ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ನವೆಂಬರ್ 10, 2018

ಚೌಂಡರಸ ವಿರಚಿತ ಅಭಿನವ ದಶಕುಮಾರ ಚರಿತೆ

ಚೌಂಡರಸ ವಿರಚಿತ ಅಭಿನವ ದಶಕುಮಾರ ಚರಿತೆ

ಹಳಗನ್ನಡ ಸಾಹಿತ್ಯವು ಕ್ರಿ. ಶ. ಒಂಬತ್ತನೆಯ ಶತಮಾನದಿಂದ ವಿಸ್ತಾರವಾಗಿ ಬೆಳೆದು ಬಂದಿದೆ. ಹಲವಾರು ಮಹಾಕವಿಗಳು ಕನ್ನಡ ಸಾರಸ್ವತದೇವಿಯನ್ನು ತಮ್ಮ ಉಜ್ವಲವಾದ ಕಾವ್ಯಾಭರಣಗಳಿಂದ ಅಲಂಕರಿಸಿ ಬೆಳಗಿದ್ದಾರೆ. ಈ ಕವಿ ಪರಂಪರೆಯಲ್ಲಿ ಚೌಂಡರಸನೂ ಒಬ್ಬ ಮಹಾಕವಿ. ಪ್ರಕೃತ ಚೌಂಡರಸನು ದಂಡಿಯ ಸಂಸ್ಕೃತ ದಶಕುಮಾರ ಚರಿತೆಯನ್ನು ಕನ್ನಡದಲ್ಲಿ ಅನುವಾದಿಸಿದ್ದಾನೆ. ಕನ್ನಡಗ್ರಂಥವು ಸಂಸ್ಕೃತ ಗ್ರಂಥದಷ್ಟೇ ಪ್ರೌಢವೂ ಸುಂದರವೂ ಆಗಿದೆ. ಇವನನ್ನು ಚೌಂಡರಾಜನೆಂದೂ ಕರೆಯುವುದುಂಟು.

ಈತನು ಭಾರದ್ವಾಜ ಗೋತ್ರದ ಬ್ರಾಹ್ಮಣ. ತಂದೆ ಮಧುಸೂದನ. ತಾಯಿ ಮಲ್ಲವ್ವ. ಈತನ ಹೆಂಡತಿ ಲಕ್ಷ್ಮಿ.  ಅಣ್ಣ ಸರಸಕವೀಶ್ವರ. ಈ ಹೆಸರು ಇಟ್ಟ ಹೆಸರೋ ಕವಿಯಾಗಿದ್ದು ಬಂದ ಹೆಸರೋ ಗೊತ್ತಿಲ್ಲ. ಇವನ ಗುರು ಮನೋಹರ. ಅಥವಾ ಉದ್ದಂಡ ಮನೋಹರ. ಇವನು ವಿಷ್ಣುಭಕ್ತ. ಹಾಗೆಯೇ ವಿಟ್ಠಲನ ಪರಮಭಕ್ತ ಕೂಡ. ಗ್ರಂಥಾರಂಭದ ಮಂಗಳ ಪದ್ಯವೇ ವಿಟ್ಠಲನ ಸ್ತುತಿ. “ ಪಂಡರೀರಾಯನಭಂಗ ವಿಟ್ಠಲನಲಂಪಿನೊಳೀಗೆಮಗಿಷ್ಟಸಿದ್ಧಿಯಂ” ಎಂದು ಪ್ರಾರ್ಥಿಸುತ್ತಾನೆ. ಪ್ರತಿಯೊಂದು ಆಶ್ವಾಸದ ಕೊನೆಯಲ್ಲಿಯೂ “ ಶ್ರೀಮದಭಂಗವಿಟ್ಠಲ ಪದಾಂಭೋಜ ಮತ್ತು ಮಧುಕರ “ ಎಂದು ತನ್ನ ಹೆಸರಿನ ಹಿಂದೆ ವಿಶೇಷಣವಾಗಿ ಜೋಡಿಸಿದ್ದಾನೆ. ಆಶ್ವಾಸಗಳ ಆದ್ಯಂತಗಳಲ್ಲಿ ವಿಟ್ಠಲನ ನಾಮವನ್ನು ಸೇರಿಸಿದ್ದಾನೆ. ತನ್ನ ಇಷ್ಟದೇವತೆಯಾದ ವಿಟ್ಠಲನನ್ನು ಒಂದು ಪಡ್ಡಳಿಯಲೂಲಿಯೂ, ಅಷ್ಟಕದಲ್ಲಿಯೂ ಭಕ್ತಿವಿಹ್ವಲನಾಗಿ ರೋಮಾಂಚಿತನಾಗಿ
ಮನಸಾರೆ ಹಾಡಿ ಹೊಗಳಿದ್ದಾನೆ.  ಇದರಿಂದ ಇವನು ಪಂಡರಿ ವಿಟ್ಠಲನ ಪರಮ ಭಕ್ತನೆಂದು ಸ್ಪಷ್ಟವಾಗಿ ತಿಳಿಯುತ್ತದೆ.  

ಇವನ ಕಾಲವನ್ನು ನಿರ್ಧರಿಸಲು ಸಾಕಷ್ಟು ಬಾಹ್ಯ ಆಧಾರಗಳಿಲ್ಲ. ಆದರೆ ಗ್ರಂಥದಲ್ಲಿನ ಕೆಲವು ಆಧಾರಗಳನ್ನು ಬಳಸಬಹುದು. ಪೂರೂವ ಕವಿಗಳಾದ ಪಂಪ, ಪೊನ್ನ.  ಚಂದ್ರ, ರುದ್ರಭಟ್ಟ ಇವರನ್ನು ಸ್ತುತಿಸಿದ್ದಾನೆ. ಆದುದರಿಂದ ಇವರಲ್ಲಿ ಅತ್ಯಾಧುನಿಕನಾದ ರುದ್ರಭಟ್ಟನಿಗಿಂತ ಈಚಿನವನು. ಅಂದರೆ ಕ್ರಿ, ಶ. ಹದಿಮೂರನೆ ಶತಮಾನದವನು.
ಚೌಂಡರಸನು ದಶಕುಮಾರ ಚರಿತೆಯನ್ನು ಚಂಪೂಶೈಲಿಯಲ್ಲಿ ರಚಿಸಿದ್ದಾನೆ.

ಪೀಠಿಕಾ ಪ್ರಕರಣ:

ಉತ್ಪಲ॥
ಶ್ರೀಯನುದಾರದಿಂದುರದೊಳೊಪ್ಪಿರೆ ತಾಳ್ದ ದಶಾವತಾರ ಸಂ
ಧಾಯಕದಿಂ ವಿರೋಧಿಬಲಮಂ ತವೆ ಗೆಲ್ದಮರುನ್ನಿಕಾಯಮಂ
ಸ್ವಾಯತಸತ್ವದಿಂ ಪೊರೆದ ಲೋಕಜನ ಸ್ತುತಿವೆತ್ತ ಪಂಡರೀ
ರಾಯನಭಂಗ ವಿಟ್ಠಲನಲಂಪಿನೊಳೀಗೆಮಗಿಷ್ಟ ಸಿದ್ಧಿಯಂ॥೧॥

ಚಂ॥ ಜಲರುಹತಂತು ಸುಂದರ ವಿಲೋಚನಮಧ್ಯೆ ಗಜಾಳಿಯನ ಕುಂ
ತಳೆ ಮಣಿದರ್ಪಣಾಧರಕಪೋಲೆ ಸುಧಾಕಳಶೋಪಮಾಂಗಮಂ
ಜುಳ ಕುಚಯುಗ್ಮೆ ಶಂಖಲತಿಕಾ ಸಮಕಂಠಭುಜಪ್ರಸಿದ್ಧೆ ರು
ಗ್ಮಿಳಿತಮರಾಳವಾಹಿನಿ ಸರಸ್ವತಿಮಾೞ್ಕೆಮಗಿಷ್ಟಸಿದ್ಧಿಯಂ॥೬॥

ಮ॥ ಸ್ರ॥ ಕರುಣಂ ಕೈಮಿಕ್ಕು ಮಾೞ್ಕೆಮ್ಮಯಮತಿಗೆ ಮಹಾತೇಜಮಂ ದಿವ್ಯಗಂಗಾ
ಧರಪುತ್ರಂ ತುಂಗಗಂಡಸ್ಥಳಗಳಿತ ಮದಾಂಬುಪ್ರವಾಹಪ್ರಕಾಮೋ
ದ್ಧುರ ಗಂಧಾಯಾತ ಭೃಂಗಾವಳಿ ಮೃದುಮಧುರಧ್ವಾನ ಸಂತೋಷಿತೋದ್ಯ
ತ್ಕರಿವಕ್ತ್ರಂ ಸಂತತಾರಾಧಕಜನ ಬಹು ವೀಘ್ನೌಘನಾಶ ಗಣೇಶಂ॥೭॥

ಚಂ॥ ಮಣಿಮಕುಟಂ ತ್ರಿಶೂಲಢಮರೂದ್ಧತ ಖಡ್ಗ ಕಪಾಲಪಾಣಿ ಭೀ
ಷಣ ವದನಂ ಕರೋಟಿವನಮಾಲೆ ಭಯಂಕರ ಭಾಳಲೋಚನಂ
ಫಣಿಕಟಕಂ ಕರಂ ತನಗೆ ರಂಜಿಪ ಭೈರವ ಮೂರ್ತಿ ದೇವತಾ
ಗಣಪತಿಸೇವ್ಯೆ ಚಂಡಿಕೆ ಮನೋಮುದಮಂ ನಮಗೀಗೆ ಸಂತತಂ ॥೮॥

ಮ॥ ಪೊಗೞ್ವೆಂ ಲಕ್ಷಣ  ಲಕ್ಷಿತಾದ್ಭುತವಚೋನಿಷ್ಕಂಪನಂ ಪಂಪನಂ
ಜಗತೀಪ್ರೀತಿಕರಪ್ರಸಿದ್ಧ ಕವಿತಾ ಸಂಪನ್ನನಂ ಪೊನ್ನನಂ
ಸುಗಮಾರ್ಥಸ್ಫುಟಶಬ್ಧ ಸುಂದರತರದ್ವಾಕ್ಷಾಂದ್ರನಂ ಚಂದ್ರನಂ
ಭಗವದ್ವಿಷ್ಣು ಕಥಾವತಾರರಚಿತ ಶ್ರೀ ಭದ್ರನಂ ರುದ್ರನಂ ॥೧೨॥

ಮ॥ ವರಮಧುಸೂದನಂ ಜನಕನೊಪ್ಪುವ ಮಲ್ಲವೆಮಾತೆಯಗ್ರಜಂ
ಸರಸಕವೀಶ್ವರಂ ತನಗೆ ವಲ್ಲಭೆ ಲಕ್ಷ್ಮಿಯೆನಿಪ್ಪಪೆಂಪು ಬಿ
ತ್ತರಿಸುವೊಡಗ್ಗಳಂ ನಿಜಮೆನಲ್ ಮೆಱೆವಂ ಹರಿಪಾದಶೋಣ ಪಂ
ಕರುಹಮಧುವ್ರತಂ ಸುಕವಿ ಚೌಂಡರಸಂ ಕವಿರಾಜಶೇಖರಂ॥೧೪॥

ಮ॥ ಮೊದಲೊಳ್ ದಂಡಿ ಕವೀಶ್ವರಂ ದಶಕುಮಾರಾಖ್ಯಾತ ಚಾರಿತ್ರಮಂ
ಪದೆಪಿಂ ಸಂಸ್ಕೃತಭಾಷೆಯಿಂ ರಚಿಸಿದಂ ಧಾತ್ರೀಜನಸ್ತೋತ್ರ ಸ
ಮ್ಮದವಪ್ಪಂತದನಾ ಪ್ರಸಿದ್ಧಿಯವತಾರಾಕಾರಮಂ ತಾಳ್ದಿಸ
ದ್ವಿದಿತಂ ರಂಗದೊಳಾಡಿ ತೋರೂಪ ತೆಱದಿಂ ಪೇೞ್ವೆಂ ಸುಕರ್ಣಾಟದಿಂ॥೧೭॥

ಮ॥ ಬಿದಿಯುತ್ಪತ್ತಿಬೀಜಮಂ ಹರಿಜಗತ್ಸಂಪಾಲನಾ ರತ್ನಮಂ
ಮದನಾರಾತಿ ದಿಗಂಬರತ್ವಮೞಿಯಲ್ ಸದ್ವಸ್ತ್ರಮಂ ಭಾಸ್ಕರಂ
ಮೃದು ಶೈತ್ಯಾಷಧಿಯಂ ಶಶಾಂಕನೊಲದಿಂದ ರಾಜಯಕ್ಷ್ಮಕ್ಕೆ ಮಾ
ಡಿದ ಮರ್ದಂ ಪಡೆವುಜ್ಜುಗಂದಳೆವರಂತಾ ಸೆಟ್ಟಿಗುರ್ತರ್ಗಳೊಳ್॥೩೯॥

ವಚನ ॥ ಅಲ್ಲಿಂ ಮುಂದೆ

ಪೂಗೊಳಲೆಂದು ಬಂದ ವಿಟಸಂತತಿಯಳ್ಳೆರ್ದೆ ಡಿಳ್ಳವಪ್ಪಿನಂ
ಪೂಗಣೆಯುರ್ಚೆ ಮೂರ್ಛೆಗೊಳಗಾಗಲೊಡಂ ಕಡುಪಿಂ ಸಹಾಯಿಗರ್
ಪೂಗೊಳದತ್ತಲುಯ್ದು ಮದನಾಗ್ನಿಯನಾಱಿಸುವಂತು ಮಾಡಿದಾ
ಪೂಗೊಳನೊಪ್ಪೆ ಕಟ್ಟಿ ಪೊಸಮಾಲೆಯನೆತ್ತುವ ಮಾಲಗಾರ್ತಿಯರು॥೪೦॥

ಉ॥ ಸಾರಸುಗಂಧದಿಂದೆಸೆವ ಪೂವಿನಮಾಲೆಯನೀವೆನಿತ್ತ ಬಾ
ಬಾರೆಲೆ ಧೂರ್ತಯೆಂಬವರ ತೋಳಮೊದಲ್ಗಳನುನ್ನತಸ್ತನಾ
ಕಾರಮನೆಯ್ದೆಕಂಡು  ನಡೆಗೆಟ್ಟಿರೆ ದೂರದೊಳಿರ್ಪರೇಕೆನಲ್
ದೂರಿತರಲ್ತೆ ಪುಷ್ಪವತಿಯರ್ ಪರಿಭಾವಿಸೆ ನೀತಿವಂತರೊಳ್  ॥೪೨॥

ವ॥ ಆ ವೇಶ್ಯಾವಾಟಕ್ಕೆ ಸಮೀಪವಾಗಿ

ಮ॥ಸ್ರ॥ ಸತತಂ ಸಂಗೀತಚಿತ್ರಂ ಸಕಲವಿವಿಧವಾದ್ಯೋತ್ಸವಂ ನೃತ್ಯ ವಿಭ್ರಾ
ಜಿತಮುದ್ಯದ್ಧೂಪಧೂಮಕ್ಷುಭಿತಮಖಿಲ ಪೌರಾಣಮಂತ್ರಾನುವಾದಂ
ಚಿತ ರಮ್ಯಾಷ್ಟಾಪಹಂ ಮಂಜುಳಮಣಿಕಲಶಂ ಪೆಂಪುವೆತ್ತಿರ್ಪಾದೇವ
ಯತನಂ ಕಣ್ಗೊಪ್ಪುಗುಂ ತತ್ಪುಪುರವರದೊಳನೂನ ಪ್ರಸಾದಂಗಳಿಂದಂ॥೪೫॥

ವ॥ ಅನಂತರಂ

ಮ॥ ಸ್ರ॥ ವಿಮಲಪ್ರಾಸಾದ ಭಿತ್ತಿಪ್ರಕಟಘನಸುಧಾಕಾಂತಿಗಳ್ ಚಂದ್ರಿಕಾ ವಿ
ಭ್ರಮಮೆಂಬಂತೊಪ್ಪೆ ನಾನಾಮಣಿಮಯ ಕಳಶಶ್ರೇಣಿಗಳ್ ತಾರಾಕಾಚಿ
ತ್ರಮನೆತ್ತಂ ಬೀಱೆ ಭಾಸ್ವತ್ಕುಮುದಮನೊಲವಿಂ ಪೆರ್ಚಿಸುತ್ತಾವಗಂ ಸಂ
ಭ್ರಮದಿಂ ಚೆಲ್ವಾದರಾಜಾಲಯಮಭಿನವಪೂರ್ವಾದ್ರಿಯಂತೊಪ್ಪಿತೋರ್ಕುಂ॥ ೪೬॥

ವ॥ ಅಂತು ಪೊಗೞ್ಕೆಗಳುಂಬಮಾಗಿರೆ

ತತ್ಪುರಪತಿ ನೃಪಮೌಳಿ ಲ
ಸತ್ಪಾದಪಯೋಜನಖಿಳ ಜನತಾ ನಿಜ ಸಂ
ಪತ್ಪೂರಕನಭಿಜನಹಿತ
ಸತ್ಪದನುಱೆ ರಾಜಹಂಸನೆಂಬ ನರೇಂದ್ರಂ॥೪೭॥

ಆತಂಗೆ ಸಚಿವರಾದರ್
ನೀತಿವಿದರ್ ಸದ್ಗುಣಪ್ರಸಿದ್ಧರ್ ವಿಶ್ವ
ಖ್ಯಾತರೆನಿಪೇೞ್ವರುಂ ಧಾ
ತ್ರೀ ತಿಲಕರ್ ಬುದ್ಧಿವಿದರತೀವ ಸಮರ್ಥರ್ ॥೪೮॥

ವಚನ॥ ಅವರಾರೆಂದೊಡೆ ರತ್ನೋದ್ಭವ, ಪ್ರೇಮದತ್ತ, ಕಾಮಪಾಲ, ಸುಮಿತ್ರ, ಸುಮತಿ, ಸುಶ್ರುತ, ಸತ್ಯವರ್ಮನೆಂಬೇೞ್ವರ್ ಅವರೊಳ್ ರತ್ನೋದ್ಭವಂ ವ್ಯವಹಾರಕ್ಕೆ, ಪ್ರೇಮದತ್ತಂ ತೀರ್ಥಯಾತ್ರೆಗೆ, ಕಾಮಪಾಲಂ ದೇಶಾಂತರಕ್ಕೆ, ಪೋಗೆ ಮಿಕ್ಕನಾಲ್ವರ್ ಪ್ರಧಾನರುಂ ತಾನುಂ

ಆತನ ಸತಿ ಗುಣವತಿ ಧೈ
ರ್ಯಾತಿವಿಳಾಸದರಿಮೆಸೆವಗಳಿಮೆಸೆವ ರತಿ ವರ ಹಂಸ
ವ್ರಾತಗತಿ ಲೋಕನುತ ವಿ
ಖ್ಯಾತೆಯೆ ವಸುಮತಿಯೆನಿಪ್ಪವನಿತಾರತ್ನಂ॥೫೦॥

ವ॥ ಆ ಕಾಂತೆ ಒಂದು ದಿನಂ ನಿಜಕಾಂತಸಹಿತಂ

ಮ॥ ಸ್ರ॥ ಎಳೆಮಾವಿಂ ಕೌಂಗಿನಿಂ ಸತ್ಕದಳಿಯಿನರನೇಱಿಲ್ಗಳಿಂ ದಾಡಿಮೀ ಸಂ
ಕುಳದಿಂ ಚೆಂದೆಂಗಿನಿಂ ಸಂಪಗೆಯಿನಸುಗೆಯಿಂ ಬಕ್ಕೆಯಿಂ ಮುತುಳುಂಗಂ
ಗಳಿನುದ್ಯದ್ರಾಕ್ಷೆಯಿಂ ಪೂದುಱುಗಲ ಲತೆಯಿಂ ಕೋಕಿಲಧ್ವಾನದಿಂ ಕಂ
ಗೊಳಿಪೊಂದುದ್ಯಾನಮಂ ಭೋಂಕನೆ ಮನದೊಲವಿಂ ಕಾಂತೆ ಪೊಕ್ಕಳ್ ನಿತಾಂತಂ॥೫೧॥

ಚಂ॥ ನಿರವಧಿಯಿಂ ಕುಳಿರ್ವುದಕಮಂ ನಡುನೆತ್ತಿಯೊಳಾಂತು ತನ್ನ ಕ
ಣ್ಣುರಿಗುಪಶಾಂತಿಯಂ ಪಡೆದನಿಲ್ಲಭವಂ ಬಿಸಿಲೊಳ್ ಪೊದೞ್ದು ಬಿ
ತ್ತರಿಪೆಳನೀರ್ಗಳಂ ತಳೆದು ಶೈತ್ಯಮನೆಲ್ಲರೊಳೀವಪೆರ್ಮೆಗಾ
ರ್ದೊರೆಯೆಮಗೆಂಬವೋಲ್ ವನದೊಳಗ್ಗದ ತೆಂಗಿನ ಸಾಲ್ಗಳೊಪ್ಪುಗುಂ॥೫೩॥

ಚಂ॥ ತಿಳಿಗೊಳದಿಂಬಿನಿಂ ಮಱಿಯನಿಟ್ಟು ಸರೋಜದಬೀಜರಾಜಿಯಂ
ಘಳಿಲನೆ ತಂದು ಚಂಚುಪುಟದೊಳ್ ನಿಜಚಂಚುವನಿಟ್ಟುಕೊಟ್ಟು ಕೋ
ಮಳಸಿತಪಕ್ಷಮಂ ಪೊದಿಸಲಾಲಿಪ ಹಂಸೆಯಪುತ್ರಮೋಹಮಂ
ಲಳನೆ ಸಮಂತುಕಂಡು ಮಿಗೆ ಚಿಂತಿಸಿದಳ್ಸುಕುಮಾರಲೃಭಮಂ ॥೫೬॥

ಚಂ॥ ಚಿಲಿಪಿಲಿಗುಟ್ಟಿ ನುಣ್ದೊದಳಗಳಿಂ ಕಿವಿಗಿಂಪನೊಡರ್ಚಿ ಗೆಜ್ಜೆಗಳ್
ಘಲಿಕೆನಿಪಂತಿರೆಯ್ಯಿ ಬಿಗಿಯಪ್ಪಿ ಕುಚಂಗಳನುಂಡು ಸೋಂಕಿಲೊಳ್
ಮಲಗಿ ಮನಕ್ಕೆ ಸಮ್ಮುದಮನೀವ ಕುಮಾರಕನಂ ಮದೀಯ ಸ
ತ್ಕುಲ ಗೃಹದೀಪನಂ ಪಡೆವ ಸೈಪಿನ ಸುಗ್ಗಿಯದೆಂದು ಸಾರ್ಗುಮೋ॥೫೭॥

ಪಕ್ಷಿ ಮೊದಲಾಗಿ ಭವ ದುಃ
ಖ ಕ್ಷಯಕಾರಣಮಿದೆಂದು ತನ್ನಯ ಶಿಶುವಂ
ರಕ್ಷಿಸುತಿರ್ದಪುದದಱಿನ
ತಿಕ್ಷೀಣವದಾಯ್ತು ಭಾವಿಸಲ್ ಮಜ್ಜನ್ಮಂ ॥೫೮॥

ಕರಿಯಿಂ ಶಶಿಯಿಂ ಹರಿಯಿಂ
ಶರನಿಧಿಯಿಂ ರವಿಯಿನೆಸೆವ ಪುಷ್ಪದಿನಧಿಕಂ
ಕರುಣಿ ಪರಾಕ್ರಮಿ ಪೂಜ್ಯಂ
ಸ್ಥಿರತೇಜಂ ನೃಪತಿ ಪುಟ್ಟುಗುಂ ಸುಕುಮಾರಂ॥೬೭॥

ವನಿತೆಯ ಗರ್ಭಚಿಹ್ನಮತಿ ಕೌತುಕಮೆಂತೆನೆ ರತ್ನನೂಪುರ
ಧ್ವನಿಗಲಸಿತ್ತು ಮಂದಗತಿಯೊಳ್ನಡು ಕಾಂಚಿಗೆ ತಿಣ್ಣವಾದುದಾ
ನನರುಚಿಚಂದ್ರನೆಂಬುಪಮೆಗೊಪ್ಪಿದುದುಚ್ಚ ಕುಚಾಗ್ರಿಮಕ್ಕೆ ಕ
ರ್ಪನುನಯವಾದುದಂಗಲತೆಕಾಂತಿಯನಾಂತುದಿಳಾಧಿನಾಯಕಾ॥೬೯॥

ಚಂ॥ ಸಕಲಸುವಸ್ತ್ರಮಂ ಸಕಲ ನಿರ್ಮಲಸನ್ನುತರತ್ನಕೋಟಿಯಂ
ಸಕಲಸುವಸ್ತುವಂ ತಳೆದು ತನ್ನ ಮನೋರಮೆಯುಂ ಸುತರೂಕಳುಂ
ಪ್ರಕಟಿತ ಸೇನೆಯುಂ ಬೆರಸು ಬಂದನನೇಕವಿಭೂತಿಯಿಂದೆ ಕೌ
ತುಕಮೆನಿಸಲ್ ನೆಗೞ್ದ ಮಿಥಿಲಾಪತಿ ಪುಷ್ಪಪುರಕ್ಕೆ ರಾಗದಿಂ॥ ೭೧॥

ದ್ವಿತೀಯಾಶ್ವಾಸಂ
ದಶಕುಮಾರೋದಯ,ಮತ್ತು ವಿದ್ಯಾಭ್ಯಾಸ ವರ್ಣನಂ.

ಚಂ॥ ಪೊಸಜಡೆ ಮಿಂಚುವೋಲ್ ಕುಣಿವ ಕುಂಡಲಮಿಟ್ಟ ವಿಭೂತಿ ಸೆಳ್ಳುಗುರ್
ಕುಸಿದೊಡಲಾಂತಲಾಕುಳ ಕಮಂಡಲುವುಟ್ಟಮಲಾಂಬರಂ ಶ್ರಮ
ಪ್ರಸವಮುಖಂ ಮನೋಹರ ವಿಲಾಸಮನಾಂತಿರೆ ಚೆಲ್ವ ಮುಗಾಧ ತಾ
ಪಸನತಿಸಂಭ್ರಮಂಬೆರಸು ಬಾಗಿಲೊಳಿರ್ದಪನುರ್ವರಾಧಿಪಾ॥೩॥

ವಚನ॥ ಎಂದು ದೌವಾರಿಕಂ ಬಿನ್ನಪಂಗೆಯ್ಯಲರಸನಾತನಂ ಬರಿಸೆಂಬುದುಂ

ಮೆಲ್ಲನಡಿಯಿಡುತೆ ತನ್ನಂ
ಬಲ್ಲವರಱಿದಪ್ಪರೆಂದು ಶಂಕಿಸುತೆ ಮುದಂ
ಪಲ್ಲವಿಸೆ ನಡೆದು ಬರೆ ಭೂ
ವಲ್ಲಭನಾಕ್ಷಣದೊಳಱಿದನಾತನ ಕುಱುಪಂ ॥೪॥

ವಚನ॥ ಅಂತಱಿದುಮಱಿಯದಂತೆ

ನಸುನಗುತೆ ಕೈಗಳಂ ಮುಗಿ
ದೊಸೆದಿಲ್ಲಿಗೆ ಬನ್ನಿಮೆಂದು ಕುಳ್ಳಿರಿಸಿ ಸಭಾ
ವಸಥದೊಳ್ನುಡಿಯಿಂ ಮ
ನ್ನಿಸಿದಂ ಕುಟಿಲೋಪಚಾರದಿಂ ಭೂಪಾಲಂ॥೫॥

ನಿನ್ನೊಡನಂದು ಕಾದಿ ಮುಱಿದೋಡಿದ ಬನ್ನದ ಬೇಗೆಯಿಂದವಂ
ತನ್ನ ಪುರಕ್ಕೆ ಪೋಗದೆ ಮಹಾವನಮಂ ತವೆ ಪೊಕ್ಕು ದುರ್ಗೆಯಂ
ಕೆನ್ನಮುಪಾಸ್ತೆಗೆಯ್ದು ಪಡೆದಂ ಗದೆಯಂ ಪದೆಪಿಂ ರಿಪುಕ್ಷಯಾ
ರ್ಥನ್ನಿಜಸೇನೆಯಂ ನೆರಪಿ ಬಂದಪನಿಲ್ಲಿಗಿಳಾಧಿನಾಯಕಾ॥೭॥

ಕಡೆಗವಲೊಳ್ ನಿಜಾಂಗಮತಿ ರಕ್ತದೊಳೊಪ್ಪಿರೆ ಬಲ್ಪುಗೆಟ್ಟು ತೇರ್
ಪೊಡೆಗೆಡೆಯಲ್ ತುರಂಗತತಿಮುಗ್ಗೆ ಸರೋಜಮುಖಂ ನಿರೋಧಮಂ
ಪಡೆದಿರೆ ಮಂಡಲಾಗ್ರ ಕರದುಗ್ರತೆ ಕುಂದಿರೆ ರಾಜಹಂಸನಂ
ಗೆಡೆಗೊಳಲಾರ್ಪೆನೆಂಬ ಬಗೆಯಿಂದಿನನೆಯ್ದಿದನಸ್ತಶೈಲಮಂ॥೩೯॥

ವಚನ॥ ಅಂತಿನನಸ್ತಮಾಗಲೊಡಂ

ಉ॥ ಏಕೆಲೆದೇವ ನಿನ್ನೊಳೆಡಗಣ್ ಬಲಗಣ್ ಸರಿಯೆನ್ನದಿಂತು
ದೋಷಾಕರನಂ ಸಮಂತು ತಲೆಗೇಱಿಸಿಕೊಂಡು ಮದೀಯಕಾಂತನಂ
ಪ್ರಾಕೃತನಂತಿರಸ್ತಗಿರಿಗೆಯ್ದಿಪೆಯೆಂದಭವಂಗೆ ವಾಸರ
ಶ್ರೀ ಕರಕಂಜಮಂ ಮುಗಿದವೋಲ್ ಮುಗಿದಿರ್ದುವು ಪದ್ಮಸಂಕುಳಂ॥೪೦॥

ಈ ರಾತ್ರಿಯೊಳಂಜದೆ ಕಾಂ
ತಾರಕ್ಕೆಯ್ತಂದಳಾವಳೆಂಬರಸನ ಗಂ
ಭೀರರವಮುಣ್ಮೆ ವಸುಮತಿ
ನಾರಿಯದಂ ಕೇಳ್ದು ನೋಡಿದಳ್ ನಾಲ್ದೆಸೆಯಂ॥೫೦॥

ವಚನ॥ ಅಂತು ಪೂರ್ವ ಪರಿಚಯಮಪ್ಪ ಗಂಭೀರ ಧ್ವನಿಯಂ ವಸುಮತಿ ಕೇಳ್ದಾ ದೆಸೆಯಂ ನೋಡಿ

ಏತೆಱದಿಂದೀವತಾಣದೊ
ಳೀ ತನುವಂ ಬಿಡುವೆನಂಜಲೇಕೆನಗಂತಾ
ಭೂತಪ್ರೇತಂಗಳೆನು
ತ್ತಾತರುಣಿ ತದೀಯರವದ ದೆಸೆಗೈತಂದಳ್॥೫೨॥

ವಚನ॥ ಅಂದು ಬಂದುನೋೞ್ಪಿನಂ

ನೀರ್ಗೆಳಸಿ ತೇಂಕುವಶ್ವಂ
ಬೇರ್ಗಳ್ ಪರಿದಿರ್ಪ ಬೀೞಲೊಳ್ ಸಿಲ್ಕಿದ ಬ
ಲ್ದೇರ್ಗದೆಯ ಘಾತಿಯಿಂ ನಸು
ನುರ್ಗಿದ ತನುವೆನುವ ನೃಪನನವಳೀಕ್ಷಿದಳ್॥೫೪॥

ವಚನ॥ ಅಂತು ಶಂಕಿಸುವುದುಂಟಾದೊಡಂ ಸಾತ್ವಿಕಭಾವಂ ಶಂಕಿಸದೆ ಮುಂದುವರಿದು ಪತಿಯೆಂಬುದನಱಿಪುತ್ತಿರೆ ಬಂದು ಕೋಮಲಕರದಿಂ ಭೂಮೀಶನ ಸಕಲಾವಯವಂಗಳನಂಟಿ ನೋಡಿ

ಎನ್ನಂತೆ ಧನ್ಯಳಾವವ
ಳೆನ್ನಧಿಪತಿ ತಪ್ಪದೆನ್ನ ನೋಂಪಿಯ ಫಲಮೇ
ಸನ್ನಿದಮಾಯ್ತೆನುತಂಗನೆ
ತನ್ನರಸನನೊಲ್ದು ಕಂಡು ಹರ್ಷಮನಾಂತಳ್॥೫೫॥

ವಚನ॥ ಅಂತು ನಮಸ್ಕರಿಸಿ ರಾಜಹಂಸ ರಾಜನಂ ಪರಿವೇಷ್ಟಿಸಿದ ತರಳ ತಾರಾನಿಕಾಯದಂತೆ ಪುರಜನಂ ಪರಿಜನಂ ಬಂದಾಲದ ಬೀೞಲೊಳ್ ಸೆಕ್ಕಿದ ಗಾಲಿಯಂ ತೆಗೆದರಸನಂ ರತ್ನಾಚಲಕ್ಕೆ ಕೊಂಡುಬಂದು ಸಕಲೌಷಧಿಗಳಿಂ ಶಸ್ತ್ರವ್ರಣಮಂ
ಮಾಣಿಸಲ್ ಬಳಿಕಂ

ಸುಮತಿ ವಸುಮತಿಯ ಗರ್ಭದ
ಕುಮಾರಕಂ ಸಕಲ ವೈರಿಯಂ ತನ್ನ ಪರಾ
ಕ್ರಮದಿಂದೆ ಗೆಲ್ದು ಮತ್ತಂ
ಸಮಸ್ತದೇಶಕ್ಕೆ ಮುಖ್ಯನಪ್ಪನಮೋಘಂ॥೬೭॥

ಉ॥ ಇಂದುವನಾ ಸುಧಾಂಬುಧಿ ತಣ್ಗದಿರಂ ಶಶಿಲೇಖೆ ಚೈತ್ರನಂ
ನಂದನಲಕ್ಷ್ಮಿ ಕಾಮಶರಮಂ ಲತೆ ಪೂರ್ಣಸರಂ ಮರಾಳನಂ
ಮಂದ ಸಮೀರನಂ ಮಳಯಮೇಖಲೆ ಪೆತ್ತವೊಲಾಕೆ ಪೆತ್ತಳಾ
ನಂದನನಂ ಕುಮಾರಹರಿಚಂದನನಂ ಸುಚರಿತ್ರವೃಂದನಂ॥೬೯॥

ಮ॥ ಜನಮಿತ್ರಂ ಪೂರ್ವರಾಜಂ ಭುಜಶಿಖರಲಸತ್ಸಾರ್ವಭೌಮಂ ಜಗನ್ಮೋ
ಹನಸೌಮ್ಯಂ ಲೋಕಜೀವಂ ಕವಿಕುಲವಿಭವಂ ರಾಜ ಹಂಸಾತ್ಮಜಂ ನ
ಮ್ಮನಿಬರ್ಗೀತಂ ಪ್ರಿಯಂ ಮತ್ಸಮಮೆನುತೆ ಸಮಸ್ತಗ್ರಹಂ ತತ್ಕುಮಾರಂ
ಗೆ ನಿಶಾಂತಪ್ರೀತಿಯಂ ಸೈತೆಸಗುವೆವೆನಲಿನ್ನಾತನಿಂ ಖ್ಯಾತನಾವೊಂ॥೭೦॥

ವಚನ॥ ಅಂತು ಸಂತೋಷಂ ಮುಖದೋಳ್ ತುೞುಂಕಲರಸಂ ತತ್ಕಾಲೋಚಿತ ಕರ್ಮಮಂ ಕೂರ್ಮೆಯಿನೆಸಗಿ ಸಕಲದಾನದಿಂ ಸರ್ವರಂ ಸನ್ಮಾನಂಗೆಯ್ದು ದ್ವಾದಶದಿನದೊಳ್ ರಾಜವಾಹನನೆಂದು ನಾಮಕರಣಮಂ ಮಾಡಲ್ ಬೞಿಯಂ

ಮ॥ ಖಗಪೂಷರ್ ಸಲೆದಕ್ಷಯಾಗದೊದವಿಂ ಭಂಗಕ್ಕೆ ಪಕ್ಕಾಗಲಿಂ
ದೊಗೆದಿರ್ದರ್ ದಶಸೂರ್ಯರೆಂಬ ತೆಱದಿಂ ಪದ್ಮಾನುರಾಗಪ್ರಭೂ
ತಗುಣ ವಿಶ್ರುತದೇಹದೀಪ್ತಿ ಪರರಾಜದ್ವೇಷಮೊಪ್ಪಲ್ ಪ್ರತಾ
ಪಿಗಳೇಂ ಪೆಂಪೆಸೆದಿರ್ದರೋ ದಶಕುಮಾರರ್ ಕೌತುಕ ಪ್ರೇಮದಿಂ ||॥೧೪೨॥

ವಚನ॥ ಅಂತು ದಶಕುಮಾರರ್ ರಾಜವಾಹನ, ಪ್ರಮತಿ, ಮಿತ್ರಗುಪ್ತ, ಮಾತೃಗುಪ್ತ, ಸುಶ್ರುತ, ಪುಷ್ಪೋದ್ಭವ, ಅರ್ಥಪಾಲ, ಸೋಮದತ್ತ, ಪ್ರಹಾರವರ್ಮ, ಉಪಹಾರವರ್ಮರ್ ಅಂತಿರ್ದ ದಶಕುಮಾರರು ಭೃಂಗಿ, ಬೇತಾಳ, ವೈತಾಳಿ, ಮರುಜರಿಯೆಂಬ ಶಸ್ತ್ರವಿದ್ಯೆಯೊಳಂ ಸಮಪಾದ ವೈಷಮ ಮಂಡಲಾಲೀಢಪ್ರತ್ಯಾಲೀಢಮೆಂಬ ಧನುರ್ವಿದ್ಯೆಯೊಳಂ ಚತುರಶೀತಿ ಪದವಿದಾನವಾದ ಗಜಶಿಕ್ಷೆಯೊಳಂ ಪಂಚಧಾರಾಸಂಚಿತಮಾದಶ್ವಾರೋಹಣದೊಳಂ ಸ್ವರ್ಣನಾಭ ಚಿತ್ರಕ ವಾತ್ಸ್ಯಾಯನ ವಿರಚಿತ ಕಾಮಶಾಸ್ತ್ರದೊಳಂ ಶಬ್ದಾರ್ಥಾಲಂಕಾರ ವ್ಯಾಕರಣಚ್ಛಂಧೋವಿಲಾಸಮೆಸೆವ ಶಬ್ದಶಾಸ್ತ್ರದೊಳಂ ಪ್ರವೀಣರಪ್ಪಂತು ಮಾಡಿ ರಾಜಹಂಸಂ ಸುಖದೊಳಿರ್ದಂ ಅದೆಂತೆನೆ

ಚಂ॥ ಸುಲಲಿತಮಪ್ಪಿನಂ ದಶಕುಮಾರಕರೊಪ್ಪುವ ಬಾಲಲೀಲೆಯಂ
ನಲವಿನೊಳಾವಗಂ ಪಡೆದು ಭಾವಿಸಿ ತನ್ನಯ ಚಿತ್ತದುತ್ಸವಂ
ಫಲಭರಮಾಗಿ ಚೆಲ್ವೆಸೆಯಲಿಂದ್ರಿಯಪಕ್ಷಕುಲಂ ನಿರಂತರಂ
ಚಲಿಸದೆರಂಜಿಸಿರ್ದನಿಳೆಯೊಳ್ನಿಜವಾಗಲಭಂಗವಿಕ್ರಮಂ॥೧೪೩॥

ಚತುರ್ಥಾಶ್ವಾಸಂ.
ಪುಷ್ಪೋದ್ಭವ ಚರಿತಂ.

ಶ್ರೀ ಲೀಲಾವಸಥಂ ಪಾ
ತಾಲದಿನೇಕಾಕಿಯಾಗಿ ಪೊಱಮಟ್ಟು ಮಹೀ
ಪಾಲಂ ಕುಳ್ಳಿರ್ದನುಪಮ
ಲೀಲೆಯೊಳೊಪ್ಪಿದನಭಂಗವಿಟ್ಠಲಭೃತ್ಯಂ॥೧॥

ವಚನ॥ ಅಂತು ಪೊಱಮಟ್ಟೊಂದು ಚಂದ್ರಕಾಂತ ಶಿಲಾತಲದೊಳ್ ಕುಳ್ಳಿರ್ಪುದುಮನತಿ ದೂರದೊಳ್

ಶಾ॥ ವ್ಯಾಯಾಮಶ್ರಮದಿಂ ಸಡಿಲ್ದವಯವಂ ಸ್ವೇದಾಂಬು ತಳ್ತಂಗಮ
ತ್ಯಾಯಾಸವ್ಯಥೆಯಂ ನಿರೂಪಿಸುವ ವಕ್ತ್ರಾಬ್ಜಂ ಸಮುತ್ಖಾತಕೌ
ಕ್ಷೇಯಂ ರಂಜಿಸುವೊರ್ಬ ವಿಕ್ರಮಭುಜಂ ಸಂರಂಭದಿಂ ಬರ್ಪುದುಂ
ಶ್ರೇಯಃಕಾಯನಿದಾವನೆಂದು ನರಪಂ ಸಂಪ್ರೀತಿಯಿಂ ನೋಡಿದಂ॥೨॥

ಎಂದು ಬಗೆಯುತ್ತೆ ನೋಡಲ್
ಮುಂದರಸಂಗಧಿಕ ಸೌಖ್ಯಮಿದಿರ್ವರ್ಪವೊಲಾ
ನಂದದೆ ನಲಿದೀಕ್ಷಿಸುತುಂ
ಬಂದಂ ಪುಷ್ಪೋದ್ಭವಂ ಮುದಶ್ರುಗಳೊಗೆಯಲ್ ॥೪॥

ವ॥ ಅಂತು ಪುಷ್ಪೋದ್ಭವಂ ಬಂದು ಪಾತಾಳದ್ವಾರದ ಚಂದ್ರಕಾಂತ ಶಿಲಾತಳದೊಳಿರ್ದ ರಾಜವಾಹನನಂ ಕಂಡು

ಚಂ॥ ನಯನದೊಳಶ್ರುವಾರಿ ಪುಳಕಂ ನಿಜದೇಹದೊಳುತ್ಸವಂ ಮನೋ
ಜಯದೊಳನೂನಕಾಂತಿ ಮುಖಮಂಡಲದೊಳ್ ಗುರುಭಕ್ತಿ ಚಿತ್ತದೊಳ್
ಪ್ರಿಯಮಖಿಳಾಂಗದೊಳ್ ನಲಿಯೆ ಸಿದ್ಧಮನೋರಥನಿಂದು ದೇವರಂ
ಘ್ರಿಯನೊಸೆದೀಕ್ಷಿಸಲ್ ಪಡೆದೆನೆಂದು ಮನಂಮಿಗೆ ಮೆಯ್ಯನಿಕ್ಕಿದಂ ॥೫॥

ಆನಲ್ಲಿಂ ಪೋದ ಬೞಿ
ಕ್ಕೇನಂ ಬಗೆದಿರ್ದಿರೆಲ್ಲರೆಲ್ಲಿಗೆ ಪೋದಿರ್
ನೀನೆಲ್ಲಿರ್ದಪೆ ಪೇೞೆಂ
ದಾ ನರಪತಿಕೇಳ್ದನಲ್ತೆ ಪುಷ್ಪೋದ್ಭವನಂ॥೧೦॥

ಮ॥ ಕಮಳಾನಂದಕರಂ ತಮೋವ್ರಜಹರಂ ಚಕ್ರಪ್ರತಿಷ್ಠಾಪರಂ
ಸುಮನಃ ಪ್ರೀತಿಯುತಂ ಮಹೋದಯನುತಂ ಪೀತಾಂಬರಾಲಂಕೃತಂ
ನಮಿತಾಶಾಮುಖಶೋಭಿತಂ ಬಹಳದೋಷಾರಾತಿ ಲಕ್ಷ್ಮೀಷನಂ
ತಮಿತಪ್ರಾಭವಮೂರ್ತಿ ಸೂರ್ಯನುದಯಂಗೆಯ್ದಂ ಧರಾಧೀಶ್ವರಾ॥೧೨॥

ಶಾ॥ ಕಾಯಕ್ಲೇಶಮದೆನ್ನೊಳಾಗೆ ಜಗದೊಳ್ ಮರ್ಬುರ್ಬಿ ಮೈವೆರ್ಚಿದ
ನ್ಯಾಯಂ ಕೈಮಿಗಲೆನ್ನ ಕಾಂತನನಲಂಪಿಂ ಕೂಡಿದಳ್ ಪಶ್ಚಿಮಾ
ಶಾಯೋಷಿತ್ಕುಟಿಲಾತ್ಮೆಯೆಂದು ದಿವಸಶ್ರೀ ಬೈದು ಬೆಂಬತ್ತಿದಳ್
ಛಾಯಾಸಂಕುಳದಿಂದೆನಲ್ಕೆ ಪಡುವಲ್ ಮುಂತಾದುವೆಲ್ಲಾನೆೞಲ್॥೧೪॥  

ವಚನ॥ ಅಂತುದಯವಾಗಲೊಡಂ ನಿಮ್ಮಡಿಗಳಂ ನೋಡಲೃಸ್ಥಾನಮಂಟಪಕ್ಕೆ ಬಂದು ಕಾಣದೆ ಸೆಜ್ಜೆವನೆಯಂ ನೋಡೆಯಲ್ಲಿಯುಂ ಕೃಣದೆ

ಉ॥ ಸಂಗಸುಖಕ್ಕೆ ಕೂರ್ತು ವನದೆವತೆಯೊಯ್ದಳೋ ಮೇಣ್ ಭುಜದ್ವಯಾ
ಲಿಂಗನದಾಸೆಯಿಂ ಖಚರಕಾಂತೆಯರೊಯ್ದರೊ ಯೌವನಕ್ಕೆ ಮೇ
ಣಂಗವಿಸಲ್ಕೆ ಕಿನ್ನರಿಯರೊಯ್ದರೊ ಮೇಣ್ ಕಡುಪಿಂ ನಿಶಾಟರೊಳ್
ಸಂಗರವಾಯ್ತೊ ಪೇೞೆನುತೆ ಚಿಂತಿಸುತಿರ್ದೆವಿಳಾಧಿನಾಯಕಾ॥೧೫॥

ಚಂ॥ ದಿಗಧಿಪರಂ ತೆರಳ್ಚುವೆವೊ ನಾಗನಿವಾಸದ ಶೇಷನಂ ಬರಲ್
ತೆಗೆವೆವೊ ಗೋತ್ರಪರ್ವತಮನಿರ್ಕಡಿ ಮಾೞ್ಪೆವೊ ಮೇಘಮಾರ್ಗಮಂ
ಬಗಿವೆವೊ ವಾರ್ಧಿಯಂ ಮುಳಿದು ಪೀರ್ವೆವೊ ಭೂಮಿಯನೆಯ್ದೆ ಪೋೞ್ವೆ
ವೊ ಬಗೆಮಿಗೆ ಪೇೞಿಮೆಂಬ ಕಡುಪಂ ತಳೆದಿರ್ದೆವಿಳಾಧಿನಾಯಕಾ॥೧೬॥

ಮ॥ ಸ್ರ॥ ಅತಿಕಾಯಂ ಸಾಹಸಾಂಕಂ ಮುಕುಳಿತಕರನೀರೇರುಹಂ ತೀವ್ರಚಿಂತಾ
ನ್ವಿತಚಿತ್ತಂ ಬದ್ಧವೇಣೀ ಜಟಿಲತನಭಯಂ ಸಂತತಂ ಕುಂಡಲಾಂದೋ
ಳಿತಕರ್ಣಂ ದಿವ್ಯತೇಜೋಮಯನಭಿನವರೂಪಂ ಲಸಚ್ಛೈಲಶೃಂಗ
ಸ್ಥಿತನಿರ್ದಂ ಛಾಯೆ ನೀರೊಳ್ ಪೊಳೆಯೆ ಪದಪಿನಿಂ ಕಂಡೆನಾಗಳ್ ನರೇಂದ್ರಾ ॥೩೬॥

ಶೃಂಗಾಗ್ರದಿಂ ನೆಲಕ್ಕೆ ಮ
ನಂಗುಂದದೆ ಬಿರ್ದು ಜೀವಮಂ ತೊಱೆವೆನೆನು
ತ್ತಂಗವಿಸಿ ಬೀೞುತಿರ್ದನ
ನಂಗೆಯ್ಯಿಂದಾಂತೆನೊರ್ವನಂ ನೃಪತಿಲಕಾ॥೩೭॥

ಭಾವಿಸೆ ಚಿಂತಾನಳನಿಂ
ಬೇವುದಱಿಂ ಪ್ರಿಯರ ಸಂಗದಿಂದಗಲ್ದು ಕರಂ
ನೋವುದಱಿಂದಡವಿಗಳೊಳ್
ಸಾವುದೆ ಲೇಸಲ್ತೆ ನೀತಿವಂತರ ಮತದಿಂ ॥೩೯॥

ಪಿತನೆಂಬುದನಱಿದತಿ ದುಃ
ಖಿತನಾದೆಂ ದೇಸೆಗೆಟ್ಟು ಮಚ್ಚಿತ್ತದೊಳೀ
ಕತೆಯಂ ಕೇಳ್ದವರಳ್ಳೆರ್ದೆ
ಧೃತಿಗುಂದದೆ ಬಲ್ಪುವಿಡಿದು ಸೈರಿಸದಪುದೇ॥೪೯॥

ಆ ಧನಿಕನಣುಗಿಯೀ ಪು
ಣ್ಯಾಧಿಕೆ ಪೆಂಪೆಸೆವ ಪೆಸರ ಹೇಮಪ್ರಭೆ ಬಿಂ
ಬಾಧರೆ ಲಾವಣ್ಯ ರಸಾಂ
ಭೋಧಿ ಕಳಾವತಿ ನೆಗೞ್ದ ಕನ್ಯಾರತ್ನಂ ॥೫೬॥

ಇವಳನುಱೆ ರತ್ನದತ್ತಂ
ವಿವಿಧಾಲಂಕಾರ ಸಹಿತಮೊಲವಿಂ ರತ್ನೋ
ದ್ಭವನೆಂಬ ಮಗಧ ನೃಪ ಸಚಿ
ವ ವರಂಗಿತ್ತಂ ಜಸಂ ಪದಿರ್ಮಡಿಸುವಿನಂ ॥೫೭॥

ವಚನ॥ ಅಂತು ರತನದತ್ತನೀ ಕನ್ಯಕೆಯಂ ರತ್ನೋದ್ಭವಂಗೆ ಕುಡಲಿರ್ವಗನ್ಯೋನ್ಯ ಸ್ನೇಹಂ ಕೈಮಿಕ್ಕಿರೆ

ಕಾಮನ ತೂಣೀರಂ ಸುಮ
ನೋ ಮಾರ್ಗಣಗರ್ಭದಿಂ ಮನಂಗೊಳಿಪಂತೀ
ಶ್ಯಾಮೆಗೆ ಗರ್ಭಂ ಮೆಱೆಯಲ್
ಕಾಮಿಸಿದಂ ಕಾಂತನೆಸೆವ ತನ್ನಯ ಪುರಮಂ ॥೫೮॥

ಹೇಮಪ್ರಭೆ ನೀಂ ಕೂಡುವೆ
ಕಾಮಾದ್ರಿಯೊಳಧಿಕನಪ್ಪ ರತ್ನೋದ್ಭವನಂ
ವಾಮೆ ಪದಿನಾಱು ವರ್ಷ
ಕ್ಕೀಮಾತಂ ನಂಬಿರೆಂದುದಾಕಾಶರವಂ॥೬೧॥

ವಚನ॥ ಅಂತಶರೀರವಾಕ್ಯಮಂ ಕೇಳ್ದುದಱಿನೀಕೆಯ ಮರಣಚಿಂತೆಯಂ ಬಿಡಿಸಿ ಕಾಮಶೈಲಕ್ಕೆ ಪೋಗಲೆಂದಿರ್ಪಾಗಳ್

ನೀರೊಳ್ ಬಂದ ಬೞಲ್ಕೆಯಿ
ನೋರಂತಿರೆ ಬೇನೆಮಸಗಿ ಹೇಮಪ್ರಭೆ ವಿ
ಸ್ತಾರದಿನಾಗಳ್ ಪಡೆದಳ್
ವಾರಿಜಸಖನಂತಿರೆಸೆವ ಪುತ್ರನನೊಲವಿಂ॥೬೨॥

ಇನ್ನುಸಿರ್ವುದೇನೊ ತತ್ಸುತ
ನನ್ನೋಡಲ್ ಪಡೆದಳಿಲ್ಲ ಪಾಪಿಷ್ಠೆಯೆನ
ಪ್ಪೆನ್ನಯ ಕಯ್ಯೊಳ್ ಕುಡಲಾಂ
ಬೆನ್ನೀರ್ಗೆಂದೊಂದು ಪುಱವನರಸಲ್ ಪೋದೆಂ॥೬೩॥

ನನ್ನಿಯ ಬಸಿರಂ ತುಂಬಿ
ತ್ತೆನ್ನರಸಂ ಬಾರನೆಪಂದು ಶಿಖಿಯಂ ಪುಗುವಳ್
ತನ್ನಮನದುರಿಗೆ ಸೈರಿಸ
ದಿನ್ನೇನಂ ಪೇೞ್ವೆನೆಂದು ಸುಱ್ರನೆ ಸುಯ್ದಳ್ ॥೬೬॥

ವಾರಣಮಂ ಕಂಡಂಜಿ ಮ
ಹಾರಣ್ಯದೊಳೀಕೆ ಬಿಸುಟುಪೋದ ಕುಮಾರಂ
ಕಾರಣದೊಳಿಲ್ಲಿಗೆಯ್ದಿದೆ
ನಾರಯ್ಕಲ್ ನಿಮ್ಮ ಪುತ್ರನೆಂದೆಱಗಿರ್ದೆಂ॥೬೮॥

ಚಂ॥ ಮನಸಿಜಮತ್ತವಾರಣಮೊ ಕಾಮನ ಕಾರ್ಮುಖಗೇಹಮೋ ಮನೋ
ಜನ ಕೃತಕಾದ್ರಿಯೋ ಕುಸುಮಬಾಣನ ಸಜ್ಜೆಯೊ ಕಂತುರಾಜನಿಂ
ಬಿನ ರತಿಶಾಲೆಯೋ ಮದನನೊಡ್ಡಿದ ಕಾಮುಕಕಂಠಪಾಶಮೋ
ನನೆಕೊನೆವೋದ ಮಾಮರನೋ ಪೇೞೆನೆ ರಂಜಿಸಿದತ್ತು ಮಾಮರಂ॥೮೬॥

ನಯನಂ ಮಾಡಿದ ಪುಣ್ಯವೆಂತುಟೊ ನಿಜ ಶ್ರೀಪಾದವಂ ಕಂಡೆನೆ
ನ್ನಯ ಜನ್ಮಂ ಸಫಲಕ್ಕೆ ಬಂದುದು ಸಮಸ್ತೋರ್ವೀತಳಂ ಕೈಗೆ ನಿ
ಶ್ಚಯದಿಂ ಸಾರ್ದುದೆನುತ್ತೆ ಭಕ್ತಿಭರದಿಂ ಮೆಯ್ಯಿಕ್ಕಿರಲ್ ತಮ್ಮನಂ
ಪ್ರಿಯದಿಂ ಮನ್ನಿಸಿದಂ ನೃಪಾಲತಿಲಕಂ ಶ್ರೀ ಮಾಗಧೋರ್ವೀಶ್ವರಂ॥೧೩೨॥

ಕೃತಜ್ಞತೆಗಳು.
ಗದ್ಯಾನುವಾದಕ:
ವಿದ್ವಾನ್  ಜಿ. ಆರ್. ಶ್ರೀನಿವಾಸ ಅಯ್ಯಂಗಾರ್
ಪ್ರಕಾಶನ:
ಕನ್ನಡ ಸಾಹಿತ್ಯ ಪರಿಷತ್ತು
ಚಾಮರಾಜಪೇಟೆ,  
ಬೆಂಗಳೂರು-೫೬೦೦೧೮.




















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ