ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ನವೆಂಬರ್ 23, 2024

ಮಂಡೀರ ಜಯಾ ಅಪ್ಪಣ್ಣ ಅವರ ಕೊಡುವ ಜಯಭಾರತ

  

   ಮಂಡೀರ ಜಯಾ ಅಪ್ಪಣ್ಣ ಅವರ ಕೊಡುವ ಜಯಭಾರತ

 

ಈ ಕಾವ್ಯದ ಕರ್ತೃ ಶ್ರೀ ಮತಿ ಮಂಡೀರ ಜಯಾ ಅಪ್ಪಣ್ಣ. ಇದು ಕೊಡಗಿನ ಆಡುಭಾಷೆಯಲ್ಲೊಂದಾದ ಕೊಡವದಲ್ಲಿದೆ. ಇದರಲ್ಲಿ ಅತಿ ಮಿಥ್ಯಗಳನ್ನು ಬದಿಗೊತ್ತಿ ವಿಮರ್ಶಕವಾಗಿ ಕಾವ್ಯ ವಿನ್ಯಾಸವಾಗಿದೆ. ಕುಗ್ರಾಮದಲ್ಲಿ ಹುಟ್ಟಿದ ನನಗೆ ಅಂದಿನ ಕಾಲದಲ್ಲಿ ಸಿರಿವಂತ ಮಾತಾಪಿತರು ಉನ್ನು ಶಿಕ್ಷಣವನ್ನು ನೀಡಿ ಆಶೀರ್ವದಿಸಿದ ದಿ॥ ಕೊಅಂಡೀರ ಪಳಂಗಪ್ಪ - ಬೊಳ್ಳಮ್ಮ ಇವರನ್ನು ಎಷ್ಟು ನೆನೆಸಿಕೊಂಡರೂ ಅದು ತುಂಬಲಾಗದ ಭಂಡಾರವಾದೀತು. 


ಕೊಡವ ಭಾಷೆಯಲ್ಲಿ ಸಾಹಿತ್ಯ ಕೃಷಿ ಅದರಲ್ಲೂ ಶಿಷ್ಟ ಸಾಹಿತ್ಯ ಇತ್ತೀಚಿನ ದಿನಗಳಲ್ಲಿ ಬೆಳೆಯುತ್ತಿದೆ ಅಷ್ಟೆ. ಅದರಲ್ಲೂ ಕಾವ್ಯ ಕೃತಿಗಳು ಕಡಿಮೆ. ಮಂಡೀರ ಜಯಾ ಅಪ್ಪಣ್ಣನವರ " ಕೊಡವ ಭಾರತ " ಮೊದಲ ಮಹಾಕೃತಿ ಎನಿಸಿದೆ. ಈ ಕೃತಿಯನ್ನು ಕೊಡವ ಭಾಷೆಯಲ್ಲಿ ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ. ಮಹಾಭಾರತ ಮಹಾಕಾವ್ಯವನ್ನು ಸಂದರ್ಭಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಕೊಡವ ಸಂಸ್ಕೃತಿಯ ಹಿನ್ನೆಲೆಯಲ್ಲಿ ಪುನರ್ನಿರ್ಮಾಣ ಮಾಡಲಾಗಿದೆ. ಕೊಡಗಿನ ಕಾವೇರಿ ತಪ್ಪಲಿನಲ್ಲಿ ಈ ಕಥಾನಕ ರೂಪು ಪಡೆಯುತ್ತದೆ.ಲೇಖಕಿಯ ತವರೂರಾದ ಮಕ್ಕಿ ಶಾಸ್ತಾವು ದೇವರ ಕೃಪೆಯನ್ನು ಬೇಡುತ್ತಾ ಇಡೀ ಕಥೆಯನ್ನು ಶಾಸ್ತನಿಗೆ ನಿವೇದನೆ ಮಾಡುವ ರೀತಿಯಲ್ಲಿ ಈ ಕೃತಿ ಮುಂದುವರಿದು ಸ್ತ್ರೀ ಶೋಷಣೆ ದ್ವಾಪರಾಯುಗ-

ದಿಂದ ಇಂದಿನ ಕಲಿಯುಗದವರೆಗೂ ಹೇಗೆ ಮುಂದುವರಿದೇ ಇದೆ ಎನ್ನುವುದನ್ನು ಲೇಖಕಿ ಪ್ರಸ್ತುತ ಪಡಿಸುತ್ತಾರ .ಮಹಾಭಾರತ ಮಹಾಕಾವ್ಯದಲ್ಲಿ ಬರುವ ಕೆಲವು ಅತಿ ಮಾನುಷ ಶಕ್ತಿಗಳು, ಅನೂಹ್ಯ ಘಟನೆಗಳನ್ನು ಕೈಬಿಡುತ್ತಾ ಅವುಗಳಿಗೆ ತಮ್ಮದೇ ವ್ಯಾಖ್ಯಾನಗಳನ್ನು ಲೇಖಕಿ ಕೊಡುತ್ತಾರೆ. 


ಮುಕ್ತಿ ಶಾಸ್ತನನ್ನು ( ಹರಿಹರ ಸುತ ) ಕೊಡವ ಭಾಷೆಯಲ್ಲಿ "ಸಾರ್ಥಾವು" ಎಂದು ಕರೆಯುತ್ತಾರೆ. ಚಿಕ್ಕಮ್ಮನ ಕಿರುಕುಳ ತಾಳಲಾರದೆ ಶಬರಿಮಲೆ ಅಯ್ಯಪ್ಪ ಒಬ್ಬ ಜೈನ ಬಾಲಕನೊಂದಿಗೆ ಕೊಡಗಿನ ಮಕ್ಕಿ ಎಂಬ ಸ್ಥಳದಲ್ಲಿ ನೆಲೆ ನಿಲ್ಲುತ್ತಾನೆ. ಈ ದೇವನೆಲೆ ಲೇಖಕಿಯ ಮನೆತನದ ಕುಲದೇವತೆಎಂದು ಲೇಖಕಿ ಸ್ಮರಿಸುತ್ತಾ ಕಾವ್ಯದುದ್ದಕ್ಕೂ ತನ್ನ ಕುಲದೇವತೆ ಸಾರ್ಥಾವುನೊಂದಿಗೆ ಕಥೆಯನ್ನು ಬೆಳೆಸುತ್ತಾ ಈ ಕಥನ ಕಾವ್ಯವು ಸಾಗುವುದು ವಿಶೇಷವಾಗಿದೆ. 


ಲೇಖಕಿಯು ಇದನ್ನು ಭಾಮಿನಿಯ ಲಯದಲ್ಲಿ ಬರೆಯುತ್ತೇನೆ ಎನ್ನುತ್ತಾರೆ.  ಆದರೆ ಆದಿಪ್ರಾಸ ಅಂತ್ಯಪ್ರಾಸಗಳನ್ನು ನಿಯಮಿತವಾಗಿ ತರೈವ ಸಲುವಾಗಿ ಇದನ್ನು "ವಿವೇಕ ಷಟ್ಪದಿ" ಎಂದೂ, " ಇತ್ತಟ ವಾಹಿನಿ ಎಂದೂ ಕರೆಯುತ್ತಾರೆ. ೧೮ ಪರ್ವಗಳ ಈ ಮಹಾಕಾವ್ಯ ಮುಕ್ತ ಛಂದಸ್ಸಿನಲ್ಲಿ ಷಟ್ಪದಿ ರೂಪದಲ್ಲಿ ಸಾಗುತ್ತದೆ.


ಮಹಾಭಾರತ ಕಾವ್ಯಕ್ಕೆ ಮೊದಲ ಶೃಂಗಾರ 


ಪೊಮ್ಮಾಲೆ ಕುಡುಮಲೆ, ಕುರುಭೂಮಿ ಆ ಕೊಡಗುದೇಶ, ಛಪ್ಪನ್ನ, ಮತ್ಸ್ಯದೇಶ.


ಬಾಳು ನೀ ಮಾನವನೆ ಬಾಳೆಲೊ 

ಕೇಳು ಹಾಡುವೆ ಮಕ್ಕಿಯೊಡೆಯನ 

ಕೀರ್ತಿಯೊಳು ಕುಡುಮಲೆಯ ಕಾಯುವ ನನ್ನ ದೇವನನು

ತಾಳ ಮೇಳದಿ ಚಂದ್ರವಂಶದೊ 

ಳಾಳಿ ಮೆರೆದರು ಕಾಲಗರ್ಭದೊ 

ಳೇಳಿಗೆಯ ಪುರು ಕುರು ಯಯಾತಿಯರರಸರಾ ಕಥೆಯ ॥೧॥


ಹಿಂದಿನದು ತಾವೆಲ್ಲ ಬರೆದರು 

ಇಂದಿನಾ ಕಲಿಗಾಲ ಕವಿಗಳು 

ತಾಳ ಬಾರಿಸಿ ನಲಿದರುಮ್ಮತ್ತಾಟ ನಾರಿಯರು

ವೀರ ಶೂರರು ಕತ್ತಿಯಾಟವ 

ಬೀಸಿ ಬೊಳಕಾಟದಲಿ ಚೌರಿಯ 

ಸೇರಿ ಕುಣಿದರು ಪರೆಯಕಳಿಯಲಿ ನಂತರಪ್ಪುತಲಿ ॥೨॥ 


ಅಸುರ ತಾನವ ದೊರೆ ಮೃಗೇಶನು 

ಕಠಿಣ ತಪದಲಿ ಯಾಗಮಾಡಲು 

ನಿಟಿಲನೇತ್ರನು ಮೆಚ್ಚಿ ಬಂದನು ರಾಕ್ಷಸನ ಬಳಿಗೆ 

ಪರಶಿವನ ಕಂಡೊಡನೆ ಹರುಷದಿ 

ಶಿರವ ಪಾದದೊಳಿರಿಸಲಾಕ್ಷಣ 

ವರವ ಬೇಡಿಕೊ ಕೊಡುವೆನೆಂದನು ಹರನು ತಾನಾಗ॥೩॥ 


ಪರಮ ಭಕ್ತಿಯ ತಾನು ನಟಿಸುತ 

ವರವ ಬೇಡಿದನಗ್ನಿ ಕರವನು

ಮೆರೆಯಲಗಣಿತ ಶಕ್ತಿ ಬೇಕೆಂದಲ್ಲಿ ಕೇಳಿರಲು

ಅರಿಯದೆಯೆ ಮೆಲುದನಿಯ ಬೇಡಿಕೆ 

ವರವನಿತ್ತು ತಥಾಸ್ತು ಎಂದನು 

ದುರುಳನಿವ ಕರವನೆತ್ತಿ ನಕ್ಕನು ಪರಶೆವನಶಿರಕೆ॥೪॥ 


ಓಡಿರಲು ಪರಶಿವನು ಬೆದರುತ 

ಕಾಡು ಸುತ್ತುತಲೋಡುತೋಡುತ 

ನೋಡಿ ಹತ್ತಿಯ ಮರದ ಪೊಟರೆಯ ಒಳಗೆ ನುಗ್ಗಿದನು 

ಕಾಡಲಸುರನು ಅಗ್ನಿ ಕರದಲಿ 

ಬಾಡಿತದು ಸುತ್ತೆಲ್ಲ ಮರಗಿಡ 

ಕಾಡುಬೇಡರ ಉಸಿರು ಕಟ್ಟಿತು ಬೆಂಕಿಯಾ ಹೊಗೆಗೆ॥೫॥ 


ಹರನ ಹುಡುಕುತ ಹರಿಯು ಬರುತಿರೆ 

ದುರುಳ ರಾಕ್ಷಸ ಹರನ ಹುಡುಕಿರೆ 

ಹರನೆ ಬಾರೋ ಎಂಬ ಕೂಗದು ಕೇಳಿತಾ ಹರಿಗೆ 

ಹೊರಗೆ ಇಣುಕುತಲಿರಲು ಪರಶೆವ 

ಹರಿಯು ಈ ಪರಿಯನ್ನು ಕಾಣುತೆ 

ಹರನ ದುರ್ಗತಿಯರಿತು ಕರೆಸಿದನಾಗ ಮೋಹಿನಿಯ॥೬॥ 


ನೋಡು ನೀ ಬಾ ಚೆಲುವೆ ಮೋಹಿನಿ 

ಮಾಡು ನಾಟ್ಯವ ತಡೆಯಲಸುರನ 

ಬೇಡಿರಲು ತಾನಾಗ ಮೋಹಿನಿ ಕುಣಿಕುಣಿದು ತಡೆಯೆ

ಮೋಡಿಯಲಿ ಮೈ ಮಣಿಸಿಯಾಡಲು 

ನೋಡಿ ರಾಕ್ಷಸ ಕಾಮವಾಂಛೆಗೆ

 ನೋಡುತಲೆ ಮರುಳಾಗಿ ಕುಣಿದನು ತಾನು ಜತೆಗೂಡಿ॥೭॥ 


ಕುಣಿದಿರಲು ನವಿಲಂತೆ ಬಳುಕುತ 

ಮಣಿದ ದಾನವ ಬಳಿಗೆ ತೆರಳುತ 

ಗುಣವತಿಯ ಮೈ ಮುಟ್ಟ ಬಂದನು ತಾನು ನಗುನಗುತ 

ಕೇಳು ನೀ ದೊರೆ ಸುಂದರಾಂಗನೆ 

ಏಳು ಉಮ್ಮತ್ತಾಟ್ ಭಂಗಿಗೆ

ಕಾಲ ಹೆಜ್ಜೆಗೆ  ಹೆಜ್ಜೆ ಜೋಡಿಸು ಕೇಳಿಗೇ ಕರೆವೆ॥೮॥ 


ಜಾರನಸುರನು ಹರುಷದಿಂದಲಿ 

ಪೂರ ನಂಬಿಕೆಯಿಂದ ಕುಣಿಯಲು 

ಪೋರಿ ಮೋಹಿನಿ ಕೆಣಕಿದುಳು ಕರವನ್ನು ತಲೆಗಿರಿಸಿ

ನೀರೆಯೆದುರಲಿ ಮದದೊಳಸುರನು 

ಘೋರ ವಿಧಿಯದು ಬಂದುದರಿಯದೆ 

ಮಾರಜನಕನ ವರದ ಕರವನೆ ತನ್ನ ತಲೆಗಿಡಲು॥೯॥ 


ಆರ್ಯದೇವನು ಕರೆದು ಹರನನು 

ಕಾರ್ಯ ಮುಗಿದಿಹಕಥೆಯ ಹೇಳಿದ 

ವೀರ್ಯಕರತಲೆಗಿಡಲು ಭಸ್ಮಾಸುರನೆ ಹತನಾದ 

ಕಾರ್ಯ ಸುಲಲಿತ ನಡೆಸುವವನೆ 

ಆರ್ಯ ದೇವನೆ ಮಾಯಗಾರನೆ

ಸೂರ್ಯನಾಣೆಗು ಗೋಪ್ಯವಿರಿಸದೆ ತೋರು ಮೋಹಿನಿಯ॥೧೦॥ 


ಹರನೆ ದ್ರಾವಿಡ ಕುಲದ ರಾಜನೆ 

ಗಿರಿಯ ಕನ್ಯೆಯು ಚೆಲುವೆ ಮೋಹಿನಿ 

ಭರದಿ ಬೊಳಕಾಟಡಿರೆನ್ನುತ ತೆರಳಿದವ ನೀನೇ

ಚುರುಕು ಕಾಮನ ಕಣ್ಣ ಬಾಣದಿ 

ತರತರದೆ ನಲಿದಾಡಿ ಮೋಹಿನಿ 

ಹರನ ಜೊತೆಯಲಿ ಕಲೆತು ಪಡೆಯಲು ಕಾಮಭೋಗವನು॥೧೧॥


ತುಂಬಿತದು ದಶಮಾಸ ಗರ್ಭಕೆ 

ಡಿಂಬವುದಿಸಿತು ಗಂಡು ಮಗುವದು

ಶಂಭು ಮಾದೇಶ್ವರನ ಮಾನಕೆ ಬಂದಿತದು ಕುತ್ತು

ಸಂಭ್ರಮಿಸೊ ಮೋಹಿನಿಯ ಮುತ್ತದು 

ಸಂಭವದಿ ಹರಗಾಪತ್ತು ತಂದಿತು 

ಸಂಬಳಿಸೆ ಮರದಲ್ಲಿ ಕಂದಗೆ ತೂಗು ತೊಟ್ಟಿಲದು॥೧೨॥ 


ಬಂದ ಪಂದಳ ರಾಜ ಬೇಟೆಗೆ 

ಅಂದು ಮಕ್ಕಳ ಫಲವದಿಲ್ಲದೆ

ನೊಂದಿರುತ ಮರದಲ್ಲಿ ಚಿನ್ನದ ತೊಟ್ಟಿಲನು ನೋಡಿ

ಕಂದನನು ಕೈಗೆತ್ತಿಕೊಳುತಲಿ 

ಬಂದನರಮನೆ ರಾಣಿಗೆಂದನು

ಇಂದು ಕಷ್ಟವು ತೀರಿತೆಮ್ಮದು ಶಿವನ ದಯದಿಂದ ॥೧೩॥ 


ಕಂದನನು ತಾನಪ್ಪಿ ರಾಣಿಯು 

ಅಂದ ಚಿನ್ನದ ಸರದ ತಾಯತ 

ಸುಂದರನು ಮಣಿಕಂಠನಾದನು ಕೊರಳ ವಜ್ರಮಣಿ 

ಅಂದು ಶಿವ ಮೋಹಿನಿಯರಿಬ್ಬರು

ಒಂದು ಮಾಡಲು ಬ್ರಹ್ಮಶಕ್ತಿಯ 

ಇಂದ್ರ ಪದವಿಯೆಸೋತು ಬಿದ್ದಿತು ಕಲಿಯುಗದ ಮಹಿಮೆ॥೧೪॥ 


ಸವೆದು ದಿನಗಳು ಕಾಲ ಕಳೆಯಲು 

ಸವತಿ ರಾಣಿಗು ಪುತ್ರ ಜನಿಸಲು 

ಭವನದಲಿ ಹಗೆತನದ ಬೆಂಕಿಗೆ ಸೋತಳಾ ರಾಣಿ 

ಸವತಿ ಮತ್ಸರ ದಹಿಸುತಿರಲದು 

ನೆವನಕಾ ಮಣಿಕಂಠ ನೊಂದನು

ತವಕ ಮೊದಲಾಯ್ತಲ್ಲಿ ಸವತಿಗೆ ದೊರೆತನದ ಪಟ್ಟ॥೧೫॥ 


ಸಿಕ್ಕಿ ಸೋಲುವ ಕವಿಗಳನುಭವ 

ಚುಕ್ಕಿಯಂತೆಯೆ ಮಿನುಗುತಿರುವುದು 

ರೆಕ್ಕೆ ಪುಕ್ಕವು ಬಲಿತ ಕೂಡಲೆ ಹಕ್ಕಿ ಹಾರುವುದು 

ಮುಖ್ಯ ಕಥೆಯಿದು ಹಿಂದೆ ನಡೆದುದು 

ಮಕ್ಕಿಯೊಡೆಯನ ಜೊತೆಗೆ ಪೇಳುವೆ 

ಅಕ್ಕರೆಯಲಿಂದಿದನು ಓದಿರಿಯೆಂದು ನಮಿಸುವೆನು॥೧೬॥


ಕೊಡವ ಮಹಾಕಾವ್ಯ ( ಮಾಕಾವ್ಯ ) 

ಐಯ್ಯಪ್ಪ ಸಾರ್ಥಾವು ಕಥೆ ( ಭಜನೆ )ಎಂದು 


ಪ್ರಾರ್ಥನೆ:-


ಅಂದು ವ್ಯಾಸನು ಗಣಪಗರುಹಿದ 

ಅಂದಿಗಿಂದಿನದೆಲ್ಲ ಕೀರ್ತಿಯು 

ಕೊಡವ ಭಾಷೆಯಲಿಂದು ಬರೆಯುವ ಶಕ್ತಿಕೊಡು ಶಿವನೆ

ಇಂದು ನೀನೇ ತಂದ ಶಕ್ತಿಯೊ 

ಳಿಂದು ನಾನಿಂದಾವ ಸತ್ಯದಿ ಅರಿತು ಬರೆಯುವೆನೋ॥೨೨॥ 


ವೇದ ಪಂಚಮ ಕಾವ್ಯ ಬರೆಯಲು

ಆದಿ ಕಾವ್ಯವೆ  ನಿನ್ನ ಓದಿಗೆ 

ಮೋದದಲಿ ಮನ ಬಹಳ ಎಚ್ಚರ ತಂದಿತದು ನನಗೆ

ಯಾವ ಹೆಸರದು ಸಿಗದೆ ಹೋಗಲು 

ಕೊಡವ ಭಾಷೆಯ ಹೆಸರೆ ಸುಳಿಯಲು 

ಬರೆದೆ ನಾನಿದ ಕೊಡವದಲಿ " ಜಯಭಾರತ " ಎಂದು ॥೨೩॥ 


ಹಿಂದೆ ಕವಿಗಳ ಬರಹ ವಿಧವಿಧ 

ಕಂಡು ನನ್ನಯ ಮನದಲಾತುರ

ಕಂಡುಹಿಡಿದೆನು ಕಂಡುಕೊಂಡೆ ವಿವೇಕ ಷಟ್ಪದಿಯ 

ಎರಡನೆಯ ಅಕ್ಷರದ ಪ್ರಾಸವು 

ಅಂತ್ಯದಕ್ಷರ ಮತ್ತೆ ಪ್ರಾಸವು 

ತೂಕ ತಪ್ಪದೆ ಇಹುದು ಛಂದಸ್ ಪ್ರಾಸ ಸಾಕ್ಷರದಿ॥೨೪॥


ನಮಿಸುತಲಿ ನಾ ತಂದೆ ತಾಯಿಗೆ 

ನಮಿಸುವೆನು ಸಾರ್ಥಾವು ದೇವನ 

ನಮಿಸುವೆನು ಗುರುಗಳನು ಆ ಹರದಾಸ ವರಕವಿಯ 

ಕ್ಷಮಿಸೆನುತ ಗಣಪನಿಗೆ ನಮಿಸುತ

ನಮಿಸುತಲಿ ಕಾವೇರಿ ಮಾತೆಗೆ 

ಎರಡು ಮನೆತನ ಗುರುಗಳಿಗೆ ಚೌಂಡ್ಯಮ್ಮೆ ಇಗ್ಗುತಗೆ॥೨೫॥


ಅಂದು ಬ್ರಹ್ಮನ ಮಗಳು ನೀನೇ 

ಮುಂದೆ ನೀ ಮಗಳಾ ಕವೇರಗೆ 

ಅಂದಗಸ್ತ್ಯನ ವರಿಸಿ ತೀರ್ಥದ ರೂಪದಲಿ ಹರಿದೆ

ಅಂದು ದೇವರು ಬಂದ "ಪಾಡಿ"ಯೊ 

ಚಂದ ಬೆಳೆ "ಪೇರೂರು" ನೆಲಜಿ"ಯೊ 

ಕುಂದದಿಗ್ಗುತ್ತಪ್ಪ ದೇವನ ನೆಲದಿ ಹೂಮಳೆಯೊ॥೨೬॥ 


ನಿಜದ ವಿಧಿಯಲಿ "ಕಣಿಯ" ಪೂಜಿಪೆ 

ವಜನ ಕಾವ್ಯದ ಕಡ್ಡಿ ಹಿಡಿಯುವೆ

 ಸೃಜನ ಕವನವ ಗಂಧ ತೀರ್ಥವನದರಲೆರೆಯುವೆನು

ಸಾಕು ಸಾಕೆಲೊ ಮಕ್ಕಿಯೊಡಯನೆ 

ಜೋಕೆಯಲಿ ವಿಧಿ ಬರೆವ ಶಿವನೇ 

ಶೇಖರಿಸಿ ಮುದ ಬಯಸಿ ಭಾರತ ನಿನ್ನದೇ ಕವನ॥೨೭॥ 


ವ್ಯಾಸ ಭಾರತ ಪಂಪ ಭಾರತ 

ಭಾಸ ಭಾರತ ರನ್ನ ಭಾರತ 

ಆಸೆ ದೈವತ್ವದಲಿ ಗದುಗಿನ ಕವಿಯ ಭಾರತವು 

ದೋಷರಹಿತ ಕರ್ಣಾಟ ಭಾರತ

 ರಾಶಿಯದು ಮಹಾಭಾರತವು ನಿಜ 

ಮೋಸವಿಲ್ಲದೆ ಕೊಡವ ಜಯಭಾರತವು ಸತ್ಯದಲಿ॥೨೮॥ 


ಆದಿ ಕಥೆಯಲಿ ಕವಿ ಕುಮಾರನು 

ನೀಡಿ ಉಪಮೆಯು ಬೆರೆತ ವಿವರವ 

ಬೋಧನೆಯಲೀ ಹಾಸ್ಯ ಕಂಡೆನು ನೀತಿ ತೂಕದಲಿ

ಓದಿ ಇರುವಿರೆ ಅವನ ಕವಿತೆಯ 

ಗಾದೆಯೊಗಟಿನ ಅರ್ಥ ಸೊಗಸದು 

ಬೂದಿ ತಲೆಯಾ ಜನಕದರಿಯದು ಗತ್ತು ಗಂಭೀರ॥೨೯॥ 


ಬಳಪ ಕಡ್ಡಿಯ ಹಿಡಿಯಲಿಲ್ಲವೊ 

ಬರೆದ ಬರಹವನಳಿಸಲಿಲ್ಲವೊ 

ಬರೆವುದಕೆ ಆಧಾರ ಗ್ರಂಥವು ಮೊದಲೆ ತಾನಿರದೆ 

ಫಲವು ಕೃಷ್ಣನ ಗದಗು ವೇದವೊ 

ಅಲೆಯು ಕುರುಕುಲಕ್ಷೇತ್ರ ಯುದ್ಧವೊ 

ಫಲಕೆ ಸುಜನರು ತಾಳ್ಮೆಯಿಂದಲಿ ಓದಬೇಕಂತೆ॥೩೦॥ 


ಪಟ್ಟ ದೊರೆಗದು ವೀರಗಾಥೆಯೊ 

ವಿಪ್ರರಿಗೆ ವೇದಾಂತ ಕಥೆಯೊ 

ಮತ್ತೆ ಸುಳ್ಳರು ಮಂತ್ರಿಗಳಿಗೆ ವಿಚಾರ ಕಥೆಯಂತೆ 

ಗಟ್ಟಿ ಸ್ತ್ರೀ ಶೃಂಗಾರ ಕಥೆಯೋ 

ಕಟ್ಟಿ ಕಾವ್ಯಕೆ ರಾಗ ರಸವೋ 

ಇಟ್ಟು ತಲೆ ಬಾಗುತ್ತಾ ಕಲಿಯಲು ತಾನೇ ಗುರುವಂತೆ॥೩೧॥ 


ಕೇಳಿ ಮಕ್ಕಳೆ ಕೊಡವ ನುಡಿಯಲಿ 

ಬಾಳಿ ಭಾರತ ನನ್ನ ಭಾಷೆಲಿ 

ಬಾಳೆ ಕಡಿಯುತ ಕೃಷ್ಣ ನಲಿಯಲಿ ಮಕ್ಕಿ ಪ್ರಾಂಗಣದಿ 

ಏಳು ಜನುಮದ ಪಾಪವೆಲ್ಲವು 

ಬಾಳು ನಿಮ್ಮದು ವೃದ್ಧಿಯಾಗಲಿ 

ತಾಳ್ಮೆಯೋದಿನ ಕೊಡವ ಭಾರತವಿರಲಿ ಮನದಲ್ಲಿ॥೩೨॥ 


ಕೊಡವ ಭಾರತ ಪಠಿಸಿದರೆ ಕಾ 

ವೇರಿ ತೀರ್ಥದಿ ಮಿಂದ ಫಲವದು 

ವೇದ ಮುನಿಗಳ ಮಂತ್ರ ಜಪಗಳ ಪಡೆದ  ಯೋಗಫಲ 

ಓದಿ ಜಯ ಮಹಾಭಾರತದ ಈ ಫಲ 

ಕಳೆದ ಜನುಮದೊಳಲ್ಲಿ ಕನ್ಯಾ ದಾನದಾ ಫಲವು॥೩೩॥ 


ಬಗಿನೆ ಮರದಲಿ ಸುರಿದ ಸೇಂದಿಯ 

ಕೆನೆಯ ನೊರೆಯಲಿ ನಲಿವ ಮಣಿ ತೆರ 

ನುಡಿವ ಕೊಡವದ ನುಡಿಯು ಸುರುಳಿಗೆ ಮಣಿಯ ನೇಯ್ದಂತೆ 

ಅರಿತವಗೆ ಬಂಗಾರ ಚೀಲವು 

ಕುರುಡ ಕೇಡಿಗ ಕಂಡು ಅರಿಯನು 

ಬರದೆ ನುಡಿದವರಿದನು ಸಾರಿನ ಸೊಪ್ಪು ಕರಿಬೇವು॥೩೪॥ 


ವ್ಯಾಸ ವೇದ ಕುಮಾರವ್ಯಾಸನ 

ಭಾಷೆಗೆನಿತಿದು ನಾನು ಸಾಟಿಯೊ 

ಆಸೆಯೋದಲಿ ಹಾಡಿ ಕುಣಿಯಲಿ ಜನರು ನನ್ನವರು

ಸಾಸದಲಿ ಕವಿ ವ್ಯಾಸ ಬರೆದನು 

ಭಾಷೆ ಗೀಜಗ ಗೂಡು ತೆರದಲಿ 

ಮೋಸವಾಗದು ಇದನು ಇಟ್ಟರೂ ಅರ್ಥ ತಾನುಂಟು॥೩೫॥


ಆರು ಸಾಲಿನ ಭಾಮಿನಿಯ ಲಯ 

ಬಾರಿ ಲಘು ಗುರು ಮಾತ್ರೆ ವಿಧದಲಿ 

ಭಾರತದ ಮಹಾಕಾವ್ಯ ರಚಿಸಿದ ಕುಮಾರ ಕವಿರಸದಿ 

ಭಾರತವೆ ಇದು ಕೊಡವ ಕಾವ್ಯದಿ 

ಸೇರಿ ಎರಡನೆ ಅಂತ್ಯ ಪ್ರಾಸದಿ 

ಆರು ಸಾಲಿನ ಚರಣ ಬರೆಯುವೆ ಹೆಸರು "ಜಯ"ವೆಂದು॥೩೬॥ 


ನವರಸದಿ ಕುಣಿದತ್ತಿಮಬ್ಬೆಯು

ಕವಿಯು ರನ್ನಗೆ ಕಾವ್ಯ ಹಬ್ಬವು 

ಕವಿಕುಮಾರಗೆ ವೀರನಾರಾಯಣನ ಪದ ತವಕ 

ಮಕ್ಕಿಯೊಡೆಯನ ಕಂಡ ಕ್ಷಣದಲಿ 

ಮನವು ತಾ ನವಿಲಾದ ಮಹಿಮೆಯು 

ಯುಗದ ಹಿರಿಮೆಯೊ ಕಾವ್ಯ ಜನುಮವೊ ಕೊಡವರಾ ಹಿರಿಮೆ॥೩೭॥ 


ಪ್ರಾಸದಲಿ ನಲಿದಾಡಿ ಕಾವ್ಯವು 

ಆಸೆಯಲಿ ನಾ ಶಬ್ಧ ಹುಡುಕುತ 

ಭಾಷೆ ತಾಯಿಯದೆಂದು ಪ್ರೀತಿಯ ವರದೆ ನಾ ನೆನೆದು

ಮೋಸ ಹೋಗದ ರೀತಿಯೊಂದದು 

ಆಶೆಯಲೆ ಶಾರದೆಯ ಬೇಡುತ

ಸಾಸಕಿದು ಸಾರ್ಥವು ಮೆಚ್ಚಿದ ನನ್ನ ಕೈ ಹಿಡಿದು॥೩೮॥ 


ಅಂದು ಜನಮೇಜಯನ ಕರೆಯುತ 

ಬಂದ ವೈಶಂಪಾಯನಾ ಮುನಿ

ನಿಂದು ಹೇಳಿದ ರಾಮಕೃಷ್ಣರ ಜನುಮದ ಕಥೆಯಾ

ಕಂಡೆ ಕನಸಲಿ ತಂದೆ ತಾಯಿಯ 

ಬಂದು ನಕ್ಕನು ಆದಿ ಕವಿಯವ 

ನಿಂದು ಬರೆಯಲು ಲಕ್ಷ್ಮಿ ಸರಸ್ವತಿ ಕರವ ಹಿಡಿದವರು॥೩೯॥ 


ಕಂಡೆ ಕನ್ನಡ ಶಬ್ಧ ಸಾಗರ 

ಕಂಡು ನನಗಿದೆ ಬಹುಳ ಎಚ್ಚರ 

ಖಂಡಿತಾ ಗಿಣಿಮಾತು ಕೊಡವದಿ ಶಬ್ಧಮಣಿ ನೂರಾ? 

ಕಂಡೆ ಪಂಪನ ಮುತ್ತುಮಣಿಸರ 

ಕುಂದ ವಜ್ರವೆ ಕವಿಕುಮಾರನು

ಉಂಟು ಕೊಡವವು ಎಂಜಲಾಗದೆ ತರಲೆ ನಾ ವಿವರ?॥೪೦॥ 


ಕೊಡವ ದೇಶದೊಳಂದು ನೆಲೆಸುತ

ಕುಡಿದು ಕಾವೇರಮ್ಮನ ತೀರ್ಥವ

ಹಗೆಗಳನು ಯುದ್ಧದಲಿ ಜಯಿಸಿದ ರಾಜಭೋಗಜರು 

ಕೊಡವ ಬಾಳ್ವೆಯ ಕುಲವು ಗೋತ್ರವು 

ಕೊಡುಗೆ ಕ್ಷತ್ರಿಗೆ ಬಿಲ್ಲು ಬಾಣವು 

ಕಡುಗಲಿಗಳಿವರೀ ಪರಂಪರೆ ಪಾಂಡವರ ಕುಲವು॥೪೧॥ 


ಜ್ಞಾನಿಗಳು ಇದನೋದಿದವರೇ 

ದೃನಿಗಳು ಇದನರಿತವರು ನಿಜ 

ಮಾನಿಸುತ ಮಕ್ಕಳಿಗೆ ಪೇಳಲು ಮೇರು ದಾನಿಗಳು

ಬದುಕಿನಲ್ಲಿದಕಾಗಿ ದುಡಿದಿಹೆ 

ವಿಧಿಯ ವರದಲಿ ಹುಟ್ಟಿ ಕವಿಗಳು 

ಬದುಕಿನಲಿ ಕರ್ನಾಟ ಕವಿಗಳು ಓದುತಿರಲಿದನು॥೪೨॥ 


ತಿದ್ದುವವರಿದ ಹುಟ್ಟಲಿಲ್ಲವು 

ಹುಟ್ಟಿದರೆ ಕಾವೇರಿ ಕುವರನು 

ಪಟ್ಟದಾನೆಯದಾಗಿ ಹುಟ್ಟಲಿ "ಕಾರೊಣನ" ಮಗನು

ಗಟ್ಟಿ ಪ್ರಾಸದಿ ಸಿಡಿದು ಪಟಪಟ 

ಗಟ್ಟಿ ಪುಟ ಹೊರಬಿದ್ದ ಸಾಹಸ 

ಹುಟ್ಟು ಕಾವ್ಯದ ಕಡ್ಡಿ ಕುಣಿತದ "ರತ್ನ ಸಾಹಿತ್ಯ" ॥೪೩॥ 


ಬೆಣಗು ಕವಿಗಳ ಲೆಕ್ಕಿಪನೆ ನಾ 

ನೆಂದು ನುಡಿದನು ನಾರಣಪ್ಪನು 

ಇಂದು ಮತ್ತದೇ ಮಾತುಗಳನೇ ಕೇಳುವೆನು ನಾನು 

ಮನದೊಳುದಿಸುವ ಅರ್ಥವೆರಡದು 

ಜನರ ಮನಕದು ನ್ಯಾಯ ಸಮ್ಮತ 

ಮನನ ಮಾಡುತಲಿದನು ಬರೆದಿಡೊ ಯೋಗ ತಾನುಂಟು॥೪೪॥ 


ಮುತ್ತಿನಾದಿಶಕ್ತಿಯ ಶಕ್ತಿ ಮಂಗಳಂ 

ಮತ್ತೆ ಆ ಹದಿನೆಂಟು ಪರ್ವಕೆ 

ಗತ್ತಿನಾ ಕವಿ ವೇದವ್ಯಾಸಗೆ ಮಂಗಳವು ಮುದದಿ

ಹತ್ತು ಅವತಾರನಿಗೆ ಮಂಗಳ 

ಗತ್ತು ಧರ್ಮದ ಕೃಷ್ಣ ಮಂಗಳ 

ಮುತ್ತು ಮಣಿ ಪೋಣಿಸಿದ ಮಹಾಭಾರತಕೆ ಮಂಗಳವು॥೪೫॥ 


॥ ಓಂ ಸರ್ವಪುಣ್ಯಾಯೈ ನಮಃ ॥


೫ - ರಾಜಿ ತೀರ್ಮಾನ ಪರ್ವ


ಸಮಯ-೩೬ 


ದೇವ ಮಧು ಸಾರ್ಥಾವು ಮಾಯೆಯೆ 

ಸಾವಕಾಶದಿ ರಥದಿ ನೆಂಟರು 

ತಾವು ಹಿರಿಯರು ಉಗ್ರಸೇನನು ಮತ್ತು ವಸುದೇವ 

ಕೋವಿದನು ದೊರೆಯಾ ವೆರಾಟನ 

ಭಾವಿ ಕಾರ್ಯವನೆಲ್ಲ ತೀರಿಸಿ 

ತಾವು ದಂಪತಿ ದ್ವಾರಕರಮನೆ ರುಕ್ಮಿಣಿಯ ಹಿರಿಮೆ॥೧॥ 


ದೊರೆ ವಿರಾಟಗೆ ಬಹಳ ಹೆಮ್ಮೆಯು 

ಭರತ ಕುಲದಲಿ ಮಗಳ ಸ್ಥಾನಕೆ 

ದುರುಳ ದುರ್ಯೋಧನನು ಪಾಂವಗಿಲ್ಲ ಸಹಬಾಳ್ವೆ

ಕುರುಗಳಿಗೆ ದುರವದರ ಮಾತದು 

ತೆರೆದ ಮನ ಪಾರ್ಥನಿಗೆ ಕೃಷ್ಣಗೆ

 ಅರಿತು ದ್ರೌಪದಿ ಭೀಮಸೇನಗೆ ಧರ್ಮವಿದು ಕರ್ಮ॥೨॥ 


ಆ ವಿರಾಟನ ತಲೆಯದೋಡಿತು 

ಸಾವಕಾಶದಿ ಸಭೆಯೊಳೆಲ್ಲರ 

ಧಾವಿಸುತ ದೊರೆ ಕುಳಿತು ಸಿಹಸನದಿ ತಾನಾಗ 

ಧರ್ಮಜನು ಬಲರಾಮ ಕೃಷ್ಣರು 

ಅರ್ಜುನನು ಬಲ ಭೀಮಸೇನನು 

ತುರ್ತಲುತ್ತರನೊಡನೆ ಬಂದರು ನಕುಲ ಸಹದೇವ॥೩॥ 


ದ್ರುಪದ ಧೃಷ್ಟದ್ಯುಮ್ನ ಸಾತ್ಯಕಿ 

ತಪನೆ ದ್ರೌಪದಿಯಾ ಸುಧೇಷ್ಣೆಗೆ 

ನೆಪದಿ ರಾಣಿಯರಾ ಸುಭದ್ರೆಯು ರಾಜ ಸಭೆಯಲ್ಲಿ 

ದೊರೆಯು ಸ್ವಾಗತವನ್ನು ಬಯಸಿದ 

ಕರೆದ ಕಾರ್ಯವನಾಗ ತಿಳಿಸುತ 

ಶುರುವಿನಲಿ ಮಾತಾಡು ಎಂದನು ತಾನು ಕೃಷ್ಣನಿಗೆ॥೪॥ 


ಕರೆದು ಧರ್ಮಜನನ್ನು ಪಗಡೆಗೆ 

ಮರೆಯ ಮೋಸವ ಮಾಡಿ ಕೌರವ 

ದುರುಳ ಶಕುನಿಯ ಮೋಸ ಧರ್ಮಜ ರಾಜ್ಯವನೆ ಸೋತ 

ಕಳಿಸಿ ಪಾಂಡವರನ್ನು ಕಾಡಿಗೆ 

ಉಳಿಸಿ ವರುಷದೊಳಾ ನಿಬಂಧನೆ 

ಗಳಿಸೆ ರಾಜ್ಯವನೀಗ ಸಹಿಸಿದರೆಲ್ಲವನು ತಾವು॥೫॥ 


ಪಡೆಯಲೀಗವರರ್ಧ ರಾಜ್ಯವ 

ಕೊಡಲಿ ಘನತೆಯಲೀಗ ಕೌರವ 

ಕೊಡಲಿ ಇಂದ್ರಪ್ರಸ್ಥ ನಗರವ ಧನ ಖಜಾನೆಯನು 

ನಡೆದು ಧರ್ಮದಿ ಬಿಡಲಿ ವೈರವ 

ಕೊಡದೆ ಹೋದರೆ ಬರಲಿ ಯುದ್ಧಕೆ 

ನಡೆವ ಯುದ್ಧದ ನಾಶ ತಡೆಯಲು ಮಾಡುವುದ ಮಾಡಿ॥೬॥ 


ತಮ್ಮನಾಡಿದ ಮಾತಿಗಾ ಬಲ 

ಸಮ್ಮತಿಸದೆಯೆ ಕೊರತೆ ಕಾಣುತ

 ಧರ್ಮ ಸೋಲಲು ಆ ಸುಯೋಧನ ಹೇಗೆ ಕಾರಣನು 

ಛಲಬಲದಿ ಸೋದರರ ಧೈರ್ಯದಿ

 ಕುಲದ ಹೆಣ್ಣನು ಮಣ್ಣ ಪಣದಲಿ 

ಕಳಿದುಕೊಂಡನು ಶಕುನಿ ಕರ್ಣರ ದೂರಿ ಫಲವೇನು??॥೭॥ 


ನಯವಿನಯ ಪ್ರೀತಿಯಲಿ ಬಗ್ಗುತ

ಬಯಸಿ ಧೃತನನು ಕೇಳಿ ನೋಡಲಿ 

ಜಯವು ಭೀಷ್ಮನು ಕರುಣೆ ತೋರುವನಾ ಪಿತಾಮಹನು

ಬೇಡ ನಿಮಗಿದು ಅತಿ ದುರಾಶೆಯು 

ನೋಡಿ ವಿದುರಗೆ ಮನವಿ ಮಾಡಿರಿ 

ನೀಡಿದರೆ ಊವರೆಷ್ಟು ಕೊಡುವರೊ ಒಪ್ಪಿ ನೀವದಕೆ॥೮॥ 


ಜಗಳ ತಾನದು ಯುದ್ಧ ಕಾರಣ 

ಜಗದಿ ಪ್ರಜೆಗಳ ನಾಶ ಸಂಭವ 

ಯುಗದ ಅಂತ್ಯವಿದಿನ್ನು ಹತ್ತಿರ ಕ್ಷ್ಣನರಿತವನೇ 

ಹಗೆಯ ಮರೆಯಲಿ ರಾಜ ಮನೆತನ 

ಸಿಗದ ನಾಲಿಗೆ ನೀಡಿ ತಕ್ಷಣ 

ಅಗೆಯಲೇ ಆ ತುರಿಕೆ ಗಿಡವನು ಚಡಿದು ಸುಡಬೇಕು॥೯॥ 


ಇದನು ಕೇಳುತ ಸಾತ್ಯಕಿ 

ಇದುವೆ ಸ್ನೇಹದ ದ್ಯೂತವೆನ್ನುತ 

ಕಡೆಗೆ ಬಗಿನೆಯ ಸೇಂದಿ ಧರ್ಮನತಲೆಯ ತಿರುಗಿಸಲು

ಇದು ಯುಯುತ್ಸು ವಿಕರ್ಣ ಮಾತೋ 

ಅದಕು ಮುನ್ನವೆ ಸೋತು ದ್ಯೂತದಿ 

ಬಿಡದೆ ಕೂದಲು ಸೀರೆ ಸೆಳೆದರು ಪಂಚ ಪತಿವ್ರತೆಯಾ॥೧೦॥ 


ಯದುಕುಲೋತ್ತಮ ಅರಿತು ನೀನಿದು 

ಚದಿಯಿದಲ್ಲವು ಎಂಬ ಮಾತನು 

ಬಿಡು ನಿ ಬಾಯಲಿ ಉಪ್ಪು ಜಗಿಯುತ ಸಪ್ಪೆಯೆನಬೇಡ

ಪಡೆಯೆ ಗೊತ್ತಿದೆ ಭಿಕ್ಷೆ ಬೇಡದೆ 

ಕೊಡುವುದಾದರೆ ಕೊಡಲಿ ಮಾನದಿ 

ಕೊಡದೆಯಿದ್ದರೆ ಬಡಿದು ಕೊಲ್ಲುತ ಪಡೆಯೆ ತಪ್ಪೇನು॥೧೧॥ 


ಕೊಟ್ಟು ತಾನೊತ್ತಾಸೆ ದ್ರುಪದನು 

ಕಟ್ಟ ಕಡೆಗಿದು ಯುದ್ಧ ಖಂಡಿತ

 ಕುಟ್ಟಿಚಾತನು ಇವನು ಕೌರವ ಬಗ್ಗಿನ ಡೆಯದವ

ಸುತನ ಮೋಹದೊಳಿರುವನಾ ಧೃತ 

ಮತಿವಿಹೀನರು ಶಕುನಿ ಕರ್ಣರ ಕಪಟ ನಾಟಕವು॥೧೨॥ 


ದೊರೆ ಸಹಾಯವ ಕೋರಿ ದೂತರು 

ಕರೆಯ ಮೇರೆಗೆ ದುರ ಸಹಾಯಕೆ 

ಸರಿ ಪುರೋಹಿತನೀಗ ತೆರಳಲಿ ತಾನು ಧೃತನಬಳಿ 

ಬೆಳೆದ ಮರ ಬುಡವೆಳೆಯಲಾಗದು 

ತಿಳಿದು ಕೊಂಬೆಯ ಮೊದಲು ಕಡಿಯಲಿ 

ತಿಳಿಯಲೋಸುಗ ಕಾಯುತಿರುವೆವು ದೌತ್ಯ ಸುದ್ಧಿಯನು॥೧೩॥ 


ಇದೈವೆ ಸರಿಯೆಂದೆನುತ ಕೇಶವ

ಸದನದಲಿ ಯಾದವರಿಗೆಂದನು 

ಯದುಕುಲದ ಬಲರಾಮನಣ್ಣನ ಕೃಷ್ಣ ಸಂತೈಸಿ 

ಯದುಕುಲದವಿದ್ವಾಂಸನವನನು 

ಮುದದಿ ಮಾಧವ ವಿಷಯ ತಿಳಿಸುತ 

ಕಡೆಗೆ ದ್ರುಪದ ಪುರೋಹಿತನ ಜೊತೆಯಲ್ಲಿ ಕಳಿಸಿದನು॥೧೪॥ 


ಅಲೂಲಿ ಹಸ್ತಿನೆಯಲ್ಲಿ ಗಡಿಬಿಡಿ 

ಇಲ್ಲಿ ಉತ್ತರೆಯಭಿಯ ಸುದ್ಧಿಯು 

ಸೊಳ್ಳೆ ಕಚ್ಚಿದ ತೆರದಿ ಕುಣಿದನು ತಾನು ಕೌರವನು 

ಕಲ್ಲು ಕಡಲೆಯ ಜಗಿಯಬಹುದೇ 

ಅಲ್ಲಿ ಮನೆತನ ದೊಡ್ಡದಹುದದು 

ಎಲ್ಲರೂ ಹಿರಿಯಪ್ಪನೆಂದರೂ ಕಡೆಗಣಿಸಿ ನಿನ್ನ॥೧೫॥ 


ಇದನರಿತು ಕೃಪ ದ್ರೋಣ ಭೀಷ್ಮರು 

ಸಿಡಿಲು ಹೊಡೆದವಮಾನ ಪಡುತಲಿ 

ವಿದುರ ಕುಂತಿಯ ತಾನು ಕೇಳಿದ ಭೀಷ್ಮ ಪ್ರಶ್ನೆಯನು

ಏಕೆ ಸೊಸೆ ನೀ ಹೋಗದಿದ್ದುದು 

ಸಾಕು ಎಂದಳು ಇರುವ ಸುಖವದು 

ಬೇಕು ನನಗದು ನಿಮ್ಮ ನಿಮ್ಮ ಎಂದಳಾ ಕುಂತಿ॥೧೬॥ 


ಮುದದಲಾ ನುಡಿ ಕುಂತಿಯಾಡಲು 

ವಿದುರನೀ ನುಡಿಯನ್ನು ಮಾನಿಸೆ 

ಇದಕೆ ಧೃತ ಗಾಂಧಾರಿಯೊಂದಿಗೆ ನಸುವೆ ತಾ ಮುನಿದ

ಬದಲಿಗೀಗಲೆ ಮುಂದೆ ಕಳಿಸುತ

ಬದುಕು ನಮ್ಮಯ ಜೊತೆಗೆ ಎನ್ನುವ 

ಮುದದಿ ಹೇಳಿದ ಮಾತ ಧರ್ಮಜಕೇಳದಿರಲಾರ ॥೧೭॥ 


ಕೇಳಿದರೆ ಪಾಂಡವರು ರಾಜ್ಯವ 

ಕೇಳಲದು ಪುಗಸಟ್ಟೆ ಕೊಡುವರೆ 

ಹೇಳಿದನು ತಾನಾ ಸುಯೋಧನ ಉಗಿದು ಕಳಿಸುವೆನು

ತಪ್ಪದಿಲ್ಲವೆ ವಿದುರ ಕೇಳಲು 

ತಪ್ಪದೇನಿದೆ ದ್ರೋಣ ಕೇಳಿದ 

ಒಪ್ಪಿ ಯುದ್ಧವನಾ ವಿರಾಟನ ಎದುರು ನೀವೀಗ॥೧೮॥ 


ಕರೆದರೊಪ್ಪದೆ ಪಾರ್ಥ ಕೃಷ್ಮರು 

ಮರೆಯದಿರೆ ದುರವಾ ವಿರಾಟನು 

ಧರ್ಮ ಭೀಮರು ಕಳೆದ ರಾಜ್ಯವ ಕೇಳದುಳಿಯುವರೆ

ಮರ್ಮವಿದೆ ಪಾಂಚಾಲಿಯೆದೆಯಲಿ 

ಕರ್ಮಕಾಂಡವು ಕೌರವರ ನಡೆ 

ಧರ್ಮದಿಂದಲಿ ಕೊಡಿರಿ ಮನ ಹಗುರಾಗುತಿರಲಾಗ॥೧೯॥ 


ವಿದುರ ದಾಸೀಪುತ್ರನೆನುತಲಿ 

ಕಡೆಗಣಿಸಿ ಕೌರವನು ನುಡಿಯಲು 

ಪದವಿ ರಕ್ತಕೆ ಬೆರೆಯು ಇರಲದು ನುಡಿದಳಾ ಕುಂತಿ 

ನನ್ನ ಮಕ್ಕಳ ನೀನು ಕಾಡದೆ 

ಇನ್ನು ನೇನಧಿಕಾರ ತೋರದೆ 

ನಿನ್ನವರು ಅಪ್ಪಮ್ಮನೆಲ್ಲವ ಮಾಡುವರು ಎನಲು॥೨೦॥ 


ಮುಚ್ಚು ಬಾಯನು ಎಂದ ಭೀಷ್ಮನು 

ಹೆಚ್ಚುಗಾರಿಕೆ ಪಟ್ಟ ನನ್ನದೆ 

ಇಚ್ಛೆಯಲಿ ಪಾಂಡವರ ಕೌರವರಿವರ ಹಕ್ಕುಂಟು 

ಸದ್ದು ಯಾರದು ಕೇಳಿದಾಗಲು 

ಖುದ್ದು ವಿದುರನೆ ಹೇಳಿ ವಿಷಯವ 

ಯುದ್ಧವೇತಕದಾತ್ಮ ಶುದ್ಧಿಯ ಸಮಯವಿದು ಎಂದ॥೨೧॥ 


ತಲೆಯ ತಗ್ಗಿಸಿ ದ್ರೋಣ ಭೀಷ್ಮರು 

ತಿಳಿದು ಪಾಂಡವ ಕಾಡು ಸೇರಿಸೆ 

ಕಳೆದುದನು ಹೇಳುತಿರೆ ವಿದುರನು ಆ ಪುರೋಹಿತನು 

ಕಳೆದು ಮೌನವ ಭೀಷ್ಮ ಕೇಳಲು 

ತಿಳಿದವನು ಪರಿಚಿತನು ದ್ರೋಣಗೆ 

ಬಳಿಗೆ ಕುಳ್ಳಿರಲಾಗ ಆಸನ ಕೊಟ್ಟು ಕೂರಿಸುತ ॥೨೨॥ 


ದ್ರುಪದ ಕಡೆಯವನಾ ಪುರೋಹಿತ 

ನೃಪತಿ ದ್ವಾರಕಿಯವನು ಕಳಿಸಿದ 

ನೃಪರು ಪಾಂಡವರಿಂದ ದೌತ್ಯಕೆ ನಾನು ಬಂದಿಹೆನು 

ಧೃತನು ಅಪ್ಪಣೆಯನ್ನು ಕೊಡಿಸಲು 

ಧೃತನ ಸಭೆಯಲಿ ಸದ್ದು ಅಡಗಿತು 

ಧೃತನ ಸಭೆಯಲೆ ಸೂಜಿ ಬಿದ್ದರು ಕೇಳುವುದು ಸದ್ದು॥೨೩॥ 


ಗಣದಲಾ ಧರ್ಮಜನ ಹೇಳಿಕೆ 

ಗುಣಿಗಳಿವರಾ ಧೃತಗು ಭೀಷ್ಮಗು 

ಮಣಿದು ಆ ಗುರು ದೂರೋಣ ಕೃಪ ಸೃಷ್ಟಾಂಗವೆಂದೆರಗಿ

ವನದವ ವಾಸಜ್ಞಾತ ವಾಸವು 

ಎಣಿಸೆ ವರ್ಷಗಳಲ್ಲಿ ಕಳೆಯಲು 

ಮನದಿ ಪ್ರೀತಿಯ ತೋರಿ ರಾಜ್ಯವನೆಮಗೆ ಮರಳಿ ಕೊಡಿ॥೨೪॥ 


ಮರಳಿ ಕೊಡಿ ಪಾಂಡವರ ರಾಜ್ಯವ 

ಮರೆತು ಹಗೆಯನು ಹಳೆಯದೆಲ್ಲವ 

ಕೊರತೆಯಾದರೆ ಯುದ್ಧ ಖಂಡಿತವೆಮಗೆ ಸಮ್ಮತವೆ 

ಕೇಳಿ ಧರ್ಮಜನವನ ವಿಜಯಕೆ 

ಏಳು ಅಕ್ಷೋಹಿಣಿಯ ಸೈನ್ಯವು 

ಕೇಳಿ ಭೀಮಾರ್ಜುನ ಪರಾಕ್ರಮ ಬುದ್ಧಿ ಕೃಷ್ಣನದು॥೨೫॥ 


ಬೇಡ ಧರ್ಮಗೆ ನ್ಯಾಯ ಕೂಟವು 

ನೀಡಿ ಧರ್ಮಕೆ ಸಿದ್ಧವೆಲ್ಲಕು 

ಪಾಡು ನಿಮ್ಮದು ಯುದ್ಧ ಕರ್ಮಕು ಹೆದರುತಲೆ ಇಲ್ಲ

ಧರ್ಮಜನ ಮಾತೊಪ್ಪಿ ಭೀಷ್ಭನು 

ಮರ್ಮದಲಿ ಪಾಂಡವರ ಕಷ್ಟವು 

ಧರ್ಮಸಮ್ಮತವಹುದು ರಾಜ್ಯದೊಳರ್ಧವ ನೀಡುವುದು॥೨೬॥ 


ಇಂದು ಬಲ ಪಾಂಚಾಲ ಮತ್ಸ್ಯರು 

ಬಂದು ಕೇಳುವರಿಲ್ಲಿ ರಾಜ್ಯವ 

ಇಂದು ಕೇಳಿದರಿಲ್ಲಿ ರಾಜ್ಯವ ಕದನವಾದೀತು 

ಇಂದು ಹೆದರುವುದುಂಟೆ ಕೌರವ 

ಪಾಂಡವರು ಬರಲಿಂದು ಕದನಕೆ 

ತುಂಡು ಭೂಮಿಯು ದಕ್ಕಲಾರದು ಕರ್ಣನಾ ಕೂಗು॥೨೭॥ 


ಬರುತಲದು ಮುಂಗಾರು ಗುಡುಗಲು 

ಭರದೊಳಾ ಹಿಂಗಾರು ಜಡಿಮಳೆ 

ಸುರಿದ ಮಳೆ ಬಿಸಿಲಿರಲು ಮದುವೆಯು ಗುಳ್ಳೆನರಿಗಳದು

ಹೊಂಗೆ ಮಾವಿನ ಕೊಂಬೆ ಮುರಿಯಿತು 

ಮಂಗವದು ಮಾಣಿಕ್ಯ ಕರದಲಿ 

ಭಂಗ ಇಂದ್ರಪ್ರಸ್ಥ ಕೌರವ ಮಜವು ಕರ್ಣನಿಗೆ॥೨೮॥ 


ಎದ್ದ ಭೀಷ್ಮನು ಜೋರಲೆಂದನು 

ಗೆದ್ದಿರದೆ ನಾವೆಲ್ಲ ಕರ್ಣನೂ 

ಗುದ್ದಿ ಸದೆಬಡಿದೋಡಿಸಿದನವನೊಬ್ಬನೇ ಪಾರ್ಥ

ಸದ್ದಡಗಿ ಧೃತರಾಷ್ಟ್ರ ಕರ್ಣಗೆ 

ಬುದ್ಧಿ ಮಾತನು ಭೀಷ್ಮನೊಬ್ಬನೆ 

ಯುದ್ಧವಾದರೆ ಹಿರಿಯರೆಲ್ಲರು ಬಿಡುವವರೆ ಪ್ರಾಣ॥೨೯॥ 


ಕುರುಡ ದೊರೆ ಸಂಜಯನ ಕರೆದನು 

ಧರ್ಮ ಬಿಡುವವನಲ್ಲ ಧರ್ಮಜ 

ಧರ್ಮನಿಷ್ಠುರ ಕ್ಷೇಮಲಾಭವ ಕೇಳಿದೆನು ಎಂದು

ಧರ್ಮಪಾಂಡವರೊಡನೆ ಶಾಂತಿಯ 

ಪೆರ್ಮೆಯಾಶೀರ್ವಚನ ನೀಡುವೆ 

ಕರ್ಮ ಯುದ್ಧದ ವಿಷಯವೊಂದನು ನೀನು ಹೇಳದಿರು ॥೩೦॥ 


ಕಂಡ ಸಂಜಯ ಧರ್ಮರಾಯನ 

ಅಂದು ದ್ರೌಪದಿಯೊಡನೆ ಪಾಂಡವ 

ತಂದಿಹೆನು ಸಂದೇಶವೆನುತಲಿ ಹೇಳಿದನು ವಿವರ

ನೀವು ನಿಜ ಸತ್ಕುಲ ಪ್ರಸೂತರು 

ಯಾವ ಯುದ್ಧವು ಜನರ ಕ್ಷಯವೇ 

ನೀವು ಕೇಶವ ಜೊತೆಯಲಿದ್ದರೆ ಗೆಲ್ಲುವನೆ ಇಂದ್ರ॥೩೧॥ 


ಧೃತನ ಆ ಸಂದೇಶ ಕೇಳುತ 

ಗತಿ ವಿಹೀನರ ನೂಕಿ ಕಾಡಿಗೆ 

ಪತನವಾಗಲು ಬೆಂಕಿಯುರಿಸುತ ಗಾಳಿ ಬೀಸಿದರು

ಹಿತವನರಿಯದ ದುರುಳ ಮಗನವ 

ಮತಿಯದಿಲ್ಲದೆ ಹೆದರುತಿರುವರು 

ಮಿತಿಯ ಮರೆತು ವಿದುರನನು ಅರಮನೆಯ ಹೊರಗಟ್ಟಿ ॥೩೨॥ 


ಹಾವು ಸಾಯದು ಕೋಲು ಮುರಿಯದು

ನಾವು ಇಂದ್ರಪ್ರಸ್ಥ ಬಿಡುವೆವೆ 

ಯಾವ ಅರ್ಥವು ಇಲ್ಲದುತ್ತರ ನಾವು ಕೇಳುವೆವೇ 

ಅಂಬು ನಿಂತಿದೆ ಬಿಲ್ಲು ತುದಿಯಲಿ 

ನಂಬಿದವರಿಗೆ ಇಂಬು ಕೊಡುವೆವು 

ಜಂಭ ಬಿಡುತಲಿಯರ್ಧ ರಾಜ್ಯಕೆ ಭೀಮ ಘರ್ಜನೆಯು॥೩೩॥ 


ಇಡಿಯ ರಾಜ್ಯವೆ ತಮ್ಮದೆನ್ನುವ 

ಹಿಡಿತ ಬಿಡಲದು ಎಮ್ಮ ಶಕ್ತಿಯ 

ಕಡೆಗೆ ಯೈದ್ಧದೊಳರಿವ ಮೊದಲೇ ಕೊಡಲಿ ರಾಜ್ಯವನು 

ಪಡೆಯದಿರುವೆವೆ ಇಂದ್ರಪ್ರಸ್ಥವ 

ಬಿಡುವೆವವರಿಗೆ ಹಸ್ತಿನಾವತಿ

ಇದನು ಒಪ್ಪಿದರೀಗ ಮಾತ್ರವೆ ಮರೆಯುವೆವು ಹಗೆಯ॥೩೪॥ 


ಇದಕೆ ಸಂಜಯನವನ ಬೋಧನೆ 

ಅಧಮ ತಾನಿದು ಯುದ್ಧ ವೇದನೆ 

ಕಡೆಗೆ ಯುದ್ಧದಿ ನಿನಗೆ ದುರ್ಗತಿಕೇಳು ಧರ್ಮಜನೇ 

ಇದನು ಕೇಳುತ ನುಡಿದ ಮಾಧವ 

ಇದು ಸರಿಯೆ ಸಂಜಯನೆ ಬೋಧನೆ 

ಬದುಕಲಿವರಿತ್ತಂಡದವರೆಂದೆನ್ನ ಪ್ರಾರ್ಥನೆಯು॥೩೫॥ 


ಬಿಟ್ಟವರು ಕೌರವರು ಧರ್ಮವ 

ಕೆಟ್ಟು ದ್ರೌಪದಿ ಸೀರೆಯೆಳೆದರು 

ಕೊಟ್ಟರೇ ಬೆಲೆ ಧರ್ಮ ಮಾತಿಗೆ ಈಗ ಹೇಳಲದು 

ಕೆಟ್ಟ ಮಾತನು ನಡಿದ ಶಕುನಿಯು 

ದುಷ್ಟ ದುಶ್ಯನು ಕೂದಲೆಳೆದನು 

ಭ್ರಷ್ಟ ಕರ್ಣನು ದಾಸಿ ಸೀರೆಯ ಸೆಳೆಯೆಂದನು॥೩೬॥ 


ಹೊತ್ತಿನಲಿ ಕುರುಕ್ಷೇತ್ರ ಯುದ್ಧಕೆ 

ಅತ್ತ ದ್ವಾರಕೆ ಕೃಷ್ಣನಲ್ಲಿಗೆ 

ಇತ್ತ ಪಾರ್ಥನು ಹೊರಟ ಸಮಯದೊಳಾ ಸುಯೋಧನನೂ 

ಬೇಗ ತಲುಪಿತು ಸುದ್ಧಿ ದ್ವಾರಕೆ

ಯೋಗ ನಿದ್ದೆಯಲಾಗ ಮಾಧವ 

ಈಗ ಸೋಗಿನ ನಿದ್ದೆ ನಾಟಕ ದೇವ ಮಾನವಗೆ॥೩೭॥ 


ಮಲಗಿರಲು ಮಂಚದಲಿ ಮಾಧವ 

ಬೆಳಗಿನಲೆ ತಲೆ ಬದಿಗೆ ಕೌರವ 

ಕುಳಿತು ಎಚ್ಚರಗೊಂಡ ಕೂಡಲೆ ಸೈನ್ಯ ಬೇಡಿಕೆಗೆ

ಕಳೆದ ಕ್ಷಣವನು ಬಂದ ಪಾರ್ಥನು 

ಕುಳಿತು ಕೃಷ್ಣನ ಕಾಲ ಬುಡದಲಿ 

ತಿಳಿದು ನಿದ್ದೆಯ ಕೃಷ್ಣನೇಳಲು ಎದ್ದರಿವರಾಗ॥೩೮॥ 


ನಿದ್ದೆ ನಟನೆಯಲೆದ್ದ ಕೃಷ್ಣಗೆ 

ಇದ್ದ ಚರಣದ ಬಳಿ ಧನಂಜಯ 

ಎದ್ದು ತಿರುಗಲು ಇದ್ದ ದುರ್ಯೋಧನನು ತಾನಲ್ಲಿ 

ಸಾಧ್ಯವೇ ಮನವರಿಯೆ ದೇವನ 

ಮಾಧವನು ಸತ್ಕಾರ್ಯ ಬಯಸುತ 

ಸೋದರರೆ ಖುಶಿಯಾಯ್ತು ನೋಡಲು ನಿಮ್ಮ ಅನ್ಯೋನ್ಯ ॥೩೯॥ 


ಎಂದು ಕೃಷ್ಣನು ಮೈಯ ಮುರಿಯುತ 

ಬಂದ ಕಾರ್ಯವನಾಗ ಕೇಳುತ 

ಮುಂದೆ ನಿನ್ನದು ಹೇಳು ವಿಷಯವನೆಂದ ಪಾರ್ಥನಿಗೆ

ಬಂದಿರುವೆ ನಾನಿಲ್ಲಿ ಮೊದಲಿಗೆ 

ಎಂದು ಕೌರವನಾಗ ಹೇಳಲು 

ಕಂಡೆ ಪಾರ್ಥನ ನಾನು ಎದುರಿಗೆ ಎಂದನಾ ಕೃಷ್ಣ ॥೪೦॥ 


ಮೂರು ಅಕ್ಷೋಹಿಣಿಯ ಸೈನ್ಯವೋ

ಮೀರಿ ನಾನಿನಗೊಬ್ಬ ಬೇಕೋ

ಪಾರ್ಥ ಕೇಳಿದು ಎರಡರಲಿ ನಿನಗೇನು ಬೇಕೆಂದ

ಅರಳಲಿಲ್ಲದು ಕೌರವನ ಮುಖ

ಅರಿತ ಮಾಧವ ನೋಡಲಿಬ್ಬರ 

ಅರಿತು ನೀ ಮೊದಲೀಗ ಬೇಡಿಕೊ ಎಂದನಾ ಕೃಷ್ಣ ॥೪೧॥ 


ನೀನೆ ಸಾಕೆಂದೆನುತ ಪಾರ್ಥನು 

ದೀನ ಸ್ವರದಲಿ ಬೇಡಿಕೊಳ್ಳಲು 

ಸೇನೆ ಅಕ್ಷೋಹಿಣಿಯು ಮೂರದು ಸಿಗಲು ಕೌರವಗೆ 

ನೀನದೃಷ್ಟವ ಪಡೆದೆಯೆನ್ನುತ 

ತಾನು ಬೆನ್ನನು ತಟ್ಟಿ ಕೃಷ್ಣನು 

ಸೇನೆ ಹೊಂದಿಕೊ ಧರ್ಮಯುದ್ಧವ ಮಾಡು ನೀನೆಂದ॥೪೨॥ 


ನಮಿಸಿ ದುರ್ಯೋಧನನು ಕೃಷ್ಣಗೆ 

ನಮದೆ ಗೆಲುವೆಂದೆನುತ ಕುಶಿಯಲಿ 

ಕ್ರಮಿಸಿದನು ಬಲರಾಮ ಬಾವನ ನೋಡುವಾತುರದಿ 

ಹೊಗಳುವೆನು ಸಾರ್ಥಾವೆ ನಿನ್ನನು 

ಜಗದಿ ಪಾರ್ಥನು ಮೂಢನೆನ್ನುವ 

ಹಗೆಯು ದುರ್ಯೋಧನನ ವೆಷಯದೊಳರಿತೆ ಮೂರ್ಖತನ॥೪೩॥ 


ನಡೆದ ಕಥೆ ಬಲರಾಮಗೆನ್ನಲು 

ಬಿಡದೆ ಸಭೆಯೊಳಗಂದು ನಾನೇ 

ಕಡೆಗೆ ಕೃಷ್ಣನ ಜೊತೆಗೆ ವಾದವ ಮಾಡಿದುದೆ ಕಠಿಣ 

ನುಡಿಯೆ ಯುದ್ಧದೊಳಿರದೆ ಕೃಷ್ಣನು 

ಹಿಡಿಯಲಾರೆನು ಎರಡು ಪಕ್ಷವ 

ಕಡೆಗೆ ನಾಶವು ಮೂರು ಅಕ್ಷೋಹಿಣಿಯ ಜನರೆಲ್ಲ ॥೪೪॥ 


ನೀನು ಗದೆಯೊಳಗೆನ್ನ ಶಿಷ್ಯನೇ 

ತಾನು ಭೀಮನು ನನ್ನ ಶೆಷ್ಯನೇ 

ಏನೆ ಆದರೂ ಯುದ್ಧವನು ತಡೆ ಜನರ ನಾಶವನು 

ಯೃವ ಯುದ್ಧವು ಕೊಡದು ಸುಖವನು 

ಯಾವ ವೇದದೊಳಿಲ್ಲ ಬೋಧನೆ 

ನೋವನರಿತೂ ನಾನು ಬಯಸುವೆ ನಿನಗೆ ಒಳಿತನ್ನೇ॥೪೫॥ 


ಕುಲವದೊಂದೇ ರಕ್ತ ಸೊಕ್ಕಲಿ 

ಕಲಹದಲಿ ಜನರನ್ನು ಸಾಯಿಸಿ 

ಬೆಲೆಯ ತೆರಬೇಕೀಗ ಕೆಂಡವ ದ್ರೌಪದಿಯ ಮುಟ್ಟಿ

ಹಿಂದಿನದು ತಾನೊಂದು ಗಾದೆಯು 

ಒಂದು ರತ್ನವ ತಿಪ್ಪೆಗೆಸೆದರು

ಕಂದಿ ಹೋಗದು ಅದರ ಹೊಳಪದು ಅರಿತಿರಾ ನೀವು॥೪೬॥ 

 

ಹಿರಿಯರನು ಪಂಡಿತರ ಕೊಲ್ಲುತ

ಹಿರಿತನದಿ ಆ ದೊರೆಗಳುಳಿಯುತ 

ಮೆರೆದರೇನದು ವರಾಣಸಂಕರವಾಗದೇ ಇರದು 

ಅರಿತ ಜ್ಞಾನಿಯರೊಡನೆ ವಾದದಿ 

ಕರಗಿ ದ್ವಾಪರದಾ  ಯುಗಾಂತ್ಯದಿ 

ವರವು ಸಾರ್ತಾವಯ್ಯಪ್ಪನೆ  ನೀ ಬ್ರಹ್ಮಚರ್ಯವದು॥೪೭॥


ತಡೆಯುತಲಿ ಬಲರಾಮನವನನು 

ಕೆಡುಕು ಮನವನು ಬಡಿದು ಕೊಲ್ಲುತ 

ಬಿಡದೆ ಶುದ್ಧಿಯ ಮಾಡುತಿದ್ದರು ಕೇಡು ಕೌರವಗೆ

ನೋಡು ಶಿಷ್ಯನೆ ಗದೆಯ ವೀರನೆ 

ರೂಢಿಯರಸರು ತಾವು ವೀರರೆ ? 

ಕೇಡು ವೀರನದೆಂಬ ಗರ್ವವ ದೂಡು ಮನದಿಂದ॥೪೮॥ 


ನಾನು ಹರಿ ಸರ್ವಜ್ಞರಲ್ಲವೊ 

ನಾನು ದೊರೆಯವತಾರಿಯಲ್ಲೊ 

ತಾನು ಕ್ಷಣಕ್ಷಣಕೀ ಭವಿಷ್ಯವು ರಾಹು ಕೇತುಗಳು 

ನಾನು ಹಿರಿಯನು ಎಂಬುದೇ ನೆಲೆ 

ತಾನು ಕೃಷ್ಣನು ಕೊಡುವನಾ ಬೆಲೆ 

ನೀನು ಅರಿತುಕೊ ಕೃಷ್ಣನವ ಸಾಮಾನ್ಯನೇ ಅಲ್ಲ॥೪೯॥ 


ನನ್ನ ಶಿಷ್ಯನೆ ಬೇಡ ಯುದ್ಧವು 

ಇನ್ನು ನೀ ಕೊಡು ಪಾಂಡವರ ನೆಲ 

ಮುನ್ನ ಕುಂತಿಯು ಅತ್ತೆ ಪಾಂಡವ ಕರುಳಿನಾ ತುಂಡು 

ನನ್ನ ಮನವದು ಮಿಡಿಯುತಿರುವುದು

ನನ್ನ ವರ ನಿನಗುಂಟು ಎಂದಿಗು 

ಇನ್ನು ಮೀರಿದ ಮಾತ ಹಕ್ಕದು ಏನು ನನಗುಂಟು॥೫೦॥ 


ಕೇಳಿ ಸೋತನಿದೆಲ್ಲ ಕೌರವ 

ಹೇಳಿ ಫಲವದು ಹೋಮ ನೀರಿಗೆ

ಕೇಳಿ ವಿಧಿಯನು ಅರಿಯದಾದನು ಮೂರ್ಖಕೌರವನು 

ಕರ್ಣ ಶಕುನಿಗಳಿರಲು ಬಲವದು 

ವರ್ಣ ಬೆಂಕಿಯ ಜ್ವಾಲೆ ನಂಜಿಗೆ 

ಪರ್ಣಕುಟಿ ಹದಿಮೂರು ವರ್ಷವು ಪಾಂಡವರ ಭೋಗ॥೫೧॥ 


ಅಲ್ಲಿ ದ್ರುಪದ ವಿರಾಟ ಕೃಷ್ಣರು 

ಅಲ್ಲಿಯಾ ಉಪಪ್ಲಾವ್ಯ ಬಳಿಯಲಿ 

ಎಲ್ಲಿ ಯೋಧರ ರಕ್ಷಣೆಯೊ ತಾವಲ್ಲಿ ನಿಂತಿರಲು

ಅಲ್ಲಿ ಮಲ್ಲರ ರಥದ ಸಾಲದು 

ಇಲ್ಲಿ ದುರ್ಯೋಧನನು ಅರಿತನು 

ಎಲ್ಲಿ ನೋಡಲು ಕಣ್ಣು ಕುಕ್ಕಿತು ರಾಜರಾ ಸೈನ್ಯ॥೫೨॥ 


ಆ ಘಟೋತ್ಕಚನು ಹಿಡಿಂಬೆಯು 

ಸಾಗಿರಲು ಗಂಧರ್ವ ಸೈನ್ಯವು 

ಈಗಲಾ ಯುಯುದಾನ ಪಾಂಡ್ಯನು ಆ ಜಯತ್ಸೇನ 

ಸಾಗಿ ಬರುತಿರೆ ದೃಷ್ಟಕೇತುವು 

ಬೇಗದಲಿ ಗಡಿ ದಾಟಿ ಭರತಕೆ 

ಈಗ ನಡುಗಿತು ನೆಲವು ದುಃಖದಿ ದೇವಿ ಭಾರತಿಗೆ॥೫೩॥ 


ಏಳು ಅಕ್ಷೋಹಿಣಿಯ ಪಾಂಡವ 

ಕೇಳು ಕೌರವಗಾ ಜಯದ್ರಥ 

ಸಾಲು ಭೂರಿಶ್ರವನು ನೀಲ ಕೈಕೇಯ ಕಾಂಬೋಜ 

ಮೇಲೆ ಆ ಕೃತವರ್ಮಗಿರುತಿರೆ 

ಮೇದಲಿ ಗರ್ವದಲಿ ಕೌರವ 

ಸಾಲು ಸೈನ್ಯವದಾಯ್ತು ಅಕ್ಷೋಹಿಣಿಯು ಹನ್ನೊಂದು॥೫೪॥ 


ಕಡೆಗೆ ಕೌರವ ಕರೆದು ತಂದವ 

ರೆಡೆಗೆ ಕಾಶಿಯ ಸೈನ್ಯ ಬಂದಿತು

ಇಡಿಯ ಗಜಪುರಿ ಕರದಲಿದ್ದಿತು ಭರತಖಂಡವದು 

ಇದುವೆ ಕುರುಮನೆತನದ ಯುದ್ಧವು 

ತಡೆಯಲಾರದೆ ಹೋದ ಕೃಷ್ಣನು 

ಕಡೆಗೆ ಮಾದ್ರಿಯ ಅಣ್ಣ ಬಂದರು ಆಯಿತದು ವ್ಯರ್ಥ॥೫೫॥


ಇದನರಿತ ಪಾಂಡವರು ಕೂಡಲೆ 

ನಡೆದ ಕಥೆ ಮಾವನನು ಕೇಳಲು 

ಹಿಡಿಯುತಿದ್ದಿರೆ ಮಾದ್ರಿಯಿದ್ದರೆ ಕೌರವರ ಪಕ್ಷ 

ಇದಕೆಯುತ್ತರ ನೀವು ಕೇಳಿರಿ 

ಮೊದಲು ಸಿರಿ ಸಂಪತ್ತಿನೊಂದಿಗೆ 

ಮುದದಿ ಪಾಂಡುವಿಗಳ ಕೊಟ್ಟುದೇ ಮೊದಲ ವ್ರತಭಂಗ॥೫೬॥ 


ಧರ್ಮರಾಯಗೆ ಶಲ್ಯನೆಂದನು 

ಕರ್ಮ ಮಾದ್ರಿಯ ಸುಟ್ಟು ಎಸೆಯಿತು 

ಕರ್ಮ ಗಾಂಧಾರಿಯದು ಎಂಬುದು ತಿಳಿದುದೂ ಆಯ್ತು 

ಧರ್ಮದಲಿ ಕೌರವಗೆ ಸೈನ್ಯವು 

ಮರ್ಮದಲಿ ನಾ ನಮ್ಮ ಪರವೇ 

ಕರ್ಮಿಗಳ ನಾನೊಳಗಿನಿಂದಲೇ ಹಣಿಯುವುದೆ ಸರಿಯು॥೫೭॥ 


ಮಾವ ಏನೇ ಮಾಡಿ ನೀವದು 

ಯಾವನಿಗು ಬರದಿರಲಿ ಸಂಶಯ 

ಮಾವ ಶಲ್ಯನ ಉಂಟು ಸಂಶಯದ್ರೋಣ ತಾನೆಂದ 

ಯಾವ ಪ್ರೀತಿಯೊ ಯಾವ ಚದಿಯೋ 

ಯಾವುದಕೆ ಬದಲಾದ ಶಲ್ಯನು 

ನೀವು ಕೇಳದಿರೆನಲು ಭೀಷ್ಮನು ತಲೆಯನಾಡಿಸಿದ॥೫೮॥ 


ಎಂತದೋ ಸತಿಶಾಸ್ತ್ರ ಹೇಳುತ 

ಅಂತು ಆ ಗಾಂಧಾರಿ ನಂಬಿಸಿ 

ಅಂತೂ ಇಂತೂ ಮಾದ್ರಿ ದೇವಿಗೆ ಸತಿಯ ಸಹಗಮನ

ಕುಂತಿ ಮಕ್ಕಳ ಪ್ರೀತಿಸುತಲೇ 

ಎಂಥದಕು ತಾನೆರ ಡಬಗೆಯದೆ

ಕುಂತಿ ಪಾಂಡವರನ್ನು ಪೋಷಣೆ ಮಾಡಿದಳು ದೃಢದಿ॥೫೯॥ 


ಕೊಡವ ಭಾರತ ನೀವು ಓದಲು 

ಬಿಡದೆ ನಿಮ್ಮಯ ಮೆದುಳು ಓಡಲು 

ಕಡೆಗೆ ಶಲ್ಯ ಗಾಂಧಾರಿ ಮಕ್ಕಳ ಅಂತ್ಯನೋಡುತಿರೆ

ಕೆಡುಕಿನದು ಈ ರಾಜಕೀಯವು 

ನಡೆವುದೆಂದಿಗು ಪಕ್ಷ ಪಕ್ಷದಿ 

ಬಿಡದೆ ಧನಬಲವಿರುವ ಕಡೆಗದು ಹಾರುವುದೆ ಮರ್ಮ॥೬೦॥ 


ಮಕ್ಕಿಯೊಡೆಯನೆ ಏನ ಹೇಳಲಿ 

ಸೊಕ್ಕಿದವರದು ಸಿಕ್ಕಿ ಸಾಯುತ 

ರಕ್ಕಸರ ಗುಣ ಬುದ್ಧಿವಂತರು ತಿಳಿಯುವರು ಎಲ್ಲ 

ಸಿಕ್ಕ ದೇವರು ಧರ್ಮ ಕರ್ಮವು

ಬೊಕ್ಕಸಕೆ ಕೈಯಿಕ್ಕಿ ಸೋತರು 

ಲೆಕ್ಕ ನ್ಯಾಯಕೆ ಜಾಗವಿಲ್ಲವೆ ಮಕ್ಕಿ ಸಾರ್ಥವೆ?॥೬೧॥ 


॥ಓಂ ವಾಗ್ದೇವಿಯೇ ನಮಃ ॥


ರಾಜಿ ತೀರ್ಮಾನ ಪರ್ವ


ಸಮಯ ೪೧ 


ಕೃಷ್ಣ - ಕರ್ಣ  ಕುಂತಿ- ಕರ್ಣ 


ನೆಂಟನವ ಪಾಂಡವಗೆ ಕೃಷ್ಣನು 

ಅಂತು ಈ ಸಂಧಾನ ಕಾರ್ಯದಿ

ಇಂಥದೊಂದಾ ಮದ್ದು ಕೌರವನವಗೆ ಕಾದಿತ್ತು

ಇಂದವನ ಮನವರಿತು ನ್ಯಾಯವ 

ಕಂಡು ಕರ್ಣನ ಸ್ಥಿತಿಗೆ ಮರುಗುತ 

ಹೊಂದಲಾ ಸುಖ ಸತ್ಯವರಿಯಲಿ ಕುಂತಿ ಹಿರಿಮಗನು॥೨೩೮॥ 


ಸಾತ್ಯಕಿಯು ಮಾಧವನು ಕರ್ಣನು 

ಸೋತ ಮನದಲಿ ರಥದಿ ಸಾಗಲು 

ಸೃತ್ಯಕಿಗೆ ಮಾಧವನು ಹೇಳಿದ ನಿಲಿಸಲಾ ರಥವ

ಸೂತ ಕರ್ಣನ ಕರವ ಪಿಡಿಯುತ 

ಮಾತೆ ಮಮತೆಯಲವನ ತಬ್ಬುತ 

ಕೂತರವರಾ ಹಸಿರು ಹುಲ್ಲಿನ ದಿಣ್ಣೆಯಾ ಮೇಲೆ॥೨೩೯॥


ವೀರ ಕರ್ಣನ ಜೊತೆಗೆ ಮಾಧವ 

ಸೇರಿ ಕರಗಳ ಹಿಡಿಯುತವನಾ 

ಶೂರನವ ಶ್ರೀಕೃಷ್ಣ ಕರಗಳನಳುತ ಹಿಡಿದಿರಲು 

ಬಡಿಯುತಿರಲೆದೆ ಕರ್ಣ ಕಂಪಿಸಿ 

ನುಡಿದನವನಾ ನೋಡಿ ಕೃಷ್ಣನ 

ಬಿಡದೆ ನಗುತಲಿ ಪ್ರೀತಿ ತೋರುತಲಿದ್ದೆ ಓ ದೇವಾ॥೨೪೦॥ 


ನಿನಗು ಪಾರ್ಥಗು ಹಗೆಯೆ ಆದರು 

ಕನಲಿ ದ್ರೌಪದಿಗಾನು ಬೈದರೂ 

ನನಗೆ ಸ್ವಯಂವರದಲಿ ಅಪಮಾನವನು ನೀ ಕಂಡೂ 

ನೀರೆ ಸೀರೆಯ ಸಭೆಯಲೆಳೆಯಲು 

ಮೀರಿ ಸಹಕಾರವನು ಅರಿತೂ 

ತೋರುವೆಯ ನೀನಿಂತ ಪ್ರೀತಿಯದೇನು ವೈಚಿತ್ರ್ಯ॥೨೪೧॥ 


ಇದನು ಕೇಳಿದ ಕೃಷ್ಣ ಮುದದಲಿ 

ಎದೆಯಲಿದೆ ಈ ಪ್ರೇಮ ಜ್ಯೋತಿಯು 

ಅದಕೆ ನಿನ್ನಯ ಭಕ್ತಿಯೆಣ್ಣೆಯು ಸುರಿದು ಬೆಳಗಿತದು 

ಕುಂತಿಯಮ್ಮನು ಸೋದರತ್ತೆಯು 

ಸ್ವಂತ ಉದರದಿ ಮೊದಲು ಹುಟ್ಟಿದೆ 

ಇಂತೆನಲು ಆ ಕರ್ಣ ಕರ್ಣದಿ ಸುರಿಯೆ ಕಣ್ಣೀರು ॥೨೪೨॥ 


ವೀರ ಕರ್ಣನ ಮುಖವು ಮಿನುಗಲು 

ಪಾರಗನು ತಾನೊರಸಿ ನೀರನು 

ವೀರಕ್ಷತ್ರಿಯನಹುದು ಎನ್ನುವ ಸತ್ಯವರುಹಿದನು

ನಾಳೆಗೆಂಟನೆ ದಿನಕೆ ಯುದ್ಧವು 

ಬಾಳಿನಲಿ ಕೊನೆಗೆನಗೆ ಸಾವೇ 

ಕೇಳು ಕೇಶವ ನನಗಿದೆಲ್ಲವನೇಕೆ ಪೇಳುವೆಯೋ॥೨೪೩॥ 


ಹೇಳಿರುವ ಬಲರಾಮ ವಿಷಯವ 

ಕೇಳು ಪಾರ್ಥನ ನೀನು ಕೊಲದಿರು 

ಹೇಳಿಹನು ಪಾರ್ಥನಿಗು ಕರ್ಣನ ಕೊಲ್ಲಬೇಡೆಂದು

ಗುಟ್ಟು ತಾನಿದರೊಳಗೆ ಅಡಗಿದೆ 

ಸ್ಪಷ್ಟ ಸಂಶಯವೆನ್ನ ಕದಡಿದೆ 

ಒಟ್ಪು ಬಲ ಚಹರೆಗಳು ನನ್ನದು ಪಾರ್ಥನದು ಒಂದೇ॥೨೪೪॥ 


ಮೆಚ್ಚುವೆನು ನಾ ನಿನ್ನ ಕೃಷ್ಣನೆ 

ಇಚ್ಛೆಯಲಿ ನೀ ಕುಂತಿಗಳಿಯನೆ 

ಹೆಚ್ಚುಗಾರಿಕೆಯೇನು ಕುಂತಿಯು ಗುಟ್ಟು ಬಿಡದಿರಲು

ಮೆಚ್ಚಿದೆನು ಶ್ರೀಕೃಷ್ಣ ಬಾವನೆ 

ಹುಚ್ಚು ಕುರುಕುಲ ಯುದ್ಧ ತಡೆಯದು 

ಮೆಚ್ಚುವೆನು ನಾ ರಾಧೆ ಅತಿರಥರ ಸುತನು ನಾ ಸೂತ॥೨೪೫॥ 


ಊರಿಗೂರು ಬೆಂದು ಹೋದರು 

ಮೀರದಿರುವುದು ಲಂಚದಾ ರುಚಿ 

ಊರು ಬೆಂದರು ಹುಡುಕುವನು ತಾ ಮೊಟ್ಟೆಕೋಳಿಯನು

ನೇರ ನಡೆಯವನಾ ಸುಯೋಧನ 

ದೂರದೆಯೆ ಆಶ್ರಯವನಿತ್ತನು 

ಪೂರ ಸಿಂಹಾಸನವ ಕೊಟ್ಟನು ಜೃತೆ ನೋಡದೆಯೇ॥೨೪೬॥ 


ಪ್ರಾಣ ಸ್ನೇಹಿತನಹುದು ನನಗವ 

ಭಾನುಮತಿಯಾ ಪ್ರೀತಿ ಮೀರುತ 

ನಾನು ರಾಣೀವಾಸ ತೆರಳಲು ಅನುಮತಿಯೆ ಬೇಡ 

ನೀನು ಕೇಶವ ನನಗೆ ಹೇಳುವೆ 

ಭಾನು ಸೂರ್ಯನ ಮಗನು ಎನ್ನುವೆ 

ತಾನು ಧರ್ಮಜ ಕೊಡುವ ಸಿಂಹಾಸನವ ತನಗೆಂದು॥೨೪೭॥ 


ಕೃಷ್ಣ ಕೇಶವ ಬಾವ ಮಾಧವ

ಕೃಷ್ಣ ನೀನೇನೆನ್ನುವುದು ಸರಿಯೆ 

ಕೃಷ್ಣ ಕೇಳಿದು ಕೊಡವ ನಾನಿದನಾ ಸುಯೋಧನಗೆ 

ಕೃಷ್ಣನೆನಗೆ ಸುಯೋಧನನ ಋಣ 

ಕೃಷ್ಣ ಮುಂದಿನ ಜನ್ಮವಿದ್ದರೂ 

ಕೃಷ್ಣ ಅವನುಪಕಾರ ತೀರದು ಎಂದನಾ ಕರ್ಣ॥೨೪೮॥ 


ರೀತಿ ಕೌರವರ ನೀತಿಯು 

ಜಾತಕವು ನನಗೆಲ್ಲ ತಿಳಿದಿದೆ 

 ಸೋತು ಪಾಂಡವರೆದುರು ಸಾಯುವರವರ ಕರ್ಮವದು 

ನೀತಿಯನು ನಾ ಬಿಟ್ಟು ನಡೆದಿಹೆ 

ಸೋತು ತಪ್ಪಾಯ್ತೆಂದು ಕೇಳಲು 

ಸೂತ ನಾನದಕರ್ಹನಲ್ಲವು ದ್ರೌಪದಿಯ ಎದುರು॥೨೪೯॥ 


ನನ್ನೆದುರು ನೀ ದೇವಮಾನವ 

ತನ್ನೊಳಗೆ ಇದನರಿತು ಕೌರವ 

ನನ್ನ ತಲೆಯನು ಹಾಳು ಮಾಡುವವನ ಕೇಡಿನಲಿ 

ನನ್ನದಿದು ಕಡೆಗಾಲವೇನೋ 

ನನ್ನೆದೆಯಲಿ ದುಃಖ ಕೇಶವ 

ಇನ್ನು ಜನುಮದ ಗುಟ್ಟು ತಿಳಿಸುತ ಕೊಂದೆಯೋ ದೇವ॥೨೫೦॥ 


ಇಂದ್ರಪ್ರಸ್ಥವು ಐದು ಗ್ರಾಮವ 

ಇಂದು ಕೊಡು ಪಾಂಡವರಿಗೆನ್ನುವೆ 

ಮುಂದೆ ಸಂಶಯವವಗೆ ಬಂದರೆ ಏನು ಮಾಡಲಿ ನಾ

ಗಂಜಿಯನ್ನವು ಉಕ್ಕಿ ಬೇಯಲು 

ಗಂಜಿ ಬಸಿದರೆ ಸಿಗುವುದನ್ನವು 

ನಂಜು ಕಬ್ಬಿಣ ಕಾದು ತಣಿದರೆ ಬಡಿಯಲಾಗುವುದೇ॥೨೫೧॥ 


ಯಾರು ಹೇಳಿದರಿದನು ಕೇಶವ 

ಯಾರು ಕಥೆ ತಿಳಿದಿಹರು ನನ್ನದು 

ಯಾರು ನೀ ಹೇಳಿಂದು ನನ್ನಯ ಅಪ್ಪನಾರೆಂದು 

ಯಾರನೂ ನಿನ್ನಾಣೆ ಕೇಳೆನು 

ಪೂರ ಅರಿತರು ಫಲವು ಏನದು 

ನೇರವಾಗಿಯೆ ಹೇಳು ಸತ್ಯವ ನೋವು ಮನದೊಳಗೆ॥೨೫೨॥ 


ಹೇಳಿ ಸಿಲುಕಿರಲಿಲ್ಲಿ ಕೃಷ್ಣನು

ಹೇಳುವೆನು ನಾ ನಿನ್ನ ಕಥೆಯನು

ಕೇಳು ದ್ವಾರಕೆಯಲ್ಲಿ ಅತ್ತೆಯನಂದು ಕಂಡಾಗ

ತಬ್ಬಿರಲು ನನ್ನತ್ತೆ ನನ್ನನು 

ತಬ್ಬಿದೆನು ಪಾಂಡವರ ನಾನೂ 

ತಬ್ಬಿಬ್ಬಾದನು ತಾತನತ್ತನು ಶೂರಸೇನನವ॥೨೫೩॥ 


ಶೂರಸೇನನು ತಾನು ಅಳುತಿರೆ 

ದೂರ ತಾತನ ಕರೆದು ಬಯ್ಯುತ 

ಕಾರಣವ ಬಲರಾಮ ಕೇಳಿದನಾಗ ಕರೆದೊಯ್ದು 

ಕಿರಿಯಳಾ ಹದಿಮೂರರಾ ಪೃಥೆ 

ಹಿರಿಯನಾ ಮುನಿ ದುಷ್ಟ ವಂಚಿಸೆ 

ಕರೆದು ಅತಿರಥಗಲ್ಲಿ ನಿನ್ನನು ಕೊಡಲು ಮಗುವಿರಲು॥೨೫೪॥ 


ಮತ್ತೆ ಪಾಂಡುಗೆ ಕೊಡಲು ಕುಂತಿಯ 

ಅತ್ತ ಭೀಷ್ಮನು ಕೂಡ ಒಪ್ಪಿರಲು 

ಮತ್ತೆ ರೋಗವನರಿತ ಭೀಷ್ಮಗೆ ಶೂರ ತಾತನೆಂದ 

ಕುಲದ ಮಾನದ ಹೇತುವರಿಯುತ 

ಕುಲ ನಿಯೋಗಕೆ ಮತ್ತೆ ಹೇಳಲು 

ಕುಲದೊಳಾರರ ಸೂತ ಪುತ್ರನು ಭೀಷ್ಮನೊಪ್ಪಿದನಾ॥೨೫೫॥ 


ವಿದುರ ಸತಿಯಾ ಕುಂತಿ ಸೋದರಿ 

ವಿದುರ ಕರ್ಣನ ಪಡೆವ ಬಯಕೆಗೆ 

ಅದನು ಕುಂತಿಯು ಕೇಳಿ ತಾನದನೊಪ್ಪದೆ ಇರಲು 

ವಿಧಿಯವಳು ಗಾಂಧಾರಿಗೆದರುತ 

ಬಿಡದೆ ಮಾನಕೆ ತಾನು ಅಂಜುತ 

ಕಡೆಗೆ ಹೋದಳು ಕುಲ ನಿಯೋಗಕೆ ಕರ್ಮ ತನದೆನುತ॥೨೫೬॥ 


ಮೊದಲು ಪೀಠಜರನ್ನು ಒಪ್ಪದೆ 

ವಿದುರನನು ಪತಿ ಪಾಂಡು ಕರೆಯಲು 

ವಿದುರನನು ತಾನೊಪ್ಪಿ ಪಡೆದಳು ಕುಂತಿ ಧರ್ಮಜನ

ವಿದುರನಿಗೆ ವರ ಪುತ್ರರಿಲ್ಲದೆ 

ವಿದುರ ತೆರಳದೆ ಎರಡನೇ ಸಲ 

ಬದಲು ಪಾಂಡುವು ಕರೆಸಿದನು ತಾನೆರಡು ಪೀಠಜರ ॥೨೫೭॥ 


ದೇವಿ ಮಾದ್ರಿಗು ಕುಲ ನಿಯೋಗವು 

ಯಾವ ಪೀಠಜರ ಕರೆಸುತ 

ಸಾವು ಪಾಂಡುವಿಗಾಯ್ತು ಮಾದ್ರಿಯ ಕಾಮನೆಗೆ ಸಿಲುಕಿ 

ಇದನರಿತ ಗಾಂಧಾರಿಯುರಿದಳು 

ಚದಿಯಲೀ ಕುಲಧರ್ಮವೇನಿದು 

ತಡೆಯದೆಯೆ ಸತಿ ಪಾಂಡುವೊಂದಿಗೆ ಚಿತೆಯನೇರಿದಳು॥೨೫೮॥ 


ಗುಟ್ಟು ಕೆಲವರಿಗಷ್ಟೆ ಗೊತ್ತಿದು 

ಗುಟ್ಟು ಗುಟ್ಟಾಗುಳಿಯುತಿಂದಿಗು 

ಗುಟ್ಟು ಅತ್ತೆಯದೆಂದೆ ನಾನೂ ಕೂಡ ನಂಬಿದ್ದೆ 

ಇಷ್ಟವದೇಕೆ ನಿನ್ನ ಕಂಡರೆ 

ಸ್ಪಷ್ಟ ಕುಂತಿಯದಿಲ್ಲ ಅನುಮತಿ 

ಅಷ್ಟು ನಿಯಮಗಳಿಟ್ಟ ಕುಂತಿಗೆ ಮೋಸದಲಿ ಭೀಷ್ಮ ॥೨೫೯॥ 


ಅತ್ತು ಕರ್ಣನು ಕಣ್ಣನೊರೆಸುತ  

ಇತ್ತ ಕೃಷ್ಣನು ಅಳುತಲಿದ್ದನು 

ಮತ್ತೆ ಕೇಳಿದು ಭೀಷ್ಮ ಸಾಯದೆ ಮಾಡೆ ನಾ ಯುದ್ಧ

ನನ್ನಿಯಲಿ ಶ್ರೀ ಕೃಷ್ಣ ತಬ್ಬಲು 

ಇನ್ನು ನಿನಗಾಗೇನು ಬೇಕೋ

ಮುನ್ನ ನನ್ನ ಸಹಾಯ ನಿನಗಿದೆ ಎಂದನಾ ಕರ್ಣ॥೨೬೦॥ 


ಮಿತ್ರ ನನಗವನಾ ಸುಯೋಧನ 

ಮತ್ತೆ ಪ್ರಾಣವೆ ಮೀಸಲವನಿಗೆ 

ಸ್ತುತ್ಯ ದೇವನೆ ಮತ್ತೆ ಕಾಣುವೆನಾ ಕುರುಕ್ಷೇತ್ರ 

ಪ್ರಾಣ ನಿನ್ನಯ ಕೊಳಲ ಗಾನವು 

ಪ್ರಾಣ ಹೋಗುವ ಮೊದಲು ಕೇಳಿಸು 

ಪ್ರಾಣದಾಸೆಯು ಕೊನೆಯು ತಾನದು ವೇಣುಗಾನವದು॥೨೬೧॥ 


ಎಂದು ತೆರಳಿದ ವೀರ ಕರ್ಣನ 

ಒಂದು ಕ್ಷಣ ಕಣ್ತುಂಬಿ ಕೃಷ್ಣನು 

ಮಂದಹಾಸದಿ ನೋಡಲಾಕ್ಷಣ ನೋಡಿದನು ಕರ್ಣ

ಎಂದು ಹೇಗೋ ಹುಟ್ಟಿ ಬಂದೆನು 

ನೊಂದ ಜನ್ಮವು ನನ್ನ ಸಾಕಿತು 

ಹೊಂದದಾಯಿತು ಕರ್ಮ ಕಡೆಗೂ ನೆನೆದನಾ ಕರ್ಣ ॥೨೬೨॥ 


ವಿಷಯವಿದು ಕೇಶವನೆ ತಿಳಿಸಿದೆ 

ವಿಷದ ಮದ್ದಿನ ಬೇರು ಜಜ್ಜುತ 

ಕುಶಿಯಲಿದ ಕುಡಿಸಿದೆ ಕಷಾಯವ ಧೈರ್ಯಕೆಟ್ಟಿತದು 

ಒಪ್ಪಿದೆನು ನಿನ್ನೆಲ್ಲ ಮಾತನು 

ತಪ್ಪದೆಯೆ ಪಾರ್ಥನಿಗು ಹೇಳಿದು 

ಒಪ್ಪುವನೊ ಪ್ರೀತಿಯಲಿ ಮಾತನು ಆಗ ತಿಳಿದೀತು ॥೨೬೩॥ 


ಯುದ್ಧ ಸೋದರರೊಳಗೆ ರಾಜ್ಯಕೆ 

ಬದ್ಧ ಧರ್ಮಜನಾ ಸುಯೋಧನ 

ಯುದ್ಧ ತಡೆದರೆ ಧರ್ಮ ಸಂಸ್ಥಾಪನೆಯದಾದೀತು 

ನಡೆದುದೆಲ್ಲವ ನಾವು ಮರೆಯಲು 

ಕಡೆಗೆ ಕುಂತಿಯ ಮಾನವುಳಿವುದೆ 

ಬಿಡಲು ಸಾಧ್ಯವೆ ಲೆಕ್ಕವೆಲ್ಲವ ಮಾನ ಅವಮಾನ ॥೨೬೪॥ 


ಹೆತ್ತು ಹೆದೆಹಾಲಿತ್ತ ರಾಧೆಗೆ 

ಹೊತ್ತ ಅತಿರಥ ಸಾಕಿದಪ್ಪಗೆ 

ಮತ್ತೆ ಕ್ಷತ್ರಿಯನಾಗಿಯವರನು ಕಳೆದುಕೊಳಲೇ ನಾ

ಸೋತು ಯುದ್ಧದಿ ಬಿದ್ದೆನಾದೊಡೆ 

ಸೂತನಾಗಿಯೆ ನಾನು ಸಾಯುವೆ 

ಮಾತೆ ಪಿತರನು ಬಿಟ್ಟು ಧರ್ಮವ ಬಿಡಲೆ ನಾ ದೇವ॥೨೬೫॥ 


ಅಂದು ಹೆಂಗಳೆಯವರ ಶೋಷಣೆ 

ಇಂದು ಏನಿದು ಪುರುಷ ಶೋಷಣೆ 

ಅಂದಿಗಿಂದಿಗು ಜನರ ನಾಲಗೆ ಎಲುಬು ಇಲ್ಲದುದೆ

ಎಂದು ಮನದೊಳಗಿರಲು ಹಗೆತನ 

ಬಂಧನದಲೀ ನೃವದಿಟ್ಟರೆ 

ಮಂದಮತಿಗಳ ಸಲಹು ನೀನೇ ಮಕ್ಕಿ ಸಾರ್ಥಾವೇ॥೨೬೬॥ 


ಕೇಶವನ ಜೊತೆ ಕರ್ಣ ತೆರಳಲು 

ಆಶೆ ಕುಂತಿಗದೇನು ನುಡಿವನೊ 

ಈಶದಯದಲಿ ಕೃಷ್ಣನಿಷ್ಟದಿ ಏನೇ ಆಗಲದು

ಆಶೆಯೊಳಗೊಂದಾ ದುರಾಶೆಯು 

ದೋಷವಲ್ಲದೆ ನುಡಿದು ವಿದುರಗೆ 

ಮೋಸವಾದೀತೆಂದು ಕರ್ಣನ ನಾಳೆ ಕಾಣುವೆನು॥೨೬೭॥ 


ಇದನು ಕೇಳುತ ವಿದುರನೆಂದನು 

ನುಡಿವೆ ಕರ್ಣನ ಬುದ್ಧಿಯರಿತಿಹೆ 

ಕಡೆಗೆ ಘನತೆಯಿದಲ್ಲ ನಿಜಕೂ ಸೂರ್ಯಪುತ್ರನದು 

ಏನು ಸತ್ಯವ ನೀನು ನುಡಿದರು 

ತಾನವನು ಬದಲಾಗಲಾರನು 

ಬಾನ ಸೂರ್ಯನ ಆಣೆ ಬೆಲೆಯನು ಕೊಡನು ಆ ಕರ್ಣ॥೨೬೮॥ 


ಇಂಥ ದುಃಖದಿ ಬೇಡಿದರು ನೀ 

ಎಂಥ ಉತ್ತರವನ್ನು ಕೊಡುವನೊ 

ಕುಂತಿ ನಿನಗಿದು ಬೇಡವೆಂದೇ ವಿದುರನಾ ಮಾತು 

ಎಂಥದಾದರೂ ನನ್ನ ಮನದಲಿ 

ಚಿಂತನೆಯು ನನದೊಂದು ಒಳಗಿದೆ 

ಕುಂತಿಯೆಂದಳು ನಾಳೆ ಕರ್ಣನ ಕಾಣುವೆನು ನಾನು॥೨೬೯॥ 


ಕದನವದು ಇತ್ತಂಡ ಸೈನ್ಯವು 

ಮೊದಲು ಯುದ್ಧವು ನಿಲ್ಲಲೆಂದೇ 

ಕಡೆಗೆ ಪ್ರಜೆಗಳು ತಮ್ಮಯಾ ಸಂಸಾರ ನೆನೆಸುತಲಿ 

ಉಣದೆ ನಿದ್ರಿಸದಿರಲು ಕುಂತಿಯು 

ಪ್ರಣವ ಸೂರ್ಯನು ಕಂತುತಿರಲದು 

ಕ್ಷಣದಿ ಬೆಳ್ಳಿಯು ಉದಿಸಿತದು ಆ ಚಂದಿರನ ಜೊತೆಗೆ॥೨೭೦॥ 


ಬೆಳ್ಳಿಯುದಿಸಲು ಕುಂತಿಯೆದ್ದಳು 

ಅಲ್ಲಿ ಮನದಲ್ಪಾಸೆ ಮೊಳೆಯಲು 

ಮೆಲ್ಲನಾಚೆಗೆ ಈಚೆ ನೋಡುತ ಹೊರಟಳಾ ಕುಂತಿ 

ತುಂಡು ಪಂಚೆಯನುಟ್ಟ ಕರ್ಣನು 

ಕಂಡಳೆದೆಯಲಿ ವಜ್ರ ಕವಚವ 

ಅಂದು ಕರ್ಣನ ಕರಗಳಲಿ ವಿಧ ವಿಧದ ಹೂವಿತ್ತು ॥೨೭೧॥ 


ಕಣ್ಣು ತೆರೆಯಲು ಕಂಡ ಕುಂತಿಯ 

ಮುನ್ನ ಯೋಚಿಸಿ ತಲೆಯ ತಗ್ಗಿಸಿ 

ಧನ್ಯೆ ಪಾಂಡವ ಮಾತೆ ನಿನಗೆ ರಾಧೇಯನಾ ನಮನ

ಕಣ್ಣು ತುಂಬಲು ಕುಂತಿಯೆಂದಳು

ಮುನ್ನ ನೀ ಕೌಂತೇಯ ಕರ್ಣನೆ 

ಕಣ್ಣು ತುಂಬಿಸಿಕೊಳ್ಳಲೆಂದೇ ಬಂದೆ ನಾ ಮಗನೇ॥೨೭೨॥ 


ತಲೆಯ ತಗ್ಗಿಸುತವನ ಬಳಿಯಲಿ 

ಕೊಳಲ ಕೃಷ್ಣನ ಮನದಿ ನೆನೆಯುತ 

ತಲೆಯ ತಗ್ಗಿಸಿದವನ ಮುಖವನು ಕುಂತಿ ಮೇಲೆತ್ತಿ

ಹೃದಯ ಮಿಡಿಯಲು ಎಂತದೋ ಸುಖ 

ಮುದದಿ ನಿಟ್ಟುಸಿರಿಡುತ ಕರ್ಣನು 

ತಡೆಯದೆಯೆ ತಾ ಮಗನ ನೆತ್ತಿಯ ಸವರಿದಳು ಕುಂತಿ॥೨೭೩॥ 


ಚೇಳು ಕಡಿದನುಭವದಿ ಕರ್ಣನು 

ತಾಳ್ಮೆಯಲಿ ಧೃತಿಗೆಡದೆ ಹೇಳಿದ 

ಕೇಳು ಮಾತೆಯೆ ಬಂದ ಕಾರಣವೇನು ನೀನೀಗ 

ನಾಲ್ಕು ಮಾರದು ದೂರ ನಿಲ್ಲುತ 

ತಾಳುತಲಿ ನಮಸ್ಕಾರ ಮಾಡಲು 

ಕೇಳು ಕರ್ಣನೆ ಎಂದು ಹೆದರುತ ಹೇಳಿದಳು ಕುಂತಿ॥೨೭೪॥ 


ನನ್ನ ಹಿರಿಮಗ ನೀನು ಕರ್ಣನೆ 

ಮುನ್ನ ಮುನಿ ಕೈಯೊಳಗೆ ಸಿಲುಕುತ 

ನನ್ನ ಹದಿಮೂರರಲಿ ಹುಟ್ಟಿದೆ ನಾನು ಅಜ್ಞಾನಿ 

ನಿನ್ನ ಸೂತಗೆ ದಾನ ಕೊಟ್ಟರು 

ನನ್ನೆರಡು ಆ ಪಾಪಿ ಹಿರಿಯರು 

ಇನ್ನು ತಡೆಯುವೆ ನಿನಗು ಪಾರ್ಥಗು ಯುದ್ಧವಾಗುವುದಾ॥೨೭೫॥ 


ಅಮ್ಮ ನೀ ಮುಚ್ಚಿಡುತ ವಿಷಯವ 

ಅಮ್ಮ ಬದುಕಿದೆ ಸೂತನಾಗಿಯೆ 

ಅಮ್ಮ ನಿನ್ನಯ ಕಾಲು ಹಿಡಿಯುವ ಭಾಗ್ಯ ಸಿಗಲಿಲ್ಲ 

ಅಮ್ಮ ನೀ ನನ್ನೆಳೆಯ ಕಾಲದಿ 

ಅಮ್ಮ ಜನುಮ ರಹಸ್ಯ ತಿಳಿಸದೆ 

ಅಮ್ಮ ನೀನಿದನೀಗ ತಿಳಿಸುತ ಕೊಂದೆಯಲ್ಲಮ್ಮ॥೨೭೬॥ 


ಈಗ ಹೇಳುವೆ ದುಃಖಪಡದೆಯೆ 

ಹೇಗೆ ನನ್ನನು ದೂರವಿಟ್ಟೆಯೊ 

ಈಗ ಹೇಳಿದು ಯಾವ ತಾಯಿ ನೀ ಏನು ಕಠಿಣ ಮನ 

ಆಗ ನಾ ಕುರುಕುಲದ ರಾಣಿಯು 

ಬೇಗೆ ಮಾನದ ಪ್ರಶ್ನೆ ತಾನು 

ಈಗ ನಿಮ್ಮನು ಮಕ್ಕಳಿಬ್ಬರ ಕಳೆದುಕೊಳಲಾರೆ॥೨೭೭॥ 


ನಗುತ ತಾನವನಾಗ ಕರ್ಣನು 

ಜಗವದರಿಯದೆ ಅರಮನೆಯ ಜನ 

ನಗುವರಲ್ಲವೆ ಈಗ ಕುರುಕುಲ ಮಾನದವಮಾನ

ಅರಿತು ಯೋಚಿಸು ಅಮ್ಮ ನೀನಿದು 

ಚರಿತೆಯಲೆ ಮೊದಲಿಂತ ಅಮ್ಮನು 

ಕುರಿತು ನೀನೋಡಿಲ್ಲಿ ನಿನ್ನಯ ಮಕ್ಕಳಾ ಯುದ್ಧ ॥೨೭೮॥ 


ಅಂತು ನಾನೇನಮ್ಮ ಮಾಡಲಿ 

ಅಂತು ಇಂತೂ ಕುಂತಿ ಮಗನೇ 

ಇಂಥದೀ ಸುದ್ಧಿಯನು ನಿನ್ನಯ ಮಕ್ಕಳಿಗು ಹೇಳು 

ಏನ ಹೇಳಲಿ ಕುಂತಿ ಚಿಂತಿಸೆ 

ದೀನ ನನ್ನನು ಕೊಲಲಿ ಪಾರ್ಥನ 

ನಾನವನ ಬಿಡೆನೆಂದ ಕರ್ಣನು ಪಾಂಡವರ ಹೊರತು ॥೨೭೯ ॥ 


ನಿನಗೆ ರಾಧೆಯು ನನ್ನ ಕೊಡುವಳೆ 

ನನಗೆ ಎದೆಹಾಲಿತ್ತ ಸೇವೆಗೆ 

ನನಗವರ ಬಿಡಲಾಗದೆಂದಿಗೂ ತಡೆಯೆ ನಾ ದುಃಖ

ಈಗ ನಿನ್ನಯ ಮಾನ ಹೋದರೂ 

ಹೇಗೆ ಮಕ್ಕಳು ತಡೆಯಬಲ್ಲರು 

ಹೋಗಲಾರೆನು ನಾನು ಯುದ್ಧಕೆ ಭೀಷ್ಮನಿರುವರೆಗೂ॥೨೮೦॥ 


ನಿನಗೆ ಈ ಹಗೆಯೇಕೆ ಕರ್ಣನೆ 

ನಿನಗವರು ಸೋದರರು ಎನ್ನುತ 

ಕೊನೆಗೆ ನೀನಾ ತೊಟ್ಟ ಬಾಣವ ತೊಡೆನು ಎಂಬ ವರ 

ಪಡೆದೆ ನೀ ನನ್ನಿಂದ ಭಾಷೆಯ 

ಬಿಡದೆ ಹೇಳುತ ಕೊಂದೆಯಮ್ಮಾ 

ಕಡೆಗೆ ಕೇಳಿದು ಯುದ್ಧ ನನಗೂ ಪಾರ್ಥಗು ತಾನೇ॥೨೮೧ ॥ 


ಅಮ್ಮ ಧಕ್ಕೆಯು ನಿನ್ನ ಮಾನಕೆ 

ಅಮ್ಮ ನನ್ನನು ಕೊಟ್ಟೆ ಸೂತಗೆ 

ಒಮ್ಮೆ ನೀ ಹೊಳೆಗೆಸೆಯುತಿದ್ದರೆ ಸ್ವರ್ಗ ಸಿಗುತ್ತಿತ್ತು 

ಅಮ್ಮ ಕವಚವ ಕಂಡೆ ಹಿಂದೆಯೆ 

ಅಮ್ಮ ತಿಳಿದಿತ್ತಲ್ಲ ಅಂದೇ 

ಅಮ್ಮ ಮಕ್ಕಳು ಇಲ್ಲದಿದ್ದರು ನನ್ನ ತೊರೆದ್ಯಲ್ಲ॥೨೮೨॥ 


ಏನು ತಾಯರಮನೆಯ ಮೋಹವು 

ಏನು ಮಂತ್ರದ ಪೀಠ ಪತಿಗಳೊ 

ನೀನು ಸಂಗಮಕೆಂತು ಹೋದೆಯೊ ಮಾನಕದು ಕುತ್ತು 

ವಯಸು ಹದಿಮೂರರಲಿ ಮುನಿಯವ 

ಬಯಸಿದವನವನಾವ ಮೂರ್ಖನೊ 

ವಯಸು ನೋಡದೆ ಬಡಿದು ಕೊಲ್ಲುವೆನವನ ಖಂಡಿತವು॥೨೮೩॥ 


ಏನದಾಗಲಿ ಪುತ್ರರೈವರು 

ನಾನು ತಾನೆಂದಿರುವರಲ್ಲವೆ 

ನೀನು ಹೇಳೆದು ನಿನಗೆ ನಾನಾ ಪಾರ್ಥನೇ ತಾನಾ 

ದಡದಡನೆ ಎದೆ ಬಡಿತ ಕೇಳಲು 

ನಡುಗಿ ಬಾಯಿಯ ಮುಚ್ಚುತಾಗಲೆ

 ಕಡೆಗು ದನಿಯದು ಉಡುಗಿ ಹೋಯಿತು ದೇವಿ ಕುಂತಿಯದು॥೨೮೪॥ 


ಮಗನ ನೆತ್ತಿಯನೊಮ್ಮೆ ಸವರುತ 

ದುಗುಡದಲಿ ಕರುಳುರಿದು ಹೋಗಲು 

ಮಗನೆ ಕೊಂದುಬಿಡೆಂದು ಹೇಳಿದಳಾಗ ಕರ್ಣನಿಗೆ

ಮರಳಿ ಬರುತಿರಲಾಗ ಪಾರ್ಥನು 

ತಿರುಗಿ ನೋಡುತ ಬಳಿಗೆ ಬಂದನು 

ಸರಸರನೆ ಬರುತಿರಲು ಕೇಳಿದನಾಗ ಕುಂತಿಯನು॥೨೮೫॥ 




ಹೇಳು ಕರ್ಣನನೇಕೆ ರಮಿಸಿದೆ 

ಹೇಳು ನನ್ನಾಣೆಯದು ನಿನಗಿದೆ 

ಕೇಳು ಮಗನೇ ನಿನ್ನ ಚಹರೆಯ ಕಂಡೆನವನಲ್ಲಿ 

ತಾನು ನಮಿಸಿದನವನು ಕರ್ಣನು 

ನಾನು ಮೆಚ್ಚಿದೆನವನ ಧೈರ್ಯವ 

ನೀನು ಯೋಚಿಸಲೇನು ಇಲ್ಲವದೆಂದಳಾ ಕುಂತಿ॥೨೮೬॥ 


॥ ಓಂ ಜನ್ಮಕರ್ಮ ವಿವರ್ಜಿತಾಯೈ ನಮಃ॥


ಸ್ಮರಣೆಯೊಡನೆ:- 


ಕರ್ತೃ :- ಕೊಡವ ಮೂಲ

 

ಶ್ರೀಮತಿ ಮಂಡೀರ ಜಯೃ ಅಪ್ಪಣ್ಣ 


ಕನ್ನಡ ಅನುವಾದ:- 


ನಾಗೇಶ್ ಕಾಲೂರು


ಪ್ರಕಾಶಕರು:- ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 

ಕಲಾಗ್ರಾಮ, ಜ್ಞಾನಭಾರತಿ ಅಂಚೆ, 

ಮಲ್ಲತ್ತಳ್ಳಿ ಬೆಂಗಳೂರು-೫೬೦೦೫೬