ಶ್ರೀಭೋಜರಾಜಸಾರ್ವಭೌಮ ವಿರಚಿತ ಚಂಪೂರಾಮಾಯಣ
ಕಾವ್ಯದ ಕರ್ತೃ ಸುಮಾರು ಹತ್ತು-ಹನ್ನೊಂದನೆಯ ಶತಾಬ್ಧದಲ್ಲಿದ್ದ ಭೋಜರಾಜ. ಧಾರಾನಗರವನ್ನು ಕೇಂದ್ರವಾಗಿ ಮಾಡಿಕೊಂಡು ನಲವತ್ತು ವರ್ಷಗಳಿಗೂ ಹೆಚ್ಚು ಕಾಲ ಪ್ರಜಾರಂಜಕನಾಗಿ ರಾಜ್ಯಭಾರ ಮಾಡಿದ ಸಾಹಿತೀಸಮರಾಂಗಣ-
ಸಾರ್ವಭೌಮ. ಸಂಸ್ಕೃತದಲ್ಲಿ ಚಂಪೂಕಾವ್ಯವು ಸಾಕಷ್ಟು ಪ್ರತಿಷ್ಠೆಯನ್ನು ಗಳಿಸಿರುವ ಒಂದು ಸಾಹಿತ್ಯಪ್ರಕಾರ. ನಳಚಂಪೂ, ಯಶಸ್ತಿಲಕಚಂಪೂ, ಭಾರತಚಂಪೂ ಮುಂತಾದ ಪ್ರಸಿದ್ಧ ಕಾವ್ಯಗಳಿದ್ದರೂ ಈ ಪ್ರಾಕಾರಕ್ಕೆ ಹೆಚ್ಚಿನ ಶೋಭೆ ಬಂದದ್ದು ಭೋಜದೇವನ ಚಂಪೂರಾಮಾಯಣದಿಂದ. ಅಷ್ಟೇಕೆ, ಚಂಪುವೆಂದರೆ ಭೋಜಚಂಪುವೆಂದೇ ಪ್ರಸಿದ್ಧಿ.
ಕಾಳಿದಾಸನ ರಘುವಂಶದ ಆರೇಳು ಸರ್ಗಗಳಲ್ಲಿ ವಿಸ್ತರಿಸಿಕೊಳ್ಳುವ ರಾಮಕಥೆಯನ್ನು ಬಿಟ್ಟರೆ ಇಡಿಯ ಸಂಸ್ಕೃತ ಸಾಹಿತ್ಯದಲ್ಲಿ ಭೋಜಚಂಪುವೊಂದೇ ಅಡಕವೂ, ಸಮಗ್ರವೂ ಆದ ರಾಮಾಯಣ ಕಾವ್ಯ. ಈ ಕಾವ್ಯ ಕಿವಿಗಿಂಪಾಗಿ, ಬಗೆಬಗೆಯ ಛಂದಸ್ಸುಗಳಿಂದ, ಸಹಜವಾದ ಪ್ರಾಸಾನುಪ್ರಾಸದಿಂದ, ಸಂಗೀತದ ಸೊಗಸನ್ನು ಮೈಗೂಡಿಸಿಕೊಂಡು,
ಆಪಾತಮಧುರವಾದಂತೆಯೇ ಹೃದಯಂಗಮವಾದ ವರ್ಣನೆಗಳ ಮೂಲಕ, ಆಕರ್ಷಕವಾದ ಅರ್ಥಾಲಂಕಾರಗಳ ಮೂಲಕ ಆಲೋಚನಾಮೃತವೂ ಆಗಿ ಪರಿಣಮಿಸಿದೆ. ಕಾವ್ಯಪಾಕಗಳ ಪೈಕಿ ಚಂಪೂರಾಮಾಯಣ ಕದಳೀಪಾಕ.
ಶ್ರೀ ಭೋಜರಾಜಸಾರ್ವಭೌಮ ವಿರಚಿತ ಚಂಪೂರಾಮಾಯಣದ ಬಾಲಕಾಂಡ,
ಪ॥ಲಕ್ಷ್ಮೀಂ ತನೋತು ನಿತರಾಮಿತರಾನಪೇಕ್ಷ -
ಮಂಘ್ರಿದ್ವಯಂ ನಿಗಮಶಾಖಿಶಿಖಾ ಪ್ರವಾಲಮ್।
ಹೈರಂಬಮಂಬುರುಹಡಂಬರಚೌರ್ಯನಿಘ್ನಂ
ವಿಘ್ನಾದ್ರಿಭೇದಶತಧಾರಾಧುರಂಧರಂ ನಃ। ೧॥
ಅನ್ವಯ॥॥॥ವೇದಗಳೆಂಬ ವೃಕ್ಷಗಳ ಕೊಂಬೆಗಳಲ್ಲಿ ( ಕೊನರಿದ ) ಚಿಗುರಾಗಿರುವ, ಕಮಲಗಳ ಸೌಂದರ್ಯದರ್ಪವನ್ನು ಅಡಗಿಸುವ, ವಿಘ್ನಗಳೆಂಬ ಪರ್ವತಗಳನ್ನು ಭೇದಿಸುವಲ್ಲಿ ವಜ್ರಾಯುಧಕ್ಚೆ ಸಮನಾದ ಸತ್ತ್ವವನ್ನು ಹೊಂದಿರುವ, ಸರ್ವತಂತ್ರಸ್ವತಂತ್ರ-ವಾಗಿರುವ ವಿನಾಯಕನ ಚರಣಯುಗಲವು ನಮ್ಮ ಸೌಭಾಗ್ಯವನ್ನು ಅತಿಶಯವಾಗಿ ವರೂಧಿಸಲಿ.
ಪ॥ ಉಚ್ಚೈರ್ಗತಿರ್ಜಗತಿ ಸಿದ್ಧ್ಯತಿ ಧರ್ಮತಶ್ಚೇ
ತ್ತಸ್ಯ ಪ್ರಮಾ ಚ ವಚನೈಃ ಕೃತಕೇತರೈಶ್ಚೇತ್॥
ತೇಷಾಂ ಪ್ರಕಾಶನದಶಾ ಚ ಮಹೀಸುರೈಶ್ಚೇ
ತ್ತಾನಂತರೇಣ ನಿಪತೇತ್ ಕ್ವ ನು ಮತ್ಪ್ರಣಾಮಃ ॥ ೨॥
ಅನು॥ ಸಂಸಾರದಲ್ಲಿ ಉತ್ಕೃಷ್ಟವಾದ ಫಲವು ಧರ್ಮದಿಂದ ಒದಗುವುದಾದರೆ, ವೇದಗಳಿಂದ ಉಟಾಗುವುದಾದರೆ, ಆ ವೇದಗಳ ಪ್ರಕಟಣೆಯು ಭೂಮಿಯ ಮೇಲಿನ ದೇವತೆಗಳಾದ ವಿಪ್ರರಿಂದ ಆಗುವುದಾದರೆ ಅವರನ್ನು ಬಿಟ್ಟು ನನ್ನ ಮನವು
ಸಲ್ಲುವುದೆಲ್ಲಿ ?
ಪ ॥ ಗದ್ಯಾನುಬಂಧರಸಮಿಶ್ರಿತಪದ್ಯಸೂಕ್ತಿ
ರ್ಹೃದ್ಯಾ ಹಿ ವಾದ್ಯಕಲಯಾ ಕಲೆತೇವ ಗೀತಿಃ
ತಸ್ಮಾದ್ದಧಾತು ಕವಿಮಾರ್ಗಜುಷಾಂ ಸುಖಾಯ
ಚಂಪೂಪ್ರಬಂಧರಚನಾಂ ರಸನಾ ಮದೀಯ॥೩॥
ಅನು ॥ ವಾದ್ಯಸಂಗೀತದಿಂದೊಡಗೂಡಿದ ಗೀತದಂತೆ ಗದ್ಯದಿಂದೊಡಗೂಡಿದ ರಸಾವಿಷ್ಟ ಪದ್ಯಕಾವ್ಯವು ಚಿತ್ತಾಕರ್ಷವಾದುದು. ಆದ್ದರಿಂದ ಸಾಹಿತ್ಯಮಾರ್ಗದ ಪ್ರಯಾಣಿಕರಿಗೆ ಆನಂದವನ್ನು ನೀಡಲು ನನ್ನ ಜಿಹ್ವೆಯು ಚಂಪೂಕಾವ್ಯದ ರಚನೆಗೆ ತೊಡಗಲಿ.
ಪ॥ ವಾಲ್ಮೀಕಿಗೀತರಘುಪುಂಗವಕೀರ್ತಿಲೇಶೈ
ಸ್ತೃಪ್ತಿ ಕರೋಮಿ ಕಥಮಪ್ಯಧುನಾಬುಧಾನಾಮ್॥
ಗಂಗಾಜಲೈರ್ಭುವಿ ಭಗೀರಥಯತ್ನಲಭ್ಧೈಃ
ಕಿಂ ತರ್ಪಣಂ ನ ವಿದಧಾತಿ ನರಃ ಪಿತೃಣಾಮ್॥೪॥
ಅನು ॥ ವಾಲ್ಮೀಕಿಯು ಹಾಡಿದ ರಘುಶ್ರೇಷ್ಠನ ಚರಿತಾಂಶಗಳಿಂದ ವಿದ್ವಾಂಸರನ್ನು ಹೇಗಾದರೂ ಈಗ ಸಂಪ್ರೀತಗೊಳಿಸುವೆನು. ಭೂಮಿಯಲ್ಲಿ ಭಗೀರಥನ ಪ್ರಯತ್ನಗಳಿಂದ ಪಡೆದುಕೊಂಡ ಗಂಗಾಜಲದಿಂದ ಶ್ರದ್ಧಾಳುವು ಪಿತೃಗಳಿಗೆ ತರ್ಪಣವನ್ನು ನೀಡುವುದಿಲ್ಲವೆ?
ಪ ॥ ವಾಚಂ ನಿಶಮ್ಯ ಭಗವಾನ್ ಸ ತು ನಾರದಸ್ಯ
ಪ್ರಾಚೇತಸಃ ಪ್ರವಚಸಾಂ ಪ್ರಥಮಃ ಕವೀನಾಮ್॥
ಮಾಧ್ಯಂದಿನಾಯ ನಿಯಮಾಯ ಮಹರ್ಷಿಸೇವ್ಯಾಂ
ಪುಣ್ಯಾಮವಾಪ ತಮಸಾಂ ನಿಹಂತ್ರೀಮ್॥೫॥
ಅನು ॥ ನಾರದನ ನುಡಿಯನ್ನು ಕೇಳಿ, ವಾಕ್ಸಿದ್ಧಿಯನ್ನು ಪಡೆದ ಕವಿಗಳಲ್ಲಿ ಮೊದಲನೆಯವನಾದ ಆ ಭಗವಾನ್ ಪ್ರಾಚೇತಸನು ಮಧ್ಯಾಹ್ನದ ಆಹ್ನಿಕಕ್ಕಾಗಿ ಮಹರ್ಷಿಗಳಿಂದ ಆರಾಧಿಸಲ್ಪಡುತ್ತಿದ್ದ, ತಮೋಗುಣವನ್ನು ನಾಶಗೊಳಿಸುವ ಪಾವನೆಯಾದ ತಮಸಾನದಿಯ ಬಳಿ ಸಾರಿದನು.
ಭೃಗುವಂಶದಲ್ಲಿ ಪ್ರಚೇತಸ್ ಎಂಬ ಋಷಿಯಿದ್ದನು. ಅವನಿಗೆ ಋಕ್ಷ ಎಂಬ ಮಗ. ಇವನು ದೀರ್ಘಕಾಲ ತಪಸ್ಸು ಆಚರಿಸಿದಾಗ ಅವನ ಸುತ್ತ ಹುತ್ತವೊಂದು ರೂಪುಗೊಂಡಿತು. ಬಳಿಕ ವರುಣನು ಮಳೆಗರೆದು ಆ ಹುತ್ತವನ್ನು ಕರಗಿಸಿದನು. ಹೀಗಾಗಿ ವಾಲ್ಮೀಕಿಗೆ ಪ್ರಾಚೇತಸ, ಮೈತ್ರಾವರುಣಿ ಎಂಬ ನಾಮಾಂತರಗಳಿವೆ.
ಗದ್ಯ ॥ ತತ್ರ ಕಂಚನ ಕ್ರೌಂಚಮಿಥುನಾದೇಕಂ ಪಂಚಶರವಿದ್ಧಮಪಿ ವ್ಯಾಧೇನಾನುವಿದ್ಧಂ ನಿದ್ಯಾಯತೋ ಬದ್ಧಾನುಕಂಪಸ್ಯ ಭಗವತೋ ವಾಲ್ಮೀಕೇರ್ವದನಾರವಿಂದಾಚ್ಛಂದೋಮಯೀ ಕಾಚಿದೇವಂ ನಿಃಸಸಾರ ಸರಸ್ವತೀ ॥
ಅನು ॥ ಆ ನದೀ ತಟದಲ್ಲಿ ಕ್ರೌಂಚಮಿಥುನದಲ್ಲಿ ಮನ್ಮಥನ ಬಾಣಗಳಿಂದ ಆಗಲೇ ಗಾಸಿಗೊಂಡಿದ್ದ ಒಂದು ಕ್ರೌಂಚವು ಬೇಡನಿಂದ ಹೊಡೆಯಲ್ಪಟ್ಟುದನ್ನು ಗಮನಿಸುತ್ತಿದ್ದ ಕರುಣಾಳು ಭಗವಾನ್ ವಾಲ್ಮೀಕಿಯ ಮುಖಕಮಲದಿಂದ ಛಂದೋಮಯವಾದ ಅಪೂರ್ವ ವಾಗ್ರೂಪ ಹೊರಹೊಮ್ಮಿತು.
ಪ ॥ ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ॥
ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿಮ್॥೬॥
ಅನು ॥ ಹೇ ವ್ಯಾಧನೇ, ಕ್ರೌಂಚಮಿಥುನದಲ್ಲಿ ಕಾಮಮೋಹಿತವಾದ ಒಂದನ್ನು ವಧಿಸಿದೆಯಲ್ಲ ! ನೀನು ಮುಂದಿನ ಯಾವತ್ತೂ ವರ್ಷಗಳಲ್ಲಿ ಅಭ್ಯುದಯವನ್ನು ಹೊಂದದಿರು.
ಸಂಸ್ಕೃತಸಾಹಿತ್ಯದಲ್ಲಿ ವೈದಿಕಸಂಸ್ಕೃತ ಹಾಗೂ ಲೌಕಿಕಸಂಸ್ಕೃತ ಎಂದು ಎರಡು ವಿಭಾಗಗಳಿವೆ. ಈ ಶ್ಲೋಕದ ರಚನೆಯಾಗುವವರೆಗೆ ಛಂದೋಮಯವಾದ ವಾಗ್ರೂಪ ವೈದಿಕಸಂಸ್ಕೃತದಲ್ಲಿತ ಮಾತ್ರವಿತ್ತು. ಈ ಶ್ಲೋಕವು ಲೌಕಿಕಸಂಸ್ಕೃತದ ಪ್ಪಪ್ರಥಮ ಛಂದೋಬದ್ಧ ರಚನೆಯಾಗಿದೆ.
ಗ ॥ ತದನು ಸಮಯೋಚಿತಕೃತ್ಯಂ ನಿರ್ವರ್ತ್ಯ ಸ್ವಾಶ್ರಮಂ ಪ್ರತಿ ಗತವತಿ ಭಗವತಿ ವಾಲ್ಮೀಕೌ ॥
ಅನು॥ ಆ ಬಳಿಕ ಮಧ್ಯಾಹ್ನಕಾಲಕ್ಕೆ ಸಮುಚಿತವಾದ ಕ್ರಿಯೆಗಳನ್ನು ಮುಗಿಸಿ ಭಗವಾನ್ ವಾಲ್ಮೀಕಿಯು ತನ್ನ ಆಶ್ರಮಕ್ಕೆ ಮರಳಿರಲು -
ಪ ॥ವಾಣೀವಿಲಾಸಮಪರತ್ರ ಕೃತಕೋಲಂಭ-
ಮಂಭೋಜಭೂರಸಹಮಾನ ಇವಾವಿರಾಸೀತ್ ॥
ಆಭಾತಿ ಯತ್ಕೃತಿರನೇಕವಿಧಪ್ರಪಂಚ
ವ್ಯಾಜೇಂದ್ರಜಾಲವಿಧಿಸಾಧಕಪಿಚ್ಛಕೇವ॥೭॥
ಅನು॥ ಯಾವನ ಕ್ರಿಯಾಶಕ್ತಿಯು ಅನಂತವೈವಿಧ್ಯದ ಪ್ರಪಂಚನಿರ್ಮಿತಿಯ ನೆವದಲ್ಲಿ ಇಂದ್ರಜಾಲಪ್ರದರ್ಶನದ ನವಿಲುಗರಿಗಳ ಕುಂಚದಂತೆ ತೋರುವುದೋ ಅಂತಹ ಬ್ರಹ್ಮನು ಬೇರೆಡೆ ಪ್ರಕಟಗೊಂಡ ಸರಸ್ವತಿಯ ವಿಲಾಸವನ್ನು ಸಹಿಸದವನೋ ಎಂಬಂತೆ ಪ್ರತ್ಯಕ್ಷನಾದನು.
ತನ್ನ ಪತ್ನಿಯಾದ ಸರಸ್ವತಿ ಅಥವಾ ವಾಣಿಯು ವಾಲ್ಮೀಕಿಗೆ ಒಲಿದಿದ್ದಾಳೆ ಎಂಬುದನ್ನು ಸಹಿಸಲಿಲ್ಲವೋ ಎಂಬಂತೆ ಬ್ರಹ್ಮ ಆ ಕ್ಷಣ ಪ್ರತ್ಯಕ್ಷನಾದನೆಂದು ಕವಿ ಉತ್ಪ್ರೇಕ್ಷಿಸಿದ್ದಾನೆ. ವಾಸ್ತವವಾಗಿ ಕ್ರೌಂಚವಧೆಯಿಂದ ಶೋಕಾವಿಷ್ಟನಾಗಿ ವ್ಯಗ್ರಮನಸ್ಕನಾದ ವಾಲ್ಮೀಕಿಯನ್ನು ಸಮಾಧಾನಿಸಿ ನಾರದ ನುಡಿದ ರಾಮಚರಿತೆಯನ್ನು ಲೋಕದಲ್ಲಿ ಪ್ರಕಟಿಸುವಂತೆ ಪ್ರೇರಿಸಲು ಪರಮ ಕರುಣಾಳುವಾದ ಬ್ರಹ್ಮ ಪ್ರತ್ಯಕ್ಷನಾಗಿದ್ದನು.
ಗ॥ ತತಃ ಪರಮಹರ್ಷೇಣ ಮಹರ್ಷಿಣಾ ವಿಧಿವದಭ್ಯರ್ಚಿತಃ ಪರಮೇಷ್ಠೀ ಮಧ್ಯಲೋಕೇऽಪಿ ಸ್ವವೃತ್ತಂ ಪ್ರಕಾಶಯುತುಂ ಕಿಲ ಭವನ್ತಮೇವೋಪತಿಷ್ಠಮಾನಯಾನಯಾ ಭಾರತ್ಯಾ ರಾಮಚರಿತಂ ಯಥಾಶೃತಂ ವ್ಯಾಕ್ರಿಯತಾಮಿತಿ ವ್ಯಾಹೃತ್ಯಾಂತರಧಾತ್
ಅನು॥ ಬಳಿಕ ಪರಮಹರ್ಷಿತನಾದ ವಾಲ್ಮೀಕಿಯಿಂದ ಶಾಸ್ತ್ರೋಕ್ತವಾಗಿ ಪೂಜಿಸಲ್ಪಟ್ಟ ಬ್ರಹ್ಮನು " ಭೂಲೋಕದಲ್ಲಿಯೂ ತನ್ನ ಮಹಿಮೆಯನ್ನು ಪ್ರಕಟಿಸಲೋ ಎಂಬಂತೆ ನಿನ್ನನ್ನೇ ಆಶ್ರಯಿಸಿದ ವಾಗ್ದೇವಿಯ ಮೂಲಕ ನೀನು ಈಗಾಗಲೇ ಕೇಳಿದ ರಾಮಚರಿತೆಯನ್ನು ರಚಿಸು" ಎಂದು ನುಡಿದು ಅಂತರ್ಧಾನನಾದನು.
ಪ॥ ಅಥ ಸರಸಿಜಯೋನೇರಾಜ್ಞಯಾ ರಾಮವೃತ್ತಂ
ಕರಬದರಸಮಾನಂ ಪ್ರೇಕ್ಷ್ಯ ದೃಷ್ಟ್ಯಾ ಪ್ರತೀಚ್ಯಾ॥
ಶುಭಮತನುತ ಕಾವ್ಯಂ ಸ್ವಾದು ರಾಮಾಯಣಾಖ್ಯಂ
ಮಧುಮಯಭಣಿತೀನಾಂ ಮಾರ್ಗದರ್ಶೀ ಮಹರ್ಷಿಃ॥೮॥
ಅನು॥ ಆ ಬಳಿಕ ಅಮೃತವೊಸರುವ ಸೂಕ್ತಿಗಳ ಮಾರ್ಗದರ್ಶಕನಾದ ಮಹರ್ಷಿಯುಕಮಲಸಂಭವನ ಆಣತಿಯಂತೆ ಯೋಗದೃಷ್ಟಿಯಿಂದ ರಾಮನ ವೃತ್ತಾಂತವನ್ನು ಅಂಗೈಯಲ್ಲಿಯ ಬೋರೆಹಣ್ಣಿನಂತೆ ಕಂಡುಕೊಂಡು ರಾಮಾಯಣವೆಂಬ ರಸಾವಿಷ್ಟವೂ, ಮಂಗಲಮಯವೂ ಆದ ಕಾವ್ಯ ರಚಿಸಿದನು.
ಗ॥ ಏನಂ ಪ್ರಬಂಧಂ ಪ್ರಯೋಕ್ತುಂ ಕಃ ಸಮರ್ಥ ಇತಿ ಚಿಂತಾಮುಪಗತವತಿ ಸತಿ ಭಗವತಿ ವಾಲ್ಮೀಕೌ॥
ಅನು॥ ಈ ಕಾವ್ಯವನ್ನು ಪ್ರಸ್ತುತಪಡಿಸಲು ಸಮರ್ಥರಾರೆಂದು ಭಗವಾನ್ ವಾಲ್ಮೀಕಿಯು ಚಿಂತಿಸುತ್ತಿರಲು…..
ಪ॥ ಉಪಾಗತೌ ಮಿಲಿತಪರಸ್ಪರೋಪಮೌ ಬಹುಶ್ರುತೌ ಶ್ರುತಿಮಧುರಸ್ವರಾನ್ವಿತೌ।
ವಿಚಕ್ಷಣೌ ವಿವಿಧನರೇಂದ್ರಲಕ್ಷಣೌ ಕುಶೀಲವೌ ಕುಶಲವನಾಮಧಾರಿಣೌ॥೯॥
ಅನು॥ ಒಂದೇ ರೀತಿಯ ರೂಪ-ಆಕಾರಗಳನ್ನು ಹೊಂದಿದ, ವಿದ್ಯಾವಿಶಾರದರಾದ, ಕಿವಿಗೆ ಇಂಪಾಗುವಂತಹ ಸ್ವರದಿಂದೊಡಗೂಡಿದ,ವಿದ್ವಾಂಸರಾದ, ಅನೇಕ ರಾಜಲಕ್ಷಣಗಳನ್ನು ಹೊಂದಿದ, ಸಂಗೀತಗಾರರಾದ ಕುಶ, ಲವ ಎಂಬ ಹೆಸರಿನ ಇಬ್ಬರು ಆಗಮಿಸಿದರು.
ಸೀತೆಯ ಗರ್ಭದೋಷ ಪರಿಹಾರಕ್ಕಾಗಿ ಕುಶ ಹಾಗೂ ಲವಗಳಿಂದ ಗರ್ಭವನ್ನು ಮಾರ್ಜನ ಮಾಡಿದ್ದರಿಂದ ಅವರಿಗೆ ಕುಶ ಹಾಗೂ ಲವ ಎಂದು ಹೆಸರು.
ಗ॥ ಏತೌ ಮುನಿ ಪರಿಗೃಹ್ಯ ಸ್ವಾಂ ಕೃತಿಮಪಾಠಯತ್।
ಅನು॥ ಮಹರ್ಷಿಯು ಅವರಿಬ್ಬರನ್ನೂ ಶಿಷ್ಯಯರನ್ನಾಗಿ ಸ್ವೀಕರಿಸಿ ತನ್ನ ಕೃತಿಯನ್ನು ಕಲಿಸಿದನು.
ಗ॥ ತೌ ಪುನರಿತಸ್ತತೋ ಗಾಯಮಾನೌ ದೃಷ್ಟ್ವಾ ರಾಮಃ ಪ್ರಹೃಷ್ಟಮನಾಃ ಸ್ವಭವನಮಾನೀಯ ಭ್ರಾತೃಭಿಃ ಪರಿವೃತೋ ನಿಜಚರಿತಂ ಗಾತುಮನ್ವಯುಂಕ್ತ।ತತಶ್ಚ-
ಅನು॥ ಅಲ್ಲಲ್ಲಿ ಹಾಡುತ್ತಿರುವ ಅವರನ್ನು ಕಂಡು ಶ್ರೀರಾಮನು ಸಂತುಷ್ಟಮನಸ್ಕನಾಗಿ ತನ್ನ ಅರಮನೆಗೆ ಕರೆತಂದು ಸಹೋದರರಿಂದ ಪರಿವೃತನಾಗಿದ್ದುಕೊಂಡು ಅವರಿಬ್ಬರನ್ನು ಹಾಡುವಂತೆ ಪ್ರೇರೇಪಿಸಿದನು. ಆ ಬಳಿಕ-
ಪ॥ ಛಂದೋಮಯೀನಾಂ ನಿಲಯಸ್ಯ ವಾಚಾಮಂತೇ ವಸಂತೌ ಮುನಿಪುಂಗವಸ್ಯ ।
ಏತೌ ಕುಮಾರೌ ರಘುವೀರವೃತಂ ಯಥಾಕ್ರಮಂ ಗಾತುಮುಪಾಕ್ರಮೇತಾಮ್॥೧೦॥
ಅನು॥ ಛಂದೋಮಯವಾದ ವಾಕ್ಕುಗಳ ಆವಾಸಸ್ಥಾನವೆನಿಸಿದ ಋಷಿವರೇಣ್ಯನ ಶಿಷ್ಯರಾದ ಆ ಇಬ್ಬರು ಕುಮಾರರು ರಘುವೀರನ ಚರಿತ್ರೆಯನ್ನು ತಮಗೆ ಉಪದೇಶಿಸಲ್ಪಟ್ಟಂತೆ ಹಾಡತೊಡಗಿದರು.
ಪ॥ ಅಸ್ತಿ ಪ್ರಶಸ್ತಾ ಜನಲೋಚನಾನಾಮಾನಂದಸಂದಾಯಿಷು ಕೋಸಲೇಷು।
ಆಜ್ಞಾಸಮುತ್ಸಾರಿತದಾನವಾನಾಂ ರಾಜ್ಞಾಮಯೋಧ್ಯೇತಿಪುರೀ ರಘೂಣಾಮ್॥೧೧॥
ಅನು॥ ಲೋಕದ ಕಣ್ಣಿಗೆ ಆನಂದವನ್ನು ನೀಡುವ ಕೋಸಲವೆಂಬ ರಾಜ್ಯದಲ್ಲಿ ತಮ್ಮ ಆದೇಶದಿಂದಲೇ ದಾನವರನ್ನು ಹೊಡೆದೋಡಿಸುತ್ತಿದ್ದ ರಘುವಂಶದ ರಾಜರ ಅಯೋಧ್ಯಾ ಎಂಬ ಪ್ರಖ್ಯಾತವಾದ ನಗರವಿದೆ.
ಪ॥ತಾಮಾವಸದ್ದಶರಥಃ ಸುರವಂದಿತೇನ ಸಂಕ್ರಂದನೇನ ವಿಹಿತಾಸನಸಂವಿಭಾಗಃ।
ವೃಂದಾರಕಾರಿವಿಜಯೇ ಸುರಲೋಕಲಬ್ಧಮಂದಾರಮಾಲ್ಯಮಧುವಾಸಿತವಾಸಭೂಮಿಃ॥೧೨॥
ಅನು॥ ದೇವತೆಗಳ ವೈರಿಗಳನ್ನು ಗೆದ್ದುದಕ್ಕಾಗಿ ದೇವಲೋಕದಿಂದ ಪಡೆದ ಮಂದಾರಪುಷ್ಪಮಾಲೆಯ ಮಕರಂದದ ಪರಿಮಳದಿಂದ ಸುವಾಸಿತವಾದ ವಾಸಪ್ರದೇಶವನ್ನು ಹೊಂದಿದ, ದೇವವಂದಿತನಾದ ಇಂದ್ರನ ಸಿಂಹಾಸನದ ಅರ್ಧಭಾಗವನ್ನು ಹಂಚಿಕೊಂಡ ದಶರಥನು ಆ ಅಯೋಧ್ಯೆಯಲ್ಲಿ ವಾಸಿಸುತ್ತಿದ್ದನು.
ಸೂರ್ಯವಂಶದ ರಘುಮಹಾರಾಜನ ಮೊಮ್ಮಗ ಅಜನೆಂಬುವನು ದಶರಥನ ತಂದೆ. ತಾಯಿ ಇಂದುಮತಿ. ದಶದಿಕ್ಕುಗಳಲ್ಲಿಯೂ ರಥವನ್ನು ಚಲಿಸುವಂತೆ ಮಾಡುವ ಕೌಶಲವಿದ್ದುದರಿಂದ ಇವನಿಗೆ ದಶರಥ ಎಂಬ ಅನ್ವರ್ಥನಾಮ.
ಗ॥ ಅಥಾಸ್ಮಿನ್ನನಪತ್ಯತಯಾ ದೂಯಮಾನಮಾನಸೇ ಪುತ್ರಾರ್ಥಂ ಕ್ರತುಮಶ್ವಮೇಧಂ ವಿಧಾತುಂ ಮಂತ್ರಿಭಿಃ ಸಮಂ ಮಂತ್ರಯಮಾಣೇ ದಶರಥೇ ಸುಮಂತ್ರಃ ಪ್ರಹೃಷ್ಟಮನಾ ಮಹರ್ಷೇರಂಗದೇಶಸಂಗತಾವಗ್ರಹನಿಗ್ರಹಶೌಂಡಸ್ಯ ವಿಭಾಂಡಕಸೂನೋರವಶ್ಯಮೃಷ್ಯಶೃಂಗಸ್ಯ ಪ್ರಸಾದಾತ್ಪ್ರಭವೋ ದಶರಥಾಯ ಕಥಯಾಮಾಸ। ಸೋऽಪಿ ಸುಮಂತ್ರವಚನಾಚ್ಛಾಂತಾಧಿಃ ಶಾಂತಾಕುಟುಂಬಿನಂ ಸಂಬಂಧಿನಂ ಮುನಿಮಾನೀಯ ವಸಿಷ್ಠಾದಿಷ್ಟಮಶ್ವಮೇಧಾದ್ವರಂ ಸರಯೂರೋಧಸಿ ವಿಧಾಯ ತತ್ರ ಪುತ್ರೀಯಾಮಿಷ್ಟಿಂ ವಿಧಿವತ್ಕರ್ತುಮಾರಭತ।
ಅನು॥ ಹೀಗಿರಲು ಸಂತಾನವಿಲ್ಲದುದರಿಂದ ಕೊರಗುತ್ತ ಪುತ್ರಸಂತಾನಕ್ಕಾಗಿ ಅಶ್ವಮೇಧವೆಂಬ ಯಜ್ಞವನ್ನು ಕೈಗೊಳ್ಳಲು ಮಂತ್ರಿಗಳ ಜೊತೆ ದಶರಥನು ಸಮಾಲೋಚಿಸುತ್ತಿರಲು ಸುಮಂತ್ರನು ಹರ್ಷದಿಂದ " ಅಂಗದೇಶಕ್ಕೆರಗಿದ ಕ್ಷಾಮನಿವಾರಣ ಸಮರ್ಥನಾದ ವಿಭಾಂಡಕಸುತನಾದ ಋಷ್ಯಶೃಂಗನೆಂಬ ಮಹರ್ಷಿಯ ಅನುಗ್ರಹದಿಂದ ನಿಶ್ಚಿತವಾಗಿ ಪುತ್ರರು ಜನಿಸುವರು" ಎಂದು ಸನತ್ಕುಮಾರನು ನುಡಿದ ಪೂರ್ವವೃತ್ತಾಂತವನ್ನು ದಶರಥನಿಗೆ ನುಡಿದನು. ಆ ದಶರಥನು ಕೂಡ ಸುಮಂತ್ರನ ಮಾತುಗಳಿಂದ ತನ್ನ ಮನೋವ್ಯಥೆಯನ್ನು ಉಪಶಮನಗೊಳಿಸಿ "ಶಾಂತಾ" ಎಂಬುವಳ ಪತಿಯಾದ ತನ್ನ ಸಂಬಂಧಿಯೂ ಆದ ಮಹರ್ಷಿ ಋಷ್ಯಶೃಂಗನನ್ನು ಬರಮಾಡಿಕೊಂಡು ವಸಿಷ್ಠನ ಮೂಲಕ ತನ್ನ ಇಷ್ಟವನ್ನು ನೆರವೇರಿಸಲಿರುವ ಅಶ್ವಮೇಧಯಾಗವನ್ನು ಸರಯೂ ನದೀತೀರದಲ್ಲಿ ಆರಂಭಿಸಿ ಅಲ್ಲಿಯೇ ಪುತ್ರಕಾಮೇಷ್ಟಿಯನ್ನು ಶಾಸ್ತ್ರದಲ್ಲಿ ವಿಧಿಸಿದಂತೆ ಆಚರಿಸಲು ತೊಡಗಿದನು.
ಬ್ರಹ್ಮನ ಮಾನಸಪುತ್ರನೂ ಮಹಾತಪಸ್ವಿಯೂ ಪರಮಜ್ಞಾನಿಯೂ ಆದ ಸನತ್ಕುಮಾರನು ಹಿಂದೊಮ್ಮೆ ಋಷಿಗಳ ಜೊತೆಗಿನ ಸಂಭಾಷಣೆಯಲ್ಲಿ ದಶರಥನ ಸಂತಾನಪ್ರಾಪ್ತಿಯ ಬಗೆಗೆ ಭವಿಷ್ಯವನ್ನು ನುಡಿದಿದ್ದನು.
ಅಂಗದೇಶದ ಹೊರವಲಯದ ಅರಣ್ಯದಲ್ಲಿದ್ದ ವಿಭಾಂಡಕ ಎಂಬ ಮಹರ್ಷಿಯ ಮಗ ಋಷ್ಯ ಎಂದರೆ ಜಿಂಕೆ, ಅದರ ಶೃಂಗ ಅಥವಾ ಕೋಡನ್ನು ಹೊಂದಿದ್ದರಿಂದ ಅವನಿಗೆ ಋಷ್ಯಶೃಂಗನೆಂದು ಹೆಸರು. ಒಮ್ಮೆ ಅಂಗದೇಶದಲ್ಲಿ ದೀರ್ಘಕಾಲದ ಕ್ಷಾಮ ತಲೆದೋರಿತು. ಋಷ್ಯಶೃಂಗನನ್ನು ಕರೆಸಿದರೆ ಸುವೃಷ್ಟಿಯಾಗುವುದೆಂಬ ಭವಿಷ್ಯವನ್ನು ಕೇಳಿ ಅಂಗದೇಶದ ರಾಜ ರೋಮಪಾದ ಪರಮಸುಂದರಿಯಾದ ವೇಶ್ಯೆಯರನ್ನು ಋಷ್ಯಶೃಂಗನ ಬಳಿ ಕಳುಹುತ್ತಾನೆ. ತನ್ನ ತಂದೆಯನ್ನು ಹೊರತುಪಡಿಸಿ ಬೇರೆ ಮನುಷ್ಯರನ್ನೇ ಕಾಣದ ಋಷ್ಯಶೃಂಗ ಈ ಸ್ತ್ರೀಯರನ್ನು ಕಂಡು ಅವರೂ ಯಾರೋ ತಪಸ್ವಿಗಳೆಂದು ಭಾವಿಸಿ ಉಪಚರಿಸುತ್ತಾನೆ. ವಿಭಾಂಡಕನಿಗೆ ಅರಿವಾಗದಂತೆ ಆ ವೇಶ್ಯಯರು ಋಷ್ಯಶೃಂಗನನ್ನು ಅಂಗದೇಶಕ್ಕೆ ಕರೆತರಲಾಗಿ ಸುವೃಷ್ಟಿಯಾಗುತ್ತದೆ. ರೋಮಪಾದ ದಶರಥನ ಮಗಳೂ ತನ್ನ ಸಾಕುಮಗಳೂ ಋದ ಶಾಂತಾಳನ್ನು ಋಷ್ಯಶೃಂಗನಿಗೆ ಮದುವೆ ಮಾಡಿಕೊಡುತ್ತಾನೆ. ಈ ಋಷ್ಯಶೃಂಗನ ನೇತೃತ್ವದಲ್ಲಿಯೇ ದಶರಥನ ಪುತ್ರಕಾಮೇಷ್ಟಿ ಸಂಪನ್ನಗೊಳ್ಳುತ್ತದೆ.
ಗ॥ ತದನು ಹವಿರಾಹರಣಾಯ ಧರಣೌ ಕೃತಾವತರಣಾಃ ಸರ್ವೇ ಗೀರ್ವಾಣಗಣಾಃ ಶತಮಖಪ್ರಮುಖಾಶ್ಚತುರ್ಮುಖಾಯ
ದಶಮುಖಪ್ರತಾಪಗ್ರೀಷ್ಮೋಷ್ಮಸಂಪ್ಲೋಷಣಮಾವೇದ್ಯ ತೇನ ಸಹ ಶರಣಮಿತಿ ಶಾಂರ್ಗಧನ್ವಾನಂ ಮನ್ವಾನಾ ನಾನಾವಿಧ-
ಪ್ರಸ್ತುತಸ್ತುತಯಃ ಕ್ಷೀರಾಂಬುರಾಶಿಮಾಸೇದುಃ॥
ಅನು॥ ಆ ಬಳಿಕ ಹವಿಸ್ಸನ್ನು ಸ್ವೀಕರಿಸಲು ಭುವಿಗೆ ಇಳಿದುಬಂದ ಇಂದ್ರಪ್ರಮುಖರಾದ ಎಲ್ಲ ದೇವಗಣಗಳು ರಾವಣನ ಪ್ರತಾಪವೆಂಬ ಅಗ್ನಿಯ ಶಾಖದಿಂದುಂಟಾದ ಬೇಗೆಯನ್ನು ಬ್ರಹ್ಮನಿಗೆ ನಿವೇದಿಸಿ ಅವನ ಜೊತೆಯಲ್ಲಿ " ಮಹಾವಿಷ್ಣುವೇ ಶರಣ್ಯ" ಎಂದು ಭಾವಿಸಿ ವಿಧವಿಧದ ಸ್ತುತಿಗಳನ್ನು ಮಾಡುತ್ತ ಕ್ಷೀರಸಾಗರಕ್ಕೆ ಆಗಮಿಸಿದರು.
ಪ॥ಸಂತಾಪಘ್ನಂ ಸಕಲಜಗತಾಂ ಶಾಂರ್ಗಚಾಪಾಭಿರಾಮಂ
ಲಕ್ಷ್ಮೀವಿದ್ಯುಲ್ಲಸಿತಮತಸೀಗುಚ್ಛಸಚ್ಛಾಯಕಾಯಮ್।
ವೈಕುಂಠಾಖ್ಯಂ ಮುನಿಜನಮನಶ್ಚಾತಕಾನಾಂ ಶರಣ್ಯಂ
ಕಾರುಣ್ಯಾಪಂ ತ್ರಿದಶಪರಿಷತ್ಕಾಲಮೇಘಂ ದದರ್ಶ॥೧೩॥
ಅನು॥ ಸಕಲಲೋಕದ ಬೇಗೆಯನ್ನು ನೀಗುವ, ಶಾರ್ಙ್ಗವೆಂಬ( ಕಾಮನ ) ಬಿಲ್ಲಿನಿಂದ ರಮಣೀಯವಾದ, ಲಕ್ಷ್ಮಿಯೆಂಬ ಮಿಂಚಿನಿಂದ ಹೊಳೆಯುವ, ಅತಸೀ ( ಅಗಸೆ ?) ವೃಕ್ಷದ ಪುಷ್ಪಗುಚ್ಛಕ್ಕೆ ಸಮಾನವಾದ ಕಾಂತಿಯನ್ನು ಹೊಂದಿದ ಕಾಯವುಳ್ಳ, ಮುನಿಜನರ ಮನಸ್ಸುಗಳೆಂಬ ಚಾತಕಪಕ್ಷಿಗಳಿಗೆ ಶರಣ್ಯವಾದ, ಕರುಣೆಯೆಂಬ ಜಲದಿಂದ ತುಂಬಿಕೊಂಡ ಮಹಾವಿಷ್ಣುವೆಂಬ ಹೆಸರಿನ ಕಪ್ಪಾದ ಮೋಡವನ್ನು ದೇವತೆಗಳ ಸಮೂಹವು ಕಂಡಿತು.
ಮಹಾವಿಷ್ಣುವಿನ ಧನುಸ್ಸೇ ಕಾಮನಬಿಲ್ಲು. ನೀಲವರ್ಣದ ಹೂಗಳನ್ನು ಬಿಡುವಮರ ಅತಸೀ. ಇದಕ್ಕೆ ಕ್ಷುಮಾ ಎಂಬ ಹೆಸರೂ ಇದೆ. ಕುಂಠ ಎಂದರೆ ಆಲಸ್ಯ, ಅಜ್ಞಾನ ಮತ್ತು ಮೂರ್ಖತನ. ಅವಾವುದೂ ಇಲ್ಲವಾದುದು ವಿಕುಂಠ. ವಿಕುಂಠದ ಭಾವವೇ ವೈಕುಂಠ. ಇಲ್ಲಿ ವೈಕುಂಠ ಎಂದರೆ ವಿಷ್ಣು. " ವಿಷ್ಣುವೆಂಬ ಕಾಲಮೇಘ" ಎಂಬುದು ಪ್ರಧಾನರೂಪಕವಾಗಿದ್ದು ಅದಕ್ಕೆ ಪೂರಕವಾಗಿ ಇತರೆಲ್ಲ ರೂಪಕಗಳಿವೆ.
ಪ॥ ಕ್ಷೀರಾಂಭೋಧೇರ್ಜಠರಮಭಿತೋ ದೇಹಭಾಸಾಂ ಪ್ರರೋಹೈಃ
ಕಾಲೋನ್ಮೀಲತ್ಕುವಲಯದಲದ್ವೈತಮಾಪಾದಯಂತಮ್।
ಅತನ್ವಾನಂ ಭುಜಗಶಯನೇಕಾಮಪಿ ಕ್ಷೌಮಗೌರೇ
ನಿದ್ರಾಮುದ್ರಾಂ ನಿಖಿಲಜಗತೀರಕ್ಷಣೇ ಜಾಗರೂಕಾಮ್॥೧೪॥
ಅನು॥ ತನ್ನ ಶರೀರದ ಕಾಂತಿಯ ಪ್ರಸಾರದಿಂದ ಕ್ಷೀರಸಾಗರದ ಮಧ್ಯಭಾಗದಲ್ಲಿ ಕಾಲಕಾಲಕ್ಕೆ ಅರಳುವ ನೀಲಕಮಲದ ಹೋಲಿಕೆಯನ್ನು ಉಂಟುಮಾಡುತ್ತಿರುವ, ಸಮಸ್ತವಿಶ್ವದ ರಕ್ಷಣೆಯಲ್ಲಿ ಜಾಗೃತವಾಗಿರುವ ಅವರ್ಣನೀಯ ನಿದ್ರಾಮುದ್ರೆಯನ್ನು ರೇಷ್ಮೆಯಷ್ಟು ಶ್ವೇತವಾದ ಹಾವಿನ ಹಾಸಿಗೆಯಲ್ಲಿ ನೆಲೆಗೊಳಿಸಿಕೊಂಡಿರುವ ( ವಿಷ್ಣುವನ್ನು ಕಂಡರು )
ಕನ್ನೈದಿಲೆಯು ನಿರ್ದಿಷ್ಟ ಸಮಯದಲ್ಲಿ ಮಾತ್ರ ಅರಳುವಂಥದ್ದು. ಆದರೆ ಮಹಾವಿಷ್ಣುವಿನ ನೀಲಕಾಂತಿ ಸದಾ ಇರುವಂಥದ್ದು.
ಪ॥ ಪ್ರಹ್ಲಾದಸ್ಯ ವ್ಯಸನಮಮಿತಂ ದೈತ್ಯವರ್ಗಸ್ಯ ದಂಭಂ
ಸ್ತಂಭಂ ವಕ್ಷಃಸ್ಥಲಮಪಿ ರೆಪೋರ್ಯೋಗಪದ್ಯೇನ ಭೇತ್ತುಮ್।
ಬದ್ಧಶ್ರದ್ಧಂ ಪುರುಷವಪುಷಾ ಮಿಶ್ರಿತೇ ವಿಶ್ವದೃಷ್ಟೇ
ದಂಷ್ಟ್ರಾರೋಚಿರ್ವಿಶದಭುವನೇ ರಂಹಸಾ ಸಿಂಹವೇಷೇ॥೧೫॥
ಅನು॥ ಪ್ರಹ್ಲಾದನ ವಿಪತ್ತನ್ನು, ರಾಕ್ಷಸಕುಲದ ಅಸೀಮ ಗರ್ವವನ್ನು ( ಲೋಹಮಯ ) ಸ್ತಂಭವನ್ನು ಹಾಗೂ ವೈರಿಯ ( (ಹಿರಣ್ಯಕಶಿಪುವಿನ )ಎದೆಯನ್ನು ಏಕಕಾಲದಲ್ಲಿ ಭೇದಿಸುವ ಸಲುವಾಗಿ, ಲೋಕವು ವಿಸ್ಮಯದಿಂದ ನೋಡುತ್ತಿರಲು ತನ್ನ ಕೋರೆಹಲ್ಲುಗಳ ಕಾಂತಿಯಿಂದ ಭುವನವನ್ನು ಬೆಳಗುವ ಸಿಂಹಾಕೃತಿಯ ಜೊತೆ ಮಾನುಷವೇಶವನ್ನು ಮಿಶ್ರಗೊಳಿಸಿ ಅತೀವೇಗವಾಗಿ ಪ್ರಕಟಗೊಂಡಿರುವ ( ವಿಷ್ಣುವನ್ನು ಕಂಡರು )
ಕಶ್ಯಪಮುನಿ ಹಾಗು ದಿತಿ ಎಂಬ ದಂಪತಿಯಲ್ಲಿ ಜನಿಸಿದ ಹಿರಣ್ಯಕಶಿಪು ಎಂಬವನ ಮಗ.(ಹಿರಣ್ಯಕಶಿಪು ಎಂದರೆ ಬಂಗಾರದ ಎಳೆಗಳಿಂದ ನೇಯ್ದ ಬಟ್ಟೆಗಳನ್ನು ಹಾಗೂ ಹಾಸಿಗೆಯನ್ನು ಉಪಯೋಗಿಸುತ್ತಿದ್ದವನುಎಂದು ಅರ್ಥ ) ವಿಷ್ಣುಭಕ್ತನಾದ ಪ್ರಹ್ಲಾದನಿಗೆ ಹಿರಣ್ಯಕಶಿಪು ವಿಧವಿಧವಾದ ಸಂಕಟಗಳನ್ನು ಒಡ್ಡಿದ. ತನ್ನ ಭಕ್ತನ ಹಾಗೂ ಲೋಕದ ರಕ್ಷಣೆಗಾಗಿ ವಿಷ್ಣು ನರಸಿಂಹರೂಪವನ್ನು ತಾಳಿಕಂಬವನ್ನು ಸೀಳಿ ಹೊರಬಂದು ಉಗುರುಗಳಿಂದ ಹಿರಣ್ಯಕಶಿಪುವಿನ ಎದೆಯನ್ನು ಬಗೆದು ಕೊಂದ.
ಪ॥ ನಾರಾಯಣಾಯ ನಲಿನಾಯತಲೋಚನಾಯ
ನಾಮಾವಶೇಷಿತಮಹಾಬಲಿವೈಭವಾಯ ।
ನಾನಾಚರಾಚರವಿಧಾಯಕಜನ್ಮದೇಶ -
ನಾಭೀಪುಟಾಯ ಪುರುಷಾಯ ನಮಃ ಪರಸ್ಮೈ॥೧೬॥
ಅನು॥ ಕಮಲದಂತೆ ವಿಶಾಲ ನೇತ್ರಗಳನ್ನು ಹೊಂದಿದ, ಬಲಿಚಕ್ರವರ್ತಿಯ ವೈಭವವನ್ನು ನಾಮಾವಶೇಷಗೊಳಿಸಿದ, ಸ್ಥಾವರಜಂಗಮಾತ್ಮಕಪ್ರಪಂಚವನ್ನು ನಿರ್ಮಿಸಿದ ಬ್ರಹ್ಮನ ಉಗಮಸ್ಥಾನವಾದ ನಾಭಿಯನ್ನು ಹೊಂದಿದ, ಪರಮಪು-
ರೈಷನಾದ ನಾರಾಯಣನಿಗೆ ನಮಸ್ಕಾರ.
ಗ॥ಪ್ರಣಮ್ಯೋತ್ಥಿತಾನೇತಾನ್ಸ್ತುತಿರವಮುಖರಿತಹರಿನ್ಮುಖಾನ್ ಹರಿಹಯಪ್ರಮು-
ಖಾನಖಿಲಾನಮರಾನರುಣಾರುಣತಾಮರಸವಿಲಾಸಚೋರೈರ್ಲೋಚನಮ-
ರೀಚಿಸಂತಾನೈರಾನಂದಯನ್ನರವಿಂದಲೋಚನಃ ಸ್ಫುಟಮಭಾಷತ।
ಅನೈ॥ ಹೀಗೆ ಸ್ತುತಿಯ ನಾದಗಳಿಂದ ದಿಗಂತಗಳನೆಲ್ಲಾ ಮೊಳಗಿಸಿ ವಂದಿಸಿ ಮೇಲೆದ್ದ ಈ ಇಂದ್ರಾದಿ ಎಲ್ಲ ದೇವತೆಗಳನ್ನು, ಅರುಣನ ಕೆಂಬಣ್ಣದ ಕಮಲಗಳ ವಿಲಾಸವನ್ನೆಲ್ಲ ಕದ್ದ, ಕಣ್ಣುಗಳ ಕಿರಣಗಳ ತರಂಗಗಳಿಂದ ಸಂತೋಷಪಡಿಸುತ್ತ ಕಮಲೋಚನನು ಸ್ಫುಟವಾಗಿ ನುಡಿದನು.
ಪ॥ ಅಪಿ ಕುಶಲಮಮರ್ತ್ಯಾಃ ಸ್ವಾಗತಂ ಸಾಂಪ್ರತಂ ವಃ
ಶಮಿತದನುಜದಂಭಾ ಕಿಂ ನು ದಂಬೋಲಿಕೇಲಿಃ।
ಅಪಿ ಧಿಷಣಮನೀಷಾನಿರ್ಮಿತಾ ನೀತಿಮಾರ್ಗಾ
ಸ್ತ್ರಿದಶನಗರಯೋಗಕ್ಷೇಮಕೃತ್ಯೇ ಕ್ಷಮಂತೇ॥೧೭॥
ಅನು॥ ಹೇ ದೇವತೆಗಳೇ, ನಿಮಗೆ ಸ್ವಾಗತ, ಕುಶಲವೇ? ( ಇಂದ್ರನ ) ವಜ್ರಾಯುಧದ ವಿಲಾಸವು ಅಸುರರ ಗರ್ವವನ್ನು ಅದುಮಿದೆಯಷ್ಟೆ? ದೇವಲೋಕದ ಯೋಗಕ್ಷೇಮವನ್ನು ಸಂಪಾದಿಸುವಲ್ಲಿ ಬೃಹಸ್ಪತಿಯ ಬುದ್ಧಿಯು ಯೋಜಿಸಿದ ನೀತಿ ವಿಧಾನಗಳು ಶಕ್ತವಾಗಿವೆಯೆ?
ಗ॥ ಏವಂ ಭಗವತಃ ಕುಶಲಾನುಯೋಗಪುರಃಸರೀಮಮೃತಾಸಾರಸರಸಾಂ ಸರಸ್ವತೀಮಾಕರ್ಣ್ಯ ಸಂಪೂರ್ಣಮನೋರ-
ಥಾನಾಂ ಸುಮನಸಾಂ ಸಂಸತ್ ಪುಂಸೇ ಪರಸ್ಮೈ ವಿಜ್ಞಾಪಯಾಮಾಸ। ದೇವ, ಕಥಮಕುಶಲಮಾವಿರ್ಭವೇಧ್ಭವತಾ-
ಕೃತಾವಲಂಬಾನಾಮಸ್ಮಾಕಮ್।
ಅನು॥ ಭಗವಂತನ ಈ ರೀತಿಯ ಕುಶಲಪ್ರಶ್ನಪೂರ್ವಕವಾದ ಅಮೃತವನ್ನೇ ಸುರಿಸುವಷ್ಟು ಹಿತಕರವಾದ ನುಡಿಯನ್ನು ಕೇಳಿ ತಮ್ಮ ಆಸೆಯು ನೆರವೇರಿತೆಂದೇ ಭಾವಿಸಿದ ದೇವಗಣವು ಪರಮಪುರುಷನಿಗೆ ಹೀಗೆಂದು ನಿವೇದಿಸಿತು: ಹೇ ದೇವನೇ
ನೀನು ಆಶ್ರಯವನ್ನು ನೀಡಿರಲು ನಮಗೆ ಸಂಕಟವೆಲ್ಲಿಂದ ಉಂಟಾದೀತು?
ಪ॥ ಅಸ್ತಿ ಪ್ರಶಸ್ತವಿಭವೈರ್ವಿಬುಧೈರಲಂಘ್ಯಾ
ಲಂಕೇತಿ ನಾಮ ರಜನೀಚರರಾಜಧೃನೀ।
ಮಾಣಿಕ್ಯಮಂದಿರಭುವಾಂ ಮಹಸಾಂ ಪ್ರರೋಹೈ
ಸ್ತೇಜಸ್ತ್ರಯಾಯ ದಿನದೀಪದಶಾಂ ದಿಶಂತೀ॥೧೮॥
ಅನು॥ ಮಾಣಿಕ್ಯಗಳಿಂದ ನಿರ್ಮಿತವಾದ ಸೌಧಗಳಿಂದ ಹೊಮ್ಮುವ ಕಾಂತಿಯ ಕಿರಣಗಳಿಂದ ( ಸೂರ್ಯ-ಚಂದ್ರ- ಅಗ್ನಿಗಳೆಂಬ) ತ್ರಿವಿಧ ತೇಜಸ್ಸುಗಳಿಗೆ ಹಗಲಿನಲ್ಲಿ ಉರಿಯುವ ದೀಪದ ದುರವಸ್ಥೆಯನ್ನು ಉಂಟುಮಾಡುತ್ತಿರುವ, ದೇವತೆಗಳಿಂದ ಆಕ್ರಮಿಸಲಾಗದ, ಅನರ್ಘ್ಯವೈಭವಗಳಿಂದ ( ಮೆರೆಯುವ ) ಲಂಕಾ ಎಂಬ ರಾಕ್ಷಸರ ರಾಜಧಾನಿಯಿದೆ.
ಪ॥ ಏನಾಂ ಪುರಾಣನಗರೀಂ ನಗರೀತಿಸಾಲಾಂ
ಸಾಲಾಭಿರಾಮಭುಜನಿರ್ಜಿತಯಕ್ಷರಾಜಃ।
ಹೇಲಾಭಿಭೂತಜಗತಾಂ ರಜನೀಚರಾಣಾಂ
ರಾಜಾ ಚಿರಾದವತಿ ರಾವಣನಾಮಧೇಯಃ॥೧೯॥
ಅನು॥ ಪರ್ವತಸಮಾನವಾದ ಪ್ರಾಕಾರದಿಂದ ಕೂಡಿದ ಈ ಪ್ರಾಚೀನ ಪುರಿಯನ್ನು ಅನಾಯಾಸವಾಗಿ ಪ್ರಪಂಚವನ್ನು ಆಕ್ರಮಿಸುವ ನೆಶಾಚರರ ರಾಜನಾದ, ಸಾಲವೃಕ್ಷದಂತೆ ರಮಣೀಯವಾದ ಬಾಹುಗಳಿಂದ ಕುಬೇರನನ್ನು ಸೋಲಿಸಿದ ರಾವಣನೆಂಬುವನು ಬಹುಕಾಲದಿಂದ ರಕ್ಷಿಸುತ್ತಿದ್ದಾನೆ.
( ೧) ಕುಬೇರ ವಿಶ್ರವಸನಿಂದ ಇಲಬಿಲಾ ಎಂಬವಳಲ್ಲಿ ಜನಿಸಿದವನು. ಲಂಕಾನಗರಿಯನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡು ಕುಬೇರ ಆಳುತ್ತಿದ್ದನು. ಇವನ ಮಲತಾಯಿಯ ಮಗನಾದ ರಾವಣ ಲಂಕೆಯನ್ನೂ ಕುಬೇರನ ಬಳಿಯಿದ್ದ ಪುಷ್ಪಕ ವಿಮಾನವನ್ನು ತನ್ನ ವಶವಾಗಿಸಿಕೊಂಡನು. ಬಳಿಕ ಕುಬೇರ ಶಿವನ ಅನುಮತಿಯನ್ನು ಪಡೆದು ಕೈಲಾಸದ ಅಂಚಿನಲ್ಲಿದ್ದ ಅಲಕಾ ಎಂಬಲ್ಲಿ ನಗರವನ್ನು ನಿರ್ಮಿಸಿಕೊಂಡು ಯಕ್ಷರಿಗೆ ರಾಜನಾದನು.
(೨ ) ವಿಶ್ರವಸ್ ಹಾಗೂ ಕೈಕಸಾದೇವಿಯವರ ಜ್ಯೇಷ್ಠಪುತ್ರ ರೃವಣ. ಜನೆಸೈವಾಗಲೇ ಹತ್ತು ತಲೆಗಳನ್ನು ಹೊಂದಿದ್ದರಿಂದ ಇವನಿಗೆ ದಶಕಂಠ, ದಶಶಿರ ಮುಂತಾಗಿ ಹೆಸರುಗಳಿವೆ. ಮನುಷ್ಯರ ಹೊರತಾಗಿ ಮತ್ತಾರಿಂದಲೂ ಮರಣ ಬಾರದಂತೆ ಬ್ರಹ್ಮನಿಂದ ವರವನ್ನು ಪಡೆದನು. ಮಯನ ಮಗಳಾದ ಮಂದೋದರಿ ಇವನ ಪತ್ನಿ. ಮೇಘನಾದ ಅಥವಾ ಇಂದ್ರಜಿತ್ ಇವನ ಮಗ. ಕೈಲಾಸಪರ್ವತವನ್ನು ಎತ್ತಲು ಹೋಗಿ ಅದರಡಿ ಕೈಗಳು ಸಿಲುಕಿ ಭಯಂಕರವಾಗಿ ಅರಚಿದ್ದರಿಂದ(ರವ-ಶಬ್ಧ)
ಶಿವ ಇವನಿಗೆ "ರಾವಣ" ಎಂದು ಹೆಸರಿಟ್ಟನು.
ಪ॥ ಯದ್ಬಾಹುರಾಹುರಸನಾಯಿತಶಸ್ತ್ರಧಾರಾ
ದಿಕ್ಪಾಲಕೇರ್ತಿಮಯಚಂದ್ರಮಸಂ ಗ್ರಸಂತಿ।
ಯದ್ವೈರಿಣಾಂ ರಣಮುಖೇ ಶರಣಪ್ರದಾಯೀ
ನೈವಾಸ್ತಿ ಕಶ್ಚಿದಮುಮಂತಕಮಂತರೇಣ॥೨೦॥
ಅನು॥ ಯಾವ ರಾವಣನು ಬಾಹುಗಳಲ್ಲಿ ನೆಲೆಗೊಂಡಿರುವ ರಾಹುವಿನ ನಾಲಗೆಯಂತಹ ಆಯುಧಗಳ ಅಲಗುಗಳು ದಿಕ್ಪಾಲಕರ ಕೀರ್ತಿಯೆಂಬ ಚಂದ್ರನನ್ನು ಕಬುಳಿಸುವವೋ, ರಣಾಂಗಣದಲ್ಲಿ ಯಾವನ ವೈರಿಗಳಿಗೆ ಈ ಯಮನನ್ನು ಬಿಟ್ಟು ಬೇರೆ ಯಾರೂ ಆಶ್ರಯವನ್ನು ನೇಡುವುದಿಲೂಲವೋ ( ಅಂತಹವನು ಲಂಕೆಯನ್ನು ಆಳುತ್ತಿದ್ದಾನೆ )
ರಾಹುವಿನ ನಾಲಗೆಯಂತೆ ವರ್ತಿಸುವ, ರಾಹುವು ತನ್ನ ನಾಲಗೆಯನ್ನು ಮುಂಚಾಚಿ ಚಂದ್ರನನ್ನು ಕಬಳಿಸುವ ಪುರಾಣಕಥೆ ಇಲ್ಲಿ ಸೂಚನೀಯ. ರಾಹು: ದಕ್ಷಪುತ್ರಿಯಾದ ಸಿಂಹಿಕಾ ಎಂಬವಳು ಕಶ್ಯಪಮುನಿಯಿಂದ ಪಡೆದ ಪುತ್ರ. ದೇವತೆಗಳು
ಅಮೃತಪಾನಮಾಡುವಾಗ ಅವರ ಸಾಲಿನಲ್ಲಿ ದೇವತೆಗಳ ವೇಷಧಾರಿಯಾಗಿ ಆಸೀನನಾಗಿದ್ದನು. ಈ ಕಪಟವನ್ನು
ಸೂರ್ಯ-ಚಂದ್ರರು ವಿಷ್ಣುವಿಗೆ ಸೂಚಿಸಿದರು. ವಿಷ್ಣು ಚಕ್ರಾಯುಧದಿಂದ ಇವನ ತಲೆಯನ್ನು ಕತ್ತರಿಸಿದರೂ ಆಗಲೇ ಕೊಂಚ ಅಮೃತಪಾನವನ್ನು ಮಾಡಿದ್ದರಿಂದ ಸಾಯದೇ ಶಿರಸ್ಸು ಮತ್ತು ಇತರ ದೇಹ ಬೇರೆಬೇರೆಯಾಗಿ ಬದುಕಿ ರಾಹು ಕೇತು ಎಂಬ ಹೆಸರುಗಳನ್ನು ಪಡೆದವು. ತಮ್ಮ ದುರವಸ್ಥೆಗೆ ಸೂರ್ಯಚಂದ್ರರು ಕಾರಣರೆಂದು ಆಗಾಗ ದ್ವೇಷದಿಂದ ಅವರನ್ನು "ಗ್ರಹಣ" ಮಾಡುತ್ತೆರುತ್ತಾರೆ.
ಪ॥ ಅಂಭೋಜಸಂಭವಮಮುಂಬಹುಭಿಸ್ತಪೋಭಿ-
ರಾರಾಧಯನ್ವರಮವಾಪ ಪರೈರ್ದುರಾಪಮ್।
ತಸ್ಮಾದಶೇಷಭುವನಂ ನಿಜಶಾಸನಸ್ಯ
ಲಕ್ಷ್ಮೀಕರೋತಿ ರಜನೀಚರಚಕ್ರವರ್ತೀ॥೨೧॥
ಅನು॥ ಈ ಕಮಲಸಂಭವನನ್ನು ( ಬ್ರಹ್ಮನನ್ನು ) ವಿಧವಿಧವಾದ ತಪಸ್ಸುಗಳಿಂದ ಪ್ರಸನ್ನಗೊಳಿಸಿ ಅನ್ಯರು ಯಾರೂ ಪಡೆಯಲಾರದ ವರವನ್ನು ಹೊಂದಿದನು. ಆ ವರದ ಬಲದಿಂದ ಅಸುರಸಾರ್ವಭೌಮನು ಸಮಸ್ತ ವಿಶ್ವವನ್ನೂ ತನ್ನ ಆಜ್ಞೆಗೆ ಗುರಿಯಾಗಿಸಿದ್ದಾನೆ.
ಗ॥ ತೇನ ವಯಂ ಪರಾಧೀನಾ ಇವ ಭವಾಮಃ। ತಥಾ ಹಿ। ಸೋऽಯಂ ಕದಾಚಿತ್ಕ್ರೀಡಾಧರಾಧರಮಾರುಹ್ಯ ಸಾವರೋಧ-
ವಧೂಜನಶ್ಚರಣಾಭ್ಯಾಂ ಸಂಚರೇತ ಚೇದಾಗಮಿಷ್ಯತ್ಯಾಗ ಇತ್ಯನಾವಿಷ್ಕೃತಾತಪೋ ಭಯೇನ ಭಗವಾನ್ಸಹಸ್ರಭಾನುರೂಪಿ ಸಂಕುಚಿತಭಾನುರೇವ ತತ್ಸಾನೂನಿ ನೂನಂ ಸಂಶ್ರಯತೇ।
ಅನು॥ ಅವನಿಂದ ನಾವು ಪರತಂತ್ರರೋ ಎಂಬಂತೆ ಆಗಿದ್ದೇವೆ. ಹೇಗೆಂದರೆ- ಆ ರಾವಣನು ಯಾವಾಗಲಾದರೊಮ್ಮೆ ಕ್ರೀಡಾಶೈಲವನ್ನು ಅಂತಃಪುರದ ರಮಣಿಯರ ಜೊತೆ ಏರಿ ಬರಿಯ ಪಾದಗಳಿಂದ ಸಂಚರಿಸುತ್ತಿರಲು ತನ್ನಿಂದ ಎಲ್ಲಿ ಅಪರಾಧವಾದೀತೋಎಂದು ಬಿರುಬಿಸಿಲನ್ನು ಪ್ರಕಟಿಸದೇ ಭಯದಿಂದ ಭಗವಾನ್ ಹಸ್ರಕಿರಣನು ಕೂಡ ತನ್ನ ಕಿರಣಗಳನ್ನು ಸಂಕೋಚಗೊಳಿಸಿಕೊಂಡು ಆ ಕ್ರೀಡಾಶೈಲದ ತಪ್ಪಲುಗಳಲ್ಲಿ ನೆಲೆಯಾಗಿರುವನು.
ವಸ್ತುತಃ ತಾವೆಲ್ಲರೂ ಶ್ರೀಮನ್ನಾರಾಯಣನ ಪ್ರಭುತ್ವದ ಅಡಿಯಲ್ಲಿ ಇರುವವರಾದರೂ ರಾವಣ ತನ್ನ ದಮಿಸಲಾರದ ಪರಾಕ್ರಮದಿಂದ ತಮ್ಮನ್ನೂ ಅವನ ಅಧೀನರನ್ನಾಗಿಸಿಕೊಂಡಿದ್ದಾನೆ ಎಂಬುದು ದೇವತೆಗಳ ಅಳಲು. ಅದನ್ನು ಸಮರ್ಥಿಸಲು ಇಲ್ಲಿಪ್ರಮುಖದೇವತೆಗಳ ದೈನ್ಯವನ್ನು ವರ್ಣಿಸಲಾಗಿದೆ. ಮೂಲರಾಮಾಯಣದಲ್ಲಿ ಸೂಚಿತವಾದುದನ್ನು ಕವಿ ಇಲ್ಲಿ ತನ್ನ ಕಲ್ಪನೆಯಿಂದ ವಿಸ್ತರಿಸಿದ್ದಾನೆ. ಭೂಮಿ ಅಂತರಿಕ್ಷದಿಂದ ಕೆಳಬೀಳದಂತೆ ಪರ್ವತಗಳು ಪಾತಾಳದಿಂದಲೇಆ-
ರಂಭಗೊಂಡು ಭೂಮಿಗೆ ಆಧಾರಸ್ತಂಭಗಳಂತೆ ನಿಂತಿವೆ ಎಂಬ ಪುರಾಣಕಲ್ಪನೆಯಿರುವುದರಿಂದ ಪರ್ವತಕ್ಕೆ ಧರಾಧರ, ಭೂಧರ ಮುಂತಾಗಿ ಹೆಸರುಗಳಿವೆ. ತನ್ನ ಸಹಜ ತೀವ್ರತೆಯಿಂದ ಪ್ರಕಟನಾದರೆ ಭೂಮಿ ಬಿಸಿಯಾಗಿ ರಾವಣನ ಪಾದಗಳು ಸುಡಲ್ಪಟ್ಟು ಅವನೆಲ್ಲಿ ಕೋಪಗೊಂಡಾನೋ ಎಂಬುದು ಸೂರ್ಯನ ಭಯ.
ಗ॥ ಏಷ ಮೃಗಾಂಕೋऽಪಿ ಮೃಗಯಾಯಾಸಪರಿಶಾಂತಿವಿಶ್ರಾಂತ್ಯೈ ಸಸಂಭ್ರಮಂ ನಮಜ್ಜನಪರಿವೃತೇ ಮಜ್ಜನಗೃಹಾಭಿ-
ಮುಖೇ ದಶಮುಖೇ ತತ್ರತ್ಯವಿಚಿತ್ರತರಶಾತಕುಂಭಸ್ತಂಭಾಗ್ರಹಪತ್ಯುಪ್ತಸ್ಫಟಿಕಶಿಲಾಶಾಲಭಂಜಿಕಾಪುಂಜಕರತಲಕಲಿತ-
ನಿಜೋಪಲಮಯಕಲಶಮುಖಾದಚ್ಛಾಚ್ಛಾಮವಿಚ್ಛಿನ್ನಧಾರಾಮಂಬುಧಾರಾಂ ನಿಜಕರಾಭಿಮರ್ಶಾದಾಪಾದಯಂಸ್ತಸ್ಯ
ಪ್ರಸಾದಪಿಶುನಾನಾಂ ಸುನಾಸೀರಚಿರಕಾಂಕ್ಷಿತಾನಾಂ ವಿಂಶತಿವಿಧವೀಕ್ಷಣಾನಾಂ ಕ್ಷಣಮಾತ್ರಂ ಪಾತ್ರಂ ಭವತಿ।
ಅನು॥ ಈ ಚಂದ್ರನೂ ಕೂಡ ಬೇಟೆಯ ಆಟೋಟದ ಬಳಲಿಕೆಯನ್ನು ನೀಗಲು ಭಯದಿಂದ ತಲೆಬಾಗಿದ ಸೇವಕರಿಂದೊ-
ಗೂಡಿ ದಶಮುಖನು ಸ್ನಾನಗೃಹದೆಡೆಗೆ ಚಲಿಸುತ್ತಿರುವಾಗ ಅಲ್ಲಿರುವ ಬಂಗಾರದ ಕಂಬಗಳ ತುದಿಯಲ್ಲಿ ನೂತನವಾಗಿ
ಜೋಡಿಸಲಾದ ಚಿತ್ರವಿಚಿತ್ರವಾದ ಸ್ಫಟಿಕದ ಸಾಲುಗೊಂಬೆಗಳ ಕೈಗಳಲ್ಲಿರುವ ಚಂದ್ರಕಾಂತಮಣಿಗಳಿಂದ ನಿರ್ಮಿತವಾದ ಕಲಶಗಳ ತುದಿಯಿಂದ ಶುಭ್ರವಾದ ಜಲಧಾರೆಯನ್ನು ತನ್ನ ಕಿರಣಗಳ ಸ್ಪರ್ಶದಿಂದ ಸುರಿಸುತ್ತ ಬಹುಕಾಲದಿಂದ ಇಂದ್ರ ಹಂಬಲಿಸುತ್ತಿದ್ದ ರಾವಣನ ಅನುಗ್ರಹ ಸೂಚಕವಾದ ಇಪ್ಪತ್ತು ವಿಧದ ನೋಟಗಳಿಗೆ ಎಲ್ಲೋ ಕ್ಷಣಕಾಲ ಪಾತ್ರನಾಗುತ್ತಾನೆ.
ಗ॥ ತೇನ ಪುಲಸ್ತ್ಯನಂದನೇನ ಸಂಕ್ರಂದನನಂದನಾತ್ಸ್ವಮಂದಿರೋದ್ಯಾನಮಾನೀತಸ್ಯ ಮಂದಾರಪ್ರಮುಖಸ್ಯ ವೃಂದಾರ-
ಕತರುವೃಂದಸ್ಯ ಬಂದೀಕೃತಸುರಸುಂದರೀನಯನೇಂದೀವರದ್ವಂದ್ವಾಚ್ಚ ಕರಾರವಿಂದಕಲಿತಕನಕಕಲಶಾಚ್ಚ ಮಂದೋಷ್ಣಂ
ಸ್ಯಂದಮಾನೈರಂಬುಭಿರ್ಜಂಬಾಲಿತಾಲವಾಲಸ್ಯ ಪಚೇಲಿಮಾನಾಮಪಿ ಕುಸುಮಾನಾಂ ಪತನಭಯಮಾಶಂಕಮಾನಾಃ
ಪವಮಾನಾಃ ಪರಿಸ್ಪಂದಿತುಮಪಿ ಪ್ರಭವೋ ನ ಭವಂತಿ.
ಅನು॥ ಆ ರಾವಣನು ನಂದನವೆಂಬ ಇಂದ್ರೋದ್ಯಾನದಿಂದ ತನ್ನ ಅರಮನೆಯ ಹೂದೋಟಕ್ಕೆ ತಂದ ಮಂದಾರವೇ ಮುಂತಾದ ದೇವತರುಗಳಸಮೂಹದ ಬುಡದ ಕಟ್ಟೆಗಳು ಸೆರೆಯಲ್ಲಿರುವ ಸುರಸುಂದರಿಯರ ನಯನಕಮಲಗಳ
ಜೋಡಿಗಳಿಂದ ಹಾಗೂ ಕರಕಮಲಗಳಲ್ಲಿ ಹಿಡಿದ ಬಂಗಾರದ ಕಲಶಗಳಿಂದ ಸುರಿಯುವ ಉಗುರುಬೆಚ್ಚಗಿನ ನೇರಿನಿಂದ ತುಂಬಿ ಕೆಸರಾಗಲು, ಒಣಗುತ್ತಿರುವ ಹೂಗಳು ಕೂಡ ಎಲ್ಲಿ ಉದುರಿಯಾವೋ ಎಂಬ ಭಯದಿಂದ ಗಾಳಿಯು ಕೊಂಚವೇ ಸರಿದಾಡಲೂ ಸಮರ್ಥನಾಗುವುದಿಲ್ಲ.
ಗ॥ ಏತೇಪಿ ಪಾವಕಾ ರೂಢಿಶಂಕಾವಹಾಂ ಹುತವಹಾಖ್ಯಾಂ ವಹಂತಸ್ತದ್ಗೃಹೇ ಗಾರ್ಹಪತ್ಯಪುರೋಗಾಃ ಪೌರೋಗವಧುರಂ ದಧತೇ । ಕಿಂ ಬಹುನಾ । ಸ ಏಷ ಮಾನುಷಾದವಮಾನನಮಾಗಮಿಷ್ಯತೀತ್ಯಮನ್ವಾನಸ್ತ-
ದಿತರೈರವಧ್ಯತ್ವಂ ಚತುರಾನನವರಾಲ್ಲಬ್ಧ್ವಾ ಸಮುದ್ಧತಃ ಸಂಪ್ರತಿ ಸಂಪ್ರಹಾರಸಮಾಕ್ರಾಂತದಿಗಂತದಂತಾ-
ವಲದಂತಕುಂತವ್ರಣಕಿಣಸ್ಥಪುಟಿತವಕ್ಷಃಸ್ಥಲಃ ಸ್ಥಲಕಮಲಿನೀಂ ವನವಾರಣ ಇವ ರಾವಣಸ್ರೀಲೋಕೀಮಭಿಭವನ್ ಭವದೀಯಾನಿತ್ಯಸ್ಮಾನ್ನ ಜಾತು ಕಿಂಚಿದಪಿ ಜಾನಾತೀತಿ।
ಅನು॥ ಗಾರ್ಹಪತ್ಯ ಮುಂತಾದ ಈ ಅಗ್ನಿಗಳು ಕೂಡ " ಹುತವಹ " ಎಂಬ ರೂಢಿಯ ಹೆಸರನ್ನು ಹೊಂದಿರುವವೋ ಎಂಬಂತೆ ರಾವಣನ ಮನೆಯಲ್ಲಿ ಪಾಕಶಾಲೆಯ ಪ್ರಮುಖನ ಹೊಣೆಯನ್ನು ಹೊತ್ತಿವೆ. ಹೆಚ್ಚಿಗೆ ಹೇಳಿ ಏನು ಪ್ರಯೋಜನ? ಈ ರಾವಣನು ಮನುಷ್ಯರಿಂದ ತನಗೆ ದುರ್ಗತಿ ಬಂದೀತು ಎಂದು ಗಣಿಸದೇ ಮಾನುಷೇತರರಿಂದ ಅವಧ್ಯತ್ವವನ್ನು ಚತುರ್ಮುಖನಿಂದ ವರವಾಗಿ ಪಡೆದು ದರ್ಪಿಷ್ಟನಾಗಿ ಈಗ ಯುದ್ಧದಲ್ಲಿ ದಿಗ್ಗಜಗಳನ್ನು ಆಹ್ವಾನಿಸಿ ಅವುಗಳ ದಂತಗಳೆಂಬ ಭರ್ಚಿಗಳಿಂದ ಎದೆಯ ಮೇಲೆ ಏರುಪೇರಾದ ಒಣಗಿದ ಗಾಯಗಳನ್ನು ಹೊಂದಿ ಮದ್ದಾನೆಯು ನೆಲದೃವರೆಯನ್ನೋ ಎಂಬಂತೆ ಮೂರು ಲೋಕಗಳನ್ನೂ ಪೀಡಿಸುತ್ತ ನಿನ್ನವರು ಎಂದು ನಮ್ಮನ್ನೂ ಲೆಕ್ಕಿಸುತ್ತಿಲ್ಲ.
ಗ॥ ಅಥ ಭಗವಾನಾಕರ್ಣ್ಯ ಗೀರ್ವಾಣಗಣವಾಣೀಮ್ -
ಅನು॥ ಬಳಿಕ ನಾರಾಯಣನು ದೇವಸಮೂಹದ ಮಾತುಗಳನ್ನು ಕೇಳಿ-
ಅನು॥ ಇಂದ್ರನೀಲ ( ರತ್ನನಿರ್ಮಿತ ) ಪರ್ವತದಲ್ಲಿ ಹರಡಿದ ಬೆಳದಿಂಗಳಿನಂತಹ ಶ್ವೇತಶುಭ್ರ ಮಂದಹಾಸವನ್ನು ಹೊಂದಿದ ಮಧುಸೂದನನು ಅಮೃತವನ್ನು ವರ್ಷಿಸುವ ಮಧುರವಾದ ಮಾತನ್ನು ನುಡಿದನು.
ಗ॥ ಭವತಾಮಪರಾಧವಿಧಾಯಿನಸ್ತಸ್ಯ ಯಾತುಧಾನಸ್ಯ ನಿಧನಮಧುನೈವ ವಿಧಾತುಂ ಶಕ್ಯಮ್। ಕಿಂತು ಸರಸಿಜಾಸನಶಾಸನಮಪ್ಯಮೋಘೀಕುರ್ವನ್ನುರ್ವೀತಲೇ ಪುತ್ರೀಯತಃ ಸುತ್ರಾಮಮಿತ್ರಸ್ಯ ದಶರಥಸ್ಯ ಮನೋರಥಮಪಿ ಪೂರಯಿತುಮಾದೃತಮಾನೈಷವೇಷಃ ಸನ್ನಹಮೇವ ತಂ ಹನಿಷ್ಯಾಮೀತಿ ವ್ಯಾಹೃತ್ಯಾಂತರಧಾತ್।
ಅನು॥ " ನಿಮಗೆ ಅಪರಾಧವನ್ನೆಸಗಿದ ಆ ರಾಕ್ಷಸನನ್ನು ಈಗಲೇ ನಾಶಗೊಳಿಸಲು ಸಾಧ್ಯ. ಆದರೆ ಬ್ರಹ್ಮ ಶಾಸನವನ್ನು ಸುಳ್ಳಾಗಿಸದಿರಲು ಹಾಗೂ ಮಗನಿಗಾಗಿ ಹಂಬಲಿಸುತ್ತಿರುವ ಇಂದ್ರ ಸಖನಾದ ದಶರಥನ ಆಶೆಯನ್ನೂ ನೆರವೇರಿಸಲು ಭೂಮಿಯಲ್ಲಿ ಮನುಷ್ಯವೇಷವನ್ನು ಧರಿಸಿದವನಾಗಿ ನಾನೇ ಅವನನ್ನು ಕೊಲ್ಲುವೆನು" ಎಂದು ನುಡಿದು ಅಂತರ್ಧಾನನಾದನು.
ಗ॥ ತತಃ ಸಾ ಪರಿಷದನಿಮಿಷಾಣಾಮುನ್ಮಿಷಿತಹರ್ಷಾ ಹೃಷೀಕೇಶಾದೇಶಾತ್ಪ್ರಶಮಿತದುರ್ದಶಾನಿ ನಿರ್ದಶಾನನಾನಿ ಚತುರ್ದಶಭುವನಾನಿ ಬುದ್ಧ್ವಾ ದುಗ್ಧಸಾಗರನ್ನಿರಗಾತ್ । ಭವಂತಸ್ತಾವದವತರಿಷ್ಯತೋ ಲಕ್ಷ್ಮೀಸಹಾಯಸ್ಯ ಸಾಹಾಯ್ಯಾರ್ಥಮಪ್ಸರಃಪ್ರಭೃತಿಷು ಯುವತಿಷು ವಾನರಾಚ್ಛಭಲ್ಲಗೋಪುಚ್ಛನೀಲಮುಖವೇಷಭೃತಃ ಪ್ರಥಿತಪ್ರಭಾವಾಃ
ಪ್ರಜಾಃ ಪ್ರಜನಯೇಯುರಿತಿ। ಪುರೈವ ಕಿಲ ಮಮ ಜೃಂಭಾರಂಭೇ ಸಂಭೂತವಾಂಜಾಂಬವಾನಿತಿ। ತತಸ್ತೇ ಗೀರ್ವಾಣಾ-
ಸ್ತಥಾಕುರ್ವನ್।
ಅನು॥ ಬಳಿಕ ಆ ದೇವಗಣವು ನಾರಾಯಣ ನೀಡಿದ ವಚನದಂತೆ ಹದಿನಾಲ್ಕು ಲೋಕಗಳೂ ರಾವಣನ ನಾಶದಿಂದ ಸಂಕಟಮುಕ್ತವಾಗುವವೆಂದು ತಿಳಿದು ಅತ್ಯಾನಂದದಿಂದ ಕ್ಷೀರಸಾಗರದಿಂದ ನಿರ್ಗಮಿಸಿತು. ಅನಂತರ ಅವರನ್ನು ಕುರಿತು ಬ್ರಹ್ಮನು ಹೀಗೆಂದನು-" ಅವತರಿಸಲಿರುವ ನಾರಾಯಣನ ಸಹಾಯಕ್ಕಾಗಿ ಅಪ್ಸರೆಯರೇ ಮುಂತಾದ ಯುವತಿಯರಲ್ಲಿ ಮಂಗ, ಕರಡಿ, ಗೋಲಾಂಗೂಲ, ಕಪ್ಪುಮುಖದ ಮಂಗ ಮುಂತಾಗಿ ವೇಷಗಳನ್ನು ಧರಿಸಿದ ಅತ್ಯಂತ ಪ್ರತಾಪಶಾಲಿಗಳಾದ ಸಂತಾನವನ್ನು ನೀವು ಉತ್ಪಾದಿಸಿರಿ. ಬಹಳ ಹಿಂದೆ ನನ್ನ ಆಕಳಿಕೆಯ ಸಮಯದಲ್ಲಿ ಜಾಂಬವಂತನು ಈಗಾಗಲೇ ಜನಿಸಿದ್ದಾನೆ." ಬಳಿಕ ದೇವತೆಗಳು ಹಾಗೆಯೇ ಮಾಡಿದರು.
ಜಾಂಬವಂತ ಬ್ರಹ್ಮನ ಆಕಳಿಕೆ( ಜೃಂಭಾ ) ಯಿಂದ ಪ್ರಕಟನಾದವನು. ಮೊದಲು ವಾಲಿಯ ಬಳಿ ಅನಂತರ ಸುಗ್ರೀವನ ಬಳಿಯೂ ಸಹಾಯಕನಾಗಿದ್ದವನು. ಅಮೃತಪಾನವನ್ನೂ ಮಾಡಿದ್ದ ಮಹಾಪರಾಕ್ರಮಶಾಲಿ. ಕರಡಿಗಳಿಗೆ ಅಧಿಪತಿ.
ಗ॥ ಅಥ ವೈತಾನಾದ್ವೈಶ್ವಾನರಾನ್ನರಃ ಪ್ರಾಜಾಪತ್ಯಃ ಸಹೇಮಪಾತ್ರಃ ಕಶ್ಚಿದುತ್ಥಾಯ ಪುತ್ರೀಯತೇ ದಶರಥಾಯ
ಪಾಯಸಮಮೃತಪ್ರಾಯಂ ಪ್ರಾಯಚ್ಛತ್।
ಅನು॥ ಅನಂತರ ಯಜ್ಞಾಗ್ನಿಯಿಂದ ಪ್ರಜಾಪತಿಪ್ರೇಷಿತನಾದ ಸುವರ್ಣಕಲಶಧಾರಿಯಾದ ಪುರುಷನೊಬ್ಬನು ಮೇಲೆದ್ದು ಬಂದು ಪುತ್ರಕಾಮನಾದ ದಶರಥನಿಗೆ ಅಮೃತಸಮಾನವಾದ ಪಾಯಸವನ್ನುನೀಡಿದನು.
ಪ॥ ಕೌಸಲ್ಯಾಯೈ ಪ್ರಥಮಮದಿಶದ್ಭೂಪತಿಃ ಪಾಯಸಾರ್ಧಂ
ಪ್ರಾದಾದರ್ಧಂ ಪ್ರಣಯಮಧುರಂ ಕೇಕಯೇಂದ್ರಸ್ಯ ಪುತ್ರೈ ।
ಏತೇ ದೇವ್ಯೌ ತರಲಮನಸಃ ಪತ್ಯುರಾಲೋಚ್ಯ ಭಾವಂ
ಸ್ವಾರ್ಧಾಂಶಾಭ್ಯಾಂ ಸ್ವಯಮಕುರುತಾಂ ಪೂರ್ಣಕಾಮಾಂ ಸುಮಿತ್ರಾಮ್॥೨೩॥
ಅನು॥ ರಾಜನು ಮೊದಲು ಪಾಯಸದ ಅರ್ಧಭಾಗವನ್ನು ಕೌಸಲ್ಯೆಗೆ ನೀಡಿದನು. ಕೈಕಯಿಗೆ ಪ್ರೀತಿಮಧುರವಾದ ಉಳಿದ ಅರ್ಧವನ್ನು ನೀಡಿದನು. ಈ ಇಬ್ಬರು ದೇವಿಯರು ವ್ಯಾಕುಲಚಿತ್ತನಾದ ಪತಿಯ ತೊಳಲಾಟವನ್ನರಿತು ಸ್ವಯಂಪ್ರೇರಿತರಾಗಿ ತಮ್ಮ ಪಾಲಿನ ಭಾಗದ ಅರ್ಧದಿಂದ ಸುಮಿತ್ರೆಯ ಹಂಬಲವನ್ನು ನೆರವೇರಿಸಿದರು.
ಕೌಸಲ್ಯಾ ಹಾಗೂ ಕೈಕಯೀ ಎಂಬಿಬ್ಬರಿಗೆ ಪಾಯಸದ ಅರ್ಧಾರ್ಧಗಳನ್ನು ಕೊಟ್ಟ ಬಳಿಕ ಮತ್ತೊಬ್ಬ ರಾಣಿಯಾದ ಸುಮಿತ್ರೆಗೆ ಕೊಡಲು ಉಳಿದಿಲ್ವಲ್ಲ ಎಂದು ದಶರಥ ಕಳವಳಗೊಂಡನು. ಅವನ ತಳಮಳವನ್ನು ತಾವಾಗಿಯೇ ಅರಿತು ಅವರಿಬ್ಬರೂ ಸುಮಿತ್ರೆಗೆ ತಮ್ಮ ಪಾಲಿಗೆ ಬಂದುದರಲ್ಲಿ ಅರ್ಧಾಂಶವನ್ನು ಕೊಟ್ಟರೆಂದು ತಾತ್ಪರ್ಯ.
ಪ॥ ಅವಭೃಥೇऽವಸಿತೇ ಸರಯೂತಟಾದಥ ಯಥಾಯಥಮುಚ್ಚಲಿತೇ ಜನೇ।
ದಶರಥಃ ಪರಿಪೂರ್ಣಮನೋರಥಃ ಪುರಮಗಾತ್ಪುರುಹೂತಪುರೋಪಮಾಮ್॥೨೪॥
ಅನು॥ ಅನಂತರ ಅವಭೃತಸ್ನಾನವು ಮುಗಿಯಲು ಸರಯೂ ತೀರದಿಂದ ( ಯಜ್ಞಕ್ಕಾಗಿ ಬಂದಿದ್ದ ) ಜನರೆಲ್ಲ ಹಾಗೆಯೇ ಚದುರಲು ಮನದ ಹಂಬಲವು ಪೂರ್ಣಗೊಂಡಿದ್ದ ದಶರಥನು ಇಂದ್ರನಗರಿಗೆ ಸಮಾನವಾದ ನಗರಿಗೆ ತೆರಳಿದನು.
ಪ॥ ಅಪಾಟವಾತ್ಕೇವಲಮಾಂಗಕಾನಾಂ ಮನೋಜ್ಞಕಾಂತೇರ್ಮಹಿಷೀಜನಸ್ಯ।
ಶನೈಃ ಶನೈಃ ಪ್ರೋಜ್ಝಿತಭೂಷಣಾನಿ ಚಕಾಶಿರೇ ದೌಹೃದಲಕ್ಷಣಾನಿ॥೨೫॥
ಅನು॥( ಗರ್ಭಧಾರಣೆಯಿಂದ ) ವಿಶೇಷಕಾಂತಿಯಿಂದ ಕೂಡಿದ ರಾಣಿಯರಲ್ಲಿ, ಸುಕುಮಾರವಾದ ಅವಯವಗಳಿಂದ ಆಭರಣಗಳೆಲ್ಲ ತ್ಯಜಿಸಲ್ಪಟ್ಟು, ಮೆಲ್ಲಮೆಲ್ಲನೆ ಗರ್ಭದ ಚೆಹ್ನೆಗಳು ಪ್ರಕಟವಾಗತೊಡಗಿದವು.
ಆಭರಣಗಳನ್ನು ಧರಿಸುವಷ್ಟು ಪಟುತ್ವವಿಲ್ಲದ ಹಸ್ತಾದಿ ಅಂಗಗಳು. ಇದು ರಾಣಿಯರ ಸೌಕುಮಾರ್ಯಸೂಚಕವಾಗಿದೆ.
ಗರ್ಭ: ತನ್ನ ಹಾಗೂ ಗರ್ಭಸ್ಥಶಿಶುವಿನ ಹೀಗೆ ಎರಡು ಹೃದಯಗಳನ್ನು ಹೊಂದಿರುವುದರಿಂದ ಗರ್ಭಕ್ಕೆ ಈ ಹೆಸರು. ಗರ್ಭಿಣಿಗೆ ದೌಹೃದಿನೀ ಎಂದೂ ಹೆಸರಿದೆ.
ಪ॥ ಮಂದಮಂದಮಪಯದ್ವಲೀತ್ರಯಾ ಗಾಧತಾವೆಷಯನಾಭಿಗಹ್ವರಾ।
ಕೋಸಲೇಂದ್ರದುಹಿತುಃ ಶನೈರಭೂನ್ಮಧ್ಯಯಷ್ಟಿರಪಿ ದೃಷ್ಟಿಗೋಚರಾ॥೨೬॥
ಅನು॥ ಕೌಸಲ್ಯಾದೇವಿಯ ಉದರವು ಕೂಡ ಕೊಂಚಕೊಂಚವೇ ತ್ರೆವಳಿಗಳು ಮರೆಯಾಗಿ ನಾಭಿಯ ಆಳವು ಮೇಲೆದ್ದು ಬಂದು ಮೆಲ್ಲನೆ ದೃಷ್ಟಿಗೋಚರವಾಗತೊಡಗಿತು.
ಪ॥ ನ್ಯಗ್ರೋಧಪತ್ರಸಮತಾಂ ಕ್ರಮಶಃ ಪ್ರಯಾತಾ-
ಮಂಗೀಚಕಾರ ಪುನರಪ್ಯುದರಂ ಕೃಶಾಂಗ್ಯಾಃ।
ಜೀವಾತವೇ ದಶಮುಖೋರಗಪೀಡಿತಾನಾಂ
ಗರ್ಭಚ್ಛಲೇನ ವಸತಾ ಪ್ರಥಮೇನ ಪುಂಸಾ॥೨೭॥
ಅನು॥ ರಾವಣನೆಂಬ ಸರ್ಪದಿಂದ ಪೀಡಿತರಾದವರಿಗೆ ಪುನಃ ಜೀವದಾನ ಮಾಡಲು ಗರ್ಭಸ್ರಶಿಶುವಿನ ನೆವದಿಂದ ಪುರುಷೋತ್ತಮನ ಮೂಲಕ ಕೃಶಾಂಗಿಯ ಉದರವು ಕ್ರಮೇಣ ಕಳೆದುಕೊಂಡಿದ್ದ ಆಲದೆಲೆಯ ಹೋಲಿಕೆಯನ್ನು ಮತ್ತೆ ಪಡೆಯಿತು.
( ೧ )ಬಾಲ್ಯದಲ್ಲಿ ಕಿಂಚಿತ್ ಸ್ಥೂಲತೆಯಿಂದ ಕೌಸಲ್ಯೆಯ ಉದರ ಆಲದೆಲೆಯ ಸಾಮ್ಯವನ್ನು ಪಡೆದಿತ್ತು. ಯೌವನದ ಪ್ರಭಾವದಿಂದ ಉದರ ಕೃಶವಾಗಿ ಆ ಸಾಮ್ಯವನ್ನು ಕಳೆದುಕೊಂಡಿತು. ಈಗ ಗರ್ಭದಾರಣೆಯಿಂದ ಪುನಃ ಸ್ಥೂಲತ್ವ-
ಪ್ರಾಪ್ತವಾಗಿ ಆಲದೆಲೆಯಂತೆ ಕಾಣತೊಡಗಿತು.
(೨) ಗರ್ಭಧಾರಣೆಯ ಪೂರ್ವದಲ್ಲಿ ಆಲದೆಲೆಯ ಸಾಮ್ಯವನ್ನು ಪಡೆದಿದ್ದ ಆಕೆಯ ಉದರ ಗರ್ಭದಿಂದ ಆ ಸಾಮ್ಯವನ್ನು ಕಳೆದುಕೊಂಡಿದ್ದರೂ ಕೂಡ ಶ್ರೀಮನ್ನಾರಾಯಣನು ಗರ್ಭದಲ್ಲಿ ಶಯನಮಾಡಿದ್ದರಿಂದ ಆ ಸಾಮ್ಯವನ್ನು ಮತ್ತೆ ಪಡೆಯಿತು.
ಪ॥ ಮಧ್ಯಂ ತನುತ್ವಾದವಿಭಾವ್ಯಮಾನಮಾಕಾಶಮಾಸೀದಸಿತಾಯತಾಕ್ಷ್ಯಃ।
ಗರ್ಭೋದಯೇ ವಿಷ್ಣುಪದಾಪದೇಶಾತ್ಕಾರ್ಶ್ಯಂ ವಿಹಾಯಾಪಿ ವಿಹಾಯ ಏವ॥೨೮॥
ಅನು॥ ಕಪ್ಪಾದ ಹಾಗೂ ವಿಶಾಲವಾದ ನೇತ್ರಗಳನ್ನು ಹೊಂದಿದ್ದ ಕೌಸಲ್ಯೆಯ ನಡುವು ಕೃಶತೆಯ ಕಾರಣದಿಂದ ಅಗೋಚರವಾದ ಆಕಾಶವೇ ಆಗಿತ್ತು. (ಈಗ) ಗರ್ಭವು ಮೂಡಿಬರಲು ಶ್ರೀವಿಷ್ಣುವಿನ ಆಶ್ರಯವಾದ ನೆವದಿಂದ ಕೃಶತೆಯನ್ನು ತ್ಯಜಿಸಿದರೂ ಮತ್ತೆ ಆಕಾಶವೇ ಆಗಿದೆ.
ಸುಂದರಿಯ ನಡು ಅತಿಕೃಶತೆಯಿಂದ ಆಕಾಶದಂತೆ ಅಗೋಚರವೆಂಬುದು ಕವಿಸಮಯ. ಇಲ್ಲಿ ಕವಿಸಮಯ, ಪುರಾಣಕಲ್ಪನೆ ಹಾಗೂ ಸಂಸ್ಕೃತಭೃಷೆಯ ಶ್ಲೇಷೆಯ ಶಕ್ತಿಗಳೆಲ್ಲ ಸೇರಿ ಮನೋಹರಕಾವ್ಯ ನಿರ್ಮಾಣವಾಗಿದೆ. ಆಕಾಶವು ಸುಂದರಿಯ ನಡುವಿಗೆ ಉಪಮಾನವಾಗಿರುವಂತೆ ಮಹಾವಿಷ್ಣುವಿನ ಆವಾಸಸ್ಥಾನವೂ ಆಗಿದೆ.ಈಗ ಗರ್ಭಾವಸ್ಥೆಯಿಂದ ಕೌಸಲ್ಯೆಯ ನಡು ಆಕಾಶತ್ವವನ್ನು ( ಕೃಶತೆಯನ್ನು) ಕಳೆದುಕೊಂಡಿದೆಯಾದರೂ ಶ್ರೀವಿಷ್ಣುವೇ ಗರ್ಭದಲ್ಲಿ ಪವಡಿಸಿರುವುದರಿಂದ ಮತ್ತೆ ಆಕಾಶವೇ ಆಗಿದೆ.
ಪ॥ ಉಚ್ಛಸ್ಥೇ ಗ್ರಹಪಂಚಕೇ ಸುರಗುರೌ ಸೇಂದೌ ನವಮ್ಯಾಂ ತಿಥೌ
ಲಗ್ನೇ ಕರ್ಕಟಕೇ ಪುನರ್ವಸುಯತೇ ಮೇಷಂ ಗತೇ ಪೂಷಣಿ।
ನಿರ್ದುಗ್ಧುಂ ನಿಖಿಲಾಃ ಪಲಾಶಸಮಿಧೋ ಮೇಧ್ಯಾದಯೋಧ್ಯಾರಣೇ-
ರಾವಿರ್ಭೂತಮಭೂತಪೂರ್ವಮಪರಂ ಯತ್ಕಿಂಚಿದೇಕಂ ಮಹಃ॥೨೯॥
ಅನು॥ ( ಸೂರ್ಯ , ಮಂಗಳ, ಗುರು, ಶುಕ್ರ ಹಾಗೂ ಶನಿ ಎಂಬ) ಐದು ಗ್ರಹಗಳು ಉಚ್ಛಸ್ಥಾನದಲ್ಲಿರಲು ಗುರುವೂ ಚಂದ್ರನೂ ಸಮಾನ ಸ್ಥಾನದಲ್ಲಿರಲು, ನವಮೀ ತಿಥಿಯಂದು ಪುನರ್ವಸುವಿನಿಂದ ಕೂಡಿದ ಕರ್ಕಟಲಗ್ನದಲ್ಲಿ ಸೂರ್ಯನು ಮೇಷರಾಶಿಯಲ್ಲಿರಲು ಸಮಸ್ತ ರಾಕ್ಷಸರೆಂಬ ಮುತ್ತುಗದ ಸಮಿಧಗಳನ್ನು ಹೋಮಿಸಲು ಯಜ್ಞಭೂಮಿಸಮಾನವಾದ ಪರಮ ಪವಿತ್ರವಾದ ಅಯೋಧ್ಯೆಯೆಂಬ ಅರಣಿಯಿಂದ ಅಭೂತಪೂರ್ವವೂ ಅಪ್ರತಿಮವೂ ಆದ ಯಾವುದೋ ಜ್ಯೋತಿಯೊಂದು ಮೂಡಿಬಂದಿತು.
ಗ್ರಹಗಳ ಸ್ಥಿತಿಗಳು ಜನಿಸಿದ ಮಹಾಪುರುಷನ ಮಹೋನ್ನತಿಯನ್ನು ಸೂಚಿಸುತ್ತವೆ. ರಾಕ್ಷಸರು ಹಾಗೂ ಮುತ್ತುಗದ ಮರ ಎಂಬ ಎರಡೂ ಅರ್ಥಗಳು ಈ ಸಂದರ್ಭದಲ್ಲಿ ಸಮುಚಿತವಾಗಿ ಹೊಂದುತ್ತವೆ.
ಪ॥ ಅಥ ರಾಮಾಭಿಧಾನೇನ ಕವೇಃ ಸುರಭಯನ್ ಗಿರಃ।
ಅಲಂಚಕಾರ ಕಾರುಣ್ಯಾದ್ರಘೂಣಾಮನ್ವಯಂ ಹರಿಃ ॥೩೦॥
ಅನು॥ ಅನಂತರ ಆದಿಕವಿಯ ವಾಣಿಯನ್ನು ಮನೋಜ್ಞವಾಗಿಸಿ ಪರಮಕಾರುಣ್ಯದಿಂದ ಶ್ರೀಹರಿಯು ರಘುವಂಶವನ್ನು ರಾಮನೆಂಬ ನಾಮಧೇಯದಿಂದ ಅಲಂಕರಿಸಿದನು.
ತನ್ನನ್ನು ಕೇಂದ್ರೀಕರಿಸಿದ ಕಾವ್ಯವನ್ನು ನಿರೂಪಿಸಲಿರುವ ಕವಿ ವಾಲ್ಮೀಕಿಯ ವಾಣಿಯನ್ನು ಶ್ರೀಹರಿಯು ಅನುಗ್ರಹಿಸಿದನು. ಅದರಿಂದ ಆ ವಾಣಿಗೆ ವೆಶೇಷ ಮೆರುಗು ಬಂದಿತು.
ಪ॥ ತಮೇನಮನ್ವಜಾಯಂತ ತ್ರಯಸ್ತ್ರೇತಾಗ್ನಿತೇಜಸಃ।
ಅಗ್ರಜಾಸ್ಯಾನುಕುರ್ವಂತಸ್ತೈಸ್ತ್ತೈರ್ಲೋಕೋತ್ತರೈರ್ಗುಣೈಃ॥೩೧॥
ಅನು॥ ತ್ರಿವಿಧ ಅಗ್ನಿಗಳ ತೇಜಸ್ಸಿನಿಂದ ಕೂಡಿದ ಅಲೌಕಿಕವಾದ ಆಯಾ ಗುಣಗಳಿಂದ ಅಗ್ರಜನನ್ನು ಹೋಲುವ ಮೂವರು ಈ ರಾಮನ ಬಳಿಕ ಜನಿಸಿದರು.
ಗಾರ್ಹತ್ಯ, ಆಹವನೀಯ, ದಕ್ಷಿಣ ಎಂದು ಅಗ್ನಿಯು ಕರ್ಮ ವೈವಿಧ್ಯದಿಂದ ಮೂರು ಪ್ರಕಾರ. ಮೂಲತಃ ಅಗ್ನಿಯೆಂಬುದು ಒಂದೇ. ಹಾಗೆಯೇ ರಾಮನೆಂಬ ಏಕಮೇವತತ್ವವು ತ್ರಿವಿಧವಾಗಿ ಪ್ರಕಟವಾಯಿತೆಂಬುದು ಇಲ್ಲಿಯ ಭಾವ.
ಪ॥ ಭರತಸ್ತೇಷು ಕೈಕೇಯ್ಯಾಸ್ತನಯೋ ವಿನಯೋಜ್ವಲಃ।
ಘಅನ್ಯೌ ಲಕ್ಷ್ಮಣಶತ್ರುಘ್ನೌ ಸುಮಿತ್ರಾಯಾಂ ಕೃತೋದಯೌ॥೩೨॥
ಅನು॥ ಅವರಲ್ಲಿ ವಿನಯದಿಂದ ಪ್ರಕಾಶಿಸುವ ಕೈಕೇಯೀ ಪುತ್ರನಾದ ಭರತ, ಮತ್ತಿಬ್ಬರು ಸುಮಿತ್ರೆಯಲ್ಲಿ ಜನಿಸಿದ ಲಕ್ಷ್ಮಣ- ಶತ್ರುಘ್ನರು.
ಪ॥ ಏತೇ ವವೃಧಿರೇ ವೀರಾ ಬ್ರಹ್ಮಕ್ಷೇಮಾಯ ದೀಕ್ಷಿತಾಃ।
ಲೋಕಾನಂದಮುಕುಂದಸ್ಯ ಚತ್ವಾರ ಇವ ಬಾಹವಃ॥೩೩॥
ಅನು॥ ವಿಶ್ವವನ್ನು ಪ್ರಸನ್ನಗೊಳಿಸುವ ( ಪ್ರಸನ್ನತೆಯೇ ಆಗಿರುವ ) ಮುಕುಂದನ ನಾಲ್ಕು ಭುಜಗಳೋ ಎಂಬಂತೆ "ಬ್ರಹ್ಮದ" ರಕ್ಷಣೆಗಾಗಿ ಬದ್ಧರಾದ ಈ ವೀರರು ವರ್ಧಿಸೆದರು.
ಗ॥ ಅಥ ಕದಾಚಿದಪರಿಮೇಯಮಾಯಾಭಯಾನಕಯುದ್ಧಸಮುದ್ಧತದೈತ್ಯಬಲಾವ-
ಸ್ಕಂದಕಾಂದಿಶೀಕವೃಂದಾರಕಾನೀಕಪರಿವಾರ್ಯಮಾಣರಥಃ ಪಂಕ್ತಿರಥಸ್ತಪಶ್ಚರ್ಯಾ-
ಜಾತಾನಾಮಾಶ್ಚರ್ಯಾಣಾಮಾಯತನಂ ತ್ರಿಶಂಕುಯಾಜಿನಂ ಭಗವಂತಂ
ಪದ್ಯಪ್ರಬಂಧಮಿವ ದರ್ಶಿತಸರ್ಗಭೇದಂ ಪ್ರಾಕೃತವ್ಯಾಕರಣಮಿವ ಪ್ರಕಟಿತವರ್ಣವ್ಯತ್ಯಾಸಂ
ಬುಧಮಿವ ಸೋಮಸುತಂ ಕುಶಿಕಸುತಮದ್ರಾಕ್ಷೀತ್।
ಅನು॥ ಹೀಗಿರಲು ಹಿಂದೊಮ್ಮೆ ಊಹಾತೀತವಾದ ಮಾಯೆಗಳಿಂದೊಡಗೂಡಿ ಯುದ್ಧಸನ್ನದ್ಧರಾದ ರಾಕ್ಷಸ ಸೈನ್ಯದ ಆಕ್ರಮಣದಿಂದ ದಿಕ್ಕುತೋಚದ ದೇವಸಮೂಹದಿಂದ ಸುತ್ತುವರಿಯಲ್ಪಟ್ಟಿದ್ದ ದಶರಥನು ತಪಶ್ಚರ್ಯೆಯಿಂದೊದಗುವ ವಿಸ್ಮಯಗಳಿಗೆ ಆಗರನಾದ, ತ್ರಿಶಂಕುವಿನ ಮೂಲಕ ಯಜ್ಞವನ್ನು ಮಾಡಿಸಿದ, ಮಹಾಕಾವ್ಯದಂತೆ ಸರ್ಗಭೇದವನ್ನು (ವಿವಿಧ ಸರ್ಗಗಳನ್ನು, ವಿಭಿನ್ನ ಸೃಷ್ಟಿಯನ್ನು ) ಪ್ರದರ್ಶಿಸಿ, ಪ್ರಾಕೃತವ್ಯಾಕರಣದಂತೆ ವರ್ಣವ್ಯತ್ಯಾಸವನ್ನು(ಅಕ್ಷರಗಳಲ್ಲಿಯ ಬಧಲೃವಣೆಯನ್ನು, ಕ್ಷತ್ರಿಯತ್ವದಿಂದ ಬ್ರಹ್ಮತ್ವವೆಂಬ ವರ್ಣವನ್ನು ) ಪ್ರಕಟಿಸಿದ, ಸೋಮಸುತನಾದ ( ಚಂದ್ರನ ಮಗನಾದ, ಸೋಮಯಾಜಕನಾದ ) ಬುಧ ( ಒಂದು ಗ್ರಹ, ಜ್ಞಾನಿ) ನಂತಿರುವ ಕುಶಿಕ ಮಗನನ್ನು ( ವಿಶ್ವಾಮಿತ್ರನನ್ನು ) ಕಂಡನು.
ಸೂರ್ಯವಂಶದ ನಿಬಂಧನ ಅಥವಾ ತ್ರಿಧನ್ವ ಎಂಬ ರಾಜನ ಮಗ ತ್ರಿಶಂಕು. ಸತ್ಯವ್ರತ ಎಂಬುದು ಇವನ ಮೂಲನಾಮ. ಇವನು ಅನ್ಯಪತ್ನಿಯನ್ನು ಅಪಹರಿಸಿ ರಾಜ್ಯಬಹಿಸ್ಕೃತನಾದ. ನಿಬಂಧನ ಅನ್ಯಪುತ್ರಾಪೇಕ್ಷೆಯಿಂದ ತಪಸ್ಸಿಗಾಗಿ ಕಾಡಿಗೆ ತೆರಳಲು ರಾಜ್ಯ ಅರಾಜಕವಾಗಿ, ನೀತಿಭ್ರಷ್ಟವಾಗಿ ಕ್ಷಾಮ ತಲೆದೋರಿತು. ಆಗ ಸತ್ಯವ್ರತ ತನ್ನ ಕುಲಗುರು ವಸಾಷ್ಠನ ವೈರಿಯಾದ ವಿಶ್ವಮಿತ್ರನ ಕುಟುಂಬಕ್ಕೆ ಸಹಾಯಕನಾದ, ಕೆಲಕಾಲದ ಬಳಿಕ ವಸಿಷ್ಠನ ಹಸುವನ್ನು ಕೊಂದು ಮಾಂಸವನ್ನು ಸಂಸ್ಕರಿಸದೆ ತಿಂದ. ಇದನ್ನು ತಿಳಿದ ವಸಿಷ್ಠ " ತಂದೆಗೆ ಅಸಮ್ಮತವಾದಪಾಪವೊಂದು, ಗುರುವಿನ ಗೋವನ್ನು ವಧಿಸಿದ ಪಾಪವಿನ್ನೊಂದು, ಅದರ ಮಾಂಸವನ್ನು ಸಂಸ್ಕರಿಸದೆ ತಿಂದ ಪಾಪ ಮತ್ತೊಂದು - ಹೀಗೆ ಮೂರು ಪಾಪ( ಶಂಕು ) ಗಳನ್ನು ಮಾಡಿದ್ದರಿಂದ ನೀನು ಪತಿತ" ಎಂದು ಶಪಿಸಿದ. ಅಂದಿನಿಂದ ಈತ ತ್ರಿಶಂಕುವಾದ. ಸದೇಹಿಯಾಗಿ ಸ್ವರ್ಗಕ್ಕೆ ಹೋಗಬೇಕೆಂದು ವಿಶ್ವಾಮಿತ್ರನ ಮೂಲಕ ಯಜ್ಞವನ್ನು ಮಾಡಿಸಿ ಊದರ ಬಲದಿಂದ ಸ್ವರ್ಗಕ್ಕೇರಲು ಇಂದ್ರ ಪಾಪಿಷ್ಠನಾದ ಇವನನ್ನು ಕೆಳದೂಡಿದ. ತಲೆಕೆಳಗಾಗಿ ಬೀಳುತ್ತಿರುವ ಇವನ್ನು ಕಂಡು ವಿಶ್ವಾಮಿತ್ರ" ಅನ್ಯಮಿಂದ್ರಂ ಕರಿಷ್ಯಾಮಿ" ಎಂದು ತನ್ನ ತಪೋಬಲದಿಂದ ಬೇರೊಂದೇ ಸ್ವರ್ಗವನ್ನು ನಿರ್ಮಿಸಿದ.
ಕುಶಿಕವಂಶದ ಗಾಧಿ ಎಂಬ ರಾಜನ ಮಗ ವಿಶ್ವರಥ ಎಂಬವನು ವಸಿಷ್ಠನ ಬ್ರಹ್ಮತೇಜಸ್ಸಿನೆದುರು ತನ್ನ ಕ್ಷಾತ್ರತೇಜಸ್ಸು ಕ್ಷುದ್ರವೆಂಬುದನ್ನು ಅರಿತು ಘೋರವಾದ ತಪಸ್ಸನ್ನು ಮಾಡಿ ಕ್ಷತ್ರಿಯ ವರ್ಣದಿಂದ ಬ್ರಾಹ್ಮಣ ವರ್ಗಕ್ಕೆ ಸೇರಿಕೊಂಡ. ಅದೇ ವಿಶ್ವರಥನೇ ಬ್ರಾಹ್ಮಣನಾಗಿ " ವಿಶ್ವಾಮಿತ್ರ" ( ವಿಶ್ವ+ ಅಮಿತ್ರ= ವಿಶ್ವಕ್ಕೆಲ್ಲ ಮಿತ್ರನಾದವನು) ಎಂದು ಪ್ರಸಿದ್ಧನಾದ. ಸೋಮ ಎಂದರೆ ಚಂದ್ರ ಹಾಗೂ ಬೃಹಸ್ಪತಿಯ ಪತ್ನಿ ತಾರೆ ಇವರ ಮಗ ಬುಧ. ಬುಧನೆಂದರೆ ಜ್ಞಾನಿ ಎಂದೂ ಅರ್ಥ.
ವಿಶ್ವಾಮಿತ್ರನ ಆಗಮನವಾದುದು ರಾಕ್ಷಸರಿಂದ ಉಂಟಾಗುತ್ತಿದ್ದ ವಿಘ್ನಪರಿಹಾರಕ್ಕಾಗಿ. ದಶರಥನೂ ಹಿಂದೊಮ್ಮೆ ದೇವತೆಗಳಿಗೆ ರಾಕ್ಷಸಸಂಹಾರದಲ್ಲಿ ಸಹಾಯಕನಾಗಿದ್ದುದರಿಂದ ಈ ಘಟಕದ ಆರಂಭದಲ್ಲಿ ದಶರಥನ ಕುರಿತಾದ ವಿಶೇಷಣ ಪೋಷಕವೇ ಆಗಿದೆ.
ಗ॥ ತದನು ಯಥಾವಿಧಿ ಕೃತಸಪರ್ಯೇಣ ಮರ್ಯಾದಾತೀತಮಹಿಮ್ನಾ ಮಹಿತೇನ ಗಾಧೇತರಹೃದಯೇನಗಾಧೆನಂದ-
ನೇನ ಸತ್ರಪರಿತ್ರಾಣಾರ್ಥಮಿತ್ಥಮಭ್ಯರ್ಥಿತೋऽಭೂತ್। ರಾಜನ್, ಭವತಸ್ತನಯೇನ ವಿನಯಾಭಿರಾಮೇಣ ರಾಮೇಣ
ಶರಾಸನಮಿತ್ರೇಣ ಸೌಮಿತ್ರಿಮಾತ್ರಪರಿಜನೇನ ಕ್ರಿಯಾಮಾಣಕ್ರತುರಕ್ಷೋ ರಕ್ಷೋದುರಿತಮುತ್ತೀರ್ಯ ಕೃತಾವಭೃಥೋ ಭವಿತುಮಭಿಲಷಾಮೀತಿ।
ಅನು। ಅನಂತರ ವಿಧಿವತ್ತಾಗಿ ಪೂಜಿತನಾದ, ಅಸೀಮ ಮಹಿಮಾನ್ವಿತನಾದ, ಪೂಜನೀಯನಾದ, ಗಂಭೀರಸ್ವಭಾವದ ವಿಶ್ವಾಮಿತ್ರನಿಂದ ಯಜ್ಞಸಂರಕ್ಷಣೆಗಾಗಿ ( ದಶರಥನು ) ಹೀಗೆಂದು ಪ್ರಾರ್ಥಿಸಲ್ಪಟ್ಟನು. " ರಾಜನ್, ಧನುವನ್ನು ಮಿತ್ರನನ್ನಾ-
ಗಿಸಿಕೊಂಡ, ಲಕ್ಷ್ಮಣನು ಮಾತ್ರ ಸಹಾಯಕನಾಗಿರುವ, ವಿನಯದಿಂದ ಶೋಭಿಸುವ ನಿನ್ನ ತನಯನಾದ ರಾಮನಿಂದ ನಾನು ಮಾಡಲಿರುವ ಯಜ್ಞವು ರಕ್ಷಿಸಲ್ಪಟ್ಟು, ರಾಕ್ಷಸರ ವಿಘ್ನಗಳನ್ನು ದಾಟಿ ಅವಭೃತಸ್ನಾನವನ್ನು ಮಾಡಲು ಬಯಸೈವೆನು.
ಗ॥ ಏತದಾಕರ್ಣ್ಯ ಕರ್ಣಪರುಷಂ ಮಹರ್ಷಿಭಾಷಿತಮತಿಮಾತ್ರಪುತ್ರವಾತ್ಸಲ್ಯಾ-
ತ್ಕೌಸಲ್ಯಾಜಾನಿಃ ಸಶಲ್ಯಾಂತಃಕರಣೋऽ ಭೂತ್। ತತಸ್ತಸ್ಮಿನ್ಬಹುಪ್ರಕಾರೈರವಾರ್ಯ-
ನಿಶ್ಚಯೇ ಭಗವತಿ ವಿಶ್ವಾಮಿತ್ರೇ ದಶರಥಸ್ತಪನಕುಲಹಿತೇನ ಪುರೋಹಿತೇನೈವಮಭಿ-
ಹಿತೋऽಭೂತ್।
ಅನು॥ ಮಹರ್ಷಿಯಿಂದ ನುಡಿಯಲ್ಪಟ್ಟ ಕರ್ಣಕಠೋರವಾದ ಈ ಮಾತನ್ನು ಕೇಳಿ ಅತಿಯಾದ ಪುತ್ರವಾತ್ಸಲ್ಯದಿಂದ ಕೂಡಿದ ದಶರಥನು ವಿದೀರ್ಣಹೃದಯನಾದನು. ಆ ಬಳಿಕ ವಿವಿಧ ಉಪಾಯಗಳಿಂದಲೂ ಭಗವಾನ್ ವಿಶ್ವಾಮಿತ್ರನು ತನ್ನ ನಿರ್ಧಾರದಿಂದ ಹಿಂಜರಿಯದಿರಲು ಸೂರ್ಯವಂಶಕ್ಕೆ ಹಿತಕಾರಿಯಾದ ಪುರೋಹಿತನು( ವಸಿಷ್ಠನು ) ದಶರಥನಿಗೆ ಹೀಗೆಂದನು.
ಮಹರ್ಷಿಯ ನುಡಿ ಅನುಲ್ಲಂಘನೀಯ. ವಿಶ್ವಾಮಿತ್ರನ ಮಾತು ಶಲ್ಯದಂತಿತ್ತು. ಅದರಿಂದ ದಶರಥನ ಹೃದಯ ಭೇದಿಸಲ್ಪಟ್ಟಿತು.
ಪ॥ ಪರ್ಯಾಪ್ತಭಾಗ್ಯಾಯಭವಾನಮುಷ್ಮೈ ಕುರ್ಯಾತ್ಸಪರ್ಯಾಂ ಕುಶಿಕಾತ್ಮಜಾಯ।
ನಿರ್ಯಾತುಧಾನಾಂ ವಸುಧಾ ವಿಧಾತುಂ ನಿರ್ಯಾತು ರಾಮಃ ಸಹ ಲಕ್ಷ್ಮಣೇನ॥೩೪॥
ಅನು॥ (ಬ್ರಹ್ಮವರ್ಚಸ್ ಎಂಬ) ಭಾಗ್ಯವನ್ನು ಪರಿಪೂರ್ಣವಾಗಿ ಹೊಂದಿದ ಈ ವಿಶ್ವಾಮಿತ್ರನನ್ನು ನೀನು ( ರಾಮನನ್ನು ಕಳುಹುವ ಮೂಲಕ ) ಪೂಜಿಸು. ವಸುಂಧರೆಯನ್ನು ರಾಕ್ಷಸರಹಿತಳನ್ನಾಗಿಸಲು ರಾಮನು ಲಕ್ಷ್ಮಣನ ಜೊತೆ ತೆರಳಲಿ.
ಅನಿವಾರ್ಯ ನಿವಾರಿಸಲಾಗದ ತಾನೇ ಯಜ್ಞರಕ್ಷಣೆಗೆ ಬರುವುದಾಗಿ ದಶರಥ ವಿಧವಿಧವಾಗಿ ವಿನಂತಿಸಿಕೊಂಡರೂ ವಿ ವಿಶ್ವಾಮಿತ್ರ ತನ್ನ ನಿರ್ಧಾರವನ್ನು ಸಡಿಸಲಿಲ್ಲ.
ಗ॥ ಏವಂ ವಸಿಷ್ಠೇನ ಪ್ರತಿಷ್ಠಾಪಿತಧೃತಿರ್ದಶರಥಃ ಸುತಪ್ರದಾನೇನ ಕುಶಿಕಸುತಮನೋರಥಮೇವ ಪೂರಯಾಮಾಸ।
ಅನು॥ ಹೀಗೆ ವಸಿಷ್ಠನಿಂದ ಧೈರ್ಯ ತುಂಬಲ್ಪಟ್ಟ ದಶರಥನು ಮಗನನ್ನು ಸಮರ್ಪಿಸುವ ಮೂಲಕ ವಿಶ್ವಾಮಿತ್ರನ ಮನೋರಥವನ್ನೇ ಪೂರ್ಣಗೊಳಿಸಿದನು.
ಪ॥ ಯೋಗೇನ ಲಭ್ಯೋ ಯಃ ಪುಂಸಾಂ ಸಂಸಾರಾಪೇತಚೇತಸಾಂ।
ನಿಯೋಗೇನ ಪಿತುಃ ಸೋऽಯಂ ರಾಮಃ ಕೌಶಿಕಮನ್ವಗಾತ್॥೩೫॥
ಅನು॥ ಪ್ರಾಪಂಚಿಕವಿಷಯಗಳಿಂದ ನಿವೃತ್ತಗೊಂಡ ಮನಸ್ಸುಳ್ಳವರಿಗೆ ಯೋಗದ ಮೂಲಕ ಯಾವನು ದೊರೆಯುವನೋ ಅಂತಹ ಈ ಶ್ರೀರಾಮನು ತಂದೆಯ ಆದೇಶದ ಮೇರೆಗೆ ವಿಶ್ವಾಮಿತ್ರನನ್ನು ಅನುಸರಿಸಿದನು.
ರಾಮನನ್ನು ಕಳುಹದೇ ತನ್ನ ಮನೋರಥವನ್ನು ಪೂರೈಸಿಕೊಳ್ಳುವುದರ ಬದಲಾಗಿ ಅವನನ್ನು ಕಳುಹಿಸಿ ವಿಶ್ವಾಮಿತ್ರನ ಮನೋರಥವನ್ನೇ ಪೂರೈಸಿದನು. ಲೋಕಕಲ್ಯಾಣಕ್ಕಾಗಿ ಮಹಾತ್ಮರು ಲೀಲಾವಿನೋದದಲ್ಲಿ ತೊಡಗುತ್ತಾರೆಂಬುದು ಶ್ಲೋಕದ ಭಾವ.
ಪ॥ ತತ್ರ ಸತ್ರಂ ಪರಿತ್ರಾತುಂ ವಿಶ್ವಾಮಿತ್ರೋ ಮಹಾಮುನಿಃ ।
ಸೌಮಿತ್ರಿಸಹಿತಂ ರಾಮಂ ನಯನ್ನಯಮವೋಚತ॥೩೬॥
ಪ॥ ಬಲೇನ ತಪಸಾಂ ಲಬ್ಧೇ ಬಲೇತ್ತತಿಬಲೇತಿ ಚ।
ವಿದ್ಯೇತೇ ಮಯಿ ಕಾಕುತ್ಥ್ಸ ವಿದ್ಯೇ ತೇ ವಿತರಾಮಿ ತೇ॥೩೭॥
ಅನು॥ ಅಲ್ಲಿ ಈ ವಿಶ್ವಮಿತ್ರಮಹರ್ಷಿಯು ಯಜ್ಞಸಂರಕ್ಷಣೆಗಾಗಿ ಲಕ್ಷ್ಮಣನ ಜೊತೆಗೂಡಿದ ರಾಮನನ್ನು ಕರೆದೊಯ್ದು ನುಡಿದನು- " ರಾಮನೇ, ತಪಸ್ಸಿನ ಬಲದಿಂದ ಪಡೆದ ಬಲ ಹಾಗೂ ಅತಿಬಲ ಎಂದು ಎರಡು ವಿದ್ಯೆಗಳು ನನ್ನಲಿವೆ. ಅವೆರಡನ್ನು ನೆನಗೆ ನೀಡುವೆನು."
ಪುರಂಜಯನೆಂಬ ಸೂರ್ಯವಂಶದ ರಾಜ ಎತ್ತಿನ ರೂಪವನ್ನು ಧರಿಸಿದ ಇಂದ್ರನ ಹೆಗಲನ್ನು ಏರಿ ರಾಕ್ಷಸರ ಜೊತೆ ಹೋರಾಡಿದ್ದ. ಆ ವಂಶದಲ್ಲಿ ಜನಿಸಿದವನಾದ್ದರಿಂದ ರಾಮನಿಗೆ ಕಾಕುತ್ಥ್ಸ ಎಂಬ ನಾಮಧೇಯ. ವಿದ್ಯೆಯು ಸುಲಭಸಾಧ್ಯವಲ್ಲ ಎಂದು ಸೂಚಿತವಾಗುತ್ತದೆ. ಹಸಿವು- ಬಾಯಾರಿಕೆಗಳ ಬಾಧೆಯಿಲ್ಲದೆ ಉತ್ಸಾಹ ಹಾಗೂ ಶಕ್ತಿಗಳು ವರೂಧಿಸುವಿಕೆ. ವೈರಿಯ ಶಸ್ತ್ರಾಘಾತವನ್ನು ಸಹಿಸುವಶಕ್ತಿ ಉಂಟಾಗುವಿಕೆ ಬಲ ಮತ್ತು ಅತಿಬಲ ಎಂಬ ವಿದ್ಯೆಗಳು.
ಗ॥ ತತೋ ಗೃಹೀತವಿದ್ಯಸ್ಯ ದಾಶರಥೇ ಪ್ರದೇಶಮೇಕಂ ಪ್ರದರ್ಶ್ಯ ಭಗವನ್ನಿತ್ಥಮಕಥಯತ್।
ಅನು॥ಬಳಿಕ ವಿದ್ಯಾಸಂಪನ್ನನಾದ ದಾಶರಥಿಗೆ ಭೂಭಾಗವೊಂದನ್ನು ತೋರಿಸಿ ಭಗವಾನ್ ವಿಶ್ವಾಮಿತ್ರನು ಹೀಗೆಂದನು.
ಪ॥ ಅಸ್ಮಿನ್ಪುರಾ ಪುರಭಿದಃ ಪರಮೇಶ್ವರಸ್ಯ
ಭಾಲಾಂತರಾಲನಯನಜ್ವಲನೇ ಮನೋಭೂಃ।
ಸದ್ಯಃ ಪ್ಪದ್ಯ ಶಲಭತ್ವಮಮುಂಚದಂಗಂ
ತಸ್ಮಾದಮುಂ ಜನಪದಂ ವಿದುರಂಗಸಂಜ್ಞಮ್॥೩೮॥
ಅನು॥ ಬಹು ಹಿಂದೆ ಈ ಪ್ರದೇಶದಲ್ಲಿ ತ್ರಿಪುರ್ರಿಯಾದ ಪರಮೇಶ್ವರನ ಹಣೆಯೊಳಗಿನ ಕಣ್ಣಿನ ಉರಿಯಿಂದ ಪತಂಗದಂತೆ ಮನ್ಮಥನು ( ಉರಿದುಹೋಗಿ ) ತನ್ನ ಶರೀರವನ್ನು ಬಿಸುಟನು. ಆದ್ದರಿಂದ ಈ ಭಾಗವನ್ನು ಅಂಗದೇಶವೆಂದು ಭಾವಿಸುತ್ತಾರೆ.
ರಾಮಲಕ್ಷ್ಮಣರು ವಿಶ್ವಾಮಿತ್ರನ ಆಶ್ರಮಕ್ಕೆ ಹೋಗುವಾಗ " ಈ ದೇಶ ಯಾವೈದು?" " ಈ ಆಶ್ರಮ ಯಾರದು ?" ಮುಂತಾಗಿ ಪ್ರಶ್ನಿಸುತ್ತಾರೆ. ಅವುಗಳಲ್ಲಿ ಒಂದು ಸಂದರ್ಭ ಮೇಲಿನ ಶ್ಲೋಕದಲ್ಲಿದೆ.
ಗ॥ ತದನು ಮಾನಸಸರಃಪ್ರಸೃತಾಂ ಸರಯೂಮತಿಕ್ರಮ್ಯ ವೃತ್ರವಧಪ್ರವೃದ್ಧವೃದ್ಧಶ್ರವಃ-
ಪಂಕಕ್ಷಾಲನಲಬ್ಧಮಲಯೋರ್ಮಲದಕರೂಶನಾಮ್ನೋರ್ಜನಪದಯೋಃ ಸೀಮ್ನಿ
ಕೃತಪದಯೋರ್ದಾಶರಥ್ಯೋಃ ಪುನರಪ್ಯೇವಮಬ್ರವೀತ್।
ಅನು॥ ಅನಂತರ ಮಾನಸಸರೋವರದಿಂದ ಉತ್ಪನ್ನವಾದಸರಯೂನದಿಯನ್ನು ದಾಟಿ ವೃತ್ರಾಸುರನ ವಧೆಯಿಂದ ಉಂಟಾದ ಮಾಲಿನ್ಯವನ್ನು ಇಂದ್ರ ತೊಳೆದುಕೊಂಡದ್ದರಿಂದ ಕಲುಷಿತವಾದ ಮಲದ ಹಾಗೂ ಕರೂಶ ಎಂಬ ಹೆಸರಿನ ದೇಶಗಳ ಗಡಿಯಲ್ಲಿ ನಡೆಯತೊಡಗಿದ ರಾಮಲಕ್ಷ್ಮಣರಿಗೆ ( ವಿಶ್ವಾಮಿತ್ರನು) ಪುನಃ ಹೀಗೆಂದನು.
ಶುಕ್ರಾಚಾರ್ಯನ ಮಗನಾದ ತ್ವಷ್ಟ್ರನೆಂಬವನು ಇಂದ್ರಸಂಹಾರಕ್ಕಾಗಿ ಯಜ್ಞದಿಂದ ಪಡೆದ ಅಸುರನೇ ವೃತ್ರ. ಆದರೆ ಯಜ್ಞದಲ್ಲಿ ಮಂತ್ರದ ಸ್ವರವ್ಯತ್ಯಾಸದಿಂದ ವೃತ್ರನೇ ಇಂದ್ರನಿಂದ ಹತನಾಗುವಂತಾಯಿತು. ಮೂಲತಃ ಬ್ರಾಹ್ಮಣನೂ ಯಜ್ಞಸಂಭವನೂ ಆದ ವೃತ್ರನನ್ನು ಕೊಂದ ಬ್ರಹ್ಮಹತ್ಯಾದೋಷವನ್ನು ಇಂದ್ರ ಮಲದ-ಕರೂಶ ಎಂಬ ಭೂಪ್ರದೇಶದಲ್ಲಿ ನೀಗಿಕೊಂಡ. ಜ್ಞಾನಿಗಳ ಉಪದೇಶವನ್ನು ಕೇಳುವವನು ಅಥವಾ ಮುದಿಯಾದ (ಜೋತುಬೆದ್ದ) ಕಿವಿಗಳುಳ್ಳವನು ಇಂದ್ರ.
ಪ॥ ಯಕ್ಷಃ ಸುಕೇತುರ್ದ್ರುಹಿಣಪ್ರಸಾದಾಲ್ಲೇಭೇ ಸುತಾಂ ಕಾಮಪಿ ತಾಟಕಾಖ್ಯಾಮ್।
ಸುಂದಃ ಕಿಲೈನಾಂ ಪರಿಣೀಯ ತಸ್ಯಾಂ ಮಾರೀಚನೀಚಂ ಜನಯಾಂ ಬಭೂವ॥೩೯॥
ಅನು॥ ಸುಕೇತುವೆಂಬ ಯಕ್ಷನು ಬ್ರಹ್ಮನ ಅನುಗ್ರಹದಿಂದ ತಾಟಕಾ ಎಂಬ ಹೆಸರಿನ ಮಗಳೊಬ್ಬಳನ್ನು ಪಡೆದನು. ಸುನಂದನೆಂಬವನು ಇವಳನ್ನು ಮದುವೆಯಾಗಿ ಅವಳಲ್ಲಿ ಮಾರೀಚನೆಂಬ ನೀಚನೊಬ್ಬನನ್ನು ಹುಟ್ಟಿಸಿದನಂತೆ.
ಗ॥ ಏಕದಾ ಸುಂದೇ ನಿಹತೇ ಮಾರೀಚಃ ಕುಂಭಸಂಭವಮಭಿಭೂಯ ತಸ್ಯ ಶಾಪಾದವಾಪ ಕೌಣಪತಾಮ್। ತಾಟಕಾಪ್ಯ-
ಭೂತ್ಪುರುಷಾದಿನೀ।
ಅನು॥ ಸುಂದ ಕೊಲ್ಲಲ್ಪಡಲು ಮಾರೀಚನೊಮ್ಮೆ ಅಗಸ್ತ್ಯನನ್ನು ಊವಮಾನಿಸಿ ಅವನ ಶಾಪದಿಂದ ರಾಕ್ಷಸತ್ವವನ್ನು ಪಡೆದನು. ಹಾಗೆಯೇ ತಾಟಕಿಯೂ ನರಭಕ್ಷಕಿಯಾದಳು.
ಸುಂದ ನಿಕುಂಭನೆಂಬ ರಾಕ್ಷಸನ ಮಗ. ಉಪಸುಂದ ಇವನ ತಮ್ಮ. ತಿಲೋತ್ತಮೆಯನ್ನು ಮೋಹಿಸಿ ಪರಸ್ಪರ ಹೊಡೆದಾಡಿ ಸುಂದ ಉಪಸುಂದ ಇಬ್ಬರೂ ಮೃತರಾದರು. ಕುಪಣ ಎಂದರೆ ಹೆಣ. ಅದನ್ನು ತಿನ್ನುವವನು ಕೌಪಣ. ಅಸಾಮಾನ್ಯ ಬಲವನ್ನು ಹೊಂದಿದ್ದ ತಾಟಕೆ ತನ್ನ ಮಕ್ಕಳೊಡನೆ ಮದೋನ್ಮತ್ತಳಾಗಿ ಅಗಸ್ತ್ಯಮುನಿಯನ್ನು ಮೋಹಗೊಳಿಸಹೋಗಿ ಅವನಿಂದ ಶಪಿತಳಾಗಿ ಅವಳೂ ಅವಳ ಮಕ್ಕಳೂ ರಾಕ್ಷರಾದರು.
ಗ॥ ಸೇಯಮಬ್ಜಾಸನಸಿದ್ಧಸಿಂಧುರಸಹಸ್ರಪ್ರಾಣಾತ್ಮಜೇನ ಸಹ ಜನಪದವೆಪದಂ ವಿದಧಾನಾ ವ್ಯಾಪಾದನೀಯ ತ್ವಯೇತಿ। ರಾಮಸ್ತಮಾಕರ್ಣ್ಯ ಸ್ತ್ರೀವಧಶಂಕಾಮಕರೋತ್। ಕಿಂಚ, ವೈರೋಚನೀಂ ಮಂಥರಾಂ ವಸುಂಧರಾಪರಾಧಧುರಂಧರಾಂ ಪುರಂದರೇಣ ನಿಹತಾಂ ಜನಾರ್ದನಕೃತಮರ್ದನಾಂ ಚ ಭಾರ್ಗವಜನನೀಂ ಪ್ರದರ್ಶ್ಯ ದಾಶರಥೇರಮಂದಾಂ ಸುಂದವ-
ಧೂವಧವಿಚಿಕಿತ್ಸಾಮುತ್ಸಾರಯಾಮಾಸ।
ಅನು॥ " ಬ್ರಹ್ಮನಿಂದ ಸಾವಿರ ಆನೆಗಳ ಬಲದ ವರವನ್ನು ಪಡೆದು ಲೋಕಕ್ಕೆ ಸಂಕಟವನ್ನೊಡ್ಡುತ್ತಿರುವ ಇಂಥ ತಾಟಕೆಯನ್ನು ಅವಳ ಪುತ್ರನ ಸಹಿತವಾಗಿ ನೀನು ಸಂಹರಿಸು." ರಾಮನು ಅದನ್ನು ಕೇಳಿ ಸ್ರ್ತೀವಧೆಯಾಗುವುದೆಂಬ ಸಂದೇಹವನ್ನು ತೋರಿದನು. ಇಡಿಯ ಭೂಮಂಡಲಕ್ಕೇ ಅಪರಾಧವನ್ನೆಸಗುವುದರಲ್ಲಿ ಅಗ್ರಗಣ್ಯಳಾದ ವಿರೋಚನನೆಂಬವನ ಮಗಳು ಮಂಥರೆ ಇಂದ್ರನಿಂದ ಕೊಲ್ಲಲ್ಪಟ್ಟುದನ್ನು, ಶುಕ್ರಾಚಾರ್ಯನ ತಾಯಿ ವಿಷ್ಣುವಿನಿಂದ ಕೊಲ್ಲಲ್ಪಟ್ಟುದನ್ನು ( ಪರಶುರಾಮಾವತಾರಿಯಾದ ವಿಷ್ಣುವಿನಿಂದ ರೇಣುಕೆ ಕೊಲ್ಲಲ್ಪಟ್ಟುದನ್ನು) ಉದಾಹರಿಸಿ ರಾಮನಲ್ಲಿ ಗಾಢವಾಗಿದ್ದ ತಾಟಕಾಸಂಹಾರದ ಸಂದೇಹವನ್ನು( ವಿಶ್ವಾಮಿತ್ರನು) ದೂರಗೊಳಿಸಿದನು.
ಪ್ರಹ್ಲಾದನ ಸುತನಾದ ವಿರೋಚನನ ಮಗಳು ಮಂಥರೆ ಭೂದೇವಿಯನ್ನು ಸಂಹರಿಸಲು ಹೋಗಿ ಇಂದ್ರನಿಂದ ಹತಳಾದಳು. ಭೃಗುಮಹರ್ಷಿಯಪತ್ನಿಯೂ ಶುಕ್ರಾಚಾರ್ಯನ ತಾಯಿಯೂ ಆದ ಖ್ಯಾತಿ ಎಂಬುವಳು ಇಂದ್ರನನ್ನು ಸಂಹರಿಸಬೇಕೆಂದು ಆಶಿಸಿದಳು. ಆಗ ವಿಷ್ಣು ಇಂದ್ರನ ಸೂಚನೆಯಂತೆ ಅವಳನ್ನು ಸಂಹರಿಸಿದ. ಇವೆರಡೂ ಪುರಾಣೋಲ್ಲೇಖಗಳು ರಾಮಾಯಣದಲ್ಲಿ ಕಂಡು ಬರುತ್ತವೆ. ಭಾರ್ಗವ ಎಂದರೆ ಶುಕ್ರಾಚಾರ್ಯಮತ್ತು ಪರಶುರಾಮ. ಪರಶುರಾಮನು ತಂದೆಯಾದ ಜಮದಗ್ನಿಯ ಆದೇಶದಂತೆ ತಾಯಿ ರೇಣುಕೆಯ ತಲೆಯನ್ನು ಕತ್ತರಿಸಿದ ಕಥೆ ಪ್ರಸಿದ್ಧವಾಗಿದೆ.
ಪ॥ ಆಶ್ರುತಃ ಶ್ರುತವೃತ್ತೇನ ತೇನ ಸುಂದಪ್ರಿಯಾವಧಃ ।
ತಮೇವಾನ್ವವದತ್ತಸ್ಯ ಚಾಪಃ ಶಿಂಜಾರವಚ್ಛಲಾತ್॥೪೦॥
ಅನು॥ ಪೂರ್ವ ವೃತ್ತಾಂತಗಳನ್ನು ಕೇಳಿದ ( ಅಥವಾ ಪ್ರಖ್ಯಾತಚರಿತನಾದ ) ಅವನು ( ರಾಮನು ) ಸುಂದನ ಪ್ರಿಯೆಯ
( ತಾಟಕೆಯ ) ವಧೆಯನ್ನು ಮಾಡೈವೆನೆಂದು ಪ್ರತಿಜ್ಞೆಗೈದನು. ಅವನ ಬಿಲ್ಲು ಕೂಡ ಹೆದೆಯ ಟಂಕಾರದ ನೆವದಿಂದ ಅದನ್ನೇ ಮಾರ್ನುಡಿಯಿತು. ರಾಮ ಪ್ರತಿಜ್ಞೆಯನ್ನು ಮಾಡಿದೊಡನೆಯೇ ಉತ್ಸಾಹದಿಂದ ಧನುಷ್ಟಂಕಾರವನ್ನು ಮಾಡಿದ. ಅದನ್ನು ಕವಿ ಹೀಗೆ ಕಲ್ಪಿಸಿದ್ದಾನೆ.
ಪ॥ ತತ್ಕಾಲೇ ಪಿಶಿತಾಶನಾಶಪಿಶುನಾ ಸಂಧ್ಯೇವ ಕಾಚಿಮ್ಮನೇ-
ರಧ್ವಾನಂ ತರಸಾ ರುರೋಧ ರುಧಿರಕ್ಷೋದಾರುಣಾ ದಾರುಣಾ ।
ಸ್ವಾಧೀನೆ ಹನನೇ ಪುರೀಂ ವಿದಧತೀ ಮೃತ್ಯೋಃ ಸ್ವಕೃತ್ಯಾತ್ಯಯ -
ಕ್ರೀಡತ್ಕಿಂಕರಸಂಘಸಂಕಟಮಹಾಶೃಂಗಾಟಕಾಂ ತಾಟಕಾ॥೪೧॥
ಅನು॥ ಕೊಲ್ಲುವ ಕಾರ್ಯವನ್ನು ತಾನು ಕೈಗೆತ್ತಿಕೊಂಡು ತಾವು ಮಾಡಬೇಕಾದ ಕಾರ್ಯಕ್ಕೆ ಭಂಗವುಂಟಾದುದರಿಂದ ವಿನೋದದಲ್ಲಿ ತೊಡಗಿರುವ ಯಮಕಿಂಕರರ ಸಮೂಹದ ಗುಂಪುಗಳಿಂದ ತುಂಬಿದ ಚತುಷ್ಪಥಗಳಿರುವಂತೆ ಯಮಪುರಿಯನ್ನು ಮಾರ್ಪಡಿಸಿ ರಾಕ್ಷಸರ ಆಹಾರ ( ಸೇವಿಸುವ ಕಾಲ ) ಸೂಚಕಳೋ ಎಂಬಂತಿರುವ ( ರಾಕ್ಷಸರ ವಿನಾಶಸೂಚಕಳಾದ), ಕುಂಕುಮ ಧೂಳಿಯಂತೆ ಕೆಂಪಾಗಿರುವ ( ರಕ್ತ ಮೆತ್ತಿಕೊಂಡು ಕೆಂಪಾಗಿರುವ) ಸಂಧ್ಯಾಕಾಲದಂತೆ ತೋರುವ ಘೋರಳಾದ ತಾಟಕೆಯೆಂಬ ರಾಕ್ಷಸಿಯೊಬ್ಬಳು ಆ ಸಮಯದಲ್ಲಿ ಮಹರ್ಷಿಯ ಮಾರ್ಗವನ್ನು ಒಮ್ಮೆಲೇ ತಡೆದಳು.
ಯಮದೂತರಿಗೆ ಕೆಲಸವೇ ಇಲ್ಲದುದರಿಂದ ಯಮಪುರಿಯ ಬೀದಿಗಳೆಲ್ಲ ವಿನೋದಕ್ರೀಡೆಗಳಲ್ಲಿ ಮಗ್ನರಾದ ಯಮದೂತರಿಂದ ಕಿಕ್ಕಿರಿದು ತುಂಬಿತ್ತು. ರಾಕ್ಷಸರು ಆಹಾರವನ್ನು ಸೇವಿಸುವ ಕಾಲಸೂಚಕಳು ಎಂದರೆ ಸಂಧ್ಯೆ. ರಾಕ್ಷಸರ ನಾಶದ ಸೂಚಕಳು. ಪ್ರಪ್ರಥಮವಾಗಿ ತಾನೇ ರಾಮನಿಂದ ಮರಣಹೊಂದಿ ಮುಂದೆ ರಾಕ್ಷಸಕುಲವೇ ಸಂಹಾರವಾಗಲಿದೆಯೆಂಬುದರ ಸೂಚಕಳು. ರಕ್ತವನ್ನು ಮೆತ್ತಿಕೊಂಡು ಅದು ಒಣಗಿ ಕೆಸರು ಬಳಿದಂತೆ ತಾಟಕೆ ಕೆಂಪಾಗಿದ್ದಳು.
ಪ॥ ಅಥ ದಾಶರಥೇಃ ಕರ್ಣಮವಿಶತ್ತಾಟಕಾಗುಣಃ ।
ತಥಾ ಧನುರ್ಗುಣಸ್ತೂರ್ಣಂ ಪ್ರಾವಿಶತ್ತಜ್ಜಿಘಾಂಸಯಾ॥೪೨॥
ಪ॥ ತತೋ ಭಾವಿನಿ ಸಂಗ್ರಾಮೇ ಬದ್ಧಶ್ರದ್ಧಸ್ಯ ತಾಟಕಾ।
ಸ್ವಪ್ರಾಣಾನ್ ರಾಮಬಾಣಸ್ಯ ವೀರಪಾಣಮಕಲ್ಪಯತ್॥೪೩॥
ಅನು॥ ಆ ಬಳಿಕ ತಾಟಕೆಯ ಘೋರಶಬ್ಧವು ದಾಶರಥಿಯ ಕಿವಿಯನ್ನು ಪ್ರವೇಶಿಸಿತು. ಹಾಗೆಯೇ ಅವಳನ್ನು ಕೊಲ್ಲುವ ಬಯಕೆಯಿಂದ ಬಿಲ್ಲಿನ ಹೆದೆಯು ಕೂಡ ( ರಾಮನ ಕಿವಿಯನ್ನು ) ಬೇಗನೆ ಸಮೀಪಿಸಿತು.
ಅನಂತರ ಮುಂದೆ ಘಟಿಸಲಿರುವ ಘೋರಯುದ್ಧದಲ್ಲಿ ಏಕಾಗ್ರವಾದ ರಾಮನ ಬಾಣಕ್ಕೆ ತನ್ನ ಪ್ರಾಣಗಳನ್ನು ವೀರಪಾನವಾಗಿ ಕಲ್ಪಿಸಿದಳು.
ಪ॥ ಮುನಿರ್ಭೃಶಾಶ್ವೋಪಜ್ಞಾನಿ ತಾಟಕಾಮಾಥಿನೇ ದದೌ।
ಅಸ್ತ್ರಾಣಿ ಜೃಂಭಕಾದೀನಿ ಜಂಭಶಾಸನಶಾಸನಾತ್ ॥೪೪॥
ಅನು॥ ಭೃಶಾಶ್ವನೆಂಬವನಿಂದ ಸಾಕ್ಷಾತ್ಕರಿಸಿಕೊಳ್ಳಲ್ಪಟ್ಟ ಜೃಂಭಕವೇ ಮೊದಲಾದ ಅಸ್ತ್ರಗಳನ್ನು ಇಂದ್ರ ಆದೇಶದ ಮೇರೆಗೆ ವಿಶ್ವಾಮಿತ್ರನು ತಾಟಕಾಸಂಹಾರಿಗೆ ನೀಡಿದನು.
ಕೃಶಾಶ್ವ ಒಂದುನೂರು ಅಸ್ತ್ರಗಳನ್ನು ಸಾಕ್ಷಾತ್ಕರಿಸಿಕೊಂಡಿದ್ದನು. ಅವೆಲ್ಲವೂ ವಿಶ್ವಾಮಿತ್ರನಿಗೆ ಪ್ರಾಪ್ತವಾಗಿದ್ದವು.
ಗ॥ ತತ್ರ ಚಂಚನ ವಿರಿಂಚಿಲೋಕಪ್ರತ್ಯಾದೇಶಂ ಪ್ರದೇಶಂ ಪ್ರದರ್ಶಯನ್ನವೋಚಿತ.
ಅನು॥ ಊಲ್ಲಿ ಬ್ರಹ್ಮಲೋಕವನ್ನೇ ಮೀರಿಸುವಂಥ ಪ್ರದೇಶವೊಂದನ್ನು ತೋರಿಸುತ್ತ ( ವಿಶ್ವಾಮಿತ್ರನು) ನುಡಿದನು.
ಪ॥ ಪ್ರತಿದಿನಮವದಾತೈರ್ಬ್ರಹ್ಮಭಿರ್ಬ್ರಹ್ಮನಿಷ್ಯೈಃ
ಪ್ರಶಮಿತಭವಖೇದೈಃ ಸಾದರಂ ಸೇವ್ಯಮಾನೇ।
ಬಲಿನಿಯಮನಹೇತೋರ್ವಾಮನಃ ಕಾನನೇऽಸ್ಮಿನ್
ಬಲಿನಿಯಮಪರಃ ಸನ್ ಬಹ್ಮಚಾರೀ ಚಚಾರ॥೪೫॥
ಅನು॥ ಸಾಂಸಾರಿಕಕ್ಲೇಶಗಳನ್ನು ನೀಗಿಕೊಂಡ ಬ್ರಹ್ಮಪರಾಯಣರಾದ ಪರಿಶುದ್ಧ ಮನಸ್ಕರಾದ ಬ್ರಹ್ಮರ್ಷಿಗಳಿಂದ ಪ್ರತಿನಿತ್ಯವೂ ಪೂಜ್ಯಭಾವದಿಂದ ಸೇವಿಸಲ್ಪಡುವ ಈ ಅರಣ್ಯಪ್ರದೇಶದಲ್ಲಿ ಪೂಜಾರಿ ವ್ರತನಿಯಮನಾಷ್ಠನಾಗಿ ಬಲಿ
( ಚಕ್ರವರ್ತಿ) ಯನ್ನು ನಿಯಂತ್ರಿಸಲು ಬ್ರಹ್ಮಚಾರಿಯಾದ ವಾಮನನು ಸಂಚರಿಸಿದನು.
ಪ್ರಹ್ಲಾದನ ಮಗನಾದ ವಿರೋಚನ ಎಂಬವನ ಮಗನೇ ಬಲಿ. ರಾಕ್ಷಸನಾದ ಇವನನ್ನು ಇಂದ್ರ ಕೊಂದ. ಶುಕ್ರಾಚಾರ್ಯನ ಮೃತಸಂಜೀವನೀವಿದ್ಯೆಯಿಂದ ಮರಳಿ ಬದುಕಿದ. ಬಳಿಕ ಇಂದ್ರನನ್ನು ಸೋಲಿಸಿ ಅಶ್ವಮೇಧಯಾಗಕ್ಕೆ ತೊಡಗಿದಾಗ ವಿಷ್ಣು ಅದಿತಿದೇವಿಯಲ್ಲಿ ವಾಮನ ರೂಪದಿಂದ ಅವತರಿಸಿ ಅವನನ್ನು ಭೂಲೋಕದಿಂದ ಪಾತಾಳಕ್ಕೆ ಅದುಮಿದ. ಬಲಿ ಎಂದರೆ ನೈವೇದ್ಯ, ಶೌಚ, ಸಂತೋಷ, ತಪಸ್, ಸ್ವಾಧ್ಯಾಯ, ಈಶ್ವರಪ್ರಣಿದಾನ ಎಂದೂ ಅರ್ಥಗಳಿವೆ.
ಪ॥ ಅಪಹೃತವಿಬುಧಾರ್ತೇರ್ವಾಮನಸ್ಯಾಜಮೂರ್ತೇ-
ರಖಿಲಭುವನಭಿಕ್ಷೋರಾಶ್ರಮಾನೋಕಹಾನಾಮ್।
ತತಿರಿಯಮತಿನೀಲಾ ವ್ಯಾಪ್ತದಿಗ್ವ್ಯೋಮಸೀಮಾ
ಸ್ವಯಮಪಿ ಪರಿಮಾತುಂ ಲೋಕಮಭ್ಯುದ್ಯತೇವ॥೪೬॥
ಅನು॥ಅನಾದಿಚೈತನ್ಯದ ಮೂರ್ತಿಯಾದ, ತ್ರಿಲೋಕಗಳನ್ನೇ ಭಿಕ್ಷೆಯಾಗಿ ಬೇಡಿದ, ದೇವತೆಗಳ ಸಂಕಟವನ್ನು ನೀಗಿದ ವಾಮನನ ಆಶ್ರಮದಲ್ಲಿ ದಿಕ್ ವ್ಯೋಮಗಳ ಪರಿಧಿಯನ್ನು ಆವರೆಸಿದ ತರುಗಳ ಈ ಅತಿಕಪ್ಪಾದ ನೆರಳಿನ ಸಾಲು ತಾನೇ ಲೋಕದ ( ಅಂಚನ್ನು ) ಅಳತೆಮಾಡಲು ಹೊರಟಂತಿದೆ.
ವ್ಯೋಮವನ್ನು ವ್ಯಾಪಿಸಿದ ವಾಮನ ಪಾದದ ಕ್ರಿಯೆಯನ್ನು ತರುಗಳ ನೀಲಚ್ಛಾಯೆ ತಾನೇ ಮಾಡಹೊರಟಂತಿದೆ. ನೆರಳು ಪಾದದಂತಿದೆ ಎಂಬ ಔಪಮ್ಯ ಸೂಚಿತವಾಗಿದೆ. ( ರಾಮಾಯಣದ ಅತಿವಿಸ್ತೃತ ಕಥಾನಕವನ್ನು ಕಾವ್ಯದಲ್ಲಿ ಹಿಡಿಯುತ್ತ ಆ ಸೀಮಿತ ಪರಿಧಿಯಲ್ಲೇ ಪ್ರಕೃತಿಯನ್ನು ಕುರಿತ ಅಸೀಮ ಆಸಕ್ತಿಯನ್ನು ನಮ್ಮ ಪ್ರಾಚೀನ ಕವಿಗಳು ಪ್ರದರ್ಶಿಸುವ ಪರಿಯನ್ನು ಗಮನಿಸಿ. ಅವರ ನೈಜ ಕಾವ್ಯಶಕ್ತಿ ಪ್ರಕೃತಿವರ್ಣನೆಯಲ್ಲಿ ಉತ್ಕಟವಾಗುತ್ತದೆ ಎಂಬುದೂ ಗಮನಾರ್ಹ)
ಪ॥ ಇತಿ ವಿವಿಧರಸಾಭಿಃ ಕೌಶಿಕವ್ಯಾಹೃತಾಭಿಃ
ಶ್ರುತಿಪಥಮಧುರಾಭಿಃ ಪಾವನೀಭಿಃ ।
ಗಲಿತಗಹನಕೃಚ್ಛ್ರಂ ಗಚ್ಛತೋರ್ದಾಶರಥ್ಯೋಃ
ಸಮಕುಚದಿವ ಸದ್ಯಸ್ತಾದೃಶಂ ಮಾರ್ಗದೈರ್ಘ್ಯಮ್॥೪೭॥
ಅನು॥ ಹೀಗೆ ವಿಶ್ವಮಿತ್ರನು ಹೇಳುತ್ತಿರಲು ವಿವಿಧ ಭಾವಗಳಿಂದ ಸಂಪನ್ನವಾದ ಕರ್ಣಮನೋಹರವಾದ ಪಾವನಚರಿತೆಗ-
ಳಿಂದ (ಅರಣ್ಯದಲ್ಲಿ) ನಡೆಯುತ್ತಿರುವ ರಾಮಲಕ್ಷ್ಮಣರ ವನಗಮನಸಂಕಟವು ನೀಗಿ ಅಷ್ಟೊಂದು ಮಾರ್ಗದೂರವೂ ಒಮ್ಮೆಲೇ ಹ್ರಸ್ವವಾಯಿತೋ ಎಂಬಂತಾಯಿತು.
ಗ॥ ತತಃ ಸಿದ್ಧಾಶ್ರಮಂ ಪ್ರವಿಶ್ಯ ವಿಶ್ವಾಮಿತ್ರಃ ಸತ್ರಮಾರಭತ। ತದನಂತರಮಂತರಿಕ್ಷಾಂತರಾ-
ಲಾದಾಪತಂತಮಂತಕಾನೀಕಭಯಾನಕಂ ತಂ ಪಲಾಶಗಣಮವಲೋಕ್ಯ ಪಲಾಯಮಾನಾಃ ಕರಗಲಿತ ಸಮಿತ್ಕುಶಾಃ ಕುಶಿಕನಂದನಾಂತೇವಾಸಿನಃ ಸಸಂಭ್ರಮಮಭಿಲಷಿತಾಹವಾಯ ರಾಘವಾಯ ನ್ಯವೇದಯನ್।
ಅನು॥ ಬಳಿಕ ಸಿದ್ಧಾಶ್ರಮವನ್ನು ಪ್ರವೇಶಿಸಿ ವಿಶ್ವಾಮಿತ್ರನು ಯಜ್ಞವನ್ನು ಆರಂಭಿಸಿದನು. ಅನಂತರ ಆಕಾಶದೊಳಗಿನಿಂದ ಅಂತಕನ ಸೈನ್ಯದಷ್ಟು ಘೋರವಾದ ರಾಕ್ಷಸಸಮೂಹ ಎರಗುತ್ತಿರುವುದನ್ನು ಕಂಡು ಕೈಗಳಲ್ಲಿ ಹಿಡಿದ ಸಮಿಧದರ್ಬೆಗಳನ್ನು ಬಿಸುಟು ವಿಶ್ವಾಮಿತ್ರನ ಶಾಷ್ಯರೆಲ್ಲ ಪಲಾಯನಮಾಡುತ್ತ ಯುದ್ಧಾಕಾಂಕ್ಷಿಯಾದ ರಾಮನಲ್ಲಿ ಗಾಬರಿಯಿಂದ ನಿವೇದಿಸಿಕೊಂಡರು.
ಪ॥ ಹೃತ್ವಾದ್ರೇಃ ಶಿಖರಾಣಿ ತಾನಿ ಪರಿತಃ ಕ್ಷಿಪ್ತ್ವಾ ಹಸಿತ್ವಾಕ್ರುಧಾ
ಕೃತ್ವಾ ಹಸ್ತವಿಘಟ್ಟನಂ ತತ ಇತಃ ಸ್ಥಿತ್ವಾ ನಟಿತ್ವಾ ಮುಹುಃ।
ಸಿಕ್ತ್ವಾ ಕ್ಷ್ಮಾಮಸೃಜಾ ಸ್ರಜಾಂತ್ರಕೃತಯಾ ಬದ್ಧ್ವಾ ಕಚಾನ್ ಖೇಚರಾನ್
ದಗ್ಧ್ವಾಗ್ನೇಃ ಸದೃಶಾ ದೃಶಾ ನಿಶಿಚರಾ ರುಂಧಂತಿ ರಂಧ್ರಂ ದಿವಃ॥೪೮॥
ಅನು॥ ಪರ್ವತದ ಶಿಖರಗಳನ್ನು ತಂದು ಅವುಗಳನ್ನು ಸುತ್ತಮುತ್ತೆಲ್ಲ ಬಿಸುಟು, ಅಟ್ಟಹಾಸವನ್ನು ಮಾಡುತ್ತ, ಸಿಟ್ಟಿನಿಂದ ಗಟ್ಟಿಯಾಗಿ ಚಪ್ಪಾಳೆ ತಟ್ಟುತ್ತಾ, ಇಲ್ಲಿ ಅಲ್ಲಿ ನಿಲ್ಲುತ್ತ. ಮತ್ತೆ ಮತ್ತೆ ನರ್ತಿಸುತ್ತ. ಭೂಮಿಯನ್ನು ರಕ್ತದಿಂದ ತೋಯಿಸುತ್ತ ಕರುಳುಗಳ ಮಾಲೆಗಳಿಂದ ಕೂದಲುಗಳನ್ನು ಬಿಗಿದುಕೊಂಡು, ಬೆಂಕಿಯಂತಹ ನೋಟಗಳಿಂದ ಆಕಾಶಮಾರ್ಗಿಗಳನ್ನು ಸುಡುತ್ತ ಈ ರಾಕ್ಷಸರು ನಭೋಮಂಡಲದ ಅಂತರಾಳವನ್ನೇ ಆವರಿಸಿಕೊಂಡಿದ್ದಾರೆ.
ಪ॥ ತತ್ರ,
ಸಂಕ್ರಾಂತವರ್ಣಾಂತರಗಾಧಿಸೂನೋಃ ಸಂಪರ್ಕಪುಣ್ಯಾದಿವ ರಾಮಭದ್ರಃ।
ಕ್ಷಾತ್ರಕ್ರಮಾತ್ಪಿಪ್ಪಲದಂಡಯೋಗ್ಯಃ ಪಲೃಶದಂಡಾಹೃತಪಾಣಿರಾಸೀತ್॥೪೯॥
ಅನು॥ ಹೀಗಿರಲು, ಕ್ಷತ್ರಿಯರಿಗೆ ಸಮುಚಿತವಾದ ಅಶ್ವತೂಥದ ದಂಡವನ್ನು ಹಿಡಿಯಲು ಅರ್ಹನಾಗಿದ್ದ ಶ್ರೀರಾಮನು ಅನ್ಯವರ್ಣಕ್ಕೆ ಸಂಕ್ರಮಿತನಾದ ವಿಶ್ವಾಮಿತ್ರನ ಸಾನ್ನಿಧ್ಯದ ಪುಣ್ಯದಿಂದ ಪಲಾಶದಂಡವನ್ನು ಹಿಡಿಯಲು( ರಾಕ್ಷಸರನ್ನು ದಂಡಿಸಲು ) ಉತ್ಸುಕವಾದ ಕೈಗಳನ್ನು ಹೊಂದಿದನು.
ಕ್ಷತ್ರಿಯರಿಗೆ ಉಪನಯನದ ಸಂದರ್ಭದಲ್ಲಿ ಆಲ ಅಥವಾ ಅಶ್ವತ್ಥದ ದಂಡವನ್ನು ಹಿಡಿಸುತ್ತಾರೆ. ಬ್ರಾಹ್ಮಣರು ಪಲಾಶ( ಮುತ್ತುಗ) ಅಥವಾ ಬಿಲ್ವದ ದಂಡವನ್ನು ಹಿಡಿಯುತ್ತಾರೆ. ಕವಿ ಇಲ್ಲಿ ಪಲಾಶ ಪದವನ್ನು ಎರಡು ಅರ್ಥಗಳಲ್ಲಿ ಪ್ರಯೋಗಿಸಿ ಚಮತ್ಕರಿಸಿದ್ದಾನೆ. ಮೊದಲು ಪಿಪ್ಪಿಲದಂಡವನ್ನು ಹಿಡಿದಿದ್ದ ಕ್ಷತ್ರಿಯನಾಗಿದ್ದ ಗಾಧಿಸುತ ಬಳಿಕ ಬ್ರಾಹ್ಮಣ್ಯವನ್ನು ಸಂಪಾದಿಸಿ ವಿಶ್ವಾಮಿತ್ರನಾಗಿ ಪಲಾಶದಂಡವನ್ನು ಹಿಡಿದನು. ( ಈಗ ಅವನೂ ಪಲಾಶ-ರಾಕ್ಷಸರ- ದಂಡನೆಗಾಗಿಯೇಹೆಣಗುತ್ತಿದ್ದಾನೆ. ) ಊವನ ಸಂಪರ್ಕದಿಂದ ಕ್ಷತ್ರಿಯನಾದ ರಾಮನೂ ಪಲಾಶದಂಡವನ್ನು ಹಿಡಿಯಲು ಉತ್ಸುಕನಾಗಿದ್ದಾನೆ.ಮಾಂಸ ಭಕ್ಷಕರಾದ ರಾಕ್ಷಸರು. ಅವರನ್ನು ದಂಡಿಸಲು ಉತ್ಸುಕನಾಗಿದ್ದಾನೆ ಎಂದು ಭಾವ.
ಪ॥ ಮಾರೀಚನೀಚಮತಿರಾಹವಮಾರಚಯ್ಯ
ಕ್ಷಿಪ್ತಃ ಕ್ಷಣೇನ ರಘುನಾಯಕಸಾಯಕೇನ ।
ಮಧ್ಯೇಪಯೋನಿಧಿ ಭಯೇನ ನಿಮಗನಮೂರ್ತಿ-
ರ್ವೇಷಂ ಪುಪೋಷ ಜಲಮಾನುಷನೆರ್ವಿಶೇಷಮ್॥೫೦॥
ಅನು॥ ಕ್ಷುದ್ರಬುದ್ಧಿಯ ಮಾರೀಚನು ( ರಾಮನ ಜೊತೆ) ಯುದ್ಧದಲ್ಲಿ ತೊಡಗಿ ರಾಮಬಾಣದಿಂದ ಕ್ಷಣಮಾತ್ರದಲ್ಲಿ ಕಡಲ ನಡುವೆ ಎಸೆಯಲ್ಪಟ್ಟು ಭಯದಿಂದ (ನೀರಿನಲ್ಲಿ) ದಂಹವನ್ನು ಮುಳುಗಿಸಿಕೊಂಡವನಾಗಿ ಜಲಮಾನವನನ್ನು ಹೋಲುವ ವೇಷವನ್ನು ಧರಿಸಿದನು.
ರಾಮನಂತಹ ಮಹಾವೀರನ ಜೊತೆ ತಾನು ಹೋರಾಡಲು ಅರ್ಹನೇ ಅಲ್ಲವೇ ಎಂದೂ ವಿವೇಚಿಸದಿರುವುದು ಕ್ಷುದ್ರಬುದ್ಧಿ.
ಪ॥ ಸುಬಾಹುರಾಹವೋನ್ಮತ್ತಃ ಕೃತ್ತಃ ಕಾಕುತ್ಥ್ಸ ಪತ್ರಿಣಾ।
ಮುನೀನಾಮನಭಿಪ್ರೇತಃ ಪ್ರೇತನೃಥಾತಿಥಿಃ ಕೃತಂ॥೫೧॥
ಅನು॥ ಸಾಧುಗಳು ನಿಂದಿಸುವ ಸುಬಾಹುವು ಯೈದ್ಧೋನ್ಮತ್ತನಾಗಿ ರಾಮಬಾಣದಿಂದ ಕತ್ತರಿಸಲ್ಪಟ್ಟು ಯಮರಾಜನ ಅತಿಥಿಯಾದನು.
ಪ॥ ವಂಶಸ್ಪೃಶಾ ಹೃದಯಹಾರಿಫಲಾನ್ವಿತೇನ
ರೃಮೇರಿತೇನ ಸಹಸಾ ಸಹಸಾಯಕೇನ।
ಸ್ನೇಹಾರ್ದಿತೇನ ನಿರಗಾದನುರಾಗಿಣೀವ
ಪ್ರಾಣಾವಲಿರ್ಹೃದಯತಃ ಪಿಶಿತಾಶನಾನಾಮ್॥೫೨॥
ಅನೈ॥ ಬಿದಿರಿನಿಂದ ಮಾಡಲ್ಪಟ್ಟ ( ಸದ್ವಂಶದಲ್ಲಿ ಜನಿಸಿದ ), ಎದೆಯನ್ನು ಸೀಳುವ ಪರಿಣಾಮದಿಂದ ಕೂಡಿದ
(ಹೃದಯವನ್ನು ಅಪಹರಿಸೈವಂತಹ), ರಾಮನಿಂದ ಪ್ರಯೋಗಿಸಲ್ಪಟ್ಟ ( ಬೇರೊಬ್ಬಳು ಹೆಣ್ಣಿನಿಂದ ಪ್ರೇರಿತನಾದ) ತೈಲಾದಿಗಳಿಂದ ಸಂಸ್ಕರಿಸಲ್ಪಟ್ಟ ( ಅಥವಾ ಪ್ರಯೋಗಿಸಿದ ಬಳಿಕ ರಾಕ್ಷಸರ ರಕ್ತದ ಜಿಡ್ಡಿನಿಂದ ಕೂಡಿದ ಅಥವಾ ಪ್ರೇಮಪೂರ್ಣವಾದ) ಬಾಣದ ಜೊತೆ ( ನೃಯಕನ ಜೊತೆ) ರಾಕ್ಷಸರ ಪ್ರಾಣಪಂಕ್ತಿಯು ಅನೈರಾಗಿಣಿಯಂತೆ ಒಮ್ಮೆಲೇ ಎದೆಯಾಳದಿಂದ ಹೊರಟುಹೋಯಿತು.
ಬೀಭತ್ಸ-ಭಯಾನಕ ರಸಗಳ ಜೊತೆ ಶೃಂಗಾರವನ್ನು ಬೆಸೆದ ಕವಿಯ ಕೌಶಲ ಅಪೂರ್ವವಾಗಿದೆ. ಒಳ್ಳೆಯ ವಂಶದಲ್ಲಿ ಜನಿಸಿದ, ಕಾಣಿಕೆಗಳನ್ನು ತಂದ, ಸಖಿಯೊಬ್ಬಳು ಕಳುಹಿದ ಪ್ರೇಮಿಯ ಜೊತೆ ಪ್ರಿಯತಮೆಯು ಓಡಿಹೋಗುವಂತೆ ರಾಕ್ಷಸರ ಪ್ರಾಣಗಳು ಹೊರಹೋದವು ಎಂದು ಭಾವ. ಬಾಣನಿರ್ಗಮನ ಎಂಬ ಕಾರಣ ಪ್ರಾಣನಿರ್ಗಮನ ಎಂಬ ಕಾರ್ಯ ಇವೆರಡೂ ಏಕಕಾಲದಲ್ಲಿ ಉಂಟಾಗಿದೆಯೆಂದು ವರ್ಣಿತವಾಗಿದೆ.
ಪ॥ ಅಥ ನಿಶಿಚರಮಾಥಾದ್ವೀತವೈತಾನವಿಘ್ನೋ
ಮುನಿರವಭೃಥಕೃತ್ಯಂ ವಿಶ್ವಹೃದ್ಯಂ ಸಮಾಪ್ಯ।
ಅಮನುತ ಜಯಲಕ್ಷ್ಮ್ಯಾ ರಾಮಮಾಜೌ ಸಮೇತಂ
ಯಜನಜನಿತಮೂರ್ತ್ಯಾ ಯೋಕ್ತುಮವ್ಯಾಜಲಕ್ಷ್ಮ್ಯಾ॥೫೩॥
ಅನು॥ ಆ ಬಳಿಕ ರಾಕ್ಷಸಸಂಹಾರದಿಂದ ಯಜ್ಞಬಾಧೆಗಳನ್ನು ನೀಗಿಕೊಂಡ, ಲೋಕಕ್ಕೆ ಸಂತಸವನ್ನು ನೀಡುವ ಅವಭೃಥವೇ ಮುಂತಾದ ಕಾರ್ಯಗಳನ್ನು ಮುಗಿಸಿ, ವಿಶ್ವಾಮಿತ್ರನು ಯುದ್ಧದಲ್ಲಿ ಆಗಲೇ ಜಯಲಕ್ಷ್ಮಿಯ ಜೊತೆಗೂಡಿದ್ದ ಶ್ರೀರಾಮನನ್ನು ಯಜ್ಞದಲ್ಲಿ ಮೂಡಿದ ಮಾನುಷಾಕೃತಿಯುಳ್ಳ ನಿಜವಾದ ಲಕ್ಷ್ಮಿಯ ಜೊತೆ ಜೋಡಿಸಲು ಇಚ್ಛಿಸಿದನು.
ಜಯಲಕ್ಷ್ಮಿ, ರಾಜ್ಯಲಕ್ಷ್ಮೀ ಮುಂತಾದವು ಬೇರೆ ಬೇರೆ ಉದ್ದೇಶದಿಂದ ರೂಪುಗೊಂಡ ಅಮೂರ್ತ- ಲಕ್ಷ್ಮಿಗಳು. ಆದರೆ ಜನಕನ ಯಜ್ಞಸಂಭವೆಯಾದವಳು ಮೂರ್ತರೂಪಳಾದ ನಿಜವಾದ ಮೂಲಲಕ್ಷ್ಮಿ.ಅವಳೇ ಸೀತಾ.
ಗ॥ ಅಥ ಮಿಥಿಲಾಂ ಪ್ರತಿ ಪ್ರಸ್ಥಿತಃ ಕೌಶಿಕಃ ಕಾಕುತ್ಸ್ಥ ಮಿತ್ಥಮಕಥಯತ್। ಪುರಾ ಖಲು ಕುಶೇಶಯಾಸನಜನ್ಮಾ ಕುಶಾಭಿಧಾನೋ ರಾಜರ್ಷಿಃ ಕುಶಾಂಬಪ್ರಮುಖೈಶ್ಚತುರ್ಭಿಃ ಕೌಶಾಂಬೀ ಮಹೋದಯಧರ್ಮಾರಣ್ಯಗಿರಿವ್ರಜಾಖ್ಯಾನಾಂ ಪುರೀಣಾಂ ಕರ್ತೃಭಿಶ್ಚ ಪುತ್ರೀ ಬಭೂವ। ಕುಶನಾಭಸ್ತು ಘೃತಾಚ್ಯಾಂ ಕನ್ಯಾಶತಮಜನಯತ್। ಕನ್ಯಾಸ್ತಾಃ ಸನ್ನದ್ಧಯೌವನಾಃ ಕಾಮಯಮಾನಃ ಪವಮಾನಃ ಪ್ರತ್ಯಾಖ್ಯಾನಾಪ್ಪ್ರತ್ಯಾಪನ್ನಮನ್ಯುರಾಸಾಮವಯವೇಷ್ವನಾರ್ಜವಮತನುತ। ಅಥ ವಿದಿತವೃತ್ತಾಂತೇನ ಕುಶನಾಭೇನ ತೇನ ಕ್ಷಮಾಮೇವ ಪ್ರತಿಕ್ರಿಯಾಂ ಮಾನ್ಯಮಾನೇನ ಚೂಲಿಸೂನವೇ ಸೌಮದೇಯಾಯ ರಾಜ್ಞೇ ಬ್ರಹ್ಮದತ್ತಾಯ ದತ್ತಾಸ್ತಾಃ ಪ್ರಕೃತಿಸ್ಥಾ ಬಭೂವುಃ। ಪುನರಪಿ ಕುಶನಾಭಸ್ತು ಪುತ್ರೀಯನ್ವಿತುಃ ಪ್ರಸಾದಾದಗಾಧಸತ್ತ್ವಾನ್ ಗಾಧಿಸಂಜ್ಞಾನಸ್ಮತ್ತಾತಪಾದಾನುದಪಾದಯತ್।
ಅನು॥ ಅನಂತರ ಮಿಥಿಲೆಯತ್ತ ಹೊರಟ ವಿಶ್ವಾಮಿತ್ರನು ರಾಮಚಂದ್ರನಿಗೆಹೀಗೆಂದು ನುಡಿದನು: ಬಹು ಹಿಂದೆ ಬ್ರಹ್ಮನಿಂದ ಜನಿಸಿದ ಕುಶನೆಂಬ ಹೆಸರಿನ ರಾಜರ್ಷಿಯು ಕೌಶಾಂಬೀ, ಮಹೋದಯ, ಧರ್ಮಾರಣ್ಯ ಹಾಗೂ ಗಿರಿವ್ರಜ ಎಂಬ ನಗರಿಗಳನ್ನು ನಿರ್ಮಿಸಿದ ಕುಶಾಂಬ ಮುಂತಾದ ನಾಲ್ವರು ಪುತ್ರರಿಗೆ ತಂದೆಯಾದನು. ( ಅವರಲ್ಲೊಬ್ಬನಾದ ) ಕುಶನಾಭನಿಗೆ ಘೃತಾಚಿಯಲ್ಲಿ ನೂರು ಕುಮಾರಿಯರು ಜನಿಸಿದರು. ಯುವತಿಯರಾದ ಆ ಕನ್ಯೆಯರನ್ನು ವಾಯುದೇವನು ಮೋಹಿಸಲು ಅವರಿಂದ ತಿರಸ್ಕೃತನಾದುದರಿಂದ ಉಂಟಾದ ಕ್ರೋಧದಿಂದ ಅವರೆಲ್ಲರ ಅವಯವಗಳು ಸೊಟ್ಟಗಾಗುವಂತೆ ಮಾಡಿಬಿಟ್ಟನು. ಆ ಬಳಿಕ ಈ ವೃತ್ತಾಂತವನ್ನು ತಿಳಿದ ಕುಶನಾಭನು ಸಹನೆಯೇ ಯೋಗ್ಯವಾದ ಪ್ರತೀಕಾರವೆಂದು ತಿಳಿದು ಚೂಲಿ ಎಂಬ ಮಹರ್ಷಿಯಿಂದ ಸೋಮದಾ ಎಂಬವಳಲ್ಲಿ ಜನಿಸಿದ ಬ್ರಹ್ದದತ್ತ ಎಂಬವನಿಗೆ ವಿವಾಹ ಮಾಡಿಕೊಟ್ಟನು. ಅದರಿಂದ ಆ ಕುಮಾರಿಯರು ಮೊದಲಿನಂತೆ ಆದರು. ಪುನಃ ಕುಶನಾಭನು ಪುತ್ರನನ್ನು ಬಯಸಿ ತನ್ನ ತಂದೆಯ ಅನುಗ್ರಹದಿಂದ ಅಗಾಧ ಸತ್ತ್ವಶಾಲಿಯಾದ "ಗಾಧಿ" ಎಂಬ ನಮ್ಮ ತಂದೆಯನ್ನು ಪಡೆದನು.
ಕಮಲವನ್ನು ಆಸನವಾಗಿಹೊಂದಿದವನು ಬ್ರಹ್ಮ. ಅವನಿಂದ ಜನಿಸಿದವನು ಕುಶ. ಮಿಥಿಲೆಯತ್ತ ಪಯಣಿಸುವಾಗ ಮಾರ್ಗಮಧ್ಯೆ ಎದುರಾದ ಭೂಪ್ರದೇಶದ ಇತಿಹಾಸವನ್ನು ತಿಳಿಸಿ ಎಂದು ರಾಮ ವಿನಂತಿಸಿದಾಗ ವಿಶ್ವಾಮಿತ್ರ ವಿವರಿಸ-
ತೊಡಗುತ್ತಾನೆ. ಕುಶನಾಭನ ಕನ್ಯೆಯರು ವಿಕೃತರೂಪಿಗಳಾಗಿ ಕುಬ್ಜೆಯರಾದ ಪ್ರದೇಶವನ್ನೇ "ಕನ್ಯಾಕುಬ್ಜ" ಎನ್ನುತ್ತಾರೆ.
ಗ॥ ದಾಶರಥಿಃ ಕೌಶಿಕೋತ್ಪತ್ತಿಕಥಾನಿಶಮನನಿರಾಯಾಮಯಾಮಿನೀಯಾಮಾನುಬಂಧೋಬಂಧೂಕಸ್ತಬಕಸುಂದರ-
ಬಂಧುರೇಣ ಸಂಧ್ಯಾರಾಗೇಣ ಪ್ರಾಚೀಮುಖೇನ ಶೋಣೀಕೃತೇನ ಶೋಣಾಭಿಧಾನಂ ದಧಾನೇನ ನದೇನ ಪ್ರವರ್ತಿತಪ್ರ-
ತ್ಯೂಷಕೃತ್ಯಃ ಕೃತನಿಯಮೇನ ಮುನಿನಾ ಸಹ ಗಂಗಾಮುಪತಿಷ್ಠಮಾನೇನ ಪಥಾ ಪ್ರಾತಿಷ್ಠತ।
ಅನು॥ ಈ ರೀತಿಯಲ್ಲಿ ಕೌಶಿಕನ ಜನ್ಮೇತಿಹಾಸವನ್ನು ಕೇಳುತ್ತ ರಾತ್ರಿಯ ಪ್ರಹರಗಳೆಲ್ಲ ಸಂಕುಚಿತವಾದಂತೆ ಅನಿಸಿದ ದಾಶರಥಿಯು ದಾಸವಾಳಹೂಗಳ ರಾಶಿಯಂತೆ ಮನೋಹರವಾಗಿಯೂ ಕಡುಗೆಂಪಾಗಿಯೂ ಇರುವ ಪ್ರಾತಃಸಂಧ್ಯೆಯಿಂದ ಪೂರ್ವದಿಕ್ಕು ಕೂಡಿರಲು(ಅದರಿಂದಲೇ) ಕೆಂಬಣ್ಣವನ್ನು ಹೊಂದಿದ "ಶೋಣಾ" ಎಂಬ ಹೆಸರಿನ ನದಿಯಲ್ಲಿ ಪ್ರಾತರ್ವಿಧಿಗಳನ್ನು ನೆರವೇರಿಸಿ, ಆಹ್ನಿಕಗಳನ್ನು ಮುಗಿಸಿದ ಮಹರ್ಷಿಯ ಜೊತೆ ಗಂಗಾನದಿಯತ್ತ ತೆರಳುವ ಮಾರ್ಗದಲ್ಲಿ ಚಲಿಸಿದನು.
ಆಯಾಮ- ದೀರ್ಘತೆ, ಅದಿಲ್ಲದಿರುವುದು ನಿರಾಯಾಮ. ಯಾಮಗಳನ್ನು ಹೊಂದಿದ್ದು ಯಾಮಿನೀ. ಯಾಮಿನಿಗೆ ಸಂಬಂಧಿಸಿದ್ದು ಯಾಮಿನೀಯ. ಯಾಮ ಅಥವಾ ಪ್ರಹರಗಳೆಂದೇ ಅರ್ಥ. ರಾತ್ರಿಯು ಮೂರು ಪ್ರಹರ ಅಥವಾ ಯಾಮ(ಜಾವ ) ಗಳನ್ನು ಹೊಂದಿದೆ ( ೭•೩೦-೧೦•೩೦, ೧೦•೩೦-೧•೩೦, ೧•೩೦-೪•೩೦ ಗಂಟೆಯವರೆಗೆ ಮೂರು ಜಾವಗಳು ) ಪಶ್ಚಿಮಾಭಿಮುಖವಾಗಿ ಹರಿಯುವ ಹೊಳೆಗೆ ನದ ಎನ್ನುವರು. ವಿಶ್ವಾಮಿತ್ರನ ಅಕ್ಕ ಸತ್ಯವತಿ ಎಂಬವಳು ಋಚೀಕ ಎಂಬಭೃಗುವಂಶ ಋಷಿಯ ಪತ್ನಿ. ಋಚೀಕ ಕಾಲಾನಂತರ ಮೃತನಾಗಲು ಈಕೆಯೂ ಸಶರೀರೆಯಾಗಿ ಸ್ವರ್ಗಕ್ಕೆ ತೆರಳಿದಳು. ಬಳಿಕ ಲೋಕದ ಅಪೇಕ್ಷೆಯಿಂದ ತೀರ್ಥರೂಪದಲ್ಲಿ ಭೂಮಿಯಲ್ಲಿ ಪ್ರವಹಿಸಿದಳು.ಕೌಶಿಕೀ ಎಂಬುದೂ ಈ ನದಿಯ ನಾಮಾಂತರ.
ಪ॥ ಆಜಾನಪಾವನಕ್ಷೀರಾಂ ವೃಷಾನಂದವಿಧಾಯಿನೀಮ್।
ಶ್ರುತಿಪ್ರಣಯಿನೀಂ ಸೋऽಯಮಾಪಗಾಮಾಪ ಗಾಮಿವ॥೫೪॥
ಅನು॥ ಸ್ವಭಾವತಃ ಪವಿತ್ರಕ್ಷೀರ( ಜಲ ಹಾಗೂ ಹಾಲು ) ವನ್ನು ಹೊಂದಿದ, ವೃಷ ( ಧರ್ಮ ಹಾಗೂ ವೃಷಭ ) ಕ್ಕೆ ಆನಂದವನ್ನುಂಟುಮಾಡುವ ಶ್ರುತಿಪ್ರಿಯಳಾದ ( ಕಿವಿಗೆ ಇಂಪಾದ ಕಲಕಲನಾದವನ್ನು ಮಾಡುತ್ತ ಪ್ರವಹಿಸುವ ಅಥವಾ ವೇದಗಳಲ್ಲಿ ಘೋಷಿತ ಮಹಿಮೆಯನ್ನು ಹೊಂದಿದ) ಗಂಗಾನದಿಯನ್ನು ಹಸುವನ್ನೋ ಎಂಬಂತೆ ಆ ಶ್ರೀರಾಮನು ಸಮೀಪಿಸಿದನು.
ಗ॥ ಅಥ ಭಾಗೀರಥೀಕಥಾಂ ಶ್ರೋತುಕಾಮಾಯ ರಾಮಾಯ ಭಗವಾನಿದಮಭಾಷತ।
ಅನು॥ ಬಳಿಕ ಭಾಗೀರಥಿಯ ಕಥೆಯನ್ನು ಕೇಳಬಯಸಿದ ಶ್ರೀರಾಮನಿಗೆ ವಿಶ್ವಾಮಿತ್ರನು ಹೀಗೆಂದನು.
ಪ॥ ಪುರಾ ಮನೋರಮಾ ನಾಮ ಸುಮೇರೋರಭವತ್ಸುತಾ।
ಗೃಹಮೇಧೀ ತಯೈವಾಸೀಚ್ಚಕ್ರವರ್ತೀ ಧರಾಭೃತಾಮ್॥೫೫॥
ಕನ್ಯಾದ್ವಯಮಮುಷ್ಯಾಸೀದೇಕಾ ಮಂದಾಕಿನೀತಯೋಃ।
ಅನ್ಯಾ ಭಗವತೀ ಸಾಕ್ಷಾಚ್ಚಂದ್ರಚೂಡಕುಟುಂಬಿನೀ॥೫೬॥
ತಾಂ ನದೀಂ ವಿಬುಧಾ ಲಬ್ಧ್ವಾನಾಕಲೋಕಮನೀನಯನ್।
ತಪಸ್ಯಂತೀಂ ಗಿರಿರ್ಗೌರೀಂ ದೇವಾಯ ಮಹತೇ ದದೌ॥೫೭॥
ಶಿವಯೋರ್ಯುಂಜತೋರ್ವೀಯಂ ದೃಷ್ಟ್ವಾ ಧಾತ್ರ್ಯಾಂ ಸಮರ್ಪಿತಾಮ್।
ಪಾವಕಃ ಪ್ರತಿಜಗ್ರಾಹ ದೈವತೈರನುನಾಥಿತಃ॥೫೮॥
ಅನಪತ್ಯಾನಥಾಮರ್ತ್ಯಾನ್ಬಹುಭಾರ್ಯಾಂ ಚ ಮೇದಿನೀಮ್।
ಅಕರೋದಂಬಿಕಾಕ್ರೋಧಃ ಪುತ್ರಾಲಾಭಸಮುದ್ಭವಃ॥೫೯
ಅಥ ಸೇನಾನ್ಯಮಿಚ್ಛದ್ಭಿರುಕ್ತಃ ಸಬ್ರಹ್ಮಭಿಃ ಸುರೈಃ॥
ವಹ್ನಿರಹ್ನಾಯ ಜಾಹ್ನವ್ಯಾಂ ನ್ಯಷಿಂಚಿದ್ವೀರ್ಯಮೈಶ್ವರಮ್॥೬೦॥
ಸಾಪಿ ಸಪ್ತಾರ್ಚಿಷಾ ಕ್ಷಿಪ್ತಂ ತೇಜಸ್ತದ್ವೋಢುಮಕ್ಷಮಾ।
ಹಿಮವತ್ಪ್ರಾಂತಕಾಂತಾರೇ ಶ್ರಾಂತಾ ಶರವಣೇ ಜಹೌ॥೬೧॥
ತತ್ರಾಭೂತ್ಕೃತ್ತಿಕಾಪ್ರೀತ್ಯೈ ಷೋಢಾರೂಢಮುಖಾಂಬುಜಮ್।
ತಾರಕಧ್ವಾಂತವಿಧ್ವಂಸಿ ಸದ್ಯಃ ಷಾಣ್ಮಾತುರಂ ಮಹಃ॥೬೨॥
ಅನು॥ ಹಿಂದೆ ಸುಮೇರುವಿಗೆ ಮನೋರಮಾ ಎಂಬ ಮಗಳು ಇದ್ದಳು.ಅವಳಿಂದಲೇ ಪರ್ವತಗಳ ಚಕ್ರವರ್ತಿಯು
( ಹಿಮವಂತನು ) ಗೃಹಸ್ಥನಾದನು.
ಅವನಿಗೆ ಇಬ್ಬರು ಪುತ್ರಿಯರಿದ್ದರು. ಅವರಲ್ಲಿ ಒಬ್ಬಳು ಮಂದಾಕಿನೀ.ಇನ್ನೊಬ್ಬಳು ಚಂದ್ರಶೇಖರನ ಪತ್ನಿಯಾದ ಸಾಕ್ಷಾತ್ಭಗವತಿ( ಪಾರ್ವತಿ )
ಆ ನದಿಯನ್ನು ( ಮಂದಾಕಿನಿಯನ್ನು ) ಪಡೆದು ದೇವತೆಗಳು ಸ್ವರ್ಗಲೋಕಕ್ಕೆ ಕೊಂಡೊಯ್ದರು. ತಪಸ್ಸಿನಲ್ಲಿ ಮಗ್ನಳಾಗಿದ್ದ ಗೌರಿಯನ್ನು ಪರ್ವತರಾಜನು ಮಹಾದೇವನಿಗೆ ನೀಡಿದನು.
ಮಿಲನದಲ್ಲಿ ಮಗ್ನರಾಗಿದ್ದ ಶಿವ-ಪಾರ್ವತಿಯರ ತೇಜಸ್ಸು ಭೂಮಿಯಲ್ಲಿ ಬಿದ್ದುದನ್ನು ಕಂಡು ದೇವತೆಗಳಿಂದ ಪ್ರಾರ್ಥಿಸಲ್ಪಟ್ಟ ಅಗ್ನಿಯು (ಅದನ್ನು ) ತಾನು ಧರಿಸಿದನು. ತನಗೆ ಮಗನು ದೊರೆಯದಿರುವುದರಿಂದ ಉಂಟಾದ ಪಾರ್ವತಿಯ ಕ್ರೋಧವು ದೇವತೆಗಳನ್ನು ಸಂತಾನಹೀನರನ್ನಾಗಿಯೂ ಭೂಮಿಯನ್ನು ಬಹುಪತಿಗಳ ಪತ್ನಿಯನ್ನಾಗಿಯೂ ಮಾಡಿತು.
ಬಳಿಕ ( ದೇವಸೇನೆಗೆ ) ಸೇನಾಪತಿಯನ್ನು ಹಂಬಲಿಸುತ್ತಿದ್ದ ಬ್ರಹ್ಮನಿಂದೊಡಗೂಡಿದ ದೇವತೆಗಳಿಂದ ಸೂಚಿತನಾದ ಅಗ್ನಿಯು ಪರಮೇಶ್ವರನ ತೇಜಸ್ಸನ್ನು ತತ್ ಕ್ಷಣ ಜಾಹ್ನವಿಯಲ್ಲಿ ಸುರಿದನು.
ಅವಳು ಕೂಡ ಅಗ್ನಿಯಿಂದ ನಿಹಿತವಾದ ಆ ತೇಜಸ್ಸನ್ನು ಸಹಿಸಲು ಅಸಮರ್ಥಳಾಗಿ ( ಆ ಹೊತ್ತಿಗೇ ) ಬಳಲಿ ಹಿಮವತ್ ಪರ್ವತದ ಅಚಿನ ಅರಣ್ಯದಲ್ಲಿ ( ಬೆಳೆದಿದ್ದ ) ನೊದೆ ಹುಲ್ಲಿನಲ್ಲಿ ( ಆ ತೇಜಸ್ಸನ್ನು) ಪರಿತ್ಯಜಿಸಿದಳು.
ಅಲ್ಲಿ ಕೃತ್ತಿಕೆಯರಿಗೆ ಸಂತಸವನ್ನುಂಟುಮಾಡಲು ಆರು (ಸಂಖ್ಯೆಯಲ್ಲಿ ) ಪ್ರಕಟಗೊಂಡ ಮುಖಕಮಲವನ್ನು ಹೊಂದಿದ, ತಾರಕಾಸುರನೆಂಬ ಕತ್ತಲೆಯನ್ನು ಧ್ವಂಸಗೊಳಿಸಿದ, ಆರು ಜನ ತಾಯಂದಿರನ್ನು ಹೊಂದಿದ, ತೇಜಸ್ಸು ಒಮ್ಮೆಲೇ ಹೊಮ್ಮಿತು.
ತಾರಕನೆಂಬ ರಾಕ್ಷಸ ಶಿವಪುತ್ರನಿಂದ ತನಗೆ ಮರಣಬರಲೆಂದು ಬ್ರಹ್ಮನಿಂದ ವರ ಪಡೆದಿದ್ದ. ಶಿವನ ಮೊದಲ ಪತ್ನಿ ದಾಕ್ಷಾಯಣಿ ದಕ್ಷಬ್ರಹ್ಮನ ಯಜ್ಞಸಮಯದಲ್ಲಿ ಆದ ಅವಮಾನದಿಂದ ಆತ್ಮಾಹುತಿಯನ್ನು ಮಾಡಿಕೊಂಡಿದ್ದಳು.ಅವಳೇ ಹಿಮವಂತನ ಮಗಳಾಗಿ ಪಾರ್ವತಿಯೆಂಬ ಹೆಸರಿನಿಂದ ಜನಿಸಿದಳು. ತೀವ್ರ ತಪಶ್ಚರ್ಯೆಯಿಂದ ಮಹಾಸತ್ವಸಂಪನ್ನೆಯಾದ ಭಗವತಿ ಪಾರ್ವತಿಯೊಡನೆ ಶಿವನ ವಿವಾಹವಾಯಿತು. ಎಷ್ಟು ಕಾಲವಾದರೂ ಸಂತಾನದ ಸೂಚನೆ ಕಾಣದಿರಲು ಅಗ್ನಿಯು ದೇವತೆಗಳ ಸೂಚನೆಯಂತೆ ಪಾರಿವಾಳದ ರೂಪದಲ್ಲಿ ಶಿವಪಾರ್ವತಿಯರ ಏಕಾಂತಸ್ಥಾನಕ್ಕೆ ಹೋದ. ಶಿವ ಹಾಗೂ ಪಾರ್ವತಿ ಇಬ್ಬರ ತೇಜಸ್ಸು ಸೇರಿದರೆ ಲೋಕವೇ ಸಹಿಸಲಾರದ ಅಮೇಯಶಕ್ತಿಯ ಉದಯವಾಗುವುದೆಂದು ದೇವತೆಗಳ ವಿನಂತಿಯ ಮೇರೆಗೆ ಶಿವ ಜಾರಿದ್ದ ತನ್ನ ತೇಜಸ್ಸನ್ನು ಅಗ್ನಿಗೆ ಕೊಟ್ಟನು. ಅಗ್ನಿ ಅದನ್ನು ಸಹಿಸಲಾರದೆ ಗಂಗೆಯಲ್ಲಿ ಬಿಸುಟ. ಗಂಗೆಯೂ ತಡೆಯಲಾರದೆ ತಟದಲ್ಲಿ ಬೆಳೆದ ನೊದೆಹುಲ್ಲಿನಲ್ಲಿ ಅದನ್ನು ಚಲ್ಲಿದಳು. ಹುಲ್ಲಿನಿಂದ ಸೀಳಲ್ಪಟ್ಟು ಆರುಮುಖಗಳಿಂದ ಜನಿಸಿದ ಷಣ್ಮುಖ ಅಲ್ಲಿಗೆ ಬಂದ ಆರು ಜನ ಕೃತ್ತಿಕೆಯರ ಸ್ತನ್ಯಪಾನಮಾಡಿದ. ಬಳಿಕ ದೇವಸೈನ್ಯದ ನಾಯಕನಾಗಿ ತಾರಕಾಸುರಸಂಹಾರವನ್ನು ಮಾಡಿದ. ಹೀಗೆ ಕುಮಾರಸ್ವಾಮಿ ಸ್ಕಂದ (ಜಾರಿದ ತೇಜಸ್ಸಿನಿಂದ ಜನಿಸಿದವನು
ಪಾವಕಿ ( ಅಗ್ನಿಯಿಂದ ಜನಿಸಿದವನು ) ಶರವಣಭವ ( ಶರವಣ- ನೊದೆಹುಲ್ಲು, ಭವ-ಜನಿಸಿದವ) ಕಾರ್ತಿಕೇಯ (ಕೃತ್ತಿಕೆಯರ ಸ್ತನ್ಯಪಾನ, ಮಾಡಿದವ ) ಷಣ್ಮುಖ ಮುಂತಾಗಿ ಹೆಸರುಗಳಿವೆ.
ಪ॥ತ್ರೈವಿಧ್ಯಂ ಶ್ರೂಯತಾಂ ವತ್ಸ ಸರಿತಸ್ತ್ರಿದಿವೌಕಸಾಮ್।
ಯಥೋಕ್ತಂ ಹವ್ಯಮಶ್ನತ್ಯಾ ದೇವತಾಯಾ ಇವಾಧ್ವರೇ॥೬೩॥
ಪುರೀಮಯೋಧ್ಯಾಮಧ್ಯಾಸ್ತ ಸಾವಿತ್ರಃ ಸಾಗರೋ ನೃಪಃ।
ಕೇಶಿನೀಸುಮತಿಭ್ಯಾಂ ಚ ಲಂಘಿತಪ್ರಥಮಾಶ್ರಮಃ॥೬೪ ॥
ಸ ಪುತ್ರೀಯನ್ ಸಪತ್ನೀಕಸ್ತಪಸ್ತೇಪೇ ಸಮಾಃ ಶತಮ್।
ಭೃಗುಃ ಪ್ರೀತಮನಾಸ್ತಸ್ಮೈ ದದೌ ದಾಯಾದಸಂಪದಮ್॥೬೫॥
ಅಸಮಂಜಂ ಸುತಂ ಲೇಭೇ ವೈದರ್ಬೀ ಕೇಶಿನೀ ತಯೋಃ ।
ಷಷ್ಟಿಂ ಪುತ್ರಸಹಸ್ರಾಣಾಂ ಸುಮತಿಶ್ಚ ಯವೀಯಸೀ ॥೬೬॥
ಅಸಮಂಜಸಚಾರಿತ್ರಮಸಮಂಜಮಪೋಹ್ಯ ಸಃ।
ಆರಬ್ಧಹಯಮೇಧಃ ಸನ್ನಮುಂಚತ ತುರಂಗಮಮ್॥೬೭॥
ಅನು॥ ಮಗೂ ಶ್ರೀರಾಮ, ಯಜ್ಞದಲ್ಲಿ ಹವಿಸ್ಸನ್ನು ಭಕ್ಷಿಸುವ ಅಗ್ನಿಯಂತೆ( ಒಂದೇ ಅಗ್ನಿಯೇ ಗಾರ್ಹಪತ್ಯ, ಆಹವನೀಯ, ದಕ್ಷಿಣ ಎಂದು ತ್ರಿವಿಧರೂಪಗಳನ್ನು ಪಡೆದಂತೆ ) ದೇವನದಿಗೆ ತ್ರಿವಿಧಸ್ವರೂಪ ಬಂದುದನ್ನು ಹಿಂದೆ ಹೇಳಲ್ಪಟ್ಟಂತೆ ಕೇಳು.
ಸೂರ್ಯವಂಶದಲ್ಲಿ ಜನಿಸಿದ ಸಗರನೆಂಬ ರಾಜನು ಅಯೋಧ್ಯೆಯೆಂಬ ನಗರಿಯನ್ನು ಆಳುತ್ತಿದ್ದನು. ( ಅವನಾದರೋ)
ಕೇಶಿನೀ ಮತ್ತು ಸುಮತೀ ಎಂಬವರಿಂದ ಪ್ರಥಮಾಶ್ರಮವನ್ನು ( ಬ್ರಹ್ಮಚರ್ಯಾಶ್ರಮವನ್ನು ) ಮೀರಿದನು( ಗೃಹಸ್ಥಾಶ್ರಮ-
ವನ್ನು ಪ್ರವೇಶೆಸಿದನು).
ಅವನು ಪುತ್ರರನ್ನು ಬಯಸಿ ಪತ್ನಿಯರ ಜೊತೆ ಒಂದುನೂರು ವರ್ಷಗಳ ವರೆಗೆ ತಪಸ್ಸನ್ನು ಆಚರಿಸಿದನು. ( ಊದರಿಂದ) ಸಂಪ್ರೀತಚಿತ್ತನಾದ ಭೃಗುವು ಅವನಿಗೆ ಸಂತಾನ ಸಂಪತ್ತನ್ನು ಕರುಣಿಸಿದನು.
ಅವರಿಬ್ಬರಲ್ಲಿ ವಿದರ್ಭದೇಶೀಯಳಾದ ಕೇಶಿನಿಯು ಅಸಮಂಜನೆಂಬ ಮಗನನ್ನು ಪಡೆದಳು. ಕಿರಿಯಳಾದ ಸುಮತಿಯು ಅರವತ್ತು ಸಾವಿರ ಪುತ್ರರನ್ನು ( ಪಡೆದಳು)
ಸಗರನು ಅವಿವೇಕಿಯಾಗಿ ವರ್ತಿಸುತ್ತಿದ್ದ ಅಸಮಂಜನನ್ನು ಹೊರದಬ್ಬಿದ. ( ರಾಜ್ಯ ಬಹಿಷ್ಕೃತಗೊಳಿಸಿ) ಅಶ್ವಮೇಧಯಾಗವನ್ನು ಆರಂಭಿಸಿ ಕುದುರೆಯನ್ನು ( ಸಂಚಾರಕ್ಕೆ ) ಬಿಟ್ಟನು.
ಸಗರ ಇಕ್ಷ್ವಾಕುವಂಶದ ರಾಜನಾದ ಅಸಿತ ಹಾಗೂ ಕಾಲಿಂದಿಯರ ಮಗ. ಅಸಿತ ಸಾಯುವಾಗ ಅವನ ಪತ್ನಿಯರಿಬ್ಬರೂ ಗರ್ಭಿಣಿಯರಾಗಿದ್ದರು. ಕಾಲಿಂದಿಯ ಗರ್ಭವನ್ನು ನಾಶಪಡಿಸಬೇಕೆಂದು ಮತ್ತೊಬ್ಬಳು ವಿಷ ನೀಡಿದಳು. ಆಗ ಕಾಲಿಂದಿ ಚ್ಯವನಮಹರ್ಷಿಯನ್ನು ಆರೈಕೆಮಾಡಿ ಅವನ ತಪೋಬಲದಿಂದ ವಿಷ( ಗರ ) ವಿದ್ದರೂ ಆರೋಗ್ಯವಂತನಾದ ಮಗುವಿಗೆ ಜನ್ಮ ನೀಡಿದಳು. ಗರ(ವಿಷ)ದಿಂದ ಸಹಿತನಾಗಿ ಜನಿಸಿದ್ದರಿಂದ ಸಗರ ಎಂಬ ಹೆಸರು ಬಂದಿತು.
ಪ॥ ಕ್ರವ್ಯಾದವಪುಷಾ ಸೋऽಯಮಹಾರಿ ಹರಿಣಾ ಹಯಃ ।
ತತಸ್ತಂ ನಷ್ಟಮನ್ವೇಷ್ಟುಂ ಸೌಮತೇಯಾಃ ಪ್ತತಸ್ಥಿರೇ ॥೬೮॥
ಸರ್ವೇ ಸಪರ್ವತಾಮುರ್ವೀಂ ಖನಂತಃ ಸಗರಾತ್ಮಜಾಃ।
ಚಕ್ರುರ್ಝರ್ಝರಿತಧ್ವಾಂತಂ ನಾಗಲೋಕಂ ನಖಾಂಶುಭಿಃ॥೬೯॥
ತ ಏತೇ ತಪಸಾ ದೀಪ್ತೇ ತಮಃಸ್ತೋಮಪ್ರಮಾಥಿನಿ।
ಕಾಪಿಲೇ ಜ್ವಲನೇ ವೀರಾ ಲೇಭಿರೇ ಶಲಭೋಪಮಾಮ್॥೭೦॥
ಅನು॥ ರಾಕ್ಷಸವೇಷಧರನಾದ ಇಂದ್ರನಿಂದ ಆ ಕುದುರೆಯು ಅಪಹರಿಸಲ್ಪಟ್ಟಿತು. ಬಳಿಕ ಕಾಣೆಯಾದ ಅದನ್ನು ಹುಡುಕಲು ಸುಮತಿ ಪುತ್ರರು ಹೊರಟರು. ಆ ಎಲ್ಲ ಸಗರಪುತ್ರರು ಪರ್ವತಸಹಿತವಾದ ಭೂಮಿಯನ್ನು ಅಗೆಯುತ್ತ (ತಮ್ಮ) ಉಗುರುಗಳ ಕಾಂತಿಯಿಂದ ಪಾತಾಳಲೋಕದ ಕತ್ತಲೆಯನ್ನು ನಾಶಮಾಡಿದರು.
ಈ ವೀರರು ತಪಸ್ಸಿನಿಂದ ಜಾಜ್ವಲ್ಯಮಾನವಾದ(ಅಜ್ಞಾನದ) ಅಂಧಕಾರಸಮೂಹವನ್ನು ನಾಶಗೊಳಿಸುವಂತ ಕಪಿಲನ
( ಕೋಪವೆಂಬ ) ಅಗ್ನಿಯಲ್ಲಿ ಪತಂಗಸಮಾನರಾದರು.
ಪ॥ ಅಸಮಂಜಸಸುತಂ ಪೌತ್ರಮಂಶುಮಂತಮಥಾಬ್ರವೀತ್ ।
ಸಪ್ತಿಂ ಹೃತ್ವಾ ಸಮಾಧತ್ತಾಂ ಸಪ್ತತಂತುಂಭವಾನಿತಿ॥೭೧॥
ಸೋऽಪಿ ಗತ್ವಾ ಬಿಲಂ ತತ್ರ ದೃಷ್ಟ್ವಾ ಭಸ್ಮೀಕೃತಾನ್ಪಿತೄನ್।
ಸಾಶ್ರುಸ್ತೇಭ್ಯೋಂऽ ಜಲಿಂ ದಿತ್ಸುಶ್ಚರಂಲ್ಲೇಭೇ ತುರಂಗಮಮ್॥೭೨॥
ಮಾತುಲೋ ಗರುಡಸ್ತೇಷಾಮೇನಂ ತತ್ರೈವಮಬ್ರವೀತ್।
ಗಂಗಾಮಿಹಾನಯಾಯುಷ್ಮನ್ನೇಷಾಮೇಷಾ ಗತಿಃ ಪರಾ॥೭೩॥
ತತ್ರಸ್ತನಯವೃತ್ತಾಂತಂ ಶ್ರುತ್ವಾ ಲಬ್ಧತುರಂಗಮಃ।
ಸಮಾಪ್ಯ ಸಗರಃ ಸತ್ರಂ ಪುತ್ರಶೋಕಾದ್ದಿವಂ ಗತಃ॥೭೪॥
ಅನು॥ ಆ ಬಳಿಕ (ಸಗರನು) ಮೊಮ್ಮಗನಾದ ಅಸಮಂಜಸುತನಾದ ಅಂಶುಮಂತನನ್ನು ಕುರಿತು " ನೀನು ಕುದುರೆಯನ್ನು ಮರಳಿ ತಂದು ಯಜ್ಞವನ್ನು ಸಾಂಗಗೊಳಿಸು" ಎಂದನು.
ಅವನು ಕೂಡಾ (ಪಾತಾಳದ) ಬಿಲವನ್ನು ಹೊಕ್ಕು ಅಲ್ಲಿ ಬೂದಿಯಾದ ಪಿತೃಗಳನ್ನು ಕಂಡು ಕಣ್ಣೀರಿಡುತ್ತ ಅವರಿಗೆ ತರ್ಪಣವನ್ನು ನೀಡಬಯಸಿದವನಾಗಿ ( ನೀರನ್ನು ಹುಡುಕುತ್ತ ) ಸಂಚರಿಸುತ್ತ ಕುದುರೆಯನ್ನು (ಮರಳಿ) ಹೊಂದಿದನು.
ಅಲ್ಲಿ ಅವರ ( ಸುಮತಿಯ ಮಕ್ಕಳ ) ಸೋದರಮಾವನಾದ ಗರುಡನು ಇವನಿಗೆ " ಹೇ ಆಯುಷ್ಮನ್, ಗಂಗೆಯನ್ನು ಇಲ್ಲಿಗೆ ಕರೆದು ತಾ, ಇವರಿಗೆ ಅವಳೇ ಸದ್ಗತಿದಾಯಕಳು" ಎಂದು ನುಡಿದನು.
ಬಳಿಕ ಮಕ್ಕಳ ವೃತ್ತಾಂತವನ್ನು ಕೇಳಿ ಕುದುರೆಯನ್ನು ಪಡೆದ ಸಗರನು ಯಜ್ಞವನ್ನು ಮುಗಿಸಿ ಪುತ್ರಶೋಕದಿಂದ ಪರಂಧಾಮವನ್ನೈದಿದನು.
ಗಾಯತ್ರ್ಯಾದಿ ಏಳು ಛಂದಸ್ಸುಗಳನ್ನು ಒಳಗೊಂಡಿರುವುದರಿಂದ ಅಥವಾ ಏಳು ಕರ್ಮಾಂಗಗಳಿರುವುದರಿಂದ ಯಜ್ಞಕ್ಕೆ ಸಪ್ತತಂತು ಎಂದು ಹೆಸರು. ಸಗರ ಪತ್ನಿಯರಲ್ಲಿ ಒಬ್ಬಳಾದ ಸುಮತಿಯು ಗರುಡನ ಸಹೋದರಿ. ಹೀಗೆ ಗರುಡ ಸುಮತಿಯ ಅರವತ್ತು ಸಹಸ್ರಪುತ್ರರಿಗೆ ಸೋದರಮಾವನಾಗುತ್ತಾನೆ.
ಪ॥ ಅಥಾಂಶುಮಾನಯಂ ರಾಜ್ಯಂ ಚಿರಾಯ ಪರಿಪಾಲಯನ್।
ದಿಲೀಪೇ ನ್ಯಸ್ತಭೂಭಾರಸ್ತಪಸ್ತೇಪೇ ಹಿಮಾಲಯೇ॥೭೫॥
ದಿಲೀಪೇऽಪಿ ದಿವಂ ಯಾತೇ ಶ್ರುತ್ವಾ ವೃತ್ತಂ ಭಗೀರಥಃ।
ಅಮರ್ತ್ಯಸರಿತಂ ಕರ್ತುಂ ಮೇನೇ ಮರ್ತ್ಯತರಂಗಿಣೀಮ್॥೭೬॥
ತತೋ ಗೋಕರ್ಣಮಾಸಾದ್ಯ ತಪಸ್ಯತಿ ಭಗೀರಥೇ ।
ದೇವೋ ದೇವಾಪಗಾಂ ವೋಢುಮನ್ವಮಂಸ್ತ ದಯಾನಿಧಿಃ॥೭೭॥
ಅನು॥ ಅನಂತರ ಈ ಅಂಶುಮಂತನು ದೀರ್ಘಕಾಲದವರೆಗೆ ರಾಜ್ಯವನ್ನು ಪರಿಪಾಲಿಸಿ ದಿಲೀಪನಿಗೆ ಭೂಮಂಡಲದ ಹೊಣೆಯನ್ನು ಹೊರಿಸಿ ಹಿಮಾಲಯದಲ್ಲಿ ತಪಸ್ಸನ್ನು ಆಚರಿಸಿದನು.
ದಿಲೀಪನೂ ಸ್ವರ್ಗಕ್ಕೆ ತೆರಳಲು ಹಿಂದೆ ನಡೆದುದನ್ನುಕೇಳಿ ಭಗೀರಥನು ದೇವನದಿಯನ್ನು ಭೂಮಿಯ ನದಿಯನ್ನಾಗಿ ಮಾಡಲು ಮನಸ್ಸುಮಾಡಿದನು.
ಬಳಿಕ ಗೋಕರ್ಣಕ್ಷೇತ್ರವನ್ನು ಸೇರಿ ದಿಲೀಪನು ತಪಸ್ಸು ಆಚರಿಸುತ್ತಿರಲು ಸುರನದಿಯನ್ನು ಧರಿಸಲು ದಯಾಮಯನಾದ ಮಹಾದೇವನು ಸಮ್ಮತಿಸಿದನು.
ಪ॥ ಅಥ ವೀಚೀಚಯಚ್ಛನ್ನದಿಗಂತಗಗನಾಂತರಾ।
ಶಶಾಂಕಶಂಖಸಂಭಿನ್ನತಾರಾಮೌಕ್ತಿಕದಂತುರಾ॥೭೮॥
ತರಂಗಾಕೃಷ್ಟಮಾರ್ತಂಡತುರಂಗಾಯಾಸಿತಾರುಣಾ ।
ಫೇನಚ್ಛನ್ನಸ್ವಮಾತಂಗಮಾರ್ಗಣವ್ಯಗ್ರವಾಸವಾ॥೭೯॥
ಆವಿಃಶಾಖಾಶಿಖೋನ್ನೇಯನಂದನದ್ರುಮಕರ್ಷಣಾ।
ಏಕೋದಕನಭೋಮಾರ್ಗದಿಙ್ಮೂಢದಿವಸೇಶ್ವರಾ॥೮೦॥
ಆವರ್ತಗರ್ತಸಂಭ್ತಾಂತವಿಮಾನಪ್ಲವವಿಪ್ಲವಾ।
ನೀಲಜೀಮೂತಶೈವಾಲಕೃತರೇಖಾ ಹರಿತ್ತಟಾ॥೮೧॥
ಅವಲೇಪಭರಾಕ್ರಾಂತಾ ಸುರಲೋಕತರಂಗಿಣೀ।
ಪಪಾತ ಪಾರ್ವತೀಕಾಂತಜಟಾಕಾಂತಾರಗಹ್ವರೇ॥೮೨॥
ಅನು॥ ಅನಂತರ ತರಂಗಸಮೂಹದಿಂದ ದಿಗಂತಗಳನ್ನೂ ಆಕಾಶವನ್ನೂ ವ್ಯಾಪಿಸಿ ಚಂದ್ರನೆಂಬ ಶಂಖದಿಂದ ಶೋಭಿಸಿ ನಷತ್ರಗಳೆಂಬ ಮುತ್ತುಗಳು ಎಲ್ಲೆಲ್ಲೂ ಹರಡಿರುವ,
ತೆರೆಗಳಿಂದ ಸೂರ್ಯನ ಕುದುರೆಗಳನ್ನೇ ಸೆಳೆದು ಅರುಣನನ್ನೇ ದಿಗ್ಭ್ರಾಂತಗೊಳಿಸಿ ನೊರೆಯಿಂದ ಮುಚ್ಚಿಹೋದ ಐರಾವತವನ್ನು ಇಂದ್ರ ಹುಡುಕುವಂತೆ ಮಾಡಿ,
ಮೇಲೆ ತೋರುವ ರೆಂಬೆಗಳ ತುದಿಯಿಂದ ಊಹಿಸಬಹುದಾದಂತೆ ನಂದನವನದ ಮರಗಳನ್ನೆಲ್ಲ ಸೆಳೆದೊಯ್ಯುತ್ತ, ಎಲ್ಲೆಲ್ಲೂ ನೀರಿನಿಂದ ಆಕಾಶಮಾರ್ಗವನ್ನು ವ್ಯಾಪಿಸಿ ಸೂರ್ಯನನ್ನೇ ಭ್ರಮೆಗೀಡುಮಾಡಿ,
ಸುತ್ತುವ ಸುಳಿಗಳೊಳಗೆ ವಿಮಾನಗಳು ರೊಯ್ಯನೆ ಮುಳುಗೇಳುವಂತೆ ಮಾಡುತ್ತ ಕಾಲಮೇಘಗಳೆಂಬ ಹಾವಸೆಗಳಿಂದ ದಿಗಂತಗಳೆಂಬ ದಡಗಳಲ್ಲಿ ಗೆರೆಯೆಳೆಯುತ್ತ,
ಮೇರೆಯಿಲ್ಲದ ಸೊಕ್ಕಿನಿಂದ ಕೂಡಿದ ಸ್ವರ್ಗೀಯ ಪ್ರವಾಹ ಪಾರ್ವತೀರಮಣನ ಜಟಾಸಮೂಹವೆಂಬ ಅರಣ್ಯದ ಗಹನದಲ್ಲಿ ಧುಮ್ಮಿಕ್ಕಿತು.
ಮಂದಾಕಿನಿ ಆಗಸವನ್ನು ವ್ಯಾಪಿಸಿದಾಗ ಆಗಸವೇ ಸಾಗರವಾಗಿ ಚಂದ್ರನೇ ಶಂಖವಾಗಿ, ನಕ್ಷತ್ರಗಳೇ ಮುತ್ತುಗಳ ರಾಶಿಯಾಗಿ ತೋರುತ್ತಿದ್ದವು. ಸುರನದಿ ಕೆಳಗಿಳಿದ ರಭಸಕ್ಕೆ ಸೂರ್ಯನ ರಥದ ಕುದುರೆಗಳೂಸೆಳೆಯಲ್ಪಟ್ಟು ಸಾರಥಿಯಾದ ಅರುಣ ಅವುಗಳನ್ನು ನಿಯಂತ್ರಿಸಲು ತುಂಬ ಪರಿಶ್ರಮಿಸಬೇಕಾಯಿತು. ಮಾರ್ತಾಂಡ- ಸೂರ್ಯ ಎಂಬ ಅರ್ಥವಿದ್ದರೂ ವಾಸ್ತವದಲ್ಲಿ ಮೃತ ಅಂಡದಿಂದ ಜನಿಸಿದ ಅರುಣ ಅಥವಾ ಅನೂರುವಿಗೆ ಈ ಹೆಸರಿದೆ.
ಪ॥ ಅಲಬ್ಧನಿರ್ಗಮಾ ಶಂಭೋಃ ಕಪರ್ದಾದಮರಾಪಗಾ।
ದಧೌ ದೂರ್ವಾಶಿಖಾಲಗ್ನತುಷಾರಕಣಿಕೋಪಮಾಮ್॥೮೩॥
ಅನು॥ ಸುರನದಿಯು ಶಿವನ ಜಟಾಜೂಟದಿಂದ ಹೊರಬರಲಾರದೆ ದೂರ್ವಾಂಕುರದ ತುದಿಯಲ್ಲಿ ನೆಲೆಗೊಂಡ ಮಂಜಿನ ಹನಿಯ ಚಿಕ್ಕ ಕಣದ ಹೋಲಿಕೆಯನ್ನು ಹೊಂದಿದಳು.
ಹಿಂದಿನ ಶ್ಲೋಕಗಳಲ್ಲಿ ವರ್ಣಿತವಾದ ಬೆರಗು ಹುಟ್ಟಿಸುವ ಮಹಾಭಯಾನಕ ಕ್ರಿಯೆಗಳಿಗೂ ಇಲ್ಲಿರುವ ಪುಟ್ಟ ಹೋಲಿಕೆಗೂ ಇರುವ ವೈಷಮ್ಯ ಅಪೂರ್ವವಾಗಿದೆ. ಮಹಾದೇವನ ಜಟಾಜೂಟದ ಅಸೀಮ ವಿಸ್ತಾರ ಸೊಗಸಾಗಿ ಸೂಚಿತವಾಗಿದೆ.
ಪ॥ ಅದೃಷ್ಟ್ವಾತಾಂ ನದೀಂ ತತ್ರ ತುಷ್ಟಾವ ಪರಮೇಶೂವರಮ್।
ಭಗೀರಥೋ ವಿಧೇಃ ಕ್ರೌರ್ಯಾತ್ಪರಿಕ್ಷೀಣಮನೋರಥಃ ॥೮೪॥
ಗಂಗಾ ಸಪ್ತಾಕೃತಿರ್ಜಾತಾ ನ್ಯಪತದ್ಧರಮೂರ್ಧನಿ।
ತೇನ ಸ್ತುತ್ಯಾ ಪ್ರಸನ್ನೇನ ಕ್ಷಿಪ್ತಾ ಬಿಂದುಸರಸ್ಯಪಿ॥ ೮೫॥
ತಾಸು ಪ್ರಾಚೀಂ ಗತಾಸ್ತಿಸ್ರಸ್ತಿಸ್ರಃ ಪ್ರಾಚೇತಸೀಂ ದಿಶಮ್।
ಅನ್ಯಾ ಪಿತೃಕ್ರಿಯೋದ್ಯುಕ್ತಭಗೀರಥಪಥಾನುಗಾ॥೮೬॥
ಸೈಷಾ ಭಾಗೀರಥೀ ಜಹ್ನೋಃ ಸತ್ರಕ್ಷೇತ್ರಂ ಸಮಾವೃಣೋತ್।
ತಾಂ ಸ ಪೀತ್ವಾ ತತಃ ಶಾಂತೋ ಜಹೌ ಶ್ರೋತ್ರೇಣ ವರ್ತ್ಮನಾ॥೮೭॥
ತಯಾ ತಟಿನ್ಯಾ ಜಾಹ್ನವ್ಯಾ ಪ್ರಾಪಯತ್ತ್ರಿದಿವಂ ಪಿತೄನ್।
ಭಗೀರಥಃ ಪುರಂ ಪ್ರಾಪ ಪರಿಪೂರ್ಣಮನೋರಥಃ॥೮೮॥
ಅನು॥ ಅಲ್ಲಿ ಆ ನದಿಯನ್ನು ಕಾಣದೆ ವಿಧಿಯ ಕ್ರೌರ್ಯದಿಂದ ಆಸೆಗುಂದಿದವನಾಗಿ ಭಗೀರಥನು ಮಹಾದೇವನ್ನು ಸ್ತುತಿಸಿದನು.
ಸ್ತೋತ್ರದಿಂದ ಪ್ರಸನ್ನನಾದ ಅವನಿಂದ ಸಪ್ತಧಾರೆಗಳಾಗಿ ಸೀಳಲ್ಪಟ್ಟ ಗಂಗೆಯು ಪರೂವತದ ಮೇಲೆ ಇಳಿದಳು. (ಹಾಗೆಯೇ) ಬಿಂದುಸರೋವರದಲ್ಲಿಯೂ ಬಿಡಲ್ಪಟ್ಟಳು.
ಅವುಗಳಲ್ಲಿ ಮೂರು ಪೂರ್ವದಿಕ್ಕಿಗೂ(ಮತ್ತು) ಮೂರು ಪಶ್ಚಿಮದಿಕ್ಕಿಗೂ ಚಲಿಸಿದವು. ಇನ್ನೊಂದು ಪಿತೃತರ್ಪಣದ ಉದ್ದೇಶದಿಂದ ಭಗೀರಥನ ಮಾರ್ಗವನ್ನು ಅನುಸರಿಸಿತು.
ಈ ಭಾಗೀರಥಿಯು ಜಹ್ನುಮಹರ್ಷಿಯ ಯಜ್ಞಭೂಮಿಯನ್ನು ಆವರಿಸಿತು. ಊವನು ಅದನ್ನು ಆಪೋಶನಗೈದು ಬಳಿಕ ಶಾಂತನಾಗಿ ಕಿವಿಯ ದಾರಿಯಲ್ಲಿ ಹೊರಬಿಟ್ಟನು. ಆ ಜಾಹ್ನವೀನದಿಯಿಂದ ಭಗೀರಥನು ಪಿತೃಗಳನ್ನು ಸ್ವರ್ಗಕ್ಕೆ ತಲುಪಿಸಿದನು. ತನ್ನ ಉದ್ದೇಶವನ್ನು ನೆರವೇರಿಸಿಕೊಂಡವನಾಗಿ ನಗರಕ್ಕೆ ಮರಳಿದನು.
ಗ॥ ಅಥ ದಾಶರಥಿರಾಕರ್ಣಿತಭಾಗೀರಥೀಕಥಾಸ್ತಾಂ ಸರಿತಂ ವಿಲಂಘ್ಯ ವಿಶಾಲಾಂ ವಿಲೋಕ್ಯ ಪುರೀಂ ಕಸ್ಯೇಯಮಿತಿ ಗಾಧಿನಂದನಮಪೃಚ್ಛತ್। ಸೋऽ ಪ್ಯೇವಮವೋಚತ್।
ಅನು॥ ಆ ಬಳಿಕ ಭಾಗೀರಥಿಯ ಕಥೆಯನ್ನು ಕೇಳಿದ ದಾಶರಥಿಯು ಆ ನದಿಯನ್ನು ದಾಟಿ ವಿಶಾಲವಾದ ( ವಿಶಾಲಾ ಎಂಬ ಹೆಸರಿನ) ನಗರವೊಂದನ್ನು ಕಂಡು" ಇದು ಯಾರದು?"ಎಂದು ವಿಶ್ವಾಮಿತ್ರನನ್ನು ಕೇಳಿದನು. ಅವನು ಕೂಡ ಹೀಗೆಂದು ನುಡಿದನು.
ಗ॥ ಪುರಾ ಖಲು ಸುರಾಸುರಾಣಾಂ ಸುಧಾನಿಮಿತ್ತಂ ಮಿಥೋವಿರೋಧೇ ಪ್ರವೃತ್ತೇ ಮಾಯಾಂ ವಿಶ್ವಮೋಹಿನೀಂ ವಿಶ್ವರೂಪಃ ಪ್ರದರ್ಶ್ಯ ದೈತೇಯನಿಧನಂ ಶತಧಾರಪಾಣಿನಾ ಕಾರಯಾಮಾಸ। ತೇಷಾಂ ಜನನೀ ದಿತಿರತಿವೇಲಮನ್ಯುಃ ಶತಮನ್ಯುಶಾಸನಂ ಕಮಪಿ ಪುತ್ರಂ ಲಬ್ಧುಕಾಮಾ ಪತ್ಯುರ್ಮಾರೀಚಸ್ಯ ವಚನಾತ್ಕುಶಪ್ಲವೇ ಸುಚಿರಂ ತಪಶ್ಚರಾ । ತಾಂ ಕೈತವೇನ ಶುಶ್ರೂಷಮಾಣಃ ಶತಧಾರಪಾಣಿಃ ಪಾದಕಲಿತಕಚಕಲಾಪಾಮಾಪನ್ನನಿದ್ರಾಮಪವಿತ್ತೇತಿ ನಿರ್ವರ್ಣ್ಯಾವಗಾ-
ಹಿತತದೀಯಜಠರಃ ಸಪ್ತಧಾ ಗರ್ಭಂ ನಿರ್ಭಿದ್ಯ ನಿರಜಗಾಮ। ದಿತಿರಪಿ ವಿದಿತತನಯ ವೃತ್ತಾಂತಾ ತಾನ್ಯಪಿ ಖಂಡಾ-
ನ್ಯಾಖಂಡಲೇನ ಸಪ್ತಮರುತಃ ಕಾರಯಿತ್ವಾ ತ್ರಿವಿಷ್ಟಪಂ ಪ್ರವೆಷ್ಟಾ।
ಅನು॥ ತುಂಬ ಹಿಂದೆ ಸುರಾಸುರರಲ್ಲಿ ಅಮೃತದ ಕಾರಣಕ್ಕಾಗಿ ಪರಸ್ಪರ ಕಲಹ ಪ್ರಂಭವಾಗಲು ವಿರಾಡ್ರೂಪಿ ವಿಷ್ಣುವು ವಿಶ್ವಮೋಹಿನಿಯೆಂಬ ಮಾಯಾರೂಪವನ್ನು ತಳೆದು ವಜ್ರಾಯಧಧರನಾದ ಇಂದ್ರನಿಂದ ದೈತ್ಯರನ್ನು ಕೊಲ್ಲಿಸಿದನು. ಅವರ ತಾಯಿಯಾದ ದಿತಿಯು ಮೇರೆಮೀರಿದ ಶೋಕದಿಂದ ವ್ಯಗ್ರಳಾಗಿ ಇಂದ್ರನನ್ನು ನಾಶಮಾಡಲು ಶಕ್ತನಾದ ಪುತ್ರನನ್ನು ಪಡೆಬಯಸಿ ಪತಿಯೃದ ಮಾರೀಚನ ಆಜ್ಞೆಯಂತೆ ಕುಶಪ್ಲವವೆಂಬ ಪ್ರದೇಶದಲ್ಲಿ ತಪಸ್ಸನ್ನು ಆಚರಿಸಿದಳು. ಮಾರುವೇಷದಿಂದ ಅವಳ ಸೇವೆಯನ್ನು ಮಾಡುತ್ತಿದ್ದ ಇಂದ್ರನು ಕಾಲುಗಳ ಸ್ಥಾನದಲ್ಲಿ ತಲೆಗೂದಲನ್ನಿಟ್ಟು ನಿದ್ರಿಸುತ್ತಿದ್ದ ಅವಳು ಅಶುಚಿ ಯಾದಳೆಂದು ನಿರ್ಧರಿಸಿ ಅವುಳ ಉದರದೊಳಗೆ ಇಳಿದು ಗರ್ಭವನ್ನು ಏಳು ಭಾಗಗಳಾಗಿ ಸೀಳಿ ಹೊರಬಂದನು. ದಿತಿಯು ಕೂಡ ತನ್ನ ( ಗರ್ಭಸ್ತ ) ತನಯನ ಅವಸ್ಥೆಯನ್ನು ತಿಳಿದು ಆ ಗರ್ಭಖಂಡಗಳನ್ನು ಇಂದ್ರನಿಂದಲೇ ಸಪ್ತಮರುತ್ತುಗಳೆಂದು ಪ್ರಸಿದ್ಧಿಪಡಿಸಿ ದೇವಲೋಕಕ್ಕೆ ಹೋದಳು.
ಅಮೃತಮಥನದಲ್ಲಿ ಸುರೆಗೆ ಅಧಿದೇವತೆಯಾದ " ವಾರುಣಿ " ಎಂಬವಳು ವರುಣಪುತ್ರಿಯಾಗಿ ಜನಿಸಿದಳು. ಸುರಾಳನ್ನು ಸ್ವೀಕರಿಸಿದವರು "ಸುರರು" ನಿರಾಕರಿಸಿದವರು " ಅಸುರರು" ಎಂದು ಪ್ರಸಿದ್ಧರಾದರು. ದಿತಿಯ ಮಕ್ಕಳು ದೈತ್ಯರು ಅಥವಾ ದೈತೇಯರು. ಅದಿತಿಯ ಮಕ್ಕಳು ಆದಿತ್ಯರು.ಅಮೃತಕ್ಕಾಗಿ ಸುರಾಸುರರ ಕಲಹವುಂಟಾಗಲು ರಾಕ್ಷಸರೂ ದೈತ್ಯರೊಡನೆ
ಸೇರಿಕೊಂಡಾಗ ಇಂದ್ರ ದೈತ್ಯರನ್ನೂ ರಾಕ್ಷಸರನ್ನೂ ಕೊಂದ. ಇಂದ್ರನನ್ನು ಕೊಲ್ಲಬಲ್ಲ ಮಗನನ್ನು ಪಡೆಯಲು ಒಂದುಸಾವಿರ ವರ್ಷ ಅಶುಚಿಯಾಗದೇ ತಪಸ್ಸನ್ನು ಆಚರಿಸಲು ದಿತಿಯಪತಿಯಾದ ಮಾರೀಚ ಸೂಚಿಸಿದ್ದ. ದಿತಿಯು ೯೯೦ ವರ್ಷಗಳವರೆಗೆ ಶುಚಿಯಾಗಿ ಎಲ್ಲಿಯೂ ತಪ್ಪದೆ ತಪಸ್ಸನ್ನು ಆಚರಿಸಿದ್ದಳು. ತನ್ನ ಬಳಿ ಮಾರುವೇಷದಲ್ಲಿ ಬಂದು ಸೇವೆ ಮಾಡುತ್ತಿದ್ದವನು ಇಂದ್ರನೆಂಬುದೂ ಆಕೆಗೆ ತಿಳಿದಿತ್ತು.ಒಮ್ಮೆ ತಲೆಯನ್ನು ಇಡುವಲ್ಲಿ ಕಾಲುಗಳನ್ನು, ಕಾಲುಗಳನ್ನು ಇಡುವಲ್ಲಿ ತಲೆಯನ್ನು ಇಟ್ಟು ಮಧ್ಯಾಹ್ನ ಆಕೆ ನಿದ್ರಿಸುತ್ತಿದ್ದಳು. ಇದು ಅಶುಚಿಸೂಚಕ. ಇಂದ್ರ ದಿತಿಯ ಗರ್ಭವನ್ನು ವಜ್ರಾಯುಧದಿಂದ
ಸೀಳುವಾಗ ಶಿಶುವು ರೋದಿಸೆತು. ಆಗ ಇಂದ್ರ "ಅಳಬೇಡ" ಎಂದು ಹೇಳಿದನು. ಅವರೇ ಮುಂದೆ ಸಪ್ತ "ಮಾರುತರಾದರು"
ಇಂದ್ರ ದಿತಿಯನ್ನು ಉಪಚರಿಸಿದ ಸ್ಥಾನವೇ ಈ ವಿಶಾಲಾ ನಗರಿ.
ಪ॥ ಅಲಂಬುಸಾಯಾಮಿಕ್ಷ್ವಾಕೋರ್ಜಾತಃ ಕಶ್ಚಿನ್ಮಹೀಪತಿಃ।
ವಿಶಾಲೇತಿ ಸ್ವನಾಮ್ನಾತ್ರ ವಿಶಾಲಾಂ ವಿದಧೇ ಪುರೀಮ್॥೮೯॥
ಗ॥ ತದನು ತದ್ವಾಸ್ತವ್ಯೇನ ಸುಮತಿನಾಮ್ನಾನೃಪತಿನಾ ಕೃತಾತಿಥ್ಯಃ ಸರಾಜಪುತ್ರೋ ಭಗವಾನ್ ವಿಶ್ವಾಮಿತ್ರಸ್ತತ್ರ ನಿಶೀಥಿನೀಂ ನೀತ್ವಾ ಮಿಥಿಲಾಂ ಪ್ರತಿ ಪ್ರಸ್ಥಿತಃ ಪ್ರತಪಸಾಮುತ್ತಮಸ್ಯ ಗೌತಮಸ್ಯಾಶ್ರಮಂ ಪ್ರದರ್ಶ್ಯ ತದ್ದಾರಾನುಷಕ್ತಾಂ ಕಥಾಮಿತ್ಥಮಕಥಯತ್।
ಅನು॥ ಅಲಂಬುಸಾ ಎಂಬವಳಲ್ಲಿ ಇಕ್ಷ್ವಾಕುವಿಗೆ ಜನಿಸಿದ ರಾಜನೊಬ್ಬನು " ವಿಶಾಲ " ಎಂಬ ತನ್ನ ಹೆಸರಿನಿಂದ ಇಲ್ಲಿ ವಿಶಾಲನಗರಿಯನ್ನು ನಿರ್ಮಿಸಿದನು.
ಅನು॥ ಅನಂತರ ಅಲ್ಲಿ ವಾಸಿಸುತ್ತಿದ್ದ ಸುಮತಿ ಎಂಬ ಹೆಸರಿನ ರಾಜನಿಂದ ರಾಜಕುವರರೊಡನೆ ಸತ್ಕರಿಸಲ್ಪಟ್ಟ ಭಗವಾನ್ ವಿಶ್ವಾಮಿತ್ರನು ಅಲ್ಲಿಯೇ ರಾತ್ರಿಯನ್ನು ಕಳೆದು ಮಿಥಿಲೆಯತ್ತ ಹೊರಟನು. ಮಹಾತಪಸ್ವಿಗಳಲ್ಲಿ ಅಗ್ರಗಣ್ಯನಾದ ಗೌತಮನ ಆಶ್ರಮವನ್ನು ತೋರಿಸುತ್ತ ಅವನ ಪತ್ನಿಗೆ ಸಂಬಂಧಿಸಿದ ಕಥೆಯನ್ನು ಹೀಗೆಂದು ನಿರೂಪಿಸಿದನು.
ಪ॥ ಅತ್ರಾಗಮದ್ಗೌತಮಧರ್ಮದಾರಾನನಾರ್ಯಜುಷ್ಟೇನ ತಥಾ ಮಹೇಂದ್ರಃ।
ಸ ಚ ಕ್ರುಧಾ ನಿರ್ವೃಷಣಂ ವೃಷಾಣ ಭಾರ್ಯಾಮದೃಶ್ಯಾಂ ಚ ಮುನಿಶ್ಚಕಾರ॥೯೦॥
ವನಮೇತದ್ಗತೇ ರಾಮೇ ಶಾಪಾನ್ಮುಕ್ತಾ ಭವಿಷ್ಯಸಿ।
ಇತ್ಯುಕ್ತ್ವಾ ಗೌತಮಃ ಪತ್ನೀಂ ಹಿಮಾದ್ರಿಂ ತಪಸೇ ಯಯೌ॥೯೧॥
ಇತ್ಥಂ ವಿದಿತವೃತ್ತಾಂತೇ ದೇವತಾನಾಂ ಗಣೇ ತದಾ।
ಪಿತೄಣಾಂ ಪ್ರಾಭವಾಲ್ಲೇಭೇ ಮೇಷಸ್ಯ ವೃಷಣಂ ವೃಷಾ॥೯೨॥
ತದೇನಾಮೇನಸೋ ಮುಕ್ತಾಂ ಪ್ರತಿಗೃಹ್ಣಾತು ಗೌತಮಃ।
ಇತಿ ತಸ್ಯಾಶ್ರಮಂ ಭೇಜೇ ಸಾಕಂ ರಾಮೇಣ ಕೌಶಿಕಃ॥೯೩ ॥
ಅನು॥ ಇಲ್ಲಿ ಇಂದ್ರನು ನೀಚರು ಅನುಸರಿಸುವ ಮಾರ್ಗದಿಂದ ಗೌತಮನ ಧರ್ಮಪತ್ನಿಯನ್ನು ಕೂಡಿದನು. ಆ ಮುನಿಯು ಕ್ರೋಧದಿಂದ ಇಂದ್ರನನ್ನು ವೃಷಣರಹಿತನನ್ನಿಗಿಯೂ ಪತ್ನಿಯನ್ನು ಅದೃಶ್ಯಳನ್ನಾಗಿಯೂ ಮಾಡಿದನು.
ರಾಮನು ಈ ವನಕ್ಕೆ ಬಂದಾಗ ಶಾಪದಿಂದ ಮುಕ್ತಳಾಗುವೆ ಎಂದು ಪತ್ನಿಗೆ ನುಡಿದು ಗೌತಮನು ತಪಸ್ಸಿಗಾಗಿ ಹಿಮವತ್ ಪರ್ವತಕ್ಕೆ ಹೋದನು.
ಆಗ ಈ ರೀತಿಯ ಘಟನೆಯನ್ನು ದೇವತೆಗಳೆಲ್ಲ ತಿಳಿಯಲು ಇಂದ್ರನು ಪಿತೃಗಳ ಪ್ರಭಾವದಿಂದ ಟಗರಿನ ವೃಷಣವನ್ನು ಪಡೆದನು.
"ಈಗ ಪಾಪದಿಂದ ಮುಕ್ತಳಾದ ಇವಳನ್ನು ಗೌತಮನು ಮರಳಿ ಸ್ವೀಕರಿಸಲಿ" ಎಂಬುದಕ್ಕಾಗಿ ರಾಮನ ಜೊತೆ ಕೌಶಿಕನು ಅವನ ಆಶ್ರಮಕ್ಕೆ ಬಂದನು.
ಅಹಲ್ಯೆಯ ಅಪ್ರತಿಮ ಸೌಂದರ್ಯದಿಂದ ಮೋಹಿತನಾದ ಇಂದ್ರ ಅವಳ ಪತಿ ಗೌತಮನಿಲ್ಲದ ಸಮಯದಲ್ಲಿ ಗೌತಮನ ವೇಷವನ್ನು ಧರಿಸಿ ಬಂದು ಅಹಲ್ಯೆಯನ್ನು ಕೂಡಿದನು. ಗೌತಮನಿಂದ ಶಾಪಗ್ರಸ್ತನಾಗಿ ವೃಷಣರಹಿತನಾದ ಬಳಿಕ ಇಂದ್ರ ದೇವತೆಗಳ ಬಳಿ " ಅತಿಯಾಗಿ ವರ್ಧಿಸುತ್ತಿದ್ದ ಗೌತಮನ ತಪಶ್ಯಕ್ತಿಯನ್ನು ನಿಯಂತ್ರಿಸಲೋಸುಗವೇ ತಾನು ಹೀಗೆ ಮಾಡಿದ್ದು. ಈಗ ನನ್ನನ್ನು ಶಪಿಸಿದ್ದರಿಂದ ಅವನ ತಪಶ್ಯಕ್ತಿ ಊನವಾಗಿದೆ. ಲೋಕಹಿತಕ್ಕಾಗಿ ಪ್ರಯತ್ನಿಸಿದ ತನಗೆ ಈ ಅವಸ್ಥೆ ಒದಗಿತು" ಎಂದೆನ್ನುತ್ತಾನೆ. ಆಗ ದೇವತೆಗಳು ಪಿತೃಗಳ ಬಳಿಯಿದ್ದ ಮೇಷ( ಟಗರು ) ದ ವೃಷಣಗಳನ್ನು ಇಂದ್ರನಿಗೆ ಜೋಡಿಸುವಂತೆ ಪಿತೃಗಳಲ್ಲಿ ಪ್ರಾರ್ಥಿಸಿ ಇಂದ್ರನನ್ನು ಮೇಷವೃಷಣನನ್ನಾಗಿಸಿದರು.
ಪ॥ ದುಃಖೇ ಸುಖೇ ಚ ರಜ ಏವ ಬಭೂವ ಹೇತು-
ಸ್ತಾದೃಗ್ವಿಧೇ ಮಹತಿ ಗೌತಮಧರ್ಮಪತ್ನ್ಯಾಃ ।
ಯಸ್ಮಾದ್ಗುಣೇನ ರಜಸಾ ವಿಕೃತಿಂ ಗತಾ ಸಾ
ರಾಮಸ್ಯ ಪಾದರಜಸಾ ಪ್ರಕೃತಿಂ ಪ್ರಪೇದೇ ॥೯೪॥
ಅನು॥ ಗೌತಮನ ಧರ್ಮಪತ್ನಿಯ ಅಂತಹ ತೀವ್ರವಾದ ದುಃಖ ಹಾಗೂ ಸುಖಗಳಲ್ಲಿ ರಜಸ್ಸೇ ಮೂಲಕಾರಣವಾಯಿತು. ಏಕೆಂದರೆ ರಜೋಗುಣದಿಂದ ಆಕೆ ವಿಕೃತಿಯನ್ನು ಹೊಂದಿದರೆ ರಾಮನ ಪಾದರಜಸ್ಸಿನಿಂದ ( ಪುನಃ ) ಪ್ರಕೃತಿಯನ್ನು ಹೊಂದಿದಳು.
ರಜಸ್ ಎಂಬ ಗುಣ ಹಾಗೂ ಧೂಳಿಯ ಕಣಗಳು ಎಂಬ ಎರಡು ಅರ್ಥಗಳು ರಜಸ್ ಪದಕ್ಕಿವೆ. ರಜೋಗುಣದ ಆಧಿಕ್ಯದಿಂದ ಆಕೆ ಇಂದ್ರನನ್ನು ಸೇರಿ ದುಃಖವನ್ನೂ ವಿಕೃತಿಯನ್ನೂ ಪಡೆದರೆ, ರಾಮನ ಪಾದ ಧೂಳಿಯ ಕಣಗಳ ಸಂಪರ್ಕದಿಂದ ಸುಖವನ್ನೂ ಪ್ರಕೃತಿಯನ್ನೂ ( ಮೂಲಸ್ಥಿತಿಯನ್ನು ) ಮರಳಿ ಪಡೆದಳು.
ಗ॥ ತಸ್ಮಿನ್ನಹಲ್ಯಯಾ ಗೌತಮೇನ ಚ ಕೃತಮಾತಿಥ್ಯಂ ವಿಶ್ವಾಮಿತ್ರಃ ಸರಾಜಪುತ್ರಃ ಪ್ರತಿಗೃಹ್ಯ ಮಿಥಿಲೋಪಕಂಠಭುವಿ ಜನಕಯಜನಭವನಮಭಜತ। ತದನು ಜನಕೇನ ವಿಧಿವದಭ್ಯರ್ಚಿತೇ ತಸ್ಮಿನ್ನಿಮಿಕುಲಪುರೋಧಾಃ ಶತಾನಂದೋ ರಘುನಂದನಮೇವಮಭಾಷತ।
ಅನು॥ ಅಲ್ಲಿ ಅಹಲ್ಯೆಯೂ ಗೌತಮನೂ ನೀಡಿದ ಸತ್ಕಾರವನ್ನು ರಾಜಕುಮಾರರ ಜೊತೆ ಸ್ವೀಕರಿಸಿದ ವಿಶ್ವಾಮಿತ್ರನು ಮಿಥಿಲೆಯ ಹೊರ ಆವರಣದಲ್ಲಿರುವ ಜನಕನ ಯಜ್ಞಶಾಲೆಯನ್ನು ಸೇರಿದನು. ಅನಂತರ ಜನಕನಿಂದ ವಿಶ್ವಾಮಿತ್ರನು ಶಾಸ್ತ್ರೋಕ್ತವಾಗಿ ಪೂಜಿತನಾಗಲು ನಿಮಿವಂಶದ ಪುರೋಹಿತನಾದ ಶತಾನಂದನು ರಾಘವನನ್ನು ಕುರಿತು ಹೀಗೆಂದನು.
ಜನಕಮಹಾರಾಜನ ಇನ್ನೊಂದು ಹೆಸರು ಮಿಥಿ. ಅವನಿಂದ ಪಾಲಿತವಾಗುತ್ತಿದ್ದುದರಿಂದ ಮಿಥಿಲಾ. ವೈರಿಗಳು ಮಥಿಸಲ್ಪಡುವರು ಎಂಬುದರಿಂದಲೂ ಮಿಥಿಲಾ. ಇಕ್ಷ್ವಾಕುವಿನ ಪುತ್ರರಲ್ಲೊಬ್ಬ ನಿಮಿ. ವಿದೇಹರಾಜವಂಶದ ಮೂಲಪುರುಷ.
ಪ॥ ತಿಷ್ಠನ್ ಕ್ಷತ್ರಾರ್ಹವೃತ್ತೌ ಮುನಿರಗಮದಸಾವಾಶ್ರಮಂ ಬ್ರಹ್ಮಸೂನೋ
ರಾತಿಥ್ಯಂ ತತ್ರ ಲಬ್ಧ್ವಾ ನಿರವಧಿ ಸುರಭೇಃ ಪ್ರಾಭವಾದಿತ್ಯವೇತ್ಯ ।
ಸಾ ತೇನ ಪ್ರಾರ್ಥಿತಾಭೂತ್ತದನು ಮುನಿವರೇ ನಾಭ್ಯುಪೇತೇ ಚಕರ್ಷ
ಕ್ರೋಶಂತೀಂ ತಾಂ ತಯೈವ ಪ್ರಚುರಬಲಜುಷಾ ಕಾಂದಿಶೀಕೋ ಬಭೂವ॥೯೫॥
ಅನು॥ ಈ ಮುನಿ (ವಿಶ್ವಾಮಿತ್ರನು) ಕ್ಷತ್ರಿಯೋಚಿತವಾದ ಬದುಕಿನಲ್ಲಿ ನೆಲೆಯಾಗಿದ್ದವನು ಬ್ರಹ್ಮನ ಮಗನ ( ವಸಿಷ್ಠನ) ಆಶ್ರಮಕ್ಕೆ ಹೋದನು. ಅಲ್ಲಿ ಮೇರೆಯೇ ಇಲ್ಲದ ಆತಿಥ್ಯವನ್ನು ಪಡೆದು (ಅದು) ಕಾಮಧೇನುವಿನ ಪ್ರಭಾವದಿಂದ ಎಂದು ಅರಿತು ಅವಳನ್ನು ಅವನು ಯಾಚಿಸಿದನು. ಅನಂತರ ಮುನಿಶ್ರೇಷ್ಠನು ಸಮ್ಮತಿಸದಿರಲು ಒರಲುತ್ತಿದ್ದ ಅವಳನ್ನು ಸೆಳೆದನು. ಅಧಿಕ ಬಲವನ್ನು ಹೊಂದಿದ್ದ ಅವಳಿಂದಲೇ ಓಡೆಸಲ್ಪಟ್ಟನು.
ಇಲ್ಲಿಂದ ಮುಂದೆ ಕ್ಷತ್ರಿಯನಾಗಿದ್ದ ಗಾಧಿಸುತನು ಬ್ರಹ್ಮರ್ಷಿ ವಿಶ್ವಾಮಿತ್ರನಾದ ವೃತ್ತಾಂತ ಸುದೀರ್ಘವಾಗಿ ವರ್ಣಿತವಾಗಿದೆ. ಸುರಭಿ ಅಥವಾ ಕಾಮಧೇನುವು ಅಮೃತಮಥನದಿಂದ ಜನಿಸಿದ್ದು. ಇದು ಇಂದ್ರನ ಹಸು. ಇದರ ಮಗಳಾದ ನಂದಿನಿಯನ್ನು ಹೋಮಕ್ಕೆ ಅಗತ್ಯವಾದ ದ್ರವ್ಯಗಳನ್ನು ಪಡೆಯಲು ವಸಿಷ್ಠನಿಗೆ ದೇವತೆಗಳು ನೀಡಿದೂದರು. ಆ ನಂದಿನಿಗೂ ಸುರಭಿ(ವಾಸ್ತವದಲ್ಲಿ ಸೌರಭೇಯಿ) ಎಂಬ ಹೆಸರು ಸಲ್ಲುತ್ತದೆ.
ಗ॥ ಬಹುಶಸ್ತದ್ಬಲಚಕಿತಸ್ಯ ತಪೋಬಲಾಧಿಗತವಿವಿಧಾಯುಧನಿಗಮಸ್ಯ ಭೂಯೋऽಪಿ ಸುರಭಿನಿಮುತ್ತ ಸಮಾರಬ್ಧಸಮರಸ್ಯ ದಿವ್ಯಾಸ್ತ್ರಪರಂಪರಾಂ ಬ್ರಹ್ಮದಂಡೇನ ನಿರುಂಧನ್ನರುಂಧತೀಜಾನಿರವತಸ್ಥೇ। ತತೋऽಯಂ ಜಾತವ್ಯಲೀಕಃ ಕ್ಷಾತ್ರಾತ್ತೇಜಸಃ ಪರಂ ಬ್ರಾಹ್ಮಮೇವ ಮಹೋ ಮಹೀಯ ಇತಿ ನಿಶ್ಚಿತ್ಯ ತತ್ಸಿದ್ಧಯೇ ದಕ್ಷಿಣಸ್ಯಾಂ ದಿಶಿ ತೀವ್ರತರಂ ತಪಶ್ಚಾರ।
ಅನು॥ ಕಾಮಧೇನುವಿನ ಅಪಾರಶಕ್ತಿಯಿಂದ ಆಶ್ಚರ್ಯಚಕಿತನಾಗಿ ತಪೋಬಲದಿಂದ ಹೊಂದಿದ ವಿವಿಧ ಅಸ್ತ್ರಸಮೂಹದಿಂದೊಡಗೂಡಿದ( ವಿಶ್ವಾಮಿತ್ರನು) ಪುನಃ ಕಾಮಧೇನುವಿಗಾಗಿ ಯುದ್ಧವನ್ನೇ ಆರಂಭಿಸಲು ಅವನ
ದಿವ್ಯಾಸ್ತ್ರಪರಂಪರೆಯನ್ನು ತನ್ನ ಬ್ರಹ್ಮದಂಡದಿಂದ ವಸಿಷ್ಠನು ತಡೆದು ನಿಂತನು. ಬಳಿಕ ಇವನು ಖಿನ್ನನಾಗಿ ಕ್ಷಾತ್ರತೇಜಸ್ಸಿಗಿಂತ ಬ್ರಾಹ್ಮತೇಜಸ್ಸೇ ಮಹಾಮಹಿಮಶಾಲಿಯಾದುದು ಎಂದು ನಿರ್ಧರಿಸಿ ಅದನ್ನು ಸಿದ್ಧಿಸಿಕೊಳ್ಳಲು ದಕ್ಸಿಣದಿಕ್ಕಿನಲ್ಲಿ ಅತಿಘೋರವಾದ ತಪಸ್ಸನ್ನು ಆಚರಿಸಿದನು.
ಅರುಂಧತಿಯ ಪತಿ ವಸಿಷ್ಠ. ಗಾಧಿಸುತನ ಚತುರಂಗ ಸೈನ್ಯವನ್ನು ಈ ಹಿಂದೆ ಕಾಮಧೇನು ಹಿಮ್ಮೆಟ್ಟಿಸಿತು. ಈಗ ವಸಿಷ್ಠ ಆ ಧೇನುವಿನ ರಕ್ಷಣೆಗೆ ಮುಂದಾದನು. ಕೌಶಿಕ ಪ್ರಯೋಗಿಸಿದ ದಿವ್ಯಾಸ್ತ್ರಗಳೆಲ್ಲ ವಸಿಷ್ಠನ ಬ್ರಹ್ಮದಂಡದಲ್ಲಿ ಲೀನವಾಗುತ್ತಿದ್ದವು. ಅದನ್ನು ಕಂಡು ಕೌಶಿಕ
ಗ॥ ಅಥ ಸಾವಿತ್ರಃ ಕ್ಷತ್ರಿಯಸ್ತ್ರಿಶಂಕುಃ ಸಶರೀರಂ ಸ್ವರ್ಗಸಿದ್ಧಿಮಭ್ಯರ್ಥಯಮಾನೋ ವಸಿಷ್ಠೇನ ಪ್ರತ್ಯಾಖ್ಯಾತಸ್ತಸ್ಯ
ಪುತ್ರೈರ್ಮಹೋದಯಾದಿಭಿರ್ನಿರ್ಬಂಧಕುಪಿತೈರ್ದತ್ತಚಂಡಾಲಭಾವಸ್ತಮೇನಂ ಶರಣಮಭಜತ। ಅಸಾವಪಿ ತನ್ಮನೋ-
ರಥಪರಿಪೂರ್ತಯೇ ಕ್ರತುಮೇಕಂ ಪ್ರಾಕ್ರಮತ। ತತ್ರ ಸಮಾಗತೇಷು ಬ್ರಾಹ್ಮಣೇಷು ಜುಗುಪ್ಸಯಾ ತ್ರಿಶಂಕೋರನಾಗತಾ-
ನ್ವಸಿಷ್ಠಪುತ್ರಾನಯಂ ಶಾಪೇನ ಶ್ವಭಕ್ಷಕಾನಕರೋತ್। ತತಃ ಕ್ರತುಭುಜಾಂ ವರ್ಗೇऽಪಿ ಸ್ವರ್ಗಾದನವತೀರ್ಣೇ।
ಅನೈ॥ ಆ ಬಳಿಕ ಸೂರ್ಯವಂಶಜನಾದ ತ್ರಿಶಂಕುವು ಸದೇಹಿಯಾಗಿ ಸ್ವರ್ಗವನ್ನು ಪಡೆಯಲು ಬಯಸಿ ವಸಿಷ್ಠನಿಂದ ನಿರಾ-
ಕರಿಸಲ್ಪಟ್ಟು, ಅತಿಯಾಗಿ ಒತ್ತಾಯಿಸಿದ್ದರಿಂದ ಸಿಟ್ಟಿಗೆದ್ದ ವಸಿಷ್ಠನ ಪುತ್ರರಾದ ಮಹೋದಯ ಮುಂತಾದವರಿಂದ ಚಾಂಡಾಲತ್ವವನ್ನು ಹೊಂದಿ ಕೌಶಿಕನನ್ನು ಆಶ್ರಯಿಸಿದನು. ಇವನು ಕೂಡ ಅವನ ಇಷ್ಟವನ್ನು ಪೂರ್ಣಗೊಳಿಸಲು ಯಜ್ಞವೊಂದನ್ನು ಆರಂಭಿಸಿದನು. (ಉಳಿದ) ಬ್ರಾಹ್ಮಣರೆಲ್ಲ ಅಲ್ಲಿಗೆ ಆಗಮಿಸಿದ್ದರೂ ತ್ರಿಶಂಕುವಿನ ಕುರಿತಾದ ಜುಗುಪ್ಸೆಯಿಂದ ಬಾರದ ವಸಿಷ್ಠನ ಪುತ್ರರನ್ನು ಇವನು ಶಾಪದಿಂದ ನಾಯಿಯ ( ಮಾಂಸವ )ನ್ನುತಿನ್ನುವವರನ್ನಾಗಿಸಿದನು. ಅನಂತರ ಯಜ್ಞದ ( ಹವಿರ್ಭಾಗವನ್ನು) ಸೇವಿಸುವ ( ದಂವ) ಗಣವೂ ಸ್ವರ್ಗದಿಂದ ಇಳಿಯದಿರಲು-
ವಸಿಷ್ಠನ ಮೇಲಿನ ಪೂರ್ವದ್ವೇಷದಿಂದಲೇ ಕೌಶಿಕ ತ್ರಿಶಂಕುವಿಗೆ ಆಶ್ರಯವನ್ನು ನೀಡಿದನು.
ಅಯಂ ಮಹಾತ್ಮಾ ತಪಸಃ ಪ್ರಭಾವಾದಾರೋಪಯಾಮಾಸ ದಿವಂ ತ್ರಿಶಂಕುಮ್।
ನೀಲಾಂಬರಂ ನಿಹ್ನುತರಾಜವೇಷಂ ವರ್ಷಾನಿಶೀಥಾದವಿಶೇಷವೇಷಮ್॥೯೬।
ಅಪಾತಯತ್ಸ್ವರ್ಗಮುಪಾಶ್ರಯಂತಂ ಸಂಜಾತಮನ್ಯುಃ ಶತಮನ್ಯುರೇನಮ್।
ತತೋऽವಲಂಬ್ಯಾಸ್ಯ ನಿಯೋಗಶಂಕುಂ ಲೇಭೇ ತ್ರಿಶಂಕರ್ಗಗನೇ ಪ್ರತಿಷ್ಠಾಮ್॥೯೭॥
ಅನು॥ ಕಪ್ಪು ಬಟ್ಟೆಯನ್ನು ಧರಿಸಿದ್ದ. ರಾಜಲಕ್ಷಣಗಳೆಲ್ಲ ಅಡಗಿಹೋದ( ಚಂದ್ರನಿಲ್ಲದ ) ಮಳೆಗಾಲದ ರಾತ್ರಿಗಿಂತ ವಿಭಿನ್ನವಲ್ಲದ ವೇಷವನ್ನು ಹೊಂದಿದ ತ್ರಿಶಂಕುವನ್ನು ತಪಸ್ಸಿನ ಮಹಿಮೆಯಿಂದ ಈ ಮಹಾತ್ಮನು ಸ್ವರ್ಗಕ್ಕೆ ಏರಿಸಿದನು.
( ಇದರಿಂದ ) ಕೋಪಗೊಂಡ ಇಂದ್ರನು ಸ್ವರ್ಗವನ್ನು ಆಶ್ರಯಿಸುತ್ತಿದ್ದ ಇವನನ್ನು ಕೆಳಗೆ ಬೀಳಿಸಿದನು. ಬಳಿಕ ಕೌಶಿಕನ
( ಅಲ್ಲಿಯೇ ನಿಲ್ಲು, ಬೀಳದಿರು ಎಂಬ ) ಆದೇಶವೆಂಬ ಕಂಬವನ್ನು ಆಶ್ರಯಿಸಿ ತ್ರಿಶಂಕುವು ಆಕಾಶದಲ್ಲಿ ಸ್ಥಾನವನ್ನು ಪಡೆದನು.
ಗ॥ ತತೋ ಗೀರ್ವಾಣಗಣಪ್ರಾರ್ಥನಯಾ ಪರಿತ್ಯಕ್ತಭುವನಾಂತರನಿರ್ಮಾಣಕರ್ಮಾಗಣಂ ತತ್ರ ತಪಃ ಪ್ರತ್ಯೂಹಃ ಪ್ರತ್ಯುದ್ಭೂತ ಇತಿ ಪಶ್ಚಿಮಾಯಾಂ ದಿಶಿ ಪುಷ್ಕರೇ ಪುಷ್ಕಲಂ ತಪಶ್ಚರಂತಮಮುಮಂಬರೀಷಯಜ್ಞಪಶುವಿನಾಶ -
ಪ್ರಾಯಶ್ಚಿತ್ತಾರ್ಥಂ ಬಹ್ವೀಭಿರ್ಗೋಭಿಃ ಕ್ರೀತ್ವಾ ನರಪಶುತಾಂ ನೀಯಮಾನಸ್ತಾವದೃಚೀಕಸ್ಯ ಮಧ್ಯಮಪುತ್ರಃ ಶುನಃಶೇಪಃ ಶರಣಮಯಾಚತ। ಅಯಂ ಭಗವನ್ನಿಜತನಯವಿನಿಮಯೇನ ರಕ್ಷಿತುಮೇನಮುನ್ಮುಖಃ ಪರಾಙ್ಮುಖೇಭ್ಯಸ್ತೇಭ್ಯೋ
ಹವಿಷ್ಯಂದಾದಿಭ್ಯಃ ಶಾಪೇನ ವಸಿಷ್ಠಪುತ್ರದಶಾಂ ದತ್ವಾಗಾಥಾದ್ವಯಪ್ರೀತಾಭ್ಯಾಮಿಂದ್ರೋಪೇಂದ್ರಾಭ್ಯಾಮಂಬರೀಷಂ
ಶೈನಃಶೇಪಂ ಚ ಪರಿಪೂರ್ಣಮನೋರಥೌ ಕಾರಯಾಮಾಸ।
ಅನು॥ ಬಳಿಕ ದೇವಸಮೂಹದ ಪ್ರಾರ್ಥನೆಯ ಮೇರೆಗೆ ಬೇರೊಂದೇ ಭುವನವನ್ನು ನಿರ್ಮಿಸುವ ಕಾರ್ಯವನ್ನು ಕೈಬಿಟ್ಟು ಅಲ್ಲಿ ತಪಶ್ಚರ್ಯೆಗೆ ಬಾಧೆಯುಂಟಾಗಿದೆಯೆಂದು ಪಶ್ಚಿಮದಿಕ್ಕಿನ ಪುಷ್ಕರಕ್ಷೇತ್ರದಲ್ಲಿ ತಪಸ್ಸನ್ನು ಆಚರಿಸುತ್ತಿರುವ ಇವನ ಬಳಿ, ಅಂಬರೀಷನ ಯಜ್ಞಪಶು ನಾಶವಾದುದರಿಂದ ಪ್ರಾಯಶ್ಚಿತ್ತಕ್ಕಾಗಿ ಅನೇಕ ಗೋವುಗಳನ್ನು ನೀಡಿ ನರಬಲಿಯೆಂದು
ಒಯಲ್ಪಡುತ್ತಿದ್ದ ಋಚೀಕನ ಮಧ್ಯಮಪುತ್ರನಾದ ಶುನಃಶೇಪನು ಶರಣು ಬಂದನು.
ಈ ಮಹಾತ್ಮನು( ಶುನಃಶೇಪನ ಬದಲು ) ತನ್ನ ಪುತ್ರರಲ್ಲಿ ಒಬ್ಬನನ್ನು ವಿನಿಮಯವಾಗಿ ನೀಡಿ ಅವನನ್ನು( ಶುನಃಶೇಪನನ್ನು ) ರಕ್ಷಿಸಲು ಮನಮಾಡಿದನು. ಅವರಾರೂ ಸಿದ್ಧರಾಗದಿರಲು ಹವಿಷ್ಯಂದಾದಿ ಆ ( ತನ್ನು ) ತನಯರಿಗೆ ಶಾಪದಿಂದ ವಸಿಷ್ಠಪುತ್ರರ ಗತಿಯನ್ನೇ ಕಾಣಿಸಿ ಮಂತ್ರದ್ವಯದಿಂದ ಇಂದ್ರನನ್ನೂ ವಿಷ್ಣುವನ್ನು ಪ್ರಸನ್ನಗೊಳಿಸಿ ಅಂಬರೀಷನ ಹಾಗೂ ಶುನಃಶೇಪನ ಅಭೀಷ್ಟಗಳನ್ನು ನೆರವೇರಿಸಿದನು.
ತ್ರಿಶಂಕುವಿಗಾಗಿ ಯಾಗ ಮಾಡಿದ ಪ್ರದೇಶದಲ್ಲಿ ನಿರಾತಂಕವಾಗಿ ತಪಸ್ಸನ್ನು ಆಚರಿಸಲು ಸಾಧ್ಯವಿಲ್ಲವೆಂದು ಕೌಶಿಕ ಪಶ್ಚಿಮದಿಕ್ಕಿನತ್ತ ತೆರಳಿದನು. ಅಯೋಧ್ಯಾಧಿಪತಿಯಾದ ಅಂಬರೀಷನ ಯಜ್ಞಪಶುವನ್ನು ಇಂದ್ರ ಅಪಹರಿಸಿದನು. ನಷ್ಟವಾದ ಪಶುವಿಗೆ ನರಪಶುವನ್ನು ಬಲಿಗೊಡುವುದೇ ಪ್ರಾಯಶ್ಚಿತ್ತ. ಅಂಬರೀಷನ ಲಕ್ಷಾಂತರ ಗೋವುಗಳನ್ನು ಮೌಲ್ಯವಾಗಿ ನೀಡಿ ಕೌಶಿಕನ ಅಕ್ಕ ಸತ್ಯವತಿಯ ಹಾಗೂ ಋಚೀಕನೆಂಬ ಋಷಿಯ ಪುತ್ರನಾದ ಶುನಃಶೇಪನೆಂಬವನನ್ನು ಕೊಂಡುಕೊಂಡು ಅಯೋಧ್ಯೆಗೆ ಮರಳುವಾಗ ಮಾರ್ಗಮಧ್ಯೆ ವಿಶ್ರಾಂತಿಗೆಂದು ನಿಂತನು. ಸನಿಹದಲ್ಲಿಯೇ ತಪವನ್ನಾಚರಿ-
ಸುತ್ತಿದ್ದ ಕೌಶಿಕನನ್ನು ಕಂಡು ಶುನಃಶೇಪನು ಸೋದರಮಾವನಾದ ಕೌಶಿಕನಿಗೆ ಶರಣು ಬಂದನು.
ಬಳಿಕ ಕೌಶಿಕನು ತನ್ನ ನೂರು ಪುತ್ರರಲ್ಲಿ ಒಬ್ಬನನ್ನು ಶುನಃಶೇಪನ ಬದಲಿಗೆ ಕಳುಹಿಸಲು ಮನಮಾಡಿದಾಗ ಯಾರೂ
ಸಮ್ಮತಿಸಲಿಲ್ಲ. ಆಗ ಕೋಪದಿಂದ ಅವರೆಲ್ಲರನ್ನೂ ಶ್ವಪಚರಾಗುವಂತೆ ಶಪಿಸಿ ಅಗ್ನಿ, ಇಂದ್ರ, ವಿಷ್ಣುಗಳನ್ನು ಬಲಿಯಿಲ್ಲದೇ ಸಂಪ್ರೀತಗೊಳಿಸುವಮಂತ್ರಗಳನ್ನು ಶುನಃಶೇಪನಿಗೆ ಬೋಧಿಸಿದನು. ಅಂಬರೀಷನ ಯಜ್ಞದಲ್ಲಿ ಆ ಮಂತ್ರಗಳನ್ನು ಉಚ್ಚರಿಸಿ ಶುನಃಶೇಪನೂ ದೀರ್ಘಾಯುವಾದನು. ಅಂಬರೀಷನ ಯಾಗವೂ ನೆರವೇರಿತು. ಈ ಅಂಬರೀಷನೇ ಹರಿಶ್ಚಂದ್ರನೆಂದು ಕೆಲವರ ಅಭಿಪ್ರಾಯ.
ಗ॥ ತತಸ್ತಪಸ್ಯಂತಮೇನಂ ಮೇನಕಾಸಂಗತಸ್ತಪೋಭಂಗಶ್ಚಿರಮಂಗೀಚಕಾರ। ಪಶ್ಚಾತ್ಪಶ್ಚಾತ್ತಾಪಾಭಿ ಭೂತೋऽಯಮುತ್ತ-
ರೇ ಭೂಭೃತಿ ಕೌಶಿಕೀತೀರೇ ಘೋರಂ ತಪಶ್ಚಚಾರ । ತತ್ರ ಜಂಭಾರಿಪ್ರಹಿತಾಂ ರಂಭಾಂ ಶೈಲೀ ಭವೇತಿ ಶಪ್ತ್ವಾ ಪೂರ್ವಸ್ಯಾಂ ದಿಶಿ ನಿರಸ್ತನಿಃಶ್ವಾಸಂ ತಪಶ್ಚರತ್ಯಮುಷ್ಮಿನ್ನೂಷ್ಮಣಾ ತಪೋऽಗ್ನೇರುದ್ವಿಗ್ನಿತಾಮರಸಖಸ್ತಾಮರಸಾಸನಃ ಸನ್ನಿಧಾಯ ಜಿತೇಂದ್ರಿಯತ್ವಾದ್ಬ್ರಹ್ಮರ್ಷಿರಸಿ, ವಸಿಷ್ಠೋऽಪ್ಯೇವಂ ವ್ಯಾಹರತು ಭವಂತಮಿತ್ಯಭಾಷತ।
ಅನು॥ ಅನಂತರ ತಪಸ್ಸನ್ನಾಚರಿಸುತ್ತಿದ್ದ ಎವನನ್ನು ಮೇನಕೆಯ ಸಂಗದಿಂದುಂಟಾದ ತಪೋಭಂಗವು ದೀರ್ಘಕಾಲ ಆವರಿಸಿಕೊಂಡಿತು. ಬಳಿಕ ಪಶ್ಚಾತ್ತಾಪದಿಂದ ಕೂಡಿದ ಇವನು ಉತ್ತರಪರ್ವತದ ಬಳಿ ಕೌಶಿಕೀನದಿಯ ತಟದಲ್ಲಿ
ಮಹಾಘೋರವಾದ ತಪಸ್ಸನ್ನಾಚರಿಸಿದನು. ಅಲ್ಲಿಗೆ ಇಂದ್ರ ಕಳುಹಿದ ರಂಭೆಯನ್ನು ಶಿಲೆಯಾಗು ಎಂದು ಶಪಿಸಿ ಪೂರ್ವ-
ದಿಕ್ಕಿನಲ್ಲಿ ಶ್ವಾಸವನ್ನು ನಿರೋಧಿಸಿ ಇವನು ತಪಗೈಯುತ್ತಿರಲು ( ಆ ತಪಸ್ಸಿನ ) ಬೇಗೆಯಿಂದ ಕಳವಳಗೊಂಡ ದೇವತೆಗಳ ಸಖನಾದ ಬ್ರಹ್ಮನು ಪ್ರತ್ಯಕ್ಷನಾಗಿ " ನೀನು ಜಿತೇಂದ್ರಿಯನಾದುದರಿಂದ ಬ್ರಹ್ಮರ್ಷಿಯಾಗಿರುವೆ,ವಸಿಷ್ಠನೂ ನಿನ್ನನು ಹಾಗೆಂದು ಕರೆಯಲಿ" ಎಂದು ನುಡಿದನು.
ಮೇನಕೆಯ ಸಂಗದಿಂದ ಶಕುಂತಲೆ ಜನಿಸಿದ ಕಥೆ ಪ್ರಸಿದ್ಧವಾಗಿದೆ. ಅನೇಕ ವರ್ಷ ಮೇನಕೆಯೊಡನಿದ್ದ ಕೌಶಿಕನಿಗೆ ತನ್ನ ಭ್ರಷ್ಟತೆಯ ಅರಿವಾಗಿ ತಪೋಭಂಗಕ್ಕಾಗಿಯೇ ದೇವತೆಗಳು ಮೇನಕೆಯನ್ನು ಕಳುಹಿಸಿದ್ದು ಎಂದು ತಿಳಿಯಿತು. ಆದರೆ ಮೇನಕೆಯನ್ನು ಶಪಿಸದೇ ಸ್ವನಿಯಂತ್ರಣವನ್ನು ಸೃಧಿಸಿದನು. ರಾಜರ್ಷಿ, ಋಷಿ, ಮಹರ್ಷಿ, ಬ್ರಹ್ಮರ್ಷಿ, ಹೀಗೆ ಒಂದೊಂದಾಗಿ ಮೆಟ್ಟಿಲನ್ನೇರುತ್ತ ಸತತ ಪ್ರಯತ್ನದಿಂದ ಮಹಾಸಿದ್ಧಿಯನ್ನು ಸಾಧಿಸಿಕೊಂಡ ಕೌಶಿಕ ಕೊನೆಗೆ ವಿಶ್ವಕ್ಕೇ ಮಿತ್ರನಾಗಿ ವಿಶ್ವಾಮಿತ್ರನಾದನು. ವಸಿಷ್ಠನೂ ಅವನನ್ನು ಬ್ರಹ್ಮರ್ಷಿಯೆಂದು ಒಪ್ಪಿಕೊಂಡನು.
ಪ॥ ಅಸೌ ವಸಿಷ್ಠನಿರ್ದೇಶಾದ್ಬ್ರಹ್ಮರ್ಷಿತ್ವಮವಿಂದತ ।
ಯಥೋಪನಯಸಂಸ್ಕಾರಾದ್ದ್ವಿಜನ್ಮಾ ಬ್ರಹ್ಮವರ್ಚಸಮ್॥೯೮॥
ಇತಿ ಜನಕಪುರೋಧಃಶ್ಲಾಘಿತೋ ಗಾಧಿಸೂನುಃ
ಸಹ ನೃಪತನಯಾಭ್ಯಾಂ ಶರ್ವರೀಂ ತತ್ರ ನೀತ್ವಾ।
ವಿಧಿವದದಿಶದರ್ಘ್ಯಂ ಪುಷ್ಪದರ್ಭಾಗ್ರಗರ್ಭಂ
ಸರಸಿಜದಯಿತಾಯ ಜ್ಯೋತಿಷೇ ಛಾಂದಸಾಯ॥೯೯॥
ಅನು॥ ಉಪನಯನಸಂಸ್ಕಾರದಿಂದ ದ್ವಿಜನು ಬ್ರಹ್ಮತೇಜಸ್ಸನ್ನು ಹೇಗೋ ಹಾಗೆ ಇವನು ವಸಿಷ್ಠನಿಂದ ನಿರ್ದೇಶಿತನಾಗಿ ಬ್ರಹ್ಮರ್ಷಿತ್ವವನ್ನು ಹೊಂದಿದನು.
ಈ ವಿಧವಾಗಿ ಜನಕನ ಪುರೋಹಿತನಿಂದ ಪ್ರಶಂಸಿತನಾದ ವಿಶ್ವಾಮಿತ್ರನು ರಾಜಕುಮಾರರ ಜೊತೆ ಅಲ್ಲಿ ರಾತ್ರಿಯನ್ನು ಕಳೆದು ಕಮಲಗಳ ಪ್ರಿಯತಮನಾದ ವೇದ ಸ್ವರೂಪಿಯಾದ ತೇಜಸ್ಸಿಗೆ ಹೂಗಳು -ದರ್ಭೆಯ ಗರಿಕೆಗಳಿಂದ ಕೂಡಿದ ಅರ್ಘ್ಯವನ್ನು ವಿಧಿವತ್ತಾಗಿ ಅರ್ಪಿಸಿದನು.
ಮಾತೆಯ ಗರ್ಭದಿಂದ ದೇಹರೂಪದ ಜನ್ಮವೊಂದು ಗುರುವಿನ ಉಪದೇಶದಿಂದ ಪ್ರಜ್ಞಾರೂಪಿಜನ್ಮ ಇನ್ನೊಂದು - ಹೀಗೆ ಎರಡು ಜನ್ಮಗಳಿರುವುದರಿಂದ ದ್ವಿಜ.
ಗ॥ ತದನು ಜನಕರಾಜಧಾನೀಂ ರಾಮಲಕ್ಷ್ಮಣನಿರೀಕ್ಷಣಕೌತುಕಾದನವರತಪತಿತೇನ ವಿಕಚಕುವಲಯನಿಚಯಾಪಚೀ-
ಯಮಾನಮಂಚಕಮರೀಚಿಮಲಿಮ್ಲುಚೇನ ಪೌರನಾರೀಲೋಚನರೋಚಿಷಾ ಕವಚಿತನರಪತಿಪಥಾಂ ವಿಶ್ವಾಮಿತ್ರಂ ಪ್ರವಿಷ್ಯ ದಶರಥತನಯಾವಿದಮಭಾಷತ।
ಅನು॥ ಅನಂತರ ರಾಮಲಕ್ಷ್ಮಣರನ್ನು ಕಾಣುವ ಕುತೂಹಲದಿಂದ ತಡೆಯಿಲ್ಲದೇ ಬೀರಲ್ಪಡುತ್ತಿದ್ದ, ಅರಳಿದ ನೈದಿಲೆಗಳ ಸಮೂಹದಿಂದ ಹೊಮ್ಮುವ ನೀಲಕಿರಣಗಳನ್ನು ಅಪಹರಿಸುವಂತಹ ಪೌರಾಂಗನೆಯರ ಕಂಗಳ ಕಾಂತಿಯಿಂದ ತುಂಬಿದ ರಾಜಮಾರ್ಗವಿರುವ ಜನಕನ ರಾಜಧಾನಿಯನ್ನು ವಿಶ್ವಾಮಿತ್ರನು ಪ್ರವೇಶಿಸಿ ದಶರಥತನಯರಿಗೆ ಹೀಗೆಂದನು.
ರಾಮಲಕ್ಷ್ಮಣರನ್ನು ನೋಡಲು ರಾಜಬೀದಿಯ ಇಕ್ಕೆಲಗಳಲ್ಲಿ ತುಂಬಿಕೊಂಡ ನಾರಿಯರ ಕಡುಗಪ್ಪು ಕಣ್ಣುಗಳಿಂದ ಹೊಮ್ಮುತ್ತಿದ್ದ ಕಾಂತಿ ಅರಳಿದ ಕನ್ನೈದಿಲೆಗಳ ಸಮೂಹದ ಸೊಬಗನ್ನು ಅಪಹರಿಸಿತ್ತು.
ಗ॥ ಅಸ್ಯಾಂ ಖಲು ನಗರ್ಯಾಮಾರಬ್ಧಯಜ್ಞಸ್ಯ ರಾಜ್ಞೋ ಜನಕಸ್ಯ ಭಾಗಧೇಯಾತ್ಸೀತಾನಾಮಧೇಯಭಾಜನ-
ಮಜೀಜನತ್ಕನ್ಯಾರತ್ನಂ ರತ್ನಗರ್ಭಾ ಭಗವತೀ। ಅಸ್ಯಾಃ ಪುನಃ ಕಿಮಪರಂ ಮಹಾತ್ಮ್ಯಮ್।
ಅನು॥ ಈ ಪಟ್ಟಣದಲ್ಲಿ ಯಜ್ಞವನ್ನು ಆರಂಭಿಸಿದ ಜನಕನ ಸೌಭಾಗ್ಯದಿಂದ ಸೀತೆಯೆಂಬ ಹೆಸರನ್ನು ಹೊಂದಿದ ಕನ್ಯಾರತ್ನವನ್ನು ರತ್ನಗರ್ಭೆಯಾದ ಭಗವತಿ ( ಭೂದೇವಿಯು) ಪ್ರಸವಿಸಿದಳು. ಈ ನಗರಿಯ ಮಹಾತ್ಮೆಯನ್ನು ಮತ್ತೇನು ಹೇಳಲಿ.
ಪ॥ ದೇವ್ಯಾ ಯಸ್ಯಾ ವಸನಮುದಧಿಃ ಪೀಠಿಕಾ ಹಾಟಕಾದ್ರಿ -
ರ್ಹಾರಃ ಸಿಂಧುಃ ಸಗರತನಯಸ್ವರ್ಗಮಾರ್ಗೈಕಬಂಧುಃ ।
ಕ್ರೀಡಾಶೈಲಃ ಪ್ರಥಮಪುರುಷಕ್ರೋಡದಂಷ್ಟ್ರಾ ಚ ತಸ್ಯಾಃ
ಸೀತಾಮಾತುರ್ಜಗತಿ ಮಿಥಿಲಾಂ ಸೂತಿಕಾಗೇಹಮಾಹುಃ॥೧೦೦॥
ಅನು॥ ಯಾವ ಸೀತಾಜನನಿಯಾದ ಭೂದೇವಿಗೆ ಸಮುದ್ರವೇ ವಸನ, ಸುವರ್ಣಪರ್ವತವೆನಿಸಿದ ಮೇರುವೇ ಆಸನಪೀಠ, ಸಗರನ ಪುತ್ರರಿಗೆ ಸ್ವರ್ಗದ ಮಾರ್ಗದಲ್ಲಿ ಬಂಧುವಾದ ಭಾಗೀರಥಿಯೇ ಹಾರ, ಪುರುಷೋತ್ತಮನ( ವರಾಹರೂಪಿ ವಿಷ್ಣುವಿನ) ಕೋರೆದಾಡೆಗಳೇ ಕ್ರೀಡಾಶೈಲವೋ, ಅಂಥವಳಿಗೆ ಜಗದಲ್ಲಿ ಮಿಥಿಲೆಯನ್ನೇ ಪ್ರಸವಗೃಹವೆಂದು ಕರೆಯುವರು.
ಹಿರಣ್ಯಾಕ್ಷ ಭೂದೇವಿಯನ್ನೇ ಅಪಹರಿಸಲಾಗಿ ವಿಷ್ಣು ವರಾಹಮೂರ್ತಿಯಾಗಿ ತನ್ನ ಕೋರೆದಾಡೆಗಳ ಮೇಲೆ ಅವಳನ್ನು ಹೊತ್ತು ಪುನಃ ಸ್ವಸ್ಥಾನದಲ್ಲಿ ಸ್ಥಾಪಿಸಿದನು. ಅವನ ಕೋರೆದಾಡೆಗಳ ಮೇಲೆ ತೂಗುಯ್ಯಾಲೆಯ ಆಟವನ್ನಾಡಿದವಳು ವಸುಂಧರೆ. ಅಂಥವಳಿಗೆ ಸೂತಿಕಾಗೃಹವಾಗುವ ಮೂಲಕ ಮಿಥಿಲೆ ಮಹಾಮಹಿಮೆಯಿಂದ ಕೂಡಿದೆಎಂದು ಭಾವ.
ಪ॥ ತತ್ರ ಸೀತಾವಿವಾಹಾರ್ಥಮಮರೈರಪಿ ದುಷ್ಕರಮ್।
ಜನಕಃ ಕಲ್ಪಯಾಮಾಸ ಧನುರಾರೋಪಣಂ ಪಣಮ್॥೧೦೧॥
ಅನು॥ ಈ ಮಿಥಿಲೆಯಲ್ಲಿ ದೇವತೆಗಳಿಂದಲೂ ದುಸ್ಸಾಧ್ಯವಾದ ಧನುವನ್ನು ಏರಿಸುವ ಪಣವನ್ನು ಸೀತಾವಿವಾಹಕ್ಕಾಗಿ ಜನಕನು ಯೋಜಿಸಿದ್ದಾನೆ.
ಪ॥ ತತೋ ಮಹರ್ಷಿರ್ಜನಕಸ್ಯ ರಾಜ್ಞಃ ಸಭಾಂ ಸುಧರ್ಮಾಸದೃಶೀಂ ಪ್ರಪೇದೇ।
ತೌ ಚಾಪತುಶ್ಚಾಪವಿಲೋಕಲೋಲೌ ಸಚಾಪಕೌ ಕೋಸಲರಾಜಪುತ್ರೌ॥೧೦೨॥
ಅನು॥ ಬಳಿಕ ವಿಶ್ವಾಮಿತ್ರನು ದೇವಸಭೆಗೆ ಸಮಾನವಾದ ಜನಕರಾಜನ ಸಭೆಯನ್ನು ಪ್ರವೇಶಿಸಿದನು. ಆ ಇಬ್ಬರು
ಅಯೋಧ್ಯಾರಾಜಕುಮಾರರುಕೂಡ ಧನುವನ್ನು ಕಾಣುವ ಕುತೂಹಲದಿಂದ ಧನುರ್ಧರರಾಗಿ ( ಸಭೆಯನ್ನು) ಸೇರಿದರು.
ಗ॥ ತತ್ರ ವಿಧಿವದಭ್ಯರ್ಚಿತಃ ಕಥಿತದಶರಥತನಯವೃತ್ತಾಂತಃ ಕೌಶಿಕಃ ಕೌಶಿಕಪ್ರಮುಖೈರಮರೈರಸ್ಮತ್ಕುಲಮಹತ್ತರೇ ದೇವರಾಜೇ ನಿಕ್ಷಿಪ್ತಂ ವಿಶೇಷತಃ ಸೀತಾಶುಲ್ಕಾರ್ಥಂ ಮಯಾ ರಕ್ಷಿತಮಿದಮಿತಿ ಜನಕೇನ ಪ್ರದರ್ಶಿತಸ್ಯ ಚಾಪಸ್ಯಾ-
ರೋಪಣಾಯ ರಾಮಮಾದಿದೇಶ।
ಅನು॥ ಬಳಿಕ ಶಾಸ್ತ್ರೋಚಿತವಾಗಿ ಪೂಜಿತನಾಗಿ ದಾಶರಥಿಯ ( ತಾಟಕಾವಧಾದಿ) ವೃತ್ತಾಂತವನ್ನು ( ಜನಕನಿಗೆ ) ನುಡಿದ ವಿಶ್ವಾಮಿತ್ರನು " ಇಂದ್ರಾದಿ ದೇವತೆಗಳಿಂದ ತನ್ನ ಕುಲದ ಪ್ರತಿಷ್ಠಿತ ರಾಜನಾದ ದೇವರಾತನಲ್ಲಿ ಇಡಲ್ಪಟ್ಟು ಸೀತಾಪರಿಣ-
ಯದ ಪಣವಾಗಿ ತನ್ನಿಂದ ಇದು ರಕ್ಷಿಸಲ್ಪಟ್ಟಿದೆಯೆಂದು" ಜನಕನಿಂದ ಪ್ರದರ್ಶಿತವಾದ ಧನುವನ್ನು ಏರಿಸಲು ರಾಮನಿಗೆ
ಆದೇಶಿಸಿದನು.
ವಿಶ್ವಾಮಿತ್ರನ ಪಿತಾಮಹನಾದ ಕುಶಿಕ ಮಹಾರಾಜನು ಇಂದ್ರಸಮಾನನಾದ ಪುತ್ರ ತನಗೆ ಜನಿಸಬೇಕೆಂದು ಯಜ್ಞವನ್ನು ಮಾಡಲು ಇಂದ್ರನೇ ತನ್ನ ಅಂಶದಿಂದ ಕುಶಿಕನ ಮಗನಾಗಿ "ಗಾಧಿ" ಎಂಬ ಹೆಸರಿನಿಂದ ಜನಿಸಿದನು. ಆದ್ದರಿಂದ ಇಂದ್ರನಿಗೂ " ಕೌಶಿಕ " ಎಂಬ ಹೆಸರು ಬಂದಿತು. ದಕ್ಷಯಜ್ಞದ ಧ್ವಂಸಕಾಲದಲ್ಲಿ ರುದ್ರನು ಧರಿಸಿದ ಮಹಾಧನುಸ್ಸು. ದೇವತೆಗಳ ಪ್ರಾರ್ಥನೆಯಂತೆ ರೈದ್ರ ಶಾಂತನಾಗಿ ಆ ಧನುವನ್ನು ದೇವತೆಗಳಿಗೆ ನೀಡಿದನು. ಅವರು ದೇವರಾತನಲ್ಲಿಆ ಧನುವನ್ನು ನಿಕ್ಷೇಪವಾಗಿ ನೀಡಿದರು. ಅದೇ ಶಿವ ಧನುಸ್ಸು.
ಪ॥ ತತಃ
ರಾಮೇ ಬಾಹುಬಲಂ ವಿವೃಣ್ವತಿ ಧನುರ್ವಂಶೇ ಗುಣಾರೋಪಣಂ
ಮಾ ಭೂತ್ಕೇವಲಮಾತ್ಮನಾ ತಿಲಕಿತೇ ವಂಶೇऽಪಿ ವೈಕರ್ತನೇ।
ಅಕೃಷ್ಟಂ ನಿತರಾಂ ತದೇವ ನ ಪರಂ ಸೀತಾಮನೋऽಪಿ ದ್ರುತಂ
ಭಂಗಸ್ತಸ್ಯ ನ ಕೇವಲಂ ಕ್ಷಿತಿಭುಜಾಂ ದೋಃಸ್ತಂಭದಂಭಸ್ಯ ಚ॥೧೦೩॥
ಅನು॥ ಅನಂತರ ರಾಮನು ಬಾಹುಬಲವನ್ನು ಪ್ರಕಟಿಸುತ್ತಿರಲು ಕೇವಲ ಬಿಲ್ಲಿನಲ್ಲಿ ಮಾತ್ರ ಗುಣದ ( ಹೆದೆಯ ) ಏರಿಸುವಿ-
ಕೆಯಾಗಲಿಲ್ಲ; ತನ್ನಿಂದ ಅಲಂಕೃತವಾದ ಸೂರ್ಯವಂಶದಲ್ಲಿ ಕೂಡ( ಗುಣದ ಪ್ರತಿಷ್ಠಾಪನೆಯಾಯಿತು), ಅದೊಂದೇ ( (ಧನುವೊಂದೇ ) ತೀವ್ರವಾಗಿ ಸೆಳೆಯಲ್ಪಡಲಿಲ್ಲ. ಬದಲಾಗಿ ಸೀತೆಯ ಚಿತ್ತವು ಕೂಡ ಒಮ್ಮೆಲೇ ( ಸೆಳೆಯಲ್ಪಟ್ಟಿತು). ಕೇವಲ ಅದರ ( ಬಿಲ್ಲಿನ) ಭಂಗವೊಂದೇ ಅಲ್ಲ ರಾಜರುಗಳೆಂಬ ಕಂಬದ ದಂಭವೂ ( ಸೊಕ್ಕೂ ಭಂಗವಾಯಿತು.)
ಪ॥ ರಾಮಾಕರ್ಷಣಭಗ್ನಕಾರ್ಮುಕಭುವಾ ಧ್ವಾನೇನ ರೋದೋರುಧಾ
ದೃಪ್ತಕ್ಷತ್ರಯಶಃಸಿತಚ್ಛದಕುಲೇ ಜೀಮೂತನಾದಾಯಿತಮ್।
ವೀರಶ್ರೀಪ್ರಥಮಪ್ರವೇಶಸಮಯೇ ಪುಣ್ಯಾಹಘೋಷಾಯಿತಂ
ಸೀತಾಯಾಃ ಕಿಲ ಮಾನಸೇ ಪರಿಣಯೇ ಮಾಂಗಲ್ಯತೂರ್ಯಾಯಿತಮ್॥೧೦೪॥
ಅನು॥ ರಾಮನಿಂದ ಸೆಳೆಯಲ್ಪಟ್ಟು ಮುರಿದುಬಿದ್ದ ಮಹಾಧನುವಿನಿಂದುಂಟಾದ ಭೂವ್ಯೋಮವನ್ನೆಲ್ಲ ಗಕ್ಕನೆ ನಿಲ್ಲಿಸಿದ ವಿಸ್ಫೋಟವು ಸೊಕ್ಕಿದ ಕ್ಷತ್ರಿಯರ ಕೀರ್ತಿಯೆಂಬ ಹಂಸಪಕ್ಷಿಗಳ ಸಂಕುಲಕ್ಕೆ ಮೋಡದ ಗುಡುಗಿನಂತಾಯಿತು. ವೀರಲಕ್ಷ್ಮಿಯ ಮೊದಲ ಪ್ರವೇಶದಲ್ಲಿ ಸ್ವಸ್ತವಾಚನದ ಮಂತ್ರವನ್ನು ಘೋಷಿಸಿದಂತಾಯಿತು. ಸೀತೆ ಅಂತರಂಗದಲ್ಲಿಯೇ ಕಲ್ಪಿಸಿಕೊಂಡ ವಿವಾಹದಲ್ಲಿ ಮಂಗಳದ ವಾದ್ಯ ಮೊಳಗಿದಂತಾಯಿತು.
ಪ॥ರವಃ ಕಠಿನಕರ್ಷಣತ್ರುಟಿತಚಾಪಜನ್ಮಾಕ್ಷಣ-
ದ್ವಿಶಾಂ ದ್ವಿರದಘೀಂಕೃತ್ಯೇಃ ಕೃತಹರಿತ್ಪತಿಸ್ವಾಗತಃ।
ಜಗದ್ಭ್ರಮಣಕೌತುಕೋಚ್ಚಲಿತರಾಮಕೀರ್ತ್ಯಂಗನಾ-
ಪ್ರಯಾಣಪಟಹಧ್ವನಿಂ ಪ್ರಥಯತಿ ಸ್ಮ ತಾರಧ್ವನಿಃ॥೧೦೫॥
ಅನು॥ ತೀವ್ರವಾಗಿ ಸೆಳೆದುದರಿಂದ ಮುರಿದ ಧನುವಿನಿಂದುಂಟಾದ ಧ್ವನಿಯು ಒಮ್ಮೆಲೇ ದಿಗ್ಗಜಗಳ ಘೀಳಿಡುವಿಕೆಯ ಮೂಲಕ ದಿಕ್ಪಾಲಕರಿಂದ ಸ್ವಾಗತಿಸಲ್ಪಟ್ಟಿತು. ಜಗತ್ತನ್ನು ಸಂಚರಿಸುವ ಕುತೂಹಲದಿಂದ ಹೊರಟ ರಾಮನಕೀರ್ತಿಯೆಂಬ ಅಂಗನೆಯ ಪ್ರಯಾಣದ ಭೇರೀನಾದವನ್ನು ಆ ಮಹಾಶಬ್ಧವು ಪ್ರಕಟಿಸಿತು.
ಎರದು ದಂತಗಳಿರುವುದರಿಂದ ಆನೆಗೆ ದ್ವಿರದ ಎಂದು ಹೆಸರು. ಐರಾವತ, ಪುಂಡರೀಕ, ವಾಮನ, ಕುಮುದ, ಅಂಜನ, ಪುಷ್ಪದಂತ, ಸಾರ್ವಭೌಮ ಹಾಗೂ ಸುಪ್ರತೀಕ ಎಂಬ ಎಂಟು ಆನೆಗಳು ಎಂಟು ದಿಕ್ಕುಗಳಲ್ಲಿ ನಿಂತು ಭೂಮಿಯನ್ನು ಹೊತ್ತಿವೆ ಎಂಬ ಪುರಾಣಕಲ್ಪನೆಯಿದೆ.
ಗ॥ ತತ್ರ ದಶರಥಃ ಸೀತಾಪರಿಣಯಕೃತನಿಶ್ಚಯಜನಕಪ್ರಹಿತದೂತಾಹೂತಃ ಪುರೋಹಿತಾಭ್ಯುಗಮಾನ್ಮಿಥಿಲಾಮುಪಾ-
ಗಮತ್।
ಅನು॥ ಆಗ ಸೀತಾವಿವಾಹವನ್ನು ನಿಶ್ಚಯಿಸಿದ ಜನಕನಿಂದ ಕಳುಹಲ್ಪಟ್ಟ ದೂತನಿಂದ ಆಮಂತ್ರಿತನಾಗಿ ಕುಲಗುರು-
ವಿನಿಂದ ಸಮ್ಮತಿಸಲ್ಪಟ್ಟವನಾಗಿ ದಶರಥನು ಮಿಥಿಲೆಗೆ ಆಗಮಿಸಿದನು.
ಪ॥ ಯತ್ಕೀರ್ತಿಸ್ತಿಲಕಾಯತೇ ಸುರವಧೂಸಂಗೀತಗೋಷ್ಠೀಮುಖೇ
ಯೇನಾದ್ಯಃ ಪಿತೃಮಾನ್ಪುಮಾನ್ವಸುಮತೀ ಯೇನೈವ ರಾಜನ್ವತೀ।
ಇಂದ್ರಃ ಸಂಗರಸಂಕಟೇಷು ವಿಜಹೌ ವೀರಸ್ಯ ಯಸ್ಯೋನ್ಮುಖ-
ಪ್ರೇಂಖತ್ಸ್ಯದನಕೇತನಾಂಬರದಶಾಸಂದರ್ಶನಾದ್ದುರ್ದಶಾಮ್॥೧೦೬॥
ಅನು॥ ದೇವಾಂಗನೆಯರ ಸಂಗೀತಗೋಷ್ಠಿಗಳ ಆರಂಭದಲ್ಲಿ ಯಾವನ ಕೀರ್ತಿಯು ಮಹೋನ್ನತವಾಗಿ ಕೊಂಡಾಡಲ್ಪಡು-
ವುದೋ, ಯಾವನನ್ನು ಆದಿಪುರುಷನು ಪಿತನನ್ನಾಗಿ ಪಡೆದಿರೈವನೋ, ಯಾವನಿಂದಲೇ ಈ ವಸುಮತಿಯು ರಾಜನ್ವತಿ
( ರಾಜನನ್ನು ಹೊಂದಿರುವವಳು ) ಯಾಗಿರುವಳೋ, ಯಾವ ವೀರನ ಊರ್ಧ್ವಮುಖವಾಗಿ ಹಾರಾಡುವ ರಥದ ಪತಾಕೆಗಳ ಅಂಚನ್ನು ಕಂಡು ಇಂದ್ರನು ಯುದ್ಧದ ಸಂಕಟಗಳಲ್ಲಿ ದುರವಸ್ಥೆಯನ್ನು ನೀಗಿಕೊಂಡನೋ ( ಅಂಥ ದಶರಥನು
ಆಗಮಿಸಿದನು)
ಪ॥ ಜನಕಃ ಸ್ವಕನೀಯಾಂಸಮಾಜುಹಾವ ಕುಶಧ್ವಜಮ್।
ಹತ್ವ ಯುಧಿ ಸುಧನ್ವಾನಂ ಸಾಂಕ್ಕಾಶ್ಯೇ ಸ್ಥಾಪಿತಂ ಪುರೇ॥೧೦೭॥
ಅನು॥ ಸುಧನ್ವನೆಂಬವನನ್ನು ಯುದ್ಧದಲ್ಲಿ ಕೊಂದು ಸಾಂಕಾಶ್ಯಾ ಎಂಬ ನಗರಿಯಲ್ಲಿಸ್ಥಾಪಿತನಾಗಿದ್ದ ತನ್ನ ತಮ್ಮನಾದ ಕುಶಧ್ವಜನನ್ನು ಜನಕನು ಕರೆಸಿದನು.
ಸೀತೆಯ ತಂದೆ ಜನಕನೆಂದು ಪ್ರಸಿದ್ಧನಾಗಿದ್ದರೂ ಅವನ ಅಂಕಿತನಾಮ ಸೀರಧ್ವಜ. ಜನಕ ಎಂಬುದು ವಂಶನಾಮ. ಸೀರಧ್ವಜಜನಕನ ತಮ್ಮ ಕುಶಧ್ವಜಜನಕ. ಸೀತಾ ಎಂಬ ಪದಕ್ಕೆ ನೇಗಿಲಿನಿಂದ ಉಳಲ್ಪಟ್ಟ ಮಣ್ಣಿನ ಸಾಲುಗಳಿರುವ ನೆಲ ಎಂಬ ಅರ್ಥವಿದೆ.
ಗ॥ ತದನು ತಾಭ್ಯಾಮಭ್ಯರ್ಚಿತಃ ಸಪುರೋಹಿತೋ ದಶರಥಸ್ತತ್ರ ಪುತ್ರಾಣಾಂ ಗೋದಾನಮಂಗಲಂ ನಿರ್ವರ್ತಯಾಮಾಸ।
ಅನು॥ ಅನಂತರ ಅವರಿಬ್ಬರಿಂದ ಸತ್ಕರಿಸಲ್ಪಟ್ಟ ವಸಿಷ್ಠ ಸಹಿತನಾದ ದಶರಥನು ಪುತ್ರರ ಕೇಶಸಂಸ್ಕಾರವೆಂಬ ಮಂಗಲಕರ್ಮವನ್ನು ನೆರವೇರಿಸಿದನು.
ಪ॥ ಜಗ್ರಾಹ ಜನಕಾಸ್ತ್ಸೀತಾಂ ತಾತಾದೇಶೇನ ರಾಘವಃ ।
ಆಮ್ನಾಯಶಾಸನೇನಾರ್ಚಾಂ ಯಜಮಾನಾದಿವಾನಲಃ॥೧೦೮॥
ಅನು॥ ತಂದೆಯ ಆದೇಶದ ಮೇರೆಗೆ ರಾಮನು ಜನಕನಿಂದ ಸೀತೆಯನ್ನು ವೇದವಚನಕ್ಕನುಗುಣವಾಗಿ ಅಗ್ನಿಯು ಯಜಮಾನನಿಂದ ಹವಿಸ್ಸನ್ನು ಹೇಗೋ ಹಾಗೆ ಸ್ವೀಕರಿಸಿದನು.
ಗ॥ ಆಶ್ಟರ್ಯಮೇತತ್
ಅನು॥ ಇದು ನಿಜವಾಗಿಯೂ ಅಚ್ಚರಿಪಡುವಂತಹ ವಿಷಯ.
ಪ॥ ಗುಣಮನಿಮಿಷಚಾಪೇ ಕಂಚಿದಾರೋಪ್ಯ ಸೀತಾಂ
ಕುಶಿಕತನಯವಾಕ್ಯಾದಗ್ರಹೀದ್ರಾಮಭದ್ರಃ ।
ತದನು ತದನುಜನ್ಮಾ ಮೈಥಿಲೇಂದ್ರಸ್ಯ ಚಿತ್ತೇ
ನಿಹಿತಬಹುಗುಣಃ ಸನ್ನೂರ್ಮಿಲಾಂ ಲಕ್ಷ್ಮಣೋಪಿ॥೧೦೯॥
ಅನು॥ ವಿಶ್ವಾಮಿತ್ರನ ಆದೇಶದ ಮೇರೆಗೆ ದೇವಧನುವಿನಲ್ಲಿ ಒಂದು ಗುಣವನ್ನು ( ಹೆದೆಯನ್ನು ) ಏರಿಸಿ ರಾಮಚಂದ್ರನು ಸೀತೆಯನ್ನು ಸ್ವೀಕರಿಸಿದನು. ಅನಂತರ ಅವನ ಅನುಜನಾದ ಲಕ್ಷ್ಮಣನು ಕೂಡ ಮಿಥಿಲಾಧೀಶನ ಮನದಲ್ಲಿ ಅನೇಕ ಗುಣಗಳನ್ನು ಸ್ಥಾಪಿಸಿದವನಾಗಿ ಊರ್ಮಿಳೆಯನ್ನು ಸ್ವೀಕರಿಸಿದನು.
ಗುಣ ಪದಕ್ಕಿರುವ ಹೆದೆ ಮತ್ತು ಸದ್ಗುಣ ಎಂಬ ಎರಡು ಅರ್ಥಗಳನ್ನು ಆಶ್ರಯಿಸಿ ಕವಿ ಇಲ್ಲಿ ಚಮತ್ಕರಿಸಿದ್ದಾನೆ. ಊರ್ಮಿಳೆಯು ಜನಕನ ಔರಸಪುತ್ರಿ. ಲಕ್ಷ್ಮಣ ಅವಳನ್ನು ವಿವಾಹವಾದನೆಂಬ ಭಾವ.
ಪ॥ ತತೋ ಭರತಶತ್ರುಘ್ನೌ ಕುಶಧ್ವಜನಿಯೋಗತಃ ।
ಮಾಂಡವೀಶ್ರುತಕೀರ್ತಿಭ್ಯಾಮಭೂತಾಂ ಗೃಹಮೇಧಿನೌ॥೧೧೦॥
ಅನು॥ ಬಳಿಕ ಕುಶಧ್ವಜನ ವಿನಂತಿಯ ಮೇರೆಗೆ ಭರತಶತ್ರುಘ್ನರು ಮಾಂಡವೀ ಹಾಗೂ ಶ್ರುತಕೀರ್ತಿ ಇವರ ಮೂಲಕ ಗೃಹಸ್ಥರಾದರು.
ಮಾಂಡವಿ ಹಾಗೂ ಶ್ರುತಕೀರ್ತಿಯರು ಜನಕನ ಸಹೋದರನಾದ ಕುಶದ್ವಜನ ಪುತ್ರಿಯರು.
ಗ॥ ಅಥ ದಶರಥಸ್ತನಯೈಸ್ಸಹ ಕೃತವಿವಾಹೈರ್ವಿದೇಹೇಭ್ಯಃ ಪ್ರತಿನಿವರ್ತಮಾನಃ ಸಂವರ್ತಸಮಯ ಸಮುಜ್ಜೃಂಭಿತ-
ಹುತವಹದುಃಸಹರೋಷಂ ಭೀಷಣದುರ್ವಾರಪರಾಕ್ರಮಂ ಕ್ಷತ್ರವರ್ಗಗರ್ವಂಕಷಪರಶ್ವಧಧಾರಾಧೀನರುಧಿರಧಾರಾಕ-
ಲ್ಪಿತಪಿತೃತರ್ಪಣಂ ದರ್ಪವತಾಮಗ್ರೇಸರಮುಗ್ರಪ್ರತಾಪೀನಂ ತಪಃಸಮುಚಿತವಲ್ಕಲವಸನಮಪಿ ವಾಸನಾವಶಾದನತಿಪರಿಮುಷಿತಯುದ್ಧಶ್ರದ್ಧಂ ಮಧ್ಯೇಮಾರ್ಗಂ ಭಾರ್ಗವಂ ಮುನಿಂ ರಾಮಮದ್ರಾಕ್ಷೀತ್।
ಅನು॥ ಬಳಿಕ ದಶರಥನು ವಿವಾಹಿತರಾದ ತನಯರ ಜೊತೆ ವಿದೇಹದೇಶದಿಂದ ಮರಳುತ್ತಿರಲು ಪ್ರಳಯಕಾಲದಲ್ಲಿ ಉರಿಯುವ ಅಗ್ನಿಯಂತಹ ಅಸಹನೀಯ ಕ್ರೋಧವಿರುವ, ಭಯಂಕರವೂ ಎದುರಿಸಲಾರದ್ದೂ ಆದ ಪರಾಕ್ರಮವನ್ನು ಹೊಂದಿದ, ಕ್ಷತ್ರಿಯ ಕುಲದ ಸಮಸ್ತವರ್ಗವನ್ನು ಸೆಳೆದ (ತನ್ನ) ಪರಶುವಿನ ಅಲಗಿನಿಂದ ರೊಪಿಸಿದ ರಕ್ತದ ಧಾರೆಯಲ್ಲಿ ಪಿತೃಗಳಿಗೆ ತರ್ಪಣವನ್ನು ನೀಡಿದ, ( ಶೌರ್ಯದಿಂದ) ಮದೋನ್ಮತ್ತರಲ್ಲಿ ಅಗ್ರಗಣ್ಯನಾದ, ಉಗ್ರಪ್ರತಾಪಿಯಾದ, ಪ್ರಭಾವದಿಂದ ಯುದ್ಧಾಸಕ್ತಿ ಪೂರ್ಣವಾಗಿ ಮರೆಯಲಾಗದ ಭಾರ್ಗವ ಮುನಿ( ಪರಶು) ರಾಮನನ್ನು ಕಂಡನು.
ಭೃಗುವಂಶದ ಜಮದಗ್ನಿ ಹಾಗೂ ರೇಣುಕೆಯರ ಮಗ ಪರಶುರಾಮ. ಕಾರ್ತವೀರ್ಯವಂಶದವರು ಕ್ರೋಧವನ್ನು ತ್ಯಜಿಸಿದ ತನ್ನ ತಂದೆಯನ್ನು ಕೊಂದರೆಂದು ಮಹಾಕ್ರೋಧದಿಂದ ಪರಶುವನ್ನೂ ದೇವದತ್ತವಾದ ವೈಷ್ಣವಧನುವನ್ನೂ ಧರಿಸಿ ಸಮಸ್ತ ಕ್ಷತ್ರಿಯರನ್ನು ದಮಿಸಿ ತಾನು ಗೆದ್ದ ಭೂಮಂಡಲವನ್ನು ಕಶ್ಯಪ ಮುನಿಗೆ ದಾನ ಮಾಡಿ ಮಹೇಂದ್ರಪರ್ವತದಲ್ಲಿ ತಪಸ್ಸನ್ನು ಆಚರಿಸುತ್ತಿದ್ದನು.
ಗ॥ ಅಪ್ರಾಕ್ಷೀಚ್ಚ ತನ್ನಿರೀಕ್ಷಣಾದೇವ ಪ್ರಕ್ಷೀಣಹರ್ಷೋऽಪಿ ಮಹರ್ಷಿಭಿಃ ಸಹ ವಿಧಾಯ ಸಪರ್ಯಾಮಾರ್ಯಶೀಲ, ಕುಶಲಮಿತಿ।
ಅನು॥ ಅವನನ್ನು ಕಾಣುವಿಕೆಯಿಂದಲೇ ಸಂತೋಷವೆಲ್ಲ ಇಳಿದುಹೋದರೂ ವಸಿಷ್ಠಾದಿ ಮಹರ್ಷಿಗಳಿಂದೊಡಗೂಡಿ( (ಅವನಿಗೆ ) ಪೂಜೆಯನ್ನು ನೆರವೇರಿಸಿ " ಹೇ ಸದ್ಗುಣಶಾಲಿಯೇ ಕ್ಷೇಮವೇ?" ಎಂದು ( ದಶರಥನು ) ಪ್ರಶ್ನಿಸಿದನು.
ಪ॥ ಅಥ ದಶರಥವಾಣೀಂ ತಾಮಶೃಣ್ವನ್ ಪ್ರಸನ್ನಾಂ
ಭೃಗುಪತಿರಿದಮೂಚೇ ಪ್ರಶ್ರಿತಂ ರಾಮಭದ್ರಮ್।
ಅವಜಿಗಮಿಷುರಾಸಂ ಜೀರ್ಣಚಾಪಾತ್ತಕೀರ್ತೇ -
ರವಿದಿತಪರಶೋಸ್ತೇ ದೋರ್ಮದಂ ಕಾಲಮುಕೇऽಸ್ಮಿನ್॥೧೧೧॥
ಅನು॥ ಅನಂತರ ಮಧುರವಾದ ದಶರಥನ ನುಡಿಯನ್ನು ಉಪೇಕ್ಷಿಸಿ ( ಪರಶುರಾಮನು) ವಿನೀತನಾದ ರಾಮಚಂದ್ರನಿಗೆ ಹೀಗೆಂದನು: "ಮುದಿಬಿಲ್ಲಿನಿಂದ ಪ್ರಸಿದ್ಧಿಯನ್ನು ಹೊಂದಿದ," ಈ " ಗಂಡುಗೊಡಲಿಯನ್ನರಿಯದ ನಿನ್ನ ಬಾಹುಗಳ ಸೊಕ್ಕು ಈ ಬಿಲ್ಲಿನಲ್ಲಿ ( ಹೇಗಿರುವುದೆಂಬುದನ್ನು ) ತಿಳಿಯಬಯಸಿದವನಾಗಿದ್ದೇನೆ.
ನೂತನ ದಂಪತಿಗಳು ಗೃಹಪೂರವೇಶಕ್ಕೆ ಹೊರಟ ಶುಭಸಂದರ್ಭದಲ್ಲಿ ಕ್ಷತ್ರಾಂಕನಾದ ಪರಶುರಾಮ ಎದುರಾದುದನ್ನು ಕಂಡ ದಶರಥನಿಗೆ ಅಮಂಗಲವೇ ಎದುರಾದಂತಾಯಿತು. ಯಾವ ಅನಿಷ್ಟ ಸಂಭವಿಸಲಿರುವುದೋ ಎಂದು ಅವನು ಆತಂಕಿತನಾದನು. ಪರಶುರಾಮನ ಬಳಿಯಿರುವ ಬಿಲ್ಲಿಗೆ ವೈಷ್ಣವ ಧನುಷ್ ಎಂದು ಹೆಸರು.
ಪ॥ ಆದಾಯ ತತ್ಸಗುಣಮಾಶು ವಿಧಾಯ ತತ್ರ
ಸಂಧಾಯ ಬಾಣಮವರ್ಧಾಯ ತಪೋಧನತ್ವಮ್।
ತಜ್ಜೀವಿತಸ್ಯ ದಯಮಾನಮನಾ ಮನೀಷೀ
ಸಂಭೂತಘೋರಸಮರಾದ್ವಿರರಾಮರಾಮಃ॥೧೧೨॥
ಅನು॥ ಆಗ ಆ ( ಬಿಲ್ಲನ್ನು ) ಸ್ವೀಕರಿಸಿ ವೇಗವಾಗಿ ಹೆದೆಯೇರಿಸಿ ಬಾಣವನ್ನೂ ಹೂಡೆ( ಅವನು ) ತಪಸ್ವಿಯೆಂಬುದನ್ನು ಮನಗಂಡು ಅವನ ಜೀವದ ಮೇಲೆ ದಯೆಯುಳ್ಳ ಮನಸ್ಸಿನವನಾಗಿ ವಿವೇಕಿಯಾದ ರಾಮನು ಎದುರಾಗಿದ್ದ ಭಯಂಕರ- ಯುದ್ಧದಿಂದ ವಿಮುಖನಾದನು.
ಪ॥ ಕಿಂಚಿ-
ತಾವುಭೌ ಭೃಗುವಂಶಸಂಭವೌ ಚೃಪದಂಡಜಮದಗ್ನಿಸಂಭವೌ ।
ಪ್ರಹ್ವಭಾವಮವಲಂಬ್ಯ ಕೇವಲಂ ರಾಘವಾರ್ಪಿತಗುಣೌ ಬಭೂವತುಃ॥೧೧೩॥
ಯುಗಪತ್ಪ್ರಾಪ್ತಗುಣಯೋಶ್ಚಾಪಭಾರ್ಗವರಾಮಯೋಃ।
ಋಜುತಾ ವಕ್ರತಾಂ ಪ್ರಾಪ ವಕ್ರತಾಪಿ ತಥಾರ್ಜವಮ್॥೧೧೪॥
ಅನು॥ ಆದರೆ ಭೃಗುವಂಶಸಂಭವರಾದ ( ಭೃಗುಸಂಭವನೂ, ವಂಶ( ಬಿದಿರು)- ಸಂಭವನೂ ಆದ ) ಜಾಮದಗ್ನಿ ಹಾಗೂ ಬಿಲ್ಲಿನ ಹಿಡಿಕೆಗಳು ಬಾಗುವಿಕೆಯನ್ನು ಮಾತ್ರ ಅವಲಂಬಿಸಿ ರಾಮನಿಗೆ ತಮ್ಮ ಗುಣ( ಸತ್ತ್ವ ಹಾಗೂ ಹೆದೆ ) ಗಳನ್ನು ಅರ್ಪಿಸಿದವರಾದರು.
ಏಕಕಾಲದಲ್ಲಿ ಗುಣವನ್ನು ( ಹೆದೆ- ಕ್ರೋದಪಶಮನವೆಂಬ ಗುಣ ) ಹೊಂದಿದ ಧನುಸ್ಸು ಹಾಗೂ ಪರಶುರಾಮ ಇವರಿಬ್ಬರಲ್ಲಿ ನೇರವಾಗಿದ್ದುದು ವಕ್ರವಾಯಿತು; ವಕ್ರವಾಗಿದ್ದುದು ನೇರವಾಯಿತು.
ಪರಶುರಾಮ ರಾಮನ ವಿಕ್ರಮದೆದುರು ವಿನೀತನಾದರೆ ಅವನ ವೈಷ್ಣವಧನುಸ್ಸು ರಾಮನಿಗೆ ಹೆದೆಯೇರಿಸುವ ಅವಕಾಶವನ್ನು ( ನೀಡಿ ) ಬಾಗಿತು.
ನೇರವಾದುದು, ಋಜುತ್ವ . ಬಿಲ್ಲಿನ ಹಿಡಿಕೆ ಹೆದೆಯೇರಿಸುವ ಮುನ್ನ ನೇರವಾಗಿದ್ದುದು ಹೆದೆಯನ್ನು ಪಡೆದು ಬಾಗಿತು. ಪರಶುಧರನಲ್ಲಿದ್ದ ಅಸೀಮ ಉಗ್ರತೆಯೆಂಬ ವಕ್ರತೆ ಈಗ ಶಾಂತವಾಗಿ ಅವನಲ್ಲಿ ಆರ್ಜವ ಅಥವಾ ಋಜುತ್ವಭಾವ ಮೂಡಿತು.
ಗ॥ ತತಸ್ತತ್ಕ್ಷಣಮಮೋಘೇನ ರಾಘವಃ ಶರೇಣ ಭಾರ್ಗವಸ್ಯ ಸ್ವರ್ಗತಿಂ ರುರೋಧ। ಸ್ಥಾನೇ ಹಿ ತತ್
ಅನು॥ ಅನುಕ್ಷಣದಲ್ಲಿ ರಾಮನು ಅಮೋಘವಾದ ಬಾಣದಿಂದ ಭಾರ್ಗವನ ಸದ್ಗತಿಯನ್ನು ಖಂಡಿಸಿದನು. ಅದು ಯೋಗ್ಯವೇ ಆಗಿದೆ.
ಪ॥ ನೂನಂ ಜನೇನ ಪುರುಷೇ ಮಹತಿ ಪ್ರಯುಕ್ತ -
ಮಾಗಃ ಪರಂ ತದನುರೂಪಫಲಂ ಪ್ರಸೂತೇ।
ಕೃತ್ವಾ ರಘೂದ್ವಹಗತೇಃ ಕ್ಷಣಮಂತರಾಯಂ
ಯದ್ಭಾರ್ಗವಃ ಪರಗತೇರ್ವಿಹತಿಂ ಪ್ರಪೇದೇ॥೧೧೫॥
ಅನು॥ ಯಾವುದೇ ವ್ಯಕ್ತಿಯು ಮಹಾಪುರುಷನಲ್ಲಿ ಎಸಗಿದ ಅಪರಾಧವು ಆ ಬಳಿಕ ಅದಕ್ಕೆ ಸಮನಾದ ಫಲವನ್ನು ನಿಶ್ಚಯವಾಗಿಯೂ ನೀಡುತ್ತದೆ. ರಾಘವನ ಮಾರ್ಗಕ್ಕೆ ಕೆಲಕಾಲ ವಿಘ್ನವನ್ನುಂಟುಮಾಡಿ ಭಾರ್ಗವನು ತನ್ನ ಸದ್ಗತಿಯ ನಾಶವನ್ನು ಹೊಂದಿದನು.
ಪರಶುರಾಮನ ಆಹ್ವಾನದಂತೆ ರಾಮನು ವೈಷ್ಣವಧನುವಿನ ತೋಲನ-ಪೂರಣ-ಸಂಧಾನ( ಬಿಲ್ಲನ್ನು ಹಿಡಿದು ನಿಯಂತ್ರಿಸುವಿಕ, ಹೆದೆಯೇರಿಸುವಿಕೆ, ಬಾಣವನ್ನು ಹೂಡುವಿಕೆ ) ಗಳನ್ನು ಮಾಡಿದನು. ಶರಸಂಧಾನವನ್ನು ಮಾಡಿದ್ದು ಶ್ರೀರಾಮ; ಅದೂ ವೈಷ್ಣವಧನುವಿನಲ್ಲಿ. ಈಗ ಆ ಬಾಣವನ್ನು ಪ್ರಯೋಗಿಸಲೇಬೇಕು. ಪರಶುರಾಮ ತನ್ನ ಮಹಾತಪಸ್ಸಿನಿಂದ ಸಾಧಿಸಿದ್ದ ಮಹೋನ್ನತ ಲೋಕಪ್ರಾಪ್ತಿ ಹಾಗೂ ಇಚ್ಛಾಗಮನ ಇವೆರಡರಲ್ಲಿ ತಪಸ್ಸಿನ ಪುಣ್ಯಫಲದ ಮೇಲೆಯೇ ಶರಪ್ರಯೋಗವಾಗಲಿ ಎಂದು ಪರಶುರಾಮನೇ ಸೂಚಿಸುತ್ತಾನೆ. ಏಕೆಂದರೆ ಈ ಹಿಂದೆ ಭೂಮಿಯನ್ನು ಕಶ್ಯಪನಿಗೆ ದಾನಮಾಡಿದ್ದರಿಂದ ಅವನು ಭೂಮಿಯಲ್ಲಿ ವಾಸಿಸುವಂತಿಲ್ಲ. ಇಚ್ಛಾಗಮನದಿಂದ ಭೂಮಿಯ ಆಚೆ ಇದ್ದ ಮಹೇಂದ್ರಪರ್ವತಕ್ಕೆ ಹೋಗಬೇಕು. ಆದ್ದರಿಂದ ತನ್ನ ತಪಸ್ಸಿನಿಂದ ಸಾಧಿಸಿದ ಸದ್ಗತಿಯ ಮೇಲೆ ರಾಮ ಶರಪ್ರಯೋಗವನ್ನು ಮಾಡಿ ಭಾರ್ಗವನ ಸಿದ್ಧಿಯನ್ನು ನಾಶಗೊಳಿಸಿದನು.
ಗ॥ ಅಥ ಸಂಕ್ರಾಂತಯಾ ಜಾಮದಗ್ನ್ಯಶಕ್ತಿಸಂಪದಾ ಸಂಪನ್ನಂ ಪನ್ನಗಪರಿವೃಢಭೋಗಭುಜಾಭಿರಾಮಂ ರಾಮಮವಿರಲ-
ಮಾಲಿಂಗ್ಯ ಮೂಧ್ನ್ರ್ಯಪಾಘ್ರಾಯ ದಶರಥಃ ಪರಿಖಯೇವ ಪರಿಸರೇ ಪರಿಸರಂತ್ಯಾ ಸರಯೂಸರಿತಾನುವಿದ್ಧಾಮಯೋ-
ಧ್ಯಾಂ ದಾರಕಾನ್ ಸದಾರಾನ್ ಸಾದರಮವಲೋಕಯಂತೀನಾಂ ಪೌರಪುರಂಧ್ರೀಣಾಂ ನಿರಂಧ್ರಿತವಾಕ್ಷೈಃ ಕಟಾಕ್ಷೈಃ
ಸೌಂದರ್ಯವಂಚಿತತಾಪಿಚ್ಚೈಃ ಪಿಚ್ಛಾತಪತ್ರಾಯಮಾಣಧವಲಾತಪತ್ರಃ ಪ್ರವಿವೀಶ।
ಅನು॥ ಬಳಿಕ ತನ್ನನ್ನು ಸೇರಿಕೊಂಡ ಭಾರ್ಗವನ ಶಕ್ತಿಸಂಪತ್ತಿನಿಂದೊಡಗೂಡಿದ ಸರ್ಪರಾಜನ ( ಆದಿಶೇಷನ ) ಹೆಡೆಗಳಂತಿರುವ ಭುಜಗಳಿಂದ ಮನೋಹರನಾದ ರಾಮನನ್ನು ಗಾಢವಾಗಿ ಆಲಿಂಗಿಸಿ ಅವನ ಶಿರವನ್ನಾಘ್ರಾಣಿಸಿ ದಶರಥನು ಕೋಟೆಯ ಸುತ್ತಲಿನ ಕಂದಕವೋ ಎಂಬಂತೆ ಸುತ್ತಲೂ ಹರಿಯುವ ಸರಯೂನದಿಯಿಂದ ಕೂಡಿದ ಅಯೋ-
ಧ್ಯೆಯನ್ನು, ಪತ್ನೀಸಹಿತರಾದ ತನಯರನ್ನು ಕಿಟಕಿಗಳಲ್ಲಿ ಎಡೆಯೇ ಇಲ್ಲದಂತೆ ತುಂಬಿಕೊಂಡು ನೋಡುತ್ತಿರುವ, ತಮಾಲವನ್ನೂ ಸೌಂದರ್ಯದಲ್ಲಿ ಹೀಗಳೆಯುವಂತಹ ಪೌರ ನಾರಿಯರ ಕಟಾಕ್ಷಗಳಿಂದ ನವಿಲುಗರಿಗಳಿಂದ ಕೂಡಿದೆಯೋ
ಎಂಬಂತಿರುವ ಶ್ವೇತಪತ್ರಸಹಿತನಾಗಿ ಪ್ರವೇಶಿಸಿದನು.
ಶ್ರೀರಾಮನು ವೈಷ್ಣವಧನುವನ್ನು ಸಂಧಾನಮಾಡಿ ಶರಪ್ರಯೋಗಕ್ಕೆ ಸಿದ್ಧನಾದಾಗ ಭಾರ್ಗವರಾಮನ ವೈಷ್ಣವೀಸತ್ವ ರಾಮನನ್ನು ಪ್ರವೇಶಿಸಿತು. ಹಿಂದಿನ ಅವತಾರದ ಶಕ್ತಿ ಮುಂದಿನ ಅವತಾರಕ್ಕೆ ಸಂಕ್ರಮಣಗೊಳ್ಳುವುದು. ದಶರಥನ ಚಕ್ರವರ್ತಿ ಸೌಭಾಗ್ಯಗಳಲ್ಲೊಂದಾದ ಧವಲಚ್ಛತ್ರವು ಪೌರನಾರಿಯರ ಕಡುಗಪ್ಪು ಕಣ್ಣುಗಳ ನೋಟಗಳಿಂದ ತುಂಬಿಕೊಂಡು ನವಿಲುಗರಿಗಳಿಂದ ರೂಪಿತವಾಗಿದೆಯೋ ಎಂಬಂತಿತ್ತು.
ಪ॥ ಲಜ್ಜಾವಶಾದವಿಶದಸ್ಮರವಿಕ್ರಿಯಾಭಿ-
ಸ್ತಾಭಿರ್ವಧೂಭಿರತಿವೇಲಮವಾಪ್ತಸೌಖ್ಯಾನ್।
ಇಕ್ಷ್ವಾಕುನಾಥತನಯಾನ್ ಪ್ರಥಮೋ ರಸಾನಾಂ
ತಾರುಣ್ಯಯೋಗಚತುರಶ್ಚತುರಃ ಸಿಷೇವೇ॥೧೧೬॥
ಅನು॥ ನಾಚಿಕೆಯ ಕಾರಣದಿಂದ ಅಸ್ಫುಟವಾದ ಶೃಂಗಾರವಿಲಾಸಗಳನ್ನು ಹೊಂದಿದ ಆ ಪತ್ನಿಯರಿಂದ ಮೇರೆಮೀರಿದ ಸಂತಸವನ್ನು ಹೊಂದುತ್ತಿದ್ದ ನಾಲ್ವರು ರಾಜಪುತ್ರರನ್ನುಯೌವನದ ಯೋಗದಿಂದ ನಿಪುಣವಾಗಿರುವ ಪ್ರಥಮರಸವು
( ಶೃಂಗಾರವು ) ಸೇವಿಸಿತು.
ತಮ್ಮಲ್ಲಿರುವ ಶೃಂಗಾರಭಾವವನ್ನು ಲಜ್ಜಾನಿಮಿತ್ತದಿಂದ ಪ್ರಕಟಿಸಲು ಆ ಲಲನೆಯರು ಹಿಂಜರಿಯುತ್ತಿದ್ದರು. ಯೌವನದ ಸಂಬಂಧವಿರುವುದರಿಂದ ಶೃಂಗಾರವು ನಿಪುಣತೆಯಿಂದ ಪ್ರಕಾಶಿತವಾಗುತ್ತಿತ್ತು.
ಪ॥ ವಿದ್ಯಯೇವ ತ್ರಯೀದೃಷ್ಟ್ಯಾ ದರ್ಭಪತ್ರಾಗ್ರಧೀಃ ಸುಧೀಃ।
ರಾಜಪುತ್ರ್ಯಾ ತಯಾ ರಾಮಃ ಪ್ರಪೇದೇ ಪ್ರೀತಿಮುತ್ತಮಾಮ್॥೧೧೭॥
ಅನು॥ ಕುಶಾಗ್ರಬುದ್ಧಿಯ ವಿದ್ವಾಂಸನು ವೇದತ್ರಯಪರ್ಯಾಲೋಚನೆಯಿಂದ ಕೂಡಿದ ವಿದ್ಯೆಯಿಂದ ಹೇಗೋ ಹಾಗೆ ರಾಮನು ಆ ರಾಜಕುಮಾರಿಯಿಂದ ಪ್ರಶಸ್ತವಾದ ಪ್ರೀತಿಯನ್ನು ಪಡೆದನು.
॥ಇತಿ ವಿದರ್ಭರಾಜವಿರಚಿತೇ ಚಂಪೂರಾಮಾಯಣೇ ಬಾಲಕಾಂಡಃ ಸಮಾಪ್ತಃ॥
ಸ್ಮರಣೆ:-
ಕರ್ತೃ:- ಮಹೇಶ ಅಡಕೋಳಿ
ಪ್ರಕಾಶಕರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು.
ವಿಳಾಸ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಕಲಾಗ್ರಾಮ, ಜ್ಞಾನಭಾರತಿ ಅಂಚೆ
ಮಲ್ಲತ್ತಹಳ್ಳಿ, ಬೆಂಗಳೂರು- ೫೬೦೦೫೬