ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಫೆಬ್ರವರಿ 21, 2026

ಜೈಮಿನಿ ಭಾರತ 33 - ದೊಡ್ಡಬೆಲೆ ನಾರಾಯಣಶಾಸ್ತ್ರೀ

ಜೈಮಿನಿ ಭಾರತ 33 - ದೊಡ್ಡಬೆಲೆ ನಾರಾಯಣಶಾಸ್ತ್ರೀ


ಸೂಚನೆ:- ಧರಣಿಪಾಗ್ರಣಿ ಯುಧಿಷ್ಠಿರ ಮಹೀವಲ್ಲಭಂ। 

ತುರಗ ಮೇಧಾಧ್ವರವನೈದೆ ವಿಸ್ತರಿಸಿದಂ । 

ಭರತ ನಳ ನಹುಷಾದಿ ಪೃಥ್ವೀಶರೀತಂಗೆ ಪಾಸಟಿಯೆ ಪೇಳೆನಲ್ಕೆ॥ 


ಪ್ರತಿಪದಾರ್ಥ :- ಈತಂಗೆ=ಈ ಧರ್ಮತನಯನಿಗೆ, ಭರತ ನಳ ನಹುಷಾದಿ ಪೃಥ್ವೀಶರು= ಭರತ, ದುಷ್ಯಂತರಾಜನ ಸುತನು, ನಳರಾಜ,ನಹುಷ, ಆದಿ= ಮೊದಲಾದ,  ಪೃಥ್ವೀಶರು= ಅರಸುಗಳು, ಪಾಸಟಿಯೆ= ಸರಿಯಾದಾರೆ, ಪೇಳು= ಹೇಳು, ಎನಲ್ಕೆ= ಎಂದು ಕೇಳಲು, ಧರಣಿಪಾಗ್ರಣಿ = ರಾಜೇಂದ್ರನಾದ,  ಯುಧಿಷ್ಠಿ ಮಹೀವಲ್ಲಭಂ= ಧರ್ಮಪುತ್ರನು, ಐದೆ= ಚನ್ನಾಗಿ,  ತುರಗಮೇಧಾಧ್ವರವನು= ಹಯಮೇಧವನ್ನು, ವಿಸ್ತರಿಸಿದಂ= ನೆರವೇರಿಸಿದನು. 


ತಾತ್ಪರ್ಯ:-ಭರತ, ನಳ, ನಹುಷಾದಿ ಚಕ್ರವರ್ತಿಗಳು, ಇವನಿಗೆ ಸಮನಾದಾರೆಯೇ ಎಂಬಂತೆ ಧರ್ಮಜನು ಅಶ್ವಮೇಧಯಾಗವನ್ನು ಮಾಡಿದನು. 


ಜನಮೇಜಯಕ್ಷಿತಿಪ ಕೇಳ್ ಬಳಿಕ ದೈತ್ಯ ಭಂ। 

ಜನಖಿಳ ಭೂಪಾಲರಂ ನಾಗಪುರಕೆ ಯೋ। 

ಜನದಳತೆಯೊಳ್ ನಿಲಿಸಿ ಬೇರೆಬೇರವರವರ ಪಡೆಗಳಂ ಪಙ್ತಿಗೊಳಿಸಿ॥ 

ತನತನಗೆ ಗಂಧ ಮಾಲ್ಯಾಂಭರಾಭರಣ ನೂ। 

ತನ ವಿಭವದಿಂದೆ ಬಹುದೆಂದು ನೇಮಿಸಿ ಧರ್ಮ। 

ತನಯನಂ ಕಾಣಬೇಕೆಂಬ ಲವಲವಿಕೆಯಿಂ ಮುಂದೆ ಬಿಜಯಂಗೈದನು॥೧॥


ಪ್ರತಿಪದಾರ್ಥ :- ಜನಮೇಜಯ ಕ್ಷಿತಿಪ = ಜನಮೇಜಯ ಭೂಪಾಲನೆ, ಕೇಳು= ಲಾಲಿಸು, ಬಳಿಕ = ಅನಂತರ, ದೈತ್ಯಭಂಜನನು= ರಾಕ್ಷಸಾಂತಕನಾದ ಕೃಷ್ಣನು, ನಾಗಪುರಕೆ= ಹಸ್ತಿನಾವತಿಗೆ, ಯೋಜನದ= ಒಂದು ಗಾವುದದ, ಅಳತೆಯೊಳ್= ದೂರವಿರುವಾಗಲೆ, ಅಖಿಳ= ಸಮಸ್ತ, ಭೂಪಾಲರಂ= ಅರಸುಗಳನ್ನು, ನಿಲ್ಲಿಸಿ= ನಿಲ್ಲಗೊಡಿಸಿ, ಅವರವರ=ಆಯಾಯ ಅರಸುಗಳ, ಪಡೆಗಳಂ= ಸೇನೆಗಳನ್ನು, ಬೇರೆಬೇರೆ= ಬೇರೆಬೇರೆಯಾಗಿರುವಂತೆ, ಪಙ್ತಿಗೊಳಿಸಿ= 

ಒರಸೆಯಾಗಿ ನಿಲ್ಲಿಸಿ,  ಧರ್ಮತನಯನಂ=ಧರ್ಮನಂದನನನ್ನು,ಗಂಧ=ಪರಿಮಳದ್ರವ್ಯ, ಮಾಲ್ಯ= ಪುಷ್ಪಹಾರವು, ಅಂಬರ= ಉಡಿಗೆಗಳು, ಆಭರಣ=ತೊಡಿಗೆಗಳನ್ನು, ನೂತನ= ನವೀನವಾದ, ವಿಭವದಿಂದ= ಸಂಭ್ರಮದಿಂದ, ತನತನಗೆ=ತಮ್ಮತಮ್ಮಷ್ಟಕ್ಕೆ, ಕಾಣಬಹುದು= ನೋಡಬಹುದು, ಎಂದು = ಎಂಬತೆರನಾಗಿ, ನೇಮಿಸಿ = ನಿಯಮಿಸಿ, 

(ತಾನೂಕೂಡ) ಕಾಣಬೇಕು=ನೋಡಬೇಕು, ಎಂಬ= ಎನ್ನತಕ್ಕ,  ಲವಲವಿಕೆಯಿಂ =ಆಸಕ್ತಿಯಿಂದ, ಮುಂದೆ= ಮೊದಲೇ, ಬಿಜಯಂಗೈದನು= ಹೊರಟನು. 


ತಾತ್ಪರ್ಯ:- ಕೇಳೈ ಜನಮೇಜಯ ಭೂಪಾಲನೆ,  ರಾಕ್ಷಸಾಂತಕನಾದ ಶ್ರೀಕೃಷ್ಣನು ಸಕಲ ರಾಜಾದಿರಾಜರನ್ನು ಹಸ್ತಿನಾವತಿಗೆ ಒಂದು ಗಾವುದ ದೂರದಲ್ಲಿ ನಿಲ್ಲಿಸಿದನು,ಪ್ರತಿಯೊಬ್ಬ ರಾಜರ ಸೇನೆಯನ್ನು ಬೇರೆಬೇರೆಯ್ಗಿ ನಿಲ್ಲಿಸುವಂತೆ ಏರ್ಪಡಿಸಿದನು, ರಾಜರೂ ಅವರ ಪರಿವಾರವೂ, ಹೂ, ಗಂಧ, ಆಭರಣಗಳು, ವಸ್ತ್ರಾದಿಗಳನ್ನು ತೆಗೆದುಕೊಂಡು ಧರ್ಮರಾಯನನ್ನು ಮರ್ಯಾದೆಯಿಂದ ನೋಡಬಹುದೆಂದಾಜ್ಞಾಪಿಸಿ,ಧರ್ಮರಾಯನನ್ನು ನೋಡಲು ಮುಂಭಾಗದಲ್ಲೆ ಹೊರಟನು. 


ಸುರನದಿಯ ತಡಿಯ ಪುಣ್ಯಕ್ಷೇತ್ರದೊಳ್ ಸುವಿ। 

ಸ್ತರದ ಮಣಿಮಂಟಪದೊಳಖಿ ಮುನಿಗಣದೊಡನೆ।

 ಬರಿಸದಿಂದೊಡಲ ದಂಡಿಸಿ ನೆಲದಮೇಲೆ ಕುಳ್ಳಿರ್ದು ಯಮ ನಿಯಮದಿಂದೆ॥ 

ಪರಮ ದೀಕ್ಷೃವಿಧಿಯನನುಕರಿಸಿ ಸಾಧ್ವಿಯರ । 

ನೆರವಿಯೊಳೆರೆವ ಪತ್ನಿವೆರಸಿ ತೊಳಗುವ ಯುಧಿ। 

ಷ್ಠಿರ ಭೂಪನಂ ಕಂಡನಸುರಾರಿ ವೆದಿಸಿತು ತತ್ಸಭೆ ಮುರಾಂತಕಂಗೆ॥೨॥ 


ಪ್ರತಿಪದಾರ್ಥ :- ಅಸುರಾರಿ = ಕೃಷ್ಣನು,  ಸುರನದಿಯ= ಗಂಗಾನದಿಯ, ತಡಿಯ= ದಡದಲ್ಲಿರುವ, ಪುಣ್ಯಕ್ಷೇತ್ರದೊಳ್= ಪುಣ್ಯಕ್ಷೇತ್ರದಲ್ಲಿ, ಸುವಿಸ್ತರದ= ಬಹಳ ವಿಶಾಲವಾದ, ಮಣಿಮಂಟಪದೊಳಗೆ= ರತ್ನಖಚಿತವಾದ ಮಂಟಪದೊಳಗೆ, ಒಡಲ= ತನ್ನ ದೇಹವನ್ನು,  ದಂಡಿಸಿ= ಕಷ್ಟಪಡಿಸಿ, ನೆಲದಮೇಲೆ, ಅಖಿಳ= ಸಮಸ್ತ,  ಮುನಿಗಣದೊಡನೆ= ಋಷಿಗಳ ಸಮೂಹದೊಡನೆ, ಕುಳ್ಳಿರ್ದು= ಕುಳಿತುಕೊಂಡು, ಪರಮ= ಶ್ರೇಷ್ಠವಾದ,  ದೀಕ್ಷಾವಿಧಿಯನು= ದೀಕ್ಷೆಯ ಕಟ್ಟಳೆಯನ್ನು, ಯಮನಿಯಮದಿಂದ= ಜಿತೇಂದ್ರಿಯತ್ವದಿಂದ,ಅನುಕರಿಸಿ= ಅನುಕರಣೆ ಮಾಡಿ, ಸಾದ್ವಿಯರ= ಗರತಿಯರ, ನೆರವಿಯೊಳು =ಗುಂಪಿನೊಳಗೆ, ಎಸೆವ= ಹೊಳೆಯುವ, ಪತ್ನಿವೆರಸಿ= ತನ್ನ ರಾಣಿಯೊಂದಿಗೆ ಕೂಡಿ, ತೊಳಗುವ= ಪ್ರಕಾಶಿಸುವ, ಯುಧಿ-

ಷ್ಠಿರ ಭೂಪನಂ= ಧರ್ಮಪುತ್ರನನ್ನು, ಕಂಡನು= ಈಕ್ಷಿಸಿದನು, ಮುರಾಂತಕಂಗೆ= ಕೃಷ್ಣನಿಗೆ, ತತ್ಸಭೆ= ಆ ಸಭಾಮಂದಿಯೆಲ್ಲ, ವಂದಿಸಿತು= ವಂದನೆ ಮಾಡಿದರು. 


ತಾತ್ಪರ್ಯ:- ಗಂಗಾನದಿಯ ತೀರದಲ್ಲಿ ವಿಸ್ತಾರವಾಗಿ ಮಣಿಖಚಿತ ಯಾಗಮಂಟಪದಲ್ಲಿ ಯುಧಿಷ್ಠಿರನು ಮುನಿಗಳ ಗುಂಪಿನಲ್ಲಿ ಕುಳಿತಿದ್ದನು. ಮನಸ್ಸು ಮತ್ತು ದೇಹಗಳನ್ನು ಒಂದು ವರ್ಷಕಾಲ ದಂಡಿಸಿ, ನೆಲದಮೇಲೆ ಕಠಿಣ ದೀಕ್ಷಾವಿಧಿಗ-

ಳನ್ನು ಅನುಸರಿಸಿ ಕುಳಿತಿದ್ದನು.  ಸಾದ್ವಿಯರ ಗುಂಪಿನಲ್ಲಿ ದ್ರೌಪದಿಯು ಅವನೊಡನಿದ್ದಳು. ಶ್ರೀಕೃಷ್ಣನು ಧರ್ಮಜ ದ್ರೌಪದಿ-

ಯರನ್ನು ನೋಡಿದನು. 


ಯದುಕುಲಾಗ್ರಣಿ ಬಳಿಕ ಭೀಮನಂ ಬಿಗಿಯಪ್ಪಿ। 

ವಿದುರ ಧೃತರಾಷ್ಟ್ರ ಮಾದ್ರೇಯರಂ ತಕ್ಕೈಸಿ। 

ಮುದದಿಂದೆ ದೇವಕಿ ಯಶೋದೆಯರ್ಗಭಿವಂದನಂಗೈದು ಪೃಥೆಗೆ ನಮಿಸಿ॥ 

ಪದುಳವಿಟ್ಟೈದೆ ಗಾಂಧಾರಿಯಂ ಬಂದು ದ್ರೌ। 

ಪದಿ ಸುಭದ್ರೆಯರಂಘ್ರಿಗೆರಗಿದೊಡೆಮಣಿದೆತ್ತಿ। 

ತದನಂತರದೊಳಖಿಳ ಮುನಿಗಳ್ಗೆ ವಂದಿಸಿ ನಗುತೆ ನೃಪತಿಗಿಂತೆಂದನು॥೩॥


ಪ್ರತಿಪದಾರ್ಥ :- ಯದುಕುಲಾಗ್ರಣಿ = ಯಾದವಶಿರೋಮಣಿ, ಬಳಿಕ =ತರುವಾಯ, ಭೀಮನಂ= ಭೀಮಸೇನನನ್ನು, ಬಿಗಿಯಪ್ಪಿ= ಗಾಢಾಲಿಂಗನ ಮಾಡಿ, ವಿದುರನಂ= ವಿದುರನನ್ನೂ, ಧೃತರಾಷ್ಟ್ರ = ಧೃತರಾಷ್ಟ್ರ ಮಹಾರಾಜನನ್ನು, ಮಾದ್ರೇಯರಂ = ನಕುಲ ಸಹದೇವರನ್ನು, ತಕ್ಕೈಸಿ= ಸತ್ಕರಿಸಿ, ದೇವಕಿಯಶೋದೆಯರ್ಗೆ= ದೇವಕಿ ಯಶೋದೆಯರಿಗೆ, ಮುದದಿಂದ = ಆನಂದದಿಂದ,  ಅಭಿವಂದನಂಗೈದು= ನಮಸ್ಕರಿಸಿ, ಪೃಥೆಗೆ= ಕುಂತಿದೇವಿಗೆ, ನಮಿಸಿ= ವಂದನೆಮಾಡಿ, ಐದೆ= ಚನ್ನಾಗಿ,  ಗಾಂಧಾರಿಯಂ= ಗಾಂಧಾರಿದೇವಿಯನ್ನು,ಪದುಳವಿಟ್ಟು= ಕ್ಷೇಮಸಮಾಚಾರಗಳನ್ನು ಕೇಳಿ, ದ್ರೌಪದಿ ಸುಭದ್ರೆಯರು= ದ್ರೌಪದಿ ಸುಭದ್ರೆಯರು, ಬಂದು= ಬಳಿಗೆ ಬಂದು, ಅಂಘ್ರಿಗೆ= ಪಾದಗಳಿಗೆ, ಎರಗಿದೊಡೆ= ವಂದನೆಮಾ- 

ಡಲು, ಮಣಿದು= ಬಾಗಿ, ಎತ್ತಿ=ಎತ್ತಿಕೊಂಡು, ಅಖಿಳಮುನಿಗಳ್ಗೆ= ಸಕಲ ತಾಪಸರಿಗೂ, ತದನಂತರದೊಳು= ಅನಂತರ, ವಂದಿಸಿ= ವಂದನೆ ಮಾಡಿ, ಇಂತು= ಮುಂದೆ ಹೇಳುವಂತೆ, ಭೂಪಗೆ= ಧರ್ಮರಾಜನಿಗೆ, ಎಂದನು= ಹೇಳಿದನು. 


ತಾತ್ಪರ್ಯ:- ಸರ್ವರಿಂದಲೂ ಮನ್ನಿಸಲ್ಪಟ್ಟ ಕೃಷ್ಣನು ಭೀಮನನ್ನು ಗಾಢಾಲಿಂಗನವನ್ನು ಮಾಡಿಕೊಂಡನು. ವಿದುರ, ಧೃತರಾಷ್ಟ್ರ,  ನಕುಲ, ಸಹದೇವರನ್ನುಆಲಿಂಗಿಸಿಕೊಂಡು, ದೇವಕಿ ಯಶೋದೆಯರನ್ನು ವಂದಿಸಿ, ಕುಂತೀದೇವಿಯ ಪಾದಗಳಿಗೆರಗಿ, ಗಾಂಧೃರಿಯ ಕ್ಷೇಮಸಮಾಚಾರಗಳನ್ನು ಕೇಳಿ, ತನಗೆ ನಮಿಸಿದ ದ್ರೌಪದಿ ಸುಭದ್ರೆಯರಿಗೆ ಋಶೀರ್ವದಿಸಿ, ಬಳಿಕ ಸಕಲ ಮುನಿವೃಂದಕ್ಕೆ ನಮಸ್ಕರಿಸಿ ಅನಂತರ ಧರ್ಮರಾಯನಿಗೆ ಮುಂದಿನಂತೆ ಹೇಳಿದನು. 


ಅರಸ ನಿನ್ನಧ್ವರದ ವಾಜಿ ಭೂವಲಯಮಂ। 

ತಿರುಗಿ ಬಂದುದು ವರ್ಷಮಾತ್ರದೊಳ್ ಮೇದಿನಿಯ। 

ನರಪತಿಗಳೆಲ್ಲರುಂ ನಡೆತಂದರೊಡನೆ ಪಾರ್ಥ ಪ್ರತಾಪದ ಹರಹಿಗೆ॥ 

ಧರಣಿ ಸಾಲದು ನೆರಪಿದೊಡವೆಗಮರಾಚಲಂ। 

ಸರಿಯಲ್ಲ ಬಕದಾಲ್ಬ್ಯಕಾದಿ ಮುನಿ ನಿಕರಮಿದೆ। 

ದೊರೆಯದಿಹ ಸಂಭಾರಮಿಲ್ಲ ನಡೆಸಿನ್ನು ಯಜ್ಞವನೆಂದು ಹರಿ ನುಡಿದನು ॥೪॥ 


ಪ್ರತಿಪದಾರ್ಥ :- ಅರಸ= ಎಲೈ ಧರ್ಮರಾಯನೆ, ನಿನ್ನ= ನಿನ್ನ,  ಅಧ್ವರವಾಜಿ= ಯಜ್ಞದ ಕುದುರೆಯು, ವರುಷಮಾತ್ರದೊಳು= ಒಂದು ವರ್ಷದಲ್ಲಿಯೆ, ಭೊವಲಯಮಂ= ಪ್ರಪಂಚವನ್ನೆಲ್ಲಾ, ತಿರುಗಿ= ಸುತ್ತಿಕೊಂಡು, ಬಂದುದು= ಬಂದಿರುವುದು, ಪಾರ್ಥ= ಫಲುಗುಣನ, ಪ್ರತಾಪದ= ಸಾಹಸದ, ಹರಹಿಗೆ= ಹರಡುವಿಕೆಗೆ, ಒಡನೆ= ಅವನೊಂದಿಗೆ, ಎಲ್ಲರುಂ= ಸಮಸ್ತರೂ, ಮೇದಿನಿಯ ನರಪತಿಗಳು= ಭೂಮಂಡಲದ ರಾಜರೆಲ್ಲರೂ, ನಡೆತಂದರು= ಬಂದಿದಾರೆ, ಧರಣಿ= ಇಳೆಯು, ಸಾಲದು= ಸಾಕಾಗುವುದಿಲ್ಲ,( ಭೂಮಿಯು ಹಿಡಿಯದಷ್ಟು ರಾಜರು ಬಂದಿರುವರು) ಅಮರಾಚಲಂ= ಚಿನ್ನದ ಬೆಟ್ಟವೂ ಕೂಡ, ನೆರಪಿದ= ಹೆಚ್ಚಾಗಿ ಗಳಿಸಿ ತಂದಿರತಕ್ಕ, ಒಡವಿಗೆ= ಒಡವೆಗಳಿಗೆ, ಸರಿಯಲ್ಲ= ಹೋಲಿಕೆಯಿಲ್ಲ, ಬಕದಾಲ್ಬ್ಯಾದಿ ಮುನಿನಿಕರಂ= ಬಕದಾಲ್ಬ್ಯನೇ ಮೊದಲಾದ  ತಾಪಸರೆಲ್ಲಾ, ಇದೆ= ಬಂದಿದಾರೆ, ದೊರೆಯದಿಹ= ನಾವು ಸಂಪಾದಿಸಿ ತಂದಿರದ, ಸಂಭಾರಂ= ಅಡಿಗೆಯ ಪರಿಕರವು, ಇಲ್ಲ= ಇಲ್ಲ,( ಸಕಲವಸ್ತುಗಳೂ ಸಿದ್ಧವಾಗಿವೆ) ಯಜ್ಞಮಂ= ಅಶ್ವಮೇಧಯಾಗವನ್ನು,  ಇನ್ನು= ಇನ್ನು ಮುಂದೆ, ನಡೆಸು= ಮಾಡು, ಎಂದು= ಎಂಬತೆರನಾಗಿ,  ಹರಿ= ಶ್ರೀಕೃಷ್ಣನು,  ನುಡಿದನು= ಧರ್ಮರಾಯನಿಗೆ ತಿಳಿಸಿದನು.  


ತಾತ್ಪರ್ಯ:- ಅಯ್ಯಾ ಧರ್ಮನಂದನ! ನಿನ್ನ ಯಜ್ಞಾಶ್ವವು ವರ್ಷತುಂಬುವುದರೊಳಗೆ ಭೂಮಂಡಲವನ್ನೆಲ್ಲ ಸಂಚಾರಮಾಡಿಕೊಂಡು ಮರಳಿ ಹಿಂತಿರುಗಿ ಬಂದಿರುವುದು, ನಿನ್ನನುಜನಾದ ಧನಂಜಯನ ಸಾಹಸಾತಿಶಯದಿಂದ ಅನೇಕ ರಾಜಾಧಿರಾಜರೆಲೂಲ ಸೋತು ನಿನ್ನ ದರ್ಶನಾರ್ಥವಾಗಿ ಕುದುರೆಯ ಹಿಂದೆಯೇ ಬಂದಿರುವರು. ಬಕದಾಲೂಬ್ಯನೇ ಮೊದಲಾದ ಮಹರ್ಷಿಗಳೆಲ್ಲಾ ಬಂದಿದ್ದಾರೆ. ಯಾಗಕ್ಕೆ ಬೇಕಾದ ಸಾಮಗ್ರಿಗಳು ಅಣಿಯಾಗಿರುವುದರಿಂದ ನೀನು ಈಗ ಯಜ್ಞಾರಂಭವನ್ನು ಮಾಡೆಂದು ನುಡಿದನು.  


ಆ ಮುರಾಂತಕನ ಮಾತಂ ಕೇಳ್ದು ಹರಿಸದಿಂ। 

ಭೂಮಿಪತಿ ನುಡಿದನೆಲೆ ದೇವತವ ಕಾರುಣ್ಯ। 

ಜೀಮೂತವಿರೆ ಬಳೆಯದಿರ್ದಪುದೆ ಪಾರ್ಥ ಪ್ರತಾಪದವೊಲಂ ತಿಳಿಯಲು॥ 

ರೋಮರೋಮದೊಳಿಡಿದಜಾಂಡ ಕೋಟಿಗಳಿಹ ಮ। 

ಹಾ ಮಹಿಮೆ ತಾನೆತ್ತ ನರನ ಸಂಗಡ ತಿರುಗು। 

ವೀ ಮನುಜತನವೆತ್ತ ಭಕ್ತರಂ ಪಾಲಿಪುದೆ ನಿನ್ನ ಬಾಳುವೆಯೆಂದನು॥೫॥ 


ಪ್ರತಿಪದಾರ್ಥ :- ಆ ಮುರಾಂತಕನ = ಆ ಮುರಹರನ, ಮಾತಂ= ನುಡಿಗಳನ್ನು, ಭೂಮಿಪತಿ = ಧರ್ಮತನಯನು, ಕೇಳ್ದು= ಕೇಳಿ, ಹರುಷದಿಂ= ಆನಂದದಿಂದ, ನುಡಿದನು= ಮುಂದೆ ಹೇಳುವಂತೆ ತಿಳಿಸಿದನು, ಎಲೆ ದೇವ= ಎಲೈ ಪ್ರಭುವೆ, ತವ= ನಿನ್ನ, ಕಾರುಣ್ಯ= ಕೃಪೆ, ಜೀಮೂತಂ= ಮೇಘವು,ಇರೆ= ಇರಲಾಗಿ, ಪಾರ್ಥ= ಫಲುಗುಣನ, ಪ್ರತಾಪದ= ಸಾಹಸವೆನ್ನುವ, ಪೊಲಂ= ಭೂಮಿಯು, ಬೆಳೆಯದೆ= ಬೆಳೆಯನ್ನು ಕೊಡದೆ, ಇರ್ದಪುದೆ= ಇರುತ್ತದೆಯೇ, ( ನಿನ್ನ ದಯವಿರುವಾಗ ಅರ್ಜುನನಿಗೆ ದಿಗ್ವಿಜಯವಾಗುವುದಕ್ಕೇನೂ ಅನುಮಾನವಿಲ್ಲವು) ತಿಳಿಯಲು= ಯೋಚಿಸಿ ನೋಡಿದರೆ, ರೋಮರೋಮ- 

ದೊಳು= ಪ್ರತಿಯೊಂದು ರೋಮಕೂಪದಲ್ಲಿಯೂ, ಇಡಿದ= ತುಂಬಿದ, ಅಜಾಂಡಕೋಟಿಗಳು= ಕೋಟಿ ಬ್ರಹ್ಮಾಂಡಗಳು, ಇಹ= ಇರತಕ್ಕ, ಮಹಾಮಹಿಮೆ= ವಿಪುಲ ಮಹಾತ್ಮೆಯು,ತಾನು= ಅಂತಾದ್ದು, ಎತ್ತ= ಎಲ್ಲಿ, ನರನಸಂಗಡ= ಫಲುಗುಣ- 

ನೊಂದಿಗೆ, ತಿರುಗುವ= ತಿರುಗಾಡತಕ್ಕ, ಈ ಮನುಜತನ= ಈ ನರಲೀಲೆಯು, ಎತ್ತ=ಎಲ್ಲಿಯದು, ಭಕ್ತರಂ= ನಿನ್ನ ಭಜಕರನ್ನು, ಪಾಲಿಪುದೆ= ಸಲಹುವುದೆ, ಬಾಳುವೆ= ನಿನ್ನ ಜೀವನವಾಗಿದೆ,ಎಂದನು= ಎಂದು ನುಡಿದನು. 


ತಾತ್ಪರ್ಯ:- ಈ ಮಾತುಗಳನ್ನೆಲ್ಲಾ ಕೇಳಿದ ಧರ್ಮಪುತ್ರನು,ಎಲೈ ಸ್ವಾಮಿಯೇ! ಮೇಘೋದಯವಾದರೆ ಹೊಲಕ್ಕೆ ಅಭಿವೃದ್ಧಿಯು ಸಿದ್ಧವಾಗುವಂತೆ ನಿನ್ನ ದಯೆಯಿರುವಾಗ ಅರ್ಜುನನಿಗೆ ಗೆಲುವಾಗದಿರುವುದೆ? ರೋಮರೋಮಗಳಲ್ಲೂ ಕೋಟಿ ಬ್ರಹ್ಮಾಂಡಗಳನ್ನುಳ್ಳ ನೀನು ಭಕ್ತಪರಾಧೀನನಾಗಿ ಈ ರೀತಿಯಲ್ಲಿ  ಅರ್ಜುನನೊಡನೆ ಅಲೆಯುವ ನಿನ್ನ ಮಹಿಮೆಯು ಅಸಾಧಾರಣವಾದುದಲ್ಲವೆ?


ದೇವ ಸಾಕಿನ್ನದರ ಮಾತೆಮ್ಮ ಪಂಚಕದ। 

ಜೀವನಂ ನಿಮ್ಮದೈಸಲೆ ಬಾಹ್ಯವೇತಕೆ ಧ। 

ರಾವಲಯದರಸುಗಳನೆಂತು ಜಯಿಸಿದಿರೆಂಬ ವಿವರಮಂ ಪೇಳ್ವುದೆಂದು॥ 

ಭೂವಲ್ಲಭಂ ಕೇಳ್ದೊಡಿಂದಿರಾಪತಿ ಹಸ್ತಿ। 

ನಾವತಿಯ ನಗರಮಂ ಪೊರಮಟ್ಟು ಮಗುಳಲ್ಲಿ। 

ಗಾ ವಾಜಿಗಳ್ ಬಂದು ಪುಗುವಿನಂ ನಡೆದ ವೃತ್ತಾಂತಮಂ ವಿವರಿಸೆದನು॥೬॥ 


ಪ್ರತಿಪದಾರ್ಥ :- ಭೂವಲ್ಲಭಂ= ಧರ್ಮರಾಯನು, ದೇವ= ಪ್ರಭುವೆ, ಅದರ= ನಿನ್ನ ಮಹಿಮೆಯ, ಮಾತು=ಪ್ರಸಂಗವು, ಸಾಕು= ಸಾಕಾಗಿದೆ, ಎಮ್ಮ= ನಮ್ಮ, ಪಂಚಕದ= ಐದುಜನರ, ಜೇವನಂ= ಬಾಳು, ನಿಮ್ಮದೈ= ನಿಮ್ಮದಲ್ಲವೆ, ಸಲೆ= ಹೆಚ್ಚಾದ, ಬಾಹ್ಯವು= ಹೊರಗಿನ ಮಾತು, ಏತಕೆ= ಏನು ಪ್ರಯೋಜನ, ಎಂತು= ಯಾವ ಪ್ರಕಾರವಾಗಿ, ಧರಾವಲಯದ= ಭೂಮಂಡಲದ, ಅರಸುಗಳನು= ರಾಜರನ್ನು, ಜಯಿಸಿದಿರಿ= ಸೋಲಿಸಿದಿರಿ, ಎಂಬ= ಎನ್ನತಕ್ಕ,  ವಿವರಮಂ= ವೃತ್ತಾಂತವನ್ನು, ಪೇಳ್ವುದು= ನುಡಿಯಬೇಕು, ಎಂದು=ಎಂಬ ತೆರನಾಗಿ, ಕೇಳ್ದೊಡೆ= ಕೇಳಲಾಗಿ, ಹಸ್ತಿನಾವತಿನಗರಮಂ= ಗಜಪುರಿಯನ್ನು, ಪೊರಮಟ್ಟು = ಬಿಟ್ಟು, ಮಗುಳು= ತಿರುಗಿ, ಅಲ್ಲಿಗೆ= ಆ ಇಭನಗರಿಗೆ, ಆ ವಾಜಿಗಳ್ = ಆ ಅಶ್ವಗಳು, 

ಬಂದು ಪೊಗುವಿನಂ= ಬಂದು ಸೇರುವವರೆಗೂ, ನಡೆದ= ಜರುಗಿದ, ವೃತ್ತಾಂತಮಂ = ವಾರ್ತೆಯನ್ನು, ಇಂದಿರಾಪತಿ= ಕೃಷ್ಣನು, ವಿವರಿಸಿದನು= ಹೇಳಿದನು. 


ತಾತ್ಪರ್ಯ:- ಎಲೈ ಮಹಾನುಭಾವನೆ, ನಮ್ಮೈವರ ಪ್ರಾಣವೇ ನೀನಾಗಿರುವಾಗ ಹೆಚ್ಚಾಗಿ ಮಾತನಾಡಿ ಸಾರ್ಥಕವೇನು? ನೀವು ಅನೇಕ ರಾಜಾಧಿರಾಜರನ್ನು ಜಯಿಸಿಕೊಂಡು ಬಂದಿರಲ್ಲವೆ? ಊದರ ಪರೆಯನ್ನು ವಿಸ್ತಾರವಾಗಿ ನನಗೆ ಹೇಳಬೇಕೆಂದು ಕೇಳಿಕೊಳ್ಳುತ್ತಲಿರುವ ಧರ್ಮಪುತ್ರನಿಗೆ ಕೃಷ್ಣನು ತಾವು ಹಸ್ತಿನಾವತಿಯಿಂದ ಯಜ್ಞಾಶ್ವದೊಂದಿಗೆ ಹೊರಟು ಮತ್ತೆ ಹಿಂದಿರುಗಿ ಬರುವವರೆಗೂ ನಡೆದ ಕಥೆಯನ್ನು  ಹೇಳತೊಡಗಿದನು. 


ವಾಜಿ ಸಹಿತರ್ಜುನಂ ಪೊರಮಟ್ಟನಂದು ವಿ। 

ಭ್ರಾಜಿಸುವ ಚೈತ್ರದೊಳ್ ಕೂಡೆ ಮಾಹಿಷ್ಮತಿಗೆ। 

ರಾಜನಹ ನೀಲಧ್ವಜಂ ತುರಗಮಂ ತಡೆದನಗ್ನಿಯ ಸಹಾಯದಿಂದೆ॥ 

ಈ ಜಿಷ್ಣು ಸಂಗರದೊಳಾತನಂ ಜಯಿಸಲಾ। 

ವ್ಯಾಜದಿಂ ಬಂದುದು ಸರಿದ್ವರೆಯ ಶಾಪಂ ಮ। 

ಹಾ ಜವದೊಳಲ್ಲಿಂದೆ ಪೋಗಿ ತಿರುಗಿತು ಹಯಂ ಬಳಿಕ ವಿಂಧ್ಯಾಚಲದೊಳು॥೭॥ 


ಪ್ರತಿಪದಾರ್ಥ :-:- ಅಂದು=ಆ ಕಾಲದಲ್ಲಿ, ವಿಭ್ರಾಜಿತದ= ಅಲಂಕಾರವಾಗಿರತಕ್ಕ,ಚೈತ್ರಮಾಸದೊಳ್= ಚೈತ್ರಮಾಸದಲ್ಲಿ, ವಾಜಿಸಹಿತ= ಕುದುರೆ ಸಹಿತ, ಅರ್ಜುನಂ= ಪಾರ್ಥನು, ಪೊರಮಟ್ಟನು= ಹೊರಟನು, ಕೂಡೆ= ಒಡನೆಯೆ, ತುರಗಮಂ= ಯಜ್ಞಾಶ್ವವನ್ನು, ಅಗ್ನಿಯ ಸಹಾಯದಿಂದ = ಅಗ್ನಿದೇವನ ಸಹಾಯಹೊಂದಿ, ಮಾಹಿಷ್ಮತಿಗೆ = ಮಾಹಿಷ್ಮತೀ ನಗರಕ್ಕೆ,  ರಾಜನು=ಅರಸು, ಆಹ= ಆಗಿರತಕ್ಕ, ನೀಲಧ್ವಜಂ= ನೀಲಧ್ವಜನು, ತಡೆದನು= ಕಟ್ಟಿದನು, ಆತನಂ= ಆ ನೀಲಧ್ವಜನನ್ನು, ಸಂಗರದೊಳು= ಯುದ್ಧದಲ್ಲಿ, ಈ ಜಿಷ್ಣು= ಈ ಫಲುಗುಣನು, ಜಯಿಸಲು= ಸೋಲಿಸಲಾಗಿ, ಸರಿದ್ವತಿಯ= ದೇವಗಂಗೆಯ, ಶಾಪಂ= ಕೆಟ್ಟ ಹರಿಕೆಯು, ಅವ್ಯಾಜದಿಂ= ಆ ನೀಲಧ್ವಜನ ಜಯಿಸಿದ ಕಾರಣದಿಂದ, ಬಂದುದು= ಉಂಟಾಯಿತು,  ಪೋಗಿ= ಹೊರಟು, ವಿಂಧ್ಯಾಚಲದೊಳು= ವಿಂಧ್ಯಪರ್ವತದೊಳಗೆ,ತಿರುಗಿತು= ತಿರುಗಿಕೊಂಡಿತು. 


ತಾತ್ಪರ್ಯ :- ಕೇಳೈ ಯುಧಿಷ್ಠಿರಾ! ಈ ಕುದುರೆಯೊಂದಿಗೆ ಅರ್ಜುನನು ಸೇನಾಸಮೇತನಾಗಿ ಚೈತ್ರಮಾಸದಲ್ಲಿ ಹೊರಟನಷ್ಟೆ, ಹೀಗೆ ಹೋಗುತ್ತಿರುವಾಗ ಕುದುರೆಯು ಮಾಹಿಷ್ಮತೀ ನಗರಕ್ಕೆ ಪ್ರವೇಶಿಸಲು, ಅಲ್ಲಿಯ ಅರಸನಾದ ನೀಲಧ್ವಜನು ಅಗ್ನಿಯ ಸಹಾಯದಿಂದ ಕುದುರೆಯನ್ನು ಕಟ್ಟಿದನು.ಈ ಅರ್ಜುನನು ಅವನನ್ನು ಸೋಲಿಸಿ ತುರಗವನ್ನು ಬಿಡಿಸಿಕೊಂಡು ಮುಂದೆ ಹೊರಟನು. ಇದೇ ಧನಂಜಯನಿಗೆ ಗಂಗಾಶಾಪವು ಬರುವುದಕ್ಕೆ ಕಾರಣವಾಯಿತು, ಆ ಬಳಿಕ ಯಜ್ಞಾಶ್ವವು ವಿಂಧ್ಯಪರ್ವತಕ್ಕೆ ಪ್ರವೇಶಿಸಿ ಅಲ್ಲೆಲ್ಲಾ ಸುತ್ತಾಡಿತು. 


ಆ ನಗದ ಜೇನ್ಗಳಿಂ ಪಣ್ಗಳಂ ನಿರ್ಝರದ। 

ಪಾನೀಯದಿಂಪಿನಿಂ ತಂಪಿನಿಂ ಕುಸುಮ ಗಂ। 

ಧಾನಿಲನ ಕಂಪಿಂದೆ ಪೆಂಪಿಂದೆ ನೆಲವೇರಿ ಚಂಡಿಯ ವಿಶಾಪದಿಂದೆ॥ 

ಸೇನೆ ವಿಸ್ಮಯದೊಡನೆ ಹಯದೊಡನೆ ಮುಂದೆ ಸು। 

ಮ್ಮಾನದಿಂ ನಡೆಯಲ್ಕೆ ತಡೆಯಲ್ಕೆ ಸಂಗರದೊ। 

ಳೀನರಂ ಜಯಿಸಿದಂ ಚಲದಿಂದೆ ಬಲದಿಂದೆ ಹಂಸಧ್ವಜನ ಸುತರನು॥೮॥ 


ಪ್ರತಿಪದಾರ್ಥ :- ಆ ನಗದ=ಆ ವಿಂಧ್ಯಾದ್ರಿಯಲ್ಲಿರತಕ್ಕ, ಜೇನ್ಗಳಿ= ಜೇನುಗಳಿಂದಲೂ, ಪಣ್ಗಳಿಂದ= ಹಣ್ಣುಗಳಿಂದಲೂ, ನಿರ್ಝರದ= ಒರತೆಗಳಿಂದ ಬರತಕ್ಕ, ಪಾನೀಯದ= ಉದಕದ, ಇಂಪಿನಿಂ= ಸೊಬಗಿನಿಂದಲೂ, ತಂಪಿನಿ= ಶೈತ್ಯದಿಂದ- 

ಲೂ, ಕುಸುಮ = ಪುಷ್ಪಗಳಲ್ಲಿರತಕ್ಕ,ಗಂಧ= ಪರಿಮಳ ಸಹಿತವಾದ,ಅನಿಲ=ಗಾಳಿಯ, ಪೆಂಪಿಂದ= ಏಳಿಗೆಯಿಂದಲೂ, ಕಂಪಿಂದ= ಸುವಾಸನೆಯಿಂದಲೂ, ನಲವು= ಆನಂದವು, ಏರಿ= ಹೆಚ್ಚಾಗಿ, ಚಂಡಿಯ= ಚಂಡಿಯೆಂಬಾಕೆಯ, ವಿಶಾಪದಿಂ= ಶಾಪವಿಮೋಚನೆಯಿಂದ, ಸೇನೆ=ದಳವು, ವಿಸ್ಮಯದೊಡನೆ= ಅಚ್ಚರಿಯೊಂದಿಗೆ, ಹಯದೊಡನೆ= ಕುದುರೆಯೊಂದಿಗೆ, ಸುಮ್ಮಾನದಿಂ= ಆನಂದದಿಂದ, ಮುಂದೆ=ಮುಂದಕ್ಕೆ, ನಡೆಯಲ್ಕೆ= ಹೊರಡಲು, ತಡೆಯಲ್ಕೆ= ಅಡ್ಡಿಮಾಡಲಾಗಿ, ಈ ನರಂ= ಅರ್ಜುನನು, ಛಲದಿಂ= ಹಠದಿಂದ, ಬಲದಿಂದ =ಸಾಹಸದಿಂದಲೂ, ಹಂಸಧ್ವಜನ ಸುತರನು= ಹಂಸಧ್ವಜನ ಕುವರರನ್ನು, ಸಂಗರದೊಳು= ಕಾಳಗದಲ್ಲಿ, ಜಯಿಸಿದಂ= ಸೋಲಿಸಿದನು. 


ತಾತ್ಪರ್ಯ:- ಅಲ್ಲಿನ ಹಣ್ಣುಹಂಪಲುಗಳಿಂದಲೂ, ಹೂ ಮೊದಲಾದವುಗಳಿಂದಲೂ ಸೇನಾಜನರೆಲ್ಲ ತಣಿದು ಆನಂದದಿಂ- 

ದಿರುವಾಗ, ಕುದುರೆಯು ಒಂದು ಬಂಡೆಯ ಮೇಲೆ ಕಾಲಿಡಲು ಕದಲಲಾರದೆ ನಿಂತುಬಿಟ್ಟಿತು.ಕಡೆಗೆ ಆ ಬಾಧೆಪರಿಹಾರ- ವಾಗಿ, ಶಿಲಾರೂಪಿಯಾಗಿದ್ದ ಚಂಡಿಯ ಶಾಪವಿಮೋಚನೆಯೂ ಆಯಿತು. ಬಳಿಕ ಕುದುರೆಯು ಮುಂದಕ್ಕೆ ನಡೆಯುತ್ತಿರು- 

ವಾಗ, ಹಂಸಧ್ವಜನ ಕುವರರು ಕೈದುರೆಯನ್ನು ಕಟ್ಟಿಹಾಕಿದರು. ಅವರನ್ನೂ ಕೂಡ ನಿನ್ನನುಜನು ಸೋಲಿಸಿದನು. 


ಜನಪ ಕೇಳಾ ಘರ್ಮ ಕಾಲದೊಳ್ ತುಹಿನ ಗಿರಿ। 

ತನುಜೆಯ ತಪೋವನದ ವಿಘ್ನಂಗಳಂ ಕಳೆದು। 

ವನಿತಾ ಮಯದ ರಾಜ್ಯದೊಳ್ ಪ್ರಮೀಳೆಯನೊಡಂಬಡಿಸಿ ಗಜಪುರಕೆ ಕಳುಹಿ॥ 

ದನುಜೇಂದ್ರ ಭೀಷಣನನಾಕ್ರಮಿಸಿ ಬಬ್ರುವಾ। 

ಹನನ ಪಟ್ಟಣಕೆ ನಿಜ ಹಯದೊಡನೆ ಬಂದನ। 

ರ್ಜುನನಬ್ದ ಋತುವಿನೋಳ್ ಮೇಘರವಮಂ ಮಿಗುವ ವಾದ್ಯ ನಿರ್ಘೋಷದಿಂದೆ॥೯॥ 


ಪ್ರತಿಪದಾರ್ಥ :- ಜನಪ= ಎಲೈ ಧರ್ಮರಾಯನೆ, ಕೇಳು=ಲಾಲಿಸು, ಅರ್ಜುನನು = ಪಾರ್ಥನು, ತುಹಿನಗಿರಿ= ಹಿಮವತ್ಪರ್ವತದ, ತನುಜೆಯ= ಮಗಳು ಪಾರ್ವತಿಯ, ತಪೋವನದ= ತಪಗೈದ ಕಾಡಿನ, ವಿಘ್ನಗಳಂ= ತೊಂದರೆಗಳನ್ನು, ಆ ಘರ್ಮಕಾಲದೊಳ್= ಆ ಬೇಸಿಗೆಯಲ್ಲಿ, ಕಳೆದು= ಮುಗಿಸಿ, ಪ್ರಮೀಳೆಯನು= ರಾಣಿ ಪ್ರಮೀಳೆಯನ್ನು, ವನಿತಾಮ- 

ಯದ= ಹೆಂಗಸರಿಂದ ಕೂಡಿದ, ರಾಜ್ಯದೊಳ್ = ರಾಜ್ಯದಲ್ಲಿ,  ಒಡಂಬಡಿಸಿ= ಒಪ್ಪಿಸಿ,ಗಜಪುರಕೆ= ಹಸ್ತಿನಾವತಿಗೆ, ಕಳುಹಿ= ಕಳುಹಿಸಿ, ದನುಜೇಂದ್ರ= ರಕ್ಕಸರಾಯನಾದ, ಭೀಷಣನನು= ಭೀಷಣನನ್ನು, ಆಕ್ರಮಿಸಿ= ಸೋಲಿಸಿ, ಅಬ್ದರುತುವಿನೊ- 

ಳ್= ಮಳೆಗಾಲದಲ್ಲಿ, ಮೇಘರವಮಂ= ಮೇಘಾಡಂಬರವನ್ನು, ಮಿಗೈವ= ಮೀರುವ, ವಾದ್ಯನಿರ್ಘೋಷದಿಂದ= ಭೇರೀ ಮೃದಂಗಾದಿಗಳನಿನದದಿಂದ, ನಿಜ= ತನ್ನ, ಹಯದೊಡನೆ = ಕುದುರೆಯೊಡನೆ, ಬಭ್ರುವಾಹನನ = ತನ್ನ ಕುವರನಾದ 

ಬಭ್ರುವಾಹನನ, ಪಟ್ಟಣಕೆ= ನಗರಕ್ಕೆ,  ಬಂದನು= ಬಂದನು. 


ತಾತ್ಪರ್ಯ:- ಕೇಳೈ ಧರ್ಮಜ, ಆ ಬಳಿಕ ಕುದುರೆಯು ಪ್ರಮೀಳ ರಾಜ್ಯವನ್ನು ಪ್ರವೇಶಿಸಿತು. ಪ್ರಮೀಳೆಯು ಅದನ್ನು ಕಟ್ಟಿಹಾಕಿದಳು. ಅವಳನ್ನು ಒಪ್ಪಿಸಿ ಹಸ್ತಿನಾವತಿಗೆ ಕಳುಹಿಸಿ, ಮುಂದೆ ವಿಭೀಷಣನೆಂಬ ರಕ್ಕಸ ರಾಜನನ್ನು ಜಯಿಸಿ, ಬಭ್ರುವಾಹನನ ರಾಜಧಾನಿಗೆ ಯಜ್ಞಾಶ್ವದೊಡನೆ ಬಂದನು. 


ಮಣಿಪುರಕೆ ಬಂದುದಾ ಸಮಯದೊಳ್  ಕುದುರೆ ಫಲು। 

ಗುಣನಲ್ಲಿ ಮಡಿದನಾತ್ಮಜನಿಂದೆ ಬಳಿಕದಂ। 

ಫಣಿರಾಜ ತನುಜೆ ಪರಿಹರಿಸಿದಳ್ ಮುಂದೆ ನಡೆಯಲ್ ತಾಮ್ರಕೇತು ತಡೆದು॥ 

ರಣದೊಳೆಮ್ಮೆಲ್ಲರಂ ಗೆಲೂದೊಡಾತನ ಪಿತಂ। 

ಗುಣನಿಧಿ ಮಯೂರಧ್ವಜಂ ತನ್ನ ಯಜ್ಞಮಂ। 

ಗಣಿಸದೆಮಗೊಪ್ಪಿಸಿ ತುರಂಗಸಹಿತೈತಂದನರಸ ಕೇಳ್ ಕೌತುಕವನು॥೧೦॥


ಪ್ರತಿಪದಾರ್ಥ :- ಮಣಿಪುರಕೆ= ಬಭ್ರುವಾಹನನ ರಾಜಧಾನಿ ಮಣಿಪುರಕ್ಕೆ, ಕುದುರೆ= ಯಾಗದ ಕುದುರೆ, ಬಂದುದು= ಬಂದು ಸೇರಿತು, ಅಲ್ಲಿ= ಆ ನಗರದಲ್ಲಿ, ಫಲುಗುಣನು=ಪಾರ್ಥನು, ಆತ್ಮಜನಿಂದ= ಮಗನಿಂದ, ಆ ಸಮಯದೊಳ್= ಆ ವೇಳೆಯಲ್ಲಿ, ಮಡಿದನು= ಮರಣಿಸಿದನು, ಬಳಿಕ = ಅನಂತರ, ಅದಂ= ಆ ಸಾವನ್ನು, ಫಣಿರಾಜತನುಜೆ= ಹಾವುಗಳಿಗೆ ಅರಸನಾದ ಆದಿಶೇಷನ ಕುವರಿಯಾದ ಉಲೂಪಿಯು, ಪರಿಹರಿಸಿದಳು= ಹೋಗಲಾಡಿಸಿದಳು. ಮುಂದೆನಡೆಯಲ್= ಮತ್ತೆ ಮುಂದೆ ಪ್ರಯಾಣಬೆಳೆಸಲು, ತಾಮ್ರಕೇತು = ತಾಮ್ರಧ್ವಜನು, ತಡೆದು= ಕುದುರೆಯನ್ನು ಕಟ್ಟಿಹಾಕಿ, ಎಮ್ಮೆಲ್ಲರಂ= ನಮ್ಮಗಳನ್ನೆಲ್ಲಾ, ರಣದೊಳು= ಕಾಳಗದಲ್ಲಿ. ಗೆಲ್ದೊಡೆ= ಸೋಲಿಸಲಾಗಿ, ಆತನಪಿತಂ= ಅವನ ತಂದೆಯಾದ, ಗುಣನಿಧಿ=

ಸದ್ಗುಣಗಳಿಗೆ ಸಮುದ್ರಪ್ರಾಯನಾಗಿರತಕ್ಕ, ಮಯೂರಧ್ವಜಂ= ಮಯೂರಧ್ವಜ ಮಹಾರಾಯನು,ತನ್ನಯಜ್ಞಮಂ= ತಾನು ಮಾಡಬೇಕೆಂದಿದ್ದ ಅಶ್ವಮೇಧವನ್ನೂ, ಗಣಿಸದೆ= ಲೆಕ್ಕಿಸದೆ, ಎಮಗೆ = ನಮಗೆ, ಒಪ್ಪಿಸಿ= ಸರ್ವಸ್ವವನ್ನೂ ಒಪ್ಪಿಸಿ, ತುರಗಸ- 

ಸಹಿತ= ಯಜ್ಞಾಶ್ವ ಸಮೇತನಾಗಿ, ಐತಂದನು= ಬಂದನು, ಅರಸ= ಎಲೈ ರಾಯನೆ, ಕೌತುಕವನು= ಅಚ್ಚರಿಯನ್ನು ಕೇಳು= 

ಲಾಲಿಸು,  


ತಾತ್ಪರ್ಯ:-ಅಲ್ಲಿ ತನ್ನ ಕುವರನೊಂದಿಗೆ ಹೋರಾಡಿ ಅರ್ಜುನನು ಸತ್ತು ಹೋದನು, ನಾಗರಾಜನ ಮಗಳು ಪಾರ್ಥನ ಪತ್ನಿ ಉಲೂಪಿ ಈ ಫಲುಗುಣನ ಹರಣವನ್ನು ಕಾಪಾಡಿದಳು. ಅನಂತರ ಕುದುರೆಯು ಮುಂದೆ ಹೋಗುತ್ತಿರುವಾಗ ತಾಮ್ರಧ್ವಜನುಕಟ್ಟಿಹಾಕಿದನು. ನಮ್ಮೆಲ್ಲರನ್ನೂ ಸೋಲಿಸಿ ಕುದುರೆಯನ್ನು ತಮ್ಮೂರಿಗೆ ಸೆಳೆದುಕೊಂಡು ಹೋಗಿ ಯಜ್ಞದೀ- 

ಕ್ಷೆಯಲ್ಲಿದ್ದ ತನ್ನ ತಂದೆ ಮಯೂರಧ್ವಜನಿಗೆ ಒಪ್ಪಿಸಲು ಆ ಭಕ್ತಾಗ್ರೇಸರನಾದ ಮಯೂರಧ್ವಜನು ನಮ್ಮ ಕುದುರೆಯನ್ನೂ ತಾನು ಬಿಟ್ಟಿದ್ದ ಕುದುರೆಯನ್ನೂ ಸಹ ನಮಗೆ ಒಪ್ಪಿಸಿ ಕುದುರೆಯ ಬೆಂಗಾವಲ್ಗೆ ತಾನೂ ಬಂದುಬಿಟ್ಟನು. 


ಆ ಮಯೂರಧ್ವಜಂ ಹರಿ ಸಹಿತ ನಡೆಯೆ ನಿ। 

ಸ್ಸೀಮನಹ ವೀರವರ್ಮಂ ತಡೆಯೆ ಬಿಡಿಸಲು। 

ದ್ದಾಮ ವಾಜಿಗಳೈದಿ ಚಂದ್ರಹಾಸನ ಪುರಕೆ  ಕಣ್ಗೆ ಗೋಚರಿಸದಿರಲು॥ 

ಪ್ರೇಮದಿಂ ನಾರದ ಮುನೀಶ್ವರ ಬಂದು ಸು। 

ತ್ರಾಮ ಸುತನೊಳ್ ಕೂಡೆ ವಿಸಾತರದೆ ವೈಷ್ಣವ ಶಿ। 

ರೋಮಣಿಯ ಕಥೆವೇಳೆ ಕೇಳ್ದು ತತ್ಪುರಕೈದಿ ನಲಿದೈದೈದಿನಮಿರ್ದನು॥೧೧॥ 


ಪ್ರತಿಪದಾರ್ಥ :- ಹರಿಸಹಿತ= ಯಜ್ಞಾಶ್ವದೊಂದಿಗೆ, ಆ ಮಯೂರಧ್ವಜನು, ನಡೆಯೆ= ಬರುತ್ತಿರುವ ಸಮಯದಲ್ಲಿ, ನಿಸ್ಸೀ-

ಮನಹ= ಅಸಹಾಯಶೂರನಾದ, ವೀರವರ್ಮಂ= ವೀರವರನೆಂಬರಸು, ತಡೆಯೆ= ಅಡ್ಡಗಟ್ಟಲು, ಬಿಡಿಸಲು= ಬಂಧನದಿಂದ ಬಿಡುಗಡೆ ಮಾಡಿದ್ದರಿಂದ, ಉದೂದಾಮವೃಜಿಗಳು= ಶ್ರೇಷ್ಠ ಕುದುರೆಗಳು, ಐದಿದವು= ಕುಂತಳನಗರವನ್ನು ಹೊಕ್ಕವು, ಐದುದಿನಗಳು= ಐದುದಿನಗಳ ಪರ್ಯಂತರವೂ, ಚಂದ್ರಹಾಸನ ಪುರದೊಳು= ಕುಂತಳರಾಜ್ಯದಲ್ಲಿಯೇ, ಇರ್ದು= ಇದ್ದು, ಹೈಮಂತಶೈಶಿರದ= ಹಿಮಕಾಲ ಮತ್ತು ಶಿಶಿರ ಋತುವಿನ, ಮಾಗಿ= ಮಾಗಿಯ ಕಾಲವು, ಮಡಲಿಡೆ= ಒದಗಲಾಗಿ, ಸೋಮನಂತೆ= ಚಂದ್ರನ ಹಾಗೆ, ತರಣಿ= ರವಿಯು, ಇರೆ=ಇರಲಾಗಿ,  ಬೆಳದಿಂಗಳೊಲ್= ಬೆಳದಿಂಗಳ ಹಾಗೆ, ಬಿಸಿಲ್= ಸೂರ್ಯನ ಝಳವು, ಆಗೆ=ಆಗಲು, ತಾಮರಸರಾಜಿ= ತಾವರೆಗಳ ಸಮುದಾಯವು, ನಶಿಸಿದವು= ಲಯವನ್ನೈದಿದವು, ಕೋಗಿಲೆಯ= ಕೋಗಿಲಗಳ, ಕೊರಲ್= ಕಂಠದ, ದನಿಗಳು= ಸ್ವರಗಳು, ಕೂಡೆ= ಒಡನೆಯೇ, ತಗ್ಗಿದವು= ಕುಗ್ಗಿಹೋದವು. 


ತಾತ್ಪರ್ಯ:- ಅನಂತರ ಕುದುರೆಯು ವೀರವರ್ಮನ ರಾಜಧಾನಿಯನ್ನು ಹೊಕ್ಕಿತು. ವೀರವರ್ಮನಿಗೂ ಪಾರ್ಥನಿಗೂ ಘೋರವಾದ ಯುದ್ಧವಾಯಿತು. ಕಡೆಗೆ ವೀರವರ್ಮನೂ ಸೋತುಕುದುರೆಯ ಹಿಂದೆಯೇ ಹೊರಟನು. ಅನಂತರ ಕುದುರೆಗಳು ಕುಂತಳರಾಜ್ಯಕ್ಕೆ ಪ್ರವೇಶಿಸಿದವು. ಅಲ್ಲಿಯ ಅರಸನಾದ ಚಂದ್ರಹಾಸನಿಂದನಾವೆಲ್ಲಾ ಸತ್ಕೃತರಾಗಿ ಐದುದಿನಗಳು ಅಲ್ಲಿಯೇ ಇದ್ದೆವು. ಅಷ್ಟು ಹೊತ್ತಿಗೆ ಹಿಮಂತಋತುವು ಪ್ರಾರಂಭವಾದ್ದರಿಂದ ಸೂರ್ಯರಶ್ಮಿಯು ಚಂದ್ರಕಾಂತಿಯೆಂಬಂತೆ ಭ್ರಾಂತಿಯನ್ನುಂಟುಮಾಡಲಾರಂಭಿಸಿತು. ಬಿಸಿಲು ಬೆಳದಿಂಗಳಾಯಿತು. ಕಮಲಗಳ ಕಾಂತಿಯು ಕಡಿಮೆಯಾಯಿತು.  ಕೋಗಿಲೆಯ ಕಂಠಧ್ವನಿಗಳು ಮಾಯವಾದವು. 


ಶೈಶಿರದ ಕಾಲದೊಳ್ ಕಲಿ ಚಂದ್ರಹಾಸನಂ। 

ಮೈಸಿರಿಯೊಳೊಳಗೊಂಡು ಬಕದಾಲೂಭ್ಯನಂ ಕಂಡು। 

ಕೈಸಾರ್ದ ಹರಿಸದಿಂ ಸಿಂಧುದೇಶದ ಮೇಲೆ ಮಖಸಮಯಕಿಲ್ಲಿಗಾಗಿ॥ 

ಜೈಸಿ ಬಂದೆವು ನಿನ್ನನುಜ್ಞೆಯೊಳ್ ಗಡ ಕಳುಹಿ। 

ದೈಸು ವೀರರ್ಕಳುಂ ಸುಖದೊಳೈತಂದರೊ। 

ತ್ತೈಸಿದಗಣಿತ ವಸ್ತು ಸಹಿತಖಿಳ ನೃಪರೊಡನೆ ಬಹಳ ವಿಭವದೊಳೆಂದನು॥೧೨॥


ಪ್ರತಿಪದಾರ್ಥ :- ಕಲಿ=ವೀರನಾದ, ಚಂದ್ರಹಾಸನಂ= ರಾಜ ಚಂದ್ರಹಾಸನನ್ನು,  ಮೈಸಿರಿಯೊಲ್ =ಶರೀರದ ನೆರಳಿನಂತೆ. ಶೈಶಿರದ ಕಾಲದೊಳ್ = ಮಾಘಫಾಲ್ಗುಣ ಮಾಸಗಳ ವೇಳೆಯಲ್ಲಿ, ಒಡಗೊಂಡು= ಜೊತೆಮಾಡಿಕೊಂಡು, ಬಕದಾಲ್ಭ್ಯನಂ= ಬಕದಾಲ್ಭ್ಯನೆಂಬ ಋಷಿಯನ್ನು, ಕಂಡು= ಭೇಟಿಮಾಡಿ, ಕೈಸಾರ್ದ= ಕೈಗೂಡಿದ, ಹರ್ಷದಿಂ= ಆನಂದದಿಂದ, ಮಖಸಮಯಕ್ಕೆ= ಯಜ್ಞಮಾಡಬೇಕಾದ ಕಾಲಕ್ಕೆ ಸರಿಯಾಗಿ, ಇಲ್ಲಿಗಾಗಿ= ಈ ಎಡೆಗಾಗಿ, ವೀರರ್ಕಳಂ= ಪರಾಕ್ರಮಿಗಳನ್ನೆ- 

ಲ್ಲಾ, ಜೈಸಿ= ಸೋಲಿಸಿ, ಸಿಂಧುದೇಶದಮೇಲೆ= ಸೈಂಧವನ ರಾಜ್ಯದ ಕಡೆಯಿಂದ, ಬಂದೆವು= ಬಂದಿದ್ದೇವೆ, ನಿನ್ನ= ನಿನ್ನವನಾದ, ಅನುಜನಕೂಡೆ= ತಮ್ಮನಾದ ಪಾರ್ಥನಕೂಡೆ, ಕಳುಹಿದ= ಕಳುಹಿಸಿಕೊಟ್ಟಿದ್ದ, ಐಸುವೀರರ್ಕಳಂ= ಅಷ್ಟು ಜನ ವೀರರೂ, ಸುಖದೊಳು= ಸೌಖ್ಯವಾಗಿ,  ಒತ್ತೈಸಿದ= ಶೇಖರಿಸಿದ, ಅಗಣಿತ= ಅಸಂಖ್ಯಾತವಾದ, ವಸ್ತು ಸಹಿತ= ಸಾಮಗ್ರಿಗಳೊಂದಿಗೆ, ನೃಪರೊಡನೆ= ರಾಜಾಧಿರಾಜರುಗಳ ಜೊತೆಯೊಳಗೆ, ಬಹಳ= ಅಧಿಕವಾದ, ವಿಭವದೊಳು= ಸಂಭ್ರಮದಿಂದ,  ಐತಂದರು= ಬಂದರು, ಎಂದನು= ಎಂದುವನುಡಿದನು. 


ತಾತ್ಪರ್ಯ:- ಶಿಶಿರ ಋತುವಿನ ಆರಂಭದಲ್ಲಿ ಶೂರಾಗ್ರಣಿಯಾದ ಚಂದ್ರಹಾಸನೊಂದಿಗೆ ಹೊರಟು ಬಕದಾಲ್ಭ್ಯಮುನಿಯ ದರ್ಶನವನ್ನು ಮಾಡಿಕೊಂಡು, ಸಿಂಧು ದೇಶದ ಮೇಲೆ ನಡೆದು ಜಯಶೀಲರಾಗಿ ಬಂದಿದ್ದೇವೆ. ಸಕಲರಾಜರೂ ಅಪರಿಮಿತ ವಸ್ತುಗಳಿಂದೊಡಗೂಡಿ ಅರ್ಜುನನೊಂದಿಗೆ ಬಂದಿದ್ದಾರೆ. 


ಭೂಮಂಡಲದೊಳಿಂದು ಮಖ ಹಯಂ ತಿರುಗಿದ ಮ।

ಮಹಾ ಮಹೀಶೂವರರೊಡನೆ ಬಂದ ವೃತ್ತಾಂತಮಂ । 

ದಾಮೋದರಂ ಪೇಳ್ದು ರಾಯನಂ ಬೀಳ್ಕೊಂಡು ತನ್ನ ಮಂದಿರಕೆ ಬಳಿಕ ॥

ಭೀಮನಂ ಕೈವಿಡಿದುಕೊಂಡು ನಡೆತರೆ ಸತ್ಯ |

ಭಾಮಾದಿ ರಾಣಿವಾಸಂಗಳಿದಿರಾಗಿಸು। 

ಪ್ರೇಮದಿಂದಾರತಿಗಳಂ ಕೊಂಡು ಬಂದು ನಗುತಾತ್ಮಪತಿಯಂ ಕಂಡರು॥೧೩॥


ಪ್ರತಿಪದಾರ್ಥ :- ಮಖಹಯಂ= ಯಜ್ಞಾಶ್ವವು,  ಭೂಮಂಡಲದೊಳು= ಪ್ರಪಂಚದೊಳು, ಇಂತು= ಈ ಪ್ರಕಾರವಾಗಿ, ತಿರುಗಿದ = ಸಂಚರಿಸಿ ಬಂದ, ಮಹಾಮಹೀಶ್ವರರೊಡನೆ= ರಾಜಾಧಿರಾಜರೊಂದಿಗೆ, ಬಂದ= ಹಿಂದಿರುಗಿದ,ವೃತ್ತಾಂತಮಂ = ವಾರ್ತೆಯನ್ನು, ದಾಮೋದರಂ= ಕೃಷ್ಣನು, ಪೇಳ್ದು= ಹೇಳಿ, ರಾಯನಂ= ಧರ್ಮರಾಯನನ್ನು, ಬೀಳ್ಕೊಂಡು = ಒಪ್ಪಿಸಿ- 

ದವನಾಗಿ, ಬಳಿಕ= ತರುವಾಯ, ಭೀಮನಂ= ಭೀಮನನ್ನು, ಕೈವಿಡಿದುಕೊಂಡು= ಕರವನ್ನು ಹಿಡಿದು, ತನ್ನ ಮಂದಿರಕ್ಕೆ= ತನ್ನ ಮನೆಗೆ, ನಡೆತರಲಾಗಿ= ಬರಲಾಗಿ, ಸತ್ಯಭಾಮಾದಿ ರಾಣಿವಾಸಂಗಳು= ಸತ್ಯಭಾಮಾದೇವಿಯೇ ಮೊದಲಾದ ಸ್ತ್ರೀಯರು,  ಇದಿರಾಗಿ= ಎದುರುಗೊಂಡು, ಆರತಿಗಳಂ= ಆರತಿಗಳನ್ನು, ಸುಪ್ರೇಮದಿಂದ= ಆನಂದದಿಂದ,  ಕೊಂಡು= ಸ್ವೀಕರಿಸಿ, ಬಂದು= ಕೃಷ್ಣನ ಬಳಿಗೆ ಸೇರಿ, ಆತ್ಮಪತಿಯಂ= ತಮ್ಮ ರಮಣನನ್ನು, ಕಂಡರು= ಕಾಣಿಸಿಕೊಂಡರು. 


ತಾತ್ಪರ್ಯ:- ಯಜ್ಞಾಶ್ವವು ಪ್ರಪಂಚ ಪರ್ಯಟನೆ ಮುಗಿಸಿ ರಾಜಾಧಿರಾಜರುಗಳೊಂದಿಗೆ,ಹಿಂದಿರುಗಿದ ವೃತ್ತಾಂತವನ್ನು ಧರ್ಮಜನಿಗೆ ತಿಳಿಸಿ, ಅವನಿಂದ ಬೀಳ್ಕೊಂಡು ತನ್ನ ಬಿಡಾರಕ್ಕೆ ಭೀಮನ ಕೈಹಿಡಿದುಬರುತ್ತಿರುವಾಗ ಅಸುರಾಂತಕನ ರಾಣಿಯರೆಲ್ಲಾ ಕೈಗಳಲ್ಲಿ ಆರತಿಗಳನ್ನು ಹಿಡಿದುಕೊಂಡು ಸ್ವಾಗತಿಸಿದರು. 


ಮಡದಿಯರ ಮಧ್ಯದೊಳ್ ಸತ್ಯಭಾಮಾ ದೇವಿ। 

ನುಡಿದಳೆಲೆ ದೇವ ನಮಗಹಳು ಸೋದರಿ ಕುಬ್ಜೆ। 

ಪೊಡವಿಯೊಳ್ ಫಲುಗುಣಂ ತುರಗ ರಕ್ಷೆಗೆ ಪೋದ ಪ್ರಮೀಲೆ ನಿಮಗೆ॥

ಒಡಹುಟ್ಟಿದವಳಾದಳಿನ್ನೇನೆನಲ್ಕವಳ। 

ಮುಡಿಯಮಾತಂ ಕೇಳ್ದು ಮೊಳೆವ ನಸುನಗೆಯ ಬೆ। 

ಳ್ಪಿಡಿಯೆ ಕಮಲಾಂಬಕಂ ಪವಮಾನ ನಂದನನ ಮೊಗನೋಡುತಿಂತೆಂದನು॥೧೪॥


ಪ್ರತಿಪದಾರ್ಥ :- ಸತ್ಯಭಾಮಾದೇವಿ= ಕೃಷ್ಣನ ಮಡದಿ ಸತ್ಯಭಾಮಾದೇವಿ, ಮಡದಿಯರ= ರಾಣಿಯರ, ಮಧ್ಯದೊಳ್= ಮಧ್ಯಭಾಗದಲ್ಲಿ, ನುಡಿದಳು= ಹೇಳಿದಳು, ಎಲೆ ದೇವ= ಎಲೈ ಕಾಂತನೆ, ನಮಗೆ= ನಮಗಾದರೊ, ಕುಬ್ಜೆ= ಕುರೂಪಿ, ಸೋದರಿ= ಒಡಹುಟ್ಟಿದವಳು,(ತಂಗಿ) ಅಹಳು= ಆಗುತ್ತಾಳೆ, ಫಲುಗುಣಂ= ಪಾರ್ಥನು, ತುರಗರಕ್ಷೆಗೆ= ಯಾಗದ ಕುದುರೆ-

ಯ ಪಾಲನೆಗೆ, ಪೊಡವಿಯೊಳು= ಭೂಮಂಡಲದಮೇಲೆ, ಪೋದ= ಪ್ರಯಾಣಮಾಡಿದ, ಕಥನದಿ= ನಿಮಿತ್ತದಿಂದ, ನಿಮಗೆ= ನಿಮಗಾದರೊ, ಪ್ರಮೀಳೆ= ಪ್ರಮೀಳೆಯೆಂಬ ವಿಷಕನ್ನೆಯು, ಒಡಹುಟ್ಟಿದಳು= ಸೋದರಿಯು, ಆದಳು= ಆಗಿದ್ದಾಳೆ, ಇನ್ನೇನು= ಇನ್ನು ಹೇಳತಕ್ಕದ್ದೇನಿರುವುದು, ಎನಲ್ಕೆ= ಎಂದು ನುಡಿಯಲು, ಕಮಲಾಂಬಕಂ= ಕಮಲನಯನ- 

ನಾದ ಕೃಷ್ಣನು, ಅವಳ= ಆ ಸತ್ಯಭಾಮೆಯ, ಮುಡಿಯಮಾತಂ= ವಕ್ರನುಡಿಗಳನ್ನು, ಕೇಳ್ದು= ಲಾಲಿಸಿ, ಮೊಳೆವ= ಹುಟ್ಟುತ್ತಲಿರುವ,ನಸುನಗೆಯ= ಹುಸಿನಗುವಿನ, ಬೆಳ್ಪು= ಶುಭ್ರವರ್ಣವು, ಇಡಿಯೆ= ಹುಟ್ಟಲು, ಪವಮಾನನಂದನನ= ವೃಕೋದರನ, ಮೊಗನೋಡುತ= ಮುಖವನ್ನು ನೋಡುತ್ತ, ಇಂತು= ಮುಂದೆ ಹೇಳುವಂತೆ,  ಎಂದನು= ನುಡಿದನು.  


ತಾತ್ಪರ್ಯ:- ಪತ್ನಿಯರ ನಡುವೆ ಶ್ರೀಕೃಷ್ಣನು ಕುಳಿತಿರಲು ಸತ್ಯಭಾಮಾದೇವಿಯು," ದೇವ, ನಮಗೆ ಕುಬ್ಜೆ( ಮಧುರೆಯಲ್ಲಿ 

ಶ್ರೀಕೃಷ್ಣನು ಅನುಗ್ರಹಿಸಿದವಳು) ತಂಗಿಯಾದಳು. ( ಶ್ರೀಕೃಷ್ಣನಿಗೂ ಅವಳಿಗೂ ಸಂಬಂಧವನ್ನು ಕಲ್ಪಿಸಿದಳು)ಹಾಗೆಯೇ ಅರ್ಜುನನು ಪರಿಗ್ರಹಿಸಿದುದರಿಂದ ಪ್ರಮೀಳೆಯು ನಿಮಗೆ ಸೋದರಿಯಾದಳು.( ಸುಭದ್ರೆಯ ಸವತಿ ತಂಗಿ) ಎಂದು ಹೇಳಲು ಶ್ರೀಕೃಷ್ಣನು ತನ್ನ ಮೇಲೆ ಸತ್ಯಭಾಮೆಯು ಹೊರಿಸಿದ ಆಪಾದನೆಯನ್ನು ಕೇಳಿ ನಸುನಗುತ್ತಾ ಭೀಮನಿಗೆ ಹೀಗೆಂದು ಹೇಳಿದನು. 


ಸಂತತಿಗೆ ಸಂತತಿಗಳಾದುವಿನ್ನೇನದರ। 

ಚಿಂತೆ ಬಾಲ್ಯವೆ ನಮಗೆ ಭೀಮ ನೋಡೀಗ ನ। 

ಮ್ಮಂತರವನರಿಯದಿವಳೆಂದ ಕಟಕಿಯ ಮಾತನೆಂದು ಮುರಹರನೊರೆದೊಡೆ॥ 

ಅಂತಹುದು ಪುಸಿಯಲ್ಲ ತರಳತನದೊಳ್ ಪುರುಷ। 

ರೆಂತಾದೊಡಂ ನಡೆವರೀ ಧರ್ಮಜನ ಪುರದೊ। 

ಳಿಂತು ಮಾರ್ಗಿಗಳಾಗದಿರಬಹದೆ ಹೇಳೆಂದಳಾ ಸತ್ಯಭಾಮೆ ನಗುತ॥೧೫॥ 


ಪ್ರತಿಪದಾರ್ಥ :- ಮುರಹರನು= ಕೃಷ್ಣನು,( ಭೀಮನನ್ನು ಕುರಿತು) ಸಂತತಿಗೆ= ನನ್ನ ಹೊಟ್ಟೆಯಲ್ಲಿ ಹುಟ್ಟಿದವರಿಗೆ, ಸಂತತಿಗಳು= ಕುವರರು, ಆದವು= ಆಗಿರುವರು, ಅದರ= ಆ ಸ್ತ್ರೀಸಂಬಂಧವಾದ, ಚಿಂತೆ= ವ್ಯಥೆಯು, ಇನ್ನೇನು= ಇನ್ನೇನಾದೀತು, ನಮಗೆ= ನಮಗಾದರೊ, ಬಾಲ್ಯವೆ= ಚಿಕ್ಕವಯಸ್ಸೆ, ಭೀಮ= ವಾಯುಸುತನೇ, ನಮ್ಮ= ನಮ್ಮದಾದ, ಅಂತರವನು= ವಯಸ್ಸನ್ನು, ಅರಿಯದೆ= ತಿಳಿಯದೆ, ಇವಳು= ಈ ಸತ್ಯಭಾಮೆಯು, ಈಗ= ಈ ಸಮಯದಲ್ಲಿ, ಎಂದ= 

ನುಡಿದ, ಕಟಕಿಯಮಾತನು= ಹಾಸ್ಯೋಕ್ತಿಗಳನ್ನು, ನೋಡು= ನೋಡುವನಾಗು, ಎಂದು= ಎಂಬಂತೆರನಾಗಿ, ಎಂದೊಡೆ= ಹೇಳಲು, ಸತ್ಯಭಾಮೆಯು= ಸತ್ಯಭಾಮಾದೇವಿಯು,ನಗುತ= ನಗುತ್ತ, ಅಂತು= ಹಾಗೆಯೇ, ಅಹುದು= ಆಗುತ್ತದೆ, ಪುಸಿಯಲ್ಲ= ಸುಳ್ಳಲ್ಲ, ಪುರುಷರು= ಗಂಡಸರು, ತರಳತನದೊಳು= ಚಿಕ್ಕಂದಿನಲ್ಲಿ,ಎಂತಾದೊಡಂ= ಹೇಗೆ ಬೇಕಾದರೂ, ನಡೆವರು= ನಡೆದುಕೊಳ್ಳುತ್ತಾರೆ, ಈ ಧರ್ಮಜನಪುರದೊಳು= ಈ ಯುಧಿಷ್ಠಿರನ ರಾಜ್ಯದಲ್ಲಿ, ಇಂತು= ಈ ರೀತಿಯಾಗಿ, ಮಾರ್ಗಿಗಳಾಗದೆ= ನಡವಳಿಕೆಯಿಲ್ಲದವರಾಗದೆ,ಇರಬಹುದೆ= ಇರುತ್ತಾರೆಯೆ, ಹೇಳು= ಹೇಳುವನಾಗು. ಎಂದಳು= ಎಂದು ನುಡಿದಳು. 


ತಾತ್ಪರ್ಯ:- "ಭೀಮಾ ನಮ್ಮ ಮಕ್ಕಳಿಗೆ ಮಕ್ಕಳಾದರು. ಈಗ ನಮಗೇನು ಯೌವನವೇ! ನಮ್ಮ ವಯಸ್ಸನ್ನು ಲೆಕ್ಕಿಸದೆ ಇವಳು ಆಡುವ ಚುಚ್ಚುಮಾತನ್ನು ನೋಡು!" ಎಂದು ಕೃಷ್ಣನು ಹೇಳಲು, ಸತ್ಯಭಾಮೆಯು" ನಿಜ ಸುಳ್ಳಲ್ಲ, ಪುರುಷರು ಯೌವನದಲ್ಲಿ ಹೇಗೆ ಬೇಕಿದ್ದರೂ ಇರುತ್ತಾರೆ. ಆದರಿದು ಹಸ್ತಿನಾವತಿ, ಧರ್ಮಜನ ಊರು. ಇಲ್ಲಿ ಸನ್ಮಾರ್ಗದಲ್ಲೇ ಇರಬೇಕಾಗಿದೆ(ಪಾಪ!) ಅಲ್ಲವೇ ಹೇಳು " ಎಂದಳು. 


ಪ್ರಾಣೇಶ್ವರಿಯ ನುಡಿಗೆ ನಸುನಗುತೆ ಮತ್ತುಳಿದ। 

ರಾಣಿಯರ ಸರಸೋಕ್ತಿಗಳನಾಲಿಸುತೆ ಚಕ್ರ। 

ಪಾಣಿ ಮಾರುತಿ ಸಹಿತ ಭವನದೊಳ್ ಕುಳ್ಳಿರ್ದು ಸುಖದೊಳಿರಲಾಪದದೊಳು॥ 

ಕ್ಷೋಣೀಂದ್ರರೊಡಗೂಡಿ ಫಲುಗುಣಂ ಭೂವರನ। 

ಕಾಣಿಕೆಗೆ ನಗರದ ಸಮೀಪಕೈತಂದನಾ। 

ವಾಣಿಯಂ ದಾರುಕಂ ಬಂದು ಬಿನ್ನೈಸಲ್ಕೆ ಪೊರಮಟ್ಟನರಮನೆಯನು॥೧೬॥


ಪ್ರತಿಪದಾರ್ಥ :- ಪ್ರಾಣೇಶ್ವರಿಯ = ಸತ್ಯಭಾಮೆಯ, ನುಡಿಗೆ= ಹಾಸ್ಯೋಕ್ತಿಗೆ, ನಸುನಗುತ=ಮುಗುಳ್ನಗುತ, ಮತ್ತೌ=ತಿರುಗಿ, ಉಳಿದ ರಾಣಿಯರ= ಬೇರೆ ರಾಣಿಯರ, ಸರಸೋಕ್ತಿಗಳನು= ಕುಹಕದ ನುಡಿಗಳನ್ನು, ಆಲಿಸುತ= ಕೇಳುತ್ತ, ಮಾರುತಿಸಹಿ-

ತ= ಭೀಮನೊಡನೆ, ಚಕ್ರಪೃಣಿ=ಕೃಷ್ಣನು,  ಭವನದೊಳ್= ಮಂದಿರದಲ್ಲಿ, ಕುಳ್ಳಿರ್ದು= ಕೂತಿರುವಾಗ, ಸುಖದೊಳು= ಸೌಖ್ಯವಾಗಿ, ಇರಲು= ಇರಲಾಗಿ, ಆ ಪಥದೊಳ್= ಆ ಮಾರ್ಗದಲ್ಲಿ, ಫಲುಗುಣ= ಪಾರ್ಥನು, ಭೂವರನ ಕಾಣಿಕೆಗೆ= ಯುಧಿಷ್ಠಿರನನ್ನು ನೋಡುವುದಕ್ಕೆ, ನಗರದ ಸಮೀಪಕೆ=ಪಟ್ಟಣದ ಹತ್ತಿರಕ್ಕೆ, ಕ್ಷೋಣೀಂದ್ರರೊಡಗೂಡಿ=ಅನೇಕ ರಾಜರೊಂದಿಗೆ, ಐತಂದನು=ಬಂದನು, ದಾರುಕಂ= ದ್ವಾರಪಾಲಕನು, ಬಂದು=ಬಂದವನಾಗಿ,  ಆ ವಾಣಿಯಂ= ಆ ನುಡಿಯನ್ನು,  ಬಿನ್ನೈಸಲ್ಕೆ = ಅರಿಕೆಮಾಡಲಾಗಿ, ಅರಮನೆಯನು=ತನ್ನ ಬಿಡಾರದಿಂದ,ಪೊರಮಟ್ಟನು= ಹೊರಟನು. 


ತಾತ್ಪರ್ಯ:- ಸತ್ಯಭಾಮೆಯ ಈ ಪರಿಯಾದ ಸರಸೋಕ್ತಿಗಳನ್ನು ಕೇಳಿ, ಕೃಷ್ಣನು ಮುಗುಳ್ನಗೆಗೊಂಡು ಮಿಕ್ಕರಾಣಿಯರ ಹಾಸ್ಯವಚನಗಳಿಗೆ ಹಿಗ್ಗುತ್ತಾ, ಭೀಮಸೇನನೊಂದಿಗೆ ತನ್ನ ಬಿಡಾರದಲ್ಲಿ ಕುಳಿತು ಸುಖವಾಗಿ ಕಾಲಕಳೆಯುತ್ತಿರುವಾಗ, ಅನೇಕರಾಜರುಗಳೊಡನೆ ಅರ್ಜುನನು ಧರ್ಮರಾಯನನ್ನು ಎದುರ್ಗೊಳ್ಳಲು ನಗರದ ಹತ್ತಿರ ಬರುತ್ತಿರುವ ಸುದ್ಧಿಯನ್ನು ದ್ವರಪಾಲಕನಿಂದ ತಿಳಿದುಬಂದಿತು. ಶ್ರೀಕೃಷ್ಣನು ತಡಮಾಡದೆ ಅಲ್ಲಿಂದ ಹೊರಟನು. 


ಬಂದನಧ್ವರ ಶಾಲೆಗಸುರಾರಿ ಮತ್ತೆ ಯಮ। 

ನಂದನಂಗಿಲ್ಲಿಹುದು ನೀನಖಿಳ ಭೂಪಾಲ।

 ವೃಂದಮಂ ಬಕದಾಲ್ಬ್ಯಮುನಿಪನಂ ನಾವಿದಿರ್ಗೊಂಡು ಬಹೆವೆಂದುಸಿರ್ದು॥ 

ಮುಂದೆ ಧೃತರಾಷ್ಟ್ರ ವಿದುರಾದಿ ವೃದ್ಧರ್ ಮಹೀ। 

ವೃಂದಾರಕ ಪ್ರತತಿ ಸಹಿತ ಪೊರಮಟ್ಟು ನಡೆ। 

ತಂದನುತ್ಸವದಿಂದೆ ಬರಲೈದೆ ಸಕಲ ಜನಮೆಂದು ನೇಮಿಸಿ ಮುದದೊಳು॥೧೭॥ 


ಪ್ರತಿಪದಾರ್ಥ :- ಅಸುರಾರಿ =ಶ್ರೀಕೃಷ್ಣನು, ಅಧ್ವರಶಾಲೆಗೆ= ಯಾಗಮಂಟಪಕ್ಕೆ, ಮತ್ತೆ=ತಿರುಗಿ, ಬಂದನು= ಬಂದನು, (ನೀನು) ಇಲ್ಲಿಹುದು= ಇಲ್ಲಿಯೇ ಇರು, (ನಾವುಗಳೆಲ್ಲರೂ) ಅಖಿಳ= ಸಮಸ್ತ, ಭೂಪಾಲವೃಂದಮಂ= ರಾಜರ ಸಮು- 

ದಾಯವನ್ನೂ, ಬಕದಾಲ್ಬ್ಯಮುನಿಪನಂ= ಬಕದಾಲ್ಬ್ಯಮುನಿಯನ್ನೂ, ಇದಿರ್ಗೊಂಡು= ಇದಿರಾಗಿ, ಬಹೆವು= ಬಂದುಬಿಡುತ್ತೇವೆ, ಎಂದು=ಎಂಬತೆರನಾಗಿ, ಉಸುರ್ದು=ತಿಳಿಸಿ, ಮುಂದೆ= ಮುಂದುಗಡೆ, ಧೃತರಾಷ್ಟ್ರ = ಧೃತರಾಷ್ಟ್ರರಾಜ, ವಿದುರ ಆದಿ= ವಿದುರನೆ ಮುಂತಾದ, ವೃದ್ಧರ್= ಹಿರಿಯರು,ಮಹೀವೃಂದಾರಕಪ್ರತತಿ ಸಹಿತ= ಭೂಸುರೋತ್ತಮರೊಂದಿಗೆ, ಪೊರಮಟ್ಟು = ಹೊರಟು, ಉತ್ಸವದಿಂದ= ಆನಂದದಿಂದ, ಐದೆ=ಚನ್ನಾಗಿ, ಸಕಲಜನಂ= ಸರ್ವರೂ, ಬರಲಿ=ಬರತಕ್ಕವರಾಗಲಿ,ಎಂದು= ಎಂಬಂತೆ, ನೇಮಿಸಿ = ಕಟ್ಟುಮಾಡಿ, ಮುದದೊಳು= ಆನಂದದಿಂದ, ನಡೆತಂದನು= ಬಂದನು. 


ತಾತ್ಪರ್ಯ:- ಯಜ್ಞಮಂಟಪಕ್ಕೆ ಬಂದು ಧರ್ಮನಂದನನನ್ನು ಕಂಡು, ಅಯ್ಯಾ ಧರ್ಮಪುತ್ರನೆ, ನೀನು ಇಲ್ಲಿಯೇ ಇರು, ನಾನು ಹೋಗಿ ಸಕಲ ರಾಜರನ್ನೂ, ಬಕದಾಲ್ಬ್ಯಮುನಿಪನನ್ನೂ, ಎದುರ್ಗೊಂಡು ಬರುವೆನೆಂದು ಹೇಳಿ ಧೃತರಾಷ್ಟ್ರ, ವಿದುರ 

ಮತ್ತು ಭೂಸುರೋತ್ತಮರಿಂದಲೂ ಕೂಡಿ ಅತ್ಯುತ್ಸಾಹದಿಂದಬರುತ್ತಲಿದ್ದನು. ಹಸ್ತಿನಾವತಿಯ ಸಕಲ ಜನರೂ ಕೃಷ್ಣನನ್ನು ಹಿಂಬಾಲಿಸಿದರು. 


ಅಸುರಹರನಾಜ್ಞೆಯಿಂದಾಗ ಪಟ್ಟಣದೊಳಗೆ

।ಪೊಸತಾಯ್ತು ಗುಡಿ ತೋರಣದ ರಚನೆ ಬೀದಿಗಳೊ।

ಳೆಸೆದುವು ಸುಮಂಗಳ ದ್ರವ್ಯಂಗಳೊಪ್ಪಿದುವುಪನ್ನೀರಚನೆಯಂಗಳು॥ 

ಮುಸುಕಿದುವು ಧೂಪ ವಾಸನೆಗಳಿಡಿದುದು ವಿವಿಧ। 

ಕುಸುಮ ಗಂಧೋತ್ಕರಂ ಘನ ಸಾರ ಕುಂಕುಮದ। 

ಕೆಸರುಗಳ ಪರಿಮಳಂ ತೀಡಿದುದು ಕಪ್ಪುರದ ಸೊಡರ್ಗಂಪುರಂಜಿಸಿದುದು॥೧೮॥ 


ಪ್ರತಿಪದಾರ್ಥ :- ಆಗ= ಆ ವೇಳೆಯೊಳಗೆ, ಅಸುರಹರನ= ಶ್ರೀಕೃಷ್ಣನ, ಆಜ್ಞೆಯಿಂದ= ಅಪ್ಪಣೆಯಿಂದ, ಗುಡಿತೋರಣದ- 

ರಚನೆ= ಬಾವುಟ ತೋರಣಗಳ ಅಲಂಕಾರವು, ಬೀದಿಬೀದಿಗಳೊಳು= ಪ್ರತಿಯೊಂದು ಬೀದಿಯಲ್ಲಿಯೂ, ಪಟ್ಟಣದೊಳ-

ಗೆ= ಹಸ್ತಿನಾವತಿಯಲ್ಲಿ, ಎಸೆದವು= ಹೊಳೆಯುತ್ತಲಿದ್ದವು,ಸುಮಂಗಳ ದ್ರವ್ಯಂಗಳು= ಶುಭಸಾಮಗ್ರಿಗಳೆಲ್ಲಾ, ಒಪ್ಪಿದವು= ಅಣಿಯಾದವು, ಪನ್ನೀರಚಳಕಂಗಳು= ಪನ್ನೀರನ್ನು ಚಲ್ಲಿದ್ದು, ಮುಸುಕಿದವು= ಆದವು, ಧೂಪವಾಸನೆಗಳು= ಊದುಕಡ್ಡಿ- 

ಗಳ, ವಾಸನೆಗಳು= ಸುರಭಿಯು, ಇಡಿದವು= ಹರಡಿದವು, ವಿವಿಧ= ಅನೇಕ, ಕುಸುಮ= ಹೂಗಳ, ಗಂಧೋತ್ಕರಂ = ಹೆಚ್ಚಾದ ಸುವಾಸನೆಯು, ಘನಸಾರ= ಕತ್ತುರಿಯ, ಕುಂಕುಮದ= ಕುಂಕುಮದ ಹೂವಿನ, ಕೇಸರಗಳು ಪರಿಮಳ ತೀಡಿದವು

= ಸುರಭಿಯನ್ನುಂಟುಮಾಡಿದವು, ಕರ್ಪೂರದ=ಕರ್ಪೂರದಿಂದ ಮಾಡಿದ, ಸೊಡರ್= ದೀಪದ, ಕಂಪು= ಸುವಾಸನೆಯು, ರಂಜಿಸಿದುದು= ಒಪ್ಪುತ್ತಲಿತ್ತು. 


ತಾತ್ಪರ್ಯ:- ಶ್ರೀಕೃಷ್ಣಮೂರುತಿಯ ಆಜ್ಞೆಯಿಂದ ಹಸ್ತಿನಾವತಿ ಪಟ್ಟಣವೆಲ್ಲಾ ಚಪ್ಪರಗಳು, ಬಾವುಟಗಳು, ತೋರಣಗಳು ಇವುಗಳಿಂದ ಕೂಡಿತು. ಮಂಗಳದ್ರವ್ಯಗಳೂ, ಪನ್ನೀರೂ ಅಣಿಯಾದವು. ಹೂ ಗಂಧ ಮೊದಲಾದ ಪರಿಮಳದ್ರವ್ಯಗಳ 

ಸುವಾಸನೆಯಾದರೊ ದಿಕ್ತಟವನ್ನಾಕ್ರಮಿಸಿತು. ಕರ್ಪೂರದೀಪದ ಕಾಂತಿಯು ಊರಲ್ಲೆಲ್ಲಾ ಹರಡಿಕೊಂಡಿತು. 


ಪೊರಮಟ್ಟುದಖಿಳ ಪುರಜನಮೈದೆ ಸಿಂಗರದ। 

ಮೆರಹುಗಳ ಮೌಳಿಯಿಂ ಮೇಳವದ ರಚನೆಗಳ। 

ತರತರದ ವಿದ್ಯಾ ವಿನೋದದಿಂ ನಟ ನರ್ತಕೀಜನದ ಗೀತದಿಂದೆ॥ 

ತುರುಗಿದ ಮೃದಂಗಾದಿ ವಾದ್ಯಧ್ವನಿಗಳಿಂದೆ। 

ಮಿರುಗುವ ವಿಲಾಸಿನಿಯರೋಳಿಯಿಂ ಮಾರಾಗದೊಳ್। 

ತೆರಪಿಲ್ಲೆನಲ್ಕೆ ವೈಭವದಿಂದೆ ಪಾರ್ಥನನಿದಿರ್ಗೊಂಬ ಸಂಭ್ರಮದೊಳು॥೧೯॥ 


ಪ್ರತಿಪದಾರ್ಥ :- ಐದೆ= ಚನ್ನಾಗಿ, ಸಿಂಗರದ= ಅಲಂಕಾರದ, ಮೆರಹುಗಳ= ಕಾಂತಿಯಿಂದೊಪ್ಪುವ, ಮೌಳಿಯಿಂ = ತಲೆಗ- 

ಳಿಂದಲೂ, ಮೇಳವದ= ಸೇರಿರತಕ್ಕ, ರಚನೆಗಳ= ಶೃಂಗಾರದ, ತರತರದ= ಬಗೆಬಗೆಯಾದ, ವಿದ್ಯಾವಿನೋದದಿಂ= ವಿದ್ಯೆ-

ಯ ಆನಂದದಿಂದಲೂ, ನಟ=ನರ್ತಕರು, ನರ್ತಕೀಜನದ= ನೃತ್ಯಗಾತಿಯರು ಇವರ, ಗೀತದಿಂ= ಹಾಡುವುದರಿಂದಲೂ, ತುರುಗಿದ= ಆವೃತವಾದ, ಮೃದಂಗಾದಿವಾದ್ಯಧ್ವನಿಗಳಿಂದ= ಮೃದಂಗವೇ ಮೊದಲಾದ ವಾದ್ಯಗಳ ಶಬ್ಧದಿಂದ, ಮಿರುಗು- 

ವ= ಪ್ರಕಾಶಮಾನವಾಗಿರತಕ್ಕ,ವಿಲಾಸಿನಿಯರು=ಸ್ತ್ರೀಯರ, ಓಳಿಯಿಂ= ಸಮೂಹದಿಂದ, ಮಾರ್ಗದೊಳ್= ಹಾದಿಯಲ್ಲಿ, ತೆರಪಿಲ್ಲ= ಅವಕಾಶವೇ ಇಲ್ಲವು, ಎನಲ್ಕೆ= ಎಂಬತೆರನಾಗಿ, ವೈಭವದಿಂದ =ಉತ್ಸಾಹದಿಂದ, ಪಾರ್ಥನಂ= ಫಲುಗುಣನ- 

ನ್ನು, ಇದಿರ್ಗೊಂಬ= ಎದುರುಗೊಳ್ಳತಕ್ಕ, ಸಂಭ್ರಮದೊಳು= ಸಡಗರದಿಂದ,  ಪೊರಮಟ್ಟುದು= ಹೊರಟರು. 


ತಾತ್ಪರ್ಯ:- ಸಮಸ್ತ ಪುರಜನರೂ ಶೃಂಗಾರಮಾಡಿಕೊಂಡು ಮೇಳ ಗೀತೆಗಳನ್ನು ಹಾಡುತ್ತಾ ವಿವಿಧ ವಿದ್ಯಾವಿನೋದ ಪ್ರದರ್ಶನ ಮಾಡುತ್ತಾ ಬಂದರು. ನಟರು, ನರ್ತಕಿಯರುಹಾಡುತ್ತಲಿರಲು, ಮೃದಂಗವೇ ಮೊದಲಾದ ವಾದ್ಯಗಳನ್ನು 

ಬಾರಿಸುತ್ತಿದ್ದರು. ಹೊಳೆಹೊಳೆಯುವ ವೆಲಾಸಿನಿಯರ ಗುಂಪು ಶೋಭಾಯಮಾನವಾಗಿತ್ತು. ದಾರಿಯಲ್ಲಿ ಎಲ್ಲೂ ಜಾಗವಿಲ್ಲದಂತೆ ಅರ್ಜುನನನ್ನು ಎದುರುಗೊಳ್ಳಲು ಬಂದರು. 


ದಂತಿಗಳ ಮೇಲೆ ದೇವಕಿ ಯಶೋದಾದೇವಿ। 

ಕುಂತಿಯರ್ ಪೊರಮಟ್ಟರದರ ಬಳಿವಿಡಿದು ಸೀ। 

ಮಂತಿನೀ ಗಣಸಹಿತ ರುಕ್ಮಿಣಿಯ ದಂಡಿಗೆ ತೆರಳ್ದುದತಿ ವಿಭವದಿಂದೆ ॥ 

ತಿಂತಿಣಿಸಿ ಗಗನದೊಳ್ ತುಂಬಿಗಳ್ ಕಾರಮುಗಿ। 

ಲಂತೆ ನವ ಪಾರಿಜಾತದ ಕುಸುಮ ಪರಿಮಳಕೆ। 

ಸಂತತಂ ಮುಸುಕಲಂದಣದೊಳೈದಿದಳಾಳಿಯರೂವೆರಸಿ ಸತ್ಯಭಾಮೆ॥೨೦॥ 


ಪ್ರತಿಪದಾರ್ಥ :- ದಂತಿಗಳಮೇಲೆ= ಆನೆಗಳ ಮೇಲೆ, ದೇವಕಿ= ದೇವಕೀದೇವಿ, ಯಶೋದಾದೇವಿ= ಯಶೋದೆಯೂ, ಕುಂತಿಯರು= ಕುಂತೀದೇವಿಯೂ ಸಹ, ಪೊರಮಟ್ಟರು= ಹೊರಟರು, ಅದರ= ಆ ಆನೆಗಳ, ಬಳಿವಿಡಿದು= ಹಿಂಬಾಲಿಸಿ, ಸೀಮಂತಿನೀಗಣಸಹಿತ= ಇತರ ಸ್ತ್ರೀಯರೊಂದಿಗೆ, ರುಕ್ಮಿಣಿಯು= ರುಕ್ಮಿಣಿಯು, ದಂಡಿಗೆ= ಮೇನೆಯು, ತೆರಳ್ದುದು= ಹೊರಟಿತು, ತುಂಬಿಗಳ= ದುಂಬಿಗಳು,  ಗಗನದೊಳ್= ಅಂತರಿಕ್ಷದಲ್ಲಿ, ಕಾರಮುಗಿಲಂತೆ= ಕಪ್ಪಗಿರುವ ಮೋಡದಹಾಗೆ,  ನವ= ನೂತನವಾದ, ಪಾರಿಜಾತದ= ಪಾರಿಜಾತ, ಕುಸುಮ= ಹೂವಿನ, ಪರಿಮಳಕೆ= ಸುರಭಿಗೆ, ಅತಿವಿಭವದಿಂದ= ಹೆಚ್ಚಾದ ಉತ್ಸಾಹದಿಂದ,  ತಿಂತಾಣಿಸಿ= ಒಟ್ಟಾಗಿ, ಸಂತತಂ= ಅನವರತವೂ, ಮುಸುಕಲು= ಕವಿದುಕೊಳ್ಳುವಂತೆ, ಆಳಿರ್-

ವೆರಸಿ= ಸಂಗಾತಿಯರೊಡಗೂಡಿ, ಅಂದಣದೊಳು= ಪಲ್ಲಕ್ಕಿಯಲ್ಲಿ ಕುಳಿತು, ಸತ್ಯಭಾಮೆ=ಸತ್ಯಭಾಮಾದೇವಿಯು,  ಐದಿದಳು= ಮುಂದಕ್ಕೆ ಹೊರಟಳು. 


ತಾತ್ಪರ್ಯ:- ದೇವಕಿ, ಯಶೋದೆ, ಕುಂತಿಯರು ಆನೆಯ ಮೇಲೆ ಕುಳಿತು ಹೊರಟರು. ಅವುಗಳ ಹಿಂದೆ ಅನೇಕ ಸ್ತ್ರೀಯ-

ರಿಂದೊಡಗೂಡಿದ ರುಕ್ಮಿಣಿಯು  ಪಲ್ಲಕ್ಕಿಯಲ್ಲಿ ಹೊರಟಳು, ಪಾರಿಜಾತ ಪುಷ್ಪದ ಪರಿಮಳ ಬಯಸಿ ಹೋಗುವ ಭೃಂಗಾಳಿಯಂತೆ ಅನೇಕ ಸ್ತ್ರೀಯರಿಂದೊಡಗೂಡಿದ ಸತ್ಯಭಾಮಾದೇವಿಯು ಮೇನೆಯಲ್ಲಿಹೊರಟಳು.