ಜೈಮಿನಿ ಭಾರತ 26 - ದೊಡ್ಡಬೆಲೆ ನಾರಾಯಣಶಾಸ್ತ್ರೀ
ಸೂಚನೆ:- ದ್ವಿಜನಾಗಿಬಂದು ಬೇಡಲ್ ಮಯೂರಧ್ವಜಂ।
ನಿಜಶರೀರದೊಳರ್ಧಮಂ ಕೊಯ್ದು ಕೊಟ್ಟು ಪಂ।
ಕಜ ಪತ್ರ ನೇತ್ರನಂ ಮೆಚ್ಚಿಸಿ ಹಯದ್ವಯವನಿತ್ತು ಮಖಮಂ ಮಾಣ್ದನು॥
ಪ್ರತಿಪದಾರ್ಥ :-ದ್ವಿಜನಾಗಿ= ಬ್ರಾಹ್ಮಣ ವೇಷಧಾರಿಯಾಗಿ, ಬಂದು=ಐತಂದು, ಬೇಡಲ್=ಯಾಚಿಸಲಾಗಿ, ಮಯೂರಧ್ವಜಂ= ಮಯೂರಧ್ವಜನು, ನಿಜಶರೀರದೊಳು= ತನ್ನ ದೇಹದಲ್ಲಿ, ಅರ್ಧಮಂ= ಅರ್ಧ ಭಾಗವನ್ನು, ಕೊಯ್ದು= ಕತ್ತರಿಸಿ, ಕೊಟ್ಟು = ಅರ್ಪಿಸಿ, ಪಂಕಜಪತ್ರನೇತ್ರನಂ= ಕಮಲಾಕ್ಷನಾದ ಕೃಷ್ಣನನ್ನು, ಮೆಚ್ಚಿಸಿ= ತೃಪ್ತಿಪಡಿಸಿ, ಹಯದ್ವಯವನು= ಅಶ್ವಗಳೆರಡನ್ನೂ,ಇತ್ತು ಕೊಟ್ಟು, ಮಖಮಂ= ಯಾಗವನ್ನು, ಮಾಣ್ದನು= ಪೂರೈಸಿದನು.
ತಾತ್ಪರ್ಯ:- ಶ್ರೀಕೃಷ್ಣನು ಬ್ರಾಹ್ಮಣನಾಗಿ ಬಂದು ತನ್ನಶರೀರದಲ್ಲಿ ಅರ್ಧವನು ಬೇಡಲು, ಮಯೂರಧ್ವಜನು ದೇಹಾರ್ಧವನು ಕೊಟ್ಟು, ಅವನನ್ನು ಮೆಚ್ಚಿಸಿ ಅಶ್ವಗಳೆರಡನ್ನೂ ಒಪ್ಪಿಸಿ, ಅಶ್ವಮೇಧಯಾಗವನ್ನು ತ್ಯಜಿಸಿದನು.
ಭೂರಮಣ ಕೇಳ್ ಕೃಷ್ಣಕಾಂಕ್ಷಿಯಾಗಿರ್ದಂ ಮ।
ಯೂರಧ್ವಜಂ ಕ್ಷಿತೀಶ್ವರನಿತ್ತಲತ್ತ ರಣ।
ಧಾರಿಣಿಯೊಳಸುರಾರಿಗೆಚ್ಚರಿಕೆ ತಲೆದೋರಿತರ್ಜುನಂಗರಿವಾದುದು॥
ವೀರಭಟರೆಲ್ಲರ್ಗೆ ಮೂರ್ಛೆತಿಳಿದುದು ಬಳಿಕ ।
ವಾರಿಜಾಕ್ಷಂ ಸಕಲ ಸೇನೆಯಂ ಸಂತೈಸಿ।
ಚೋರಬುದ್ಧಿಯೊಳೊಂದುಪಾಯಮಂ ಕಂಡಾ ಧನಂಜಯಗಿಂತೆಂದನು॥೧॥
ಪ್ರತಿಪದಾರ್ಥ :- ಭೂರಮಣ= ಭೂಕಾಂತನಾದ ಜನಮೇಜಯನೆ, ಕೇಳು =ಲಾಲಿಸು, ಇತ್ತಲ್= ರತ್ನಪುರಿಯಲ್ಲಿ, ಮಯೂರಧ್ವಜ ಕ್ಷಿತಿಪಂ= ಪೃಥ್ವೀಪತಿಯಾದ ಮಯೂರಧ್ವಜನು, ಕೃಷ್ಣಕಾಂಕ್ಷೆಯಾಗಿ= ಕೃಷ್ಣನನ್ನು ನೋಡಬೇಕೆಂಬ ಹೆಚ್ಚಾದ ಆಸಕ್ತಿಯಿಂದ ಕೂಡಿದವನಾಗಿ, ಇರ್ದಂ= ಇದ್ದನು, ಅತ್ತಕಡೆ= ಆ ಕಡೆ, ರಣಧಾರಿಣಿಯೋಳ್= ಸಮರಾಂಗಣದಲ್ಲಿ, ಅಸುರಾರಿಗೆ= ಕೃಷ್ಣನಿಗೆ, ಎಚ್ಚರಿಕೆ ತಲೆದೋರಿತು=ತಿಳಿವು ಬಂದಿತು, ಅರ್ಜುನಂಗೆ= ಪಾರ್ಥನಿಗು ಕೂಡ, ಅರಿವು= ಎಚ್ಚರವು, ಆದುದು=ಆಯಿತು, ಎಲ್ಲರ್ಗೆ= ಸಕಲರಾದ, ವೀರಭಟರಿಗೂ=ಶೂರಾಗ್ರಣಿಗಳಿಗೂ, ಮೂರ್ಛೆ
-ತಿಳಿದುದು= ಎಚ್ಚರವಾಯಿತು, ಬಳಿಕ= ಅನಂತರ, ವಾರಿಜಾಕ್ಷಂ= ಕಮಲದಂತೆ ಕಣ್ಣುಗಳುಳ್ಳ ಕೃಷ್ಣಸ್ವಾಮಿಯು, ಸಕಲಸೇನೆಯಂ= ಅಶೇಷವಾದ ದಳವನ್ನೂ, ಸಂತೈಸಿ= ಸಮಾಧಾನಗೊಳಿಸಿ, ಚೋರಬುಧ್ಧಿಯೊಳು= ಕಳ್ಳದಾರಿಯಿಂದ,
( ತನ್ನ ಭಕ್ತನಾದ ಮಯೂರಧ್ವಜನನ್ನು ರೂಪಾಂತರದಿಂದ ಕಂಡು ಅವನಿಂದ ಕುದುರೆಯನ್ನು ತರಬೇಕೆಂದು ಯೋಚಿಸಿ)
ಉಪಾಯಮಂ=ಯುಕ್ತಿಯೊಂದನ್ನು, ಕಂಡು=ತಿಳಿಸಿ, ಆ ಧನಂಜಯಂಗೆ= ಆ ಪಾರ್ಥನಿಗೆ, ಇಂತು= ಮುಂದೆ ಹೇಳುವಂತೆ, ಎಂದನು=ನುಡಿದನು.
ತಾತ್ಪರ್ಯ:- ಕೇಳೈ ಧರಾವಲ್ಲಭ ಜನಮೇಜಯನೆ, ಕೃಷ್ಣಾರ್ಜುನರನ್ನು ಮೂರ್ಛೆಗೊಳಿಸಿ, ಅವರ ಸೈನ್ಯವನ್ನೆಲ್ಲಾ ನೆಲಕ್ಕೆ ಕೆಡಹಿ ಯಾಗದ ಕುದುರೆಯನ್ನು ಹಿಡಿದು ತಂದಿರುವೆನೆಂದು ತಿಳಿಸಿದ ತಾಮ್ರಧ್ವಜನ ಮಾತುಗಳನ್ನು ರಾಜೇಂದ್ರನಾದ ಮಯೂರಧ್ವಜನು ಕೇಳಿದೊಡನೆಯೇ ಮಗನ ದುಷ್ಕೃತ್ಯಕ್ಕೆ ಹೆಚ್ಚಾದ ದುಗಡ ಹೊಂದಿ, ಸುತನನ್ನು ನಾನಾ ಪ್ರಕಾರವಾಗಿ ನಿಂದಿಸಿ ಬೆಳಗಾದ ಕೂಡಲೆ ತಾನು ರಣರಂಗದಲ್ಲಿ ಮೂರ್ಛೆಗೊಂಡಿರತಕ್ಕ ಕೃಷ್ಣ ಪರಮಾತ್ಮನನ್ನು ನೋಡಲು ಹೊರಡಬೇ-
ಕೆಂದು ಮನಸ್ಸನ್ನು ಸ್ಥಿರಮಾಡಿಕೊಂಡು ತನ್ನ ಪಟ್ಟಮಹಿಷಿಯಾದ ಕುಮದ್ವತಿಯೊಂದಿಗೆ ಕೂಡಿ ಆ ದಿನವೆಲ್ಲಾ ಸ್ವಾಮಿಯನ್ನು ನೋಡಬೆಕೆಂಬುದರಲ್ಲಿಯೇ ಆಸಕ್ತನಾಗಿಬೆಳಗಾಗುವುದನ್ನೇ ಎದುರು ನೋಡುತ್ತಲಿದ್ದನು. ಅತ್ತ ಸಮರಾಂಗಣದಲ್ಲಿ ಪ್ರಜ್ಞೆಯೇ ಇಲ್ಲದೆ ಬಿದ್ದು ಹೋಗಿದ್ದ ಕೃಷ್ಣನಿಗೆ ಎಚ್ಚರಿಕೆಯಾಯಿತು, ಅನಂತರ ಅರ್ಜುನನೂ ಆ ಬಳಿಕ ಸೇನಾಪರಿವಾರವೆಲ್ಲಾವೂ ಎಚ್ಚರವನ್ನೈದಿತು. ಆಗ ಕೃಷ್ಣನು ಸಕಲರನ್ನೂ ಸಂತೈಸಿದ ಬಳಿಕ ಪಾರ್ಥನನ್ನು ಕುರಿತು.
ನೋಡಿದೈ ಕುಂತೀಕುಮಾರ ತಾಮ್ರಧ್ವಜಂ।
ಮೃಡಿದ ವಿಘಾತಿಯಂ ನಮ್ಮೆಲ್ಲರಂ ಧುರದೊ।
ಳೀಡಿರಿದುರುಳ್ಚಿ ಹಯಮಂ ಕೊಂಡು ರತ್ನಪುರಿಗೈದಿದಂ ಪಿತನ ಬಳಿಗೆ॥
ಆಡಲೇನಹುದಿನ್ನು ಸೇನೆ ಮೆಲ್ಲನೆ ಪಿಂತೆ।
ಬೀಡಾಗಿ ನಡೆತರಲಿ ಮುಂದೆ ಪೋದಪೆನೆನ್ನ।
ಕೂಡೆ ಬಾ ನಿನಗೊಂದುಪಾಯಮಂ ತೋರಿಸುವೆನೆಂದನಸುರಾರಿ ನಗುತೆ॥೨॥
ಪ್ರತಿಪದಾರ್ಥ :- ತಾಮ್ರಧ್ವಜಂ = ತಾಮ್ರಕೇತುವು, ಮಾಡಿದ= ಎಸಗಿದ, ವಿಘಾತಿಯಂ = ಹೊಡೆತವನ್ನು, ಕುಂತೀಕುಮಾರ =ಕುಂತೀಸುತನಾದ ಫಲುಗುಣನೆ, ನೋಡಿದೈ= ನೋಡಿದೆಯಾ, ನಮ್ಮೆಲ್ಲರಂ= ನಮ್ಮೆಲ್ಲರನ್ನೂ, ಧುರದೊಳು= ಕಾಳಗದಲ್ಲಿ, ಈಡಿರಿದು= ಪ್ರತಿಭಟಿಸಿ ಸೋಲಿಸಿದವನಾಗಿ,ಉರುಳ್ಚಿ= ನೆಲಕ್ಕೆ ಕೆಡವಿ, ಹಯಮಂ= ಯಜ್ಞಾಶ್ವವನ್ನು, ಕೊಂಡು= ತೆಗೆದುಕೊಂಡು, ಪಿತನ= ಜನಕನ, ಬಳಿಗೆ= ಸಮೀಪಕ್ಕಾಗಿ, ರತ್ನಪುರಿಗೆ= ರತ್ನಪುರಿ ಎಂಬ ರಾಜಧಾನಿಗೆ, ಐದಿದಂ= ಹೋಗಿ ಸೇರಿದನು, ಇನ್ನು= ಇನ್ನು ಮುಂದೆ, ಆಡಲು= ಹೆಚ್ಚಾಗಿ ಮಾತನಾಡಿ, ಏನಹುದು= ಏನು ಸಾರ್ಥಕವಾದೀತು, ಸೇನೆ= ಪರಿವಾರವೆಲ್ಲಾ, ಮೆಲ್ಲನೆ= ನಿಧಾನವಾಗಿ, ಹಿಂದೆ= ಹಿಂದುಗಡೆಯಲ್ಲಿ, ಬೀಡಾಗಿ= ಒಮ್ಮುಖವಾಗಿ,ನಡೆತರಲಿ = ಬರುತ್ತಿರಲಿ,(ನಾನು) ಮುಂದೆ= ಮೊದಲೆ, ಪೋದಪೆನು= ಹೋಗುತ್ತೇನೆ, ನೀನು=ನೇನಾದರೊ,ಎನ್ನಕೂಡೆ= ನನ್ನ ಜೊತೆಯಲ್ಲಿ, ಬಾ= ಬರುವನಾಗು, ನಿನಗೆ= ನಿನಗಾದರೊ, ಒಂದುಪಾಯಮಂ= ಒಂದು ಚಮತ್ಕಾರವನ್ನು, ತೋರಿಸುವೆ-
ನು, ಎಂದು= ಎಂಬುದಾಗಿ, ನಗುತ= ಮುಗುಳ್ನಗುತ್ತಾ,ಅಸುರಾರಿ= ಕೃಷ್ಣನು, ಎಂದನು= ಹೇಳಿದನು.
ತಾತ್ಪರ್ಯ:-ಅಯ್ಯಾ ಫಲುಗುಣಾ! ತಾಮ್ರಧ್ವಜನ ಸಾಹಸವನ್ನು ನೋಡಿದೆಯಾ! ನಮ್ಮನ್ನೂ ಅಸಾಧಾರಣರಾದ ನಮ್ಮ ವೀರಾಗ್ರಣಿಗಳನ್ನೂ ಹಾಗೂ ನಮ್ಮ ಸಕಲ ಪರಿವಾರವನ್ನೂ ಮೂರ್ಛೆಗೊಳಿಸಿ ಯಜ್ಞಾಶ್ವವನ್ನು ತೆಗೆದುಕೊಂಡು ಹೋಗಿ ತನ್ನ ತಂದೆಯ ಬಳಿ ಸೇರಿರುವನಲ್ಲಾ ! ಆಹಾ, ಊವನ ಸಾಹಸವು ಇನ್ನೆಷ್ಟು ಅಸಾಧಾರಣವಾದದ್ದೊ! ಕಾರ್ಯವು ಮೀರಿದ್ದ-
ರಿಂದ, ಇನ್ನು ಯೋಚಿಸಿ ಫಲವೇನಿರುವುದು? ಎಲೈ ಅರ್ಜುನನೆ ಈಗ ನಾನೊಂದು ಯುಕ್ತಿಯನ್ನು ಹುಡುಕುತ್ತೇನೆ ಸುಮ್ಮನಿರು. ನಮ್ಮ ಸಕಲಬಲವೂ ನಿಧಾನವಾಗಿ ರತ್ನಪುರಿಯ ಬಳಿಗೆ ಬರಲಿ, ನಾನು ಈಗಲೇ ಅಲ್ಲಿಗೆ ಹೋಗುವೆನು,ನೀನೂ ನನ್ನೊಂದಿಗೆ ಬಾ ಎಂದು ಮಂದಹಾಸದಿಂದ ನುಡಿದನು.
ಆ ಹರಿಯ ನುಡಿಗೇಳ್ದು ಫಲುಗುಣಂ ಸೇನಾಸ।
ಮೂಹಮಂ ಪಿಂದುಳಿಸಿ ರತ್ನನಗರಿಗೆ ಪಕ್ಷಿ।
ವಾಹನನಕೂಡೆ ನಡೆತಂದನವರಿರ್ವರು ಮಾತಾಡಿಕೊಂಡು ಬಳಿಕ॥
ರೂಹುಗಾಣಿಸದಂತೆ ವಿಪ್ರವೇಶವನಾಂತು।
ದೇಹಿಕರ ತೆರದಂತೆ ವೃದ್ಧನಾದಂ ಶೌರಿ।
ಮೋಹದಿಂ ತನಗೆ ಕೈಗುಡುವ ಬಾಲಕ ಶಿಷ್ಯನಾದನಮರೇಂದ್ರಸೂನು॥೩॥
ಪ್ರತಿಪದಾರ್ಥ :- ಫಲುಗುಣಂ= ಪಾರ್ಥನು, ಆ ಹರಿಯ= ಆ ಕೃಷ್ಣನ, ನುಡಿ=ಮಾತನ್ನು, ಕೇಳ್ದು= ಲಾಲಿಸಿ, ಪಿಂದೆ= ಹಿಂದುಗಡೆಯೇ, ಸೇನಾಸಮೂಹಮಂ= ಸೈನ್ಯವನ್ನೆಲ್ಲಾ, ಉಳಿಪಿ= ಬಿಟ್ಟು, ರತ್ನನಗರಿಗೆ = ರತ್ನಪುರಿಯೆಂಬ ಮಯೂರ-
ಧ್ವಜನ ರಾಜಧಾನಿಗೆ, ಪಕ್ಷಾವಾಹನನಕೂಡೆ= ಗರುಡಾರೂಢನಾದ ಕೃಷ್ಣನ ಜೊತೆಯಲ್ಲಿ ,ನಡೆತಂದನು= ಬಂದು ಸೇರಿದನು, ಬಳಿಕ = ಅನಂತರ, ಅವರೀರ್ವರೂ= ಪಾರ್ಥ ಕೃಷ್ಣರು, ರೂಹುಕಾಣಿಸಿದಂತೆ= ನಿಜರೂಪು ಕಾಣಿಸದಂತೆ, ವಿಪ್ರವೇಶವ-
ನು= ಬ್ರಾಹ್ಮಣ ವೇಶವನ್ನು,ಆಂತು=ಪಡೆದು, ಶೌರಿ= ಕೃಷ್ಣನು, ದೇಹಿಕರ ತೆರದಿಂದ = ಯಾಚಕರಂತೆ, ವೃದ್ಧನು= ಮುದು-
ಕನು, ಆದಂ= ಆದನು, ತನಗೆ= ವಿಪ್ರವೇಷಧಾರಿಯಾದ ಸ್ವಾಮಿಗೆ, ಅಮರೇಂದ್ರಸೂನು= ಪಾರ್ಥನು,ಮೋಹದಿಂ = ಅಕ್ಕರೆಯಿಂದ, ಕೈಗೊಡುವ= ಕರಲಾಘವನ್ನು ಕೊಡುವ, ಬಾಲಕಶಿಷ್ಯನು= ಪ್ರಿಯಶಿಷ್ಯನು, ಆದನು= ಆಗಿಬಿಟ್ಟನು.
ತಾತ್ಪರ್ಯ:- ಧನಂಜಯನು ಕೃಷ್ಣನ ಅಪ್ಪಣೆಯಂತೆ ತನ್ನ ಪರಿವಾರವನ್ನೆಲ್ಲಾ ಹಿಂದೆಯೇ ಬಿಟ್ಟು ಮುರಹರಿಯನ್ನು ಹಿಂಬಾಲಿಸಿದನು. ಸ್ವಲ್ಪ ಹೊತ್ತಿನಲ್ಲಿ ನರನಾರಾಯಣರೀರ್ವರೂ ರತ್ನಪುರಿಯ ಹತ್ತಿರಕ್ಕೆ ಬಂದರು. ಆಗ ಕೃಷ್ಣನು ಅರ್ಜುನನನ್ನು ನೋಡಿ ಅಯ್ಯಾ ಅರ್ಜುನಾ! ನಾವಿಬ್ಬರೂ ಇಲ್ಲಿ ರೂಪಾಂತರವನ್ನ ಮಾಡಿಕೊಂಡು ಅನಂತರ ಪಟ್ಟಣವನ್ನು ಪರ್ವೇಶಮಾಡೋಣ, ನಾನು ಒಬ್ಬ ಮುದುಕ ಬ್ರಾಹ್ಮಣನಾಗುತ್ತೇನೆ. ನೇನು ನನಗೆ ಶಿಷ್ಯನಾಗು ಎಂದು ಬೋಧಿಸಿದನು. ಆಗ ಕೃಷ್ಣನು ವೃದ್ಧ ಬ್ರಾಹ್ಮಣನೂ ಅರ್ಜುನನು ಅವನ ಶಿಷ್ಯನೂ ಆಗಿ ಅವರೀರ್ವರೂ ರತ್ನಪುರಿಯೊಳಕ್ಕೆ ಪ್ರವೇಶಮಾಡಿದರು.
ಬಟ್ಟೆ ವಿಡಿದವರಿರ್ವರುಂ ಮಯೂರಧ್ವಜನ ।
ಪಟ್ಟಣಕ್ಕೆ ನಡೆತಂದರನ್ನೆಗಂ ದೆಸೆದೆಸೆಯೊ।
ಳಿಟ್ಟಣಿಸಿ ಲೋಕಮಂ ಕಂಗೆಡಿಸುವಂಧಕಾರಂಗಳಂ ನಿಲಲೀಯದೆ॥
ಅಟ್ಟಿ ಹರಿಹರಿದುರೆ ಬಳಲ್ದು ಕಾಹುರದೆ ಕಂ।
ಗೆಟ್ಟು ಕಳೆಗುಂದಿ ಮೆಲ್ಲನೆ ನಭೋಮಾರ್ಗಮಂ।
ಬಿಟ್ಟು ಪಶ್ಚಿಮಗಿರಿಯ ತಪ್ಪಲಂ ಸಾರ್ದನೆನೆ ರವಿ ಪಡುಗಡೆಯೊಳೆಸೆದನು॥೪॥
ಪ್ರತಿಪದಾರ್ಥ :- ಮಯೂರಧ್ವಜನ ಪಟ್ಟಣಕೆ= ಮಯೂರನ ರಾಜಧಾನಿಯಾದ ರತ್ನಪುರಿಗೆ, ಬಟ್ಟೆವಿಡಿದು= ದಾರಿಯನ್ನು ಹಿಡಿದವರಾಗಿ, ಅವರೀರ್ವರುಂ= ಕೃಷ್ಣಾರ್ಜುನರಿಬ್ಬರೂ, ನಡೆತಂದರು= ಬಂದರು, ದೆಸೆದೆಸೆಯೊಳು= ಎಲ್ಲಾ ದಿಕ್ಕುಗಳ-
ಲ್ಲಿಯೂ, ಅನ್ನೆಗಂ= ಆ ವರೆಗೂ, ಇಟ್ಟಣಿಸಿ= ತುಂಬಿಕೊಂಡು, ಲೋಕಮಂ= ಪ್ರಜೆಗಳನ್ನು, ಕಂಗೆಡಿಸುವ= ಕಣ್ಣು ಕಾಣದಂತೆ ಮಾಡುವ, ಅಂಧಕಾರಂಗಳಂ= ತಮೋರಾಶಿಯನ್ನು, ನಿಲಲೀಯದೆ= ನಿಲ್ಲಗೊಡಿಸದೆ, ಅಟ್ಟಿ= ಓಡಿಸಿ, ಹರಿಹರಿದ= ಓಡಾಡಿ ಓಡಾಡಿ, ಉರೆ= ಹೆಚ್ಚಾಗಿ, ಬಳಲ್ದು= ಆಯಾಸಗೊಂಡು,ಕಾಹುರದಿ= ವ್ಯಸನದಿಂದ, ಕಂಗೆಟ್ಟು= ಕೃಶವಾಗಿ, ಕಳೆಗುಂದಿ= ಕಾಂತಿಯನ್ನು ಕಳೆದುಕೊಂಡು, ನಭೋಮಾರ್ಗಮಂ = ಆಕಾಶದ ದಾರಿಯನ್ನು, ಮೆಲ್ಲನೆ= ನಿಧಾನವಾಗಿ, ಬಿಟ್ಟು= ತ್ಯಜಿಸಿ, ಪಶ್ಚಿಮಗಿರಿಯ ತಪ್ಪಲಂ= ಪಶ್ಚಿಮಾದ್ರಿಯನ್ನು, ಸಾರ್ದನು= ಹೊಕ್ಕನು, ಎನೆ=ಎಂಬಂತೆ, ರವಿ= ದಿಕರನು, ಪಡುಗಡಲೊಳು= ಪಶ್ಚಿಮ ಸಮುದ್ರದ ಕಡೆಗೆ, ಎಸೆದನು= ಪ್ರಕಾಶಿಸುತ್ತಲಿದ್ದನು.
ತಾತ್ಪರ್ಯ:- ಈ ರೀತಿಯಲ್ಲಿ ಕೃಷ್ಣಾರ್ಜುನರು ಮಯೂರಧ್ವಜನ ರಾಜಧಾನಿಯನ್ನು ಸೇರುವ ಕಾಲಕ್ಕೆ ಸರಿಯಾಗಿ ಸೂರ್ಯನು ಪಶ್ಚಿಮಸಮುದ್ದದಲ್ಲಿ ಮುಳುಗಿದನು ಆಗ ಸೂರ್ಯಮಂಡಲವಾದರೊ ಗಾಡಾಂಧಕಾರದ ಹೊಯೂಲನ್ನು ತಾಳಲಾರದೆ ಓಡಿಓಡಿ ಬಳಲಿ, ಕಂಗೆಟ್ಟು ಹೋಗಿದೆಯೊ ಎಂಬಂತೆ ಕಾಂತಿವಿಹೀನವಾಗಿದ್ದಿತು, ಕತ್ತಲೆಯಾದರೂ ದಿಕ್ತಟಗ-
ವರೆಗೂ ವ್ಯಾಪಿಸಿತ್ತು.
ಮೆಲ್ಲಮೆಲ್ಲನೆ ತರಣಿ ಮುಳುಗಿದಂ ಪಡುಗಡಲೊ।
ಳಲ್ಲಿಗಲ್ಲಿಗೆ ಮೂಡಿದುವು ಸಂಜೆದಾರಗೆಗ।
ಳೆಲ್ಲೆಲ್ಲೆಲ್ಲಿಯುಂ ತಮಂ ತುಂಬಿದುದು ತುಂಬಿಗಳೊಡನೆ ಮುಗಿದುವಂಬುಜಾಳಿ॥
ನಲ್ಲನಲ್ಲರ ನೇಹಗಲಹದೊಳ್ ಮುನಿದು ರತಿ।
ಗೊಲ್ಲದೊಲ್ಲದ ಕಾಂತೆಯರ ಮನಂ ತರಹರಿಸಿ।
ನಿಲ್ಲನಿಲ್ಲದವೊಲಂಗಜನುರುಬತೊಡಗಿದಂ ಮರುಗಿದುವು ಕೋಕಂಗಳು॥೫॥
ಪ್ರತಿಪದಾರ್ಥ :- ಮೆಲ್ಲಮೆಲ್ಲನೆ = ಮೆತ್ತಮೆತ್ತಗೆ( ನಿಧಾನವಾಗಿ) ಪಡುಕಡಲೊಳ್= ಪಶ್ಚಿಮ ಕಡೆಯಲ್ಲಿರುವ ಸಮುದ್ರದೊ-
ಳಗೆ, ತರಣಿ= ರವಿಯು, ಮುಳುಗಿದಂ= ಮುಳುಗಿಕೊಂಡನು, ಸಂಜೆದಾರಗೆಗಳು= ಸಂಧ್ಯಾಕಾಲವನ್ನು ತೋರಿಸುವ ಉಡುಗಣವು, ಅಲ್ಲಿಗಲ್ಲಿಗೆ= ಆಕಾಶದ ಎಲ್ಲಾ ಭಾಗದಲ್ಲೂ, ಮೂಡಿದುವು= ಉಂಟಾದವು, ತಮಂ= ಕತ್ತಲೆಯು, ಎಲ್ಲೆಲ್ಲಿಯುಂ= ಎಲ್ಲಾಶಸ್ಥಳಗಳಲ್ಲಿಯೂ, ತುಂಬಿದುದು= ಆವರಿಸಿಕೊಂಡಿತು, ತುಂಬಿಗಳೊಡನೆ= ದುಂಬಿಗಳೊಂದಿಗೆ, ಅಂಬುಜಾಳಿ= ತಾವರೆಗಳ ಸಮುದಾಯವು, ಮುಗಿದುವು= ಮುಚ್ಚಿಕೊಂಡವು, ರತಿಗೆ= ಕ್ರೀಡಾಸುಖಕ್ಕೆ, ಒಲ್ಲದೊಲ್ಲದ= ಆಶಿಸದಿರುವ, ಕಾಂತೆಯರ = ಸ್ತ್ರೀಯರ, ಮನಂ= ಮನಸ್ಸು, ನಲ್ಲರ= ಪ್ರೀತಿಪಾತ್ರರ(ಕಾಮುಕರ) ನೇಹಗಲಹದೊಳ್=
ಪ್ರೇಮಕಲಹದಿಂದ, ಮುನಿದು= ಕೋಪಗೊಂಡು, ತರಹರಿಸಿ= ಮನ್ಮಥಪೀಡೆಯನ್ನು ತಾಳಲಾರದೆ ಭ್ರಾಂತಿಗೊಂಡು, ನಿಲ್ಲನಿಲ್ಲದವೊಲ್= ನಿಂತಿರುವುದಕ್ಕೂ ಕೂಡ ಶಕ್ತಿಯಿಲ್ಲದಂತೆ, ಅಂಗಜನು= ಮನ್ಮಥನು, ಉರುಬ= ಹೆಚ್ಚಾ ಶಕ್ತಿಯನ್ನು, ತೊಡಗಿದಂ= ತೋರಿದನು, ಕೋಕಂಗಳು= ಚಕ್ರವಾಕಗಳು, ಮರುಗಿದುವು= ಕೊರಗಿದವು.
ತಾತ್ಪರ್ಯ:-ಅಷ್ಟು ಹೊತ್ತಿಗೆ ಸೂರ್ಯಾಸ್ತಮಾನವೂ ಚನ್ನಾಗಿಯೇ ಆಯಿತು. ಎಲ್ಲೆಲ್ಲಿಯೂ ನಕ್ಷತ್ರಗಳು ಮಿಣುಗುಟ್ಟುತ್ತ-
ಲಿದ್ದವು. ತುಂಬಿಗಳ ಬಳಗವು ತಾವರೆಗಳೊಳಗೆಬಂಧಿಯಾದವು. ಸ್ತ್ರೀಪುರುಷರು ವಿರಹವೇದನೆಯನ್ನು ತಾಳಲಾರದೆ ಸಂಕಟಪಡುತ್ತಲಿದ್ದರು. ಚಕ್ರವಾಕ ಪಕ್ಷಿಗಳ ವ್ಯಸನವು ಮಿತಿಮೀರಿತು.
ಹೊತ್ತುಹೊತ್ತಿಗೆ ಮತ್ತೆ ಮತ್ತೆ ಬಲವತ್ತರದೊ।
ಳೊತ್ತಿಡಿದು ಸುತ್ತಲೆತ್ತೆತ್ತಲುಂ ಕೆತ್ತವೋಲ್।
ಮುತ್ತಿ ಮುಸುಕಿತ್ತು ಕಗ್ಗತ್ತಲೆ ಧರಿತ್ರಿಯಂ ಮುಳ್ಳಮೊನೆ ಕೊಳ್ಳದಂತೆ॥
ಚಿತ್ತಜಂ ಕತ್ತಿಯಂ ಕಿತ್ತುಕೊಂಡೆತ್ತಿ ಹೊ।
ಯ್ಯುತ್ತೆ ಬರಲುತ್ತುಂಗ ವೃತ್ತಕುಚೆಯರ್ ತಮಗೆ।
ತ್ತೆತ್ತಿರ್ದ ತೆತ್ತಿಗರನೊತ್ತಿಗರ ಸುತ್ತಿರ್ದರಾಗಳನುರಾಗದಿಂದೆ॥೬॥
ಪ್ರತಿಪದಾರ್ಥ :- ಮತ್ತೆ ಮತ್ತೆ= ಪುನಃ ಪುನಃ, ಹೊತ್ತು ಹೊತ್ತಿಗೆ = ಆಯಾಯ ಸಮಯಕ್ಕೆ, ಬಲವತ್ತರದೊಳ್= ಬಲವಾಗಿ ಒತ್ತುವುದರಿಂದ( ಸೇರುವುದರಿಂದ) ಒತ್ತಿಡಿದು= ಸಾಂದ್ರವಾಗಿ ನೆರೆದು, ಎತ್ತೆತ್ತಲುಂ= ಎಲ್ಲಾ ಕಡೆಯೂ,ಸುತ್ತಲು= ನಾನಾ ಭಾಗದೊಳು,ಕೆತ್ತವೊಲ್= ನೆಂದಿರುವಂತೆ, ಮುಳ್ಳುಮೊನೆ= ಮುಳ್ಳಿನ ತುದಿಯು, ಕೊಳ್ಳದಂತೆ= ಇಡಲಾಗದಹಾಗೆ, ತಮಂ= ಕತ್ತಲೆಯು, ಮುತ್ತಿಮುಸುಕಿತ್ತು= ಎಲ್ಲೆಲ್ಲಿಯೂ ವ್ಯಾಪಿಸಿತ್ತು, ಚಿತ್ತಜಂ= ಮನ್ಮಥನು, ಕತ್ತಿಯಂ ಕಿತ್ತಕೊಂಡು= ಕತ್ತಿಯನ್ನು ಹೊರಗೆ ಸೆಳೆದುಕೊಂಡು, ಎತ್ತಿ= ಮೇಲ್ಗಡೆಗೆ ಎತ್ತಿ, ಹೊಯ್ಯುತ್ತಬರಲು=ಘಾತಿಸುತ್ತ ಬರಲಾಗಿ, ಉತ್ತುಂಗ= ದೊಡ್ಡದಾಗಿ-
ರುವ, ವೃತ್ತ=ಗುಂಡಾಗಿರುವ, ಕುಚೆಯರ್= ಸ್ತನಗಳುಳ್ಳ ಸ್ತ್ರೀಯರು, ತಮಗೆ=ತಮಗಾಗಿ, ತೆತ್ತಿದ್ದ= ಸಹಾಯಕರಾಗಿದ್ದ, ತೆತ್ತಿಗರನು= ಕಾಮುಕರನ್ನು,ಒತ್ತಿಗೆ=ರತಿಸುಖವನ್ನನುಭವಿಸುವಿಕೆಯಿಂದ ಕಾಮಬಾಧಾ ಪರಿಹಾರವನ್ನುಗೈವ ಸಹಾಯಕ್ಕೆ, ಆಗಲು=ನೆರವಾಗುವುದಕ್ಕೋಸ್ಕರ, ಅನುರಾಗದಿಂದ= ವಿಶ್ವಾಸದಿಂದ, ಅರಸುತಿರ್ದರು= ಕಾಮುಕರ ಬರುವಿಕೆಯನ್ನೇ ನೋಡುತ್ತಲಿದ್ದರು.
ಅ॥ವಿ॥ ಕಗ್ಗತ್ತಲೆ= ಕರಿದೈ+ಕತ್ತಲೆ (ವಿ. ಪೂ. ಕ.) ಚಿತ್ತಜಂ= ಮನಸ್ಸಿನಲ್ಲಿ, ಜ= ಹುಟ್ಟಿದವನು(ಷ. ತ. ಸ.) ಉತ್ತುಂಗ ವೃತ್ತ ಕುಚೆಯರ್= ವೃತ್ತಗಳಾದ ಕುಚಂಗಳ್( ವಿ. ಪೂ. ಕ.) ಉತ್ತುಂಗಗಳಾದ ವೃತ್ತಕುಚಗಳು ಯಾರಿಗೊ ಅವರು ( ಬ. ಸ.)
ತಾತ್ಪರ್ಯ:- ಆಗ ಕೃಷ್ಣನು ಅರ್ಜುನನನ್ನು ಜೊತೆಮಾಡಿಕೊಂಡು ಊರಿನ ಬೀದಿಗಳೆಲ್ಲೆಲ್ಲಾ ತಿರುಗುತ್ತಾ ಅನೇಕ ಸುಂದರಿಯರು ಮನ್ಮಥಪಾಶಕ್ಕೆ ಸಿಕ್ಕಿ ಹುಚ್ಚು ಹಿಡಿದು ಅಲೆಯುತ್ತಲಿರುವದನ್ನೂ ಅವರ ನಾನಾ ತೆರನಾದ ಕಾಮಚೇ-
ಷ್ಟೆಗಳನ್ನೂ ನೋಡುತ್ತಾ ಹೊರಟನು.
ಆ ರಜನಿಯೊಳ್ ಬಳಿಕ ರತ್ನಪುರಮಂ ಪೊಕ್ಕು ।
ನೀರಜದಳೇಕ್ಷಣಂ ಕೇರಿಕೇರಿಗಳೊಳ್ ಸ।
ಮೀರಜನ ತಮ್ಮನಂ ಕೂಡಿಕೊಂಡೈತರುತೆ ಕಂಡನತಿ ನಿದ್ರೆಯಿಂದೆ॥
ಊರ ಜನಮೆಲ್ಲಮುಂ ಮರೆದೊರಗಲಲ್ಲಲ್ಲಿ।
ಮಾರಜ ಭ್ರಮೆಯಿಂದೆ ಪೊರಮಟ್ಟು ಸಂಚರಿಪ।
ಚಾರು ಜಲರುಹ ವದನೆಯರ ಬೇಟದಾಟದ ಪಲವು ಬಗೆಯ ಚೇಷ್ಟೆಗಳನು॥೭॥
ಪ್ರತಿಪದಾರ್ಥ :- ಬಳಿಕ = ಆಮೇಲೆ, ನೀರಜದಳೇಕ್ಷಣಂ= ಕಮಲ ನೇತ್ರನಾದ ಕೃಷ್ಣನು, ರತ್ನಪುರಮಂ= ಮಯೂರನ ರಾಜಧಾನಿಯನ್ನು, ಆ ರಜನಿಯೊಳ್ =ಆ ರಾತ್ರಿಯಲ್ಲಿಯೇ,ಪೊಕ್ಕು = ಹೋಗಿ ಸೇರಿ, ಸಮೀರಜನ= ಭೀಮನ, ತಮ್ಮನಂ= ಅನುಜನಾದ ಪಾರ್ಥನನ್ನು, ಕೂಡಿಕೊಂಡು= ಜೊತೆಮಾಡಿಕೊಂಡು, ಊರಜನಂ= ನಗರವಾಸಿಗಳೆಲ್ಲರೂ, ಮರೆದು= ಎಚ್ಚರದಪ್ಪಿ, ಒರಗಲು= ಬಿದ್ದುಹೋಗಿರಲಾಗಿ, ಮಾರಜಭ್ರಮೆಯಿಂದ= ವಿಷಯಾಸಕ್ತಿಯಿಂದ,ಪೊರಮಟ್ಟು = ಹೊರಬಂದು, ಅಲ್ಲಲ್ಲಿ= ಎಲ್ಲಾಸ್ಥಳಗಳಲ್ಲೂ, ಸಂಚರಿಪ= ಓಡಾಡುತ್ತಲಿರುವ,ಚಾರು= ಸುಂದರಿಯರಾದ, ಜಲರುಹನಯನೆಯರ= ಕಮಲಾಕ್ಷಿಯರ, ಬೇಟದಾಟದ= ವಿಹಾರದ, ಪಲವುಬಗೆಯ= ತಂಡತಂಡಗಳಾದ, ಚೇಷ್ಟೆಗಳ-
ನು= ವಿಕಾರಗಳನ್ನು(ನಡವಳಿಕೆಯನ್ನು) ಕೇರಿಕೇರಿಗಳೊಳ್ = ಎಲ್ಲಾಬೀದಿಗಳಲ್ಲಿಯೂ, ಕಂಡನು= ನಿರುಕಿಸಿದನು.
ಅ॥ವಿ॥ ಜಲಜದಳೇಕ್ಷಣಂ= ಜಲಜ-ನೀರಿನಲ್ಲಿ, ಜ-ಹುಟ್ಟಿದ್ದು (ಷ. ತ. ಸ. ) ಜಲಜದಳ( ಷ.ತ. ಸ.) ಜಲಜದಳದಂತೆ ಈಕ್ಷಣವು ಯಾರಿಗೊ ಅವನು(ಬ. ಸ. ) ಜಲರುಹವದನೆಯರು=ಜಲ-ನೀರಿನಲ್ಲಿ,ರುಹ-ಹುಟ್ಟಿದ್ದು (ಷ. ತ. ಸ.) ಜಲರುಹ=ಕಮಲದಂತೆ, ವದನೆಯರು- ಮುಖವುಳ್ಳವರು (ಬ. ಸ.)
ತಾತ್ಪರ್ಯ:- ಆಗ ಕೃಷ್ಣನು ಅರ್ಜುನನ ಜೊತೆಯಲ್ಲಿ ಊರಿನ ಬೀದಿಗಳಲ್ಲೆಲ್ಲಾ ತಿರುಗುತ್ತಾ ಅನೇಕ ಸುಂದರಿಯರು ಮನ್ಮಥ ಪಾಶಕ್ಕೆ ಸಿಕ್ಕಿ ಹುಚ್ಚು ಹಿಡಿದು ಅಲೆಯುತ್ತಲಿರುವುದನ್ನೂ ಅವರ ನಾನಾ ತೆರನಾದ ಕಾಮಚೇಷ್ಟೆಗಳನ್ನೂ ನೋಡುತ್ತಾ ಹೊರಟರು.
ಆಭರಣಮಲುಗಿದೊಡೆ ಕಣ್ಗದಿರ್ ಸೂಸಿದೊಡೆ।
ಶೋಭಿಸುವ ತನುಗಂಧಮುಣ್ಮಿದೊಡೆ ಜನರ ನಿ।
ದ್ರಾಭಂಗಮಾಗಿ ಕಂಡಪರೆಂಬ ಭೀತಿಯಿಂದೈತರ್ಪ ಕಾಮಿನಿಯನು॥
ಸಾಭಿಲಾಶೆಯೊಳೊರ್ವ ವಿಟನಿದಿರ್ವಂದುಮ।
ತ್ತೇಭ ಗಾಮಿನಿ ಭೃಂಗ ನೀಲಕುಂತಲೆ ಪನ್ನ।
ಗಾಭ ಸುಂದರವೇಣಿ ಬೆದರಬೇಡೆನುತ ತಕ್ಕೈಸಿದನದೇಂ ಪ್ರೌಢನೋ॥೮॥
ಪ್ರತಿಪದಾರ್ಥ :- ಆಭರಣಂ= ತೊಡವುಗಳು, ಅಲುಗಿದೊಡೆ= ಅಲ್ಲಾಡುತ್ತಿರಲು, ಕಣ್ಗದಿರ್ = ಕಣ್ಣುಗಳ ಕಳೆಯು, ಸೂಸಿದೊಡೆ= ಹರಡಲಾಗಿ, ಶೋಭಿಸುವ = ಕಾಂತಿಯುಕ್ತಮಾದ, ತನಿಗಂಧಂ= ಒಳ್ಳೆಯ ಪರಿಮಳವು, ಉಣ್ಮಿದೊಡೆ= ಒದಗಲು, ಜನರ= ಪಟ್ಟಣವಾಸಿಗಳಿಗೆಲ್ಲಾ, ನಿದ್ರಾಭಂಗಂ ಆಗಿ= ಎಚ್ಚರವಾಗಿ, ಕಂಡಪರು= ನೋಡಿಬಿಡುತ್ತಾರೆ, ಎಂಬ= ಎನ್ನತಕ್ಕ, ಭೀತಿಯಿಂದ= ಹೆದರಿಕೆಯಿಂದ, ಐತಪ್ಪ= ಬರುತ್ತಿರುವ, ಕಾಮಿನಿಯನು= ಮನ್ಮಥಾವಸ್ಥೆಯಿಂದ ಪೀಡಿತಳಾದ ನಾರಿಯನ್ನು, ಸಾಭಿಲಾಷೆಯೊಳು= ವಿಶ್ವಾಸಪೂರ್ವಕವಾಗಿ, ಓರ್ವವಿಟನು= ಒಬ್ಬ ಕಾಮುಕನು, ಇದಿರ್ವಂದು= ಎದುರುಬಂದು( ಆ ಹೆಂಗಸನ್ನು ಕುರಿತು) ಮತ್ತೇಭಗಾಮಿನಿ= ಮದ್ದಾನೆಯ ಹಾಗೆ ನಿಧಾನವಾದ ನಡಿಗೆಯುಳ್ಳವಳೆ,ಭೃಂಗನೀಲಕುಂತಳೆ= ದುಂಬಿಗಳ ಹಾಗೆ ಕಪ್ಪಾದ ಕೂದಲುಳ್ಳವಳೆ,ಪನ್ನಗಾಭವೇಣಿ= ಸರ್ಪದ ಕಾಂತಿಯಿಂದ ಹೋಲಿಕೆಯಾಗುವ, ವೇಣಿ= ಜಡೆಯವಳೆ, ಬೆದರಬೇಡ= ದಿಗಿಲು ಬೀಳಬೇಡ, ಎನುತ= ಎಂದು ನುಡಿಯುತ್ತಾ, ತಕ್ಕೈಸಿದನು= ಉಪಚಾರೋಕ್ತಿಗಳಿಂದ ಮನ್ನಿಸಿದನು, ಅದೇಂ ಪ್ರೌಢನೊ= ಇನ್ನೆಂತ ರಸಿಕನೋ ಎಂದರೆ! ಆ ಕಾಮುಕನು= = ಕಾಮಿನಿಯನ್ನು ಬಹು ಸುಂದರಳೆಂದು ವರ್ಣಿಸಿದನೆಂದು ಭಾವವು, ಮತ್ತೇಭಗಾಮಿನಿ= ಮದಿಸಿದ ಆನೆಯಂತಿರುವವಳು.
ಅ॥ವಿ॥ ಮತ್ತ+ಇಭದಂತೆ ಗಮನವುಳ್ಳವಳುಯಾರೊ ಅವಳು (ಬ.ಸ.) ಭೃಂಗಕುಂತಳೆ= ನೀಲವಾದ ಕುಂತಳ( ವಿ. ಪೂ. ಕ.) ಭೃಂಗದಂತಿರುವ ನೀಲಕುಂತಳವು ಯಾರಿಗೊ ಅವಳು= ಭೃಂಗನೀಲಕುಂತಳೆ( ಬ. ಸ. )
ತಾತ್ಪರ್ಯ:- ಇದನ್ನೆಲ್ಲಾ ನೋಡುತ್ತಾ ಹೋಗುತ್ತಿರುವಾಗ ಒಬ್ಬ ಕಾಮುಕಳು ತನ್ನ ಒಡವೆಗಳು ಅಲ್ಲಾಡುವುದರಿಂದಲೂ, ಕಣ್ಣುಗಳ ಅಂದದಿಂದಲೂ,ಸುವಾಸನೆಯಾದ ಗಂಧದ ಲೇಪನದಿಂದಲೂ, ಹೊರಗಿನವರೆಲ್ಲಿ ಎಚ್ಚರಗೊಂಡಾರೊ ಎಂಬ ಭೀತಿಯಿಂದ ಬರುತ್ತಿರುವಾಗ ವಿಟನೋರ್ವನು ಬಂದು ಅವಳ ಮಂದಗಮನ, ಸೊಗಸಾದ ತಲೆಯಕೂದಲು, ಕಳಸರೂಪಕ್ಕೆ ಸಮನಾದ ಜಡೆ ಇವನ್ನೆಲ್ಲಾ ನೋಡಿ ಅವಳ ಸೌಂದರ್ಯವನ್ನು ಬಣ್ಣಿಸಿ ಬಣ್ಣಿಸಿ ಮನದಣಿಯುವಂತೆ ಗಾಢಾಲಿಂಗನವನ್ನು ಮಾಡಿಕೊಳ್ಳುತ್ತಲಿರುವುದನ್ನು ಕಂಡರು.
ತೋರಮುತ್ತಿನ ಹಾರಮಂ ತೊಟ್ಟು ಚಂದ್ರಮುಖಿ।
ಕಾರ ಕತ್ತಲೆಯೊಳಿಡಲಂಜಿ ಪಣೆಗೆ ಕ।
ಸ್ತೂರಿಯಂ ಕಣ್ಗೆ ಕಾಡಿಗೆಯಂ ಕೊರಲ್ಗೆ ಹರಿ ನೀಲಮಣಿ ಭೂಷಣವನು॥
ಸೇರಿಸಲ್ಕದು ನೈಜಮಾಗೆ ಬೆರಗಾಗಿ ಬಳಿ।
ಕೋರೆದುರುಬಂ ತೆಗೆದು ಜಡೆಕಟ್ಟಿ ಪೊರಮಟ್ಟು ।
ಕೇರಿಗೊಂಡೈದಿದಳ್ ಸಂಕೇತ ಭವನದೊಳ್ ಕಾದಿರ್ದ ಕಾಂತನೆಡೆಗೆ॥೯॥
ಪ್ರತಿಪದಾರ್ಥ :- ಚಂದ್ರಮುಖಿ = ಇಂದುವದನೆ, ತೋರ=ಗಾತ್ರವಾದ, ಮುತ್ತಿನ ಹಾರಮಂ= ಮುತ್ತಿನ ಸರವನ್ನು, ತೊಟ್ಟು= ಹಾಕಿಕೊಂಡು, ಕಾರಗತ್ತಲೆಯೊಳು= ಕಗ್ಗತ್ತಲೆಯಲ್ಲಿ, ಅಡಿಯಿಡಲು= ಹೆಜ್ಜೆಗಳನ್ನೂರಲು, ಅಂಜಿ= ಹೆದರಿ, ಕಸ್ತೂರಿಯಂ= ಕತ್ತುರಿಯನ್ನು, ಫಣೆಗೆ= ಹಣೆಗೂ, ಕಾಡಿಗೆಯಂ= ಕಪ್ಪನ್ನು, ಕಣ್ಗೆ= ಕಣ್ಣುಗಳಿಗೂ,ಹರಿನೀಲಭೂಷಣವನ್ನು= ಇಂದ್ರನೀಲದ ಸರವನ್ನು, ಕೊರಳ್ಗೆ= ಕಂಠಕ್ಕೂ, ಸೇರಿಸಲ್ಕೆ= ಸಿಂಗರಿಸಿಕೊಳ್ಳಲು,ಅದು=ಅದರ ಕಾಂತಿ,ನೈಜಂ= ಸ್ವಭಾವಸಿದ್ಧವಾದುದು,ಆಗ= ಆಗಲು, ಬೆರಗಾಗಿ= ಆಶ್ಚರ್ಯಪಟ್ಟು,ಬಳಿಕ = ಅನಂತರ, ಓರೆತೈರುಬಂ= ವಕ್ರವಾಗಿ ಮಾಡಿಕೊಂಡಿದ್ದ ತುರುಬನ್ನು, ತಗೆದು= ಕೆದರಿ, ಜಡೆಗಟ್ಟಿ= ಜಡೆಮಾಡಿಕೊಂಡು, ಸಂಕೇತಭವನದೊಳ್= ನಿಷ್ಕರ್ಷೆಮಾಡಿ-
ಕೊಂಡಿದ್ದ ಸ್ಥಳದೊಳಗೆ, ಕಾದಿರ್ದ= ಕಾದುಕೊಂಡಿದ್ದ, ಕಾಂತನೆಡೆಗೆ= ಕಾಮುಕನಶಹತ್ತಿರಕ್ಕೆ, ಕೇರಿಗೊಂಡು= ದಾರಿಶಹಿಡಿದು ಹೊರಟವಳಾಗಿ, ಐದಿದಳು= ಹೋಗಿ ಸೇರಿದಳು.
ಅ॥ವಿ॥ ಚಂದ್ರಮುಖಿ= ಚಂದ್ರನಂತೆ ಮುಖವು ಯಾರಿಗೊ ಅವಳು ( ಬ. ಸ.) ಕಾರಗತ್ತಲೆ= ಕಪ್ಪೃದ ಕತ್ತಲೆ ( ವಿ. ಪೂ. ಕ.)
ತಾತ್ಪರ್ಯ:- ಅಲ್ಲಿಂದ ಮುಂದೆ ಸ್ವಲ್ಪ ದೂರ ಹೋಗಿ ನೋಡಲು ಒಬ್ಬ ಚಂದ್ರವದನೆಯು ಕಂಠದಲ್ಲಿ ಮುತ್ತಿನ ಹಾರವನ್ನು ಹಾಕಿಕೊಂಡು ಹಣೆಗೆ ಚಸ್ತೂರಿಯ ತಿಲಕವನ್ನು ಧರಿಸಿಕೊಂಡವಳಾಗಿ ಇಂದ್ರನೀಲಮಣಿಯ ಹಾರವನ್ನು ಧರಿಸಿ, ಕೇಶರಾಶಿಯನ್ನು ಜಡೆಮಾಡಿಕೊಂಡು, ಕತ್ತಲೆಂಬ ಭಯದಿಂದಲೂ,ನಲ್ಲನೊಂದಿಗೆ ಬರೆಯಬೇಕೆಂಬ ಅತ್ಯಾತುರದಿಂದಲೂ, ಸಂಕೇತಸ್ಥಾನಕ್ಕೆ ಹೋಗುತ್ತಲಿರುವುದನ್ನು ನೋಡಿದರು.
ಸಂಚುವ ಸತೀಜನದೊಳಂಗಭವ ಕೇಳೀ ಪ್ರ।
ಪಂಚ ವವನೊಳ್ ಸಮನಿಸಿದ ಬಳಿಕ ಮನದೊ।
ಳಂಚುವ ಬೆದರ್ಕೆಯಂ ಬಿಟ್ಟು ನಿಜ ಭವನಮಂ ಪೊರಮಟ್ಟು ಕತ್ತಲೆಯೊಳು॥
ಮಿಂಚುವ ವಿಭೂಷಣಕೆ ಮುಸುಕಿಟ್ಟು ಸುಳಿವರ್ಗೆ।
ಹೊಂಚುವ ಚಮತ್ಕೃತಿಯನಳವಡಿಸಿ ನೆನಹಿಂಗೆ।
ಮುಂಚುವ ಪದನ್ಯಾಸಮಂ ಕಲಿತು ನಡೆವ ಜಾರೆಯರ ಚದುರೆಸೆದಿರ್ದುದು॥೧೦॥
ಪ್ರತಿಪದಾರ್ಥ :- ಸಂಚುವ= ಹೊಂಚುಕಾಯತಕ್ಕ, ಸತೀಜನದೊಳ್= ಹೆಂಗಸರೊಳಗೆ, ಅಂಗಭವನ= ಮದನನ, ಕೇಳಿ=ಕ್ರೀಡೆಯನ್ನು, ಪ್ರಪಂಚುವವನೊಳ್= ಜರುಗಿಸುವವನಲ್ಲಿ, ಸಮನಿಸೆದ= ಉಂಟಾದ, ಬಳಿಕ = ಅನಂತರ, ಮನದೊಳ್= ಮನಸ್ಸಿನಲ್ಲಿ, ಪಳಂಚುವ= ಹುಟ್ಟತಕ್ಕ,ಬೆದರ್ಕೆಯಂಬಿಟ್ಟು= ಹೆದರಿಕೆಯನ್ನು ನೀಗಿ,ನಿಜ= ಸ್ವಕೀಯವಾದ, ಭವನಮಂ= ಮನೆಯನ್ನು, ಪೊರಮಟ್ಟು = ಬಿಟ್ಟು ನಡೆದು, ಮಿಂಚುವ= ಕಾಂತಿಯುಕ್ತಮಾಗಿರುವ, ವಿಭೂಷಣಕೆ= ಒಡವೆಗೆ, ಕತ್ತಲೆಯೊಳ್= ಕತ್ತಲೆಯಲ್ಲಿ, ಮುಸುಕಿಟ್ಟು= ವಸ್ತ್ರವನ್ನು ಹೊದಿಸಿ, ಹೊಂಚುವ= ಕಾಯುತ್ತಿರುವ, ಚಮತ್ಕೃತಿಯನು= ಚಮತ್ಕಾರವನ್ನು, ಸುಳಿವರ್ಗೆ= ದಾರಿಗರಿಗೆ, ಅಳವಡಿಸಿ = ನೇರ್ಪಡಿಸಿ,ನೆನಹಿಂಗೆ= ಇಚ್ಛೆಗಳಿಗೆ, ಮುಂಚುವ=ಮುಂದುಬಿದ್ದು ಬರತಕ್ಕ,ಪದನ್ಯಾಸಮಂ= ನಡಿಗೆಯ ಅಂದವನ್ನು, ಕಲಿತುನಡೆವ= ಕಲಿತುಕೊಂಡು ನಡೆಯತಕ್ಕ, ಜಾರೆಯರ= ಕಾಮುಕ ಸ್ತ್ರೀಯರ,ಚದುರು= ಚಮತ್ಕಾರವು, ಎಸೆದಿರ್ದುದು= ಕಾಂತಿಯುಕ್ತಮಾಗಿತ್ತು.
ತಾತ್ಪರ್ಯ:-ಆ ಬಳಿಕ ಇವರು ಮತ್ತೆ ಸ್ವಲ್ಪ ದೂರಹೊರಡಲು ಅಲ್ಲಿ ಒಬ್ಬ ಜಾರಿಣಿಯು ತನ್ನ ಮನೆಯಲ್ಲಿ ಯಾರೂ ಕಾಣದಂತೆ ಹೊರಟು ತನ್ನ ಸೌಂದರ್ಯವು ಮತ್ತೆ ಯಾರಿಗೂ ಗೋಚರವಾಗಬಾರದೆಂದು ಮೈಯನ್ನೆಲ್ಲಾ ವಸ್ತ್ರದಿಂದಾ-
ಚ್ಛಾದಿಸಿಕೊಂಡು ಕಾಮುಕನಿರುವೆಡೆಗೆ ಹೋಗುತ್ತಲಿರುವುದನ್ನು ನೋಡಿದರು.
ಕಿಕ್ಕಿರಿದಡರ್ದುರವ ನಿಂಬುಗೊಂಡುರೆ ಬಳೆದ।
ಕಕ್ಕಸದ ಬಟ್ಟಬಲ್ಮೊಲೆಗಳೋಪನ ಕೈಗೆ।
ವೆಕ್ಕಸಂ ನೋಳ್ಪರ್ಗೆ ಕಣ್ಗಿಸುರ್ ಮುದುಗಿದೊಡೆ ಮದನಂಗೆ ಮಾನಹಾನಿ॥
ಸೊಕ್ಕು ಲೇಸಾಗದೆಂದೊಪ್ಪಿಡಿಯೊಳೊದಗಿ ನೋ।
ಟಕ್ಕೆ ಕಾಣಿಸದೆ ಕಾಮನ ರೂಪವನಳವಡಿಸಿ।
ತಕ್ಕ ಬಡತನದೊಳಿರ್ದುದು ಸಣ್ಣ ಸೆಳೆನಡು ನಿಶೆಯೊಳೈದಿ ಬಹ ಜಾರೆಯರ॥೧೧॥
ಪ್ರತಿಪದಾರ್ಥ :- ನಿಶೆಯೊಳು= ರಾತ್ರಿಕಾಲದೊಳಗೆ, ಐದಿ= ಕಾಮುಕನು ಎದುರು ನೋಡುತ್ತಿರುವ ಸ್ಥಳವನ್ನು ಸೇರಿ,ಬಹ= ಹಿಂದಿರುಗಿ ಬರತಕ್ಕ, ಜಾರೆಯ= ಕಾಮುಕಳ, ಸಣ್ಣ =ಕೋಶವಾದ, ಸೆಳೆನಡು= ತೆಳ್ನಡುವು, ಕಿಕ್ಕಿರಿದು= ಒಟ್ಟುಗೂಡಿ, ಅಡರ್ದು= ವ್ಯಾಪಿಸಿ, ಉರವನು= ಎದೆಯಭಾಗವನ್ನೆಲ್ಲಾ,ಇಂಬುಗೊಂಡು= ಮುತ್ತಿಕೊಂಡು, ಉರೆ=ಅಧಿಕವಾಗಿ, ಬೆಳೆದ= ದೊಡ್ಡದಾಗಿರುವ, ಕಕ್ಕಸದ= ಕಠಿಣವಾದ, ಬಟ್ಟ=ದುಂಡಾಗಿರತಕ್ಕ, ಬಲ್ಮೊಲೆಗಳು= ದೊಡ್ಡ ಕುಚಗಳು, ಓಪನ ಕೈಗಿ= ಕಾಂತನ ಕೈಹಿಡಿತಕ್ಕೆ, ವೆಕ್ಕಸಂ= ಆಗದಿರುವುದು, ನೋಳ್ಪರ್ಗೆ= ನೋಟಕರಿಗೆ, ಕಣ್ಗಿಸರು= ಕಣ್ಣುಗಳ ನೋಟದಿಂದ ಆಗುವ ದೋಷವು, ಪುದುಗಿದೊಡೆ= ಉಂಟಾದರೆ, ಮದನಂಗೆ= ಮಾರನಿಗೆ, ಮಾನಹಾನಿ= ಮರ್ಯಾದೆ ತಪ್ಪುವುದು,ಸೊಕ್ಕು= ದೃಷ್ಟಿಸಂಬಂಧದ ತೊಂದರೆಯು,( ಮನ್ಮಥಾವಸ್ಥೆಯ ಆಯಾಸವು) ಲೇಸು= ಮೇಲಾದದ್ದು, ಆಗದು= ಆಗುವುದಿಲ್ಲ, ಎಂದು= ಎಂಬತೆರನಾಗಿ, ಒಪ್ಪುಳಿಯೊಳು= ಒಂದು ಹಿಡಿಯಲ್ಲಿಯೇ, ಅಡಗಿ= ಮರೆಯಾಗಿ, ನೋಟಕ್ಕೆ ಕಾಣಿಸದೆ= ದೃಷ್ಟಿ ಪಥಕ್ಕೆ ಸಿಕ್ಕದೆ, ಕಾಮನ= ಮನ್ಮಥನ, ರೊಪನು= ಆಕಾರವನ್ನು, ಒಳಗೊಂಡು=ತಾಳಿ, ತಕ್ಕ= ಯೋಗ್ಯವಾದ, ಬಡತನ-
ದೊಳು=ಬಡವಾಗಿರುವುದರ ಭಾರದಿಂದ, ಇರ್ದುದು= ತೋರಿಬರುತ್ತಲಿತ್ತು.
ತಾತ್ಪರ್ಯ:-ಇನ್ನೂ ಮುಂದೆ ಹೋಗಲು ಕಠಿಣವಾದ ಕುಚಮಂಡಲದಿಂದೊಪ್ಪುತ್ತಲೂ,ಸುಂದರಿಯಾಗಿಯೂ, ಇರುವ ಮತ್ತೋರ್ವಳು ಕಾಮುಕನೊಂದಿಗೆ ರತಿಸುಖವನ್ನೈದಿ ಹಿಂದಿರುಗಿ ಬರುತ್ತಲಿರುವುದನ್ನೂ ನೋಡಿದರು.
ನಿಟಿಲಮಂ ನೇವರಿಸುತಂಗುಲಿಯ ತುದಿಯಿಂದೆ।
ತುಟಿವಿಡಿದು ನೋಡುತ್ತೆ ಮಣಿಮಣಿದು ವೃತ್ತ ಕುಚ।
ತಟಮಂ ನಿರೀಕ್ಷಿಸುತೆ, ಕರ್ಣಪತ್ರವ ನಮರ್ಚುತ ಹಾರಮಂ ಸರಿಯುತೆ॥
ಕಟಿಗೆ ನಿರಿಯಂ ಸೇರಿಸುತೆ ನಿಮಿರ್ದ ಕ್ಷತಕೆ।
ವಿಟನನುರೆ ಬೈಯುತ್ತ ತಿರುಗಿ ನಿಜಮಂದಿರಕೆ।
ಕುಟಿಲ ಕುಂತಳದ ಜಾರೆಯರೈದಿ ಬರುತಿರ್ದರಲ್ಲಲ್ಲಿ ಕತ್ತಲೆಯೊಳು॥೧೨॥
ಪ್ರತಿಪದಾರ್ಥ :- ಕುಟಿಲ=ಚದರಿಹೋಗಿರುವ,ಕುಂತಳ= ಕೇಶಗಳಿಂದ ಕೂಡಿದ, ಜಾರೆಯರು= ಕಾಮುಕಿಯರು, ಐದಿ= ವಿಟನಿರುವ ಕೇಳಿಗೃಹಕ್ಕೆ ಹೋಗಿ (ಹಿಂದಕ್ಕೆ ಬರುವಾಗ) ಕತ್ತಲೆಯೊಳು=ಅಂಧಕಾರದಲ್ಲಿ, ಅಲ್ಲಲ್ಲಿ= ಆಯಾಯ ಸ್ಥಳಗಳಲ್ಲಿ, ಅಂಗುಲಿಯ=ಕೈಬೆರಳಿನ, ತುದಿಯಿಂದ = ಕಡೆಯಿಂದ, ನಿಟಿಲಮಂ= ಹಣೆಯ ಭಾಗವನ್ನು, ನೇವರಿಸುತ= ನೇರ್ಪಡಿಸಿಕೊಳ್ಳುತ್ತಲೂ, ತುಟಿವಿಡಿದು = ತುಟಿಯಮೇಲೆ ಬೆರಳಿಟ್ಟುಕೊಂಡು, ನೋಡುತ್ತ= ಈಕ್ಷಿಸುತ್ತ, ವೃತ್ತ= ದುಂಡಗಿರುವ, ಕುಚತಟಮಂ= ಸ್ತನಪ್ರದೇಶಗಳನ್ನು, ಮಣಿಮಣಿದು= ಬಾಗಿಬಾಗಿ, ನಿರೀಕ್ಷಿಸುತ= ನೋಡುತ್ತ, ಕರ್ಣಪತ್ರ-
ವನ್ನು= ತಾಟಂಕವನ್ನು, ಅಮರ್ಚುತ= ಸರಿಯಾಗಿರುವಂತೆ ಮಾಡಿಕೊಳ್ಳುತ್ತ, ಹಾರಮಂ= ಕತ್ತಿನ ಪದಕವನ್ನು,ಸರಿವುತ= ಸರಿಪಡಿಸಿಕೊಳ್ಳುತ್ತ, ನೆರಿಗೆಯಂ= ಸೀರೆಯ ಮಡಿಕೆಗಳನ್ನು, ಕಟಿಗೆ=ಟೊಂಕಕ್ಕೆ,ಸೇರಿಸುತ= ಸಿಕ್ಕಿಸಿಕೊಳ್ಳುತ್ತ,ನಿಮಿರ್ದ= ಉಂಟಾದ, ಕ್ಷತಕೆ= ಹಲ್ಲು ಉಗುರುಗಳಶಗಾಯಕ್ಕೆ, ಉರೆ= ಅಧಿಕವಾಗಿ, ವಿಟನಂ= ಕಾಮುಕನನ್ನು,ಬೈವುತ= ನಿಂದಿಸುತ್ತ, ತಿರುಗಿ= ಹಿಂದಿರುಗಿದವರಾಗಿ, ನಿಜಮಂದಿರಕೆ= ತಮ್ಮ ತಮ್ಮ ಮನೆಗಳಿಗೆ, ಬರುತಿರ್ದರು= ಬರುತ್ತಲಿರ್ದರು
ತಾತ್ಪರ್ಯ:-ಕಾಮುಕನೊಂದಿಗೆ ಸೇರಿ ಹಿಂದಿರುಗಿ ಬರುವ ನಾರಿಯರೃದರೊ, ಹಣೆಯಲ್ಲಿ ಕುಂಕುಮವು ಚದುರಿ ಹೋಗಿ-
ರುವುದನ್ನು ನೇವರಿಸಿಕೊಂಡು ತುಟಿಯನ್ನು ಕೈಯಿಂದ ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತ, ಸೂಡಾದ ತನ್ನ ಕುಚಯುಗ್ಮ-
ಗಳನ್ನುಸೆರಗಿನಿಂದ ಮುಚ್ಚಿಕೊಂಡು, ಕಿವಿಯಲ್ಲಿರುವ ಓಲೆಯನ್ನು ಸರಿಪಡಿಸಿಕೊಳ್ಳುತ್ತ,ಜಾರಿಹೋಗಿರುವ ನೆರಿಗೆಗಳನ್ನು ಟೊಂಕದಲ್ಲಿ ಸೇರಿಸಿಕೊಂಡು ವಿಟನಿಂದಾದ ಗಾಯಗಳನ್ನು ತಾಳಲಾರದೆ ಅವನನ್ನು ದೂಷಿಸುತ್ತಲಿರುವುದನ್ನು ಕೃಷ್ಣಾರ್ಜುನರು ನೋಡುತ್ತಾ.
ಕತ್ತಲೆಯೊಳಸುರಾರಿ ಫಲ್ಗುಣರ್ ಜಾರೆಯರ।
ವೃತ್ತಾಂತಮಂ ನೋಡುತೈತರಲ್ಕನಿತರೊಳ್।
ಪೊತ್ತದಿಹ ಜಕ್ಕವಕ್ಕಿಗಳ ವಿರಹದ ಬೆಂಕಿವೊಗೆ ಪೊಗೆದು ಮೇದಿನಿಯೊಳು॥
ಸುತ್ತಿ ಸುತ್ತಲುಮಂಧಕಾರಮಾಗಿರುತಿರಲ್।
ಚಿತ್ತಜಂ ತಂಬೆಲರೊಳೂದಿದೊಡೆ ಪಜ್ಜಳಿಸಿ।
ಮತ್ತುರಿವ ಕಿಚ್ಚಿನೇಳಿಗೆಯಂತೆ ಮೂಡಿದಂ ಚಂದ್ರನಿಂದ್ರನ ದೆಸೆಯೊಳು॥೧೩॥
ಪ್ರತಿಪದಾರ್ಥ :- ಅಸುರಾರಿ ಫಲುಗುಣರು= ನರನಾರಾಯಣರು, ಜಾರೆಯರ= ಕಾಮುಕಸ್ತ್ರೀಯರ, ವೃತ್ತಾಂತಮಂ = ಸುದ್ಧಿಯನ್ನು, ಕತ್ತಲೆಯೊಳ್= ಕತ್ತಲೆಯಲ್ಲಿ, ನೋಡುತ= ನಿರುಕಿಸುತ್ತ, ಐತರಲ್ಕೆ= ಬರಲಾಗಿ, ಪೊತ್ತದೆ= ಸಹಿಸಲಸದಳ-
ವಾಗಿ,(ಉರಿಯದೆ) ಇಹ=ಇರತಕ್ಕ, ಜಕ್ಕವಕ್ಕಿಗಳ = ಚಕೋರಗಳ, ವಿರಹದಬೆಂಕಿ=ವಿರಹಾಗ್ನಿಯು, ಅನಿತರೊಳ್= ಅಷ್ಟ-
ರಲ್ಲಿ, ಪೊಗೆಪೊಗೆದು= ಹೊಗೆಯಾಡಲುಜ್ಜುಗಿಸಿ, ಮೇದಿನಿಯೊಳ್= ಧರೆಯೊಳಗೆ, ಸುತ್ತಸುತ್ತಲುಂ= ನಾನಾ ಕಡೆಯಲ್ಲಿ-
ಯೂ, ಅಂಧಕಾರಮಾಗಿ= ಕತ್ತಲೆಯಾಗಿ, ಇರುತಿರಲ್=ಇರಲಾಗಿ, ತಂಬೆಲರೊಳು= ತಂಗಾಳಿಯಿಂದ, ಚಿತ್ತಜಂ= ಮದನ-
ನು, ಊದಿದೊಡೆ= ಬೀಸಲಾಗಿ, ಪ್ರಜ್ವಲಿಸಿ= ವಿರಹತಾಪದಿಂದೊಗೆದ ಬೆಂಕಿಯಿಂದ ದೊಡ್ಡದಾದ ಉರಿಯು ಹುಟ್ಟಿ, ಮತ್ತೆ= ತಿರುಗಿ, ಉರಿವ= ಉರಿಯುತ್ತಲಿರುವ, ಕಿಚ್ಚಿನ= ಅಗ್ನಿಯ,ಏಳಿಗೆಯಂತೆ= ಹೆಚ್ಚಿಗೆಯ ಹಾಗೆ, ಇಂದ್ರನ ದೆಸೆಯೊಳು= ಮೂ-
ಡಲದಿಕ್ಕಿನಲ್ಲಿ,ಚಂದ್ರನು= ಇಂದುವು, ಮೂಡಿದಂ= ಉದಯಿಸಿದನು,
ಅ॥ವಿ॥ ಜಕ್ಕವಕ್ಕಿ(ತ್ಭ) ಚಕ್ರವಾಕಪಕ್ಷಿ (ತ್ಸ) ತಂಬೆಲರ್= ತಣ್ಣಿತ್ತು+ಎಲರ್ (ವಿ. ಪೂ. ಕ. )
ತಾತ್ಪರ್ಯ:- ಮುಂದರಿದು ಬರುವ ಕಾಲಕ್ಕೆ ಸರಿಯಾಗಿ ಚಕ್ರವಾಕಪಕ್ಷಿಗಳ ಹೊಗೆಯಾಡುತ್ತಲಿರುವ ವಿರಹಾಗ್ನಿಯು ಮನ್ಮಥನಿಂದ ಬೀಸಲ್ಪಟ್ಟ ತಂಗಾಳಿಯ ದೆಸೆಯಿಂದ ದೊಡ್ಡ ಜ್ವಾಲೆಯಾಗಿ ಪರಿಣಮಿಸಿತೊ ಎಂಬಂತೆ ಪೂರ್ವದಕ್ಕಿನಲ್ಲಿ ಚಂದ್ರನ ಕಾಂತಿಯು ಕಂಗೊಳಿಸಲಾರಂಭಿಸಿತು.
ಮರುಗಿದುವು ಕೋಕ ಕೋಕನದಂಗಳಾಗ ಬಾ।
ಯ್ದೆರೆದುವು ಚಕೋರ ಕೋರಕ ಕುಮುದರಾಜಿಗಳ್।
ತುರುಗಿದ ತಮಿಸ್ರಮಾಲೋಕಸ್ಥಿತಿಗೆ ತೊಲಗಿದುದು ದೆಸೆದೆಸೆಯೊಳು॥
ಮೊರೆದುದು ಸಮುದ್ರಮುದ್ರವದ ಪೆರ್ಚುಗೆಯಿಂದ।
ಮೊರೆತುದುಡುಕಾಂತ ಕಾಂತ ಪ್ರತತಿಕುಸುಮ ಶರ।
ನುರುಬಿದನಗಲ್ದರಂ ಚಾಪಚಾಪಲಹಸ್ತನಾಗಿ ಚಂದ್ರೋದಯದೊಳು॥೧೪॥
ಪ್ರತಿಪದಾರ್ಥ :- ಕೋಕ= ಜಕ್ಕವಕ್ಕಿಗಳು, ಕೋಕನದಂಗಳು= ಕಮಲಗಳೂ ಸಹ, ಆಗ= ಆ ಕಾಲದಲ್ಲಿ, ಮರುಗಿದವು= ವಿರಹವೇದನೆಯನ್ನುಗೊಳಗಾದವು ಮತ್ತು ಮಗ್ಗಾದವು, ಚಕೋರ=ಚಕೋರಪಕ್ಷಿಗಳು, ಕೋರಕ ಕುಮುದ= ಮೊಗ್ಗಾದ ಕರೀ ಕಮಲಗಳೂ, ಇವುಗಳ, ರಾಜಿಗಳು=ಶ್ರೇಣಿಗಳು,ಬಾಯ್ತೆರೆದವು= ಚಂದ್ರಬೆಳಕನ್ನು ಕುಡಿಯಲು ಬಾಯನ್ನು ಬಿಟ್ಟವು,
ಮತ್ತು ವಿಕಸಿಸಿದವು,ಆಲೋಕ= ಕಾಂತಿಯುಕ್ತವಾದ ಲೋಕಸ್ಥಿತಿಗೆ, (ಪ್ರಪಂಚದ ಇರುವಿಕೆಗೆ) ದೆಸೆದೆಸೆಯಳು= ನಾನಾ ದಿಕ್ಕುಗಳೊಳಗೂ, ತುರುಗಿದ= ತುಂಬಿಕೊಂಡಿದ್ದ, ತಮಿಸ್ರಂ= ಕತ್ತಲೆಯು, ತೊಲಗಿದವು= ಹೊರಟುಹೋಯಿತು, ಉದ್ರವದ= ಮೇಲಕ್ಕೇರಿಬರುವ, ಪೆರ್ಚುಗೆಯಿಂದಲೆ= ಅಭಿವೃದ್ಧಿಯಿಂದಲೆ,ಸಮುದ್ರಂ= ಕಡಲು, ಮೊರೆದುದು= ಘರ್ಜಿ-
ಸಿತು, ಉಡು= ತಾರೆಗಳ, ಕಾಂತ= ಅಂದವಾದ, ಕಾಂತಪ್ರತತಿ= ಕಳೆಯ ಸಮುದಾಯವು, ಒರತುದು= ಕಡಿಮೆಯಾಯಿತು, ಕುಸುಮಶರನು= ಹೂಗಳ ಬಾಣದಿಂದ ಕೂಡಿದ ಮನ್ಮಥನು, ಚಾಪ= ಧನುಸ್ಸಿನಿಂದ, ಚಾಪಲ=ಅಲುಗಾಡುತ್ತಿರುವ, ಹಸ್ತನಾಗಿ= ಕರಗಳಿಂದಕೂಡಿ, ಚಂದ್ರೋದಯದೊಳು= ಚಂದ್ರನು ಉದಯಿಸಿದಾಗ, ಅಗಲ್ದರಂ= ವಿರಹವೇದನೆಯನ್ನು-
ಅನುಭವಿಸುವವರನ್ನು ,ಉರುಬಿದನು= ಮೇಲ್ವಾಯ್ದು ಶಿಕ್ಷಿಸಿದನು.
ತಾತ್ಪರ್ಯ:-ಚಂದ್ರನ ಈ ಪರಿಯಾದ ಏಳಿಗೆಯಾದರೊ ಜಕ್ಕವಕ್ಕಿಗಳಿಗೆ ವಿರಹವನ್ನು ಹೆಚ್ಚಿಸಿತು, ತಾವರೆಗಳನ್ನು ಮುಚ್ಚುವಂತೆ ಮಾಡಿತು. ಚಕೋರಪಕ್ಷಿಗಳು ಚಂದ್ರಕಿರಣಗಳನ್ನು ಪಾನಮಾಡಲು ಬಾಯಿ ಬಿಡುವಂತೆ ಮಾಡಿತಲ್ಲದೆ ಕನ್ನೈದಿಲೆಗಳುಆರಳಲು ಅವಕಾಶವನ್ನುಂಟು ಮಾಡಿತು ಕತ್ತಲನ್ನು ದೂರಮಾಡಿತು, ಸಮುದ್ರದ ಸಂತೋಷವನ್ನು ಹೆಚ್ಚಿಸಿತು. ನಕ್ಷತ್ರರಾಶಿಯ ಕಾಂತಿಯು ಚಂದ್ರಿಕೆಯ ವೇಧೆಯನ್ನು ತಡಿಯದೆ ಮಾಯವಾಯಿತು. ಮನ್ಮಥಾವಸ್ಥೆಯನ್ನು ತಾಳಲಾರದೆ ಜನರು ಬೀದಿಬೀದಿಯಲ್ಲೂ ತಿರುಗಾಡುವಂತಾಯಿತು.
ಪ್ರಾಚೀನಿತಂಬಿನಿಯ ಮುಖಬಿಂಬದೆಳನಗೆಯ।
ರೋಚಿಗಳೊ ಪೆರ್ಚುಗೆಯೊಳುಬ್ಬೆದ್ದ ಪಾಲ್ಗಡಲ।
ವೀಚಿಗಳೊ ಮನ್ಮಥನ ಕೀರ್ತಿಯ ಮರೀಚಿಗಳೊ ನಿಜಕಾಂತನಂ ಕಾಣುತೆ॥
ನಾಚಿ ಬೆಳ್ಪೇರಿದಳೊ ರಾತ್ರಿವಧು ಚೆಲ್ಲಿದನೊ।
ಭೂಚಕ್ರಂಗಜಂ ಬೇಳುವೆಯ ಬೂದಿಯಂ।
ವಾಚಿಸುವೊಡರಿದೆನಲಪಸರಿಸಿತು ಚಂದ್ರಕಿರಣಂಗಳೆಲ್ಲದೆಸೆಯೊಳು॥೧೫॥
ಪ್ರತಿಪದಾರ್ಥ :- ಪ್ರಾಚೀನಿತಂಬಿಯ= ಮೂಡಣದಿಕ್ಕೆಂಬ ನಾರೀಮಣಿಯ,ಮುಖಬಿಂಬದ= ಚಂದ್ರನಂತೆ ಹೊಳೆಯುವ ಮೋರೆಯ, ಎಳನಗೆಯ= ಮಂದಹಾಸದ, ರೋಚಿಗಳೊ= ಕಿರಣಗಳೊ, ಪೆಚ್ಚುಗೆಯೊಳು= ಅಧಿಕವಾಗುವಿಕೆಯಿಂದ,
ಉಬೆದ್ದ= ಮೇಲಕ್ಕೆ ಉಕ್ಕಿದ, ಪಾಲ್ಗಡಲ= ಹಾಲಿನ ಸಮುದ್ರದ, ವೀಚಿಗಳೊ= ತರಂಗಗಳೊ, ಮನ್ಮಥನ= ಮದನನ, ಕೀರ್ತಿಯ= ಒಳ್ಳೆ ಹೆಸರಿನ, ಮರೀಚಿಗಳೊ = ಅಂಶುಗಳೊ, ರಾತ್ರಿವಧು= ರಾತ್ರಿಯೆಂಬ ಸ್ತ್ರೀಯ, ನಿಜ=ತನ್ನ, ಕಾಂತನಂ= ಪತಿಯನ್ನು, ಕಾಣುತ= ನೋಡುವುದರಿಂದ, ನಾಚಿ= ನಾಚಿಕೆಪಟ್ಟು ಬೆಳ್ಪೇರಿದಳೊ= ಬೆಳ್ಳಗಾದಳೊ, ಭೂಚಕ್ರಕೆ= ಇಳಾವ-
ಲಯಕ್ಕೆ, ಅಗಜಂ= ಮದನನು, ಬೇಳುವೆಯ ಬೂದಿಯಂ= ಮಂಕುಬೂದಿಯನ್ನು, ಚೆಲ್ಲಿದನೊ= ಎರಚಿದನೊ, ವಾಚಿಸುವೊಡೆ= ನಡೆಯುವುದಕ್ಕೆ, ಅರಿದು= ಅಸದಳವು, ಎನಲ್= ಎಂಬತೆರನಾಗಿ, ದೆಸೆದೆಸೆಯೊಳು= ಎಲ್ಲಾ ದಿಕ್ಕುಗ-
ಳೊಳಗೂ, ಚಂದ್ರಕಿರಣಂಗಳು= ಹಿಮಾಂಶುಗಳು, ಪಸರಿಸಿತು= ಹರಡಿಕೊಂಡಿತು.
ತಾತ್ಪರ್ಯ:-ಇಂತಹ ಬಾಲಚಂದ್ರನು ಅಭಿವೃದ್ಧಿಯಾದಾಗ ನೋಟಕರಿಗಾದರೊ, ಪೂರ್ವದಿಕ್ಕೆಂಬ ನಾರೀಮಣಿಯ ಹಣೆಯಲ್ಲಿರುವ ಕಾಂತಿಯೋ ಎಂಬಂತೆಯೂ, ಕ್ಷೀರಸಮುದ್ರವು ಉಕ್ಕಿದ್ದರಿಂದ ಮೇಲಕ್ಕೆ ಬಂದ ಅಲೆಗಳ ಸಮುದಾಯವೊ ಎಂಬ ಪರಿಯಿಂದಲೂ, ಮನ್ಮಥನ ಕೀರ್ತ್ಯತಿಶಯದಿಂದುಂಟಾದ ಕಿರಣಗಳೊ ಎನ್ನುವ ಹಾಗೂ ನಿಶಾನಾರಿಯು ತನ್ನ ಪತಿಯನ್ನು ಕಾಣದ ಮನೋವ್ಯಥೆಯಿಂದ ಬಿಳುಪನ್ನೈದಿದಳೊ ಎಂಬ ಬಗೆಯಾಗಿಯೂ ಮನ್ಮಥನೇ ಲೊಕಕ್ಕೆಲ್ಲಾ ಮಂಕುಬೂದಿಯನ್ನು ಎರಚಿಬಿಟ್ಟಿದ್ದಾನೊ ಎಂಬುದಾಗಿಯೂ ಭ್ರಾಂತಿಯುಂಟು ಮಾಡಿತು.
ತವೆ ಶಾಂತನಮೃತ ರೂಪಂ ಶೈತ್ಯ ವರ್ಧನಂ।
ಭುವನ ಪ್ರಕಾಶಂ ಜನಾವಲೋಕ ಪ್ರಿಯಂ।
ಧವಳ ತನು ವೃತ್ತಂ ನಿರಂತರಂ ವಿಷ್ಣು ಪದ ಸೇವಕಂ ಕೃಷ್ಣಾಂಕನು॥
ದಿವಿಜ ತೋಷಕನಾದ ರಾಜನಭ್ಯುದಯದೊಳ್।
ಕುವಲಯ ಶ್ರೀವಿರಾಜಿತಮಪ್ಪುದೇಂ ಕೌತು।
ಕವೆ ಜಾರಚೋರರ್ಕಳಡಗದಿರ್ದಪರೆ ಪೇಳೆನಲಿಂದು ಮೆರೆದನಂದು॥೧೬॥
ಪ್ರತಿಪದಾರ್ಥ :- (ಈ ಪದ್ಯದಲ್ಲಿ ಚಂದ್ರನಿಗೂ ರಾಜನಿಗೂ ಹೋಲಿಕೆಯನ್ನು ಕೊಟ್ಟಿದೆ) ತವೆ= ಚನ್ನಾಗಿ, ಕಾಂತನು= ತಣ್ಣಗಿರುವವನು, ಅಮೃತರೂಪಂ= ಅಮೃತದಿಂದ ಪರಿಪೂರ್ಣನಾದವನು,ಶೈತ್ಯವರ್ಧನಂ= ತಂಪನ್ನು ಹೆಚ್ಚಿಸುವವನು, ಜನ= ಲೋಗರ, ಅವಲೋಕ= ದೃಷ್ಟಿಗೆ, ಪ್ರಿಯಂ= ಹಿತವನ್ನುಂಟುಮಾಡುವವನು, ಧವಳ=ಬೆಳ್ಳಗಿರುವ, ತನುವೃತ್ತಂ= ವರ್ತುಳಾಕಾರವಾದ ಶರೀರವುಳ್ಳವನು, ನಿರಂತರಂ= ಯಾವಾಗಲೂ, ವಿಷ್ಣುಪದಸೇವಕಂ= ಆಕಾಶದಲ್ಲಿ ಸಂಚರಿಸತಕ್ಕವ-
ನು, ಕೃಷ್ಣ= ಕಪ್ಪಾದ, ಅಂಕಂ= ಗುರುತುಳ್ಳವನು, ದಿವಿಜ= ಸುರರಿಗೆಲ್ಲಾ, ತೋಷಿತನು= ಸಂತಸವನ್ನೀಯುವವನು, ( ಇದು ಚಂದ್ರನ ಪರವಾದ ಅರ್ಥವು) ತವೆ=ಪೂರ್ಣವಾಗಿ, ಶಾಂತನು= ಸಮಾಧಾನವಾದ ಮನಸ್ಸುಳ್ಳವನು, ಅಮೃತರೂಪಂ= ಪ್ರಜಾ ಹಿತೈಷಿಯು, ಶೈತ್ಯವರ್ಧನಂ= ತನ್ನ ಪ್ರಜೆಗಳಿಗೆಲ್ಲಾ ಸಮಾಧಾನವನ್ನು ಹೆಚ್ಚಿಸುವವನು, ಭುವನ=ಲೋಕದಲ್ಲೆಲ್ಲಾ, ಪ್ರಕಾಶಂ= ಹೆಸರುವಾಸಿಯಾದವನು, ಜನ= ತನ್ನ ಪ್ರಜೆಗಳನ್ನು, ಅವಲೋಕ= ನೋಡಿಕೊಳ್ಳುವುದರಲ್ಲಿ, ಪ್ರಿಯಂ= ಅನುರಾಗವುಳ್ಳವನು, ಧವಳ= ಬೆಳ್ಳಗಿರುವ, (ಸ್ವಚ್ಛವಾದ) ತನುವೃತ್ತಂ= ದೇಹ ಮತ್ತು ನಡವಳಿಕೆಯಿಂದೊಡಗೂಡಿರತಕ್ಕ-
ವನು, ನಿರಂತರಂ= ಸದಾ, ವಿಷ್ಣು= ಹರಿಯ, ಪದ= ಚರಣಂಗಳ, ಸೇವಕಂ= ಚಾರಕನು, ಕೃಷ್ಣ= ತುಲಸೀಮಾಲೆಯೇ, ಅಂಕಂ= ಗುರುತಾಗಿ ಉಳ್ಳವನು, ದಿವಿಜತೋಷಕನು= ದೇವತೆಗಳ ಸಮೂಹಕ್ಕೆಲ್ಲಾ, ತೋಷಿತನು= ಸಂತೋಷವನ್ನೀಯು-
ವವನು (ಯಾಗಾದಿಗಳಲ್ಲಿ ಹವಿಸ್ಸನ್ನು ಕೊಟ್ಟು ಆನಂದಪಡಿಸುವವನು) ಆದ= ಆಗಿರತಕ್ಚ, ರಾಜನ= ಅರಸಿನ, (ಇದು ರಾಜನ ಪರವಾದ ಅರ್ಥವು) ಅಭ್ಯುದಯದೊಳು= ಏಳಿಗೆಯಲ್ಲಿ, ಕುವಲಯ ಶ್ರೀ ವಿರಾಜಿತಂ= ಕನ್ನೈದಿಲೆಗಳ ಕಳೆಯಿಂದ
ಹೊಳೆಯತಕ್ಕದ್ದು, ಅಪ್ಪುದು= ಆಗುವುದು, (ಚಂದ್ರೋದಯ ಕಾಲದಲ್ಲಿ) ಕುವಲಯ= ಇಳಾಮಂಡಲದ, ಶ್ರೀ= ಐಸಿರಿಯಿಂದ, ವಿರಾಜಿತಂ= ಹೊಳೆಯುವುದು, ಅಪ್ಪುದು= ಆಗುತ್ತದೆ, ಏಂ ಕೌತುಕವೇ= ಏನಚ್ಚರಿಯು, ಜಾರಚೋರರ್ಕ-
ಳು= ವಿಟರು ಮತ್ತು ಕಳ್ಳರು,ಅಡಗದೆ= ಅವಿತುಕೊಳ್ಳದೆ, ಇರ್ದಪರೆ= ಇದ್ದಾರೆಯೆ, ಪೇಳು= ಹೇಳು, ಎನಲ್= ಎಂಬಂತೆ, ಅಂದು= ಆ ನೆಶೆಯಲ್ಲಿ, ಇಂದು= ಚಂದ್ರನು,ಮೆರೆದನು= ಕಾಂತಿಯುಕ್ತನಾದನು.
ತಾತ್ಪರ್ಯ:- ಆಗ್ರಹ ರಹಿತನೂ, ಲೋಕಹಿತೈಷಿಯೂ,ಪ್ರಜೆಗಳ ಮೇಲ್ಮೆಯುಂಟುಮಾಡುವವನೂ,ಲೋಕಪ್ರಸಿದ್ಧನೂ, ಪರೆಶುದ್ಧಾಂತಕರಣನೂ, ತುಲಸೀಮಾಲಾಂಕೃತನೂ, ವಿಷ್ಣುಭಕ್ತನೂ, ಯಾಗಾದಿಗಳಿಂದ ದೇವತೆಗಳನ್ನು ತೃಪ್ತಿಪಡಿಸುವವ-
ನೂ, ಆದ ಅರಸನಂತೆ ತಾನೂಕೂಡ ಕಾಂತಿಯಿಂದಲೂ ಅಮೃತಕಿರಣದಿಂದಲೂ, ಕೂಡಿ ಲೋಕವನ್ನೆಲ್ಲಾ ತನ್ನ ಬೆಳಕಿನಿಂದ ಸಂತೋಷಪಡಿಸುತ್ತ, ಬೆಳ್ಪನ್ನು ಹೊಂದಿ ಆಗಸದಲ್ಲಿ ಮೆರೆಯುತ್ತ ಚಂದ್ರನೂ ಸುರರಿಗೆಲ್ಲಾ ಸಂತಸವನ್ನೀಯುವವನೂ ಆಗಿ ಹೆಚ್ಚಾದ ಕಾಂತಿಯಿಂದೊಡಗೂಡಿದನು, ಇದರಿಂದ ಜಾರಚೋರರಿಗೆ ಬಹು ತೊಂದರೆಯಾಯಿತು.
ಚಂದ್ರನುದಯಂಗೆಯ್ಯೆ ದೆಸೆದೆಸೆಗಳೆಲ್ಲಮುಂ।
ಚಂದ್ರಿಕೆಗಳಿಂದೆ ಬೆಳಬೆಳಗಿ ಬೆಳ್ಳಿವೊಲಾಗೆ।
ಚಂದ್ರಕಾಂತಂಗಳಿಂದೊಲ್ದು ನಿರ್ಮಿಸಿದ ನವ ಸೌಧಸೌಧಾಗ್ರಂಗಳು॥
ಚಂದ್ರಶಾಲೆಗಳೊಳಗೆ ರತಿ ಕಲಾ ಪ್ರೌಢಿಯಿಂ।
ಚಂದ್ರವದನೆಯರಂತರಂಗದೊಳ್ ಪುದಿದ ಕೆ।
ಚ್ಚಂ ದ್ರವಿಸುವಂತೆ ರಂಜಿಸಿ ರಮಿಸುತಿಹ ಪುರುಷರಾಪುರದೊಳೆಸೆದಿರ್ದರು॥೧೭॥
ಪ್ರತಿಪದಾರ್ಥ :- ಚಂದ್ರನು= ಇಂದುವು, ಉದಯಂಗೈಯೆ= ಹುಟ್ಟಲಾಗಿ, ಚಂದ್ರಿಕೆಗಳಿಂದ= ತಂಪುಕಿರಣಗಳಿಂದ, ದೆಸೆದೆ-
ಗಳೆಲ್ಲಮಂ= ನಾನಾ ದಿಕ್ಕುಗಳನ್ನೂ, ಬೆಳಬೆಳಗಿ= ಚನ್ನಾಗಿ ಹೊಳೆಯುವಂತೆ ಮಾಡಿ, ಬೆಳ್ಳಿಯೋಲ್= ಬೆಳ್ಳಿಯಂತೆ, ಆಗೆ= ಆಗಲು, ಐದೆ= ಚನ್ನಾಗಿ, ಚಂದ್ರಕಾಂತಂಗಳಿಂದ= ಚಂದ್ರಕಾಂತದ ಕಲ್ಲುಗಳಿಂದ, ನಿರ್ಮಿಸಿದ= ರಚಿಸಿದ, ನವ= ನೂತನ-
ವಾದ, ಸೌಧಾಗ್ರಂಗಳ= ಮಹಡಿಯ ಮೇಲ್ಭಾಗಗಳು, ಚಂದ್ರಶಾಲೆಗಳ= ಮನೆಗಳ, ಒಳಗೆ= ಒಳಭಾಗದಲ್ಲಿ, ಚಂದ್ರವದ-
ನೆಯರ= ಇಂದುಮುಖಿಯರ, ಅಂತರಂಗದೊಳ್= ಹೃದಯದಲ್ಲಿ, ರತಿಕಲಾಪ್ರೌಢಿಯಿಂದ= ರತಿಚಮತ್ಕಾರದಿಂದ, ಪುದಿದ=ತುಂಬಿದ, ನವನೂತನವಾದ= ಹೊಚ್ಛಹೊಸದಾದ, ಚಂದ್ರಿಕೆ= ಬೆಳದಿಂಗಳು, ಎನಲ್= ಎಂಬಂತೆ, ರಂಜಿಸಿರೆ= ಹೊಳೆಯುತ್ತಿರಲು,ಆ ಪುರದೊಳು= ಆ ಪಟ್ಟಣದೊಳಗೆ, ರಮಿಸುತಿಹ = ಕೇಳೀಸುಖವನ್ನೀಯುತ್ತಿರುವ,ಪುರುಷರು= ಮಾನವರು, ಎಸೆದಿರ್ದರು= ಕಾಂತಿಯಿಂದ ಕೂಡಿದ್ದರು.
ತಾತ್ಪರ್ಯ :- ಚಂದ್ರೋದಯವಾದುದರಿಂದ ನಾಲ್ಕು ದಿಕ್ಕುಗಳೂ ಬೆಳ್ಳಿಯಂತೆ ಬೆಳ್ಳಗೆ ಕಂಗೊಳಿಸಲಾರಂಭಿಸಿದವು, ಆಗ ಚಂದ್ರಮಂಡಲದ ಕಾಂತಿಯನ್ನೂ ಕೂಡ ನಿರಾಕರಿಸುವ ಇಂದುವದನೆಯರು ಚಂದ್ರಕಾಂತ ಶಿಲೆಗಳಿಂದ ಕಟ್ಟಿರುವ ಉಪ್ಪರಿಗೆಗಳೊಳಗೆ ಯಥೇಚ್ಛವಾಗಿ ವಿಹರಿಸುತ್ತಿದ್ದರು.
ಕುಚಮಂಡಲದ ಮೇಲೆ ಚಾರು ನಯನದ ನಡುವೆ।
ಕಚದೆಡೆಯೊಳಿಹ ಕೃಷ್ಣ ವೈಭವಂ ತನ್ನ ಬಗೆ।
ಗುಚಿತಮಪ್ಪುದು ನಿನ್ನೆದೆಯೊಳಿರ್ಪ ಕೃಷ್ಣಭಾವಂ ತನಗೆ ವಿರಹಿತವನು॥
ರಚಿಸದಿರದೆಂದೊರ್ವನಿನಿಯಳಂ ತಿಳಿಸಲ್ಕೆ।
ವಿಚಲಮಪ್ಪುದೆ ಕೃಷ್ಣಹೃದಯಮೆಂದವಳೊದರೆ।
ವಚನದೋಷಕೆ ಬೇಡಿಕೊಂಬವೊಲ್ ಕಾಲ್ಗೆರಗಿ ಸಂತೈಸಿದಂ ಪ್ರಿಯೆಯನು॥೧೮॥
ಪ್ರತಿಪದಾರ್ಥ :- ಕುಚಮಂಡಲದಮೇಲೆ= ದುಂಡಗಿರತಕ್ಕ ಎದೆಗಂಟುಗಳ ಮೇಲೆ( ಮೊಲೆಗಳ) ಚಾರು= ಸೊಗಸಾದ, ನಯನದ= ಕಣ್ಣುಗಳ, ನಡುವೆ= ಮಧ್ಯಭಾಗದೊಳಗೆ, ಕಚದ= ಕೇಶಪಾಶಂಗಳ,ಎಡೆಯೊಳು= ಸ್ಥಾನದಲ್ಲಿ, ಇಹ= ಇರತಕ್ಕ, ಕೃಷ್ಣವೈಭವಂ= ಕಪ್ಪುವರ್ಣದ, (ಕೃಷ್ಣಮೂರುತಿಯ ) ವೈಭವಂ= ಸೌನದರ್ಯವು,ಉಚಿತಂ= ಅರ್ಹತೆಯನ್ನೈದಿದ್ದು, ಅಪ್ಪುದು= ಆಗುತ್ತದೆ, ನಿನ್ನೆದೆಯೊಳು= ನಿನ್ನ ಎದೆಯಭಾಗದಲ್ಲಿ, ಇರ್ಪ= ಇರತಕ್ಕ, ಕೃಷ್ಣಭಾವಂ = ಕಪ್ಪು ಮತ್ತು ಹೋಲಿಕೆಯು, ತನಗೆ= ನನಗೆ, ವಿರಹಿತವನು= ವಿರಹವೇದನೆಯನ್ನು, ರಚಿಸದೆ= ಎಸಗದೆ, ಇರದು= ಇರುವುದಿಲ್ಲ, ಎಂದು= ಎಂಬುದಾಗಿ, ಓರ್ವನು= ಒಬ್ಬ ಕಾಮುಕನು, ಇನಿಯಳಂ= ತನ್ನ ಸಖಿಯೊಂದಿಗೆ, ತಿಳುಪಲ್ಕೆ= ಅರುಹಲು, ಅವಳು= ಆ ಕಾಮುಕಳು, ಕೃಷ್ಣಹೃದಯಂ= ಕಪ್ಪುವರ್ಣವು, ಶ್ರೀಕೃಷ್ಣನಲ್ಲಿ ಆಸಕ್ತಿಯು ಮತ್ತು ರೋಷದಿಂದ ಕೂಡಿರುವ ಮನಸ್ಸು, ವಿಚಲಂ= ಶಾಶ್ವತವಾಗಿರುವುದು, ಅಪ್ಪುದೆ= ಆದೀತೆ, ಎಂದು=ಎಂಬತೆರನಾಗಿ, ಒದರೆ= ನುಡಿಯಲು, ವಚನ= ನುಡಿಗಳ, ದೋಷಕೆ= ನಿಂದೆಗೆ, ಹೆಂಗಸರ ಅಲಂಕಾರಕ್ಕೆ ಕಾರಣಗಳಾದ ಸ್ತನಗಳು, ತಲೆಯ ಕೂದಲು, ಕಣ್ಣಿನನೋಟ, ಇವನ್ನು ದೂಷಣೆ ಮಾಡಿದಂಥ ಪಾತಕ ಪರಿಹಾರದ ಸಲುವಾಗಿ,ಕಾಲ್ಗೆ= ಅವಳ ಪಾದಗಳಿಗೆ, ಎರಗಿ= ನಮಸ್ಕಾರ ಮಾಡಿ,
ಅವಳ ಕಾಲುಗಳ ಸಮೀಪವನ್ನೈದಿ, ಪ್ರಿಯಳನು= ಸಖಿಯನ್ನುಬೇಡಿಕೊಂಬುವೋಲ್= ಕ್ಷಮಾಪಣೆಯನ್ನು ಕೇಳಿಕೊಳ್ಳು-
ವನೊ ಎಂಬಂತೆ, ಸಂತೈಸಿದಂ= ಮನ್ನಿಸಿದನು, ಅಂದಕೆ= ಅವಳ ಮನವು ತಣಿಯುವಂತೆ ರತಿಸುಖವನಿತ್ತನು.
ತಾತ್ಪರ್ಯ:- ಆಗ ಒಬ್ಬ ವಿಟನು ಕಾಮುಕಳ ಕಣ್ಣುಗಳು, ಕೂದಲು, ಸ್ತನಗಳು ಇವುಗಳನ್ನು ಬಣ್ಣಿಸಿ ಬಣ್ಣಿಸಿ ಪ್ರಿಯಳಿಗೆ ಹಿತವಾಗುವಂತೆ ಮಾಡಿ ರತಿಸುಖವನೈದುತ್ತಲಿದ್ದರು.
ಅಚ್ಚಬೆಳ್ದಿಂಗಳೊಳ್ ಮತ್ತೋರ್ವನಿನಿಯಳಂ।
ನಿಚ್ಚಟದೊಳುಳಿವಂತೆ ನೀವಿಯಂಬರೆಸೆಳೆದು।
ಹೆಚ್ಚಳಿಸಿ ಪ್ರಿಯೆ ನಿನ್ನ ಸರ್ವಾಂಗಮಂ ನೋಡಿ ಕೃಷ್ಣಾವಲೋಕನವನು॥
ಮೆಚ್ಚಿ ತಣಿಯದವೊಲಿರ್ದಪುವೆನ್ನ ಕಂಗಳೆಂ।
ದುಚ್ಚರಿಸಲೆಲೆ ಮರುಳೆ ತಪ್ಪುನಾಡಿದೆ ದೃಷ್ಟಿ।
ಗೊಚ್ಚತಂಗೊಂಡು ರಂಜಿಪ ಕೃಷ್ಣರೊಪಮೆರಲನ್ಯಮಿನ್ನೇಕೆಂದಳು॥೧೯॥
ಪ್ರತಿಪದಾರ್ಥ :- (ಒಬ್ಬ ವಿಟನು ದಿಗಂಬರಳಾದ ಕಾಮುಕಿಯೋರ್ವಳೊಂದಿಗೆ ರಮಿಸುತ್ತಲಿದ್ದನೆಂಬುದನ್ನು ಈ ಪದ್ಯದಲ್ಲಿ ವರ್ಣಿಸಿದೆ) ಮತ್ತೋರ್ವನು= ಬೇರೊಬ್ಬ ಕಾಮುಕನು, ಅಚ್ಚ= ಪರಿಶುದ್ಧವಾದ, ಬೆಳ್ದಿಂಗಳೊಳ್= ತಿಂಗಳ ಬೆಳಕಿನಲ್ಲಿ, ಇನಿಯಳಂ= ಸಖಿಯನ್ನು, ನಿಚ್ಚಟದೊಳು= ಬರಿಯ ಮೈಯಲ್ಲಿ, ಉಳಿವಂತೆ= ಇರುವ ತೆರನಾಗಿ, ನೀವಿಯಂ= ಸೀರೆಯ ಗಂಟನ್ನು, ಬರೆಸೆಳೆದು= ಬಿಚ್ಚಿಹೋಗುವಂತೆ ಸಡಿಲಿಸಿಬಿಟ್ಟು, ಹೆಚ್ಚಳಿಸಿ= ಆನಂದದಿಂದ ಕೂಡಿ, ಪ್ರಿಯೆ= ಎಲೆ ನಾಯಕಿಯೆ, ನಿನ್ನ= ನಿನ್ನ ಸಂಬಂಧವಾದ, ಸರ್ವಾಂಗಮಂನೋಡಿ= ನಿನ್ನಶರೀರವನ್ನೆಲ್ಲಾ ವೀಕ್ಷಿಸಿ, ಕೃಷ್ಣಾವಲೋಕನವನು= ಪ್ರಾಯಸ-
ಮರ್ಥತೆಯನ್ನು, (ಕೃಷ್ಣನನ್ನು ನೋಡುವುದನ್ನು) ಮೆಚ್ಚಿ = ಆನಂದವನ್ನು ಹೊಂದಿ, ದಣಿಯದವೊಲ್= ಸಂತೋಷವನ್ನೈ-
ದದಿರುವಂತೆ, ಎನ್ನ=ನನ್ನ, ಕಂಗಳು= ನಯನಗಳು, ಇರ್ದಪುವು= ಇರುತ್ತವೆ, ಎಂದು= ಎಂಬತೆರನಾಗಿ, ಉಚ್ಚರಿಸಲು= ನುಡಿಯಲು, ಎಲೆಮರುಳೆ= ಎಲೈ ವಿವೇಕಹೀನನೆ, ತಪ್ಪನಾಡಿದೈ= ತಪ್ಪಾಗಿ ಮಾತನಾಡುತ್ತಿರುವಿ, ದೃಷ್ಟಿಗ= ನೋಟಕ್ಕೆ,
ಬಚ್ಚತಂಗೊಂಡು= ಅರ್ಹವಾಗಿದ್ದುಕೊಂಡು, ರಂಜಿಸುವ = ಹೊಳೆಯುವ, ಕೃಷ್ಣ ರೂಪಂ= ಶ್ರೀಕೃಷ್ಣಮೂರುತಿಯ ಆಕೃತಿಯು ಮತ್ತು ನಗ್ನತೆಯು, ನನಗೆ= ನನಗಾದರೊ, ಇರಲು= ಉಂಟಾಗಿರಲು, ಅನ್ಯಂ= ಬೇರೆಯಾದದ್ದು, ಇನ್ನೇಕೆ= ಇನ್ನೇನು ಪ್ರಯೋಜನವು, ಎಂದಳು= ಎಂದು ನುಡಿದಳು.
ತಾತ್ಪರ್ಯ:- ಸುಂದರವಾದ ಅಚ್ಚಬೆಳದಿಂಗಳಿನಲ್ಲಿ ಇನ್ನೊಬ್ಬ ವಿಟನು ತನ್ನ ಪ್ರಿಯೆಯ ಸೀರೆಯ ಗಂಟನ್ನು ಬಿಚ್ಚಿ ಅವಳ ದೇಹವನ್ನು ನೋಡಿ ನೋಡಿ "ಪ್ರಿಯೆ ನಿನ್ನ ಸರ್ವಾಂಗವನ್ನು ನೋಡಿ ನೋಡಿ ಮೆಚ್ಚಿ ಮೆಚ್ಚಿ, ಶ್ರೀಕೃಷ್ಣನ ಸಗುಣ ರೂಪವನ್ನು ಎಷ್ಟು ನೋಡಿದರೂ ತೃಪ್ತಿಯಾಗದಂತೆ ನನ್ನ ಕಣ್ಣುಗಳು ಸುಖಿಸುತ್ತಿವೆ" ಎನ್ನಲು, ಅವಳು ಮರುಳೆ ನೀನು ತಪ್ಪನ್ನಾಡಿದೆ ದೃಷ್ಟಿಗೆ ಅತ್ಯಾನಂದಕರವಾದ (ಕೃಷ್ಣ) ಎರುವಾಗ ನಿನಗೆ ಬೇರೆಯ ಅವಶ್ಯಕತೆಯೇಕೆ? ಎಂದಳು.
ಅಂಗಜ ಶ್ರಮದಿಂದೆ ಬೆಮರ್ದ ಕಾಮಿನಿ ತನ್ನ।
ತುಂಗಕುಚ ತಟದ ಕಸ್ತೂರಿಯೊಳ್ ಪುದಿದಿನಿಯ।
ನಂಗಮಂ ಕಂಡಿದೇತಕೆ ಕೃಷ್ಣರೂಪಾದೆ ನೀನೆಂದು ಬೆಸಗೊಳಲ್ಕೆ॥
ಅಂಗನೆ ತಿಳಿಯದಾದೆ ಪೊತ್ತಿರ್ದನಂದು ಕೃ।
ಷ್ಣಂ ಗಿರಿಯನೊಂದನೆರಡದ್ರಿಗಳ ನೀಗಳಾಂ।
ಹಿಂಗದಾಂತಿಹೆನೆನಗೆ ಕೃಷ್ಣಭಾವಂ ಬರ್ಪುದಚ್ಚರಿಯೆ ಪೇಳೆಂದನು॥೨೦॥
ಪ್ರತಿಪದಾರ್ಥ :- ( ಒಬ್ಬ ನಾಯಕನು ತನ್ನ ಕರತಳದಿಂದ ಕಾಮುಕಿಯಾದೋರ್ವಳ ಸ್ತನಗಳನ್ನು ಹಿಡಿದು ರಮಿಸುತ್ತಲಿದ್ದ-
ನೆಂಬುದನ್ನು ಈ ಪದ್ಯದಲ್ಲಿ ವಿವರಿಸಿದೆ)ಅಂಗಜಶ್ರಮದಿಂದ = ಮನ್ಮಥಾವಸ್ಥೆಯಿಂದ (ಮಿಥುನ ಶ್ರಮದಿಂದ) ಬೆಮರ್ದ= ಮೈಯಲ್ಲೆಲ್ಲಾ ಬೆವರಿನಿಂದ ಕೂಡಿದ, ಕಾಮಿನಿ=ಸ್ತ್ರೀಯು, ತನ್ನ= ತನ್ನದಾದ, ತುಂಗ= ದೊಡ್ಡದಾಗಿರುವ, ಕುಚತಟದ= ಸ್ತನ-
ಮಂಡಲವನ್ನಾವರಿಸಿರುವ, ಕತ್ತುರಿಯೊಳ್= ಕಸ್ತೂರಿಯೊಳಗೆ, ಪುದಿದಿರ್ದ=ವ್ಯಾಪಿಸಿದ್ದ, ಪ್ರಿಯನ= ವಿಟನ, ಅಂಗಮಂ= ಶರೀರವನ್ನು,ಕಂಡು= ನೋಡಿ, ನೀನು= ನೀನಾದರೊ, ಇದೇತಕೆ= ಯಾವ ಕಾರಣದಿಂದ, ಕೃಷ್ಣರೂಪು ಆದೆ= ಕಪ್ಪಾಗಿ ಹೋದೆ, ಎಂದು= ಎಂಬತೆರನಾಗಿ, ಬೆಸಗೊಳಲ್ಕೆ= ಪ್ರಶ್ನಿಸಲು, ಅಂಗನೆ= ಎಲೆ ನಾರಿಯೆ,ತಿಳಿಯದಾದೆ =ಇದು ನಿನಗೆ ತಿಳಿಯದೆ ಹೋಯಿತೆ, ಕೃಷ್ಣನು=ಶ್ರೀಕೃಷ್ಣಮೂರುತಿಯು, ಅಂದು= ಪೂರ್ವದಲ್ಲಿ, ಒಂದು= ಒನದಾದ, ಗಿರಿಯನು= ಬೆಟ್ಟವನ್ನು, ಪೊತ್ತಿರ್ದನು= ಹೊತ್ತುಕೊಂಡಿದ್ದನು, ಆಂ= ನಾನಾದರೊ,ಹಿಂಗದೆ= ಹಿಮ್ಮೆಟ್ಟದೆ, ಈಗಳ್=ಈಗ,ಎರಡ-
ದ್ರಿಗಳನು= ಎರಡು ಬೆಟ್ಟಗಳನ್ನು, ಆಂತು=ಧರಿಸಿ, ಇಹೆನು= ಇದ್ದೇನೆ, ಎನಗೆ=ಈ ರೀತಿಯಲ್ಲಿ ಬೆಟ್ಟಗಳೆರಡನ್ನುಹೊತ್ತಿರುವ ನನಗೆ, ಕೃಷ್ಣಭಾವಂ = ಕೃಷ್ಣ ರೂಪವು, ಬಪ್ಪುದು= ಉಂಟಾಗುವುದು, ಅಚ್ಚರಿಯೆ=ಆಶ್ಚರ್ಯವೆ, ಪೇಳ= ಹೇಳವಳಾಗು, ಎಂದನು= ಎಂದು ನುಡಿದನು.
ತಾತ್ಪರ್ಯ:- ಕಾಮಕದನ ಶ್ರಮದಿಂದ ಬೆವತಿದ್ದ ಒಬ್ಬಳು ತನ್ನ ಕುಚಾಗ್ರದ ಕಸ್ತೂರಿಯಿಂದ ಲೇಪಿತನಾದ ತನ್ನ ಇನಿಯನನ್ನು ನೋಡಿ ಇದೇಕೆ ನೀನು ಕೃಷ್ಣರೂಪನಾದೆ( ಕಸ್ತೂರಿ ಹತ್ತಿ ಕಪ್ಪಾದೆ) ಎಂದು ಕೇಳಲು ಅವನು ಕಾಂತೆ ನಿನಗೆ ತಿಳಿಯದೆ ಹೋಯಿತು. ಅಂದು ಕೃಷ್ಣನು ಒಂದು ಬೆಟ್ಟವನ್ನು ಹಿಡಿದು ಕಪ್ಪಾದ, ನಾನು ಎರಡು ಬೆಟ್ಟಗಳನ್ನು ಹಿಡಿದಿದ್ದೇನೆ. ನನಗೆ ಕೃಷ್ಣರೂಪ (ಭಾವ) ವು ಬಾರದಿರುವುದೇ ಎಂದು ಕೇಳಿದನು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ