ಜೈಮಿನಿ ಭಾರತ 28 - ದೊಡ್ಡಬೆಲೆ ನಾರಾಯಣಶಾಸ್ತ್ರೀ
ಸೂಚನೆ :- ಇಂದ್ರಜಂ ತುರಗಂಗಳಂ ಕಾಣದಿರೆ ನಾರ।
ದಂ ದೃಷ್ಟಿಗೋಚರಕೈದಿ ವಿಸ್ತರಿಸಿದಂ।
ಚಂದ್ರಹಾಸ ಕಥಾವಿಶೇಷಮಂ ಕರ್ಣ ಪೀಯೂಷಮಂ ಪ್ರೀತಿಯಿಂದೆ॥
ಪ್ರತಿಪದಾರ್ಥ :- ಇಂದ್ರಜ= ಪಾರ್ಥನು,ತುರಗಂಗಳಂ = ಯಾಗದ ಕುದುರೆಗಳನ್ನು, ಕಾಣದಿರೆ= ನೋಡದೆ ಕಳವಳಪಡುತ್ತ-
ಲಿರುವಾಗ, ನಾರದಂ= ನಾರದ ಮುನಿಯು, ದೃಷ್ಟಿಗೋಚರಕೈದಿ= ಪಾರ್ಥನಿಗೆದುರಾಗಿ ಬಂದು, ಕರ್ಣಪೀಯೂಷಮಂ= ಕೇಳಲು ಇಂಪಾಗಿರುವ, ಚಂದ್ರಹಾಸನ ಕಥಾವಿಶೇಷಮಂ= ಚಂದ್ರಹಾಸನೆಂಬ ವಿಷ್ಣು ಭಕ್ತನ ಚರಿತ್ರೆಯನ್ನು, ಪ್ರೀತಿಯಿಂದ = ವಿಶ್ವಾಸಪೂರ್ವಕವಾಗಿ, ವಿಸ್ತರಿಸಿದಂ= ವಿಶದಪಡಿಸಿದನು.
ತಾತ್ಪರ್ಯ:- ಯಜ್ಞದ ಕುದುರೆಗಳು ಕಾಣದಾಗಲು, ನಾರದನು ಅರ್ಜುನನ ಬಳಿಗೆ ಬಂದು, ಕಿವಿಗಳಿಗಮೃತವಾದ, ವಿಶಿಷ್ಟ-
ವಾದ ಚಂದ್ರಹಾಸನ ಕತೆಯನ್ನು ಹೇಳಿದನು.
ಭೂಮಿಪತಿ ಕೇಳ್ ಬಳಿಕ ಸೌರಾಷ್ಟ್ರದಿಂದೆ ಸು।
ತ್ರಾಮ ಸುತನಸುರಾರಿ ಸಹಿತ ಕುದುರೆಗಳ ಕೂ।
ಡಾ ಮಹಾನದವನುತ್ತರಿಸೆ ನಡೆತರುತಿರ್ದನಾ ಪಥದೊಳೈಕಿಲಿಂದೆ॥
ಹೇಮಂತ ಶೈಶಿರದ ಮಾಗಿ ಮಡಲಿಡೆ ತರಣಿ।
ಸೋಮನಂತಿರೆ ಬಿಸಿಲ್ ಬೆಳದಿಂಗಳ ವೊಲಾಗೆ।
ತಾಮರಸ ರಾಜಿ ನಸಿದುವು ಕುಗ್ಗಿದುವು ಕೋಗಿಲೆಯ ಕಂಠಕಲರವಗಳು॥೧॥
ಪ್ರತಿಪದಾರ್ಥ :- ಭೂಮಿಪತಿ= ಧರಣೀಂದ್ರನಾದ ಜನಮೇಜಯನೆ, ಕೇಳು=ಲಾಲಿಸು, ಬಳಿಕ= ಆಮೇಲೆ, ಕುದುರೆಗಳ ಕೂಡ= ಯಜ್ಞಾಶ್ವಗಳೊಂದಿಗೆ, ಅಸುರಾರಿ ಸಹಿತ= ಕೃಷ್ಣ ಸಮೇತನಾಗಿ, ಸುತ್ರಾಮಸುತನು= ಇಂದ್ರಸೂನುವಾದ ಫಲು-
ಗುಣನು. ಮಹಾನದವನ್ನು= ದೊಡ್ಡ ಗಂಡುನದಿಯನ್ನು, ಉತ್ತರಿಸಿ=ಅತಿಕ್ರಮಿಸಿ, ಸೌರಾಷ್ಟ್ರದಿಂದ= ಸೌರಾಷ್ಟ್ರ ದೇಶದಿಂ-
ದ, ನಡೆತರುತಿರ್ದನು= ಬರುತ್ತಿದ್ದನು. ಆ ಪಥದೊಳು= ಆ ದಾರಿಯಲ್ಲಿ, ಐಕಿಲಿಂದ= ಒಟ್ಟಾಗಿ, ಹೇಮಂತ= ಹಿಮಕಾಲವು,
ಶೈಶಿರ= ಶಿಶಿರ ಋತುವಿನ ಸಮಯವು, ಮಾಗಿ= ಕೊರೆತವು, ಮಡಲಿಡೆ= ಹೆಚ್ಚಾಗುತ್ತಿರಲು, ತರಣಿ= ರವಿಯು, ಸೋಮ-
ನಂತೆ= ಇಂದುವಿನ ತೆರನಾಗಿ, ಇರೆ= ಇರುತ್ತಿರಲು, ಬಿಸಿಲ್= ಸೂರ್ಯನ ಕಾಂತಿಯು, ಬೆಳದಿಂಗಳೊಲ್= ಚಂದ್ರ ಕಿರಣ-
ದಂತೆ, ಆಗೆ= ಆಗಿಬಿಡಲು, ತಾಮರಸರಾಜಿ= ತಾವರೆಗಳ ಸಮೂಹವು, ನಸಿದವು= ಮುಚ್ಚಿಕೊಂಡವು, ಕೋಗಿಲೆಯ=
ಕೋಗಿಲೆ ಹಕ್ಕಿಯ, ಕಂಠ= ಕತ್ತಿನ, ಕಲ= ಇಂಪಾದ, ರವಗಳು= ಶಬ್ಧಗಳು, ಕುಗ್ಗಿದವು= ಕಡಿಮೆಯಾದವು.
ಆ॥ವಿ॥ ನದಿ=ಹೆಣ್ಣುನದಿ, ನದ=ಶಗಂಡುನದಿ, ಅಸುರ+ಅರಿ= ಅಸುರಾರಿ ( ಸ. ದೀ. )
ತಾತ್ಪರ್ಯ:- ಕೇಳೈ ಜನಮೇಜಯ ಮಹೀವಲ್ಲಭನೆ, ಪಾರ್ಥನು ಕೃಷ್ಣ ನೊಡನೆಯೂ, ಯೌವನಾಶ್ವಾದಿ ರಾಜಾಧಿರಾಜ-
ರಿಂದ ಕೂಡಿದವನಾಗಿ, ಯಜ್ಞಾಶ್ವಗಳನ್ನು ಜೊತೆಮಾಡಿಕೊಂಡು, ಸೌರಾಷ್ಟ್ರದಿಂದ ಹೊರಟು ಬರುತ್ತಿರುವಾಗ, ದಾರಿಯಲ್ಲಿ ಮಹಾನದಿಯೊಂದು ಕಾಣಿಸಲು ಅದನ್ನೂ ಕೂಡ ಶ್ರೀಕೃಷ್ಣನ ಅನುಗ್ರಹದಿಂದ ಸಕಲ ಪರಿವಾರದೊಂದಿಗೆ ದಾಟಿದನು. ಅಷ್ಟು ಹೊತ್ತಿಗೆ ಹಿಮಂತಋತುವು ಒದಗಿತು. ಸೂರ್ಯನ ತಾಪವೆಲ್ಲಾ ಕಡಿಮೆಯಾಗಿ ಹೋಯಿತಾದ್ದರಿಂದ, ಬಿಸಿಲು ಚಂದ್ರನ ಕಾಂತಿಯಂತೆ ಬೆಳ್ಳಗಾಯಿತು. ಕಮಲಗಳಿಗೆ ವೃದ್ಧಾಪ್ಯವು ಒದಗಿತು, ಕೋಗಿಲೆ ಪಕ್ಷಿಗಳ ಕಂಠಧ್ವನಿಗಳು ಮಾಯ-
ವಾದವು.
ಬಾಲೆಯರ ಕಡೆಗಣ್ಣ ಬಾಣದಿಂದಂಗಜಂ।
ರೋಲಂಬ ರಾಜಿ ಸೊಕ್ಕಾನೆಗಳ ಸೊಗಡಿಂದೆ।
ಕಾಲಮಂ ಕಳೆವೊಲಾದುದು ಪೂಗಳಿಲ್ಲದೆ ಮಸುಳ್ದುವಿನ ಶಶಿ ರುಚಿಗಳು॥
ಜ್ವಾಲೆ ಶೀತಳಮಾದುದಗ್ನಿಯಿಂ ಬಿಟ್ಟು ಕಾಂ।
ತಾಲಿಂಗನವನೆ ಬಯಸಿದುದು ಕಾಮುಕ ಜನಂ।
ಮೂಲೋಕಮಂ ಮಾಗಿ ನಡುಗಿಸಿತು ಮೇಣುಡುಗಿಸಿತು ಪೆರ್ಚಿದೈಕಿಲಿಂದೆ॥೨॥
ಪ್ರತಿಪದಾರ್ಥ :- ಬಾಲೆಯರ= ಕನ್ನಿಕೆಯರ, ಕಡೆಗಣ್ಣ= ಕಟಾಕ್ಷವೆಂಬ, ಬಾಣದಿಂದ = ಸರಲಿನಿಂದ, ಅಗಜಂ= ಮದನನು, ರೋಲಂಬ= ಭೃಂಗಗಳ, ರಾಜಿ= ಸಾಲುಗಳೆನ್ನುವ, ಸೊಕ್ಕಾನೆಗಳ= ಮದಗಜಗಳ, ಸೊಗಡಿಂದ= ಸುರಭಿಯಿಂದ, ಕಾಲಮಂ ಕಳೆವೊಲು= ಕಾಲವನ್ನು ಕಳೆಯುವ ತೆರನಾಗಿ, ಪೂಗಳಿಲ್ಲದಾದುದು= ಪುಷ್ಪರಹಿತವಾಯಿತ,ಇನಶಶಿರುಚಿಗಳು= ಸೂರ್ಯಚಂದ್ರರ ಪ್ರಕಾಶಗಳು, ಮಸುಳ್ದವು= ಕುಕುಗ್ಗಿಹೋಯಿತು, ಜ್ವಾಲೆ= ಅಗ್ನಿಯ ಹೊಯಲು, ಶೀತಳಂ= ತಣ್ಣಗಿರು-
ವುದು, ಆದುದು=ಆಗಿಹೋಯಿತು, ಕಾಮುಕಜನಂ= ಕಾಂತೆಯರಲ್ಲಿ ಅನುರಾಗವುಳ್ಳವರು, ಅಗ್ನಿಯಂ ಬಿಟ್ಟು= ಬೆಂಕಿಯ
ಮೇಲಣ ಆಶೆಯನ್ನು ಬಿಟ್ಟು ,ಕಾಂತಾಲಿಂಗನವನೆ= ಸ್ತ್ರೀಯರನ್ನು ತಬ್ಬಿಕೊಳ್ಳುವುದನ್ನು,ಬಯಸಿದುದು= ಇಚ್ಛಿಸಿತು, ಮಾಗಿ= ಮಾಗಿಯಕಾಲವು, ಪೆರ್ಚಿದೈಕಿಲಿಂದ= ಹೆಚ್ಚಾದ ಕೊರತದಿಂದ, ಮೂಲೋಕಮಂ= ಲೋಕತ್ರಯವನ್ನು, ನಡುಗಿ-
ಸಿತು= ಕಂಪಿಸುವಂತೆ ಮಾಡಿಬಿಟ್ಟಿತು, ಮೇಣ್= ಅದೂ ಅಲ್ಲದೆ,ಉಡುಗಿಸಿತು= ಕುಗ್ಗುವಹಾಗೆ ಮಾಡಿಬಿಟ್ಟಿತು.
ತಾತ್ಪರ್ಯ:- ಜನರಿಗೆ ಮನ್ಮಥಬಾಧೆಯು ಸಹಿಸಲಸದಳವಾಯಿತು. ಸೂರ್ಯಚಂದ್ರರ ಕಾಂತಿಗೆ ಭಂಗವುಂಟಾಯಿತು, ಬೆಂಕಿಯಲ್ಲಿರಬೇಕಾದ ತೀಕ್ಷ್ಣತೆಯೂ ಕೂಡ ಹೇಮಂತ ಋತುವಿನ ಶೈತ್ಯಕ್ಕೆ ಹೆದರಿತು, ಜನರೆಲ್ಲಾ ಸ್ತ್ರೀಸಂಭೋಗದಲ್ಲಿ ನಿರತರಾಗಿರುತ್ತಲಿದ್ದರು. ಮಾಗಿಯ ಚಳಿ ಮೂರುಲೋಕಗಳನ್ನೂ ನಡುಗಿಸಿತು.
ಉತ್ತಮಾಂಗದ ಗಂಗೆಯಂ ಸಾಗರಕೆ ಕಳುಹಿ।
ಪೊತ್ತ ಶಶಿಕಲೆಯನಂಬರಕಿಟ್ಟು ತನ್ ನಡು।
ನೆತ್ತಿಯೊಳ್ ಕಣ್ಣತೆರೆದಗ್ನಿಯಂ ತಾಳ್ದುದಲ್ಲದೆ ಕಾಂತೆಗರೆಮೆಯ್ಯನು॥
ತೆತ್ತು ಕಾಮಿನಿಯರ ಕುಚಾಲಿಂಗನವನುಳಿದೊ।
ಡೆತ್ತಣದು ಹಿಮಕೆ ಭೇಷಜಮೆಂದು ವಿರಹಿಗಳ್ ಕೂರ್ಪರನರಸುತಿರ್ದರು॥೩॥
ಪ್ರತಿಪದಾರ್ಥ :- ಈಶ್ವರನು= ಶಿವನು, ಸಾಗರಕೆ= ಸಮುದ್ರಕ್ಕೆ, ಉತ್ತಮಾಂಗದ=ತಲೆಯಮೇಲಿದ್ದ, ಗಂಗೆಯಂ= ಸುರನ-
ದಿಯನ್ನು, ಕಳುಹಿ= ಕಳುಹಿಸಿ, ಅಂಬರಕೆ= ಆಗಸಕ್ಕೆ, ಪೊತ್ತ= ತಾನು ಧರಿಸಿರತಕ್ಕ, ಶಶಿಕಲೆಯನು=ಇಂದುಕಲೆಯನ್ನು, ಇಟ್ಟು = ಇಟ್ಟವನಾಗಿ, ತನ್ನ= ಸ್ವಕೀಯವಾದ, ನಡುನೆತ್ತಿಯೊಳ್= ಹಣೆಯ ಮಧ್ಯಭಾಗದಲ್ಲಿರುವ,ಕಣ್ಣ= ಕಣ್ಣನ್ನು, ತೆರೆದು
= ಬಿಟ್ಟವನಾಗಿ, ಅಲ್ಲಿ= ಆ ಕಣ್ಣಲ್ಲಿ ,ಅಗ್ನಿಯಂ=ಅಗ್ನಿಯನ್ನು, ತಾಳ್ದುದಲ್ಲದೆ= ಇಟ್ಟುಕೊಂಡಲ್ಲದೆ, ಅರೆಮಮೆಯ್ಯನು= ತನ್ನ ಶರೀರದ ಅರ್ಧಭಾಗವನ್ನು, ಕಾಂತೆಗೆ= ತನ್ನ ಸತಿಗೆ,ಇತ್ತು= ಕೊಟ್ಟು, ಬಿಡದೆ= ಅಗಲಿರಲಾರದೆ, ಅಪ್ಪಿಕೊಂಡು=ತಬ್ಬಿಕೊಂ-
ಡು, ಇರುವನು= ಇದ್ದಾನೆ, ಎನಲ್= ಎನ್ನುವಾಗ, ಮತ್ತೆ= ತಿರುಗಿ, ವಿರಹಿಗಳು= ವಿರಹವೇದನೆಯಿಂದ ಕೂಡಿರತಕ್ಕವರು,
ಕಾಮಿನಿಯರ= ಸ್ತ್ರೀಯರ, ಕುಚಾಲಿಂಗನವನು=ಮೊಲೆಗಳನು ತಬ್ಬಿಕೊಳ್ಳುವುದನ್ನು ಬಿಟ್ಟು, ಉಳಿದೊಡೆ= ಬಿಟ್ಟರೆ, ಹಿಮಕೆ= ಕೊರೆತಕ್ಕೆ, ಭೇಷಜಂ= ಔಷಧವಾದದ್ದು, ಎತ್ತಣದು= ಇನ್ನೆಲ್ಲಿದೆ, ಎಂದು=ಎಂಬತೆರನಾಗಿ ಆಲೋಚಿಸಿ, ಕೂರ್ಪರನು=ನಲ್ಲರನ್ನು, ಅರಸುತಿರ್ದರು= ಹುಡುಕುತ್ತಿದ್ದರು.
ತಾತ್ಪರ್ಯ:- ಈ ಕಾಲದಲ್ಲಿ ಚಳಿಯನ್ನು ತಡೆಯಲಾರದೆ ಕಾಮಾಸಕ್ತರಾಗಿ ಅಲೆದಾಡುತ್ತಿರುವುದನ್ನು ನೋಡೆದರೆ, ಪೂರ್ವದಲ್ಲಿ ಪರಮೇಶ್ವರನು ತನ್ನ ತಲೆಯಮೇಲಿದ್ದ ಗಂಗೆಯನ್ನು ಸಮುದ್ರಕ್ಕೆ ಕಳುಹಿಸಿ, ಚಂದ್ರನನ್ನು ಆಗಸಕ್ಕೆ ಕಳುಹಿ, ಹಣೆಗಣ್ಣನ್ನು ತೆರೆದು ಅಗ್ನಿಯನ್ನು ಇಟ್ಟುಕೊಂಡನು. ಆದರೂ ಚಳಿಯು ಅಸಾಧ್ಯವಾಗಲು, ಇದರ ಬಾಧೆಯನ್ನು ಪರಿಹಾ- ರಮಾಡಿಕೊಳ್ಳಲು, ತನ್ನರಸಿಯಾದ ಪಾರ್ವತಿಯನ್ನು ತನ್ನರ್ಧಾಂಗದಲ್ಲಿ ಸೇರಿಸಿಕೊಂಡು ಔಷಧವನ್ನಾಗಿ ಮಾಡಿಕೊಂಡು
ಚಳಿಯ ಬಾಧೆಯನ್ನು ಪರಿಹರಿಸಿಕೊಂಡುದನ್ನು ಜ್ಞಾಪಿಸುತ್ತಲಿತ್ತು.
ನೆರೆ ಲೋಭಿ ವಿತ್ತಮಂ ಸುಯ್ದಾನಮಂ ಮಾಳ್ಪ।
ತೆರದಿಂದೆ ಕಾಮಿನೀ ಪ್ರಣಯಮಂ ನಂಬಿರ್ಪ।
ನರಿವಿನಂತಿಡಿದ ಶೈಶಿರದ ಶೀತಕೆ ಪಗಲಿರುಳ್ ತಮ್ಮ ಗೂಡುಗಳನು॥
ಪೊರಮಟ್ಟು ಪಾರಲೊಲ್ಲದೆ ವಾಯಸ ಪ್ರತತಿ।
ಗರಿಗಳಂ ಪೊದಿಸಿ ಮಗ್ಗುಲೊಳಿಟ್ಟು ಕೋಗಿಲೆಯ।
ಮರಿಗಳಂ ಮೆಯ್ಯೊಳ್ ಪುಗಿದುಕೊಂಡು ಮರುಕದಿಂದೈದೆ ಪಾಲಿಸುತಿರ್ದುವು॥೪॥
ಪ್ರತಿಪದಾರ್ಥ :- ವಿತ್ತಮಂ= ಹಣವನ್ನು, ನೆರೆಲೋಭಿ= ಅಧಿಕವಾದ ಜಿಪುಣತನದಿಂದೊಡಗೂಡಿದ ಮನುಷ್ಯನು, ಸುಯಿದಾನಮಂ ಮಾಳ್ಪ= ಸಂಕಟಪಟ್ಟುಕೊಂಡು ದಾನಮಾಡುವ, ತೆರದಿಂದ = ಬಗೆಯಿಂದ, ಕಾಮಿನಿಯ= ಸ್ತ್ರೀಯ, ಪ್ರಣಯಮಂ= ಪ್ರೇಮವನ್ನು, ಇಹನ= ಇರುವ ಮನುಷ್ಯನ, ಅರಿವಿನಂತೆ= ತಿಳಿವಳಿಕೆಯ ಹಾಗೆ, ಇಡಿದ= ನೆರೆದ, ಶೈಶಿರದ=ಮಾರ್ಗಶಿರ ಪುಷ್ಯಮಾಸಗಳ,ಶೀತಕಳೆ= ಕೊರೆತಕ್ಕೆ, ಪಗಲಿರುಳ್= ಹಗಲು ರಾತ್ರಿಯಲ್ಲಿಯೂ, ತಮ್ಮ = ಸ್ವಕೀ-
ಯವಾದ, ಗೂಡುಗಳನು= ನಿಲಯಗಳಿಂದ, ಪೊರಮಟ್ಟು = ಹೊರಟು, ಪಾರಲು= ಹಾರಾಡಲು,ಒಲ್ಲದೆ= ಇಷ್ಟವಿಲ್ಲದೆ, ವಯಸಪ್ರತತಿ= ಕಾಗೆಗಳ ಸಮೂಹವು, ಗರಿಗಳಂ= ರೆಕ್ಕೆಗಳನ್ನು, ಪೊದಿಸಿ=ಹೊದಿಸಿ, ಮಗ್ಗುಲೊಳ್= ಪಕ್ಕದಲ್ಲಿ, ಇಟ್ಟು =
ಇಟ್ಟುಕೊಂಡು, ಮೈಯೊಳ್= ತಮ್ಮ ದೇಹದಲ್ಲಿ, ಕೋಗಿಲೆಯ ಮರಿಗಳಂ= ಕೋಗಿಲೆಯ ಎಳೆ ಮರಿಗಳನ್ನು, ಪುದುಗಿ-
ಕೊಂಡು= ಹೊದಿಸಿಕೊಂಡು, ಮರುಕದಿಂದ=ಅಕ್ಕರೆಯಿಂದ, ಐದೆ= ಚನ್ನಾಗಿ, ಪಾಲಿಸುತಿರ್ದವು= ಕಾಪಾಡುತ್ತಲಿದ್ದವು.
ತಾತ್ಪರ್ಯ:-ಲೋಭಿಯು ಹಣವನ್ನು ರಕ್ಷಿಸುವಂತೆ, ಹೆಣ್ಣಿನ ಪ್ರಣಯವನ್ನು ನಂಬಿಕೊಂಡಿರುವವನ, ತಿಳಿವಳಿಕೆಯಂತೆ, ಶಿಶಿರದ ಸೀತಕ್ಕೆ ಹಗಲಿರುಳೂ ಗೂಡನ್ನು ಬಿಟ್ಟು ಹೊರಹೋಗದೆ, ಕಾಗೆಗಳು ಕೋಗಿಲೆಯ ಮರಿಗಳಿಗೆ ರೆಕ್ಕೆಗಳಿಂದ ಹೊದಿಸಿ ಮರುಕದಿಂದ ಪಾಲಿಸುತ್ತಿದ್ದವು
ಭುವನಮಂ ತೀವಿರ್ದ ಹಿಮಮುಮಂ ತಮಮುಮಂ।
ತವಿಸುವ ತವಕದಿಂದಮವಗಡಿಸಿ ಜವಗೆಡಿಸಿ।
ಬವಣೆಗೊಂಡಭ್ರದೊಳ್ ತೊಳಲುತ್ತೆ ಬಳಲುತ್ತೆ ಬಂದೊಡಂ ಮತ್ತೆ ಬಿಡದೆ॥
ಕವಿಯಲ್ ಪ್ರತಾಪದೇಳಿಗೆ ನಂದಿ ಮಿಗೆ ಕುಂದಿ।
ರವಿ ತಣ್ಣಗಾದನೆನೆ ಕಾಣಿಸಿತು ಮಾಣಿಸಿತು।
ತವೆ ತಕ್ಕೆಯೊಳ್ ನೆರೆಯ ಬಲ್ಲರೊಳ್ ನಲ್ಲರೊಳ್ ಮುನಿಸನಾ ಶೈಶಿರದೊಳು॥೫॥
ಪ್ರತಿಪದಾರ್ಥ :- ಭುವನಮಂ= ಪ್ರಪಂಚವನ್ನೆಲ್ಲಾ, ತೀವಿರ್ದ= ಆವರಿಸಿಕೊಂಡಿದ್ದ, ಹಿಮವನುಂ= ಶೈತ್ಯವನ್ನೂ, ತಮವನು=ಅಂಧಕಾರವನ್ನೂ, ತವಿಸುವ= ಬೇಯಿಸುವ, ಉತ್ಸವದಿಂದಲಿ= ಆಸಕ್ತಿಯಿಂದ, ಅವಗಡಿಸಿ= ಹಾಸಿಸಿ,
ಜವಗೆಡಿಸಿ= ಜಾಗ್ರತೆಯನ್ನು ತಗ್ಗಿಸಿ, ಅಭ್ರದೊಳ್= ಅಂತರಿಕ್ಷದಲ್ಲಿ, ಬವಣಿಗೊಂಡು= ಅಲೆದಾಡಿಕೊಂಡು, ತೊಳಲುತ್ತ= ತಿರುಗಾಡುತ್ತ, ಬಳಲುತ್ತ= ಆಯಾಸಗೊಳ್ಳುತ್ತ,ಬಂದೊಡಂ= ಬಂದರೂ ಕೂಡ, ಮತ್ತೆ=ಪುನಃ, ಬಿಡದೆ= ತಪ್ಪದೆ, ಕವಿಯಲ್= ಆಕ್ರಮಿಸಲು,ಪ್ರತಾಪದ= ಸಾಹಸದ, ಏಳಿಗೆ= ಅತಿಶಯವು, ಮಿಗೆ= ಹೆಚ್ಚಾಗಿ, ನಂದಿ=ತಪ್ಪಿ,ಕುಂದಿ=ಕೃಶವಾ-
ವಾಗಿ, ರವಿ= ಸೂರ್ಯನು, ತಣ್ಣಗಾದನು=ತಂಪಾದನು, ಎನೆ= ಎಂಬಂತೆ, ಕಾಣಿಸಿತು= ತೋರಿತು,ಆ ಶೈಶಿರದೊಳು= ಆ
ಹೇಮಂತ ಋತು ಸಮಯದಲ್ಲಿ , ತವೆ ತಕ್ಕೆಯೊಳ್= ಗಾಢಾಲಿಂಗನದಲ್ಲಿ , ನೆರೆಯಬಲ್ಲರೊಳ್= ಸೇರಲಾರದವರೊಂದಿಗೆ,
ನಲ್ಲರೊಳ್= ಪ್ರಿಯಕರರಲ್ಲಿ, (ಗಂಡಂದಿರಲ್ಲಿ) ಮುನಿಸನು= ಕೋಪವನ್ನು, ಮಾಣಿಸಿತು= ಹೋಗಲಾಡಿಸಿತು.
ಅ॥ವಿ॥ ಚಳಿಯ ಹೊಡೆತವು ಅತಿಯಾದ್ದರಿಂದ ಗಂಡಹೆಂಡಿರು ತಮ್ಮ ತಮ್ಮ ಕೋಪವನ್ನು ದೂರೀಕರಿಸಿ ಸುಖಸಲ್ಲಾಪಗ-
ಳಿಂದ ವಿಹರಿಸುತ್ತಿದ್ದರು,
ತಾತ್ಪರ್ಯ:- ಎಲ್ಲೆಲ್ಲಿಯೂ ಮಂಜು ಆವರಿಸಿತು. ಸೂರ್ಯನ ಕಾಂತಿಯೂ ಕೂಡ ಕ್ಷೀಣಿಸಿದ್ದರಿಂದ, ಗಾಢಾಂಧಕಾರವು ಕವಿದುಕೊಂಡಿತು. ಆಗ ತಮ್ಮಲ್ಲಿದ್ದ ಕೋಪವನ್ನು ಬಿಟ್ಟು ಸ್ತ್ರೀ ಪುರುಷರು ಸುಖದಿಂದ ಕಾಲಕಳೆಯುತ್ತಲಿದ್ದರು.
ಉರ್ವೀಶ ಕೇಳ್ ಬಳಿಕ ಸೇನಾ ಸಮಗ್ರದಿಂ।
ಗೀರ್ವಾಣಪತಿ ನಂದನಂ ಬಹಳದೇಶ ವನ।
ಪರ್ವತ ನದೀ ನದಂಗಳನುತ್ತರಿಸಿ ಕುದುರೆಗಳ ಹಿಂಗೊಂಡು ಬರಲು॥
ತರ್ವಾಯೊಳವು ಹಾಯ್ದುವನಿಲ ಜವದಿಂ ಪಡೆಯೊ।
ಳೊರ್ವರುಮರಿಯದಂತೆ ಕುಂತಳ ನಗರಕೆ ಬಲ।
ಗರ್ವಿತ ಚಂದ್ರಹಾಸಾಖ್ಯನರಸನಲ್ಲಿಗವನಾ ಹರಿಗಳಂ ತಡೆದನು॥೬॥
ಪ್ರತಿಪದಾರ್ಥ :- ಉರ್ವೀಶ= ಪೊಡವಿಪನಾದ ಜನಮೇಜಯನೆ, ಕೇಳು=ಲಾಲಿಸು, ಬಳಿಕ = ಅನಂತರ, ಸೇನಾಸಮಗ್ರದಿಂ= ಸಮಸ್ತ ಸೇನೆಯೊಡನೆ, ಬಹಳದೇಶ = ಅನೇಕ ದೇಶಗಳನ್ನು, ವನ=ಕಾಡುಗಳು, ಪರ್ವತ= ಬೆಟ್ಟಗಳು,
ನದೀನದಂಗಳು= ಹೆಣ್ಣು ಗಂಡು ಹೊಳೆಗಳನ್ನೆಲ್ಲಾ, ಗೀರ್ವಾಣಪತಿ ನಂದನಂ= ಇಂದ್ರಸೂನುವಾದ ಪಾರ್ಥನು, ಉತ್ತರಿಸಿ= ಅತಿಕ್ರಮಿಸಿ, ಕುದುರೆಗಳಂ= ಯಾಗದ ಕುದುರೆಗಳನ್ನು , ಹಿಂದುಗೊಂಡು ಬರಲು= ಹಿಂಬಾಲಿಸಿ ಬರುತ್ತಿರುವಾಗ, ತರ್ವಾಯದೊಳ್= ಅನಂತರ, ಪಡೆಯೊಳು= ದಳದೊಳಗೆ= ಓರ್ವರುಂ= ಯಾರೊಬ್ಬರೂ,ಅರಿಯದಂತೆ= ಕಾಣದ ರೀತಿಯಾಗಿ,ಕುಂತಳನಗರಕ್ಕೆ= ಕುಂತಳ ನಗರಕ್ಕೆ, ಹಾಯ್ದವು= ನಡೆದವು, ಅಲ್ಲಿಗೆ= ಆ ಊರಿಗೆ, ಬಲಗರ್ವಿತಂ= ಸತ್ವಾತಿಶ-
ಯದಿಂದೊಪ್ಪುವ, ಚಂದ್ರಹಾಸಾಖ್ಯನು= ಚಂದ್ರಹಾಸನೆಂಬ ರಾಜನು, ತಡೆದನು= ಅಡ್ಡಹಾಕಿ ನಿಲ್ಲಿಸಿದನು.
ಅ॥ವಿ॥ ಉರ್ವ+ಈಶ=ಉರ್ವೀಶ( ಸ. ದೀ. ಸಂ. ) ಗೀರ್ವಾಣಪತಿ ನಂದನಂ= (ಷ. ತ. ಸ.) ನಂದನಂ=ಮಗನು, ನಂದನವನವೆಂಬ ವನದ ಹೆಸರು, ನಂದನವೆಂಬ ಸಂವತ್ಸರ, ಹರಿ=ಕುದುರೆ, ವಿಷ್ಣು, ಕಪ್ಪೆ, ಕೋತಿ, ಅಶ್ವತ್ಥದ ಮರ,
ತಾತ್ಪರ್ಯ:- ಎಲೈ ರಾಜೇಂದ್ರ ಜನಮೇಜಯನೆ ಕೇಳು, ಇಂತಹ ಮಾಗಿಯ ಕಾಲವೊದಗಿದರೂ ಲೆಕ್ಕಿಸದೆ, ಅಪರಿಮಿತವಾದ ಸೇನಾಸಮುದ್ರವನ್ನು ಯಜ್ಞಾಶ್ವದ ಸಂಗಡ ಮುನ್ನಡೆಸುತ್ತ ಅರ್ಜುನ ಹೊರಟನು. ಅನೇಕ ದೇಶಗಳನ್ನೂ,
ಪರ್ವತಗಳನ್ನೂ, ನದಿಗಳನ್ನೂ, ಕಾಡುಗಳನ್ನೂ ದಾಟಿ ಮುಂದೆ ಬರುತ್ತಿರುವಾಗ ಯಾರಿಗೂ ಗೋಚರವೇ ಇಲ್ಲದಂತೆ ಯಾಗದ ಕುದುರೆಗಳು ಕುಂತಳದೇಶಕ್ಕೆ ಬಂದು ಸೇರಿದವು. ಆ ನಗರಕ್ಕೆ ಚಂದ್ರಹಾಸನೆಂಬಾತ ಅರಸನಾಗಿದ್ದನು, ಅವನು ಈ ಯಾಗದ ಕುದುರೆಗಳನ್ನು ಕಟ್ಟಿದನು.
ಬೆಂಗಾವಲಾಗಿದ್ದ ಪಟುಭಟರ್ ಮೀರಿದ ತು।
ರಂಗಮಂ ಕಾಣದೈತಂದು ಸಿತವಾಹ।
ನಂಗೆ ಬಿನ್ನೈಸಿದರ್ ಜೀಯ ಪೋದುವು ಹರಿಗಳರಸಿದೊಡೆ ಗೋಚರಿಸವು॥
ಮುಂಗೈವ ಕಜ್ಜಮಂ ಬೆಸಸೆನೆ ಧನಂಜಯಂ।
ಮಂಗಳಾತ್ಮಕನ ಮೊಗನೋಡಿ ಚಿಂತಿಸುವಿನಂ।
ಕಂಗೊಳಿಸಿತಾಗಸದೊಳೊಂದು ಬೆಳಗೆರಡನೆಯ ದಿನಮಣಿಯ ತೇಜದಂತೆ॥೭॥
ಪ್ರತಿಪದಾರ್ಥ :- ಮೀರಿದತುರಂಗಮಂ= ಅತಿವೇಗದಿಂದ ಹೊರಟ ಯಜ್ಞಾಶ್ವಗಳೆರಡನ್ನೂ, ಬೆಂಗಾವಲಾಗಿರ್ದ= ಮೈಗಾವ-
ಲಾಗಿ ಬರುತ್ತಿದ್ದ , ಪಟುಭಟರು= ವೀರಾಧಿವೀರರು, ಕಾಣದೆ= ನೋಡದೆ, ಸಿತವಾಹನಂಗೆ= ಪಾರ್ಥನ ಬಳಿಗೆ, ಐತಂದು= ಬಂದು, ಬಿನ್ನೈಸಿದರು= ಅರಿಕೆಮಾಡಿಕೊಂಡರು, ಜೀಯ=ಪ್ರಭುವೆ, ಹರಿಗಳು= ಕುದುರೆಗಳು, ಪೋದವು= ಮಾಯವಾ-
ದವು, ಅರಸಿದೊಡೆ= ಹುಡುಕಿದರೂ ಕೂಡ, ಗೋಚರಿಸವು=ಕಾಣಿಸದಾದವು, ಮುಂಗೈವ= ಮುಂದೆ ನಾವು ಮಾಡಬೇ-
ಕಾದ ಕಜ್ಜಮಂ= ಕಾರ್ಯವನ್ನು, ಬೆಸಸು= ಅಪ್ಪಣೆ ಮಾಡು, ಎನೆ= ಎಂದು ಕಾವಲುಭಟರು ಅರಿಕೆಮಾಡಿಕೊಳ್ಳಲು, ಮಂಗಳಾತ್ಮಕನ= ಕಲ್ಯಾಣಕರವಾದ ಆಕಾರದಿಂದ ಒಪ್ಪುವ ಕೃಷ್ಣನ, ಮೊಗಂ=ಮುಖವನ್ನು, ಧನಂಜಯಂ=ಪಾರ್ಥನು, ನೋಡಿ= ಈಕ್ಷಿಸಿ, ಚಿಂತಿಸುವಿನಂ= ಆಲೋಚಿಸುತ್ತಿರುವ ವೇಳೆಗೆ ಸರಿಯಾಗಿ, ಎರಡನೆಯ =ಎರಡನೆಯದಾದ, ದಿನಮಣಿಯ = ಸೂರ್ಯನ, ತೇಜದಂತೆ= ಕಾಂತಿಯಂತೆ, ಆಗಸದೊಳು= ಅಂತರಿಕ್ಷಮಾರ್ಗದೊಳಗೆ, ಕಂಗೊಳಿಸಿತು= ಹೊಳೆಯಲಾರಂಭಿಸಿತು.
ತಾತ್ಪರ್ಯ:- ಅತ್ತ ಕುದುರೆಗಳ ರಕ್ಷೆಗಾಗಿ ಹೊರಟಿದ್ದ ಕಾವಲುಗಾರರು, ಸೇನಾಮಧ್ಯದಲ್ಲಿ ಯಜ್ಞಾಶ್ವಗಳು ಕಾಣದಿರಲು ಬಹಳವಾಗಿ ಗಾಬರಿ ಬಿದ್ದು, ಎಲ್ಲೆಲ್ಲಿಯೂಹುಡುಕಿ ಕಾಣದೆ ತಮ್ಮರಸನಾದ ಅರ್ಜುನನ ಬಳಿಗೆ ಬಂದು, ಎಲೈ ಪಾರ್ಥನೆ, ಯಜ್ಞಾಶ್ವಗಳು ಮಾಯವಾಗಿವೆ, ಎಲ್ಲಿ ಹುಡುಕಿದರೂಕಾಣಿಸುತ್ತಿಲ್ಲ,ಮುಂದೆ ನಾವೇನು ಮಾಡಬೇಕೆಂದು ಬಿನ್ನವಿಸುತ್ತಲಿರ-
ತಕ್ಕ ಪರಿವಾರದ ಜನರ ಮಾತನ್ನು ಕೇಳುತ್ತಲಿರುವ ಫಲುಗುಣನು ಹತ್ತಿರದಲ್ಲಿದ್ದ ಕೃಷ್ಣನ ಮುಖವನ್ನು ನೋಡುತ್ತ ಖಿನ್ನನಾಗಿ
ನಿಂತಿರುವಲ್ಲಿ ಸೂರ್ಯನ ಪ್ರಕಾಶಕ್ಕಿಂತಲೂ ಅಧಿಕಪ್ರಕಾಶವೊಂದು ಗೋಚರಿಸಿತು.
ಕ್ರೀಡೆಯಿಂ ಮಾಧವನುತ ಪ್ರಸಂಗವನುಂಟು।
ಮಾಡುತ್ತೆ ಸುಮನೋನುರಾಗದಿಂದಿರದೆ ನಲಿ।
ದಾಡುತ್ತೆ ಕ್ಜವಂಶ ಭೇದನಂಗೆಯ್ಯುತ್ತ ಸಾಮಜೋಲ್ಲಾಸದಿಂದೆ॥
ಪಾಡುತ್ತೆ ವಿಷ್ಣುಪದಕಮಲ ಮಧುಕರನೆಂಬ।
ರೂಢಿಯಂ ನಿಜವಾಗಿ ಕಾಣಿಸುವ ತೆರದಿಂದೆ।
ನೋಡುವರ ಕಣ್ಗೆ ಗೋಚರಿಸಿದಂ ನಾರದ ಮುನೀಶ್ವರಂ ಬಾಂದಳದೊಳು॥೮॥
ಪ್ರತಿಪದಾರ್ಥ:- ಕ್ರೀಡೆಯಿಂ= ವಿನೋದಿಂದ, ಮಾಧವ= ಹೂಗಳಲ್ಲಿರು ಮಕರಂದದ, ನುತ= ಉತ್ತಮವಾದ, ಪ್ರಸಂಗವ-
ನು=ಸಲ್ಲಾಪಗಳನ್ನು, ಉಂಟುಮಾಡುತ್ತ= ನೆರವೇರಿಸುತ್ತ, ಇರದೆ=ಕಾಲಹರಣ ಮಾಡದೆ, ಸುಮನೋನುರಾಗದಿಂದ= ಹೂಗಳಲ್ಲಿ ವಿಶ್ವಾಸದಿಂದ, ನಲಿದಾಡುತ್ತ= ಆನಂದಪಡುತ್ತ,ಕುಜ=ವೃಕ್ಷಗಳನ್ನೂ, ವಂಶ= ಬಿದಿರುಗಳನ್ನೂ ಸಹ, ಭೇದನಂ-
ಗೈವುತ್ತ= ರಂದ್ರಗಳುಂಟಾಗುವಂತೆ ಮಾಡುತ್ತ, ಸಾಮಜ= ಝೇಂಕಾರದ, ಉಲ್ಲಾಸದಿಂದ= ಸಡಗರದಿಂದ, ಪಾಡುತ್ತ= ಗಾನವನ್ನು ಮಾಡುತ್ತ, ಇದು ದುಂಬಿಯಪರವಾದ ಅರ್ಥವು),
ಕ್ರೀಡೆಯಿಂ= ಸಂಭ್ರಮದಿಂದ, ಮಾಧವ= ಲಕ್ಷ್ಮೀ ನಾರಾಯಣ ಮೂರ್ತಿಯ, ನುತ= ಅನಿರ್ವಾಚ್ಯವಾದ, ಪ್ರಸಂಗವನು= ಪ್ರಸ್ತಾಪವನ್ನು, ಉಂಟುಮಾಡುತ್ತ= ಎಸಗುತ್ತ, ಇರದೆ= ಎಡೆಬಿಡದೆ, ಸುಮನೋನುರಾಗದಿಂದ= ಸಹೃದಯದ ಕೌತುಕ-
ದಿಂದ, ನಲಿದಾಡುತ್ತ= ಮೈದವನ್ನು ತಾಳುತ್ತ, ಕುಜ= ವೃಕ್ಷದಿಂದ ಮಾಡಿದ, ವಂಶ= ವಿಪಂಚಿಯನ್ನು, ಭೇದನಂಗೈವುತ್ತ= ನುಡಿಸುತ್ತ, ಸಾಮಜೋಲ್ಲಾಸದಿಂದ= ಸಾಮಗಾನ ಸಂಬಂಧದ ಸಂತೋಷದಿಂದ, ಪಾಡುತ್ತ= ಸಂಗೀತರೂಪವಾಗಿ ಹೊಗಳುತ್ತ(ಇದು ಋಷಿವರ್ಯರಾದ ನಾರದ ಪರವಾದ ಅರ್ಥವು) ವಿಷ್ಣುಪದಕಮಲ ಮಧುಕರನು= ವಿಷ್ಣು ಪದಕಮಲ-
ಗಳಲ್ಲಿ ದುಂಬಿಯಂತಿರುವನು, ಎಂಬ= ಎನ್ನತಕ್ಕ, ರೂಢಿಯಂ= ಪ್ರಾಶಸ್ತ್ಯವನ್ನು, ನಿಜವಾಗಿ = ಯಥಾರ್ಥವಾಗಿ,ಕಾಣಿಸುವ =ಗೋಚರಮಾಡುವ, ತೆರದಿಂದ = ಪರಿಯಿಂದ, ನೋಡುವರಕಣ್ಗೆ= ನೋಟಕರ ಕಣ್ಣುಗಳಿಗೆ, ನಾರದ ಮುನೀಶ್ವರಂ= ನಾರದ ಮುನಿಯು, ಬಾಂದಳದೊಳು= ಅಂತರಿಕ್ಷ ಮಾರ್ಗದಲ್ಲಿ, ಗೋಚರಿಸಿದಂ = ಕಾಣಿಸಿದನು.
ತಾತ್ಪರ್ಯ:-ಆಗ ಅರ್ಜುನನು ಆಗಸದ ಕಡೆ ನೋಡುತ್ತಲಿರುವಾಗ ಶ್ರೀಮನ್ನಾರಾಯಣಮೂರ್ತಿಯ ದಿವ್ಯ ನಾಮಸಂಕೀ-
ರ್ತನೆಯನ್ನು ಮಾಡುತ್ತಲೂ, ವೀಣೆಯನ್ನು ನುಡಿಸುತ್ತಲೂ, ಸಾಮಗಾನದಿಂದ ಕೃಷ್ಣನನ್ನು ಕೀರ್ತೆಸುತ್ತಲೂ, ಭ್ರಮರವು ಕಮಲವನ್ನು ಸೇವಿಸುವಂತೆ ಶ್ರೀಮನ್ನಾರಾಯಣನ ಪಾದಕಮಲಂಗಳನ್ನು ಸೇವಿಸುವ ಭ್ರಮರವೋ ಎಂಬಂತೆ ಕಾಣಿಸಿದನು
ಕೆಂಜೆಡೆಯ ಸುಲಿಪಲ್ಲ ಚೀರ ಕೃಷ್ಣಾಜಿನದ।
ಮಂಜುಲ ತುಲಸಿಯ ದಂಡೆಯ ಕೊರಳ ತಾವಡದ।
ರಂಜಿಸುವ ಪದ್ಮಾಕ್ಷಗಳ ಲಲಿತ ಮೇಖಲೆಯ ಚಾರುತರದೈಪವೀತದ॥
ಕಂಜನಾಭ ಧ್ಯಾನದಮಲ ವೀಣಾಕ್ವಣಿತ।
ಸಂಜಾತ ಗಾನ ಸುಖದೆಸೆವ ತೇಜೋಮಯದ।
ಪುಂಜವೆನಿಪಮರಮುನಿ ನಾರದಂ ಪಾರ್ಥಾದಿಗಳ ಕಣ್ಗೆ ಕಾಣಿಸಿದನು॥೯॥
ಪ್ರತಿಪದಾರ್ಥ :- ಕೆಂಜೆಡೆಯ= ಕೆಂಡದಂತೆ ಹೊಳೆಯುವ ಜಟೆಯಿಂದಲೂ,ಸುಲಿ= ಪರಿಶುದ್ಧವಾದ, ಪಲ್ಲ= ದಂತಪಙ್ತಿಗ-
ಳಿಂದಲೂ,ಚೀರ= ನಾರುಮಡಿ, ಕೃಷ್ಣಾಜಿನದ= ಜಿಂಕೆಯ ಚರ್ಮ ಇವುಗಳ ಉಡಿಗೆಯಿಂದಲೂ, ಮಂಜುಲ= ಶ್ರೇಷ್ಠವಾದ, ತುಲಸೀದಂಡೆಗಳ= ತುಲಸೀಮಾಲಿಕೆಯಿಂದ ಕೂಡಿದ, ಕೊರಳ= ಕಂಠದಿಂದಲೂ,ತವಡದ= ಕಮಲದ ಹಾಗೆ, ರಂಜಿಸುವ=
ಹೊಳೆಯುವ, ಪದ್ಮಾಕ್ಷಗಳ= ಪದ್ಮಮಣಿಗಳ ಹಾರದಿಂದಲೂ, ಲಲಿತ= ಕೋಮಲವಾದ, ಮೇಖಲೆಯ= ಉಡಿದಾರದಿಂ-
ದಲೂ, ಚಾರುತರದ= ಬಹು ಅಂದವಾದ, ಉಪವೀತದ= ಬ್ರಹ್ಮಸೂತ್ರದಿಂದಲೂ, (ಜನಿವಾರದಿಂದಲೂ)ಕಂಜನಾಭ= ಪದ್ಮನಾಭನಾದ ಕೃಷ್ಣನ, ಧ್ಯಾನದ= ಸ್ಮರಣೆಯಿಂದ ಕೂಡಿದ, ಅಮಲ= ಪರಿಶುದ್ಧವಾದ, ವೀಣಾ= ವೀಣೆಯ, ಕ್ವಣಿತ= ದನಿಯಿಂದ, ಸಂಜಾತ= ಹುಟ್ಟಿದ, ಗಾನ= ಹಾಡುವುದರ, ಸುಖ= ಸಂತಸದಿಂದ, ಎಸೆವ= ಹೊಳೆಯುವ, ತೇಜೋಮ-
ಯದ= ತೇಜೋವಿಶಿಷ್ಟವಾದ, ಪುಂಜವು= ಸಮುದಾಯವು, ಎನಿಪ= ಎಂದು ಹೆಸರ್ಗೊಂಡಿರತಕ್ಕ,ಅಮರ ಮುನಿ= ರಸ
ಋಷಿಯಾದ, ನಾರದಂ= ನಾರದನು, ಪಾರ್ಥಾದಿಗಳಕಣ್ಗೆ= ಧನಂಜಯನೇ ಮೊದಲಾದವರ ದೃಷ್ಟಿಗೆ, ಕಾಣಿಸಿದನು= ಗೋಚರಿಸಿದನು.
ಅ॥ವಿ॥ ಕೆಂಜಡೆ=ಕೆಚ್ಚನೆ+ಜಡೆ ( ವಿ. ಪೂ. ಕ. ) ಕಂಜನಾಭ= ಕಂ-ನೀರಿನಲ್ಲಿ, ಜ-ಹುಟ್ಟಿದ್ದು-ಕಮಲ( ಕೃ, ವೃ,) ಕಂಜದಂತೆ ನಾಭಿಯು ಯಾರಿಗೊ ಅವನು ಕಂಜನಾಭ( ಬ. ಸ. )ಕಂಜನಾಭನ ಧ್ಯಾನ( ಷ.ತ. ಸ. ) ಅಮರಮುನಿ(ಷ. ತ. ಸ. )
ತಾತ್ಪರ್ಯ:- ಕೆಂಪಾಗಿರುವ ಜಟೆಯಿಂದಲೂ, ಶುಭ್ರಗಳಾದ ಹಲ್ಲುಗಳಿಂದಲೂ, ನಾರು ವಸ್ತ್ರ ಕೃಷ್ಣಾಜಿನಗಳನ್ನು ಧರಿಸಿ, ತುಲಸೀ ಮಾಲೆಯನ್ನು ಕೊರಳಲ್ಲಿ ಹಾಕಿಕೊಂಡು, ಪದ್ಮಮಣಿಗಳ ಸರದಿಂದ ಪ್ರಕಾಶಿಸುತ್ತ, ಉತ್ತಮವಾದ ಯಜ್ಞೋಪವೀತವನ್ನು ಕಂಠದಲ್ಲಿ ಹಾಕಿಕೊಂಡು, ವೀಣಾಗಾನವನ್ನು ಮಾಡುತ್ತ, ತೇಜೋರಾಶಿಯಿಂದ ಕೂಡಿದವನಾಗಿ ಬರುತ್ತಲಿರುವುದು ಅರ್ಜುನನೇ ಮೊದಲಾದವರಿಗೆ ಕಾಣಿಸಿತು.
ಅಂಭೋಜಮಿತ್ರನಾಸರೊಳಾಗಸವನುಳಿದು।
ಕುಂಭಿನಿಗೆ ಬಂದಪನೊ ಪೇಳೆನಲ್ ಗಗನ ಪಥ।
ದಿಂ ಭಾಸುರಪ್ರಭೆಯೊಳಾ ಮುನಿಪನಿಳಿತಂದೊಡಸುರಾಂತಕಾದಿ ನೃಪರು॥
ಸಂಭಾವಿಸಿದರಾ ತಪೋನಿಧಿಯನತಿವಿನಯ।
ಗಂಭೀರ ವಾಕ್ಯದಿಂ ಬೆಸಗೊಂಡನುಪಚರಿಸಿ।
ಜಂಭಾರಿ ನಂದನಂ ನಾರದನನಖಿಳ ಲೋಕಸ್ಥಿತಿ ವಿಶಾರದನು॥೧೦॥
ಪ್ರತಿಪದಾರ್ಥ :- ಆ ಮುನಿಪನು= ಋಷಿವರ್ಯನಾದ ನಾರದನು, ಅಂಭೋಜಮಿತ್ರನು= ಕಮಲಮಣಿಯಾದ ದಿನಮಣಿಯೇ, ಆಗಸವನು= ಅಂತರಿಕ್ಷವನ್ನು, ಉಳಿದು= ಬಿಟ್ಟು, ಕುಂಭಿನಿಗೆ =ಭೂಮಂಡಲಕ್ಕೆ, ಆಸರೊಳು= ಶ್ರಮದಿಂದ, ಬಂದಪನೊ= ಬರುತ್ತಿದ್ದಾನೊ, ಪೇಳು= ಹೇಳುವನಾಗು, ಎನಲ್= ಎಂಬತೆರನಾಗಿ, ಭಾಸುರಪ್ರಭೆಯೊಳು= ಹೆಚ್ಚಾದ ಕಾಂತಿಯಿಂದ ಕೂಡಿ, ಗಗನಪಥದಿಂ= ಆಕಾಶ ಮಾರ್ಗದಿಂದ, ಇಳಿತಂದಡೆ= ಇಳಿದು ಬರಲಾಗಿ, ಆ ತಪೋನಿ-
ಧಿಯನು=ತಪಸ್ಸನ್ನೇ ನಿಕ್ಷೇಪವಾಗಿವುಳ್ಳ ಆ ನಾರದಮುನಿವರ್ಯನನ್ನು, ಅತಿವಿನಯ= ಹೆಚ್ಚಾದ ನಮ್ರತೆಯಿಂದ ಕೂಡಿದ,
ಗಂಭೀರವಾಕ್ಯದಿಂ= ಮನ್ನಣೆಯ ನುಡಿಗಳಿಂದ, ಅಸುರಾಂತಕಾದಿ ನೃಪರು= ಕೃಷ್ಣನೇ ಮೊದಲಾದ ಸಕಲ ರಾಜರೂ ಕೂಡ
ಸಂಭಾವಿಸಿದರು= ಮರ್ಯಾದೆಯಿಂದ ಕಂಡರು, ಅಖಿಲ ಲೋಕ ಸ್ಥಿತಿ ವಿಶಾರದನು= ಸಕಲ ಲೋಕಗಳ ನಡವಳಿಕೆಯ-
ನ್ನೆಲ್ಲಾ ಕಂಡಿರತಕ್ಕ, ನಾರದನನು= ನಾರದಮುನಿಯನ್ನು, ಜಂಭಾರಿನಂದನಂ= ಪಾರ್ಥನು, ಉಪಚರಿಸಿ= ಉಪಚಾರ-
ಮಾಡಿ, ಬೆಸಗೊಂಡನು= ಮುಂದೆಹೇಳುವಂತೆ ಕೇಳಿಕೊಂಡನು.
ಅ॥ವಿ॥ ಅಂಭೋಜ (ಕೃ. ವಿ.) ಅಂಭೋಜಗಳ ಮಿತ್ರ(ಷ. ತ. ಸ. ) ಆಸರು(ತ್ಭ) ಆಶ್ರಯ(ತ್ಸ)
ತಾತ್ಪರ್ಯ:- ಅಂತರಿಕ್ಷ ಮಾರ್ಗದಲ್ಲಿ ಸಂಚಾರಮಾಡುತ್ತಲಿದ್ದ ಸೂರ್ಯನು ಆಯಾಸದಿಂದ ನೆಲಕ್ಕೆ ಇಳಿದು ಬಂದನೋ ಎಂಬಂತೆ ಬರುತ್ತಲಿರುವ ನಾರದ ಮುನಿವರ್ಯನನ್ನು ನೋಡಿ ಅರ್ಜುನಾದಿಗಳೆಲ್ಲಾ ಅತ್ಯಂತ ಮೃದುಮಧುರ ವಾಕ್ಯದಿಂದ ಕೂಡಿದ ನಮ್ರತೆಯಿಂದ ಮನ್ನಿಸಿದವರಾದರು. ಅನಂತರದಲ್ಲಿ ಅರ್ಜುನನು ತ್ರಿಲೋಕ ಸಂಚಾರಿಯಾದ ನಾರದನನ್ನು ಕುರಿತು ಮುಂದೆ ಹೇಳುವಂತೆ ಕೇಳಿಕೊಳ್ಳುವನು.
ಎಲೆ ಮುನೀಶ್ವರ ತನ್ನ ಕುದುರೆಗಳ್ ಪೋದುವೀ।
ನೆಲದೊಳಾವೆಡೆಯೊಳಿರ್ದಪುವೆಂದರಿಯೆನಿನ್ನು।
ಬಲವಂತರೀ ಸ್ಥಳದೊಳಿಲ್ಲಲೇ ಕಂಡುದಂ ತನಗೊರೆಯವೇಳ್ವುದೆಂದು॥
ಫಲುಗುಣಂ ಕೇಳ್ದೊಡಾ ನಾರದಂ ನಸುನಗುತೆ।
ಸುಲಲಿತಾಶ್ವಂಗಳೈದಿದುವು ಕುಂತಳಪುರಕೆ।
ಕಲಿ ಚಂದ್ರಹಾಸಾಖ್ಯ ನರಸಲ್ಲಿಗಾ ನೃಪಂ ಕಟ್ಟಿಕೊಂಡಿಹನೆಂದನು॥೧೧॥
ಪ್ರತಿಪದಾರ್ಥ :- ಎಲೆ ಮುನೀಶ್ವರ= ಋಷಿವರ್ಯನಾದ ನಾರದನೆ, ತನ್ನ = ನನ್ನ, ಕುದುರೆಗಳ್= ಯಜ್ಞಾಶ್ವಗಳು, ಪೋದವು= ಕಾಣಿಸುವುದಿಲ್ಲ, ಈ ನೆಲದೊಳ್= ಈ ಪ್ಪಪಂಚದಲ್ಲಿ, ಆವೆಡೆಯೊಳ್= ಯಾವ ಭಾಗದಲ್ಲಿ, ಇರ್ದಪವು= ಇವೆ, ಎಂದು= ಎಂಬ ಬಗೆಯನ್ನು, ಅರಿಯೆನು= ತಿಳಿದಿಲ್ಲವು, ಇನ್ನು=ಇನ್ನು ಮೇಲೆ, ಈ ಸ್ಥಳದೊಳ್= ಈ ಭಾಗದಲ್ಲಿ, ಬಲವಂತರು= ಶೂರರು, ಇಲ್ಲಲೆ=ಇಲ್ಲವಷ್ಟೆ, ಕಂಡುದಂ= ನಿಮಗೆ ಗೋಚರವಾಗಿರುವುದನ್ನು, ತನಗೆ=ನನಗೆ, ಒರೆಯವೇ-
ವುದು= ಪೇಳಬೇಕು, ಎಂದು=ಎಂಬುದಾಗಿ, ಫಲುಗುಣಂ= ಪಾರ್ಥನು, ಕೇಳ್ದಡೆ= ಕೇಳಲಾಗಿ, ನಾರದಂ= ನಾರದ ಮುನಿ-
ಯು, ನಸುನಗುತ= ಮಂದಹಾಸಗೈಯುತ್ತ, (ಅರ್ಜುನನನ್ನು ಕುರಿತು) ಸುಲಲಿತಾಶ್ವಂಗಳು=ಮನೋಹರವಾದ ನಿನ್ನ ಯಾಗದ ಕುದುರೆಗಳು, ಕುಂತಳಪುರಕೆ= ಕುಂತಳವೆಂಬ ನಗರಕ್ಕೆ, ಐದಿದವು= ಹೋದವು, ಅಲ್ಲಿಗೆ= ಆ ರಾಜ್ಯಕ್ಕೆ, ಕಲಿ= ವೀರನಾದ, ಚಂದ್ರಹಾಸನೆಂಬಾತನು, ಅರಸು= ರಾಜ, ಆ ನೃಪಂ= ಆರಾಜನು, ಕಟ್ಟಿಕೊಂಡು= ನಿನ್ನ ಕುದುರೆಗಳನ್ನು ಬಂಧಿಸಿಕೊಂಡು, ಇಹನು=ಇದ್ದಾನೆ, ಎಂದನು= ಎಂದು ನುಡಿದನು.
ತಾತ್ಪರ್ಯ:- ಎಲೈ ನಾರದ ಮಹರ್ಷಿಗಳೆ, ನಮ್ಮ ಯಾಗದ ಕುದುರೆಗಳು ಇಲ್ಲಿ ಎಲ್ಲಿಯೊ ಮಾಯವಾದವು. ಎಲ್ಲಿ ಹುಡುಕಿದರೂ ಸಿಕ್ಕಲಿಲ್ಲ. ಇಲ್ಲಿ ನನಗಿಂತಲೂ ಬಲಶಾಲಿಗಳುಯಾರೂ ಇಲ್ಲವಷ್ಟೆ. ನಿಜಸ್ಥಿತಿಯನ್ನು ನನಗೆ ಅಪ್ಪಣೆ ಕೊಡಬೇ
-ಕೆಂದು ಕೇಳಿಕೊಳ್ಳುತ್ತಲಿರುವ ಪಾರ್ಥನನ್ನು ಕುರಿತು ನಾರದ ಮುನಿಯು ಇಂತೆಂದನು. ಎಲೈ ಅರ್ಜುನಾ, ನಿನ್ನ ಯಜ್ಞಾಶ್ವ-
ಗಳು, ಕುಂತಳ ನಗರಕ್ಕೆ ಹೋಗಿವೆ, ಅಲ್ಲಿ ಚಂದ್ರಹಾಸನೆಂಬ ಶೂರನು ರಾಜನಾಗಿರುವನು.ಆ ಭೂಮಿಪನು ನಿನ್ನ ಯಜ್ಞಾಶ್ವ-
ಗಳನ್ನು ಕಟ್ಟಿಕೊಂಡಿದ್ದಾನೆ.
ಹಿಂದಣರಸುಗಳ ಬಲಮಿವನ ಹದಿನಾರರೊಳ।
ಗೊಂದು ಕಳೆಯಲ್ಲಿವಂ ಪರಮ ವೈಷ್ಣವನಿವನ।
ಮುಂದದಟರಂ ಕಾಣೆನಾಹವದೊಳೀತನ ಚರಿತ್ರಮತಿಚಿತ್ರಮೆಂದು॥
ಮಂದಸ್ಮಿತದೊಳಾ ತಪೋಧನಂ ಪೇಳ್ದೊಡೆ ಪು॥
ರಂದರಾತ್ಮಜನವನ ವರ್ತನವನಾದ್ಯಂತ।
ದಿಂದೆನಗೆ ವಿಸ್ತರಿಸಿ ಪೇಳ್ವುದೆನಲರ್ಜುನಂಗಾ ತಪೋನಿಧಿ ನುಡಿದನು॥೧೨॥
ಪ್ರತಿಪದಾರ್ಥ :- ಆ ತಪೋಧನಂ= ಕೃಚ್ಛ್ರ ಚಾಂದ್ರಾಯಣ ಮೊದಲಾದ ತಪಸ್ಸನ್ನೇ ನಿಕ್ಷೇಪವಾಗಿವುಳ್ಳ ನಾರದನು, ಮಂದಸ್ಮಿತದೊಳ್= ಮುಗುಳ್ನಗೆಯಿಂದ ಕೂಡಿದವನಾಗಿ, (ಅರ್ಜುನನನ್ನು ಕುರಿತು) ಇವನ= ಈ ಚಂದ್ರಹಾಸನ, ಹದಿನಾರರೊಳಗೆ= ಹದಿನಾರು ಭಾಗದಲ್ಲಿ, ಒಂದುಕಳೆಯು= ಒಂದಂಶಕ್ಕೆ ಹೋಲಿಕೆಯಾಗಿ, ಹಿಂದಣ= ನೀನು ಇದುವ-
ರೆಗೆ ನೋಡಿರತಕ್ಕ, ಅರಸುಗಳ= ರಾಜರುಗಳ ಬಲಂ= ಶೌರ್ಯವು ಇಲ್ಲ= ಸಮನಾಗುವುದಿಲ್ಲ, ಇವಂ= ಇವನಾದರೊ, ಪರಮವೈಷ್ಣವಂ= ಶ್ರೀಮನ್ನಾರಾಯಣನಲ್ಲಿರಬೇಕಾದ ಭಕ್ತರಲ್ಲಿ ಮೊದಲನೆಯವನಾಗಿದ್ದಾನೆ, (ಪರಂ=ಹೆಚ್ಚಾಗಿ, ಆ ವೈಷ್ಣವಂ= ಪರಬ್ರಹ್ಮಸ್ವರೂಪವನ್ನು ಧ್ಯಾನಿಸತಕ್ಕವನು) ಆಹವದೊಳು= ಯುದ್ಧದಲ್ಲಿ, ಇವನ ಮುಂದೆ= ಇವನಿಗೆದುರಾಗಿ
ನಿಲ್ಲುವ, ಅಧಟರಂ= ವೀರರನ್ನೇ, ಕಾಣೆನು=ಕಂಡಿಲ್ಲವು, ಈತನ= ಈ ಭೂಮಿಪನ, ಚರಿತ್ರಂ= ಚರಿತ್ರೆಯು, ಅತಿಚಿತ್ರಂ= ಬಹು ಅಚ್ಚರಿಯನ್ನುಂಟುಮಾಡತಕ್ಕದ್ದಾಗಿರುವುದು, ಎಂದು=ಎಂಬತೆರನಾಗಿ, ಪೇಳ್ದಡೆ=ನುಡಿಯಲಾಗಿ, ಅವನ= ಆ ಚಂದ್ರಹಾಸನ, ವರ್ತಮಾನವನು= ಸಮಾಚಾರವನ್ನೆಲ್ಲಾ,ಎನಗೆ=ನನಗೆ, ಆದ್ಯಂತದಿಂದ=ವಮೊದಲಿನಿಂದ ಕಡೆತನಕ,
ವಿಸ್ತರಿಸವೇಳ್ವುದು= ತಿಳಿಸಬೇಕೆಂದು, ಪುರಂದರಾತ್ಮಜನು= ಇಂದ್ರಸೂನುವಾದ ಪಾರ್ಥನು, ಎನಲು=ಅರಿಕೆ ಮಾಡಲು,
ಅರ್ಜುನಂಗೆ=ಫಲುಗುಣನನ್ನು ಕುರಿತು, ನುಡಿದನು= ಮುಂದೆ ಹೇಳುವಂತೆ ಹೇಳುವನು.
ತಾತ್ಪರ್ಯ:- ನೀನು ಇದುವರೆಗೆ ಜಯಿಸಿದ ರಾಜಾಧಿರಾಜರುಗಳ ಪರಾಕ್ರಮಕ್ಕಿಂತಲೂ ಈತನು ಹದಿನಾರು ಪಾಲು ಹೆಚ್ಚಾದ ಪರಾಕ್ರಮಶಾಲಿ. ವಿಷ್ಣು ಭಕ್ತರಲ್ಲಿ ಅಗ್ರಸರನೂ ಮಹಾ ಸಾಹಸಿಯೂ ಆಗಿರುವನು, ಇವನ ಮುಂದೆ ಯುದ್ಧಕ್ಕೆ ನಿಲ್ಲುವ ಶೂರರನ್ನು ಕಾಣೆನು, ಇವನ ಚರಿತ್ರೆಯಾದರೊ ಆಶ್ಚರ್ಯವನ್ನುಂಟುಮಾಡತಕ್ಕದ್ದಾಗಿದೆ, ಎಂದು ನುಡಿಯಲು, ಆಗ ಅರ್ಜುನನು ನಾರದನನ್ನು ಕುರಿತು, ಎಲೈ ಮಹನೀಯನೆ, ಹಾಗಾದರೆ ವಿಷ್ಣುಭಕ್ತನಾಗಿಯೂ, ಪರಮಪಾವನ- ನಾಗಿಯೂ ಇರುವ, ಇವನ ಕಥೆಯನ್ನು ನನಗೆ ಸವಿಸ್ತಾರವಾ ಗಿಹೇಳಿ ಎಂದ ಧನಂಜಯನ ಕುರಿತು, ನಾರದರು ಮುಂದೆ ಹೇಳುವಂತೆ ತಿಳಿಸಿದರು.
ಸಮಯವಲ್ಲಿದು ನಿನಗೆ ಪಾರ್ಥ ಸಿಕ್ಕಿರ್ದಪುವು।
ವಿಮಲಮಖ ವಾಜಿಗಳ್ ಚಿಂತಿಸುತಿಹಂ ಮಹೀ।
ರಮಣನಿಭಪುರದೊಳೆನೆ ಫಲುಗುಣಂ ನರರ ಬಾಳ್ ಚಿರಕಾಲಮಿಪ್ಪುದಿಲ್ಲ॥
ಭ್ರಮೆಯಿಂದೆ ಕೇಳದಿರಬಹುದೆ ವೈಷ್ಣವ ಕಥೆಯ।
ನಮಮ ತನಗಾವ ಪೊಳ್ತುಭಯ ಬಲಮಧ್ಯದೊಳ್।
ಕಮಲಾಕ್ಷನೊರೆದ ಗೀತಾಮೃತವನಾಲಿಸಿದೆನೆನೆ ಮುನಿಪನಿಂತೆಂದನು॥೧೩॥
ಪ್ರತಿಪದಾರ್ಥ :- ಇದು= ಚಂದ್ರಹಾಸನ ಕಥಾಶ್ರವಣ ಮಾಡುವುದು, ಪಾರ್ಥ= ಎಲೈ ಧನಂಜಯನೆ, ನಿನಗೆ= ನಿನಗಾದರೊ, ಸಮಯವಲ್ಲ= ಈಗ ಹೊತ್ತಲ್ಲ, ವಿಮಲ=ಪವಿತ್ರವಾದ, ಮಖವಾಜಿಗಳು= ಯಾಗದ ಕುದುರೆಗಳು, ಸಿಕ್ಕಿರ್ದಪವು= ಸಿಕ್ಕಿವೆ, ಇಭಪುರದೊಳು= ಹಸ್ತಿನಾವತಿಯಲ್ಲಿ,ಮಹೀರಮಣನು= ಭೂಕಾಂತನಾದ ಯೈಧಿಷ್ಠಿರನು, ಚಿಂತಿಸುತಿಹಂ= ಯಜ್ಞಾಶ್ವವ-
ದೊಂದಿಗೆ ಪಾರ್ಥನು ಇನ್ನೂ ಹಿಂದಿರುಗಿ ಬರಲಿಲ್ಲವೆಂದು ಆಲೋಚಿಸುತ್ತಿರುವನು, ಎನೆ=ಎಂದು ನಾರದನು ಹೇಳಲು, ಫಲುಗುಣಂ= ಪಾರ್ಥನು, ಚಿರಕಾಲಂ= ಬಹುದಿನಗಳವರೆಗೂ, ನರನಬಾಳ್= ಮಾನವ ಜನ್ಮವು, ಇಪ್ಪುದಿಲ್ಲ= ಇರುವು-
ದಿಲ್ಲ, ವೈಷ್ಣವ ಕಥೆಯನು= ವಿಷ್ಣು ಭಕ್ತರ ಕಥೆಯನ್ನು, ಭ್ರಮೆಯಿಂದ= ಅಕ್ಕರೆಯಿಂದ, ಕೇಳದೆ ಇರಬಹುದೆ=ವಕೇಳಲು ಇರಲು ಆದೀತೆ, ಅಮಮ=ಆಶ್ಚರ್ಯ, ಉಭಯಬಲಮಧ್ಯದೊಳ್=ಎರಡು ಸೈನ್ಯಗಳು ಕಲೆತಿರುವ ಕಾಲದಲ್ಲಿ, (ಕೌರವ ಪಾಂಡವರ ಯುದ್ಧದಲ್ಲಿ) ಆವ ಪೊಳ್ತು= ಯಾವಾಗಲೂ, ಕಮಲಾಕ್ಷನು= ಕೃಷ್ಣನು, ತನಗೆ= ನನಗೆ, ಒರೆದ = ನುಡಿದ,
ಗೀತಾಮೃತವನು= ಅಮೃತೋಪಮವಾದ ಭಗವದ್ಗೀತಾಸಾರವನ್ನು, ಆಲಿಸಿ= ದೆನು= ಶ್ರವಣ ಮಾಡಿದೆನು, ಎನೆ=ಎಂದು ನುಡಿಯಲು, ಮುನಿಪನು= ನಾರದನು, ಇಂತು= ಮುಂದೆ ಹೇಳುವಂತೆ, ಎಂದನು= ಹೇಳಿದನು.
ತಾತ್ಪರ್ಯ:- ಈಗ ಚಂದ್ರಹಾಸನ ಕಥೆಯನ್ನು ಕೇಳುವ ಸಮಯವಲ್ಲ. ಯಜ್ಞಾಶ್ವಗಳು ಸಿಕ್ಕಿವೆ, ಹಸ್ತಿನಾವತಿಯಲ್ಲಿ ಧರ್ಮರಾಯನು ಕಳವಳಿಸುತ್ತಿರುತ್ತಾನೆ, ಆದಕಾರಣ ಕಥೆಯನ್ನು ಕೇಳಲು ಇದು ಸಮಯವಲ್ಲ, ಯಜ್ಞಾಶ್ವಗಳನ್ನು ಬಿಡಿಸಿಕೊಂಡು ಹೋಗುವ ಯೋಚನೆಯನ್ನು ಮಾಡೆಂದು ನುಡಿದನು, ಈ ಮಾತನ್ನು ಕೇಳಿದ ಅರ್ಜುನನು, ಎಲೈ
ಮುನೀಂದ್ರನೆ! ಮಾನವ ಜನ್ಮವು ಅಶಾಶ್ವತವಾದದ್ದು, ಕೌರವ ಪಾಂಡವ ಯುದ್ಧದಲ್ಲಿ ಕೃಷ್ಣನಿಂದ ಗೀತಾಸಾರವನ್ನು ಕೇಳಿ ಆನಂದಗೊಂಡಂತೆ ಈಗಲೂ ವೆಷ್ಣುಭಕ್ತನ ಕಥೆಯನ್ನು ನಿನ್ನಿಂದ ಕೇಳಬೇಕೆಂದಿರುವೆನು. ದಯಮಾಡಿ ನನಗೆ ಅನುಗ್ರಹಿಸ-
ಬೇಕೆಂದು ಕೇಳಿಕೊಳ್ಳುತ್ತಿರುವ ಅರ್ಜುನನನ್ನು ಕುರಿತು.
ಇನ್ನೊರೆವೆನಾಲಿಸಾದೊಡೆ ಪಾರ್ಥ ಧಾರ್ಮಿಕಂ।
ಮುನ್ನೊರ್ವನುಂಟು ಕೇರಳ ದೇಶದವನಿಪಂ।
ಸನ್ನುತ ಗುಣೋದಯಂ ಮೇಧಾವಿಯೆಂಬವಂ ಬಲಯುತಂ ಬಳಿಕವಂಗೆ॥
ತನ್ನ ಪಟ್ಟದ ರಾಣಿಯೊಳ್ ಬಹಳ ಭಾಗ್ಯ ಸಂ।
ಪನ್ನನೆಡೆದಂಘ್ರಿಗರುವೆರಳಾಗಿ ದಿವದೊಳು।
ತ್ಪನ್ನನಾದಂ ಮೂಲನಕ್ಷತ್ರದಿಂದರಿಷ್ಟಾಂಶದೊಳ್ ಸುಕುಮಾರನು॥೧೪॥
ಪ್ರತಿಪದಾರ್ಥ :- ಇನ್ನು=ಮುಂದೆ, ಆದೊಡೆ= ನಿನಗೆ ಚಂದ್ರಹಾಸನ ಕಥೆಯನ್ನು ತಿಳಿದುಕೊಳ್ಳಬೇಕೆಂಬ ಆಸೆಯಿದ್ದ ಪಕ್ಷದಲ್ಲಿ
ಪಾರ್ಥ= ಅಯ್ಯಾ ಅರ್ಜುನ, ಒರೆವೆನು= ಹೇಳುವೆನು, ಆಲಿಸು= ಗಮನವಿಟ್ಟು ಕೇಳು, ಮುನ್ನ= ಪೂರ್ವದಲ್ಲಿ, ಧಾರ್ಮಿಕಂ= ಧರ್ಮವಂತನೂ, ಸನ್ನುತ= ಸ್ತೋತ್ತ ಮಾಡಲು ಯೋಗ್ಯನಾದ, ಗುಣೋದಯಂ= ಗುಣವಂತನೂ, ಬಲಯುತಂ= ಶೂರನೂ ಆದ, ಓರ್ವನು= ಒಬ್ಬನು, ಮೇಧಾವಿಯೆಂಬವಂ = ಮೇಧಾವಿಯೆಂಬ ಹೆಸರುಳ್ಳ, ಕೇರಳದೇ-
ಶದ= ಕೇರಳವೆಂಬ ರಾಜ್ಯದ, ಅವನಿಪಂ= ರಾಜನು, ಉಂಟು= ಇದ್ದನು, ಬಳಿಕ= ಹೀಗಿರುವಲ್ಲಿ, ಅವಂಗೆ= ಆ ರಾಜನಿಗೆ, ಬಹುಭಾಗ್ಯವಂತನು= ಐಶ್ವರ್ಯದಿಂದ ಶೋಭಿಸುವ, ಸುಕುಮಾರನು= ಕೋಮಲಾಂಗನಾದ ಮಗನು, ತನ್ನಪಟ್ಟದರಾ-
ಣಿಯೊಳ್= ತನ್ನ ಧರ್ಮಪತ್ನಿಯ ಗರ್ಭದಲ್ಲಿ, ಮೂಲನಕ್ಷತ್ರದ= ಮೂಲಾನಕ್ಷತ್ರಯುಕ್ತವಾದ, ಅರಿಷ್ಟಾಂಶದೊಳ್= ತಂದೆಗೆ
ಕೇಡನ್ನುಂಟುಮಾಡುವ ಭಾಗದಲ್ಲಿ, ದಿನದೊಳು= ಹಗಲುವೇಳೆಯಲ್ಲಿ, ಎಡದಂಘ್ರಿಗೆ= ಎಡದಕಾಲಿನಲ್ಲಿ, ಆರುವೆರಳಾಗಿ= ಆರು ಬೆಟ್ಟುಗಳೊಡನೆ, ಉತ್ಪನ್ನನು= ಹುಟ್ಟಿದವನು, ಆದಂ= ಜನಿಸಿದನು.
ತಾತ್ಪರ್ಯ:- ಎಲೈ ಫಲುಗುಣನೆ! ಕೇಳು, ಪೂರ್ವದಲ್ಲಿ ಕೇರಳದೇಶವೆಂಬ ರಾಜ್ಯದಲ್ಲಿ ಮೇಧಾವಿಯೆಂಬ ಅರಸನು ಧರ್ಮದಿಂದ ರಾಜ್ಯವಾಳುತ್ತಿದ್ದನು. ಅವನು ಸದ್ಗುಣಸಂಪನ್ನನೂ, ಪರಾಕ್ರಮಿಯೂ, ಆಗಿದ್ದನು. ಆ ರಾಜನಿಗೆ ಅಷ್ಟೈಶ್ವ-
ರ್ಯಗಳಿಂದೊಡಗೂಡಿದ ಕುವರನೋರ್ವನು ಮೂಲನಕ್ಷತ್ರದಲ್ಲಿ ತಂದೆತಾಯಿಗಳಿಗೆ ಅರಿಷ್ಟವನ್ನುಂಟುಮಾಡುವ ಅಂಶದೊಳಗೆ ಹಗಲು ಹೊತ್ತಿನಲ್ಲಿ ಹುಟ್ಟಿದನು. ಇವನ ಎಡಗಾಲಿನಲ್ಲಿ ಆರು ಬೆರಳುಗಳಿದ್ದವು.
ಪುತ್ರೋತ್ಸವಂ ಮಾಡಿ ಕೆಲವು ದಿನಮಿರೆ ನೃಪಂ।
ಶತ್ರುಗಳ್ ಬಂದು ನಿಜನಗರಮಂ ಮುತ್ತಿದೊಡೆ ।
ಕ್ಷತ್ರಧರ್ಮದೊಳವರೊಡನೆ ಯುದ್ಧರಂಗದೊಳ್ ಪೊಯ್ದಾಡಿ ಮಡಿಯೆ ಕೇಳ್ದು॥
ಚಿತ್ರಭಾನು ಪ್ರವೇಶಂಗೈದಳಂದು ಶತ।
ಪತ್ರಲೋಚನೆ ಪತಿವ್ರತೆಯಾಗಿ ಬಳಿಕೆಲೆ ಧ।
ರಿತ್ರೀಶ್ವರನ ರಾಜ್ಯಮಂ ತೆಗೆದುಕೊಂಡರಹಿತರಾಳ್ದರದನೇವೇಳ್ವೆನು॥೧೫॥
ಪ್ರತಿಪದಾರ್ಥ :- ನೃಪಂ = ರಾಜನು, ಪುತ್ರೋತ್ಸವವನ್ನು ಮಾಡಿ= ಹುಟ್ಟಿದ ಮಗುವಿಗೆ ಜಾತಕರ್ಮ, ನಾಮಕರಣ ಮೊದಲಾದ ಶುಭಕಾರ್ಯಗಳನ್ನು ಸಂತೋಷದಿಂದ ಸಾಂಗವಾಗಿ ನೆರವೇರಿಸಿ, ಕೆಲವು ದಿನಂ= ಕೆಲವು ಕಾಲದವರೆಗೆ, ಇರೆ= ಸುಖವಾಗಿರುವ ಕಾಲದಲ್ಲಿ, ನಿಜನಗರಮಂ= ತನ್ನ ಪಟ್ಟಣವನ್ನು, ಶತ್ರುಗಳ್= ವೈರಿರಾಜರು, ಬಂದು= ಬಂದವರಾಗಿ, ಮುತ್ತಿದೊಡನೆ= ಆಕ್ರಮಿಸಲಾಗಿ, ಅವರೊಡನೆ= ಆ ಹಗೆಗಳೊಂದಿಗೆ, ಯುದ್ಧರಂಗದೊಳ್ = ರಣರಂಗದಲ್ಲಿ, ಕ್ಷತ್ರಧರ್ಮ-
ದೊಳು= ಸಾಹಸದಿಂದ, ಪೊಯ್ದಾಡಿ = ಹೊಡೆದಾಡಿ, ಮಡಿಯೆ= ಮರಣವನ್ನೈದಿದ ಸುದ್ದಿಯನ್ನು ಅಂದು=ಆಗ, ಶತಪ-
ತ್ರಲೋಚನೆಯಾದ, ಆ ರಾಜನರಸಿಯು, ಕೇಳ್ದು=ತಿಳಿದು, ಪತಿವ್ರತೆಯಾಗಿ = ಗಂಡನೊಡನೆ ತಾನು ಮೃತಿಯನ್ನೈದುವ ಅಭಿಪ್ರಾಯವುಳ್ಳವಳಾಗಿ,ಚಿತ್ರಭಾನುಪ್ರವೇಶಂಗೈದಳು= ಬೆಂಕಿಯಲ್ಲೆ ಬಿದ್ದು ಹೋದಳು, ಅಹಿತರು=ಶತ್ರುಗಳು, ಆ ಧರಿತ್ರೀಶ್ವರನ= ಆ ಮೇಧಾವಿ ರಾಜನ, ರಾಜ್ಯಮಂ= ರಾಜ್ಯವನ್ನು, ಬಳಿಕಲಿ=ತಾವು ಗೆದ್ದುಕೊಂಡನಂತರ, ಆಳ್ದರು= ರಾಜ್ಯಭಾರ ಮಾಡಲು ಪ್ರಾರಂಭಿಸಿದರು. ಅದನು= ಆ ಸಮಾಚಾರವನ್ನು, ಏವೇಳ್ವೆನು= ಏನೆಂದು ಹೇಳಲಿ.
ತಾತ್ಪರ್ಯ:- ಇಂತಹ ಸುಕುಮಾರನು ಹುಟ್ಟಿದ ಕೂಡಲೆ ರಾಜನು ಅತ್ಯಾನಂದಗೊಂಡು ಜಾತಕರ್ಮಾದಿ ಉತ್ಸವಗಳನ್ನು ನೆರವೇರಿಸಿ ಸಂತೋಷದಿಂದಿರುವಾಗ ಶತ್ರುಗಳು ಬಂದು ಕೇರಳದೇಶಕ್ಕೆ ಮುತ್ತಿಗೆ ಹಾಕಿದರು. ಶೂರನಾದ ಮೇಧಾವಿಯು ಅರಿಗಳೊಡನೆ ಹೋರಾಡಿ ಮಡಿದನು. ಈ ಸುದ್ಧಿಯನ್ನು ಮೇಧಾವಿಯ ಹೆಂಡತಿ ತಿಳಿದು ಕೂಡಲೆ ಅಗ್ನಿಪ್ರವೇಶಮಾಡಿ ಪತಿಸಾನಿಧ್ಯವನ್ನೈದಿದಳು. ಆ ಬಳಿಕ ಶತ್ರುಗಳು ಕೇರಳರಾಜ್ಯವನ್ನು ಆಳತೊಡಗಿದರು.
ಬಳಿಕೋರ್ವ ದಾದಿ ಶಿಶುವಂ ಕೊಂಡು ಪೊರಮಟ್ಟು ।
ತೊಳಲಿ ಬಳಲುತೆ ಮೆಲ್ಲಮೆಲ್ಲನೈತಂದು ಕುಂ।
ತಳ ನಗರಮಂ ಪೊಕ್ಕಳಲ್ಲಿ ಸಾಕಿದಳರ್ಭಕನನತಿ ಪ್ರೇಮದಿಂದೆ॥
ಎಳೆಯಂಗೆ ಬೇಕಾದುದಿಲ್ಲದಿರೆ ಮರುಗುವಳ್।
ಪೊಳಲೊಳಗೆ ತಿರಿದು ಹೊರೆದಳಲುವಳ್ ಮುದ್ದಿಸಿ ಪ।
ಸುಳೆಯಭಿನಯಂಗಳ್ಗೆ ಹಿಗ್ಗಿ ಬಿಸುಸುಯ್ವಳವಳನುದಿನದೊಳಾರ್ತೆಯಾಗಿ॥೧೬॥
ಪ್ರತಿಪದಾರ್ಥ :- ಬಳಿಕ = ಈ ರೀತಿಯಲ್ಲಿ ಕೇರಳ ರಾಜ್ಯವು ಶತ್ರುಗಳ ಪಾಲಾದ ಬಳಿಕ, ಓರ್ವ ದಾದಿ= ಒಬ್ಬ ದಾಸಿಯು, ಶಿಶುವಂ= ಹಸುಳೆಯನ್ನು, ಕೊಂಡು=ತೆಗೆದುಕೊಂಡು, ಪೊರಮಟ್ಟು = ಹೊರಟು, ತೊಳಲಿ ಬಳಲುತ= ಹೆಚ್ಚಾದ ಶ್ರಮವನನ್ನನುಭವಿಸುತ್ತ, ಮೆಲ್ಲಮೆಲ್ಲನೆ = ನಿಧಾನವಾಗಿ, ಐತಂದು= ಬಂದು, ಕುಂತಳನಗರಮಂ= ಕುಂತಳ ಪಟ್ಟಣವನ್ನು, ಪೊಕ್ಕಳು= ಸೇರಿದಳು, ಅರ್ಭಕನನ್ನು = ಮಗುವನ್ನು, ಅಲ್ಲಿ= ಆ ನಗರದಲ್ಲಿ, ಅತಿ ಸ್ನೇಹದಿಂದ=ಅತ್ಯತಿಶ-
ಯ ಪ್ರೀತಿಯಿಂದ, ಸಾಕಿದಳು= ರಕ್ಷಿಸಿದಳು, ಎಳೆಯಂಗೆ = ಆ ಹಸುಳೆಗೆ, ಬೇಕಾದುದು= ಅವಶ್ಯಕವಾದದ್ದು, ಇಲ್ಲದಿರೆ= ಇಲ್ಲದೆ ಹೋದರೆ, ಮರುಗುವಳ್= ಸಂಕಟಪಡುವಳು, ಪೊಳಲೊಳಗೆ= ಪಟ್ಟಣದಲ್ಲಿ, ತಿರಿದು= ಭಿಕ್ಷೆ ಬೇಡಿ, ಹೊರೆದು= ಕಾಪಾಡಿ, ಮುದ್ದಿಸಿ= ಲಲ್ಲೆಗೈದು, ಅಳಲುವಳ್=ಸಂಕಟಪಡುವಳು, ಪಸುಳೆಯ= ಮಗುವಿನ, ಅಭಿನಯಂಗಳಿಗೆ= ಆಟಗಳಿಗೆ, ಹಿಗ್ಗಿ= ಆನಂದಪಟ್ಟು, ದಿನದಿನದೊಳು= ಪ್ರತಿನಿತ್ಯವೂ, ಆರ್ತೆಯಾಗಿ= ಮನದಲ್ಲಿ ಮರುಕವುಳ್ಳವಳಾಗಿ, ಬಿಸುಸುಯ್ವಳು= ನಿಟ್ಟುಸಿರು ಬಿಡುವಳು.
ತಾತ್ಪರ್ಯ:- ಆಗ ಅಲ್ಲಿದ್ದ ದಾಸಿಯೋರ್ವಳು ಮೇಧಾವಿರಾಜನ ಮಗುವನ್ನು ಎತ್ತಿಕೊಂಡು ಕುಂತಳ ನಗರಕ್ಕೆ, ಬಂದುಸೇರಿ ಊರಲ್ಲೆಲ್ಲಾ ತಿರುಪೆ ಮಾಡಿ ಮಗುವನ್ನು ಅಕ್ರೆಯಿಂದ ಸಲಹುತ್ತಲಿದ್ದಳು. ಈ ಬಾಲಕನಿಗೆ ಏನಾದರೂ ಇಲ್ಲದೆ ಹೋದರೆ ಆ ದಾಸಿಯು ದುಃಖಪಡುವಳು. ಪ್ರತಿ ದಿನವೂ ಆ ಹಸುಳೆಯನ್ನು ವಿಶ್ವಾಸದಿಂದ ಸಲಹುತ್ತಾ, ಅದರ ಬಾಲಚೇಷ್ಟೆಗಳನ್ನು ನೋಡಿ ಸಂತೋಷದಿಂದ ಕಾಲ ಕಳೆಯುತ್ತಿದ್ದಳು.
ಇಡೆ ತೊಟ್ಟಲಿಲ್ಲಾಡಿಸೈವರಿಲ್ಲ ನಿನಗೆ ಪೊಂ।
ದೊಡಿಗೆಯಿಲ್ಲಿರೆ ನಿಳಯಮಿಲ್ಲ ಬಿಡದೆರೆವ ನೀ।
ರ್ಕುಡಿವಾಲ್ಗಳೆಣ್ಣೆ ಬೆಣ್ಣೆಗಳಿಲ್ಲ ಲಾಲಿಸಿ ನಲಿವ ತಂದೆತಾಯ್ಗಳಿಲ್ಲ॥
ಪೊಡವಿಪತಿ ಕೇರಳಾಧೀಶ್ವರಂ ಪರಕೆಯೊಳ್।
ಪಡೆದೆನಿದಕೀಗ ನಿನ್ನಂ ನೋಡುವೆನ್ನ ಕ।
ಣ್ಣೊಡೆಯದಕಟಕಟೆಂದು ಬಿಸುಸುಯ್ದಳಲ್ದು ಮರುಗುವಳಾಕೆ ದಿನದಿನದೊಳು॥೧೭॥
ಪ್ರತಿಪದಾರ್ಥ :- ಇಡೆ= ಮಲಗಿಸಬೇಕಾದರೆ,ತೊಟ್ಟಿಲು ಇಲ್ಲ= ತೊಟ್ಟಿಲೇ ಇಲ್ಲ, ಆಡಿಸುವರು=ಆಟವಾಡಿಸತಕ್ಕವರು,ಇಲ್ಲ= ಇಲ್ಲವು, ನಿನಗೆ= ನಿನಗಾದರೊ, ಪೊಂದೊಡಿಗೆ= ಚಿನ್ನದ ಒಡವೆಗಳು, ಇಲಾಲ=ಇಲ್ಲವು, ಇರೆ= ವಿಸಮಾಡಲು, ನಿಳಯಂ= ಮನೆಯೂ ಇಲ್ಲ, ಬಿಡದೆ= ವಿರಾಮವಿಲ್ಲದೆ, ಎರೆವ= ಹಾಕುವ, ನೀರ್=ಅಭ್ಯಂಜನಕ್ಕೆ ಬೇಕಾದ ನೀರು, ಕುಡಿವ= ಕುಡಿಯ-
ತಕ್ಕ, ಪಾಲು=ಹಾಲೂ, ಎಣ್ಣೆ ಬೆಣ್ಣೆಗಳು= ಎಣ್ಣೆ ಮತ್ತು ಬೆಣ್ಣೆಗಳು, ಇಲ್ಲ= ಇಲ್ಲವು, ಲಾಲಿಸಿ= ಮುದ್ದಾಡಿ, ನಲಿವ= ಸಂತೋಷಪಡುವ, ತಂದೆ ತಾಯ್ಗಳು= ಜನನೀಜನಕರು,ಇಲ್ಲ=ಇಲ್ಲವು, ಇದಕೆ= ಇಂತಹ ಸಹಿಸಲಸದಳವಾದ ಕಷ್ಟ ಪರಂ- ಪರೆಗೆ ಭಾಗಿಯಾಗಲೆಂದು, ಪೊಡವಿಪತಿ = ರಾಜೇಂದ್ರನಾದ, ಕೇರಳಾಧೀಶ್ವರನು= ತನಯನಂ= ಮಗನನ್ನು, ಪಡೆದನು= ಹೆತ್ತನು, ನಿನ್ನಂ ನೋಡುವ= ನಿನ್ನನ್ನು ನೋಡಿ ಮರುಗುತ್ತಲಿರುವ,ಎನ್ನ= ನನ್ನ, ಕಣ್ಣು= ನಯನವು, ಒಡೆಯದೆ ಇರದು= ಸೀಳಿ ಹೋಗುವುದಿಲ್ಲವು, ಅಕಟ= ಅಯ್ಯೊ, ಎಂದು= ಎಂಬುದಾಗಿ, ಬಿಸುಸುಯ್ದು= ನಿಟ್ಟುಸಿರುಬಿಟ್ಟು, ಅಳಲ್ದು= ಗೋಳಾಡಿ, ದಿನದಿನದೊಳು= ಪ್ರತಿನಿತ್ಯವೂ, ಆಕೆ= ಆ ದಿಸಿಯು, ಮರುಗುವಳ್= ಸಂಕಟಪಡುವಳು.
ತಾತ್ಪರ್ಯ:- ಒಂದೊಂದು ವೇಳೆ ಆ ದಾಸಿಯು ಮಗುವನ್ನು ನೋಡಿನೋಡಿ, ಅಯ್ಯೊ ಕಂದನೇ! ನಿನ್ನನ್ನು ಮಲಗಿಸುವುದಕ್ಕೆ ತೊಟ್ಟಿಲೇ ಇಲ್ಲವು, ಒಡವೆಗಳನ್ನಿಟ್ಟು ಸಂತೋಷಪಡುವುದಕ್ಕೆ ಮಾರ್ಗವೇ ಇಲ್ಲ. ವಾಸಮಾಡುವುದಕ್ಕೆ ಮನೆಯೇ ಇಲ್ಲ, ಅಭ್ಯಂಜನಸ್ನಾನಕ್ಕೆ ನೀರಿಲ್ಲ, ಎಣ್ಣೆ ತುಪ್ಪ ಮೊದಲಾದವೆಲ್ಲಾ ಸ್ವಪ್ನಪ್ರಾಯವಾಗಿವೆಯಲ್ಲಾ! ನಿನ್ನ ತಾಯ್ತಂದೆಗಳಿಗೆ ಎದನ್ನೆಲ್ಲಾ ನೋಡುವ ಪುಣ್ಯವಿಲ್ಲ. ನಿನ್ನನ್ನು ನೋಡಿದುಃಖಪಡುವುದು ನನಗೆ ಒದಗಿತಲ್ಲಾ ಏನು ಮಾಡಲೆಂದು ಗೋಳಿಡುತ್ತಲಿದ್ದಳು.
ಮೊಳೆವಲ್ಲುಗುವಜೊಲ್ಲು ದಟ್ಟಡಿ ತೊದಲ್ನುಡಿ।
ತೊಳತೊಳಗುತಿಹ ಸೊಬಗು ಮೆರೆವ ನಗೆಮೊಗದ ಬಗೆ।
ಪೊಳೆವ ಕಣ್ ಮಿಸುಪ ನುಣ್ಗದಪಿಗೆಣೆ ಚೆಲ್ವಪಣೆ ಕುರುಳಜೋಲಂಬೆಗಾಲು॥
ಸುಳಿನಾಭಿ ಮಿಗೆ ಶೋಭಿಪಧರದೆಡೆ ಬಟ್ಟದೊಡೆ।
ನಳಿತೋಳಿಡಿದ ಧೂಳಿ ಸೊಗಯಿಸುವ ವರ ಶಿಶುವ।
ನಲಿದಾಡಿಸುವ ರೂಢಿಯಿಲ್ಲೆಂದು ನೆರೆ ನೊಂದು ಮರುಗುವಳಜಸ್ರಮವಳು೧೮॥
ಪ್ರತಿಪದಾರ್ಥ :- ಮೊಳೆವ= ಆಗತಾನೆ ಹುಟ್ಟುತ್ತಲಿರುವ, ಹಲ್ಲು= ಹಲ್ಲಗಳು,ಒಗುವ= ಕೆಳಕ್ಕೆ ಸ್ರವೆಸುತ್ತಲಿರುವ, ಜೊಲ್ಲು = ಜೊಲ್ಲು ರಸವು, ದಟ್ಟಡಿ= ತಪ್ಪು ಹೆಜ್ಜೆಗಳನ್ನಿಡುವ ಅಂದವು, ತೊದಲ್ನುಡಿಯು= ತೊದಲುತ್ತಿರುವ ಮಾತುಗಳು, ತೊಳತೊ-
ಳಗುತಿಹ= ಹೆಚ್ಚಾದ ಕಾಂತಿಯಿಂದ ಶೋಭಿಸುತ್ತಲಿರುವ, ಸೊಬಗು= ಚಲೈವಿಕೆಯು, ಮೆರೆವ= ಹೊಳೆಹೊಳೆವ, ನಗೆಮೊ-
ಗದ= ಮಂದಹಾಸದ, ಬಗೆ=ರೀತಿಯು, ಪೊಳೆವ= ಥಳಥಳಿಸುವ,ಕಣ್ಣು=ನಯನಗಳು, ಮಿಸುಪ= ಕಾಂತಿಯುಕ್ತ ಮುಖದ, ನುಣ್ಗದಪಿಗೆ= ನಯವಾದ ಕಪೋಲಕ್ಕೆ, ಎಣೆ= ಹೋಲಿಕೆಯಾಗಿರತಕ್ಕ, ಚೆಲೂವ= ಅಲಂಕಾರದಿಂದ ಕೂಡಿದ, ಫಣೆ= ಹಣೆಯ ಭಾಗವು, ಜೋಲ್ವ= ಜೋಲಾಡುತ್ತಿರುವ, ಅಂಬೆಗಾಲು= ಮೊಣಕಾಲಿನ ಮೇಲೆ ನಡೆಯುವ, ಸುಳಿನಾಭಿ =ಆಳ-
ವಾದ ಹೊಕ್ಕಳು, ಮಿಗೆ= ಅತಿಶಯವಾಗಿ, ಶೋಭಿಪ= ಹೊಳೆಯತಕ್ಕ, ಅಧರದ= ತುಟಿಯ, ಎಡೆ= ಭಾಗವು, ಬಟ್ಟ= ದುಂಡಾಗಿಯೂ ಕೋಮಲವಾಗಿಯೂ ಎರುವ, ತೊಡೆ= ಮೊಣಕಾಲಿನ ಮೇಲ್ಭಾಗವು, ನಳಿತೋಳು= ಕಮಲದ ದಂಟಿ-
ನಂತೆ ಗುಂಡಾಗಿರತಕ್ಕ ಕೈಗಳು, ಇಡಿದ= ತುಂಬಿರತಕ್ಕ, ಧೂಳಿ= ಧೂಳು ಮೊದಲಾದವುಗಳಿಂದ, ಸೊಗಯಿಸುವ = ನೋ-
ಡುವುದಕ್ಕೆ ಅಂದವಾಗಿ ಕಾಣುತ್ತಲಿರುವ, ವರಶಿಶುವ= ಮೇಲ್ಮೆಯನ್ನು ಹೊಂದಿದ ಹಸುಳೆಯನ್ನು, ನಲಿದು= ಸಂತೋಷ-
ದಿಂದ, ಆಡಿಸುವ= ಆಟವಾಡಿಸಿ ಸಂತೋಷಪಡುವ, ರೂಢಿ= ಅಭ್ಯಾಸವು, ಇಲ್ಲೆಂದು= ಇಲ್ಲವೆಂಬುದಾಗಿ,ಅವಳು= ಆ ದಿಸಿಯು, ನೆರೆ=ಹೆಚ್ಚಾಗಿ, ನೊಂದು=ಸಂಕಟಪಟ್ಟು, ಅಜಸ್ರಂ= ಸಲಸಲಕ್ಕೂ, ನೆರೆ= ಹೆಚ್ಚಾಗಿ, ನೊಂದು= ಸಂಕಟಪಟ್ಟು, ಮರುಗುವಳು= ವ್ಯಸನಪಡುವಳು.
ಅ॥ವಿ॥ ದಟ್ಟಡಿ= ದಟ್ಟಿತಾದ ಅಡಿ(ಕ. ವಿ. ಪೂ. ಕ) ತೊಳತೊಳಗು( ಆಧಿಕ್ಯದಲ್ಲಿ ದ್ವಿರುಕ್ತಿ)ಬಟ್+ತೊಡೆ= ಬಟ್ಟದೊಡೆ( ವ್ಯಂಜನಸಂಧಿ,) ಬಟ್ಟದೊಡೆ( ಕ. ವಿ. ಪೂ. ಕ)
ತಾತ್ಪರ್ಯ:- ಆಗತಾನೆ ಮೊಳಕೆಯೊಡೆಯುವ ಹಲ್ಲುಗಳು, ಉಕ್ಕಿ ಬರುತ್ತಿರುವ ಜೊಲ್ಲು ರಸವೂ,ತಪ್ಪುಹೆಜ್ಜೆ ಇಡುವುದೂ, ತೊದಲು ಮಾತುಗಳನ್ನಾಡುವುದೂ,ಆ ಮಗುವಿನ ಅಂದಚಂದಗಳನ್ನೂ, ಹೊಳೆಯುವ ಕಣ್ಣುಗಳನ್ನೂ, ನುಣ್ಣಗಿರುವ ಕೆನ್ನೆಗಳನ್ನೂ, ಹಂದವಾದ ಹಣೆಯನ್ನೂ, ಅಂಬೆಗಾಲಿಡುವುದನ್ನೂ,ಗುಂಡಗೆ ಮತದುಂಬಿಕೊಂಡು ನಲಿದಾಡುವುದನ್ನೂ, ನೋಡಿ ಸುಛಪಡುವ ರೂಢಿಯೇ ಇಲ್ಲವೆಂಬುದಾಗಿ ದಿನಂಪ್ರತಿ ದುಖವನ್ನು ಪಡುತ್ತಲಿದ್ದಳು.
ಬಾಲಕನ ಲೀಲೆಯಂ ಕಂಡು ಹಿಗ್ಗುವಳೊಮ್ಮೆ।
ಲಾಲನೆಗಳಿಲ್ಲೆಂದಳಲ್ದುಮರುಗುವಳೊಮ್ಮೆ।
ಪಾಲಿಸಿದಳಿಂತು ನಡೆನುಡಿಗಳಂ ಕಲಿವಲ್ಲಿ ಪರಿಯಂತಮಾ ಶಿಶುವನು॥
ಮೇಲೆ ರುಜೆ ಬಂದಡಸಿ ವಿಧಿವಶದೊಳಾ ಧಾತ್ರಿ।
ಕಾಲನರಮನೆಗೈದಿದಳ್ ಬಳಿಕ ಪಸುಳೆಗೆ ನಿ।
ರಾಲಂಬಮಾಗಲಾ ಪಟ್ಟಣದೊಳೆಲ್ಲರ್ಗೆ ಕಾರುಣ್ಯಕೀಡಾದನು॥೧೯॥
ಪ್ರತಿಪದಾರ್ಥ :- ಒಮ್ಮೆ = ಒಂದು ಸಲ, ಬಾಲಕನ= ಹಸುಳೆಯ, ಲೀಲೆಯಂ= ಆಟಪಾಟಗಳನ್ನು, ಕಂಡು=ನೋಡಿ, ಹಿಗ್ಗುವಳು= ಆನಂದಪಡುವಳು, ಒಮ್ಮೆ = ಇನ್ನೊಂದಾವರ್ತಿ, ಲಾಲನೆಗಳನ್ನು= ಚೆನ್ನಾಗಿ ಸಾಕುವುದು, ಇಲ್ಲ=ಇಲ್ಲವು, ಎಂದು= ಎಂಬುದಾಗಿ, ಅಳಲ್ದು= ದುಃಖಿಸಿ, ಮರುಗುವಳು= ಸಂಕಟಪಡುವಳು, ಆ ಶಿಶುವಂ= ಆ ಹಸುಳೆಯನ್ನು, ನಡೆ-
ನುಡಿಗಳಂ= ನಡೆಯುವುದಕ್ಕೂ ಮಾತನಾಡುವುದಕ್ಕೂ, ಕಲಿಪಲ್ಲಿ ಪರಿಯಂತಂ=ಅಭ್ಯಾಸವಾಗುವ ತನಕ, ಇಂತು=ಹೀಗೆ-
ಯೇ, ಪಾಲಿಸಿದಳು= ಸಂರಕ್ಷಣೆಯನ್ನು ಮಾಡಿದಳು, ಮೇಲೆ=ಹೀಗೆ ನಡೆಯುತ್ತಿರುವಲ್ಲಿ, ರುಜೆ ಬಂದು= ಕಾಯಿಲೆ ಬಂದು,
ಅಡಸಿ=ಆವರಿಸಿಕೊಂಡು, ಕಾಲನರಮನೆಗೆ= ಯಮಪುರಿಗೆ, ಆ ಧಾತ್ರಿ= ಆ ದಾಸಿಯು, ಐದಿದಳು= ಹೊರಟಳು,ಬಳಿಕ = ಅನಂತರ, ಆ ಪಸುಳೆಗೆ= ಆ ಹುಡುಗನಿಗೆ, ನಿರಾಲಂಬಂ=ಆಶ್ರಯ ತಪ್ಪಿ, ಆಗಲು=ಆಗಿ ಹೋಗಲು, ಆ ಪಟ್ಟಣದೊಳು= ಆ ನಗರದಲ್ಲಿ, ಎಲ್ಲರ್ಗೆ= ಸಕಲರಿಗೂ, ಕಾರುಣ್ಯಕೆ= ಪ್ರೀತಿಗೆ, ಈಡಾದನು= ಪಾತ್ರನಾದನು.
ಅ॥ವಿ॥ ಧಾತ್ರಿ (ತ್ಸ) ದಾದಿ(ತ್ಭ) ಶಿಶು( ತ್ಸ) ಸಿಸು(ತ್ಭ) ವಿಧಿ= ಬ್ರಹ್ಮನು, ಕಟ್ಟಳೆ.)
ತಾತ್ಪರ್ಯ:- ಆ ಮಗುವು ತೋರಿಸುವ ಅಭಿನಯಗಳನ್ನು ನೋಡಿ ಹಲವುಬಾರಿ ಸಂತಸಗೊಳ್ಳುತ್ತಲೂ, ಮುದ್ದುಮಾಡುವವರೇ ಇಲ್ಲವೆಂದು ಕೆಲವುಸಾರಿ ದುಃಖಗೊಳ್ಳುತ್ತಲೂ, ಆ ಮಗುವಿಗೆ ಸ್ವಲ್ಪ ಮಾತುಗಳು ಬಂದು ನಡೆಯುವುದಕ್ಕಾಗುವ ತನಕ ಸಂರಕ್ಷಿಸಿದ ಬಳಿಕ ಆ ದಾಸಿಯೂ ದೈವಾದೀನಳಾದ ಕಾರಣ ಅದಕ್ಕೆ ಯಾರೂ ದಿಕ್ಕಿಲ್ಲದೇ ಹೋಯಿತು. ಈ ರೀತಿಯಲ್ಲಿ ಅನಾಥನಾದ ಆ ಬಾಲಕನು ಕುಂತಳ ನಗರದ ಬೀದಿ ಬೀದಿಗಳಲ್ಲಿ ತಿರುಗಾಡುತ್ತಲಿರುವುದನ್ನು ಕಂಡಕಂಡ ಜನರೆಲ್ಲರ ಕರುಣೆಗೆ ಪಾತ್ರನಾದನು.
ಚೆಲ್ವಶಿಶು ಬೀದಿಯೊಳ್ ಬಂದು ದೇಸಿಗನಾಗಿ।
ನಿಲ್ವಿನಂ ಕಂಡ ಕಂಡಬಲೆಯರ್ ಕರೆಕರೆದು।
ಮೆಲ್ವ ತನಿವಣ್ಗಳಂ ಕಜ್ಜಾಯ ಸಕ್ಕರೆಗಳಂ ಕುಡುವರೆತ್ತಿಕೊಂಡು॥
ಸೊಲ್ವ ಮಾತುಗಳನಾಲಿಸಿ ಮುದ್ದಿಸುವರೀವ।
ರೊಲ್ವುದಂ ಮಜ್ಜನಂಗೈಸಿ ಮಡಿಯಂ ಪೊದಿಸಿ।
ಮೆಲ್ವಾಸಿನೊಳ್ ಮಲಗಿಸುವರಳ್ತಿಯಿಂದೊಸೆದು ತಂತಮ್ಮ ಮಕ್ಕಳೊಡನೆ॥೨೦॥
ಪ್ರತಿಪದಾರ್ಥ :- ಬೀದಿಯೊಳ್= ದಾರಿಯೊಳಗೆ, ಚೆಲ್ವ = ಚೆನ್ನಾದ, ಶಿಶು= ಮಗು, ಬಂದು=ಐತಂದು, ದೇಶಿಗನಾಗಿ= ಅನಾ-
ನಾಗಿ, ನಿಲ್ವಿನಂ= ನಿಂತಿರುವಾಗ, ಕಂಡಕಂಡ= ನೋಡಿದ, ಅಬಲೆಯರು= ಸ್ತ್ರೀಯರು, ಕರೆಕರೆದು= ತಮ್ಮಹತ್ತಿರಕ್ಕೆಕರೆದು-
ಕೊಂಡವರಾಗಿ, ಮೆಲ್ವ= ತಿನ್ನಲು ಯೋಗ್ಯವಾದ, ತನಿವಣ್ಗಳಂ = ರುಚಿಯಾದ ಹಣ್ಣುಗಳನ್ನು, ಕಜ್ಜಾಯ ಸಕ್ಕರೆಗಳಂ= ಕಜ್ಜಾಯ ಸಕ್ಕರೆಯನ್ನು, ಕೊಡುವರು= ಕೊಡುತ್ತಲಿರುವರು, ಎತ್ತಿಕೊಂಡು= ಎತ್ತಿ ಕಂಕುಳಲ್ಲಿರಿಸಿಕೊಂಡು, ಸೊಲ್ವಮಾತುಗ-
ಳನು= ಪ್ರೀತಿಯ ನುಡಿಗಳನ್ನು, ಆಲಿಸಿ= ಕೇಳಿ, ಮುದ್ದುಗೈವರು= ವಿಶ್ವಾಸದಿಂದ ಆದರಿಸುವರು, ಅವರು= ಆ ಮಂದಿಯೆ-
ಲ್ಲ, ಪ್ರತಿಪದಾರ್ಥ :-ಒಲ್ವ = ಉತ್ತಮವಾದ, ಉದಕ ಮಜ್ಜನಂಗೈಸಿ= ಚೆನ್ನಾಗಿ ಸ್ನಾನಮಾಡಿಸಿ, ಮಡಿಯಂ= ಚನ್ನಾಗಿ ಒಗೆದು ಬೆಳ್ಳಗಿರುವ ಬಟ್ಟೆಯನ್ನು, ಪೊದಿಸಿ=ಉಡಿಸಿ, ತಮ್ಮ ಮಕ್ಕಳೊಡನೆ= ತಮ್ಮ ಬಾಲಕರ ಜೊತೆಯಲ್ಲಿ, ಒಸೆದು= ಪ್ರೀತಿಸಿ, ಮೇಲ್ವಾಸಿನೊಳ್= ಮೆತ್ತಗಿರುವ ಹಾಸಿಗೆಯಲ್ಲಿ, ಮಲಗಿಸುವರು= ಮಲಗಿಸುತ್ತಲಿರುವರು.
.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ