ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಆಗಸ್ಟ್ 6, 2017

ಸನತ್ಸುಜಾತ ನೀತಿ

ಸನತ್ಸುಜಾತ ನೀತಿ

ಅವಧರಿಸು ಪರತತ್ವ ವಿದ್ಯಾ
ವಿವರ ಭೇದವನನ್ಯಜಾತಿಗ
ಳೆವಗೆ ಸಲುವುದೆ ಮುನಿವರನ ಕರುಣೋದಯದಲಹುದು
ಅವರಿವರುಗಳ ಮುಖದಲಿದು ಸಂ
ಭವಿಸುವುದೆ ಬ್ರಹ್ಮೋಪದೇಶದ
ಹವಣ ಬಲ್ಲವನಾವನೈ ಧೃತರಾಷ್ಟ್ರ ಕೇಳೆಂದ ||೨||

ಒಬ್ಬನೇ ಬಲ್ಲವನು ಲೋಕದೊ
ಳಿಬ್ಬರಿಲ್ಲ ಸನತ್ಸುಜಾತನು
ಸರ್ವಗುಣಸಂಪೂರನಾತನ ಭಜಿಸಿದೊಡೆ ನೀನು
ಸಭ್ಯನಹೆಯೆನಲಾ ಮುನಿಯ ಕ
ರ್ತವ್ಯಭಾವನೆಯೊಳರಸನಿರಲಾ
ವಿರ್ಭವಿಸಿದನು ವಿಪ್ರಕುಲಕಮಲಾರ್ಕನಾ ಕ್ಷಣಕೆ ||೩||

ನೆನೆಯಲೊಡನೆ ಸನತ್ಸುಜಾತನು
ಮನೆಗೆಬರಲಿದಿರೆದ್ದು ಕೌರವ
ಜನಕ ಮೈಯಿಕ್ಕಿದನೆನಗೆ ಬ್ರಹ್ಮೋಪದೇಶವನು
ಮುನಿಪ ನೀ ಕೃಪೆಮಾಡಬೇಕೆನ
ಲನುನಯದೊಳವನೀಪತಿಗೆ ಜನ
ಜನಜನಿತವೆನಲರುಹಿದನು ಪರಲೋಕಸಾಧನವ ||೪||

ಚಿತ್ತವಿಸು ಧೃತರಾಷ್ಟ್ರ ನೃಪ ಪರ
ತತ್ವವಿದ್ಯಾವಿಷಯ ಭೇದವ
ಬಿತ್ತರಿಸುವೆನು ಸಕಲ ಸಚರಾಚರದೊಳಗೆ ನೀನು
ಉತ್ತಮಾಧಮವೆನ್ನದೇ ಕಾ
ಣುತ್ತ ಹರುಷ ವಿಷಾದದಲಿ ಮುಳು
ಗುತ್ತಿರದೆ ಸಮರಸದೊಳಿಹುದುಪದೇಶ ನಿನಗೆಂದ ||೫||

ಅವನಿಪತಿ ಕೇಳಾತ್ಮನಿಂ ಸಂ
ಭವಿಸಿತಂಬರವಂಬರದಲಾ
ಪವನ ಪವನನಲಗ್ನಿ ಅಗ್ನಿಯಲಾದುದಾ ಭುವನ
ಭುವನದಿಂ ಧರೆ ಧರಣಿಯಿಂದು
ದ್ಭವಿಸಿತೋಷಧಿ ಓಷಧಿಗಳಿಂ
ದವತರಿಸಿತಾ ನಾದಿಪುರುಷ ಪ್ರಕೃತಿ ವಿಕೃತಿಗಳು ||೬||

ನೇತ್ರ ನಾಸಿಕ ಪಾದ ಪಾಣಿ
ಶೋತ್ರವೆಂಬಿವು ತಮ್ಮೊಳೊಂದೇ
ಸೂತ್ರದಲಿ ಸಂಸೃಷ್ಟವಾಗಿ ಸಮಾನಬುದ್ಧಿಯಲಿ
ಗಾತ್ರವಿಡಿದಿಹವೋಲು ವಿಶ್ವದ
ಮೈತ್ರಿಯಲಿ ಮನಸಂದು ಪಾತ್ರಾ
ಪಾತ್ರವೆನ್ನದೆ ಬೆರಸಿ ಬದುಕುವುದಧಿಕಗುಣವೆಂದ ||೭||

ಸೃಷ್ಟಿ ಸಂಹಾರದಲಿ ಭೂತದ
ಕಟ್ಟಳೆಗಳ ಗತಾಗತಿಗಳಲಿ
ಮುಟ್ಟಿಸಿದ ವಿದ್ಯೆಯಲವಿದ್ಯೆಯಲಪ್ರತಿಮನೆನಿಸಿ
ನಷ್ಟಿಯಲಿ ತುಷ್ಟಿಯಲಿ ಮನವನು
ಬಿಟ್ಟು ಹಿಡಿಯದೆ ಕಾಲಕರ್ಮವ
ಮೆಟ್ಟಿ ನಿಲೆ ಭಗವಂತನೆನಿಸುವೆ ರಾಯ ಕೇಳೆಂದ ||೮||

ಅಣುವಿನಲಿ ಲಘುವಿನಲಿ ಗುರುವಿನ
ಯೆಣಿಕೆಯಲಿ ಮಹಿಮೆಯಲಿ ಪ್ರಾಪ್ತಿಯ
ಭಣಿತೆಯಲಿ ಶೀಲತ್ವದಲಿ ವೆಂ
ಟಣಿಸಿ ರೇಚಕ ಪೂರಕದ ರಿಂ
ಗಣವನರಿವುದು ಯೋಗಸಿದ್ಧಿಗೆ ಲಕ್ಷಣವನೆಂದ ||೯||

ತ್ಯಜಿಸುವುದು ದುಸ್ಸಂಗವನು ನೀ
ಸೃಜಿಸುವುದು ಸತ್ಸಂಗವನು ಗಜ
ಬಜಿಸದಿರಹೋರಾತ್ರಿಯಲಿ ಧರ್ಮವನೆ ಸಂಗ್ರಹಿಸು
ಭಜಿಸು ನಿತ್ಯಾನಿತ್ಯವಸ್ತುವ
ವಿಜಯನಹೆ ಇಹಪರಕೆ ತತ್ವದ
ನಿಜವಿದೆಲೆ ಧೃತರಾಷ್ಠ್ರ ಚಿತ್ತೈಸೆಂದನಾ ಮುನಿಪ ||೧೦||
ಕಾಯವಿದು ನೆಲೆಯಲ್ಲ ಸಿರಿ ತಾ
ಮಾಯಾರೂಪಿನ ಮೃತ್ಯುದೇವತೆ
ಬಾಯ ಬಿಡುತಿಹಳಾವುದೀತನ ಕಾಲಗತಿಯೆಂದು
ದಾಯವರಿದು ಮಹಾತ್ಮರಿದಕೆ ಸ
ಹಾಯ ಧರ್ಮವ ರಚಿಸುವುದು ನಿ
ರ್ದಾಯದಲಿ ಕೈಸೂರೆಗೊಂಬುದು ಮುಕುತಿ ರಾಜ್ಯವನು ||೧೧||

ಕೆಟ್ಟ ಮಾರ್ಗದಲಿಂದ್ರಿಯಂಗಳ
ಚಿಟ್ಟುಮುರಿಯಾಟದಲಿ ಮನ ಸಂ
ದಷ್ಟವಾಗಿಯನಿತ್ಯಸಂಸಾರದ ಸುಖಕ್ಕೆಳಸಿ
ಹುಟ್ಟು ಸಾವಿನ ವಿಲಗದಲಿ ಕಂ
ಗೆಟ್ಟು ನಾನಾ ಯೋನಿಯಲಿ ತಟ
ಗುಟ್ಟಿ ಬಳಲುವುದುಚಿತವೇ ಭೂಪಾಲ ಕೇಳೆಂದ ||೧೨||
ಹಲವು ವರ್ಣದೊಳೆಸೆವ ಗೋ ಸಂ
ಕುಲದೊಳೊಂದೇ ವರ್ಣದಲಿ ಕಂ
ಗೊಳಿಸುವೀ ಕ್ಷೀರಾಮೃತವು ಮೈಗೊಂಡು ತೋರ್ಪಂತೆ
ಹೊಲಬುಗೆಟ್ಟ ಚರಾಚರಂಗಳ
ಸುಳಿವಿನಲಿ ಸುಳಿದಡಗಿ ಕಡೆಯಲಿ
ನಿಲುವ ನಿಜವೊಂದಲ್ಲದೆರಡಿಲ್ಲೆಂದನಾ ಮುನಿಪ ||೧೩||

ಅತಿಶಯದ ಸುಕೃತವನು ವಿರಚಿಸಿ
ಗತಿವಡೆದು ಸ್ವರ್ಗಾದಿ ಭೋಗೋ
ನ್ನತಿಕೆಯನು ಭೋಗಿಸಿದ ಸಮನಂತರದೊಳವನಿಯಲಿ
ಪತನ ತಪ್ಪದು ಮರಳಿ ಬಾರದ
ಗತಿಯನರಿದು ಮಹಾನುಭಾವರ
ಮತವಿಡಿದು ನಡೆವುದು ನಯವು ಕೇಳೆಂದನಾ ಮುನಿಪ ||೧೪||

ಸಕಲ ಧರ್ಮದ ಸಾರವನು ಮತಿ
ವಿಕಳನಾಗದೆ ಚಿತ್ತವಿಸು ಬಾ
ಧಕವದಾವುದು ನಿನಗದನು ನೀನನ್ಯರುಗಳಲ್ಲಿ
ಯುಕುತಿಯಿಂದದಮಾಡದಿರು ನಿ
ರ್ಮುಕುತನಹೆ ಸಂಸಾರದಲಿ ಸಾ
ಧಕವಿದೊಂದೇ ಸಕಲ ಜನಮತವೆಂದನಾ ಮುನಿಪ ||೧೫||

ಒಂದು ವಸ್ತುವನೆರಡು ಮಾಡುವೆ
ನೆಂದು ಬುದ್ಧಿ ಭ್ರಾಂತಿಯಲಿ ಮನ
ಸಂದು ಸಮ್ಯಗ್ಜ್ಞಾನದುದಯದ ನೆಲೆಯ ಕಾಣಿಸದೆ
ದಂದುಗಂಬಡುತಿಹುದು ತತ್ವದ
ಹಿಂದುಮುಂದರಿಯದೆ ಮಹಾತ್ಮರು
ಬಂದ ಪಥದಲಿ ಬಾರದೇ ಕೆಡುತಿಹುದು ಜಗವೆಂದ ||೧೬||

ಪ್ರಣವದೊಂದಾ ವರ್ಣಮೂರರ
ಗುಣವಿಡಿದು  ತೋರುವ ಚರಾಚರ
ವೆಣಿಸಬಾರದು ವಿಶ್ವದಲಿ ನಿಸ್ಯೂತವಾಗಿಹುದು
ಹಣಿದು ಬೀಳಲು ಹೊಳೆವ ಜ್ಯೋತಿ
ರ್ಗಣದವೊಲು ತೊಳತೊಳಗಿ ಬೆಳಗುವ
ಗುಣರಹಿತನ ನಿಜಸ್ವರೂಪವಿದೆಂದನಾ ಮುನಿಪ ||೧೭||

ನಳಿನಮಿತ್ರನು ಪಶ್ಚಿಮಾಂಬುಧಿ
ಗಿಳಿಯೆ ನಾನಾ ಪಕ್ಷಿಜಾತಿಗಿ
ಳುಲಿವುವೈತಂದೊಂದು ವೃಕ್ಷವನೇರಿ ರಾತ್ರಯನು
ಕಕ್ಷೆದು ನಾನಾ ದೆಸೆಗೆ ಹರಿವವೊ
ಲಿಳೆಯ ಭೋಗದ ದೃಷ್ಟಿ ತೀರೀದ
ಬಳಿಕ ಲೋಕಾಂತರವನೆಯ್ದುವರೆಂದನಾ ಮುನಿಪ ||೧೮||

ಪೊಡವಿಯೊಳಗುದಯಿಸಿದ ದುಷ್ಕೃತ
ಬಿಡದು ಭೂಪರನದು ಪುಲೋಹಿತ
ರೇಡೆಗೆ ಬಳಿಕಾ ಮೂರ್ಖ ಶಿಷ್ಯನ ದೋಷ ಗುರುವಿನದು
ಮಡದಿ ಮಾಡಿದ ಪಾತಖವು ಪತಿ
ಗೊಡಲಹುದು ಪರಮಾರ್ಥವಿದು ಪರಿ
ವಿಡಿಯನರಿಯದೆ ಕೆಡುವುದೀ ಜಗವೆಂದನಾ ಮುನಿಪ ||೧೯||

ದುರ್ಜನರಿಗಂಜುವುದು ಲೋಕವು
ಸಜ್ಜನರ ಲೆಕ್ಕಿಸದು ತಾರ್ಕ್ಷ್ಯನ
ಸೆಜ್ಜೆಯೊಳಗಿಹ ದಂದಶೂಕನನರ್ಚಿಸುವರೊಲಿದು
ಉಜ್ಜ್ವಲಿತ ಭಕ್ತಿಯಲಿ ಬಹಳ ವಿ
ತರ್ಜೆಯಲಿ ಮೂಢಾತ್ಮರಿಕ್ಕಿದ
ಹಜ್ಝೆಯಿದು ಲೋಕಕ್ಕೆ ಕೇಳ್ ನೀನೆಂದನಾ ಮುನಿಪ ||೨೦||

ತಳಪಟದೊಳಾಯುಷ್ಯ ರಾಶಿಯ
ನಳೆವ ಕೊಳಗವು ಸೂರ್ಯನೆಂಬುದ
ತಿಳಿದಹೋರಾತ್ರಿಯಲಿ ಸಂಖ್ಯೆಯ ಸಲುಗೆಯಂಕಿಸದೆ
ಬಳಸುವುದು ಸನ್ಮಾರ್ಗದಲಿ ಮುಂ
ಕೊಳಿಸುವುದು ಸದ್ಧರ್ಮದಲಿ ಕಳ
ವಳಿಸದಿರು ಷಡುವರ್ಗದಲಿ ಕೇಳೆಂದನಾ ಮುನಿಪ ||೨೧||

ನಷ್ಟಿಯಿದು ಸಂಸಾರದೊಳಗು
ತ್ಕೃಷ್ಟವಿದು ಮನ್ವಾದಿ ಮಾರ್ಗದ
ದೃಷ್ಟವಿದು ಲೋಕಾಂತರದ ಸುಖದುಃಖದೇಳಿಗೆಯ
ಹುಟ್ಟುಮೆಟ್ಟಿನ ಕಾಲಕರ್ಮದ
ಕಟ್ಟಳೆಯಿದೆಂದರಿದು ನಡೆವಂ
ಗಿಟ್ಟಣಿಸುವುದದಾವುದೈಹೇಳೆಂದನಾ ಮುನಿಪ ||೨೨||

ಶಿಲೆಯ ರೂಹನು ಮೂಢರುಗಳ
ಗ್ಗಳೆಯ ಪಾವಕನನು ಮಹೀಸುರ
ರಿಯೊಳಗೆ ಪರಮಾತ್ಮನೇ ಪರದೈವ ತಾನೆಂದು
ಒಲಿದು ಪೂಜಿಸುತಿಹರು ಹೃದಯಾಂ
ಗದೊಳಗೆ ವರಯೋಗಿಗಳು ಕೈ
ವಳಸುವುದು ಜನವೀ ಪ್ರಕಾರದೊಳರಸ ಕೇಳೆಂದ ||೨೩||

ಜ್ಞಾನಿಗಳನೊಡಬಡಿಸಬಹುದ
ಜ್ಞಾನಿಗಳನಹುದೆನಿಸಬಹುದು
ಜ್ಞಾನಲವವನು ಕೂಡಿಕೊಂಡಿಹ ದುರ್ವಿಗ್ಧರನು
ಏನ ತಿಳುಹಲುಬಹುದು ವಿಷ್ವ
ಕ್ಸೇನಗಳವಲ್ಲರಸ ಮಿಕ್ಕಿನ
ಮಾನವರ ಪಾಡಾವುದೆಂದನು ಮುನಿ ನೃಪಾಲಂಗೆ ||೨೪||

ದಾನವೊಂದಾ ಪಾಲನೆಯ ಫಲ
ದಾನವೊಂದೇ ಉಭಯವಿದರೊಳು
ದಾನದಿಂದಹುದಿಹಪರಂಗಳ ಸೌಖ್ಯ ಸಂಪದವು
ದಾನವೇ ಸಂಸಾರ ಸಾಧನ
ದಾನದಿಂ ಪಾಲನೆಯ ಫಲಕಿ
ನ್ನೇನನೆಂಬೆನು ಕಡೆಯೊಳಚ್ಯುತ ಪದವಿ ಫಲವೆಂದ ||೨೫||

ಅರಸನೊಡೆಯನು ದಂಡನಾಥನು
ಗೈರು ಹಿರಿಯನುತ್ತಮನು ದೈವಾ
ಪರನು ಸಾಹಿತ್ಯನು ಸದಸ್ಯನು ಸತ್ಪುರುಷನೆಂದು
ಪರಿಪರಿಯ ನಾಮಂಗಳಲಹಂ
ಕರಿಸುವರು ಜೀವಾತ್ಮ ತೊಲಗಿದ
ಮರುದಿವಸ ಹೆಣನೆನ್ನರೇ ಹೇಳೆಂದನಾ ಮುನಿಪ||೨೬||

ವರುಷ ಮೂರರೊಳು ಮಾಸ ಮೂರರೊ
ಳಿರದೆ ಪಕ್ಷತ್ರಯದೊಳಗೆ ಬಂ
ದರುಹುವುದು ಲಿನ ಮೂರರಲಿ ಸಂದೇಹಬೇಡಿದಕೆ
ಧರೆಯೊಳುತ್ಕಟಪುಣ್ಯ ಪಾಪೋ
ತ್ಕರದ ಫಲವಿದು ತಪ್ಪಬಾರದು
ಮರಳುವುದು ಪರಲೋಕದೆಸೆಗವನೀಶ ಕೇಳೆಂದ ||೨೭||

ಒಂದು ಭೂಪಿಂಡದಲಿ ನಾನಾ
ಚಂದದಿಂ ಪ್ರಾಣಿಗಳು ಜನಿಸುವು
ವೊಂದು ಜ್ಯೋತಿಸ್ಸಿನಲಿ ನಾನಾ ಜ್ಯೋತಿಯುದಿಸುವುವು
ಒಂದು ಪರವಸ್ತುವಿನ ಬಳಿಯಲಿ
ಬಂದುದಬುಜಭವಾಂಡ ಕೋಟಿಗ
ಳೆಂದೊಡವು ಬೇರಿಲ್ಲ ಸರ್ವವು ವಿಷ್ಣುಮಯವೆಂದ ||೨೮||

ತಾನಿದಿರು ಹಗೆ ಕೆಳೆ ವಿವೇಕ
ಜ್ಞಾನವಜ್ಞಾನಂಗಳಿಹಪರ
ಹಾನಿ ವೃದ್ಧಿಯ ಮಾರ್ಗದಲಿ ತಾನೇಕ ಚಿತ್ದಲಿ
ದಾನ ಧರ್ಮ ಪರೋಪಕಾರ ವಿ
ಧಾನ ದೀಕ್ಷಾಕರ್ಮನಿಷ್ಠರು
ಮಾನನೀಯರಲೇ ಮಹೀಪತಿ ಕೇಳು ನೀನೆಂದ ||೨೯||

ಕರಣ ಗುಣ ಸಂಹಣ ಸಂಧ್ಯಾಂ
ತರದವಸ್ಥಾಂತರದಲೋಕೋ
ತ್ಕರದ ತಾಪತ್ರಯದ ಲಕ್ಷಣಲಕ್ತಿತವನರಿದು
ಪರಿವಿಡಿಯ ಮೂರ್ತಿತ್ರಯಂಗಳ
ಗುರು ಲಘುವನಾರೈದು ನಡೆವಂ
ಗರಿದೆನಿಸುವುದದಾವುದೈ ಹೇಳೆಂದನಾ ಮುನಿಪ ||೩೦||

ವೇದ ನಾಲ್ಕಾಶ್ರಮವು ತಾ ನಾ
ಲ್ಕಾದಿಮೂರುತಿ ನಾಲ್ಕು ವರ್ಣ ವಿ
ಭೇದ ನಾಲ್ಕಾ ಕರಣ ನಾಲುಕುಪಾಯ ನಾಲ್ಕರಲಿ
ಭೇದಿಸಲು ಪುರುಷಾರ್ಥ ನಾಲ್ಕರ
ಹಾದಿಯರಿದು ವಿಮುಕ್ತ ನಾಲುಕ
ನೈದುವನು ಸಂದೇಹವೇ ಹೇಳೆಂದನಾ ಮುನಿಪ ||೩೧||

ಭೂತ ವರ್ಣಸ್ಥಾನ ಸರ್ಗ ನಿ
ಪಾತವದರೊಳು ಕೃತ್ಯಗಳ ಸಂ
ಜಾತಮುಖವಾವರಣಶರಸಂಗತಿಯ ಸೋಹೆಗಳ
ಧಾತು ಮೂಲಾದಿಗಳನರಿವುದು
ಪ್ರೀತಿಯಿಂದಿಹಪರವ ಗೆಲುವುದು
ಭೂತಳದೊಳುತ್ತಮವಲೇ ಭೂಪಾಲ ಕೇಳೆಂದ ||೩೨||

ಆರು ಗುಣ ಋತುವರ್ಣ ವರ್ಗವ
ದಾರು ದರ್ಶನ ಪಾತ್ರವಂಗವ
ದಾರು ಭೇದದ ಬಗೆಯನರಿವುದು ಶಿಷ್ಟಮಾರ್ಗದಲಿ
ತೋರುವೀ ಮಾಯಾ ಪ್ರಪಂಚವ
ಮೀರಿ ಕೇಡಿಲ್ಲದ ಪದವ ಕೈ
ಸೂರೆಗೊಂಬುದು ಪರಮ ಮಂತ್ರವಿದೆಂದನಾ ಮುನಿಪ ||೩೩||

ಜಲಧಿ ಮಾತೃಕೆ ವಾರ ಕುಲಗಿರಿ
ಗಳು ವಿಭಕ್ತಿ ದ್ವೀಪ ಸರ್ಪಾ
ವಳಿ ಮುನೀಶ್ವರರುಗಳ ಧಾತು ಗಡಣದ ವೇದಿಗಳ
ತಿಳಿದು ಕಾಲದ ಗತಿಯ ಗಮಕಂ
ಗಳನರಿದು ನಡೆವವರುಗಳು ನಿ
ರ್ಮಳದಲೆಡಹದೆ ಬೆರಸಿಕೊಂಬರು ಮುಕ್ತಿ ರಾಜ್ಯವನು ||೩೪||

ಕಾಯ ದಿಗ್ಬಂಧ ಪ್ರಣಾಮ ವಿ
ಧೇಯವರ್ಚನೆ ಯೋಗಸಿದ್ಧಿ ನಿ
ಕಾಯ ನಾಲ್ಕರ ಇಂದ್ರಿಯಸ್ಥಿತಿ ಗತಿಯನಾರೈದು
ಆಯವನು ವಿವರಿಸುತ ಮೇಲಣ
ಬೀಯವಿದು ತನಗೆಂಬುದನು ನಿ
ರ್ದಾಯದಲಿ ನಿಶ್ಚಯಿಸಬೇಹುದು ರಾಯ ಕೇಳೆಂದ ||೩೫||

ನವ ನವ ವ್ಯೂಹಂಗಳಬುಜೋ
ದ್ಭವನ ಪಾಳಿ ವಿಖಂಡ ನವರಸ
ನವವಿಧಗ್ರಹ  ನಾಟಕಂಗಳ ಲಕ್ಷಣವನರಿದು
ನವವಿಧಾಮಳ ಭಕ್ತಿರಸವನು
ಸವಿದು ನಿತ್ಯಾನಿತ್ಯವಸ್ತುವ
ನವರಸವನಾರೈದು ನಡೆವುದು ಭೂಪ ಕೇಳೆಂದ ||೩೬||

ಹತ್ತು ಮುಖದಲಿ ಲೋಕದೊಳಗು
ತ್ಪತ್ತಿಯಾದ ಚರಾಚರಂಗಳ
ಲುತ್ತಮಾಧಮರೆನ್ನದೇ ಹರಿ ಸರ್ವಗತನಾಗಿ
ಸುತ್ತುವನು ನಾನಾ ತೆರದಲಿ ವಿ
ಚಿತ್ರಚರಿತನು ಕಪಟ ನಾಟಕ
ಸೂತ್ರಧಾರಕನೆಂದರಿದು ಸುಖಿಯಾಗು ನೀನೇಂದ ||೩೭||

ಲೇಸು ಮಾಡಿದಿರೆನ್ನ ಚಿತ್ತದ
ಬೇಸರಿಕೆ ಬಯಲಾಯ್ತು ನಿಮ್ಮುಪ
ದೇಶದಿಂದ ಕೃತಾರ್ಥನಾದೆನು ಗೆಲಿದೆನಿಹಪರವ
ಗಾಸಿಯಾದುದು ರಾಗ ಲೋಭದ
ಮೀಸಲಳಿದುದು ನಿಮ್ಮ ದೆಸೆಯಿಂ
ದೇಸು ಧನ್ಯರೊ ನಾವು ಚಿತ್ತೈಸೆಂದನಾ ಭೂಪ ||೩೮ ||

ಸ್ವರ್ಗವಾವುದು ನರಕವಾವುದು
ವಿಗ್ರಹದಲಹ ಸಿದ್ಧಿ ಯಾವುದ
ನುಗ್ರಹಿಸಲೇನಹುದು ಪಾತ್ರಾಪಾತ್ರವೆಂದರೇನು
ಉಗ್ರವಾವುದು ದೈವದೊಳಗೆ ಸ
ಮಗ್ರವಾವುದು ಧರ್ಮದೊಳಗ
ವ್ಯಗ್ರದಿಂದುಪದೇಶಿಸಲು ಬೇಕೆಂದನಾ ಭೂಪ ||೩೯||

ಸುಲಭನತಿ ಸಾಹಿತ್ಯ ಮಂಗಳ
ನಿಳಯನಗಣಿತ ಮಹಿಮನನ್ವಯ
ತಿಲಕನನುಪಮಚರಿತ ದೈವಾಪರನು ಪುಣ್ಯನಿಧಿ
ಕುಲಯುತನು ಕೋವಿದನು ಕರುಣಾ
ಜಲಧಿ ಕೌತುಕ ಯುಕ್ತಿವಿದನೆಂ
ದಿಳೆ ಹೊಗಳುತಿರಲದುವೆ ಕೇಳೈ ಸ್ವರ್ಗ ತಾನೆಂದ ||೪೦||

ಪಾಯಕನು ಪತಿತನು ಕೃತಘ್ನನು
ಘಾತಕನು ಮರ್ಮನು ದುರಾಢ್ಯನ
ಭೀತಕನು ದೂಷಕನು ದುರ್ಜನನಪ್ರಯೋಜಕನು
ನೀತಿಹೀನನು ಜಾತಿಧರ್ಮ ಸ
ಮೇತ ದೈವದ್ರೋಹಿಯೆಂಬುದು
ಭೂತಳದೊಳೇ ನರಕ ಚಿತ್ತೈಸೆಂದನಾ ಮುನಿಪ ||೪೧||

ದೇಹವಿಡಿದಿಹ ಧರ್ಮವದು ನಿ
ರ್ದೇಹದಲಿ ದೊರಕುವುದೆ ಮಾನವ
ದೇಹವೇ ಸಾಧನ ಸಕಲ ಪುರುಷಾರ್ಥಶೀಲರಿಗೆ
ಐಹಿಕಾಮುಷ್ಮಿಕದ ಗತಿ ಸಂ
ಮೋಹಿಸುವುದು ಶರೀರದಲಿ ಸಂ
ದೇಹವೇ ಧೃತರಾಷ್ಟ್ರಚಿತ್ತೈಸೆಂದನಾ ಮುನಿಪ ||೪೨||

ಗರುಡ ಪಂಚಾಕ್ಷರಿಯೊಳಲ್ಲದೆ
ಗರಳ ಭಯವಡಗುವುದೆ ವಿಷ್ಣು
ಸ್ಮರಣೆಯಿಂದಲ್ಲದೆ ಮಹಾಪಾತಕಕೆ ಕಡೆಯಹುದೆ
ಹಿರಿದು ಸಂಸಾರಾಂಬುಧಿಯನು
ತ್ತರಿಸುವೊಡೆ ಗುರುಮುಖದೊಳಲ್ಲದೆ
ನಿರತಿಶಯವಿನ್ನಾವುದೈ ಹೇಳೆಂದನಾ ಮುನಿಪ ||೪೩||

ತನ್ನ ಮನೆಯಲಿ ಮೂರ್ಖನತಿ ಸಂ
ಪನ್ನ ಪೂಜ್ಯನು ಭೂಮಿಪಾಲನು
ತನ್ನ ದೇಶದೊಳಧಿಕ ಸ್ವಗ್ರಾಮದಲಿ ಪ್ರಭು ಪೂಜ್ಯ
ಭಿನ್ನವಿಲ್ಲದೆ ಹೋದ ಠಾವಿನೊ
ಳನ್ಯವೇನಿಸದೆ ವಿಶ್ವದೊಳು ಸಂ
ಪನ್ನ ಪೂಜಾಪಾತ್ರರೈ ವಿದ್ವಾಂಸರುಗಳೆಂದ ||೪೪||

ಒಬ್ಬನಹನೈ ಶೂರ ನೂರರೊ
ಳೊಬ್ಬನಹ ಸಾವಿರಕೆ ಪಂಡಿತ
ನೊಬ್ಬನಹನೈ ವಕ್ತ ಶತಸಾವಿರಕೆ ಲೋಕದಲಿ
ಒಬ್ಬ ದಾನಿಯ ಕಾಣೆ ನಾನಿ
ನ್ನೊಬ್ಬರೊಬ್ಬರಿಗೊಂದು ಗುಣವದು
ಸರ್ಬಗುಣ ಸಂಪನ್ನರೈ ವಿದ್ವಾಂಸರುಗಳೆಂದ ||೪೫||

ಸತಿಯರಿಗೆ ಗತಿ ಯಾವುದೈ ನಿಜ
ಪತಿಗಳಲ್ಲದೆ ವಿಪ್ರಜಾತಿಗೆ
ಹುತವಹನು ವರ್ಣತ್ರಯಕೆ ಭೂದೇವರುಗಳಿರಲು
ಕ್ಷಿತಿಯೊಳತಿಶಯವಾವುದೈ ಭೂ
ಪತಿಯೆ ಕೇಳಿಹಪರಕೆತ ಸುಖಸಂ
ಗತಿಯನೊಲುವಡೆ ಪೂಜಿಸುವುದೈ ಬ್ರಾಹ್ಮಣೋತ್ತಮರ ||೪೬||

ಚೋರನನು ಕಂಟಕನ ಹಿಸುಣನ
ಜಾರನನು ಷಂಡನನು ಸಮಯ ವಿ
ಕಾರ ಭೇದಿನಿಯನಿಂತರುವರನು ಕಂಡು ಮನ್ನಿಸದೆ
ದೂರದಲಿ ವರ್ಜಿಸವುದು ಬಹಿ
ಷ್ಕಾರಿಗಳು ಸರ್ವಕ್ಕಿವರುಗಳು
ಸಾರಿದುದು ಸರ್ವೇಶ್ವರನ ಮತವರಸ ಕೇಳೆಂದ ||೪೭||

ಮೊದಲಲಾ ಮಾಹಿಷಿಕನ ಮ
ಧ್ಯದಲಿ ವೃಷಲೀವಲ್ಲಭನನಂ
ತ್ಯದಲಿ ವಾಗ್ಧೋಷಕನ ಕಂಡವರುಗಳ ಭಾಗ್ಯನಿಧಿ
ಕದಡಿ ಹರಿವುದು ಕಂಡ ಮುಖದಲಿ
ಸದಮಳಿತ ಶಾಸ್ತ್ರಾರ್ಥ ನಿಶ್ಚಯ
ವಿದನರಿದು ನಡಿವುದು ನಯವು ಭೂಪಾಲ ಕೇಳೆಂದ ||೪೮||

ಕುಲಮಹಿಷಿ ದುರ್ಮಾರ್ಗ ಮುಖದಲಿ
ಗಳಿಸಿದರ್ಥವನುಂಡು ಕಾಲವ
ಕಳೆವ ನಿರ್ಭಾಗ್ಯರು ಕಣಾ ಮಾಹಿಷಿಕರೆಂಬವರು
ಇಳೆಯೊಳವರೊಡನಾಡಿದವದಿರು
ಗಳಿಗೆ ನರಕಾರ್ಣವದೊಳಾಳುತ
ಮುಳುಗುತಿರುತಿಹುದಲ್ಲದೇ ಗತಿಯಿಲ್ಲ ಕೇಳೆಂದ ||೪೯||

ದೈವದಾಧೀನದಲಿ ಜಗವಾ
ದೈವ ಮಂತ್ರಾಧೀನ ಮಂತ್ರವು
ಭೂವಿಬುಧರಾದೀನವಾಗಿಹುದಾಗಿ ಲೋಕದಲಿ
ದೈವವೇ ಬ್ರಾಹ್ಮಣನದಲ್ಲದೆ
ಭಾವಿಸಲು ಬುಧರಿಂದಧಿಕವ
ದೈವವೆಂಬುದಾವುದೈ ಹೇಳೆಂದನಾ ಮುನಿಪ ||೫೦||

ಕೆಲಸ ಗತಿಯಲಿ ಕಡೆದ ಶಿಲೆಯನು
ಕಲುಕುಟಿಕನಿಳುಹುವನದಲ್ಲದೆ
ಹಲವು ಪರಿಯಿಂದದನು ಲೋಕಕೆ ದೈವವನು ಮಾಡಿ
ಸಲಿಸುವವರುಂಟೇ ಸುರಾಸುರ
ರೊಳಗೆ ವಿಪ್ರೋತ್ತಮರುಳಿಯೆ ಜಗ
ದೊಳಗೆ ದೈವವದಾವುದೈ ಹೇಳೆಂದನಾ ಮುನಿಪ ||೫೧||

ಎಣಿಸಬಹುದೂರ್ವರೆಯ ಸೈಕತ
ಮಣಿಯನೊಯ್ಯಾರದಲಿ ಗಗನಾಂ
ಗಣದೊಳೈತಹ ವೃಷ್ಟಿಬಿಂದುವ ಲೆಕ್ಕಗೊ ಳಬಹುದು
ಎಣಿಸಬಾರದದೊಂದು ದಿವಿಜರ
ಗಣಕೆಗೋಚರವಾಗಿ ಸದ್ಬ್ರಾ
ಹ್ಮಣನೊಳೊಬ್ಬನ ರಕ್ಷಿಸಿದ ಫಲವರಸ ಕೇಳೆಂದ ||೫೨||

ಜಾತಿಧರ್ಮವನನುಸರಿಸಿ ವರ
ಮಾತೃಪಿತೃ ಪರಿಚರಿಯದಲಿ ಸಂ
ಪ್ರೀತಿವಡೆಯುತ ಪರಗುಣಸ್ತುತಿ ನಿಂದೆಗಳನುಳಿದು
ಭೂತನಾಥನ ಭಕುತಿಯಲಿ ವಿ
ಖ್ಯಾತವಹ ಗುರುದೈವದಲಿ ಭಯ
ಭೀತಿ ಹಿರಿದಿರಲದುವೆ ಕೇಳ್ ಸುಕೃತಕಕೆ ಕಡೆಯೆಂದ ||೫೩||

ಅರ್ಥದಿಂದಹ ಸಿದ್ಧಿ ಯಾವುದ
ನರ್ಥವೆಂಬುದದೇನು ತನಗೆ
ಸ್ವಾರ್ಥವಾರು ಪರಾರ್ಥದಿಂದಹುದಾವುದವನಿಯಲಿ
ತೀರ್ಥವಾವುದು ವಿಪ್ರರೊಹಳಗೆ ಸ
ಮರ್ಥರಾರು ಸುಧಾತ್ರಿಯೊಳಗೆಯು
ವ್ಯರ್ಥಜೀವಿಗಳಾರು ಚಿತ್ತೈಸೆಂದನಾ ಮುನಿಪ ||೫೪||

ಧನವನುಳ್ಳ ಮಹಾತ್ಮನಾವುದ
ನೆನೆದೊಡದು ಕೈಸಾರುವುದು ನಿ
ರ್ಧನಿಕ ಬಯಸಿದ ಬಯಕೆ ಬಯಲಹುದಲ್ಲದೇ ಬೇರೆ
ಧನಿಕನಂತೆ ಸಮಸ್ತ ಸುಖ ಸಂ
ಜನಿಸುವುದೆ ಸರ್ವಕ್ಕೆ ಸಾಧನ
ಧನವದಲ್ಲದೆ ಭುವನದೊಳಗನ್ಯತ್ರವಿಲ್ಲೆಂದ ||೫೫||

ವ್ಯರ್ಥರುಗಳೊಡನಾಟ ತಮ್ಮ
ಸ್ವಾರ್ಥವಿಲ್ಲದರುಗಳ ಕೂಟ ಪ
ರಾರ್ಥದಿಂದುಜ್ಜೀವಿಸಿದವನ ಬದುಕು ಲೋಕದಲಿ
ಅರ್ಥವಿಲ್ಲದ ಸಿರಿಯ ಸಡಗರ
ಅರ್ಥಿಯಿಲ್ಲದ ಬಾಳುವೆಗಳಿವ
ನರ್ಥ ಪಾರಂಪರೆಯಲೇ ಕೇಳೆಂದನಾ ಮುನಿಪ ||೫೬||

ಮಾಡುವುದು ಧರ್ಮವನು ಸುಜನರ
ಕೂಡುವುದು ಪರಪೀಡೆಯೆಂಬುದ
ಮಾಡಲಾಗದು ಕರಣ ಮೂರರೊಳಲ್ಲದಾಟವನು
ಆಡಲಾಗದು ದಸ್ಯುಜನವನು
ಕೂಡಲಾಗದಿದೆಂಬ ಮಾರ್ಗವ
ನೋಡಿ ನಡೆವುದು ತನಗೆ ಪರಮ ಸ್ವಾರ್ಥಕರವೆಂದ ||೫೭||

ಕರಿತುರಗ ಮೊದಲಾದ ವಸ್ತುಗ
ಳರಮನೆಗಳಲಿ ಪುತ್ರಮಿತ್ರರು
ತರುಣಿಯರು ಸಹಭವರು ಗೋತ್ರಜರಡವಿಯೊಳಗಿಕ್ಕಿ
ತಿರುಗುವರು ನಿಜಸುಕೃತ ದುಷ್ಕೃತ
ವೆರಡು ಬೆಂಬಿಡವಲ್ಲದುಳಿದುದ
ನರಸ ಬಲ್ಲವರಾರು ಧರ್ಮರಹಸ್ಯ ವಿಸ್ತರವ ||೫೮||

ಧರ್ಮದಾಧಾರದಲಿಹುದು ಜಗ
ಧರ್ಮವುಳ್ಳನನಾಶ್ರಯಿಸುವುದು
ಧರ್ಮವೇ ನೂಕುವುದು ಜನ್ಮಾಂಯರದ ಪಾತಕವ
ಧರ್ಮವೇ ಸರ್ವ ಪ್ರತಿಷ್ಠಿತ
ಧರ್ಮವೆಂಬುದು ಪರಮಪದವಾ
ಧರ್ಮವನು ಬಿಟ್ಟಿಹುದು ಬದುಕಲ್ಲರಸಕೇಳೆಂದ ||೫೯||

ಪರಿಪರಿಯ ಯಜ್ಞವನು ವಿರಚಿಸಿ
ಸುರಪತಿಯ ಸಂತುಷ್ಟಿಬಡಿಸಲು
ಸುರಿವನವ ಸಂಪೂರ್ಣವಾಗಿ ಸುವೃಷ್ಟಿಯನು ಜಗಕೆ
ಹರಿಹಯನು ಸಸ್ಯಾಧಿಕಂಗಳ
ಹೊರೆಯಲೋಸುಗ ಮೈಗೆ ಮೈಯಾ
ಗಿರುತಿಹನು ಭುವನದೊಳವನೀಶ ಕೇಳೆಂದ ||೬೦||

ಎತ್ತಲಾನು ಸುತೀರ್ಥವೆಂಬುದ
ಚಿತ್ತವಿಸುವೊಡೆ ಸರ್ವ ತೀರ್ಥದ
ಸತ್ವವನು ಸನ್ನಿಹಿತವಾಗವಧರಿಸು ನೀನದನು
ವಿಸ್ತರಿಸುವೆನು ವಿಪ್ರಪಾದ ವಿ
ಮುಕ್ತ ವಿಮಳೋದಕವನಾವನು
ನೆತ್ತಿಯಲಿ ಧರಿಸಿದವನವನು ಕೃತಾರ್ಥನಹನೆಂದ ||೬೧||

ಶರಧಿಯೊಳು ಹರಿ ಯೋಗನಿದ್ರೆಯೊ
ಳಿರಲು ಭೃಗುವೈತಂದು ಲಕ್ಷ್ಮೀ
ಧರನ ವಕ್ಷಸ್ಥಳವನೊದೆಯಲು ಮುನಿಯ ಚರಣವನು
ಸಿರಿಯುದರದೊಳಗೊತ್ತಿ ಧರಣೀ
ಸುರರ ಮೆರೆದನು ತೀರ್ಥಪಾದವ
ಧರೆಯೊಳಗೆ ಬುಧರಿಂದಧಿಕವಹ ತೀರ್ಥವಿಲ್ಲೆಂದ ||೬೨||

ಮಾಡುತಿಹ ಯಜ್ಞವನು ಪರರಿಗೆ
ಮಾಡಿಸುವ ವೇದಾಧ್ಯಯನವನು
ಮಾಡುತಿಹ ತದ್ವಿಷಯದಲಿ ಯೋಗ್ಯರನು ಮಾಡಿಸುವ
ಮಾಡುತಿಹ ದಾನವನು ಲೋಗರು
ನೀಡುತಿರಲೊಳಕೊಂಬ ಗುಣವನು
ಕೂಡಿಕೊಂಡಿಹನೇ ಸಮರ್ಥನು ವಿಪ್ರರೊಳಗೆ ||೬೩||

ವೇದಪುರುಷನ ವಿಗ್ರಹದಲಿ ವಿ
ಭೇದವಿಲ್ಲದೆ ಬಿಸಜ ಸಂಭವ
ನಾದಿಯಾದ ಸಮಸ್ತ ದೇವರು ನೆಲೆವನೆಗಳಾಗಿ
ನೇದುಕೊಂಡಿಹರಂತು ಕಾರಣ
ವಾದಿಸದೆ ವಿಪ್ರೋತ್ತಮರನಭಿ
ವಾದಿಸುವುದುತ್ತಮವಲೇ ಕೇಳೆಂದನಾ ಮುನಿಪ ||೬೪||

ಯುವತಿಯರು ಗಾಯಕರು ಕವಿಗಳು
ತವತವಗೆ ಕೈವಾರಿಸುವರಾ
ವವನವನೆ ಯಾವಗಲು ದೂಷಕನಿಹಪರಂಗಳಿಗೆ
ಇವರು ಮೂವರು ನಿಂದಿಸುವರಾ
ವವನವನು ಸರ್ವಜ್ಞನೆನಿಸುವ
ನವನಿಪತಿ ಚಿತ್ತೈಸು ಧರ್ಮರಹಸ್ಯ ವಿಸ್ತರವ ||೬೫||

ಜ್ಞಾತವಾವ್ದಜ್ಞಾತವಾವುದು
ನೀತಿ ಯಾವುದನೀತಿ ಯಾವುದು
ದ್ವೈತವಾವ್ದದ್ವೈತವಾವುದು ವೈದಿಕಾಂಗದಲಿ
ಖ್ಯಾತಿಯಾವ್ದಖ್ಯಾತಿ ಯಾವುದು 
ಜಾತಿಯಾವುದಜಾತಿ ಯಾವುದು
ಭೂತಳದೊಳವನೀಶ ಚಿತ್ತೈಸೆಂದನಾ ಮುನಿಪ ||೬೬||

ಧರಣಿಯಮರರ ಸೇವೆಯನು ವಿ
ಸ್ತರಿಸಿ ಸತ್ಕಾರದಲವರನಾ
ದರಿಸಿ ಬಹುಮಾನವನು ವಿರಚಿಸಿದನಾ ಮಹಾತ್ಮರಿಗೆ
ಎರವಹುದೆ ಸ್ವರ್ಗಾಪವರ್ಗದ
ಸಿರಿಯದೆಂಬುದನರಿದು ನಡೆವಂ
ಗರಿದೆನಿಸುವದದಾವುದೈ ಹೇಳೆಂದನಾ ಮುನಿಪ ||೬೭||

ಯೋನೀಮುಖವೆಂಬತ್ತುನಾಲ್ಕು  ನ
ವೀನ ಜನ್ಮಂಗಳೊಳಗುದಯಿಸಿ
ಹಾನಿ ವೃದ್ಧಿಗಳರಿದು ಜ್ಞಾನದ ಕಡೆಯ ಕಣೆಯದಲಿ
ಮಾನವರ ಬಸುರಿನಲಿ ಬಂದ
ಜ್ಞಾನತರರಾಗಳಿವುದಿದು ಕ
ಕರ್ಮಾನುಗತವಾಗಿಹುದಲೇ ಭೂಪಾಲ ಕೇಳೆಂದ ||೬೮||

ಪಾನದಿಂ ಸೂಕರನು ಬುಧರವ
ಮಾನದಿಂ ಕ್ಷಯರೋಗಿ ಗುರುಜನ
ಹಾನಿಯಿಂದವೆ ಕುಷ್ಠಿ ಗರ್ವದಿ ಕುಕ್ಕುಟಾಹ್ವಯನು
ಹೀನಗತಿಯಿಂದುರಗ ನಾನಾ
ಯೋನಿಗಳಲಿ ಚರಾಚರವು ಕ
ರ್ಮಾನುಗತವಾಗುದಯಿಸುವುದವನೀಶ ಕೇಳೆಂದ ||೬೯||

ಪರರ ಪಟುತರವಾದದಲಿ ಮೂ
ಗರವೊಲಿಹ ಪರ ವಚನದುತ್ಕಟ
ವೊರೆಗೆ ಬಧಿರತ್ವವನು ಪರಗುಣ ದೋಷ ದರುಶನವು
ದೊರಕಿದೊಡೆ ಜಾತ್ಯಂಧನೆನಿಸುವ
ಪುರುಷನಾವವನವನು ಸಾಕಕ್ಷಾ
ತ್ಪರಮಪುರುಷೋತ್ತಮನಲೇ ಭೂಪಾಲ ಕೇಳೆಂದ ||೭೦||

ಇಷ್ಟಸಂತರ್ಪಣವ ಮಾಡಿ ವಿ
ಶಿಷ್ಟಪೂಜಾಪಾತ್ರರನು ಸಂ
ತುಷ್ಟಿಬಡಿಸಿ ಸಧರ್ಮದಲಿ ರಾಜ್ಯವನು ರಕ್ಷಿಸುತ
ಕೊಟ್ಟವರ ಕೊಂಡವರ ಮತ್ತೊಡ
ಬಟ್ಟವರನನುಜಾತ್ಮಜರನೊಳ
ಗಿಟ್ಟುಕೊಂಡಿಹುದುಚಿತವದು ಭೂಪಾಲ ಕೇಳೆಂದ ||೭೧||

ನುಡಿದುದನು ಪೂರೈಸಿ ಕಾಲದ
ಕಡೆಯ ಕಾಣಿಸಿ ಹೋಹವರ ಬೀ
ಳ್ಕೊಡುತ ಹಳೆಯರನಾಪ್ತರನು ಮನ್ನಿಸುತ ತನ್ನುವನು
ಹಿಡಿದು ಸೇವೆಯ ಮಾಡುವವರನು
ಬಿಡದೆ ನಾನಾ ತೆರದ ಪದವಿಯ
ಕೊಡುತಲಿಹುದಿದು ನೀತಿ ಚಿತ್ತೈಸೆಂದನಾ ಮುನಿಪ ||೭೨||

ವಿಲಗ ಸಾಗರನಾಗಿ ದೇಶವ
ಹಿಳಿದು ಹಿಂಡುತ ದಾನ ಧರ್ಮವ
ನುಳಿದು ದೇವ ಬ್ರಾಹ್ಮರೆನ್ನದೆ ಕಂಡವರನೆಳೆದು
ಗಳಿಗೆ ಸಂಖ್ಯೆಗೆ ದಂಡ ದೋಷವ
ಕೊಳುತ ಕಡೆಯಲಧೋಗತಿಗಳೊಳ
ಗಿಳಿದು ಹೋಹುದನೀತಿ ಚಿತ್ತೈಸೆಂದನಾ ಮುನಿಪ ||೭೩||

ಯೋನಿಯಲ್ಲದ ಠಾವುಗಳಲಿ ವಿ
ಯೋನಿಯಹ ವಿಷಯಂಗಳಲಿ ಪಶು
ಯೋನಿಯಲಿ ಸಂಭೋಗಿಸುವ ಪಾತಕರ ಪರಿವಿಡಿಯ
ಏನ ಹೇಳಲು ಬಹುದು ನರಕ ವಿ
ತಾನದೊಳಗೋಲಾಡಿ ಬಳಿಕಾ
ಶ್ವಾನ ಯೋನಿಯೊಳವರು ಜನಿಸುವರೆಂದನಾ ಮುನಿಪ ||೭೪||

ಜೀವ ಪರಮನಭೇದವನು ಸಂ
ಭಾವಿಸದೆ ವೇದಾಂತ ಶಾಸ್ತ್ರವಿ
ದಾವ ಮುಖವೆಂದರಿಯದೆಯೆ ದಾಸೋಹವೆಂದೆನುತ
ಕೋವಿದರ ಸಂಗವನುಳಿದು ಮಾ
ಯಾ ವಿಲಾಸದ ನೆಲೆಯ ನೋಡದೆ
ಸಾವುತಿಹುದೇ ದ್ವೈತ ಚಿತ್ತೈಸೆಂದನಾ ಮುನಿಪ ||೭೫||

ಉತ್ತಮರ ಸಂಗದೊಳಗೋಲಾ
ಡುತ್ತ ದುರ್ವಿಷಯಂಗಳನು ಮುರಿ
ಯೊತ್ತಿ ಸಕಲ ಚರಾಚರದ ಸುಖ ದುಃಖವನು ತಾನು
ಹೊತ್ತು ನಡೆವುತ ಪುಣ್ಯ ಪಾಪವಿ
ದೆತ್ತಣದು ತನಗೆಂಬ ಕಾಣಿಕೆ
ಯುತ್ತರೋತ್ತರ ಸಿದ್ಧಿ ಚಿತ್ತೈಸೆಂದನಾ ಮುನಿಪ ||೭೬||

ಪೊಡವಿಯೊಳಗೆ ಪುರೋಹಿತರನವ
ಗಡಿಸಿ ಧರ್ಮದ ಬಲದಿ ನಾಕಕೆ
ನಡೆವ ರಾಯರ ಹೊಯಿದಿಳಿಯಲಿಕ್ಕು ವರಧೋಗತಿಗೆ
ಕೆಡಿಸುವರು ರಾಷ್ಟ್ರವನು ಕ್ಷಾತ್ರವ
ತಡೆಗಡಿಸಿ ಚತುರಂಗಬಲವನು
ಹುಡುಹುಡಿಯ ಮಾಡುವರು  ನಿರ್ಜರರರಸ ಕೇಳೆಂದ ||೭೭||

ಬಲಿಯ ರಾಜ್ಯವ ವಿಭೀಷಣನ ಸಿರಿ
ಜಲನಿಧಿಯ ಗಾಂಭೀರ್ಯ ಬಾಣನ
ಬಲುಹು ಹನುಮಾನುವಿನ ಭುಜಬಲ ವೀರ ರಾಘವನ
ಛಲ ದಧೀಚಿಯ ದಾನ ಪಾರ್ಥನ
ಕೆಳೆ ಯುಧಿಷ್ಠಿರ ನೃಪನ ಸೈರಣೆ
ಗಳವಡುವ ಬದುಕುಳ್ಳಡದು ವಿಖ್ಯಾತಿ ಕೇಳೆಂದ ||೭೮||

ಇರುಳು ಹಗಲನವರತ ಪತಿ ಪರಿ
ಚರಿಯವನು ಮಾಡುತ್ತ ಪರಪುರು
ಷರನು ನೆನೆಯದೆ ಹಲವು ಸಂತತಿಗಳಿಗೆ ತಾಯಾಗಿ
ಇರುತ ದೇವ ಬ್ರಾಹ್ಮರನು ತಾ
ನಿರುತ ಸತ್ಕರಿಸುತ್ತಲಂತಃ
ಪುರದಲೆಸೆಯೆ ಗೃಹಸ್ಥೆಯೆನಿಸುವಳರಸ ಕೇಳೆಂದ ||೭೯||

ಮಡದಿ ನಿಜನಿಳಯವನು ಬಿಟ್ಟಡಿ
ಗಡಿಗೆ ಪರಗೃಹದೊಳಗೆ ಬಾಯನು
ಬಡಿದು ಮನೆಮನೆವಾರ್ತೆಯೆನ್ನದೆ ಬೀದಿಗಲಹವನು
ಒಡರಿಚುವ ಪತಿಯೊಬ್ಬನುಂಟೆಂ
ದೆಡಹಿ ಕಾಣದ ದಿಟ್ಟೆ ಹತ್ತನು
ಹಡೆದೊಡೆಯು ವರ್ಜಿಸುವುದುತ್ತಮ ಪುರುಷರುಗಳೆಂದ ||೮೦||

ಮುಡಿಯನೋಸರಿಸುತ್ತ ಮೇಲುದ
ನಡಿಗಡಿಗೆ ಸರಿವುತ್ತ ಮೌನವ
ಹಿಡಿದಧೋಮುಖಿಯಾಗಿ ಕಿಗ್ಗಣ್ಣಿಕ್ಕಿ ಕೆಲಬಲನ
ಬಿಡದೆ ನೋಡುತ ಮುಗುಳು ನಗೆಯಲಿ
ಜಡಿದು ಜಾರುವ ಜಾರವನಿತೆಯ
ಗೊಡವೆಗೊಳಗಾಗದವರುತ್ತಮಪುರುಷರುಗಳೆಂದ ||೮೧||

ಗುರುವಿನಲಿ ತಂದೆಯಲಿ ತಾಯಲಿ
ಹಿರಿಯರಲಿ ದೈವದಲಿ ಪಾಪದ
ಇರುಬಿನಲಿ ಗೋವಿನಲಿ ತೀರ್ಥದಲಿಮಿಗೆ ತನ್ನುವನು
ಹೊರೆವ ದಾತಾರನಲಿ ಮಂತ್ರದ
ಪರಮ ಸೇವೆಗಳಲ್ಲಿ ಧರಣೀ
ಸುರರೊಳಂಜಿಕೆ ಹಿರಿದಿರಲು ಬೇಕೆಂದನಾ ಮುನಿಪ ||೮೨||

ನೀತಿವಿದನಲ್ಲದ ಕುಮಂತ್ರಿ ವಿ
ನೀತಿಪರನಲ್ಲದ ಪುರೋಹಿತ
ನೇತಕವರಿಂದಾವ ಪುರುಷಾರ್ಥಂಗಳೆಯ್ದುವುವು
ಕಾತರಿಸಿ ಸಮರಾಂಗಣಕೆ ಭಯ
ಭೀತನಹ ಭೂಭುಜನ ದೆಸೆಯಿಂ
ಬೀತು ಹೋಗದೆ ಸಕಲಸಂಪದವರಸ ಕೇಳೆಂದ ||೮೩||

ಧರ್ಮವಾವುದು ಮೇಣು ಜಗದೊಳ
ಧರ್ಮವಾವುದು ರಾಜ ಮಂತ್ರದ
ಧರ್ಮವಾವುದು ಮಾರ್ಗವಾವುದಮಾರ್ಗವೆಂದೇನು
ಕರ್ಮವಾವುದು ವಿಧಿವಿಹಿತ ದು
ಷ್ಕರ್ಮವಾವುದದೆಂಬ ಭೇದವ
ನಿರ್ಮಿಸಾ ಸಾಕೆಂದು ಬಿನ್ನಹ ಮಾಡಿದನು ಭೂಪ ||೮೪||

ಸತಿಸಹಿತ ವಿರಚಿಸಿದ ಧರ್ಮ
ಸ್ಥಿತಿ ಸಮೃದ್ಧಿಕವಾಗಿ ಸಲುವುದು
ಪತಿಗಳಲ್ಲದೆ ತನ್ನ ಸ್ವಾತಂತ್ರ್ರ್ಯದಲಿ ಮಾಡಿದುದು
ಅತಿಶಯವನೆಯ್ದದು ಕಣಾ ಭೂ
ಪತಿಯೆ ಕೇಳಿಹಪರದ ಗತಿ ನಿಜ
ಸತಿಯ ದೆಸೆಯಿಂದಲ್ಲದೆ ಫಲಿಸುವುದು ಹುಸಿಯೆಂದ ||೮೫||

ಅತಿಥಿ ಪೂಜೆಯನುಳಿದ ಜೀವ
ಸ್ಥಿತರ ಧರ್ಮಸ್ಥಿತಿಯನಪಹರಿ
ಸುತ ಬಲದಲವನಿಯಲಿ ನಿರಿಯಣದ ಕಾಲದಲಿ
ಗತಿಗೆಡಿಸಿ ಕೊಂಡೊಯ್ದು ವೈವ
ಸ್ವತನು ನಾಯಕನರಕದೊಳಗ
ದ್ದುತ ಬಹನು ಕುಲಕೋಟಿಸಹಿತವನೀಶ ಕೇಳೆಂದ||೮೬||

ತಮ್ಮ ಕಾರ್ಯ ನಿಮಿತ್ತ ಗರ್ವವ
ನೆಮ್ಮಿದರೆ ತದ್ಗರ್ವದಿಂದುರೆ 
ದಿಮ್ಮಿತಹುದಾ ಕಾರ್ಯ ಮರ್ತ್ಯ ಚರಾಚರಂಗಳಲಿ
ನಿರ್ಮಮತೆಯಲಿ ನಡೆದುಪಶ್ರುತಿ
ಗುಮ್ಮಹವನೈದುವವೊಲೌಕುವ
ಮರ್ಮಿಗಳನೊಳಹೊಯ್ದು ಕೊಂಬುದು ಭೂಪ ಕೇಳೆಂದ ||೮೭||

ಅರಸ ಕೇಳೈ ಮಾರ್ಗ ಮೂರಾ
ಗಿರುತಿಹವು ಸಂಪೂರ್ಣ ಧನ ಗುರು
ಪರಿಚರಿಯ ಪರಿವರ್ತನೆಗಳೆಂಬಿನಿತನತಿಗಳೆದು
ತಿರುಗಿ ಬಂದೊಡೆ ನಾಲ್ಕನೆಯ ಮತ
ದೊರಕಲರಿವುದೆ ಕಲೆಗಳನು ಸಂ
ವರಿಸುವ ನರೋತ್ತಮರಿಗವನೀಪಾಲ ಕೇಳೆಂದ ||೮೮||

ಕಾದುದಕದಾಸ್ನಾನ ಸಿದ್ಧಿಯ
ವೈದಿಕಾಂಗದ ಮಂತ್ರ ಸಾಧನ
ವೇದ ಹೀನರಿಗಿತ್ತ ಫಲವಾ ಶ್ರಾದ್ಧ ಕರ್ಮದಲಿ
ಐದದಿಹ ದಕ್ಷಿಣೆಗಳೆಂಬಿವು
ಬೂದಿಯಲಿ ಬೇಳಿದ ಹವಿಸ್ಸಿನ
ಹಾದಿಯಲ್ಲದೆ ಫಲವನೀಯವು ಭೂಪ ಕೇಳೆಂದ ||೮೯||

ಇಹಪರದ ಗತಿ ದಾನ ಧರ್ಮದ
ಬಹುಳತಿಗಳನು ತತ್ತ್ವಭಾವದ 
ವಿಹಿತಪುಣ್ಯದ ಬೆಳವಿಗೆಯ ಫಲವೊಂದು ನೂರಾಗಿ
ಬಹುದು ಸದ್ವಂಶದಲಿ ಜನಿಸಿಹ
ಮಹಿಮನಿರೆ ಲೋಕಾಂತರದ ಸುಖ
ವಹುದು ಸಂತಾನಾಭಿವೃದ್ಧಿಯು ನೃಪತಿ ಕೇಳೆಂದ ||೯೦||

ಚೋರನನು ಕಾಣುತ್ತ ಮರಳಿದು
ಚೋರನೆಂದೊಡೆ ಪತಿತನನು ನಿ
ಷ್ಟೂರತನದಿಂ ಪತಿತನೆಂದೊಡೆ ಸಾಮ್ಯದೋಷವದು
ಸಾರುವುದು ಮಿಥ್ಯೋತ್ತರದಲಿ ವಿ
ಚಾರಿಸದೆ ನುಡಿದವರಿಗಿಮ್ಮಡಿ
ನಾರಕದ ಫಲ ತಪ್ಪಧವನೀಪಾಲ ಕೇಳೆಂದ ||೯೧||

ವಿನುತ ಮಧುಕೈಟಬರ ಮೇಧ
ಸ್ಸಿನಲಿ ಮೇದಿನಿಯಾದುದಿದ ನೀ
ನನುಭವಿಸುವೊಡೆ ಪುಣ್ಯಕೀರುತಿಯೆಂಬ ಪರಿಮಳದ
ಹೊನಲಿನಲಿ ತರವಿಡಿದು ಲೇಸಾ
ಗನುಭವಿಸುವುದದಲ್ಲದಿದ್ದೊಡೆ
ಮನುಜ ಮಾಂಸವ ಭಕ್ಷಿಸಿದ ಫಲವರಸ ಕೇಳೆಂದ ||೯೨||

ತನ್ನ ದಾನವಪಹರಿಸಿ ಕೊಂ
ಡನ್ಯರಿತ್ತುದಕಡ್ಡ ಬೀಳುವ
ಧನ್ಯರುಗಳರವತ್ತು ಸಾವಿರ ವರುಷ ಪರಿಯಂತ
ಖಿನ್ನವಹ ವಿಷ್ಠೆಯೊಳು ಕ್ರಿಮಿಗಳ
ಜನ್ಮದಲ್ಲಿಹರಿದನರಿದು ನೀ
ನಿನ್ನು ಕೊಟ್ಟುದನುಳುಹಿಕೊಂಬುದು ಧರ್ಮವಲ್ಲೆಂದ ||೯೩||

ಕರಣ ಮೂರರೊಳಿತ್ತ ವಸ್ತುವ
ನಿರಿಸಿಕೊಂಡರೆ ಮಾಸಮಾಸಾಂ
ತರದೊಳೊಂದಕೆ ನೂರು ಗುಣದಲಿ ಕೋಟಿ ಪರಿಯಂತ
ಹಿರಿದಹುದು ದಾನ ಪ್ರಶಂಸೆಯ
ನಿರಿಸಿಕೊಂಡಿಹ ದಾನ ನರಕವ
ನೆರಡಕೊಂದೇ ದಾನ ಕಾರಣವೆಂದನಾ ಮುನಿಪ ||೯೪||

ದ್ಯೂತದಲಿ ಮದ್ಯದಲಿ ಘನ ಕಂ
ಡೂತಿಯಲಿ ನಿದ್ರೆಯಲಿ ಕಲಹ ವಿ
ಘಾತಿಯಲಿ ಮೈಥುನದಲಾಹಾರದಲಿ ಬಳಿಸಂದು
ಕೈತವದ ಉದ್ಯೋಗದಲಿ ದು
ರ್ನೀತಿಯಲಿ ಪರಸತಿಯರಲಿ ಸಂ
ಪ್ರೀತಿ ಬಲಿವುದು ಬೆದಕ ಬೆದಕಲು ಭೂಪ ಕೇಳೆಂದ ||೯೫||

ದುಷ್ಕೃತವನೆಸಗುವರು ಫಲದಲಿ
ಕಕ್ಕುಲಿಸುವರು ಸುಕೃತವೆಂಬುದ
ಲೆಕ್ಕಿಸರು ತತ್ಫಲವನೇ ಬಯಸುವರು ಮಾನವರು
ಇಕ್ಕದೆರೆಯದೆ ಬಿತ್ತಿ ಬೆಳೆಯದೆ
ಪುಕ್ಕಟೆಯ ಸ್ವರ್ಗಾದಿ ಭೋಗವು
ಸಿಕ್ಕಲರಿವುದೆ ರಾಯ ಚಿತ್ತೈಸೆಂದನಾ ಮುನಿಪ ||೯೬||

ವರ ಶ್ರುತಿ ಸ್ಮೃತಿಗಳು ಕಣಾ ಭೂ
ಸುರರ ದೃಷ್ಟಿಗಳಿವರೊಳೊಂದಕೆ
ಕೊರತೆಯಾಗಲು ಕಾಣನೆನಿಸುವನೆರಡನರಿಯದಿರೆ
ನಿರುತವಿದು ಜಾತ್ಯಂಧನೆನಿಸುವ
ನರಸ ಕೇಳೀ ಮಾಂಸ ದೃಷ್ಟಿಗ
ಳೆರವಲೇ ಸರ್ವತ್ರ ಸಾಧಾರಣವು ಲೋಕದಲಿ ||೯೭||

ವಾಚಿಸದೆ ವೇದಾರ್ಥ ನಿಚಯವ
ನಾಚರಿಸದಾಲಸ್ಯದಿಂದು
ತ್ಕೋಚನಾಗಿ ಪರಾನ್ನ ಪೂರಿತ ತಪ್ತ ತನುವಾದ
ನೀಚನಹ ಭೂಸುರನ ಕರುಳನು
ತೋಚುವಳಲೈ ಮೃತ್ಯುವವನನು
ನಿಶಾಚರನು ದ್ವಿಜನಲ್ಲ ಚಿತ್ತೈಸೆಂದನಾ ಮುನಿಪ ||೯೮||

ಸರಸಿಜಾಕ್ಷನ ವಿಷ್ಣು ನಾಮ
ಸ್ಮರಣೆಯಲಿ ಶ್ರುತಿಮೂಲ ವಾಕ್ಯೋ
ತ್ಕರುಷೆಯಲಿ ಭೂತಕ್ಕೆ ಹಿತವಹ ನಡವಳಿಯನರಿದು
ಪರವಚನವನು ತ್ರಿಕರಣದೊಳು
ಚ್ಚರಿಸಲಾಗದು ಸರ್ವಥಾ ಸ
ತ್ಪುರುಷರಭಿಮತವಿದು ಚಿತ್ತೈಸೆಂದನಾ ಮುನಿಪ ||೯೯||

ಲೋಕಸಮ್ಮತವಾದುದನು ನಿ
ರಾಕರಿಸುವವರುಗಳು ತಾವೇ
ನಾಕೆವಾಳರೆ ಜಗಕೆ ತಮ್ಮನದಾರು ಬಲ್ಲವರು
ಬೇಕು ಬೇಡೆಂಬುದಕೆ ತಾವವಿ
ವೇಕಿಗಳು ಮೊದಲಿಂಗೆ ಪ್ರಾಮಾ
ಣೀಕರುಗಳವರಲ್ಲ ಚಿತ್ತೈಸೆಂದನಾ ಮುನಿಪ ||೧೦೦||

ಉತ್ತಮರುಗಳ ನಿಂದಿಸುತ ದು
ರ್ವೃತ್ತನಾಗಿಯಧರ್ಮ ಕೋಟಿಯೆ
ನಿತ್ಯವಿಧಿ ತನಗಾಗಿ ಧರ್ಮದ ತಾರತಮ್ಯವನು
ಎತ್ತಲೆಂದರಿಯದೆ ಜಗಕ್ಕೆ ಜ
ಡಾತ್ಮರಾಗಿಹ ವೇದಬಾಹ್ಯರ
ಮೃತ್ಯುದೇವತೆ ಮುರಿದು ಮೋದದೆ ಬಿಡುವಳೇಯೆಂದ ||೧೦೧||

ಲೋಕದೊಳಗಣ ಪುಣ್ಯ ಪಾಪಾ
ನೀಕವನು ಯಮರಾಜನಾಲಯ
ದಾಕೆವಾಳಂಗರುಹುವರು ಹದಿನಾಲ್ಕು ಮುಖವಾಗಿ
ನಾಲ್ಕು ಕಡೆಯಲಿ ಕವಿದು ಬರಿಸುವ
ರೌಕಿ ದಿನದಿನದಲ್ಲಿ ಗರ್ವೋ
ದ್ರೇಕದಲಿ ಮೈಮರೆದು ಕೆಡಬೇಡೆಂದನಾ ಮುನಿಪ ||೧೦೨||

ಚಕ್ರಿಯೊಬ್ಬಗೆ ಹತ್ತು ಕಡಿಕರ
ಲೆಕ್ಕವಂತಾ ಚಕ್ರಿ ಹತ್ತರ
ಲೆಕ್ಕದೊಳಗಾ ಧ್ವಜಿ ಕಣಾ ಧ್ವಜಿ ಹತ್ತರ ಸಮಾನ
ಮಿಕ್ಕ ವೇಸಿಗೆ ವೇಸಿ ಹತ್ತರ 
ಲೆಕ್ಕವೊಬ್ಬರಸಂಗೆ ಪಾತಕ
ವೊಕ್ಕಲಿಕ್ಕುವುದರಸುತನ ಸಾಮಾನ್ಯವಲ್ಲೆಂದ ||೧೦೩||

ಬಲುಕರಿಸಿ ಭೂಮಿಯೊಳಗೊಂದಂ
ಗುಲವನೊತ್ತಿದವಂಗೆ ಪಶು ಸಂ
ಕುಲದಲೊಂದೇ ಗೋವನಪಹರಿಸಿದ ದುರಾತ್ಮಂಗೆ
ಅಳುಪಿ ಕನ್ಯಾರತ್ನದೊಳಗೊ
ಬ್ಬಳನು ಭೋಗಿಸಿದಂಗೆ ನರಕದೊ
ಳಿಳಿವುದಲ್ಲದೆ ಬೇರೆ ಗತಿಯಿಲ್ಲೆಂದನಾ ಮುನಿಪ ||೧೦೪ ||

ದಾನವಿರಹಿತರಾಗಿ ಜನಿಸಿದ
ಮಾನವರು ದಾರಿದ್ರರದರಿಂ
ಹೀನಸುಕೃತಿಗಳಾಗಿಯದರಿಂ ಘೋರತರ ನರಕ
ಆ ನರಕದಿಂ ಮರಳಿ ಪಾತಕ
ಯೋನಿ ಮರಳಿ ದರಿದ್ರವದು ತಾ
ನೇನ ಮಾಡಿಯು ಬೆನ್ನಬಿಡದವನೀಶ ಕೇಳೆಂದ ||೧೦೫||

ಪಾಕಶಾಸನನೈದಿ ವೃತ್ರನ
ಢಾಕುಗೆಡಸಿ ದಧೀಚಿಯಸ್ಥಿಯ
ಲೌಕಿ ಹೊಯ್ಯಲು ದಾನವನ ತನು ನೀರೊಳಡಗೆಡೆಯೆ
ತೂಕ ಕುಂದಿ ಜಲಾಧಿದೇವತೆ
ಯಾ ಕಪರ್ದಿಯ ಕರುಣದಲಿ ದ
ರ್ಭಾಕೃತಿಯ ಕೈಕೊಂಡುದವನೀಶ ಕೇಳೆಂದ ||೧೦೬||

ಆದಿಯಲಿ ಕಮಲಾಸನನು ಮಧು
ಸೂದನನು ಮಧ್ಯದಲಿ ಮೇಲಣ
ಹಾದಿಯಲಿ ಗಿರಿಜೇಶನಿರೆ ತ್ರೈಮೂರ್ತಿಮಯವಾಗಿ
ಕಾದುಕೊಂಡಿಹರಖಿಳ ಲೋಕವ
ನೈದೆ ದರ್ಭಾಂಕುರದ ಮಹಿಮೆಯ
ಭೇದವನು ಬಣ್ಣಿಸುವನಾವನು ಭೂಪ ಕೇಳೆಂದ ||೧೦೭||

ಬೆರಳ ಮೊದಲಲಿ ಭೂಸುರರು ನಡು
ವೆರಳೆಡೆಗಳಲಿ ಪಾರ್ಥಿವರು ತುದಿ
ವೆರಳೊಳಗೆ ವೈಶ್ಯರುಗಳೀ ಕ್ರಮದಲಿ ಪವಿತ್ರವಿದು
ಧರಿಸಬೇಹುದು ದಕ್ಷಿಣ ಕರಾಂ
ಬುರುಹದಲಿ ದಿನದಿನದ ಸಂಧ್ಯಾಂ
ತರದ ಸಮಯದಲರಸ ಚಿತ್ತೈಸೆಂದನಾ ಮುನಿಪ ||೧೦೮||

ಮಂರೆದಪ್ಪಿದ ಜಪ ಸುಕಲ್ಪಿತ
ಧಾರೆಯುಡುಗಿದ ದಾನ ದರ್ಭಾ
ಕಾರ ವಿರಹಿತವಾದ ಸಂಧ್ಯಾವಂದನಾದಿಗಳು
ಪಾರವೆಯ್ದದ ಶೌಚ ವಿನಯ ವೀ
ಹಾರವಿಲ್ಲದ ಪೂಜೆಗಳುಪ
ಕಾರವಹುದೇ ರಾಯ ಚಿತ್ತೈಸೆಂದನಾ ಮುನಿಪ ||೧೦೯||

ದೇವತಾಸ್ಥಾನದಲಿ ವಿಪ್ರ ಸ
ಭಾವಳಯದಲಿ ರಾಜಪುರುಷರ
ಸೇವೆಯಲಿ ಗುರುಸದನದಲಿ ನದಿಯಲಿ ತಟಾಕದಲಿ
ಗೋವುಗಳ ನೆರವಿಯಲಿ ವರ ವೃಂ
ದಾವನದೊಳುಪಹತಿಯ ಮಾಡುವು
ದಾವ ಗುಣ ಗರುವರಿಗೆ ಚಿತ್ತೈಸೆಂದನಾ ಮುನಿಪ ||೧೧೦||

ದೆಸೆಗಳೇ ವಾಸಸ್ಸು ರಾಜ್ಯ
ಪ್ರಸರಣವು ನಿರ್ಲಜ್ಜೆ ಜಟೆ ರಂ
ಜಿಸುವ ಧೂಳೀ ದೂಸರದ ಗಂಗಾಧರನವೋಲು
ಎಸೆವ ಸುತರುಗಳಿಲ್ಲದಿರೆ ಶೋ
ಭಿಸುವುದೇ ಸಂಸಾರವೆಂಬುದು
ವಸುಧೆಯೊಳು ಪುಣ್ಯಾಧಿಕರುಗಳಿಗಲ್ಲದಿಲ್ಲೆಂದ ||೧೧೧||

ಗುರುಸುತನವೋಲಾಯು ನೀಲಾಂ
ಬರನವೊಲುಬಲ ದಶರಥನವೋಲ್
ಸಿರಿ ನದೀಜನವೋಲು ಶೌರ್ಯವು ರಘುಪತಿಯವೋಲು
ಅರಿವಿನಾಶನ ನಹುಷನವೊಲೈ
ಶ್ವರಿಯ ಮಾರುತಿಯವೊಲು ಗತಿ ಸಂ
ವರಿಸುವುದು ಶಿವನೊಲಿದವರುಗಳಿಗಲ್ಲದಿಲ್ಲೆಂದ ||೧೧೨||

ಕ್ಷಿತಿಯವೊಲು ಪಾವನತೆ ಕುರು ಭೂ
ಪತಿಯವೋಲಭಿಮಾನ ಲಕ್ಷ್ಮೀ
ಪತಿಯವೊಲು ಸತ್ಕೀರ್ತಿ ವಿದುರನವೋಲು ವಿಜ್ಞಾನ
ಕ್ಷಿತಿಯವೊಲು ಸೈರಣೆ ಸುಹೃತ್ಸಂ
ತತಿಯವೊಲು ಪರಿಣಾಮ ಕುಂತೀ
ಸುತರವೊಲು ಸತ್ಯಾಧಿಕರು ಲೋಕದೊಳಗಿಲ್ಲೆಂದ ||೧೧೩||

ಗಗನದಗಲದಿನುಗುವವೃಷ್ಟಿಯೊ
ಳೊಗೆದ ಕೀಲಾಲವು ಸಮುದ್ರವ
ಹೊಗುವ ನದಿ ನಾನಾ ಪ್ರಕಾರದ ರೂಪುಗಳಲೆಸೆವ
ಒಗುಮಿಗೆಯ ದೈವದ ಪದಾಂಬುಜ
ಯುಗಳದರ್ಚನೆ ಪೂಜನೆಗಳಿವು
ಜಗದುದರನನು ಮುಟ್ಟವೇ ಭೂಪಾಲ ಕೇಳೆಂದ ||೧೧೪||

ಜಲದೊಳಗೆ ವಾರಾಹ ವಿಷ್ಣು
ಸ್ಥಳದೊಳಗೆ ವಾಮನನು ವನ ಸಂ  
ಕುಳದೊಳಗೆ ನರಸಿಂಹನಾಗಿಯೆ ಭಕ್ತನಿಕರವನು
ಸಲಹುತಿಹನೊಮ್ಮೆಯು ಜಗತ್ರಯ
ದೊಳಗು ಹೊರಗೆನ್ನದನುದಿನ
ಜಲರುಹಾಕ್ಷನು ಕೃಷ್ಣ ಕೇಶವನಲ್ಲದಿಲ್ಲೆಂದ ||೧೧೫||

ಕತ್ತಲೆಯ ಕಾಲಾಟ ಸೂರ್ಯನ
ನೊತ್ತುವುದೆ ದುಷ್ಕರ್ಮ ಕೋಟಿಗ
ಳೆತ್ತ ಮುಟ್ಟುವುವೈ ಮಹಾಪುರುಷರನು ಖಗಪತಿಯ
ತತ್ತುದೇ ವಿಷ ಕೃಷ್ಣರಾಯನ
ಭಕ್ತರುಗಳನುಭವಿಸುವುದು ತಾ
ಪಥ್ಯವೇ ಜಡಜೀವರಿಗೆ ಹೇಳೆಂದನಾ ಮುನಿಪ ||೧೧೬||

ಅರುಹಬಾರದು ಮುಂದೆ ಬಹ ದಿನ
ಬಿರಿಸು ನೀನೆಚ್ಚೆತ್ತು ನಡೆ ಮೈ
ಮರೆಯದಿರು ನಿನ್ನಾತ್ಮಜರ ವೈರಾನುಬಂಧದಲಿ
ಬರಿದಹುದು ಬ್ರಹ್ಮಾಂಡ ನೀನದ
ನರಿಯೆ ಮೇಲಣ ತಾಗು ಬಾಗಿನ
ಹೊರಿಗೆ ದೈವಾಧೀನವಾಗಿಹುದೆಂದನಾ ಮುನಿಪ ||೧೧೭||

ತೆರಹುಗುಡದೆ ಧರಿತ್ರಿಯೊಳಗೀ
ಡಿರಿದ ದೈತ್ಯ ಸಹಸ್ರ ಕೋಟಿಯ
ನಿರಿದು ಭೂಭಾರವನಿಳುಹಿ ನಿರ್ಜರರ ದುಗುಡವನು
ಹರಿದು ಹಾಯಿಕಿ ಭಕ್ತರನು ನೆರೆ
ಮೆರೆಯಲೋಸುಗ ಜನಿಸಿದನು ಹರಿ
ಯರಿಯಲಾ ಶ್ರೀಕೃಷ್ಣರಾಯನು ಮನುಜನಲ್ಲೆಂದ ||೧೧೮||

ಆತನಾ ಪಾಂಡವರ ಹರಿಬವ
ನಾತು ಪಾರ್ಥನ ರಥಕೆ ತಾನೇ
ಸೂತನಾದನು ನಿಮಗೆ ಜಯವೆಲ್ಲಿಯದು ಭೂಪತಿಯೆ
ಭೂತಳವನೊಪ್ಪಿಸುವುದಸುರಾ
ರಾತಿಯನು ಮರೆಹೊಕ್ಕು ಬದುಕುವು
ದೀ ತತುಕ್ಷಣವಲ್ಲದಿರ್ದೊಡೆ ಕೆಡುವಿರಕಟೆಂದ ||೧೧೯||

ಜಲಧಿಯೊಳು ದುಗ್ಧಾಭ್ಧಿ ತೀರ್ಥಾ
ವಳಿಗಳೊಳು ಸುರನದಿ ಮುನೀಶ್ವರ
ರೊಳಗೆ ವೇದವ್ಯಾಸನಾ ವ್ರತಿಗಳೊಳು ಹನುಮಂತ
ಜಲರುಹಾಕ್ಷನೆ ದೈವದೊಳು ಕೇ
ಳುಳಿದ ಧರಣೀಪಾಲರೊಳಗ
ಗ್ಗಳೆಯನೈ ಧರ್ಮಜನು ಚಿತ್ತೈಸೆಂದನಾ ಮುನಿಪ ||೧೨೦||

ಈ ಪರಿಯ ಬೋಧೆಯಲಿ ನೃಪನನು
ತಾಪವನು ಮಾಣಿಸಿ ಕುಬುದ್ಧಿ
ವ್ಯಾಪಕನು ಧೃತರಾಷ್ಟ್ರನೆಂಬಪಕೀರ್ತಿಯನು ಬಿಡಿಸಿ
ಕಾಪಥಂಗಳ ನಿಲಿಸಿ ತತ್ವ ಕ
ಳಾಪ ವಿಮಲ ಜ್ಞಾನದುದಯದ
ರೂಪು ತಾನೆಂಬಂತೆ ಸೂರ್ಯೋದಯವ ಕಾಣಿಸಿದ ||೧೨೧||

ಧರಣಿಪನ ಸಂತೈಸಿದನು ಮುನಿ
ವರನು ತನ್ನಾಶ್ರಮಕೆ ತಿರುಗಿದ
ನುರುತರ ಪ್ರೇಮದಲಿ ಧೃತರಾಷ್ಟ್ರಾವನೀಶ್ವರನು
ಹರಿಯದಮಳಾನಂದ ರಸದಲಿ
ಹೊರೆದು ಹೊಂಪುಳಿಯೋಗಿ ಲಕ್ಷ್ಮೀ
ಧರನ ನೆನೆದು ರಾಯ ಗದುಗಿನ ವೀರನರಯಣನ ||೧೨೨||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ