ಗಿರಿಜಾ ಕಲ್ಯಾಣ - ಹರಿಹರ
ಪ್ರಥಮಾಶ್ವಾಸಂ•
ಹೈಮಾಚಲವರ್ಣನಂ. 
ಶ್ರೀಮಚ್ಚೈಲೇಂದ್ರಪುತ್ರೀ ಗುರುತರಹೃದಯಕ್ಷೀರವಾರಾಚಂದ್ರಂ 
ವ್ಯೋಮಾರ್ಕೇಂದುಕ್ಷಮಾತ್ಮಾನಲಜಲತಪಮಾನಾಷ್ಟಮೂರ್ತಿಪ್ರಸಿದ್ಧಂ 
ಪ್ರೇಮಂಭೆತ್ತೀಗೆ ಸದ್ಭಕ್ತಿಯನೆಮಗಮರಾನೀಕಮಾಣಿಕ್ಯಮೌಳಿ 
ಸ್ತೋಮಾಂಘ್ರಿದ್ಯೋತಿ ಪಂಪಾಪುರದರಸ ವಿರೂಪಾಕ್ಷನಾನಂದದಿಂದಂ ||೧||
ಶ್ರೀಹೇಮಾದ್ರೀಂದ್ರ ಚೂಡಸ್ತಿರಕರಣಸಮಾರೂಢ ಪದ್ಮಾಸನಸ್ಥಂ 
ಕೋಹಂ ಸೋಹಂಗಳೆಂಬಾ ಗಜೆಬಜೆ ಪುಗದಾನಂದಸಂವಿತ್ತು ಕಂದ 
ರ್ಪಾಹಂಕಾರಪ್ರವಿಧ್ವಂಸನಕರನಿಟಿಲಾಕ್ಷಂ ಶಿವಂ ಪಾರ್ವತೀಶಂ 
ನೇಹಂ ಕೈಮುಕ್ಕು ಪಂಪಾಪುರಪತೀದಯೇಯಿಂ ನೋಡಿ ರಕ್ಷಿಕ್ಕೆ ನಮ್ಮಂ ||೩||
ಮಂಗಳಮೂರ್ತಿ ಮಾನಿನಿ ಮಹೋಜ್ವಳೆ ಮಾನ್ಯೆ ಮಹಾಮಹೇಶನ 
ರ್ಧಾಂಗಿ ಮಹೋವಿರಾಜಿತೆ ಮಹಾಶೀವಭಕ್ತೆ ಮಹಾ ಪತಿವ್ರತೋ 
ತ್ತುಂಗೆ ಮಹಾತ್ರಿಲೋಚನೆ ಮಹಾನಿಧಿ ತನ್ನ ವಿವಾಹವರ್ಣನಾ 
ಸಂಗತಿಯೆಂದು ಮತ್ಕೃತಿಗೆ ಪಾರ್ವತಿ ಮಾಳ್ಕೆ ಮಹೋತ್ಸವಂಗಳಂ ||೪||
ಎನ್ನೀ ಕಾವ್ಯಕ್ಕೆ ನಿರ್ವಿಘ್ನದಿನತುಳನವೀನಾರ್ಥವಾಕ್ಯಪ್ರಸನ್ನೋ 
ತ್ಪನ್ನಾಲಂಕಾರಮಂ ಕೂಡುಗೆ ವಿಪುಳಕಪೋಳಸ್ಥಳಾಂತಸ್ಥಳೀ ಸಂ 
ಭಿನ್ನೋದ್ಯದ್ದಾನಧಾರಾಪ್ರಬಳಪರಿಮಳಾಸಕ್ತಭೃಂಗಾವಳೀ ಸಂ 
ಪನ್ನ ಪ್ರೋದ್ಭೂತಝಂಕಾರಿತರವಮುದಿತಾನಂದವೇಶಂ ಗಣೇಶಂ ||೫||
ಚತುರ ಚತುರ್ಮುಖನೆಲ್ಲಾ 
ಶ್ರುತಿಗಳನೊಲವಿಂದೆ ಕಲ್ತ ಶಿವನ ವಿವಾಹೋ 
ನ್ನತಿಯಾ ಕೃತಿಯೆಂದೆನೆ ಭಾ 
ರತಿಯೆನಗನುಕೂಲೆಯಾಗದಿರಲಣ್ಮುವಳೇ ||೯||
ಕೊಂಡಾಡುಗೆ ಕಲ್ತೋದುಗೆ 
ಮುಂಡಾಡುಗೆ ಮುದ್ದಿಸುಗೆ ಮರಲ್ದಪ್ಪುಗೆ ಕೈ 
ಕೊಂಡೀಕಾವ್ಯಮನಗಜೆಯ 
ಗಂಡನಲಂಪಿಂದೆ ಹಂಪೆಯ ವಿರೂಪಾಕ್ಷಂ ||೧೦||
ಅತುಳತರಾರ್ಥಮರ್ಥದನುವೃತ್ತಿಪದಂ ಪದದಿಚ್ಛೆಬಂಧಮೂ 
ರ್ಜಿತಪದಬಂಧ ಸಂಧಿ ನವರೀತಿ ಸುರೀತಿ ಗುಣಂ ಸದೃಕ್ಕಲಂ 
ಕೃತಿ ಸದಲಂಕೃತಿಪ್ರತಿಮಮೊಪ್ಪುವ ಭಾವಮನೂನ ಭಾವದು 
ನ್ನತರಸಮೆಂದು ಸತ್ಕವಿಗಳಾಲಿಸೆ ಪೇಳ್ದಪೆನೀಪ್ರಬಂಧಮಂ ||೧೧||
ಕಾವ್ಯಂ ತಾನಿದು ನವರಸ 
ಸೇವ್ಯಂ ಗಿರಿರಾಜಾಧಿನಾಥನುರುತರಕರ್ಣ
ಶ್ರಾವ್ಯಂ ವಸುಧಾತಳದೊಳ್ 
ನವ್ಯಂ ಭೂತೇಶ ಭಕ್ತಜನತಾ ಭಾವ್ಯಂ ||೧೪||
ಸೇವ್ಯಂ ಸೌಖ್ಯಂ ಪ್ರಸನ್ನಂ ನವರಸವಿಭವಂ ಪುಣ್ಯಪುಂಜಂ ಶುಭಂ ವಾ 
ಗ್ದೇವ್ಯಾವಾಸಂ ವಿವೇಕೋನ್ನತಜಲನಿಧಿ ಸಂಸಾರ ವಿಶ್ರಾಮದೇಶಂ 
ದಿವ್ಯಜ್ಞಾನೋಕ್ತಿಮಾರ್ಗಂ ನಿರತಿಶಯಪದಂ ಕೂರ್ತುಪೇಳ್ವಳ್ತಿಯಿಂದಂ 
ಕಾವ್ಯಂ ಕಲ್ಪಾಂತರ ಸ್ಥಾಯಿಯೆನಿಪ ನುಡಿ ಸತ್ಯಂ ಕವೀಶಾಧಿಪತ್ಯಂ ||೧೬||
ಸುರತರುವಿನಂತೆ ಸುಜನರ 
ಸಿರಿಯಂತೆ ಸರೋಜದಂತೆ ಸುಧೆಯಂತೆ ಸುಧಾ 
ಕರ ಕಿರಣದಂತೆ ಹಂಪೆಯ 
ಹರಿದೇವನ ಕಾವ್ಯಮಖಿಳ ಸೇವ್ಯಂ ನವ್ಯಂ ||೧೭||
ಪ್ರಿಯವಚದಂತೆ ಪುಣ್ಯತತಿಯಂತೆ ಸುಧಾಕರನಂತೆ ಕೂರ್ತ ಮು 
ಗ್ಧೆಯ ಕಡುನೇಹದಂತಮೃತದಂತೆ ವಸಂತಕನಂತೆ ಪುಷ್ಪಮಾ 
ಲೆಯ ಪೊಸಗಂಪಿನಂತೆ ಮಲಯಾನಿಲನಂತೆ ಮರಾಳನಂತೆ ಹಂ 
ಪೆಯ ಹರಿದೇವನೊಪ್ಪಿರೆ ನಿಮಿರ್ಚಿದ ಕಾವ್ಯಮಿಳಾಜನೋತಾಸವಂ ||೧೮||
ಕ್ಷುದ್ರಂಗೆ ಸಕಲಸುಜನೋ 
ಪದ್ರವರೂಪಂಗೆ ಪರರ ಕಾವ್ಯಾರ್ಥಮಂ 
ಛಿದ್ರಿಸುವಂಗತಿಶಬ್ದ ದ 
ರಿದ್ರಂಗಕ್ಕುಮೆ ನವೀನಕಾವ್ಯಾರಂಭಂ ||೨೬||
ಒಳಗಱಿಯದೆ ಸತ್ಕಾವ್ಯದ 
ಕಳೆಯಱಿಯದೆ ಲಘುತರತ್ವದಿಂ ನಾಲ್ಕೆರಡಾ 
ಯ್ಕುಳಿ ಮಾತನಾಡಿಯುಱೆ ಹೆ 
ಹೆಕ್ಕಳಮಿಕ್ಕಿದೊಡೊಲ್ವರೇ ಕವೀಂದ್ರಾಭರಣರ್ ||೨೭||
ಗಿರಿಜಾಕಲ್ಯಾಣಮಿಂತೀನುತಕೃತಿಯ ಪೆಸರ್ ಭಾಪುರೇ ! ಕಾವ್ಯನಾಥಂ 
ಗಿರಿಜಾನಾಥಂ ಕಥಾಸಂಗತಿ ವರಗಿರಿಜೋದ್ವಾಹಮೀಕಾವ್ಯಮಂ ಬಿ 
ತ್ತರದಿಂ ತಾನೊಲ್ದು ಪೇಳ್ದಂ ಶಿವಕವಿ ಹರಿದೇವಂ ಮಹೋತ್ಸಾಹದಿಂದಂ 
ಪರಮಾನಂದಾಬ್ಧಿ ಪಂಪಾಪುರದರಸ ವಿರೂಪಾಕ್ಷ ಸಾಕ್ಸಾತ್ಸುಪುತ್ರಂ ||೩೩||
ಜಾಣಂ ರಸಿಕಂ ಸುಜನ 
ಪ್ರಾಣಂ ಕವಿತಾನಿಧಾನನಧಿಕಂ ಪುಣ್ಯಾ 
ಕ್ಷೂಣಂ ವರಗಿರಿಜಾ ಕ 
ಲ್ಯಾಣಮನೊರೆದಂ ವಿವೇಕಿ ಹರಿಹರದೇವಂ ||೪೧||
ಆ ವಿಸ್ತಾರಗಭೀರವಾರಿನಿಧಿಯಿಂದಂ ಪಶ್ಚಿಮಾಂಬೋಧಿಗಂ 
ತೀವಿರ್ದೊಪ್ಪುವುದಾತ್ತಗಹ್ವರ ಗುಹಾಸಂತಾನಪರ್ಯಂತ ಗೋ 
ತ್ರಾವಾಸೋಜ್ವಲ ಗಂಡಶೈಲಶಿಖರಪ್ರೋದ್ಭೂತಭೂಜಾತಪ 
ತ್ರಾವೇಶೋನ್ನತ ಭೀಮರೂಪಧರದೇವಾಗಮ್ಯ ಹೈಮಾಚಳಂ ||೪೮||
ವಚನ : ಆ ಸಂಭ್ರಮದೊಳೊರ್ವಪುಳಿಂದಂ ತನ್ನ ನಚ್ಚಿನನಾಯಂ ಮೊಲನ ಸರುವಂ ತೋಱಿ ಕೀಱಿಟ್ಟಾಗಳ್ 
ನಡೆನಡೆದು ನಸುಬಳುಂಕು 
ತ್ತೆಡಬಲನಂ ನೋಡಿ ಕೂಡೆಯಾಘ್ರಾಣಿಸುತಂ 
ಗಿಡುವಿನ ಸರುವಿನ ದರುವಿನ 
ಮಡುವಿನ ಬಳಿಗೊಂಡು ಶುನಕನಟ್ಟಿತು ಮೊಲನಂ ||೮೫||
ಅಟ್ಟಿದೊಡೆ ತಿರುಗಿ ಮುರಿ ಮುರಿ 
ದೊಟ್ಟೈಸುತೆ ಕೊಂಕಿ ಪರಿಯುತೆಡನಂ ಬಲನಂ 
ದಿಟ್ಟಿಸುತೆ ನಿಂದು ನಿಲ್ಲದೆ 
ನಿಟ್ಟೋಟದೊಳೋಡಿತೆಸೆವಮಸಕದ ಶಶಕಂ ||೮೬||
ಧೀರಂ ಪಿಂಗಳಲೋಚನಂ ನಿಶಿತ ದಂಷ್ಟ್ರಂ ಭೀಷ್ಮವಕ್ತ್ರಂ ಘನ 
ಕ್ರೂರಂ ವಜ್ರ ಸಮಾನ ರೋಮನಿಚಯಂ ಸಂಪೂರ್ಣಕಾಯಂ ಸ್ಥಿರಂ 
ಶೂರಂ ರೌದ್ರಗಭೀರಚಿತ್ತನತಿಮಾನಿ ಸ್ವಲ್ಪಪುಚ್ಛಾನ್ವಿತಂ 
ಘೋರ್ರಣ್ಯಚರಂ ವಿರಾಜಿಸಿದುದುದ್ಯದ್ಭೀಕರಂ ಸೂಕರಂ|| ೧೦೦||
ಅಷ್ಟಮಾಶ್ವಾಸಂ•
ಕಾಮದಹನ ವರ್ಣನಂ•
ಗರಳಧರನುರಗಭೂಷಂ 
ಸರಸಿಜಭವ ಮಸ್ತಕ ಪ್ರಯುಕ್ತರಂ ಭೀ 
ಕರಭಾಳ ಲೋಚನಂ ಭ 
ಕ್ತಿರಸಮನೆಮಗೀಗೆ ಹಂಪೆಯ ವಿರೂಪಾಕ್ಷಂ ||೧||
ಕೀರತುರಗ ಸಂಘಮಯಮೀಧರೆ ಪುಷ್ಪಚಯಾಸ್ತ್ರ ಶಸ್ತ್ರ ವಿ 
ಸ್ಯಾರ ಸುಗಂಧ ವೃಂದಮಯಮೀ ಕಕುಭಂ ಮಕರಂದ ಸಾಂದ್ರ ಸಂ 
ಚಾರ ರಜೋನಿಕಾಯಮೀನಭಮೆಂದೆನೆ ಕೌತುಕಪ್ರದಂ 
ಮಾರನೃಪಾಲಸೇನೆ ನಡೆದಿತ್ತು ಜಿತೇಂದ್ರಿಯ ಚಿತ್ತಶೋಷಣಂ ||೨||
ವಚನ: ಇಂದು ನೆರೆದು ನಡೆವ ಕುಸುಮಕೋದಂಡನ ಕಮನೀಯ ಬಲದ ಹಿಂದೆ  
ಘಳಿಲನೆ ಕಂಪನದಿಂ ಮುನಿ 
ಗಳ ಕರತಳದಕ್ಷಮಾಲೆ ಬೀಳುತ್ತಿರೆ ಕೋ 
ಕಿಳಕುಳ ನಿಸ್ಸಾಳದಳಂ 
ಧಳಂ ಧಳಂ ಧಳನಿನಾದ ಮುಣ್ಮಿತ್ತಾಗಳ್ ||೩||
ವಚನ: ಇಂತು ಕಂತುರಾಜನ ಚತುರಂಗಬಲಂ ದಿವಸೇಂದ್ರನ ಮುಂದಣ ತಮಃಪಟಲದಂತೆ 
ನಂದೀಶ್ವರನ ಕೋಪದ ಕಡುಗಾಯ್ಪಿಂ ನೋಡೆ ನೋಡೆ ಮಾಯವಾಗೆ 
ನುಡಿದಂ ಮದನಂ ತನ್ನೊಳ್ 
ಬೆಡಂಗಿದೇನೀ ಗಣೇಶನೀ ಯೆಱನಿನ್ನಾ 
ಮೃಡನಂ ನಡೆದೆಸುವೊಡೆ ಸಂ 
ಗಡವಾರಾರಳವದಾರ ಶಕ್ಯಮಶಕ್ಯಂ ||೧೨||
ಅಱಿದೆಂ ನಿನ್ನಯ ಬರವಂ 
ಕಱೆಗೊರಲನ ತೀವ್ರ ತಪಮನೆಳ್ಪಟ್ಟುವುದೀ 
ತೆಱದಿಂದೆನ್ನಿಷ್ಟಮದೆ 
ನ್ನರಕೆಯದೆನ್ನಿಚ್ಛೆಯೆನ್ನಲಾಭಂ ಲೋಭಂ ||೧೭||
ನಾನಾ ವಿಧದಿಂ ರುದ್ರನ 
ನೂನತಪೋಭರದ ಬೆಸುಗೆಯಂ ಬಿಡಿಸೊಲವಿಂ 
ಶ್ರೀನಂದನ ನೀನಂಜದಿ 
ರಾನಿರ್ದಪೆನಾನೆ ರಕಷೆಯಾನೆ ಸಹಾಯಂ ||೧೮||
ಇನ್ನಂಜೆನಂಜೆನಾಹಾ 
ಉನ್ನತ ಬಲವಾಯ್ತೆನುತ್ತೆ ವಿಭ್ರಮ ಬಳಸಂ 
ಪನ್ನಂ ಕಾಮಂ ತೆಗೆದಂ 
ತನ್ನಗ್ಗದುದಂಚ ಪಂಚಬಾಣಮನಾಗಳ್ ||೪೩||
ನಳನಳಿಸುವಿಕ್ಷುಚಾಪದೊ 
ಳಳವಡೆ ನಡೆನೋಡಿ ಹೂಡುತೈದಂಬಂ ಸಂ 
ಚಳಿಸದ ಶಂಕರನ ಮನಂ 
ಚಳಿಯಿಪುದಂ ಸಾರ್ದು ಪಾರ್ದು ತೆಗೆನೆಱೆದಿರ್ದಂ ||೪೪||
ಪೊಗೆದುದು ಪೊತ್ತಿದತ್ತುಕಿಡಿಯಿಟ್ಟುದು ನಾಲ್ದೆಸೆದೋಱಿದತ್ತು ಬಾನ್ 
ಗೊಗೆದುದು ನಿಂದು ಪೊಂಬೆಳಗುಮಂ ಪರಪುತ್ತದು ಧಂಧಗಿಲ್ ಧಗಿಲ್ 
ಧಗಿಲೆನುತಟ್ಟಿ ತಟ್ಟಿದುದು ಮುಟ್ಟಿತು ಸುಟ್ಟಿತುತಿಂದು ತೇಗಿದ 
ತ್ತಗಿಯದೆ ನಿಂದ ಪೂಗಣೆಯನಂ ಹಂಪೆಯಾಳ್ದನಾ ||೪೭||
ಇಟ್ಟಣಿಸಿ ಘುಡುಘುಡಿಸಿಕಿಡಿ 
ಗುಟ್ಟಿ ಕನಲ್ದಡಸಿ ಸಿಡಿಲ ಬಳಗದ ಮುಳಿಸಂ 
ತೊಟ್ಟುದು ಬಿಸುಗಣ್ಣುರಿ ಪೊಱ 
ಮಟ್ಟುದು ಸುಟ್ಟುದು ರತೀಶನಂ ನಿಮಿಷಾರ್ಧಂ ||೪೮||
ಮೊಱೆಯೋ ಮೊಱೆಯೋ ಶಿವಧೋ 
ಕಱೆಗೊರಲನ ಕಣ್ಣ ದಾಳಿ ಕುಸುಮಾಯುಧನಂ 
ನೆಱೆ ಮುತ್ತಿತ್ತಯ್ಯೋ ಇದ 
ನಱಿವವರಿಲ್ಲಕ್ಕಟಾ ಕೃಪಾಳುಗಳಿಲ್ಲಾ||೭೫||
ಗಿರಿಜೆಯ ಪದಯುಗದೊಳ್ ರತಿ 
ಪೊರಳ್ದು ಪುಯ್ಯಲ್ಚಿ ಪೆರ್ಚಿದಳಲಿಮ್ಮಡಿಸು 
ತ್ತಿರೆ ಪಳಯಿಸುತುಂ ದುಃಖಾ 
ತುರೆ ಶೋಕಂಗೆಯ್ದು ಸುಯ್ದು ಪೊಯ್ದಳಲುತ್ತುಂ ||೭೯||
ಕರುಣಿಸು ತಾಯೇ ತವರೇ 
ಪರಿರಕ್ಷಿಸು ದಯೆಯೊಳೀಕ್ಷಿಸುಡುಗಿಸು ನೋವಂ 
ಪರಿಹರಿಸು ದಃಖಮಂ ವರ 
ಗಿರಿರಾಜತನೂಜೆ ಕಾದುಕೊಳೆನ್ನಸುವಂ ||೮೦||
ವಚನ : ಎಂದಳಲ್ವ ರತಿಯಂ ಕಂಡು ಮನಂಗೊಂಡು 
ಬೇಡುಡುಗು ಶೋಕರಸಮಂ 
ನೀಡಾಗದೆ ನಿನ್ನ ವಲ್ಲಭನನೀಶ್ರನಂ 
ಬೇಡುವೆನಾವರ್ಥದೊಳಂ 
ಮಾಡುವೆನೆಲೆ ಪರಮಹರ್ಷಮಂ ನಿನಗೆ ರತೀ ||೮೧||
ಎಂದಗಜೆ ಬೆಸಸೆ ಶೋಕಮ 
ನಂದುಡುಗುತಡಂಗಿಸುತ್ತುಮಳಲಂ ಮನದೊಳ್ 
ಸಂದಣಿಪ ದುಃಖಮಂ ಮಱೆ
 ದೊಂದಿದಳ್ ರತಿ ಭವಾನಿಯುಜ್ಜ್ವಳವಚಮಂ ||೮೨||
ನವಮಾಶ್ವಾಸಂ :
ಪಾರ್ವತೀ ತಪೋವರ್ಣನಂ ವಿರೂಪಾಕ್ಷ ಪ್ರತ್ಯಕ್ಷೀಕರಣ ವರ್ಣನಂ : 
ಕಾರುಣ್ಯಕರನಭವಂ 
ಘೋರತಪೋಮಯ ತಪಃ ಪ್ರಮೋದಾವೃತ ವಿ 
ವಿಸ್ತಾರಫಲಪ್ರದನೆಮಗೀ 
ಗೋರಂತತಿ ಭಕ್ತಿಯಂ ವಿರೂಪಾಕ್ಷ ಶಿವಂ ||೧||
ಬಂದು ತಪೋನಿವೇಶನಮನೀಕ್ಷಿಸಿ ಬರ್ಪ ನಿದಾಘಕಾಲದೊಳ್ 
ಸಂದ ನಗಾಗ್ರದಲ್ಲಿ ನಿಲವೇಳ್ಕುಮೆನುತ್ತಮೆ ನಿಂದು ಮೇನಕಾ 
ನಂದನೆ ತದ್ವಿಳಾಸಿನಿಯರಾನನಮಂ ನಡೆನೋಡಿ ಕಾಣುತುಂ 
ಸೌಂದರಿಯರ್ ಜಟಾರಚನೆಯಂ ತರದಿಂ ಭರದಿಂದೊಡರ್ಚಿದರ್ ||೨||
ವಿರಚಿಸಿದರ್ ಜಡೆಗಳನಾ 
ದರದಿಂ ದರಹಸಸಿತಬಿಸಿರುಹಾನನೆಯರ್ ಶಂ 
ಕರನರಸಿಗೆ ಗಿರಿಜಾತೆಗೆ 
ವರಭಸಿತಮನಂಗತತಿಯೊಳುದ್ಧೂಳಿಸಿದರ್ ||೩||
ವರಭಸಿತೋದ್ಧೂಳನಮಂ 
ಗಿರಿಜೆಗೆ ಸುರಸತಿಯರೊಲ್ದು ಮಾಳ್ಪೆಡೆಯೊಳ್ ಕ 
ಪುರದ ರಜದಿಂದೆ ಪುಷ್ಪೋ 
ತ್ಕರಮಾಲೆಯನೊಸೆದು ಪೊರೆವ ತೆಱನಾಯ್ತಾಗಳ್ ||೪||
ವಾರಿಜಮುಖಿಯರ್ ಸಖಿಯರ್ 
ತಾರಾಚಲನಾಥನರಸಿಗನುನಯದಿಂದಂ 
ಸಾರಮಮೃದುತರವಿಮಳವಿ 
ಸ್ತಾರಿತವಲ್ಕಲಮನೊಪ್ಪವಡಿಸುತ್ತಿರ್ದರ್ ||೫||
ಸಾಕ್ಷಾಚ್ಛಂಕರವಕ್ತ್ರಮಿ 
ವಕ್ಷಯಸುಖಮೀವ ಸುಕೃತಫಲಮಿವು ಸತ್ಯಂ 
ರಕ್ಷೆಯಿವೆನುತಗಜಗೆ ರು 
ದ್ರಾಕ್ಷಿಗಳಂ ಕೂಡೆ ತೊಡಿಸಿದರ್ ಮಾನಿನಿಯರ್ ||೬||
ವಚನ : ಇಂತು ಭಕ್ತಿಜ್ಞಾನವೈರಾಗ್ಯಯುಕ್ತಮಪ್ಪ ತಪೋಮಂಡನಂಗಳಂ ಸಂಗಡಮಿರ್ದಂಗನೆಯರ್ 
ಶೃಂಗರಿಸೆ ಮಂಗಳಮುಖಿ ಹೊಂಗಿ ಹೊರೆಯೇಱೆ 
ಸಂದಣಿಸುವ ಜಡೆ ಬೆನ್ನಂ 
ಮಂದಯಿಸಿ ಮುಸುಕುತಿಳಿಯೆ ನೀಲಾಂಬುದಮಂ 
ಪಿಂದಿಕ್ಕಿ ಮುಂದೆ ಬೆಳಗುತೆ 
ನಿಂದೆಳಮಿಂಚಿನವೊಲಗಜೆ ನೆಱೆ ಮೆಱೆದಿರ್ದಳ್ ||೭||
ಅಳವಡೆ ಮುನ್ನಂ ಪತ್ತಿದ 
ಕಳಂಕಮಂ ಪೊರ್ದದಂತೆ ನಭದಿಂದಿಳಿತಂ 
ದಿಳೆಯೊಳ್ ಶಂಭುಗೆ ಮಿಗೆ ಶಶಿ 
ಕಳೆ ತಪಮಿರ್ಪಂತೆ ಗಿರಿಜೆ ತಪದೊಳ್ ನಿಂದಳ್ ||೮||
ಆಸುರದ ಗಿರಿಜೆಯಗ್ರವಿ 
ಭಾಸುರತಪಕಂಜಿ ನಭದ ತಪನಂ ನಡೆಯು 
ತ್ತಾ ಸರಿಸಮಂ ಕರಂ ಬಿ 
ಟ್ಟೋಸರಿಸಿಯೆ ನಡೆವನೆಂದೊಡೇವಣ್ಣಿಪೆನೋ ||೧೫||
ಮ||ಸ್ರ|| ದೆಸೆಯಂ ಕಾಹೇಱಿಸುತ್ತುಂ ತೃಣಕುಲಲತೆಯಂ ಸೀದು ಕರ್ಪೇಱಿಸುತ್ತುಂ 
ರಸೆಯಂ ಸಂತಾಪಿಸುತ್ತುಂ ಜಳಭರಿತತಟಾಕಂಗಳಂ ಶೋಷಿಸುತ್ತುಂ 
ಸಸಿಯಂ ವೃಕ್ಷಾಳಿಯಂ ಸುಟ್ಟುರಿಪುತೆ ಮೃಗಮಂ ಬೇಯಿಸುತ್ತದ್ರಿಯಂ ದ 
ಳ್ಳಿಸಿ ಸೀಳುತ್ತುಂ ವಿಶಾಳಂ ದವಶಿಖಿಯವೊಲಳ್ದತ್ತಮೋಘಂ ನಿದಾಘಂ ||೧೭||
ನಡೆಯಲ್ಕೊಂದಡಿಯಿಟ್ಟು ಕಾಯ್ದ ನೆಲನಂ ಕಾಲ್ ಮುಟ್ಟಿ ಚುಯ್ಯೆಂದು ಬೆಂ 
ದೊಡೆ ಮತ್ತೊಂದಡಿಯೆತ್ತಲಾಱದಳಲಿಂ ಕಣ್ಮುಚ್ಚಿ ಹಸ್ತಾಗ್ರಮಂ 
ಕಡೆವಾಯೊಳ್ ಸೆಱೆಯಿಟ್ಟು ನೆತ್ತಿ ಬಿರಿದೆತ್ತಲ್ಮುತ್ತುಗಳ್ ಸುತ್ತಲುಂ 
ಸಿಡಿಯುತ್ತಿರ್ಪಿನಮಿರ್ದುದೊಂದತಿ ಮದೇಭಂ ಭೀಷ್ಮಧೊಳ್ ಗ್ರೀಷ್ಮದೊಳ್ ||೨೪||
ಜಯೆ ವಿಜಯೆಗಳಿಗಿದು ಪೊಸತತಿ 
ಶಯವೀ ಶಿಶಿರದೊಳದೇಂ ಭವಾನಿ ವಸಂತೋ
ದಯಸೂಚನೆಯಾದುದು ನಿ 
ಮ್ಮಯೆ ಪುಣ್ಯ ತಪಃಪ್ರಭಾವ ಕಾರಣಮಲ್ತೆ ||೮೮||
ಎನುತಿರೆ ಬಂದು ಭಾವಿಸಿ ತಪೋವನಮಂ ಶಶಿಮೌಳಿ ಪೊಕ್ಕು ಮೆ 
ಲ್ಲನೆ ಬರುತುಂ ಪಥಶ್ರಮವನಾಂತು ಬಳಲ್ದವೊಲಾಗಿ ತೇಂಕುತುಂ 
ಮನದೊಳನೂನಸಂಪದಮನೆಯ್ದುತುಮೀಕ್ಷಿಸುತಿರ್ಕೆಲಂಗಳಂ 
ಘನಮಹಿಮಂ ಸ್ವತಂತ್ರವಿಭು ಪೊರ್ದಿದನೊಂದು ವಿನೂತ್ನಚೂತಮಂ ||೮೯||
ಎಳವಾಳೆಯ ಸುಳಿಯೆಲೆಯೊಳ್ 
ನಳನಳಿಸುವ ಕಂದಮೂಲಮಂ ನವಜಂಬೂ 
ಫಳವಾಮ್ರಫಳಂ ಕದಳೀ 
ಫಳಂಗಳಂ ತೀವಿ ತಂದು ಮುಂದಿಳಿಪುತ್ತುಂ ||೯೧||
ಎಲೆಯತಿಥಿ ಬಳಲ್ದಿರೆಮ್ಮೀ 
ಫಲದಿಂದಂ ನಿಮ್ಮ ಪಸಿವನುಡುಗಿಸಿಯೆನೆ ಸೈ 
ಫಲಮಂ ಕೆಯ್ಕೊಂಡಪೆವೀ 
ಲಲನೆಯದಾರ್ ತಪವಗಣ್ಣಯವಾವನ ಪುಣ್ಯಂ ||೯೨||
ಇವರಿರವಿನ ಚಿಂತಾರತಿ 
ನಿನಗೇಕೀ ಕ್ಷುಧೆಯನೀ ಪಥಶ್ರಮಮಂ ತೀ 
ರ್ಚುವಬಗೆಯಂ ಬೇಗಂ ಮಾ 
ಡುವುದೆನೆ ನಸುನಗುತೆ ವಿಪ್ರನಂದಿಂತೆಂದಂ ||೯೩||
ಬೆಸಗೊಂಡೊಡೆ ದೋಷಮೆ ಈ 
ಪೊಸಕನ್ನೆ ತಪೋನಿರೋಧದಿಂದಿರ್ದೊಡೆ ಸೈ 
ರಿಸಬರ್ಪುದೆ ತಪಮಂ ಮಾ 
ಣಿಸುವವರಿಲ್ಲಾ ಸಹಾಯಸಂಪದಮಿಲ್ಲಾ ||೯೪||
ಎನೆ ಕೇಳ್ದಾ ಗಿರಿಜೆ ಮನದೊಳ್
 ಮುನಿಯುತ್ತುಂ ಜಪವನುಡುಗಿ ಜಪಮಾಲೆಯನೊ 
ಯ್ಯನೆ ಕೆಯ್ಯೊಳೋಸರಿಸಿ ಮೆ 
ಲ್ಲನೆ ಕಣ್ದೆಱೆಯುತ್ತೆ ಕಂಡಳಾ ವರ ವಟುವಂ ||೯೫||
ನೆಗೆವ ಜಡೆಮುಡಿಯನೊತ್ತು 
ತ್ತೊಗೆವಭುಜಾವಳಿಯನಡಂಗಿಸುತ್ತೂರುಗಳಿಂ 
ಮಿಗುವ ವೃಷೇಂದ್ರನನೌಂಕು 
ತ್ತಗಲದೆ ನಿಜಮೂರ್ತಿಯೊಳಗೆ ಗಜಬಜಿಸುತ್ತುಂ ||೯೮||
ಈ ಸುಕುಮಾರತೆಯೀ ನಿಲ 
ವೀ ಸುಕರತೆಯೀ ನವೀನಯೌವನಮದವೀ 
ಭಾಸುರತೆಯೀ ಸುಧಾಮಯ 
ವೀ ಸುಖದೊಳ್ ತಪಮಿದೆಂತು ಬಂದುದು ಮುಗ್ಧೇ ||೧೦೦||
ನಿನಗೇತಕೀ ತರುಣತೆಯೊಳ್ 
ಘನತಪವೆಡೆಗೊಂಡುದಕಟ ನವಲತೆಯಂ ಸೂ 
ರ್ಯನ ಬಿಸಿಲಿಂ ಕೊರಗಿಪ ದು 
ಷ್ಟನನೆನಗಱಿಪಬಲೆ ಸೌಕುಮಾರ್ಯಾವರಣೇ ||೧೦೧||
ಬಗೆವೆರ್ಚಿ ಕೇಳುತಿರ್ದಪೆ 
ಮಿಗೆ ಪೇಳ್ದಪೆನೆಲೆಲೆ ಧೂರ್ತವಿಪ್ರನೆ ಕೇಳ್ ಶಂ 
ಭುಗೆ ಕಾರುಣ್ಯಾಬ್ಧಿಗೆ ಶೂ 
ಲಿಗೆ ಕರುಣಂ ಪುಟ್ಟುವಂತೆ ತಪದಿಂದಿರ್ಪೆಂ ||೧೦೯||
ಎನುತಂ ಗದ್ಗದಿಸುತೆ ಪುಳ 
ಕನಿಕಾಯಮನಾನುತಶ್ರುವಂ ಕಳೆಯುತ್ತುಂ 
ಘನಹರ್ಷಚಿತ್ತೆಯಾಗು 
ತ್ತೆ ನಗೇಶ್ವರಪುತ್ರಿ ಶಂಕರನ ಪೆಸರ್ಗೊಂಡಳ್ ||೧೧೦||
ವಚನ : ಎಂದು ವಿರೂಪಾಕ್ಷಂಗೆ ತಪಮಿರ್ದಪೆನೆಂಬ ನುಡಿಯಂ ಕೇಳ್ದು ದುಷ್ಟ ಧರಾಮರ ನಟ್ಟಹಾಸದಿಂದಿಂತೆಂದಂ  
ಅಕ್ಕಕ್ಕು ಕಾಮಹರನೊಳ್ 
ಮುಕ್ಕಣ್ಣನೊಳಖಿಳವೇದ ಶಾಸ್ತ್ರಕ್ರಮಮಂ 
ಮಿಕ್ಕವನೊಳ್ ಪಿತೃವನದೊಳ್ 
ಪೊಕ್ಕವನೊಳದೆಂತು ಚಿತ್ತವಿಟ್ಟೆ ಲತಾಂಗೀ ||೧೧೧||
ಪುಲಿದೊವಲುಡಿಗೆಯ ಹಾವಿನ 
ನೆಲೆದೊಡಿಗೆಯ ನೊಸಲ ಕಣ್ಣ ಖಟ್ವಾಂಗದ ಪಂ 
ದಲೆಗಳ ಮಾಲೆಯ ಶೂಲದ 
ಕಲಿಗಂಜದೆ ಮನವನೆಂತು ಮಾಡಿದೆ ಮುಗ್ಧೇ ||೧೧೪||
ವಚನ : ಎಂದು ವಿಪ್ರಂ ನುಡಿದ ಶಿವನಿಂದೆಗೆ ಭವಾನಿ ಮುನಿದು ಕನಲ್ದು ಕಿನಿಸಿ ಕಿಡಿಕಿಡಿ ವೋಗಿ 
ತಪವದಂತಿರ್ಕೆ ಮಾಡುವ 
ಜಪವಿರ್ಕೆ ಮೃಗಾಂಕಮೌಳಿಯಂ ಭರದಿಂ ಧ್ಯಾ 
ನಿಪುದಿರ್ಕೆ ಶಂಭುವಂ ನಿಂ 
ದಿಪುದಂ ಕೇಳ್ವೊಂದು ಪಾಪವಿಂದೆನಗಾಯ್ತೇ ||೧೧೫||
ಆದ ನಿರೋಧದ ನಿಂದೆಯ 
ನಾದರಿಸದೆ ಭಸಿತದಿಂದೆ ವಿಪ್ರನಿಡೆ ಪೋ 
ಪೋದುದು ವಟುವೇಶಂ ಶಿವ 
ನಾದೊಡದೇಂ ಪುಸಿ ದಿಟಕ್ಕೆ ನಿಲ್ವುದೆ ಜಗದೊಳ್ ||೧೧೭||
ಮುಗಿಲ ತೆಱೆ ಸರಿದ ಶಶಿಯಂ 
ತೊಗೆದ ತಮಂ ತೆಗೆದ ತರುಣತರಣಿಯ ತೆಱದಿಂ 
ಪೊಗೆ ತಳ್ಗಿದಗ್ನಿಯಂತಿರೆ 
ಮಿಗೆ ವೇಷಂ ತೊಲಗಿ ಶಂಭು ತೊಳಗುತ್ತಿರ್ದಂ ||೧೧೮||
ಜಡೆಮುಡಿ ಪಂಚಮುಖಂ ನೆಗೆ 
ದುಡುಪತಿಕಳೆ ದಶಭುಜಂ ತ್ರಿಣೇತ್ರಂ ಗಾತ್ರಂ 
ಬಿಡಿದ ನವಭೂತಿ ಪುಲಿದೊವ 
ಲುಡಿಗೆಗಳಿಂ ಶಂಕರಂ ಕರಂ ಮೆಅಱೆದಿರ್ದಂ ||೧೧೯||
ವಚನ : ಆ ಸಮಯಥೊಳ್ 
ಸರಿದುದು ಪುಸಿವೇಷದ ತೆಱೆ 
ಸುರಿದುದು ಕೆಯ್ನೀರ ತೆಱದೆ ಪೂವಳೆ ಸರಿಸಂ 
ಬರಿದುದು ಜೀರಿಗೇ ಬೆಲ್ಲದ 
ಪರಿಯಿಂ ಮುಳಿದಿಟ್ಟ ಭಸಿತಮದೆ ಮದುವೆಯವೋಲ್ ||೧೨೦||
ದಶಮಾಶ್ವಾಸಂ •
ಪಾರ್ವತಿಪರಮೇಶ್ವರ ವಿವಾಹವರ್ಣನಂ •
ಶ್ರೀ ಗಿರಿಜಾವಲ್ಲಭನಖಿ
ಳಾಗಮದುರ್ಲಭನಪಾರಸುಲಭಂ ಕಾರು 
ಣ್ಯಾಗಾರಂ ಭಕ್ತಿಯನೆಮ 
ಗೀಗೆ ಸದಾವರದ ಹಂಪೆಯ ವಿರೂಪಾಕ್ಷಂ ||೧||
ಆಗಳ್ ಕಂಡಗಸುತೆ ಬೆಱ 
ಗಾಗುತೆ ಸರಿವರಿಸಿಕೊಳುತೆ ವಲ್ಕಲವಸನಾ 
ಭೋಗಮನತಿಲಜ್ಜಿತೆ ತಲೆ 
ವಾಗಿದಳನುರಾಗವೇಱಿ ಪುಳಕಿಸುತಿರ್ದಳ್ ||೨||
ಅವಳೋಕನದಿಂ ಸೆಳೆದಳ್ 
ಶಿವನಂ ಮನದಿಂದ ತೆಗೆದಳಪ್ಪಿದಳತ್ಯು
ತ್ಸವದಿಂ ಚಿತ್ತದೊಳೆಳಸುತೆ 
ತವಕಂ ಮಿಗೆ ಚುಂಬಿಸಿದಳಹಂಕಾರದೊಳಂ ||೩||
ಉಡುಪತಿಬಿಂಬಮಂ ನಗುವ ನಿರ್ಮಳವಕ್ತ್ರಮನಾಸೆ ಮಿಕ್ಕು ಧೀಂ 
ಕಿಡುವ ಕಟಾಕ್ಷಮಾಲೆಗಳನುನ್ನತಪೀನಪಯೋಧರಂಗಳಂ 
ಮೃಡನೊಸೆದೀಕ್ಷಿಸುತ್ತೆ ನಿಲಲಾಱದಪರ್ಣೆಯ ಪುಣ್ಯ ಹಸ್ತಮಂ 
ಪಿಡಿದನಶೇಷ ದೇವಕುಲಮೌಳಿವಿರಾಜಿತ ಪಾದಪಂಕಜಂ ||೪||
ಗಿರಿಸುತೆಯಳ್ಕಱಿಂ ನಡೆಯ ತಾರಗಿರೀಂದ್ರನಿವಾಸದಲ್ಲಿಗ 
ತ್ಯುರುತರಲೀಲೆಯಿಂದಮೆನೆ ದೇವ ಗಿರೀಶ್ವರನಲ್ಲಿಯೆನ್ನನಾ 
ದರದೊಳಗೆ ಬೇಡಿಯೂರ್ಜಿತವಿವಾಹಮದಚ್ಚರಿಯೆನಿಪ್ಪ ಮಾಳ್ಕೆಯಂ 
ಕರುಣಿಪುದೆಂದುದಂ ಸಲಿಸವೇಳ್ಪುದು ಬೇಳ್ಪೆನಿದಂ ಸದಾಶಿವಾ ||೫||
ಎಂದಗಜೆ ನುಡಿಯೆ ಮಹಿಮಾ 
ವೃಂದನೊಡಂಬಡುತೆ ಸುಖದೊಳಿರ್ಪವಸರದೊಳ್ 
 ಬಂದು ರತಿ ಮುಕುಳಿತಾನನೆ 
ನಿಂದುಮ್ಮಳದಿಂದೆ ಮುಂದೆ ಮೆಯ್ಯಿಕ್ಕಿರ್ದಳ್ ||೬||
ರತಿ ಮೆಯ್ಯಿಕ್ಕಿರ್ದೊಡೆ ಪಾ 
ರ್ವತಿ ಬಿನ್ನಯ್ಸಿದಳಧೀಶನ ಕೇಳೀಲಲನಾ 
ಪತಿಯಪ್ಪ ಕಾಮನಂ ಪಶು 
ಪತಿ ನಿಮ್ಮಿಂ ಪಡೆದು ಕೊಡುವೆನೆಂದಾಂ ನುಡಿದೆಂ ||೭||
ಎನೆ ಕೇಳ್ದು ಶಂಕರಂ ಗಿರಿ 
ತನಯಾಮಧುರಾಸ್ಯಮಂ ನಿರೀಕ್ಷಿಸಿ ನಗುತುಂ 
ನೆನೆದಾಗಳ್ ಕಾಮನನಂ
ಗನಾಗಿ ಕುಡುತಿರ್ಕೆ ರತಿಗೆ ಸುಖಸಂಪದಮಂ ||೮||
ಇದಿರ್ಗೊಂಡಂ ಗಿರಿರಾಜನೂರ್ಜಿತತಪೋವಿಸ್ತಾರೆಯಂ ಧೀರೆಯಂ 
ಸದಲಂಕಾರಮನಾಂತ ಪಿಂಗಳಜಟಾಸಂಪನ್ನೆಯಂ ಚೆನ್ನೆಯಂ 
ಮುದದಿಂ ವಲ್ಕಲವಸ್ತ್ರವಿಸ್ತರಿತಶೋಭಾಗಾತ್ರೆಯಂ ಸ್ತೋತ್ರೆಯಂ 
ಪಡೆದಾಹಾ ಗಿರಿಜಾತೆಯಂ ಸಕಳಕಾಂತಿಸ್ತೋಮೆಯಂ ರಾಮೆಯಂ ||೧೩||
ಭರದಿಂ ನಡೆತಂದು ರಾಜಗೃಹಮಂ ಸಂತೋಷದಿಂ ಪೊಕ್ಕು ಭಾ 
ಸ್ಕರ ಕೋಟಿಪ್ರಭೆಯಂ ಸಭಾಸದನದೊಳ್ ಬೀಱುತ್ತುವಿರ್ಪುದ್ಘವಿ 
ಷ್ಟರಂ ತುಷ್ಟಿಯನೇಱಿ ಶೈಳಪತಿಯಂ ಶರ್ವಾಣಿಯಂ ಸ್ನೇಹದಿಂ 
ದಿರೆ ಮೇನಾವಧು ಬಂದಳೀಕ್ಷಿಸಿದಳೀಷತ್ಗಾತ್ರೆಯಂ ಪುತ್ರಿಯಂ ||೧೪||
ನೆನೆಯದ ಮುನ್ನಂ ಬಂದರ್ 
ವಿನುತಾಶೇಷರ್ ಜಟಾಧರರ್ ಭಸಿತಾಂಗರ್ 
ಘನಮಹಿಮಾರುಂಧತಿ ಬೆ 
ನ್ನನೆ ಬರೆವರೆ ಸಪ್ತಋಷಿಯರತಿಮುದದಿಂದಂ ||೧೮||
ಬಂದಭವಂಗತಿಸುಖಮುಖ 
ದಿಂದಂ ಮೆಯ್ಯಿಕ್ಕಿ ಹರ ಬರ್ದುಂಕಿದೆವೆನುತುಂ 
ಸಂದಣಿಸಿ ಪುಳಕಮೆಳ್ತರೆ 
ನಿಂದಿರ್ದು ಶಶಾಂಕಮೌಳಿ ಬೆಸನೇನೆನುತುಂ ||೧೯||
ಇರೆ ಕಂಡು ಕರುಣದಿಂ ಶಂ 
ಕರನಾ ಋಷಿಗಳ್ಗೆ ಬೆಸಸಿದಂ ಪೋಪುದು ಭೂ 
ಧರನಾಥನಲ್ಲಿಗತ್ಯಾ
ದರಮಂ ಮಾಡುವುದು ಬೇಡುವುದು ಗಿರಿಸುತೆಯಂ ||೨೦||
ಮನದೊಳ್ ಪರಮೋತ್ಸಾಹಂ 
ಜನಿಯಿಸಿ ಗಿರಿರಾಜನೆಸೆವ ಋಷೀಗಳನಿದಿರ್ಗೊಂ
ಡನುನಯದಿಂ ತಂದುಚ್ಚಾ 
ಸನದೊಳ್ ಕುಳ್ಳಿರಿಸಿ ವಿನಯವಿನಮಿತನಾದಂ ||೨೨||
ವಚನ : ಅಂತು ವಿನಯದಿಂದೆಱಗಿ 
ಸುರಲೋಕದಲ್ಲಿ ಸುಖದಿಂ 
ಭದಿರುತುಂ ಬರವಿಂತು ನಿಮಗೆ ದೊರೆಕೊಂಡುದಿದೆ 
ಮ್ಮುರುತರಭಾಗ್ಯಮೆನುತ್ತುಂ 
ಗಿರಿರಾಜಂ ಸಪ್ತಋಷಿಗಳಂ ಕೇಳಲೊಡಂ ||೨೩||
ವರಮುನಿಗಳ್ ಮನದೋಂದಾ 
ದರದಿಂ ನುಡಿದರ್ ಶಿವಂ ಶಶಾಂಕಧರಂ ಶಂ 
ಕರನಭವಂ ನಿರ್ಮಾಯಂ 
ಗಿರಿಜೆಯ ಬೇಡುವೊಡೆ ತಿಳುಪಿ ಕಳುಪಿದನೆಮ್ಮಂ||೨೪||
ಗಿರಿಪತಿ ಚಾರರಂ ಕಳುಪಿ ನಿರ್ಜರಲೋಕದ ವಿಶ್ವಕರ್ಮನಂ 
ಬರಿಸಿ ನಯೋಕ್ತಿಯಿಂ ನುಡಿದು ಮನ್ನಿಸಿ ಬೇಳ್ಪುದನಿತ್ತು ಚಂದ್ರಶೇ 
ಖರನ ಮದೀಯಪುತ್ರಿಯ ವಿವಾಹಶುಭೋಚಿತಮಂಟಪಾದಿ ಭಾ 
ಸುರವರಚಿತ್ರಪತ್ರಕುಳಮಂ ನೆಱೆ ನಿರ್ಮಿಪುದಿಂದೆ ಬೇಗದಿಟ ||೨೭||
ಎನೇ ನಲಿದು ವಿಶ್ವಕರ್ಮಂ 
ನೆನೆಯದ ಮುನ್ನಂ ಸಮುದ್ರ ಮುದ್ರಿತವೀಶ್ವಾ 
ವನಿಪರಿಗತವಿಭವಾಸ್ಪದ 
ಘನಮಂಟಪವೆಸೆದುದುಮುಂದೆ ತೋಱಿತ್ತಾಗಳ್ ||೨೮||
ಭದ್ರಾನನೆಯರ್ ನವಕುಸು 
ಮದ್ರವಯುತಜಲದೆ ಮಜ್ಜನಕ್ಕೆಱೆಯುತೆ ಕ 
ಲ್ಪದ್ರುಮಶಾಖಾನ್ವಿತೆಗೆ ಹ 
ರಿದ್ರಾಪರಿಮಳಮನಂಗದೊಳ್ ಸಮನಿಸಿದರ್ ||೩೦||
ಅಂಬಿಕೆಯ ಸುಧಾವಯವ ಕ 
ದಂಬದ ಚೆಲ್ವಿಂಗೆ ದೃಷ್ಟಿಯಾಗದ ತೆಱದಿಂ 
ಬಿಂಬಾಧರೆಯರ್ ತೊಡಸಿದ 
ರೆಂಬಂತಿರೆ ಮೆಱೆದುವರರೆ ಭೂಷಣತತಿಗಳ್ ||೪೫||
ಮಿಗಿಲೆತ್ತಂ ಜ್ಯೋತಿಗಂ ಪಾವಕರುಚಿ ಎಸೆವಾ ಜ್ಯೋತಿಗಂ ಪಾವಕಂಗಂ 
ಮೃಗಲಕ್ಷ್ಮಜ್ಯೋತ್ನ್ಸೆಯೆಂತು ಕರಮಸದಳಮಾ ಜ್ಯೋತಿಗಂ ಪಾವಕಂಗಂ 
ಮೃಗಲಕ್ಷ್ಮಜ್ಯೋತ್ನ್ಸೆಗಂ ಭಾಸ್ಕರರುಚಿ ಪಿರಿದಾ ಜ್ಯೋತಿಗಂ ಪಾವಕಂಗಂ 
ಮೃಗಲಕ್ಷ್ಮಜ್ಯೋತ್ನ್ಸೆಗಂ ಭಾಸ್ಕರರುಚಿಗಮತರ್ಕ್ಯಂ ವಿರೂಪಾಕ್ಷತೇಜಂ ||೬೨||
ವಚನ : ಎಂದು ಪೊಗಳುತ್ತಿರ್ಪ ಸಮಯದೊಳ್ ಶಿವನ ವಿವಾಹಕ್ಕೆ ಸಕಲ ದೇವಕುಲಂ  ಹರ್ಷದಿಂ ಬರುತಿರ್ಪಲ್ಲಿ 
ಸುರಪತಿಯಾನೆಯಂ ಹುತವಹ ತಗರಂ ಸಮವರ್ತಿ ಕೋಣನಂ 
ನಿರೃತಿ ಮನುಷ್ಯನಂ ಜಳಧಿಪಂ ನೆಗಳಂ ಪವಮಾನನೇಣನಂ 
ಹರಸಖನಶ್ವಮಂ ಶಶಿಧರ ವೃಷಮಂ ನಲಿದೇಱಿ ಬಂದರ 
ತ್ಯುರುತರ ನಂದಿವಾಹನ ವಿವಾಹಮಹೋತ್ಸವದೇಳ್ಗೆಗಳ್ಕಱಿಂ ||೬೩||
ಸಂಗಡಿಸಿದ ಶಂಖಂ ಚ 
ಕ್ರಂ ಗದೆ ಶಾರ್ಙ್ಗಂಗಳೆಸೆಯೆ ಗರುಡಾಸನದೊಳ್ 
ಪಿಂಗದೆ ಬಂದಂ ಯುತಚತು 
ರಂಗಂ ಮಾಧವನುಮಾಧವಂ ಮಚ್ಚುವಿನಂ ||೭೦||
ಭರದಿಂದಂ ತನ್ನ ಬಲಂ 
ಬೆರಸೊಲವಿಂ ಹಂಸೆಯೇಱಿ ತೊಳತೊಳಗುತ್ತುಂ 
ಸರಭಸದಿಂದಂ ನಡೆತಂದಂ 
ಸರಸಿಜಭವನಭವನಭಯಮೀಯೆ ಸರಾಗಂ ||೭೧||
ಹರಿ ಜಯಜೀಯ ಜೀಯೆನೆಯಜಂ ಮಝಭಾಪೆನೆ ದೇವವೀಧಿ ದೇ 
ವುರೆ ಸುರರಾಜರಾಜಧಿರುರೇ ಎನೆ ಸನ್ಮುನಿಗಳ್ ಸರಾಗದಿಂ 
ಹರಿಹರ ರುದ್ರ ಭದ್ರಯೆನೆ ನಿಂದ ಗಣಾವಳಿಯಳ್ಕಱಿಂ ಮದೀ 
ಶ್ವರ ಭಲರೇ ಕಪರ್ದಿಯೆನೆ ನಂದಿಯನೇಱಿದನೆಮ್ಮ ಶಂಕರಂ ||೭೯||
ಮುತ್ತೈದೆಯರೊತ್ತೊತ್ತೆಯ
ನೊತ್ತರಿಸುತೆ ಬೆಳಗಿನೊಳಗೆ ಹೊಸಬೆಳಗಂ 
ಸುತ್ತುಂ ಸವಿನೋಟಮ ನೀ 
ಯುತ್ತುಂ ಜವನಿಕೆಯ ನೆಲೆಗೆ ಶಿವನೈತಂದಂ ||೮೨||
ವಚನ : ಆ ಸಮಯದೊಳ್ ಪಾರ್ವತಿದೇವಿ ನಿಟ್ಟೈದೆ ಮೆಟ್ಟಕ್ಕಿಯಂ ಮೆಟ್ಟಿ ತೆಱೆಯ 
ಮಱೆಯಂ ಮಱೆಗೊಂಡು ನಿಂದಿರ್ಪಲ್ಲಿ, 
ನಲ್ಲರ ನಡುವುಪಚಾರಂ 
ಸಲ್ಲಲಿತೇಕ್ಷಣದ ನಡುವೆ ಪಕ್ಷ್ಮಪುಟಂ ಸಂ 
ಫುಲ್ಲರಮಧ್ಯದೊಳ್ ಮಿಗೆ 
ಸೊಲ್ಲಿರ್ಪಂತಿರ್ದುದಲ್ಲಿ ತೆಱೆ ಹರನಿದಿರೊಳ್ 
ವಚನ : ಅಂತಿರ್ಪ ಜವನಿಕೆಯನತಿಸ್ನೇಹದಿಂ ನೋಡಿ 
ಅವಿಭೇದಪ್ರಕೃತಿಗಳೆನಿ 
ಪವಯವದಿಂದೊಪ್ಪುವರ್ಧನಾರೀಶ್ವರರೊಳ್ 
ಜವನಿಕೆ ನಡುವೊಡ್ಡಿತು ಕಾ 
ಕಾಲವಶದಿನಾವಂಗಮಾವುದಾಗದು ಧರೆಯೊಳ್ ||೮೪||
ಬೆಳಗಿನ ಬೀಜಾವಳಿಯೊ 
ರ್ಬುಳಿಯೋ ನಕ್ಷತ್ರರಾಶಿಯೋ ನವಪುಣ್ಯಂ 
ಗಳ ಪುದುವೋ ಚಂದ್ರಿಕಾತಂ 
ಡುಳವೋ ಎನೆ ತೊಳಗಿ ತೋರ್ಪ ಮೆಟ್ಟಕ್ಕಿಗಳಂ ||೮೫||
ಕಾಂತಿಮಯಂ ಶಶಿಚೂಡಂ 
ಶಾಂತಂ ನವಭೋಗಿಯೆನಿಪ ಲೀಲಾವಾಸಂ 
ಸಂತಂ ಸುರುಚಿರಹರ್ಷಮ 
ಯಂ ತಡೆಯದೆ ಮೆಟ್ಟಿ ನಿಂದ ಸಮನಂತರಥೊಳ್ ||೮೬||
ಅಮರಗುರು ಸಕಳವೇದಾ 
ಗಮಕೋವಿದನೊಲ್ದು ಭಕ್ತಿಯಿಂದಂ ಪುಣ್ಯಾ 
ಹಮೆನುತ್ತುಮಿತ್ತ ರಾಜತ್ 
ಸುಮುಹೂರ್ತಂ ಬಂದು ತೆಱೆಯನೋಸರಿಸಲೊಡಂ ||೮೯||
ಆನಿರೆ ಮತ್ತೋರ್ವಳ್ ಗಡ 
ತಾನಿರ್ಪಳ್ ಜಡೆಯೊಳೆನುತೆ ಮುಳಿದಿಡುವಂತಾ 
ಮಾನಿನಿ ಜೀರಿಗೆ ಬೆಲ್ಲದೊ 
ಳಾನುತೆ ಶಿವನುತ್ತಮಾಂಗಮಂ ಪಡೆದಿಟ್ಟಳ್ ||೯೧||
ಮೃಡನಾಗಳ್ ಗಿರಿಜೆಯ ಚೆ 
ಲ್ವಿಡಿದ ಮೊಗಂಗಂಡು ಸಾತ್ತ್ವಿಕಂ ಕೆಯ್ಕೊಂಡೊ 
ಲ್ದಿಡುವಾ ಜೀರಿಗೆ ಬೆಲ್ಲಂ 
ಸಡಿಲ್ದು ಕಂಪನದೆ ಬಿಳ್ದುವಗಜೆಯ ಪದದೊಳ್ ||೯೨||
ನಲಿನಲಿದು ಬಂದು ಗಿರಿಪತಿ 
ಯೊಲವಿಂದಂ ಗಿರಿಜೆಸಹಿತವುಂ ನಾವೆಲ್ಲವುಂ 
ನೆಲೆದೊಳ್ತಿರ್ ಬಳಿದೊಳ್ತಿರ್ 
ಸಲೆದೊಳ್ತಿರ್ ನಿಮಗೆನುತ್ತೆ ಧಾರೆಯನೆರೆದಂ ||೯೫||
ಇಳೆಯೊಳ್ ಪೆರ್ಮಳೆಯುಂ ಸಮಸ್ತಫಲಮುಂ ಸಂತೋಷಮುಂ ಧರ್ಮಸಂ 
ಕುಳಮುಂ ಸತ್ಯಮುಮೀಶ್ವರಾರಾಚನೆಯ ಸೊಂಪುಂ ಶ್ರೀಯುಮಾಯುಂ ನಿರಾ 
ಕುಳಮೆಂದು ನೆಲಸಿರ್ಪುದೊಂದು ತೆಱನಂ ತಾಂ ಮಾಳ್ಕೆ ಸರ್ವೇಶ್ವರೀ 
ವಿಳಸತ್ ಸಂಗಸುಖಾಬ್ಧಿಶೀತಕಿರಣಂ ಪಂಪಾಪುರಾಧೀಶ್ವರಂ ||೧೧೫||
ಕೃಪೆ .
ವಿದ್ವಾನ್ ಎಂ. ಜಿ. ನಂಜುಂಡಾರಾಧ್ಯ 
ಪ್ರಕಾಶನ. ಕ .ಸಾ.ಪ.
ಚಾಮರಾಜಪೇಟೆ 
ಬೇಂಗಳೂರು-18 
ನಿಂಗಯ್ಯನವರೆ,
ಪ್ರತ್ಯುತ್ತರಅಳಿಸಿಮೇರು ಕೆಲಸ ಮಾಡಿದ್ದೀರಿ, ಅನಂತಾನಂತ ಧನ್ಯವಾದಗಳು.
ಓದಿ ತಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು.
ಅಳಿಸಿ