ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಸೆಪ್ಟೆಂಬರ್ 17, 2017

ಕರ್ನಾಟಕ ಕಾದಂಬರಿ - ನಾಗವರ್ಮ

ಕರ್ನಾಟಕ ಕಾದಂಬರಿ - ನಾಗವರ್ಮ
ಕಥಾವತರಣಂ:

ಶ್ರೀಮನ್ನಾಗೇಂದ್ರ ಭೋಗಸ್ಫುರದರುಣಮಣಿದ್ಯೋತಿ ಸಂಧ್ಯಾನಿಬದ್ಧ
ಪ್ರೇಮಂ ಪ್ರೋದ್ಯತ್ತರಂಗೋಚ್ಚರದಮರನದೀಶೀಕರೋದಾರ ತಾರಾ
ರಾಮಂ ಹೇಮಪ್ರಭಾ ಪ್ರಸ್ಫುರಿತ ಗಿರಿಶ ಚಂಚಜ್ಜಟಾಜಾಲಜೂಟ
ವ್ಯೋಮ ಪ್ರೋದ್ಭಾಸಿ ಚಂದ್ರಂ ತ್ರಿಭುವನಜನಕಾನಂದಮಂ ಮಾಡುಗೆಂದುಂ ||೧||

ಸತತ ಗಭೀರವೃತ್ತಿಯಿನುದಾರತೆಯಿಂ ಜಗದೇಕ ಜೀವನ
ಸ್ಥತಿಯಿನತಿಪ್ರಸಾದಗುಣದಿಂ ರಸಭಾವವಿಳಾಸದಿಂ ಕವಿ
ಪ್ರತತಿನಿತಾಂತ ಸೇವ್ಯತೆಯನೊಂದಿ ಸರಸ್ವತಿಯಂದದಿಂ ಸರ
ಸ್ವತಿ ದಯೆಗೆಯ್ಗೆ ನಮ್ಮೊಳನುಕೂಲತೆಯಿಂದವೆ ನಿರ್ಮಳತ್ವಮಂ ||೨||

ಬಾಣಂ ವಲ್ಲಭನಕ್ಕುಮೆಂದು ಪಡೆದಾ ವಾಗ್ದೇವಿಗಬ್ಜೋದ್ಭವಂ
ಜಾಣಿಂ ಬಾಣಿಯೆನಿಪ್ಪದೊಂದು ಪೆಸರಂ ಮುನ್ನಿತ್ತನೆಂದಂದು ಪೋ
ಮಾಣಿನ್ನನ್ಯ ಕವಿಸ್ತುತಿವ್ಯಸನಮಂ ವಾಗ್ಜಾತ ಚಾತುರ್ಯಗೀ
ರ್ವಾಣಂ ತಾನೆನೆ ಸಂದ ಬಾಣನೆ ವಲಂ ವಂದ್ಯಂ ಪೆರರ್ವಂದ್ಯರೇ ||೩||


ಅವಯವದೆರ್ದೆಗೊಳ್ವುದಿದಾ
ರುವನೆಂದೊಡೆ ಬಾಣಕೃತಿ ಪುಳಿಂದನ ಸಂಧಾ
ನವನೆಯ್ದಿದತ್ತು ಮತ್ತಿನ
ಕವಿಕುಳದೆರ್ದೆಗೊಳ್ವುದೆಂಬುದೊಂದಚ್ಚರಿಯೇ ||೪||


ಸತ್ಕೃತಿ ಸಂಸ್ಕೃತದಿಂದೆ ಜ
ಗತ್ಕೌತುಕಮಾಗಿ ಮತ್ತೆ ಕರ್ಣಾಟದೊಳಂ
ಸತ್ಕೃತಿ ನಿವಹಂ ಪೊಗಳೆ ಚ
ಮತ್ಕೃತಿಯಂ ಪಡೆದು ಸೊಬಗುವಡೆದತ್ತೀಗಳ್ ||೫||


ಆಕೃತಿ ಮುನ್ನಂ ಚೆಲ್ವಿಂ
ಗಾಕರಮೆನಿಸಿರ್ದು ಮತ್ತೆ ಕನ್ನಡಿಸಿತ್ತಿ
ನ್ನೀ ಕವಿತೆಯಿಂ ಪ್ರಗಲ್ಭತೆ
ಯಾ ಕಾದಂಬರಿಯ ಸೊಬಗದೇನಚ್ಚರಿಯೋ ||೬||


ಕೃತಿಪತಿ ನರೇಂದ್ರಚಂದ್ರಂ
ಕೃತಿಯಂ ಪೇಳ್ದಂ ಬುಧಾಬ್ಜವನಕಳಹಂಸಂ
ಕೃತಿ ಕಾದಂಬರಿಯೆನೆ ಸ
ತ್ಕೃತಿ ಕಥಿತ ಕಥಾವತಾರಮೇಂ ಕೇವಳಮೇ ||೭||


ಜನತಾಧೀಶ್ವರ ಬಿನ್ನಪಂ ತ್ರಿದಶಲೋಕಕ್ಕೇಱುತಿರ್ದಾ ತ್ರಿಶಂ
ಕುನರಾಧೀಶನ ಲಕ್ಷ್ಮಿ ಶಕ್ರನ ಮಹಾಹುಂಕಾರದಿಂ ಬಿರ್ದಳೆಂ
ಬಿನೆಗಂ ವಿಶ್ರತ ದಕ್ಷಿಣಪಥದಿನೊರ್ವಳ್ ಕನ್ನೆ ಚಂಡಾಲೆ ದ
ರ್ಶನತಾತ್ಪರ್ಯದೆ ರಾಜಕೀರಸಹಿತಂ ಬಂದಿರ್ದಪಳ್ ಬಾಗಿಲೊಳ್ ||೨೨||


ವಚನ: ಎಂದು ಪಡಿಯರತಿ ಬಿನ್ನವಿಸೆ ರಾಜಾಧಿರಾಜಂ ರಾಜಲೋಕದ ಮೊಗಮಂ ನೋಡಿ
ದೋಷಮೇಂ ಬರ್ಕೆಂಬುದಂ ಚಂಡಾಲಕನ್ನೆಯಂ ಪುಗವೇಳ್ದಾಗಳ್


ತಳೆದಳೊ ಪತಿಯಂ ನೆಲೆವೆಣ್
ಬಳೆದನುರಾಗದೊಳೆ ಹೃದಯವಿದೆಂಬಿನೆಗಂ
ಥಳಥಳಿಪ ರತ್ನಕುಟ್ಟಿಮ
ತಳದೊಳ್ ಪೊಳೆದತ್ತು ರೂಪು ಭೂಪೋತ್ತಮನಾ ||೩೦||



ವಚನ : ಅಂತಿರ್ದ ಶೂದ್ರಚಕ್ರವರ್ತಿಯನಾ ಚಂಡಾಲಕನ್ಯೆ ಕಂಡು


ಅರುಣದಳೋತ್ಪಲ ಕೋಮಲ
ಕರತಳದೊಳ್ ತಳೆದದೊಂದು ಸಂಬಳಿಗೋಲಿಂ
ದಿರದೆ ಪಳಂಚಿಸಿದಳ್ ಜ
ರ್ಝರರವಮೊಗೆಯಲ್ಕೆ ನೃಪಸಭಾಕುಟ್ಟಿಮಮಂ ||೩೧||


ವಚನ : ಅಂತು ಸಂಬಳಿಗೋಲಿಂ ಸನ್ನೆಗೆಯ್ಯೆ


ಒಗೆದೊಂದು ತಾಳೆದನಿಗೇ
ಳ್ದ ಗಜವ್ರಜದಂದಮಾಗೆ ಸಂಬಳಿಗೋಲಿಂ
ದೊಗೆದೊಂದುಲುಪಿಂಗತ್ತಲೆ
ಮೊಗಮಾದುದು ಭೋಂಕನಖಿಳರಾಜಕದಂಬಂ ||೩೨||


ಜರೆಯಿಂದಟಂ ಕೂಡಿ ಬೆಳ್ಪಂ ತಳೆಯೆ ತಲೆದಳದ್ರಕ್ತ ನೀರೇಜಮಂ ಪೋ
ಲ್ತಿರೆ ಕಣ್ ವ್ಯಾಯಾಮದಿಂ ಮೆಯ್ ಸಡಿಲದೆಸೆಯೆ ಮಾತಂಗನಾಗಿರ್ದುಮೇಂ ನಿ
ಷ್ಠುರಮಲ್ತಾಕಾರಮೀತಂಗೆನಿಸಿ ಧವಳವಾಸೋನ್ವಿತಂ ಮತ್ತಮೊರ್ವಂ
ಬರುತಿರ್ದಂ ಬೆನ್ನೊಳಾತ್ಮೋಚಿತಮೆನಿಸಿದ ಚಾತುರ್ಯದಿಂದಾರ್ಯವೇಶಂ ||೩೩||


ಅರಗಿಳಿಯ ಪಸುರ್ಪಿಂದಂ
ಮರಕತಮಯವೆನಿಪ ಪೊನ್ನಪಂಜರಮಂ ಪೊ
ತ್ತಿರದೇಳ್ತಂದಂ ಚಂಡಿಕೆ
ವೆರಸಿದ ಚಂಡಾಲಬಾಲಕಂ ಮತ್ತೊರ್ವಂ ||೩೪||


ವಚನ :ಅಂತವರ್ ಬೆರಸು ಬಂದಳಂತುಮಲ್ಲದೆಯುಂ


ದನುಜರ ಕೆಯ್ಯೊಳಿರ್ದಮರ್ದನಾವಗಮೀಳ್ಕೊಳಲೆಂದು ದೈತ್ಯಮ
ರ್ದನನೆನಿಸಿರ್ದವಂ ಕಪಟದಿಂದೆ ವಿಲಾಸಿನಿಯಾದ ವೇಷಮಂ
ನೆನೆಯಿಸಿದಪ್ಪುದೀ ಪಸಿಯ ಬಣ್ಣಮಿವಳ್ಗೆನೆ ಚೆಲ್ವನಾಳ್ದು ಮೆ
ಲ್ಲನೆ ನಡೆತರ್ಪ ನೀಲಮಣಿಪುತ್ರಿಕೆಯಂದದಿನಾದಮೊಪ್ಪಿದಳ್ ||೩೫||


ಇದು ಮೂಲೋಕಕ್ಕಚ್ಚರಿಯೆನಿಸಿದುದಾಸ್ಥಾದೊಳ್ ರೂಪಮಂ ಮಾ
ಡಿದ ವಾಣೀಶಪ್ರಯತ್ನಂ ತ್ರಿಭುವನಜನಕ್ಕಾಶ್ಚರ್ಯಮಪ್ಪಂತು ರೂಪಂ
ಪದಪಿಂದಂ ಮಾಡಿಯುಂ ನೋಡಿಯುಮಸದೃಶದೊಳ್ ಗರ್ಹಿತ ಸ್ಪರ್ಶಸಂಭೋ
ಗದೊಳಿಂತೀ ದುಷ್ಟಚಂಡಾಲರ ಕುರದೊಳಗೇಗೈದನೋ ದುರ್ವಿವೇಕಂ ||೪೬||


ಇದನಱಿವೆಂ ಕಮಲಭವಂ
ಮೊದಲೊಳ್ ಮಾತಂಗಿಯೆಂದು ತಾಂ ಮುಟ್ಟದೆ ಮಾ
ಡಿದನಕ್ಕುಂ ಕೆಯ್ಯೊಳ್ ಮು
ಟ್ಟಿದೊಡಿಂತಗ್ಗಳಿಸಿ ತೋರ್ಕುಮೇ ಲಾವಣ್ಮಂ ||೪೭||


ವಚನ : ಎಂದಾ ರೂಪಿಂಗಚ್ಚರಿವಡುತಿರ್ದ ನೃಪರೂಪಚಂದ್ರನಂ ನೋಡಿ


ಸೊಗಯಿಸುವ ಪಾಲೆಯಿಂ ನಸು
ಜಗಳುತ್ತಿರೆ ಕರ್ಣಪೂರಪಲ್ಲವಂ ಚ
ಕ್ರಿಗೆ ತನ್ನ ವಿನಯದಿಂದಂ
ಪ್ರಗಲ್ಭೆಯೆನಿಸಿರ್ದ ವನಿತೆವೋಲ್ ಪೊಡಮಟ್ಟಳ್ ||೪೮||



ವಚನ : ಅಂತು ಪೊಡಮಟ್ಟು ಮಣಿಕುಟ್ಟಿಮತಳದೊಳ್ ಕುಳ್ಳಿರ್ಪುದುಮಡನೆಯಾ
ಮಾತಂಗಂ ವಿಹಂಗಸಂಗತಪಂಜರಮಂ ಪಿಡಿದು ನರೇಂದ್ರನಂ ದೇವ ಬಿನ್ನಪಮೆಂದಿಂತೆಂದಂ


ಇದು ವಿದಿತಾರ್ಥಶಾಸ್ತ್ರನಿದಶೇಷ ಪುರಾಣಕಥಾಪ್ರವೀಣನಿಂ
ತಿದು ಸಕಲಾಂಗವೇದವಿದನಿಂತಿದು ಕಾವ್ಯಕಲಾಪ್ರಗಲ್ಭನಿಂ
ತಿದು ವಿತತಾದಿ ವಾದ್ಯವಿದನಿಂತಿದು ಚಿತ್ರಕಥಾಭಿರೂಪನಿಂ
ತಿದು ಗಜ ವಾಜಿ ಲಕ್ಷಣವಿಚಕ್ಷಣನೀ ಶುಕನುದ್ಗತಾಂಶುಕಂ ||೪೯||


ಇದು ನರ್ತನಾವಲೋಕನ
ವಿದನಿದು ಪರಿಹಾಸವಚನ ನಿಚಯಾಸ್ಪದನಿಂ
ತಿದು ಸಕಲಸುಭಾಷಿತಕೋ
ವಿದನಿದು ಬಹುವಿಧಕಳಾಪಾಭಿಜ್ಞಂ ||೫೦||


ವನಿತೆಯರೊಲವಿನ ಕಲಹದ
ಮುನುಸುಗಳಂ ತಿಳಿಪುವೆಡೆಯೊಳತಿಚತುರಂ ತಾ
ನೆನಿಸಿರ್ದುಂ ವೈಶಂಪಾ
ಯನೆನಿಪುದು ಪೆಸರೊಳೀ ಶುಕಂ ಭುವನಪತೀ ||೫೧||


ದೇವರೆ ಭಾಜನಂ ವಿದಿತರತ್ನಚಯಕ್ಕೆ ದಲೆಂದು ತನ್ನ ಸ
ದ್ಭಾವದಿನೆನ್ನನಾಳ್ದನ ಮಗಳ್ ಪದಪಿಂದಮೆ ತಂದಳಿಂತಿದಂ
ದಂವರ ಪಾದಪಂಕರುಹದಲ್ಲಿಗೆ ಕನ್ಯೆಯದೊಂದು ಭಕ್ತಿಯಂ
ಭಾವಿಸಿ ನೀನಿದಂ ನೃಪತಿ ಕೈಕೊಳವೇಳ್ಪುದು ರಾಜಕೀರಮಂ ||೫೨||


ತಿರ್ಯಗ್ಜಾತಿಯೊಳೀ ಚಾ
ತುರ್ಯಮಿದೇನೆಂದು ಸಭೆಯ ಚಿತ್ತದೊಳತ್ಯಾ
ಶ್ಚರ್ಯಮೊದವುವಿನಮರಸಂ
ಗಾರ್ಯಮನೋದಿತ್ತದೊಂದನಾಶುಕರತ್ನಂ ||೫೩||


ಆರ್ಯಾ ||  ಸ್ತನಯುಗಮಶ್ರುಸ್ನಾತಂ
                   ಸಮೀಪತರವೃತ್ತಿ ಹೃದಯಶೋಕಾಗ್ನೇಃ
                   ಚರತಿ ವಿಮುಕ್ತಾಹಾರಂ
                   ವ್ರತಮಿವ  ಭವತೋ ರಿಪುಸ್ತ್ರೀಣಾಂ


ವೀರರ ವೀರ ವಿಮುಕ್ತಾ
ಹಾರಂ ಭವದರಿವಧೂಸ್ತನದ್ವಿತಯಂ ಕ
ಕಣ್ಣೀರಿಂ ಮಿಂದೆರ್ದೆಗಿರ್ಚಿಂ
ದೋರಂತಿರೆ ಬೆಂದು ಚರಿಸುತಿರ್ಪುದು ತಪಮಂ ||೫೪||


ಗಿಳಿಗೀ ಸ್ಪಷ್ಟಾಕ್ಷರೋಚ್ಚಾರಣಮೆ ಮೊದಲೊಳಾಶ್ಚರ್ಯಮೆಂಬಲ್ಲಿ ಮತ್ತ
ಗ್ಗಳಿಸುತ್ತಂ ವರ್ಣಮಾತ್ರಾಸ್ವರ ರುಚಿರಮುಮಾದಾರ್ಯೆಯಂ ವ್ಯಕ್ತದಿಂದ
ಸ್ಖಲಿತಂ ತಾನೆನ್ನನುದ್ದೇಶಿಸಿ ಸುಲಲಿತಮೆಂಬಂದದಿಂದೋದಿತೋರ್ದೀ
ಗಿಳಿಗೆಂತೋ ಬುದ್ಧಿಪೂರ್ವಂ ಮನುಜರ ತೆಱದಿಂದೋದುಮಾಶ್ಚರ್ಯಮಾಗಲ್ ||೫೫||


ಶುಕಶಾರಿಕಾದಿ ವಿಹಗ
ಪ್ರಕರಂ ಮುಂ ಕೇಳ್ದ ವಚನಮಂ ನುಡಿವುದು ಕೌ
ತುಕಮಲ್ಲದೀಗಳುಂ ಕೌ
ತುಕಮಿಂತಿಂತೇಕೆ ದೇವ ನೀನಱಿಯದುದೆ ||೫೬||


ಇದು ಪೂರ್ವಜನ್ಮಸಂಸ್ಕಾ
ರದೆ ಮೇಣ್ ಪುರುಷಪ್ರಯತ್ನದಿಂದಂ ಮೇಣಿಂ
ತುದಯಿಸುಗುಮಲ್ತೆ ಸಂಸ್ಕಾ
ರದೊಳತಿಶಯ ಚಿತ್ರಮಲ್ತು ಭಾವಿಸಿ ನೋಡಲ್ ||೫೭|


ನುಡಿ ಮುನ್ನಂ ಸ್ಪಷ್ಟಮಾಗಿರ್ದುದು ಬಳಿಕಮಿದಸ್ಪಷ್ಟಮಾಯ್ತಗ್ನಿಶಾಪಂ
ಗುಡಲಲ್ಲಿಂದಿತ್ತಲಿಂತೀ ಶುಕಸಮಿತಿಗೆ ತಚ್ಫಾಪದಿಂದಾನೆಗಳ್ಗಂ
ನುಡಿಯಲ್ಕಾಗಂದಿನಿಂ ನಾಲಗೆ ಮಡಿದುದೆನುತ್ತಿಂತು ಪೇಳುತಿರಲ್ಕಾ
ಗಡೆ ಪೊಣ್ಮಿತ್ತಲ್ಲಿ ಮಧ್ಯಂದಿನ ಸಮಯಸಮುದ್ಭೂತ ಶಂಖಪ್ರಣಾದಂ ||೫೮||


ಬಳಸಿರ್ದಭ್ರಾಳಿಯಿಂದಂ ತುಹಿನಗಿರಿ ಶಿಲಾಪಟ್ಟವೆಂಬಂತೆ ಚೆಲ್ವಾ
ದ ಲತಾಂತಂ ಶಯ್ಯಶ್ರಿತ ಸಿತ ಮೃದುಳ ಪ್ರಚ್ಛದಚ್ಛನ್ನ ಶಯ್ಯಾ
ತಲದೊಳ್ ಕಿಳ್ವಾಳವಳ್ ಮೆಲ್ಲನೆ ಕರತಳಪದ್ಮಂಗಳಿಂ ಪಾದಪದ್ಮಂ
ಗಳನಂದೊತ್ತುತ್ತಿರಲ್ ಶೂದ್ರಕ ನೃಪತಿ ಸುಖಾಸೀನನಾಗಿರ್ದನಾಗಳ್ ||೫೯||


ಏನೇನಭಿಮತಮಂ ಪೇಳ್
ನೀನಾಸ್ವದಿಸಿದೆ ದೇವಿಯರ ಮನೆಯೊಳೆನ
ಲ್ಕೇನೇನಭಿಮತಮಂ ಕೇ
ಳಾನಾಸ್ವಿದಿಸಿದೆನಿಲ್ಲ ನೃಪಕುಲತಿಲಕಾ ||೭೨||


ಕಳಕಂಠಲೋಚನಚ್ಛವಿ
ಳಾಸಮಂ ತಳೆದ ನೀಲಪಾಟಳ ಜಂಬೂ
ಫಳ ಮಧುರರಸಮನೀಂಟಿದೆ
ನಿಳೇಶ ಪಿರಿದಳ್ತಿಯಂ ಮನಂ ತಣಿವಿನೆಗಂ ||೭೩||


ಹರಿವಿದಳಿತ ಮದಗಜಕುಂ
ಭರಕ್ತಸಿಕ್ತಾರ್ದ್ರಮೌಕ್ತಿಕಪ್ರಕರದವೋಲ್
ಕರಮೆಸೆವ ದಾಡಿಮೀಬೀ
ಜರಾಜಿಯಿಂ ತೆಗೆದು ರಸವನಾಸ್ವಾದಿಸಿದೆಂ ||೭೪||


ಆದತ್ತಾಮಳಕಫಳಾ
ಸ್ವಾದನೆಯಿಂ ತೃಪ್ತದೇವ ಗಳಪುತ್ತಿರಲೇಂ
ಆದತ್ತಮೃತಂ ದೇವಿಯ
ರಾದರದಿಂ ತಮ್ಮ ಕಯ್ಯೊಳೂಡಿದರೆನ್ನಂ ||೭೫||


ವಚನ : ಅಅಂತು ನುಡಿದ ವೈಶಂಪಾಯನನಂ ನರೇಂದ್ರನಿಂತೆಂದಂ


ಎಂತೆಂತು ನುಡಿಯೆ ವಿಸ್ಮಯ
ವಂತಂತೊದವಿಪುದು ಚಿತ್ತದೊಳ್ ಕೇಳಿದನ
ತ್ಯಂತಂ ನಿನ್ನಯ ನಿಜವೃ
ತ್ತಾಂತಮನೆನಗಱಿಯೆ ಪೇಳ್ವುದತಿಕೌತುಕಮಂ ||೭೬||


ನಿನ್ನಯ ದೇಶಮೆತ್ತಣದು ಪುಟ್ಟಿದೆಯೆಂತಭಿಧಾನಮಾವನಿಂ
ದಂ ನಿನಗಾಯ್ತು ವೇದನಿವಹಸ್ಮ್ರತಿ ಶಾಸ್ತ್ರಕಳಾಕಳಾಪ ಸಂ
ಪನ್ನತೆಯೆಂತು ಬಂದುದು ಭವಸ್ಮ್ರತಿ ಪುಟ್ಟಿತೊ ಮೇಣ್ ವರಪ್ರಸಾ

ದೋನ್ನತಿಯಾದುದೋ ಮಱಸಲೆಂದು ವಿಹಂಗಮವೇಷಿಯಾದೆಯೋ ||೭೭||

ದೊರೆಕೊಂಡೆಯೆಂತು ಮುಂ ಪಂ
ಜರಬಂಧನಮಾದುದೆಂತು ನಿನಗೀ ಚಂಡಾ
ಲರ ಸಂಗತಿಯೆಂತಿಲ್ಲಿಗೆ
ಬರವಾಯಿತ್ತೆಂತು ಪೇಳಿದೆಲ್ಲಮನೀಗಳ್ ೭೮||

ತನ್ನಯ ಚಿತ್ತದೊಳ್ ಪಿರಿದು ಕೌತುಕಮಾಗಲು ತನ್ನನಳ್ಕಱಿಂ
ಮನ್ನಿಸಿ ಭೂಭುಜಂ ಬೆಸಗೊಳಲ್ ನಿಜವೃತ್ತಮನೆಲ್ಲವಂ ಕ್ಷಣಂ
ತನ್ನೊಳೆ ತಾನೆ ಭಾವಿಸುತುಮಿರ್ದ ಶುಕಂ ನುಡಿಗುಂ ನರೇಂದ್ರ ಕೇಳ್
ನಿನ್ನ ಮನಕ್ಕೆ ಕೌತುಕಮಿದಪ್ಪೊಡೆ ಪೇಳೆನೆ ತತ್ಪ್ರಪಂಚಮಂ ||೭೯||

ವಚನ : ಎಂದು ವೈಶಂಪಾಯಭಿದಾನ ಶುಕಂ ಪೇಳಲ್ತಗುಳ್ದುದದೆಂತೆನೆ

ಭುವನಪ್ರಸ್ತುತ್ಯ ವಸ್ತುಪ್ರಕರದ ಪುದುವಿಂ ಮಧ್ಯದೇಶಕ್ಕಳಂಕಾ
ರವೆನಲ್ ಚೆಲ್ವಾಗಿ ಭೂದೇವಿಯ ರುಚಿರಕಟೀಸೂತ್ರಮೋ ಪೇಳಿಮೆಂಬಂ
ತೆವೊಲೊಪ್ಪಂಬೆತ್ತು ಪೂರ್ವಾಪರ ಜಳನಿಧಿ ವೇಳಾತರಂಗೋಚ್ಚಳದ್ರ
ತ್ನವಿನಿದ್ರ ಪ್ರಾಂತದೇಶಂ ಸೊಗಯಿಪುದೆನಸುಂ ನೀಳ್ದ ವಿಂಧ್ಯಾಚಳೇಂದ್ರಂ ||೮೦||

ಅದು ನಿಖಿಲಭುವನಮಂಡಲ
ವೆದಿತಂ ತಳ್ತೆಸೆವ ದಂಡಕಾರಣ್ಯದೊಳಿ
ರ್ಪುದಗಸ್ಯ್ತಮುನಿಪನಾಶ್ರಮ
ಪದವತಿಪಾವನವಗಣ್ಯಪುಣ್ಯಕ್ಷೇತ್ರಂ ||೮೬||

ವಚನ : ಅದರೊಳ್ ಸುರಾಸುರಮಕುಟಪತ್ರಭಂಗಕೋಟಿಚುಂಬಿತ ಚರಣಾರವಿಂದನುಂ
ದಕ್ಷಿಣಾಶಾಮುಖ ವಿಶೇಷಕನುಮೆನಿಸಿದಗಸ್ತ್ಯಮಹಾಮುನಿಯಿರ್ಪನಾತನ ಮಹಾ
ಪ್ರಭಾವವಂ ಪೇಳ್ವೊಡೆ 

ಕೆಡೆದಂ ಭೋಂಕನೆ ಸಗ್ಗದಿಂದೆ ನಹುಷಂ ಪಾವಾಗಿ ಹುಂಕಾರದಿಂ
ಪೊಡೆಗಿಚ್ಚಂದವೆ ಜೀರ್ಣನಾದನಸುರಂ ವಾತಾಪಿ ತನ್ನಾಣೆಯಿ
ಟ್ಟೊಡೆ ಮಾಣ್ದಿರ್ದುದೆ ಮೇರು ಮತ್ಸರದೊಳಾದಂ ನೀಳ್ದ ವಿಂಧ್ಯಾಚಳಂ
ಕಡಲಾಪೋಶನಮಾದುದು ಮುನಿಗೆನಲ್ಕೇನೆಂಬೆನಾಶ್ಚರ್ಯಮಂ ||೮೭||

ಮರಗಟ್ಟೆಂಬಂತೆ ಸುತ್ತುಂ ಮೊದಲೊಳಜಗರಂ ಸುತ್ತ ದಿಕ್ಚಕ್ರವಾಳಾಂ
ತರಮಂ ನೋಡಲ್ಕೆ ನೀಳ್ದಂತಿರೆ ಬೆಳೆದ ಮಹಾಶಾಖೆಗಳ್ ತಾಂಡವಾಡಂ
ಬರದೊಳ್ ನಾನಾವಿಧಂ ನರ್ತಿಪ ನಟನ ಭುಜಾದಂಡಮೋ ಪೇಳಿಮೆಂಬಂ
ತಿರಮೇಯಸ್ಕಂಧಮಂ ಸಂಧಿಸೆ ಜರಠ ಮಹಾಶಾಲ್ಮಲೀವೃಕ್ಷಮಿರ್ಕುಂ ||೧೦೦||

ಭಯದೊದವಿಂದೆ ಮಾಣದೆ ನಭಸ್ಥಲದೊಳ್ ಪರಿಯುತ್ತುಮಿರ್ಪ ತ
ನ್ನಯ ಪರಿಖೇದದಿಂದೆ ಕಡುಸೇದೆಯನಾಂತ ಪತಂಗನೂಢ ವಾ
ಜಿಯ ಕಡೆವಾಯ್ಗಳಿಂದುಗುವ ಷೇನವಿತಾನದೊಳಾದಮೊಂದಿ ಸಂ
ಶಯಮನೆ ಮಾಳ್ಪುವಾತುರದ ತೂಱಲಗೊಂಬಿನ ತೂಲರಾಶಿಗಳ್ ||೧೦೧ ||

ಪಿರಿದುಂ ತೀಂಟೆತ್ತಿ ಗಂಡಸ್ಥಳಮನನುದಿನಂ ಕಾಡಸೊಕ್ಕಾನೆಗಳ್ ಬಂ
ದೊರಸಲ್ ಸುತ್ತುಂ ಜಗಲ್ತಗ್ಗಲಿಸಿದ ಮದದಿಂ ಕಳ್ಗಿ ತದ್ಗಂಧಮಂ ಕ
ವ್ವರೆಗೊಂಡೋರಂತೆ ಸುತ್ಯಿರ್ದಳಿಕುಳದೆನಸುಂ ಶೃಂಖಲಾಬದ್ಧಮೆಂಬಂ
ತಿರೆ ಕಲ್ಪಸ್ಥಾಯಿಯಾಗಿರ್ದುದು ಗಿರಿಕೂಟಸ್ಥೂಲಮಾ ವೃಕ್ಷಮೂಲಂ ||೧೦೨||

ವಚನ : ಮತ್ತಮದು ದುರ್ಯೋಧನನಂತುಪಲಕ್ಷಿತ ಶಕುನಿ ಪಕ್ಷಪಾತಮುಂ ಪದ್ಮನಾಭನಂತೆ
ವನಮಾಲೋಪಗೂಢಮುಂ ಜಳದವ್ಯೂಹದಂತೆ ನಭೋವಿಭಾಗಪ್ರಭೂತೋನ್ನತಿಯುಮೆನಿಪು
ದಂತುಮಲ್ಲದೆಯುಂ

ಭುವನತ್ರಯಮುಮನತ್ಯು
ತ್ಸವದಿಂದಂ ನೋಡಲಿದುವೆ ದಲ್ ವನದೇವೀ
ನಿವಹಕ್ಕೆ ಮಹಾಪ್ರಾಸಾ
ದವೆನಿಸಿ ತೋಱುವುದು ತನ್ನೊಳಾದುನ್ನತಿಯಿಂ ||೧೦೩||

ವಚನ : ಮತ್ತಮದು ವಿಂಧ್ಯಾಚಳಸೋದರಮುಂ ದಂಡಕಾರಣ್ಯದಧಿಪತಿಯುಂ ವನಸ್ಪತಿ
ಗಳ ನಾಯಕನುಮೆನಿಸಿತದಱಾ

ತಳಿರ್ಗಳಿಱುಂಬನಲ್ಲಿ ತುದಿಗೋಡ ಮೊದಲ್ಗಳ ತಾಣದಲ್ಲಿ ನಾ
ರ್ಗಳ ಪೊರೆಯಲ್ಲಿ ಪೋಳ್ಗಳೆಡೆಯಲ್ಲಿ ಕವಲ್ಗಣೆಯಲ್ಲಿ ಸುತ್ತಲುಂ
ಗಿಳಿಗಳ ಹಿಂಡುಗಳ್ ನೆರೆದು ಕೂಡಿಯುಮಲ್ಲಿ ಸಹಸ್ರಮುಂ ನಿರಾ
ಕುಳಮನುರಾಗದಿಂ ಪಲವು ದೇಶದೊಳಿರ್ಪುವು ಬಂದು ಭೂಪತಿ ||೧೦೪||

ಪರಿವೃತ ಪಲ್ಲವಾಂತರದೊಳುದ್ಗತ ವಲ್ಕಲಮಧ್ಯದೊಳ್ ನಿರಂ
ತರ ವಿಟಪಾಗ್ರದೊಳ್ ವಿಪುಳಕೋಟರ ಸಂಕುಳದೊಳ್ ವಿಶಾಲ ಕಂ
ಧರಗತ ಸಂಧಿಯೊಳ್ ನಿಚಿತ ನೀಡನಿಕಾಯಮನೆಯ್ದೆ ಸುತ್ತಲುಂ
ವಿರಚಿಸಿ ನಿರ್ಭಯಂ ಪಲವುಮಿರ್ಪವು ಕೀರಕುಳಂ ನಿರಾಕುಳಂ ||೧೦೫||

ಎಲವಂ ಮಡಲ್ತುದೆನೆಯೆಲೆ
ಕೆಲಕೆಲವಾಗಿರ್ದುಮೆಲೆಯ ಪುದುವಿಂದವೆ ಕ
ತ್ತಲಿಸಿದವೋಲಿರ್ಪುದಂದ
ಗ್ಗಲಿಸಿದ ಗಿಳಿವಿಂಡುಗಳ ಪೊದಳ್ದ ಪಸುರ್ಪಿಂ ||೧೦೬||

ಎಲೆ ಕಾಳಿಂದೀಪ್ರವಾಹೋತ್ಕರಮೊ ಸುರಗಜೋನ್ಮೂಲಿತಾಕಾಶಗಂಗಾ
ನಲಿನೀ ಸಂತಾನಮೋ ಮೇಣ್ ಪರಿಕಿಸೆ ಲಿನಕೃದ್ವಾಜಿರಾಜಪ್ರಭಾಮಂ
ಡಲಮೋ ಸಂಚಾರಿಗಾರುತ್ಮತ ರುಚಿರಧರಾಭಾಗಮೋ ಶಕ್ರಚಾಪಾ
ವಲಿಯೋ ಪೇಳೆಂಬಿನಂ ಪೋಪುವು ಕುಟುಕುಗೊಳಲ್ ನಿಚ್ಚಲುಂ ಕೀರಜಾಳಂ ||೧೦೭||

ಬಿಸಿಲೆಸಕದಿಂದೆ ಕೊರಗಿದ
ದೆಸೆವೆಣ್ಗಳ ಬಿಸುಪನಾಱಿಪಂತಿರೆ ಗಿಳಿಗಳ್
ಪಸುರೆಱಕೆಯೆಂಬ ಬಾಳೆಯ
ಪೊಸ ಬಿಜ್ಜಣಿಗೆಗಳಿನೆಸಗಿಪುವು ತಣ್ಣೆಲರಂ ||೧೦೮||

ಶುಕಶಕುನಿಗಳ್ ಕೃತಾಹಾ
ರಕಂಗಳತಿಪಕ್ಷಪಾತದಿಂದಂ ನಿಜಶಾ
ಬಕತತಿಯನೆಯ್ದಿ ಚಂಚು
ಪ್ರಕರದೆ ನೀಡುವುವು ಕುಟುಕನುತ್ಕಂಠಂಗಳ್ ||೧೦೯||

ಅಂತಾ ಶುಕಸಂತತಿ ನಿ
ಶ್ಚಿಂತದಿನಿರ್ದಲ್ಲಿ ಜೀರ್ಣಕೋಟರವಿರಳಾ
ಭ್ಯಂತರದೊಳಿರ್ದುದೊಂದು ಶು
ಕಂ ತನ್ನಯ ಜಾಯೆವೆರಸು ಪರಿಣತವಯಸಂ ||೧೧೦||

ಆ ವೃದ್ದಶುಕಂಗೊರ್ನೆ
ದೈವಾಧೀನದೊಳೆ ಪುಟ್ಟಿದೆಂ ಪಾಪಿಯೆನಿ
ನ್ನೇವೇಳ್ದಪೆಂ ಪ್ರಸೂತ್ಯು
ದ್ಭಾವದಿನೆಮ್ಮವ್ವೆಕಳಿದಳಂತಾಕ್ಷಣದೊಳ್ ||೧೧೧||

ವಚನ : ಅಂತುಕಳಿಯೆ ಜಾಯಾವಿಯೋಗದಿಂ ದುಃಖಿತನಾಗಿಯುಮೆನ್ನ ತಂದೆ ಪುತ್ರ
ಸ್ನೇಹದಿಂದಳವಿಗಳಿದ ಹೃದಯಶೋಕಮನಡಂಗಿಸಿರ್ದು ಮತ್ಪ್ರಾಣನ ಪ್ರಯತ್ನತತ್ಪರನಾಗಿ

ಕಳಲಲ್ ನಿಜತನುವೊಂದೆರ
ಡುಳಿಯಲ್ ಗಱಿವೀಳ್ದು ಕುಳಿಯಲಾಕರ್ಣಂ ಜೋ
ಲ್ದಿಳಿಯಲ್ ಮುಯ್ವುಗಳಾವಗೆ
ವಳಿಯಲ್ ಬಲವಾಱದಂತು ಮುಪ್ಪಿಂ ಪಾಱಲ್ ||೧೧೨||

ವಚನ : ಅಂತು ಮುಪ್ಪಿಂ ಪಾಱಲಾರದೆ

ಪಕ್ಕಿಗಳಲ್ಲಿ ತಿಂದುಳಿದ ನೆಲ್ಗಳನುಚ್ಚುಗಳಂ ಫಲಂಗಳಂ
ಪಕ್ಕದೊಳಿರ್ದ ಗೂಡುಗಳಿನಾಯ್ದೆನಗಿಕ್ಕವನಳ್ಕಱಿಂದೆ ತಾಂ
ಮಿಕ್ಕುದನುಂಡಪಂ ಕಡಿದು ನೆಲ್ಗಳನಂಟದ ತಾಳೆವಣ್ಣ ಬ
ಣ್ಣಕ್ಕೆಣೆಯಾದ ಚಂಚುಪುಟದಿಂದಮೆ ಮಜ್ಜನಕಂ ಮಹೀಪತೀ ||೧೧೩||

ವಚಚನ : ಅಂತಾತನೆನಗೆ ಕುಟುಕನಿಕ್ಕಿ ಮಿಕ್ಕುದಂ ತನಗಶನಮಂ ಮಾಡಿ ಜೀವಿಸುತ್ತುಮಿರಿಯಿರೆ

ಅರುಣಮರೀಚಿರಕ್ತ ನಳಿನೀದಳದಿಂದೆಸೆವಭ್ರಪಂಕಜಾ
ಕರತಟದಿಂದಮೀಗಳಪರಾಬ್ಧಿಗೆ ಬರ್ಪ ಜರನ್ಮರಾಳವೋ
ಪಿರಿದುಮೆನಲ್ಕೆ ಮೆಲ್ಲನಿಳಿದತ್ತು ವಿಯತ್ತಳ ಮಧ್ಯಭಾಗದಿಂ
ಪರಿಣತರಂ ರೋಮತತಿ ಪಾಂಡುರಮಂದು ಶಶಾಂಕಮಂಡಲಂ ||೧೧೪||

ಅದು ಸಂಧ್ಯೋಪಾಸ್ತಿಗೆ ಪೊ
ರ್ದಿರ್ದಪುದು ಮಾನಸ ಸರಕ್ಕಮೀಗಳಿಲೆಂಬಂ
ದದಿನುತ್ತರಾಶೆಯಂ ಪೊ
ರ್ದಿದತ್ತು ಸಪ್ತರ್ಷಿಮಂಡಲಂ ಕ್ರಮದಿಂದಂ||೧೧೫||

ಕರಗಿರ್ದಪುವೋತರದಿಂ
ದರಗಿನ ಸರಿಗೆಗಳಿವಲ್ಲವಾನೆಯ ನೆತ್ತರ್
ಪೊರೆದಿರ್ಪುವೊ ಸಿಂಹದ ಸಿಂಹದ ಕೇ
ಸರಂಗಳೆನಲೊಗೆದವರುಣತರಣಿಕರಂಗಳ್ ||೧೧೬||

ಹರಿದಶ್ವಂ ಬಂದಪಂ ವಾಹಳಿಗೆನುತರುಣಂ ವ್ಯೋಮವಿಸ್ತೀರ್ಣರಂಗಾಂ
ತರವೀಧೀಚ್ಛನ್ನತಾರಾಸ್ಫಟಿಕಶಕಲಮಂ ನೂಂಕುತಂ ಚಾರುಚಾಮೀ
ಕರಯಂತ್ರವ್ರಾತದಿಂ ಕುಂಕುಮ ಘನರಸಮಂ ಸಿಂಪಿಸುತ್ತಿರ್ದನೆಂಬಂ
ತಿರಲೆತ್ತಂ ನೀಳ್ದು ಪೊಣ್ಮಿತ್ತುದಯಸಮಯದೊಳ್ ಶೋಣಸೂರ್ಯಾಂಶುಜಾಲಂ ||೧೧೭||

ಕುಡುಕುಗೊಳವೋಪ ಶಕುನಿಗ
ಳೊಡವೋಗಲ್ ಜನಕನಾಱದಿರ್ದೊಡಮಾನುಂ
ಮಿಡುಕಲಣಮಱಿಯದಿರ್ದೆಂ
ಪೊಡರದ ಗಱಿಯವನೆ ತನ್ನ ತಂದೆಯ ಕೆಲದೊಳ್ ||೧೨೭||

ಚಕಿತೋದ್ಯತ್ಪಕ್ಷ ಪಕಷಸ್ವನದೊಳಮರ್ದ ಕೋಳಾಹಳಧ್ವಾನದಿಂ ಕೊ
ರ್ವಿ ಕರೀಂದ್ರೋದ್ಭತ ಫೂತ್ಕಾರದೆ ಪುದಿದು ಗುಹಾನೀಕಸುಪ್ತೋತ್ಥಸಿಂಹ
ಪ್ರಕರಪ್ರೋನ್ನಾದದಿಂ ತಳ್ತುಪಗತ ವನದೇವಿಚಯಸ್ವಾಂತಸಂತ್ರಾ
ಸಕರಂ ಪೊಣ್ಮಿತ್ತು ವಿಂಧ್ಯಂ ನಡುಗೆ ಘನರವಸ್ಪರ್ಧಿ ಕೈರಾತಘೋಷಂ ||೧೨೮||

ಅಂತಶ್ರುತ ಪೂರ್ವಧ್ವನಿ
ಯಂ ತೊಟ್ಟನೆ ಕೇಳ್ದು ಕಿವಿಯೊಡದಪುದೆಂ
ಬಂತಾಗೆ ಘೀಳಿಡಲ್ವೊ
ಕ್ಕೆತಂದೆಯ ಶಿಥಿಲ ಪಕಷಸಂಪುಟದೊಳ್

ವಚನ : ಅಂತಾ ಸಮಯದೊಳ್

ಇದೆ ಪರ್ವಿತ್ತು ಮತಂಗಜೋಚ್ಚಳಿತ ಕಂಜಾಳೀರಜಸ್ತೋಮಮಿಂ
ತಿದೆ ತೀಡಿತ್ತು ವರಾಹಸಂಕುಳದಳನ್ಮುಸ್ತೋತಕರಾಮೋದಮಿಂ
ತಿದೆ ಬಂದಿತ್ತಿಭಯೂಥನಾಥದಳಿತೋದ್ಯತ್ಸಲ್ಲಕೀಗಂಧಮಿಂ
ತಿದೆ ತೋಱಿತ್ತು ಮದಾಂಧಸೈರಿಭಖರಪ್ರೋದ್ದೂತರೇಣುವ್ರಜಂ ||೧೩೦||

ರುರುಗಣಮಿತ್ತಲಿತ್ತ ವಿಚರನ್ಮೃಗಸಂಕುಳಮಿತ್ತಲಿತ್ತ ಸೂ
ಕರಚಯಮಿತ್ತಲಿತ್ತ ವನಸೈರಿಭಸಂಕುಲಮಿತ್ತಲಿತ್ತ ಕುಂ
ಜರಕುಳಮಿತ್ತಲಿತ್ತವೆ ಶಿಖಂಡಿಕುಲಸ್ವನಮಿತ್ತಲಿತ್ತ ಕೇ
ಸರಿರವಮಿತ್ತಲಿತ್ತಮೆನುತಿರ್ಪ ರವಂ ನೆಗೆದತ್ತು ಸುತ್ತಲುಂ ||೧೩೧||

ಆಂ ಜನಕನೆಱೆಕೆಯೊಳಗಿ
ರ್ದಂಜುತ್ತಂ ಕೇಳುತಿರ್ದೆನಿರ್ಪನ್ನವರಂ
ಬಿಂಜದಡವಿಯೊಳಗೆಲ್ಲಂ
ನಂಜಿನಮಳೆಗೊಂಡು ಬಿಟ್ಟ ತೆರನಾಯ್ರಾಗಳ್ ||೧೩೬||

ಅದು ಮೊಳಗು ಮಾಣ್ದ ಕಾರ್ಗಾ
ಲದ ಮುಗಿಲದು ಕಡೆಪಮುಡುಗಿದಂಬುಧಿಯೆಂಬಂ
ದದಿನಡವಿ ಮೂಗುವಟ್ಟಿ
ರ್ದುದು ಬೇಟೆಯೊಳಾದ ಕಳಕಳಂ ಪಿಂಗುವಿನಂ ||೧೩೭||

ವಚನ : ಅಂತಾ ಕಳಕಳರವಮಡಂಗಲೊಡನೆಯುದ್ಭೂತವಿಸ್ಮಯನಾಗಿ ತಂದೆಯಿರಿಸಿದ ಪಕ್ಷ
ಸಂಪುಟದೊಳಗಣಿಂ ಪೊಱಮಟ್ಟಿದೇನನುತ್ತಮಾಂ ಪೊಳಲೊಳಗಿರ್ದು ಮೆಲ್ಲನೆ ನಿಳ್ಕಿನಿಳ್ಕಿದೆಪ್ಪಳಿಸಿ
ನೋಳ್ಪನ್ನೆಗಮಲ್ಲಿ

ಇದು ನವಕಾಳಮೇಘಚಯಮಲ್ಲಿದು ಘೋರ ಮಹಾಂಧಕಾರಮ
ಲ್ಲಿದು ವಿಚರತ್ತಮಾಳವನಮಲ್ಲಿದು ಘೋರಕೃತಾಂತಸೈನ್ಯಮ
ಲ್ಲಿದು ಕಲಿಕಾಲ ಬಂಧುಕುಲಮಲ್ಲಿದು ದುರ್ಧರ ದಾನೌಘಮೆಂ
ಬುದನೆನಿಸುತ್ತಮಲ್ಲಿ ಬರುತಿರ್ದನಂಯಕಿರಾತಸಂಕುಳಂ|| ೧೩೮||

ವಚನ: ಅಂತುತ್ಪಾತವೇತಾಳಪಡೆಯಂತೆ ಭಯಂಕರಾಕಾರಮಾದ ಬೇಡವಡೆಯ ಶಡುವೆ

ಕರ್ಬೊನ್ನಿಂದಂ ವಿಧಾತ್ರಂ ಸಮೆದನಿವನನೆಂಬೊಂದು ಕಾರ್ಕಶ್ಯದಿಂದಂ
ಸರ್ಬಾಂಗಂ ಕಣ್ಣಗುರ್ವಂ ಪಡೆಯಲಡವಿಯಂ ಕೂಡೆ ಕಾಳಿಂದಿಯೆತ್ತಂ
ಪರ್ಬಿದತ್ಯೆಂಬಂತೆ ನೇಳೋತ್ಪಳದಳ ರುಚಿರಶ್ಯಾಮದೇಹಾಂಶು ಪರ್ಬ
ಲ್ಕೊರ್ಬಂ ಬಂದಂ ಪುಳಿಂದಪ್ರಕರ ಬಹುಳ ಸೇನಾಪರೀತಂ ಕಿರಾತಂ ||೧೩೯||

ಪಡೆವಂ ವಿಂಧ್ಯನಗೇಂದ್ರ
ಕ್ಕೊಡವುಟ್ಟಿದನಂತಕಂಗೆ ನಂಟಂ ಪಾಪ
ಕ್ಕೊಡನಾಡಿ ಕಲಿಗೆನಿಪ್ಪಂ
ಪೊಡವಿಯೊಳಿನ್ನಾತನಿಂ ಭಯಂಕರನಾವಂ ||೧೪೩||

ಆತನ ಪೆಸರಂ ಕೇಳ್ದೆಂ
ಮಾತಂಗಕನೆಂದು ಬಳಿಯಮಾ ಶಬರಂ ಸಂ
ಜಾತಶ್ರಮಂ ಕಿರಾತಸ
ಮೇತಂ ಶಾಲ್ಮಲೀಮಹೀಜಮಂ ಸಾರ್ತಂದಂ  ||೧೪೪||

ಜರೆಯಿಂದಂ ಪುರಬು ಜೋಲಲ್ ಯೆರೆ ತರತರದಿಂದುಣ್ಮಿ ಪೊಣ್ಮಲ್ಕೆ ಗಂಟಲ್
ಮುರಿದತ್ತೊಂದೊನದಱೊಳ್ ತಳ್ತೊಗೆಯೆ ಸೆರೆಗಳೊತ್ತಂದಿಂ ಬರ್ಪ ಕೆಮ್ಮಿಂ
ಬಿರಿಯಲ್ ಬೆಟ್ಟಂಗಳಾ ಬಟ್ಟೆಯೊಳಿನಿತಡಗುಂ ತನ್ನ ಕೈಸಾರದೆಂದಾ
ತುರಿಸುತ್ತಂ ಭ್ರಾಂತಿಯಿಂದೆನ್ನ ಮರದಡಿಯೊಳ್ ನಿಂದನೊರ್ವಂ ಪುಳಿಂದಂ ||೧೪೬||

ಬೇಡಿದೊಡಕೀಯದೈದೆ ಬಿಯದರ್ ಮೃಗಮಾಂಸವ ರಕ್ತವರ್ಣದಿಂ
ಕೂಡಿದ ಕಣ್ಗಳಿಂ ಶುಕನಿಕಾಯದ ಜೀವಮನೆಯ್ದೆ ಪೀರ್ವವೋಲ್
ಗೂಡುಗಳಂ ತಗುಳ್ದೆಣಿಪವೋಲ್ ವಿಹಗಾಮಿಷ ಲಾಭಲೋಲುಪಂ
ನೋಡಿದನಾ ಜರಚ್ಛಬರನಾಯಕನಾ ಮರನಂ ಮಹೀಪತಿ ||೧೪೭||

ವಚನ : ಅಂತು ನೋಡುತ್ತಮದನೇಕ ತಾಳೋತ್ಸೆಧನಮುಮಭ್ರಂಕಷಮಂ ದುರಾರೋ
ಹಮುಮಾದೊಡಂ ಬಗೆಯದೆ ಬಳಸಿದ ಬಳ್ಳಿ ವಿಡಿದಡರ್ದೇರಿ

ಜಳಜದ ಮೊಗ್ಗೆಯಂತೆ ಮುಗುಳಂತೆಳೆಯೆಕ್ಕೆಯ ಕಾಯ್ಗಳಂತೆ ಶಾ
ಲ್ಮಲಿಕುಸುಮಂಗಳಂತೆ ತರುನೀಡನಿಕಾಯದಿನೆಲ್ಲವಾಗಳಾ
ಗಳೆ ಗಱಿವೊಯ್ವ ಕಂದೆರೆವ ತುಪ್ಪಳೊಡರ್ಚುವ ಕೆಂಪನಾಳ್ವ ಕೋ
ಮಳಶಿಶುಶಾಬಕಪ್ರಕರಮಂ ತೆಗೆದಂ ದಯೆಗೆಟ್ಟು ಲುಬ್ಧಕಂ ||೧೪೮||

ಪಱಿದುವು ಗಱಿ ಚಂಚುಗಳಂ
ಮುಱಿದವು ತಲೆ ನಡುಗುತಿರ್ದುವೆನ್ನದೆ ತರದಿಂ
ಬಱಿಗೆಯ್ಯುತಿರ್ದ ಮಾಯ್ದಱ
ಗುಲಿ ಕರ್ವೇಡನಲ್ಲಿ ಮುದುಗಿಳಿಗಳುಮಂ ||೧೪೯||

ವಚನ : ಅಂತವೆಲ್ಲವನೊಡನೊಡನೆ ಗಂಟಲಂ ಮುಱಿದು ನೆಲಕ್ಕೀಡಾಡುತಿರ್ದ ಬೇಡನಂ
ತೊಟ್ಟನೆ ನೋಡಿ ಪ್ರಾಣಾಪಹಾರಮುಮಪ್ರತೀಕಾರಮಪ್ಪ ಕಷ್ಟಮಂ ಕಂಡು ಭಯಂಗೊಂಡು

ಬಸವಳಿದು ಕಣ್ಣನೀರಿಂ
ದೆಸೆಗೆಟ್ಟೆಲೆ ಮಗನೆ ನಿನ್ನನಿನ್ನಾರ್ ಕಾಯ
ಲ್ಕೆ ಸಮರ್ಥರೆನುತ್ತಾಗಳ್
ಬಿಸುಸುಯ್ದಂ ನೋಡಿ ಜನಕನೆನ್ನಯ ಮೊಗಮಂ ||೧೫೦||

ನಿನ್ನಯ ತಾಯನೊಯ್ವ ಪದದೊಳ್ ಜವನಕ್ಕಟ ನೋಡು ಕಂದ ಬಂ
ದೆನ್ನಮನಂತೆ ಕೂಡಿದೊಡನೊಕ್ಕಲುವೋಗಿಸನೇಕೆ ಬಯ್ತೆ ನಾಂ
ನಿನ್ನನೆ ನೋಡಿ ಶೋಕಮನಡಂಗಿಸಿ ಬಾಳ್ಕೆಯೆ ಲೇಸೆನುಯ್ತಮಿ
ರ್ಪನ್ನೆಗಮಮ್ಮ ನಿನ್ನನೊಡಗೊಂಡು ಮುಳುಂಗುವಕಾಲಮಾದುದೋ ||೧೫೧||

ವಚನ : ಎಂದು ಸೈರಿಸಲಾಱದೆ

ಇಱುಕಿ ತೊಡೆಯೆಡೆಯೊಳೆನ್ನಂ
ಪಱಿದೆಱಕೆಗಳಿಂದ ಮುಚ್ಚಿ ಮೋಹದೆ ತಾತಂ
ಮಱಗುತ್ತಿರ್ಪಿನಮೆಯ್ದಿದ
ನಱಗುಲಿ ಕರ್ವೇಡನೆನ್ನ ಪೊಳಲಿಗಾಗಳ್ ||೧೫೨||

ಅಡಸುವ ಕಾಲದಂಡಮೆರೆಗೊಳ್ವಿಸಿತೋರಗನೆಂಬ ಶಂಕೆ ನೂ
ರ್ಮಡಿಸೆ ಕಾಡುಪಂದಿಗಳ ಬಲ್ನೆಣದಿಂ ಪೊಲಸಟ್ಟಿ ನಾರ್ವ ಜೇ
ವಡೆಗಳ ಪುಣ್ಗಳಿಂ ತೊರೆದ ನೆತ್ತರ ಕೆಯ್ ನಡುಗಲ್ಕೆ ನೀಡಿ ಕೀ
ಳಿಡೆಯಿಡೆ ಗಂಟಲಂ ಮುಱಿದನೊರ್ಮಯೆ ನಿರ್ಘೃಣನೆನ್ನ ತಂದೆಯಂ ||೧೫೩||

ಬೆಱೆತುಳಿದೆನಾಗಿಯುಂ ತನು
ಕಿಱಿದಾಗಿಯುಮತ್ತಮಾಯುಮುಂಟಾಗಿಯು ಮೇ
ಣಱಿಯೆಂ ಕಾಣಂ ತಂದೆಯ
ಗಱಿಯೊಳಗಿರ್ದವನನೆನ್ನಂದು ನೃಶಂಸಂ ||೧೫೪||

ಕಳಿದಿರ್ದ ತಂದೆಯಂ ಬಿಸು
ಟಳಲುಮನಿನಿಸಱಿಯದೆಳವೆಯೊಳ್ ಪಾತಕನೆಂ
ಪಳೆಯ ತಱಗೆಲೆಗಳೊಳಗಿ
ರ್ದುವಿದೆಂ ಖಳನಿಳಿದು ಕಾಣ್ಗುಮೆಂಬೀ ಭಯದಿಂ||೧೫೫||

ವಚನ : ಅನ್ನೆಗಮಿತ್ತಲ್

ಇಳಿದು ಮರದಿಂದಮಾಗಳ್
ಕೆಳಗೆಲ್ಲಂ ಪರೆದು ಬಿರ್ದ ಶುಕಸಂತತಿಯಂ
ಗಳಗಳಿಸಿ ಕಟ್ಟಿ ನಡು ಬೆ
ನ್ನಿಳಿವಿನೆಗಂ ಪೊತ್ತುಪೋದನಾ ಮುದುವೇಡಂ ||೧೫೬||

ಅಂತಾ ಬೇಡಂ ಬೇಡವಡೆಯಂ ಬಳಿಸಂದು ಪೋಗೆವೋಗೆ

ತಂದೆಕಳಿದಳಲ ಬೇಗೆಯೊ
ಳಂದೂರದೆ ಬಿರ್ದದೊಂದು ಕಡುಸೇದೆಯೊಳಂ
ಬಂದೆನ್ನಂ ಪರವಶತೆಯೊ
ಳೊಂದಿಸಿದತ್ತಾಗಳ್ ಪಿಪಾಸೋದ್ರೇಕಂ ||೧೫೭||

ವಚನ : ಅಂತಾ ಪಿಪಾಸೆ ಪುಟ್ಟಲೊಡಂ

ಅಱಿಯೆಂ ಪಾರಲ್ ಬಾಯುಂ
ಬಱಬಱ ಬತ್ತಿತ್ತು ಪೋಪೆನೆಂದೇಳ್ವುದುಮಾ
ತಱಗೆಲೆ ಗಿಱುಕೆನೆ ಬೇಡಂ
ಪೊಱೆಗೆಯ್ದಿದನೆಂದು ಭಯದೆ ಮಱುಗಿದೆನಾಗಳ್ ||೧೫೮||

ವಚನ : ಮತ್ತಂ ಮೆಲ್ಲನೆಳ್ದು ದೆಸೆಗಳೆಲ್ಲಮಂ ನೋಡಿವೊರ್ಬರುಮಂ ಕಾಣದೆರ್ದೆಯಂ
ನೀವಿಕೊಂಡು ನೀರ್ದಾಣಕ್ಕೆ ಪೋಗಲುದ್ಯೋಗಂಗೆಯ್ದು

ಗಱಿ ಪಾರಲ್ಕಿಲ್ಲ ಕಾಲುಂ ಬಲಿಯವು ನಡೆಯಲ್ ಬೆಟ್ಟಿತೆಂಬಂತೆ ಮೂಗಂ
ಮುಱಿವನ್ನಂ ಮುಂದೆ ಮುಗ್ಗುತ್ತಡಬಲದೊಳಗಾಂ ಬೀಳುತುಂ ಪಕ್ಕಗೂಡಾ
ಗೊಱಗುತ್ತಂ ಪೋಗಿ ಮಧ್ಯಾಹ್ನದ ಬಿಸಿಲುಮಿರಲ್ ಕಣ್ಮಲರ್ನಟ್ಟು ಸುಯ್ಗಳ್
ಪೊಱಮಟ್ಟೊಂದೊಂದನಟ್ಟುತ್ತಿರೆ ಪಿರಿದುಮಳಲ್ದೆನ್ನೊಳಿಂತೆಂದೆನಾಗಳ್ ||೧೫೯||

ಬಸವಲ್ತೆಂಮೆನಿಪ್ಪವಸ್ಥೆಗಳನೆಯ್ದುತ್ತಿರ್ಪಿನಂ ಜೀವಮಂ
ಬಿಸುಡಲ್ ಜೀವಿಗಪೇಕ್ಷೆ ಪುಟ್ಟುದುವಲಂ ಪೋಜೀವದಿಂ ಬಿಟ್ಟಪೇ
ಕ್ಷಿಸುವಂತಪ್ಪುದೆ ಕಾಣನಿಂತು ಸಲೆ ತಾತಂ ದುಃಖಮೆಯ್ದಿರ್ದುದಿ
ಲ್ಲಸುವೆನ್ನಿಂ ಕೃಪೆಗೆಟ್ಟನಂ ಪೆಱನದೊರ್ವಂ ಸತ್ತವೋಲಿರ್ದನಂ ||೧೬೦||

ಎನ್ನಯ ತಾಯಿ ಸತ್ತಳಲನಾದವಡಂಗಿಸಿ ಮುಪ್ಪಿನೊಳ್ ಮರ
ಲ್ದೆನ್ನನೆ ನೋಡಿ ತತ್ತಿವಿಡಿದಿಂದುವರಂ ಪಿಡಿದಿರ್ದು ಯತ್ನದಿಂ
ದಂ ನಡಪುತ್ತುಮಿರ್ದುದುಮನೊಲ್ಮೆಯೆ ದಲ್ ಮಱೆದೀ ಕೃತಘ್ನನ
ಪ್ಪೆನ್ನಸುನಿರ್ಘೃಣಂ ಬಳಿಸಲಲ್ಕಣಮಾಱದುತಂದೆ ಸಾಯೆಯುಂ ||೧೬೧||

ಅತಿ ಕಷ್ಟಮಪ್ಪವಸ್ಥಾ
ತತಿಯಿಂ ಮಱೆಯಿಸಿ ಜಳಾಭಿಲಾಷೆಯನೀ ಜೀ
ವಿಯತತೃಷ್ಣೆ ಮೂಡಿತೀ ಜೀ
ವಿತಾಶೆಯಂ ಬಿಟ್ಟು ಕಷ್ಟಮಾವುದುಂಟೇ

ಪೆಱತೇಂ ನಿರ್ಘೃಣನೆಂಬುದ
ನಱಿದೆಂ ಪಿತೃಮರಣಜಾತದುಃಖಮನೀಗಳ್
ಮಱೆದು ಮನಂ ನೀರ್ಗುಡಿಯಲ್
ಮಱುಗಿದಪುದು ಕುಡಿವೊಡೆನಗೆ ನೀರುಂ ದೂರಂ ||೧೬೩||

ಅದೆಮಾತಂ ನಸುಗೇಳಲಾಯ್ತು ಜಳದೇವೀನೂಪುರಾರಾವದಂ
ದದೆ ಹಂಸಸ್ವನಂ ಪಾರಿಬಂದುದದೆ ನಾನಾ ಸಾರೋತ್ತಾರಸಂ
ಮದಕೋಳಾಹಳಮೆಯ್ದಿತ್ತದುವೆ ತಾನುಲ್ಲಾಸಿ ದಿಗ್ದೇವತಾ
ವದನೋತ್ಸರ್ಪಣವಿಪ್ರಕರ್ಷವಿರಳಂ ಪಂಕೇಜಿನೀಸೌರಭಂ ||೧೬೪||

ವಚನ : ಅದಲ್ದೆಯುಂ

ಕಡುವೊತ್ತಾದುದು ರವಿಯುಂ
ನಡುವಗಲೊಲ್ ನಿಂದು ಕೆದಱಿದಂ ಕರತತಿಯಿಂ
ಕಿಡಿಗಳನೆನೆ ಬಿಱಿವಿಸಿಲುಂ
ಸುಡುತಿರೆ ನೀರಡಿಕೆ ತಿಣ್ಣಮಾದತ್ತಾಗಳ್ ||೧೬೫||

ಬಟ್ಟೆಯ ದೂಳಿದುವೆ ಮೊದಲಾದುದು ಪೋದಪೆನೆಂಬ ಮೆಯ್ ಜವಂ
ಗೆಟ್ಟುಪಿಪಾಸೆಯಿಂ ಪೊಡರಲಾರ್ತಪುದಿಲ್ಲೆರ್ದೆಗೆಟ್ಟೆನೀಗಳೀ
ದಿಟ್ಟಿ ಮರಳ್ದು ನಂದಿದಪುದೆನ್ನುಮನಾನಱಿದಪ್ಪೆನಿಲ್ಲ ಪೋ
ಬೆಟ್ಟಿದನಾಗಿ ತಾನೆ ವಿಧಿ ಕೊಂದಪನಾಗಳೆ ಸಾಯದಿರ್ದೊಡಂ ||೧೬೬||

ವಚನ : ಎಂದು ಚಿಂತಿಸುತ್ತಿರೆಯರೆ

ಪ್ರತ್ಯಸನದೊಳಿರ್ಪುದು
ಯತ್ಯಾಶ್ರಮವಲ್ಲಿ ನೆಗಳ್ದ ಜಾಬಾಲಿಗಳೆಂ
ಬತ್ಯುತ್ತಮ ಯತಿಪತಿಗಳ
ಪತ್ಯಂ ಹಾರೀತನಾಮನಾವನದೊರ್ವಂ ||೧೬೭||

ಸಮವಯಸರ್ ಕೆಲದೊಳ್ ಮುನಿ
ಕುಮಾರರಿರ್ವರ್ ಬರುತಮಿರೆ ಬಹುವಿದ್ಯಂ
ಕಮಳಾಕರಮಂ ಮೀಯಲ್
ಕುಮರಂ ಬಂದಂ ಸನತ್ಕುಮಾರನ ದೊರೆಯಿಂ ||೧೬೮||

ಇದು ರವಿಬಿಂಬದಿನೊಗೆದ
ತ್ತಿದು ಮಿಂಚಿನ ಗೊಂಚಲಿಂದೆ ಮೇಣ್ ಮೂಡಿದುದಿಂ
ತಿದು ಕನಕದ್ಯುತಿಯಿಂ ಪೂ
ಸಿದುದೆನೆ ಪೊಳೆದತ್ತು ಮೂರ್ತಿ ತನ್ಮುನಿವರನಾ ||೧೬೯||

ಎಳೆವಿಸಿಲೆಱಗಿದುದೊ ಬನ
ದೊಳಗೆನೆ ಮೆಯ್ವೆಳಗು ಬಳಸೆ ಖಾಂಡವಮಂ ತ
ಳ್ತಳುಱುತಿರೆ ವಟುಕವೇಶಮ
ನೆಳಸಿದ ಪಾವಕನನಿನಿಸನುಕರಿಸಿರ್ದಂ ||೧೭೦||

ವಚನ : ಅದಲ್ಲದೆಯುಂ

ಬಳೆದು ಪೊಱಮುಯ್ವುವರೆಗಂ
ತಳೆದು ಕನತ್ಕನಕ ಪಿಂಗರುಚಿಯಂ ತೀರ್ಥಾ
ದಳಿ ಜಲಪೂತಂಗಳ್ ಕ
ಣ್ಗೊಳಿಪುವು ಮುನಿವರನ ಮಿಸುಪ ಕೆಂಜೆಡೆಮಱುಗಲ್ ||೧೭೧||

ಬಿಸುಟೆಂ ಸಮಸ್ತ ವಿಷಯದ
ದೆಸೆಯಿಂ ನಿಶ್ಚಯದೆ ಮೂಱುಸೂಳ್ವರಮೆಂಬಂ
ತೆಸೆದತ್ತು ನಾಡೆಯುಂ ಪೆಱೆ
ನೊಸಲೊಳ್ ಭಸಿತಪುಂಡ್ರಕಂ ಮುನಿವರನಾ ||೧೭೨||

ಗಗನಗಮನಕ್ಕೆ ಹಂಸಂ
ಮೊಗಸಿದುದೆನೆ ನಿಮಿರ್ದ ಕೊರಳನೊಳ್ವೆಳಗಿನ ಗುಂ
ಡಿಗೆ ಮುನಿಯ ಕೆಯ್ಯೊಳೆಸೆದುದು
ಜಗಕೆಲ್ಲಂ ಸ್ವರ್ಗಮಾರ್ಗವಂ ತೋಱುವವೋಲ್||೧೭೩||

ಉರದ ಬರಿಯೆಲುವನೆಣಿಪಂ
ತಿರಲೆಲರಿಂ ನಡುಗುತುಂ ತಪಸ್ವಿಯ ಕೊರಲೊಳ್
ಕರಮೆಸೆದುದು ತೋಱಿದುದು ತಾ
ವರೆದಂಟಿನ ಮಿಸುಪ ನೂಲ ಪೊಸ ಜನಿವಾರಂ ||೧೭೪||

ಅಗುಳ್ದು ತುದಿಗೊಂಬಿನೊಳ್ ಮೆ
ಲ್ಲಗೆ ಪೊತ್ತಭಿಷಕ ಮೃತ್ತಿಕೆಯನೊಡಸಂದ
ತ್ತಗಲದಿನಿಸುಂ ತಪೋವನ
ಮೃಗಮಾ ಮುನಿವರನೊಳಾದ ಪರಿಚಯದಿಂದಂ ||೧೭೫||

ಗುಣಿಗಳ ಮನಮೆಂದುಮಕಾ
ರಣದೊಳೆ ಕರುಣಾರಸಾರ್ದ್ರಮಾರೊಳಮದು ಕಾ
ರಣದಿಂದೆ ಮುನಿಕುಮಾರಾ
ಗ್ರಣಿಕರುಣಿಸಿ ಕೆಲದ ಮುನಿಕುಮಾರರ್ಗೆಂದಂ ||೧೭೬||

ಗಿಡುಗಂ ತಂದತ್ತೊ ಮೇಣ್ ಪೆರ್ಮರನ ತುದಿಯನೇಱಿ ಬಿರ್ದುದೋ ಸೇದೆಯೊಂದು
ಗ್ಗಡದಿಂದಂ ಸುಯ್ ಪೊದಳ್ದುಣ್ಮಿಪುದು ನಡುಗುತ್ತಿರ್ದುವೀ ಕಣ್ಮಲರ್ ಬಾ
ಯ್ವಿಡುತ್ತಿರ್ದತ್ತಕಟಾ ಗೋಣಿನಿಸು ನಿಲಲುಮಾರ್ತಪ್ಪುದಿಲ್ಲೆಯ್ದೆ ಜೀವಂ
ಬಿಢದನ್ನಂ ಬೇಗಮಿಂತೀ ಗಿಳಿಮಱಿಯನಬ್ಜಾಕರಕ್ಕೊಯ್ವಮೀಗಳ್ ||೧೭೭||

ವಚನ : ಅಂತಾ ಗಿಳಿವೆರಸು ಮುನಿಕುಮಾರಕಂ ಕಮಳಾಕರಕ್ಕೆವಂದು ದಂಡಕಮಂಡಲು
ಗಳನೊಂದೆಡೆಯೊಳಿರಿಸಿ

ಕುಡಿತೆಯೊಳೆ ತಂದು ನೀರಂ
ಪಿಡಿದೊಯ್ಯನೆ ತೆಱೆದು ತಾನೆ ಚಂಚೂಪುಟದಿಂ
ಕುಡಿಸುತಡಿಯಣ ತಾವರೆ
ಗೊಡೆಯೆಲೆಗಳ ತಳದ ನೆಳಲೊಳಿರಿಸಿದನೆನ್ನಂ ||೧೭೮||

ವಚನ : ಅಂತೆನ್ನಂ ಸಪ್ರಾಣನಪ್ಪಂತುಮಾಡಿ ಸಕಲ ಪರಿಶ್ರಮಂಗಳನಾಱಿಸಿಮುನಿ
ಕುಮಾರಂ ಕೃತಸ್ನಾನನಾಗಿ ಪ್ರಾಣಾಯಾಮಪೂರ್ವಕಮಘಮರ್ಷಣ ಕ್ರಿಯೆಗಳಂ ನಿರ್ವರ್ತಿಸಿ
ನಳಿನೀದಳಪುಟದೆ ಕೆಂದಾವರೆಯಲರ್ಗಳಿಂ ದಿವಸಕರಂಗರ್ಘ್ಯಮನೆತ್ತಿ ಗೃಹೀತ ಧವಳವಲ್ಕನುಂ
ನಿರ್ಧೂತ ಜಟಾಕಳಾಪನುಂ ಪೂರ್ಣಕಮಂಡಳಾಕಲಿತ ಕರತಳನುಮಾಗೆನ್ನಂ ಪರ್ಣಪುಟ
ದೊಳ್ ತಳೆದು ನಿರ್ವರ್ತಿತನಿಯಮರಪ್ಪ ಮುನಿಕುಮಾರರ್ ಬೆರಸು ನಿಜಾಶ್ರಮಕ್ಕೆ ಪೋಗವೋಗೆ

ತನುವೆರಸೊಯ್ಯಲ್ ಮುನಿಗಳ
ನನಲಂ ಸ್ವರ್ಗಕ್ಕೆ ಸೇತುಗಟ್ಟಿದನೆನೆ ಪಾ
ವನ ಹೋಮಧೂಮಮೊಗೆಯಲ್
ಮುನಿಪಾಶ್ರಮಮೆನಗೆ ಕಾಣಲಾದತ್ತಾಗಳ್ ೧೭೯||

ಕುಳಶೈಲವ್ರಾತದಿಂದಂ ಬಳಸಿದ ಕನಕಕ್ಷ್ಮಾಧರೇಂದ್ರಂ ಸಮುದ್ರಾ
ವಳಿಯಿಂ  ಸುತ್ತಿರ್ದ ಲೋಕಂ ಹುತವಹತತಿಯಿಂ ವೇಷ್ಟಿಸಿರ್ದಧ್ವರಂ ಕ
ಜ್ಜಳಿತಾರ್ಕಾನೀಕದಿಂದಂ ಬಳಸಿದ ಗಗನಾಭೋಗಮೆಂಬಂದದಿಂ ಕ
ಣ್ಗೊಳಿಸುತ್ತಂ ಯೋಗಿವೃಂದಾರಕರ ನಡುವೆ ಜಾಬಾಲಿಯೋಗೀಂದ್ರನಿರ್ದಂ ||೧೯೧||

ಪರಮತೋನಿಧಿಯೆನಿಸಿದ
ಗುರುವಿಂಗಭಿವಂದಿಸುತ್ತೆ ಹಾರೀತಂ ಕು
ಳ್ಳಿರೆ ನಿಮಗಿದೆತ್ತಣಿಂ
 ದೊರಕೊಂಡಿತ್ತೆಂದು ತಾಪಸರ್ ಬೆಸಗೊಂಡರ್ ||೨೨೧||

ವಚನ : ಅಂತು ಬೆಸಗೊಳ್ವುದುಂ ಹಾರೀತಕನೆಂದನಾಂ ಸ್ನಾನಾರ್ಥಂ ಪೋಗುತ್ತಿರೆ
ಪಂಪಾಸರೋವರದ ಪಕ್ಕದಡವಿಯ ಪೆರ್ಮರನ ತುದಿಗೋಡಿನಿಂ ಬಿರ್ದು ದೆಸೆಗೆಟ್ಟು ನಡುವಗಲ
ಬಿಸಿಲಳುರೆ ಕಿಡಿಯಿಡುವ ಪುಡಿಯೊಳ್ ಪೊರಳುತ್ತಂ ಕಂಠಗತಪ್ರಾಣನಾಗಿರ್ದುದನೀ ಗಿಳಿಯಂ
ಕಂಡು ಕರುಣಿಸಿ ತಂದೆಂ ನಡಪಿ ಗಱಿಮೂಡಿದಬಳಿಕ್ಕಂಪಾಱಿಪೋಕುಮಲ್ಲದಂತು ಪರಿಚಯದಿಂ
ನಿಲ್ಗೆಂದೆನ್ನ ಸಂಬಂಧಮಂ ನುಡಿವುತ್ತಿರೆ ಜಾಬಾಲಮುನೀಂದ್ರನಾ ಮಾತಂ ಕೇಳ್ದೀಪದಾವಲಿತ
ಕಂಧರನಿದೆತ್ತಣಿಂ ಬಂದುದೆಂದು ಪುಣ್ಯಜಲದಿಂ ಪ್ರಕ್ಷಾಳಿಸುವಂತೆ ಶಾಂತದೃಷ್ಟಿಗಳಿಂದೆನ್ನಂ
ಮುನ್ನಂ ಕಂಡಱಿವನಂತೆ ನೀಡುಂ ಭಾವಿಸಿ ನೋಡಿ

ಈತಂ ಮುನ್ನಿನ ಭವದೊಳ್
ನೀತಿಯನುಳಿದೆಸಗಿ ಮೋಹದಿಂದಂ ತಿರ್ಯ
ಗ್ಜಾತಿಗೆ ಬಿಳ್ದೋರಂದದಿ
ನೀ ತೆಱದಿಂ ಕರ್ಮಫಲವನುಂಡಪನಲ್ತೇ ||೨೨೨||

ವಚನ : ಎಂದು ಕಾಲತ್ರಯವೇದಿಗಳ್ ನುಡಿಯೆ ಮುನಿಗಳೆಲ್ಲರ್ ವಿಸ್ಮಿತಾಂತಃಕರಣರಾಗಿ
ಮುನೀಂದ್ಲನನಿಂತೆಂದರ್

ಮುನ್ನಾವನ ವಿನಯಮನೇ
ನಂ ನೆಗಳ್ದಂ ವಿಹಗಯೋಗಿಯೆಂತಾದಂ ಮ
ತ್ತಿನ್ನೇನಾದಪನೆನುತಂ
ಭಿನ್ನವಿಪುತ್ಕಂಠೆ ಮನದೊಳಾದಪುದೀಗಳ್

ಬೆಸಸಲ್ನೀ ಪೇಳ್ವುದಿಂತೀ ಗಿಳಿಯಮಱಿಯ ವೃತ್ತಾಂತಮಂ ತಾಮೆನಲ್ ತಾ
ಪಸವೃಂದಕ್ಕಾ ಮುನೀಂದ್ರಂ ಕಥೆ ಪಿರಿದು ಮಹಾಶ್ಚರ್ಯಮೀ ರಾತ್ರಿಯೊಳ್ ಸಂ
ತಸಮಿರ್ಪಂತಾಗೆ ತಾಂ ಕೇಳಿಸಿದಪೆನದಱಿಂದೆಳ್ದು ನೀಮೆಲ್ಲರುಂ ಪ್ರಾ
ರ್ಥಿಸದೀ ಮಧ್ಯಹ್ನಕಾಲೋಚಿತ ಸಮಯದೊಳಾಸಕ್ತಿಯಂ ತಾಳ್ದಿಮೀಗಳ್||೨೨೪||

೨•  ಚಂದ್ರಾಪೀಡನ ಜನನ ಮತ್ತು ಬಾಲ್ಯ

ವಿಲಸತ್ಪ್ರಭಾಳಿಶಶಿಮಂ
ಡಲಮಾ ಕುಮುದಾವಭಾಸಿಯೆನೆ ತಿಳಿಗೊಳದೊಳ್
ನೆಲಸುವ ತೆರದಿಂ ಗರ್ಭಂ
ನೆಲಸಿದುದು ವಿಳಾಸವತಿಗೆ ಪುಣ್ಯೋದರದೊಳ್ ||೭೫||

ಅಂತು ಕೆಲದಿವಸದೊಳ್ ನಿಜ
ಕಾಂತಪ್ರತಿಬಿಂಬಮಂ ವಿಳಾಸದೆ ತಳೆದಳ್
ಕಾಂತೆ ಮಣಿದರ್ಪಣಶ್ರೀ
ಯಂತಿರೆ ಸಂಕ್ರಾಂಮಪ್ಪ ಗರ್ಭದ ನೆವದೊಳ್ ||೭೬||

ಒದವಲ್ ನಿಜತೇಜಂ ಘನ
ದೊದವಿಂ ನವಮೇಘಮಾಲೆಗುದಯಿಪ ತೆಱದಿಂ
ಹೃದಯಾನಂದಂ ಭುವನದೊ
ಳೊದವಲ್ಕೆ ವಿಳಾಸವತಿಗೆ ಸುತನುದಯಿಸಿದಂ ||೧೦೧||

ಉದಯದ ಕೆಂಪಿನಿಂ ಪುದಿದೊಂದಿನಬಿಂಬಮೊ ಸಂಜೆಗೆಂಪಿನಿಂ
ಪುದಿದ ಸುಧಾಂಶುಮಂಡಳಮೊ ಮೇಣಿದರಲ್ಕೆಯೊಳಾದ ರಾಗದಿಂ
ಪುದಿದರುಣಾರವಿಂದಚಯಮೋ ತಳಿರ್ಗೊಂಚಲ ತಳ್ತ ಕೆಂಪಿನಿಂ
ಪುದಿದಮರಾವನೀರುಹಮೊ ಪೇಳೆನೆ ಬಾಲಕನಾದಮೊಪ್ಪಿದಂ ||೧೦೪||

ಎಳವಿಸಿಲಿಂ ಪವಳದ ಕುಡಿ
ದಳಿರಿಂ ಮಾಣಿಕದ ಬೆಳಗಿನಿಂ ನಿರ್ಮಿಸಿದಂ
ನಳಿನಭವನೆಂಬಿನಂ ಕ
ಣ್ಗೊಳಿಸಿರ್ದಂ ಜಿತಕುಮಾರನೆಂಬ ಕುಮಾರಂ ||೧೦೫||

ಲೈವವಿದಿರ್ಚಿಬಂದುದು ಜಗಜ್ಜಯಮಂ ತಳೆದೇವ ರೇಣುಕಾ
ದೇವಿಗೆ ರಾಮನುತ್ಸವದೆ ಪುಟ್ಟಿದವೋಲ್ ಶುಕನಾಸಮಂತ್ರಿ ಸಂ
ಭಾವಿತೆಯಪ್ಪ ಪಾರ್ವಿತಿ ಮನೋರಮೆಗತ್ತ ಭವತ್ಪ್ರಸಾದದಿಂ
ದೀವರಲಗ್ನದೊಳ್ ತನಯನತ್ಯಧಿಕೋತ್ಸವಮಾಗೆ ಪುಟ್ಟಿದಂ ||೧೧೪||

ಮೊದಲೊಳ್ ಬಂದಳ್ಕಱಿಂದೀತನ ವಕ್ತ್ರಾಬ್ಜದೊಳ್ ಚಂದ್ರಮಂ ಪೊ
ಕ್ಕುದನಲ್ತೆ ಕಂಡೆನಾಂ ಸ್ವಪ್ನದೊಳೆನುತೆ ಮನಂಗೊಂಡು ತತ್ಸ್ವಪ್ನಸಾದೃ
ಶ್ಯದೆ ಚಂದ್ರಾಪೀಡನೆಂಬೀ ಮೊದಲ ಪೆಸರನಿಟ್ಟಂ ತನೂಜಂಗೆ ಮೂಲೋ
ಕದೊಳಂ ಮಾಂಗಲ್ಯತೂರ್ಯಧ್ವನಿ ಪಸರಿಸಿ ಪರ್ವುತ್ತಿರಲ್ ಸಾರ್ವಭೌಮಂ ||೧೧೭||

ಮನುಮಾರ್ಗದೊಳೇಕಾದಶ
ದಿನದೊಳ್ ಯನಯಂಗೆ  ವಿಪ್ರಜನಸಮುಚಿಯಮಾ
ಯ್ತೆನೆ ಸಚಿವಂ ವೈಶಂಪಾ
ಯನನೆಂಬೀ ಪೆಸರನಿಟ್ಟನಧಿಕೋತ್ಸವದಿಂ ||೧೧೮||


ಶುಕನಾಸಾರ್ಯಗುರುತ್ವದಿಂದೆ ಸಹಪಾಂಸುಕ್ರೀಡನಾಭ್ಯಾಸದಿಂ
ದೆ ಕಳಾಜ್ನಾನವಿಶೇಷದಿಂದುಚಿತಸೇವಾಜಾತ ಚಾತುರ್ಯದಿಂ
ದೆ ಕರಂ ಚಿತ್ತಮನಪ್ಪುಗೆಯ್ದಖಿಳ ವಿಸ್ರಂಬಕ್ಕಮಾವಿಸಮಾ
ಗಿ ಕುಮಾರಂಗೆ ಮಹಾಪ್ರಧಾನತನಯಂ ಮಿತ್ರತ್ವಮಂ ತಾಳ್ದಿದಂ ||೧೨೪||


ದಿನಪತಿಯುಂ ದಿನಮುಂ ಬಿಡ
ದನುಬಂಧನಗಲದಂತೆವೋಲ್ ಚಂದ್ರಾಪೀ
ಡನುಮಂತಾ ವೈಶಂಪಾ
ಯನನುಂ ಪದಪಿಂದಮೊರ್ವರೊರ್ವರನಗಲರ್ ||೧೨೫||


೩• ಚಂದ್ರಾಪೀಡನ ಜೈತ್ರಯಾತ್ರೆ


ಎನ್ನ ಮನೋರಥಕ್ಕೆ ಪರಿಪೂರ್ತಿಯನೆಯ್ದಿಸೆ ಶಸ್ತ್ರ ಶಾಸ್ತ್ರ ಸಂ
ಪನ್ನತೆಯಿಂ ವಿರಾಜಿಸಿ ನಿರೀಕ್ಷಿಸಲುತ್ಸುಕೆಯರ್ಕಳಾದಪರ್
ತನ್ನಯ ತಾಯ್ವಿರೆಂದು ಜನಕಂ ಬಳಿಯಟ್ಟಿದನಳ್ಕಱಿಂ ಪುರ
ಕ್ಕಿನ್ನಡೆತಂದು ದೇವಪಡೆ ಪೌರಜನಂಗಳ ಕಣ್ಗೆ ಪರ್ವಂ ||೧||


ಅದೆ ಪೊಱಗಿಂದ್ರಾಯುಧಮೆಂ
ಬುದೊಂದು ದಿವ್ಯಾಶ್ವಮಟ್ಟಿದಂ ನಿನಗೇಱ
ಲ್ಕದನನಿಲಗರುಡಜವಮೆನಿ
ಸಿದುದು ತ್ರಿಜಗಕ್ಕೆ ರತ್ನಮಂ ನಿಜಜನಕಂ ||೨||


ಜಲನಿಧಿಜಲದಿಂ ಪೊಱಮ
ಟ್ಟಿಳೆಗವತರಿಸಿದುದಯೋನಿಸಂಭವವೀ ಮಂ
ಗಳಹಯವೆಂದೋಲೈಸಿದ
ನಿಳಾಧಿನಾಥಂಗೆ ಪಾರಕಾಧೀಶಂ ||೩||


ಪಿರಿದೆಂದಾಯಿಂದ್ರನುಚ್ಚ್ಯಃಶ್ರವಮನೆ ನಡೆನೋಡುತ್ತಮಿರ್ಕೆಂದು ರತ್ನಾ
ರತ್ನಾಕರಮುಲ್ಲೋಲಂಗಳಿಂದಂ ಮಱೆಯಿಸಿ ಜನಪಂಗಿಂದ್ರಚಾಪಪ್ರಭಾಭಾ
ಸುರಮಂ ತ್ರೈಲೋಕ್ಯಸಾಮ್ರಾಜ್ಯದ ಫಳಮೆನಿಪೀ ವಾಜಿಯಂ ಕೊಟ್ಟನೆಂದಾ
ದರದಿಂದಂ ನೋಡಿದಂ ವಿಸ್ಮಯಮೊದವುವಿನಂ ಚಿತ್ತದೊಳ್ ರಾಜಪುತ್ರಂ ||೧೦||


ಕ್ಷಮೆಯಂ ಮಾಡಶ್ವ ನೀನಾರಱಿಯೆನದಱಿನಿಂತೀ ಮದಾರೋಹಣಾತಿ
ಕ್ರಮಕೆಂದಾಮಂತ್ರಣಂಗೆಯ್ವುದುಮದು ಬಗೆಗೊಂಡಂತಿರಾ ಕೇಕರಾಲೋ
ಕಮುಖಂ ನೋಡುತ್ತಮೇರಲ್ ಕರೆವ ತೆರದೆ ಹೇಷಾರವಂ ಪೊಣ್ಮೆ ಭೂಭಾ
ಗಮನತ್ಯುತ್ಸಾಹದಿಂ ದಕ್ಷಿಣಖುರದೆ ಬೆಱಂಟಿತ್ತು ದಿವ್ಯಶ್ವಮಾಗಳ್ ||೧೫||


ಘನಹೇಷಿತದಿಂ ದತ್ತಾ
ಭ್ಯನುಜ್ಞನಾದಂತೆ ಲಘುತೆಯಿಂದೇಱಿದನಾ
ಸನದೃಢತೆ ರೂಪುವಡೆದ
ತ್ತೆನಲಿದ್ರಾಯುಧಮನಂದು ಚಂದ್ರಾಪೀಡಂ ||೧೬||


ಮಂದಾನಿಲರಗಳೆ||


ಇನಿತಂ ಪಾಱೆನ್ನಂ ತ್ವರಿತಗತಿಕೆ
ಪಿಡಿ ಮೇಲುದನೀಗಳ್ ಲಲಿತಲತಿಕೆ


ಸೋರ್ಮುಡಿಯಂ ಸಾವಗಿಸಕ್ಕ ನಿನ್ನ
ಜೋಲ್ದುಡೆಯಂ ನೋಡೆಲೆ ಮರುಳೆ ಮುನ್ನ


ಆವೊಕ್ಕುಪುದೆಲೆ ಮದನಾಂಧೆ ಮುಂದೆ
ಮೌಕ್ತಿಕನಿಕರಂ ನಿಜಹಾರದಿಂದೆ


ಕಾಂಚೀದಾಮಮನೋಸರಿಸು ಮುಗ್ಧೆ
ಬಿಡದೆ ನೀನೆನಿಸೀಕ್ಷಿಸುವೆ ವಿದಗ್ಧೆ


ತೊಲಗುತ್ತಿದೆ ಘನಕುಚಯುಗಳದಿಂದೆ
ನೋಡಿದೆ ಸಿಚಯಂ ನಿನ್ನಯ ಮುಂದೆ


ಎರ್ದೆ ಪಡಪಡ ಪಾರ್ದಪುದೇಕೆ ಕೆಳದಿ
ತೋಳುಗಳಂ ಪಿಡಿ ಮೃದುಹಸ್ತತಳದಿ


ನೆಡಪಿದಪೆ ತನ್ವಿ ಪೂವಲಿಗಳಲರ
ಆಸವಮದದಿಂ ನಗಿಸಿದಪೆ ಪಲರ


ನವಯೌವನೆ ಮರುಳಾದೆಯೀತಂಗೆ
ಗುಱಿಮಾಡಿದಪೆ ನಿನ್ನ ಮನುಮತಂಗೆ


ಮನದೊಳ್ ಸಂಕಲ್ಪಿತ ಸುರತಸುಖಮ
ನನುಭವಿಸುವೆಯದಱಿಂ ನೋಡು ಮುಖಮ


ನುಸುರಿಕ್ಕುವುದುಮನೇಂ ಮಱೆತೆ ಕಾಂತೆ
ಬಂದಪನದೆ ಮುಂದೆ ಜಯಂತನಂತೆ


ಮುತ್ತಿನ ಬೆಳ್ಗೊಡೆಗಳ ಬಳಗದೊಳಗೆ
ಚಾಮರತತಿ ಕೆಲದೊಳೆ ಮಿಳಿರ್ದು ತೊಳಗೆ


ಸೊಗಯಿಸುತುಂ ಚಂದ್ರಪೀಡದೇವ
ನುದಿತಾರ್ಕಸಹಸ್ರಸಮಪ್ರಭಾವ


ನಾ ನೋಡಿದಪೆನಿತ್ತನೃಪಕುಮಾರ
ನಾ ಲಾವಣ್ಯರೂಪ ಜಿತಕುಮಾರ


ನಾ ವೈಶಂಪಾಯನೊಡನೆ ನೋಡ
ನಸುನಗೆ ದಶನಪ್ರಭೆಯಿಂದ ಕೂಡ


ಲಾ ದೆಸೆ ಧವಳಿಸಿದವೊಲಾಯ್ತು ರಯ್ಯ
ನಾ ವೀಳಯಕೆ ನೀಡಿದಪಂ ಕಯ್ಯ


ನೀ ಕಮಳಾಂಕಿತ ಕರತಳಮನಾವ
ಸುಂದರಿ ಪಿಡಿವಳೊ ಧನ್ಯೆಯವಳೀ ವ


ಸುಂದರೆಯೊಳೆನುತ್ತಂ ರಾಗದಿಂದೆ
ಮೆಯ್ಯಱಿಯದೆ ಪಲರುತ್ಕಂಠೆಯಿಂದೆ


ಸವಿಳಾಸ ಸೋನ್ಮಾದ ಸಾಭ್ಯಸೂಯ
ಸಸ್ಪೃಹ ಸೇರ್ಷ್ಯಾದಿ ರಸಾನುಮೇಯ

ರಮಣೀಯಾಳಾಪಕಳಾಪದಿಂದ

ಮೆಸೆದುದು ರಮಣೀತತಿ ಚೆಲ್ವಿನಿಂದ ||೨೯||

ಮುನಿಸಿಂ ತ್ವಜ್ಜನಕಂ ಕುಳೂತಪುರಮಂ ನಿರ್ಮೂಲಿಪಂದಾ ಕುಳೂಸ
ತನರೇಂದ್ರಂ ಭಯದಿಂ ಕಳತ್ರಸಹಿತಂ ಪೋಗಲ್ ಕುಳುತೇಶನಂ
ದನೆಯಂ ಮತ್ತಮನೇಕರಂ ಸೆಱೆಗೆ ತಂದಿಟ್ಟಲ್ಲಿ ತದ್ರಾಜನಂ
ದನೆಯಂ ಕನ್ನೆಯನಳ್ಕಱಿಂ ನಡಪಿದಳ್ ಮಾದೇವಿ ಕಾರುಣ್ಯದಿಂ ||೫೮||

ವಚನ: ಅಂತು ನಡಪುತ್ತಮಿರ್ದು

ಪಿರಿದುಂ ಮನ್ನಿಸಿ ನಡಪು
ತ್ತಿರೆ ಪರಮರಹಸ್ಯಭೂಮಿಯೆನಿಸಿದಳಿಂತೀ
ಪರಿಚಾರಿಕೆ ತನಗೆಂದಾ
ದರದಿಂ ನಿಜಜನನಿ ಬೆಸಸಿಯಟ್ಟಿದಳೀಗಳ್ ||೫೯||

ಧರೆಯೊಳ್ ನೆಗಳ್ದ ಕುಳೂತೇ
ಶ್ವರನ ಮಗಳ್ ಪತ್ರಲೇಖೆಯೆಂಬುದುಪೆಸರಿಂ
ಪರಿಜನ ಸಾಮಾನ್ಯದೆ ನೀಂ
ಪರೀಕ್ಷಿಸಲ್ವೇಡ ಸತಿಯನೀ ಗುಣವತಿಯಂ ||೬೦||

ವಚನ : ಎಂದು ಪೊಡವಡಿಸೆ ಪತ್ರಲೇಖೆಯ ವಿಚಿತ್ರರೂಪನಾ ಕ್ಷತ್ರಿಯಪುತ್ರಂ ವಿಸ್ಮಯಾ
ಕ್ಷಿಪ್ತಚಿತ್ತನಾಗಿ ನೋಡುತಿರ್ದು ದೇವಿಯರ್ ಬೆಸಸಿದಂತೆ ನೆಗಳ್ವೆನೆಂದು ಕಂಚುಕಿಯಂ ಕಳಿಪ
ಲಿತ್ತ ಪತ್ರಲೇಖೆಯಭಿನವ ಸಮುಪಜಾತ ಸೇವಾರಸದಿನೊಂದು ಪೊತ್ತಗಲದೋಲಗಿಸುತ್ತಿರಲಾ
ಕೆಯ ಶೀಲಾಚಾರವಿನಯಮಂ ಕಂಡು ತಾಂಬೂಲಕರಂಕವಾಹಿನಿಯಂ ಮಾಡಿ ನೃಪರೂಪಚಂದ್ರಂ
ನಿಜಜನನೀಜನಕರನೋಲಗಿಸುತ್ತರ್ದನನ್ನೆಗಮತ್ತ

 ಅಕ್ಕರ : ಧೀರನಪ್ಪನುಮಂ ಹಾಸ್ಯಂ ಮಾಳ್ಪಳ್ ಮರುಳನೆಂಬಿನಂ ಪಾವೆಂದು ದಾಂಟುವಳಭಿಜಾತನಂ
ವೀರನರಿಗುಮೆಂದೊಲ್ಲಳುದಾರನಪ್ಪನಂ ಗಳಪನೆಂದಿಪಳ್ ಪುರುಡಿಂ
ಭಾರತೀಶನಂ ಸೋಂಕಳ್ ದಾನಿಯಂ ಮುಟ್ಟಳಸ್ಪೃಶ್ಯನೆಂದು ವಿನೀತನಂ
ದೂರದಿಂ ನೋಡಿ ಪಾತಕನಿವನೆಂದು ತಿಳಿದು ಪೋಗಳಿಂದಿರೆ ನಂಬದಿರ್ ||೮೩||

ಪಿರಿಯಕ್ಕರ: ಎಸೆವ ಗುಣಮೆಂಬ ಕಳಹಂಸನಿಕರಕ್ಕಕಾಲದ ಪೆರ್ಮಳೆ ವಿಷಯೇಂದ್ರಿಯ
ಪ್ರಸರಮೆಂಬ ಮೃಗಪ್ರಕರಕ್ಕೆ ಗೋವಿಯದನಿ ಸಚ್ಚರಿತ್ರಗಳೆಂಬ
ಮಿಸುಪ ಚಿತ್ರಕ್ಕೆ ಕಂದಿಪ ಕರ್ವೊಗೆ ಧರ್ಮಮೆಂಬಿಂದುಮಂಡಲಕ್ಕೆ
ಮುಸುಕುವ ಕಾಳರಾಹುವಿನ ನಾಲಿಗೆಯೆನಿಪ ಸಿರಿಯಂ ಬಣ್ಣಿಪಂ ಗಾಂಪನಲ್ತತೇ||೮೫||

ಲಲಿತರಗಳೆ || ಗಂಧರ್ವನಗರಲೇಖೆಯ ತೆಱದೆ ಕಂಡಂತೆ
                 ಕಾಣಲ್ಕೆ ಬಾರಳಿರ್ದಾಯೆಡೆಯೊಳಿರ್ದಂತೆ
                 ವಿಪಯವಿಷವಲ್ಲಿಯಂ ಪೆರ್ಚಿಸುವ ಜಳಧಾರೆ
                 ಸಾಧುತ್ವಮಂ ಕೆಡಿಸಿ ನಡಸುವ ದುರಾಚಾರೆ
                 ಕಪಟನಾಟಕತತಿಗೆ ತಾನೆ ನೆಲೆಯೆನಿಸವಳ್
                 ಕೋಪಗ್ರಹಾವೇಶ ಜನ್ಮನಿಧಿಯೆನಿಸುವಳ್
                 ಶಾಸ್ತ್ರದೃಷ್ಟಿಗೆ ತಿಮಿರಪಟಲತತಿಯೆನಿಸುವಳ್
                 ದೋಷಮೆಂಬಾಶೀವಿಷಕ್ಕೆ ಪುತ್ತೆನಿಸುವಳ್
                 ಚಿತ್ರಗತೆಯಾಗಿಯುಂ ನೋಡೆ ಸಂಚರಿಸುವಳ್
                 ಕರುವಿಟ್ಟೊಡಂ ನಿಲಿಸಲರಿದೆನಿಸಿ ಚೆದುಱುವಳ್
                 ಕಂಡರಿಸಿದೊಡಮಲ್ಲಿ ನಿಲಲಾಱಳೆನಿಸುವಳ್
                 ಕೇಳ್ದೊಡಂ ತನ್ನನನುಭವಿಪುದರಿದೆನಿಸುವಳ್
                 ಒಲ್ದು ಜಾನಿಸಿದೊಡಂ ತಕ್ಷಣದೆ ವಂಚಿಪಳ್ ||೮೬||

ವಚನ :  ಇಂತು ಚಂಚಲೆಯಪ್ಪ ಸಿರಿ ತಮಗೆ ವಿಧಿವಶದಿನೆತ್ತಲಾನುವಪ್ಪುದುಂ

ಮೊದಲೊಳ್ ರಾಜ್ಯಾಭಿಷೇಕಪ್ರಬಲಜಲಮೆ ಕರ್ಚಿತ್ತು ದಾಕ್ಷಿಣ್ಯಮಂ  ಹೋ
ಮದ ಧೂಮಂ ಚಿತ್ತದೊಳ್ ತೊಟ್ಟನೆ ಮಲಿನತೆಯಂ ಪೊರ್ದಿಸಿತ್ತೊಪ್ಪಿರಲ್ ಕ
ಟ್ಟಿದ ಪಟ್ಟಂ ಬರ್ಪ ಮುಪ್ಪಂ ಮಱೆಯಿಸಿತಧಿಕಕ್ಷಾಂತಿಯಂ ವಿಪ್ರವರ್ಗಾ
ಸ್ಪದ ದರ್ಭಾನೀಕ ಸಮ್ಮಾರ್ಜನಿ ಕಳೆದುದೆನಲ್ ದುಷ್ಟರಪ್ಪರ್ ನೃಪಾಲರ್ ||೮೭||

ಮರದಿಂ ಮರಕ್ಕೆ ದಾಂಗುಡೆ
ವರಿವೆಳಲತೆಯಂತೆ ನೀತಿಮಾಂಧಾತನೊಳಾ
ವರಿಸರ್ದು ರಾಜವಿದ್ಯಾ
ಧರನಲ್ಲಿಗೆ ರಾಜ್ಯಲಕ್ಷ್ಮಿ ನಿಲುಕಿದಳಾಗಳ್ ||೧೦೮||

ದುರುಳರನೊಕ್ಕಲಿಕ್ಕಿ ಮಱೆವೊಕ್ಕರ ರಕ್ಷಿಸಿ ದೇಶದೇಶದೋ
ಳರಗುವರರ್ಗೊಡರ್ಚಿ ನೃಪಪಟ್ಟವನಾರ್ಜಿಸಿ ರತ್ನರಾಶಿಯಂ
ನಿರವಿಸಿ ನಾಡನೇರ್ಪ ನಿಜಮುದ್ರೆಯನೇಱಿಸಿ ಶಾಸನಂಗಳಂ
ಬರೆಸಿ ಬುಧರ್ಗೆ ಬಿತ್ತರಿಸಿದಂ ಜಸಮಂ ನೃಪಸುತಂ ಯುವರಾಜಚಂದ್ರಮಂ ||||೧೨೯||

ಜಲನಿಧಿಪರಿವೃತ ಧಾತ್ರೀ
ತಲಮಂ ಬಲವಂದು ಪಿರಿದುವಾಸತ್ತಬಲಂ
ನಿಲವೇಳ್ಕುಮೆಂದು ನೃಪಕುಲ
ಲಲಾಮನಂತಲ್ಲಿ ಪಲವು ದಿವಸಮನಿರ್ದಂ ||೧೩೧||

೪. ಮಹಾಶ್ವೇತೆಯ ಸಂದರ್ಶನ

ವಚನ|| ಅಂತಿರುತ್ತಮೊಂದು ದಿವಸಂ ಯುವರಾಜನಿಂದ್ರಾಯುಧಮನೇಱಿ ಬೇಂಟೆಯ
ವಿನೋದದಿಂ ತೊಳಲುತ್ತಮಿರೆಯಿರೆ

ಪಿರಿದಪ್ಪಾಶ್ಚರ್ಯಪರಂ
ಪರೆ ಸಮನಿಸಲದ್ರಿಶಿಖರದಿಂದಿಳಿದಾಡು
ತ್ತಿರೆಯಿರೆ ನಿಜೇಚ್ಛೆಯಿಂ ಕಿ
ನ್ನರಮಿಥುನಮನವನಿಪಾಲತನಯಂ ಕಂಡಂ ||೧||

ವಚನ : ಆಗಳ್ ಸಮುಪಜಾತಕುತೂಹಲಂ ವಿಸ್ಮಯಕ್ಷಿಪ್ತಚಿತ್ತನಾಗಿ

ಜಗದೊಳಗಪೂರ್ವಮೆಂಬೀ
ಬಗೆಯಿಂ ತಾಂ ಪಿಡಿವ ತವಕದಿಂ ಭೋಂಕನೆಬಂ
ದಗಣಿತ ಜವಮಂ ಕಿನ್ನರ
ಯುಗದ ಸಮೀಪಕ್ಕೆ ಬಿಟ್ಟನಿಂದ್ರಯುಧಮಂ ||೨||

ವಚನ : ಆಗಳ್ ತಮ್ಮೆಡೆಗಯ್ತರ್ಪುದಂ ಕಂಡದೃಷ್ಟಪೂರ್ವಮಪ್ಪುದಱಿಂ ಕಿನ್ನರ ದ್ವಯ
ಮತಿಭೀತಿಯಿಂ ಪರಿಯೆ

ಪಿಡಿದಪನೀಗಳಾ ಪಿಡಿಯಲೆಯ್ದಿದನಾ ಪಿಡಿದಪ್ಪನೀಗಳಾ
ಪಿಡಿದನೆ ಕಿನ್ನರದ್ವಯಮನೆಂಬಿನೆಗಂ ಬಳಿಸಂದು ತನ್ನ ಸಂ
ಗಡದವರುಂ ಪರಿಗ್ರಹಮುಮೆಯ್ತರಲಾಱದೆ ಪಿಂದೆ ನಿಲ್ವಿನಂ
 ಕಡುಪಿನೊಳಂದು ಬಿಟ್ಟನತಿಶೀಘ್ರದೆ ವಾಜಿಯನಾ ನೃಪೋತ್ತಮಂ ||೩||

ಮಡದಲಿ ನೂಂಕೆ ವಾಜಿ ಗರುಡಂಗಮದಿರ್ಮಡಿವಾಯುವಿಂಗೆ ಮೂ
ರ್ಮಡಿಯೆನಿಪೊಂದು ತನ್ನ ಜವದಿಂ ಪರಿಯಲ್ಕೆ ಮುಹೂರ್ತಮಾತ್ರದೊಳ್
ಗಡಪದಿನೈದುಯೋಜನಮನೊರ್ವನೆ ಸಂಧಿಸಿ ಪೋದನಂದು ಪೇ
ರಡವಿಯೊಳಾ ತುರಂಗವದನರ್ಕಳ ಬೆಂಬಳಿಯಂ ಮಹೀಭುಜಂ ||೪||

ಛಲದಿಂದರಸಂ ತಾಂ ಬೆ
ನ್ನೊಳೆ ಪರಿದೆಳ್ಬಬಟ್ಟಿ ಪಿಡಿಯಲನುಗೆಯ್ವುದಮ
ಸ್ಖಲಿತಂ ಮುಂದಣ ತಾರಾ
ಚಲಶಿಖರಮನೇಱಿದತ್ತು ಕಿನ್ನರಮಿಥುನಂ ||೫||

ಏಕೆ ನಿರರ್ಥಕಂ ಮಗುವಿನಂದದೆ ಕೋಟಲೆಗೊಂಡನಕ್ಕಟಿಂ
ತೇಕೆಯೊ ಕಿನ್ನದ್ವಯದ ಬೆಂಬಳಿಯಂ ತಗುಳುತ್ತೆ ಬಂದೆನಿಂ
ತೇಕೆಯೊ ಮೂರ್ಖನಂತೆ ಮತಿಗೆಟ್ಟೆನಿದಂ ಪಿಡಿದಲ್ಲಿ ಬರ್ಪುದೇಂ
ವ್ಯಾಕುಲನಾಗುತಂ ಪಿಡಿಯದಿರ್ದೊಡೆ ಪೇಳ್ ಕಿಡುವೊಂದು ವಸ್ತುವೇಂ ||೬||

ಏನಾನೊಂದನೆಮಾಡಿದೆಂ ಮಗುವಿನಂತೇನಾನುಮೊಂದಕ್ಕೆ ಪೇ
ಳೇನೋ ಕೌತುಕದಿಂದ ಬಂದೆನೆನಗೀ ದುರ್ಮೋಹದುದ್ಯೋಗಮಿಂ
ತೇನಾನೊಂದನೊಡರ್ಚಿತಿಂತಿದೆನುತಂ ತದ್ವೇಗದಿಂ ವಿಸ್ಮಯ
ಧ್ಯಾನಾಧೀನಮನಸ್ಕನೊಂದಿನಿಸುಬೇಗಂ ನಂದನುರ್ವೀಶ್ವರಂ ||೭||

ವಚನ : ಅಂತು ನಿಂದು  

ಪಿರಿದುಜವಮುಳ್ಳದಱಿನೀ
ಹರಿ ನಿಮಿಷಕೆ ಪಿರಿದುವರಿಗುಮನಿತಱೊಳೆನಿತಂ
ತರಮನೆಡೆವರಿಗುಮೋ ಚೆ
ಚ್ಚರದಿಂ ಬಳಿಸಂದು ಮಱುಗಿ ಬರ್ಪೆನ್ನಬಲಂ ||೮||

ತಱಗೆಲೆ ಬಳ್ಳಿಯೆಂಬಿವಱ ತಿಂತಿಣಿಯೊಳ್ ಯುರುಗಾತಿವೇಗದಿಂ
ದಱಿಯಲೆ ಬಂದುದಿಲ್ಲ ಪಥಮುಂ ಬರುತಂ ಮಗುಳ್ವಂದಮೆಂತೊ ಮೇ
ಣ್ಮಱೆದುವರಣ್ಯದೊಳ್ ಸುಳಿವನಿಲ್ಲ ನರಂ ಸರದೋಱುವನ್ನನೇ
ತೆಱದೊಳಮೆಂತು ಪೋಪೆನೊ ಸುವರ್ಣಪುರಕ್ಕೆನುತಂ ನರಾಧಿಪಂ ||೯||


ದಿನಲಕ್ಷ್ಮೀರಸನೈಕ ಮಧ್ಯಮಣಿಯಾದಂ ಭಾಸ್ಕರಂ ಶ್ರಾಂತಿಯುಂ
ಘನಮಾದತ್ತು ತುರಂಗಮಕ್ಕದಱಿನಾಂ ನೀರ್ದಾಣಮಂ ನೋಡಿ ಮೆ
ಲ್ಲನೆ ಸಾರ್ದಲ್ಲಿ ಬಳಲ್ಕೆಯಂ ಕಳೆದು ಪೋಪೆಂ ಬಳಿಕ್ಕೆಂದು ವಾ
ರಿನಿವಾಸಂಗಳನಲ್ಲಿ ನಾಲ್ದೆಸೆಗಳೊಳ್ ನೋಳ್ಕುಂ ಮಹೀವಲ್ಲಭ ||೧೨||

ವಚನ : ಅಂತು ನೋಡುತ್ತುಮಿರೆಯಿರೆ

ಕೊಳದಿಂದಂ ತೆಗೆದೊಟ್ಟಿಕೊಂಡ ಕುಮುದಾಂಭೋಜಾತ ಕಲ್ಲಾರ ಕು
ಟ್ಮಲಶಾಲೂಕ ಮೃಣಾಳಜಾಲನಿಡುತ್ತೀಡಾಡುತಂ ಪಾದಪಂ
ಗಳ ಪುಷ್ಪಸ್ತಬಕಂಗಳಂ ಮುಱಿವುತಂ ಪೋಗಲ್ ಮದೇಭಂಗಳಾ
ಗಳದೇಂ ತೀಡಿದುದೋ ಸುಗಂಧಬಹುಳಂ ಬಂದೊಂದು ಮಂದಾನಿಲಂ ||೧೩||

ವಚನ : ಅಂತು ನಿರೀಕ್ಷಿಸುತ್ತಂ ಪೋಗೆವೋಗೆ

ಕುಮುದರಜಂಗಳೊಳ್ ಪೊರೆದು ವಾಃಕಣಜಾಲಮನಾಂತು ಕೂಡೆ ವಿ
ಶ್ರಮಿಸಿ ತರಂಗಮಾಲಿಕೆಗಳೊಳ್ ಕಲಹಂಸನಿನಾದಬಂಭ್ರಮ
ದ್ಭ್ರಮರರವಂಗಳೊಳ್ ಬೆರಸಿ ಮಾರುತನೊಯ್ಯನೊಯ್ಯನೆ ಬಂದು ತೀಡಿದ
ತ್ತಮರ್ದೊಸೆದಪ್ಪಿಕೊಂಡು ಕರೆವಂತೆವೋಲಾ ಮನಜೇಂದ್ರಚಂದ್ರನಂ ||೧೫||

ಎಲೆ ತಾರಾಗಂ ಹರಂ ಕಣ್ಣಿಡೆ ಕರಗಿದುದಂತಲ್ತು ರುದ್ರಾಟ್ಟಹಾಸಂ
ಜಲಮಾದತ್ತಲ್ತು ಚಂದ್ರಾತಪಮಮೃತಸಾಕಾರಮಾಯ್ತಲ್ತು ಹೈಮಾ
ಚಲಮಂಭೋರೂಪದಿಂದಂ ಪರಿಣಮಸಿದುದಲ್ತು ನೈರ್ಮಲ್ಯಶೋಭಾ
ಕಲಿತಂ ತ್ರೈಲೋಕ್ಯಲಕ್ಷ್ಮೀಮಣಿಮುಕುರಮೆನಲ್ ಚೆಲ್ವದಾಯ್ತಬ್ಜಷಂಡಂ ||೧೬||

ವಸುಧೆಯ ಚಂದ್ರಕಾಂತಮಣಿಭೂಗೃಹಮೆನ್ನದೆ ಘೂರ್ಣಿತಾರ್ಣವ
ಪ್ರಸವ ಸಮಗ್ರನಿರ್ಗನಮಾರ್ಗಮಿದೆನ್ನದೆ ನೋಡೆ ಪರ್ವಿದಾ
ಗಸದವತಾರಮೆನ್ನದೆ ಜಗತ್ರಯಸಂಚಿತ ಪುಣ್ಯಸಂಚಯಂ
ರಸಮಯಮಾದುದೆನ್ನದೆ ಸರೋವರಮಂ ಪೆರತೇನನೆಂಬುದೋ ||೧೭||

ವಚನ: ಅದಲ್ಲದೆಯುಂ

ವಸುಧೆಯ ಚಂದ್ರಕಾಂತಮಣಿಭೂಗೃಹಮೆನ್ನದೆ ಘೂರ್ಣಿತಾರ್ಣವ
ಪ್ರಸವ ಸಮಗ್ರನಿರ್ಗಮನಮಾರ್ಗಮಿದೆನ್ನದೆ ನೋಡೆ ಪರ್ವಿದಾ
ಗಸದವತಾರಮೆನ್ನದೆ ಜಗತ್ರಯಸಂಚಿತ ಪುಣ್ಯಸಂಚಯಂ
ರಸಮಯಮಾದುದೆನ್ನದೆ ಸರೋವರಮಂ ಪೆಱತೇನನೆಂಬುದೋ ||೧೭||

ವಚನ : ಮತ್ತಮದು ತೆಕ್ಕನೆತೀವಿಯುಮತಿನಿರ್ಮಲತೆಯಿಂ ರಿಕ್ತಮಾದಂತಿರ್ಪುದಂ ತಿರ್ಪು
ದಂತುಮಲ್ಲದೆಯುಂ

ಎಸಗುವ ಮಂದಾನಿಲನಿಂ
ಕುಸುಮರಜಂಬೊರೆದು ಪೊಣ್ಮುವಳಿದೆರೆಗಳಿನೇ
ನೆಸೆದುದೊ ಸುರಚಾಪಂಗಳ್
ಪಸರಿಸಿದಂಬರಮೆನಲ್ ಸರೋವರಮಾಗಳ್ ||೧೮||

ಪ್ರತಿಬಿಂಬದ ನೆವದಿಂ ವನ
ತತಿ ಶೈಲಗ್ರಹನಿಕಾಯ ತಾರಾಂಕ ಜಗ
ತ್ರಿತಯಮನಬ್ಜೋದರನಾ
ಕೃತಿಯಂ ತನ್ನೊಳಗೆ ತಳೆದು ತಿಳಿಗೊಳನೆಸೆಗುಂ ||೧೯||

ದಿವಿಜರಗೇಂದ್ರದಿಂ ಕಡೆದ ಪಾಲ್ಗಡಲಂತಿರೆ ನೀಲಕಂಠಪೀ
ತ ವಿಷಮನಂಗಕೇತನದವೊಲ್ ಮಕರಾಂಕಿತಮುರ್ವರೇಶ್ವರಾಂ
ಘ್ರಿವೊಲನಿಮೇಷಕೂರ್ಮಲಲಿತಂ ಮಲಯಾದ್ರಿನಿಕುಂಜಲೇಶದಂ
ತೆವೊಲತಿಸೌರಭಾಕಲಿತ ಚಂದನಶೀತವನಂ ಸರೋವರಂ ||೨೩||

ಆವುವುಳಿದೆಡೆಗಳೆಂದು ಸ
ರೋವರಮಂ ನೋಡುತಿರ್ಪ ಬಗೆಯಿಂ ಕೈಲಾ
ಸಾವಾಸಮಂ ಬಿಡಂ ಗೌ
ರೀವಲ್ಲಭನೆಂದೊಡಾರಿದಂ ನೆಱೆಪೊಗಳರ್ ||೨೪||

ಅಳವಱಿಯದೆ ತುರಗಮುಖ
ರ್ಕಳ ಬಳಿವಳಿಯನೆ ತಗಳ್ದು ಬಂದುದುಮೀಗಳ್
ಫಳಮಾದತ್ತೊಂದಱೊಳೀ
ಕೊಳನಂ ಕಂಡುದಱೊಳೆನುತೆ ಮತ್ತಂ ಭೂಪಂ ೨೫||

ಮುರಿದ ಕೊರಲ್ ಬಳಲ್ದೆಳಪಲಾಟಿಪ ಮೆಯ್ ಕಟುವಾಯ ಲೋಳೆಯೊಳ್
ಪೊರೆದುಗುತರ್ಪ ಪಚ್ಚಪಸಿಯಗಱುಂಕೆ ಮರಲ್ದ ದಿಟ್ಟ ಕ
ತ್ತರಿಮೊನೆಗೊಂಡೆಳಲ್ವ ಕಿವಿ ಸೂಚಿದಪ್ಪುದು ಸೋಲ್ತ ಭಾವಮಂ
ತುರಗಮಿದೇನನಾಲಿಸುತಮಿರ್ದಪುದೆಂದು ನರೇಂದ್ರಚಂದ್ರಂ ||೩೦||

ಹರಹಾಸವಯವಂಗಳಂತಿರಲನಂತಾನಂತ ಭೋಗಂಗಳಂ
ತಿರೆ ಪೂರ್ಣೇಂದ್ರಕಲಾಳಿಯಂತಿರೆ ಸಿತಾಬ್ಜಾನೀಕಮೊಪ್ಪಲ್ ಶಿಖಾಂ
ತರದೊಳ್ ನಿರ್ಮಲ ದಿವ್ಯಮೌಕ್ತಿಕಶಿಲಾಲಿಂಗಂ ಚತುರ್ವಕ್ತ್ರಸುಂ
ದರಮಲ್ಲಿರ್ದುದು ರತ್ನಪೀಠಘಟಿತಂ ದೇದೀಪ್ಯಮಾನಪ್ರಭಂ ||೩೫||

ಅಮೃತಾಂಬೋರಾಶಿಪೂರಪ್ರತಿಮ ನಿಜತಪಸ್ಸಚಯಂ ಪರ್ವಿತೋ ಲೋ
ಕಮನೆಂಬಂತಿರ್ದ ದೇಹಾಂಶುಗಳ ಬಳಗದಿಂ ಕಾನನಾನೀಕಮಂ ದಂ
ಯಮಯ ಮಾಳ್ಪಂತೆ ತಾರಾಚಳಮನಸದಳಂ ನುಣ್ಣಿಪಂಯೊರ್ವಳತ್ಯು
ತ್ತಮ ದಿವ್ಯಾಕಾರೆ ಕುಳ್ಳಿರ್ದತನುಹರನನಾರಾಧಿಸುತ್ಯಿರ್ದಳಾಗಳ್ ||೩೬||

ವಚನ : ಅಂತುಮಲ್ಲದೆಯುಂ

ತಳತಳಿಸಿ ಪೊಳೆವ ಪಳುಕಿನ
ನಿಲಯದೊಳಮೃತಾಬ್ಧಿಜಲದೊಳಭ್ರಕಪಟಲಂ
ಗಳ ಮಱೆಯೊಳಿರ್ದಳೆನೆ ಮೆ
ಯ್ವೆಳಗಿಂ ನೆಱೆಯಱಿಯಲಾದುದಿಲ್ಲಂಗನೆಯಂ ||೩೭||

ಸೊಗಯಿಸವೆಂದು ಪೃಥಿವ್ಯಾ
ದಿಗಳೆನಿಸುವ ಪಂಚಭೂತಮೆಲ್ಲವನುಳಿದಾ
ವಗಮುಜ್ವಳಾಂಗಿಯಂ ಧವ
ಳಗುಣದೆ ನಿರ್ಮಿಸಿದನಾಗವೇಳ್ಕುಂ ಧಾತ್ರಂ ||೩೮||

ವಚನ : ಅಂತುಮಲ್ಲದೆಯುಂ

ಪತಿಯನೆ ಬೇಡಿ ರುದ್ರನ ಸಮೀಪದೊಳುಗರತಪಕ್ಕೆ ನಂದಳೋ
ರತಿ ಶಶಿಲೇಖೆಯಂ ನೆನೆದು ಬಂದಳೋ ಮೇಣಮೃತಾರ್ಣವಾಧಿದೇ
ವತೆ ಶತಿಕಂಠಕಂಠತಮಮಂ ಕಳೆವಾಗ್ರಹದಿಂದೆ ಬಂದಳೋ
ಕ್ಷಿತಿಗಮೃತಾಶುಯೆನಲೇನೆಸೆದಿರ್ದುದೊ ರೂಪು ಕಾಂತೆಯಾ ||೩೯||

ಹರಹಾಸದ್ಯುತಿ ಮೂರ್ತಿಗೊಂಡುದೊ ವಿರಿಂಚಿಖ್ಯಾತಿ ಲೋಕಂಗಳೊಳ್
ಪರಿದಾಯಾಸದೆ ನಿಂದುದೋ ಕಲಿಯುಗಂ ನಿರ್ಮೂಲಿಸಲ್ ಧರ್ಮಮಂ
ಪಿರಿದುಂ ಶೋಕದೊಳಾ ತ್ರಯೀವಧು ವನಂಬೊಕ್ಕಿರ್ದಳೋ ಪೇಳಿಮ
ಚ್ಚರಿಯೆಂಬಂತಿರೆ ದಿವ್ಯಸುಂದರಿ ಮನಕ್ಕಾನಂದಮಂ ಮಾಡಿದಳ್ ||೪೦||

ಕಡೆದರೊ ಶಂಖದಿಂ ತೆಗೆದರೋ ನವಮೌಕ್ತಿಕದಿಂ ಮೃಣಾಳದಿಂ
ಪಡೆದರೊ ದಂತದಿಂದೆಸೆಯೆ ಮಾಡಿದರೋ ರುಚಿರೋಜ್ವಲಾಂಗಮಂ
ಬಿಡದಮೃತಾಂಶುರಶ್ಮಿಗಳ ಕುಂಚಿಗೆಯಿಂದಮೆ ಕರ್ಚಿ ಪಾರದಂ
ದೊಡೆದರೊ ಪೇಳೆನಲ್ ಕರಮೆ ಕಣ್ಗೆಸೆದಿರ್ದುದು ರೂಪು ಕಾಂತೆಯ ||೪೪||

ವನರುಹನಾಭನಾಭಿಸಿತಪಂಕಜಬೀಜಮೊ ಪದ್ಮಗರ್ಭನಾ
ನನದೆ ಪೊದಳ್ದ ವೇದವಿಮಲಾಕ್ಷರಮಾಲೆಯೊ ಕೆಯ್ಯಸೋಂಕು ಪಾ
ವನತರಮೆಂದು ಸಪ್ತಮುನಿಮಂಡಲಮಿರ್ಪುದೊ ಬಂದು ಪೇಳೆನಲ್
ವನಿತೆಯ ಮೌಕ್ತಿಕಾಕ್ಷವಲಯಂ ಕೊರಲೊಳ್ ಕರಮೊಪ್ಪಿ ತೋಱುಗುಂ ||೫೧||

ಕಿನ್ನರಯುಗ್ಮಮೆತ್ತ ಮನಮೆತ್ತ ಸರೋರುಹಷಂಡಮೆತ್ತಗೀ
ತಂ ನಯದಿಂದ ಬಂದೆಸೆವುದೆತ್ತ ಭವಾಲಯಮೆತ್ತ ಭೋಂಕನೀ
ಕನನೆಯ ಕಾಣ್ಕೆಯೆತ್ತ ಮನುಜಂಗೆನಗೆಂದು ನರೇಂದ್ರನಂದನಂ
ತನ್ನೊಳೆ ತಾನು ವಿಸ್ಮಯದೆ ಭಾವಿಸುತಿರ್ದನದೊಂದು ಜಾವಮಂ ||೫೯||

ವಚನ : ಅಂತು ಭಾವಿಸುತ್ತಮಿರ್ದು

ಮನುಜನನೆನ್ನನೀಕ್ಷಿಸಿ ಭವಾದ್ರಿಯನೇಱದೆ ನಾಡೆ ನೋಡಿ ತೊ
ಟ್ಟನೆ ಕೊಳೆ ಮಾಯವಾಗದೆ ನಭಕ್ಕೊಗೆದಾಗಳೆ ಪೋಗದಿರ್ದೊಡೊ
ಯ್ಯನೆ ಬೆಸೆಗೊಳ್ವನಾರ್ಗೆ ಸತಿ ನೀಂ ಪೆಸರೇಂ ನಿನಗಿಂತು ತೋರ್ಪ ಜ
ವ್ವನದೊಳಗೀ ತಪಕ್ಕೆ ಗುಱಿಮಾಡಿಸಿದುಬ್ಬೆಗಮಮಾವುದೆಂಬುದಂ ||೬೦||

ವಚನ : ಅನಂತರಮಾ ತ್ರೈಲೋಕ್ಯರಕ್ಷಾಮಣಿಯಂ ಪುದಕಷಿಣೀಕರಣಪೂರ್ವಕಂ ನಮಸ್ಕರಿಸಿ

ಒಸೆದಾಶ್ವಾಸಿಸುವಂತೆ ಪುಣ್ಯತತಿಯಿಂದಂ ಮುಟ್ಟುವಂತಚ್ಛತೀ
ರ್ಥಸಮೂಹಾಂಬುಗಳಿಂದವಂಭಿಷವಂ ಮಾಳ್ಪಂತೆ ಪೂತತ್ವಮಂ
ಪಸರಿಪ್ಪಂತೆ ಬರಂಗಳಂ ಪದಪಿನಿಂದೀವಂತೆ ದೃಕ್ತೃಪ್ತಿ ರಾ
ಜಿಸೆ ದಿವ್ಯಾಂಗನೆ ನೋಡಿದಳ್ ತಗುಳ್ದು ಚಂದ್ರಾಪೀಡಭೂಪಾಲನಂ ||೬೨||

ಸ್ವಾಗತಮೇ ನಿನಗೆ ಮಹಾ
ಭಾಗನೆ ಮದ್ಭೂಮಿಗೆಂತು ಬಂದಯ್ ನೀನ
ಭ್ಯಾಗತನಾಗಲ್ವೇಳ್ಕೆಂ
ದಾಗಳ್ ನೃಪಸುತನನಳ್ಕರಿಂ ಸತಿ ನುಡಿದಳ್ ||೬೩||

ವಚನ : ಅಂತು ನುಡಿದನಿತರೊಳೆ ಕೃತಾರ್ಥನಾದೆನೆಂದು ಬಗೆಯುತ್ತಂ ದೇವಿಯರ್
ಬೆಸೆದಂತೆಗೆಯ್ವೆನೆಂದು ಆ ಕಾಂತೆಯ ಬೆಂಬಳಿವಿಡಿದು ನಡೆವ ಶಿಷ್ಯನಂತೆ ಪೋಗೆವೋಗೆ
ಕಿಱಿದಂತರದೊಳ್

ಕಾಲದ ಮರ್ವು ಪರ್ವಿದವೊಲಿರ್ದ ತಮಾಲವನಂಗಳಿಂದೆ ಭೃಂ
ಗಾಳಿಯ ಗಾವರಂ ಪುದಿದ ಪುಷ್ಪಲತಾಗೃಹದಿಂದೆ ಚಂದ್ರಿಕಾ
ಜಾಲದವೊಲ್ ಕೆಲಂಬಿಡಿದು ಭೋರ್ಗರೆಯಲ್ ಸುರಿತರ್ಪ ನಿರ್ಝರಾ
ಸ್ಫಾಲನ ಶೀಕರಪ್ರಸರದಿಂದೆಸೆದತ್ತು ಬೃಹದ್ಗುಹಾಂಗಣಂ ||೬೪||

ವಚನ : ಅಂತುಗುಹಾಂಗಣದ ಮುಂದೆ ನಿಂದು ನೋಳ್ಪಲ್ಲಿ

ಅದು ಸುರಭೂಜಲವಲ್ಕವಸನಮಂತದುದಂಡಮಲ್ಲಿ ನೇ
ಲಿದುದದು ಜೋಗವಟ್ಟಿಗೆ ಕಮಂಡಲಮಂತದು  ಭಸ್ಮಶಯ್ಯೆಯಂ
ತದು ಶಶಿಮಂಡಲಾಕೃತಿವೊಲಿರ್ದುದುಶಂಖದ ಪಾತ್ರೆಯೆಂದು ನೋ
ಡಿದನತಿವಿಸ್ಮಯಂಬೆರಸು ತದ್ಗುಹೆಯಂ ನೃಪರೂಪಚಂದ್ರಮಂ ||೬೫||

ಪಿರಿದೆನಿಸಿರ್ದ ನಿಮ್ಮಯ ಪ್ರಸಾದಮನಾಂ ಪಡೆದೊಂದು ಗರ್ವದಿಂ
ಪರಿಚಿತನಂತೆ ಬಿನ್ನವಿಸಲುಂ ಬಗೆದಂದಪೆನಂತುಟಲ್ತೆ ಬಿ
ತ್ತರಿಪೊಡಧೀರರಪ್ಪ ಮನುಜರ್ ಪ್ರಭುಗಳ್ ದಯೆಯಿಂದೆ ತಮ್ಮನಾ
ದರಿಸಿದೊಡಾಗಳೆ ಗಳಪಲ್ ಬಗೆದರ್ಪುದಿದಾವ ವಿಸ್ಮಯಂ ||೬೭||

ಮನುಜಂಗೆ ಕೌತುಕಾವಹ
ಮಿನಿತೊಂದಾಶ್ಚರ್ಯಮದಱಿನಿಂ ಬೆಸಗೊಳ್ಳ
ಲ್ಕನುಗೆಯ್ಯುತ್ತಿರ್ದಪುದೀ
ಮನಮನನುಗ್ರಹಿಸಿ ದೇವಿ ಪೇಳಲ್ವೇಳ್ಕುಂ ||೬೮||

ಸುರಮುನಿಸಿದ್ಧಖೇಚರರಾವಕುಳಂ ನಿಜಜನ್ಮದಿಂದಲಂ
ಕರಿಸಿತೊ ಪಂಚಭೂತಮಯಮಾಗಿಯುಮೀ ತನುಮಿಂದುಕಾಂತಿಯಂ
ತಿರೆ ಪೊಳೆಯುತ್ತಮಿರ್ದಪುದಿದೇಂ ಪೊಸಜವ್ವನದೇಳ್ಗೆಯೊಳ್ ತಪ
ಶ್ಚರಣಮಿದೇಂ ಪೊದಳ್ದಿಡಿದ ಕಾನನದೊಳ್ ಬಿಡದೊರ್ಬಳಿರ್ಪುದೇಂ ||||೬೯||

ವಚನ : ಎಂದು ಬೆಸಗೊಳ್ವುದುಂ ಕಿಱಿದುಬೇಗಂ ತನ್ನೊಳ್ ತಾನೆ ಭಾವಿಸಿ

ಪೊಳೆವಲರ್ಗಳಿಂ ಮಿಳಿರ್ವ ಬೆಳ್ಪು ರಸಾತ್ಮಕಮಾಗಿ ಗಂಡಮಂ
ಡಳತಳದಿಂದಮಂದಿಳಿಯುತಿರ್ದುವೆನಲ್ ನಯನಾಂಬುಲೋಚನಂ
ಗಳಿನಿರದುಣ್ಮೆ ಶಬ್ದಮಣಮಿಲ್ಲದೆ ತೊಟ್ಟನೆ ಕಣ್ಮುಗುಳ್ದಳ
ಗ್ಗಳಿಪಳವಿಂದೆ ಮಾನಿನಿ ಮನಕ್ಕತಿವಿಸ್ಮಯಮಾಗೆ ಭೂಪನಾ ||೭೦||

ವಚನ : ಅಂತಾ ಕಾಂತೆ ಶೋಕಾಕ್ರಾಂತೆಯಾಗಿ

ರಸೆಯಂ ತಾಂ ತಾಂಕಿ ಕಲ್ಪಾಂತದ ಬಱಸಿಡಿಲೆಯ್ತಂದು ಪೊಯ್ಯಲ್ ನೆಲಂ ಕಂ
ಕಂಪಿಸುವತ್ಯಂತಶೋಕಾಕುಲತೆಯಿನಳುತಿರ್ದಪ್ಪಳೋರಂದದಿಂ ಮ
ಳ್ಗಿಸಲಿನ್ನಾರ್ಪರೀ ಶೋಕಮನೆನುತೆ ಭಯಂಗೊಂಡಿದೆತ್ತೆತ್ತಲೀಗಳ್
ಬೆಸಗೊಂಡೆಂ ಕೆಮ್ಮನೆಂದುಮ್ಮಳಿಸಿ ಪಿರಿದುಮಂದಾ ಉನೃಪಂ ವ್ಯಗ್ರನಾದಂ ||೭೧||

ವಚನ : ಅಂತು ನೃಪತಿ ವ್ಯಗ್ರನಾಗಿ ಮುಖಪ್ರಕ್ಷಾಳನಾರ್ಥಂ ಪೇರಡವಿಯೊಳಂಜಲಿಯಿಂ
ಜಲಮಂ ತಂದು ದೇವಿಯರವಧಾರಿಸುವುದೆಂದು ಭೂಪನಿಳಿಂಪನುಪರೋಧಿಸುತ್ತಮೆಱೆಯೆ

ಅಳವಿಲ್ಲದಳುತ್ತಿರೆ ಕೆಂ
ಪೆಳಸಿದ ಬಾಷ್ಪಾಂಬುಪೂರ್ಣಲೋಚನಮಂ ತ
ಜ್ಜಳದಿಂದೆ ಕರ್ಚಿ  ವಲ್ಕಾಂ
ಚಲದಿಂ ನಿಜವದನಬಿಂಬಮಂಸತಿ ತೊಡೆದಳ್ ||೭೨||

ಅಂತಾ ಕಾಂತೆ ಶೋಕಾಕ್ರಾಂತೆಯಾಗಿರ್ಪುದುಂ ಕಂಡಿಂತಪ್ಷವರುಮಳುವಂದಮ
ದ್ಭುತಮೆಂದು ಮನದೊಳ್ ಭಾವಿಸುತ್ತಮಿರೆ

ಉರಗಮುಖೋಗ್ರದಂಷ್ಟ್ರ ಸಹಜಾತೆಯನೂರ್ಜಿತಕಾಲಪಾಶನಿ
ಷ್ಠುರತರರೂಪೆಯಂ ಸಹಜಶಾಕಿನಿಯಂವಿಷಕನ್ಯಕಾಸಹೋ
ದರಿಯನಪಾರ ಘೋರದುರಿತಾರ್ಣವಜಾತೆಯನಾತ್ಮವಲ್ಭಾಂ
ತರಿತೆಯನೆನ್ನನಣ್ಣ ಬೆಸಗೊಳ್ವುದೆ ಪೇಳ್ವೆನೆ ತತ್ಪ್ರಪಂಚಮಂ ||೭೩||

೫• ಮಹಾಶ್ವೇತೆಯ ವೃತ್ತಾಂತ

ತ್ರಿದಿವದೊಳಚ್ಚರಸಿಯರಿ
ರ್ಪುದು ವಿದಿತಂ ನಿಮಗಮಂತವರವಂಶಂಗಳ್
ಪದಿನಾಲ್ಕನೆ ಪೆಸರಿಂ ನೆಗ
ಳ್ದುದಯಿಸಿದುವು ಬೇಱೆಬೇಱೆ ನೃಪಕುಲತಿಲಕಾ ||೧||

ವಚನ : ಅದಲ್ದದೆಯುಂ ದಕ್ಷಪ್ರಜಾಪತಿಗೆ ಪುಟ್ಟಿದ ಮುನಿಯುಮರಿಷ್ಟೆಯುಮೆಂಬೀರ್ವರ್
ಕನ್ನೆಯರಿಂ ಗಂಧರ್ವಕುಲಮುದಯಿಸಿದುದಲ್ಲಿ ಚಿತ್ರಸೇನಾದಿಗಳಪ್ಪ ಪದಿನೈವರಿಂ ಪಿರಿಯನೆನಿಸಿ

ಚಿತ್ರರಥನೆಂಬನೊರ್ವಂ
ಪುತ್ರಂ ಗಂಧರ್ವರಾಜನಮರೇಂದ್ರಂಗಂ
ಮಿತ್ರನೆನೆ ಪೆಂಪುವಡೆದು ಜ
ಗತ್ರಯವಿಖ್ಯಾತಕೀರ್ತಿ ಮುನಿಗುದಯಿಸಿದಂ ||೩||

ವಚನ :ಮತ್ತಮಾ ಸೋಮಮಯೂಖಸಂಭವೆಯರಪ್ಪಚ್ಚರಸಿಯೊಳಗೆ

ಅಮೃತಕರ ಭಾಸುರೋದ್ಯ
ತ್ಕಮನೀಯಕಲಾಕಲಾಪಲಾವಣಣ್ಯಝರೀ
ಸಮುದಿತೆಯೆನಲ್ಕೆ ಪುಟ್ಟಿದ
ಳಮೃತಾಂಶುನಿಭಾಸಯೆ ಗೌರಿಯೆಪಂಬಳ್ ಪೆಸರಿಂ ||೬||

ಇಂಗಡಲಿಗಮರನದೀ
ಸಂಗಂ ಸಂಘಟಿತ ತೆಱದೆ ಗಂಧರ್ವಕುಲೋ
ತ್ತುಂಗನೆನಲ್ ನೆಗಳ್ದಾ ಹಂ
ಸಂಗಾದುದುಗೌರಿಯೊಳ್ ವಿವಾಹೋತ್ತಾಹಂ ||೭||

ನಿನಗೇಂ ಪೇಳ್ದಪೆನಾಂ ಮಹಾತ್ಮರೆನಿಸಿದ ತಂದೆಗಂ ತಾಯ್ಗಮೋ
ರ್ವನೆ ನಿರ್ಭಾಗ್ಯನಿವಾಸೆಯಂ ನಿಖಿಲಪಾಪಾಕರೆಯೆಂ ದುಃಖಭಾ
ಜನೆಯಂ ಪುಟ್ಟಿದೆನ್ನನೀಕ್ಷಿಸಲೊಡಂ ತಾತಂ ಮಹಾಶ್ವೇತೆಯೆಂ
ದನುರಾಗಂಬೆರಸಿಟ್ಟನೆನ್ನ ಪೆಸರಂ ಗಂಧರ್ವಚಕ್ರೇಶ್ವರಂ||೯||

ವಚನ : ಅಂತು ನಿಜಜನನೀಜನಕರ್ ಪಲಕಾಹಲಮನಪತ್ಯರಪ್ಪುದಱಿಂ ಪುತ್ರನಿಂದಗ್ಗಳ
ಮಪ್ಪ ಪರಮಪ್ರೀತಿಯಿಂ ನಡಪುತ್ತಮಿರೆ ಕೆಲವುದಿವಸದೊಳವಿದಿತ ಸ್ನೇಹಶೋಕಾಯಾಸಮಪ್ಪ
ಶೈಶವಂ ಪತ್ಯುವಿಡುವುದುಂ

ಎಸೆವ ವಸಂತಮಾಸದೆ ವಸಂತನುಮಾಂತ ಕುಜಾತಪಲ್ಲವ
ಪ್ರಸರದಿನಾ ವಸಂತಸಮಯಂ ಕುಸುಮಾವಳಿಯಿಂದೆ ಪಲ್ಲವಂ
ಮಿಸುಪಳಿಮಾಲೆಯಿಂ ಕುಸುಮಮಂಜರಿ ರಂಜಿಸುವಂತಿರಲ್ವಿಜೃಂ
ಭಿಸಿದುದು ಯವ್ವನೋದಯವಿಲಾಸಾನುಕ್ರಮದಿಂ ಮದಂಗದೊಳ್ ||೧೦||

ವಚನ : ತದನಂತರಂ

ಸ್ವರರಾಗಾಂಧತ್ವದಿಂದಂ ಪಗಲೊಳಮಸತೀಕೇಳಿ ಪೊಣ್ಮಲ್ ವಿಯೋಗಾ
ತುರ ಜೀವಾಹಾರದಿಂದಂ ರತಿಪತಿ ತಣಿಯಲ್ ಪುಷ್ಪಚಾಪಾಸ್ತ್ರ ಟಂಕಾ
ರರವೋದ್ಭಿನ್ನ ಪ್ರಪಾಂಥಪ್ರಕರಹೃದಯರಕ್ತಾಂಬುಗಳ್ ಕೂಡೆ ಮಾರ್ಗಾಂ
ತರದೊಳ್ ಸೂಸುತ್ತಿರರಲ್ ಬಂದುದು ಶಿಶಿರನೃಪೋದ್ಯತ್ಕೃತಾಂತಂ ವಸಂತಂ ||೧೧||

ಇದು ಮದಭೃಂಗಕೀರ್ಣಕುಸುಮೋತ್ಕರರಮ್ಯಲತಾವಿತಾನಮಿಂ
ತಿದು ಪಿಕತುಂಡಖಂಡಿತಗಳದ್ರಸಕೋಶ ರಸಾಲಸಾಲಮಿಂ
ತಿದು ಶಿಖನಾದ ಭೀತಫಣಿವರ್ಜಿತ ಚಂದನಭೂಜರಾಜಿಯೆಂ
ದೊದವಿದ ರಾಗದಿಂದವನಭೀಕ್ಷಿಸುತಾಂಚರಿಸುತ್ತಮಿರ್ಪಿನಂ ||೧೨||

ಇಳಿಕೈದುಳಿದಲರ್ಗಳ ಪರಿ
ಮಳಮಂ ಘ್ರಾಣೈಕತರ್ಪಣಂ ಮಿಳದಳಿಸಂ
ಕುಳಮೇನೆಸಗಿತ್ತೊ ವನಾ
ನಳನೀತಂ ಕುಸುಮಗಂಧಮೋರೊಂದೆಡೆಯಿಂ ||೧೩||

ವಚನ : ಅಂತು ಬಂದ ಮಾನುಷಕುಲೋಚಿತಮುಮನಾಘ್ರಾತಪೂರ್ವಮುಮೆನಿಪ
ಕುಸುಮಗಂಧಮನಾಘ್ರಾಣಿಸತಮಿದೆತ್ತಣದೆಂದು ಕೌತುಕಂಮಿಗಲದರ ಬಳಿವಿಡಿದು  

ಅರಸಂಚೆಗಳೊಡವರೆ ನೇ
ವುರದಿಂಚರಕೊಲ್ದು ಪೋಗಲಾಂ ಕಿಱಿದೆಡೆಯಂ
ಸರಸಿಗೆ ಮೀಯಲ್ಕೆಂದೈ
ತರುತಿರ್ದು ಮುಂದೆ ಮುನಿಕುಮಾರಕನೊರ್ವಂ ||೧೪||

ಇಂಬಾಗಿರೆ ಬಾಂದೊಱೆಯೊಳ
ಲುಂಬಿದ ಮನದಾರವಲ್ಕಲವಿರಚಿತ ನವದಿ
ವ್ಯಾಂಬರವಾ ಮುನಿವರನೊಳ್
ಬಿಂಬಿಸಿತು ಜರಚ್ಚಕೋರಲೋಚನರುಚಿರಂ||೨೭||

ವಚನ : ಅಂತುಮಲ್ಲದೆಯುಂ ಬ್ರಹ್ಮಚರ್ಯಕ್ಕಲಂಕಾರಮುಂ ಧರ್ಮಕ್ಕೆ ನವಯವ್ವನಮುಂ
ಸರಸ್ವತಿಗೆ ಲೀಲಾವಿಲಾಸಮಂ ವಿದ್ಯಾಪ್ರತತಿಗೆ ಸ್ವಯಂವರಪತಿಯುಂ ಸಮಸ್ತಶ್ರುತಿಗಳಿಗೆ
ಸಂತನಿಕೇತನಮುಮೆನಿಸಿದನಲ್ಲದೆಯುಂ

ತನಗನುರೂಪಮೆಂಬಿನೆಗಮೊರ್ವ ಕುಮಾರತಪಸ್ವಿ ದೇವತಾ
ರ್ಚನೆಗೆ ವನಕ್ಕೆ ಬಂದು ಪೊಸವೂಗಳನರ್ತಿಯೊಳಾಯ್ದು ಕೊಯ್ದು ಬೆ
ನ್ನನೆ ಬರಲೀ ವನಾಂತರ ಸರೋವರದಲ್ಲಿಗೆ ಮೇಯಲೆಂದು ಮೆ
ಲ್ಲನೆ ಬರುತಿರುದ ತನ್ಮುನಿಕುಮಾರನನಾಂಬೆಡೆ ನೋಡಿದೆಂ ನೃಪಾ ||೨೮||

ವಚನ : ಅಂತು ನೋಳ್ಪನ್ನೆಗಂ

ಸ್ಮರಕಾಂತಾರತಘರ್ಮಬಿಂದುಚಯಮೋ ಮೀನಾಂಕಮತ್ತೇಭಚಾ
ಮರಮೋ ನಂದನಲಕ್ಷ್ಮಿಯೊಳ್ನಗೆಯೊ ತಾಂ ಮಂದಾನಿಲಂ ತೆಂಕಣಿಂ
ಬರೆ ಚೈತ್ರಂ ಕುಡುವರ್ಘ್ಯಲಾಜತತಿಯೋ ಪೇಳೆಂಬಿನಂ ಪುಷ್ಪಮಂ
ಜರಿಯಂ ತನ್ಮುನಿಕರ್ಣಪೂರಕಮನತ್ಯಾಶ್ಚರ್ಯದಿಂ ನೋಡಿದೆಂ ||೨೯||

ವಚನ : ಅಂತು ಭಾವಿಸುತ್ತುಂ ಆ ಮುನಿಕುಮಾರವದನೇಂದುಬಿಂಬಮಂ ನೋಡಿ

ಸಿರಿ ನಲವಿಂದಮಿರ್ಪ ನೆಲೆ ಕಣ್ಗಳ ಪರ್ವಮೆನಿಪ್ಪ ಪಂಕಜೋ
ತ್ಕರಮುಮನಿಂದುಮಂಡಲಮುಂ ಮೊದಲೊಳ್ ಸಮೆದಬ್ಜಂ ಮನೋ
ಹರಮೆನೆ ಮಾಡಿದೀ ಮೊಗದ ಪೋಲ್ವೆಗೆ ಮುನ್ನೆಗಳಲ್ ತಗುಳ್ಚಿ ಬಿ
ತ್ತರಿಸಿದನಲ್ಲದಿಂತು ಸಮವಸ್ತುಗಳಂ ಪಡೆವಂತು ಗಾಂಪನೇ ||೩೧||

ವಚನ : ಮತ್ತಂ

ಕೇಳಿ ಸುಷುಮ್ನೆಯೆಂಬ ಕರದಿಂ ಗಡ ಚಂದ್ರಕಲಾಪಕಲಾಪಮಂ
ಕಾಲದೊಳಂಶುಮಾಲಿ ತೆಗೆದೀಂಟುವನೆಂಬುದಸತ್ಯಮಾ ಪ್ರಭಾ
ಜಾಲಕಮೆಲ್ಲೀ ತನುವಿನೊಳ್ ಪುಗುತಿರ್ಪುದು ತಪ್ಪದಲ್ಲದಿಂ
ತೀ ಲಲಿತಾಂಗಮೀತಪದೊಳಿಂತಿರೆ ಕಾಂತಿಯನಪ್ಪುಕೆಯ್ಗುಮೇ ||೩೨||

ವಚನ : ಎಂದು ರೂಪೈಕಪಕ್ಷಪಾತಮಂ ಭಾವಿಸುತ್ತಮಿರ್ಪುದುಂ

ನವಯವ್ವನದೊಳ್ ಗುಣದೋ
ಷವಿಚಾರಮನಿಂತು ಮಾಡಲೀಯದ ಭಾವೋ
ದ್ಭವನಿಂ ಪರವಶೆಯಾದೆಂ
ನವಕುಸುಮಾಸವದೆ ಸೊಕ್ಕಿದಳಿನಿಯ ತೆಱದಿಂ ||೩೩||

ವಚನ : ಅಂತಾಶ್ಚರ್ಯಮಂ ತಳೆದು ನನ್ನ ನಾನೆ ಸಂತೈಸಿ

ಎನ್ನೆವರಂ ಸಚೇತನೆಯೆನೆನ್ನೆವರಂ ಲಘುವಾಗದಿರ್ಪೆನೋ
ಅನ್ನೆಗಮೀಗಳೀಯೆಡೆಯಿನಾಂ ತೊಲಗಿರಪುದು ಕಜ್ಜಮಲ್ಲದಂ
ದೆನ್ನಯ ಮನ್ಮಥೋಚಿತವಿಕಾರಮನೀಕ್ಷಿಸಿ ಸೋಲ್ತಕ್ಕಟಾ
 ಎನ್ನದೆ ಶಾಪಮಂ ಕುಡುವನಂತುಟೆ ಕೋಪಿಗಳಲ್ತೆ ತಾಪಸರ್ ||೩೯||

ವಚನ : ಎಂದು ಪೋಗಲುದ್ಯೋಗಂಗೆಯ್ದು ನಿಖಿಳಜನಪೂಜಾರ್ಹರನವಜ್ಞೆಗೆಯ್ಯಲಾಗದೆಂದು

ತೊಳಗುವ ಚೆನ್ನಪೂಗಳಲಕಾವಳಿಯೊಳ್ ಮಿಱುಗಲ್ ಕಪೋಲಮಂ
ಡಳತಳದೊಳ್ ತೆಱಂಬೊಳೆಯೆ ಕೋಮಲಪಲ್ಲವಕರ್ಣಪೂರ ಮಂ
ಜುಳಮಣಿಕುಂಡಲಂ ಪೆಗಲೊಳಾಡೆ ಮರಳ್ದೆವೆಯಿಕ್ಕದಾಂ ಮನಂ
ಗೊಳಿಪ ಮುನೀಂದ್ರನಾನನಮನೀಕ್ಷಿಸುತಂ ಪೊಡೆವಟ್ಟೆನಳ್ಕಱಿಂ ||೪೦||

ವಚನ : ತದನಂತರಂ

ಮದನಂ ದುರ್ಜಯನಿಂದ್ರಿಯಂಗಳನಿವಾರ್ಯಂಗಳ್ ವಸಂತಂ ಮದ
ಪ್ರದನಾಸ್ಥಾನವತೀವರಮ್ಯಮೆನಗಂ ದುಃಖಂಬರಲ್ವೇಳ್ಕುಮ
ಪ್ಪುದಱಿಂ ಭಾವಿಸಿ ಮದ್ವಿಕಾರಮನೆ ನೋಡುತ್ತಿರ್ಪುದುಂ ಗಾಳಿಗೋ
ಡ್ಡಿದ ದೀಪಾಂಕುರದಂತೆ ತನ್ಮನಿಯುಮಂ ಕಾಮಂ ಚಲಂ ಮಾಡಿದಂ ||೪೧||

ವಚನ : ಅಂತು ಮಾಡೆ
ಮನಮೆನ್ನಂ ಮುಂಬರಲ್ಮುಂದುವರಿವುದನೆ ತೋರ್ಪಂತೆ ನೀಳ್ದತ್ತು ಸುಯ್ ಭೋಂ
ಕೆನಲಂತೆಯ್ತರರ್ಪ ಕಾಮಂಗೊಲವಿನೊಳಿದಿರೇಳ್ವಂತೆ ರೋಮೋದ್ಗಮಂ ತೊ
ಟ್ಟನೆ ಮೆಯ್ದೋಱಿತ್ತು ವೀರವ್ರತವಳಿದಪ್ಪುದಿನ್ನೆಂದು ನಟ್ಟಂಜಿದಂತಾ
ತನ ಕೆಯ್ಯೊಳ್ ರಂಜಿಪಾಕ್ಷಾವಳಿ ನಡುಗಿದುದತ್ಯಂತಮಾಶ್ಚರ್ಯಮಾಗಲ್ ||೪೨||

ಮನದೊಂದಳ್ಕಱೊಳೆನ್ನನೊಲ್ದಡರೆ ನೋಡುತ್ತಿರ್ಪುದುಂ ಕಣ್ಣ ಬೆ
ಳ್ವಿನಗುರ್ವಸ್ಥಳಮಂ ಸಿತಾಬ್ಜಮಯಮೆಂಬಂತಾಗೆಯುಂ ಮಾಡಿ ಭೋಂ
ಕೆನಲಚ್ಛೋದಸರೋಂಬುವಂ ಕುಮುದಷಂಡಂ ಬಿಟ್ಟು ತಳ್ತತ್ತು ಮೇ
ಲೆ ನಭೋಭಾಗಮನೆಂಬಿನಂ ಪಸರಿತ್ತಾಗಳ್ ದಿಶಾಚಕ್ರಮಂ ||೪೪||

ವಚನ : ಅಂತೆಯ್ದೆ ಮತ್ತಮೆನ್ನೊಳ್ ಸಂಭೋಗಲೀಲಾನರ್ತನಕ್ಕೋಜನಪ್ಪ ಮನೋಜಂ
ವಿಲಾಸೋಪದೇಶಕ್ಕೋಜನಾಗವೇಳ್ಕುಮಲ್ಲದಂದು ರತರಸಾಸಾವಾದನಂಗಳನಱಿಯದನ ದಿಟ್ಟಿಗಮ
ರ್ದನುಗುಳ್ವಂತೆ ಗೆಯ್ವಂದಮುಂ ಒಸರ್ದು ಪರಿದಪ್ಪುದೆನಿಪ ರತಿರಸಮುಮಾನಂದಬಾಷ್ಪಪ್ರಸ
ರಮಂ ರಸಭಾರದಿಂ ನಡುಗುವಂತೆ ಸಂಚಳಿಸುವಂದಮುಂ ಇನಿಸಪ್ಪೊಡೆ ಪೊಡರ್ಪನಪ್ಪುಕೆಯ್ಯ
ದಿಳಿಯೆ ಪೂದಳೆದುದೆನಿಪ ಪುರ್ಬಿನ ಕುಡಿವೆರಸು ತೂಕಡನೊಳಕೊಂಡ ಜಾಡ್ಯಮಂ ಸೊಕ್ಕು
ಮುಕ್ಕಳಿಸಿದಂತಿರ್ದಿರವುಂ ಬಳಲ್ವಂತೆ ಜೋಲ್ದಂದಮುಂ ಮುನ್ನಮಭ್ಯಾಸಮಿಲ್ಲದುದರ್ಕ್ಕೆಂತು
ದೊರಕೊಳ್ಗುಮೆಂದು ಭಾವಿಸಿ ನೋಡುತ್ತಾತನೊಳವಸರಂಬಡೆದು ಮೆಲ್ಲನೆಯ್ದುವಂದು

ಪೆಸರೇನಾರ್ಗೀತನೀ ಜವ್ವನಿಗ ತವಸಿ ತೊಟ್ಟಿರ್ಪ ಕರ್ಣಾವತಂಸಂ
 ಪೊಸತೀ ಲೋಕಕ್ಕಿದಾವಂಘ್ರಿಪದ ಪೊಳೆವ ಪೂಗೊಂಚಲಿಂದಾದುದೋ ನೀಂ
ಬೆಸಸಲ್ವೇಳ್ಕಿಂತಿದಂ ಕೌತುಕಮನೆನಗೆನುತ್ತಂ ನಮಸ್ಕಾರಪೂರ್ವಂ
ಬೆಸಗೊಂಡೆಂ ತನ್ಮುನೀಂದ್ರಾನುಚರಮುನಿಯನಾನಂದತಿಪ್ರೀತಿಯಿಂದಂ ||೪೫||

ವಚನ : ಅಂತು ಬೆಸಗೊಳೆ

ಬೆಸಗೊಳ್ವುದಱಿಂದಿದನು
ದ್ದೆಸಮಾವುದು ತರುಣಿ ನಿನಗೆ ಕೌತುಕಮೆನೆ ಕೇ
ಳುಸಿರ್ದಪೆನೆಂದಾ ಮುನಿಪಂ
ನಸುನಗುತಂ ಪೇಳಲುದ್ಯತನಾದಂ ||೪೬||

ವಚನ : ಅದೆಂತೆನೆ ಸಕಲ ಮುನಿವೃಂದವಂದಿತಚರಣನುಮಖಿಲಮುನಿಜನಾನಂದನನುಂ
ವಿದಿತ ನಿರವದ್ಯಾಕಲಾಪನುಮಪ್ರತಿಮರೂಪನುಮಪ್ಪೊರ್ಬ ಶೇತಕೇತುವೆಂಬ ಮಹಾ
ಮುನಿಯಮರಲೋಕದೊಳಿರ್ಪನಾತನೊಂದುದಿವಸಂ ಪುಂಡರೀಕಮೆಂಬ ಸರೋವರಮಂ
ಮೀಯಲೆಂದು ಬಂದಿರೆ

ಅರವಿಂದಾಕರಸಾಂದ್ರ ಪದ್ಮವನಮಧ್ಯೋದ್ದೇಶಳ್ ಲಕ್ಷಕಮಿ ಭಾ
ಸುರವಿಸ್ತೀರ್ಣಸಿಯಾಬ್ಜದಲ್ಲಿ ಪದಪಿಂ ಪ್ರತ್ಕ್ಷಮಿರ್ಪಳ್ ನಿರಂ
ತರಮಾ ಕೋಮಳೆ ಪದ್ಮಸದ್ಮತಟದೊಳ್ ನಿಂದಿರ್ದ ಸರ್ವಾಂಗಸುಂ
ದರನಂ ದಿವ್ಯಮುನೀಂದ್ರನಂ ಪಿರಿದುಮೊಂದಾಸಕ್ತಿಯಿಂ ನೋಡಿದಳ್ ||೪೭||

ವಚನ : ಅಂತು ನೋಡೆ



ನೋಡಲೊಡಂರತಾಂತಸುಖಮಾಗೆ ನಿಜಾಸನ ಪುಂಡರೀಕದೊಳ್
ನೋಡೆ ಕೃತಾರ್ಥೆಯಾದಳದಱತ್ತಣಿನಾಗಳೆ ಗಾಡಿ ನಾಡೆ ಕ
ಣ್ಗೂಡಿರಲೊರ್ವನುದ್ಭವಿಸೆ ಕಂಡು ನಿಜಾತ್ಮಜನೀತನೆಂದವಳ್
ನೀಡಿದಳಾ ಕುಮಾರಕನನಾ ಮುನಿಪಂಗೆ ಮನೋನುರಾಗದಿಂ ||೪೮||

ವಚನ : ಆಗಳಾತಂ ಯೋಗದೃಷ್ಟಿಯಿಂ ನೋಡಿ ತತ್ಕುಮಾರನಂ ಕೈಕೊಂಡು ಬಾಲ
ಜನ್ಮೋಚಿತಕ್ರಿಯೆಗಳಂ ಮಾಡಿ ಜನ್ಮಾನುರೂಪಮಾಗೆ ಪುಂಡರೀಕನೆಂದು ಪೆಸರನಿಟ್ಟು ಶೈಶವಮಂ
ಪತ್ತುವಿಡಲೊಡಮಖಿಳವಿದ್ಯಾಕಲಾಪದೊಳ್ ಪರಿಣತನಂ ಮಾಡಿ ಯತಿತ್ವಮಂ ಕೈಕೊಳಿಸೆ
ತದನುಷ್ಟಾನಪರಾಯಣನಾದ ಮಹಾನುಭಾವನೀತಂಗೀ ವ್ರತವಿರುದ್ಧಮಪ್ಪ ಕುಸುಮ ಮಂಜರಿಯೆಂತು
ಬಂದುದೆಂಬೆಯಪ್ಪೊಡೆ

ಇಂದು ಚತುರ್ದಶಿಯಪ್ಪುದ
ಱಿಂದಂ ಕೈಲಾಸವಾಸಿಯಂ ಕಾಣಲ್ಕಾ
ನಂದದೆ ದಿವದಿಂದಿರ್ಬರು
ಮೊಂದಾಗಿ ಬರುತ್ತಮಿರ್ಪುದಂ ತತ್ ಕಷಣದೊಳ್ ||೪೯||

ಕುಸುಮವಿಭೂಷಣಾನ್ವಿತೆನವಪ್ರಸವಾಸವಪಾನಮತ್ತೆ ರಂ
ಜಿಸುವ ವಸಂತಲಕ್ಷ್ಮಿಯ ಕರಾಗ್ರದೊಳಿಕ್ಕಿ ನಖಾಂಶುಜಾಲಮಂ
ಪಸರಿಸುತಿರ್ಪ ತನ್ನ ಕರಮಂ ವನದೇವತೆ ಪಾರಿಜಾತದೊಂ
ದೆಸೆವಲರ್ಗೊಂಚಲಂಪಿಡಿದು ನಂದನದೊಳ್ ಬರುತೊರ್ವಳೊಪ್ಪಿದಳ್ ||೫೦||

ಅಂತು ಬಂದು ಪೊಡಮಟ್ಟು ಭುವನತ್ರಯಾಭಿರಾಮಮಪ್ಪ ನಿನ್ನ ಸೌಕುಮಾರ್ಯಕ್ಕೆ
ತಕ್ಕಲಂಕಾರಮೀ ದಿವ್ಯಕುಸುಮಮಂಜರಿಯನವತಂಸಂ ಮಾಡಿ ಪಾರಿಜಾತಜನ್ಮಮಂ ಸಫಲಂ
ಮಾಳ್ಪುದೆಂದು ಬಿನ್ನವಿಸೆ ನಿಜರೂಪಸ್ತುತಿಗೆ ಲಜ್ಜಿಸಿ ಕೇಳದಂತೆ ಪೋಗೆ ಮತ್ತಂ ಬೆನ್ನನೆಪತ್ತಿ
ಬರುತಿರ್ಪುದುಮಾಂ ಕಂಡು ತಾರುಣ್ಯದಿಂದೀ ಕಾಂತೆಗೆ ಸಂತೋಷಮಂ ಮಾಡಿಮೆನಲಿದೇಕೆ ಬೇಡ
ವೇಡೆಯೆನೆಯುಂ ಕಿವಿಯೊಳ್ ತೊಡರ್ಚಿ ಪೋದಳೀ ಕುಸುಮಮಂಜರಿಯನೆಂದು ಸಹಚರಮುನಿ
ಪೇಳೆ ಪುಂಡರೀಕಂ ದರಹಸಿತಾಧರಕಪೋಲತಲನಾಗಿ

ಎಳಸುತ್ತಿರ್ದಪೆ ಪುಷ್ಪಮಂಜರಿಗೆ ಕೊಳ್ಳೀಸುತ್ತಿದೇಕೆಂದು ಸಂ
ಚಳಿಸುತ್ತಂ ನಿಜಕರ್ಣದಿಂ ತೆಗೆದು ಸೋಲ್ತೆಂ ಕೂಡು ನೀನೆನ್ನೊಳೆಂ
ದಳಿಮಾಲಾರವದಿಂದೆ ಪೇಳ್ವತೆರದಿಂ ಮತ್ಕರ್ಣದೊಳ್ ತಾರಕೋ
ಜ್ವಳಮಂ ರಂಜಿಪ ಪುಷ್ಪಮಂಜರಿಯನತ್ಯೌತ್ಸುಕ್ಯದಿಂದಿಕ್ಕಿದಂ ||೫೧||

ಇಂ ಪೇಳ್ವುದೇನನೆನ್ನ ಕ
ದಂಪಿನ ನಸುಸೋಂಕಿನೊಂದು ಸುಖದಿಂದಾದಂ
ಕಂಪಿಸುತಿರೆ ಕರತಳದಿಂ
ದಂ ಪೋದತ್ತಕ್ಷಮಾಲೆ ನಾಣ್ಬೆರಸಾಗಳ್ ||೫೨||

ವಚನ : ಅಂತು ಪೋದೊಡಮಱಿಯದಿರೆ

ತೊಳಗುವ ಹಾರಮನಾಗಳ್
ತಳೆವಂತಿರೆ ನೆಲಕೆ ಬೀಳ್ಪಿನಂ ಪಿಡಿದಕ್ಷಾ
ವಳಿಯಂ ಕೊರಲೊಳ್ ತಳೆದಾಂ
ತಳೆದೆಂ ಮುನಿಪತಿಯ ಯೋಳ ತಳ್ಕಿನ ಸುಖಮಂ ||೫೩||

ಎಂತು ಗಡ ನಿನ್ನ ಕೆಯ್ಯಿಂ
ದಂ ತೊಟ್ಟನೆ ಬಿಳ್ದ ಜಪದಮಣಿಯುಮನೆಲೆ ಮುಂ
ದಂತೊಯ್ಯಲಱಿಯೆನೆನಲಿ
ನ್ನಿಂತಿರೆ  ನಿನ್ನಂತೆ ವಿಗತಚಿತ್ತರುಮೊಳರೇ ||೬೦||

ವಚನ : ಅದಱಿನಿನ್ನಾದೊಡಂ ನಿನ್ನ ಮನಮಂ ನೀಂ ನಿಲಿಸಿಕೊಳ್ಳೆಂದು ನುಡಿಯೆ
ಲಜ್ಜಿತನಾದಂತೆಗೆಯ್ದು

ಬೆಸೆದು ಕಪಿಂಜಲ ನೀಂ ಭಾ
ವಿಸದಿರ್ ಬೇಱೊಂದು ತೆಱನನವಳೆನ್ನಂ ವಂ
ಚಿಸಿದಪರಾಧಮನಾಂ ಸೈ
ರಿಸುವೆನೆ ನೋಡೆನುತಮೆಳ್ದು ಪುಸಿಮುಳಿಸಿಂದಂ ||೬೧||

ಪಿರಿದುಂ ಪ್ರಯತ್ನದಿಂದಮೆ
ವಿರಚಿಸೆ ಕಣ್ಗೆಸೆವ ಭೀಷಣಭ್ರುಕುಟಿ ಪೊದ
ಳ್ದಿರೆ ಚುಂಬನಭಿಲಾಷ
ಸ್ಫುರಿತಾಧರನಾ ಕುಮಾರತಾಪಸನೆನ್ನಂ ||೬೨||

ಕುಡು ಚಪಳೆ ಜಪದಮಣಿಯಂ
ಕುಡದಿನ್ನೊಂದಡಿಯನಪ್ಷೊಡಂ ಪೋಗದಿರೆಂ
ದೊಡನೆ ಕೇಳ್ದು ಜಪದಮಣಿಗೆ
ತ್ತೊ ಡನೆಯೆ ಹಾರಮನೆ ತೆಗೆದೆನ್ನಯ ಕೊರಲಿಂ ||೬೩||

ವಚನ : ಅಂತು ಮಕರಧ್ವಜಲಾಸ್ಯಾರಂಭಲೀಲಾಪುಷ್ಪಾಂಜಲಿ ಯೆನಿಸಿದೇಕಾವಳಿಯಂ
ತೆಗೆದುಕುಡುವಿನಮಾತನುಂ ಮನ್ಮುಖಾಸಕ್ತದೃಷ್ಟಿಯಿಂ ಮೆಯ್ಯಱಿಯದಕಷಾವಳಿಗೆತ್ತು ಕಳೆದು
ಕೊಳ್ವುದುಮಾನಾಗಳಲ್ಲಿಂ ತಳರ್ದು

 ಕಳವಳಿಸಿ ಬೆಮರ್ತಾಗಳ್
ಕೊಳದೊಳ್ ಮೀಯಲ್ಕತಿಪ್ರಯತ್ನದಿಂದೊಯ್ದರ್
ಕೆಳದಿಯರೆಂತಾನುಂ ತೆಗೆ
ದಳವಿಲ್ಲದೆ ಬಂದ ನದಿಯನಿದಿರೇಱುವವೋಲ್ ||೬೪||

ವಚನ : ಅಂತೊಯ್ಯಲ್ ನಿಜಜನನಿಯೊಡನೆಂತಾನುಮರಮನೆಗೆ ಬಂದು ಮದೀಯ
ಮಂದಿರಮಂ ಪೊಕ್ಕು ತದ್ವಿಯೋಗದೊಳ್ ಮೆಯ್ಯಱಿಯದೆ

ಮೆನೆಗೇಂ ಬಂದೆನೋ ಬಾರೆನೋ ಸಖಿಯರೊಳ್ ಕೂಡಿರ್ದೆನೋ ಕೂಡದಿ
ರ್ದೆನೊ ಮೇಣ್ ನಿದ್ರೆಯೊಳಿರ್ದೆನೋ ಪಿರಿದುಮೆಚ್ಚೆತ್ತಿರ್ದೆನೋ ಮೌನಮಿ
ರ್ದೆನೊಮಾತಾಡುತ್ತಿರ್ದನೋ ವ್ಯಸನದೊಳ್ ಸಂದಿರ್ದಿನೋ ರಾಗಮಿ
ರ್ದೆನೊ ಪೇಳಾಂ ನಗುತಿರ್ದೆನೋ ಮನದೊಳಂದಾಸತ್ತಮಿತ್ತಿರ್ದೆನೋ ||೬೫||

ಇದು ದಿವಮೋ ರಾತ್ರಿಯೊ ಮೇ
ಣಿದು ದುಃಖಮೊ ರುಜೆಯೊ ಕಳವಳಮೊ ಪೇಳಿದು ಪೊ
ಲ್ಲದೊ ತಾನಿದೊಳ್ಳಿತೋ ಮೇ
ಣಿದೆಂಬುದು ಬಗೆಯಲಾರ್ತನಿಲ್ಲಾಕ್ಷಣದೊಳ್ ||೬೬||

ಅದಾವೆಡೆಗೆ ಪೋಪುದಿನ್ನುಡಿವುದಾರೊಳಿನ್ನಳ್ಕಱಿಂ
ದದಾವುದನೆಕೇಳ್ವೆನಿಂ ಪಡೆದು ನೋಳ್ಪಪುದಿನ್ನೇನನಿ
ನ್ನದಾಗಿರ್ದನೆ ಪೇಳ್ವೆನಿನ್ನನಗೆ ಬಾಳ್ಕೆ ಪೇಳಾವುದೆಂ
ದದೇನುಮಱಿಯಲ್ಕೆ ಬಾರದೆ ಮನೋಭವೋದ್ರೇಕದಿಂ ||೬೭||

ಆ ಕನ್ನೆಯಾರ್ಗೆ ಪೆಸರೇ
ನೇಕಿಲ್ಲಿಗೆ ಬಂದಳಾರ ಮಗಳೆಸೆವಲರ್ದ
ಬ್ಜಾಕರದಿನೆತ್ತ ಪೋದಪ
ಳೀಕೆಯೆನಲ್ ಮುನಿಕುಮಾರಂಗಿಂತೆಂದೆಂ|| ೭೧||

ವಚನ : ಅದೆಂತೆಂದೊಡೆ ದಿನಮೃತಕರಮರೀಚಿಯಿಂದಾದಪ್ಸರಸಿಯೊಳುದಿಸಿದ
ಗೌರಿಗಂ ಗಂಧರ್ವಲೋಕಾಧಿಪತಿಯಪ್ಪ ಹಂಸಂಗಂ ಮಗಳಾಗಿ ಮಹಾಶ್ವೇತೆಯೆಂಬ ಪೆಸರಿಂ
ನೆಗಳ್ತೆವೆತ್ತಳದಲ್ಲದೆಯುಂ ಇಂದು ಜನನಿಯೊಡನೀ ಸರೋವರಮಂ ಮೀಯಲೆಂದು ಬಂದಾತ್ಮ
ನಿವಾಸಮಪ್ಪ ಹೇಮಕೂಟಾಚಲಕ್ಕೆ ಪೋಗುತ್ತಿರ್ದಳೆಂಬುದುಂ ಕಿಱಿದುಬೇಗಮೇನಾನುಮಂ
ತನ್ನೊಳೆ ಬಗೆಯುತ್ತುಮಿರ್ದನಂತರಮೆನ್ನನಿಂತೆಂದಂ

ಎಳವಿಯೊಳಂ ಗಾಂಭೀರ್ಯಮ
ನೊಳಕೊಂಡ ಭವತ್ಸ್ವರೂಪಮಂ ಕಂಡೀ ಕೋ
ಮಳೆಯಂ ಪ್ರಾರ್ಥಿಸಿದೊಡೆ ನಿ
ಷ್ಫಲಮಾಗದೆನುತ್ತೆ ಬಂದೆನಾನಿಂದುಮುಖೀ ||೭೨||

ವಚನ : ನುಡಿಯಲಾನಾಗಳಾದರಂಬೆರಸು ಕೈಗಳಂ ಮುಗಿದು  

ಬೆಸಸುವುದಂತದಿರ್ಕೆಮ ಭವದ್ವಧರಪ್ರತಿಮಪ್ರಭಾವರೀ
ಕ್ಷಿಸುವರೆ ಮುನ್ನ ಮದ್ವಿಧರನೆನ್ನವೊಲಾದಮೆ ನೋಂತಳಾವಳಿ
ನ್ನಸಿರ್ವುದು ನನ್ನಿಯಂ ನುಡಿಯೆ ಕಾರ್ಯವನೆನ್ನವಳೀಕೆಯೆಂದು ಭಾ
ವಿಸಿ ಕೃತಕೃತ್ಯೆಯಪ್ಪೆನೆನೆನಲಾಗಳೆ ಸಂತಸವಂ ನೆಗಳ್ಚಿದಂ||೭೩||

ಕೆಲದೊಳಳುರ್ತು ಕಾರ್ಮುಗಿಲೆ ಪರ್ವಿದುದೆಂಬಿನೆಗಂ ಕಱಂಗಿ ಕ
ತ್ತಲಿಪ ತಮಾಲಪಾದಪದ ಪಲ್ಲವಮಂ ಹಿಳಿದೊಂದು ನಿರ್ಮಲೋ
ಪಲತಳದಲ್ಲಿ ತದ್ರಸದಿನಾಗಳೆ ನೋಡಿ ನಿಜೋತ್ತರೀಯ ವ
ಲ್ಕಲವಸನೈಕದೇಶಮನೆ ಸೀಳ್ದದಱೊಳ್ ಬರೆದಂ ತಳೋದರಿ ||೭೪||

ಏಕಾಂತದೊಳೀ ಲೇಖಮ
ನಾ ಕನ್ನೆಗೆ ಪೋಗಿ ಕುಡುವುದೆಂದಟ್ಟಿದನೆಂ
ದಾಕೆನುಡಿಯುತ್ತಮಂದ
ಪ್ರಾಕಟವದನಡಪದೊಳಗಣಿಂ ತೆಗೆದಾಗಳ್ ||೭೫||

ಅದು ಶಬ್ದಾತ್ಮಕಮಾಗಿಯುಂ ಪಿರಿದುಮಂದತರ್ಗತಸ್ಪರ್ಶ ಸೌ
ಖ್ಯದವೊಲ್ಮಾಡುತಮಾಗಳಂತೆ ಕಿವಿವೊಕ್ಕುಂ ಮೆಯ್ಯಳಂತೆಯ್ದೆ ಪೊ
ಕ್ಕುದನುದ್ಯತ್ಪುಳಕಂಗಳಿಂದಱಿಯಿಸುತ್ತ ಮನ್ಮಥಾವೇಶಮಂ
ತ್ರದವೊಲಾತನ ವಾರ್ತೆ ಮೆಯ್ಯಱಿಯದಿರ್ಪಂತೆನ್ನನೇಂ ಮಾಡಿತೋ ||೭೬||

ವಚನ : ಅನಂತರಮಾ ಲೇಖನಮಂ ಕಳೆದುಕೊಂಡು ನಿಮಿರ್ಚಿ ನೋಳ್ಪನ್ನೆಗಮಲ್ಲಿ

ದೂರಂ ಮುಕ್ತಾಲತಯಾ | ಬಿಸಸಿತಯಾ ವಿಪ್ರಲಭ್ಯಮಾನೋ ಮೇ
ಹಂಸ ಇವ ದರ್ಶಿತಾಶೋ | ಮಾನಸಜನ್ಮಾತ್ವಯಾನೀತಃ ||೭೭||

ಎನಗಾಸೆದೋಱಿ ಬಿಸಸಿತ
ಮನಿಸುವ ನಿಜಹಾರಲತೆಯಿಂದಂ ಹಂ
ಸನವೊಲ್ಮಾನಸಸಂಭವ
ಮೆನಿಪ ಮದೀಯಾಭಿಮಾನಮಂ ಕಟ್ಟೊಯ್ದೌ ೭೮||

ವಚನ : ಎಂಬೀ ಆರ್ಯೆಯಂ ಭಾವಿಸಿ ನೋಡೆ

ಮನದೊಳ್ ಸೊಕ್ಕಿದವಂಗೆ ಕಳ್ ವಿಷದಿನಳ್ಕಿರ್ದಂಗೆ ದುರ್ನಿದ್ರೆ ಕಾ
ಣದವಂಗುರ್ವಿದ ಮರ್ವು ದಿಗ್ಭ್ರಮೆ ಪದಂಗೆಟ್ಟಂಗೆ ಪೈಶಾಚಕಂ
ಗೆ ದುರಾವೇಶಮಧಾರ್ಮಿಕಂಗೆ ಕುಮತಂ ತತ್ವಪ್ರಮೂಢಂಗೆ ಬೀ
ಸಿದ ಕಣ್ಮಾಯದ ಕುಂಚದಂತಿರೆನಗಾದತ್ತಾಗಳೇನೆಂಬುದೋ ||೭೯||

ವಚನ : ತದನಂತರಂ

ಅಮರ್ದಂ ಪೀರ್ದಳೊ ಮೇಣ್ವರಂಬಡೆದಳೋ ಪುಣ್ಯೋದಯಂ ತನ್ನೊಳೇಂ
ಸಮಸಂದಿರ್ದುದೊ ಶಾಕಲೋಕಸುಖಮಂ ಕೈಕೊಂಡಳೋ ದೈವವೀ
ರಮಣೀರತ್ನದ ಮೇಲೆ ಮೇಣ್ ನೆಲಸಿತೋ ತ್ರೈಲೋಕ್ಯರಾಜ್ಯಭಿಷೇ
ಕಮೆ ಕೈಸಾರ್ದುದಿವಳ್ಗೆನುತ್ತೆ ಪದಪಿಂದಾನಾಕೆಯಂ ನೋಡಿದೆಂ ||೮೦||

ವಚನ : ಅಂತು ನೋಡಿ ಪಿರಿದುಮಳ್ಕಱಿಂ ಕೆಲಕ್ಕೆ ಕರೆದು ಕುಳ್ಳಿರಿಸಿ

ಪರೆದಿರ್ಧಕುರುಳ್ಗಳನೋ
ಸರಿಸಿ ಕದಂಪುಗಳನೊಯ್ಯನೆಳೆವುತ್ತಂದಾ
ಳರಸೆಂಬ ಭೇಧಮೆಮ್ಮಿ
ರ್ಬರೊಳಂ ಪಲ್ಲಟಿಸಿತೆಂಬಿನಂ ಮನ್ನಿಸಿದೆಂ ||೮೧||

ವಚನ : ಅಂತಾದರಿಸುತಮಿರ್ದು

ಎಂತೆಂತು ಕಂಡೆ ಕಣ್ಬರಿ
ವೆಂತೆಂತೇನೆಂದು ನುಡಿದನಾತನ ಕೆಲದೊಳ್
ನೀಂ ತಡೆದ ಬೇಗವೆನಿತೆನಿ
ತಂತರಮಂ ಬರುತಲಿರ್ದನೆಮ್ಮಯ ಬಳಿಯಂ ||೮೨||

ವಚನ : ಆಗಳೆನ್ನ ಕೊಡೆವಿಡಿದವಳ್ ಬಾಗಿಲಿಂ ಪರಿತಂದು

ಕೊಳನ ತಡಿಯಲಿ ಕಂಡಾ
ಗಳಿರುಬರೊಳೊರ್ಬಮುನಿಕುಮಾರಂ ಭೂಭೃ
ನ್ನಿಳಯದ ಬಾಗಿಲೊಳಕ್ಷಾ
ವಳಿಯಂ ಬೇಡಲ್ಕೆ ಬಂದು ನಿಂದಿರ್ದಪ್ಪಂ ||೮೭||

ವಚನ : ಎಂದವಳ್ ಬಂದು ಪೇಳ್ವುದುಂ

ನಿನಗೇವೇಳ್ದಪೆನಾಂ ಭೋಂ
ಕೆನಲಾ ತಾಪಸಕುಮಾರವೆಸರ್ಗೊಳ್ವುದುಮಾ
ತನೆಗೆತ್ತು ಬಾಗಿಲೊಳ್ ತೊ
ಟ್ಟನೆ ಬಂದಿರ್ದಂತಿರಾದೆನಿರ್ದಂತಿರ್ದುಂ ||೮೮||

ವಚನ :  ಆಗಳೊರ್ವ ಕಂಚುಕಿಯಂ ಕರೆದು ಬೇಗಮೊಡಗೊಂಡು ಬಾಯೆಂದು ಪೇಳಲೊಡನೆ

ಎಳವಿಸಿಲೊಲವಿಂ ಬೆಳ್ದಿಂ
ಗಳ ಬಳಿಯಂ ಬರುತಮಿರ್ದುವೆಂಬಂತೆ ಕಪಿಂ
ಜಳನಾಗಳ್ ಜರಾನಿ
ರ್ಮಳನೆನಿಸಿದ ಸೌವಿದಲ್ಲನೊಡವರುತಿರ್ದಂ ||೮೯||

ವಚನ : ಅಂತು ರೂಪಿಂಗೆ ಯವ್ವನಮುಂ ಯವ್ವನಕ್ಕೆ ಕಾಮನುಂ ಕಾಮಂಗೆ ವಸಂತ
ಸಮಮಯಮುಂ ವಸಂತಸಮಯಕ್ಕೆ ತಂಬೆಲರುಮೆಂಬಂತೆ ಪುಂಡರೀಕಂಗೆ ಸಹಾಯನಪ್ಪ ಮುನಿ
ಕುಮಾರನಂಕಂಡೆನನ್ನೆಗಂ ಮುನಿಪಂ ವ್ಯಾಕುಲನಂತೆ ಶೂನ್ಯದಂತೆ ದುಃಖಿತನಾಗಿರ್ದಂತೆನಾನುಂ
ಪ್ರಾರ್ಥಿಪನಂತೆ ಬರ್ತಿರ್ದನಿರ್ಪುದುಂ ತಕ್ಷಣದೊಳ್

ಇದಿರೆಳ್ದು ಪೊಡವಡುತ್ತೇ
ಱಿದ ಕನಕಾಸನಮನಿತ್ತು ಬೇಡೆನೆಯೆನೆ ತ
ತ್ಪದಯುಗಮಂ ಕರ್ಚಿ ಪದಾ
ಬ್ಜದಿರ್ಪನಾಂ ತೊಡೆದೆನುತ್ತರೀಯಾಂಶುಕದಿಂ ||೯೦||

ನುಡಿಯಲ್ ಮುನಿಪಂ ಬಗೆದೆ
ನ್ನಡಪದವಳ್ ಕೆಲದೊಳಿರ್ದೊಡಾಕೆಯ ದೆಸೆಯಂ
ಕಡೆಗಣ್ಣಿಂ ನೋಳ್ಪುದುಮಾ
ಗಡೆ ಲಜ್ಜಿಸಿದಪ್ಪನೆಂದು ನೋಟದಿನಱಿದೆಂ||೯೧||

ನುಡಿವೊಡೆ ಲಜ್ಜಿಸಿ ನಾಲಗೆ
ಪೊಡರ್ದಪುದಿಲ್ಲಕ್ಕು ಬಿಕ್ಕೆಯಂ ಬೇರುಮನುಂ
ಡಡವಿಯೊಳಗಿರ್ಪ ಮುನಿಗಳ
ನಡವಳಿಯೆತ್ತೆತ್ತ ಯುವತಿಜನದನುರಾಗಂ ||೯೨||

ನಗೆಗೆಡೆಯಾಗೆ ದೈವವೆನಗೇನನೊಡರ್ಚಿತೀಗಳಕ್ಕ ರಾ
ಗಿಗಳ ನಿಕೃಷ್ಟಚೇಷ್ಟೆಗನುಗೆಯ್ದಪೆನೆಂತಿದ ನಿನ್ನ ಮುಂದೆ ಪೇಳ್
ಬಗೆವೊಡೆ ಕಟ್ಟಿದೀ ಜಡೆಗೆ ತಕ್ಕುದೊ ಮೇಣ್ ಪೊದೆದಿರ್ದ ನಾಹರಸೀ
ರೆಗೆ ದೊರೆಯೋ ತಪಕ್ಕಿದನುರೂಪಮೊ ಮೇಣ್ ಸುಕೃತಕ್ಕುಪಾಯಮೋ ||೯೩||

ಪೇಳಲೆವೇಡಿದಪ್ಪುದು ಶರಣ್ ಪೆಱತಾವುದುಮಿಲ್ಲ ಕೇವಲಂ
ಪೇಳದಿರಲ್ಕನರ್ಥಮದಱಿಂದಸುವ ನೆಱೆ ಬಿಟ್ಟುಮೀಗಳಾಂ
ಪಾಲಿಸವೇಳ್ಕುಮೆನ್ನಯ ಸಹಾಯನ ಜೀವಮನೊಂದು ಲಜ್ಜೆಯಂ
ಪಾಲಿಸದೆಯ್ದೆ ಪೇಳಲನುಗೆಯ್ದಪೆನುತ್ಸವಲೋಲಲೋಚನೆ ||೯೪||

ಒದವಿದ ಮುನಿಸಿಂ ನಿ
ನ್ನಿದಿರೊಳ್ ಬಿಡೆ ನುಡಿದು ಬಿಟ್ಟು ಮುನಿಪನ ಪೂಗೊ
ಯ್ದುದುಮಂ ಬಿಸುಟ್ಟು ನಿಲಲಾ
ಱದೆ ಮತ್ತೊಂದೆಡೆಗೆ ಪೋದನುಬ್ಬೆಗದಿಂದಂ ||೯೫||

ಮದನಮದೋದ್ರೇಕದಿನೆ
ನ್ನಿದಿರೊಳ್ ಧೃತಿಗೆಟ್ಟು ಸಿಗ್ಗಿನಿಂ ತನ್ನೊಳ್ ಪೊ
ಲ್ಲದನೆತ್ತಾಚರಿಸುಗುಮೋ
ಒದವಿದ ಸಿಗ್ಗಿಂದಮಾರುಮೇನನೊಡರ್ಚರ್ ||೯೮||

ವಚನ : ಎಂದರಸಿ ನೋಡುತ್ತುಮೆಂತೆಂತು ಕಾಣದಿರ್ಪೆನಂತಂತೇನಾನುಮಂ ಮನದೊಳ್
ಭಾವಿಸುತ್ತುಮಿರ್ದು

ಇರಿಪುದು ಯುಕ್ತಮಿನ್ನೆನಗರಣ್ಯದೊಳೊರ್ವನನೆಂದು ಶಂಕೆಯಿಂ
ತರುತಳದೊಳ್ ತಮಾಲವನದೊಳ್ ಘನಚಂದನವೀಥಿಯೊಳ್ ನಿರಂ
ತರ ಲತಿಕಾಗೃಹಂಗಳೊಳನೇಕ ಲತಾಭವನಂಗಳೊಳ್ ಸರೋ
ವರತಟದೊಳ್ ತೊಳಲ್ದಱಸಿ ನೋಡಿದೆನುತ್ಪಲಲೋಲಲೋಚನೆ ||೯೯||

ವಚನ : ಅಂತು ನೋಡುತಿರ್ಪನ್ನೆಗಮೊಂದು ಸರಸ್ಸಮೀಪದೊಳ್ ವನನಿರಂತರತೆಯಿಂ
ಕುಸುಮಮಯಮುಂ ಪರಭೃತಮಯಮುಂ ಮಯೂರಮಯಮುಮಾಗಿ ವಸಂತಜನ್ಮ
ಭೂಮಿಯುಮಾದಂತಿರಲತಿಮನೋಹರಮಾದ ಲತಾಗಹನದೊಳುತ್ಕೃಷ್ಟಸಕಲವ್ಯಾಪಾರನುಂ
ವಿಗತನಿಮೇಷನುಮೆನಿಸಿ ಬರೆದನಂತೆಯುಂ ಕಂಡರಿಸಿದನಂತೆಯುಂ ಮಱವಟ್ಟನಂತೆಯುಂ
ಯೋಗಸಮಾಧಿಸ್ಥಿತನಂತೆಯುಮುಪರತವಶನಾದಂತೆಯುಮಿರ್ದನಲ್ಲದೆಯುಂ

ಹೃದಯದೊಳಿರ್ದವಲ್ಲಭೆಯನೀಕ್ಷಿಸಲೆಂದೊಳಪೊಕ್ಕು ಮೆಯ್ಗೆ ಪ
ರ್ಬಿದ ಮದನಾನಲಂಗಗಿದು ಭೋಂಕನೆ ಮೆಯ್ಗರೆದಿರ್ದುವೆಂಬಿನಂ
ಕದಡಿದ ಚಿತ್ತಮೆಂಬ ಕಡಲೊಳ್ ಪೊಡರಲ್ಕಣಮಾಱದಿರ್ದೊಡಂ
ಗಿದುವು ಶರೀರದೊಳ್ ವಿರಹದಿಂದಖಿಳೇಂದ್ರಿಯವಾ ಮುನೀಂದ್ರನಾ ||೧೦೦||

ವಚನ : ಅದಲ್ಲದೆಯುಂ

 ಒಳಗೊಳಗಳುರ್ವ ಮನೋಜಾ
ನಳಧೂಮಸ್ತೋಮಮೆಯ್ದೆ ಸುತ್ತಿದುದೋ ಕ
ಣ್ಗಳನೆನೆ ತಳ್ತೆಮೆದುಱುಗಲಿ
ನಿಳಿದುವು ಮಿಗೆ ಭಾಷ್ಪವಾರಿ ಧಾರಾಪೂರಂ||೧೦೧||

ಹೃದಯದೊಳಗುಣ್ಮಿ ಪೊಣ್ಮಿದ
ಮದನಾಗ್ನಿಜ್ವಾಲೆಯೆನಿಸಿದಧರಾಂಶುಗಳಿಂ
ಪುದಿದ ಬಿಸುಸುಯ್ಗಳಿಂ ಕೊರ
ಗಿದುವು ಲತಾಕುಸುಮಕೇಸರಪ್ರಸರಂಗಳ್ ||೧೦೨||

ಒದವಿದ ಚಿಂತಾಭಾರದೆ
ಕದಪಿನೊಳಿಕ್ಕಿರ್ದ ಮುನಿಯ ಕರನಖರುಚಿಗಳ್
ಪುದಿದಡರ್ದು ಬೆಳಗಿದುವು ಪೂ
ಸಿದ ಚಂದನರಸಲಲಾಮದಂತಿರೆ ನೊಸಲೊಳ್ ||೧೦೩||

ವಚನ : ಅಂತು ಬೆಸಗೊಳ್ವುದುಮಾಗಳೆಡವಿಡದೆ ಮುಚ್ಚಿಬೆಚ್ಚಂತಿರ್ದ ಕಣ್ಗಳನೆಂತಾನುಂ ತೆಱೆದು

ಬಸವಲ್ಲದಳ್ತು ಕೆಂಪೊಡ
ರಿಸೆ ತೀವಿರೆ ಬಾಷ್ಪಸಲಿಲಮಚ್ಛಂಬುಗಳಿಂ
ಮುಸುಕಿದ ರಕ್ತಾಂಬೋರುಹ
ದೆಷಳಂ ಪೋಲ್ತೆಸೆವ ಕಣ್ಗಳಿಂದೀಕ್ಷಿದಂ ||೧೧೧||

ಅಡುವಂತಾದಪುದೀಗಳೆನ್ನವಯವಂಗಳ್ ಕೂಡೆ ಕಣ್ಣಾಲಿಗಳ್
ಸುಡುವಂತಾದಪುದೇವೆನೆಯ್ದೆ ಹೃದಯಂ ಬೇವಂತುಟಾದಪ್ಪುದೀ
ವೊಡಲೋರಂತತುರಿವಂದವಾದಪುದಿದಂ ನೀಂ ಮಾಣಿಸಲ್ಕಾರ್ಪೆಯ
ಪ್ಪೊಡೆ ದಲ್ ಮಾಣಿಪುದೆಂಬಿದಂ ನುಡಿದು ಮಾತಂ ಮಾಣ್ದನಬ್ಜಾನನೆ||೧೧೮||

ವಚನ : ಅಂತು ಚಿಂತಿಸುತ್ತಮಿರ್ದುಮೆನ್ನೊಳಿಂತೆಂದೆಂ



ದೆಸೆಗೆಟ್ಟೇನ್ನುಮಂ ಚಿಂತಿಸುತ್ತಿರೆ ಫಲಮೇಂ ಪೊಲ್ಲದಿನ್ನೊಳ್ಳಿತ್ತೆಂಬು
ದ್ದೆಸಮಂ ಮಾಣ್ದೀಗಳೆಲ್ಲಂದದೊಳಮೆನಗೆ ಮಾತೇಂ ಸುಹೃತ್ಪ್ರಾಣಮಂ ರ
ಕ್ಷಿಸವೇಳ್ಕುಂ ಬೇಗಮಾಂ ರಕ್ಷಿಸುವ ತೆಱನುಮೆಂತೆಂದೊಡಂ ನಿಶ್ಚಯಂ ಭಾ
ವಿಸಿ ನೋಳ್ಪಂದಾಕೆಯಂ ತರ್ಪುದನುಳಿಯೆ ಬಳಿಕ್ಕಿಲ್ಲ ಬೇರೊಂದುಪಾಯಂ ||೧೨೨||

ಇದು ಮನ್ಮಿತ್ರನವಸ್ಥೆ ತದ್ವಿರಹಸಂತಾಪಾನುರಾಗಕ್ಕೆ ತ
ಕ್ಕುದನಾಂ ಬಂದೆಡೆಗಂ ಮೃಗಾಕ್ಷಿ ನಿನಗಂ ಪೋಲ್ವಂತುಟಂ ನೀನೆ ಬ
ಲ್ಲೆ ದಲಿಂದಿಂತಿದಕೇನನೆಂದಪಳೊ ಕೇಳ್ವೆಂ ಮಾತನೆಂದೇನುಮೆ
ನ್ನದೆ ಮದ್ವಕ್ತ್ರಮನಾ ಕಪಿಜಳಕನಾಗಳ್ ನೋಡುತಿರ್ದಂ ನೃಪಾ ||೧೨೫||

ತಡೆದಿರಬಾರದು ಶೇಸಱ್
ಪಡುತಂದುದು ಪೊಳ್ತುಪೋಯ್ತು ಪೋದಪೆನೆಂತಾ
ದೊಡಮೆನ್ನ ಕೆಳೆಯನಸುವಂ
ಪಿಡಿವುದು ಸೆಱಗೊಡ್ಡಿ ಬೇಡಿದೆಂ ಮೃಗನಯನೇ ||೧೨೯||

ಮನೆಗೆ ಬರಲ್ ಕಪಿಂಜಲಮಹಾಮುನಿಗಂ ಮಱುಮಾತನಿತ್ತೆನಿ
ಲ್ಲೆನಗದಱಿಂದಮಿಂ ಪ್ರಣಯಭಂಗಮದಾವುದೊ ಕೆಟ್ಟೆನತ್ತಲೋ
ಪನುಮಿದನಿಂತೆಕೇಳ್ದೊಡೆ ನಿರಾಶೆಯೊಳಕ್ಕಟ ಸಾಗುಮಂತಱಿಂ
ಮುನಿವಧಲದಷಮಾವತೆಱದಿಂ ಕಳೆಗುಂ ಕಮಲಾಯಯೇಕ್ಷಣೆ ||೧೩೩|

ವಚನ : ಎಂದು ತರಳಿಕೆ ನುಡಿಯೆ

ಇದನೇನೆಂದಪ್ಪೆ ನಾಣೇಂ ಗುರುಗಳುಮೆನಗಿನ್ನೇಕೆ ಪೇಳ್ ಮೃತ್ಯವೋಲ್ ಮೂ
ಡಿದನಲ್ತೆ ಚಂದ್ರನುಂ ತಾನಿರದೆ ಕರುಣದಿಂದೊಯ್ವೊಡೇಳ್ ಪೋಪಮೀ ದೇ
ಹದೊಳಿಂದೀ ಪ್ರಾಣಮುಳ್ಳನೆಗಮೆ ತಡೆಯದಾತ್ಮೇಶನಂ ಕಾಣ್ಬೆನೋ ಪು
ಣ್ಯದಿನೆಂದಾಂ ಚೇಷ್ಟೆಗೆಟ್ಟಂವಳನೆ ಪಿಡಿದಲ್ಲಿಂದಮೆಂತಾನುಮೆಳ್ಪೆಂ||೧೪೨||

ವಚನ : ಅಂತೇಳಲೊಡನೆ

ಬಿದಿ ಮತ್ತೇನನಿದಂ ತೋ
ಱಿದಪನೊ ಪಾತಕಿಗೆನುತ್ತೆ ಭಯಮಂ ಚಿತ್ತ
ಕ್ಕೊದವಿಸಿ  ಬಲಗಣ್ ಕೆತ್ತಲ್
ಮೊದಲಿಕ್ಕಿತು ದುರ್ನಿಮಿತ್ತಸೂಚಕಮಾಗಳ್ ||೧೪೩||

ಶ್ರವಣನತ ಪಾರಿಜಾತ
ಸ್ತವಕೋದ್ಗತ ಪರಿಮಳಕ್ಕೆ ನಂದನ ಭೃಂಗೀ
ನಿವಹಂ ಕವಿದೆನ್ನ ಮುಸುಂ
 ಕುವಿನ ಪೊಱಮಟ್ಟೆನಾಗಳತಿಸಂಭ್ರಮದಿಂ ||೧೪೫||

ಪ್ರತಿಬಿಂಬವ್ಯಾಜದಿಂ ನಿನ್ನಯ ಕದಪುಗಳಂ ಚುಂಬಿಸುತ್ತಕಲಾಪಂ
ಚಿತರತ್ನಾನೀಕಮಂ ಸೋಂಕುತಮೆಸೆವ ಕುಚಾಭೋಗದೊಳ್ ನಿಂದ ಮೇಲ್ವಾ
ಯುತಮುದ್ತ್ಕಾಂತಿ ಚಂಚನ್ನಖಗತತನುವೆಂತುಂ ಬಿಡಂ ಪತ್ತಿ ಕಾಲಂ
ಸತಿ ಬೀಳ್ದಿರ್ದಪ್ಪನಿಂತೀತನ ತೆಱನನಿದಂ ಕಾಣೆ ನೀನುತ್ಪಲಾಕ್ಷೀ||೧೪೯||

ಮೊದಲೊಳೆ ಕೆತ್ತಿದತ್ತು ಬಲಗಣ್ಣೆನಗೇನನೊಡರ್ಚಲಿರ್ದುದೋ
ಬಿದಿಯೆನುತುಂ ಭಯಂಬೆರಸು ಮುನ್ನಮೆ ಶಂಕಿಸುತಿರ್ದೆನೋವೋ ಮ
ತ್ತಿದು ಪೆಱತೇನೆನುತ್ತಮೆರ್ದೆ ಪವ್ವನೆ ಪಾಱಲದೊಂದು ಕೇಳಲಾ
ದುದು ಪುರುಷಪ್ರಲಾಪರುದಿತಸ್ವನಮಾ ಗಹನಾಂತರಾಳದೊಳ್ ||೧೫೦||

ಉರಿದೆಂ ಬೆಂದನಿದೇನನಿಂತು ನೆಗಳ್ದೈನಿಸ್ತ್ರಿಂಶ ಪುಷ್ಪಾಸ್ತ್ರ ನಿ
ಷ್ಠುರ ಪೇಳ್ ಪೊಲ್ಲದೇನನಾಚರಿಸಿದಳ್ ನಿನ್ನೊಳ್ ಮಹಾಶ್ವೇತೆ ಭೀ
ಕರ ದೋಷಾಕರ ಕೂಡಿತೇ ಬಗೆದುದುಂ ಚಂಡಾಳ ತಂಗಾಳಿ ಪೇಳ್
ಪಿರಿದೊಂದುತ್ಸವಮಾಯ್ತೆ ಕೇಡನಱಿದೈ ಹಾ ಶ್ವೇತಕೇತುವ್ರತೀ ||೧೫೧||


ಶರಣಾರೊ ತಪಮೆ ಭುವನಾಂ
ತರದೊಳ್ ಕೈಕೋಳ್ವರಾರೊ ಧರ್ಮಮೆ ನಿನ್ನಂ
ಸುಲಲೋಕಮೆ ಪಾಳಾದೈ
ಸರಸ್ವತಿದೇವಿ ರಂಡೆಯಾದೌ ಸತ್ಯಂ ||೧೫೨||

ಪರಿಚಯಮಿಲ್ಲ ಕಂಡಱಿಯೆಯೋ ಸಖ ತೊಟ್ಟೆನಲಿಂತು ಬಿಟ್ಟು ಪೋ
ಪರೆ ಕಠಿನಾತ್ಮನಾದೇ ನೆರವಾಗಿರ್ದಪರೇತ್ತಪೋಪೆನೊ
ರ್ಬರುಮೆನಗಾಸೆಯಿಲ್ಲ ದೆಸೆ ಪಾಳ್ಮಸಗಿರ್ಪುದಂಧನಾದೆನಾರ್
ಶರಣೆನಗೆನ್ನ ಬಾಳ್ಕೆಯೆ ನಿರರ್ಥಕಮೆಂದೇನುತಂ ಪಲುಂಬುತಂ ||೧೫೩||

ಉಸಿರದೇ ನೀನಿರಲ್ ನುಡಿವೆನಾರೊಡನಾಟಮನಾಡುತಿರ್ಪೆ ನೀ
ಪುಸಿಮುಳಿಸೇಕೆ ಪೇಳ್ ಕೆಳೆಯ ನಿನ್ನಯ ಕೂರ್ಮೆಯದೆತ್ತವೋಯ್ತು ನೋ
ಯಿಸದಿನಿಸೆಳ್ದು ನೋಡಿ ನುಡಿಯೆಂದೆನಿತುಂ ತೆಱದಿಂ ಕಪಿಂಜಲಂ
ದೆಸೆದೇಸೆಗಂದು ಬಾಯ್ವಿಡುತಮಿರ್ದುದನಾಲಿಸಿದೆಂ ಮಹೀಪತಿ ||೧೫೪||

ಅದನಾಂ ಕೇಳ್ದೆರ್ದೆಗೆಟ್ಟು ಮೆಯ್ಮಱುಗಿ ಸತ್ತಂತಾಗಿ ಕಣ್ಣೀರ  ಪೂ
ರದಗುರ್ವಿಂ ದೆಸೆಗಾಣದೆಡಪುತಂ ತಾಗುತ್ತಮೋರಂತೆ ಮೇ
ಲುದಱೊಳ್ ಗುಲ್ಮಲತಾಳಿಗಳ್ ತೊಡರಲೊರ್ವಂ ನೂಂಕಿಕೊಂಡೊಯ್ವ ಮಾ
ರ್ಗದೆ ಪೋದೆಂ ಬಳಿಕಾತನಿರ್ದೆಡೆಗೆ  ಹಾಹಾಕ್ರಂದನಂಗೆಯ್ವುತಂ ||೧೫೫||

ವಚನ : ಯಥಾಶಕ್ತಿತ್ವರಿತಗತಿಯಿಂ  ಪೋದೆನನ್ನೆಗಂ

ಕೊಳದ ತಡಿಯಲ್ಲಿ ಸೀರ್ಪನಿ
ಗಳ ತುಱುಗಲನುಗುಳ್ವಚಂದ್ರಕಾಂತದಶಿಲೆಯೊಳ್
ಪೊಳೆವೆಳೆದಳಿರ್ಗಳ ಬಳಗದ
ಕುಳಿರ್ವಲರ್ದಲರೆಸೆಳ ಪಸೆಯ ಮೇಲೊಱಗಿರ್ದಂ ||೧೫೬||

ಘಳಿಲನೆ ಬರ್ಪೆನ್ನಂ ಕಂ
ಡಳಲಿರ್ಮಡಿಯಾಗೆ ಪತ್ತಿ ಕೆಳೆಯನ ಕೊರಲಂ
ಪಳವಿಸಿ ಕಪಿಂಜಳಂ ಬಾ
ಬಾಯಳಿದುಬ್ರಹ್ಮಣ್ಯಮೆಂದು ಬಿಡೆ ಪುಯ್ಯಲ್ಚಲ್||೧೬೮||


ಪಲವು ಭವಂಗಳೊಳ್ ನೆರಪಿದೆನ್ನಯ ಪಾಪಮೊ ಮೇರೆಗೆಟ್ಟ ಕೋ
ಟಲೆಗಳನುಣ್ಬೆನೆಂಬಳಲ ಸೈರಣೆಯೋ ಕಡುಪಿಂ ತಗುಳ್ದು ನ
ಟ್ಟಲೆವಸಮಾಸ್ತ್ರವಕ್ರತೆಯೊ ದೈವಿಕಮೋ ನಿನಗೇನನೆಂಬೆನ
ಗ್ಗಲಿಸಿಯೆ ನಿಂದುದೆಂತುಮಸು ಪೋಗದೆ ಕಲ್ಲೆರ್ದೆಯೆಂ ಮಹೀಪತೀ ||೧೭೦||

ಪಿಂತಾದ ದುಸ್ಸಹಾವ
ಸ್ಥಾಂತರ ಸಂತತಿಯನಾಗಳನುಭವಿಸುತಮಿ
ರ್ಪಂತಿರ್ದಳ ಚೈತನ್ಯಮ
ನಂತಾಗಳೆ ಹರಿಯಿಸಿತ್ತು ಮೂರ್ಛಾವೇಗಂ ||೧೭೬||

ವಚನ : ಅಂತು ಮೂರ್ಛೆವೋಗಿ ಬೀಳ್ವುದುಂ

ಒದವಿದ ತಲ್ಲಣಂಬೆರಸು ಚೆಚ್ಚರದಿಂ ಪಿಡಿದೆತ್ತಿ ಶಂಕೆಯಿಂ
ಸುದತಿಯ ಪಾಂಗಿದೇನೆನುತಮಾತೆಯ ಕಣ್ಮಲರಿಂದಮುಣ್ಮಿ ಮಾ
ಣದೆ ಸುರಿಯುತ್ತಮಿರ್ಪ ಜಲಧಾರೆಗಳಿಂದಮೆ ನಾಂದದೊಂದು ಮೇ
ಲುದಱ ಸೆಱಂಗಿನಿಂ ನಯದೆ ಬೀಸಿದನಾ ಮನುಜೇಂದ್ರಚಂದ್ರಮಂ ||೧೭೭||

ವಚನ :ಅಂತು ಬೀಸಿ ಮೂರ್ಚೆಯಿಂದೆಚ್ಚಱಿಸಿ

ಇನಿವಿರಿದೊಂದವಸ್ಥೆಯುಮನೆಯ್ದಿಸಿದೆಂ ಬೆಸಗೊಂಡ ಪಾಪಕ
ರ್ಮನೆನದಱಿಂದಮೀ ಕಥೆಯೆ ಮಾಣ್ಗಿದು ಕೇಳಲಸಹ್ಯಮೆಂಬುದೇಂ
ಮನಕತಿದುಸ್ಸಹಂಗಳೆನಿಸಿರ್ದ ಸುಹೃಜ್ಜನದುಃಖಸಂಕುಲಂ
ನೆನೆದೊಡಮಂತೆ ಕೇಳ್ದೊಡೆ ನವವ್ಯಥೆಯಂ ನೆಱೆಮಾಡದಿರ್ಕುಮೇ ||೧೭೮||

ವಚನ : ಎನುತ್ತಂ ನುಡಿಯೆ ನಿಡುಸುಯ್ದುಂ ಗುಡುಗುಡನೆ ಸುರಿವ ಕಣ್ಬನಿಗಳಂ ಮಿಡಿವುತ್ತಂ
ಮತ್ತಮಿಂತೆಂದಳ್

ಇದೇನನೆಂದಪ್ಪೆ ಲಜ್ಜಾಕರಮನರಸ ಪೋದಾ ಮಹಾರಾತ್ರಿಯೊಳ್ ಪೋ
ಗದ ಮತ್ಪ್ರಾಣಂಗಳಿಂ ಪೋದಪುವೆ ಕೊಲುತಮಿರ್ಪಂತಕಂ ನೋಡಲುಂ ಪೇ
ಸಿದನೆನ್ನಂ ಕಷ್ಟೆಯಂ ಕಲ್ಲೆರ್ದೆಯವಳುಮನೆಂದಂದು ಪೇಳ್ ಸಾವುಮೆಲ್ಲಿ
ರ್ಪುದು ಮತ್ತಂ ನಿಸ್ತ್ರಪಾಗ್ರೇಸರೆಯೊಡನುಡಿವಲ್ಲಿಂದಮೇಂ ಕಷ್ಟಮುಂಟೆ ||೧೮೦||



ವಚನ : ಅದೆಂತೆಂದೊಡಂತೀಯವಸ್ಥಾಂತರದೊಳೆಡೆವಿಡದತ್ತಿರ್ದಡಪದವಳ ಮೊಗಮಂ ನೋಡಿ

ತರಳಿಕೆ ಮಾಣದಿನ್ನೆನಸನಳ್ತಪೆ ಸಂಗಡಿಸಿಧನಂಗಳಂ
ವಿರಚಿಸು ಬೇಗಮಿಂ ಚಿತೆಯನೇಂ ತಡವೀಕ್ಷಣಮೆನ್ನ ಜೀವಿತೇ
ಶ್ವರನೊಡವೋಗವೇಳ್ಕುಮೆನಗೆಂಬುದುಮೊರ್ಮೆಯೆ ಚಂದ್ರಮಂಡಲಾಂ
ತರದೊಳದೊರ್ವನಂದು ಪೊಱಮಟ್ಟಿಳಿತಂದನಮರ್ತ್ಯಮಾರ್ಗದಿಂ ||೧೮೩||

ಅಂತತಿಶೀತಲಸ್ಪರ್ಶಂಗಳಪ್ಪಮೃಣಾಲಕೋಮಲಂಗಳೆನಿಪ ಕರಾಂಗುಳಿಗಳಿನೆನ್ನ
ಮುಂದುಪರತನಾದ ಪುಂಡರೀಕನನೆತ್ತಿಕೊಂಡು

ಬಗೆಗೆಟ್ಟು ಸಾವ ಬಗೆಯಂ
ಮಗಳೆ ಮಹಾಶ್ವೇತೆ ಬಗೆಯದಿರ್ ಕೂಡುವೆ ನೀಂ
ಮಗುಳೆಯುಮೀತನನೆನುತಂ
ಮಗುಳ್ದಾತಂಬೆರಸು ಗಗನಮಾರ್ಗಕ್ಕೊಗೆದಂ ||೧೮೫||

ಅಳುವೆನ್ನಂ ತರಳಿಕೆ ಮೆ
ಯ್ವಳಿಯಿಂ ಪಿಡಿದೊಯ್ಯನೆತ್ತಿ ಮೆಲ್ಲನೆ ತಡಿಗಾ
ಗಿಳಿತಂದೀ ಕೊಳದೊಳ್ ನೀ
ರಿಳಿಯಿಸೆ ನೀರಿಳಿದೆನಿಲ್ಲಿ ಬೆಳಗಪ್ಪಾಗಳ್ ||೧೯೨||

ವಚನ : ಅಂತು ನೀರಿಳಿದು ತದನಂತರಂ


ಆತನ ಪರಮಪ್ರೀತಿಯಿ
ನಾತನ ವಲ್ಕಲದಿನತನಕ್ಷಾವಳಿಯಿಂ
ದಾತನ ಕಮಂಡಲುವಿನಿಂ
ದಾತನ ವೇಷಮನೆ ತಾಳ್ದಿ ತಳೆದೆಂ ವ್ರತಮಂ ||೧೯೩||

ಮನಮಂ ನಿಗ್ರಹಿಸುತ್ತ ಸದ್ವಿಷಯದತ್ತಲ್ ಪೊರ್ದದಂತಾಗೆ ಮಾ
ಡಿ ನಿರುದ್ಧೆಂದ್ರಿಯೆಯಾಗಿ ಬಂಧುಜನಮಂ ತಾಯ್ತಂದೆಯಂ ಪತ್ತುವಿ
ಟ್ಟೆನಗಿನ್ನೊರ್ವರುಮೇವರೆಂದು ಭಗೆಯಂ ನಿಶ್ಚೈಸಿ ಲೋಕೈಕನಾ
ಥನ ನಾನಾಗಳನಾಥೆಯೆಂ ಶರಣೆನುತ್ತಾಶ್ರೈಸಿದೆಂ ಸ್ಥಾಣುವಂ ||೧೯೪||

ಅಯಶಕ್ಕೀಡಾದ ನಿರ್ಲಕ್ಷಣೆಯನಶುಭೆಯಂ ನಿಷ್ಫಲೋತ್ಪನ್ನೆಯಂ ನಿ
ರ್ದಯೆಯಂ ನಿಃಸ್ನೇಯಂ ನಿಸ್ತ್ರಪೆಯನಸುಖೆಯಂ ನಿಂದ್ಯೆಯಂ ನಿಷ್ಫಲ
ಪ್ರಾ ಣೆಯನಾದಂ ಕ್ರೂರೆಯಂ ಬ್ರಾಹ್ಮಣಹನನ ಮಹಾಪಾಪಮಂ ಗೆಯ್ದ ನಿಸ್ತ್ರಿಂ
ಶೆಯನೆನ್ನಂ ಪಾಪೆಯಂ ನೀಂ ಬೆಸಗೊಳೆ ಫಲಮೇಂ ಪೇಳ್ ಮಹೀಪಾಲ ||೧೯೮||

ಇನಿಸೊಗೆತರ್ಪ ಕಣ್ಬನಿಗಳಿಂದಮೆ ನೇಹಮನುಂಟುಮಾಡುವಂ
ಗನೆಯರೊಳೇನಪಾರಭವಭೋಗಮನಿಂತಿರೆ  ಪತ್ತುವಿಟ್ಟು ಕಾ
ನನದೊಳೆ ನಟ್ಟುನಿಂದು ಸುಕುಮಾರಮೆನಿಪ್ಪ ಶರೀರಮಂ ಕಱು
ತ್ತಿನಿವಿರಿದೊಂದು ಘೋರತಪಕೊಡ್ಡಿದೆ ನಿನ್ನವೊಲಾರ್ ಕೃತಜ್ಞಯರ್ ||೨೦೧||

ತರಳಿಕೆಯೆಂಬಳ್ ನಿಮ್ಮಯ
ಪರಿಚಾರಿಕೆಯೆತ್ತವೋದಳೆಲ್ಲಿರ್ದಪಳೆಂ
ದರಸಂ ಬೆಸಗೊಳ್ವುದಮಾ
ದರದೆ ಮಹಾಶ್ವೇತೆ ಪೇಳಲುದ್ಯತೆಯಾದಳ್ ||೨೧೦||

ದರದೆ ಮಹಾಶ್ವೇತೆ ಪೇಳಲುದ್ಯತೆಯಾದಳ್ ||೨೧೦||

೬• ಕಾದಂಬರಿಯ ಪ್ರಥಮ ಸಂದರ್ಶನ

ಮೊದಲೊಳ್ ನಿನಗಾಂ ಪೇಳ್ದಮೃ
ತದಿನುದಯಿಸಿದಪ್ಸರಾಂಗನಾನ್ವಯೊಳ್ ಪು
ಟ್ಟಿದಳಲ್ಲಿ ಮದನಮದವತಿ
ಮದಿರೇಕ್ಷಣೆ ಮದಿರೆಯೆಂಬ ಕನ್ಯಾರತ್ನಂ ||೧||

ಆ ಕನ್ಯೆಯ ಕೈವಿಡಿದಂ
ಸ್ವೀಕೃತ ಗಂಧರ್ವರಾಜ್ಯಮಹಿಮೋದಯನ
ಪ್ರಾಕೃತ ನಿಜವಿಭವಕೃತಾ
ರ್ಥೀಕೃತ ಬುಧಜನಮನೋರಥಂ ಚಿತ್ರರಥಂ ||೨||

ಆ ವಿಭುಗಂತಃಪುರಕಾಂ
ತಾವಿಭವದೆಂತುಮುಳ್ಳೊಡಂ ತನಗೆ ಮಹಾ
ದೇವಿವೆಸರೆಸೆಯೆ ಮದಿರಾ
ದೇವಿಯೆ ಪಟ್ಟಕ್ಕೆ ತಾನೆ ಮೊದಲೆನಿಸಿರ್ದಳ್ ||೩||

ಆ ದಂಪತಿಗಧಿಕಪ್ರೇ
ಮೋದಯಮೊದವಲ್ಕೆ ಪುಟ್ಟಿದಳ್ ಭುವನಜನಾ
ಹ್ಲಾದಂ ಜನಿಯಿಸುವಿನೆಗಂ
ಕಾದಂಬರಿಯೆಂಬ ಪೆಸರ ಕನ್ಯಾರತ್ನಂ ||೪||

ಒಡನುಂಡುಡೊಡನಿರ್ದದವಳೆ
ದೊಡನಾಡಿಗಳಾಗಿ ನೃತ್ಯಗೀತಂ ಮೊದಲಾ
ಗೊಡನೊಡನೆ ಕಲ್ತುಕಲೆಗಳ
ನೆಡೆವಿಡದಿರ್ವರ್ಗಮಾಯ್ತು ಪರಮಪ್ರೇಮಮಂ ||೫||

ವಚನ : ಅನಂತರಂ ಶೈಶವಮಂ ಪತ್ತುವಿಟ್ಟಿರ್ಪುದುಮಾ ಕಾದಂಬರೀದೇವಿಯಂ ಮದೀಯ 
ದರದೆ ಮಹಾಶ್ವೇತೆ ಪೇಳಲುದ್ಯತೆಯಾದಳ್ ||೨೧೦||

೬• ಕಾದಂಬರಿಯ ಪ್ರಥಮ ಸಂದರ್ಶನ

ಮೊದಲೊಳ್ ನಿನಗಾಂ ಪೇಳ್ದಮೃ
ತದಿನುದಯಿಸಿದಪ್ಸರಾಂಗನಾನ್ವಯೊಳ್ ಪು
ಟ್ಟಿದಳಲ್ಲಿ ಮದನಮದವತಿ
ಮದಿರೇಕ್ಷಣೆ ಮದಿರೆಯೆಂಬ ಕನ್ಯಾರತ್ನಂ ||೧||

ಆ ಕನ್ಯೆಯ ಕೈವಿಡಿದಂ
ಸ್ವೀಕೃತ ಗಂಧರ್ವರಾಜ್ಯಮಹಿಮೋದಯನ
ಪ್ರಾಕೃತ ನಿಜವಿಭವಕೃತಾ
ರ್ಥೀಕೃತ ಬುಧಜನಮನೋರಥಂ ಚಿತ್ರರಥಂ ||೨||

ಆ ವಿಭುಗಂತಃಪುರಕಾಂ
ತಾವಿಭವದೆಂತುಮುಳ್ಳೊಡಂ ತನಗೆ ಮಹಾ
ದೇವಿವೆಸರೆಸೆಯೆ ಮದಿರಾ
ದೇವಿಯೆ ಪಟ್ಟಕ್ಕೆ ತಾನೆ ಮೊದಲೆನಿಸಿರ್ದಳ್ ||೩||

ಆ ದಂಪತಿಗಧಿಕಪ್ರೇ
ಮೋದಯಮೊದವಲ್ಕೆ ಪುಟ್ಟಿದಳ್ ಭುವನಜನಾ
ಹ್ಲಾದಂ ಜನಿಯಿಸುವಿನೆಗಂ
ಕಾದಂಬರಿಯೆಂಬ ಪೆಸರ ಕನ್ಯಾರತ್ನಂ ||೪||

ಒಡನುಂಡುಡೊಡನಿರ್ದದವಳೆ
ದೊಡನಾಡಿಗಳಾಗಿ ನೃತ್ಯಗೀತಂ ಮೊದಲಾ
ಗೊಡನೊಡನೆ ಕಲ್ತುಕಲೆಗಳ
ನೆಡೆವಿಡದಿರ್ವರ್ಗಮಾಯ್ತು ಪರಮಪ್ರೇಮಮಂ ||೫||

ವಚನ : ಅನಂತರಂ ಶೈಶವಮಂ ಪತ್ತುವಿಟ್ಟಿರ್ಪುದುಮಾ ಕಾದಂಬರೀದೇವಿಯಂ ಮದೀಯ 

ಹತವೃತ್ತಾಂತಮಂ ಕೇಳ್ದತ್ಯಂತಶೋಕಾಕ್ರಾಂತೆಯಾಗಿ


ಇರಲಿಂತಪ್ಪೊಂದು ಶೋಕಾಕುಲತೆಯೊಳೆ ಮಹಾಶ್ವೇತೆ ಮತ್ತೊರ್ವನಂತಾಂ
ನೆರೆದೇನಾನಿಂತು ಕನ್ಯಾವ್ರತದೊಳೆ ಕಳೆವಂ ಕಾಲಮಂ ತಂದೆಯಿಂ ತಾ
ನಿರದಾವಂಗೆನ್ನನೀಯಲ್ ಬಗೆದು ಮನದೊಳಂತುಜ್ಜಗಂಗೆಯ್ವೊಡಂ ಚೆ
ಚ್ಚರಮೆನ್ನೀ ಪ್ರಾಣಮಂ ತಾಂಬಿಡದಿರೆನೆನುತಂ ನಿಶ್ಚಯಂಗೆಯ್ದಳಾಗಳ್ ||೬||


ವಚನ : ಅಂತುಪಾರೂಢಯವ್ವನೆಯಪ್ಪ ಮಗಳ ನಿಶ್ಚಯಮಂ ಮದಿರಾಮಹಾದೇವಿಯುಮರಸು
ಚಿತ್ರರಥನುಂ ಕರ್ಣಪರಂಪರೆಯಿಂ ಪರಿಜನದತ್ತಣಿಂ ಕೇಳ್ದು ಪಿರಿದುಮಳಲ್ದು ಕ್ಸಷೀರೋದನೆಂಬ
ಕಂಚುಕಿಯಂ ಕರೆದೆನ್ನಲ್ಲಿಗಟ್ಟಿದೊಡಾತಂ ಬಂದು


ತನ್ನ ಮಹಾವ್ಯತಿಕರದೊಳ್
ಮುನ್ನವೆ ಬೆಂದವರ್ಗೆ ಮತ್ತೆ ಕಾದಂಬರಿಯಿಂ
ದಂ ನೋವು ಬಂದುದಱಿಂ
ದಿನ್ನನುವಿನೊಳಾನೆ ಶರಣಮಾವ್ಯತಿಕರದೊಳ್ ||೭||


ವಚನ : ಎಂದು ಜನನೀ ಜನಕರಟ್ಟಿದರೆಂದು ನುಡಿಯೆ


ಗುರುಗಳ್ ತಾವೇನನೊಂದಂ ಬೆಸಸಿದರದನೇ ಕೊಳ್ವುದಿನ್ನೆನ್ನ ಜೀವಂ
ಬೆರಸಾನಿಂತಿರ್ಪುದು ತಾಂ ಬಯಸುವ ಬಗೆಯೆಂತೆಂದೊಡೆದಿಂತು ಕಾದಂ
ಬರಿಗಾದಂ ಬುದ್ಧವೇಳ್ದಟ್ಟಿದೆ ನಿರದಧಿಕಪ್ರೇಮದಿಂ ಸೌವಿದಲ್ಲಂ
ಬೆರಸತ್ತಲ್ ಪೋದಳಂತಾಗಳೆ ತರಳಿಕೆಯುಂ ನೀವುಮೆಳ್ತಂದಿರೀಗಳ್ ||೮||


ವಚನ : ಎಂದು ಪೇಳ್ದಳನ್ನೆಗಮಿತ್ತ ಲಾಂಛನಚ್ಛಲದಿಂ ಶೋಕಾನಲದಗ್ಧಮಪ್ಪ ಮಹಾಶ್ವೇತಾಹೃದಯಮಂ
ವಿಡಂಬಿಸುವಂತೆಯುಂ ಮುನಿಕುಮಾರವಧ ಮಹಾಪಾತಕಮಂತಾಳ್ದಿದಂತೆಯುಮಾಗಿ

ಇನಿಸಂ ಮುಚ್ಚಿರೆ ಕೃಷ್ಣಾ
ಜಿನಮವಿರಳ ಭಸ್ಮಧವಳಮಗಜಾರಾಮಾ
ಸ್ತನಮಂಡಳಮೊಪ್ಪಿದುದೆಂ
ಬಿನಮುದಯಿಸಿದುದು ಮೃಗಾಂಕಮಂಡಲಮಾಗಳ್ ||೯||

ವಚನ : ಅಂತಾತಂ ಪೋಗೆ ಚಂದ್ರಾಪೀಡನನಿಂತೆಂದಳ್

ಇದೆ ಸಾರಿರ್ಪುದು ರಾಜಧಾನಿ ಪಿರಿದುಂ ಚಿತ್ರಾವಹಂ ಬಂದು ನೋ
ಳ್ಪುದು ನೀನೆನ್ನೊಡಸಂದು ಮತ್ಸಖಿಗೆಂತುಂ ಬುದ್ಧಿವೇಳಲ್ಕೆ ವೇ
ಳ್ಪುದು ಮತ್ಪ್ರಾಣಸಮಾನೆಯಾಕೆ ನಿಜದಿಂದಸ್ವಸ್ಥೆ ಗಂಧರ್ಸವಲೋ
ಕದೊಳಿಂದಕ್ಕೆಭವದ್ವಿಲೋಕನಸುಖಂ ಭೂಪಾಲವಿದ್ಯಾಧರಾ ||೧೫||

ವಚನ : ಅದಲ್ದೆಯುಂ ಮದೀಯ ಪ್ರಾರ್ಥನೆಯಂ ನಿರರ್ಥಕಂ ಮಾಡದಿಂದು ಬಂದಲ್ಲಿ
ವಿಶ್ರಮಿಸಿ ನಾಳೆ ಬೀಡಿಂಗೆ ಬಿಜಯಂಗೆಯ್ವದೆಂದು ಮತ್ತಮಿಂತೆಂದಳ್ 


ನಿನ್ನನಕಾರಣಭಾಂಧವ
ನಂ ನೋಡಿಯೆ ಶೋಕವಾಱಿದುದು ಸುಜನರ ಲೋ
ಕೋನ್ನತರ ಪರಹಿತರ ನಿ
ಮ್ಮನರ ಬರವಾರ್ಗೆ ಸುಖವನುತ್ಪಾದಿಸದೋ ||೧೬||

ವಚನ : ಎಂದು ನುಡಿದೊಡೆ

ಇನಿತಂ ಪ್ರಾರ್ಥಿಸಲೇಂ ನೀ
ನಿನಿತೆಸಗುವುದೆಂದು ಬೆಸಸುವುದು ಸಾಲ್ಗುಂ ನೀ
ಮೆನಗೆಂದು ವಿನಯದೊಳ್ ಕಾ
ಮಿನಿ ಪಿಂತನೆ ನಡೆದನಂದು ಚಂದ್ರಾಪೀಡಂ ||೧೭||

ವಚನ : ಆಗಳರಸನುಂ ಪ್ರತೀಹಾರಿಕಾಜನೋಪದಿಶ್ಯಮಾನಮಾರ್ಗನಾಗಿ ಪೊಕ್ಕು ನೋಳ್ಪನ್ನೆಗಂಮಲ್ಲಿ

ಇದು ನಾರೀಮಯಮಪ್ಪ ಲೋಕಮಿದು ಬೇಱೊಂದಂಗನಾದ್ವೀಪಮಿಂ
ತಿದು ನಿಷ್ಪೂರುಷಜೀವಲೋಕಮಿದು ಸರ್ಗಕ್ಕೆಂದು ಪದ್ಮೋದ್ಭವಂ
ಸು ದತೀರತ್ನಸಮೂಹಮಂ ಪದಪಿನಿಂ ಬೈಚಿಟ್ಟ ಭಂಡಾರಮ
ಪ್ಪುದೆನಲ್ ಸಂದಣಿಸಿರ್ದ ಸುಂದರಿಯರಂ ಕಂಡಂ ನರೇಂದ್ರಾತ್ಮಜಂ||೧೯||

ವಚನ : ಆ ಮಣಿಮಯಮಂಟಪ ಮಧ್ಯಭಾಗದೊಳನೇಕ ಕನ್ಯಕಾಪರಿಜನವೃತೆಯಾಗಿ  

ಪೊಳೆಯುತ್ತಿರ್ಪ ಮಹಾವರಾಹವದನೋದ್ಯದ್ದಂಷ್ಟ್ರಮಂ ನೆಮ್ಮಿ ನಿಂ
ದಳೊ ಭೂಕಾಂತೆಯೆನಲ್ಕೆ ನೀಲವಸನಪ್ರಚ್ಛನ್ನಪರ್ಯಂಕಮಂ
ಡಳದೊಳ್ ಬೆಳ್ಪೆಸೆದಿರ್ದ ಕೌಳುಡೆಯನೊಂದಂ ನೆಮ್ಮಿ ಕುಳ್ಳಿರ್ದ ಕೋ
ಮಳೆಯಂ ದೂರದೆ ನೋಡಿ ಕಂಡನರಸಂ ಕಾದಂಬರೀದೇವಿಯಂ ||೩೧||

ಉರಗಗನಿಕಾಯ ದಿಕ್ಪತಿನಿಕಾಯ ನಿಲಿಂಪನಿಕಾಯಮೆಲ್ಲಮಾ
ದರದೊಳೆ ತಮ್ಮ ತಮ್ಮ ನಿಳಯಕ್ಕಿರದದೊಯ್ದಪರೊಲ್ದು ಕನ್ನೆಯಂ
ಪಿರಿದುಮೆನಲ್ಕೆ ಹರ್ಮ್ಯಮಣಿಕುಟ್ಟಿಮಭಿತ್ತಿಸಮೂಹಮಂಟಪೋ
ಪರಿಮತಲಂಗಳೊಳ್ ಸೊಗಯಿಸಿರ್ದುದು ರೂಪಮೃತಾಂಶುವಕ್ತ್ರೆಯಾ ||೩೨||

ವಚನ : ಮತ್ತಂ ಮಹಾಶ್ವೇತೆಯತ್ತಣಿಂ ಬಂದ ನೃಪರೂಪಚಂದ್ರಮನ ರೂಪಾತಿಶಯ ಗುಣಂಗಳಂ
ಬಿನ್ನವಿಸುತ್ತಿರ್ದ ಕೇಯೂರಕನ ಮೊಗಮಂ ನೋಡಿ

ಬರವಿದು ಚೋದ್ಯಮಾರತನಯಂ ಪೆಸರಾವುದು ರೂಪದೆಂತುಟೋ
ಹರೆಯಮದಿನ್ನೆಗಂ ತಡೆದೆ ನೀಂ ನುಡಿಯಾದುದೆ ನಿನ್ನೊಳಾತನೊಳ್
ಪರಿಚಯಮೆಂತು ಸಂಗಳಿಸಿತಿಲ್ಲಿಗೆ ಬಂದಪನೇ ಎನುತ್ತಮಾ
ತರುಣಿ ನಿರಂತರಂ ಬೆಸಗೊಳುತ್ತಿರಲಾ ಮನುಜೇಂದ್ರಚಂದ್ರನಂ ||೬೦||

ವಚನ : ಎಂದು ಮಗುಳೆ ಮಗುಳೆ ಬೆಸಗೊಳುತಿರ್ದ ಗಂಧರ್ವರಾಜನಂದನೆಯನತಿ ದೂರದೊಳ್
ವಿಸ್ಮಿತಾಂತರಂಗನಾಗಿ ನೋಡಿ

ಇವಳಂ ನೋಡಲ್ ಪಡೆದೆ

ಇವಳಂ ನೋಡಲ್ ಪಡೆದೆ
ನ್ನ ವಿಲೋಚನಮಾವ ನೋಂಪಿಯಂ ನೋಂತುವೊ ಮಾ
ಯ್ದ ವಿಧಾತ್ರನೇಕೆ ವಿರಚಿಸ
ನೊ ವಿಲೋಚನಮಯಮೆನಲ್ ಮದಿಂದ್ರಿಯಚಯಮಂ ೬೧||

ವನಿತಾಮಂಡನ ರತ್ನಕಾಂತಿ ಮಱೆಯಾದತ್ತೆಂದು ತದ್ಭೂಷಣ
ಧ್ವನಿ ಸಂಭಾಷಣಮೆಂದು ಕಾಂತೆ ಹೃದಯಾಂತರ್ಲಗ್ನೆ ತಾನಾಗಿರ
ಲ್ಕೆನಗಿನ್ನೇನೊಳಗಾದಳೆಂದೆಸೆವ ದೇಹಚ್ಛಾಯೆ ಮೆಯ್ಪೊರ್ದೆ ಕಾ
ಮಿನಿ ತಳ್ತಪ್ಪಿದಳೀಗಳೆಂದು ಬಗೆದಂ ಭೂಪಾಲವಿದ್ಯಾಧರಂ ||೬೬||

ವಚನ : ಅಂತಾ ಕಾಂತೆಯೆಂತಾನಾಂ ಕತಿಪಯಪದಂಗಳಂ ನಡೆದು

ಪಲವು ದಿವಸಕ್ಕೆ ಕಂಡೊಗೆ
ದೊಲವಿಂ ಬಿಗಿಯಪ್ಪಿದಳ್ ಮಹಾಶ್ವೇತೆಯನಾ
ಲಲನೆ ಮಹಾಶ್ವೇತೆಯುಮಾ
ಲಲನೆಯನನುರಾಗದಿಂದಮಪ್ಪಿದಳಾಗಳ್ ||೬೭||

ವಚನ : ಅನಂತರಂ ಮಹಾಶ್ವೇತೆ ಕಾದಂಬರಿಯನಿಂತೆಂದಳ್ ಚಂದ್ರಾಪೀಡನೆಂಬೀ
ಮಹಾನುಭಾವಂ ಭಾರತವರ್ಷದ ರಾಜನುಂ ತುರಗಖುರಮುಖೋಲ್ಲೇಖದತ್ತಂ ಚತುಸ್ಸಮುದ್ರ
ಮುದ್ರನುಂ ಕ್ಷಪಿತ ಪ್ರಜಾಪೀಡನುಮೆನಿಸಿದ ತಾರಾಪೀಡನರೇಂದ್ರಂಗೆ ನಂದನನುಂ ನಿಜಭುಜ
ಶಿಲಾಸ್ತಂಭವಿಶ್ರಾಂತ ವಿಶ್ವವಿಶ್ವಂಭರಾಪೀಡನುಮೆನಿಸಿ ದಿಗ್ವಿಜಯಪ್ರಸಂಗದಿಂ ಬಳಿಸಂದೀ
ಪ್ರದೇಶಕ್ಕೆ ಬಂದನಲ್ಲದೆಯುಂ ಪರಿತ್ಯಕ್ತ ಸಕಲಸಂಗೆಯಾಗಿ ಕಲ್ಲೆರ್ದೆಯಳೆನಿಸಿದೆನ್ನಂ ಕಾಣ
ಲೊಡನೆ ಸ್ವಭಾವಸರಳತೆಯನಪ್ಪುಕೆಯ್ದು ನಿಜಗುಣದಿಂ ನಿಷ್ಕಾರಣಬಂಧುವುಂ ನಿರ್ನಿಮಿತ್ತ
ಮಿತ್ರನುಮೆಂದೆನಿಸಿದನಂತುಮಲ್ಲದೆಯುಂ

ಒದವಿದ ದಾಕ್ಷಿಣ್ಯಕಂ
ವಿದಗ್ಧವೃತ್ತಿಗಮಪಾರಗಾಂಭೀರ್ಯಕ್ಕಂ
ಮೊದಲೆನಿಸಿದ ಸಕಲಗುಣಾ
ಸ್ಪದರಂ ಜಗದೊಳಗೆ ಪಡೆವುದಸದಳಮಲ್ತೇ ||೬೮||

ವಚನ : ಅದುಕಾರಣದಿಂ ಪ್ರಜಾಪತಿಯ ರೂಪನಿರ್ಮಾಣಕೌಶಲಮುಮಂ ಎಡೆವಱಿಯದೆ
ನಿಂದ ಲಕ್ಷ್ಮಿಯ ವಿವೇಕಮುಮಂ ವಸುಂಧರೆಯ ಸದ್ಭರ್ತೃತಾಸುಖಮುಮಂ ಮರ್ತ್ಯಲೋಕದ
ಸಫಲತೆಯುಮಂ ಕಲಾಕಲಾಪದ ಮೇಳಾಪಕಮುಮಂ ಸೌಭಾಗ್ಯದ ಭಾಗ್ಯಮುಮಂ ಮನುಷ್ಯರ
ಗ್ರಾಮ್ಯತೆಯುಮಂ ನೀನುಂ ಕಾಣ್ಬೆಯೆಂದೆಂತಾನುಮಿಲ್ಲಿಗೆಗೊಡಗೊಂಡು ಬಂದೆಂ

ಅರಸನನಾಂ ಕಂಡಱಿಯೆಂ
ಪರಿಚಯಮಿಲ್ಲೆನ್ನೊಳೆಂದು ಮಿಗೆ ತಾಂ ನಾಣ್ಚು
ತ್ತಿರದಿಂದೆನ್ನೊಳದೆಂತಂ
ತಿರೆ ನೀಂ ನೆಗಳ್ವುದು ನಿರಂತರಂ ಕಮಲಮುಖೀ ||೬೯||

ವಚನ : ಆಗಳಾ ಕಾದಂಬರಿಯೊಡನೆ ಕುಳ್ಳಿರ್ದ ಮಹಾಶ್ವೇತೆ

ಕರದಿಂದಂ ಕರ್ಣಭೂಷಾರುಚಿರುಚಿರಮೆನಿಪ್ಪಂಸವಂ ಮುಟ್ಟುತಂ ಷ
ಟ್ಚರಣವ್ಯಾಲೋಲ ಕರ್ಣೋತ್ಪಲಮನಮರೆ ಸೈತಿಕ್ಕುತಂ ಸಂಚಲಚ್ಚಾ
ಮರಸಂಜಾತಾನಿಲಾಂದೋಳನ ಚಲದಳಕಾನೀಕಂ ಮೆಲ್ಲನಂದೋ
ಸರಿಸುತ್ತಂ ತಂಗಿ ಪೇಳ್ ಭವ್ಯವೆ ನಿನಗೆನಲಾ ಕಾಂತೆ ನಾಣ್ಚುತ್ತಮಾಗಳ್ ||೭೪||

ವನವಾಸಾಯಾಸದಿನ
ಕ್ಕನಿಂತಿರಲ್ ಮನೆಯೊಳಿರ್ದೆನಾನೆಂದು ಕರಂ
ಮನದೊಳ್ ತೊಳಲುತ್ತುಂ ತಾಂ
ಮನವೊಲ್ಲದೆ ತನಗೆ ಸೇವಮೆಂದೆನುಯೊರೆದಳ್ ||೭೫||

ವಚನ : ಅನಂತರಂ ತಾಂಬೂಲಪ್ರದಾನೋದ್ಯತೆಯಾದ ಕಾದಂಬರೀದೇವಿಯಂ ಮಹಾಶ್ವೇತೆಯಿಂತೆಂದಳ್

ಭು ವನಾಧೀಶ್ವರಸುತನಭಿ
ನವಾಗತಂ ಮಾನ್ಯನಪ್ಪನಾರಾಧ್ಯನೆ ದಲ್
ನಮಗೆಲ್ಲತೆಱದಿನದಱಿಂ
ದವೀವುದರಸಂಗೆ ಮುನ್ನಮೀ ತಂಬುಲಮಂ||೭೭||

ಆನಕ್ಕ ನಾಣ್ಚುವೆಂ ಪಿಡಿ
ನೀನೆ ನೃಪಂಗಿಕ್ಕು ತಂಬುಲಮನಱಿವೆನೆ ಪೇ
ಱೇನುಮನಾನೆಂದಂತಿಲ
ಜ್ಜಾನತಮುಖಿಯಾಗಿ ಕಾಂತೆ ಮೆಲ್ಲನೆ ನುಡಿದಳ್ ||೭೮||
ವಚನ : ಅಂತು ನುಡಿಯೆ ಮಹಾಶ್ವೇತೆ ಮತ್ತಮಾಗ್ರಹಿಸೆ ತಂಬುಲಂಗೊಡಲುಜ್ಜುಗಂಗೆಯ್ದು

ಬೆಮರಿಂ ಮುಳುಗಿದಪೆಂ ಸಂ
ಭ್ರಮದಿಂ ಬಿಳ್ದಪ್ಪೆನರಸ ಕೈಗುಡು ನೀಂ ಬೇ
ಗಮೆನಿಪ್ಪ ತೆಱದೆ ತಾಂಬೂ
ಲಮಿಳಿತಮಂ ಕಾಂತೆ ನೀಡಿದಳ್ ನಿಜಕರಮಂ ||೭೯||

ಎನಸುಂ ಮುಂದೆ ನಖಾಂಶು ನಿಳ್ಕೆ ನೃಪಹಸ್ತಾನ್ವೇಷಣಂಗೆಯ್ವವೊಲ್
ನಿನಗೆನ್ನಂ ಬಿಡದುಣ್ಮಿದೀ ಬೆಮರೆ ಕೈನೀರಾಗಿರಲ್ ತೋರ್ಕೆಗೊ
ಟ್ಟನಂಗಮಂ ಪಿಡಿ ನಿನ್ನ ಕೈಯೆಡೆಯನೊಂದಿರ್ದಪ್ಪುದಿನ್ನೆನಂ ಜೀ
ವನಮೆಂಬುದದಿನಿಕ್ಕಿದಳ್ ನಡುಗುತಂ ತನ್ವಂಗಿ ತಾಂಬೂಲಮಂ ||೮೦||

ವಚನ : ಅನಂತರಂ ಮಹಾಶ್ವೇತೆಗಂ ತಾಂಬೂಲಂಗೊಟ್ಟಳನ್ನೆಗಂ  

ಸುರುಳನೆ ಸುತ್ತಿದಂತೆ ಕೊರಲೊಳ್ ಮಿಱುಗುತ್ತಿರೆ ಮೂಱುರೇಖೆಗಳ್
ಮರಕತಕಾಂತಿಯಂ ತಳೆದು ನುಣ್ಗಱಿಗಳ್ ಮಿನುಗಲ್ಕೆ ವಿದ್ರುಮಾಂ
ಕುರದವೊಲೊಪ್ಪೆ ಚಂಚುಪುಟಮೊಯ್ಯನೆ ಬಂದುದು ಕನ್ಯಕಾಸಭಾಂ
ತರದೊಳಗೊಂದು ಶಾಡ್ವಳಿತ ಹರ್ಯ್ಮಮಣಿಪ್ರವರಾಂಶುಕಂ ಶುಕಂ ||೮೧||

ಮನಮಱಿಗುಂ ನರೇಂದ್ರಸುತನೆಂದಿನಿಸಳ್ಕೆನೆ ಸುತ್ತಲುಂ ಸಖೀ
ಜನಮಿರೆಯುಂ ವಿಚಾರಿಸೆನೆ ದುಃಖದೊಳಕ್ಕನಿರೆ ಲಜ್ಜೆಗಾ
ಯೆನೆ ಗುರುಗಳ್ಗೆ ಬೆಳ್ಕರೆನೆ ಚೇಟಕಿಯರ್ ನೆರೆದಿರ್ದರೆಂಬಿದಂ
ನೆನೆಯೆನೆ ಕೆಟ್ಟನೇನನಿರದಿಂತುಟು ವಿಭ್ರಮದಿಂದೊಡರ್ಚಿದೆಂ ||೯೩||

ಕನ್ನ ನಿಜಜೀವಿತಮುಮಂ
ತನ್ನುಮನಿರದಿತ್ತು ತೊಳ್ತುತನಮಂತಾಂ ಕೊಂ
ಡುಂ ನೆಱೆಯಳ್ ಸುಜನರ್ಗಿ
ನ್ನಿನ್ನನ್ನರ್ಗೇನ ಮಾಡಿಯುಂ ತಣಿವುಂಟೇ ||೧೨೫||

ಪೊಳೆವ ಸುಧಾಸೂತಿ ನಭ
ಸ್ಥಳದೊಳ್ ಕಣ್ಗೊಳಿಪ ತೆಱದೆ ಯುವರಾಜನುರ
ಸ್ಥಳದೊಳ್ ಮುಕ್ತಾವಳಿ ಕ
ಣ್ಗೊಳಿಸುಗುಮೆಂದಳ್ಕಱಿಂದಮಟ್ಟಿದಳೀಗಳ್ ||೧೨೮||

ತರಳಿಕೆಯ ಕೆಯ್ಯೊಳ್ಕಟ್ಟಿದ
ಳರಸ ಮಹಾಶ್ವೇತೆ ತಾನೆ ಬೇಱೊಂದನೆನು
ತ್ತಿರಸಲ್ಲದೆಂದು ಮುತ್ತಿನ
ಸರಮನದಂ ಕೊರಲೊಳಾಕೆ ಕಟ್ಟಿದಳಾಗಳ್ ||೧೩೧||

ಕಮಲಿನಿಗೆ ಕಮಲಬಂಧುಗೆ
ಕುಮುದಿನಿಗಾ ಕುಮುದಿನೀಶ್ವರಂಗೆಂತೀಗಳ್
ತಮಗಂತಿರ್ಪೆಡೆಗಳ್ ದೂ
ರಮಾದೊಡಂ ಪ್ರೀತಿ ಮಾಣದಾ ಕಲ್ಪಾಂತಂ ||೧೭೨||

ವಚನ : ಎಂದು ನುಡಿದು ಗಂಧರ್ವಕುಮಾರರಂ ಕರೆದರಸನಂ ಬೀಡಿಂಗೆಯ್ದಿಸಿಮೆಂದು
ಪೇಳೆ ವಿದಗ್ಧವಿದ್ಯಾಧರನೆಳ್ದು ಮಹಾಶ್ವೇತೆಗೆ ನಮಸ್ಕಾರಂಗೆಯ್ದು ಕಾದಂಬರಿಗೆ ಕೆಯ್ಗಳಂ ಮುಗಿದು
ಪಿರಿದು ನುಡಿಯೇವುದೆನಗಿಂ
ಪರಿಜನದೊಳಗೊರ್ವನೆಂದು ದೇವಿಯರೆನ್ನಂ
ಪರಿಭಾವಿದೆಂಬಿದನುಸಿ
ರ್ದರಸಂ ಪೊರಮಟ್ಟನಾಗಳೆತಃಪುರಮಂ ||೧೭೪||

೭•  ಕಾದಂಬರಿಯ ದ್ವಿತೀಯ ಸಂದರ್ಶನ ,

ವಚನ : ಅಂತು ಕಳೆದಾ ಮಱುದಿವಸಮಾ ಕನ್ನೆಯನೆ ನೆನೆವುತ್ತಮಾಸ್ಥಾನಮಂಟಪ ದೊಳಿರ್ಪನ್ನೆಗಂ
ಪಡಿಯರಂಬೆರಸು ಕೇಯೂರಕಂ ಭೋಂಕನೆ ಬಂದು

ವಿನಯಂ ಕೈಗಣ್ಮೆ ದೂರಾಂತದೊಳೆಱಗೆ ಕಂಡಿತ್ತಬಾಯಿತ್ತಬಾಯೆಂ
ಬಿನಮೈತಂದಂಘ್ರಿಪದ್ಮಕ್ಕೆಱಗೆ ತೆಗೆದು ತಳ್ಕೈಸಿದಂ ಪ್ರೀತಿಯಿಂ ಮು
ನ್ನ ನಿಜಾಪಾಂಗಾವಲೋಕಂ ಬಳಿಕೆ ಹೃದಯವಲ್ಲಿಂ ಬಳಿಕ್ಕಂತೆ ರೋಮಾಂ
ಚನಿಕಾಯೋದ್ಭೇದವಲ್ಲಿಂ ಬಳಿಕ ಭುಜಯುಗಂ ಸುತ್ತೆ ರಾಜೇಂದ್ರಚಂದ್ರಂ ||೧||

ಅರಸಿಯರ್ಗೆ ಮಹಾಶ್ವೇತೆಗೆ
ಪರಿಜನನಿವಹಕ್ಕೆ ಕುಶಲಮೇ ಪೇಳೆನಲಾ
ದರದಿಂದೆ ದೇವ ನೀಮಿಂ
ತಿರೆ ಬೆಸಗೊಂಡಂತೆ ಕುಶಲಮಂತವರ್ಗೆಲ್ಲಂ ||೩||

ಹಿಮಕರಮಯಮೆನಿಸಿದ ನಿಜ
ವಿಮಲಗುಣವ್ರಜಮೆ ತನ್ನಗಲ್ಕೆಯೊಳುಷ್ಣಾಂ
ಶುಮಯಮೆನಿಸಿದಪುವೆನೆ ಮು
ನ್ನಮೆ ತನ್ನಂ ಕಾಣದಿರ್ಪುದದು ಸುಖಮಲ್ತೇ ||೪||

ತನು  ಬಸಮಲ್ತು ಮತ್ಸಖಿಗೆ ಮನ್ಮಥನನ್ನನೆನಿಪ್ಪ ತನ್ನುಮಂ
ನೆನೆ ದಪಳೊರ್ಮೆ ಬಂದೆನಗೆ ಮಾಳ್ಪುದು ಪೆರ್ಮೆಯ ನಿಮ್ಮ ನಣ್ಪಿನಿಂ
ಜನಿಯಿಸಿದೀ ಕದರ್ಥನೆಗೆ ಸೈರಿಪುದಿಲ್ಲಿಗೆ ಬರ್ಪುದೆಂದು ಪೇ
ಳ್ದಿನಿವಿರಿದೊಂದು ದರ್ಪಮೆನಗಾದುದು ತನ್ನಯ ನಿರ್ಮಳತ್ವದಿಂ ||೭||

ಪದಪಿಂ ತಮ್ಮಾಳ್ಗಳನಿಂ
ತು ದೇವಿಯರ್ ನೆನೆವುದೆಂಬುದಿದು ಸಖಲಗುಣಾ
ಸ್ಪದೆಯೆನಿಪ ಮಹಾಶ್ವೇತೆಯ
ಪದಕಮಲಾರಾಧನೆಯ ತಪಃಫಲಮಲ್ತೇ ||೯||

ಹೃದಯಭವಪ್ಪಯಾಣಪಟಹ ಧ್ವನಿಯೆಂನಮೆತ್ತಲುಂ ಪೊದ
ಳ್ದೊದವಿದ ರತ್ನನೂಪುರಕಲಾಪಕಲಧ್ವನಿಗಂಚೆವಿಂಡು ತಂ
ಡದಿನುಲಿವುತ್ತಿರಲ್ ಕೆಳದಿಯರ್ವೆರಸಾಗಳೆ ನಿಮ್ಮನೀಕ್ಷಿಸಲ್
ಪದೆದಿರದೇಱಿದಳ್ ತರುಣಿ ತನ್ನ ರನ್ನದ ಕನ್ನೆಮಾಡಮಂ ||೧೧||

ಪೊಳೆವ ಭುವನಪ್ರದೀಪಂ
ಗಳೊಡನೆ ಕುಮುದಿನಿಗಳೊಡನೆ ಚಕ್ರಾಹ್ವಯಸಂ
ಕುಳದೊಡನೆ ನಿದ್ರೆಯಿಂದು
ತ್ಪಳಾಕ್ಷಿ ಕೋಟಲೆಗೊಳುತ್ತಮಿರುಳಂ ಕಳೆದಳ್ ||೧೬||

ಕುಳಿರ್ವ ಹಿಮಾಲಯದೊಳ್ ಕೋ
ಮಳೆ ನಿಜಪರಿವಾರಸಹಿತಮಿರ್ದಳ್ ಹಿಮವ
ತ್ತಳದೊಳ್ ತರಂಗಿಣಿಸಂ
ಕುಳದಿಂ ಬಳಸಿರ್ದ ದಿವಿಜನದಿಯೆಂಬಿನೆಗಂ ||೨೬||

ವಚನ: ಅಂತು ಕಾದಂಬರೀದೇವಿಯಂ ನೋಡಿ ದೂರದೊಳೆ ಕಂಡನನ್ನೆಗಂ ಮೂರ್ತಿ ನಾರಾಯಣಂ
ಬಂದನೆಂದು ಪೇಳಲುತ್ತರಳತಾರಕೆಯಾಗಿ

ಬರವನದಾರ್ ಪೆಳ್ದಟ್ಟಿದ
ರರಸಂ ಬಂದಪನೆ ಕಂಡಿರೇಂ ನೀವೆನಿತಂ
ತರಮಾವೆಡೆಯೆನುತೆನುತಂ

ಪರಿಜನಮಂ ಕಣ್ಸನ್ನೆಯಿಂ ಬೆಸಗೊಂಡಳ್ ||೩೪||

ನಡುಗುತ್ತಂಮೇಲುದೆಂದೊರ್ಮೆದಲೆ ತೆಗೆದು ಹಾರಾಂಶುವಂ ಸಾರ್ಚುತಂ ಸೋ
ರ್ಮುಡಿಯಂ ಸಸ್ವೇದಹಸ್ತಾಬ್ಜದಿನೆಳೆವುತಾತ್ಮಪ್ರತಿಚ್ಛಾಯೆಯಂ ಕೆ
ಯ್ಗುಡು ನೀನೆಂಬಂದದಿಂ ನಿರ್ಮಲತರ ಮಣಿಬದ್ದಾವನೀಭಾಗಮಂ ತ
ನ್ನೆಡಗೆಯ್ಯಿಂ ಮೆಲ್ಲನೊತ್ತುತ್ತೆಸೆವಲರ್ವಸೆಯಿಂ ಕಾಂತೆಯೆಂತಾನುಮೆಳ್ದಳ್ ||೩೬||

ವಸುಧಾಧೀಶನ ಪಪರಮ
ಪ್ರಸಾದಭಾಗಿನಿಯನಡಪವಳಿತಿಯನವಧಾ
ರಿಸುಪತ್ರಲೇಖೆಯೆಂಬುದು
ಪೆಸರೆಂದಾಸತಿಯನರಸಿಯಂ ಕಾಣಿಸಿದಂ ||೩೮||

ತನಗಾಗಳ್ ಪೊಡವಟ್ಟಳಂ ಪದಪಿನಿಂ ಪೊಣ್ಮಿತ್ತಬಾಯಿತ್ತ ಬಾ
ಯೆನುತಂ ತನ್ನ ಕೆಲಕ್ಕೆ ಕಾಂತೆ ಕರೆದಾದಂ ಭ್ರಾಂತಿಯಿಂದಂ ಸಖೀ
ಜನಮೆಲ್ಲಂ ನಡೆನೋಡೆ ಪಿಂತಿರಿಸಿಕೊಂಡಾಗಳ್ಮೊದಲ್ಗೊಂಡಲಂ
ಪಿನೊಳಾ ಕಾಂತೆಯ ಮೆಯ್ಯನೊಯ್ಯನೆಳವುತ್ತಿರ್ದಳ್ ಕರಾಂಭೋಜದಿಂ ||೪೦||

ವಚನ : ಆಗಳಾ ಕಾದಂಬರೀದೇವಿಯಕೆಳದಿ ಮದನಲೇಖೆಯೆಂಬಳ್ ಮೂರ್ತಿನಾರಾಯಣನ ಮೊಗಮಂ ನೋಡಿ

ಇದನೇನೆಂದಪುದಿಂತುಟೆಂದುಸಿರಲಾರ್ಗಂ ಬಾರದೀ ತಾಪದೊಂ
ದೊದವಿಂತೀ ಸುಕುಮಾರಭಾವಯುತೆಗಾದಂ ತಾಪಮಂಮಾಡದಾ
ವುದು ಪೇಳಿಂತುಟೆ ದಲ್ ಮೃಣಾಳಿನಿಗೆ ತೀವ್ರಾಗ್ನಿಸ್ವರೂಪಂಗಳಾ
ಗದೆ ಮಾಣ್ದಿರ್ದುವೆ ಚಂದ್ರಿಕಾಪ್ರಸರಮುಂ ನೀಹಾರವಿಸ್ತಾರಮುಂ ||೪೬||

ಆರೋ ಪಡೆದಪರಿದಂ ಕೇ
ಯೂರಕ ದೇವೀಪ್ರಸಾದಮಂ ಧನ್ಯೆಯಿವಳ್
ಸಾರಿರ್ದಪಳ್ ಗಡಿಂತೀ
ಕಾರುಣ್ಯಪದಕ್ಕೆ ಪತ್ರಲೇಖೆಯೆ ನೋಂತಳ್ ||೪೮||

ವಚನ : ಎಂದು ಪತ್ರಲೇಖೆಯನಿರಲ್ವೇಳ್ದು ನಡೆಗೊಂಡು ನಿಜಸ್ಕಂಧಾವಾರಮಂ ಪುಗುವಾಳ್

ಚರನುಜ್ಜೈನಿಯಿನೊರ್ವನಾಗಳೆ ಬರಲ್ ಕಾಣುತ್ತಮೌತ್ಸುಕ್ಯದಿಂ
ಪರಿವಾರಂಬೆರಸೆಮ್ಮ ತಂದೆಯುಮಶೇಷಾಂತಃಪುರಸ್ತ್ರೀಜನಂ
ಬೆರಸೆಮ್ಮಬ್ಬೆಯುಮಿರ್ದರೇ ಸುಖದಿನೆಂದಾವಿರ್ಭವತ್ಪ್ರೀತಿನಿ
ರ್ಭರವಿಸ್ತಾರಿತನೇತ್ರನಂದು ಬೆಸಗೊಂಡಂ ಚಂದ್ರಚೂಡಾಹ್ವಯಂ ||೪೯||

ವಚನ : ಅಂತು ಬೆಸಗೊಳ್ವುದುಮಾ ಲೇಖವಾಹಕಂ ಪೊಡಮಡುತ್ತೈದೆವಂದು ದೇವರ್
ಬೆಸಸಿದಂದದೊಳೆಲ್ಲರುಂ ಸುಖದಿನಿರ್ದರೆಂದು ಬಿನ್ನವಿಸಿ ನಿಮ್ಮ ತಂದೆಯರಟ್ಟಿದ ರಾಜಾದೇಶ
ಮಿದೆಂದು ಲೇಖನದ್ವಿತಯಮಂ ನೀಡೆ

ಯುವರಾಜನೃಪಂ ನಯವಿನ
ಯವಿನೂತಂ ತಲೆಯೊಳಾಂತು ಕೈಕೊಂಡು ಮಹೋ
ತ್ಸವದಿಂದಂ ರಾಜಾದೇ
ಶವನಾಗಳ್ ಬಿರ್ಚಿನೋಡಿ ತಾಂ ಬಾಚಿಸಿದಂ ||೫೦||

ಪ್ರಜೆಯೆಲ್ಲಂ ಕ್ಷೇಮದಿಂದಿರ್ದುದು ಕುಶಲದಿನಿರ್ದಪ್ಪೆವಾವಾದೊಡಂದಿ
ಗ್ವಿಜಯಂಗೆಯ್ಯಲ್ಕೆ ಪೋದಂ ಪಲವು ದಿವಸಮಾದತ್ತು ಕಾಣಲ್ಕೆವೇಳ್ಕುಂ
ವಿಜಯಾಲಂಕಾರನಂ ಪುತ್ರನನೆನುತ ಮಹೋತ್ಕಂಠೆಯಿಂ ತನ್ನ ಮಾತೃ
ವ್ರಜಮಿರ್ದತ್ತೋಲೆಯಂ ಬಾಚಿಸುವುದು ತಡಮೆಳ್ತಂದು ತಾಂ ಕಾಣ್ಬುದೆಮ್ಮಂ||೫೧||

 ವಚನ : ಕೇಯೂರಕಂಗೆ ನೀನಿಂತು ಪೇಳ್ವುದು

ನೆನೆಯದೆ ತಮ್ಮ ವತ್ಸಲತೆಯಂ ಪರಿಭಾವಿಸದೊಳ್ಪನಳ್ಕಱಂ
ಮನದೊಳಣಂ ವಿಚಾರಿಸದೆ ನಿಸ್ಪ್ರಹತಾತ್ಮಕನೆಂಬಳೀಕಭ
ಕ್ತನನುಮುಪಚಾರಶೀಲನುಮೆನಿಪ್ಪೆನಗಂ ನುಡಿಯೊಂದು ಮಾಟವೊಂ
ದೆನಿಸಿದ ಮಾನವಂಗೆನಗೆ ದೇವಿ ಹಸಾದಮನೇಕೆ ಮಾಡಿದಳ್ ||೫೩||

ಎನಸುಂ ಕೈವಾರದಿಂದಿಲ್ಲದ ಗುಣಗಣಮಂ ರಾಗದಿಂ ಕೆಮ್ಮೀ ಪಾಂ
ಥನೊಳಧ್ಯಾರೋಪಣಂಗೆಯ್ದೆನಗನವರತಂ ಬಣ್ಣಿಸುತ್ತಿರ್ದಳೀ ಮ
ರ್ತ್ಯನೊಳಾವೊಳ್ಪಪ್ಪೊಡೆಂತೀ ತೆಱನುಮರಿದೆನುತ್ತಂ ಮಹಾಶ್ವೇತೆಯಂತಾ
ಮನದೊಳ್ ಮೇಣ್ ಮಾತಿನೊಳ್ ಮೇಣಱಿಗುಮರಸಿಯೆಂದಾಂ ಕರಂ ನಾಣ್ಚಿದಪ್ಪೆಂ ||೫೪||

ಜನಕಾಜ್ಞೆ ಮೀಱಲಂಗಮೆ
ತನುವಿಂತವರೊಡವೆಯಾಗಿ ಸಲ್ಗೆಮ ಗಂಧ
ರ್ವನಿವಾಸಕ್ಕನುವಿಸುವೀ
ಮನವಪ್ಪೊಡೆ ತನಗೆ ಮಾಱುವೋದತ್ತೀಗಳ್ ||೫೫||

೮• ಚಂದ್ರಾಪೀಡನ ಪುನರಾಗಮನ

ಯುವರಾಜಂ ಬಂದೀಗಳ್
ತವಂಗದಲ್ಲಿರ್ದನೆಂದು ಪರಮೋತ್ಸವದಿಂ
ತವತವಗೆ ಪರಿದು ಪರಿಜನ
ನಿವಹಂ ಬಿನ್ನವಿಸೆ ಕೇಳ್ದು ತಾರಾಪೀಡಂ ||೫||

ಸುರಿಯುತ್ತಿರ್ದ್ದತ್ತು ಮುಕ್ತಾಫಲದ ಸರಿಗಳಂ ಕಲ್ಪಭೂಜಾತಮೆಂಬಂ
ತಿರಲೆತ್ತಂ ಹರ್ಷವಾರ್ಬಿಂದುಗಳುಗುತರೆ ಭೋರೆಂಬಿನಂ ಪಾಲಮುನ್ನೀರ್
ತೆರೆಯಂತಿರ್ದುತ್ತರೀಯಂ ನೆಲದೊಳಲೆಯಿಸುತ್ತಿರ್ದ ಮೂರ್ಧಾಭಿಷಿಕ್ತರ್
ಬೆರಸಾನಂದಾತಿಭಾರಾಲಸಪದನಿದಿರೊಳ್ ಬಂದನಾ ಸಾರ್ವಭೌಮಂ ||೬||

ಅರಮನೆಯುಮವಂತಿಯುಮು
ರ್ವರೆಯುಂ ರಾಜ್ಯಮುಮಿವೆಲ್ಲಮೇವುದೊ ಕಾದಂ
ಬರಿಯಿಲ್ಲದೆಂದು ವಿರಹಾ
ತುರಹೃದಯಂ ನೃಪತನೂಭವಂ ಚಿಂತಿಸಿದಂ ||೭||

ಅರಸನಿರುಳಾಗೆ ಪಗಲಿನ
ಬರವಂ ಪಗಲಾಗಲಿರುಳ ಬರವಂ ಪಾರು
ತ್ತಿರುಳುಂ ಪಗಲುಂ ಗಂಧ
ರ್ವರಾಜನಂದನೆಯ ವಿರಹದಿಂ ಚಿಂತಿಸಿದಂ ||೮||

ವಚನ : ಮತ್ತಂ ಚಿತ್ರರಥನಂದನೆಯವಾರ್ತೆಯಂ ಕೇಳಲುತ್ಕಂಠಿತನಾಗಿ ಪತ್ರಲೇಖೆ
ಬರ್ಪ ಸೈಪನೇ ಬಯಸುತ್ತಮಿರಲಾಹಕೆಯಂ ಕೆಲವಾನುದಿವಸಕ್ಕೊಡಗೊಂಡು ಬಂದು ಮೇಘ ನಾದಂ
ಪ್ರಣಾಮಪುರಸ್ಸರಂ ಕಾಣಿಸೆ ನೃಪರೂಪಚಂದ್ರನಿದಿರೇಳ್ವುದುಂ ಪತ್ರಲೇಖೆ ತದಂಘ್ರಕಮಲಕ್ಕೆಱಗಿದಾಗಳ್

ಜನಪತಿ ಸಾಜದಿಂದಮೆ ಪಸಾದಮನಾದಮೆ ಮಾಡುತಿರ್ದನಾ
ವನಿತೆಯ ಮೇಲೆ ಚಿತ್ರರಥನಂದನೆಯತ್ತಣಿನಾಗಳೆಳ್ತರಲ್
ಮನದ ಪಸಾದಮುಂ ಪದಪುಮೊರ್ಮೆಯೆ ನೂರ್ಮಡಿಯಾಗೆ ಸಸ್ಮಿತಾ
ನನನಮರ್ದಪ್ಪಿದಂ ತೆಗೆದು ನಿರ್ಭರಹರ್ಷದೆ ಪತ್ರಲೇಖೆಯಂ ||೯||

ವಚನ : ಅಂತು ಕುಳ್ಳಿರ್ದು ಪತ್ರಲೇಖೆಯ ಮೊಗಮಂ ನೋಡಿ  

ಎನಿತು ದಿನಮಿರ್ದೆ ಗಂಧ
ರ್ವನ ನಂದನೆಯೊಂದು ಪದಪದೆಂತುಟು ನುಡಿಗಳ್
ಮನಮೊಸೆದು ನಮ್ಮ ದೆಸೆಯಂ
ನೆನೆವವರಾರಲ್ಲಿ ಗೋಷ್ಠಿಯೇನಿಂದುಮುಖಿ ||೧೨||

ವಚನ : ಎಂದು ನೃಪರೂಪಚಂದ್ರಂ ಬೆಸಗೊಳ್ವುದುಂ ದೇವ ತಾತ್ಪರ್ಯದಿನವಧಾರಿಸುವುದೆಂದು
ನೀವಿತ್ತಬಿಜಯಗೈಯಲೊಡನೆಯಾ ಕೇಯೂರಕನೊಡನೆ ಪೋಗಿ ಮುನ್ನಿನಂದ
ದೊಳೆ ಪಟ್ಟಿರ್ದ ಕಾದಂಬರೀದೇವಿಯ ಕೆಲದೊಳ್ ಕುಳ್ಳಿರ್ದು ಪೊಸತೆನಿಸಿದ ಪಸಾದಮನನು
ಭವಿಸುತ್ತಮಿರ್ದೆನಲ್ಲದೆಯುಂ

ಪದಪಿನ ಮಾತುಗಳ್ ಪಲವುಮಂ ಬಿಡದಾಡಿದೊಡಲ್ಲಿ ಬರ್ಪುದಾ
ವುದು ಗಡ ದೇವ ಮನ್ನಯನದೊಳ್ ನಯನಂ ಕರದೊಳ್ ಕರಾಬ್ಜವಂ
ಗದೊಳೆಸೆವಂಗಯಷ್ಟಿ ಪೆಸರಕ್ಕರದೊಳ್ ನಿಜವಾಣಿ ಕೂರ್ಮೆಯೊಳ್
ಹೃದಯವದೊರ್ಮೆಯು ನೆಲಸಲಂಗನೆಗಿಂತಿರೆ ಪೋದುದಾದಿನಂ ||೧೩||

ಎನಗೀಗಳ್ ನಿಕ್ಕುವಂ ವಲ್ಲಭತೆಯೆಡೆಯೊಳೆಮ್ಮಬ್ಬೆಯಿಂದಯ್ಯನಿಂದ
ಕ್ಕನಿನೀ ಪ್ರಾಣಂಗಳಿಂದತ್ಯಧಿಕಮೆನಿಸಿ ಮಚ್ಚಿತ್ತದೊಳ್ ನಿಂದೆ ನೀಂ ನಿ
ನ್ನನದೆಂದಾಂ ಕಂಡೆನಂದಿಂಬಳಿಕೆ ಸಖಿಯರಂ ಪತ್ತುವಿಟ್ಟೀ ಮನಂ ನಿ
ನ್ನನೆ ನೇಡುಂ ನಾಡೆ ನಂಬಿರ್ದಪುದಱಿಯೆನಿದಿನ್ನೆಂತುವಾಂ ಪತ್ರಲೇಖೆ ||೨೨||

ಕನಸಿನೊಳಾವನಾಂ ಮಱೆದು ನಿದ್ರೆಗೆಯ್ಯುತಿರೆ ಬಂದುವಂದು ಕೆ
ಮ್ಮನೆ ಕಿವಿಯೋಲೆಯಲ್ಲಿ ಕುರುಪಂ ಬರೆವಂ ಛಲದಿಂದ ಬೇಡವೇ
ಡೆನೆನಡೆನೋಡುವಂ ಭವನನಂದನದೊಳ್ ಸುಳಿಯುತ್ತಿರಲ್ಕೆ ಪಿಂ
ತನೆ ಮಱೆಯಿಕ್ಕಿ ಬಂದು ಕಡುಗೂರ್ತವೊಲೆನ್ನಯ ಬೆನ್ನನಪ್ಪುವಂ ||೨೮||

ಶ್ವಸಿತಾನೀಕಂಗಳಿಂದಂ ಕದಪಿನ ಬೆಮರಂ ನಾಡೆ ಕೂರ್ತಂದದಿಂದಾ
ರಿಸುವಂ ಕಸ್ತೂರಿಯಿಂದೆನ್ನಯಮೊಲೆಗೆಲದೊಳ್ ಪತ್ರಭಂಗಂಗಳಂ ಚಿ
ತ್ರಿಸುವಂ ಕಂಕೆಲ್ಲಿಯಂ ಲೀಲೆಯಿನೊದೆವೆಡೆಯೊಳ್ ಮಾಣದಾತ್ಮಾಂಗಮಂ ಸಂ
ದಿಸುವಂ ಪೇಳೇವೆನೆಂತಾಂನಿಯಮಿಸಿದಪ್ಪೆನಾ ಧೂರ್ತನಂ ಪತ್ರಲೇಖೆ ||೨೯||

ಮುನಿಯಲ್ಕಾಗದು ಯುವರಾ
ಜನ ದೋಷಮಿದಲ್ತು ಕಮಲಮುಖಿ ಕೇಳಿದು ಕಾ
ಮನ ದೋಷಮೆಂಬುದುಂ ಕಾ
ಮನೆಂಬನಾರೆಂದುಮಱಿಯನಿಂತಿರೆ ನೆಗಳ್ದಂ ||೩೦||

ಇಲ್ಲಿಗೆ ಮನುಜಮನೋಜನೆ
ಬಲ್ಲನುಪಾಯಮನದರ್ಕೆ ನೀನೀಗಳ್ ತ
ಳ್ವಿಲ್ಲದೆ ಬೆಸಸೆನ್ನಂ ಭೂ
ವಲ್ಲಭನುಮನಿಂದೆ ತಂದಪೆಂ ಚಂದ್ರಮುಖೀ ||೩೩||

ಪದದೆನ್ನಂ ಕಾಮನಿತ್ತಂ ತನಗೆನಲದು ಪೊರ್ದಲ್ ನೆವಂ ಕೂರ್ಪೆ ನಾನೆಂ
ಬುದು ವೇಶ್ಯಾಲಾಪವಾಂ ತನ್ನಯ ವಿರಹದೆ ಸತ್ತಪ್ಪೆನೆಂಬುದು ದೃಷ್ಟ
ಕ್ಕದಸತ್ಯಂ ಬರ್ಪೆ ನಾನೆಂಬುದು ಚಪಲತೆ ತಾಂ ಬರ್ಪುದೆಂದಂದು ಸೌಭಾ
ಗ್ಯದ ಗರ್ವಂ ಮೇಲೆ ಬಿಳ್ದಾನೆಳಸಿದಪೆನೆನಲ್ ಬಂಧಕೀಧಾರ್ಷ್ಯ್ಟಮಲ್ತೆ ||೩೫||

ಇನಿಸಂ ಬಂದ ಬಳಲ್ಕೆಯಂ ಬಗೆಯದಾಂ ಪೋದಪ್ಪೆನೆಂಬನ್ನನಾ
ವನೊ ಪೇಳಿಂತಿರೆ ದೇಶಕಾಲಗತಿಯಂ ನಿನ್ನಂತಿರಲ್ ಬಲ್ಲನಾ
ವನೊ ನಿರ್ವ್ಯಾಜದೆ ಭಕ್ತಿಭಾವನೆಯನೆನ್ನೊಳ್ ನಿನ್ನವೊಲ್ ತೋರ್ಪನಾ
ವನೊ ನೀನೆಂದುದೆ ಕಜ್ಜಮಿಂತಿದನೆ ಬೇಗಂ ಮಾಡು ಕೇಯೂರಕಾ ||೭೯||

ಪದಪಿಂದಂ ನೋಡಿ ಬಾಷ್ಪಾಕುಲನಯನದೆ ತಳ್ಕೈಸಿ ರೋಮಾಂಚದಿಂದಂ
ಪುದಿದಿರ್ದುದ್ದಾಮಬಾಹುದ್ವಿತಯದಿನದು ಬೇಱೊಂದು ಸಂದೇಶಮೆಂಬಂ
ದದಿನಾಗಳ್ ತಾನೆ ಕೇಯೂರಕನ ಕಿವಿಯೊಳುಲ್ಲಾಸಿತಾನೇಕ ವರ್ಣಾ
ಸ್ಪದಮಪ್ಪಾತ್ಮೀಯ ಕರ್ಣಾಭರಣಮನೊಲವಿಂದಿಕ್ಕಿದಂ ರಾಜಪುತ್ರಂ ||೮೨||

ಕಂಡಱಿವಂತೆ ಮುನ್ನ ಶುಕನಾಸತನೂಭವನಾಗಳಾ ಲತಾ
ಮಂಡಪಮಂ ಕರಂ ಮನದೆ ಮತ್ತಮೊಱಲ್ದು ನೋಡುತಂ
ಕಂಡರಿಸಿಟ್ಟರೋ ಕಡೆದರೋ ಕರುವಿಟ್ಟರೊ ನಿದ್ದೆ ಬಂದು ಕೆ
ಯ್ಕೊಂಡುದೊ ಪೇಳಿಮೆಂಬಿನೆಗಮಲ್ಲಿಯೆ ನಿಂದನದೊಂದು ಜಾವಮಂ ||೧೧೩||

ತನುವಂ ತಾಳ್ದಿರಲಾಱದೊರ್ಮೊದಲೆ ಮೂರ್ಛಾವೇಗದಿಂದಿಕ್ಕುವ
ಟ್ಟನವೊಲ್ ಝೊಂಪಿಸಿ ಜೋಲ್ದು ನೇಲ್ದು ನೆಲದೊಳ್ ಕುಳ್ಳಿರದನೇನಾನುಮೊಂ
ದನೆ ತನ್ನೊಳ್ ಪರಿಭಾವಿಸುತ್ತಮೆನಿತಾನುಂ ಪೊಳ್ತು ನಿಷ್ಪಂದಗಾ
ತ್ರನುಮುದ್ಬಾಷ್ಪನಿಮಗ್ನನೇತ್ರನುಮೆನಲ್ ತನ್ಮಂತ್ರಿಮುಖ್ಯಾತ್ಮಜಂ ||೧೧೪||

ತರುವೀಧೀವ್ರಾತದೊಳ್ ಕಳ್ತಲೆವಿಡುವ ತಮಾಲಂಗಳೊಳ್ ಮಲ್ಲಿಕಾಮಂ
ದಿರದೊಳ್ ನಾನಾಲತಾಮಂಟಪದೊಳೆಸೆವ ಬೀಳ್ಜೊಂಪದೊಳ್ ದಿವ್ಯ ಪದ್ಮಾ
ಕರತೀರೋಪಾಂತ ಸಿದ್ದಾಯತನದೊಳೆನಸುಂ ಭ್ರಾಂತಿಯಿಂ ಭಾವಿಸುತ್ತ
ಚ್ಚರಿವಟ್ಟೇನಾನುಮಂ ಕೆಟ್ಟುದನಱಸುವವೋಲ್ ಕೂಡೆ ನೋಡುತ್ತ ಮಿರ್ದಂ ||೧೧೭||

ಇನ್ನಾ ಕಾದಂಬರಿಯುಮ
ನೆನ್ನಯ ಕೆಳೆಯನುಮನೆಂತುಮಾಂ ಕಂಡೆನೆನು
ತ್ತುನ್ನೃಪತನೂಜನಾಗಳ್
ತನ್ನೊಳೆ ಬಗೆಯುತ್ತಮೆನಸುಮುತ್ಸಾಹಿಸಿದಂ ||೧೫೩||

ಒಲವಿನೊಳಾಗಳೊಲ್ದೆಱಗೆ ಪೆರ್ಮೊಲೆಗಳ್ ತೊರೆದುರ್ಚೆ ಪಾಯ್ವ ಪಾ
ಲೊಳೆ ಮಿಸಿಸುತ್ತಮೆತ್ತಿ ಮಗನಂ ಬಿಗಿಯಪ್ಪಿ ಪೊದಳ್ದ ಕಣ್ಣನೀ
ರ್ಗಳನೊಳಸೇದಿಸಿ ತಾಂ ಪರಸಿ ಮತ್ತಮಲಂಪಳಿಯಾಗೆ ನೋಡಿ ಬೀ

ಳ್ಕೊಳಿಸಿದಳಾ ವಿಲಾಸವತಿ ಧೀರತೆಯಿಂ ಬಲಿಕೆಯ್ದು ಚಿತ್ತಮಂ ||೧೫೬||

೯•  ಚಂದ್ರಾಪೀಡನ ಪ್ರಾಣವಿಯೋಗ

ಎನಗೆನಸುಂ ಲಜ್ಜಿಸಿ ಪೋ
ಪನ ಬೆನ್ನೊಳ್ ಪೋಗಿ ತೆಗೆದು ತಳ್ಕೈಸುತವಾ
ತನದೊಂದು ಲಜ್ಜೆಯಂ ಕಳೆ
ದನುಭವಿಪೆಂ ಮತ್ಸುಹೃತ್ಸಮಾಗಮಸುಖಮಂ ||೧||

ಆತನುಮಾನುವಾಗಳೆ ಮದಾಗಮನೋದ್ಯತಹರ್ಷೆಯಂ ಮಹಾ
ಶ್ವೇತೆಯನೆಯ್ದೆ ಕಂಡು ಬಳಿಕಂತೆ ತದಾಶ್ರಮದೊಳ್ ತುರಂಗಸಂ
ಘಾತಮುಮಂ ನೃಪಾತ್ಮಜರುಮಂ ನಿಲಿಸಿಟ್ಟೊಲವಿಂದಮಾ ಮಹಾ
ಶ್ವೇತೆಯ ಬೇಗಮೊಯ್ಯೆ ಪುಗದಿರ್ಪೆವೆ ನಚ್ಚಿನ ಹೇಮಕೂಟಮಂ ||೨||

ದೆಸೆಗೆಟ್ಟುದ್ಬಾಷ್ಪದಿಂದಂ ತರಳಿಕೆ ಪಿಡಿದೆಂತಾನುವಾತ್ಮಾಂಗಮಂ ನೆ
ಮ್ಮಿಸೆ ಜೋಲ್ದಂತಾ ಗುಹಾದ್ವಾರದ ಶಿಲೆಯೊಳೆ ಮನ್ಯೂದ್ಗಮಕ್ಷೋಭದಿಂ ಕಂ
ಪಿಸುತಂ ಪ್ರಾವರ್ಷಧಾರಾವಳಿವೊಲೊಗೆವ ಕಣ್ಣೀರ್ಗಳೊಳ್ ತೇಂಕುತಂ ದುಃ
ಖಸಹಸ್ರೋದ್ವೇಜನಾಧೋಮುಖಿಯೆನಿಪ ಮಹಾಶ್ವೇತೆಯಂ ಕಂಡನಾಗಳ್ ||೨೧||

ಪಿರಿದುಂ ಹರರ್ಷಮನೆನ್ನಯ
ಬರವಿಂದಂ ಮಾಡದೀ ಮಹಾಶ್ವೇತೆಯದೊಂ
ದಿರವಿಂತಿದೇನೊ ಕಾದಂ
ಬರಿಗೇನಾನೊಂದನಿಷ್ಟಮಾಗಲೆವೇಳ್ಕುಂ ||೨೨||

ನಿನಗೇವೇಳ್ದಪಳೀಕೆ ಕೇಳಿಸಿದೆನಾಂ ಮದ್ದುಃಖಮಂ ಮುನ್ನೆ ನಿ
ನ್ನನದುಃಖಶ್ರವಣಾರ್ಹನಂ ಸಕಲದುಃಖಾವಾಸೆಯೆಂ ಜೀವಿತ
ಕ್ಕೆ ನಿಬದ್ಧಾಸೆಯನತ್ರಪಾತ್ಮಿಕೆಯನೀಗಳ್ ಮತ್ತೆಯುಂ ಕೇಳಿಸ
ಲ್ಕನುಗೆಯ್ದಪ್ಪೆನಿದೊಂದು ದುಃಶ್ರವಮುಮಂ ರಾಜಾಧಿರಾಜಾತ್ಮಜಾ ||೨೩||

ನಸುದೋಱುತ್ತಿರ್ದ ನುಣ್ಮೀಸೆಗಳುಮತಿಮೃದುಸ್ನಿಗ್ಧಕೇಶಂಗಳುಂ ಕ
ಣ್ಗೆಸೆಯಲ್ ಮೂಲೋಕಮಂ ಯವ್ವನಚತುರತರಾಪಾಂಗದಿಂದೊಂದು ಸೀರ್ಪು
ಲ್ಗೆಸೆವನ್ನಂ ಮಾಡುತಂಗಪ್ರಭೆಯೊಳಖಿಲ ಕಾಂತಾರಮಂ ಕೂಡೆ ತೇಂ
ಡಿಸುತಂ ವಿಪ್ರೋತ್ತಮಂ ನಿನ್ನಯ ಹರಯದವಂ ಬಂದನೊರ್ವಂ ಕುಮಾರಂ ||೨೪||

ವಚನ : ಅಂತು ಬಂದಂತಃರಣದೆನುನ್ಮುಕ್ತನಾದಂತೆಯುಂ ಸಕಲೇಂದ್ರಿಯಂಗಳಿಂ ವಿಕಲನಾದಂತೆಯುಂ
ಉತ್ತರಳಮುಖನುಂ ಉತ್ಫುಲ್ಲಿತಾಕ್ಷನುಮೆನಿಸಿ ಬನದೊಳಲ್ಲಿಗಲ್ಲಿಗೆ ಬದ್ಧವಲಕ್ಷ್ಯದೃಷ್ಟಿಯಿನೇನಾನುಂ ಕೆಟ್ಟದನರಸುವನಂತೆನ್ನ ನೋಡುತ್ತಮೆಯ್ದೆವಂದು ಕಂಡಱಿವನಂತೆಯುಮೇನಾನುಮಂ
ಪ್ರಾರ್ಥಿಪನಂತೆಯುಂ ಬೆಸಗೊಳ್ಳದೆಯುಂ ನಿಜಾವಸ್ಥೆಯಂ ಶಿವೇದಿಸುವಂತೆಯುಂ
ಲಜ್ಜಿಸುವಂತೆಯುಮುಮ್ಮಳಿಸುವಂತೆಯುಮಾಗಿ

ಸುರಿತರೆ ಬಾಷ್ಪಪೂರಮೆಮೆಯಿಕ್ಕದೆ ಕೆನ್ನೆಯನೆಯ್ದೆ ನೀಳ್ದು ಬಿ
ತ್ತರಿಪ ಬಳಲ್ಪೆಳರ್ವೆರಸು ಸುತ್ತುವ ಮುತ್ತುವಪಪಾಂಗಮಾಲೆಯಿಂ
ಬರೆತೆಗೆದಪ್ಪನಪ್ಪಿದಪನೆನ್ನೊಳಪೊಕ್ಕಪನೆಯ್ದೆ ಪೀರ್ದಪಂ
ಪಿರಿದುವೆನಲ್ಕೆ ತದ್ವಿಜಕುಮಾರಖಕನೆನ್ನನೊಱಲ್ದು ನೋಡಿದಂ ||೨೫||

ವಚನ : ಅಂತು ನೀಡುಂ ನೋಡುತ್ತಮೆನ್ನನಿಂತೆಂದಂ


ಭುವನದೊಳೆಲ್ಲಂ ತಂತ
ಮ್ಮವಯೋರೂಪಕ್ಕೆ ತಕ್ಕುದಂ ನೆಗಳ್ದೊಡೆ ಮೆ
ಮೆಚ್ಚುವರೆಳವೆಗಮಸದೃಶಮೆನಿ
ಸುವನುಷ್ಠಾನದೊಳಿದೇಕೆ ನಿನ್ನಯ ಯತ್ನಂ ||೨೬||

ಇರಿಸಲ್ಕೆ ತಕ್ಕುದೊಲವಿಂ
ದುರದೊಳೆನಿಪ್ಪೊಂದು ಮಾಲತೀಮಾಲಿಕೆಯೊಳ್
ದೊರೆಯೆನಿಪ ನಿನ್ನ ತನುವಂ
ಕೊರಗಿಪುದೆ ಲತಾಂಗಿ ಘೋರತರ ತಪದಿಂದಂ ||೨೭||

ಸುಮನೋಬಾಣಜಯಪ್ರದಾಯಕತಮಂ ನಿನ್ನೀ ತ್ರಿಲೋಕಾಭಿರಾ
ಮಮೆನಿಪ್ಪಾಕೃತಿ ದೇವದುರ್ಲಭತರಂ ನಿನ್ನೀ ಜಗದ್ವಂದನೀ
ಯಮೆನಿಪ್ಪದ್ವಯವಪ್ರತರ್ಕ್ಯಮಹಿಮಂ ನಿನ್ನೀ ಮಹೋದಾರಮ
ಪ್ರಮಿತೈಶ್ವರ್ಯಮೆನಲ್ಕೆ ಮತ್ತೆ ತಪದಿಂ ತನ್ವಂಗಿ ನೀವೇಳ್ಪುದೇಂ||೨೮||

ಸರಸ ಮೃಣಾಳಿಕೆಯಂ ಮೃದು
ತರ ತುಹಿನಂ ಕೊರಗಿಪಂತೆ ಶಾಂತಿರಸಕ್ಕಾ
ಗರಮೆನಿಪ್ಪಾ ತಪಮೆ ನಿನ್ನಂ
ಕೊರಗಿಸುತಿರೆ ತರುಣಿ ಪಿರಿದುವಾಂ ಕೊಲಗಿದಪೆಂ ||೨೯||

ಸುಂದರಿ ಜೀವಲೋಕದ ಸುಖಕ್ಕೆ ಪರಾಙ್ಮುಖಿಯರ್ಕಳಾಗಿ ನಿ
ನ್ನೊಂದಿಗರೀ ತಪಕ್ಕೆಳಸಿದಂದು ಮನೋಜನ ಬಿಲ್ಬಲ್ಮೆ ಪೂ
ರ್ಣೇಂದುವಿನುಜ್ಜಳಕ್ಕೆ ಮಧುಮಾಸದ ಗೋಸನೆ ತುಂಬಿಯಿಂಚರಂ
ಬಂದೆಳಮಾವಿನೇಳ್ಗೆ ಬಗೆದಂದು ನಿರರ್ಥಕಮಾಗದಿರ್ಕುಮೇ ||೩೦||

ನೀನಾರ್ಗೆ ಬಂದೆಯೆತ್ತಣಿ
ನೇನಂ ಬೆಸಗೊಳ್ವೆಯೆನ್ನನೆಂದಾತನನಂ
ತೇನುಮನಾಂ ಬೆಸಗೊಳ್ಳದೆ
ಮೌನದಿನೊರ್ದೆಸೆಗೆ ತೊಲಗಿದೆಂ ನೃಪತಿಲಕಾ ||೩೧||


ಅಲರ್ದಚ್ಛೋದನವೋತ್ಪಲಪ್ರಸರ ದಿವ್ಯಾಮೋದದೊಳ್ ಸಂದು ನಿ
ರ್ಮಲ ಚಂದ್ರದ್ಯುತಿವರ್ಷಹರ್ಷಿತ ಚಕೋರಾನಂದವಾರ್ಬಿಂದು ಸಂ
ಕುಲದೊಳ್ ಮಿಂದು ಚಲಲ್ಲತಾವಳಿಗೆ ಲಾಸ್ಯಾರಂಭಮಂ ಯಂದು ತ
ಣ್ಣೆಲರೂದುತ್ತಿರಲಾನದರ್ಕೆಳಸಿ ಪಟ್ಟಿರ್ದೆಂ ಶಿಲಾಪಟ್ಟದೊಳ್ ||೩೪||

ಎಲೆ ಕೇಡಾಯ್ತೆನಗೋವೊ ಮತ್ತಮಿವನೆನ್ನಂ ಕೆಯ್ಯೊಳಂ ಬಂದು ಮು
ಟ್ಟಲೊಡಂ ಪತ್ತುವಿಡಲ್ಕೆವೇಳ್ಕಸುವಂ ಮೆಯ್ಯೊಡಿಡಿದೆಂ ದುಃಖಸಂ
ಕುಲಕೋರಂತಿರೆ ಪುಂಡರೀಕನನೆ ಮತ್ತಂ ಕಾಣ್ಬೆನಾನೆಂದೆ ನಿ
ಷ್ಫಲಮಾಯ್ತಕ್ಕಟ ಮಂದಭಾಗ್ಯೆಗೆನಗಿಂತೀ ಪ್ರಾಣಸಂಧಾರಣಂ ||೩೮||

ನುಡಿವನ್ನನೆನ್ನನೀ ಪರಿ
ಸಿಡಿಲೇತಕೆ ಕೆಡೆದುದಿಲ್ಲ ನಿನ್ನಯ ಸಿರದೊಳ್
ಉಡುಗಿದುದಿಲ್ಲಮುಸಿರ್ ನೂ
ರ್ಮಡಿಯೆನಲೀ ಜಿಹ್ವೆ ಬಿಱಿದುದಿಲ್ಲ ದುರಾತ್ಮ ||೪೧||

ಈ ತೆಱದಿಂದಂ ಗಳಹುವ
ಪಾತಕಿ ನೀಂ ನೀತಿಮಾರ್ಗವಱಿಯದ ತಿರ್ಯ
ಗ್ಣಾತಿಯೊಳೆ ಜನ್ಮವೆತ್ತದ
ದೇತರ್ಕೆ ಮನುಷ್ಯಜಾತಿಯೊಳ್ ಜನಿಯಿಸಿದೈ  ||೪೩||

ವಚನ : ಮತ್ತಮೆಲೆ ಮತ್ತ ನೀನಿಂತು ನಗೆಗೀಡಾದ ನುಡಿಗಳಂ ನುಡಿಯುತ್ತಮೆನಗೆ
ಮುಳಿಸನಾದೊಡಂ ಪುಟ್ಟಿಸಲಿಲ್ಲಮದುಕಾರಣದಿಂ ನಿನ್ನ ನುಡಿಗನುರೂಪಮಪ್ಪ ಜಾತಿಯೊಳ್
ಪುಟ್ಟಿದೊಡೆಮ್ಮ್ನರನೆಂದುಂ ಕಾಮಿಸೆಯೆಂದು ನುಡಿದೊಡನಾಂ ಚಂದ್ರಾಭಿಮುಖಿಯಾಗಿ
ಕೆಯ್ಗಳಂ ಮುಗಿದು ಮಹಾಭಾಗ ಸಕಲಭುವನಚೂಡಾಮಣಿಯಪ್ಪ ರೋಹಿಣೀರಮಣ
ಪುಂಡರೀಕನನಾಂ ನೋಡಿದಂದಿನಿಂ ಮತ್ತೊರ್ವ ಪುರುಷನಂ ಮನದೊಳಾದೊಡಂ
ಭಾವಿಸದಿರ್ದುದು ನನ್ನಿಯಪ್ಪೊಡೀಯಳೀಕಾಮಿಯಾನುಸಿರ್ದಂತೆ ಗಿಳಿಯಾಗಿ ಪುಟ್ಟುಗೆಂದು
ಶಪಿಸಲೊಡನೆ   

ಸಹಿಸಲಸಹ್ಯಮಸಪ್ಪ ಮದನಜ್ವರವೇಗದೆ ಮೇಣ್ ನಿಜಾಘ ದು
ರ್ವಹಪರಿಪಾಕದಿಂ ಬಗೆಯಲಲ್ಲದೊಡೆನ್ನಯ ತೀವ್ರಶಾಪವಾ
ಙ್ಮಹಿಮೆಯಿನಾತನಂದು ಕಡಿದಿಕ್ಕಿದ ಪೆರ್ಮರನಂತೆವೋಲದೇ
ನಹಹ ನಿರೂಪಿಪೆಂ ಕೆಡೆದು ಪೊಂದಿದನಾಯಿಳೆಯಲ್ಲಚೇತನಂ ||೪೪||

ವಚನ : ಅದಂ ಕಂಡತಿದುಃಖಿತರಪ್ಪ ಪರಿಜನಂಗಳ ಮುಖದಿಂದೀತಂ ಭವತ್ಪ್ರಿಯವಯಸ್ಯನೆಂದಱಿದಾಂ
ಕಡುದುಗುಡಂದಳೆದಿದೇನೆಂದು ಕಂಬನಿಗಳಂ ಬಿಡುತ್ತೆ ಲಜ್ಜಾವನಿತಮುಖಿಯಾಗಿರ್ದಳಂ ಕುರಿತು
ಚಂದ್ರಾಪೀಡಂ

ಪಿರಿದುಂ ನೀನೊಲವಿಂದೆ ಯತ್ನಿಸಿದೊಡಂ ಕಾದಂಬರೀದೇವಿಯಾ
ಚರಣೋಪಾಸನ ಸೌಖ್ಯಮಾದೊಡೆನಗಾದತ್ತಿಲ್ಲಮೀ ಪುಟ್ಟಿನೊಳ್
ದೊರೆಕೊಳ್ವಂತದು ತಾನೊಡರ್ಚು ಮಱುವುಟ್ಟಲ್ಲಾದೊಡಂ ನೀನೆಯೆಂ
ದೊರೆವನ್ನಂ ಬಿಱಿದತ್ತು ಭೋಂಕನೆರ್ದೆ ತದ್ರಾಜೇಂದ್ರಚಂದ್ರಾಂಕನಾ ||೪೫||

ವಚನ : ಅನಂತರಂ ತರಳಿಕೆ ಮಹಾಶ್ವೇತೆಯಂ ಬಿಟ್ಟು ಭೋರನೆ ಚಂದ್ರಾಪೀಡಶರೀರಮಂ
ಸಾರ್ದು ಹೇ ದೇವ ಚಂದ್ರಾಪೀಡ ಕಾದಂಬರಿಯನುಳಿದೆತ್ತಪೋಪೆಯೆಂದು ಬಾಯಳಿದು
ಪಳವಿಸುತ್ತಮಿರ್ದಳ್ ಮಹಾಶ್ವೇತೆಯುಂ ಚಂದ್ರಪೀಡಮುಖನಿಹಿತ ನಿಶ್ಫಲಸಸ್ತಬ್ಧದೃಷ್ಟಿಯಾಗಿ
ಮರಣಸಮಸಾದಿತೆಯಾದಂತೆ ಮೂರ್ಛೆಗೆ ಸಂದಳಿತ್ತಲನಂತರಂ ತತ್ಸಮಾಸನ್ನ ಪರಿಜನಂ
ಪ್ರಲಾಪಂಗಿಯ್ಯುತ್ತವನಿತಲದೊಳ್ ಕೆಡೆದು ವಿಗತಚೇತನನಾದಕುಮಾರನಂ ಕಂಡು ಕೆಟ್ಟೆವಿದೇ
ನೆಂದು ರಾಜಪುತ್ತರುಮುದ್ಭ್ರಾಂತರಾಗಿ ಚಂದ್ರಾಪೀಡನನುಗಮನಮೇ ಕರಣೀಯವೆಂದು
ನಿಶ್ಚೈಸಿರ್ದರನ್ನೆಗಮಿತ್ತ ಕಾದಂಬರಿಯ ಪರಿಜನಂ

ತಮತಮಗೊಲವಿಂ ಶ್ವೇತಾ
ಶ್ರಮಕ್ಕೆ ತಾಂ ಬಂದನಧಿಕಹರ್ಷದೆ ನೃಪಚಂ
ದ್ರಮನೆಂದು ಭೋಂಕನತಿಸಂ
ಭ್ರಮದಿ ಗಂಧರ್ವಕನ್ಯೆಗಱಿಪಿದರಾಗಳ್ ||೪೬||

ಅಱಿಯೈ ಚಂದ್ರನೆನಾಂ ಕಪಿಂಜಲಕ ನೀನೀ ಪುಂಡರೀಕಾರ್ಥಮೀ
ತೆಱದಿಂ ಪಿಂದೆಯಿದೇಕೆ ಬಂದೆ ಗಡ ಲೋಕಾನುಗ್ರಹಂಗೆಯ್ವ ದೂ
ಸಱಿನಾಂ ಬಂದುದಯಂಗೆಯುತ್ತಮಿರಲೀಕಾಮಾತುರಂ ಸಾವುತಂ
ಬಱಿದಿಂತೆನ್ನನದೋಷಿಯಂ ಕುರಿತು ಕೋಪೋದ್ರೇಕದಿಂ ನೋಡಿದಂ ||೬೭||

ಎಲೆ ಚಂದ್ರಹತಕ ಮದನನ
ಬಲದಿಂದಂ ಮೇಲೆವರಿದು ಕೊಂದಿಂತೆನ್ನಂ
ನಿಲಲಱಿಯೆಯಿರ್ಮೆ ನೀಂ ಮ
ರ್ತ್ಯಲೋಕದೊಳ್ ಪುಟ್ಟೆನುತ್ತೆ ಶಾಪಂಗೊಟ್ಟಂ ||೬೮||

ಇವನೆನಗೆ ನಿರಪರಾಧಂ
ಗವಿಚಾರದೆ ಶಾಪಮೀಯೆ ನೀನುಂ ಸುಖದುಃ
ಖವನೆನ್ನೊಡನನುಭವಿಸೆಂ
ದಿವಂಗೆ ಮುನಿದಾನುಮಂತೆ ಶಾಪಂಗೊಟ್ಟೆಂ ||೬೯||

ಎಲೆ ಮಶ್ಶಿಕ್ಷಿತ ನಿನ್ನ ಕಣ್ಣೊಡೆದುವೇ ವಿಸ್ತೀರ್ಣಮಪ್ಪೀ ನಭ
ಸ್ಥಲದೊಳ್ ಪೋಗುತಮೆನ್ನನಿಂತುರದೆ ನೀಂ ನಿನ್ನೊಂದು ವಿದ್ಯಾತಪೋ
ಬಲದಿಂ ದಾಂಟಿದೆ ವಾಹದಂತಿರದಱಿಂ ವಾಹತ್ವಮಂ ತಾಳ್ದಿ ಭೂ
ತಲದೊಳ್ ಪೋ ನೆಲಸೆಂದು ಕೊಟ್ಟನೆನಗಾ ವೈಮಾನಿಕಂ ಶಾಪಮಂ ||೭೦||

ಜನಿಯಿಸಿದಪರೆನ್ನಯ ಕೆಳೆ
ಯನುಮಾ ಚಂದ್ರಮನುಮಿನ್ನಿಳಾತಳದೊಳವರ್
ಜನಿಯಿಸಿದಲ್ಲಿಯೆ ಜನಿಯಿಸು
ವಿನಿತಂ ನೀಂ ದಯೆಯಿನೆನಗೆ ಮಾಡಲೆವೇಳ್ಕುಂ ||೭೧||

ಅಂತಾ ವೈಮಾನಿಕಂ ವಚ
ನಾಂತದೊಳಾ ತುರಗರೂಪಮಂ ತಳೆದಾಕಾ
ಶಾಂತರದಿಂದಿಳಿದು ಸಮು
ದ್ರಾಂತದೊಳ್ ಬಿಳ್ದೇನೆನ್ನಂ ಕರಾಮಾಂತಲದೀಂ||೭೨||

ಮುನ್ನಮದೊರ್ಮೆ ಪಾತಕಿಯೆನಂತಿರೆ ಕೊಂದವಳೆಂ ಭವಾಂತರೋ
ತ್ಪನ್ನನುಮಾಗಿ ನೀಂ ಮದನುರಾಗದಿನೆಳ್ತರೆ ಮತ್ತೆ ಕೊಂದೆ ನಾಂ
ನಿನ್ನನೆ ನಿನ್ನನಿಂತು ಮಗುಳ್ದುಂ ಮಗಳ್ದುಂ ಕೊಲವೇಳ್ಪುದೆಂದು ಪೇ
ಳೆನ್ನನಿದಿಂತು ಪುಟ್ಟಿಸಿದನೇ ವಿಧಿ ರಕ್ಕಸಿಯಂ ಮನಃಪ್ರಿಯಾ ||೭೩||

ಇರಿಸಲ್ವೇಡಿರ್ದರಂ ಪಿಂದಿರಿಸಿ ಸಕಲರಾಜನ್ಯಕಂ ಸುತ್ತುವಂದೆ
ಳ್ತರಲಶ್ವಾನೀಕವಾದಂ ಪಥಮನಿರದೆ ಪೀರ್ತಂದುವೋ ಪೇಳಿಮೆಂಬಂ
ತಿರಲೆಳ್ತಂದೆಲ್ಲಿಯುಂ ನಿಲ್ಲದೆ ಕೆಲವುದಿವಸಕ್ಕೆಯ್ದಿದಂ ಪದ್ಮಪತ್ರೋ
ತ್ಕರಕಾಂತಿಪ್ರಚ್ಛದಾಚ್ಛಾದಿತ ಜಲಮೆನಿಪಚ್ಚೋದಮಂ ಸಾರ್ವಭೌಮಂ ||೯೯||

ಬಸುಱೊಳ್ ಬಂದಂ ನಮ್ಮೊಂ
ದು ಸುಕೃತದಿಂ ದೇವತಾತ್ಮನೀ ಮಗನಂ ಮಾ
ನಿಸನೆಂದು ದೇವಿ ನೀಂ ಭಾ
ವಿಸಿ ಶೋಕಮನೇನನಪ್ಪುಕೆಯ್ಯದಿರೀಗಳ್ ||೧೦೮||

೧೦• ಚಂದ್ರಾಪೀಡ ಕಾದಂಬರಿಯರ ಪುನಸ್ಸಮಾಗಮ

ಎಂದಾ ಹಾರೀತನಾಮಪ್ರಮುಖಮುನಿಸಮೂಹಕ್ಕೆ ಜಾಬಾಲಿಗಳ್ ಪೇ
ಳ್ವಂದುಂ ಮಂದಸ್ಮಿತಾಸ್ಯರ್ ಕಥೆಯ ರಸದೊಳೋಲಾಡುತಂ ಪೊಳ್ತೆನಿತ್ತಾ
ಯ್ತೆಂದು ಮಚ್ಚಿತ್ತದೊಳ್ ಭಾವಿಸದೆ ಮಱೆದುಪೇಳುತ್ತಮಿಂತಿರ್ಪಮೇ ಪೇ
ಳೆಂದೆನ್ನಂ ನೋಡಿ ಕೇಳ್ ಶೂದ್ರಕನೃಪ ಕೆಲದೊಳ್ ಕೇಳ್ವವರ್ಗೆಂದರಾಗಳ್ ||೧||

ಆವೊಂ ಶ್ರೀಶ್ವೇತಕೇತುವ್ರತಿಗೆ ಸುತನೆನಲ್ ಸಂದು ಕಾಮಿತ್ವದಿಂದಂ
ದೇವತ್ವಂಗೆಟ್ಟು ಮರ್ತ್ಯೊದ್ಭವನೆನೆ ಶುಕನಾಸಂಗೆ ಪುಟ್ಟಿರ್ದನೋ ತಾ
ಳಲ ವೈಶಂಪಾಯನಂ ತಂದೆಯ ಮುನಿಸಿನ ಬೈಗುಳ್ಗಳಿಂದಂ ಮಹಾಶ್ವೇ
ಪೇ ವಾಕ್ಸಾಮರ್ಥ್ಯದಿಂದಂ ಗಿಳಿಯ ಬಸುಱೊಳೀಯಂದದಿಂ ಬಂದನಲ್ತೆ ||೨||

ಅಂತು ಮುನಿ ಪೇಳಲೆಚ್ಚೆ
ತ್ತಂತೆವೊಲಾನಾಗೆ ಬಾಲ್ಯದೊಳವೆನ್ನಯ ಜ
ನ್ಮಾಂತರದೊಳಾದ ವಿದ್ಯಾ
ಸಂತತಿ ಜಿಹ್ವಾಗ್ರದಲಿ ನೆಲಸಿದುದಾಗಳ್ ||೩||

ಮುನ್ನಿನ ಭವಮಂ ಬಂಧುಗ
ಳಂ ನೆಱೆ ತಿಳಿವಱಿತಮಾಯ್ತು ಭವದೀಯ ಪದಾ
ಸನ್ನತೆಯಿಂದಾದೊಡಮೇಂ
ಬಿನ್ನವಿಸಿದಪೆಂ ಮುನೀಂದ್ರ ನಾಣ್ಚದೆ ಮತ್ತಂ ||೪||

ಕೇಳೆಲೆ ನೀಂ ಕಪಿಂಜಲ ಭುವತ್ಸುಹೃದಂ ವಿಧಿಯೋಗದಿಂದೆ ಜಾ
ಬಾಲಿಮುನೀಂದ್ರನಾಶ್ರಮವನಾ ಶುಕದೇಹದೆ ಸೇರ್ದನಿಂದು ಮೇಣ್
ಮೇಳಿಸಿತೈ ಸಮಂತು ಜನನಾಂತರ ಸಂಸ್ಮರಣಂ ದಲಾತನೊಳ್  
ತಾಳುತನೂನಹರ್ಷಮನೆ ಪೋಗವನಂ ನಡೆನೋಡಲೊಪ್ಪದಿಂ ||೨೮||

ಭರದಿಂದಂ ಸಾರ್ದು ಪುಣ್ಯಾಶ್ರಮವನಿರದೆ ಮತ್ಸ್ವಸ್ತಿವಾದಂಗಳಂ ಬಿ
ತ್ತರಿಸುತ್ತಂ ದೀರ್ಘಕಾಲಂ ಬದುಕಿಪ ಬಗೆಯಿಂದೀಗಳಾಂ ಮಾಡುವಾಯು
ಷ್ಕರಯಜ್ಞಂ ಪೂರ್ಣಮಪ್ಪನ್ನೆವರಮೊಸೆದು ಜಾಬಾಲಿಸಾಮೀಪ್ಯದೊಳ್ಸಾ
ದರಮಿರ್ ಬೇಱೊಂದನಾಲೋಚಿಸದಿರೆನುತೆ ಪೇಱ್ ನೀನವಂಗೆಂದರಾಗಳ್ ||೨೯||

ಜಾತಿಸ್ಮರನಾದೆಂ ಮುನಿ
ಜಾತೆಯೆನಾಂ ಮುನ್ನ ಶಾಪದಿಂದಂ ತಿರ್ಯ
ಗ್ಜಾತಿಗೆ ಬಿಳ್ದೆಂ ಬಿಡ್ ದುಃ
ಖಾತುರನೆಂ ನಿನಗೆ ಪುಣ್ಯಮಕ್ಕುಮಗಣ್ಯಂ ||೪೦||

ಚನ : ಎಂದಡಿಗಡಿಗೆ ಕಾಲಮೇಲೆ ಬೀಳ್ವುದುಮವಂ ಬೆಟ್ಟವೆಟ್ಟಿನಿಂತೆಂದಂ

ಮುನಿಯೋ ಯಕ್ಷನೊ ಗಂಧ
ರ್ವನೊ ರಾಕ್ಷಸನೋ ಪಿಶಾಚನೋ ನೀನಿನ್ನಾ
ವನುಮೆಂದಱಿಯೆ ಮತ್ಸ್ವಾ
ಮಿನಿಗೊಯ್ದೊಪ್ಪಿಸುವೆನೀಗಳಿನಿತನೆ ಬಲ್ಲೆಂ ||೪೧||

ನರಕದ ನೆಲೆ ಪೇಸಿಕೆಗಳ
ಕರು ಮಸಣದ ಪುಟ್ಟು ಪಾಪದೆಱೆ ಪಾತಕದಾ
ಗರಮದು ನೆನೆವರ್ಗೆ ಭಯಂ
ಕರವತಿಪಾಪಕರಮಾದುದುದ್ವೇಗಕರಂ ||೪೨||

ಎಯ್ದದೆಡೆಯೆಲ್ಲಮಂ ನೀ
ನೆಯ್ದಿದೆ ಮತ್ತಿರದೆ ಮಗನೆ ಮಾಣದೆ ಪೇಳಿ
ನ್ನೆಯ್ದಿದಪೆಯೆಲ್ಲಿಗಳ್ಕಱಿ
ನುಯ್ದಪೆನಾಂ ಕಾಮಪರತೆಯಿಂದಂ ಕೆಟ್ಟೈ ||೪೪||

ನಯದಿಂದಂ ತಿಳಿವುಟ್ಟಿರಲ್ಕೆನಗೆ ಪೇಳಲ್ ಚಂಡಾಲಜಾ
ತಿಯೊಳೀ ವಾಕ್ಯಮುಮೀ ವಿವೇಕಮುಮದೆಂತಾದತ್ತೊ ಪೇಳೆಂದು ವಿ
ಸ್ಮಯಮುತ್ತೆಂದುದಗೆಯ್ವೆನೆಂಬ ಬಗೆಯೊಳ್ ಬಾಳ್ವಾಸೆಯಿಂ ಕ್ಪತ್ಪಿಪಾ
ಸೆಯುಮಂ ತಾಳ್ದಿರಲಾಱದಾಱಿಸಿದೆನಾಂ ತತ್ಪಾನಪಾನಂಗಳಿಂ ||೪೮||

ಮಗನಿಂತೀ ಶುಕನೀ ದುರಾತ್ಮಕನ ತಾಯೆಂ ಶ್ರೀಯೆನಾಂ ದಿವ್ಯಚ
ಕ್ಷುಗಳಿಂದೀತನ ತಂದೆ ಪೋಗಱಿದಿವಂ ತಿರ್ಯಕ್ತ್ವದೊಳ್ ನಿಲ್ವನೆ
ನ್ನೆಗಮಾಯುಷ್ಕರಮಾದ ಯಜ್ಞಮನಿದಂ ಪೂರೈಸದಾನಿರ್ಪೆನ
ನ್ನೆಗಮೀಗಳ್ ಸೆರೆಯಿಕ್ಕಿಯಿಂ ನಿಲಿಪುದೆಂದೆನ್ನಲ್ಲಿಗಿಂತಟ್ಟಿದಂ ||೫೩||

ನೀಂ ಪುಂಡರೀಕನೈ ವೈ
ಶಂಪಾಯನ ಪೂರ್ವಜನ್ಮಸಂಬಂಧಿಯೆ ಕಂ
ಡೆಂ ಪುಣ್ಯದಿಂದಮಿರ್ವರು
ಮಿಂ ಪಡೆದಪೆಮೊಡನೆ ಶಾಪಮೋಕ್ಷದ ಫಲಮಂ ||೫೫||

ಸ್ವಾಗತ || ಎನ್ನನಿತ್ತು ಸುಖಮಂ ಸಖಂಗೆ ಮಾ
ಳ್ಪೆಂ ನಿರಾಕುಳಮೆನುತ್ತವಾಗಳಿ
ತ್ತಂ ನೃಪಂ ಪದಪಿನಿಂ ಮಹಾತ್ಮನಾಂ
ಕಿಂ ನದೇಯಮೆನೆ ತನ್ನ ಜೀವಮಂ ||೫೯||

ಗಿಳಿಯಿತ್ತ ಮಹಾಶ್ವೇತಾ
ವಳೋಕನೋತ್ಕಂಠೆಯಿಂದೆ ಜೀವಂ ಬಿಟ್ಟ
ತ್ತೆಳಸುತಿರಲಮೃತಕರಮಂ
ಡಳಮಧ್ಯದ ಪುಂಡರೀಕದೇಹಮದಾಗಳ್ ||೬೦||

ಉದಯಂ ರಾಜೇಂದ್ರಚಂದ್ರಾತ್ಮಕನೆನಿಸಿದ ಚಂದ್ರಂಗೆ  ಸಾರ್ತಂದುದಿನ್ನ
ಭ್ಯುದಯಂ ಲೋಕತ್ರಯಕ್ಕೆಂಬುದನಱಿಪುವೆನಾಂ ರಾಗದಿಂದೀಗಳೆಂಬ
ದದೆ ರಕ್ತಶೋಕಚೂತದ್ರುಮಸಮುದಿತ ಬಾಲಪ್ರವಾಳಧ್ವಜಂ ಬಂ  
ದುದು ಚಂಚಚ್ಚಂಚರೀಕಪ್ರಕರ ಶುಕಕುಲಾಲಾಪಕಾಂತಂ ವಸಂತಂ ||೬೧||

ನಿನ್ನನೆ ಪೂಜಿಸಿ ಪಡೆದರ್
ಕನ್ನೆಯರಭಿಮತಮನಾದವಾರಾಧಿಸಲಾ
ನಿನ್ನೆವರಂ ರತಿಪತಿ ನೀ
ನೆನ್ನ ಮನೋರಥಮನೇಕೆ ಪೇಳ್ ತಡೆಯಿಸಿದೈ ||೬೬||

ಅಳಿಪಿನೊದವಿಂ ನೀಡುಂ ಪೀರ್ವಂದದಿಂ ನಡೆನೋಡಿ ಸಂ
ಗಳಿಸೆ ನಿಡುಸುಯ್ ರೋಮಾಂಚಂ ಪೊಣ್ಮೆ ಘರ್ಮಜಲಂ ಪೊದ
ಳ್ದಿಳಿಯೆ ನಡುಗುತ್ತಕ್ಕಂ ಕಂಡಪ್ಪಳೆಂದು ಮೃಗಾಕ್ಷಿ ಪೆ
ಪ್ಪಳಿಸಿ ದೆಸೆಯಂ ನೋಡುತ್ತಂ ಪೊರ್ದಿದಳ್ ನೃಪಚಂದ್ರನಂ ||೬೮||

ಉಳಿಯಲೆನಸುಂ ಲಜ್ಜಾಭಾರಂ ಸಮಂಚಿತ ಸಾಧ್ವಸಂ
ಕಳಿಯಲೆಡೆವೆತ್ತಾಗಳ್ ಸಾರಾರುಮಿಲ್ಲದಿರಲ್ಕೆ ಕಂ
ಡೆಳಸಿ ನಿಲಿಸಲ್ ತನ್ನಂ ತಾನಾಱದೊಯ್ಯನೆ ಕಣ್ಮಲರ್
ಮಲರೆ ನೃಪನಂ ಭೋಂಕಲ್ ಮೇಲ್ವಾಯ್ದು ತಳ್ತಿರದಪ್ಪಿದಳ್ ||೬೯||

ವಚನ : ಆಗಳ್ ತದಾಲಿಂಗನಾಮೃತವರ್ಷದಿಂ ಜೀವಂ ಬಂದು

ಪ್ರಸರಚ್ಚಂದ್ರಪ್ರಭಾಲಿಂಗಿತ ಕುಮುದಮಯಂ ತಾನಿದೆಂಬಂತಿರುತ್ಸಾ
ಹಿಸೆ ಮೆಲ್ಸುಯ್ಗುತ್ತಿನಿಂದೊಂದಿದ ಹೃದಯಮುಷಸ್ಸಂಗಪದ್ಮಂಬೊಲುನ್ಮೀ
ಳಿಸೆ ಕಂಗಳ್ ಕೂಡೆ ಚೈತನ್ಯದೊಳಳವಡೆ ಸರ್ವಾಂಗಮೆಚ್ಚೆತ್ತನಾಗಳ್
ಪಸೆಯೊಳ್ ಮುನ್ನಿದ್ರೆಗೆಯ್ದೆಚ್ಚಱುವರಸನವೋಲಂದು ರಾಜೇಂದ್ರಚಂದ್ರಂ ||೭೦||

ವಚನ : ಅಂತು ಮೆಯ್ಮುರಿದೆಚ್ಚೆತ್ತು ತನ್ನಂ ತಳ್ತಪ್ಪಿರ್ದ ಗಂಧರ್ವರಾಜನಂದನೆಯಂ

ಪಡೆದೆಂ ಮತ್ಪುಣ್ಯದಿಂದೀ ಪದಮನಿನಿತುಕಾಲಕ್ಕೆನುತ್ತುಂ ನರೇಂದ್ರಂ
ನಿಡುದೋಳಿಂದಪ್ಪೆ ಭೋಂಕಲ್ ಭಯದೆ ನಡುಗುತಂ ಕಣ್ಗಳಂ ಮುಚ್ಚಿ ತಳ್ತಿ
ರ್ದೊಡಲಂ ಪೊಕ್ಕಪ್ಪಳೆಂಬಂದದೆ ಬೆಡಗಿನೊಳಪ್ಷುತ್ತಮಾಗಳ್ ಬಿಡಲ್ಕಂ
ಪಿಡಿಯಲ್ಕಂ ತಾನದೇನೆಂದಱಿಯದಬಲೆ ನಾನಾ ರಸಾಕ್ರಾಂತೆಯಾದಳ್ ||೭೧||

ಕುಳಿರುತ್ತಿರ್ಪಮೃತಾಂಶುಮಂಡಲದೊಳಿರ್ದಾದಂ ಸುಧಾಮೋದಮಂ
ತಳೆದಂಗಂ ಬೆಳರ್ಗಂಪನಾಳ್ದಿರೆ ಮಹಾಶ್ವೇತಾಂಗನಾಮೌಕ್ತಿಕಾ
ವಳಿ ವಕ್ಷಸ್ಥಲದೊಳ್ ತೆಱಂಬೊಳೆಯಲಾಗಳ್ ಪುಂಡರೀಕಂ ಕಪಿಂ
ಜಳಕಂ ಕೈಗುಡಲಿಷ್ಟಮಿತ್ರನೆ ಬರುತ್ತಿರ್ದಂ ಮರುನ್ಮಾರ್ಗದಿಂ ||೭೪||

ಮನದೊಂದಾಹ್ಲಾದದಿಂದಂ ಗಗನತಳದಿನೆಳ್ತಂದು ರಾಜೇಂದ್ರಚಂದ್ರಾಂ
ಕನ ಪಾದಾಂಬೋಜಯುಗ್ಮಕ್ಕೆಱಗೆ ತೆಗೆದು ತಳ್ಕೈಸುತಂ ಪುಂಡರೀಕಾ
ಖ್ಯನಿಜಪ್ರಾಗ್ಜನ್ಮಸಂಬಂಧದಿನೊಗೆದ ಸುಹೃತ್ಸ್ನೇಹದಿಂ ಮತ್ತೆಯುಂ ಪಿಂ
ತನೆ ಬಂದೈ ನೀನೆನುತ್ತಳ್ಕಱೊಳೆ ಕೆಳೆಯನೊಳ್ ಮಾತನಾಡುತ್ತಮಿರ್ದಂ ||೭೫||

ಪೊಡೆವಡೆ ತಾಯ್ ಬಸುಱೊಳಡಗಿಡ
ಲೊಡರಿಸಿದಪಳಿರದೆ ಮಗುಳ್ದುಮೆನೆ ಮೊಲೆವಾಲ್ಗಳ್
ಬಿಡದೆಚ್ಚುಪಾಯೆ ಪದಪಿಂ
ದಡಿಗಡಿಗಾತ್ಮಜನನಾದವಪ್ಪಿದಳಾಗಳ್ ||೭೮||

ಎಱೆಯಂ ತ್ರೈಲೋಕ್ಯರಾಜ್ಯಕ್ಕೆನಿಸಿದ ವಿಭುವಿಂಗೇನನಿತ್ತೀಗಳೊಲ್ದಾ
ನೆಱೆವೆಂ ಕಾದಂಬರೀದೇವಿಗೆ ಬಳಿವಳಿ ಗಂಧರ್ವರಾಜ್ಯಂ ದಲೆಂದ
ಳ್ಕಱಿನಿಂ ಕೈಕೊಳ್ವುದೆಂದಾತ್ಮಜೆಯನೊಲವಿನಿಂದಿತ್ತು ಸಾಕ್ಷ್ಯಕ್ಕೆ ಕೈನೀ
ರೆಱೆದಂ ರಾಜೇಂದ್ರಚಂದ್ರಂಗೊದವಿದ ಪದಪಿಂದಂ ಗಂಧರ್ವರಾಜಂ ||೮೪||

ಪಿರಿದುಂ ವಿಭೂತಿಯಿಂ ಚಿ
ತ್ರರಥಾನುಜನೆನಿಪ ಹಂಸನುಂ ನಿಜರಾಜ್ಯಂ
ಬೆರಸು ಮಹಾಶ್ವೇತೆಯನಾ
ದರದಿಂದಂ ಪುಂಡರೀಕದೇವಂಗಿತ್ಯಂ ||೮೫||

ಪ್ರಿಯದಿಂ ರಾಜೇಂದ್ರಚಂದ್ರಂ ಪ್ರಿಯತಮೆಯೆನೆ ಸಂದಿರ್ದ ಕಾದಂಬರೀಕಾಂ
ತೆಯೊಳಾ ಕಾದಂಬರೀಕಾಂತೆಯುಮೊಸೆದು ಮಹಾಶ್ವೇತೆಯೊಳ್ ತನ್ಮಹಾಶ್ವೇ
ತೆಯನೊಲ್ದಾ ಪುಂಡರೀಕಾಹ್ವಯನಮಲತರಪ್ರೇಮದಿಂ ಪುಂಡರೀಕಾ
ಹ್ವಯನಂರಾಜೇಂದ್ರಚಂದ್ರಾಂಕನುಮಗಲದೆ ಕೂಡಿರ್ದರುತ್ಸಾಹದಿಂದಂ ||೯೪||

ಕ್ಷಿತಿಯೊಳ್ ಸೌವರ್ಣಕಾಂತಿಪ್ರಸರಮಸದಳಂ ಪರ್ವೆ ಸಂದಿರ್ದುದಂತಾ
ಕೃತಿ ಮುನ್ನಂ ಬಾಣವಾಣೀಪ್ರಿಯನ ವಚನಲಿಂ ಮತ್ತೆ ಕರ್ಣಾಟಭಾಷಾ
ಚತುರತ್ವಂ ಪೊರ್ದಿ ಕಾದಂಬರಿ ಪಸರಿಸಿ ರಾಜೇಂದ್ರಚಂದ್ರಾಂಕನೊಳ್ ಸಂ
ಗತಿವೆತ್ತಾದಂ ತ್ರಿಲೋಕೀ ಸಹಚರಿಯೆನೆ ತಾಂ ಸಂದುದಾಚಂದ್ರತಾರಂ ||೯೫||

ನೆನಕೆ• ಹ• ವೆ• ನಾರಾಣಶಾಸ್ತ್ರೀ
ಪ್ರಕಾಶಕರು • ಕನ್ನಡ ಸಾಹಿತ್ಯ ಪರಿಷತ್ತು
ಬೆಂಗಳೂರು - ೫೬೦೦೧೮ 

2 ಕಾಮೆಂಟ್‌ಗಳು:

  1. ಮಾನ್ಯರೇ, ದೊಡ್ಡಕೆಲಸ ಮಾಡಿದ್ದೀರಿ. ಧನ್ಯವಾದಗಳು! ಆದರೆ ಒಂದೇ ವ್ಯಥೆ! ಈಗಿನ ವಿದ್ಯಾವಂತರೂ ಕನ್ನಡದ ಪದವಿ ಪಡೆದವರೂ ಹಳೆಗನ್ನಡ ಓದುವುದನ್ನೇ ಬಿಟ್ಟಿದ್ದಾರೆ. ಒಬ್ಬಿಬ್ಬರು ವಿದ್ಯಾವಂತ ಹುಡುಗರು ಜೈಮಿನಿ ಭಅರತದ ಒಂದೆರಡು ಪದ್ಯಗಳನ್ನು ಓದಿ ನೋಡಿ, ಇದು ಕನ್ನಡವೇ ಎಂದು ಕೇಳಿದರು! ಅದಕ್ಕೆ ನಾನು ಜೈಮಿನಿ ಭಾರತಕ್ಕೆ ಪದವಿಭಾಗ ಹಾಗೂ ಅರ್ಥವನ್ನು ವಿಕಿಸೋರ್ಸಿನಲ್ಲಿ ಹಾಕುತ್ತಿದ್ದೇನೆ. ಸರ್ಕಾರ ಹಾಗೂ ಶಿಕ್ಷಣ ಇಲಾಖೆ, ಪಠ್ಯಪುಸ್ತಕ ರಚಿಸುವವರು ಶಿಕ್ಷಣದಲ್ಲಿ ಈಗ ಹಳಗನ್ನಡದ ಪದ್ಯಗಳನ್ನು ಸೇರಿಸುವುದಿಲ್ಲ; ಸೇರಿಸಿದರೂ ಅದು ಎರಡು -ಮೂರು ಪದ್ಯಕ್ಕೆ ಸೀಮಿತ. ಅದನ್ನು ಪಾಠ ಮಾಡುವವರೂ ಇಲ್ಲ. ಅದಕ್ಕಾಗಿ ನೀವು ಸಾಧ್ಯವಾದರೆ ಕೆಲವು ಕಾವ್ಯಕ್ಕೆ ಪದವಿಭಾಗ, ಅನ್ವಯ, ಅರ್ಥಬರೆದು ಹಾಕಿದರೆ ಕನ್ನಡ ಅಭಿಮಾನಿ ಯುವಕರಿಗೆ ಅನುಕೂಲವಾಗಬಹುದು. ವಂದನೆಗಳು, ನಿಮ್ಮವ, ಬಿ.ಎಸ್.ಚಂದ್ರಶೇಖರ ಸಾಗರ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಮ್ಮ ಅನಿಸಿಕೆಗೆ ಧನ್ಯವಾದಗಳು.ನಿಮ್ಮ ಅಭಿಲಾಷೆಗಳಿಗೆ ಸ್ಪಂದಿಸಿ ಮುಂದುವರಿಯುತ್ತೇನೆ.
      ಆದಷ್ಟು ಬೇಗ ಕಾರ್ಯ ಪ್ರವೃತ್ತನಾಗುವೆ

      ಅಳಿಸಿ