ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಫೆಬ್ರವರಿ 10, 2018

ರಾಘವಾಂಕ ವಿರಚಿತ ಸಿದ್ಧರಾಮ ಚಾರಿತ್ರ.

ರಾಘವಾಂಕ ವಿರಚಿತ   
ಸಿದ್ಧರಾಮ ಚಾರಿತ್ರ.

ಸೂ|| ಭೂವಲಯದೊಳಗುಳ್ಳ ಸರ್ವ ಜೀವಾಳಿಗಳ
ಪಾವನಂ ಮಾಡಲೆಂದನುಗೆಯ್ದ ಶಿವಸಿದ್ಧ
ಜಾವಳನೆ ದೇವಕುಲಕರ್ತ ಮರ್ತ್ಯದೊಳುದಿಸಿದನು ಸುರರುಘೇಯೆನುತಿರೆ

ಶ್ರೀಮಹಾಗುರು ಬಲೋದಗ್ರ ವಿಗ್ರಹನಚಳ
ಸೋಮಧಾಮಾವೃತ ಜಟಾಪಟಲ ವೇಷನಾ
ಶಾಮಯ ಭಯಾತೀತ ನೂತನಾಂಗಂ ಮಂಗಳೋದಯ ದಯಾಭರಿತನು
ಪ್ರೇಮದಿಂದೆಮಗೆ ಭಕ್ತಿಯನೀಗೆ ಶಿವಸಿದ್ಧ
ರಾಮನಭಿರಾಮನುದ್ದಾಮ ಜಿತಕಾಮನತಿ
ಭೀಮ ಸುಖಧಾಮ ಮಾಯಾ ಮಥನಸಂಗ್ರಾಮ ಸೋಮಧರ ಸಲಹುಗೆಮ್ಮ ||೧||

ಸಲ್ಲಲಿತವಹ ಪುಣ್ಯಕಾವ್ಯ ಕಥನದೊಳು ಮು
ನ್ನಿಲ್ಲದುದ ನುಡಿದುಳ್ಳುದಂ ಪೂಳ್ದು ಹುಲ್ಲು ಹೊಲ
ನೆಲ್ಲವಂ ಪೊಗಳಿ ಸುಧೆಯೊಳಗೆ ನಂಜಿಡುವಂತೆ ಮೇಳವಿಸಿ ಪೇಳೆ ನಾನು
ಬಲ್ಲಂತೆ ಮರ್ತ್ಯಾನುಸಾರದಿಂ ಶಿವಸಿದ್ಧ
ವಲ್ಲಭನ ಮಹಿಮೆಯಂ ಸರ್ವರಱಿಯಲು ನಟ್ಟ
ಕಲ್ಲೆನಿಸದಿಳೆಯೊಳಗೆ ಸುಳಿವ ಶಾಸನವೆನಿಸಿ ಪೇಳ್ವೆನೀ ಸತ್ಕೃತಿಯನು ||೫||

ಅರರೆ ತನುವೆರಸಿ ಮನವೆರಸಿ ನಂಟರುವೆರಸಿ
ಪುರವೆರಸಿ ನಾಡುಗಳ್ವೆರಸಿ ರಾಜ್ಯಂವೆರಸಿ
ಹರನನೆಯ್ದಿದ ಪುರಾತನರ ಕಥೆಗಳು ಪುರಾಣಗಳೊಳಗಲ್ಲದಿಲ್ಲ
ಧರೆಯಱಿಯಲಿಂತು ಸೊನ್ನಲಿಗೆಯಲಿ ನಡೆಯುತಿಹ
ಸಿರಿಯಾಗಿ ಸಾಮರ್ಥ್ಯರೀತಿ ಪೇಳುವೆ ಜಗದ
ಗುರು ಸಿದ್ಧರಾಮನಾಥಂ ಮನುಜನಲ್ಲ ಕಾರುಣ್ಯರುದ್ರನೆಂಬ ಬಗೆಯ ||೭||

ಧರೆಗೆ ಸೊನ್ನಲಿಗೆಪುರ ಕೈಲಾಸವಾ ಜಗದ
ಗುರು ಸಿದ್ಧರಾಮನೀಶ್ವರನಲ್ಲಿ ಮೆಱೆವ ಗು
ಡ್ಡರು ಗಣೇಶ್ವರರಖಿಳ ಜನವಮರರವರ ಸತಿಯರು ರುದ್ರ ಕನ್ಯಕೆಯರು
ನರೆದ ಶಿವಭವನಂಗಳಷ್ಟಷಷ್ಠಿ ಕ್ಷೇತ್ರ
ನಿರತವೆಂದೆತ್ತಿದೆನು ಕಯ್ಯನಿದನಲ್ಲೆಂಬ
ಪರವಾದಿಯಾರವನ ಶಿರದೊಳಿಳುಹುವೆನೆನ್ನ ವಾಮಪದ ಪಾದುಕೆಯನು ||೮||

ಭಸಿತವೇ ಘುಟಿಕೆ ರುದ್ರಾಕ್ಷೆ ಮೂಲಿಕೆ ಸಿದ್ಧ
ರಸ ಮೂಲಮಂತ್ರ ನಿಜಹಸ್ತ ಮೂಷಿಕೆ ನಿಯಾ
ಮಿಸುವಾಜ್ಞೆ ಯಿಂಧನಂ ಜ್ಞಾನಾಗ್ನಿಯಗ್ನಿಯುಪದೇಶ ಕಣ್ಣಿಡುವುದಾಗಿ
ಹೊಸಪಾಪ ಗಂಧ ಕಾಳಿಕೆ ಕೆಡಲು ಭವಿಲೋಹ
ವಿಸರಮಂ ಮಾಡಿ ರುದ್ರಂಗೆ ಮಾಱುವಾ ಸಿದ್ಧನಾ ಸಿದ್ಧರಾಮಯ್ಯನು ||೧೧||

ಕೃತಿವೆಸರು ಶ್ರೀ ಸಿದ್ಧರಾಮ ಚಾರಿತ್ರವೀ
ಕೃತಿಗೊಡೆಯನಾ ಜಗದಗುರು ಸಿದ್ಧರಾಮನೀ
ಕೃತಿಯ ಪಾಲಕರು ಗುರುಭಕ್ತರೆನಿಪೆಕ್ಕವಿಂಡುಗಳಿದಂ ಪೇಳ್ದಾತನು
ಚತುರ ಕವಿರಾಯ ಹಂಪೆಯ ಹರೀಶ್ವರನ ವರ
ಸುತನುಭಯಕವಿ ಕಮಲರವಿ ರಾಘವಾಂಕ ಪಂ
ಡಿತನೆಂದಡೀ ಕಥಾರಸದ ಲಹರಿಯನು ಬಣ್ಣಿಸುವರಾರೀ ಧರೆಯೊಳು ||೧೨||

ಗಾನದೊಳು ವಿದ್ಯದೊಳು ಪ್ರಾಯದೊಳು ಚೆಲುವಿನೊಳು
ಮಾನದೊಳು ಪದವಿಯೊಳು ಭೋಗದೊಳು ಶಿವಭಕ್ತಿ
ಯಾನಂದದೊಳು ಶಿವನ ಕರುಣದೊಳು ಪ್ರತಿಯಿಲ್ಲೆನಿಪ್ಪ ಪುಣ್ಯವನೆ ತಳೆದು
ಜ್ಞಾನಮಯರದ್ರಿಶಿರರೂರ್ಧ್ವಶಿರರೆನಿಸುವಭಿ
ಧಾನದಿಂದೆಸೆವ ಗಂಧರ್ವರಗಜೇಶನಾ
ಸ್ಥಾನಕ್ಕೆ ಬರುತಲವರಿದಿರಾಗಿ ಬಹ ಭೃಂಗಿಯಂ ಕಂಡು ನಸುನಕ್ಕರು ||೨೪||

ಇಂದೆನ್ನನಱಿತಱಿಯದಂತೆ ನಕ್ಕುದರ ದೆಸೆ
ಯಿಂದಜ್ಞಾನಮಯವಪ್ಪ ನರಜನ್ಮದೊಳು
ಬಂದು ಭವಿಸತಿಪತೀಗಳಾಗಿ ನೀವೆಂದು ಮುನಿದಾತ ಶಾಪವನಿತ್ತಡೆ
ಮುಂದುಗೆಟ್ಟಱಿವುಗೆಟ್ಟಳುಕುತ್ತ ಬಳುಕುತ್ತ
ತಂದೆ ಕರುಣಿಸು ವಿಶಾಪವನೆಂದು ಬಾಯ್ವಿಡುವ
ಮಂದಮತಿಗಳಿಗೆ ದೊರಕದ ಲೇಸನೀಯಬೇಕೆಂದು ಮನದೊಳು ನೆನೆದನು ||೨೫||

ಎವೆಯಿಕ್ಕದುಸಿರಿಕ್ಕದುಣ್ಣದಜಿತೇಂದ್ರಿಯ
ತ್ವವ ತಳೆದ ನಿರ್ಮಾಯನೆನಿಸುವ ಶಿವಜ್ಞಾನಿ
ನಿವಗೆ ಮಗನಾಗಿ ಪುಟ್ಟಲು ವಿಶಾಪವೆನಲ್ಕೆ ಗುಣವಿನಿಸನುಳ್ಳಾತನು
ಭುವನದೊಳಗಿಲ್ಲ ಮೇಣುಳ್ಳೊಡಿಂತಪ್ಪಾತ
ನೆವಗೆಂತು ಮಗನಪ್ಪನೆಂದಡದನಂಬಿಕಾ
ಧವನ ಕೇಳೆಂದು ಬಹ ಗಂಧರ್ವರಂ ಕಳುಪಿ ಹೋದನಾ ಭೃಂಗೀಶನು ||೨೬||

ಆರಿಂದ ನರಕವಾದುದು ಭೃಂಗಿಯಿಂದದೇಂ
ಕಾರಣಂ ಕಂಡು ನಕ್ಕುದರಿಂದವೇನೆಂದ
ಘೋರತರ ಭವಿಗಳಹ ನರರಾಗಿಯೆಂದ ಮೇಲೇಂ ವಿಶಾಪಕೊಟ್ಟನು
ಕ್ರೂರನಲ್ಲದ ನಿತ್ಯತೃಪ್ತಂ ಜಿತೇಂದ್ರಿಯಂ
ಶೂರನೇಕೋನಿಷ್ಠನಕ್ಷಯಂ ಮಂಗಳಾ
ಕಾರ ಶಿವಯೋಗಿ ಮಗನೆನಿಸಿ ಪುಟ್ಟಲು ನಿಮಗೆ ನರಜನ್ಮ ಪೋಪುದೆಂದ ||೨೮||

ಇಂತಪ್ಪ ಮಹಿಮನುಂಟೇ ಸುಕೃತಮುಳ್ಳೊಡೆ
ಮ್ಮಂತಪ್ಪ ಪಾಪಿಗಳಿಗೊಗೆವನೇ ತಂದೆಯೆನ
ಲಂತದಂ ಶಿವನ ಕೇಳೆಂದಡಿನ್ನೇಗೆಯ್ವೆವೆಂದು ದೈನ್ಯದಿ ನುಡಿಯಲು
ಕಂತುಮದನಹರನವರಿಗಭಯವಿತ್ತಾತನೆಂ
ದಂತೆಯಾಸಱನಳಿವೆನಖಿಳಮಂ ಹೊರೆವೆ ನಿ
ಮ್ಮಂ ತೆಗೆದು ತಪ್ಪೆನುಮ್ಮಳಿಸಬೇಡಂಜಬೇಡೆಂದು ನಂಬುಗೆಗೊಟ್ಟನು||೨೯||

ಧಾರುಣಿಯೊಳಗೆ ಜನಿಸಿ ಹೋಗಿ ನೀವೆಂದಡಾ
ವುರೊಳಗೆ ಸೊನ್ನಲಿಗೆಯೊಳಗೆಂದಡೆಮಗೆಂದು
ಕಾರುಣ್ಯನಿಧಿ ಜನಿಸುವೆಯೆನೆ ದೇಹವಿಕಾರ ವಿಷಯಂಗಳಱತ ಬಳಿಕ
ಪಾರದ ಸಮೀಪದೊಳಜಾತನೆನಿಸುವ ಬಿರುದು
ತೀರದಂತೊಗೆದು ನಿಮ್ಮಂ ಕಾವೆನೆನಲು ಗಿರಿ  
ಜಾರಮಣನಡಿಗೆಱಗಿ ಬೀಳ್ಕೊಂಡರತುಳ ಸಂಭವ ಕಾರಣೋದ್ಯೋಗರು ||೩೦||

ನಡೆತಂದು ಧರೆಯೊಳು ವಿಶಾಲತೆಯೊಳತಿ ಪೆಸರ್
ವಡೆದಿರ್ಪ ಪುರ ಪಟ್ಟಣ ಗ್ರಾಮ ಸಂಕುಳದ  
ನಡುವೆ ಕಿಱುವಳ್ಳಿಯಾಗಿಯು ಕಣ್ಗೆ ಮೆಱೆದು ಹೆಂಪಿನೊಳಿರ್ಪುದೆಂತೆಂದಡೆ
ಬಡಲೊಳತಿ ತೋರವೆತ್ತಿರ್ಪವಯವಂಗಳೊಳು
ನಡು ಸಣ್ಣನಾಗಿಯುಂ ಕಣ್ಣಿಗೊಸೆವಂತೊಪ್ಪ
ವಿಡಿದಿಹ ಸುವರ್ಣವಲ್ಲಿಯ ಪುರಕ್ಕೆಯ್ತಂದರಾ ಗರುವ ಗಂಧರ್ವರು ||೩೧||

ಧರೆಯ ಕುಡಿಯರ ಕುಲಶಿರೋಮಣಿಗಳೆನಿಪ ಗೌ
ಡರ ಬಸಿಱೊಳೊಗೆದ ಸುಮುಹೂರ್ತದೊಳು ಕಱಲು ಕ
ಲ್ಮರಡಿ ಬೆಳೆಯಲು ತಂದೆ ಬಾಲಂಗೆ ಪೆಸರ ಮೊರಡಿಯ ಮುದ್ದನೆಂದಿಟ್ಟನು
ತರುಣಿಯಂ ತಂದೆ ಸುಗ್ಗವ್ವೆಯೆಂದಿಟ್ಟನಿ
ಬ್ಬರ ಮನೆಯೊಳಿಬ್ಬರತಿ ಗಳಗಳನೆ ನವ ವನಾಂ
ತರದ ಕೊಳನೊಳಗೆ ಮಱಿದುಂಬಿಯುಂ ಸಣ್ಣನನೆಯುಂ ಬೆಳೆವವೋಲ್ ಬೆಳೆದರು||೩೨||

ಹಾವುಗೆಗಳಂ ಕಳೆದು ಮೆಯ್ಯಿಕ್ಕಿ ಪುಳಕಿಸುತೆ
ಭಾವಿಸುತೆ ಕಂಪಿಸುತ್ತಡಿ ನೆಲನ ತಾಗದಂ
ತೋವಿ ನಡೆನಡೆದು ನಿಂದಡಿಗಡಿಗೆ ನೆನೆದು ಹಾರೈಸಿ ಬೆಱಗಾಗುತಿರಲು
ದೇವ ನೀವಿನಿತುಂ ಕೃತಾರ್ಥೆಯನೆಯ್ದುವುದಿ
ದಾವ ಕಾರಣವೀ ಪ್ರದೇಶಂಗಳೊಳು ಮಹಾ
ದೇವ ಗೃಹಮಿಲ್ಲಾರ್ಯರಿಲ್ಲ ತೀರ್ಥಂಗಳಿಲ್ಲೆಂದು ಕೇಳ್ದರು ಶಿಷ್ಯರು ||೩೬||

ಉದಕವಿಲ್ಲದ ತೀರ್ಥ ನೆಲೆ ಶಿಲಾನಾಮವಿ
ಲ್ಲದ ಶಿವಂ ತನುಧರ್ಮ ಕರ್ಮ ಕಲ್ಮಷತೆಯಿ
ಲ್ಲದ ಹಿರಿಯನೆನಿಪ ಶಿವಸಿದ್ಧನೀ ಪುರದೊಳಗೆ ಜನಿಸಿದಪನಾತನಿಂದ
ಇದು ಲಿಂಗ ಬೀಡಾಗಿ ಸಿರಿಗೆ ಕರುವಾಗಿ ಪು
ಣ್ಯದ ಪುಂಜವಾಗಿ ಮುಕ್ತಿಕ್ಷೇತ್ರವಾಗಿ ಧ
ರ್ಮದ ದಾನಿಯಾಗಿ ಧರೆಯಱಿಯ ಮೆಱೆದಪ್ಪುದೀ ಸೊನ್ನಲಿಗೆ ಕೇಳೆಂದನು ||೩೭||

ಎಂದುವುಂ ಸುಖದುಃಖವೆಂದಿಲ್ಲ ಶೀತೋಷ್ಣ
ವೆಂದಿಲ್ಲ ಹಗೆ ಕೆಳೆಗಳೆಂದಿಲ್ಲ ಪುರವಡವಿ
ಯೆಂದಿಲ್ಲ ಹಸಿವು ತಣಿವೆಂದಿಲ್ಲ ಹರುಷಂ ವಿಷಾದಂಗಳೆಂಬುವಿಲ್ಲ
ನಿಂದೆ ನುತಿಯೆಂದಿಲ್ಲ ನಾರಿಪುರುಷವ್ರಾತ
ವೆಂದಿಲ್ಲ ದಿವರಾತ್ರೆಯೆಂದಿಲ್ಲ ಮೃದು ಕಠಿನ
ವೆಂದಿಲ್ಲದಪ್ರತಿಮ ಶಿವಯೋಗಯುತ ನಿಮಗೆ ಪುತ್ರನಾದಪನೆಂದನು ||೪೦||

ಎನ್ನ ಹರೆಯಂ ಬಿಟ್ಟು ಜರೆವಟ್ಟು ಹೊಲೆಗೆಟ್ಟು
ಕೆನ್ನೆ ನರೆದೊಟ್ಟು ಶಿಥಿಲತ್ವವಳವಟ್ಟು ನೆಱೆ
ಮುನ್ನಿನಂಗವಿಕಾರಮಂ ಬಿಟ್ಟು ಹೋಗಿ ಧಾತುಗಳು ಪಲ್ಲಟವಾದವು
ಇನ್ನು ನಾನೆತ್ತ ಮಗನಂ ಪಡೆವುದೆತ್ತ ಲಾ
ತಂನೆಱೆದು ಕುಲವಳಿದು ಯೋಗಿಯಹುದೆತ್ತ ಲೋ
ಕಂ ನಗುವ ಮಾತನಾಡಿದಿರಿ ಹುಟ್ಟುವಡೆ ಹುಟ್ಟನೆ ಹಿಂದೆ ಹೇಳೆಂದಳು ||೪೧||

ಪುರುಷರೆಲ್ಲಂ ಕಂಡು ಕೂಡಲೆಳಸುವ ನಿನ್ನ
ಹರೆಯದೊಳು ಹೊಲೆಗೆ ನೆಲೆಯಪ್ಪ ಋತುಕಾಲದೊಳು
ಪರಮದಂಪತಿಗಳ ವಿಕಾರದನುಭವದ ಹೇಯದ ಶುಕ್ಲಶೋಣಿತದೊಳು
ಬೆರಸಿ ಜನಿಯಿಸಲಾರ್ಪನೇ ಮರುಳೆ ಜನಿಸಿಯುಂ
ಹಿರಿಯನೇ ಎಂದಡಿನ್ನೆಂದೊಗೆವನೆಂದಡೊಂ
ದೆರಡು ಮಾಸಕ್ಕೆಂದಡಾತನ ಚರಿತ್ರವೆಂತೆಂದು ಕೇಳ್ದಳು ಗುರುವನು ||೪೨||

ಆನೆತ್ತಲಿನ್ನು ಮಗನಂ ಪಡೆವುದೆತ್ತಲ
ಜ್ಞಾನಿಗೆನಗೆತ್ತ ದಿವ್ಯಜ್ಞಾನಿಯೊಗೆವುದೆ
ತ್ತೀನೆಲದೊಳಂಗನೆಗೆ ಪುರುಷಸಂಗಂ ಸಮನಿಸದೆ ಗರ್ಭವಪ್ಪುದೆತ್ತ
ಏನಸಂಭವಾವಿತವನಾದೊಡಂ ವೃದ್ಧರನು
ಮಾನವಿಲ್ಲದೆ ನುಡಿವಿರೆಂದು ತನ್ನೊಡನಿರ್ದ
ಮಾನಿನಿಗೆ ನುಡಿದುದಾಸೀನದಿಂ ಮಱೆದಳಾರ್ಯನ ಪುಣ್ಯಸೂಚನೆಯನು||೪೪||

ಅತ್ತಲಭವಂ ನೆನೆದು ತನುವಂ ಸುತ್ತಿ
ಮುತ್ತಿ ಸೇವಿಸುತಿರ್ಪ ಸಮತೆಯಂ ಸತ್ವಮಂ
ನಿತ್ಯತ್ವಮಂ ತೃಪ್ತಿಯಂ ದಯೆಯನತುಳ ಭಕ್ತಿಜ್ಞಾನ ವೈರಾಗ್ಯಮಂ
ಎತ್ತಿ ಸದ್ಗುಣಶತವನಾಯ್ದುಕೊಂಡೊಂದು ಕಿಱು
ಪುತ್ತಳಿಯ ಮಾಡಿ ನಿಜಸಾಮರ್ಥ್ಯ ಸಂಕುಳವ
ನಿತ್ತು ತಂದಿರಿಸಿದಂ ಸುಗ್ಗವ್ವೆಯುದರದೊಳು ಸುರರು ಜಯಜೀಯಯೆನಲು ||೪೬||

ಮದನಂಗೆ ಚಿಂತೆ ಮಾಯಗೆ ದುಗುಡವಂತಕಂ
ಗೆದೆಗುದಿಹವಾಶಾದಿ ವಿಷಯ ಷಡುವರ್ಗಕ್ಕೆ
ಹೆದಱು ದುಷ್ಕರ್ಮಕ್ಕೆ ನಡುಕವಜ್ಞಾನಕ್ಕೆ ತಲ್ಲಣಂ ತಲೆದೋಱಲು
ಸುದತಿ ಸುಗ್ಗವ್ವೆಗೊಗೆಯಿತ್ತು ನವಗರ್ಭ ಲೋ
ಕದ ಗರ್ಭದಂತಲ್ಲದನುಪಮಂ ಬೀಜವಿ
ವಿಲ್ಲದೆ ಮೊಳೆತ ಸಸಿಯನಾವಂ ಬಲ್ಲನಾತನೀ ಗರ್ಭದನುವಂ ||೪೭||

ಇಂದೊಗೆವ ತೇಜಿಷ್ಠ ಸಿದ್ಧಚಕ್ರೇಶ್ವರನ
ಮುಂದೆನ್ನ ತೇಜವೇನೆಂದು ಪೋಪಂತೆ ರವಿ
ಬಂದನಸ್ತಾಚಲಕ್ಕುದಯ ಕಾಲಕ್ಕೆ ಸುತ್ತಿದ ಕರಿಯ ತೆರೆಯೊ ಎನಿಸಿ
ಹಿಂದೆ ಕತ್ತಲೆ ಕವಿದು ತೆತ್ತಿಸಿದ ಮೇಲ್ಕಟ್ಟ
ದೆಂದೆನಿಸಿ ತಾರೆ ತಳಿತವು ಹಿಡಿದ ಹೆಜ್ಜೊಡರ
ನಿಂದುಬಿಂಬಂ ಪೋಲ್ತುದಾಹ ಸುಗ್ಗವ್ವೆಯ ಪುಣ್ಯವನೇನ ಬಣ್ಣಿಸುವೆನು ||೫೪||

ಕೆಲಬಲದೊಳಿದ್ದಿರ್ದು ದುಂದುಭಿಗಳೆಸೆಯೆ ಪೂ
ಮಳೆ ಸುರಿಯೆ ಜಯಜಯವುಘೇಯೆನುತ ತಮತಮಗೆ
ಫಳವಿಡಿದು ಮಂಗಳಾರತಿವಿಡಿದು ಸೇಸೆವಿಡಿದಮರ ಕಾಮಿನಿಯರೈದೆ
ಬಳಸಿ ಕಮಳದ ಮಧ್ಯದಿಂ ಹಂಸಶಿಶು ಮೇಘ
ದೊಳಗಿಂದ ತರುಣಶಶಿಯೊಗೆವಂತೆ ಸತಿಯ ನಿ
ರ್ಮಳ ಗರ್ಭದಿಂದುದಯವಾದನಾ ಮಹಮುಕುತಿ ಸತಿಯ ನಚ್ಚಿನ ನಲ್ಲನು ||೫೬||

ಪ್ರೇಮದಿಂ ಸಿದ್ಧರಾಮಯ್ಯನೆಂದಾತಂಗೆ
ನಾಮವಂ ಕಟ್ಟಿಕೊಟ್ಟೆನ್ನ ಗಂಡನ ಸರ್ವ
ಸಾಮರ್ಥ್ಯವಳವಡಲಿ ನಿನಗೆಂದು ಹರಸಿ ಹಾರೈಸಿ ಪಟ್ಟಿರಿಸಿ ತಿರುಗಿ
ಹೈಮವತಿ ಕೈಲಾಸಗಿರಿಗೆ ತೆರಳಿದಳಿತ್ತ
ಲಾ ಮಹೋತ್ಸವದ ಸಂಭ್ರಮದನಂತರ ಪುಣ್ಯ
ಧಾಮೆ ಸುಗ್ಗವ್ವೆ ಕಡುಸುಖದ ಸೊಗಸಿನ ಜೊಮ್ಮು ತಿಳಿದು ಮೈಮುರಿದೆದ್ದಳು||೬೦||

ಒಂಬತ್ತನೆಯ ಸಂಧಿ

ಸೂಚನೆ:- ಸತ್ತ ಪ್ರಾಣಿಗಳು ಜೀವವ ಪಡೆಯುತಿರೆ ಜಗವು
             ಚಿತ್ತಮುಟ್ಟೆಱಗುತ್ತಮಿರಲು ಸಿದ್ಧೇಂದ್ರಂಗೆ
             ಉತ್ತಮ ಜ್ಞಾನಿಯಲ್ಲಮಪ್ರಭು ಬಂದನಾ ಸಿದ್ಧಕುಲ ತಿಲಕನೆಡೆಗೆ

ಎಲ್ಲಿಯಾದರು ಹಾವು ತಿಂದವರ ಬೇಗೆಯೊಳು
ಹುಲ್ಲಾಗಿ ಮುರುಟಿ ಸತ್ತವರ ವ್ಯಾಧಿಯೊಳಳಿದ
ರೆಲ್ಲರಂ ಹೊತ್ತು ಹೊತ್ತೈತಂದು ಮಹಮನೆ ಬಾಗಿಲೊಳು ಬಿಸುಟರೆನಲು
ಹುಲ್ಲು ಕಚ್ಚುವರ್ಗೆ ಕರುಣಂದೋಱಿ ಬಾಯಳಿದು
ಲಲ್ಲೆಗರೆವರಿಗೆ ಗುರು ಕರುಣಿಸುತ ಸುಮ್ಮನಿ
ಪ್ಪಲ್ಲಿ ಬಂದಂ ಲಿಂಗದೊಳಗೆ ನೆಱೆ ನಟ್ಟ ದೃಷ್ಟಿಯ ಧೀರನೆನಲಲ್ಲಮ||೩೭||

ಲಿಂಗದ ಮಹತ್ವ ಮನದಿಂ ತನುವ ವೇಧಿಸಲು
ಮಂಗಳವೆನಿಪ್ಪ ಬೆಗಳವಟ್ಟು ಭೌತಿಕತೆ
ಹಂಗಿಗತನವನುಳಿದು ಸುಖದಿ ಮೆಱೆಯುತ್ತ ಸದ್ಯೋವರವ ನೀಡುವಂತೆ
ರಂಗರೀತಿಯಿನೆಸವ ವಚನದಿಂ ತ್ರೈಜಗದ
ಭಂಗಿಸುತ ಬಸವರಾಜನ ಜಾನಿಸುತ್ತೊಂದು
ಜಂಗಕಾರಮಾಕಾರವಿಡಿದಿಹ ಮಹಾಂತನು ನೋಡಬಂದ ಸೊನ್ನಲಿಗೆ ಪುರಕೆ ||೩೮||

ಕೆಱೆಯ ಕೆಲಸದಲಿ ಸಿದ್ಧೇಂದ್ರನಿರುತಿರೆ ಬಂದು
ದಱಿವಿಲ್ಲವೆನುತ ಕರೆಯೋ ಒಡ್ಡರೆಱೆಯನಂ
ಕೊಱೆಕೂಲಿಗೊಂಡನೋ ನಾಳೆ ಮಿಕ್ಕುದನಗೆಯಬಾರದೇ ಎಂಬನ್ನೆಗಂ
ಅಱಿದನಾಗಳೆ ಜಗಜ್ಜನದ ಅಂತರ್ಯಾಮಿ
ಕುಱುಹುವಿಡಿದುಂ ಜಱೆವುದಂ ಕಂಡು ಅಲ್ಲಮಂ
ಗಱುಹಿಸುವೆ ಬಡವ ಮಡಗಿದ ಕಡವರದ ತೆಱದ ಮಕುಟದ ಮಱೆಯ ಲಿಂಗವ||೩೯||

ಎಂದು ನಸುನಗುತಲ್ಲಮನ ಸಮ್ಮುಖಕೆ ಬಂದು
ನಿಂದುತ್ತಮಾಂಗ ಮಧ್ಯದ ವಸ್ತ್ರಮಂ ಬೆರಳಿ
ನಿಂದಲೋಸರಿಸೆ ಕೆಮ್ಮುಗಿಲ ಸಂಧಿಯೊಳಿಂದು ಕೋಟಿ ಪ್ರಭಾ ಪಟಲಮಂ
ಹಿಂದುಗಳೆದೆಸೆವ ಶೈತ್ಯ ಪ್ರಜ್ವಲಿತ ಕಾಂತಿ
ಯಿಂದೆಸೆವ ನಿರುಪಾಧಿಕ ಜ್ಯೋತಿಲಿಂಗವಿ
ಪ್ಪಂದಮಂ ಬಾಹ್ಯಕ್ರಿಯೆಯೊಳು ಬಳಕೆಯಂ ತೋಱಲಲ್ಲಮಂ ಮತ್ತೆಂದನು ||೪೦||

ಲೋಹ ಸಂಗದಿ ಕಿಚ್ಚು ಬಡಿಹಡೆದುದೆಂಬಂತೆ
ದೇಹಸಂಗದೊಳಾತ್ಮನಾಯಸಂ ಬಡುವಂತೆ
ಬೇಹುದೊಂದಳವಟ್ಟ ಬಳಿಕ ಬಿಡಲಾಗದೆನೆ ನೆರೆಯವರಿಗತ್ತು ಕಣ್ಣು
ಹೋಹಂದ ನಿಮಗೆನಲು ದೊರಕಿದಾತಂ ಸವಿಯ
ಬೇಹುದೇ ಮತ್ತಾರ್ಗೆ ದೊರೆಕೊಳುವುಪಾಯಕ್ಕೆ
ಸೋಹೆಯುಂ ಕೊಡಲಾಗದೇ ಜಗಜ್ಜನದ ಕೃಪೆಗೆಂದನಾ ಸಿದ್ಧೇಂದ್ರನು ||೪೧||

ಜಡರ ನಡುವಿರಲವರ ಸಂಗದಿಂ ಕಾಯಗುಣ
ವಿಡಿದು ಬಳಲುವರೆನಲು ನಸುನಗುತ ಗಾಳಿಯಂ
ಹುಡಿ ಹಿಡಿವುದೇ ರಸನೆ ಹೆಡಸಹುದೆ ಆಲಿಯಂಜನವನೊಳಕೊಂಡಿರ್ಪುದೆ
ಪೊಡವಿಯೊಳು ಶಿವಯೋಗಿ ಸುಳಿದಡಂ ನೀರ ನಡು
ವಿಡಿದ ಕಂಜದ ತೆಱದಿ ಭಕ್ತಿಯುಕ್ತನು ಅಲ್ಲ
ಮೃಡಮೂರ್ತಿಗಗ್ರನೆಂದೆನುತ ಹಾಡಿದನು ಗುರುವಚನವಲ್ಲಮ ಮೆಚ್ಚಲು ||೪೨||

ಲೋಕವೆಲ್ಲಂ ಬದುಕಲೆಂದು ನಾಗಾರ್ಜುನನ
ದೇಕೆ ಹೋಗಾಡಿದಂ ತಲೆಯನಾ ವ್ಯಾಳಿ ಬಳಿ
ಕೇಕಾದ ಬೆಳ್ಳಿ ಕೋರಾಂಟಕಂ ನೀರೊಳೇಕದ್ದನೆನಲಱಿದುದಿಲ್ಲ
ಏಕನದ್ವಿತಿಯನೆನಿಸುವ ಲಿಂಗವಂ ನಂಬ
ದಾ ಕಾರಣಂ ಕೆಟ್ಟರಲ್ಲದವರಳಿವರೇ
ಸಾಕಾರನಿಷ್ಠೆ ಭೂತಂಗಳೊಳಗನುಕಂಪೆ ತಾನೆ ಪರಬೊಮ್ಮವೆನಲು ||೪೩||

ಆಗಲಹುದದಕೇನೊಡಂಬಟ್ಟೆನೀ ಯುಗಂ
ಬಾಗಿ ಬಲಗಾಲಿನುಂಗುಟವನೂಱಲ್ಕಂಜಿ
ಯೋಗಿಗಳು ಕದಳಿಯಂ ಮುನಿಗಳನಿಬರು ಮೇರು ಮಂದರ ಗುಹೋದರವನು
ಭೋಗಿಕುಲ ಸರ್ಪಲೋಕಕ್ಕೆ ದಿವಿಜರು ದಿವಕೆ
ಸಾಗರದ ಕಟ್ಟೆಯಂ ಕಟ್ಟಿ ರಾಕ್ಷಸರು ಭಯ
ರಾಗಿರ್ಪರೆಂಬಾಗ ಮಾನವರ ನಡುವಿರಲು ಬೇಡ ಸಿದ್ಧೇಂದ್ರಯೆನಲು ||೪೪||

ಅದನು ನಾ ಬಲ್ಲೆನೀ ಯುಗದ ಜೀವರ ಪುಣ್ಯ
ದೊದವಿಂಗೆ ಕೈಕೊಂಡ ಮೂರ್ತಿಯಿದು ಹುಸಿಯ ಮಾ
ಡಿದೆನಾದೊಡುಳಿದ ಮಾನವರ ಪರಿಯೈಸಲೇ ಅಲ್ಲಮಪ್ರಭುವೆಯೆನಲು
ಚದುರನಿನ್ನೀ ಸೃಷ್ಟಿಯೇ ಬೇಱೆ ಅದಕೆ ಮೆ
ಚ್ಚಿದೆನು ನೀನಿರ್ದುಮಿಲ್ಲೆಂಬ ಬಯಲಿನ ಭ್ರಮೆಯ
ಬೆದಱ ಬಿಸುಡೆಂದು ಶಿವಸುಖಗೋಷ್ಠಿಯಿಂದ ಕದಳಿಯ ಬಟ್ಟೆಗೊಂಡ ಪ್ರಭುವು ||೪೫||

ಸಂತರನುಭವ ಸ್ವಾನುಭವವಾಗಿ ಮನದೊಳಗೆ
ಚಿಂತಿಸಿದ ಕೆಱೆಯ ಮಧ್ಯದ ಯೋಗಿನಾಥನ ಗೃ
ಹಾಂತರದೊಳೊಂದು ಗೊಪೆಯಂ ಮಾಡಿ ನಡುಗುಂಡಿನೊಳು ಬಾಗಿಲು ಮಾಡಿಸಿ
ಚಿಂತಿಸಲ್ಕರಿದೆನಿಪ ವಜ್ರದ ಕವಾಟದಿಂ
ಭ್ರಾಂತುಜೊಳಿಸುವೆ ಸರ್ವ ಜನವನಿಲ್ಲಿಹೆನೆಂದು
 ಮುಂತಿನಂತೀ ಕ್ಷೇತ್ರದೊಳಗು ಹೊಱಗೆನ್ನದಂತಿರುತಿರ್ದು ತೋರ್ಪೆನೆಂದ ||೪೬||

ಹತ್ತೈದು ದಿವಸಮಂ ಕಳೆದು ಶಿವಕೂಟಣಿಯೆ
ಇತ್ತಬಾಯೆನಲು ಹಾವಿನ ಹಾಳ ಕಲ್ಲಯ್ಯ
ನತ್ಯಂತ ಹರುಷಮಯನಾಗಿ ಪುಳಕಿತಗಾತ್ರ ಮೈಯಿಕ್ಕಿ ಕೆಲಸಾರ್ದಡೆ
ಹತ್ತಿರ್ದವರ್ಗೆ ಬೆಸನವ ಕೊಟ್ಟು ಕಳುಪುತ್ತ
ನಿತ್ಯತೃಪ್ತನು ತಾನೆನಿಪ್ಪ ಗುರುವೇಕಾಂತ
ಚಿತ್ತನಾಗಿರ್ದು ಮತ್ತಾತಂಗೆ ಮನದಾಯತವ ಹೇಳಲನುವಾದನು ||೪೭||

ಎಮ್ಮ ಮನವೊಂದಂ ನಿವಾತ ಗೊಪೆಯಂ ಸವೆಸಿ
ಸುಮ್ಮಾನದಿಂದ ಪದ್ಮಾಸನವ ಚಲಲಿಯಿಸದೆ
ಹಮ್ಮಮತೆಯಂ ಬಿಟ್ಟು ಆತ್ಮನ ವಿಚಾರದಿಂ ಪರಮಕಾಷ್ಠೆಯನ್ನೈದುವ
ನೆಮ್ಮುಗೆಯ ನೆನೆನೆನೆದು ಪರಮ ಶಿವತತ್ವವನು
ಬೊಮ್ಮವೆಳಗಿನ ಬೆಳಗುವೆರಸಿ ಬೆಱಗಾಗದಿ
ಪ್ಪುಮ್ಮಹದಭೀಷ್ಟಮಂ ನಿನಗೆ ಹೇಳಿದೆವೆನಲು ದೇವ ಬಿನ್ನಪವೆಂದನು ||೪೮||

ನೀನಱಿಯೆ ಮಲ್ಲಿಕಾರ್ಜುನನೊಬ್ಬನೇ ನಿತ್ಯ
ಜ್ಞಾನಮಯ ಸರ್ವಜ್ಞ ಷಡ್ಗುಣೈಶ್ವರ್ಯಂಗ
ಳೇನುವುಂ ಕೊಱತೆಯಿಲ್ಲದೆಸೆವ ನೆನದೆನ್ನ ನೀನಿಹಗೆ ಕೀರ್ತಿಸುವರೇ
ಭಾನುವಿನ ಮುಂದುಳಿದ ಬೆಳಗೆಸೆವುದೇ ಶಿವ
ಜ್ಞಾನ ನಿನಗುಂಟೆಂದು ಆಳೋಚಿಸಿದೊಡೆಮ
ಗೇನುವುಂ ತತ್ವನೆಮ್ಮಗೆಯ ಹೇಳದೆ ಸ್ತೌತ್ಯಮಂ ಮಾಡಿ ಕಳೆದೆಯೆನಲು ||೫೦||

ಧಱೆಯರಿಯುತಿರೆ ಕಪಿಲಸಿದ್ಧ ಮಲ್ಲೇಶ್ವರನ
ಹರವರಿಯ ನಾಮವಿದೆ ನಾ ಕೊಟ್ಟೆನೇ ತಂದೆ
ನಿರುಪಾಧಿಕ ಪಾನದ ಹಂಗು ನಿನಗಿಲ್ಲ
ಸುರರಸುರಮಾನವರೊಳಿನ್ನು ಮುನ್ನೆಂದುಂಟೆ
ಪರಬೊಮ್ಮ ನೀ ನಿಮ್ಮ ನೆನೆವಾತನೇ ಬೊಮ್ಮಧಾರಿಯೆನುತಿಂತೆಂದನು ||೫೧||

ಲೋಕದೊಳು ನರರಂ ಕೃತಾರ್ಥತೆಯ ಮಾಡಲೆಂ
ದಾಕಾರವಾದ ಶಿವಸಿದ್ಧಮೂರುತಿ ದೇವ
ಸಾಕಾರ ನಿಷ್ಕಳಾಕಾರ ವೇದಿಸಲು ಸರ್ವರಿಗೆ ಬೊಮ್ಮದ ಪೆರ್ಮೆಯ
ಬೇಕೆಂಬನಿತು ಸೂಱೆಯೇಂ ಸುಲಭವಾಗಿತ್ತೆ
ಏಕಕ್ಕಟಾ ಬಯಲಭ್ರಮೆಯನೆಲ್ಲರಿಗಿಕ್ಕಿ
ಬೇಕಾದಡಿಕ್ಕು ದೇವರು ಸ್ವತಂತ್ರರು ನಮೋ ನಮೋ ಎಂದು ಶುದ್ಧನೆನಲು ||೫೨||

ಕಲ್ಲಯ್ಯನೆಂದ ಬಿನ್ನಹಕೆ ಉಮ್ಮಹದಿ ಕರ
ಪಲ್ಲವದಿ ಮೈದಡವಿ ಬೋಳೈಸಿ ನಿನ್ನಂತೆ
ಬಲ್ಲರಾರೂ ಇಲ್ಲ ಮನವ ವಂಚಿಸಬಹುದೆ ನಮಗಾಗದಿರವೆಂಬುದು
ಹೊಲ್ಲಹುದು ಕಲಿಕಾಲ ನರರು ಸುರರಸುರರಿಂ
ಬಲ್ಲಿದರು ಅದು ಕಾರಣ ಸಮಾಧಿಯ ಧರೆಗೆ
ಪಲ್ಲವಿಸಿ ಮಲ್ಲಿಕಾರ್ಜುನನ ಕ್ಷೇತ್ರದೊಳಿರ್ದು ಇರದಂತೆ ತೋರ್ಪೆನೆನಲು ||೫೩||

ಕೃತಜ್ಞತೆ:-

ಆರ್.ಎಸ್. ರಾಮರಾವ್, ಎಂ. ಎ.
ಪ್ರಕಟಣೆ:-
ಕನ್ನಡ ಸಾಹಿತ್ಯ ಪರಿಷತ್ತು
ಚಾಮರಾಜಪೇಟೆ
ಬೆಂಗಳೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ