ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಫೆಬ್ರವರಿ 17, 2018

ಸಿಂಗಿರಾಜ ಕವಿಕೃತ ಬಸವರಾಜ ಚಾರಿತ್ರ ~ ಸಿಂಗಿರಾಜ ಪುರಾಣ

ಸಿಂಗಿರಾಜ ಕವಿಕೃತ ಬಸವರಾಜ ಚಾರಿತ್ರ(  ಸಿಂಗಿರಾಜ ಪುರಾಣ )

ಸೂಚನೆ:-

ಶ್ರೀ ಷಡ್ಗುಣೈಶ್ವರ್ಯಹಸಂಪನ್ನ ಬಸವ ಗುರು
ವೇಷಮಂ ಧರಿಸಿ ಮರ್ತ್ಯದಿ ಭಕ್ತರುಗಳನುಱೆ
ಪೋಷಿಸಿದ ಕಾರಣವ ಕೃತಿಮಾಳ್ಪೆ ಸದ್ಭಕ್ತಜನರಱಿವ ಮಾಳ್ಕೆಯಿಂದ

ಶ್ರೀಮದಮರೇಂದ್ರಾರ್ಚಿತಂ ಪರಾತ್ಪರಮನಿ
ಸ್ಸೀಮನದ್ವಯನತುಳನನಘ ನಿಗಮಾಗಮ
ಸ್ತೋಮ ಸಂಸ್ತುತ್ಯಗೋಚರ ನಿರಾಲಂಬ ನಿಶ್ಚಿಂತ ನಿಜ ನಿತ್ಯಮೂರ್ತಿ
ಪ್ರೇಮದಿಜನಾರ್ದನಜ ಮನುಮುನಿಪ ಯಕ್ಷ ಖಚ
ರಾಮರಮೇಶ್ವರರ್ಗಖಿಳಸಂಪದವಿತ್ತ
ಸ್ವಾಮಿ ಕಾಶೀಪುರಾಧಿಪ ವಿಶ್ವಪತಿ ಕೂರ್ತು ನೆಲಸೆನ್ನ ಹೃದಯದೊಳಗೆ ||೧||

ಆವುದಂತಸ್ಥವೀ ಕೃತಿಮೂಲವೃತ್ತಾಂತ
ಸಾವಯವೆನಲು ಭರ್ಗನೆರಡನೆಯ ಮೂರ್ತಿ ವೃಷ
ಭಾವತಾರನು ಬಸವನಾಮದಿಂ ಜನಿಸಿ ಸದ್ಭಕ್ತಿಪಥ ತೋಱಿ ಜಗವ
ಪಾವನವ ಮಾಡಿ ಪರವೆರಸಿದ ಮಹಾ ರಹ
ಸ್ಯಾವಳಿಯ ಗಣಕುಲಕೆ ನಂದಿಮಹಕಾಳರು
ದ್ರಾವರೇಣ್ಯನೊಡರ್ಚಿದೋಜೆ ಕಲ್ಪಿತ ರಸಾಯನಸಿದ್ಧಿ  ಶರಣರ್ಗಿದು ||೯||

ನಕ್ರದಿಂದವಹಾರದಿಂ ಕಮಠದಿಂ ಕದುಳಿ
ಚಕ್ರದಿಂ ತಿಮಿ ತಿಮಿಂಗಿಲ ಪ್ರೋಷ್ಠದಿಂ ಕುಳಿರ
ವಕ್ರದಿಂ ಮದ್ಗುರವಮಕರದಿಂ ಕರಿಮಕರದಿಂ ಜಳೂಕದಿ ಪುಷ್ಕರ
ಚಕ್ರನಿಚಯದಿ ಶಾಲಿಹೋತ್ರಕುಲದಿಂ ದ್ವಿರದ
ಚಕ್ರವಾಳದಿ ಕರಭದಿಂ ಜೀವ
ವಿಕ್ರಮದಿ ಮನುಜಸಂಚಯದಿ ಪೊಂಪೊಗೆದು ವಾರಾಶಿ ಕಣ್ಗೆಸೆದಿರ್ದುದು ||೧೩||

ಲೀಲೆಯಿಂದಾ ಭದ್ರಸಿಂಹವಿಷ್ಟರದಿನೊ
ಡ್ಡೋಲಗಂಗೊಟ್ಟು ಕುಳ್ಳಿರ್ದ ಪರಶಕ್ತಿಯ ಸ
ಮೇಳದಿಂ ಸ್ಕಂದ ನಂದೀಶ್ವರ ಗಣಾಧೀಶ ವೀರಭದ್ರ ಪ್ರಮುಖರ
ಸಾಲುಸಂಗಡದ ರುದ್ರಾಳಿಗಳ ತ್ರೈಜಗ
ತ್ಪಾಲಸಂಖ್ಯಾತರ್ಪುರಾತನರ್ಮಾಹೇಶ
ಜಾಲ ಸಾನಂದಾದಿ ಸಾಮೀಪ್ಯರೊಗ್ಗಿನಿಂ ಬಳಸಿರ್ದುದುಮೆವರನನು ||೨೨||

ಲಾಲಿಸುತಲಖಿಳ ಸುಖಸಂಪದುತ್ತರಪರಮ
ಲೀಲೆಯಿಂದಿರೆ ಉಮಾವರನು ದಿವಿಜಾಳಿಗಳ
ಪಾಲಿಸುತಿರಲ್ಕೆಯಂತಾಸಮಯದೊಳು ಬಸವರಾಜ ಭೂವಳಯದಲ್ಲಿ
ಭಾಳಾಕ್ಷನಪರಾವತಾರ ತಾಂ ಸದ್ಗತಿಸ
ಮೇಳಗಳ ಭಕ್ತರ್ಗೆ ತೋಱಿ ಬಂದಾ ಶಿವನ
ಓಲಗದ ಮುಂದೆ ಪುಷ್ಪಕವನಿಳಿದಾಕಥಾವೃತ್ತಾಂತಮಂ ಪೇಳ್ವೆನು ||೩೭||

ಏಕ್ಷನೆಯ ಸಂಧಿ

ಸೂಚನೆ:-
ಈಶನಟ್ಟಿದ ಕಾರಣದ ಲಿಪಿಯ ಚಪ್ಪನ್ನ
ಭಾಷೆಯವರಱಿಯದಿರಲದ ನೋಡುತೋದಿ ಭೂ
ಮೀಶಂಗೆ ತಿಳುಪಿ ಭಂಡಾರದಧ್ಯಕ್ಷಮಂ ಪಡೆದ ಸಂಗನಬಸವನು

ಶ್ರೀಮದಖಿಳಾಗಮಾರ್ಣವ ಮಥನಗೈದು ನಿ
ಸ್ಸೀಮನಂದೀಶ ಪ್ರಮಥರ್ಗಮಲವಚನರಚ
ನಾ ಮಹಾವಸ್ತುವಿಸ್ತೀರ್ಣಮಂ ಸ್ಥಲವಿಟ್ಟನಾ ಮಂತ್ರರಹಸ್ಯಾದಿಯ
ಭೂಮಿಯ ಶಿವಾರ್ಚಕರ್ಗೊರೆದಬಸವೇಶ್ವರನ
ನಾಮಾಮೃತಾಕೃತಿಯ ವಿಶ್ವೇಶನಮಲಪದ
ತಾಮರಸಷಟ್ಚರಣಷಟ್ಪದೀಗಳಿಂ ಸಿಂಗಿರಾಜಾಂಕನೆನಲದೆಂತೊ ||೧||

ಮಕುಟವರ್ಧನರೆಂಟು ಸಾವಿಲಮವರೊಳಡಸಿ
ಸಕಲರಾಜರ ರಾಜಪುತ್ರ ಸಚಿವರ ಮಾನ್ಯ
ಪ್ರಕರ ಬಾಹತ್ತರ ನಿಯೋಗ ದಂಡಾಧೀಶರಖಿಳ ಭಾಷಾಯುಕ್ತರ
ನಿಕರ ಚೌಷಷ್ಠಿ ನಾನಾಕಳಾನ್ವಿತ ಪರೀ
ಕ್ಷಕರ ನಡುವೊಡ್ಡೋಲಗದೊಳೊಪ್ಪಿರಲ್ಕಾಕ
ಸ್ಮಿಕದ ಲಿಖಿತಂಬರದಿ ಭರದಿ ಬಿದ್ದಿತು ನೃಪನ  ಎಸೆವ ಸಿಂಹಾಸನದೊಳು||೪||

ಆ ಲಿಖಿತವಂ ತೆಗೆದು ಚೋದ್ಯವೆಂದೇನುತ ಭೂ
ಲೋಲ ಮೂಗಿಂಗೆ ಕೈಯಿಟ್ಟು ತಾ ನೋಡೆ ಕಣು
ಕೀಲಿಸುವೊಲಾಗತಿ ಭೀತಿಯಿಂ ಸಚಿವರ್ಗಿತ್ತರವರದನು ನೋಡೆ
ಆಲಿ ಸಿಡಿವಂತಹುದು ತುಟಿಮಿಡುಕ ತೆಱಹಿಲ್ಲ
ನಾಲಿಗೆಗೆ ಬಿಯ್ಯಗಂ ಹೂಡಿದಂತಹುದದಱ
ಮೂಲ ಲಿಪಿ ಭಾಷೆ ತಿಳಿಯದೆ ಬಳಲಿ ಬಲ್ಲವರ್ಗಳೆಲ್ಲರಂ ಕರೆಸಿ ತೋಱೆ ||೫||

ಗಣಕರಂ ಹಳಿದು ಲಿಖಿತರ ಮೀಱಿ ಮುಹೂರ್ತಕರ
ಡೊಣದು ವಿದ್ವಾಂಸರಂ ವಿಧಿಗೊಳಿಸುತಾಗಮಿಕ
ರೆಣಿಕೆಗೊಳ್ಳದೆ ಕವಿಗಮಕಿವಾದಿವಾಗ್ಮಿಗಳ ಭ್ರಮೆಗೊಳಿಸಿ ಬಲ್ಲವರನು
ತೃಣಮಾಡಿ ಸಾಮರ್ಥ್ಯ ಸಟೆಯೆನಿಸಿ ತಾರ್ಕಿಕರ
ನಣೆದು ಗಣಿತಜ್ಞರಂ ಗುಣಗೆಡಿಸಿ ಲಿಪಿಯ ಲ
ಕ್ಷಣದಕ್ಷರಂದಿಳಿಯದೆಲ್ಲರಂ ಅಲ್ಲೆನಿಸಿ ಓಡಾಡಿತೇಂ ಪೊಗಳ್ವೆನು ||೬||

ಗಗನಲಿಪಿ ಧೂಮಲಿಪಿ ಜಲಲಿಪಿ ಪಿಶಾಚಲಿಪಿ
ಖಗಲಿಪಿ ಕದಂಬಲಿಪಿ ಕಲ್ಪಲಿಪಿ ಕಾಕಲಿಪಿ
ನಿಗಮಲಿಪಿ ನೀಲಲಿಪಿ ಚಕ್ರಲಿಪಿ ಲೆಖ್ಖಲಿಪಿ ಬಿಂದುಲಿಪಿ ದರ್ಪಣಲಿಪಿ
ಭೃಗುಲಿಪಿ ಪ್ರಬಂಧಲಿಪಿ ಶಸ್ತ್ರಲಿಪಿ ಚಿತ್ರಲಿಪಿ
ವಿಗತಲಿಪಿ ರಣಲಿಪಿ ಶಿಲಾಲಿಪಿ ಶಿರೋರ್ಲಿಪಾ
ದಗಣಿತ ಮಹಾಲಿಪಿಗಳೊಳಗಱಿದು ತಿಳಿಯದಳಲುತಲಿರ್ದು ಬಳಲಿ ಮತ್ತೆ ||೮||

ಹಲವನಾಡೆಹುದಿಲ್ಲ ಕಾರ್ಯ ಹೋ ಹೋ ಸಾಕು
ಗಲಭೆಯೇಕೀ ಲಿಪಿಯನೋದಿ ತಿಳಿಪಿದಡೆಮ್ಮ
ಬಲಕೆ ರಾಜ್ಯಕ್ಕೆ ರಣಭಂಡಾರವೆಲ್ಲವಕ್ಕಧಿಕತ್ವದೊಡೆತನಕ್ಕೆ
ಸಲುಗೆ ವೇಳ್ದಂಡಾಧಿನಾಥಪದಮಂ ಕೊಟ್ಟು
ಸಲಹುವೆನೆನಲ್ಸಾಧ್ಯವಲ್ಲೆಮಗೆ ಸಾಧಿಸೀ
ಫಲವ ಪಡೆಯಲು ಬಲ್ಲಗಲದೀ ಲಿಖಿತ ದೈವಿಕಮಾರ್ಗೆ ತಿಳಿಯದೆನಲು ||೧೦||

ಸಂಗಮದೊಳಿರ್ದು ಕಾರಣದಿಂದೆ ಬಂದು ಕರ
ಣಂಗಳಾಶ್ರಯದಲ್ಲಿ ಬರೆವುತಿಹ ಬಸವೇಶ್ವ
ರಂಗೆ ಭಾವದೊಳಿರ್ದು ಶರಣನಾಕಾರದಿಂದೆಂದುದಶರೀರವಾಕ್ಕು
ಲಿಂಗಜಂಗಮದಿರವ ನೀನಱಿದು ಮಾಳ್ಪ ಲೇ
ಸಿಂಗೆ ತಕ್ಕಧಿಕ ಫಲಬೇಕೆಂದು ಲಿಖಿತಮಂ
ಸಂಗಮೇಶ್ವರಲೀಲೆಯಿಂದಟ್ಟಿದೋಲೆಯಿದು ಸಾಧ್ಯ ನಿನಗೋದೆಂದನೆ||೧೧||

ರೂಢೀಶ ನಿಮ್ಮ ಬರವೇಳ್ದನೆನೆ ಎದ್ದು ನಿಲೆ
ನೋಡಿ ಬೆಱಗಾಯ್ತು ಸಭೆ ಏನಿವನ ಮರುಳುಮಾ
ತಾಡಿಸಿತೊ ಮೇಣ್ಬಲ್ಲನೋ ದೇವತಾಕರುಣವೋ ಕಾಕುವಗರಣವನು
ಆಡುವನೊ ಯೆನುತೆಲ್ಲರಲ್ಲಲ್ಲಿ ನಿಂದು ಮಾ
ತಾಡುತಿರಲಾ ಸಭಾಶಧಿಮಥನಕ್ಕೆ ಶಿವ
ನಾಡಿಸುವ ಮಂದರದೊಲೈತಂದಬಸವರಸ ಬಿಜ್ಜಳನ ಸಮ್ಮುಖಕ್ಕೆ|| ೧೯||

ವಿಷಮದೋಲಿದು ವಿರಾಜಿತ ರಾಜಶೇಖರನ
ವಿಷಯದಿನೊಗೆದುದಿದಱ ವೃತ್ತಾಂತಮಂ ದಿಟಂ
ಬೆಸಗೊಂಬೆಯಾದಡಾದಱಂತಸ್ಥವೆಲ್ಲವಂ ತಿಳಿವೆಯಾದೊಡೆ ಪೇಳ್ವೆನು
ವಸುಧೆಗಚ್ಚರಿ ನಿನನ ಪರಮ ಸಂಪದಲಕ್ಷ್ಮಿ
ಗೆಸಕವಿದು ಬಿಜ್ಜಳನರೇಂದ್ರಯೆನೆ ಹಾರವಿಸಿ
ಬಸವ ನಮ್ಮಯ್ಯ ಪೇಳೆಂತೆನಲ್ಕೋಲೆಯನೊಡರ್ಚೋದಲುಜ್ಜುಗಿಸಿದಂ ||೨೩||

ಸ್ವಸ್ತಿ ಶ್ರೀಮನ್ಮಹಾದೇವಾಧಿದೇವಸಂ
ಸ್ತುತ್ಯ ಸಂಗಮನಾಥನನುಮತಂ ಇದು ಮಿಕ್ಕಿ
ನ ಸ್ಥಿತಿಯದೇಶ ಗಾಧೆಯಕನ್ಯವಾದ ಸಿದ್ಧಾಂತ ಬದ್ಧಾಂತವಲ್ಲ
ವಸ್ತುವಱುವತ್ತಾಱು ಕೋಟಿಯಂ ತೋಱುವ ಸು
ವಸ್ತುವಂಜನ ದೇವಲಿಪಿ ನಿನ್ನ ಭಾಗ್ಯದ ಸ
ಮಸ್ತ ಸಾರೋದ್ಧಾರ ಶಾಸನವಿದೆಂದು ಬಸವೇಶನೋದಿದನೋಲೆಯ ||೨೪||

ಭಾಪುರೆಮ್ಮಯ್ಯ ಕಿಱಿದೆನಬಹುದೆ ಪರುಷಮಂ
ಭಾಪುವೆಮ್ಮಯ್ಯಬಾಯಿತ್ತ ಬಾಯೆಂದಪ್ಪಿ
ಭೂಪ ಸಿಂಹಾಸನದ ಬಲದ ಭಾಗದೊಳಿಂಬುಗೊಟ್ಟು ಕುಳ್ಳಿರಿಸಿಕೊಂಡು
ಕೂಪ ಸಚಿವರೊಳೆಂದ ನೋಡಿರೈ ಈ ಹಿರಿಯ
ಪಾಪಿಗಳೊಳಾರುವಱಿಯದ ಲಿಪಿಯನೋದಿದ ಮ
ಹಾಪರುಷ ಕಿಱಿದೆಯೆನೆನೆರವಿ ತಲೆಗುತ್ತಿ ನೆಲನಂ ಬರೆದುದೇಂ ಪೊಗಳ್ವೆನು ||೨೫||

ಇಟ್ಟಿಮುಱಿಯಿತ್ತು ತಾರ್ಕಿಕರೊಡಲ ಶೂಲದಿಂ
ದಿಟ್ಟಂತೆಯಾ ಪ್ರಭಾಕರರ್ಗಳೆದೆ ಚಾರ್ವಾಕ ನಾನಾಭಾಷೆ ದೇಶಿಕರ
ನೆಟ್ಟನುರಿಗುತ್ತಿದಂತಾರುಹತ ಬೌದ್ಧ ಬರುಬೋಧಕರ ಬದಿಯಲಲಗ
ಹೆಟ್ಟಿದಂತಾಯ್ತು ನಾನಾಭಾಷೆ  ದೇಶಿಕರ
ಕಟ್ಟೂರಿಸಿತು ಸಿದ್ಧರದ್ವೈತ ಸಮಯಿಗಳ
ಮೆಟ್ಟಿ ಸೀಳಿತು ನಿಮ್ಮ ಬಸವಣ್ಣನೋದು ವಾದಿಗಳ ಮುಂಬಲ್ಗಳೆದುದು ||೨೬||

ಬಸಿರ ಕಿಚ್ಚಿಂಗೆ ಬಣಬೆಯಂ ಸುಡುವನಂತೆ ತಾ
ಮಸಿಗರಱಿಯರ್ಭೂಪ ನಿನ್ನ ಮಹದೈಶ್ವರ್ಯ
ವಸುಮತಿಯಱಿಯೆ ಪೆರ್ಚಲೆಂದು ಶಶಿಶೇಖರಾಜ್ಞಾನುಸಾರದಿ ಬಂದುದು
ಕುಶಲತೆಯು ನಿನಗೆ ಸಂತಸದೆಸಕ ಮುಂದೆನ
ಲ್ಬಸವೇಶನೆಡೆಗೆ ಬಂದಸಮಾನ ಲಿಪಿಯ ವಾ
ಚಿಸಿದ ತೆಱತದ್ದ್ರವ್ಯಮಿಹ ತಾಣಮಂ ತೋಱಿ ಪಾಲಿಸೆನಲರ್ತಿಯಿಂದ ||೨೬||

ಚಾಳುಕ್ಯಚಕ್ರೇಶನಿದು ನಿಜದ ನಿಱಿಗೆಯೆಂ
ದೇಳಲೊಡೆ ಮುಂಕೊಂಡು ಮುಂ ಧನವ ಬೈತಿಟ್ಟ
ಮೂಲಿಗನೊಲಮ್ಮಮ್ಮ ನಡೆದು ನಿಕ್ಷೇಪದೆಡೆಗೈದಿ ಹರಶರಣೆನುತ್ತ
ಭಾಳಲೋಚನ ಶರಣು ಭರ್ಗ ಶರಣುಗ್ರ ತ್ರಿ
ಶೂಲಿ ಶರಣಂಬಿಕಾಪತಿ ಶರಣು ದುರಿತರಿಪು
ನೀಲಕಂಠನೆ ಸಂಗಮೇಶ ಶರಣೆಂದು ನಿಧಿಯಂ ಮೆಟ್ಟಿ ನಿಂದಿರ್ದನು ||೩೦||

ಇದೆಯಿಲ್ಲಿ ದಾತಾ ಮಾತಾವಯಸ್ತಂಭವಾ
ಯಿದೆಯಿಲ್ಲಿ ಇಂದಿರಾನಂದಲಾವಣ್ಯರಸ
ಮಿದೆಯಿಲ್ಲಿ ಸಂಕ್ರಂದನ ಲೋಕವಾರೂಢ ಭೋಗ ಭಾಗ್ಯಾಗಂತುಕ
ಇದೆಯಿಲ್ಲಿ ಧನದನಾಪತ್ಕೋಶ ನಿತ್ಯನಿಧಿ
ಇದೆಯಿಲ್ಲಿ ಸಕಲಸಂಪತ್ಕರನಿಧಾನಫಲ
ಇದೆಯಿಲ್ಲಿ ಭೂಪ ತೆಗೆಸೈ ತೆಗೆಸು ಲಿಪಿಯಾರ್ಥದರ್ಥದೋಱುವೆನೆಂದೆನೆ ||೩೧||

ಹಾರೆಕಾಱರು ಸಲಿಕೆಕಾರ ಗುದ್ದಲಿಕಾಱ
ಗೋರಿಕಾಱರ್ಕವಿದು ಬಂದು ತನ್ಮುಖದಿ ಹೊಡೆ
ದಾರಿಯಗೆಯಲ್ಕೊಂದು ತೆಱದ ಭೈರವ ಭೂತ ಭೇತಾಳ ಪ್ರಳಯಗ್ರಹ
ತೋಱಿ ತವದಿರ ಕಣ್ಗೆ ಉರಗ ವ್ಯಾಘ್ರತಿಚಂಡ
ಘೋರ ಭಯ ಹೊಯ್ದು ಬೊಬ್ಬಿಡುತೋಡಲೇನದಱ
ಕಾರ್ಯ ಭಿಕ್ಷವನೊಲ್ಲೆನಾಯ ತೆಗೆಯೆಂಬವೊಲಾಯ್ತಾವುದಿದಕುಪಮಾನವು ||೩೨||

ಎನಲು ಪಂಚಾಕ್ಷರಿಯ ಜಪಿಸುತನಿತಗಲದೊಳು
ಘನತ್ರಿಪುಂಡ್ರಂದಳೆವುತೆನ್ನನೀಕ್ಷಿಸುತಗೆಯಿ
ರೆನುತಭಯವಿತ್ತೆಲ್ಲರಂ ಬರಿಸಿ ತಾ ನಿಂದು ಬಳಸಗೆಸಲೊಡನೆ ಮುಗುಳೆ
ಕನಕ ಕಣ್ದೆಱೆದುದೀತನ ಭಕ್ತಿಯುನ್ನತಿಯ
ದಿನಕರ ದೆಸೆಯ ಬೆಳಗುವಂತೆ ರಾಯನ ಭಾಗ್ಯ
ವನಿತೆಯಂ ಭೂಕಾಂತೆ ಪಡೆದಳೆನೆ ನಿಧಿನಿಧಾನಂ ರೂಪು ನಿಜದೋಱಿತು ||೩೩||

ರಾಜನುತ್ಸಹದಿಂದೆ ರಾಜಿಸುತಖಿಲ ಸಭಾ
ರಾಜರಾಹಾ ವಿರಾಜಿತ ಮೌಳಿದೂಗಿದರು
ಮೂಜಗದೊಳಿಲ್ಲದಚ್ಚರಿಯೆಂದು ವಿದ್ಯಾಧಿರಾಜ ಪ್ರಮುಖರೆಲ್ಲರು
ರಾಜನಂ ರಾಜರಾಜಾಧೀಶನಂ ಬಸವ
ರಾಜನಂಗವ ರಾಜಶೇಖರನೆ ಬಲ್ಲನೆಂ
ದಾ ಜನಂ ಕೈಯೆತ್ತಿ ಪೊಡವಡುತ್ತಿರ್ದರಪ್ರತಿಮನಪ್ರತಿಮನೆಂದು ||೩೪||

ಆವ ಕಡೆ ನೋಳ್ಪಡೊಡ್ಡೈಸೆ ಬಹ ಪುರಜನಗ
ಳಾವಕಡೆ ನೋಳ್ಪೊಡೊಡ್ಡೈಸಿ ಬಹ ನಾರಿಯರ
ದಾವಕಡೆ ನೋಳ್ಪೊಡೊಡ್ಡೈಸಿ ಬಹ ಪರಿವಾರ ಪಲತೆಱದ ವಾದ್ಯಂಗಳ
ಆವಕಡೆ ನೋಳ್ಪೊಡೊಡ್ಡೈಸಿ ಬಹ ತೇಜಿಗಳ
ಆವಕಡೆ ನೋಳ್ಪೊಡೊಡ್ಡೈಸಿ ಬಹ ರಥವಾಜಿ
ಆವಕಡೆ ನೋಳ್ಪೊಡೊಡ್ಡೈಸಿ ಬಹ ಗಜಘಟಾಳಿಗಳೆಲ್ಲಂ ಸಿಂಗರದೊಳು ||೩೯||

ಆ ಪುರದೊಳೆಲ್ಲ ಮೆಱೆಸುತ್ತ ತನ್ನರಮನೆಗೆ
ಭೂಪ ಬಿಜಯಂಗೆಯ್ಸಿಕೊಂಡು ಬಂದುನ್ನತಾ
ಳಾಪ ಪ್ರಧಾನ ಪಟ್ಟಂಗಟ್ಟಿದನು ರಾಷ್ಟ್ರಪುರಕೆ ಭಂಡಾರಕ್ಕೆಲ್ಲ
ಈ ಪುರೋಹಿತರಿಗೀ ಸಚಿವ ಕರಣಕ್ಕೆಲ್ಲ
ನೀ ಪರಮಪಾಲಕಾಗ್ರಣಿಯೆಂದು ವೊರೆದು ಮ
ದ್ರೂಪ ದಂಡಾಧೀಶ ಬಸವರಸರೆಂದೊಸಗೆವಱೆಗಳಂ ಮೊಳಗಿಸಿದನು ||೪೭||

ರಾಜೋಪಚಾರ ರಚನಾಳಾಪಕೇನುಳ್ಳ
ತೇಜಸಂಪದವಿತ್ತು ಬಹಳಪ್ರಯತ್ನದಿ ವಿ
ರಾಜಿಪುನ್ನತದ ಒಂದರಮನೆಯ ಕೊಟ್ಟು ತಾ ಗೃಹಪ್ರವೇಶಂಗೆಯಿಸಲು
ಮೂಜಗಂ ಮೋಹನಂಗೊಳಲು ಮಂಗಳಕುಳಸ
ಮಾಜಗಳ ಕೈಗೊಳಿಸಿ ಕಳುಪೆ ಪುರದೊಳು ಬಸವ
ರಾಜರಾಜಿತನು ಬಂದರಮನೆಯ ಹೊಕ್ಕು ಸಂಗಮನಾಥ ಶರಣೆನುತಲೆ ||೪೮||

ಆಗಣಸಮೇಳದೊಳು ಸುಖಮಿರುತೆ ರಾಜವಿನಿ
ಯೋಗದೊಳು ಮೈದೋಱಿರಲ್ಕೆ ವಿಶ್ವಾಸ ಸ್ವಯ
ಮಾಗಿ ಮನಬೇಱಿಲ್ಲದಿರಬೇಕೆನುತ್ತರಸ ನೆನೆದನೊಂದನುಬಂಧವ
ಆಗ ತಾತನ ಪಿಂತೆ ಸಂಗೀತಚೂಡಾಮ
ಣ್ಯಾಗಳಾ ಬಲ್ಲಹನೊಳೆಮ್ಮ ತಾಯ್ಸಹಗಮನ
ವಾಗಲಾ ದಿನಕೆಮ್ಮ ತಮ್ಮ ಕರ್ನಹದೇವ ಬಾಲನಿಗಿರಲಾತನ ||೫೨||

ಲೀಲೆಯಿಂ ಮೊಲೆಯೂಡಿ ಸಲಹಿದಳು ಮಂತ್ರಿಕುಲ
ಪಾಲ ಸಿದ್ಧರಸದಣ್ಣೌಯಕರರಸಿ ಪುಣ್ಯ
ಶೀಲದೇವತೆ ಪದ್ಮಗಂಧಿಯಾಕೆಯ ಉದರದಲಿ ಬಳಿಕ ಜನಿಸಿದಾಕೆ
ನೀಲಲೋಚನೆ ಯೆಮಗೆ ತಂಗಿಯಾಗಿಹಳಾಕೆಯನು
ನೀಲಲೋಚನ ಬಸವಗೀವೆನೆನುತುತ್ಸಾಹ
ದಾಳಾಪದಲಿ ಪಟ್ಟವಧುವೆಂದು ಮದುವೆಯಂ ಮಾಡಿದಂ ನೃಪ ಬಸವಗೆ||೫೩||

ಕೃತಜ್ಞತೆಗಳು.
ಸಂಪಾದಕ :- ಹೆಚ್. ದಂವೀರಪ್ಪ
ಕನ್ನಡ ಅಧ್ಯಯನ ಸಂಸ್ಥೆ
ಮೈಸೂರು ವಿಶ್ವವಿದ್ಯಾನಿಲಯ

ನಯಸೇನ ವಿರಚಿತ.
ಧರ್ಮಾಮೃತಂ.
ಕಾಲ ಕ್ರಿ. ಶ. ೧೧೧೨
ಇವನು ಧಾರವಾಡ ಜಿಲ್ಲೆಗೆ ಸೇರಿದ ಮುಳುಗುಂದದ ನಿವಾಸಿ. ತನ್ನ ತಂದೆ ತಾಯಿಗಳ ಹೆಸರು ಹೇಳಿಲ್ಲ.
ಆಶ್ರಯದಾತನಾದ ದೊರೆ, ಮಂತ್ರಿ. ಶ್ರೀಮಂತ ಮೊದಲಾದವರ ಹೆಸರುಗಳನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ.
ಬಹುಶಃ ಈತನು ರಾಜಾಶ್ರಯವನ್ನು ಬಯಸಿರಲಾರ. ಈ ಕೃತಿಯನ್ನು ಬರೆಯುವ ಹೊತ್ತಿಗೆ ಜೈನಯತಿಯಾಗಿದ್ದನೆಂಬ
ನಂಬಿಕೆ ಮೂಡಿಸುವಂಥ ಕೆಲವು ಅಂಶಗಳು ಕಾವ್ಯದಲ್ಲಿ ಕಂಡುಬಂದಿವೆ. ಆಶ್ವಾಸಾಂತ್ಯದ ಗದ್ಯಗಳಲ್ಲೆಲ್ಲ
“ ಶ್ರೀಮನ್ನಯಸೇನ ದೇವವಿರಚಿತ’ ವೆಂಬ ಪದಪುಂಜ ಇದೆ. ಇಲ್ಲಿನ ದೇವ ಶಬ್ದ ಯತಿ ಎಂಬ ಅರ್ಥ ಕೊಡುತ್ತದೆ.
ಕಾವ್ಯದ ಆರಂಭದಲ್ಲಿ ವಾಗ್ದೇವಿಯನ್ನುಪ್ರಾರ್ಥಿಸುವಾಗ ಕವಿ “ ವಾಕ್ಸುಂದರಿ ಕೂರ್ತುನಿಲ್ಕೆ ನಯಸೇನ ಮುನೀಂದ್ರ
ಮುಖಾಬ್ಜಷಂಡದೊಳ್” ಎಂದು ಹೇಳಿಕೊಂಡಿದ್ದಾನೆ. “ ತಾನು ಸುವ್ರತಾಂಬೋನಿಧಿ” “ ಸಕಲಜಗತ್ಪಾವನಂ”
ಪರಮ ಶ್ರೀ ಜೈನಧರ್ಮಾಂಬರ ದಿನಕರನ್” ಎಂದು ಹೊಗಳಿಕೊಂಡಿದ್ದಾನೆ.” ತಾನು ಉದ್ಯತ್ತಪೋಮೂರ್ತಿ”
ಯೆಂದು ಹೇಳಿಕೊಂಡಿದ್ದಾನೆ. ಈ ಎಲ್ಲ ಹೇಳಿಕೆಗಳನ್ನು ಗಮನಿಸಿದಾಗ ನಯಸೇನಬುಧನು ಧರ್ಮಾಮೃತದ ರಚನೆಯ ವೇಳೆಗೇ ಯತಿಯಾಗಿದ್ದನೆಂದು ಅರ್ಥವಾಗುತ್ತದೆ.

ಕನ್ನಡಕಾವ್ಯಗಳಲ್ಲಿ ಸಂಸ್ಕೃತದ ಬಳಕೆ ಅತಿಯಾಯಿತೆಂದೂ ಓಚಿತ್ಯವಿಲ್ಲದ, ಅನಗತ್ಯವಾದ, ಅಪ್ರಸಿದ್ಧವಾದ
ಸಂಸ್ಕೃತ ಪದಗಳನ್ನುಉಪಯೋಗಿಸಿ ಓದುಗರ ಕ್ಲೇಶವನ್ನು ಹೆಚ್ಚಿಸುವುದು ವಿವೇಕವಲ್ಲವೆಂದೂ ನಯಸೇನನ ಮತ. ಕನ್ನಡದಲ್ಲಿ ಕಾವ್ಯವನ್ನು ರಚಿಸುವ ಸಂಕಲ್ಪ ಹೂಡಿ ತನ್ನ ಅಭಿಪ್ರಾಯವನ್ನು ಕನ್ನಡ ಮಾತುಗಳಲ್ಲಿ ಸರಿಯಾಗಿ ತಿಳಿಯ ಹೇಳಲು ಸಾಧ್ಯವಾಗದೆ  “ ಮಿಸುಕದ ಸಕ್ಕದಮನಿಕ್ಕುವವನುಂ ಕವಿಯೇ” ಎಂದು ನಯಸೇನ ಗಟ್ಟಿಸಿ ಕೇಳಿದ್ದಾನೆ. ಸಂಸ್ಕೃತವನ್ನು
ಬಳಸುವ ಅಪೇಕ್ಷೆಯಿದ್ದರೆ ಸಂಪೂರ್ಣವಾಗಿ ಆ ಭಾಷೆಯಲ್ಲಿಯೇ ಕೃತಿ ರಚನೆಮಾಡಬಹುದಲ್ಲಾ ! ಅದಕ್ಕೆ ಯಾರ ಅಡ್ಡಿ ಏನಿದೆ ?


ಕನ್ನಡ ನಾಡಿನ ಅನೇಕ ವಿದ್ವಾಂಸರು, ವಿದುಷಿಯರು, ಗೀರ್ವಾಣಭಾಷೆಯಲ್ಲಿ ಕೃತಿರಚನೆ ಮಾಡಿಲ್ಲವೆ? ಹಾಗೆ
ಮಾಡದೆ ಶುದ್ಧ ಕನ್ನಡದಲ್ಲಿ ಮಧ್ಯೆ ಅರ್ಥವಾಗದ ಸಂಸ್ಕೃತವನ್ನು ತಂದಿಕ್ಕುವುದು ಸರಿಯಲ್ಲ. ಅದು ತುಪ್ಪ ಮತ್ತು ಎಣ್ಣೆಗಳನ್ನು ಬೆರಸುವಂಥ ಕೆಟ್ಟ ಕೆಲಸ. ಕನ್ನಡ ಸಂಸ್ಕೃತಗಳಲ್ಲಿ ಎಣ್ಣೆ ಯಾವುದು, ತುಪ್ಪ ಯಾವುದು? ಅದು ಅವರವರ ಅಭಿರುಚಿಗೆ ಬಿಟ್ಟ ವಿಚಾರ. ಆದರೆ ಅವುಗಳ ಬೆರಕೆ ಸುತರಾಂಸಹ್ಯವಲ್ಲ. ಅವೆರಡೂ ಬೆರೆತಾಗ ತುಪ್ಪದ ರುಚಿಯೂ ಹಾಳು ಎಣ್ಣೆಯ ಗುಣವೂ ನಷ್ಟ ಅದು ದುರ್ಮಿಶ್ರಣ.
ಎಣ್ಣೆಯೂ ಅಲ್ಲ, ತುಪ್ವೂ ಅಲ್ಲ. ಹಾಗೆ ಈ ಎರಡೂ ಭಾಷೆಗಳನ್ನು ಕಲಬೆರಕೆ ಮಾಡಿ ಕನ್ನಡ ಓದುಗರಿಗೆ ತಲೆಬೇನೆ ತರಿಸುವುದು ಸಮಾಜ ವಿರೋಧಿ ಚಟುವಟಿಕೆ! ಇದು ನಯಸೇನನ ವಾದದ ಧಾಟಿ.

ಕಾವ್ಯ ರಸವತ್ತಾಗಿರಬೇಕಾದರೆ ಅದರಲ್ಲಿ ನಾಣ್ನುಡಿಗಳಿರಬೇಕು. ಪದ್ದತಿಯ ರಚನೆಯಿರಬೇಕು. ಮಾರ್ಗ ಶೈಲಿಯಿರಬೇಕು
ಹಾಗಿರದ ಕೃತಿ ಕೃತಿಯೇ ಅಲ್ಲ. ನಯಸೇನನಿಗೆ ದೀಸಿಯಮೇಲೆ ಆದರ. ನಾಣ್ಣುಡಿಗಳನ್ನಂತೂ ಅವನು ತನ್ನ ಕೃತಿಯಲ್ಲಿ
ಬೇಕಾದ ಹಾಗೆ ಬಳಸಿಕೊಂಡಿದ್ದಾನೆ. ಅವನಿಗೆ ಪಂಡಿತರ ಸಂತೋಷ ಬೇಕಾಗಿರಲಿಲ್ಲ. ಸಾಮಾನ್ಯರಿಗೂ ಪ್ರಾಕೃತರಿಗೂ,
ನರಕದಲ್ಲಿ ಬಿದ್ದು ಕೋಟಲೆಗೊಳ್ಳುವವರಿಗೂ ತಿಳಿಯುವಂತೆ “ ದೃಷ್ಟಾಂತ ಸಮೇತವಾಗಿ ಹೇಳಬೇಕೆಂಬುದೇ ಕವಿಯ
ಮನೋರಥ. ಕನ್ನಡಿಗರ ಆಡುಮಾತಿನಲ್ಲಿ ಬಳಕೆಯಾಗಿದ್ದು ಹೆಚ್ಚು ಪ್ರಯತ್ನವಿಲ್ಲದೆ ಸುಲಭವಾಗಿ ಅರ್ಥವಾಗುವ
ಸಂಸ್ಕೃತ ಪದಗಳ ಬಳಕೆ ನಯಸೇನನ ದೃಷ್ಟಿಯಲ್ಲಿ ಅಪರಾಧವಲ್ಲ. ಪಾಂಡಿತ್ಯ ಪ್ರದರ್ಶನಕ್ಕೋಸ್ಕರ, ಶಾಲಂಷ,
ಕಾವ್ಲಿಂಗ, ಮೊದಲಾದ ಅಲಂಕಾರಗಳನ್ನು ತರುವುದಕ್ಕಾಗಿ ಕ್ಲಿಷ್ಟವಾದ ಅಪೂರ್ವ ಪದಗಳನ್ನು ಬಳಸಬಾರದೆಂಬುದಿಷ್ಟೇ ಕವಿಯ ಆಶಯ. ನಯಸೇನ ನಿರೂಪಿಸಿದ ನೀತಿಯನ್ನು ತನ್ನ ಕೃತಿಯಲ್ಲಿ ಆಚರಣೆಗೆ ತಂದು ಕೃತಕೃತ್ಯನಾಗಿದ್ದಾನೆ.

ಕಪ್ಪೆ ಸಮುದ್ರವನ್ನು ಕಂಡರಿಯದು. ಅಂಥ ಅಜ್ಞಾನದ ಜಂತು ಮಹಾಸಮುದ್ರವನ್ನು ಹೀಯಾಳಿಸಿದರೆ ಸಾಗರಕ್ಕೆ ಅದರಿಂದ ಅಪಮಾನವಾದೀತೆ ? ಹಾಗೆಯೇ ಶ್ರೇಷ್ಠ ಕವಿತೆಯ ಹಿರಿಮೆ ಸ್ವಾರಸ್ಯಗಳನ್ನು ಅನುಭವಿಸಿ ಅರಿಯದ
ಮೂರ್ಖರು, ಅರಸಿಕರು, ಕುಕವಿಗಳು ಅವಹೇಳನ ಮಾಡಿದರೆ, ಆಕ್ಷೇಪಿಸಿದರೆ ಕಾವ್ಯಕ್ಕೆ ಕುಂದೆ ?

ಜಿನ ಮತದಲ್ಲಿ ಎಷ್ಟು ಸಾರವಿದೆಯೋ ಅದೆಲ್ಲವೂ ತನ್ನ ಕೃತಿಯಲ್ಲಿ ಚೆನ್ನಾಗಿರೂಪು ಗೊಂಡಿದೆಯೆಂದು
ನಯಸೇನನ ನಂಬಿಕೆ. ದೊಡ್ಡ ಆನೆಯ ರೂಪ ಸಣ್ಣ ಕನ್ನಡಿಯಲ್ಲಿಯೂ ಸ್ಪಷ್ಟವಾಗಿ ಮೂಡುವ ಹಾಗೆ
ಮಹತ್ತಮವಾದ ಜಿನಧರ್ಮದತಿರುಳು ತನ್ನಕೋತಿಯಲ್ಲಿ ಪ್ರತಿಬಿಬಿಸಿದೆಯಂತೆ. ಮರೆತಾದರೂ ಜಿನೇಶ್ವರನ ಹೆಸರನ್ನು ಹೇಳುವವರಿಗೆ ಕರ್ಮಬಂಧನದಿಂದ ಬಿಡುಗಡೆಯಾಗಿ ನಿರ್ವೃತಿ ಸೌಖ್ಯ ದೊರೆಯುವುದು ಎಂದು ಹೇಳುತ್ತಾನೆ.

ಧರ್ಮಾಮೃತ “ ಕಥಾಮೃತ “ ವೂ ಆಗಿದೆ. “ ಚಕ್ರಾಯುಧವೇ ಮೊದಲಾದ ಹದಿನಾಲ್ಕೂ ಮಹಾರತ್ನಗಳನ್ನು
ಧರಿಸಿದವರು ತಪಾಪದೆ ಶ್ರೇಷ್ಟವಾದ ಚಕ್ರವರ್ತಿಯ ಪದವಿಯಲ್ಲಿ ನಿಲ್ಲುವ ಹಾಗೆ ಸಮ್ಯಗ್ಧರ್ಶನವೇ ಮೊದಲಾದ
ಈ ಹದಿನಾಲ್ಕು ಕಥೆಗಳ ಸಮೂಹವನ್ನು ಕೇಳಿ ಚಿತ್ತದಲ್ಲಿ ಧರಿಸಿದವರು ತಪ್ಪದೆ ವಿಶೇಷ ಪದವಿಯಲ್ಲಿ,
ಮೋಕ್ಷ ಪದವಿಯಲ್ಲಿ, ನಿಲ್ಲುವರು” ಎಂದು ನಯಸೇನ ಬುಧನು ಹೇಳಿಕೊಂಡಿದ್ದಾನೆ.

ಪ್ರಥಮಾಶ್ವಾಸಂ.
ದರ್ಶನ : ವಸುಭೂತಿಯ ಕಥೆ.

ಶ್ರೀರಾಮಾ ರಮಣೀಯ ಪಾದಸರಸೀಜಾತಂ ನಿಲಿಂಪೇಂದ್ರವೃಂ
ದಾರಾಧ್ಯಂ ಭುವನತ್ರಯ ಪ್ರಭು ವಿನೇಯಾನೀಕಕಲ್ಪದ್ರುಮಂ
ಧೀರಂ ನಿತ್ಯನನಂತಕ್ಷಯಸುಖಂ ಮುಕ್ತ್ಯಂಗನೇಕಂ ಜಗ
ತ್ಸಾರಂ ವೀರಜಿನೇಂದ್ರನೀಗೆಮಗೆ ಮುಕ್ತಿ ಶ್ರೀ ಸುಖಾವಾಪ್ರಿಯಂ ||೧||

ಅಸಗನ ದೇಸಿ ಪೊನ್ನನ ಮಹೋನ್ನತಿವೆತ್ತ ಬೆಡಂಗು ಪಂಪನೊಂ
ದಸದೃಸಮಪ್ಪಪೂರ್ವರಸಮೆಯ್ದೆ ಗಜಾಂಕುಶನೊಳ್ಪುವೆತ್ತುರಂ
ಜಿಸುವ ಸದರ್ಥ ದೃಷ್ಟಿ ಗುಣವರ್ಮನ ಜಾಣ್ಕವಿರತ್ನನೋಜೆ ಶೋ
ಭಿಸೆ ನೆಲಸಿರ್ಕೆ ಧಾರಿಣಿ ಮನಂಗೊಳೆ ಮತ್ಕೃತಿಯೊಳ್ನಿರಂತರಂ ||೩೯||

ರಸಭಾವಂ ಗಮಕಂ ಕಾ
ಣಿಸೆ ನಾಣ್ಣುಡಿ ದೇಸಿವೆತ್ತ ಪೊಸನುಡಿ ಮಾರ್ಗಂ
ಕುಸುಱಿಯ ಬಗೆಯಿಂದಿನತಱೊ
ಳೆಸೆಯದ ಕೃತಿ ಕೃತಿಯೆ ಬಗೆದು ನೋೞ್ಪೊಡೆ ಜಗದೊಳ್ ||೪೦||

ಸಕ್ಕದಮಂ ಪೇೞ್ವೊಡೆ ನೆಱೆ
ಸಕ್ಕದಮಂ ಪೇೞ್ಗೆ ಸುದ್ಧಗನ್ನಡದೊಳ್ತಂ
ದಿಕ್ಕುವುದೇ ಸಕ್ಕದಮಂ
ತಕ್ಕುದೆ ಬೆರಸಲ್ಕೆಘೃತಮುಮಂ ತೈಲಮುಮಂ||೪೨||

ಪರಿಣತರೆನಿಸುವ ನಿರ್ಮ
ತ್ಸರರಂ ಮೆಚ್ಚಿಪುದು ಗಹನಮಲ್ಲದು ಜಡರಂ
ಕರಮಱಿದು ತಿಳಿಪಲೆಂತೆನೆ
ಖರಕರನಂ ಗೂಗೆಗೆಯ್ದೆ ತೋರ್ಪಂತಕ್ಕು ೪೩||

ಮಂಡೂಕಂ ಶರನಿಧಿಯಂ
ಕಂಡಱಿಯದೆ ಪಳಿಗುಮಬ್ಧಿಗದು ಭಂಗಮೆ ಪೇೞ್
ಖಂಡಿಸೆ ಕುಕವಿ ಸಮೂಹಂ
ಪಂಡಿತರಪ್ಪವರ್ಗೆ ಭಂಗಮಕ್ಕುಮೆ ಜಗದೊಳ್ ||೪೪||

ಪೊಲ್ಲಮೆಗಂಡದನಱಿದುಂ
ಮೆಲ್ಲನೆ ಸಯ್ತಾಗೆ ತಿರ್ದುವರ್ಸುಕವೀಶರ್
ಪೊಲ್ಲಮೆಯಿಲ್ಲದೊಡಂ ಲೇ
ಸಲ್ಲದು ಕೃತಿಯೆಂದು ಕುಕವಿನಿಕರಂ ಪಳಿಗುಂ||೪೫||

ಇಲಿಗಂ ಮರಕುಟವಕ್ಕಿಗ
ಮಲಸದೆ ಕರ್ದುಕುತ್ತೆ ಕಡಿಯುತಿರ್ಪುದೆ ಸಹಜಂ
ಸಲೆ ಚಪಲಂಗಂ ಕುಕವಿಗ
ಮಲಸದೆ ತೆಗಳ್ವಿದುವೆ ಸಹಜಮವಱಂತೆ ಕರಂ ||೪೬||

ಮೞೆಯಿಲ್ಲದೆ ಪೊಯ್ನೀರಿಂ
ಬೆಳಗುಮೆ ಧರೆ ಮಱುಗಿ ಕುದಿದು ಶಾಸ್ತ್ರದ ಬಲದಿಂ
ದಳಿಪಿ ಪೇೞ್ವೊಡಮದುಕೋ
ಮಳಮಕ್ಕುಮೆ ಸಹಜಮಿಲ್ಲದಾತನ ಕಬ್ಬಂ ||೪೯||

ಉಪ್ಪಿಲ್ಲದೆ ಕೇಳೊಕ್ಕಳ
ತುಪ್ಪವನೆಱೆದುಣ್ಬೆನೆಂಬೊಡುಣಿಸೇಂ ಸ್ವಾ
ದಪ್ಪುದೆ ಸಹಜಂ ತನಗಿನಿ
ಸಪ್ಪೊಡಮಿಲ್ಲದನ ಕವಿತೆ ರುಚಿವಡೆದಪುದೇ||೫೦||

ತರಣಿ ಬೆಳಗಲ್ಪೆಂಪೇಕೆಂದಿರ್ದುವೇ ಭಗಣಂಸುರ
ದ್ವಿರದಮಿರಲಿಂ ಸೊರ್ಕೇಕೆಂದಿರ್ದುವೇ ಪೆಱವಾನೆಗಳ್
ಪರಮಕವಿಗಳ್ ಸಾಲ್ವರ್ತಾಮೆಂದು ಮಾಣದೆ ಪೇೞ್ವೆನಾ
ದರದಿನೊಲವಿಂದರ್ಥೀ ದೋಷಂ ನಪಶ್ಯತಿಯೆಂಬಿನಂ ||೫೩||

ಜಿನಮತದೊಳೆನಿತುಸಾರಮ
ದನಿತುಂ ಲೇಸಾಗಿ ತೋರ್ಪುದೀ ಕೃತಿಯೊಳದೆಂ
ತೆನೆ ಕನ್ನಡಿಯೊಳಗೆ ಜಲ
ಕ್ಕನೆ ತೋರ್ಪವೊಲಿಭದರೂಪು ವಿಸ್ತರದಿಂದಂ ||೫೫||

ದುರಿತತಿಮಿರಪ್ರಭಾವಂ
ಪರಿಹರಿಪುದು ದೇವ ನಿನ್ನ ಮುಖಚಂದ್ರಮನಿಂ
ತ್ವರಿತಂ ನೋಡಲದೆಂತುಂ
ದೊರಕೊಳ್ವುದು ವೀರಜಿನಪ ನಿರ್ವೃತಿ ಸೌಖ್ಯಂ || ೬೩||

ತಿರಿಕನಾರಕಮಾನವಾಮರಲೋಕದೊಳ್ ನೆಲೆಗೊಂಡು ನಿ
ತ್ತರಿಸದೆಲ್ಲಿಯುಮಲ್ಲಿಗಲ್ಲಿಗೆ ಪುಟ್ಟಿ ರಾಟಳದಂದದಿಂ
ತಿರಿವ ಸಂಸ್ಕೃತಿ ದುಃಖದಿಂ ಪೊಱಮಟ್ಟು ಶ್ಶ್ವತ ಸೌಖ್ಯದೊಳ್
ನೆರೆವುಪಾಯಮನೞ್ತಿಯಿಂ ಬೆಸಸಲ್ಕೆವೇೞ್ಕುಂ ಮುನೀಶ್ವರಾ||೬೫||

ಗದ್ಯ|| ನೀಂ ಬೆಸಗೊಂಡ ಚತುರ್ಗತಿಚ್ಛೇದಮುಂ ಜಾತಿಜರಾಮರಣದೂರಮುಂ ಸಾರ
ಮುಮಪ್ಪ ನಿರಂತರ ಸುಖಂ ಮುಕ್ತಿಯೊಳಲ್ಲದೆ ದೊರೆಕೊಳ್ಳದಾಮುಕ್ತಿಯುಂ ತ್ರಿಜಗನ್ಮಾಂಗಲ್ಯ
ಮಪ್ಪಸಮ್ಯಗ್ದರ್ಶನದಿಂದಲ್ಲದೆ ಸಮನಿಸದಾ ಸಮ್ಯಗ್ದರ್ಶನಮುಂಕರಣಲಬ್ಧಿಯಿಲ್ಲದೆ ಕೂಡದಾ
ಸಮ್ಯಗ್ದರ್ಶನಮಿಲ್ಲದೆ ನಿರಂತರಸ್ಥಾಯಿಯಪ್ಪ ಮುಕ್ತಿಶ್ರೀಯಂ ಪಡೆವೆನೆಂಬಾತಂ ಕಣ್ಣಿಲ್ಲದೆ
ಕಾಣ್ಬೆನೆಂಬ ಮಣ್ಣಿಲ್ಲದೆ ಬೆಳೆವೆನೆಂಬ ಸತಿಯಿಲ್ಲದೆ ಸುತರಂ ಪಡೆವೆನೆಂಬ, ಮತಿಯಿಲ್ಲದೆ ಪರ
ದುಗೆಯ್ಬೆನೆಂಬ ಕೇರಿಲ್ಲದೆ ಚಿತ್ರಮಂ ಬರೆವೆನೆಂಬ ನೀರಿಲ್ಲದೆ ಕೂಳನಡುವೆನೆಂಬ ಅಂಬಿಲ್ಲದೆ
ಬಿಲ್ವಿಡಿವೆನೆಂಬ ತೂಬಿಲ್ವದೆ ಕೆಱೆಯಂ ಕಟ್ಟುವೆನೆಂಬ ಕಾಲಿಲ್ಲದೆ ಪರಿವೆನೆಂಬಕೀಲಿಲ್ಲದೆ ಪಡಿದೆಱೆ
ವೆನೆಂಬ ಭೈತ್ರಮಿಲ್ಲದೆ ಸಮುದ್ರದೊಳ್ಪೋಪೆನೆಂಬ ಗೋತ್ರಮಱಿಯದೆ ಕೂಸುಗುಡುವೆನೆಂಬ
ಕಿವಿಯಿಲ್ಲದೆ ಕೇಳ್ವೆನೆಂಬ ಸವಿಯಿಲ್ಲದುಣ್ಬೆವೆಂಬ ಕೆಯ್ಯಿಲ್ಲದೆ ಬೇಲಿಯಿಕ್ಕುವೆನೆಂಬ ಬಾಗಿಲಿಲ್ಲದೆ
ಪೋಗುವೆನೆಂಬ ಧನಮಿಲ್ಲದಧಿಕನೆಂಬ ವಾಹನಮಿಲ್ಲದೇರುವೆನೆಂಬ, ನಾಲಿಗೆಯಿಲ್ಲದೆ ನುಡಿವೆ
ನೆಂಬ ಪಱುಗಗೋಲಿಲ್ಲದೆತೊಱೆಯಂ ಪಾಯ್ವೆನೆಂಬ ಪಚ್ಚಪಸಿಯೆಗ್ಗನಂ ಪೋಲ್ಗುಂ ಇಂತು

ವರಚಕ್ರವರ್ತಿಪದವಿಗ
ಮುರುಗೀರ್ವಾಣಾಧಿಪತಿಯ ಸದ್ವಿಭವಕ್ಕಂ
ಪರಮಾರ್ಹಂತ್ಯ ಪದಕ್ಕಂ
ಪರಮಾರ್ಥಂ ಶದ್ಧ ದರ್ಶನಂ ಮೊತ್ತಮೊದಲ್||೬೮||

ಭಟಸಂಘಕ್ಕದಟೆಂತುಟಂತುಟೆಮುಖಾಂಭೋಜಕ್ಕೆ ಮೂಗೆಂತುಟುಂ
ತುಟೆ ಬಿತ್ತಿಂಗೆಲೆಯೆಂತುಟಂತುಟೆ ಮಹಾಭೈತ್ರಕ್ಕೆಕೀಲೆಂತುಟಂ
ತುಟೆ ಕೈಗಂಗುಲಿಯೆಂತುಟಂತುಟೆ ಲಸದ್ವೀಪಕ್ಕೆ ಸಂದೆಣ್ಣೆಯೆಂ
ತುಟು ತಾನಂತುಟೆ ದರ್ಶನಂ ಸಕಲಧರ್ಮಕ್ಕಂ ಧರಾಚಕ್ರದೊಳ್ ||೭೨||

ಪಟುದೇಹಕ್ಕಸುವೆಂತುಟಂತುಟೆ ಕುಜಾನೀಕಕ್ಕೆ ಬೇರೆಂತುಟಂ
ತುಟೆ ಕಣ್ಣಾಲಿಯದೆಂತುಟಂತುಟೆ ತಟಾಕಕ್ಕೇರಿತಾನೆಂತುಟಂ
ತುಟೆ ಕಾಲಿಂಗಡಿಯೆಂತುಟಂತುಟೆ ಚಿರವಾಸಕ್ಕಧಿಷ್ಠಾನಮೆಂ
ತುಟು ತಾನಂತುಟೆ ದರ್ಶನಂ ಸಕಲಧರ್ಮಕ್ಕಂ ಮಹೀಚಕ್ರದೊಳ್ ||೭೩||

ಸುದತಿಯರಿಲ್ಲದೋಲಗದ ಲೀಲೆ ಮನೋಹರಮಪ್ಪ ಪುತ್ರರಿ
ಲ್ಲದ ಮನೆವಾೞ್ತೆ ಸಾರಜಲಮಿಲ್ಲದ ಬಾವಿ ವಿಶೇಷದುರ್ಗಮಿ
ಲ್ಲದಮಹಿಪಾಲನುಗ್ರತೆ ಜನೋನ್ನತಿಯಿಲ್ಲದನಾಡು ಕೂರ್ಮೆಯಿ
ಲ್ಲದ ನಿಜಕಾಂತೆ ಸತ್ವದಯೆಯಿಲ್ಲದಧರ್ಮಮದೊಪ್ಪಲಾರ್ಕುಮೇ ||೭೪||

ಗದ್ಯ|| ಕಂಪಿಲ್ಲದ ತುಪ್ಪಮುಂ ಪೆಂಪಿಲ್ಲದ ಪ್ರಭುತ್ವಮುಂ ಸ್ನೇಹಮಿಲ್ಲದ ಕೋಡುಂ
ಮೋಹಮಿಲ್ಲದ ಬಾೞುಂ ಭಕ್ತಿಯಿಲ್ಲದ ಕೊಂಡಾಟಮುಂ ಶಕ್ತಿಯಿಲ್ಲದ ಸೆಣಸುಂ ಕೋಡಿಲ್ಲದ
ಸಿರಿಯುಂ ನಾಡಿಲ್ಲದರಪಸುಂ ಫಲಮಿಲ್ಲದ ತೋಟಮುಂ ಕುಲಮಿಲ್ಲದ ಮಹಿಮೆಯುಂ ಬಟ್ಟೆಯಲ್ಲದ
ಪಯಣಮುಂ ಪಟ್ಟಣಮಿಲ್ಲದರಾಜ್ಯಮುಂ ಕಿಚ್ಚಿಲ್ಲದಡುಗೆಯುಂ ನಚ್ಚಿಲ್ಲದ ಪೆಂಡತಿಯುಂ ದಯೆ
ಯಿಲ್ಲದನೆಗೞ್ತೆಯುಂ ನಯಮಿಲ್ಲದ ಸೇವೆಯುಂ ಭಂಢಮಿಲ್ಲದಂಗಡಿಯುಂ ಗಂಡನಿಲ್ಲದ ಸತಿಯುಂ
ಮೊದಲಿಲ್ಲದ ಪರದುಂ ಮದಮಿಲ್ಲದಾನೆಯುಂ ನೀರಿಲ್ಲದೂರುಂ ಕೇರಿಲ್ಲದಮನೆಯುಂ ಶ್ರುತಮಿಲ್ಲದ
ತಪಮುಂ ಘೃತಮಿಲ್ಲದೂಟಮುಂ ಮ್ಯಗ್ದರ್ಶನಮಿಲ್ಲದ ದಾನಮುಂ ತಪಮುಂ ಜಪಮುಂ
ಧರ್ಮಮುಮೊಪ್ಪಲಾರ್ಕುಮೆ?

ಒದವಿದ ಭೂಪರಿಲ್ಲದಿಳೆ ಭೋಜನಮಿಲ್ಲದಬಾಡು ವಸ್ತ್ರಮಿ
ಲ್ಲದಬಹುಭೂಷಣಂ ನಯಮಿಲ್ಲದ ಸೂಳೆ ವಿಶೇಷಲಾಭಮಿ
ಲ್ಲದಷರದಬ್ಜಮಿಲ್ಲದಕೊಳಂ ಬೆಳಸಿಲ್ಲದ ಧಾತ್ರಿ ರಕ್ಷಯಿ
ಲ್ಲದನೃಪನಾಳ್ಕೆ ದರ್ಶನದೊಳೊಂದದ ಧರ್ಮಮುಮೊಪ್ಪಲಾರ್ಕುಮೇ ||೭೬||

ಕೊಲ್ಲದ ಪುಸಿಯದ ಕಳವಿನಿ
ಸಿಲ್ಲದ ಪರವನಿತೆಯರ್ಗೆಪದಪಿಂಚಿತ್ತಂ
ಸಲ್ಲದ ಪರಿಗ್ರಹಕ್ಕಳಿ
ಪಿಲ್ಲದ ಸುವ್ರತಮಿವೈದುಮಲ್ಲವೆ ರತ್ನಂ||೮೧||

ಜಿನಭವನಾವಳಿಯಿಂದುಪ
ವನದಿಂ ಪೆರ್ಗೆಱೆಗಳಿಂ ಸರೋಜಾಕರದಿಂ
ಧನದಡನಪುರದಂತೊಪ್ಪುವು
ದನವರತಂ ಶೋಭೆಯಿಂ ಕರಂ ಗಿರಿನಗರಂ ||೮೯||

ಗದ್ಯ :- ಆ ಪುರಮನಾಳ್ವಂ ವಿಶ್ವಸೇನನೆಂಬ ಮಹಾಮಂಡಳಿಕನಾತನ ರಾಜಶ್ರೇಷ್ಠಿಯನ್ವಯ
ಶುದ್ಧನುಂ ಪ್ರಸಿದ್ಧನುಮಪ್ಪದಯಾಮಿತ್ರಶೆಟ್ಟಿಯೆಂಬಪರದನಿರ್ಪನಾತಂ  

ಸಿರಿಯೊಳ್ ಕುಬೇರನಂ ತ್ರ
ಸ್ತರಿಯಾಡುವನಹಿಷನೊಡನೆ ಭೋಗಕ್ಕಂ ಮ
ಚ್ಚರಿಸುವನುದಾರಗುಣದೊಳ್
ಪುರುಡಿಸುವಂ ಕಲ್ಪವೃಕ್ಷದೊಳ್ತದ್ವಣಿಜಂ||೯೧||

ಗದ್ಯ :- ಎಂದು ಪರದುವೋಪೆನೆಂಬ ಬಗೆಯಂ ತಂದು ಯಥೋಚಿತಮಪ್ಪ ಭಂಡಮಂ
ಕೊಂಡು ಶುಭದಿನದೊಳ್ ಪೊಱವೀಡಂ ಬಿಟ್ಟು ತನ್ನಾಶ್ರಯಿಸಿ ಬರ್ಪವರ್ ಬರ್ಪನ್ನೆವರಮಿರ್ಪನ್ನೆಗಂ

ಕೊರಲ ಪೊಸಜನ್ನಿವರಮೊ
ಪ್ಪಿರೆ ನಿಡುಬೊಟ್ಟೆಸೆಯೆ ದರ್ಭೆಕರಮತಿಶಯದಿಂ
ಬೆರಳೊಳ್ ರಂಜಿಸೆ ಕಾಶಾಂ
ಬರಮೆಸೆದಿರೆ ಬಂದು ನಿಂದುಭೂಸುರನೊರ್ವಂ ||೯೫||

ಗದ್ಯ :- ವೇದರುಕ್ಕಂ ಪೇಳ್ದಕ್ಷತೆಯನೀವುದುಂ ದಯಾಮಿತ್ರಶೆಟ್ಟಿ ನೋಡಿ ನಿಮ್ಮ ಪೆಸರೇನೆಂದೆತ್ತಿಣಿಂಬಂದಪ್ಪರಿನ್ನೆಲ್ಲಿಗೆ
ಫಪೋದಪ್ಪಿರಿಲ್ಲಿಗೇಂ ಕಾರಣಂ ಬಂದಿರೆಂದು ಬೆಸಗೊಳ್ವುದುಂ ಪಾರವನಿಂತೆಂದಂ

ವಸುಭೂತಿಯೆಂಬುದೆನ್ನಯ
ಪೆಸರುನ್ನತಿವೆತ್ತತೆಂಕನಾಡಿಂ ಬಂದೆಂ
ವಸುಧೆಗೆಸೆದಿರ್ದ ಗಂಗೆಯ
ನಸಹಾಯನೆಯರ್ತಿವೆರಸುಮೀಯಲ್ಕೆಂದಾಂ ||೯೭||

ಗದ್ಯ :- ಎಂದು ಮುಂದಡವಿಯಪ್ಪುದಱಿಂ ಕ್ರೂರಮೃಗಂಗಳಿಂದಾನುಂ ವನಚರರಿಂದಾನುಂ
ಪ್ರಾಣಭಯಮಕ್ಕುಮೆಂದಂಜಿ ನೆರವಂ ಪೊೞಲಿನೊಳಱಸುತ್ತುಮಿರ್ದು ನಿಮ್ಮ ಪೋಗಂ
ಪುರಜನಂ ಪೇೞೆ ಕೇಳ್ದು ನಿಮ್ಮನೆರವನಾಶ್ರಯಿಸಿ ಬಂದೆನೆಂಬುದುಂ ಸೆಟ್ಟಿ ಕರಮೊಳ್ಳಿತ್ತು
ಬನ್ನಿಮೆನೆ ವಸುಭೂತಿ,

ಅಕಟಕಟ ವೈಶ್ಯಜಂ ಭಾ
ವಕನಲ್ಲಂ ಲಜ್ಜೆಗೆಟ್ಟ ಸವಣರ ಮಾತಂ
ನಿಕರಕ್ಕೆ ನಂಬಿ ಠಕ್ಕಿಂ
ಗೆ ಕರಂ ಮತಿಗೆಟ್ಟು ಗತಿಯನಱಿಯದೆ ಕೆಟ್ಟಂ ||೧೦೩||

ವಸುಮತಿಯೊಳ್ ಪಲರುಂ ಪೂ
ಪೂಜಿಸುವೆಸಗುವ ದೈವಮಂ ಮಹಾಧರ್ಮಮುಂ
ಬಿಸುಟಹಹ ಮೋಡಕೋಣೆಯ
ಕುಸುಕುಱುಧರ್ಮವನದೆಂತು ನಂಬಿದನೀತಂ ||೧೦೪||

ಕುಲಮಂ ಮಾಸಿಸಿ ಮೀಹಮಂ ತೊಱೆದು ಕಂಡಪೇಸೇ ಮೆಯ್ಯೊಳ್ ಮಹಾ
ಮಲಮಂ ತಾಳ್ದಿದ ಕಷ್ಟರಂ ಸವಣರಂ ಕಂಗೆಟ್ಟರಂ ಕಂಡು ಸಂ
ಚಲಚಿತ್ತ ಕುಲದೈವಮೆಂದು ಪದಪಿಂ ಕೊಂಡಾಡುವಂತಿಪ್ಪ ಗಾ
ವಿಲನಂ ಗಾಂಪನೇಗ್ಗನಂ ಜಡನನಾಂ ಕಾಣೇಂ ಮಹೀಚಕ್ರದೊಳ್ ||೧೦೮||

ಎಲ್ಲೆಲ್ಲ ವಸ್ತುಗಳುಮಂ
ಬಲ್ಲರ್ನಿಮ್ಮನ್ನರಿಲ್ಲ ಬುದ್ಧಿಗೆ ನೀವುಂ
ನಿರ್ಲಜ್ಜರಪಾಪ ಸವಣರ
ಸೊಲ್ಲಿಂಗೊಳಗಾದುದಕ್ಕೆ ನಾಂ ಬೆಱಗಾದೆ ||೧೧೧||

ಮಾಯಮನೆ ಬೀಸಿ ಪೆಱರನು
ಪಾಯದೆ ಠಕ್ಕಿಕ್ಕಿ ದೇವಕಾರ್ಯದೊಳಿನಿಸುಂ
ನೋಯದೆ  ಸುಖಿಯಿಪ ಸವಣರು
ಪಾಯಮನಿಂ ನಿನ್ನೊಳಣ್ಣ ಭಾವಿಸಿ ನೋಡಾ ||೧೧೨||

ಮಲಮಂ ಧರಿಯಿಸಿ ನಾಣಂ
ತೊಲಗಿಸಿ ನಿರ್ಗ್ರಂಥಮಿರ್ದುಸೊಂಬಿಂ ಪಲ್ಲಂ
ಸುಲಿಯದೆ ಮೀಯದೆ ಮೀಳ್ಕದೆ
ಕುಲದಿಂ ಕೆಟ್ಟವರವರಣ್ಣ ನೀಂ ಮನ್ನಿಪುದೇ ||೧೧೩||

ಗದ್ಯ :- ಮತ್ತಂ ಭಾವಿಸುವೊಡವರ ಮಾಟಮೆಲ್ಲಂ ಕೂೞ್ ಕಾರಣಮಲ್ಲದೆ ಗತಿ ಕಾರಣಮಲ್ಲದು;
ಗತಿವಡೆವೆನೆಂಬುದು ಕಾಯಕ್ಲೇಶಂ ಬೇಅೞ್ಪುದು; ಆ ಕಾಯಕ್ಲೇಶಂ ನಿಮ್ಮ ನಚ್ಚಿನ ಸವಣರ
ಮೆಯ್ಯೊಳೆಳ್ಳೆನಿತೂಮಿಲ್ಲ ; ನೀನವರುಮನವರ ದೈವಮುಮಂ ಕೊಂಡಾಡುವ ಮರುಳಾಟಕ್ಕೆ
ಪಿರಿದುಂ ವಿಸ್ಮಯಮಾದಪುದೆಂಬುದುಂ ದಯಾಮಿತ್ರಶೆಟ್ಟಿ ಮುಗುಳ್ನಗೆ ನಕ್ಕು ತನ್ನೊಳಿಂತೆಂದಂ.

ಬೇಡಂ ಮಾಣಿಕಮೊಂದಂ
ಕಾಡೊಳ್ ಕಂಡೊರ್ಮೆ ಮೆಲ್ದುಪಗಿನಲ್ಲೆಂದೀ
ಡಾಡಿದನೆಂಬೀನಾಣ್ಣುಡಿ
ನಾಡೆಯುಮೆಸೆದಪುದು ದುರಿತವಶದಿಂದಿವನೊಳ್ ||೧೧೫||

ಬೆಳಗಿನೊಳಂ ಕಾಣದು ನಿಶಿ
ಯೊಳ್ ಕಾಣ್ಬುದು ಪೆಗ್ಗಣಕ್ಕೆ ನಿರ್ಗುಣರ್ಗಂತು
ಜ್ವಳಮಂ ಧರ್ಮಮನಱಿಯದೆಯು
ಮ್ಮಳಮಂ ಪೊರ್ದುವುದು ಜಡರ್ಗೆ ಸಹಜಮೆನಿಕ್ಕು||೧೧೬||

ಅಱಿಯದು ಕಪ್ಪೆ ಸಾಗರಮನಂಬುಧಿಗಂತದು ಕುಂದೆ ಗೂಗೆ ಕಂ
ಡಱಿಯದು ಚಂಡರೋಚಿಯನಿನಂಗದು ಭಂಗಮೆ ನೋಡೇ ಕಾಗೆ ಕಂ
ಡಱಿಯದು ಚಂದ್ರನಂ ಸಸಿಗೆ ಹೀನಮೆ ಸಜ್ಜನರೊಳ್ಪನಿಂ
ತಱಿಯದೆ ದೂರ್ತಿನಿಂ ಪೞಿಯೆ ಕಷ್ಟತೆ ಸಾರ್ಗುಮೆ ದಿವ್ಯರಪಾಪರಂ ||೧೧೭||

ಗದ್ಯ:- ಮದ್ದುಕುಣಿಕೆಯಂ ತಿಂದಂಗೆ ಕಲ್ಲುಂ ಮಣ್ಣುಂ ಮರನುಂ ಪೊಂಬಣ್ಣಮಾಗಿ
ತೋರ್ಪಂತೆ ಕರ್ಮದ ತೀವ್ರತೆಯಿಂದೀಪಾರ್ವಂಗೆ ಲೌಕಿಕಧರ್ಮಮೆ ಧರ್ಮಮಾಗಿ
ತೋರ್ಪುದದು ಕಾರಣದಿಂ ಸದ್ಧರ್ಮಮನೊರ್ಮೆಯೆ ಪೇೞ್ದೆನಪ್ಪೊಡೆ ಪಿತ್ತಜ್ವರಮುಳ್ಳವಂಗೆ
ಕುದಿವ ಪಾಲನೆಱೆವಂತಾನುಂ ಶಿಶುವಿನ ಕೈಯೊಳ್ ಮಸೆದ ಬಾಳಂ ಕೊಟ್ಟಂತಾನುಂ
ಕಪಿಯ ಕೊರಲೊಳ್ ಪೂಮಾಲೆಯಿಕ್ಕಿದಂತಾನುಮಕ್ಕುಮದಱಿಂದುಪಾಯದೊಳೆ
ತಿಳಿಪಲ್ವೇೞ್ಕುಮೆಂದು ದಯಾಮಿತ್ರಶೆಟ್ಟಿ ಪತ್ತೆಂಟು ದಿವಸಂ ಪೋಗಲ್ ಮತ್ತೊಂದು ದಿವಸಂ

ಭಟ್ಟರೆ  ಕೇಳಿಂ ನಿಮ್ಮಂ
ಬಿಟ್ಟು ಕೆಲರ್ಕುಲಜರೊಳರೆ ನಂಬಿದೆನೀಗಳ್
ನೆಟ್ಟನೆ ನಿಮ್ಮಿಂ ಸುಗತಿಯ
ಬಟ್ಟೆಯ ತೆಱನಱಿಯಲಾಯ್ತು ಪುಣ್ಯೋದಯದಿಂ ||೧೨೦||

ನೆರಪಲ್ಬಾರದ ವಿತ್ತಂ
ದೊರೆಕೊಂಡುದು ನೆಲೆಗೆ ಪೋಗಿ ಮಕ್ಕಳೊಳಂ ಪೆಂ
ಡಿರೊಳಮೊಡಗೂಡಿ ಸುಖದಿಂ
ಚರಿಯಿಸುವೆಂ ಮೇಚ್ಛಿದಂದದಿಂ ಭೋಗಿಸುವೆಂ ||೧೩೧||

ಗದ್ಯ:- ಎಂದು ಮನದೊಳ್ ಪಾಲ್ಗುಡಿದು ನೋಂಪಿಯಂ ನೋಂಪ ಕ್ರಮಮಂ ಪೇೞಿಮೆನೆ
ವೈಶ್ಯಲಲಾಮನಿಂತೆಂದನಾ ನೋಂಪಿ ತೀರ್ವನ್ನಂ ಗ್ರಾಸದೊಳ್ ಕಳಪೆಯ ಕೂೞಂ
ತಿಳಿದುಪ್ಪಮಂ ಪೆಱರೊರ್ವರ್ಬಡಿಸೆ ಕೈಯೊಳ್ ಮೋನದಿಂದುಂಡು

ಸಲೆ ಮಱೆಯೊಳ್ಪಡುವುದು ಮೈ
ಮಲವೇಱಿತ್ತೆಂದು ಮೀಯಲಾಗದು ಪಲ್ಲಂ
ಸುಲಿಯದೆ ವನಿತೆಯರಂ ಪಂ
ಬಲಿಸದೆ ತಲ್ಲಣಿಸದಿರ್ಪುದತ್ಯುತ್ಸವದಿಂ ||೧೩೫||

ತಲೆಯಂ ಬಲುದಡಿಗರ್ಕಿಳೆ
ನಿಲಲಾಱದೆ ಸುಂಟದಿಂದ ಕೋಡಗದಂತು
ಮ್ಮಳಿಸಿ ಕಳವಳಿಸಿ ನೋವಿಂ
ತಲೆಯಂ ತಿರಿಪುತ್ತುಮಂಜಿ ಕೆಟ್ಟೆನೆನುತ್ತುಂ ||೧೪೧||

ಬಿಡದೌಡುಗರ್ಚಿನೋವಿಂ
ದಡಿಗಡಿಗಹಹಾಯೆನುತ್ತುಮೆಡಗೈಯಿಂದಂ
ತಡವರಿಸುತ್ತುಂ ಸಾಸವೆ
ಗುಡಿದಂತಿರೆ ಕರಮೆ ಮಱುಗಿ ತಳವೆಳಗಾದಂ ||೧೪೩||

ಇವು ಲೇಸವು ಲೇಸೆಂಬೀ
ವಿವರದೊಳೇಂ ಸಕಲ ಭಕ್ಷ್ಯಮುಂ ಬಾಡುಗಳುಂ
ಸವಿಯೊಳ್ ಸಾಸಿರಮಡಿ ಮಿ
ಕ್ಕುವು ಭಾವಿಸಿ ನೋೞ್ಪೊಡಿಂದ್ರನುಣ್ಬಮೃತಮುಮಂ ||೧೫೩||

ಗದ್ಯ :- ಎಂದು ತನ್ನೂಟಂ ತನಗೆ ಜನ್ಮಪೂರ್ವಮಪ್ಪುದಱಿಂ ಮಹಾವಿಸ್ಮಯಂಬಟ್ಟು
ಇರುಳ್ಕಂಡ ಕನಸುಗಳಂ ಪಗಲೆನ್ನುವಂತೆ ನೆನೆಯುತ್ತುಂ ಪಗಲೆಲ್ಲಂ ಸಂತಸದಿಂದಿರ್ದು
ನೇಸರ್ಪಟ್ಟೊಂದು ಜಾವಕ್ಕೆ ತೊಟ್ಟನೆ

ಅಸದಳಮೆನಿಸುವ ತೀವ್ರದ
ತೃಷೆ ಮೊಕ್ಕಳಮಾಗೆ ನಾಡೆಯುಂ ಮನದೊಳ್ಸೈ
ರಿಸಲಾರದೆ ತಲ್ಲಣದಿಂ
ಬಿಸುಸುಯ್ದುಮ್ಮಳಿಸಿ ಬಾೞಲರಿಯದಾಯ್ತೆನುತುಂ ||೧೫೫||

ಅಂತಿಂತೆನ್ನದೆ ಮುಂ ಪೇ
ೞ್ದಂತುಸಿರದೆ ಮೋನದಿಂದಮುಣ್ಬುದು ನಾನೇ
ನಂ ತಂದಿಕ್ಕಿದೊಡಂ ಗುಣ
ವಂತರ್ಕುಲದೊಡೆಯರೆನಿಪ ನಿಮಗಿದು ಪಿರಿದೇ||೧೬೩||

ಪುಲಿಯಮೀಸೆಯನಂಜದುಯ್ಯಲನಾಡಲಪ್ಪುದು ನಂಜನೆಂ
ಜಲಿಸಲಪ್ಪುದು ಸಿಂಹಮಂಪಿಡಿದೇಱಲಪ್ಪುದು ಕಿಚ್ಚಿನೊ
ಳ್ತೊಲಗದೊರ್ಮೆಯೆಪಾಯಲಪ್ಪುದು ಸೊಕ್ಕಿದಾನೆಗೆಸಂದುಮಾ
ರ್ಮಲೆಯಲಪ್ಪುದು ನಿನ್ನ ನೋಂಪಿಗೆ ಗಂಡನಾವನೊ ಸೈರಿಪಂ ||೧೬೯||

ಕಲಿತನದಿಂದಂ ಲೋಗರ್
ಪುಲಿಯಂ ಪಿಡಿದೊಡಮದೇಂಬಿಡೆಂಬರ್ತಾಮೊಂ
ದಿಲಿಯಂಪಿಡಿದೋಡಮದು ಪೆ
ರ್ಬುಲಿಯೆಂಬರ್ದುಜನರ್ಗೆ ತಾನಿದು ಸಹಜಂ ||೧೭೩||

ಕಡುಮೂರ್ಖರ್ತಮ್ಮಿಚ್ಛೆಗೆ
ಪಿಡಿದುದೆ ಪಿರಿದೆಂಬರಣ್ಣ ಜಿನಮಾರ್ಗದೊಳೇಂ
ನಡೆಯಲ್ಬರ್ಕುಮೆ ಬಾರದು
ಕಡಲೆಗಳಂ ತಿಂಬು ಮೊಗ್ಗು ಕಲ್ಗಳೊಳುಂಟೆ ||೧೭೫||

ಗದ್ಯ :- ಕಟಕಮಂ ಕಂಡಱಿಯದವಂಗೆ ಪಳ್ಳಿಪಿರಿಯೂರಾಗಿ ತೋರಾಪಂತೆ ಧೈರ್ಯಾನ್ವಿತರಪ್ಪ
ಮಹರ್ಷಿಯರ ತಪೋಮಾರ್ಗಮನಱಿಯದೆನಗೆಮ್ಮಚಾರಿತ್ರಮೆ ಪಿರಿದಾಗಿರ್ದುದು ಸಹಜಮಾ
ದೊಡಂ “ ಪರದರೊಳ್ಮರುಳಿಲ್ಲಸೂಳೆ ಸಾಧುವಲ್ಲ” ಎಂಬ ನಾಣ್ಣುಡಿಯುಂಟಿಪ್ಪುದಱಿಂದೀತಂ
ಮರುಳಲ್ಲಮೀತನ ಪಿಡಿದ ಧರ್ಮಮೆ ಧರ್ಮಮೆಂದು

ಗದ್ಯ:- ಎಂದು ತನ್ನೊಳೆ ವಿಚಾರಿಸಿ ವಾತ್ಸಲ್ಯರತ್ನಾಕರಂಗೆ ಕೈಗಳಂ ಮುಗಿದು ನಿಮ್ಮ ಪಿಡಿದ
ಧರ್ಮಮೆ ಲೇಸೆಂಬುದನೀಗಳಱಿದೆಂ ನೀವೆನಗೆ ಧರ್ಮದೊಳಾದಭಿಪ್ರಾಯಮನಱಿಯೆ
ಪೇೞಲ್ವೇೞ್ಕೆಂಬುದುಂ ಸೆಟ್ಟಿಯಿಂತೆಂದಂ

ಪರಮಾರ್ಥಮಪ್ಪುದಂ ಮ
ಚ್ಚರಿಸದೆ ಕೋಪಿಸದೆ ಡಂಗೆಗೊಳ್ಳದೆ ಪಕ್ಷ
ಕ್ಕುರಿದೇಳದೊಂದೆಮನದಿಂ
ನಿರುತಂ ಕೇಳ್ವವನೆ ಧರ್ಮದೊಳಗಂ ತಿಳಿಗುಂ ||೧೮೧||

ಕನ್ನಡಿಯಂ ನೋಡುವವಂ
ತನ್ನಯ ಪೆಱಗಣ್ಗೆಕಾಣಲಾರ್ಪನೆ ರೂಪಂ
ಮುನ್ನಮೆ ಬಱಿದೊಳಱುವವಂ
ಸನ್ನುತಸದ್ಧರ್ಮಮಪ್ಪುದಂ ತಾನಱಿಯಂ ||೧೮೨||

ಮರಣಂ ಚಿಂತೆ ಭಯಂ ಮದಂ ಮುಳಿಸು ಮೋಹಂ ಖೇದ ರೋಗಂ ಬೆಮ
ರ್ಜರೆ ನೀರೞ್ಕೆ ವಿಷಾದಮೂಟ ಜನನಂ ಲೋಭಂ ಮಹಾವಿಸ್ಮಯಂ
ಸ್ಮರಬಾಣಾಹತಿ ನಿದ್ರೆಯೆಂಬಿನಿತಂ ಗೆಲ್ದಾತನೇ ತಾಂ ಜಿನೇ
ಶ್ವರನಿಂದ್ರಾರ್ಚಿತಪಾದನಾತನೆ ವಲಂ ಸೌಖ್ಯಕ್ಕೆ ತಾಂ ಕಾರಣಂ ||೧೯೮||

ಗದ್ಯ :- ಸಮ್ಯಕ್ತ್ವಂ ಆ ಸಮ್ವ್ಯಕ್ತ್ವಂಮೇಗೆಯ್ದುಂ ದೊರಕೊಳ್ಳದದು ಪುಣ್ಯದಿಂ ದೊರೆ
ಕೊಂಡುದಪ್ಪೊಡನಂತಸುಖದೊಳ್ಕೂಡುಗುಮೆಂದು ವಣಿಗ್ವಂಶಲಲಾಮಂ ಪೇೞೆ; ವಸುಭೂತಿ
ಕೇಳ್ದು ತಾಗಿ ಬಾಗಿದನಂತೆ ಮುನ್ನಿನ ದರ್ಪಂಗೆಟ್ಟು ಕದಡಿ ತಿಳಿದ ನೀರಂತೆ ಮನದೊಳ್
ನಿರ್ಮಳನಾಗಿ ಸಮ್ಯಗ್ದರ್ಶನಂ ದೊರೆಕೊಂಡುದಕ್ಕೆ ಮನದೊಳಾನಂದಂಬೆತ್ತು ಸಮ್ಯಕ್ತ್ವ
ಚೂಡಾಮಣಿಯಂ ನಾನಾವಿಧದಿಂ ಪೊಗೞ್ದು ದರ್ಶನದೊಳ್ ದೃಢನಾಗಿರ್ದನನ್ನೆಗಮಿಭಾನ್ವಯ
ಪವಿತ್ರಂ ಮಱುದಿವಸಂ ಬೀಡನೆತ್ತಿ ಕತಿಪಯ ಪಯಣಂಬೋಗಿ ನಂದ್ಯಾವಲಿಯೆಂಬ ಪೇರಡವಿಯೊಳ್
ಬೀಡಂ ಬಿಡುವುದುಂ

ಕೃತಜ್ಞತೆ :-
ಕೆ. ವೆಂಕಟರಾಮಪ್ಪ
ಪ್ರಕಾಶಕರು :-
ಕನ್ನಡ ಸಾಹಿತ್ಯ ಪರಿಷತ್ತು
ಚಾಮರಾಜಪೇಟೆ
ಬೆಂಗಳೂರು-೫೬೦೦೧೮.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ