ಹರಿಹರನ
ಉಡುತಡಿಯ
ಅಕ್ಕಮಹಾದೇವಿಯ ರಗಳೆ.
ಈಗ ಹತ್ತು ಶತಮಾನಗಳಿಗೂ ಹಿಂದೆಯೇ ಕನ್ನಡ ಕಾವ್ಯಜಗತ್ತನ್ನು ಸ್ವರ್ಣಯುಗವನ್ನಾಗಿ ಮಾಡಿದ ಆದಿಕವಿ ಪಂಪನ ಕಾವ್ಯಗಳು ತಮಗೂ ಹಿಂದಿನ ಕವಿಕಾವ್ಯಗಳನ್ನು ಇಕ್ಕಿ ಮೆಟ್ಟಿದುದು ಮಾತ್ರವೇ ಅಲ್ಲ; ಆ ಮಹಾಕವಿ ತನ್ನ ಪ್ರತಿಭಾಶಕ್ತಿಯಿಂದ ಮುಂದಿನ ಕವಿಗಳಿಗೆಲ್ಲ ಒಂದು ಹೆದ್ದಾರಿಯನ್ನು ನಿರ್ಮಿಸಿ ಕೊಟ್ಟ. ಆತನು ಹಾಕಿಕೊಟ್ಟ ಸಂಪ್ರದಾಯವ ಸುಮಾರು ಇನ್ನೂರೈವತ್ತು ವರ್ಷಗಳಷ್ಟು ದೀರ್ಘಕಾಲ ತಾನೇತಾನಾಗಿ ವಿಜೃಂಭಿಸಿತು. ಆದರೆ ಅಂದಿನ ಕವಿಗಳೆಲ್ಲರೂ ಬಹುಮಟ್ಟಿಗೆ ರಾಜಕೃಪಾಪದಷಿತರು. ರಾಜಾಸ್ಥನದ ಪಂಡಿತರ ಮೆಚ್ಚಿಕೆಗೂ ರಾಜರ ಔದಾರ್ಯಕ್ಕೂ ಕೈ ಚಾಚಿದ್ದವರು. ವರ ಹೆಗ್ಗುರಿ ವೆಷಯ ನಿರೂಪಣೆಯಷ್ಟೇ - ಒಮ್ಮೊಮ್ಮೆ ಅದಕ್ಕೂ ಹೆಚ್ಚಾಗಿ- ಪಾಂಡಿತ್ಯ ಪ್ರದರೂಶನವೂ ಆಗಿತ್ತು. ಈ ಸಂಸ್ಕೃತ ಭೂಯಿಷ್ಟಮಯವಾದ ಪಾಂಡಿತ್ಯದಿಂದ ಮಂಡಿತಳಾದ ಅವರ ಕಾವ್ಯದೇವಿ, ಅವರ ಆಶ್ರಯದಾತರಂತೆ ಸಿಂಹಾಸನವೇರಿ ಕುಳಿತಿದ್ದಳು. ಆಕೆಯ ಅನುಗ್ರಹ ಆಶೀರೂವಾದಗಳಿರಲಿ, ಆಕೆಯ ದರ್ಶನ ಕೂಡ ಶ್ರೀಸಾಮಾನ್ಯನಿಗೆ ಅಸಾಧ್ಯವಾಗಿತ್ತು.
ಸಾಹಿತ್ಯದ ಭಾವ ಭಾಷೆಗಳೆರಡರಲ್ಲೂ ಪರಿಷ್ಕರಣವಾಗಬೇಕೆಂಬ ಕೂಗು ಆಗಾಗ ಕಾವ್ಯಪ್ರಪಂಚದಲ್ಲಿ ಕೇಳಿ ಬರುತ್ತಿತ್ತು.
ಆದರೂ ಸಂಪ್ರದಾಯಶೀಲರಾದ ಕವಿಗಳು ಅದರತ್ತ ಕಿವುಡರಾಗಿದ್ದರು. ಹನ್ನೆರಡನೆಯ ಶತಮಾನದಲ್ಲಿ ಕಾಣಿಸಿಕೊಂಡ ವೀರಶೈವ ವಚನಕಾರರು ಭಾವ ಭಾಷೆಗಳೆರಡರಲ್ಲಿಯೂ ಕೋಲಾಹಲಕಾರವಾದ ಕ್ರಾಂತಿಯೊಂದಕ್ಕೆ ನಾಂದಿಯನ್ನು ಹಾಡಿ, ನಿರಾಭರಣಸುಂದರಿಯಂತಿರುವ ವಚನವಾಙ್ಞಯವನ್ನು ಸೃಷ್ಟಿಸಿದರು.
ವಚನವಾಙ್ಞಯದಿಂದ ಕನ್ನಡಕ್ಕೊಂದು ಕೋಡು ಮೂಡಿದಂತಾಯಿತು. ಇದರ ಭಾವ ಭಾಷೆಗಳೆರಡೂ ಕನ್ನಡ ನೆಲದಲ್ಲಿ ಹುಟ್ಟಿ ಅಚ್ಚಕನ್ನಡತನದಿಂದ ತುಂಬಿರುವುದು ಮಾತ್ರವೇ ಅಲ್ಲ, ಇಂತಹ ಸಾಹಿತ್ತಪ್ರಾಕಾರ ಮತ್ತಾವ ಭಾಷಾ ಸಾಹಿತ್ಯಗಳಲ್ಲಿಯೂ ಕಂಡುಬರುವುದಿಲ್ಲ. ಇದನ್ನು ಸೃಷ್ಟಿಸಿದ ಉದಾರ ಚೇತನರ-ಶಿವಶರಣರ-ಹೆಗ್ಗುರಿ ಜನಜಾಗೃತಿ ಜನರ ಆತ್ಮೋದ್ಧಾರ. ಇದು ಜೀವನವನ್ನು ಹಸನುಗೊಳಿಸುವುದರ ಜೊತೆಗೆ ಕವಿಕಾವ್ಯರಚನೆಗೆ ಸಾಕಷ್ಟು ಪ್ರೇರಣೆ, ಪ್ರಚೋದನೆಯನ್ನು ನೀಡಿತು. ಹೀಗೆ ಪ್ರಭಾವಿತರಾದ ಕವಿಗಳಲ್ಲಿ ಕಾಲದ ದೃಷ್ಟಿಯಿಂದ ಮಾತ್ರವೇ ಅಲ್ಲದೆ ಯೋಗ್ಯತೆಯ ದೃಷ್ಟಿಯಿಂದಲೂ ಅಗ್ರಗಣ್ಯನಾದವನು ಹರಿಹರದೇವ. ಈತನ ಕಾಲ ೧೨೦೦. ಈತನ ಹುಟ್ಟೂರು ಹಂಪೆ. ಮಹದೇವ ಭಟ್ಟ
ಶರ್ವಾಣಿ ಈತನ ತಂದೆ ತಾಯಿ. ರುದ್ರಾಣಿ ಈತನ ಸೋದರಿ. ರುದ್ರಾಣಿ ಹಂಪೆಯ ಸಜ್ಜನ ಶಿವಭಕ್ತನೊಬ್ಬನನ್ನು ಕೈಹಿಡಿದು "ಸದ್ಗೃಹಿಣಿ" ಎನಿಸಿಕೊಂಡಳು. ಆಕೆಯ ಪುಣ್ಯಗರ್ಭದಲ್ಲಿ ಜನಿಸಿದವನೇ "ಷಟ್ಪದಿಬ್ರಹ್ಮ" ನೆಂದು ವಿಖ್ಯಾತನಾದ ಕವಿ ರಾಘವಾಂಕ. ಹರಿಹರನು ಗುರುಪರಂಪರೆಯನ್ನು ಮುಕ್ತಕಂಠನಾಗಿ ಅವರನ್ನು ಹೊಗಳುತ್ತಾನೆ.ಹಂಪೆಯ ಶಂಕರದೇವ-
ಮಾದಿರಾಜ-ಮಾಯಿದೇವ -ಹರಿಹರನ ಗುರುಪರಂಪರೆ.
ಹರಿಹರಕವಿ ಕನ್ನಡ ಸಾಹಿತ್ಯದಲ್ಲಿ ನೂತನ ಪಂಥವೊಂದನ್ನು ಸೃಷ್ಟಿಸಿ ಯುಗಪುರೈಷನಾದ.ಆತನ ಕಾವ್ಯಗಳು ರಸಸ್ರೋತಗಳು.ಅದಕ್ಕೂ ಹೆಚ್ಚಾಗಿ ಲೋಕಕಲ್ಯಾಣವನ್ನು ಸಾಧಿಸುವ ಸಂತರ ಚರಿತ್ರೆಗಳನ್ನು ಬಿತ್ತರಿಸಿ ಓದುಗರು ಆತ್ಮಕಲ್ಯಾಣವನ್ನು ಪಡೆಯಲು ಮಾರ್ಗದರ್ಶನ ಮಾಡಿಸಿದೆ. ಹದಿಮೂರನೆಯ ಶತಮಾನದ ಆದಿಭಾಗದಿಂದ ಮುಂದೆ ಸುಮಾರು ಅರ್ಧ ಶತಮಾನಗಳಿಗೂ ಹೆಚ್ಚುಕಾಲ ಬಾಳಿ ಬದುಕಿರಬಹುದಾದ ಆ ಕವಿ ತನ್ನ ಕಾಲದ ಸೀಮಾಪುರುಷ.
ಷಡಕ್ಷರ ಕವಿ ಆತನನ್ನು ಕುರಿತು " ಹರೀಶ್ವರಸ್ತೇನ ಕವಿಃ ಕಃ" ಎಂದು ಹೇಳಿರುವ ಮಾತು ಕಾಲಗರ್ಭದಿಂದ ತೂರಿಬಂದು ಉತ್ತರವಿಲ್ಲದೆ ಅನುರಣಿತವಾಗುತ್ತದೆ.
ಕಥಾಸಾರ
ಶಶಿಗೆ ಬೆಳದಿಂಗಳನ್ನು ಕಡವೀಯುವಷ್ಟು ಶುಭ್ರಧವಳವಾದ ರಜತಗಿರಿಯ ನೆತ್ತಿಯಲ್ಲಿ ಪರಮಶಿವನ ಸಭಾಭವನವಿದೆ. ಬ್ರಹ್ಮ, ವಿಷ್ಣು, ದೇವೇಂದ್ರಾದಿ ದೇವತೆಗಳೂ, ಕಿನ್ನರ, ಕಿಂಪುರೈಷ.ಪನ್ನಗ, ಸಿದ್ಧ, ವಿದ್ಯಾಧರರಾದಿ, ಖೇಚರರೂ, ಶಿವಗಣರೂ ನೆರೆದಿದ್ದ ಆ ಸಭಾಭವನದಲ್ಲಿ ಸರೂಪಭೂಷಣನು ಸಿಂಹಾಸನಾರೂಢನಾಗಿದ್ದಾನೆ. ಆತನ ಆಪ್ಪಣೆಯಂತೆ ಗುಪ್ತಗಣನಾಥನು ಪರಶಿವನ ಅಪ್ಪಣೆಯನ್ನು ಅರಿಯಲೆಂದು ಆಕೆಯ-ಗಿರೆಜೆಯ- ಅಂತಃಪುರಕ್ಕೆ ಬಂದನು. ಅಂಬಿಕೆಯನ್ನು
ಕಂಡು ಆಕೆಯ ಬಳಿ ಸಾರಿ " ತಾಯೆ ಮೂಜಗದ ಮಾತೆ, ದೇವದೇವನಾದ ಶಂಕರನು ದೇವಿಯರ ಸಮಯವನ್ನು ಅರಿಯಲೆಂದು ನನ್ನುನ್ನು ಕಳುಹಿಸಿದನು " ಎಂದು ಬಿನ್ನವಿಸಿ ಅಡ್ಡಬಿದ್ದನೈ. ಆಗ ಆತನ ಹಿಂದೆ ನಿಂತಿದ್ದ ಮಹಾದೇವಿ ಎಂಬ
ರುದ್ರಕನ್ನಿಕೆಗೆ ಆತನ ಕಾಲು ಸೋಂಕಿತು. ಕುಪಿತಳಾದ ಆಕೆಯು " ಎಲೆ ಭವಿಯೆ, ನೋಡಿ ಪೊಡಮಡು" ಎಂದು ಗದರೆಸಿದಳು. "ಭವಿ" ಎಂಬ ಮಾತು ಕಿವಿಗೆ ಬಿದ್ದೊಡನೆ ಮನನೊಂದ ಗುಪ್ತಗಣನಾಥನು ದೈನ್ಯದಿಂದ ಪಾರ್ವತಿಯತ್ತ ನೋಡಿದನು.ಕಸೆವಿಸಿಗೊಂಡ ಗಿರಿಜಾತೆ "ಏನವ್ವಾ ಮಹಾದೇವಿ, ಭವಿ ಎಂದು ನುಡಿವರೆ? ಈ ತಪ್ಪಿಗಾಗಿ ನೀನು ಇಂದಿನ ನಿನ್ನ ಹೆಸರಿನಿಂದಲೇ ಭೂಲೋಕದಲ್ಲಿ ಹುಟ್ಟಿ ಭವಿಗೆ ಹೆಟಡತಿಯಾಗಿ ಹುಟ್ಟಿ, ಭಕ್ತರಿಗೆ ಶರಣೆಂದು ಭವವಾರ್ಧಿಯಂ ದಾಂಟಿ, ಬಳಿಕ ಕೈಲಾಸಕ್ಕೆ ಬಾ" ಎಂದು ಅಪ್ಪಣೆ ಮಾಡಿದಳು.
ಮೊದಲನೆಯ ಸ್ಥಲ
ವೃತ್ತ
ಶ್ರೀಮದ್ ಗೌರೀವರಂ ಶಂಕರನಭವನಚಿಂತ್ಯಂ ಸದಾನಂದರೂಪಂ।
ಸೋಮಾರ್ಧೋತ್ತಂಸನೀಶಂ ಪಶುಪತಿ ಗಿರಿಶಂ ಭಕ್ತವೃಂದಪ್ರಮೋದಂ॥
ಭೀಮಂ ಭರ್ಗಂ ಭವಂ ಭಾಸುರನಿಧಿ ಮೆಱೆದಂ ಭೂಮಿಯೊಳ್ ಭಾಳನೇತ್ರಂ।
ಪ್ರೇಮಕಯ್ಗಣ್ಮೆ ತಾನೊಲ್ದುಡುತಡಿಯ ಮಹಾದೇವಿಯಂ ಹಂಪೆಯಾಳ್ದಂ॥
ಕಂದ ಪದ್ಯ
ಭಾವಕಿಯ ಭಕ್ತಿ ಚರಿತೆಯ ।
ಲಾವಣ್ಯದ ತಿರುಳ ತಂಬೆಲರ ತಂಪಿನ ಸಂ ॥
ಜೀವನೆಯೆಂದೆನಿಪ ಮಹಾ ।
ದೇವಿಯ ಗುಣಕಥನಮಂ ವಿವರ್ಣಿಪರಳವೇ॥೧॥
ಹಂಪೆಯ ಶಂಕರದೇವರ।
ಹಂಪೆಯ ಗುರು ಮಾದಿರಾಜದೇವರ ಮತ್ತಾ॥
ಹಂಪೆಯ ಮಾದರಸ ದಯೆ ।
ಯಿಂ ಪೇಳ್ದಂ ರಸಿಕಚಕ್ರಿ ಹರಿಹರದೇವಂ॥೩॥
ಲಲಿತ ರಗಳೆ
ಶ್ರೀ ಸಕಳ ದೇವರೊಲಿದೊಪ್ಪಿಪ್ಪ ರಜತಗಿರಿ
ವಾಸವಂ ಮನುಮುನಿಗಳಾದರಿಪ ರಜತಗಿರಿ
ಅಣಿಮಾದಿಗುಣವಗಲದೊಪ್ಪಿಪ್ಪ ರಜತಗಿರಿ
ಮಣಿಮುಕುರ ವೀಧಿಯಂ ತಳೆದಿಪ್ಪ ರಜತಗಿರಿ
ಶಶಿಗೆ ಬೆಳುದಿಂಗಳಂ ಕಡನೀವ ರಜತಗಿರಿ
ದೆಸೆಗೆ ಪುಣ್ಯದ ಬೆಳಗನಳವಡಿಪ ರಜತಗಿರಿ
ಭಸಿತದ ಬೆಳೆಗಳನೆಳೆದುಕೊಳುತಿರ್ಪ ರಜತಗಿರಿ
ಅಸಮನಯನನ ಸುಖಸ್ಥಲವಾದ ರಜತಗಿರಿ
ಆಸ ಗಿರಿಯ ಮೇಗಣ ಸಭಾಭವನಮಧ್ಯದೊಳು
ನಾಗಭೂಷಣನೊಪ್ಪುತ್ತಿರ್ದನತಿ ಚೋದ್ಯದೊಳು
ಎಡಬಲದೊಳಿಡಿದಿರ್ದ ದೇವಗಣತತಿಯೊಳಗೆ
ಜಲಜನಾಭಂ ಜಲಜಭವನಮರತತಿಯೊಳಗೆ
ಕಿನ್ನರರ ಸುರರ ಕಿಂಪುರುಷರ ಪ್ರಕರದೊಳಗೆ
ಪನ್ನಗರ ಸಿದ್ಧ ವಿದ್ಯಾಧರರ ವ್ರಜದೊಳಗೆ
ಕೆಂಜೆಡೆಯ ಕಮನೀಯರೂಪನೊಪ್ಪುತಿರ್ದ
ಗುಪ್ತ ಗಣನಾಥನೆಂಬನ ವದನಮಂ ನೋಡಿ
ಆಪ್ತನೆನಿಸಿರ್ದ ಶರಣಂಗೆ ಕೃಪೆಯಂ ಮಾಡಿ
ಕರೆಯಲು ಮಹಾಪ್ರಸಾದಂ ದೇವ ಎನುತ್ತೆದ್ದು
ಕರುಣಕ್ಕೆ ಹಿಗ್ಗಿ ಹೊರೆಯೇಱಿ ಸುಖದೊಳಗಿರ್ದು
ಮೈಯಿಕ್ಕಿ ಕೈಮುಗಿದು ತಳ್ಗಿ ಕುಳ್ಗುತ್ತುಮಿರೆ
ಕೈಯೆತ್ತಿ ಪೊಡಮಟ್ಟು ಕರುಣಮಂ ಹಾರುತಿರೆ
ದೇವನಾತನನೀಕ್ಷಿಸುತ ನುಡಿದನೆಲೆ ಮಗನೆ
ದೇವಿಯರ ಸಮಯಮಂ ನೋಡಿ ಬಾರೆಲೆ ಮಗನೆ ॥
ಹೋಗಯ್ಯ ಗುಪ್ತಗಣನಾಥ ಹೋಗೆಂದಲ್ಲಿ
ರಾಗದಿಂ ಬೆಸಸೆ ಪೊಱಮಟ್ಟನೈಬ್ಬುತ್ತಲ್ಲಿ
ಅಂತಃಪುರಕೆ ಬಂದು ಬಾಗಿಲುಗಳು ಕಳಿದು
ಮುಂತೆ ರುದ್ರಾಣಿಯ ಸಭಾಸ್ಥಲಕೆ ನಲಿನಲಿದು
ಬರುತಲಿರೆ ಮಾನಿನಿಯರೋಲಗಂ ತೋಱಿತ್ತು
ಬರೆ ಕಂಕಣಂಗಳ ಝಣತ್ಕಾರ ಉಣ್ಮಿತ್ತು
ಪರಿಮಳಭಾರದಿಂ ತಂಗಾಳಿ ತೀಡಿತ್ತು
ವರಗಣೇಶನ ಕಣ್ಗೆ ಕೌತುಕಮನಱಿಪಿತ್ತು
ಪರಿವ ಬೆಳುದಿಂಗಳೋ ಕಡೆಗಣ್ಣ ನೋಟಮೋ
ನೆರೆದ ಶಶಿಬಿಂಬಮೋ ಸಿರಿಮೊಗದ ಮೊತ್ತಮೋ
ಚಕ್ರವಾಕದ ನೆರವಿಯೋ ಕುಚತ ಪಂಙ್ತಿಯೋ
ಶಕ್ರ ಚಾಪಂಗಳೋ ತುಡುಗೆಗಳ ಕಾಂತಿಯೋ
ಸುರಕುಜದ ಶಾಖೆಯೋ ನಳಿತೋಳ ತೋರ್ಕೆಯೋ
ಪರಿಮಳದ ಪಸರಮೋ ಸವಿವುಸುರತೆಕ್ಕೆಯೋ
ಸೌಕುಮಾರ್ಯದ ಸಾಲೊ ವನಿತೆಯರ ನೆರವಿಯೋ
ಲೌಕಿಕದ ನುಡಿ ಪುಗದ ಸಿಂಗರದ ಸೀಮೆಯೋ ೪೦
ಎಂಬ ಸಂಶಯಮನೊಳಗೊಂಡುದಪ್ರತಿಮ ಸಭೆ
ಅಂಬಿಕೆಗೆ ಸಕಲಸುಖವೀವ ಸುಕುಮಾರಸಭೆ
ಆ ಸಭೆಯ ನಡುವೆ ಸಿರಿ ಸೀಗುರಿಯನಿಕ್ಕೆಂಬ
ಭಾಸುರದಿ ಚಾಮರಮನಿಕ್ಕು ಭಾರತಿಯೆಂಬ
ದೇವಿಯರ ಮೆಲ್ಲನಡಿಯೊತ್ತು ಮೇನಕೆಯೆಂಬ
ಓವಿ ಬಿಜ್ಜಣಿಗೆಯಂ ಬೀಸು ಖೇಚರಿಯೆಂಬ
ಸಿರಿಮುಡಿಯನೊಪ್ಪಿರಲು ಸಿಂಗರೆಸು ಶಚಿಯೆಂಬ
ವರಯಕ್ಷಕರ್ದಮವನಿರಿಸು ಯಕ್ಷಿಣಿಯೆಂಬ
ಎಲೆ ಪುಷ್ಪದತ್ತೆ ಪುಷ್ಪಂಗಳಂ ನೀಡೆಂಬ
ಎಲೆಲೆ ಧವಳಾಂಗಿ ಮಡಿವರ್ಗಮಂ ತಾರೆಂಬ
ಅಳಕಕ್ಕೆ ಪುರುಡಿಸುವ ತುಂಬಿಗಳ ನೆಟ್ಟೆಂಬ
ಬೆಳಪ ಮಣಿಮುಕುರಮಂ ನಾಲ್ದೆಸೆಗೆ ಪಿಡಿಯೆಂಬ
ರವಿಕಿರಣೆ ಪದಕಮಂ ಪಿಡಿದು ನೀಂ ನಿಲ್ಲೆಂಬ
ನವಕುಮುದೆ ಬಾಳಶಶಿಯೊಳ್ ತಿಳಕವಿಕ್ಕೆಂಬ
ಜಯವೆಜಯೆ ಕೈಮುಗಿದು ಬಿನ್ನೈಸಿಯೆಂದೆಂಬ
ದಯದೊಳೀಕ್ಷಿಸು ದೇವಿ ಊರ್ವಸಿಯನೆಂದೆಂಬ
ಕಿನ್ನರಿಗೆ ತೆಱಹುಗುಡು ರಂಭ ಹೆಱಸಾರೆಂಬ
ಪನ್ನಗಾಂಗನೆ ತಿಲೋತ್ತಮೆಗೆಡೆಯನೀಯೆಂಬ
ರತಿಯೊಡನೆ ರೋಹಿಣಿಯನೊಳಪುಗಿಸು ಪೋಗಿಸೆಂಬ
ಅತಿಶಯದಿ ಗಂಧರ್ವಸತಿ ಪಾಡುಪಾಡೆಂಬ
ರುದ್ರಕನ್ನಿಕೆಯರಂ ಬೇರೆ ಕುಳ್ಳಿರಿಸೆಂಬ
ಮುದ್ರಿಸೆದ ಭಂಡಾರಮಂ ನೋಡು ನೋಡೆಂಬ
ಧನದವಸತಿಯೃಭರಣಜಾಲಮಂ ನೀಡೆಂಬ
ವನಲಕ್ಷ್ಮಿ ತಂದ ನವಶಾಕಮಂ ತೆಗೆಯೆಂಬ
ವರುಣನರಸಿಯೆ ಅಗ್ಘವಣೆಗಳು ತಾ ಎಂಬ
ಇರದ ಪರಮಾನವಧೈವಂ ಹೂವನೀಯೆಂಬ
ಬೋನಮಂ ಸ್ವಾಹಾವನಿತೆ ಮಾಡು ಮಾಡೆಂಬ
ಭಾನುಸತಿ ಸೆಜ್ಜೆಯೊಳು ಜ್ಯೋತಿಯಂ ಬೆಳಗೆಂಬ
ಪಡಿಯಱತಿಯರ ಮಹಾಕೋಳಾಹಳದ ನಡುವೆ
ಎಡೆಗೊಂಡ ಬಹುರತ್ನಕಾಂತಿನಿಳಯದ ನಡುವೆ ೭೦
ವಿರಚಿಸಿದ ಮಣಿನಿಕರಸಿಂಹಾಸನದ ಮೇಲೆ
ಅರಸಿ ರಂಜಿಪ ಹಂಸತೂಳತಲ್ಪದ ಮೇಲೆ
ಕುಳ್ಳಿರ್ದು ಸಾವಿತ್ರಿಯೊಡನೆ ಮಾತಾಡುತಂ
ಒಳ್ಳಿತೆನೆ ಗಾಯಿತ್ರಿಯೊಳು ಸರಸವಾಡುತಂ
ನಿಂದರುಂಧತಿಗೆ ಕೃಪೆಯಿತ್ತು ನಡೆನೋಡುತಂ
ಮುಂದಿದ್ದ ಸಪ್ತಮಾತೃಕೆಯೊಳು ನುಡಿವುತಂ
ಕಾರಿಕಾಲಮ್ಮೆಯಂ ವಿನಯದಿಂ ನೋಡುತಂ
ಬಾರ ಮಾಂಗಾಯಕ್ಕರಸಿನಾಚಿಯೆನ್ನುತಂ
ಕರೆದು ಯಸ್ಯಜ್ಞಾನಿದೇವಿಯಂ ಪೊಗಳುತಂ
ಕರುಣದಿಂ ಕೋಳೂರ ಕೊಡಗೂಸ ನೋಡುತಂ ೮೦
ಚಂಗಳವ್ವೆಯನೊಲಿದು ನೋಡಿ ಮನವೀವ್ರತಂ
ಮಂಗಳಾಂಗನ ದುಗ್ಗಳವ್ವೆಗೊಲವನೀವುತಂ
ನಂಬಿಯಕ್ಕನ ಮೇಲೆ ಕರತಳವ ನೀವುತಂ
ಇಂಬಱಿವ ವೈಜಕವ್ವೆಯನೊಸೆದು ಓಡುತಂ
ವರದಾನಿ ಗುಡ್ಡವ್ವೆಯಂ ನೋಡಿ ನಲಿವುತಂ
ಪರಮಸುಖಿಯಾದ ಮಲ್ಹಣಿಯನಾದರಿಸುತಂ
ಹರನರ್ಧಮಂ ಸೂಱೆಗೊಂಡ ಸುಧೆಯೊಪ್ಪಿದಳು
ಹರನ ಮನಮಂ ಮಾಱುಗೊಂಡ ವಧುವೊಪ್ಪಿದಳು
ಪುಲಿದೊವಲ ಪುಣ್ಯಾಧಿಕನ ಕಾಂತೆಯೊಪ್ಪಿದಳು
ನಲಿದು ಪೂಜಿಪ ಶರಣಜನ ಶಾಂತೆಯೊಪ್ಪಿದಳು
ನಿತ್ಯನೊಳು ನೆಲೆಗೊಂಡ ಮುತ್ತೈದೆಯೊಪ್ಪಿದಳು
ಸತ್ಯಂ ವಿರೂಪಾಕ್ಷನರ್ಧಾಂಗಿಯೊಪ್ಪಿದಳು
ಆ ಸಮಯದೊಳು ಗುಪ್ತಗಣನಾಥನೊಳಪೊಕ್ಕು
ಭಾಸುರಾಸ್ಥಾನದೊಪ್ಪಕ್ಕೆ ಹರುಷಂ ಮಿಕ್ಕು
ಮೆಲ್ಲನೊಂದೆಸೆಯೆ ಗೋಂಟಂ ಪತ್ತಿ ನಿಂದಿರ್ದು
ಅಲ್ಲಿ ಹೊಱವೇಶವಿಲ್ಲದೆ ಸುಖದಿನೊಳಸಾರ್ದು
ಭಸಿತಮಂ ಮನದೊಳಗೆ ರುದ್ರಾಕ್ಷಿ ಮನದೊಳಗೆ
ಎಸೆವ ಶಂಕರನ ವೇಷಂ ಚಿತ್ತದೊಳಗೊಳಗೆ
ಎಂದೆನಿಪ ಗುಪ್ತಮಾಹೇಶ್ವರಂ ಕೈಮುಗಿದು
ನಿಂದು ಬಿನ್ನೈಸಿದಂ ಚಿತ್ತವಲರುತ್ತಗಿದು ೧೦೦
ತಾಯೆ ಮೂಜಗಮಾತೆ ಶಂಕರಂ ಕಳುಪಿದಂ
ಮಾಯಾರಹಿತೆಯೆ ಮಾತೆ ಶಶಿಧರಂ ಕಳುಪಿದಂ
ಎಂದು ಭಯಭಕ್ತಿಯಿಂದಲ್ಲಿ ಮೈಯಿಕ್ಕುತಿರೆ
ಪಿಂದಿರ್ದ ಭಕ್ತೆಯಂ ತನ್ನ ಕಾಲ್ ತಾಗುತಿರೆ
ದೇವಿಯರ ಪೆಸರಪ್ಪ ಮಹಾದೇವಿಯೆಂಬಳಂ
ಭಾವಿಸಲು ರುದ್ರಕನ್ನಿಕೆಯೆನಿಸಿ ನಿಂದಳಂ
ಕಾಲ್ ತಾಗೆ ಕೋಪಿಸುತೆ ನುಡಿದಳತಿಗರ್ವದಿಂ
ಸೋಲ್ತು ಹೊಱವೇಶಮಂ ಕಾಣದಜ್ಞಾನದಿಂ
ಎಲೆ ಭವಿಯೆ ನೋಡಿ ಪೊಡಮಡು ಪೊಡಮಡೆಂದೆನಲು
ಎಲೆಲೆ ಪಿಂದಿರ್ದರಂ ಕಾಣಬಾರದೆಯೆನಲು
ಭವಿಯೆಂಬ ನುಡಿಗೇಳ್ದು ಗುಪ್ತಮಾಹೇಶ್ವರಂ
ತವಕದಿಂ ಭಕ್ತಿಯಭಿಮಾನಿ ನೋವುತೆ ಕರಂ
ದೇವಿಯರ ವದನಮಂ ದೈನ್ಯದಿಂ ನೋಡುತಿರೆ
ದೇವಿಯರು ನುಡಿದರಾ ನೆರೆದ ಸಭೆ ನಡುಗುತಿರೆ
ಏನವ್ವ ಮಹದೇವಿ ಭವಿಯೆಂದು ನುಡಿವರೇ
ಜ್ಞಾನನಿಧಿ ಗುಪ್ತಗಣನಾಥನಂ ಜರಿವರೇ
ಹೊಱವೇಷವಿದ್ದಲ್ಲಿ ಭಕ್ತಿದೊರಕೊಳ್ವುದೇ
ಬಱಿವೇಷದೊಳು ನುಡಿಯ ಬಲೆಯೊಳಗೆ ಬೀಳ್ವುದೇ
ಗುಪ್ತರುಂ ಶಾಂತರುಂ ಸತ್ಯವುಳ್ಳವರುಂಟು
ಆಪ್ತರೆನ್ನವರ ಭವನೊಲುಮೆಯುಳ್ಳವರುಂಟು ೧೨೦
ಇಂತೊಂದು ತೆಱನೆನಲ್ಬಹುದೆ ಸದ್ಭಕ್ತರಂ
ಸಂತತವನತಶೀಲರ್ ಭಕ್ತಿಯುಕ್ತರಂ
ಭಕ್ತರ ನಿರೋಧದಿಂದೊಂದು ಜನ್ಮಂ ನಿನಗೆ
ಯುಕ್ತವೆನಿಸಿತ್ತು ನೂರ್ವರುಷ ಉರ್ವರೆಯೊಳಗೆ
ಭಕ್ತರುದರಂಬೊಕ್ಕು ನಿಜನಾಮಮಂ ತಳೆದು
ಭಕ್ತನಂ ಭವಿಯೆಂದ ದೂಸಱಿಂದಪ್ಪುದು
ಭವಿಗೆ ಹೆಂಡತಿಯಾಗಿ ಭಕ್ತರ್ಗೆ ಶರಣೆಂದು
ಭವವಾರ್ಧಿಯಂ ದಾಂಟಿ ಶ್ರೀಗಿರಿಗೆ ನಡೆತಂದು
ಬಳಿಕ ಬಪ್ಪುದು ಹೋಗೆನುತ್ತ ಬೆಸಸಲ್ಕಂದು
ಕಳವಳಿಸಿ ಕೊರಗುತ್ತ ಮಹದೇವಿ ನೆರೆನೊಂದು
ಪಿರಿದೊಂದು ಭೀತಿಯಿಂ ಗಿರಿಜೆಯಂ ಬೀಳ್ಕೊಂಡು
ಹರನರಸಿಯಿತ್ತ ಶಾಪವನಲ್ಲಿ ಕೈಕೊಂಡು
ಬರುತಿರ್ದಳಗಜೆ ಬೆಸಸಿದ ಮಾತನಾಡುತ್ತೆ
ಬರುತಿರ್ದಳಂಬಿಕೆಯ ಚರಣಮಂ ನೆನೆವುತ್ತೆ
ಇತ್ತ ಧರಣೀತಳಕೆ ತೊಡವಿದೆಂದೆನಿಸಿರ್ಪ
ಮುಕ್ತಿ ಶಿವಭಕುತಿ ಸಂತಾನದಿಂದಿಡಿದಿರ್ಪ
ಹೊಸ ಸೋಮ ಸೂರ್ಯವೀಥಿಗಳಿಂ ವಿರಾಜಿಸುವ
ಮಿಸುವ ಕರುಮಾಡಕೋಟೆಗಳಿಂದ ರಂಜಿಸುವ
ಗೌರೀಶನಭವಭವನಾಳಿಯಿಂದಂ ಮೆರೆವ
ಪೌರಜನಜನಿತಸಂಪದದ ಸೊಂಪಿಂದೆಸೆವ
ಕೌಶಿಕನೆನಿಪ್ಪ ಮನ್ನೆಯನಿಪ್ಪ ಪಟ್ಟಣದ
ದೇಶದೊಳಗೊಪ್ಪುವುಡುತಡಿಯೆಂಬ ಪಟ್ಟಣದ ೧೪೦
ಒಳಗಿಪ್ಪರೊಪ್ಪದಿಂ ಗಂಡ ಹೆಂಡಿರು ನೋಡ
ತಿಳಿವೊದಗಿ ಶಿವನನರ್ಚಿಸುವ ಶರಣರು ನೋಡ
ಶಿವಭಕ್ತ ಶಿವಭಕ್ತೆಯೆಂಬುದಿಬ್ಬರ ಪೆಸರು
ಶಿವನ ಕಾರುಣ್ಯದಿಂ ಮಾಯೆಯಂ ಲೆಕ್ಕಿಸರು
ಷೋಡಸಪ್ರಾಯವವರಿಬ್ಬರಿಗೆ ಸಮವಾಗೆ
ಗಾಡಿವಡೆದರು ಶೈವದಂಪತಿಗಳನುವಾಗೆ
ಚೆಲುವರಚ್ಚಿಳಿಯರಭಿಮಾನಿಗಳ್ ಜ್ಞಾನಿಗಳ್ ೧೫೦
ವಿನಯವಿದರಾಹ ನಿರ್ಭಾರ್ಧಕರು ಸಾಧಕರು
ಘನಶಿವನ ನಿಜವಱಿವ ವೇದಕರು ಬೋಧಕರು
ಕೊಱತೆಯಿಲ್ಲಂ ತಮಗೆ ಧನದೊಳಂ ಮನದೊಳಂ
ನೆಱೆಮೆಱೆವರಧಿಕ ಜೌವನದೊಳಂ ಜನದೊಳಂ
ಇಂತಿಪ್ಪ ಶಿವಭಕ್ತರಂತೊಂದು ದಿವಸದೊಳ್
ಚಿಂತಿಸುತ್ತೈತಂದು ಶಂಕರನ ನಿಳಯದೊಳು
ಪೊಕ್ಕ ಗಿರಿಜಾತೆಯಂ ಪೊಗಳುತ್ತ ಕೈಮುಗಿದು
ಅಕ್ಕಱಿಂ ಸತಿಪತಿಗಳಗಿದಗಿದು
ದೇವಿ ಎಮಗೊರ್ವ ಪುತ್ರಿಯ ನೀವುದೆಲೆ ತಾಯೆ
ತಾವು ನಿಮ್ಮಯ ಪೆಸರನಿಟ್ಟಪೆವು ಒಲಿದೀಯೆ
ಅವನಿಗತಿರೂಪಸಂಪನ್ನೆಯಂ ಚೆನ್ನೆಯಂ
ಶಿವನ ಶಿವಭಕ್ತೆಯೊಳಭಿನ್ನೆಯಂ ಕನ್ನೆಯಂ
ಕರುಣಿಸುವುದೆಂದು ಬಾಯಳಿದು ಬಿನ್ನವೆಸುತಿರೆ
ಗಿರಿಸುತೆಯ ಮುಡಿಯಿಂದಲೊಂದು ಹೂ ಸಡಿಲುತಿರೆ
ಆ ಪುಷ್ಪವಂ ಕೊಂಡು ಕುಕಿಲೂವಿಱಿದು ಕುಣಿದಾಡಿ
ಭಾಪು ಭಾಗ್ಯವೆ ಎಂದು ಶಿವಭಕ್ತರೊಲಿದಾಡಿ
ನವಪುಷ್ಪಮಂ ಪುಷ್ಪವತಿಯಧರದೊಳಗಿರಿಸಿ
ಪವಣಿಲ್ಲದಕ್ಕಱಿಂ ನಡೆತಂದರುತ್ಸವಿಸಿ
ಅವರ ಬಸಿರೊಳ್ ಬಂದು ಪೊಕ್ಕಳಾ ಮಹಾದೇವಿ
ಶಿರವನರಸಿಯಾಜ್ಞೆಯಿಂದಿರ್ದಳುತ್ತಮಭಾವಿ ೧೭೦
ಲೀಲೆಯಿಂ ಗರೂಭಕಮಲಕ್ಕೆ ಪಕ್ಕಾಗಿರ್ದ
ಳಾಲಂಬನಕ್ಕೆಳಸಿ ಪಟ್ಟಲನುವಾಗಿರ್ದ
ಳಿಂತೆಸೆವ ಸುಕುಮಾರಿ ಗರ್ಭದೊಳಗೊಪ್ಪುತಿರೆ
ಸಂತತಂ ಸುಖಮುಖದಿ ಬಳೆವುತ್ತ ನೀರೆಯಿರೆ
ಕಂದ
ಗಿರಿಜಾತೆಯಾಜ್ಞೆಯಿಂದಂ
ನರಲೋಕಕ್ಕಿಳಿದು ಬಂದುಭಕ್ತೆಯ ಪುಣ್ಯೋ
ದರಗತ ವೆಶುದ್ಧ ವಿಭ್ರಮ
ಗುರುತರ ಮುಖವಾದ ಗರ್ಭಮಂ ಬಣ್ಣಿಪರಾರ್
ಇದು ಮೊದಲನೆಯ ಸ್ಥಲಂ
ಮುಕ್ತಾಯ.
ಏಳನೆಯ ಸ್ಥಲ
ವೃತ್ತ
ಪೊಱಮಟ್ಟಳುಡುತಡಿಯ ಪುರಮಂ ಮಹಾದೇವಿ
ನೆಱ ಮನದ ಪಾವನದ ಘನವಿರಕ್ತಿಯನೋವಿ
ಒಡನೆ ಬರುತಿರ್ಪ ಪುರಜನಮಂ ಪರೀಕ್ಷಿಸದೆ
ನಡೆವ ಪರಿಚಾರಕೆಯರಕ್ಕೆಯಂ ಲೆಕ್ಕಿಸದೆ
ಒಟ್ಟಿವೊರಲುವ ಮಾತೆಪಿತರಂ ವಿಚಾರೆಸದೆ
ಬಟ್ಟೆಯೊಳು ಕಾಲ್ಗಡ್ಡಬಿದ್ದವರಂ ಲಾಲಿಸದೆ
ಪುರದ ಪುಣ್ಯಂ ಹೆಣ್ಣುರೂಪಾಗಿ ಪೋಪಂತೆ
ಪುರದ ಹರಭಕ್ತಿ ಪರ್ವತಕ್ಕೆಯ್ದಿ ನಡೆವಂತೆ
ಬರುತಿರ್ದಳತಿಭಕ್ತೆ ಉಡುತಡಿಯ ಮಹಾದೇವಿ
ಪರಮವೈರಾಗ್ಯ ರಸವೆಯ್ದೆ ತನುವಂ ತೀವಿ ೧೦
ನಿಷ್ಠೆ ಪಾದದ ರಕ್ಷೆಯಾಗುತಿರೆ ನಡೆವುತಂ
ಉಟ್ಟ ಕೇಶಾಂಬರಂ ದಟ್ಟೈಸಿ ಮೆರೆವುತಂ
ಎಡೆಗೊಂಡ ವೈರಾಗ್ಯದಲ್ಲಿ ಬೆಳಗೊಡೆಯಾಗಿ
ನಡೆಯಿಸುವ ಸಂಬಳಂ ಮೃಢಭಕ್ತಿ ತಾನಾಗೆ
ಮಲ್ಲಿನಾಥಂ ಕರಸರೋಜಮಧ್ಯದೊಳೊಪ್ಪೆ
ಅಲ್ಲಿಯಂಗುಲಿಯ ಪಂಚಾವರಣದೊಳಗೊಪ್ಪೆ
ಒಂದು ಪರೂವತ ಮೂಲಮಂ ಸಾರುತಿಪ್ಪಲ್ಲಿ
ಸಂದಣಿಪ ನಿಷ್ಠೆಯಿಂ ನಡೆದು ಬರುತಿಪ್ಪಲ್ಲಿ
ತಾಯಿ ಬಳಲ್ದವ್ವ ಎಂದೆನುತ ಮುಟ್ಟುವ ತೆಱದೆ
ವಾಯು ತೀಡುತ್ತಮಿರೆ ಕಂಪು ತಂಪಿನ ಭಱದೆ ೨೦
ಮಲ್ಲಿನಾಥಂ ಕರುಣಿಪಂ ಬನ್ನಿಮೆಂಬಂತೆ
ಪಲ್ಲವಂಗಳ್ ಪದವನಿಂದವಲುಗಲ್ಕಂತೆ
ಬಗೆದುದಂ ಶಿವನೀವನೆಂದು ಕರೆವಂದದಿಂ
ಖಗಸಂಕುಲ ಕರೆವುತಿರ್ದುವಾನಂದದಿಂ
ಬರೆವರೆ ಶಿವಾಲಯಗಳ ವೃಷಭಕೇತನಂ
ಹರಭಕ್ತೆಯತ್ತಲೊಲವಾದತ್ತು ನೂತನಂ
ಪೂಗಿಡು ಮಹಾದೇವಿಯರ ಪೂಜೆಗೆಂದೆಳಸಿ
ರಾಗದಿಂ ಮೊಗವಲರ್ದು ಹಿಗ್ಗಿಹೆಚ್ಚಿರೆ ಬಯಸಿ
ಹಳ್ಳದೊಳು ಹೊದರಿನೊಳು ಬೆತ್ತದೊಳು ಬಿದಿರ್ಗಳೊಳು
ಕೊಳ್ಳದೊಳು ಕೊಳಗಳೊಳು ಕೆರೆಗಳೊಳು ತೊರೆಗಳೊಳು
ಬೆಟ್ಟದೊಳು ಘಟ್ಟದೊಳು ಸುರುವಿನೊಳು ದುರುವಿನೊಳು
ಇಟ್ಟಣಿಪ ಹುಲಿ ಹುಲ್ಲೆ ಇಮ್ಮಾವು ಮರಗಳೊಳು
ಕೂಡೆ ಪೆರ್ಬುಲಿ ಕಡವು ಕರಡಿ ಸಾರಂಗದೊಳು
ಕಾಡಾನೆ ಕಾಳ್ಕೋಣನೆನಿಪ ಮೃಗವೃಂದದೊಳು
ಮಲ್ಲಿನಾಥನನಲ್ಲಿ ನೆನೆವುತಂ ನಡೆವುತಂ
ಮಲ್ಲಿನಾಥನ ನಿಷ್ಠೆಯಿಂದ ಸುಖವಡೆವುತಂ
ಬಂದು ಪರ್ವತ ಮಲ್ಲಿನಾಥಂ ನೆಱೆಕಂಡು
ನಿಂದು ಪೊಡಮಟ್ಟು ನಯದಿಂದ ನೇಹಂಗೊಂಡು
ಗೀತಮಂ ಪಾಡುತಂ ಪೊಱಮಟ್ಟು ನಡೆತಂದು
ನೂತನ ಶ್ರೀಶೈಲದೊಳಗೆ ಚಿತ್ತಂ ಸಂದು ೪೦
ಎಲ್ಲಿ ಲತವನಗಳುಂಟಲ್ಲಲ್ಲಿ ಮಹದೇವಿ
ಸಲ್ಲಲಿತೆ ಪುಷ್ಪವಾಟಿಯೊಳಲ್ಲಿ ಮಹದೇವಿ
ಕಲ್ಲು ಗವಿಗಳ ನಡುವೆ ಮಲ್ಲಿನಾಥನ ಪೂಜೆ
ಎಲ್ಲಿ ತಿಳಿಗೊಳದಲ್ಲಿ ಮಲ್ಲೆನಾಥನ ಪೂಜೆ
ಬಾಳೆ ಸಹಕಾರದೊಳು ನೀಲಕಂಠನ ಪೂಜೆ
ಲೀಲೆಯಿಂ ಹಿಮಜಲಾವಲಯ ವಿಲಸಿತ ಪೂಜೆ
ಒದವಿ ಹಂಸಗಳಿಪ್ಪ ನದಿಯ ತಡಿಯೊಳು ಪೂಜೆ
ವಿದಳಿತಾಂಬುಜಯುತ ತಟಾಕ ತೀರದ ಪೂಜೆ
ನಿರ್ಜನ ನಿವಾತ ನಿಸ್ಸಂಗ ನಿರ್ಮಳ ಪೂಜೆ
ನಿರ್ಜಿತಾನಂಗ ಮಂಗಳಮಯ ಮಹಾ ಪೂಜೆ ೫೦
ಯಾಗಿ ಪರ್ವತದೊಳಿರೆ ತಂದೆ ತಾಯ್ಗಳು ಬಂದು
ರಾಗವಳಿದಲ್ಲಿ ಮಗಳಂ ಕಂಡು ಮಿಗೆ ನೊಂದು
ಏನವ್ವ ಮಹದೇವಿ ಇಂತಿಪ್ಪರೇ ಮಗಳೆ
ನಾನಾ ವಿರೋಧದೊಳು ಸಂದಿಪ್ಪರೇ ಮಗಳೆ
ಶಶಿ ಸೋಂಕೆ ಕಂದುವಂಗಂ ಬಿಸಿಲಿಗಾಂತುದೇ
ಉಸುರನಾದದ ತನುವು ಬಿರುಗಾಳಿಗಾಂತುದೇ
ಮೃದುಪದಂ ಕಲುನೆಲಕೆ ಸೇರಿದ್ದುದೇ ಮಗಳೆ
ಒದವಿ ಪಲವುಪವಾಸವಳವಟ್ಟವೇ ಮಗಳೆ
ಎಂದ ಮಾತಂ ಕೇಳ್ದು ಮಹದೇವಿ ನಸುನಗುತ
ನೊಂದು ನುಡಿದಳು ಪರ ಮವೈರಾಗ್ಯದೊಳು ಮಿಗುತ
ಶಿವಭಕ್ತರಾಗಿಯುಂ ನೀವಿಂತು ನುಡಿವರೇ
ಶಿವಭಕ್ತಿ ಯೇಕಾಂತಮಂ ಬಿಡಿಸಬಗೆವರೇ
ಭವಿಯ ಸಂಗಂ ತಪ್ಪಿ ಭವನ ಸಂಗವನಪ್ಪಿ
ಶಿವಭಕ್ತಿ ರಸಭರಿತ ಶರನಿಧಿಯನಡುವೊಪ್ಪಿ
ಇರ್ಪುದಂ ಕೆಡಿಸುವರು ಮಾತಾಪಿತರೆನಗಲ್ಲ
ಸರ್ಪಭೂಷಣನ ಭಕ್ತಾಳಿಗಿದು ನುಡಿಯಲ್ಲ
ಎನೆ ಮಾತೆ ಪಿತರಲ್ಲಿ ನೆರೆ ಕೌತುಕಂಬಟ್ಟು
ತನುಜೆಗಂದೆರಡುಂ ಸಹಸ್ರ ಪೊನ್ನಂ ಕೊಟ್ಟು
ಹೋದರತ್ತಲು ತಂದೆ ತಾಯಿಗಳು ಸೋಜಿಗಂ
ಆದುದುಡುತಡಿಯೊಳಿತ್ತಲು ಕಾಮನೂಳಿಗಂ ೭೦
ಕೌಶಿಕನನೈದುಂ ಸರಂಗಳಿಂದಿಸುತಲಿರೆ
ಆಸೆ ಮಹದೇವಿಯರತ್ತ ಮಿಕ್ಕು ಪರಿವುತಿರೆ
ಮಹದೇವಿಯೊಳಿವಳೆಂದಾ ಕೌಶಿಕಂ ನೆನೆದು
ಬಹುವಿಧದ ವೇಷವಂ ತನುವಿನೊಡನೆ ನೆಱೆತಳೆದು
ಭಸಿತಮಂ ರುದ್ರಾಕ್ಷಿಯಂ ಜಡೆಯನಳವಡಿಸಿ
ಎಸೆವ ಹೊರವೇಷಮಂ ತನುವಿನೊಳು ಸಿಂಗರಿಸಿ
ತನ್ನಂದದಿಂ ಭಕ್ತರಂ ನಾಲ್ವರು ಕೂಡಿ
ಉನ್ನತ ಸ್ಮರತಾಪದಗ್ಧಚಿತ್ತಂ ನೋಡಿ
ನಡೆತಂದನುರವಣಿಸಿ ಪರ್ವತದ ದೆಸೆಗಾಗಿ
ಮೃಡ ವೇಷಮಂ ಹೊರಗೆ ಧರಿಯಿಸುತ ಮರುಳಾಗಿ ೮೦
ಬಂದು ಶಿಖರವನೇರಿ ಮಹದೇವಿಯಂ ಕಂಡು
ಇಂದು ಮುಖಿಯಂ ಸುಖದ ಸುಮ್ಮಾನಿಯರ ಕಂಡು
ಭಕ್ತನಾದಂ ಮಹಾದೇವಿ ಕರುಣಿಪುದೆನಗೆ
ಯುಕ್ತಿಯಿಲ್ಲದ ಕಿಂಕರಂಗೆ ಕರುಣಿಪುದೆನಗೆ
ಸುಖದ ಸುಗ್ಗಿಯ ಸದಾವರದೆ ಕರುಣಿಪುದೆನಗ
ಮುಖದ ಮುನಿಸಿದನ ತಿಳಿವಿನಬಳೆ ಕರುಣಿಪುದೆನಗೆ
ಎಂದು ಕಾಲ್ವಿಡಿದಿರ್ದ ಕೌಶಿಕನನೀಕ್ಷಿಸುತೆ
ನೊಂದು ಕಡುನೊಂದು ನೆಱೆನೊಂದಳಲ್ಲಿ ನಸುನಗುತ
ಬಿಟ್ಟಿರ್ಪನೆಂದೊಡಂ ಬಿಡದು ನಿನ್ನಯಮಾಯೆ
ಒಟ್ಟಯಿಸಿ ಬಂದೊಡಮದಪ್ಪುದೀ ಮಾಯೆ ೯೦
ಜೋಗಿಗಂ ಜೋಗಿಣಿಯದಾಯ್ತು ನಿನ್ನಯ ಮಾಯೆ
ರಾಗದಿಂ ಸವಣಂಗೆ ಕಂತಿಯಾಯಿತು ಮಾಯ
ಭಗವಂಗೆ ಮಾಸಕಬ್ಬೆಯ ಚೋಹವಾಯ್ತಯ್ಯು
ಬಗೆವರಾರವರವರ್ಗೆಯವರಂದವಾಯ್ತಯ್ಯ
ಗಿರಿಯನೇರಿದೊಡಿರದೆ ಗಿರಿಯನೇರಿತು ಮಾಯೆ
ಪರಿದಡವಿಯಂ ಪೊಕ್ಕೊಡೊಡನೆ ಪೊಕ್ಕುದು ಮಾಯೆ
ಬೆನ್ನ ಕೈಯಂ ಬಿಡದು ಭಾಪು ಸಂಸಾರವೇ
ಎನ್ನನಂಜಿಸಿತು ಮಝ ಭೃಪು ಸಂಸಾರವೇ
ಕರೈಣಾಕರಾ ನಿನ್ನ ಮಾಯೆಗಂಜುವೆನಯ್ಯ
ಪರಮೇಶ್ವರಾ ಮಲ್ಲಿನಾಥ ಕರೈಣಿಪುದಯ್ಯ ೧೦೦
ಇನ್ನೇವೆನಿನ್ನೇವೆನಯ್ಯೋ ಮಹಾದೇವ
ಪನ್ನಗಾಭರಣ ಕರೈಣಿಸುವುದೆಲೆ ಮಹಾದೇವ
ಎಂದು ವೈರಾಗ್ಯದಿಂದಂ ಗೀತವಂ ಪಾಡಿ
ಮುಂದಿರ್ದ ಕಾಮುಕನನತಿ ರೋಷದಿಂದಂ ನೋಡಿ
ಎಲೆಲೆ ಕೌಶಿಕ ಹೋಗು ನೀನೇಕೆ ನಾನೇಕೆ
ನೆಲನಱಿಯ ನಿನ್ನೊಡನೆ ಪುದುವಾಅಳ್ವುದೆನಗೇಕೆ
ತಮವೆತ್ತ ಬೆಳಗೆತ್ತ ಶಿಖಿಯೆತ್ತ ತಂಪೆತ್ತ
ಭ್ರಮೆಯೆತ್ತ ತಿಳಿವೆತ್ತ ಬಿಸಿಲೆತ್ತ ಶಶಿಯೆತ್ತ
ನೀನೆತ್ತ ನಾನೆತ್ತ ಪೋಗು ಪೋಗೆಲೆ ಮರುಳೆ
ಏನೆಂದು ಬಂದು ಎಲೆ ತರಳ ನಿನಗಾಂ ಪುರುಳೆ ೧೧೦
ನಿನ್ನ ವೇಷಂ ನಿನಗೆ ಎನ್ನವೇಷವೆವಗೆ
ನಿನ್ನ ಪವಣೇಘನಂಘನಭಕ್ತರುರ್ವರೆಗೆ
ನಿನ್ನ ಪುಣ್ಯದ ಬೆಳಸು ನಿನಗಿಲ್ಲ ಕೌಶಿಕನೆ
ಎನ್ನ ಭಾಗ್ಯದ ಫಲವನೀಶ್ವರಂ ತಪ್ಪುವನೆ
ಎನ್ನಂತೆ ಬಾಳ್ವುದೆನಗಿಂತಿದೆ ಘನವೆನಗೆ
ಇನ್ನೇಕೆ ನಿನ್ನ ಸಂಗಂ ಬೇಡ ಬೇಡೆನಗೆ
ಎಂದಿಂತು ಬಿರುನುಡಿಯೆ ಕೌಶಿಕಂ ಮನನೊಂದು
ಬಂದು ತನ್ನೊಳಗೊಂದನಾಳಾಚಿಸಿದನಂದು
ಶಿವ ಭಕ್ತರ್ಗೆ ಹೊನ್ನಿತ್ತು ನೋಡುವೆನೆಂದು
ಅವರ ಮಾತಂ ಮೀಱಳಿದನೆ ಮಾಡುವೆನೆಂದು ೧೨೦
ಕಲೈಮಠದ ರಾಜಗುರುಗಳಿಗೆ ಹೊನ್ನೀವುತಂ
ಹುಲುಮಠದ ಮುಖ್ಯರ್ಗೆ ಘನಲಂಚವೀವುತಂ
ಇರ್ದ ಮಾಹೇಶ್ವರರರ್ಗೆಯ್ದೆ ಹೊನ್ನೀವುತಂ
ಸಾರ್ದಶರಣರಿಗಿತ್ತು ಕುಟಿಲವಂ ಮಾಡುತಂ
ಒಂದು ದಿನವೆಲ್ಲ ಕೃತಸಂಕೇತರಾಗುತಂ
ಬಂದು ನೆರೆವರ್ ಭಕ್ತರೊಂದೆಡೆಯೊಳೊಗ್ಗುತಂ
ಮಕುಟದ ಮಹಾಮಹಿಮರಲ್ಲಿ ಕೆಲಬರೈ ಬೇರೆ
ವಿಕಸಿತಾನನರಾಗಿ ಮೆರೆವ ಶರಣರು ಬೇರೆ
ಕಕ್ಷದ ಕರಸ್ಥಲ ಶಿರಸ್ಥಲದವರು ಬೇರೆ
ವಕ್ಷಸ್ಥಲ ಮುಖಸ್ಥಲದ ಶರಣರುಂ ಬೇರೆ ೧೩೦
ಸರ್ವಗುಣ ಸಂತಾನವೊಬ್ಬುಳಿಸಿ ಕುಳ್ಳಿರಲು
ಬಿನ್ನಯಿಸಿದಂ ಕೌಶಿಕಂ ನಿಂದು ಮೆಯ್ಯಿಕ್ಕಿ
ತನ್ನ ಲಜ್ಜೆಯನಱಿಯದಾತುರಂ ಮೆಯ್ಯಿಕ್ಕಿ
ದೇವ ಉಡುತಡಿಯಲಿರ್ಪೆಂ ಪೆಸರ್ ಕೌಶಿಕಂ
ದೇವ ಮಹದೇವಿ ಮಮ ಜೀವ ಜೀವಾತ್ಮಕಂ
ಭವಿಯೆಂದು ಬಿಟ್ಟಳಾಂ ಭಕ್ತನಾದೆಂ ದೇವ
ಶಿವಭಕ್ತೆಯಂ ಕೂಡಿ ಕೊಡುವುದೆನ್ನೊಳು ದೇವ
ಎನೆ ಮಹೇಶ್ವರರೆಲ್ಲೊಡಂಬಟ್ಟು ಕೇಳುತಂ
ತನತನಗೆ ತಪ್ಪಿಲ್ಲಿ ನಿನ್ನೊಳೆಂದುಬ್ಬುತಂ ೧೪೦
ಕರೆ ಮಹದೇವಿಯನೆನುತ್ತೊಬ್ಬನಂ ಕಳುಪೆ
ಶರಣರನು ಮತಿಗೊಟ್ಟು ಕರೆಯೆಂದು ನೆಱೆ ಕಳುಪೆ
ಬರುತಿರ್ದಳಿತ್ತಲಿತ್ತಲು ನೆನೆದು ಮಹದೇವಿ
ಪರಮ ವೈರಾಗ್ಯನಿಧಿ ಶಿವಭಕ್ತಿ ಸದ್ಭಾವಿ
ಮುನ್ನವೇ ತಿಳಿದು ಸಾಹಿತ್ಯ ದಿವ್ಯಜ್ಞಾನಿ
ಉನ್ನತ ಶಿವಾರ್ಚನಾನಿರತ ಪರಮಧ್ಯಾನಿ
ಪರೂವತದ ಮಲ್ಲಿನಾಥನ ಮುಂದೆ ಒಂದೊಂದು
ಶರ್ವಾಣಿಯಾಜ್ಞೆಯಿಂ ಶಕ್ತಿಯಂ ನೆಱೆತಂದು
ಗಳಗಳನೆ ಮೇಲೊಂದು ನಿಳಯಮುಮನಳವಡಿಸಿ
ಪುಳುಕಿಸುತೆ ಶಕ್ತಿ ಪ್ರತಿಷ್ಠೆಯನಲಂಕರಿಸಿ ೧೫೦
ಆ ಪೀಠದೊಳು ನಿತ್ಯನಿಧಿ ಮಲ್ಲಿನಾಥನಂ
ಕಾಪಾಲಿಯಂ ಶೂಲಿಯಂ ಮಲ್ಲಿನಾಥನಂ
ಕಾಮದಹನವ್ಯೋಮಕೇಶಿಯಂ ಭೀಮನಂ
ಸೋಮಧರನಂ ಸ್ವಾಮಿಯಂ ಸಾರ್ವಭೌಮನಂ
ಮಾಡಿತೆ ಸುಮುಹೂರ್ತವೆಂದು ಬಿಜಯಂಗೆಯಿಸಿ
ನೋಡಿ ಘನಶಕ್ತಿಯೊಳು ಶಂಭುವಂ ಮೇಳೈಸಿ
ಕುಳ್ಳಿರ್ದಳಚಲೆ ನಿರ್ಮಳ ನಿಷ್ಕಳಾಯುಕ್ತೆ
ಕುಳ್ಳಿರ್ದಳಕಳಂಕಚರಿತೆ ಪರಮವಿರಕ್ತೆ
ಇರ್ದಳಾನಂದನಿಧಿ ಸುಖಕರ ಸುಧಾವಾಣಿ
ಇರ್ದಳತ್ಯನುಪಮ ಸುಸಂಗಿ ಲಿಂಗಪ್ರಾಣಿ ೧೬೦
ಇರೆ ಬಂದ ಭಕ್ತನಾ ಮಹದೇವಿಯಂ ಕಂಡು
ಹರನನಲದ ಭಕುತಿ ಭರಿತೆಯಿರವಂ ಕಂಡು
ಕರೆಯಲಮ್ಮದೆ ನೋಡಿ ಕಣ್ಮುಚ್ಚಿ ಪೊರಮಟ್ಟು
ತಿರುಗಿ ಬಂದಂ ಭಕ್ತರಲ್ಲಿಗಚ್ಚರಿವಟ್ಟು
ಬಂದು ಬೆಱಗಾಗಿ ಭರದಿಂದ ಬಿನ್ನವಿಸಿದಂ
ಇಂದುಮುಖಿಯಿರವಿನಾನುಡಿಯಂ ಮೇಳವಿಸಿದಂ
ಏನೆಂಬೆನಾ ಮಹಾದೇವಿಯ ಚರಿತ್ರಮಂ
ತಾನಿರ್ದಳತ್ಯಧಿಕಮೆನಿಸುವ ವಿಚಿತ್ರದಿಂ
ಚೆನ್ನಮಲ್ಲಯ್ಯನಂ ಚೆನ್ನಪೀಠದೊಳಿಟ್ಟು
ತನ್ನಸುವನಾಲಿಂಗದಂಘ್ರಿಯೊಳಗಿರಲಿಟ್ಟು
ಇರ್ದಪಳು ಎಂತಾರಾರ್ಗಂ ಚಿಂತಿಸಲ್ಕರಿದು
ಸಾರ್ದಳೆರಡಿಲ್ಲದಿರವಂ ಘಟ್ಟಿಸಲ್ಕರಿದು
ನೋಡಬಾರದು ನುಡಿಸುವ ಮಾತದೆಲ್ಲಿಯದು
ಆಡಂಬರಂ ಕೊಳ್ಳದತ್ಯಧಿಕಮಾದುದದು
ಅತಿನಿಬಿಡವಸತಿಸಾಂದ್ರವಿತಸುಖಂ ಲಿಂಗದೊಳು
ಎನೆ ಕೇಳ್ದು ಶರಣರೆಲ್ಲ ಹಾ ಹಾ ಎನುತೆದ್ದು
ತನತನಗೆ ಪರಿತಂದು ಪರಮಸುಖಮಂ ತಾಳ್ದು
ತೆಗೆದಪ್ಪಿಕೊಂಡು ಮಹದೇವಿಯಂ ಮುಂಡಾಡಿ
ಬಗೆವೆಚ್ಚಿ ಮುದದಿಂದವೆಲ್ಲರುಂ ಕೊಂಡಾಡಿ ೧೮೦
ಹೋಗು ಕೌಶಿಕರಾಜ ಹೋಗು ನಿನಗಳವಲ್ಲ
ರಾಗರಹಿತೆಯ ಚಿತ್ತವತಿ ಕೂರಿತಿಂಬಿಲ್ಲ
ಎಂದಾತನಂ ಕಳುಪಿ ಮಹದೇವಿಯಂ ನೋಡಿ
ಬಂದ ಗಣಸಂಕುಳಂ ಪರಕೆಯಿಂ ನೆಱೆ ನೀಡಿ
ನಿನ್ನಂತೆ ಗುರು ಕರುಣವಾರ್ಗುಂಟು ಮಹದೇವಿ
ಮಲ್ಲಿನಾಥನ ಪರಮಕೀರ್ತಿಲತೆ ನೀನವ್ವ
ಮಲ್ಲಿನಾಥನ ಸಕಳಸುಖಮೂರ್ತಿ ನೀನವ್ವ
ಎಲೆ ನಿತ್ಯ ಮುಕುತೆ ಸತ್ಯಪ್ರಕಾಶಿತೆ ನೀನೆ
ಸೆಲೆಸಂದ ನಿರುಪಮ ಜ್ಞಾನಪಸಂಪದೆ ನೀನೆ ೧೯೦
ಎಂದು ಕರುಣಿಸುವ ಗಣಸಂಕುಳಕ್ಕೆರಗುತುಂ
ಬಂದ ಮಾಹೇಶ್ವರರನಳ್ಳರಿಂ ಕಳಾಪುತಂ
ತನ್ನಯ ಪೊಗಳ್ತೆಗಂತಂತು ಮಿಗೆ ನಾಣ್ಚುತಂ
ಚೆನ್ನಮಲ್ಲಯ್ಯನತ್ತಲು ನೆನಹ ಸಾರ್ಚುತಂ
ಬಂದ ಕಿನ್ನರ ಬೊಮ್ಮಿ ತಂದೆಯಂ ಕಾಣುತಂ
ಅಂದಂದಿನುಚಿತಕ್ಕೆ ಗೀತಮಂ ಪಾಡುತಂ
ಪಲಕೆಲವು ದಿವಸವೀತೆರದಿ ಸುಖದಿಂದಿರ್ದು
ಚಲಿಸದಗಲಗೆ ಮಿಸುಕದಲಸದೊಲವಿಂದಿರ್ದು
ನರಲೋಕದೊಳಗಿರವು ಬೇಡ ಸಾಲ್ಗಿನ್ನೆಂದು
ಗಿರಿಸುತೆಯ ಶಾಪವಾದುದು ತೀರಿತಿನ್ನೆಂದು ೨೦೦
ಕಲುಮಠದ ಹುಲುಮಠದ ಶಿವಮುಖ್ಯರಂ ಕರೆದು
ಒಲುಮೆಯಿಂ ಮಲ್ಲಿನಾಥನ ಮುಂದೆ ಭರವಿಡಿದು
ಚೆನ್ನಮಲ್ಲಯ್ಯಂಗೆ ಮಜ್ಜನಕೆ ಪೂಜನೆಗೆ
ಉನ್ನತಾರೋಗಣಗೆ ನವಧೂಪದಾರತಿಗೆ
ಬೇಡಿದನಿತುಂ ಹೊನ್ನನಿತ್ತು ವಿಸ್ತರಿಸುತುಂ
ಬೇಡಿಕೊಂಡವರನೋರಂತೆಯುಪಚರಿಸುತುಂ
ಎಂದುವುಂ ಕುಂದದಂತಲ್ಲಿ ಸಮಗಟ್ಟುತುಂ
ನಿಂದ ಪರ್ವತ ಮಲ್ಲಿನಾಥಂಗೆಯಱಿಪುತುಂ
ನಡೆಯಿಪುದು ಚೆನ್ನಮಲ್ಲಯ್ಯಗಿದೆಲ್ಲಮಂ
ಮೃಢ ನಂಬಿದೆಂ ಮಾಳ್ಪುದೀವೊಂದು ಸೊಲ್ಲುಮಂ ೨೧೦
ಎನುತೆನುತ ಚೆನ್ಮಲ್ಲಯ್ಯನಲ್ಲಿಗೆ ಬಂದು
ಮನವೊಸೆದು ಕೈಮುಗಿದು ಕಾರ್ಪಣ್ಯದಿಂ ನುಡಿದು
ದೇವ ಕರುಣಿಪುದು ಕೈಲಾಸಕ್ಕೆ ಬಟ್ಟೆಯಂ
ದೇವ ಗಿರಿಜೆಯ ಚರಣಮಂ ಕಾಣ್ಬ ನಿಷ್ಠೆಯಂ
ಭವಿಯ ಸಂಗದ ತನುವನಿದನೊಲ್ಲೆನಿದನೊಲ್ಲೆ
ನವಯುವಂ ಭೀಭತ್ಸುವಿದನೊಲ್ಲೆನಾ ವೊಲ್ಲೆ
ನೆನಗೆ ನಿಮ್ಮಳಕಾಯಮಂ ಕರುಣಿ ಕರೈಣಿಪುದು
ಎನಗೆ ವಿದ್ಯಾವಯವಮಂ ದೇವ ಕರುಣಿಪುದು
ಎಂದು ಬಿನ್ನಯಿಸೆ ಬಂದುದು ವಿಮಾನಂ ಕೂಡೆ
ಇಂದುಬಿಂಬದಬೆಳಗನೇಳಿಸುತ್ತುಂ ಕೂಡೆ ೨೧೦
ಒಡನೆ ಬಂದರು ಗಣಾಧ್ಯಕ್ಷರಾನಂದದಿಂ
ನಡುವೆ ನಿಲುತಂ ಪರ್ವತಾಗ್ರದೊಳು ಛಂದದಿಂ
ಬಂದ ಪುಷ್ಪಕದ ನಡುವಣ ದಿವ್ಯ ದೇಹದೊಳು
ತಂದು ಮಹಾದೇವಿಯಂ ಪೋಗಿಸಿದರ್ ಕಾಯದೊಳು
ಮುಂದಿರ್ದ ಕಾಯಮದು ಮಾಯವಾಗುತ್ತಮಿರೆ
ಮುಂದಣ ಗಣೇಶ್ವರರು ನೋಡಿ ಬೆರಗಾಗುತಿರೆ
ಪುಷ್ಪವೃಷ್ಟಿಯ ನಡುವೆ ದೇವಗಣತತಿಯೊಳಗೆ
ಪುಷ್ಪಕಂ ನೆಗೆದುದಾಕಾಶ ದುಂಧುಬಿ ಮೊಳಗೆ
ಪರ್ವತದ ಶಿವಭಕ್ತ ಕುಲವೊಲಿದು ನೋಡುತಿರೆ
ಪರ್ವಿದುದು ಗಗನ ತಳವಂ ಜಗಂ ಪೊಗಳುತಿರೆ ೨೩೦
ಬಂದು ನಂದೀಶ್ವರನ ಬಾಗಿಲೊಳಗೊಲಿದಿಳಿದು
ಮುಂದೆ ಮೆಯ್ಯಿಕ್ಕುತಂ ನಡೆತಂದು ನಲಿನಲಿದು
ಪಾರ್ವತಿಯ ಮುಖಕಮಲವಿಮಲಾರ್ಕ ತೇಜಂಗೆ
ಪಾರ್ವತಿಯ ಭುಜಲತಾವರಣ ಸುರಭೋಜಂಗೆ
ಗೌರೀ ಕಟಾಕ್ಷವರ ಕೌಮುದಿಯ ಭೂಷಂಗೆ
ಗೌರೀ ಕುಚಾಲಿಂಗನಾನಂದವೇಷಂಗೆ
ಗಿರಿಜಾ ಮನೋಳಿನವರಾಜಹಂಸಂಗೆ
ಗಿರಿಜಾ ವಚೋವರ್ಣ ಕರ್ಣಾವತಂಸಂಗೆ
ಎಱಗಿದಳು ಮಹಾದೇವಿಯರ್ಧನಾರೀಶಂಗೆ
ತುಱುಗಿದ ಶಿರೋಮಾಲೆಗಳ ಮಹಾವೇಶಂಗೆ ೨೫೦
ಎರಗೆ ಕಂಡಭವನಾನಂದದಿಂದೇಳೆಂದು
ಕರಿಗೊರಲನತಿಕರುಣದಿಂದ ನೋಡುತ್ತಂದು
ಗಿರಿಜೆ ಬಲ್ಲಹ ನಮ್ಮ ರುದ್ರಕನ್ನಿಕೆ ಈಕೆ
ವರಗುಪ್ತಗಣನಾಥನಿಂದಿಳೆಗೆ ಪೋದಾಕೆ
ಹುಟ್ಟಿ ಶಿವಭಕ್ರರ್ಗೆ ಬೆಸಕೆಯ್ದ ಕನ್ಯೆಯಂ
ನಿಷ್ಠೆನೆಲೆಗೊಂಡ ನಿಜಭಕ್ತಿಯೊಳಭಿನ್ನೆಯಂ
ನಿನ್ನನುಜ್ಞೆಯನಿಂತು ಹೊತ್ತು ನಡೆದವರುಂಟೆ
ನಿನ್ನ ಶಾಪವನಿಳೆಯೊಳನುಭವಿಸಿದವರುಂಟೆ
ಪದವಿಯಂ ರಾಜ್ಯಮಂ ಬಿಸುಟು ಹೋದವರುಂಟೆ
ಅದಿರದೆಯೆ ಶ್ರೀಶೈಲದೊಳಗೆ ಪೊಕ್ಕವರುಂಟೆ ೨೬೦
ಭವಿಯ ಸಂಗದ ಶರೀರವನೊಲ್ಲದವರುಂಟೆ
ನವದಿವ್ಯದೇಹದಿಂದೈತಂದಂತುಂಟೆ
ಎಂದು ಕೊಂಡಾಡುತಂ ಮುನ್ನಿನಂದದೊಳಿರಿಸಿ
ಇಂದುಮುಖಿ ಮಹದೇವಿಯಂ ಕರುಣದಿಂದಿರಿಸಿ
ರುದ್ರ ಕನ್ನಿಕೆಯರೊಳು ಸಲೆಸಿ ಕರುಣಾಕರಂ
ಭದ್ರಗುಣಗಣಯುಕ್ತ ಶಶಿಕಳಾಶೇಖರಂ
ಶ್ರೀ ಮಹಾದೇವನಪ್ರತಿಮಗುರುವೊಪ್ಪಿದಂ
ಶ್ರೀ ಮಹಾಮಹಿಮನಾನಂದಮಯನೊಪ್ಪಿದಂ
ಆಕಾಶ ಗಂಗಾಂತರಕೇಳನೊಪ್ಪಿದಂ
ಲೋಕೈಕ ವಿಭವವಿಭುವಭವ ನಿಂತೊಪ್ಪಿದಂ ೨೭೦
ಮೃಗಧರಂ ರವಿಪವನ ಸಖನಯನನೊಪ್ಪಿದಂ
ಅಗಜೇಶ ದೇವರಾದಿತ್ಯ ನಿಂತೊಪ್ಪಿದಂ
ಕಮಳದ ಶಿರೋಬೀಜನುತಪರಶುವೊಪ್ಪಿದಂ
ವಿಷಧರಂ ವಿಷಧರರ ಶಾಂತನಿಂತೊಪ್ಪಿದಂ
ವಿಷಮತರ ಪುರವಿಪಿನ ದಾವಾಗ್ನಿಯೊಪ್ಪಿದಂ
ಪಂಪಾಪುರಾಂಭೋಜ ಗಗನಮಣಿಯೊಪ್ಪಿದಂ
ಹಂಪೆಯ ವಿರೂಪಾಕ್ಷನನವರತನೊಪ್ಪಿದಂ
ಕಂದ
ಮೃಡನಪ್ರತಿಮಂ ಶರ್ವಂ
ಕುಡುಗೆಮಗನವಧಿ ವಿರಕ್ತಿಯಂ ಭಕ್ತಿಯ ನಾ
ಉಡುತಡಿಯ ಮಹಾದೇವಿಯ
ಕಡುಸಲುಗೆಯ ಕಂದನೆಂದು ಹಂಪೆಯ ರಾಯಂ
ಇಂತು ಮಹಾದೇವಿಯಕ್ಕನ ರಗಳೆ ಮುಗಿದುದು.
ಕೃತಜ್ಞತೆಗಳು
ಸಂಪಾದಕರು: ತ. ಸು. ಶಾಮರಾಯ
ಪ್ರಕಾಶಕರು: ಪ್ರತಿಭಾ ಪ್ರಕಾಶನ
ಪ್ರಥಮ ಛಾಯ, ಗೋಕುಲಂ ಮೂರನೆ ಹಂತ
ಮೈಸೂರು
ಉತ್ತಮ ಮತ್ತು ಅಪರೂಪದ ಬರಹ. ತುಂಬಾ ಧನ್ಯವಾದಗಳು
ಪ್ರತ್ಯುತ್ತರಅಳಿಸಿ