ಕೇಶಿರಾಜ ವಿರಚಿತ ಶಬ್ದಮಣಿ ದರ್ಪಣಂ
ಉಪೋದ್ಘಾತ
ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ವ್ಯಾಕರಣಶಾಸ್ತ್ರಕ್ಕಿರುವಂತಹ ಮನ್ನಣೆ ಮತ್ತಾವ ಶಾಸ್ತ್ರಕ್ಕೂ ಇಲ್ಲ. ಭಾರತೀಯ ಶಾಸ್ತ್ರಗಳ ಅಭ್ಯಾಸಕ್ಕೆ ಇದೇ ತಳಹದಿ. ಇದನ್ನು ಕಲಿತ ಮೇಲೆಯೇ ಉಳಿದ ಶಾಸ್ತ್ರಾಧ್ಯಯನಕ್ಕೆ ಆರಂಭಿಸಬೇಕು. ಸಮಸ್ತ ವಿದ್ಯೆಗಳಿಗೂ ಇದು ಮೂಲಭೂತವೆನಿಸುವುದರಿಂದ ಇದರಲ್ಲಿ ಪರಿಣತರಾದ ವೈಯಾಕರಣರು ವಿದ್ವಾಂಸರಲ್ಲಿ ಅಗ್ರಗಣ್ಯರೂ, ಅಗ್ರಮಾನ್ಯರೂ ಆಗಿರುತ್ತಾರೆ. ಆದ್ದರಿಂದಲೆ ಭಾರತದಲ್ಲಿ ವ್ಯಾಕರಣ ಶಾಸ್ತ್ರಾಧ್ಯಯನವು ಇತರ ಎಲ್ಲ ಶಾಸ್ತ್ರಗಳಿಗಿಂತ ಆಳವೂ ಸಮಗ್ರವೂ ಆಗಿ ನಡೆದು, ಇದು ಅತ್ಯಂತ ನಿಷ್ಕೃಷ್ಟವೂ, ಪರಿಪೂರ್ಣವೂ ಆದ ಶಾಸ್ತ್ರವೆನಿಸಿದೆ. ಭಾರತೀಯ ವಿದ್ವಾಂಸರು ಅತ್ಯಂತ ಹೆಚ್ಚಿನ ಪ್ರಾವೀಣ್ಯತೆಯನ್ನು ಗಳಿಸಿರುವುದು ವ್ಯಾಕರಣದಲ್ಲಿಯೆ. ಈ ವಿಚಾರದಲ್ಲಿ ಇದಕ್ಕೆ ಸಮಾನವಾದುದು ಜಗತ್ತಿನಲ್ಲಿ ಮತ್ತೊಂದಿಲ್ಲ. ಭಾಷಾಪ್ರಯೋಗದ ವಿಚಾರದಲ್ಲಿಯಾಗಲಿ, ಅಥವಾ ಕಾಲದೇಶಗಳ ವ್ಯತ್ಯಾಸದಿಂದ ಹುಟ್ಟಿಕೊಳ್ಳುವ ಭಾಷಾರೂಪ ವ್ಯತ್ಯಾಸಗಳಲ್ಲಿಯೂ ಭಾರತೀಯರು ನೀಡಿರುವ ಅಭಿಪ್ರಾಯಗಳು ಸರ್ವಗ್ರಾಹ್ಯವಾಗಿವೆ.
ನಮಗೆ ಸಮಗ್ರವಾದ ಕನ್ನಡ ವ್ಯಾಕರಣ ಗ್ರಂಥವನ್ನು ನೀಡಿದ ಕೀರ್ತಿ ಹನ್ನೆರಡನೆಯ ಶತಮಾನದ ಮಧ್ಯಕಾಲದಲ್ಲಿದ್ದ ಎರಡನೆಯ ನಾಗವರೂಮನಿಗೆ ಸಲ್ಲುತ್ತದೆ. ಆತನು “ ಕಾವ್ಯಾವಲೋಕನ” “ಭಾಷಾಭೂಷಣ” ಎಂಬ ಎರಡು ವ್ಯಾಕರಣ ಗ್ರಂಥಗಳನ್ನು ಬರೆದಿದ್ದಾನೆ. “ ಭಾಷಾಭೂಷಣ” ಸಂಸ್ಕೃತದಲ್ಲಿದೆ. ಇದರ ಸೂತ್ರ ಮತ್ತು ವೃತ್ತಿಗಳು ಸಂಸ್ಕೃತದಲ್ಲಿವೆ. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಪರದೇಶೀಯರು ಕನ್ನಡಗ್ರಂಥಗಳನ್ನು ನಮಗೆ ಇಂಗ್ಲೀಷಿನಲ್ಲಿ ಪರಿಚಯಮಾಡಿಕೊಡಲು ಹೊರಟಂತೆ, ಕನ್ನಡಾಭಿಮಾನಿಗಳಾದ ಜೈನರು ಆ ಕಾಲದಲ್ಲಿ ಕನ್ನಡ ವ್ಯಾಕರಣಗಳನ್ನು ಸಂಸ್ಕೃತದ ಮೂಲಕ ಕನ್ನಡಿಗರಿಗೆ ಪರಿಚಯಮಾಡಿಕೊಡಬೇಕಾಯಿತೆಂದು ತೋರುತ್ತದೆ.ಪ್ರಾಕೃತ ವ್ಯಾಕರಣವನ್ನು ಸಂಸ್ಕೃತದಲ್ಲಿ ರಚಿಸಿದಂತೆ ಕನ್ನಡ ವ್ಯಾಕರಣವನ್ನು ಸಂಸ್ಕೃತದಲ್ಲಿ ರಚಿಸಬೇಕಾಯಿತು.ನಾಗವರ್ಮನು ತನ್ನ
“ಭಾಷಾಭೂಷಣ “ ದಲ್ಲಿ “ ಸರ್ವ ಭಾಷಾಮಯಿ ಸರಸ್ವತಿ” ಎಂದು ಹೇಳೆ, ಎಲ್ಲ ಭಾಷೆಗಳು ಸರಸ್ವತಿಯ ಸ್ವರೂಪವೇ ಎಂದು ಹೇಳಿದ್ದಾನೆ. ಯಾವ ಕಾರಣದಿಂದ ಸಂಸ್ಕೃತವನ್ನು ಆಳವಾಗಿ ಅಭ್ಯಾಸ ಮಾಡಬೇಕೋ ಅದೇ ಕಾರಣಕ್ಕಾಗಿ ಕನ್ನಡವನ್ನು ಆಳವಾಗಿ ಅಭ್ಯಾಸ ಮಾಡಬೇಕು. ಸಂಸ್ಕೃತವು ದೇವಭಾಷೆಯಾದರೆ ಕನ್ನಡವೂ ದೇವಭಾಷೆ. ಅಷ್ಟೇ ಅಲ್ಲ, ಮಹಾ ವಿದ್ವಾಂಸರಾದವರು ಈ ಹಿಂದೆಯೆ ಒಂದಲ್ಲ, ಹಲವು ವ್ಯಾಕರಣಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ.ಕನ್ನಡವೇನೂ ಬರಡು ಭಾಷೆಯಲ್ಲ. ಅದಕ್ಕೆ ಶ್ರೀಮಂತವಾದ ಸಾಹಿತ್ಯವಿದೆ.
ಕೇಶಿರಾಜನು ಕನ್ನಡ ವೈಯಾಕರಣರಲ್ಲಿ ಅಗ್ರಗಣ್ಯ. ಹದಿಮೂರನೆ ಶತಮಾನದ ಮಧ್ಯಭಾಗದಲ್ಲಿದ್ದ ಈತನೂ ಈತನ ತಂದೆಯಾದ ಯೋಗಿಪ್ರವರ ಮಲ್ಲಿಕಾರ್ಜುನನೂ ಕನ್ನಡ ಸಾಹಿತ್ಯ ಇತಿಹಾಸದಲ್ಲಿ ತಮ್ಮದೇ ಆದ ವಿಶಿಷ್ಟಸ್ಥಾನವನ್ನು ಗಳಿಸಿಕೊಂಡು ಕೀರ್ತಿಶಾಲಿಗಳಾದವರು. ಯೋಗಿಪ್ರವರ ಚಿದಾನಂದ ಮಲ್ಲಿಕಾರ್ಜುನ ಸುತನೆಂದು ಹೇಳಿಕೊಂಡಿರುವ ಕೇಶಿರಾಜ ತನ್ನ “ ಶಬ್ದಮಣಿದರೂಪಣ” ದಲ್ಲಿ
ದೊರೆವಡೆದ ಚೋೞಪಾಲಕ
ಚರಿತಂ ಶ್ರೀ ಚಿತ್ರಮಾಲೆಯಂತೆ ಸುಭದ್ರಾ
ಹರಣಂ ಪ್ರಬೋಧ ಚಂದ್ರಂ
ಕಿರಾತಮಿವು ಕೇಶಿರಾಜ ಕವಿ ರಚಿತಂಗಳ್॥
ಎಂದು ಹೇಳಿಕೊಂಡಿದ್ದಾನೆ. ಅವು ಈವರೆಗೆ ಉಪಲಬ್ಧವಾಗಿಲ್ಲ. ಆದರೇನು? ಆತನ ಕೀರ್ತಿಪತಾಕೆಯನ್ನು ಗಗನಕ್ಕೇರಿಸಲು ಆತನ ಶಬ್ದಮಣಿದರ್ಪಣವೆ ಸಾಕು. ಕೇಶವ, ಕವಿಕೇಶವ, ಚೆನ್ನಕೇಶವದೇವ, ಮಹಾಕವಿ ಚೆನ್ನಕೇಶವ ಇತ್ಯಾದಿ ಪರ್ಯಾಯನಾಮಗಳಿಂದ ತನ್ನನ್ನು ಸಂಭಾವಿಸಿಕೊಂಡಿರುವ ಕೇಶಿರಾಜನು ನಿಜವಾಗಿಯೂ ಪುಣ್ಯಶಾಲಿ.ಆತನು ಹುಟ್ಟಿ ಬೆಳೆದ ಪರಿಸರ ಸಾರಸ್ವತ ವಾತಾವರಣದಿಂದ ತುಂಬಿ ತುಳುಕುತ್ತಿತ್ತು. ಆತನ ತಂದೆ ಕವಿ, ಪಂಡಿತ. “ಸೂಕ್ತಿಸುಧಾರ್ಣವ” ದ ಕರ್ತೃ. ಇವನ ಕಾಲ ಕ್ರಿ. ಶ. ೧೨೬೦. ಬಾಲ್ಯದಿಂದಲೂ ಸಾಹಿತ್ಯದೇವಿಯ ಸಾನ್ನಿದ್ಧ್ಯದಲ್ಲಿಯೇ ಬೆಳೆದು ಆತನ ಪ್ರತಿಭೆ ಪಾಂಡಿತ್ಯಗಳು” ಕಟಕಾಚಾರ್ಯ” ನಾಗುವಷ್ಟು ಎತ್ತರಬಿತ್ರಗಳನ್ನು ಪಡೆದವು. ಕೇಶಿರಾಜನು ಜೈನನೆಂಬುದು ಆತನ ಬಂಧುವರ್ಗದವರ ಪರಿಚಯದಿಂದಲೇ ಅರ್ಥವಾಗುತ್ತದೆ.
ಕೇಶಿರಾಜನು ತನ್ನ ವ್ಯಾಕರಣವನ್ನು ಕಂದಪದ್ಯಗಳ ಕಾವ್ಯರೂಪದಲ್ಲಿ ಬರೆದಿದ್ದಾನೆ. ಇದರಲ್ಲಿ ೩೨೬ ಸೂತ್ರಗಳಿದ್ದು ಅವುಗಳನ್ನು
೧) ಸಂಧಿಪ್ರಕರಣ ( ಸೂತ್ರ ೧ರಿಂದ ೭೦)
೨) ನಾಮಪ್ರಕರಣ ( ಸೂತ್ರ ೭೧ ರಿಂದ ೧೬೧)
೩) ಸಮಾಸಪ್ರಕರಣ ( ಸೂತ್ರ ೧೬೨ರಿಂದ ೧೯೬)
೪) ತದ್ಧಿತಪ್ರಕರಣ ( ಸೂತ್ರ ೧೯೭ ರಿಂದ ೨೧೫)
೫) ಆಖ್ಯಾತಪ್ರಕರಣ ( ಸೂತ್ರ ೨೧೬ರಿಂದ ೨೫೨)
೬) ಧಾತುಪ್ರಕರಣ ( ಸೂತ್ರ೨೫೩ರಿಂದ ೨೫೪)
ಅಪಭ್ರಂಶಪ್ರಕರಣ( ಸೂತ್ರ ೨೫೫ ರಿಂದ ೩೦೩)
೮) ಅವ್ಯಯಪ್ಲಕರಣ( ಸೂತ್ರ೩೦೪ ರಿಂದ ೩೨೬)
ಎಂಬ ಎಂಟು ಪ್ರಕರಣಗಳಾಗಿ ವಿಭಾಗಿಸಲಾಗಿದೆ.
ಪೀಠಿಕೆ:
ಶ್ರೀವಾಗ್ದೇವಿಗೆ ಶಬ್ದದಿ
ನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳು
ದ್ಭಾವಿಪ ನಿರ್ಮಳಮೂರ್ತಿಗಿ
ಳಾವಂದ್ಯೆಗೆ ಶಾಸ್ತ್ರಮುಖದೊಳವನತನಪ್ಪೆಂ॥೧॥
ವೃತ್ತಿ : ಕಾಂತಿಯೆಂಬ ಗುಣದೊಳನ್ವಿತೆಯಪ್ಪ, ವಾಕ್ಕೆಂಬ ದೇವಿಗೆ, ಪಂಚೇಂದ್ರಿಯಂಗಳ ವಿಷಯಮಪ್ಪ ಶಬ್ಧ, ಸ್ಪರ್ಶ, ರೂಪ, ರಸ, ಗಂಧಂಗಳೊಳ್ಪಂ ಶ್ರೋತ್ರೇಂದ್ರಿಯಮೊಂದಱೊಳೆ ಶಬ್ಧಮುಖದಿನಭಿವ್ಯಕ್ತಿಯಂ ಮಾೞ್ಪ ವಿಮಲಸ್ವರೂಪೆಗೆ, ಭುವನಸ್ತುತೆಗೆ ಶಾಸ್ತ್ರಮುಖದೊಳ್ ನಮಸ್ಕರಿಸೈವೆ.
ತಾತ್ಪರ್ಯ : ಕಿವಿ, ಚರ್ಮ, ಕಣ್ಣು, ನಾಲಗೆ, ಮೂಗು ಎಂಬ ಪಂಚೇಂದ್ರಿಯಗಳಿಂದ ಪಡೆಯಬಹುದಾದ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಎಂಬ ವಿಷಯಗಳನ್ನು ಕೇವಲ ಕಿವಿಯೊಂದರಲ್ಲಿಯೇ ಶಬ್ದದ ಮೂಲಕ ಅಭಿವ್ಯಕ್ತಿಗೊಳಿಸುವ ಶಬ್ದರೂಪಿಣಿಯೂ, ಲೋಕವಂದ್ಯಳೂ, ಕಾಂತಿಯುಕ್ತೆಯೂ ಆದ ಸರಸ್ವತಿಗೆ ಈ ಶಬ್ದಶಾಸ್ತ್ರದ ಪ್ರಾರಂಭದಲ್ಲಿ ನಮಸ್ಕರಿಸುವವನಾಗುತ್ತೇನೆ.
ವಿ. ವಿ. : ಈ ಪದ್ಯವು, ಕೇಶಿರಾಜನು ಕೇವಲ ವೈಯಾಕರಣ ಮಾತ್ರವಲ್ಲ, ಕವಿಯೂ ಅಹುದು ಎಂಬುದನ್ನು ಸೂಚಿಸುತ್ತದೆ. ಇದರಲ್ಲಿ ಸರಸ್ವತಿಯ ಪ್ರಾರ್ಥನಾರೂಪವಾದ ಒಂದು ರೂಪಕಾಲಂಕಾರವಿದೆ.
ಕವಿಸುಮನೋಬಾಣನ ಯಾ
ದವಕಟಕಾಚಾರ್ಯನೆಸೆವ ದೌಹಿತ್ರನೆನಾಂ
ಕವಿ ಕೇಶವನೆಂ ಯೋಗಿ
ಪ್ರವರ ಚಿದಾನಂದ ಮಲ್ಲಿಕಾರ್ಜುನ ಸುತನೆಂ॥೨॥
ವೃತ್ತಿ : ಯಾದವಕಟಕೋಪಾದ್ಯನಪ್ಪ ಕವಿ ಸುಮನೋಬಾಣನ ಮಗಳ ಮಗನೆಂ, ಯೋಗಿ ವಲ್ಲಭನಪ್ಪ ಮಲ್ಲಿಕಾರ್ಜುನದೇವ ಸುತನೆನಾಂ, ಕೇಶಿರಾಜ ಕವಿಯೆನಾಂ.
ತಾತ್ಪರ್ಯ : ನಾನು ಯಾದವ ವಂಶದ ಕ್ಷತ್ರಿಯರ ಗುರುವಾದ ಕವಿ ಸುಮನೋಬಾಣನ ಮಗಳ ಮಗನೂ; ಯೋಗಿಶ್ರೇಷ್ಠನೂ ಚಿದಾನಂದನೂ ಆದ ಮಲ್ಲಿಕಾರ್ಜುನನ ಮಗನೂ ಕವಿ ಕೇಶಶನೂ ಆಗಿದ್ದೇನೆ.
ವಿ. ವಿ. : ಇಲ್ಲಿ ಕೇಶಿರಿಜನು ತನ್ನನ್ನು ಕವಿಯೆಂದು ಹೇಳಿಕೊಂಡಿದ್ದಾನೆ. "ಕೇಶವನೆಂ" ಎನ್ನುವಲ್ಲಿ " ಕೇಶವ" ಎಂಬ ನಾಮಪದದಮೇಲೆ " ಎನ್" ಎಟಬ ಆಖ್ಯಾತಪ್ರತ್ಯಯವು ಬಂದು ಕ್ರಿಯಾಪದವಾಗಿ "ಕೇಶವನಾಗಿದ್ದೇನೆ" ಎಂಬ ಅರ್ಥವನ್ನು ಹೊಂದಿದೆ. ಹೀಗೆಯೇ ದೌಹಿತ್ರನೆಂ, ಸುತನೆಂ ಎಂಬುದನ್ನು ತಿಳಿಯಬೇಕು.
ಗುಣಮಮರೆ ಶಬ್ದಮಣಿದ
ರ್ಪಣನಾಮಮನಿಟ್ಟು ನೆಱೆಯೆ ಕರ್ಣಾಟಕ ಲ
ಕ್ಷಣ ಶಬ್ದಶಾಸ್ತ್ರಮಂ ಲಾ
ಕ್ಷಣೀಕರ್ ಪೇೞೆಂದು ಬೆಸಸೆ ಬಗೆವುಗೆ ಪೇಅೞ್ವೆಂ॥೩॥
ವೃತ್ತಿ :ಶಬ್ದಶಾಸ್ತ್ರಮಮರೆ, ವಿಸ್ತರದಿಂ ಕರ್ನಾಟಕ ವ್ಯಾಕರಣಮಂ, ಶಬ್ಧಮಣಿದರ್ಪಣವೆಸರನಿಟ್ಟು ಲಕ್ಷಣಾಚಾರ್ಯರ್ ಪೇೞೆಂದು ಬೆಸಸೆ ಬಗೆಗೆ ಬರ್ಪಂತು ಮನಟಬುಗೆ ಪೇೞ್ವೆಂ.
ತಾತ್ಪರ್ಯ: " ಶಬ್ದಸಾಮರ್ಥ್ಯವೆಂಬ ಗುಣದಿಂದ ಕೂಡಿದ ಮತ್ತು ಕನ್ನಡ ಭಾಷೆಯ ಲಕ್ಷಣವನ್ನು ಸಮಗ್ರವಾಗಿ ಬೋಧಿಸುವ ವ್ಯಾಕರಣವೊಂದನ್ನು " ಶಬ್ದಮಣಿದರ್ಪಣ" ಎಂಬ ಹೆಸರನ್ನಿಟ್ಟು ಹೇಳು" ಎಂದು ಲಾಕ್ಷಣಿಕರು ಅಪ್ಪಣೆ ಮಾಡಲಾಗಿ ಮನಸ್ಸಿಗೆ ಹಿಡಿಯುವಂತೆ ಮನೋಹರವಾಗಿ ಹೇಳುತ್ತೇನೆ.
ಅವಧರಿಪುದು ವಿಬುಧರ್ ದೋ
ಷವಿದಱೊಳೇನಾನುಮುಳ್ಳೊಡಂ ಪ್ರಿಯದಿಂ ತಿ
ರ್ದುವುದು ಗುಣಯುಕ್ತಮುಂ ದೋ
ಷವಿದೂರಮುಮಾಗೆ ಮೆಚ್ಚಿ ಕೈಕೊಳ್ವುದಿದಂ॥೪॥
ವೃತ್ತಿ : ಶಬ್ದಮಣಿದರ್ಪಣದೊಳೇನಾನುಂ ದೋಷಮುಳ್ಳೊಡಂ, ವಿದ್ವಾಂಸರವಧರಿಸಿ ಕೇಳ್ದು ಕರುಣದಿಂ ಮನಃಪ್ರೀತಿವೆರಸಿ ತಿರ್ದುವುದು, ಗುಣಾನ್ವಿತಮುಂ, ನಿರ್ದೋಷಮುಮಾಗೆ ಮೆಚ್ಚಿ ಸ್ವೀಕರಿಪುದು.
ತಾತ್ಪರ್ಯ: ವಿದ್ವಾಂಸರು ಈ ಶಬ್ದಮಣಿದರ್ಪಣವನ್ನು ಪರಿಶೀಲಿಸಿ ದೋಷಗಳೇನಾದರೂ ಇದ್ದರೆ ಪ್ರೀತಿಯಿಂದ ತಿದ್ದುವುದು. ಶಬ್ದಸಾಮರ್ಥ್ಯವೆಂಬ ಗುಣದಿಂದ ಕೂಡಿಯೂ ದೋಷವಿಲ್ಲದುದಾಗಿಯೂ ಇದ್ದರೆ ಮೆಚ್ಚಿ ಸ್ವೀಕರಿಸುವುದು.
ಗಜಗನ ಗುಣನಂದಿಯಮನ
ಸಿಜನಸಗನ ಚಂದ್ರಭಟ್ಟ ಗುಣವರ್ಮ ಶ್ರೀ
ವಿಜಯರ ಪೊನ್ನನ ಪಂಪನ
ಸುಜನೋತ್ತಂಸನ ಸುಮಾರ್ಗಮಿದಱೊಳೆ ಲಕ್ಷ್ಯಂ॥೫॥
ವೃತ್ತಿ : ಈ ಕವಿಗಳಾದಿಯಾಗಿ ಮತ್ತಂ ಪಲಂಬರ್ ಪ್ರಸಿದ್ಧ ಕವಿಗಳುದಾಹರಣಂಗಳುಮಿದಱೊಳೊಳವು.
ತಾತ್ಪರ್ಯ: ಗಜಗ, ಗುಣನಂದಿ, ಮನಸಿಜ ಅಸಗ, ಚಂದ್ರಭಟ್ಟ, ಗುಣವರ್ಮ, ಶ್ರೀವಿಜಯ, ಪೊನ್ನ, ಪಂಪ, ಸುಜನೋತ್ತಂಸನೇ ಮೊದಲಾದ ಇನ್ನೂ ಹಲವು ಪ್ರಸಿದ್ಧ ಕವಿಗಳ ಗ್ರಂಥಗಳ ಪ್ರಯೋಗಗಳು ಇದರಲ್ಲಿ ಲಕ್ಷ್ಯಗಳಾಗಿವೆ.
ವಿ. ವಿ. : " ಪ್ರಯೋಗಶರಣಾಃ ವೈಯಾಕರಣಾಃ" - ವ್ಯಾಕರಣಕ್ಕೆ ಪ್ರಯೋಗವೇ ಪ್ರಮಾಣ. ಕೇಶಿರಾಜನು ತನ್ನ ಗ್ರಂಥದ ಸೂತ್ರಗಳಿಗೆ ಪ್ರಮಾಣ ಗ್ರಂಥಗಳನ್ನು ಸೂಚಿಸಿದ್ದಾನೆ.
ಈತನು ಮೇಲೆ ಹೇಳಿರುವ ಕವಿಗಳಲ್ಲಿ ಶ್ರೀವಿಜಯನೇ ಅತ್ಯಂತ ಪ್ರಾಚೀನ. ಆತನ ಕಾಲ ಕ್ರಿ. ಶ. ಒಂಬತ್ತನೆಯ ಶತಮಾನ. ಕಾಲದ ದೃಷ್ಟಿಯಿಂದ ಕಡೆಯವನು ಸುಜನೋತ್ತಂಸ. ಆತನ ಕಾಲ ಕ್ರಿ. ಶ. ಹನ್ನೆರಡನೆಯ ಶತಮಾನದ ಕಡೆಯ ಭಾಗ. ಅಂದರೆ ಕೇಶಿರಾಜನು ಸುಮಾರು ಮುನ್ನೂರೈವತ್ತು ವರ್ಷಗಳ ಸಾಹಿತ್ಯವನ್ನು ಗಮನದಲ್ಲಿಟ್ಟುಕೊಂಡು ತನ್ನ ಗ್ರಂಥವನ್ನು ಬರೆದಿರುವುದು ಗೋಚರವಾಗುತ್ತದೆ.
೧)ಗಜಗ ಅಥವಾ ಗಜಾಂಕುಶನ ಕಾಲ ಕ್ರಿ. ಶ. ೧೦೦೦.
೨)ಗುಣನಂದಿಯ ಕಾಲ ಕ್ರಿ. ಶ. ೯೦೦, ಈತನು ತರ್ಕ ವ್ಯಾಕರಣಾದಿ ಶಾಸ್ತ್ರನಿಪುಣನೆಂದು ಶ್ರವಣಬೆಳಗೊಳದ ಶಾಸನಗಳಿಂದ ತಿಳಿದು ಬರುತ್ತದೆ.
೩)ಮನಸಿಜ ಕ್ರಿ. ಶ. ೧೧೪೦ ರವನು
4) ಅಸಗ ಕ್ರಿ. ಶ. ೮೫೪ ರಲ್ಲಿದ್ದವನು; ಈತನ ಕಾವ್ಯ ವರ್ಧಮಾನ ಪುರಾಣ.
೫) ಚಂದ್ರಭಟ್ಟ ಕ್ರಿ. ಶ.೮೫೦ಕ್ಕಿಂತ ಹಿಂದಿನವನು.
೬) ಗುಣವರ್ಮ - ಈ ಹೆಸರಿನ ಇಬ್ಬರು ಕವಿಗಳಿದ್ದಾರೆ.ಒಂದನೆಯ ಗುಣವರ್ಮನ ಕಾಲ ಕ್ರಿ. ಶ. ೯೦೦. ಈತನ ಗ್ರಂಥಗಳು "ಹರಿವಂಶ" ಮತ್ತು "ಶೂದ್ರಕ". ಎರಡನೆಯ ಗುಣವರ್ಮನ ಕಾಲ ಕ್ರಿ. ಶ. ೧೧೨೫. ಈತನ ಗ್ರಂಥ "ಪುಷ್ಪದಂತ ಪುರಾಣ "
೭) ಶ್ರೀ ವಿಜಯ ಕ್ರಿ. ಶ. ೮೫೦ ರವನು.
೮) ಪೊನ್ನ ಕ್ರಿ.ಶ. ೯೫೦ ರಲ್ಲಿದ್ದವನು. ಈತನ ಗ್ರಂಥ ಶಾಂತಿಪುರಾಣ
೯) ಪಂಪ ಕ್ರಿ. ಶ. ೯೪೦, ಈತನ ಗ್ರಂಥಗಳು " ಆದಿಪುರಾಣ" ಮತ್ತು "ವಿಕ್ರಮಾರ್ಜುನ ವಿಜಯ "
೧೦) ಸುಜನೋತ್ತಂಸನ ಕಾಲ ಕ್ರಿ. ಶ. ೧೧೮೦. ಈತನ ನಿಜವಾದ ಹೆಸರುಬೊಪ್ಪಣ್ಣ. ಈತನ ಕಾವ್ಯಗಳು "ಗುಮ್ಮಟ ಸ್ತುತಿ" ಮತ್ತು "ನಕ್ಷತ್ರಮಾಲಿಕೆ"
ಈ ಕವಿಯ ಕಾಲಕ್ಕೆ ವಚನ, ರಗಳೆ, ತ್ರಿಪದಿ ಇತ್ಯಾದಿ ದೇಶೀಯ ಸಾಹಿತ್ಯವು ಸಾಕಷ್ಟು ಪ್ರಮಾಣದಲ್ಲಿ ಬೆಳೆದಿದ್ದರೂ ಈತನಿಗೆ ಆ ಸಾಹಿತ್ಯ ಪ್ರಕಾರಗಳು ಪ್ರಮಾಣಭೂತವಲ್ಲವೆಂಬ ಭಾವನೆ ಇತ್ತೋ ಏನೋ? ಅದರಿಂದಾಗಿ ಆತನು ಅವನ್ನು ಪ್ರಯೋಗಕ್ಕಾಗಿ ಎಲ್ಲಿಯೂ ಎತ್ತಿಕೊಂಡಿಲ್ಲದಿರುವುದು ಗಮನಾರ್ಹವಾದ ಸಂಗತಿ.
ಪ್ರಾಸಚ್ಛಂದೋನ್ವಯ ವಿ
ನ್ಯಾಸದಿನಂತಿಂತು ಶಬ್ದಮಿರ್ಕುಂ ವೃತ್ತಿ
ವ್ಯಾಸಂ ತದ್ವ್ಯಾಕುಳಮೆಂ
ದಾ ಸೂತ್ರಕರ್ಥವೃತ್ತಿ ವರ್ತಿಸೆ ಪೇೞ್ದೆಂ॥೬॥
ವೃತ್ತಿ : ಪಾರಾಸದ, ಛಂದದ, ಅನ್ವಯದ, ನಿಱುಗೆಯಿಂ ಶಬ್ದಂಗಳ್ ವ್ಯತ್ಯಯಮಾಗಿರ್ಪುವು; ಅವಱವಱ ಬೞಿಯೊಳ್ ವೃತ್ತಿಯ ವಿಸ್ತರಂ ವ್ಯಾಕುಲಮಾದಪ್ಪುದೆಂದುಸೂತ್ರಕ್ಕೆ ತಾತ್ಪರ್ಯಾರ್ಥಂ ಪ್ರವರ್ತಿಸುತ್ತಮಿರೆ ಪೇೞ್ದೆಂ.
ತಾತ್ಪರ್ಯ: ಪ್ರಾಸ ಮತ್ತು ಛಂದಸ್ಸು ಅನುಸರಿಸಿ ಬರೆಯುವಾಗ ಶಬ್ದಗಳು ವ್ಯತ್ಯಾಸವಾಗುತ್ತವೆ ( ಹಿಂದು ಮುಂದಾಗುತ್ತವೆ) ಇದರಿಂದ ನಿರ್ದಿಷ್ಟವಾದ ಅರ್ಥವು ತಿಳಿಯದೆ ಸಂದೇಹ ಬರಬಹುದೆಂದು ಭಾವಿಸಿ ಇಲ್ಲಿಯ ಸೂತ್ರಗಳಿಗೆ ಅರ್ಥವೃತ್ತಿಯನ್ನು ಬರೆದಿದ್ದೇನೆ.
ಜನಮಂಗೀಕರಿಪುದು ನೆ
ಟ್ಟನೆ ಸಂಬಂಧಾಭಿಧೇಯ ಶಕ್ಯಾನುಷ್ಠಾ
ನ ನಿಜೇಷ್ಟ ಸಿದ್ದಿಗಳ್ ನೆಲ
ಸಿ ನಿಂದ ಕಾರಣದೆ ಶಬ್ದಮಣಿದರೂಪಣಮಂ॥೭॥
ವೃತ್ತಿ : ಸಂಬಂಧಮೆಂದು ಪೊದುಗೆ, ಅಭಿಧೇಯಮೆಂದರ್ಥಂ, ಶಕ್ಯಾನುಹ್ಮಾನಮೆಂದಾ ಪದಾರ್ಥಮಂ ಸಾಧಿಸುವುದ್ಯೋಗಂ, ಇಷ್ಟಸಿದ್ಧಯೆಂದದಱ ಫಲಂ ಇವು ಶಬ್ದಮಣಿದರ್ಪಣದೊಳ್ ನೆಲೆಗೊಂಡಿರ್ಪುದಱಿಂ ಸ್ವೀಕರಿಸದ ಲೋಕಮಿಲ್ಲ.
ತಾತ್ಪರ್ಯ: ಸಂಬಂಧ, ಅಭಿಧೇಯ, ಶಕ್ಯಾನುಷ್ಟಾನ, ಇಷ್ಟಸಿದ್ಧಿ -ಇವುಗಳು ಈ ಗ್ರಂಥದಲ್ಲಿರುವುದರಿಂದ ಶಬ್ದಮಣಿದರ್ಪಣವನ್ನು ಜನರು ಸ್ವೀಕರಿಸಬೇಕು.
ವಿ. ವಿ. : ಸಂಸ್ಕೃತ ಶಾಸ್ತ್ರ ಗ್ರಂಥಗಳ ಸಂಪ್ರದಾಯವನ್ನನುಸರಿಸಿ ಕೇಶಿರಾಜನು ತನ್ನ ಶಾಸ್ತ್ರಗ್ರಂಥದಲ್ಲಿಯೂ ಅನುಬಂಧ ಚತುಷ್ಟಯಗಳನ್ನು ಹೆಸರಿಸಿದ್ದಾನೆ. ಸಂಬಂಧ, ಅಭಿಧೇಯ, ಶಕ್ಯಾನುಷ್ಟಾನ ಮತ್ತು ಇಷ್ಟಸಿದ್ಧಿ - ಇವು ಅನುಬಂಧ ಚತುಷ್ಟಯಗಳು. ಅವುಗಳ ಸ್ಥೂಲ ಸ್ವರೂಪ ಹೀಗಿದೆ.
ಸಂಬಂಧ - ವ್ಯಾಕರಣದಲ್ಲಿ ಪ್ರಕೃತಿ ಪ್ರತ್ಯಯಸಂಬಂಧ, ಲಕ್ಷ್ಯ ಲಕ್ಷಣ ಸಂಬಂಧ, ವಿಶೇಷ್ಯ ವಿಶೇಷಣಸಂಬಂಧ ಮತ್ತು ಕರ್ತೃ ಕರ್ಮಕ್ರಿಯಾಸಂಬಂಧವೆಂಬ ನಾಲ್ಕು ಸಂಬಂಧಗಳು ಇವೆ.
ಅಭಿಧೇಯ : ಎಂದರೆ ಗ್ರಂಥದ ವಸ್ತು ಅಥವಾ ವಿಷಯ. ಗ್ರಂಥಕ್ಕೂ ಅಭಿಧೇಯಕ್ಕೂ ಒಂದು ವಿಧವಾದ ಸಂಬಂಧವಿರಲೇಬೇಕು. ವ್ಯಾಕರಣದ ವಿಷಯಕ್ಕೆ ಸಂಬಂಧಿಸಿದ ಈ ಗ್ರಂಥದಲ್ಲಿ ವ್ಯಾಕರಣವಿಷಯ ಬರಬೇಕೇ ವಿನಾ ಛಂದಸ್ಸು, ಅಲಂಕಾರ ಇತ್ಯಾದಿ ಇನ್ನಾವ ವಿಷಯವೂ ಬರಬಾರದು. ಶಬ್ದಮಣಿದರೂಪಣದಲ್ಲಿ ವ್ಯಾಕರಣಕ್ಕೆ ಸಂಬಂಧಿಸಿದ ವಿಷಯ ಮಾತ್ರವೇ ಇದೆ.
ಶಕ್ಯಾನುಷ್ಟಾನ: ಎಂದರೆ ನಿಯಮಗಳ ಪಾಲನೆ. ಒಂದು ಕಾರ್ಯವನ್ನು ಸಾಧಿಸಲು ಕೆಲವು ನಿಯಮಗಳು ವಿಧಿಸಲ್ಪಟ್ಟಿರುತ್ತವೆ. ಹಾಗೆಯೇ ವ್ಯಾಕರಣ ಗ್ರಂಥದಲ್ಲಿ ಸಾಧುವಾದ ಶಬ್ಧಗಳನ್ನು ಸಿದ್ಧಗೊಳಿಸಲು, ನಿಯಮಗಳು ನಿರೂಪಿತವಾಗಿರುತ್ತವೆ. ಈ ನಿಮಗಳನ್ನು ಶಕ್ತವಾಗಿ ( ಸಮಂಜಸವಾಗಿ) ಶಬ್ದಮಣಿದರ್ಪಣವುಪಾಲಿಸುತ್ತದೆ.
ಇಷ್ಟ ಸಿದ್ದಿ : ಎಂದರೆ ಪ್ರಯೋಜನ. ವ್ಯಾಕರಣದಿಂದ ದೊರೆಯುವ ಪ್ರಯೋಜನವೆಂದರೆ ಶಬ್ದಸ್ವರೂಪವನ್ನು ತಿಳಿಯೈವುದು. ಶಬ್ದಮಣಿದರ್ಪಣವು ಶಬ್ದಸ್ವರೂಪವನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಈ ಕಾರಣಗಳಿಂದ ಕೇಶಿರಾಜನು ತನ್ನ ಗ್ರಂಥವಾದ ಶಬ್ದಮಣಿದರ್ಪಣವನ್ನು ಕನ್ನಡಿಗರು ಅಂಗೀಕರಿಸಬೇಕೆಂದು ವಿನಂತಿಸಿಕೊಂಡಿದ್ದಾನೆ.
ವ್ಯಾಕರಣ ಪ್ರಾರಂಭ :
ಕ್ರಮದಿಂದೆ ಸಂಧಿ ನಾಮಂ
ಸಮಾಸಮಾ ತದ್ದಿತಂ ಪೊದೞ್ದಾಖ್ಯಾತಂ
ಸಮುದಿತ ಧಾತುಮಪಭ್ರಂ
ಶಮವ್ಯಯಂ ಸಂಧಿ ಶಬ್ದಮಣಿದರ್ಪಣದೊಳ್॥೮॥
ವೃತ್ತಿ : ತಱುವಾಯಿಂ ಸಂಧಿಯೆಂದುಂ, ನಾಮಮೆಂದುಂ, ಸಮಾಸಮೆಂದುಂ, ತದ್ದಿಯಮೆಂದುಂ, ಆಖ್ಯಾತಮೆಂದುಂ, ಧಾತುಮೆಂದುಂ, ಅಪಭ್ರಂಶಮೆಂದುಂ, ಅವ್ಯಯಮೆಂದುಂ, ಸಂಧಿಯೆಂಟಕ್ಕುಂ.
ತಾತ್ಪರ್ಯ: ಶಬ್ದಮಣಿದರ್ಪಣದಲ್ಲಿ ಸಂಧಿ, ನಾಮ, ಸಮಾಸ, ತದ್ದಿತ, ಆಖ್ಯಾತ, ಧಾತು, ಅಪಭ್ರಂಶ ಮತ್ತು ಅವ್ಯಯ-ಎಂಬ ಎಂಟು ಸಂಧಿಗಳಿವೆ.
ವಿ. ವಿ. : ಈ ಸೂತ್ರದ ಕಡೆಯಲ್ಲಿ ಹೇಳಿರುವ " ಸಂಧಿ ಎಂಬ ಶಬ್ಧಕ್ಕೆ ವಿಭಾಗ ಎಂದು ಅರ್ಥ. "ಪೊದೞ್ದ" ಮತ್ತು "ಸಮುದಿತ" ಎಂಬ ಎರಡು ಶಬ್ದಗಳು ಕೇವಲ ಪಾದಪೂರ್ಣಕ್ಕಾಗಿ ಬಂದಿವೆ. ವ್ಯಾಕರಣಶಾಸ್ತ್ರ ಭಾಗಕ್ಕೂ ಈ ಶಬ್ದಗಳಿಗೂ ಯಾವ ಸಂಬಂಧವೂ ಇಲ್ಲ.
ಅನುಕೂಲಪವನನಿಂ ಜೀ
ವನಿಷ್ಟದಿಂ ನಾಭಿಮೂಲದೊಳ್ ಕಹಳೆಯ ಪಾಂ
ಗಿನವೊಲ್ ಶಬ್ದದ್ರವ್ಯಂ
ಜನಿಯಿಸುಗುಂ ಶ್ವೇತಮದಱ ಕಾರ್ಯಂ ಶಬ್ದಂ॥೯॥
ವೃತ್ತಿ: ಪವನನ ಬೆಂಬೞಿಯಿಂ, ಜೀವನಿಷ್ಟದಿಂ, ನಾಭಿಯಮೊದಲಲ್ಲಿ ನೆಗಪಿದ ಕಹಳೆಯಾಕಾರದಿಂ ಶಬ್ದಮೆಂಬ ದ್ರವ್ಯಂ ಧವಳವರ್ಣಮಾಗಿ ಪುಟ್ಟುಗುಂ. ಅದಱ ಕಾರ್ಯಂ ಶಬ್ದಮೆಂಬುದು.
ತಾತ್ಪರ್ಯ: ಜೀವನ ಅಪೇಕ್ಷೆಯಂತೆ, ಆ ಜೀವಾತ್ಮನ ಅಪೇಕ್ಷೆಗನುಸಾರವಾಗಿ ನಡೆಯುವ ಪ್ರಾಣವಾಯುವಿನಿಂದ, ನಾಭಿಯ ಮೂಲದಲ್ಲಿ, ಮೇಲೆತ್ತಿದ ಕಹಳೆಯ ಆಕಾರದ ಹಾಗೆ ಶಬ್ದವೆಂಬ ಧವಳ ವರ್ಣದ ದ್ರವ್ಯವು ಹುಟ್ಟುತ್ಯದೆ. ಅದರ ಕಾರ್ಯವು ಶಬ್ದ.
ವಿ. ವಿ.: ಜೈನರು ಶಬ್ದವನ್ನು ದ್ರವ್ಯವೆಂದು ಸ್ವೀಕರಿಸಿದ್ದಾರೆ. ಇದರಿಂದ ಕೇಶಿರಾಜನು ಜೈನನೆಂಬುದು ಸ್ಪಷ್ಟವಾಗುತ್ತದೆ.
ತನು ವಾದ್ಯಂ ನಾಲಗೆ ವಾ
ದನದಂಡಂ ಕರ್ತೃವಾತ್ಮನವನ ಮನೋವೃ
ತ್ತಿ ನಿಮಿತ್ತಮಾಗಿ ಶಬ್ದಂ
ಜನಿಯಿಸುಗುಂ ಧವಳವರ್ಣಮಕ್ಷರರೂಪಂ ॥೧೦॥
ವೃತ್ತಿ: ಶರೀರಮೆ ವಾದ್ಯಂ, ನಾಲಗೆ ಬಾಜಿಸುವ ಕುಡುಹು, ವಾದಕನಾತ್ಮಂ, ಆತನ ಮನೋವೃತ್ತಿಯಿಂ ಧವಳವರ್ಣಮಕ್ಷರರೂಪಮಪ್ಪ ಶಬ್ದಂ ಪುಟ್ಟುಗುಂ.
ತಾತ್ಪರ್ಯ: ಶರೀರವೆ ವಾದ್ಯ, ನಾಲಗೆಯೇ ವಾದನದಂಡ, ಆ ವಾದ್ಯವನ್ನು ಬಾರಿಸುವವನು ಜೀವಾತ್ಮ. ಅವನ ಮನೋವೃತ್ತಿಗನುಗುಣವಾಗಿ ಧವಳವರ್ಣದ ಅಕ್ಷರರೂಪವಾದ ಶಬ್ದವು ಜನಿಸುತ್ತದೆ.
ವ್ಯಾಕರಣದಿಂದೆ ಪದಮಾ
ವ್ಯಾಕರಣದ ಪದದಿನರ್ಥಮರ್ಥದೆ ತತ್ವಾ
ಲೋಕಂ ತತ್ವಾಲೋಕದಿ
ನಾಕಾಂಕ್ಷಿಪ ಮುಕ್ತಿಯಕ್ಕುಮಿದೆ ಬುಧರ್ಗೆ ಫಲಂ ॥೧೧॥
ವೃತ್ತಿ: ವ್ಯಾಕರಣದಿಂ ಪದಸಿದ್ಧಿಯಕ್ಕುಂ; ಪದಸಿದ್ಧಿಯಿಂದರ್ಥ ಜ್ಞಾನಮಮಕ್ಕುಂ; ಅರ್ಥಜ್ಞಾನದಿಂ ತತ್ವವಿಚಾರಮಕ್ಕುಂ, ತತ್ವಜ್ಞಾನದಿಂ ಮುಕ್ತಿ ದೊರೆಕೊಳ್ಗುಂ; ವಿಬುಧರ್ಗದು ಕಾರಣದಿಂ ವ್ಯಾಕರಣಮುಪಾದೇಯಂ.
ತಾತ್ಪರ್ಯ: ವ್ಯಾಕರಣದಿಂದ ಪದಸಿದ್ಧಿಯೂ, ಆ ಪದಸಿದ್ಧಿಯಿಂದ ಅರ್ಥವೂ, ಅರ್ಥದಿಂದ ತತ್ವಜ್ಞಾನವೂ, ತತ್ವಜ್ಞಾನದಿಂದ ಮಾನವರು ಬಯಸುವ ಮೋಕ್ಷವೂ ದೊರೆಯುತ್ತದೆ. ವಿದ್ವಾಂಸರಿಗೆ ವ್ಯಾಕರಣದಿಂದ ದೊರೆಯುವ ಪ್ರಯೋಜನವೆಂದರೆ ಈ ಮೋಕ್ಷವೇ ಆಗಿದೆ.
ವ್ಯಾಕರಣಾತ್ ಪದಸಿದ್ಧಿಃ
ಪದಸಿದ್ಧೇರರ್ಥ ನಿರ್ಣಯೋ ಭವತಿ
ಅರ್ಥೇ ತತ್ವಜ್ಞಾನಂ
ತತ್ವಜ್ಞಾನಾತ್ ಪರಂ ಶ್ರೇಯಃ॥
-ಎಂಬ ನ್ಯಾಸದಲ್ಲಿ ಬಂದಿರುವ ಶ್ಲೋಕದ ಅನುವಾದವಾಗಿದೆ ಶಬ್ದಮಣಿದರ್ಪಣದ ಈ ಸೂತ್ರ.
ಕನ್ನಡ ಮತ್ತೊಂದು ಸುಪ್ರಸಿದ್ಧ ವ್ಯಾಕರಣವಾದ " ಶಬ್ದಾನುಶಾಸನ"ದ ವ್ಯಾಖ್ಯಾನದಲ್ಲಿ ವ್ಯಾಕರಣವು ಸರ್ವ ವಿದ್ಯೆಗಳಿಗೂ ಪ್ರದೀಪಸ್ವರೂಪವಾದುದು; ವಾಗ್ದೋಷಗಳಿಗೆ ಚಿಕಿತ್ಸಾರೂಪವಾದುದು, ಪದಸಿದ್ಧಿ ಅರ್ಥನಿರ್ಣಯಗಳು ಮೋಕ್ಷಕ್ಕೆ ಸಾಧನ- ಎಂಬುದಾಗಿ ವ್ಯಾಕರಣದ ಮಹತ್ಪ್ರಯೋಜನವನ್ನು ವರ್ಣಿಸಲಾಗಿದೆ.
೨. ಸಂಧಿಪ್ರಕರಣಂ
ಸೂತ್ರಂ :
ಆರಯೆ ತಚ್ಛಾಸ್ತ್ರವ್ಯವ
ಹಾರಜ್ಞಾನಾರ್ಥಮಾಗಿ ಪೇೞಲ್ಪಡೆಗುಂ
ಧಿರರಿನಕ್ಷರಸಂಜ್ಞಾ
ಕಾರಂ ವ್ಯಾಕರಣದಾದಿಯೊಳ್ ಪರಿವಿಡಿಯಿಂ॥೧॥
ವೃತ್ತಿ : ಶಬ್ದಶಾಸ್ತ್ರದ ಮೊದಲೊಳ್ ವ್ಯವಹಾರಜ್ಞಾನಕ್ಕೆ ಕಾರಣಮಾಗಕ್ಷರ ಸಂಜ್ಞಾಸ್ವರೂಪಂ ಕ್ರಮದಿಂ ಪೇೞಲ್ ಪಡೆಗುಂ.
ತಾತ್ಪರ್ಯ: ವ್ಯಾಕರಣ ಶಾಸ್ತ್ರವನ್ನು ತಿಳಿಯುವ ಸಲುವಾಗಿ ವಿದ್ವಾಂಸರು ವ್ಯಾಕರಣದ ಪ್ರಾರಂಭದಲ್ಲಿ ಅಕ್ಷರ ಸಂಜ್ಞಾಸ್ವರೂಪವನ್ನು ಕ್ರಮವಾಗಿ ವಿವರಿಸಿದ್ದಾರೆ.
ವಿ. ವಿ. : ಇಲ್ಲಿ ಬಳಸಿರುವ ಕೆಲವು ಮಾತುಗಳು ತುಂಬ ಸಾರ್ಥಕವಾಗಿವೆ.
ಆರಯೆ= ವಿಚಾರಿಸಲೈ, - ಈ ವರೆಗೆ ಉಪಲಬ್ಧವಿರುವ ವ್ಯಾಕರಣಶಾಸ್ತ್ರಗಳನ್ನು ವಿಚಾರಮಾಡಿ ನೋಡಿದರೆ ಪ್ರತಿ ವ್ಯಾಕರಣಕೃತಿಯ ಪ್ರಾರಂಭದಲ್ಲಿಯೂ ಅಕ್ಷರಸಂಜ್ಞಾ ಪ್ರಕರಣವಿರುವುದು ತಿಳಿಯುತ್ತದೆ. ಎಲ್ಲ ವಿದ್ವಾಂಸರೂ ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ಇದನ್ನು ವಿಚಾರಮಾಡಿ ನೋಡಿ ಈ ವ್ಯಾಕರಣ ಕೃತಿಯ ಪ್ರಾರಂಭದಲ್ಲಿಯೂ ಅಕ್ಷರಸಂಜ್ಞಾ ಪ್ರಕರಣವನ್ನು ಕೊಡಲಾಗಿದೆ.
ವ್ಯವಹಾರ : ಲೋಕದಲ್ಲಿ ಧನಕನಕಾದಿಗಳಿಂದ ವ್ಯವಹಾರವು ನಡೆಯುವುದು ಗೊತ್ತಿರುವ ವಿಷಯ. ಪ್ರಕೃತಿ-ಪ್ರತ್ಯಯಗಳು ವ್ಯಾಕರಣಶಾಸ್ತ್ರದ ವಸ್ತುಗಳು. ಅಕ್ಷರ ಸಂಜ್ಞೆಗಳ ಮೂಲಕ ಆ ಪ್ರಕೃತಿ-ಪ್ರತ್ಯಯಗಳೊಡನೆ ವ್ಯವಹಾರವು ಸಾಗುತ್ತದೆ. ಆದ್ದರಿಂದ ವ್ಯಾಕರಣಶಾಸ್ತ್ರ ರಚನೆಯು ಅಕ್ಷರಸಂಜ್ಞೆಗಳನ್ನು ಅವಲಂಬಿಸಿದೆ.
ಪರಿವಿಡಿ = ಅನುಕ್ರಮಣಿಕೆ - ಒಂದು ಗೊತ್ತಾದ ಕ್ರಮವನ್ನು ಅವಲಂಬಿಸಿ ಇಲ್ಲಿ ಸಂಜ್ಞೆಗಳನ್ನು ತಿಳಿಸಲಾಗಿದೆ.
( ಸೂತ್ರದಲ್ಲಿರುವ " ಪೇೞಲ್ಪಡೆಗುಂ" ಎಂಬುದು ಕರ್ಮಣಿಯಲ್ಲಿದೆ. ವಿಜ್ಞಾನ ಮತ್ತು ಶಾಸ್ತ್ರಗಳ ತತ್ವ ಪ್ರತಿಪಾದನೆಗೆ ಕರ್ಮಣಿಯು ಬಹಳ ಉಪಯುಕ್ತ. ಲೋಕವ್ಯವಹಾರ ಮತ್ತು ಸಾಹಿತ್ಯಕ್ಕೆ ಇದರ ಅಗತ್ಯವು ಅಷ್ಟಾಗಿ ಇಲ್ಲ. ಕೇಶಿರಾಜನು ಹಲವು ಸೂತ್ರಗಳಲ್ಲಿ ಕರ್ಮಣಿಯನ್ನು ಬಳಸಿಕೊಂಡಿರುವುದನ್ನು ಗಮನಿಸಿದರೆ ಪ್ರಾಯಶಃ ಬಹಳ ಹಿಂದಿನಿಂದ ಅವನ ಕಾಲದವರೆಗೆ ಕನ್ನಡದಲ್ಲಿಯೂ ಕರೂಮಣಿಪ್ರಯೋಗವು ಬಳಕೆಯಲ್ಲಿದ್ದಿರಬೇಕು ಎನಿಸುತ್ತದೆ. ಈಚೆಗೆ ಕರ್ಮಣಿಯು ಬಹಳ ಮಟ್ಟಿಗೆ ಪ್ರಯೋಗದಲ್ಲಿ ನಿಂತುಹೋಗಿದೆ.ಆಧುನಿಕರು ಕರ್ಮಣಿಯನ್ನುಕನ್ನಡಕ್ಕೆ ಅಸಹಜವೆಂದು ಭಾವಿಸುವರು)
ಸೂತ್ರಂ :
ಅಕ್ಕರಮುಂ ವರ್ಣಮುಮೆಂ
ದಕ್ಕುಂ ಶುದ್ಧಾಕ್ಷರಕ್ಕೆ ನಾಮಂ ಬರೆಪಂ
ಬೊಕ್ಕುಚ್ಛರಿಸಲ್ಬಾರದು
ವಕ್ಕರಮಲ್ತವು ಘನಸ್ವನಾದಿ ಧ್ವನಿಗಳ್॥೨॥
ವೃತ್ತಿ :ಅಕ್ಕರಮೆಂದುಂ, ವರ್ಣಮೆಂದುಂ, ಶುದ್ಧಾಕ್ಷರಕ್ಕೆ ಪರ್ಯಾಯನಾಮಂ; ಬರೆಯಲುಮುಚ್ಚರಿಸಲ್ಬಾರದುವಕ್ಷರಂಗಳಲ್ಲವು, ಮೊೞಗು ಮೊದಲಾದ ಪಲತೆಱದ ಧ್ವನಿಗಳ್.
ತಾತ್ಪರ್ಯ: ಶುದ್ಧಾಕ್ಷರಕ್ಕೆ ಅಕ್ಕರ (ಅಕ್ಷರ) ವೆಂದೂ ವರ್ಣವೆಂದೂ ಹೆಸರು. ಗುಡುಗು ಮೊದಲಾದ ಧ್ವನಿಗಳು ಬರಹಕ್ಕಾಗಲಿ ಉಚ್ಚಾರಣೆಗಾಗಲಿ ಬರದಿರುವುದರಿಂದ ಅವು ಅಕ್ಷರಗಳಲ್ಲ; ಕೇವಲ ಧ್ವನಿಗಳು.
ವಿ. ವಿ : ಜೈನಪರಂಪರೆಯು ಪಾರಿಶುದ್ಧತೆಗೆ ಉನ್ನತಸ್ಥಾನವನ್ನು ಕೊಟ್ಟಿದೆ. ಪರಿಶುದ್ಧ ಚೇತನರೇ ತೀರ್ಥಂಕರರು. ಅದು ಜೈನರ ಒಂದು ದೊಡ್ಡ ಸಿದ್ಧಾಂತ. ಆದುದರಿಂದ ಜೈನ ವ್ಯಾಕರಣಕಾರರು ಅಕ್ಷರಗಳಿಗೆ ಶೈದ್ಧಚೇತನರೊಡನೆ ಅಭೇದ ಕಲ್ಪಿಸಿ
ಅವೈಗಳನ್ನು " ಶುದ್ಧಗೆ" ಗಳೆಂದು ಕರೆದಿದ್ದಾರೆ.
ಸೂತ್ರಂ :
ವ್ಯವಹರಿಪುವೆರಡು ರೂಪಿಂ
ದವಕ್ಕರಂ ಶ್ರಾವಣಂ ಸ್ವನೈಕಾಕಾರಂ
ವಿವಿಧಾಕಾರಂ ಲಿಪಿಭೇ
ದ ವೃತ್ತಿಯಿಂ ಚಾಕ್ಷುಷಂ ಪುರಾತನಮತದಿಂ॥೩॥
ವೃತ್ತಿ: ಎರಡು ತೆಱದಾಕಾರದಿಂದಕ್ಕರಂ ವರ್ತಿಸುಗುಂ; ಶಬ್ದೈಕಾಕಾರದಿಂ ಕಿವಿಗೆ ವಿಷಯಮಾದಕ್ಕರಮಂ ಶ್ರಾವಣಮೆಂಬುದು; ಲಿಪಿಭೇದದಿಂ ಪಲವಾಕಾರಮಾಗಿ ಕಣ್ಗೆ ತೋರ್ಪಕ್ಷರಮಂ ಚಾಕ್ಷುಷಮೆಂಬುದು; ಇದನಾದಿಮಾರ್ಗದಿ-
ನಱಿವುದು.
ತಾತ್ಪರ್ಯ: ಅಕ್ಷರಗಳು ಎರಡು ರೂಪಗಳಿಂದ ವರ್ತಿಸುತ್ತವೆ. ಶ್ರಾವಣ ಮತ್ತು ಚಾಕ್ಷುಷ. ಧ್ವನಿರೂಪವಾಗಿ ಕಿವಿಗೆ ವಿಷಯವಾಗುವುದು ( ಕೇಳುವುದು ) -ಶ್ರಾವಣ, ಬೇರೆ ಬೇರೆ ಲಿಪಿರೂಪವಾಗಿ ಕಣ್ಣಿಗೆ ಕಾಣಿಸುವುದು - ಚಾಕ್ಷುಷ.
ವಿ. ವಿ : ಶ್ರಾವಣವೆನ್ನುವುದು ಸಾಮಾನ್ಯವಾಗಿ ಒಂದೇ ಬಗೆಯಾಗಿ ಇರುತ್ತದೆ.ಉದಾಹರಣೆಗೆ "ಪ" ಎಂದು ಹೇಳಿದರೆ ಈ ಧ್ವನಿಯು ಎಲ್ಲ ಭಾಷೆಗಳಲ್ಲಿಯೂ ಒಂದೇ ರೀತಿಯಾಗಿರುತ್ತದೆ. ಉಚ್ಛಾರಣೆಯಲ್ಲಿ ಅಲ್ಪ ಸ್ವಲೂಪ ವ್ಯತ್ಯಾಸ ಕಂಡುಬರಬ-
ಹುದು. ಅದು ಗಮನಾರ್ಹವಲ್ಲ. ಚಾಕ್ಷುಷವಾದರೋ ಒಂದೊಂದು ಭಾಷೆಯಲ್ಲಿಯೂ ಒಂದೊಂದು ರೀತಿಯಲ್ಲಿರುತ್ತದೆ.
ಉದಾಹರಣೆಗೆ: ಕನ್ನಡದಲ್ಲಿ "ಪ" , ಸಂಸ್ಕೃತದಲ್ಲಿ , ಇಂಗ್ಲಿಷ್ನಲ್ಲಿ ಬೇರೆಯಾಗಿರುತ್ತದೆ. "ಅಕ್ಷರ" ಶಬ್ದಕ್ಕೆ ನಾಶರಹಿತವಾದುದು
ಎಂದರ್ಥ. ವ್ಯಾಕರಣಕಾರರು ಶಬ್ದವನ್ನು ನಿತ್ಯವೆಂದು ತಿಳಿಯುತ್ತಾರೆ. ಶಬ್ದಬ್ರಹ್ಮನನ್ನು ಉಪಾಸನೆ ಮಾಡುತ್ತಾರೆ. ಆದ್ದರಿಂದಲೇ ಇವುಗಳನ್ನು ಅಕ್ಷರಗಳೆಂದು ಕರೆಯಲಾಗಿದೆ. ರೇಖಾವಿನ್ಯಾಸಗಳು ಶ್ರಾವಣರೂಪವಾದ ಅಕ್ಷರಗಳಿಗೆ ಸಂಕೇತಗಳು. ಈ ಸಂಕೇತಗಳನ್ನು ಲಿಪಿಗಳೆಂದು ಕರೆಯುತ್ತಾರೆ. ಈ ಲಿಪಿಗಳು ಧ್ವನಿರೂಪವಾದ ಅಕ್ಷರಗಳ ಸಂಕೇತಗಳು. ಇವು ರೇಖಾರೂಪದಲ್ಲಿರುವುದರಿಂದಲೇ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ರೀತಿಯಾಗಿರುತ್ತವೆ.
ಸೂತ್ರಂ :
ವರ್ಣಂಗಳ ಪಾಠಕ್ರಮ
ಮರ್ಣವವೃತ ಧಾತ್ರಿಯೊಳ್ ಪ್ರಸಿದ್ಧಂ ನಿಜದಿಂ
ವರ್ಣಂಗಳಕಾರಾದ್ಯಾ
ಪೂರ್ಣತೆಯಂ ಪಡೆವುವಾ ಳಕಾರಂಬರೆಗಂ॥೪॥
ವೃತ್ತಿ: ಅಕ್ಕರಂಗಳನೋದುವ ಕ್ರಮಂ ಕಡಲುಡುಗೆಯಾದ ಧಾರಿಣಿಯೊಳ್ ಸ್ವಭಾವದಿಂ ಪ್ರಸಿದ್ಧಂ ; ಅಕ್ಕರಂಗಳಕಾರಂ ಮೊದಲಾಗಿ ಳಕಾರ ಪರ್ಯಂತಂ ಪರಿಪೂರ್ಣಮಾಗಿರ್ಪುವು.
ತಾತ್ಪರ್ಯ: ಸಮುದ್ರವನ್ನೇ ಎಲ್ಲೆಯಾಗುಳ್ಳ ಭೂಮಂಡಲದಲ್ಲಿ ವರ್ಣಗಳನ್ನು ಓದುವ ಕ್ರಮವು ಪ್ರಸಿದ್ಧವಾಗಿದೆ. "ಅ"
ಕಾರದಿಂದ " ಳ"ಕಾರದವರೆಗೆ ವರ್ಣಗಳು ಪರಿಪೂರ್ಣವಾಗಿವೆ.
ಅ ಆ, ಇ ಈ, ಉ ಊ, ಋ ೠ, ಌ ೡ, ಏ ಐ, ಓ ಔ,
ಕ್ ಖ್ ಗ್ ಘ್ ಙ,
ಚ್ ಛ್ ಜ್ ಝ್ ಞ
ಟ್ ಠ್ ಡ್ ಢ್ ಣ್
ತ್ ಥ್ ದ್ ಧ್ ನ್
ಪ್ ಫ್ ಬ್ ಭ್ ಮ್
ಯ್ ರ್ ಲ್ ವ್ ಶ್ ಷ್ ಸ್ ಹ್ ಳ್
ವಿ. ವಿ : ಅಕಾರವೆಂದರೆ "ಅ" ಎಂಬ ಅಕ್ಷರ ಮಾತ್ರವೆಂದು ತಿಳಿಯಬೇಕು. ಯಾವ ಅಕ್ಷರದ ಮುಂದೆ "ಕಾರ" ಎಂಬ ಶಬ್ದವು ಉಚ್ಚರಿಸಿದಷ್ಟು ಅಂಶವನ್ನು ಮಾತ್ರ ಬೋಧಿಸುತ್ತದೆ. "ಅ"ಕಾರ ಎಂದರೆ "ಅ"ಎಂಬ ಅಕ್ಷರ ಮಾತ್ರ. "ವರ್ಣ" ಶಬ್ದವುಸಜಾತೀಯ ಬೋಧಕ. ಅವರ್ಣ ಎಂದರೆ ಹ್ರಸ್ವ ದೀರ್ಘಾದಿ ಸಕಲ ಅಂಶಗಳಿಂದ ಕೂಡಿದ ಅಕ್ಷರ.
ಉಚ್ಚಾರಣೆಯ ಸೌಲಭ್ಯಕ್ಕಾಗಿ ವ್ಯಂಜನಗಳಿಗೆ "ಅ"ಕಾರವನ್ನು ಸೇರಿಸಿ ಹೇಳುವ ವಾಡಿಕೆ ಇದೆ. ಕಕಾರವೆಂದಾಗ, ಕ ಎಂಬುದರಲ್ಲಿ ಕ್+ಅ ಇದ್ದರೂ ಅ ಕಾರವನ್ನುಉಚ್ಚಾರಣಾ ಸೌಲಭ್ಯಕ್ಕೆ ಮಾತ್ರವಿದೆಯೆಂದು ಭಾವಿಸಿ ಕೇವಲ "ಕ್" ಅಕ್ರವನ್ನು ಗ್ರಹಿಸಬೇಕು. ಅ ಕಾರದಿಂದ ಮೊದಲ್ಗೊಂಡು ಳ ಕಾರದವರೆಗಿನ ಅಕ್ಷರಗಳನ್ನು ಎಲ್ಲ ವ್ಯಾಕರಣಕಾರರೂ ಒಂದು ಪ್ರಸಿದ್ಧ ಕ್ರಮವನ್ನನುಸರಿಸಿ ವ್ಯವಸ್ಥೆಗೊಳಿಸಿದ್ದಾರೆ. ಅಕ್ಷರಗಳ ಈ ವ್ಯವಸ್ಥಿತ ಕ್ರಮವೇ ಪಾಠಕ್ರಮ. ಪಾಠಕ್ರಮವನ್ನು ಅಕ್ಷರಸಮಾಮ್ನಾಯ, ವರ್ಣಸಮಾಮ್ನಾಯ, ವರ್ಣಮಾಲೆ - ಮೊದಲಾದ ಹೆಸರುಗಳಿಂದಲೂ ಕರೆಯುತ್ತಾರೆ.
ಸೂತ್ರಂ:
ಕುಳದ ನಿಯಾಮದೊಳೆಂದುಂ
ಕ್ಷಳಕ್ಕೆ ಲಾಕ್ಷರವಿಕಲ್ಪಮಿಲ್ಲ ವಿಕಲ್ಪಂ
ಕ್ಷಳನಲ್ಲದಿಲ್ಲ ಸಂಸ್ಕೃತ
ದೊಳಾ ಲಕಾರಕ್ಕೆ ಪೇೞ್ದೆನದಱಿಂ ಕ್ಷಳನಂ॥೫॥
ವೃತ್ತಿ : ಕುಳ ಪ್ರಾಸಮಾಗಿ ಪೇೞ್ದ ಕನ್ನಡಗಬ್ಬಂ ಕ್ಷಳನಂ ಸೆಱೆಗೆಯ್ವುದಾಗಿ ಲ ಕಾರಮಂ ವಿಕಲ್ಪಮಾಡಬಾರದು; ಲಕಾರ ಪ್ರಾಸಮಾಗಿ ಪೇೞ್ದ ಕನ್ನಡಗಬ್ಬದೊಳ್ ಕ್ಷಳನಂ ವಿಕಲ್ಪದಿನಿರಿಸಲ್ಬಾರದಾಗಿಯದುವುಮಾಗದು; ಕ್ಷಳನೆಂಬುದಿಲ್ಲದೆ ಸಂಸ್ಕೃತ ಪದದ ಲಕಾರಕ್ಕೆ ವಿಕಲೂಪಮಂ ಪೇೞಲೂಬಾರದಾಗಿ ಕ್ಷಳನನಿದಱೊಳೆ ಬೆರಸಿ ಪೇೞ್ದೆಂ.
ತಾತ್ಪರ್ಯ: ಪ್ರಾಸಸ್ಥಾನದಲ್ಲಿ ಕುಳವಿರುವಾಗ ಕ್ಷಳದ ವಿಕಲ್ಪವಾದ "ಲ" ಕಾರವನ್ನು ಬಳಸಬಾರದು; ಕ್ಷಳವನ್ನೇ ಬಳಸಬೇಕು. ಪ್ರಾಸವಲ್ಲದ ಕಡೆಯೂ ಸಂಸ್ಕೃತ ಶಬ್ದವನ್ನು ಪ್ರಯೋಗಿಸುವಾಗ ಕ್ಷಳವನ್ನೇ ಬಳಸಬೇಕು. ಅದರ ವಿಕಲ್ಪವಾದ "ಲ" ಕಾರವನ್ನು ಬಳಸಬಾರದು. ಪ್ರಾಸಸ್ಥಾನ ಮತ್ತು ಪ್ರಾಸೇತರ ಸ್ಥಾನಗಳೆರಡರಲ್ಲಿಯೂ, ಕ್ಷಳವನ್ನೇಬಳಸಬೇಕು.
ಕುಳಕ್ಷಳ ಪ್ರಯೋಗ-
ಕಿಳಿಱೆ ಹಯಂಗಳ್ ಗರ್ಜಿಸೆ
ಜಳದ ನಿಬಂಗಳ್ ಗಜಂಗಳ್ ( ೧)
ಲಕಾರಕ್ಕೆ ಕ್ಷಳನನಿರಿಸಲ್ಬಾರದುದಕ್ಕೆ ಪ್ರಯೋಗಂ -
ಓಲಗದೊಳೊರ್ಮೆ ನತನರ
ಪಾಲಕ ಚೂಡಾಮಣಿ ದ್ಯುತಿಪ್ಲುತ ಚರಣಂ ( ೨)
ವಿ. ವಿ : ಇದರ ಹಿಂದಿನ ಸೂತ್ರದ ವೃತ್ತಿಯಲ್ಲಿ ಸಂಸ್ಕೃತ ವರ್ಣಮಾಲೆಯನ್ನು ಬರೆದು ಅಂತ್ಯದಲ್ಲಿ " ಳ್" ಎಂಬ ಅಕ್ಷರವನ್ನು ಸೇರೆಸಿದ್ದಾನೆ. ಅಲ್ಲಿ ಹೇಳಿರುವ "ಳ್" ಎಂಬ ವರ್ಣವು ಸಹಜವಾಗಿ ಸಂಸ್ಕೃತ ವರ್ಣಮಾಲೆಯಲ್ಲಿ ಇಲ್ಲ. ಆದುದರಿಂದ ಈ "ಳ"ಕಾರವನ್ನು ಇಲ್ಲಿ ಏಕೆ ಹೇಳಿದೆ ಎಂಬ ಪ್ರಶ್ನೆ ಬರಬಹುದೆಂದು ಶಂಕಿಸಿ ಅದಕ್ಕೆ ಸಮಾಧಾನವನ್ನು ಇಲ್ಲಿ ಹೇಳಿದ್ದಾನೆ.
ವಿಕಲ್ಪ ಎಂದರೆ ಐಚ್ಛಿಕ. ವಿಕಲ್ಪವೆಂದು ಒಂದು ಕಾರ್ಯವನ್ನು ವಿಧಿಸಿದರೆ, ವಿಧಿಸಿದ ಕಾರ್ಯವೂ ಅಲ್ಲಿ ಬರಬಹುದು ಇಲ್ವವೇ ಬಾರದಿರಬಹುದು.
"ಲಳಯೋರಭೇದಃ " ಎಂಬ ಸಂಸ್ಕೃತ ಸೂತ್ರಕ್ಕನುಸಾರವಾಗಿ ಕನ್ನಡದಲ್ಲಿ ಸಂಸ್ಕೃತ ಲಕಾರಕ್ಕೆ ಬದಲಾಗಿ ಪ್ರಯೋಗಿಸುವ "ಳ" ಕಾರವನ್ನು "ಕ್ಷಳ" ವೆಂದು ಕರೆಯುತ್ತಾರೆ. ಕನ್ನಡದಲ್ಲಿರುವ ಸಹಜವಾದ "ಳ"ಕಾರವನ್ನು "ಕುಳ" ವೆಂದು ಕರೆಯುತ್ತಾರೆ. ಕುಳವು ಪ್ರಾಸಸ್ಥಾನದಲ್ಲಿ ಬಂದಾಗ ಅದಕ್ಕೆ ಪ್ರಾಸವಾಗಿ ಕ್ಷಳವನ್ನೇ ಬಳಸಬೇಕೇ ಹೊರತು "ಲ" ಕಾರವನ್ನು ಬಳಸಬಾರದು. ಲಕಾರವಿದ್ದರೆ ಅದನ್ನು ಕ್ಷಳವನ್ನಾಗಿ ಮಾಡಿಕೊಳ್ಳಬೇಕು. "ಲ"ಕಾರವೇ ಪ್ರಾಸಸ್ಥಾನದಲ್ಲಿ ಬಂದಾಗ ಅದಕ್ಕೆ "ಲ" ಕಾರವನ್ನೇ ಪ್ರಾಸವಾಗಿ ಬಳಸಬೇಕು. ಅದರ ವಿಕಲ್ಪವಾದ ಕ್ಷಳವನ್ನು ಬಳಸಬಾರದು.
ಇದರಿಂದ (೧)ಕುಳಕ್ಕೆ ಕ್ಷಳಪ್ರಾಸ ಬರಬಹುದು. (೨) ಕನ್ನಡದ "ಲ"ಕಾರಕ್ಕೆ ಸಂಸ್ಕೃತದ ಲಕಾರ ಬರಬಹುದು. ಕ್ಷಳ ಬರಬಾರದು.
ಕಿಳಿಱೆ ಹಯಂಗಳ್ ಗರ್ಜಿಸೆ
ಜಲದ ನಿಭಂಗಳ್ ಗಜಂಗಳ್
ಇಲ್ಲಿ ಮೊದಲನೆಯ ಪ್ರಾಸಸ್ಥಾನದಲ್ಲಿ (ಕಿಳಿರೆ" ) ಕುಳ " ಳ" ಕಾರವಿದೆ. ಎರಡನೆಯ ಸಾಲಿನಲ್ಲಿ "ಜಲದ" ಲಕಾರವಿದೆ. ಇದು ದೋಷ. ಆದುದರಿಂದ "ಜಲದ" ಎಂಬಲ್ಲಿರುವ "ಲ" ಕಾರವನ್ನು ಕ್ಷಳ (ಳ" ) ವನ್ನಾಗಿ ಮಾಡಿಕೊಂಡು "ಜಳದ" ಎಂದು ಪ್ರಯೋಗಿಸಬೇಕು. "ಜಲದ" ಎಂದೇ ಬರೆದರೆ ಅದು ದೋಷ.
ಕೊಳಗಳ್ ದಳಿದಾಬ್ಜಂಗಳ್
ದಳಿತಾಬ್ಜಂಗಳ್ ಸಮೃದ್ಧ ಮಧುಗಳ್ ಮಧುಗಳ್
ಚಳದಳಿಕುಳಾ ಕುಳಂಗಳ್
ವಿಳಸದಳಿ ಪ್ರತತಿ ಮಧುರವಿರುತಿಯೆ ಬನದೊಳ್॥ - ( ಕಾವ್ಯಾವಲೋಕನ - ಪದ್ಯ ೬೨೩)
ಮೊದಲಿನ ಸಾಲಿನಲ್ಲಿ " ಕೊಳ " ಎಂಬ ದೇಶೀಯ " ಳ " ಕಾರ (ಕುಳ ) ಪ್ರಸಸ್ಥಾನದಲ್ಲಿದೆ. ಆದುದರಿಂದ ಮುಂದಿನ ಮೂರು ಸಾಲುಗಳಲ್ಲಿಯೂ ಪ್ರಾಸಸ್ಥಾನದಲ್ಲಿ ರುವ "ದಲಿತಾ " "ಚಲತ್ " " ವಿಲಸತ್ " ಎಂಬ ಸಂಸ್ಕೃತ ಶಬ್ದಗಳ ಲಕಾರಕ್ಕೆ ಬದಲಾಗಿ ಕ್ಷಳವನ್ನು ಬಳಸಲಾಗಿದೆ. ಮೇಲಿನ ಎರಡು ಉದಾಹರಣೆಗಳಲ್ಲಿಯೂ ಕುಳಕ್ಕೆ ಕ್ಷಳ ಪ್ರಾಸವು ಬಂದಿದೆ. ಇದು ದೋಷವಲ್ಲ.
ಅಲರ್ದ್ದುವೊಡನೊಡನೆ ಕೈರವ
ಕುಲಮುಂ ಕುಲಟಾಮುಖಂಗಳುಂ ಮುನಿದುವು ನಿ
ಶ್ಚಲಯೋಗ ನಿರತ ಸಂಧ್ಯಾಂ
ಜಲಿಯುಂ ಸರಸಿರುಹವನಮುಮೊಡನೊಡನಾಗಳ್॥ ( ಕಾವ್ಯಾವಲೋಕನ- ಪದ್ಯ ೬೧೪)
ಮೇಲಿನ ಪದ್ಯದ ಮೊದಲ ಸಾಲಿನಲ್ಲಿ " ಅಲರ್ " ಎಂಬಲ್ಲಿ ಕನ್ನಡದ "ಲ" ಕಾರವು ಪ್ರಾಸಸ್ಥಾನದಲ್ಲಿದೆ. ಉಳಿದ ಮೂರು ಸಾಲುಗಳಲ್ಲಿಯೂ ಪ್ರಾಸಸ್ಥಾನದಲ್ಲಿ " ಕುಲಂ " " ನಿಶ್ಚಲಂ " " ಅಂಜಲಿ" ಎಂಬಲ್ಲಿ ಸಂಸ್ಕೃತದ "ಲ" ಕಾರವಿದೆ. ಪ್ರಾಸವು ಸರಿಯಾಗಿಯೇ ಇದೆ. ಕ್ಷಳ ವಿಕಲ್ಪವೆಂದು ಹೇಳಿರುವುದರಿಂದ "ಕುಲ" "ನಿಶ್ಚಲ" " ಅಂಜಲಿ" ಎಂಬಲ್ಲಿರುವ "ಲ" ಕಾರವನ್ನು
ಕ್ಷಳವನ್ನಾಗಿ ಮಾಡಿ "ಕುಳ" "ನಿಶ್ಚಳ" "ಅಂಜಳಿ" ಎಂದು ಬರೆಯಬಾರದು. ಇದು ದೋಷ. ಹೀಗೆಯೇ
ಓಲಗದೊಳೊರ್ಮೆ ನತನರ
ಪಾಲಕ ಚೂಡಾಮಣಿ ದ್ಯುತಿ ಪ್ಲುತ ಚರಣಂ ….
ಎಂಬಲ್ಲಿ ಈ ಪದ್ಯದ ಮೊದಲ ಸಾಲಿನ "ಓಲಗ " ಎಂಬಲ್ಲಿ ಕನ್ನಡದ "ಲ"ಕಾರ ಪ್ರಾಸಸ್ಥಾನದಲ್ಲಿದೆ. ಎರಡನೆಯ ಸಾಲಿನ "ಪಾಲಕ" ಎಂಬಲ್ಲಿಯೂ "ಲ" ಕಾರವೇ ಪ್ರಾಸಸ್ಥಾನದಲ್ಲಿದೆ. ಪ್ರಾಸ ಸರಿಯಾಗಿಯೇ ಇದೆ. ಕ್ಷಳ ವಿಕಲ್ಪವೆಂದು ಹೇಳಿರುವುದರಿಂದ " ಪಾಲಕ" ಎಂಬುದನ್ನು " ಪಾಳಕ " ಎಂದು ಕ್ಷಳವನ್ನಾಗಿ ಮಾಡಿಕೊಳ್ಳಬಾರದು. ಇದು ದೋಷ. ಇಷ್ಟು ಪ್ರಾಸದ ವಿಷಯವಾಯಿತು. ಸಂಸ್ಕೃತ ಲಕಾರದಿಂದ ಕೂಡಿದ ಅನೇಕ ಶಬ್ದಗಳು ಕನ್ನಡದಲ್ಲಿ ಬಳಕೆಯಲ್ಲಿವೆ. ಈ ಪದಗಳನ್ನು ಇದ್ದಹಾಗೆಯೇ ಬಳಸಬೇಕೇ ಅಥವಾ ಅವುಗಳನ್ನು ಕ್ಷಳವನ್ನಾಗಿ ಮಾಡಿಕೊಳ್ಳಬೇಕೆ ಎಂಬ ಪ್ರಶ್ನೆ ಉದ್ಬವವಾಗುತ್ತದೆ. ಪ್ರಕೃತ ಸೂತ್ರದ ವೃತ್ತಿಯಲ್ಲಿ "ಪ್ರಾಸಮಲ್ಲದಲ್ಲಿಯಂ ಸಕ್ಕದದ ಲ ಕಾರಕ್ಕೆ ಕ್ಷಳನಲ್ಲದೆ ವಿಕಲ್ಪಮಾಗಿ ಲಕಾರಮಂ ಪೇಳ ಸಲ್ಲ. " ಎಂದು ಹೇಳಿರುವುದರಿಂದ ಲಕಾರದಿಂದ ಕೂಡಿದ ಸಂಸ್ಕೃತ ಪದಗಳನ್ನು ಕನ್ನಡದಲ್ಲಿ ಬಳಸುವಾಗ ಕ್ಷಳವನ್ನೇ ಬಳಸಬೇಕು. ವಿಕಲ್ಪ "ಲ"ಕಾರವನ್ನು ಬಳಸಬಾರದು.
ವೈದಿಕ ಸಂಸ್ಕೃತದಲ್ಲಿ "ಳ" ಕಾರವು ಪ್ರಯೋಗದಲ್ಲಿದೆ. ಉದಾಃ " ಅಗ್ನಿಮೀಳೆ ಪುರೋಹಿತಂ", ಕ್ವಚಿತ್ತಾಗಿ ಲೌಕಿಕ ಸಾಹಿತ್ಯದಲ್ಲಿಯೂ "ಳ"ಕಾರ ಪ್ರಯೋಗವನ್ನು ಗಮನಿಸಬಹುದು.
ಉದಾಹರಣೆ: ಇಂದೀವರದಳಶ್ಯಾಮಂ ಇಂದಿರಾನಂದ ಕಂದಳಂ ….. -( ರಘುವಂಶ ಮಲ್ಲಿನಾಥ ವ್ಯಾಖ್ಯಾನ )
ಸೂತ್ರಂ:
ಕವಿಗಳ್ ಸ್ವರದಿಂ ವರ್ಗದಿ
ನವರ್ಗದಿಂ ಯೋಗವಾಹದಿಂ ದೇಶಿಯೊಳು
ದ್ಭವಮಪ್ಪ ವರ್ಣದಿಂ ಪಂ
ಚವಿಧ ತಾನೆಂದು ತಿಳಿಪುವರ್ ಶುದ್ಧಗೆಯಂ॥೬॥
ವೃತ್ತಿ : ಸ್ವರದಿಂ, ವರ್ಗದಿಂ, ಅವರ್ಗದಿಂ, ಯೋಗವಾಹದಿಂ, ದೇಶೇಯಂಗಳಿಂ ಇಂತು ಶುದ್ಧಾಕ್ಷರಂಗಳೀ ಕನ್ನಡದೊಳ್ ಪಂಚವಿಧಮೆಂದು ಕವಿಗಳ್ ಬಾಲಶಿಕ್ಷೆಯಂ ಮಾೞ್ಪರ್.
ತಾತ್ಪರ್ಯ: ವಿದ್ವಾಂಸರು ಶುದ್ಧಗೆ, ಶುದ್ಧಕ, ಸುದ್ದಗೆ ಎಂಬ ಪರ್ಯಾಯನಾಮಗಳೂ ಇವೆ. ಸ್ವತಂತ್ರೊಚ್ಚಾರಣಗೆ ಯೋಗ್ಯವಾದ ಅಕ್ಷರಗಳನ್ನು ಸ್ವರಗಳೆಂದೂ, ಸ್ವರಸಹಾಯದಿಂದ ಉಚ್ಚಾರಣೆಗೆ ಯೋಗ್ಯವಾದ ಅಕ್ಷರಗಳನ್ನು ವ್ಯಂಜನಗಳೆಂದೂ ಕರೆಯುತ್ತಾರೆ. ಸಂಸ್ಕೃತದಲ್ಲಿ ಕಾಣಬರದ, ಆದರೆ ಅಚ್ಚಗನ್ನಡದಲ್ಲಿ ಬಳಕೆಯಲ್ಲಿರುವ ಎ, ಒ, ಱ, ೞ, ಕುಳ ಇವುಗಳನ್ನು ದೇಶೀಯವೆಂದು ಕರೆಯುತ್ತಾರೆ.
ಸೂತ್ರಂ :
ತರದಿನಕಾರಂ ಮೊದಲಾ
ಗಿರೆ ಪದಿನಾಲ್ಕುಂ ಸ್ವರಂಗಳಾದಿಯ ಪತ್ತ
ಕ್ಕರಮುಂ ಸಮಾನಮನಿಸುಗು
ಮೆರಡೆರಡವಱೊಳ್ ಸವರ್ಣಮೆಂತೋದಿದೊಡಂ॥೭॥
ವೃತ್ತಿ: ಕ್ರಮದಿನಕಾರಂ ಮೊದಲಾಗಿ ಔಕಾರಪರ್ಯಂತಮಿರ್ದ ಪದಿನಾಲ್ಕಕ್ಕರಂ ಸ್ವರಸಂಜ್ಞೆಯಂ ಪಡೆಗುಂ; ಅಲ್ಲಿ ಮೊದಲ ಪತ್ತಕ್ಕರಂ ಸಮಾನ ಸಂಜ್ಞೆಯಂ ಪಡೆಗುಂ; ಆ ಪತ್ತಕ್ಕರಂಗಳೊಳ್ ಎರಡೆರಡಕ್ಕರಂಗಳೆ ತಮ್ಮೊಳನುಲೋಮದೊಳಿರ್ದೊ-
ಡಂ ವಿಲೋಮದೊಳಿರ್ದೊಡಂ, ಸವರ್ಣ ಸಂಜ್ಞೆಯಂ ಪಡೆಗುಂ.
ಅ ಆ, ಇ, ಈ, ಉ, ಊ, ಋ, ೠ, ಌ, ೡ, ಏ, ಐ, ಓ, ಔ, ಈ ಪದಿನಾಲ್ಕುಂ ಸ್ವರಸಟಜ್ಞೆಯಂ ಪಡೆಗುಂ.
ಅ, ಆ, ಇ, ಈ, ಉ,ಊ, ಋ, ೠ, ಌ, ೡ, ಈ ಪತ್ತು ಸಮಾನಂಗಳ್.
ಈ ಯುಗಳಂಗಳ್ ಅ, ಆ, ಎಂದು ಅನುಲೋಮದೊಳಿರ್ದೊಡಂ ಆ, ಅ, ಎಂದು ಪಲ್ಲಟಂಬೋದೊಡಂ ಸವರ್ಣವಪ್ಪುವು.
ತಾತ್ಪರ್ಯ : ಕ್ರಮವಾಗಿ ಅಕಾರದಿಂದ ಔಕಾರದವರೆಗಿನ ಹದಿನಾಲ್ಕು ಆಕ್ಷರಗಳು ಸ್ವರಗಳೆನಿಸುತ್ತವೆ. ಈ ಹದಿನಾಲ್ಕು ಅಕ್ಷರಗಳಲ್ಲಿ ಮೊದಲ ಹತ್ತು ಅಕ್ಷರಗಳು (ಅ ಆ, ಇ ಈ , ಉ ಊ, ಋೠ, ಌೡ,) ಸಮಾನವರ್ಣಗಳೆನಿಸಿ, ಸಮಾನ ಸಂಜ್ಞೆಯನ್ನು ಪಡೆದ ಈ ಹತ್ತು ಅಕ್ಷರಗಳಲ್ಲಿ ಅನುಕ್ರಮವಾಗಿ ಎರಡೆರಡು ಅಕ್ಷರಗಳು ಅನುಲೋಮ ವಿಲೋಮವಾಗಿ ಹೇಗೆ ಓದಿದರೂ ಸವರ್ಣವೆನಿಸುತ್ತವೆ.
ಯಾವ ಎರಡು ವರ್ಣಗಳಿಗೆ ಸ್ತಾನ, ಪ್ರಯತ್ನಗಳು ಸಮಾನವೋ ಆ ವರ್ಣಗಳು ಪರಸ್ಪರ ಸವರ್ಣಗಳೆನಿಸುತ್ತವೆ.
ಅನುಲೋಮ : ಹ್ರಸ್ಶಾಕ್ಷರವನ್ನು ಮೊದಲು ಹೇಳಿ ಅನಂತರ ದೀರಾಘಾಕ್ಷರವನ್ನು ಹೇಳುವುದು
ಉದಾಹರಣೆ: ಅ, ಆ.
ವಿಲೋಮ : ದೀರಾಘಾಕ್ಷರವನ್ನು ಮೊದಲು ಹೇಳಿ ಅನಂತರ ಹ್ರಸ್ಶಾಕ್ಷರವನ್ನು ಹೇಳುವುದು.
ಉದಾಹರಣೆ : ಆ, ಅ.
ಹದಿನಾಲ್ಕು ಸ್ವರಗಳನ್ನು ಎರಡು ಭಾಗಮಾಡಿ ಮೊದಲ ಹತ್ತು ಸ್ವರಗಳನ್ನು ಸಮಾನ ಸ್ವರಗಳೆಂದು ಕರೆದಿದ್ದಾನೆ. ಇವು ಸಹಜವಾದ ಸ್ವರಗಳು. ಎರಡನೆಯ ಭಾಗದ ನಾಲ್ಕು ಸ್ವರಗಳು ( ಏ ಐ, ಓ, ಔ ) ಸಹಜಾಕ್ಷರಗಳಲ್ಲ : ಸಂಧ್ಯಕ್ಷಲಗಳು.
ಮೊದಲ ಹತ್ತು ಸ್ವರಗಳಲ್ಲಿ, ಅನುಕ್ರಮವಾದ ಎರಡೆರಡು ಅಕ್ಷರಗಳಲ್ಲಿ ಸಾವರ್ಣ್ಯವಿರುವುದರಿಂದ ಇವುಗಳನ್ನು ಸಮಾನಗಳೆಂದು ಕರೆಯಲಾಗಿದೆ. ಕೊನೆಯ ನಾಲ್ಕು ಅಕ್ಷರಗಳಲ್ಲಿ ಸಾವರ್ಣ್ಯವಿಲ್ಲದಿರುವುದರಿಂದ ಅವು ಸಮಾನಗಳಲ್ಲ.
ಸೂತ್ರಂ :
ಕ್ರಮದಿಂ ಹ್ರಸ್ವಕ್ಕಂ ಹ್ರ
ಸ್ವಮೊದವೆ ದೀರ್ಘಕ್ಕೆ ದೀರ್ಘಮೊದವೆ ತಗುಳ್ಗುಂ
ಸಮಸಂದಾ ಯುಗಳಂಗಳೊ
ಳಮಳಿನಮಾಗೆಲ್ಲಿಯುಂ ಸವರ್ಣವಿಧಾನಂ॥೮॥
ವೃತ್ತಿ: ತಱುವಾಯಿಂದಮಾ ಯುಗಳಂಗಳೊಳೆ ಹ್ರಸ್ವಕ್ಕೆ ಹ್ರಸ್ವಂ ಪರಮಾದೊಡಂ, ದೀರ್ಘಕ್ಕೆ ದೀರ್ಘಂ ಪರಮಾದೊಡಂ, ನಿರ್ದೋಷಮಾಗಿ ಸವರ್ಣಸಂಜ್ಞೆಯಂ ಪಡಗುಂ,
ಅ ಅ, ಆ ಆ, ಎಂಬಂತುೞಿದವನಱಿದುಕೊಳ್ವುದು.
ತಾತ್ಪರ್ಯ: ಆ ಯುಗಳಾಕ್ಷರಗಳಲ್ಲಿ (ಜೊತೆ) ಹ್ರಸ್ವಕ್ಕೆ ಹ್ರಸ್ವ ಪರವಾದರೂ, ದೀರ್ಘಕ್ಕೆ ದೀರ್ಘಂ ಪರವಾದರೂ ಸವರ್ಣವೆನಿಸುತ್ತವೆ. ಇದು ದೋಷವಲ್ಲ.
ವಿ, ವಿ. : ಹಿಂದಿನ ಸೂತ್ರದಲ್ಲಿ ಹ್ರಸ್ವ ದೀರ್ಘಗಳು ಅನುಲೋಮ ವಿಲೋಮದಿಂದ ಸವರ್ಣ ಸಂಜ್ಞೆಯನ್ನು ಪಡೆಯುತ್ತವೆಂದು ಹೇಳಲಾಗಿದೆ. ಈ ಸೂತ್ರವು ಹ್ರಸ್ವಕ್ಕೆ ಹ್ರಸ್ವವೂ, ದೀರ್ಘಕ್ಕೆ ದೀರ್ಘವೂ ಸವರ್ಣವೆಂಬುದನ್ನು ತಿಳಿಸುತ್ತದೆ. ಆದುದರಿಂದ ಅ ಕಾರಕ್ಕೆ ಅ ಕಾರವಾಗಲೀ, ಆ ಕಾರಕ್ಕೆ ಆ ಕಾರವಾಗಲೀ; ಆ ಕಾರಕ್ಕೆ ಅಕಾರವಾಗಲೀ, ಆ ಕಾರಕ್ಕೆ ಅಕಾರವಾಗಲೀ ಅಥವಾ ಅಕಾರಕ್ಕೆ ಆಕಾರವಾಗಲೀ ಪರವಾದಾಗ ಅವು ಸವರೂಣಗಳೇ ಆಗುತ್ತವೆ. ಹೀಗೆಯೇ ಇ ಈ, ಇತ್ಯಾದಿ ಜೋಡಿ ಅಕ್ಷರಗಳನ್ನು ತಿಳಿದುಕೊಳ್ಳಬೇಕು.
ಸೂತ್ರಂ :
ಸವನಿಸಿದ ಏ ಒ ಓ ಯೆಂ
ಬಿವು ಕನ್ನಡದೊಳ್ ಸ್ವಭಾವದಿಂದೊಳವು ಸವ
ರ್ಣವುಮಪ್ಪುವು ವರ್ಣಾಂಕಂ
ಸವರ್ಣಸಂಜ್ಞೆಯೊಳಮೊದವುಗುಂ ವ್ಯಾಕೃತಿಯೊಳ್॥೯॥
ವೃತ್ತಿ: ಎ ಏ, ಒ ಓ, ಎಂಬೀ ಯುಗಳಾಕ್ಷರಂಗಳುಂ ವಿಶಂಕಾವಧಾರಣ ನಿಪಾತಂಗಳಲ್ಲದೆ ನಿಜದಿನೊಳವು. ಸವರ್ಣ ಸಂಜ್ಞೆಯುಮವರ್ಕೆ ದೊರೆಕೊಳ್ವುದು. ಸವರ್ಣ ಸಂಜ್ಞೆಗೆ ವರ್ಣಸಂಜ್ಞೆ ವ್ಯಾಕರಣದೊಳುಂಟು.
ತಾತ್ಪರ್ಯ: ಎ ಏ, ಒ ಓ, ಜಂಬ ಜೋಡಿ ಅಕ್ಷರಗಳು ವಿಶಂಕೆ, ಅವಧಾರಣೆ, ನಿಪಾತಗಳಾಸಗಿರುವುದಲ್ಲದೆ ಅವು ಕನ್ನಡ ವರ್ಣಮಾಲೆಯಲ್ಲಿ ಸಹಜವಾಗಿಯೂ ಇವೆ. ಅವುಗಳೂ ಸವರ್ಣಸಂಜ್ಞೆಯನ್ನು ಪಡೆಯುತ್ತವೆ, ಇವುಗಳಿಗೆ ಸವರ್ಣಸಂಜ್ಞೆಯೂ ಇದೆ. ಅವರ್ಣವೆಂದರೆ ಅ ಆ ಎಂಬ ಎರಡೂ ಅಕ್ಷರಗಳಾಗುತ್ತವೆ. ಹೀಗೆಯೇ ಎ ಒ ವರ್ಣಗಳನ್ನೂ ತಿಳಿಯಬೇಕು.
ಪ್ರಯೋಗಂ : ಎಲೆ, ಎಲವಂ, ಏರಿ, ಏತಂ, ಒಕ್ಕಲ್, ಒರೆಗಲ್, ಓಸರಿಸು, ಓರಗೆ.
ಎತ್ತುಂಗೋಲಂ ವಿರಹಿಗೆ
ಚಿತ್ತಭವಂ…… (೧) ( ಸೂಕ್ತಿ ಸುಧಾರ್ಣವಂ.೧೦-೮೦)
ಎಡಱಿದರನಟ್ಟಿ ಮೋದುವ
ಪಡಿಯಱಗಟ್ಟಗಳ್ ….. (೨)
ಏಳಿದಂಗೆಯ್ಯಲಿಮೀಗಳೆ …..(೩)
ಏೞುಂ ಬಸನಮುಮಂ ನರಪಾಲಕರುೞಿಗೆ (೪)
ಒತ್ತರಮೊತ್ತಿದಂತೆ ಬೆಱಗಾಗೆ ಕೃಪಾದಿಗಳ್ (೫)
ಓಸರಿಸಿದ ಜವನಿಕೆಯೊಡ
ನೋಸರಿಸಿದನಿಸಲೆ ಕಂತು (೬) ಆದಿಪುರಾಣಂ ೯.೨೧
ವಿ. ವಿ : ಮೇಲಿನ ಪ್ರಯೋಗದಲ್ಲಿ ಬಂದಿರುವ ಎತ್ತುಂಗೋಲ್, ಎಡಱು, ಏಳಿದ, ಏೞುಂ, ಒತ್ತರ, ಓಸರಿಸು - ಈ ಶಬ್ದಗಳು ಅಚ್ಛಗನ್ನಡದ ಶಬ್ದಗಳು. ಇವೆಲ್ಲವೂ ಎ ಏ, ಮತ್ತು ಒ ಓ, ಎಂಬ ಅಕ್ಷರಗಳಿಂದ ಕೂಡಿರುವುದರಿಂದ ಈ ಅಕ್ಷರಗಳು ಕನ್ನಡದಲ್ಲಿ ಸಹಜವಾಗಿಯೇ ಇವೆ ಎಂದು ಕೇಶಿರಾಜನು ಪ್ರತಿಪಾದಿಸಿದ್ದಾನೆ.
ವಿಶಂಕೆ ಎಂದರೆ ಸಂದೇಹ. ಎ ಕಾರಾಂತವಾದ "ಅವನೆ" ಎಂಬ ಪದದ ಕೊನೆಯ "ಎ" ಕಾರವು ಅವಧಾರಣೆಯನ್ನು ತಿಳಿಸುತ್ತದೆ. ದುಃಖ,ಕೋಪ ಮೊದಲಾದವುಗಳನ್ನು ತಿಳಿಸುವ ಅಯ್ಯೋ, ಛೇ, ಓಹೋ ಮೊದಲಾದವುಗಳಿಗೆ ನಿಪಾತಗಳೆಂದು ಸಟಜ್ಞೆ. ನಿಪಾತಗಳನ್ನು ಅವ್ಯಯಗಳೆಂದೂ, ಪದಗಳೆಂದೂ ವ್ಯವಹರಿಸುತ್ತಾರೆ.
ಕೃತಜ್ಞತೆಗಳು :
ಸಂಪಾದಕರು:
ತ. ಸು. ಶಾಮರಾಯ
ಹೆಚ್. ನಂಜೇಗೌಡ.
ಪ್ರ : ಕಾವ್ಯಾಲಯ, ಪ್ರಕಾಶಕರು, ಮೈಸೂರು -೪.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ