ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಆಗಸ್ಟ್ 10, 2019

ಗುಬ್ಬಿ ಶಾಂತೇಶ ತೋಂಟದ ಸಿದ್ಧೇಶ್ವರ ಪುರಾಣಂ

ಗುಬ್ಬಿ  ಶಾಂತೇಶ ಕವಿಯ ತೋಂಟದ ಸಿದ್ಧೇಶ್ವರ ಪುರಾಣಂ  

ಕವಿ ಶಾಂತೇಶನು ತನ್ನ ಸಿದ್ಧೇಶ್ವರ ಪುರಾಣದ ಮೊದಲನೆಯ ಸಂಧಿಯಲ್ಲಿ ತನ್ನ ವಂಶಪರಂಪರೆಯನ್ನು ಹೇಳುತ್ತಾ ಅಮರಗುಂಡದ ಮಲ್ಲಿಕಾರ್ಜುನನ ನಿಷ್ಠಾಭಕ್ತನಾದ ಗುರುಭಕ್ತನನ್ನು ಅತ್ಯಂತ ಪೃಜ್ಯ ಭಾವದಿಂದ ಸ್ಮರೆಸಿದ್ದಾನೆ. ಆ ಗುರೈಭಕ್ತನ ವಂಶಸ್ಥನೂ ವಾತುಲಾಗಮ ಟೀಕಾಕಾರನೂ ಯೋಗಷಟ್ಸ್ಥಲ ವೀರಮಾಹೇಶ್ವರಾಚಾರ ಸ್ಥಾಪನನಿರೂಪಣ ಗಣಭಾಷ್ಯರತ್ನಮಾಲಾ -ಪರೆಮಿತದ ವೀರಶೈವ ಮಹಿಮಾತಿಶಯನೂ ಆದ ಗುಬ್ಬಿ ಮಲ್ಲಣಾರ್ಯನಪ್ರಪೌತ್ರ ತಾನೆಂದು ತಿಳಿಸಿದ್ದಾನೆ. ಆ ಗುಬ್ಬಿಯ ಗುರುಮಲ್ಲಣಾರ್ಯನ ಪೌತ್ರನಾದ ಕವಿ ಮಲ್ಲಣಾರ್ಯನ ಪುತ್ರ ಎಂಬುದಾಗಿ ಹೇಳಿಕೊಂಡಿದ್ದಾನೆ.

ಶಾಂತೇಶನು ತನ್ನ ಮುತ್ತಾತನನ್ನು ಸನ್ಮಲ್ಲಣಾರ್ಯನೆಂದಿದ್ದಾನೆ. ತನ್ನ ತಂದೆ ಕವಿಮಲ್ಲಣಾರ್ಯನನ್ನು “ಘನಮಲ್ಲಣಾರ್ಯನೆಂದು” ಕರೆದಿದ್ದಾನೆ.

ಪಲ್ಲವ॥ ಶ್ರೀ ವಿಮಲ ಕಾತ್ಯಾಯನೀಶ್ವರ
ದೇವಿಯಾನನಪದ್ಮ ಮಧುಕರ
ಪಾವನಾತ್ಮ ಗಿರೀಶ ಶಂಕರ ಕರುಣ ಘನವಾಸಾ।
ದೇವ ದೇವ ನವೀನ ನಿರ್ಮಲ
ಜೀವಿತೇಶ್ವರ ಕೈರವಾರುಣ
ಭೂವಳಯಮಂ ಪಾಲಿಪುದು ಸಿದ್ಧೇಶ ಚಿತ್ಕೋಶಾ॥ ೧॥

ಕಲ್ಪಿಸಿದ ಫಲಗಳನೆ ಕೊಡುವಾ
ಕಲ್ಪವೃಕ್ಷಂ ತೋಂಟದಾರ್ಯನ
ಬಲ್ಪಿನ ತ್ಯಾಗಕ್ಕೆ ಲಜ್ಜಿಸಿ ಬಾಗುತಿರಲಾಗಿ ।
ಮೆಲ್ಪಿನಿಂ ಸುರವನಿತೆಯರು ಸಂ
ಕಲೂಪವಿಲ್ಲದೆ ಕುಸುಮತತಿಯನ
ನಲ್ಪವಾಗಿಯೆ ತಿಱಿವರುಱೆದೋಂಟಗಳ ಪಿಡಿಯದೆಯು॥ ೫॥

ಆ ಮಹಾಗುರು ಸಿದ್ಧಲಿಂಗನ
ರಾಮಣೀಯಕ ಮಹಿಮೆಯಂ ಸಲೆ
ಭೂಮಿಯೊಳು ಬಲ್ಲವನದಾವಂ ಪೊಗಳೆ ನಾಲ್ಮೊಗದಾ।
ಶ್ರೀಮತಿಗೆ ಪವಣಲ್ಲ ಧರೆಯೊಳ್
ಸ್ವಾಮಿಯಣುಗನ ಷಣ್ಮುಖನ ನುತಿ
ಗೀ ಮಹಿಮನತಿಶಯವೆನಲು ರಾಜಿಸುವನುನ್ನತಿಯಂ॥ ೭॥

ಪಂಚಮುಖನಪರಾವತಾರನ
ಸಂಚಿತಾದಿಗಳಿಲ್ಲದೀಶನ
ಕಾಂಚನಾದ್ರಿಯೆ ವಾಸವಾದನ ವಿಮಲ ಶಂಕರನಾ।
ಮಿಂಚಿನಂತಿಂದೀಷಣಾದಿಯ
ವಂಚನೆಗಳಂ ಬಿಟ್ಟ ದೇವನ
ನಾಂ ಚದುರಿನಿಂ ನುತಿಪೆ ತೋಂಟದ ಸಿದ್ಧಗುರುವನಾ॥೧೨॥

ಇಂತೆಸೆವ ಗುರುಸಿದ್ಧಲಿಂಗನ
ನಂತಮಹಿಮೆಯ ಪೊಗಳೆ ಲೋಕದೊ
ಳಂತನಂತನ ರಸನೆಗರಿದೆನೆ ಶಕ್ಯವೇ ಯೆನಗೆ ।
ಶಾಂತರೂಪನ ಪಾದಪಂಕಜ
ವಿಂತು ಯೆನ್ನಯ ಹೃತ್ಕಮಲದೊಳು
ಸಂತಸದೊಳಿರೆ ಕಾವ್ಯಮಂ ಪೇಳುವೆನು ಲಕ್ಷಣದಿಂ ॥೧೪॥

ಧರಣಿಯೊಳ್ ಸಂಸ್ಕೃತಮಹಾ ಬಂ
ಧುರದ ಕರ್ನಾಟಂಗಳಾದಿಯ
ಸರಸ ಶಾಸ್ತ್ರಂಗಳು ಮುಖೋದ್ಗತವಾಗಿ ರಾಜಿಸುವಾ।
ವರ ಬಸವಪೌರಾಣದತಿಶಯ
ದುರುತರದ ಘನ ಮಲ್ಲಣಾರ್ಯನ
ಪರಮ ಪುತ್ರಂ ಶಾಂತದೇಶಿಕನೊರೆದನೀಕೃತಿಯಾ॥೧೭॥

ಶರಣಲೋಚನಕೈರವಕೆ ಹಿಮ
ಕಿರಣನೆನಿಸುವ ಗುಮ್ಮಳಾಪುರ
ದುರುತರದ ಶಾಂತೇಶನಂಘ್ರಿಯನೆನ್ನ ಮನದಲ್ಲಿ।  
ಹರುಷದಿಂದಂ ನೆನೆದು ಸಿದ್ಧೇ
ಶ್ವರನ ಕೃತಿಯಂ ಮಾಳ್ಪೆನೆನ್ನಯ
ಗುರುಗಣೇಶ್ವರಮೂರ್ತಿಯಂ ಭಾವಿಸುತ ರಚಿಸುವೆನು॥೧೮॥

ಬಸವ ಮೊದಲಾದವರ್ಗೆ ನುಡಿಯಿಂ
ಪೆಸೆಯೆ ಬೋಧಿಸಿ ಶೂನ್ಯಪೀಠದೊ
ಳೆಸೆದು ಮಾಯಾದಿಗಳ ಮರ್ದಿಸಿ ನಮಿತರಾದರ್ಗೆ ।
ರಸೆಯೊಳಗ್ಗದ ಭಕ್ತಿಯಂ ಪಸ
ರಿಸಿದ ಸುಪ್ರಭುದೇವರಂಘ್ರಿಯ
ನೊಸೆದು ಭಜಿಸುವೆನೆನ್ನ ಪಾಪಂ ಪರೆವಾತೆಱದಿಂದಾ॥ ೨೧॥

ಧರೆಯ ರಕ್ಷಿಸಲೆಂದು ಮಂಡಗೆ
ಯುರುತರದ ಮಾದರಸರಂಗನೆ
ತರುಣಿ ಮಾದಾಂಬೆಯರ ಗರ್ಭದೊಳೊಗೆದು ಮರ್ತ್ಯದೊಳು ॥
ಅರಸ ಬಿಜ್ಜಳನಂ ನಿವಾರಿಸಿ
ಪರಮ ಷಟ್ಸ್ಥಲಮಾರ್ಗವೇ ಸಂ
ಚರಿಸುವಂದದಿ ಪಸರಿಸಿದ ಬಸವಂಗೆ ಶರಣೆಂಬೆಂ॥೨೨॥

ನಿರುತದಿಂ ಚೌಷಷ್ಟೀಶೀಲದೊ
ಳರರೆ ತಾನಾಚರಿಸಿ ಬಸವೇ
ಶ್ವರನ ಸಲೆ ಕೊಂಡಾಡಿ ಶಿವನಂ ಸ್ತುತಿಸಿ ರಾಜಿಸುವಾ।
ಪರಮ ಘನಪಾಲ್ಕುಱಿಕೆ  ಸೋಮೇ
ಶ್ವರನ ಚರಣವ ನೆನೆದು ತೋಂಟದ
ಸರಸ ಸಿದ್ಧೇಶ್ವರನ ಕೃತಿಯಂ ಪೇಳ್ವೆನತಿಶಯದಿಂ॥೨೭॥

ಇವರು ಮೊದಲಾದಖಿಳ ಶರಣರ
ನವಪದಾಂಬುಜವೆನ್ನ ಹೃದಯದೊ
ಳವಿರತಂ ನೆಲೆಗೊಳಲು ತೋಂಟದ ಸಿದ್ಧದೇಶಿಕನಾ।
ತವೆ ಕೃತಿಯನೊರೆಯಲ್ಕೆ ಬಾಧೆಯೆ
ವಿವಿಧ ಯುಕ್ತಿಗಳಿಂದ ನೋಳ್ಪಡೆ
ಭುವಿಯೊಳಿದಕೆಣೆಯಿಲ್ಲವೆನಿಪುದು ಕಾವ್ಯವತಿಸೇವ್ಯ॥೨೮॥

ಚಂದ್ರಶೇಖರದೇವರಾಜ್ಞೆಯ
ಸಾಂದ್ರದಿಂ ಮಸ್ತಕದಿ ಧರಿಸತೆ
ರುಂದ್ರವಾಗಿಯೆ ಪೇಳ್ವೆನಲ್ಲದೆ ಯೆನ್ನ ಮತಿಯಿಂದಾ।
ತಂದ್ರಿ ರಹಿತನ ತೋಂಟದಾರ್ಯ ಯ
ತೀಂದ್ರನ ಬಣ್ಣಿಸುವೊಡಳವೇ
ಆಂಧ್ರ ಮೊದಲಾದುರುತರದ ದೇಶದೊಳು ಭಾವಿಪಡೆ॥೩೧॥

ಪೇಳೆನಲು ನಾಂ ರಚಿಸಿದೆಂ ಸಲೆ
ಭಾಳಲೋಚನ ಸಿದ್ಧಲಿಂಗನ
ಮೇಳದಗ್ಗದ ಕಾವ್ಯಮಂ ಶಿವಭಕ್ತರಿದನೋದಿ ।
ಕಾಳುಮತಿಗಳು ಗೆಡೆಯದಂದದೆ
ಮೇಳವಿಸಿ ತಿದ್ದುವುದುಲಾಲಿಸಿ
ಕೇಳುವುದು ಸಲೆ ತೋಂಟದಾರ್ಯನ ಕೃತಿಯನುನ್ನತಿಯಾ॥೩೫॥

ಶೋಣರತ್ನಂ ಮೌಕ್ತಿಕಂ ಸ
ತ್ಪ್ರಾಣಪವಳಂ ಪಚ್ಚೆ ಚಾರುಧು
ರೀಣ ಪುಷ್ಯಸುರಾಗ ವಜ್ರಂ ನೀಲ ವೈಢೂರ್ಯ।
ಮೇಣು ಗೋಮೇಧಿಕವೆಸೆಯೆ ಯ
ಕ್ಷೀಣ ರವಿ ಶಶಿ ಭೂಜ ಬುಧ ಗುರು
ಮಾಣದಾ ಕವಿಮಂದತಮಶಿಖಿಯಂತೆ ಸುರಶೈಲಂ॥೩೭॥

ಇಂತೆಸೆವ ಸುರಶೈಲದೊತ್ತಿನೊ
ಳಂತು ವರರಜತಾದ್ರಿಯೊಪ್ಪುವು
ದೆಂತೆನಲ್ ಚಿಂತಾಮಣಿಯ ಮೊರಡಿಗಳು ಮಱುಜವಣಿ ।
ಕಾಂತಿಯಮೃತದ ತೊಱೆಗಳವಱಿಂ
ಮುಂತೆ ರಾಜಿಪ ಸುರಕುಜಗಳ
ತ್ಯಂತ ಸುರಭಿಗಳೊಪ್ಪೆಯಾ ನಗವತಿಶಯದೆ ತೋರ್ಕುಂ॥೩೮॥

ನೆಟ್ಟನಘಮಂ ಸುಟ್ಟ ಶರಣರ
ಕೊಟ್ಟ ದುರಿತಘಱಟ್ಟಪುಣ್ಯದ
ದಟ್ಟ ಸುಖಮಂ ಬಿಟ್ಟಸುಜನರ್ಗಟ್ಟ ಕರುವಿಟ್ಟಾ।
ದಿಟ್ಟ ಕೀರ್ತಿಯ ಪಟ್ಟಪೂಜ್ಯದ
ತಿಟ್ಟ ಬೆಳ್ಪಿನ ಬಟ್ಟ ಮುತ್ತಳ
ವಟ್ಟ ಹರುಷದ ಗಟ್ಟ ಬೆಳ್ಳಿಯ ಬೆಟ್ಟ ರಂಜಿಪುದು॥೩೯॥

ಇಂತೆಸೆವ ರಜತಾದ್ರಿಯೊಳ್ ಸಲೆ
ಕಂತುವೈರಿಯ ನಗರಿಯೊಪ್ಪುವು
ದಂತದಕೆ ಸುಧೆಪೂರ್ಣವಾಗಿಪ್ಪಗಳು ವಸುಮಯದಿಂ।
ಮುಂತೆ ರಾಜಿಪ ಕೋಂಟೆ ಮೌಕ್ತಿಕ
ವಾಂತು ರಂಜಿಪ ತೆನೆಗಳಿಂದ
ತ್ಯಂತ ಮರಕತ ವಜ್ರದಿಂ ಶಿವಪುರ ವಿರಾಜಿಪುದು॥೪೧॥

ಆ ಮಹಾ ರಜತಾದ್ರಿಯೆಡೆಯೊಳು
ಸೋಮಧರನಂತಃಪುರಂ ಮಿಗೆ
ರಾಮಣೀಯಕವಾದುದದಱೊಳು ವಿನುತ ಘನ ದಿವ್ಯ ।
ನಾಮ ಸಿಂಹಾಸನವದಱೊಳಂ
ಪ್ರೇಮದಿಂ ದೇವಿಯರು ಸಹಿತಂ
ಕೋಮಲಾತ್ಮಂ ಮೂರ್ತಿಗೊಂಡಿರೆ ಬಂದರೋಲಗಕೆ॥೪೨॥

ಎಡದೊಳಿರ್ದರು ವಿಷ್ಣುಕೋಟಿಗ
ಳೊಡನೆ ಬಲದೊಳ್ ಬ್ರಹ್ಮಕೋಟಿಗ
ಳೆಡೆವಿಡದೆಯೊಪ್ಪಿದರು ಭರ್ಗನ ಪದದ ಸೇವೆಯಲಿ।
ತಡೆಯದಸುರರು ಖೇಚರರು ಸಂ
ಗಡಿಸಿ ಸೇವಿಸೆಯಾಗ ಸಲೆ ಮೂ
ಱಡಿಯ ಭೃಂಗೀಶ್ವರನ ನೃತ್ಯಂ ಮುಗಿದನಂತರದಿಂ॥೪೩॥

ಪರೆಯೆ ಪೇರೋಲಗವದಾಗಂ
ಗಿರಿಜೆಯೊಳು ಸರ್ವೇಶ್ವರಂ ತಾ
ನಿರೆಮಹಾನಂದೀಶ ವೀರಗಣೇಶ ಭೃಂಗೀಶಂ।
ಪರಮನಂಘ್ರಿಯ ಸೇವಿಸುತ್ತಿರೆ
ಯರರೆ ಬಳಿಕೇಕಾಂತದೋಲಗ
ಕುರವಣಿಸಿ ನಡೆತಂದ ನಾರದನೆಂಬ ಮುನಿರಾಯಾ॥೪೪॥

ಬಂದು ಪರಮೇಶ್ವರನ ಪಾದಕೆ
ವಂದಿಸುತ್ತಂ ಕರಕಮಲಮಂ
ಚಂದದಿಂ ಮುಗಿದು ಬಿನ್ನೈಸಿದನು ಶರೂವಂಗೆ।
ಇಂದುಧರ ಚಿತ್ತವಿಸುವದು ನಲ
ವಿಂದ ಮರ್ತ್ಯವನೋವಿ ರಕ್ಷಿಸ
ಲೆಂದು ಕಳುಪಿದೆ ನಂದಿಕೇಶನ ಬಸವನಾಮದಲಿ॥೪೫॥

ತನ್ನ ಸದೂಗುಣವಾದಿಯಾದವ
ನುನ್ನತದೆ ಕೂಡುತ್ತ ತೋಂಟದ
ಚಿನ್ನಿಧಾನಂ ವಿಮಲ ಸಿದ್ಧೇಶ್ವರನೆನಿಪ ಪೆಸರಂ।
ಮನ್ನಿಸುತೆ ಕೊಟ್ಟಾಗ ಗುರುರೂ
ಪಿನ್ನಿಖಿಲಮಂ ಬೋಧಿಸೆನಲಾ
ಗನ್ನಲಿದು ಮರ್ತ್ಯಕ್ಕೆ ನಡೆತಂದಂ ಶಿವಾಜ್ಞೆಯೊಳು॥೪೮॥

ಸಕಲಮುನಿಗಣವಂದ್ಯಪಾದನೆ
ಯಕುಟಿಲಾತ್ಮನೆ ಯನುಪನೆ ಪಾ
ವಕನಯನನೇ ಪಾವನಾಂಗನೇ ಪರಮ ಸುಖರೂಪಾ।
ಪ್ರಕಟ ಘನಸತ್ಕೀರ್ತಿಯೈಳ್ಳನೆ
ಸುಕರಚಿತ್ತನೆ ಶುದ್ಧಕಾಯನೆ
ಮಕರಕೇತನಮದಹರನೆ ಜಯ ಸಿದ್ಧದೇಶಿಕನೇ ॥೪೯॥

ಇದು ವಿಮಲಗುರು ತೋಂಟದಾರ್ಯನ
ಪದಕಮಲ ಷಟ್ಚರಣನೆನಿಸುವ
ಸದಮಲದ ಸನ್ಮಲ್ಲಣಾರ್ಯನ ಕುಲಶರಧಿಚಂದ್ರಾ।
ಪದುಳದಿಂ ಶಾಂತೇಶನೊರೆದೀ
ವಿದಿತ ಸಿದ್ಧೇಶಪುರಾಣವ
ನೊದವಿ ಕೇಳಿದ ಭಕ್ತತತಿಗಿಷ್ಟಾರ್ಥಮೊಂದುವುದು॥೫೦॥

ಪ್ರಥಮಸಂಧಿ ಸಮಾಪ್ತಂ.

ಹತ್ತನೆಯ ಸಂಧಿ:

ಪಲ್ಲವ॥ಶಿವನ ಲೋಕದ ವಿವರಮಂ ಶಂ
ಭುವಿನ ವಿಮಲಾಸ್ಥಾನದಿರವಂ
ಭುವನಕತಿಶಯವೆನಲು ಪೇಳ್ದಂ ಸಿದ್ಧದೇಶಿಕನು॥

ಪೂತ ಶರಣರ ಸಂಗನೇ ಸಂ
ಗೀತಚಿತ್ತನೆ ಚಿತ್ತಜಾಹಿತ
ನೂತನಾಂಗನೆಯಂಗನೆಯರಿಗೆ ದೇಹಮಂ ಕುಡದಾ ।
ಯಾತನೇ ಯಾತನೆಯ ಗೆಲ್ದನೆ
ದಾತನೇ ದಾತೇಷ್ಟವಿನುತ
ಶ್ವೇತನೇ ಶ್ವೇತಂಗೆ  ಮೋಕ್ಷವನಿತ್ತ ಸಿದ್ಧೇಶಾ॥೧॥

ಗುರುವೆ ತೋಂಟದ ಸಿದ್ಧದೇಶಿಕ
ಹರುಷದಿಂದಂ ಭುವನಕೋಶದೊ
ಳುರುತರದ ಬ್ರಹ್ಮಾಂಡದುನ್ನತಿಯಂ ಬಳಿಕ್ಕೆನಗೆ ।
ಕರುಣದಿಂ ಪೇಳಿದಿರಿ ಮತ್ತಂ
ಪರಮ ಘನ ಶಿವಲೋಕದಿರವಂ
ನಿರವಿಸೆಂಬಾ ಚಂದ್ರಶೇಖರ ಮೂರ್ತಿಗಿಂತೆಂದಂ॥೨॥

ಶೆವಪುರಾಣದ ರುದ್ರಕೋಟಿಯ
ವಿವಿಧ ಸಂಹಿತೆಯಲ್ಲಿ ಪೇಳ್ದಂ
ಸವಿನಯದೆ ನಂದೀಶ್ವರಂ ಕೃಪೆಯಿಂದ ಪೂರ್ವದೊಳು।
ತವಕದಿಂದ ಸನತ್ಕುಮಾರಂ
ಗವಿರತಂ ತಾನೊರೆದ ತೆಱದಿಂ
ಕುವರ ನಿನಗಱುಪುವೆನೆನುತ್ತಂ ನುಡಿದನೆಂತೆನಲು॥೩॥

ಲಾಲಿಸಲ್ಕೆಯಜಾಂಡದಿಂದಂ
ಮೇಲೆ ಮೂವತ್ತೆರಡುಕೋಟಿ ವಿ
ಶಾಲದಿಂ ಶಿವಲೋಕಮಿರ್ಪುದದಂ ಸಕಲ ವೇದ ।
ಜಾಲವಱಿಯವು ನಿಖಿಲ ಭುವನಕೆ
ಲೋಲನೇಯಾಧಾರಮಾಗು
ತ್ತಾ ಲತಾಘನಕಂದದಂದದೊಳೆಸೆವುದೆಂದುಸುರ್ದಂ।।೪॥

ಮೀಟಿನಿಂ ಜ್ಯೋತಿರ್ಮಯದ ಸಲೆ
ಕೋಟೆ ಶಿವಲೋಕಕ್ಕೆಯೆಂಟತಿ
ಸಾಟಿಯಿಲ್ಲದ ಬಾಗಿಲೊಪ್ಪೆ ಪುರಂದರನ ದೆಸೆಯಾ।
ಮಾಟದಾದ್ವಾರದೊಳು ತೋರ್ಪಂ
ಕೋಟಿಭಟರೋಲೈಸೆ ದಂಡಂ
ನಾಟಿಸಿದ ಘನತರ ಕಮಂಡಲ ಕರದೆ ರಾಜಿಸಲು॥೫॥

ಅರುಣಗಾತ್ರಂ ಹಂಸವಾಹನ
ವರರೆ ಬ್ರಾಹ್ಮಿಯೆನಿಪ್ಪ ಶಕ್ತಿಯು
ಮಿರೆ ಮಹಾಭೈರವನೆಸೆವ ನೆಱೆಮೂಱುಕಣ್ಣಿಂದಾ।
ಸರಸದಿಂ ಪರಮೇಶನಾಜ್ಞೆಯೊ
ಳರರೆಯಿಂದ್ರನ ದೆಸೆಯೊಳಿರ್ಪಂ
ತರರೆ ಬಳಿಕಾ ಪಾವಕನ ದೆಸೆಯೊಪ್ಪುತಿರ್ಪರು॥೬॥

ಭೈರವಂಗಂ ಕನಕಗಾತ್ರಂ
ಚಾರು ಡಮರೈಗ ಶೂಲ ಖಡ್ಗಂ
ಸಾರೆ ಖಟ್ವಾಂಗಂ ವಿರಾಜಿಸೆಯಜನ ವಾಹನದಿಂ ।
ಸೇರಿ ಸಲೆ ಹದಿನೆಂಟುಕೋಟಿಯ
ನಾರತಂ ಭಟರೋಲಗಿಸೆ ಗಂ
ಘಭೀರದಿಂ ಮಾಹೇಶ್ವರೀಶಕ್ತಿಯೊಳುಕಾಯ್ದಿರ್ಪಂ॥೭॥

ಶೂಲ ವಜ್ರಂ ಶಕ್ತಿ ಶುಕನೆಂ
ಬಾ ಲಲಿತ ಚಾತುರ್ಭುಜಗಳಿಂ
ಮೇಲೆ ವಾಹಿನಿಶಕ್ತಿಸಲೆಕಾಮಾರಿಭಟರಯಿದು।
ಆ ಲಲಿತ ಕೋಟಿಗಳು ಸೇವಿಸೆ
ಲೀಲೆಯಿಂ ಮೂರ್ಕಣ್ಣು ಸಹಿತನು
ಕೂಲದಿಂದಂ ಚಂಡಭೈರವನಿರ್ಪಯಮನಲ್ಲಿ॥೮೩

ಹೇಮದಂಗಂ ಶಂಖ ಚಕ್ರಂ
ಪ್ರೇಮದಿಂ ಗದೆ ಶಾರ್ಘ್ಗಮೆಸೆಯಲ್
ಕೋಮಲದೆ ಘನ ವೈಷ್ಣವೀಶಕ್ತಿಯೊಳು ಖಗಪತಿಯಾ।
ನಾಮವಾಹನದಿಂದಲೈದೆನಿ
ಪಾ ಮಹಾಘನ ಕೋಟಿಭಟರಿಂ ಕ್ರೋಧಿಭೈರವನೂ॥೯॥

ಅಂದದಿಂ ರವಿಕೋಟಿಬೆಳಗಿನ
ಮುಂದೆ ಪಾಱುವ ಮಿಂಚುಬುಳುವಿನ
ಛಂದದಿಂದಿಂದ್ರೃಣಿತತಿ ನೋಡಲ್ಕೆಯಱಿಯೆವಲಾ।
ಕುಂದದಿಭ ದರ್ಪಣದೊಳಿರ್ಪಂ
ತಂದಜಾಂಡದಿಗಳು ತೋಱುವ
ವಿಂದರುಣರುಚಿವೆಳಗನೇಳಿಪ ಶಿವನ ಹರಿಪೀಠ॥೨೦॥

ಸುರಪ ಶಿಖಿ ಯಮ ನಿರುತಿ ವರುಣಂ
ವರ ಮರುತ ಧನಧೀಶರೃಸೆಯೊ
ಳಿರದೆ ಕೇಳ್ ಕ್ರಮದಿಂದ ಧರ್ಮಂ ಭೂತವೇ ಮೂರ್ತಿ।
ಸರಸ ಧರ್ಮವೃಷಂ ಬಳಿಕ ಬಂ
ಧುರದೊಳಾಜ್ಞಾನಂ ವಿಕಟತನು
ಭರದೊಳಂತಾ ಜ್ಞಾನವೇ ಘನಶಾಂತಿರೂಪಾದಾ॥೨೧॥

ಬೇಱೆಬೇಱೆ ಗಣಂಗಳಾಗಂ
ತೋಱುವರು ವೊಬ್ಬೊಬ್ಬರಿಗೆ ನಲ
ವೇಱೆ ಪದ್ಮಂ ಹತ್ತು ಹತ್ತುಂ ಬಳಿಕ ಮತ್ತೈದು ।
ನೀಱನೇ ಶಂಖಂಗಳಾಗವೆ
ಯಾಱು ಸಪ್ತಾರ್ಬುದ ವಿರಾಜಿಸೆ
ಮೂಱು ನೇತ್ರದ ಶಿವನ ಬಲದೋಲಗವೌಸೆದುದಿನ್ನು॥೩೩॥

ವಿವಿಧ ಪಾಶುಪತಾಸ್ತ್ರರೂಪಿಂ
ಶಿವನ ಪಶ್ಚಿಮದಾಸೆಯಲ್ಲಿಹ
ರವಿರತಂ ಮತ್ತಲ್ಲಿ ದಂಡಧರಾಂಡ ಮೊದಲಾದ।
ನವ ಬಲಪ್ರಮಥಾದಿಗಳಿಗಂ
ತವೆಯನೇಕಾರ್ಬುದ ಗಣಂಗಳು
ಸವಿನಯದೆ ರಂಜಿಸಲು ಭವನೋಲಗದೊಳಪೊಪ್ಪಿದರು॥೩೪॥

ಹರಿ ಸುರಪ ದಿಕ್ಪಾಲರಾ ಹ
ನ್ನೆರಡು ತರಣಿಗಳಷ್ಟ ಶಸುಗಳು
ಭರದೊಳೇಕಾದಶ ಮಹಾರುದ್ರಾದಿಗಳ್ಬಂದು ।
ಹರುಷದಿಂ ಸರೂವೇಶ್ವರನಬಂ
ಧುರದೆ ಸೇವೆಸೆಯಾಗ ಮೆಱೆದುದು
ವರ ಶಿವನ ವಾಮಾಂಗದೊಡ್ಡೋಲಗವನಿಶವಿಂತು॥೩೫॥

ಹದಿಮೂರನೆ ಸಂಧಿ:

ಪಲ್ಲವ : ವರ ಚಿದಂಬರದಾ ಸ್ವರೂಪಂ
ಧರಣಿಯೊಳು ಸುಜ್ಞಾನಿಗಳು ಬಂ
ಧುರದೆ ಮೆಚ್ಚುವ ತೆಱದೊಳೊರೆದಂ ಸಿದ್ಧದೇಶಿಕನು॥

ಕಾಲಹರ ಸುಖದಾಲವಾಲಂ
ಶಾಲ ಶಂಕರಲೋಲ ಸತ್ಸುಖ
ಜಾಲ ಸಜ್ಜನಪಾಲ ಶಾಂತಿಯ ಶೀಲ ಸಲೆ ಸುಮುಖ॥
ಸ್ಥೂಲ ಜನದನುಕೂಲ ಕಾಷ್ಠಾ
ಚೇಲ ವಿರಸಾಭೀಲ ಕರಧರ
ಶೂಲ ಮಂಜುಲ ನೀಲಗಳ ನೀ ಪಾಲಿಸೈ ಸಿದ್ಧಾ॥೧॥

ಸರಸ ಸನ್ನುತ ಸಚ್ಚಿದಾನಂ
ದುರುತರದ ಘನನಿತ್ಯವಂ ತಾ
ಸ್ಥಿರದ ನವಪರಿಪೂರ್ಣನಹ ಶಿವಭಕ್ತಿಯತಿಶಯದಾ॥
ಸುರುಚಿರದ ಹೃತ್ಕಮಲದೊಳಗಂ
ಪರಮ ಜಂಗಮಲಿಂಗದುದಯಂ
ಹರುಷದಿಂದಾ ಜಂಗಮದ ವರ ಮಕುಟಮಧ್ಯದೊಳು॥೨॥

ಶೂನ್ಯಲಿಂಗೋತ್ಪತ್ತಿಯಂತಾ
ಶೂನ್ಯಲಿಂಗದ ಮಧ್ಯದೆಡೆಯೊಳು
ವನ್ಯವಿಲ್ಲದೆ ವರ ಚಿದಂಬರಮೊಗೆದುದದಱಿರವಂ ॥
ಮಾನ್ಯನೇ ನಿನಗೊರೆವೆನೆಂದು ವ
ದಾನ್ಯ ಸಿದ್ಧೇಶ್ವರ ಹರುಷದಿಂ
ಮನ್ಯರಹಿತದ ಚಂದ್ರಶೇಖರದೇವರಿಗೆ ಪೇಳ್ದಂ॥೩॥

ತರುಣ ಕೇಳು ಚಿದಂಬರವನು
ದ್ಧರಿಸುತಿಪ್ಪ ವಿಚಾರವೆಂತೆನೆ
ಯರರೆ ಹೇಮಾದಿಗಳೊಳೊದಗಿದ ಪತ್ರಮಧ್ಯದೊಳು॥
ಹರುಷದಿಂ ಹನ್ನೆರಡು ರೇಖೆಗ
ಳಿರದೆ ಚೌಕಂ ತಪ್ಪದಂತಾ
ಪರಿಯೊಳಡ್ಡಂ ನೀಳಮಾಗಿಯೆ ತೆಗೆವುದೈ ಬಳಿಕಾ॥೪॥

ತಗೆದ ರೇಖೆಗಳಗ್ರದೊಳಗಂ
ಮಿಗೆ ಬರೆವುದಂತಾ ತ್ರಿಶೂಲಗ
ಳೊಗುಮಿಗೆಯೊಳವಱವಱಮಧ್ಯದೊಳಂ ಬರೆವುದಾಗಂ॥
ಸೊಗಸಿನಿಂ ಶ್ರೀಕಾರತತಿಗಳ
ಮಗನೆ ನಾಲ್ವತ್ತೆಂಟನಾಗಂ
ಸಗುಣಿಯೇ ಬರೆಯೆಂದು ನುಡಿದಂ ಸಿದ್ಧದೇಶಿಕನು॥೫॥

ಹರುಷದಿಂದಾ ರೇಖೆಗಳ ಬಂ
ಧುರದೆ ಕೇಳಿಪ್ಪತ್ತನಾಲ್ಕಂ
ತ್ವರಿತದಿಂದಂ ಬಳಿಕವಡ್ಡಂ ನೀಳದಿಂ ತೆಗೆಯೈ॥
ತರುಣ ಕೇಳೊಂದೊಂದು ಸಾಲಿಗೆ
ಯುರುತರದ ಹನ್ನೊಂದು ಮನೆಗಳು
ಯಿರದೆಯಾ ಹನ್ನೊಂದು ಪಂಕ್ತಿಗೆ ವಾಸವೆಷ್ಟೆನಲು॥೬॥

ನೂಱಯಿಪ್ಪತ್ತೊಂದು ಮನೆ ಸರಿ
ನೀಱನೇ ಯಾ ಚೌಕದೆಡೆಯೊಳು
ತೋಱುವುದು ಮಧ್ಯಕ್ಕೆ ಪದೆನೈದಾಲಯಂ ಬಳಿಕಾ ॥
ಮಿಱಿದಾ ಮನೆ ಮನೆಗೆಯಾರ್ಣಂ
ಜಾಱದೊಂದೊಂದಾಗೆ ಸತತಂ
ನೂಱಮುವತ್ತಾಱಲಾ ಯಂತ್ರಕ್ಕೆ ಲೆಕ್ಕಗಳು ॥॥೭॥

ಸುರಪನಾಸೆಯೊಳಗಾ ಕುಳಿತು
ದ್ಧರಿಸೆ ಈಶಾನ್ಯಾಗ್ನಿ ನೈರುತಿ
ಮರುತನಾದಿಯ ದಿಕ್ಕು ನಾಲ್ಕುಂ ತೋಱಿಯೊಂದೊಂದು ॥
ಸರಸದಿಕ್ಕಿಗೆ ಮನೆಗಳನಿಶಂ
ಭರದೊಳಿಪ್ಪತ್ತೈದು  ನಾಲ್ಕ
ಕ್ಕರರೆ ಕೂಡಿದ ಚಾರು ಸದನವೆ ನೂಱಲಾಯಿನ್ನು॥೮॥

ನಡುವೆ ಸುಪ್ತಪ್ರಣವದಾಲಯ
ದೊಡನೆಯಿಂದಂ ನಾಲ್ಕು ಬೀದಿಗ
ಳಡರಿ ಮೂಡಲ್ಪಡುವಳುತ್ತರ ದಕ್ಷಿಣದೊಳೊಪ್ಪೆ॥
ತಡೆಯದಾ ವೊಂದೊಂದು ಬೀದಿಗೆ
ಬಿಡದೆ ಮನೆಯೈದೈದು ಮತ್ತಂ
ಸಡಗರದೊಳಾ ನಾಲ್ಕುಬೀದಿಗೆ ವಾಸವೆಪ್ಪತ್ತು॥೯॥

ಒಂದು ಮೂಲೆಗೆ ಮನೆಗಳೈದಾ
ಗಂದದಿಂ ನಾಲ್ಕಕ್ಕೆ ಮನೆಗ
ಳ್ಕುಂದದಾದವು ನೂಱು ಮನೆಗಳ ನಡುವೆ ರಾಜಿಸುವ ॥
ಒಂದು ಮನೆಯೊಳ್ಪ್ರಣವವಿಪ್ಪುದ
ದೊಂದು ಸಹಿತಂ ಮನೆಗಳೇ ನೂ
ಱೊಂದೈವಾದವು ನಾಲ್ಕು ಬೀದಿಯ ಮನೆಗಳಿಪ್ಪತ್ತು॥೧೦॥

ಒಂದಿ ತಾನಿರೆ ನೂಱಯಿಪ್ಪ
ತ್ತೊಂದು ಮನೆಗಳ್ಬಿಡದೆಯಾದೌ
ಮುಂದೆಯಾವೃತ್ತತ್ರಿಪಂಚಾಕ್ಷರಿಯ ಹದಿನೈದು ॥
ಮಂದಿರಗಳು ಸಹಿತವಾದವು
ಕಂದನೇ ಯಂತ್ರಕ್ಕೆ ಗೇಹಗ
ಳಂದವಾದವು ನೂಱಮುವ್ವತ್ತಾಱು ವಾಸಗಳು॥೧೧॥

ಅಣಿಯರದೊಳೊಪ್ಪುವುದು ಸುಪ್ತ
ಪ್ರಣವ ಮಧ್ಯಾಗಾರದಲ್ಲಿಯ
ಗುಣಿತದಿಂದಂ ಬಳಸಿ ಬರೆವುದು ಮೂಡಲೊಳ್ತೊಡಗಿ ॥
ಗುಣಿಯೆ  ಎಡದಿಂ ಬಲದ ದಿಕ್ಕಿಗೆ
ಯೆಣಿಸಿಯಾಗ ನಮಃಶಿವಾಯಾ
ಗ್ರಣಿಯ ವಾಶಿಮನಂ  ಶಿವಾಯ ನಮೋ ಎನುತ ಮತ್ತೆ॥೧೨॥

ಬರೆವುದೈ ಪದಿನೈದು ವರ್ಣಮ
ನಿರದೆಯಾ ಪ್ರಣವಕ್ಕೆಯೀಶನ
ಸರಸ ದಿಕ್ಕಿನೊಳೆಸೆವ ಪಂಕ್ತಿತಿಗಳೈದಕಂ ಬಳಿಕಾ ॥
ಹರುಷದಿಂದಂ ಪಂಚವಿಂಶತಿ
ವರ ಗೃಹಂಗಳ್ತೋಱಿಯಱೊಳ್
ಗರುವನೇ ಕೇಳ್ಮೊದಲು ಮೇಲೆ ಯವಾಶೆಮನವೆಂದು ॥೧೩॥

ಬರೆವುದೈ ಶಿಮನಂ ಯವಾಯೆಂ
ದಿರದೆ ನಯವಾ ಶಿಮವೆನುತ್ತಂ
ಬರೆವುದಾಗಂ ವಾಶಿಮನಯನಂ ಮನಯವಾಶಿಯಹಾ॥
ಪರಿಯ ಪಂಚಾಕ್ಷರಿಯ ಬರೆವುದು
ನಿರುತಮಪ್ಪಾ ಪ್ರಣವದಿಂದಂ
ಸುರಪನಾಸೆಗೆ ಬರೆವ ಬೀಜಾಕ್ಷರವದೆಂತೆನಲು॥೧೪॥

ಭರದೊಳಂ ಕ್ಷಾಂ ಹ್ರೀಂ ಯೆನುತ್ತಾ
ದರರೆ ಓಂ ಸೌಂಕ್ಲೀಂ ಯೆನುತ್ತಂ
ಬರೆವುದೈ ಯಂತ್ರಪ್ರಣವಿಡಿದಾಗ ವೃಸವನಾ॥
ಸರಸದಿಕ್ಕಿನ ಬೀದಿಯಲೂಲಿಯೆ
ಸ್ಥಿರದೆ ಪುತ್ರನೆ ಕೇಳೆನುತ್ತಾ
ಗೊರೆದನಂದಾ ಸಿದ್ಧಲಿಂಗಂ ತನ್ನ ಕುವರಂಗೆ ॥೧೫॥

ತರುಣ ಮಧ್ಯಪ್ರಣವ ವಾಸ
ಕ್ಕಿರದೆಯಗ್ನಿಯ ಪಂಕ್ತಿಯೈದ
ಕ್ಕರರೆಯಕ್ಷರ ವೀಧಿಯಿಪ್ಪತ್ತೈದವವವೆನೆ ॥
ವರ ನವಾಮಯ ಶಿಂ ಯೆನಿಪ್ಪ
ಕ್ಷರಗಳಂತಾ ಮಯಶಿವನೆಯೆಂ
ದುರುತರದ ಶಿವನಾಮಯಾಕ್ಷರವಿನ್ನವೆಂತೆನಲು॥೧೬॥

ವಾಮಯಶಿನಂ ಮತ್ತೆ ಯಶಿನಂ
ವಾಮಯೆಂಬೀಯಕ್ಷರಂಗಳು
ರಾಮಣೀಯಕಮಾಗಿ ಯಿಪ್ಪತ್ತೈದವಂ ಶಿಖಿಯಾ॥
ಯಾಮಹಾದಿಕ್ಕಿಂಗೆ ಬರೆ ಸ
ತ್ಪ್ರೇಮದಿಂದಂ ಪ್ರಣವವಿಡಿದು
ದ್ದಾಮ ದಕ್ಷಿಣ ದೆಸೆಯ ಬೀದಿಗೆ ಲಿಖಿಪಬೀಜಾರ್ಣಂ॥೧೭॥

ಎಂತೆನಲು ಸೌಂ ಕ್ಲೀಂ ಬಳಿಕ್ಕಂ
ಮುಂತೆ ಕ್ಷಾಂ ಹ್ರೀಂ ಜಂ ಸತತ ನಿ
ಶ್ಚಿಂತನೇಯೆಂಬೀಪರಿಯ ವರೂಣಂಗಳಂತಾಗಿ ॥
ಅಂತಕನ ದೆಸೆಯಲ್ಲಿ ತೋರ್ಪವ
ನಂತರದೆ ನೈರುತ್ಯನಾಸೆಯೊ
ಳಿಂತು ರಾಜಿಪ ಪಂಚ ಪಂಚಾಕ್ಷರಿಗಳಂ ಕೇಳು॥೧೮॥

ಶಿಯಮವಾನಂ ವಾನಶಿಯಮಂ
ನಿಯಮವಾವಶಿ ನಶಿಯವಂ ಮಾ
ಪ್ರಿಯದಿ ಕೇಳು ಮವಾನ ಶಿಯಂಗಾಗ ನಿರುತಿಯಲಿ॥
ನಯದಿ ಬರೆ ಪಶ್ಚಿಮದ ದೆಸೆಯೊ
ಳ್ನಿಯತದಿಂ ಹ್ರೀಂ ಶ್ರೀಂ ಸುಸೌಂಕ್ಲೀಂ
ಭಯಜಿತಕ್ಷಾ ಯೆಂಬ ಬೀಜಾರ್ಣಂಗಳಂ ಲೀಖಿಸು॥೧೯॥

ಮರುತನೊಳಗಂ ಪಂಚ ಪಂಚಾ
ಕ್ಷರಗಳೊಪ್ಪುವವಾವವೆಂದೆನೆ
ಹರುಷದಿಂ ನಮಃ ಶಿವಾಯಾ ವಾಯನಮಶಿಮಹಾ॥
ವರದ ಮಶಿವಾಯನ ಕಣಾ ಬಳಿ
ಕಿರದೆ ಯನಮಶಿವಾಯೆನುತ್ತಂ
ತ್ವರಿತದಿಂದೆ ಶಿವಾಯನಮಃಯೆಂಬಕ್ಷರಾದಿಗಳಾ॥೨೦॥

ಮತ್ತೆ ಸುಪ್ತಪ್ರಣವವಿಡಿದದ
ಱುತ್ತರಾಸೆಯೊಳೆಸೆವವೈ ಯ
ತ್ಯುತ್ತಮದ ಬೀಜಾಕ್ಷರಂಗಳು ಮೆಱೆವವೆಂತೆನಲು॥
ಉತ್ತರದ ಕ್ಲೀಂ ಸೌಂ ಬಳಿಕ್ಕಿವೆ
ನುತ್ತಂ ಕ್ಷಾಂ ಹ್ರೀಂ ಯೆನಿಪ್ಪುದು
ಚಿತ್ತಜಾಹಿತ ವರಚಿದಂಬರದುದ್ಧರಣೆ ಕೇಳು॥೨೧॥

ತರುಣ ಕೇಳೈ ಚಂದ್ರಶೇಖರ
ನಿನಗೆ ನಾವೀಗೊರೆದ ಸನ್ನುತ
ಘನ ಚಿದಂಬರದೊಳಗೆ ಹ್ರಸ್ವಂ ದೀರ್ಘ ಸುವಿಸರ್ಗ ॥
ವಿನುತ ಬಿಂದ್ವಾದಿಗಳೆರಡು ಬರೆ
ಯನುವಿನಂದವ ನೋಡದಿರು ಘ
ಮ್ಮನೆ ಸಕಲರಱಿವಂತೆ ಪೇಳಿದೆವೆಂದ ಸಿದ್ಧೇಶಂ॥೨೨ ॥

ವರ ಚಿದಂಬರದಕ್ಷರಂಗಳು
ಪರಿಕಿಸಲ್ಸ್ವಾತಂತ್ರ್ತಕರ್ತೃಗ
ಳರರೆಯದಱೊಳಗಿರ್ಪ ವಿಮಲ ಪ್ರಣವವೇ ಸುಪ್ತ॥
ಉರಗನಂದದೆ ತೋರೂಪುದನಿಶಂ
ತರೈಣನೇ ಯದಱಿರವನೊರೆವೆಂ
ಪರಮ ವಾತೂಲಾಗಮಾರ್ಥದೊಳೆಂತೆನಲು ಕೇಳು॥೨೩॥

ವರಕುಮಾರಂಗೀಶನೆಂದಂ
ಪರಮ ಘನಸತ್ಪ್ರಣವವನಿಶಂ
ತರುಣ ಸಕಲಾಗಮಕೆ ಮೊದಲಾ ಪ್ರಣವಪಂಚಕವು॥
ಹರುಷದಿಂದಂ ಕೋಟಿಮಂತ್ರ
ಕ್ಕಿರದೆ ತಾಯಾಗಿಪ್ಪುದಂತಾ
ಪರಿಯ ವಾಗ್ಜಪ್ರಣವಮೆಂಬುದುವದು ಹಕಾರವಲಾ॥೨೪॥

ಪ್ರಣವವೇ ನೆಱೆನಾದವಂತಾ
ಪ್ರಣವೇ ಓಂಕಾರವಂತಾ
ಪ್ರಣವಕಂ ಪರವಾ ಹಕಾರಂ ಬಳಿಕ ಕೇಳಂತಾ ॥
ಪ್ರಣವವಂತು ನಕಾರವಂತಾ
ಪ್ರಣವವಿರದೆಯುಕಾರವಂತಾ
ಪ್ರಣವದಂಶದಕಾರಮಂ ಸಲೆ ಮತ್ತುಕಾರವನು॥೨೫॥

ಎರಡನೊಂದಿಸಲಾ ಮಕಾರಂ
ತರುಣನೇ ಸತ್ಪ್ರಣವವಲ್ಲಭ
ವರರೆ ಕೇಳಿದು ತತ್ಪ್ರವೃತ್ತಿಯ ಮಾರ್ಗವೈ ಮುಂದೆ॥
ವರ ನಿವೃತ್ತಿಯ ಪಥವನೊರೆವೆವು
ಭರದೆ ಗೋಪ್ಯವದಾಗಬೇಕೆಂ
ದಿರದೆ ತೋಂಟದಲಿಂಗನೆಂದಂ ಚಂದ್ರಶೇಖರಗೆ॥೨೬॥

ಹರೈಷದಿಂದೊಂದೊಱೊಳುಕಾರವ
ದೆರಡರಲ್ಲಿಯಕಾರವಂತಾ
ಪರಿಯ ಮೂಱಱೊಳಂ ಮಕಾರಂ ಮತ್ತೆನಾಲ್ಕಱೊಳು॥
ಸರಸದಿಂದೋಂಕಾರವೈದಱೊ
ಳಿರದೆ ವಾಗ್ಜವೆನಿಪ ಹಕಾರಂ
ತರುಣನೇ ಕೇಳ್ ಪ್ರಣವಪಂಚಕವೆಂಬುದೆಂದಱಿಯೈ॥೨೭॥

ಮುಂದೆ ನೀ ಕೇಳೈಯುಕಾರಂ
ಬಿಂದುರೂಪದೆ ಜಾಗ್ರದೊಳ್ಸಲೆ
ಸಂದು ತೋರ್ಪುದಕಾರವೇ ನೆಱೆ ನಾದರೂಪಿಂದಾ॥
ಅಂದದಿಂ ಸ್ವಪ್ನದೊಳು ರಾಜಿಪು
ದಿಂದುಶೇಖರ ವರ ಮಕಾರವೆ
ಕುಂದದನಿಶಂ ಸುಪ್ತಿಯೊಳು ಮೆಱೆವುದು ಕಲಾರೂಪಿಂ॥೨೮॥

ಮುಂದೆ ಕೇಳೋಂಕಾರಶಕ್ತ್ಯಾ
ನಂದರೂಪದೆ ತುರಿಯದಲ್ಲಿಹು
ದಂದವಾಗ್ಜ ಪ್ರಣವ ಶಿವರೂಪಿಂದೆಯನವರತಂ॥
ಒಂದಿ ತುರಿಯಾತೀತದಲ್ಲಿಹು
ದೆಂದು ತೋಂಟದ ಸಿದ್ಧದೇಶಿಕ
ನಿಂದುಶೇಖರಗೊರೆದನೈದೋಂಕಾರ ರೂಪುಗಳಂ॥೨೯॥

ಮೊದಲಕಾರದೊಳಂತುಕಾರಮ
ನೊದವಿದಾ ವ್ಯಾಕರಣ ಸೂತ್ರದೆ
ಪುದಿಯಲಿಂತೋಂಕಾರವಾಯಿತು ಕೇಳ್ಮಕಾರವನು॥
ಪದುಳದಿಂ ಕೂಡಿದಡೆ ಸಲೆಯಾ
ದುದು ಬಳಿಕ್ಕೋಂಕಾರವದಱ
ಗ್ರದ ವಿಮಲದೋಂಕಾರಮೊಂದಲ್ತವೆ ನಿರಂಜನವು॥೩೦॥

ಅದು ಹಕಾರಪ್ರಣವರೂಪಂ
ತದು ನವಾಗ್ಜಪ್ರಣವವೆನುತಂ
ಸದಮಲದ ಗುರುಸಿದ್ಧಲಿಂಗಂ ವರ ಚಿದಂಬರದಾ ॥
ವಿದಿತ ಮಧ್ಯಪ್ರಣವದಿರವಂ
ಮುದದೆ ಕೇಳ್ದಾ ಚಂದ್ರಶೇಖರ
ಗದಱ ಘನತರಮಹಿಮೆಯಂ ಸದ್ಭಕ್ತತತಿ ಮೆಚ್ಚೆ॥೩೧

ಅಂತವಾಚ್ಯಪ್ರಣವವೆಸೆವುದ
ದೆಂತೆನಲ್ವೇದಾದಿಮೂಲಂ
ಮುಂತೆಯಾ ಸ್ವರತತಿಗೆ ತಾನೇ ಕೀರ್ತಿವೆತ್ತಿಹುದು॥
ಕಾಂತಿಯಿಂ ಹದಿಮೂಱಱೆಡೆಯೊಳ
ನಂತ ಶಶಿರವಿಬಿಂಬಗಳನ
ತ್ಯಂತದಿಂ ಕೀಳ್ಪಡಿಸಿ ತೋರ್ಪುದು ಮುಂದೆ ಕೇಳಿನ್ನು॥೩೨॥

ಹರುಷದಿಂದಂ ಸುಪ್ತಸರ್ಪನ
ಪರಿಯೊಳಿರ್ಪುದು ಮೂಱು ತತ್ವ
ಕ್ಕರರೆ ಮೊದಲಾಗಿಪ್ಪುದೈಯಿಂತಪ್ಪ ಸನುಮತದಾ॥
ಉರುತರದ ಸತ್ಪ್ರಣವಮಂ ಕುಱಿ
ತಿರದೆ ಸಲೆ ಶರಣೆಂಬರೆನುತಂ
ಶರಣ ತೋಂಟದಸಿದ್ಧಲಿಂಗಚಿದಂಗನಿಂತೆಂದಂ॥೩೩॥

ಪರಮರಾಹಸ್ಯದೊಳು ಕೇಳೈ
ಉರುತರದ ಸತ್ಪ್ರಣವವುಳ್ಳಾ
ಸ್ಥಿರದ ನಾದಂ ಬಿಂದು ಕಳೆಗಳ್ಕೂಡಿದಾ ವೀಮಲ
ವರ ಷಡಕ್ಷರಿಗಾದಿಯೆನಿಪುದು
ನಿರುತದಿಂದೆಯಕಾರದೊಳಗಂ
ತಿರದುಕಾರಂ ಕೂಡಲೋಂಕಾರಸ್ವರಂ ತೋರ್ಕುಂ॥೩೪॥

ಆ ಮಹಾ ಓಂಕಾರಮಂ ಮಿಗೆ
ಭೂಮಿಯೊಳ್ಸದ್ಭ್ರಹ್ಮವೆಂದುಱೆ
ರಾಮಣೀಯಕ ಯೋಗಿಗಳು ನುಡಿಯುತ್ತಮಿರ್ಪರಲಾ॥
ಪ್ರೇಮದಿಂದೆಯಕಾರವಂತಾ
ಕೋಮಲದ ಉಕಾರವತಿಶಯ
ದಾ ಮಕಾರವಿದೊಂದೆ ಓಂ ಇತಿರೂಪಮೇ ಜ್ಯೋತಿ॥೩೫॥

ಇರದಕಾರೋಂಕಾರವಂತಾ
ಸ್ಥಿರ ಮಕಾರಮನುಱೆ ಪುದಿಯಲಾ
ಪರಿಯೊಳೋಂಕಾರಂ ಬಳಿಕ್ಕದು ಸರ್ವಬೀಜವಲಾ॥
ಗಿರಿಜೆ ಕೇಳಾ ನನ್ನ ಸನ್ಮತ
ದುರುತರದ ಪ್ರಣವಗಳು ಕೇವಲ
ನಿರುತದಿಂದಂ ನಿನ್ನ ಸಂಬಂಧಪ್ರಣವವೃಂದಂ॥೩೬॥

ಪೇಳಲಾ ಮಂತ್ರಂಗಳಿಗೆ ಕೇ
ಳಲಘುಶಕ್ತಿಮಯಂ ಬಳಿಕ್ಕಂ
ಸಲೆಯಕಾರೋಂಕಾರವಂತು ಮಕಾರವೊಂದಿರ್ದಾ॥
ಲಲಿತದೋಂಕಾರಪ್ರಣವವದು
ಲಲನೆ ನನ್ನದು ನಿನ್ನ ಸನ್ನುತ
ದೊಲವಿನ ಪ್ರಣವಂಗಳಂ ಕೇಳೆಂದು ಶಿವನೆಂದಂ॥॥೩೭॥

ಆ ಉಕಾರಂ ಘನ ಮಕಾರದೊ
ಳಾವಗಂ ಕೇಳಂತಕಾರಂ
ತೀವಿದುರುತರ ದೀರ್ಘಮುಱೆಯಾವರಿಸೆಯದು ನಿನ್ನಾ॥
ಪಾವನದ ರೂಪಪ್ರಣವ ಶೋ
ಭಾವಹದೊಳೀ ಮೂಱು ನೀನೆ
ನ್ನಾ ವಿಶೇಷದ ಚಾರು ಸಲೆ ಸಂಬಂಧವಂತಾಗಿ॥೩೮॥

ಈ ಪ್ರಕಾರದ ಲಿಂಗಜಂಗಮ
ವಪ್ರತರ್ಕ್ಯವಿದಾರು ಬಲ್ಲರು
ಭೂಪ್ರದೇಶದೊಳಂತಕಾರೋಕಾರ ಮಾಕಾರಂ॥
ಕ್ಷಿಪ್ರದಿಂದೀ ಮೂಱಱೊಳಗಂ
ಸುಪ್ರಯತ್ನದೆ ದೇವ ದೇವತೆ
ಗಳ್ಪ್ರಮೋದದೆ ಜನಿಸಿಯಡಗುವರಕ್ಷರತ್ರಯದೆ ॥೩೯॥

ಎಂದು ಶಂಕರನಾಡೆಯುಮೆ ಶರ
ಣೆಂದು ಕೇಳಿದಳಭವನಂ ಮುದ
ದಿಂದೆ ಘನಷಡ್ವರ್ಣವರಮಪ್ಪಾ ಪ್ರಣವರೂಪಂ॥
ಇಂದು ಪೇಳೆನೆ ನುಡಿದನೀಶ್ವರ
ನಂದದಿಂದೋಂಕಾರನಾದಂ
ಬಿಂದು ಸರ್ವವ್ಯಾಪಿ ಪರಮೇಶ್ವರನ ಗೋಪ್ಯಮುಖಮಂ॥೪೦॥

ನೆಟ್ಟನಂತಾ ಪ್ರಣವದಾದಿಯ
ಹುಟ್ಟೆ ತಾರಕವೆಂಬುದಂತಾ
ಹುಟ್ಟಿನಿಂದದನಿಳಿಯ ತೆಗದುದೆ ದಂಡಕಂ ವದಕೆ॥
ಕೊಟ್ಟ ಪೊಕ್ಕುಳೆ ಕುಂಡಲಿಯು ಅಳ
ವಟ್ಟ ಹೆಱೆ ತಾನರ್ಧಚಂದ್ರಂ
ಇಟ್ಟ ಸೊನ್ನೆಯೆ ಮುಕುರರೇಖೆ ನಿರಂಜನಜ್ಯೋತಿ ॥೪೧॥

ವರ ನಕಾರಂ ತಾರಕಂ ಬಂ
ಧುರ ಮಕಾರಂ ದಂಡಕಂ ಸೌಂ
ದರ ಶಿಕಾರಂ ಕುಂಡಲಿಯು ವಾಕಾರವೇಯರ್ಧಾ॥
ನಿರುತಚಂದ್ರಂ ಸಲೆ ಯಕಾರಂ
ಸರಸ ಬಿಂದುಕ್ರಮದೆಯಜಹರಿ
ಪರಮ ರುದ್ರೇಶ್ವರ ಸದಾಶಿವರವಱೊಳೆಸೆವರಲೌ॥೪೨ ॥

ಆಱುವರ್ಣಂ ಪ್ರಭೆಗಳಂ ಮಿಗೆ
ಮೀಱಿದತಿಶಯ ತೈಲಧಾರೆಯ
ತೋಱುವಂತಾಪ್ರಣವದಾಕಾರಂ ವಿರಾಜಿಸಲು॥
ಸಾಱೆ ಘಂಟೆಯ ನೈಡಿಸಿ ನಿಲಿಸಿದೊ
ಡೇಱಿದಾಧ್ವನಿಯಂತೆ ನಾದಂ
ಮೂಱುಲೋಕದೊಳೆಸೆವುದೌ ಪಿಂಡಾಂಡದೊಳ್ತುಂಬಿ॥೪೩॥

ಮುಂದೆ ಕೇಳೋಂಕಾರವೆಂದುಱೆ
ಯಂದದಿಂದಂ ಪ್ರಣವವೇ ತಾ
ನೆಂದು ಮತ್ತಂ ಬ್ರಹ್ಮವೆಂದು ಜ್ಞಾನವೆಂದು ಶಿವಂ ॥
ಯೆಂದುವಾತ್ಮಂ ಕಾಂತಿಬೀಜವ
ದೆಂದು ನಿಷ್ಕಲತಾರಕವಿದಿಂ
ತೆಂದು ಸತತಂ ನಿಷ್ಕಲಾತ್ಮಕವೆಂದು ಕೇಳ್ಮುಂದೆ ॥೪೪॥

ನಾದವಾ ನಾದಾದಿ ಸಲೆ ಹೃ
ನ್ನಾದವಿರದಾಗಂ ಬಳಿಕ ವೇ
ದಾದಿಯಾ ವರ ವೇದಭೂಷನ್ಮುಕ್ತಿಬೀಜವಲಾ॥
ಮೋದದಿಂದಂ ಮಂತ್ರಬೀಜಂ
ಸಾದರದೆ ಸಲೆ ವರೂಣಬೀಜಂ
ಮೇದಿನಿಯೊಳೀ ಪ್ರಣವಕಂ ಪದಿನೆಂಟು ಪೆಸರಾಯ್ತು॥೪೫॥

ಧರೆಯೊಳವ್ಯಂಜನಮಘೋಷಮ
ನಿರದೆ ದುಸ್ತರ ರೇಫೆವರ್ಜಿತ
ವರರೆ ತಾಲುಗಳಾನುನಾಸಿಕಮೋಷ್ಟದಿಂ ನುಡಿಯೆ ॥
ನಿರುತದಿಂದಂ ಬಾರದೌಯ
ಕ್ಷರ ಚರಾಚರವಖಿಳಲೋಕಂ
ಪರಮ ವೇದಾದಿಗಳು ಪುಟ್ಟಿದವಾ ಪ್ರಣವದಿಂದಂ॥೪೬॥

ಸಾದರದೊಳಾ ಪ್ರಣವದಿಂದಂ
ನಾದವಾಗಂ ಪುಟ್ಟಿತಂತಾ
ನಾದದಿಂದಂ ಬಿಂದುವದಱಿಂ ಕಲೆಯದಾಯಿತ್ತು॥
ಮೋದದಿಂದಾ ಕಲೆಯೊಳಂ ಸಲೆ
ಭೇದವಿಲ್ಲದೆ ಶಕ್ತಿಯದಱೊಳ
ಗಾದುದೌ ಸಂವಿತ್ತು ವದಱಿಂ ಚಿತ್ತು ಚಿತ್ತಿಂದಾ॥೪೭॥

ಪರಮತೇಜಂ ಪುಟ್ಟಿತಂತದು
ವರ ಸದಾಶಿವನವನೊಳಾದಂ
ಸರಸರುದ್ರನೆಯೆವನವನಿಂ ವಿಷ್ಣು ಜನಿಸಿದನು॥
ಹರಿಯೊಳಜನುದ್ಭವಿಸಿದಂ ಬಳಿ
ಕಿರದೆಯಾ ವಿಧಿಯಿಂದಾ ಸಚರಾ
ಚರಗಳುದ್ಭವಿಸಿದವಿವಕ್ಕಂ ಪ್ರಣವವೇ ಮುಖ್ಯಂ ॥೪೮॥

ಎಂದು ಗೌರಿಗೆ ಶಂಭು ಮುನ್ನೊರೆ
ದಂದದಿಂದಂ ತೋಂಟದಾರ್ಯಂ
ಗೊಂದಿಸುತೆ ಬೆಸಗೊಂಬ ಸನ್ನುತ ಚಂದ್ರಶೇಖರಗೆ॥
ಅಂದದಿಂದಂ ಚಿದಂಬರವನಾ
ನಂದದಿಂದಂ ಪೇಳಿದಂ ಮುದ
ದಿಂದಲಿಲ್ಲಿಗೆ ಮುಗಿದುದೀಗಂ  ಪ್ರಣವದುತ್ಪತ್ತಿ॥೪೯॥

ಸಂಧಿ: ೧೩;  ಒಂದು ಒಳನೋಟ

ಸಚ್ಚಿದಾನಂದ ನಿತ್ಯಸ್ವರೂಪನೂ ಪರಿಪೂರ್ಣನೂ ಆದ ಶಿವಭಕ್ತನ ಹೃತ್ಕಮಲದೊಳಗೆ ಜಂಗಮಲಿಂಗದ ಉದಯ. ಆ ಜಂಗಮದ ಮಕುಟಮಧ್ಯದೆಡೆಯಲ್ಲಿ ಚಿದಂಬರದ ಜನನ. ಆ ಜ್ಞಾನಾಕಾಶವೆಂಬ ಬಯಲತತ್ವದ ಉದ್ಧರಣೆಯ ವಿಚಾರ ಪ್ರಸ್ತುತ ೧೩ ನೆಯ ಸಂಧಿಯ ಪ್ರಮುಖ ವಸ್ತು. ಚಿನ್ನ, ಹಿತ್ತಾಳೆ,  ತಾಮ್ರಪಟಗಳೇ ಮೊದಲಾದವುಗಳ ರೇಖಾಕೃತಿಯ ಚೌಕದ ಅಗ್ರದೊಳಗೆ ಶ್ರೀಕಾರತತಿಗಳ ನಾಲ್ವತ್ತೆಂಟನ್ನು ಬರೆಯುತ್ತ ಮುಂದುವರಿಸಿದ ಯಂತ್ರದ ನೂರುಮನೆಗಳ ಮಧ್ಯದ ಸುಪ್ತಪ್ರಣವ ವಾಸಸಹಿತ ನೂರೊಂದು ಹಾಗೆಯೇ ನೂರಿಪ್ಪತ್ತೊಂದು, ನೂರಮುವ್ವತ್ತಾರು ವಾಸಗಳಲ್ಲಿ ಆಗಮಾರ್ಥನು-
ಸಾರಪಂಚಾಕ್ಷರಿಯನ್ನೂ ಬೀಜಾಕ್ಷರಗಳನ್ನು ಬರೆಯುವುದು. ಚಿದಂಬರಕ್ಷರಗಳು “ಸ್ವಾತಂತ್ರ್ಯ ಕರ್ತೃಗಳು.” ಅದರೊಳಗಿರುವ ಪ್ರಣವವೇ ಸುಪ್ತಕುಂಡಲಿ.ವಾತುಲಾಗಮದ ಅರ್ಥದೊಳಗೆ ಎಲ್ಲ ಆಗಮಗಳಿಗೂ ಮೊದಲು ಪ್ರಣವಪಂಚಕ. ಅವಾಗ್ಜವೆನಿಸಿದ ನಿರಂಜನಪ್ರಣವ ಹಕಾರ.ಅದು ಪ್ರಣವಕಂ ಪರವು.ಅ ಕಾರ, ಉಕಾರ,ಸಂಯೋಗದಿಂದ ಕೂಡಿದ ಮಕಾರದ ಓಂಕಾರಜ್ಯೋತಿ ಎಲ್ಲಕ್ಕೂ ಕಾರಣವಾಗಿ ಪ್ರವೃತ್ತಿಮಾರ್ಗದಿಂದ ಹೇಳಿದುದು. ಉಕಾರ, ಮಕಾರ, ಅಕಾರ ದೀರ್ಘವಾವರಿಸಿದ ಓಂಕಾರ ಗಿರಿಜೆಯೊಲವಿನ ಪ್ರಪಂಚವು.

ಉಕಾರವೆ ಬಿಂದುರೂಪ. ಅಕಾರವೆ ನಾದರೂಪ. ಮಕಾರವೆ ಕಲಾರೂಪ. ಇವು ಕ್ರಮವಾಗಿ ಜಾಗ್ರತ್, ಸ್ವಪ್ನ,ಸುಷುಪ್ತಿಯ ಅವಸ್ಥಾತ್ರಯಗಳಲ್ಲಿ ತೋರುವುವು. ಓಂಕಾರಶಕ್ತಿ ಆನಂದರೂಪದಲ್ಲಿ ತುರಿಯದಲ್ಲಿರುವುದು.ಅವಾಗ್ಜಪ್ರಣವವು ಶಿವರೂಪಿಂದ ಸದಾ ತುರಿಯಾತೀತದಲ್ಲಿರುವುದು.ಓಂಕಾರಕ್ಕೆ ಐದು ರೂಪುಗಳಿವೆಯೆಂದು ಹೇಳಲಾಗಿದೆ. ಪರಮರಹಸ್ಯ-
ದೊಳಗೆ ನಾದ ಬಿಂದು ಕಲೆಗಳಿಂದ ಕೂಡಿದ ಷಕ್ಷರಿಗೆ ಆದಿಯೆನಿಪ ಓಂಕಾರವನ್ನು ಯೋಗಿಗಳು ಸದ್ಬ್ರಹ್ಮವೆಂಬರು. ಷಡಂಗಸ್ಥ ಷಡಕ್ಷರವು ಷಡ್ಬ್ರಹ್ಮಮಯವು, “ ಓಂ ಇತಿ ರೂಪಮೇ ಜ್ಯೋತಿ” ಓಂಕಾರವು ಪರಮೇಶ್ವರನ ಗೋಪ್ಯಮುಖ. ಅದು ಹದಿನೆಂಟು ಪರ್ಯಾಯನಾಮವುಳ್ಳದ್ದು. ಸಾರೆ ಘಂಟೆಯ ನುಡಿಸಿ ನಿಲಿಸಿದೊಡೇರಿದಾ ಧ್ವನಿಯಂತೆ ನಾದವು ಮೂರು ಲೋಕದಲ್ಲಿಯೂ ಪಿಂಡಾಂಡದಲ್ಲಿಯೂ ತುಂಬಿಕೊಂಡಿರುತ್ತದೆ. ಪ್ರಣವದಿಂದ ನಾದ, ಆ ನಾದದಿಂದ ಬಿಂದು. ಅದರಿಂದ ಕಲೆಯಾಯಿತು. ಕಲೆಯಲ್ಲಿ ಶಕ್ತಿ, ಆ ಶಕ್ತಿಯಲ್ಲಿ ಸಂವಿತ್ತು( ಜ್ಞಾನ) ಅದರಿಂದ ಚಿತ್ತು. ಆ ಚಿತ್ತಿನಿಂದ ತೇಜ ಹುಟ್ಟಿತು. ಅಂತದು ಸದಾಶಿವನು. ಅವನೊಳು ರುದ್ರನಾದನು. ಅವನಿಂದ ವಿಷ್ಣು. ಆ ವಿಷ್ಣುವಿನಿಂದ ಬ್ರಹ್ಮ, ಆ ವಿಧಿಯಿಂದ ಸಚರಾಚರಗಳು ಉದ್ಭವಿಸಿದುವು. ಇಲ್ಲಿಗೆ ಪ್ರಣವದುತ್ಪತಿ ಮುಗಿಯಿತು. ಓಂಕಾರ ಮಹಾಘನಸಾದಾಖ್ಯವೆಂದೇ ಗುರುವಾಕ್ಯ. ಸದ್ಯೋಜಾತಾದಿ ಪಂಚಮುಖನ ಗೋಪ್ಯಮುಖ ಪಂಚಾಕ್ಷರಿ. ಓಂಕಾರ ಸರ್ವತತ್ವಾತ್ಮಕ. ಕೋಟಿ ವೇದಕೆ ತಂದೆ. ಷಡಕ್ಷರಮಂತ್ರ ಸರ್ವಸಿದ್ಧಿಕರ. ಶಿವಾಗಮದಲ್ಲಿ ವರ್ತಿಸದವರಿಗೆ, ವಿಷಯಾಸಕ್ತರಿಗೆ, ನೀತಿಬಾಹಿರರಿಗೆ ಈ ಪ್ರಣವಸ್ವರೂಪವನ್ನು ಉಪದೇಶಿಸಬಾರದೆಂಬ ಎಚ್ಚರಿಕೆಯ ನುಡಿಯಿದೆ. ಶಿವಜ್ಞಾನಿಗಳಿಗೆ ಮಾತ್ರ ಈ ಗುಪ್ತ ಶಿವರಹಸ್ಯ ಅನುಭವವೇದ್ಯವೆಂದು ಹೇಳಿ, ಪಂಚಾಕ್ಷರಿಯ ಮಹಿಮೆಯನ್ನು ಕೇಳಿದ ಭಕ್ತರಿಗೆ ಇಷ್ಟಾರ್ಥ ಸಿದ್ಧಿಸುವುದೆಂಬ  ಆಶ್ವಾಸನೆಯಿಂದ ಈ ಸಂಧಿ ಸಮಾಪ್ತಿಗೊಂಡಿದೆ.

ಕೃತಜ್ಞತೆಗಳು:

ಸಂಶೋಧಕ - ಸಂಪಾದಕ
ಪ್ರೊ. ಸಿ. ಮಹಾದೇವಪ್ಪ,
ಪ್ರಕಾಶನ: ಬೆಂಗಳೂರು ಸಂಶೋಧನ ಕೋಟಿ
“ ಶಾರದಾ ನಿವಾಸ”
ನಂ. 197, 5 ನೇ ಮುಖ್ಯ ರಸ್ತೆ, ವೈಯಾಲಿಕಾವಲ್,  
ಬೆಂಗಳೂರು-560003,





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ