ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಬುಧವಾರ, ಜನವರಿ 15, 2025

ಕನ್ನಡ ವಕ್ರೋಕ್ತಿ ಜೀವಿತ - ಡಾ. ಆರ್. ಲಕ್ಷ್ಮೀನಾರಾಯಣ

 ಕನ್ನಡ ವಕ್ರೋಕ್ತಿ ಜೀವಿತ - ಡಾ. ಆರ್. ಲಕ್ಷ್ಮೀನಾರಾಯಣ 


ಕೃತಿಯ ಕರ್ತೃ ಕುಂತಕ. ವಕ್ರೋಕ್ತಿಯೆ ಕಾವ್ಯದ ಜೀವಿತವೆಂದು ಕೃತಿಯ ಶೀರ್ಷಿಕೆಯ ಮೂಲಕ ಸೂಚಿಸುವ ಕುಂತಕ ತನ್ನ ಪೂರ್ವಸೂರಿಗಳು ನೀಡಿದ ಪರಿಕಲ್ಪನೆಯನ್ನು ಮರುಚಿಂತನೆಗೆ ಒಳಗುಮಾಡಿ, ಪರಿಷ್ಕರಿಸಿ, ವಿಸ್ತರಿಸಿ, ಪ್ರತಿಪಾದಿಸಿದವನು. ವಕ್ರೋಕ್ತಿಯ ಕುರಿತಾದ ಚಿಂತನೆ ಕುಂತಕನಿಗೂ ಹಿಂದೆ ಇದ್ದ ಭಾಮಹ, ದಂಡಿ, ವಾಮನರಲ್ಲಿ ಕಾಣಿಸಿಕೊಂಡಿದೆ. ಇವರಲ್ಲಿ ಪ್ರಾಚೀನತಮನಾದ ಭಾಮಹನಲ್ಲಿ ಮೊದಲಿಗೆ ವಕ್ರೋಕ್ತಿಯ ಪರಿಕಲ್ಪನೆ ಉಲ್ಲೇಖಗೊಂಡಿದೆ. ಆಕರ್ಷವಾಗಿ, ಮನಮುಟ್ಟುವಂತೆ ಪರಿವರ್ತಿಸಲಾದ ಮಾತು ವಕ್ರೋಕ್ತಿ.  ಮನಮುಟ್ಟುವಂತಿರುವ ಭಾಷೆ ಮತ್ತು ಆಲೋಚನೆಅಲಂಕಾರಗಳಿಗೆ ಮೂಲ. ಅದಿಲ್ಲದೆ ಯಾವ ಅಲಂಕಾರವೂ ಇಲ್ಲ. 


ಲೋಕಸಾಮಾನ್ಯವಲ್ಲದ ಹೊಳಹು-ಹೊಳಪನ್ನು ಉಂಟುಮಾಡುವ ವೈಚಿತ್ರ್ಯವೇ ವಕ್ರತೆ. ಇಲ್ಲಿ ಲೋಕೋತ್ತರ ಎನ್ನುವುದು ಅಲೌಕಿಕ ಅಥವಾ ದೈವಿಕ ಅಲ್ಲ. ಸ್ವಾರ್ಥದೂರವಾದದ್ದು, ಅಸಾಧಾರಣವಾದದ್ದು ಅಥವಾ ಲೋಕಸಾಧಾರಣವಲ್ಲದ್ದು ಎಂದರ್ಥ. ಚಮತ್ಕಾರಿ ಎನ್ನುವುದುಹೊಸ-ಹೊಳಹು-ಹೊಳಪುನೀಡುವ ವಾಕ್ಸೃಷ್ಟಿ ಕ್ರಿಯೆ. ಇಂಥ ಕವಿಮಾನಸ ಕ್ರಿಯೆ ಅಭಿವ್ಯಕ್ತಿಗೊಳ್ಳುವ ಪರಿ ಬೇರೆ ಬಗೆಯದೇ ಆಗಿರುತ್ತದೆ. ಈ ಬೇರೆ ಬಗೆಯೇ "ವೈಚಿತ್ರ್ಯ" ಇದಕ್ಕೆ ಇನ್ನೊಂದು ಹೆಸರುವಕ್ರತೆ. ನೇರ ಅಲ್ಲದ್ದು ವಕ್ರತೆಯೇ ವಿನಾ ಹೀನಾರ್ಥದಲ್ಲಿ ಅಲ್ಲ. ಕುಂತಕನು ಪರ್ಯಾಯ ಪದಗಳಾಗಿ ಸಮಾನ ನೆಲೆಯಲ್ಲಿ ಬಳಸಿದ 

" ವೈತಚಿತ್ರ್ಯ- ವಕ್ರತೆ " ಎನ್ನುವ ಪದಗಳನ್ನು ಬೇರೆ ಪದಗಳಿಂದ ಅನುವಾದಿಸಲಾಗದು. ಇವುಗಳ ಆಂತರ್ಯವನ್ನು ಕುಂತಕನ ವಿಶ್ಲೇಷಣೆಯಿಂದಲೇ ಅರಿಯಬೇಕಾಗಿದೆ. 


ಕುಂತಕನು ಕಾವ್ಯ ಪ್ರಕ್ರಿಯೆಯನ್ನು " ವಕ್ರ ಕವಿ ವ್ಯಾಪಾರ " ಅಥವಾ " ಕವಿ ವ್ಯಾಪಾರ ವಕ್ರತ್ವ " ವೆಂದು ಗುರುತಿಸುತ್ತಾನೆ. ಕುಂತಕನದು ಸ್ವತಂತ್ರ ಪ್ರಸ್ತಾನವಲ್ಲ. ಭಾಮಹನಿಂದ ಬೆಳಕಿಗೆ ಬಂದ ಅಲಂಕಾರ ಪ್ರಸ್ಥಾನದ ವಿಸ್ತೃತ ರೂಪ. ವಕ್ರೋಕ್ತಿ ಸಿದ್ಧಾಂತದಮಂಡನೆಯ ಮೂಲಕ ಅಲಂಕಾರ ಪ್ರಸ್ಥಾನವನ್ನೂ, ತನ್ನ ಪ್ರಾಚೀನರ ಕಾವ್ಯ ಚರ್ಚೆಯನ್ನೂ ಹೊಸ ದಿಕ್ಕಿಗೆ ಒಯ್ದ ಕುಂತಕನು ರಸ, ಧ್ವನಿ ಮುಂತಾಗಿ ಇತರ ಸಿದ್ಧಾಂತಗಳನ್ನು ನಿರಾಕರಿಸದೆ, ವಕ್ರೋಕ್ತಿಯಲ್ಲೇ ಅಂತರ್ಗತ ಮಾಡಿಕೊಳ್ಳುವ ಮೂಲಕ " ಅಂತರ್ಭಾವವಾದಿ " ಎನಿಸಿದ್ದಾನೆ. ಕುಂತಕನು ನೀಡಿದ ನಿದರ್ಶನಗಳನ್ನು ಅವಲೋಕಿಸಿದಾಗ ಆತನ ವಿಶಾಲ ಓದು, ಸಾಹಿತ್ಯ ಜಾಣ್ಮೆ, ವಿಮರ್ಶಾತ್ಮಕ ಒಳನೋಟ ಅರಿವಿಗೆ ಬರುತ್ತದೆ


ವಕ್ರೋಕ್ತಿಯನ್ನು ಕಾವ್ಯದ ಜೀವಿತ ಎಂದು ಘೋಷಿಸುವ ಮೂಲಕ ಭಾರತೀಯ ಕಾವ್ಯಮೀಮಾಂಸೆಯಲ್ಲಿ ಒಂದು ವಿಶಿಷ್ಟ ದನಿಯಾದವನು ಕುಂತಕ. ಅಷ್ಟೇ ಅಲ್ಲ, ಅದನ್ನೇ ಒಂದು ಪ್ರಸ್ಥಾನದ ರೂಪದಲ್ಲಿ ರೂಪಿಸಿದವನು.  ಅದುವರೆಗಿನ ಪ್ರಮುಖ ಕಾವ್ಯ ಸಿದ್ಧಾಂತಗಳನೆಲ್ಲ ಹೊಸ ದೃಷ್ಟಿಕೋನದಿಂದ ಕಂಡು ಹೊಸ ರೀತಿಯಲ್ಲಿ ವ್ಯಾಖ್ಯಾನಿಸಿದಸಾಹಸಿ ಮತ್ತು ಮೇಧಾವಿ. ಕಲಾಕೃತಿಗಳನ್ನು ತನ್ನ ನೂತನ ಸಿದ್ಧಾಂತದ ಒರೆಗಲ್ಲಿನ ಮೇಲೆ ತಿಕ್ಕಿ ನೋಡಿ ಕವಿ ಮತ್ತು ಕಾವ್ಯಗಳ ಮೂಲ್ಯಾಂಕನ ಮಾಡುವ ರೀತಿಯಲ್ಲಂತೂಒಂದು ಮೈಲಿಗಲ್ಲೆನಿಸಿ, ತನ್ಮೂಲಕ ಸಾಹಿತ್ಯ ವಿಮರ್ಶೆಗೆ ಹೊಸ ಆಯಾಮ ನೀಡಿದವನು. ಇಂಥ ಆಚಾರ್ಯನ ಕಾಲ, ದೇಶ, ಕೃತಿಗಳ ಬಗೆಗೆ ಏನನ್ನೂ ಹೇಳಿಕೊಂಡಿಲ್ಲ. ಅವನ ಕೃತಿಯಲ್ಲಿ ಸಿಗಬಹುದಾದ ಆಂತರಿಕ ಸಾಕ್ಷ್ಯ ಗಳು, ಎತರೆ ಕೃತಿಗಳು ಮತ್ತು ಕವಿಗಳನ್ನೇ ಅವಲಂಬಿಸಿದೆ. ಸ್ಥೂಲವಾಗಿ ಕುಂತಕನ ಕಾಲ ೯೨೦-೯೨೫ ಎಂದಿಟ್ಟುಕೊಳ್ಳಬಹುದು. 


ವಕ್ರೋಕ್ತಿ ಜೀವಿತ ಕೃತಿಯು (೧) ಕಾರಿಕಾ ಭಾಗ (೨) ವೃತ್ತಿ ಭಾಗ ಹಾಗೂ (೩) ಲಕ್ಷ್ಯ ಭಾಗಗಳೆಂದು ಮೂರು ಭಾಗಗಳನ್ನು ಒಳಗೊಂಡಿದೆ. ಸಕಲ ವ್ಯಾಖ್ಯಾನ ವಿವರಣೆಗಳೊಂದಿಗೆ ನಾಲ್ಕು ಉನ್ಮೇಷಗಳಲ್ಲಿ ನಿರೂಪಿಸಲಾಗಿದೆ. ನಾಲ್ಕು ಉನ್ಮೇಷಗಳೂ ಸೇರಿ ಒಟ್ಟಾರೆ ೧೮೩ ಕಾರಿಕೆಗಳು ಮತ್ತು ೪೩೩  ಉದಾಹೃತ ಭಾಗಗಳಿಂದ ಕೂಡಿ ವಿಸ್ತಾರವಾಗಿದೆ. 


ಕನ್ನಡ ವಕ್ರೋಕ್ತಿ ಜೀವಿತ 


ಮೊದಲನೆಯ ಉನ್ಮೇಷ 


ಜಗತ್ತ್ರಿತಯ ವೈಚಿತ್ರ್ಯ ಚಿತ್ರಕರ್ಮವಿಧಾಯಿನಮ್। 

ಶಿವಂ ಶಕ್ತಿ ಪರಿಸ್ಪಂದ ಮಾತ್ರೋಪಕರಣಂ ನುಮಃ॥೧॥ 


ಶಕ್ತಿ ಪರಿಸ್ಪಂದ ಮೆಂಬುಪಕರಣ ಮಾತ್ರದಿಂದಲೆ 

ಜಗತ್ರಯ ವೈಚಿತ್ರ್ಯವೆನುವಂಥ 

ಚಿತ್ರ ರಚನೆಯ ಗೈವ ಮಹಾಕುಶಲಕರ್ಮಿಗೆ 

ಆ ಶಿವಗೆ ನನ್ನಯ ನಮನ॥ 


ಯಥಾತತ್ತ್ವಂ ವಿವೇಚ್ಯಂತೇ ಭಾವಾಸ್ತ್ರೈಲೋಕ್ಯವರ್ತಿನಃ

ಯದಿ ತನ್ನಾದ್ಭುತಂ ನಾಮ ದೈವ ರಕ್ತಾ ಹಿ ಕಿಂಶುಕಾಃ ॥೨॥ 


ಮೂರೂ ಲೋಕಗಳಲ್ಲಿ ಇರುವ ವಸ್ತುಗಳನ್ನು ಅವುಗಳು ಇರುವಂತೆಯೇ ವಿವೇಚಿಸಿದರೆ ಅದರಲ್ಲೇನೂ ಅದ್ಭುತವಿರುವುದಿಲ್ಲ.  ಸ್ವಭಾವತಃ ರಕ್ತ ವರ್ಣದ ಹೂಗಳಿಂದ ಕೂಡಿರುವ ಮುತ್ತುಗದ ಮರ ಹೇಗೆ ಅದ್ಭುತವಲ್ಲವೋಹಾಗೆ.


ಸ್ವಮನೀಷಿಕಯೈನಾಥ ತತ್ತ್ವಂತೇಷಾಂ ಯಥ್ರುಚಿ। 

ಸ್ಥಾಪ್ಯತೇ ಪ್ರೌಢಿಮಾತ್ರಂ ತತ್ಪರಮಾರ್ಥೋ ನ ತಾದೃಶಃ॥೩॥ 


ಚಿಂತಕರು ಮೂರೂ ಲೋಕಗಳಲ್ಲಿರುವ ವಸ್ತುಗಳ ಸ್ವರೂಪಕ್ಕೆ ಸಂಬಂಧಿಸಿದಂತೆ ತಮ್ಮ ಬುದ್ಧಿಗೆ ತೋಚಿದಂತೆ ಸ್ವೇಚ್ಛೆಯಿಂದ ತಮ್ಮದೇ ಆದ  ನಿರ್ಣಯಕ್ಕೆ ಬರಬಹುದು. ಹಾಗಾದರೆ ಅದು ಅವರ ಪ್ರೌಢಿಮೆಯಾಗುತ್ತದೆ ಅಷ್ಟೆ. ಯಾವುದೇ ವಸ್ತುವಿನ ಸತ್ಯ ಅಂಥ ಚಾತುರ್ಯಕ್ಕೆ ಸಗ್ಗುವಂತಿರುವುದಿಲ್ಲ. 


ಇತ್ಯಸತ್ತರ್ಕ ಸಂದರ್ಭೇ ಸ್ವತಂತ್ರೇऽ ಪ್ಯಕೃತಾದರಃ। 

ಸಾಹಿತ್ಯಾರ್ಥ ಸುಧಾಸಿಂಧೋಃ ಸಾರಮುನ್ಮೀಲಯಾಮ್ಯಹಂ ॥೪॥ 


ಇಂಥ ಮಿಥ್ಯಾತರ್ಕಗಳಿಂದ ಹೊರಹೊಮ್ಮುವ ಸ್ವಚ್ಛಂದ ವಾಗ್ಜಾಲಗಳಿಂದ ಅಸಂತುಷ್ಟನಾಗಿ ನಾನೀಗ ಸಾಹಿತ್ಯದ ಅರ್ಥವೆಂಬ ಅಮೃತಸಾಗರದ ಸಾರವನ್ನು ಮೊದಲ ಬಾರಿಗೆ ಹೊರತರೈವೆನು. 


ಯೇನ ದ್ವಿತಯಮಪ್ಯೇತತ್ತತ್ವ ನಿರ್ಮಿತಿ ಲಕ್ಷಣಮ್। 

ತದ್ವಿದಾಮದ್ಭುತಾಮೋದ ಚಮತ್ಕಾರಂ ವಿಧಾಸತಿ॥೫॥ 


ತತ್ತ್ವ ಮತ್ತು ನಿರ್ಮಿತಿ ಲಕ್ಷಣಗಳೆಂಬ ಎರಡು ಅಂಶಗಳಿಗೆ ಸಂಬಂಧಿಸಿದಂತೆ ಈ ನನ್ನ ಗ್ರಂಥವು ಸಾಹಿತ್ಯ ಮರ್ಮಜ್ಞರಿಗೆ (ರಸಿಕರಿಗೆ) ಅದ್ಭುತ ಆನಂದ ಹಾಗೂ ಚಮತ್ಕಾರಗಳನ್ನುಂಟುಮಾಡುವಂಥದಾಗಿರುತ್ತದೆ.  


ವಂದೇ ಕವೀಂದ್ರ ವಕ್ತ್ರೇಂದು ಲಾಸ್ಯಮಂದಿರ ನರ್ತಕೀಂ। 

ದೇವೀಂ ಸೂಕ್ತಿ ಪರಿಸ್ಪಂದ ಸುಂದರಾಭಿನಯೋಜ್ವಲಾಂ॥1॥ 


ಕವೀಂದ್ರರ ಮುಖಚಂದ್ರ ರಂಗಮಂದಿರದೊಳ್ 

ನಲವಿಂ ಕುಶಲೋಕ್ತಿ ರೂಪದ ಸುಂದರ 

ಭಾವಾಭಿನಯ ಕೌಶಲಂಗಳಿಂ ನರ್ತಿಪ 

ನಟೀಮಣಿಗೆ ವಾಗ್ದೇವಿಗೆ ವಂದಿಸುವೆನು ನಾನು 


[ ಕವಿ ಶ್ರೇಷ್ಠರ ಮುಖಚಂದ್ರವೆಂಬ ರಂಗಮಂದಿರದಲ್ಲಿ ಕುಶಲವಾದ ಉಕ್ತಿಗಳ ರೂಪದ ಸಾತ್ವಿಕಾದಿ ಸುಂದರ ಭಾವಾಭಿನಯ ಕೌಶಲಂಗಳಿಂ ನರ್ತಿಸುತ್ತಿರುವ ಉಜ್ವಲ ನಟಿಯಾದ ಶಾರದೆಗೆ ನಾನು ನಮಸ್ಕರಿಸುತ್ತೀನೆ. ] 


ವಾಚೋ ವಿಷಯ ನೈಯತ್ಯಮುತ್ಪಾದಯಿತುಮುಚ್ಯತೇ 

ಆದಿವಾಕ್ಯೇऽಭಿಧಾನಾದಿ ನಿರ್ಮಿತೇರ್ಮಾನ ಸೂತ್ರಮ್॥೬॥ 


ಕಟ್ಟಡನಿರ್ಮಾಣದಲ್ಲಿ ಅಳತೆಯ ಕಡ್ಡಿಯಿಂದ ನೀಲ ನಕ್ಷೆಯನ್ನು ತಯಾರಿಸುವಂತೆ ಮಾತುಗಳನ್ನು ವಿಷಯದ ಪರಿಧಿಯಲ್ಲಿ ನಿಯಂತ್ರಿಸುವ ಸಲುವಾಗಿ ಅಭಿಧಾನವೇ ಮೊದಲಾದ ಅನುಬಂಧ ಚತುಷ್ಟಯಗಳನ್ನು ಹೇಳಲಾಗುತ್ತದೆ.  


ಲೋಕೋತ್ತರ ಚಮತ್ಕಾರಕಾರಿ ವೈಚಿತ್ರ್ಯ ಸಿದ್ಧಯೇ। 

ಕಾವ್ಯಸ್ಯಾಯಮಲಂಕಾರಃ ಕೋऽಪ್ಯಪೂರ್ವೋ ವಿಧೀಯತೇ ॥2॥ 


ಲೋಕೋತ್ತರವಾದ ಚಮತ್ಕಾರವನ್ನು ಉಂಟುಮಾಡಬಲ್ಲ ವೈಚಿತ್ರ್ಯದ ಸಿದ್ಧಿಗಾಗಿ ಅಪೂರ್ವವೆನಿಸಿದ ಹಾಗೂ ಕಾವ್ಯಕ್ಕೆ ಅಲಂಕಾರ ಪ್ರಾಯವಾದ ಈ ಗ್ರಂಥವನ್ನು ರಚಿಸಲಾಗಿದೆ. 


ಧರ್ಮಾದಿ ಸಾಧನೋಪಾಯಃ ಸುಕುಮಾರ ಕ್ರಮೋದಿತಃ । 

ಕಾವ್ಯ ಬಂಧೋऽಭಿಜಾತಾನಾಂ ಹೃದಯಾಹ್ಲಾದಕಾರಕಃ॥3॥ 


ಸುಕುಮಾರ ಕ್ರಮದಲ್ಲಿ ರಚಿತವಾದ ಮಹಾಕಾವ್ಯವು, ಧರ್ಮ, ಅರ್ಥ, ಕಾಮ, ಮೋಕ್ಷವೇ ಮೊದಲಾದ ಪುರುಷಾರ್ಥಗಳನ್ನು ಸಾಧಿಸುವುದು ಸಾಧನವಾಗಿರುವುದಷ್ಟೇ ಅಲ್ಲ; ಅಭಿಜಾತ ವ್ಯಕ್ತಿಗಳ ಹೃದಯಕ್ಕೆ ಆಹ್ಲಾದವನ್ನುಂಟುಮಾಡುವಂಥದೂ ಆಗಿರುತ್ತದೆ.  


ವ್ಯವಹಾರ ಪರಿಸ್ಪಂದ ಸೌಂದರ್ಯವ್ಯವಹಾರಿಭಿಃ । 

ಸತ್ಕಾವ್ಯಾಧಿಗಮಾದೇವ ನೂತನೌಚಿತ್ಯಮಾಪ್ಯತೇ॥4॥ 


ಲೋಕವ್ಯವಹಾರದಲ್ಲಿ ತೊಡಗಿರುವ ಜನರು, ನೂತನೌಚಿತ್ಯದಿಂದ ಕೂಡಿದ ಲೋಕ ವ್ಯಾಪಾರದ ಸೌಂದರ್ಯವನ್ನು ಸತ್ಕಾವ್ಯ ಪರಿಜ್ಞಾನದಿಂದ ಮಾತ್ರ ಸವಿಯಬಲ್ಲರು.  


ಚತುರ್ವರ್ಗ ಫಲಾಸ್ವಾದಮಪ್ಯತಿಕ್ರಮ್ಯ ತದ್ವಿದಾಮ್। 

ಕಾವ್ಯಾಮೃತರಸೇನಾಂತಶ್ಚಮತ್ಕಾರೋ ವಿತನ್ಯತೇ ॥5॥ 


ಧರ್ಮ, ಅರ್ಥ,  ಕಾಮ,  ಮೋಕ್ಷಾದಿ ಚತುರ್ವಿಧ ಪುರುಷಾರ್ಥಗಳ ಫಲಾಸ್ವಾದವನ್ನೂ ಮೀರಿದ ಆನಂದ, ಸಹೃದಯನ ಹೃದಯದಲ್ಲಿ ಕಾವ್ಯಾಮೃತ ರಸಾಸ್ವಾದದಿಂದ ಉಂಟಾಗುತ್ತದೆ.  


ಕಟುಕೌಷಧವಚ್ಛಾಚ್ತ್ರಮ ವಿದ್ಯಾವ್ಯಾಧಿನಾಶನಮ್ । 

ಆಹ್ಲಾದ್ಯಮೃತವತ್ಕಾವ್ಯಮ ವಿವೇಕ ಗದಾ ಪಹಮ್ ॥ ೭॥ 


ಶಾಸ್ತ್ರವು, ಕಹಿಯಾದ ಔಷಧಿಯ ಹಾಗೆ ಅವಿದ್ಯೆ( ಅಜ್ಞಾನ) ಯೆಂಬ ರೋಗವನ್ನು ನಾಶಮಾಡುತ್ತದೆ.  ಕಾವ್ಯವು ಆಹ್ಲಾದವೆಂಬ ಅಮೃತದಹಾಗೆ ಹಾಗೆ ಅದೇ ಅಜ್ಞಾನ (ಅವಿವೇಕ) ವೆಂಬ ರೋಗವನ್ನು ನಾಶಮಾಡುತ್ತದೆ. 

 

ಆಯತ್ಯಾಂ ಚ ತದಾತ್ವೇ ಚ ರಸನಿಷ್ಯಂದ ಸುಂದರಮ್ 

ಯೇನ ಸಂಪದ್ಯತೇ ಕಾವ್ಯಂ ತದಿದಾನೀಂ ವಿಚಾರ್ಯತೇ॥೮॥


ಯಾವ ತತ್ವದಿಂದಾಗಿ ಕಾವ್ಯವು ಅಧ್ಯಯನ ಕಾಲದಲ್ಲೂ ಅನಂತರದಲ್ಲೂ ತನ್ನ ರಸಸ್ಯಂದತೆಯಿಂದ ರಮಣೀಯವೆನಿಸುತ್ತದೆಯೋ ಆ ತತ್ವವನ್ನು ಈಗ್ರಂತದಲ್ಲಿ ವಿವೇಚಿಸಲಾಗುವುದು.  


ಅಲಂಕೃತಿರಲಂಕಾರ್ಯಮಪೋಧ್ಧೃತ್ಯ ವಿವೋಚ್ಯತೇ। 

ತದುಪಾಯತಯಾ ತತ್ತ್ವಂ ಸಾಲಂಕಾರಸ್ಯ ಕಾವ್ಯತಾ॥6॥ 


"ಅಲಂಕರಣ" ಮತ್ತು "ಅಲಂಕಾರ್ಯ" ಗಳೆರಡನ್ನೂಬೇರೆ ಬೇರೆಯಾಗಿಯೇ ವಿವೇಚಿಸಲಾಗುವುದು,  ನಮ್ಮ ಅಂತಿಮ ಉದ್ದೇಶವನ್ನು ಸಾಧಿಸಲು ಇರುವ ಅತ್ಯಂತಿಕ ಮಾರ್ಗ ಅದೊಂದೇ,  ವಸ್ತು ಸಂಗತಿ ಏನೆಂದರೆ, ಕಾವ್ಯವು ಯಾವಾಗಲೂ ಸಾಲಂಕೇ. ಅಲಂಕರಣ ಮತ್ತು ಅಲಂಕಾರ್ಯಗಳು ಸೇರಿಯೇ ಕಾವ್ಯವಾಗುತ್ತದೆ.  


ಕನ್ನಡ ವಕ್ಕೋಕ್ತಿ ಜೀವಿತ 

ಎರಡನೆಯ ಉನ್ಮೇಷ


ಏಕೋ ದ್ವೌ ಬಹವೋ ವರ್ಣಾ ಬಧ್ಯಮಾನೃಃ ಪುನಃ ಪುನಃ 

ಸ್ವಲ್ಲಾಂತರಾಸ್ತ್ರಿಧಾ ಸೋಕ್ತಾ ವರ್ಣವಿನ್ಯಾಸ ವಕ್ರತಾ ॥1॥ 


ಒಂದು, ಎರಡು ಅಥವಾ ಹಲವು ವರ್ಣಗಳು ( ವ್ಯಂಜನಗಳು) ಕಡಿಮೆ ಕಾಲದ ಅಂತರದಲ್ಲಿ ಮತ್ತೆ ಮತ್ತೆ ಬಳಕೆಯಾದಾಗ ಮೂರು ರೀತಿಯ ವರ್ಣವಿನ್ಯಾಸ ವಕ್ರತೆಗಳು ರೂಪಿತವಾಗುತ್ತವೆ. 


ವರ್ಗಾಂತ ಯೋಗಿನಃ ಸ್ಪರ್ಶಾ ದ್ವಿರುಕ್ತಾಸ್ತಾ-ಲ- ನಾದಯಃ 

ಶಿಷ್ಟಾಶ್ಚ ರಾದಿಸಂಯುಕ್ತಾಃ ಪ್ರಸ್ತುತೌಚಿತ್ಯಶೋಭಿನಃ॥20 ॥


ವರ್ಗೀಯ ವ್ಯಂಜನಗಳು ( ಕ ಕಾರದಿಂದ ಮಕಾರದವರೆಗಿನ ೨೫) ತಮ್ಮ ವರ್ಗದ ಅಂತಿಮ ವ್ಯಂಜನಗಳಾದ ಅನುನಾಸಿಕಗಳೊಂದಿಗೆ ಸೇರಿ ಆವೃತ್ತವಾಗಬಹುದು. " ತ" "ಲ" "ನ"ಗಳು ದ್ವಿರುಕ್ತಗಳಾಗಿ ಆವೃತ್ತಗೊಳ್ಳಬಹುದು . 

ಉಳಿದ ಎಲ್ಲ ವರ್ಣಗಳು " ರ" ಆದಿಯೊಂದಿಗೆ ಸಂಯುಕ್ತಗೊಂಡು ಆವೃತ್ತಗೊಳ್ಳಬಹುದು. ವರ್ಣ್ಯಮಾನ ವಸ್ತುವಿನೊಂದಿಗೆ ಔಚಿತ್ಯಪೂರ್ಣವಾಗಿ ಮಿಳಿತಗೊಂಡು ಇವು ಶೋಭಿಸುತ್ತವೆ.


ಕ್ವಚಿದವ್ಯವಧಾನೇಪಿ ಮನೋಹಾರಿ ನಿಬಂಧನಾ। 

ಸಾ ಸ್ವರಾಣಾಮಸಾರೂಪ್ಯಾತ್ ಪರಾಂ ಪುಷ್ಣಾತಿ ವಕ್ರತಾಮ್॥೩॥ 


ಕೆಲವೊಮ್ಮೆ ಕಾಲ ವಿಳಂಬವಿಲ್ಲದೆ ಒಂದಾದ ನಂತರ ಮತ್ತೊಂದರಂತೆ ಕವಿಯು ಕಲಾತ್ಮಕವಾಗಿ ಯೋಜಿಸಿದ ವರ್ಣಾವೃತ್ತಿಯು ಸ್ವರಗಳ ವ್ಯತ್ಯಯದಿಂದಾಗಿ ಅಪೂರ್ವವಾದ ಕಾವ್ಯಸೌಂದರ್ಯವನ್ನು ಪೋಷಿಸುತ್ತದೆ. 


ಕಾಲವಿಳಂಬವಿಲ್ಲದ ಏಕವ್ಯಂಜನ ವರ್ಣಾವೃತ್ತಿಗೆ

ವಾಮಂ ಕಜ್ಜಲವದ್ವಿಲೋಚನ ಮುರೋರೋಹದ್ವಿಸಾರಿಸ್ತನಮ್॥೯॥ 


ಇಲ್ಲಿ "ಕಜ್ಜಲ" ದಲ್ಲಿ "ಜ"ದ ಹಾಗೂ " ವಿಲೋಚನ ಮುರೋರೋಹದ್" ನಲ್ಲಿ "ರ" ಕಾಲವಿಳಂಬವಿಲ್ಲದೆ ಆವೃತ್ತವಾಗಿದೆ. 


ಎರಡು ವ್ಯಂಜನಗಳ ಪುನರಾವೃತ್ತಿಗೆ


ತಾಂಬೂಲೀನದ್ಧ ಮುಗ್ಧಕ್ರಮುಕ ತರುತಲ ಸ್ರಸ್ತರೇ ಸಾನುಗಾಭೀ 

ಪಾಯಂ ಪಾಯಂ ಕಲಾಚೀಕೃತಕ ದಲದಲಂ ನಾರೀಕೇಳೀ ಫಲಾಂಭಃ

ಸೇವ್ಯಂತಾಂ ವ್ಯೋಮಯಾತ್ರಾ ಶ್ರಮಜಲಜಯಿನಃ ಸೈನ್ಯಸೀಮಂತಿನೀಭಿ

ರ್ದಾತ್ಯೂಹವ್ಯೂಹ ಕೇಲೀಕಲಿತ ಕುಹುಕುಹಾರಾವ ಕಾಂತಾಬನಾಂತಃ॥೧೦॥ 


ಕುಹು ಕುಹು ಕೋಕಿಲ ಸ್ವರಗಳು 

ಮಾರ್ದನಿಗೊಡುತಿರುವ ವನಸ್ಥಳಗಳಲಿ 

ವೀಳ್ಯದ ಬಳ್ಳಿಗಳು ತಬ್ಬಿರುವ 

ಎಳೆಯ ಅಡಿಕೆ ಮರಗಳೆಡೆಗಳಲಿ

ಶಿಲಾಸ್ತರದ ಮೇಲ್ ಕುಳಿತು ಸೇನಾಲಲನೆಯರು 

ಬಾಳೆಲೆಯ ದೊನ್ನೆಗಳಲಿ ಎಳನೀರ 

ಕುಡಿಕುಡಿದು ವ್ಯೋಮಯಾತ್ರೆಯ 

ಶ್ರಮದಲುದಿಸಿದ ಬೆವರ ಹನಿಗಳ ನೀಗಿಕೊಳಲಿ॥೧೦॥ 


ಹಾಗೂ 


ಆಯಿ ಪಿಬಿತ ಚಕೋರಾಃ ಕೃತ್ಸ್ನಮುನ್ನಮ್ಯ ಕಂಠಾನ್ 

ಕ್ರಮುಕವಲನ ಚಂಚಚ್ಚಂಚವಶ್ಚಂದ್ರಿಕಾಂಭಃ 

ವಿರಹವಿಧುರಿತಾನಾಮ್ ಜೀವಿತತ್ರಾಣಹೇತೋ 

ರ್ಭವತಿ ಹರಿಲಕ್ಷ್ಮಾಯೇನ ತೇಜೋದರಿದ್ರಃ॥೧೧॥ 


ಅಡಕೆಗಳ ಕುಕ್ಕಿ ಹರಿತ ಕೊಕ್ಕನು ಹೊಂದಿಹ 

ಚಕೋರಗಳೆ

ವಿರಹದಲಿ ನವೆಯುತಿರುವವರ

ಪ್ರಾಣ ರಕ್ಷಣೆಗಾಗಿ 

ನಿಮ್ಮ ಕೊರಳನೆತ್ತರಿಸಿ ಕುಡಿದು ಬಿಡಿ

ಚಂದ್ರಿಕೆಯ ಜಲವನ್ನೆಲ್ಲ

 ಅದರಿಂದ ಮೃಗಲಾಂಚನನು 

ತನ್ನ ತೇಜವನೆಲ್ಲ ನೀಗಿಕೊಂಡು ಬಿಡಲಿ॥೧೧॥ 


ಇಲ್ಲಿ ಕೊನೆಯ ಸಾಲಿನಲ್ಲಿ ಮಾತ್ರ ಬರುವ " ದರಿದ್ರ" ದಲ್ಲಿ "ದ" ಮತ್ತು "ರ" ಗಳು ಕಾಲವಿಳಂಬವಿಲ್ಲದೆ ಪುನರಾವೃತ್ತಗೊಂಡಿವೆ. 


ಅನೇಕ ವ್ಯಂಜನಗಳ ಪುನರಾವೃತ್ತಿಗೆ: 


 ಸರಲತರಲತಾಲಾಸಿಕಾ॥೧೨॥ 


ಇಲ್ಲಿ ರ, ಲ, ತ, ಎಂಬ ವರ್ಣಗಳು ಕಾಲವಿಳಂಬವಿಲ್ಲದೆ ಎರಡು ಸಲ ಆವೃತ್ತಗೊಂಡಿವೆ. 


ಸ್ವಸ್ಥಾಃ ಸಂತು ವಸಂತ ತೇ ರತಿಪತೇರಗ್ರೇಸರಾ ವಾಸರಾಃ ॥೧೩॥ 


ಹೇ ವಸಂತನೇ ರತಿಪತಿಯ ಮುನ್ನಡೆಯಲಿ ಸಾಗುವಾ ನಿನ್ನ ದಿನಗಳು ಸುಖಕರವಾಗಲಿ. ॥೧೩॥ 


ಅನೇಕ ವರ್ಣಗಳು ಮಧ್ಯೆ ವ್ಯವಧಾನವಿದ್ದರೂ ಪುನರಾವೃತ್ತವಾಗುವುದಕ್ಕೆ


ಚಕಿತ ಚಾತಕಮೇಚಕಿತವಿಯತಿ ವರ್ಷಾತ್ಯಯೇ ॥೧೪॥ 


ಮಳೆಗಾಲದಂತ್ಯದಲಿ ಚಕಿತಗೊಂಡ ಚಾತಕಗಳಾಗಸದೊಳು ॥೧೪॥ 


ನಾತಿನಿರ್ಬಂಧವಿಹಿತಾ ನಾಪ್ಯಪೇಶಲಭೂಷಿತಾ 

ಪೂರ್ವಾವೃತ್ತ ಪರಿತ್ಯಾಗ ನೂತನಾವರ್ತನೋಜ್ವಲಾ॥4॥ 


ಹೆಚ್ಚಿನ ಪ್ರಯಾಸವಿಲ್ಲದೆ ( ಪರ್ಯತ್ನವಿಲ್ಲದೆ) ಕರ್ಕಶವಲ್ಲದ ವರ್ಣಗಳಿಂದ ಕೂಡಿದ್ದು. ಈ ಮುಂಚೆ ಆವೃತ್ತಗೊಂಡ ವರ್ಣಗಳನ್ನು ಬಿಟ್ಟು ನೂತನ ವರ್ಣಗಳ ಆವರ್ತನದಿಂದ ಸುಶೋಭಿತಗೊಂಡ ವರ್ಣವಿನ್ಯಾಸ ವಕ್ರತೆಯಾಗಿರಬೇಕು. 


ಏತಾಮ್ ಪಶ್ಯ ಪುರಸ್ತಟೀಮಿಹ ಕಿಲ ಕ್ರೀಡಾಕಿರಾತೋ ಹರಃ 

ಕೋದಂಡೇನ ಕಿರೀಟಿನಾಂ ಸರಭಸಂ ಚೂಡಾಂತರೇ ತಾಡಿತಃ 

ಇತ್ಯಾಕರ್ಣ್ಯ ಕಥಾದ್ಭುತಂ ಹಿಮ ನಿಧಾವದ್ರೌ ಸುಭದ್ರಾಪತೇ 

ರ್ಮಂದಂ ಮಂದಮಕಾರಿ ಯೇನ ನಿಜಯೋರ್ದೋರ್ದಂಡಯೋರ್ಮುಂಡನಂ ॥೨೨॥ 


ಮುಂದಿರುವೀ ನದೀತಟವ ನೋಡಿದೊ 

ಇಲ್ಲೆ ಅರ್ಜುನನು ಧನುವಿಂದ 

ಕಿರಾತವೇಷದ ಶಿವನ ಶಿರವ ರಭಸದಿಂದಲಿ 

ಘಟ್ಟಿಸಿದನು ಹಿಮಗಿರಿಯ ಮೇಲೆ 

ಸುಭದ್ರಾಪತಿ ಅರ್ಜುನನು ಮೆರೆದ


ವರ್ಣಚ್ಛಾಯಾನುಸಾರೇಣ ಗುಣಮಾರ್ಗಾನುವರ್ತಿನೀ

ವೃತ್ತಿ ವೈಚಿತ್ರ್ಯ ಯುಕ್ತೇತಿ ಸೈವ ಪ್ರೋಕ್ತಾ ಚಿರಂತನೈಃ ॥5॥ 


ವರ್ಣಗಳ ಸೌಂದರ್ಯವನ್ನು ದುಡಿಸಿಕೊಳ್ಳುವ ವರ್ಣವಿನ್ಯಾಸ ವಕ್ರತೆಯು ಗುಣ ಮತ್ತು ಮಾರ್ಗಗಳನ್ನು ಅನುಸರಿಸುವಂಥದು. ವೃತ್ತಿ ವೈಚಿತ್ರ್ಯದಿಂದ ಕೂಡಿರುವಂಥದು ಎಂದು ಚಿರಂತನಾಚಾರ್ಯರು ಹೇಳಿದ್ದು ಇದನ್ನೇ. 


ಕನ್ನಡ ವಕ್ರೋಕ್ತಿ ಜೀವಿತ 


ಮೂರನೆಯ ಉನ್ಮೇಷ 


ಉದಾರ ಸ್ವ ಪರಿಸ್ಪಂದ ಸುಂದರತ್ವೇನ ವರಣನಮ್

ವಸ್ತು ನೋ ವಕ್ರ ಶಬ್ದೈಕ ಗೋಚರತ್ವೇನ ವಕ್ರತಾ[ 1] 


ತನ್ನದೇ ಆದ ಅಪಾರ ಸ್ವಾಭಾವಿಕ ಸೌಂದರ್ಯದ ದೆಸೆಯಿಂದಾಗಿ ವಸ್ತುವು ರಮಣೀಯತೆಗೆ ತಗುವ ರೀತಿಯಲ್ಲಿ ವಿಶಿಷ್ಟ ವಕ್ರ ಶಬ್ಧದ ಮೂಲಕವೇ ವರ್ಣಿಸಲ್ಪಟ್ಟಾಗ, ಅದನ್ನು ವಸ್ತು ವಕ್ರತೆ ಎಂದು ಪರಿಗಣಿಸಬಹುದು. [1] 


ಅಪರಾ ಸಹಜಾಹಾರ್ಯಕವಿಕೌಶಲಶಾಲಿನೀ 

ನಿರ್ಮಿತಿರ್ನೂತನೋಲ್ಲೇಖಲೋಕಾತಿಕ್ರಾಂತ ಗೋಚರಾ[೨] 


ಇನ್ನೊಂದು ಪ್ರಕಾರದ ವಕ್ರತೆ ಇದೆ. ಅದು ಕವಿಯ ಸಹಜ ಹಾಗೂ ವ್ಯುತ್ಪತ್ತಿಜನ್ಯ ಕೌಶಲಗಳಿಂದ ಶೋಭಿತವಾದ್ದು.  ಅದು ಕವಿ ಪ್ರತಿಭಾಜನ್ಯ ಮೌಲಿಕ ರಚನೆಗಳಲ್ಲಿ ಪರಿಣಮಿಸುವಂಥದು [2] 


ಮಾರ್ಗಸ್ಥ ವಕ್ರಶಬ್ಧಾರ್ಥ ಗುಣಾಲಂಕಾರ ಸಂಪದಃ । 

ಅನ್ಯದ್ವಾಕ್ಯಸ್ಯ ವಕ್ರತ್ವಂ ತಥಾಭಿಹಿತಿ ಜೀವಿತಮ್ [3] 


ಮನೋಜ್ಞಫಲಕೋಲ್ಲೇಖ ವರ್ಣಚ್ಛಾಯಾಶ್ರಿಯಃ ಪೃಥಕ್।

ಚಿತ್ರಸ್ಯೇವ ಮನೋಹಾರಿ ಕರ್ತುಃ ಕಿಮಪಿ ಕೌಶಲಮ್ [4] 


ಸುಕುಮಾರಾದಿ ಮಾರ್ಗಗಳಲ್ಲಿರುವ (ವಕ್ರ) ಶಬ್ಧ, ಅರ್ಥ, ಗುಣ, ಹಾಗೂ ಅಲಂಕಾರಗಳ ಸೌಂದರ್ಯ ಸಂಪತ್ತಿಗಿಂತ ವಾಕ್ಯವಕ್ರತೆ ಎಂಬುದು ತೀರಾ ಭಿನ್ನವಾದದ್ದು. ವಾಕ್ಯರೂಪದ ಅಭಿವ್ಯಕ್ತಿಯೇ ಈ ಸೌಂದರ್ಯದ ಪ್ರಾಣವೆಂದು ಪರಿಗಣಿಸಲಾಗಿದೆ. ಅದು ಕವಿಯ ವಿಶಿಷ್ಟ ಕೌಶಲದ ದ್ಯೋತಕ. ಹೇಗೆಂದರೆ ಚಿತ್ರವೊಂದನ್ನು ರೂಪಿಸುವ ಸುಂದರ ಫಲಕ, ಗೆರೆಗಳು ಮತ್ತು ವಿವಿಧ ವರ್ಣ ಛಾಯೆಗಳೇ ಮೊದಲಾದ ವಿವಿಧ ವಸ್ತುಗಳ ಸೌಂದರ್ಯಕ್ಕಿಂತಚಿತ್ರದ ಒಟ್ಟಾರೆ ವಿಶಿಷ್ಟ ಸೌಂದರ್ಯವು ವಿಭಿನ್ನವಾಗಿರುವಂತೆ. [ 3, 4 ] 


ಭಾವಾನಾಮಪರಿಮ್ಲಾನ ಸ್ವಭಾವೌಚಿತ್ಯ ಸುಂದರಮ್। 

ಚೇತನಾನಾಮ್ ಜಡಾನಾಮ್ ಚ ಸ್ವರೂಪಂ ದ್ವಿವಿಧಂ ಸ್ಮೃತಂ [ 5] 


ಎಂದೂ ಮಾಸದ ಔಚಿತ್ಯದಿಂದ ಹಾಗೂ ಸರಸ ಸ್ವಭಾವದ ಸೌಂದರ್ಯದಿಂದ ಕೂಡಿರುವಂತೆ ವರ್ಣಿಸಲಾಗುವ ಕಾವ್ಯ ವಿಷಯಗಳು ಎರಡು ಪ್ರಾಕಾರದವು. ಅವುಗಳೆಂದರೆ ಜಡ ಮತ್ತು ಚೇತನಗಳು. 


ತತ್ರ ಪೂರ್ವಂ ಪ್ರಕಾರಾಭ್ಯಾಮ್ ದ್ವಾಭ್ಯಾಮೇವ ವಿಭಿದ್ಯತೇ। 

ಸುರಾದಿ ಸಿಂಹಪ್ರಭೃತಿ ಪ್ರಾಧಾನ್ಯೇತರ ಯೋಗತಃ[ 6] 


ಇವುಗಳಲ್ಲಿ ಮೊದಲನೆಯದಾದ ಚೇತನ ವರ್ಗದಲ್ಲಿ ದೇವಾದಿ ಮತ್ತು ಸಿಂಹಾದಿಗಳಲ್ಲಿ ಪ್ರಾಧಾನ್ಯ ಮತ್ತು ಅಪ್ರಾಧಾನ್ಯದಿಂದ ಮತ್ತೆ ಎರಡು ವಿಧಗಳಾಗುತ್ತವೆ. 


ಮುಖ್ಯಮಕ್ಲಿಷ್ಟರತ್ಯಾದಿ ಪರಿಪೋಷ ಮನೋಹರಮ್। 

ಸ್ವಜಾಚ್ಯುಚಿತ ಹೇವಾಕ ಸಮುಲ್ಲೇಖೋ ಜ್ವಲಂ ಪರಮ್[7] 


ಮೊದಲನೆಯದಾಗಿ ಚೇತನ ಪ್ರಕಾರಗಳು ಸುಂದರವಾದ ರತಿಯೇ ಮೊದಲಾದ ಸ್ಥಾಯೀ ಭಾವಗಳ ಸರಾಗ ಪರಿಪೋಷಣೆಯಿಂದ ಮನೋಹರವೆನಿಸುತ್ತವೆ. ಎರಡನೆಯ ಗೌಣ [೬] ಚೇತನ ಪದಾರ್ಥಗಳು ತಮ್ಮ ಜಾತಿಗೆ ಉಚಿತವಾದ ಸ್ವಭಾವದ ಸಂಯಕ್ ನಿರೂಪಣೆಯಿಂದ ಉಜ್ವಲವಾಗುತ್ತವೆ.[7]


ರಸೋದ್ದೀಪನ ಸಾಮರ್ಥ್ಯ ವಿನಿಬಂಧನ ಬಂಧುರಮ್। 

ಚೇತನಾನಾಮಮುಖ್ಯಾನಾಂ ಜಡಾನಾಂ ಚಾಪಿ ಭೂಯಸಾ॥ [8] 


ಗೌಣಚೇತನ ಪದಾರ್ಥಗಳು ( ಅಮುಖ್ಯಚೇತನ ಪಶುಪಕ್ಷಿ ಸಿಂಹಾದ್ರಿ ) ಹಾಗೂ ಹೆಚ್ಟಾಗಿ ಜಡ ಪದಾರ್ಥಗಳನ್ನು ರಸವನ್ನು ಉದ್ದೀಪಿಸಲು ಸಮರ್ಥವಾಗುವ ರೀತಿಯಲ್ಲಿ ವರ್ಣಿಸಿದಾಗ, ಅವು ಅತ್ಯಂತ ಮನೋಹರವೆನಿಸುತ್ತವೆ.


ಕನ್ನಡ ವಕ್ರೋಕ್ತಿ ಜೀವಿತ 

ನಾಲ್ಕನೆಯ ಉನ್ಮೇಷ 


ಯತ್ರ ನಿರ್ಯಂತ್ರಣೋತ್ಸಾಹ ಪರಿಸೂಪಂದೋಪಶೋಭಿನೀ। 

ಪ್ರವೃತ್ತಿ ರ್ವ್ಯವಹರ್ತೃಣಾಂ ಸ್ವಾಶಯೋಲ್ಲೇಖ ಶಾಲಿನೀ ॥1॥ 


ಅಪ್ಯಾಮೂಲಾದನಾಶಂಕ್ಯ ಸಮುತ್ಥಾನೇ ಮನೋರಥೇ। 

ಕಾಪ್ಯುನ್ಮೀಲತಿ ನಿಃಸೀಮಾ ಸಾ ಪ್ರಬಂಧಾಂಶ ವಕ್ರತಾ॥2॥ 


ಅಪರಿಮಿತವಾದ ಉತ್ಸಾಹದ ಸೌಂದರ್ಯದಿಂದ ಶೋಭಿತವಾದ ತಮ್ಮ ಭಾವನೆಗಳಿಗೆ ಅಭಿವ್ಯಕ್ತಿ ಕೊಡುವ ಹಾಗೂ ತಮ್ಮ ಆಶಯಗಳನ್ನು ಪ್ರಬಲವಾಗಿ ಅಭಿವ್ಯಕ್ತಿಸುವ ಪ್ರವೃತ್ತಿ ವ್ಯವಹರಿಸುವವರಲ್ಲಿ ( ಪಾತ್ರಗಳಲ್ಲಿ) ಕಂಡು ಬಂದಾಗ. 


ಪಾತ್ರಗಳ ಮನೋಭೀಷ್ಟಗಳು ಮೊದಲಿನಿಂದ ಕಡೆಯವರೆಗೂ ನಿಗೂಢವಾಗಿಯೇ ಉಳಿದು ಬಿಟ್ಟಾಗ ( ಅಂದರೆ ಕೊನೆಯವರೆಗೂ ಕಾತರ ನಿರೀಕ್ಷೆಗಳು ಶಾಶ್ವತವಾಗಿ ಉಳಿದಿರುತ್ತವೆ.) ಈ ಎಲ್ಲದರ ಹಿಂದಿರುವ ವಿಶಿಷ್ಟವೂ, ಅಸೀಮವೂ ಆದ ಕಾವ್ಯ ಕೌಶಲವು ಪ್ರಕರಣ ವಕ್ರತೆ ಎನಿಸುತ್ತದೆ.  


ಇತಿವೃತ್ತ ಪ್ರಯುಕ್ತೇऽಪಿ ಕಥಾವೈಚಿತ್ರ್ಯ ವರ್ತ್ಯನಿ।

ಉತ್ಪಾದ್ಯಲವಲಾವಣ್ಯಾದನ್ಯಾ ಲಸತಿ ವಕ್ರತಾ॥3॥ 


ತಥಾ ಯಥಾ ಪ್ರಬಂಧಸ್ಯ ಸಕಲಸ್ಯಾಪಿ ಜೀವಿತಮ್ । 

ಭಾತಿ ಪ್ರಕರಣಂ ಕಾಷ್ಮಾದಿ ರೂಢ ರಸನಿರ್ಭರಮ್॥4॥ 


ಇತಿವೃತ್ತ (ಇತಿಹಾಸ) ವನ್ನಾಧರಿಸಿದ್ದರೂ, ಕವಿಯು ಕಥಾ ವೈಚಿತ್ರ್ಯವನ್ನು ನಿರ್ಮಿಸ ಹೊರಟಿದ್ದರೆ, ಅಲ್ಲಿ ಲಾವಣ್ಯದ ಕಿಂಚಿದಂಶವನ್ನು ಸೃಷ್ಟಿಸಿದ್ದರೂ ಸಾಕು, ಅದರಿಂದ ಹೊರಹೊಮ್ಮುವ ಸೌಂದರ್ಯವು ಅಪೂರ್ವವೇ ಆಗಿಬಿಡುತ್ತದೆ.


ಪ್ರಕರಣವೊಂದು ರಸನಿರ್ಭರತೆಯಿಂದ ಕೂಡಿಕೊಂಡು ಪರಾಕಾಷ್ಠೆಯನ್ನು ಮುಟ್ಟುವುದರಿಂದ ಅದು ಸಮಗ್ರ ಪ್ರಬಂಧದ ಪ್ರಾಣ ಸ್ವರೂಪದಂತೆ ಶೋಭಿಸುವುದು. 


ಪುರಬಂಧಸ್ಯೈಕ ದೇಶಾನಾಂ ಫಲಬಂಧಾನುಬಂಧವಾನ್। 

ಉಪಕಾರ್ಯೋಪ ಕರ್ತೃತ್ವ ಪರಿಸ್ಪಂದಃ ಪರಿಸ್ಫುರನ್॥5॥ 


ಅಸಾಮಾನ್ಯ ಸಮುಲ್ಲೇಖ ಪ್ರತಿಭಾ ಪ್ರತಿಭಾಸಿನಃ । 

ಸೂತೇ ನೂತನ ವಕ್ರತ್ವರಹಸ್ಯಂ ಕಸ್ಯಚಿತ್ಕವೇ॥6॥ 


ಆತ್ಯಂತಿಕ ಫಲ (ಗುರಿ) ಸಾಧನೆಯ ಉದ್ದೇಶದಿಂದ ಕೃತಿಯ ವಿವಿಧ ಭಾಗಗಳಲ್ಲಿ ವರ್ಣಿಸಲಾದ ವಿವಿಧ ಪ್ರಕರಣಗಳು ಪರಸ್ಪರ ಉಪಕಾರ್ಯೋಪ ಕರ್ತೃತ್ವ ಸಂಬಂಧದಿಂದ ಒಂದಕ್ಕೊಂದು ಬೆಸೆಯಲ್ಪಟ್ಟಿರುತ್ತವೆ. ಇಂಥ ಪ್ರಕರಣಗಳಲ್ಲಿ ಕಣ್ಣಿಗೆ ಹೊಡೆಯುವಂತೆ ಸಾವಯವ ಸಂಬಂಧ ಅಥವಾ ಅವಯವೈಕತೆ ಇರುತ್ತದೆ. 


ಇಂಥ ಸಾವಯವ ಸಂಬಂಧವು ಮೌಲಿಕ ಸೃಜನಶೇಲತೆಯ ತಿರುಳನ್ನು ಅಭಿವ್ಯಕ್ತಿಸುತ್ತದೆ. ಅಸಾಮಾನ್ಯ ನಿರ್ಮಾಣಶೀಲ ಪ್ರತಿಭಾಸಂಪನ್ನತೆಯನ್ನು ವರವಾಗಿ ಪಡೆದಿರುವ ಅದ್ಭುತ ಕಾವ್ಯ ಪ್ರತಿಭಾಸಂಪನ್ನ ಕವಿಯಲ್ಲಿ ಮಾತ್ರ ಈ ನೂತನ ವಕ್ರತ್ವವು ಹೊರಹೊಮ್ಮುವುದು. 


ಪ್ರತಿ ಪ್ರಕರಣಂ ಪ್ರೌಢ ಪ್ರತಿಭಾಭೋಗ ಯೋಜಿತಃ । 

ಏಕ ಏವಾಭಿಧೇಯಾತ್ಮಾ ಬಧ್ಯಮಾನಃ ಪುನಃ ಪುನಃ ॥7॥ 


ಅನ್ಯೂನ ನೂತನೋಲ್ಲೇಖರಸಾಲಂಕರಣೋಜ್ವಲಃ । 

ಬಧ್ನಾತಿ ವಕ್ರತೋದ್ಭೇದ ಭಂಗೀಮುತ್ಪಾದಿತಾದ್ಭುತಾಮ್ ॥8॥ 


ಒಂದೇ ವಸ್ತುವು ಪ್ರತಿ ಪ್ರಕರಣದಲ್ಲೂ ಮತ್ತೆ ಮತ್ತೆ ಕವಿಯ ಪ್ರೌಢ ಪ್ರತಿಭೆಯ ಸ್ಪರ್ಶದಿಂದ ವರ್ಣಿಸಲ್ಪಟ್ಟಾಗ. (7) 


ಹಾಗೂ ಅನ್ಯೂನವೂ (ಪರಿಪೂರ್ಣವೂ) ನೂತನವೂ ಆದ ರಸಾಲಂಕಾರಗಳ ಉಜ್ವಲತೆಯನ್ನು ಬಿಂಬಿಸುವಂತಾದಾಗ ಅದು ವಕ್ರತೆಯ ಅದ್ಭುತವಾದ ಭಂಗಿಯನ್ನು ಅಭಿವ್ಯಕ್ತಿಸುತ್ತದೆ. ಅಂಥ ಹೊಸಕ್ರಮವು, ವಕ್ರತೆಯ ಸೌಂದರ್ಯವನ್ನು ಪ್ರಭಾವಪೂರ್ಣವಾದ ರೀತಿಯಲ್ಲಿ ಅಳವಡಿಸಿಕೊಳ್ಳುತ್ತದೆ. 


ಕಥಾ ವೈಚಿತ್ರ್ಯ ಪಾತ್ರಂ ತದ್ವಕ್ರಿಮಾಣಂ ಪ್ರಪದ್ಯತೇ। 

ಯದಂಗಂ ಸರ್ಗಬಂಧಾದೇಃ ಸೌಂದರ್ಯಾಯ ನಿಬಧ್ಯತೇ॥9॥ 


ಮಹಾ ಕಾವ್ಯಾದಿಗಳ (ಸರ್ಗಬಂಧೃದೇಃ) ಸೌಂದರ್ಯದ ಸಲುವಾಗಿ ಯೋಜಿಸಲಾಗುವ ಸಾಂಪ್ರದಾಯಿಕಗಳೆನಿಸಿದ ಪ್ರಕರಣಗಳೂ ಕಥಾ ಸಂವಿಧಾನ ವೈಚಿತ್ರ್ಯದ ಅವಿಭಾಜ್ಯ ಅಂಗವಾಗಿ ಬಂದಾಗ, ವಕ್ರತೆಯನ್ನು ಪಡೆದುಕೊಳ್ಳುತ್ತವೆ. 


ಯತ್ರಾಂಗಿರಸ ನಿಷ್ಯಂದ ನಿಕಷಃ ಕೋ ಲಕ್ಷ್ಯತೇ । 

ಪೂರ್ವೋತ್ತರ ರೈರಸಂಪಾದ್ಯಃ ಸಾಂಕಾದೇಃ ಕಾಪಿ ವಕ್ರತೇ॥10॥ 


ಅಂಕಾದಿಗಳಿಗೆ ಸಂಬಂಧಿಸಿದ ಅಲೌಕಿಕ ವಕ್ರತೆಯು ಅಂಕವೊಂದಕ್ಕೆ ವಿಶಿಷ್ಟವಾಗಿದ್ದು, ನಾಟಕದಲ್ಲಿ ಅದರ ಹಿಂದಿನ ಅಥವಾ ಮುಂದಿನ ಅಂಕದಿಂದ ಆ ಅಲೌಕಿಕತೆ ಸಿದ್ಧಿಸುವುದಿಲ್ಲ.  ಹೀಗಾಗಿ ಆ ಅಂಕವು ತನ್ನದೇ ಆದ ರೀತಿಯಲ್ಲಿ ನಾಟಕದ ಪ್ರಧಾನ ರಸಪ್ರವಾಹದ ನಿಕಷವಾಗಿರುತ್ತದೆ. 


ಕರ್ತೃ: ಕುಂತಕ

ಅನುವಾದಕರು: ಡಾ. ಆರ್. ಲಕ್ಷ್ಮೀನಾರಾಯಣ 

ಪ್ರಕಾಶಕರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 

ಬೆಂಗಳೂರು-೫೬೦೦೫೬



ಫರ್ಡಿನಂಡ್ ಕಿಟೆಲರ ಕ್ರಿಸ್ತ ಕಥನ ಕಾವ್ಯ ಕಥಾಮಾಲೆ

ಫರ್ಡಿನಂಡ್ ಕಿಟೆಲರ ಕ್ರಿಸ್ತ ಕಥನ ಕಾವ್ಯ ಕಥಾಮಾಲೆ


ಫರ್ಡಿನೆಂಡ್ ಕಿಟೆಲರ ಹೆಸರಿನ ಜತೆಗೆ ನೆನಪಾಗುವುದು, ಅವರು ರಚಿಸಿದ " ಕನ್ನಡ - ಇಂಗ್ಲಿಷ್ ನಿಘಂಟು; ಕನ್ನನಡ

ವ್ಯಾಕರಣ, ಶಬ್ಧಮಣಿದರ್ಪಣ, ಹಾಗೂ " ನಾಗವರ್ಮನ ಛಂದೋಂಬುಧಿ" ಕನ್ನಡದ ಏರೆತ್ತರದ ಮಾನಸ್ತಂಭಗಳು. 

ಎರಡು ಸಂಸ್ಕೃತಿಗಳ ವಿಭಿನ್ನ ನೆಲೆಗಳಲ್ಲಿ ಕಾರ್ಯನಿರ್ವಹಿಸಿ ಭಾರತೀಯ ಅದರಲ್ಲೂ ಕನ್ನಡ ಸಂಸ್ಕೃತಿಯ ಎಲ್ಲೆಯನ್ನು ವಿಸ್ತರಿಸಿದ ಕಿಟೆಲರ ಅಸಾಮಾನ್ಯ ಭಾರತೀಯ ನೆಲದ ಅರಿವು ಹೆಚ್ಚಾಗಿ ಬೆಳಕಿಗೆ ಬೇದಿಲ್ಲ. 


ಕಿಟೆಲ್ ಹುಟ್ಟಿದ್ದು ೧೮೩೨ ಏಪ್ರಿಲ್ ೨ ರಂದು. ಹುಟ್ಟೂರು ಜರ್ಮನಿಯ ಪೂರ್ವ ಫ್ರಿಸಿಯಾದ ರೆಸ್ಕರ್ ಹಾಫೆ. ತಾಯಿ ಹೆಲೆನ್, ತಂದೆ ಗಾಟ್ ಫ್ರೀ ಕಿಟೆಲ್ ಒಬ್ಬ ಧರ್ಮಗುರು. ಜೌರಿಕ್ನಲ್ಲಿ ಆರಂಭಿಕ ಶಿಕ್ಷಣ ಮುಗಿಸಿ ೧೮೫೦ ರಲ್ಲೆ ಬಾಸೆಲ್ ಮಿಷನ್ಗೆ ಸೇರೆದರು. ಊಲ್ಲಿ ಮೂರು ವರ್ಷಗಳ ಕಾಲ ಕ್ರೈಸ್ತ ದೈವಶಾಸ್ತ್ರ ತರಬೇತಿ ಪಡೆದರು. ಬಳಿಕ ಕಿಟೆಲ್ ೨.೧೧.೧೮೫೩ ರ ರಂದು ತನ್ನ ಸಹಮತವುಳಿಗ ( ಸುವಾರ್ತಾ ಪ್ರಚಾರಕ ) ಕೌಫ್ಮನ್ನೊಂದಿಗೆ ಹಡಗನ್ನೇರಿ ೮.೧೨.೧೮೫೩ ರಂದು ಭಾರತದ ನೆಲಕ್ಕೆ ಮುಂಬಯಿಗೆ ಬಂದಿಳಿದರು. ೧೩.೧೨.೧೮೫೩ ರಂದು ಬ್ರಿಟಿಷ್ ಹಾಯಿಹಡಗಿನಲ್ಲಿ ಮುಂಬಯಿಯಿಂದ ಹೊನ್ನಾವರ ತಲುಪಿದರು. ಮೇಲಧಿಕಾರಿಗಳ ಸೂಚನೆ ಮೇರೆಗೆ ಕಿಟೆಲ್, ಕೌಫ್ಮನ್ ಧಾರವಾಡಕ್ಕೆ ಬಂದರು. 


ಬಾಸೆಲ್ನಿಂದ ಹೊರಡುವ ವೇಳೆಗೆ ಕಿಟೆಲ್ ಮತ್ತು ಕೌಫ್ಮನ್ ಧಾರವಾಡದಲ್ಲಿ ವೈಗಲ್ನಿಂದ ಕನ್ನಡ ಕಲಿಯಬೇಕೆಂದು ಸೂಚಿಸಲಾಗಿತ್ತು. ಈ ನಡುವೆ ವೈಕಲ್ ಅವರಿಗೆ ಮಂಗಳೂರಿಗೆ ವರ್ಗಾವಣೆ ಆದೇಶ ಬಂದಿತು. ಅಂತೆಯೇ ಮಾರ್ಚ್

೩೧. ೧೮೫೪ ಕ್ಕೆ ವೈಗಲ್ ಮಂಗಳೂರಿಗೆ ತಲುಪಿದರು. ಹೀಗಾಗಿ ಕಿಟೆಲರಿಗೆ ವೈಗಲ್ ರಿಂದ ಮೂರು ತಿಂಗಳು ಮಾತ್ರ ಕನ್ನಡ ಬೋಧನೆ ಸಾಧ್ಯವಾಯಿತು. ಮುಂದೆ ಕಿಟೆಲರ ಕನ್ನಡ ಕಲಿಕೆಗೆ ಮೊರಿಕೆ ನಿಯುಕ್ತರಾದರು. 


ಕಿಟೆಲರು ಸುವಾರ್ತಾ ಪ್ರಚಾರಕನಾಗುವುದರ ಬದಲು ಭಾರತೀಯ ಸಂಸ್ಕೃತಿ,  ಭಾಷೆ, ವ್ಯಾಕರಣ. ಛಂದಸ್ಸಿನ ಶೋಧಕರಾಗುತ್ತಿರುವುದನ್ನು ಗಮನಿಸಿದ ಹಾನ್ಸ್  ಕಿಟೆಲರನ್ನು ನೀಲಗಿರಿ ಬೆಟ್ಟದ ಕೇಟಿಗೆ ( ೨೯.೧೦. ೧೮೫೬) ವರ್ಗಾಯಿಸಿದರು. ೧೮೬೯ ರಲ್ಲಿ  ಕಿಟೆಲರನ್ನು ಮಂಗಳೂರಿನ ಬಾಸೆಲ್ ಮಿಷನ್ ಮುದ್ರಣಾಲಯಕ್ಕೆ ವರ್ಗಾಯಿಸ-

ಲಾಯಿತು. ಅಲ್ಲಿ ಅವರು ಕನ್ನಡ ಗ್ರಂಥಗಳ ಸಂಪಾದನೆ,  ಕನ್ನಡ ಸಾಹಿತ್ಯ ಚರಿತ್ರೆಯ ನಿರ್ಮಾಣ,  ಧಾರ್ಮಿಕ ಸಾಹಿತ್ಯದ ರಚನೆಯಲ್ಲಿ ಪೂರ್ಣ ಕಾಲಾವಧಿ ತೊಡಗಿದರು.  ಕನ್ನಡ ವ್ಯಾಕರಣ,  ಛಂದಸ್ಸುಗಳ ಅಭ್ಯಾಸ,  ಕನ್ನಡ ಭಾಷೆ ಕಾಲದಿಂದ ಕಾಲಕ್ಕೆ ತೋರಿದ ಮಾರ್ಪುಗಳ ಅಧ್ಯಯನ, ತಾಡವೋಲೆಗಳ ಸಂಗ್ರಹ ಹಾಗೂ ಶುದ್ಧಪಾಠ ನಿರ್ಣಯದಂತಹ ಶ್ರಮಪೂರ್ಣ ಕೆಲಸಗಳಲ್ಲಿ ತೊಡಗಿಕೊಂಡರು. ಇದನ್ನು ಗಮನಿಸಿಯೇ ಕಿಟೆಲ್ ಶೋಧಕ ರೀನ್ ಹಾರ್ಡವೆಂಟ್ ಕಿಟೆಲರನ್ನು " ಅಕ್ಷರಪುರುಷ " ಎಂದು ಕರೆದರು. 


ಕಿಟೆಲರು ಕನ್ನಡ-ಇಂಗ್ಲಿಷ್ ಶಬ್ಧಕೋಶಕ್ಕಾಗಿ ಹಲವಾರು ಹಳಗನ್ನಡ. ನಡುಗನ್ನಡ, ಜೊತೆಗೆ ಒಂದೆರಡು ಹೊಸಗನ್ನಡ ಕೃತಿಗಳನ್ನು ಆಯ್ದ ಶಬ್ಧ ಸಂಗ್ರಹಕ್ಕೆ ಆಗಲೆ ತೊಡಗಿದ್ದರು. ಅಷ್ಟೇ ಅಲ್ಲದೆ ಅನೇಕ ಪ್ರಾದೇಶಿಕ ಪದಗಳನ್ನು, ಕೂಡುನುಡಿ, ಜೋಡುನುಡಿ, ಗಾದೆ, ಒಗಟುಗಳನ್ನು ಜೋಡಿಸಿಕೊಂಡಿದ್ದರು. ಬಾಸೆಲ್ ಮಿಷನ್ ಪರವಾಗಿ ಮೋಗ್ಲಿಂಗ್ ಬ್ರಿಟಿಷ್ ಸರಕಾರದ ಜೊತೆ ಸಂಧಾನ ನಡೆಸಿ ಬ್ರಿಟಿಷ್ ಸರಕಾರ ನಿಘಂಟಿಗಾಗಿ ೧೦೦೦ ಪೌಂಡುಗಳನ್ನು ಮಿಷನ್ಗೆ ನೀಡುವುದೆಂದು ಅದಕ್ಕೆ ಪ್ರತಿಯಾಗಿ ಮುದ್ರಣವಾದ ಬಳಿಕ ೨೦೦ ಪ್ರತಿಗಳನ್ನು ಮಿಷನ್ಗೆ ಉಚಿತವಾಗಿ ಸರಕಾರಕ್ಕೆ ನೀಡಬೇಕೆಂದು ಮತ್ತು ಕಿಟೆಲ್ ಮೂರು ವರ್ಷಗಳಲ್ಲಿ ನಿಘಂಟನ್ನು ರೂಪಿಸಿ ಕೊಡಬೇಕು, ಅದಕ್ಕೆ ಅವರಿಗೆ ತಿಂಗಳಿಗೆ ೩೨೫ ರೂಪಾಯಿ ಸಂಭಾವನೆ ನೀಡುವುದೆಂದು ಒಪ್ಪಂದದ ಕರಾರಾಯಿತು. 


ಕಿಟೆಲ್ ನಿರ್ಮಿಸಿದ ಕನ್ನಡ-ಇಂಗ್ಲಿಷ್ನಿಘಂಟು ೧೮೯೧ ಹಾಗೂ ವ್ಯಾಕರಣ ( ೧೯೦೩) ಗಳು ಕನ್ನಡ ಭಾಷೆಯ ಅಸಾಧಾರಣ ಶಬ್ಧಶಕ್ತೀಯನ್ನು ಹಾಗೂ ನಿಘಂಟಿನಲ್ಲಿ ಬಳಕೆಯಾದ ಅಪಾರ ಸಂಖ್ಯೆಯ ಪದಗಳಿಂದ ಕನ್ನಡ ಸಂಸ್ಕೃತಿಯ ಅನನ್ಯ ಸಾಮಾಜಿಕ ಸಾಂಸ್ಕೃತಿಕ ಬಹುತ್ವವನ್ನು ಕಿಟೆಲ್ ನಿಘಂಟು ಪ್ರತಿನಿಧಿಸಿದೆ. ಸುಮಾರು ಇಪ್ಪತ್ತು ವರ್ಷಗಳ ಪರಿಶ್ರಮದಿಂದ ಕಿಟೆಲ್ ಒಂದು ಸಾವಿರದ ಏಳುನೂರು ಪುಟಗಳ ಬೃಹತ್ ದ್ವಿಭಾಷಿಕ ನಿಘಂಟನ್ನು ರೂಪಿಸಿದರು. ಈ ನಿಘಂಟಿಗೆ ಸಾಟಿಯಾದ ನಿಘಂಟನ್ನು ಕಟ್ಟಲು ನಾವು ಇನ್ನೂ ಯಶಸ್ವಿಯಾಗಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಈ ನಿಘಂಟಿನ ರಚನೆಯ ಹಿಂದಿನ ಬೌದ್ಧಿಕಶ್ರಮ ಹಾಗೂ ಭಾಷಾ ವೈಜ್ಞಾನಿಕ ತಿಳುವಳಿಕೆಯನ್ನು ಗಮನಿಸಿ ಕಿಟೆಲ್ ಅವರಿಗೆ 

ತುಬಿಂಜೆನ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ (೧೮೯೬ ) ನೀಡಿ ಗೌರವಿಸಿತು. 


ಕಥೆಯ ಹರಹು


ಕಥಾ ಪ್ರವೇಶದ ಮೊದಲಿಗೆ ಭಾಮಿನಿ ಷಟ್ಪದಿಯಲ್ಲಿ ರಚಿತವಾದ "ವಂದನಾ ವಾಕ್ಯ " ಎನ್ನುವ ಕಥಾ ಪ್ರವೇಶಕ್ಕೆ ಪೂರ್ವಪೀಠಿಕೆಯನ್ನು ನೀಡಿದ್ದಾರೆ.  ಹಳಗನ್ನಡ,  ನಡುಗನ್ನಡ  ಕವಿಗಳ ಮಾದರಿಯಲ್ಲಿ ಕಿಟೆಲರು ಶ್ರೀಕಾರದೊಂದಿಗೆ 

( ಇದು ಕನ್ನಡ ವಿಶಿಷ್ಟತೆ ) ಮೂಜಗನ್ನಾಥ ಏಸುವನ್ನು ಹಲವಾರು ವಿಶೇಷಣಗಳೊಂದಿಗೆ ಸ್ತುತಿಸಿ " ಮೂಡು ಭಕ್ತರ ಹೃದಯಕಮಲದೊಳು" ) ಎಂದು ಪ್ರಾರ್ಥಿಸಿಕೊಳ್ಳುತ್ತಾರೆ. 


ಕಥಾಮಾಲೆ 

॥ ಶ್ರೀ ಯೇಹೋವಾಯ ನಮಃ ॥ 

ವಂದನಾ ವಾಕ್ಯ  

ಭಾಮಿನೀ ಷಟ್ಪದಿ


ಶ್ರೀಜನಾರ್ಚಿತ ಸತ್ಯಸಾಕ್ಷಿಯೆ 

ಭೂಜನೈಕೋಗುರುವೆ ದೇವಜ 

ರಾಜಿಪವನೇ ರವಿಯೆ ಸುಪಥವೆ ಜೀವದಧಿಪತಿಯೇ॥ 

ತೇಜದುದಯವೆ ದೇವಕಾಂತಿಯೆ 

ಮೂಜಗನ್ನಾಥೇಸೊ ನಿನ್ಮುಖ 

ಮಾಜಿಕೊಳ್ಳದೆ ಮೂಡು ಭಕ್ತರ ಹೃದಯಕಮಲದೊಳು॥೧॥ 


ಶ್ರೀ ಮಹಾಂತನೆ ದೇವದತ್ತನೆ 

ಸಾಮಕರ್ತನೆ ಶುದ್ಧಯಜ್ಞನೆ 

ನೇಮದಂತ್ಯನೆ ವಿಜಯಶಾಲಿಯೆ ಪಾಪಪರಿಹರನೆ ॥ 

ಪ್ರೇಮದಬ್ಧಿಯೆ ಮನುಜಪುತ್ತನೆ 

ರಾಮಣೀಯಕ ಸಖನೆ ನಿನ್ನಯ 

ನಾಮದುನ್ನತಿ ಯಾರು ನುಡಿದಾರತುಲಶೋಭಿತನೇ॥೨॥ 


ನಿನ್ನ ವಾಕ್ಯವ ನೋಡಿ ರಚಿಸಿದೆ 

ವುನ್ನತೇಶನೆ ಕಥೆಯ ಮಾಲೆಯ 

ನಿನ್ನು ನಿನಗೈ ವಂದಿಸುತ್ತೇವದನು ವಿನಯದಲಿ॥ 

ಚಿನ್ನ ಮಾಡೈ ನಮ್ಮ ಬುದ್ಧಿಯ 

 ಮನ್ನಿಸೇಸುವೆ  ದಯದಿ ನಮ್ಮನು

 ಬೆನ್ನ ಹತ್ತಲಿ ನಿನಗೆ ರಾಜನೆ ಸಕಲ ಮಾನವರೂ॥೩॥ 


ಮತ್ತೆ ಮನುಜರೆ ನೀವು ಪಠಿಸಿರು 

ಚಿತ್ತವಿಟ್ಟೀ ಕಥೆಯ ಮಾಲೆಯ 

ಹೊತ್ತನರ್ಥಕೆ ಕಳೆವ ಕಾವ್ಯವಿದಲ್ಲವಲ್ಲವೆಲೇ॥ 

ಉತ್ತಮೋತ್ತಮ ಕ್ರಿಸ್ತನಾಗಮ

ವಿತ್ತಲಾತನ ಶುದ್ಧಯಜ್ಞವು 

ಸತ್ತನಂತರ ಮಹಿಮೆಯುದ್ಗಮವೆಲ್ಲ ತಿಳಿಯುವದೂ॥೪॥ 


ನಿಮಗೆ ಕ್ರಿಸ್ತನು ಸಲಿಸಿದಮಿತಿಯ 

ಮಮತೆ ಚಿಂತಿಸಿ ನಿಮಗೆ ಪಟ್ಟ 

ಶ್ರಮೆಯ ಮರಣದ ತಾಪವೀಕ್ಷಿಸಿಯವನ ಕೊಂಡಾಡಿ॥ 

ವಿಮಲಕರ್ತನು ಮಾಡಿದಾವುಪ 

ಶಮನ ಪಡಕೊಂಡವಗೆ ಧೂಳಲಿ 

ನಮಿಸಲೆರಗಿರಿ ಹಿಂದು ದೇಶದ ಸಕಲ ಕುಲದವರೇ॥೫॥ 


೧ . ಯೇಸುವಿನ ಜನನ ವಿಷಯವು - ಭಾಮಿನೀ ಷಟ್ಪದಿ


ಪಡುವಲು ದಿಕ್ಕಿನ ಯೂದಿ ದೇಶದ

ಲಡಿವೆಯೊಂದನು ಪೊಕ್ಕ ಕುರುಬರು 

ನಡುವಣಿರುಲೊಳು ಹಿಂಡು ಕಾಯುತ್ತಿರುವ ಸಮಯದಲಿ॥ 

ಒಡನೆ ದೇವರ ದೂತ ಬರಲವ 

ರೆಡೆಗೆ ದೇವರ ಮಹಿಮೆಯೆಸೆವರೆ 

ತೊಡಗಿತಾಗವರಧಿಕ ಭಯದವರಾಗಿ ಬೊಗ್ಗಿದರೂ॥೧॥ 


ಹೆದರಬೇಡಿರಿ ದೊಡ್ಡ ಮೋದವ 

ವದಿಸಿಬಂದೆನು ಸಕಲಜನಹಿತ 

ಕೆದುರ ಬೇತುಲೆಹೇಮಿನಲ್ಲೊಗದಿಹನು ರಕ್ಷಕನೂ॥ 

ಇದರ ಗುರ್ತನ್ನೊರೆವೆ ಛತ್ರದ 

ಮೃದುವದಲ್ಲದ ಗೋದ್ಲಿ ಹುಲ್ಲಲಿ

ಮುದದ ಶಿಶುವನು ಬಟ್ಟೆ ಸುತ್ತಿದದಾಗಿ ಕಾಣುವಿರಿ॥೨॥ 


ಹಾಗೆ ದೂತನು ನುಡಿಯೆಪರದಿಂ 

ವೇಗವಿಳಿದೊಂದಮಿತ ಸೇನೆಯು 

ರಾಗವೆತ್ತಿದುದಧಿಕ ಮಂಜುಳ ದನಿಯಲಿಂತೆನುತಾ॥ 

ಆಗಲತಿಶಯವುಚ್ಚಲೋಕ 

ಶ್ರೀಗತೀಶನಿಗಿಳೆಯ ವಿಧವಿಧ 

ಭಾಗದಲಿ ಶಾಂತ್ಯೊದಗಲದರಲಿ ಮನುಜರಿಂಗೊಲುಮೇ॥೩॥ 


ಕುರುಬರಾಲಿಸಿಯಿನ್ನು ಶೀಘ್ರದಿ 

ಹೊರಟು ಬೆತುಲೆಹೇಮ ಛತ್ರಕೆ 

ಬರಲು ದನಗಳ ಗೋದ್ಲಿಯೊಳ್ ಮಲಗಿರುವ ಮಗು ಕಂಡೂ॥ 

ಸರುವ ಸೃಷ್ಟಿಯ ನಾಥನಾದದ 

ಧರೆಯ ರಕ್ಷಕರ್ತನಾದದ 

ಹರಸಿ ಪಟ್ಣದ ಜನರಿಗೆಲ್ಲವ ಸಾರಿ ಹೇಳಿದರೂ॥೪॥ 


ಜನರು ಕೇಳಲಿಕಂಥ ಸುದ್ದಿಯ 

ಮನದಿ ವಿಸ್ಮಯ ಪಡುವರಾದರು

ವನದಲುಳಿದಿಹ ಹಿಂಡ ಕಾವಲಿಗಂದು ಕುರುಬಜನಾ॥ 

ವಿನುತ ದೇವರು ಗೈದ ಕರುಣೆಯ 

ನೆನಸಿ ಹರ್ಷದಿಯವನ ಹೆಸರನು 

ಘನವ ಪಡಿಸುತ ಹೊಗಳಿ ಪೊಗಳುತ ತಿರುಗಿ ಗಮಿಸಿದುದೂ॥೫॥


೫. ಸ್ನಾನವು  - ಭಾಮಿನೀ ಷಟ್ಪದಿ


ಮಾನಸಾಂತರ ಪಡಿರೆಲೆನುತ 

ಸ್ನಾನ ಕೊಡುತಲಿ ಯೊರ್ದನುದಕದ 

ಕಾನನಾಶ್ರಮದಲ್ಲಿ ಯೋಹಾನಿರುವ ಕಾಲದೊಳೂ॥ 

ತಾನು ಹೊಂದ ಸ್ನಾನವನ್ಯೋ 

ಹಾನಿಗೇಸುವು ಸಾರಿ ನನಗೂ 

ನೀನು ಜಲವೆರೆಯೆಂದು ವಿನಯದಿಯವನ ಬೆಸಸಿದನೂ॥೧॥ 


ಯಾವ ಮಾತಿದು? ದಿವ್ಯ ಶೋಭೆಯ 

ಪಾವನಾತ್ಮಜ ನೀನು ನಂಗೆ ದ 

ಯಾವಲಂಬನೆ ದೊರಕಿಸಿದರದು ಯೋಗ್ಯವಹುದೆಂದೂ॥ 

ದೇವವರಯೋಹಾನು ನುಡಿಯವ 

ನೀವು ನನಗೀ ಸ್ನಾನ! ರಕ್ಷಾ 

ಸೇವಾಯಲ್ನಾನೆಲ್ಲ ನೀತಿಯ ನಡಿಸಬೇಕೆಂದಾ ॥೨॥ 


ಅದನು ಕೇಳಿ ಸ್ನಾನಪಾಲಕ 

ನುದಕದಿಂದಭಿಷೇಕ ಕೊಟ್ಟನು 

ತದನುವೇಸುವು ನೀರಿನಿಂ ಪೊರಮಟ್ಟು ಪ್ರಾರ್ಥಿಸಲೂ॥ 

ಸದಮಲಾತ್ಮವು ಪಾರಿವಾಳ ಖ 

ಗದನುರೂಪದಿಯವನ ಮೇಲತಿ 

ಮುದದೊಳಿಳಿದುದು ತೆರೆದ ಬಾನಿಂದಿಳಿದ ತತ್ಕ್ಷಣವೇ॥೩॥ 


ಉದ್ದ ತಾಣದಿನೀತನೆನ್ನಯ 

ಮುದ್ದು ಪುತ್ರನು ನನಗೆ ಮೋದವು 

ಸಿದ್ಧಿಯಾಗಿಹುದೀತನಲ್ಲಿಯೆ ಕೇಳಿರೆಂಬೊಂದೂ॥

ಸದ್ದು ಕೇಳಿಸಿತಾಗ ಹತ್ತರ

ವಿದ್ದ ಯೋಹಾನದನು ಲಾಲಿಸ 

ಲೆದ್ದು ಪಸರಿಸಿದಧಿಕದಾಚ್ಚರವವನ ಹೃದಯದೊಳಗೇ॥೪॥  

                        ********


ಪ್ರೀತಿಸಾಗರವಾದ ಕ್ರಿಸ್ತಗೆ 

ಹೇತುವೇನುದಕಾಭಿಷೇಕಕ್ 

ಕಾತನುಕ್ತಿಯ ಮೇಲೆ ತಿಳುಕೊಳಲಾಲಿಸಿರಿ ಜನರೇ॥ 

ನೀತಿಯೆಲ್ಲವ ನಡತೆಯಲ್ಲಿಯು 

ಮಾತಿನಲ್ಲಿಯು ಗೈದು ಸಗ್ಗಕೆ 

ಶೇತುವಾಗುವ ಹಾಗೆ ನೇಮದ ಪೂರ್ತಿಗೊಳಗಾದಾ॥॥೧॥ 


ಅವನು ನೀತಿಯ ನಡಿಸಿಯದರಿಂ 

ಭುವನದೆಲ್ಲರ ಋಣವ ತೀರಿಸಿ 

ಯವನ ಗೈದನು ಶಾಪಬಂಧದಲಿರುವ ಮನುಜರಿಗೇ॥ 

ವಿವಿಧ ವಜ್ರಗಳೆಸೆಯುವಂತೆಯೆ 

ರವಿಯ ಕಾಂತಿಯು ಹೊಳೆಯುವಂತೆಯೆ 

ಯವನಿಮಂಡಲದಲ್ಲಿ ತೋರುವವನ ಸುಗುಣಗಳೂ॥೨॥


೬. ಜೀವದ ನೀರು  *** ವಾರ್ಧಿಕ್ಯ 


ಜಲದಾತ್ಮದಭಿಷೇಕ ತಂಗಾದ ಮೇಲೇಸು 

ಒಲೆದೊಲೆದು ತೊಡಗಿದನು ಪಿತದೇವ ತಂಗಿತ್ತ 

ಕೆಲಸವನು ದೇವರದು ರಾಜ್ಯವೊದಗಿಹುದೀಗ ನಿಮ್ಮೊಳಗೆ ಶುಭತರದಲೀ॥ 

ಎಲವೊ ದುರ್ಕರ್ಮಿಗಳೆಯೆನ್ನುತಲಿ ಬಂದಧಿಕ 

ಬಲದ ಪ್ರಸಂಗದಿಂದೆಚ್ಚರಿಸುತೆಲ್ಲರನು 

ಗಲಿಲಯದ ನಾಡ ಪೊಗುವಾ ಹೊತ್ತು ಸಾಮಾರ್ಯಿ ಬಾವಿಯಲಿ ಕೂತುಕೊಂಡಾ॥೧॥ 


ಆಸರವ ಪಟ್ಟವನ ಶಿಷ್ಯರಾಹಾದಿ 

ಗೋಸರಿಸಿ ಪೋಗಿರಲು ಕೊಡವೆತ್ತಿ ಪಟ್ಟಣ ನಿ 

ವಾಸಿಗಳಲೊಬ್ಬಾಕೆ ಬಂದಳಾ ಬಾವಿಂಗೆ ಜಲ ಶೇದಬೇಕೆನ್ನುತಾ॥ 

ಯೇಸುಗುರು ಕುಡಿಯ ಕೊಡು ಹೆಣ್ಣೆ ನೀರಡಿಕೆಗೆನೆ 

ಹೇಸಿಯೆಯೊ ಯೂದಿ ನೀನಶುಚಿಸಾಮಾರ್ಯಳಿಂ 

ದೀಸಿಕೊಳ ನೀರನೈ? ನಿನಗು ನಮಗೇನು ಬಳಿಕುಂಟೆನ್ನುತವಳೊರೆದಳೂ॥೨॥ 


ಅರಿಯೆ ನೀ ನಿನ್ನಿಂದ ನೀರನ್ನು ಬೇಡುವನ 

ಗುರುತರಿತಳಿಗಿದ್ದರಾತನನ್ನಮಲಜಲ 

ವರ ಕೇಳ್ವಿ ಮತ್ತವನು ನಿಂಗಿಂದು ಜೀವಜಲವೀವನೆಂದವನುಸುರಲೂ ॥ 

ಕರದಲ್ಲಿ ನಿನಗೈಯ್ಯ ಹಗ್ಗವೇನಿಲ್ಲದಿರೆ 

ಹರದೀತೆಯೀಯುದ್ಧ ಬಾವಿಯಿಂ ಶೇದುವದು 

ನರನೆ ನೀನದ ತೋಡಿ ಶೇದಿ ಕುಡಿದಾ ಪಿತನಿಗೆಂದಾಕೆ ಕೇಳಲಾಗೀ॥೩॥ 


ಹೇಳುವೆನು ಹೆಣ್ಣೆಯೀ ಶೆಲೆನೀರ ಕುಡಿದವನು 

ತಾಳುವನು ಮತ್ಮತ್ತು ದಾಹವನು ತೋಷಿಸದಲೆ 

ಬಾಳುವನು ನನ್ನಮೃತ ಜಲವೇಸಿ ಕೊಂಡದನು ಕುಡಿದಾತನೆಂದೆಂದಿಗೂ॥ 

ಕೇಳು ನಾನೀವ ನೀರ್ ಕುಡಿದವಗೆ ನಿತ್ಯದಲ್ 

ಲೇಳುತಿಹ ಜೀವಶೆಲೆಯಹುದೆಂದು ಗುರುವೆನೆ ದ 

ಯಾಳೆಯಾ ಜಲ ಪಾಲಿಸಿನ್ಗಾನತೃಷೆಯಾಗಿ ಶೇದಲಿಕೆ ಬಾರೆನೀಸ್ಥಳಕೆಂದಳೂ॥೪॥ 


ಅವಳರಿಯಳೆನ್ನಮರ ವಾಕ್ಯಗಳು ಜೀವಜಲ 

ದವುಗಳೆಂದಿರತೇಸು ತಿಳುಕೊಂಡು ವಧುವೆ ನೀ 

ನವಧರಿಸು ಪುರಕೈದಿ ತಾ ನಿನ್ನ ಗಂಡನನ್ನೆನಲವಳುನಾಚಿ ಕೊಂಡೂ॥ 

ಅವನಿಗೈ ನಂಗಿಲ್ಲ ಗಂಡನೆನಲಾ ಮಾತ 

ಭವವರಿತು ತಾನೆಂದು ಕಲಿತಿರದ ವಧುವಿಂಗೆ 

ದಿವಕರ್ತನಹುದೈವರಿದ್ದರೀಗಿರುವವನು ನಿನ್ನ ಧವನಲ್ಲೆಂದನೂ॥೫॥


ಬಂದುವೇನಿಲ್ಲದಿದ್ದಂತೀತನರುಹಿಸಿದ 

ನೆಂದಾಕೆಯೈ ನಿಪ್ರಾವದಿಯೆಲೆ ಮೂಢಳಿಂ 

ಗಿಂದು ದಯೆಯಿಂ ಪೇಳು ದೇವರಾರಾಧಿಸಲಿಕೊಳ್ಳೆಯೆಡೆಯನ್ನೆಂದಳೂ॥ 

ವಂದಿಸುವರರಿತ ಜನರರಿಸದಲೆ ದೇವರಿಂ 

ಗೊಂದು ಬಗೆತಾಣವನ್ನಾತ್ಮದಲು ಸತ್ಯದಲು 

ಮುಂದೆರೈವ ಕಾಲದೊಳ್ ಪ್ರಭುವಾತ್ಮವವನ ಜನರಾತ್ಮಭಾವಾನ್ವಿತವರೂ॥೬॥ 


ಬಿಡದೆ ಮತ್ತುಸುರಿಯಾ ಹೆಣ್ಣು ಮಗಳವನಪತಿ 

ಯೆಡೆಯಲ್ಲಿದ್ದೀಶಜನು ಬಂದೆಲ್ಲವರುಹಿಸುವೆನೆಂದು ನಾ ಬಲ್ಲೆನೆನ್ನೇ 

ಪಡದೀಗಲವನನಾರೊರೆದಿಹನು ಕೇಳು ನೀನ್ 

ನೊಡನವನೆ ! ಯೆನಲೇಸುವಾ ಸ್ರ್ತೀಯು ಕೇಳುತಲೆ 

ತಡವಿಲ್ಲದಲ್ಲಿ ಕೂಡ ಬಿಟ್ಟೋಡಿ ಮುಂದ ಪುರಬಾಗಿಲನು ಬೇಗ ಪೊಕ್ಕೂ॥೭॥ 


 ಕರಕರದಳವಳು ಬಿದ್ಯೋಣಿಗಳ ಜನಜನರ 

ನೊರವೊರದಳವಳು ತಾ ಕಂಡದನು ಲಾಲಿಸಿದ 

ವರನರರು ಮುಖಮುಖವ ನೋಡುತಲಿ ಬೆರಗಾಗಿ ನೆರನೆರದು ಬೇಗದಿಂದಾ॥ 

ಸರಸದಿ ನಿನ್ನ ಮಾತಿನ್ನೇಕೆ ? ನಾವೆ ಕಂ 

ಡೆರಗೆರಗುತಿಹೆವಾತಗೆನ್ನುತಲಿ ವರಗುರುವ ತಡಸಿದರು ತಮ್ಮೆಡೆಯಲೀ॥೮॥ 


ನೀರಡಿಸುವಾತ್ಮರೇಯೇಸುವಿನ ಚರಣಕ್ಕೆ 

ಶೇರಿರೆಲೆ ಮೂಲೋಕದಲ್ಲೆಲ್ಲಿ ಹುಡುಕಿದರು 

ಬೇರುಬ್ಬನಧಿಕಾರಿ ದೊರಕಿಸನು ನಿಮ್ಮಾತ್ಮದಾಹವನು ಕಳೆಯುವದಕೇ॥ 

ಕೋರಿದದನಾ ವೈದ್ಯ ತಂದಂತೆಯಾಗುವದು 

ಹೇರಳಾದಾದರಣೆಯೀವನವನೊಲೈಮೆಯಲಿ 

ದೂರವಿರದೀಗೊದಗಿ ಬಂದಮಲ ಜೀವಜಲವಡದು ಕೊಂಡುದ ಕುಡಿಯಿರಿ॥೯॥


೧೧. ಕೊಳದಲ್ಲಿಯ ರೋಗಿಷ್ಟನು  ••••• ಭಾಮಿನೀ ಷಟ್ಪದಿ 


ಬಂದನೇಸುವೆರೊಸಲೇಮು ವಿ 

ನೊಂದು ಬಾಗಲಿಗದನು ಕುರಿಗದ 

ವೆಂದು ಹೇಳುವರಲ್ಲಿ ಬೆಥೆಸುದವೆಂಬದೊಂದ್ಕೆರೆಯೂ॥ 

ಮಂದಿಸಮಜವು-ಕುರುಡಕುಂಟರು 

ಮಂದಮೈಯವರೂನರೊಣ ಕೈ 

ಯಿಂದ ಕಾಲಿಂ ಕಷ್ಟ ಪಡುವವರಲ್ಲಿ ನೆರೆಯುವರೂ॥೧॥ 


ಸುಂಟರನಿಲವು ಬಡಿಯುವಂದದಿ 

ಘಂಟೆ ಬಂದರೆ ಜಲದ ಮಥನವ 

ನುಂಟು ಮಾಡುವನೊಬ್ಬ ದೂತನು ದೇವರಾಜ್ಞೆಯಲೀ॥ 

ಮಂಟಪಸ್ಥಿತ ಜನರು ನೋಡುತ 

ದಾಂಟು ಮೀಂಬರು ದೇಹಸೊಸ್ಥಕೆ 

ವೆಂಟಣಿಸುವನು ಗುಣವ ಮೊದಲಿಗೆ ಜಲದ ಪೊಕ್ಕವನೂ॥೨॥ 


ಕಷ್ಟಪಟ್ಟವನೊಬ್ಬನತಿ ರೋ 

ಗಿಷ್ಟನಲ್ಲಿಹನವನು ಬಿದ್ದವ 

ರಷ್ಟು ಜನರೊಳು ಚಿಂತೆಯುಳ್ಳವನಾಗಿ ನರಳುವನೂ॥ 

ಅಷ್ಟತ್ರಿಂಶತಿ ವರ್ಷದಿಂದಲಿ 

ದುಷ್ಟ ರೋಗವು ಹತ್ತಿಯವನದು 

ಪುಷ್ಟಿ ತಿಂಬುದು ನೆಲದಿ ಬಿದ್ದವನನ್ನು ಗುರು ಕಂಡಾ॥೩॥ 


ಅವನವಸ್ಥೆಯ ತಿಳಿದು ಕರ್ತನು 

ಸವಿಯ ಮಾತನು ಕರುಣೆಯಿಂ ನುಡಿ 

ದವನ ಬೇಕೆಲೆ ಗುಣವ ಬಯಸುತಿಯೆನ್ನಲಾಯೊರೆಯೂ॥ 

ಕಿವಿಗೆ ಬಿದ್ದವನೊಡೆಯ ನನ್ನನು 

ಗವನ ಮಾಡುವರಿಲ್ಲ ಕದಲಲು 

ತವಕದಿಂದೆನನುದಕಿಡುವವರಾರು ಬಾರರೆನೇ॥೪॥ 


ಮಗನೆ ಭಯ ಪಡದೆದ್ದು ಬೇಗದಿ 

ಹೆಗಲಿಗೆತ್ತಿಸಿಕೊಂಡು ಮಂಚವ 

ಸೊಗದಿ ನಡಿಯೈಯೆನುತಲಪ್ಪಣೆ ಕೊಟ್ಟನೇಸುಗುರೂ॥ 

ಮಿಗಿಲು ಮುದದಿಂ ಗುಣವ ಪಡೆದವ 

ನಗಣಿತಾಚ್ಚರವಾಗಿ ಮಂಚವ 

ನೆಗಹಿ ನಡೆದನು ಪರಮ ದೇವನ ಶಕ್ತಿವರದಿಂದಾ॥೫॥ 


ಕೇಳರೆಲ್ಲರೆಯಂಥ ಕೊಳವೀ 

ವೇಳೆಯಲ್ಲಿಯು ಕಾಣದಾದರೆ 

ಬಾಳಕರುಣೆಯ ವೈದ್ಯನೀಗಲು ಬಾಳುತಿದ್ದಾನೇ॥ 

ಹೇಳಲೇತಕ್ಕವನ ಹೆಸರನ್

ನಾಳುತಾನೀಗೆಲ್ಲ ಲೋಕವ 

ನೇಳಿರವನಿಯ ಜನರೆಯೇಸುವಿನೆಡೆಗೆ ಬೀಳ್ವದಕೇ॥


೧೮. ಶ್ರೇಷ್ಠಪಾಲು ***** ವಾರ್ಧಿಕ್ಯ 


ಗ್ರಾಮವೊಂದಕ್ಕೈದಿ ಮುನ್ನಿನಂತೇಸುಗುರು

 ಪ್ರೇಮದಿಂ ಶೇರಿದನು ಮಾರ್ಥಳೆಂಬವಳ ಮನೆ

ಯಾ ವನಿತೆಯನುಜಗಿಹ ಮರಿಯಳವಳೊಂದಿಗಿರುವಳವರತಿ ಭಕ್ತರೂ॥ 

ಹೇಮಕಿಂತಪರಂಜಿಗಿಂತಖಿಲ ಭೂಲೋಕ 

ಸೀಮೆಗಳ ರತ್ನಕಿಂತೊಳ್ಳೆ ಮಾತಿಂ ದೇವ 

ನಾಮರಾಜ್ಯಾದಿಗಳ ಮರ್ಮವನು ನುಡಿಯುತಿಹನಲ್ಲಿ ಬಂದ್ಕೂತಿರಲ್ಕೆ॥೧॥ 


ಮರಿಯಳೆಂಬಾಕೆಯ ಸಮಯದೊಳು ಗುರು ನುಡಿಯು

ತಿರುವ ಮಾತಾಲೈಸಿಕೊಳ್ಳುವಂತಧಿಕ 

ಹರುಷದಲಿ ಬೋಧಕನ ಪಾದದೆಡೆ ಕುಳ್ತಿರಲು ಮಾರ್ಥಳತಿ ಸೇವಿಸುತ್ತಾ॥ 

ಕರುತ ಕೇಳಿವಳಿನ್ನನೊಬ್ಬಳಾಗೀ ಕಷ್ಟ 

ತರವಾದ ಕೆಲಸವನು ಮಾಡ ಬಿಟ್ಟದಕಾಗಿ 

ಕರಕರೆಯು ನಿಂಗಾಗದೇನೈಯ್ಯ ವೊತ್ತಾಸೆ ಗೈವಂತೆ ಹೇಳೆಂದಳೂ॥೨॥ 


ಬಳಿಕೇಸು ದಯೆಯಿಂದಲುತ್ತರವನೀಯುತ್ತ

ತಳಗಾಣದತಿ ಬಹಳವಾದದಕೆ ಮಾರ್ಥಳೆಲೆ 

ತೊಳತೊಳಲಿ ತೊಂದರೆಯ ಪಡುತಿದ್ಧಿ ಕೇಳೆ ಸ್ತ್ರೀಯೆ ಬೇಕಾದದೊಂದೆ ಮಾತ್ರಾ॥ 

ಉಳಿದೆಲ್ಲ ವಿಧವಿಧಗಳುದ್ಯೋಗಗಳಿಗಿಂತ 

ತಿಳಿ ಮರಿಯಳೊಳ್ಳೆ ಪಾಲನ್ನಾದುಕೊಂಡಲ್ಲಿ 

ಪೊಳೆಯುತಿರಲಾಕೆಯಿಂದದು ತೆಗೆಯ ಪಡದು ಕೇಳೆಂದವಳನೆಚ್ಚರಿಸಿದಾ॥೩॥ 


                    **********


ಸಂಗರವನಾಡಾಡಿ ಬಹುಕೀರ್ತಿ ನಾಮಗಳ 

ಸಂಗತಿಗೆ ರಾಜರುಗಳಲೆಯುವರು ವಿದ್ಯೆಗಳ 

ಮಂಗಳದ ಜಲನಿಧಿಯ ರತ್ನಗಳನಡೆಯಲ್ಕೆ ವಿದ್ಯಾರ್ಥಿ ಜನರಲೆವರೂ॥ 

ಅಂಗರಕ್ಷಾರ್ಥದಿಂ ಗೋರಕ್ಷೆ ವಾಣಿಜ್ಯ 

ಮುಂಗೊಂಡು ಮತ್ತು ಕೃಷಿ ಸೇವೆಗಳಲಿತರ ಜನ 

ಸಂಗಗಳು ಮಿಗೆಯಲೆಯುತಲೆಯುತಲಿ ಕಾಣುವರು ಭೂಲೋಕದಲೆಲ್ಲಿಯೂ॥೧॥ 


ಅನ್ನಿನಿಂದೀ ವರಿಗೆ ಹಿಂದುಜನರಾದವರೆ 

ಬನ್ನ ಪಟ್ಟಲೆವಿರೆಲಾವಾ ಪರಿಯ ಕೆಲಸದಲಿ 

ಮುನ್ನ ನಿಜ ಪದವಿಯನು ಚಿಂತಿಸದೆ ದೇವರನು ಸತ್ಯವನು ಬಿಟ್ಟು ಬಿಟ್ಟೂ॥ 

ಹೊನ್ನು ಹೆಣ್ಣುದರ ಮಣ್ಣಾದಿಗಕಟಚಲವಾದ್ 

ದನ್ನರಸದಾರೈಸದಂಥ ಮನವತಿಗಳೆದು 

ಭಿನ್ನವೇನಿಲ್ಲದಲವಶ್ಯವಾದೇಸುವೊರೆಯಾಲೈಸಿ ಶಾಂತಿಗೊಳಿರೀ॥೨॥


೩೦. ಯೆರೂಸಲೇಮ ವಿಷಯದ ನಿರ್ಣಯ    ***** ಭಾಮಿನೀ ಷಟ್ಪದಿ 

      ************************************ 


ಇಂಚರಾತಿಸುವಾರ್ತೆಯಾಡುತ 

ವಂಚನಿಲ್ಲದೇಸು ಗುರು ಪ್ರ 

ಪಂಚದಬ್ಧಿಲಿ ಮುಳುಗಿದಾ ಜನ ಕರೆಯುತಿರುವಾಗಾ॥ 

ಚಂಚಲಾತ್ಮದ ಯೂದಿ ಜನರೊಳ್ 

ಕೊಂಚ ಮಂದಿಯೆ ಜೀವಪಾನವ

ಹಂಚುವಾತಗೆ ದಿಟ್ಟ ಭಾವದಿ ಬೆನ್ನ ಬಳಸುವರೂ॥೧॥ 


ಆಗ ನಂಬುತ ತುತಿಯ ಸಲ್ಲಿಸ 

ಲೀಗಲೆದುರಿಸಿ ತಮ್ಮ ಪಥದಲಿ 

ಸಾಗಿ ಪೋಪರು ಬಾಯಿ ತೆರೆದಿಹ ನರಲೋಕಕ್ಕೇ॥ 

ಹೀಗೆ ನೋಡುತಲೇಸು ಮರುಳರ 

ಮೇಗೆ ನೋವನು ತಾಳಿ ಭಾರಕೆ 

ಬಾಗಿ ಮೊರೆಯನ್ನಿಡುತ ದೇಶವ ತಿರುಗಿತಿರುಗುತಿಹಾ॥೨॥ 


ಸಂದಿ ಬೀದಿಗಳಲ್ಲಿ ನಡೆಯುವ 

ಮಂದಿ ನೆವನವನೇನು ಹಿಡುಕೊಳ 

ದಂದದಿ ಸರ್ವತ್ರ ಸರ್ವವ ಸರ್ವ ಜನಕೊರೆಯೇ॥ 

ಒಂದು ದಿನದಲೆರೂಸಲೇಮಿಗೆ 

ಬಂದು ದೇವಳದಲ್ಲಿ ಜನರೊಳ್ 

ನಿಂದು ದುಖ್ಖಿಸಿಯಂತಃಕರಣದಿ ಹೀಗೆ ಹಲುಬಿದನೂ॥೩॥ 


ಕೇಳು ನಗರವೆರೂಸಲೇಮುವೆ 

ವೇಳೆವೇಳೆಗೆ ಬಂದು ಬುದ್ಧಿಯ 

ಹೇಳಿ ವಾದಿಸಿದಾ ಪ್ರವಾದಿಗಳನ್ನು ಕೊಂದವಳೇ॥ 

ಕೀಳ ಮನದಿಂ ದೇವ ಕಳುಹಿಸಿ 

ದಾಳುಗಳ ಕಲ್ಲೆಸೆದ ನಗರವೆ 

ಬಾಳ ಕರೆದೆನು ನನ್ನ ಮಾತನು ಕೇಳದಿದ್ದಿ ಕಣಾ॥೪॥ 


ಚಿಕ್ಕ ಮರಿಗಳನೊಂದು ಕೋಳಿಯು 

ರೆಕ್ಕೆಯೊಳಗತಿ ಮಮತೆ ತಾಳುತ 

ಲಿಕ್ಕುವಂದದಿ ನಿನ್ನ ಹುದುಗಿಸುವಂತೆ ಬಯಸಿದೆನೂ॥ 

ಮಕ್ಕಳೆನ್ನುತಲಾದರಕಟಾ 

ಧಿಕ್ಕುಧಿಕ್ಕರಿಸೆನ್ನ ವಾಕ್ಯವ 

ದುಕ್ಕದಬ್ಧಿಯೊಳೆನ್ನ ಹಾಕಲಿಕೊಲ್ಲೆನೆಂದೊರೆದೀ॥೫॥ 


ಇನ್ನು ನಿನ್ನಯ ಚೆಲುವ ನಿಳಯವು 

ಛಿನ್ನಛಿನ್ನದಿ ಹಾಳು ಬೀಳ್ವುದು 

ನನ್ನ ಕರುಣಕಾಲ ತಪ್ಪಿತು ನಿನಗೆ ಪಟ್ಟಣವೆ॥ 

ಉನ್ನತೇಶನ ವಿನುತ ನಾಮದಿ 

ನಿನ್ನ ಹತ್ತರ ಬರುವ ಕ್ರಿಸ್ತಗೆ 

ಮನ್ನಣಾಗಲೆಲೆನ್ನುವನಕವೆ ನನ್ನ ನೋಡದಿರೂ॥೬॥ 


                      ********* 


ಉಚ್ಚಮಹಿಮಾಕರ್ತನೊರೆದದ್

ದೆಚ್ಚಿದೊಂದತಿ ಹದನ ಬಾಣವೆ 

ಯೆಚ್ಚರಾಗಿರಿ ತಾಗಲಿಕ್ಕದು ನಿಮ್ಮ ಹೃದಯಕ್ಕೇ॥ 

ನಚ್ಚದಿದ್ದರೆ ನೀವು ಮನುಜರೆ 

ನಿಚ್ಚ ನಿರ್ಮಲ ಕ್ರಿಸ್ತರಾಜನ 

ನಚ್ಚಲಾತ್ಮನ ಬಿಸುಟು ಬಿಟ್ಟರೆ ಹಾಳು ತಪ್ಪದಲೇ॥ 


ಕರ್ತೃ: ಫರ್ಡಿನಂಡ್ ಕಿಟೆಲ್ 

ಸಂಪಾದಕರು: ಪ್ರೊ ॥ ಎ. ವಿ. ನಾವಡ

ಪ್ರಕಾಶಕರು: ಕನ್ನಡ ಸಾಹಿತ್ಯ ಪರಿಷತ್ತು 

ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, 

ಬೆಂಗಳೂರು-೫೬೦೦೧೮.