ಜೈಮಿನಿ ಭಾರತ 6 - ದೊಡ್ಡಬೆಲೆ ನಾರಾಯಣಶಾಸ್ತ್ರಿ
ಆರನೆಯ ಸಂಧಿ.
ಸೂಚನೆ:- ಸಿಂಧುರನಗರದಿಂದೆ ನಡೆತಂದು ಪವನಜಂ।
ಸಿಂಧುರಂಗದೊಳೆಸೆವ ದ್ವಾರಕೆಯೊಳೈದೆ ಮುಳಿ।
ಸಿಂ ಧುರದೊಳಸುರರಂ ಗೆಲ್ವನನಾರೋಗಣೆಯ ಸಮಯದೊಳ್ ಕಂಡನು
ಪ್ರತಿಪದಾರ್ಥ:
ಪವನಜಂ=ವಾಯು ಸೂನುವು, ಸಿಂಧುರನಗರದಿಂದ= ಹಸ್ತಿನಾವತಿಯಿಂದ, ನಡೆತಂದು= ಪ್ರಯೃಣವಂ ಬೆಳಸಿ, ಸಿಂಧು=ಕಡಲಿನ, ರಂಗದೊಳು= ನಡುವೆ, ಎಸೆವ= ಹೊಳೆಯುವ, ದ್ವಾರಕೆಯೊಳು= ದ್ವಾರಕೆ ಎಂಬ ನಗರದಲ್ಲಿ, ಐದೆ=ಹೊಕ್ಕು, ಮುಳಿಸಿಂ= ಕೋಪಾತಿಶಯದಿಂದ, ಧುರದೊಳುಂ= ರಣದಲ್ಲಿ, ಅಸುರರಂ= ನೀಚರಾದ ರಕ್ಕಸರನ್ನು,
ಗೆದ್ದವನನು= ಜಯಿಸಿದವನನ್ನು, (ಶ್ರೀ ಕೃಷ್ಣಮೂರ್ತಿಯನ್ನು) ಆರೋಗಣೆಯ ಸಮಯದೊಳು= ಊಟಮಾಡುವ ವೇಳೆಯಲ್ಲಿ, ಕಂಡನು=ಈಕ್ಷಿಸಿದನು,
ಎಲೆ ಮಹೀಶ್ವರ ನಾಗನಗರಮಂ ಪೊರಮಟ್ಟ ।
ನಿಲಸುತಂ ಪಯಣಗತಿಯೊಳ್ ಬರುತೆ ಕಂಡನಘ।
ಕುಲದ ಪವಿಘಾತ ಭಯ ಶಮನೌಷಧಿಯನತುಲಕಲ್ಲೋಲನಿರವಧಿಯನು॥
ಜಲಜಂತು ಚಾರಣನಿಧಿಯನಿಳಾಮಂಡಲದ ।
ಬಳಸಿನ ಪರಿಧಿಯ ನಪಹೃತಗಣಿತಸುಧಿಯ ನವಿ।
ರಳಘೋಷದುದಧಿಯನನೇಕರತ್ನ ಪ್ರತತಿಗಳ ನಿಧಿಯನಂಬುಧಿಯನು॥೧॥
ಎಲೆ ಮಹೀಶ್ವರ =ಅಯ್ಯಾ ಜನಮೇಜಯ ಭೂಪನೆ, ಅನಿಲಸುತಂ= ವಾಯುಜನು, ನಾಗನಗರಮಂ = ಗಜಪುರಿಯಿಂದ, ಪೊರಮಟ್ಟು = ಬಿಟ್ಟು ಹೊರಟು, ಪಯಣ=ಪ್ರಯಾಣದ, ಗತಿಯೊಳ್= ಗಮನದಲ್ಲಿ, ಬರುತ= ನಡೆತರುತ್ತ, ಅಗಕುಲದ= ಗಿರಿಸಮೂಹಗಳಿಗೆ, ಪವಿ= ವಜ್ರವೆಂಬಾಯುಧದ, ಘಾತ= ಏಟಿನ, ಭಯ= ಹೆದರಿಕೆಯನ್ನು, ಶಮನ=ತಗ್ಗಿಸುವ, ಔಷಧಿಯನು= ಔಷಧಿಪ್ರಾಯವಾದ, ಅತುಲ=ಅಸದೃಶವಾದ, ಕಲ್ಲೋಲ= ತೆರೆಗಳಿಂದ, ನಿರವಧಿಯನು= ಮೇರೆಯೇ ತೋರದಿರುವ. ಜಲಜಂತು= ಉದಕವಾಸಿಗಳಾದ ಪ್ರಾಣಿಗಳನ್ನು, ಚಾರಣಂ=ಚಲಿಸಲು, ವಿಧಿಯನು= ಗೊತ್ತಾಗಿರುವ
,ಇಳಾಮಂಡಲವ= ಧರ್ವಲಯವನ್ನು, ಬಳಸಿದ= ಆವರಿಸಿದ, ಪರಿಧಿಯನು= ಕುಡ್ಯವಂ ಪೋಲುವ, ಅಪಹೃತ= ಹೋಗಲಾಡಿಸಲ್ಪಟ್ಟ, ಅಗಣಿತ = ಲೆಕ್ಕವಿಲ್ಲದಿರುವ, ಸುಧೆಯನು= ಅಮೃತವಿಶಿಷ್ಟವಾಗಿರುವ, ಅವಿರಳ= ಸಾಂದ್ರವಾದ, ಘೋಷದ= ರವವುಳ್ಳ, ಉದಧಿಯನು= ನೀರಿನಿಂದ ಕೂಡಿರುವ, ಅನೇಕ= ನಾನಾಪ್ರಕಾರವಾದ, ರತ್ನ= ಮಣಿಗಳ, ಪ್ರತತಿಗಳ= ಸಮೂಹಗಳಿಗೆ, ವಿಧಿಯನು= ಆಸರೆಯಾದ, ಅಂಬುಧಿಯನು=ಸಮುದ್ರವನ್ನು, ಕಂಡನು= ಈಕ್ಷಿಸಿದನು.
ಅ॥ವಿ॥ ಅನಿಲ= ವಾಯು, ಅನಲ= ಅಗ್ನಿ, ಅಗಕುಲ(ಷ. ತ.) ಪವಿಘಾತ (ಷ. ತ.) ಅಗಕುಲಕ್ಕೆ ಪವಿಘಾತ (ಷ. ತ.) ಅಘಕುಲಪವಿಘಾತದಭಯ(ಷ.ತ.) ಅಘಕುಲ ಪವಿಘಾತ ಶಮನೌಷಧಿ ಭಯದ ಶಮನ(ಷ. ತ.) ಮಹೌಷಧ (ವಿ.ಪೂ)
ನಿರವಧಿ=ಮಿತಿಯಿಲ್ಲದ್ದು, ಚಾರಣ= ತಿರುಗುವುದು, ಚಾರಣರೆಂಬುವರು, ವಸು= ದ್ರವ್ಯಗಳನ್ನು, ಧೆ= ಧರಿಸಿರುವದು,
ಅನೇಕವಾದ ರತ್ನ(ವಿ. ಪೂ.) ಅನೇಕ ರತ್ನಗಳ ಪ್ರತತಿ(ಷ. ತ.) ಅಂಬು=ನೀರು ಮತ್ತು ಬಿಲ್ಲುಎಂಬೆರಡರ್ಥಗಳು. ಊನಿಲಸುತಂ ಅಂಬುಧಿಯಂ ಕಂಡನು= ಸಕರ್ಮಕ ಕರ್ತರಿವಾಕ್ಯವು,
ತಾತ್ಪರ್ಯ :- ಅನಂತರದಲ್ಲಿ ಜೈಮುನಿ ಋಷಿಯು ಜನಮೇಜಯರಾಯನನ್ನು ಕುರಿತು ಕೇಳೈ ಜನಮೇಜಯನೆ, ಆ ಬಳಿಕ ಧರ್ಮಪುತ್ರನಿಂದ ಆಜ್ಞಾಪಿಸಲ್ಪಟ್ಟ ವಾಯುನಂದನನು ದ್ವಾರಕವಾಸಿಯಾಗಿರುವ ಶ್ರೀಕೃಷ್ಣಸ್ವಾಮಿಯನ್ನು ಕರೆತರಲು ಇಭನಗರಿಯಿಂದ ಹೊರಟು ಬರುತ್ತಿರುವಾಗ ಮುಂಭಾಗದಲ್ಲಿ ಒಂದಾನೊಂದು ಸಮುದ್ರವು ಕಾಣಬಂದಿತು. ಆ ಕಡಲು ಪೂರ್ವದಲ್ಲಿ ದೇವೇಂದ್ರನಿಂದ ಪರ್ವತಗಳಿಂದುಂಟಾಗಿದ್ದ ಭಯವನ್ನು ಹೋಗಲಾಡಿಸುವುದರಲ್ಲಿ ದಿವ್ಯೌಷಧಿಯಂತೆಯೂ, ಅಸಂಖ್ಯಾತವಾದ ತರಂಗಗಳ ತಂಡದಿಂದೊಡಗೂಡಿಯೂ, ಮೀನು ಮೊಸಳೆ ಮೊದಲಾದ ಪ್ರಾಣಿರಾಶಿಗಳಿಂದ ತುಂಬಿ ಭೂಮಂಡಲಕ್ಕೆ ಪರಿಧಿಯೋಪಾದಿಯಲ್ಲಿದ್ದುಕೊಂಡು ತನ್ನಲ್ಲಿದ್ದ ಅಮೃತವನ್ನು ಹೋಗಲಾಡಿಸಿದ ವ್ಯಸನದಿಂದ ಅತ್ಯಾರ್ಭಟವಂ ಮಾಡುತ್ತಿರುವಂತೆಯೂ, ನಾನಾ ರತ್ನಗಳಿಂದೊಡಗೂಡಿಯೂ, ಮೆರೆಯುತ್ತಿತ್ತು.
ಮುನಿ ಮುನಿದು ಪೀರ್ದುದಂ ರಾಜವಂಶಕುಠಾರ।
ಕನ ಕನಲ್ಕೆಗೆ ನೆಲಂಬಿಟ್ಟುದಂ ರಘುಜರಾ ।
ಮನ ಮನದ ಕೋಪದುರುಬೆಗೆ ಬಟ್ಟೆಗೊಟ್ಟುದಂ ಬಡಬಾನಲನಂ ತನೂನೊಳು॥
ದಿನದಿನದೊಳವಗಡಿಸುತಿರ್ಪುದಂ ಬಹಳ ಜಡ ।
ತನ ತನಗೆ ಬಂದುದಂ ಭಂಗಮೆಡೆಗೊಂಡುದಂ।
ನೆನೆನೆನೆದು ನಿಟ್ಟುಸಿರ್ವಿಟ್ಟು ಸುಯ್ವಂತುದಧಿ ತೆರೆವೆರ್ಚುಗೆಯೊಳಿರ್ದುದು॥೨॥
ಪ್ರತಿಪದಾರ್ಥ:- ಮುನಿ= ಅಗಸ್ತ್ಯಮುನೀಂದ್ರನು, ಮುನಿಸಿ= ಕೋಪಿಸಿಕೊಂಡು, ಪೀರ್ದುದಂ= ಕುಡಿದುಬಿಟ್ಟುದನ್ನು, ರಾಜ= ದೊರೆಗಳ, ವಂಶ= ಸಂತತಿಗೆ, ಕುಠಾರಕನ= ಪರಶುವಿನಂತಿರುವ ಜಮದಗ್ನಿಯ, ಕನಲ್ಕೆಗೆ= ಮುಳಿಸಿಂಗೆ, ನೆಲಂ= ಇಳೆಯನ್ನು, ಬಿಟ್ಟುದಂ= ತ್ಯಜಿಸಿದ್ದನ್ನು, ರಘುಜ= ರಘುಕುಲದಲ್ಲಿ ಜನಿಸಿದ, ರಾಮನ= ರಾಮಚಂದ್ರಮೂರ್ತಿಯ, ಮನದ=ಚಿತ್ತದ, ಕೋಪದ= ಸಿಟ್ಟಿನ, ಉರುಬೆಗೆ= ಹೆಚ್ಚಿಗೆಗೆ, ಬಟ್ಟೆಗೊಟ್ಟುದಂ = ದಾರಿಕೊಟ್ಟದ್ದನ್ನು, ತನ್ನೊಳು= ಸಮುದ್ರದಲ್ಲಿ, ಬಡಬಾನಲಂ= ಬಡಬಾಗ್ನಿಯು, ದಿನದಿನದೊಳು= ಪ್ರತಿನಿತ್ಯವೂ, ಅವಘಡಿಸುತ= ಮೀರಲವಕಾಶವಿಲ್ಲದೆ ಒಣಗಿಸುತ್ತಾ, ಇರ್ಪುದಂ= ಇರತಕ್ಕದೂದನ್ನು, ಬಹಳ= ಹೆಚ್ಚಾದ, ಜಡತನ= ಸೋಮಾರಿತನವು, ತನಗೆ= ತನ್ನ ವಿಷಯದಲ್ಲಿ, ಬನದೈದಂ=ಉಂಟಾದದ್ದನ್ನು, ಭಂಗಂ= ಅಪಮಾನವು, ಒಡಗೊಂಡುದಂ= ಒದಗಿದ್ದನ್ನು, ನೆನೆನೆನೆದು= ಎಣಿಸೆಣಿಸಿ, ನಿಟ್ಟುಸಿರ್ವಿಟ್ಟು = ಉದ್ದವಾದ ಸುಯ್ಲಿಂದ, ಸುಯಿವಂತೆ= ದುಃಖದಿಂದ ನಿಶ್ವಸಿಸುವಂತೆ, ಉದಧೆ= ಕಡಲು, ತೆರೆ= ತರಂಗಗಳ, ಪೆರ್ಚುಗೆಯೊಳು= ಅತಿಶಯದಿಂದ, ಇರ್ದುದು=ಇರುತ್ತಿತ್ತು.
ಅ॥ವಿ ॥ (೧)ಸಮುದ್ರರಾಜನ ಅಹಂಕಾರಕ್ಕೆ ಪ್ರತಿಯಾಗಿ ಗರ್ವಭಂಗವನ್ನೆಸಗಲೋಸುಗ ಅಗಸ್ತ್ಯಮುನಿಪನು ಸಮುದ್ರವನ್ನೆಲ್ಲಾ ಆಪೋಶನ ಮಾಡಿ ಮೂತ್ರದಲ್ಲಿ ಬಿಟ್ಟನು.(೨) ಜಮದಗ್ನಿಯ ಪುತ್ರನಾದ ಪರಶುರಾಮನು ಪ್ರಪಂಚದಲ್ಲಿರುವ ಕ್ಷತ್ರಿಯರ ಹುಟ್ಟನ್ನೇ ಅಡಗಿಸಬೇಕೆಂದೆಣಿಸಿ ಇಪ್ಪತ್ತೊಂದಾವರ್ತಿ ಕ್ಷತ್ರಿಯರನ್ನು ಸಂಹರಿಸಿ ತಾನು ಜಯಿಸಿದ ಸ್ಥಳಗಳನ್ನೆಲ್ಲಾ ಕಶ್ಯಪಮುನಿಗಳಿಗೆ ಧಾರೆಯೆರೆದನು. ಅನಂತರ ಭೂಮಿಯಲ್ಲಿ ತಾನಿರಲು ಬ್ರಾಹ್ಮಣರ ಸ್ವತ್ತಾದ್ದರಿಂದಲೂ ಆ ವಿಪ್ರವರ್ಯರು ಇವನನ್ನು ಇರಗೊಡಿಸದೆ ಹೋದದ್ದರಿಂದಲೂ ಸಮುದ್ರದೊಂದಿಗೆ ಹೋರಾಡಿ ಅವನಿಂದ ಸ್ಥಳವಂ ಬಿಡಿಸಿಕೊಂಡು ಮುಂದೆ ನಡೆದನು. ಈಗಲೂ ತೆಂಕಣದಿಗ್ಭಾಗದಲ್ಲಿ ಪರಶುರಾಮಕ್ಷೀತ್ರವೆಂದು ಹೆಸರಾಗಿದೆ. (೩)ಶ್ರೀರಾಮನು ರಾವಣನನ್ನು ಸಂಹರಿಸಿ, ಸೀತೆಯನ್ನು ಕರೆತರಲು ಕಪಿಸೈನ್ಯದಿಂದೊಡಗೂಡಿ ದಕ್ಷಿಣ ಸಮುದ್ರದ ಬಳಿಗೆ ಬರಲು ಸೈನ್ಯವು ಮುಂದುವರಿಯಲು ಕಡಲು ದಾರಿಯನ್ನೇ ಕೊಡಲಿಲ್ಲವಾದ್ದರಿಂದ ಕೋಪವಂತಾಳಿ ಬಾಣಪ್ರಯೋಗವಂ ಮಾಡಲುಜ್ಜುಗಿಸಲು ಸಮುದ್ರನು ಹೆದರಿ ದಾರಿಯಂ ಬಿಟ್ಟದ್ದಲ್ಲದೆ ಬಹುವಾಗಿ ಉಪಚರಿಸಿದನು. (೪) ಸಮುದ್ರವು ಮೇರೆತಪ್ಪಿದರೆ ಪ್ರಪಂಚವೇ ಲಯವಾದೀತೆಂದು ತನ್ನ ಜ್ವಾಲೆಯಿಂದ ಕಡಲನ್ನು ಮಿತಿಮೀರಲು ದಾರಿಯಂ ಕೊಡದೆ ಇರುವನು.
ತಾತ್ಪರ್ಯ:- ಅಗಸ್ತ್ಯಮಹಾಮುನಿಯು ಕೋಪಾತಿಶಯದಿಂದ ಉದಧಿಯಲ್ಲಿನ ಯಾವತ್ತು ಜಲವನ್ನು ಏಕಾಪೋಶನವಾಗಿ ಮಾಡಿದ್ದರಿಂದಲೂ, ಜಮದಗ್ನಿ ಪುತ್ರನೂ ಕ್ಷತ್ರಿಯರಹಗೆಯೂ ಆದ ಪರಶುರಾಮನ ಭಯದಿಂದ ಭೂಮಿಗೆ ಬಹುದೂರದಲ್ಲಿರುವಂತೆ ಮಾಡಿದುದರಿಂದಲೂ, ದಾಶರಥಿಯ ಕೋಪಾಗ್ನಿಗೆ ಬೆದರಿ ತನ್ನ ಮೇಲೆ ಸೇತುವೆ ಕಟ್ಟಲವಕಾಶ-
ವನ್ನಿತ್ತ ಕತದಿಂದಲೂ, ತನ್ನ ಅಭಿವೃದ್ಧಿಗೆ ಬಡಬಾಗ್ನಿಯು ಅಡ್ಡಿಪಡಿಸುತ್ತಲಿರುವುದರಿಂದಲೂ,ತನಿಗೆ ಜಡಬುದ್ಧಿಯು ಒದಗಿದ್ದರಿಂದಲೂ, ಉಂಟಾದ ದುಃಖವನ್ನು ತಡೆಯಲಾರದೆ ನಿಟ್ಟುಸಿರು ಬಿಡುತ್ತಲಿರುವುದೋ ಎಂಬಂತೆ ಅಲೆಗಳು ಭ್ರಾಂತಿಗೊಳಿಸುತ್ತಿದ್ದವು.
ಘುಳುಘುಳಿಸುತೇಳ್ವ ಬೊಬ್ಬಳಿಗಳಿಂ ಸುಳಿಗಳಿಂ।
ಸೆಳೆಸೆಳೆದು ನಡೆವ ಪೆರ್ದೊರೆಗಳಿಂ ನೊರೆಗಳಿಂ।
ಪೊಳೆವ ತುಂತುರಿನ ಸೀರ್ಪನಿಗಳಿಂ ಧ್ವನಿಗಳಿಂ ವಿವಿಧರತ್ನಂಗಳಿಂದೆ॥
ಒಳಕೊಳ್ವ ನಾನಾಪ್ರವಾಹದಿಂ ಗ್ರಾಹದಿಂ ।
ದಳತೆಗಳವಡದೆಂಬ ಪೆಂಪಿನಿಂ ಗುಂಪಿನಿಂ।
ದಳದ ಪವಳದ ನಿಮಿರ್ದ ಕುಡಿಗಳಿಂ ತಡಿಗಳಿಂದಾ ಕಡಲ್ ಕಣ್ಗೆಸೆದುದು॥೩॥
ಪ್ರತಿಪದಾರ್ಥ:- ಘುಳುಘುಳಿಸುತ= ಗುಡಗುಡನೆ ಶಬ್ಧಮಾಡುತ್ತ, ಏಳ್ವ= ಸಮೀಪವನ್ನೈದುವ, ಬೊಬ್ಬುಳಿಗಳ= ಬುದ್ಬುದಂಗಳ, ಸುಳಿಗಳಿಂ= ಸುತ್ತುಗಳಿಂದಲೂ, ಸೆಳೆಸೆಳೆದು= ಬಹುವಾಗಿ ಎಳೆದುಕೊಂಡು, ನಡೆವ= ಆ ಕಡೆಗೂ ಈಕಡೆಗೂ ಚಲಿಸುವ, ಪೆರ್ದೆರೆಗಳಿಂ= ದೊಡ್ಡ ದೊಡ್ಡ ಅಲೆಗಳಿಂದಲೂ, ನೊರೆಗಳಿಂ= ನೊರೆಗಳಿಂದಲೂ, ತುಂತುರಿನ= ಸಣ್ಣ ಸಣ್ಣ, ನೀರ್ವನಿಗಳಿಂ= ಅಂಬುಕಣಗಳಿಂದಲೂ, ಧ್ವನಿಗಳಿಂ= ನಿನದಂಗಳಿಂದ,ವಿವಿಧ= ಬಗೆಬಗೆಯಾದ, ರತ್ನಂಗಳಿಂದ= ಮಣಿವಿಶೇಷಗಳಿಂದ, ಒಳಗೊಂಬ= ಸೆಳೆದಕೊಳ್ಳುವ,ನಾನಾ= ತೆರತೆರವಾದ, ಪ್ರವಾಹದಿಂ= ನದಿಗಳ ಸಮೂಹದಿಂದ, ಗ್ರಾಹದಿಂ = ಜಲವಾಸಿಗಳಾದ ಮತ್ಸ್ಯಾದಿಗಳಿಂದ, ಅಳತೆಗೆ= ಪರಿಮಿತಿಗೆ, ಅಳವಡದು= ವಶವಾಗದು, ಎಂಬ = ಎನ್ನುವ, ಪೆಂಪಿನಿಂ= ಸೊಂಪಿನಿಂದ, ತಳೆದ=ಹೊಂದಿದ, ಪವಳದ= ಪ್ರವಾಳಂಗಳ, ಮೀರ್ದ= ಹೆಚ್ಚಿರುವ, ಕುಡಿಗಳಿಂ= ಗುಚ್ಛಗಳಿಂದಲೂ, ತಡಿಗಳಿಂದ= ದಂಡೆಗಳಿಂದಲೂ, ಆ ಕಡಲ್= ಆ ಉದಧಿಯು, ಕಣ್ಗೆ = ನಯನಂಗಳಿಗೆ, ಎಸೆದುದು= ಥಳಥಳಿಸಿತು.
ಅ॥ವಿ॥ ಪವಳ (ತ್ಬ) ಪ್ರವಾಳ(ತ್ಸ) ಘುಳುಘುಳಿಸು ( ಅಧಿಕ್ಯಾರ್ಥದಲ್ಲಿ ದ್ವಿರುಕ್ತಿ)
ತಾತ್ಪರ್ಯ:- ಆ ಸಮುದ್ರದಲ್ಲಿ ಎಲ್ಲೆಲ್ಲಿಯೂ ನೀರ್ಗುಳ್ಳೆಗಳು ಏಳುತ್ತಲೂ ಮುಳುಗುತ್ತಲೂ ಇದೂದವು. ಅಲ್ಲಲ್ಲಿ ಸುಳಿಗಳು ಉಂಟಾಗುತ್ತಿದ್ದವು. ದೊಡ್ಡದೊಡ್ಡ ತರಂಗಗಳೂ ನೊರೆಯೂ ಕಂಗೊಳಿಸುತ್ತಿದ್ದವು. ಎಲ್ಲಿನೋಡಿದರೂ ಸಣ್ಣ ಸಣ್ಣ ನೀರಿನ ಹನಿಗಳು ಕಾಣಬರುತ್ತಿದ್ದವು. ದೊಡ್ಡ ದೊಡ್ಡ ನದಿಗಳೆಲ್ಲಾ ಭೂಮಿಯಲ್ಲಿರುವ ನವನಿಧಿಗಳನ್ನು ಹೊಡೆದುಕೊಂಡು ಬಂದು ಬೀಳುತಲಿರುವುದೂ ಹವಳದ ಕುಡಿಗಳು ತುಂಬಿರುವುದೂ ನೋಟಕರ ಮನಸ್ಸನ್ನು ಅಚ್ಚರಿಗೊಳಿಸುತ್ತಿತ್ತು. ಈ ರೀತಿಯಾಗಿರುವ ಅಗಾಧವಾದ ಆ ಕೂಪಾರವು.
ಪಾಕಶಾಸನನ ಸಕಲೈಶ್ವರ್ಯ ಸಂಪದಕೆ।
ಬೇಕಾದ ವಸ್ತುವಂ ಪಡೆದಿತ್ತೆನೆನ್ನವ।
ರ್ಗಾಕುಲಿಶಧರನುಪಹತಿಯನೆಸಗನದರಿಂದಮಿನ್ನಿಳೆಗೆ ಮುನ್ನಿನಂತೆ॥
ಜೋಕೆ ಮಿಗೆ ತೆರಳಿ ನೀವೆಂದು ಸಂತೈಸಿ ರ।
ತ್ನಾಕರಂ ಕಳುಹಿದ ಕುಲಾದ್ರಿಗಳ ಪರ್ಬುಗೆಗ।
ಳೇ ಕರಮಿವಹುರ್ವೆನಲ್ ಪೆರ್ದೆರೆಗಳೆದ್ದು ಬರುತಿರ್ದವು ಮಹಾರ್ಣವದೊಳು॥೪॥
ಪ್ರತಿಪದಾರ್ಥ:- ಪಾಕಶಾಸನನ = ಪಾಕನೆಂಬ ರಾಕ್ಷಸನನ್ನು ಸಂಹರೆಸಿದ ದೇವೇಂದ್ರನ, ಸಕಲ= ಸಮಸ್ತವಾದ, ಐಶ್ವರ್ಯ = ಸಾಮ್ರಾಜ್ಯದ, ಸಂಪದಕೆ= ವೈಭವಕ್ಕೆ, ಬೇಕಾದ ವಸ್ತುವಂ= ಬಯಸಿದ ಪುರುಳನ್ನೆಲ್ಲಾ, ಪಡೆದು= ಹೊಂದಿ, ಇತ್ತೆನು= ಕೊಟ್ಟೆನು, ಎನ್ನವರ್ಗೆ= ನನ್ನವರಿಗೆ, ಆ ಕುಲಿಶಧರನು=ಆ ವಜ್ರಾಯುಧವನ್ನು ಧರಿಸಿದ ದೇವೇಂದ್ರನು, ಉಪಹತಿಯನು= ಬಾಧೆಯನ್ನು, ಎಸಗನು= ರಚಿಸುವುದಿಲ್ಲವು, ಅದರಿಂದ= ಆದಕಾರಣ, ಇನ್ನು= ಇನ್ನುಮೇಲೆ, ಇಳೆಗೆ= ಧರೆಗೆ, ಮುನ್ನಿನಂತೆ= ಮೊದಲಿನ ಹಾಗೆಯೇ, ಜೋಕಮಿಗೆ= ಎಚ್ಚರವಾಗಿರುವಂತೆ, ನೀವು= ನೀವುಗಳು, ತೆರಳಿ= ಧರಾವಲಯದ ಮೇಲ್ಭಾಗಕ್ಕೆ ನಡೆಯಿರಿ, ಎಂದು= ಎಂಬ ತೆರನಾಗಿ, ಸಂತೈಸಿ= ಒಪ್ಪಿಸಿ, ರತ್ನಾಕರಂ = ಕಡಲು, ಕಳುಹಿದ= ಸಾಗಿಸಿದ, ಕುಲಾದ್ರಿಗಳ= ಹಿಮವತ್ಪರೂವತ, ನಿಷಧ, ವಿಂಧ್ಯ, ಮಾಲ್ಯವಂತ, ಪಾರಿಯಾತ್ರಕ, ಜಂಧಮಾಧನ, ಹೇಮಕೂಟವೇ ಆದಿಯಾದ ಏಳು ಕುಲಗಿರಿಗಳ, ಪರ್ಬುಗೆಯನೇಕ= ಅಧಿಕವಾದ ಗುಂಪು, ಬರುತಿಹವು= ಸಮೀಪಸ್ಥವಾಗುವವು, ಎನಲ್= ಎಂಬಂತೆ, ಮಹಾರ್ಣವದೊಳ್= ಅಗಾಧವಾದ ಉದಧಿಯಲ್ಲಿ, ಪೆರ್ದೆರೆಗಳು= ದೊಡ್ಡ ದೊಡ್ಡ ಅಲೆಗಳು, ಬರುತ=ಐತರುತ್ತ, ಇರ್ದವು= ಇದ್ದವು.
ಅ॥ವಿ॥ ಪಾಕಶಾಸನ( ಕೃ. ವ್ಯ) ಐಶ್ವರ್ಯ (ತ್ಸ) ಐಸಿರಿ(ತ್ಭ) ರತ್ನಾಕರ ಮತ್ತು ಕುಲಾದ್ರಿ ಎರಡೂ ಸವರ್ಣದೀರ್ಘಸಂಧಿ.
ತಾತ್ಪರ್ಯ:- ಅಮರೇಂದ್ರನಿಗೆ ಸಮಸ್ತವಾದ ಐಸಿರಿಯನ್ನು ಇತ್ತು ತೃಪ್ತಿಗೊಳಿಸಿದೆನೆಯಾಗಿ ನನ್ನಲ್ಲಿದ್ದ ಪರ್ವತಗಳಿಗೆ ಎಡರನ್ನುಂಟು ಮಾಡಲಾರೆನೆಂದು ಬಗೆದು ಸಪ್ತಕುಲಪರ್ವತಗಳನ್ನು ಕುರಿತು ಪೂರ್ವದಂತೆಯೇ ಇನ್ನು ನೀವು ಭೂಲೋಕದಲ್ಲಿ ನಿರ್ಭಯವಾಗಿರಬಹುದೆಂದು ನುಡಿಯಲು, ಅವುಗಳೆಲ್ಲ ಆನಂದಾತಿಶಯದಿಂದಲೂ ಹೆಮ್ಮೆಯಿಂದಲೂ
ಓಡಿಓಡಿ ಬರುತ್ತೆರೈವಂತೆಯೂ, ಆ ಉದಧಿಯ ದೊಡ್ಡ ದೊಡ್ಡ ತರಂಗಗಳು ಭ್ರಾಂತಿಗೈಸುತ್ತಲಿದ್ದವು.
ಶಿವನಂತೆ ಗಂಗಾಹಿಮಕರಾವಹಂ ರಮಾ।
ಧವನಂತೆ ಗೋತ್ರೈಕಪಾಲಕಂ ಪಂಕರುಹ।
ಭವನಂತೆ ಸಕಲಭುವನಾಶ್ರಯಂ ಶಕ್ರನಂತನಿಮಿಷನಿಕರಕಾಂತನು॥
ದಿವಸಾಧಿಪತಿಯಂತನಂತರತ್ನಂ ರಾಜ।
ನಿವಹದಂತಪರಿಮಿತವಾಹಿನೀಸಂಗತನು।
ಪವನಾಳಿಯಂತೆ ವಿದ್ರುಮಲತಾಶೋಭಿತಂ ತಾನೆಂದುದಧಿ ಮೆರೆದುದು॥೫॥
ಪ್ರತಿಪದಾರ್ಥ:- ಶಿವನಂತೆ= ಪರಮೇಶ್ವರನಹಾಗೆ, ಗಂಗಾ= ಸುರನದಿಯನ್ನು, ಹಿಮಕರ= ಇಂದುವನ್ನೂ, ಆವಹಂ= ತಾಳಿದವನು, (ಹರನು) ಗಂಗಾ= ದೇವನದಿಯನ್ನು, ಅಹಿ= ಉರಗಗಳನ್ನೂ, ಮಕರ= ಮೊಸಳೆಗಳನ್ನೂ, ಆವಹಂ= ಸೇರಿಸಿಕೊಂಡಿರುವನು,(ಸಮುದ್ರನು) ರಮಾ=ಲಕ್ಷ್ಮಿಯ, ಧವನಂತೆ= ಪತಿಯಾದ ನಾರಾಯಣನಂತೆ, ಗೋತ್ರೈಕಪಾಲಕಂ = ಗೋತ್ರ-ಇಳೆಗೆ ಹೊರೆಯಾಗಿದ್ದ ಅಸುರರನ್ನು ಸಂಹರಿಸಿ ಧರೆಯನ್ನು,ಏಕ-ಮುಖ್ಯವಾಗಿ, ಪಾಲಕಂ=ಸಲಹುವನು, (ವಿಷ್ಣು), ಗೋತ್ರ= ಪವಿಯಘಾತಕ್ಕೆ ಹೆದರಿದ ಪರ್ವತಗಳನ್ನು, ಪಾಲಕಂ=ಸಂರಕ್ಷಿಸುವ(ಉದಧಿಯು), ಪಂಕರುಹ=ತಾವರೆಯಲ್ಲಿ, ಭವನಂತೆ= ಹುಟ್ಟಿದ ಸೃಷ್ಟಿಕರ್ತನಹಾಗೆ,ಸಕಲ=ಎಲ್ಲಾ,ಭುವನ= ಪ್ರಪಂಚಗಳಿಗೆ, ಆಶ್ರಯಂ= ನೆರವಾಗಿರುವ,(ಹರನು) ಸಕಲ=ಸಮಸ್ತವಾದ, ಭುವನ= ಜಗತ್ತುಗಳಿಗೆ, ಆಶ್ರಯ= ಸ್ಥಿರಪ್ರದೇಶವಾಗಿರುವ, (ಕಡಲು) ಶಕ್ರನಂತೆ= ಶಚೀಪತಿಯಂತೆ, ಅನಿಮಿಷ= ಅಸುರವೈರಿಗಳ, ನಿಕರ= ಗುಂಪಿನಿಂದ, ಕಾಂತನು= ಪ್ರಕಾಶಮಾನನಾದವನು,
(ಸುರನಾಥನು) ಅನಿಮಿಷ= ಮೀನುಗಳ, ನಿಕರ= ಸಮುದಾಯದಿಂದ, ಕಾಂತನು= ಹೊಳೆಯತಕ್ಕವನು,(ಸಮುದ್ರ ರಾಜನು) ದಿವಸ= ಹಗಲಿಗೆ, ಅಧಿಪತಿಯಂತೆ= ಒಡೆಯನಾದ ರವಿಯೋಪಾದಿಯಲ್ಲಿ, ಅನಂತ= ಅಂತರಿಕ್ಷಕ್ಕೆ, ರತ್ನಂ= ರತ್ನಪ್ರಾಯನಾದ, ಅನಂತ= ಅಸಂಖ್ಯಾವಾದ, ರತ್ನಂ=ನವರತ್ನಗಳಿಂದ ಸಹಿತಮಾದ, (ಅಬ್ಧಿಯು) ರಾಜ= ಪ್ರಭುಗಳ, ನಿವಹದಂತೆ= ಗುಂಪಿನಹಾಗೆ, ಅಪರಿಮಿತ = ಬಹು ಹೆಚ್ಚಾದ, ವಾಹಿನಿ= ದಳಗಳಿಂದ, ಸಂಗತನು= ಸಹಿತವಾದವನು
(ಅರಸು), ಅಪರಿಮಿತ = ಲೆಕ್ಕವಿಲ್ಲದಷ್ಟು, ವಾಹಿನೀ= ಹೊಳೆಗಳಿಂದ, ಸಂಗತನು= ಸೇರಿದ್ದು( ಪರಿವಾರವು), ಉಪವನ= ತೋಟಗಳ, ಆಳಿಯಂತೆ= ಶ್ರೇಣಿಯಹಾಗೆ, ವಿದ್ರುಮ= ಚಿಗುರುಗಳಿಂದಲೂ, ಲತಾ= ಎಳೆ ಬಳ್ಳಿಗಳಿಂದಲೂ, ಶೋಭಿತನು= ಹೊಳೆಯುತ್ತಿರುವುದು, (ಆರಾಮವು) ವಿದ್ರುಮ= ಪ್ರವಾಳಗಳಿಂದ, ಲತಾ=ಎಳೆ ಬಳ್ಳಿಗಳಿಂದ, ಶೋಭಿತನು= ಭೂಷಣವಾದದ್ದು(ಕೂಪಶರವು) ತಾಂ= ತಾನು, ಎಂದು= ಎಂಬುದಾಗಿ, ಉದಧಿ= ಸರಿತ್ಪತಿಯು, ಮೆರೆದುದು= ಅಲಂಕೃತವಾಯಿತು.
ತಾತ್ಪರ್ಯ:- ಗಂಗಾನದಿ ಪುಣ್ಯನದಿಗಳಿಂದಲೂ ಸರ್ಪಗಳು, ಮೊಸಳೆಗಳು ಮೊದಲಾದವುಗಳಿಂದಲೂ ಕೂಡಿ ದೇವನದಿ ಮತ್ತು ಇಂದುವಿನಿಂದಲಂಕೃತನಾದ ಹರನಂತೆಯೂ, ಕುಲಗಿರಿಗಳನ್ನು ಕಷ್ಟಕ್ಕೆ ಸಿಕ್ಕಿಸದೆ ಇದ್ದು ರಾಕ್ಷಸಾಂತಕನಾದ ಶ್ರೀಮಹಾ
ವಿಷ್ಣುವನ್ನು ಹೋಲುತ್ತಲೂ, ಪ್ರಪಂಚಕ್ಕೆ ತಾನು ಸುತ್ತುಕಟ್ಟಿಕೊಂಡಿರೋಣದರಿಂದ ಜಗತ್ಕರ್ತನಾದ ಬ್ರಹ್ಮನನ್ನು ಹೋಲುತ್ತಲೂ, ಮೇನು ಮೊಸಳೆ ಮೊದಲಾದವುಗಳನ್ನು ತನ್ನಲ್ಲಿಟ್ಟುಕೊಂಡು ಸುರವಿಂಡಿನಿಂ ಮೆರೆವ ತ್ರಿದಶಪತಿಗೆಣೆಯಾಗಿಯೂ, ನವರತ್ನಗಳಿಂ ಕೂಡಿರುವುದರಿಂದ ಆಕಾಶಕ್ಕೆ ರತ್ನಪ್ರಾಯನಾದ ಸೂರ್ಯನನ್ನು ಹೋಲುತ್ತಲೂ, ಅನೇಕ ನದಿಗಳಿಂದ ಕೂಡಿ ಅಪರಿಮಿತ ಸೇನಾನಿವಹದಿಂದ ಮೆರೆಯುತಲಿರುವ ಅರಸುಗಳನ್ನೆಲ್ಲಾ ಅಲ್ಲಗಳೆಯುತ್ತಲೂ, ಪ್ರವಾಳಂಗಳು ಬಳ್ಳಿಗಳು ಮೊದಲಾದವುಗಳಿಂದ ಸೇರಿಕೊಂಡು ದೊಡ್ಡ ದೊಡ್ಡ ಮರಗಳಿಂದಲೂ ಎಲೆವಳ್ಳಿಗಳಿಂದಲೂ, ಸಹಿತಮಾದ ಆರಾಮಗಳನ್ನು ನಗೆಗೀಡಾಗಿ ಮಾಡುತ್ತಲೂ ಎರುವ ಮಹಾರ್ಣವದಲ್ಲಿ.
ಚಿಪ್ಪೊಡೆದು ಸಿಡಿವ ಮುತ್ತುಗಳಲ್ಲದಿವು ಮಗು।
ಳ್ದುಪ್ಪರಿಸುವೆಳಮೀನ್ ಬಿದಿರ್ವ ಶೀಕರಮಲ್ಲ ।
ಮೊಪ್ಪುವ ಸುಲಲಿತಶಂಖದ ಸರಿಗಳಲ್ಲದಿವು ಬೆಳ್ನೊರೆಗಳೊಟ್ಟಿಲಲ್ಲಿ॥
ತಪ್ಪದೊಳಗಣ ರನ್ನವೆಳಗಲ್ಲದಿವು ತೊಡ।
ರ್ದಿಪ್ಪ ಕೆಂಬವಳಮಲ್ಲಿವು ಪಯೋನಿಧಿಯ ಕೆನೆ।
ಯೊಪ್ಪಮಲ್ಲದೆ ನೀರ್ ಮೊಗೆಯಲಿಳಿವಮೇಘಂಗಳಲ್ಲೆನಿಸಿದುವು ಕಡಲೊಳು॥೬॥
ಪ್ರತಿಪದಾರ್ಥ:- ಇವು= ಇವುಗಳು, ಚಿಪ್ಪು= ಮುತ್ತಿನಮಣಿಯುಕ್ತಮಾದ ಚೀಲವು, ಒಡೆದು= ಛಿದ್ರವಾಗಿ, ಸಿಡಿದ= ಮೇಲಕ್ಕೇಳುವ, ಮತ್ತು ಮುತ್ತುಗಳ= ಮುತ್ತೆಂಬ ಪದಾರ್ಥವು, ಅಲ್ಲದೆ= ಆಗಿಲ್ಲದೆ, ಮಗುಳ್ದು= ಮತ್ತೆ, ಉಪ್ಪರಿಸುವ= ಮೇಲಕ್ಕೇಳುವ, ಎಳಮೀನ್ಗಳು= ಚಿಕ್ಕ ಚಿಕ್ಕ ಮೀನುಗಳು, ಬಿದಿರ್ವ= ಶರೀರವನ್ನು ಒದರುವುದರಿಂದ ಉಂಟಾದ, ಶೀಕರಂ=ಅಂಬುಕಣಗಳು, ಊಲ್ಲ= ಅಲ್ಲವು, ಲಲಿತ= ನಯವಾದ, ಶಂಖದ, ಸರಿಗಳು= ರಾಶಿಗಳು, ಅಲ್ಲದೆ= ಹೊರತು, ಇವು= ಈ ವಸ್ತುಗಳು, ಬೆಳ್ನೊರೆಗಳ= ಬಿಳಿದಾದ ನೊರೆಗಳ, ಒಟ್ಟಿಲು= ಗುಂಪು, ಊಲ್ಲ= ಅಲ್ಲವು, ತಪ್ಪದೆ= ವಿಸರ್ಜಿಸದೆ, ಒಳಗಣ= ಅಂತರ್ಭಾಗದಲ್ಲಿರುವ, ರನ್ನ= ಮಣಿಗಣಗಳ, ವೆಳಗು= ಕಾಂತಿಯು, ಅಲ್ಲದೆ= ಹೊರ್ತು, ಇವು= ಈ ಪುರುಳ್ಗಳು
ತೊಡದಿರ್ಪ= ಪೂರ್ಣವಾಗಿರುವ, ಕೆಂಬವಳಂ= ಕೆಂಪುಬಣ್ಣದ ಹವಳವು, ಅಲ್ಲ= ಅಲ್ಲವು, ಪಯೋನಿಧಿಯ= ಪಾಲ್ಗಡಲ, ಕೆನೆಯೊಪ್ಪಂ= ಸಾರದಿಂದ ಸಹಿತವಾದ್ದು, ಹೊರ್ತು, ನೀರ್ಮೊಗೆಯಲು= ಜಲವನ್ನು ಪಾನಮಾಡಲು, ಇಳಿವ= ಸಮೀಪಕ್ಕೆ ಬರುವ, ಮೇಘಂಗಳು= ಮುಗಿಲ್ಗಳು, ಅಲ್ಲ=ಅಲ್ಲವು, ಎಂದು= ಎಂಬ ತೆರನಾಗಿ, ಆ ಕಡಲೊಳು= ಆ ಉದಧಿಯಲ್ಲಿ, ಎನಿಸಿತು= ಹೇಳಿಸಕೊಂಡಿತು, ಎಂದರೆ ಕಡಲಲ್ಲಿನ ಉದಕ ಬಿಂದುಗಳು ಮುಕ್ತಾಫಲಗಳಂತೆಯೂ, ನೊರೆಯು ಶಂಖವೆಂಬುದನ್ನೂ , ಬಿಳೀ ಮೋಡಗಳನ್ನೂ ಶ್ವೇತವರ್ಣದ ಜಲವನ್ನೂ ಹೋಲುವಂತೆ ಭ್ರಾಂತಿಯನ್ನಂಟುಮಾಡುತ್ತಿತ್ತು.
ತಾತ್ಪರ್ಯ:- ಎರುವ ಮೀನುಗಳು ತಮ್ಮ ತಮ್ಮ ಶರೀರಗಳನ್ನು ಅಲ್ಲಾಡಿಸುವುದರಿಂದುಂಟಾದ ನೀರ್ಪನಿಗಳೇ ಆಗ ತಾನೆ ಚಿಪ್ಪಿನಿಂದ ಸಿಡಿದು ಮೇಲಕ್ಕೆ ಹಾರುತ್ತಿರುವ ಆಣಿಮುತ್ತುಗಳೆಂಬಂತೆಯೂ, ಬಿಳಿದಾದ ನೊರೆಗಳೇ ಶಂಖಗಳ ಸಮೂಹವೆಂಬಹಾಗೂ, ಒಳಭಾಗದಲ್ಲಿರುವ ಕೆಂಪು ಹವಳದ ಬಳ್ಳಿಗಳ ಕಾಂತಿಯೇ ನವರತ್ನಗಳ ಹೊಳಪೆಂಬ ತೆರನಾಗಿಯೂ, ಮೇಲ್ಗಡೆ ಏಳುವ ಕೆನೆಯೇ ನೀರಿಗಾಗಿ ಬರುತ್ತಿರುವ ಬಿಳಿಯ ಮೋಡಗಳೆಂಬಂತೆಯೂ, ಉಂಟಾದ
ಭ್ರಾಂತಿಯು ತಲೆದೋರುತ್ತಿತ್ತು.
ಕ್ರೂರ ಕರಕಟಕ ಕಟಕಂ ಕಮಠಮಠಮಿಡಿದ।
ನೀರಾನೆಗಳ್ ನೆಗಳ್ದೆಡೆ ಮುದಮುದಯಿಪ ಶಾ।
ಲೂರಕುಲರಾಜಿ ರಾಜಿಪ ಗೃಹಂ ನಿಬಿಡ ಗಂಡೂಪದ ಪದಂ ಪೆರ್ಚಿದ॥
ಘೋರ ಸಮುದ್ರದಗ್ರದ ಗ್ರಾಹಭವ ಭವನಮುಂ।
ಭೂರಿಭೀಕರ ಮಕರಮಹಿ ತಿಮಿತಿಮಿಂಗಿಲ ಕ ।
ಠೋರತರ ರಾಜೀವ ಜೀವಪ್ರತತಿ ವಾಸವಾ ಸಮುದ್ರದೊಳೆಸೆದುದು॥೭॥
ಪ್ರತಿಪದಾರ್ಥ:- ಕ್ರೂರ = ಭಯಂಕರಗಳಾದ, ಕರ್ಕಟಕ= ಏಡಿಕಾಯಿಗಳ, ಕಟಕಂ= ಸಮೂಹಕ್ಕೆ, ಕಮಠ= ತಾಂಬೇಲಿಗಳ, ಮಠಂ=ಎಡೆಯು, ಇಡಿದ= ಸಾಂದ್ರವಾದ, ನೀರಾನೆಗಳ್= ಜಲಜಗಳಾದ ಹಸ್ತಿಗಳು, ನೆಗಳ್ಪ= ನೆಲೆಮಾಡಿಕೊಂಡಿರುವ, ಎಡೆ= ಸ್ಥಳವೂ, ಮುದಮುದೈವ= ಆನಂದದಿಂ ಪೂರಿತಮಾಗುವ, ಶಾಲೂರ= ದರ್ದುರಂಗಳ, ಕುಲ= ಸಂತತಿಯ, ರಾಜಿ= ಶ್ರೇಣಿಗೆ, ರಾಜಿಪ= ಹೊಳೆಯುವ, ಗೃಹಂ= ಮನೆಯು, ನಿಬಿಡ= ದಟ್ಟಮಾದ, ಗಂಡೂಪದ= ಕಪ್ಪೆಗಳಿಗೆ, ಪದಂ = ನಿಲಯವು, ಪೆರ್ಚಿದ= ಅಭಿವೃದ್ಧಿಯಾದ, ಘೋರ= ಭಯಂಕರವಾದ, ಸಮುದಗ್ರ= ಅಧಿಕವಾದ ( ಭಾರಿಯಾದ), ಗ್ರಾಹ =ಮೊಸಳೆಗಳಿಗೆ, ಭವ= ಗೃಹಕೃತ್ಯದ, ಭವನಮಂ= ಮಂದಿರವು, ಭೂರಿ= ಹೆಚ್ಚಾದ, ಭೀಕರಂ= ಹೆದರಿಸುವ, ಮಕರ= ಮೊಸಳೆಗಳಿಗೆ, ಮಹಿ= ನೆಲೆಯಾದದ್ದು, ತಿಮಿತಿಮಿಂಗಿಲ= ಅಧಿಕವಾದ, ಮತ್ತು ಅತ್ಯಧಿಕವಾದ ಮತ್ಯ್ಸವು, ಕಠೋರತರ= ಬಹುಕ್ರೂರವಾದ, ರಾಜೀವಂ=ಸಂಘದ ಮತ್ಸ್ಯಗಳು ಇವೇ ಆದಿಯಾದ, ಜೀವ= ನೀರಿನಲ್ಲಿ ವಾಸಮಾಡತಕ್ಕ ಜಂತುಗಳ, ಪ್ರತತಿ= ಸಮೂಹಕ್ಕೆ, ವಾಸವು=ನೆಲೆಯು, ಆ ಸಮುದ್ರದೊಳು= ಆ ಉದಧಿಯಲ್ಲಿ, ಎಸೆದುದು= ಪ್ರಕಾಶಿಸಿತು.
ತಾತ್ಪರ್ಯ :- ಈ ಪರಿಯಿಂದ ಶೋಭಿಸುತ್ತಲಿರುವ ಮಹಾ ಕಡಲು ಮೀನು, ಮೊಸಳೆ, ಆನೆ, ನವರತ್ನಗಳು, ಕಪ್ಪೆಗಳು, ತಿಮಿ ತಿಮಿಂಗಿಲಗಳು ಮೊದಲಾದ ನಾನಾ ಜಲಚರಗಳಿಗೆಆವಾಸಮಾಗಿ.
ಸುಳಿದೊಂದು ಮೀನ್ನುಂಗಿತಾ ಮೀನನಾ।
ಗಳೆ ನುಂಗಿತೊಂದು ಮೀನಾ ಮೀನ ನುಂಗಿದುದು।
ಬಳಿಕೊಂದು ಮೀನದಂ ಮತ್ತೊಂದು ಮೀನ್ನುಂಗಿತಾ ಮೀನ ನುಂಗಿತೊಂದು॥
ತೊಳಲುತೊಂದೊಂದನೊಂದಿತು ನುಂಗಲ್ ತಿಮಿಂ।
ಗಿಳನೆಲ್ಲಂ ನುಂಗುತಿರ್ಪುದೆನೆ ಬೆದರಿ ಮೀ।
ನ್ಗಳೆ ತಿರುಗುತಿರ್ದುವೆರಕೆಗಳೊಡನೆ ಮುಂಪೊಕ್ಕ ಗಿರಿಗಳೆಡೆಯಾಡುವಂತೆ॥೮॥
ಪ್ರತಿಪದಾರ್ಥ:- ಸುಳಿದ= ಮುಂದಾಗಿ ಬಂದ, ಒಂದು ಮೀನ= ಒಂದಾನೊಂದು ಮೀನನ್ನು ಮೀನು= ಮತ್ತೊಂದು ಜಲಚರವು, ನುಂಗಿತು= ತುತ್ತಾಗಿ ಮಾಡಿಕೊಂಡಿತು, ಆ ಮೀನನು=ನೇರನ್ನು ವಾಸವಾಗುಳ್ಳ ಅದನ್ನು, ಆಗಳೆ= ಕೂಡಲೆ, ನುಂಗಿತು= ಭಕ್ಷಿಸಿತು, ಒಂದು ಮೀನು= ಬೇರೊಂದು ಮತ್ಯ್ಸವು, ಆ ಮೀನ= ಅದನ್ನು, ನುಂಗಿದುದು= ಕವಳವಾಗಿ ಮಾಡಿಕೊಂಡಿತು, ಬಳಿಕ= ತರುವಾಯ, ಒಂದು ಮೀನು=ಮಗದೊಂದು, ಅದಂ= ಅದನ್ನು, ಇನ್ನೊಂದು ಮತ್ಯ್ಸವು, ನುಂಗಿತು=ತುತ್ತು ಮಾಡಿಕೊಂಡಿತು, ಆ ಮೀನ= ಅದನ್ನು, ನುಂಗಿತು= ತಿಂದಿತು, ಒಂದು= ಬೇರೊಂದು, ತೊಳಲುತ= ಹಿಂಸೆಪಡುತ್ತ, ಒಂದಾನೊಂದು= ಒಂದು ಮತ್ತೊಂದನ್ನು, ನುಂಗಿತು= ಕವಳವನ್ನಾಗಿ ಮಾಡಿಕೊಂಡಿತು, ಇಂತು= ಈ ಪ್ರಕಾರವಾಗಿ, ನುಂಗಲ್=ತುತ್ತುಮಾಡುತ್ತಿರಲು, ತಿಮಿಂಗಿಲವು= ಬಹುದೊಡ್ಡ ಮತ್ಸ್ಯವು, ಎಲ್ಲಮಂ= ಸಕಲವನ್ನೂ, ನುಂಗುತಿರ್ಪುದು= ಭಕ್ಷಿಸುತ್ತಿತ್ತು, ಎನೆ= ಎಂಬಂತೆ, ಮೀನ್ಗಳು= ಜಲಚರಗಳು, ಎರಕೆಗಳೊಡನೆ= ಗರಿಗಳಸಹಿತವಾಗಿ, ಮುಂ=ಮದಲು, ಪೊಕ್ಕ= ಕಡಲ ಒಳಭಾಗವನ್ನು ಪ್ರವೇಶಿಸಿರುವ, ಗಿರಿಗಳ= ಅಗಗಳು, ಎಡೆಯಾಡುವಂತೆ= ಚಲಿಸುವಂತೆ,ತಿರುಗುತಿರ್ದವು= ತಾರೃಡುತ್ತಿದ್ದವು.
ತಾತ್ಪರ್ಯ:- ಇದ್ದುದಲ್ಲದೆ ಒಂದು ಮೀನು ಮತ್ತೊಂದನ್ನೂಅದು ಎನ್ನೊಂದನ್ನೂಪುನಃ ಅದು ಬೇರೊಂದನ್ನೂ ಹಿಡಿಯಲು ಚಲಿಸುತ್ತಿರುವುದನ್ನು ನೋಡಿದರೆ ಒಳಭಾಗದಲ್ಲಿ ಅಡಗಿಕೊಂಡಿರತಕ್ಕ ಕುಲಗಿರಿಗಳೇ ಇಂತು ಚಲಿಸುತ್ತಿರುವವೊ ಎಂಬಂತೆ ತೋರಿತು.
ಆ ಮಹಾಂಭೋಧಿಯಂ ನೋಡಿ ಹರ್ಷಿತನಾಗಿ।
ಭೀಮಸೇನಂ ಬಳಿಕ ನಲವಿನಿಂ ದ್ವಾರಕೆಯ।
ಸೀಮೆಗೈತಂದು ನಗರದ್ವಾರಮಂ ಪೊಕ್ಕು ಬರೆ ರಾಜಮಾರ್ಗದೊಳೆ॥
ಸಾಮಜಗಿರಿಯ ಹಯತರಂಗದ ನೆರವಿದೊರೆಯ ।
ಚಾಮರ ಶಫರಿಯ ಬೆಳ್ಗೊಡೆನೊರೆಯ ಭೂಷಣ।
ಸ್ತೋಮಮಣಿಗಣದ ಕಳಕಳರವದ ಜನದ ಸಂದಣಿಯ ಕಡಲಂ ಕಂಡನು॥೯॥
ಪ್ರತಿಪದಾರ್ಥ:- ಆ ಮಹಾಂಬುಧಿಯಂ= ಆ ದೊಡ್ಡ ಅಬ್ಧಿಯನ್ನು, ಭೀಮಸೇನಂ= ವೃಕೋದರನು, ನೋಡಿ= ಈಕ್ಷಿಸಿ, ಹರ್ಷಿತನಾಗಿ= ಆನಂದದಿಂದ ಕೂಡಿ, ಬಳಿಕ =ತರುವಾಯ, ನಲವಿನಿಂ = ಪ್ರೇಮದಿಂದ, ದ್ವಾರಕೆಯ ಸೀಮೆಗೆ= ದ್ವಾರಕಾಪಟ್ಟಣದೆಡೆಗೆ, ಐತಂದು=ಪ್ರಯಾಣಮಾಡಿ. ನಗರ= ಪಟ್ಟಣದ, ದ್ವಾರಮಂ= ಕವಾಟವನ್ನು, ಪೊಕ್ಕು =ಪ್ರವೇಶ ಮಾಡಿ, ರಾಜಮಾರ್ಗದೊಳಗೆ= ದೊಡ್ಡ ಬೀದಿಯಲ್ಲಿ, ಬರೆ= ಐತರಲು, ಸಾಮಜ= ಹಸ್ತಿ ಎಂಬ, ಗಿರಿಯ= ದುರ್ಗವುಳ್ಳ, ಹಯ= ಅಶ್ವಂಗಳೆಂಬ, ತರಂಗದ=ತೆರೆಗಳುಳ್ಳ, ನೆರವಿ=ವ್ಯಾಪಾರ ಸ್ಥಳಗಳಲ್ಲಿ, ಸಾಮಾನುಗಳನ್ನೆಲ್ಲೆಲ್ಲಿಯೂ ಹಾಕಿರುವುದೆಂಬ, ದೊರೆಯ= ಹೊಳೆಗಳುಳ್ಳ, ಚಾಮರ=ಚಾಮರಗಳೆಂಬ, ಶಫರಿಯ= ಮೀನುಗಳುಳ್ಳ, ಬೆಳ್ಗೊಡೆ= ಶ್ವೇತಾತಪತ್ರವೆಂಬ,ನೊರೆಯ= ನೊರೆಯಿಂದ ಕೂಡಿದ, ಭೂಷಣ= ತೊಡಿಗೆಗಳೆಂಬ, ಮಣಿಗಣದ= ನವರತ್ನಗಳ ಗುಂಪಿನ,ಕಳಕಳರವದ = ಕೋಲಾಹಲಸ್ವನದ, ಜನದ=ಲೋಕದ, ಸಂದಣಿಯ= ಗುಂಪೆನ್ನುವ, ಕಡಲಂ= ಉದಧಿಯನ್ನು, ಕಂಡನು= ನೋಡಿದನು.
ಪ್ರತಿಪದಾರ್ಥ:- ಆ ಮಹೋದಧಿಯನ್ನು ವೃಕೋದರನು ಕಂಡು ಸಂತುಷ್ಟನಾಗಿ,ದ್ವಾರಕಾ ಪಟ್ಟಣದ ಬಳಿಗೆ ಬಂದು ಆ ಊರ ಹೆಬ್ಬಾಗಿಲಿನಿಂದ ಒಳಗೆ ಪ್ರವೇಶಮಾಡುತ್ತಿರುವಾಗ, ಮದ್ದಾನೆಯೆಂಬ ಪರ್ವತಗಳಿಂದಲೂ, ಅಶ್ವಗಳೆಂಬ ಅಲೆಗಳಿಂದಲೂ, ಎಲ್ಲೆಲ್ಲಿಯೂ ಹಾಕಿರತಕ್ಕ ವಸ್ತುನಿಚಯ ವೆಂಬ ಹೊಳೆಗಳಿಂದಲೂ, ಚಾಮರಗಳೆನ್ನುವ ಮೀನ್ಗಳಿಂದಲೂ, ಶ್ವೇತಾತಪತ್ರವೆಂಬ ನೊರೆಗಳಿಂದಲೂ, ತೊಡಿಗೆಗಳೆಂಬ ರತ್ನರಾಶಿಗಳಿಂದಲೂ, ಕಲಕಲಧ್ವನಿಯೆಂಬ ಶಬ್ಧದಿಂದಲೂ, ಮೊರೆಯುತ್ತಿರುವ ಜನಸಂಘವೆಂಬ ಮಹಾ ಸಮುದ್ರವನ್ನು ಕಂಡನು.
ಪೆಚ್ಚಿದಿಂಗಡಲೂರ್ಮಿಮಾಲೆ ಮಾಲೆಗಳೆಡೆಯೊ।
ಳುಚ್ಛಳಿಸಿ ಹೊಳೆಹೊಳೆವ ಮರಿಮೀನ್ಗಳೆನೆ ತೊಳಗು।
ವಚ್ಚ ಬೆಳ್ಮುಗಿಲೊಡ್ಡುಗಳ ತರತರಂಗಗಳೊಳ್ ತಲೆದೋರ್ಪ ಮಿಂಚುಗಳೆನೆ॥
ಅಚ್ಚರಿಯೆನಿಪ ರಾಜಮಾರ್ಗದಿಕ್ಕೆಲದೊಳಿಹ।
ನಿಚ್ಚಳದ ಕರುಮಾಡದೋರಣದ ನೆಲೆನೆಲೆಯೊ।
ಳೊಚ್ಚೇರೆಗಂಗಳೆಳವೆಂಗಳ ಕಟಾಕ್ಷದ ಮರೀಚಿಗಳ್ ಸೊಗಯಿಸಿದುವು॥೧೦॥
ಪ್ರತಿಪದಾರ್ಥ:- ಪೆಚ್ಚಿದ= ಅಧಿಕವಾದ, ಇಂಗಡಲ= ಹಾಲಿನ ಸಮುದ್ರದ, ಊರ್ಮಿ= ತರಂಗಗಳ, ಮಾಲೆಮಾಲೆಗಳ= ಶ್ರೇಣಿ ಶ್ರೇಣಿಗಳ, ಎಡೆಯೊಳು= ಸ್ಥಾನದಲ್ಲಿ, ಉಚ್ಚಳಿಸಿ= ಮೇಲ್ಭಾಗಕ್ಕೆ ಹಾರಿ, ಹೊಳೆಹೊಳೆವ= ಮಿರುಮಿರುಗುವ, ಮರಿಮೀನ್ಗಳೆನೆ= ಚಿಕ್ಕಚಿಕ್ಕಮತ್ಸ್ಯಗಳೆಂಬಂತೆ, ತೊಳಗುವ=ಹೊಳೆಯುವ, ಅಚ್ಚ= ನಿರ್ಮಲವಾದ, ಬೆಳ್ಮುಗಿಲ= ಬಿಳುಪಾದ ಮೋಡಗಳ, ಒಡ್ಡುಗಳ= ಗುಂಪುಗಳ, ಥರಥರಂಗಳೊಳ್= ಬಗೆಬಗೆಗಳಿಂದ, ತಲೆದೋರ್ವ= ಅಲ್ಪವಾಗಿ ಕಾಣುವ, ಮಿಂಚುಗಳ್= ವಿದ್ಯುತ್ತುಗಳು, ಎನೆ=ಎಂಬಂತೆ, ಅಚ್ಚರಿಯೆನಿಪ= ಭ್ರಾಂತಿಯನ್ನೀಯತಕ್ಕದ್ದೆನಿಸಿಕೊಳ್ಳುವ ರಾಜಮಾರ್ಗದ= ದೊಡ್ಡರಸ್ತೆಯ, ಇಕ್ಕೆಲದೊಳು= ಎರಡುಕಡೆ ಇರುವ, ನಿಚ್ಚಲದ= ಅಲ್ಲಾಡದಿರುವ, ಕರುವಾಡದ= ಮಹಡಿಗಳ, ಓರಣದ= ಸಾಲಿನ, ನೆಲೆನೆಲೆಯೊಳು= ಎಲ್ಲಾ ಪ್ರದೇಶಂಗಳಲ್ಲಿಯೂ, ಒಚ್ಚೇರೆಗಂಗಳ= ಒಂದು ಬೊಗಸೆಯಷ್ಟು ವಿಸ್ತಾರವಾದ ನಯನಂಗಳುಳ್ಳ, ಎಳೆವೆಣ್ಗಳ= ಬಾಲೆಯರ, ಕಟಾಕ್ಷ= ಓರೆನೋಟದ, ಮರೀಚಿಗಳ್ = ಕರಂಗಳು, ಸೊಗಯಿಸಿದವು= ಅಲಂಕಾರದಿಂದ ಕೂಡಿದ್ದವು.
ತಾತ್ಪರ್ಯ:- ದಾಟಿಕೊಂಡು ಮುಂದೆ ನಡೆಯುತ್ತಿರುವಾಗ ಪಾಲ್ಗಡಲಲ್ಲಿ ಹುಟ್ಟಿದ ಅಲೆಗಳನ್ನಾಶ್ರಯಿಸಿದ ಮೀನುಗಳ ಮರಿಗಳೆಂಬಂತೆಯೂ, ನಿರ್ಮಲವಾದ ಮೇಘದಲ್ಲಿ ಹುಟ್ಟಿದ ವಿದ್ಯುಲ್ಲತೆಯೋ ಎನ್ನುವಹಾಗೂ ರಾಜಬೀದಿಯ ಪಾರ್ಶ್ವಗಳಲ್ಲಿ ಎತ್ತರವಾದ ಸೌಧಾಗ್ರಗಳಲ್ಲಿ ನೆರೆದಿರುವ ಕಮಲಾಕ್ಷಿಯರು ಕಾಂತಿಯುಕ್ತರಾಗಿರುವುದನ್ನು ಕಂಡನು.
ವಿರಚಿಸಿದ ಕರುವಾಡದಿಕ್ಕೆಲದ ನವರತ್ನ।
ಪರಿಖಚಿತ ಕನಕತೋರಣಮೊಪ್ಪಿದುದು ರಜತ।
ಗಿರಿಶಿಖರಮಂ ಸಾರ್ದ ಶುಭ್ರಾಭ್ರದೊಳ್ ಮೂಡಿದಮರೇಂದ್ರ ಚಾಪದಂತೆ॥
ಪರಿಪರಿಯ ಗುಡಿ ಕಳಸ ಕನ್ನಡಿ ಪತಾಕೆ ಸೀ।
ಗುರಿಚವರಿಗಳ ಸಾಲ್ಗಳೆಸೆದುವು ಗಗನಮೆಂಬ ।
ಕರಿಯ ಸಿಂಗರಿಸಿದರೊ ಪರಿಮಳೋತ್ಸವಕೆ ಪೊರಮಡುವನಿಲರಾಜಂಗೆನೆ॥೧೧॥
ಪ್ರತಿಪದಾರ್ಥ:-
ಕರುವಾಡದ= ಮಹಡಿಯ ಮೇಲಿರುವ ಅಂಗಳದ(ಬಿಸಿಲುಮಚ್ಚಿನ) ಇಕ್ಕೆಲದ= ಎಡಬಲಭಾಗಗಳ, ನವರತ್ನ= ವಜ್ರವೈಡೂರಾದಿಗಳಿಂದ, ಪರಿಖಚಿತ = ಸಿಂಗರಿಸಿದ, ಕನಕ=ಸುವರ್ಣಮಯವಾದ, ತೋರಣದ= ಬಾಗಿಲಿಗೆ ಕಟ್ಟಿದ ಹಾರವು, ರಜತಗಿರಿ= ಬೆಳ್ಳಿಯ ಬೆಟ್ಟದ, ಶಿಖರಮಂ= ತುದಿಯನ್ನು, ಸಾರ್ದ=ಹೊಂದಿದ, ಶುಭ್ರಾಭ್ರದೊಳು= ಬಿಳಿಯ ಮೋಡದಲ್ಲಿ, ಮೂಡಿದ= ಜನಿಸಿದ, ಅಮರೇಂದ್ರ ಚಾಪದಂತೆ= ಸುರಪನ ಬಿಲ್ಲಿನ ಹಾಗೆ, ಪರಿಪರಿಯ= ವಿಧವಿಧವಾದ, ಗುಡಿ= ದೇವಾಲಯಗಳ, ಕಲಶ= ಮೇಲ್ಭಾಗದಲ್ಲಿರುವ ಕಲಶಂಗಳ, ಕನ್ನಡಿ= ದರ್ಪಣಗಳ, ಪತಾಕೆ= ಬಾವುಟಗಳ, ಸೀಗುರಿ= ಸಣ್ಣ ಚಾಮರಗಳ, ಚಮರಗಳ= ದೊಡ್ಡ ದೊಡ್ಡ ಚಾಮರಗಳ, ಸಾಲ್ಗಳು= ಶ್ರೇಣಿಗಳು, ಪರಿಮಳೋತ್ಸವಕೆ= ಸುವಾಸನೆಯ ಆನಂದಕ್ಕೆ, ಪೊರಮಡುವ= ಹೊರಟುಬರುವ, ಅನಿಲರಾಜಂಗೆ= ಪವನನೆಂಬ ಅರಸನಿಗೆ, ಗಗನಮೆಂಬ= ಅಂತರಿಕ್ಷವೆನ್ನುವ, ಕರಿಯ= ಗಜವನ್ನು, ಸಿಂಗರಿಸಿದರೋ= ಅಲಂಕಾರ ಮಾಡಿದರೋ, ಎಂಬಂತೆ= ಎಂಬತೆರನಾಗಿ, ಎಸೆದವು= ಥಳಥಳಿಸಿದವು.
ತಾತ್ಪರ್ಯ:-ವಾಯುವೆಂಬರಸು ಸುರಭಿ ಸಂಭ್ರಮಕ್ಕಾಗಿ ಪ್ರಣಯಸನ್ನದ್ಧನಾಗಿ ಹೊರಡುವುದರಿಂದ ರಾಜಬೀದಿಯ ಎರಡು ಪಕ್ಕಗಳಲ್ಲಿಯೂ, ನವರತ್ನಖಚಿತವಾದ ಭಂಗಾರದ ತೋರಣವನ್ನು ಕಟ್ಟಿ ಕೈಲಾಸಗಿರಿಯನ್ನು ಆವರಿಸಿದ ಬೆಳ್ಮುಗಿಲೊಳ್ಪು-
ಟ್ಟಿದ ಅಮರಪತಿಯ ಬಿಲ್ಲಿನಹಾಗೆ ಎಲ್ಲೆಲ್ಲಿಯೂ ಇರುವ ದೇವಸ್ಥಾನಗಳು ಎತ್ತರವಾದ ಸ್ಥಳಗಳು ಮೊದಲಾದುವನ್ನೂ ಆಕಾಶವೆಂಬ ಹಸ್ತಿಯನ್ನು ಅಲಂಕರೆಸಿರುವದೊ ಎಂಬಂತೆ ಕಾಣಬರುವೈದನ್ನೂ.
ಹರ್ಮ್ಯಾಗ್ರದೊಳ್ ವಿರಾಜಿಪ ಚಂದ್ರಶಾಲೆಗಳ ।
ನಿರ್ಮಲಸ್ಥಳದೊಳೇಕಾಂತದಿಂ ತನುಲತೆಯ ।
ಘರ್ಮಶ್ರಮಂಗಳೆವ ಸೊಕ್ಕು ಜೌವನದ ನೀರಜಗಂಧಿಯರ ಕೊಬ್ಬಿದ॥
ಪೆರ್ಮೊಲೆಗಳೆಡೆಯ ಚಂದನದಣ್ಪ ಮಲ್ಲಿಗೆಯ ।
ಲರ್ಮುಡಿಯ ತನಿಗಂಪ ನೆರವಿ ನೆರವಿಗೆ ತಂಬೆ।
ಲರ್ಮೆಲ್ಲಮೆಲ್ಲನೆ ಪರಪುತಿರ್ದುದಾ ರಾಜಮಾರ್ಗದೊಳ್ ಪಿಸುಣರಂತೆ॥೧೨॥
ಪ್ರತಿಪದಾರ್ಥ:- ಹರ್ಮ್ಯ= ಮಹಡಿಗಳ, ಅಗ್ರದೊಳ್= ಕಟ್ಟಕಡೆಯಲ್ಲಿ, ವಿರಾಜಿಪ= ಹೊಳೆವ, ಚಂದ್ರಶಾಲೆಗಳ,= ಅಗ್ರಭಾದ ಮನೆಯ, ನಿರ್ಮಲ= ಪರಿಶುದ್ಧವಾದ, ಸ್ಥಳದೊಳು= ಎಡೆಯಲ್ಲಿ, ಏಕಾಂತದಿಂ= ಗೋಪ್ಯವಾಗಿ, ತನುಲತೆಯ = ಬಳ್ಳಿಯಹಾಗಿರತಕ್ಕ ಶರೀರದ, ಘರ್ಮಶ್ರಮಂ= ಉಷ್ಣದ ಬಳಲಿಕೆಯನ್ನು, ಕಳೆವ= ನಿವಾರಣೆಮಾಡುವ, ಸೊಕ್ಕುಜವ್ವನೆಯ= ಹರೆಯದ ಮದವುಳ್ಳ, ನೀರಜಗಂಧಿಯರ = ತಾವರೆಯ ಸುರಭಿಯಂತೆ ಪರಿಮಳವನ್ನುಳ್ಳ ನಾರಿಯರ, ಕೊಬ್ಬಿದ= ವಿವರಗಳಿಲ್ಲದ, ಪೆರ್ಮೊಲೆಗಳ= ದೊಡ್ಡ ಸ್ತನಗಳ, ಎಡೆಯ= ಪಾರ್ಶ್ವದ, ಚಂದನಗಂಧ= ಪರಿಮಳಯುಕ್ತವಾದ ಬಿಳೀಗಂಧದ, ತಣ್ಪ= ಶೈತ್ಯವನ್ನು, ಮಲ್ಲಿಗೆಯಲರ್= ಮಲ್ಲಿಕಾಪುಷ್ಪಗಳ, ಮುಡಿಯ= ಗಂಟಿನ, ತನು= ಅತ್ಯಲ್ಪವಾದ, ಗಂಪ= ಸುವಾಸನೆಯನ್ನು, ನೆರವಿಗೆ = ಪ್ರಜೆಗಳೆಲ್ಲರ ಸಮುದಾಯಕ್ಕೂ, ಎಲರ್= ಪವನನು, ತಂದು= ಸಾಗಿಸಿಕೊಂಡುಬಂದು, ರಾಜಮಾರ್ಗದೊಳು= ಆ ರಾಜಬೀದಿಯಲ್ಲಿ, ಪಿಸುಣರಂತೆ= ವಿಟರಂತೆ, ಮೆಲ್ಲಮೆಲ್ಲನೆ= ಮೆತ್ತ ಮೆತ್ತಗೆ, ಪರಿವುತಿರ್ದುದು= ಹರಡುತ್ತಿತ್ತು.
ತಾತ್ಪರ್ಯ:- ವಾಯುವೆಂಬರಸು ಸುರಭಿ ಸಂಭ್ರಮಕ್ಕಾಗಿ ಪ್ರಣಯಸನ್ನದ್ಧನಾಗಿ ಹೊರಡುವುದರಿಂದ ರಾಜಬೀದಿಯ ಎರಡು ಪಕ್ಕಗಳಲ್ಲಿಯೂ ನವರತ್ನಖಚಿತವಾದ ಭಂಗಾರದ ತೋರಣವನ್ನು ಕಟ್ಟಿ ಕೈಲಾಸಗಿರಿಯನ್ನು ಆವರಿಸಿದ ಬೆಳ್ಮುಗಿಲೊಳ್ಪುಟ್ಟಿದ ಅಮರಪತಿಯ ಬಿಲ್ಲಿನಹಾಗೆ ಎಲ್ಲೆಲ್ಲಿಯೂ ಇರುವ ದೇವಸ್ಥಾನಗಳ ಎತ್ತರವಾದ ಸ್ಥಳಗಳು ಮೊದಲಾದುವನ್ನೂ ಆಕಾಶವೆಂಬ ಹಸ್ತಿಯನ್ನು ಅಲಂಕರಿಸಿರುವದೊ ಎಂಬಂತೆ ಕಾಣಬರುವುದು.
ದುರ್ಗಮ ಜಡಾಶ್ರಯಮನುಗ್ರಜಂತುಗಳ ಸಂ।
ಸರ್ಗಮಂ ಬಿಟ್ಟು ಮುಕ್ತಾಳಿ ವಿದ್ರುಮ ರತ್ನ।
ವರ್ಗಂಗಳಿಲ್ಲಿ ಸೇರುದುವೆಂಬೊಲೊಪ್ಪಿದವನರ್ಘ್ಯಮಣಿವಸರಂಗಳು॥
ಭರ್ಗಸಖನೊಲಿದು ನವನಿಧಿಗಳಂ ಧಾತ್ರಿಯ ಜ।
ನರ್ಗೆ ವಿಸ್ತರಿಸಿ ತೋರಿಸಿದನೆನೆ ಚಿನ್ನವರ।
ದರ್ಗುಡಿಸಿಗೊಂಡಿರ್ಪ ರಾಸಿಪೊನ್ಗಳ್ ಪಿಂಗದಂಗಡಿಗಳೆಸೆದಿರ್ದುವು॥೧೩॥
ಪ್ರತಿಪದಾರ್ಥ:- ದುರ್ಗಮ= ಪ್ರವೇಶಮಾಡಲು ಅಸದಳವಾದ, ಜಡಾಶ್ರಯಮನು= ಮಂಕರಿಗೂ ನೀರಿಗೂ ನೆರವಾದ,ಉಗ್ರಜಂತುಗಳ= ದುಷ್ಟಗಳಾದ ಮಕರವೇ ಮೊದಲಾದ ಪ್ರಾಣಿಗಳ ಅಥವಾ ಕಠಿಣಚಿತ್ತವುಳ್ಳ ಲೋಗರ, ಸಂಸರ್ಗಮಂ= ಜೊತೆಯನ್ನು, ಬಿಟ್ಟು =ವರ್ಜಿಸಿ, ಮುಕ್ತಾಳಿ= ಮೌಕ್ತಿಕ ಸಮೂಹವು, ವಿದ್ರುಮ= ಹವಳಗಳು, ರತ್ನ= ವೈಡೂರ್ಯಾದಿಗಳು ಇವುಗಳ, ವರ್ಗಂಗಳಲ್ಲಿ= ಸಮೂಹದಲ್ಲಿ, ಸೇರಿದವು= ಒಂದಾದವು, ಎಂಬೊಲ್= ಎಂಬತೆರನಾಗಿ, ಅನರ್ಘ್ಯ= ಬೆಲೆಕಟ್ಟಲಾಗದ, ಮಣಿ= ರತ್ನಖಚಿತಗಳಾದ, ವಸನಂಗಳು= ಅಂಬರಗಳು, ಒಪ್ಪಿದವು= ಅಲಂಕಾರದಿಂದ ಮೆರೆದವು, ಭರ್ಗ= ಹರನಿಗೆ, ಸಖನು= ಸ್ನೇಹಿತನಾದ ಧನಪತಿಯು, ಒಲಿದು=ಪ್ರೀತಿಸಿ, ನವನಿಧಿಗಳಂ = ಒಂಬತ್ತು ವಿಧವಾದ ನಿಕ್ಷೇಪಗಳನ್ನು, ಧಾತ್ರಿಯ= ಪ್ರಪಂಚದ, ಜನರ್ಗೆ= ಲೋಕರಿಗೆ, ವಿಸ್ತರಿಸಿ= ಪ್ರಕಟಪಡಿಸಿ, ತೋರಿಸಿದನು = ಗೋಚರಮಾಡಿದನು,ಎನೆ= ಎನ್ನುವತೆರನಾಗಿ, ಚಿನ್ನವರೆಗರ್= ಚಿನ್ನವನ್ನು ವರೆಗಲ್ಲಿನಲ್ಲಿ ಉಜ್ಜಿಶಪರೀಕ್ಷಿಸುವ ವ್ಯಾಪಾರಸ್ಥರು, ಗುಡಿಸಿಕೊಂಡು=ಒಟ್ಟು ಸೇರಿಸಿಕೊಂಡು, ಇರ್ಪ=ಇರತಕ್ಕ, ರಾಶಿಪೊನ್ಗಳ್= ದ್ರವ್ಯ ಮತ್ತು ಚಿನ್ನದ ಗುಡ್ಡೆಗಳು, ಪಿಂಗದ= ಕಡಿಮೆಯಾಗದಿರುವ,ಅಂಗಡಿಗಳು= ವ್ಯಾಪಾರ ಸ್ಥಾನಗಳು, ಎಸೆದು=ತೇಜಸ್ಸಿನಿಂದಕೂಡಿ, ಇರ್ದವು= ಇದ್ದವು.
ತಾತ್ಪರ್ಯ:- ನೋಡಿ ಅತ್ಯಾನಂದಪಟ್ಟು ಮತ್ತೆ ಸ್ವಲ್ಪದೂರ ನಡೆಯಲಾಗಿ ವ್ಯಾಪಾರಸ್ತರ ಅಂಗಡಿಗಳು ಕಾಣಿಸಿದವು. ಅವುಗಳಲ್ಲಿ ವಜ್ರ ವೈಡೂರ್ಯಾದಿ ನವರತ್ನಗಳನ್ನೂ ಸುವರ್ಣದ ರಾಶಿಯನ್ನೂಹಾಕಿಕೊಂಡು ಅಳಕಾಪಟ್ಟಣದ ಅರಸನೂ ಧನಪತಿಯೂ ಆದ ಕುಬೇರನೇ ಭೂಲೋಕದ ಜನರಿಗೆಲ್ಲಾಭಂಗಾರದ ಪರೀಕ್ಷೆಯನ್ನು ತೋರುತ್ತಿರುವುದು ಈಕ್ಷಿಸುತ್ತ ಸ್ವಲ್ಪ ಕಾಲವನ್ನು ಕಳೆದನು.
ದಾನವಧ್ವಂಸಿಗೀ ದ್ವಾರಕಾಪುರಿ ರಾಜ।
ಧಾನಿ ಗಡ ಸಕಲವೈಭವದೊಳಾತನ ರಾಣಿ।
ತಾನಿರದಿಹಳೆ ಲಕ್ಷ್ಮಿ ಮೇಣಿವಳುಮರಸಿಯಲ್ಲವೆ ಧರಣಿ ತನ್ನೊಳಿರ್ದ ॥
ನಾನಾ ಸುವಸ್ತುಗಳನೊದವಿಸದಿಹಳೆ ಚೋದ್ಯ।
ಮೇನೆನೆ ವಣಿಗ್ವಾಟಪಂಙ್ತಿಗಳ್ ಶೋಭಾಯ ।
ಮಾನವಾದುವು ರಾಜಮಾರ್ಗದೊಳ್ ಬಹಳ ಧನಸಂಪತ್ಸಮಾಜದಿಂದೆ॥೧೪॥
ದಾನವ= ದನುವೆಂಬುವಳ ಗರ್ಭದಲ್ಲಿ ಜನಿಸಿದ ಅಸುರರನ್ನು, ಧ್ವಂಸಿಗೆ= ಸಂಹಾರಮಾಡಿದ ಕೃಷ್ಣಸ್ವಾಮಿಗೆ, ಈ ದ್ವಾರಕಾಪುರಿ = ಈಶದ್ವಾರಕಾನಗರವು, ರಾಜಧಾನಿಗಡ= ಮುಖ್ಯಸ್ಥಳವಲ್ಲವೆ, ಆದಪ್ರಯುಕ್ತ, ಸಕಲ= ಎಲ್ಲಾವಿಧವಾದ,ವೈಭವದೊಡನೆ= ಐಶ್ವರ್ಯದಿಂದ, ಆತನ= ಆ ಸ್ವಾಮಿಯ, ರಾಣಿ= ಅರಸಿಯಾದ ಶ್ರೀಯು, ತಾನು, ಇರದೆ= ನೆಲೆಯಾಗದೆ, ಇಹಳೆ= ಇದ್ದಾಳೆಯೆ, ಮೇಣ್= ಅಲ್ಲದೆ, ಧರಣಿ= ಇಳೆಯು, ಅರಸಿಯಲ್ಲವೆ= ಪಟ್ಟಮಹಿಷಿಯಲ್ಲವೆ, ಆದ್ದರಿಂದ =ಆದ ಕಾರಣ, ತನ್ನೊಳು= ಧನದ ಹೊರೆ ಎಂಬ ತನ್ನಲ್ಲಿ,ನಾನಾವಸ್ತುಗಳನು= ಬಗೆಬಗೆಯಾದ ಪುರಳ್ಗಳನ್ನು, ಒದವಿಸದೆ= ಒಟ್ಟುಗೂಡಿಸಿ ಈಯದೆ, ಇಹಳೆ= ಇರುವಳೆ, ಚೋದ್ಯಂ= ಅಚ್ಚರಿಯು, ಏನು= ಎನಿಸಿರುವುದು, ಎನೆ= ಎಂಬರೀತಿಯಾಗಿ, ವಣಿಕ್=ವರ್ತಕರ, ವಾಟ= ವ್ಯಾಪಾರಸ್ಥಳಗಳ, ಪಂಙ್ತಿಗಳು= ಶ್ರೇಣಿಗಳು, ರಾಜಮಾರ್ಗದೊಳು= ದೊಡ್ಡ ದೊಡ್ಡ ಬೀದಿಗಳಲ್ಲಿ, ಬಹಳ= ಹೆಚ್ಚಾದ, ಧನ=ದ್ರವ್ಯದ, ಸಂಪತ್ ಐಸಿರಿಯು, ಸಮಾಜದಿಂದ= ಸಮುದಾಯದಿಂದ, ಶೋಭಾಯಮಾನಂ= ಥಳಥಳಿಸುವುದು, ಆದವು= ಆಗಿದ್ದವು.
ಅ॥ವಿ॥ ರಾಜಧಾನಿ= ರಾಜನು ವಾಸಮಾಡತಕ್ಕ ಪಟ್ಟಣ, ಸಕಲವಾದ ವೈಭವ(ವಿ. ಪೂ) ಬಹಳವಾದ ಧನ(ವಿ.ಪೂ.) ಬಹಳ ಧನದ ಸಂಪತ್(ಷ.ತ.) ಬಹಳ ಧನದ ಸಂಪತ್ತಿನ ಸಮಾಜ(ಷ. ತ.)
ತಾತ್ಪರ್ಯ:-ಅಸುರಾಂತಕನಾದ ಶ್ರೀಕೃಷ್ಣಸ್ವಾಮಿಗೆಲಕ್ಷ್ಮಿಯೂ ಭೂದೇವಿಯೂ ಪತ್ನಿಯರಾದ್ದರಿಂದ ಆ ಮಹಾನುಭಾವನಿಗೆ ಐಶ್ವರ್ಯಕ್ಕರೆಯೇನಿರುವುದೆಂಬುದಾಗಿ ಭ್ರಾಂತಿಗೊಳಿಸುವ ಚಿನಿವಾರದ ಗುಂಪುಳ್ಳ ದ್ವಾರಕಾ ನಗರವಂ ನೋಡಿ ಅತ್ಯಾನಂದವನ್ನು ಹೊಂದಿ ಮುಂದೆ ಸ್ವಲ್ಪದೂರ ಪ್ರಯಾಣಮಾಡಲು.
ಸವಿಯೆ ಪ್ರಿಯರಾಗಮದ ರಾಗಮದರಾಗ ಮದ।
ನವಿಲಾಸವೆಂದು ತಾಂಬೂಲಮಂ ತೋರ್ಪರ್ ಮು।
ಡಿವೊಡೆ ಬೇಕಾದಲರ್ಕಾದಲರ್ಕಾದಲಕ್ಕಂಗಜಾಹವದೊಳೆಂದು॥
ನವಸುಗಂಧಾಮೋದಕುಸುಮಂಗಳಂ ತೋರಿ।
ಸುವರೊಂದುವೇಕಾಂತಕಾಂತಕಾಂತರನೊಲಿಸ।
ಲಿವು ಬಲ್ಲುವೆಂದು ಪರಿಮಳದ ಕರಡಿಗೆಗಳಂ ತೋರ್ಪರ್ ಪಲರ್ ವಿಟರ್ಗೆ॥೧೫॥
ಪ್ರತಿಪದಾರ್ಥ :- ಪಲರ್= ಹಲವು ಮಂದಿ ವೇಶ್ಯಾಂಗನೆಯರು, ವಿಟರ್ಗೆ= ಹಾದರತನವನ್ನು ಬಲ್ಲವರಿಗೆ, ಸವಿಯೆ=
ಅಡಿಕೆಲೆ ಹಾಕಿಕೊಂಡರೆ, ಪ್ರಿಯ= ಕಾಮುಕರಾದ ಸ್ತ್ರೀ ಪುರುಷರ, ರಾಗ= ವಿಶ್ವಾಸದ, ಮದರಾಗ= ಪ್ರಾಯಸಂಬಂಧವಾದ ಪ್ರೇಮದ, ಮದರಾಗ = ವಿಶ್ವಾಸಪೂರ್ವಕವಾದ ಆಹ್ಲಾದದ ,ಮದಿಸಿದ= ಕೊಬ್ಬಿದ, ಮದನ= ಮೀನಕೇತನನ, ವಿಲಾಸವೆಂದು= ಪ್ರೇಮಕಲಹವುಳ್ಳದ್ದೆಂದು, ಅಲ್ಲದೆ,ಪ್ರಿಯಸ್ನೇಹಿತರ, ಆಗಮದ= ಸಮೀಪಸ್ಥರಾಗುವುದರಿಂದೊಗೆವ, ರಾಗ= ವಿಶ್ವಾಸದಿಂದ ಲಭಿಸಿದ, ಮದರಾಗ= ಪ್ರಾಯಸಂಬಂಧವಾದಸರಸಸಲ್ಲಾಪಗಳನ್ನುಳ್ಳ,ಮದನ= ಮಾರನ, ವಿಲಾಸವೆಂದು= ಹಾಸ್ಯದ ನಿಧಿಯೆಂದು, ತಾಂಬೂಲಮಂ= ವೀಳಯವನ್ನು, ತೋರ್ಪರು= ಗೋಚರಪಡಿಸುವರು, ತಾಂಬೂಲವು ತಮ್ಮ ಅಂತರಾಭಿಪ್ರಾಯವನ್ನು ಪ್ರಿಯನಿಗೆ ತೋರ್ಪಡಿಸುವುದಕ್ಕೂ, ಅವನ ಮನಸ್ಸನ್ನು ತಮ್ಮ ಕಡೆಗೆಳೆದುಬಿಡುವುದಕ್ಕೂಸಹಾಯಕಾರಿಯಾದ್ದರಿಂದ, ವೀಳೆಯದೆಲೆ ಅಡಿಕೆಪುಡಿ ಮೊದಲಾದ ಮನ್ಥೋದ್ರೇಕ ವಸ್ತುಗಳನ್ನು ತೋರಿಸುತ್ತಿದ್ದರೆಂದು ಭಾವವು. ಮುಡಿದರೆ= ಪುಷ್ಪವನ್ನು ಜಡೆಯಲ್ಲಿಟ್ಟುಕೊಂಡರೆ, ಅಂಗಜಾಹವದೊಳು= ಮಾರನಾಟದಲ್ಲಿ,ಎಂದರೆ ಸ್ತ್ರೀಪುರುಷರಸಂಯೋಗಕಾಲದಲ್ಲಿ, ಬೇಕಾದ= ಅವಶ್ಯಕವಾದ, ಅರಲ್= ಪುಷ್ಪಗಳ, ಕಾದಲಿಕ್ಕೆ= ಹೋರಾಟಕ್ಕೆ, ಕಾದ=ರತಿಯಿಂದ ತೀಕ್ಷ್ಣಮಾದ, ಅಲರ್= ಶರವು, ಎಂದು=ಎಂಬತೆರನಾಗಿ, ನವ=ನೂತನವಾದ, ಸುಗಂಧ= ಪರಿಮಳದ, ಆಮೋದ= ಸುರಭಿಯುಳ್ಳ, ಕುಸುಮಂಗಳಂ= ಪುಷ್ಪಗಳನ್ನು ತೋರಿಸುವರು=ಗೋಚರಪಡಿಸುವರು, ತಾಂಬೂಲದಂತೆ= ಇವೂ ಮನ್ಮಥಾವಸ್ಥೆಯನ್ನು ಹೆಚ್ಚಿಸತಕ್ಕವು, ಒಲಿದು= ಪ್ರೀತಿಸಿ, ಏಕಾಂತ= ಅಂತರಂಗದಲ್ಲಿ, ಕಾಂತ= ಸುಂದರವಾದ, ಕಾಂತ= ಕಾಮುಕರನ್ನು, ಒಲಿಸಲು= ತಮ್ಮ ಬಲೆಗೆ ಸಿಕ್ಕಿಸಿಕೊಳ್ಳಲು, ಇವು= ಈ ಕರಡಿಗೆಗಳು, ಬಲ್ಲವು= ಅರಿತಿರುವವು, ಎಂದು= ಎಂಬತೆರನಾಗಿ, ಪರಿಮಳದ= ಪರಿಮಳ ದ್ರವ್ಯಗಳಿಂದ ಕೂಡಿದ, ಕರಡಿಗೆಗಳಂ= ಡಬ್ಬಿಗಳನ್ನು, ತೋರ್ಪರು= ಕಾಣಿಸುತ್ತಿರುವರು, ತಾಂಬೂಲದ ಕರಡಿಗೆಯ ಧ್ವನಿಯು ಕೂಡ ಸ್ತ್ರೀಪುರುಷರ ಕಾಮವನ್ನು ಹೆಚ್ಚಿಸತಕ್ಕವು.
ಅ॥ವಿ॥ ಪರಿಮಳ ವಸ್ತುಗಳು-ಅಡಿಕೆ,ಎಲೆ, ಜಾಕಾಯಿ, ಲವಂಗ, ಜಾಪತ್ರೆ, ಕುಂಕುಮಕೇಸರಿ, ಪಚ್ಚೆಕರ್ಪೂರ, ಕತ್ತುರಿಯೇ ಮೊದಲಾದವು.
ತಾತ್ಪರ್ಯ :- ಮುಂಭಾಗದಲ್ಲಿ ವೇಶ್ಯಾಸ್ತ್ರೀಯರ ಬೀದಿಯು ಸಿಕ್ಕಲಾಗಿ ಭೀಮಸೇನನು ಆ ಪಥವನ್ನೇ ಹಿಡಿದು ಹೋದನು. ಅಲ್ಲಿ ಪ್ರತಿಮನೆಯ ಬೀದಿಯ ಬಾಗಿಲಲ್ಲಿಯೂ ಚಲ್ವೆಯರೂ ನವಯುವತಿಯರೂ ಆದ ವಾರಾಂಗನೆಯರು ತಮ್ಮ ತಮ್ಮ ಕೈಗಳಲ್ಲಿ ಕಾಮುಕರನ್ನು ಮರುಳು ಮಾಡಲು ಸಾಧಕಮಾದ ತಾಂಬೂಲವನ್ನೂ, ಪುಷ್ಪವನ್ನೂ,ಅಡಿಕೆಯ ಕರಡಿಗೆಗಳನ್ನೂ ಪಿಡಿದು ಬೀದಿಯ ಬಾಗಿಲನ್ನಲಂಕರಿಸಿ ನಿಂತು ದಾರಿಯಲ್ಲಿ ಬರುವ ಕಾಮುಕರನ್ನು ವಿಭ್ರಾಂತರನ್ನಾಗಿ ಮಾಡುತಿತ್ದ್ದರು.
ನಸುನಗೆಯೊಳರೆವಿರಿದ ಮಲ್ಲಿಗೆಯನುರೆಪೊಳೆವ।
ದಶನದೊಳ್ ಕುಂದಮಂ ಮೊಗದೊಳರವಿಂದಮಂ ।
ಮಿಸುಪ ನಳಿನತೋಳೊಳ್ ಶಿರೀಷಮಾಲೆಯನೆಸೆವನಾಸದೊಳ್ ಸಂಪಗೆಯನು॥
ಎಸಳ್ಗಣ್ಣೊಳುತ್ಪಲವನುಗುರ್ಗುಳೊಳ್ ಕೇತಕಿಯ।
ನೊಸೆದಿರಿಸಿ ಕೊಂಡುಳಿದಲರ್ಗಳಂ ಮಾರ್ವವೊಲ್ ।
ಕುಸುಮದ ಪಸರದೊಳೊಪ್ಪಿದರಲ್ಲಿಪೂವಡಿಗವೆಣ್ಗಳದನೇವೇಳ್ವೆನು॥೧೬॥
ಪ್ರತಿಪದಾರ್ಥ:- ನಸುನಗೆಯೊಳು= ಕಿರುನಗೆಯಿಂದ, ಅರೆಬಿರಿದ= ಅರ್ಧವಿಕಸಿತವಾದ, ಮಲ್ಲಿಗೆಯನು= ಮಲ್ಲಿಕಾ ಪುಷ್ಪವನ್ನು, ಉರೆ= ಹೆಚ್ಚಿಗಿ, ಪೊಳೆವ= ಪ್ರಕಾಶಿಸುವ, ದಶನದೊಳ್= ದಂತದಲ್ಲಿ, ಕುಂದಮಂ= ಕುಂದಮಲ್ಲಿಗೆ ಹೂವನ್ನು, ಮೊಗದೊಳ್= ಆಸ್ಯದಲ್ಲಿ,ಅರವಿಂದಮಂ= ತಾವರೆಯನ್ನು, ಮಿಸುಪ=ಥಳಥಳಿಸುವ, ನಳಿತೋಳ್ಗಳೊಳ್= ತಾವರೆ ದಂಟನ್ನು ಹೋಲುವ ಕೈಗಳಲ್ಲಿಯೂ, ಶಿರೀಷಮಾಲೆಯನು= ಗಿರಿಮಲ್ಲಿಕಾ ಪುಷ್ಪಗಳ ಸರವನ್ನು, ಎಸೆವ= ಪ್ರಕಾಶಿಸುವ, ನಾಸದೊಳ್= ಮೂಗಿನಲ್ಲಿ, ಸಂಪಿಗೆಯನು= ಚಂಪಕಪುಷ್ಪವನ್ನು, ಅಥವಾ ಮೊಗ್ಗನ್ನು, ಎಸಳ್ಗಂಣೊಳು= ತಾವರೆದಳದಂತೆ ಅತಿವಿಶಾಲವಾದ ನಯನದಲ್ಲಿ,ಉತ್ಪಲವನು= ಕಪ್ಪು ಕಮಲವನ್ನು, ಉಗುರ್ಗಳೊಳ್= ನಖಗಳಲ್ಲಿ, ಕೇತಕಿಯನು= ಕೇತಕಿಪುಷ್ಪವನ್ನು,ಒಸೆದು= ಪ್ರೀತಿಯಿಂದ, ಎರಿಸಿಕೊಂಡು= ಹತ್ತಿರದಲ್ಲಿ ಸೇರಿಸಿಕೊಂಡು, ಉಳಿದ= ಮಿಕ್ಕ, ಅಲರ್ಗಳಂ= ಪುಷ್ಪಗಳನ್ನು, ಮಾರ್ವವೋಲ್= ಖರೀದಿಗೆ ಕೊಡುವರೋ ಎಂಬಂತೆ, ಕುಸುಮಪಸರದೊಳ್= ಪುಷ್ಪಂಗಳ ವ್ಯಾಪಾರಸ್ಥಳದಲ್ಲಿ, ಪೂವಡಿಗವೆಂಗಳು= ಹೂವಾಡಗಿತ್ತಿಯರು, ಒಪ್ಪಿದರು= ಕಾಂತಿಯುಕ್ತರಾದರು, ಅಲ್ಲಿ = ಆ ದ್ವಾರಕಾ ನಗರದಲ್ಲಿ, ಅದನು= ಆ ಸ್ತ್ರೀಯರ ಚಲುವನ್ನು, ಏವೇಳ್ವೆನು= ಎಂತು ಬಣ್ಣಿಸಲಿ.
ಆ॥ವಿ॥ ಆ ನಾರಿಯರು ಪುಷ್ಪಗಳಂತಿರುವ ಅತಿಮನೋಹರವಾದ ದೇಹಕಾಂತಿಯಿಂದ ಹೊಳೆಯುತ್ತಿದ್ದರು.
ತಾತ್ಪರ್ಯ = ಇನ್ನು ಸ್ವಲ್ಪದೂರ ನಡೆತರಲಾಗಿ ಅಲ್ಲಿ ಹೂವಾಡಿಗರ ಅಂಗಡಿಗಳಲ್ಲಿ ಕುಳಿತಿರುವ ನಾರಿಯರು ಕಿರುನಗೆಯಿಂದ ಆಗತಾನೆ ವಿಕಸಿಸಲಿರುವ ಮಲ್ಲಿಕಾಪುಷ್ಪವನ್ನೂ ಹೀಯಾಳಿಸುವಂತೆಯೂ, ಶುಭ್ರವಾದ ಹಲ್ಲುಗಳ ಸಾಲ್ಗಳಿಂದ ಕುಂದಕುಟ್ಮಲವನ್ನು ಕೂಡ ಅಲ್ಲಗಳೆಯುವಂತೆಯೂ, ತಮ್ಮ ಮುಖದಿಂದ ಬೆಳ್ದಾವರೆಯನ್ನು ತಿರಸ್ಕರಿಸುವಹಾಗೂ ಇದ್ದರು. ಅದೂ ಅಲ್ಲದೆ ಹೂವಾಡಗಿತ್ತಿಯರು ತಾವರೆಯ ದಂಟನ್ನು ಹೋಲುವ ತಮ್ಮ ಬಾಹುಗಳಲ್ಲಿ ಗಿರಿಮಲ್ಲಿಕಾ ಮಾಲಿಕೆಯನ್ನುಳ್ಳವರಾಗಿ ಸಂಪಿಗೆಯ ಮೊಗ್ಗನ್ನು ಹೋಲುವ ನಾಶಿಕವನ್ನೂ, ಕಮಲಪತ್ರವನ್ನು ನೋಡಿ ನಗುವಂತೆ ಇರುವ ವಿಶಾಲನೇತ್ರಂಗಳನ್ನೂ, ಹೊಂದಿ ಕೇದಿಗೆ ಹೂವಿನ ಸೊಬಗನ್ನು ಕಡೆಯೆಂದು ತೋರ್ಪಡಿಸುವ ನಖಗಳಿಂದಲೂ, ಕಪ್ಪು ತಾವರೆ ಹೂವೆಂಬ ಭ್ರಾಂತಿಯನ್ನುಂಟುಮಾಡುವ ನಯನಂಗಳಿಂದಲೂ ಕೂಡಿಪ್ರಕಾಶಿಸುತ್ತಿದ್ದರು.
ಕಬ್ಬುವಿಲ್ ತುಂಬಿವೆದೆ ಪೂಸರಲ್ ಪೂಣ್ದಿಸಲ್ ।
ನಿಬ್ಬರಮಿದೆಂದು ಮದನಂ ಮಾಲೆಗಾರ್ತಿಯರ।
ಹುಬ್ಬೆಂಬ ಚಾಪಮಂ ಕುರುಳೆಂಬ ನಾರಿಯಂ ಕಣ್ಣೆಂಬ ಕೂರ್ಗಣೆಯನು॥
ಉಬ್ಬರದ ಸಾಹಸದೊಳಳವಡಿಸಿಕೊಂಡು ಬಿಡ।
ದಬ್ಬರಿಸಿ ಸೋವಿ ತಂದವರ ಬಲ್ಮೊಲೆಯೆಂಬ ।
ಹೆಬ್ಬೆಟ್ಟದೆಡೆಯಿರುಬಿನೊಳ್ ಕೆಡಪುತಿಹನಲ್ಲಿ ವಿಟ ಪಕ್ಷಿಮೃಗಕುಲವನು॥೧೭॥
ಪ್ರತಿಪದಾರ್ಥ:- ಮದನಂ=ಮಾರನು, ಕಬ್ಬುವಿಲ್ = ಕಬ್ಬಿನ ಚಾಪವನ್ನು, ತುಂಬಿ= ಭೃಂಗಗಳು, ಹೆದೆ= ಸಿಂಜನಿಯು, ಪೂ= ಅರಲು, ಸರಳ್= ಅಲಗು ಮೊದಲಾದುವನ್ನು, ಈ ತೆರನಾಗಿ, ಪೂಣ್ದು= ಪ್ರತಿಜ್ಞಿಸಿ, ಎಸಲು= ಪ್ರಯೋಗಿಸಲು, ನಿಬ್ಬರಂ= ಅಸದಳವು, ಇದು, ಎಂದು=ಎಂಬುದಾಗಿ,ಬಗೆದು, ಮಾಲೆಗಾತಿಯರ= ಹೂವಾಡಗಿತ್ತಿಯರ, ಹುಬ್ಬೆಂಬ= ಹುಬ್ಬೆನ್ನತಕ್ಕ, ಚಾಪಮಂ= ಧನುಸ್ಸನ್ನು ಕುರುಳೆಂಬ= ಮುಂಭಾಗದ ಕೇಶಪಾಶಂಗಳೆಂಬ, ನಾರಿಯಂ= ಹಗ್ಗವನ್ನ,ಕಣ್ಣೆಂಬ=ನಯನವೆಂಬ, ಕೂರ್ಗಣೆಯನು= ಹರಿತವಾದ ಅಂಬನ್ನು, ಉಬ್ಬರದ= ಅತ್ಯಧಿಕವಾದ, ಸಾಹಸದೊಳು= ಶೌರ್ಯದಿಂದ, ಅಳವಡಿಸಿ-
ಕೊಂಡು= ನೇರ್ಪಡಿಸಿಕೊಂಡು, ಬಿರಿದು=ಅಧಿಕವಾಗಿ, ಅಬ್ಬರಿಸಿ= ಘರ್ಜಿಸಿ, ಸೋವಿ=ಧ್ವನಿಗೈದು, ತಂದು= ಹೆದರಿಕೆಯ-
ನ್ನುಂಟುಮಾಡಿ ಸಾಗಿಸಿಕೊಂಡುಬಂದು, ಅವರ=ಆ ನಾರಿಯರ, ಬಲ್ಮೊಲೆಯೆಂಬ= ಪೀವರ ಸ್ತನಂಗಳೆನ್ನತಕ್ಕ, ಹೆಬ್ಬೆಟ್ಟದ= ಅಗಾಧವಾದ ಗಿರಿಗಳ, ಎದೆ=ಉರಸ್ಸು, ಎನ್ನುವ, ಇರುಬಿನೊಳ್= ಇಕ್ಕಟ್ಟಿನಲ್ಲಿ, ಅಲ್ಲಿ= ಆ ನಗರದಲ್ಲಿ, ವಿಟರ= ಕಾಮುಕರ, ಅಕ್ಷಿ= ನಯನಂಗಳೆಂಬ, ಮೃಗಕುಲವನು= ಮೃಗಗಳ ಗುಂಪನ್ನು, ಕೆಡಹುತಿಹನು= ಕೆಳಗೆ ಬೀಳುವಂತೆ ಮಾಡುತ್ತಿರುವನು.
ತಾತ್ಪರ್ಯ:- ಬೇಟೆಯಾಡುವ ಬೇಡರವನು ಅರಣ್ಯವಾಸಿಗಳಾದ ಮೃಗವಿಂಡನ್ನು ಸೂರೆಮಾಡಲು ಧನುಸ್ಸು, ಬಾಣ, ದಾರ, ಮೊದಲಾದವನ್ನು ಸಿದ್ಧಪಡಿಸಿಕೊಂಡು, ಕೈಗೆ ಸಿಕ್ಕಿದ ಮೃಗಗಳನ್ನು ಕೊಳ್ಳೆ ಹೊಡೆಯುತ್ತಿರುವಂತೆ, ಮಾರನೆಂಬ ವ್ಯಾಧನು ತನ್ನ ಪುಷ್ಪಬಾಣಕ್ಕೆ ಸಾಧನಂಗಳಾದ ಕಬ್ಬು, ಬಾಣ,ಅಳಿ, ನಾರಿ, ಹೂ ಮೊದಲಾದವನ್ನೆಲ್ಲಾ ನಿರರ್ಥಕಂಗಳೆಂದು ಬಗೆದು ಆ ದ್ವಾರಕಾನಗರದ ಹೂವಾಡಿಗರ ಬೀದಿಯಲ್ಲಿ ಹೂವನ್ನು ಮಾರುತ್ತಿರುವ ನಾರಿಯರ ಹುಬ್ಬೆಂಬ ಧನುಸ್ಸಿಗೆ ಅವರ ಮುಂಗು-
ರುಗಳೆನ್ನತಕ್ಕ ದಾರವನ್ನುಬಿಗಿದು, ನಯನಂಗಳೆನ್ನುವ ಅಲಗನ್ನು ತಗಲಿಸಿ,ಬಹೈ ಜಾಗ್ರತೆಯಾಗಿ ಕಾಮುಕರ ನಯನಂಗಳೆಂಬ ಮೃಗಗಳನ್ನು ಹೊಡೆದು ಆರ್ಭಟದಿಂದ ಬೆದರಿಸಿ ಎಳತಂದು ಆ ಹೂವಾಡಗಿತ್ತಿಯರ ಪೀವರಸ್ತನಂಗಳ ಮಧ್ಯಭಾಗದಲ್ಲಿ ಕೆಡವುತ್ತಿರೈವನೊ ಎಂಬಂತೆ ವಿಟಪುರುಷರು ಕಾಮಾತುರರಾಗಿ ಆ ನಾರಿಯರನ್ನೆ ನೋಡಿ ನೋಡಿ ಆನಂದ ಪಡುತ್ತಿದ್ದರು.
ಮಲ್ಲಿಗೆಯಲರ್ವಿಡಿದು ಕೆಂಜಾದಿಯೆಂದೀವ ।
ರುಲ್ಲಾಸದಿಂದೆ ನೀಲೋತ್ಪಲವನೆಳನಗೆಯ ।
ಸೊಲ್ಲಿಂದೆ ಕುಮುದಮೆಂದುಸಿರುವರ್ ಸುರಹೊನ್ನೆಯಲರ ಮಾಲೆಯನೊಪ್ಪುವ ॥
ಸಲ್ಲಲಿತ ಕಾಯದ ಸರಿಸಕೆತ್ತಿ ಸುರಗಿಯೆಂ।
ದೆಲ್ಲರ್ಗೆ ತೋರಿಸುವರರಣ ತಾಮರಸಮಂ।
ಚೆಲ್ಲೆಗಣ್ಗೊನೆಯೊಳೀಕ್ಷಿಸಿ ಪುಂಡರೀಕಮೆಂದಚ್ಚರಿಪರೆಳವೆಣ್ಗಳು॥೧೮॥
ಪ್ರತಿಪದಾರ್ಥ:- ಮಲ್ಲಿಗೆಯಲರ್=ಮಲ್ಲಿಕಾಪುಷ್ಪವನ್ನು, ಪಿಡಿದು= ಹಿಡಿದುಕೊಂಡು, ಕೆಂಜಾಜಿಯಿಂದು= ರಕ್ತವರ್ಣವಾದ ಜಾಜಿಪುಷ್ಪವೆಂದು, ಈವರು= ಕೊಡುತ್ತಿರುವರು, (ಅಂಗನೆಯರ ಕರವು ನವಪಲೂಲವಗಳಂತೆ ರಕ್ತವರ್ಣವಾಗಿದ್ದುದರಿಂದ ಬಿಳುಪಾದಹೂವನ್ನೂಕೂಡ ಕೆಂಪಗೆ ಕಾಣುವಂತೆ ಮಾಡಿತೆಂದು ಊಹೆ) ಉಲ್ಲಾಸದಿಂದ= ಉತ್ಸಾಹದಿಂದ, ನೀಲೋತ್ಪಲವನೆ= ಕಪ್ಪು ಕಮಲವನ್ನೇ, ಎಳನಗೆಯ= ಮಂದಸ್ಮಿತದ, ಸೊಲ್ಲಿನಿಂದ= ನುಡಿಯಿಂದ, ಕುಮುದವೆಂದು= ಪುಂಡರೀಕವೆಂದು, ಉಸುರುವರು= ಹೇಳುವರು, ( ಕಿರುನಗೆಯ ಧವಳವರ್ಣದ ಕಾಂತಿಯು ಕನ್ನೈದಿಲೆಯ ಕೃಷ್ಣವರ್ಣವನ್ನು ಮರೆಮಾಚಿತು) ಸುರಹೊನ್ನೆಯ= ಸುರಹೊನ್ನೆ ಎನ್ನತಕ್ಕ, ಅರಳಮಾಲೆಯಲ್ಲಿ= ಪುಷ್ಪಮಾಲಿಕೆಯಲ್ಲಿ, ಒಪ್ಪುವ= ಮೆಚ್ಚುವಂಥಾ, ಸಲ್ಲಲಿತ= ಕೋಮಲವಾದ, ಕಾಯದ= ದೇಹಕ್ಕೆ, ಸರಿಸ= ಸಮವಾಗಿ, ಕೆತ್ತು= ಒಟ್ಟುಗೂಡಿಸಿ, ಸುರಗಿಯೆಂದು= ಸುರಗಿಯ ಪುಷ್ಪವೆಂದು, ಎಲ್ಲರಿಗೆ= ಎಲ್ಲಾ ಜನರಿಗೂ, ತೋರಿಸುವರು= ಕಾಣಿಸುತ್ತಾರೆ, ಅರುಣತಾಮರಸವಮಂ= ರಕ್ತವರ್ಣದ ಕಮಲಪುಷ್ಪವನ್ನು, ಚೆಲ್ಲೆಕಣ್ಗೊನೆಯೊಳು= ಚಪಲವಾದ ಕಟಾಕ್ಷ ವೀಕ್ಷಣದಿಂದ, ಈಕ್ಷಿಸಿ = ನಿರುಕಿಸಿ, ಪುಂಡರೀಕಮೆಂದು= ಸಿತಾಂಭೋಜಾತಂಗಳೆಂಬುದಾಗಿ, ಎಳವೆಣ್ಗಳು= ಯೌವನ ಸ್ತ್ರೀಯರು, ಎಚ್ಚರಿಸುವರು= ಎಚ್ಚರಿಕೆಯನ್ನುಂಟುಮಾಡುವರು.
ಅ॥ವಿ॥ ಕೆಚ್ಚೆನೆಜಾಜಿ( ವಿ. ಪೂ ) ನೀಲೋತ್ಪಲ ( ಗುಣಸಂಧಿ)
ತಾತ್ಪರ್ಯ:- ಮನ್ಮಥಾವಸ್ಥೆಯಿಂದ ಮರುಳ್ಗೊಂಡ ಆ ಹೆಂಗಸರು ಅಲ್ಲಿಗೆ ಬರತಕ್ಕ ವ್ಯಾಪಾರಸ್ಥರಿಗೆ ಮಲ್ಲಿಮಲ್ಲಿಕಾ ಪುಷ್ಪವನ್ನು ಚಿಗುರಿನಂತಿರುವ ಕರದೊಳ್ಪಿಡಿದು ಜಾತೀ ಕುಸುಮವೆಂದು ಕೊಡುತ್ತಲೂ, ಮುಗುಳ್ನಗೆಯ ಕಾಂತಿಯು ಕರೀತಾವರೆಯ ಮೇಲೆ ಬೀಳಲು ಅದನ್ನು ಬೆಳ್ತಾವರೆಯೆಂದು ನುಡಿಯುತ್ತಲೂ, ಸುರಹೊನ್ನೆಯ ಹೂವಿನ ಹಾರವನ್ನು ತಮ್ಮ ದೇಹಕಾಂತಿಯಿಂದ ಸುರಗಿಯ ಹೂವೆಂಬುದಾಗಿ ತೋರಿಸುತ್ತಲೂ ರಕ್ತಛಾಯೆಯ ಕಮಲವನ್ನು ಓರೆಗಣ್ಣಿನಿಂದ ನೋಡಿ ಬೆಳ್ದಾವರೆ ಎಂದು ಹೇಳಿ ಅಚ್ಚರಿಗೊಳಿಸುತ್ತಿದ್ದರು.
ಪಸರದೊಳ್ ಮಾರ್ವಲರ್ಗಳ ಸರಂಗಳ್ಗೆ ಸೊಗ।
ಯಿಸುವ ಸುಯ್ಯೆಲರ ಕಂಪಿಂದೆ ಕಂಪೇರಿಸುವ।
ರೊಸೆದು ಕೋಮಲದ ತನುವಲ್ಲರಿಯ ಸೊಂಪಿಂದೆ ಸೊಂಪುದೋರಿಸುತಿರ್ಪರು॥
ಲಸದವಯವಂಗಳಾಕೃತಿಯ ಚೆಲ್ವಿಕೆಯಿಂದೆ ।
ಪೊಸತೆನಿಪ ಚೆಲ್ವಿಕೆಯನೆಯ್ದೆ ನಲವಿಂದೆ ಕಾ।
ಣಿಸುವರಲ್ಲಿಯ ಮಾಲೆಗಾರ್ತಿಯರ್ ಮದನಶರಮೂರ್ತಿಯರ್ ವಿರಹಿಗಳ್ಗೆ॥೧೯॥
ಪ್ರತಿಪದಾರ್ಥ:- ವಿರಹಿಗಳ್ಗೆ= ಕಾಮಾತುರರಾದವರಿಗೆ, ಮದನಶರಮೂರ್ತಿಯರು- ಮದನ=ಮನ್ಮಥನ, ಶರ= ಸರಲ್ಗಳ, ಮೂರ್ತಿಯರು= ಆಕೃತಿಯುಳ್ಳ, ಮಾಲೆಗಾತಿಯರು= ಹೂವಾಡಗಿತ್ತಿಯರು, ಪಸರದೊಳ್= ಪ್ರಕಟನೆಯಿಂದ, ಮಾರ್ವ= ವಿಕ್ರಯಿಸತಕ್ಕ, ಅಲರ್ಗಳ= ಪುಷ್ಪಂಗಳ, ಸರಂಗಳ್ಗೆ= ಹಾರಂಗಳಿಗೆ, ಸೊಗಯಿಸುವ=ಅಲಂಕಾರವನ್ನುಂಟುಮಾಡತಕ್ಕ,ಸು
ಸುಯ್ಯಲರ= ನಿಟ್ಟುಸಿರಿನ, ಕಂಪಿಂದ= ಆಮೋದದಿಂದ, ಕಂಪೇರಿಸುವ= ಹೆಚ್ಚುಸುರಭಿಯನ್ನುಂಟುಮಾಡುವರು, ಕೋಮಲಿತ= ಬಹಳ ಮೃದುವಾದ, ತನುವಲ್ಲರಿಯ = ಎಳೆವಳ್ಳಿಯಂತಹ ದೇಹದ, ಸೊಂಪಿಂದ= ಕೋಮಲತ್ವದಿಂದ,
ಸೊಂಪುದೋರಿಸುತ= ಮಾರ್ದವವನ್ನು ಪ್ರಕಟಿಸುತ್ತ, ಇರ್ಪರು= ಇರುತ್ತಾರೆ, ಲಸತ್= ಹೊಳಹೊಳೆಯುವ, ಅವಯವ= ದೇಹದ, ಆಕೃತಿಯ= ಆಕಾರವುಳ್ಳ, ಚೆಲ್ವಿಕೆಯಿಂದ= ಅಲಂಕಾರದಿಂದ, ಪೊಸತು= ನವೀನವಾದ್ದು, ಎನಿಪ= ಎನ್ನಿಸಿಕೊಳ್ಳತಕ್ಕ, ಚಲೂವಿಕೆಯನು= ಅಲಂಕಾರವನ್ನು, ಐದೆ= ಚೆನ್ನಾಗಿ, ನಲವಿಂದ= ವಿಶ್ವಾಸದಿಂದ, ಕಾಣಿಸುವರು=ಪ್ಕಟಪಡಿಸುವರು.
ತಾತ್ಪರ್ಯ:- ತಾವು ಮಾರುವ ಹೂವಿಗೆ ತಮ್ಮ ಮೈ ಸುಗಂಧದಿಂದಕೂಡಿದ ನಿಟ್ಟುಸಿರನ್ನು ತುಂಬಿ ಸುವಾಸನೆಯನ್ನು ಹೆಚ್ಚಿಸುತ್ತಲೂ, ತಮ್ಮ ಮೃದುವಾದ ಸುಂದರಗಾತ್ರದಿಂದ ಅಲಂಕೃತವಾಗಿ, ಕಾಂತಿ ವಿಶಿಷ್ಟಗಳಾದ ಅವಯವಗಳಿಂದ ಮೆರೆಯುತ್ತ ವಿಟಪುರುಷರನ್ನು ಮೀನಕೇತನನ ಬಾಣದಿಂದ ತಪಿಸುತ್ತಿದ್ದರು.
ನಾನಾಸುವಸ್ತುಗಳ ವಿಸ್ತರವನೊಲಿದು ಪವ।
ಮಾನಾತ್ಮಜಂ ನೋಡುತೈತರಲ್ ಮುಂದೆ ಗಣಿ ।
ಕಾ ನಾರಿಯರ ಸದನಪಙ್ತಿಗಳ ಲೋವೆಗಳ ಸಾಲ್ಮೆರೆದುವಿಕ್ಕೆಲದೊಳು॥
ಏನಾದೊಡಂ ಮುನಿಮೃಗಾವಳಿಯ ಬೇಂಟೆಯಂ ।
ತಾನಾಡಲೆಂದು ಸಿಂಗರದ ಪೆಣ್ಗಾಡಿನೊಳ್।
ಮೀನಾಂಕನೃಪತಿ ಕಟ್ಟಿಸಿದ ಬೆಳ್ಳಾರಂಗಳಾಗಬೇಕೆಂಬಂತಿರೆ॥೨೦॥
ಪ್ರತಿಪದಾರ್ಥ:- ನಾನಾ ವಿಧವಿಧವಾದ, ವಸ್ತುಗಳ= ಪದಾರ್ಥಗಳ, ವಿಸ್ತಾರವನು= ವೈಶಾಲ್ಯವನ್ನು, ಪವಮಾನಾತ್ಮಜಂ= ವಾಯುಪುತ್ರನಾದ ವೃಕೋದರನು, ನೋಡುತ= ಈಕ್ಷಿಸುತ್ತ, ಐತರಲ್= ಸಮೀಪಸ್ಥನಾಗಲಾಗಿ, ಮುಂದೆ= ಅನಂತರ, ಏನಾದೊಡಂ= ಏನೇ ಆದರೂ, ಮುನಿ= ತಾಪಸರೆಂಬ, ಮೃಗಾವಳಿಯ= ಜೀವರಾಶಿಯ, ಬೇಟೆಯಂ= ಕೊಳ್ಳೆಯನ್ನು, ತಾನು= ಮನ್ಮಥನು, ಆಡಲೆಂದು= ಕ್ರೀಡಾಸುಖವನ್ನೈದಬೇಕೆಂದು, ಸಿಂಗರದ=ಅಲಂಕಾರಯುಕ್ತರಾದ, ಪೆಣ್ಗೂಡಿನೊಳ್= ಸ್ತ್ರೀಯರೆಂಬ ಮಾಡದಲ್ಲಿ, (ಗೂಡಿನಲ್ಲಿ) ಮೀನಾಂಕನೃಪತಿ= ಮದನನು, ಕಟ್ಟಿಸಿದ= ವಿರಚಿಸಿದಂಥ, ಬೆಳ್ಳಾರಂಗಳ್= ಬಂಧನದ ಗೂಡು ಅಥವಾ ಬೋನು, ಎಂಬಂತೆ= ಎಂಬತೆರನಾಗಿ, ಇರೆ=ಇರಲಾಗಿ, ಗಣಿಕಾನಾರಿಯರ= ಸೂಳೆಯರ, ಸದನ= ಗೃಹಗಳ, ಪಙ್ತಿಗಳ= ಸಾಲುಗಳ, ಲೋವೆಗಳ ಸಾಲು= ಮನೆಯಮುಂದೆ ಗೋಡೆಗೆ ಆಧಾರವಾದ ಸ್ಥಾನಗಳ ಶ್ರೇಣಿಯು, ಇಕ್ಕೆಲದೊಳು= ಎರಡು ಪಕ್ಕಗಳಲ್ಲಿಯೂ, ಮೆರೆದವು=ಥಳಥಳಿಸಿದವು.
ತಾತ್ಪರ್ಯ:- ಭೀಮಸೇನನು ವಿರಹತಾಪವನ್ನುಂಟುಮಾಡತಕ್ಕ ಹೂವಾಡಿಗರ ಬೀದಿಯಿಂದ ಮುಂದೆ ನಡೆಯಲಾಗಿ ಸೂಳೆಯರ ಮನೆಗಳ ಸಾಲ್ಗಳಿಂದ ಕೂಡಿದ ರಾಜಬೀದಿಯು ಕಾಣಿಸಲು ಇವನೂ ಅದೇ ಮಾರ್ಗವನ್ನು ಹಿಡಿದು ಬರುತ್ತಿದ್ದನು. ಆ ಬೀದಿಯು ತಾಪಸರೆಂಬ ಮೃಗಗಳನ್ನು ಬೇಟೆಯಾಡಬೇಕೆಂದು ಮನ್ಮಥನೆ ಕಟ್ಟಿಸಿದ್ದ ಬಲೆಗಳೋ ಎಂಬಂತೆ ಹೊಳೆಯುತ್ತಿತ್ತು.
ಘನಕುಚದ್ವಯಕೆ ಲೋಚನಯುಗಕೆ ಸೊಗಯಿಸುವ।
ತನುಮಧ್ಯಕಿಂಪಾದನುಣ್ದೊಡೆಗೆ ಪಡಿಗಟ್ಟು।
ವನಿತು ಸೊಬಗುಳ್ಳ ವಸ್ತುಗಳನಂಬುಜಭವಂ ಭುವನದೊಳ್ ಕಾಣೆನೆಂದು ॥
ಜನಮರಿಯೆ ಪೆರ್ಗವತೆ ಸೇರೆ ಪಿಡಿ ಕರಭಂಗ।
ಳೆನಿಪಿವರೊಳಭಿನಯಿಸಿ ತೋರಿಸಲ್ ಮೃದುಪಾಣಿ।
ವನಜಮಂ ಸೃಷ್ಟಿಸಿದನೆಂಬ ಚೆಲ್ವಿನ ಕೋಮಲೆಯರಲ್ಲಿ ಕಣ್ಗೆಸೆದರು॥೨೧॥
ಪ್ರತಿಪದಾರ್ಥ:- ಘನ= ಬಲಿತ, ಕುಚ= ಸ್ತನಗಳ, ದ್ವಯಕೆ= ಎರಡಕ್ಕೆ, ಲೋಚನ= ನಯನಂಗಳ, ಯುಗಕೆ= ಎರಡಕ್ಕೆ, ಸೊಗಯಿಸುವ= ಅಲಂಕಾರಯುಕ್ತವಾದ, ತನು= ಬಡವಾದ, ಮಧ್ಯಕೆ= ಟೊಂಕಕ್ಕೆ, ಇಂಪಾದ= ಆನಂದದಾಯಕವಾದ, ನುಣ್ದೊಡೆಗೆ= ನಯವಾದ ಮೊಣಕಾಲ ಮೇಲ್ಭಾಗಕ್ಕೆ, ಪಡಿಗಟ್ಟುವ= ಸಾಮ್ಯವಾಗುವ, ಅನಿತು= ಅದರಷ್ಟು, ಸೊಬಗುಳ್ಳ= ಸೌಂದರ್ಯವುಳ್ಳ, ವಸ್ತುಗಳನು= ಪುರುಳ್ಗಳನ್ನು, ಭುವನದೊಳ್= ಲೋಕದಲ್ಲಿ, ಕಾಣೆನು= ಗೋಚರಪಡಿಸಿಕೊಳ್ಳಲಿಲ್ಲವು, ಎಂದು= ಎಂಬತೆರದಿಂದ, ಅಂಬುಜಭವಂ= ವಿರಂಚಿಯು, ಜನವರಿಯೆ= ಲೋಗರ ದೃಷ್ಟಿಪಥವನ್ನೈದುವಂತೆ, ಪೆರ್ಗಿರಿ= ದೊಡ್ಡಬೆಟ್ಟ, ವನಜ= ತಾವರೆ, ಲತೆ= ಬಳ್ಳಿ, ಸೇರೆ= ನೀಳವಾದ ಕುಡಿತೆ, ಪಿಡಿಕರ= ಆನೆಸೊಂಡಿಲು, ಭೃಂಗಗಳ್= ದುಂಬಿಗಳು, ಎಂದು= ಎಂದು ಹೇಳಿಸಿಕೊಳ್ಳತಕ್ಕ, ಇವರೊಳು= ಈ ಕರಂಗಳಿಂದ, ಅಭಿನಯಿಸೆ= ಸಾಮ್ಯವನ್ನು ಹೇಳಿದ ವಸ್ತು ಸಮುದಾಯದಿಂದ ಮುಖ್ಯವಾದ ಪುರುಳ್ಗಳನ್ನು ಕರ ಸಂಜೆಗಳಿಂದ ಸೈಲಭಗ್ರಾಹ್ಯವಾಗುವಂತೆ ಮಾಡುತ್ತ, ತೋರಿಸಲ್= ಅರುಹಲು, ಮೃದು= ಮೆತ್ತಗಿರುವ, ಪಾಣಿ=ಹಸ್ತವೆನ್ನತಕ್ಕ, ವನಜಮಂ= ತಾವರೆಯನ್ನು, ಸೃಷ್ಟಿಸಿದನು= ನಿರ್ಮಿಸಿದನು, ಎಂಬ=ಎನ್ನುವ,ಚೆಲ್ವಿನ= ಅಲಂಕಾರಯುಕ್ತರಾದ,ಕೋಮಲೆಯರು= ನಾರಿಯರು, ಕಣ್ಗೆ= ನಯನಂಗಳಿಗೆ, ಎಸೆದರು= ಹೊಳೆಯುತ್ತಿದ್ದರು.
ಅಧಿಕ॥ವಿಷಯ॥ ವನ=ನೀರಿನಲ್ಲಿ, ಜ= ಹೈಟ್ಟಿದ್ದು,(ಕಮಲ ಸ. ತ) ಪ್ರಪಂಚದ ಸಕಲ ವಸ್ತುಗಳನ್ನು ಊವುಗಳ ಸಾಮ್ಯದಿಂದ ಸಕಲ ಜನರಿಗೂ ಕರಸಂಜ್ಞೆಗಳಿಂದ ಎಂದರೆ ಕೈಗಳ ಬೆರಳುಗಳನ್ನು ಮಡಿಸುವುದು, ತೆರೆಯುವುದು,
ಮೇಲಕ್ಕೆತ್ತುವುದು,ಕೆಳಗೆ ತಗ್ಗಿಸುವುದು ಇವೆ ಮೊದಲಾದವುಗಳಿಂದ ಗೋಚರಪಡಿಸತಕ್ಕ ವಿಧಾನವು ನಂದಿಯೆ ಮೊದಲಾದವರು ರಚಿಸಿದ ಗ್ರಂಥಗಳಲ್ಲಿ ಸುಪ್ರಸಿದ್ಧಗಳಾಗಿರುವವು.
ತಾತ್ಪರ್ಯ:- ಅಲ್ಲಿರು ಗಣಿಕಾಸ್ತ್ರೀಯರು ಪೀವರಸ್ತನಗಳಿಂದಲೂ ತೆಳ್ನಡುವಿನಿಂದಲೂ ನುಣುಪಾದ ತೊಡೆಗಳಿಂದಲೂ ಕೂಡಿ ಜಗತ್ಕರ್ತನಾದ ಬ್ರಹ್ಮನು ನಮ್ಮಂತಹ ರೂಪವತಿಯರಾರನ್ನೂ ಸೃಷ್ಟಿಸಿರಲಿಲ್ಲವೆಂದೂ, ಬಹಳ ಚನ್ನಾಗಿ ಅಭಿನಯಿಸಲು ಸಾಧಕವಾದ ಕರಪಲ್ಲವಗಳನ್ನುಳ್ಳವರಲ್ಲೆಲ್ಲಾ ನಾವೇ ಅಗ್ರಗಣ್ಯರೆಂದೂ ಮೆರೆಯುತ್ತಿದ್ದರು.
ಗುರುಕುಚದ ಭರಣಿ ಸುಂದರಗಜಾರೋಹಿಣಿ ಮ।
ಧುರಾಕಾಮಕೇಳೀರಸಾರರ್ರ್ದೆ ಸನ್ಮೋಹನೋ।
ತ್ತರೆ ಸುರತ ತಂತ್ರವಿರಚಿತ ಹಸ್ತಚಿತ್ತೆ ಹ್ರಸ್ವಾತಿವರ್ತುಳಸುಕಂಠೆ॥
ವರಬಾಹುಮೂಲೆ ಮಣಿಭೂಷಣಶ್ರವಣೆ ವಿ।
ಸ್ತರಗುಣಾಪೂರ್ವೆಯೆನಿಸುವ ಬಾಲಿಕೆಯರಲ್ಲಿ ।
ಪರಿಶೋಭಿಸಿದರೆಸೆವ ನಕ್ಷತ್ರಗಣದಂತೆ ಮೊಗಸಸಿಯ ಸೇರುವೆಯೊಳು॥೨೨॥
ಪ್ರತಿಪದಾರ್ಥ:- ಗುರು= ದಪ್ಪನಾದ, ಕುಚದ= ಮೊಲೆಗಳೆನ್ನುವ, ಭರಣಿ= ಟೊಳ್ಳಾದ ಫಲವನ್ನುಳ್ಳ (ಭರಣಿ= ಭರಣಿ ಎಂಬ ನಕ್ಷತ್ರ) ಸುಂದರ= ಅಲಂಕಾರಮಾದ, ಗಜಾರೋಹಿಣಿ= ಹಸ್ತ್ಯಾರೋಹಣವನ್ನು ಮಾಡಿದವಳಾದ, (ರೋಹಿಣೀ= ರೋಹಿಣೀ ಎಂಬ ನಕ್ಷತ್ರವು) ಮಧುರ= ಹೃದಯಾನಂದಕರಮಾದ, ಕಾಮಕೇಳಿ= ಮದನಕ್ರೀಡೆಯಿಂದೊಗೆದ,ರಸ= ಮನ್ಮಥವಿಕಾರದ ಉದಕದಿಂದ, ಆರ್ದ್ರೆ= ತೋಯಲ್ಪಟ್ಟವಳು( ಆರ್ದ್ರಾ= ಆರ್ದ್ರಾನಕ್ಷತ್ರವು) ಸಮ್ಮೋಹನ= ಕಾಮೋದ್ರೇಕವನ್ನುಂಟುಮಾಡುವುದರಲ್ಲಿ, ಉತ್ತರೆ=ಹೆಚ್ಚಾದವಳು ( ಉತ್ತರಾನಕ್ಷತ್ರ) ಸುರತ=ರತಿಸುಖದ, ಚಿತ್ರೆ=ಚಾತುರ್ಯವುಳ್ಳವಳು, (ಹಸ್ತ ಮತ್ತು ಚಿತ್ತ ಎಂಬ ನಕ್ಷತ್ರಗಳು) ಹ್ರಸ್ವ= ಚಿಕ್ಕದಾಗಿಯೂ, ಅತಿವರ್ತುಳ=ಬಹುದುಂಡಗೂ, ಸುಕಂಠೀ= ಕತ್ತನ್ನುಳ್ಳವಳು, (ಸ್ವಾತಿ ಎಂಬತಾರೆಯು) ವರ= ಉತ್ತಮವಾದ, ಬಾಹುಮೂಲ= ಕೈ ಬುಡವುಳ್ಳವಳು ( ಮೂಲ ಎಂಬ ತಾರೆಯು) ಮಣಿ=ನವರತ್ನಗಳಿಂದ ಕೆತ್ತಿದ, ಭೂಷಣ= ತೊಡಿಗೆಗಳ, ಶ್ರವಣೆ= ಶ್ರೋತ್ರೇಂದ್ರಿಯದಲ್ಲಿವುಳ್ಳವಳು, (ಶ್ರವಣವೆಂಬ ನಕ್ಷತ್ರ) ವಿಸ್ತರ= ಅಧಿಕವಾದ, ಗುಣ= ಸದ್ಗುಣಗಳಿಂದ, ಅಪೂರ್ವೆ= ಸುಪ್ರಸಿದ್ಧಳು, ( ಪೂರ್ವಾಷಾಢಾ ಎಂಬ ನಕ್ಷತ್ರವು) ಎನಿಸಿರುವ= ಈ ಪರಿಯ ತಾರಾಗಣದಂತೆ ಪ್ರಕಾಶಮಾ-
ನರೆನ್ನುವ, ಬಾಲಕಿಯರ= ಕನ್ಯೆಯರು, ಅಲ್ಲಿ= ಆ ನಗರದಲ್ಲಿ, ಎಸೆವ= ಹೊಳೆಯುವ,ನಕ್ಷತ್ರ=ಭರಣೀ ನಕ್ಷತ್ರವೇ ಮೊದಲಾದವುಗಳ, ಗಣದಂತೆ= ಗುಂಪಿನಂತೆ, ಮೊಗಸಸಿಯ= ಮೋರೆ ಎಂಬ ಹಿಮಕರನ, ಸೇರುವೆಯೊಳು= ಒಟ್ಟುಗೂಡುವುದರಿಂದ,ಪರಿಶೋಭಿಸಿದರು.
ಅ॥ ವಿ॥ ಮೊಗ (ತ್ಭ) ಮುಖ(ತ್ಸ) ಸಸಿ(ತ್ಭ) ಶಶಿ(ತ್ಸ)
ತಾತ್ಪರ್ಯ:-ಕುಚಗಳೆಂಬ ಭರಣಿಯಿಂದ ಕೂಡಿ ಕಾಂತಿಯುಕ್ತಮಾದ ಆನೆಯನ್ನೇರಿ, ಮನ್ಮಥವಿಲಾಸದಿಂದುಂಟಾದ ನೀರಿನಿಂದ ನೆನೆಸಲ್ಪಟ್ಟು, ಅತಿಶಯವಾದ ಭಾವಾವಿಷ್ಟರಾಗಿ, ಮಾರನ ಆಟದಲ್ಲಿ ಕರಚಾತುರ್ಯವನ್ನು ಚನ್ನಾಗಿ ತೋರುತ್ತ, ಒಳ್ಳೆ ಕಂಠವುಳ್ಳವರಾಗಿ, ಅಲಂಕಾರಯುಕ್ತಂಗಳಾದ ಕಿವಿಗಳಿಂದಲೂ, ಅತ್ಯಧಿಕವಾದ ಸೌಂದರ್ಗಳಿಂದಲೂ ಭರಣೀ ನಕ್ಷತ್ರ ಮೊದಲಾದುವನ್ನು ಹೋಲುತ್ತಲೂ ಇದ್ದರು.
ಅಡಿಯುಮಮಲಾಸ್ಯಮುಂ ಕಮಲಮಂ ಕಮಲಮಂ।
ನಡೆಯುಮೆಳವಾಸೆಯುಂ ನಾಗಮಂ ನಾಗಮಂ।
ಕಡುಚೆಲ್ವಪಾಣಿಯುಮಧರಮುಂ ಪ್ರವಾಳಮಂ ಲಲಿತಪ್ರವಾಳಮಣಿಯಂ॥
ತೊಡೆಯುಮೆಸೆವಕ್ಷಿಯುಂಬಾಳೆಯಂ ಬಾಳೆಯಂ।
ನಡುವುಂ ಸುವಾಣಿಯುಂ ಹರಿಯುಮಂ ಹರಿಯುಮಂ ।
ಬಿಡದೆಪೋಲ್ತಿರೆ ಮೆರೆವ ಕಾಂತೆಯರ್ ನೀಲಾಳಕಾಂತೆಯರ್ ಸೊಗಯಿಸಿದರು॥೨೩॥
ಪ್ರತಿಪದಾರ್ಥ:- ಅವಳ= ಆ ಸ್ತ್ರೀಯ, ಅಡಿಯುಂ= ಪಾದವು, ಆಸ್ಯಮುಂ= ಮೋರೆಯು, ಕಮಲಮಂ= ತಾವರೆಯನ್ನು,ಕಮಲಮಂ= ಇಂದುವನ್ನು, ನಡೆಯುಂ=ನಡಿಗೆಯು, ಎಳೆವಾಸಿಯುಂ= ಜಡೆಯು, ನಾಗಮಂ= ಹಸ್ತಿಯನ್ನು, ನಾಗಮಂ= ಪನ್ನಗನನ್ನು, ಕಡು=ಬಹಳ, ಚೆಲ್ವ= ಸೊಗಸಿನಿಂದ ಕೂಡಿದ, ಪಾಣಿಯುಂ= ಹಸ್ತವು, ಅಧರಮುಂ= ಓಷ್ಠವು, ಪ್ರವಾಳಮಂ= ಪಲ್ಲವಂಗಳುಮತ್ತುಪವಳಗಳು ಇವನ್ನು, ಲಲಿತ= ಸುಂದರವಾದ, ಪ್ರವಾಳ= ಹವಳದ, ಮಣಿಯಂ=ಮಣಿಯನ್ನು, ತೊಡೆಯು=ತೊಡೆಗಳು, ಎಸೆವ= ಥಳಥಳಿಸುವ, ಅಕ್ಷಿಯೂ= ನೇತ್ರವು, ಬಾಳೆಯಂ= ಕದಳಿಯನ್ನು, ಬಾಳೆಯೆಂಬ ಮೀನಿನ ಜಾರೆಯನ್ನು, ನಡುವುಂ= ಸೊಂಟವು, ಸುವಾಣಿಯುಂ= ಸವಿನುಡಿಯು, ಹರಿಯುಮಂ= ಮೃಗೇಂದ್ರನನ್ನು, ಹರಿಯುಮಂ= ಶುಕವನ್ನು, ಬಿಡದೆ= ತ್ಯಜಿಸದೆ, ಪೊತ್ತಿರೆ= ಹೊತ್ತಿರುವ ಹಾಗೆ, ನೀಲ=ಕೃಷ್ಣವರ್ಣದ, ಅಳಕ= ಮುಂಗುರುಳ್ಗಳ, ಅಂತೆಯರ= ಕೊನೆಯುಳ್ಳ, ಮೆರೆವ= ಪ್ರಕಾಶಿಸತಕ್ಕ, ಕಾಂತೆಯರು= ನಾರಿಯರು, ಸೊಗಯಿಸಿದರು= ಅಲಂಕಾರಯುಕ್ತರಾದರು.
ತಾತ್ಪರ್ಯ:- ಆ ಸ್ತ್ರೀಯರು ತಾವರೆಯಂತಿರುವ ಪಾದಗಳನ್ನೂ, ಇಂದುವನ್ನು ಹೋಲುವ ಮೋರೆಯನ್ನೂ, ಆನೆಯ ನಡಿಗೆ-
ಯಂತಿರುವ ನಡಿಗೆಯನ್ನೂ, ಸರ್ಪದಂತೆ ಉದ್ದವಾದ ಜಡೆಯನ್ನೂ, ಎಳೆದಳಿರಂತಿರುವ ಹಸ್ತಂಗಳನ್ನೂ, ಹವಳದಂತಿರುವ ತುಟಿಯನ್ನೂ, ಕದಳೀಸ್ತಂಭಕ್ಕೆ ಸಮನಾದ ತೊಡೆಗಳನ್ನೂ, ಬಾಳೆ ಎನ್ನುವ ಮೀನನ್ನುಅಲಗಳೆಯುವ ನಯನಂಗಳನ್ನೂ, ಸಿಂಹದ ನಡುವಿನಂತಿರುವ ನಡುವನ್ನೂ, ಶುಕದ ಕೂಗನ್ನು ತಿರಸ್ಕರಿಸುವ ಮೃದುನುಡಿಗಳನ್ನೂ, ಉಳ್ಳವರಾಗಿದ್ದರು.