ಜೈಮಿನಿ ಭಾರತ 8 - ದೊಡ್ಡಬೆಲೆ ನಾರಾಯಣಶಾಸ್ತ್ರಿ
ಎಂಟನೆಯ ಸಂಧಿ:
ಸೂಚನೆ ॥ ಅಧ್ವರೋಪಕ್ರಮದೊಳಮಲಹಯಮೈದೆ ನೀ।
ಲಧ್ವಜನ ಪಟ್ಟಣದೊಳಗ್ನಿಯಂ ಕಂಡರಿಬ।
ಲಧ್ವಂಸಿ ಪಾರ್ಥನವನಂ ಜಯಿಸೆ ಭಂಗದಿಂ ತನ್ನ ಪುರಮಂ ಪೊಕ್ಕನು॥
ಪ್ರತಿಪದಾರ್ಥ:- ಅಧ್ವರ= ಯಜ್ಞದ, ಉಪಕ್ರಮದೊಳು= ಆರಂಭದಲ್ಲಿ, ಅಮಲ=ಉತ್ತಮವಾದ, ಹಯಂ= ಕುದುರೆಯು, ಐದೆ= ದೇಶಾಟನೆಗಾಗಿ ಹೊರಟಿರಲು, ನೀಲಧ್ವಜನ= ಕರ್ರಗಿರುವ ಧ್ವಜಪಟದಿಂದ ಶೋಭಿಸುತ್ತಿರುವ ನೀಲಧ್ವಜನೆಂಬರ-
ಸನ, ಪಟ್ಟಣದೊಳು=ನಗರದಲ್ಲಿ, ಅಗ್ನಿಯಂ= ಆ ಪೊಳಲಂ ಕಾಯುತ್ತಿರುವ ಸ್ವಭಾವವುಳ್ಳ ಅಗ್ನಿಶಪುರುಷನನ್ನು, ಕಂಡು= ಕುದುರೆಯನ್ನು ನಿರ್ಬಂಧದಿಂದ ತಪ್ಪಿಸಲು ಹೋಗತಕ್ಕವರನ್ನು ಸುಡುತ್ತಿರುವಂತೆ, ನೋಡಿ=ಈಕ್ಷಿಸಿ, ಅರಿಬಲ= ವೈರಿಗಳ ಚತುರಂಗಬಲವನ್ನು, ಮತ್ಯು ಅಗ್ನಿಯನ್ನು ಸಹ, ಜಯಿಸೆ= ಪರಾಕ್ರಮ ಮತ್ತು ದೇವತಾಸ್ಮರಣೆ ಇವುಗಳಿಂದ ಸೋತುಹೋಗವಂತೆ ಮಾಡಲು, ಭಂಗದಿಂ = ಪರಾಜಯದಿಂದ, ನೀಲಧ್ಶಜನಿಗೆ ಸಹಾಯಕನಾದ ಅಗ್ನಿಯು ಫಲ್ಗುಣನಿಗೆ ವಶವಾಗಲು, ತನ್ನ=ಸ್ವಕೀಯವಾದ, ಪುರಮಂ= ಮಾಹಿಷ್ಮತೀ ಎಂಬ ಹೆಸರಿನಿಂದ ಮೆರೆಯುವ ಪಟ್ಟಣವನ್ನು, ಪೊಕ್ಕನು= ಪ್ರವೇಶಮಾಡಿದನು.
ಅ॥ವಿ॥ ಅರಿಗಳ(ಷ. ತ. ) ಅರಿಬಲವನ್ನು ಧ್ವಂಸಮಾಡತಕ್ಕವನು ಯಾರೊ ಅವನು( ಬ. ಸ.) ಅರಿ= ತಿಳಿ,(ಕ್ರಿಯೆ) ಕಾಳಿನಿಂದ ಕೂಡಿರುವ ಹುಲ್ಲು(ನಾಮ) ಬಲ=ಶಕ್ತಿ, ಸೈನ್ಯ, ಪೊಕ್ಕನು= ಪುಗು ಎಂಬ ಧಾತುವಿನ ಭೂತಕಾಲ. ಅರ್ಜುನ, ಫಲ್ಗುನ, ಪಾರ್ಥ, ಕಿರೀಟಿ, ಶ್ವೇತವಾಹನ, ಭೀಭತ್ಸು, ವಿಜಯ, ಸವ್ಯಸಾಚಿ, ಧನಂಜಯ ಎಂಬ ಹತ್ತು ಹೆಸರುಗಳು ಅರ್ಜುನನಿಗೆ ಸಲ್ಲತಕ್ಕವು.
ರಾಯಕೇಳನುಸಾಲ್ವನಂ ಕೂಡಿಕೊಂಡು ಕಮ।
ಲಾಯತಾಂಬಕನಖಿಳಯಾದವರ ಗಡಣದಿಂ ।
ದಾ ಯುಧಿಷ್ಠಿರನೃಪನ ಸನ್ಮಾನಮಂ ತಳೆಯುತಿರೆ ಜಾಹ್ನವೀತಟದೊಳು॥
ಆಯಿತಧ್ವರಶಾಲೆ ಶಾಸ್ತ್ರವಿಶ್ರುತದ ವಿವಿ।
ಧಾಯತ ವಿಚಿತ್ರ ವೈಭವದಿಂದೆ ಬಳಿಕಾ ಮ।
ಹಾ ಯಾಗದನುಪಮ ಪ್ರಾರಂಭಕಾಲದ ವಸಂತರ್ತು ಸಂಭವಿಸಿತು॥೧॥
ಪ್ರತಿಪದಾರ್ಥ:- ರಾಯ= ಎಲೈ ಜನಮೇಜಯ ಕ್ಷಿತಿಪಾಲನೆ, ಕಮಲಾಯತಾಂಬಕನು= ಕೃಷ್ಣಸ್ವಾಮಿಯು, ಅನುಸಾಲ್ವನಂ ಕೂಡಿಕೊಂಡು= ಅನುಸಾಲ್ವನನ್ನು ಸಂಗಡ ಕರೆದುಕೊಂಡು, ಅಖಿಲ= ಎಲ್ಲಾ, ಯಾದವರ=ಯದುಕುಲಜರ, ಗಡಣದಿಂ = ಸಮುದಾಯದಿಂದ, ಆ ಯುಧಿಷ್ಠಿರ ನೃಪನ= ಆ ಧರ್ಮಪುತ್ತನೆಂಬ ಹಸ್ತಿನಾವತಿಯ ಒಡೆಯನ, ಸನ್ಮಾನಮಂ= ಮರ್ಯಾದೆಯನ್ನು, ತಳೆವುತ= ಹೊಂದುತ್ತ, ಇರೆ=ಇರಲಾಗಿ, ಜಾಹ್ನವೆಯ= ಸುರನದಿಯ, ತಟದೊಳು= ದಡದಲ್ಲಿ, ಅಧ್ವರಶಾಲೆ= ಯಜ್ಞ ಮಂಟಪವು, ಆಯಿತು= ಎಸಗಬೇಕೆಂದು ನಿಷ್ಕರ್ಷೆಯಾಯಿತು,(ನೆರವೇರಿತು) ಶಾಸ್ತ್ರ= ಶ್ಸ್ತ್ರಗಳಲ್ಲೆಲ್ಲಾ, ವಿಶ್ರುತ= ಸುಪ್ರಸಿದ್ಧವಾಗಿರುವ, ವಿವಿಧ= ನಾನಾಪ್ರಕಾರವಾದ, ಆಯತ= ಬಹುದೊಡ್ಡ, ವಿಚಿತ್ರ= ಅಚ್ಚರಿಗೊಳಿಸುವ, ವೈಭವದಿಂದ = ಸಾಮ್ರಾಜ್ಯದಿಂದ, ಬಳಿಕ= ಯಜ್ಞಮಂಟಪದಲ್ಲಿ ನೆರವೇರಿದಮೇಲೆ, ಆ ಮಹಾಯಜ್ಞದ= ಶ್ರೇಷ್ಠತಮವಾದ ಅಶ್ವಮೇಧವೆಂಬ ಆ ಕ್ರತುವಿನ, ಅನುಪಮ= ಅಸದೃಶವಾದ, ಪ್ರಾರಂಭಕಾಲದ= ಆರಂಭಿಸುವ ಸಮಯವಾದ, ವಸಂತರುತು= ಮಧುಮಾಸವು, ( ಚೈತ್ರ, ವೈಶಾಖ ) ಸಂಭವಿಸಿತು= ಪ್ರಾಪ್ತವಾಯಿತು.
ಅ॥ ವಿ॥ ಕಮಲಾಯತಾಂಬಕ= ಆಯತಮಾದ ಅಂಬಕ( ವಿ. ಪೂ.) ಕಮಲದಂತೆ ಆಯತಾಂಬಕವು ಯಾರಿಗೊ ಅವನು ಕಮಲಾಯತಾಂಬಕ (ಬ. ಸ. ) ಪೂರ್ವದಲ್ಲಿ ಸುರಲೋಕದಿಂದ ಗಂಗಾನದಿಯು ಭೂಲೋಕಕ್ಕೆ ಭಗೀರಥನ ಇಷ್ಟಸಿದ್ಧಿಯಂ ಗೈಯಲು ಬರುತ್ತಿರುವ ಕಾಲದಲ್ಲಿ ಜಹ್ನು ಋಷಿಯ ಆಶ್ರಮದೆಡೆಗೆ ಬಂದುಆತನ ಪರ್ಣಶಾಲೆಯೆಲ್ಲಾ ನೆನೆದುಹೋಗು-
ವಂತಾಯಿತು, ಇದಕ್ಕಾಗಿ ಆ ಮಹರ್ಷಿಯು ಸುರನದಿಯ ಉದಕವನ್ನೆಲ್ಲಾ ಪಾನಮಾಡಿ ಭಗೀರಥಮಹಾರಾಯನ ಅನೇಕವಾದ ಪ್ರಾರ್ಥನೆಗಳಿಗೆ ಪ್ರಸನ್ನನಾಗಿ ತನ್ನ ಕಿವಿಯ ಮೂಲಕವಾಗಿ ಭೂಲೋಕಕ್ಕೆ ಸುರನದಿಯನ್ನು ಬಿಟ್ಟುಬಿಟ್ಟನು.ಇದರಿಂದಲೂ ಗಂಗಾನದಿಗೆ ಜಾಹ್ನವಿ ಎಂಬ ನಾಮಧೇಯವುಂಟಾಗಿರುವುದು.
ತಾತ್ಪರ್ಯ:- ಕೇಳು ಜನಮೇಜಯ ಕ್ಷಿತಿಪತಿಯೆ ! ಈ ರೀತಿಯಲ್ಲಿ ಶ್ರೀಕೃಷ್ಣನು ಅನುಸಾಲ್ವನೊಂದಿಗೂ, ತನ್ನ ಸಕಲ ಸೇನೆಯೊಂದೊಡಗೊಡಿಯೂ, ಧರ್ಮಜನ ಸತ್ಕಾರ್ಯವನ್ನೆಲ್ಲ ಕೈಕೊಂಡು ಸಂತೋಷಚಿತ್ತನಾಗೆರುವಾಗ ಗಂಗಾನದಿಯ ದಡದಲ್ಲಿ ಶಾಸ್ತ್ರಸಮ್ಮತವಾಗಿಯೂ, ಬಹು ವಿಚಿತ್ರ ವೈಭವದಿಂದ ಕೂಡಿಯೂ, ಇರುವ ಯಜ್ಞಶಾಲೆಯುನಿರ್ಮಿತವಾಯಿತು.
ಆ ಕಾಲಕ್ಕೆ ಸರಿಯಾಗಿ ಸಕಲ ಮನೋರಂಜಿತವಾದ ಮಧುಮಾಸವು ಪ್ರಾರಂಭವಾಯಿತು.
ಒಂದೆಡೆಯೊಳು ತನಗೆ ನಿಲವಿಲ್ಲದತಿವೇಗ।
ದಿಂದೆ ನಿರುತಂ ಪ್ರಬಲಮಾಗಿ ಬೀಸುವ ಗಾಳಿ ।
ಚಂದನದ್ರುಮಮಂ ತೊಡರ್ದಹಿಗಳಾಹಾರಮಂ ಕೊಂಡುಕೊಂಡು ಮಿಕ್ಕು॥
ಮಂದತ್ವಮಂ ತಳೆದು ಮಲಯಾಚಲದ ಸೀಮೆ।
ಯಿಂದೆ ಸರಸಿಜದೊಳ್ ಭ್ರಮಿಸುವ ಮರಿದುಂಬಿಗಳ ।
ವೃಂದಮಂ ಕೂಡಿಕೊಂಡಲೆವೆಲರ್ ಬಂದುದು ವಿರಹಿಗಳೆದೆಯಾರುವಂತೆ॥೨॥
ಪ್ರತಿಪದಾರ್ಥ:- ಒಂದೆಡೆಯೊಳು= ಒಂದು ಕಡೆಯಲ್ಲಿ, ತನಗೆ= ಮಂದಾನಿಲನಿಗೆ, ನಿಲುವು= ನೆಲೆಯು, ಇಲ್ಲದ= ಇಲ್ಲದಿರತಕ್ಕ, ಅತಿವೇಗದಿಂ= ಬಹು ಜಾಗ್ರತೆಯಿಂದ, ನಿರುತಂ= ಅನವರತವೂ, ಪ್ರಬಲಂ= ಹೆಚ್ಚಾದದ್ದು, ಆಗಿ= ಆಗಿಬಿಟ್ಟು, ಬೀಸುವ= ಸುಳಿದಾಡತಕ್ಕ, ಗಾಳಿ= ವಾಯುವು, ಚಂದನದ್ರುಮಂಗಳಂ= ಚಂದನ ತರುಗಳನ್ನು, ತೊಡರ್ದು= ಆವರಿಸಿಕೊಂಡು, ಅಹಿಗಳು= ಹಾವುಗಳು, ಆಹಾರಮಂ= ತಿಂಡಿಯನ್ನು, ಕೊಂಡುಕೊಂಡು= ಸ್ವೀಕರಿಸಿ, ಮಿಕ್ಕು= ಸ್ವಲ್ಪವಾಗಿ ನಿಂತು,ಮಂದತ್ವಮಂ= ಜಡತನವನ್ನು, ತಳರ್ದು= ಧರಿಸಿ, ಮಲಯಾಚಲದ= ಮಲಯಗಿರಿಯ, ಸೀಮೆಯಿಂದ= ತಟದಿಂದ, ಒಂದು=ಒಂದಾದ, ಸರಸಿಜದೊಳ್ = ತಾವರೆಯಲ್ಲಿ, ಭ್ರಮಿಸುವ= ಚಲಿಸತಕ್ಕ, ಮರಿದುಂಬಿಗಳ = ಪರಮೆವರಿಗಳ, ವೃಂದಮಂ= ಗುಂಪಿನಿಂದ, ಕೂಡಿಕೊಂಡು = ಜೊತೆಮಾಡಿಕೊಂಡು, ಎಳೆವೆಲರು= ಮಂದಾನಿಲವು, ವಿರಹಿಗಳ= ಕಾಮಾತುರರಾಗಿರತಕ್ಕವರ,ಎದೆಯ= ಹೃದಯಸ್ಥಾನವು, ಆರುವಂತೆ= ಒಣಗಿಹೋಗುವ- ತೆರನಾಗಿ, ಬಂದುದು=ಐತಂದಿತು,(ಚಲಿಸುತ್ತಿತ್ತು )
ತಾತ್ಪರ್ಯ:- ಆಗ ಬಂದು ಒಂದುಕಡೆಯಿಂದ ತನಗೆ ಎಲ್ಲಿಯೂ ನಿಲ್ಲಲಾಗುವುದಿಲ್ಲವೆಂಬಂತೆ ಬಹುವೇಗದಿಂದ ಗಟ್ಟಿಯಾಗಿ ಬೀಸಿಕೊಂಡು ಬರುತ್ತಾ ಗಂಧದ ಮರಗಳಿಗೆ ಸಿಕ್ಕಿಹೋಗಿ, ಸರ್ಪಗಳಿಗೆ ಆಹಾರವಾದ್ದರಿಂದ ಮೊದಲಿದ್ದ ವೇಗವು ಕಡಿಮೆಯಾಗಿ, ಮಲಯಪರ್ವತಪ್ರಾಂತವಂ ಬಳಸಿಕೊಂಡು, ಕಮಲಗಳಲ್ಲಿರುವ ಅಳಿವಿಂಡನ್ನು ಸ್ಪರ್ಶಿಸುತ್ತ, ಭೃಂಗಾಳಿಗ-
ಳಿಂದೊಡಗೂಡಿ ಬಂದು ವಿರಹವೇದನೆಯನ್ನನುಭವಿಸುವವರ ಎದೆಯು ಬತ್ತಿಹೋಗುವಂತೆ ಮಾಡುತ್ತಲಿರುವುದೋ ಎಂಬತೆರನಾಗಿ ಮಂದಾನಿಲವು ಬೀಸುತ್ತಿತ್ತು.
ಮಿರುಗುವ ತಳಿರ್ದೋರಣಂಗಳಂ ಕಟ್ಟಿಸುತೆ।
ಮರಿಗೋಗಿಲೆಗಳ ಬಾಯ್ಗಳ ಬಲಿದ ಬಂಧನದ।
ಸೆರೆಗಳಂ ಬಿಡಿಸುತ್ತೆ ತುಂಬಿಗಳ ದಳಕೆ ಕಮ್ಮಲರ್ಗಳಂ ಸೂರೆವಿಡುತೆ॥
ಕಿರುವೆಲರೊಳೆತ್ತಲುಂ ಸಾರಿಸುತೆ ವಿರಹಿಗಳ ।
ನೆರಗಿಸುತೆ ಜೊನ್ನದ ಜಸಂ ಪೆರ್ಚೆ ಮಧುನೃಪಂ।
ಪೊರಮಟ್ಟು ಮಾಗಿಯನ್ನುಡುಗಿಸಿ ಸಮಸ್ತ ವನರಾಷ್ಟ್ರಮಂ ಕೈಕೊಂಡನು॥೩॥
ಪ್ರತಿಪದಾರ್ಥ:- ಮಿರುಗುವ= ಹೆಚ್ಚಾಗಿ ಹೊಳೆಯುತ್ತಿರುವ, ತಳಿರು=ಚಿಗುರ್ಗಳೆನ್ನತಕ್ಕ, ತೋರಣಂಗಳಂ= ಚೂತಪರ್ಣಂಗಳ ( ಮಾವಿನೆಲೆಯ ) ತೋರಣಂಗಳನ್ನು, ಕಟ್ಟಿಸುತ= ಕಟ್ಟಿಹಾಕುತ್ತ, ಮರಿಕೋಗಿಲೆಗಳ= ಕೋಗಿಲೆಯ ಮರಿಗಳ, ಬಾಯ್ಗಳ= ವದನಂಗಳ, ಬಲಿದ= ಹೆಚ್ಚಾದ, ಬಂಧನದ= ಕಟ್ಟುಗಳಿಂದ ಕೂಡಿದ, ಸೆರೆಗಳಂ= ಬಂಧನಗಳನ್ನು, ಬಿಡಿಸುತ್ತ= ಬಿಟ್ಟುಹೋಗುವಂತೆ ಮಾಡುತ್ತ, ದುಂಬಿಗಳ= ಅಳಿಗಳ, ಬಳಗಕೆ= ಸಮೂಹಕ್ಕೆ, ಕಮಲಗಳ= ತಾವರೆಗಳನ್ನು, ಸೂರೆವಿಡುತ್ತ= ಕೊಳ್ಳೆ ಕೊಡುತ್ತ, ಕಿರುವೆಲರೊಳು= ಮಂದಾನಿಲದಿಂದ ,ಎತ್ತಲುಂ= ಎಲ್ಲಾ ಕಡೆಗಳಲ್ಲೂ, ಸಾರಿಸುತ= ಪ್ರಕಟಮಾಡುತ್ತ, ಜೊನ್ನದ= ಚಂದ್ರಿಕೆಯ, ರಸಂ=ವರ್ಣವು,( ಕಾಂತಿಯು ) ಪೆರ್ಚಿ=ಅಧಿಕವಾಗಿ, ಮದನ= ಮನ್ಮಥನೆನ್ನುವ,ನೃಪ=ದೊರೆಯು, ಪೊರಮಟ್ಟು = ಹೊರಟು, ಮಾಗಿಯನು= ಮಾಘ ಫಾಲ್ಗುಣ ಮಾಸಗಳನ್ನು, ಉಡುಗಿಸಿ= ತಗ್ಗಿಸಿಬಿಟ್ಟು, ಸಂಕುಲವನ= ಎಲ್ಲಾ ಆರಾಮಂಗಳ, ಸಾಲುಮರ= ಸಾಲಾಗಿ ಅಥವಾ ಗುಂಡಾಗಿರತಕ್ಕ ತರುಗಳೆನ್ನುವ, ರಾಷ್ಟ್ರಮಂ= ನಾಡನ್ನು, ಕೈಕೊಂಡನು= ವಶಮಾಡಿಕೊಂಡನು,
ಅ॥ ವಿ॥ ಜೊನ್ನ (ತ್ಭ ) ಜ್ಯೋತ್ಸ್ನಾ (ತ್ಸ ) ಮಾಗಿ (ತ್ಭ ) ಮಾಘ (ತ್ಸ )
ತಾತ್ಪರ್ಯ :- ಮನ್ಮಥರಾಜನು ದಿಗ್ವಿಜಯಾರ್ಥವಾಗಿ ಪಯಣವಂ ಮಾಡಿರುವುದರಿಂದ ಅಲಂಕಾರವಾಗಿರುವಂತೆ ಕಟ್ಟಿರುವ ತೋರಣಗಳೋಎಂಬಂತೆ ಎಲ್ಲೆಲ್ಲಿಯೂ ಎಳೆಯವಾಗಿಯೂ, ಕೆಂಪಗೂ ಇರತಕ್ಕ ಚಿಗುರುಗಳು ಮರಗಳನ್ನಾವರಿಸಿದ್ದವು. ಪರರಾಜರ ಬಂಧನದಿಂದ ಬಿಡುಗಡೆಯಾಯಿತೋ ಎಂಬಂತೆ ಕೋಗಿಲೆಗಳ ಕೊರಲ್ಸರವು ಚೆಲುವಾಯಿತು,ಅಳಿವಿಂಡು ತಾವರೆಗಳನ್ನು ವರಿಸಿತು. ಮಂದಮಾರುತವು ಎಲ್ಲೆಡೆಗಳಲ್ಲಿಯೂ ಬೀಸಲಾರಂಭಿಸಿತು.
ಬೆಳ್ದಿಂಗಳ ಕಾಂತಿಯು ಅಧಿಕವಾಯಿತು. ಚಳಿಗಾಲವೆಂಬ ಹಗೆಯನ್ನು ಗೆದ್ದು ವನರಾಷ್ಟ್ರದಲ್ಲಿ ಪಟ್ಟಾಭಿಷಿಕ್ತವಾಗಿರುವನೋ ಎಂಬಂತೆ ತೋರುತ್ತಿತ್ತು.
ಪೊಸಮಾವಶೋಕೆಯೊಳ್ ಮರಿದುಂಬಿ ಕೋಗಿಲೆಯೊ।
ಳೆಸೆವ ಸಂಪಗೆ ಪೊಚ್ಚಪೊಂದಾವರೆಯೊಳ್ ಪವ।
ಡಿಸಿದ ಮಲ್ಲಿಗೆಯಲರ್ ಬೆಳೆತ ಬೆಳ್ದಿಂಗಳೊಳ್ ಗಿಳಿವಿಂಡು ಬನಸಿರಿಯೊಳು॥
ಎಸೆದುವೊಂದೊಂದರೊಳ್ ಮಧುಮಾಸಕಂಗಜನ ।
ದಸೆಯಂತೆ ಖತಿಯಂತೆ ಧನದಂತೆ ಜಸದಂತೆ ।
ಪಸುರ್ವೆಳಸಿನಂತೆ ಕೆಂಪಸಿತ ಪಳದಿ ಪಳುಕುಪಚ್ಚೆಗಳ ಬಣ್ಣದಿಂದೆ॥೪॥
ಪ್ರತಿಪದಾರ್ಥ:- ಅಂಗಜನ= ಮನ್ಮಥನ ಸಂಬಂಧವಂ ಪಡೆದ, ಮಧುಮಾಸಕೆ= ಗಿಡಮರಗಳೆಲ್ಲಾ ಚಿಗುರಿ ಹೂವಾಗಿ ಕಾಯಿ ಹಣ್ಣು ಮೊದಲಾದವುಗಳಿಂದ ಪೂರ್ಣಮಾಗಿರಲು, ( ಮಾರನಾಟಕೆ ಕಾಲವಾಗಿರತಕ್ಕ ವಸಂತಋತುವಿನ ಸಮಾಗ-
ವಾಗಲು) ಪೊಸಮಾವು= ಚಿಗುರಿನಿಂದ ಕೂಡಿದ ಮಾವಿನ ಮರವು, ಅಶೋಕೆಯೊಳ್= ಅಶೋಕವೃಕ್ಷದಲ್ಲಿ, (ಆನಂದಾತಿ-
ಶಯದಲ್ಲಿ), ಕೆಂಪು= ರಕ್ತಛಾಯೆಯು, ದೆಸೆಯಂತೆ = ಸಂಜೆಗೆಂಪಿನಿಂ ಮೆರೆವ ದಿಕ್ಕುಗಳ ಹಾಗೆ, ಒಂದೊಂದರೊಳು= ಒಂದು ಇನ್ನೊಂದರಲ್ಲಿ, ಮಸೆದುದು= ಸೇರಿಕೊಂಡಿತು, ( ವಸಂತ ಋತುವಿನಲ್ಲಿ ಮಾವಿನ ಮರಗಳೆಲ್ಲಾ ಚಿಗುರಿ ಅಲಂಕಾರಯುಕ್ತವಾಗಿರುತ್ತವೆಂದು ಭಾವವು) ಮರಿದುಂಬಿ= ಜೀರುಂಡೆಯ ಮರಿಗಳು, ಕೋಗಿಲೆಯೊಳು= ಪಿಕಂಗಳಲ್ಲಿ, ಖತಿಯಂತೆ= ಕೋಪದ ತೆರನಾಗಿ, ಅಸಿತ= ಕೃಷ್ಣಛಾಯೆಯನ್ನು, ಮಸೆದೈದು= ಉಂಟಾಗಿತ್ತು, (ಚೈತ್ರಮಾಸ ಪ್ರಾರಂಭವಾದ್ದರಿಂದ ಕೋಗಿಲೆಯ ಮತ್ತು ಭೃಂಗಗಳ ಸ್ವನಂಗಳು ಮನೋಹರವಾಗಿದ್ದುವೆಂದು ಆಶಯವು.), ಎಸೆವ= ಹೊಳೆಯುವ, ಸಂಪಿಗೆ= ಚಂಪಕಕುಸುಮಗಳು, ಪೊಚ್ಚ= ನೂತನವಾದ, ಪೊಂದಾವರೆಯೊಳು= ಅರಸಿನ ಬಣ್ಣದಿಂದ ಕೂಡಿದ ತಾವರೆ ಹೂಗಳಲ್ಲಿ, ಧನದಂತೆ= ಸುವರ್ಣದ ನಾಣ್ಯದಂತೆ, ಪಳದಿ= ಅರಿಸಿನ ಬಣ್ಣದಿಂದ, ಮಸೆದುದು= ಕೂಡಿತ್ತು
( ಮಧುಮಾಸವು ಒದಗಿ ಸಂಪಿಗೆಯ ಹೂಗಳಿಂದ ಶೋಭಿಸುತ್ತಿತ್ತು) ಪವಡಿಸಿದ = ಹೆಚ್ಚಾದ, ಮಲ್ಲಿಗೆಯ= ಮಲ್ಲಿಕಾಲತೆಗಳ, ಅಲರ್= ಪುಷ್ಪಂಗಳು, ಬೆಳೆತ= ಚೆನ್ನಾಗಿ ಬಲಿತ, ಬೆಳದಿಂಗಳೊಳ್= ಚಂದ್ರನ ಕಿರಣಗಳಲ್ಲಿ, ಜಸದಂತೆ= ಯಶಸ್ಸಿನ ಹಾಗೆ, ಪಳುಕು= ಶ್ವೇತಛಾಯೆಯಿಂದ,ಮಸೆದುದು= ನೆರೆಯಿತು, ( ಮಧುಮಾಸದಲ್ಲಿ ಮಲ್ಲಿಗೆಯ ಬಳ್ಳಿಗಳೆಲ್ಲಾ ಸುವಾಸನೆಯಾದ ಪುಷ್ಪಂಗಳಿಂದ ಶೋಭಿಸುತ್ತಿದ್ದವು), ಗಿಳಿವಿಂಡು= ಶುಕಸಂತತಿಯು, ಬನಸಿರಿಯೊಳ್= ಉದ್ಯಾನವೆಂಬ ಲಕ್ಷ್ಮಿಯೊಂದಿಗೆ, ಪಸುರ್ವೆಳಗಿನಂತೆ= ಹಸುರುಬಣ್ಣದ ಪಚ್ಚೆಮಣಿಯಂತೆ,ಪಚ್ಚೆ = ಹಸುರು ಬಣ್ಣದಿಂದ, ಮಸೆದುದು= ಕೂಡಿತು. ( ಎಲೆಗಳಿಂದಲೂ ಹಸುರಾಗಿದ್ದವು)
ಅ ॥ ವಿ ॥ ಸಂಪಿಗೆ (ತ್ಭ ) ಚಂಪಕ( ತ್ಸ ) ಮಲ್ಲಿಗೆ ( ತ್ಭ ) ಮಲ್ಲಿಕಾ ( ತ್ಸ ) ಬನ (ತ್ಭ ) ವನ (ತ್ಸ ) ಜಸ ( ತ್ಭ ) ಯಶಸ್(ತ್ಸ) "ಕೆಂಪಸಿತಂಪಳದಿಪಚ್ಚೆಗಳ ಬಣ್ಣದಿಂದ" ಎಂಬೆಡೆಯಲ್ಲಿ ಅರ್ಥವು ಕ್ರಮವರಿತು ತೆಗೆದುಕೊಳ್ಳುವುದರಿಂದ ಕ್ರಮಾಲಂಕಾರವು.
ತಾತ್ಪರ್ಯ:- ವಸಂತಕಾಲವು ಸಮೀಪಸ್ಥವಾಗಲು ಚೂತವೃಕ್ಷಗಳೆಲ್ಲಾ ಪಲ್ಲವಿಸಿ ದಾರಿಗರ ನೇತ್ರಗಳಿಗಾನಂದವನ್ನುಂಟು-
ಮಾಡುತ್ತಿತ್ತು. ಎಲ್ಲೆಲ್ಲಿಯೂ ಭೃಂಗಾಳಿಗಳೂ, ಪಿಕವಿಂಡೂ, ಇಂಪಾಗಿರುವಂತೆ ಗಾನವನ್ನು ಮಾಡುತ್ತಿದ್ದವು. ಚಂಪಕಕುಸುಮಂಗಳಿಂದಲೂ ಮಲ್ಲಿಕಾಪುಷ್ಪಂಗಳಿಂದಲೂ, ಉಂಟಾದ ಸುವಾಸನೆಯು ದಿಕ್ಕುಗಳ ಕೊನೆಯನ್ನು ಮುಟ್ಟುತ್ತಿತ್ತು. ಎಲೆಗಳೆಲ್ಲಾ ಅಚ್ಚ ಹಸರು ಬಣ್ಣದಿಂದ ಕೂಡಿ ಪಚ್ಚೆಯಮಣಿಗಳನ್ನು ಧರಿಸಿರುವಂತೆ ಭ್ರಾಂತಿಗೈಯ್ಯುತ್ತಿದ್ದವು.
ತಳಿತೆಸೆವ ತರುಗಳ ನೆಳಲ್ಗಳಂ ಸಾರ್ದು ಶೀ।
ತಳದ ನಿರ್ಮಲಸುವಾರಿಯನೀಂಟಿ ನವ್ಯಪರಿ।
ಮಳದಿಂದೆ ಸೊಗಸ ತೀಡುವ ತೆಳುವೆಲರ್ಗೆ ಮೆಯ್ಯೊಡ್ಡಿ ಮಾರ್ಗಶ್ರಮವನು॥
ಕಳೆದರಧ್ವಗರೋಪರೊಳ್ ನೆರೆದು ವಿರಹಿಗಳ್।
ಮಲಯಜದ ಘನಸಾರದೊಳ್ ತಂಪೈವೆತ್ತು ನಿ।
ಚ್ಚಳದ ಕರುವಾಡದೊಳ್ ಭೋಗಿಸಿದರಂದು ಚೈತ್ರಾಗಮದ ಸಂಭ್ರಮದೊಳು॥೫॥
ಪ್ರತಿಪದಾರ್ಥ:- ತಳಿತು= ಚಿಗುರಿ, ಎಸೆವ= ಹೊಳೆಯುವ, ತರುಗಳ= ವೃಕ್ಷಂಗಳ, ನೆರಳ್ಗಳಂ= ಪ್ರತಿಬಿಂಬಗಳನ್ನು,ಸಾರ್ದು= ತಾಳಿ(ಬಂದು)ಶೀತಳದ= ತಂಪಾದ, ನಿರ್ಮಲ= ಪರಿಶುದ್ಧವಾದ, ವಾರಿಯಂ= ಉದಕವನ್ನು, ನೀಂಟಿ= ಕುಡಿದು, ನವ್ಯ=ನೂತನವಾದ, ಪರಿಮಳದಿಂದ= ಸುರಭಿಯಿಂದ, ಸೊಗಸು= ಸೌಂದರ್ಯವನ್ನು, ತೀಡುವ= ಹರಡುವ, ತೆಳು= ಸ್ವಲ್ಪ ಸ್ವಲ್ಪವಾಗಿ ಬೀಸುವ, ಎಲರ್ಗೆ= ವಾಯುವಿಗೆ, ಮೈ= ದೇಹವನ್ನು, ಒಡ್ಡಿ= ಚಾಚಿ, ಮಾರ್ಗಶ್ರಮವನು= ನಡೆಯುವುದರ ಆಯಾಸವನ್ನು, ಅಧ್ವಗರು= ದಾರಿಗರು, ಕಳೆದರು= ಹೋಗಲಾಡಿಸಿಕೊಂಡರು, ವಿರಹಿಗಳ್= ಕಾಮಾತುರರಾಗಿರತಕ್ಕ ಹೆಂಗಸರು, ಓಪರೊಳ್= ಪ್ರಿಯರೊಡನೆ, ಮಲಯಜದ= ಮಲಯಗಿರಿಯಲ್ಲಿ ಹುಟ್ಟಿದ ಸುಗಂಧಯುಕ್ತವಾದ , ಘನಸಾರದೊಳ್= ಪಚ್ಚೆಗರ್ಪುರದಿಂದ, ತಂಪುವೆತ್ತು= ಶೈತ್ಯವಂ ಪಡೆದು, ನಿಚ್ಚಳದ= ನೆಲೆಯಾದ, ಕರುವಾಡದೊಳ್ = ಉಪ್ಪರಿಗೆಗಳಲ್ಲಿ, ಅಂದು= ಆ ಕಾಲದಲ್ಲಿ, ಚೈತ್ರಾಗಮದ= ವಸಂತಕಾಲದ ಪ್ರಾರಂಭದ, ಸಂಭ್ರಮದೊಳು= ಆನಂದದಿಂದ, ಭೋಗಿಸಿದರು= ಕ್ರೀಡಿಸಿದರು.
ತಾತ್ಪರ್ಯ:- ದಾರಿಗರು ಬಿಸಿಲಿನ ತಾಪವನ್ನು ತಡೆಯಲಾರದೆ ಎಳೆ ಚಿಗುರುಗಳಿಂದ ಕೂಡಿದ ವೃಕ್ಷಚ್ಛಾಯೆಗಳನ್ನಾಶ್ರಯಿಸಿ, ತಣ್ಣಗೂ ನಿರ್ಮಲವಾಗಿಯೂ ಇರುವ ಉದಕವಂ ಕುಡಿದು, ಶೈತ್ಯ ಸೌರಭ್ಯಮಾಂದ್ಯಯುಕ್ತಮಾದ ಗಾಳಿಗೆ ಮೈಬಿಟ್ಟುಕೊಂಡು ತಮ್ಮ ಮಾರ್ಗಾಯಾಸವನ್ನು ಹೋಗಲಾಡಿಸಿಕೊಳ್ಳುತ್ತಿದ್ದರು. ವಿರಹತಾಪದಿಂದ ಬೆಂದು ಬೆಂಡಾದ ಸ್ತ್ರೀಯರು ಕಾಮುಕರೊಂದಿಗೆ ನೆರೆದು ಪಚ್ಚೆಕರ್ಪೂರ ಮೊದಲಾದ ವಸ್ತುಗಳಿಂದ ತಂಪಾಗಿರುವಂತೆ ಮಾಡಿಕೊಂಡು ಉಪ್ಪರಿಗೆಗಳ ಮೇಲ್ಮಚ್ಚುಗಳಲ್ಲಿ ಆನಂದದಿಂದ ಕ್ರೀಡಾಸುಖವನ್ನನುಭವಿಸುತ್ತಿದ್ದರು.
ಆ ಚೈತ್ರಮಾಸಮೆಸೆದುದು ಧರ್ಮಜನ ಕೀರ್ತಿ।
ಭೂಚಕ್ರಮಂ ಮುಸುಕಿದಂತೆ ಬೆಳುದಿಂಗಳಿರೆ ।
ಯಾಚಕರನೆತ್ತಲುಂಕೂಗಿ ಕರೆವಂತುಲಿಯೆ ಕೋಗಿಲೆಗಳಿಳೆಯ ಜನದ॥
ಲೋಚನಕುದಯಿಪ ಪಸದಂತೆ ಚೂತಾಂಕುರಂ ।
ಗೋಚರಿಸುತೆ ಪಾತಕಕ್ಷಯದಂತೆ ಮಾಗಿಯ ವಿ।
ಮೋಚನಂ ಕಾಣಿಸಲ್ ಪುಣ್ಯವಾಸನೆಯಂತೆ ದಕ್ಷಿಣದ ವಾಯು ಸುಳಿಯೆ॥೬॥
ಪ್ರತಿಪದಾರ್ಥ:- ಧರ್ಮಜನ= ಯುಧಿಷ್ಠಿರನ, ಕೀರ್ತಿ=ಯಶಸ್ಸು, ಭೂಚಕ್ರಮಂ= ಧರಾವಲಯವನ್ನು , ಮುಸುಕಿದಂತೆ= ಕವಿದುಕೊಂಡಂತೆ, ಬೆಳ್ದಿಂಗಳು= ಚಂದ್ರಿಕೆಯು, ಇರೆ=ಇರಲಾಗಿ, ಯಾಚಕರನು= ಅತಿಥಿಗಳಾಗಿ ಬಂದವರನ್ನು, ಎಲ್ಲೆಲ್ಲಿಯೂ ಕೂಗಿ= ಫಲಪ್ರಾಪ್ತಿಯನ್ನು ಪಡೆಯಲು ಬರಹೇಳಿ, ಕರೆವಂತೆ= ಕರೆಯುವತೆರನಾಗಿ, ಕೋಗಿಲೆಗಳು= ಕೋಗಿಲೆ ಹಕ್ಕಿಗಳು, ಉಲಿಯೆ= ಶಬ್ಧವಂ ಮಾಡಲು, ಇಳೆಯ= ಧರೆಯ, ಜನದ=ಲೋಗರ, ಲೋಚನಕೆ= ನಯನಂಗಳಿಗೆ, ಉದಯಿಪ= ಕಾಣಬರತಕ್ಕ, ಪೊಸತಂತೆ= ಹೊಸದಾಗಿರುವ ಹಾಗೆ, ಚೂತಾಂಕುರಂ= ಮಾವಿನ ಮರದ ಪಲ್ಲಂವಗಳು, ಗೋಚರಿಸೆ= ಕಾಣಲಾಗಿ, ಪಾತಕ=ದುರಿತ, ಕ್ಷಯದಂತೆ= ನಿವಾರಣೆಯಂತೆ, ಮಾಗಿಯ= ಮಾಘಮಾಸದ, ವಿಮೋಚನಂ= ಬಿಡುಗಡೆಯು, ಕಾಣಿಸೆ= ಗೋಚರವಾಗುತ್ತಿರಲಾಗಿ, ಪುಣ್ಯವಾಸನೆಯಂತೆ = ಸತ್ಕಾರ್ಯದ ಆಮೋದದ ಬಗೆಯಾಗಿ,ಕ್ಷಿಣದ
= ತೆಂಕಣದೆಸೆಯ, ವಾಯು= ಪವನನು, ಸುಳಿಯೆ= ತಿರುಗಾಡಲು, ಆ ಚೈತ್ರಮಾಸವು= ಆ ವಸಂತಕಾಲವು, ಎಸೆದುದು= ಹೊಳೆಯಲಾರಂಭಿಸಿತು.
ತಾತ್ಪರ್ಯ:- ಧರ್ಮಾತ್ಮನಾದ ಧರ್ಮನಂದನನ ಯಶಸ್ಸೆಂಬ ಚಂದ್ರಿಕೆಯು ಎಲ್ಲೆಲ್ಲಿಯೂ ವ್ಯಾಪಿಸಿದೆಯೊ ಎಂಬಂತೆ ತೋರುವ ಬೆಳ್ದಿಂಗಳಿಂದಲೂ, ಯಾಚಕರನ್ನು ಬೇಗ ಬನ್ನಿರೆಂದು ಕೂಗುತ್ತವೆಯೋ ಎಂಬಂತೆ ಕಾಣುವ ಪಿಕವಿಂಡುಗಳ ಇಂಚರಗಳಿಂದಲೂ, ಹೊಸದಾಗಿ ಚಿಗುರಿ ನೋಡುವುದಕ್ಕಾನಂದವಂ ಗೈವ ಚೂತಪಲ್ಲವಗಳಿಂದಲೂ, ಪಾತಕ ಪರಿಹಾರ
ವಾದ್ದರಿಂದಲೇ ಪುಣ್ಯವು ಲಭಿಸುವಂತೆ ಮಾಗಿಯ ಕಾಲವು ಹೋಗಿ ಸಕಲಜನ ಮನೋರಂಜಕಮಾದ ಮಧುಮಾಸವುಂ-
ಟಾಗಿ ತೆಂಕಣ ಗಾಳಿಯು ಬೀಸುತ್ತಿರುವಾಗಲು.
ಧಾತ್ರೀಶ ಕೇಳ್ ಬಳಿಕ ಧರ್ಮಜಂ ತಾಮರಸ।
ನೇತ್ರ ವೇದವ್ಯಾಸರಾಜ್ಞೆಯಿಂದಖಿಳ ರ್ಷಿ।
ಗೋತ್ರದ ಮುನಿಗಳೆಲ್ಲರಂ ಕರೆಸಿ ಮೇಲವರನುಜ್ಞೆಯಿಂದಾ ಯಜ್ಞದ॥
ಸೂತ್ರಪ್ರಕಾರದಿಂದಾರಾಜಿಸುವ ಬಹಿಃ।
ಕ್ಷೇತ್ರದಧ್ವರಶಾಲೆಯೊಳ್ ದೀಕ್ಷೆಯಂ ತಳೆದು ।
ಚೈತ್ರಸಿತಪೌರ್ಣಮಾಸಿಯ ದಿನದೆ ಬಿಟ್ಟನರ್ಚಿಸಿ ಹಯವನುತ್ಸವದೊಳು॥೭॥
ಪ್ರತಿಪದಾರ್ಥ:- ಧಾತ್ರೀಶ= ಪೊಡವಿಪನಾದ ಜನಮೇಜಯನೆ ! ಕೇಳ್=ಲಾಲಿಸು, ಬಳಿಕ= ಆಮೇಲೆ, ಧರ್ಮಜಂ= ಯುಧಿಷ್ಠಿರನು, ತಾಮರಸ= ಸರಸಿಜಾತಂಗಳಂತಿರುವ (ಕಮಲದಂತಿರುವ ) ನೇತ್ರ= ನಯನಂಗಳನುಳ್ಳ, ಕೃಷ್ಣಮೂರ್ತಿಯ, ವೇದವ್ಯಾಸರ= ಬಾದರಾಯಣ ಮುನಿಪತಿಯ,( ಇವರೀರ್ವರ ) ಆಜ್ಞೆಯಿಂದ= ಶಾಸನದಿಂದ, ಅಖಿಲ= ಸಮಸ್ತರಾದ, ಋಷಿ= ತಾಪಸೋತ್ತಮರ, ಗೋತ್ರದ= ವಂಶದಲ್ಲಿ ಹುಟ್ಟಿದ, ಮುನಿಗಳೆಲ್ಲರ= ಅಶೇಷರಾದ ಮುನೀಂದ್ರರನ್ನೂ, ಕರೆಸಿ= ಬರುವಂತೆ ಮಾಡಿ, ಮೇಣ್=ಅಲ್ಲದೆ, ಅವರ= ಆ ಋಷೀಶ್ವರರ, ಅನುಜ್ಞೆಯಿಂದ = ಆಜ್ಞೆಯಿಂದ, ಆ ಯಜ್ಞದ= ಆ ಕ್ರತುವಿನ, ಸೂತ್ರಪ್ರಕಾರದಿಂದ= ವಿಧಿನಿಯಾಮಕದಿಂದ, ರಾಜಿಪ= ಹೊಳೆಹೊಳೆವ, ಬಹಿಃಕ್ಷೇತ್ರದ= ನಗರದ ಹೊರಗಡೆಯಲ್ಲಿರತಕ್ಕ, ಅಧ್ವರಶಾಲೆಯೊಳ್= ಯಾಗಮಂಟಪದಲ್ಲಿ, ದೀಕ್ಷೆಯಂಕೊಂಡು= ದೀಕ್ಷಾಬದ್ಧನಾಗಿ, ಚೈತ್ರಸಿತ= ಚೈತ್ರಶುಕ್ಲದ, ಪೌರ್ಣಮಾಸಿಯ= ಪೂರ್ಣಿಮೆಯ, ದಿನದ= ದಿವಸದಲ್ಲಿ, ಉತ್ಸವದೊಳ್= ಸಂಭ್ರಮಾತಿಶಯದಿಂದ, ಅರ್ಚಿಸಿ= ವೇದವಿಧಿಯಂತೆ ಪೂಜೆಗೈದು, ಹಯವನು= ಅಶ್ವವನ್ನು, ಬಿಟ್ಟರು= ದೇಶಾಟನೆಗೋಸುಗವಾಗಿ ಕಳುಹಿಸಿದರು.
ತಾತ್ಪರ್ಯ:- ಆಗ ಧರ್ಮಜನು ಕಮಲಾಕ್ಷನಾದ ಕೃಷ್ಣಸ್ವಾಮಿಯ ಮತ್ತು ವೇದವ್ಯಾಸ ಮುನಿಗಳ ಆಜ್ಞೆಯಂತೆ ಕಶ್ಯಪ, ಅತ್ರಿ,ಭರದ್ವಾಜ, ವಿಶ್ವಾಮಿತ್ರ,ಗೌತಮ, ಜಮದಗ್ನಿ, ಅಗಸ್ತ್ಯರೆ ಮೊದಲಾದ ಋಷಿವರ್ಗದವರನ್ನೆಲ್ಲಾ ಕರೆಯಿಸಿ, ಸಶಾಸ್ತ್ರೀಯವಾಗಿ ದೀಕ್ಷೆಯಂ ಕೈಗೊಂಡವನಾಗಿ, ಯಜ್ಞಾಶ್ವವನ್ನು ಗಂಧ ಪುಷ್ಪಾಕ್ಷತೆಗಳಿಂದ ಪೂಜಿಸಿ ದೇಶಾಟನೆಗೋಸ್ಕರ ಕಳುಹಿಸಿದರು.
ಇಂದುಕುಲದಗ್ಗಳೆಯ ಪಾಂಡುವಸುಧಾಪಾಲ ।
ನಂದನ ಯುಧಿಷ್ಠಿರ ನರೇಂದ್ರನಧ್ವರಹಯಮಿ।
ದಂ ದಿಟ್ಟರಾರಾದೊಡಂ ಕಟ್ಟಿಕೊಳಲಾರ್ಪೊಡಿಳೆಯೊಳೆಂಬೀ ಲಿಪಿಯನು॥
ಸಂದಿಸಿ ಬರೆದ ಕನಕಪಟ್ಟಮನದರ ಪಣೆಯೊ।
ಳೊಂದಿಸಿ ತುರಂಗಮವನಮಲವಸ್ತ್ರಾಭರಣ।
ದಿಂ ದಿವ್ಯಗಂಧಮಾಲ್ಯಾಕ್ಷತೆಗಳಿಂದಲಂಕರಿಸಿ ಬಿಟ್ಟರ್ ಶುಭದೊಳು॥೮॥
ಪ್ರತಿಪದಾರ್ಥ:- ಇಂದುಕುಲದ= ಹಿಮಕರಾನ್ವಯದಲ್ಲಿ ಜನಿಸಿದವರಲ್ಲಿ, ಅಗ್ಗಳೆಯ= ಉತ್ತಮೋತ್ತಮನಾದ, ಪಾಂಡುವಸುಧಾಪಾಲ= ಪಾಂಡುರಾಜನ= ಪಾಂಡುರಾಜನ, ನಂದನ= ಕುವರನಾದ, ಯುಧಿಷ್ಠಿರ= ಧರ್ಮತನಯನೆಂಬ, ನರೇಂದ್ರನ= ಮನುಜಾಧಿಪನ, ಅಧ್ವರಹಯಂ= ಯಾಗದ ಕುದುರೆಯು, ಇದಂ= ಈ ಹಯವನ್ನು, ದಿಟ್ಟರು= ವೀರಾಗ್ರಣಿಗಳು, ಆರಾದೊಡಂ= ಯಾರೇ ಆದರೂ, ಆರ್ಪೊಡೆ= ಶೂರರಿದ್ದಲ್ಲಿ, ಕಟ್ಟಿಕೊಳಲಿ=ಬಂಧಿಸಲಿ, ಎಂಬ= ಎಂಬತೆರನಾದ, ಲಿಪಿಯನು= ಬರವಣಿಗೆಯನ್ನು, ಸಂಧಿಸಿ= ಸೇರಿಸಿ, ಬರೆದ= ಬರೆದಿರತಕ್ಕ, ಕನಕ= ಬಂಗಾರದಿಂದ ಮಾಡಿದ,ಪಟ್ಟವನು=ರೇಕನ್ನು, ಅದರ= ಆ ಅಶ್ವದ, ಪಣೆಯೊಳು= ಫಾಲದಲ್ಲಿ, ಬಂಧಿಸಿ= ಬಿಗಿದು, ತುರಂಗವನು= ಹಯವನ್ನು, ಅಮಲ= ಸ್ವಚ್ಛಂಗಳಾದ, ವಸ್ತ್ರಾಭರಣದಿಂ= ಉಡಿಗೆತೊಡಿಗೆಗಳಿಂದ, ದಿವ್ಯ= ಶ್ರೇಷ್ಠವಾದ, ಗಂಧಮಾಲ್ಯಾದಿಗಳಿಂದ = ಗಂಧ, ಹೂ, ಸೇಸೆ, ಇವುಗಳಿಂದ, ಅಲಂಕರಿಸಿ =ಶೃಂಗಾರ ಮಾಡಿ, ಶುಭದೊಳು= ಕಲ್ಯಾಣದಿಂದ, ಬಿಟ್ಟರು= ಕಳುಹಿದರು.
ಆ॥ ವಿ॥ ಇಂದು= ಈಗ, ( ಕನ್ನಡ ) ಇಂದು= ಚಂದ್ರ, ( ಸಂಸ್ಕೃತ) ಅಗ್ಗಳೆ(ತ್ಭ) ಅರ್ಗಳ( ತ್ಸ ) ವಸು=ದ್ರವ್ಯ, ಮತ್ತು ಅಷ್ಟವಸುಗಳು.
ತಾತ್ಪರ್ಯ:- ಒಂದಾನೊಂದು ಭಂಗಾರದ ತಗಡಿನಲ್ಲಿ " ಈ ಯಜ್ಞಾಶ್ವವು ಚಂದ್ರವಂಶದ ರಾಜರುಗಳಲ್ಲೆಲ್ಲಾ ರತ್ನಪ್ರಾಯನಾದ ಯುಧಿಷ್ಠಿರ ಮಹಾರಾಜನದು. ವೀರಾಗ್ರಣಿಗಳು ಯಾರು ಬೇಕಾದರೂ ಈ ಕುದುರೆಯನ್ನು ಕಟ್ಟಿ ನಮ್ಮನ್ನು ಜಯಿಸಬಹುದು ಎಂದು ಬರೆದ ಚಿನ್ನದ ತಗಡಿನ ಪಟ್ಟಿಯನ್ನು ಆ ಉತ್ತಮಾಶ್ವದ ಹಣೆಯಲ್ಲಿ ಬಿಗಿದು ಅಮೌಲ್ಯವಾದ ವಸ್ತ್ರಾಭರಣಗಳಿಂದಲಂಕರಿಸಿ, ದಿಗ್ವಿಜಯಾರ್ಥವಾಗಿ ಬಿಟ್ಟರು.
ಶ್ಲಾಘ್ಯದಿಂದಾದ ಮಜ್ಜನಭೋಜನದ ಸದಾ ।
ರೋಗ್ಯದಿಂ ತಾಂಬೂಲ ವಸ್ತ್ರ ಭೂಷಣದ ಸೌ।
ಭಾಗಯದಿಂ ಕುಸುಮ ಪರಿಮಳಲೇಪನಂಗಳಿಂ ಸ್ತ್ರೀಪುರುಷರೇಕಾಂತಕೆ॥
ಯೋಗ್ಯವಹ ಸಜ್ಜೆವನೆಯೊಳಗೀರ್ವರುಂ ದಿವ್ಯ ।
ಭೋಗ್ಯಮೆನಿಪೊಂದು ಮಂಚದೊಳೊರಗಿ ಕಾಮವೈ।
ರಾಗ್ಯಮಾಗಿರ್ಪುದಸಿಪತ್ರವ್ರತಂ ತದ್ವ್ರತದೊಳರಸನಿರುತಿರ್ದನು॥೯॥
ಪ್ರತಿಪದಾರ್ಥ:- ಶ್ಲಾಘ್ಯದಿಂ= ಶ್ರೇಷ್ಠಮಾರ್ಗದಿಂದ, ಆದ= ಉಂಟಾದ, ಮಜ್ಜನ= ಸ್ನಾನದ, ಭೋಜನದ= ಶಾಲ್ಯಾನ್ನದ ಊಟದ, ಸದಾ=ಅನವರತವೂ, ಆರೋಗ್ಯದಿಂದ= ಕಾಯಿಲೆ ಇಲ್ಲದೆ ಇರುವಿಕೆಯಿಂದಲೂ,ಮತ್ತು ದೈವಾಯತ್ತವಾದ ಬಲದಿಂದಲೂ, ತಾಂಬೂಲ ವಸ್ತ್ರ ಭೂಷಣದ = ಅಡಿಕೆ ವೀಳೆಯದೆಲೆ ಉಡಿಗೆ ತೊಡಿಗಗಳು ಇವುಗಳ, ಸೌಭಾಗ್ಯದಿಂ= ಸೊಬಗಿನಿಂದ, ಕುಸುಮಪರಿಮಳಾನುಲೇಪನದಿಂ= ಹೂ ಗಂಧ ಮೊದಲಾದವುಗಳ ಬಳಿಯುವಿಕೆಯಿಂದಲೂ, ಸ್ತ್ರೀಪುರುಷರು= ಗಂಡ ಹೆಂಡಿರು, (ದೀಕ್ಷಾಬದ್ಧರಾದ ) ಏಕಾಂತಕೆ= ರಹಸ್ಯಸ್ಥಾನಕ್ಕೆ, ಯೋಗ್ಯವಹ= ಯೋಗ್ಯವಾಗಿರತಕ್ಕ , ಸಜ್ಜೆಮನೆಯೊಳಗೆ= ಮಹಡಿಯ ಮನೆಯಲ್ಲಿ ( ದೀಕ್ಷಾಬದ್ಧರಾದ ) ಸತಿಪತಿಗಳಿರಲು ಮಾಡಿರುವ ಮನೆಯಲ್ಲಿ, ಈರ್ವರು= ದಂಪತಿಗಳು, ( ಧರ್ಮರಾಜ ದ್ರೌಪದಿಯರು) ದಿವ್ಯಭೋಗ್ಯ= ಶ್ರೇಷ್ಠವಾದ ಸುಖಾನುಭವವು, ಎನಿಪ= ಎಂದೆನಿಸಿಕೊಳ್ಳುವ
ಒಂದು=ಒಂದಾದ, ಮಂಚದೊಳ್= ದರ್ಭೆಯಿಂದ ಮಾಡಿದ ಹಾಸಿಗೆಯಲ್ಲಿ, ಒರಗಿ=ಕಲೆತು, ಕಾಮವೈರಾಗ್ಯಮಾಗಿ= ಕಾಮಾತುರವನ್ನು ಬಿಟ್ಟು, ಇರ್ಪುದು= ಇರತಕ್ಕದ್ದು, ಅಸಿಪತ್ರವ್ರತಂ= ಅಸಿಧಾರಾವ್ರತವೆನಿಸಿಕೊಳ್ಳುವುದು, ತದ್ವ್ರತದೊಳ್= ಅಂತಹ ನಿಯಮದಲ್ಲಿ, ಊರಸನು= ಯುಧಿಷ್ಠಿರನು, ಇರುತಿರ್ದನು= ಇದ್ದನು.
ತಾತ್ಪರ್ಯ :- ತರುವಾಯ ಅಭ್ಯಂಗನಸ್ನಾನದಿಂದಲೂ,ಶಾಲ್ಯನ್ನ ಭೋಜನದಿಂದಲೂ, ತಾಂಬೂಲವಸ್ತ್ರಾಭರಣಗಳಿಂದಲೂ
ಹೂ, ಗಂಧ, ಮೊದಲಾದವುಗಳಿಂದಲೂ ಕೂಡಿ ಉಪ್ಪರಿಗೆಗಳ ಮೇಲ್ಮಚ್ಚುಗಳಲ್ಲಿ ಪಟ್ಟೆ ಮಂಚದಮೇಲೆ ಮಲಗಿ ಸುಖಸಲ್ಲಾಪಗಳಿಂದ ಕ್ರೀಡಿಸುತ್ತಿದ್ದ ಯುಧಿಷ್ಠಿರನೂ ಮತ್ತು ಇವನ ಪಟ್ಟದರಸಿಯಾದ ದ್ರೌಪದಿಯೂ ಸಹ ಊಶ್ವಮೇಧಯಾಗ ಸಾಧನೆಗಾಗಿ ರಾಜಭೋಗಂಗಳ ಹಂಬಲವನ್ನೆಲ್ಲಾ ಮರೆತು ಮಂತ್ರೋದಕ ಸ್ನಾನವೂ, ಕ್ಷೀರಮಾತ್ರವಾದ ಆಹಾರವೂ, ದೈವಾಯತ್ತವಾದ ಶಕ್ತಿಯೂ, ಅಲಂಕಾರಮಾತ್ರಕ್ಕಾಗಿ ಇಟ್ಟಿರತಕ್ಕ ಗಂಧ ಪುಷ್ಪ ತಾಂಬೂಲಗಳೂ ಉಳ್ಳವರಾಗಿ, ಯಾಗದೀಕ್ಷೆಯಂ ಕೈಕೊಂಡು, ಅತ್ಯಧಿಕವಾದ ವೈರಾಗ್ಯಬುದ್ಧಿಯಿಂದ ದೇವಯೋಗ್ಯಮಾದೊಂದು ದರ್ಭಾಸನದಲ್ಲಿ ಮಲಗಿ ಅಸಿಧಾರಾವ್ರತಮಂ ನೆರವೇರಿಸುತ್ತಿದ್ದರು.
ತದ್ಯಾಗಮೊಂದು ಬರಿಸಕೆ ಮುಗಿವುದನ್ನೆಗಂ ।
ಸದ್ಯಾಜಮಾನದೀಕ್ಷೆಯನವನಿಪ ತಾಳ್ದ ।
ನುದ್ಯುಕ್ತರಾದರರ್ಜುನನೊಡನೆ ಹಯರಕ್ಷೆಗಸುರಹರನಾಜ್ಞೆಯಿಂದೆ॥
ಉದ್ಯತ್ಪರಾಕ್ರಮಿಗಳನುಸಾಲ್ವ ಸಾತ್ಯಕಿ ।
ಪ್ರದ್ಯುಮ್ನ ಕೃತವರ್ಮ ಯೌವನಾಶ್ವಾತಿಬಲ ।
ಖದ್ಯೋತಸುತಸೂನು ಮೊದಲಾದ ವೀರರೊದಗಿತು ಚಾತುರಂಗದೊಡನೆ॥೧೦॥
ಪ್ರತಿಪದಾರ್ಥ:- ತದ್ಯಾಗಂ= ಆ ಹಯಮೇಧವು, ಒಂದು ವರ್ಷಕೆ= ಒಂದು ಸಂವತ್ಸರಕೆ, ಮುಗಿವುದು=ಪೂರೈಸುತ್ತದೆ, ಅನ್ನೆಗಂ= ಅದುವರೆವಿಗೂ, ಸತ್=ಉತ್ತಮವಾದ, ಯಜಮಾನ = ಯಜ್ಞಕರ್ತನು ಮಾಡಬೇಕಾಗಿರತಕ್ಕ, ದೀಕ್ಷೆಯನು= ವಿಧಿಯನ್ನು, ಅವನಿಪಂ= ಯುಧಿಷ್ಠಿರನು, ತಾಳ್ದನು= ಹೊಂದಿದನು, ಉದ್ಯತ್= ಶ್ರೇಷ್ಠರಾದ, ಪರಾಕ್ರಮಿಗಳು= ವೀರಾಗ್ರಣಿಗಳು, ಅನುಸಾಲ್ವ= ಸಾಲ್ವನ ತಮ್ಮನು,ಕೃತವರ್ಮ= ಕೃತವರ್ಮನೆಂಬುವನು, ಯೌವನಾಶ್ವ = ಭದ್ರಾವತೀ ರಾಜನು, ಅತಿಬಲ= ಬಹುಪರಾಕ್ರಮಿಯಾದ, ಖದ್ಯೋತ= ರವಿಯ, ಸುತ=ಕುಮಾರನಾದ ಕರ್ಣನಿಗೆ, ಸೂನು= ಮಗನಾದ ವೃಷಧ್ವಜನು, ಮೊದಲಾದ = ಇವರೆ ಆದಿಯಾಗಿರತಕ್ಕ, ವೀರರು= ಭಟರು, ಅಸುರಹರನ= ರಾಕ್ಷಸಾಂತಕನ, ಆಜ್ಞೆಯಿಂದ = ಶಾಸನದಿಂದ, ಅರ್ಜುನನೊಡನೆ= ಪಾರ್ಥನೊಂದಿಗೆ, ಹಯರಕ್ಷೆಗೆ= ಅಶ್ವಪಾಲನೆಗೆ, ಉದ್ಯುಕ್ತರಾದರು= ಅನುವಾದರು, ಒಡನೆ= ಕೂಡಲೆ, ಚಾತುರಂಗಂ= ಆನೆ, ಕುದುರೆ, ತೇರು, ಕಾಲ್ಬಲವೇ ಮೊದಲಾದವು, ಒದಗಿತು= ಪಯಣಕ್ಕೆ ಅನುವಾಯಿತು.
ತಾತ್ಪರ್ಯ:- ಇದೇ ರೀತಿಯಲ್ಲಿ ಒಂದು ವರ್ಷದವರೆಗೂ ಅಸಿಧಾರಾವ್ರತನಿಯಮದಲ್ಲಿರಬೇಕೆಂದು ಗೊತ್ತುಮಾಡಿಕೊಂಡು, ದಿಗ್ವಿಜಯಾರ್ಥವಾಗಿ ಹೊರಟ ಯಜ್ಞಾಶ್ವದ ಬೆಂಗಾವಲ್ಗಾಗಿ ಅರ್ಜುನನನ್ನು ಕೃಷ್ಸ್ವಾಮಿಯ ಅಪ್ಪಣೆ ಮೇರೆಗೆ ಕಳುಹಿಸಲು ಇವನ ಹಿಂದೆಯೇ ವೀರಾಗ್ರೇಸರರಾದ ವೃಷಕೇತು, ಅನುಸಾಲ್ವ, ಸಾತ್ಯಕಿ, ಮದನನೇ ಮೊದಲಾದವರೆಲ್ಲರೂ ಚತುರಂಗಬಲ ಸಮೇತರಾಗಿ ಕುದುರೆಯ ಮೈಗಾವಲ್ಗಾಗಿ ಅರ್ಜುನನನ್ನು ಮುಂದಾಳಾಗಿಯೂ ಪ್ರದ್ಯುಮ್ನನನ್ನು ಪ್ರಧಾನ ಸೇನಾನಾಯಕನನ್ನಾಗಿಯೂ ಮಾಡಿಕೊಂಡು ಹೊರಟರು.
ಇಭಮುಖಾರ್ಚನೆಯಂ ನವಗ್ರಹದ ಪೂಜೆಯಂ।
ವಿಭವದಿಂ ಮಾಡಿ ಧರ್ಮಜ ಭೀಮ ಕುಂತಿಗ।
ಳ್ಗಭಿನಮಿಸಿ ಕೃಷ್ಣನ ಪದಾಂಬುಜಕ್ಕೆರಗಿ ದಿಕ್ಪಾಲರಂ ಬೇಡಿಕೊಂಡು॥
ಶುಭಮುಹೂರ್ತದೊಳರಸಿಯರ ಸೇಸೆವೆತ್ತು ಮುನಿ।
ಸಭೆಗೆ ವಂದಿಸಿ ಪರಕೆಗೊಂಡು ಪಾಠಕರ ಜಯ।
ರಭಸದಿಂದೆಸೆವ ಮಂಗಳವಾದ್ಯಘೋಷದಿಂದರ್ಜುನಂ ಪೊರಮಟ್ಟನು॥೧೧॥
ಪ್ರತಿಪದಾರ್ಥ:- ಅರ್ಜುನಂ= ಫಲ್ಗುಣನು, ಇಭಮುಖ= ಗಣೇಶನ, ಅರ್ಚನೆಯಂ= ಪೂಜೆಯನ್ನು (ಸಪರ್ಯೆಯನ್ನು) ನವಗ್ರಹದ= ಒಂಬತ್ತು ಗ್ರಹಗಳ, ಪೂಜೆಯಂ= ಅರ್ಚನೆಯನ್ನು, ವಿಭವದಿಂ= ಸಂಭ್ರಮಾತಿಶಯದಿಂದ, ಮಾಡಿ = ಎಸಗಿ, ಧರ್ಮಜ= ಧರ್ಮರಾಯನು, ಭೀಮ= ವೃಕೋದರನು, ಕುಂತಿಗಳ್ಗೆ= ಕುಂತಿದೇವಿಯೇ ಮೊದಲಾದವರಿಗೆ, ಅಭಿನಮಿಸಿ= ಪ್ರಣಾಮವಂಗೈದು, ಶ್ರೀಕೃಷ್ಣನ= ಕೃಷ್ಣಮೂರ್ತಿಯ, ಪದಾಂಬುಜಕ್ಕೆ = ಕಮಲದಂತಿರುವ ಪಾದಗಳಿಗೆ, ಎರಗಿ= ವಂದನೆಯಂ ಮಾಡಿ, ದಿಕ್ಪಾಲಕರಂ= ಅಷ್ಟದಿಕ್ಕುಗಳ ಅಧಿನಾಯಕರನ್ನು, ಬೇಡಿಕೊಂಡು= ಕೇಳಿಕೊಂಡು, ಶುಭ= ಮಂಗಳದಿಂದ ಕೂಡಿದ, ಮುಹೂರ್ತದೊಳು= ಕಾಲದಲ್ಲಿ, ಅರಸಿಯರ= ರಾಣಿಯರಿಂದ, ಸೇಸೆ= ಆರತಿಯಿಂದ ಕೂಡಿದ ಅಕ್ಷತೆಯನ್ನು, ವೆತ್ತು=ತಾಳಿ, ಮುನಿಸಭೆಗೆ= ಋಷಿಮಂಡಲಿಗೆ, ವಂದಿಸಿ = ಪ್ರಣಾಮವಂಗೈದು, ಪರಕೆಗೊಂಡು= ಆಶೀರ್ವಚನಮಂ ತಾಳಿ, ಪಾಠಕರ= ಹೊಗಳು ಭಟರ, ಜಯರಭಸದಿಂದ= ಜಯಜಯನಿನದದಿಂದ, ಎಸೆವ= ಹೊಳೆಯುವ, ಮಂಗಳವಾದ್ಯ= ಶುಭ ಸೂಚಕವಾದ್ಯಗಳ, ಘೋಷದಿಂದ= ವಾದ್ಯಸ್ವನಂಗಳಿಂದ, ಪೊರಮಟ್ಟನು.
ಆ॥ ವಿ ॥ ಇಭ= ಹಸ್ತಿಯ ವದನದಂತಿರುವ, ಮುಖ= ಆಸ್ಯವುಳ್ಳವನು, ( ಬ. ಸ. ) ನವಗ್ರಹಗಳು= ಸೂರ್ಯ, ಚಂದ್ರ, ಅಂಗಾರಕ, ಬುಧ, ಗುರು, ಶುಕ್ರ, ಶನಿ, ರಾಹು, ಕೇತುಗಳೆಂಬ ಒಂಬತ್ತು ಮಂದಿಯು, ಪದಾಂಬುಜ= ಅಂಬುಜದಂತಿರುವ ಪದ- ಪದಾಂಬುಜ(ಉ. ಉ. ಕ ) ಸ. ದೀ. ದಿಕ್ಪಾಲಕರು= ಇಂದ್ರ, ಅಗ್ನಿ, ಯಮ, ನಿರುತಿ, ವರುಣ, ವಾಯು, ಕುಬೇರ, ಈಶಾನ, ಎನ್ನತಕ್ಕವರು. ಮಂಗಳಕರವಾದ ವಾದ್ಯ ( ವಿ. ಪೂ. ) ಮಂಗಳವಾದ್ಯದ ಘೋಷ ( ಷ. ತ. ) ಅರ್ಜುನ= ಧರ್ಮಜನ ಎರಡನೆಯ ತಮ್ಮನು, ಎಕ್ಕದ ಗಿಡ, ಶ್ವೇತವರ್ಣ, ಕಾರ್ತವೀರ್ಯಾರ್ಜುನ ಎಂಬಿವು. ಪೊರಮಟ್ಟನು= ಪೊರಮಡು ( ಧಾತು )
ತಾತ್ಪರ್ಯ:- ಆಗ ಅರ್ಜುನನು ತಾನು ಹೋಗಿ ಮಾಡಬೇಕಾದ ಕಾರ್ಯವು ನಿರ್ವಿಘ್ನವಾಗಿ ನಡೆಯಬೇಕೆಂದು ಮೊದಲು ಗಣಪತಿಗೆ ಪೂಜೆಮಾಡಿ ಅನಂತರ ಸೂರ್ಯಾದಿ ಒಂಬತ್ತು ಗ್ರಹಗಳನ್ನು ಯಥಾವಿಧಿಯಾಗಿ ಅರ್ಚಿಸಿ,ಅಣ್ಣಂದಿರಾದ ಧರ್ಮಜ, ವೃಕೋದರರಿಗೂ, ತಾಯಿಯಾದ ಕುಂತಿಗೂ ನಮಸ್ಕಾರವಂ ಮಾಡಿ, ಶ್ರೀಕೃಷ್ಣನ ಪಾದಕಮಲಗಳಲ್ಲಿ ವಂದನೆಗಳನ್ನರ್ಪಿಸಿ, ತನಗೆ ಮೇಲನ್ನು ಮಾಡಲೆಂದು ಅಷ್ಟದಿಕ್ಪತಿಗಳನ್ನೂ ಪ್ರಾರ್ಥಿಸಿದವನಾಗಿ,ಶುಭಮುಹೂರ್ಥದಲ್ಲಿ ತನ್ನ ರಾಣಿಯರಿಂದ ಆರತಿ ಅಕ್ಷತೆಗಳನ್ನು ಮಾಡಿಸಿಕೊಂಡು, ತಾಪಸ ನಿಕರದಿಂದ ಆಶೀರ್ವಾದವಂ ಪಡೆದು ಮುಂದುವರಿಯಲು ಇಕ್ಕೆಲದಲ್ಲಿಯೂ ಸ್ತುತಿಪಾಠಕರು ಅರ್ಜುನನ ಬಿರುದಾವಳಿಗಳನ್ನು ಪಠಿಸುತ್ತಾ ನಡೆದರು.
ಮುರಹರನ ರಾಣಿಯರ್ ಧುರಧೀರ ಕರ್ಣಸುತ।
ನರಸಿಯೆಂದೆನ್ನ ಪೊಗಳ್ವಂತೆ ಮಿಗೆ ಸಂಗರದೊ।
ಳರಿಗಳಂ ಗೆಲ್ವುದೆಂದಾರತಿಯನೆತ್ತಿ ಮುತ್ತಿನ ಸೇಸೆಗಳನೆ ಸೂಸಿ॥
ಭರದಿಂದ ಬಂದಪ್ಪಿದಂಗನೆಯ ಮೊಗನೋಡಿ।
ಕುರುಳುಗಳನುಗುರ್ಗಳಿಂ ತಿದ್ದಿ ಮುದ್ದಿಸಿ ತನ್ನ।
ಬೆರಳುಂಗುರಂಗೊಟ್ಟು ಸಂತೈಸಿ ವೃಷಕೇತು ಕಾಂತೆಯಂ ಬೀಳ್ಕೊಂಡನು॥೧೨॥
ಪ್ರತಿಪದಾರ್ಥ:- ಮುರಹರನ= ಮುರಾಂತಕನಾದ ಕೃಷ್ಣಮೂರ್ತಿಯ, ರಾಣಿಯರ್= ಅರಸಿಯರು, ಧುರಧೀರ= ರಣದಲ್ಲಿ ಶೂರನಾದ, ಕರ್ಣಸುತನ= ಕರ್ಣನಂದನನ, ಅರಸೆಯೆಂದು=ರಾಣಿ ಎಂಬುದಾಗಿ, ಎನ್ನ= ನನ್ನನ್ನು, ಪೊಗಳ್ವಂತೆ= ಸ್ತುತಿಸುವಂತೆ, ಸಂಗರದೊಳು= ರಣದಲ್ಲಿ, ಮಿಗೆ= ಹೇಚ್ಚಾಗಿ, ಅರಿಗಳಂ= ಹಗೆಗಳನ್ನು, ಗೆಲ್ವುದು= ಜಯಿಸಬೇಕೆಂಬುದಾಗಿ, ಆರತಿಯನು= ಕೆಂಪುನೀರಿನ ಮಂಗಳಾರತಿಯನ್ನು,ಎತ್ತಿ= ಮಾಡಿ, ಮುತ್ತಿನ ಸೇಸೆಗಳನ್ನು= ಮುತ್ತಿನ ಮಂತ್ರಾಕ್ಷತೆಗಳನ್ನು, ಸೂಸಿ = ಎಸೆದು, ಭರದಿಂದ= ತಡಮಾಡದೆ, ಬೇಗನೆಬಂದು= ಶೀಘ್ರವಾಗಿ ಕರ್ಣಜನ ಸಮೀಪವನ್ನು ಸೇರಿ, ಅಪ್ಪಿದ= ಆಲಿಂಗಿಸಿಕೊಂಡ, ಅಂಗನೆಯ= ತನ್ನ ರಾಣಿಯ, ಮೊಗನೋಡಿ= ಮುಖವನ್ನು ಈಕ್ಷಿಸಿ, ಕುರುಳ್ಗಳಂ= ತಲೆಯ ಮುಂದಲೆಯ ಭಾಗದಲ್ಲಿರುವ ಕೂದಲುಗಳನ್ನು,ಉಗುರ್ಗಳಿಂ= ಉಗುರುಗಳಿಂದ, ತಿದ್ದಿ= ನೇರ್ಪಡಿಸಿ, ಮುದ್ದಿಸಿ= ಮುದ್ದಾಡಿ, ತನ್ನ= ಸ್ವಕೀಯವಾದ, ಬೆರಳ= ಬೆಟ್ಟುಗಳಲ್ಲಿದ್ದ, ಉಂಗುರಂ= ಉಂಗುರವನ್ನು, ಕೊಟ್ಟು=ಇತ್ತವನಾಗಿ,ಸಂತೈಸಿ= ಸಮಾಧಾನದ ನುಡಿಗಳನ್ನಾಡಿ, ವೃಷಕೇತು= ವೃಷಧ್ವಜನು, ಕಾಂತೆಯಂ= ತನ್ನರಸಿಯನ್ನು, ಬೀಳ್ಕೊಂಡನು= ಒಡಂಬಡಿಸಿ ಕಳುಹಿಸಿಕೊಂಡನು.
ಅ॥ ವಿ॥ ಸೇಸೆ (ತ್ಭ ) ಶೇಷಾ ( ತ್ಸ. )
ತಾತ್ಪರ್ಯ:- ಕರ್ಣಸುತನೂ ವೀರರ ಹುಲಿಯೂ ಆದ ವೃಷಧ್ವಜನು, ತಾನೂ ಸಕಲರಿಗೂ ನಮಸ್ಕಾರ ಮಾಡಿ, ಆಶೀರ್ವಾದ ಪಡೆದು ತನ್ನ ರಾಣಿಯಿದ್ದ ಕಡೆಗೆ ಬರಲಾಗಿ, ಆಗ ಅವನರಸಿಯು ವೃಷಕೇತುವನ್ನು ಕುರಿತು, ಎಲೈ ಮೋಹದ ನಿಧಿಯೇ ! ಶ್ರೀಕೃಷ್ಣನ ಕಾಂತೆಯರೆಲ್ಲರೂ, ನನ್ನನ್ನು " ರಣಧೀರನೂ ಸೂರ್ಯಸುತನ ತನುಜನೂ ಆದ ವೃಷಧ್ವಜನ ರಾಣಿ "
ಎಂದು ಹೊಗಳುವಂತೆ ಆಗಲಿ ಎಂಬುದಾಗಿ ನುಡಿಯುತ್ತ , ಆರತಿಯನ್ನು ಎತ್ತಿ ಮುತ್ತಿನ ಮಂತ್ರಾಕ್ಷತೆಗಳನ್ನು ತಳೆದು, ಬಹುಬೇಗನೆ ತನ್ನ ಪ್ರಾಣಕಾಂತನ ಬಳಿಗೆ ಬಂದು, ಗಾಢಾಲಿಂಗನವನ್ನು ಮಾಡಿಕೊಂಡು ಪತಿಯನ್ನಗಲಿರಬೇಕೆಂದು ಖಿನ್ನಳಾಗಿ ನಿಂತಳು. ಈ ರೀತಿಯಲ್ಲಿರುವ ಮೋಹನಾಂಗಿಯ ಮುಖವನ್ನು ನೋಡಿ, ತನ್ನು ಉಗುರುಗಳಿಂದ ಮುಂದಲೆಯನ್ನು ನೇರ್ಪಡಿಸಿ, ಮುತ್ತಿಟ್ಟು ತನ್ನು ಬೆರಳಲ್ಲಿದ್ದ ಮುದ್ರೆಯ ಉಂಗುರವನ್ನು ಕೊಟ್ಟು ಯುದ್ಧದಲ್ಲಿ ಜಯಶೀಲನಾಗಿ ಜಾಗ್ರತೆಯಲ್ಲಿಯೇ ಬಂದು ಸೇರುವೆನೆಂದು ಸಮಾಧಾನಪಡಿಸಿ ಹೊರಟನು.
ಅಂಕೆಯಿಂದರ್ಜುನಂಗಂದು ಯಾದವಸೈನ್ಯ।
ಮಂ ಕೂಡಿಕೊಟ್ಟು ದಳಪತಿಯಾಗಿ ತನಯನಂ।
ಮುಂಕೊಳಿಸಿ ಕರ್ಣಜ ಸುವೇಗಾನುಸಾಲೂವರ ಸಹಾಯಮಂ ಕೈವರ್ತಿಸಿ॥
ಪಂಕರುಹಲೋಚನಂ ಪೊರಮಟ್ಟನಿಬರೆಲ್ಲ।
ರಂ ಕಳುಹಿ ತಿರುಗಿದಂ ಸ್ವೇಚ್ಛೆಯಿಂದಾ ಹಯಂ।
ತೆಂಕಮೊಗಮಾಗಿ ನಡೆದುದು ಕರಿತುರಂಗರಥಪದಾತಿಗಳ್ ಸಂದಣಿಸಲು॥೧೩॥
ಪ್ರತಿಪದಾರ್ಥ:- ಅಂಕೆಯಿಂದ= ತಾನು ನಡೆಯಬೇಕಾದ ವಿಧಿಯಿಂದ, ಅಂದು= ಆಗ, ಅರ್ಜುನಂಗೆ= ಫಲ್ಗುಣನಿಗೆ, ಯಾದವಸೈನ್ಯಮಂ= ಯದುವಂಶಜರ ದಂಡನ್ನು, ಕೂಡೆ= ಜೊತೆಯಲ್ಲಿ, ಕೊಟ್ಟು= ಕೊಟ್ಟವನಾಗಿ, ತನಯನಂ= ಮೀನಕೇತನನನ್ನು, ದಳಪತಿಯಾಗಿ = ಸೇನಾನಾಯಕನನ್ನಾಗಿ, ಮುಂಕೊಳಿಸಿ = ಮುಂದಾಳಾಗಿರುವಂತೆ ಮಾಡಿಕೊಂಡು, ಕರ್ಣಜ= ಕರ್ಣಸುತನು, ಸವೇಗ= ಸವೇಗನೆಂಬ ಯೌವನಾಶ್ವನ ಕುವರನು, ಅನುಸಾಲ್ವರ= ಸಾಲ್ವನ ತಮ್ಮನು ಇವರೇ ಮೊದಲಾದವರ, ಸಹಾಯಮಂ= ಸಂಗವನ್ನು, ಕೈವರ್ಯಿಸಿ= ಕೈಕೊಂಡು, ಪಂಕರುಹಲೋಚನಂ= ಕೃಷ್ಣಸ್ವಾಮಿಯು, ಪೊರಮಟ್ಟು = ಹೊರಟು, ಅನಿಬರೆಲ್ಲರಂ= ಅಷ್ಟುಮಂದಿಯನ್ನೂ, ಕಳುಹಿ= ಹೊರಡಿಸಿ, ತಿರುಗಿದಂ= ಹಿಂತಿರುಗಿದವ-
ನಾದನು,ಆ ಹಯಂ= ಆ ತುರಗವು, ಸ್ವೇಚ್ಛೆಯಿಂದ= ತನ್ನ ಮನಸ್ಸು ಬಂದಂತೆ, ತೆಂಕಮುಖನಾಗಿ= ದಕ್ಷಿಣದಿಕ್ಕಿನ ಕಡೆಗೆ, ಕರಿ= ಗಜಗಳು, ತುರಗ= ಅಶ್ವಂಗಳು, ರಥ= ತೇರುಗಳು, ಪದಾತಿಗಳ್= ಕಾಲ್ಬಲಗಳು, ಸಂದಣಿಸಲು= ಒಟ್ಟಾಗಿಶಸೇರಲು,
ನಡೆದುದು= ಮುಂದೆಹೊರಟಿತು.
ಆ॥ ವಿ॥ ಪಂಕರುಹಲೋಚನಂ= ಪಂಕ-ಕೆಸರಿನಲ್ಲಿ, ರುಹ- ಹುಟ್ಟಿದ್ದು ( ಕೃ. ವೃ. ) ಪಂಕರುಹ= ಕಮಲದಂತೆ= ಲೋಚನಂ= ನಯನಂಗಳುಳ್ಳವನು ( ಬ. ಸ.)
ತಾತ್ಪರ್ಯ:- ಈ ರೀತಿಯಲ್ಲಿ ಹೊರಟ ಅರ್ಜುನ ವೃಷಕೇತುಗಳ ನೆರವಿಗಿಗಿ ಶ್ರೀಕೃಷ್ಣಸ್ವಾಮಿಯು ತನ್ನ ಪರಿವಾರವನ್ನೆಲ್ಲಾ ಜೊತಾಮಾಡಿ ಎಲ್ಲರನ್ನೂ ಸಾಗಕಳುಹಿ ತಾನು ಹಿಂದಕ್ಕೆ ಧರ್ಮಜನಿದ್ದಲ್ಲಿಗೆ ಬಂದು ಸೇರಿದನು. ಬಳಿಕ ಕುದುರೆಯೂ ಸ್ವೇಚ್ಛೆಯಾಗಿ ದಕ್ಷಿಣದಿಕ್ಕಿಗೆ ಹೊರಡಲಾಪಕ್ರಮಿಸಲಾಗಿ ಅದರ ಹಿಂದೆಯೇ ಅರ್ಜುನಾದಿಗಳೂ ಚತುರಂಗಬಲವೊ ನಡೆಯಿತು.
ಊಹಿಸುವೊಡರಿದೆನೆ ತುರಂಗಮದ ಕೂಡೆ ಸ।
ನ್ನಾಹದಿಂ ಮೇರೆದಪ್ಪಿದ ಮಹಾರ್ಣವದ ಪ್ರ।
ವಾಹಮೆನೆ ತಳ್ತಿಡಿದ ತರುಗುಲ್ಮಲತೆಗಳಿಂ ನಡೆಗೊಂಡು ಕಾನನಮೆನೆ॥
ಮೋಹರಂ ಭೂತಳಮನೊಳಕೊಂಡು ಬರುತಿರ್ದು।
ದಾಹಯಂ ಬಳಿಕ ದಕ್ಷಿಣದಿಶಾಮುಖಮಾಗಿ।
ಮಾಹಿಷ್ಮತೀಪಟ್ಟಣದ ಬಹಿರ್ಭಾಗದುಪವನದೆಡೆಗೆ ನಡೆತಂದುದು॥೧೪॥
ಪ್ರತಿಪದಾರ್ಥ:- ಊಹಿಸುವೊಡೆ= ಆಲೋಚನೆಮಾಡಿ ತಿಳೆದುಕೊಳ್ಳಲು, ಅರಿದು=ಅಸಾಧ್ರವು, ಎನೆ= ಎಂಬಂತೆ, ತುರಂಗಮದ= ಅಶ್ವದ, ಕೂಡೆ = ಸಂಗಡ, ಸನ್ನಾಹದಿಂ= ಸಲಕರಣೆಗಳಿಂದ, ಮೇರೆತಪ್ಪಿದ= ತಟವನ್ನತಿಕ್ರಮಿಸಿದ, ಮಹಾಪ್ರವಾಹಂ= ದೊಡ್ಡ ನದಿಯು,ಎನೆ= ಎಂಬಂತೆ, ತಳ್ತು= ಪಲ್ಲವಿಸಿ, ಇಡಿದ= ಸಾಂದ್ರವಾದ, ತರು= ವೃಕ್ಷಗಳಿಂದಲೂ, ಗುಲ್ಮ= ಪೊದರುಗಳಿಂದಲೂ, ಲತೆಗಳಿಂ= ಎಳೆವಳ್ಳಿಗಳೇ ಮೊದಲಾದವುಗಳಿಂದಲೂ,ನಡೆಗೊಂಡ= ನಡೆದುಬರುವ, ಕಾನನಂ= ವಿಪಿನವು, ಎನೆ= ಎಂಬಂತೆ, ಮೋಹರಂ= ದಳವು, ಭೂತಳವನು= ಭೂಭಾಗವನ್ನು, ಒಳಕೊಂಡು= ಸೇರಿಸಿಕೊಂಡು, ಬರುತಿರ್ದುದು= ಬರುತ್ತಿತ್ತು. ಬಳಿಕ =ಆ ಮೇಲೆ, ಆ ಹಯಂ= ಆ ಅಶ್ವವು, ದಕ್ಷಿಣದಿಶಾಮುಖಮಾಗಿ= ದಕ್ಷಿಣ ದಿಕ್ಕಿನ ಕಡೆಗೆ, ಮಾಹಿಷ್ಮತೀಪಟ್ಟಣದ= ಮಾಹಿಷ್ಮತೀ ಎಂಬ ನಗರದ, ಬಹಿರ್ಭಾಗದ= ಹೊರಗಡೆಯಲ್ಲಿರುವ, ಉಪವನದ=ಆರಾಮದ, ಎಡೆಗೆ=ಹತ್ತಿರಕ್ಕೆ, ನಡೆತಂದಿತು= ಐತಂದಿತು.
ತಾತ್ಪರ್ಯ:- ಈ ಸೈನ್ಯವನ್ನು ನೋಡಿದರೆ ಅಗಾಧವಾದ ಸಮುದ್ರವು ಮೇರೆತಪ್ಪಿ ಭೂಮಿಯಮೇಲೆ ಹೊರಟು ಬರುತ್ತಿದೆಯೋ ಎಂಬಂತೆಯೂ, ವಿಧವಿಧವಾದ ಮರಗಿಡಬಳ್ಳಿಗಳಿಂ ಕೂಡಿದ ಘೋರ ಕಾಂತಾರವೋಎಂಬತೆರನಾಗಿ-
ಯೂ, ಭ್ರಾಂತಿಯನ್ನುಂಟುಮಾಡುತ್ತಿತ್ತು. ಈ ತೆರನಾದ ಸೇನಾರ್ಣವದಿಂದ ಕೂಡಿದ ಅಶ್ವವು ತೆಂಕಮುಖನಾಗಿ ಮುಂದೆ ಮುಂದೆ ನಡೆಯುತ್ತೆರುವಾಗ ಮಾಹಿಷ್ಮತೀ ಪಟ್ಟಣದ ಉದ್ಯಾನವನವು ಕಾಣಬಂದಿತು.
ಆ ನಗರದರಸು ನೀಲಧ್ವಜಂ ಮೇಣವನ ।
ಸೂನು ಪ್ರವೀರನೆಂಬವನಾಗಳಲ್ಲಿಗು।
ದ್ಯಾನಕೇಳಿಗೆ ಬಂದನೊಲವಿಂದೆ ಮದನಮಂಜರಿಯೆಂಬ ಕಾಂತೆಯೊಡನೆ॥
ಆ ನಳಿನಲೋಚನೆಯ ಕೆಳದಿಯರ್ ಬಿಡಯದಿಂ ।
ದಾನಂದದೊಳು ಸಂಚರಿಸುತಿರ್ದರ್ ಬಳಿಕ ।
ಮೀನಕೇತನ ಮಹೀಪಾಲನರಮನೆಯ ಸೊಕ್ಕಾನೇಗಳ ತಂಡದಂತೆ॥೧೫॥
ಪ್ರತಿಪದಾರ್ಥ :- ಆ ನಗರದ= ಮಾಹಿಷ್ಮತೀ ಎಂಬ ಪಟ್ಟಣದ, ಅರಸು= ರಾಜನಾದ, ನೀಲಧ್ವಜಂ= ನೀಲಧ್ವಜನೆಂಬವನು
ಮೇಣ್= ಮತ್ತು, ಅವನಸೂನು= ಅವನ ಕುಮಾರನಾದ ಪ್ರವೀರನೆಂಬ ನಾಮಧೇಯವಂ ಪಡೆದವನು,ಅಲ್ಲಿ= ಆ ಉಪವನದಲ್ಲಿ, ಆಗಳು= ಆ ಕಾಲದಲ್ಲಿ, ಉದ್ಯಾನಕೇಳಿಗೆ= ತೋಟದ ಆಟಕ್ಕೆ, ಮದನಮಂಜರಿಯೆಂಬ = ಮದನಮಂಜರಿ ಎಂಬ ನಾಮಧೇಯವುಳ್ಳ, ಕಾಂತೆಯೊಡನೆ= ತನ್ನರಸಿಯೊಂದಿಗೆ, ಒಲವಿಂದ= ವಿಶ್ವಾಸದಿಂದ, ಬಂದನು= ಐತಂದನು, ಆಬಳಿಕ= ಅನಂತರ, ಆ ನಳಿನಲೋಚನೆಯ= ಆ ಪದ್ಮಾವತಿಯ,ಕೆಳದಿಯರ= ಸಂಗಾತಿಯರು,ಬಿಡಯದಿಂ=
ಬೆಡಗನ್ನು ತೋರ್ಪಡಿಸುವುದರಿಂದ, ಆನಂದನದೊಳು= ಆ ಉದ್ಯಾನದೊಳು, ಮೀನಕೇತನ ಮಹೀಪಾಲನ= ಮನ್ಮಥನೆಂಬರಸನ, ಅರಮನೆಯ= ರಾಜಗೃಹದಲ್ಲಿರತಕ್ಕ, ಸೊಕ್ಕಾನೆಗಳ= ಮತ್ತ ಹಸ್ತಿಗಳ, ತಂಡದಂತೆ= ಗುಂಪಿನಹಾಗೆ, ಸಂಚರಿಸುತಿದ್ದರೈ= ಸುಳಿದಾಡುತ್ತಿದ್ದರು.
ಅ॥ ವಿ॥ ನಳಿನಲೋಚನೆ= ನಳಿನದಂತೆ ಲೋಚನವುಳ್ಳವಳು ಯಾರೋ ಅವಳು (ಬ. ಸ. )
ತಾತ್ಪರ್ಯ:- ಆ ಉಪವನದಲ್ಲಿ ಮಾಹಿಷ್ಮತೀರಾಜನಾದ ನೀಲಧ್ವಜನೆಂಬುವನೂ ಅವನ ಕುವರನಾದ ಪ್ರವೀರನೆಂಬಾತನೂ, ಮನ್ಮಥನೆಂಬ ರಾಜನಮನೆಯ ಮದ್ದಾನೆಗಳ ಗುಂಪೋ ಎಂಬಂತೆ ತೋರುವ ಸಖೀಜನರಿಂದೊಡಗೂಡಿದ ಮದನಮಂಜರಿಯೆಂಬ ಪ್ರವೀರನ ಅರಸಿಯೂ ಸಹ ಬಂದು ವಿಹರಿಸುತ್ತಾ ಸಂತೋಷದಿಂದ
ಕೂಡಿದ್ದರು.
ನೋಡಿ ತಿಲಕವನಪ್ಪಿ ಕುರುವಕವನೆಳನಗೆಯೊ।
ಳೂಡಿ ಸಂಪಗೆಯಂ ಪ್ರಿಯಂಗುವಂ ಸೋಂಕಿ ಮುರಿ।
ದಾಡಿ ಚೂತವನೊದೆದಶೋಕೆಯಂ ಬಕುಳಮಂ ಮುಕ್ಕುಳಿಸಿ ಮಧ್ಯದಿಂದೆ॥
ಪಾಡಿ ಪುನ್ನಾಗಮಂ ಕರ್ಣಿಕಾರವನೆ ಕೊಂ।
ಡಾಡಿ ಮಂದಾರಮಂ ಜಾಣ್ಣುಡಿದು ಪುಷ್ಪಿತಂ।
ಮಾಡಿ ತೋರಿದರಂಬುಜಾಕ್ಷಿಯರ್ ನಾನಾವಿಲಾಸದಿಂದಾ ಬನದೊಳು॥೧೬॥
ಪ್ರತಿಪದಾರ್ಥ:- ಅಂಬುಜಾಕ್ಷಿಯರು= ಸರಸಿಜಲೋಚನೆಯರು, ತಿಲಕವನು= ಹಣೆಯಲ್ಲಿ ಅಲಂಕಾರವಾಗಿರತಕ್ಕ ತಿಲಕವನ್ನು, ನೋಡಿ= ಈಕ್ಷಿಸಿ, ಕುರವಕವನು= ಕೆಂಪು ಗೋರಂಟಿಯನ್ನು, ಅಪ್ಪಿ = ತಬ್ಬಿಕೊಂಡು, ಸಂಪಗೆಯಂ= ಸಂಪಿಗೆಯ ಗಿಡವನ್ನು , ಎಳನಗೆಯೊಳು= ಹುಸಿನಗುವಿನಿಂದ, ಊಡಿ= ಆಗಮಾಡಿ, ( ಉಗುಳಿ ) ಪ್ರಿಯಂಗುವಂ= ಪ್ರಿಯಂಗುವೆಂಬ ಮರವನ್ನು, ಸೋಂಕಿ= ಮುಟ್ಟಿ, ಚೂತಮನ= ಮಾವಿನ ಮರವನ್ನು, ಮುರಿದಾಡೆ= ಭಂಜಿಸಿ, ಅಶೋಕೆಯಂ= ಅಶೋಕವೆಂಬ ತರುವನ್ನು, ಒದೆದು= ಕಾಲಿನಿಂದ ತಾಡಿಸಿ, ಬಕುಳಮಂ= ವಕುಳ ವೃಕ್ಷವನ್ನು, ಮುಕ್ಕುಳಿಸಿ = ಬಾಯಿ ನೀರನ್ನು ಹೊರಕ್ಕೆ ಚೆಲ್ಲಿ, ಪುನ್ನಾಗಮನ= ಪುನ್ನಾಗವೃಕ್ಷವನ್ನು, ( ಸುರಹೊನ್ನೆಯ ಮರವನ್ನು), ಮಧ್ಯದಿಂ= ಮಧ್ಯಮಾವತಿ ರಾಗದಿಂದ, ಪಾಡಿ= ಗಾನಮಾಡಿ, ಕರ್ಣಿಕಾರವನೆ= ಕಣಿಗಲು ಗಿಡವನ್ನು, ಕೊಂಡಾಡಿ= ನುತಿಸಿ, ಮಂದಾರಮಂ= ಪಾರಿಜಾತದ ಮರವನ್ನು, ಜಾಣ್ನುಡಿದು= ಚಮತ್ಕಾರ ವಚನದಿಂದ ಬಾಗಿಸಿ, ಪುಷ್ಪಿತಂ ಮಾಡಿ= ಹೂಗಳು ಬಿಡುವಂತೆ ಮಾಡಿ. ಆ ಬನದೊಳು= ಆ ಉದ್ಯಾನದಲ್ಲಿ, ನಾನಾವಿಲಾಸದಿಂದ= ಪರಿಪರಿಯ ಚಾತುರ್ಯಗಳಿಂದ, ತೋರಿದರು= ತಮ್ಮ ಕೈಕಾಲು ಮೊದಲಾದವುಗಳ ಸಂಜ್ಞೆಯಿಂದ ತೋರ್ಪಡಿಸಿದರು.
ಅ॥ ವಿ॥ ಅಂಬುಜಾಕ್ಷಿಯರ್= ಅಂಬು-ನೀರಿನಲ್ಲಿ, ಜ-ಹೈಟ್ಟಿದ್ದು ಕಮಲ ( ಕೃ. ವೃ. ) ಅಂಬುಜದಂತೆ ಅಕ್ಷಿಯು ಯಾರಿಗೊ ಅವರು (ಬ. ಸ. ) ಬನ (ತ್ಭ ) ವನ( ತ್ಸ. )
ತಾತ್ಪರ್ಯ:- ಅಲ್ಲಿ ನೆರೆದಿದ್ದ ಕಮಲಾಕ್ಷಿಯರು ತಿಲಕವೃಕ್ಷವನ್ನು ನೋಡುತ್ತಲೂ, ಗೋರಂಟಿಯ ಮರವನ್ನು ಅಪ್ಪಿಕೊಳ್ಳುತ್ತಲೂ, ಸಂಪಿಗೆಯ ಹೂಗಳಿಂದ ಸಂತಸಮಂ ತಾಳುತ್ತಲೂ, ಮಾವಿನ ಮರಗಳನ್ನು ಮುರಿದು ಅಶೋಕವೃಕ್ಷ-
ಗಳನ್ನು ಒದೆಯುತ್ತಲೊ, ಸುರಹೊನ್ನೆ, ಗಿರಿತಾವರೌ ಮೊದಲಾದವನ್ನು ಹೊಗಳುತ್ತಲೂ, ಕಲ್ಪವೃಕ್ಷವನ್ನು ಬೊಗ್ಗಿಸಿ ಪುಷ್ಪಗಳುಂಟಾಗುವಂತೆ ಮಾಡುತ್ತಲೂ, ಕೈಕಾಲು ಮೊದಲಾದ ಅವಯವಗಳಿಂದ ವಿಧವಿಧವಾಗಿ ಚಮತ್ಕಾರತಿಶಯವನ್ನು ತೋರುತ್ತಿದ್ದರು.
ಮುಟ್ಟಲ್ ಪ್ರಿಯಂಗು ಪೂವಹ ತರಳೆಯರ ಕೈಗೆ।
ನಿಟ್ಟಿಸಲ್ ತಿಲಕಮಲರಹ ನೀರೆಯರ ಕಣ್ಗೆ।
ಮೆಟ್ಟಿದೊಡಶೋಕಮಂಕುರಮಪ್ಪ ಬಾಲೆಯರ ಮೆಲ್ಲಡಿಗೆ ಮಿಗೆ ಬೆಳ್ನಗೆ॥
ಪುಟ್ಟಲ್ಕೆ ಸಂಪಗೆ ಮುಗುಳ್ದೋರ್ಪ ಸುದತಿಯರ ।
ಬಟ್ಟಮೊಗಕೆಣೆಯಹವೆ ತಾವರೆಗಳೆಂದವಂ ।
ಬಿಟ್ಟು ತುಂಬಿದ ಜೌವನೆಯರ ತನುಪರಿಮಳಕೆ ಕವಿದುವಾ ಬನದಳಿಗಳು॥೧೭॥
ಪ್ರತಿಪದಾರ್ಥ:- ಮುಟ್ಟಲ್= ಮುಟ್ಟುವಿಕೆಯಿಂದ, ಪ್ರಿಯಂಗು= ಅಶೋಕವೃಕ್ಷವು, ಪೂವಹ= ಹೂವಾಗತಕ್ಕ, ತರಳೆಯರ= ಬಾಲೆಯರ, ಕೈಗೆ= ಕರಗಳಿಗೆ, ನಿಟ್ಟಿಸಲು= ಈಕ್ಷಿಸಲಾಗಿ, ತಿಲಕಂ= ತಿಲಕವೆಂಬಮರವು, ಅಲರಹ= ಪುಷ್ಪಿಸುವ, ನೀರೆಯರ = ನಾರಿಯರ, ಕಣ್ಗೆ = ನಯನಂಗಳಿಗೆ, ಮೆಟ್ಟಿದೊಡೆ= ಪಾದಸ್ಪರ್ಶಮಾಡಲು, ಅಶೋಕಂ= ಅಶೋಕವೆಂಬ ಮರವು, ಅಂಕುರಮಪ್ಪ= ಚಿಗುರಾಗುವ, ಬಾಲೆಯರ= ಯೌವನಸ್ತ್ರೀಯರ, ಮೆಲ್ಲಡಿ= ಮೃದುವಾದ ಕಾಲ್ಗಳಿಗೆ, ಮಿಗೆ= ಹೆಚ್ಚಾಗಿ, ಬೆಳ್ನಗೆ= ಬಿಳಿದಾದ ಹುಸಿನಗುವು, ಪುಟ್ಟಲ್ಕೆ= ಅಂಕುರಿಸಲು, ಸಂಪಗೆ= ಸಂಪಗೆ ಮರವು, ಮುಗುಳ್ದೋರ್ವ= ಮೊಗ್ಗುಗಳು ಆಗುವ ತೆರದಿಂದ ಕಾಣಬರುವ, ಸುದತಿಯರ = ನಾರಿಯರ, ಬಟ್ಟಮೊಗಕೆ= ದುಂಡಾದ ವದನ ಪ್ರದೇಶಕ್ಕೆ, ತಾವರೆಗಳು= ಸರಸಿಜಾತಗಳು, ಎಣೆಯಹವೆ= ಸದೃಶವಾಗಿ ಆದಾವೆ ? ಎಂದು= ಎಂಬತೆರನಾಗಿ, ಅವಂ= ಆ ತಾವರೆಗಳನ್ನು, ಬಿಟ್ಟು = ದೂರಮಾಡಿ, ತುಂಬಿದ= ಪರಿಪೂರ್ಣವಾದ, ಜವ್ವನೆಯರ= ಪ್ರಾಯದ ಹೆಂಗಸರ, ತನು= ದೇಹದ, ಪರಿಮಳಕೆ= ಸುರಭಿಗೆ, ಆ ಬನದ= ಆ ತೋಟದ, ಅಳಿಗಳು= ಭೃಂಗಂಗಳು, ಕವಿದವು= ಮುತ್ತಿಕೊಂಡವು.
ತಾತ್ಪರ್ಯ :- ನೋಡಿದ ಮಾತ್ರದಿಂದಲೆ ಅಶೋಕವೃಕ್ಷ, ತಿಲಕತರುಗಳಲ್ಲಿ ಹೂಗಳುಂಟಾಗುವಂತೆ ಮಾಡುವ ನಯನಂಗಳಿಂದಲೂ, ತುಳಿದ ಮಾತ್ರದಿಂದಲೆ ಅಶೋಕವೃಕ್ಷವೆಲ್ಲಾ ಚಿಗುರಿನಿಂದ ಕೂಡುವಂತೆಸಗುವ ಅಡಿದಾವರೆ-
ಗಳಿಂದಲೂ, ಸಂಪಗೆಯ ಮಗ್ಗುಗಳನ್ನು ಹೋಲುವ ಮಂದಹಾಸದಿಂದಲೂ, ಅಂಬುಜಗಳನ್ನೂ ಕೂಡ ಅಲೆಗಳೆಯುವ ಮುಖಪದ್ಮದಿಂದಲೂ, ಕೂಡಿದ ನಾರೀಮಣಿಗಳ ಶರೀರದ ಸುರಭಿಗೆಳಸಿ ಆ ಉದ್ಯಾನದಲ್ಲಿದ್ದ ಭೃಂಗಗಳೆಲ್ಲಾ ಮುತ್ತಿಕೊ- ಳ್ಳುತ್ತಲಿದ್ದವು.
ಸಣ್ಣನಡು ಸೈನಿಮಿರೆ ತೋಳಮೊದಲೊಳ್ಪೆಸೆಯೆ ।
ತಿಣ್ಣ ಮೊಲೆಗಳ್ ಪೊದಳೆ ಬೆನ್ನ ಸೋರ್ಮುಡಿಯಲೆಯೆ।
ಕಣ್ಣ ಬೆಳಗಾಗಸವನಾವರಿಸೆ ಮೊಗಮೆತ್ತಿ ತುದಿಗಾಲ್ಗಳಿಂದೆ ನಿಂದು॥
ಬಣ್ಣವಳಿಯದ ಪೂಗಳಂ ಕೊಯ್ದು ಬೆಂಡಾಗಿ।
ತಣ್ಣೆಲರ್ಗೊಡ್ಡಿ ಮೈಬೆವರನಾರಿಸಿಕೊಂಡು ।
ಪೆಣ್ಣುವಿಂಡಾ ಬನದೊಳಲರ್ಗಳಂ ತಮ್ಮ ತನುವಿನ ಕಂಪಿನಿಂ ಪೊರೆದರು॥೧೮॥
ಸಣ್ಣ ನಡು= ಬಹು ಚಿಕ್ಕ ಸೊಂಟವು, ಸೈನಿಮಿರೆ= ಉನ್ನತವಾಗಿರಲು, ತೋಳಮೊದಲೊಳ್= ಬಾಹುಮೂಲದೆಡೆಯಲ್ಲಿ, ಪೊಸೆಯೆ= ಪ್ರಕಾಶಿಸುತ್ತಿರಲಾಗಿ, ತಿಣ್ಣಮೊಲೆಗಳು= ಗಟ್ಟಿಯಾಗಿಯೂ ಮೇಲಕ್ಕೆದ್ದೂ ಇರುವ ಕುಚಗಳು, ಪೊದಳೆ= ಅಲ್ಲಾ-
ಡುತ್ತಿರಲಾಗಿ, ಬೆನ್ನಸೋರ್ಮುಡಿ= ಬೆನ್ನ ಹಿಂದೆ ಬಿದ್ದ ಕೇಶಪಾಶಂಗಳು, ಒಲಿಯೆ= ಪಕ್ಕಕ್ಕೆ ತಿರುಗಲು, ಕಣ್ಣಬೆಳಗು= ನಯನಂಗಳಿಂದುಂಟಾದ ಪ್ರಭೆಯು, ಆಗಸವನು= ಅಂತರಿಕ್ಷವನ್ನು, ಆವರಿಸೆ= ಮುಚ್ಚಿಕೊಂಡುಬಿಡಲು, ಮೊಗಂ= ಮೋರೆಯನ್ನು, ಎತ್ತಿ= ಮೇಲಕ್ಕೆತ್ತಿ, ತುದಿಗಾಲ್ಗಳಿಂದ= ಪಾದದ ದೊಡ್ಡ ಉಂಗುಟದಿಂದ, ನಿಂದು= ಎದ್ದುನಿಂತು, ಬಣ್ಣಂ -
ಅಳಿಯದ= ಕಂದಿಹೋಗದಿರುವ, ಪೂಗಳಂ= ಪುಷ್ಪಂಗಳನ್ನು, ಕೊಯ್ದು= ಕೊಯ್ದುಬಿಟ್ಟು, ಬೆಂಡಾಗಿ= ನಿಸ್ತೂಕವಾಗಿ, ಮೈ= ಶರೀರವನ್ನು, ತಣ್ಣೆಲರ್ಗೆ= ತಂಗಾಳಿಗೆ, ಒಡ್ಡಿ=ಚಾಚಿ, ಬೆವರನು= ಸ್ವೇದೋದಕವನ್ನು( ಬೆವರನೀರನ್ನು ), ಆರಿಸಿಕೊಂಡು= ಆರಿಹೋಗುವಂತೆ ಮಾಡಿಕೊಂಡು, ಪೆಣ್ಣುವಿಂಡು= ಸ್ತ್ರೀ ಮಂಡಲಿಯು, ಆ ಬನದ = ಆ ಉದ್ಯಾನದ, ಅಲರ್ಗಳಂ= ಪುಷ್ಪಗಳನ್ನು, ತಮ್ಮ= ಸ್ವಕೀಯವಾದ, ತನುವಿನ= ದೇಹದ, ಕಂಪಿನಿಂ= ಸುರಭಿಯಿಂದ, ಪೊರೆದರು= ಬಾಡದಂತೆ ಸಲಹಿದರು.
ತಾತ್ಪರ್ಯ:- ಆ ಕಮಲಮುಖಿಯರು ತಮ್ಮ ಬಡನಡುಗಳನ್ನು ಮೇಲಕ್ಕೆತ್ತಿಕೊಂಡು ಬಾಹುಮೂಲವು ಥಳಥಳಿಸುವಂತೆ ಮಾಡುತ್ತ, ಕಠಿಣವಾದ ಸ್ತನಗಳು ಅಲೂಲಾಡುತ್ತಿರಲಾಗಿ, ತಲೆಯಗಂಟು ಓರೆಯಾಗಲು, ಕಣ್ಣಿನ ದೃಷ್ಟಿಯನ್ನು ಆಕಾಶ-
ಮಾರ್ಗದಲ್ಲಿರುವಂತೆ ಮಾಡಿ, ಹೆಬ್ಬೆಟ್ಟುಗಳಮೇಲೆ ನಿಂತು, ಬಲು ಚೆಲುವಾಗಿಯೂ, ಸುವಾಸನೆಯಿಂದ ಕೂಡಿಯೂ ಇರುವ ಹೂಗಳನ್ನೆಲ್ಲಾ ಕೊಯ್ದು ಆಯಾಸದಿಂದ ಶಕ್ತಿ ಕುಂದಿದವರಾಗಿ, ತಂಗಾಳಿಯಿಂದ ತಮ್ಮ ದೇಹದಲ್ಲುಂಟಾದ ಬೆವರನ್ನು ಆರಿಸಿಕೊಳ್ಳುತ್ತ ಅವುಗಳನ್ನೆಲ್ಲಾ ತಮ್ಮ ಮೈಗಂಪಿನಿಂದ ಬಾಡದಂತೆ ಕಾಪಾಡುತ್ತಲಿದ್ದರು.
ನಿಲುಕಿ ಪೂಗೊಯ್ವ ಲಲಿತಾಂಗಿಯರ ಬಟ್ಟ ಬ।
ಲ್ಮೊಲೆಗಳಂ ಪೊರಲಾರದಸಿಯ ಸೆಳೆನಡುವಿದು ಶಿ।
ಥಿಲಮೆಂದು ಹರಿನೀಲದೆಸೆವೊಂದು ಸಣ್ಣ ಸರಳಂ ಮನೋಜಂ ನಿರ್ಮಿಸಿ॥
ನಿಲಿಸಿ ಬಿಗಿದನೊ ಮೂರುಕಟ್ಟನೆಡೆಗೆಡೆಗೆನಲ್।
ಸಲೆ ರಾಜಿಸಿತು ವಳಿತ್ರಯದ ಚೆಲ್ವಿಕೆಯಿದೆ ।
ಲಲನೆಯರ ಮಧ್ಯದೊಳೊಗೆದ ಬಾಸೆ ಕುಸುಮಾಪಚಯಸಮಯದೊಳ್ ಪೊಸತೆನೆ॥೧೯॥
ಪ್ರತಿಪದಾರ್ಥ:- ನಿಲುಕಿ= ಹೆಬ್ಬೆಟ್ಟಿನ ಮೇಲೆ ನಿಂತು, ಪೂಗೊಯ್ವ= ಹೂ ಕೊಯ್ಯುತ್ತಿರುವ,( ಪುಷ್ಪಾಪಚಯವಂ ಮಾಡತಕ್ಕ) ಲಲಿತಾಂಗಿಯರ= ಸುಂದರಗಾತ್ರವುಳ್ಳವರ, ಬಟ್ಟ= ದುಂಡಾಗಿಯೂ, ಬಲ್= ಚೆನ್ನಿಗಿ ಬಲಿತೂ ಇರತಕ್ಕ, ಮೊಲೆಗಳಂ= ಸ್ತನಗಳನ್ನು, ಪೊರಲಾರದ= ಹೊರುವುದಕ್ಕಾಗದಿರತಕ್ಕ, ಅಸಿಯ= ಮನ್ಮಥನ ಖಡ್ಗದಂತಿರುವ ನಾರಿಯ, ಇದು ಸೆಳೆನಡು= ಈ ತೆಳ್ನಡುವು, ಶಿಥಿಲಂ= ಗಟ್ಟಿಯಾಗಿಲ್ಲ, ಎಂದು= ಎಂಬುದಾಗಿ, ಮನೋಜಂ= ಮನ್ಮಥನು, ಹರಿನೀಲದಿಂದ= ಇಂದ್ರನೀಲದಿಂದ, ಎಸೆವ= ಹೊಳೆಯುವ, ಸಣ್ಣ= ಬಹುಚಿಕ್ಕದಾಗಿರತಕ್ಕ, ಸರಳಂ= ಅಲಗನ್ನು, ನಿರ್ಮಿಸಿ= ಉಂಟುಮಾಡಿ, ನಿಲ್ಲಿಸಿ = ನೇರವಾಗಿರುವಂತೆ ಮಾಡಿ, ಮೂರುಕಟ್ಟನು= ಮೂರುಬಂಧನಗಳನ್ನು,ಎಡೆಗೆಡೆಗೆ= ಹತ್ತಿರಹವಾಗಿ, ಬಿಗಿದನೊ= ಕಟ್ಟಿಹಾಕಿದನೊ ? ಎನಲ್= ಎಂಬ ರೀತಿಯಿಂದಿರುವ, ವಳಿತ್ರಯದ= ತ್ರಿವಳಿಗಳ, ಚೆಲ್ವಿಕೆಯಿಂದ= ಸೌಂದರ್ಯಾತಿಶಯದಿಂದ, ಲಲನೆಯರ= ಮಾರನೃಟವಂ ಬಯಸುವ ಸ್ತ್ರೀಯರ, ಮಧ್ಯದೊಳು= ಸೊಂಟದಲ್ಲಿ, ಬಗೆದ= ಉಂಟಾಗಿದ್ದ, ಬಾಸೆ= ರೋಮಪಂಙ್ತಿಯು, ಪುಷ್ಪಾಪಚಯ ಸಮಯದೊಳ್= ಅಲರ್ಗಳಂ ಬಿಡಿಸುವ ಕಾಲದಲ್ಲಿ, ಪೊಸತೆನೆ= ಹೊಸದೆಂಬಂತೆ, ಸಲೆ= ಬಹುವಾಗಿ, ರಾಜಿಸಿತು=
ಹೊಳೆಯುತ್ತಲಿತ್ತು.
ಅ॥ ವಿ॥ ಮನೋಜಂ= ಮನ- ಮನಸ್ಸಿನಲ್ಲಿ, ಜ- ಹುಟ್ಟಿದವನು ( ಮದನನು, ಕೃ. ವೃ. ) ಬಾಸೆ(ತ್ಭ ) ಪಾಶ ( ತ್ಸ )
ತಾತ್ಪರ್ಯ:- ಈ ರೀತಿಯಲ್ಲಿ ಮೇಲ್ಗಡೆಯಲ್ಲಿಯೇ ದೃಷ್ಟಿಯನ್ನಿಟ್ಟುಕೊಂಡು ಹೂಗಳನ್ನು ಕೊಯ್ಯುತ್ತಿರುವಾಗ ಬಲು ದಪ್ಪನಾದ ಅವರ ಮೊಲೆಗಳನ್ನು ಹೊರಲು ನಡುವು ಅತಿ ಸಣ್ಣದಾದ್ದರಿಂದ ಭಾರವನ್ನು ತಾಳಲು ಆಗುವುದಿಲ್ಲವೆಂದು ಯೋಚಿಸಿ, ಮನ್ಮಥನು ಇಂದ್ರನೀಲದಿಂದ ಪ್ರಕಾಶಿಸುವ ಸಣ್ಣದಾದ ಅಲಗೊಂದನ್ನು ನಿರ್ಮಾಣಮಾಡಿ ಭದ್ರವಾಗಿರಲೆಂದು
ಮೂರು ಕಟ್ಟುಗಳಿಂದ ಬಿಗಿದಿರುವನೋ ಎಂಬಂತೆ ತೋರುವ ತ್ರಿವಳಿಗಳಿಂದ ಕೂಡಿದ ಅವರ ಉದರದ ಮೇಲ್ಗಡೆಯಲ್ಲಿ ತೋರುವ ರೋಮಪಙ್ತಿಯು ಪ್ರಕಾಶಿಸುತ್ತಲಿತ್ತು.
ತುಂಬಿಗಳನೋಡಿಸದ ಚಂಪಕಂ ಸೊಕ್ಕಾನೆ।
ಯಂ ಬೆದರಿಸದ ಸಿಂಗಮಿಡಿದಂಧಕಾರಮಂ।
ತುಂಬಿಸದ ಚಂದ್ರಮಂಡಲಮಿರಲ್ ಕಂಡಿಲ್ಲಿ ನಾವುಮಿರ್ದೊಡೆ ನಮ್ಮನು॥
ಶಂಬರಾರಿಯ ಶರಂ ಕಾಡದಿರುಳಿನ ವೆರಹ।
ಕೆಂಬ ನಿಶ್ಚಯದೊಳಗಲದೆ ಬಾಲಿಕೆಯರುರವ ।
ನಿಂಬುಗೊಂಡೆಣೆವಕ್ಕಿಯೆನಲೆಸೆದುವಲರ್ಗೊಯ್ವ ನೀರೆಯರ ನೆಲೆಮೊಲೆಗಳು॥೨೦॥
ಪ್ರತಿಪದಾರ್ಥ :- ತುಂಬಿಗಳನು= ಅಳಿಗಳನ್ನು, ನಯನಂಗಳನು, ಓಡಿಸದ= ಓಡಿಹೋಗದಂತೆ ಮಾಡದಿರುವ, ಚಂಪಕಂ= ಚಂಪಕಪುಷ್ಪವು, ಸೊಕ್ಕಾನೆಯಂ= ಮತ್ತಗಜವನ್ನು, ಕಟಿಪಶ್ಚಾದ್ಭಾಗವನ್ನು, ನಡಿಗೆಯನ್ನು, ಮತ್ತು ಸ್ತನಂಗಳನು, ಬೆದರಿಸದ= ಹೆದರಿಸದಿರತಕ್ಕ, ತೆಳ್ಳಗೆ ಮಾಡದಿರುವ, ಸಿಂಗಂ= ಮೃಗೇಂದ್ರನು, ಸೊಂಟವು, ಇಡಿದ= ಎಲ್ಲೆಲ್ಲಿಯೂ ಕವಿದುಕೊಂಡ,ದಟ್ಟವಾದ, ಅಂಧಕಾರಮಂ= ಕತ್ತಲೆಯನ್ನು, ಮತ್ತು ತುರುಬನ್ನು, ತುಂಬಿಸದ= ಸಾಂದ್ರಮಾದ, ಕಾಂತಿವಿಶಿಷ್ಟಮಾದ, ಚಂದ್ರಮಂಡಲಂ= ಇಂದುವು, ಮತ್ತು ಆಸ್ಯವು, ಇರಲ್=ಆಗಿರಲು, ಕಂಡು= ಈಕ್ಷಿಸಿ, ಅಲ್ಲಿ= ತಮಗೆ ಪ್ರತಿಬಂಧಕವಿರುವೆಡೆಯಲ್ಲಿ, ನಾರಿಯರ ದೇಹದಲ್ಲಿ, ನಾವುಂ= ನಾವೂ ಸಹ, ಇರ್ದೊಡೆ= ಇದ್ದಲ್ಲಿ, ನಮ್ಮನು= ನಮ್ಮಗಳನ್ನು, ಶಂಬರಾರಿ= ಮದನನ, ಶರಂ= ಸರಲು, ಇರುಳಿನ= ರಾತ್ರಿಯಕಾಲದ, ವಿರಹಕೆ= ಅಗಲುವಿಕೆಗೆ, ಕಾಡದು= ತೊಂದರೆಪಡಿಸುವುದಿಲ್ಲ, ಎಂಬ= ಎನ್ನತಕ್ಕ, ನಿಶ್ಚಯದೊಳು= ನಿರ್ಣಯದಿಂದ, ಅಗಲದೆ= ಅವಕಾಶವನ್ನೀಯದೆ, ಬಾಲಕಿಯರ= ಬಾಲೆಯರ, ಉರವನು= ಹೃದಯಸ್ಥಳವನ್ನು, ಇಂಬುಗೊಂಡು= ಒಟ್ಟುಮಾಡಿಕೊಂಡು ಇರುವ, ಎಣೆವಕ್ಕಿಯೆನಲ್= ಜಕ್ಕವಕ್ಕಿಯೊ ಎಂಬಂತೆ, ಅಲರ್ಗೊಯ್ವ= ಪುಷ್ಪಾಚಯಮಂ ಮಾಡತಕ್ಕ, ನೀರೆಯರ= ಸ್ತ್ರೀಯರ, ನೆಲೆ= ಮೇಲಕ್ಕೆದ್ದಿರುವ, ಮೊಲೆಗಳು= ಸ್ತನಂಗಳು, ಎಸೆದವು= ಹೊಳೆಯುತ್ತಲಿದ್ದವು.
ಅ॥ ವಿ॥ ವಸ್ತುಗಳ ಬಣ್ಣ, ಆಕೃತಿ ಇವುಗಳನ್ನು ಹೇಳಿ ವಸ್ತುಗಳನ್ನು ಊಹೆಮಾಡುವಂತೆ ತೋರ್ಪಡಿಸಿ ಸುಂದರಾಂಗನೆ-
ಯೆಂಬುದನ್ನು , ಸೂಚಿಸುತ್ತಲಿರುವುದು.ಸೊಕ್ಕಾನೆ= ಸೊಕ್ಕಿದ- ಆನೆ ( ವಿ. ಪೂ.) ಸಿಂಗಂ( ತ್ಭ) ಸಿಂಹಂ(ತ್ಸ) ಅಲರಂ+ಕೊಯ್ವ ( ಅಲರ್ಗೊಯ್ವ, ಕ್ರಿ. ಸ. ) ನೆಲೆಮೊಲೆಗಳು= ನೆಲೆಯಾದ + ಮೊಲೆಗಳು ( ವಿ. ಪೂ.)
ತಾತ್ಪರ್ಯ:- ಭ್ರಮರಗಳನ್ನು ಹೋಲುವ ನಯನಂಗಳಿಂದಲೂ, ಸಂಪಿಗೆಯ ಹೂವಿನಂತಿರುವಸುನಿಸಿಕದಿಂದಲೂ, ಆನೆಯ ನಡಿಗೆಯನ್ನೂ, ಸಿಂಹದ ನಡುವನ್ನೂ ತಿರಸ್ಕರಿಸುವ ಮಂದಗಮನ ಮತ್ತು ಬಡನಡುವು ಇವುಗಳಿಂದಲೂ ಉದ್ಯಾನವನದಲ್ಲಿ ತಿರುಗಾಡುವ ಚಂದ್ರಮುಖಿಯರ ಎದೆಯ ಭಾಗದಲ್ಲಿರತಕ್ಕ ಬಲ್ಮೊಲೆಗಳು ಚಕ್ರವಾಕ ಪಕ್ಷಿಗಳಂತೆ ಅತಿ ಚೆಲುವಾಗಿದ್ದವು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ