ಜೈಮಿನಿ ಭಾರತ 9 - ದೊಡ್ಡಬೆಲೆ ನಾರಾಯಣಶಾಸ್ತ್ರಿ
ಸೂಚನೆ:- ಜ್ವಾಲೆ ನಿಜ ಕಾಂತನಂ ಚಲದಿಂದೆ ಬಿಟ್ಟು ತ।
ನ್ನಾಲಯದೊಳಿರದೆ ಪೊರಮಟ್ಟು ಬಂದರ್ಜುನನ।
ಮೇಲೆ ತಂತ್ರವನಿಕ್ಕಿ ಶಾಪಮಂ ಕುಡಿಸಿದಳ್ ದೇವ ನದಿಯಂ ಕೆರಳ್ಚಿ॥
ಪ್ರತಿಪದಾರ್ಥ:- ಜ್ವಾಲೆ= ಜ್ವಾಲೆಯೆಂಬ ನಾರಿಯು, ನಿಜ= ಸ್ವಕೀಯವಾದ, ಕಾಂತನಂ= ರಮಣನನ್ನು, ಛಲದಿಂದ= ದ್ವೇಷದಿಂದ, ಬಿಟ್ಟು = ಬಿಟ್ಟು ಬಿಟ್ಟು, ತನ್ನ=ತನ್ನದಾದ, ಆಲಯದೊಳು= ಮನೆಯಲ್ಲಿ, ಇರದೆ= ಸುಮ್ಮನಿರದೆ, ಪೊರಮಟ್ಟು = ಹೊರಟು, ಬಂದು= ಸಮೀಪವನ್ನು ಸೇರಿ, ಅರ್ಜುನನಮೇಲೆ= ಪಾರ್ಥನೊಂದಿಗೆ, ತಂತ್ರವನು= ಮೋಸಕಾರ್ಯವನ್ನು, ಎಸಗಿ=ಮಾಡಿ, ದೇವನದಿಯಂ= ಸುರನದಿಯಾದ ಗಂಗಾಪ್ರವಾಹವನ್ನು, ಕೆರಳ್ಚಿ= ಕೋಪಬರುವಂತೆ ಮಾಡಿ, ಶಾಪಮಂ= ತೊಂದರೆಯಾಗಬೇಕೆಂಬ ಹರಿಕೆಯನ್ನು, ಕೊಡಿಸಿದಳ್= ಕೊಡಿಸಿದವಳಾದಳು.
ಅ॥ ವಿ॥ ದೇವನದಿ= ದೇವತೆಗಳ ನದಿ, (ಷ. ತ. ) ತನ್ನ + ಆಲಯ= ತನ್ನಾಲಯ( ಲೋ. ಸಂ. )
ಇಂದುಕುಲತಿಲಕ ಜನಮೇಜಯ ನರೇಂದ್ರ ಕೇ।
ಳಂದು ನೀಲಧ್ವಜಂ ತಿರುಗಿ ತನ್ನರಮನೆಗೆ ।
ಬಂದು ವೈಶ್ವಾನರನನುಜ್ಞೆಯಿಂ ಪಾರ್ಥನ ತುರಂಗಮಂ ಬಿಡುವೆನೆಂದು॥
ನಿಂದು ಮಂತ್ರಿಗಳ ಕರಸಲ್ಕದಂ ಕೇಳ್ದು ನಡೆ।
ತಂದು ನುಡಿದಳ್ ಜ್ವಾಲೆಯೆಂಬರಸಿ ಪತಿಗೆ ನೀ।
ನಿಂದು ಸಿತವೃಹನಂಗೀಯದಿರ್ ಕುದುರೆಯಂ ಬೆದರದಿರೆನುತ ತಡೆದಳ್॥೧॥
ಪ್ರತಿಪದಾರ್ಥ:- ಇಂದಕುಲತಿಲಕ= ಇಂದು - ಹಿಮಕರನ, ಕುಲ- ಸಂತತಿಗೆ, ತಿಲಕ= ಅಲಂಕಾರ ಪ್ರಾಯವಾಗಿರುವ, ಜನಮೇಜಯ= ಜನಮೇಜಯನೆಂಬ ಹೆಸರುಳ್ಳ, ನರೇಂದ್ರ= ಮನುಜೇಶ್ವರನೇ ! ಕೇಳು=ಲಾಲಿಸು, ಅಂದು= ಆ ದಿನ, ನೀಲಧ್ವಜಂ= ನೀಲಧ್ವಜನೆಂಬ ಮಾಹಿಷ್ಮತಿಯ ಅರಸು, ತಿರುಗಿ= ಯುದ್ಧದಿಂದ ಹಿಂಜರಿದು, ತನ್ನ= ಸ್ವಕೀಯವಾದ, ಅರಮನೆಗೆ= ರಾಜಭವನಕ್ಕೆ, ಬಂದು=ಐತಂದು, ವೈಶ್ವಾನರನ= ಅಗ್ನಿಪುರುಷನ, ಅನುಜ್ಞೆಯಿಂ= ಅಪ್ಪಣೆಯಿಂದ, ಪಾರ್ಥನ= ಫಲ್ಗುಣನ, ತುರಂಗಮಂ= ಅಶ್ವವನ್ನು, ಬಿಡುವೆನು= ಅರ್ಜುನನಿಗೆ ಒಪ್ಪಿಸೈವೆನು, ಎಂದು= ಎಂಬುದಾಗಿ, ನಿಂದು= ಸ್ಥಿರಚಿತ್ತನಾಗಿ, ಮಂತ್ರಿಗಳ= ಅಮಾತ್ಯರನ್ನು, ಕರೆಸಲ್ಕೆ= ಬರಹೇಳಲು, ಅದಂ= ಆ ಸುದ್ಧಿಯನ್ನು, ಜ್ವಾಲೆಯೆಂಬ=
ಜ್ವಾಲೆ ಎಂಬ ಹೆಸರುಳ್ಳ, ಅರಸಿ= ನೀಲಧ್ವಜನ ರಾಣಿಯು, ಕೇಳ್ದು=ತಿಳಿದವಳಾಗಿ, ನಡೆತಂದು= ಗಂಡನ ಬಳಿಗೆ ಬಂದು, ಪತಿಗೆ= ತನ್ನ ಕಾಂತನನ್ನು ಕುರಿತು, ನುಡಿದಳು= ಮುಂದೆ ಹೇಳುವಂತೆ ಅರುಹುವಳು, ನೀನು= ನೀನಾದರೊ, ಇಂದು= ಈ ಹೊತ್ತು, ಸಿತವಾಹನಂಗೆ= ಬಿಳೀ ಕುದುರೆಗಳನ್ನು ಕಟ್ಟಿದ ರಥವುಳ್ಳ ಪಾರ್ಥನಿಗೆ, ಕುದುರೆಯಂ= ಹಯವನ್ನು, ಈಯದಿರ್= ಬಿಟ್ಟುಕೊಡಬೇಡ, ಬೆದರದೆ= ದಿಗಿಲು ಬೀಳದೆ, ಇರು= ಇರುವವನಾಗು, ಎನುತ= ಎಂದು ನುಡಿಯುತ್ತ, ತಡೆದಳು= ಕುದುರೆಯನ್ನು ಕೊಡಲು ನಿರೋಧಿಸಿಬಿಟ್ಟಳು.
ಅ॥ ವಿ ॥ ಇಂದು= ಚಂದ್ರ ( ಸಂ. ಪದ ) ಈಗ (ಕ. ಪ. ) ಇಂದುಕುಲತಿಲಕ= ಇಂದುವಿನ ಕುಲ ( ಷ. ತ. )ಇಂದು ಕುಲದಲ್ಲಿ ತಿಲಕ ( ಸ. ತ. ) ನರೇಂದ್ರ= ನರರ ಇಂದ್ರ ( ಷ. ತ. ಮತ್ತು ಗುಣಸಂಧಿ )
ತಾತ್ಪರ್ಯ:- ಅನಂತರದಲ್ಲಿ ಜೈಮಿನಿ ರುಷಿಯು ಜನಮೇಜಯರಾಯನಂ ಕುರಿತು, ಕೇಳೈ ಜನಮೇಜಯ ಮಹೀಂದ್ರನೆ ! ಆ ಬಳಿಕ ನೀಲಧ್ವಜನು ಯುದ್ಧರಂಗವನ್ನು ಬಿಟ್ಟು ತನ್ನರಮನೆಗೆ ಬಂದು ಮುಖ್ಯಾಮಾತ್ಯರನ್ನೆಲ್ಲಾ ಕರೆಯಿಸಿ, ತಾನು ಹಿಡಿದಿರುವ ಉತ್ತಮಾಶ್ವವನ್ನು ಅರ್ಜುನನಿಗೆ ಒಪ್ಪಿಸಬೇಕೆಂದು ಅಗ್ನಿಪುರುಷನ ಅಪ್ಪಣೆಯಾಗಿರುವುದರಿಂದ ಈ ವಿಷಯದಲ್ಲಿ ನಿಮ್ಮಗಳ ಅಭಿಪ್ರಾಯವೇನೆಂದು ಕೇಳುತ್ತಿದ್ದ ಸುದ್ಧಿಯನ್ನು ಅಂತಃಪುರದಲ್ಲಿದ್ದ ನೀಲಧ್ವಜನ ಪಟ್ಟದರಸಿಯಾದ ಜ್ವಾಲೆಯೆಂಬಾಕೆಯು ಕೇಳಿ, ಜಾಗ್ರತೆಯಲ್ಲಿ ಗಂಡನ ಬಳಿಗೆ ಬಂದು, ಎಲೈ ರಮಣನೆ ! ನೀನು ಈ ಯಜ್ಞಾಶ್ವವನ್ನು ಅರ್ಜುನನಿಗೆ ಕೊಡಬೇಡ, ಹೆದರದೆ ಯುದ್ಧಮಾಡತೊಡಗೆಂದು ಬೋಧಿಸಿ ಕುದುರೆಯನ್ನು ಕೊಡಲು ಅಡ್ಡಿಮಾಡಿದಳು.
ಅನ್ನೆಗಂ ಕೇಳ್ದು ಜನಮೇಜಯ ನರೇಶ್ವರಂ ।
ತನ್ನ ಮನದೊಳ್ ಸಂದೆಗಂಬಟ್ಟು ಬೆಸಗೊಂಡ।
ನಿನ್ನೊಮ್ಮೆ ತಿಳಿಪೆಲೆ ಮುನೀಂದ್ರ ಪೃವಕನೇತಕಾ ಪಟ್ಟಣದೊಳಿರ್ದನು॥
ಮನ್ನಣೆಯ ಮನೆಯಳಿಯನೆಂತಾದನಾ ನೃಪನ।
ಕನ್ನಿಕೆಯದೇನ ಮಾಡಿದಳಿದರ ವೃತ್ತಾಂತ।
ಮನ್ನಿರೂಪಿಸವೇಳ್ವುದೆನೆ ಮತ್ತೆ ಜೈಮಿನಿ ಧರಾಧಿಪಂಗಿಂತೆಂದನು॥ ೨॥
ಪ್ರತಿಪದಾರ್ಥ:- ಅನ್ನೆಗಂ= ಅಷ್ಟು ಹೊತ್ತಿನವರೆಗೂ, ಕೇಳ್ದ= ಕಥೆಯನ್ನಾಲಿಸುತ್ತಲಿದ್ದ, ಜನಮೇಜಯ = ಜನಮೇಜಯನೆಂಬ, ನರೇಶ್ವರನು= ರಾಜನು, ತನ್ನ= ಸ್ವಕೀಯವಾದ, ಮನದೊಳು= ಚಿತ್ತದಲ್ಲಿ,ಸಂದೆಗಂಬಟ್ಟು= ಅನುಮಾನಹೊಂದಿ, ಎಲೆ ಮುನೀಂದ್ರ= ಎಲೈ ತಾಪಸೋತ್ತಮನಾದ ಜೈಮಿನಿಯೇ ! ಇನ್ನೊಮ್ಮೆ = ಮತ್ತೊಂದಾವರ್ತಿ,ತಿಳಿಪು= ಈ ಕಥೆಯನ್ನು ವಿಶದಪಡಿಸು, ಪಾವಕನು= ಯಜ್ನೇಶ್ವರನು, ಆ ಪಟ್ಟಣದೊಳು= ಆ ಮಾಹಿಷ್ಮತೀ ನಗರದಲ್ಲಿ , ಏತಕೆ=ಯಾವ ಕಾರಣದಿಂದ, ಇರ್ದನು=ಇದ್ದವನಾದನು, ಮನ್ನಣೆಯ= ಮರ್ಯಾದೆಯನ್ನು ಮಾಡಿಸಿಕೊಳ್ಳತಕ್ಕ, ಮನೆಯಳಿಯನು= ಮನೆಯಲ್ಲಿಯೇ ಇರುವ ಜಾಮಾತ್ಯನು,( ಅಳಿಯನು) ಎಂತು= ಹೇಗೆ, ಆದನು= ಆಗಿರುವನು ? ಆ ನೃಪನ= ಆ ಮಾಹಿಷ್ಮತಿಯ ಅರಸನ,ಕನ್ನಿಕೆಯು= ಕುವರಿಯು, ಅದೇನಮಾಡಿದಳು= ಅಗ್ನಿಯನ್ನು ವರಿಸಲು ಯಾವ ಕಾರ್ಯವನ್ನು ಮಾಡಿದಳು ? ಅದರ= ಆಕೆಯು ಮಾಡಿದ, ಅಥವಾ ಅಗ್ನಿಯು ನೀಲಧ್ವಜನ ಅಳಿಯನಾದ, ವೃತ್ತಾಂತಮಂ= ಬಗೆಯನ್ನು, ನಿರೂಪಿಸವೇಳ್ಪುದು=ತಿಳಿಸಬೇಕು, ಎಂದು= ಎಂಬುದಾಗಿ, ಬೆಸಗೊಂಡನು= ಕೇಳಿಕೊಂಡನು, ಎನೆ= ಹೀಗೆಂದು ಜನಮೇಜಯನು ಕೇಳಲು, ಜೈಮಿನಿ =ಜೈಮಿನಿ ಋಷಿಯು, ಮತ್ತು= ಪುನಃ, ಧರಾಧಿಪಂಗೆ= ಭೂಕಾಂತನಾದ ಜನಮೇಜಯನಿಗೆ, ಇಂತು= ಮುಂದೆ ಹೇಳುವಂತೆ, ಎಂದನು= ನುಡಿದನು.
ತಾತ್ಪರ್ಯ:- ಎಂಬುದಾಗಿ ಹೇಳುತ್ತಲಿದ್ದ ಜೈಮಿನಿಮುನಿಪನನ್ನು ಕುರಿತು, ಜನಮೇಜಯನು, ಎಲೈ ಜೈಮುನಿಪುಂಜವನೆ !
ಮಾಹಿಷ್ಮತೀ ನಗರದಲ್ಲಿ ಅಗ್ನಿಯು ಇದ್ದ ಕಾರಣವನ್ನೂ, ನೀಲಧ್ವಜ ರಾಯನಿಗೆ ಅವನು ಅಳಿಯನಾದ ತೆರನನ್ನೂ, ಆ ರಾಜನ ಮಗಳು ಅಗ್ನಿಯನ್ನು ವರಿಸಲು ಏನೇನು ಮಾಡಿದಳೆಂಬುದನ್ನೂ ನನಿಗೆ ಸವಿಸ್ತಾರವಾಗಿ ಮತ್ತೊಂದಾವರ್ತಿ ತಿಳಿಯಪಡಿಸಬೇಕೆಂದು ಕೇಳಲು, ಜೈಮಿನಿ ಋಷಿಯು ನೀಲಧ್ವಜನಿಗೆ ಅಗ್ನಿಯು ಅಳಿಯನಾದ ಕಥೆಯನ್ನು ಹೇಳತೊಡಗಿದನು.
ಆಲಿಸಿನ್ನಾದೊಡೆಲೆ ಭೂಪ ನೀಲಧ್ವಜಂ।
ಜ್ವಾಲೆಯೆಂಬರಸಿಯೊಳ್ ಪಡೆದನತಿರೂಪ ಗುಣ।
ಶೀಲಂಗಳಿಂದೆಸೆವ ತನುಜೆಯಂ ಸ್ವಾಹಾಭಿಧಾನದಿಂ ಬಳೆಯುತಿರುವ॥
ಆ ಲೋಲ ಲೋಚನೆಗೆ ಜೌವನಂ ಬರೆ ಪಿತಂ।
ಮೋಲೋಕದೊಳಗುಳ್ಳ ಪುರುಷರ್ಕಳಂ ಪಟದ।
ಮೇಲೆ ರೂಪಿಸಿ ತೋರಿಸಿದನಿದರೊಳಾರ್ ನಿನಗೆ ವಲ್ಲಭಂ ಪೇಳ್ವುದೆಂದು॥೩॥
ಪ್ರತಿಪದಾರ್ಥ:- ಎಲೈ ಭೂಪ= ಎಲೈ ಜನಮೇಜಯನೆ, ಆದಡೆ= ಹಾಗಾದರೆ, ಇನ್ನು= ಮತ್ತೊಂದು ಬಾರಿ, ಆಲಿಸು= ಕೇಳುವವನಾಗು, ನೀಲಧ್ವಜಂ= ನೀಲಧ್ವಜನೆಂಬರಸು, ಜ್ವಾಲೆಯೆಂಬ= ಜ್ವಾಲಾದೇವಿ ಎನ್ನತಕ್ಕ, ಅರಸಿಯೋಳ್= ತನ್ನ ರಾಣಿಯಲ್ಲಿ, ಅತಿ= ಹೆಚ್ಚಾದ, ರೂಪ= ಸೌಂದರ್ಯವು, ಗುಣ= ಸದ್ಗುಣಗಳ, ಶೀಲಂಗಳಿಂದ= ಒಳ್ಳೆ ನಡತೆಗಳಿಂದ, ಎಸೆವ= ಹೊಳೆಯುವ, ತನುಜೆಯಂ= ಮಗಳನ್ನು, ಪಡೆದನು= ಹೊಂದಿದನು, ಸ್ವಾಹಾ= ಸ್ವಾಹಾ ಎನ್ನುವ, ಅಭಿಧಾನದೊಳ= ನಾಮಧೇಯದಿಂದ, ಬೆಳೆವುತ= ಅಭಿವೃದ್ಧಿಯಾಗುತ್ತಾ, ಇರುವ= ಇರತಕ್ಕ, ಆ ಲೋಲಲೋಚನೆಯಂ= ಆ ಚಪಲನೇತ್ರಂಗಳನ್ನುಳ್ಳ ನೀಲಧ್ವಜನ ಕುವರಿಗೆ, ಜವ್ವನಂ=ಹರೆಯವು, ಬರೆ=ಉಂಟಾಗಲು, ಪಿತಂ= ಇವಳ ತಂದೆಯು, ಮೂಲೋಕದೊಳಗೆ= ಸ್ವರ್ಗ ಮರ್ತ್ಯ ಪಾತಾಳಗಳೆಂಬ ಮೂರರಲ್ಲಿಯೂ, ಉಳ್ಳ= ಇರುವ, ಪುರುಷರ್ಕಳಂ= ಮಾನವರನ್ನು, ಪಠದಮೇಲೆ = ಕಾಗದದ ಮೇಲೆ, ರೂಪಿಸಿ= ರಚಿಸಿ, ತೋರಿದಂ= ಸ್ವಾಹಾದೇವಿಯ ಮುಂದೆ ಇಟ್ಟನು, ಅನಿಯರೊಳಗೆ= ಚಿತ್ರದಲ್ಲಿರುವ ಅಷ್ಟು ಮಂದಿಯಲ್ಲಿ, ನಿನಗೆ= ನಿನ್ನ ಸಲುವಾಗಿ, ವಲ್ಲಭಂ= ರಮಣನಾಗತಕ್ಕವನು, ಆರ್= ಯಾವ ಪುರುಷನು ? ಪೇಳ್ವುದು= ಹೇಳತಕ್ಕದ್ದು, ಎಂದು= ಎಂಬತೆರನಾಗಿ, ಎಂದನು= ಮಗಳಿಗೆ ಹೇಳಿದನು.
ಅ॥ ವಿ॥ ತನುಜೆ= ತನು- ಶರೀರದಲ್ಲಿ , ಜೆ= ಹುಟ್ಟಿದವಳು ( ಕೃ. ವೃ.) ಬೆಳೆ= ಸಸ್ಯವೃದ್ಧಿಯಲ್ಲಿ ಬಳಸತಕ್ಕ ಶಬ್ಧ, ಬಳೆ= ಸಸ್ಯೇತರ ವಸ್ತುಗಳ ಏಳಿಗೆಯಲ್ಲಿ ಪ್ರಯುಕ್ತವಾಗತಕ್ಕ ಶಬ್ಧ.
ತಾತ್ಪರ್ಯ:- ಕೇಳೈ ಜನಮೇಜಯನೆ, ನೀಲಧ್ವಜನೆಂಬ ಮಾಹಿಷ್ಮತೀ ನಗರದ ರಾಜನು ಜ್ವಾಲೆಯೆಂಬ ತನ್ನ ಪಟ್ಟಮಹಿಷಿಯಲ್ಲಿ ಸುಗುಣ, ಸೌಶೀಲ್ಯಾದಿಗಳಿಂದ ಮೆರೆವ ಸ್ವಾಹಾ ಎಂಬ ಹೆಸರುಳ್ಳ ಕನ್ಯಾರತ್ನವಂ ಪಡೆದನು, ರಾಜನೂ ರಾಣಿಯೂ ಈ ಮಗುವನ್ನು ಪ್ರೀತ್ಯತಿಶಯದಿಂದ ಸಾಕುತ್ತಲಿರುವಾಗ, ತನ್ನ ಕುವರಿಯು ಪ್ರಾಯಸಮರ್ಥಳಾಗುತ್ತಾ ಬರುತ್ತಿರುವುದನ್ನು ದೊರೆಯು ಕಂಡು ಸ್ವರ್ಗ, ಮರ್ತ್ಯ, ಪಾತಾಳಗಳೆಂಬ ಮೂರು ಲೋಕಂಗಳಲ್ಲಿರುವ ಸುಂದರ ಪುರುಷರ ಭಾವಚಿತ್ರಗಳನ್ನು ತರಿಸಿ, ತನ್ನ ಮಗಳಾದ ಸ್ವಾಹಾದೇವಿಯನ್ನು ಕುರಿತು, ಎಲೈ ಮಗುವೆ ! ಇಷ್ಟುಜನ ಪುರುಷ- ಶ್ರೇಷ್ಠರಲ್ಲಿ ನಿನ್ನ ಮನ ಒಪ್ಪತಕ್ಕವನು ಯಾರಾದರೂ ಇದ್ದರೆ ಹೇಳೆಂದು ಚಿತ್ರಪಠಂಗಳನೆಲ್ಲಾ ತನ್ನಣುಗಿಯ ವಶಕ್ಕೆ ಕೊಟ್ಟನು.
ವಿಪುಲ ಗಂಧರ್ವ ಯಕ್ಷೋರಗ ಸುರಾಸುರರ ।
ನಪಹೃಸ್ಯಮಂ ಮಾಡಿ ಸಕಲ ಭೂಮಂಡಲದ ।
ನೃಪವರ್ಗಮಂ ಪಳಿದು ಹರಿ ಹರ ವಿರಿಂಚಿ ಶಕ್ರಾದಿಗಳನಿಳಿಕೆಗೆಯ್ಯದು॥
ತಪನೇಂದು ಮನ್ಮಥ ವಸಂತರ್ಕಳಂ ಜರೆದ।
ನೈಪಮ ದಿಕ್ಪಾಲಕರ ನಡುವೆ ಕುಳ್ಳಿರ್ದು ರಾ।
ಜಿಪ ವೀತಿ ಹೋತ್ರನಂ ಕಂಡಳ್ ತೋರಿಸಿದಳೆನಗಿವಂ ಕಾಂತನೆಂದು॥೪॥
ಪ್ರತಿಪದಾರ್ಥ:- ವಿಪುಲ= ಅನೇಕರಾದ, ಗಂಧರ್ವ= ಗಂಧರ್ವರನ್ನೂ, ಯಕ್ಷ= ಯಕ್ಷರೆಂಬುವವರನ್ನೂ, ಉರಗ=ಹಾವುಗಳನ್ನೂ, ಸುರ= ಅಮರರನ್ನೂ, ಅಸುರರನು= ರಕ್ಕಸರನ್ನೂ, ಅಪಹಾಸವಂ ಮಾಡಿ= ಪರಿಹಾಸ್ಯವಂಗೈದು
ಸಕಲ= ಎಲ್ಲಾ ಭೂಮಂಡಲದ, ಇಳಾವಲಯದಲ್ಲಿರತಕ್ಕ, ನೃಪವರ್ಗಮಂ = ಅರಸರ ಸಮುದಾಯವನ್ನು, ಪಳಿದು= ಜರೆದು, ಹರಿಹರವಿರಿಂಚಿ ಶಕ್ರಾದಿಗಳನು= ಹರಿ-ವಿಷ್ಣುವು, ಹರ= ಈಶ್ವರನು, ವಿರಿಂಚಿ= ಬ್ರಹ್ಮದೇವರು, ಶಕ್ರ= ದೇವೇಂದ್ರನು, ಆದಿಗಳನು= ಮೊದಲಾದವರನ್ನು, ಇಳಿಕೆಗೈದು= ತುಚ್ಛರನ್ನಾಗಿ ಮಾಡಿ, ತಪನ= ರವಿಯನ್ನು, ಇಂದು= ಹಿಮಕರನನ್ನು, ಮನ್ಮಥ= ಮದನನನ್ನು, ವಸಂತರ್ಕಳಂ = ವಸಂತನೇ ಮೊದಲಾದವರನ್ನು, ಜರಿದು= ಹೀಯಾಳಿಸಿ, ಅನುಪಮ= ಅಸದೃಶರಾದ, ದಿಕ್ಪಾಲರ= ಇಂದ್ರನೇ ಮೊದಲಾದ ಅಷ್ಟದಿಕ್ಪತಿಗಳ, ನಡುವೆ= ಮಧ್ಯಭಾಗದಲ್ಲಿ, ಕುಳ್ಳಿರ್ದು= ಕುಳಿತುಕೊಂಡು, ರಾಜಿಪ= ಹೊಳೆಯುತ್ತಲಿರುವ, ವೀತಿಹೋತ್ರನಂ= ಯಜ್ಞೇಶ್ವರನನ್ನು, ಕಂಡು= ಈಕ್ಷಿಸಿ, ಇವಳ್= ಈ ಸ್ವಾಹಾದೇವಿಯು, ಎನಗೆ= ನನಿಗೆ, ಇವಂ= ಈ ಹುತವಹನೆ, ಕಾಂತನು= ಪತಿಯು, ಎಂದು= ಎಂಬುದಾಗಿ, ತೋರಿಸಿದಳು
= ತೋರ್ಪಡಿಸಿದವಳಾದಳು.
ತಾತ್ಪರ್ಯ:- ಸ್ವಾಹಾ ಎಂಬ ನೀಲಧ್ವಜನ ಕುವರಿಯು ತಂದೆಯು ಕೊಟ್ಟ ಚಿತ್ರಪಠಂಗಳನೆಲ್ಲಾ ನೋಡುತ್ತಲಿರುವಾಗ ಒಂದು ಪಠದಲ್ಲಿರುವ ಪುರುಪಶ್ರೇಷ್ಠನು, ಅನೇಕರಾದ ಗಂಧರ್ವರು, ಯಕ್ಷರು, ನಾಗರು, ಸುರಾಸುರರು ಇವರನ್ನೆಲ್ಲಾ ತನ್ನ ಕಾಂತಿಯಿಂದ ಹಾಸ್ಯಮಾಡುತ್ತಲೂ, ಪ್ರಪಂಚದ ರಾಜಾಧಿರಾಜರನ್ನೂ, ತ್ರಿಮೂರ್ತಿಗಳನ್ನೂ ,ತನ್ನ ಸೌಂದರ್ಯಕ್ಕಿಂತ -
ಲೊ , ಕಡಮೆಯಾದವರೆಂದು ತಿರಸ್ಕರಿಸಿ, ಸೂರ್ಯ, ಚಂದ್ರ, ಮನ್ಮಥ, ವಸಂತರನ್ನೂಕೂಡ ಹೀಯಾಳಿಸುತ್ತಾ, ಇಂದ್ರಾದಿ ಅಷ್ಟದಿಕ್ಪಾಲರನ್ನೂ ಜರೆಯುತ್ತಾ, ತೇಜೋರೂಪನಾಗಿರುವುದನ್ನು ನೋಡಿ, ಇವನೇ ಶ್ರೇಷ್ಠನಾದ ಅಗ್ನಿಪುರುಷನೆಂದರಿತು ನನಿಗೆ ಇವನೇ ಗಂಡನಾಗತಕ್ಕವನೆಂದು ನಿಶ್ಚೈಸಿ, ತಂದೆಯೊಂದಿಗೆ ಹೇಳಿದಳು.
ಆ ನೀಲಕೇತು ನೃಪನವಳ ನುಡಿಗೇಳ್ದಣುಗೆ।
ನೀನಘಟಿತ ವರನೂಹಿಸಿದೆ ಪೇಳ್ದೊಡಿ।
ನ್ನೇನಪ್ಪುದೆಂದು ಚಿಂತಿಸುತಿರ್ಪ ತಾತನಂ ಜರೆದು ಬೀಳ್ಕೊಂಡು ಬಳಿಕ॥
ಮಾನಿನಿ ಪುರೋದ್ಯಾನದೊಳ್ ಪ್ರವಹಿಸುವ ನರ್ಮ।
ದಾ ನದಿಗೆ ಬಂದಲ್ಲಿ ಮಿಂದು ಸುವ್ರತೆಯಾಗಿ।
ನಾನಾ ವಿಧಾನದಿಂದರ್ಚಿಸಿದಳಗ್ನಿಯಂ ಭಕ್ತಿಯಿಂದನುದಿನದೊಳು॥ ॥೫॥
ಪ್ರತಿಪದಾರ್ಥ:- ಆ ನೀಲಕೇತುನೃಪನು= ಆ ನೀಲಧ್ವಜನೆಂಬರಸು, ಅವಳ= ತನ್ನ ಕುವರಿಯಾದ ಸ್ವಾಹಾದೇವಿಯ, ನುಡಿ= ವಚನಗಳನ್ನು, ಕೇಳ್ದು= ಆಲಿಸಿ, ಅಣುಗೆ= ಬಾಲೆಯೆ! ನೀನು= ನೀನಾದರೊ, ಅಘಟಿತದ= ಆಗಲಸದಳಮಾದ, ವರವನು= ಇಷ್ಟಾರ್ಥವನ್ನು, ಊಹಿಸಿದೆ= ಯೋಚನೆಮಾಡಿದೆ, ಪೇಳ್ದೊಡೆ= ಕಷ್ಟಸಾಧ್ಧವಾದುದನ್ನು ನುಡಿದರೆ, ಆನು= ನಾನು, ಏನು= ಏನನ್ನು, ಅಪ್ಪುದು= ಎನ್ನಬೇಕು, ಎಂದು= ಎಂಬುದಾಗಿ, ಚಿಂತಿಸುತಿರ್ಪ= ಆಲೋಚನೆಯಂ ಮಾಡುವ, ತಾತನಂ= ಪಿತನನ್ನು, ಜರೆದು=ಧಿಕ್ಕರಿಸಿ,ಬೀಳ್ಕೊಂಡು= ಅವನ ಆಜ್ಞೆಯಂ ತಾಳಿ, ಬಳಿಕ= ಆಮೇಲೆ, ಮಾನಿನಿ= ಸ್ವಾಹಾದೇವಿಯು, ಪುರ= ಪಟ್ಟಣದ, ಉದ್ಯಾನದೊಳ್= ಆರಾಮದಲ್ಲಿ, ಪ್ರವಾಹಿಪ= ಹರಿದು ಬರುತ್ತಿರುವ, ನರ್ಮದಾನದಿಗೆ= ನರ್ಮದಾತೀರ್ಥಕ್ಕೆ, ಬಂದು= ಐತಂದು, ಮಿಂದು= ಅದರಲ್ಲಿ ಸ್ನಾನಮಾಡಿ, ಅಲ್ಲಿ = ಆ ಸ್ಥಳದಲ್ಲಿ, ಸುವ್ರತೆಯಾಗಿ= ಒಳ್ಳೆ ವ್ರತವುಳ್ಳವಳಾಗಿ, ನಾನಾ= ಅನೇಕ ಪ್ರಕಾರವಾದ, ವಿಧಾನದಿಂದ= ಶಾಸ್ತ್ರ ನಿಯಮಗಳಿಂದ, ಅನುದಿನದೊಳು= ದಿನಂಪ್ರತಿಯಲ್ಲಿಯೂ, ಭಕ್ತಿಯಿಂದ = ಶ್ರದ್ಧಾಪೂರ್ವಕವಾಗಿ, ಅಗ್ನಿಯಂ= ಅಗ್ನಿಪುರುಷನನ್ನು, ಅರ್ಚಿಸಿದಳು.
ಅ॥ವಿ॥ "ಮಾನಿನಿ ಅಗ್ನಿಯನರ್ಚಿಸಿದಳು" ಎಂಬುದು ಪ್ರಧಾನವಾದ ಸಕರ್ಮಕ ಕರ್ತರಿವಾಕ್ಯವು.
ತಾತ್ಪರ್ಯ:- ಮಗಳ ಇಷ್ಟಾರ್ಥವನ್ನು ಕೇಳಿದ ನೀಲಧ್ವಜನು, ಎಲೈ ಕುವರಿಯೆ ! ನೀನು ಅಸಾಧ್ಯವಾದುದನ್ನೇ ಆಗಬೇಕೆಂದು ಕೇಳಿದೆಯಲ್ಲಾ ! ಅಗ್ನಿಗೆ ನಿನ್ನನ್ನು ಕೊಟ್ಟು ಮದುವೆ ಮಾಡುವುದು ಹೇಗೆ ? ಎಂದು ಯೋಚಿಸುತ್ತಿರುವುದನ್ನು ಸ್ವಾಹಾದೇ- ವಿಯು ನೋಡಿ, ಎಲೈ ತಂದೆಯೇ ! ನಿನಗೆ ಕಷ್ಟವಾದರೆ ನಾನೇ ಅಗ್ನಿಯನ್ನು ವರಿಸಲು ತಪಸ್ಸು ಮಾಡುವುದಕ್ಕಾಗಿ ಹೊರಡುವೆನು. ಇದಕ್ಕೆ ಅಪ್ಪಣೆಯನ್ನು ಕೊಡೆಂದು ಕೇಳಿದಳು. ತಂದೆಯು ಆಗಬಹುದೆಂದು ಆಜ್ಞೆಯನಿತ್ತನು. ಸ್ವಾಹಾದೇವಿಯಾದರೊ ಮಾಹಿಷ್ಮತೀ ನಗರದ ಸಮೀಪದಲ್ಲಿರುವ ಉದ್ಯಾನಕ್ಕೆ ಬಂದು, ಅಲ್ಲಿ ಹರಿಯುತ್ತಲಿದ್ದ ಪರಿಶುದ್ಧವಾದ ನರ್ಮದಾನದಿಯ ಉದಕದಲ್ಲಿ ಸ್ನಾನವಂ ಮಾಡಿ, ಅಗ್ನಿಪುರುಷನನ್ನು ಭಕ್ತಿಯಿಂದ ಸೇವಿಸುತ್ತಾ ಬಹು
ಕಾಲವಂ ಕಳೆದಳು.
ಪಾವಕಂ ಬಳಿಕ ಮೆಚ್ಚಿದನವಳ ನೋಂಪಿಗೆ ಮ।
ಹೀ ವಿಬುಧ ವೇಷಮಂ ತಾಳ್ದು ನೀಲಧ್ವಜನ ।
ಚಾವಡಿಗೆ ಬರಲಾತನಿದಿರೆದ್ದು ಸತ್ಕರಿಸಿ ಕೈಮುಗಿದು ವಿನಯದಿಂದೆ॥
ನೀವು ಬಿಜಯಂಗೈದ ಕಾರ್ಯಮಂ ಬೆಸಸಿಮೆನ।
ಲಾವು ಕನ್ಯಾರ್ಥಿಗಳ್ ಕುಡು ನಿನ್ನ ಸುತೆಯನಿದ।
ಕಾವೆಣಿಕೆ ಬೇಡ ಭೂಭುಜರೀಯಬಹುದು ವಿಪ್ರರ್ಗೆಂದೊಡಿಂತೆಂದನು॥೬॥
ಪ್ರತಿಪದಾರ್ಥ:- ಪಾವಕಂ= ಅಗ್ನಿಯು, (ಹುತವಹನು) ಅವಳ= ಆ ನೀಲಧ್ವಜನ ಮಗಳ, ಭಕ್ತಿ= ಶ್ರದ್ಧೆಯಿಂದ ಕೂಡಿದ, ನೋಂಪಿಗೆ = ವ್ರತಕಾರ್ಯಗಳಿಗೆ, ಮಹೀವಿಬುಧ= ವಿಪ್ರನ, ವೇಷಮಂ=ಆಕಾರವನ್ನು, ತಾಳ್ದು= ಹೊಂದಿ, ನೀಲಧ್ವಜನ = ನೀಲಧ್ವಜನೆಂಬರಸನ, ಚಾವಡಿಗೆ= ಸಭಾಸ್ಥಾನಕ್ಕೆ, ಬರಲು=ಐತರಲು, ಆತನು= ಆ ನೀಲಧ್ವಜ ಮಹಿಪನು, ಇದಿರೆದ್ದು= ಎದುರಾಗಿ ಬಂದು, ಸತ್ಕರಿಸಿ = ಅರ್ಘ್ಯಪಾದ್ಯಾದಿಗಳಿಂದ ಮನ್ನಿಸಿ, ಕೈಮುಗಿದು= ವಂದಿಸಿ, ವೆನಯದಿಂದ= ನಮ್ರಭಾವದಿಂದ, ನೀವು= ನೀವಾದರೊ, ಬಿಜಯಂಗೈದ =ವದಯಮಾಡಿಸೋಣವಾದ, ಕಾರ್ಯಮಂ= ಕಜ್ಜವನ್ನು, ಬೆಸಸಿ= ಆಜ್ಞಾಪಿಸಿರಿ, ಎನಲು= ಎಂದು ನೀಲಧ್ವಜನು ಕೇಳಲಾಗಿ, ಆವು= ನಾವಾದರೊ, ಕನ್ಯಾರ್ಥಿಗಳು= ಕನ್ಯಕೆಗೋಸುಗ ಬಂದವರು, ನಿಮ್ಮ ಸುತೆಯ= ನಿನ್ನ ಕುವರಿಯನ್ನು, ಕೊಡು= ನನಿಗೆ ಕೊಟ್ಟು ಮದುವೆ ಮಾಡು, ಇದಕೆ= ಈ ಕಾರ್ಯಕ್ಕೆ, ಆವೆಣಿಕೆ= ಯಾವ ಬದಲು ಯೋಚನೆಯೂ , ಬೇಡ= ಕೂಡದು, ಭೂಭುಜರು= ಅರಸರು, ವಿಪ್ರರ್ಗೆ= ಭೂಸುರರಿಗೆ, ಈಯಬಹುದು= ಕನ್ಯಾದಾನ ಮಾಡಬಹುದು, ಎಂದೊಡೆ= ಎಂದು ನುಡಿಯಲು, ಇಂತು= ಮುಂದೆ ಹೇಳುವಂತೆ, ಎಂದನು=ನುಡಿದನು.
ತಾತ್ಪರ್ಯ:- ಈ ರೀತಿಯಲ್ಲಿ ಭಕ್ತ್ಯತಿಶಯದಿಂದ ಸೇವಿಸುತ್ತಿರಲು, ಸ್ವಾಹಾದೇವಿಯ ವ್ರತನಿಯಮಕ್ಕೆ ಅಗ್ನಿಯು ಸಂತುಷ್ಟನಾಗಿ, ಬ್ರಾಹ್ಮಣವೇಷಮಂ ತಾಳಿ, ನೀಲಧ್ವಜನ ಒಡ್ಡೋಲಗಕ್ಕೆ ಬಂದನು. ಕೂಡಲೆ ನೀಲಧ್ವಜನು ಎದ್ದು ಬಂದು,ತೇಜೋರೂಪನಾದ ಬ್ರಾಹ್ಮಣೋತ್ತಮನಿಗೆ ವಂದಿಸಿ, ಅರ್ಘ್ಯಪಾದ್ಯಾದಿಗಳಿಂದ ಸತ್ಕರಿಸಿ, ಉಚಿತಾಸನದಲ್ಲಿ ಕುಳ್ಳಿರಿಸಿದ ಬಳಿಕ ಆ ವಿಪ್ರವರ್ಯನನ್ನು ಕುರಿತು ನೀವು ಇಲ್ಲಿ ದಯಮಾಡಿರುವ ಕಾರ್ಯವೇನೋ ಅದನ್ನು ಆಜ್ಞಾಪಿಸಬೇಕೆಂದು ಕೇಳಿದನು. ಆಗ ಬ್ರಾಹ್ಮಣವೇಷಧಾರಿಯಾದ ಅಗ್ನಿಯು ನೀಲಧ್ವಜನನ್ನು ಕುರಿತು ಎಲೈ ರಾಜನೆ! ನಾನು ಕನ್ಯಾರ್ಥಿಯಾಗಿ ನಿನ್ನ ಬಳಿಗೆ ಬಂದಿರುವೆನು, ನಿನ್ನ ಮಗಳಾದ ಸ್ವಾಹಾದೇವಿಯನ್ನು ನನಿಗೆ ಕೊಟ್ಟು ಮದುವೆ ಮಾಡು. ಇದಕ್ಕೆ ಬದಲು ಹೇಳಕೂಡದು, ಕ್ಷತ್ರಿಯರು ಬ್ರಾಹ್ಮಣರಿಗೆ ಹೆಣ್ಣು ಕೊಟ್ಟು ಲಗ್ನಮಾಡುವುದರಲ್ಲಿ ದೋಷವೇನೂ ಇಲ್ಲವಲ್ಲಾ ? ಎಂದು ನುಡಿಯುತ್ತಿರುವ ಬ್ರಾಹ್ಮಣೋತ್ತಮನನ್ನು ಕುರಿತು,
ಕನ್ಯಾರ್ಥಿಯಾಗಿ ನೀಂ ಬಂದು ಬೇಡುವುದಿಳೆಯೊ।
ಳನ್ಯಾಯಮಲ್ಲ ವಿಪ್ರರ್ಗೆ ಕೊಡಬಹುದು ರಾ।
ಜನ್ಯರದಕೇನೊಂದು ಚಲದಿಂದೆ ತನ್ನ ಕುವರಿಗೆ ಮರುತ್ಸಖನಲ್ಲದೆ॥
ಅನ್ಯರಂ ಪತಿಯಾಗಿ ವರಿಸಬೇಕೆಂಬ ಚೈ।
ತನ್ಯಮಿಲ್ಲೇನು ಮಾಡುವೆನಿನ್ನು ನಿನಗೀವ ।
ಧನ್ಯತೆಗೆ ಬಾಹಿರಂ ತಾನಾದೆನೆನಲಾ ಕಪಟ ವಿಪ್ರನಿಂತೆಂದನು॥೭॥
ಪ್ರತಿಪದಾರ್ಥ:- ನೀವು= ನೀವಾದರೊ, ಕನ್ಯಾರ್ಥಿಯಾಗಿ = ಕನ್ಯೆಗೋಸ್ಕರ, ಬಂದು= ಐತಂದು, ಬೇಡುವುದು= ಕೇಳತಕ್ಕದ್ದು, ಇಳೆಯೊಳು= ಪ್ರಪಂಚದಲ್ಲಿ, ಅನ್ಯಾಯವಲ್ಲ= ಅಯುಕ್ತವಾದ್ದಲ್ಲ, ( ಯುಕ್ತವೇ ಸರಿ) ರಾಜನ್ಯರು= ದೊರೆಗಳು, ವಿಪ್ರರ್ಗೆ = ಭೂಸುರರಿಗೆ, ಕೊಡಬಹುದು= ಹೆಣ್ಣು ಕೊಟ್ಟು ಮದುವೆಮಾಡಬಹುದು, ಅದಕೆ= ಹಾಗೆ ಮಾಡುವುದರಲ್ಲಿ, ಏನು= ಅಡ್ಡಿ ಏನಿರುವುದು? ಒಂದು ಫಲದಿಂದ= ಒಂದು ಉಪಯೋಗದಿಂದ, ತನ್ನ=ತನ್ನವಳಾದ, ಕುವರಿಗೆ= ಪುತ್ರಿಗೆ, ಮರುತನ= ಪವನನ, ಸಖನು= ಸ್ನೇಹಿತನಾದ ಅಗ್ನೆಪುರುಷನು, ಅಲ್ಲದೆ= ಪತಿಯಾಗಬೇಕೇ ಹೊರತು, ಅನ್ಯರಂ= ಮತ್ತೆ ಯಾರನ್ನೂ, ಪತಿಯಾಗಿ = ರಮಣನನ್ನಾಗಿ, ವರಿಸಬೇಕೆಂಬ= ಬಯಸಬೇಕೆನ್ನತಕ್ಕ, ಚೈತನ್ಯಂ= ಇಚ್ಛೆಯು, ಇಲ್ಲ= ಇರುವುದಿಲ್ಲ, ಏನುಮಾಡುವೆನು= ಮಾಡತಕ್ಕದ್ದೇನು ? ಇನ್ನು= ಹೀಗಿರುವುದರಿಂದ, ನಿನಗೆ= ಕನ್ಯಾರ್ಥಿಯಾಗಿ ಬಂದಿರತಕ್ಕ ನಿನಗೆ, ಈವ= ಮಗಳನ್ನು ಕೊಟ್ಟು ಮದುವೆ ಮಾಡುವ, ಧನ್ಯತೆಗೆ= ಕೃತಾರ್ಥತೆಗೆ, ತಾನು= ನಾವಾದರೊ, ಬಾಹಿರಂ= ಬೇರೆಯಾದವನು, ಆದೆನು= ಆಗಿಬಿಟ್ಟಿದ್ದೇನೆ, ಎನಲು= ಎಂದು ನುಡಿಯಲು, ಆ ಕಪಟವಿಪ್ರನು= ಕೃತ್ರಿಮದಿಂದ ಬ್ರಾಹ್ಮಣನಾಗಿ ಇರುವ ಅಗ್ನಿಪುರುಷನು, ಇಂತು= ಮುಂದೆ ಹೇಳುವಂತೆ, ಎಂದನು= ನುಡಿದನು.
ಅ॥ವಿ॥ ಕುಮಾರಿ( ತ್ಸ. ) ಕುವರಿ(ತ್ಭ) ಮರುತಸಖ= ಮರುತನ ಸಖ( ಷ. ತ. )
ತಾತ್ಪರ್ಯ :- ನೀಲಧ್ವಜನು, ಎಲೈ ಭೂಸುರನೆ ! ನೀನು ನನ್ನ ಮಗಳನ್ನು ಕೇಳತಕ್ಕದ್ದು ಯುಕ್ತವೇ ಸರಿ. ಬ್ರಾಹ್ಮಣನಿಗೆ ಕ್ಷತ್ರಿಯರು ಹೆಣ್ಣು ಕೊಡಲೂ ಬಹುದು. ಆದರೆ ನನ್ನ ಮಗಳಾದ ಸ್ವಾಹಾದೇವಿಯು ಅಗ್ನಿಯನ್ನಲ್ಲದೆ ಮತ್ತೊಬ್ಬರನ್ನೂ ವರಿಸುವುದಿಲ್ಲವೆಂದು ಶಪಥಮಾಡಿರುವಳಲ್ಲಾ, ಇದಕ್ಕೇನು ಮಾಡಲಿ ? ನಿನಗೆ ಕನ್ಯಾದಾನಮಾಡಿ ಪಡೆಯಬಹುದಾದ ಫಲಕ್ಕೆ ಸ್ವಾಹಾದೇವಿಯ ಶಪಥವು ಅಡ್ಡಿಯಾಗಿದೆ, ಎಂದು ಯೋಚಿಸುತ್ತಲಿರುವ ರಾಯನನ್ನು ಕಪಟಬ್ರಾಹ್ಮಣನು ನೋಡಿ
ಪ್ರಾಪ್ತಮಾದುದು ನಿನ್ನ ಮಗಳೆಣಿಕೆ ಸುವ್ರತ ಸ।
ಮಾಪ್ತಿಯಂ ಮಾಡಿಸಿನ್ನಾನಗ್ನಿ ಸಂಶಯ।
ವ್ಯಾಪ್ತಿಯಂ ಬಿಡು ಕುಡು ನಿಜಾತ್ಮನೆಯನೆನೆ ನಂಬದಾನೃಪಂ ಬಳಿಕ ತನ್ನ॥
ಆಪ್ತ ಮಂತ್ರಿಯೊಳೀಗಳಿವನಂ ಪರೀಕ್ಷಿಸೆನೆ।
ಗೋಪ್ತಾರನಾಜ್ಞೆಯಿಂಬಂದಮನೋಡೆ ಶಿಖಿ।
ದೀಪ್ತಿಯಂ ತೋರಲೆವೆ ಗಡ್ಡ ಮೀಸೆಗಳುರಿಯಲನಲನೆಂದರಿದನಂದು॥೮॥
ಪ್ರತಿಪದಾರ್ಥ:- ನಿನ್ನ= ನಿನ್ನ ಸಂಬಂಧವಾದ, ಮಗಳ= ಕುವರಿಯ, ಎಣಿಕೆ= ಇಷ್ಟಾರ್ಥವು, ಪ್ರಾಪ್ತಂ= ಸಿದ್ಧಿಸಿದಂತಾದ್ದು,ಆದುದು= ಆಯಿತು, ಸುವ್ರತ= ಅಗ್ನಿಯನ್ನು ಪೂಜೆಮಾಡುವಸದ್ವ್ರತದ, ಸಮಾಪ್ತಿಯಂ= ಪೂರೈಸುವಿಕೆಯನ್ನು, ಮಾಡಿಸು= ಈಡೇರಿಸು, ಆಂ=ನಾನೆ, ಅಗ್ನಿ= ಯಜ್ಞೇಶ್ವರನು, ಇನ್ನು= ಇನ್ನು ಮುಂದೆ, ಸಂಯಪ್ರಾಪ್ತಿಯಂ= ಹೆಚ್ಚಾದ ಅನುಮಾನವನ್ನು, ಬಿಡು= ಬಿಟ್ಟುಬಿಡು, ನಿಜ=ನಿನ್ನ, ಆತ್ಮಜೆಯನು= ಕುವರಿಯನ್ನು, ಕೊಡು= ಕೊಟ್ಟು ಮದುವೆಮಾಡು, ಎನೆ= ಎಂದು ನುಡಿಯಲು, ಆ ನೃಪಂ= ಆ ನೀಲಧ್ವಜನೆಂಬ ದೊರೆಯು, ನಂಬದೆ= ನಂಬಿಕೆಯನ್ನು ತಾಳದೆ, ಬಳಿಕ= ಆನಂತರ, ತನ್ನ=ಸ್ವಕೀಯವಾದ, ಆಪ್ಯಮಂತ್ರಿಗಳ್ಗೆ= ಮುಖ್ಯರಾದ ಸಚಿವರಿಗೆ, ಇವನಂ= ಈ ಬ್ರಾಹ್ಮಣನನ್ನು, ಪರೀಕ್ಷಿಸಿ= ಅಗ್ನಿಯು ಇವನೇ ಎಂಬುದನ್ನು ಗೊತ್ತುಮಾಡಿ, ಎನೆ= ಎಂದು ಹೇಳಲು, ಗೋಪ್ತಾರನ= ರಕ್ಷಕನಾದ ದೊರೆಯ, ಆಜ್ಞೆಯಿಂ= ಶಾಸನದಿಂದ, ಬಂದು= ಐತಂದು, ಅವಂ= ಆ ಸಚಿವನು, ನೋಡೆ= ನಿರುಕಿಸಲಾಗಿ, ಶಿಖಿ= ಅಗ್ನಿಪುರುಷನು, ದೀಪ್ತಿಯಂ = ತನ್ನ ಕಾಂತಿಯನ್ನು, ತೋರಲು= ಕಾಣಿಸಲು, ಎವೆ= ಕಣ್ಣುಬ್ಬುಗಳು, ಗಡ್ಡಮೀಸೆಗಳು= ಗಡ್ಡವೂ ಮೀಸೆಯೂ ಸಹ, ಉರಿಯಲು= ಬೆಂದುಹೋಗಲು, ಅಂದು= ಆ ಸಮಯದಲ್ಲಿ, ಅನಲನೆಂದು= ಅಗ್ನಿದೇವರೇ ಎಂಬುದಾಗಿ, ಅರಿದನು= ಗೋಚರಮಾಡಿಕೊಂಡನು.
ಅ॥ವಿ॥ ಆತ್ಮಜೆ= ಆತ್ಮ- ತನ್ನಲ್ಲಿ, ಜೆ- ಹುಟ್ಟಿದವಳು( ಮಗಳು, ಕೃ. ವೃ.) ಆಜ್ಞೆ( ತ್ಸ) ಆಣೆ(ತ್ಭ) ಶಿಖಿ= ನವಿಲು, ಬ್ರಾಹ್ಮಣ, ಅಗ್ನಿ ಮೊದಲಾದವು. ಅನಲ=ಅಗ್ನಿ, ಅನಿಲ= ಗಾಳಿ, ಅರಿ= ತಿಳಿ(ಧಾತು) , ಶತ್ರು, (ನಾಮವಾಚಕ) ಊರಿದನು=" ಅರಿ " ಎಂಬ ಧಾತುವಿನ ಭೂತಕಾಲ, ಪ್ರಥಮಪುರುಷ, ಪುಲ್ಲಿಂಗ ಏಕವಚನ.
ತಾತ್ಪರ್ಯ:- ಎಲೈ ಭೂಕಾಂತನೆ ! ನಿನ್ನ ಮಗಳ ಇಷ್ಟಾರ್ಥವು ಕೈಗೂಡಿತೆಂದು ತಿಳಿ. ಆಕೆಯು ಮಾಡುತ್ತಿರುವ ವ್ರತವು ಸಾಂಗವಾಯಿತೆಂದರುಹಿ ಮನೆಗೆ ಕರತರುವನಾಗು. ನಾನೇ ಅಗ್ನಿಯು, ಸಂಶಯವನ್ನು ಬಿಟ್ಟು ನಿನ್ನ ಮಗಳನ್ನು ನನಿಗೆ ಕೊಟ್ಟು ಮದುವೆ ಮಾಡು ಎಂದು ನುಡಿದನು. ಇದನ್ನೆಲ್ಲಾ ಕೇಳಿದ ನೀಲಧ್ವಜನುತನ್ನ ಮುಖ್ಯಾಮಾತ್ಯರನ್ನು ಕರೆಯಿಸಿ ಈ ಬ್ರಾಹ್ಮಣನು ಅಗ್ನಿಯೇ ಹೌದೊ ಅಲ್ಲವೊ ಪರೀಕ್ಷಿಸಿ ನೋಡಿರೆಂದು ಆಜ್ಞಾಪಿಸಿದನು. ದೊರೆಯಿಂದ ಆಜ್ಞಾಪಿಸಲ್ಪಟ್ಟ ಮಂತ್ರಿಯು ಆ ವಿಪ್ರನ ಹತ್ತಿರಕ್ಕೆ ಬರಲು, ಅಗ್ನಿಯು ತನ್ನ ತೇಜೋಬಲದಿಂದ ಅವನ ಗಡ್ಡ ,ಮೀಸೆ, ಕಣ್ಣುರೆಪ್ಪೆ ಇವೆಲ್ಲಾ ಸುಟ್ಟುಹೋಗುವಂತೆ ಮಾಡಿದನಾದ್ದರಿಂದ ಆ ಮಂತ್ರಿಗೆ ಇವನು ಅಗ್ನಿಯೇ ಎಂದು ಗೊತ್ತಾಯಿತು.
ಸಪ್ತರಸನಂ ತಪ್ಪದೆಂದಾ ನೃಪಂ ತಿಳಿದು।
ಗುಪ್ತದಿಂದ ತನ್ನ ಸತಿಯನುಜೆಯಂ ಕರಸಿ ಲೋ।
ಲುಪ್ತಿಯಿಂ ಬಂದವನಿವಗೀಯಬೇಕಣುಗಿಯಂ ಶಿಖಿಯಹುದೆ ನೋಡೆನಲ್ಕೆ॥
ದೃಪ್ತ ಭಾವದೊಳಾಕೆ ನಡೆತಂದು ನಿಟ್ಟಿಸಲ್।
ತಪ್ತಮಾದುದು ಮೇಲುದಿನ ವಸನಮಾಗಳಾ।
ಕ್ಷಿಪ್ತಮಂ ಮಾಡಿ ನಗುತಿರ್ದನಾ ಭೂವರಂ ಸಭೆಯೊಳ್ ವಿನೋದದಿಂದೆ॥೯॥
ಪ್ರತಿಪದಾರ್ಥ:- ಆ ನೃಪಂ= ಆ ನೀಲಧ್ವಜನೆಂಬರಸು, ಸಪ್ತರಸನಂ= ಸಪ್ತ ಜಿಹ್ವೆಗಳುಳ್ಳ ಅಗ್ನಿ ದೇವನೆ, ತಪ್ಪದು ಈ ಮಾತು
ಹುಸಿಯಲ್ಲ, ಎಂದು= ಎಂಬತೆರನಾಗಿ, ತಿಳಿದು= ಅರಿತವನಾಗಿ, ಗುಪ್ತದಿಂ= ಗೋಪ್ಯವಾಗಿ, ತನ್ನ= ಸ್ವಕೀಯರಾದ, ಸತಿ= ಹೆಂಡತಿಯಾದ ಜ್ವಾಲೆಯನ್ನು, ತನುಜೆಯಂ= ಕುವರಿಯಾದ ಸ್ವಾಹಾದೇವಿಯನ್ನು, ಕರೆಸಿ= ಬರಮಾಡಿಕೊಂಡು, ಲೋಲುಪ್ತಿಯಿಂ= ಹೆಚ್ಚಾದ ಆಸೆಯಿಂದ, ಬಂದನು= ಅಗ್ನಿಯೇ ಬಂದಿರುವವನು, ಇವನಿಗೆ= ಈ ಹುತಾಶನನಿಗೆ, ಅಣುಗೆಯಂ=ಕುವರಿಯನ್ನು, ಈಯಬೇಕು= ಕೊಟ್ಟು ಮದುವೆ ಮಾಡಬೇಕು, ಶಿಖಿಯು= ಹುತವಹನು, ಅಹುದೆ= ಆಗಿದ್ದಾನೆಯೇ ? ನೋಡು=ಪರೀಕ್ಷೆಮಾಡು, ಎನಲ್ಕೆ= ಎಂದು ನುಡಿಯಲು, ಆಕೆ= ಸ್ವಾಹಾ ಎಂಬ ಕುವರಿಯು, ತೃಪ್ತಭಾವದೊಳ್= ಪ್ರೇಮಾತಿಶಯದಿಂದ, ನಡೆತಂದು= ಐತಂದು, ನಿಟ್ಟಿಸಲ್= ಗಮನವಿಟ್ಟು ನೋಡಲು, ಮೇಲುದಿನ= ಮೇಲ್ಗಡೆಯಿರುವ, ವಸನಂ= ಸೀರೆಯ ತುದಿಯು, ತಪ್ತಂ= ಸುಟ್ಟುಹೋದದ್ದು, ಆದುದು= ಆಗಿಹೋಯಿತು, ಆ ಭೂವರಂ= ಆ ಮಾಹಿಷ್ಮತಿಯ ಅರಸನು, ಸಭೆಯೊಳ್= ಸಭಾಮಂಟಪದಲ್ಲಿ, ಅಕ್ಷಿಪ್ತಮಂಮಾಡಿ= ಅನುಮಾನವನ್ನು ಹೋಗಲಾಡಿಸಿ, ವಿನೋದದಿಂದ= ಆನಂದಾತಿಶಯದಿಂದ, ನಗುತ= ಸಂತೋಷವಂ ತಾಳುತ್ತ, ಇರ್ದ್ದನು= ಇದ್ದವನಾದನು.
ಅ॥ ವಿ॥ ಸಪ್ತರಸನಂ= ಸಪ್ತ- ಏಳಾದ, ರಸನಂ- ನಾಲಿಗೆಯುಳ್ಳವನು, ಯಾರೊ ಅವನು ( ಬ. ಸ. )
ತಾತ್ಪರ್ಯ:- ನೀಲಧ್ವಜನೂ ಕೂಡ ಇವನನ್ನು ಅಗ್ನಿಯೇ ಎಂದು ತಿಳಿದವನಾಗಿ ತನ್ನ ಹೆಂಡತಿಯನ್ನೂ ಮಗಳನ್ನೂ ಗೋಪ್ಯವಾಗಿ ಕರೆಯಿಸಿ, ತನ್ನ ಕುವರಿಯನ್ನು ಕುರಿತು, ಇಗೋ ಈ ಬ್ರಾಹ್ಮಣನೇ ಅಗ್ನಿಪುರುಷನು, ಇವನಿಗೆ ನಿನ್ನನು ಕೊಟ್ಟು ಮದುವೆ ಮಾಡುವೆನು. ಇವನು ಅಗ್ನಿಯು ಅಹುದೋ ಅಲ್ಲವೊ ? ಹತ್ತಿರಕ್ಕೆ ಹೋಗಿ ಪರೀಕ್ಷಿಸೆಂದು ನುಡಿಯಲು, ಸ್ವಾಹಾದೇವಿಯು ಸಂತುಷ್ಟಾಂತರಂಗಳಾಗಿ ಆ ಬ್ರಾಹ್ಮಣನ ಬಳಿಗೆ ಹೋಗಿ ನಿಂತಕೂಡಲೆ ಅವಳು ಉಟ್ಟಿದ್ದ ಸೀರೆಯ ಸೆರಗು ಸುಟ್ಟುಹೋಯಿತು. ಎದನ್ನೆಲ್ಲಾ ನೀಲಧ್ವಜನು ನೋಡಿ ಸಂತೋಷಮಂತಾಳುತ್ತಾ ಸಭೆಯಲ್ಲಿ ಕುಳಿತಿದ್ದನು.
ಭೂಕಾಂತ ಕೇಳ್ ಬಳಿಕ ನೀಲಧ್ವಜಾವನಿಪ।
ನಾ ಕಪಟ ವಿಪ್ರನಂ ಕರೆದಗ್ನಿ ನೀನಾದೊ।
ಡೀ ಕುವರಿಯಂ ಕುಡುವೆನಿಂದುಮೊದಲಾಗಿ ಮಾಹಿಷ್ಮತಿಯ ಪಟ್ಟಣಕ್ಕೆ॥
ಪ್ರಾಕಾರಮಾಗಿ ಯೆನ್ನರಮನೆಯೊಳೆಂದುಮಿರ।
ಬೇಕೆಂದು ಬೇಡಿಕೊಳಲೊಪ್ಪಿ ಪವಮಾನ ಸಖ ।
ನಾ ಕಮಲವದನೆಯಂ ಮದುವೆಯಾದಂ ವಿಧಿ ವಿಧಾನ ವಿಭವಗಳಿಂದೆ॥೧೦॥
ಪ್ರತಿಪದಾರ್ಥ:- ಭೂಕಾಂತ= ಪೃಥ್ವೀಶನಾದ ಜನಮೇಜಯನೆ ! ಕೇಳು= ಲಾಲಿಸು, ಬಳಿಕ = ಆಮೇಲೆ, ನೀಲಧ್ವಜಾವನಿಪನು= ನೀಲಧ್ವಜನೆಂಬರಸು, ಆ ಕಪಟವಿಪ್ರನಂ= ಆ ಬ್ರಾಹ್ಮಣ ವೇಷಧಾರಿಯಾದ ಅಗ್ನಿಯನ್ನು, ಕರೆದು= ಸಮೀಪಕ್ಕೆ ಬರಹೇಳಿ, ಅಗ್ನಿ = ಅಗ್ನಿದೇವನು, ನೀನು= ನೀನೇ, ಆದೊಡೆ= ಆದಲ್ಲಿ, ಈ ಕುವರಿಯಂ= ಈ ನನ್ನ ತನುಜೆಯನ್ನು, ಕೊಡುವೆನು=ವಕೊಟ್ಟು ಮದುವೆ ಮಾಡುತ್ತೇನೆ, ಇಂದು ಮೊದಲಾಗಿ= ಈ ಹೊತ್ತು ಮೊದಲುಮಾಡಿ-
ಕೊಂಡು, ಮಾಹಿಷ್ಮತೀ ಪಟ್ಟಣಕ್ಕೆ = ಮಾಹಿಷ್ಮತೀ ನಗರಕ್ಕೆ, ಪ್ರಾಕಾರಮಾಗಿ = ಕೋಟೆಯಾಗಿ ಬಳಸಿಕೊಂಡು, ತನ್ನ= ನನ್ನದಾದ, ಅರಮನೆಯೊಳು= ರೃಜಮಂದಿರದಲ್ಲಿ, ಎಂದುಂ= ಅನವರತವೂ, ಇರಬೇಕು= ನೆಲಸಿದವನಾಗಿರಬೇಕು, ಎಂದು= ಎಂಬುದಾಗಿ, ಬೇಡಿಕೊಳಲು= ಕೇಳಿಕೊಳ್ಳಲಾಗಿ, ಪವಮಾನಸಖಂ= ಅಗ್ನಿದೇವರು, ಆ ಕಮಲವದನೆಯ= ಕಮಲದಂತೆ ಮುಖವುಳ್ಳ ಆ ಸ್ವಾಹಾದೇವಿಯನ್ನು,ವಿಧಿ= ಶಾಸ್ತ್ರಸಮ್ಮತವಾದ, ವಿಧಾನ= ನಿಯಮಂಗಳ, ವಿಭವಂಗಳಿಂದ= ಸಂಭ್ರಮಾತಿಶಯದಿಂದ, ಮದುವೆಯಾದಂ= ಲಗ್ನವನ್ನು ಮಾಡಿಕೊಂಡನು.
ಅ॥ ವಿ॥ ಕಮಲವದನೆ= ಕಮಲದಂತೆಶವದನವು ಯಾರಿಗೊ ಅವಳು(ಬ. ಸ. ) ವಿಧಿವಿಧಾನವಿಭವಂಗಳಿಂ- ವಿಧಿಯ ವಿಧಾನ( ಷ. ತ. ) ವಿಧವಿಧಾನದ ವಿಭವಂಗಳು( ಷ. ತ. )
ತಾತ್ಪರ್ಯ:- ಎಲೈ ಜನಮೇಜಯನೆ! ಕೇಳು, ಬಳಿಕ ನೀಲಧ್ವಜನೆಂಬರಸು, ಆ ಕಪಟ ಬ್ರಾಹ್ಮಣನನ್ನು ಹತ್ತಿರಕ್ಕೆ ಕರೆಯಿಸಿ, ಎಲೈ ಬ್ರಾಹ್ಮಣನೇ! ನೀನು ಅಗ್ನಿಯೇ ಆದರೆ ನನ್ನ ಮಗಳನ್ನು ನಿನಗೆ ಕೊಟ್ಟು ಮದುವೆ ಮಾಡುತ್ತೇನೆ.ನೀನು ಇಂದು ಮೊದಲ್ಗೊಂಡು ಯಾವಾಗಲೂ ನನ್ನ ಪಟ್ಟಣದ ಕೋಟೆಯ ಸುತ್ತಲೂ ಕಾವಲಾಗಿದ್ದು ನನ್ನ ರಾಜಧಾನಿಗೆಯಾವ ಭಯವೂ ಇಲ್ಲದಂತೆ,ಕಾಪಾಡಬೇಕೆಂದು ಕೇಳಿಕೊಳ್ಳಲು, ಹಾಗೆಯೇ ಆಗಲೆಂದು ಅಗ್ನಿಯು ಒಪ್ಪಿ ಕೊಂಡನು. ಕೂಡಲೆ ಕಮಲಮುಖಿಯಾದ ಸ್ವಾಹಾದೇವಿಗೂ ತೇಜಃಪುಂಜದಿಂದ ಮೆರೆಯುವ ಅಗ್ನಿಪುರುಷನಿಗೂ ಶಾಸ್ತ್ರೋಕ್ತವಾಗಿ
ಅತ್ಯುತ್ಸವದಿಂದ ವಿವಾಹ ನಡೆಯಿತು.
ಶ್ರೀ ಹೈಮವತಿಯರಂ ದುಗ್ಧಾಬ್ಧಿ ಹಿಮಗಿರಿಗ।
ಳಾ ಹರಿಹರರ್ಗೆ ಕೊಟ್ಟಿಂಬಿಟ್ಟುಕೊಂಡಿಹವೊ।
ಲೀ ಹುತವಹಂಗಾತ್ಮಜೆಯನಿತ್ತು ನಿಲಿಸಿಕೊಂಡು ನೀಲಕೇತು ಬಳಿಕ ॥
ಸ್ವಾಹಾ ವನಿತೆಯ ಸಮ್ಮೇಳದತಿಸೌಖ್ಯದಿಂ।
ಮಾಹಿಷ್ಮತೀ ಪಟ್ಟಣದೊಳಿರ್ದನನಲಂ ಮ।
ನೋಹರದ ವಿವಿಧ ಭೋಗದೊಳಂದು ಮೊದಲಾಗಿ ಸಂದು ಸಂತೋಷದಿಂದೆ॥೧೧॥
ಪ್ರತಿಪದಾರ್ಥ:- ಶ್ರೀ= ಲಕ್ಷ್ಮೀದೇವಿ, ಹೈಮವತಿಯರಂ= ಪಾರ್ವತಿ ಇವರನ್ನು, ದುಗ್ಧಾಬ್ಧಿ = ಪಾಲ್ಗಡಲು, ಹಿಮಗಿರಿಗಳು= ಹಿಮವಂತನು, ಆ ಹರಿಹರರ್ಗೆ = ವಿಷ್ಣು ಮತ್ತು ಈಶ್ವರರಿಗೆ,ಕೊಟ್ಟು ಮದುವೆಮಾಡಿ, ಇಂಬಿಟ್ಟುಕೊಂಡು= ತಮ್ಮ ಮನೆಯ
ಲ್ಲಿರಿಸಿಕೊಂಡು, ಇರ್ಪೊಲು= ಇರುವ ತೆರದಿಂದ, ನೀಲಕೇತು= ನೀಲಧ್ವಜನೂ ಕೂಡ, ಈ ಹುತವಹಂಗೆ= ಈ ಯಜ್ಞೇಶ್ವರ-
ನಿಗೆ ಆತ್ಮಜೆಯನು= ತನ್ನ ಕುವರಿಯನ್ನು, ಇತ್ತು= ಕೊಟ್ಟು, ( ಮದುವೆಮಾಡಿ) ನಿಲಿಸಿಕೊಂಡಂ= ತನ್ನ ಮನೆಯಲ್ಲಿಯೇ ಇರುವಂತೆ ಮಾಡಿಕೊಂಡನು, ಬಳಿಕ=ತರುವಾಯ, ಸ್ವಾಹಾವನಿತೆಯ= ಸ್ವಾಹಾ ಎಂಬಾಕೆಯ, ಸಮ್ಮೇಳವದ= ಜೊತೆಯು,
ಸೌಖ್ಯದಿಂ= ಸುಖಪರಂಪರೆಯಿಂದ,ಮಾಹಿಷ್ಮತೀ ಪಟ್ಟಣದೊಳು= ಮಾಹಿಷ್ಮತೀ ನಗರದಲ್ಲಿ, ಅನಲಂ= ಹುತವಹನು, ಮನೋಹರದ= ಮನೋಲ್ಲಾಸಕರವಾದ, ವಿವಿಧ= ನಾನಾಪ್ರಕಾರವಾದ, ಭೋಗದೊಳು = ಸುಖಪರಂಪರೆಗಳಿಂದ ಅಂದುಮೊದಲಾಗಿ= ಆ ದಿನ ಮೊದಲುಮಾಡಿಕೊಂಡು, ಸಂದು= ಸೇರಿ, ಸಂತೋಷದಿಂದ = ಆನಂದಾತಿಶಯದಿಂದ, ಇರ್ಪನು= ಇರುತ್ತಲಿದ್ದನು.
ಅ॥ವಿ॥ ಹೈಮವತಿ= ಹಿಮವಂತನ ಮಗಳು(ಪಾರ್ವತಿ) ದುಗ್ಧಾಬ್ಧಿ= ಅಬ್ಧಿ- ಆಪ್-ನೀರನ್ನು, ಧಿ- ಧರಿಸಿರುವುದು(ಕೃ. ವೃ. ) ದುಗ್ಧದ ಅಬ್ಧಿ (ಷ. ತ. )
ತಾತ್ಪರ್ಯ:- ಹಿಮವಂತನು, ತನ್ನ ಕುವರಿಯಾದ ಪಾರ್ವತಿಯನ್ನು ಈಶ್ವರನಿಗೂ, ಕ್ಷೀರಸಮುದ್ರವು ತನ್ನು ಪುತ್ತಿಯಾದ ಲಕ್ಷ್ಮೀದೇವಿಯನ್ನು ಶ್ರೀ ಮನ್ನಾರಾಯಣಮೂರ್ತಿಗೂ ಕೊಟ್ಟು ಮದೈವೆಮಾಡಿ ತಮ್ಮ ತಮ್ಮ ಮನೆಯಲ್ಲಿಯೇ ಇರಿಸಿಕೊಂಡಂತೆ, ನೀಲಧೂವಜನೂ ಕೂಡ, ತನ್ನಣುಗಿಯಾದ ಸ್ವಾಹಾದೇವಿಯನ್ನು ಅಗ್ನಿಗೆ ಕೊಟ್ಟು ವಿವಾಹವಂ ಮಾಡಿ ತನ್ನ ಮನೆಯಲ್ಲಿಯೇ ಇಟ್ಟುಕೊಂಡದ್ದರಿಂದ ಆ ದಿನ ಮೊದಲ್ಗೊಂಡು ಅಗ್ನಿಯು ಮಾಹಿಷ್ಮತೀ ನಗರದಲ್ಲಿ ಸ್ವಾಹಾದೇವಿ-
ಯೊಂದಿಗೆ ವಿಧವಿಧವಾದ ಭೋಗಗಳನ್ನನುಭವಿಸುತ್ತ, ಸುಖವಾಗಿ ಕಾಲವಂ ಕಳೆದುಕೊಂಡು ನೀಲಧ್ವಜನ ರಾಜಧಾನಿಗೆ ಯಾವ ಭಯವೂ ಇಲ್ಲದಂತೆ ಕಾಪಾಡುತ್ತಲಿರುವನು. ಇದೇ ಅಗ್ನಿಯು ನೀಲಧ್ವಜನ ರಾಜಧಾನಿಯಲ್ಲಿರಲು ಕಾರಣವು.
ಅಲ್ಲಿ ಪಾವಕನಿರ್ಪ ಕಾರಣಮಿದೀಗ ಮುಂ।
ದಿಲ್ಲಿಯ ಕಥಾಂತರವನರಸಕೇಳಾ ರಾತ್ರಿ।
ಯಲ್ಲಿ ನೀಲಧ್ವಜಂ ಮನೆಯೊಳಾ ಜ್ವಾಲೆಯ ನಿರೂಪಮಂ ಶಿರದೊಳಾಂತು ॥
ಸಲ್ಲಲಿತ ವಾಜಿಯಂ ಬಿಡೆನೆನ್ನೊಡನೆ ಕಾದಿ।
ದಲ್ಲದೆಂದಾ ಕಿರೀಟಿಗೆ ಪೇಳಿಸಿದನಿತ್ತ।
ಪಲ್ಲವಿಸಿತಮಲ ಪೂರ್ವಾಶಾ ಲತಿಕೆಯೆನಲ್ ಕೆಂಪಡರ್ದುದುಮೂಡಲು॥೧೨॥
ಪ್ರತಿಪದಾರ್ಥ:- ಅರಸ= ಎಲೈ ಜನಮೇಜಯನೆ ! ಅಲ್ಲಿ= ಆ ಮಾಹಿಷ್ಮತೀ ನಗರದಲ್ಲಿ , ಪಾವಕನು= ಅಗ್ನಿದೇವನು,ಇರ್ಪ= ಇರತಕ್ಕ, ಕಾರಣಂ= ನಿಮಿತ್ತವು, ಇದು= ಇದೇ, ಈಗ= ಇನ್ನು ಮುಂದೆ, ಇಲ್ಲಿಯ= ಇಲ್ಲಿ ನಡೆಯತಕ್ಕ, ಕಥಾಂತರವನು= ಕಥಾ ವಿಸ್ತಾರವನ್ನು,ಕೇಳು=ಲಾಲಿಸು, ಆ ರಾತ್ರಿ = ಆ ನಿಶೆಯಲ್ಲಿ, ನೀಲಧ್ವಜಂ= ನೀಲಧ್ವಜರಾಯನು, ಮನೆಯೊಳು= ಏಕಾಂತಸ್ಥಾನದಲ್ಲಿ, ಜ್ವಾಲೆಯ= ಜ್ವಾಲೆಯೆಂಬ ತನ್ನ ಹೆಂಡತಿಯ, ನಿರೊಪಮಂ= ಆಜ್ಞೆಯನ್ನು, ತಲೆಯೊಳು= ತನ್ನ ಉತ್ತಮಾಂಗದಲ್ಲಿ( ತಲೆಯಲ್ಲಿ) ಆಂತು= ತಾಳಿದವನಾಗಿ, ಸಲ್ಲಲಿತ = ಮನೋಹರವಾದ, ವಾಜಿಯಂ = ಅಶ್ವವನ್ನು, ನಮ್ಮೊಡನೆ= ನಮ್ಮ ಸಂಗಡ, ಕಾದಿದಲ್ಲದೆ= ಕಾಳಗಮಾಡಿದಲ್ಲದೆ, ಬಿಡೆನು= ಬಿಟ್ಟುಕೊಡುವುದಿಲ್ಲ, ಎಂದು= ಎಂಬುದಾಗಿ, ಆ ಕಿರೀಟಿಗೆ= ಆ ಪಾರ್ಥನಿಗೆ,ಪೇಳಿಸಿದನು= ಹೇಳಿಸಿದವನಾದನು, ಇತ್ತ= ಈ ಪಾರ್ಶ್ವದಲ್ಲಿ,ಅಮಲ= ಪರಿಶುದ್ಧವಾದ, ಪೂರ್ವಾಶಾ= ಪೂರ್ವದಿಕ್ಕೆನ್ನುವ, ಲತಿಕೆ= ಎಳೆವಳ್ಳಿಯು, ಪಲ್ಲವಿಸಿತು= ತಳಿರ್ಗಳಿಂ ಕೂಡಿತು, ಎನೆ= ಎಂಬಂತೆ, ಮೂಡಲು= ಪೂರ್ವದಿಕ್ಕಿನ ಪಾರ್ಶ್ವವು, ಕೆಂಡರಿತು= ರಕ್ತ ಛಾಯೆಯನ್ನೈದಿತು, ಎಂದರೆ ಅರುಣೋದಯವಾಯಿತು.
ತಾತ್ಪರ್ಯ:- ಕೇಳೈ ಜನಮೇಜಯನೆ ! ಇನ್ನು ಮುಂದಿನ ಕಥೆಯನ್ನು ಹೇಳತೊಡಗುವೆನು, ನೀಲಧ್ವಜನು ಯಜ್ಞಾಶ್ವವನ್ನು ಅರ್ಜುನನಿಗೆ ಕೊಡುವೆನೆಂದು ಅಗ್ನಿಯ ಮಾತಿನಂತೆ ಒಪ್ಪಿ ತನ್ನ ಪಟ್ಟಣಕ್ಕೆ ಹೋದ ರಾತ್ರಿಯಲ್ಲಿ ಅವನ ಕಾಂತೆಯಾದ ಜ್ವಾಲೆಯು ಯಾಗದ ಕುದುರೆಯನ್ನು ಕೊಡಕೂಡದೆಂದು ಮಾಡಿದ ದುರ್ಬೋಧನೆಗೆ ರಾಜನು ಕಿವಿಗೊಟ್ಟು ತನ್ನ ಚಾರರಂ ಕುರಿತು, ಎಲೈ ದೂತರೆ! ನೀವು ಈಗಲೇ ಅರ್ಜುನನ ಬಳಿಗೆ ಹೋಗಿ ನೀಲಧ್ವಜನನ್ನು ಗೆದ್ದಲ್ಲದೆ ಯಜ್ಞಾಶ್ವವು ನಿಮ್ಮ ಕೈಸೇರಲಾರದೆಂದು ಹೇಳಿ ಬನ್ನಿರೆಂದು ಆಜ್ಞಾಪಿಸಲು ಅವರು ಹಾಗೆಯೇ ಮಾಡಿದರು. ಅಷ್ಟು ಹೊತ್ತಿಗೆ ಪೂರ್ವದಿಕ್ಕೆಂಬ ಎಳೆಬಳ್ಳಿಯು ಹೊಸದಾದ ಕೆಂದಳಿರ್ಗಳಿಂದಲಂಕೃತವಾಯಿತೋ ಎಂಬಂತೆ ಅರುಣೋದಯವಾಯಿತಾದ್ದರಿಂದ ಪೂರ್ವ ದಿಕ್ಕೆಲ್ಲಾ ಕೆಂಪಾಗಿ ಕಾಣಲುಜ್ಜುಗಿಸಿತು.
ತನ್ನ ಪಗೆಯಾದ ಕತ್ತಲೆಯ ಸಾರೂಪ್ಯದಿಂ।
ದಿನ್ನಿರ್ದೊಡೆಮಗಿನಂ ಮುಳಿಯದಿರನೆಂದಂಜಿ ।
ಕನ್ನೈದಿಲೆಯ ಮೊಗಂ ಬಾಡಿದುದು ಕೂಡೆ ನಗುತಿರ್ದುವರವಿಂದಂಗಳು॥
ಗನ್ನದೊಳ್ ನೆರೆವ ಜಾರೆಯರ ಕುಂಟಣಿಯಂತೆ ।
ಸನ್ನೆಗೈದುವು ತಾಮ್ರ ಚೂಡಂಗಳೊಂದಿದುವು।
ಮುನ್ನಿನಂತಿರೆ ಜಕ್ಕವಕ್ಕಿಗಳ್ ಪಾಡಿದುವು ತುಂಬಿಗಳ್ ಬಂಡನರಸೆ॥೧೩॥
ತನ್ನ= ಇನನ, ಪಗೆಯಾದ= ವೈರಿಯಾದ, ಕತ್ತಲೆಯ= ಅಂಧಕಾರದ, ಸಾರೂಪ್ಯದಿಂ= ಸಮಾನವಾದ ಬಣ್ಣದಿಂದ, ಇನ್ನು= ಸೂರ್ಯೋದಯವಾದನಂತರ,ಇರ್ದೊಡೆ= ಇದ್ದಹಾಗಾದರೆ,ಎಮಗೆ= ಕನ್ನೈದಿಲೆಗಳಾದ ನಮಿಗೆ, ಇನಂ= ರವಿಯು, ಮುಳಿಯದೆ= ಸಿಟ್ಟುಮಾಡಿಕೊಳ್ಳದೆ, ಇರನು= ಇರತಕ್ಕವನಲ್ಲ, ಎಂದು= ಎಂಬುದಾಗಿ, ಅಂಜಿ= ಹೆದರಿ, ಕನ್ನೈದಿಲೆಯ = ಕರಿಯ ಕಮಲದ ಹೂಗಳ, ಮೊಗಂ= ಮೋರೆಯು, ಬಾಡಿದುದು= ಚಂದಿಹೋಯಿತು, ಕೂಡೆ= ತಕ್ಷಣವೇ, ಅರವಿಂದಗಳು= ಬಿಳಿ ತಾವರೆ ಹೂಗಳು, ನಗುತಿರ್ದವು= ನಗುತ್ತಲಿರುವಂತೆ ಅರಳಲು ಪ್ರಾರಂಭಿಸಿದವು, ಗನ್ನದೊಳ್= ಕಪಟದಿಂದ, ನೆರೆವ= ಸುಳಿದಾಡುವ, ಜಾರೆಯರ= ಕಾಮುಕ ಸ್ತ್ರೀಯರ, ಕುಂಟಣಿಯಂತೆ= ಯಜಮಾನಿಯಹಾಗೆ, (ತಲೆ ಹಿಡುಕಿಯತೆರದಿಂದ) ತಾಮ್ರಚೂಡಂಗಳು= ಕೋಳಿಗಳು, ಸನ್ನೆಗೈದವು= ಬೆಳಗಾದ ಸೂಚನೆಯನ್ನು ತೋರ್ಪಡಿಸುತ್ತಲಿದ್ದವು, ಜಕ್ಕವಕ್ಕಿಗಳು = ಚಕ್ರವಾಕಂಗಳು, ಮುನ್ನಿನಂತೆ=ವಮೊದಲಿನ ಹಾಗೆ, ಇರೆ= ಇರಲು, ಒಂದಿದವು= ಒಟ್ಟುಗೂಡಿದವು, ತುಂಬಿಗಳು= ಜೀರುಂಡೆಗಳು, ಬಂಡನು= ಪುಷ್ಪರಸವನ್ನು, ಅರಸಿ= ಹುಡುಕುತ್ತಾ, ಪಾಡಿದವು= ಝೇಂಕಾರಧ್ವನಿಯಿಂದ ಗಾನಮಾಡಲಾರಂಭಿಸಿದವು.
ಅ॥ ವಿ॥ ಕನ್ನೈದಿಲೆ= ಕರಿದಾದ ನೈದಿಲೆ, (ವಿ. ಪೂ. ) ಮೊಗಂ(ತ್ಭ) ಮುಖಂ(ತ್ಸ) ಸನ್ನೆ( ತ್ಭ) ಸಂಜ್ಞಾ(ತ್ಸ ) ಸನ್ನೆಯಂಗೈದವು= ಸನ್ನೆಗೈದವು(ಕ್ರಿ. ಸ.) ತಾಮ್ರಚೂಡಂ= ತಾಮ್ರ-ಕೆಂಪಾದ, ಚೂಡಂ= ಜುಟ್ಟುಳ್ಳದ್ದು,( ಬ. ಸ. ) ಜಕ್ಕವಕ್ಕಿ(ತ್ಭ) ಚಕ್ರವಾಕಪಕ್ಷಿ (ತ್ಸ ) ಅರಸಿ= ಹುಡುಕಿ ( ಕೃದಂತ) ಅರಸಿ= ರಾಣಿ ನಾಮವಾಚಕ.
ತಾತ್ಪರ್ಯ:- ಆಗ ತನ್ನ ಹಗೆಯಾದ ಕತ್ತಲೆಯು ತೊಲಗಿದರೂ ಕೂಡ ಈ ಕಪ್ಪುಕಮಲಗಳು ಅರಳಿಕೊಂಡೇ ಇವೆಯಲ್ಲಾ ಎಂದು ಸೂರ್ಯನು ಎಲ್ಲಿ ಕೋಪಮಾಡಿಕೊಳ್ಳುವನೋ, ಎಂಬ ಭಯದಿಂದ ಕನ್ನೈದಿಲೆಗಳು ತಮ್ಮಷ್ಟಕ್ಕೆ ತಾವೇ ಮುಚ್ಚಿಕೊಂಡು ಕಾಂತಿಹೀನವಾದದ್ದನ್ನು ಬೆಳ್ದಾವರೆಗಳು ನೋಡಿ ನಗುತ್ತಲೆವೆಯೋ ಎಂಬಂತೆ ಅರಳುತ್ತಲಿದ್ದವು. ತಲೆಹಿಡಕಿಯಾದ ಹೆಂಗಸು ವಿಟರನ್ನು ಜಾರಿಣಿಯರಿಗೆ ಸೂಚಿಸುವ ತೆರನಾಗಿ ಕೋಳಿಗಳು ಬೆಳಗಾಗುತ್ತ ಬಂತೆಂದು ಜನರಿಗೆಲ್ಲಾ ಧ್ವನಿಯಿಂದ ಸೂಚಿಸುತ್ತಲಿದ್ದವು. ಚಕೂರವಾಕ ಪಕ್ಷಿಗಳು ಮೊದಲಿನಂತೆಯೇ ಒಟ್ಟುಗೂಡಿ ಸಂತೋಷದಿಂದ ತಿರುಗಾಡಲಾರಂಭಿಸಿದವು. ಜೀರುಂಡೆಗಳು ಮಕರಂದಕ್ಕಾಗಿ ಅಲ್ಲಲ್ಲಿ ಅಲೆದಾಡಲುದ್ಯುಕ್ತವಾದವು.
ರಾಹು ಮುನ್ನೊಮ್ಮೆ ತನ್ನಂ ತುಡುಕಿ ಬಿಟ್ಟ ನೆಂ।
ಬಾಹಗೆಯ ಮಗುಚಲೊಳವೊಕ್ಕು ಪಾತಾಳದ ಮ।
ಹಾಹಿ ಸಂಕುಲಮನಾಶ್ರಯಿಸಿ ಪೆಡೆಮಣಿಗಳಂ ತೆಗೆದುಕೊಂಡಾಗಳವನು॥
ಸಾಹಸಂ ಮಿಗೆ ದೆಸೆದೆಸೆಗೆಚೆಲ್ಲುತೈತರಪ ।
ನೋ ಹರಿದ್ವಾಜಿಪೇಳೆನೆ ಪಸುಳೆವಿಸಿಲ ಪ್ರ।
ವಾಹಂಗಳೆತ್ತಲುಂ ಪರಿವಿನಂ ದಿನಪನುದಯಂಗೈದು ಬರುತಿರ್ದನು॥೧೪॥
ಪ್ರತಿಪದಾರ್ಥ :- ರಾಹು= ರಾಹುವೆಂಬ ರಾಕ್ಷಸನು, ಮುನ್ನ= ಪೂರ್ವದಲ್ಲಿ, ಒಮ್ಮೆ = ಒಂದಾವರ್ತಿ,ತನ್ನಂ= ಇನನನ್ನು, ತುಡುಕಿ= ಮುಟ್ಟಿ, ಬಿಟ್ಟನು= ಕಾಂತಿಹೀನನನ್ನಾಗಿ ಮಾಡಿದನು, ಎಂಬ=ಎನ್ನತಕ್ಕ, ಆ ಹಗೆಯಂ= ಆ ವೈರಿಯನ್ನು, ಅರಸಲು= ಹುಡುಕಿನೋಡಲು, ಒಳವೊಕ್ಕು= ಒಳಗೆ ಹೋಗಿ, ಪಾತಾಳದ= ಪಾತಾಳಲೋಕದಲ್ಲಿರತಕ್ಕ, ಮಹಾ= ದೊಡ್ಡದಾದ, ಅಹಿ= ಹಾವುಗಳ, ಸಂಕುಲವನು= ಸಮುದಾಯಗಳನ್ನು, ಆಕ್ರಮಿಸಿ= ವಶಮಾಡಿಕೊಂಡು,ಪೆಡೆ= ಹೆಡೆಗಳಲ್ಲಿರತಕ್ಕ,ಮಣಿಗಳಂ= ಮಾಣಿಕ್ಯಗಳನ್ನು, ತೆಗೆದುಕೊಂಡು= ಕೈಕೊಂಡು, ಆಗಲ್=ಆಗ, ಅವನು=ಆ ಇಂದುವು, ಸಾಹಸಂಮಿಗೆ= ಶಕ್ತಿಯು ಹೆಚ್ಚುವಂತೆ,ದೆಸೆದೆಸೆಗೆ= ದಿಕ್ಕುದಿಕ್ಕುಗಳಿಗೂ, ಚಲ್ಲುತ/= ಆ ರತ್ನಗಳನ್ನು ಎಸೆಯುತ್ತ, ಹರಿಹಯಂ= ದಿನಕರನಾಗಿ, ಐತಪ್ಪನೋ= ಬರುತ್ತಲಿರುವನೊ ? ಪೇಳ್= ಹೇಳು, ಎನಲ್= ಎಂಬಂತೆ, ಪಸುಳೆವಿಸಿಲ = ಬಾಲಸೂರ್ಯಪ್ರಭೆಯ, ಪ್ರವಾಹಂಗಳು=ಕಿರಣಗಳು, ಎತ್ತಲುಂ= ಎಲ್ಲಾ ಭಾಗದಲ್ಲಿಯೂ, ಪರಿವಿನಂ= ಹರಡುವಿಕೆ-
ಯಿಂದ, ದಿನಪನು= ರವಿಯು, ಉದಯಂಗೈದು= ಉದ್ಭವಿಸಿ, ಬರುತ=ಐತರುತ್ತ, ಇರ್ದ್ದನು= ಇದ್ದವನಾದನು.
ಅ॥ ವಿ॥ ದೆಸೆದೆಸೆಗೆ- ಎಲ್ಲ ದಿಕ್ಕುಗಳು ಎಂಬ ಅರ್ಥದಲ್ಲಿ ದ್ವಿರುಕ್ತಿ.
ತಾತ್ಪರ್ಯ:- ರಾಹುವೆಂಬ ರಕ್ಕಸನು ಪೂರ್ವದಲ್ಲಿ ತನ್ನನ್ನು ಮುಟ್ಟಿ ಕಾಂತಿಹೀನನನ್ನಾಗಿ ಮಾಡಿದ ವೈರವನ್ನು ತೀರಿಸಿಕೊಳ್ಳಲು ಚಂದ್ರನು ಪಾತಾಳದವರೆಗೂ ಹೋಗಿ ದೊಡ್ಡ ದೊಡ್ಡ ಹಾವುಗಳ ಹೆಡೆಯಲ್ಲಿರತಕ್ಕ ಮಣಿಗಳನ್ನೆಲ್ಲಾ ತೆಗೆದುಕೊಂಡು ಮೇಲಕ್ಕೆ ಬಂದು, ದಿಕ್ಕುದಿಕ್ಕಿಗೂ ಆ ರತ್ನಗಳನ್ನೆಲ್ಲಾ ಚೆಲ್ಲಿಬಿಟ್ಟುಸೂರ್ಯನಾಗಿ ಬರುತಲಿರುವನೊ ಎಂಬಂತೆ ಎಳೆಬಿಸಿಲು ಎಲ್ಲೆಲ್ಲಿಯೂ ಹರಡಿ ಕೊಂಡಿತು.
ಇತ್ತಲವನೀಶ ಕೇಳುದಯವಾಗದ ಮುನ್ನ ।
ಮತ್ತೆ ಮಾಹಿಷ್ಮತಿಯ ಪಟ್ಟಣದ ಕೋಟೆಯಂ ।
ಮುತ್ತಿಕೊಂಡುದು ನರನ ಚತುರಂಗಮೋಜೆಯೊಳ್ ನೀಲಕೇತುವಿನ ಸೇನೆ॥
ಒತ್ತಿ ಕವಿದುದು ವೀರರೊದಗಿದರ್ ಪೊಯ್ದಾಡಿ ।
ತಿತ್ತಂಡಮೊಡವೆರಸಿ ಚೂಣಿಗಾಳಗದ ಭಟ।
ರೆತ್ತಿದರ್ ಪಂತಪಾಡುಗಳನಸಿತಧ್ವಜಂ ನಡೆದನರ್ಜುನನಮೇಲೆ॥೧೫॥
ಪ್ರತಿಪದಾರ್ಥ:- ಅವನೀಶ= ಭೂಕಾಂತನಾದ ಜನಮೇಜಯನೆ , ಕೇಳು=ಲಾಲಿಸು, ಇತ್ತಲು= ಈ ಭಾಗದಲ್ಲಿ. ಉದಯವಾಗದ = ಸೂರ್ಯೋದಯಕ್ಕಿಂತಲೂ , ಮುಂಚೆಯೇ= ಮೊದಲೇ, ಮತ್ತೆ=ತಿರುಗಿ, ಮಾಹಿಷ್ಮತಿಯಪಟ್ಟಣದ= ಮಾಹಿಷ್ಮತಿಯೆಂಬ ನಗರಿಯ, ಕೋಟೆಯಂ= ಕೋಟೆಯನ್ನು, ನರನ=ಫಲ್ಗುಣನ, ಚತುರಂಗಬಲಂ =ಹಸ್ತ್ಯಶ್ವರಥಪದಾತಿಗಳು, ಮುತ್ತಿಕೊಂಡುದು= ಕವಿದುಕೊಂಡಿತು,ಆಜಿಯೊಳು= ರಣದಲ್ಲಿ, ನೀಲಧ್ವಜನ= ನೀಲಧ್ವಜನೆಂಬರಸನ, ವಾಹಿನಿ= ದಂಡು, ಒತ್ತಿ= ಮುಂದೆಮುಂದೆಬಂದು, ಕವಿದುದು= ಸುತ್ತಿಕೊಂಡಿತು, ವೀರರ= ಭಟರು
ಪೊಯ್ದಾಡಲು= ಯುದ್ಧಮಾಡಲು, ಒದಗಿದರು= ಅನುವಾದರು, ಇತ್ತಂಡಂ= ಎರಡು ಕಡೆಯ ಸೈನ್ಯವೂ, ಒಡವೆರಸಿ= ಒಂದಾಗಿ, ಚೂಣಿ= ಸೈನ್ಯದ, ಕಾಳಗದ= ರಣದ, ಭಟರು=ಯೋಧರು, ಪಂಥಪಾಡುಗಳನು= ಜೂಜನ್ನೂ ಮತ್ತು ಸಾಹಸವನ್ನೂ, ಬಿತ್ತಿದರು= ಹೆಚ್ಚುಮಾಡಿದರು, ಅಸಿತಧ್ವಜಂ= ನೇಲಧ್ವಜನೆಂಬರಸು, ಅರ್ಜುನನಮೇಲೆ= ಪಾರ್ಥನೊಂದಿಗೆ, ನಡೆದನು= ಕಾಳಗಕ್ಕೆ ಹೊರಟವನಾದನು.
ತಾತ್ಪರ್ಯ:- ಎಲೈ ಜನಮೇಜಯನೆ! ಈ ಕಡೆಯಲ್ಲಿ ಅರುಣೋದಯವಾಗುವುದಕ್ಕೆ ಮುಂಚಿತವಾಗಿಯೇ ಅರ್ಜುನನ ಸೈನ್ಯವು ನೀಲಧ್ವಜನ ರಾಜಧಾನಿಯಾದ ಮಾಹಿಷ್ಮತೀ ನಗರವನ್ನು ಎಲ್ಲೆಲ್ಲಿಯೂ ಮುತ್ತಿಕೊಂಡಿತು. ನೀಲಧ್ವಜನ ಸೈನ್ಯವೂ
ಕೂಡ ಯುದ್ಧಕ್ಕೆ ಒದಗಿತು. ಉಭಯಪಕ್ಷದವರೂ ಹೋರಾಡಲು ಉದ್ಯುಕ್ತರಾದರು. ಎರಡುಕಡೆಯ ಯೋಧಾಗ್ರೇಸರರೂ ತಮ್ಮ ತಮ್ಮ ಶಕ್ತಿಸಾಹಸಗಳನ್ನು ಹೇಳಿಕೊಳ್ಳುತ್ತಲೂ, ಒಬ್ಬರೊಬ್ಬರನ್ನು ಜರೆಯುತ್ತಲೂ, ಇದ್ದರು. ನೀಲಧ್ವಜನೂ ಯುದ್ಧಕ್ಕೆ
ಬಂದು ಸೇರಿದನು.
ತರಣಿ ತೊಲಗಿದ ಬಳಿಕ ಮಿಂಚುಬುಳುವಿಗೆ ತಮಂ।
ತೆರಳಬಲ್ಲುದೆ ಕೃಶಾನುಜ್ವಾಲೆಗಳುಕದಾ ।
ನರನುಳಿದ ವೀರರಂ ಬಗೆವನೇ ಪಡೆವೆರಸಿ ನೂಕಿದಂ ಕಣೆಗರೆವುತ॥
ಮುರಿದುದುರವಣೆಗವನ ಸೇನೆ ಬಳಿಕಳವಿಗರ್ ।
ತರಹರೆಸಿ ಸುತ ಸಹೋದರ ಮಂತ್ರಿ ಬಾಂಧವರ್।
ದುರದೊಳಾಂತಳಿದರರ್ಜುನನೊಳಾತಂ ಕಾದಿ ನೊಂದು ಮೂರ್ಛಿತನೃದನು॥೧೬॥
ಪ್ರತಿಪದಾರ್ಥ:- ತರಣಿ= ರವಿಯು, ತೊಲಗಿದ ಬಳಿಕ = ಹೊರಟುಹೋದ ಮೇಲೆ, ಮಿಂಚುಬುಳುಬಿಗೆ= ಮಿಂಚುಹುಳಕ್ಕೆ, ತಮಂ= ಅಂಧಕಾರವು, ತೆರಳಬಲ್ಲುದೆ = ಹೊರಟುಹೋಗುತ್ತದೆಯೇ ? ಕೃಶಾನುಜ್ವಾಲೆಗೆ= ಬೆಂಕಿಯ ಹೊಯ್ಲಿಗೆ, ಅಳುಕದ= ಹೆದರದ, ಆ ನರನು= ಆ ಪಾರ್ಥನು,ಉಳಿದ= ಮಿಕ್ಕ, ವೀರರಂ= ಧೀರರನ್ನು, ಬಗೆವನೆ= ಲಕ್ಷ್ಯಮಾಡುವನೆ, ಪಡೆವೆರಸಿ= ಸೇನಾಸಮೇತನಾಗಿ, ಕಣೆಗರೆವುತ= ಬಾಣಪ್ರಯೋಗವಂ ಮಾಡುತ್ತ, ನೂಕಿದಂ= ವೈರಿಗಳ ಬಲವನ್ನು ಹಿಮ್ಮೆ-
ಟ್ಟುವಂತೆ ಮಾಡಿದನು, ಉರವಣಿಗೆ= ಏಟುಗಳಿಗೆ, ಅವನ= ಆ ನೀಲಧ್ವಜನೆಂಬ ರಾಜನ, ಸೇನೆ =ಪಡೆಯು, ಮುರಿದು-
ದು= ಭಂಗಪಟ್ಟಿತು, ಬಳಿಕ=ಅನಂತರ, ಅಳಲಿಗರು= ದುಃಖದಿಂದ ಕೂಡಿದವರು,ತರಹರಿಸಿ= ಹೆದರಿಕೊಂಡು, ಸುತ= ಮಕ್ಕಳು, ಸಹೋದರ = ಅಣ್ಣತಮ್ಮಂದಿರು, ಮಂತ್ರಿ= ಅಮಾತ್ಯರು, ಬಾಂಧವರು= ಬಂಧುವರ್ಗದವರು, ಧುರದೊಳು= ರಣದಲ್ಲಿ, ಆಂತು=ಯುದ್ಧಾಸಕ್ತರಾಗಿ, ಅಳಿದರು=ನಾಶವಾದರು, ಆತಂ= ಆ ನೀಲಧ್ವಜನು, ಅರ್ಜುನನೊಳು= ಪಾರ್ಥನೊಂದಿಗೆ, ಕಾದಿ= ಹೋರಾಡಿ, ನೊಂದು= ಸಂಕಟಪಟ್ಟು, ಮೂರ್ಛಿತನಾದನು= ಮೈಮರೆತು ಬಿದ್ದನು.
ತಾತ್ಪರ್ಯ:- ಪರಸ್ಪರ ಘೋರಯುದ್ಧವು, ನಡೆಯಲಾರಂಭಿಸಿತು. ಸೂರ್ಯನ ಬೆಳಕಿಲ್ಲದಿದ್ದರೆ ಮಿಂಚುಹುಳದಿಂದ ಮಾತ್ರವೇ ಕತ್ತಲೆಯು ತೊಲಗುವುದು ಹೇಗೆ ಅಸಂಭವವೋ, ಅದೇರೇತಿಯಾಗಿಯೇ ಅಗ್ನಿಯ ಸಹಾಯದಿಂದ ತಪ್ಪಿಹೋದ ನೀಲಧ್ವಜನು ಅರ್ಜುನನ ಎದುರಿಗೆ ನಿಲ್ಲಲಾರದೆ ಹೋಗಿ, ಅವನ ಬಾಣಗಳ ಹೊಡೆತವನ್ನು ತಾಳಲಾರದೆ ಮಕ್ಕಳು, ಒಡಹುಟ್ಟಿದವರು, ಬಂಧುವರ್ಗದವರು, ಮಂತ್ರಿಗಳು ಮೊದಲಾದವರನ್ನೆಲ್ಲಾ ಕಳೆದುಕೊಂಡು ಅರ್ಜುನನ ಏಟಿಗೆ ತಡೆಯಲಾರದೆ ತಾನೂ ಮೂರ್ಛಾಕ್ರಾಂತನಾಗಿ ಬಿದ್ದುಹೋದನು.
ಬಳಿಕ ಸಾರಥಿ ಮನೆಗೆ ತಂದನಾ ಭೂಪನಂ।
ಪೊಳಲ ಪೆರ್ಬಾಗಿಲ್ಗಳಿಕ್ಕಿದುವು ಕೋಟೆ ಕೊ।
ತ್ತಳದ ಕಾವಲ್ಗಳಂ ಬಲೆದರಲ್ಲಲ್ಲಿ ಗಜಬಜವಾಯ್ತು ನಗರದೊಳಗೆ॥
ತಿಳಿದುದಾತನ ಮೂರ್ಛೆ ಕಣ್ದೆರೆದು ನೋಡಿ ಕೊಳು।
ಗುಳದ ಪರಿಭವಕೆ ಬೆಂಡಾಗಿ ನಿಜ ತನಯರಳಿ।
ದಳಲಿನಿಂ ಬೈದನಸಿತಧ್ವಜಂ ಜ್ವಾಲೆಯಂ ಪ್ರತಿಕೊಲೆಯಂ ಖತಿಯೊಳು॥೧೭॥
ಪ್ರತಿಪದಾರ್ಥ:- ಬಳಿಕ= ನೀಲಧ್ವಜನು ಸ್ಮರಣೆಯನ್ನು ಕಳೆದುಕೊಂಡ ಮೇಲೆ, ಸಾರಥಿ= ರಥವನ್ನು ನಡೆಯಿಸತಕ್ಕವನು, ಆ ಭೂಪನಂ= ಆ ನೀಲಧ್ವಜನನ್ನು, ಮನೆಗೆ= ಅರಮನೆಗೆ, ತಂದನು= ತೆಗೆದುಕೊಂಡು ಬಂದು ಬಿಟ್ಟನು, ಪೊಳಲ= ನಗರದ, ಪೆರ್ಬಾಗಿಲ್ಗಳು= ದೊಡ್ಡ ಹೆಬ್ಬಾಗಿಲುಗಳೆಲ್ಲಾ, ಇಕ್ಕಿದವು= ಹಾಕಲ್ಪಟ್ಟವು, ಕೋಟೆ= ಆವರಣದ, ಕೊತ್ತಳದ= ಬುರುಜುಗಳ, ಕಾವಲ್ಗಳಂ= ಕಾಯುವಿಕೆಯನ್ನು, ಬಲಿದರು= ಹೆಚ್ಚುಮಾಡಿದರು, ಆ ನಗರದೊಳಗೆ= ಆ ಪುರದಲ್ಲಿ, ಅಲ್ಲಲ್ಲಿ= ಅಲ್ಲಲ್ಲಿಯೇ, ಗಜಬಜಿಸಿತು= ಹಾಹಾಕಾರವಾಯಿತು,ಆತನ= ಆ ರಾಜನ, ಮೂರ್ಛೆ= ಸ್ಮರಣೆತಪ್ಪಿರುವುದು, ತಿಳಿದುದು= ಹೋಗಿ ಜ್ಞಾನವು ಬಂದಿತು. ಕಣ್ದೆರೆದು= ದೃಷ್ಟಿಸಿ, ನೋಡಿ= ಈಕ್ಷಿಸಿ, ಕೊಳುಗುಳದ= ರಣದ, ಪರಿಭವಕೆ = ಅವನತಿಗೆ (ಸೋಲಿಗೆ), ಬೆಂಡಾಗಿ= ನಿಸ್ತೂಕವಾಗಿ, ನಿಜ=ತನ್ನ (ಸ್ವಕೀಯವಾದ) ತನಯರು= ಪುತ್ರರು, ಅಳಿದ= ಸತ್ತುಹೋದ, ಅಳಲಿಂದ= ವ್ಯಸನದಿಂದ, ಅಸಿತಧ್ವಜಂ= ನೀಲಧ್ವಜನು, ಖತಿಯೊಳು= ಸಿಟ್ಟಿನಿಂದ, ಪ್ರತಿಕೂಲೆಯಂ= ತನಗೆ ವ್ಯತಿರಿಕ್ತಳಾಗಿರತಕ್ಕ, ಜ್ವಾಲೆಯಂ= ಹೆಂಡತಿಯಾದ ಸತಿಯನ್ನು, ಬೈದನು= ದೂಷಿಸಿದನು.
ತಾತ್ಪರ್ಯ:- ಕೂಡಲೆ ಸಾರಥಿಯು ನೀಲಧ್ವಜನನ್ನು ಜಾಗ್ರತೆಯಲ್ಲಿ ಅರಮನೆಗೆ ಕರೆತಂದು ಬಿಟ್ಟನು. ರಾಜಧಾನಿಯ ಹೆಬ್ಬಾಗಿಲುಗಳನ್ನೆಲ್ಲಾ ಮುಚ್ಚಿಬಿಟ್ಟು ಕೋಟೆ ಕೊತ್ತಲಗಳಲ್ಲಿ ಕಾವಲನ್ನು ಬಲಪಡಿಸಿದರು. ಊರಲ್ಲೆಲ್ಲಾ ಹಾಹಾಕಾರವು ಬಲವಾಯಿತು. ಅಷ್ಟು ಹೊತ್ತಿಗೆ ನೀಲಧ್ವಜನು ಸ್ಮೃತಿಯನ್ನು ತಂದುಕೊಂಡವನಾಗಿ ಯುದ್ಧದಲ್ಲಿ, ತನಗೆ ಪರಾಜವವಾದುದಕ್ಕೋಸ್ಕರ ಹೆಚ್ಚಾದ ಅವಮಾನದಿಂದ ತಲೆ ತಗ್ಗಿಸಿದವನಾಗಿ ತನ್ನ ಮಕ್ಕಳೆಲ್ಲಾ ಯುದ್ಧದಲ್ಲಿ ಮಡಿದುದಕ್ಕಾಗಿ ಉಂಟಾದ ವ್ಯಸನವನ್ನು ಸಹಿಸಲಾರದೆ, ನೀಚಳಾದ ತನ್ನ ಹೆಂಡತಿಯನ್ನು ದೂಷಿಸಿದನು.
ನಿನ್ನೆ ಪಾರ್ಥನ ಹಯವನಾತಂಗೆ ಬಿಡಲೀಯ।
ದೆನ್ನ ಕೆಡಿಸಿದೆಯಲಾ ಪಾತಕಿಯೆ ಸುತರಳಿದ।
ರಿನ್ನೇನು ಘಾತಕಿಯೆ ಮತ್ಕುಲಕರಿಷ್ಟೆ ನೀನತಿಕಷ್ಟೆ ಪೋಗು ದುಷ್ಟೆ॥
ಎನ್ನರಮನೆಯೊಳಿರದಿರೆಂದಾಗಳಾ ಜ್ವಾಲೆ।
ಯನ್ನೀಲಕೇತು ಧಟ್ಟಿಸಿ ಬೈದು ಬಳಿಕಶ್ವ।
ಮನ್ನರನೆಡೆಗೆ ಕಳುಪಿ ತಾನಾ ಕಿರೀಟಿಯಂ ಕಾಣಲ್ಕೆ ಪೊರಮಟ್ಟನು॥೧೮॥
ಪ್ರತಿಪದಾರ್ಥ:- ನಿನ್ನೆ= ನಿನ್ನೆಯದಿನ, ಪಾರ್ಥನ= ಫಲ್ಗುಣನ, ಹಯವನ್ನು = ಅಶ್ವವನ್ನು, ಆತಂಗೆ= ಆ ಅರ್ಜುನನಿಗೆ, ಬಿಡಲ್= ಬಿಟ್ಟಬಿಡಬೇಕೆಂದಿದ್ದರೆ, ಈಯದೆ= ಕೊಡಲೀಸದೆ, ಎನ್ನ= ನನ್ನನ್ನು, ಕೆಡಿಸಿದೆಯಲಾ = ನಾಶಮಾಡಿಬಿಟ್ಟೆಯಲ್ಲಾ, ಪಾತಕಿಯೆ= ಎಲೆ ಪಾಪಾತ್ಮಳೆ, ಸುತರು= ನಿನ್ನ ಮಕ್ಕಳು, ಅಳಿದರು= ಸತ್ತು ಹೋದರು, ಇನ್ನೇನು= ಇನ್ನು ಯಾವ ತೊಂದರೆಯು ಮಿಕ್ಕಿದೆ ? ಘಾತಕಿಯೆ = ಮಕ್ಕಳೆಲ್ಲಾ ಸತ್ತುಹೋಗಲು ಕಾರಣವಾದವಳೆ ! ಮತ್ಕುಲಕೆ= ನನ್ನ ವಂಶಕ್ಕೆ ಅನಿಷ್ಟೆ= ಕೆಡಕುಮಾಡಿದವಳು, ನೀನು= ನೀನೆ ಅಲ್ಲವೆ ? ಅತಿಕಷ್ಟೆ= ಬಹು ಕಷ್ಟಗಳಿಗೆ ಸಿಕ್ಕಿಸಿರುವಿ, ದುಷ್ಟೆ= ನೀಚಳೆ ! ಪೋಗು= ನಡೆ, ಎನ್ನರಮನೆಯೊಳ್= ನನ್ನ ಮಂದಿರದಲ್ಲಿ, ಇರದಿರು= ಇರಕೂಡದು, ಎಂದು = ಎಂಬತೆರನಾಗಿ, ಆ ಜ್ವಾಲೆಯಂ= ಆ ತನ್ನ ಸತಿಯನ್ನು, ಧಟ್ಟಿಸಿ= ತಿರಸ್ಕರಿಸಿ, ಆಗ= ಆ ಕಾಲದಲ್ಲಿ, ಬೈದು= ದೂಷಿಸಿ, ಅಶ್ವಮಂ= ಹಯವನ್ನು, ನರನೆಡೆಗೆ= ಪಾರ್ಥನ ಹತ್ತಿರಕ್ಕೆ, ಕಳುಪಿ= ಕಳುಹಿಸಿಕೊಟ್ಟು, ತಾನು= ನೀಲಧ್ವಜನು, ಆ ಕಿರೀಟಿಯಂ= ಆ ಅರ್ಜುನನನ್ನು ಕಾಣಲ್ಕೆ= ದರ್ಶನ ತೆಗೆದುಕೊಳ್ಳಲು, ಪೊರಮಟ್ಟನು = ಹೊರಟವನಾದನು.
ತಾತ್ಪರ್ಯ:- ಕೋಪಾವಿಷ್ಟನಾಗಿ ಎಲೆ ದುಷ್ಟಳೇ ! ಅರ್ಜುನನ ಕುದುರೆಯನ್ನು ಅವನಿಗೆ ಕೊಟ್ಟುಬಿಡಬೇಕೆಂದು ನಿನ್ನೆಯ ದಿನ ನಾನು ಯೋಚನೆಮಾಡಿದ್ದರೆ ಅದಕ್ಕೆ ವಿಘ್ನಮಾಡಿದೆಯಾದ್ದರಿಂದ ಈಗ ನನ್ನ ಮಕ್ಕಳೂ ಸತ್ತುಹೋದರು, ನಾನೂ ಸೋತು ಅವಮಾನವನ್ನು ಹೊಂದಿದೆನು. ಆದ್ದರಿಂದ ಇನ್ನು ನೀನು ನನ್ನ ಅರಮನೆಯಲ್ಲಿರಬೇಡ ಎಂದು ತಿರಸ್ಕರಿಸಿ, ಯಜ್ಞಾಶ್ವವನ್ನು ಅರ್ಜುನನಿಗೆ ಕಳುಹಿಸಿಕೊಟ್ಟು ತಾನೂಕೂಡ ಹೊರಡಲನುವಾದನು.
ಕೊಂಡು ಬರಿಸಿದನಖಿಳ ವಸ್ತುಗಳನಮಲ ಮಣಿ।
ಮಂಡನಾಳಿಗಳಂ ವಿವಧ ದುಕೂಲಂಗಳಂ ।
ಹಿಂಡಾಕಳಂ ಮಹಿಷಿಗಳನುತ್ತಮಸ್ತ್ರೀಯರಂ ಗಜ ಹಯಾವಳಿಯನು॥
ಭಂಡಾರದರ್ಥಮಂ ಗುಡ ತೈಲ ಧಾನ್ಯಮಂ।
ಬಂಡಿಗಳಮೇಲೆ ತುಂಬಿಸಿ ಪಾರ್ಥನಂ ಬಂದು।
ಕಂಡನಸಿತಧ್ವಜಂ ಬಳಿಕವನನರ್ಜುನಂ ಪ್ರೀತಿಮಿಗೆ ಮನ್ನಿಸಿದನು॥೧೯॥
ಪ್ರತಿಪದಾರ್ಥ = ಅಸಿತಧ್ವಜಂ= ಮಾಹಿಷ್ಮತೀ ನಗರದ ರಾಜನು, ಅಖಿಳ= ಸಕಲವಾದ, ವಸ್ತುಗಳನು= ಪುರುಳ್ಗಳನ್ನು, ಅಮಲ= ಪರಿಶುದ್ಧವಾದ, ಮಣಿ=ರತ್ನಗಳ, ಮಂಡನಾದಿಗಳಂ= ತೊಡಿಗೆಗಳನ್ನು, ವಿವಿಧ = ನಾನಾಬಗೆಯಾದ, ದುಕೂ-
ಲಂಗಳಂ= ಉಡಿಗೆಗಳನ್ನು, ಹಿಂಡಾಕಳಂ= ಗೋ ಸಮೂಹವನ್ನೂ, ಮಹಿಷಿಗಳನು= ಎಮ್ಮೆಗಳನ್ನೂ, ಉತ್ತಮಸ್ತ್ರೇಯರಂ=
ಶ್ರೇಷ್ಠರಾದ ನಾರಿಯರನ್ನು, ಗಜ= ಆನೆಗಳು, ಹಯಾದಿಗಳನು= ಕುದುರೆಯೇ ಮೊದಲಾದವನ್ನು, ಭಂಡಾರದ= ಖಜಾನೆಯಲ್ಲಿರುವ, ಅರ್ಥಮಂ= ಹಣದರಾಶಿಯನ್ನೂ, ಗುಡ ತೈಲ ಧಾನ್ಯಗಳ= ಬೆಲ್ಲ, ಎಣ್ಣೆ, ಅಕ್ಕಿ, ಬೇಳೆ ಮೊದಲಾದವುಗಳನ್ನು, ಬಂಡಿಗಳಮೇಲೆ= ಗಾಡಿಗಳೊಳಗೆ, ತುಂಬಿಸಿಕೊಂಡು= ಹಾಕಿಸಿಕ್ಕೊಂಡು, ಬರಿಸಿದನು= ಬರುವಂತೆ ಮಾಡಿದನು, ಪಾರ್ಥನಂ= ಫಲ್ಗುಣನನ್ನು, ಕಂಡನು= ದರ್ಶನವಂ ತೆಗೆದುಕೊಂಡನು, ಬಳಿಕ= ಆ ಮೇಲೆ, ಅರ್ಜುನನು= ಪಾರ್ಥನು, ಪ್ರೀತಿಮಿಗೆ = ಪ್ರೇಮವು ಅಧಿಕವಾಗುವಂತೆ, ಮನ್ನಿಸಿದನು= ತಪ್ಪನ್ನು ಕ್ಷಮಿಸಿ ಮರ್ಯದೆಯಿಂದ ನೋಡಿದನು.
ತಾತ್ಪರ್ಯ:- ನಾನಾರತ್ನಾಭರಣಗಳನ್ನೂ, ದಿವ್ಯವಾದ ಉಡಿಗೆಗಳನ್ನೂ, ಅನೇಕ ಹಸುಗಳು, ಎಮ್ಮೆಗಳು, ಉತ್ತಮಾಂಗನೆಯರು, ಹಸ್ತ್ಯಶ್ವಾದಿಗಳು, ದ್ರವ್ಯರಾಶಿಗಳು, ಇವನ್ನೆಲ್ಲಾ ಬಂಡಿಗಳಲ್ಲಿ ತುಂಬಿಸಿಕೊಂಡು ಬಂದು,ಅರ್ಜುನನಿಗೆ ಒಪ್ಪಿಸಲಾಗಿ, ಪಾರ್ಥನು ಆ ನೀಲಧ್ವಜಮಹಿಪನನ್ನು ಮರ್ಯಾದೆಯಿನದ ಸತ್ಕರಿಸಿದನು.
ವಾಜಿ ನಡೆದುದು ಬಳಿಕ ತೆಂಕಮೊಗಮಾಗಿ ಸೇ।
ನಾ ಜಲಧಿಸಹಿತ ನೀಲಧ್ವಜಂ ಪೊರಮಟ್ಟ ।
ನಾ ಜನಪನಂ ಕೂಡಿಕೊಂಡು ಮುಂದಕೆ ಸವ್ಯಸಾಚಿ ತೆರಳಿದನಿತ್ತಲು॥
ತೇಜಮಿಲ್ಲದೆ ಮನೆಯೊಳಿಂ ಪೆಣ್ಣೊಡಲ್ವೆಳಸು।
ವೀ ಜೀವಮೇತಕೆನಗೆನುತೆ ನಿಜ ವಲ್ಲಭನ ।
ರಾಜ ಗೃಹಮಂ ಬಿಟ್ಟು ಪೋದಳಾ ಜ್ವಾಲೆಯುನ್ಮುಖನೆಂಬ ತಮ್ಮನೆಡೆಗೆ॥೨೦॥
ಪ್ರತಿಪದಾರ್ಥ:- ಬಳಿಕ = ಅನಂತರ, ವಾಜಿ= ಹಯವು, ತೆಂಕಮುಖನಾಗಿ= ದಕ್ಷಿಣ ದಿಕ್ಕನ್ನು ಹಿಡಿದು, ನಡೆದುದು= ಮುಂದರಿಯಿತು, ಸೇನಾ= ಪರಿವಾರವೆನ್ನುವ, ಜಲಧಿಸಹಿತ= ಕಡಲಿನ ಸಮೇತವಾಗಿ, ನೀಲಧ್ವಜನ =ನೀಲಧ್ವಜನೆಂಬ-
ರಸು, ಪೊರಮಟ್ಟನು= ಹೊರಟನು, ಆ ಜನಪನಂ= ಆ ದೊರೆಯನ್ನು, ಕೂಡಿಕೊಂಡು= ಜೊತೆಮಾಡಿಕೊಂಡು, ಸವ್ಯಸಾಚಿ = ಪಾರ್ಥನು, ಮುಂದಕೆ= ಮುಂದುಮುಂದಕ್ಕೆ, ತೆರಳಿದನು= ನಡೆದನು, ಇತ್ತಲು= ಈ ಭಾಗದಲ್ಲಿ, ಮನೆಯೊಳುಂ= ಮಂದಿರದಲ್ಲಿ, ಪೆಣ್ಣೊಡಲ್= ಸ್ರ್ರೀಶರೀರವನ್ನು, ಬೆಳಸುವ= ಕಾಪಾಡತಕ್ಕ, ಈ ಜೀವಂ= ಈ ಹರಣವು, ಎನಗೆ= ನನಿಗೆ, ಏತಕೆ=ಏನುಪ್ರಯೋಜನ ? ಎನುತ= ಎಂದು ನುಡಿಯುತ್ತ, ನಿಜವಲ್ಲಭನ= ತನ್ನ ಪತಿಯ, ರಾಜಗೃಹಮಂ= ರಾಜಭವನ-
ವನ್ನು, ಬಿಟ್ಟು = ಬಿಟ್ಟವಳಾಗಿ, ಆ ಜ್ವಲೆಯು= ಆ ಜ್ವಾಲೆಯೆಂಬ ನೀಲಧ್ವಜನ ರಾಣಿಯು, ಉನ್ಮುಖನೆಂಬ= ಉನ್ಮುಖನೆಂಬ ಹೆಸರುಳ್ಳ, ತಮ್ಮನ= ಒಡಹೈಟ್ಟಿದವನ, ಎಡೆಗೆ= ಹತ್ತಿರಕ್ಕೆ, ಪೋದಳು= ಹೊರಟು ಹೋದಳು.
ಅ॥ವಿ॥ ಸೇನಾಜಲಧಿಸಹಿತ= ಜಲ-ನೀರನ್ನು, ಧಿ-ಧರಿಸಿರುವುದು, (ಕೃ. ವೃ. ಸಮುದ್ರ) ಸೇನೆ ಎಂಬ ಜಲಧಿ, (ಸಂ. ಪೂ.)
ಸೇನಾಜಲಧಿಯಿಂದ ಸಹಿತ( ತೃ. ತ. ) ಜನಪನಂ= ಜನ-ಜನರನ್ನು, ಪ- ಕಾಪಾಡುವವನು (ಕೃ. ವೃ. )
ತಾತ್ಪರ್ಯ:-ಬಳಿಕ ಅರ್ಜುನನು ಕುದುರೆಯನ್ನು ದಕ್ಷಿಣದಿಕ್ಕಿಗೆ ಬಿಟ್ಟುಕೊಂಡು ಸೇನಾಸಮೇತನಾಗಿ ಮುಂದೆಮುಂದೆ ನಡೆಯಲು, ನೀಲಧ್ವಜನೂ ತನ್ನ ಚತುರಂಗಬಲದಿಂದ ಕೂಡಿ ಪಾರ್ಥನನ್ನೇ ಹಿಂಬಾಲಿಸಿ ಹೊರಟನು. ಇತ್ತ ನೀಲಧ್ವಜನ ಅರಮನೆಯಲ್ಲಾದರೊ ಜ್ವಾಲೃದೇವಿಯು ಕಾಂತಿವಿಹೀನವಾದ ಈ ಮನೆಯಲ್ಲಿ ತಾನಿದ್ದು ಪ್ರಯೋಜನವೇನು ? ಇನ್ನು ನಾನು ಏತಕ್ಕೆ ಬದುಕಬೇಕೆಂದುಕೊಂಡು ರಾಜಗೃಹವನ್ನು ಬಿಟ್ಟು ತನ್ನ ತಮ್ಮನಾದ ಉನ್ಮುಖನಿರುವ ಸ್ಥಳಕ್ಕೆ ಹೊರಟಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ