ಜೈಮಿನಿ ಭಾರತ 12 - ದೊಡ್ಡಬೆಲೆ ನಾರಾಯಣಶಾಸ್ತ್ರಿ
ಸೂಚನೆ:- ಅಪರಿಮಿತ ಸೈನ್ಯಸನ್ನಾಹದಿಂದರ್ಜುನನ।
ಚಪಲಹಯಮಂ ಮರಾಳಧ್ವಜಂ ಪಿಡಿಯಲ್ಕೆ।
ತಪನಸುತನಂದನ ಸುಧನ್ವರ್ಗೆ ಕಾಳಗಂ ಪೂಣ್ದುದಾಡಂಬರದೊಳು॥
ಪ್ರತಿಪದಾರ್ಥ :- ಅಪರಿಮಿತ = ಬಹು ಹೆಚ್ಚಾದ, ಸೈನ್ಯ=ಸೈನ್ಯದ, ಸನ್ನಾಹದಿಂದ=ಕಾರ್ಯದಿಂದ, ಮರಾಳಧ್ವಜಂ = ಚಂಪಕಾವತಿಯ ರಾಜನಾದ ಹಂಸಧ್ವಜನು, ಅರ್ಜುನನ = ಪಾರ್ಥನ, ಚಪಲ= ಚಂಚಲವಾದ, ಹಯಮಂ=ಅಶ್ವವನ್ನು, ಪಿಡಿಯಲ್ಕೆ= ಹಿಡಿದು ಕಟ್ಟಲು, ತಪನಸುತನಂದನ= ವೃಷಧ್ವಜ, ಸುಧನ್ವರ್ಗೆ= ಹಂಸಧ್ವಜನ ಮಗನಾದ ಸುಧನ್ವ ಇವರಿಗೆ, ಆಡಂಬರದೊಳು= ಅಟ್ಟಹಾಸದಿಂದ, ಕಾಳಗಂ= ಯುದ್ಧವು, ಪೂಣ್ದುದು= ಉಪಕ್ರಮವಾಯಿತು.
ಅ॥ವಿ॥ ಮರಾಳ= ಹಂಸಪಕ್ಷಿಯ, ಧ್ವಜಂ= ಕೇತುವಿನಲ್ಲುಳ್ಳವನು, ಮರಾಳಧ್ವಜನು (ಬ.ಸ.) ತಪನನ+ಸುತ= ತಪನ ಸುತ,
(ಷ.ತ.) ಪರಿಮಿತಿ ಇಲ್ಲದ್ದು- ಅಪರಿಮಿತ.
ಇನ್ನು ಮೇಲಣ ಕಥೆಯನಾಲಿಸೆಲೆ ಭರತಕುಲ।
ರನ್ನ ಜನಮೇಜಯ ಸುಧನ್ವನ ಕಟಾಹದುರಿ।
ಯಂ ನಾರಸಿಂಹ ಜಪದಿಂ ಜಯಿಸೆ ಲಿಖಿತನೆಸಗಿದ ವೈಷ್ಣವದ್ರೋಹಕೆ॥
ತನ್ನರಿವನುರೆ ಜರೆದುಕೊಂಡಸುದೊರೆವೆನೆಂದು।
ನನ್ನಿಯಿಂದಾ ತೈಲದೊಳ್ ಬೀಳಲವರ್ಗಳಂ।
ಮನ್ನಿಸಿ ನೃಪಂ ತೆಗೆಸಲಾ ಪುರೋಹಿತನವನಿಪತಿಗೆ ಬಳಿಕಿಂತೆಂದನು॥೧॥
ಪ್ರತಿಪದಾರ್ಥ :- ಭರತ= ಭರತಮಹಾರಾಯನ, ಕುಲ=ವಂಶದಲ್ಲಿ, ರನ್ನ= ರತ್ನಪ್ರಾಯನಾದ, ಜನಮೇಜಯ = ಜನಮೇಜಯನೇ! ಇನ್ನು ಮೇಲಣ= ಇಲ್ಲಿಂದ ಮುಂದೆ ಹೇಳುವ, ಕಥೆಯನು= ನಡವಳಿಕೆಯನ್ನು, ಆಲಿಸು= ಕೇಳುವನಾಗು, ಕಟಾಹದ= ಕಾದ ಎಣ್ಣೆಯ ಕೊಪ್ಪರಿಗೆಯ, ಉರಿಯಂ= ಸುಡುವಿಕೆಯನ್ನು,ನಾರಸಿಂಹಜಪದಿಂ= ನೃಸಿಂಹ ಮಂತ್ರೋಚ್ಛಾರಣೆಯಿಂದ, ಜಯಿಸಿ= ಗೆಲುವನ್ನು ಹೊಂದಿ, ಲಿಖಿತನು= ಲಿಖಿತಮುನಿಯು, ಎಸಗಿದ= ಗೈದ, ವೈಷ್ಣವದ್ರೋಹಕೆ= ವಿಷ್ಣುಭಕ್ತಗೆ ಮಾಡಿದ ಪಾಪಕ್ಕೆ, ತನ್ನ ಅರಿವನು= ತನ್ನಯ ತಿಳಿವಳಿಕೆಯನ್ನು,ಉರೆ= ಬಹುವಾಗಿ, ಜರದುಕೊಂಡು= ದೂಷಿಸಿಕೊಂಡು, ಅಸುದೊರೆವೆನೆಂದು= ಪ್ರಾಣತ್ಯಾಗಮಾಡುತ್ತೇನೆಂಬುದಾಗಿ, ನನ್ನಿಯಿಂ= ನಿಜದಿಂದ, ಆ ತೈಲದೊಳ್= ಆ ಕಾದ ಎಣ್ಣೆಯಲ್ಲಿ, ಬೀಳಲು= ಬೀಳಲಾಗಿ, ಹಂಸಧ್ವಜಂ= ಹಂಸಕೇತುವು, ಅವರ್ಗಳಂ= ಸುಧನ್ವ ಲಿಖಿತರೀರ್ವರನ್ನು, ಮನ್ನಿಸಿ= ಮರ್ಯಾದೆಮಾಡಿ, ತೆಗೆಸಲು= ಕೊಪ್ಪರಿಗೆಯಿಂದೀಚೆಗೆ ತೆಗೆಯಿಸಲಾಗಿ, ಆ ಪುರೋಹಿತನು= ಪುರೋಹಿತನಾದ ಲಿಖಿತನು, ಅವನಿಪತಿಗೆ= ಭೂಪತಿಗೆ, ಬಳಿಕ = ತರುವಾಯ, ಇಂತೆಂದನು= ಮುಂದಿನಂತೆ ಹೇಳಿದನು.
ಅ॥ವಿ॥ ಭರತ= ರಾಮನನುಜ, ದುಷ್ಯಂತರಾಯನ ಮಗ, ರನ್ನ (ತ್ಭ) ರತ್ನ ( ತ್ಸ) ನೃ= ಮನುಷ್ಯರನ್ನು, ಪ=ಪಾಲಿಸತಕ್ಕವನು-
ರಾಜ. ಪುರ= ಪಟ್ಟಣಿಗರಿಗೆ, ಹಿತ= ಮೇಲು ಕೋರುವವನು.
ತಾತ್ಪರ್ಯ:- ಎಲೈ ಜನಮೇಜಯ ಕ್ಷಿತೀಶನೆ! ಇನ್ನು ಮುಂದೆ ನಡೆದ ವರ್ತಮಾನವನ್ನು ವಿವರಿಪೆನು ಕೇಳು. ಆ ಸುಧನ್ವನು ಮರಳಿದ ತೈಲದ ಜ್ವಾಲೆಯ ತಾಪವಂ ನೃಸಿಂಹ ಮಂತ್ರ್ರೋಚ್ಛಾರಣೆಯ ದೆಸೆಯಿಂದ ಪರಿಹರಿಸಿಕೊಂಡು, ಯಾವ ತೊಂದರೆಯೂ ಇಲ್ಲದೆ ಸುಖಿಯಾಗಿರುತಿರಲು, ಅನಂತರದಲ್ಲಿ ಲಿಖಿತನು, ತಾನು ವಿಷ್ಣುಭಕ್ತನಾದ ಸುಧನ್ವನಿಗೆ ಮಾಡಿದ ದ್ರೋಹಕ್ಕಾಗಿ, ತಾನೂ ಕಾದೆಣ್ಣೆಯ ಕೊಪ್ಪರಿಗೆಯೊಳ್ಬೀಳಲಾಗಿ, ಅವರೀರ್ವರೂ ಯಾವ ತೊಂದರೆಯೂ, ಇಲ್ಲದೆ, ಸುಖವಾಗಿರುವದನ್ನು ಹಂಸಧ್ವಜನು ಕಂಡು, ಅವರನ್ನು ಕೊಪ್ಪರಿಗೆಯಿಂದ ತೆಗೆಯಿಸಿ ಸತ್ಕರಿಸಿದನು. ತರುವಾಯ ಲಿಖಿತನು ಹಂಸಧ್ವಜನಿಗೆ ಹೇಳಿದ್ದೇನೆಂದರೆ.
ಭೂನಾಥ ಕೇಳ್ನಿನ್ನ ಸುತನ ದೆಸೆಯಿಂದೆ ನ।
ಮ್ಮೀನೆಲಂ ಪ್ರಜೆ ನಾಡು ಬೇಡೂರು ಪರಿವಾರ।
ಮಾನೆ ಕುದುರೆಗಳಿರ್ದ್ದ ಪಶು ಪಕ್ಷಿ ಮೃಗ ಕೀಟ ತರು ಗುಲ್ಮ ಲತೆಗಳೆಲ್ಲ॥
ಈ ನಿರುದ್ಧಕೆ ದನ್ಯವಾದುವೇಂ ಕೃತಿಯೊ ನೀಂ।
ಭಾನುರಶ್ಮಿಗೆ ಕಂದೆರೆಯದ ಗೂಗೆಯವೊಲ।
ಜ್ಞಾನಿ ದ್ವಿಜಾಧಮಂ ತಾನಾದೆನೀ ದ್ರೋಹಕೆಂದು ಲಿಖಿತಂ ನುಡಿದನು॥೨॥
ಪ್ರತಿಪದಾರ್ಥ :- ಭೂನಾಥ= ಎಲೈ ಜನಮೇಜಯರಾಯನೆ! ಕೇಳು=ಆಲಿಸು, ನಿನ್ನ ಸುತನ ದೆಸೆಯಿಂ= ನಿನ್ನಯ ಪುತ್ರನಾದ ಸುಧನ್ವನ ಸಹವೃಸದಿಂದ, ನಮ್ಮ ಈ ನೆಲಂ= ನಮ್ಮೀ ಪೃಥ್ವಿಯು, ಪ್ರಜೆ= ಜನವು, ನಾಡು=ರಾಜ್ಯವು, ಬೀಡು= ಬೀಡು ಜನರು(ಅನಾಥರು,) ಪರಿವಾರಂ= ರಾಜಕಾರ್ಯೋಪಯೋಗ್ಯರು, ಆನೆಕುದುರೆಗಳು= ಗಜಾಶ್ವಗಳು, ಇದ್ದ= ಇರುವ, ಪಶು= ಗೋವುಗಳು, ಪಕ್ಷಿ= ಹಕ್ಕಿಗಳು, ಮೃಗ=ಜಿಂಕೆ ಮೊದಲಾದವು, ಕೀಟ= ಹುಳುವಿನಂತಹ ಪ್ರಾಣಿಗಳು, ತರು= ವೃಕ್ಷಾದಿಗಳು, ಗೈಲ್ಮ= ಹೊದರುಗಳು, ಲತೆಗಳು= ಬಳ್ಳಿ ಮೊದಲಾದವು, ಎಲ್ಲಾ= ಸಮಸ್ತವೂ, ಈ ನಿರುದ್ಧಕೆ= ಇಂದಿನ ದಿವಸಕ್ಕೆ, ಧನ್ಯರು=ಪಾಪರಹಿತರು, (ಕೃತಾರ್ಥರು) ಆದರು= ಆಗಿರುವರು. ಏಂಕೃತರೋ= ಎಷ್ಟು ಪುಣ್ಯಮಾಡಿದವರೊ, ತಾಂ=ನಾನಾದರೊ, ಭಾನುರಶ್ಮಿಗೆ = ಸೂರ್ಯನ ಕಾಂತಿಗೆ, ಕಂದೆರೆಯದ= ಕಣ್ಬಿಡದಿರುವ, ಗೂಗೆಯವೋಲ್= ಉಲೂಕದಹಾಗೆ, ಅಜ್ಞಾನಿ= ದಡ್ಡನು, ದ್ವಿಜಾಧಮಂ= ಬ್ರಾಹ್ಮಣರಲ್ಲಿ ನೀಚನು, ತಾನು=ನಾನು, ಈ ದ್ರೋಹಕೆ= ವಂಚನೆಗೆ, ಆದೆನು= ಗುರಿಯಾದೆನು,ಎಂದು= ಎಂಬುದಾಗಿ, ಲಿಖಿತನು ನುಡಿದನು= ಲಿಖಿತ ಮುನಿಯು ಹೇಳಿದನು.
ಅ॥ವಿ॥ ಗೂಗೆ(ತ್ಭ) ಘೂಕ( ತ್ಸ) , ಪಶು ಪಕ್ಷಿ….ಲತೆಗಳು,( ಬ. ದ್ವ) , ಇದು + ದ್ರೋಹ= ಈ ದ್ರೋಹ, (ಗ.ಸ.) ಭಾಃ= ಕಾಂತಿ, ಅದುಳ್ಳವನು, ಭಾನು-( ದ್ವಿಜರಲ್ಲಿ +ಅಧಮನು= ದ್ವಿಜಾಧಮ (ಷ. ತ.)
ತಾತ್ಪರ್ಯ:-ಎಲೈ ರಾಜನೇ ಕೇಳು, ನಿನ್ನ ಮಗನ ಸತ್ಸಹವಾಸದಿಂದ ನಮ್ಮೀ ರಾಜ್ಯ, ಪ್ರಜೆ, ಪರಿವಾರ,ಗಜ, ತುರಗ, ರಥಪದಾತಿಗಳು, ಪಶುಪಕ್ಷಿ ಮೃಗಾದಿಗಳು, ಸಮಸ್ತವೂ ಕೃತಾರ್ಥವೃದವು. ನಾನಾದರೊ ಸೂರ್ಯಕಾಂತಿಗೆ ಕಣ್ಣು ಬಿಡದ ಗೂಬೆಯಂತೆ ವಿವೇಕಶೂನ್ಯನೂ, ವಿಪ್ರಾಧಮನೂ, ಆಗಿರುವೆನೆಂದು ಚಿಂತಿಸುತ್ತಿರಲು.
ಬಳಿಕಾತನಂ ಸುಮ್ಮನಿರಿಸಿ ನುಡಿದಂ ಶಂಖ।
ನೆಲೆ ಮಹೀಪಾಲ ಹರಿಶರಣರ್ಗೆಡರ್ಗಳೆ।
ತ್ತೊಳವು ಬೆಳುದಿಂಗಳ್ಗೆ ಬೆಮರುಂಟೆ ಬೇಸಗೆಯೊಳಿವನ ನಿಜಮಂ ಕಾಣದೆ॥
ಬಳಸಿದೆವು ಮೂರ್ಖತೆಯನರಿದು ಮರುಳಾದೆವಿ।
ನ್ನುಳಿದ ಮಾತುಗಳೇಕೆ ಸಾಕೀ ಸುಧನ್ವನಂ ।
ಕಳುಹು ಕಾಳಗಕೆನಲ್ ಭೂಪನವನಂ ತೆಗೆದು ಬಿಗಿಯಪ್ಪಿದಂ ಮುದದೊಳು॥೩॥
ಪ್ರತಿಪದಾರ್ಥ :- ಬಳಿಕ=ಅನಂತರದಲ್ಲಿ, ಆತನ= ಆ ಲಿಖಿತಮುನಿಯನ್ನು, ಸುಮ್ಮನೆ ಇರಿಸಿ=ಮಾತನಾಡದಂತೆ ಹೇಳಿ,
( ಸಮಾಧಾನಮಾಡಿ) ಶಂಖನು=ಶಂಖನೆಂಬ ಋಷಿಯು) ನುಡಿದಂ= ಹೇಳಿದನು, ಎಲೆ ಮಹೀಪಾಲ=ಎಲೈ ಭೂಮಿಪಾಲನೆ
ಹರಿಶರಣರ್ಗೆ= ವಿಷ್ಣು ಸೇವಕರಿಗೆ, ಎಡರ್ಗಳು= ವಿಘ್ನಗಳು, ಎತ್ತಣದು= ಎಲ್ಲಿಂದ ಬಂದೀತು, (ಬರುವುದಿಲ್ಲ) ಬೇಸಿಗೆಯೊಳು= ಬಿಸಿಲುಕಾಲದಲ್ಲಿ, ಬೆಳದಿಂಗಳಿಗೆ=ಚಂದ್ರಿಕೆಗೆ, ಬೆಮರು= ಸ್ವೇದವು ಉಂಟಾದೀತೆ, (ಯಾವಾಗ್ಗೂ ಬೆಳದಿಂಗಳಿಗೆ= ಬೆವರು ಹೇಗೆ ಉಂಟಾಗುವುದಿಲ್ಲವೋ, ಹಾಗೆಯೇ ವಿಷ್ಣುಭಕ್ತರಿಗೆ ವಿಪತ್ತುಗಳುಂಟಾಗುವುದಿಲ್ಲವೆಂಬ ಭಾವ)ಅವನ= ಆ ಸುಧನ್ವನ ನಿಜಮಂ=ವಿಷ್ಣುವಿನಲ್ಲಿರುವ ನಿಶ್ಚಲವಾದ ನಂಬಿಕೆಯನ್ನು, ಕಾಣದೆ= ನೋಡದೆ, ಮೂರ್ಖತೆಯನು=ಹಠವನ್ನು, ಬಳಸಿದೆವು= ಆಚರಿಸಿದೆವು, ಅರಿ = ( ಈ ವಿಷಯವನ್ನು)ತಿಳಿ,ಮರುಳರು =ಬುದ್ಧಿ-
ಯಿಲ್ಲದವರು, ಆದೆವು=ಆಗಿರುವೆವು, ಇನ್ನು ಉಳಿದ ಮಾತುಗಳು ಏಕೆ= ಇನ್ನು ಮಿಕ್ಕ ವಿಷಯವನ್ನೇಕೆ ಹೇಳಬೇಕು, ಸಾಕು= ಬಿಡು, ಈ ಸುಧನ್ವನಂ= ಈ ಸುಧನ್ವನನ್ನು ,ಕಾಳಗಕೆ= ಯುದೂಧಮಾಡಲಿಕ್ಕೆ, ಕಳುಹು= ಕಳುಹಿಸೆಚೊಡು, ಎನಲು= ಎಂದು ಹೇಳಲು, ಭೂಪನು= ರಾಜನು, ಅವನಂ= ಆ ಶಂಖಮಹರ್ಷಿಯನ್ನು, ತೆಗೆದು= ಹಿಡಿದು, ಮೈದದೊಳು= ಆನಂದದಿಂದ, ಬಿಗಿಯಪ್ಪಿದಂ= ತಬ್ಬಿಕೊಂಡನು.
ಅ॥ವೆ॥ (ಶಂಖ= ಸಮೈದ್ದಶಂಖ, ಶಂಖಚೂಡ, ಶಂಖಋಷಿ) ಬೇಸಿಗೆ(ತ್ಭ) ವೈಶಾಖ ( ತ್ಸ) ,ಅರಿ=ತಿಳಿ, ಶತ್ರು, ಹರಿ= ವಿಷ್ಣು, ಸೂರ್ಯ, ಕುದುರೆ, ಸಿಂಹ, ಕೋತಿ, ನರಿ, ಕಪ್ಪೆ, ಬಿಳಿದು+ತಿಂಗಳು=ಬೆಳದಿಂಗಳು(ವೆ. ಪೂ. ಕ.) ಮೂರ್ಖನ ಭಾವ= ಮೂರ್ಖತನ, ಮೂರ್ಖತೆ.
ತಾತ್ಪರ್ಯ:- ಶಂಖಮಹರ್ಷಿಯು ಆ ಲಿಖಿತನಂ ಸಂತವಿಟ್ಟು, ಎಲೈ ಹಂಸಕೇತುವೇ! ಹರಿಶರಣರಿಗೆಲ್ಲಿಯಾದರೂ ಕಷ್ಟಗಳುಂಟೆ! ಬೆಳದಿಂಗಳಿಗೆಲ್ಲಿಯಾದರು ಬೆಮರಿರ್ಪುದೆ? ನೃವು ಹರಿಭಕ್ತನ ಸತ್ಯಮಂ ಅರಿಯದೆ ಹಠವಿಡಿದು ಹುಚ್ಚರಾದೆವು. ಮತ್ತೆ ಯಾವದನ್ನೂ ಯೋಚಿಸದೆ ಸುಧನ್ವನಿಗೆ ಆಜ್ಞೆಯನ್ನಿತ್ತು ಕಾಳಗಕೆ ಕಳುಹಿಸುವನಾಗೆಂದುಹೇಳಲಾಗಿ ಹರ್ಷದಿಂದ ಹಂಸಧ್ವಜನು ಶಂಖನನ್ನು ಆಲಿಂಗಿಸಿಕೊಂಡು ತನ್ನ ಮಗನಾದ ಸುಧನ್ವನನ್ನು ಯುದ್ಧಕ್ಕೆ ಹೋಗುವಂತೆ ಅನುಜ್ಞೆಯಂ ಮಾಡಲು.
ತಂದೆಯ ಚರಣಕೆರಗಿ ಶಂಖಲಿಖಿತರ ಪದಕೆ।
ವಂದಿಸಿ ಪರಕೆಗೊಂಡು ಸಾರಥಿಯನಾದರಿಸಿ।
ಪೊಂದೇರನಳವಡಿಸಿ ತುರಗಂಗಳಂ ಪೂಡಿ ಸಿಂಧಮಂ ನಿಡಿದುಮಾಡಿ॥
ಗೊಂದಣದ ಝಲ್ಲಿಗಳ ಕನಕಮಾಲೆಗಳ ಸ್ರ।
ಕ್ಚಂದನ ವಿಭೂಷಣಾವಳಿಗಳಂ ಸಿಂಗರಿಸಿ।
ಬಂದಡರ್ದಂ ಜಯರವದೊಳಾ ಸುಧನ್ವಂ ತಿರಸ್ಕೃತಕುಸುಮಧನ್ವನು॥೪॥
ಪ್ರತಿಪದಾರ್ಥ :- ತಂದೆಯ= ಜನಕನಾದ ಹಂಸಧ್ವಜನ, ಚರಣಕೆ= ಅಡಿಗಳಿಗೆ, ಎರಗಿ= ನಮಸ್ಕಾರ ಮಾಡಿ, ಶಂಖಲಿಖಿತರ = ಶಂಖ ಮತ್ತು ಲಿಖಿತ ಈ ಇಬ್ಬರ, ಪದಕೆ= ಕಾಲುಗಳಿಗೆ, ನಮಸ್ಕರಿಸಿ= ಅಡ್ಡಬಿದ್ದು, ಪರಕೆಗೊಂಡು = ಮಂಗಳಾಶೀರ್ವಾ-
ದಂ ಪೊಂದಿ, ಸಾರಥಿಯನು= ರಥ ಓಡಿಸುವವನನ್ನು, ಆದರಿಸಿ= ಪ್ರೀತಿಸಿ,ಪೊಂದೇರನು= ಚಿನ್ನದ ರಥವನ್ನು, ಅಳವಡಿಸಿ = ಸಿದ್ಧಪಡಿಸಿಕೊಂಡು, ತುರಂಗಗಳಂ= ಕುದುರೆಗಳನ್ನು,ಪೂಡಿ=ಕಟ್ಟಿ, ಸಿಂಧಮಂ= ಛತ್ರದಿಂದ ಕೂಡಿದ ಕೇತನವನ್ನು, ನೀಡುಮಾಡಿ= ಮೇಲಕ್ಕೆ ಎತ್ತಿಸಿ, ಗೊಂದಣದ= ಅಟ್ಟಲೆಗಳ ಗುಂಪಿನ, ಝಲ್ಲಿಗಳ = ಝಾಲರಿಗಳ, ಕನಕ=ಚಿನ್ನದ, ಮಾಲೆಗಳ = ಹಾರಗಳ, ಸ್ರಕ್= ಪೂಸರಗಳಿಂದ, ಚಂದನ= ಶ್ರೀಗಂಧದಿಂದ, ವಿಭೂಷಣ= ಆಭರಣಗಳ, ಅವಳಿಗಳಿಂ= ಸಮೂಹಗಳಿಂದ, ಸಿಂಗರಿಸಿ= ಶೃಂಗಾರ ಮಾಡಿಕೊಂಡು, ತಿರಸ್ಕೃತ= ಹೀಯಾಳಿಸಲ್ಪಟ್ಟ, ಕುಸುಮಧನ್ವನ= ಪೂವಿಲ್ಲನಾದ
ಮದನನುಳ್ಳವನಾದ, ಸುಧನ್ವನೆಂಬವನು, ಜಯರವದೊಳು= ಜಯಶಬ್ಧದಿಂದ,ಬಂದು= ಬಂದು, ಅಡರ್ದ= ತೇರನ್ನು ಹತ್ತಿದನು.
ಅ॥ವಿ॥ ಕುಸುಮವೇ ಬಿಲ್ಲಾಗುಳ್ಳವನು, ಕುಸುಮಧ್ವಜನು, ( ಬ. ಸ.) ಪೊನ್ನಿನ +ತೇರ್=ಪೊಂದೇರ್ ( ಷ. ತ. ) ಶಂಖನೂ + ಲಿಖಿಯನೂ= ಇವರು ಶಂಖ ಲಿಖಿತರು,( ದ್ವಿ. ದ್ವಂದ್ವ. ಸ. ) ಸಿಂಗರ(ತ್ಭ) ಶೃಂಗಾರ(ತ್ಸ)
ತಾತ್ಪರ್ಯ:- ಆಗ ಸುಧನ್ವನು ತಂದೆಯಡಿದಾವರೆಗೆರಗಿ, ತಮ್ಮ ಕುಲ ಪುರೋಹಿತರಾದ ಶಂಖ ಲಿಖಿತರಪಾದಾರವಿಂದಗಳಿಗೆ ನಮಸ್ಕರಿಸಿ, ಅವರಿಂದ ಮಂಗಳಾಶೀರ್ವಾದಂ ಪೊಂದಿ, ತನ್ನ ಸಾರಥಿಯನ್ನು ಆದರಿಸಿ,ದಿ ದಿವ್ಯಗಳಾದ ರತ್ನಖಚಿತಗಳಾದ ,ಆಭರಣಗಳಿಂದಲಂಕರಿಸಿಕೊಂಡು, ಪರಿಮಳಯುಕ್ತವಾದಶ್ರೀಗಂಧವಂ ಲೇಪನಮಾಡಿಕೊಂಡು, ಸುಗಂಧದಿಂ ಯುಕ್ತಮಾದ ಪುಷ್ಪಮಾಲಿಕೆಗಳಂ ಧರಿಸಿಕೊಂಡು, ಸುವರ್ಣಮಯವಾದ ರಥವನ್ನು ತ್ತಿ ತಿರಸ್ಕೃತ ಮದನನೋಪಾದಿಯಲ್ಲಿ ಅರ್ಜುನನ ಮೇಲೆ ಯುದ್ಧಕ್ಕೆ ಹೊರಟನು.
ಕೇಳ್ಗುಣಮಣಿಯೆ ಧರಣಿಪಾಗ್ರಣಿಯೆ ತನ್ನ ಮಗ।
ನೇಳ್ಗೆಯಂ ಕಂಡುಬ್ಬಿದಂ ಮರಾಳಧ್ವಜಂ।
ಸೂಳ್ಗೈದುವಾಗ ತಂಬಟೆ ಭೇರಿ ನಿಸ್ಸಾಳ ಕಹಳಾದಿ ವಾದ್ಯಂಗಳು॥
ತೋಳ್ಗುಟ್ಟುತಾರ್ದು ಸುಮ್ಮಾನದಿಂ ಪಟುಭಟರ್।
ಕೇಳ್ಗೊಂಡು ಕುದಿಯುತಿರ್ದರು ಸಾರ್ಧಯೋಜನದೊ।
ಳಾಳ್ಗಜ ತುರಂಗ ರಥವಿಟ್ಟಣಿಸಿ ನಡೆದುದುತ್ಸಾಹದಿಂ ನರನ ಮೇಲೆ॥೫॥
ಪ್ರತಿಪದಾರ್ಥ :- ಗುಣಮಣಿಯೆ= ಸದ್ಗುಣಕ್ಕೆ ರತ್ನಪ್ರಾಯನಾದ, ಧರಣಿಪಾಗ್ರಣಿಯೆ = ರಾಜಾಗ್ರಗಣ್ಯನಾದ, ಎಲೈ ಜನಮೇಜಯನೇ! ತನ್ನ=ತನ್ನಯ, ಮಗನ= ಪುತ್ರನಾದ ಸುಧನ್ವನ, ಏಳ್ಗೆಯಂ= ಅಭಿವೃದ್ಧಿಯನ್ನು, ಕಂಡು=ಈಕ್ಷಿಸಿ, ಮರಾಳಧ್ವಜಂ= ಹಂಸಪಕ್ಷಿಯೆ ಧ್ವಜದಲ್ಲಿ ಉಳ್ಳ ಹಂಸಧ್ವಜನು, ಉಬ್ಬಿದಂ= ಸಂತೋಷದಿಂದ ಹೆಚ್ಚಿದವನಾದನು,ಆಗ= ಆ ಸಮಯದಲ್ಲಿ, ತಂಬಟ= ಕನಕ ತಮ್ಮಟೆಯು, ಭೇರಿ= ದೊಡ್ಡ ನಗಾರಿಯು, ನಿಸ್ಸಾಳ = ಸಣ್ಣ ಭೇರಿಯು, ಕಹಳೆ= ಕೊಂಬಿನ ವಾದ್ಯವು, (ಇವುಗಳೇ) ಆದಿ= ಮೊದಲಾಗುಳ್ಳ, ವಾದ್ಯಗಳು= ವಾದ್ಯವಿಶೇಷಗಳು, ಸೂಳ್ಗೈದವು= ರವಗೈದವು,
ತೋಳ್ಗುಟ್ಟುವ= ಬಾಹುಗಳನಪ್ಪಳಿಸುವ,ಆರ್ದು= ಧ್ವನಿಮಾಡಿ, ಸುಮ್ಮಾನದಿಂ = ಯುದ್ಧಾತುರದಿಂದಾದ ಆನಂದದಿಂದ,
ಪಟು=ಬಲಾಢ್ಯರಾದ ಭಟರು= ಶೂರರು, ಕೋಳ್ಗೊಂಡು= ಬೇಟೆಯಾಡಿಕೊಂಡು, ( ಕೋಲಾಹಲ ಮಾಡಿಕೊಂಡು) ಕುದಿವುತ= ಸಿಟ್ಟಿನಿಂದ ಸುಡುತ್ತ, ಇರ್ದರು= ಇರುತ್ತಿದ್ದರು, ಸಾರ್ಧಯೋಜನದೊಳು= ಹದಿನೆಂಟು ಮೈಲು ನೆಲದ ವೆಸ್ತಾರದಲ್ಲಿ, ಚತುರಂಗ ರಥವು,( ಗಜ, ಅಶ್ವ, ರಥ, ಪದಾತಿ ಇವಕ್ಕೆ ಚತುರಂಗವೆಂದು ಹೆಸರು) ನಾಲ್ಕು ಬಗೆಯಾದ ಸೈನ್ಯವೂ ಮತ್ತು ತೇರು, ಇಟ್ಟಣಿಸಿ= ಗುಂಪುಸೇರಿ, ನರನಮೇಲೆ= ಅರ್ಜುನನಮೇಲೆ, ಉತ್ಸಾಹದಿಂದ = ಯುದ್ಧೋತ್ಸಾಹ-
ದಿಂದ, ನಡೆದುದು= ಹೊರಟಿತು.
ಅ॥ವಿ॥ ಗುಣ=ನಡತೆ, ಬಿಲ್ಲಿನ ಹಗ್ಗ, ಮಣಿ= ರತ್ನ, ನಮಸ್ಕಾರ ಮಾಡುವುದು, ( ತೋಳಂ+ಕುಟ್ಟುತ)ತೋಳ್ಗುಟ್ಟುತ,
( ಕ್ರಿ. ಸ.) ಪಟುಗಳಾದ+ಭಟರು= ( ವಿ. ಪೂ. ಕ.)ಅರ್ಧದಿಂದ ಸಹಿತವಾದದ್ದು)ಸಾರ್ಧ, ಸಹ, (ಪೂ. ಬಹು)
ಚತುರಂಗ= ಹಸ್ತ್ಯಶ್ವ, ರಥಪದಾತಿ.
ತಾತ್ಪರ್ಯ:- ಗುಣಾಢ್ಯನು ರಾಜಶ್ರೇಷ್ಠನು ಆದ ಜನಮೇಜಯರಾಯನೇ ತನ್ನ ಪುತ್ರನ= ವೈಭವವನ್ನು ನೋಡಿದ ಹಂಸಧ್ವಜನು ಆನಂದದಿಂದ ಉಬ್ಬಿಹೋದವನಾಗಲು, ಸುಧನ್ವನು ಆ ಸಮಯದಲ್ಲಿ ತಂಬಟ, ಭೇರಿ, ಕಹಳೆ, ನಿಸ್ಸಾಳಾದಿ ವಾದ್ಯಧ್ವನಿಗಳಿಂದಲೂ, ಭಟರ ಕೋಲಾಹಲರವದಿಂದಲೂ, ಕೋಪೋದ್ರೇಕವುಳ್ಳವರಾಗಿ ಅರ್ಜುನನಮೇಲೆಯುದ್ಧಕ್ಕೆ ಹೊರಟನು.
ಬೆರಬೆರಸುತೊತ್ತಿಡಿದುಮುಂದೌ ಭರದಿಂದೆ ನಡೆ।
ವರಸರಸುಗಳ ಕಂಠಮಾಲೆಗಳ ತೋರಮು।
ತ್ತೊರಸೊರಸು ಮಿಗೆ ಪರಿದವರ ಸೂಸುದಂಬುಲದ ಚೆನ್ನೆಲದ ಮೇಲೊಕ್ಕಿರೆ॥
ಪೊರೆದ ಸಂಧ್ಯಾರುಣದ ಗಗನಮೆಡಲದೊಳಂ।
ಕುರಿಸಿದುಡುಗಣದಂತೆ ರಂಜಿಸಿತು ದೆಸೆದೆಸೆಗೆ।
ಪರಿಮಳದೆಲರ್ ಪರಿದುದಗರಚಂದನ ಯಕ್ಷಕರ್ದಮದ ಮೊಗವಾಸದ॥೬॥
ಪ್ರತಿಪದಾರ್ಥ :- ಬೆರಬೆರಸುತ= ಒತ್ತೊತ್ತಾಗಿ ಸೇರುತ್ತ, ಒತ್ತಿ=ತಳ್ಳಿ, ಇಡಿದು= ಗುಂಪಾಗಿ, ಮುಂದೆ= ಮುಂಭಾಗದಲ್ಲಿ, ಭರದಿಂದ= ಶೀಘ್ರವಾಗಿ, ನಡೆವ= ಹೋಗುತ್ತಿರುವ, ಅರಸರಸುಗಳ= ರಾಜಾಧಿರಾಜರ, ಕಂಠಮಾಲೆಗಳ = ಕತ್ತಿನಲ್ಲಿ ಹಾಕಿರುವ ಹಾರಗಳ, ತೋರ= ದಪ್ಪಗಳಾದ, ಮುತ್ತುಗಳು= ಮೌಕ್ತಿಕಗಳು, ಒರಸೊರಸು= ಒಂದಕ್ಕೊಂದು ತಗಲಿ ತಗಲಿ, ಪರಿದು= ಕಿತ್ತುಹೋಗಿ, ಅವರ= ಆ ರಾಜರ, ಸೂಸು= ಸ್ರವಿಸುವ, ದಂಬುಲದ= ಅಡಿಕೆಲೆಯಿಂದಾದ,ರಸದ= ದ್ರವದ, ಚನ್ನು= ಅರುಣವು, ಒತ್ತಿರೆ= ಭೂಮಿಯಮೇಲೆ ಬಿದ್ದಿರಲು, ಪೊರದ= ಹೊರದ, ಸಂಧ್ಯಾರುಣ= ಸಂಜೆಗೆಂಪಿನ, ಗಗನಮಂಡಲದೊಳು= ಅಂತರಿಕ್ಷದಲ್ಲಿ, ಅಂಕುರಿಸಿದ= ಹುಟ್ಟಿದ, ಉಡುಗಣದಂತೆ= ನಕ್ಷತ್ರಪುಂಜದ ಹಾಗೆ, ರಂಜಿಸಿತು= ಕಾಂತಿಯುಕ್ತವಾಗಿತ್ತು, ದೆಸೆದೆಸೆಗೆ= ದಿಕ್ಕುದಿಕ್ಕಿಗೂ, ಅಗರು= ಕೃಷ್ಣಾಗರು ಮತ್ತು ಶ್ವೇತಾಗರುಗಳು, ಚಂದನ= ಶ್ರೀಗಂಧವು, ಯಕ್ಷಕರ್ದಮ= ಕರ್ಪೂರ ಕಸ್ತೂರಿ ಮೊದಲಾದ ಪುಡಿ ಇವುಗಳ, ಮೊಗವಾಸದ= ಮುಖವಾಸನೆಯ, ಪರಿಮಳದ ಎಲರ್= ಸುವಾಸನೆಯಿಂದಾದ ವಾಯುವು, ಪರಿದುದು= ಸಂಚರಿಸಿತು.
ಅ॥ವಿ॥ ಬೆರಸು+ಬೆರಸು= ಬೆಂಬೆರಸು, (ದ್ವಿ.), ಕಂಠದ+ಮಾಲೆ= ಕಂಠಮಾಲೆ (ಷ. ತ.) ಸಂಧ್ಯಾ(ತ್ಸ) ಸಂಜೆ(ತ್ಭ) ಅರುಣ=ಕೆಂಪು, ಮುತ್ತು, ಸೂರ್ಯನ ಸಾರಥಿ, ಮುತ್ತು=( ತ್ಭ) ಮೌಕ್ತಿಕ=(ತ್ಸ)
ತಾತ್ಪರ್ಯ:- ಯುದ್ಧಕ್ಕೆ ಹೊರಟಾಗ ಜನಗಳ ಗುಂಪಿನಿಂದ ಒಬ್ಬರೊಬ್ಬರು ಒತ್ತುತ್ತಲೂ ತಳ್ಳುತ್ತಲೂ ಇದ್ದುದರಿಂದ ಯುದ್ಧಕ್ಕೆ ನೆರೆದಿದ್ದ ರಾಜರ ಕಂಠದಲ್ಲಿದ್ದ ಅಮೌಲ್ಯವಾದ ಮುಕ್ತಾಹಾರಗಳು ಕಿತ್ತುಹೋಗಿ ದೊಡ್ಡ ಮುತ್ತುಗಳು ಒಡೆದುಹೋಗಿ ನೆಲದಲ್ಲಿ ಬಿದ್ದುದರಿಂದಲೂ, ಆ ರಾಜರು ಅಡಿಕೆಲೆಯನ್ನು ಹಾಕಿಕೊಂಡು ಅಗಿಯುತ್ತಿದ್ದಾಗ ಬಾಯಿಯಿಂದ ಸ್ರವಿಸಿದ ಕೆಂಪಾದನೀರು ಭೂಮಿಯಮೇಲೆ ಬಿದ್ದಿದ್ದರಿಂದ, ಒಡೆದು ನೆಲದಲ್ಲಿ ಬಿದ್ದಿರುವ ಮುತ್ತುಗಳ ಸಮೂಹವು ನಕ್ಷತ್ರಗಳಿಗೂ, ಕೆಂಪಾದ ದ್ರವವನ್ನು ಊರುಣನಿಗೂ, ಹೋಲಿಸಿದ ಕವಿಚಮತ್ಕಾರಕ್ಕೆ ತಕ್ಕಂತೆಯೇ ಆ ಯುದ್ಧರಂಗವು ನಾನಾಪ್ರಕಾರವಾಗಿ
ಕಂಗೊಳಿಸುತ್ತಿತ್ತು.
ಪಡೆಯೊಳನ್ಯೋನ್ಯ ಸಂಘರ್ಷಣದೊಳೊಗುವ ಪೊಂ।
ದೊಡವುಗಳ ರೇಣುಗಳೊ ಮೈಗಳಂ ಸೋಂಕಿ ಪುಡಿ।
ವಡೆದ ಕುಂಕುಮ ಸುಗಂಧಾನುಲೇಪನದ ಚೂರ್ಣಂಗಳೋ ಪದಘಾತಿಗೆ॥
ಪೊಡವಿಯಿಂದಿರದೇಳ್ವರುಣರಜಂಗಳೊ ತಿಳಿದು।
ನುಡಿಯಲರಿದೆಂಬಿನಂ ಮೇರುವಿನ ಬಣ್ಣಮಿಂ।
ಪಿಡಿದ ದಿವಿಜರ ಭೋಗಮಜನ ಗುಣಮೆಚ್ಚರಿಸೆ ಕೆಂಧೂಳಿ ಮಸಗಿತಾಗ॥೭॥
ಪ್ರತಿಪದಾರ್ಥ :- ಪಡೆಯೊಳು= ಸೇನೆಯಲ್ಲಿ,ಅನ್ಯೋನ್ನ= ಪರಸ್ಪರ ಒಬ್ಬರಿಗೊಬ್ಬರಿಗಾದ, ಸಂಘರ್ಷಣದೊಳು= ಉಜ್ಜುವಿಕೆಯಿಂದ, ಒಗುವ= ರೇಣುಗಳಾಗಿ ಉದುರಿ ಬೀಳುವ, ಪೊಂದೊಡವುಗಳ= ಚಿನ್ನದ ಆಭರಣಗಳ, ರೇಣುಗಳೊ= ಅಣುಗಳೊ, ಮೈಗಳಂ= ಒಡಲುಗಳನ್ನು, ಸೋಂಕಿ=ತಗಲಿ, ಪುಡಿವಡೆದ= ಧೂಳಾದ, ಕುಂಕುಮ= ಕುಂಕುಮ ಕೇಸರಿ-
ಯಿಂದೊಡಗೂಡಿದ, ಸುಗಂಧ=ಒಳ್ಳೆಯ ವಾಸನೆಯುಳ್ಳ, ಅನುಲೇಪನದ= ಹಚ್ಚಿಕೊಂಡಿದ್ದ ಶ್ರೀಗಂಧದ ಚೂರ್ಣಂಗಳೊ, ಪುಡಿಗಳೊ, ಪದಘಾತಿಗೆ= ಪಾದದ ತುಳಿತಕ್ಕೆ, ಪೊಡವಿಯಿಂದ= ಪೃಥ್ವಿಯಿಂದ, ಇರದೆ ಏಳ್ವ=ತಪ್ಪದೇ ಏಳುತ್ತಿರುವ, ಅರುಣರಜಂಗಳೋ= ಕೆಂಪಾದ ರೇಣುಗಳೋ, ತಿಳಿದು= ಗ್ರಹಿಸಿ, ನುಡಿಯಲು= ಹೇಳಲು, ಅರಿದು= ಸಾಧ್ಯವಲ್ಲ, ಎಂಬಿನಂ= ಎನ್ನುವ ರೀತಿಯಿಂದ, ಮೇರುವಿನ= ಕನಕಾಚಲದ, ಬಣ್ಣಮಂ= ಕಾಂತಿಯನ್ನು, ಪಿಡಿದ= ಹೊಂದಿರುವ, ದಿವಿಭಾಗಮಂ= ಆಕಾಶವನ್ನು ಕುರಿತು, ಜನವನು= ಕಾಣುವ ಜನರನ್ನು, ಎಚ್ಚರಿಪಂತೆ= ಜ್ಞಾಪಕಕ್ಕೆ ತರುವಂತೆ, ಕೆಂಧೂಳಿ= ಕೆಂಪಾದ ಧೂಳು, ಆಗ= ಆ ಸಮಯದಲ್ಲಿ, ಮುಸುಕಿತು= ಆವರಿಸಿಕೊಂಡಿತು.
ಅ॥ವಿ॥ ಕೆಚ್ಚನೆಯ+ ಧೂಳಿ= ಕೆಂಧುಳಿ ( ವಿ. ಪೂ. ಕ.) ಪೊಡವಿ (ತ್ಭ) ಪೃಥ್ವಿ (ತ್ಸ) ವರ್ಣ (ತ್ಸ) ಬಣ್ಣ (ತ್ಭ)
ತಾತ್ಪರ್ಯ:- ಆ ಸೇನೆಯಲ್ಲಿದ್ದ ರಾಜರ ಮತ್ತು ಚತುರಂಗಬಲಗಳ ತುಳಿದಾಟಕ್ಕೆ, ಭೂಮಿಯಿಂದ ಮೇಲಕ್ಕೆದ್ದ ಧೂಳು ಅಂತರಿಕ್ಷವನ್ನು ವ್ಯಾಪಿಸಿತು, ರಾಜರು ಧರಿಸಿದ್ಧ ಒಡವೆಗಳು ಒಡೆದು ಚೂರಾದ ಧೂಳಿಗಳೂ ಮತ್ತು ಅವರು ತಮ್ಮ ಶರೀರಕ್ಕೆ ಲೇಪನಮಾಡಿಕೊಂಡಿದ್ದ ಸುವಾಸನೆಯುಕ್ತವಾದ ಶ್ರೀಗಂಧದ ಪುಡಿಯೂ ಆ ಧೂಳಿನಲ್ಲಿ ಸೇರಿದ್ದರಿಂದ ಅಂತರಿಕ್ಷವು ಸುವರ್ಣಾದ್ರಿಗೆ ಹೋಲುತ್ತಿತ್ತು.
ಮೊಗಗೈಗಳಿಂ ತಮ್ಮೊಡಲ ನೀರನಾನೆಗಳ್ ।
ತೆಗೆದು ಚೆಲ್ಲಲ್ ಪೊನಲ್ವರಿದ ಮಡುಗಳ ಕೆಸರೊ।
ಳೊಗೆದ ನೃಪಮಂಡಲದ ಕನಕಾಭರಣ ಕಿರಣ ತರುಣಾತಪದೊಳಲರ್ದ॥
ಮಿಗೆ ಸುಳಿವ ಚಾಮರಂಗಳ ರಾಜಹಂಸಾವ।
ಳಿಗಳ ಸಂಚಾರಮಂ ಕೆಳೆಗೊಂಡು ಬೆಳುದಾವ।
ರೆಗಳ ಹಂತಿಗಳಂತೆ ಪಡೆಯೊಳೆಸೆದುವು ತಳ್ತಿಡಿದ ಸತ್ತಿಗೆಯ ಸಾಲ್ಗಳು॥೮॥
ಪ್ರತಿಪದಾರ್ಥ :- ಆನೆಗಳ= ಗಜಗಳು, ಮೊಗದ= ಮುಖದ ಹತ್ತಿರವಿರುವ, ಕೈಯಿಂದ= ಸೊಂಡಿಲಿನಿಂದ, ತಮ್ಮೊಡಲ ನೀರನು= ತಮ್ಮ ಶರೀರದಿಂದ ಸುರಿವ ಬೆವರಿನ ನೀರನ್ನು, ತೆಗೆದು=ತೆಗೆದುಕೊಂಡು, ಚಲ್ಲಲು= ಸುತ್ತಲು ಎರಚಲು, ಪೊನಲ್ವರಿದ= ಪ್ರವಹಿಸಿದ ಪ್ರವಾಹದ, ಮಡವುಗಳ= ಹಳ್ಳಗಳ, ಕೆಸರೊಳು= ಬದಿಯಲ್ಲಿ, ಒಗೆದ= ಜನಿಸಿದ, ನೃಪಮಂಡಲದ= ದೊರೆಗಳ ಗುಂಪಿನ, ಕನಕಾಭರಣ = ಚಿನ್ನದಿಂದ ನಿರ್ಮಿತವಾದ ಆಭರಣಗಳ, ಕಿರಣಗಳ= ಪ್ರಕಾಶಗಳೆಂಬ, ತರುಣ= ಬಲಿಯದ, ಆ ತಪದೊಳು= ಬಿಸಿಲಿನಲ್ಲಿ, ಅಲರ್ದ= ವಿಕಸಿತವಾದ, ಮಿಗೆ =ಹೆಚ್ಚಾಗಿ, ಸುಳಿದ= ತಿರುಗಾಡುವ, ಚಾಮರಂಗಳ=ಚಾಮರಗಳೆಂಬ, ರಾಜಹಂಸದ= ರಾಜಹಂಸಗಳ, ಅವಳಿಗಳ=ಗುಂಪುಗಳ, ಸಂಚಾರಮಂ= ತಿರುಗಾಟವನ್ನು, ಕಳೆಗೊಂಡ= ಕಾಂತಿಯುಕ್ತವಾದ, ಬೆಳ್ದಾವರೆಗಳ= ಬಿಳಿದಾದ ಕಮಲ ಪುಷ್ಪಗಳ, ಹಂತಿಗಳಂತೆ= ಸಾಲುಗಳ ಹಾಗೆ, ತಳ್ತು= ವಿಕಸಿತವಾಗಿ, ( ವಿಸ್ತರಿಸಲ್ಪಟ್ಟು) ಇಡಿದ= ಗುಂಪಾಗಿರುವ, ಸತ್ತಿಗೆಯ= ಕೊಡೆಗಳ, ಸಾಲ್ಗಳು= ಪಙ್ತಿಗಳು, ಎಸೆದವು= ಕಾಂತಿಯುಕ್ತವಾದುವು.
ಅ॥ವೆ॥ ರಾಜ(ತ್ಸ) ರಾಯ (ತ್ಭ) ಹಂಸ (ತ್ಸ) ಅಂಚೆ (ತ್ಭ) ನೃಪರ +ಮಂಡಲ= ಷ. ತ.
ತಾತ್ಪರ್ಯ :- ಆ ಸಮಯದಲ್ಲಿ ಆನೆಗಳು ಶರೀರದಿಂದ ಬೆವರು ನೀರನ್ನು ವಿಶೇಷವಾಗಿ ಸುರಿಸಿದವು. ರಾಜರು ಧರಿಸಿದ್ದ ಒಡವೆಗಳು ಕಾಂತಿಯುಕ್ತವಾಗಿದ್ದವು, ವಿಶೇಷವಾಗಿ ಶ್ವೇತಚ್ಛತ್ರಗಳನ್ನು ಹಿಡಿದಿದ್ದರು, ಇದು ಬೆವರು ನೀರಿನ ಪ್ರವಾಹವೆಂಬ ಮಡುಗಳ ಕೆಸರಿನಲ್ಲಿ, ಶ್ವೇತಚ್ಛತ್ರಗಳೆಂಬ ಬಿಳಿದಾವರೆಗಳು, ರಾಜರು ಧರಿಸಿದ್ದ ಒಡವೆಗಳ ಕಾಂತಿಯೆಂಬ ಸೂರ್ಯನಿಂದ ಅರಳಿದಾಗ್ಯೂ, ರಾಜಮರ್ಯಾದಾರ್ಥವಾಗಿ ಬೀಸುವ ಚಮರಿಗಳು, ರಾಜಹಂಸ ಪಕ್ಷಿಗಳಂತೆ ಪ್ರಕಾಶಿಸಿತು.
ಮುಂಕೊಂಬ ಮಂದಿ ಕುದುರೆಗೆ ಧರಾಮಂಡಲಂ।
ಸಂಕುಲದ ವೃದ್ಯಧ್ವನಿಗೆ ದಿಶಾಮಂಡಲಂ।
ಸಂಖ್ಯೆಯಿಲ್ಲದೆ ಸಿಂಧ ಸೀಗುರಿ ಪತಾಕೆಗೆ ನಭೋಮಂಡಲಂ ಮೀರಿದ॥
ಬಿಂಕದಿಂದಿರಿವ ಕಲಿತನಕೆ ರಣಮಂಡಲಂ।
ಸಂಕೋಚಮೆನೆ ಬಂದು ಪಿಡಿದು ಪಾರ್ಥನ ತುರಗ।
ಮಂ ಕಟ್ಟಿ ಬಳಸಿ ಪದ್ಮವ್ಯೂಹಮಾಗಿ ನಿಂದಾರ್ದುದಾ ಸೇನೆ ನಲಿದು॥೯॥
ಪ್ರತಿಪದಾರ್ಥ :- ಮುಂಕೊಂಬ= ಮುಂದಾಗಿ ನುಗ್ಗಿ ಬರುವ, ಮಂದಿ=ಕಾಲ್ಬಲಕ್ಕೂ, ಕುದುರೆಗೆ= ತುರಂಗಗಳ ಸೈನ್ಯಕ್ಕೂ ಧರಾಮಂಡಲಂ= ಈ ಪೃಥ್ವೀ ಮಂಡಲವು. ಸಂಕುಲದ= ಗುಂಪಾಗಿ ಸೇರಿದ, ವಾದ್ಯಧ್ವನಿಗೆ= ನಗಾರಿ ಮೊದಲಾದವುಗಳ ರವಕ್ಕೆ, ದಿಶಿಮಂಡಲಂ= ದಿಙ್ಮಂಡಲವು, ಸಂಖ್ಯೆಯಿಲ್ಲದ= ಅಸಂಖ್ಯಾತವಾದ, ಸಿಂಧ= ಕೊಡೆಗಳಿಗೂ, ಸೀಗುರಿ= ಚೌರಿಗಳಿಗೂ, ಪತಾಕೆಗೆ= ಬಾವುಟಗಳ ಸಮೂಹಕ್ಕೆ, ನಭೋಮಂಡಲಂ= ಆಕಾಶಮಂಡಲವು, ಮೀರಿದ= ಹೆಚ್ಚಾದ, ಬಿಂಕದಿಂದ= ಗರ್ವದಿಂದ, ಇರಿವ= ತಿವಿಯುವ, ಕಲಿತನಕ್ಕೆ= ಪರಾಕ್ರಮಕ್ಕೆ, ರಣಮಂಡಲಂ= ಯುದ್ಧರಂಗವು, ಸಂಕೋಚಂ ಎನೆ= ಸ್ಥಳಸಾಲದು ಎನ್ನುವಂತೆ, ಬಂದ= ಆಗಮಿಸಿದ, ಪಾರ್ಥನ= ಫಲ್ಗುಣನ, ತುರಂಗಮಂ= ಕುದುರೆಯನ್ನು, ಕಟ್ಟಿ= ಸಮರ್ಥಿಸಿ, ಬಳಸಿ= ಸುತ್ತಲೂ ಆವರಿಸಿ, ಪದ್ಮವ್ಯೂಹವಾಗಿ= ಕಮಲದಂತೆ ಸೈನ್ಯವನ್ನು ಮೂರ್ತಿಗೊಳಿಸಿ, ನಿಂದು= ನಿಂತುಕೊಂಡು, ಆ ಸೇನೆ= ಆ ಸುಧನ್ವನ ಸೈನ್ಯವು, ನಲಿದು= ಸಂತೋಷಿಸಿ, ಆರ್ದುದು= ಅಬ್ಬರಿಸಿತು.
ಅ॥ವಿ॥ ಅಬ್ಬರ( ತ್ಭ) ಆರ್ಭಟ ( ತ್ಸ) ಕಲಿಯಭಾವ=ಕಲಿತನ. ಪದ್ಮವ್ಯೂಹ= ಪದ್ಮದ ಆಕೃತಿಯಾದ ಸೈನ್ಯ, ವ್ಯೂಹವು = ಪದ್ಮದಂತೆ, ಪದ್ಮವ್ಯೂಹ. (ಉ. ಪೂ. ಕ.)
ತಾತ್ಪರ್ಯ:- ಇದೂ ಅಲ್ಲದೆ ಹಸ್ತ್ಯಶ್ವ ರಥಪದಾತಿಗಳು ಭೂಭಾಗವನ್ನೂ, ಭೇರೀಮುಂತಾದವುಗಳ ವಾದ್ಯ ಘೋಷವೈ ದಿಕ್ಚಕ್ರವನ್ನೂ, ಅಸಂಖ್ಯಾತವಾದ ಛತ್ರಚಾಮರ ದ್ವಜಪತಾಕಾದಿಗಳು, ಅಂತರಿಕ್ಷ ಭಾಗವನ್ನೂ, ಹೆಚ್ಚಾದ ಗರ್ವದಿಂದೊಡ-
ಗೂಡಿದ ವೇರಭಟರ ಸಮೂಹವು ಯೈದ್ಧರಂಗವನ್ನೂ ಆವರಿಸಿಕೊಂಡಿರಲು, ಅರ್ಜುನನ ಅಶ್ವಮೇಧಯೋಗ್ಯವಾದ ಕುದುರೆಯ ಸುತ್ತಲೂ ಸುತ್ತುಗಟ್ಟಿಕೊಂಡು ಹಂಸಧ್ವಜನ ಸೇನೆಯು ಸಂತೋಷದಿಂದಾರ್ಭಟಿಸಿತು.
ಸುತ್ತ ಪದ್ಮವ್ಯೂಹಮಂ ರಚಿಸಿ ನಡುವೆ ನರ।
ನುತ್ತಮತುರಂಗಮಂ ಕಟ್ಟಿ ಕಾಳಗಕೆ ಭಟ।
ರೊತ್ತಾಗಿ ನಿಂದರರಿವೀರರಂ ಬರಹೇಳೆನುತ್ತರಸನಾಜ್ಞೆಯಿಂದೆ॥
ಇತ್ತ ಪಾರ್ಥಂಗೆ ಚರರೈತಂದು ನುಡಿದರೀ।
ವೃತ್ತಾಂತಮಂ ಬಳಿಕ ಪ್ರದ್ಯುಮ್ನನಂ ಕರೆದು।
ಮತ್ತೆ ಬಂದುದು ವಿಘ್ನಮಿದಕಿನ್ನುಪಾಯಮೇನೆಂದೊಡವನಿಂತೆಂದನು॥೧೦॥
ಪ್ರತಿಪದಾರ್ಥ :- ಸುತ್ತ= ಅರ್ಜುನನ ಕುದುರೆಯ ಸುತ್ತಲೂ, ಪದ್ಮವ್ಯೂಹಮಂ= ಕಮಲದ ಎಸಳಿನಂತೆ, ಸೇನಾನಿರ್ಮಾ-
ಣವನ್ನು ,ರಚಿಸಿ= ನಿರ್ಮಿಸಿ, ನಡುವೆ= ಆ ಸೇನೆಯ ಮಧ್ಯದಲ್ಲಿ, ನರನ= ಪಾರ್ಥನ, ( ಉತ್ತಮ= ಯೋಗ್ಯವಾದ ಅಶ್ವಮೇಧಯೋಗ್ಯವಾದ), ತುರಂಗಮಂ= ಅಶ್ವವನ್ನು, ಕಟ್ಟಿ= ಬಂಧಿಸಿ( ಸಮರ್ಥಿಸಿ)ಕಾಳಗಕ್ಕೆ = ಜಗಳಕ್ಕೆ, ಪಟುಭಟರು= ಬಲಶಾಲಿಗಳಾದ ವೀರರು, ಅರಸನ= ದೊರೆಯಾದ ಹಂಸಧ್ವಜನ, ಆಜ್ಞೆಯಿಂದ= ಅಪ್ಪಣೆಯ ಮೇರೆಗೆ, ಅರಿವೀರರ= ಶತ್ರುಗಳಾದ ಶೂರರನ್ನು, ಬರಹೇಳು= ಯುದ್ಧಕ್ಕೆ ಬರುವಂತೆ ಹೇಳು, ಎನುತ್ತ=ಎಂದು ಹೇಳುತ್ತಾ, ಒತ್ತಾಗಿ= ಗುಂಪಾಗಿ,
ನಿಂತುಕೊಂಡರು, ಇತ್ತ= ಈ ಕಡೆ, ಪಾರ್ಥಂಗೆ= ಅರ್ಜುನನಿಗೆ, ಚರರು= ಸೇವಕರು, ಐತಂದು= ಬಂದು, ಈ ವೃತ್ತಾಂತಮಂ= ಈ ಸಂಗತಿಯನ್ನು, ನುಡಿದರು= ಹೇಳಿದರು, ಬಳಿಕ = ಅನಂತರ, ಪ್ರದ್ಯುಮ್ನನಂ= ಕೃಷ್ಣನ ಮಗನಾದ ಪ್ರದ್ಯುಮ್ನನನ್ನು, ಕರೆಸಿ= ಬರಮಾಡಿ, ಮತ್ತೆ= ಪುನಃ, ವಿಘ್ನಂ= ತೊಂದರೆಯು, ಬಂದುದು= ಪ್ರಾಪ್ತವಾಯಿತು, ಇದಕೆ= ಈ ವಿಘ್ನಕ್ಕೆ, ಇನ್ನು= ಬೇರೆ, ಉಪಾಯಂ= ಯೋಚನೆಯು, ಏಂ ಎಂದೊಡೆ= ಏನು ಮಾಡಬೇಕೆನಲು, ಅವನು= ಆ ಪ್ರದ್ಯುಮ್ನನು,ಇಂತೆಂದನು= ಮುಂದಿನಂತೆ ಹೇಳಿದನು.
ಅ॥ವಿ॥ ನರ= ಅರ್ಜುನ, ಮನುಷ್ಯ, ಪಾರ್ಥ= ಪೃಥೆಯ ಮಗ, ಆಜ್ಞೆ (ತ್ಸ) ಅಪ್ಪಣೆ (ತ್ಭ)
ತಾತ್ಪರ್ಯ:-ಆಗ ಅರ್ಜುನನ ಕುದುರೆಯ ಸುತ್ತಲೂ, ಕಮಲಪತ್ರದಂತೆ ಸೇನಾರಚನೆಯನ್ನೇರ್ಪಡಿಸಿ, ಮೆಯ್ಗಲಿಗಳಾದ ಯೋಧರು ಹಂಸಧ್ವಜನ ಅಪ್ಪಣೆಯಂತೆ ಮಹಾಶೂರರಾದ ಶತ್ರು ರಾಜರನ್ನು ಕಾಳಗಕೆ ಬರುವಂತೆ ಹೇಳಿಕಳುಹಿಸಿ,ವೀರ- ಭಟರು ಒತ್ತಾಗಿ ನಿಂತಿರಲು ಹಂಸಧ್ವಜನ ಕಡೆಯ ಭೃತ್ಯರು ಅರ್ಜುನನನ್ನು ಯುದ್ಧಕ್ಕೆ ಬರಹೇಳಿದ ಸಂಗತಿಯನ್ನರಿತವರಾಗಿ ಪ್ರದ್ಯುಮ್ನನನ್ನು ಬರಮಾಡಿಕೊಂಡು, ಪುನಃ ಅಶೂವಮೇಧ ಕುದುರೆಯು ಮುಂದರಿಯಲು, ಮಹತ್ತಾದ ವಿಘ್ನ ಬಂದೊದಗಿದ ಸಂಗತಿಯನ್ನು ತಿಳಿಯಪಡಿಸಿ, ಕೇಳಲಾಗಿ, ಪ್ರದ್ಯುಮ್ನನು ಮುಂದೆ ಬರುವಂತೆ ಹೇಳಿದನದೆಂತೆನೆ.
ನಿನ್ನಂ ಕಳುಹುವಂದು ಹಯದ ಮೇಲಾರೈಕೆ।
ಗೆನ್ನನಟ್ಟಿದನಲಾ ಪಿತನಾತನಾಜ್ಞೆಯಂ।
ಮನ್ನಿಸುವ ಕಾಲಮಲ್ಲವೆ ತನಗೆ ನೀನಿದಕ್ಕೆಣಿಕೆಗೊಳಬಹುದು ಬರಿದೆ॥
ತನ್ನ ಭುಜಬಲದಿಂದೆ ಬಿಡಿಸಿ ತಂದಪೆನಶ್ವ।
ಮನ್ನೋಡು ಸಾಕೆನುತ ಪಾರ್ಥನಂ ಬೀಳ್ಕೊಂಡು ।
ಪನ್ನಗಾರಿಧ್ವಜನ ತನಯನೈದೆದನಹಿತಮೋಹರಕೆ ಸೇನೆಸಹಿತ॥೧೧॥
ಪ್ರತಿಪದಾರ್ಥ :- ನಿನ್ನಂ= ಪಾರ್ಥನೃದ ನಿನ್ನನ್ನು, ಕಳುಹವಂದು= ಶ್ರೀಕೃಷ್ಣನು ಕುದುರೆಯ ಸಂಗಡ ಕಳುಹಿಸುವಾಗ, ಹಯದ= ಕುದುರೆಯ, ಮೇಲೆ ಆರೈಕೆಗೆ= ಮೈಗಾವಲಾಗಿ, ಪಿತನು= ಎನ್ನ ತಂದೆಯಾದ ಶ್ರೀಕೃಷ್ಣನು, ಎನ್ನನು= ನನ್ನನ್ನು, ಅಟ್ಟಿದನಲಾ= ಕಳುಹಿಸಿದನಲ್ಲವೆ, ಆತನ= ಆ ಕೃಷ್ಣನ, ಅನುಜ್ಞೆಯಂ=ಅಪ್ಪಣೆಯನ್ನು, ಮನ್ನಿಸುವ= ಮರ್ಯಾದೆಯಿಂದ ನಡೆಯಿಸುವ, ಕಾಲಂ= ವೇಳೆಯು, ತನಗೆ= ನನಗೆ, ಅಲ್ಲವೆ= ಈಗ ಆಗಿರುವುದಲ್ಲವೆ? ನೀಂ=ನೀನು, ಇದಕೆ= ಈ ಅಲ್ಪಕಾರ್ಯಕ್ಕೆ, ಬರಿದೆ= ಸುಮ್ಮನೆ, ಎಣಿಕೆಗೆ= ಆಲೋಚನೆಯನ್ನು, ಗೊಳಬಹುದೆ= ಮಾಡಬಹುದೆ, ತನ್ನ=ನನ್ನ, ಭುಜಬಲದಿಂದ= ಬಾಹುಶಕ್ತಿಯಿಂದ, ಅಶ್ವಮಂ= ಕುದುರೆಯನ್ನು, ಬಿಡಿಸಿ= ಬಿಡುಗಡೆ ಮಾಡಿಕೊಂಡು, ತಂದಪೆನು= ತರುತ್ತೇನೆ, ನೋಡು= ಈಕ್ಷಿಸು, ಸಾಕು= ಬಿಡು( ಯೋಚನೆ ಮಾಡಬೇಡ) ಎನುತ= ಹೀಗೆಂದು ಹೇಳುತ್ತ, ಪಾರ್ಥನಂ= ಅರ್ಜುನನನ್ನು, ಬೀಳ್ಕೊಂಡು=ಸಮಾಧಾನಮಾಡಿಕೊಂಡು, ಪನ್ನಗಾರಿ= ಸರ್ಪಗಳಿಗೆ ಶತ್ರುವಾದ ಗರುಡನೆ, ಧ್ವಜನ= ಧ್ವಜವಾಗುಳ್ಳ ಕೃಷ್ಣನ, ತನಯನು= ಮಗನಾದ ಪ್ರದ್ಯುಮ್ನನು, ಅಹಿತಮೋಹರಕೆ= ಹಗೆಗಳ ಸೇನೆಗೆ, ಸೇನೆಸಹಿತ= ಸೇನಾಯುಕ್ತನಾಗಿ, ಐದಿದನು= ಸೇರಿದನು.
ಅ॥ವಿ॥ ಆಜ್ಞೆ (ತ್ಸ) ಆಣೆ (ತ್ಭ) ( ಪತ್=ಕಾಲು, ನ= ಇಲ್ಲದ, ಗ= ಗಮಿಸುವುದು) -ಸರ್ಪ, ಪನ್ನಗಕ್ಕೆ ಅರಿ = ಪನ್ನಗಾರಿ, ಚ.ತ.
ಪನ್ನಗಾರಿಯೇ ಟಕ್ಕೆಯಾಗುಳ್ಳವನು, ಪನ್ನಗಾರಿ ಧ್ವಜ ( ಬ.ಸ.) ಕಾಲ=ಸಮಯ, ಯಮಧರ್ಮ.
ತಾತ್ಪರ್ಯ:- ನಿನ್ನನ್ನು ಕುದುರೆಯ ಸಂಗಡ ಕಳುಹಿಸುವಾಗ ಕುದುರೆಯ ಕಾವಲಿಗೆ ಶ್ರೀಕೃಷ್ಣನು ನನ್ನನ್ನು ಕಳುಹಿಸಲಿಲ್ಲವೇ? ಈಗ ಎನ್ನ ತಂದೆಯಾದ ಕೃಷ್ಣನ ಅಪ್ಪಣೆಯನ್ನು ನಡೆಸಲಿಕ್ಕೆ ಸಮಯವಲ್ಲವೇ? ಇಂಥಾ ಅಲ್ಪವಾದ ಕಾರ್ಯಕ್ಕೆ ಚಿಂತಿಸಬಹುದೆ? ನನ್ನ ಭುಜಪರಾಕ್ರಮದಿಂದ ಕುದುರೆಯನ್ನು ಬಿಡಿಸಿ ತಂದಪೆನೆನುತ ಪಾರ್ಥನಂ ಬೀಳ್ಕೊಂಡು ಪ್ರದ್ಯುಮ್ನನು ಸೇನಾಸಮೇತನಾಗಿ ಹೊರಟುಹೋದನು.
ಲಟಕಟಿಸುತಾಗ ಸಾತ್ಯಕಿ ಸಾಂಬ ಕೃತವರ್ಮ।
ಶಠ ನಿಶಠರನಿರುದ್ಧ ಗದ ಮುಖ್ಯರಾದ ಪಟು।
ಭಟರಖಿಳ ಯಾದವ ಚತುರ್ಬಲಂ ಜೋಡಿಸಿತು ಸಮರಸನ್ನಾಹದಿಂದೆ॥
ದಿಟಮಿಂದಜಾಂಡಘಟಮೊಡೆಯದಿರದೆಂಬಿನಂ।
ಪಟಹ ಡಿಂಡಿಮ ಡೌಡೆ ಭೇರಿ ನಿಸ್ಸಾಳ ತಂ।
ಬಟ ಮುರಜ ಡಕ್ಕೆ ಡಮರುಗ ಕೊಂಬು ಕಹಳೆಗಳ ಬಹುಳರವಮಳ್ಳಿರಿದುದು॥೧೨॥
ಪ್ರತಿಪದಾರ್ಥ :- ಆಗ= ಆ ವೇಳೆಗೆ ಸರಿಯಾಗಿ, ಸಾತ್ಯಕಿ=ಸತ್ಯಕನ ಪುತ್ತನು, ಸಾಂಬ= ಜಾಂಬವತಿಯ ನಂದನನು, ಕೃತವರ್ಮ= ಯದುಸೇನಾಧ್ಯಕ್ಷನು, ಶಠ= ಶಠನೆಂಬುವನು, ನಿಶಠ= ನಿಶಠನು, ಅನಿರುದ್ಧ= ಅನೆರುದ್ಧನು, ಗದ= ಗದನೆ, ಆದಿ= ಮೊದಲ್ಗೊಂಡು, ಮುಖ್ಯರಾದ= ಆದಿಯಾದ, ಪಟುಭಟರು= ಬಲಾಢ್ಯರಾದ ವೀರರು, ಅಖಿಳ ಯಾದವರ= ಸಮಸ್ತ ಯದುರಾಜರ, ಚತುರ್ಬಲಂ= ಆನೆ, ಕುದುರೆ, ರಥ, ಕಾಲಾಳು, ಇವುಗಳು, ಲಟಕಟಿಸಿ= ತಂಡತಂಡವಾಗಿ ಸೇರಿ, ಸರ್ವ= ಸಕಲವಾದ, ಸನ್ನಾಹದಿಂದ=ಕಾರ್ಯದಿಂದ, (ಜೋಡಿಸಿತು= ಸೇರೆದ್ದಾಯೆತು, ಇಂದು=ಈಗ), ಅಜಾಂಡ= ಬ್ರಹ್ಮನ ಅಖಂಡವಾದ ಈ ಭೂಮಂಡಲವು, ಒಡೆಯದೆ= ಹೋಳಾಗದೆ, ಇರದು= ಇರಲಾರದು, ದಿಟಂ= ನಿಜವು, ಎಂಬಿನಂ= ಎನ್ನುವ ಹಾಗೆ, ಪಟಹ= ತಮ್ಮಟೆಯು, ಡಿಂಡಿಮ= ಸಣ್ಣನಗಾರಿ, ಡೌಡೆ= ಡೋಲು, ಭೇರಿ= ದೊಡ್ಡ ನಗಾರಿಯು, ನಿಸ್ಸಾಳ =ಸಣ್ಣನಗಾರಿಯು, ತಮ್ಮಟೆ=ತಮ್ಮಟೆಯು, ಮುರಜ=ಶಂಖವು, ಢಕ್ಕೆ= ಢಕ್ಕೆ ಎಂಬ ವಾದ್ಯವು, ಡಮರುಗ= ಬುಡುಬುಡಿಕೆಯು, ಕೊಂಬು= ಕೋಡಿನಂತೆ ಇರುವ ವಾದ್ಯ ವಿಶೇಷವು, ಕಹಳೆ== ಕಹಳಾ ಎಂಬ ವಾದ್ಯ ವಿಶೇಷವು, ಇವುಗಳ= ಇವೇ ಆದಿಯಾಗುಳ್ಳ, ಬಹುವಾದ= ಹೆಚ್ಚಾದ, ರವಂ= ಶಬ್ಧವು, ಅಳ್ಳಿರಿದುದು= ಎರಡು ಪಕ್ಕೆಗಳಲ್ಲಿಯೂ ತುಂಬಿಕೊಂಡಿತು.
ಅ॥ವಿ॥ ಬಲ=ಬಲರಾಮ, ಸೈನ್ಯ, ಶಕ್ತಿ, ದಶಾವತೃರಗಳು= ಮತ್ಸ್ತ, ಕೂರ್ಮ, ವರಾಹ, ನಾರಸಿಂಹ, ವಾಮನ, ಪರಶುರಾಮ, ರಘುರಾಮ, ಕೃಷ್ಣ, ಬೌದ್ಧ, ಕಲ್ಕಿ.
ತಾತ್ಪರ್ಯ:- ಆಗ ಸಾತ್ಯಕಿ, ಸಾಂಬ, ಕೃತವರ್ಮ, ಶಠ, ನಿಶಠ, ಅನಿರುದ್ಧ, ಗದ ಇವರೇ ಮುಖ್ಯರಾದ ಸೇನಾಜನರು, ವಾದ್ಯರವದಿಂದ ಕೂಡೆದವರಾಗಿ ಪ್ರಯಾಣಮಾಡಿ ಯುದ್ಧಕ್ಕೆ ಬಂದರು. ಆ ಸಮಯದಲ್ಲಿ ಹಸ್ತ್ಯಶ್ವರಥಪದಾತಿ ಇವೇ ಮೊದಲಾದ ಚತುರಂಗಬಲವೂ ಸೇರಿ ತಮಟೆ, ಡೋಲು, ನಗಾರಿ, ರಣಭೇರಿ, ದೊಡ್ಡ ನಖಾರಿ,ಢಕ್ಕೆ, ಶಂಖ, ದುಂದುಭಿ, ಕೊಂಬು, ಕಾಳಗ ತಮ್ಮಟೆ, ಇವೇ ಮೊದಲಾದ ವಾದ್ಯವಿಶೇಷಗಳು, ರವಗೈಯುತ್ತಿರಲು ಪಕ್ಕದ ಎರಡು ಭಾಗಗಳೂ ತುಂಬಿಕೊಳ್ಳುವಂತೆ ಇತ್ತು. ಸಮಸ್ತ ಯಾದವರ ಸೈನ್ಯವೂ ಪುಂಖಾನುಪುಂಖವಾಗಿ ಬರುತ್ತ ಕಾಲಕ್ಕೆ ಅನುಸಾರವಾಗಿಯೂ ನಿಯಮಕೆ ತಪ್ಪದೆಯೂ ಬಂದು ಒದಗಲು, ಬ್ರಹ್ಮಾಂಡವೇನಾದರು ಒಡೆದು ಹೋಗುತ್ತದೆಯೋ ಎಂಬಂತೆ ಯುದ್ಧಕ್ಕೆ ಅನುವಾಯಿತು.
ಮೊಗಸಿತರಿಬಲವನನುಸಾಲ್ವಕನ ಸೇನೆಯೊ।
ಮ್ಮೊಗದೊಳೊರೆಯುಗಿದ ಫಣಿಕುಲದಂತೆ ರಣದವಕ।
ಮೊಗದೊದಗಿತಂಬುಧಿಯ ತೆರೆಯಂತೆ ಯೌವನಾಶ್ವನ ಸೈನ್ಯಮೊಂದೆಸೆಯೊಳು॥
ಯುಗದಂತ್ಯದಭ್ರದಂತೆದ್ದುದುರವಣಿಸಿ ಸಂ।
ಯುಗಕೆ ನೀಲಧ್ವಜನ ಸೈನಿಕಂ ಬಳಿಕ ಕರ।
ಯುಗಳಂ ಮುಗಿದು ಕಿರೀಟಿಗೆ ವಿನಯದಿಂದ ಒನ್ನೈಸಿದಂ ಕರ್ಣಸೂನು॥೧೩॥
ಪ್ರತಿಪದಾರ್ಥ :- ಅನುಸಾಲ್ವಕನ= ಸಾಲ್ವನ ಮಗನಾದ ಅನುಸಾಲ್ವಕನ, ಸೇನೆ= ಸೈನ್ಯವು, ಅರಿಬಲವನು= ಶತ್ರು ಸೈನ್ಯವನ್ನು, ಎರೆಯುಗಿದ= ಪರೆಯನ್ನು ಬಿಟ್ಟ, ಫಣಿಕುಲದಂತೆ =ಹಾವುಗಳ ಸಮೂಹದ ಹಾಗೆ, ಮೊಗದುದು= ಆವರಿಸಿ-
ಕೊಂಡಿತು, ಮತ್ತು ರಣದವಕ= ಯುದ್ಧಾಕಾಂಕ್ಷೆಯು,ಮೊಗದೊಡಗಿತು= ಉಪಕ್ರಮವಾಯಿತು, ಅಂಬುಧಿಯ= ಕಡಲಿನ, ತೆರೆಯಂತೆ= ಅಲೆಯ ಹಾಗೆ, ಯೌವನಾಶ್ವನ = ಯೌವನಾಶ್ವನೆಂಬುವನ, ಸೇನೆ=ಸೈನ್ಯವು, ಒಂದೆಸೆಯೊಳು= ಒಂದು ದಿಕ್ಕಿನಲ್ಲಿ ,ಮೊಗದೊಡಗಿತು= ಎದುರಾಗಿ ನಿಂತಿತು, ನೀಲಧ್ವಜನ = ಜ್ವಾಲೆಯ ಗಂಡನ, ಸೈನಿಕಂ= ಸೇನೆಯು, ಯುಗದಂತ್ಯದ= ಪ್ರಪಂಚನಾಶಸಮಯದ, ಅಭ್ರದಂತೆ= ಮೋಡದಂತೆ, ಸಂಯುಗಕೆ= ಕಾಳಗಕ್ಕೆ, ಉರವಣಿಸಿ= ರೇಗಿ, ಎದ್ದುದು= ಸಿದ್ಧವಾಯಿತು, ಬಳಿಕ = ಅನಂತರದಲ್ಲಿ, ಕರ್ಣಸೂನು= ವೃಷಧ್ವಜನು, ಕರಯುಗಳಂ= ಕೈಗಳೆರಡನ್ನೂ, ಮುಗಿದು= ಸೇರಿಸಿಕೊಂಡು, ಕಿರೀಟಿಗೆ = ಪಾರ್ಥನಿಗೆ, ವಿನಯದಿಂದ= ನಮ್ರತೆಯಿಂದ,ಬಿನ್ನೈಸಿದಂ= ಅರಿಕೆ ಮಾಡಿಕೊಂಡನು.
ಅ॥ವಿ॥ಸಾಲ್ವನ ಮಗ=ಅನುಸಾಲ್ವ, ಅರಿಯ+ಬಲ= ಅರಿಬಲ (ಷ.ತ.) ಎರೆಯನ್ನು+ಉಗಿದ( ಕ್ರಿರಿ. ಸ.) ಫಣಿಯ+ಕುಲ
(ಷ. ತ.) ಫಣ= ಹೆಡೆ, ಅದು ಉಳ್ಳದ್ದು ಫಣಿ, ಕರ=ಕೈ, ಕಿರಣ, ಆನೆಯ ಸೊಂಡಿಲು, ಕಾಣಿಕೆ.
ತಾತ್ಪರ್ಯ:- ಅನುಸಾಲ್ವಕನ ಸೇನೆಯು ಅರಿಬಲವನ್ನು ಪರೆಬಿಟ್ಟ ಫಣಿಯಂತೆ ಆವರಿಸಿಕೊಂಡುತು, ಮತ್ತು ಯೌವನಾಶ್ವನ ಸೇನೆಯು ಸಮುದ್ರದಲ್ಲಿ ಉಬ್ಬಿ ಮೇಲಕ್ಕೇಳುವ ತರಂಗದ ರೀತಿಯಿಂದ ಒಂದು ಭಾಗದಲ್ಲಿ ಆವರಿಸಿಕೊಂಡಿತು.ಮತ್ತೊಂದು ಕಡೆಯಲ್ಲಿ ನೀಲಧ್ವಜನೆಂಬ ವೀರನ ಸೈನ್ಯವು ಜಲಪ್ರಳಯದ ಮೇಘದ ರೀತಿಯಿಂದ ಮುತ್ತಿಗೆಯನ್ನು ಹಾಕಿತು. ಬಳಿಕ ಕರ್ಣನ ಮಗನಾದ ವೃಷಧ್ವಜನು ಕೈಗಳಂ ಮುಗಿದುಕೊಂಡು ನಮ್ರಭಾವದಿಂದ ಅರಿಕೆ ಮಾಡಿಕೊಂಡನು.
ತಾತ ಚಿತ್ತೈಸು ಗೋಷ್ಟದಜಲಕೆ ಹರಿಗೋಲ।
ದೇತಕೆ ವೃಥಾ ಕುದುರೆಮಂದಿಯಂ ನೋಯಿಸದಿ।
ರೀತಳನೆಲ್ಲರಂ ತೆಗೆಸೆನಗೆ ಸೆಲವಿಂದಿನಾಹವಂ ಪರಬಲವನು॥
ಘಾತಿಸಿ ತುರಂಗಮಂ ತಾರದೊಡೆ ಬಳಿಕ ರವಿ।
ಜಾತನ ಕುಮಾರಕನೆನೋಡು ಸಾಕೆನುತ ವೃಷ।
ಕೇತು ಪಾರ್ಥನ ಬೆಸಂಬಡೆದು ರಥವೇರಿದಂ ಮೀರಿದ ಪರಾಕ್ರಮದೊಳು॥೧೪॥
ತಾತ= ಎಲೈ ತಂದೆಯಾದ ಪಾರ್ಥನೆ! ಗೋಷ್ಟದ= ಆಕಳಿನ ಹೆಜ್ಜೆಯಲ್ಲಿ ನಿಂತಿರುವ, ಜಲಕೆ=ನೀರಿಗೆ, ಹರಿಗೋಲು= ದೋಣಿಯು, ಅದೇತಕೆ= ತರುವುದರಿಂದೇನು ಫಲ, ವೃಥಾ= ನಿಷ್ಕಾರಣವಾಗಿ, ಕುದುರೆ= ಅಶ್ವಗಳನ್ನು, ಮಂದಿಯಂ= ಜನರನ್ನೂ, ನೋಯಿಸದಿರಿ= ಆಯಾಸಪಡಿಸಬೇಡಿ, ಈತಗಳನೆಲ್ಲರಂ= ಹೊರಟಿರುವ ಇವರೆಲ್ಲರನ್ನೂ, ತೆಗೆಸು= ಹಿಂದಕ್ಕೆ ಬರಮಾಡು, ಇಂದಿನ= ಈ ಹೊತ್ತಿನ, ಆಹವಂ= ಕಾಳಗವು, ಎನಗೆ= ನನಗೆ, ಸೆಲವು= ಅನುಜ್ಞೆಯಾಗಲಿ, ಪರಬಲವನು= ಅರಿಸೇನೆಯನ್ನು, ಘಾತಿಸಿ= ನಾಶಮಾಡಿ, ತುರಂಗಮಂ = ನಮ್ಮ ಕುದುರೆಯನ್ನು, ತಾರದೊಡೆ= ತರದೇ ಇದ್ದರೆ, ಬಳಿಕ = ರವಿಜಾತನ= ಕರ್ಣನ, ಕುಮಾರಕನೇ= ಮಗನಾದೇನೆ, ನೋಡು= ಈಕ್ಷಿಸು, ಸಾಕು=ಬಲಹೀನನೆಂಬ ಅನುಮಾನವನ್ನು ಬಿಡು, ಎನುತ= ಎಂದು ಹೇಳುತ್ತಾ, ವೃಷಕೇತು= ವೃಷಧ್ವಜನು, ಪಾರ್ಥನ = ಫಲ್ಗುಣನ, ಬೆಸಂ= ಅನುಜ್ಞೆಯನ್ನು, ಬಡೆದು=ಹೊಂದಿ, ಮೀರಿದ= ಅತಿಕ್ರಮಿಸಿದ, ಪರಾಕ್ರಮದೊಳು= ಶೌರ್ಯದಿಂದ, ರಥಂ=ತೇರನ್ನು, ಏರಿದಂ=ಹತ್ತಿದನು.
ಅ॥ವಿ॥ ಗೋವಿನ+ಪದ(ಷ. ತ.) ಹೆಜ್ಜೆ ಹಳಗನ್ನಡ ಪಜ್ಜೆ, ರವಿಯಿಂದ+ ಜಾತ ( ತೃ. ತ.)
ತಾತ್ಪರ್ಯ:- ಎಲೈ ತಾತನಾದ ಧನಂಜಯನೇ! ಆಕಳಿನ ಹೆಜ್ಜೆಯ ಗುರುತಿನಲ್ಲಿ ನಿಂತಿರುವ ಜಲಕ್ಕೆ( ಅದನ್ನು ದಾಟಲು) ತೆಪ್ಪ ಬೇಕಾದೀತೆ? ಅದೇಕೆ ವೃಥಾ ಸೈನಿಕರನ್ನು ನೋಯಿಸುತ್ತಿ? ಇವರನ್ನೆಲ್ಲಾ ಹಿಂದಕ್ಕೆ ಬರುವಂತೆ ಮಾಡು, ಈ ದಿನ ನನಗೆ ಅನುಜ್ಞೆಯಾದಲ್ಲಿ ಶತ್ರು ಸೈನ್ಯವನ್ನೆಲ್ಲಾ ನಾಶಮಾಡಿ, ಕುದುರೆಯನ್ನು ಬಿಡಿಸಿ ತರುವೆನು, ಹಾಗೆ ತಾರದಿದ್ದರೆ ನನ್ನನ್ನು ಸೂತ ಪುತ್ರನಾದ ಕರ್ಣನ ಕುಮಾರನೆಂದು ಕರೆದಾರೆ! ನಾನು ಬಾಲಕನೆಂದು ಅನುಮಾನಬೇಡ, ನನ್ನ ಪರಾಕ್ರಮವಾದರೂ ನೋಡೆಂದು ರಥವನ್ನೇರಿದನು.
ತಾರಕಾಸುರನ ಪೆರ್ಬಡೆಗೆ ಮೈದೋರುವ ಕು।
ಮಾರನಂ ತಾನಭ್ರಮಾರ್ಗದೋಳ್ ಸುಳಿವ ಮುಂ।
ಗಾರಮಿಂಚಂ ತನ್ನ ಹೊಂದೇರುಗಿರಿಗೆರಗುವಶನಿಯಂ ತನ್ನ ಘಾತಿ॥
ಪೇರಡವಿಗೈದುವ ದವಾಗ್ನಿಯಂ ತನ್ನ ಪ್ರ।
ಚಾರಂ ನೆಗಳ್ದ ನಡುವಗಲ ರವಿಯಂ ತನ್ನ।
ವೀರಪ್ರತಾಪಂ ತಿರಸ್ಕರಿಸೆ ವೃಷಕೇತು ರಿಪುಸೈನ್ಯಮಂ ಪೊಕ್ಕನು॥೧೫॥
ತಾನು=ವೃಷಧ್ವಜನು, ತಾರಕಾಸುರನ= ತಾರಕನೆಂಬ ದೈತ್ಯನ, ಪೆರ್ಬಡೆಗೆ= ದೊಡ್ಡದಾದ ಸೈನ್ಯಕ್ಕೆ, ಮೈದೋರುವ= ಎದುರಾಗಿ ಪ್ರವೇಶಿಸುವ, ಕುಮಾರಕನಂ= ಸುರಸೇನಾಧಿಪತಿಯಾದ ಗುಹನನ್ನು, ತನ್ನ=ತನ್ನಯ, ಹೊಂದೇರ= ಸುವರ್ಣಮಯವಾದ ರಥವು, ಅಭ್ರಮಾರ್ಗದೋಳ್= ಅಂತರಿಕ್ಷದಲ್ಲಿ ( ಮೇಘಮಾರ್ಗದಲ್ಲಿ) ಸುಳಿವ= ತಿರುಗಾಡುವ, ಮುಂಗಾರಮಿಂಚು= ಕಾರ್ಗಾಲದ ಅವಧಿಯಲ್ಲಿ ಉಂಟಾಗುವ ಹೊಳಪನ್ನು, ತನ್ನಘಾತಿ= ತನ್ನಯ ಪೆಟ್ಟು, ಜಲಕ್ಕನೆ= ಉದುಕಕ್ಕೆ, ಎರಗುವ= ತಗಲುವ, ಅಶನಿಯಂ= ಸಿಡಿಲನ್ನು, ತನ್ನ=ತನ್ನಯ, ಪ್ರಚಾರಂ=ಅಭಿವೃದ್ಧಿಯು, ಹೇರಡವಿಗೆ= ದೊಡ್ಡ ಕಾಡಿಗೆ, ಐದು = ಉಂಟಾಗುವ, ದವಾಗ್ನಿಯಂ= ಕಾಡುಗಿಚ್ಚನ್ನು ,ತನ್ನವೀರಪ್ರತಾಪಮಂ= ಶೂರತ್ವದ ಆಟೋಪವು, ನೆಗಳ್ದು= ಆವರಿಸಿ, ನಡುವಗಲರವಿಯಂ= ಮಧ್ಯಾಹ್ನದ ಭಾನುವನ್ನು, ತಿರಸ್ಕರಿಸೆ= ಹೀಯಾಳಿಸುತ್ತಿರಲು, ವೃಷಕೇತು= ಕರ್ಣನ ಮಗನಾದ ವೃಷಧ್ವಜನು, ರಿಪುಸೈನ್ಯಮಂ= ಅರಿಬಲವನ್ನು, ಪೊಕ್ಕನು.
ಅ॥ವಿ॥ ಕಾರಿನ+ಮುಂದು(ಅ.ಸ.) ವೀರರ+ ಪ್ರತಾಪ (ಷ.ತ.) ವೀರ(ತ್ಸ) ಬೀರ(ತ್ಭ) ಅರಣ್ಯದಲ್ಲಿ ಕಾಳ್ಗಿಚ್ಚು, ಭೂಮಿಯಲ್ಲಿ ಗರ್ಭಾಗ್ನಿಯೂ,ಸಮುದ್ರದಲ್ಲಿ ಬಾಡಬಾಗ್ನಿಯೂ ಇರುವುವಂತೆ.
ತಾತ್ಪರ್ಯ:- ಆಗ ವೃಷಕೇತುವು ತಾರಕಾಸುರನ ದೊಡ್ಡದಾದ ಸೈನ್ಯಕ್ಕೆ ಎದುರು ಪಕ್ಷವಾಗಿ ಹೋಗುವ ದೇವತೆಗಳ ಸೇನಾಧ್ಯಕ್ಷನಾದ ಗುಹನನ್ನು, ತನ್ನ ಸುವರ್ಣಮಯವಾದ ರಥವು ಅಂತರಿಕ್ಷಮಾರ್ಗದಲ್ಲಿ ಸಂಚರಿಸುವ ಮುಂಗಾರು ಮಳೆಯಲ್ಲಿಬರು ಮಿಂಚನ್ನು, ತನ್ನ ಹೊಡೆತವು ನೀರಿಗೆ ಹೊಡೆಯುವ ಅಶನಿಯನ್ನು , ತನ್ನ ವ್ಯಾಪನೆಯು ಹೇರಡವಿಗೆ ಬಂದುಹೋಗುವ ದವಾನಲನನ್ನು, ತನ್ನ ಶೂರತ್ವದ ಆಟೋಪವು ಮೇಘಾವರಣವಿಲ್ಲದೆ ವ್ಯಾಪಿಸಿ, ಮಧ್ಯಾಹ್ನ ಕಾಲದ ಭಾಸ್ಕರನನ್ನೂ ತಿರಸ್ಕಾರ ಮಾಡುತ್ತಿರಲು, ವೃಷಧ್ವಜನುಅರಿಬಲವನ್ನು ಹೊಕ್ಕನು.
ದೂರದೊಳ್ ಕಂಡಂ ಸುಧನ್ವನಾತನ ಬರವ।
ನಾರಿವಂ ಪಾರ್ಥನಾದೊಡೆ ಕಪಿಧ್ವಜಮಿಹುದು।
ದಾರವೃಷಭಾಂಕಿತದ ಕೇತುದಂಡದ ಸುಭಟನಾವನೋ ಪಾಂಡವರೊಳು॥
ವೀರನಹನೆನುತ ಬಂದಿದಿರಾಗಿ ನಿಂದು ಪರಿ।
ವಾರಮಂ ತೆಗೆಸಿ ಬಿಲ್ದಿರುವನೊದರಿಸುತೆ ಕೈ।
ವಾರಿಸುತೆ ನಸುನಗುತೆ ಬಾಣಮಂ ತೂಗುತಿನಸುತಜನಂ ಬೆಸಗೊಂಡನು॥೧೬॥
ಪ್ರತಿಪದಾರ್ಥ :- ಸುಧನ್ವಂ= ಸುಧನ್ವನು, ಆತನ=ಆ ವೃಷಧ್ವಜನ, ಬರವನು= ಬರುವಿಕೆಯನ್ನು, ದೂರದೋಳ್= ದೂರದಿಂದಲೇ, ಕಂಡನು= ನೋಡಿದನು, ಇವಂ=ಈತನು, ಆರು=ಯಾರಾಗಿರಬಹುದು,ಪಾರ್ಥನಾದೊಡೆ= ಫಲ್ಗುಣನು ಆಗಿದ್ದರೆ, ಕಪಿಧ್ವಜಂ= ಕೇತುವಿನಲ್ಲಿ ಕೋತಿಯನ್ನುಳ್ಳದ್ದಾಗಿ, ಇಹುದು= ಇರುವುದು, ಉದಾರ= ಹೆಚ್ಚಾದ, ವೃಷಭ= ಎತ್ತೇ,ಅಂಕಿತದ= ಚಿಹ್ನೆಯುಳ್ಳ, ಕೇತುದಂಡದ =ಟೆಕ್ಕೆಯ ಕಂಬದ, ಸುಭಟನು= ವೀರನು ಅಹನು= ಆಗಿರುವನು, ಎನುತ= ಎಂದು ಹೇಳುತ್ತ, ಬಂದು= ಬಂದವನಾಗಿ, ಇದಿರಾಗಿ= ಎದುರಾಗಿ, ನಿಂದು=ನಿಂತುಕೊಂಡು, ಪರಿವಾರಮಂ= ತನ್ನ ಸುತ್ತಲಿದ್ದ ಜನವನ್ನು, ತೆಗೆಸಿ= ಅಡ್ಡ ಬರದಂತೆ ಮಾಡಿ, ಬಿಲ್ದಿರುವನು=ಧನಸ್ಸಿನ ಹಗ್ಗವನ್ನು, ಒದರಿಸುತ= ಟಂಕಾರ ಧ್ವನಿ ಮಾಡುತ್ತಾ, ಕೈವಾರಿಸುತ= ಕೈ ಬಡಿಯುತ್ತ, ಶ್ಲಾಘಿಸುತ= ಸ್ತುತಿಸುತ್ತಾ, ನಸುನಗುತ= ಮುಗುಳ್ನಗುತ್ತಾ, ಬಾಣಮಂ= ಅಂಬನ್ನು, ತೂಗುತ= ತಿರುಗಿಸುತ್ತಾ, ಇನ= ಸೂರ್ಯನ, ಸುತಪುತ್ರನಾದ ಕರ್ಣನಿಂದ, ಜನಂ= ಜನಿಸಿದ, ವೃಷಕೇತುವನ್ನು, ಬೆಸಗೊಂಡನು= ಮಾತಾಡಿಸಿದನು.
ಅ॥ವಿ॥ ಇನ= ಸೂರ್ಯ, ಗಂಡ, ಕೈಯಂ+ಬಾರಿಸು (ಕ್ರಿ. ಸ.) ಬಿಲ್+ತಿರುವು(ದ. ಆ .ಸಂ) ಸುಷ್ಠು+ಭಟ=ಸುಭಟ.
ತಾತ್ಪರ್ಯ:- ಆ ಬಳಿಕ ಸುಧನ್ವನು, ವೃಷಕೇತುವಿನ ಬರುವಿಕೆಯನ್ನು ನೋಡಿ ಇವನು ಯಾರಿರಬಹುದು? ಅರ್ಜುನನಾಗಿದ್ದ ಪಕ್ಷದಲ್ಲಿ ಕಪಿಧ್ವಜನಲ್ಲವೆ? ದೊಡ್ಡದಾದ ಹೋರಿಯೇ ಧ್ವಜದಲ್ಲುಳ್ಳವನಾಗಿದ್ದಾನೆ, ವೀರಭಟನಾಗಿರುವನು ಎಂದು ಹೇಳುತ್ತಾ ತನ್ನ ಸೈನ್ಯವನ್ನು ಕ್ರಮಗೊಳಿಸಿ, ವೃಷಧ್ವಜನಿಗೆದುರಾಗಿ ಬಂದು ನಿಂತು ಬಿಲ್ಲಿನ ಹೆದೆಯನ್ನು ಸರಿಪಡಿಸಿಕೊಳ್ಳುತ್ತಾ ಕರ್ಣನ ಪುತ್ರನಾದ ವೃಷಕೇತುವನ್ನು ಈ ರೀತಿಯಾಗಿ ವಿಚಾರಿಸಿದನು.
ಎಲವೊ ನೀನಾರ್ ನಿನ್ನ ಪೆಸರದೇನಾವರ್ಷಿ।
ಕುಲದವಂ ನಿನ್ನ ಪಿತನಾವಾತನೆಂಬುದಂ।
ತಿಳಿಪೆನಗೆ ತಾನೀಗ ವೀರಹಂಸಧ್ವಜನೃಪನ ಕುಮಾರಂ ತನ್ನನು॥
ಇಳೆಯೊಳ್ ಸುಧನ್ವನೆಂಬರ್ ಮಧುಚ್ಛಂದಮುನಿ।
ತಿಲಕನಿಂದಾಯ್ಯೆಮ್ಮ ವಂಶಮೆನೆ ಕರ್ಣಜಂ।
ಬಳಿಕ ನಸುನಗೆಯೊಳೆಡಗೈಯ್ಯ ಕೋದಂಡಮಂ ತಿರುಗಿಸತ್ತಿಂತೆಂದನು೧೭॥
ಪ್ರತಿಪದಾರ್ಥ :- ಎಲವೊ =ಎಲೈ, ನೀನು ಆರು= ನೀನು ಯಾರು? ನಿನ್ನ ಪೆಸರು= ನಿನ್ನ ನಾಮಧೇಯವು, ಅದೇನು= ಯಾವುದು? ಆವರ್ಷಿ ಕುಲದವನು= ಯಾವ ಋಷಿಕುಲ ಪ್ರಸೂತನು, ನಿನ್ನ ಪಿತನು= ನಿನ್ನ ತಂದೆಯು, ಆವಾತನು= ಯಾರು? ಎಂಬುದಂ= ಎಂಬ ವಿಷಯವನ್ನು, ಎನಗೆ=ನನಗೆ, ತಿಳಿಸು=ತಿಳಿಯಪಡಿಸು, ತಾನು=ನಾನು,ವೀರ=ಪರಾಕ್ರಮಿ-
ಯಾದ, ಹಂಸಧ್ವಜ ನೃಪನ= ಹಂಸಧ್ವಜನೆಂಬ ರಾಜನ, ಕುಮಾರಂ= ಪುತ್ರನು, ತನ್ನಂ=ನನ್ನನ್ನು, ಇಳೆಯೋಳ್= ಭೂಮಿಯಲ್ಲಿ, ಸುಧನ್ವಂ= ಸುಧನ್ವನು, ಎಂಬರ್= ಎಂದು ಕರೆಯುವರು, ಎಮ್ಮ= ನಮ್ಮ, ವಂಶಂ= ಗೋತ್ರವು, ಮಧುಚ್ಛಂದ ಮುನಿಯಿಂ= ಮಧುಚ್ಛಂದ ಮಹರ್ಷಿಯಿಂದ, ಆಯಿತು=ನಿರ್ಮಿತವಾಯಿತು, ಎನೆ= ಎಂದು ಹೇಳಲಾಗಿ, ಕರ್ಣಜಂ= ಕರ್ಣನ ಮಗನಾದ ವೃಷಕೇತುವು, ಬಳಿಕ=ಅನಂತರದಲ್ಲಿ, ನಸುನಗೆಯೊಳು= ಮಂದಹಾಸದಿಂದ, ಎಡಕೈಯ= ಎಡಕೈಯಲ್ಲಿದ್ದ, ಕೋದಂಡಮಂ= ಧನುವನ್ನು, ತಿರುಗಿಸುತಲಿ= ತಿರುಗಿಸುತ್ತ, ಇಂತೆಂದನು= ಈ ಪ್ರಕಾರವಾಗಿ ಹೇಳಿದನು.
ಅ॥ವಿ॥ ಎಡದ-ಕೈ= ಎಡಗೈ, (ಷ. ತ.) ವಂಶ=ಕುಲ, ಬಿದಿರು, ಮಹ+ಋಷಿ=ಮಹರ್ಷಿ (ಗು. ಸಂ. )
ತಾತ್ಪರ್ಯ:- ಎಲವೊ ನೀನು ಯಾರು? ನಿನ್ನ ನಾಮಧೇಯವೇನು? ನೀನು ಯಾವ ಋಷಿಕುಲಕ್ಕೆ ಸೇರಿದವನು? ನಿನ್ನ ತಂದೆ ಯಾರು? ಎಂಬಂಶವನ್ನು ವಿವರಗೊಳಿಸುವನಾಗು. ನಾನಾದರೋ ಅಸಹಾಯಶೂರನಾದ ಚಂಪಕಾವತಿಯ ರಾಜನಾದ ಮರಾಳಧ್ವಜನ ಕುಮಾರನು, ನನ್ನನ್ನು ಪೃಥ್ವಿಯಲ್ಲಿ ಸುಧನ್ವನೆಂದು ತಿಳಿವರು, ನಮ್ಮ ಕುಲವಾದರೋ ಮಧುಚ್ಛಂದ ಮಹರ್ಷಿಯಿಂದಾದುದು ಎನಲು.
ಗೂಢಮಾಗಿರ್ದಲರ ಪರಿಮಳಂ ಪ್ರಕಟಿಸದೆ।
ರೂಢಿಸಿದ ವಂಶವಿಸ್ತಾರಮಂ ಪೌರುಷದ।
ಮೋಡಿಯಿಂದರಿಯಬಾರದೆ ಸಮರಸಾಧನಮಿದರೊಳಹುದೆ ನಿನಗಾದೊಡೆ॥
ಮೂಢ ಕೇಳ್ ಕಶ್ಯಪನ ಕುಲವೆಮ್ಮದೆಂಬರಾ।
ರೂಢನಾಗಿಹ ದಿನಮಣಿಯ ತನಯನಾಹವ।
ಪ್ರೌಢಕರ್ಣನ ಸುತಂ ಪೆಸರೆನಗೆ ವೃಷಕೇತುವೆಂದೊಡವನಿಂತೆಂದನು॥೧೮॥
ಪ್ರತಿಪದಾರ್ಥ :- ಗೂಢಂ ಆಗಿರ್ದ= ಅಂತರಂಗವಾಗಿದ್ದ, ಅಲರ= ಹೂವಿನ, ಪರಿಮಳಂ= ಸುವಾಸನೆಯು, ಪ್ರಕಟಿಸದೆ= ಬಹಿರಂಗಪಡಿಸದೆ ಹೋದೀತೆ, ರೂಢಿಸಿದ= ಬಹಿರಂಗವಾಗಿರುವ, ವಂಶ= ಗೋತ್ರದ, ವಿಸ್ತಾರಮಂ= ಬಿತ್ತರವನ್ನು
(ವಿವರವನ್ನು) ಪೌರುಷದ ಹೇಡಿಯಿಂದ= ಪರಾಕ್ರಮವುಳ್ಳ ಕೈಲಾಗದವನಿಂದ, ಅರಿಯಬಾರದು= ತಿಳಿಯತಕ್ಕದ್ದಲ್ಲ, ಸಮರಕೆ= ಯುದ್ಧಕ್ಕೆ, ಸಾಧನಂ= ಸಾಮಗ್ರಿಯು, ಇದರೋಳ್= ನನ್ನನ್ನು ವಿಚಾರಿಸಿ ತಿಳಿಯುವದ್ದರಿಂದ, ನಿನಗೆ= ಪರಾಕ್ರಮಿಯಾದ ನಿನಗೆ, ಅಹುದೆ= ಆದೀತೆ, (ಆಗಲಾರದು) ಮೂಢ= ಅಜ್ಞಾನಿಯೆ,ಕೇಳ್= ತಿಳಿ, ಕಶ್ಯಪನ= ಕಶ್ಯಪ-
ಋಷಿಯ, ಕುಲವು= ಗೋತ್ರವು, ಎಮ್ಮದು= ನಮ್ಮದಾಗಿರುವುದು, ಎಂಬರು= ಈ ವಿಧದಿಂದ ಜನರು ಹೇಳುತ್ತಾರೆ, ಆರೂಢಂ ಆಗಿಹ= ಆ ಹೆಸರುವಾಸಿಯಾಗಿರುವ, ದಿನಮಣಿಯ = ಸೂರ್ಯನ, ತನಯನು= ಕುಮಾರನು, ಆಗಿ= ಆಗಿರುವ, ಆಹವ= ಕಾಳಗದಲ್ಲಿ, ಪ್ರೌಢ= ಬಲಾಢ್ಯನಾದ, ಕರ್ಣಸುತಂ= ಕರ್ಣನಿಗೆ ಪುತ್ರನು. ಎನಗೆ= ನನಗೆ, ಪೆಸರು= ಹೆಸರು, ವೋಷಕೇತುವು= ವೃಷಧ್ವಜನು. ಎಂದೊಡೆ= ಎಂದು ತಿಳಿಯಪಡಿಸಲು, ಅವನು= ಆ ಸುಧನ್ವನು, ಇಂತೆಂದನು= ಮುಂದಿನಂತೆ ಹೇಳಿದನು.
ಅ॥ವಿ॥ ವಂಶ= ಬಿದಿರು, ಸಂತತಿ, ಅಲರಿನ+ಪರಿಮಳ(ಷ. ತ.) ದಿನದ+ಮಣಿ( ಷ.ತ.) ಮಣಿ=ರತ್ನ, ನಮಸ್ಕಾರಮಾಡುವುದು, ಕರ್ಣ=ಕಿವಿ, ಸೂರ್ಯಪುತ್ರ.
ತಾತ್ಪರ್ಯ:- ಆ ಬಳಿಕ ವೃಷಧ್ವಜನು ಕೋದಂಡವನ್ನು ಕೈಯಲ್ಲಿ ತಿರುವುತ್ತ, ಗುಪ್ತವಾಗಿದ್ದ ಪುಷ್ಪದ ಪರಿಮಳವು ವ್ಯಕ್ತವಾಗದೆ ಹೋದೀತೆ? ನನ್ನ ಕುಲಗೋತ್ರಾದಿಗಳನ್ನು ವಿಚಾರಿಸುವುದು ಹೇಡಿಯಾದ ನಿನ್ನಿಂದಾದೀತೆ? ಸುಲಭೋಪಾಯವಾಗಿ ನಿನ್ನಿಂದ ತಿಳಿಯಲಾದೀತೆ? ಎಲೋ ಮೂಢನೆ ! ಕೇಳು, ನಾನು ಕಶ್ಯಪ ಋಷಿಯ ಕುಲದವನು, ಎಮ್ಮ ತಂದೆಯು ಸೂರ್ಯ ಪುತ್ರನಾದ ಕರ್ಣನೇ, ನಾನು ಅಂಥಾ ಕರ್ಣನಿಗೆ ಮಗನಾಗಿರುವೆನು, ಇಳೆಯೊಳಗೆನ್ನಂ ವೀರ ವೃಷಾಂಕನೆಂದಪರು, ಎನಲಾಗಿ, ಆಗ ಸುಧನ್ವನು,
ಕರ್ಣಸುತನಾದೊಡೊಳ್ಳಿತು ವೀರನಹುದು ನೀಂ।
ನಿರ್ಣಯಿಸಬಲ್ಲೆ ರಣರಂಗಮಂ ಮೂಢರಾಂ।
ವರ್ಣಕದ ಮಾತುಗಳನರಿಯೆವೆನುತೆಚ್ಚಂ ಸುಧನ್ವನೀತನಸರಿಸಕೆ॥
ಸ್ವರ್ಣಪುಂಖದ ಕಣೆಗಳೈದಿದುವು ಮಿಂಚಿನ ಪೊ।
ಗರ್ನಭೋಮಂಡಲವನಂಡಲೆಯಲಾಕ್ಷಣಂ।
ದುರ್ನಿರೀಕ್ಷಣಮಾಗಲೆಡೆಯೊಳವನೆಲ್ಲವಂ ತರಿದಿವಂ ಕೋಲ್ಗರೆದನು॥೧೯॥
ಪ್ರತಿಪದಾರ್ಥ :- ಕರ್ಣಸುತನು= ಕರ್ಣನಿಗೆ ಮಗನು, ಆದೊಡೆ= ಆಗಿದ್ದರೆ, ಒಳ್ಳಿತು= ಮೇಲಾಯಿತು, ವೀರನು= ಸಮರ್ಥನು, ಅಹುದು=ಆಗಿರಬಹುದು, ರಣರಂಗಮಂ= ಯುದ್ಧರಂಗವನ್ನು, ನೀ= ನೀನು, ನಿರ್ಣೈಸಬಲ್ಲೆ= ದೃಢಪಡಿಸಬಲ್ಲೆ, ಆವು= ನಾವಾದರೋ, ಮೂಢರು= ಏನೂ ತಿಳಿಯದವರು, ವರ್ಣಕದ= ಜಂಭದ, ಮಾತುಗಳಂ= ಮಾತುಗಳನ್ನು, ಅರಿಯೆವು= ತಿಳಿದವರಾಗಿಲ್ಲ,ಎನುತ= ಎಂದು ಹೇಳುತ್ತ, ಸುಧನ್ವಂ= ಸುಧನ್ವನು, ಎಚ್ಚಂ= ಬಾಣ ಪ್ರಯೋಗ ಮಾಡಿದನು, ಈತನ= ಈ ವೃಷಧ್ವಜನ, ಸರಿಸಕೆ= ಸಮೀಪಕ್ಕೆ, ಸ್ವರ್ಣ= ಕಾಂಚನಯುಕ್ತವಾದ,ಪುಂಖದ= ರೆಕ್ಕೆಗಳುಳ್ಳ, ಕಣೆಗಳು= ಅಂಬುಗಳು, ಐದಿದವು= ಹೊಂದಿದವು, ಮಿಂಚಿನ= ಹೊಳಪಿನ, ಒಗರ್=ಕಾಂತಿಯು,
ನಭೋಮಂಡಲವನ್ನು= ಅಂತರಿಕ್ಷವನ್ನು, ಅಂಡಲೆಯಲು= ತುಂಬಿಬರಲು, ಆಕ್ಷಣಂ= ಆ ಕಾಲವು, ದುರ್ನಿರೀಕ್ಷಣಂ= ನೋಡಲು ಕಷ್ಟವಾದದ್ದು,ಆಗಲು= ಆಗಲಾಗಿ, ಅವಂ= ಆ ವೃಷಧ್ವಜನು, ಅವಂ= ಎಲ್ಲ ಬಾಣಗಳನ್ನೂ,ಎಡೆಯೊಳು= ಬರುತ್ತಿರುವ ಮಾರ್ಗದಲ್ಲಿಯೇ, ತರಿದು=ತುಂಡುಮಾಡಿ, ಕೋಲ್ಗರೆದನು= ಬಾಣಗಳನ್ನು ಸುರಿಸಿದನು.
ಅ॥ವಿ॥ ಕೋಲ್+ ಕರೆ= ಗ ಕಾರ ಆದೇಶ ಸಂಧಿ, ಸ್ವರ್ಣ(ತ್ಸ)ಚಿನ್ನ (ತ್ಭ)
ತಾತ್ಪರ್ಯ:- ವೃಷಧ್ವಜನಂ ಕುರಿತು ಎಲೋ! ನೀನು ಕರ್ಣನ ಮಗನೇ ಆಗಿರಬಹುದು, ಆದರೆ ಬಹು ಒಳ್ಳೇದಾಯಿತು, ಯುದ್ಧರಂಗದಲ್ಲಿ ನಿನ್ನನ್ನು ನೀನುಚಮತ್ಕಾರವಾಗಿ ಕಾಪಾಡಿಕೊಳ್ಳಲು ಬಲ್ಲವನಾಗಿರುತ್ತಿ, ನಾವೇನೋ ಮೂಢರೆಂಬುದನ್ನು ಬಲ್ಲೆ, ನಿನ್ನಂತೆ ಬಿನ್ನಾಣದ ಮಾತುಗಳನ್ನು ಅರಿತವರಲ್ಲ,ಎಂದು ಬಾಣವಂ ಪ್ರಯೋಗಿಸಲುಅವು ವೃಷಧ್ವಜನ ಹತ್ತಿರಕ್ಕೆ ಮಿಂಚನ್ನು ತಿರಸ್ಕರಿಸು ವಚಿನ್ನದ ಪುಂಖಗಳುಳ್ಳ ಗರಿಗಳಿಂದಾವೃತಮಾದದ್ದಾಗಿ ಬರುತ್ತಿರಲು ದಾರಿಯಲ್ಲಿಯೇ ಕತ್ತರಿಸಿ, ವೃಷಧ್ವಜನು ಆ ಸುಧನ್ವನ ಮೇಲೆ ಬಾಣವೃಷ್ಟಿಯಂ ಸುರಿಸಿದನು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ