ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಅಕ್ಟೋಬರ್ 4, 2025

ಜೈಮಿನಿ ಭಾರತ 17 - ದೊಡ್ಡಬೆಲೆ ನಾರಾಯಣಶಾಸ್ತ್ರೀ

ಜೈಮಿನಿ ಭಾರತ 17 - ದೊಡ್ಡಬೆಲೆ ನಾರಾಯಣಶಾಸ್ತ್ರೀ


ಸೂಚನೆ:- ವಿನಯದಿಂದೈತಂದು ಕಾಣಲ್ಕೆ ಬಭ್ರುವಾ। 

ಹನನಂ ಜರೆದು ನರಂ ನೂಕಿದೊಡಂ ಬಳಿಕವಂ।

ಕನಲಿ ಪಾರ್ಥನ ಚಾತುರಂಗದೊಳ್ ಕಾದಲ್ಕೆ ಸೇನೆಸಹಿತಿದಿರಾದನು॥


ಪ್ರತಿಪದಾರ್ಥ :- ವಿನಯದಿಂದ = ನಮ್ರಭಾವದಿಂದ, ಐತಂದು= ಬಂದು, ಕಾಣಲ್ಕೆ= ಕಾಣಲಾಗಿ, ಆ ಪಾರ್ಥಂ= ಆ ಅರ್ಜುನನು, ಬಭ್ರುವಾಹನನಂ= ಬಭ್ರುವಾಹನನೆಂಬವನನ್ನು, ಜರೆದು= ಹೀಯಾಳಿಸಿ, (ದೂಷಿಸಿ, ತಿರಸ್ಕರಿಸಿ) ನೂಕಿದೊಡೆ= ಕಳುಹಿಸಲಾಗಿ,  ಚಾತುರಂಗದೊಳ್= ಚತುರಂಗ ಸೇನೆಯೊಡನೆ, ಕಾದಲ್ಕೆ= ಕಾಳಗಮಾಡಲೋಸುಗವಾಗಿ, ಸೇನೆ=ತನ್ನ ಸೈನ್ಯದ,ಸಹಿತ=ಸಂಗಡ, ಇದಿರಾದನು= ಎದುರುಗೊಂಡನು.


ಅ॥ವಿ॥ ಕಲಿಯಾದ ಪಾರ್ಥ= ಕಲಿಪಾರ್ಥ(ವಿ. ಪೂ. ಕ. ) ಬಭ್ರು= ಮುಂಗುಸಿಯೇ, ವಾಹನ= ಧ್ವಜದಲ್ಲುಳ್ಳವನು=ಬಭ್ರು-

ವಾಹನ(ಬ. ಸ. ) 


ಭೂಭುಜಲಲಾಮ ಕೇಳಿಂದ್ರತನಯನ ತುರಗ। 

ಮಾಭೀಷಣನ ಸೀಮೆಯಂ, ಕಳೆದು ಬರೆ ಮುಂದೆ। 

ಶೋಭಿಸಿತು ವರ್ಷಾಗಮಂ ಧರೆಯ ಬೇಸಗೆಯ ಬೇಸರಂ ತವೆ ತನಿಸುತೆ॥ 

ಲಾಭಿಸುವ ಚಾತಕಪ್ರೀತಿಯಂ ಕಂಡಸೂ। 

ಯಾಭರವನಂಚೆಗಳ್ ತಾಳಲಾರದೆ ಘನ। 

ಕ್ಷೋಭದಿಂದೋಡಿದುವು ಪರರ ಸಿರಿಯಂ ಸೈರಿಸರು ವಿಜಾತಿಯ ಜನರೆನೆ॥೧॥ 


ಭೂಭುಜ= ರಾಜರಲ್ಲಿ, ಲಲಾಮ= ತಿಲಕಪ್ರಾಯನಾದ ,ಜನಮೇಜಯರಾಯನೆ, ಕೇಳು= ಆಲಿಸು, ಇಂದ್ರತನಯ= ಇಂದ್ರ ಪುತ್ರನಾದ ಪಾರ್ಥನ, ಕುದುರೆ= ಯಜ್ಞಾಶ್ವವು, ಆ ಭೀಷಣನ= ಭೀಷಣನೆಂಬ ರಕ್ಕಸನ, ಸೀಮೆಯಂ= ರಾಜ್ಯವನ್ನು,  ಕಳೆದು= ದಾಟಿಕೊಂಡು, ಮುಂದೆ= ಮುಂದೆ ಬರುವ ಮಣಿಪುರಕ್ಕೆ, ಬರೆ= ಬರಲಾಗಿ, ವರ್ಷಾಗಮಂ= ಮಳೆಗಾಲವು, (ವರ್ಷ ಋತುವು) ಧರೆಯ= ಪೃಥ್ವಿಯ, ಬೇಸಗೆಯ= ಬಿಸಿಲಿನ ತಾಪದ,ಬೇಸರಂ= ಜುಗುಪ್ಸೆಯನ್ನು,ತವೆ= ಬಹುವಾಗಿ, ತವಿಸುತ= ದಹಿಸುತ್ತ( ಪರಿತಾಪ ಪಡಿಸುತ್ತ) ಲಾಭಿಸುವ= ಬರುವ(ಆಗಮಿಸುವ) ಚಾತಕ=ಮೇಘ ಪಕ್ಷಿಗಳ,(ಚಾತಕ ಪಕ್ಷಿಗಳ) ಪ್ರೀತಿಯಂ=ಲವಲವಿಕೆಯನ್ನು, ಕಂಡು=ನೋಡಿ, ಅಸೂಯಾ= ಸಹಿಸದೇ ಇರುವ,(ಹೊಟ್ಟೆ ಕಿಚ್ಚಿನ) ಭರವನು= ಹೊರೆಯನ್ನು, ಅಂಚೆಗಳ್= ಹಂಸಗಳು, ತಾಳಲಾರದೆ= ಸಹಿಸಲಾರದೆ, ಘನ= ಮೊಡಗಳ, ಕ್ಷೋಭದಿಂದ= ತೊಂದರೆಯಿಂದ, ಪರ=ಇತರರ, ಸಿರಿಯಂ= ವೈಭವವನ್ನು, (ಐಶ್ವರ್ಯವನ್ನು) ಸೈರಿಸದೆ= ತಾಳಲಾರದೆ, ವಿಜಾತೀಯ=

ಬೇರೊಂದು ಜಾತಿಯವರಾದ,ಜನರ=ಜನಗಳು, ಎನೆ=ಎನ್ನುವಂತೆ, ಓಡಿದುವು= ಓಡಿಹೋದವು, ಎನೆ= ಎನ್ನುವ ಹಾಗೆ, ಶೋಭಿಸಿತು= ಪ್ರಕಾಶಿಸಿತು. 


ಅ॥ವಿ॥ಭೂಭುಜರಲ್ಲಿ ಲಲಾಮ= ಭೂಭುಜಲಲಾಮ ( ಸ. ತ. ಸ. ) ಇಂದ್ರನ+ ತನಯ= ಇಂದ್ರ ತನಯ(ಷ. ತ.) ವರ್ಷ=ಮಳೆ, ಸಂವತ್ಸರ,ಘನ=ದೊಡ್ಡದು, ಮೇಘ, ಘನಾಕೃತಿ, ಸಿರಿ(ತ್ಭ)ಶ್ರೀ(ತ್ಸ) ಅಂಚೆ=ತ್ಭ) ಹಂಸ( ತ್ಸ), ಕನಲಿ=ರೇಗಿ, ಕನಕ=ಚಿನ್ನ, ವರ್ಷಾ+ಋತು= ವರ್ಷರ್ತು (ಗುಣ. ಸಂ) 


ತಾತ್ಪರ್ಯ:- ರಾಜಶ್ರೇಷ್ಠನಾದ ಜನಮೇಜಯರಾಯನೆ ಆಲಿಸು, ಅರ್ಜುನನು ಭೀಷಣನೆಂಬ ರಾಕ್ಷಸನನ್ನು ಜಯಿಸಿದ ಬಳಿಕ ಯಜ್ಞಾಶ್ವವು, ಇವನ ಮಗನಾದ, ಮುಂಗುಸಿಯೇ ಧ್ವಜವಾಗಿ ಉಳ್ಳ ಬಭ್ರುವಾಹನನ,ರಾಜಧಾನಿಯಾದ ಮಣಿಪು- 

ರಕ್ಕೆ ಬರಲಾಗಿ, ಶ್ರಾವಣ ಭಾದ್ರಪದ ಮಾಸಗಳಾದ ವರೂಷಾಕಾಲವು ಬರಲಾಗಿ, ಬೇಸಿಗೆಯ ಕಾಲದ ಬಿಸಿಲಿನ ತಾಪದಿಂದ, ಭೂಮಿಯಲ್ಲಿದ್ದ ತಾಪವು ಕಡಿಮೆಯಾಯಿತು. ಆಗ ಬೇಸರಿಕೆಯಿಂದ ಬಹುವಾಗಿ ತಾಪಪಡುತ್ತಿದ್ದ, ಚಾತಕಪಕ್ಷಿಗಳು ಬಹುವಾಗಿ ಹರ್ಷಿಸಿ ಮೇಘಾವರಣದಲ್ಲಿ ಬಾಯ್ದೆರೆದುಕೊಂಡು ನಲಿಯುತ್ತಿರುವುದನ್ನು ಕಂಡು ಅಸೂಯೆಯಿಂದ ನೊಂದ ಹಂಸಗಳು ಹೆಚ್ಚಾದ ವ್ಯಥೆಯಿಂದ ಗುಂಪಾಗಿ, ಒಬ್ಬರ ಐಶ್ವರ್ಯವನ್ನು ನೋಡಿ ಹೊಟ್ಟೆಕಿಚ್ಚು ಪಡುವ ವಿಜಾತೀಯ ಜನರ ಹಾಗೆ ಹೋಗುತ್ತ ಶೋಭಿಸಿದವು. 


ಎದ್ದುವು ಮುಗಿಲ್ಗಳೆಣ್ದೆಸೆಗಳೊಳ್ ತರತರದೊ। 

ಳಿದ್ದುವು ಗಿರಿಗಳಂತೆ ಮಿಂಚಿದುವು ದಿಗ್ವಧುಗ। 

ಳುದ್ದಂಡದಿಂದೆ ಪರ್ಜನ್ಯನಂ ಸೆಣಸಿ ನೋಡುವಚಲಾಪಾಂಗದಂತೆ॥ 

ಸದ್ದಾತೃವಾಗಿ ತನ್ನವೊಲಿರದ ಲೋಭಿಯಂ। 

ಗದ್ದಿಸುವ ತೆರದಿಂದೆ ಮೊಳಗಿದುವು ಧರಣಿಯೊಳ್। 

ಬಿದ್ದ ಮುಂಬನಿಯ ಕಂಪಿಂಗೆ ಸೊಗಸಲಾನೆಗಳ್ ಕೃಷಿಕತತಿ ನಲಿಯಲೊಡನೆ॥೨॥ 


ಪ್ರತಿಪದಾರ್ಥ :- ಆಗ=ಆ ವರ್ಷಾಕಾಲದಲ್ಲಿ,ಮುಗಿಲ್ಗಳ್= ಮೋಡಗಳು, ಗಿರಿಗಳಂತೆ= ಬೆಟ್ಟಗಳಹಾಗೆ, ಎಣ್ದೆಸೆಯೊಳ್= ಎಂಟು ದೆಸೆಗಳಲ್ಲಿಯೂ, ಎದುದುವೈ= ಹುಟ್ಟಿದವು, ಥರಥರದೊಳ್= ನಾನಾವಿಧಗಳಿಂದ,ಗಿರಿಗಳಂ= ಅಚಲಗಳ ಹಾಗೆ ಇದ್ದವು= ಬಗೆಬಗೆಯ ರೂಪಗಳಾಗಿದ್ದವು, ದಿಗ್ವಧುಗಳ್= ದೆಸೆಗಳೆಂಬ ಯುವತಿಯರು, ಪರ್ಜನ್ಯನಂ= ವೃಷ್ಟಿಯ ಅಧಿದೇ-

ವತೆಯನ್ನು, ಸೆಣಸಿ= ಕೋಪಗೊಂಡು, ನೋಡುವ=ಈಕ್ಷಿಸುವ, ಚಲ= ಚಲಿಸುತ್ತಿರುವ, ಅಪಾಂಗದಂತೆ= ಕಡೆಗಣ್ಣನೋ-

ಟದ ಹಾಗೆ, ಉದ್ದಂಡದಿಂದ= ಹೆಚ್ಚಿಗೆಯಿಂದ, ಮಿಂಚಿದವು= ಕಾಂತಿಯನ್ನು ತೋರ್ಪಡಿಸಿದವು, ತನ್ನವೋಲ್= ನನ್ನ ರೀತಿಯಿಂದ, ಸದ್ದಾತೃವಾಗಿ= ಉತ್ತಮವಾದ ದಾನಶೀಲನಾಗಿ, ಇರದ= ಇಲ್ಲದಿರುವ, (ದಾನಮಾಡದಿರುವ) ಲೋಭಿಯಂ = ಜಿಪುಣನನ್ನು, ಗದ್ದರಿಸೈವ= ಧಟ್ಟಿಸುವ, (ಗದರಿಸುವ) ತೆರದಿಂದ = ಬಗೆಯಿಂದ,  ಮೊಳಗಿದವು=ಧ್ವನಿಮಾಡಿದವು, ಚಾತಕ= ಚಾತಕ ಪಕ್ಷಿಯು, ಶುಕ=ಕೀರವು, ದ್ವಿಪ=ಗಜವು, ಕೃಷಿಕ= ಬೇಸಾಯಗಾರನು,(ಬೇಸಾಯಮಾಡುವ ಕಾಲ್ನಡೆಯು) 

ಶಿಖಿ=ಮಯೂರವು, ಎವೇ ಮೊದಲಾದವುಗಳಿಗೆ, ಮುಂ= ಹರೂಷವು, ಒದಗಲು= ಉಂಟಾಗಲು, ಹಂಸಾಳಿ= ಹಂಸಪಕ್ಷಿಗಳ ಗುಂಪು, ಆಗಸಕೆ= ಆಕಾಶಕ್ಕೆ,  ಸಾರ್ದವು= ಹೊಂದಿದವು(ಹೊಕ್ಕವು) 


ಅ॥ವಿ॥ ಎಂಟು ದೆಸೆಗಳ ಸಮಾಹಾರ= ಎಣ್ದೆಸೆ, ಸಮಾಹಾರ,(ದ್ವಿಗೈ. ಸ) ಹಂಸಗಳ+ಆಳಿ= ಹಂಸಾಳಿ( ಷ. ತ.) ಚಾತಕ(ತ್ಸ) ಚಾದಗೆ(ತ್ಭ) ಶುಕ=ಗಿಣಿ, ಶುಕಮುನಿ, ಅಂಚೆ(ತ್ಭ) ಹಂಸ(ತ್ಸ) ವರ್ಷ ಋತುವಿನಲ್ಲಿ ಮೇಘಗಳು (ನೀಲವರ್ಣದ ಮೋಡಗಳು) ಗುಂಪುಗುಂಪಾಗಿ ಹಾರಿಹೋಗುವುದು ಸ್ವಾಭಾವಿಕವಾದ್ದರಿಂದ ಇದು ಸ್ವಭಾವೋಕ್ತ್ಯಲಂಕಾರ. 


ತಾತ್ಪರ್ಯ:- ಆಗ ವರ್ಷಾಕಾಲದ ಮೇಘಗಳು ಎಣ್ದೆಸೆಗಳಲ್ಲಿಯೂ ಎದ್ದು ನಾನಾ ಬಗೆಗಳಾಗಿ ಕಣ್ಣುಗಳಿಗೆ ಆನಂದವನ್ನುಂಟುಮಾಡುವಂತೆ ಗಿರಿಗಳಂತೆ ಶೋಭಿಸಿದವು. ದಿಗ್ವಧುಗಳು ದಿಕ್ಕುಗಳೆಂಬ ಪರ್ಜನ್ಯವನ್ನು ಸೆಣಸಿ ಈಕ್ಷಿಸುವ ಚಪಲವಾದ ಅಪಾಂಗದಂತೆ ಮಿಂಚಿದವೈ. ವರ್ಷಾಕಾಲದ ಮುಗಿಲಿನಂತೆ ಒಳ್ಳೇ ದಾತೃವಾಗಿ ಇರದ ಲೋಭಿಯನ್ನು ಗದರೆಸುವ ತೆರದಿಂದ ಮೊಳಗಿದವು. ಚಾತಕ ಪಕ್ಷಿಗಳು, ಶುಕ, ಗಜ, ಕೃಷಿಕ, ಎತ್ತುಗಳು, ಮಯೂರ ಇವೇ ಆದಿಯಾಗಿ ಹರ್ಷಿಸಿದವೈ. ಮರಾಳಗಳ ಹಿಂಡು ಆಕಾಶಕ್ಕೆ ಹಾರಿಹೋದವು. ವರ್ಷಾಕಾಲದಲ್ಲಿ ಕಾರ್ಮುಗಿಲೇಳುವುದು, ಮಿಂಚುವೈದು, ಗುಡುಗುವುದು, ಚಾತಕಾದಿಗಳು ನಲಿದಾಡುವುದು ಸ್ವಭಾವವಾದ್ದರಿಂದ ಇದು ಸ್ವಭಾವೋಕ್ತ್ಯಲಂಕಾರ. 


ವರ ನೀಲಕಂಠ ನೃತ್ಯದಿನನಂಧಕಾಸುರ ಸ। 

ಮರ ಧರಣಿಯಂ ಕುವಲಯಾನಂದಕರದ ಘನ। 

ಪರಿಶೋಭೆಯಿಂದೆ ಚಂದ್ರೋದಯವನಾಲೋಕ ಚಂಚಲೋದ್ಭಾಸದಿಂದೆ॥ 

ತರುಣಿಯ ಕಟಾಕ್ಷಮಂ ರಾಜಹಂಸಪ್ರಭಾ।

ಹರಣದಿಂ ಪರಶುರಾಮಪ್ರತಾಪವನಧಿಕ। 

ತರವಾಹಿನೀಘೋಷದಿಂದೆ ನೃಪಯಾತ್ರೆಯಂ ಪೋಲ್ತು ಕಾರೆಸೆದಿರ್ದುದು॥೩॥ 


ಪ್ರತಿಪದಾರ್ಥ :- ಕಾರ್ಗಾಲಂ= ಆ ವರ್ಷಾಕಾಲವು, ವರ=ಉತ್ತಮವಾದ,  ನೀಲಕಂಠ= ಕರಿಗೊರಲನ(ಪರಮೇಶ್ವರನು), ಮಯೂರದ, ನೃತ್ಯದಿಂ= ನರ್ತನದಿಂದ, ಅಂಧಕಾಸುರ=ಅಂಧನೆಂಬ ದೈತ್ಯನ, ಧರಣಿಯಂ=ಪೃಥ್ವಿಯನ್ನು, ಕುವಲಯ= 

ಕನ್ನೈದಿಲೆಗಳಿಗೆ, ಭೂಮಂಡಲಕ್ಕೆ,ಆನಂದಕರಮಾದ= ಮನೋಹರವಾದ, ಹರ್ಷಪ್ರದಮಾದ,ಘನ=ದಟ್ಟವಾದ, (ಒತ್ತಾದ) ಮೋಡದ, ಪರಿಶೋಭೆಯಿಂದ= ಬಿಳಿದು ತಿಂಗಳಿಂದಲೂ,( ಅತಿಶಯ ಕಾಂತಿಯಿಂದ) ಚಂದ್ರೋದಯಂ= ಚಂದ್ರನ ಉದಯದಿಂದ, ಆಲೋಕ= ಈಕ್ಷಿಸುವುದು, ಕಾಂತಿ, ಚಂಚಲ= ಸ್ಥಿರಮನವಿಲ್ಲದೆ, ಉದ್ಭಾಸದಿಂ= ಶೋಭಿಸುವುದರಿಂದ, 

ಥಳಥಳಿಸುವುದರಿಂದ, ಯುವತಿಯರ=ತರುಣಿಯರ, ಪ್ರಾಯಸಮರ್ಥರಾದ ಸ್ತ್ರೀಯರ,  ಕಟಾಕ್ಷಮಂ= ಕಡೆಗಣ್ಣಿನ ನೋಟವನ್ನು, ರಾಜಭೂಪಾರಲ್ಲಿ, ಹಂಸ=ಉತ್ತಮವಾದ, ಅರಸಂಚೆಗಳ, ಪ್ರಭಾ= ಕಾಂತಿಯತಿಶಯವನ್ನು,(ಪ್ರಕಾಶವನ್ನು)

ಐಶ್ವರ್ಯದ ಕಾಂತಿಯನ್ನು,  ಹರಣದಿಂ= ತೆಗೆದುಕೊಳ್ಳೋಣದರಿಂದ, ಪರಶುರಾಮ = ಭಾರ್ಗವನ, ಪ್ರತಾಪವಂ= ಅಧಿಕ ಶೌರ್ಯವನ್ನು, ಅಧಿಕತರಂ= ಬಹು ಹೆಚ್ಚಾದ, ವಾಹಿನೀ= ಸೈನ್ಯದ, ಘೋಷದಿಂದ= ರಭಸದಿಂದ (ಧ್ವನಿಯಿಂದ) ನೃಪ=ರಾಜರುಗಳ, ಯಾತ್ರೆಯಂ= ಯುದ್ಧ ಯಾತ್ರೆಯನ್ನು, ಪೋಲ್ದು=ಹೊಂದಿ, ಎಸೆದಿರ್ದುದು= ಶೋಭಿಸುತ್ತಿತ್ತು.  


ಅ॥ವಿ॥ ಚಂದ್ರ+ಉದಯ= ಚಂದ್ರೋದಯ( ಗುಣ. ಸಂ. ) ತರಣಿ=ಸೂರ್ಯ,  ತರುಣಿ= ಸ್ತ್ರೀ,  ನೀಲಕಂಠ= ಈಶ್ವರ, ನವಿಲು, ವಾಹಿನಿ=ಸೇನೆ, ನದಿ, ಘನ= ಮೇಘ, ಸಾಂದ್ರ, ಕುವಲಯ= ನೈದಿಲೆ, ಭೂಮಿ. 


ತಾತ್ಪರ್ಯ:-ವರ್ಷಾಕಾಲವು ಉತ್ತಮವಾದ ನವಿಲುಗಳ ನಾಟ್ಯದಿಂದಲೂಈಶ್ವರನ ನಾಟ್ಯದಿಂದಲೂ ಅಂಧಕನೆಂಬ ರಕ್ಕಸನನ್ನೂ ಪೃಥ್ವಿಯನ್ನೂ,ನೈದಿಲೆಗಳಿಗೆ ಆನಂದಕರಮಾದ ಮತ್ತು ದಟ್ಟವಾದ ಮೇಘಗಳ ಪರಿಶೋಭೆಯಿಂದ, ಚಂದ್ರೋದಯವನ್ನು (ಭೂಮಂಡಲಕ್ಕೆ ಅನುಕೂಲವಾದ ಮೇಘಗಳ ಪ್ರಕಾಶದಿಂದಲೂ) ನೋಡುವಿಕೆಯ ಚಂಚಲವಾದ ಉದ್ಭಾಸದಿಂದ ಯುವತಿಯರ ಕಟಾಕ್ಷವನ್ನು ರಾಜ ಹಂಸಪಕ್ಷಿಗಳ ಕಾಂತಿಯತಿಶಯವನ್ನು ಎಂದರೆ ಸಕಲೈಶ್ವರ್ಯವನ್ನು ಅಪಹರಿಸುವುದರಿಂದ ಪರಶುರಾಮನ ಪರಾಕ್ರಮವನ್ನು ಅಧಿಕವಾದ ನದಿಗಳ ಘೋಷದಿಂದ ನೃಪರ ಜೈತ್ರಯಾತ್ರೆಯ ಹೋಲಿಕೆಯನ್ನು ಹೊಂದಿ ಪ್ರಕಾಶಿಸುತ್ತಿತ್ತು.ಎಂದರೆ ವರೂಷರ್ತುವನ್ನು ರಾಜರು ಯುದ್ಧಪ್ರಯಾಣಕ್ಕೆ ಹೊರಡುವ ಕಾಲದಂತೆ ಹೋಲುತ್ತಿತ್ತು.


ಜಾತ ನವ ಶಾಡ್ವಲದ ಸೊಂಪಿಡಿದೆಸೆವ ನೆಲದ। 

ಪೂತೆಸೆವ ಜಾಜಿಗಳ ವರಕುಟಜ ರಾಜಿಗಳ। 

ಕೇತಕಿಯ ಧೂಳಿಗಳ ಕೆದರುತಿಹ ಗಾಳಿಗಳ ಲಸದಿಂದ್ರಗೋಪಚಯದ॥ 

ಕಾತೆಳೆಯ ಮಾವುಗಳ ಬನಬನದ ಠಾವುಗಳ। 

ನೂತನ ಸುವಾರಿಗಳ ನಡೆಗುಡದ ದಾರಿಗಳ। 

ಭೂತಳದ ಸಿರಿ ಮೆರೆಯೆ ಮುಗಿಲೈದೆ ಮಳೆಗರೆಯೆ ವರ್ಷರ್ತು ಚೆಲ್ವಾದುದು॥೪॥ 


ಪ್ರತಿಪದಾರ್ಥ :- ಜಾತ=ಉಂಟಾದ, ನವ=ನೂತನವಾದ,  ಶಾಡ್ವಲದ= ಹಸಿಯ ಗರಿಕೆಯ, ವರ್ಣದ=ಬಣ್ಣದ, ಸೊಂಪು= ಅಲಂಕಾರವು, ಇಡಿದ= ತುಂಬಿಕೊಂಡಿರುವ, ನೆಲದ=ಪೃಥ್ವಿಯ, ಪೂತ=ಹೂಬಿಟ್ಟ, ಎಸೆವ= ಶೋಭಿಸುವ, ಜಾಜಿಗಳ= ಜಾಜೀಗಿಡಗಳ, ವರ=ಉತ್ಕೃಷ್ಟವಾದ, ಕುಟಜ= ಕುರಟಗನ ಗಿಡದ ಪುಷ್ಪದ( ಗೋರಂಟಿಶಗಿಡದ) ರಾಜಿಗಳ= ಸಾಲುಗಳ, ಕೇತಕಿಯ= ಕೇದಿಗೇ ಹೂಗಳ, ಧೂಳಿಗಳ= ಪರಾಗಗಳನ್ನು, ಕೆದರುತಿಹ = ವಿಸ್ತರಿಸುತ್ತಿರುವ, ಗಾಳಿಗಳ= ಅನಿಲಗಳ, ಲಸತ್= ಪ್ರಕಾಶಿಸುವ,  ಇಂದ್ರಗೋಪ= ಮಿಣುಕು ಹುಳುಗಳ, (ಮಳೆಗಾಲವು ಪ್ರಾರಂಭವಾದ ಕೂಡಲೆ ಈ ಹುಳುಗಳು ಹೆಚ್ಚುವುವು)ಚಯದ= ಒಡ್ಡಿನ, (ಗುಂಪಿನ) ಕಾತ=ಫಲವನ್ನು ಬಿಡತಕ್ಕ, ಎಳೆಯ ಮಾವುಗಳ= ಎಳದಾದ ಸಹಕಾರ ವೃಕ್ಷಗಳ, ಬನಬನದ= ಪ್ರತಿಯೊಂದು ಕಾಡುಪ್ರದೇಶದ, ತಾವುಗಳ= ಸ್ಥಾನಗಳ, ನೂತನ= ನವೀನವಾದ, ಸುವಾರಿಗಳಂ= ಯೋಗ್ಯವಾದ ಜಲಗಳನ್ನು, ಎಡೆಗೊಂಡ= ಉಂಟಾಗಿರತಕ್ಕ( ಸ್ಥಳಗಳನ್ನಾಕ್ರಮಿಸಿರುವ) ದಾರಿಗಳ= ಹಾದಿಗಳ, ಭೂತಳದ= ಭೂಭಾಗದ(ಪೃಥ್ವಿಯ) ಸಿರಿ=ಐಶ್ವರ್ಯವು, (ವೈಭವವು) ಮೆರೆಯೆ= ಹೊಳೆಯಲು, ಮುಗಿಲು=ಮೋಡವು, ಐದೆ= ಉಂಟಾಗಲು, (ಉದ್ಭವವಾಗಲು) ಮಳೆ= ಮಳೆಯು(ವೃಷ್ಟಿಯು) ಕರೆಯೆ= ಕರೆಯಲು, ಬೀಳಲು= ಸುರಿಸಲು, ವರ್ಷರ್ತು= ವರ್ಷಾಕಾಲವು(ಶ್ರಾವಣ-ಭಾದ್ರಪದ ಮಾಸಗಳ ಕಾಲಕ್ಕೆ ಈ ಹೆಸರು) ಚೆಲ್ವಾದುದು= ಮನೋಹರವಾಗಿತ್ತು. 


ಅ॥ವಿ॥ ಇಂದ್ರಗೋಪ= ಮಿಣುಕು ಹುಳುಗಳು,(ಮಿಂಚುಹುಳುಗಳು) ವರ್ಷಾ+ಋತು= ವರ್ಷರ್ತು(ಗು. ಸಂ.) ಸುಷ್ಠು+ವಾರಿ=ಸುವಾರಿ( ವಿ. ಪೂ. ಕ) ಭವನ=ಮನೆ, ಭುವನ=ಪ್ರಪಂಚ, ಸಿರಿ (ತ್ಭ) ಶ್ರೀ(ತ್ಸ) 


ತಾತ್ಪರ್ಯ:- ಆ ಕಾಲದಲ್ಲಿ ಹೊಸದಾಗಿ ಬೆಳೆದಿರುವ ಗರಿಕೆ ಹುಲ್ಲುಗಳ ಹಸುರು ಬಣ್ಣದಿಂದ ವ್ಯಾಪ್ತವಾದ ಸೊಗಸು ಭೂಮಿಯ ಎಲ್ಲಾ ಕಡೆಯಲ್ಲೂ ಹೂ ಬಿಟ್ಟು ಪ್ರಕಾಶಿಸುವ ಜಾಜೀ ಪುಷ್ಪಗಳು ಶ್ರೇಷ್ಠವಾದ ಕುಟಜ ಪುಷ್ಪಗಳು, ಇವುಗಳ ಸಾಲುಗಳು ಕೇದಿಗೆಯ ಹೂವಿನ ಧೂಳಿಯನ್ನು ಎಲ್ಲಾ ಕಡೆಯಲ್ಲಿಯೂ ಬೀಸುತ್ತಿರುವ ಸುವಾಸನೆಯಿಂದೊಡಗೂಡಿದ ಮಂದಮಾರುತವು ನಾನಾ ಬಣ್ಣಗಳಿಂದ ಒಪ್ಪುತ್ತಿರುವ ಮಿಣುಕು ಹುಳುಗಳ ಸಮೂಹಗಳು ಕೋಮಲವಾಗಿ ಬೆಳೆದು ಹೂ ಕಾಯಿಗಳಿಂದ ಬಲಿತು ತುಂಬಿರುವ ಮಾವಿನ ಮರಗಳ ತೋಪುಗಳು ಎಲ್ಲಿ ನೋಡಿದಾಗೂ ಹೊಸ ಉದಕಗಳಿಂದ ಕೂಡಿದ ದಾರಿಗಳು ಭೂಮಿಯು ಸಂಪತ್ಸಮೃದ್ಧಿಯಿಂದ ಪ್ರಕಾಶಿಸುತ್ತಿರಲು ವರ್ಷಾಕಾಲವು ಅತ್ಯಂತ ಪ್ರಕಾಶಮಾನವಾಗಿತ್ತು. 


ತುಂಗ ನವಚಿತ್ರ ಮಯ ಸುಪ್ರಭಾಸುರ ಕಾರ್ಮು। 

ಕಂಗಳಿಂ ಸುರಕಾರ್ಮುಕಂಗಳಂ ವಿವಿಧ ವಾ। 

ದ್ಯಂಗಳ ಗಭೀರ ಘನ ಘೋಷಂಗಳಿಂದೆ ಘನಘೋಷಂಗಳಂ ನೆಗಳ್ದ॥ 

ಸಂಗತ ನೃಪಾಲ ವಾಹಿನಿಗಳಿಂ ವಾಹಿನಿಗ। 

ಳಂಗೆಲ್ದು ವೀರಪಾಂಡವ ಸೈನ್ಯಸಾಗರಂ। 

ಕಂಗೊಳಿಪ ಕಾರ್ಗಾಲದಂತೆಸೆಯೆ ವಾಜಿ ಮಣಿಪುರಕಾಗಿ ನಡೆತಂದುದು॥೫॥ 


ಪ್ರತಿಪದಾರ್ಥ :- ತುಂಗ=ದೊಡ್ಡದಾದ, (ಎತ್ತರವಾದ),ಚಿತ್ರಮಯ= ನಾನಾ ಬಗೆಗಳಾದವುಗಳಿಂದ ಕೂಡಿದ, ಸುಪ್ರಭಾಸುರ

=ಅತಿ ಹೆಚ್ಚಾಗಿ ಹೊಳೆಯುವುದಾದ,ಕಾರ್ಮುಕಂಗಳಿಂ= ಧನುಸ್ಸುಗಳಿಂದ, ಸುರಕಾರ್ಮುಕಂಗಳಂ= ಕಾಮನಬಿಲ್ಲುಗಳನ್ನು, 

(ಇಂದ್ರಚಾಪಂಗಳನ್ನು) ವಿವಿಧ= ನಾನಾಬಗೆಯಾದ, ವಾದ್ಯಂಗಳ= ಭೇರಿ, ನಗಾರಿ, ಕಹಳೆ ಮುಂತಾದ ವಾದ್ಯಧ್ವನಿಗಳ, ಗಭೀರ= ಗುಂಭಿತವಾದ, ಘೋಷಂಗಳಿಂದ= ಧ್ವನಿಗಳಿಂದ, ಘನ= ಮೋಡಗಳ, ಘೋಷಂಗಳಂ= ಆರ್ಭಟಗಳನ್ನು, ನೆಗಳ್ದು= ಉಂಟಾಗಿ,(ವ್ಯಾಪಿಸಿಕೊಂಡು), ವಾಹಿನಿಗಳಿಂ= ಸೈನ್ಯಗಳಿಂದ, ವಾಹಿನಿಗಳಂ= ಹೊಳೆಗಳನ್ನು, ಗೆಲ್ದು=ಜಯಿಸಿ, ವೀರ= ಪರಾಕ್ರಮಿಯಾದ, ಪಾಂಡವ= ಪಾರ್ಥನ, ಸೈನ್ಯಸಾಗರಂ= ಸಮುದ್ರದಷ್ಟು ವಿಸ್ತಾರವಾದ ಸೈನ್ಯವು, ಕಂಗೊಳಿಪ= ಶೋಭಿಸುವ, ಕಾರ್ಗಾಲದಂತೆ= ಮಳೆಗಾಲದಂತೆ, ಎಸೆಯೆ= ಹೊಳೆಯಲು,ವಾಜಿ= ಯಜ್ಞಾಶ್ವವು, ಮಣಿಪುರಕಾಗಿ= ರತ್ನ ಪುರವನ್ನು ಕುರಿತು, ನಡೆತಂದುದು= ಪ್ರವೇಶಿಸಿತು.


ಅ॥ವಿ॥ ಸುರನ+ಕಾರ್ಮುಕ= ಸುರಕಾರ್ಮುಕ( ಷ. ತ. ) ಕಾರ್+ಕಾಲ= ಕಾರ್ಗಾಲ( ಗಕಾರ ಆದೇಶ ಸಂ), ಮಣಿ ಎಂಬ ಪುರ=ಮಣಿಪುರ(ಸಂಭಾವನಾ ಪೂ. ಕ.) ಮಣಿಯ+ಪುರ= ಮಣಿಪುರ(ಷ. ತ.) ನವವಾದ+ಚಿತ್ರವಾದ=ನವಚಿತ್ರ(ವಿ.ಉ.ಕ


ತಾತ್ಪರ್ಯ:-ಬಳಿಕ ಅತಿ ಎತ್ತರವಾದ ನಾನಾ ಚಿತ್ರ ವಿಚಿತ್ರ ಬಣ್ಣಗಳಿಂದ ಕೂಡಿದ, ಬಹಳವಾಗಿ ಶೋಭಿಸುವ ಯುದ್ಧ ಭಟರ ಬಿಲ್ಲುಗಳಿಂದ, ವರ್ಷಾಕಾಲದಲ್ಲುದ್ಭವಿಸುವ ಕಾಮನಬಿಲ್ಲುಗಳನ್ನು, ನಾನಾವಿಧಗಳಾದ ಭೇರೀಮೊದಲಾದ ವಾದ್ಯ ಧ್ವನಿಗಳಿಂದ, ಗುಡುಗುಗಳ ಧ್ವನಿಗಳನ್ನು ಪ್ರಸಿದ್ಧಿಯಾಗಿ ಸರ್ವದಾ ಸಂಗಡಲಿರುವ ಹಂಸಧ್ವಜಾದಿ ರಾಜರುಗಳ ಸೈನ್ಯಗಳಿ-

ದ,ಉದ್ದವಾಗಿ ಪ್ರವಹಿಸುವ ನದಿಗಳನ್ನು ದಾಟಿ ವೀರನಾದ ಪಾರ್ಥನ ಸೈನ್ಯವೆಂಬ ಸಾಗರವು, ಕಣ್ಗೊಳಿಸುವ ಕಾರ್ಗಾಲದಂತೆ ಶೋಭಿಸುತ್ತಿರಲಾಗಿ, ಯಜ್ಞಾಶ್ವವು ಮಣಿಪುರದೆಡೆಗೆ ನಡೆತಂದುದು. 


ಕ್ಷೋಣೀಂದ್ರ ಕೇಳರ್ಜುನನ ಕಣ್ಗೆ ಮಣಿಪುರಂ। 

ಕಾಣಿಸಿತು ಕನಕರಜತದ ಕೋಂಟೆ ಕೊತ್ತಳದ। 

ಮಾಣಿಕದ ವಜ್ರವೈಡೂರ್ಯ ಗೋಮೇಧಿಕದ ಮುಗಿಲಟ್ಟಳೆಯ ಸಾಲ್ಗಳ॥ 

ಶೋಣಪ್ರವಾಳ ತೋರಣದ ಸೂಸಕದ ಕ। 

ಟ್ಟಾಣಿ ಮುತ್ತುಗಳ ಲೋವೆಗಳ ಗೋಪುರದ ಬಿ। 

ನ್ನಾಣದ ಸುಚಿತ್ರ ಪತ್ರದ ಕುಸುಕದೆಸಕದಿಂ ಮೆರೆವ ಬಾಗಿಲ್ಗಳಿಂದೆ॥೬॥


ಪ್ರತಿಪದಾರ್ಥ :- ಕ್ಷೋಣೀಂದ್ರ= ಪೃಥ್ವೀಪತಿಯಾದ ಜನಮೇಜಯರಾಯನೆ, ಆ ಮಣಿಪುರಂ= ಅರ್ಜುನನ ಮಗನಾದ ಬಭ್ರುವಾಹನನ ರತ್ನಪುರಿಯು, ಅರ್ಜುನನ =ಪಾರ್ಥನ, ಕಣ್ಗೆ= ಕಣ್ಣುಗಳಿಗೆ, ಕನಕ=ಚಿನ್ನದ, ರಜತ=ಬೆಳ್ಳಿಯಿಂದ ನಿರ್ಮಿ- 

ತವಾದ, ಕೋಟೆ ಕೊತ್ತಳದ= ಕೋಟೆಯ ಮೇಲೆ ಬುರುಜುಳ್ಳದ್ದಾದ, ಮಾಣಿಕದ= ಮಾಣಿಕ್ಯದಿಂದಲೂ, ವಜ್ರದಿಂದಲೂ,

ವೈಡೂರ್ಯದಿಂದಲೂ, ಗೋಮೇಧಿಕದ = ಗೋಮೇಧಿಕದಿಂದಲೂ ನಿರ್ಮಿತವಾದ,  ಮುಗಿಲಟ್ಟಲೆಯ= ಅಂತರಿಕ್ಷದವರೆಗೂ ಸೋಕುವ ಕೋಟೆತೆನೆಗಳ, ಸಾಲ್ಗಳ= ಪಙ್ತಿಗಳಿಂದಲೂ,ಶೋಣ=ರಕ್ತವರ್ಣದಂತಿರುವ,ಪ್ರವಾಳ-

ಮಣಿ= ಪವಳದ ಮಣಿಯಿಂದ, ರುಚಿ= ಪ್ರಕಾಶವುಳ್ಳ, ತೋರಣದ= ತೋರಣದಿಂದಲೂ, ಕಟ್ಟಾಣಿಮುತ್ತುಗಳ= ಒಂದೇಸಮನಾಗಿ ಗುಂಡಾಗಿರುವ ಮೌಕ್ತಿಕಗಳ, ಲೋವೆಗಳ= ಲೋವೆಗಳುಳ್ಳ, ಗೋಪುರದ= ಪುರದ್ವಾರದಿಂದಲೂ, ಬಿನ್ನಾಣದ= ಠೀವಿಯಿಂದೊಪ್ಪುವ, ಸುಚಿತ್ರ= ಒಳ್ಳೇ ಅಲಂಕಾರದಿಂದ ಚಿತ್ರಿಸಿದ,ಪತ್ರಗಳಿಂ= ಪತ್ರಗಳಿಂದಲೂ, ಕುಸುಕದ= ನೆಡಲ್ಪಟ್ಟ, ಎಸಕದಿಂ= ಕೈಚಮತ್ಕಾರವಾದ ಕಾರ್ಯದಿಂದ, ಎಸೆವ= ಹೊಳೆಯುತ್ತಿರುವ, ಬಾಗಿಲ್ಗಳಿಂದ= ಕದಗಳಿಂದಲೊ, ಕಾಣಿಸಿತು.


ಅ॥ವಿ॥ ಕ್ಷೋಣಿ+ಇಂದ್ರ= ಕ್ಷೋಣೀಂದ್ರ( ಸ. ದೀ. ಸಂ.), ಸೈನ್ಯವೆಂಬ ಸಾಗರ(ಅಂ. ಪೂ. ಕ) ಸಗರನ ಪುತ್ತರಿಂದಾದದ್ದು ಸಾಗರ. 


ತಾತ್ಪರ್ಯ:- ಎಲೈ ಭೂಪಾಲಕನಾದ ಜನಮೇಜಯರಾಯನೆ! ಆಲಿಸು,ಅರ್ಜುನನ ಕಣ್ಣುಗಳಿಗೆ ಚಿನ್ನ ಬೆಳ್ಳಿಗಳಿಂದ ನಿರ್ಮಿತವಾದ ಕೊಟೆಯ ಕೊತ್ತಳವು, ಮಾಣಿಕ್ಯ, ರತ್ನ, ವಜ್ರ, ವೈಡೂರ್ಯ, ಗೋಮೇಧಿಕಗಳಿಂದ ರಚಿತವಾದ ಮೇಘಾವರಣವನ್ನು ಮುಟ್ಟುತ್ತಿರುವ ಕೋಟೆಯ ತೆನೆಗಳು, ಚಿಗುರಿನಂತೆ ಕೆಂಪಾದ ಹವಳ ಮಣಿಗಳಿಂದ ಪ್ರಜ್ವಲಿಸುವ ತೋರಣದ ಕಂಭಗಳು ಅಂದವಾಗಿಪಚ್ಚೆಗಳ ಮಣಿಗಳಿಂದ ನಿರ್ಮಿತವಾದ ಮಕರ ತೋರಣಗಳು, ದುಂಡಗೆ ಅತಿಗುಂಡಾ-

ಗಿರುವ ಆಣಿಮುತ್ತುಗಳಿಂದ ಖಚಿತವಾದ ಲೋವೆಗಳು ನಾನಾ ಬಗೆಯಾದ ಬಣ್ಣಗಳಿಂದ ಕೂಡಿ ಅತಿಮನೋಹರವಾಗಿ ರಂಜಿಸುವ ಕೋಟೆಯ ಬಾಗಿಲ ಪ್ರದೇಶವು ಇವುಗಳಿಂದ ಶೋಭಿಸುವ ಬಭ್ರುವಾಹನನ ರಾಜಧಾನಿಯಾದ ರತ್ನಪುರವು ಕಾಣಿಸಿತು.


ಪಗಲ ದೆಸೆಗಳುಕಿ ಪರೆದಿರ್ದ ಬೆಳ್ದಿಂಗಳೀ। 

ನಗರಮಂ ಪೊಕ್ಕು ವೆಂಟಣಿಸಿ ಮಾರ್ಮಲೆತಿರಲ್। 

ಮಿಗೆ ಮೋಹರಿಸಿ ಬಂದು ಮುತ್ತಿಗೆಯನಿಕ್ಕಿಕೊಂಡಿರ್ಪೆಳವಿಸಿಲ್ಗಳೆನಲು॥ 

ಗಗನವನಡರ್ದ ಸೌಧಂಗಳ ಮರೀಚಿಯಿಂ। 

ಪೊಗರುಗುವ ಪೊಚ್ಚಪೊಸಪೊನ್ನ ಕೋಂಟೆಗಳ ಕಾಂ।

ತಿಗಳೈದೆ ಮುಸುಕಿಕೊಂಡೆಸೆದಿರ್ದುವರ್ಜುನನ ಕಣ್ಗೆ ಕೌತುಕಮಾಗಲು॥೭॥ 


ಪ್ರತಿಪದಾರ್ಥ :- ಪಗಲದೆಸೆಗೆ= ಹಗಲಿನ ತೊಂದರೆಯಿಂದ, ಅಳುಕಿ= ಭಯಗೊಂಡು, ಪರದಿರ್ದ= ಓಡಿಹೋಗಿದ್ದ, ಬೆಳದಿಂಗಳು= ಚಂದ್ರಿಕೆಯು, ಈ ನಗರಮಂ= ಈ ರತ್ನಪುರವನ್ನು, ಪೊಕ್ಕು= ಹೊಕ್ಕು, ವೆಂಟಣಿಸಿ = ಪ್ರಬಲವಾಗಿ, 

ಮಾರ್ಮಲೆವುತ= ಪ್ರತಿಭಟಿಸಿ (ಎದುರು ಬೀಳುತ್ತ) ಇರೆ=ಇರುತ್ತಿರಲು, ಮಿಗೆ=ಹೆಚ್ಚಾಗಿ, ಮೋಹರಿಸಿ= ಸೈನ್ಯದಿಂದೊಡ- 

ಗೂಡಿ, ಬಂದು= ಈ ಮಣಿಪುರ ಪ್ರವೇಶಿಸಿ, ಮುತ್ತಿಗೆಯನು= ಮುತ್ತಿಗೆಯನ್ನು, ಇಕ್ಕಿಕೊಂಡು= ಹಾಕಿಕೊಂಡು, ಇರ್ಪ= ಇರುತ್ತಲಿರುವ, ಎಳೆವಿಸಿಲ್ಗಳು= ಬಾಲಾತಪಗಳು(ಎಳೆಬಿಸಿಲು) ಎನಲ್= ಎನ್ನುವಂತೆ, ಗಗನವನು= ಅಂತರಿಕ್ಷವನ್ನು, ಅಡರ್ದ= ಹತ್ತುವಂತಿರುವ( ಸೋಂಕುವಂತಿರುವ) ಸೌಧಂಗಳ= ಮೇಲು ಮಹಡಿಗಳ,ಮರೀಚಿಯಿಂ=ಕಿರಣದಿಂದ (ಪ್ರಕಾಶದಿಂದ)ಪೊಗರ್=ಕಾಂತಿಗಳಾಗಿ, ಒಗುವ= ವ್ಯಾಪಿಸುವ,(ವಿಸ್ತರಿಸುತ್ತಿರುವ) ಪೊಚ್ಚ=ಹಳದಿಯ ವರ್ಣದ, ಪೊಸ= ಹೊಸದಾದ, ಪೊನ್ನ=ಚಿನ್ನದ, ಕೋಟೆಗಳ= ಕೋಟೆಗಳುಳ್ಳ(ತುದಿಗಳುಳ್ಳ) ಕಾಂತಿಗಳು= ಪ್ರಕಾಶಗಳು, ಐದೆ= ಉಂಟಾಗಿ, (ಚೆನ್ನಾಗಿ),ಅರ್ಜುನನ=ಪಾರ್ಥನ,ಕಣ್ಗೆ =ಕಣ್ಣುಗಳಿಗೆ, ಕೌತುಕಂ= ಕುತೂಹಲವು, ಆಗಲು= ಆಗುವಂತೆ, ಎಸೆದಿರ್ದವು= 

ಹೊಳೆಯುತ್ತಿದ್ದವು.


ಅ॥ವಿ॥ ಬಿಳಿದು+ತಿಂಗಳು= ಬೆಳದಿಂಗಳು( ವಿ. ಪೂ. ಕ.) ಎಳೆಯಾದ+ಬಿಸಿಲ್= ಎಳೆವಿಸಿಲ್(ವಿ. ಪೂ. ಕ) ಆಗಸ(ತ್ಭ) ಆಕಾಶ(ತ್ಸ), ಮರೀಚಿ= ಕಿರಣ, ಮೆಣಸು, ಮರೀಚಿ ಋಷಿ, 


ತಾತ್ಪರ್ಯ:- ಆಗ ಹಗಲಿನ ದೆಸೆಯಿಂದ ಭಯಗೊಂಡು ಓಡಿ ಹೋಗಿದ್ದ ಬೆಳುದಿಂಗಳು ಈ ರತ್ನಪುರವನ್ನು, ಹೊಕ್ಕು ವೃದ್ಧಿಗೊಂಡು ಪ್ರತಿಭಟಿಸುತ್ತಿರಲಾಗಿ,ಅಧಿಕವಾಗಿ ಸೇನೆಯನ್ನೊಳಗೊಂಡು ಈ ರತ್ನಪುರಕ್ಕೆ ಮುತ್ತಿಗೆಯನ್ನು ಹಾಕಿಕೊಂಡಿರುವ ಎಳೆಯದಾದ ಬಿಸಿಲ್ಗಳು ಎನ್ನುವಂತೆ ಅಂತರಿಕ್ಷವನ್ನು ಚುಂಬಿಸುತ್ತಿರುವ ಉಪ್ಪರಿಗೆ ಮನೆಗಳ ಮರೀಚಿ-

ಯಿಂದ ಪ್ರಭೆಗಳಾಗಿ ಪ್ರಸರಿಸುತ್ತಿರುವ ಅರಸಿನ ವರ್ಣದ ಹೊಸದಾದ ಮತ್ತು ಪರಿಶುದ್ಧವಾದ ಅಪರಂಜಿಯ ಕೋಟೆಗಳ ಕಾಂತಿಗಳು ಬಂದು ಮುತ್ತಿಕೊಂಡು ಪಾರ್ಥನ ಕಣ್ಣುಗಳಿಗೆ, ಅದ್ಭುತವು ಎಂದು ಕಾಣುತ್ತ ಶೋಭಿಸಿತು. 


ಮೇರುಗಿರಿಯಂ ಜರೆವ ಕಾಂಚನದ ಗೋಪುರಂ। 

ತೋರಮೊಲೆ ರಾಜಮಾರ್ಗಂ ಬಾಹುಲತೆ ನೃಪಾ। 

ಗಾರಂ ಮುಖಾಂಬುಜಂ ಚಿತ್ರಿತ ಪತಾಕೆಗಳ್ ಚಲಿಸುವಳಕಾವಳಿಗಳು॥ 

ತೋರಣಂ ಮಣಿಹಾರಮೆಸೆವ ಕೋಟಾವಲಯ। 

ಮಾರಾಜಿಪಂಬರಂ ಪರಿಖೆ ಮೇಖಲೆ ಗೃಹಸು। 

ಧಾರೋಚಿ ದರಹಾಸಮಾಗಲಾ ನಗರಿ ಚೆಲ್ವಿನ ನಾರಿಯಂತಿರ್ದುದು॥೮॥ 


ಪ್ರತಿಪದಾರ್ಥ :- ಮೇರುಗಿರಿಯಂ = ಸುವರ್ಣಾದ್ರಿಯನ್ನು, ಜರೆವ= ಹಿಯ್ಯಾಳಿಸುವ, (ತಿರಸ್ಕಾರಮಾಡುವ) ಕಾಂಚನದ= ಚಿನ್ನದಿಂದ ನಿರ್ಮಿತವಾದ,  ಗೋಪುರಂ= ಪುರದ್ವಾರದಲ್ಲಿರುವ ಶಿಖರಗಳೇ, ತೋರ=ದೊಡ್ಡದಾದ,ಮೊಲೆ=ಕುಚಗಳಂ-

ತೆಯೂ, ರಾಜಮಾರ್ಗ= ರಾಜಬೀದಿಗಳೆ(ವಿಶಾಲವಾದ ರಸ್ತೆಗಳೆ) ಬಾಹುಲತೆ= ಲತಾಕೃತಿಯಾದ ಬಾಹುಗಳಂತೆಯೂ, ನೃಪ= ರಾಜನ, ಆಗರಂ= ಮನೆಯೇ, ಮುಖಾಂಬುಜಂ= ಮುಖಪದ್ಮದಂತೆಯೂ, ಚಿತ್ರಿತ= ಚಿತ್ರಿಸಿರುವ,ಪತಾಕೆಗಳು= ಬಾವುಟಗಳೇ, (ತೇರುಗಳು) ಚಲಿಸುವ= ಅಲುಗಾಡುವ, (ಅಲ್ಲಾಡುತ್ತಿರುವ) ಅಳಕಾಳಿಗಳು= ಮುಂಗುರುಳುಗಳ ಸಮೂಹದಂತೆಯೂ, ತೋರಣಂ= ಬಾಗಿಲಿಗೆ ಕಟ್ಟಿರುವ ತೋರಣವೇ, ಮಣಿಹಾರಂ= ರತ್ನಖಚಿತ ಹಾರದಂತೆಯೂ, ಎಸೆವ= ಶೋಭಿಸುವ,  ಕೋಟಾವಲಯ= ಸುತ್ತಲೂ ಸುತ್ತಿಕೊಂಡಿರುವ ಕೋಟೆಯ ಪ್ರದೇಶವೇ, ಆರಾಜಿಪ= ಹೊಳೆ-

ಯುತ್ತಿರುವ, ಅಂಬರಂ= ಧರಿಸಿದ್ದ ಪಟ್ಟೆಯ ವಸ್ತ್ರದಂತೆಯೂ,ಪರಿಘ=ಕಂದಕವೇ, ಮೇಖಲೆ= ಒಡ್ಯಾಣದಂತೆಯೂ,

(ಡಾಬುವಿನಂತೆಯೂ) ಗೃಹ= ಸದನಗಳಿಗೆ ಹಚ್ಚಿರುವ,ಸುಧಾ= ಸುಣ್ಣದ, ರೋಚಿ= ಪ್ರಕಾಶವೇ, ದರಹಾಸಂ= ಮಂದಹಾಸದಂತೆಯೂ, ಆಗಲು= ಉಂಟಾಗಲು, ಆ ನಗರಿ= ಆ ರತ್ನಪೈರವು, ನಾರಿಯ= ಸ್ತ್ರೀಯ, ಚೆಲ್ವಿನಂತೆ= ಲಾವಣ್ಯದ ಹಾಗೆ, ಇರ್ದುದು= ಇತ್ತು. 


ಅ॥ವಿ॥ ಕೋಟೆಯ+ವಲಯ= ಕೋಟಾವಲಯ( ಷ. ತ.) ಸೂತ್ರ=ವಿಧಿ, ದಾರ, ಅದು+ನಗರಿ= ಆ ನಗರಿ (ಗ. ಸ.)

ರತ್ನ (ತ್ಸ) ರನ್ನ( ತ್ಭ) ಮಾಣಿಕ್ಯ (ತ್ಸ) ಮಾಣಿಕ(ತ್ಭ) ಅಂಬರ= ವಸ್ತ್ರ, ಆಕಾಶ, ನಗರಿ=ಪಟ್ಟಣ, ನಾರಿ=ಸ್ತ್ರೀ, ಮುಖವು+ 

ಅಂಬುಜದಂತೆ= ಮುಖಾಂಬುಜ ( ಉ. ಉತ್ತರ. ಕ) 


ತಾತ್ಪರ್ಯ:- ಆ ಬಳಿಕ ಆ ಮಣಿಪುರವು ಸುವರ್ಣಾದ್ರಿಯನ್ನು ತಿರಸ್ಕರಿಸುವ ಚಿನ್ನದ ಗೋಪುರಗಳೇ ದಪ್ಪನಾದ ಕುಚಗಳಂತೆಯೂ, ಉದ್ದವಾದ ರಾಜಬೀದಿಗಳೇ ಲತೆಯಂತಿರುವ ತೋಳುಗಳಂತೆಯೂ, ದೊರೆಯ ಅರಮನೆಯೇ 

ಮುಖಾಂಬುಜದಂತೆಯೂ, ನಾನಾ ಬಗೆಗಳಾಗಿ ಮಾಡಲ್ಪಟ್ಟಿರುವ,ಪತಾಕೆಗಳೇಮುಂಗುರುಳುಗಳಂತೆಯೂ, ತೋರಣಕ್ಕಾಗಿ ಕಟ್ಟಿರುವ ಸೂತ್ರವೇ ರತ್ನಖಚಿತವಾದ ಕಂಠೀಸರದಂತೆಯೂ, ಸುತ್ತಲೂ ಗುಂಡಾಗಿ ಸುತ್ತಿರುವ ಕೋಟೆಯ ಪ್ರಾಕಾರವೇ ಪಟ್ಟೆಯ ವಸ್ತ್ರದಂತೆಯೂ, ಆ ಕೋಟೆಯ ಸುತ್ತಲಿರುವ ಪರಿಘವೇ ಶೋಭಿಸುವ ಒಡ್ಯಾಣದಂತೆಯೂ, ಮನೆಗಳಿಗೆ ಹಚ್ಚಿರುವ ಬಿಳಿಯ ಬಣ್ಣವೇ ಪ್ರಕಾಶಮಾನವಾದ ಕಾಂತಿಯ ಕಿರುನಗೆಯಂತೆಯೂ, ಈ ಪ್ರಕಾರವಾಗಿ ಆ ರತ್ನಪುರವು ಸುಂದರ ಸ್ತ್ರೀಯಂತೆ ಕಂಗೊಳಿಸುತ್ತಿತ್ತು.  


ಕೋಟೆಗಾವಲ ಭಟರ ವಿವಿಧಾಯುಧಂಗಳ ಕ। 

ವಾಟರಕ್ಷೆಯ ಬಲದ ಸನ್ನಾಹಸಾಧನದ। 

ಕೂಟದತಿಭೀಕರದ ದುರ್ಗದಭಿಮಾನದೇವತೆ ಸಕಲಭೂವಲಯಕೆ॥ 

ಮೀಟೆನಿಸುವಾತನೀ ಪೊಳಲಾಣ್ಮನೊರ್ವನೆ ಸ। 

ಘಾಟಿಕೆಯೊಳೆಂದು ಬೆರಲೆತ್ತಿ ತೋರಿಸುವಂತೆ। 

ನೋಟಕರ ಕಣ್ಗೆ ಕಾಣಿಸಿದುವೆಣ್ದೆಸೆಯ ಡೆಂಕಣಿಯ ಪಳವಿಗೆಗಯ್ಗಳು॥೯॥ 


ಪ್ರತಿಪದಾರ್ಥ :- ಕೊಟೆ= ದುರ್ಗವನ್ನು, ಕಾವಲ= ಪಾಲಕರಾದ, ಭಟರ= ಶೂರರ, ವಿವಿಧ= ನಾನಾಬಗೆಗಳಾದ, ಆಯುಧಂಗಳ= ಆಯುಧಗಳ,  ಕವಾಟ= ಕದಗಳನ್ನು, ರಕ್ಷೆಯ= ಕಾಪಾಡತಕ್ಕ, ಬಲದ= ಸೇನೆಯ, ಸನ್ನಾಹದ= 

ಕಾಳಗಕ್ಕೆ ಯತ್ನಮಾಡುವಿಕೆಯ, ಕೂಟದ=ಗುಂಪಿನ, ಅತಿ= ಹೆಚ್ಚಾಗಿ, ಭೀಕರದ= ಭಯವನ್ನುಂಟುಮಾಡತಕ್ಕ, ದುರ್ಗದ= 

ಗಮಿಸಲು ಸಾಧ್ಯವಲ್ಲದ ಪ್ರಾಕಾರದ, ಅಭಿಮಾನದೇವತೆ= ಅಭಿಮಾನಶಾಲಿಯಾದ ಧ್ವಜದಲ್ಲಿರುವ ದೇವತಾ ಪ್ರತಿಮೆಯು, ಅಖಿಲ= ಸಮಸ್ತ,  ಭೂಪ= ರಾಜರುಗಳ, ಆಲಯಕೆ= ಅರಮನೆಗಳಿಗೆ, ಮೀಟೆನಿಸುವ= ಶ್ರೇಷ್ಠವಾದ್ದೆನಿಸಿಕೊಳ್ಳುವ, ಆತನು= ಅಂತಹ ಮನುಷ್ಯನು, ಈ ಪೊಳಲ= ಈ ನಗರದ, ಆಣ್ಮನು= ಸಂರಕ್ಷಕನಾದ ರಾಜನು, ಓರ್ವನು= ಒಬ್ಬನು ಮಾತ್ರವೇ, ಸಘಾಟಿಕೆಯೊಳು= ಕ್ರಮವಾದ ರೀತಿಯಿಂದ, (ಸುಸ್ಥಿತಿಯಲ್ಲಿ)ಇರುವನು, ಎಂದು=ಎಂಬುದಾಗಿ ಹೇಳಿ, ಬೆರಳ= ಕೈ ಬೆಟ್ಟನ್ನು, ಎತ್ತಿ= ಮೇಲಕ್ಕೆ ಎತ್ತಿಕೊಂಡು, ತೋರಿಸುವಂತೆ= ತೋರೂಪಡಿಸುವ ರೀತಿಯಿಂದ, ನೋಟಕರ= ಪ್ರೇಕ್ಷಕರ, ಕಣ್ಗೆ= ಕಂಗಳಿಗೆ,  ನಿಂದು= ನಿಂತುಕೊಂಡು, ಎಸೆವ= ಶೋಭಿಸುವ, ಡೆಂಕಣಿ= ಧ್ವಜಸ್ತಂಭದ, ಪಳವಿಗೆ= ನಿಶಾನಿಯ, ಅಥವಾ ಧ್ವಜಪಟದಲ್ಲಿರುವ ದೇವತೆಯ, ಕೈಗಳು= ಕರಗಳು, ಕಾಣಿಸಿತು.  


ಅ॥ವಿ॥ ಗ=ಗಮಿಸಲು, ದುರ್= ಸಾಧ್ಯವಲ್ಲದ್ದು,= ದುರ್ಗ, ಚೂರ್ಣ(ತ್ಸ) ಸುಣ್ಣ (ತ್ಭ) ಪಳವಿಗೆಯ +ಕೈ= ಪಳವಿಗೆ ಕೈ(ಷ,ತ.)


ತಾತ್ಪರ್ಯ:- ಆಗ ಕೋಟೆಯನ್ನು ರಕ್ಷಿಸುವ ಭಟರ ವಿವಿಧ ಆಯುಧಗಳ ಕವಾಟಗಳನ್ನು ರಕ್ಷಿಸುವ ಸೇನೆಯ ಯೈದ್ಧದ ಕಾರ್ಯಕ್ಕೆ ಸಹಾಯವಾದ, ಪಿರಂಗೀ ಮೊದಲಾದವುಗಳ ಸಮೂಹದಿಂದ ಅತಿಯಾಗಿ ಭಯಂಕರವಾದ ದುರ್ಗದ ಜಯಸ್ತಂಭದಲ್ಲಿರುವ ಅಭಿಮಾನದೇವತೆಯು ಸಕಲ ಭೂಪಾಲರ ಗೃಹಗಳಿಗೆ ಅತ್ಯಧಿಕವಾದವನೆಂದೆನಿಸಿಕೊಳ್ಳುವ ಆತನು ಈ ನಗರದ ಓರ್ವನೇ ರಾಜ ಎಂದು ಬೆರಳನ್ನು ಎತ್ತಿ ತೋರಿಸುವಂತೆ ನೋಟಕರ ಕಣ್ಣುಗಳಿಗೆ ಸ್ಥಿರವಾಗಿ ನಿಂತು ಶೋಭಿಸುವ ಧ್ವಜಪಟದಲ್ಲಿರುವ ಪ್ರತಿಮೆಯ ಕೈಗಳು ಕಾಣಿಸಿತು. 


ತಂಡತಂಡದೊಳಾ ಪೊಳಲ ಪುಗುವ ಪೊರಮಡುವ। 

ಶುಂಡಾಲ ವಾಜಿಗಳ ಪುರಜನದ ಪರಿಜನದ । 

ಮಂಡಲಾಧಿಪರೆನಿಪ ಹಂಸಧ್ವಜಾದಿ ಭೂಭುಜರನುದಿನಂ ತಪ್ಪದೆ॥ 

ಕೊಂಡುಬಂದೀವ ಕಟ್ಟಳೆಯ ಕಪ್ಪದ ಪೊನ್ನ। 

ಬಂಡಿಗಳ ಸಾಸಿರದ ಸಂದಣಿಯ ಕಾಣಬಹ। 

ಕಂಡು ಮರಳುವ ಮನ್ನೆಯರ ಮಹಾವಿಭವಂಗಳೆಸೆದುವಾ ಪುರದ ಪೊರಗೆ॥೧೦॥ 


ಪ್ರತಿಪದಾರ್ಥ :- ಆ ನಗರದೊಳು= ಆ ಮಣಿಪುರದಲ್ಲಿ, ತಂಡತಂಡದೊಳು= ಗುಂಪುಗುಂಪಾಗಿ, ಪೊಳಲ= ಪಟ್ಟಣವನ್ನು

ಪುಗುವ=ಪ್ರವೇಶಿಸುತ್ತಿರುವ, ಶುಂಡಾಲ=ಆನೆಗಳ, ವಾಜಿಗಳ = ಕುದುರೆಗಳ, ಪುರಜನದ= ಪಟ್ಟಣದ ಜನರ, ಪರಿಜನದ= ರಾಜಪರಿವಾರದವರ, ಮಂಡಲಕೆ= ರಾಜ್ಯಕ್ಕೆ,  ಅಧಿಪ= ಪ್ರಭುಗಳು, ಎನಿಪ= ಎನ್ನಿಸಿಕೊಂಡಿರುವ, ಹಂಸಧ್ವಜಾದಿ= ಹಂಸಧ್ವಜನೇ ಮೊದಲಾಗಿ, ಭೂಭುಜರು= ರಾಜರುಗಳು, ಅನುದಿನ= ಪ್ರತಿದಿನ( ಗೊತ್ತಾದ ದಿನಗಳಲ್ಲಿ) ತಪ್ಪದೆ= ಅತಿಕ್ರಮಿಸದೆ, (ಮೀರಿ ನಡೆಯದೆ) ಕೊಂಡು ಬಂದು= ಹೊತ್ತುಕೊಂಡು ಬಂದು,(ಕಪ್ಪ ಕಾಣಿಕೆಗಳನ್ನು ಹೊತ್ತುಕೊಂಡು ಬಂದು) ಈವ=ಕೊಡತಕ್ಕ, ಕಟ್ಟಳೆಯ= ಪದ್ಧತಿಯನ್ನು ಅನುಸರಿಸುವ, ಕಪ್ಪದ= ಕಾಣಿಕೆಯ, ಪೊನ್ನ=ಚಿನ್ನದ,(ದ್ರವ್ಯ) ವನ್ನು

ತುಂಬಿರುವ= ಪೂರ್ತಿಯಾಗಿರುವ, ಭಂಡಿಗಳ= ಗಾಡಿಗಳ, ಸಾವಿರದ= ಸಾವಿರ ಸಂಖ್ಯೆಯ, ಸಂದಣಿಯ= ಗುಂಪಿನ, ಕಾಣ= ತಮ್ಮ ರಾಜನನ್ನು ನೋಡಲೋಸುಗ, ಬಹ= ಬರುತ್ತಿರುವ, ಮೇಣ್=ಮತ್ತು, ಕಂಡು= ಈಕ್ಷಿಸಿ,  ಮರಳುವ= 

ಹಿಂದಿರುಗುತ್ತಿರುವ, ಮನ್ನೆಯರ= ಮರ್ಯಾದೆಯುಳ್ಳ ಸ್ತ್ರೀ ಪುರುಷರ, ಮಹಾ= ಅಧಿಕವಾದ, ವಿಭವಂಗಳು= ಅಟ್ಟಹಾಸಂಗಳು( ಅಲಂಕಾರಗಳು) ಆ ನಗರದೊಳಗೆ= ಮಣಿಪುರದಲ್ಲಿ ,ಎಸೆದುವು= ಶೋಭಿಸಿದುವು. 


ಅ॥ವಿ॥ ಮಂಡಲದ+ಅಧಿಪರ್= ಮಂಡಲೃಧಿಪರ್( ಷ.ತ.) ವಿಭವ=ವೈಭವ, ಒಂದು ಸಂವತ್ಸರ, ತಂಡತಂಡ=ಗುಂಪು ಗುಂಪು, ಭಂಡಿ ಭಂಡಿ,( ಅತಿ ಹೆಚ್ಚಿಗಿದ್ದುವೆಂಬ ಭಾವ) 


ತಾತ್ಪರ್ಯ:- ಆ ಬಳಿಕ ಗುಂಪುಗುಂಪಾಗಿ ಮಣಿಪುರವನ್ನು ಪುಗುವ ಆನೆಗಳ,ಕುದುರೆಗಳ, ಪುರಜನದ, ಪರಿಜನದ, ಅಧೀನ ರಾಜರು ಎನ್ನಿಸಿಕೊಂಡ ಹಂಸಧ್ವಜನೇ ಮೊದಲಾದ ರಾಜರು ಪೊಗದಿಯನ್ನು ಸಲ್ಲಿಸುವ ಗೊತ್ತಾದ ದಿನಗಳಲ್ಲಿ ತಪ್ಪದೆ ಕಾಣಿಕೆಗಳನ್ನು ಸಲ್ಲಿಸುವ ಪೊಗದಿಯ ಹಣವನ್ನು ಬಂಡಿಗಳಲ್ಲಿ ತುಂಬಿ ರಾಜನಿಗೆ ಕೊಟ್ಟು ದರ್ಶನ ಮಾಡಿಕೊಂಡು ವಾಪಸ್ಸು ಬರುವ ಜನರಿಂದಲೂ, ರಾಜಸ್ಥಾನಕ್ಕೆ ಮೀರಿ ನಡೆದರೆ ತಮಗುಂಟಾಗುವ ತೊಂದರೆಯ ಭಯದಿಂದ ಕ್ಲುಪ್ತಕಾಲಕ್ಕೆ ಸರಿಯಾಗಿ ಸಲ್ಲಿಸತಕ್ಕ ರಾಜಮರ್ಯಾದೆಗಳನ್ನು ಸಲ್ಲಿಸಿ ಬೀದಿ ಬೀದಿಗಳಲ್ಲಿ ಸಂಚರಿಸುತ್ತಿರುವ ಅಧಿಕಾರಿಗಳಿಂದಲೂ ಆ ನಗರವು ಕಂಗೊಳಿಸುತ್ತಿತ್ತು.  


ನೆಟ್ಟನೆ ಹಯಂ ಪೋಗಿ ವಹಿಲದಿಂ ಪೊಕ್ಕುದಾ। 

ಪಟ್ಟಣವನದರೊಡನೆ ನಡೆತಂದು ಪಾಳೆಯಂ। 

ಬಿಟ್ಟುದು ಪುರೋದ್ಯಾನವೀದಿಗಳೊಳರ್ಜುನಂ ನಗರಮಂ ನೋಡಿ ನಗುತೆ॥ 

ಕಟ್ಟೆಸಕದಿಂದೆ ಕಂಗೊಳಿಸುತಿದೆ ಪೊಳಲಿದಂ। 

ಮುಟ್ಟಿ ಪಾಲಿಸ ವೀರನಾರವಂ ಕುದುರೆಯಂ। 

ಕಟ್ಟುವನೆ ಪೇಳೆಂದು ಹಂಸಧ್ವಜಕ್ಷಿತಿಪನಂ ಕೇಳ್ದೊಡಿಂತೆಂದನು॥೧೧। 


ಪ್ರತಿಪದಾರ್ಥ :- ಆ ಹಯಂ= ಆ ಯಜ್ಞಾಶ್ವವು, ನೆಟ್ಟನೆ= ಕ್ರಮವಾಗಿ, ವಹಿಲದಿಂ = ಶೀಘ್ರವಾಗಿ, ಪೋಗಿ=ಪ್ರವೇಶಿಸಿ,  ಆ ಪಟ್ಟಣವನ್ನು= ಆ ಮಣಿಪುರವನ್ನು, ಪೊಕ್ಕುದು = ಪ್ರವೇಶಿಸಿತು, ಅದರೊಡನೆ= ಆ ತುರಗದೊಡನೆ, ನಡೆತಂದು= ಬಂದು, ಪುರ= ನಗರದ, ಉದ್ಯಾನ= ಆರಾಮಗಳ, ವೀಧಿಗಳೊಳು= ಬೀದಿಗಳಲ್ಲಿ, ಪಾಳೆಯಂ= ಸೈನ್ಯವು, ಬಿಟ್ಟುದು= ಇಳಿದು- 

ಕೊಂಡಿತು, ಅರ್ಜುನಂ= ಪಾರ್ಥನು,ನಗರಮಂ= ರತ್ನಪುರವನ್ನು, ನೋಡಿ=ಕಂಡು, ನಗುತ= ಹರ್ಷಿಸುತ್ತ, ಕಟ್ಟೆಸಕದಿಂದ= ಚಮತ್ಕಾರದ ರೀತಿಯಿಂದ, ಕಂಗೊಳಿಸುತಿದೆ= ಹೊಳೆಯುತ್ತಿದೆ, ಇದಂ= ಈ ಮಣಿಪುರವನ್ನು, ಮುಟ್ಟಿ= ಮನಮೊಲಿವ ರೀತಿಯಿಂದ( ವಿಶ್ವಾಸಪೂರ್ವಕದಿಂದ) ಪಾಲಿಪ= ಪರಿಪಾಲನೆ ಮಾಡತಕ್ಕ, ವೀರನು= ಪರಾಕ್ರಮಶಾಲಿಯು, ಆವವಂ= ಯಾರು ಇರುತ್ತಾರೆ, ಕುದುರೆಯಂ= ತುರಂಗವನ್ನು, ಕಟ್ಟುವನೆ= ಸಮರ್ಥಿಸುತ್ತಾನೆಯೋ, ಪೇಳ್= ಹೇಳು, ಎಂದು=ಎಂಬುದಾಗಿ,  ಹಂಸಧ್ವಜ= ಹಂಸಧ್ವಜನೆಂಬ, ಕ್ಷಿತಿಪನಂ= ಭೂಪಾಲನನ್ನು, ಕೇಳ್ದಡೆ= ಕೇಳಲಾಗಿ,  ಹಂಸಧ್ವಜಂ= ಹಂಸಧ್ವಜನು, ಇಂತು= ಈ ಪ್ರಕಾರವಾಗಿ, ಎಂದನು= ಹೇಳಿದನು. 


ಅ॥ವಿ॥ ವೀರ-ಹೊಸಗನ್ನಡ, ಬೀರ=ಹಳಗನ್ನಡ, ಕುಂತಿಗೆ ಪೃಥೆ ಎಂಬ ಹೆಸರೂ ಉಂಟು, ಪೃಥೆಯ ಮಗ ಪಾರ್ಥ, ಇದು+ಪುರ= ಈ ಪುರ( ಗಮಕ.ಸ.) ವೀಥೀ(ತ್ಸ) ಬೀದಿ (ತ್ಭ) 


ತಾತ್ಪರ್ಯ:- ಅನಂತರದಲ್ಲಿ ಪಾರ್ಥನ ಯಜ್ಞಾಶ್ವವು ನೆಟ್ಟನೆ ಶೀಘ್ರವಾಗಿ ಹೊರಟು ಆ ಮಣಿಪುರವನ್ನು ಪ್ರವೇಶಿಸಲಾಗಿ ಆ ಯಜ್ಞಾಶ್ವದ ಸಂಗಡಲೇ ಪಾರ್ಥನ ಸೇನೆಯು ಬಂದು ಆ ಮಣಿಪುರದ ಉದ್ಯಾನವನದಲ್ಲಿ ನಿಂತು ವಿಶ್ರಮಿಸಿಕೊಳ್ಳಲುಪ-

ಕ್ರಮಿಸಿತು. ಆಗ ಆ ಧನಂಜಯನು ಆ ಮಣಿಪುರದ ಆಕಾರವನ್ನೆಲ್ಲ ನೋಡಿ ನಗುತ್ತ ಈ ಪಟ್ಟಣವು ಅತಿ ರಮಣೀಯವಾಗಿ ಕಂಗೊಳಿಸುತ್ತಿದೆ. ಈ ಪಟ್ಟಣವನ್ನು ಪಾಲಿಸುವ ವೀರನು ಯಾರಿರಬಹುದು? ಈ ನಮ್ಮ ಯಜ್ಞಾಶ್ವವನ್ನು ಕಟ್ಟಬಹುದೆ? ಈ ವಿಷಯವನ್ನು ನಿನಗೆ ತಿಳಿದಮಟ್ಟಿಗೆ ವಿವರಿಸೆಂದು ಹಂಸಧ್ವಜನನ್ನು ಕುರಿತು ಪಾರ್ಥನು ಕೇಳಲಾಗಿ. 


ನೀನರಿದುದಿಲ್ಲಲಾ ಪಾರ್ಥಮಣಿಪುರಮೆಂಬ। 

ರೀನಗರಮಂ ಬಭ್ರುವಾಹನಂ ಪ್ರಖ್ಯಾತ। 

ಭೂನಾಥನಿಲ್ಲಿಗರಸವನಿಪರಥಳಗ್ಗಳೆಯನಿವನ ಸಿದ್ಧಾಯಕಾಗಿ॥ 

ಏನೆಂಬೆನೊಂದು ಸಾಸಿರ ಬಂಡಿ ಕನಕಮಂ। 

ನ್ಯೂನಮಿಲ್ಲದೆ ತೆತ್ತು ಬಹೆವು ನಾವೆಲ್ಲರುಂ। 

ಹೀನಮಾದೊಡೆ ದಂಡಿಸುವನೆಂಬ ಭೀತಿಯಿಂ ಪ್ರತಿದಿನದೊಳಂ ತಪ್ಪದೆ॥೧೨॥ 


ಪ್ರತಿಪದಾರ್ಥ :- ಪಾರ್ಥ= ಎಲೈ ಫಲುಗುಣನೆ! ನೀಂ=ನೀನು, ಅರಿದುದಿಲ್ಲಲಾ= ತಿಳಿದಿರುವವನಲ್ಲವೆ? ಈ ನಗರಂ= ಈಗ ನಾವು ಬಂದಿರುವ ಪಟ್ಟಣವು, ಮಣಿಪುರಮೆಂಬುದು= ರತ್ನಪುರವೆಂದು ಹೆಸರುಳ್ಳದ್ದಾಗಿರುವುದು, ಇಲ್ಲಿಗೆ= ಈ ಮಣಿಪು-

ರಕ್ಕೆ, ಬಭ್ರುವಾಹನಂ= ಮುಂಗುಸಿಯೇ ಧ್ವಜದಲ್ಲುಳ್ಳವನಾದ ಬಭ್ರುವಾಹನನೆಂಬುವ, ಅರಸು=ರಾಜನು, ಪ್ರಖ್ಯಾತ = ಹೆಸರುವಾಸಿಯಾದ, ಭೂನಾಥಂ= ಭೂಮಿಪತಿಯು, ಆಗಿರ್ಪ= ಆಗಿರುವನು, ಅವಂ= ಅವನು, ಅವನಿಪರೊಳು= ಭೂಪಾಲಕರಲ್ಲಿ, ಅಗ್ಗಳೆಯನು= ಮಹಾಪರಾಕ್ರಮಶಾಲಿಯು, ಅವನ= ಆ ಬಭ್ರುವಾಹನನ,  ಸಿದ್ಧಾಯಕ= ಅವನಿಗೆ ನಿಗದಿಯಾಗಿ ಕೊಡತಕ್ಕ ಕಾಣಿಕೆಗೆ, ಏಂ ಎಂಬೆನು= ಯಾವ ರೀತಿಯಾಗಿಹೇಳಲಿ, ಒಂದು= ಒಂದಾದ, ಸಾವಿರ= ಸಾವಿರ ಸಂಖ್ಯೆಯುಳ್ಳ, ಬಂಡಿ= ಗಾಡಿಗಳಲ್ಲಿ, ತುಂಬಿದ= ಭರ್ತಿಮಾಡಿದ, ಕನಕಮಂ= ಸುವರ್ಣ ನಾಣ್ಯವನ್ನು, ನ್ಯೂನಂ ಇಲ್ಲದೆ=

ಕಡಿಮೆಯಾಗದೆ, ನಾವ್= ನಾವುಗಳು, ಎಲ್ಲರುಂ= ಸಮಸ್ತರೂ, ಹೀನಂ= ಆ ಹಣದಲ್ಲಿ ಏನಾದರೂ ಕೊರತೆಯಾದಲ್ಲಿ ,ದಂಡಿಸುವಂ= ದಂಡಿಸುತ್ತಾನೆ, ಎಂಬ=ಎನ್ನುವ, ಭೀತಿಯಿಂ= ಭಯದಿಂದ, ತಪ್ಪದೆ= ಮೀರಿನಡೆಯದೆ, ಪ್ರತಿದಿನಂ= ಕಾಣಿಕೆ ಕೊಡಲು ಏರ್ಪಡಿಸಿದ ದಿನದಲ್ಲಿ, ತೆತ್ತು= ಕೊಟ್ಟು, ಬಹೆವು= ಬರುತ್ತೇವೆ. 


ಅ॥ವಿ॥ ಸಾವಿರವಾದ ಬಂಡಿಗಳ ಸಮಾಹಾರ = ಸಾವಿರಬಂಡಿ ಸಮಾಹಾರ ( ದ್ವಿ. ಸ.) ಕೈಯ+ಮೇಗು= ಮೇಗೈ( (ಅವ್ಯಯೀಭಾವ. ಸಮಾಸ), ವಾಕ್+ ಮಯ=ವಾಙ್ಮಯ (ಅನುನಾಸಿಕ. ಸಂ) ಭೂಮಿಯ+ನಾಥ=ಭೂನಾಥ

(ಷ. ತ.)


ತಾತ್ಪರ್ಯ:-ಆಗ ಪಾರ್ಥನ ಮಾತುಗಳನ್ನು ಕೇಳಿದ ಹಂಸಧ್ವಜನು ಧನಂಜಯನನ್ನು ಕುರಿತು ಈ ವಿಷಯಗಳೆಲ್ಲ ನಿನಗೆ ಗೊತ್ತಿಲ್ಲ. ಈ ನಗರವು ರತ್ನಪುರವೆಂಬ ಹೆಸರುಳ್ಳದ್ದು, ಈ ನಗರಕ್ಕೆ ಬಭ್ರುವಾಹನನೆಂಬುವ ರಾಜನು ಪ್ರಖ್ಯಾತನಾದ ರಾಜನಾಗಿರುತ್ತಾನೆ. ಆ ನಕುಲಧ್ವಜನುಈ ಭೂಮಂಡಲದ ವೀರನಾದ ರಾಜರಲ್ಲಿ ಒಬ್ಬನಾಗಿರುತ್ತಾನೆ, ಆ ರಾಜನಿಗೆ ಸಾಮಂತರಾಜರಾದ ನಾವೆಲ್ಲರೂ ಕ್ಲುಪ್ತಕಾಲದಲ್ಲಿ ಸಲ್ಲಿಸಬೇಕಾದ ಕಪ್ಪಕಾಣಿಕೆಗಳನ್ನು ಸಾವಿರಾರು ಭಂಡಿಗಳಲ್ಲಿ ತಲಪಿಸುತ್ತೇವೆ. ಕೊಂಚಮಟ್ಟಿಗೆ ನ್ಯೂನತೆಯಾದರೂ ನಮ್ಮಗಳನ್ನು ಕ್ರೂರವಾಗಿ ಶಿಕ್ಷಿಸುವನೆಂಬ ಭಯದಿಂದ ಕ್ರಮವಾಗಿ ಸಲ್ಲಿಸುತ್ತಿರುವೆವು. 


ಈತಂಗೆ ಸಚಿವಂ ಸುಬುದ್ಧಿಯೆಂಬವನೋರ್ವ। 

ನಾತನೇ ಪಾಲಿಸುವನಿವನ ಭೂತಳಮಂ ನಿ। 

ಜಾತಿಶಯ ಧರ್ಮದಿಂದೆಳ್ಳನಿತು ದೋಷಮಿಲ್ಲದೆ ಸಾವಧಾನನಾಗಿ॥ 

ನೀತಿಪಥಮಂ ಬಿಡದೆ ವಿವಿಧವರ್ಣಾಶ್ರಮದ। 

ಜಾತಿಭೇದವನರಿದು ಸಂತತಂ ಪ್ರಜೆಗಳಂ। 

ಪ್ರೀತಿಯಿಂ ಪೊರೆದು ಪರಿಜನಕೆ ಪದುಳಿಗನಾಗಿ ಭೂಪನಂ ಪೋಷಿಸುವನು॥೧೩॥ 


ಪ್ರತಿಪದಾರ್ಥ :- ಈತಂಗೆ= ಈತನಿಗೆ, ಸುಬುದ್ಧಿ= ಸುಬುದ್ಧಿಯು, ಎಂಬುವಂ= ಎನ್ನತಕ್ಕವನು, ಓರ್ವಂ= ಒಬ್ಬನಾದ, ಸಚಿವಂ= ಅಮಾತ್ಯನು, ಇರೂಪಂ= ಇರುವನು, ಆತನೆ= ಆ ಸಚಿವನೇ, ಇವನ= ಈ ಬಭ್ರುವಾಹನನ, ಭೂತಳವಂ= ದೇಶವನ್ನು, ನಿಜ=ಯಥಾರ್ಥದಿಂದಲೂ, ಅತಿಶಯ= ಅತ್ಯಧಿಕವಾದ, ಧರ್ಮದಿಂ= ಧರ್ಮದಿಂದಲೂ, ಎಳ್ಳನಿತು= ಒಂದು ತಿಲಮಾತ್ರದಷ್ಟು, ದೋಷಂ=ಪಾಪವು, ಇಲ್ಲದೆ= ಬಾರದಂತೆ, ಸಾವಧಾನದಿಂದ = ತಾಳ್ಮೆಯಿಂದ, ಪಾಲಿಸುವಂ= ಕಾಪಾಡುತ್ತಿರೈವನು, ನೀತಿ=ನೀತಿಯ, ಪಥಮಂ= ಹಾದಿಯನ್ನು, ಬಿಡದೆ= ತಪ್ಪಿ ನಡೆಯದೆ, ವಿವಿಧ= ಅನೇಕ ಬಗೆಗಳಾದ, ವರ್ಣ= ನಾಲ್ಕು ವರ್ಣಾಶ್ರಮಗಳ,ಆಶ್ರಮದ= ಆಶ್ರಮಗಳ, ಜಾತಿಭೇದವಂ= ಆಯಾ ಜಾತಿಭಾಗಗಳನ್ನು, ಅರಿದು= ಬಲ್ಲವನಾಗಿ, ಸತತಂ= ಯಾವಾಗಲೂ, ಪ್ರಜೆಗಳಂ= ತನ್ನರಾಷ್ಟ್ರದ ಜನರನ್ನು, ಪ್ರೀತಿಯಿಂ= ವಿಶ್ವಾಸದಿಂದ,  ಪೊರೆದು= ಸಂರಕ್ಷಿಸಿ,ಪುರಜನಕೆ= ನಾಗರಿಕರಿಗೆ, ಪದುಳಿಗನು= ಕ್ಷೇಮಚಿಂತಕನು,ಸಂಪ್ರೀತಿಯಿಂ= ಆದರದಿಂದ,ಭೂಪನಂ= ರಾಜನಾದ ಬಭ್ರುವಾಹನನನ್ನು, ಪೋಷಿಸುವಂ=ಸಂರಕ್ಷಿಸುವನು. 


ಅ॥ವಿ॥ ವರ್ಣಗಳು ನಾಲ್ಕು =ಬ್ರಹ್ಮ, ಕ್ಷತ್ರಿಯ, ವತಶ್ಯ, ಶೂದ್ರ, ಆಶ್ರಮಗಳು ನಾಲ್ಕು = ಬ್ರಹ್ಮಚರ್ಯ,  ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಇವುಗಳು. ಕಾಲತ್ರಯ= ಭೂತ,ಭವಿಷ್ಯ ವರ್ತಮಾನ, ಋಣತ್ರಯ= ದೇವ ಋಣ, ಪಿತೃಋಣ, 

ಋಷಿ ಋಣ, ಲಿಂಗತ್ರಯ= ಪುಂ. ಸ್ತ್ರೀ. ನಪುಂಸಕ, ಕುಂಬಾರ(ತ್ಭ)ಕುಂಭಕಾರ(ತ್ಸ) ಕುಂದ+ಇಂದು= ಕುಂದೇಂದು(ಗು.ಸಂ.)


ತಾತ್ಪರ್ಯ:- ಈತಂಗೆ ಸುಬುದ್ಧಿಯೆಂಬ ನಾಮಧೇಯವುಳ್ಳ ಒಬ್ಬ ಮಂತ್ರಿ ಶ್ರೇಷ್ಠನಿರುವನು. ಆ ಸುಬುದ್ಧಿಯೆಂಬಾತನೇ ಈ ಭೂತಳವನ್ನು ಕ್ರಮವಾಗಿ ನ್ಯಾಯದಿಂದಲೂ,ಸತ್ಯದಿಂದಲೂ,ಸುಗುಣದಿಂದಲೂ,ತಿಲಾಂಶದಷ್ಟಾದರೂ ದೋಷವುಂಟಾಗ-

ದಂತೆ, ದುಷ್ಟನಿಗ್ರಹ, ಶೆಷ್ಟಪರಿಪಾಲನೆಯನ್ನು ಮಾಡಿ ಸಾವಧಾನಚಿತ್ತದಿಂದ ಪರಿಪಾಲಿಸುವನು, ನ್ಯಾಯವನ್ನು ತಪ್ಪದೆ ನಾನಾರೀತಿಯಾದ ವರ್ಣಾಂತರದ ಕುಲಗಳಲ್ಲಿ ನಡೆಯಬೇಕಾದ ಧರ್ಮಾಧರ್ಮ ಭೇದಾದಿಗಳನ್ನು ತಿಳಿದು ಅನವರತವೂ ದೇಶದ ಜನರನ್ನು ಅಕ್ಕರೆಯಿಂದ ಪೊರೆದು ಪಟ್ಟಣಿಗರಿಗೆ ಸರ್ವದಾ ಹಿತವನ್ನೆ ಬಯಸತಕ್ಕವನಾಗಿ ತನ್ನ ರಾಜನನ್ನು ಪೋಷಿ- 

ಸುತ್ತಿರುವನು.


ಒಂದು ಕೊಡಕೆಯ ಕಪ್ಪಿನಿಂದೆಸೆವ ತೇಜಿಗಳ್। 

ಕುಂದೇಂದುಧವಳಾಂಗದಾನೆಗಳ್ ಮಣಿಮಯದ। 

ಪೊಂದೇರ್ಗಳಿನಿತೆಂದರಿಯರಿವನ ಕರಣಿಕರ್ ಮಿಕ್ಕ ರಥ ಕರಿ ಘಟೆಗಳ॥ 

ಮಂದಿ ಕುದುರೆಯ ಪವಣವನರಿವರಾರ್ ಭೂಪಾಲ। 

ವೃಂದದೊಳ್ ಪಡಿಯುಂಟೆ ಬಭ್ರುವಾಹಂಗೆ ಕಡು। 

ಪೊಂದಿದತಿಶಯವೀರನೀ ತುರಗಮಂ ಕಟ್ಟದಿರ್ಪನೆ ಪೇಳೆಂದನು॥೧೪॥ 


ಪ್ರತಿಪದಾರ್ಥ :- ಒಂದು ಕೊಡಕೆಯ= ಒಂದು ಕರ್ಣದ, ಕಪ್ಪಿಯಿಂದ= ನೀಲವರ್ಣದಿಂದ,ಎಸೆವ=ಶೋಭಿಸುವ, ತೇಜಿಗಳ= ಅಶ್ವಗಳ, ಕುಂದ= ತುಂಬೇಹುವ್ವು( ಬೆಟ್ಟದ ಮಲ್ಲಿಗೆ ಹುವ್ವು) ಇಂದು= ಚಂದ್ರ ಇವರಂತೆ,ಧವಳ= ಶುಭ್ರವಾದ, ಆನೆಗಳ=ಗಜಗಳ, ಮಣಿಮಯದ= ರತ್ನವಾಕಾರಗಳಾದ, ಪೊಂದೇರ್ಗಳು= ಸ್ವರ್ಣ ವಿಕಾರಮಾದ ರಥಗಳ, ಇನಿತೆಂದು= ಇಷ್ಟೇ ಎಂಬುದಾಗಿ, ಇವನ= ಈ ರಾಜನ, ಕರಣಿಕರರ್= ಶಾನುಭಾಗರೇ ಮೊದಲ್ದವರು, ಅರಿಯರು= ಬಲ್ಲವರಾಗಿಲ್ಲ ಅಶ್ವಶಾಲಾಧ್ಯಕ್ಷರು, ಗಜಶಾಲಾಧ್ಯಕ್ಷರು, ಸಹ ಯಾರೊಬ್ಬರೂಇವುಗಳ ಲೆಕ್ಕವನ್ನು ಬಲ್ಲವರಾಗಿಲ್ಲ , ಎಂದರೆ ವಿಶೇಷವಾಗಿ-

ತ್ತೆಂಬ ಭಾವವು) ಮಿಕ್ಕ= ಬಾಕಿಯಾದ, ಕರಿಘಟೆಗಳ= ಗಜಸೇನೆಯ, ಮಂದಿ=ಜನರು, ಕುದುರೆಯ= ಕುದುರೆಗಳ, ಪವಣ= ರೀತಿಯನ್ನು, (ಪ್ರಮಾಣವನ್ನು) ಅರಿವರ್= ಬಲ್ಲವರು, (ವಿಚಾರಮಾಡತಕ್ಕವರು) ಆರ್=ಯಾರಿರುವರು, (ಒಬ್ಬರೂ ಎಲ್ಲ), ಭೂಪಾಲರೊಳ್= ಪೃಥ್ವೀ ಪಾಲಕರಲ್ಲಿ, ಬಭ್ರುವಾಹನಂಗೆ=ಬಭ್ರುವಾಹನನಿಗೆ, ವೃಂದದೋಳ್= ಗುಂಪಿನಲ್ಲಿ,ಪಡಿಯುಂಟೆ= ಸಮರುಂಟೆ, ಎಂದರೆ ಈತನಿಗೆ ಸಮಾನರೇ ಇಲ್ಲವೆಂಬ ಭಾವ, ಕಡು=ಹೆಚ್ಚಾಗಿ,  ಪೊಂದಿದ= ಧರಿಸಿದ, ಅತಿಶಯದ= ಮಹತ್ತಾದ, ವೀರನು= ಪರಾಕ್ರಮಾತಿಶಯವುಳ್ಳವನು, ಈ ತುರಗಮಂ= ಈ ಯಜ್ಞಾಶ್ವವನ್ನು,  ಕಟ್ಟದೆ= ಹಿಡಿದುಕೊಳ್ಳದೆ, ಇರ್ಪನೆ= ಇರುತ್ತಾನೆಯೇ, ಪೇಳ್= ಹೇ, ಎಂದನು= ಎಂಬುದಾಗಿ ಹೇಳಿದನು.  


ಅ॥ವಿ॥ ಧವಳ+ ಅಂಗ= ಧವಳಾಂಗ( ಸವರ್ಣ ದೀ, ಸಂ.) ಧವಳವಾದ +ಅಂಗ= ಧವಳಾಂಗ(ವೆ, ಪೂ. ಕ. ) ಪವಣ್= ಹಳಗನ್ನಡ, ಪವಣ್(ತ್ಭ)ಪ್ರಮಾಣ(ತ್ಸ)


ತಾತ್ಪರ್ಯ:- ಒಂದು ಕರ್ಣದಲ್ಲಿ ಕಪ್ಪಾಗಿ ಹೊಳೆಯುವ ಅಶ್ವಮೇಧಕ್ಕೆ ಯೋಗ್ಯವಾದ ಅಶ್ವಗಳು,  ಮೊಲ್ಲೇ ಹುವ್ವು,ಮತ್ತು ಚಂದ್ರನು ಇವರುಗಳಿಗೆ ಸಮಾನವಾದ ಕಾಂತಿಯುಳ್ಳ ಧವಳ ವರ್ಣದ ಗಜಗಳೂ, ರತ್ನಖಚಿತಗಳಾದ ಚಿನ್ನದ ರಥಗಳೂ, ಇವೇ ಮೊದಲಾದವುಗಳು ಇಷ್ಟೆಂದು ನಿರ್ಣಯಿಸಲಿಕ್ಕೆ ಅಶ್ವಶಾಲಾ, ಗಜಶಾಲಾ,ರಥಶಾಲಾ ಇವುಗಳ ಮುಖ್ಯಾಧಿಕಾರಿ-

ಗಳಾದ ಶಾನುಭೋಗ ಕರಣಿಕರೇ ಆದಿಯಾದವರಿಗೆ ಸಹಾ ತಿಳಿಯದೆ ಹೋಗುವುದರಿಂದ, ಬಭ್ರುವಾಹನನ ಐಶ್ವರ್ಯವನ್ನು ಗೊತ್ತುಮಾಡಲಿಕ್ಕೆ ಸಾಧ್ಯವಿಲ್ಲವಾಗಿರುತ್ತೆ. ಈತನಿಗೆ ಸಮಾನರಾದ ಭೂಪಾಲರು ಭೂಮಿಯಲ್ಲಿ ಯಾರೂ ಇಲ್ಲವೆಂಬಂತೆ ಅತಿ ಪರಾಕ್ರಮಶಾಲಿಯಾಗಿಯೂ,ಸತ್ಯಸಂಧನಾಗಿಯೂ ಇರುವನು. ಈ ರೀತಿ ಪರಾಕ್ರಮಶಾಲಿಯಾದ ಬಭ್ರುವಾಹನನು ಈ ತುರಗವನ್ನು ಬಂಧಿಸದೇ ಬಿಟ್ಟಾನೆ ನೀನೇ ಯೋಚಿಸೆಂದು ಹೇಳಿದನು. 


ಈ ಪುರದೊಳಿರ್ಪ ಮಾನವರೆಲ್ಲರುಂ ಸದಾ। 

ಶ್ರೀಪತಿಯ ಭಜನೆಯಲ್ಲದೆ ಪೆರತರಿಯರತಿದ। 

ಯಾಪರರ್ ವೇದಾರ್ಥಕೋವಿದರ್ ಸತ್ಯವ್ರತಾಚಾರಸಂಪನ್ನರು॥ 

ಕೋಪವರ್ಜಿತರಹಿಂಸಾಮತಿಗಳಾತ್ಮಸ್ವ।

ರೂಪಜ್ಞರತಿಬಲರ್ ದಾನಿಗಳ್ ಶುಚಿಗಳ್ ಪ್ರ। 

ತಾಪಿಗಳ್ ವೀರರ್ಕಳತಿನಿಪುಣರನಸೂಯರಸ್ತ್ರಶಸ್ತ್ರಪ್ರೌಢರು॥೧೫॥ 


ಪ್ರತಿಪದಾರ್ಥ :- ಈ ಪುರದೊಳು= ಈ ಮಣಿಪುರದಲ್ಲಿ, ಇರ್ದ= ಇರತಕ್ಕ, ಮಾನವರು= ನಾಗರಿಕರು, ಎಲ್ಲರುಂ= ಸರ್ವರೂ, ಸದಾ= ಯಾವಾಗಲೂ, ಶ್ರೀಪತಿಯ= ಲಕ್ಷ್ಮೀಪತಿಯಾದ ವಿಷ್ಣುವಿನ, ಭಜನೆ= ಆರಾಧನೆಯು, ಅಲ್ಲದೆ= ಅದು ಹೊರತಾಗಿ, (ಶ್ರೀವಿಷ್ಣುವಿನ ಸೇವೆಯಲ್ಲದೆ) ಪೆರತು= ಎರಡನೆಯ ಮಾರ್ಗವನ್ನೆ, ಅರಿಯರು= ಬಲ್ಲವರಲ್ಲ, ಅತಿ=ಅಧಿಕ-

ವಾಗಿ, ದಯಾಪರರು= ಕೃಪಾಳುಗಳು, ವೇದಾರ್ಥ= ಶ್ರುತ್ಯರ್ಥ ವಿಚಾರವನ್ನು, ಕೋವಿದರು= ಬಲ್ಲವರು( ವೇದಾರ್ಥಾ-

ಪಾರ್ಥ= ದಿಗಳನ್ನು ಬಲ್ಲವರು) ಸತ್ಯ=ಯಥಾರ್ಥವನ್ನು ಹೇಳುವುದರಲ್ಲಿಯೂ, ವ್ರತ= ಆಚರಣೆಯಿಂದಲೂ, ಆಚಾರ= ಸನ್ಮಾರಗ-

ದಿಂದಲೂ, ಸಂಪನ್ನರು=ಒಡಗೂಡಿದವರು, ಕೋಪ= ರೋಷದಿಂದ, ವರ್ಜಿತರು= ಕೋಪವಿಲ್ಲದವರು, ಅಹಿಂಸಾಮತಿಗಳು= ಅರಾಣಿದಯಾಪರರು, ಆತ್ಮ= ಶ್ರೀಪರಮಾತ್ಮನ, ಸ್ವರೂಪ= ಆಕಾರವನ್ನು,ಜ್ಞರು= ಬಲ್ಲವರು, ಅತಿಬಲರ್= ಶೂರರು, ದಾನಿಗಳ್= ಉದಾರಿಗಳು, ಶುಚಿಗಳ್= ಅಂತರಂಗ ಬಹಿರಂಗ ಶುದ್ಧಿಯುಳ್ಳವರು,ಪ್ರತಾಪಿಗಳ್= ಪರಾಕ್ರಮಿಗಳು, ವೀರರ್= ಮಹಾಶೂರರು, ಕಳಾ= ಕಲೆಗಳಲ್ಲಿ, ನಿಪುಣರ್= ಪ್ರವೀಣರು, ಅನಸೂಯರು= ಹೊಟ್ಟೆ ಕಿಚ್ಚು ಪಡದವರು, ಅಸ್ತ್ರ= ಮಂತ್ರಿಸಿ ಬಿಡುವ ವಿದ್ಯೆಯಲ್ಲಿಯೂ, ಶಸ್ತ್ರ= ಆಯುಧಗಳನ್ನು ಪ್ರಯೋಗಿಸುವ ವಿದ್ಯದಲ್ಲಿಯೂ, ಪ್ರೌಢರು= ನಿಪುಣರು, ಆಗಿರ್ಪರ್= ಆಗಿರುತ್ತಾರೆ. 


ಅ॥ವಿ॥ ಶ್ರೀಯ+ಪತಿ=ಶ್ರೀಪತಿ(ಷ. ತ.) ಶ್ರೀ(ತ್ಸ) ಸಿರಿ(ತ್ಭ) ವೇದಗಳು=ಋಗ್, ಯಜು, ಸಾಮ, ಅಥರ್ವ, ಷಟ್ಛಾಸ್ತ್ರಗಳು= 

ವೇದಾಂತ, ವೈಶೇಷಿಕ, ಭಾಷ್ಯ, ವ್ಯಾಕರಣ, ಪೂರ್ವಮೀಮಾಂಸ, ಉತ್ತರಮೀಮಾಂಸ, ಷಡ್ದರ್ಶನ= ಸಾಂಖ್ಯ, ಯೋಗ, ನ್ಯಾಯ,ವೈಶೇಷಿಕ, ಮೀಮಾಂಸ, ವೇದಾಂತ. 


ತಾತ್ಪರ್ಯ:- ಈ ಮಣಿಪುರವಾಸಿಗಳು ದೇಶವತ್ಸಲರು,ಧರ್ವಂತರು, ತಪೋನೆಷ್ಠರು, ಸತ್ಯಸಂಧರು, ಅಸೂಯಾರಹಿತರು, ಶ್ರೀಲಕ್ಷ್ಮೀರಮಣ ಸೇವಾನಿರತರು,ವೇದವಿದರು, ಸಕಲಕಲಾಕೋವಿದರು, ವೇದಾಧ್ಯಯನ ಸಂಪನ್ನರು, ಬಹುಬಲಾನ್ವಿತರು, ಸಾಹಸಿಗಳಾದ ಯೋಧರು, ಮಹಾಶಕ್ತಿ ಯುಕ್ತಿವಂತರು, ರಾಜಭಕ್ತಿಯಲ್ಲಿ ಅಗ್ರಗಣ್ಯರು. 


ಯೋಗಿಜನದಂತೆ ಮುಕ್ತಾಹಾರದಿಂ ಪೂಜ್ಯ। 

ಮಾಗಿಹುದು ಪಾತಾಳನಿಳಯದಂತಾವಗಂ। 

ಭೋಗಿಪವಿಲಾಸಮಂ ತಳೆದಿಹುದು ಸಂತತಂ ಗಾಂಧರ್ವಶಾಸ್ತ್ರದಂತೆ॥ 

ರಾಗಾನುಬಂಧ ಮೋಹನ ಮಧುರತಾಲಂಬ। 

ಮಾಗಿಹುದು ಪಾರ್ಥ ಕೇಳೀಪುರದ ಸಕಲ ನಾ। 

ರೀಗಣ ಮೇಣಂತುಮಲ್ಲದೆ ಪತಿವ್ರತಾಶೀಲಮಂ ತಾಳ್ದೆಸೆವುದು॥೧೬॥ 


ಪ್ರತಿಪದಾರ್ಥ :- ಪಾರ್ಥ= ಎಲೈಫಲುಗುಣನೆ, ಕೇಳು=ಆಲಿಸು, ಈ ಪುರದ= ಈ ಪಟ್ಟಣದ, ಸಕಲ= ಸಮಸ್ತ, ನಾರೀಗಣ= ಸ್ತ್ರೀ ಸಮೂಹವು, ಯೋಗೀಜನದಂತೆ= ಯೋಗೀಶ್ವರರ ಹಾಗೆ(ರೇಚಕ, ಪೂರಕ, ಕುಂಭಾದಿಗಳನ್ನು ಕಲಿತ ಯೋಗಿಗಳ -

ರೀತಿಯಿಂದ) ಆಗಿಹುದು=ಆಗಿರುವುದು, ಹೇಗೆಂದರೆ, ಮುಕ್ತ=ಬಿಡಲ್ಪಟ್ಟ, ಆಹಾರದಿಂ= ಆಹಾರಾದಿಗಳಿಂದ, ಪೂಜ್ಯಂ= ಪೂಜನೀಯವಾದದ್ದಾಗಿ, ಇಹುದು= ಇರುವುದು, (ಯೋಗಿಜನವು) ವಿಮುಕ್ತ= ಮುತ್ತುಗಳ, ಹಾರದಿಂ= ಸರಗಳಿಂದ, ಪೂಜ್ಯಮಾಗಿ= ಶ್ರೇಷ್ಠವಾದದ್ದಾಗಿ,ಇಹುದು=ಇರುವುದು, (ನಾರೀಗಣವು) ಪಾತಾಳನಿಲಯದಂತೆ= ಪಾತಾಳವೆಂಬ ಗೃಹದ ಹಾಗೆ, ಇಹುದು= ಇರುವುದು, ಹೇಗೆಂದರೆ, ಆವಗಂ= ಸರ್ವಕಾಲದಲ್ಲೂ, ಭೋಗಿಪ= ಆದಿಶೇಷನ, ವಿಲಾಸಮಂ= ವೈಭವವನ್ನು, (ಆಟಗಳನ್ನು) ತಳೆದಿಹುದು= ಹೊಂದಿರುತ್ತದೆ, ಆವಗಂ= ಸರ್ವದಾ, ಭೋಗಿಪ= ವಿಷಯಾಸಕ್ತತೆಯಿಂದ, 

(ಕ್ರೀಡಿಸುವ ಜನಗಳ) ವಿಲಾಸಮಂ= ವೈಭವವನ್ನು, ತಳೆದಿಹುದು= ಪಡೆದಿರುವುದು, (ನಾರೀಗಣಂ), ಸತತಂ= ಯಾವಾಗಲೂ,  ಗಾಂಧರ್ವಶಾಸ್ತ್ರದಂತೆ= ಗಾನ ಶಾಸ್ತ್ರದಂತೆ, ಇಹುದು= ಇರುತ್ತಿರುವುದು, ಹೇಗೆಂದರೆ, ಸಂತತಂ= ಸರ್ವದಾ, ರಾಗ=ಕಲ್ಯಾಣಿ, ಮಧ್ಯಮಾವತಿ,ಮೋಹನವೇ ಆದಿಯಾದ ಸಂಗೀತರಾಗಂಗಳ,ಅನುಬಂಧ= ಕೂಡಿರುವುದ-

ರಿಂದ, ಮೋಹನ=ಭ್ರಾಂತಿಪಡಿಸುವ, ಮಧುರಕೆ= ಇಂಪಿಗೆ,(ಮಾಧುರ್ಯಕ್ಕೆ) ಆಲಂಬವಾಗಿ= ಆಶ್ರಯವಾಗಿ, ಇಹುದು= ಇರುವುದು, (ಗಾಂಧರ್ವ ಶಾಸ್ತ್ರವು)ರಾಗ= ಪ್ರಿಯನ ಅನುರಾಗದಿಂದ, ಅನುಬಂಧ=ಸೇರಿರುವ, ಮೋಹನ= ಮೋಹವನ್ನು ಜನಗಳಿಗುಂಟುಮಾಡತಕ್ಕ, ಮಧುರಕೆ= ಅಧರ ರಸಾಸ್ವಾದನೆಯ ಇಂಪಿಗೆ, (ಮಧುರಕ್ಕೆ),ಆಲಂಬಮಾಗಿ= ಸ್ವರೂಪವಾಗಿ, 

(ಆಶ್ರಯವಾಗಿ) ಇಹುದು= ಇರುತ್ತಲಿರುವುದು, ಮೇಣ್= ಇನ್ನೂ, ಅಂತು=ಆ ರೀತಿಯಾಗಿ, ಅಲ್ಲದೆ= ಅಲ್ಲದೇನೆ, ಪತಿ=ತನ್ನ ಪ್ರಿಯನಲ್ಲಿ, (ಗಂಡನಲ್ಲಿ) ವ್ರತ= ನಿಯಮವಾಗುಳ್ಳವರ, ಶೀಲಮಂ= ರೀತಿಯನ್ನು( ಆಕಚಾರವನ್ನು, ನಿಯಮವನ್ನು) ತಾಳ್ದು =ಹೊಂದಿ, ಎಸೆವುದು= ಶೋಭಿಸುತ್ತಿರುವುದು. 


ಅ॥ವಿ॥ ಸಪ್ತಸ್ವರಗಳು= ನಿಷಾದ, ಋಷಭ, ಗಾಂಧಾರ, ಷಡ್ಜ, ಮಧ್ಯಮ, ಧೈವತ, ಪಂಚಮ ಇವುಗಳೇ ಈಶ್ವರ ಮುಖದಿಂದ ಉತ್ಪತ್ತಿಯಾದವು, ಸಪ್ತ ತಾಳಗಳು= ಧ್ರುವ, ಮಟ್ಟ, ರೂಪಕ, ಜಂಪೆ, ತ್ರಿಪುಟ, ಅಷ್ಟ, ಏಕ. 


ತಾತ್ಪರ್ಯ:- ಎಲೈ ಕುಂತೀಪುತ್ರನಾದ ಫಲುಗುಣನೆ ಆಲಿಸು, ಈ ಪುರದ ಸಮಸ್ತ ನಾರೀಗಣವೂ ಮುಕ್ತಾಹಾರದಿಂದ ಪೂಜ್ಯವಾಗಿಯೂ, ಸುಖವನ್ನು ಅನುಭವಿಸುವ ಜನರ ವಿಲಾಸವನ್ನು ಹೊಂದಿರತಕ್ಕದ್ದಾಗಿಯೂ, ಕಾಮುಕರ ಅನುರಾಗದಿಂದ ಸೇರಿರುವ, ಮೋಹವನ್ನು ಜನರಲ್ಲಿ ಉತ್ಪಾದನೆ ಮಾಡುವ ಮಧುವಿನಂತೆ ಮಧುರವಾದ ಅಧರಾಮೃತಾ 

ಸ್ವಾದನೆಯಲ್ಲಿ ಗಣಿಯಾಗಿರುವಂತೆ ರಂಜಿಸುವುದು, ಮತ್ತು ಇದೂ ಅಲ್ಲೆ ತಮ್ಮ ಗಂಡನಲ್ಲಿಯೇ ನಿಯಮವುಳ್ಳವರಾಗಿ-

ಯೂ, ಒಳ್ಳೇಶೀಲಸ್ವಭಾವಾದಿಗಳಿಂದ ಮೆರೆಯುತ್ತಿರುವವರಾಗಿಯೂ, ಉದಾರಿಗಳಾಗಿಯೂ ಕಂಗೊಳಿಸುತ್ತಿರುವರು.


ಇಲ್ಲಿ ಪುರುಷಸ್ತ್ರೀಯರೋರ್ವರುಂ ಪಾತಕಿ। 

ಳಲ್ಲದಿಹ ಕಾರಣಂ ಸಾನಿಧ್ಯದಿಂ ರಮಾ। 

ವಲ್ಲಭಂ ಪೊರೆವನೀ ನಗರಮಂ ತನಗಿದೆರಡನೆಯ ವೈಕುಂಠಮೆಂದು॥ 

ನಿಲ್ಲದೆ ತುರಂಗಮಂ ಪೋಗಿ ಪೊಕ್ಕುದು ಬಿಡಿಸ। 

ಬಲ್ಲರಂ ಕಾಣೆನಾಂ ಫಲುಗುಣ ಮುರಾಂತಕನ। 

ಮೆಲ್ಲಡಿಯ ಕರುಣಮೆಂತಿಹುದೆಂದರಿಯೆನೆಂದನಾ ಹಂಸಕೇತುನೃಪನು॥೧೭॥ 


ಪ್ರತಿಪದಾರ್ಥ :- ಇಲ್ಲಿ= ಈ ಮಣಿಪುರದಲ್ಲಿರೈವ, ಪುರುಷ ಸ್ತ್ರೀಯರ್= ಗಂಡಸರು ಮತ್ತು ಹೆಂಗಸರು, ಓರ್ವರುಂ= ಒಬ್ಬರಾದರೂ, ಪಾತಕಿಗಳ್= ದೋಷಯುಕ್ತರಾದವರು, ಅಲ್ಲದಿಹ= ಆಗದಿರುವ, ಕಾರಣಂ= ಕಾರಣದಿಂದ ರಮಾವಲ್ಲಭಂ = ಲಕ್ಷ್ಮೀರಮಣನಾದ ನಾರಾಯಣನು, ಸಾನ್ನಿಧ್ಯದಿಂ= ಸನ್ನಿಧಾನವಿರುವುದರ ದೆಸೆಯಿಂದ,(ತಾನಾಗಿಯೇ ವಾಸಮಾಡು-

ವುದರಿಂದ,) ತನಗೆ= ಆ ಲಕ್ಷ್ಮೀಪತಿಗೆ, ಇದು= ಈ ಮಣಿಪುರವು, ಎರಡನೆಯ= ಎರಡನೆಯದಾದ, ವೈಕುಂಠಂ ಎಂದು= ಸ್ವರ್ಗವಾಗಿರುತ್ತದೆಂದು, (ವೈಕುಂಠವೇ ಇದು ಎಂದು ಭಾವಿಸಿ) ಈ ನಗರಮಂ= ಈ ಮಣಿಪುರವನ್ನು,  ಪೊರೆವಂ= ಸಂರಕ್ಷಿಸುತ್ತಿರುವನು, ಅದು ತುರಗಂ= ಆ ಕುದುರೆಯು, ನಿಲ್ಲದೆ= ತಪ್ಪದೆ, ( ಒಂದು ಕಡೆ ನಿಂತುಕೊಳ್ಳದೇ-ವಿಶ್ರಮಿಸಿಕೊ-

ಳ್ಳದೇ) ಪೋಗಿ= ಹೋಗಿ, ಪೊಕ್ಕುದು = ಪ್ರವೇಶಿಸಿತು, ಬಿಡಿಸಬಲ್ಲರಂ= ಅಶ್ವವನ್ನು ಬಿಡಿಸಿಕೊಂಡು ಬರುವ ಪರಾಕ್ರಮಿಗ-

ಳನ್ನು, ಆಂ=ನಾನಾದರೊ, ಕಾಣೆಂ= ನೋಡಿರುವುದಿಲ್ಲ, ಫಲುಗುಣ=ಎಲೈ ಪಾರ್ಥನೆ, ಮುರಾಂತಕನ= ಮುರಾರಿಯಾದ 

ಶ್ರೀಕೃಷ್ಣನ,  ಮೆಲ್ಲಡಿಯ= ಮೃದುವಾದ ಪಾದದ, ಕರುಣಂ= ಕೃಪೆಯು, ಎಂತು= ಯಾವರೀತಿಯಿಂದ, ಇರುವುದೆಂದು= 

ಇರುತ್ತದೆಂದು, ಅರಿಯೆಂ= ನನಗೆ ಗೊತ್ತಾಗುವುದಿಲ್ಲ,  (ಎಂದು=ಎಂದುಶಹೇಳಿ) ಹಂಸಕೇತು= ಹಂಸಕೇತು, ನೃಪನು=ರಾಜನು, ಎಂದನು= ಎಂಬುದಾಗಿ ಹೇಳಿದನು. 


ಅ॥ವಿ॥ ಪುರುಷನೂ+ಸ್ತ್ರೀಯೂ= ಪುರುಷಸ್ತ್ರೀಯರು( ದ್ವ, ಸ.) ರಮೆಯ+ವಲ್ಲಭ= ರಮಾವಲ್ಲಭ( ಷ.ತ.)ಮೆಲ್ಲಿತ್ತು+ ಅಡಿ

= ಮೆಲ್ಲಡಿ( ವಿ. ಪೂ. ಕ.)


ತಾತ್ಪರ್ಯ:-ಈ ಮಣಿಪುರದಲ್ಲಿರುವ ಸರ್ವ ಪುರುಷಸ್ತ್ರೀಯರಲ್ಲಿ ಯಾರೊಬ್ಬರೂ ದೋಷಾಕರರಾಗದೆ ಇರುವ ಕಾರಣ ಲಕ್ಷ್ಮೀಪತಿಯಾದ ನಾರಾಯಣನು ತಾನಾಗಿಯೇ ವಾಸಮಾಡುತ್ತಿರುವುದರಿಂದ, ತನಗೆ ಈ ಮಣಿಪುರವು ಎರಡನೆಯ ವೈಕುಂಠವೋ ಎಂಬುದಾಗಿ ಭಾವಿಸಿ ಬಹು ಪ್ರೀತಿಯಿಂದ ಈ ಮಣಿಪುರವನ್ನು ರಕ್ಷಿಸುತ್ತಿರವನು. ಮತ್ತೆ ಯಾವ ಕಡೆಗೂ ಹೊರಡದೆ ಆ ಯಜ್ಞಾಶ್ವವು ಈಶಪುರವನ್ನು ಹೊಕ್ಕಿರುತ್ತದೆ, ನಮ್ಮೀ ಯಜ್ಞಾಶ್ವವನ್ನು ಬಿಡಿಸಿಕೊಂಡು ಬರತಕ್ಕ ಶೂರಾಗ್ರೇಸರರನ್ನು ನಮ್ಮ ಸೇನಾಜಾಲದಲ್ಲಿ ಯಾರನ್ನೂ ಕಾಣೆನು. ಎಲೈ ಪಾರ್ಥನೇ ಮುರಾಂತಕನಾದ ಶ್ರೀಕೃಷ್ಣನ ಪಾದಾರವಿಂದದ ಕೃಪಾಕಟಾಕ್ಷವು ಹೇಗಿರುತ್ತದೆಯೋ ನನಗೆ ಗೊತ್ತಾಗುವುದಿಲ್ಲವೆಂದು ಹಂಸಧ್ವಜನು ಹೇಳಿದನು. 


ಭೂಲೋಲ ಕೇಳ್ ಮರಾಳಧ್ವಜನ ಮಾತನಿಂ। 

ತಾಲಿಸುವ ಪಾರ್ಥನ ಕಿರೀಟಾಗ್ರದೊಳ್ ಬಂದು। 

ಕಾಲೂರಿ ನಿಂದಿರ್ದುದೊಂದು ಪರ್ದೇನೆಂಬೆನುತ್ಪಾತದದ್ಭುತವನು॥ 

ನೀಲಧ್ವಜಾದಿ ನೃಪರೆಲ್ಲರುಂ ತಮತಮಗೆ। 

ಮೇಲಣಪಜಯಸೂಚನೆಯಲಾ ನರಂಗಕಟ। 

ಕಾಲಗತಿಯೆಂತಿಹೈದೊ ಶಿವಶಿವಾಯೆನುತೆ ಮನವಳುಕಿ ಚಿಂತಿಸುತಿರ್ದರು॥೧೮॥ 


ಭೂಲೋಲ= ಪೃಥ್ವಿಯಲ್ಲಿ ಆಸಕ್ತನಾದ ಜನಮೇಜಯರಾಯನೆ, ಕೇಳ್= ಆಲಿಸು, ಮರಾಳಧ್ವಜನ = ಹಂಸಕೇತು ಭೂಪಾಲನ, ಮಾತಂ= ಆ ನುಡಿಯನ್ನು, ಇಂತು= ಈ ಪ್ರಕಾರವಾಗಿ, ಆಲಿಸುವ= ಕೇಳುತ್ತಿರುವ, ಪಾರ್ಥನ = ಧನಂಜಯನ, ಕಿರೀಟಾಗ್ರದೊಳ್= ಕಿರೀಟದ ಕೊನೆಯಲ್ಲಿ, ಒಂದು ಪದ್ದು= ಒಂದು ಗೃಧ್ರವು, ಬಂದು= ಬಂದುದಾಗಿ, ಕಾಲೂರಿ= ಕಾಲನ್ನಿಟ್ಟುಕೊಂಡು, ನಿಂದಿರ್ದುದು= ನಿಂತುಕೊಂಡಿತ್ತು, ಉತ್ಪಾತದ= ಅಮಂಗಳದ(ಅಶುಭ ಸೂಚಕದ) ಅದ್ಭುತಮಂ= ಅಚ್ಚರಿಯನ್ನು(ಸೋಜಿಗವನ್ನು) ಏನೆಂಬೆನು= ಏನು ಹೇಳಲಿ, ನೀಲಧ್ವಜ= ನೀಲಧ್ವಜನೇ, ಆದಿ=ಮೊದ-

ಲಾದ, ನೃಪರೆಲ್ಲರುಂ= ರಾಜರೆಲ್ಲರೂ, ತಮತಮಗೆ= ತಮ್ಮಲ್ಲಿ ತಾವೆ, ಮೇಲಣ= ಮುಂದೆಯಾಗತಕ್ಕ, ಅಪಜಯ= ಸೋಲುವಿಕೆಯ, ಸೂಚನೆಯಲಿ= ಗುರ್ತಿನಿಂದ, ಆ ನರಂಗೆ=ಆ ಫಲುಗುಣನಿಗೆ,ಆಲಗತಿ= ದೈವಾನುಕೂಲವು, ಎಂತು= ಯಾವರೀತಿಯಾಗಿ, ಅಹುದೊ= ಆಗುತ್ತದೆಯೊ, ಶಿವಶಿವ=ಹರಹರ, ಅಕಟ= ಅಹಹ, ಎನುತ= ಎಂಬುದಾಗಿ ಹೇಳುತ್ತ, ಮನವು= ಮನಸ್ಸು, ಅಳುಕಿ= ಭಯಗೊಂಡು, ಚಿಂತಿಸುತಿರ್ದರು= ಆಲೋಚಿಸುತ್ತಿದ್ದರು. 


ಅ॥ವಿ॥ ಹದ್ದು (ತ್ಭ) ಗೃಧ್ರ (ತ್ಸ) ಉತ್ಸವ= ಸಂತೋಷ, ಹಬ್ಬ,ಕಿರೀಟ+ಅಗ್ರ= ಕಿರೀಟಾಗ್ರ(ಷ.ತ.) ಹರಹರ, ಅಕಟಕಟ ಇವುಗಳು ವ್ಯಸನ ಸೂಚನೆಯಲ್ಲಿ ದ್ವಿರುಕ್ತಿಯಾಗಿ ಬಂದಿವೆ. 


ತಾತ್ಪರ್ಯ:- ಎಲೆ ಜನಮೇಜಯನೆ ಕೇಳು, ಫಲುಗುಣನು ಹಂಸಧ್ವಜನ ಮಾತುಗಳನ್ನು ಕೇಳುತ್ತಿದ್ದ ಸಮಯದಲ್ಲಿಯೇ, ಪಾರ್ಥನ ಕಿರೀಟಾಗ್ರದಲ್ಲಿ ಒಂದು ಮುದಿಹದ್ದು ಕೂತುಕೊಂಡಿತು. ಈ ಉತ್ಪಾತವನ್ನು ಏನೆಂದು ಹೇಳೋಣ. ನೀಲಧ್ವಜನೇ ಆದಿಯಾದ ರಾಜರು ತಮಗೆ ತಾವೆ ಅಪಜಯಸೂಚಕದ ಕಾರಣದಿಂದ ನಮ್ಮ ಪಾರ್ಥನಿಗೆ ಕಾಲಗತಿಯು ಯಾವ ಪ್ರಕಾರವಾಗಿರುತ್ತದೆಯೋ ಅಕಟಕಟ! ಶಿವಶಿವ, ಎಂಬುದಾಗಿ ಹೇಳುತ್ತ ಮನಬೆದರಿದವರಾಗಿ ಯೋಚಿಸುತ್ತಿದ್ದರು. 


ಇತ್ತಲೀ ತೆರದೊಳಿರುತಿರಲತ್ತಲಾ ಪುರದೊ। 

ಳುತ್ತಮಹಯಾಗಮವನೊಡನೆ ಬಂದಿಹ ನೃಪರ। 

ವೃತ್ತಾಂತಮಂ ಬಭ್ರುವಾಹನಂ ಕೇಳ್ದು ಭಟರಂ ಕಳುಹಿ ತೊಳತೊಳಗುವ॥ 

ಮುತ್ತುಗಳ ಮಾಲೆಯಿಂ ಕನಕದಾಭರಣದಿಂ। 

ಬಿತ್ತರದ ಗಂಧಮಾಲ್ಯಾಕ್ಷತೆಗಳಿಂ ಪೂಜೆ। 

ವೆತ್ತೆಸೆವ ತುರಗಮಂ ತರಿಸಿ ಕಟ್ಟಿದನೋದಿಕೊಂಡು ಪಟ್ಟದ ಲಿಪಿಯನು॥೧೯॥ 


ಪ್ರತಿಪದಾರ್ಥ :- ಇತ್ತಲ್= ಈ ಎಡೆಯಲ್ಲಿ, ಈ ತೆರದೊಳ್= ಈ ಬಗೆಯಾಗಿ, ಇರುತಿರಲ್= ಇರುತ್ತಿರಲಾಗಿ, ಅತ್ತಲ್= ಆ ಎಡೆಯ, ಆ ಪುರದೊಳ್= ಆ ಮಣಿಪುರದಲ್ಲಿ, ಉತ್ತಮ= ಶ್ರೇಷ್ಠವಾದ, ಹಯಾಗಮನಕೆ= ತುರಗ ಬಂದಿರುವುದಕ್ಕೆ ಒಡನೆ= ಹಯದ ಕೂಡೆ, ಬಂದಿಹ= ಬಂದಿರುವಂಥ,ನೃಪರ= ರಾಜರ, ವೃತ್ತಾಂತಮಂ= ವರ್ತಮಾನವನ್ನು, ಬಭ್ರುವಾಹ-

ನಂ= ಬಭ್ರುವಾಹನನು, ಕೇಳ್ದು=ಆಲಿಸಿ, ಭಟರ= ತನ್ನ ಕಡೆಯ ವೀರರನ್ನು,  ಕಳುಹಿ=ಕಳುಹಿಸಿಕೊಟ್ಟು, ತೊಳತೊಳಗುವ= ಅತ್ಯಂತಮಾಗಿ ಪ್ರಕಾಶಿಸುವ, ಮುತ್ತುಗಳ= ಮೌಕ್ತಿಕಗಳ, ಮಾಲೆಯಿಂ= ಹಾರದಿಂದಲೂ, ಕನಕದ= ಚಿನ್ನದ, ಆಭರಣದಿಂ= 

ಆಭರಣಗಳಿಂದಲೂ, ಬಿತ್ತರದ= ವಿಸ್ತಾರವಾಗಿ ಮಾಡಿದ, ಗಂಧ= ಶ್ರೀಗಂಧವೇ ಮೊದಲಾದ ಸುಗಂಧದ,ಮಾಲ್ಯ=ಪುಷ್ಪ-

ಮಾಲೆಯು, ಅಕ್ಷತೆಗಳಿಂ= ಮಂತ್ರಾಕ್ಷತೆಗಳಿಂದಲೂ,ಪೂಜೆವೆತ್ತು= ಪೂಜೆಯನ್ನು ಹೊಂದಿ, ಎಸೆವ= ಶೋಭಿಸುವ,  ತುರಗಮಂ= ಹಯವನ್ನು, ತರಿಸಿ= ತರಿಸಿಕೊಂಡು, ಪಟ್ಟದ= ಪಟ್ಟದಲ್ಲಿ ಲಿಖಿಸಿರುವ,ಲಿಪಿಯನು= ಬರಹವನ್ನು ಓದಿಕೊಂಡು = ವಾಚಿಸಿಕೊಂಡು,ಅದಂ= ಆ ಕುದುರೆಯನ್ನು,ಕಟ್ಟಿದಂ= ಕಟ್ಟಿಸಿದನು. 


ಅ॥ವಿ॥ ಮುಕ್ತಾ (ತ್ಸ) ಮುತ್ತು (ತ್ಭ), ಗಂಧವೂ, ಮಾಲ್ಯವೂ, ಅಕ್ಷತೆಯೂ= ಗಂಧಮಾಲ್ಯಾಕ್ಷತೆಗಳ್ (ಬಹು. ದ್ವಂ. ಸ. ) ಅಕ್ಷತ (ತ್ಸ) ಅಕ್ಕಿ (ತ್ಭ) 


ತಾತ್ಪರ್ಯ:- ಇತ್ತಲು ಈ ವಿಧದಲ್ಲಿರುತ್ತಿರಲಾಗಿ, ಅತ್ತಲು ಆ ಮಣಿಪುರದೊಳು, ಉತ್ತಮವಾದ ಯಜ್ಞಾಶ್ವವು ಬಂದಿರುವ ವಿಷಯಕ್ಕೆ,  ಯಜ್ಞಾಶ್ವದ ಕೂಡ ಬಂದಿರುವಂಥ ನೃಪಾಲರ ವೃತ್ತಾಂತವನ್ನು ಬಭ್ರುವಾಹನನು ಕೇಳಿದವನಾಗಿ, ಭಟರನ್ನು ಕಳುಹಿ, ಅತ್ಯಧಿಕವಾಗಿ ಪ್ರಜ್ವಲಿಸುತ್ತ ಮುತ್ತಿನ ಕಂಠೀಸರದಿಂದಲೂ, ಚಿನ್ನದ ಆಭರಣಗಳಿಂದ ಅಲಂಕಾರವಾಗಿಯೂ, ಗಂಧಾಕ್ಷತೆಗಳಿಂದ ಪೂಜಿಸಿದ್ದಾಗಿಯೂ, ಇರುವ ಯಜ್ಞಾಶ್ವವನ್ನು ಹಿಡಿತರಿಸಿ, ಆ ಅಶ್ವದ ಹಣೆಯಲ್ಲಿ ಭಂಗಾರದ ತಟ್ಟೆಯ ಮೇಲೆ ಬರೆದಿದ್ದಲಿಖಿತವನ್ನು ಓದಿಕೊಂಡವನಾಗಿ ಆ ತುರಗವನ್ನು ಅಶ್ವಶಾಲೆಯಲ್ಲಿ ಕಟ್ಟುವಂತೆ ಅಪ್ಪಣೆಮಾಡಿದನು. 


ಅರಸ ಕೇಳಾದುದನಿತರೊಳಸ್ತಮಯ ಸಮಯ। 

ಮರವಿಂದದಲರ್ಗಳೊಳ್ ಸೆರೆಯಾದುವಾರಡಿಗ। 

ಳಿರದೆ ಸರಿದುವು ಬಿಸಿಲ ಬೀಡುಗಳ್ ಗೂಡುಗೊಂಡುವು ಕೂಡೆ ಪಕ್ಷಿಜಾತಿ॥ 

ಪಿರಿದೆನಿಪ ಕತ್ತಲೆಯ ರಾಶಿಯಂ ಪೊತ್ತಿಕೊಂ। 

ಡುರಿವ ಬೆಂಕಿಯ ಕಡೆಯೊಳುಳಿದ ಕೆಂಗೆಂಡಮೆನೆ। 

ತರಣಿಮಂಡಲಮೆಸೆದುದಪರದಿಗ್ಭಾಗದೊಳ್ ಕೊರಗಿದುವು ಕೋಕಂಗಳು॥೨೦॥


ಪ್ರತಿಪದಾರ್ಥ :- ಅರಸ= ದೊರೆಯಾದ ಜನಮೇಜಯರಾಯನೆ,  ಕೇಳ್= ಆಲಿಸುವನಾಗು, ಅನಿತರೊಳ್= ಅಷ್ಟರಲ್ಲಿ,

(ಬಭ್ರುವಾಹನನು ಕುದುರೆಯನ್ನು ಚರರಿಂದ ಲಾಯದಲ್ಲಿ ಬಂಧಿಸಿದನಂತರದಲ್ಲಿ) ಅಸ್ತಮಯ= ಸೂರ್ಯನು ಮುಳುಗುವ, ಸಮಯಂ= ವೇಳೆಯು(ಕಾಲವು, ಸಮಯವು) ಆದುದು= ಆಯಿತು,(ಸಂಜೆಯಾಯಿತು),ಅರವಿಂದ = ಕಮಲದ, ಅಲರ್ಗಳೊಳ್=ಹೂಗಳಲ್ಲಿ,ಆರಡಿಗಳು= ಭೃಂಗಗಳು, ಸೆರೆಯಾದವು=ಈಚೆಗೆ ಬರದಂತಾದುವು, (ಕಮಲಪುಷ್ಪಕ್ಕೆ ಮಧುಪಾನಕ್ಕಾಗಿ ಬಂದಿದ್ದ ಭ್ರಮರಗಳು, ಸೂರ್ಯಾಸ್ತಸಮಯವಾದುದರಿಂದ,ಕಮಲಗಳಾಗ ಮುಕುಳಿತವಾದುದರಿಂದ ಆ ಪುಷ್ಪಗಳಲ್ಲಿಯೇ ಈ ಭ್ರಮರಗಳು ಸಿಕ್ಕಿಹಾಕಿಕೊಂಡವು), ಇರದೆ=ತಪ್ಪದೆ ಬಿಸಿಲ= ಬಿಸಿಲಿನ, ಬೀಡುಗಳ್= ಗುಂಪುಗಳು, ಸರಿದವು=ಜಾರಿಹೋದವು, (ಬಿಸಿಲು ಹೋಗಿ ಕತ್ತಲಾಯಿತು),ಪಕ್ಷಿಜಾತಿ= ಹಕ್ಕಿಗಳ ಗುಂಪು, ಗೂಡುಗೊಂಡವು= ಗೂಡುಸೇರಿಕೊಂಡವು, ಪಿರಿದೆನಿಪ= ಅತಿಶಯವಾದ್ದೆನಿಸಿಕೊಳ್ಳುವ, ಕತ್ತಲೆಯ=ಅಂಧಕಾರದ, ರಾಶಿಯಂ= ಸಮೂಹವನ್ನು, ಪೊತ್ತುಕೊಂಡು= ಹೊರೆಯಾಗಿ ಹೊತ್ತು, ಉರಿವ= ಜ್ವಲಿಸುತ್ತಿರುವ,ಬೆಂಕಿಯ= ಬೆಂಕಿಯನ್ನು, ಕಡೆಯಲು= ಮಥಿಸಲಾಗಿ, ಉಳಿದ= ಮಿಕ್ಕಿರುವ, ಕೆಂಗೆಂಡಂ=ಕೆಂಪಾಗಿರುವ ಅಗ್ನಿಯ ಕೆಂಡವೋ, ಎನೆ= ಎನ್ನುವಂತೆ, ಅಪರ ದಿಗ್ಭಾಗದೊಳ್= ಪಶ್ಚಿಮ ದಿಕ್ಕಿನಲ್ಲಿ, ತರಣಿಮಂಡಲಂ= ಇನಬಿಂಬವು, (ಸೂರ್ಯಬಿಂಬವು)ಎಸೆದುದು= ಶೋಭಿಸಿತು, ಕೋಕಂಗಳು= ಚಕ್ರವಾಕ ಪಕ್ಷಿಗಳು, ಕೊರಗಿದವು= ವ್ಯಥೆಪಟ್ಟವು(ದುಃಖಿಸಿದವು) 


ಅ॥ವಿ॥ ಕೋಕ= ಚಕ್ರವಾಕ, ಕೋಕಿಲ, ಬೆಟ್ಟದಾವರೆ, ತರಣಿ=ಸೂರ್ಯ, ತರುಣಿ= ಹೆಂಗಸು, ಹರ=ಈಶ್ವರ, ಪರ=ಹಗೆ, ಅನ್ಯ, ಅಲರ್=ಪುಷ್ಪ,ಎಲರ್=ಗಾಳಿ. 


ತಾತ್ಪರ್ಯ:- ಇತ್ತಲು ಈ ವಿಧದಲ್ಲಿರುತ್ತಿರಲಾಗಿ, ಅತ್ತಲು ಆ ಮಣಿಪುರದಲ್ಲಿ, ಉತ್ತಮವಾದ ಯಜ್ಞಾಶ್ವವು ಬಂದಿರೈವ ವಿಷಯಕ್ಕೆ,  ಯಜ್ಞಾಶ್ವದ ಕೂಡ ಬಂದಿರುವಂಥ ನೃಪಾಲರ ವೃತ್ತಾಂತವನ್ನು ಬಭ್ರುವಾಹನನು ಕೇಳಿ, ಭಟರನ್ನು ಕಳುಹಿ, ಅತ್ಯಧಿಕವಾಗಿ ಪ್ರಜ್ವಲಿಸುತ್ತ ಮುತ್ತಿನ ಕಂಠೀಸರದಿಂದಲೂ,  ಕನಕಾಭರಣಗಳಿಂದ ಅಲಂಕಾರವಾಗಿಯೂ, ಗಂಧ ಪರಿಮಳಾದಿ ಸುಗಂಧಂಗಳಿಂದ ಪೂಜಿಸಿದ್ದಾಗಿಯೂ, ಇರುವ ಯಜ್ಞಾಶ್ವವನ್ನು ಹಿಡಿತರಿಸಿಕೊಂಡು, ಆ ಅಶ್ವದ ಹಣೆಯಲ್ಲಿ ಭಂಗಾರದ ಪಟ್ಟಿಯಮೇಲೆ ಬರೆದಿದ್ದ ಲಿಖಿತವನ್ನು ಓದಿಕೊಂಡವನಾಗಿ ಆ ತುರಗವನ್ನು ಅಶ್ವಶಾಲೆಯಲ್ಲಿ ಕಟ್ಟುವಂತೆ ಅಪ್ಪಣೆಮಾಡಿದನು.