ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಮಂಗಳವಾರ, ಅಕ್ಟೋಬರ್ 21, 2025

ಜೈಮಿನಿ ಭಾರತ 19 - ದೊಡ್ಡಬೆಲೆ ನಾರಾಯಣಶಾಸ್ತ್ರೀ

ಜೈಮಿನಿ ಭಾರತ 19 - ದೊಡ್ಡಬೆಲೆ ನಾರಾಯಣಶಾಸ್ತ್ರೀ


ಸೂಚನೆ:- ರಮಣಂ ತೊರೆದನೆಂಬುದಂ ಕೇಳ್ದು ಶೋಕದಿಂ। 

ಭ್ರಮಿಸುತಡವಿಯೊಳಿರಲ್ ಕಂಡು ವಾಲ್ಮೀಕಿಯಾ। 

ಶ್ರಮಕೊಯ್ದೊಡಲ್ಲಿ ಮಿಥಿಳೇಂದ್ರಸುತೆತನಯರಂ ಪಡೆದು ಪದುಳದೊಳಿರ್ದಳು॥ 


ಪ್ರತಿಪದಾರ್ಥ :- ರಮಣಂ=ವಲ್ಲಭನಾದ ಶ್ರೀರಾಮಚಂದ್ರನು, ತೊರೆದಂ= ತನ್ನನ್ನು ತ್ಯಜಿಸಿದನು, ಎಂಬುದಂ= ಎನ್ನುವ ವಿಷಯವನ್ನು, ಕೇಳ್ದು=ತಿಳಿದುಕೊಂಡು, ಶೋಕದಿಂ= ವ್ಯಥೆಯಿಂದ, ಅಡವಿರೊಳ್= ಅರಣ್ಯದಲ್ಲಿ, ಭ್ರಮಿಸುತ=ಸುಳಿದಾ-

ಡುತ್ತ, ಇರಲ್= ಇರುತ್ತಿರಲಾಗಿ,ವಾಲ್ಮೀಕಿಯು= ವಾಲ್ಮೀಕಿ ಮಹರ್ಷಿಯು, ಕಂಡು=ಈಕ್ಷಿಸಿ, ಆಶ್ರಮಕೆ= ತಮ್ಮ ತಪೋವನಕ್ಕೆ

ಕೊಂಡೊಯ್ಯೆ= ಸಂಗಡ ಕರೆದುಕೊಂಡು ಹೋಗಲಾಗಿ, ಮಿಥಿಳೇಂದ್ರಸುತೆ= ಮಿಥಿಲಾಧಿಪನಾದ ಜನಕರಾಯನ ಪುತ್ರಿ-

ಯಾದ ಜಾನಕಿಯು, ತನಯರಂ= ಪುತ್ರರನ್ನು, ಪಡೆದು= ಹೊಂದಿದವಳಾಗಿ, ಪದುಳದೊಳು= ಸೌಖ್ಯದಲ್ಲಿ,ಇದ್ದಳು= ಇರುತ್ತಿದ್ದಳು. 


ಅ॥ವಿ॥ ವಲ್ಮೀಕ=ಹುತ್ತ, ಅದರಲ್ಲಿ ಹುಟ್ಟಿದವನು= ವಾಲ್ಮೀಕಿ, ಮಿಥಿಲೆಯೆಂಬ+ ಪುರ= ಮಿಥಿಲಾಪುರ(ಸಂ. ಪೂ. ಕ. ಸ. )

ಮಿಥಿಳ+ಇಂದ್ರ= ಮಿಥಿಳೇಂದ್ರ ( ಗುಣ. ಸಂ. ) ಇಂದ್ರ=ದೇವೇಂದ್ರ, ದೊರೆ,ಕರ=ಕಿರಣ, ಪೊಗದಿ, ಆನೆಯ ಸೊಂಡಿಲು.

ಅಡವಿ(ತ್ಸ) ಅಟವಿ(ತ್ಭ) 


ಅರಸ ಕೇಳ್ ಸೌಮಿತ್ರಿ  ವೈದೇಹಿಯಂ ಕೊಂಡು। 

ತೆರಳುವ ರಥಾಗ್ರದೊಳ್ ಟಲಿಸುವ ಪತಾಕೆ ರಘು। 

ವರನಂಗನೆಯನುಳಿದನಹಹಯೆಂದಡಿಗಡಿಗೆ ತಲೆಗೊಡಹುವಂತಿರಲ್ಕೆ॥ 

ಪರಮದಾರುಣಮಾಯ್ತಿದೆಂದಯೋಧ್ಯಾಪುರುದ। 

ನೆರವಿಯ ಜನಂ ಗುಜು ಗುಜಿಸಿ ಮನದೆ ಕರಗಿ ಕಾ। 

ತರಿಸುತಿರೆ ಪರಿಸಿದಂ ಕಲ್ಬಟ್ಟೆಗೊಂಡನಿಲವೇಗದಿಂದಾ ರಥವನು॥೧॥ 


ಪ್ರತಿಪದಾರ್ಥ :- ಅರಸ= ರಾಜನಾದ ಜನಮೇಜಯರಾಯನೆ, ಸೌಮಿತ್ರಿ = ಸುಮಿತ್ರಾತ್ಮಜನಾದ ಲಕ್ಷ್ಮಣನು, ವೈದೇಹಿಯಂ

= ವಿದೇಹದೇಶದ ರಾಜಕುವರಿಯಾದ ಜಾನಕಿಯನ್ನು, ಕೊಂಡು=ರಥದಲ್ಲಿ ಕೂಡಿಸಿ ಕರೆದುಕೊಂಡು, ತೆರಳುವ= ಹೊರ-

ಡುವ, ರಥ= ವರೂಥದ, ಅಗ್ರದೋಳ್= ಮೇಲ್ಭಾಗದಲ್ಲಿ,ಚಲಿಸುವ= ಹಾರಾಡುತ್ತಿರುವ, ಪತಾಕೆ= ಬಾವುಟವು,ರಘುವರ - ಶ್ರೀರಾಮಚಂದ್ರನು, ಅಂಗನೆಯನು= ಹೆಂಡತಿಯಾದ ಜಾನಕಿಯನ್ನು, ಉಳಿದನು= ಬಿಟ್ಟುಬಿಟ್ಟನು( ಪರಿತ್ಯಾಗಮಾಡಿದನು)

ಅಹಹ= ಅಕಟಕಟ, ಎನೆ= ಎನ್ನುವ ರೀತಿಯಿಂದ, ಅಂದು= ಆ ಕಾಲದಲ್ಲಿ, ಅಡಿಗಡಿಗೆ= ಆಗಿಂದಾಗ್ಯೆ, ತಲೆ= ತಲೆಯನ್ನು, ಗೊಡಹುವಂತೆ= ಅಲ್ಲಾಡಿಸುವ ಹಾಗೆ( ಕೊಡಹುತ್ತಿರುವಂತೆ) ಇರಲ್ಕೆ= ಇರುತ್ತಿರಲಾಗಿ, ಅಯೋಧ್ಯಾಪುರದ= ಅಯೋಧ್ಯಾ 

ನಗರದ, ನೆರವಿಯ= ಸಮುದಾಯವಾಗಿರುವ,ಜನಂ= ಜನಗಳು, ಮನದಿ= ನಸ್ಸಿನಲ್ಲಿ, ಪರಮ= ಅಧಿಕವಾದ, ದಾರುಣಂ= 

ಕ್ರೂರಕೃತ್ಯವು,ಆಯ್ತು= ಆಗಿರುವುದು( ಉಂಟಾಗಿರುತ್ತದೆ),ಎಂದು=ಎಂಬುದಾಗಿ ಹೇಳಿ, ಗುಜಗುಜಸಿ= ಗುಂಪುಗುಂಪಾಗಿ ಮಾತನಾಡುತ್ತ, ಕರಗಿ= ವ್ಯಥೆಯಿಂದ ಸವೆದುಹೋಗಿ, ಕಾತರಿಸುತಿರೆ= ಹೆದರಿಕೊಳ್ಳುತ್ತಿರಲು, ಕಾಣ್ಬಟ್ಟೆಗೊಂಡು= ತಮ್ಮ 

ಮಾರ್ಗವಿಡಿದು ಹೋಗುತ್ತಿರುವ, ಆ ರಥವನು= ಆ ವರೂಥವನ್ನು, ಅನಿಲ= ಗಾಳಿಗೆ ಸದೃಶವಾದ,ವೇಗದಿಂದ= ಜಾಗ್ರತೆಯಿಂದ, ಪರಿಸಿದಂ= ಹೊಡೆದನು, (ನಡೆಸಿಕೊಂಡು ಹೋದನು.  


ಅ॥ ವಿ॥ ವಿದೇಹರಾಜಪುತ್ರಿ= ವೈದೇಹಿ, (ಸೀತೆ) ಅನಿಲ=ವಾಯು,ಅನಲ=ಅಗ್ನಿ, ಸುಮಿತ್ರೆಯ ಮಗ ಸೌಮಿತ್ರಿ, ಕಾಣುವ+ಬಟ್ಟೆ = ಕಾಣ್ಬಟ್ಟೆ (ವಿ. ಪೂ. ಕ. ) ಅನಿಲನ +ವೇಗ= ಅನಿಲವೇಗ (ಷ. ತ. ) ಕ್ರೂರ (ತ್ಸ) ಕೂರ (ತ್ಭ) ರಘುವಿನ+ 

ವಂಶ= ರಘುವಂಶ ( ಷ. ತ. ) 


ತಾತ್ಪರ್ಯ:- ಎಲೈ ಭೂಪಾಲಕನಾದ ಜನಮೇಜಯರಾಯನೆ ಕೇಳು, ಬಳಿಕ ಸೌಮಿತ್ರಿಯು ವೈದೇಹಿಯನ್ನು ರಥದಲ್ಲಿ  ಕರೆದುಕೊಂಡು ಹೋಗುವ ಕಾಲದಲ್ಲಿ ರಥಾಗ್ರದಲ್ಲಿ ಹಾರಾಡುತ್ತಿರುವ ಬಾವುಟವು, ಶ್ರೀರಾಘವನು ತನ್ನ ಪಟ್ಟಮಹಿಷಿ-

ಯಾದ ಜಾನಕಿಯನ್ನು ಪರಿತ್ಯಾಗಮಾಡಿದನು, ಆಶ್ಚಯ್ರಾಶ್ಚರ್ಯವು ಎಂಬುವ ಹಾಗೆ ಬಾರಿಬಾರಿಗೂ ಶಿರವನ್ನಲ್ಲಾಡಿಸುವ ಹಾಗೆ ಅಯೋಧ್ಯಾಪುರದಲ್ಲಿ ಗುಂಪುಗುಂಪಾಗಿ ಸೇರಿರುವ ಜನಸಮೂಹವು ಹೃದಯದಲ್ಲಿ ಅತಿಶಯವಾದ ಕ್ರೂರಕೃತ್ಯವು ಉಂಟಾಗಿರುವುದು ಎಂಬುದಾಗಿ ಗುಜಿಗುಜಿಸಿ ಮಾತನಾಡುತ್ತ ಮನೋವ್ಯಥೆಯಿಂದ ಕೃಶರಾಗಿ ಕಾತರಪಡುತ್ತಿರಲು ಕಣ್ಣಿಗೆ ಕಾಣುತ್ತಿರುವ ದಾರಿಯನ್ನು ಅನುಸರಿಸಿ ಹೋಗುತ್ತಿರುವ ರಥವನ್ನು ವಾಯೈವೇಗಕ್ಕೆ ಸಮನಾಗಿ ನಡೆಸಿಕೊಂಡು ಬಂದನು.  


ಧುರದೊಳಾಂತರನಿರಿದುಮೆರೆಯಲೇರುವ ರಥಂ। 

ತರಳೆಯಂ ಕಾನನಕೆ ಕಳುಹಲಡರ್ವಂತಾಯ್ತು। 

ಧರೆಯೊಳಾರ್ತರನೈದೆ ರಕ್ಷಿಸುವ ಬುದ್ಧಿ ಕೋಮಲೆಯ ಕೊಲೆಗೆಲಸಕ್ಕಾಯ್ತು॥ 

ಕರುಣಮಿಲ್ಲದೆ ಹೊರೆವ ಹರಣಂ ಸೈಡಲಿ ನಿ। 

ಷ್ಠುರದೊಳೆಂತೀಕೃತ್ಯಮೆಸಗುವನೊ ರಾಘವೇ। 

ಶ್ವರನೆಂತಿದಕ್ಕೆ ಬೆಸಸಿದನೊ ತನಗೆನುತೆ ಸೌಮಿತ್ರಿ ಮರುಗುತ ನಡೆದನು॥೨ ॥ 


ಪ್ರತಿಪದಾರ್ಥ :- ಧುರದೊಳು = ಕಾಳಗದಲ್ಲಿ ( ಯುದ್ಧದಲ್ಲಿ) ಆಂತರನು= ಪ್ರತಿಭಟಿಸಿ ನಿಂತವರನ್ನು, ಇರಿದು= ಸಂಹರಿಸಿ,  ಮೆರೆಯಲು= ಶೋಭಿಸಲಾಗಿ,ಏರುವ= ಹತ್ತುವ,(ಅಡರುವ) ರಥಂ=ರಥವು, ತರಳೆಯಂ= ಬಾಲೆಯನ್ನು (ಸೀತಾದೇವಿ-

ನ್ನು) ಕಾನನಕೆ= ಅರಣ್ಯಕ್ಕೆ, ಕಳುಹಲು= ಕಳುಹಿಸಿಕೊಡಲು, ಅಡರ್ವಂತೆ= ಹತ್ತುವ ಹಾಗೆ, ಆಯ್ತು= ಆಗಿರುವುದು, ಧರೆಯೊಳು= ಪೃಥ್ವಿಯಲ್ಲಿ, ಆರ್ತರನು= ತೊಂದರೆ ಪಡುತ್ತಿರುವವರನ್ನು,ರಕ್ಷಿಸುವ= ಸಲಹಲು ವಿನಿಯೋಗಿಸಬೇಕಾದ,

( ರಕ್ಷಿಸುವ),ಬುದ್ಧಿ = ತಿಳಿವಳಿಕೆಯು, ಕೋಮಲೆಯ= ಮೃದ್ವಂಗಿಯಾದ ಜಾನಕಿಯ, ಕೊಲೆ=ಸಂಹರಿಸುವ, ಕೆಲಸಕೆ= ಕೃತ್ಯಕ್ಕೆ, ಆಯ್ತು= ವಿನಿಯೋಗಿಸಿಬೇಕಾಗಿ ಬಂತು, ಕರುಣಂ= ದಯೆಯು, ಇಲ್ಲದೆ= ಇಲ್ಲದೆಯೇ, ಪೊರೆವ= ಆತ್ಮಸಂರಕ್ಷಣೆ

ಮಾಡಿಕೊಳ್ಳವ, ಹರಣಂ= ಜೀವವು, ಸುಡಲಿ= ಸುಟ್ಟುಹೋಗಲಿ, ನಿಷ್ಠುರದೊಳು= ಆಕ್ಷೇಪಣೆಯಿಂದ, (ಅತಿ ಕಠಿಣತೆಯಿಂ-

ದ),ಈ ಕೆಲಸಕ್ಕೆ = ಇಂತಹ ಕಾರ್ಯಕ್ಕೆ,(ಸೀತೆಯನ್ನು ಅಡವಿಪಾಲು ಮಾಡುವುದಕ್ಕೆ) ಎಂತು= ಹೇಗೆತಾನೆ, ಎಸಗುವೆನೊ= ಗೈಯುವೆನೊ, ರಾಘವೇಶ್ವರನು= ರಘುಕುಲ ಶ್ರೇಷ್ಠನಾದ ಶ್ರೀರಾಮನು, ಎಂತು= ಅದು ಹೇಗೆತಾನೆ, ಇದಕೆ= ಈ ರೀತಿ-

ಯಾದ ಕಾರ್ಯಕ್ಕೆ, ತನಗೆ= ಎನಗೆ, ಬೆಸಸಿದನೋ= ಅಪ್ಪಣೆ ಮಾಡಿದನೋ, (ಆಜ್ಞಾಪಿಸಿದನೊ) ಎನುತ= ಎಂಬುದಾಗಿ ಆಡಿಕೊಳ್ಳುತ್ತ, ಸೌಮಿತ್ರಿ = ಸುಮಿತ್ರೆಯ ಪುತ್ರನಾದ ಲಕ್ಷ್ಮಣನು,  ಮರುಗುತ= ಸಂತಾಪ ಪಡುತ್ತ. ನಡೆದನು= ಹೊರಟನು. 


ಅ॥ವಿ॥ ಕೊಲೆ+ಕೆಲಸ= ಕೊಲೆಗೆಲಸ (ಗಕಾರಾದೇಶ, ಸಂಧಿ) ತರುಣ=ಹುಡುಗ,ಕರುಣ=ಕೃಪೆ,ಪ್ರಯಾಣ (ತ್ಸ)ಪಯಣ(ತ್ಭ) 

ಅಗ್ರ=ತುದಿ, ಆಗ್ರಹ= ಕೋಪ, ಅದು+ರಥ= ಆ ರಥ ( ಗ. ಸ.) 


ತಾತ್ಪರ್ಯ:- ಆಗ ಲಕ್ಷ್ಮಣನು ಯುದ್ಧದಲ್ಲಿ ಪ್ರತಿಭಟಿಸಿ ನಿಂತವರನ್ನು ಸಂಹರಿಸಿ ಮೆರೆಯಲು ಹತ್ತಬೇಕಾದ ಈ ತೇರನ್ನು ಈಗ ಈ ಬಗೆಯಾದ ರಥದಲ್ಲಿ ಬರ್ಭಿಣಿಯಾದ ಭೂಮಿಜೆಯನ್ನು ಕೂಡಿಸಿಕೊಂಡು ಕಾಡಿಗೆ ಕರೆದುಕೊಂಡು ಬರುವುದಕ್ಕಾಗಿ ಉಪಯೋಗಿಸಬೇಕಾಯಿತೆ? ಅಕಟಾ, ವಿಧಿಯೇ ಎನಗೆ ಆಗತಕ್ಕ ಕಾರ್ಯಕ್ಕೆ ಮಾಡುವುದೇನಿದೆ? ಪೃಥ್ವಿಯಲ್ಲಿ ಶ್ರಮಪಡುವವರನ್ನು ಸಂರಕ್ಷಿಸಲು ಉಪಯೋಗಿಸಬೇಕಾದ ತಿಳಿವಳಿಕೆಯು ಕೋಮಲೆಯಾದ ತರುಣಿಯನ್ನು ಕೊಲ್ಲುವ ಕಾರ್ಯಕ್ಕಾಯಿತು,ದಯಾಶೂನ್ಯವಾದ ತನ್ನ ಹೊಟ್ಟೆಯನ್ನು ಹೊರೆಯಲಿಕ್ಕಿರುವ ಪ್ರಾಣವು ಇರುವುದಕ್ಕಿಂತಲೂ ನಾಶವೊಂದುವುದೇ ಯೋಗ್ಯವಾದ್ದು ಎಂದು ನಿಷ್ಠುರದಿಂದ ಈ ಅಬಲೆಯಾದ ಗರ್ಭಿಣಿಸ್ರ್ತೀಯನ್ನು ವನವಾಸಮಾಡಿಸಲು ಕರೆದೊಯ್ಯುವ ಕಾರ್ಯಕ್ಕೆ ನಾನು ಏನು ಮಾಡಲೋ ದಿಕ್ಕು ತೋಚದಾಗಿದೆ. ಪೂರ್ಣಚಂದ್ರಮುಖಿಯಾದ ಪೂರ್ಣಗರ್ಭಿ-

ಣಿಯನ್ನು ಅಡವಿಪಾಲು ಮಾಡಿ ಬರುವಂತೆ ಶ್ರೀರಾಘವೇಶ್ವರನು ಎನಗೆ ಹೇಗೊರೆದು ನಿಯಮಿಸಿದನೋ ಶಿವಶಿವ ಆತ್ಮಸಾಕ್ಷಿಯಾಗಿ ಈ ಕಾರ್ಯವನ್ನು ನಾನು ಹೇಗೆ ಮಾಡಲಿ? ಎಂದು ಚಿಂತಿಸುತ್ತ ಸೌಮಿತ್ರಿಯು ಮುಂದುವರಿದನು. 


ಬಳ್ಳೊರಲ್ದುದು ಮುಂದೆ ಮಾರ್ಗವಂ ದಾಂಟಿದುವು। 

ಕುಳ್ಳಿರ್ದ ಮೃಗಮೆದ್ದು ಬಲದ ಕಣ್ಣದಿರೆ ಕಂ। 

ಡಳ್ಳೆದೆಯಲವನಿಸುತೆ ನೋಡು ಲಕ್ಷ್ಮಣ ದುರ್ನಿಮಿತ್ತಂಗಳಂ ಪಥದೊಳು॥ 

ಡಿಳ್ಳಮಾದಪುದೀಗಳೆನ್ನ ಮನಮಿದಕೆ ಮುಂ। 

ದೊಳ್ಳಿತಾಗಲಿ ರಾಮನಾಯುಷ್ಯಕೈಶ್ವರ್ಯ। 

ಕುಳ್ಳ ಭುಜಬಲಕಸುರರಂಗೆಲ್ದ ರಾಘವಂ ನಮ್ಮಂ ಸಲಹಲೆಂದಳು॥೩॥ 


ಪ್ರತಿಪದಾರ್ಥ :-  ಬಳ್ಳು=ವೃದ್ಧ ಜಂಬುಕವು, ಒರಲ್ದುದು= ಅರಚಿಕೊಂಡಿತು(ಬೊಗಳಿತು), ಮುಂದು=ಮುಂದುಗಡೆ, ಕುಳ್ಳಿರ್ದ= ಕೂತುಕೊಂಡಿರ್ದ, ಮೃಗಂ= ಚಿಗರೆಯು, ಎದ್ದು= ಮೇಲಕ್ಕೆದ್ದು,ಮಾರ್ಗಮಂ=ಹಾದಿಯನ್ನು, ದಾಟಿದುದು= ಅಡ್ಡಲಾಗಿ ಹೋಯಿತು (ಈ ರೀತಿಯಾಗುವುದು ಅಪಶಕುನ) ಬಲದ= ಬಲಖಡೆಯ, ಕಣ್=ಕಣ್ಣು, ಬೆದರೆ=ಅಲುಗಲು, ಅವನಿಸುತೆ= ಭೂಪುತ್ರಿಯಾದ ಸೀತಾದೇವಿಯು, ಕಂಡು= ಈ ಉತ್ಪಾತವನ್ನು ನೋಡಿ, ಅಳ್ಳೆದೆಯೊಳು= ಭಯಗೊಂಡ ಚಿತ್ರದಿಂದ, ಲಕ್ಷ್ಮಣ =ಎಲೈ ಸೌಮಿತ್ರಿಯೇ! ಪಥದೊಳು= ಹಾದಿಯಲ್ಲಿ, ದುರ್ನಿಮಿತ್ತಂಗಳಂ = ಕೆಟ್ಟ ಶಕುನಗಳನ್ನು, ನೋಡು=ಈಕ್ಷಿಸುವವನಾಗು, ಇದಕೆ= ಈ ಕೆಟ್ಟಶಕುನಗಳಾಗುವುದಕ್ಕೆ,ಎನ್ನ=ನನ್ನ, ಮನಂ= ಮನಸ್ಸು,ಈಗಲು= ಶ್ರೀರಾಮನನ್ನು ಅಗಲಿದ ಬಳಿಕ, ಡಿಳ್ಳಂ= ಅಧೈರ್ಯವುಳ್ಳದ್ದು,ಆದಪುದು= ಆಗುತ್ತಿರುತ್ತದೆ, ಮುಂದೆ= ಇಲ್ಲಿಂದೀಚೆಗೆ, ರಾಮನ= ಶ್ರೀರಾಮನ, ಆಯುಷ್ಯಕೆ= ಆಯುವಿಗೆ(ಜೀವಿತಕ್ಕೆ),ಐಶ್ವರ್ಯಕೆ= ಸಿರಿಗೆ, ಉಳ್ಳ= ಆಗಿರುವ, ಭುಜಬಲಕೆ= ಬಾಹುಶಕ್ತಿಗೆ, ಒಳ್ಳಿತು= ಮೇಲಾದದ್ದು. ಆಗಲಿ= ಆಗುವುದಾಗಲಿ, ಅಸುರರಂ= ರಕ್ಕಸರನ್ನು(ದಾನವರನ್ನು) ಗೆಲ್ದ= ಗೆದ್ದ, ರಾಘವಂ= ರಘುಶ್ರೇಷ್ಠನಾದ ರಾಮಚಂದ್ರನು, ನಮ್ಮಂ= ನಮ್ಮನ್ನು, (ಆಶ್ರಿತರಾದ ನಮ್ಮಗಳನ್ನು),ಸಲಹಲಿ=ಸಂರಕ್ಷಿಸಲಿ,

(ಪೊರೆಯಲಿ) ಎಂದಳು= ಎಂಬುದಾಗಿ ಹೇಳಿದಳು,.


ಅ॥ವಿ॥ ಒಳ್ಳಿತ್ತು+ನುಡಿ= ಒಳ್ನುಡಿ(ವಿ. ಪೂ. ಕ.) ಮೃಗ=ಚಿಗರೆ, ಕಾಡುಮೃಗ, ಪಥ=ಮಾರ್ಗ, ದಿಕ್ಕು, ಭುಜದ+ ಬಲ= ಭುಜಬಲ(ಷ. ತ. ) ಆಯುಷ್ಯ(ತ್ಸ)ಆಯಿಸ(ತ್ಭ) ಚಿತ್ತ= ಚಿತ್ತಾ ನಕ್ಷತ್ರ, ಮನಸ್ಸು.  


ತಾತ್ಪರ್ಯ:- ಸೌಮಿತ್ರಿಯು ವೈದೇಹಿಯೊಡನೆ ಪ್ರಯಾಣ ಮಾಡುತ್ತಿರುವ ಕಾಲದಲ್ಲಿ ಒಂದು ವೃದ್ಧ ಜಂಬುಕವು ಕೂಗಿತು, ಮುಂದೆ ಎದುರಾಗಿ ಕುಳಿತಿದ್ದ ಜಿಂಕೆ ಎದ್ದು ಮಾರ್ಗಕ್ಕೆ ಅಡ್ಡಲಾಗಿ ಹೋಯಿತು, ಬಲದ ಕಣ್ಣು ಅದುರಿತು. ಸೀತಾದೇವಿಯು ಇದೆಲ್ಲವನ್ನೂ ಕಂಡವಳಾಗಿ ಭಯಗೊಂಡ ಮನಸ್ಸಿನಿಂದ ಸೌಮಿತ್ರಿಯೇ! ಮಾರ್ಗದಲ್ಲಿ ಪರಂಪರೆಯಾಗಿ ಸಂಭವಿಸುತ್ತಿರುವ ಅಪಶಕುನಗಳನ್ನು ನೋಡಿದೆಯಾ! ಈ ರೀತಿಯಾದ ದುರ್ನಿಮಿತ್ತಗಳಾಗುವುದಕ್ಕೆ ಎನ್ನಯ ಚಿತ್ತವು ಈಗ ಧೈರ್ಯಗುಂದಿರು-

ವುದು. ಇನ್ನು ಮುಂದಕ್ಕೆ ಶ್ರೀರಾಮಚಂದ್ರನ ಆಯುಷ್ಯವೃದ್ಧಿಗೂ ಭಾಗ್ಯಸಂಪತ್ತಿಗೂ ಬಾಹುಬಲಾತಿಶಯಕ್ಕೂ ಸರ್ವದಾ ಶುಭವಾಗುತ್ತಿರಲಿ. ದೈತ್ಯಾದಿಗಳನ್ನು ಸೋಲಿಸಿದ ಶ್ರೀರೃಮ ಮೂರ್ತಿಯು, ನಮ್ಮನ್ನು ಅನವರತವೂ ಸಲಹಲಿ ಎಂದು ಶ್ರೀರಾಮನ ಅಡಿದಾವರೆಗಳನ್ನು ಮನದಲ್ಲಿ ಧ್ಯಾನಿಸಿದಳು. 


ಅನ್ನೆಗಂ ಜಾನಕಿಯ ಕಣ್ಗೆ ತೋರಿತು ಮುಂದೆ। 

ಸನ್ನುತ ರಘೂಧ್ವಹನ ಕೀರ್ತಿಯೆನೆ ಮೂವಟ್ಟೆ। 

ಯನ್ನಡೆದು ಮುಕ್ಕಣ್ಣನಂ ಸಾರ್ದು ಮೂಜಗದ ಪಾಪಮಂ ಮುರಿದು ಮುಕ್ಕಿ॥

ಮುನ್ನೀರು ಮುಂತಾಗಿಮೂದೇವರೊಳಗಾದ। 

ಮುನ್ನುಳ್ಳ ಮೂವತ್ತು ಮೂರ್ಕೋಟಿ ವಿಬುಧರಂ। 

ತನ್ನೊಳ್ ಮುಳುಗಿದರಣಕಿಪ ಪೆಂಪೊದವಿ ಪರಿವ ಬೆಳ್ವೊನಲ್ ದಿವಿಜ ನದಿಯ॥೪॥ 


ಪ್ರತಿಪದಾರ್ಥ :- ಅನ್ನೆಗಂ= ಆವರೆಗೆ, ಮುಂದೆ= ಎದುರಿನಲ್ಲಿ,ಜಾನಕಿಯ= ಜನಕರಾಯನ ಪುತ್ರಿಯಾದ ಸೀತಾದೇವಿಯ, ಕಣ್ಗೆ= ಕಣ್ಣುಗಳಿಗೆ, ಸನ್ನುತ= ಸ್ತೋತ್ರಾರ್ಹಮಾದ, ರಘೂಧ್ವಹನ= ಶ್ರೀರಾಮನ, ಕೀರ್ತಿ= ಯಶವು, ಎನೆ= ಎನ್ನುವ ಹಾಗೆ, ಮೂವಟ್ಟೆಯಂ= ಮೂರು ಮಾರ್ಗಗಳನ್ನು( ಸ್ವರ್ಗ, ಮರ್ತ್ಯ. ಪಾತಾಳಗಳೆಂಬಮೂರು ಮಾರ್ಗಗಳನ್ನೂ ತೊಳಲಿ) ನಡೆದು= ಹರಿದು ಹೊರಟು, ಮುಕ್ಕಣ್ಣನಂ= ಮೂರು ಕಣ್ಣುಳ್ಳ ಈಶ್ವರನನ್ನು, ಸಾರ್ದು = ಈಶ್ವರನ ಜಟೆಯಲ್ಲಿ ಸೇರಿಕೊಂಡು, ಮೂಜಗದ= ಸ್ವರ್ಗ ಮರ್ತ್ಯ ಪಾತಾಳಗಳೆಂಬ ಮೂರುಲೋಕಗಳಲ್ಲಿರುವವರ, ಪಾಪಮಂ= ಪಾಪವನ್ನು, ಮುರಿದು= ನಾಶಮಾಡಿ, ಮುಕ್ಕಿ= ತೊಂದರೆ ಪಡಿಸಿ, (ಭಕ್ಕಿಷಿ) ಮುನ್ನೀರ್= ಸಮುದ್ರವೆ, ಮುಂತಾಗಿ= ಆದಿಯಾಗಿ, ಮೂದೇವರು= ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರು, ಒಳಗಾದ= ಅಂತಃ ಅಡಗಿರುವ( ಒಳಗಡೆ ಕೂಡಿರುವ) ವಳಾಗಿ ಎಂದರೆ ತ್ರಿಮೂರ್ತಿಗಳಿಂದುದ್ಭವಿಸಿದವಳಾಗಿ, ಮುನ್ನುಳ್ಳ= ಪೂರ್ವದಿಂದಿರುತ್ತಿರುವ, ಮೂವತ್ತು ಮೂರು= ಮುವತ್ತು ಮೂರಾದ, ಕೋಟಿ= ಕೋಟಿಸಂಖ್ಯೆಯುಳ್ಳ, ವಿಬುಧರಂ= ಅಮರರನ್ನು, ತನ್ನೊಳು= ತನ್ನ ಹರಿಯುವಿಕೆಯಲ್ಲಿ ಮುಳುಗಿದರೆ= ಸ್ನಾನಮಾಡಿದರೆ,ಅಣಕಿಪ= ಉಪಹ್ಸಮಾಡುವ, ಪೆಂಪು= ಆಧಿಕ್ಯವನ್ನು, ಒದವಿ=ಧರಿಸಿ, (ಹೊಂದಿ) ಪರಿವ= ಹರಿಯುತ್ತಿರುವ, ದಿವಿಜನದಿಯ= ದೇವ ಗಂಗಾನದಿಯ,ಬೆಳ್ಪೊನಲ್= ಧವಳ ವರ್ಣದ ಪ್ರವಾಹವು, ತೋರಿತು= ಕಂಡುಬಂದಿತು. 


ಅ॥ವಿ॥ಮೂರುಜಗತ್ತುಗಳ ಸಮಾಹಾರವು= ಮೂಜಗ (ದ್ವಿ. ಸ. ) ಬಿಳಿದು+ ಪೊನಲ್= ಬಿಳ್ಪೊನಲ್ (ವಿ. ಪೂ. ಕ. ) ತ್ರಿಲೋಕ=ಸ್ವರ್ಗ, ಮರ್ತ್ಯ.ಪಾತಾಳ, ತ್ರಿಮೂರ್ತಿ=ಬ್ರಹ್ಮ, ವಿಷ್ಣು, ಮಹೇಶ್ವರ. ಆತ್ಮತ್ರಯ=ಜೀವಾತ್ಮ,ಪರಮಾತ್ಮ, ಅಂತರಾತ್ಮ, ಶಕ್ತಿತ್ರಯ= ಪ್ರಭು, ಮಂತ್ರ, ಉತ್ಸಾಹ,  ರೀತಿತ್ರಯ= ಗೌಡೀ, ವೈದರ್ಬೀ, ಪಾಂಚಾಲೀ, ಗುಣತ್ರಯ= ಸತ್ವ ರಜ, ತಮ. 


ತಾತ್ಪರ್ಯ:- ಮುಂದೆ ಜಾನಕಿಯ ಕಣ್ಣುಗಳಿಗೆ ಶ್ಲಾಘ್ಯತಮವಾದ ರಘೂಧ್ವಹನ ಕೀರ್ತಿ ಚಂದ್ರಿಕೆಯು ಎನ್ನುವಂತೆ ಸ್ವರ್ಗ,ಮರ್ತ್ಯ, ಪಾತಾಳಗಳೆಂಬ ಮೂರು ಮಾರ್ಗಗಳಲ್ಲೊಪ್ರವಹಿಸಿಕೊಂಡು ತ್ರಿಲೋಚನನಾದ ಪರಮೇಶ್ವರನ ಜಟೆಯಲ್ಲಿ ಸೇರಿಕೊಂಡು ಮೂರು ಲೋಕಗಳಲ್ಲೂ ಇರುವ ಜನರ ಪಾಪಗಳನ್ನು ಪರಿಹರಿಸಿ ಪರಿಶುದ್ಧರನ್ನಾಗಿ ಮಾಡಿ,ಸಮುದ್ರವೇ ಆದಿಯಾಗಿ ತ್ರಿಮೂರ್ತಿಗಳಾದ ಎಂದರೆ ಬ್ರಹ್ಮ ವಿಷ್ಣು ಮಹೇಶ್ವರರೇ ಒಳಗಾಗಿರುವವಳಾಗಿ ಎಂದರೆ ಬ್ರಹ್ಮ ವಿಷ್ಣು ಮಹೇಶ್ವರರಿಂದ ಉದ್ಭವಿಸಿದವಳಾಗಿ,ಅನಾದಿಯಾಗುತ್ತಿರುವ ಮೂವತ್ತುಮೂರುಕೋಟಿ ಸಂಖ್ಯೆಯುಳ್ಳ ದೇವತೆಗಳನ್ನು ತನ್ನ ಪ್ರವಾಹದಲ್ಲಿ ಮುಳುಗಿದರೆ ಅಣಕಿಸುವ ಅಂದವನ್ನು ಒದಗಿಸಿ ಪ್ರವಹಿಸುತ್ತಿರುವ ದೇವಗಂಗಾನದಿಯ ಧವಳ ವರ್ಣಾ - ಲಂಕೃತವಾದ ಪ್ರವಾಹವು ಸೀತಾ ಲಕ್ಷ್ಮಣರ ಪರಿಶುದ್ಧವಾದ ಕಣ್ಣುಗಳಿಗೆ ತೋರಿಬಂದು ಮನಸ್ಸಂತೋಷವನ್ನುಂಟುಮಾ- 

ಡಿತು. 


ತೆರತೆರದ ಕಲ್ಲೋಲ ಮಾಲೆಗಳ ಲೀಲೆಗಳ। 

ಬೆರೆಬೆರೆವ ರಾಜಹಂಸಾಳಿಗಳ ಕೇಳಿಗಳ। 

ಪರಿಪರಿಯ ನೀರ್ವನಿಗಳಾಕರದ ಶೀಕರದ ನೊರೆಯ ಬೊಬ್ಬುಳಿಯ ಸುಳಿಯ॥

ಮೊರೆಮೊರೆದು ಘೂರ್ಮಿಸುವ ಪರಿವುಗಳ ಮುರಿವುಗಳ। 

ತಿರುತಿರುಗಿ ಸುಳಿವ ಜರಜಂತುಗಳ ಗೊಂತುಗಳ। 

ನೆರೆನೆರೆದು ಮುನಿಜನಂ ಸೇವಿಸುವ ಭಾವಿಸುವ ಗಂಗೆಗವನಿಜೆ ಬಂದಳು॥೫॥ 


ಪ್ರತಿಪದಾರ್ಥ :- ತೆರತೆರದ= ಬಗೆಬಗೆಗಳಾದ, ಕಲ್ಲೋಲ= ದೊಡ್ಡ ತೆರೆಗಳ, ಮಾಲೆಗಳ= ಸಮುದಾಯಗಳ, ಲೀಲೆಗಳ= ವೈಭವಗಳ,ಬೆರೆಬೆರೆವ= ಒಂದರೊಡನೊಂದು ಕಲೆಯುತ್ತಿರುವ, ರಾಜಹಂಸ= ಅರಸಂಚೆಗಳ, ಅಳಿಗಳ= ಸಮುದಾಯದ, ಕೇಳಿಗಳ= ವನೋದಗಳ, ಪರಿಪರಿಯ= ನಾನಾವಿಧಗಳಾದ, ನೀರ್ವನಿಗಳ= ತುಂತುರುಗಳ, ಆಕರದ=ಗಣಿಯಾದ, (ಆಶ್ರಯವಾದ) ಸೀಕರದ= ನೀರ ಸಣ್ಣ ಹನಿಗಳ, ನೊರೆಯ= ಬುರುಗಿನ, ಬೊಬ್ಬುಳಿಯ= ಮೆದೆಯ(ಸಮೂಹದ), ಸುಳಿಯ= ಸುತ್ತುವಿಕೆಯ, ಮೊರೆಮೊರೆದು = ಆರ್ಭಟಿಸಿ, ಘೂರ್ಮಿಸುವ = ಚಲಿಸುತ್ತಿರುವ, ಪರಿವುಗಳ= ಹರಿಯುವಿ-

ಕೆಯ, ಮುರಿವುಗಳ= ಎಡ ಬಲ ತಿರುಗುವ, ತಿರುತಿರುಗಿ= ಸುತ್ತಿಸುತ್ತಿ, ಸುಳಿವ= ಸಂಚರಿಸುವ, ಜಲಜಂತುಗಳು= ಜಲಚರಗಳು, ಗೊಂತುಗಳ= ಮೇಲಕ್ಕೆ ಎಗರುವ, ನೆರೆನೆರೆದು= ಹೆಚ್ಚಾಗಿ ಬಂದು, ಮುನಿಜನಂ= ರುಷಿಗಳ ಗುಂಪು, ಸೇವಿಸುವ= ಸೇವೆಯನ್ನು ಮಾಡುವ, ಭಾವಿಸುವ= ಯೋಚಿಸುವ, (ತಿಳಿಯುವ) ಗಂಗೆಗೆ= ಜಾಹ್ನವಿಗೆ, ಅವನಿಜೆ= ಭೂಪುತ್ರಿಯಾದ ಜಾನಕಿಯು, ಬಂದಳು= ಬಂದವಳಾದಳು. 


ಅ॥ವಿ॥ ಕಲುಲೋಲ= ದೊಡ್ಡ ತೆರೆ, ಜಲದ+ಜಂತು=ಜಲಜಂತು (ಷ. ತ. ) ಋಷಿ(ತ್ಸ)ರಿಸಿ (ತ್ಭ) ಭಾವಿಸು= ಭಾವನೆಯನ್ನು ಮಾಡು, ಭವಿಸು= ಹುಟ್ಟು. 


ತಾತ್ಪರ್ಯ:- ನಾನಾ ವಿಧಗಳಾದ ತರಂಗಗಳ ಸಮುದಾಯವುಳ್ಳ, ವಿಲಾಸದಿಂದ ಆಗಿಂದಾಗ್ಯೆ ಬೆರೆಯುತ್ತಿರುವ, ರಾಜಹಂಸಗಳ ಗುಂಪಿನ ಆಟಗಳ, ಪರಿಪರಿಯ ನೀರಿನ ಹನಿಗಳಿಗೆ, ಆಸರೆಯಾದ ಸಣ್ಣತುಂತುರು ಹನಿಗಳ, ನೊರೆಗಳ ರಾಶಿಗಳುಳ್ಳ, ಸುಳಿಗಳಿಂದ ಮೊರೆಯುತ್ತಿರುವ, ಅತಿಯಾಗಿ ಧ್ವನಿಮಾಡುತ್ತ ಸಂಚರಿಸುವ, ಅಡ್ಡ ಪ್ರವಾಹಗಳುಳ್ಳ, ಕೆಳಗಿನಿಂದ ಮೇಲಕ್ಕೆ ಮೇಲಿನಿಂದ ಕೆಳಕ್ಕೆ, ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಸಂಚರಿಸುತ್ತಿರುವ ನೀರ್ಗುದುರೆಯೇ ಮೊದಲಾದ ಜಲಚರಗಳು,ಮತ್ತು ಅವುಗಳ ಹಾರಾಡುವಿಕೆಯ ಗುಂಪುಗಳು, ಬಂದು ಸೇರುತ್ತಿರುವ ಋಷಿಸಮೂಹ, (ಋಷಿಗಳು ಋಷಿಪತ್ನಿಯರು ಬಂದು ಸ್ನಾನಸಂಧ್ಯಾವಂದನೆ ಮೊದಲಾದ ಕರ್ಮಾದಿಗಳನ್ನು ಮಾಡುತ್ತಿರುವರೆಂದು ಭಾವವು) ನಾನಾ ಬಗೆಯ ಜನಗಳಿಂದಲೂ ಸ್ತೋತ್ರಾರ್ಹರಾದ ದೇವಗಂಗಾನದಿಯ ಬಳಿಗೆ ಭೂಪುತ್ರಿಯಾದ ಜಾನಕಿಯು ಬಂದಳು. 


ತೆಂಗೆಳಗವುಂಗು ಪನಸಂ ದ್ರಾಕ್ಷೆ ಜಂಬು ನಾ। 

ರಂಗ ಜಂಬೀರ ಖರ್ಜೂರ ಕಿತ್ತಳೆ ಮಾತು। 

ಳಂಗ ತಿಂತ್ರಿಣಿ ಚೂತ ನೆಲ್ಲಿ ಬಿಲ್ವ ಕಪಿತ್ಥಮೆಂಬ ನಾನಾ ತರುಗಳು॥ 

ತೊಂಗುವ ಫಲಾವಳಿಯ ಭಾರಂಗಳಾವಗಂ। 

ಪಿಂಗವಿವನಿಳೆಗಿಳುಪಬೇಕೆಂದು ಬಾಗಿದೊಂ। 

ದಂಗಮನೆ ಕಣ್ಗೆಸೆದುವಿಕ್ಕೆಲದೊಳಾ ಜಾಹ್ನವಿಯ ತಡಿಯ ಬನದೆಡೆಯೊಳು॥೬॥ 


ಪ್ರತಿಪದಾರ್ಥ :- ತೆಂಗು= ತೆಂಗಿನ ಮರಗಳು, ಎಳೆಕವುಂಗು= ಬಲಿಯದ ಅಡಿಕೆ ಮರಗಳು,ಪನಸ= ಹಲಸಿನವೃಕ್ಷಗಳು, ದ್ರಾಕ್ಷ= ದ್ರಾಕ್ಷೆಯ ಬಳ್ಳಿಗಳು,ಜಂಬು= ನೇರಿಲ ವೃಕ್ಷಗಳು,ನಾರಂಗ= ಹೆರಳೆಯ ಗಿಡಗಳು, ಜಂಬೀರ= ನಿಂಬೆಯಗಿಡವು, ಖರ್ಜೂರ= ಖರ್ಜೂರದ ಗಿಡಗಳು,ಕಿತ್ತಳೆ= ಕಿತ್ತಲೆ ಮರಗಳು, ಮಾತುಳಂಗ= ಮಾದಳದ ಗಿಡಗಳು, ತಿಂತ್ರಿಣಿ = ಹುಣಿಸೇ ಮರಗಳು, ಚೂತ= ಮಾವಿನ ಮರಗಳು, ನೆಲ್ಲಿ= ನೆಲ್ಲಿಯ ಮರಗಳು, ಬಿಲ್ವ= ಬಿಲ್ಪತ್ರೆ ಮರಗಳು, ಕಪಿತ್ಥ= ಬೇಲದ ಮರಗಳು, ಎಂಬ= ಎನ್ನುವಂಥ, ನಾನಾ= ವಿಧವಿಧವಾದ, ತರುಗಳು= ಮರಗಳು, ತೊಂಗುವ= ತುಂಬಿಕೊಂಡಿರುವ, ಫಲಾಳಿಯ= ಹಣ್ಣುಗಳ ಗೊಂಚಲುಗಳ, ಭಾರಂಗಳು= ಹೊರೆಗಳು. ಆವಗಂ= ಸರ್ವಕಾಲಗಳಲ್ಲು, ಇಂಗದ= ಒಣಗಿ ಹೋಗದ, ಇದಂ= ಈ ಫಲಗಳನ್ನು, ಇಳೆಗೆ= ಭೂಮಿಗೆ, ಇಳುವಬೇಕೆಂದು= ಇಳುಹಬೇಕೆಂಬುದಾಗಿ,ಬಾಗಿ= ಬಗ್ಗಿಕೊಂಡು, ಬಂದು= ಬಂದವುಗಳಾಗಿ, ಅಂಗನೆಯ= ಅಬಲೆಯಾದ ಜಾನಕಿಯ, ಕಣ್ಗೆ= ಕಣ್ಣುಗಳಿಗೆ, ಆ ಜಾಹ್ನವೀ= ಆ ದೇವಗಂಗಾನದಿಯ, ಇಕ್ಕೆಲದೊಳು= ಎರಡು ದಡಗಳಲ್ಲಿಯೂ, ತಟ=ದಡದಲ್ಲಿರುವ,ಬನದೊಳು= ಕಾಡಿನಲ್ಲಿ, ಎಸೆದುವು= ಪ್ರಕಾಶಿಸಿದವು. 


ಅ॥ವಿ॥ ಭಗೀರಥನ ಪ್ರಾರ್ಥನೆಯ ಮೇರೆಗೆ ದೇವಗಂಗೆಯು ಭೂಲೋಕಕ್ಕೆ ಇಳಿದು ಬಂದಾಗ ಜಹ್ನುಋಷಿಯ ಪರ್ಣಶಾಲೆಯ ಸುತ್ತಲೂ ಆವರಿಸಿ ತೊಂದರೆಯುಂಟಾಗಲು ಆ ಋಷಿಯು ಕುಪಿತನಾಗಿ ಗಂಗೆಯನ್ನೆಲ್ಲಾ ಕುಡಿದ ಬಳಿಕ ಭಗೀರಥನ ಪ್ರಾರ್ಥನೆಯಿಂದ ಪುನಃ ಕಿವಿಯಲ್ಲಿ ಬಿಟ್ಟನು. ಹೀಗೆ ಜಹ್ನುಋಷಿಯಿಂದುಂಟಾದುದರಿಂದಕ್ಕಾಗಿ ಜಾಹ್ನವಿಯೆಂಬ ಹೆಸರಾಯಿತು. ಜಹ್ನುಋಷಿಯ ಮಗಳು= ಜಾಹ್ನವಿ, ಭಗೀರಥನಿಂದಾದದ್ದು=ಭಾಗೀರಥಿ, ಫಲದ+ ಅವಳಿ=ಫಲಾವಳಿ (ಷ. ತ. ) 


ತಾತ್ಪರ್ಯ:- ಆ ಬಳಿಕ ತೆಂಗು, ಎಳೆ ಅಡಿಕೆ ಮರಗಳು, ಹಲಸಿನ ಮರಗಳು, ದ್ರಾಕ್ಷೆಯ ಬಳ್ಳಿಗಳು, ನೇರಿಲಮರಗಳು, ಹೆರಳೆಯ ಗಿಡಗಳು, ನಿಂಬೆಯ ಗಿಡಗಳು, ಖರ್ಜೂರ,ಕಿತ್ತಳೆ, ಮಾದಳ, ಹುಣಿಸೆ, ಮಾವು, ನೆಲ್ಲಿ, ಆಮಟೆ, ಬಿಲ್ವ, ಬೇಲದ ಮರಗಳು, ಫಲಭಾರದಿಂದ ಜಗ್ಗುತ್ತಿರುವ, ಭಾರದ ದೆಸೆಯಿಂದ ನೆಲಕ್ಕೆ ಕೊಡಬೇಕೆಂದು ಬಗ್ಗಿ ಬಂದುದೊಎಂಬಂತೆ ಇರುವ, 

ಫಲಪುಷ್ಪಾದಿಗಳಿಂದ ಯಾವಕಾಲದಲ್ಲೂ ಕೊರತೆಯಿಲ್ಲದೆ ಗಂಗೆಯ ಉಭಯ ದಡಗಳಲ್ಲಿಯೂ ಇದ್ದವು, ಇವೆಲ್ಲವೂ ಜಾನಕಿಯ ಕಣ್ಣುಗಳಿಗೆ ಆನಂದವುಂಟುಮಾಡಿದವು. 


ಇಳಿದು ರಥದಿಂದೆ ಮಂದಾಕಿನಿಗೆ ಪೊಡಮಟ್ಟು। 

ಬಳಿಕ ನಾವಿಕರೊಡನೆ ನಾಲದೊಳ್ ಗಂಗೆಯಂ। 

ಕಳೆದುನಿರ್ಮಲ ತೀರ್ಥದೊಳ್ ಮಿಂದು ಸೌಮಿತ್ರಿ ಮತ್ತೆಭೂಜಾತೆ ಸಹಿತ॥ 

ಒಳಗೊಳಗೆ ಮರುಗಿ ಬಿಸುಸುಯ್ದು ಚಿಂತಿಸುತೆ ಮುಂ। 

ದಳೆದುಗ್ರ ಮೃಗಪಕ್ಷಿ ಗಣದಿಂದೆ ಘೂರ್ಮಿಸುವ । 

ಹಳುವಮಂ ಪೊಕ್ಕನಡಿಯಿಡುವೊಡಸದಳಮೆಂಬ ಕರ್ಕಶದ ಮಾರ್ಗದಿಂದೆ॥೭॥ 


ಪ್ರತಿಪದಾರ್ಥ :- ಜಾನಕಿ= ಸೀತಾದೇವಿಯು, ರಥದಿಂದ= ವರೂಥದಿಂದ,ಇಳಿದು= ಕೆಳಕ್ಕಿಳಿದು, ಮಂದಾಕಿನಿಗೆ = ದೇವಗಂಗೆಗೆ, ಪೊಡಮಟ್ಟು = ಅಡ್ಡಬಿದ್ದು,( ನಮಸ್ಕರಿಸಿ) ಬಳಿಕ = ಅನಂತರದಲ್ಲಿ, ನಾವಿಕರ= ದೋಣಿ ನಡೆಸುವವರ, ಒಡನೆ=ಸಂಗಡ, ನಾಲದೊಳ್= ದೋಣಿಯಲ್ಲಿ, ಗಂಗೆಯಂ= ಗಂಗಾನದಿಯನ್ನು, ಕಳೆದು= ದಾಟಿ, ನಿರ್ಮಲದ= ಕೊಳೆಯಿಲ್ಲದ,ತೀರ್ಥದೊಳು= ನೀರಲ್ಲಿ, ಮಿಂದು= ಸ್ನಾನಮಾಡಿ, ಸೌಮಿತ್ರಿ = ಲಕ್ಷ್ಮಣನು,  ಮತ್ತೆ=ತಿರುಗಿ, ಭೂಜಾತೆ= ಜಾನಕಿಯ, ಸಹಿತ=ಸಂಗಡ, ಒಳಗೊಳಗೆ= ಮನದಲ್ಲಿ, ಮರುಗಿ= ಸಂತಾಪಪಟ್ಟು, ಬಿಸುಸುಯ್ದು= ನಿಟ್ಟುಸಿರುಬಿಟ್ಟು, ಚಿಂತಿಸುತ= ಯೋಚಿಸುತ್ತ, ಮುಂದಳೆದು= ಮುಂದಕ್ಕೆ ಪ್ರಯಾಣಮಾಡಿ, ಉಗ್ರ= ಭಯಂಕರವಾದ, ಮೃಗ=ವಕಾಡುಮೃ-

ಗಗಳ, ಗಡಣದಿಂದ= ಸಮುದಾಯದಿಂದ, ಘೂರ್ಮಿಸುವ = ಭಯಪಡಿಸುತ್ತಿರುವ,ಹಳುವವಂ= ಅರಣ್ಯವನ್ನು, ಅಡಿ = ಕಾಲನ್ನು, ಇಡುವೊಡೆ= ಇಡಬೇಕಾದರೆ, ಅಸದಳ= ಅಸಾಧ್ಯವು, ಎಂಬ= ಎನ್ನುವ, ಕರ್ಕಶ= ಅತಿ ಕ್ರೂರವಾದ ,ಮಾರ್ಗ-

ದಿಂದ= ಹಾದಿಯಿಂದ, ಪೊಕ್ಕನು= ಪ್ರವೇಶ ಮಾಡಿದನು. 


ಅ॥ವಿ॥ ಪೊಗು=ಧಾತು, ಪೊಕ್ಕನು=ಕ್ರಿಯಾಪದ, ಭೂತರೂಪ, ಪ್ರಥಮ ಪುರುಷ. ಏಕವಚನ. ಮಲವಿಲ್ಲದ್ದು= ನಿರ್ಮಲ, 

( ಷ. ತ. ), ಬೆಚ್ಚನೆಯ+ಸುಯ್= ಬಿಸುಸುಯ್ ( ವಿ. ಪೂ. ಕ. ) ಕರ್ಕಶ (ತ್ಸ) ಕಕ್ಕಸ ( ತ್ಭ. ) ಉಗ್ರ= ಭಯಂಕರ, ಈಶ್ವರ.


ತಾತ್ಪರ್ಯ:- ಆಗ ಸೀತಾ ಲಕ್ಷ್ಮಣರೀರ್ವರೂ ರಥದಿಂದ ಕೆಳಕ್ಕೆ ಇಳಿದು ಮಂದಾಕಿನಿಗೆ ನಮಸ್ಕಾರವನ್ನು ಮಾಡುತ್ತ ಅನಂತರದಲ್ಲಿ ನಾವಿಕನೊಡನೆ ನಾವೆಯಲ್ಲಿ ಕುಳಿತು ಗಂಗಾನದಿಯನ್ನು ದಾಟಿ ಪರಿಶುದ್ಧ ನೀರಿನಲ್ಲಿ ಸ್ನಾನಮಾಡಿ,  ಲಕ್ಷ್ಮಣನು ಮತ್ತು ಜಾನಕಿಯು ಮತ್ತೆ ಕಾಡಿನೊಳಗೆ ಸಂತೃಪಪಡುತ್ತ ನಿಟ್ಟುಸಿರುಬಿಟ್ಟು ನಾನಾವಿಧವಾಗಿ ಯೋಚಿಸುತ್ತ ಮುಂದಕ್ಕೆ ಪ್ರಯಾಣಮಾಡಿ, ಮಹಾ ಭಯಂಕರಗಳಾದ ಕಾಡುಮೃಗಗಳಿಂದ ಕೂಡಿದ ಕಾಡಿನಲ್ಲಿ ಅಡಿಯಿಡುವುದು ಅಸಾಧ್ಯ ಎಂಬಂತಿರುವ ಮಾರ್ಗದಿಂದ ಪ್ರಯಾಣಮಾಡಿದರು.


ಶಕುನಿ ಚೀತ್ಕಾರ ಘೋಷಣಮಯಂ ತೃಣಮಯಂ। 

ವಿಕಿರದುಪಲಾಳಿ ಕರ್ಕಶಮಯಂ ಶಶಮಯಂ। 

ಪ್ರಕಟ ಕಂಟಕ ಕೀರ್ಣ ತರಮಯಂ ರುರುಮಯಂ ವಿವಿಧೋಗ್ರಜಂತುಮಯವು॥ 

ನಕುಲ ಮೂಷಕ ಸರೀಸೃಪಮಯಂ ದ್ವಿಪಮಯಂ। 

ಸಕಲ ಭೂವಿಷಮ ಸಂಕುಲಮಯಂ ಬಿಲಮಯಂ। 

ವೃಕ ಸೂಕರ ವ್ಯಾಘ್ರ ಚಯಮಯಂ ಭಯಮಯಂ ತಾನೆನಿಸಿ ಕಾಡಿರ್ದುದು॥೮॥


ಪ್ರತಿಪದಾರ್ಥ :-  ಅದು= ಆ ಅರಣ್ಯವು, ಶಕುನಿ=ವಿಹಂಗಗಳ, ಚೀತ್ಕಾರ= ಚೀತ್ಕಾರವೆಂಬುವ, ಘೋಷಣ= ಶಬ್ಧದ ಮಯಂ= ವ್ಯಾಪನೆಯಿಂದಲೂ, ತೃಣಮಯಂ= ಹುಲ್ಲುಗಾವಲುಗಳ ಸಮುದಾಯದಿಂದಲೂ, ವಿಕಿರತ್=ಎರಚಿದಂತಿರು-

ವ, ಉಪಲ= ಶಿಲೆಗಳ, ಅಳಿ= ಸಮೂಹದಿಂದ, ಕರ್ಕಶ= ಅತಿ ಕಷ್ಟವಾದ, ಮಾರ್ಗದಿಂದ = ಹಾದಿಗಳಿಂದಲೂ, ಮಯಂ= ತುಂಬಿರುವ, ಶಶಮಯಂ= ಮೊಲಗಳ ಗುಂಪಿನಿಂದಲೂ, ರುರು=ಜಿಂಕೆಗಳ, ಮಯಂ= ತುಂಬಿರುವುದರಿಂದಲೂ, ಪ್ರಕಟ= ಅಭಿವೃದ್ಧಿ ಹೊಂದಿರುವ, ಕಂಟಕ= ಸೂಜಿಯಂತಿರುವ ಮುಳ್ಳುಗಳ, ಶೀರ್ಣ=ಸವೆದು ಹೋಗಿರುವ ತರು= ವೃಕ್ಷಗಳ, ಮಯಂ= ವ್ಯೃಪಕತೆಯಿಂದಲೂ,ವಿವಿಧ= ಅನೇಕ ಬಗೆಗಳಾದ, ಉಗ್ರ= ಭಯಂಕರಗಳಾದ, ಜಂತು= ಜೀವರಾಶಿಗಳ, ಮಯಂ= ವ್ಯಾಪನೆಯುಳ್ಳದ್ದಾಗಿಯೂ, ನಕುಲ= ಮುಂಗಸಿಗಳ, ಮೂಷಕ= ಇಲಿಗಳ, ಸರೀಸೃಪ= ಹಾವುಗಳ, ಮಯಂ= ತುಂಬಿರೋಣದರಿಂದಲೂ, ದ್ವಿಪ=ಆನೆಗಳ, ಮಯಂ=ತುಂಬಿರುವಿಕೆಯಿಂದಲೂ, ಸಕಲ= ಸಮಸ್ತ, ಭೂ=ಭೂಮಿ, ವಿಷಮ= ಹಳ್ಳ ತಿಟ್ಟುಗಳ, ಸಂಕುಲ= ಸಮುದಾಯಗಳ, ಮಯಂ= ತುಂಬಿಕೊಂಡಿರುವಿಕೆಯಿಂದಲೂ, ಬಿಲ= ಬಿಲಗಳ, 

ಹುತ್ತಗಳ, ಮಯಂ=ವ್ಯಾಪನೆಯಿಂದಲೂ,ವೃಕ= ತೋಳಗಳ, ಸೂಕರ= ಹಂದಿಗಳು, ವ್ಯಾಘ್ರ= ಹುಲಿಗಳು, ಇವುಗಳ, ಚಯ= ಸಮುದಾಯಗಳ, ಮಯಂ= ತುಂಬಿರುವಿಕೆಯಿಂದಲೂ, ಭಯ= ಭೀತಿಯ, ಮಯಂ= ಅಭಿವೃದ್ಧಿಯಿಂದ ಕೂಡಿರುವುದು, ತಾನು, ಎನಿಸಿ= ತಾನೆ ಎನ್ನಿಸಿಕೊಂಡು, ಕಾಡು= ಆ ಅರಣ್ಯವು, ಇದ್ದುದು= ಇತ್ತು. 


ಅ॥ವಿ॥ ವ್ಯಾಘ್ರ  (ತ್ಸ) ಬಗ್ಗ (ತ್ಭ) ಧ್ವನಿ(ತ್ಸ)ದನಿ (ತ್ಭ) ಶುಕ=ಗಿಣಿ, ಶುಕಮುನಿ,ನಕುಲ= ನಕುಲನೆಂಬವನು, ಮುಂಗಸಿ, ದ್ವಿ=ಎರಡುಸಲ, ಪ=ಪಾನಮಾಡುವುದು ಆನೆ, ಭೂಮಿಯ+ವಿಷಮ= ಭೂವಿಷಮ (ಷ. ತ. ) 


ತಾತ್ಪರ್ಯ:- ಆ ಕಾಡು ಶಕುಂತಗಳ ಚೀತ್ಕಾರದಿಂದಲೂ, ಹಸುರಾದ ಹುಲ್ಲಿನಿಂದಕೂಡಿಯೂ, ಎಲ್ಲೆಲ್ಲೂ ಹರಡಿದ್ದ ಬಂಡೆಗಳಿಂದಲೂ,ಮುಳ್ಳು ಪೊದರುಗಳಿಂದಲೂ,ಮೊಲಗಳ ಸಮೂಹದಿಂದಲೂ,ಸಾರಂಗ ಜಿಂಕೆ ಮೊದಲಾದವುಗಳ ಗುಂಪಿನಿಂದಲೂ,ಮುಂಗಸಿ, ಇಲಿ ಹೆಗ್ಗಣ ಮೊದಲಾದವುಗಳ ಗುಂಪಿನಿಂದಲೂ,ಹುಲಿ, ಸಿಂಹ, ಕರಡಿ, ತೋಳ ಮೊದಲಾದವುಗಳ ಸಮೂಹದಿಂದಲೂ, ಎಲ್ಲೆಲ್ಲಿಯೂ ಆನೆಗಳಸಮೂಹದಿಂದಲೂ,ಹಂದಿ,ಶಿವಂಗಿ,ಕಾಡೆಮ್ಮೆ, ಮೊದಲಾ-

ದವುಗಳ ಗುಂಪುಗಳಿಂದಲೂ, ಭೂಮಿ ಹಳ್ಳ ದಿಣ್ಣೆಗಳಿಂದಲೂ, ಭಯಂಕರವಾಗಿದ್ದಿತು. 


ಇರುಳಂತೆ ಪಗಲಂತೆ ಮಖದಂತೆ ದಿವದಂತೆ। 

ವರ ಪಯೋನಿಧಿಯಂತೆ ಕೈಲಾಸಗಿರಿಯಂತೆ। 

ನಿರುತಮಂ ಸೋಮಾರ್ಕ ಶಿಖಿ ಸಹಸ್ರಾಕ್ಷ ಹರಿನುತಶಿವಾವಾಸಮಾಗಿ॥ 

ಧುರದಂತೆ ಕೊಳದಂತೆ ಕಡಲಂತೆ ನಭದಂತೆ। 

ಶರ ಪುಂಡರೀಕ ವಿದ್ರುಮ ಋಕ್ಷಮಯದೊಳಿಡಿ। 

ದಿರುತಿರ್ದುದಾ ಮಹಾಟವಿ ಜಾನಕಿಯ ಕಣ್ಗೆ ಘೋರತರಮಾಗಿ ಮುಂದೆ॥೯॥


ಪ್ರತಿಪದಾರ್ಥ :-  ಆ ಕಾಡು= ಆ ಅರಣ್ಯವು, ಇರುಳಂತೆ= ಕತ್ತಲಹಾಗೆ,ಪಗಲಂತೆ= ಹಗಲಿನ ಹಾಗೆಯೂ,ಮಖದಂತೆ= ಯಜ್ಞದಹಾಗೆಯೂ, ದಿವಿಯಂತೆ= ಸುರಲೋಕದಂತೆಯೂ,ವರ=ಶ್ರೇಷ್ಠವಾದ, ಪಯೋನಿಧಿಯಂತೆ=ಕ್ಷೀರಸಮುದ್ರದ- ಹಾಗೆಯೂ,ಕೈಲಾಸಗಿರಿಯಂತೆ= ರಜತ ಪರ್ವತದ ಹಾಗೆಯೂ,ನಿರುತಂ= ಸದಾಕಾಲದಲ್ಲೂ,ಸೋಮ=ಚಂದ್ರ, ಅರ್ಕ= ಸೂರ್ಯ,ಶಿಖಿ= ನವಿಲೂ,ಸಹಸ್ರಾಕ್ಷ= ದೇವೇಂದ್ರನು, ಹರಿ=ನಾರಾಯಣನು, ನುತ=ಸ್ತೋತ್ರಾರ್ಹರಾದ, ಶಿವ=ಪರಮೇಶ್ವ-

ರನಿಗೆ,ಆವಾಸಂ= ವಾಸಸ್ಥಳವೂ,ಆಗಿ=ಆಗಿರುವುದಾಗಿ,ಧುರದಂತೆ= ಕಾಳಗದ ಹಾಗೆಯೂ, ಕೊಳದಂತೆ= ಸರೋವರದ ಹಾಗೆಯೂ,ಕಡಲಂತೆ= ಸಮುದ್ರದಂತೆಯೂ,ನಭದಂತೆ=ಅಂತರಿಕ್ಷದಂತೆಯೂ,ಶರ=ಬಾಣಗಳ, ಪುಂಡರೀಕ= ಬಿಳೀ ಕಮಲಗಳ,ವಿದ್ರುಮ=ಹವಳದ,(ಲತೆಗಳ) ಋಕ್ಷ=ಕರಡಿಗಳ, ಮಯದೊಳು= ತುಂಬಿಯು, ಇಡಿದು= ಕೂಡಿದ್ದಾಗಿ, ಆ ಮಹಾಟವಿ= ಆ ಮಹಾ ಅಡವಿಯು, ಮುಂದೆ= ಮುಂಭಾಗದಲ್ಲಿ, ಜಾನಕಿಯ= ಸೀತಾದೇವಿಯ,ಕಣ್ಗೆ = ಕಣ್ಣುಗಳಿಗೆ, ಘೋರತರ=ಅತಿ ಭಯಂಕರವಾಗಿ,ಇರುತಿರ್ದುದು= ಇರುತಿತ್ತು. 


ಅ॥ವಿ॥ ಶಿಖಿ=ನವಿಲು, ಅಗ್ನಿ, ಪುಂಡರೀಕ= ಹುಲಿ, ಕಮಲ, ಮಖ=ಯಜ್ಞ, ಮುಖ=ಮೋರೆ, ಶಂ=ಸುಖವನ್ನು, ಕರ= 

ಉಂಟುಮಾಡತಕ್ಕವನು, ಶಂಕರ, ಸಹಸ್ರಾಕ್ಷ= ಇಂದ್ರ, ನವಿಲು, ಧುರ=ಯುದ್ಧ, ಧರೆ=ಭೂಮಿ. 


ತಾತ್ಪರ್ಯ:- ಆ ಕಾಡಿನಲ್ಲಿ ವನ್ಯಮೃಗ, ಆನೆಗಳಿಂದ ಕೂಡಿದ, ಇರುಳಂತೆಯೂ,ಹಗಲಿನಂತೆಯೂ,ಯಜ್ಞದಂತೆಯೂ, ಸ್ವರ್ಗದಂತೆಯೂ, ಶ್ರೇಷ್ಠವಾದ ಹಾಲ್ಗಡಲಂತೆಯೂ,ಕೈಲಾಸಗಿರಿಯಂತೆಯೂ, ಸರ್ವದಾ ಚಂದ್ರನು, ಸೂರ್ಯನು, ಅಗ್ನಿಯು, ನವಿಲು, ದೇವೇಂದ್ರನು,ಹರಿಯು,ಇವರುಗಳಿಂದ ಶ್ಲಾಘ್ಯವಾದ ಶಂಕರನಿಗೆ ವಾಸಸ್ಥಾನವಾಗಿಯೂ,ರಣರಂಗ- 

ದಂತೆಯೂ, ಸರೋವರದಂತೆಯೂ,ಕಡಲಂತೆಯೂ,ನಭದಂತೆಯೂ, ನೀರಿನ ಪುಂಡರೀಕಗಳ, ಹವಳದ ಲತೆಗಳ, ನಕ್ಷತ್ರಗಳ, ಸಮೋದ್ಧಿಯಿಂದಲೂ,ವ್ಯಾಪ್ತವಾದುದಾಗಿ, ಈ ಘೋರಾರಣ್ಯವು ಸೀತಾದೇವಿಯ ಕಣ್ಣುಗಳಿಗೆ, ಕ್ರೂರವಾಗಿ ಕಂಡುಬಂದಿತು. 


ಅಟವಿಯ ಮಹಾಘೋರ ಗಹ್ವರಂ ಮುಂದೆ ದು। 

ರ್ಘಟಮಾಗೆ ನಡುನಡುಗಿ ಭೀತಿಯಿಂ ಸೀತೆ ಸಂ। 

ಕಟದಿಂ ರಾಮನಾಮಂಗಳಂ ಜಪಿಸುತೆಲೆ ಸೌಮಿತ್ರಿ ಕಾನನಮಿದು॥ 

ಆಟನಕಸದಳಮಪ್ಪುದಿಲ್ಲಿ ಪುಣ್ಯಾಶ್ರಮದ। 

ಜಟಿಗಳಂ ವಲ್ಕಲವನುಟ್ಟ ಮುನಿವಧುಗಳಂ। 

ವಟುಗಳಂ ಶ್ರುತಿಘೋಷ ಹೋಮಧೂಮಂಗಳಂ ಕಾಣೆನೆಂದಳವಳಿದಳು॥೧೦॥


ಪ್ರತಿಪದಾರ್ಥ :-  ಜನಕಜೆ= ಜನಕರಾಯನ ಪುತ್ರಿಯಾದ ಸೀತಾದೇವಿಯು, ಅಟವಿಯ= ಅರಣ್ಯದ, ಮಹಾ= ಅಧಿಕವಾದ

ಘೋರ= ಭಯಂಕರವಾದ, ಗಹ್ವರಂ= ಗವಿಗಳು, ಮುಂದೆ= ಮುಂದಿನ ಮಾರ್ಗದಲ್ಲಿ, ದುರ್ಘಟಂ= ಸಂಚರಿಸಲು ಸಾಧ್ಯವಲ್ಲದ್ದು,ಆಗೆ=ಉಂಟಾಗಲು, ಸೀತೆ=ಸೀತಾದೇವಿಯು, ಭೀತಿಯಿಂದ= ಹೆದರಿಕೆಯಿಂದ, ನಡನಡುಗಿ= ನಡುನಡುಗಿ-

ದವಳಾಗಿ, ಸಂಕಟದಿಂದ= ವ್ಯಥೆಯಿಂದ, ರಾಮ= ಶ್ರೀರಾಮಚಂದ್ರನ, ನಾಮಗಳಂ=ಹೆಸರುಗಳನ್ನು, ಜಪಿಸುತ= ಧ್ಯಾನೆಸುತ್ತ,ಎಲೆ= ಎಲೈಯ್ಯಾ, ಸೌಮಿತ್ರಿ= ಲಕ್ಷ್ಮಣನೆ, ಇದು= ಇಲ್ಲಿರುವ, ಕಾನನಂ= ಅರಣ್ಯವು,ಆಟನಕೆ= ತಿರುಗಾಟಕ್ಕೆ, ಅಸದಳಂ= ಅಸಾಧ್ಯವು, ಅಪ್ಪುದು= ಆಗಿದೆ, ಇಲ್ಲಿ=ಈ ಅರಣ್ಯದಲ್ಲಿ, ಪುಣ್ಯ= ಪವಿತ್ರಕರವಾದ, ಆಶ್ರಮಗಳ= ಋಷ್ಯಾಶ್ರಮಗಳ, ಜಟಿಗಳಿಂ=ಸನ್ಯಾಸಿಗಳಿಂದ, ವಲ್ಕಲವನು= ನಾರುಡಿಗಳನ್ನು, ಉಟ್ಟು=ಧರಿಸಿಕೊಂಡಿರುವ, ಮುನಿವಧು-

ಗಳಂ= ಋಷಿಪತ್ನಿಯರನ್ನು, ಶ್ರುತಿ= ಆಗಮಗಳ, ಘೋಷ= ಶಬ್ಧದಿಂದ ವ್ಯಾಪ್ತವಾದ, ಹೋಮ=ಯಜ್ಞದ, ಧೂಮಂಗಳಂ= ಹೊಗೆಗಳನ್ನು, ಎಂದರೆ ದಕ್ಷಿಣಾಗ್ನಿ, ಗಾರ್ಹಪತ್ಯ,ಆಹವನೀಯವೇ ಮೊದಲಾದ ಅಗ್ನಿಗಳ ಹೊಗೆಗಳನ್ನು, ಕಾಣೆನು= ನೋಡಿಲ್ಲ, ಎಂದು=ಎಂಬುದಾಗಿ, ಅಳವಳಿದಳು= ಧೈರ್ಯಗುಂದಿದಳು. (ಭಯಗ್ರಸ್ತಳಾದಳು)


ಅ॥ವಿ॥ ಮಹತ್ತಾದ +ವನ= ಮಹಾವನ ( ವಿ. ಪೂ. ಕ.)ಸಾಧ್ಯವಲ್ಲದ್ದು =ಅಸಾಧ್ಯ, ಸುಮಿತ್ರೆಯ ಮಗ ಸೌಮಿತ್ರಿ, ಪುಣ್ಯ+ ಆಶ್ರಮ= ಪುಣ್ಯಾಶ್ರಮ (ಸ. ದೀ. ಸಂ) ಜಟಾ (ತ್ಸ) ಜಡೆ (ತ್ಭ) ಅಕ್ಷ (ತ್ಸ) ಅಚ್ಚು (ತ್ಭ) ಋಕ್ಷ=ನಕ್ಷತ್ರ,ಕರಡಿ, ಈಷಣತ್ರಯ= ಅರ್ಥ, ಪುತ್ರ, ದಾರ, ತ್ರಿಧಾತು=ವಾತ, ಪಿತ್ತ, ಶ್ಲೇಷ್ಮ, ಕರ್ಮತ್ರಯ= ಯಜನ, ಅಧ್ಯಯನ,ದಾನ, ತ್ರಿವರ್ಗ= ಧರ್ಮ, ಅರ್ಥ, ಕಾಮ. ತ್ರಿಸ್ಥಲಿ= ಕಾಶಿ, ಪ್ರಯಾಗ, ಗಯಾ. ತ್ರಿವೇಣಿ= ಗಂಗಾ, ಯಮುನಾ, ಸರಸ್ವತಿ. 


ತಾತ್ಪರ್ಯ:-ಆ ಗಂಗಾ ತಟದ ಪ್ರದೇಶದಲ್ಲಿದ್ದ ಕಾಡಿನ ಅತ್ಯಧಿಕವಾದ ಮತ್ತು ಗಹನವಾದ ಗುಹೆಗಳು ಮುಂದೆ ಕಾಣುವ ದಾರಿಯಲ್ಲಿ  ಪ್ರವೇಶಿಸಲು ಅಸಾಧ್ಯವಾಗಿತ್ತು. ಸೀತಾದೇವಿಯು ಭೀತಿಯಿಂದ ನಡನಡುಗಿ ಸಂಕಟದಿಂದ ರಾಮನಾಮ

ಜಪಿಸುತ್ತ,ಎಲೈ ಸೌಮಿತ್ರಿಯೇ! ಈ ಅರಣ್ಯವು ಜನಸಂಚಾರಕ್ಕೆ ಅಸದಳವಾಗಿದೆ, ಇಂತಹ ಮಹಾರಣ್ಯದಲ್ಲಿ ಋಷಿ ಆಶ್ರಮಗಳು ಒಂದಾದರೂ ಕಾಣಬರಲಿಲ್ಲ, ಜಟಾಧರರಾದ ಋಷಿಗಳನ್ನೂ ಅವರ ಧರ್ಮಪತ್ನಿಯರನ್ನೂ ಕಾಣೆನು. ವೇದಾಭ್ಯಾಸಿಗಳಾದ ವಟುಗಳನ್ನೂ ಕಾಣೆನು. ವೇದಘೋಷಸಹ ಕೇಳಲಿಲ್ಲ, ಅಗ್ನಿಹೋತ್ರಾದಿಗಳ ಧೂಮವು ಸಹ ನೋಡಲಿಲ್ಲ, ಎಂಬುದಾಗಿ ಅಧೈರ್ಯಪಟ್ಟು ಮಾತನಾಡಿದಳು.


ಎಲ್ಲಿ ಮುನಿಪೋತ್ತಮರ ಪಾವನದ ವನದೆಡೆಗ।

 ಳೆಲ್ಲಿಸಿದ್ಧಾಶ್ರಮಗಳ ಮಂಗಳಸ್ಥಳಗ। 

ಳೆಲ್ಲಿ ಸುಹವಿಗಳ ಕಂಪೊಗೆದ ಪೊಗೆದಳೆದಗ್ನಿ ಹೋತ್ರದ ಕುಟೀರಂಗಳು॥ 

ಎಲ್ಲಿ ಪರಿಚಿತವಾದ ವಾದ ವೇದ ಧ್ವನಿಗ।

 ಳಲ್ಲಿಗೊಯ್ಯದೆ ದಾರುದಾರುಣದ ಕಟ್ಟಡವಿ।

ಗಿಲ್ಲಿಗೇಕೈತಂದೆ ತಂದೆ ಸೌಮಿತ್ರಿ ಹೇಳೆಂದು ಜಾನಕಿ ಸುಯ್ದಳು॥೧೧॥ 


ಪ್ರತಿಪದಾರ್ಥ :- ಎಲ್ಲಿ= ಆವೆಡೆಯಲ್ಲಿ, ಮುನಿಪೋತ್ತಮರ= ಋಷಿಶ್ರೇಷ್ಠರ, ಪಾವನ= ಮಂಗಳಕರವಾದ,ವನದ= ಕಾಡಿನ,

(ವಿಪಿನದ), ಎಡೆಗಳು= ಪ್ರದೇಶಗಳು, ಎಲ್ಲಿ= ಯಾವ ಸ್ಥಳದಲ್ಲಿ, ಸಿದ್ಧಾಶ್ರಮಂಗಳ= ಸಿದ್ಧರ ಪರ್ಣಶಾಲೆಗಳ( ಸಿದ್ಧರ ತಪೋವನಗಳ) ಸ್ಥಳಗಳು=ಎಡೆಗಳು, ಎಲ್ಲಿ= ಯಾವ ಪ್ರದೇಶದಲ್ಲಿ, ಸು=ಒಳ್ಳೆಯದಾದ, ಹವಿಗಳ= ಹವಿಸ್ಸುಗಳ, (ಹೋಮ ದ್ರವ್ಯಗಳ) ಕಂಪು= ಸುವಾಸನೆಯು, ಒಗೆದ= ಪ್ರಾಪ್ತವಾದ, ಪೊಗೆ= ಧೂಮದಿಂದ, ತಳದ= ವ್ಯಾಪ್ತವಾದ, ಅಗ್ನಿ ಹೋತ್ರದ= ಅಗ್ನಿ ಹೋತ್ರವೇ ಮೊದಲಾದ ಪ್ರದೇಶಗಳುಳ್ಳ, ಕುಟೀರಂಗಳು= ಎಲೆ ಮನೆಗಳು,ಎಲ್ಲಿ= ಯಾವ ಪ್ರದೇಶದಲ್ಲಿ, ಪರಿಚಿತಂ= ಕುರುಹುಳ್ಳ( ಅಭ್ಯಾಸವುಳ್ಳ) ವೇದ= ಚತುರ್ವೇದಗಳ, ಶಾಸ್ತ್ರ= ಷಟ್ಶಾಸ್ತ್ರಗಳ, ಧ್ವನಿಗಳು= ಘೋಷಗಳು, ಅಲ್ಲಿಗೆ= ಆ ಪ್ರದೇಶಕ್ಕೆ,  ಒಯ್ಯದೆ= ಕರೆದುಕೊಂಡು ಹೋಗದೆ, ಅದಾರುಮಿಲ್ಲದ= ಯಾರೂ ಇಲ್ಲದಿರುವ, ಕಟ್ಟಡವಿಗೆ= ಕಗ್ಗಾಡಿಗೆ, ಏಕೆ= ಏನು ಕಾರಣಕ್ಕಾಗಿ, ಇಲ್ಲಿಗೆ= ಈ ಘೋರಾರಣ್ಯಕ್ಕೆ, ಐತಂದೆ= ಬಂದೆ, ತಂದೆ= ತಂದೆಗೆ ಸಮಾನನಾದವನೇ! ಸೌಮಿತ್ರಿ= ಲಕ್ಷ್ಮಣನೆ! ಹೇಳು=ಮಾತನಾಡು, ಎಂದು=ಎಂಬುದಾಗಿ, ಜಾನಕಿ= ಸೀತಾದೇವಿಯು, ಸುಯ್ದಳು= ನಿಟ್ಟುಸಿರು ಬಿಟ್ಟಳು. 


ಅ॥ವಿ॥ ಬೆಚ್ಚನೆಯ+ಸುಯ್= ಬಿಸುಸುಯ್ (ವಿ, ಪೊ. ಕ. ) ಮುನಿಪ+ಉತ್ತಮ= ಮುನಿಪೋತ್ತಮ ( ಗು. ಸಂ. ) ಸಿದ್ಧರ +ಆಶ್ರಮ= ಸಿದ್ಧಾಶ್ರಮ(ಷ. ತ. ) ಷಟ್ ಶಾಸ್ತ್ರಗಳು= ವ್ಯಾಕರಣ, ವೈಶೇಷಿಕ, ಭಾಟ್ಟ, ಜೋತಿಷ, ಪೂರ್ವಮೀಮಾಂಸ, 

ಉತ್ತರಮೀಮಾಂಸ. ಚತುರ್ವೇದಗಳು= ಋಗ್, ಯಜು, ಸಾಮ, ಅಥರ್ವಣ. 


ತಾತ್ಪರ್ಯ:-ಎಲೈ ಸೌಮಿತ್ರಿಯೇ, ಯಾವಕಡೆ ನೋಡಿದರೂ ಋಷ್ಯಾಶ್ರಮಗಳಾಗಲಿ, ಸಿದ್ಧಪುರುಷರ ತಪೋವನಗಳಾಗಲಿ,

ಎಲ್ಲಿ ನೋಡಿದರೂ ಹವಿಸ್ಸಿನ ಧೂಮಗಳಾಗಲಿ, ಅಗ್ನಿ ಹೋತ್ರಾದಿಗಳ ಎಡೆಗಳಾಗಲಿ, ವೇದಶಾಸ್ತ್ರ ಪಠನಗಳ ಧ್ವನಿಗಳಾಗಲಿ

ಕೇಳಿಬರುವುದಿಲ್ಲವಲಾ! ನನ್ನನ್ನು ಶ್ರೇಷ್ಠವಾದ ತಪೋವನಕ್ಕೆ ಕರೆದೊಯ್ಯದೆ ಉಗ್ರಜಂತುಗಳಿಂದಲೂ, ಕಗ್ಗಾಡುಗಳಿಂದಲೂ, ನಿಬಿಡವಾಗಿರುವ ಈ ಮಹಾರಣ್ಯಕ್ಕೆ ಕರೆದೊಯ್ಯುತ್ತೀ, ಎಲೆ ತಂದೆಗೆ ಸಮಾನನೇ ಹೇಳೈ ಎಂಬುದಾಗಿ ನಿಟ್ಟುಸಿರು ಬಿಟ್ಟು 

ಬಹುವಾಗಿ ಚಿಂತಿಸುತ್ತಿದ್ದಳು.


ಪಾವನಕೆ ಪಾವನಂ ಮಂಗಳಕೆ ಮಂಗಳಮ। 

ದಾವನಚರಿತ್ರ ನಾಮಂಗಳಾ ರಾಘವನೆ। 

ಜೀವೇಶನಾಗಿರಲ್ಕಾತನಂಘ್ರಿಯನಗಲ್ದೀಗ ನಾಂ ಬಂದಬಳಿಕ॥ 

ಈ ವನದೊಳಿನ್ನು ಪುಣ್ಯಾಶ್ರಮಂ ಗೋಚರಿಪು। 

ದೇ ವನಜದರಳನುಳಿದಾರಡಿಗೆಬೊಬ್ಬುಳಿಯ। 

ಪೂವಿನೊಳ್ ಮಧುವುಂಟೆ ಸೌಮಿತ್ರಿ ಹೇಳೆಂದು ಪೊದಕುಳಿಗೊಂಡಳು॥೧೨॥ 


ಪ್ರತಿಪದಾರ್ಥ :- ಪಾವನಕೆ= ಪವಿತ್ರಕ್ಕೆ, ಪಾವನಂ= ಪವಿತ್ರಕರವಾದಂಥ,ಮಂಗಳಕೆ= ಮಂಗಳಕರವಾದ್ದಕ್ಕೆ, ಮಂಗಳಂ= ಅತಿ ಮಂಗಳಕರವಾದ, ಅದು=ಆ ಅರಣ್ಯವು, ಅವನ=ಯಾವನ, (ಯಾರೊಬ್ಬರ) ಚರಿತ್ರಂ= ನಡತೆಯು, ನಾಮಂಗಳು= ನಾಮಗಳು, ಆಗಿರಲ್ಕೆ= ಆಗಿರಲಾಗಿ, ಆ ರಾಘವನ= ಆ ರಘುಕುಲಶ್ರೇಷ್ಠನಾದ ಶ್ರೀರಾಮಚಂದ್ರನ, ಜೀವೇಶನು= ಪ್ರಾಣವಲ್ಲಭನು, ಆಗಿರಲ್ಕೆ= ಆಗಿರಲಾಗಿ, ಆತನ= ಆ ರಾಮಮೂರ್ತಿಯ,ಅಂಘ್ರಿಯನು= ಚರಣವನ್ನು, ಅಗಲ್ದು= ಬಿಟ್ಟು, ಈಗ= ಈ ಸಮಯದಲ್ಲಿ, ನಾ=ನಾನಾದರೂ, ಬಂದಬಳಿಕ= ಬಂದ ತರುವಾಯ, ಈ ವನದೊಳು= ಈ ಕಾಡಿನಲ್ಲಿ, ಇನ್ನು= ಇನ್ನು ಮುಂದಕ್ಕೆ, ಪುಣ್ಯಾಶ್ರಮವು= ಪವಿತ್ರಕರವಾದ ಋಷ್ಯಾಶ್ರಮವು,ಗೋಚರಿಪುದೇ= ಕಾಣಬಂದೀತೆ, ವನಜದರಳನು= ವಿಕಸಿಸಿದ ಪದ್ಮವನ್ನು, ಉಳಿದು= ಬಿಟ್ಟು, ಆರಡಿಗೆ=ದುಂಬಿಗೆ, ಬೊಬ್ಬುಳಿಯ=ಬೊಬ್ಬುಳಿ ಗಿಡದ (ನೀರಗುರುಳೆಯ)  ಪೂವಿನೊಳ್= ಹೂವಿನಲ್ಲಿ,ಮಧು= ಮಕರಂದವು,ಉಂಟೆ= ಇದ್ದೀತೆ? ಸೌಮಿತ್ರಿ = ಲಕ್ಷ್ಮಣನೆ, ಹೇಳೆಂದು= ಹೇಳೆಂಬುದಾಗಿ

ಸೀತೆ= ಜಾನಕಿಯು, ಪೊದಕುಳಿಗೊಂಡಳು= ಕಳವಳಗೊಂಡಳು.( ಹೊದಕುಳಿಗೊಂಡಳು)


ಅ॥ವಿ॥ವನಜದ+ಅರಳ್=ವನಜದರಳ್ (ಷ. ತ. ) ಅರಳ್=ಹೂವು, ಎಲರ್= ಗಾಳಿ, ವನ=ನೀರು, ಕಾಡು.ಬೊಬ್ಬುಳಿ=ರಾಶಿ, ಬೊಬ್ಬುಳೀ ಗಿಡ, ಮಂಗಳ= ಮಂಗಳಗ್ರಹ, ಶುಭ, ಜೀವ+ಈಶ= ಜೀವೇಶ (ಗು, ಸಂ) ಅಂಘ್ರಿ=

ಪಾದ, ಕಿರಣ, ಬೇರು. 


ತಾತ್ಪರ್ಯ:- ಆಗ ಜಾನಕಿಯು ಪಾವನಕ್ಕೆ ಅತಿಪರಿಶುದ್ಧವಾಗಿ, ಮಂಗಳಕ್ಕಿಂತ ಅತಿಯಾದ ಮಂಗಳಕರವಾದುದು,ಯಾರ ಚರಿತ್ರೆಯ ನಾಮಗಳು ಆಗಿವೆಯೋ,ಅಂತಹ ಶ್ರೀರಾಮಚಂದ್ರನ ಪಾದಾರವಿಂದವನ್ನು ಅಗಲಿ ಬಂದ ಬಳಿಕ ಈ ಕಗ್ಗಾಡಿನಲ್ಲಿ ನನಗೇನಾದರೂ ಪುಣ್ಯಾಶ್ರಮಗಳೇ ಆಗಲಿ ಸಿದ್ಧಾಶ್ರಮಗಳೇ ಆಗಲಿ ಕಾಣಲಾದಪುವೇ! ವಿಕಸಿತವಾದ ತಾವರೆಯನ್ನು ಬಿಟ್ಟು ದುಂಬಿಗೆ ಬೊಬ್ಬುಳಿಯ ಹೂವಿನಲ್ಲಿ ಮಕರಂದವು ದೊರಕೀತೇ? ಎಲೈ ತಂದೆ!ಲಕ್ಷ್ಮಣನೆ! ನೀನು ಹೇಳು ಎಂಬುದಾಗಿ ಜಾನಕಿಯು ಅತಿಯಾಗಿ ಬೇಗುದಿಗೊಂಡಳು.


ನರನಾಥ ಕೇಳವನಿಸುತೆ ನುಡಿದಮಾತಿಗು। 

ತ್ತರವನಾಡದೆ ಮನದೊಳುರೆ ನೊಂದು ರಾಘವೇ। 

ಶ್ವರನೆಂದ ಕಷ್ಟಮಂ ಪೇಳ್ದಪೆನೊ ಮೇಣುಸಿರದಿರ್ದಪೆನೊ ನಿಷ್ಟುರದೊಳು॥ 

ತರಣಿಕುಲಸಾರ್ವಭೌಮನ ರಾಣಿಯಂ ಬನದೊ। 

ಳಿರಿಸಿ ಪೋದಪೆನೆಂತೊ ಪೋಗದಿರ್ದೊಡೆ ಸಹೋ। 

ದರನದೇನೆಂದಪನೊ ಹಾಯೆಂದು ಲಕ್ಷ್ಮಣಂ ಬೆಂದು ಬೇಗುದಿಗೊಂಡನು॥೧೩॥


ಪ್ರತಿಪದಾರ್ಥ :- ನರನಾಥ= ಭೂಪಾಲಕನಾದ ಜನಮೇಜಯರಾಯನೆ! ಕೇಳು= ಆಲಿಸು, ಊವನಿಸುತೆ= ಭೂಪುತ್ರಿಯಾದ ಸೀತೆಯು, ನುಡಿದ =ಆಡಿದ, ಮಾತಿಗೆ= ವಚನಕ್ಕೆ, ಉತ್ತರವನು= ಬದಲು ಮಾತನ್ನು, ಆಡದೆ= ನುಡಿಯದೆ,ಮನದೊಳು= ಮನಸ್ಸಿನಲ್ಲಿ, ಉರೆ= ಹೆಚ್ಚಾಗಿ, ನೊಂದು= ವ್ಯಥೆಪಟ್ಟು, ರಾಘವೇಶ್ವರಂ= ಶ್ರೀರಾಮಮೂರ್ತಿಯು, ಎಂದ= ಆಡಿದ, ಕಷ್ಟಮಂ= ಕಠಿಣೋಕ್ತಿಯಂ,ಪೇಳ್ವೆನೊ=ಹೇಳಲೊ, ಮೇಣ್= ಹಾಗಿಲ್ಲದಿದ್ದರೆ, ಉಸುರದೆ= ಮಾತಾಡದೆ, ಇದ್ದಪೆನೊ= ಇರಲೋ, ನಿಷ್ಠುರದೊಳು= ಕಠಿಣತೆಯಿಂದ, ತರಣಿ=ಸೂರ್ಯನ, ಕುಲ= ವಂಶಕ್ಕೆ, ಸಾರ್ವಭೌಮನ= ಚಕ್ರೇಶ್ವರನಾದ ಶ್ರೀರಾಮಚಂದ್ರನ, ರಾಣಿಯಂ= ಪಟ್ಟ ಮಹಿಷಿಯಾದ ಸೀತಾದೇವಿಯನ್ನು ವನದೊಳು=ಕಗ್ಗಾಡಿನಲ್ಲಿ, ಇರಿಸಿ= ಬಿಟ್ಟು, ಎಂತೊ=ಹೇಗೆ ತಾನೆ, ಪೋದಪೆನೊ= ಹೋಗುವೆನೊ, ಪೋಗದಿರ್ದೊಡೆ= ಹಿಂದಿರುಗದಿದ್ದರೆ, ಸಹೋದರನು=ಅಣ್ಣನಾದ ಶ್ರೀರಾಮಚಂದ್ರನು, ಏನೆಂದಪನೊ=ಏನು ಹೇಳುತ್ತಾನೊ,ಹಾ=ಕಷ್ಟವು ಎಂದು= ಎಂಬುದಾಗಿ, ಲಕ್ಷ್ಮಣ= ಲಕ್ಷ್ಮಣನು, ಬೆಂದು=ತಾಪಗೊಂಡು, ಬೇಗುದಿಗೊಂಡನು= ಸಂತಾಪ ಪಡುತ್ತಿದ್ದನು.


ಅ॥ವಿ॥ ನರರ+ನೃಥ=ನರನಾಥ (ಷ. ತ. ) ಅವನಿಯ+ಸುತೆ= ಅವನಿಸುತೆ (ಷ.ತ. ) ಉರೆ=ಅಧಿಕವಾದ, ಉರ=ಎದೆ, ಉರಗ=ಸರ್ಪ, ರಾಣಿ (ತ್ಭ) ರಾಜ್ಞಿ (ತ್ಸ) ಸರ್ವ ಭೂಮಿಗೂ+ಒಡೆಯ= ಸಾರ್ವಭೌಮ, ಬೆಚ್ಚನೆಯ +ಕುದಿ= ಬೇಗುದಿ -

(ವಿ. ಪೂ. ಕ )


ತಾತ್ಪರ್ಯ:- ಭೂಮೀಶನಾದ ಜನಮೇಜಯರಾಯನೆ ಆಲಿಸು, ಭೂಮಿಪುತ್ರಿಯಾದ ಜಾನಕಿಯು ಲಕ್ಷ್ಮಣನಿಗೆ ಹೇಳಿದ ಮಾತಿಗೆ, ಪ್ರತ್ಯುತ್ತರವನ್ನು ಕೊಡದೆ ಮನದಲ್ಲಿಯೇ ಬಾಧೆಪಟ್ಟು ಶ್ರೀರಾಮಚಂದ್ರನು ಆಡಿದ ಕಠೋರ ಮಾತನ್ನು ಹೇಳಲೊ 

ಅಥವಾ ಹೇಳದಿರಲೊ? ಶ್ರೀರಾಮನ ಧರ್ಮಪತ್ನಿಯಾದ ಜಾನಕಿಯನ್ನು ಈ ಗೊಂಡಾರಣ್ಯದಲ್ಲಿ ಬಿಟ್ಟು ಹೇಗೆ ತಾನೆ ಹೋಗಲಿ, ನನ್ನನ್ನು ಈ ಬಗೆಯಾದ ದುಃಖಕ್ಕೆ ಗುರಿಮಾಡಿದೆಯಾ, ಹಿಂದಿರುಗಿ ಹೋಗದಿದ್ದರೆ ಅಣ್ಣನಾದ ರಾಮಮೂರ್ತಿ ಏನೆನ್ನತ್ತಾನೆಯೋ ಹಾ! ಕಷ್ಟವು ಎಂಬುದಾಗಿ ಸೌಮಿತ್ರಿಯು ಬೆಂದು ಬೆಂಡಾಗಿ ನಿಟ್ಟುಸಿರು ಬಿಟ್ಟನು.


ಉಕ್ಕಿದುವು ಕಂಬನಿಗಳಧರೋಷ್ಠಮದಿರಿತಲ। 

ಗಿಕ್ಕಿ ತಿರುಪಿದವೊಲಾಯ್ತೊಡಲೊಳೆಡೆವರಿಯದುಸಿ। 

ರೊಕ್ಕುದುರೆ ಕಂಪಿಸಿದುದವಯವಂ ಕರಗಿತೆರ್ದೆ ಸೈರಣೆ ಸಮತೆಗೆಟ್ಟುದು॥ 

ಸಿಕ್ಕಿದುವು ಕಂಠದೊಳ್ ಮಾತುಗಳ್ ಸೆರೆಬಿಗಿದು। 

ಮಿಕ್ಕು ಮೇರುವ ಶೋಕದಿಂದೆ ಬೆಂಡಾಗಿ ಕಡು। 

ಗಕ್ಕಸದ ಕೆಲಸಮನುಸಿರಲರಿಯದವನೊಯ್ಯನವನಿಸುತೆಗಿಂತೆಂದನು॥೧೪॥


ಪ್ರತಿಪದಾರ್ಥ :- ಕಂಬನಿಗಳ್= ಅಶ್ರೈ ಧಾರೆಗಳು,ಉಕ್ಕಿದುವು=ಹೆಚ್ಚಾಗಿ ಸುರಿದವು, ಅಧರೋಷ್ಠ= ಕೆಳಗಣತುಟಿಯು, ಅದಿರಿತು= ನಡುಗಿತು, ಒಡಲು= ದೇಹವು, ಅಲಗ=ಕತ್ತಿಯನ್ನು, ಇಕ್ಕಿ= ನಾಟುವಂತೆ ಮಾಡಿ, ತಿರುವಿದವೊಲ್=ತಿರುಗಿ- 

ಸಿದ ರೀತಿಯಂತೆ, ಆಯ್ತು= ಆಯಿತು, ಉಸುರು= ಉಸಿರಾಟವು, ಎಡವರಿಯದೆ= ಬಿಡಲು ಅವಕಾಶ ಕೊಡದೆ, ಒಕ್ಕುದು=ಪ್ರವೇಶಿಸಿತು,ಅವಯವಂ= ಶರೀರಭಾಗಗಳು, ಉರೆ= ಅಧಿಕವಾಗಿ, ಕಂಪಿಸಿದುದು= ನಡುಗಿತು, ಎದೆಯ= ಹೃದಯದ, ಸೈರಣೆ= ತಾಳ್ಮೆಯು, ಕರಗಿತು= ನಶಿಸಿಹೋಯಿತು, ಸಮತೆ= ಸಮತ್ವವು ಎಂದರೆ ನಿಜಸ್ಥಿತಿಯು,ಕೆಟ್ಟುದು= ಕೆಟ್ಟಿತು, ಸೆರೆ= ನರಗಳು, ಪಿಡಿದು= ಗ್ರಹಿಸಿ, (ಹೊಂದಿ) ಕಂಠದೊಳ್= ಗಂಟಲಲ್ಲಿ,ಮಾತುಗಳ್= ನುಡಿಗಳು, ಸಿಕ್ಕಿದುವು= 

ತೊಡಕುಗೊಂಡವು(ಆಡಲು ಆಗದೇ ಹೋದವು) ಮಿಕ್ಕು= ಉಳಿದು, ಮೀರುವ= ಮೀರಿ ಬರುತ್ತಿರುವ,(ಅತಿಕ್ರಮಿಸುವ)

ಶೋಕದಿಂದ= ದುಃಖದಿಂದ, ಬೆಂಡಾಗಿ = ಸತ್ವವಿಲ್ಲದ್ದಾಗಿ,ಕಡಗಕ್ಕಸದ= ಅತಿ ಕರ್ಕಶವಾದ, ಕೆಲಸವನು= ಕಾರ್ಯವನ್ನು, ಉಸುರಲು= ಹೇಳಲು, ಅರಿಯದೆ= ತಿಳಿಯದೆ, ಅವನು=ಲಕ್ಷ್ಮಣನು, ಒಯ್ಯನೆ= ನಿಧಾನವಾಗಿ, ಅವನಿಸುತೆಗೆ= ಜಾನಕಿಗೆ,ಇಂತೆಂದನು = ಈ ರೀತಿಯಾಗಿ ಹೇಳಿದನು.  


ಅ॥ವಿ॥ ಅಧರ+ಓಷ್ಠ= ಅಧರೋಷ್ಠ (ಗು. ಸಂ.) ಕಣ್+ಪನಿ=ಕಂಬನಿ (ಆದೇಶ. ಸಂ. ) ಸಮತೆ+ಕೆಟ್ಟು = ಸಮತೆಗೆಟ್ಟು

( ಗಕಾರ. ಆದೇಶ. ಸಂ.) ಅಧರ=ತುಟಿ, ರುಧಿರ= ರಕ್ತ, ಕಕ್ಕಸ (ತ್ಭ) ಕರ್ಕಶ (ತ್ಸ) 


ತಾತ್ಪರ್ಯ:- ಆಗ ಸೌಮಿತ್ರಿಗೆ ಕಂಬನಿಗಳುಕ್ಕಿದವು, ಧಾರಾಕಾರವಾಗಿ ಸುರಿಯಲುಪಕ್ರಮಿಸಿದವು. ಅಧರೋಷ್ಠ ಅಲುಗಿತು. ದೇಹಕ್ಕೆ ಕತ್ತಿಯನ್ನು ಚುಚ್ಚಿ ತಿರುವಿದಂತಾಯ್ತು. ಉಸಿರು ತಡವಿಲ್ಲದಂತೆ ಜಾಗ್ರತೆಯಾಗಿ ಉಂಟಾಯಿತು. ಪ್ರತಿ ಅವಯವ-

ವೂ ಗಡಗಡನೆ ನಡುಗಿದವು, ಮನದ ಸೈರಣೆ ಕುಗ್ಗಿ ಹೋಯಿತು. ಮನೋವಿಕಾರವುಂಟಾಗಿ ಹೃದಯದಿಂದ ಬರುವ ಮಾತುಗಳು ಸರಾಗವಾಗಿ ಬರದೆ ಗದ್ಗದವುಂಟಾಯಿತು, ಮಹಾಶೋಕದಿಂದ ಬೆಂದು ಬೆಂಡಾಗಿ ಕಠಿಣವಾದ ಕಾರ್ಯವನ್ನು 

ತಿಳಿಸಲು ದಿಕ್ಕೇ ತೋಚದೆ ಮೆಲ್ಲಗೆ ಸೀತಾದೇವಿಯನ್ನು ಕುರಿತು ಈ ರೀತಿಯಾಗಿ ಹೇಳಿದನು. 


ದೇವಿ ನಿನಗಿನ್ನೆಗಂ ಪೇಳ್ದುದಿಲ್ಲಪವಾದ। 

ಮಾವರಿಸಿ ನಿನ್ನನೊಲ್ಲದೆ ರಘುಕುಲೋದ್ವಹಂ। 

ಸೀವರಿಸಿ ಬಿಟ್ಟು ಕಾಂತಾರಕ್ಕೆ ಕಳುಹಿ ಬಾಯೆಂದೆನಗೆ ನೇಮಿಸಿದೊಡಂ॥ 

ಆ ವಿಭುವಾಜ್ಞೆಯಂ ಮೀರಲರಿಯದೆ ನಿಮ್ಮ। 

ನೀ ವಿಪಿನಕೊಡಗೊಂಡು ಬಂದೆನಿನ್ನೊಯ್ಯೊಯ್ಯ। 

ನಾವಲ್ಲಿಗಾದೊಡಂ ಪೋಗೆಂದು ಲಕ್ಷ್ಮಣಂ ಬಾಷ್ಪಲೋಚನನಾದನು॥೧೫॥ 


ಪ್ರತಿಪದಾರ್ಥ :- ದೇವಿ=ಎಲೈ ಜಾನಕೀದೇವಿಯೇ, ನಿನಗೆ= ಲೋಕಮಾತೆಯಾದ ನಿನಗೆ, ಇನ್ನೆಗಂ= ಈ ಪರಿಯಂತವೂ, ಅಪವಾದಂ= ನಿಂದನೆಯ ಮಾತು ( ಅಪಖ್ಯಾತಿಯ ಮಾತು) ಆವರಿಸೆ= ವ್ಯಾಪಿಸುತ್ತಿರಲಾಗಿ,ಪೇಳ್ದುದಿಲ್ಲ= ಹೇಳಲಿಲ್ಲ, ರಘು= ರಘುಮಹರಾಯನ, ಕುಲ=ಗೋತ್ರದಲ್ಲಿ, ಉದ್ಭವಂ= ಜನಿಸಿದವನಾದ ಶ್ರೀರಾಮನು, ಸೀವರಿಸಿ= ಅಸಹ್ಯಪಟ್ಟು, ಬಿಟ್ಟು = ಪರಿತ್ಯಾಗಮಾಡಿ,ಕಾಂತಾರಕ್ಕೆ = ಕಾಡಿಗೆ, ಕಳುಹಿಬಾ= ಕಳುಹಿಸಿ ಬರುವವನಾಗು,ಎಂದು=ಎಂಬುದಾಗಿ, ಎನಗೆ=ನನಗೆ, ನೇಮಿಸಿದೊಡೆ= ಆಜ್ಞಾಪಿಸಲಾಗಿ,ಆ ವಿಭುವಿನ= ಆ ಮಹಾ ಪ್ರಭುವಿನ, ಆಜ್ಞೆಯಂ= ಆಣತಿಯನ್ನು, ಮೀರಲು= ಅತಿಕ್ರಮಿಸಿ ನುಡಿಯಲು, ಅರಿಯದೆ= ತಿಳಿಯದೆ, ಮೆಲ್ಲನೆ= ನಿಧಾನವಾಗಿ, ಈ ವಿಪಿನಕೆ= ಈ ಕಗ್ಗಾಡಿಗೆ, ಒಡಗೊಂಡು= ಜೊತೆಯಲ್ಲಿ ಕರೆದುಕೊಂಡು, ಬಂದೆನು= ಬಂದವನಾದೆನು, ಇನ್ನು= ಇಲ್ಲಿಂದ ಮುಂದಕ್ಕೆ,  ಒಯ್ಯೊಯ್ಯನೆ= ನಿಧಾನವಾಗಿ, ಆವಲ್ಲಿಗಾದೊಡಂ= ಯಾವಕಡೆಗಾದರೂ,ಪೋಗೆಂದು= ಹೊರಟು ಹೋಗೆಂಬುದಾಗಿ,ಲಕ್ಷ್ಮಣಂ=ಲಕ್ಷ್ಮಣನು,

ಬ್ಷ್ಪ= ಕಣ್ಣೀರಿನಿಂದ ಕೂಡಿದ, ಲೋಚನಂ= ಕಣ್ಣುಗಳುಳ್ಳವನು, ಆದನು= ಉಂಟಾದನು. 


ಅ॥ವಿ॥ ದೇವಿ=ಸ್ತ್ರೀಲಿಂಗ, ದೇವ=ಪುಲ್ಲಿಂಗ, ಆಜ್ಞಪ್ತಿ (ತ್ಸ) ಆಣತಿ (ತ್ಭ) ಬಾಷ್ಪದ+ ಲೋಚನವುಳ್ಳವನು= ಬಾಷ್ಪಲೋಚನನು (ಬಹು. ಸ. ) ಪಾದವು+ಅರವಿಂದದಂತೆ= ಪಾದಾರವಿಂದ ( ಉಪ.ಕ. ಸ. ) ಇದು+ವಿಪಿನ=ಈ ವಿಪಿನ

(ಗ. ಸ.) 


ತಾತ್ಪರ್ಯ:- ಆಗ ಲಕ್ಷ್ಮಣನು ಜಾನಕಿಯನ್ನು ಕುರಿತು, ಎಲೌ ದೇವಿಯೇ! ನಿನಗೆ ಅಪವಾದದ ಮಾತು ಕೇಳಿಬರಲು ಶ್ರೀರಾಮನು ವ್ಯಸನಾಕ್ರಾಂತನಾಗಿ, ಭೂಮಿಜೆಯಾದ ಸೀತೆಯನ್ನು ಗಂಗಾತಟದಲ್ಲಿರುವ ಅರಣ್ಯದಲ್ಲಿ ಬಿಟ್ಟು ಬರುವಂತೆ ನನಗೆ ಆಜ್ಞಾಪಿಸಿದನು. ರಘುಕುಲತಿಲಕನ ಪಾದಸೇವಕನಾದ ನಾನು ಆತನ ಅನುಜ್ಞೆಯನ್ನು ಪಾಲಿಸದಿದ್ದರೆ ಏನಾದರೂ ತೊಂದರೆ ಬಂದೀತೆಂಬ ಭಯದಿಂದ ಈ ಘೋರಾರಣ್ಯಕ್ಕೆ ಕರೆತಂದಿರುವೆನು, ಇಲ್ಲಿಂದೀಚೆಗೆ ಮೆಲ್ಲಗೆ ನಡೆದುಕೊಂಡು ಎಲ್ಲಿಗಾದರೂ ಹೋಗೆಂದು ಗದ್ಜದಸ್ವರದಿಂದ ದುಃಖಿತನಾಗಿ,ಕಣ್ಣೀರಿನೊಡನೆ ಹೇಳಿದನು. 


ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ। 

ಮುರಿದಿಳೆಗೊರಗುವಂತೆ ಲಕ್ಷ್ಮಣನ ಮಾತು ಕಿವಿ। 

ದೆರೆಗೆ ಬೀಳದ ಮುನ್ನ ಹಮ್ಮೈಸಿ ಬಿದ್ದಳಂಗನೆ ಧರೆಗೆ ನಡುನಡುಗುತೆ॥ 

ಮರೆದಳಂಗೋಪಾಂಗಮಂ ಬಳಿಕ ಸೌಮಿತ್ರಿ । 

ಮರುಗಿ ಕಣ್ದೀರ್ದಳೆದು ಪತ್ರದೊಳ್ ಕೊಡೆವಿಡಿದು। 

ಸೆರಗಿಂದೆ ಬೀಸಿ ರಾಮನ ಸೇವೆ ಸಂದುದೇ ತನಗೆಂದು ರೋದಿಸಿದನು॥೧೬॥


ಪ್ರತಿಪದಾರ್ಥ :- ಬಿರುಗಾಳಿ= ಸುಂಟರಗಾಳಿಯು, ಪೊಡೆಯಲ್ಕೆ= ಬೀಸಲಾಗಿ, ಕಂಪಿಸಿ= ಊಲುಗಾಡಿ( ನಡುಗಿ) ಫಲಿತ= ಹಣ್ಣು ಬಿಟ್ಟ, ಕದಳಿ= ಬಾಳೆಯ ಗಿಡವು, ಮುರಿದು=ತುಂಡಾಗಿ,ಇಳೆಗೆ= ಭೂಮಿಗೆ, ಒರಗುವಂತೆ= ಉರುಳಿಕೊಳ್ಳುವ ಹಾಗೆ, ಲಕ್ಷ್ಮಣನ= ಸೌಮಿತ್ರಿಯ,ಮಾತು= ವಚನವು, ಕಿವಿದೆರೆಗೆ= ಕರ್ಣಗಳಿಗೆ, ಬೀಳದಮುನ್ನು= ಬೀಳುವುದಕ್ಕೆ ಮೊದಲೇ,ಹಮ್ಮೈಸಿ= ಪ್ರಜ್ಞೆತಪ್ಪಿ,ಅಂಗನೆ= ಜಾನಕೀದೇವಿಯು,ನಡನಡುಗಿ= ಗಡಗಡನೆ ನಡುಗುತ್ತ, ಧರೆಗೆ= ಭೂಮಿಗೆ, ಬಿದ್ದಳು= ಉರುಳಿಕೊಂಡಳು, ಅಂಗೋಪಾಂಗಮಂ= ಶರೀರದ ಪ್ರತಿ ಅವಯವಗಳನ್ನು, ಮರೆದಳು= ಮರೆತುಹೋದಳು, ಬಳಿಕ = ಅನಂತರದಲ್ಲಿ, ಸೌಮಿತ್ರಿ = ಲಕ್ಷ್ಮಣನು, ತಣ್ಣೀರ್= ತಂಪಾದ ನೀರನ್ನು, ತಳಿದು= ಚಿಮುಕಿಸಿ, ಪತ್ರದೊಳ್= ಎಲೆಯಿಂದ,( ಕಮಲಪತ್ರದಿಂದ) ಕೊಡೆ= ಛತ್ರಿಯ ರೀತಿಯಾಗಿ,ಪಿಡಿದು= ಹಿಡಿದುಕೊಂಡು, ಸೆರಗಿನಿಂದ= ವಸ್ತ್ರದ ಕೊನೆಯಿಂದ,ಬೀಸೀ= ಗಾಳಿ ಹಾಕಿ, ರಾಮನ= ಶ್ರೀರಾಮನ, ಸೇವೆ= ಸೇವಾವೃತ್ತಿಯು, ತನಗೆ= ಅನುಜನಾದ ನನಗೆ, ಸಂದುದೇ= ಪ್ರಾಪ್ತವಾಯಿತೇ? (ಲಭಿಸಿತೆ) ಎಂದು= ಎಂಬುದಾಗಿ, ರೋದಿಸಿದನು= ಪ್ರಲಾಪಿಸಿದನು.


ಅ॥ವಿ॥ ಬೆಟ್ಟಿತ್ತು+ಗಾಳಿ= ಬಿರುಗಾಳಿ ( ವಿ. ಪೂ. ಕ. ) ಕಿವಿಯ+ತೆರೆ= ಕಿವಿದೆರೆ (ಷ. ತ.) ಅಂಗ+ಉಪಾಂಗ= ಅಂಗೋಪಾಂಗ (ಗು. ಸಂ. ) ಅಂಗ= ದೇಹ, ಅಂಗದೇಶ. 


ತಾತ್ಪರ್ಯ:-ಬಳಿಕ ಜಾನಕಿಯು ಆ ಕರ್ಕಶವಾದ ಮಾತು ಕಿವಿಗೆ ಬೀಳುವುದಕ್ಕೆಮೊದಲೇ ಬಿರುಗಾಳಿಯ ಹೊಡೆತಕ್ಕೆ ಫಲಭರಿತ ಬಾಳೆಯ ಮರವು ನೆಲಕ್ಕೆ ಉರುಳುವಂತೆ ಪ್ರಜ್ಞೆಯಿಲ್ಲದೆ ಗಡಗಡನೆ ಕಂಪಿಸುತ್ತ ಧರೆಗೆ ಉರುಳಿದಳು, ಶರೀರದ ಅಂಗಗಳನ್ನು ಮರೆತು ಹೋಗಲು, ಲಕ್ಷ್ಮಣನು ತಣ್ಣೀರಿನಿಂದ ಸಂತೈಸಿ, ಕಮಲಪತ್ರದಿಂದ ನೆರಳುಮಾಡಿ ಸೆರಗಿನಿಂದ ಗಾಳಿ ಬೀಸಿದನು. ಶ್ರೀರಾಮನ ಸೇವೆಯು ಈ ರೀತಿಯಾಗಿಯೂ ಸಂದಿತು, ಎಂಬುದಾಗಿ ಹೇಳುತ್ತ ಗಟ್ಟಿಯಾಗಿ ರೋದಿಸಿದನು. 


ಒಯ್ಯನರೆಗಳಿಗೆಯೊಳ್ ಕಣ್ದೆರೆದು ದೈನ್ಯದಿಂ। 

ಸುಯ್ಯೆಲರನುರೆ ಸೂಸಿ ಸೌಮಿತ್ರಿಯಂ ನೋಡಿ। 

ಕೊಯ್ಯಲೊಲ್ಲದೆ ಕೊರಳನಿಂತು ತನ್ನಂ ಬಿಡಲ್ ಮಾಡಿದಪರಾಧಮುಂಟೆ॥ 

ಕಯ್ಯಾರೆ ಖಡ್ಗಮಂ ಕೊಟ್ಟು ತನ್ನರಸಿಯಂ। 

ಹೊಯ್ಯೆಂದುಪೇಳದಡವಿಗೆ ಕಳುಹಿ ಬಾಯೆಂದ।

ನಯ್ಯಯ್ಯೊ ರಾಘವಂ ಕಾರುಣ್ಯನಿಧಿಯೆಂದಳಲ್ದಳಂಭೋಜನೇತ್ರೆ॥೧೭॥ 


ಪ್ರತಿಪದಾರ್ಥ :- ಅಂಭೋಜನೇತ್ರೆ= ತಾವರೆಕಣ್ಣಿನಂತ ಜಾನಕಿಯು, ಅರೆಗಳಿಗೆಯೊಳ್= ಅರ್ಧಗಳಿಗೆಯಲ್ಲಿ,ಒಯ್ಯನೆ= ನಿಧಾನವಾಗಿ, ಕಣ್ತೆರೆದು= ಕಣ್ಣುಗಳನ್ನ ಬಿಟ್ಟು, ದೈನ್ಯದಿಂ= ದೀನತ್ವದಿಂದ, (ನಮ್ರಭಾವದಿಂದ), ಸುಯ್ಯೆಲರನು= ನಿಟ್ಟುಸಿರನ್ನು, ಉರೆ=ಅಧಿಕವಾಗಿ, ಸೂಸೆ=ಬಿಡಲಾಗಿ, ಸೌಮಿತ್ರಿಯಂ= ಲಕ್ಷ್ಮಣನನ್ನು ,ನೋಡಿ=ಕಂಡು, ಕೊರಳಂ= ಕಂಠವನ್ನು, ಕೊಯ್ಯಲೊಲ್ಲದೆ= ಕತ್ತರಿಸಲಾರದೆ, ಇಂತು= ಈ ಪ್ರಕಾರವಾಗಿ, (ಈ ಕಾಡಿಗೆ ಬಿಡುವ ರೀತಿಯಿಂದ) ತನ್ನಂ= ನನ್ನನ್ನು, ಬಿಡಲು= ಪರಿತ್ಯಾಗಮಾಡಲು, ಮಾಡಿದ= ಗೈಯ್ದ, ಅಪರಾಧಂ= ತಪ್ಪು, ಉಂಟೇ= ಇದೆಯೆ, ಕಯ್ಯಾರೆ= ಹಸ್ತ-

ಪೂರ್ತಿಯಾಗಿ, ಖಡ್ಗಮಂ= ಕತ್ತಿಯನ್ನು, ಕೊಟ್ಟು = ಇತ್ತು, ತನ್ನ=ತನ್ನಯ, ಅರಸಿಯಂ= ರಾಣಿಯನ್ನು, ಹೊಯ್= ಹೊಡಿ, ಎಂದು=ಎಂಬುದಾಗಿ, ಪೇಳದೆ= ಹೇಳದೆ, ಅಡವಿಗೆ= ಕಾಡಿಗೆ, ಕಳುಹಿ= ಕಳುಹಿಸಿಕೊಟ್ಟು, ಬಾ=ಹಿಂದಿರುಗಿ ಬಾ, ಎಂದರೆ= ಎಂಬುದಾಗಿ ಹೇಳಿದನೆ, ಅಯ್ಯಯ್ಯೊ=ಅಕಟಕಟ, ಕಾರುಣ್ಯನಿಧಿಯು= ದಯಾನಿಧಿಯಾದ, ರಾಘವಂ= ಶ್ರೀರಾಮನು, ಎಂದನೆ= ಹೇಳಿದನೆ, ಎಂದು= ಈ ರೀತಿಯಾಗಿ ಹೇಳಿ,ಅಳಲ್ದಳು= ಪ್ರಲಾಪಿಸಿದಳು. 


ಅ॥ವಿ॥ ಅಂಭೋಜದಂತೆ+ನೇತ್ರ= ಅಂಭೋಜನೇತ್ರೆ{ ಉ. ಪೂ ಕ, (ಬ. ಸ. ) } ಕಣ್+ತೆರೆ= ಕಣ್ದೆರೆ (ದಕಾರ. ಆದೇಶ.ಸಂ) ಬೆಟ್ಟತ್ತು+ಗಾಳಿ= ಬಿರುಗಾಳಿ (ವಿ.ಪೂ.ಕ.)ಖಡ್ಗ (ತ್ಸ) ಖಡುಗ(ತ್ಭ) 


ತಾತ್ಪರ್ಯ:- ಆಗ ಜಾನಕಿಯು ಮೈದುನನ ಶೈತ್ಯೋಪಚಾರದಿಂದ ಅರ್ಧ ಗಳಿಗೆಯೊಳಗಾಗಿ ಚೇತರಿಸಿಕೊಂಡು,ಕಣ್ಣುಗಳನ್ನು ತೆರೆದು, ಅತಿಯಾದ ದೈನ್ಯದಿಂದ ಬಿಸುಸುಯ್ದು ಸೌಮಿತ್ರಿಯನ್ನು ನೋಡಿ ಎಲೈ ಸೌಮಿತ್ರೆಯೇ ರಘುಕುಲಶ್ರೇಷ್ಠನು ಎನ್ನಯ ಕೊರಳನ್ನು ಕೊಯ್ಯೆಂದು ಹೇಳುವುದಕ್ಕೆ ಬದಲಾಗಿ ಈ ಘೋರಾರಣ್ಯಕ್ಕೆ ಬಿಡುವಂತೆ ನಿನಗೆ ಅಪ್ಪಣೆಯನ್ನು ಇತ್ತನೆ? ನಾನು ಮಾಡಿದ ಅಪರಾಧವೇನು? ನಿಷ್ಕರುಣದಿಂದ ಕೈಗೆ ಖಡ್ಗವನ್ನು ಕೊಟ್ಟು ಶಿರಚ್ಛೇದನ ಮಾಡೆಂದು ಹೇಳಲಿಕ್ಕೆ ಬದಲಾಗಿ, ಈ ರೀತಿ ನಿನಗೆ ಬೆಸಸೆದನೇ? ಅಯ್ಯೊ ವೆಧಿಯೇ? ಕೃಪಾನಿಧಿಯಾದ ಶ್ರೀರಾಮಚಂದ್ರನುಈ ರೀತಿ ಆಜ್ಞಾಪಿಸಿದನೇ? ಎಂದು ಜಾನಕಿಯು ರೋದಿಸಿದಳು. 


ಬಿಟ್ಟನೆ ರಘುಶ್ರೇಷ್ಠನೆನ್ನನಕಟಕಟ ತಾ। 

ಮುಟ್ಟನೆ ನೆಗಳ್ದ ಬಾಳ್ಕೆಗೆ ಸಂಚಕಾರಮಂ। 

ಕೊಟ್ಟನೆ ಸುಮಿತ್ರಾತನುಜ ಕಟ್ಟರಣ್ಯದೊಳ್ ಕಳುಹಿ ಬಾಯೆಂದು ನಿನಗೆ॥ 

ಕೊಟ್ಟನೆ ನಿರೂಪವಂ ತಾನೆನ್ನ ಕಣ್ಬಟ್ಟೆ। 

ಗೆಟ್ಟನೆ ಮನೋವಲ್ಲಭನನಗಲ್ದಡವಿಯೊಳ್। 

ನೆಟ್ಟನೆ ಪಿಶಾಚದವೊಲೆಂತಿಹೆನೊ ಕೆಟ್ಟೆನಲಾ ಯೆಂದೊರಲ್ದಳಬಲೆ॥೧೮॥ 


ಪ್ರತಿಪದಾರ್ಥ :- ಸುಮಿತ್ರಾತನುಜ= ಸುಮಿತ್ರಾ ಪುತ್ರನಾದ ಲಕ್ಷ್ಮಣನೆ, ರಘುಶ್ರೇಷ್ಠಂ= ರಘುವಂಶದಲ್ಲಿ ಲಲಾಮನಾದ ಶ್ರೀರಾಮನು,  ಎನ್ನಂ= ಪಟ್ಟದರಸಿಯಾದ ನನ್ನನ್ನು, ಬಿಟ್ಟನೆ= ಪರಿತ್ಯಾಗಮಾಡಿದನೆ, ಅಕಟಕಟ=ಅಯ್ಯಯ್ಯೊ, ನೆಗಳ್ದ= ಪ್ರಸಿದ್ಧವಾದ,ಬಾಳ್ಕೆಗೆ= ಬದುಕುವುದಕ್ಕೆ, ತಾಂ=ನಾನು, ಮುಟ್ಟನೆ= ಪುನಹ ವರಿಸುವುದಿಲ್ಲವೆ,(ನನ್ನೊಡನೆ ಸಂಸಾರ ಮಾಡುವುದಿಲ್ಲವೆ)ಸಂಚಕಾರಮಂ= ಮುಂಗಡವನ್ನು,( ಎಂದರೆ ತ್ಯಜಿಸಲು ಒಪ್ಪಿಗೆಯನ್ನು) ಕೊಟ್ಟನೆ= ಕೊಟ್ಟವನಾದನೆ, ಸುಮಿತ್ರಾತನುಜ= ಲಕ್ಷ್ಮಣನೇ, ಕಟ್ಟರಣ್ಯದೊಳ್ = ಈ ಕಗ್ಗಾಡಿನಲ್ಲಿ, ಎನ್ನಂ= ನನ್ನನ್ನು, ಕಳುಹಿ ಬಾಯೆಂದು= ಕಳುಹಿಸಿ ಬರುವವನಾಗು ಎಂಬುದಾಗಿ, ನಿನಗೆ= ತಮ್ಮನಾದ ನಿನಗೆ, ನಿರೂಪಮಂ= ಆಜ್ಞೆಯನ್ನು, ಕೊಟ್ಟನೆ= ಕೊಟ್ಟವನಾದನೆ, ತಾಂ= ನಾನಾದರೊ, ಕಾಣ್ಬಟ್ಟೆಗೆಟ್ಟೆನೆ= ಶ್ರೀರಾಮಚಂದ್ರನನ್ನು ಕಾಣುವ ಹಾದಿಯನ್ನು ತಪ್ಪಿದೆನಲ್ಲಾ,ಮನೋವಲ್ಲಭನಂ= ಪತಿಯಾದ ಶ್ರೀರಾಮನನ್ನು, ಅಗಲ್ದು= ಬೇರೆಯಾಗಿ,ಅಡವಿಯೊಳ್=ಅರಣ್ಯದಲ್ಲಿ, ನೆಟ್ಟನೆ= ನೇರವಾಗಿ,  ಪಿಶಾಚದವೋಲ್= ದೆವ್ವದ ಹಾಗೆ, ಎಂತು= ಯಾವರೀತಿಯಾಗಿ, ಇಹೆನೋ= ಇರಬಲ್ಲೆನೋ, ಕೆಟ್ಟೆನಲ್ಲಾ= ನಷ್ಟಪಟ್ಟೆನಲ್ಲವೆ? ಎಂದು=ಎಂಬುದಾಗಿ,  ಅಬಲೆ= ಜಾನಕಿಯು  ಒರಲ್ದಳು= ರೋದಿಸಿದಳು.


ಅ॥ವಿ॥ಅಕಟ=ಅವ್ಯಯ,ದೈವ (ತ್ಸ)ದೆವ್ವ (ತ್ಭ) ಸಿತ=ಬಿಳುಪು, ಸೀತೆ=ರಾಮನ ಹೆಂಡತಿ, ಬಟ್ಟೆ +ಕೆಟ್ಟ= ಬಟ್ಟೆಗೆಟ್ಟ(ಗಕಾರ ಆದೇಶ ಸಂಧಿ) ಸುಮಿತ್ರೆಯ +ತನುಜ= ಸುಮಿತ್ರಾ ತನುಜ(ಷ. ತ. ) 


ತಾತ್ಪರ್ಯ:- ಎಲೈ ತಂದೆಯೇ! ರಘುಕುಲಶ್ರೇಷ್ಠನಾದ ಶ್ರೀರಾಮನು ನನ್ನನ್ನು ಮುಟ್ಟುವುದಿಲ್ಲವೇ? ಅಕಟಕಟ, ಪ್ರಸಿದ್ಧವಾದೀ ನನ್ನ ಬಾಳ್ವೆಗೆ ತಾನು ಇನ್ನು ಅಪೇಕ್ಷಿಸುವುದಿಲ್ಲವೇ? ನನ್ನನ್ನು ಕಾಪಾಡುವುದಕ್ಕೆ ಸಂಚಕಾರವನ್ನು ತಂದನೇ? ಎಲೈ ಸುಮಿತ್ರಾತ್ಜನೇ! ಕಟ್ಟಾರಣ್ಯದಲ್ಲಿ ಎನ್ನನ್ನು ಬಿಟ್ಟು ಬಾ ಎಂಬುದಾಗಿ ನಿನಗೆ ನಿರೂಪವನ್ನಿತ್ತನೆ? ನಾನು ಪುನಃ ನನ್ನ 

ಪ್ರಾಣಕಾಂತನನ್ನು ನೋಡದಂತೆ ಮಾಡಿ, ಈ ಅರಣ್ಯಕ್ಕೆ ಅಟ್ಟಿದನೇ? ಎನ್ನ ಪ್ರಾಣವಲ್ಲಭನನ್ನು ಬಿಟ್ಟು ನಾನು ಪಿಶಾಚಿಗಳಂತೆ ಈ ಅರಣ್ಯದಲ್ಲಿ ಹೇಗೆ ತಾನೆ ಜೀವಿಸಲಿ? ಶಿವಶಿವಾ! ಕೆಟ್ಟೆನಲ್ಲಾ ಎಂಬುದಾಗಿ ಜಾನಕಿಯು ಅಧಿಕವಾಗಿ ಒರಲಿದಳು.


ಎಂದು ಕೌಶಿಕಮುನಿಪನೊಡನೆ ಮಿಥಿಲಾಪುರಕೆ। 

ಬಂದು ಹರಧನುವ ಮುರಿದೆನ್ನಂ ಮದುವೆಯಾದ। 

ನಂದುಮೊದಲಾಗಿ ರಮಿಸಿದನೆನ್ನೊಳಾನಗಲ್ದೊಡೆ ತಾಂ ನವೆದನಲ್ಲದೆ॥ 

ಒಂದಿದನೆ ಸೌಖ್ಯಮಂ ರಾಮನೆನಗಾಗಿ ಕಪಿ। 

ವೃಂದಮಂ ನೆರಪಿ ಕಡಲಂ ಕಟ್ಟಿ ದೈತ್ಯರಂ। 

ಕೊಂದಗ್ನಿ ಮುಖದೊಳ್ ಪರೀಕ್ಷಿಸಿದನೆನ್ನೊಳಪರಾಧಮಂ ಕಾಣಿಸಿದನೇ॥೧೯॥ 


ಪ್ರತಿಪದಾರ್ಥ :- ರಾಮಂ= ಶ್ರೀರಾಮಚಂದ್ರನು, ಎಂದು= ಯಾವ ಸಮಯದಲ್ಲಿ, ಕುಶಿಕಮುನಿಪನ= ಕೌಶಿಕಮಹರ್ಷಿಯ, 

(ವಿಶ್ವಾಮಿತ್ರ ಮಹಾಮುನಿಯ) ಒಡನೆ= ಸಂಗಡ, ಮಿಥಿಲಾಪುರಕೆ= ಮಿಥಿಲಾ ನಗರಕ್ಕೆ, ಬಂದು= ಪ್ರವೇಶಿಸಿ, ಹರಧನುವ= ಶೈವಧನುವನು( ಈಶ್ವರನ ಧನುಸ್ಸಾದಪಿನಾಕವನ್ನು) ಮುರಿದು= ಎರಡು ತುಂಡು ಮಾಡಿ, ಎನ್ನಂ=ನನ್ನನ್ನು, ಮದುವೆ-

ಯಾದಂ= ವಿವಾಹವಾದನು, ಅಂದುಮೊದಲಾಗಿ= ಆ ದಿನದಿಂದ,ಎನ್ನೊಳ್= ನನ್ನೊಡನೆ, ರಮಿಸಿದನು= ಕ್ರೀಡಿಸಿದನು, ಆಂ=ನಾನು, ಅಗಲ್ದೊಡೆ= ಬೇರೆಯಾದರೆ, ತಾಂ=ಆ ಶ್ರೀರಾಮನು, ನವೆದನು= ಕೃಶವಾಗಿ ಹೋದನು, ಅಲ್ಲದೆ= ಅದು ಹೊರತಾಗಿ, ರಾಮಂ= ಶ್ರೀರಾಮನು, ಸೌಖ್ಯಮಂ= ಸುಖವನ್ನು,  ಒಂದಿದನೆ= ಪಡೆದನೆ, (ಪಡೆಯಲಿಲ್ಲವೆಂಬ ಭಾವ) ಎನಗಾಗಿ= ನನ್ನ ನಿಮಿತ್ತವಾಗಿ, ಕಪಿ=ವೃನರುಗಳ, ವೃಂದಮಂ= ಸೈನ್ಯವನ್ನು, ನೆರವಿ=ಕೂಡಿಸಿ, ಕಡಲಂ= ಸಮೈದ್ರವನ್ನು, ಕಟ್ಟಿ= ಸೇತುವೆಯನ್ನು ನಿರ್ಮಿಸಿ, ದೈತ್ಯರಂ= ದಾನವರನ್ನು, ಕೊಂದು= ಸಂಹಾರಮಾಡಿ, ಅಗ್ನಿಮುಖದೊಳ್= ಅಗ್ನಿ ಪ್ರವೇಶವನ್ನು ಮಾಡುವದರ ಮುಖಾಂತರವಾಗಿ, ಎನ್ನಂ=ನನ್ನನ್ನು,  ಪರೀಕ್ಷಿಸಿದಂ= ಪರೀಕ್ಷೆ ಮಾಡಿದನು. ಎನ್ನೊಳ್= ನನ್ನಲ್ಲಿ, ಅಪರಾಧಮಂ= ತಪ್ಪನ್ನು, ಕಾಣಿಸಿದನೆ= ತೋರಿಸಿಕೊಟ್ಟನೆ, (ಇಲ್ಲ. ಆವ ಕಳಂಕವೂ ತೋರಿಬರಲಿಲ್ಲ) 


ಅ॥ವಿ॥ ಕುಶಿಕನವಂಶಜ= ಕೌಶಿಕ, ಹರನ+ಧನು= ಹರಧನು(ಷ. ತ.) ಮಿಥೆಳೆಯೆಂಬ+ಪುರ= ಮಿಥಿಳಾಪುರ(ಸಂ.ಪೂ.ಕ.)

ಅಂದು=ಆಗ. ನಂದು=ಆರಿಹೋಗು, ಮುಖ= ಮೋರೆ, ಮಖ=ಯಜ್ಞ. 


ತಾತ್ಪರ್ಯ:-ಮತ್ತೆ ಜಾನಕಿಯು ಸೌಮಿತ್ರಿಯನ್ನು ಕುರಿತು- ಮೊದಲು ಶ್ರೀರಾಮಚಂದ್ರನು ಕೌಶಿಕಮುನೀಂದ್ರನ ಸಂಗಡ ಮಿಥಿಲಾಪುರಕ್ಕೆ ಬಂದು ಹರಧನೈವನ್ನು ಮುರಿದು ನನ್ನನ್ನು ಪಾಣಿಗ್ರಹಣಮಾಡಿಕೊಂಡು, ಸುಖವಾಗಿರುತ್ತಿರುವಾಗ್ಯೆ ನಾನು ಎನ್ನ ಪ್ರಾಣವಲ್ಲಭನನ್ನು ಬಿಟ್ಟು ಅಗಲಿರಲು, ನನ್ನನ್ನು ಕಾಣದೆ ಅತಿಯಾಗಿ ಕುಂದಿ, ಕುದಿದು ಬೆಂಡಾಗಿ, ಅತಿಯಾಗಿ ಪರಿದಾಡಿ, ನನ್ನನ್ನು ಹುಡುಕುವುದಕ್ಕಾಗಿ ಆ ವನಪ್ರದೇಶದಲ್ಲಿ ಕಪಿಗಳ ಸೇನೆಯನ್ನು ಸೇರಿಸಿಕೊಂಡು, ತಾನಾಗಿ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ ನನ್ನನ್ನು ಹುಡುಕಿ, ದುಷ್ಟ ರಕ್ಕಸರನ್ನು ಸಂಹರಿಸಿ, ಅಗ್ನಿ ಮುಖದ್ವಾರಾ ನನ್ನ ಪತಿವ್ರತಾಧರ್ಮವನ್ನು ಪರೀಕ್ಷಿಸಿದನು. ಆಗ್ಗೆ ಇಲ್ಲದ ಅನುಮಾನವು ಈಗ ನಿಮ್ಮ ರಘುಶ್ರೇಷ್ಠರಿಗೆ ಬಂದೊದಗಿತೆ, ಹಾ ಎಂದು ಕಲ್ಮರಗಳು ಕರಗುವಂತೆ ಪ್ರಲಾಪಿಸಿದಳು. 


ಕಲ್ಮುಳ್ಳಿಡಿದಕಾಡೊಳಂದೆನ್ನನುಪಚರಿಸಿ। 

ಪಲ್ಮೊರೆದು ಗರ್ಜಿಪ ವಿರಾಧನಂ ಮರ್ದಿಸಿದೆ। 

ಬಲ್ಮೆಯಿಂ ನಾಂ ಕಳುಹಿದೊಡೆ ಜನಸ್ಥಾನದಿಂ ಹೋದೆ ರಾಘವನ ಬಳಿಗೆ॥ 

ನಲ್ಮೆಯಿಂ ಮರೆದಪೆನೆ ಸೌಮಿತ್ರಿ ನೀನೆಲ್ಲ। 

ರೊಲ್ಮೈದುನನೆ ತನಗೆ ಕಾನನದೊಳೆನ್ನ ನಿಲಿ।

ಸಲ್ಮನಂ ಬಂದಪುದೆ ತಂದೆ ನಿನಗೆಂದು ಕಂಬನಿಮಿಡಿದಳಂಬುಜಾಕ್ಷಿ॥೨೦॥ 


ಪ್ರತಿಪದಾರ್ಥ :- ರಾಘವಂ= ಶ್ರೀರಾಮನು, ಅಂದು= ವನವಾಸ ಕಾಲದಲ್ಲಿ, ಕಲ್ಲು= ಕಲ್ಲುಗಳಿಂದಲೂ,(ನುರುಜು ಕಲ್ಲುಗಳಿಂದಲೂ) ಮುಳ್ಳು= ಮುಳ್ಳುಗಳಿಂದಲೂ, ಇಡಿದ= ತುಂಬಿದ್ದ, ಕಾಡೊಳು= ಕಾನನದಲ್ಲಿ, ಎನ್ನಂ= ನನ್ನನ್ನು,  ಉಪಚರಿಸಿ=ಉಪಚಾರಮಾಡಿ, ಪಲ್ಮೊರೆದು= ಹಲ್ಲುಗಳನ್ನು ಕಡಿದು,ಗರ್ಜಿಪ= ಅಬ್ಬರಿಸುವ, ವಿರಾಧನಂ= ವಿರಾಧನೆಂಬ ದಾನವನನ್ನು.ಮರ್ದಿಸಿದೆ= ಸಂಹಾರಮಾಡಿದೆ, ನಾಂ=ನಾನಾದರೊ, ಬಲ್ಮೆಯಿಂ= ಬಲವಂತದಿಂದ,  ನಾಂ=ನಾನು, ಕಳುಹಿದೊಡೆ= ಶ್ರೀರಾಮನ ಬಳಿಗೆ ಕಳುಹಿಸಲಾಗಿ, ಜನಸ್ಥಾನದಿಂ = ಪಂಚವಟಿಯಿಂದ, ರಾಘವನ= ಶ್ರೀರಾಮನ, ಬಳಿಗೆ= ಹತ್ತಿರಕ್ಕೆ, ಪೋದೆ= ಹೊರಟುಹೋದೆ, ಸೌಮಿತ್ರಿ=ಲಕ್ಷ್ಮಣನೆ, ನಲ್ಮೆಯಂ= ಪ್ರೀತಿಯನ್ನು, ಮರೆದಪೆನೆ= ಮರೆವೆನೆ, ನೀಂ= ನೀನು,ಎನಗೆ= ನನಗೆ, ಎಲ್ಲರೊಲ್= ಭರತ ಶತ್ರುಘ್ನರಂತೆ, ಮೈದುನನೆ= ಮೈದುನನಾಗಿರುತ್ತೀಯ(ಎಂದರೆ ಅಲ್ಲ) ತಂದೆ= ಎನ್ನ ಜನಕನಿಗೆ ಸಮನಾದವನೆ! ಕಾನನದೊಳು= ಕಾಡಿನಲ್ಲಿ,ನಿಲಿಸಲು= ನಿಲ್ಲುವಂತೆ ಮಾಡಲು, ಮನಂ= ಮನಸ್ಸು,  ಬಂದಪುದೇ= ಬರುವುದೇ, (ಬಂದೀತೇ) ಎಂದು=ಎಂಬುದಾಗಿ, ಅಂಬುಜಾಕ್ಷಿ= ಅರವಿಂದಾಕ್ಷಿಯಾದ ಜಾನಕಿಯು, ಕಂಬನಿ= ಕಣ್ಣೀರನ್ನು, ಮಿಡಿದಳು= ಸುರಿಸಿದಳು. 


ಅ॥ವಿ॥ ಪಲ್ಲಂ+ಮೊರೆದ= ಪಲ್ಮೊರೆದ (ಕ್ರಿ. ಸ.) ಅಂಬುಜದಂತೆ+ ಅಕ್ಷಿಯುಳ್ಳವಳು=ಅಂಬುಜಾಕ್ಷಿ (ಉ. ಪೂ. ಬ. ಸ.) ಬಲ್ಮೆ= ಬಲಾತ್ಕಾರ, ನಲ್ಮೆ=ಪ್ರೀತಿ, ಅಂಬು=ನೀರು, ಕಂಬು= ಶಂಖ. 


ತಾತ್ಪರ್ಯ:- ನಾವುಗಳು ಹದಿನಾಲ್ಕು ವರ್ಷ ಅರಣ್ಯವಾಸ ಮಾಡುತ್ತ ಕಗ್ಗಾಡಿನಲ್ಲಿ ಕಲ್ಲು ಮುಳ್ಳುಗಳ ದೆಸೆಯಿಂದ ಕಷ್ಟಪಡುವ ಕಾಲದಲ್ಲಿ, ನನ್ನನ್ನು ಬಹುವಾಗಿ ಉಪಚರಿಸಿ, ನನ್ನ ಕಷ್ಟವನ್ನು ಹೋಗಲಾಡಿಸಿದವನಾದೆ. ತನ್ನ ಕೋರೆ ಹಲ್ಲುಗಳನ್ನು ಕಟಕಟನೆ ಕಡಿದು ಮೇಲೆ ನುಗ್ಗಿ ಬರುವ ವಿರಾಧನೆಂಬ ರಕ್ಕಸನನ್ನು, ನಾಶಮಾಡಿದೆ,ನೃನು ನಿರ್ಬಂಧಪಡಿಸಿ ಶ್ರೀರಾಮನ ಬಳಿಗೆ ಹೋಗೆನಲು ನನ್ನ ಮಾತು ಮೀರದೆ ಪಂಚವಟಿಯಿಂದ ಹೋದೆ. ನೀನು ಇತರ ಮತದುನರಂತೆ ಸಾಮಾನ್ಯ ಮೈದುನನೇ! ತಂದೆ ಎಲೈ ಲಕ್ಷ್ಮಣಾ ನೀನು ನಿರಪರಾಧಿಯಾದ ನನ್ನನ್ನು ನಿಷ್ಕರುಣದಿಂದ ಈ ಕಾಡಿನಲ್ಲಿ ಬಿಡಲು ಮನಸ್ಸು ಒಪ್ಪಿತೇ ಎಂದು ವಿಶಾಲಾಕ್ಷಿಯಾದ ಜಾನಕಿಯು ಕಂಬನಿದುಂಬಿ ರೋದಿಸಿದಳು.  


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ