ಜೈಮಿನಿ ಭಾರತ 31 - ದೊಡ್ಡಬೆಲೆ ನಾರಾಯಣಶಾಸ್ತ್ರೀ
ಸೂಚನೆ:- ಕೃತ ವಿವಾಹದೊಳಗುಪಹತಿಯ ಕೃತಕಂಗಳಿಂ ।
ಸುತನೊಡನೆ ಮೃತನಾದ ಮಂತ್ರಿಯಂ ಧರಣಿಗಧಿ।
ಪತಿಯಾಗಿ ನೆಗಪಿದಂ ಚಂದ್ರಹಾಸಂ ಚಂಡಿಕಾದೇವಿಯಂ ಮೆಚ್ಚಿಸಿ॥
ಪ್ರತಿಪದಾರ್ಥ :- ಚಂದ್ರಹಾಸಂ= ಚಂದ್ರಹಾಸನು, ಧರಣಿಗೆ= ಭೂಮಂಡಲಕ್ಕೆ, ಅಧಿಪತಿಯಾಗಿ= ರಾಜನಾಗಿ, ಚಂಡಿಕಾ-
ದೇವಿಯಂ= ಚಂಡಿಕೇಶ್ವರಿಯನ್ನು, ಮೆಚ್ಚಿಸಿ= ಮುಚ್ಚುವಂತೆ ಮಾಡಿ, ಕೃತ= ನೆರವೇರಿದ, ವಿವಾಹದೊಳು= ಲಗ್ನದಲ್ಲಿ, ಉಪಹತಿಯ= ಕೊಂದುಹಾಕುವುದರ, ಕೃತಕಂಗಳಿಂ= ಕಾರ್ಯಗಳಿಂದ, ಸುತನೊಡನೆ= ಮಗನೊಡನೆ, ಮೃತನಾದ= ಸತ್ತುಬಿದ್ದಿದ್ದ, ಮಂತ್ರಿಯಂ= ಅಮಾತ್ಯನನ್ನು, ನೆನಪಿದಂ= ಪುನಃ ಜೀವಿಸುವಂತೆ ಮಾಡಿದನು.
ತಾತ್ಪರ್ಯ:- ಮದುವೆಯಾದ ಚಂದ್ರಹಾಸನನ್ನು ಕೊಲ್ಲಲು ಮಾಡಿದ ಕಪಟ ಕೃತ್ಯದಿಂದ ತಾನೇ ಮಗನೊಡನೆ ಮೃತನಾದ ದುಷ್ಟಬುದ್ಧಿಯನ್ನು ದೊರೆಯಾದ ಚಂದ್ರಹಾಸನು ಚಂಡಿಕಾದೇವಿಯನ್ನು ಮೆಚ್ಚಿಸಿ, ಬದುಕಿಸಿದನು.
ವಾಸವಾತ್ಮಜ ಕೇಳಲಂಕಾರದಿಂ ಚಂದ್ರ।
ಹಾಸನಂ ಮದವಳಿಗನಂ ಮಾಡುತಿರ್ದರ್ ಸು।
ವಾಸಿನಿಯರುತ್ಸವದೊಳಿಂತೆಂದು ಮದನನಂತಃಪುರದೊಳೆಚ್ಚರಿಸಲು॥
ಪ್ರಾಸಾದದಗ್ರದೊಳ್ ತಪಿಸುತಿಹ ವಿಷಯೆಗೆ ವಿ।
ಲಾಸಿನಿಯರೈತಂದು ನುಡಿದರಂಬುಜ ವನಕೆ।
ನೇಸರುದಯಿಸುವ ಕಾಲದ ಮುಂದೆ ತಂಪಿಡಿದುಬೀಸುವೆಳಗಾಳಿಯಂತೆ॥೧॥
ಪ್ರತಿಪದಾರ್ಥ :-
ವಾಸವಾತ್ಮಜ= ಇಂದ್ರಕುವರನಾದ ಫಲುಗುಣನೆ, ಕೇಳು= ಲಾಲಿಸು, ಸುವಾಸಿನಿಯರು= ಸುಮಂಗಲಿಯರು, ಚಂದ್ರಹಾಸನಂ = ಚಂದ್ರಹಾಸನನ್ನು, ಉತ್ಸವದೊಳು= ಸಂಭ್ರಮದಲ್ಲಿ, ಮದವಳಿಗನಂ = ಮದುವೆಯ ಗಂಡನ್ನು, ಮಾಡುತಿರ್ದರ್=ಅಲಂಕರಿಸುತ್ತಿದ್ದರು,ಅಂತಃಪುರದೊಳು= ಸ್ತ್ರೀಯರಿದ್ದೆಡೆ, ಇಂತೆಂದು= ಈ ತೆರನಾಗಿ, ಮದನನು= ದುಷ್ಟಬುದ್ಧಿಯ ಕುವರನು, ಎಚ್ಚರಿಸಲು= ಹೇಳಿದ ಕಾರಣ, ವಿಲಾಸಿನಿಯರು= ಅಲ್ಲಿ ನೆರೆದಿದ್ದ ಹೆಂಗಸರು, ಐತಂದು=ಬಂದು, ನೇಸನೇಸರು=ರವಿಯು, ಉದಯಿಸುವ= ಮೂಡುವ, ಕಾಲದ= ವೇಳೆಯ, ಮುಂದೆ= ಮೊದಲೇ, ಅಂಬುಜವನಕೆ= ತಾವರೆಕೊಳದ ವನಕ್ಕೆ, ತಂಪಿಡಿದು= ತಣ್ಣನಾಗಿ, ಬೀಸುವ= ಬೀಸುತ್ತಲಿರುವ, ಎಳೆಗಾಳಿಯಂತೆ= ತಂಗಾಳಿಯ ಹಾಗೆ, ಪ್ರಾಸಾದದ= ಮಹಡಿಯ, ಅಗ್ರದೊಳ್= ತುದಿಯಲ್ಲಿ, ತವಿಸುತಿಹ= ಕಾಮಬಾಧೆಯನ್ನನುಭವಿಸುತ್ತಿ-
ರುವ, ವಿಷಯೆಗೆ= ವಿಷಯೆಗೆ, ನುಡಿದರು= ತಿಳಿಸಿದರು.
ತಾತ್ಪರ್ಯ:- ನಾರದಮುನಿಯು ಅರ್ಜುನನನ್ನು ಕುರಿತು ಇಂತೆಂದನು. ಕೇಳೈ ಫಲುಗುಣನೆ, ದುಷ್ಟಬುದ್ಧಿಯ ಕುವರನಾದ ಮದನನು ವಿಷಯೆಯನ್ನು ಇಂದುಹಾಸನಿಗೆ ಕೊಟ್ಟು ಮದುವೆಮಾಡಬೇಕೆಂದು ನಿಶ್ಚೈಸಿರತಕ್ಕ ಸುದ್ಧಿಯನ್ನು ರಾಣಿವಾ-
ಸದ, ಸ್ತ್ರೀಯರೊಂದಿಗೆ ಹೇಳಿದ ಕೂಡಲೇ ಅವರೆಲ್ಲಾ ಚಂದ್ರಹಾಸನನ್ನು ಮದುವಣಿಗನನ್ನಾಗಿ ಮಾಡಿದರು. ಅಲ್ಲಿದ್ದ ನಾರಿಯರಲ್ಲಿ ಕೆಲವರು ತಡಮಾಡದೆ ಉಪ್ಪರಿಗೆಯ ಮೇಲಂತಸ್ತಿನಲ್ಲಿ, ವಿರಹವೇದನೆಯಿಂದ ತಪಿಸುತ್ತಲಿರುವ ವಿಷಯೆ-
ಯ ಬಳಿಗೆ ಹೋಗಿ ಈ ಸುದ್ದಿಯನ್ನು ಹೇಳಿದರು, ವಿಷಯಾಸಕ್ತಳಾದ ವಿಷಯೆಯು ಇವರ ಮಾತನ್ನು ಕೇಳಿದ ಕೂಡಲೇ ಕಮಲಗಳ ವನಕ್ಕೆ ಸೂರ್ಯಕಾಂತಿಯು ಬಿದ್ದಂತೆ ಅತ್ಯಾನಂದದಿಂದ ಕೂಡಿದವಳಾದಳು.
ಸೊಗಯಿಸುವ ಪಚ್ಚಗಪ್ಪುರದ ಪುಡಿಯಂ ಮೈಗೆ।
ತಿಗುರಿದೊಡೆ ಬಾವನ್ನದೊಳ್ಗೆಸರನೆಸೆವ ಕುಚ।
ಯುಗದೆಡೆಗೆ ಮೆತ್ತಿದೊಡೆ ಕಣ್ಣೆವೆಗೆ ಪನ್ನೀರನೊಡನೊಡನೆ ತೊಡೆದೊಡದಕೆ॥
ಮಿಗೆ ಪೆಚ್ಚಿತುರಿಯೆಂದು ಮತ್ತೆ ಸಿಡಿಮಿಡಿಗೊಂಡು।
ಮುಗುಳಂಬನುರುಬೆಗಾರದೆ ಪೊರಳುತಿಹ ಮಂತ್ರಿ।
ಮಗಳೆಡೆಗೆ ಪರಿತಂದು ನುಡಿದೊಳೊಸಗೆಯನಾಪ್ತ ಸಖಿಯೊರ್ವಳವಳಕೂಡೆ॥೨॥
ಪ್ರತಿಪದಾರ್ಥ :- ಒರ್ವಳು= ಒಬ್ಬಳು, ಸಖಿಯು=ಗೆಳತಿಯು, ಮೈಗೆ= ವಿಷಯೆ ದೇಹಕ್ಕೆ, ಸೊಗಯಿಸುವ = ಉತ್ತಮವಾದ,
ಪಚ್ಚಕರ್ಪೂರದ ಪುಡಿಯಂ= ಪಚ್ಚಕರ್ಪೂರದ ಹುಡಿಯನ್ನು, ತಿಗುರಿದೊಡೆ= ಉಜ್ಜಿದರೆ, ಎಸೆವ= ಹೊಳೆವ, ಕುಚಯುಗ-
ದೆಡೆಗೆ = ಸ್ತನಯುಗ್ಮಗಳಮೇಲೆ, ಬಾವನ್ನದ= ಶ್ರೀಗಂಧದ,ಒಳ್ಗೆಸರನು= ನೀರಾಗಿರುವ ಗಂಧವನ್ನು, ಮೆತ್ತಿದೊಡೆ= ಬಳಿದರೆ,
ಒಡನೊಡನೆ= ಬಾರಿಬಾರಿಗೂ, ಪನ್ನೀರನು=ಗುಲಾಬಿ ಹೂವಿನ ನೀರನ್ನು, ಕಣ್ಣೆವೆಗೆ= ಕಣ್ಣು ರೆಪ್ಪೆಗೆ, ತೊಡೆದೊಡೆ=ಹಚ್ಚಿದ-
ರೆ, ಅದಕೆ= ಹಾಗೆ ಬಳಿದ ಕಾರಣ, ಉರಿ= ತಾಪವು, ಮಿಗೆ= ಹೆಚ್ಚಾಗಿ, ಪೆಚ್ಚಿತು= ಬಲವಾಯಿತು, ಎಂದು= ಎಂಬುದಾಗಿ, ಮತ್ತೆ=ತಿರುಗಿ, ಸಿಡಿಮಿಡಿಗೊಂಡು= ಕೋಪಗೊಂಡು, ಮುಗುಳಂಬನ= ಮನ್ಮಥನ, ಉರುಬೆಗೆ= ಹೊಯ್ಲಿಗೆ, ಆರದೆ= ಸಹಿಸುವುದಕ್ಕೆ ಆಗದೆ, ಪೊರಳುತಿಹ = ಹೊರಳಾಡುತ್ತಿರುವ, ಮಂತ್ರಿಮಗಳೆಡೆಗೆ= ವಿಷಯೆಯ ಸಮೀಪಕ್ಕೆ, ಪರಿತಂದು= ಜಾಗ್ರತೆಯಾಗಿ ಬಂದು, ಅವಳಕೂಡೆ= ಆ ವಿಷಯೆಯೊಂದಿಗೆ, ಒಸಗೆಯನು= ಶುಭ ವಾರ್ತೆಯನ್ನು, ನುಡಿದಳು= ತಿಳಿಸಿದಳು.
ತಾತ್ಪರ್ಯ:- ಮೈಯುರಿಯೆಂದು ನರಳುವ ವಿಷಯೆಯ ಮೈಗೆ ಪಚ್ಚಕರ್ಪೂರದ ಪುಡಿಯನ್ನು ತೀಡಿದರೆ, ಚಂದನದ ಗಂಧವನ್ನು ಮೊಲೆಗಳ ಮೇಲೆ ಹಚ್ಚಿದರೆ, ಕಣ್ಣೆವೆಗೆ ಪನ್ನೀರನ್ನು ಹಚ್ಚಿದರೆ, ಉರಿಯು ಹೆಚ್ಚಿಯಿತೆಂದು ಸಿಡಿಮಿಡಿಗೊಳ್ಳುತ್ತಾ ಮದನತಾಪವನ್ನು ಸಹಿಸದೆ ಹೊರಳುತ್ತಿದ್ದ ವಿಷಯೆಯ ಬಳಿಗೆ ಆಪ್ತಸಖಿಯೊಬ್ಬಳು ಬಂದು ಶುಭಸಮಾಚಾರವನ್ನು ಹೇಳಿದಳು.
ಚಿಂತೆಯಂ ಬಿಡು ತರಳೆ ಕೈಸಾರ್ದುದೀಗ ನಿ।
ನ್ನಂತರಂಗದ ಬಯಕೆ ಶಶಿಹಾಸನೆಂಬವಂ।
ಕಂತು ಸಮನಾಗಿಹಂ ನೀನದೇಂ ಪುಣ್ಯಮಂ ಮಾಡಿದೆಯೊ ಮುನ್ನಿನೊಳು॥
ಕುಂತಳೇಂದ್ರನ ಕುವರಿ ನಗುತ ಸರಸದೊಳಾಡಿ।
ದಂತಾಯ್ತು ತಂದೆ ಕಳುಹಿದ ಲೇಖನವನೋದಿ।
ಸಂತಸದೊಳಿಂದು ಮದನಂ ನಿನ್ನನಾತಂಗೆ ಕುಡುವೆನೆಂದವಳೊರೆದಳು॥೩॥
ಪ್ರತಿಪದಾರ್ಥ :- ತರಳೆ= ಎಲೈ ತರುಣಿಯೆ, ಚಿಂತೆಯಂ= ವ್ಯಥೆಯನ್ನು, ಬಿಡು= ಬಿಟ್ಟು ಬಿಡು, ನಿನ್ನ= ನಿನ್ನದಾದ, ಅಂತರಂಗದ= ಒಳಗೇ ನೆಲಸಿದ್ದ, ಬಯಕೆ= ಇಷ್ಟಾರ್ಥ, ಈಗ= ಈ ಸಮಯದಲ್ಲಿ, ಕೈಸಾರ್ದುದು= ನೆರವೇರುವುದು, ಮುನ್ನ= ಪೂರ್ವಜನ್ಮದಲ್ಲಿ, ಇಳೆಯೊಳು= ಪ್ರಪಂಚದಲ್ಲಿ, ನೀಂ= ನೀನು, ಅದೇಂಪುಣ್ಯಮಂ= ಇನ್ನೆಂಥ ಮೇಲ್ಮೆಯನ್ನು, ಮಾಡಿದೆಯೊ= ಎಸಗಿರುವೆಯೊ, ನಗುತ= ಮುಗುಳು ನಗುತ್ತಾ, ಸರಸದೊಳು= ಹಾಸ್ಯವಾಗಿ, ಕುಂತಳೇಂದ್ರನ ಕುವರಿ= ಕುಂತಳಾಧೀಶನ ಮಗಳಾದ, ಚಂಪಕಮಾಲಿನಿ = ಚಂಪಕಮಾಲಿನಿಯೆಂಬ ನಿನ್ನ ಸಖಿಯು, ಆಡಿದಂತೆ= ನುಡಿದ ಹಾಗೆಯೆ, ಆಯ್ತು= ಉಂಟಾಯಿತು, ಇಂದು= ಈ ಹೊತ್ತು, ಮದನಂ= ಮದನನಾದರೊ, ತಂದೆ= ತಂದೆಯಾದ ದುಷ್ಟಬುದ್ಧಿಯು, ಕಳುಹಿದ= ಕಳುಹಿಸಿದಂಥ, ಲೇಖನವ= ಕಾಗದವನ್ನು, ನೋಡಿ= ನೋಡಿಕೊಂಡು, ಆತಂಗೆ= ಆ ಚಂದ್ರಹಾಸಂಗೆ, ನಿನ್ನನು= ನಿನ್ನನ್ನು, ಸಂತಸದೊಳು= ಪ್ರೇಮದಿಂದ, ಕೊಡುವನು= ಮದುವೆಮಾಡಿಕೊಡುವನು, ಎಂದು= ಎಂಬುದಾಗಿ, ಅವಳು= ಆ ಸಖಿಯು, ಒರೆದಳು=ನುಡಿದಳು.
ತಾತ್ಪರ್ಯ:- ಅಮ್ಮಾ, ವಿಷಯೆ! ನೀನೇಕೆ ಯೋಚಿಸುವಿ, ನಿನ್ನ ಮನೋಭಿಪ್ರಾಯವು ನೆರವೇರಿತಾದ್ದರಿಂದ, ಇನ್ನು ಚಿಂತಿಸಬೇಡ, ಪೂರ್ವದಲ್ಲಿ ನೀನು ಮಾಡಿದ ಪುಣ್ಯವು ಅಸಾಧಾರಣವಾದ್ದರಿಂದಲೇ ನಿನಗೆ ಚಂದ್ರನಂತಿರುವ ಚಂದ್ರಹಾಸನೊಂದಿಗೆ ಪಾಣಿಗ್ರಹಣ ಮಹೋತ್ಸವವು ನಡೆಯುವುದು. ನಿನ್ನ ತಂದೆಯಾದ ದುಷ್ಟಬುದ್ಧಿಯು ನಿನ್ನಣ್ಣನಿಗೆ ಕಾಗದವನ್ನು ಬರೆದಿದ್ದಾನೆ. ಮದನನೂ ಕೂಡ ಅತ್ಯಾನಂದದಿಂದ ನಿನ್ನನ್ನು ಚಂದ್ರಹಾಸನಿಗೆ ಕೊಟ್ಟು ಮದುವೆ ಮಾಡಲು ನಿಷ್ಕರ್ಷಿಸಿರುವನೆಂದು ನುಡಿದಳು.
ರಜ್ಜುಬಂಧನವನುಗಿದ ಮೃಗದಂತೆ ತಾಂ ನೆನೆದ।
ಕಜ್ಜಮೊಡಗೂಡಲ್ಕೆ ಮೊಗಮರಲ್ದುದು ಬಳಿಕ।
ಲಜ್ಜೆ ಮೊಳೆದೋರಿದುದು ತಲೆವಾಗಿ ನೆಲನನುಂಗುಟದಿಂದೆ ಬರೆಯುತಿರಲು॥
ಉಜ್ಜುಗವಿದೇನಬಲೆ ಸಾಕು ನಡೆ ಮಂಗಳ ಸು।
ಮಜ್ಜನದ ಮನೆಗೆಂದು ಕಮಲಾಯತಾಕ್ಷಿಯಂ।
ತಜ್ಜನನಿ ಕಳುಹಿದ ನಿತಂಬಿನಿಯರುಪ್ಪರಿಗೆದುದಿಯಿಂದಿಳುಹಿ ತಂದರು॥೪॥
ಪ್ರತಿಪದಾರ್ಥ :-:- ತಾಂ= ತಾನು, ನೆನೆದ= ಯೋಚಿಸಿದ, ಕಜ್ಜಂ= ಕಾರ್ಯವು, ಒಡಗೂಡಲ್ಕೆ= ನೆರವೇರಿದ ಕಾರಣ, ರಜ್ಜುಬಂಧನವನು= ಕಟ್ಟಿದ್ದ ಹಗ್ಗವನ್ನು, ಉಗಿದ= ಬಿಡಿಸಿದ, ಮೃಗದಂತೆ= ಪ್ರಾಣಿಯಂತೆ, ಮೊಗಂ= ಮುಖವು, ಅರಳ್ದುದು= ಅರಳಿತು, ಲಜ್ಜೆ= ನಾಚಿಕೆಯು, ಬಳಿಕ = ಅನಂತರ, ಮೊಳೆದೋರಿದುದು= ಆರಂಭವಾಯಿತು, ತಲೆವಾಗಿ= ತಲೆಯನ್ನು ಬಗ್ಗಿಸಿ, ಉಅಂಗುಟದಿಂದ= ಹೆಬ್ಬೆರಳಿನಿಂದ,ನೆಲನನು= ಭೂಮಿಯನ್ನು, ಬರವುತಿರಲು= ಗೆರೆಹಾಕುತ್ತಿದ್ದ ಕಾರಣ, ಅಬಲೆ= ಎಲೈ ಬಾಲೆಯೇ, ಇದೇನು ಉಜ್ಜುಗಂ= ಇದೆಂತಹ ಕೆಲಸ, ಸಾಕು= ನಿಲ್ಲಿಸು, ಮಂಗಳ= ಕಲ್ಯಾಣಪ್ರದ-
ವಾದ ಸುಮಜ್ಜನದ, ಮನೆಗೆ= ನೀರುಮನೆಗೆ, ನಡೆ= ಹೊರಡು, ಎಂದು=ಎಂಬತೆರನಾಗಿ, ತಜ್ಜನನಿ= ಅವರ ತಾಯಿಯು, ಕಳುಹಿದ= ಕಳುಹಿಸಿದಂಥ, ನಿತಂಬಿನಿಯರು= ಸ್ತ್ರೀಯರು,ಕಮಲಾಯತಾಕ್ಷಿಯಂ = ತಾವರೆಯಂತೆ ವಿಶಾಲವಾದ ಕಣ್ಣುಗಳುಳ್ಳ ವಿಷಯೆಯನ್ನು, ಉಪ್ಪರಿಗೆಯ = ಮಹಡಿಯ, ತುದಿಯಿಂದ = ಕಡೆಯಭಾಗದಿಂದ, ಇಳುಹಿ= ಕೆಳಕ್ಕಿಳಿಸಿ, ತಂದರು= ಸ್ನಾನದ ಮನೆಗೆ ಕರೆತಂದರು.
ತಾತ್ಪರ್ಯ:- ಈ ಮಾತನ್ನು ಕೇಳಿದ ವಿಷಯೆ, ಬಂಧನದಿಂದ ಬಿಡಿಸಿಕೊಂಡ ಮೃಗದಂತೆ ಸಂತೋಷಚಿತ್ತಳಾದಳು.ಮುಖವು ವಿಕಸಿತವಾಯಿತು. ನಾಚಿಕೆಯು ತಲೆದೋರಿತು. ನೆಲವನ್ನು ಹೆಬ್ಬೆಟ್ಟಿನಿಂದ ಕೆರೆಯುತ್ತಿದ್ದಳು.ಆಗ ಅವರ ತಾಯಿಯು ಕಳುಹಿದ ಸೇವಕ ಜನರು ಬಂದು ವಿಷಯೆಗೆ ಮಂಗಳ ಸ್ನಾನವನ್ನು ಮಾಡಿಸಲೋಸುಗ ಉಪ್ಪರಿಗೆಯಿಂದ ನೀರಮನೆಗೆ ಕರೆದುಕೊಂಡು ಬಂದರು.
ವರ ಶಾತಕುಂಭ ಕುಂಭಸ್ತನದ ಪಲ್ಲವಾ।
ಧರದ ಗುಣರಾಜಿ ರಾಜಿತದ ಕೋಮಲೆಗೆ ಸೌಂ।
ದರ ಕುಂಕುಮಾಂಗ ಮಾಂಗಲ್ಯದಬಲೆಯರುದಕಪೂರಿತ ಕನಕಕಲಶದ॥
ಸುರುಚಿವೆತ್ತರುಣ ತರುಣ ಪ್ರವಾಳದ ವಸ್ತ್ರ।
ಪರಿವೃತದ ಕಲ್ಪಕಲ್ಪ ವಿಧಾನಮಾಗಿರದೆ।
ವಿರಚಿಸಿದರಾಗ ರಾಗದೊಳಮಲ ಶೋಭನ ಸ್ನಾನವಂ ಸೋತ್ಸವದೊಳು॥೫॥
ಪ್ರತಿಪದಾರ್ಥ :- ಸೌಂದರ= ಅಲಂಕಾರದಿಂದ ಕೂಡಿದ, ಕುಂಕುಮಾಂಗ= ಕುಂಕುಮವೇ ದೇಹದಲ್ಲಿವುಳ್ಳ, ಮಾಂಗಲ್ಯ= ಮಾಂಗಲ್ಯದಿಂದ ವಿರಾಜಿಸುತ್ತಿರುವ, ಅಬಲೆಯರು= ನಾರಿಯರು, ಉದಕ= ಜಲದಿಂದ, ಪೂರಿತ= ತುಂಬಿರತಕ್ಕ, ಕನಕ ಕಲಶದ= ಸುವರ್ಣದ ತಂಬಿಗೆಯ, ಸುರುಚಿವೆತ್ತ= ಕಳೆಯಿಂದ ಕೂಡಿರತಕ್ಕ, ಅರುಣ= ಕೆಂಪಾದ, ತರುಣ= ನೂತನವಾದ, ಪ್ರವಾಳದ = ಪಲ್ಲವದ, ವಸ್ತ್ರ= ಬಟ್ಟೆಯ ಮೂಲಕ, ಪರಿವೃತ= ಆವರಿಸಿಕೊಂಡಿರತಕ್ಕ, ಕಲ್ಪ= ಬಗೆಗೆ, ಕಲ್ಪ= ಹೋಲುತ್ತಿರುವ, ವಿಧಾನಮಾಗಿ= ರೀತಿಯಾಗಿ, ಇರದೆ= ಕಾಲವನ್ನು ಕಳೆಯದೆ, ಆಗ= ಆ ಕಾಲದಲ್ಲಿ, ವರ= ಉತ್ತಮವಾದ, ಶಾತಕುಂಭ= ಸುವರ್ಣ ಕರವಾದ, ಕುಂಭ= ಕಲಶದಹಾಗೆ ಇರತಕ್ಕ, ಸ್ತನದ= ಕುಚಗಳುಳ್ಳ, ಪಲ್ಲವ= ಚಿಗುರಿನಂತೆ ವರ್ಣವುಳ್ಳ, ಅಧರದ= ತುಟಿಯ, ಗುಣರಾಜಿ = ಸದ್ಗುಣ ಸಮುದಾಯದಿಂದ, ರಾಜಿತದ= ಕಾಂತಿಯಿಂದ ಕೂಡಿದ, ಕೋಮಲೆಗೆ= ಸುಂದರಿಯಾದ ವೆಷಯೆಗೆ, ರಾಗದೊಳು= ಸಂತಸದಿಂದ, ಮಹೋತ್ಸವದೊಳು= ಅತ್ಯಂತವೈಭವದಿಂದ, ಅಮಲ=ಪರಿಶುದ್ಧವಾದ, ಶೋಭನ= ಮಂಗಳಕರವಾದ, ಸ್ನಾನವ= ಸ್ನಾನವನ್ನು, ಆಗ= ಆ ಸಮಯದಲ್ಲಿ, ವಿರಚಿಸಿದರು= ನೆರವೇರಿಸಿದರು.
ತಾತ್ಪರ್ಯ:- ಚಿನ್ನದ ಕಳಶದಂತಿರುವ ಕುಚಗಳಿಂದಲೂ, ಕೆಂಪಾದ ಚಿಗುರನ್ನು ಮೀರಿಸುವ ಚೆಂದುಟಿಯಿಂದಲೂ, ಸದ್ಗುಣಾವಳಿಗಳಿಂದಲೂ, ಶೋಭಿಸುತ್ತಿರುವ ವಿಷಯೆಗೆ ಭಂಗಾರದ ತಂಬಿಗೆಗಳಿಂದ ನೀರನ್ನು ಹೊಯಿದು ಸ್ನಾನವನ್ನು ಮಾಡಿಸಿದರು.
ಮುಟ್ಟಿದೊಡೆ ಕಂದದಿರದವಳಸುಕುಮಾರ ತನು।
ದಿಟ್ಟೆಯರದೆಂತೊ ನವ ಕುಂಕುಮವನೀಗ ನುಂ।
ಪಿಟ್ಟರಲ್ಲದೆ ಪೋದ ಮಧ್ಯದೊಳೆಂತು ನಿಲಿಸಿದರೊ ದಿವ್ಯಾಂಬರವನು॥
ಬಟ್ಟ ಮೊಲೆಗಳ ಪೊರೆಗೆ ಬಾಗಿ ನಡೆವಳ್ಗೆಂತು।
ಕಟ್ಟಿದರೊ ಹಾರಾವಳಿಯನೆಂದು ಕೌತುಕಂ।
ಬಿಟ್ಟು ನೋಳ್ಪವೊಲೆಸೆದಳಾವಿಷಯೆ ಬಳಿಕಲಂಕಾರ ಮಂಡಿತೆಯಾಗಲು॥೬॥
ಪ್ರತಿಪದಾರ್ಥ :- ಇವಳ= ಈ ವಿಷಯೆಯ, ಸುಕುಮಾರತನು= ಮೃದುವಾದ ದೇಹ, ಮುಟ್ಟಿದರೆ= ಮುಟ್ಟಿಬಿಟ್ಟರೆ, ಕಂದದಿರದು= ಕಾಂತಿಯುಕ್ತವಾಗಿರುವುದಿಲ್ಲ, ನವಕುಂಕುಮ= ಹೊಸಕುಂಕುಮವನ್ನು, ದಿಟ್ಟೆಯರು= ಪ್ರಾಜ್ಞರಾದ ಸ್ತ್ರೀಯರು, ಈಗ= ಈಗಲಾದರೊ, ಊದೆಂತು= ಅದುಹೇಗೆ, ನುಂಪಿಟ್ಟರು= ಸಿಂಗರಿಸಿದರು, ಅಲ್ಲದೆ= ಇದಲ್ಲದೆ, ದಿವ್ಯಾಂಬರವನು= ಪೀತಾಂಬರವನ್ನು, ಪೋದಮಧ್ಯದೊಳು= ಬಡವಾದ ಸೊಂಟದಲ್ಲಿ, ಅದೆಂತು ನಿಲಿಸಿದರೊ= ಅದು ಹೇಗೆ ನಿಲ್ಲುವಂತೆ ಮಾಡಿದರೊ, ಹಾರಾವಳಿಯನು= ಅನೇಕ ಹಾರಗಳನ್ನು,ಬಟ್ಟ= ದುಂಡಗಿರತಕ್ಕ, ಮೊಲೆಗಳ ಪೊರೆಗೆ= ಕುಚಗಳ ಭಾರಕ್ಕೆ, ಬಾಗಿನಡೆವಳ್ಗೆ= ಬಗ್ಗಿ ನಡೆಯತಕ್ಕ ವಿಷಯೆಗೆ, ಎಂತು= ಹೇಗೆ, ಕಟ್ಟಿದರೊ= ಹಾಕಿನಿಲ್ಲಿಸಿದರೊ, ಎಂದು= ಎಂಬತೆರನಾಗಿ, ಕೌತುಕಂ= ಅಚ್ಚರಿಯನ್ನು, ಬಟ್ಟು= ತಾಳಿ, ನೋಡುವೆವೊ= ನಿರುಕಿಸುವೆವೊ, ಅಲಂಕಾರಮಂಡಿತೆಯಾಗಲು= ಅಲಂಕಾರದಿಂದ ಕೂಡಲು, ಬಳಿಕ = ಅನಂತರ, ಆ ವಿಷಯೆ= ಆ ಕುಮಾರಿ ವಿಷಯೆ, ಎಸೆದಳು= ಕಾಂತಿಯುಕ್ತಳಾದಳು.
ತಾತ್ಪರ್ಯ:- ವಿಷಯೆಯ ಕೋಮಲ ದೇಹವು ಮುಟ್ಟಿದರೆ ಮಾಸುವಂತೆ ಇದ್ದರೂ ಅವಳಿಗೆ ಕುಂಕುಮವನ್ನು ಹೇಗಿಟ್ಟರೋ! ಅತಿ ಬಡವಾದ ಸೊಂಟದಲ್ಲಿ ಅದು ಹೇಗೆ ದಿವ್ಯವಾದ ಪೀತಾಂಬರವನ್ನು ನಿಲ್ಲೆಸಿದರೋ! ಬಟ್ಟ ಮೊಲೆಗಳ ಭಾರದಿಂದ ಬಾಗಿ ನಡೆಯುವ ಅವಳಿಗೆಅದು ಹೇಗೆ ಹಾರಗಳಿಂದ ಅಲಂಕರಿಸಿದರೋ ಏನೋ ಎನ್ನುವಂತೆ ವಸ್ತ್ರಾಲಂಕಾರಗಳಿಂದ ಕೂಡಿದ ವಿಷಯೆಯು ಶೋಭಿಸಿದಳು.
ಬಾವನ್ನಗಂಪಿನಂಗದ ಲಲನಿಗನುಲೇಪ।
ನಾವಳಿಗಳೇಕಿನ್ನು ಕನ್ಯಕಾ ತಿಲಕಕ್ಕೆ।
ಭಾವಿಸೆ ಲಲಾಮವೇತಕೆ ಪಣೆಗೆ ಸೊಂಪೊದವಿದದವಯವದೊಳಿಂಪುವಡೆದ॥
ಪೂವೆಸೆವ ಕೋಮಲೆಗದೇತಕೆ ಕುಸುಮದ ಮಾಲೆ।
ಲೃವಣ್ಯ ಭೂಷಣದ ಪೆಣ್ಗಾಭರಣಮೇಕೆ।
ಕೋವಿದೆಯರಲ್ಲ ಸೈರಂಧ್ರಿಯರೆನಲ್ಕೆ ವಿಷಯೆಗೆ ಸಿಂಗರಂ ಗೈವರು॥೭॥
ಪ್ರತಿಪದಾರ್ಥ :- ಅನುಲೇಪನಾದಿಗಳು= ಚಂದನಲೇಪನಗಳು, ಬಾವನ್ನು= ಸಿರಿಕಂಡದ, ಕಂಪಿನ= ಪರಿಮಳದ, ಅಂಗದ= ದೇಹದ, ಲಲನೆಗೆ= ತರುಣಿಗೆ, ಏಕೆ= ಏನು ಪ್ರಯೋಜನ, ಭಾವಿಸೆ= ಯೋಚಿಸಿ ನೋಡಿದರೆ, ಪಣೆಗೆ = ಹಣೆಗೆ, ಲಲಾಮ- ವು=ತಿಲಕವು, ಕನ್ಯಾತಿಲಕಕೆ= ಹುಡುಗಿಯರಲೂಲೆಲ್ಲಾ ಶ್ರೇಷ್ಠಳಾಗಿರತಕ್ಕ ವಿಷಯೆಗೆ, ಇನ್ನು= ಇನ್ನುಮುಂದೆ, ಏತಕೆ= ಏನು ಸಾರ್ಥಕವು, ಕುಸುಮದಮಾಲೆ=ಪುಷ್ಪಮಾಲಿಕೆಯು, ಸೊಂಪು=ಸೌಂದರ್ಯವು, ಒದವಿದ= ಉಂಟಾಗಿರತಕ್ಕ, ಅವಯವ-
ದೊಳು= ಅವಯವಗಳಲ್ಲಿ, ಇಂಪುವಡೆದ= ಸುವಾಸನೆಯನ್ನು ಬೀರುವ, ಪೂವೆಸರ= ಹೂವಿನ ಸಮುದಾಯದಂತಿರತಕ್ಕ, ಕೋಮಲೆಗೆ= ಮೃದುಶರೀರವುಳ್ಳ ವಿಷಯೆಗೆ, ಅದೇಕೆ= ಯಾತಕ್ಕೆ ಬೇಕು, ಆಭರಣಂ= ತೊಡಿಗೆಗಳು, ಲಾವಣ್ಯ= ಸೌಂದರ್ಯವೆಂಬ, ಭೂಷಣದ = ಅಲಂಕಾರವುಳ್ಳ, ಪೆಣ್ಗೆ= ತರುಣಿಗೆ, ಏಕೆ= ಏನು ಸಾರ್ಥಕವು, ಸೈರಂಧ್ರಿಯರು= ಸೇವಕ ಸ್ತ್ರೀಯರು, ಕೋವಿದೆಯರೈ= ಬಲ್ಲವರು, ಅಲ್ಲ= ಆಗಿಲ್ಲ, ಎನಲ್ಕೆ= ಎಂಬ ರೀತಿಯಾಗಿ, ವಿಷಯೆಗೆ= ವೆಷಯೆಗೆ, ಸಿಂಗರಂ-
ಗೈದರೈ= ಅಲಂಕಾರ ಮಾಡಿದರು.
ಅಪರದಿಗ್ಭಾಗದಂತಂಜನೋದ್ಭಾಸಿತಂ।
ವಿಪುಲ ಹರಿಪದದಂತೆ ತಾರಕಾಲಂಕೃತಂ।
ಲಿಪಿಯಂತೆ ದೀರ್ಘಶೋಭಾನ್ವಿತಂ ದ್ವಿಜನಂತೆ ಶ್ರುತಿಯುತಂ ದೈತ್ಯನಂತೆ॥
ಅಪಹೃತಾನಿಮಿಷ ಲೀಲಾವಿಲಾಸಂ ನರಾ।
ಧಿಪನಂತೆ ಕುವಲಯಶ್ರೀಧರಂ ಘನದಂತೆ।
ಚಪಲಾಭಿರಾಮಮಾಗಿರ್ದುದಾ ಶಶಿಮುಖಿಯ ನೇತ್ರಯುಗಮೇವೇಳ್ವೆನು॥೮॥
ಪ್ರತಿಪದಾರ್ಥ :- ಅಪರದಿಗ್ಭಾಗದಂತೆ= ಪಡುವಣ ದಿಕ್ಕಿನಂತಾಗಿ, ಅಂಜನ= ಅಂಜನೇಯನೆನ್ನುವ ಆನೆಯಿಂದ, ಉದ್ಭಾಸಿತಂ= ಹೊಳೆಯುತ್ತಲಿರುವುದು, ವಿಪುಲ= ವಿಶಾಲವಾಗಿರತಕ್ಕ, ಹರಿಪದದಂತೆ= ಅಂತರಿಕ್ಷದ ಹಾಗೆ, ತಾರಾಲಂಕೃತಂ= ತಾರೆಗಳಿಂದ ಅಲಂಕರಿಸಲ್ಪಟ್ಟಿರುವುದು, ಲಿಪಿಯಂತೆ= ಬರವಣಿಗೆಯ ಹಾಗೆ, ದೀರ್ಘ= ದೀರ್ಘವಾದ ಅಕ್ಷರಗಳ, ಶೋಭಾ= ಕಾಂತಿಯಿಂದ, ಅನ್ವಿತಂ= ಕೂಡಿದ, ದ್ವಿಜನಂತೆ= ವಿಪ್ರನಹಾಗೆ, ಶ್ರುತಿಯುತಂ= ವೇದಸಹಿತವಾಗಿ-
ರುವುದು, ದೈತ್ಯನಂತೆ= ರಕ್ಕಸನ ರೀತಿಯಾಗಿ, ಅಪಹೃತ= ಅಪಹರಿಸಲ್ಪಟ್ಟ, ಲೀಲಾ= ಸಂತೋಷದ, ವಿಲಾಸಂ= ಸಡಗರ-
ವುಳ್ಳದ್ದು,ನರಾಧಿಪನಂತೆ= ರಾಜನಹಾಗೆ, ಕುವಲಯ= ಭೂಮಂಡಲದ, ಶ್ರೀ= ಐಸಿರಿಯನು, ಧರಂ= ಹೊಂದಿರುವುದು, ಘನದಂತೆ= ಮೋಡದಹಾಗೆ, ಚಪಲಾಭಿರಾಮಂವಿದ್ಯುತ್ತಿನಿಂದ ಶೋಭಿಸುವುದು,(ಇದು ಪಶ್ಚಿಮದಿಕ್ಕಿನ ಅಂತರಿಕ್ಷದ ವರ್ಣನೆಯು) ಆ ಶಶಿಮುಖಿಯ= ಚಂದ್ರಮುಖಿಯಾದ ವಿಷಯೆಯ,ನೇತ್ರಯುಗಂ= ಕಣ್ಣುಗಳೆರಡೂ,ಅಪರದಿಗ್ಭಾಗದಂತೆ ಅಂಜನೋದ್ಭಾಸಿತಂ= ಕಪ್ಪನ್ನು ಹಚ್ಚಿರುವುದರಿಂದ ಕಾಂತಿಯುಕ್ತವಾಗಿರುವುದು, ವಿಪುಲಹರಿಪದದಂತೆ ತಾರಕಾಲಂಕೃತಂ= ಕಣ್ಣುಗುಡ್ಡೆಗಳಿಂದ ನೋಡುವುದಕ್ಕೆ ಅಂದವಾಗಿರುವುದು, ಲಿಪಿಯಂತೆ ದೀರ್ಘಶೋಭಾನ್ವಿತಂ= ವಿಶಾಲವಾಗಿಯೂ
ಅಲಂಕಾರವಾಗಿಯೂ ಇರುವುದು, ದ್ವಿಜನಂತೆ ಶೃತಿಯುತಂ= ಶ್ರೋತ್ರಂಗಳಿಂದ ಕೂಡಿರುವುದು, ದೈತ್ಯನಂತೆ ಅಪಹೃತ= ರಾಕ್ಷಸನಂತೆ ಅಪಹರಿಸಲ್ಪಟ್ಟ, ಅನಿಮಿಷ= ರೆಪ್ಪೆ ಬಡಿಯದೆ ನೋಡುತ್ತಿರುವ, ಲೀಲಾ= ಲೀಲೆಯ, ವಿಲಾಸಂ= ಕಾಂತಿಯುಳ್ಳದ್ದು, ಘನದಂತೆ= ಕುವಲಯ, ಶ್ರೀಧರಂ= ಕರೀಕಮಲದ ಪ್ರಕಾಶದಂತೆಯೂ, ಚಪಲಾಭಿರಾಮಂ= ಚಂಚಲವಾದದ್ದಾಗಿಯೂ, ( ಇದು ವಿಷಯೆಯ ಕಣ್ಣುಗಳ ವರ್ಣನೆಯು)
ತಾತ್ಪರ್ಯ:- ವಿಷಯೆಯ ಕಣ್ಣುಗಳು ಪಶ್ಚಿಮದಿಕ್ಕಿನಂತಿದ್ದವು. ಏಕೆಂದರೆ ಪಶ್ಚಿಮ ದಿಗ್ಗಜ ಅಂಜನ. ಅವಳ ಕಣ್ಣುಗಳಿಗೆ
(ಅಂಜನ)ಹಚ್ಚಿತ್ತು. ಆಕಾಶದಲ್ಲಿ ನಕ್ಷತ್ರಗಳಿರುವಂತೆ ಅವಳ ಕಣ್ಣುಗುಡ್ಡೆಗಳಿದ್ದವು. ಅಕ್ಷರಗಳಿಗೆ ದೀರ್ಘಹಾಕಿದಾಗ ಶೋಭಿಸುವಂತೆ ಕಣ್ಣುಗಳು ದೀರ್ಘವಾಗಿದ್ದವು. ಬ್ರಾಹ್ಮಣನು (ಶೃತಿ) ವೇದವನ್ನು ಕಲಿತಿರುತ್ತಾನೆ. ಅವಳ ಕಣ್ಣುಗಳು ಎರಡು ಕಿವಿಗಳಿಂದೊಡಗೂಡಿದ್ದವು.ರಾಕ್ಷಸನು ದೇವತೆಗಳನ್ನು (ಅನಿಮಿಷ) ಅಪಹರಿಸುವಂತೆ, ಅವಳ ಸೌಂದರ್ಯವು ನೋಟಕರು ರೆಪ್ಪೆ ಬಡಿಯದಂತೆ ಮಾಡುತ್ತಿದ್ದವು. ರಾಜನು ಭೂಪತಿಯಾದಂತೆ ಅವಳ ಕಣ್ಣುಗಳು ಚಪಲ ಕನ್ನೈದಿಲೆಯಂತೆ -ಇದ್ದವು.
ಉಲ್ಲಾಸ ತಿಲಕಮಂ ಸುತಮಾಲ ಪತ್ರಮುಂ।
ಮೊಲ್ಲೆಯ ಮುಗುಳ್ಗಳುಂ ಚೂತಪ್ರವಾಳಮುಂ।
ಮಲ್ಲಿಗೆಯಲರ್ಗಳುಮಂ ಸಂಪಗೆಯ ಮೊಗ್ಗೆಯುಂ ನಿಂಬದಳಮುಂ ತೊಳಗುವ॥
ಸಲ್ಲಲಿತ ಸಾಲ ಕಾನನದೊಳಿರ್ದಪುವು ಪೊಸ।
ತಲ್ಲೆಂಬ ತೆರನಾದುದೆಂತು ಬಣ್ಣಿಸುವೆನೀ।
ಚೆಲ್ಲೆಗಂಗಳ ಚೆಲ್ವಿಕೆಯೊಳೆಸೆವ ಬಾಲಕಿಯ ನಗೆಮೊಗದ ಸೌಂದರವನು॥೯॥
ಪ್ರತಿಪದಾರ್ಥ :- ಉಲ್ಲಾಸ= ಹೊಳೆಯುತ್ತಲಿರುವ, ತಿಲಕಮುಂ= ತಿಲಕವೆಂಬ ಮರವು, ಉಲ್ಲಾಸ= ಅಗಲವಾದ, ತಿಲಕಮಂ= ಹಣೆಯಲ್ಲಿರತಕ್ಕ ಕುಂಕುಮವು, ಸು=ಉತ್ತಮವಾದ, ತಮಾಲಪತ್ರಮುಂ= ಹೆಗಲಿನಮೇಲೆ ಬರೆದಿರತಕ್ಕ ಮಕರಿಕಾಪತ್ರವೂ, ಸು=ಚನ್ನಾಗಿರತಕ್ಕ, ತಮಾಲಪತ್ರಮುಂ= ಹೊಂಗೆ ಎಲೆಯೂ, ಮೊಲ್ಲೆಯ= ಮಲ್ಲಿಗೆಯ,ಮುಗುಳ್ಗಳುಂ
= ಮೊಗ್ಗುಗಳೂ, ಚೂತಪ್ರವಾಳಮುಂ= ಮಾವಿನ ಮರದ ಎಳೆ ಚಿಗುರು, ಮಲ್ಲಿಗೆಯ= ಮಲ್ಲಿಗೇಶಗಿಡದ, ಅಲರ್ಗಳುಂ= ಹೂಗಳೂ, ಸಂಪಿಗೆಯ= ಚಂಪಕವೃಕ್ಷದ, ಮೊಗ್ಗೆಯುಂ= ಮೊಗ್ಗು, ನಿಂಬದಳಮು= ಬೇವಿನಮರದ ಚಿಗುರೂ, ತೊಳಗುವ
= ಹೊಳೆಯುವ, ಸಲ್ಲಲಿತ= ಸುಂದರವಾದ, ಸಾಲಕಾನನದೊಳು= ಸಾಲಾಗಿರುವ ಕಾಡಿನೊಳಗೆ, ಇರ್ದಪವು= ಇದ್ದವು, ಪೊಸತು= ನೂತನವಾದ್ದದ್ದು, ಅಲ್=ಅಲ್ಲವು, ಎಂಬ= ಎನ್ನತಕ್ಕ, ತೆರನು=ಬಗೆಯು, ಆದುದು= ಆಗಬಿಟ್ಟಿತು, ಈ ಚೆಲ್ಲೆಗಂಗಳ= ಟಪಲನೇತ್ರಗಳ, ಚೆಲ್ವಿಕೆಯೊಳು= ಅಲಂಕಾರದಿಂದ, ಎಸೆವ= ಹೊಳೆಯುತ್ತಿರುವ, ಬಾಲಕಿಯ= ಬಾಲೆ-
ಯಾದ ವಿಷಯೆಯ,ನಗೆಮೊಗದ= ಮಂದಹಾಸದಿಂದ ಕೂಡಿದ ಮುಖದ, ಸೌಂದರವನು= ಅಲಂಕಾರವನ್ನು, ಎಂತು= ಯಾವ ರೀತಿಯಾಗಿ, ಬಣ್ಣಿಸುವೆನು= ವರ್ಣನೆಮಾಡಲಿ.
ತಾತ್ಪರ್ಯ:- ತಿಲಕ, ಹೊಂಗೆ, ಮಲ್ಲಿಗೆಯ ಹೂ, ಮೊಲ್ಲೆಯ ಮೊಗ್ಗು, ಮಾವಿನ ಚಿಗುರು, ಸಂಪಗೆಯ ಮಮೊಗ್ಗು, ಬೇವಿನ ಚಿಗುರು ಇವೆಲ್ಲವೂ ಸಾಲಮರದ ಕಾಡಿನಲ್ಲಿರುವುದೇ! ಹಣೆಯಲ್ಲಿ ಉಲ್ಲಾಸ ತಿಲಕ, ತಮಾಲಪತ್ರದ ರೇಖೆ ಮೊಲ್ಲೆಯ ಮೊಗ್ಗು, ಅವಳ ತುಟಿ ಮಾವಿನ ಚಿಗುರು, ನಗು ಮಲ್ಲಿಗೆಯ ಹೂ, ಮೂಗು ಸಂಪಗೆಯ ಮೊಗ್ಗು, ಮುಖ ಬೇವಿನ ಚಿಗುರು, ಇವು ವಿಷಯೆಯ ಸ-ಅಲಕ-ಆನನ ಮುಂಗುರುಳಿಂದ ಕೂಡಿದ ಮುಖದಲ್ಲದ್ದವು ಹೇಗೆ ವರ್ಣಿಸಲಿ.
ಶ್ರವಣ ಭೂಷಣದಿಂದೆ ಹಸ್ತಾಭರಣದಿಂದೆ।
ದಿವಿಜ ಪದಮೆಸೆವಂತೆ ಕುಂತಳ ಶ್ರೀಯ ವೈ।
ಭವದಿಂದೆ ರಮಣೀಯ ಕಾಂಚೀಪ್ರದೇಶದಿಂ ಭೂಭಾಗಮೊಪ್ಪುವಂತೆ॥
ತವೆ ಮೆರೆವ ಸುಗ್ರೀವ ತಾರಾವಲಂಬದಿಂ।
ದವಿಕಲಾಂಗದ ಇರಾಜಿತದಿಂದೆ ಸನ್ನುತ।
ಪ್ಲವಗ ಕುಲದುನ್ನತಿಯ ಬೆಳೆವಿಗೆಯ ಚೆಲ್ವಿಂದೆ ವಿಷಯೆ ಕಂಗೊಳಿಸುತಿರ್ದಳು॥೧೦॥
ಪ್ರತಿಪದಾರ್ಥ :- ದಿವಿಜಪದಂ= ಅಂತರಿಕ್ಷವು, ಶ್ರವಣಭೂಷಣದಿಂದ= ಶ್ರವಣವೆಂಬ ನಕ್ಷತ್ರದ ಒಡವೆಯಿಂದ, ಹಸ್ತಾಭರ- ಣದಿಂದ= ಹಸ್ತಾನಕ್ಷತ್ರವೆಂಬ ತೊಡಿಗೆಯಿಂದ, (ಅಂತರಿಕ್ಷದ ಪರವಾಗಿ) ಶ್ರವಣಭೂಷಣದಿಂ=ಶಕಿವಿಗೆ ಇಟ್ಟುಕೊಳ್ಳುವ,ಓಲೆ ಮೊದಲಾದವುಗಳಿಂದ, ಹಸ್ತಾಭರಣದಿಂದ= ಕೈಗೆ ಇಟ್ಟುಕೊಳ್ಳುವ ಕಡಗ ಮುಂತಾದವುಗಳಿಂದ,(ವಿಷಯೆಯ ಅಲಂಕಾ-
ರದ ಪರವಾಗಿ) ಎಸೆವಂತೆ=ವಹೊಳೆಯುವಹಾಗೆ) ಭೂಭಾಗಂ= ಭೂಮಿಯ ಭಾಗವು, ಕುಂತಳ= ಕುಂತಳ ನಗರದ, ಶ್ರೀ= ಐಶ್ವರ್ಯದ, ವೈಭವದಿಂದ = ಏಳಿಗೆಯಿಂದ, ಕುಂತಳ=ಕೂದಲಿನ, ಶ್ರೀಕಾಂತಿಯ= ವೈಭವದಿಂದ ಅಲಂಕಾರದಿಂದ, ರಮಣೀಯ= ನೋಡುವುದಕ್ಕೆ ಚೆನ್ನಾಗಿರತಕ್ಕ, ಕಾಂಚೀ= ಕಂಚೀ ಎಂಬ ನಗರದ, ಪ್ರದೇಶದಿಂದ=ಸ್ಥಳದಿಂದ,ರಮಣೀಯ=
ಅಲಂಕಾರವಾಗಿರುವ, ಕಾಂಚೀ= ಡಾಬಿನ, ಪ್ರದೇಶದಿಂದ= ಸೊಂಟದಲ್ಲಿರೋಣದರಿಂದ, ಒಪ್ಪುವಂತೆ= ಅಂದವಾಗಿರು-
ವಂತೆ, ತವೆ=ಚನ್ನಾಗಿ, ಮೆರೆವ= ಹೊಳೆಯುತ್ತ, ಸುಗ್ರೀವನೆಂಬ=ಕಪಿರಾಜನ, (ಒಳ್ಳೆ ಕಂಠದ) ತಾರಾ= ತಾರೆಯೆಂಬ ವಾಲಿಯ ಹೆಂಡತಿಯ, (ಕಣ್ಣು ಗುಡ್ಡೆಗಳ) ಅವಲಂಬದಿಂದ= ಆಶ್ರಯದ ಮೂಲಕ, ಆವಿಕಲ= ವಿಶಾಲವಾದ ಮತ್ತು ಸ್ಫುಟ-
ನಾಗಿರತಕ್ಕ, ಅಂಗದ= ಭುಜಕೀರ್ತಿಯ, ಮತ್ತು ಅಂಗದನೆಂಬ ಕಪಿಯ, ವಿರಾಜಿತದಿಂದ= ಸೌಂದರ್ಯದಿಂದ, ವಿಷಯೆ =
ವಿಷಯೆಯು, ಕಂಗೊಳಿಸುತಿರ್ದಳು= ಕಾಂತಿಯುಕ್ತಳಾಗಿದ್ದಳು.
ತಾತ್ಪರ್ಯ:- ಆಕಾಶವು ಶ್ರವಣ, ಹಸ್ತಾ ನಕ್ಷತ್ರಗಳಿಂದಶೋಭಿಸುವಂತೆ ವಿಷಯೆಯು ಕಿವಿಗಳ ಆಭರಣ ಹಸ್ತಾಭರಣಗಳಿಂದ
ಶೋಭಿಸುತ್ತಿದ್ದಳು. ಭುಮಿಯು ಕುಂತಳ ದೇಶದಿಂದ ಶೋಭಿಸುವಂತೆ ಮುಂಗುರುಳುಗಳಿಂದ ಅವಳು ಅಂದವಾಗಿದ್ದಳು. ಭೂಮಿಯು ಕಾಂಚೀಪ್ರದೇಶದಿಂದ ಶೋಭಿಸುವಂತೆ ಅವಳ ನಡುವು ಕಾಂಚಿಯಿಂದ(ಡಾಬಿನಿಂದ) ಹೊಳೆಯುತ್ತಿತ್ತು. ಅವಳ ಸುಂದರವಾದ ಕತ್ತು ನಕ್ಷತ್ರದಂತಿದ್ದ ಅವಳ ಕಣ್ಣುಗಳು ಸ್ವಲ್ಪವೂ ಕುಂದಿಲ್ಲದೆ ಸ್ಫುಟವಾಗಿ ಸುಂದರವಾಗಿ ಕಾಣುತ್ತಿದ್ದವು.
ಲಾವಣ್ಯ ವಾರಿ ಪೂರಿತಮಾದ ನಾಭೀಸ।
ರೋವರದತ್ರಿವಳಿತೆರೆಗಳನಡುವೆ ರಂಜಿಸುವ।
ಶೈವಾಲದಂತೆ ಜಘನಾದ್ರಿಯಂ ವೇಡ್ಡೈಸಿದಮಲ ಕಾಂಚೀದಾಮದ॥
ದಾವ ಶಾಖಿಯಿಂದೆ ನಭಕೇಳ್ವ ಕರ್ಬೊಗೆಯಂತೆ।
ಪೀವರ ಸ್ತನದುರ್ಗಕಂಗಜನಡರ್ದಿಳಿವ ।
ಠಾವಿನಂತಾ ಚಂದ್ರಮುಖಿಯ ತನುಮಧ್ಯದೊಳ್ ಬಾಸೆ ಕಂಗೊಳಿಸಿರ್ದುದು॥೧೧॥
ಪ್ರತಿಪದಾರ್ಥ :- ಆ ಚಂದ್ರಮುಖಿಯ = ಚಂದ್ರನಂತೆ ಮುಖವುಳ್ಳ ಆ ವಿಷಯೆಯ, ತನು= ದೇಹದ, ಮಧ್ಯದೊಳ್= ಮಧ್ಯಭಾಗದಲ್ಲಿರತಕ್ಕ, ಬಾಸೆ= ವಳಿತ್ರಯವಾದರೊ,ಲಾವಣ್ಯ =ಸೌಂದರ್ಯವೆನ್ನತಕ್ಕ, ವಾರಿ=ನೀರಿನಿಂದ, ಪೂರಿತವಾದ= ತುಂಬಿದ, ನಾಭಿ= ಹೊಕ್ಕುಳೆಂಬ, ಸರೋವರದ= ಕೊಳದ, ತ್ರಿವಳಿ= ಮೂರು ಮಡಿಕೆಗಳ, ತೆರೆಗಳನಡುವೆ= ತರಂಗದ ಮಧ್ಯಭಾಗದೊಳಗೆ, ರಂಜಿಸುವ= ಹೊಳೆಯುವ, ಶೈವಾಲದಂತೆ= ಪಾಚಿಯಹಾಗೆ, ಜಘನ= ಹಿಂಭಾಗ ಕುಂಡೆಯೆಂಬ, ಅದ್ರಿಯಂ= ಪರ್ವತವನ್ನು, ವಡ್ಡೈಸಿದ= ಎದುರಿಸಿದಂಥ, ಅಮಲ= ಪರಿಶುದ್ಧವಾದ, ಕಾಂಚೀದಾಮದ=ಚಿನ್ನದ ಡಾಬಿನ, ದಾವ ಶಿಖಿಯಿಂದ= ಕಾಡು ಬೆಂಕಿಯಿಂದ, ನಭಕೆ= ಅಂತರಿಕ್ಷಕ್ಕೆ, ಏಳ್ವ= ಏರುತ್ತಿರುವ, ಕಾರ್ಬೊಗೆಯಂತೆ= ಕಪ್ಪು ಹೊಗೆಯರೀತಿಯಾಗಿ,ಪೀವರ= ದಪ್ಪನಾದ, ಸ್ತನದುರ್ಗಕೆ= ಕುಚಗಳೆಂಬ ಪರ್ವತಕ್ಕೆ, ಅಂಗಜನು=ಮನ್ಮಥನು, ಅಡರ್ದು=
ಹತ್ತಿ, ಇಳಿವ= ಇಳಿದು ಬರುವ, ಠಾವಿನಂತೆ= ಪ್ರದೇಶದ ಹಾಗೆ, ಕಂಗೊಳಿಸಿರ್ದುದು= ಕಾಂತಿಯುಕ್ತವಾಗಿತ್ತು.
ತಾತ್ಪರ್ಯ:- ಅವಳ ನಾಭೀಸರೋವರದಲ್ಲಿತುಂಬಿದ ಸೌಂದರ್ಯ ಜಲದ, ತ್ರಿವಳಿಗಳೆಂಬ ತೆರೆಗಳ ನಡುವೆ ಕಟ್ಟಿದ ಪಾಚಿಯೋ, ಅವಳ ಜಘನವೆಂಬ ಬೆಟ್ಟವನ್ನು ಸುತ್ತುವರಿದ ಡಾಬಿನಿಂದ ಏಳುವ ಕಾಡುಗಿಚ್ಚಿನ ಕರಿಯ ಹೊಗೆಯೋ ಎಂಬಂತೆ ಅವಳ ಸ್ತನದುರ್ಗಕ್ಕೆ ಇಳಿಯಲು ಹತ್ತಲು ಮನ್ಮಥನಿಗೆ ದಾರಿಯೋ ಎಂಬಂತೆ ಅವಳ ಬಾಸೆ ಕಾಣಿಸುತ್ತಿತ್ತು.
( ಹೊಕ್ಕುಳಿನಿಂದ ಮೊಲೆಗಳವರೆಗೆ ಬೆಳೆದ ಕೂದಲು)
ಬಿಡದೆ ಮಕ್ತಾಹಾರದಿಂದೆ ಸಮರೂಪದಿಂ।
ದೃಢತೆವೆತ್ತೂರ್ಧ್ವಮುಖಮಾಗಿ ಕರ್ಕಶ ವೃತ್ತ।
ದೊಡಗೂಡಿ ಕುಚಯುಗಂ ಮೆರೆದುದು ಕಠೋರ ತಪದಿಂದೆಸೆವ ಯೋಗಿಯಂತೆ॥
ಬಡವಾಗಿ ಬಲ್ಲಿದರ ನಡುವೆ ನವೆದಿರ್ದ ಸೊಂ।
ಪಡಗದೆ ವಿಜೃಂಭಿಸುವ ವೀರ ಕಂಠೀರವಕೆ।
ಪಡಿಯಾಗಿ ಸತ್ಪುರುಷನಂದದೊಳ್ ಕಾಣಿಸಿತು ಮಧ್ಯಲತೆ ಮಂತ್ರಿಸುತೆಯ॥೧೨॥
ಪ್ರತಿಪದಾರ್ಥ :- ಬಿಡದೆ= ನಿಯಮಕ್ಕೆ ಅನುಸಾರ, ಮುಕ್ತ= ಬಿಡಲ್ಪಟ್ಟ, ಆಹಾರದಿಂದ= ಅನ್ನಾದಿಗಳಿಂದ, ಮುಕ್ತಾಹಾರ-
ದಿಂದ= ಮುತ್ತುಗಳ ಮಾಲಿಕೆಯಿಂದ, ಸಮರೂಪದಿಂ= ಏಕರೀತಿಯಿಂದ, ಸಮ=ಒಂದೇ ಬಗೆಯಾದ, ರೂಪದಿಂ= ಆಕಾರದಿಂದ, ಧೋಡತೆವೆತ್ತು=ವಮನಸ್ಸನ್ನು ಸ್ಥಿರಮಾಡಿಕೊಂಡು, ಊರ್ಧ್ವಮುಖಮಾಗಿ=ವಮೇಲಕ್ಕೆ ನೋಟವನ್ನೆಟ್ಟು,
(ಮೇಲಕ್ಕೆತ್ತಲ್ಪಟ್ಟಮೊಲೆತೊಟ್ಟುಗಳನ್ನು ಹೊಂದಿ) ಕರ್ಕಶ= ಕಠಿಣವಾದ, ವೃತ್ತದ= ನಡವಳಿಕಯುಳ್ಳ, ಕರ್ಕಶವೃತ್ತದ= ಬಲವಾಗಿಯೂ, ದುಂಡಗೂ ಇರತಕ್ಕ ರೀತಿಯಿಂದ, ಒಡಗೂಡಿ= ಸೇರಿ, ಕುಚಯುಗಂ= ಸ್ತನಯುಗ್ಮವು, ಕಠೋರ= ಬಹು ಕಠಿಣವಾದ, ತಪದಿಂದ= ತಪಸ್ಸಿನಿಂದ, ಎಸೆವ= ಹೊಳೆಯುವ, ಯೋಗಿಯಂತೆ= ಯತಿಯತೆರನಾಗಿ, ಎಸೆದುದು= ಕಾಂತಿಯುಕ್ತವಾಯಿತು, ಬಲ್ಲಿದರ= ಪ್ರಾಜ್ಞರಾದವರ, ನಡುವೆ= ಮಧ್ಯದಲ್ಲಿ,ನವೆದು= ಬಡವಾಗಿ, ಇರ್ದು=ಇದ್ದು, ಸೊಂಪು= ದೇಹದ ಕೋಮಲತೆಯು, ಅಡಗದೆ= ತಗ್ಗದೆ, ವಿಜೃಂಭಿಸುವ= ಮೆರೆಯತಕ್ಕ, ವೀರ= ಪರಾಕ್ರಮದಿಂದ ಕೂಡಿದ, ಕಂಠೀರವಕೆ= ಮೃಗರಾಜನಿಗೆ, ಪಡಿಯಾಗಿ= ಹೋಲಿಕೆಯಾಗಿ, ಸತೂಪುರುಷನ= ಉತ್ತಮನಾದ ಮನುಷ್ಯನ, ಅಂದದೊ-
ಳ್= ರೀತಿಯಾಗಿ, ಮಂತ್ರಿಸುತೆಯ= ಮಂತ್ರಿ ದುಷ್ಟಬುದ್ಧಿಯ ಪುತ್ರಿ ವಿಷಯೆಯ, ಮಧ್ಯಲತೆ= ಬಳ್ಳಿಯಂತಿರುವ ಸೊಂಟ-
ವು, ಬಡವಾಗಿ = ಸಣ್ಣನಾಗಿ, ಕಾಣಿಸಿತು= ತೋರಬಂದಿತು, ಎಂದರೆ ಬಲವಾದ ಕುಚಯುಗ್ಮದಿಂದಲೂ, ಸಣ್ಣನಾದ ನಡುವಿನಿಂದಲೂ ಕೂಡಿದ್ದಳು.
ತಾತ್ಪರ್ಯ:- ಯೋಗಿಯಾದವನು ಸತತವಾಗಿ ಆಹಾರವನ್ನು ಬಿಟ್ಟು ಎಲ್ಲ ಜೀವರಾಶಿಗಳನ್ನು ಸಮನಾಗಿ ಕಾಣುತ್ತಾ ದೃಢ-
ವಿಗಿ ಊರ್ಧ್ವಮುಖನಾಗಿರುತ್ತಾನೆ. ವಿಷಯೆಯ ಸ್ನನಗಳೂ ಹಾಗೆಯೇ (ಮುಕ್ತಾಹಾರ) ಮುತ್ತಿನ ಹಾರದಿಂದಲಂಕೃತವಾಗಿ ಒಂದೇ ಗಾತ್ರ ಆಕಾರಗಳಿಂದ ದೃಢವಾಗಿ, ಕಠಿಣವಾಗಿ, ದುಂಡಗೆ ಊರ್ಧ್ವಮುಖವಾದ ಚೂಚುಕಗಳಿಂದ ಕೂಡಿದ್ದವು. ಬಡವನಾಗಿದ್ದರೂ ಬಲ್ಲಿದರ ನಡುವೆ, ಕಷ್ಟಪಟ್ಟರೂ ಸೊಂಪಡಗದೆ, ಸಿಂಹದಂತಿರುವ ಸತ್ಪುರುಷನಂತೆ ಅವಳ ನಡುವು ವಿಜೆಂಭಿಸಿತು. ( ಸ್ತನಯುಗ್ಮ ವಿಜೃಂಭಿಸಿದರೆ ನಡು ಬಡವಾಗಿ ಸಿಂಹ ಕಟಿಯಂತಿತ್ತು)
ತೊಳಗಿ ಬೆಳಗುವ ಸದ್ಗುಣಾವಳಿಗಳೈಶ್ವರ್ಯ।
ಲಲನೆಯಂ ಗೃಹಪತಿಯ ಮಂದಿರಕೆ ಸಂಘಟಿಸಿ।
ಬೆಳವಿಗೆಯನತಿಶಯಂಮಾಳ್ಪಂತೆ ಸಿಂಗರಂಗೈದು ನೀಲಾಳಕೆಯರು॥
ಬಳಿಕ ಪೊನ್ನಂದಣದ ಮೇಲೆ ವೈವಾಹ ಮಂ।
ಗಳ ಮಹೋತ್ಸವಕೆ ವಿರಚಿಸಿದ ಮಂಟಪದೆಡೆಗೆ।
ನಳಿನ ಪತ್ರಾಕ್ಷಿಯಂ ತಂದರೊಸಗೆಯೊಳಂದು ವಿಭವದ ವಿಲಾಸದಿಂದೆ॥೧೩॥
ಪ್ರತಿಪದಾರ್ಥ :- ನೀಲಾಳಕೆಯರು=ಕಪ್ಪು ಮುಂಗುರುಳುಳ್ಳ ಸ್ತ್ರೀಯರು, ತೊಳಗಿಬೆಳಗುವ= ಹೆಚ್ಚಾದ ಕಾಂತಿಯ, ಸದ್ಗುಣಾವಳಿಗಳು= ಉತ್ತಮವಾದ ಗುಣಗಳು ಮತ್ತು ಐಶ್ವರ್ಯ ಸಂಪತ್ತು ಇವುಗಳ, ಲಲನೆಯಂ= ನಾರಿಯನ್ನು, ಸಂಗಡಿಸಿ= ಹೊಂದಿ, ಗೃಹಪತಿಯಮಂದಿರಕೆ= ಯಜಮಾನನ ಭವನಕ್ಕೆ, ಬೆಳವಿಗೆಯ = ಏಳಿಗೆಯ, ಅತಿಶಯಮಂ= ಹೆಚ್ಚಿಕೆಯನ್ನು, ಮಾಳ್ಪಂತೆ= ಮಾಡುವ ರೀತಿಯಾಗಿ, ಸಿಂಗರಂಗೈದು= ಶೃಂಗಾರವನ್ನು ಮಾಡಿ, ಬಳಿಕ =ಅನಂತರ, ಅಂದು= ಆ ಸಮಯದಲ್ಲಿ, ಪೊನ್ನಂದಣದ= ಚಿನ್ನದ ಮೇನೆಯಲ್ಲಿ, ಮೇಲೆ= ಮೇಲ್ಭಾಗದಲ್ಲಿ, ವೈವಾಹ= ಪರಿಣಯದ, ಮಂಗಳ= ಶುಭದಾಯಕವಾದ, ಮಹೋತ್ಸವಕೆ= ವೈಭವಕ್ಕಾಗಿ, ವಿರಚಿಸಿದ= ನಿರ್ಮಿಸಿದ, ಮಂಟಪದೆಡೆಗೆ= ಮಂಟಪದ ಹತ್ತಿರಕ್ಕೆ, ಒಸಗೆಯೊಳು= ಮಂಗಳಕರವಾದ ವರ್ತಮಾನದಿಂದ, ವಿಭವದವಿಲಾಸದಿಂದ= ಅತಿಶಯವಾದ ವೈಭವದಿಂದ, ನಳಿನಪತ್ರಾಕ್ಷಿಯನ್ನು= ಕಮಲದ ದಳದಂತೆ ವಿಶಾಲವಾದ ಕಣ್ಣುಗಳುಳ್ಳ ವಿಷಯೆಯನ್ನು, ತಂದರು= ಕರೆದುಕೊಂಡು ಬಂದರು.
ಅ॥ವಿ॥ ಅಂದಣ(ತ್ಭ) ಆಂದೋಳಿಕ(ತ್ಸ) ಸಿಂಗರಿಸಿ( ತ್ಭ) ಶೃಂಗರಿಸಿ( ತ್ಸ)
ತಾತ್ಪರ್ಯ:- ಇಂತಹ ಸುಂದರಿಯಾದ ವಿಷಯೆಯನ್ನು ನಾನಾ ಬಗೆಯಾದ ಉಡಿಗೆ ತೊಡಿಗೆಗಳಿಂದಲಂಕರಿಸಿ, ಅತ್ಯುತ್ಸವ-
ದಿಂದ ಕೂಡಿದವರಾಗಿ ನವರತನಖಚಿತವಾಗಿ ರಚಿಸಿರುವ ವಿವಾಹ ಮಂಟಪಕ್ಕೆ ಬಂಗಾರದ ಮೇನೆಯಲ್ಲಿ ಕರೆದುಕೊಂಡು ಬಂದರು.
ಬಳಸಿದ ಸಮಸ್ತ ಜನಜಂಗುಳಿಯ ಕೈಸೊಡ।
ರ್ಗಳ ಸಾಲ ಹಂದಣಿಯ ಪಾಡುವ ಪುರಂಧ್ರಿಯರ।
ಕಳಸ ಕನ್ನಡಿವಿಡಿದ ಕನ್ನೆಯರ ನಾನಾ ಸುವಸ್ತುಗಳ ವಿಸ್ತರಣದ॥
ತೊಳಗುವೊಸಗೆಯ ವಾದ್ಯ ಸಂಕುಲದ ಬಹು ಫಲಾ।
ವಳಿಗಳ ವಿಡಾಯದಿಂದೈತಂದು ದಂಡಿಗೆಯ।
ನಿಳಿದನಾರತಿಗಳ ನಿವಾಳಿಯಿಂ ಚಂದ್ರಹಾಸಂ ಭದ್ರಮಂಟಪದೊಳು॥೧೪॥
ಪ್ರತಿಪದಾರ್ಥ :- ಚಂದ್ರಹಾಸಂ= ಚಂದ್ರಹಾಸನು, ಬಳಸಿದ = ಸುತ್ತುವರಿದ, ಸಮಸ್ತ = ಎಲ್ಲಾ, ಜನ= ಪ್ರಜೆಗಳ, ಜಂಗುಳಿಯ= ಗುಂಪಿನ, ಕೈಸೊಡರ್ಗಳ= ಕೈದೀಪಗಳ, ಸಾಲ= ಸಾಲಾಗಿರತಕ್ಕ, ಸಂದಣಿಯ= ಗುಂಪನ್ನು, ಪಾಡುವ= ಹಾಡುವ, ಪುರಂಧ್ರಿಯರ = ಸುವಾಸಿನಿಯರ, ಕಲಶಕನ್ನಡಿ= ಕಲಶ ಕನ್ನಡಿಯನ್ನು, ಪಿಡಿದ= ಹಿಡಿದ, ಕನ್ನೆಯರ= ಬಾಲೆಯರ, ನಾನಾ= ತಂಡತಂಡವಾದ, ಸುವಸ್ತುಗಳ= ಉತ್ತಮವಾದ ಪದಾರ್ಥಗಳ, ವಿಸ್ತರಣದ= ಸಮುದಾಯದ, ತೊಳಗುವ= ಹೊಳೆಯುವ, ಪೊಸಗೆಯ= ಮಂಗಳಕರವಾದ, ವಾದ್ಯ= ಮಂಗಳವಾದ್ಯಗಳ, ಕುಲದ=ಗುಂಪಿನ, ಬಹು= ಅನೇಕ ಪ್ರಕಾರವಾದ, ಫಲಾವಳಿಗಳ= ಹಣ್ಣುಗಳ, ವಿಡಾಯದಿಂದ= ಗುಂಪಿನಿಂದ, ಐತಂದು= ಬಂದು, ಭದ್ರಮಂಟಪ- ದೊಳು = ಮದುವೆಯಮಂಟಪದೊಳಗೆ,ಆರತಿಗಳನಿವಾಳಿಯಿಂ=ಆರತಿಗಳನ್ನೆತ್ತುವುದರಿಂದ,ದಂಡಿಗೆಯನು=ಪಲ್ಲಕ್ಕಿಯ-
ನ್ನು, ಇಳಿದನು= ಇಳಿದವನಾದನು.
ತಾತ್ಪರ್ಯ:- ಆ ದಿವ್ಯವಾದ ವಿವಾಹಮಂಟಪದಲ್ಲಿ ಅನೇಕ ಜನಗಳ ಗುಂಪಿನಿಂದಲೂ, ಕೈಯಲ್ಲಿ ಹಿಡಿದಿರತಕ್ಕ ದೀಪಗಳಿಂದಲೂ, ಮುತ್ತೈದೆಯರು ಹೇಳತಕ್ಕ ಮಂಗಳಕರವಾದ ಹಾಡುಗಳ ಸೊಬಗಿನಿಂದಲು, ಕಲಶಕನ್ನಡಿಯನ್ನು ಕೈಯಲ್ಲಿ ಹಿಡಿದಿರುವ ಕನ್ನೆಯರಿಂದಲೂ, ಅನೇಕವಾದ್ಯವಿಶೇಷಗಳಿಂದಲೂ ಕೂಡಿ ಮನೋಹರವಾಗಿತ್ತು. ಇಂತಹ ದಿವ್ಯ ಮಂಟಪಕ್ಕೆ ಚಂದ್ರಹಾಸನನ್ನು ಪಲ್ಲಕ್ಕಿಯಲ್ಲಿ ಕರೆದುಕೊಂಡು ಬಂದರು.
ವರ ತಾರಕಾಕ್ಷೆಯೆಂಬಾ ಪ್ರಧಾನನ ಪತ್ನಿ।
ಚರಣಮಂ ಪ್ರಕ್ಷಾಳನಂಗೈಯೆ ಮದನನಾ।
ದರಿಸಿ ಮಧುಪರ್ಕಮಂ ಮಾಡೆ ಕನ್ಯಾವರಣದೊಳ್ ಕುಲ ಪರಂಪರೆಯನು॥
ಒರೆಯೆನಲ್ ಶಶಿಹಾಸನೆನಗೆ ವಾಮನಗೋತ್ರ।
ಮರವಿಂದನಾಭಂ ಪಿತಂ ಹರಿಪಿತಾಮಹಂ।
ಮುರಹರಂ ಪ್ರಪಿತಾಮಹಂ ಕುಳಿಂದನುಮವನ ಸತಿಯುಂ ಗುರುಗಳೆಂದನು॥೧೫॥
ಪ್ರತಿಪದಾರ್ಥ :- ವರ= ಮೇಲ್ಮೆಯನ್ನು ಹೊಂದಿದ, ತಾರಕಾಕ್ಷಿಯೆನ್ನತಕ್ಕ, ಪ್ರಧಾನನ ಪತ್ನಿ= ಸಚಿವನಾದ ದುಷ್ಟಬುದ್ಧಿಯ ಸತಿಯು, ಚರಣಮಂ= ಚಂದ್ರಹಾಸನ ಕಾಲುಗಳನ್ನು, ಪ್ರಕ್ಷಾಳನಂಗೈದು= ತೊಳೆದು, ಮದನನು= ಮದನನಾದರೊ, ಆದರಿಸಿ= ಸತ್ಕರಿಸಿ, ಮಧುಪರ್ಕಮಂ ಮಾಡಿ= ಮಧುಪರ್ಕದ್ರವ್ಯವನ್ನು ರಚಿಸಿ, ಕನ್ಯಾವರಣದೊಳು= ಬಾಲೆಯನ್ನು ಪರಿ-
ಗ್ರಹಿಸುವ ಕಾಲದಲ್ಲಿ, ಕುಲಪರಂಪರೆಯನು= ವಂಶಾವಳಿಯನ್ನು, ಒರೆಯೆನಲ್= ತಿಳಿಸು ಎಂದು ಮದನನು ಕೇಳಲು, ಶಶಿಹಾಸನು= ಚಂದ್ರಹಾಸನು, ಎನಗೆ=ನನಗೆ, ವಾಮನಗೋತ್ರಂ= ವಾಮನಗೋತ್ರಕ್ಕೆ ಸೇರಿದವನು, ಅರವಿಂದನಾಭಂ=
ಕಂಜನಾಭನೆ, ಪಿತಂ=ತಂದೆ, ಪಿತಾಮಹಂ= ತಾತನಾದರೊ, ಹರಿ=ವಿಷ್ಣುವು, ಪ್ರಪಿತಾಮಹಂ = ಮುತ್ತಾತನು, ಮುರಹರಂ= ಮುರಾಂತಕನು, ಗುರುಗಳು= ನನ್ನನ್ನು ಪಾಲಿಸಿದವರು, ಕುಳಿಂದನೂ= ಮೇಧಾವಿಯೂ, ಅವನ= ಆ ಮೇಧಾವಿಯ, ಸತಿಯುಂ= ಹೆಂಡತಿಯಾದ ಮೇಧಾವಿನಿಯೂ ಆಗಿರುವರು, ಎಂದನು=ಎಂಬುದಾಗಿ ಉತ್ತರ ಕೊಟ್ಟನು.
ತಾತ್ಪರ್ಯ:- ಅಲ್ಲಿ ದುಷ್ಟಬುದ್ಧಿಯ ಹೆಂಡತಿಯಾದ ತಾರಕಾಕ್ಷಿಯು ಚಂದ್ರಹಾಸನ ಕಾಲುಗಳನ್ನು ತೊಳೆದಳು. ಮದನನು ಇಂದುಹಾಸನನ್ನು ಆದರದಿಂದ ದಿವ್ಯ ಪೀಠದಲ್ಲಿ ಕುಳ್ಳಿರಿಸಿದನು. ಮಧುಪರ್ಕವೇ ಮೊದಲಾದ ಕಾರ್ಯಗಳೆಲ್ಲಾ ನಡೆದು
ಕನ್ಯಾವರಣ ಕಾಲದಲ್ಲಿ ಪ್ರವರೋಚ್ಛಾರಣವನ್ನು ಕೇಳಿದರು. ಆಗ ಇಂದುಹಾಸನು ನಾನು ವಾಮನಗೋತ್ರದವನು. ಪದ್ಮನಾಭನಾದ ಶ್ರೀ ಮಹಾವಿಷ್ಣುವೇ ನಮ್ಮ ತಂದೆಯು, ಪಾಪಗಳನ್ನು ದೂರಮಾಡುವ ಹರಿಯೇ ನಮ್ಮ ತಾತನು. ಮುರಾಂತಕನಾದ ಕೃಷ್ಣಸ್ವಾಮಿಯೇ ನಮ್ಮ ಮುತ್ತಾತನಾಗಬೇಕು. ಚಂದನಾವತಿಯ ಅರಸನಾದ ಕುಳಿಂದನೂ ಅವನ ರಾಣಿಯಾದ ಮೇಧಾವಿನಿಯೂ ನನ್ನ ಸಾಕುತಂದೆ ತಾಯಿಗಳಾಗಿದಾರೆಂದು ನುಡಿದನು.
ಅಲ್ಪಭಾಷಿತಮಲ್ಲದಿಹ ಚಂದ್ರಹಾಸನ ಸು।
ಜಲ್ಪಿತಂ ಸೊಗಸೆ ಮದನಂ ಮುದದೊಳಾಗ ಸಂ।
ಕಲ್ಪಿತ ನೀರೀಕ್ಷಣೆಗೆ ಸುಮುಹೂರ್ತಮಂಕೇಳ್ದು ತೆರೆದೆಗೆಸಿ ಭೂ ದಿವಿಜರ॥
ನಲ್ಸರಕವೆತ್ತು ಜೀರಿಗೆಬೆಲ್ಲದೊಪ್ಪಮೆಸೆ।
ಯಲ್ಪದದ ಮೆಟ್ಟಕ್ಕಿ ಸುತ್ತನೂಲ್ ಮೆರೆಯೆ ಫಣಿ।
ತಲ್ಪನಿದಿರೊಳ್ ತದರ್ಪಿತಮಾಗಲೆಂದವನ ಕೈಗೆ ಧಾರೆಯನೆರೆದನು॥೧೬॥
ಪ್ರತಿಪದಾರ್ಥ :- ಅಲ್ಪಭಾಷಿತ= ಸಾಧಾರಣವಾದ ಮಾತು, ಅಲ್ಲದಿಹ= ಅಲ್ಲದಿರತಕ್ಕ,ಚಂದ್ರಹಾಸನ = ಇಂದುಹಾಸನು, ಸುಜಲ್ಪಿತಂ= ಸವಿನುಡಿಯು, ಸೊಗಸೆ= ಯೋಗ್ಯವಾಗಿರಲು,ಮದನಂ= ಮದನನಾದರೊ, ಮುದದೊಳು= ಆನಂದದಿಂದ, ಆಗ= ಆ ಕಾಲದಲ್ಲಿ, ಸಂಕಲ್ಪಿತ= ನಿಷ್ಕರ್ಷಿಸಿರತಕ್ಕ, ನೀರೀಕ್ಷಣೆಗೆ= ಲಗ್ನವನ್ನು ಎದುರು ನೋಡುವುದಕ್ಕೆ, ಸುಮೂಹೂರ್ತ- ಮಂ= ಒಳ್ಳೆಯ ಲಗ್ನವನ್ನು, ಕೇಳ್ದು= ಕೇಳಿ, ತೆರೆತೆಗಿಸಿ= ತೆರೆಯನ್ನು ತೆಗೆಯುವಂತೆ ಮಾಡಿ, ಭೂದಿವಿಜರ= ವಿಪ್ರರ, ನಲ್= ಶ್ರೇಷ್ಠವಾದ, ಪರಕೆವೆತ್ತು= ಆಶೀರ್ವಾದ ಪಡೆದು, ಜೀರಿಗೆ ಬೆಲ್ಲದ= ಜೀರಿಗೆ ಬೆಲ್ಲ ಇವುಗಳ, ಒಪ್ಪಂ= ವಧೂವರರು ಇಡತಕ್ಕದ್ದು, ಎಸೆಯಲ್= ಚನ್ನಾಗಿ ಕಾಣಲು, ಪದದ= ಹೆಜ್ಜೆಯ, ಮೆಟ್ಟಕ್ಕಿ = ಮೆಟ್ಟತಕ್ಕ ಅಕ್ಷತೆಯು, ಸುತ್ತ= ನಾಲ್ಕು ಕಡೆಯೂ, ನೂಲ್= ಸೂತ್ರವು, ಮೆರೆಯೆ= ಕಂಗೊಳಿಸುತ್ತಿರಲಾಗಿ, ಫಣಿತಲ್ಪನ= ಶ್ರೀಮನ್ನಾರಾಯಣನ, ಸಾಲಗ್ರಾಮದ= ಸಾಲಗ್ರಾಮಶಿಲೆಯ, ಇದಿರೊಳ್= ಮುಂದುಗಡೆ, ತದರ್ಪಿತಂ= ಶ್ರೀಮನ್ನಾರಾಯಣನಿಗೆ ಸಮರ್ಪಕವಾಗತಕ್ಕದ್ದು, ಆಗಲಿ= ಆಗಬೇಕು, ಎಂದು=ಎಂಬುದಾಗಿ, ಅವನಕೈಗೆ= ಆ ಚಂದ್ರಹಾಸನ ಹಸ್ತ ಪ್ರದೇಶಕ್ಕೆ, ಧಾರೆಯನು= ತುಲಸೀದಳ, ಸಾಲ-
ಗ್ರಾಮ ಶಿಲೆ ಇವುಗಳಿಂದ ಕೂಡಿದ ಉದಕವನ್ನು, ಎರೆದರು= ಸುರಿದವರಾದರು.
ತಾತ್ಪರ್ಯ:- ಇಂತಹ ಅಸಾಧಾರಣವಾದ ಇಂದುಹಾಸನ ನುಡಿಗಳನ್ನಾಲಿಸಿ ಸಂತುಷ್ಟನಾದ ಮದನನು ಗೋತ್ರಪ್ರವರಗಳನ್ನು ಹೇಳಿದ ಬಳಿಕ ಕನ್ಯಾನಿರೀಕ್ಷಣೆಗೆ ಸರಿಯಾದ ಮುಹೂರ್ತವನ್ನು ಕೇಳಿ ತೆರೆಯನ್ನು ಸರಿಸಿದರು. ವಧೂವರರು ಜೀರಿಗೆ ಬೆಲ್ಲವನ್ನು ಪರಸ್ಪರ ಹಾಕಿದರು. ಅನಂತರ ಅಕ್ಷತಾರೋಪಣೆಯೂ ಕಂಕಣ ಬಂಧನೆಯೂ ನಡೆಯಿತು, ಆ ತರುವಾಯ ಮದನನೂ ತಾರಕಾಕ್ಷಿಯೂ ಸಹ ವಿಷಯೆಯನ್ನು ಇಂದುಹಾಸನಿಗೆ ಕೃಷ್ಣಾರ್ಪಿತವಾಗಲೆಂದು ಧಾರೆಯೆರೆದರು.
ಮೊರೆವ ಮರಿದುಂಬಿಗಳ ಮಾಲೆಯಂ ತಾಳ್ದ ನವ।
ಪರಿಮಳದ ಮಂದಾರ ಮಾಲೆಯಂ ವಿಷಯೆ ಸೌಂ।
ದರ ಶಿರೀಷದ ಮಾಲೆಯಂ ಪೋಲ್ವ ನಳಿತೋಳನೆತ್ತಿ ಕಂಧರದೊಳಿಡಲು॥
ಭರಿತ ಲಾವಣ್ಯ ಸಾಕಾರದಿಂ ಮಂಗಳಾ।
ಭರಣಂಗಳೆಸೆವಲಂಕಾರದಿಂ ಪಾರ್ವರು।
ಚ್ಚರಿಪಗ್ನಿಹೋತ್ರ ಪ್ರಕಾರದಿಂ ವಧುವಂ ಕುಳಿಂದಜಂ ಕೈವಿಡಿದನು॥೧೭॥
ಪ್ರತಿಪದಾರ್ಥ :- ಮೊರೆವ= ಧ್ವನಿಗೈಯುವ, ಮರಿದುಂಬಿಗಳ = ಎಳೆದುಂಬಿಗಳ, ಮಾಲೆಯಂ= ಹಾರವನ್ನು, ತಾಳ್ದ= ಪಡೆದಿರುವ, ನವ= ಹೊಸ, ಪರಿಮಳದ= ಸುವಾಸನೆಯ, ಮಂದಾರಮಾಲೆಯಂ= ಮಂದಾರ ಹೂಗಳಿಂದ ಮಾಡಿದ ಹಾರವನ್ನು, ಸೌಂದರ= ಅಂದವಾದ, ಶಿರೀಷಮಾಲೆಯಂ= ಶಿರೀಷ ಹೂಗಳ ಹಾರವನ್ನು, ಪೋಲ್ವ= ಹೋಲುವ, ನಳ= ತಾವರೆ ದಂಟಿನಂತ, ತೋಳುಗಳನು= ಕೈಗಳನ್ನು, ಎತ್ತಿ= ಮೇಲಕ್ಕೆತ್ತಿ,ಕಂಧರದೊಳು= ಇಂದುಹಾಸನ ಕಂಠದಲ್ಲಿ, ಇಡಲು= ಹಾಕಲಾಗಿ, ಭರಿತ= ತುಂಬಿರುವ, ಲಾವಣ್ಯ =ಸೌಂದರ್ಯದ, ಸಾಕಾರದಿಂ= ಆಕೃತಿಯಿಂದಲೂ, ಮಂಗಳ= ಶುಭದಾಯಕ-
ಗಳಿಂದ, ಆಭರಣಗಳಾದ= ತೊಡಿಗೆಗಳಿಂದ, ಎಸೆವ= ಹೊಳೆಯುವ, ಅಲಂಕಾರದಿಂ= ಅಂದದಿಂದಲೂ, ಪಾರ್ವರು= ಭೂಸುರರು, ಉಚ್ಚರಿಪ= ಹೇಳುತ್ತಿರುವ, ಅಗ್ನಿಹೋತ್ರಪ್ರಕಾರದಿಂ= ಅಗ್ನಿಸಾಕ್ಷಿಯಾಗಿಯೂ, ಕುಳಿದಜ= ಇಂದುಹಾಸನು, ವಧುವಂ= ಮದುವೆಗೆ ಸಿದ್ಧಳಾಗಿರುವ ವಿಷಯೆಯೆಂಬ ತರುಣಿಯನ್ನು, ಕೈವಿಡಿದನು= ಮದುವೆಮಾಡಿಕೊಂಡನು.
ತಾತ್ಪರ್ಯ:- ಸುಕುಮಾರಿಯಾದ ವಿಷಯೆಯೆಂಬ ಕನ್ಯಾಮಣಿಯು ಶಿರೀಷ ಕುಸುಮದಂತೆ ಅತ್ಯಂತ ಮೃದುವಾದ ತನ್ನ ಕೈಗಳಿಂದ ಸುವಾಸನೆಯನ್ನು ಬೀರುತ್ತಿರುವ ಮಂದಾರಮಾಲೆಯನ್ನೆತ್ತಿಕೊಂಡು ಇಂದುವನ್ನು ಹೋಲುತ್ತಿರುವ ಇಂದುಹಾಸನ ಕತ್ತಿಗೆ ಹಾಕಿದಳು, ಆಗ ಬ್ರಾಹ್ಮಣರೆಲ್ಲಾ ಚಂದ್ರಹಾಸ ವಿಷಯೆಯರಿಗೆ ಆಶೀರ್ವಾದ ಮಾಡಿದರು. ಸುಂದರಾ-
ಕಾರದಿಂದಲೂ, ದಿವ್ಯಾಭರಣಗಳಿಂದಲೂ, ಒಪ್ಪುತ್ತಲಿರುವ ವಿಷಯೆಯನ್ನು ಇಂದುಹಾಸನು ಅಗ್ನಿಸಾಕ್ಷಿಯಾಗಿ ಪಾಣಿಗ್ರ-
ಹಣ ಮಾಡಿದನು.
ಮುಂದೆ ವಿರಚಿಸಿದ ವೇದಿಯೊಳೆಸೆವ ಹಸೆಗೆ ನಡೆ।
ತಂದು ಪಾಣಿಗ್ರಹಣಮಂ ಗೈದು ಲಾಜಾಜ್ಯ।
ದಿಂದೆ ಹೋಮದೊಳಗ್ನಿಯಂ ಬೆಳಗೆ ವಿಪ್ರರಾಶೀರ್ವಾದಮಂ ಮಾಡಲು॥
ಬಂದು ತಿಲಕವನಿಟ್ಟು ಪತ್ರಫಲಮಂ ಕೊಟ್ಟು।
ಪೊಂದಳಿಗೆವಿಡಿದಾರತಿಯ ನೆತ್ತಲೈದೆಯರ್।
ಕಂದರ್ಪ ರತಿಗಳ ವಿವಾಹಮೆನೆ ಕಂಗೊಳಿಸಿತಾ ದಂಪತಿಗಳ ಮದುವೆ ॥೧೮॥
ಪ್ರತಿಪದಾರ್ಥ :- ಮುಂದೆ= ಮೊದಲೇ, ವಿರಚಿಸಿದ= ಎಸಗಿದ್ದ, ವೇದಿಯೊಳು= ಹಸೆಜಗಲಿಯ ಮೇಲ್ಕಡೆ, ಎಸೆವ= ಹೊಳೆಯುವ, ಲಾಜ= ಲಾಜಾಹೋಮವು, (ಅರಳನ್ನು ಮಂತ್ರಪುರಸ್ಸರವಾಗಿ ಅಗ್ನಿಯಲ್ಲಿ ಹಾಕುವುದು) ಅಶ್ಮದಿಂದ= ಅಶ್ಮನಾಮಕವಾದ ಕಾರ್ಯದಿಂದ, ಹೋಮದೊಳು= ಹೋಮದ ಕಾರ್ಯದಿಂದ,ಅಗ್ನಿಯ ಕುರಿತು= ಅಗ್ನಿಗೆ, ಬೆಳಗಿ= ಆರತಿ ಮಾಡಿ, ವಿಪ್ರರು= ಬ್ರಾಹ್ಮಣರು, ಆಶೀರ್ವಾದಮಂ ಮಾಡಲು= ಆಶೀರ್ವಚನವನ್ನು ನುಡಿಯಲು, ಬಂದು= ಬಂದವನಾಗಿ, ತಿಲಕವನು= ಹಣೆಗೆ ಅಲಂಕಾರವಾದದ್ದನ್ನು, ಇಟ್ಟು = ಇಟ್ಟವನಾಗಿ, ಪತ್ರಫಲಮಂ= ಫಲತಾಂಬೂಲವ-
ನ್ನು, ಕೊಟ್ಟು = ಅವರೀರ್ವರ ಕೈಗೆ ಕೊಟ್ಟು, ಐದೆಯರ್= ಮುತ್ತೈದೆಯರು, ಪೊಂದಳಿಗೆ ಪಿಡಿದು= ಚಿನ್ನದ ತಟ್ಟೆಯನ್ನು ಹಿಡಿದುಕೊಂಡು, ಆರತಿಯನು ಎತ್ತಲು= ಆರತಿಯನ್ನು ಬೆಳಗಿದಾಗ, ಆ ದಂಪತಿಗಳ ಮದುವೆ=ಆ ಚಂದ್ರಹಾಸ ವಿಷಯೆ-
ಯರ ಲಗ್ನವು, ಕಂದರ್ಪರತಿಗಳ= ಮನ್ಮಥ ರತಿದೇವಿಯರ,ವಿವಾಹಂ= ಕಲ್ಯಾಣವು, ಎನೆ= ಎಂಬಂತೆ, ಕಂಗೊಳಿಸಿತು= ವಿಜೃಂಭಣೆಯಿಂದ ಕೂಡಿತ್ತು.
ತಾತ್ಪರ್ಯ:- ಸಪ್ತಪದಿ, ಲಾಜಾಹೋಮ, ಮೊದಲಾದವೆಲ್ಲಾ ನೆರವೇರಿದವು. ಬ್ರಾಹ್ಮಣರೆಲ್ಲ ಆಶೀರ್ವಾದವನ್ನು ಮಾಡಿದರು. ಮುತ್ತೈದೆಯರು ಚಂದ್ರಹಾಸನಿಗೂ ವಿಷಯೆಗೂ ಕುಂಕುಮವನ್ನು ಹಣೆಗಿಟ್ಟು, ಕೈಗೆ ತಾಂಬೂಲವನ್ನು ಕೊಟ್ಟು ಹಾಡುಗಳ-
ನ್ನು ಹೇಳುತ್ತಿರುವ ಚಂದವನ್ನು ನೋಡಿದರೆ ಮನ್ಮಥ ರತಿದೇವಿಯರ ಮದುವೆಯೋ ಎಂಬಂತೆ ಮೆರೆಯುತ್ತಲಿತ್ತು.
ತತ್ಕಾಲದೊಳ್ ಮದನನಾ ಚಂದ್ರಹಾಸನಂ।
ಸತ್ಕರಿಸಿ ಬಳುವಳಿಗೆ ಬಹಳ ಗೋ ಮಹಿಷಿ ಬಲ।
ವತ್ಕರಿಸಿ ತುರಂಗ ರಥ ಶಯ್ಯಾಸನಂಗಳಂ ವಳಿತ ವಾಹನ ಪದವನು॥
ಉತ್ಕೃಷ್ಟ ಪರಿಮಳದ್ರವ್ಯ ಸಂಕುಲಮಂ ಚ।
ಮತ್ಕಾರದಬಲೆಯರನಂಬರಾಭರಣ ವಿಲ।
ಸತ್ಕಂಠಮಾಲೆಗಳನಿತ್ತನೆಂದುಂ ಬಳಸಿ ತೀರದ ಸುವಸ್ತುಗಳನು॥೧೯॥
ಪ್ರತಿಪದಾರ್ಥ :- ತತ್ಕಾಲದೊಳ್ = ವಿಷಯೆಗೂ ಚಂದ್ರಹಾಸನಿಗೂ ಮದುವೆ ನಡೆದ ವೇಳೆಯೊಳಗೆ, ಮದನಂ= ಮದನನು, ಚಂದ್ರಹಾಸನಂ= ಆ ಚಂದ್ರಹಾಸನನ್ನು, ಸತ್ಕರಿಸಿ = ಆದರಿಸಿ, ಬಹಳ = ಅಧಿಕವಾದ, ಗೋ= ಧೇನುಗಳನ್ನೂ, ಮಹಿಷಿ= ಎಮ್ಮೆಗಳನ್ನೂ, ಬಲವರ್= ಬಲವಾಗಿರತಕ್ಕ, ಕರಿ= ಆನೆಗಳನ್ನೂ, ಅಶ್ವರಥ ಶಯ್ಯಾಸನಂಗಳಂ= ಕುದುರೆ, ರಥ, ಹಾಸಿಗೆ,ಕುಳಿತುಕೊಳ್ಳುವ ವಸ್ತುಗಳೆ ಮೊದಲಾದವನ್ನೂ, ವಳಿತ= ಆವರಿಸಿರುವ, ವಾಹನಪದವನು= ಅಶೂವರಥಗಳನ್ನು
ನಿಲ್ಲಿಸಲು ಅನುಕೂಲವಾದ ಎಡೆಗಳನ್ನೂ, ಉತ್ಕರ್ಷ= ಶ್ರೇಷ್ಠವಾದ, ಪರಿಮಳ= ಸುರಭಿ ವಿಶಿಷ್ಟವಾದ, ದ್ರವ್ಯ= ಪದಾರ್ಥಗಳ, ಸಂಕುಲವನು=ಸಮುದಾಯವನ್ನು, ಚಮತ್ಕಾರದ= ಚಾತುರ್ಯದಿಂದ ಕೂಡಿರುವ,ಅಬಲೆಯರನು= ನಾರಿಯರನ್ನೂ, ಅಂಬರ= ಪೀತಾಂಬರವೇ ಮೊದಲಾದವನ್ನೂ, ಆಭರಣ= ತೊಡಿಗೆಗಳನ್ನೂ, ವಿಲಸತ್= ಕಾಂತಿಯುಕ್ತ-
ವಾದ, ಕಂಠಮಾಲೆಗಳನು= ಕಂಠೀಹಾರಗಳನ್ನೂ, ಬಳಸಿ= ಉಪಯೋಗಿಸಿ, ಎಂದುಂ= ಯಾವಕಾಲಕ್ಕೂ, ತೀರದ= ಮುಗಿಯದ, ಸುವಸ್ತುಗಳನು= ಶ್ರೇಷ್ಠವಾದ ವಸ್ತುಗಳನ್ನೂ, ಬಳುವಳಿಗೆ=ಮರ್ಯಾದಾ ದ್ರವ್ಯಕ್ಕಾಗಿ, ಇತ್ತನು= ಕೊಟ್ಟನು.
ತಾತ್ಪರ್ಯ:- ಈ ರೀತಿಯಲ್ಲಿ ಅತಿ ಸಂಭ್ರಮದಿಂದ ವಿವಾಹ ಮಹೋತ್ಸವವು ನಡೌದಮೇಲೆ ಮದನನು, ಅನೇಕ ಗೋವುಗಳನ್ನೂ, ಮಹಿಷಿಗಳನ್ನೂ,ಆನೆ, ಕುದುರೆ ರಥಗಳನ್ನೂ, ಹಸೆಗೆ ಕುಳಿತುಕೊಳ್ಳುವ ಪೀಠಗಳೇ ಮೊದಲಾದವನ್ನೂ, ಹೆಚ್ಚಾದ ಸುಗಂಧ ದ್ರವ್ಯಗಳನ್ನೂ, ಅನೇಕ ಜನ ಸ್ತ್ರೀಯರನ್ನೂ, ನಾನಾಪ್ರಕಾರವಾದ ಉಡಿಗೆ ತೊಡಿಗೆಗಳನ್ನೂ, ಅನೇಕ ಕಂಠೀಹಾರಗಳನ್ನೂ, ಎಂದೆಂದಿಗೂ ಮುಗಿಯದಷ್ಟು ಹೆಚ್ಚಾಗಿ ಆ ವಧೂವರರಿಗೆ ಬಳುವಳಿಯಾಗಿ ಕೊಟ್ಟನು.
ಉರ್ವೀಶ್ವರನ ಪುರೋಹಿತ ಗಾಲವಂಗೆ ತನ।
ಗುರ್ವ ಬಾಂಧವ ಪುತ್ರಮಿತ್ರರ್ಗೆ ನೆರೆದ ಭೂ।
ಗೀರ್ವಾಣರೆಲರ್ಗೆ ಕವಿ ಗಮಕಿ ನಟ ವಿದೂಷಕ ವಂದಿ ಗಾಯಕರ್ಗೆ॥
ಸರ್ವ ಜನಕವರವರ ತರವರಿತು ಸತ್ಕರಿಸಿ।
ತರ್ವಾಯೊಳಗಣಿತ ದ್ರವ್ಯಮಂ ಪೊತ್ತು ಬೇ।
ಸರ್ವಿನಂ ಕೊಟ್ಟನುತ್ಸವದಿಂದೆ ಯಾಚಕರ್ಗಾಗ ದುರ್ಮತಿಯ ಸೂನು॥೨೦॥
ಪ್ರತಿಪದಾರ್ಥ :- ದುರ್ಮತಿಯ ಸೂನು= ದುಷ್ಟಬುದ್ಧಿಯ ಮಗ ಮದನನು, ಉರ್ವೀಶ್ವರನ= ಕುಂತಳ ರಾಜನ, ಪುರೋಹಿತ= ಹವ್ಯಕ ವ್ಯಾದಿಗಳನ್ನ ಮಾಡಿಸತಕ್ಕ, ಗಾಲವಂಗೆ= ಗಾಲವ ಮುನಿಗೂ, ತನಗೆ= ತನ್ನಕಡೆಯ, ಉರ್ವ= ಹೆಚ್ಚಾದ, ಬಾಂಧವ= ನೆಂಟರುಗಳಿಗೂ, ಪುತ್ರ= ಮಕ್ಕಳಿಗೂ, ಮಿತ್ರರ್ಗೆ= ಪ್ರೀತಿಪಾತ್ರರಾದವರಿಗೂ, ನೆರೆದ= ಅಲ್ಲಿ ಸೇರಿರತಕ್ಕ, ಭೂಗೀರ್ವಾಣರೆಲ್ಲರಿಗೆ= ಭೂಸುರರಿಗೂ, ಕವಿ=ಕವಿಗಳಿಗೂ, ಗಮಕಿ= ಓದುಗರಿಗೂ, ನಟ= ನರ್ತಕರು, ವಿದೂಷಕ= ನಕಲಿಯವರು, ವಂದಿ= ಹೊಗಳತಕ್ಕವರು, ಗಾಯಕರ್ಗೆ= ಹಾಡುಗಾರರಿಗೆ, ಸರ್ವಜನಕೆ= ಸಮಸ್ತರಿಗೂ, ಅವರವರ= ಆಯಾಯ ಪ್ರಜೆಗಳ, ತರವ= ಮರ್ಯಾದೆಯನ್ನು, ಅರಿತು=ತಿಳಿದು, ಸತ್ಕರಿಸಿ = ಮನ್ನಿಸಿ,ತರ್ವಾಯದೊಳು=
ಇವರನ್ನೆಲ್ಲಾ ಉಪಚರಿಸಿದ್ದಾದನಂತರ,ಅಗಣಿತ= ಲೆಕ್ಕವಿಲ್ಲದಷ್ಟು, ದ್ರವ್ಯಮಂ= ಹಣವನ್ನು, ಪೊತ್ತು=ಹೊತ್ತುಕೊಂಡು, ಬೇಸರ್ವಿನಂ= ಬೇಸರಹುಟ್ಟುವಂತೆ, ಉತ್ಸವದಿಂದ=ಅತ್ಯಾನಂದದಿಂದ, ಯಾಚಕರ್ಗೆ= ಭಿಕ್ಷುಕರಿಗೆ, ಕೊಟ್ಟನು= ಕೊಟ್ಟನು.
ತಾತ್ಪರ್ಯ:- ಆ ಬಳಿಕ ಪುರೋಹಿತನಾದ ಗಾಲವ ಮುನಿಗೂ, ತನ್ನ ಬಂಧುಮಿತ್ರರಿಗೂ, ಬ್ರಾಹ್ಮಣೋತ್ತಮರಿಗೂ, ಕವಿಗಳು, ಶಾಸ್ತ್ರಜ್ಞರು,ನಟವಿದೂಷಕರಿಗೂ, ಸ್ತುತಿಪಾಠಕರಿಗೂ, ಗಾಯಕರೇ ಮೊದಲಾದವರಿಗೆಲ್ಲಾ ಅಪರಿಮಿತವಾದ ಹಣದ ರಾಶಿಯನ್ನುಕೊಟ್ಟು ಸತ್ಕರಿಸಿದನು. ಯಾಚಕರಿಗಾದರೊ ಅವರು ಹೊರುವಷ್ಟು ಧನವನ್ನು ಕೊಟ್ಟು ಅವರ ಮನಸ್ಸನ್ನು ತಣಿಸಿದನು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ