ಮಲ್ಲಿನಾಥ ಪುರಾಣಂ - ನಾಗಚಂದ್ರ
ಈ ಕೃತಿಯ ಕರ್ತೃ ನಾಗಚಂದ್ರ. ರಾಮಚಂದ್ರ ಚರಿತ ಪುರಾಣ ಮತ್ತು ಮಲ್ಲಿನಾಥ ಪುರಾಣ ಈತನ ಕೃತಿಗಳು. ಕವಿ ನಾಗಚಂದ್ರನನ್ನು ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಮೊದಲ ಬಾರಿಗೆ ಪರಿಚಯಿಸಾಕೊಟ್ಟ ಕೀರ್ತಿ ಹರ್ಮನ್ ಮೊಗ್ಲಿಂಗ್ ಅವರಿಗೆ ಸಲ್ಲತಕ್ಕದ್ದು. ಇವನು ತನ್ನನ್ನು ಅಭಿನವ ಪಂಪಂನೆಂದು ಅಭಿಮಾನದಿಂದ ಕರೆದುಕೊಂಡಿದ್ದಾನೆ.ತನ್ನ ಬಿರುದಿಗೆ ತಕ್ಕ ಹಾಗೆ ಪಂಪನ ತರುವಾಯದ ಕವಿಗಳಲ್ಲಿ ಮಹತ್ವದವನಾಗಿದ್ದಾನೆ. ಇವನು ರಾಮಾಯಣದ ವಸ್ತುವನ್ನು ಕನ್ನಡಕ್ಕೆ ಪರಿಚಯಿಸಿದ ಮೊದಲ ಕವಿ. ಪಂಪ ರಾಮಾಯಣವನ್ನು ಮೊದಲ ಬಾರಿಗೆ ಸಂಪಾದಿಸಿಕೊಟ್ಟ ಬಿ. ಎಲ್. ರೈಸ್ ರವರು ನಾಗಚಂದ್ರನ ಕಾಲವನ್ನು ಕ್ರಿ. ಶ. ೧೧೪೦ ಎಂದು ಅಭಿಪ್ರಾಯ ಪಡುತ್ತಾರೆ. ಇವನು ಉತ್ತರ ಕರ್ನಾಟಕದ ವಿಜಯಪುರಕ್ಕೆ ಸೇರಿದವನು.
೨೪ ಜನ ತೀರ್ಥಂಕರರಲ್ಲಿ ಮಲ್ಲಿನಾಥ ೧೯ನೆಯವನು.ಇವನ ಚರಿತ್ರೆಯೇ ಮಲ್ಲಿನಾಥ ಪುರಾಣ. ಈ ಕೃತಿಗೆ ವಸ್ತುವನ್ನು ೯ನೆಯ ಶತಮಾನದ ಜಿನಸೇನ ಮತ್ತು ಗುಣಭದ್ರಾಚಾರ್ಯರ ಮಹಾಪುರಾಣದಿಂದ ಪಡೆದುಕೊಂಡಿದ್ದಾನೆ. ಮೂಲದಲ್ಲಿ ೧೨೫ ಶ್ಲೋಕಗಳಲ್ಲಿದ್ದ ಮಲ್ಲಿನಾಥನ ಕಥೆಯನ್ನು ನಾಗಚಂದ್ರನು ತನ್ನ ಪ್ರತಿಭಾಕೌಶಲದಿಂದ ವಿಸ್ತರಿಸಿ ಹೇಳಿದ್ದಾನೆ. ಮಹಾಪುರಾಣದ ಒಂದು ಭಾಗವೆನಿಸಿದ್ದ ಮಲ್ಲಿನಾಥನ ಕಥೆಯನ್ನು ಸ್ವತಂತ್ರ ಮಲ್ಲಿನಾಥ ಪುರಾಣವಾಗಿ ರಚಿಸೆದ್ದಾನೆ. ಇವನು ಮಾರ್ಗಶೈಲಿಯ ಅನುಯಾಯಿ. ಪ್ರಾಚೀನವಾದ ಚಂಪೂಕಾವ್ಯ ಪದ್ದತಿಯನ್ನು ಅನುಸರಿಸಿದ್ದಾನೆ.
ಪ್ರಥಮಾಶ್ವಾಸಂ :
ಶ್ರೀ ಪಾದಂ ಬಾಲಚಂದ್ರೋಜ್ವಲತರಸುಮನೋವರ್ಷದಿಂ ಪಾದಪೀಠಂ।
ಭೂಪಾಲೋತ್ತಂಸತಾರಾತರಳಮಣಿಗಳಿಂದುತ್ತಮಾಂಗಂ ಶರಜ್ಜ್ಯೋ॥
ತ್ಸ್ನಾಪಾಂಡುಚ್ಛತ್ರರತ್ನಂಗಳಿನಱಿಪೆ ನಿಜೈಶ್ವರ್ಯಮಂ ದಿವ್ಯಭಾಷಾ।
ವ್ಯಾಪಾರೋದಾರನಾದಂ ಕುಡುಗೆಮಗೆ ಸುಖಾವಾಪ್ತಿಯಂ ಮಲ್ಲಿನಾಥಂ॥೧॥
ಕರಣಂಗಳ್ವಿಷಯಂಗಳತ್ತೆಱಗದೀರಾಱುಂ ತಪೋಮಾರ್ಗವಿಂ।
ಬಿರದಿಂಬಿತ್ತುದು ಶೀಲಮಾಲೆ ಪದುಳಂ ನಿಂದತ್ತು ಮೆಯ್ವೆರ್ಚಿ ಶಾಂ॥
ತರಸಂ ಕಾೞ್ಪುರಮಾಯ್ತೆ ನಲ್ದಯೆಯ ನೇತ್ರೋನ್ಮೀಲನಂ ಗೆಯ್ದ ಸ।
ಚ್ಚರಿತರ್ ಸಾಧುಗಳೆಮ್ಮನುದ್ಧರಿಸುಗೀ ಸಂಸಾರವಾರಾಶಿಯಿಂ॥೫॥
ಪದವಿನ್ಯಾಸ ವಿಲಾಸಮಂಗವಿಭವಂ ಚೆಲ್ವಾದ ದೃಷ್ಟಿಪ್ರಸಾ।
ದದೊಳೊಂದಾದ ನಯಂ ಮೃದೂಕ್ತ್ತಿ ವನಿತಾಸಾಮಾನ್ಯವಲ್ತೆಂಬ ಕುಂ॥
ದದ ವರ್ಣಂ ನಿಜವೆಂಬ ರೂಪೆಸೆಯೆ ನಾನಾ ಭಂಗಿಯಂ ಬೇಱ ತಾ।
ಳ್ದಿದ ವಾಗ್ದೇವತೆ ಮಾೞ್ಕೆ ಮತ್ಕೃತಿಗೆ ಲೋಕಾಶ್ಚರ್ಯಚಾತುರಯ್ಮಂ॥೭॥
ವಾರಣವಾಹನಂ ಪೃಥುತರಾಷ್ಟ್ರಭುಜಂ ವಿಜಯಾಂಗನಾಗೃಹ।
ದ್ವಾರದನೇಕ ಶಾಖೆಯೆನೆ ವಕ್ತ್ರಚತುಷ್ಟಯಮೊಂದೆ ನಾಳದೊಳ್॥
ನೀರಜಮುಳ್ಳಲರ್ದುವೆನೆ ರಂಜಿಸುವಂ ಸುರಚಾಪ ರುಙ್ಮನೋ।
ಹಾರಿ ಕುಬೇರಯಕ್ಷನೊಸದೀ ಕೃತಿಗೀಗೆ ಗುಣ ಪ್ರತಿಷ್ಠೌಯಂ॥೮॥
ಚತುರಂಗುಲ ಚಾರಣ ಋ।
ದ್ಧಿತಮಗೆ ಸಮನಿಸಿದುದೆನಿಪ ತಪದುನ್ನತಿಯಿಂ॥
ಶ್ರುತದಿಂ ಭೂಮಂಡಲವಿ ।
ಶ್ರುತರೆನಿಸಿದರಲ್ತೆ ಕೊಂಡಕುಂದಾಚಾರ್ಯರ್॥೧೫॥
ಚಾರುಚರಿತ್ರತೀರ್ಥ ಜಲದಿಂದಘಕರ್ದಮಮಂ ಕೞಲ್ಚಿ ಸಂ।
ಸಾರಸಮುದ್ರಮಂ ತೃಣಪಯಃಕಣದಿಂದಿೞಿಕೆಯ್ದು ದಿವ್ಯ ಭಾ॥
ಷಾರಸಪೂರ್ಣಮಂ ಶ್ರುತಪಯೋಧಿಯೆನಿಸಿದ ವರ್ಧಮಾನ ಭ।
ಟ್ಟಾರಕಂ ವಚಸ್ಸುರಭಿಚಂದನಚರ್ಚೆಗಳಿಂದಮರ್ಚಿಪೆಂ॥೧೭॥
ವಿವಿಧಾಲಂಕಾರದಿಂ ರಂಜಿಸೆ ತಮಗೆ ವಶಂ ಮಾಡಿ ಶಬ್ಧಗಳಂತ।
ಮ್ಮ ವಚಸ್ಸಂಪತ್ತಿ ಕರ್ಣಾಮೃತಮೆನೆ ರಸಭಾವಂಗಳಂ ತೋಱೆ ಜಾಡ್ಯ॥
ವ್ಯವಹಾರಂ ಪಿಂಗೆ ತಮ್ಮಿಂ ನೆಗೞೆ ಸುಖಮಯಂ ಸೃಷ್ಟಿ ಸತ್ಕೀರ್ತಿಯಂ ಭೂ।
ಭುವನಂ ನಿಲ್ವನ್ನೆಗಂ ತಾಳ್ದಿದ ಸುಕವಿಗಳಿಂದಕ್ಕೆ ವಿದ್ಯಾಪ್ರಸಾದಂ॥೨೩॥
ಮನ್ನಿಸುಗೆ ಕೃತಿಗೆ ಸೌಭಾ।
ಗ್ಯೋನ್ನತಿಯಂ ಸುಕವಿಪಂಪನಾದಿಪುರಾಣಂ॥
ಪೊನ್ನನ ಶಾಂತಿಪುರಾಣಂ।
ರನ್ನನ ಕೃತಿರತ್ನಮೆನಿಸಿದಜಿತಪುರಾಣಂ॥೨೫॥
ರಸಮಂ ನಾಲಗೆ ಕವಿತಾ।
ರಸಮಂ ಕವಿ ಕುಸುಮರಸಮನಳಿಮಾಳೆ ಸುಧಾ॥
ರಸಮಂ ಸುರರಕ್ಷಯಸುಖ।
ರಸಮಂ ಪರಮಾತ್ಮನಱಿವನುೞಿದೆವರಱಿಯರ್॥೨೮॥
ಬಗೆ ಕಿಱಿದು ಮಾತು ಪಿರಿದೆನೆ।
ಬಗೆಯಂ ನುಡಿ ಮುಟ್ಟಿ ನುಡಿಯದೆನೆ ಬಗೆ ಪೆಱರಂ॥
ಬಗೆಗೊಳಿಸಲಾಱದೆನೆ ಪೇ।
ೞ್ಗಾವಿಲರ್ಕವಿತೆಗೇಕೆ ಮುಯ್ಯಂ ಮಾೞ್ವರ್॥೩೧॥
ಪೆಱರ ನುಡಿ ಪೆಱರ ಮಾರ್ಗಂ।
ಪೆಱರ್ಥಂ ಪೆಱರೆ ದೇಸಿ ಪೆಱರೋಜೆಯೆನಲ್॥
ಪೆಱರ ಬೞಿಸಂದು ತನ್ನಂ।
ಮೆಱವಂ ಕವಿಯಲ್ಲಮಾಟಕಾಱರ ಚೋಹಂ॥೩೨॥
ಪರಿಣತಕವೀಂದ್ರವದನಾ।
ಜಿರದೊಳ್ ಮೃದುಪದವಿಲಾಸ ವಿನ್ಯಾಸಾಲಂ॥
ಕರಣಂ ರಂಜಿಸೆ ನರ್ತಿಪ।
ಸರಸ್ವತೀಲಾಸ್ಯ ಭೇದಮಂ ಜಡನಱಿಯಂ॥೩೪॥
ಧರೆ ಪೊಗೞೆ ವೀತರಾಗನ।
ಚರಿತದೊಳಳವಡಿಸಿ ಸಕಲರಸಮಂ ಕವಿತಾ॥
ಪರಿಣತೆಯಂ ಮೆಱದೀಕಾ।
ವ್ಯರಸಾರ್ಣವಪೂರ್ಣಚಂದ್ರನಭಿನವಪಂಪಂ॥೩೯॥
ಜಿನಪತಿಗಂ ಜಿನಮುನಿಗಂ।
ಜಿನಾಗಮಕ್ಕಂ ಜಿನಾಧಿಪತಿಭವನಕ್ಕಂ॥
ಜಿನಗುಣಸಂಪತ್ತಿಗಮೆಱ।
ಪನೆಱಗನುೞಿದವರ್ಗೆ ನಾಗಚಂದ್ರಕವೀಂದ್ರಂ॥೪೦॥
ಪದರಚನೆ ಸಜ್ಜನಶ್ರವ।
ಣದೊಳಂಚೆಯ ತುಪ್ಪುೞಂಚೆಯಂ ತಿರಿಪಿದವೊಲ್॥
ಮೃದುವೆನೆ ಪೊಸಬಗೆ ರಸಭಾ।
ವದೊಳೋಕುಳಿಯಾಡೆ ಪೇೞ್ದನಭೆನವಪಂಪಂ॥೪೨॥
ಫುಲ್ಲಸರಳ್ ಬಸಂತದ ಪುಗಿಲ್ ನೆಱೆದಿಂಗಳ ತಣ್ಬಿಸಿಲ್ಮುಗು।
ಳ್ಮಲ್ಲಿಗೆ ಬಂದ ಮಾವಲೆವ ತೆಂಕಣಗಾಳೀ ವಿಪಚಿಯಿಂಚರಂ॥
ನಲ್ಗಳ ಲಲ್ಲೆ ಕೋಗಿಲೆಯ ಬಗ್ಗಣೆ ತುಂಬಿಯ ಗೇಯತಮೆಂಬಿನಂ।
ಬಲ್ಲವರಂ ಮನಂಗೊಳಿಸುಗು ಕೃತಿ ಸತ್ಕೃತಿ ನಾಗಚಂದ್ರನೃ॥೪೪॥
ಭರತಮಹೀಶ್ವರಂಗೆ ಮಗಧೇಶ್ವರಮಂಡಲಿಕಂಗೆ ತಾರಭೂ।
ಧರವಿಪುಲಾದ್ರಿಯೊಳ್ ವೃಷಭಸೇನಗಣಾಗ್ರಣಿ ಗೌತಮೋತ್ತಮಂ॥
ಪುರಜಿನವರ್ಧಮಾನಗುರುಸನ್ನಿಧಿಯೊಳ್ತಿಳಿವಂತು ಪೇೞ್ದುದಂ ।
ವಿರಚಿಸುವೆಂ ಮನಂಬಯಸೆ ಮಲ್ಲಿಜಿನೇಂದ್ರಮಹಾಪ್ರಬಂಧಮಂ॥೫೩॥
ಇದು ಪರಮಜಿನಸಮಯ ಕುಮುದಿನೀ ಶರಚ್ಚಂದ್ರಬಾಲಚಂದ್ರ
ಮುನೀಂದ್ರ ಚರಣನಖಕಿರಣಚಂದ್ರಿಕಾಚಕೋರಂ ಭಾರತೀ
ಕರ್ಣಪೂರಂ ಶ್ರೀಮದಭಿನವಪಂಪ ವಿರಚಿತಮಪ್ಪ
ಮಲ್ಲಿನಾಥಪುರಾಣದೊಳ್
ಪೀಠಿಕಾಪ್ರಕರಣಂ ಪ್ರಥಮಾಶ್ವಾಸಂ.
ಚತುರ್ಥಾಶ್ವಾಸಂ.
ವ॥ ಆಗಳರಸನತಿಹರ್ಷಚಿತ್ತನರ್ಹತ್ಪರಮೇಶ್ವರಪೂಜಾವಿಧಿಗಳಂ ನಿಯೋಜಿಸಿ ಬಿಜಯಂಗೆಯ್ವುದುಮಾ ಮಹಾನುಭಾವೆ ವಯಶ್ರವಣ ವಲ್ಲಭನಿಯಾಮದಿಂ ಶುಛಿರ್ಭೂತೆಯುಮತಿಸಮಾಹಿತಚಿತ್ತೆಯುಮಾಗಿ,
ಸುತಲಾಭಾರ್ಥಿ ವಿಶೇಷತೀರ್ಥಜಲದಿಂ ಶ್ರಿಖಂಡದಿಂದಕ್ಷತಾ।
ಕ್ಷತದಿಂ ಕಾಂತಲತಾಂತಮಾಲಿಕೆಗಳಿಂ ದಿವ್ಯಾನ್ನದಿಂ ರತ್ನರಂ॥
ಜಿತದೀಪಪ್ರಚಯಂಗಳಿಂದಗರೂಧೂಪ ಸ್ತೋಮದಿಂ ಮಂಗಲೋ।
ಚಿತ ನಾನಾಫಲದಿಂ ಲತಾಂಗಿ ಜಿನಪಾದ್ಯಾಭ್ಯರ್ಚನಂ ಮಾಡಿದಳ್॥೨೬॥
ಮಾಣಿಕದ ಸೊಡರ್ಗಳಿಂ ನೇ।
ರಾಣಿಯ ಪೊನ್ನಲರ್ಗಳಿಂ ಹರಿದ್ರತ್ನಚತು॥
ಷ್ಕೋಣಕಲಶಂಗುಳಿಂ ಗೀ।
ರ್ವಾಣಾರ್ಚಿತನಂ ನರೇಂದ್ರವಧುವರ್ಚಿಸಿದಳ್॥೨೭॥
ಭ್ರಮರಹಿತಂ ಹೃದ್ಯಂ ಸ್ಮೇ।
ರಮುಖಂ ಲೋಕೈಕಹಿತಕರಂ ಸುಕುಮಾರಂ॥
ಸಮನಿಸುಗೆಂದರ್ಚಿಸಿದಳ್।
ಸುಮನೋಮಂಜರಿಯಿನಾಕೆ ಸುಮನಸ್ಸು ತನಂ॥೨೮॥
ತೊಳಗುವ ದೀಪಾವಳಿಯಿಂ।
ವಿಳಾಸವತಿ ಪಾತ್ರದೊಳ್ಸುಗುಣಸ್ನೇಹದಿನು॥
ಜ್ಜ್ವಳಿಸುವ ತೇಜೋನಿಲಯಂ।
ಕುಳದೀಪಕತನಕ್ಕೆ ತನಯನೆಂದರ್ಚಿಸಿದಳ್॥೨೯॥
ಅಟ್ಟುವ ಸೀಯನಪ್ಪ ರಸಗೇಯಮದಂಗೆಡೆಗೊಂಡೈ ಚಿತ್ತಮಂ।
ಮುಟ್ಟುವ ಹೃದ್ಯವಾದ್ಯಲಯದೋಜೆಯಿನೊಂದೆ ಲಯಕ್ಕೆ ಲಕ್ಕೆಯಂ॥
ಮೆಟ್ಟುವ ಪೆಕ್ಕಣಂ ತುಱುಗಿ ಕಟ್ಟುವ ವಂದನಮಾಲೆ ಲೀಲೆಯಂ।
ಪುಟ್ಟಿಸೆ ನಿಚ್ಚಮರ್ಚಿಸುವಳಾ ಸತಿ ದಿವ್ಯಜಿನೇಂದ್ರಗೇಹಮಂ॥೩೦॥
ಮಾನಿನಿ ನಾಲ್ಕುಂನಿಯಮ ವಿ।
ಧಾನದ ಬೞಿಸಂದು ನಿಚ್ಚೆಯಿಂ ಚರಿಯಿಸಿ ಸಂ॥
ತಾನಾರ್ಥಮೆನೆ ಚತುರ್ವಿಧ।
ದಾನವಾಸನದೊಳೆ ದಿವಸಮಂ ನಡೆಯಿಸುವಳ್॥೩೫॥
ಅನುಲೇಪಂ ತನುವಿಂಗೆ ಮಾಲೆಕಬರೀಭಾರಕ್ಕೆ ಹಾರಂ ಘನ।
ಸ್ತನಭಾರಕ್ಕತಿಭಾರಮೆಂಬ ಸುಕುಮಾರಶ್ರೀಯನಾಳ್ದಾನಿತಂ॥
ಬಿನಿಭೂಶಯ್ಯೆಗೆ ಜಾಗರಕ್ಕನಶನಕ್ಕೇಕಾಂತರಕ್ಕೇಕಭು।
ಕ್ತಿನಿಯಾಮಕ್ಕೊಡಲಂ ನಿಯೋಜಿಸಿದಳಾಶಾಶಕ್ತಿ ಸಾಮಾನ್ಯಮೇ॥೩೬॥
ರನ್ನದ ಬಾಯಿನಕ್ಕೆ ಪಲವಂದದ ಚಂದದ ಸೀರೆಗೆನ್ನವ।
ರ್ತನ್ನವರೆನ್ನದಿತ್ತೋಸಗೆಗೀ ನೆಲದೊಳ್ ಪೊಱಗಾಱುಮಿಲ್ಲೆನಲ್॥
ಮನ್ನಿಸಿ ಮೆಯ್ಮೆಯಂ ಮೆಱೆದು ಪುಂಸವನಂ ಮೊದಲಾಗೆ ತಕ್ಕುವಂ।
ತನ್ನಿನಿಯಳ್ಗೆ ಮಾಡಿಸಿದನುತ್ಸವದಿಂ ನೃಪನುತ್ಸವಂಗಳಂ॥೭೧॥
ವ॥ ಅಂತು ನೆಗೞ್ವಿ ಮಹೋತ್ಸವಂಗಳೊಡನೆ ಗರ್ಭಮಂ ಬಂಧುಜನ ಹರ್ಷಗರ್ಭಮುಂ ಪರಿಪೂರ್ಣಮಾಗೆ,
ಮರಕತರಂಗದೊಳ್ ರಮಣಿ ತೀವಿದಗರ್ಭದ ಬಿಣ್ಪಿನಿಂ ನಯಂ।
ಬೆರಸೆಡೆಯಾಡುವಾಗಳತಿಯೂಡಿದ ಮೆಲ್ಲಡಿವಜ್ಜೆಗಳ್ ಮನೋ॥
ಹರಮೆನಿಸಿರ್ದುವೀ ಸತಿಯ ಗರ್ಭದೊಳಿರ್ದ ತನೂಜನಾದವಂ ।
ವರನೆನಗೆಂದಿಳಾವಧುಗೆ ಪಲ್ಲವೆಸಿತ್ತನುರಾಗಮೆಂಬಿನಂ॥೭೨॥
ಹಾರಮನಿಕ್ಕಿ ಮಿಕ್ಕ ಕನಕಾಭರಣಂಗಳ ಬಿಣ್ಪನೇನುಮಂ।
ಸೈರಿಸದಿರ್ಪುದಪ್ಪುದೆ ವಲಂ ಕನಕಾದ್ರಿಯ ಬಿಣ್ಪನಪ್ಪೊಡಂ॥
ಸೈರಿಸದರ್ಭಕಂ ಬಳೆಯೆ ಗರ್ಭಸರೋಜದೊಳಾವಿನೀ।
ರೇರುಹನೇತ್ರ ತತ್ಕನಕಮಾತ್ರದ ಬಿಣಪನದೇಕೆ ಸೈರಿಪಳ್॥೭೩॥
ತನು ತನುವಾದ ಗರ್ಭಿಣಿಗೆ ತತ್ಸಮಯೋಚಿತಮಂಗಳಪ್ರಸಾ।
ಧನಮೆಸೆದತ್ತು ಕಪ್ಪುರದ ಕಂಠಿಕೆ ಬಣ್ಣದ ಸಣ್ಣ ಮಾಲೆ ತೆಂ॥
ಗಿನ ತಿರುಳೋಲೆ ತಾವರೆಯನೂಲುಡೆನೂಲ್ಸಿರಿಕಂಡದಣ್ಕೆ ಮು।
ತ್ತಿನ ತಿಸರಂ ಮೃಣಾಳಿಕೆಯ ಮುದ್ರಿಕೆ ಪೂವಿನ ಪಿಂಡುಗಂಕಣಂ॥೭೪॥
ಘನಕುಚೆ ಮೇಳದಂಗನೆಯ ಮೇಲೆ ಮಲಂಗಿ ಸರೋಜಪತ್ರವೀ।
ಜನಪವನಂ ವಿಕಾಸಮನೊಡರ್ಚೆ ಮನಕ್ಕೆ ಸುಧಾಪ್ರವಾಹಮೆಂ॥
ಬಿನಮೆರಡುಂ ಕೆಲಂ ಬಿಡಿದು ಬಾಜಿಪ ವಂಶದಿನೋಜೆವೆತ್ತ ಗಾ।
ಇನೆಯರಸೀಯನಪ್ಪ ರಸಗೇಮನಾಲಿಸುತಿರ್ಪಳೊರ್ಮೆಯುಂ॥೭೫॥
ಸೋರ್ಮುಡಿ ಮಾಲೆಯಿಂ ಕದಪುಗಳ್ ಮಲಯೋದ್ಭವಪತ್ರಭಂಗದಿಂ।
ಪೆರ್ಮಾಲೆ ಹಾರದಿಂದೆಸೆಯೆ ಬಂಬಲವಾಡಿದ ರೂಪು ಗಾಡಿಯಂ॥
ನೂರ್ಮಡಿ ಮಾಡೆ ಮೇಳದವಳಂ ಸತಿ ನಿರ್ಭೆರಗರ್ಭಭಾರದಿಂ।
ನೆರ್ಮಿ ನಿಮಿರ್ಚುವಳ್ ಪುರುಳಿಯೊಳ್ಪರಿಹಾಸವಚೋವಿಳಾಸಮಂ॥೭೬॥
ವ॥ ಅಂತು ವಿವಿಧವಿಲಾಸಂಗಳಿಂ ದಿವಸಂಗಳಭಿಲಷಿತಫಳಪ್ರಸವಂಗಳಾಗೆ ಸುಖಪ್ರಸವಸಮಯದೊಳ್,
ಶುಭವಾರಂ ಶುಭವಾಸರಂ ಶುಭಮುಹೂರ್ತಂ ಕೂಡೆ ತಾರಾಬಲಂ।
ಶುಭಮಂ ಮಾಡೆ ಶುಭಗ್ರಹಂ ನಿಲೆನಿಜೋಚ್ಚಸ್ತಾನದೊಳ್ಭೂಭುಜ॥
ಪ್ರಭುಚಿಹ್ನಂ ಶುಭಲಕ್ಷಣಂ ತನುವಿನೊಳ್ಮೆಯ್ದೋಱೆ ಬಾಲಾರ್ಕಸ।
ನ್ನಿಭತೇಜೋನಿಧಿ ನಂದನಂ ಸತಿಗೆ ವಂಶಾನಂದನಂ ಪುಟ್ಟಿದಂ॥೭೭॥
ಸುರಕುಜಮೀವ ದಿವ್ಯವಸನಂಗಳನರ್ಘ್ಯವಿಭೂಷಣಂಗಳೀ ।
ದೊರೆಯವೆ ಮಂದರಾಚಳದ ಕಾಂಚನಮೇನಿನಿತುಂಟೆ ಪನ್ನಗೇ॥
ಶ್ವರನ ಫಣಾಮಣಿಪ್ರಚಯಮಿನ್ನವೆ ಪೇೞೆನಿಪನ್ನವಂ ನಿರಂ।
ತರಮಿರದರ್ಥಿಸಂತತಿಗೆ ಬಾಂಧವಕೋಟಿಗೆ ಕೊಟ್ಟನಾ ನೃಪಂ॥೮೪॥
ಕನಕಮನಾರ್ಪನಿತಂ ಬೇ ।
ೞ್ಪನಿತಂ ದಾವ್ಯಾಂಬರಂಗಳಂ ರತ್ನಮನೊ॥
ಲ್ವನಿತಂ ಭೂಷಣಮಂ ಸಾ।
ಲೂವನಿತಂ ಧರೆಗೆಲ್ಲಮಿತ್ತನಾ ಧರಣೀಶಂ॥೮೫॥
ವ॥ ಅಂತು ಮಹೋತ್ಸವಮಹಾಮಹಿಮೆಯಂ ಮಾಡಿ ದಶಮ ದಿನದೊಳ್
ಈ ಧರೆಗೆಲ್ಲಂ ಕನಕಮ।
ಹೀಧರಮೇಂ ಮನೆಯೊಳುಂಟೆ ಪೇೞೆನೆ ಪಿರಿದಿ॥
ತ್ತಾ ಧರಣೀಶಂ ಸುತನಂ।
ಶ್ರೀಧರಶುಭಕರಣನಾಮದೊಳ್ ಯೋಜಿಸಿದಂ॥೮೬॥
ಇದು ಪರಮಜಿನಸಮಯ ಕುಮುದಿನೀಶರಚ್ಚಂದ್ರಬಾಲಚಂದ್ರ
ಮುನೀಂದ್ರ ಚರಣನಖ ಕಿರಣಚಂದ್ರಿಕಾಚಕೋರಂ ಭಾರತೀ
ಕರ್ಣಪೂರಂ ಶ್ರೀಮದಭಿನವಪಂಪವಿರಚಿತಮಪ್ಪ
ಮಲ್ಲಿನಾಥಪುರಾಣದೊಳ್
ಕುಮಾರೋದಯವರ್ಣನಂ ಚತುರ್ಥಾಶ್ವಾಸಂ ಸಂಪೂರ್ಣಂ.
ನವಮಾಶ್ವಾಸಂ.
ಸಿಡಿಲೆಂಬ ಜವನ ಕೊಡಲಿಯ।
ಕಡುವೊಯ್ಲಿಂ ನೆಗೆದ ಬೇರ್ಗಳೊಡನೆ ನೆಲಂ ಬಾ॥
ಯ್ಬಿಡೆ ಬೆಟ್ಟು ಕೆಡೆವ ತೆಱದಿಂ।
ಕೆಡೆದಾಲಮನಿದಿರೊಳವನಿಪಾಳಂ ಕಂಡಂ॥೩೮॥
ತಲೆಯೊಳ್ತಳ್ಪೊಯ್ಯೆ ಬೇರ್ಗಳ್ ಫಣಿಪತಿ ತಲೆಮಟ್ಟೆತ್ತಿದಂ ಕುತ್ತೆ ಸುತ್ತುಂ।
ಕೆಲಗೊಂಬಾಶಾಗಜಂ ತಾಗಿದುವೆಡೆಗುಡದಾಕಾಶಮಂ ತೀವೆ ತೀವ್ರಾ॥
ನಿಲನಾಟಂದೊತ್ತಿದಂತಿಗ್ಮುರುಚಿಕರಸಹಸ್ರಗಳಿಂ ಪೊಯ್ದನಡ್ಡಂ।
ನಿಲೆ ತೇರ್ಗಂತಲ್ಲದಂದೀ ತರು ಕೆಡೆವುದೆ ಸೌದಾಮಿನೀಪಾತದಿಂದಂ॥೩೯॥
ಎಂದು ಬಗೆ ಪಚ್ಚು ಪಸರಿಸೆ।
ಮಂದರಧೈರ್ಯಂ ಧರಾಧಿಪಂ ಸುರಧನುವಂ॥
ಮುಂದಿಡೆ ಕಿರೀಟಕಿರಣ।
ಸ್ಪಂದನಮಡಿಗಡಿಗೆ ತಲೆಯನೇಂ ತೂಗಿದನೋ॥೪೦॥
ವ॥ ಅಂತು ಮನದೊಳೆ ಬಗೆದು ವಿಸ್ಮಯಮೆ ತನಗೆ ವೈರಾಗ್ಯ ರಸಕ್ಕೆ ಸೇತುವಾಗೆ,
ಆಲಂಬಂ ನಭಮಂ ಪಳಂಚಲೆವ ಶಾಖಾಶ್ರೇಣಿ ಸಗ್ಗಕ್ಕೆನಿ।
ಪ್ಪಾಲಂಬನಮನೆಯ್ದೆ ಕಾಲವಶದಿಂ ಕಂಡು ವಿದಗ್ಧಂ ಮಹೀ॥
ಪಾಲಂ ಭಾವಿಸಿದಂ ದ್ರುಮಪ್ರಕೃತಿಯಂ ದುರ್ಮೋಹದಿಂ ಸಜ್ಜನೋ।
ಪಾಲಂಭಾವಿಳನಾಗಿ ನಿಲ್ಲದೊಡಲಂ ನಂಬಲ್ಮನಂದರ್ಪುದೇ॥೪೧॥
ಸ್ಥಿಯಮೂಲಮನಾಲದ ಪೆ।
ರ್ಮರನಂ ಕಡಿಗೊಂಬುಗೊಂಡ ಕಾಲವ್ಯಾಳ॥
ದ್ವಿರದಕ್ಕೆ ನರಕಳೇಬರ।
ಜರತೃಣಗ್ರಾಸಮಾತ್ರಮಾವುದೊ ಗಹನಂ॥೪೨॥
ಉಸಿರಂ ಕಾಳೋರಗನುಸಿ।
ರ್ದುಸಿರ್ದಿರುಳುಂ ಪಗಲುಮೀಂಟಿಯುಂಮತ್ತಂ ಜೀ॥
ವಿಸುವಳಿಪಿಂದೆಸಗುವ ಮಾ।
ನಿಸನಂ ಸೋಂಕಿದುದು ದೇಹಮೋಹಪಿಶಾಚಂ॥೪೩॥
ಜೀವನ ಸಂಗತಿಯಿಂದಂ।
ಪಾವನಮುೞಿದಂದ ಪಾವನಂ ತಾನೆನೆ ಮೆ॥
ಯ್ಗಾವನೋ ಬಸದಪ್ಪನವಂ।
ಜೀವನ್ಮೃತಕಂ ವಿವೇಕಶೂನ್ಯನಮಾನ್ಯಂ॥೪೪॥
ಎನಿತುಂ ಘನಮಾದೊಡಮಪ।
ಘನಮೆ ಗಡಂ ಸ್ಥೂಳರೂಪಮೆನಿತಾದೊಡಮೇಂ॥
ತನುವೆ ಗಡಂ ದೇಹಂ ಜಾ।
ಣನೊ ಸೂತ್ರಿಸಿದಂತೆ ಪೆಸಱನಿಟ್ಟ ವಿಧಾತ್ರಂ॥೪೫॥
ನಿಮಿಷಾರ್ಧದ ಸಂಗತಿಯಿಂ।
ಸಮಸ್ತಭೋಗೋಪಭೋಗಶುಚಿವಸ್ತುಗಳೆ॥
ಲ್ಲಮನಶುಚಿಮಾೞ್ಪುದಂ ದೇ।
ಹಮನಾತ್ಮಂ ಬಿಟ್ಟು ಪಿಂಗದನ್ನಂ ಶುಚಿಯೆ॥೪೬॥
ಪರಸುತ್ತುಂಮಗನಂ ಪಲ।
ವರಕೆಗಳಿಂದೊಸಗೆವಱೆಯ ದನಿ ಸಕಳದಿಶಾ॥
ಭರಿತಮೆನೆ ಮಾಡಿದಂ ಬಿ।
ತ್ತರದಿಂ ರಾಜ್ಯಾಭಿಷವಣಮಂ ವೈಶ್ರವಣಂ॥೮೬॥
ಉದಯಗಿರಿಕೂಟಕೋಟಿಯಿ।
ನುದಿಯಿಸುವಿನನೆಳವಿಸಿಲ್ಗಳೆನೆ ಭೂಭುಜನೆ॥
ತ್ತಿದ ಪೊಂಗಳಸದ ಧಾರಾ।
ಕದಂಬಮೆಸೆದತ್ತು ಕನಕರುಚಿಪಿಂಜರಿತಂ॥೮೭॥
ಇದು ಪರಮಜಿನಸಮಯಕುಮುದಿನೀಶರಚ್ಚಂದ್ರಬಾಲಚಂದ್ರ
ಮುನೀದ್ರಚರಣಖರಕಿರಣಚಂದ್ರಿಕಾಚಕೋರಂ ಭಾರತೀ
ಕರ್ಣಪೂರಂ ಶ್ರೀಮದಭಿನವಪಂಪವಿರಚಿತಮಪ್ಪ
ಮಲ್ಲಿನಾಥಪುರಾಣದೊಳ್
ಶ್ರೀಧರಕುಮಾರ ಪಟ್ಟಬಂಧೋತ್ಸವವರ್ಣನಂ ನವಮಾಶ್ವಾಸಂ ಸಮಾಪ್ತಂ.
ಸಂಪಾದಕರು:-ಡಾ॥ ಶಾಂತಿನಾಥ ದಿಬ್ಬದ,
ಪ್ರಕಾಶಕರು:-ಪ್ರಸಾರಾಂಗ
ಕನ್ನಡ ವಿಶ್ವವಿದ್ಯಾಲಯ ಹಂಪಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ