ಜೈಮಿನಿ ಭಾರತ 34 - ದೊಡ್ಡಬೆಲೆ ನಾರಾಯಣಶಾಸ್ತ್ರೀ
ಸೂಚನೆ:- ಮಿಗೆ ಮೂಜಗಂ ತಣಿಯೆ ಹಯಮೇಧ ಯಜ್ಞಮಂ।
ಮುಗಿಸಿ ಧರ್ಮಾತ್ಮಜಂ ಕೃಷ್ಣಾದಿ ಸಕಲ ನೃಪ।
ತಿಗಳನವರವರ ನಗರಂಗಳ್ಗೆ ಕಳುಹಿ ಸುಖದಿಂದೆ ರಾಜ್ಯಂ ಗೈದನು॥
ಪ್ರತಿಪದಾರ್ಥ :- ಧರ್ಮಾತ್ಮಜಂ= ಧರ್ಮನಂದನನು, ಮಿಗೆ = ಅಧಿಕವಾಗಿ, ಮೂಜಗಂ= ತ್ರಿಲೋಕಗಳು, ದಣಿಯೆ= ತೃಪ್ತಿಯಾಗುವಂತೆ, ಹಯಮೇಧಯಜ್ಞಮಂ= ಅಶ್ವಮೇಧಯಾಗವನ್ನು, ಮುಗಿಸಿ = ನೆರವೇರಿಸಿ, ಅವರವರ ನಗರಂಗಳ್ಗೆ= ಅವರವರ ರಾಜ್ಯಗಳಿಗೆ, ಕೃಷ್ಣಾದಿ ಸಕಲ ನೃಪತಿಗಳನು= ಕೃಷ್ಣನೇ ಮೊದಲಾದ ರಾಜರನ್ನೆಲ್ಲಾ, ಕಳುಹಿ= ಕಳುಹಿಸಿ, ಸುಖದಿಂದ = ಸೌಖ್ಯವಾಗಿ, ರಾಜ್ಯಂ ಗೈದನು= ರಾಜ್ಯಭಾರವನ್ನು ಮಾಡಿದನು.
ತಾತ್ಪರ್ಯ:- ಧರ್ಮರಾಯನು ಮೂರು ಲೋಕಗಳೂ ತಣಿಯುವಂತೆ ಅಶ್ವಮೇಧಯಾಗವನ್ನು ಮಾಡಿ, ಶ್ರೀಕೃಷ್ಣನೇ ಮೊದಲಾದ ಎಲ್ಲಾ ರಾಜರನ್ನೂ ಅವರವರ ನಗರಗಳಿಗೆ ಕಳುಹಿಸಿ ಸುಖದಿಂದ ರಾಜ್ಯಭಾರವನ್ನು ಮಾಡುತ್ತಿದ್ದನು.
ಅ॥ವಿ॥ ಧರ್ಮಾತ್ಮಜಂ= ಆತ್ಮ- ತನ್ನಲ್ಲಿ, ಜ- ಹುಟ್ಟಿದವನು, (ಸ. ತ. ಸ. )ಧರ್ಮ= ಧರ್ಮರಾಯನ, ಆತ್ಮಜಂ= ಮಗನು, (ಷ. ತ.ಸ.)ಮೂಜಗಂ=ಸ್ವರ್ಗ, ಮರ್ತ್ಯ, ಪಾತಾಳ.
ಅರಸ ಕೇಳರುವತ್ತು ನಾಲ್ಕು ದಂಪತಿಗಳ।
ಧ್ವರದ ಋತ್ವಿಕ್ಕುಗಳ್ವೆರಸಿ ವೇದವ್ಯಾಸ ।
ಪರಮ ಋಷಿ ಗಂಗೆಯೊಳ್ ಜಲದೇವತೆಯನರ್ಚಿಸಿದ ಮಂತ್ರಿತೋದಕವನು।
ವರಪುಷ್ಪ ಪಲ್ಲವದ ಪೊಂಗಳಸಮಂ ತುಂಬಿ।
ಕರದೊಳನುಸೂಯೆಗೀಯಲ್ಕವಳರುಂಧತಿಯ।
ಶಿರಕೆ ಪೊರಿಸಿದೊಡಾಕೆ ರುಕ್ಮಿಣಿಯ ಸಿರಿಮುಡಿಯೊಳಿರಿಸಿ ನಗುತಿಂತೆಂದಳು॥ ೧॥
ಪ್ರತಿಪದಾರ್ಥ :- ಅರಸ= ಜನಮೇಜಯನೆ, ಕೇಳು= ಲಾಲಿಸು, ವೇದವ್ಯಾಸಪರಮರ್ಷಿ= ತಾಪಸೋತ್ತಮನಾದ ವೇದವ್ಯಾಸ ಮುನಿಯು, ಅರವತ್ತನಾಲ್ಕು ದಂಪತಿಗಳು ಮತ್ತು ಅಧ್ವರದ ಋತ್ವಿಕ್ಕುಗಳಿಂದ ಕೂಡಿ, ಜಲದೇವತೆಯನು= ಉದಕಾಭಿಮಾನಿ ದೇವತೆಯನ್ನು, ಗಂಗೆಯೊಳ್= ಗಂಗಾನದಿಯೊಳಗೆ, ಅರ್ಚಿಸಿದ= ಆರಾಧಿಸಿದ, ಮಂತ್ರಿತೋದಕವನು= ಮಂತ್ರಪುರಸ್ಸರವಾದ ನೀರನ್ನು, ವರಪುಷ್ಪಪಲ್ಲವದ= ಉತ್ತಮವಾದ ಹೂ ಚಿಗುರುಗಳಿಂದ ಕೂಡಿದ, ಪೊಂಗಲಶದೊಳ್= ಭಂಗಾರದ ಗಡಿಗೆಯೊಳಗೆ, ತುಂಬಿ= ತುಂಬಿಸಿ, ಕರದೊಳು= ತನ್ನ ಕೈಯಿಂದ, ಅನಸೂಯೆಗೆ= ಅತ್ರಿಮಹರ್ಷಿಯ ಪತ್ನಿಗೆ ಈಯಲ್ಕೆ= ಕೊಡಲಾಗಿ,ಅವಳು=ಆಕೆಯು, ಅರುಂಧತಿಯ ಶಿರಕೆ= ಅರುಂಧತಿಯ ತಲೆಯಮೇಲಕ್ಕೆ, ಪೊರಸಿದೊಡೆ= ಹೊರಸಿದ ಕಾರಣ, ಆಕೆ= ಆ ವಸಿಷ್ಠನ ಹೆಂಡತಿಯು, ರುಕ್ಮಿಣಿಯ ಸಿರಿಮುಡಿಯೊಳು= ರುಕ್ಮಿಣೀದೇವಿಯ ತಲೆಯಮೇಲೆ,
ಇರಿಸಿ= ಇಟ್ಟು, ಇಂತು= ಮುಂದೆ ಹೇಳುವಂತೆ, ನಗುತ= ಮುಗುಳ್ನಗುತ್ತ, ಎಂದಳು= ಹೇಳಿದಳು,
ತಾತ್ಪರ್ಯ:- ಕೇಳೈ ಜನಮೇಜಯ ಮಹೀವಲ್ಲಭನೆ, ಇತ್ತ ನಾರದಮಹಾಮುನಿಯು, ಕೃಷ್ಣನ ಮಹಿಮೆಯನ್ನು ಕೊಂಡಾಡುತ್ತಲಿರುವಾಗ, ಅತ್ತ ಅರವತ್ತನಾಲ್ಕು ದಂಪತಿಗಳು ರುತ್ವಿಕ್ಕುಗಳು ಇವರುಗಳಿಂದ ಕೂಡಿದ ಕೃಷ್ಣನು ಗಂಗಾನದಿಗೆ ಹೋಗಿ ಸೇರಿದನು.ಅಲ್ಲಿ ವೇದವ್ಯಾಸರು ಮಂತ್ರಪೂರಕವಾಗಿ ಜಲದೇವತೆಯನ್ನು ಆರಾಧಿಸಿದ ಬಳಿಕ ಚಿನ್ನದ ಕಲಶದಲ್ಲಿ ಗಂಗೆಯನ್ನು ತುಂಬಿ ಅನಸೂಯೆಯ ಕೈಗೆ ಕೊಡಲು ಆಕೆಯು ಅರುಂಧತಿಗೂ, ಅರುಂಧತಿಯು ರುಕ್ಮಿಣಿಗೂ ಕೊಟ್ಟಳು.
ದೇವಿ ಸಿರಿಮುಡಿಗಲರ್ ಪೊರೆಯಹುದು ನಿನಗೆ ನೀರ್।
ತೀವಿರ್ದ ಪೊಂಗಳಸಮಿದು ತಿಣ್ಣಮಾಗದೆಂ।
ದಾ ವಶಿಷ್ಠನ ರಮಣಿ ರುಕ್ಮಿಣಿಗೆ ವಿನಯದಿಂ ನುಡಿದೊಡೆ ಸುಭದ್ರೆ ಕೇಳ್ದು॥
ಗೋವರ್ಧನವನಾಂತ ವಿಶ್ವಕುಕ್ಷಿಯನೆದೆಯೊ।
ಳಾವಗಂ ಧರಿಸಿಕೊಂಡಿರ್ದ ಮಾನಿನಿಗೆ ಬಿ।
ಣ್ಣಾಪುದು ಪತಿವ್ರತಾಧರ್ಮಮಿದಕಳುಕಲೇತಕೆ ತಾಯೆ ನೀನೆಂದಳು॥೨॥
ಪ್ರತಿಪದಾರ್ಥ :- ಆ ವಶಿಷ್ಠನ ರಮಣಿ= ಆ ವಶಿಷ್ಠ ಮುನಿಯ ಹೆಂಡತಿಯು, ವಿನಯದಿಂ = ಮೆಲ್ನುಡಿಗಳಿಂದ, ರುಕ್ಮಿಣಿಯನ್ನು ಕುರಿತು, ದೇವೆ= ಎಲೌ ಮಾತೆಯೆ, ಅಲರ್= ಪ್ಷ್ಪವು, ಸಿರಿಮುಡಿಗೆ= ನಿನ್ನ ಸಂಪದ್ಯುಕ್ತವಾದ ತುರುಬಿಗೆ, ಪೊರೆಯು= ಭಾರವಾದದ್ದು, ಅಹುದು= ಆಗುತ್ತದೆ, ನೀರ್= ನೀರನ್ನು, ತೀವಿರ್ದ= ತುಂಬಿರತಕ್ಕ, ಇದು ಪೊಂಗಲಶಂ= ಈ ಭಂಗಾರದ ಕೊಡವು, ನಿನಗೆ= ನಿನಗೆ, ತಿಣ್ಣಂ= ಭಾರವಾದದ್ದು, ಆಗದೆ= ಆಗದಿರುವುದೆ, (ಭಾರವಾಗುತ್ತದೆ) ಎಂದು= ಎಂಬ ತೆರನಾಗಿ, ನುಡಿದೊಡೆ= ಹೇಳಲು, ಸುಭದ್ರೆ= ಸುಭದ್ರೆಯು, ಕೇಳ್ದು= ಕೇಳಿದವಳಾಗಿ, ಗೋವರ್ಧನವನು= ಗೋವರ್ಧನ ಗಿರಿಯನ್ನು, ಆಂತ= ಹೊತ್ತುಕೊಂಡಿದ್ದ, ವಿಶ್ವಕುಕ್ಷಿಯನು= ಲೋಕಂಗಳನ್ನೆಲ್ಲಾ ಹೊಕ್ಕುಳಲ್ಲಿಟ್ಟುಕೊಂಡಿರುವ ಮಹಾನುಭಾವನನ್ನು, ಎದೌಯೊಳು= ಕುಚಂಗಳ ಮೇಲೆ, ಆವಗಂ= ಅನವರತವೂ, ಧರಿಸಿಕೊಂಡು= ಸೇರಿಸಿಕೊಂಡು, ಇರ್ದ=ಇರತಕ್ಕ, ಮಾನಿನಿಗೆ= ಸ್ತ್ರೀಗೆ, ಬಿಣ್ಪು= ಭಾರವಾದದ್ದು, ಆವುದು= ಯಾವುದು ತಾನೆ ಇರುವುದು, ಪತಿವ್ರತಾಧ-
ರ್ಮಂ= ಗಂಡನಲ್ಲಿ ಭಕ್ತಿಯನ್ನಿಟ್ಟುಕೊಂಡಿರಬೇಕಾದದ್ದು, ತಾಯೆ=ಅಮ್ಮ, ನೀನು= ನೀನಾದರೊ, ಇದಕೆ= ಈ ಕಾರ್ಯಕ್ಕೆ,
ಅಳುಕಲು= ಹೆದರತಕ್ಕದ್ದು, ಏಕೆ= ಏನುಪ್ರಯೋಜನ, ಎಂದಳು= ಎಂದು ನುಡಿದಳು.
ತಾತ್ಪರ್ಯ:- ಆಗ ಅರುಂಧತಿಯು ರುಕ್ಮಿಣಿಯನ್ನು ಕುರಿತು, ಅಮ್ಮಾ ರುಕ್ಮಿಣೀ, ನಿನಗೆ ತಲೆಯಲ್ಲಿರುವ ಹೂವೇ ಭಾರವಾ- ಗಿರುವಾಗ ಈ ನೀರಿನ ಕೊಡವು ಭಾರವೆಲ್ಲದಿರುವುದೇ ಎಂದು ಕೇಳಲು, ಸುಭದ್ರೆಯು ವಶಿಷ್ಠನ ಪತ್ನಿಯನ್ನು ಕುರಿತೈ, ಗೋವರೂಧನಗಿರಿಯನ್ನು ಮೇಲಕ್ಕೆತ್ತಿ ಹಿಡಿದ ನಾರಾಯಣನನ್ನು ಎಡೆಬಿಡದೆ ಎದೆಯಮೇಲಿಟ್ಟುಕೊಂಡಿರುವ ಈ ರುಕ್ಮಿಣಿಗೆ ಗಂಗೋದಕದಿಂದ ಕೂಡಿದ ಈ ಕಲಶವು ಭಾರವೇ, ಇದು ಪತಿವ್ರತಾ ಧರ್ಮ, ಇದಕೇಕೆ ಅಳುಕು ಎಂದು ಹಾಸ್ಯಮಾಡಿದಳು.
ನಸುನಗುತರುಂಧತಿಗೆ ಬಳಿಕ ರುಕ್ಮಿಣಿ ನುಡಿದ।
ಳುಸಿರಲಂಜುವೆನೀ ಸೈಭದ್ರೆಯ ವಿಶಂಷಗುಣ।
ದೆಸಕಮಂ ನಮ್ಮಂತೆ ಬಿಡದೆ ರಮಣನನೆದೆಯೊಳಾವಗಂ ಧರಿಸಳೊಮ್ಮೆ॥
ಒಸೆದೊಡೆ ವಿಚಾರಿಸುವಳಲ್ಲದೊಡೆ ವಲ್ಲಭನ।
ಗಸಣಿಯಂ ಪಾರಳ್ ಪತಿವ್ರತಾ ಧರ್ಮದೊಳ್।
ಪೊಸತೆಂದು ಸರಸವಂ ಮಾಡುತೈದೆಯರೊಡನೆ ಪೊಂಗಳಸಮಂ ತಾಳ್ದಳು॥೩॥
ಪ್ರತಿಪದಾರ್ಥ :- ಬಳಿಕ = ಅನಂತರ, ರುಕ್ಮಿಣಿ= ರುಕ್ಮಿಣೀದೇವಿಯು, ನಸುನಗುತ= ಮುಗುಳ್ನಗುತ್ತ, ಅರುಂಧತಿಗೆ= ಅರುಂಧತಿದೇವಿಯೊಂದಿಗೆ, ನುಡಿದಳು= ಹೇಳಿದಳು, ಈ ಸುಭದ್ರೆಯು = ಈ ಸುಭದ್ರೆಯು, ವಿಶೇಷ= ಆಶ್ಚರ್ಯಕರವಾದ, ಗುಣದ= ಒಳ್ಳೆಯ ನಡವಳಿಕೆಗಳ, ಎಸಕಮಂ= ಬಗೆಯನ್ನು, ಉಸಿರಲು= ಹೇಳಲು, ಅಂಜುವೆನು=ಹೆದರುತ್ತೇನೆ, ರಮಣನು= ಪತಿಯು, ಆವಗಂ= ಅನವರತವೂ, ಎಮ್ಮಂತೆ= ನಮ್ಮಹಾಗೆ, ಎದೆಯೊಳ್= ಕುಚಗಳಮೇಲೆ, ಬಿಡದೆ= ತಪ್ಪದೆ, ಧರಿಸಳು= ಎಟ್ಟುಕೊಳ್ಳುವುದಿಲ್ಲ,ಒಸೆದೊಡೆ= ಇಷ್ಟಬಂದರೆ, ಒಮ್ಮೆ =ಒಂದಾವರ್ತಿ, ವಿಚಾರಿಸುವಳು= ವಿಚಾರ-
ಮಾಡುವಳು, ಅಲ್ಲದೊಡೆ= ಬೇಡವಾದರೆ, ವಲ್ಲಭನ= ರಮಣನ, ಗಸಣಿಯಂ ಬಾರಳು=ಗೊಡವೆಗೇ ಬಾರಳು=ಗೊಡವೆಗೇ ಬರುವುದಿಲ್ಲವು, ಪತಿವ್ರತಾಧರ್ಮದೊಳ್= ಗಂಡನಲ್ಲಿ ಭಕ್ತಿಯನ್ನಿಟ್ಟುಕೊಂಡಿರುವುದರಲ್ಲಿ, ಪೊಸದು= ಹೊಸದಾದದ್ದು, ಎಂದು= ಎಂಬತೆರನಾಗಿ, ಐದೆಯರೊಡನೆ= ಮುತ್ತೈದೆಯರೊಂದಿಗೆ, ಸರಸವಾಡುತ್ತ= ಅಪಹಾಸ್ಯದ ನುಡಿಗಳನ್ನಾಡುತ್ತ, ಪೊಂಗಲಸಮಂ= ಚಿನ್ನದ ಕಲಶವನ್ನು, ತಾಳ್ದಳು= ಒತ್ತುಕೊಂಡಳು.
ತಾತ್ಪರ್ಯ:- ರುಕ್ಮಿಣಿಯು ಅರುಂಧತಿಗೆ " ಸುಭದ್ರೆಯಲ್ಲಿ ಒಂದು ವಿಶೇಷ ಗುಣವಿದೆ, ಅವಳು ತನ್ನ ಪತಿಯನ್ನು ಯಾವಾಗಲೂ ಎದೆಯಲ್ಲಿ ಧರಿಸುವುದಿಲ್ಲ. ಪ್ರೀತಿ ಬಂದಾಗ ವಿಚಾರಿಸುತ್ತಾಳೆ. ಉಳಿದಂತೆ ಅವನ ತಂಟೆಗೇ ಹೋಗುವುದಿಲ್ಲ. ಇದು ಪತಿವ್ರತಾಧರ್ಮದಲ್ಲಿ ಒಂದು ಹೊಸ ಗುಣ." ಎಂದು ಹೇಳಿ ಹೊನ್ನ ಕಳಸವನ್ನು ತೆಗೆದುಕೊಂಡಳು.
ಅರುವತ್ತುನಾಲ್ಕು ದಂಪತಿಗಳೊಪ್ಪುವ ಗಂಗೆ।
ದೊರೆಯಿಂದ ಬಳಿಕ ಮಖ ಮಂಟಪಕೆ ನೀರ್ದುಂಬಿ।
ಮೆರೆವ ಪೊಂಗಳಸಂಗಳಂ ಕೊಂಡು ಬಂದರುತ್ಸವದಿಂದೆ ಮುನಿಗಳೊಡನೆ॥
ಕರೆದುವನಿಬರಮೇಲೆ ಮುತ್ತುಗಳ ಸೇಸೆಗಳ್।
ನೆರೆ ಮೊಳಗಿದುವು ಸಕಲ ವಾದ್ಯಂಗಳಬ್ರದೊಳ್ ।
ತುರುಗಿತನಿಮಿಷ ವಿತತಿ ಕೌತುಕಕೆ ನೆರೆದುದು ಮಹಾಜನಂ ಮೇದಿನಿಯೊಳು॥೪॥
ಪ್ರತಿಪದಾರ್ಥ :- ಬಳಿಕ = ಅನಂತರ, ಒಪ್ಪುವ= ಯೋಗ್ಯವಾದ, ಗಂಗೆದೊರೆಯಿಂದ= ಗಂಗಾನದಿಯಿಂದ, ನೀರ್ದುಂಬಿ= ನೀರನ್ನು ತುಂಬಿಕೊಂಡು, ಅರವತ್ತುನಾಲ್ಕು ದಂಪತಿಗಳು= ಅರವತ್ತ ನಾಲ್ಕು ಮಂದಿ ಸತಿಪತಿಗಳು, ಮೆರೆವ= ಹೊಳೆಯು-
ತ್ತಲಿರುವ, ಪೊಂಗಲಶಂಗಳಂ= ಭಂಗಾರದ ಕಲಶಗಳನ್ನು,ಕೊಂಡು= ತೆಗೆದುಕೊಂಡು, ಮುನಿಗಳೊಡನೆ= ತಾಪಸೋತ್ತ-
ಮರೊಂದಿಗೆ, ಉತ್ಸವದಿಂದ= ಸಂಭ್ರಮದಿಂದ, ಮಖಮಂಟಪಕೆ= ಯಾಗಶಾಲೆಗೆ, ಬಂದರು= ಬಂದರು, ಬಳಿಕ = ಆಮೇಲೆ, ಮೇದಿನಿಯೊಳು= ಭೂಮಂಡಲದಲ್ಲಿ, ಅನಿಬರಮೇಲೆ= ಅಷ್ಟು ಜನಗಳ ಮೇಲೆಯೂ,ಮುತ್ತುಗಳ ಸೇಸೆಗಳ್= ಮುತ್ತುಗಳ ಮಂತ್ರಾಕ್ಷತೆಯು,ಕರೆದವು= ಎರಚಲ್ಪಟ್ಟವು, ಸಕಲ= ಎಲ್ಲಾ, ವಾದ್ಯಂಗಳು= ಭೇರಿ ಮೃದಂಗಾದಿಗಳು,ನೆರೆ= ಅಧಿಕವಾಗಿ, ಮೊಳಗಿದವು= ಘೋಷಿಸಿದವು, ಅಭ್ರದೊಳ್= ಅಂತರಿಕ್ಷದಲ್ಲಿ, ಅನಿಮಿಷತತಿ= ಸುರಸಮುದಾಯವು, ತುರುಗಿತು= ತುಂಬಿತು, ಕೌತುಕಕೆ= ಈ ಅಚ್ಚರಿಯನ್ನು ನೋಡುವುದಕ್ಕೆ, ಮೇದಿನಿಯೊಳು= ಭೂಮಂಡಲದಲ್ಲೆಲ್ಲಾ, ಮಹಾಜನಂ=ಹೆಚ್ಚಾದ ಜನರು, ನೆರೆದುದು= ಸೇರಿತು
ತಾತ್ಪರ್ಯ:- ಹೀಗೆಂದು ಮಾತನಾಡುತ್ತಾ ಅರವತ್ತುನಾಲ್ಕು ದಂಪತಿಗಳುಕಲಶಗಳನ್ನು ಹೊತ್ತುಕೊಂಡು ಯಾಗಶಾಲೆಗೆ ಬರುತ್ತಿರುವಾಗ ಅವರ ಮೇಲೆ ಮುತ್ತಿನ ಮಂತ್ರಾಕ್ಷತೆಗಳನ್ನು ಎರಚಲಾಯಿತು,ವಿಧವಿಧವಾದ ವಾದ್ಯಗಳಾದವು. ಈ ಅಚ್ಚರಿಯನ್ನು ನೋಡಲು ಆಗಸದಲ್ಲಿ ದೇವತೆಗಳು ಗುಂಪೂ, ಭೂಮಿಯಮೇಲೆ ಜನಜಂಗುಳಿಯೂ ನೆರೆಯಿತು.
ಆ ಪುಣ್ಯ ಸಲಿಲದೊಳ್ ಸೇಚನಂಗೈದೆಸೆವ।
ಯೂಪದೊಳ್ ಕಟ್ಟಿ ಪೂಜಿಸಿದರಮಲಾಶ್ವಮಂ।
ಭೂಪನುಂ ದ್ರೌಪದಿಯುಮಭಿಷಿಕ್ತರಾದರ್ ಸುಮಂತ್ರಿತ ಜಲಂಗಳಿಂದೆ॥
ವ್ಯಾಪಿಸಿದ ವಿಧಿ ವಿಧಾನಂಗಳಿಂದಾವುದುಂ।
ಲೋಪಮಿಲ್ಲದೆ ನಡೆಯತೊಡಗಿತು ಮಹಾಧ್ವರಂ।
ತಾಪಸ ಪ್ರತತಿ ಸಂದಿಗ್ಧಂಗಳಂ ತಿಳಿದು ಸಮ್ಮತದೊಳಹುದೆನಲ್ಕೆ॥೫॥
ಪ್ರತಿಪದಾರ್ಥ :- ಅಮಲ= ಪವಿತ್ರವಾದ, ಅಶ್ವಮಂ = ತುರಗವನ್ನು, ಆ ಪುಣ್ಯಸಲಿಲದೊಳ್= ಆ ಪುಣ್ಯ ತೀರ್ಥದೊಳಗೆ, ಸೇಚನಂಗೈದು= ಅಭಿಷೇಕಮಾಡಿ, ಎಸೆವ= ಹೊಳೆಯುವ, ಯೂಪದೊಳ್= ಯೂಪಸ್ತಂಭದಲ್ಲಿ,ಕಟ್ಟಿ= ಬಿಗಿದು, ಪೂಜಿ-
ಸಿದರು= ಪೂಜೆಮಾಡಿದರು, ಸುಮಂತ್ರಿತ= ಮಂತ್ರ ಸಹಿತವಾದ, ಜಲಂಗಳಿಂದ= ನೀರಿನಿಂದ, ಭೂಪನುಂ= ಧರ್ಮನಂದ-
ನನೂ, ದ್ರೌಪದಿಯುಂ= ಪಾಂಚಾಲರಾಜಕುವರಿಯೂ, ಅಭಿಷಿಕ್ತರಾದರು= ಅಭಿಷೇಕಮಾಡಿಸಿಕೊಂಡರು, ತಾಪಸಪ್ರತತಿ= ಋಷಿಗಳ ಸಮೂಹ, ಸಂದಿಗ್ಧಂಗಳಂ= ಯಾಗಮಾಡುವಾಗ ಬರತಕ್ಕ ಅನುಮಾನಗಳನ್ನೆಲ್ಲಾ, ತಿಳಿದು= ತಿಳಿದವರಾಗಿ, ಸಮ್ಮತದೊಳು= ಒಪ್ಪಿಗೆಯಿಂದ, ಅಹುದು= ಸರಿಯಾದದ್ದು, ಎನಲ್ಕೆ= ಎಂದು ನುಡಿಯುತ್ತಿರಲು, ಮಹಾಧ್ವರಂ= ದೊಡ್ಡ
ದಾದ ಆ ಅಶ್ವಮೇಧವು, ವ್ಯಾಪಿಸಿದ = ತುಂಬಿದ, ವಿಧಿವಿಧಾನಗಳಿಂದ= ಶಾಸ್ತ್ರ ನಿಯಮಗಳಿಂದ, ನಡೆಯತೊಡಗಿತು= ನಡೆಯಲಾರಂಭಿಸಿತು,
ತಾತ್ಪರ್ಯ:- ಆಗ ಯಜ್ಞಾಶ್ವವನ್ನು ಗಂಗಾತೀರ್ಥದಿಂ ಅಭಿಷೇಕಮಾಡಿ ಯೂಪಸ್ತಂಭಕ್ಕೆ ಕಟ್ಟಿದರು. ತಾಪಸೋತ್ತಮರ ಸಹಾಯದಿಂದ ಶ್ರೇಷ್ಠವಾದ ಈ ಅಶ್ವಮೇಧಯಾಗವು, ನಿರ್ವಿಘ್ನವಾಗಿ ನಡೆಯಲಾರಂಭಿಸಿತು.
ಬಂದ ಮುನಿಗಳ ಪಾದಮಂ ತೊಳೆದು ಸತ್ಕಾರ।
ದಿಂದೆ ಪೂಜಿಸಿ ನಿವೃಸ ಸ್ಥಾನಮಂ ಕೊಟ್ಟು ।
ವಂದಿಸುವನಚ್ಯುತಂ ತಾನೆ ಕುಳ್ಳಿರ್ಪೊಡಾಸನವನೀವಂ ಸಾತ್ಯಕಿ॥
ಚಂದನ ಸುಕರ್ಪೂರ ಕುಸುಮ ತಾಂಬೂಲಂಗ।
ಳಿಂದಲಂಕರಿಸುವಂ ಪ್ರದ್ಯುಮ್ನರವರವರ।
ಮಂದಿರಕೆ ಬೇಕಾದ ವಸ್ತುಗಳನೊದವಿಸುವನಡಿಗಡಿಗೆಸಹದೇವನು॥೬॥
ಪ್ರತಿಪದಾರ್ಥ :- ಅಚ್ಯುತಂ= ಕೃಷ್ಣನು, ತಾನೆ= ತಾನಾಗಿಯೆ, ಬಂದು= ಬಂದು, ಮುನಿಗಳ= ತಾಪಸೋತ್ತಮರ, ಪಾದ-
ಮಂತೊಳೆದು= ಕಾಲ್ಗಳನ್ನು ತೊಳೆದು, ಸತ್ಕಾರದಿಂದ= ಮನ್ನಣೆಯಿಂದ, ಪೂಜಿಸಿ= ಆರಾಧಿಸಿ, ನಿವೃಸಸ್ಥಾನಮಂ= ಕುಳಿತು-
ಕೊಳ್ಳುವುದಕ್ಕೆ ಅವಕಾಶವನ್ನು, ಕೊಟ್ಟು= ಕೊಟ್ಟವನಾಗಿ, ವಂದಿಸುವನು= ವಂದನೆಗಳನ್ನರ್ಪಿಸುತ್ತಲಿರುವನು, ಕುಳ್ಳಿರ್ಪ-
ಡೆ= ಕುಳಿತುಕೊಳ್ಳಲೋಸುಗ, ಆಸನವನು= ಪೀಠವನ್ನು, ಸಾತ್ಯಕಿ= ಸಾತ್ಯಕಿಯು, ಈವಂ= ಮಾಡಿಕೊಡುವನು, ಚಂದನ= ಶ್ರೀಗಂಧದಿಂದಲೂ, ಕರ್ಪೂರ= ಕರ್ಪೂರದಿಂದಲೂ,ಕುಸುಮ= ಹೂಗಳಿಂದಲೂ,ತಾಂಬೂಲಂಗಳಿಂದ= ವೀಳೆಯದೆಲೆ ಅಡಿಕೆ ಮೊದಲಾದವುಗಳಿಂದಲೂ ಸಹ, ಪ್ರದ್ಯುಮ್ನನು= ಮದನನು, ಅಲಂಕರಿಸುವಂ= ಸಿಂಗರಿಸುವನು, ಅವರವರ ಮಂದಿರಕೆ= ಅವರು ಇಳಿದಿರುವ ಸ್ಥಳಗಳಿಗೆಲ್ಲಾ, ಬೇಕಾದ= ಅವಶ್ಯವಾಗಿರತಕ್ಕ, ವಸ್ತುಗಳನು= ಸಾಮಗ್ರಿಗಳನ್ನು, ಅಡಿಗಡಿಗೆ= ಬಾರಿಬಾರಿಗೂ, ಸಹದೇವನು, ಒದಗಿಸುವನು= ಅಣಿಮಾಡುತ್ತಿರುವನು.
ತಾತ್ಪರ್ಯ:- ಕೃಷ್ಣನು ಋಷಿಗಳ ಪಾದಗಳನ್ನು ತೊಳೆದು ತಕ್ಕೆಡೆಗಳಲ್ಲಿ ಕುಳ್ಳಿರಿಸುತ್ತಲಿದ್ದನು. ಸಾತ್ಯಕಿಯು ಉಚಿತಾಸನಗಳ-
ನ್ನು ಒದಗಿಸುತ್ತಲಿದ್ದನು. ಮನ್ಮಥನು ಹೂ ಗಂಧ ವೀಳೆಯಗಳಿಂದ ಮನ್ನಿಸುತ್ತಲಿದ್ದನು. ಸಹದೇವನು ಅವರವರ ಬಿಡಾರ-
ಗಳಿಗೆ ಬೇಕಾದ ಸಾಮಗ್ರಿಗಳನ್ನು ಒದಗಿಸುತ್ತಲಿದ್ದನು.
ಸಕಲ ಜನ ಜಾಲಮಂ ತಾರತಮ್ಯವನರಿತು।
ನಕುಲನಾದರಿಸುವಂ ಪಗಲಿರುಳ್ ಪರಿಮಳೋ।
ದಕವನಳವಡಿಸುವಂ ಕರೂಣಸುತನೆಲ್ಲರಾರೈಕೆ ಹೈಡಿಂಬಿಗಾಯ್ತು॥
ಶಕಟ ಸಂದೋಹದಿಂ ಪೂಡಿಸುವ ಸಂಭಾರ।
ನಿಕರಕಧಿಪತಿಯಾದನನಿರುದ್ಧನನ್ನವಾ।
ಟಿಕೆಗಳೊಳ್ ಪಾಕಮಂ ಮಾಡಿಸುವ ಮಣಿಹಮಂ ಕೃತವರ್ಮಕಂ ತಾಳ್ದನು॥೭॥
ಪ್ರತಿಪದಾರ್ಥ :- ಸಚಲ= ಸಮಸ್ತ, ಜನಜಾಲಮಂ= ಜನಗಳ ಗುಂಪನ್ನು, ತಾರತಮ್ಯವನು= ಅವರವರ ಅಂತಸ್ತಿಗನು-
ಗುಣವಾಗಿ. ಅರಿತು= ತಿಳಿದುಕೊಂಡು, ನಕುಲನು, ಆದರಿಸುವಂ= ಸತ್ಕರಿಸುವನು, ಪಗಲಿರುಳ್= ಹಗಲೂ ರಾತ್ರಿ, ಪರಿಮಳೋದಕವನು= ಸುಗಂಧಮಿಶ್ರಿತವಾದ ಜಲವನ್ನು, ಕರ್ಣಸುತನು= ಕರ್ಣತನಯನು, ಅಳವಡಿಸುವಂ= ಶೇಖರಿ-
ಸುವನು, ಹೈಡಿಂಬಿಗೆ= ಮೇಘನಾದನಿಗೆ, ಎಲ್ಲರ= ಸರ್ವರ, ಆರೈಕೆ= ಉಪಚಾರ ಮಾಡುವಿಕೆಯು, ಆಯ್ತು= ಉಂಟಾ-
ಯಿತು, ಶಕಟ= ವಾಹನಗಳ, ಸಂದೋಹದಿಂ = ಸಮುದಾಯದಿಂದ, ಪೂರಿಸೈವ= ಹೊರಿಸತಕ್ಕ, ಸಂಭಾರ= ಸಂಭಾರ ಸಾಮಗ್ರಿಗಳ, ನಿಕರಕೆ=ಸಮುದಾಯಕ್ಕೆ, ಅನಿರುದ್ಧನು= ಕೃಷ್ಣನ ಮೊಮ್ಮಗನು, ಅಧಿಪತಿಯು= ಒಡೆಯನು ಆದನು,
ಅನ್ನವಾಟಿಕೆಗಳೊಳ್= ಪಾಕಶಾಲೆಗಳಲ್ಲಿ, ಪಾಕಮಂ ಮಾಡಿಸುವ= ಅಡಿಗೆಯನ್ನು ಮಾಡಿಸತಕ್ಕ, ಮಣಿಹಮಂ= ಯಜಮಾನಿಕೆಯನ್ನು, ಕೃತವರ್ಮಕಂ= ಯದುರಾಜರ ಸೇನಾನಾಯಕನು, ತಾಳ್ದನು= ವಹಿಸಿಕೊಂಡನು.
ತಾತ್ಪರ್ಯ:- ನಕುಲನು ಎಲ್ಲರನ್ನೂ ಅವರವರ ಸ್ಥಾನಕ್ಕನುಗುಣವಾಗಿ ಉಪಚರಿಸುತ್ತಲಿದ್ದನು. ಕರ್ಣಜನು ಪನ್ನೀರು ಒದಗಿಸುವ ಕೆಲಸದಲ್ಲೆರುತ್ತಿದ್ದನು. ಮಂಘನಾದನು ಎಲ್ಲರನ್ನೂ ಉಪಚರಿಸುತ್ತಿದ್ದನು.ಅನಿರುದ್ಧನುಭಂಡಿಗಳಲ್ಲಿ ಆಹಾರ ಸಾಮಗ್ರಿಗಳನ್ನು ಒದಗಿಸುತ್ತಲಿದ್ದನು. ಅಡಿಗೆ ಮನೆಯ ಪಾರುಪತ್ಯವನ್ನು ಕೃತವರ್ಮನು ವಹಿಸಿಕೊಂಡನು.
ಯೋಜನತ್ರಯದ ಚಪ್ಪರದೊಳೆಡೆವಿಡದೆ ನಾ।
ನಾ ಜನಕೆ ಬೇಕಾದ ಷಡ್ರಸದ ಶಾಲ್ಯಾನ್ನ।
ಭೋಜನವನೈದೆ ಮಾಡಿಸುತಿಹುದುಸಾಂಬಾದಿ ಯಾದವರ್ಗಾಯ್ತು ಬಳಿಕ ॥
ಶ್ರೀ ಜನಾರ್ದನನ ಸಾನಿಧ್ಯಮಾಗಿರೆ ಧರ್ಮ।
ಜನ ಮಹಾಧ್ವರಂ ಸಾಂಗಮಾಗದೆ ಮೇಣ್ ಸ।
ರೋಜನಾಭಂ ತಾನೆ ಯಜ್ಞಸ್ವರೂಪನಲ್ಲವೆ ಭೂಪ ಹೇಳೆಂದನು॥೮॥
ಪ್ರತಿಪದಾರ್ಥ :- ಸಾಂಬಾದಿಯಾದವರ್ಗೆ= ಸಾಂಬನೇ ಮೊದಲಾದ ಯದುವಂಶದವರಿಗೆಲ್ಲಾ, ಯೋಜನತ್ರಯದ ಚಪ್ಪ-
ರದೊಳು= ಮೂರುಗಾವುದ ಉದ್ದ ಅಗಲಗಳಿಂದ ಕೂಡಿದ ಚಪ್ಪರದಲ್ಲಿ, ನಾನಾಜನಕೆ= ಸಕಲರಿಗೂ, ಬೇಕಾದ= ಇಷ್ಟವಾ-
ದ, ಷಡುರಸದ= ಭಕ್ಷ್ಯ, ಭೋಜ್ಯ, ಲೇಹ್ಯ, ಚೋಷ್ಯ, ಖಾದ್ಯ, ಪಾನೀಯಾದಿಗಳಿಂದ ಕೂಡಿದ, ಶಾಲ್ಯನ್ನ ಭೋಜನವನು=
ಮೃಷ್ಟಾನ್ನದ ಊಟವನ್ನು, ಐದೆ= ಚನ್ನಾಗಿ, ಎಡವಿಡದೆ= ತಪ್ಪದೆ, ಮಾಡಿಸುತಿಹುದು= ಮಾಡಿಸುತ್ತಿದ್ದರು, ಆಯ್ತು= ನಿಷ್ಕ-
ರ್ಷೆಯಾಯಿತು, ಬಳಿಕ = ಅನಂತರ, ಶ್ರೀ= ಇಂದಿರಾಸಹಿತವಾದ, ಜನಾರ್ದನನ= ನಾರಾಯಣನ, ಸಾನಿಧ್ಯಂ= ಸಮೀಪ-
ದಲ್ಲಿಯೇ ನೆಲಸಿರುವುದು, ಆಗಿರೆ= ಆಗಿರುವಾಗ, ಧರ್ಮರಾಜನ=ಧರ್ಮತನಯನ, ಮಹಾದ್ವರಂ= ಅಸಾಧಾರಣವಾದ ಅಶ್ವಮೇಧಯಾಗವು, ಸಾಂಗಂ ಆಗದೆ= ಪೂರ್ತಿಯಾಗದಿರುವುದೆ, ಮೇಣ್=ಅದೂ ಅಲ್ಲದೆ, ಯಜ್ಞಸ್ವರೂಪನು= ಯಜ್ಞಕ್ಕೆ ಅಧಿದೇವತೆಯು, ಸರೋಜನಾಭಂ ತಾನೆ ಅಲ್ಲವೆ= ಕಮಲನಾಭನಾದ ಸ್ವಾಮಿಯೇ ಅಲ್ಲವೆ, ಭೂಪ= ಭೂಕಾಂತನಾದ ಜನಮೇಜಯನೆ, ಹೇಳು= ಹೇಳುವನಾಗು, ಎಂದನು= ಎಂದು ನುಡಿದನು.
ತಾತ್ಪರ್ಯ:- ಸಾಂಬನೇ ಮೊದಲಾದ ಯಾದವರೆಲ್ಲಾ ಭೋಜನಶಾಲೆಯ ಮೇಲ್ವಿಚಾರಣೆಯಲ್ಲಿ ನಿರತರಾದರು. ಕೇಳೈ ಜನಮೇಜಯನೆ! ಯಜ್ಞಕರ್ತನೂ, ಯಜ್ಞರೂಪನೂ, ಯಜ್ಞಮೂರುತಿಯೂ ಆದ ಕೃಷ್ಣಸ್ವಾಮಿಯೇ ಧರ್ಮತನಯನ ಅಶ್ವಮೇಧ ಯಾಗದಲ್ಲಿ ಯಜಮಾನನಾಗಿರುವಾಗ, ಯಾಗವು ಮೇಲಾಗಿ ನಡೆಯಲು ಅಡ್ಡಿಯೇನಿರುವುದು.
ಸುರೆಯದೊಂದಲ್ಲದೆ ಪಯೋಧಿಗಳನಾರ ನಾ।
ಕರುಷಣಂಗೈದರೆನೆ ಸುರಸಂಗಳೆಸೆಯೆ ಕುಲ।
ಗಿರಿಗಳಂ ನಗುವಂತೆ ಮಿರುಪ ಶಾಲ್ಯೋದನದ ರಾಶಿಗಳ್ ಕಂಗೊಳಿಸಲು॥
ಪರಿಪರಿಯ ಭಕ್ಷ್ಯ ಪಾಯಸ ವಿವಿಧ ಶಾಕಾದಿ।
ಪರಿಕರಮದೆಂತೊದಗಿದುವೊ ಕೃಷ್ಣಸುರಭಿ ತಾಂ।
ಪೊರೆಯೊಳಿರಲರಿದಾವುದೆಂಬಿನಂ ತಣಿದುಂಡರಾಮಖದೊಳಖಿಳ ಜನರು॥೯॥
ಪ್ರತಿಪದಾರ್ಥ :- ಪಯೋದಧಿಯನು= ಕ್ಷೀರಸಮುದ್ರ, ದಧಿಸಮುದ್ರ ಇವುಗಳನ್ನು, ಆರನು= ಆರನ್ನು, ಸುರೆಯು= ಸುರೆ-
ಯೆಂಬ ಜಲಧಿಯು, ಅದೊಂದು= ಅದು ಮಾತ್ರವೇ, ಅಲ್ಲದೆ= ಬಿಟ್ಟು, ಆರು= ಮತ್ತೆ ಯಾರು, ಆಕರ್ಷಣಂಗೈದರು= ಆಕರ್ಷಿಸಿರುವರು, ಎನೆ= ಎಂಬಂತೆ, ಸುರಸಂಗಳು= ಷಡ್ರಸಗಳು, ಎಸೆಯೆ= ಮೆರೆಯುತ್ತಿರಲು,ಮಿರುಪ= ಪ್ರಕಾಶಮಾನ-
ವಾದ, ಶಾಲ್ಯೋದನದ ರಾಶಿಗಳು= ಅನ್ನದ ರಾಶಿಗಳು, ಕುಲಗಿರಿಗಳಂ= ಸಪ್ತಕುಲ ಪರ್ವತಗಳನ್ನು, ನಗುವಂತೆ= ಹಾಸ್ಯ-
ಮಾಡುತ್ತಲಿವೆಯೊ ಎಂಬಂತೆ, ಕಂಗೊಳಿಸಲು= ಹೊಳೆಹೊಳೆಯಲು,ಪರಿಪರಿಯ = ವಿಧವಿಧವಾದ, ಭಕ್ಷ್ಯ= ಲಾಡು ಫೇಣಿ ಮೊದಲಾದವುಗಳೂ, ಪಾಯಸ= ಪಾಯಸಗಳೂ, ವಿವಿಧ= ನಾನಾಪ್ರಕಾರವಾದ, ಶಾಕಾದಿಪರಿಕರಂ= ಕಾಯಿಪಲ್ಯಗಳ
ಖಾದ್ಯಗಳೂ, ಅದೆಂತು= ಯಾವರೀತಿಯಲ್ಲಿ,ಒದಗಿದವೊ= ಅಣಿಯಾದವೊ, ಪೊರೆಯೊಳು= ಸಮೀಪದಲ್ಲಿಯೆ, ತಾಂ= ಆ, ಕೃಷ್ಣಸೈರಭಿ= ಕೃಷ್ಣನೆಂಬ ಕಾಮಧೇನುವೇ, ಇರಲು= ಇರತಕ್ಕ ಕಾಲದಲ್ಲಿ, ಅರಿದು= ಅಸಾಧ್ಯವಾದದ್ದು, ಆವುದು= ಯಾವುದುತಾನೆ ಇರುವುದು, ಎಂಬಿನಂ= ಎನ್ನುವ ಹಾಗೆ, ಅಖಿಳಜನರು= ಸಕಲರೂ, ಆ ಮಖದೊಳು= ಆ ಯಾಗದಲ್ಲಿ, ದಣಿದು= ಸಂತುಷ್ಟರಾಗಿ, ಉಂಡರು= ಊಟಮಾಡಿದರು.
ಅ॥ವಿ॥ ಕುಲಪರ್ವತಗಳು - ಹಿಮವತ್ಪರ್ವತ, ನಿಷಧಪರ್ವತ, ವಿಂಧ್ಯಪರ್ವತ, ಮಾಲ್ಯಪರ್ವತ, ಪಾರಿಯಾತ್ರಕ ಪರ್ವತ, ಗಂಧಮಾಧನ ಪರೂವತ, ಹೇಮಕೂಟವೆಂಬ ಏಳು ಪರ್ವತಗಳು. ಷಡ್ರಸಗಳು- ಸಿಹಿ, ಹುಳಿ, ಉಪ್ಪು, ಒಗರು, ಕಾರ, ಕಹಿ, ಇವುಗಳು.
ತಾತ್ಪರ್ಯ:- ಕೃಷ್ಣನೆಂಬ ಕಾಮಧೇನುವಿರುವಾಗ ಯಾವುದಕ್ಕೆ ತಾನೆ ಕಡಿಮೆಯಾದೀತು. ಕ್ಷಣಮಾತ್ರದಲ್ಲಿ ಅನ್ನದ ರಾಶಿಗಳು ಪರ್ವತ ರಾಶಿಗಳಂತೆ ಕಂಗೊಳಿಸಿದವು, ಭಕ್ಷ್ಯಭೋಜ್ಯಾದಿಗಳೂ ಕಾಯಿಪಲ್ಯಗಳೂ ಅಣಿಯಾದವು. ಸಕಲರೂ ಸಂತೋಷವಾಗಿ ಭೋಜನಮಾಡಿ ತೃಪ್ತರಾದರು.
ಊಟದ ಸುಗಂಧಾನುಲೇಪನದ ಕಪ್ಪುರದ।
ವೀಟಿಕಾವಳಿಯ ಮಾಲ್ಯಾಂಬರ ವಿಭೂಷಣದ।
ಮೀಟು ಸಿಂಗರದಿಂಪುವಡೆಯೆ ಮಿಗೆ ಬಯಸಿದ ಸುವಸ್ತುಗಳನಿತ್ತು॥
ಪಾಟಿಸುವ ಭೀಮ ಫಲ್ಗುಣರ ಸನ್ಮಾನದ ಸ।
ಘಾಟಿಕೆಯ ನೃಪ ಕುಲದ ಪುಣ್ಯ ಮುನಿಗಳ ಯಜ್ಞ।
ವಾಟದತಿ ಕೌತುಕದ ಮಾಳ್ಕೆಯಂ ಕಂಡು ನಲಿದಾಡಿತು ಜನಂ ಮುದದೊಳು॥೧೦॥
ಪ್ರತಿಪದಾರ್ಥ :- ಜನರು= ಪ್ರಜೆಗಳೆಲ್ಲರೂ, ಊಟದ= ಊಟಮಾಡುವುದರ, ಸುಗಂಧಾನುಲೇಪನದ = ಗಂಧವನ್ನು ಬಳಿದುಕೊಳ್ಳುವುದರ, ಕಪ್ಪುರದ= ಪಚ್ಚಕರ್ಪೂರದಿಂದ ಕೂಡಿದ, ವೀಟಿಕಾವಳಿಯ = ವೀಳೆಯದೆಲೆ ಕಟ್ಟುಗಳ, ಮಾಲ್ಯ= ಕುಸುಮಂಗಳ, ಅಂಬರ= ಉಡಿಗೆಗಳ, ವಿಭೂಷಣದ= ತೊಡಿಗೆಗಳ, ಮೀಟು= ಹೆಚ್ಚಾದ, ಸಿಂಗರದ= ಶೃಂಗಾರ ಸಂಬಂಧವಾದ, ಇಂಪುವಡೆದು= ಸುಖವನ್ನೈದಿ, ಮಿಗೆ= ಹೆಚ್ಚಾಗಿ, ಬಯಸಿ=ಆಶಿಸಿ, ಬೇಡಿದ= ಕೇಳಿಕೊಂಡ, ಸುವಸ್ತುಗ-
ಳ= ಉತ್ತಮವಾದ ಪದಾರ್ಥಗಳನ್ನೆಲ್ಲಾ, ಇತ್ತು=ಕೊಟ್ಟು, ಪಾಟಿಸುವ=ಸರಿಸಮನಾದ, ಭೀಮಫಲುಗುಣರ= ಭೀಮಾರ್ಜು-
ನರ, ಸನ್ಮಾನದ= ಮನ್ನಣೆಯ ಸಂಬಂಧವಾದ, ಸಘಾಟಿಕೆಯ= ಉಪಚಾರದ ಮಾತುಗಳಿಂದ ಕೂಡಿದ, ನೃಪಕುಲದ= ರಾಜಸಮುದಾಯದ, ಪುಣ್ಯಮುನಿಗಳ= ಪುಣ್ಯ ವಿಶಿಷ್ಟರಾದ ಮುನಿಗಳ,ಯಜ್ಞವಾಟದ= ಯಾಗಮಂಟಪದ, ಅತಿಕೌತುಕದ= ಅತಿ ಆಶ್ಚರ್ಯಕರವಾದ,ಮಾಳ್ಕೆಯಿಂ= ರೀತಿಯಿಂದ, ಕಂಡು= ಈಕ್ಷಿಸಿ, ಮುದದೊಳು= ಆನಂದದಿಂದ, ನಲಿದಾಡಿತು= ಸಂತಸಗೊಂಡಿತು.
ತಾತ್ಪರ್ಯ:- ಊಟ, ಸುಗಂಧ, ಅನುಲೇಪನ, ಕರ್ಪೂರ ತಾಂಬೂಲ, ಹೂಹಾರ, ವಸ್ತ್ರ, ಆಭರಣಗಳಿಂದ ಉತ್ತಮವಾಗಿ ಶೃಂಗರಿಸಿಕೊಳ್ಳಲು, ಕೇಳಿದುದೆಲ್ಲವನ್ನೂ ಸಂತೋಷದಿಂದ ಕೊಡುತ್ತಿದ್ದ ಭೀಮಾರ್ಜುನರ ಸನ್ಮಾನದಿಂದ ಸರ್ವರೂ ತೃಪ್ತರಾಗಿ, ಅಲ್ಲಿದ್ದ ರಾಜರನ್ನು, ಯಾಗಶಾಲೆಯ ಮುನಿಗಳನ್ನೂ, ಕಂಡು ಜನರು ನಲಿದಾಡಿದರು.
ಸಾಮಜ ತುರಂಗ ರಥ ರತ್ನ ಜಾಲಂಗಳಂ।
ಗೋ ಮಹಿಷಿ ದಾಸೀ ನಿಕರಮಂ ಮೃಗಾಜಿನ ಕಂಬಳಾದಿಗಳನು॥
ಚಾಮರ ವ್ಯಜನಾತಪತ್ರ ಯಾನಂಗಳಂ।
ಭೂಮಿಗಳನಗುರುಚಂದನ ಮುಖ್ಯವಸ್ತುವಂ।
ಭೀಮ ಫಲ್ಗುಣರಖಿಳ ಯಾಚಕಾವಳಿ ತಣಿಯೆ ಕುಡುತಿರ್ದರಿದರದೊಳು॥೧೧॥
ಪ್ರತಿಪದಾರ್ಥ :- ಭೀಮಫಲುಗುಣರು= ಭೀಮಾರ್ಜುನರು, ಅಖಿಳಯಾಚಕಾವಳಿದಣಿಯೆ= ಸಕಲ ಯಾಚಕರಿಗೂ ಅವರವರ ಮನವೊಪ್ಪುವ ರೀತಿಯಾಗಿ, ಆದರದೊಳು= ವಿಶ್ವಾಸದಿಂದ, ಹೇಮ= ಚಿನ್ನ, ವಸ್ತ್ರ= ಉಡಿಗೆಗಳು, ಆಭರಣ= ಒಡವೆಗಳು, ಮುಕ್ತಾಫಲಂಗಳಂ= ಮುತ್ತುಗಳನ್ನು, ಸಾಮಜ= ಆನೆಗಳು, ತುರಂಗ= ಕುದುರೆಗಳು, ರಥ=ತೇರುಗಳು, ಇವುಗಳ, ಜಾಲಂಗಳಂ= ಸಮುದಾಯಗಳನ್ನು, ಗೊ= ಹಸುಗಳು, ಮಹಿಷಿ= ಎಮ್ಮೆಗಳು, ದಾಸ= ಸೇವಕರು, ದಾಸೀ= ಸೇವಕ ಸ್ತ್ರೀಯರು ಇವರ, ನಿಕರಮಂ= ಸಮುದಾಯವನ್ನು, ಮೃಗಾಜಿನ= ಕೃಷ್ಣಾಜಿನವು, ಕಂಬಳ= ಶಾಲುಗಳು, ಆದಿಗಳನು= ಮೊದಲಾದವನ್ನೂ, ಚಾಮರ= ಚಾಮರ, ವ್ಯಜನ= ಬೀಸಣಿಗೆ, ಆತಪತ್ರ= ಬೆಳ್ಗೊಡೆಗಳು, ಯಾನಂಗಳು= ರಥಗಳು, ಭೂಮಿಗಳನು= ಹೊಲ, ಗದ್ದೆ, ತೋಟಗಳನ್ನು, ಅಗರು= ಕಪ್ಪು ಗಂಧದ ಚಕ್ಕೆಗಳು, ಚಂದನ= ಕೆಂಪು ಗಂಧದ ಚಕ್ಕೆಗಳು, ಮುಖ್ಯ= ಮೊದಲಾದ, ವಸ್ತುವಂ= ವಸ್ತುಗಳನ್ನು, ಕೊಡುತಿರ್ದರು= ದಾನಮಾಡುತ್ತಿದ್ದರು.
ತಾತ್ಪರ್ಯ:- ಅಲ್ಲಿ ನೆರೆದಿದ್ದ ಯಾಚಕರಿಗೆಲ್ಲಾ ವಸ್ತ್ರಾಭರಣಗಳು,ಮೌಕ್ತಿಕ ರಾಶಿಗಳು, ಗಜ,ತುರಗ,ರಥಾದಿಗಳು, ಕೃಷ್ಣಾಜಿನ ಮೊದಲಾದವನ್ನೂ,ಅನೇಕ ಗೋದಾನ, ಭೂದಾನ, ಮೊದಲಾದವನ್ನೂ, ಕೊಡುತ್ತಾ, ಯಾಚಕಾಳಿಯು ದಣಿದರೂ ತಮಗೆ ಮಾತ್ರ ತೃಪ್ತಿಯೇ ಇಲ್ಲದಿರುತ್ತಿದ್ದರು.
ಯಾಗ ದೀಕ್ಷೆಯ ನೃಪಂ ಮಂತ್ರವಾರಿ ಸ್ನಾತ।
ನಾಗಿ ಬಳಿಕನುಪಮ ಸುವರ್ಣಚಯನದ ಪೊರೆಗೆ।
ಪೋಗಿ ಹಯಮಂ ತರಿಸಲುಚ್ಚರಿಸಿ ಯಜ್ಞಪಶುವಾದುದೆಂದಭಿವರ್ಣಿಸೆ॥
ಮೇಗೆ ಶ್ರುತಿವಾಕ್ಯಂಗಳಂಪಠಿಸುತಿರೆ ಘೋಟ।
ಪೋಗು ನೀನಶ್ವಲೋಕದೊಳಮರಪದಮಪ್ಪು।
ದೀಗ ನಿನಗೆಂದೆಂದುಮಳಿವಿಲ್ಲದುತ್ತಮಸಾವರ್ಗಮಂ ಪಡೆಯೆಂದನು॥೧೨॥
ಪ್ರತಿಪದಾರ್ಥ :- ಯಾಗದೀಕ್ಷೆಯನೃಪಂ = ಯಜ್ಞದೀಕ್ಷೆಯನ್ನು ಕೈಗೊಂಡಿರುವ ಧರ್ಮಪುತ್ರನು, ಮಂತ್ರವಾರಿಸ್ನಾತನಾಗಿ= ಮಂತ್ರಜಲದಿಂದ ಸ್ನಾನವನ್ನು ಮಾಡಿ, ಬಳಿಕ = ಅನಂತರ, ಅನುಪಮ= ಅಸದೃಶವಾದ, ಸುಪರ್ಣಾಕೃತಿಯ= ಗರುಡನ ಆಕಾರದ ಜಗಲಿಯ, ಪೊರಗೆ= ಸಮೀಪಕ್ಕೆ, ಪೋಗಿ= ಹೋಗಿ, ಹಯಮಂತರಿಸಲು= ಯಜ್ಞಾಶ್ವವನ್ನು ಕರೆತರಲಾಗಿ, ಉಜ್ವಲಿಸುವ= ಜಾಜ್ವಲ್ಯಮಾನವಾಗಿರುವ, ಅಗ್ನಿ= ಯಜ್ಞೇಶ್ವರನಿಗೆ, ಪಶುವು= ಆಹುತಿಗೆ ತಕ್ಕದ್ದು, ಆದುದು= ಆಯಿತು, ಎಂದು= ಎಂಬಂತೆ, ಅಭಿವರ್ಧಿಸೆ= ಹೆಚ್ಚಾಗಿ ಉರಿಯಲು, ಶ್ರುತಿವಾಕ್ಯಂಗಳಂಪಠಿಸುತ= ವೇದವಚನಗಳನ್ನು ಹೇಳುತ್ತ,
ಎಲೆಘೋಟ= ಎಲೈ ಕುದುರೆಯೇ, ನೀನು= ನೀನಾದರೊ, ಪೋಗು= ಹೊರಟುಹೋಗು, ನಿನಗೆ= ನಿನಗಾದರೊ, ಈಗ= ಈ ಕಾಲದಲ್ಲಿ, ಅಮರಪದಂ= ದೈವಾಂಶವು, ಅಶ್ವಲೋಕದೊಳ್= ಕುದುರೆಗಳ ಲೋಕದಲ್ಲಿ, ಅಪ್ಪುದು= ಲಭಿಸುವುದು, ಅಳಿವು= ಚ್ಯುತಿಯು ಎಂದರೆ ಪುನಃ ಭೂಮಿಯಲ್ಲಿ ಹುಟ್ಟುವುದು, ಎಂದುಂ= ಇನ್ನೆಂದಿಗೂ, ಇಲ್ಲದೆ= ಒದಗದೆ, ಉತ್ತಮ= ಮೇಲಾದ, ಸ್ವರ್ಗಂ= ಸ್ವರ್ಗಲೋಕವನ್ನು, ಪಡೆ= ಅನುಭವಿಸು. ಎಂದನು= ಎಂದು ನುಡಿದನು.
ತಾತ್ಪರ್ಯ:- ಆಗ ದೀಕ್ಷಾಬದ್ಧನಾದ ಧರ್ಮರಾಯನು ಮಂತ್ರೋದಕ ಸ್ನಾನವನ್ನು ಮಾಡಿ ಗರುಡವೇದಿಕೆಯ ಬಳಿಗೆ ಯಾಗಪಶುವಾದ ಕುದುರೆಯನ್ನು ತರಿಸ, ತೇಜೋರೂಪವಾಗಿರುವ ಆ ಕುದುರೆಯನ್ನು ಕುರಿತು, ಎಲೈ ಕುದುರೆಯೇ!
ನಿನಗೆಂದೆಂದಿಗೂ ನಾಶವಿಲ್ಲದ ಸ್ವರ್ಗವು ಸಿದ್ಧಿಸುವುದು, ನೀನು ಅಶ್ವಲೋಕಕ್ಕೆಹೋಗೆಂದು ನುಡಿದನು. ಬ್ರಾಹ್ಮಣರೆಲ್ಲ ವೇದವಚನಗಳನ್ನು ಉದ್ಘೋಷಿಸುತ್ತಲಿದ್ದರು.
ನೃಪನ ಮಾತಂ ಕೇಳ್ದು ವಾಜಿ ತಲೆಗೊಡಹಿ ಮುರ।
ರಿಪುವನೀಕ್ಷಿಸುವಭಿಪ್ರಾಯಮಂ ಮೋದದಿಂ।
ವಿಪುಲ ಮತ ನಕುಲಂಗೆ ಸೂಚಿಸಿದೊಡಾತನದರಿಂಗಿತವನರಿದು ಬಳಿಕ ॥
ತಪನಸುತ ನಂದನಂಗೆಂದನವಧರಿಸು ಹಯ।
ಮುಪರಿಲೋಕದೊಳಶ್ವಪದವಿಯಂ ತಾನೊಲ್ಲೆ।
ನುಪಮೆಗೈದದ ಕೃಷ್ಣಸಾಯುಜ್ಯಮಂ ಪಡೆವೆನೆಂದೆಂಬುದೆನ್ನೊಳೆಂದು॥೧೩॥
ಪ್ರತಿಪದಾರ್ಥ :- ವಾಜಿ=ಅಶ್ವವು, ನೃಪನ= ಅರಸನ, ಮಾತಂ= ನುಡಿಯನ್ನು, ಕೇಳ್ದು= ಕೇಳಿ, ತಲೆಕೊಡಹಿ=ತನ್ನತಲೆಯ-
ನ್ನೊದರಿ, ವೆಪುಲ= ಹೆಚ್ಚಾದ, ಮತಿ= ಬುದ್ಧಿಯನ್ನುಳ್ಳ,ನಕೈಲಂಗೆ= ನಕುಲನಿಗೆ, ಮುರರಿಪುವನು= ಕೃಷ್ಣನನ್ನು, ಈಕ್ಷಿಸುವ=
ನೋಡತಕ್ಕ, ಅಭಿಪ್ರಾಯಮಂ= ಆಶಯವನ್ನು, ಮೋದದಿಂ= ಆನಂದದಿಂದ, ಸೂಚಿಸಿದೊಡೆ= ಅರುಹಲು, ಅದರ ಇಂಗಿತವನು= ಅದರ ಆಶಯವನ್ನು, ಆತನು= ಆ ನಕುಲನು, ಅರಿದು=ತಿಳಿದು,ಬಳಿಕ= ಅನಂತರ,ತಪನಸುತನಂದನಂಗೆ=
ಧರ್ಮರಾಯನಿಗೆ,( ತಪನಸುತನಂದನ= ಧರ್ಮರಾಯ, ವೃಷಕೇತು) ಅವಧರಿಸು= ಕಿವಿಗೊಟ್ಟು ಕೇಳು, ಹಯಂ= ಯಜ್ಞಾಶ್ವವು, ತಾನು=ಅದು, ಉಪರಿಲೋಕದೊಳ್= ಸ್ವರ್ಗಲೋಕದೊಳಗೆ, ಅಶ್ವಪದವಿಯಂ= ಕುದುರೆಗಳಿಗಾಗುವ ಮುಕ್ತಿಯನ್ನು, ಒಲ್ಲೆನು= ಒಪ್ಪುವುದಿಲ್ಲ, ಐಪಮೆಗೈದದ= ಅಸದೃಶವಾದ, ಕೃಷ್ಣಸಾಯುಜ್ಯಮಂ= ಕೃಷ್ಣನಲ್ಲಿಯೇ ಐಕ್ಯವಾ- ಗುವಿಕೆಯನ್ನು ಪಡೆಯುವೆನು= ಲಭಿಸುವಂತೆ ಮಾಡಿಕೊಳ್ಳುವೆನು,ಎಂದು= ಎಂಬುದಾಗಿ, ಎನ್ನೊಳು=ನನ್ನಲ್ಲಿ, ಎಂಬುದು= ಹೇಳುತ್ತಿದೆ, ಎಂದನು= ಎಂಬುದಾಗಿ ನಕುಲನು ಯುಧಾಷ್ಠಿರನೊಂದಿಗೆ ಹೇಳಿದನು,
ತಾತ್ಪರ್ಯ:- ಧರ್ಮರಾಯನ ಮಾತನ್ನು ಕೇಳಿದ ಕೂಡಲೆ ಕುದುರೆಯು ತನ್ನ ತಲೆಯನ್ನು ಅಲ್ಲಾಡಿಸಿತು, ಧರ್ಮಜನು ಇದರ ಇಂಗಿತವೇನೆಂದು ತಮ್ಮನಾದ ನಕುಲನನ್ನು ಕೇಳಲು, ನಕುಲನು ಅಣ್ಣನನ್ನು ಕುರಿತು, ಈ ಕುದುರೆಯು ತನಗೆ ಅಶ್ವಲೋಕ-
ವು ಬೇಡವೆಂದೂ, ಕೃಷ್ಣಸಾನ್ನಿಧ್ಯವುಂಟಾಗಲೆಂದೂ ಹೇಳುತ್ತಿರುವುದು.
ಫಣಿ ಶಯನ ಸಾನ್ನಿಧ್ಯಮಿಂತಿಲ್ಲದೀಶ್ವರಾ।
ರ್ಪಣಮಲ್ಲದನ್ಯ ಯಜ್ಞಂಗಳೊಳ್ ಮಡಿದ ಪಶು।
ಗಣಕೆ ಮೇಣಾಕರ್ತೃಗಳ್ಗತಿಶಯ ಸ್ವರ್ಗಭೋಗಮಾದಪುದು ನಿನ್ನ ॥
ಪ್ರಣುತ ಸತ್ಕ್ರತು ಫಲಂ ಶ್ರೀಕಾಂತನಾ ಕಾ।
ರಣದಿಂದೆ ಕೃಷ್ಣನ ಶರೀರಮಂ ಪೊಗುವೆನೀ।
ಕ್ಷಣದೊಳಿದನೆಲೂಲರುಂ ನೋಡಲೆನುತಿದೆ ತುರಗಮೆಂದು ನಕುಲಂ ನುಡಿದನು॥೧೪॥
ಪ್ರತಿಪದಾರ್ಥ :- ಇಂತು= ಈ ರೀತಿಯಾಗಿ, ಫಣಿಶಯನನ= ಸರ್ಪವನ್ನೆ ಹಾಸಿಗೆಯಾಗುಳ್ಳ ನಾರಾಯಣನ, ಸಾನ್ನಿಧ್ಯಂ= ಹತ್ತಿರದಲ್ಲಿಯೇ ಇರುವಿಕೆಯು,ಇಲ್ಲದ= ಇಲ್ಲದಿರತಕ್ಕ, ಈಶ್ವರಾರ್ಪಣಂ= ಈಶ್ವರನಿಗೆ ಅರ್ಪಣೆ ಮಾಡುವುದು, ಅಲ್ಲದ=
ಆಗದಿರುವ, ಅನ್ಯಯಜ್ಞಂಗಳೊಳ್= ಮಿಕ್ಕ ಯಾಗಗಳಲ್ಲಿ, ಮಡಿದ= ಸತ್ತುಹೋದ, ಪಶುಗಣಕೆ= ಪಶುರಾಶಿಗೆ,ಮೇಣ್= ಅಲ್ಲದೆ, ಆ ಕರ್ತೃಗಳ್ಗೆ= ಆ ಯಜ್ಞದ ಯಜಮಾನರಿಗೆ, ಅತಿಶಯ= ಹೆಚ್ಚಾದ, ಸ್ವರ್ಗಭೋಗಂ= ಸ್ವರ್ಗಪ್ರಾಪ್ತಿಯು, ಆದಪುದೆ= ಆದೀತೆ, ಶ್ರೀಕಾಂತನು= ಕೃಷ್ಣನು, ನಿನ್ನ= ನೀನು ಮಾಡತಕ್ಕ, ಪ್ರಣುತ= ಸ್ತೋತ್ರಾರ್ಹವಾದ, ಸತ್ಕ್ರತುಫಲಂ= ಯಾಗದ ಫಲವು, ಆದಕಾರಣದಿಂದ= ಆಗಿರುವುದರಿಂದ, ಈ ಕ್ಷಣದೊಳು= ಈಗಲೆ, ಕೃಷ್ಣನ = ಕೃಷ್ಣಮೂರುತಿಯ, ಶರೀರಮಂ= ದೇಹವನ್ನು,ಪೊಗುವೆನು= ಪ್ರವೇಶಮಾಡುವೆನು, ಇದನು= ಈ ಪರಿಯನ್ನು,ಎಲ್ಲರು= ಸರ್ವರೂ,ನೋಡಲಿ=
ನೋಡುವರಾಗಲಿ, ಎಂದು= ಎಂಬತೆರನಾಗಿ, ತುರಗಂ= ಕುದುರೆಯು, ಎನುತಿದೆ= ಎಂದು ನುಡಿಯುತ್ತಿದೆ, ಎಂದು= ಎಂಬತೆರನಾಗಿ, ನಕುಲನು, ನುಡಿದನು= ಧರ್ಮಜನಿಗೆ ಹೇಳಿದನು.
ತಾತ್ಪರ್ಯ:- ಪೂರ್ವದಲ್ಲಿ ಯಾರೂ ಇಂತಹ ಯಾಗವನ್ನು ಮಾಡಿಲ್ಲವೆಂದೂ, ಇದು ಅಸಾಧಾರಣವಾದ ಯಾಗವಾದ್ದರಿಂ-
ದಲೇ,ನನಗೆ ಕೃಷ್ಣಸಾನ್ನಿಧ್ಯವು ದೊರೆಯುವುದೆಂದೂ ಈ ಕುದುರೆಯು ಹೇಳುತ್ತಲಿರುವುದೆಂದು ಕುದುರೆಯ ಮನೋಭಿ-
ಪ್ರಾಯವನ್ನು ನಕುಲನು ಹೇಳಿದನು.
ತುರಗದಂತರ್ಭಾವಮಂ ತಿಳಿದು ನಕುಲನಿಂ।
ತರಸಂಗೆ ಬಿನ್ನಪಂಗೈದುದಂ ಕೇಳ್ದಖಿಳ।
ಧರಣೀಶ್ವರರ್ ಮುನಿಗಳಂಗನಾನಿಕುರುಂಬಮಾಶ್ಚರ್ಯಮಂ ನೋಡಲು॥
ನೆರೆದುದು ಸುಮಂತ್ರಿತದ ಯೂಪದೊಳ್ ಕಟ್ಟುತ।
ಧ್ವರ ಹಯವನಭಿಮಂತ್ರಿಸಿದರಚ್ಯುತನಮುಂದೆ।
ಪರಮಋಷಿಗಳ್ ಬಳಿಕ ಭೀಮನಂ ಕರೆದು ಮುದದಿಂ ಧೌಮ್ಯನಿಂತೆಂದನು॥೧೫॥
ಪ್ರತಿಪದಾರ್ಥ :- ನಕುಲನಿಂ=ನಕುಲನಿಂದ,ತುರಗದ= ಹಯದ,ಅಂತರ್ಭಾವಮಂ= ಆಶಯವನ್ನು, ತಿಳಿದು=ತಿಳಿದುಕೊಂ-
ಡು, ಅರಸಂಗೆ= ಧರ್ಮರಾಯನಿಗೆ, ಇಂತು= ಈ ಪ್ರಕಾರವಾಗಿ, ಬಿನ್ನಪವಂಗೈದುದಂ= ಅರಿಕೆಮಾಡಿಕೊಡದ್ದನ್ನು,ಅಖಿಳ= ಸಕಲ, ಧರಣೀಶ್ವರರ್= ಅರಸುಗಳು, ಮುನಿಗಳು= ತಾಪಸೋತ್ತಮರು,ಅಂಗನಾನಿಕುರುಂಬಂ= ಸ್ತ್ರೀಸಮುದಾಯವೂ ಸಹ, ಕೇಳ್ದು= ಕೇಳಿ, ಆಶ್ಚರ್ಯಮಂ= ಅಚ್ಚರಿಯನ್ನು, ನೋಡಲು= ನೋಡಬೇಕೆಂದು, ನೆರೆದುದು=ಒಟ್ಟುಗೂಡಿತು, ಪರಮರುಷಿಗಳು= ತಾಪಸೋತ್ತಮರು, ಅಧ್ವರಹಯವ= ಅಶ್ವಮೇಧದ ಕುದುರೆಯನ್ನು, ಸುಮಂತ್ರಿತ= ಮಂತ್ರದಿಂದ ಪರಿಶುದ್ಧವಾದ, ಯೂಪದೊಳ್= ಯೂಪಸ್ತಂಭದಲ್ಲಿ, ಕಟ್ಟುತ= ಕಟ್ಟುತ್ತ,ಅಚ್ಯುತನಮುಂದೆ= ಕೃಷ್ಣನ ಮುಂದುಗಡೆ, ಅಭಿಮಂತ್ರಿಸಿದರು= ಪ್ರೋಕ್ಷಣೆಯನ್ನು ಮಾಡಿದರು, ಬಳಿಕ = ಅನಂತರ, ಧೌಮ್ಯಮುನಿಯು, ಭೀಮನಂ= ಭೀಮಸೇನನನ್ನು, ಕರೆದು= ಬರಮಾಡಿಕೊಂಡು, ಇಂತು= ಮುಂದೆಹೇಳುವಂತೆ, ಮುದದಿಂದ = ವಿಶ್ವಾಸದಿಂದ, ಎಂದನು= ನುಡಿದನು.
ತಾತ್ಪರ್ಯ:- ಈ ಅಚ್ಚರಿಯನ್ನು ನೋಡಬೇಕೆಂದು ಅಲ್ಲಿ ನೆರೆದಿದ್ದ ಸರ್ವರೂ ಏಕಾಗ್ರಚಿತ್ತವುಳ್ಳವರಾಗಿರುವಾಗ, ಧೌಮ್ಯ-
ಮುನೀಂದ್ರನು ಭೀಮನನ್ನು ಕರೆದು ಈ ರೀತಿ ಹೇಳಿದರು.
ಈಕ್ಷಿಪುದು ಸಕಲ ಜನಮೆಲೆ ವೃಕೋದರ ನಾಂ ಪ।
ರೀಕ್ಷೆಯಂ ತೋರಿಸುವೆನೀತುರಂಗಮದೊಳೊಂ।
ದೇಕ್ಷಣಂ ಖಡ್ಗಮಂ ಕೊಂಡು ನಿಶ್ಚಲನಾಗಿನಿಲ್ವುದೆಂದಾ ಧೌಮ್ಯನು॥
ಪ್ರೋಕ್ಷಿಸಿ ಕರಾಗ್ರದಿಂ ಪಿಡಿದು ಹಯದೆಡಗಿವಿಯ।
ನಾಕ್ಷೋಭದಿಂ ಸೀಳಿದೊಡೆ ನೆತ್ತರಿಲ್ಲದೆ ಮ।
ಹಾಕ್ಷೀರಧಾರೆ ಪೊರಮಟ್ಟುದು ಸಮಸ್ತ ಲೋಕಂ ಕಂಡು ಬೆರಗಾಗಲು॥೧೬॥
ಪ್ರತಿಪದಾರ್ಥ :- ಆ ಧೌಮ್ಯನು, ಎಲೆ ವೃಕೋದರ= ಎಲೈ ವಾಯುನಂದನನೆ, ನಾಂ= ನಾನು, ಈ ತುರಂಗಮದೊಳು= ಈ ಕುದುರೆಯಲ್ಲಿ, ಪರೀಕ್ಷೆಯಂ ತೋರುವೆನು= ಪರೀಕ್ಷೆಯನ್ನು ತೋರಿಸಿಕೊಡುತ್ತೇನೆ, ಸಕಲಜನಂ= ಎಲ್ಲರೂ, ಈಕ್ಷಿಪುದು= ನೋಡಬೇಕು, ಖಡ್ಗಮಂ=ಕತ್ತಿಯನ್ನು, ಒಂದೇಕ್ಷಣಂ= ಒಂದು ಕ್ಷಣಮಾತ್ರ, ಕೊಂಡು= ಹಿಡಿದುಕೊಂಡು, ನಿಶ್ಚಲನಾಗಿ=ಸ್ಥಿರ-
ಚಿತ್ತದಿಂದ, ನಿಲ್ವುದು= ನಿಂತುಕೊಳ್ಳತಕ್ಕದ್ದು, ಎಂದು= ಎಂಬತೆರನಾಗಿ ತಿಳಿಸಿ, ಪ್ರೋಕ್ಷಿಸಿ= ಪ್ರೋಕ್ಷಣೆ ಮಾಡಿ, ಹಯದ= ಕುದುರೆಯ, ಎಡಗಿವಿಯನು= ಎಡಭಾಗದ ಕಿವಿಯನ್ನು, ಕರಾಗ್ರದಿಂ ಪಿಡಿದು= ಕೈಬೆರಳಿನಿಂದ ಹಿಡಿದುಕೊಂಡು, ಅಕ್ಷೋಭದಿಂ= ಕಷ್ಟದಿಂದ, ಸೀಳಿದೊಡೆ= ಸೀಳಿಬಿಡಲು, ನೆತ್ತರಿಲ್ಲದೆ= ರಕ್ತವೇ ಬಾರದೆ,ಸಮಸ್ತ ಲೋಕಂ= ಸಕಲರೂ, ಕಂಡು= ನೋಡಿಬೆರಗಾಗಲು, ಅಚ್ಚರಿಯನೈದುವಂತೆ, ಮಹಾಕ್ಷೀರಧಾರೆ= ಹೆಚ್ಚಾದ ಹಾಲಿನ ಧಾರೆಯು, ಪೊರಮಟ್ಟುದು= ಈಚೆಗೆ ಸುರಿಯಲಾರಂಭಿಸಿತು.
ತಾತ್ಪರ್ಯ:- ಅಯ್ಯಾ ಭೀಮಸೇನನೆ, ನೀನು ಸ್ವಲ್ಪಪಹೊತ್ತು ನಿಶ್ಚಲನಾಗಿ ನಿಂತಿರು. ಈ ಕುದುರೆಯಲ್ಲಿ ನಿಮ್ಮೆಲ್ಲರಿಗೂ ಒಂದು ಸೋಜಿಗವನ್ನು ತೋರಿಸುವೆನೆಂದು ನುಡಿದು, ಆ ಕುದುರೆಯ ಎಡಕಿವಿಯನ್ನು ಸೀಳಿದನು. ಅದರಲ್ಲಿ ರಕ್ತವು ಸುರಿಯದೆ ಹಾಲು ಧಾರೆಯಾಗಿ ಸುರಿಯುತ್ತಿರುವುದನ್ನು ನೋಡಿ ಎಲ್ಲರೂ ಅಚ್ಚರಿಗೊಳ್ಳುತ್ತಿರುವಾಗ,
ಮತ್ತೆ ಧೌಮ್ಯಂ ಭೀಮಸೇನನಂ ಕರೆದು ಪುರು।
ಷೋತ್ತಮಂ ಪ್ರೀತನಪ್ಪವೊಲಿನ್ನು ಬಾಳಿಂದ।
ಕತ್ತರಿಸು ಕುದುರೆಯ ತಲೆಯನೆಂದು ನೇಮಿಸಿದೊಡನಿಲಸುತನಾ ಕ್ಷಣದೊಳು॥
ಒತ್ತಿಡಿದ ವಾದ್ಯಘೋಷದೊಳಮಲ ಬರ್ಹಗಳ।
ಬಿತ್ತರದ ಪರಿಪೂತ ವಿಜಿ ಶಿರಮಂ ಛೇದಿ।
ಸುತ್ತಿರಲದಿಳೆಗೆ ಬೀಳದೆ ನಭಸ್ಥಳಕಡರ್ದಡಗಿತಿನಮಂಡಲದೊಳು॥೧೭॥
ಪ್ರತಿಪದಾರ್ಥ :- ಮತ್ತೆ= ತಿರುಗಿ, ಧೌಮ್ಯಂ= ಋಷಿ ಧೌಮ್ಯನು, ಭೀಮಸೇನನಂ ಕರೆದು= ವೃಕೋದರನನ್ನು ಕೂಗಿ, ಇನ್ನು= ಇನ್ನುಮುಂದೆ, ಪುರುಷೋತ್ತಮಂ= ಶ್ರೀಮನ್ನಾರಾಯಣಮೂರ್ತಿಯು,ಪ್ರೀತನಪ್ಪವೊಲ್= ಸಂತಸಗೊಳ್ಳುವಂತೆ,ಬಾಳಿಂದ=
ಖಡ್ಗದಿಂದ, ಕುದುರೆಯ= ತುರಂಗಮದ, ತಲೆಯನು= ತಲೆಯನ್ನು, ಕತ್ತರಿಸಲು= ಕಡಿದುಹಾಕು, ಎಂದು= ಎಂಬುದಾಗಿ, ನೇಮಿಸಿದೊಡೆ= ಅಪ್ಪಣೆಮಾಡಲು, ಆಕ್ಷಣದೊಳು= ಒಡನೆಯೇ, ಒತ್ತಿಡಿದ= ಸಾಂದ್ರವಾದ,ವಾದ್ಯಘೋಷದೊಳು= ಮಂಗಳವಾದ್ಯಗಳ ಘೋಷದೊಡನೆ, ಅಮಲ= ಶ್ರೇಷ್ಠವಾದ, ಬರೂಹಿಗಳ= ನವಿಲುಗರಿಗಳ, ಚಿತ್ತರದಿ= ಸಿಂಗರದಿಂದ, ಪರಿಪೂತ= ಪವಿತ್ರವಾದ, ವಾಜಿ= ಅಶ್ವದ, ಶಿರಮಂ= ತಲೆಯನ್ನು, ಅನಿಲಸುತನು= ಭೀಮನು, ಛೇದಿಸುತಿರಲು= ಕಡಿದು ಹಾಕಲಾಗಿ, ಇಳೆಗೆ ಬೀಳದೆ= ಭೂಮಿಯಮೇಲೆ ಬೀಳದೆ, ನಭಸ್ಥಳಕೆ= ಆಕಾಶಕ್ಕೆ, ಅಡರ್ದು= ಹಾರಿಹೋಗಿ, ಇನಮಂಡ-
ಲದೊಳು= ಸೂರ್ಯಮಂಡಲದೊಳಗೆ, ಅಡಗಿತು= ಮಾಯವಾಯಿತು, ( ಕಾಣಿಸದೆ ಹೋಯಿತು)
ತಾತ್ಪರ್ಯ:- ಧೌಮ್ಯಮುನಿಯು ಮತ್ತೆ ಭೀಮಸೇನನನ್ನು ನೋಡಿ, ಎಲೈಭೀಮನೆ, ಈಗ ನೀನು ಈ ಕುದುರೆಯ ತಲೆಯನ್ನು ಕತ್ತರಿಸಿಬಿಡೆಂದನು. ವಾಯುಸುತನು ಕೂಡಲೇ ಅದರ ಕಂಠವನ್ನು ಕತ್ತರಿಸುವಾಗ ಅನೇಕವಾದ್ಯಘೋಷಗಳುಂಟಾದವು. ಭೀಮನು ಅದರ ಶಿರಸ್ಸನ್ನು ಛೇಧಿಸಿದ ಕೂಡಲೆ ತಲೆಯು ನೆಲಕ್ಕೆ ಬೀಳದೆ ಅಂತರಿಕ್ಷದಲ್ಲಿ ಮಾಯವಾಯಿತು.
ಪರಿಶುದ್ಧಮಾಗಿರ್ಪುದೀ ತುರಗಮೆಂದೊರೆದು।
ಹರಿ ಹೊಯ್ದನದರುರಸ್ಥಳದೊಳುರ್ವಿಗೆ ಬಿದ್ದು।
ದಿರದೆ ಪೊರಮಟ್ಟು ಜೀವಾತ್ಮನತಿತೇಜದಿಂದಚ್ಯುತಾಸ್ಯದೊಳಡಗಲು॥
ವರ ಮುನಿಗಳಮಲ ಧರ್ಮಮಿದೆಂದರೆಲೆ ಯುಧಿ।
ಷ್ಠಿರ ಪೂರ್ವ ಯುಗದಧ್ವರಂಗಳೊಳ್ ಕಾಣೆವೀ।
ಪರಿ ಪವಿತ್ರದ ಪಶುವನಿದು ನಿನಗೆ ದೊರೆಕೊಂಡು ಕ್ರತು ಸಫಲಮಾಯ್ತೆಂದರು॥೧೮॥
ಪ್ರತಿಪದಾರ್ಥ :- ಈ ತುರಗಂ= ಈ ಕುದುರೆಯು, ಪರಿಶುದ್ಧಮಾಗಿರ್ಪುದು= ಪವಿತ್ರವಾದದ್ದಾಗಿರುವುದು,ಎಂದು= ಎಂಬತೆರನಾಗಿ, ಹರಿ, ಅರಿದು=ತಿಳಿದವನಾಗಿ,ಅದರ= ಆ ಅಶ್ವದ, ಉರಸ್ಥಳದೊಳು= ಎದೆಯ ಭಾಗದಲ್ಲಿ, ಹೊಯ್ದನು= ಹೊಡೆದನು, ಇರದೆ= ತಡಮಾಡದೆ, ಉರ್ವಿಗೆ= ನೆಲದಮೇಲೆ, ಬಿದ್ದುದು= ಬಿದ್ದುಹೋಯಿತು, ಜೀವಾತ್ಮನು= ಜೀವಾತ್ಮ-
ನಾದರೊ, ಪೊರಮಟ್ಟು = ಹೊರಹೊರಟು, ಅಚ್ಯುತನ ಆಸ್ಯದೊಳು= ಶ್ರೀಕೃಷ್ಣನ ಮುಖದಲ್ಲಿ, ಅತಿತೇಜದಿಂದ= ಹೆಚ್ಚಾದ ಕಾಂತಿಯಿಂದ, ಅಡಗಲು= ಹೋಗಿ ಸೇರಲು, ವರಮುನಿಗಳು= ತಾಪಸೋತ್ತಮರು,ಎಲೆ ಯುಧಿಷ್ಠಿರ= ಅಯ್ಯಾ ಯುಧಿ-
ಷ್ಠಿರನೆ, ಈ ಪರಿ= ಈ ಬಗೆಯಾಗಿರತಕ್ಕ, ಪವಿತ್ರ= ಪರಿಶುದ್ಧವಾದ, ಪಶುವನು= ಅಶ್ವವನ್ನು, ಪೂರ್ವಯುಗದ ಅಧ್ವರಗ-
ಳೊಳ್= ಪೂರ್ವಕಾಲದಲ್ಲಿ ಮಾಡಿದ ಯಾಗಗಳಲ್ಲಿ, ಕಾಣೆವು= ನೋಡಿಯೇ ಇಲ್ಲವು, ಇದು= ಈ ಅಶ್ವವು, ನಿನಗೆ= ನಿನಗಾದರೊ, ದೊರಕೊಂಡು= ಲಭಿಸಿದ ಕಾರಣ, ಕ್ರತು= ಈ ನಿನ್ನ ಯಾಗವು, ಸಫಲಂ= ಫಲದಾಯಕ, ಆದುದು= ಆಯಿತು, ಎಂದು= ಎಂಬತೆರನಾಗಿ, ಅಮಲ= ಶ್ರೇಷ್ಠವಾದ, ಧರ್ಮಂ= ಧರ್ಮವು, ಎಂದು= ಎಂಬುದಾಗಿ, ಎಂದರು= ತಿಳಿಸಿದರು.
ತಾತ್ಪರ್ಯ:- ಆಗ ಕೃಷ್ಣನು ಇದು ಉತ್ತಮಾಶ್ವವೇ ಸರಿಯೆಂದರಿತು, ಅದರ ಎದೆಯನ್ನು ತಾನೇ ಛೇಧಿಸಲು ಕೈದುರೆಯು ಕೆಳಗೆ ಬಿದ್ದು, ಅಂತರಾತ್ಮನು ಕೃಷ್ಣನ ಮುಖದಲ್ಲಿ ಸೇರಿ ತೇಜೋರೂಪನಾಗಿರುವುದನ್ನು ಅಲ್ಲಿ ನೆರೆದಿದ್ದವರೆಲ್ಲರೂ ನೋಡಿ, ಧರ್ಮರಾಯನ ಯಾಗವು ಸಾರ್ಥಕವಾಯಿತೆಂದೂ ಪೂರ್ವದಿಂದಲೂ ಯಾರಿಗೂ ಇಂತಹ ಪುಣ್ಯವು ಪ್ರಾಪ್ತವಾಗಲಿಲ್ಲ-
ವೆಂದೂ ಕೊಂಡಾಡುತ್ತಿದ್ದರು.
ಏವೇಳವೆನಾಶ್ಚರ್ಯಮಂ ಬಳಿಕ ವಾಜಿಯ ಕ।
ಳೇವರಂ ಕರ್ಪೂರಮಾದುದತಿಶುಭ್ರದಿಂ।
ಭಾವಿಸಿ ಮಹಾಮುನಿಗಳಿದುವೆ ಕೃಷ್ಣನ ಮಹಿಮೆಯೆಂದು ವಿಸ್ಮಿತರಾಗಲು॥
ಭೂವರಂ ಹರಿಸಹಿತ ಪತ್ನಿಯಂ ಕೂಡಿ ಕೊಂ।
ಡಾವೇಷ್ಟಿಸಿದಸಕಲ ಬಾಂಧವರ ಗಡಣದಿಂ।
ಪಾವಕನ ಮುಂದೆ ಕುಳ್ಳಿರ್ದನದರಿಂದೆ ಹೋಮಂಗಳಂ ಮಾಡಿಸಲ್ಕೆ॥೧೯॥
ಪ್ರತಿಪದಾರ್ಥ :- ಆಶ್ಚರ್ಯಮಂ= ಆಶ್ಚರ್ಯಕರವಾದ ಸಂಗತಿಯನ್ನು, ಏವೇಳ್ವೆನು= ಏನೆಂದು ಹೇಳಲಿ, ಬಳಿಕ = ಅನಂತರ, ವಾಜಿಯ= ಕುದುರೆಯ, ಕಳೇವರಂ= ದೇಹವು, ಅತಿಶುಭ್ರದಿಂ= ಬಹಳ ಬೆಳ್ಳಗಿರತಕ್ಕ, ಕರ್ಪೂರಂ= ಕರ್ಪೂರವು, ಆದುದು= ಆಯಿತು, ಆಗ= ಆ ಕಾಲದಲ್ಲಿ, ಮಹಾಮುನಿಗಳು= ತಾಪಸೋತ್ತಮರೆಲ್ಲಾ, ಭಾವಿಸಿ= ಜ್ಞಾನದೃಷ್ಟಿಯಿಂದ ನೋಡಿ, ಇದು= ಈ ಕುದುರೆಯ ದೇಹವು ಕರ್ಪೂರವಾಗಿರತಕ್ಕದ್ದು, ಕೃಷ್ಣನ = ಕೃಷ್ಣ ಸ್ವಾಮಿಯ, ಮಹಿಮೆ= ಮಹಾತ್ಮೆಯು, ಎಂದು=ಎಂಬುದಾಗಿ, ವಿಸ್ಮಿತರಾಗಲು= ಅಚ್ಚರಿಯಿಂದ ಕೂಡಲು, ಭೂವರಂ= ಯುಧಿಷ್ಠಿರನು, ಹರಿಸಹಿತ= ಶ್ರೀಕೃಷ್ಣನೊಂದಿಗೆ, ಪತ್ನಿಯಂ ಕೂಡಿಕೊಂಡು= ಪತ್ನೀ ಸಮೇತನಾಗಿ, ಅವೇಷ್ಟಿಸಿದ=ಸುತ್ತಲೂ ನೆರೆದಿರತಕ್ಕ, ಸಕಲ= ಸಮಸ್ತ, ಬಾಂಧವರಗಡಣದಿಂ= ಬಂಧುವರ್ಗದ ಗುಂಪಿನೊಡನೆ, ಪಾವಕನ= ಅಗ್ನಿಯ, ಮುಂದೆ= ಮುಂದುಗಡೆ, ಅದರಿಂದ= ಆ ಕುದುರೆಯ ಶರೀರದಿಂದ, ಹೋಮಂಗಳಂ ಮಾಡಿಸಲ್ಕೆ= ಹೋಮಗಳನ್ನು ಮಾಡಿಸಲೋಸುಗ, ಕುಳ್ಳಿರ್ದನು= ಕುಳಿತುಕೊಂಡಿದ್ದನು.
ತಾತ್ಪರ್ಯ:- ಕೇಳೈ ಜನಮೇಜಯನೇ, ಇಂತಹ ಆಶ್ಚರ್ಯವನೆಂದೂ ಕೇಳಿಯೇ ಇಲ್ಲವು. ನೆಲದಮೇಲೆ ಬಿದ್ದ ಕುದುರೆಯ ದೇಹವೆಲ್ಲಾ ಧವಳವರ್ಣವಾದ ಕರ್ಪೂರವಾಗಿರುವುದನ್ನು ನೋಡಿ, ಇದು ಕೃಷ್ಣನ ಮಹಾತ್ಮೆಯಲ್ಲದೆ ಬೇರೆಯಲ್ಲವೆಂದು ತಿಳಿದು ಕೊಂಡಾಡುತ್ತಲಿದ್ದರು. ಆಗ ಧರ್ಮರಾಯನು ಪತ್ನಿಯೊಂದಿಗೆ ಕೂಡಿ ಅಶ್ವದೇಹವನ್ನು ಯಜ್ಞೇಶ್ವರನಿಗೆ ಕೊಡಲು-
ದ್ಯುಕ್ತನಾದನು.
ಧಾರಿಣಿಗೆ ಕುಪ್ಪಳಿಸಿದಾ ತುರಗದೊಡಲ ಕ।
ರ್ಪೂರಮಂ ಸ್ರುವದಿಂದೆ ಸಂಗ್ರಹಿಸಿ ಶಾಸ್ತ್ರ ಪ್ರ।
ಕಾರದಿಂದಾಗ ವೇದವ್ಯಾಸ ಮುನಿಪನಮರೇಂದ್ರನಂ ಕರೆದು ಬರಿಸಿ॥
ಈ ರಾಜಕುಲತಿಲಕನಧ್ವರದೊಳೀವ ಘನ।
ಸಾರಾಹುತಿಯನಿದ ಸ್ವೀಕರಿಸು ಮುಂದೆ ನಿನ।
ಗಾರು ಕೊಡುವವರಿಲ್ಲ ಕಲಿಯುಗದೊಳೀ ತೆರದೊಳೆನೆ ಶಕ್ರನಿಂತೆಂದನು॥೨೦॥
ಪ್ರತಿಪದಾರ್ಥ :- ವೇದವ್ಯಾಸ ಮುನಿಪನು= ವ್ಯಾಸಮಹರ್ಷಿಯು, ಸ್ರುವದಿಂದ= ಸ್ರುವನಾಮಕವಾದ ಪಾತ್ರೆಯಿಂದ, ಧಾರುಣಿಗೆ= ಭೂಮಿಗೆ, ಕುಪ್ಪಳಿಸಿದ= ಒಟ್ಟಾಗಿ ಬಿದ್ದಿರತಕ್ಕ, ಆ ತುರಗದ= ಆ ಕುದುರೆಯ, ಒಡಲಕರ್ಪೂರಮಂ= ಕರ್ಪೂರವಾಗಿರತಕ್ಕ ದೇಹವನ್ನು, ಸಂಗ್ರಹಿಸಿ= ಶೇಖರಿಸಿ, ಆಗ= ಆ ಕಾಲದಲ್ಲಿ, ಅಮರೇಂದ್ರನಂ= ದೇವೇಂದ್ರನನ್ನು,
ಶಾಸ್ತ್ರಪ್ರಕಾರದಿಂದ= ಯಥಾ ಶಾಸ್ತ್ರೀಯವಾಗಿ, ಕರೆದು= ಕರೆದವರಾಗಿ, ಬರಸಿ= ಬರಮಾಡಿಕೊಂಡು,ಈ ರಾಜಕುಲತಿಲಕನ= ಈ ರಾಜಶ್ರೇಷ್ಠನಾದ ಧರ್ಮರಾಯನ, ಅಧ್ವರದೊಳು= ಯಾಗದಲ್ಲಿ, ಈವ= ಕೊಡುತ್ತಿರುವ, ಘನ= ಹೆಚ್ಚಾಗಿ, ಸಾರ= ಸ್ವಾರಸ್ಯವುಳ್ಳ, ಘನಸಾರ= ಚರ್ಪೂರದ, ಆಹುತಿಯನು= ಹವಿಸ್ಸನ್ನು, ಈಗ= ಈಗಲಾದರೊ, ಸ್ವೀಕರಿಸು= ತೆಗೆದುಕೊಳ್ಳುವನಾಗು, ನಿನಗೆ= ನಿನಗಾದರೊ, ಕಲಿಯುಗದೊಳು= ಕಲಿಯುಗದಲ್ಲಿ, ಮುಂದೆ= ಇನ್ನು ಮುಂದೆ, ಈ ತರದೊಳು= ಈ ಪರಿಯಿಂದ, ಕೊಡುವವರು= ಹೋಮಮಾಡುವವರು, ಆರುಂ= ಬೇರೊಬ್ಬರೂ, ಇಲ್ಲ= ಇಲ್ಲವು, ಎನೆ=ಎಂದು ನುಡಿಯಲು, ಶಕ್ರನು= ದೇವೇಂದರನು, ಇಂತು= ಮುಂದೆ ಹೇಳುವಂತೆ, ಎಂದನು= ನುಡಿದನು.
ತಾತ್ಪರ್ಯ:- ಆಗ ವ್ಯಾಸಮುನಿಯು ನೆಲದಮೇಲೆ ಕರೂಪೂರಾಕೃತಿಯಾಗಿ ಬಿದ್ದಿರುವ ಅಶ್ವದೇಹವನ್ನೆಲ್ಲಾ ಸ್ರುವವೆಂಬ ಪಾತ್ರೆಯೊಳಕ್ಕೆ ಶೇಖರಿಸಿ ದೇವೇಂದ್ರನನ್ನು ಕುರಿತು, ಎಲೈ ಶಚೀಪತಿಯೇ! ಭೂಕಾಂತನಾದ ಧರ್ಮರಾಯನು ಈಗ ಕೊಡುತ್ತಲಿರುವ ಹೋಮದ್ರವ್ಯವನ್ನು ಆದರದಿಂದ ಸ್ವೀಕರಿಸು. ಕಲಿಯುಗದಲ್ಲಿ ಯಾರೂ ಅಶ್ವಮೇಧಯಾಗವನ್ನು ಮಾಡುವುದಿಲ್ಲವಾದ್ದರಿಂದ ನಿನಗೆ ಆಹಾರವು ಮುಂದೆ ದೊರೆಯಲಾರದು ಎನ್ನಲು ದೇವೇಂದ್ರನು ಮುಂದಿನಂತೆ ಹೇಳಿದನು.
ನೆನಕೆಗಳು:- ಬ್ರ॥ ಶ್ರೀ॥ ದೊಡ್ಡಬೆಲೆ, ನಾರಾಯಣಶಾಸ್ತ್ರಿ
ಪ್ರಕಾಶಕರು:- ಟಿ. ಎನ್. ಕೃಷ್ಣಯ್ಯಶೆಟ್ಟಿ;
ಬೆಂಗಳೂರು ಸಿಟಿ, ಚಿಕ್ಕಪೇಟೆ ಬುಕ್ ಡಿಪೊ, ಪ್ರೊಪ್ರೈಟರ್;
ಶ್ರೀ ವೆಂಕಟೇಶ ಮುದ್ರಣಾಲಯ
೧೯೩೨.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ