ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಫೆಬ್ರವರಿ 14, 2026

ಜೈಮಿನಿ ಭಾರತ 32 - ದೊಡ್ಡಬೆಲೆ ನಾರಾಯಣಶಾಸ್ತ್ರೀ

 ಜೈಮಿನಿ ಭಾರತ 32 - ದೊಡ್ಡಬೆಲೆ ನಾರಾಯಣಶಾಸ್ತ್ರೀ


ಸೂಚನೆ:- ವರ ಚಂದ್ರಹಾಸನಂ ಪ್ರೀತಿಯಿಂದೊಡಗೊಂಡು। 

ಶರಧಿಯ ಮಧ್ಯದೊಳ್ ಬಕದಾಲ್ಭ್ಯನಂ ಕಂಡು।

ಮರಳಿ ಕೃಷ್ಣಾರ್ಜುನರ್ ಸಿಂಧುದೇಶದಮೇಲೆ ಗಜನಗರಿಗೈತಂದರು॥


ಪ್ರತಿಪದಾರ್ಥ :- ಕೃಷ್ಣಾರ್ಜುನರು = ನರನಾರಾಯಣರು,ಪ್ರೀತಿಯಿಂದ = ಪ್ರೇಮದಿಂದ, ವರ= ಉತ್ತಮವಾದ, ಚಂದ್ರಹಾಸನಂ= ಚಂದ್ರಹಾಸನನ್ನು,  ಒಡಗೊಂಡು= ಜೊತೆಮಾಡಿಕೊಂಡು, ಬಕದಾಲ್ಭ್ಯನಂ= ಬಕದಾಲ್ಭ್ಯನೆಂಬ ಋಷಿಯನ್ನು, ಶರನಿಧಿಯ= ಸಾಗರದ ಮಧ್ಯದೊಳ್= ಮಧ್ಯದಲ್ಲಿ, ಕಂಡು=ಈಕ್ಷಿಸಿ, ಸಿಂಧುದೇಶದ ಮೇಲೆ= ಸಿಂಧು ರಾಜ್ಯದಮೇಲೆ, ಗಜನಗರಿಗೆ= ಹಸ್ತಿನಾಪುರಕ್ಕೆ, ಮರಳಿ= ತಿರುಗಿ, ಐತಂದರು= ಬಂದರು. 


ತಾತ್ಪರ್ಯ:-ಚಂದ್ರಹಾಸನನ್ನು ಪ್ರೀತಿಯಿಂದ ಜೊತೆಗೆ ಕರೆದುಕೊಂಡು ಸಮುದ್ರಮಧ್ಯದಲ್ಲಿ ಬಕದಾಲ್ಭ್ಯನನ್ನು ನೋಡಿ ಕೃಷ್ಣಾರ್ಜುನರಿಬ್ಬರೂ ಸಿಂಧ ದೇಶದ ಮೂಲಕ ಹಸ್ತಿನಾಪರಿಗೆ ಬಂದರು. 


ಕೇಳ್ದೆಲಾ ನರನಾಥ ಪಾರ್ಥಂಗೆ ನಾರದಂ। 

ಪೇಳ್ದ ವೃತ್ತಾಂತಮಂ ಬಳಿಕ ಸಂತೋಷಮಂ। 

ತಾಳ್ದು ಕುಂತೀಸುತಂ ಚಂದ್ರಹಾಸ ಪುರಾಭಿಮುಖಮಾಗಿನಡೆಯುತಿರಲು॥ 

ಆಳ್ದೋರಿ ತಮತಮಗೆ ಭೂಪಾಲರೈದೆ ಕೆಂ। 

ದೂಳ್ದೇವಲೋಕಮಂ ಕಿತ್ತೆತ್ತಿಕೊಂಡೊಯ್ದು। 

ದಾಳ್ದುದಿನ್ನೇನಂಬುಧಿಯೊಳವನಿತಳಮೆಂಬ ತೆರನಾಗಿ ಪದಹತಿಯೊಳು॥೧॥


ಪ್ರತಿಪದಾರ್ಥ :- ಎಲೈ ನರನಾಥ= ಅಯ್ಯಾ ಜನಮೇಜಯನೆ, ಪಾರ್ಥಂಗೆ= ಫಲುಗುಣನೊಂದಿಗೆ, ನಾರದಂ= ನಾರದನು, ಪೇಳ್ದು=ತಿಳಿಸಿದ, ವೃತ್ತಾಂತಮಂ = ವಾರ್ತೆಯನ್ನು, ಕೇಳ್ದೆ= ಕೇಳ್ದೆಯಷ್ಟೆ, ಬಳಿಕ = ತರುವಾಯ, ಕುಂತೀಸುತಂ= ಫಲುಗು- 

ಣನು, ಸಂತೋಷಮಂತಾಳ್ದು= ಆನಂದಗೊಂಡು, ಚಂದ್ರಹಾಸನ ಪುರಕೆ= ಚಂದ್ರಹಾಸನ ಕುಂತಳ ರಾಜ್ಯದ ಕಡೆಗೆ, ಮುಖಮಾಗಿ= ಎದುರಾಗಿ, ನಡೆವುತಿರಲು= ನಡೆಯುತ್ತಿರಲಾಗಿ, ಭೂಪಾಲರು= ಅರಸುಗಳು, ತಮತಮಗೆ= ತಮ್ಮ ತಮ್ಮಷ್ಟಕ್ಕೆ,ಆಳ್ದೋರಿ= ಅವರವರ ಸಾಹಸವನ್ನು ತೋರ್ಪಡಿಸಿ, ಐದೆ= ಹೊರಡಲಾಗಿ, ದೇವಲೋಕಮಂ= ಅಮರಾವ- 

ತಿಯನ್ನು, ಕೆಂಧೂಳ್= ಕೆಂಪುಧೂಳು, ಕಿತ್ತು= ಕಿತ್ತುಕೊಂಡು,ಅವನಿತಳಂ= ಭೂಪ್ರದೇಶವು, ಪದಹತಿಯೊಳು= ಕಾಲ್ತುಳಿ- 

ತದಿಂದ, ಅಂಬುಧಿಯೊಳು= ಸಾಗರದಲ್ಲಿ, ಆಳ್ದುದು= ಮುಳುಗಿಕೊಂಡಿತು, ಇನ್ನೇನು= ಇನ್ನೇನಾದೀತು, ಎಂಬ= ಎನ್ನತಕ್ಕ,  ತೆರನು= ರೀತಿಯು, ಆಗೆ= ಆಗಲಾಗಿ, ಒಯ್ದುದು= ಧೂಳನ್ನೆತ್ತಿಕೊಂಡು ಹೊರಟಿತು. 


ತಾತ್ಪರ್ಯ:- ಕೇಳೈ ಜನಮೇಜಯ ಭೂಪಾಲನೆ, ಸುರಮುನಿಯಾದ ನಾರದನು ಫಲುಗುಣನಿಗೆ ಪೇಳಿದ ಇಂದುಹಾಸನಕಥೆಯನ್ನು ಇನ್ನೂ ವಿವರಿಸಿ ಹೇಳುವೆನು. ದೇವಮುನಿಯಿಂದ ಚಂದ್ರಹಾಸನ ಕಥೆಯನ್ನು ಸವಿಸ್ತಾರವಾಗಿ ಕೇಳಿಸಂತುಷ್ಟನಾದ ಧನಂಜಯನು ಸೇನಾಸಮೇತನಾಗಿ ಕುಂತಳರಾಜ್ಯದ ಕಡೆಗೆ ಹೊರಡುತ್ತಿರುವಾಗ ಸೈನ್ಯದ ಪಾದತುಳಿ- ತದಿಂದ ಎದ್ದ ಧೂಳು ಭೂಮ್ಯಾಕಾಶಗಳಿಗೆ ಏಕಾಕಾರವಾಗಿ ಕಾಣಿಸಿತು. 


ಬರುತಿರ್ದುದರ್ಜುನನ ಸೈನಿಕಂ ಕುಂತಳ ನ। 

ಗರಿಗಾಗಿ ಜನಮೇಜಯ ಕ್ಷಿತಿಪ ಕೇಳಿತ್ತ। 

ನರನ ವಾಜಿಗಳೂರ ಪೊರವಳಯಮುಪವನದ ನಡುವೆ ತಮ್ಮಿಚ್ಛೆಯಿಂದೆ॥

ತಿರುಗುತಿರೆ ಕಂಡವರ್ ಕೌತುಕಮಿದೆಂದು ಬಂ। 

ದೊರೆಯೆ ಪದ್ಮಾಕ್ಷಮಕರಧ್ವಜರ್ ಪಿಡಿದವರ। 

ಶಿರದ ಪಟ್ಟದ ಲಿಪಿಯನೋದಿ ವಿಸ್ಮಿತರಾಗಿ ತಂದೆಗೊಪ್ಪಿಸಿ ನುಡಿದರು॥೨॥ 


ಪ್ರತಿಪದಾರ್ಥ :- ಜನಮೇಜಯ ಕ್ಷಿತಿಪ = ಜನಮೇಜಯ ಭೂಕಾಂತನೆ, ಕೇಳು= ಆಲಿಸು,  ಕುಂತಳನಗರಿಗಾಗಿ= ಕುಂತಳ ನಗರದವಕಡೆಗೆ, ಅರ್ಜುನನ = ಫಲುಗುಣನ, ಸೈನಿಕಂ= ದಳವು, ಬರುತಿರ್ದುದು= ಬರುತ್ತಲಿತ್ತು, ನರನ= ಪಾರ್ಥನ,  ವಾಜಿಗಳು= ಯಜ್ಞಾಶ್ವಗಳು,  ಇತ್ತ= ಈ ಭಾಗದಲ್ಲಿ,  ಊರ= ಪಟ್ಟಣದ, ಪೊರವಳಯದ= ಹೊರಗಡೆಯಲ್ಲಿರತಕ್ಕ, ಉಪವನದ= ಉದ್ಯಾನದ, ನಡುವೆ= ಮಧ್ಯಭಾಗದೊಳಗೆ, ತಮ್ಮಿಚ್ಛೆಯಿಂದ= ಸ್ವೇಚ್ಛೆಯಾಗಿ, ತಿರುಗುತಿರೆ= ತಿರುಗುತ್ತಿರ- 

ಲಾಗಿ, ಇದು= ಈ ರೀತಿ ನಡೆಯತಕ್ಕದ್ದು,ಕೌತುಕಂ= ಅಚ್ಚರಿಯು, ಎಂದು=ಎಂಬುದಾಗಿ,  ಕಂಡವರು= ನೋಡಿದ ಸೇವಕರು, ಬಂದು= ಬಂದವರಾಗಿ, ಒರೆಯೆ= ಹೇಳಲಾಗಿ, ಪದ್ಮಾಕ್ಷ ಮಕರಧ್ವಜರು= ಇಂದುಹಾಸನ ಕುವರರಾದ ಪದ್ಮಾಕ್ಷ ಮಕರಧ್ವಜರು, ಪಿಡಿದು= ಹಿಡಿದುಕೊಂಡು,  ಅದರ= ಆ ತುರಗದ, ಶಿರದ= ಹಣೆಯಲ್ಲಿದ್ದ, ಪಟ್ಟದ= ಚಿನ್ನದ ತಗಡಿನ- 

ಮೇಲೆ  ಬರೆದಿರತಕ್ಕ, ಲಿಪಿಯ= ಬರವಣಿಗೆಯ, ನೋಡಿ= ನೋಡಿದವರಾಗಿ, ವಿಸ್ಮಿತರಾಗಿ=ಅಚ್ಚರಿಗೊಂಡು, ತಂದೆಗೆ= ತಮ್ಮ ಜನಕ ಇಂದುಹಾಸನಿಗೆ, ಒಪ್ಪಿಸಿ = ಕೊಟ್ಟು,  ನುಡಿದರು= ಮುಂದೆ ಹೇಳುವಂತೆ ಹೇಳುತ್ತಾರೆ.  


ತಾತ್ಪರ್ಯ:- ಅತ್ತ ಯಜ್ಞಾಶ್ವಗಳು ಕುಂತಳ ರಾಜ್ಯದ ಊರಹೊರಗಿನ ಉದ್ಯಾನದಲ್ಲಿ ತಿರುಗಾಡುತ್ತಿರುವ ಆಶ್ಚರ್ಯವನ್ನು ಅಲ್ಲಿಯ ಕಾವಲ್ಗಾರರು ನೋಡಿ ತಡಮಾಡದೆ ಬಂದು ಚಂದ್ರಹಾಸನ ಕುವರರಾದ ಪದ್ಮಾಕ್ಷ ಮಕರಧ್ವಜರಿಗೆ ತಿಳಿಸಲು ಅವರೀರ್ವರೂ ಜಾಗ್ರತೆಯಾಗಿ ಹೋಗಿ ಯಜ್ಞಾಶ್ವಗಳನ್ನು ನೋಡಿ ಊದರ ಹಣೆಯಲ್ಲಿರುವ ಬಿರುದಾವಳಿಯನ್ನೆಲ್ಲಾ ಓದಿಕೊಂಡು ಕುದುರೆಗಳು ಸಹಿತ ತಂದೆ ಚಂದ್ರಹಾಸನ ಬಳಿಗೆ ಬಂದು ನುಡಿದರು. 


ಜೀಯ ಬಿನ್ನಪವನವಧರಿಸಿಳೆಯಮೇಲೆ ಕೌಂ। 

ತೇಯನ ಮಹಾಧ್ವರದ ವಾಜಿಗಳ್ ತಿರುಗಿ ತರು। 

ವಾಯೊಳಿಲ್ಲಿಗೆ ಬಂದೊಡಾವು ಕಟ್ಟಿದೆವಿನ್ನು ಬಿಡಿಸಿಕೊಂಬತಿಬಲರನು॥ 

ಸಾಯಕದ ಮೊನೆಯೊಳೈಸಲೆ ಕಾಣಬೇಕೆನಲ್-। 

ಪ್ರೀಯದಿಂ ತನಯರಂ ತೆಗೆದಪ್ಪಿ ತಾನಭಿ। 

ಪ್ರಾಯಮಂ ತಿಳಿದು ಹರ್ಷಿತನಾಗಿ ಚಂದ್ರಹಾಸಂ ನಯದೊಳಿಂತೆಂದನು॥೩॥ 


ಪ್ರತಿಪದಾರ್ಥ :- ಜೀಯ= ಎಲೈ ತಂದೆಯೇ, ಬಿನ್ನಪವನು= ನಮ್ಮ ಮಾತುಗಳನ್ನು,  ಅವಧರಿಸು= ಲಾಲಿಸು,  ಕೌಂತೇಯನ= ಕುಂತೀ ಸುತನಾದ ಯುಧಿಷ್ಠಿರನ,  ಮಹಾ= ದೊಡ್ಡದಾದ,  ಅಧ್ವರದ=ಅಶ್ವಮೇಧದ, ವಾಜಿಗಳ್= ಕುದುರೆಗಳು, ಇಳೆಯಮೇಲೆ= ಪ್ರಪಂಚದಲ್ಲೆಲ್ಲಾ, ತಿರುಗಿ= ಸುತ್ತಿಕೊಂಡು, ಇಲ್ಲಿಗೆ= ನಮ್ಮ ಪಟ್ಟಣಕ್ಕೆ, ತರುವಾಯೊಳ್= 

ಕಡೆಗೆ, ಬಂದೊಡೆ= ಬಂದಿರುವ ಕಾರಣದಿಂದ,  ಆವು= ನಾವು, ಕಟ್ಟಿದೆವು= ಕಟ್ಟಿಹಾಕಿರುವೆವು, ಇನ್ನು= ಇನ್ನು ಮುಂದೆ, ಬಿಡಿಸಿಕೊಂಬ= ಬಿಡಿಸಿಕೊಳ್ಳಲು ಬರುವ, ಅತಿಬಲರನು= ಸಾಹಸಿಗಳನ್ನು, ಐಸಲೆ= ಚನ್ನಾಗಿ, ಸಾಯಕದಮೊನೌಯೊಳು= ಬಾಣಗಳ ತುದಿಯಿಂದ,  ಕಾಣಬೇಕು= ನೋಡುವುದೇ ಸರಿ, ಎನಲ್= ಎಂದು ನುಡಿಯಲು, ತನಯರಂ= ಕುವರರನ್ನು, ಪ್ರಿಯದಿಂ= ಅಕ್ಕರೆಯಿಂದ,  ತೆಗೆದಪ್ಪಿ= ಹತ್ತಿರಕ್ಕೆ ಕರೆದು ಆಲಂಗಿಸಿಕೊಂಡು, ತಾನು=ತಾನಾದರೊ, ಅಭಿಪ್ರಾಯಮಂ= ಶ್ರೀಕೃಷ್ಣ ಪರಮಾತ್ಮನೇ ಭಕ್ತರ ಮನೋಭೀಷ್ಟಗಳನ್ನು ನೆರವೇರಿಸಲು ಭೂಸಂಚಾರವನ್ನು ಮಾಡಿಕೊಂಡು ಇಲ್ಲಿಗೆ ಬರುತ್ತಿ- 

ರುವುದಾಗಿ, ತಿಳಿದು= ತಿಳಿದುಕೊಂಡು,  ಹರುಷಿತನಾಗಿ= ಸಂತಸಗೊಂಡು, ನಯದೊಳು= ವಿಶ್ವಾಸದಿಂದ,  ಇಂತು= ಮುಂದೆ ಹೇಳುವಂತೆ,  ಎಂದನು= ನುಡಿದನು.  


ತಾತ್ಪರ್ಯ:- ತಂದೆಯೇ ? ಈ ಕುದುರೆಗಳು ಭೂಕಾಂತನಾದ ಯುಧಿಷ್ಠಿರನ ಯಜ್ಞಾಶ್ವವಗಳಾಗಿವೆ. ದೇಶದೇಶವನ್ನೆಲ್ಲಾ ಸುತ್ತಿಸುತ್ತಿ ಕೊನೆಗೆ ನಮ್ಮೂರ ಹೊರಗೆ ತಿರುಗಾಡುತ್ತಿದ್ದುದನ್ನು ನಾವು ಕಂಡು ಹಿಡಿದುತಂದಿರುವೆವು. ಯುದ್ಧಮಾಡಿ ನಮ್ಮನ್ನು ಸೋಲಿಸಿದಲ್ಲದೆ ಈ ಕುದುರೆಗಳನ್ನು ಯುಧಿಷ್ಠಿರನ ಕಡೆಯವರದೆಂತು ಪಡೆದಾರೆಂದು ನುಡಿದರು. ಈ ರೀತಿ ಹೇಳುತ್ತಿರುವಸುತರ ನುಡಿಗಳನ್ನಾಲಿಸಿ ಚಂದ್ರಹಾಸನು ಪುತ್ರರನ್ನು ಸಂತೋಷದಿಂದ ಆಲಂಗಿಸಿಕೊಂಡು ಹೇಳಿದನು. 


ಮಕ್ಕಳಿರ ಕೇಳಿ ತಾನಾಬಾಲ್ಯದಿಂದೆ ಬಿಡ। 

ದಕ್ಕರಿಂ ಚಿತ್ತದೊಳ್ ಧ್ಯಾನಿಸುವ ದೇವನಿನಿ। 

ತಕ್ಕೆ ಮೈದೋರುವಂ ಪಾರ್ಥನ ಸಹಾಯಕೈತಂದು ನಮಗರಿವೆನಿದನು॥ 

ಸಿಕ್ಕಿದೊಡೆ ಕೃಷ್ಣದರ್ಶನದ ಪುಣ್ಯವೆ ಸಾಕು। 

ಮಿಕ್ಕ ಸುಕೃತದ ಗಸಣಿಯೇಕಿನ್ನು ಧರ್ಮಾಧ್ವ। 

ರಕ್ಕೆ ತಿರುಗುವ ಕುದುರೆಗಳನಿಲ್ಲಿ ಕಟ್ಟಿದೊಡೆ ಪುರುಷಾರ್ಥಮೇನೆಂದನು॥೪॥ 


ಪ್ರತಿಪದಾರ್ಥ :- ಮಕ್ಕಳಿರ= ಮಕ್ಕಳೇ, ಕೇಳಿ= ಆಲಿಸಿ, ಆ ಬಾಲ್ಯದಿಂದ= ಚಿಕ್ಕಂದಿನಿಂದಲೂ, ತಾನು=ನಾನು, ಬಿಡದೆ= ತಪ್ಪದೆ, ಚಿತ್ತದೊಳ್= ಮನಸ್ಸಿನಲ್ಲಿ, ಧ್ಯಾನಿಸುವ= ಧ್ಯಾನಮಾಡುವ, ದೇವನು= ದೇವರೇ, ಇನಿತಕ್ಕೆ= ಇಷ್ಟು ದಿನಕ್ಕೆ, ಪಾರ್ಥನ= ಫಲುಗುಣನ,  ಸಹಾಯಕೆ=ಸಹಾಯದ ನಿಮಿತ್ತ, ಐತಂದು= ಬಂದು, ನಮಗೆ= ನಮಗಾದರೊ, ಮೈತೋರು- 

ವಂ= ಪ್ರತ್ಯಕ್ಷನಾಗುವನು, ಇದನು= ಈ ವಾರ್ತೆಯನ್ನು, ಅರಿವೆನು= ತಿಳಿದಿದ್ದೇನೆ,  ಸಿಕ್ಕಿದರೆ=ಇಷ್ಟು ಮಾತ್ರ ಶ್ರೀಕೃಷ್ಣನ ದರ್ಶನಲಾಭವು ನಮಗುಂಟಾದರೆ, ಕೃಷ್ದರ್ಶನಪುಣ್ಯಮೆ= ಕೃಷ್ಣ ಪರಮಾತ್ಮನನ್ನು ನೋಡಿದಂತ ಪುಣ್ಯವೆ, ಸಾಕು= ಸಾಕಾಗಿದೆ, ಮಿಕ್ಕ =ಉಳಿದ, ಸುಕೃತದ= ಸತ್ಕಾರ್ಯದ, ಘಸಣಿ= ಅಲೆದಾಟವು, ಏಕೆ= ಏನು ಪ್ರಯೋಜನ,  ಇನ್ನು= ಈ ಪ್ರಕಾರವಾಗಿ ಸ್ವಾಮಿಯೆ ನಮ್ಮ ಎದುರಿಗೆ ಬಂದು ನಿಂತ ಬಳಿಕ,  ಧರ್ಮಾಧ್ವರಕೆ= ಯುಧಿಷ್ಠಿರನ ಅಶ್ವಮೇಧ ಯಾಗಕ್ಕಾಗಿ, ತಿರುಗುವ= ಭೂಸಂಚಾರ ಮಾಡುತ್ತಿರುವ, ಕುದುರೆಗಳನು= ಕುದುರೆಗಳನ್ನು,  ಇಲ್ಲಿ= ಈ ಎಡೆಯಲ್ಲಿ, ಕಟ್ಟಿದರೆ= ಕಟ್ಟಿಹಾಕಿದ ಮಾತ್ರಕ್ಕೇ, ಪುರುಷಾರ್ಥಂ ಏನು= ಸಾರ್ಥಕವೇನು, ಎಂದನು= ಎಂದು ಹೇಳಿದನು. 


ತಾತ್ಪರ್ಯ:- ಎಲೈ ಮಕ್ಕಳೇ ಕೇಳಿ. ನಾನು ಬಾಲ್ಯದಿಂದ ಯಾರನ್ನು ಧ್ಯಾನಿಸುತ್ತಲಿದ್ದೆನೊ ಅಂತಹ ಪರಮಪುರುಷನಾದ 

ಸ್ವಾಮಿಯು ನನಗೆ ಸಂದರ್ಶನವನ್ನು ಕೊಡುವುದಕ್ಕಾಗಿಯೇ ಅರ್ಜುನನ ಸಹಾಯಕನಾಗಿ ಆತನ ಹಿಂದೆ ಬರುತ್ತಲಿರುವನು. ಇಂತಹ ಪರಮಮೂರ್ತಿಯು ಪ್ರತ್ಯಕ್ಷನಾಗುವಾಗ ಈ ಯಜ್ಞಾಶ್ವಗಳನ್ನು ನಾವು ಯಾವ ಪುರುಷಾರ್ಥಕ್ಕಾಗಿ ಕಟ್ಟಬೇಕಾಗಿದೆ. 


ಧರಣಿಯೊಳ್ ಪ್ರತ್ಯಕ್ಷಧರ್ಮದಾಕೃತಿ ಯುಧಿ। 

ಷ್ಠಿರಭೂಪನಾತನ ಹಯಂಗಳಂ ತಡೆದಪರೆ। 

ಪಿರಿದಾಯಸದೊಳವರ್ ಪಾಲಿಸಿದರಿನ್ನೆಗಂ ದಶಮಾಸದಿಂದ ಮೇಲೆ॥ 

ಅರೆದಿಂಗಳಾದುದಿನ್ನಿಹುದು ಪಕ್ಷತ್ರಯಂ। 

ಬರಿಸಕಲ್ಲಿಂದ ಮುಂದಿಲ್ಲಿ ಸಿಕ್ಕಿರ್ದೊಡ। 

ಧ್ವರಮುಳಿವುದದರಿಂದ ನೀವೆ ರಕ್ಷಿಸಿ ಪಾಂಡವಂಗೆ ಕೊಟ್ಟಪುದೆಂದನು॥೫॥


ಪ್ರತಿಪದಾರ್ಥ :- ಯುಧಿಷ್ಠಿರ ಭೂಪನು= ಧರ್ಮತನಯನಾದರೊ, ಧರಣಿಯೊಳ್= ಇಳೆಯೊಳಗೆ, ಪ್ರತ್ಯಕ್ಷ = ಎದುರಿಗೆ ಇರತಕ್ಕ,  ಧರ್ಮದ=ಧರ್ಮಕಾರ್ಯದ, ಆಕೃತಿ= ಆಕಾರವಾಗಿರುವನು, ಆತನ= ಅಂಥಾ ಧರ್ಮಾತ್ಮನಾದ ಧರ್ಮಪುತ್ರನ,

ಹಯಂಗಳಂ = ಯಜ್ಞಾಶ್ವಗಳನ್ನು, ತಡೆದಪರೆ= ತಡೆಯಬಹುದೆ, ಅವರ್= ಆ ಪಾರ್ಥಾದಿಗಳೆಲ್ಲಾ, ಇನ್ನೆಗಂ= ಇಷ್ಟು ಕಾಲವೂ, ಪಿರಿದಾಯಸದೊಳು= ಅಧಿಕ ಕಷ್ಟದಿಂದ, ಪಾಲಿಸಿದರು= ಸಲಹಿಕೊಂಡಿದ್ದಾರೆ, ದಶಮಾಸದಿಂದ ಮೇಲೆ= ಹತ್ತು ತಿಂಗಳಾಗಿ, ಅರೆದಿಂದಗಳು= ಹದಿನೈದುದಿನಗಳು ಹೆಚ್ಚಾಗಿ, ಆದುದು= ಆಗಿದೆ, ಪಕ್ಷತ್ರಯಂ= ಮೂರುತಿಂಗಳು ಮಾತ್ರವೇ, ವರ್ಷಕೆ=ಒಂದು ವರ್ಷಕೆ, ಇನ್ನು= ಇನ್ನು ಮುಂದೆ, ಇಹುದು= ಉಳಿದಿರುವುದು, ಇಲ್ಲಿ= ಈ ನಮ್ಮ  ನಾಡಿನಲ್ಲಿ ಸಿಕ್ಕಿರ್ದಡೆ =ಕಟ್ಟಿಹಾಕಿಬಿಟ್ಟ ಪಕ್ಷದಲ್ಲಿ,  ಮುಂದೆ= ಇನ್ನು ಮುಂದೆ, ಅಧ್ವರಂ= ಯಾಗವು, ಉಳಿವುದು= ನಿಂತುಹೋಗುವುದು, ಅದರಿಂದ= ಆದಕಾರಣ,  ನೀವೇ ರಕ್ಷಿಸಿ= ಯಜ್ಞಾಶ್ವಗಳ ಗೊಡವೆಗೆ ಹೋಗದೆ, ಪಾಂಡವರಿಗೆ= ಫಲುಗುಣನಿಗೆ, ಕೊಟ್ಟಪುದು= ಈ ಕುದುರೆಗಳನ್ನು ಒಪ್ಪಿಸಬೇಕು, ಎಂದನು= ಎಂಬುದಾಗಿ ಹೇಳಿದನು.  


ತಾತ್ಪರ್ಯ:- ಯುಧಿಷ್ಠಿರನಾದರೊ, ಲೋಕದಲ್ಲಿ ಪ್ರತ್ಯಕ್ಷಧರ್ಮಸ್ವರೂಪನು, ಆತನು ಮಾಡಬೇಕೆಂದಿರುವ ಯಾಗದ ಕುದುರೆಗಳನ್ನು ಅರ್ಜುನಾದಿಗಳು ಹತ್ತು ತಿಂಗಳಿಂದಲೂ ಸಲಹುತ್ತಿರುವರು. ಧರ್ಮರಾಯನು ಮಾಡಬೇಕೆಂದಿರುವ ಯಾಗದ ಅವಧಿಯು ಒಂದೂವರೆತಿಂಗಳು ಮಾತ್ರವೇ ಇರುವಾಗ ನೀವು ಈ ಅಶ್ವಗಳನ್ನು ಈಗ ಕಟ್ಟಿಹಾಕಿದರೆ, ಯಜ್ಞಭಂಗವಾದೀತು ಎಂದನು. 


ತನ್ನ ಹೇಳಿಕೆಯೊಳಲ್ಲದೆ ಕೃಷ್ಣಫಲ್ಗುಣ। 

ರ್ಗಿನ್ನು ಸಿಕ್ಕಿದ ಹರಿಗಳಂ ಬಿಡದೆ ಭೂಮಿಯೊಳ್। 

ಸನ್ನದ್ಧರಾಗಿ ಪಾಲಿಸಿ ನೀವು ಯಜ್ಞಕಾಲಕೆ ಧರ್ಮಜಂಗೆ ಕುಡಲು॥ 

ಉನ್ನತದ ಸುಕೃತಮಾದಪುದು ನಮಗೆಂದು ಸಂ।

 ಪನ್ನಮತಿ ಚಂದ್ರಹಾಸಂ ನಿಜ ಕುಮಾರರಂ।

ಮನ್ನಿಸಿ ತುರಂಗ ರಕ್ಷೆಗೆ ಕಳುಹಿ ಬಲಸಹಿತ ಪೊಳಲ ಪೊರಗಿರುತಿರ್ದನು॥೬॥ 


ಪ್ರತಿಪದಾರ್ಥ :- ಸಂಪನ್ನ= ಉತ್ತಮೋತ್ತಮವಾದ,  ಮತಿ= ತಿಳುವಳಿಕೆಯಿಂದ ಕೂಡಿರತಕ್ಕ, ಚಂದ್ರಹಾಸಂ= ಇಂದುಹಾಸನು, ನಿಜಕುಮಾರರಂ= ತನ್ನ ಮಕ್ಕಳನ್ನು, ಮನ್ನಿಸಿ= ಕ್ಷಮಿಸಿ, ಇನ್ನು= ಇನ್ನು ಮುಂದೆ, ಭೂಮಿಯೊಳ್= ನಮ್ಮ ದೇಶದಲ್ಲಿ, ಸಿಕ್ಕಿದ= ಸಿಕ್ಕಿದಂಥಾ, ಹರಿಗಳಂ= ಅಶ್ವಗಳನ್ನು,  ತನೂನ=ನನ್ನ, ಹೇಳಿಕೆಯೊಳು= ಹೇಳುವಿಕೆಯಿಂದ, ಅಲ್ಲದೆ=

ಹೊರತು, ಕೃಷ್ಣಫಲುಗುಣರ್= ಕೃಷ್ಣ ಮತ್ತು ಪಾರ್ಥರಬಿಡದೆ=ತಡಮಾಡದೆ, ಸನ್ನದ್ಧರಾಗಿ = ಸಿದ್ಧವಾಗಿ, ನೇವು= ನೀವೀರ್ವರೂ, ಪಾಲಿಸಿ= ಸಲಹಿ, ಧರ್ಮಜಂಗೆ= ಧರ್ಮತನಯನಿಗೆ, ಯಜ್ಞಕಾಲಕೆ = ಯಾಗಮಾಡುವ ಕಾಲಕ್ಕೆ ಸರಿಯಾಗಿ,  ಕೊಡಲು= ಕೊಟ್ಟಹಾಗಾದರೆ, ನಮಗೆ= ನಮಗಾದರೊ, ಉನ್ನತದ ಸುಕೃತಂ= ಅಧಿಕವಾದ ಪುಣ್ಯಪ್ರಾಪ್ತಿಯು,

ಆದಪುದು= ಆಗುತ್ತದೆ, ಎಂದು= ಎಂಬತೆರನಾಗಿ ಹೇಳಿ, ತುರಂಗಪಾಲನೆಗೆ= ಕುದುರೆಯ ರಕ್ಷಣೆಗೆ, ಕಳುಹಿ= ಪದ್ಮಾಕ್ಷ ಮಕರ ಧೂವಜರನ್ನೂ ಕಳುಹಿಸಿ, (ಚಂದ್ರಹಾಸನು) ಪೊಳಲಪೊರಗೆ= ಪಟ್ಟಣದ ಹೊರಭಾಗದಲ್ಲಿ,  ಬಲಸಹಿತ= ದಳದಿಂದ ಕೂಡಿ, ಇರುತಿರ್ದನು= ಇದ್ದನು.


ಅ॥ವಿ॥ ತುರಂಗಮ= ತುರುಗಜಾಗ್ರತೆಯಾಗಿ, ಗಮ= ಗಮಿಸುವುದು, ಬಲ=ಸೈನ್ಯ, ಶಕ್ತಿ, ಬಲಭಾಗ. 


ತಾತ್ಪರ್ಯ:- ಆದಕಾರಣ ನೀವು ಈ ಯಾಗದ ಕುದುರೆಗಳನ್ನು ಕಾಪಾಡುತ್ತಿದ್ದು ಯಜ್ಞಕಾಲಕ್ಕೆ ಧರ್ಮಜನಿಗೆ ಅವುಗಳನ್ನು ಒಪ್ಪಿಸಿ ಕೃತಕೃತ್ಯರಾಗಬೇಕೆಂದು ಹೇಳಿ ಅವರೀರ್ವರನ್ನೂ ಯಜ್ಞಾಶ್ವಗಳ ರಕ್ಷಣೆಗಾಗಿ ನೇಮಿಸಿ ತಾನು ಸೇನಾಸಮೇತನಾಗಿ 

ಕೃಷ್ಣಸ್ವಾಮಿಯ ಸಮಾಗಮವನ್ನೆ ಎದುರು ನೋಡುತ್ತ ಊರ ಹೊರಗಿನ ಬಯಲಿನಲ್ಲಿರುವಾಗ. 


ತುರಂಗಗಳಂ ಬಿಟ್ಟದರ ಕೂಡೆ ಸೇನೆಸಹಿ। 

ತಿರದೆ ಪದ್ಮಾಕ್ಷ ಮಕರಧ್ವಜರ್ ಪೋದ ಬಳಿ। 

ಕರವಿಂದನಾಭದರ್ಶನಕೆ ಲೋಲೈಪನಾಗಿ ಚಂದ್ರಹಾಸಂ ಮುದದೊಳು॥ 

ಪುರದ ಹೊರವಳಯದೊಳ್ ಸೇನೆಯಂ ಕೂಡಿಕೊಂ। 

ಡಿರುತಿರ್ದನನ್ನೆಗಂ ಮೇರೆದಪ್ಪಿದ ಮಹಾ। 

ಶರಧಿಯಂತರ್ಜುನನ ಮೋಹರಂ ತಲೆದೋರಿತೆತ್ತಣಾಶ್ಚರ್ಯಮೆನಲು॥೭॥ 


ಪ್ರತಿಪದಾರ್ಥ :- ಪದ್ಮಾಕ್ಷ ಮಕರಧ್ವಜರ್= ಪದ್ಮಾಕ್ಷ ಮಕರಧ್ವಜರೀರ್ವರೂ,ತುರಂಗಗಳಂ= ಯಾಗದ ಕುದುರೆಗಳನ್ನು, ಬಿಟ್ಟು= ಬಿಟ್ಟವರಾಗಿ, ಇರದೆ= ನಿಲ್ಲದೆ, ಸೇನೆಸಹಿತ= ದಳದೊಂದಿಗೆ, ಅದರಕೂಡ= ಅವುಗಳ ಜೊತೆಯಲ್ಲಿ, ಪೋದಬಳಿಕ = ಹೋದನಂತರ, ಚಂದ್ರಹಾಸನು = ಇಂದುಹಾಸನಾದರೊ, ಅರವಿಂದನಾಭನ= ಶ್ರೀಕೃಷ್ಣನ, ದರುಶನಕೆ= ದರುಶನಕ್ಕಾಗಿ, ಲೋಲುಪನಾಗಿ= ಆಶೆಗೊಂಡು, ಸೇನೆಯಂ= ಬಲವನ್ನೆಲ್ಲಾ,  ಪುರದ= ನಗರದ, ಹೊರವಲಯದೊಳ್= ಹೊರಭಾಗದಲ್ಲಿ, 

ಕೂಡಿಕೊಂಡು = ನಿಲ್ಲಿಸಿಕೊಂಡು, ಮುದದೊಳು= ಆನಂದದಿಂದ, ಇರುತಿರ್ದನು= ಇದ್ದನು, ಅನ್ನೆಗಂ= ಅಷ್ಟು ಹೊತ್ತಿಗೆ, 

ಅರ್ಜುನನ = ಪಾರ್ಥನ, ಮೋಹರಂ= ಬಲವು, ಎತ್ತಣ= ಎಲ್ಲಿಯ, ಆಶ್ಚರ್ಯಂ=ಅಚ್ಚರಿಯು, ಎನಲು= ಎಂಬರೀತಿಯಾ- 

ಗಿ, ಮೇರೆತಪ್ಪಿದ= ಮಿತಿಮೀರಿದ, ಮಹಾಶರಧಿಯಂತೆ= ದೊಡ್ಡ ಸಾಗರದ ಹಾಗೆ, ತಲೆದೋರಿತು =ಗೋಚರಿಸಿತು.  


ತಾತ್ಪರ್ಯ:- ಮಿತಿಮೀರಿ ಬರುತ್ತಲಿರುವ ಕಡಲೋ ಎಂಬಂತೆ ಸಮೀಪಿಸುತ್ತಿರುವ, ಅರ್ಜುನನ ಸೇನಾಸಾಗರವನ್ನು ಕಂಡು. 


ಸಮತಳಿಸಿ ಫಲುಗುಣನ ಸೇನೆ ಬಹುದಂ ಕಂಡು। 

ಸಮರಕಭಿಮುಖನಾಗಿ ತನ್ನ ಮೋಹರಸಹಿತ। 

ಸಮಚಂದ್ರಹಾಸನೈತರಲಾಗ ಮುರಹರಂ ಸಕಲ ಭೂಪಾಲಕರನು॥ 

ಕ್ರಮದಿಂದೆ ನಿಲ್ಲಿಸಿ ಪಾರಥಂಗೆ ಸಾರಥಿಯಾಗಿ। 

ಕಮಲ ಸುಗದಾ ಶಂಖ ಚಕ್ರದ ಚತುರ್ಭುಜದ। 

ಕಮನೀಯ ರೂಪಮಂ ಕೈಕೊಂಡು ಬಿಟ್ಟನಾತನ ಸಮ್ಮುಖಕೆ ರಥವನು॥೮॥ 


ಪ್ರತಿಪದಾರ್ಥ :- ಅಸಮಚಂದ್ರಹಾಸಂ= ಅಸದೃಶನಾದ ಚಂದ್ರಹಾಸನು, ಫಲುಗುಣನ= ಪಾರ್ಥನ, ಸೇನೆ=ದಳವು, ಸಮತಳಿಸಿ = ಸಾಂದ್ರವಾಗಿ, ಬಹುದಂ= ಬರುತ್ತಿರುವುದನ್ನು,ಕಂಡು=ಈಕ್ಷಿಸಿ, ಸಮರಕೆ= ಕಾಳಗಕ್ಕೆ, ಅಭಿಮುಖನಾಗಿ= 

ಎದುರಾಗಿ, ತನ್ನಮೋಹರಸಹಿತ= ತನ್ನ ದಳದೊಂದಿಗೆ, ಐತರಲಾಗಿ= ಬರಲು, ಮುರಹರಂ= ಕೃಷ್ಣನು, ಕ್ರಮದಿಂದ= ಒಂದು ಕ್ರಮವಾಗಿ, ಸಕಲಭೂಪರನು= ರಾಜರನ್ನೆಲ್ಲಾ, ನಿಲಿಸಿ= ನಿಲ್ಲಿಸಿ, ಪಾರ್ಥಂಗೆ= ಫಲುಗುಣನಿಗೆ,  ಸಾರಥಿಯಾಗಿ= ರಥವನ್ನು ನಡೆಸತಕ್ಕವನಾಗಿ, ಕಮಲ=ತಾವರೆಯ, ಸುಗದಂ= ಶ್ರೇಷ್ಠವಾದ ಗದೆಯು, ಶಂಖ=ಶಂಖವು, ಚಕ್ರದ= ಚಕ್ರವೇ ಮೊದಲಾ- 

ದವುಗಳಿಂದ ಕೂಡಿದ, ಚತುರ್ಭುಜದ = ನಾಲ್ಕು ತೋಳುಗಳುಳ್ಳ, ಕಮನೀಯ= ಮನರಂಜಿಸುವ, ರೂಪಮಂ= ಆಕಾರವನ್ನು, ಕೈಕೊಂಡು= ತಾಳಿ, ರಥವನು= ತೇರನ್ನು,  ಆತನಸಮ್ಮುಖಕ್ಕೆ= ಚಂದ್ರಹಾಸನಿಗೆದುರಾಗಿ, ಬಿಟ್ಟನು= ರಥವನ್ನು ನಡೆಯಿಸಿದನು. 


ತಾತ್ಪರ್ಯ:- ತಾನೂ ದಳಸಹಿತ ನಿಂತು ನೋಡುತ್ತಿದ್ದನು. ಅತ್ತ ಶ್ರೀಕೃಷ್ಣನು ಸಕಲ ರಾಜರನ್ನೂ ಕ್ರಮವರಿತು ನಿಲ್ಲಿಸಿ, ತಾನು  ಶಂಖಚಕ್ರಗದಾಪದ್ಮಂಗಳಿಂದಲಂಕೃತವಾದ ಕೈಗಳಿಂದಲೂ ಸುಂದರಾಕಾರದಿಂದಲೂ ಕೂಡಿ, ಅರ್ಜುನನ ಸಾರಥಿಯಾಗಿ ತೇರನ್ನು ಮುಂದಕ್ಕೆ ನಡೆಸುತ್ತಾ ಎಲೈ ಅರ್ಜುನನೆ! ವೈಷ್ಣವಶಿರೋಮಣಿಯಾಗಿರುವ ಚಂದ್ರಹಾಸನನ್ನು ನೋಡೆಂದು ನುಡಿ-

ಯಲು, ಫಲುಗುಣನು ಕೃಷ್ಣಮೂರ್ತಿಯನ್ನು ಕುರಿತು ಎಲೈ ಮಹಾನುಭಾವನೆ, ವಿಷ್ಣುನಾಮ ಸಂಕೀರ್ತನೆಯಲ್ಲಿಯೇ ನಿರತ-

ನಾಗಿ,ತುಲಸೀಮಾಲಿಕೆಗಳಿಂದೊಪ್ಪುತ್ತ ಸತ್ವಗುಣಾವಿಶೆಷ್ಟನಾಗಿರುವ ಈ ಇಂದುಹಾಸನನ್ನು ನೋಡಿದ್ದು ನನ್ನ ಪೂರ್ವಜನ್ಮದ 

ಸುಕೃತವೇ ಸರಿ. 


ನೋಡಿದೈ ಪಾರ್ಥ ವೈಷ್ಣವ ಶಿರೋಮಣಿಯನೆನೆ। 

ಮೂಡಿಮುಳುಗುವ ಮಾಧವ ಧ್ಯಾನಚೇತನದ। 

ಸೂಡಿದ ಮುಕುಂದಪಾದಾಬ್ಜ ತುಲಸೀಪೂತಮಸ್ತಕದ ಸತ್ವಗುಣದ॥ 

ಬೀಡೆನಿಪ ಕಲಿ ಚಂದ್ರಹಾಸನಂ ಕಂಡು ತಾ। 

ಮಾಡಿದಗ್ಗದ ಪುಣ್ಯದಿಂ ಜನ್ಮಸಫಲವಾ। 

ಯ್ತಾಡಲೇನೆಲೆದೇವ ತನ್ನ ಬಿನ್ನಪವನಧರಿಸೆಂದನಿಂದ್ರಸೂನು॥೯॥


ಪ್ರತಿಪದಾರ್ಥ :- ಪಾರ್ಥ= ಅಯ್ಯಾ ಫಲುಗುಣಾ, ವೈಷ್ಣವಶಿರೋಮಣಿಯನು= ಶ್ರೀಕೃಷ್ಣನನ್ನು ಧ್ಯಾನಿಸುವವರಲ್ಲಿ ಉತ್ತಮ ನಾದ ಇಂದುಹಾಸನನ್ನು, ನೋಡಿದೈ= ನೋಡಿದೆಯಾ? ಎನೆ= ಎನಲು, ಇಂದ್ರಸೂನು= ಇಂದ್ರನಂದನನಾದ ಪಾರ್ಥನು, ಎಲೆದೇವ= ಎಲೈ ಪ್ರಭುವೆ, ತಾಂ= ನಾನು, ಮಾಡಿದ= ಔಸಗಿದ, ಪುಣ್ಯಫಲದಿಂದ = ಸುಕೃತಪರಂಪರೆಯಿಂದ, ಮೂಡಿ= ಪ್ರಾಪ್ತವಾಗಿ, ಮುಳುಗುವ= ಮುಳುಗಿರತಕ್ಕ, ಮಾಧವಧ್ಯಾನಚೇತನದ= ಶ್ರೀಮನ್ನಾರಾಯಣನ,  ಧ್ಯಾನ= ಭಜನೆಯಲ್ಲಿ, ಚೇತನದ= ಆಸಕ್ತಿಯುಳ್ಳ,ಸೂಡಿದ= ಹಾಕಿಕೊಂಡಿರತಕ್ಕ, ಮುಕುಂದ= ಶ್ರೀಕೃಷ್ಣನ, ಪಾದಾಬ್ಜ= ಅಡಿದಾವರೆಯಲ್ಲಿ ಪೂಜಿ-

ಸಲ್ಪಟ್ಟಿರುವಂಥಾ, ತುಲಸಿಯ= ತುಲಸೀಕುಡಿಗಳಿಂದ, ಪೂತ= ಪವಿತ್ರವಾದ, ಮಸ್ತಕದ= ತಲೆಯನ್ನುಳ್ಳ, ಸತ್ವಗುಣದ= ಸತ್ವಸ್ವಭಾವದ, ಬೀಡು= ನೆಲೆಯು, ಎನಿಪ= ಎನ್ನಿಸಿಕೊಳ್ಳತಕ್ಕ,ಕಲಿ= ಶೂರನಾದ, ಚಂದ್ರಹಾಸನಂ = ಚಂದ್ರಹಾಸನನ್ನು,  ಕಂಡು= ಈಕ್ಷಿಸಿ,  ಜನ್ಮ= ನನ್ನ ಬಾಳು, ಸಫಲವು= ಸಾರ್ಥಕವಾದದ್ದು, ಆಯ್ತು= ಆಯಿತು,ಆಡಲೇನು= ಇನ್ನು ಹೆಚ್ಚಾಗಿ ಹೇಳತಕ್ಕದ್ದೇನಿರುವುದು, ತನ್ನ=ನನ್ನ,  ಬಿನ್ನಪವನು= ಅರಿಕೆಯನ್ನು, ಅವಧರಿಸು= ಲಾಲಿಸು,  ಎಂದನು= ಎಂಬುದಾಗಿ ಹೇಳಿದನು.  


ತಾತ್ಪರ್ಯ:- ಎಂದು ಕೊಂಡಾಡುತ್ತಲಿರುವ ಅರ್ಜುನನನ್ನು ನೋಡಿ ಕೃಷ್ಣನು ಅಯ್ಯಾ ಫಲುಗುಣಾ! ಈ ಇಂದುಹಾಸನಾದ- 

ರೊ, ಸುಜ್ಞಾನಮೂರುತಿಯು. ಮಹಾತಪಸ್ವಿಯು. ಅಲ್ಲದೆ ಮುನ್ನೂರು ವರ್ಷ ವಯಸ್ಸುಳ್ಳ ಮುದುಕನಾಗಿದ್ದಾನೆ, ಇವನ ದೃಢಭಕ್ತಿಗೆ ನಾನು ಮೆಚ್ಚಿರುವನೆಂದು ನುಡಿಯುತ್ತ. 


ಜ್ಞಾನವೃದ್ಧಂ ತಪೋವೃದ್ಧಂ ವಯೋವೃದ್ಧಂ। 

ನೀನರೇಶ್ವರನೀತನೊಳ್ ಕಾದಿ ಜಯಿಸುವ ವಿ। 

ಧಾನವೆಂತೆನಗೆ ಬೆಸಸೆಂದರ್ಜುನಂ ಕೇಳ್ದೊಡಸುರಾರಿ ಕರುಣದಿಂದೆ॥ 

ಧ್ಯಾನಿಸುವನಾ ಬಾಲ್ಯದಿಂದೆನ್ನನೀತಂಗೆ। 

ತಾನೊಲಿದೆನೆಂದು ನಿಜರೂಪಮಂ ತೋರಲಾ। 

ಭೂನಾಥನಂಬುಜಾಕ್ಷನ ದಿವ್ಯಮೂರ್ತಿಯಂ ಕಂಡು ಪುಳಕಿತನಾದನು॥೧೦॥


ಪ್ರತಿಪದಾರ್ಥ :- ಈ ನರೇಶ್ವರನು= ಈ ರಾಜನು, ಜ್ಞಾನವೃದ್ಧ= ಮಹಾಜ್ಞಾನಿ, ತಪೋವೃದ್ಧಂ= ಮಹಾತಪಸ್ವಿ, ವಯೋವೃದ್ಧನು= ಬಹಳ ವಯಸ್ಸಾದವನು, ಎನಗೆ= ನನಗೆ, ಈತನೊಳ್= ಈ ಇಂದುಹಾಸನೊಂದಿಗೆ, ಕಾದಿ= ಜಗಳಮಾಡಿ, ಜಯಿಸುವ= ಗೆಲ್ಲತಕ್ಕ, ನಿಧಾನಂ= ಬಗೆಯು, ಎಂತು= ಯಾವ ರೀತಿಯಾಗಿದೆ, ಬೆಸಸು= ಹೇಳು, ಎಂದು= ಎಂಬ ತೆರನಾಗಿ, ಅರ್ಜುನನು= ಪಾರ್ಥನು, ಕೇಳ್ದೊಡೆ= ಪ್ರಶ್ನಿಸಲು, ಅಸುರಾರಿ = ಕೃಷ್ಣನು,  ಕರುಣದಿಂದ= ಪ್ರೀತಿಯಿಂದ, ಎನ್ನನು= ನನ್ನನ್ನು,  ಆ ಬಾಲ್ಯದಿಂದ= ಹುಡುಗನಾದಾರಭ್ಯ, ಧ್ಯಾನಿಸುವನು= ಪೂಜಿಸುತ್ತಲಿದ್ದನೆ, ತಾನು= ನಾನು, ಈತಂಗೆ= ಈ ಚಂದ್ರಹಾಸನಿಗೆ, ಒಲಿದೆನು= ಮೆಚ್ಚಿದ್ದೇನೆ, ಎಂದು= ಎಂಬುದಾಗಿ ನುಡಿದು, ನಿಜರೂಪಮಂ= ತನ್ನ ನಿಶ್ಚಯವಾದ ಆಕೃತಿಯನ್ನು,ತೋರಲು= ಕಾಣಿಸಲು, ಅಂಬುಜಾಕ್ಷನ= ಶ್ರೀಕೃಷ್ಣನ, ದಿವ್ಯ= ಉತ್ತಮವಾದ, ಮೂರ್ತಿಯಂ=

ಆಕಾರವನ್ನು,  ಕಂಡು=ನೋಡಿ, ಆ ಭೂನಾಥನು= ಆ ರಾಜ ಚಂದ್ರಹಾಸನು,  ಪುಳಕಿತನಾದನು= ರೋಮಾಂಚಗೊಂಡನು. 


ತಾತ್ಪರ್ಯ:- ಇವನು ಜ್ಞಾನವೃದ್ಧನು, ತಪೋವೃದ್ಧ, ವಯೋವೋದ್ಧ, ಇವನೊಡನೆ ಯುದ್ಧಮಾಡಿ ಗೆಲ್ಲುವ ವಿಧಾನವನ್ನು ನನಗೆ ಹೇಳು. ಅರ್ಜುನನು ಹೀಗೆ ಹೇಳಲು ಶ್ರೀಕೃಷ್ಣನು" ಇವನು ಬಾಲ್ಯದಿಂದ ನನ್ನನ್ನು ಧ್ಯಾನಿಸುತ್ತಿದ್ದಾನೆ. ಇವನಿಗೆ ನಾನು ಒಲಿದಿದ್ದೇನೆ," ಎಂದು ಹೇಳಿ ತನ್ನ ನಿಜರೂಪವನ್ನು ತೋರಿಸಲು, ಚಂದ್ರಹಾಸನು ಆ ರೂಪವನ್ನು ನೋಡಿ ರೋಮಾಂಚನಗೊಂಡನು. 


ಕಂಬು ಚಕ್ರಾಬ್ಜ ಕೌಮೋದಕಿಗಳಂ ಧರಿಸಿ। 

ಪೊಂಬಟ್ಟೆಯಂ ತಾಳ್ದು ಕೌಸ್ತುಭದ ಶೋಭಾವ। 

ಲಂಬದಿಂ ಸರ್ವಾಭರಣ ವಿಭೂಷಿತನಾಗಿ ದಿವ್ಯಮಾಲೆಗಳನಾಂತು॥ 

ತುಂಬಿದವಯವದ ಲೃವಣ್ಯಲಹರಿಗಳ ವಿಸ। 

ಟಂಬರಿವ ಕರುಣರಸವೆಳನಗೆಯ ಸಿರಿಮೊಗದ। 

ಶಂಬರಾರಿಯ ಪಿತಂ ಪಾರ್ಥನ ರಥಾಗ್ರದೊಳ್ ಕಣ್ಗೆಸೆದನಾ ನೃಪತಿಯ॥೧೧॥


ಪ್ರತಿಪದಾರ್ಥ :- ಶಂಬರಾರಿಯಪಿತಂ= ಶ್ರೀಕೃಷ್ಣನು, ಆ ನೃಪತಿಯ= ಆ ಚಂದ್ರಹಾಸನ,  ಕಣ್ಗೆ= ಕಣ್ಣುಗಳಿಗೆ, ಪಾರ್ಥನ ರಥಾಗ್ರದೊಳ್= ಪಾರ್ಥನ ತೇರಿನ ಮುಂದುಗಡೆ, ಕಂಬು=ಶಂಖವು, ಚಕ್ರ= ಚಕ್ರಾಯುಧವು, ಅಬ್ಜ= ತಾವರೆಯು, ಕೌಮೋದಕಿಗಳಂ= ಗದೆ ಇವುಗಳನ್ನು,  ಧರಿಸಿ= ತೊಟ್ಟುಕೊಂಡು, ಪೊಂಬಟ್ಟೆಯಂ = ಹಳದೀ ಬಣ್ಣದ ಮಡಿಯನ್ನು, ತಾಳ್ದು= ಧರಿಸಿ,  ಕೌಸ್ತುಭ= ಕೌಸ್ತುಭಮಣಿಯ, ಶೋಭಾ=ಪ್ರಭೆಯ, ಅವಲಂಬದಿಂ= ಆಶ್ರಯದಿಂದ, ಸರ್ವಾಭರಣದಿಂ=

ಸಮಸ್ತವಡವೆಗಳಿಂದ,ಭೂಷಿತನಾಗಿ= ಅಲಂಕಾರಗೊಂಡು, ದಿವ್ಯ= ಶ್ರೇಷ್ಠವಾದ, ಮಾಲೆಗಳನು= ಹೂದಂಡೆಗಳನ್ನು, ಆಂತು= ಹಾಕಿಕೊಂಡು,  ತುಂಬಿದ= ಸಾಂದ್ರವಾದ, ಅವಯವದ= ಅವಯವಗಳ, ಲಾವಣ್ಯ = ಪ್ರಕಾಶಿಸತಕ್ಕ,  ಲಹರಿಗಳ= ಪ್ರವಾಹಂಗಳ, ವಿಸಟಂಬರವ= ವಿಶಾಲತೆಯನ್ನು ಪಡೆದಿರತಕ್ಕ, ಕರುಣರಸದ=ಕರುಣಾರಸದಿಂದ ಕೂಡಿದ, ಎಳನಗೆಯ= ಹುಸಿನಗೆಯುಳ್ಳ, ಸಿರಿಮೊಗದ= ಕಾಂತಿಯುಕ್ತವಾದ ಮುಖದಿಂದ, ಎಸೆದನು= ಹೊಳೆಯುತ್ತಲಿದ್ದನು. 


ತಾತ್ಪರ್ಯ:- ಈ ರೀತಿಯಲ್ಲಿ ಶೋಭಿಸುತ್ತಲಿರುವ ಕೃಷ್ಣನನ್ನು ಚಂದ್ರಹಾಸನು ನೋಡಿದೊಡನೆಯೇ ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಶರೀರವೆಲ್ಲಾ ರೋಮಾಂಚನಗೊಂಡಿತು, ಕೂಡಲೇ ತನ್ನ ರಥದಿಂದ ಕೆಳಗಿಳಿದು ಅರ್ಜುನನ ತೇರಿನ ಬಳಿಗೆ ಬಂದು, ಕೃಷ್ಣಸ್ವಾಮಿಯ ಪಾದಾರವಿಂದಗಳಿಗೆರಗಿ ಆ ಮಹಾನುಭಾವನನ್ನು ಸ್ತೋತ್ರಮಾಡುತ್ತಲಿರುವಾಗ,ಅಸುರಾ-

ರಿಯು ಆ ಇಂದುಹಾಸನನ್ನು ಮೆಲ್ಲಗೆ ಮೇಲಕ್ಕೆತ್ತಿ  ಆನಂದಾತಿಶಯದಿಂದ ಬಾಚಿ ತಬ್ಬಿಕೊಂಡನು. 


ಕಂಗಳ ನಿರೀಕ್ಷಣದ ಸೌಖ್ಯಮಂ ಸೂಸುವುದ। 

ಕಂಗಳ ಪೊನಲ್ತಟೆಯ ಹರ್ಷದಿಂದೇಳ್ವ ಪುಳ। 

ಕಂಗಳ ನೆಗಳ್ಕೆಯಂ ಭಯಭರಿತಭಕ್ತಿ ಭಾವಿಸೆ ರಥವನಿಳಿದು ಬಂದು॥ 

ಮಂಗಳ ಪವಿತ್ರ ಕೋಮಲ ಪಾದಪದ್ಮಯು।

ಗ್ಮಂಗಳ ಸಮೀಪದೊಳ್ ಚಂದ್ರಹಾಸಂ ಪ್ರಣಾ। 

ಮಂಗಳ ವಿಧಾನಮಂ ಮಾಡುತಿರೆ ಹರಿ ತೆಗೆದು ಬಿಗಿದಪ್ಪಿದಂ ಕೃಪೆಯೊಳು॥೧೨॥ 


ಪ್ರತಿಪದಾರ್ಥ :- ಚಂದ್ರಹಾಸಂ= ಚಂದ್ರಹಾಸನು, ಸೂಸುವ= ಕಾಣತಕ್ಕ,  ಉದಕಂಗಳ= ಕಣ್ಣೀರುಗಳ, ಪೊನಲ್= ಧಾರೆಯು, ಕಂಗಳ= ಕಣ್ಣುಗಳಿಂದ, ನಿರೀಕ್ಷಣದ= ಈಕ್ಷಿಸುವುದರಿಂದ, ಸೌಖ್ಯಮಂ= ಆನಂದವನ್ನು,  ತಡೆಯೆ= ಅಡಗಿಸು- 

ತ್ತಿರಲು, ಭಯ= ಹೆದರಿಕೆಯಿಂದ,  ಭರಿತ= ತುಂಬಿದ, ಭಕ್ತಿ= ಭಕ್ತಿಯಾದರೊ, ಹರುಷದಿಂದ= ಆನಂದದಿಂದ, ಏಳ್ವ= ಉಬ್ಬುವ, ಪುಲಕಂಗಳ= ರೋಮಾಂಚದ, ನೆಗಳ್ಕೆಯಿಂ= ಆಗುವುದರಿಂದ, ಬಾರಿಸೆ= ಮೇಲಕ್ಕೆಬ್ಬಿಸುತ್ತಿರಲು, ರಥವನು= ರಥದಿಂದ, ಇಳಿದು= ಕೆಳಕ್ಕಿಳಿದು, ಮಂಗಳ= ಶುಭಪ್ರದವಾದ,ಪವಿತ್ರ= ಸ್ವಚ್ಛವಾದ, ಕೋಮಲ= ಮೆತ್ತಗಿರತಕ್ಕ, ಪಾದಪ-

ದ್ಮಯುಗಳಂಗಳ= = ತೃವರೆಯ ಎಲೆಗಳನ್ನು ಹೋಲುವ ಎರಡು ಕಾಲ್ಗಳ, ಸಮೀಪದೊಳ್= ಹತ್ತಿರದಲ್ಲಿ, ಪ್ರಣಾಮಂಗಳ ವಿಧಾನಮಂ= ನಮಸ್ಕಾರಗಳನ್ನು, ಮಾಡುತ= ನೆರವೇರಿಸುತ್ತ,ಇರೆ=ಇರಲಾಗಿ,  ಹರಿ= ಕೃಷ್ಣನು,  ಕೃಪೆಯೊಳು= ಕರುಣೆಯಿಂದ,  ತೆಗೆದು= ಹತ್ತಿರಕ್ಕೆ ಕರೆದುಕೊಂಡು, ಬಿಗಿಯಪ್ಪಿದಂ= ಗಟ್ಟಿಯಾಗಿ ತಬ್ಬಿಕೊಂಡನು.  


ಅ॥ವಿ॥ ಪದ್ಮಗಳಂತಿರುವ ಪಾದಗಳು= ಪಾದಪದ್ಮಂಗಳು( ಉತ್ರರ ಪದ, ಕ, ಸ) ಮಂಗಳವಾದ, ಪವಿತ್ರವಾದ, ಕೋಮಲವಾದ, ಪಾದಪದ್ಮಂಗಳು ( ವಿ, ಪೂ. ಕ. ಸ. ) ಮಂಗಳ ಪವಿತ್ರ ಕೋಮಲ ಪಾದಪದ್ಮಯುಗ್ಮ( ಷ. ತ.) 

ಅಸುರ+ಅರಿ= ಅಸುರಾರಿ ( ಸ. ದೀ. ಸಂ.)


ತಾತ್ಪರ್ಯ:- ಶ್ರೀಕೃಷ್ಣದರ್ಶನವು ಚಂದ್ರಹಾಸನ ಕಣ್ಣುಗಳಲ್ಲಿ ಆನಂದಾಶ್ರುಗಳ ಧಾರೆಯನ್ನು ತಂದೆತು. ಇದರಿಂದ ಶ್ರೀಕೃಷ್ಣನ ಮೂರ್ತಿದರ್ಶನಕ್ಕೆ ಸ್ವಲ್ಪ ಅಡ್ಡಿಯಾಯಿತು. ಸಂತೋಷದಿಂದ ರೋಮಾಂಚನವುಂಟಾಯಿತು. ಚಂದ್ರಹಾಸನು ಭಯಭರಿತ ಭಕ್ತಿಯಿಂದ ರಥವನ್ನಿಳಿದು ಬಂದು ಮಂಗಳವೂ ಪವಿತ್ರವೂ ಕೋಮಲವೂ ಆದ ಶ್ರೀಕೃಷ್ಣನ ಪಾದಕಮಲಗಳಿಗೆ ನಮಸ್ಕರಿಸಿದನು. ಶ್ರೀಕೃಷ್ಣನು ಅವನನ್ನು ಮೇಲಕ್ಕೆತ್ತಿ ಕೃಪೆಯಿಂದ  ಆಲಿಂಗಿಸಿದನು. 


ಅಸುರಾರಿ ಬಳಿಕರ್ಜುನನ ವದನಮಂ ನೋಡಿ। 

ನಸುನಗುತ ನುಡಿದನೇತಕೆ ಸುಮ್ಮನಿಹೆ ಧರ್ಮಿ। 

ಶಶಿಹಾಸನತಿಬಲಂ ಪರಿಣತಂ ಧ್ರುವಸನ್ನಿಭಂ ತನಗೆ ಭಕ್ತನಿವನು॥ 

ಒಸೆದು ನೀನಾಲಂಗಿಸೆನೆ ದೇವ ನಿಮ್ಮಡಿಗ। 

ಳುಸಿರಿದುವಲಾ ತನ್ನ ಮಾರ್ಗಗತಿ ಲೇಸನ್ಯ। 

ರೆಸಗುವಂದದೊಳಾಚರಿಸೆ ಭಯಾವಹಮೆಂದು ಭೀಷ್ಮ ಸಂಗರದೊಳೆನಗೆ॥೧೩॥ 


ಪ್ರತಿಪದಾರ್ಥ :- ಬಳಿಕ=ಅನಂತರ, ಅಸುರಾರಿ = ಕೃಷ್ಣನು,  ಅರ್ಜುನನ= ಪಾರ್ಥನ,  ಮುಖಮಂ=ಮುಖವನ್ನು,  ನೋಡಿ=ಈಕ್ಷಿಸಿ,  ನಸುನಗುತ= ಮುಗುಳ್ನಗುತ್ತ, ನುಡಿದನು= ಮುಂದೆ ಹೇಳುವಂತೆ ಹೇಳಿದನು, ಏತಕೆ= ಯಾವ ಕಾರಣದಿಂದ,  ಸುಮ್ಮನಿಹೆ= ಮೌನವಾಗಿರುವೆ, ಶಶಿಹಾಸನು= ಚಂದ್ರಹಾಸನು, ಧರ್ಮಿ=ಧರ್ಮಿಷ್ಟ, ಅತಿಬಲಂ= ಬಹಳ ಪರಾಕ್ರಮಿ, ಪರಿಣತಂ= ತಿಳೈವಳಿಕೆಯುಳ್ಳವನು, ಧ್ರುವಸನ್ನಿಭಂ = ಧ್ರುವಚಕ್ರವರ್ತಿ ಸಮಾನನು, ಇವನು= ಈ ಇಂದುಹಾಸನು, ತನಗೆ= ನನಗೆ, ಭಕ್ತನು=ಭಜಕನು, ನೀನು= ನೀನು, ಒಸೆದು= ವಿಶ್ವಾಸದಿಂದ,  ಆಲಂಗಿಸು= ಅಪ್ಪಿಕೊ, ಎನೆ=ಎನ್ನಲು, ದೇವ= ಎಲೈ ಪ್ರಭುವೆ, ನಿಮ್ಮಡಿಗಳು= ತಾವು, ಉಸಿರೆದುವಲಾ=ನುಡಿದಿರಲ್ಲವೇ, ಆ ತನ್ನ=ಆ ನನ್ನ,  ಮಾರ್ಗಗತಿ= ರೀತಿಯು, ಲೇಸು= ಉತ್ತಮವು, ಅನ್ಯರು=ಬೇರೆಯವರು, ಎಸಗುವ=ಮಾಡುವ, ಅದದೊಳು= ತೆರನಾಗಿ,  ಆಚರಿಸೆ= ನೆರವೇರೆಸಲು, ಭೀಷ್ಮ ಸಂಗರದೊಳು=ಭೀಷ್ಮಾಚಾರ್ಯರೊಂದಿಗೆ ನಡೆಸಿದ ಕಾಳಗದಲ್ಲಿ,  ಭಯಾವಹಂ= 

ಭಯವನ್ನುಂಟುಮಾಡತಕ್ಕದ್ದಾಗಿದೆ,ಎಂದು= ಎಂಬುದಾಗಿ, (ಎಂದರೆ ಭೀಷ್ಮಾಚಾರ್ಯರೊಂದಿಗೆ ಯುದ್ಧ ಮಾಡಿದಂತೆ ಈಗಲೂ ಈ ಚಂದ್ರಹಾಸನೊಂದಿಗೆ ಕದನವನ್ನು ಮಾಡಲೇಬೇಕೆಂಬ ಭಾವವು) 


ತಾತ್ಪರ್ಯ:- ಬಳಿಕ ಶ್ರೀಕೃಷ್ಣನು ಅರ್ಜುನನ ಮುಖವನ್ನು ನೋಡಿ ನಸುನಗುತ್ತಾ " ಏಕೆ ಸುಮ್ಮನಿರುವೆ ? ಚಂದ್ರಹಾಸನು ಧರ್ಮದಿಂದ ನಡೆಯುವವನು, ಮಹಾಬಲಶಾಲಿ, ಧ್ರುವನಿಗೆ ಸಮಾನನಾದ ನನ್ನ ಭಕ್ತ. ಪ್ರೀತಿಯಿಂದ ಇವನನ್ನಾಲಿಂಗಿಸು" ಎಂದನು. ಅರ್ಜುನನು " ದೇವಾ ನೀನೇ ಹೇಳಿದಂತೆ ನನ್ನ ಕರ್ತವ್ಯವನ್ನುನಾನು ಮಾಡಬೇಕು.  ನನ್ನ  ಧರ್ಮವನ್ನು ಬಿಟ್ಟರೆ ಅದು ಭಯಕ್ಕೆ ಕಾರಣವಾಗುತ್ತದೆ" ಎಂದನು. 


ಅದರಿಂದೆ ಕಾಳೆಗವೆ ತನಗೆ ಕರ್ತವ್ಯಮೀ। 

ಪದದೊಳಾಲಿಂಗನಮುಚಿತಮಲ್ಲವೃದ್ಧನಹ। 

ನದರಿಂದೆ ಬೇಕಾದೊಡೀತಂಗೆ ವಂದಿಸುವೆನೆನೆ ತನ್ನ ಕಿಂಕರರ್ಗೆ॥ 

ಮುದದೊಳೆರಗಿದೊಡೆ ಮೇಣವರನಪ್ಪಿದೊಡೆ ತ। 

ಪ್ಪದು ಮಾನವರ್ಗೆ ಕಾಪಿಲ ಗೋ ಸಹಸ್ರ ದಾ। 

ನದ ಪುಣ್ಯಮೆನ್ನ ಭಕ್ತರನಾದರಿಪುದಧರ್ಮವೆ ಪಾರ್ಥ ಹೇಳೆಂದನು॥೧೪॥ 


ಪ್ರತಿಪದಾರ್ಥ :- ಅದರಿಂದ =ಆದಕಾರಣ,  ಕಾಳಗವೆ=ಹೋರಾಟವೇ, ತನಗೆ= ನನಗಾದರೊ, ಕರ್ತವ್ಯಂ= ಮಾಡತಕ್ಕ- 

ದ್ದಾಗಿದೆ, ಈ ಪದದೊಳು=ಇಂತಹ ಕಾಲದಲ್ಲಿ, ಆಲಿಂಗನಂ= ತಬ್ಬಿಕೊಳ್ಳುವುದು, ಉಚಿತಂ ಅಲ್ಲ=ಯುಕ್ತವಾಗಿ ತೋರು- 

ವುದಿಲ್ಲ, ವೃದ್ಧನು= ಮುದುಕನು, ಅಹನು= ಆಗಿದ್ದಾನೆ,  ಬೇಕಾದೊಡೆ= ನಿನಗೆ ಇಷ್ಟವಾಗಿದ್ದರೆ, ಈತಂಗೆ= ಈ ಇಂದುಹಾ- 

ಸಂಗೆ, ಆದರದಿಂದ=ಪ್ರೀತಿಯಿಂದ,  ವಂದಿಸುವೆನು= ನಮಸ್ಕರಿಸುವೆನು, ಎನೆ= ಎನ್ನಲು, ಪಾರ್ಥ=ಫಲುಗುಣನೆ, ತನ್ನ ಕಿಂಕರರ್ಗೆ= ತನ್ನ ಭಕ್ತರಿಗೆ, ಮುದದೊಳು=ಅಕ್ಕರೆಯಿಂದ, ಎರಗಿದೊಡೆ= ವಂದಿಸಿದರೆ, ಮೇಣು=ಅಲ್ಲದೆ, ಅವರನು=ಆ ಭಕ್ತರನ್ನು, ಅಪ್ಪಿದೊಡೆ= ತಬ್ಬಿಕೊಂಡರೆ, ಕಾಪಿಲ= ಕಪಿಲವರ್ಣವನ್ನುಂಟಾಗಿರುವ, ಗೋಸಹಸ್ರ= ಸಾವಿರ ಆಕಳುಗಳ, ದಾನದ= ದಾನಮಾಡುವುದರ, ಪುಣ್ಯಂ=ಸುಕೃತವು, ಮಾನವರ್ಗೆ= ನರರಿಗೆ, ತಪ್ಪದು=ತಪ್ಪುವುದಿಲ್ಲ,  ಎನ್ನ=ನನ್ನ, ಭಕ್ತರನು= ಪೂಜಿಸುವವರನ್ನು, ಆದರಿಪುದು= ಸತ್ಕರಿಸುವುದು, ಅಧರ್ಮವೆ= ಧರ್ಮಕ್ಕೆ ವಿರುದ್ಧವೇ, ಎಂಬುದಾಗಿ ಪ್ರಶ್ನೆ

ಮಾಡಿದನು. 


ತಾತ್ಪರ್ಯ:- "ಆದುದರಿಂದ ನನಗೆ ಯುದ್ಧ ಮಾಡುವೈದೇ ಕರ್ತವ್ಯ.  ಈಗ ಆಲಿಂಗಿಸುವುದು ಉಚಿತವಲ್ಲ. ಇವನು ವೃದ್ಧನೆಂಬ ಕಾರಣಕ್ಕೆ ಬೇಕಾದರೆ ನಮಸ್ಕರಿಸುತ್ತೇನೆ." ಎಂದು ಅರ್ಜುನನು ಹೇಳಿದನು. ಶ್ರೀಕೃಷ್ಣನು " ನನ್ನ ಭಕ್ತರಿಗೆ ನಮಸ್ಕರಿಸಿದರೆ, ಆಲಿಂಗಿಸಿದರೆ ಮನುಷ್ಯರಿಗೆ ಸಹಸ್ರ ಕಪಿಲೆ ಗೋವುಗಳನ್ನುದಾನಮಾಡಿದ ಫಲವು ಬರದೆ ಬಿಡುವುದಿಲ್ಲ.  ಅರ್ಜುನ ನನ್ನ ಭಕ್ತರನ್ನು ಆದರಿಸುವುದು ಅಧರ್ಮವೆ? ಹೇಳು" ಎಂದನು. 


ತನ್ನ ಶರಣರ ಜೀವನವೆ ತನಗೆ ಜೀವನಂ। 

ತನ್ನ ಶರಣರ್ ಬೇರೆ ತಿಳಿಯೆ ತಾಂ ಬೇರಲ್ಲ। 

ತನ್ನ ಶರಣರ ಹೃದಯಕಮಲದೊಳ್ ಪ್ರತ್ಯಕ್ಷಮಾಗಿ ತಾನಿರುತಿರ್ಪೆನು॥ 

ನಿನ್ನ ತೆರದಿಂ ಮರುಳರಾರುಂಟು ಲೋಕದೊಳ್। 

ನಿನ್ನ ತೆರದಿಂದೀತನೆನಗೆ ಬೇಕಾದವಂ। 

ನಿನ್ನ ತೆರನೇನೆಂದು ಜರೆದು ಕೌಂತೇಯನಂ ಕೇಳ್ದನಸುರಾರಿ ನಗುತೆ॥೧೫॥


ಪ್ರತಿಪದಾರ್ಥ :- ಅಸುರಾರಿ=ಕೃಷ್ಣನು, ನಗುತ= ಮುಗುಳ್ನಗುತ್ತ, ಕೌಂತೇಯನಂ= ಪಾರ್ಥನನ್ನು, ಜರೆದು=ಹೀಯಾಳಿಸಿ,  ತನಗೆ= ನನಗೆ, ತನೂನ ಶರಣರ= ನನ್ನನ್ನು ಮರೆಹೊಕ್ಕವರ, ಜೀವನವೆ= ಬಾಳೆ, ಜೀವನವು= ಬದುಕು, ತನ್ನ ಶರಣರು= ನನ್ನ ಭಕ್ತರು, ಬೇರೆ ತಿಳಿಯೆ= ಬೇರೆ ವಿಧವಾಗಿ ತಿಳಿದುಕೊಂಡರೆ, ತಾಂ=ನಾನು, ಬೇರಲ್ಲ=ಬೇರೆಯವನಲ್ಲ, ನಾನು= ನೃನು, ತನ್ನ ಶರಣರ= ನನ್ನನ್ನು ಮರೆಹೊಕ್ಕವರನ್ನು, ಹೃದಯಕಮಲದೊಳ್= ಮನಸ್ಸಿನಲ್ಲಿ,  ಪ್ರತ್ಯಕ್ಷಮಾಗಿ = ಗೋಚರವಾಗುವಂ-

ತೆ, ಇರುತಿರ್ಪೆನು= ಇರುತ್ತೇನೆ. ಲೋಕದೊಳ್= ಭೂಮಿಯಲ್ಲಿ,  ಮರುಳರು= ಅವಿವೇಕಿಗಳು, ನಿನ್ನ ತೆರದೊಳು= ನಿನ್ನಂತೆ, ಆರು= ಮತ್ತೆ ಯಾರು, ಉಂಟು= ಇದ್ದಾರೆ, ಈತನು=ಈ ಇಂದುಹಾಸನು,  ಎನಗೆ=ನನಗೆ, ನಿನ್ನ ತೆರದಿಂದ= ನಿನಗಿಂತಲೂ ಹೆಚ್ಚಾಗಿಯೇ, ಬೇಕಾದವಂ= ಬೇಕಾದವನಾಗಿರುವನು, ನಿನ್ನ ತೆರನು= ನಿನ್ನ ಬಗೆಯು, ಏನು= ಎಂಥಾದ್ದು, ಎಂದು=ಎಂಬುದಾಗಿ,  ಕೇಳ್ದನು= ಕೇಳಿದನು. 


ತಾತ್ಪರ್ಯ:- ಶ್ರೀಕೃಷ್ಣನು " ನನ್ನ  ಶರಣರ ಜೀವನವೇ ನನಗೆಶಜೀವನ. ನನ್ನ ಶರಣರು ಬೇರೆ ನಾನು ಬೇರೆ ಅಲ್ಲ. ನನ್ನ ಶರಣರ ಹೃದಯ ಕಮಲದಲ್ಲಿ ನಾನು ಪ್ರತ್ಯಕ್ಷನಾಗಿರುತ್ತೇನೆ. ಈ ಲೋಕದಲ್ಲಿ ನಿನ್ನಂಥ ಹುಚ್ಚರು ಯಾರಿದ್ದಾರೆ! ಇವನು ನನಗೆ ನಿನ್ನಷ್ಟೇ ಬೇಕಾದವನು; ನಿನ್ನ ರೀತಿಯೇನು?" ಎನದು ನಗುತ್ತಾ ಕೇಳಿದನು. 


ಭೂಪಾಲ ಕೇಳ್ ಬಳಿಕ ಫಲುಗುಣಂ ಕೃಷ್ಣನ ನಿ। 

ರೂಪಮಂ ಕೈಗೊಂಡು ಹರ್ಷದಿಂದಾಗ ನಿ। 

ಷ್ಪಾಪನಾಗಿಹ ಚಂದ್ರಹಾಸನಂ ಬಂದು ಗಾಢಾಲಿಂಗನಗೈಯಲು॥ 

ಆ ಪೊಡವಿಪತಿ ನುಡಿದನೆಲೆ ಪಾರ್ಥ ಕದನ ದಾ। 

ಳಾಪಮಂ ನಿನ್ನೊಡನೆ ಮಾಡಿದೊಡೆ ನೃಪಮಖಂ। 

ಲೋಪಮಹುದೆಂದು ಕಳುಹಿದೆನೆನ್ನ ತನುಜರಂ ತುರುಗ ರಕ್ಷಾರ್ಥಮಾಗಿ॥೧೬॥ 


ಪ್ರತಿಪದಾರ್ಥ :- ಭೂಪಾಲ= ಭೂಕಾಂತನಾದ ಜನಮೇಜಯನೆ, ಕೇಳು=ಲಾಲಿಸು,ಬಳಿಕ =ಅನಂತರ, ಫಲುಗುಣಂ= ಪಾರ್ಥನು, ಕೃಷ್ಣನ =ಕೃಷ್ಣನ, ನಿರೂಪಮಂ= ಆಜ್ಞೆಯನ್ನು, ಕೈಕೊಂಡು= ಅನುಮೋದಿಸಿ, ಹರುಷದಿಂದ= ಆನಂದದಿಂದ, ಬಂದು= ಬಂದು, ಆಗ= ಆ ವೇಳೆಯೊಳಗೆ, ನಿಷ್ಪಾಪನಾಗಿ= ಪಾಪರಹಿತನಾಗಿ, ಇಹ=ಇರತಕ್ಕ, ಚಂದ್ರಹಾಸನಂ= ಇಂದು- 

ಹಾಸನನ್ನು,ಗಾಢಾಲಿಂಗನಗೈಯಲು= ಭದ್ರವಾಗಿ ಅಪ್ಪಿಕೊಳ್ಳಲು, ಆ ಪೊಡವಿಪತಿ = ಆ ದೇಶಾಧಿಪತಿಯಾದ ಇಂದುಹಾ- 

ಸನು, ಎಲೆ ಪಾರ್ಥ= ಅಯ್ಯಾ ಫಲುಗುಣ, ನಿನ್ನೊಡನೆ= ನಿನ್ನಕೂಡ, ಕದನದ=ಕಾಳಗದ, ಆಳಾಪಮಂ= ಪ್ರಸಂಗವನ್ನು, ಮಾಡಿದೊಡೆ= ಪ್ರಾರಂಭಿಸಿದರೆ, ನೃಪಮಖಂ=ಧರ್ಮರಾಯನ ಯಾಗವು,ಲೋಪಂ= ಅಡಚಣೆಗೆ ಸಿಕಕುವುದು, ಅಹುದು= ಆಗುತ್ತದೆ, ಎಂದು= ಎಂಬುದಾಗಿ ತಿಳಿದು, ತುರಗ ರಕ್ಷಾರ್ಥವಾಗಿ= ಕುದುರೆಗಳ ರಕ್ಷಣೆಗೋಸುಗ, ಎನ್ನ=ನನ್ನ,  ತನುಜರಂ= ಮಕ್ಕಳನ್ನು, ಕಳುಹಿದೆನು=ಕಳುಹಿಸಿದ್ದೇನೆ ಎಂಬುದಾಗಿ,  ನುಡಿದನು= ಹೇಳಿದನು. 


ತಾತ್ಪರ್ಯ:- ಎಂದು ಜರಿಯಲು, ಫಲುಗುಣನು ಕೃಷ್ಣನ ಅಪ್ಪಣೆಯಂತೆ ತಡಮಾಡದೆ ಬಂದು ಇಂದುಹಾಸನನ್ನು ಅಪ್ಪಿಕೊ-

ಕೊಳ್ಳಲು, ಆಗ ಇಂದುಹಾಸನು ಪಾರ್ಥನನ್ನು ಕುರಿತು ಕೇಳೈ ಫಲುಗುಣಾ! ನಿನ್ನೊಡನೆ ಯುದ್ಧಕ್ಕೆ ನಿಂತರೆ ಧರ್ಮನಂದನನ ಯಾಗಕ್ಕೆ ಭಂಗಬಂದೀತು ಎಂದು ಯೋಚಿಸಿ, ಯಜ್ಞಾಶ್ವಗಳ ರಕ್ಷೆಗಾಗಿ ನನ್ನ ಕುವರರಾದ ಪದ್ಮಾಕ್ಷ ಮಕರಧ್ವಜರನ್ನು ಕಳು-

ಸಿರುವೆನು. 


ಹಲವು ಮಾತುಗಳೇಕೆ ನಮಗೆ ನಿಮಗಾಶ್ರಯಂ। 

ಜಲಜಾಕ್ಷನಾಗಿರ್ದ ಬಳಿಕಾವಧರ್ಮಕೌ।

ಶಲಮಕಟ ಸಾಕಿನ್ನು ಪಾರ್ಥ ನಿನ್ನಶ್ವಂಗಳಂ ತರಿಸಿ ಕುಡುವೆನೆನುತೆ॥ 

ಬಲಸಹಿತ ಕುದುರೆಕಾವಲ್ಗೆ ಪೋಗಿಹ ಸುತರ । 

ಬಳಿಗೆ ಚರರಂ ಕಳುಹಿ ಕರೆಸಲವರೈತಂದು। 

ಫಲುಗುಣನ ವಾಜಿಗಳನ್ನೊಪ್ಪಿಸಿ ಮುರಾರಿಯಂ ಕಂಡರತಿಭಕ್ತಿಯಿಂದೆ॥೧೭॥


ಪ್ರತಿಪದಾರ್ಥ :- ಹಲವು ಮಾತುಗಳೇಕೆ= ಹೆಚ್ಚು ಮಾತುಗಳಿಂದ ಏನು ಪ್ರಯೋಜನ, ನಮಗೆ= ನಮಗೂ, ನಿಮಗೆ= ನಿಮಗೂ, ಆಶ್ರಯಂ= ಆಧಾರವಾಗಿರುವ, ಜಲಜಾಕ್ಷನು= ಶ್ರೀಕೃಷ್ಣನು, ಆಗಿರ್ದ ಬಳಿಕ= ಆದನಂತರ, ಆವ= ಯಾವತೆರ- 

ನಾದ, ಧರ್ಮಕೌಶಲಂ= ಕ್ಷಾತ್ರಧರ್ಮವು ಬೇಕಾಗಿರುವುದು, ಪಾರ್ಥ= ಎಲೈ ಫಲುಗುಣನೆ, ಅಕಟ= ಅಯ್ಯೊ, ಇನ್ನು= ಇನ್ನುಮುಂದೆ, ಸಾಕು= ಯುದ್ಧದ ಗೊಡವೆ ಬೇಡ, ನಿನ್ನ = ನಿನ್ನದಾದ, ಅಶ್ವಂಗಳಂ= ಕುದುರೆಗಳನ್ನು,  ತರಿಸಿಕೊಡುವೆನು= ತರಿಸಿಕೊಡುತ್ತೇನೆ, ಎನುತ= ಎಂದು ನುಡಿಯುತ್ತ,  ಚರರಂ= ದೂತರನ್ನು,  ಕುದುರೆಗಾವಲ್ಗೆ= ಯಾಗದ ಕುದುರೆಗಳ ಪಾಲನೆಗೆ, ಬಲಸಹಿತ= ದಳದೊಂದಿಗೆ, ಪೋಗಿಹ= ಹೋಗಿರತಕ್ಕ, ಸುತರಬಳಿಗೆ=ಪುತ್ರರ ಸಮೀಪಕ್ಕೆ,  ಕಳುಹಿ= ಕಳುಹಿಸಿ ಕೊಟ್ಟು, ತರಿಸಲು= ಬರುವಂತೆ ಮಾಡಲಾಗಿ, ಅವರು= ಆ ಪುತ್ರರೀರ್ವರೂ, ಐತಂದು= ಬಂದು, ಅತಿಭಕ್ತಿಯಿಂದ= ಹೆಚ್ಚಾದ ಭಕ್ತಿಯಿಂದ, ಫಲುಗುಣನ= ಪಾರ್ಥನ, ವಾಜಿಗಳನು= ಕುದುರೆಗಳನ್ನು, ಒಪ್ಪಿಸಿ = ಒಪ್ಪಿಸಿಬಿಟ್ಟು, ಮುರ್ರಿಯಂ= ಶ್ರೀಕೃಷ್ಣನನ್ನು, ಕಂಡರು= ಕಾಣಿಸಿಕೊಂಡರು. 


ತಾತ್ಪರ್ಯ:- ಎಲೈ ಅರ್ಜುನ, ಹೆಚ್ಚಾದ ಮಾತುಗಳಿಂದ ಫಲವೇನು, ನಮ್ಮಿಬ್ಬರಿಗೂ ಕೃಷ್ಣಸ್ಮಾಮಿಯೇ ಆಸರೆಯಾಗಿರುವು- 

ದರಿಂದ, ನಾನು ಈಗಲೇ ಚರರನ್ನು ಕಳುಹಿ ಯಜ್ಞಾಶ್ವಗಳನ್ನು ತರಿಸಿ ನಿನಗೆ ಕೊಡುವೆನೆಂದು ನುಡಿದು, ಕೂಡಲೆ ದೂತರನ್ನು ತನ್ನ ಕುವರರಿದ್ದೆಡೆಗೆ ಕಳುಹಿದನು. ಅವರು ತಡಮಾಡದೆ ಹೋಗಿ ಪದ್ಮಾಕ್ಷ ಮಕರಧ್ವಜರಿಗೆ ಚಂದ್ರಹಾಸನ ಆಜ್ಞೆಯನ್ನು ಅರಿಕೆಮಾಡಿದರು. ಅವರೀರ್ವರಿಗೂ ಯಜ್ಞಾಶ್ವಗಳೊಂದಿಗೆಜಾಗ್ರತೆಯಾಗಿ ಬಂದು, ತಂದೆಯ ಅಪ್ಪಣೆಯ ಮೇರೆಗೆ ಆ ಕುದುರೆಗಳನ್ನು ಅರ್ಜುನನಿಗೊಪ್ಪಿಸಿ ಕೃಷ್ಣನ ಪಾದಾರವಿಂದಗಳಿಗೆ ಭಕ್ತಿಯಿಂದ ನಮಸ್ಕರಿಸಿದರು. 


ನರನೊಡನೆ ಸಖ್ಯಮಾದುದು ಬಳಿಕ ಬಂದ ನೃಪ। 

ವರರೆಲ್ಲಂ ಪ್ರಿಯದೊಳಾದರಿಸಿದಂ ಕೂಡೆ। 

ಹರಿಯನತಿಭಕ್ತಿಯಿಂದೈದೆ ಕೊಂಡಾಡಿದಂ ನಿರುಪಮ ಸ್ತುತಿಗಳಿಂದೆ॥ 

ಪರಿಪರಿಯ ಗುಡಿ ತೋರಣಾವಳಿಯ ರಚನೆ ಮಿಗೆ। 

ಪುರಕೆ ಬಿಜಯಂಗೈಸಿ ತಂದನುತ್ಸವದಿಂದೆ। 

ಸಿರಿಯನುರೆ ವಿಸ್ತರಿಸಿ ಭೂಪುರಂದರನಂತೆ ಚಂದ್ರಹಾಸನಂ ಮೆರೆದನು॥೧೮॥ 


ಪ್ರತಿಪದಾರ್ಥ :- ಸಖ್ಯಂ= ಸ್ನೇಹವು, ನರನೊಡನೆ=ಅರ್ಜುನನೊಡನೆ, ಆದುದು=ಉಂಟಾಯಿತು,  ಬಳಿಕ = ಅನಂತರ, ಬಂದ ನೃಪರೆಲ್ಲರಂ= ಬಂರ ರಾಜರುಗಳನ್ನೆಲ್ಲಾ, ಪ್ರಿಯದೊಳು= ವಿಶ್ವಾಸದಿಂದ,  ಆದರಿಸಿದಂ= ಸತ್ಕರಿಸಿದನು, ಕೂಡ= ಒಡನೆಯೇ, ಅತಿಭಕ್ತಿಯಿಂದ= ಹೆಚ್ಚಾದ ಭಕ್ತಿಯಿಂದ, ನಿರುಪಮ=ಅಸದೃಶವಾದ,  ಸ್ತುತಿಗಳಿಂದ= ಹೊಗಳುವುದರಿಂದ, ಐದೆ= ಚನ್ನಾಗಿ,  ಹರಿಯನು= ಕೃಷ್ಣನನ್ನು, ಕೊಂಡಾಡಿದನು= ನುತಿಸಿದನು, ಪರಿಪರಿಯ = ವಿಧವಿಧವಾದ, ಗುಡಿ= ಚಪ್ಪರಗಳು, ತೋರಣ= ತೋರಣಗಳು ಇವುಗಳ, ಆವಳಿಯ= ಸಮುದಾಯದ, ರಚನೆ= ಅಲಂಕಾರಗಳೆಲ್ಲಾ, ಮಿಗೆ= ಹೆಚ್ಚಾಗಿ, ಮೆರೆಯೆ= ಕಾಂತಿಯುಕ್ತವಾಗಲು, ಪುರಕೆ= ನಗರಕ್ಕೆ,  ಬಿಜಯಂಗೈಸಿ= ಬರಮಾಡಿ, ಉತ್ಸವದಿಂದ= ಅತ್ಯಾನಂದದಿಂದ,  ತಂದನು= ಕರೆದುಕೊಂಡು ಬಂದನು, ಚಂದ್ರಹಾಸಂ = ಚಂದ್ರಹಾಸನು, ಉರೆ= ಹೆಚ್ಚಾಗಿ, ಸಿರಿಯನು= ತನ್ನ ಐಶ್ವರ್ಯವನ್ನು, ವಿಸ್ತರಿಸಿ =ಪ್ರಕಟಿಸಿ, ಭೂ= ಭೂಲೋಕದ, ಪುರಂದರನಂತೆ= ದೇವೇಂದ್ರನೋಪಾದಿಯಲ್ಲಿ, ಮೆರೆದನು= ಪ್ರಕಾಶಿಸುತ್ತಲಿದ್ದನು. 


ತಾತ್ಪರ್ಯ ಆ ಬಳಿಕ ಇಂದುಹಾಸನಿಗೂ ಅರ್ಜುನನಿಗೂ ಸ್ನೇಹವಾಯಿತು. ಮಯೂರಧ್ವಜಾದಿ ರಾಜರನ್ನೆಲ್ಲಾ ವಿಶ್ವಾಸದಿಂದ ನೋಡಿದನು. ಶ್ರೀಕೃಷ್ಣ ಮೂರುತಿಯನ್ನು ಅತ್ಯಂತ ಭಕ್ತಿಯಿಂದ ಕೊಂಡಾಡುತ್ತಲಿದ್ದನು. ಅನಂತರ ತನ್ನ ಪಟ್ಟಣವನ್ನೆಲ್ಲಾ ಅಲಂಕಾರಮಾಡಿಸಿ ಕೃಷ್ಣಾದಿಗಳನ್ನೆಲ್ಲಾ ತನ್ನ ಊರಿಗೆ ಕರೆದುಕೊಂಡು ಹೋದನು. ತನ್ನ ಜನ್ಮವು ಇಂದಿಗೆ ಸಫಲವುಂಟಾಯಿತೆಂದು ಆ ಶಶಿಹಾಸನ ಸಂತೋಷಕ್ಕೆ ಪಾರವೇ ಇರಲಿಲ್ಲ, ಆಗ ಆ ಕುಂತಳನಗರವು ಭೂಲೋಕದ ಸ್ವರ್ಗದಂತೆ ಹೊಳೆಯುತ್ತಲಿತ್ತು. 


ಇಂದುಹಾಸಾಶ್ರಯದೊಳಿರ್ದಖಿಲ ಪುರಜನಂ। 

ಕಂದರ್ಪ ತಾತನಂ ಕಂಡು ಕೃತಕೃತ್ಯಮಾ। 

ಯ್ತಿಂದಿರಾ ವಲ್ಲಭನ ಸಂದರ್ಶನಕೆ ದುಷ್ಟಬುದ್ಧಿ ನಿಜ ಸೂನುಸಹಿತ॥ 

ಬಂದು ನಿರ್ಧೂತ ಕಿಲ್ಭಿಷನಾದನಾಗಳೈ। 

ತಂದು ಗಾಲವನ ಸುರಮರ್ದನನ ಪಾದಾರ। 

ವಿಂದಮಂ ವಿವಿಧಾಗಮೋಕ್ತದಿಂ ಪೂಜಿಸಿದನತಿ ಭಕ್ತಿ ಭಾವದಿಂದೆ॥೧೯॥


ಪ್ರತಿಪದಾರ್ಥ :- ಕಂದರ್ಪ= ಮನ್ಮಥನ, ತಾತನಂ= ತಂದೆಯಾದ ಕೃಷ್ಣನನ್ನು,  ಇಂದುಹಾಸನ= ಚಂದ್ರಹಾಸನ,  ಆಶ್ರಯದೊಳು= ಆಸರೆಯಲ್ಲಿ,ಇರ್ದ= ಇದ್ದಂಥ, ಅಖಿಳ= ಸಕಲ, ಪುರಜನಂ= ನಗರವಾಸಿಗಳೂ, ಕಂಡು=ನೋಡಿ, 

ಕೃತಕೃತ್ಯಮಾಯ್ತು= ಕೃತಾರ್ಥರಾದರು,ಇಂದಿರಾ= ಲೋಕಮಾತೆಯ, ವಲ್ಲಭನ= ಕಾಂತನಾದ ಕೃಷ್ಣನ,  ಸಂದರ್ಶನಕೆ= ದರ್ಶನಕ್ಕೆ,  ನಿಜಸೂನು ಸಹಿತ= ತನ್ನ ಕುವರನಾದ ಮದನನೊಂದಿಗೆ, ದುಷ್ಟಬುದ್ಧಿ = ದುಷ್ಟಬುದ್ಧಿಯು, ಬಂದು= ಬಂದು, ನಿರ್ಧೂತ= ನಿವಾರಣೆಯನ್ನೈದಿದ, ಕಿಲ್ಬಿಷನು= ದೋಷವುಳ್ಳವನಾದ, ಗಾಲವನು= ಗಾಲವ ಋಷಿಯೂ, ಆಗಲೆ= ಒಡನೆಯೇ, ಐತಂದು=ಬಂದು, ಅತಿ ಭಕ್ತಿ ಭಾವದಿಂದ = ಮಿಗಿಲಾದ ಭಕ್ತಿ ಪೂರ್ವಕವಾಗಿ, ವಿವಿಧ= ಅನೇಕ, ಆಗಮ= ವೇದಗಳ, ಉಕ್ತಿಯಿಂದ= ವಚನಗಳಿಂದ, ಅಸುರಮರ್ದನನ= ರಾಕ್ಷಸ ಸಂಹಾರಕನಾದ ಕೃಷ್ಣನ, ಪಾದಾರವಿಂದಮಂ= ಅಡಿದಾವರೆಗಳನ್ನು,ಪೂಜಿಸಿದನು.


ತಾತ್ಪರ್ಯ = ಚಂದ್ರಹಾಸನ ಆಶ್ರಯದಲ್ಲಿದ್ದ ಕುಂತಳ ನಗರದ ಎಲ್ಲ ಪುರಜನರೂ ಶ್ರೀಕೃಷ್ಣನನ್ನು ಕಂಡು ಕೃತಕೃತ್ಯರಾದರು. ದುಷ್ಟಬುದ್ಧಿಯು ತನ್ ಮಗ ಮದನನೊಡನೆ ಬಂದು ಶ್ರೀಕೃಷ್ಣನನ್ನು ಕಂಡು ಸಮಸ್ತ ಪಾಪಗಳನ್ನೂ ಕಳೆದುಕೊಂಡನು. ಗಾಲವನು ಬಂದು ಶ್ರೀಕೃಷ್ಣನ ಪಾದಗಳನ್ನೂ ವಿವಿಧ ಆಗಮಗಳ ಮಂತ್ರದಿಂದ ಅತಿ ಭಕ್ತಿ ಭಾವದಿಂದ  ಪೂಜಿಸಿದನು. 


ಪ್ರೀತಿಯಿಂ ಚಂದ್ರಹಾಸಂ ತನ್ನ ರಾಜ್ಯಮಂ। 

ಪೀತಾಂಬರನ ಚರಣ ಸರಸಿರುಹಕರ್ಪಿಸಿದ। 

ನಾತಂ ಧನಂಜಯನ ಸಮ್ಮತದೊಳೊಸೆದು ವಿಷಯಾ ಕುಮಾರಂಗೆ ಕೊಟ್ಟು॥ 

ಖ್ಯಾತಮಾದಖಿಳ ವಸ್ತುಗಳೊಡನೆ ಗಜಪುರಕೆ । 

ದೂತರಂ ಕಳುಹಿ ಸತ್ಕೃತನಾಗಿ ಭೂಪತಿ। 

ವ್ರಾತ ಸಹಿತಲ್ಲಿ ಮೂರಿರುಳಿರ್ದು ಪೊರಮಟ್ಟನೈದೆ ಕುದುರೆಗಳ ಕೂಡೆ॥೨೦॥


ಪ್ರತಿಪದಾರ್ಥ :- ಚಂದ್ರಹಾಸಂ = ಇಂದುಹಾಸನು, ಪೀತಾಂಬರನ= ಶ್ರೀಕೃಷ್ಣನ, ಚರಣಸರಿಸಿರುಹಕೆ= ಕಮಲದಂತಿರುವ ಪಾದಗಳಿಗೆ,  ತನ್ನ ರಾಜ್ಯಮಂ = ತನ್ನ ದೇಶವನ್ನು, ಪ್ರೀತಿಯಿಂದ= ಪ್ರೇಮದಿಂದ,  ಅರ್ಪಿಸಿದನು= ಕೊಟ್ಟನು,ಆತಂ= ಆ ಶ್ರೀಕೃಷ್ಣನು,  ಎಸೆದು= ಪ್ರಕಾಶವಾಗಿ, ವಿಷಯಕುಮಾರಂಗೆ= ವಿಷಯೆಯ ತನುಜ ಮಕರಧ್ವಜನೆಂಬುವನಿಗೆ, ಧನಂಜಯನ ಸಮ್ಮತದೊಳು= ಪಾರ್ಥನ ಇಷ್ಟದಂತೆ, ಕೊಟ್ಟು= ವಹಿಸಿ, ದೂತರಂ= ತನ್ನ ಸೇವಕರನ್ನು, ಖ್ಯಾತಮಾದ= ಹೆಸರುವಾಸಿಯಾದ,  ಅಖಿಲವಸ್ತುಗಳೊಡನೆ= ಸಕಲ ಪದಾರ್ಥಗಳೊಂದಿಗೆ ,ಗಜಪುರಿಗೆ= ಹಸ್ತಿತಿನಾವತಿಗೆ, ಕಳುಹಿ= ಕಳುಹಿಸಿ,  ಸತ್ಕೃತನಾಗಿ = ಮನ್ನಣೆಹೊಂದಿ, ಅಲ್ಲಿ= ಆ ಕುಂತಳ ನಗರದಲ್ಲಿ,  ಐದೆ= ಚನ್ನಾಗಿ, ಮೂರಿರುಳು=ಮೂರು ರಾತ್ರಿ, ಭೂಪತಿವ್ರಾತಸಹಿತ= ರಾಜರ ಸಮೊಹದೊಡನೆ, ಇರ್ದು=ಇದ್ದು, ಕೂಡ= ಒಡನೆ, ಪೊರಮಟ್ಟನು= ಹೊರಟನು. 


ತಾತ್ಪರ್ಯ:- ಆ ಬಳಿಕ ಸಂತುಷ್ಟನಾದ ಚಂದ್ರಹಾಸನು ತನ್ನ ರಾಜ್ಯವನ್ನು ಶ್ರೀಕೃಷ್ಣನ ಚರಣಗಳಿಗೆ ಅರ್ಪಿಸಿದನು. ಶ್ರೀಕೃಷ್ಣನು ಅರ್ಜುನನ ಸಮ್ಮತಿಯಿಂದ ಆ ರಾಜ್ಯವನ್ನು ವಿಷಯೆಯ ಮಗನಾದ ಮಕರಧ್ವಜನಿಗೆ ಕೊಟ್ಟು ಅಲ್ಲಿಯ ಉತ್ತಮವಾದ ವಸ್ತುಗಳನ್ನೆಲ್ಲಾ ಹಸ್ತಿನಾವತಿಗೆ ಕಳುಹಿಸಿ ಅರ್ಜುನಾದಿಗಳೊಡನೆ ಚಂದ್ರಹಾಸನ ಸತ್ಕಾರವನ್ನು ಸ್ವೀಕರಿಸಿ, ಕುಂತಳರಾಜ್ಯದಲ್ಲಿಯೇ ಮೂರು ದಿನಗಳಿದ್ದು, ಅನಂತರ ಸರ್ವರನ್ನೂ ಕರೆದುಕೊಂಡು ಯಜ್ಞಾಶ್ವಗಳೊಡನೆ ಮುಂದೆ ಹೊರಟನು. 





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ