ಕನಕದಾಸ ವಿರಚಿತ ಹರಿಭಕ್ತಿಸಾರ
ಶ್ರೀಯರಸ ಗಾಂಗೇಯನುತ ಕೌಂ
ತೇಯವಂದಿತಚಲರಣ ಕಮಲದ
ಳಾಯತಾಂಬಕರೂಪ ಚಿನ್ಮಯ ದೇವಕೀತನಯ
ರಾಯ ರಘುಕುಲವರ್ಯ ಭೂಸುರ
ಪ್ರೀಯ ಸುರಪುರನಿಲಯ ಚೆನ್ನಿಗ
ರಾಯ ಚತುರೋಪಾಯ ರಕ್ಷಿಸು ನಮ್ಮನನವರತ ||೧ ||
ದೇವದೇವ ಜಗದ್ಭರಿತ ವಸು
ದೇವಸುತ ಜಗದೇಕನಾಥ ರ
ಮಾವಿನೋದಿತ ಸಜ್ಜನಾನತ ನಿಖಿಲಗುಣಭರಿತ
ಭಾವಜಾರಿಪ್ರಿಯ ನಿರಾಮಯ
ರಾವಣಾಂತಕ ರಘುಕುಲಾನ್ವಯ
ದೇವ ಅಸುರವಿರೋಧಿ ರಕ್ಷಿಸು ನಮ್ಮನನವರತ ||೨||
ಅನುಪಮಿತಚಾರಿತ್ರ ಕರುಣಾ
ವನಧಿ ಭಕ್ತಕುಟುಂಬಿ ಯೋಗೀ
ಜನಹೃದಯಪರಿಪೂರ್ಣ ನಿತ್ಯಾನಂದ ನಿಗಮನುತ
ವನಜನಾಭ ಮುಕುಂದ ಮುರಮ
ರ್ದನ ಜನಾರ್ದನ ತ್ರೈಜಗತ್ಪಾ
ವನ ಸುರಾರ್ಚಿತ ದೇವ ರಕ್ಷಿಸು ನಮ್ಮನನವರತ||೩||
ಭಕ್ತಿಸಾರದ ಚರಿತೆಯನು ಹರಿ
ಭಕ್ತರಾಲಿಸುವಂತೆ ರಚಿಸುವೆ
ಯುಕ್ತಿಯಲಿ ಬರೆದೋದಿದವರಿಷ್ಟಾರ್ಥ ಸಿದ್ಧಪುದು
ಮುಕ್ತಿಗಿದು ನೆಲೆದೋರುವುದು ಹರಿ
ಭಕ್ತರಿದ ಲಾಲಿಪುದು ನಿಜಮತಿ
ಭಕ್ತಿಗೊಲಿವಂದದಲಿ ರಕ್ಷಿಸು ನಮ್ಮನನವರತ ||೧೮||
ಗಿಳಿಯ ಮರಿಯನು ತಂದು ಪಂಜರ
ದೊಳಗೆ ಪೋಷಿಸಿ ಕಲಿಸಿ ಮೃದುನುಡಿ
ಗಳನು ಲಾಲಿಸಿ ಕೇಳ್ವ ಪರಿಣತರಂತೆ ನೀನೆನಗೆ
ತಿಳುಹು ಮತಿಯನು ಎನ್ನ ಜಿಹ್ವೆಗೆ
ಮೊಳಗುವಂದದಿ ನಿನ್ನ ನಾಮಾ
ವಳಿಯ ಪೊಗಳಿಕೆಯಿತ್ತು ರಕ್ಷಿಸು ನಮ್ಮನನವರತ ||೨೦||
ವೇದಶಾಸ್ತ್ರ ಪುರಾಣ ಪುಣ್ಯದ
ಹಾದಿಯನು ನಾನರಿಯೆ ತರ್ಕದ
ವಾದದಲಿ ಗುರುಹಿರಿಯರರಿಯದ ಮೂಢಮತಿಯೆನಗೆ
ಆದಿಮೂರುತಿ ನೀನು ನೆರೆ ಕರು
ಣೋದಯನು ಹೃದಯಾಂಗಣದಿ ಜ್ಞಾ
ನೋದಯವನೆನಗಿತ್ತು ರಕ್ಷಿಸು ನಮ್ಮನನವರತ ||೨೨||
ಹಸಿವರಿತು ತಾಯ್ ತನ್ನ ಶಿಶುವಿಗೆ
ಒಸೆದು ಮೊಲೆ ಕೊಡುವಂತೆ ನೀ ಪೋ
ಷಿಸದೆ ಬೇರಿನ್ನಾರು ಪೋಷಕರಾಗಿ ಸಲಹುವರು
ಬಸಿರೊಳಗೆ ಬ್ರಹ್ಮಾಂಡಕೋಟಿಯ
ಪಸರಿಸಿದ ಪರಮಾತ್ಮ ನೀನೆಂ
ದುಸಿರುತಿದೆ ವೇದಗಳು ರಕ್ಷಿಸು ನಮ್ಮನನವರತ ||೨೩||
ಇಬ್ಬರಣುಗರು ನಿನಗೆಯವರೊಳ
ಗೊಬ್ಬ ಮಗನೀರೇಳು ಲೋಕದ
ಹೆಬ್ಬೆಳಸು ಬೆಳೆವಂತೆ ಕಾರಣಕರ್ತನಾದವನು
ಒಬ್ಬ ಮಗನದ ಬರೆವ ಕರಣಿಕ
ರಿಬ್ಬರೆ ಲೋಕಪ್ರಸಿದ್ಧರು
ಹಬ್ಬಿಸಿದೆ ಪ್ರಾಣಿಗಳ ರಕ್ಷಿಸು ನಮ್ಮನನವರತ ||೨೪||
ಸಿರಿಯು ಕುಲಸತಿ ಸುತನು ಕಮಲಜ
ಹಿರಿಯ ಸೊಸೆ ಶಾರದೆ ಸಹೋದರಿ
ಗಿರಿಜೆ ಮೈದುನ ಶಂಕರನು ಸುರರೆಲ್ಲ ಕಿಂಕರರು
ನಿರುತ ಮಾಯೆಯು ದಾಸಿ ನಿಜ ಮಂ
ದಿರವಜಾಂಡವು ಜಂಗಮಸ್ಥಾ
ವರಕುಟುಂಬಿಗ ನೀನು ರಕ್ಷಿಸು ನಮ್ಮನನವರತ ||೨೫||
ಸಾಗರನ ಮಗಳರಿಯದಂತೆ ಸ
ರಾಗದಲಿ ಸಂಚರಿಸುತಿಹವು
ದ್ಯೋಗವೇನು ನಮಿತ್ತ ಕಾರಣವಿಲ್ಲ ಲೋಕದಲಿ
ಭಾಗವತರಾದವರ ಸಲಹುವ
ನಾಗಿ ಸಂಚರಿಸುವುದು ಈ ಭವ
ಸಾಗರದಿ ಮುಳುಗಿಸದೆ ರಕ್ಷಿಸು ನಮ್ಮನನವರತ ||೨೬||
ಬಲಿಯ ಬಂಧಿಸಿ ಮೊರೆಯಿಡುವ ಸತಿ
ಗೊಲಿದು ಅಕ್ಷಯವಿತ್ತು ಕರುಣದಿ
ಮೊಲೆಯನುಣಿಸಿದ ಬಾಲಿಕೆಯ ಪಿಡಿದಸುವನಪಹರಿಸಿ
ಶಿಲೆಯ ಸತಿಯಳ ಮಾಡಿ ತ್ರಿಪುರದ
ಲಲನೆಯರ ವ್ರತಗೆಡಿಸಿ ಕೂಡಿದ
ಕೆಲಸವುತ್ಸತಮವಾಯ್ತು ರಕ್ಷಿಸು ನಮ್ಮನನವರತ ||೩೦||
ಏನುಮಾಡಿದಡೇನು ಕರ್ಮವ
ನೀನೊಲಿಯದಿನ್ನಿಲ್ಲವಿದಕನು
ಮಾನವುಂಟೆ ಭ್ರಮರಕೀಟನ್ಯಾಯದಂದದಲಿ
ನೀನೊಲಿಯೆ ತೃಣ ಪರ್ವತವು ಪುಸಿ
ಯೇನು ನೀ ಪತಿಕರಿಸೆ ಬಳಿಕಿ
ನ್ನೇನು ಚಿಂತಿಸಲೇಕೆ ರಕ್ಷಿಸು ನಮ್ಮನನವರತ ||೪೦||
ಎಷ್ಟುಮಾಡಲು ಮುನ್ನ ತಾ ಪಡೆ
ದಷ್ಟುಯೆಂಬುದ ಲೋಕದೊಳು ಮತಿ
ಗೆಟ್ಟ ಮಾನವರಾಡುತಿಹರಾ ಮಾತದಂತಿರಲಿ
ಪಟ್ಟವಾರಿಂದಾಯ್ತು ಧ್ರುವನಿಗೆ
ಕೊಟ್ಟ ವರ ತಪ್ಪಿತೆ ಕುಚೇಲನಿ
ಗಿಷ್ಟ ಬಾಂಧವ ನೀನು ರಕ್ಷಿಸು ನಮ್ಮನನವರತ ||೪೧||
ದೀನ ನಾನು ಸಮಸ್ತ ಲೋಕಕೆ
ದಾನಿ ನೀನು ವಿಚಾರಿಸಲು ಮತಿ
ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು
ಏನ ಬಲ್ಲೆನು ನಾನು ನೆರೆ ಸು
ಜ್ಞಾನಮೂರುತಿ ನೀನು ನಿನ್ನ ಸ
ಮಾನರುಂಟೆ ದೇವ ರಕ್ಷಿಸು ನಮ್ಮನನವರತ ||೪೯||
ಧಾರಿಣಿಗೆ ವರ ಚಕ್ರವರ್ತಿಗ
ಳಾರು ಮಂದಿ ನೃಪಾಲಕರು ಹದಿ
ನಾರು ಮಂದಿಯು ಧರಣಿಯನು ಮುನ್ನಾಳ್ದ ನೃಪರೆನಿತೋ
ವೀರರನು ಮೆಚ್ಚಿದಳೆ ಧರಣೀ
ನಾರಿ ಬಹು ಮೋಹದೊಳು ನಿನ್ನನು
ಸೇರಿಯೋಲೈಸುವಳು ರಕ್ಷಿಸು ನಮ್ಮನನವರತ ||೫೨||
ಗತಿವಿಹೀನರಿಗಾರು ನೀನೇ ನನ್ನ ವಿರುದ್ಧ
ಗತಿ ಕಣಾ ಪತಿಕರಿಸಿಕೊಡು ಸ
ದ್ಗತಿಯ ನೀನೆಲೆ ದೇವ ನಿನಗಪರಾಧಿ ನಾನಲ್ಲ
ಶ್ರುತಿವಚನವಾಡುವುದು ಶರಣಾ
ಗತನ ಸೇವಕನೆಂದು ನಿನ್ನನು
ಮತವಿಡಿದು ನಂಬಿದೆನು ರಕ್ಷಿಸು ನಮ್ಮನನವರತ ||೫೪||
ಈಗಲೋ ಈ ದೇಹವಿನ್ನ್ಯಾ
ವಾಗಲೋ ನಿಜವಿಲ್ಲವೆಂಬುದ
ನೀಗ ತಿಳಿಯದೆ ಮಡದಿ ಮನೆ ಮನೆವಾರ್ತೆಯೆಂದೆಂಬ
ರಾಗಲೋಭದಿ ಮುಳುಗಿ ಮುಂದಣ
ತಾಗುಬಾಗುಗಳರಿಯೆ ನಿನ್ನ ಸ
ಮಾಗಮವ ಬಯಸುವೆನು ರಕ್ಷಿಸು ನಮ್ಮನನವರತ ||೫೫||
ಮಾಂಸ ರಕ್ತದ ಮಡುವಿನಲಿ ನವ
ಮಾಸ ಜನನಿಯ ಜಠರದೊಳಗಿರು
ವಾ ಸಮಯದಲ್ಲಿ ವೃತ್ತಿಯನು ಕಲ್ಪಿಸಿದ ಪ್ರಭುವಾರು
ನೀ ಸಲಹಿದವನಲ್ವೇ ಕರು
ಣಣಾಸಮುದ್ರನು ನೀನಿರಲು ಕಮ
ಲಾಸನನ ಹಂಗೇಕೆ ರಕ್ಷಿಸು ನಮ್ಮನನವರತ ||೫೬||
ಎತ್ತಿದೆನು ನಾನಾ ಶರೀರವ
ಹೊತ್ತು ಹೊತ್ತಲಸಿದೆನು ಸಲೆ ಬೇ
ಸತ್ತು ನಿನ್ನಯ ಪದವ ಕಾಣದೆ ತೊಳಲಿ ಬಳಲಿದೆನು
ಸತ್ತು ಹುಟ್ಟುವ ಹುಟ್ಟಿ ಹಿಂಗುವ
ಸುತ್ತ ತೊಡಕನು ಮಾಣಿಸಲೆ ಪುರು
ಷೋತ್ತಮನೆ ಮನವೊಲಿದು ರಕ್ಸಷಿಸು ನಮ್ಮನನವರತ ||೬೦||
ಗಣನೆಯಿಲ್ಲದ ಜನನಿಯರು ಮೊಲೆ
ಯುಣಿಸಲಾ ಪಯಬಿಂದುಗಳನದ
ನೆಣಿಸಲಳವೇ ಸಪ್ತಸಾಗರಕಧಿಕವೆನಿಸಿಹುದು
ಬಣಗು ಕಮಲಜನದಕೆ ತಾನೇ
ಮಣೆಯಗಾರನು ಈತ ಮಾಡಿದ
ಕುಣಿಕೆಗಳ ನೀಬಿಡಿಸಿ ರಕ್ಷಿಸು ನಮ್ಮನನವರತ ||೬೨||
ಎಂಟು ಗೇಣಿನ ದೇಹ ರೋಮಗ
ಳೆಂಟು ಕೋಟಿಯ ಕೀಲ್ಗಳರುವ
ತ್ತೆಂಟು ಮಾಂಸಗಳಿಂದ ಮಾಡಿದ ಮನೆಯ ಮನವೊಲಿದು
ನೆಂಟ ನೀನಿರ್ದಗಲಿದಡೆ ಒಣ
ಹೆಂಟೆಯಲಿ ಮುಚ್ಚುವರು ದೇಹದ
ಲುಂಟೆ ಫಲ ಪುರುಷಾರ್ಥ ರಕ್ಷಿ,ಸು ನಮ್ಮನನವರತ ||೬೬||
ಕೋಪವೆಂಬುದು ತನುವಿನಲಿ ನೆರೆ
ಪಾಪ ಪಾತಕದಿಂದ ನರಕದ
ಕೂಪದಲಿ ಮುಳುಗುವುದು ತಪ್ಪದು ಶಾಸ್ತ್ರಸಿದ್ಧವಲೆ
ರಾಪು ಮಾಡದೆ ಬಿಡನು ಯಮನು ನಿ
ರಾಪರಾಧಿಯು ನೋಡಿ ಕೀರ್ತಿಕ
ಲಾಪವನು ನೀ ಕಾಯ್ದು ರಕ್ಷಿಸು ನಮ್ಮನನವರತ ||೬೮||
ನೀರ ಮೇಲಣ ಗುಳ್ಳೆಯಂದದಿ
ತೋರಿಯಡಗುವ ದೇಹವೀ ಸಂ
ಸಾರ ಬಹಳಾರ್ಣವದೊಳಗೆ ಮುಳುಗಿದೆನು ಪತಿಕರಿಸಿ
ತೋರಿಸಚಲಾನಂದಪದವಿಯ
ಸೇರಿಸಕಟಾ ನಿನ್ನವೋಲ್ ನಮ
ಗಾರು ಬಾಂಧವರುಂಟು ರಕ್ಷಿಸು ನಮ್ಮನನವರತ ||೭೫||
ತೊಗಲು ಬೊಂಬೆಗಳಂತೆ ನಾಲಕು
ಬಗೆಯ ನಿರ್ಮಾಣದಲಿ ಇದರೊಳು
ನೆಗಳದೀ ಚೌಷಷ್ಟಿ ಲಕ್ಷಣ ಜಾತಿ ಧರ್ಮದಲಿ
ಬಗೆಬಗೆಯ ನಾಮಾಂಕಿತದ ಜೀ
ವಿಗಳದೆಲ್ಲವು ನಿನ್ನ ನಾಮದಿ
ಜಗದಿ ತೋರುತ್ತಿಹುದು ರಕ್ಷಿಸು ನಮ್ಮನನವರತ ||೮೪||
ಹೂಡಿದೆಲುಮರಮಟ್ಟು ಮಾಂಸದ
ಗೋಡೆ ಚರ್ಮದ ಹೊದಿಕೆ ನರವಿನ
ಕೂಡೆ ಹಿಂಡಿಗೆ ಬಿಗಿದ ಮನೆಯೊಳಗಾತ್ಮ ನೀನಿರಲು
ಬೀಡು ತೊಲಗಿದ ಬಳಿಕಲಾ ಸುಡು
ಗಾಡಿನಲಿ ಬೆಂದುರಿವ ಕೊಂಪೆಯ
ನೋಡಿ ನಂಬಿರಬಹುದೆ ರಕ್ಷಿಸು ನಮ್ಮನನವರತ ||೮೫||
ಬೀಗಮುದ್ರೆಗಳಿಲ್ಲದೂರಿಗೆ
ಬಾಗಿಲುಗಳೊಂಬತ್ತು ಹಗಲಿರು
ಳಾಗಿ ಮುಚ್ಚದೆ ತೆರೆದಿಹುದು ಜೀವಾತ್ಮ ತಾನಿರುತ
ನೀಗಿಯೆಲ್ಲವ ಬಿಸುಟು ಬೇಗದಿ
ಹೋಗುತಿಹ ಸಮಯದಲಿ ಇವರವ
ರಾಗಬಲ್ಲರೆ ನೀನೆ ರಕ್ಷಿಸು ನಮ್ಮನನವರತ ||೮೬||
ಎಂಜಲೆಂಜಲು ಎಂಬರಾ ನುಡಿ
ಎಂಜಲಲ್ಲವೆ ವಾರಿ ಜಲಚರ
ದೆಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೆ
ಎಂಜಲೆಲ್ಲಿಯದೆಲ್ಲಿಯುಂ ಪರ
ರೆಂಜಲಲ್ಲದೆ ಬೇರೆ ಭಾವಿಸ
ಲೆಂಜಲುಂಟೇ ದೇವ ರಕ್ಷಿಸು ನಮ್ಮನನವರತ ||೧೦೧||
ಕೇಳುವುದು ಹರಿಕಥೆಯ ಕೇಳಲು
ಹೇಳುವುದು ಹರಿಭಕ್ತಿ ಮನದಲಿ
ತಾಳುವುದು ಹಿರಿದಾಗಿ ನಿನ್ನಯ ಚರಣಸೇವೆಯಲಿ
ಊಳಿಗವ ಮಾಡುವುದು ವಿಷಯವ
ಹೂಳುವುದು ನಿಜ ಮುಕ್ತಕಾಂತೆಯ
ನಾಳುವುದು ಕೃಪೆಮಾಡಿ ರಕ್ಷಿಸು ನಮ್ಮನನವರತ ||೧೦೨||
ನೂರು ಕನ್ಯಾದಾನವನು ಭಾ
ಗೀರಥೀಸ್ನಾನವನು ಮಿಗೆ ಕೈ
ಯಾರೆ ಗೋವ್ಗಳ ಪ್ರೇಮದಿಂದಲಿ ಭೂಸುರರಿಗೊಲಿದು
ಊರುಗಳ ನೂರಗ್ರಹಾರವ
ಧಾರೆಯೆರೆದಿತ್ತಂತೆ ಫಲ ಕೈ
ಸೇರುವುದು ಹರಿಭಕ್ತಿಸಾರದ ಕಥೆಯ ಕೇಳ್ದವಗೆ ||೧೦೬||
ಕೃಪೆ
ಎನ್. ರಂಗನಾಥಶರ್ಮಾ
ಸರ್ ನಿಮ್ಮ ಈ ಸೇವೆ ನಮಗೆ ಮಾರ್ಗದರ್ಶಕವಾಗಿದೆ. ನಿಮಗೆ ನಾನು ಬಹಳ ಋಣಿಯಾಗಿರುವೆ.
ಪ್ರತ್ಯುತ್ತರಅಳಿಸಿಓದಿ ತಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು.
ಅಳಿಸಿ