ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಬುಧವಾರ, ಜೂನ್ 21, 2017

ಚಾಮರಸನ ಪ್ರಭುಲಿಂಗ ಲೀಲೆ

ಚಾಮರಸನ ಪ್ರಭುಲಿಂಗ ಲೀಲೆ



ಶ್ರೀಮದಮಲ ಜ್ಞನ ಭಕ್ತಿ
ಪ್ರೇಮ ವೇದ ಪುರಾಣ ಶಾಸ್ತ್ರ
ಸ್ತೋ ಮ ನುತ ನತ ಆರು ಚರಣಾಂಭೋಜ ಘನಮಹಿಮ
ನಾಮ ರೂಪ ಕ್ರೀ ಕಳಾಪ ವಿ
ರಾಮನನುಪಮ ದಿವ್ಯ ತೇಜೋ
ವ್ಯೋಮ ಮೂರುತಿ ಗುರು ಗುಹೇಶ್ವರ ಲಿಂಗ ಶರಣಾರ್ಥಿ||೧||

ಕುಱಿಗಳೋಪಾದಿಯಲಿ ಕಬ್ಬಿನ
ಹೊಱಗಣಲೆಯನು ಮೇದಕಟ ಮೆಲು
ಕಿಱಿವುತಲ್ಪ ಸುಖಕ್ಕೆ ಸೋಲದೆ ಕಬ್ಬಿನೊಘಳು ರಸವ
ನೆಱೆ ಸವಿವ ಗಜದಂತೆ ಭಕ್ತಿಯ
ತೆಱನ ತಿಳಿದಾಚರಿಬೇಕೆಂ
ದಱಿವವರು ಲಾಲಿಸುವುದೀ ಪ್ರಭುಲಿಂಗಲೀಲೆಯನು||೬||

ಇರುತಲೊಂದಾನೊಂದು ದಿನ ವಿ
ಸ್ತರ ವಿನೋದಂಗಳಲಿ ಸಭೆಯೊಮಳು
ಪರಕಲಿಸಿ ದಂತಚ್ಛವಿಯ ಬೆಳುದಿಂಗಳನು ಸುಘರಿವ
ಕರ ಚೆಲುವ ಬಾಯ್ದೆರೆಯ ಪರಮೇ
ಶ್ವರಿ ನಿಜಾತಂಕರಣ ಜನಿತ
ಸ್ಫುರಣೆಯನು ಬಿನ್ನೈಸಲುದ್ಯೋಗಿಸಿದಳಭವಂಗೆ ||೧೫||

ಶಿವನೆ ನಿನ್ನೊಡ್ಡೋಲಗದೊಳೊ
ಪ್ಪುವ ಮಹಾ ಘನ ಮಹಿಮರೆಲ್ಲರು
ಭವಕೆ ಬಾರದೆ ನಿತ್ಯ ಸುಖದಿಂದಿಪ್ಪರೋ ಮೇಣು
ಇವರಿಗೆಯು ನೆಲೆಯಿಲ್ಲವೋ ಪೇ
ಳಿವರವಸ್ಥೆಯನೆನುತ ಕೇಳಲು
ಶಿವೆಗೆ ತಿಳಿವಂದದಲಿ ಬಳಿಕಾ ಶಂಭುವಿಂತೆಂದಂ ||೧೬||

ಭೋಗ ಭೂಮಿಯ ಭೋಗ ತನುವಿನ
ಲಾಗದನುಪಮ ಸಿದ್ಧಿ ಕರ್ಮೋ
ದ್ಯೋಗ ಭೂಮಿಯ ಕರ್ಮ ತನುವಿನಲಲ್ಲದದಱಿಂದ
ಯೋಗ ಯೋಗ್ಯರು ಯೋಚಿಸುತ ಭೂ
ಭಾಗದೊಳು ಮಾನವ ಶರೀ.ಮಮರಿಗ
ಳಾಗಿ ಸಾಧಿಸಿ ನಿಜವನರಿವರು ಗಿರಿಜೆ ಕೇಳೆಂದ||೧೯||}

ಏನ ಹೇಳುವೆನಾದಿಯಲಿ ಸು
ಜ್ಞಾನಿ ನಿರಹಂಕಾರರೆಂಬರ
ನೂನ ತಪವನು ಮಾಡಲೆನ್ನ ನಿಜಸ್ವರೂಪವರ
ಸೂನುವೆಂಬಂದದಲಿ ಸುಳಿದನು
ತಾನೆ ಅಲ್ಲಮನೆಂಬ ಪೆಸರಲಿ
ಮಾನಿನಿಯೆ ಕೇಳಾ ಮಹಾತ್ಮನಲಱಿವುದಱಿವುಗಳ ||೨೧||

ಅಲ್ಲಮ ಪ್ರಭುವೆನಿಪನಾತನ
ಬಲ್ಲೆ ನಾನೀಗಱಿದೆ ಬಳಿಕಿ
ನ್ನಲ್ಲಿ ನಿಜತತ್ವ ಸ್ವರೂಪವನಱಿವುದೇನರಿದು
ಒಳ್ಳಿತಾಯಿತು ತಿಳಿಯ ಬೇಕೆಂ
ಬೆಲ್ಲರಿಗೆ ಕರ ಸುಲಭವೆನುತಲಿ
ಬುಲ್ಲವಿಸಿ ಗಿರಿಜಾತೆ ನುಡಿಯಲು ಶಂಭುವಿಂತೆಂದ||೨೨||

ಖಾತಿಗೊಳ್ಳದಿರಾಡಿ ತೋಱಿದ
ಡೀತ ನಿಷ್ಟುರನೆನ್ನದಿರು ಬಱಿ
ಮಾತು ಮಾತಿಗೆ ಸಿಕ್ಕನಾರಾರಾವ  ಭಕ್ತಿಗಳ
ರೀತಿಗಳಲಿಹರವರಿಗವರ
ಪ್ರೀತಿಯಲಿ ರೂಪಾಗಿ ಕೇಳ್ ಸಾಮಾನ್ಯನಲ್ಲೆಂದ ||೨೩||

ಬಳಿಕಲಂಬಿಕೆ ತನ್ನ ತಾಮಸ
ಕಳೆಯೆ ಮೂರುತಿಯಾದ ಮಾಯೆಯ
ನಿಳೆಯಲುದಯಿಸಿ ಅಲ್ಲಮನ ನೀನಱಿದು ಬಾರೆನಲು
ತಿಳಿವೆನಾತನ ನಿಜವನಥವಾ
ಸೆಳೆದನಾದಡೆ ಮುಟ್ಟಿ ಹಿಡಿಕೊಂ
ಡೆಳೆದು ತಹೆ ನಾನೆನುತ ಪೈಜೆಯ ನುಡಿದಳಾ ಮಾಯೆ ||೨೪||

ಗತಿ ೨

ಚಿತ್ತವಿಸುವುದು ಸಕಲ ಶಿವ ಭ
ಕ್ತೋತ್ತಮರು ಮುಂದಣ ಕಥಾ ಸ
ದ್ಬಿತ್ತರವನಮರಾದ್ರಿಗೊಪ್ಪುವ ತೆಂಕ ದಿಕ್ಕಿನಲಿ
ಸತ್ಯದಲಿ ಸದ್ಭಕ್ತಿಯಲಿ ಸ
ದ್ವೃತ್ತಿಯಲಿ ಸಚ್ಚರಿತದಲಿ ಸಂ ಈ ಭಾಗದ
ಪತ್ತಿನಲಿ ಸಲೆ ಸೊಗಸಿ ಬೆಳುವಲ ದೇಶ ಮೆಱೆದಿಹುದು||೨೮||

ಅದಱೊಳವನೀ ಕಾಂತೆಗೊಪ್ಪುವ
ವದನವೋ ಶೃಂಗಾರ ಸಾರದ
ಸದನವೋ ಸೊಬಗಿನ ಸುಮಾನದ ಸುಖದ ನೆಲೆ ವೀಡೊ
ಸುದತಿ ರತ್ನಗಳೊಗೆವ ಚೆಲುವಂ
ಬುಧಿಯೊ ಪೇಳೆನೆ ಸಕಲ ಸೌರಂ
ಭದಲಿ ಸೊಗಸಿಹುದಲ್ಲಿ ಬನವಸೆಯೆಂಬ ಪಟ್ಟಣವು ||೨೯||
ಆರು ಬಣ್ಣಿಸ ಬಲ್ಲರಾ ಮಮ
ಕಾರ ನೃಪನ ಮಹಾ ಪ್ರತಾಪವ
ಶೂರತೆಯ ಸಾಹಸವನಾತನ ಸಕಲ ಗುಣ ಗಣವ
ಧಾರಿಣಿಯೊಳಪ್ರತಿಮನಾಗಿ ಉ
ದಾರತೆಯಲಿರುತಿರ್ಪನಾತಗೆ
ನಾರಿಯಾಗಿಹಳೊಬ್ಬ ಮಾನಿನಿ ಮೋಹಿನೀ ದೇವಿ ||೩೪||

ಕುಸುಮ ಬಾಣನೊ ರತಿಯೊ ಮೇಣಾ
ಶಶಿಯೊ ರೋಹಿಣಿದೇವಿಯೋ ಮೇ
ಣೆಸೆವ ಸುರಪನೊ ಶಚಿಯೊ ಮೇಣ್ ಪುರುಷೋತ್ತಮನೊ ಸಿರಿಯೊ
ಹೆಸರಿಡಲು ಹವಣಿಲ್ಲೆಂಬೊಂ
ದಸಮ ಸಮ್ಮೇಳದ ಸಗಾಢದ
ಬೆಸುಗೆಯಲಿ ಮಮಕಾರ ನೃಪ ಮೋಹಿನಿಯರೆಸೆದಿಹರು ||೩೫||

ಭಾವಿಸಲು ಮಮಕಾರ ಮೋಹಿನಿ
ದೇವಿಯರ ಬಸಿಱಿನಲಿ ವರ ರಾ
ಜೀವಲೋಚನೆ ಚಿತ್ತ ರಂಜನೆ ಸಕಲ ಸಂಪನ್ನೆ
ದೇವ ದಾನವ ಮಾನವರುಗಳ
ಡಾವಣಿಯ ದನ ಮಾಡಿ ಕಟ್ಟುವ
ಭಾವೆ ಮಾಯಾದೇವಿ ಹುಟ್ಟಿದಳಖಿಳ  ವಿಭವದಲಿ ||೩೭||

ಬೆಎತ್ತ ಬಿದಿರಿಡಿದಿರ್ದ ತರು ಲತೆ
ಹುತ್ತ ಬೆಳೆದ ಸಮಾಧಿವಂತರ
ಚಿತ್ತ ಸಂಚಲವಾಗಿ ನೆನಹಿನ ನೇಮ ನೆಲೆಗೆಡಲು
ಎತ್ತಣಿಂದೀ ಮಾಯೆ ಹುಟ್ಟಿತೆ
ನುತ್ತೆ ಚಿಂತಾಕ್ರಾಂತರಾಗಿರೆ
ಸತ್ಯ ನಿಧಿ ದುರ್ವಾಸನಾ ಪ್ರಸ್ತಾವದಲಿ ಸುಳಿದ ||೪೦||

ಹೂಣಿಸಿಯೆ ಹುರಿಗೊಂಡು  ನೆಱೆ ಗೀ
ರ್ವಾಣರೆಲ್ಲರ ಮುಂದೆ ಮಿಗೆ ರು
ದ್ರಾಣಿ ತನ್ನಯ ತಾಮಸಾಂಗದ ಮಾಯೆಯನು ಕಳುಹೆ
ಮಾಣದಿಳೆಯೊಳು ಜನಿಸಿ ಬಂದಳು
ಕಾಣಿರೇ ಬಳಿಕಲಿ ಸಮಾಧಿ
ತ್ರಾಣಿಗಳಿಗೆಲ್ಲಿಯದು ತರಹರವೆಂದನಾ ಮುನಿಪ ||೪೨||

ಮಾತುಮಾತಿನೊಳೋಲಗದಲಗ
ಜಾತೆ ಶಿವನೊಳು ಗೋಷ್ಠಿ ಮಾಡುತ
ಲಾತನನು ನಿಜ ರೂಪ ಕೇಳಿದಡಲ್ಲಮ ಪ್ರಭುವ
ಭೂತಳದೊಳಱಿದಲ್ಲಿ ತಿಳಿಯೆನೆ
ಭೂತ ನಾಥನು ಬಳಿಕ ಪಾರ್ವತಿ
ಪ್ರೀತಿಯಿಂದಟ್ಟಿ ದಳು ನಿಜ ತಾಮಸದ ಮಾಯೆಯನು||೪೫||

ಶಿಶುವ ನೋಡಿದ ಕಣ್ಗೆ ಮಾಯವೆ
ಮುಸುಕುವುದು ಮನ ಮೆಚ್ಚುವುದು ಮೋ
ಹಿಸುವುದೀ ಪರಿ ಜನನಿ ಜನಕಾದ್ಯರುಗಳೆಲ್ಲರಿಗೆ
ವಸುಮತೀ ಪತಿ ಬಳಿಕಲತಿ ಸಂ
ತಸದೊಳಾತ್ಮಜೆಗಖಿಳ ವಿಭವದಿ
ಹೆಸರನಿಟ್ಟನು ಮಾಯೆಯೆಂಬ ನವೀನ ನಾಮವನು ||೪೯||

ಆಕೆ ಕನ್ಯಾಮಾಡದೊಳು ನಾ
ನಾಕುಶಲ ಶಾಸ್ತ್ರವನು ವಿದ್ಯಾ
ನೀಕವನು ಪರಿಚರಿಸಿ ಪರಿಣತೆಯಾಗಿ ಸುಖದಿಂದ
ಆ ಕುಮಾರಿತಿ ಇರುತಿರಲು ಬಳಿ ಕಾ
ಕಳಾನಿಧಿ ನೃಪತಿ ಮಾಯೆಗೆ
ಬೇಕೆನುತಲಾಳಾಪಿಸಿದ ಮದುವೆಯನು ಮನದೊಳಗೆ ||೫೫||

ಫಲಿತ ಚೂತದ ಮರನ ಸಿರಿ ಕೋ
ಗಿಲೆಗೆ ನೆಟ್ಟನೆ ಹಾಲು ಹಂಸೆಗೆ
ಲಲಿತ ಕುಸುಮದ ಕಂಪು ತುಂಬಿಗೆ ಸವಿಯನೀವಂತೆ
ಉಳಿದ ಖಗ ಕಡಡದುಱುಗಳಿಗೆ ಸುಖ
ವಳವಡುವುದೆ ಸದಾಶಿವಂಗೀ
ಲಲನೆಯಲ್ಲದೆ ನರರಿಗುಚಿತವೆ ಭೂಪ ಕೇಳೆಂದ ||೫೮||

ಧರಣಿ ಪಾಲಕನಿತ್ತ ಸುಖದಿಂ
ದಿರುತಲಿರ್ದನು ಈ ಕುಮಾರಿತಿ
ಹರುಷದಿಂದಲಿ ನಿತ್ಯನೇಮವ ಹಿಡಿದು ಛಲದಿಂದ
ಪುರಕೆ ಘಟಿಕಾ ಸ್ಥಾನವೆನಿಸುವ
ಪರಮ ಸಿದ್ಧಿಯನೀವ ಮಧುಕೇ
ಶ್ವರನ ಪೂಜಿಸುತಿರ್ದಳಿನಿಯನ ಬಯಸಿ ಭಕ್ತಿಯಲಿ||೬೧||

ಅಷ್ಟ ವಿಧದರ್ಚನೆಗಳಿಂದ ಭ
ಯಾಷ್ಟ  ವಿಧದುಪಚಾರದಿಂದಲ
ಭೀಷ್ಟವೆನಿಸುವ ನಿಜ ಮನೋವಲ್ಲಭನ ಬಯಕೆಯಲಿ
ಶ್ರೇಷ್ಠವೆನಿಸುವ ಮಧುಕನಾಥನ
ತುಷ್ಟಿ ವಡುವಂತರ್ಚಿಸಿದಳೀ
ಸೃಷ್ಟಿಯೊಳು ಸಾಂಗದಲಿ ಮಾಯಾ ದೇವಿ ಮನವೊಲಿದು ||೬೨||

ಗತಿ  ೩

ಕಾಮಿತಾರ್ಥವನೀಯ ಬೇಹುದು
ಕಾಮಿನಿಗೆ ತಾನವಳು ಕಾಮ
ಪ್ರೇಮ ಭಕ್ತಿಯ ಮಾಡಿದದು ಕಾರಣದಿಂದಲೆನುತ
ಆ ಮಹಾ ಮಹಿಮ ಸ್ವರೂಪ ಸ
ನಾಮವನು ಮಱೆಮಾಡಿ ಅಭಿನವ
ಕಾಮ ರೂಪಿನ ಪರಿಯನಲ್ಲಮ ಲಿಂಗ ಧರಿಸಿದನು ||೬೩||

ತುಱುಬು ಚಿಮ್ಮುಱಿ ಚೆಂದಿ ಕಾಸೆಯ
ಸೆರಗು ನಸು ಹೊದೆದೊಲ್ಲಿ ಮಿಂಚುವ
ಮಿಱುಪ ಸುಲಿ ಪಲ್ಲಸಿಯ ಸೆಳ್ಳುಗುರುಲಿವ ಹೊಂದೊಡರು
ಉಱುವ ಗಂಧದ ಲೇಪ ಬೆನ್ನೊಳು
ಮೆಱೆವ ಮದ್ದಳೆ ಸಹಿತ ಬಂದೀ
ತೆಱನನಲ್ಲಮ ನಟಿಸಿ ನಿಂದನು ವಿಕೃತವೇಷದಲಿ ||೬೫||

ನಿಂದು ನಾನಾಪರಿಯ ವಹಣಿಗ
ಳಿಂದ ತಾಳ ಸಮೇಳ ಪದ್ಧತಿ
ಯಿಂದಲುಗ್ಘಡಣೆಯ ಘಡಾವಣೆಯಿಂದಲಲ್ಲಮನು
ಅಂದು ಮಧುಕೇಶ್ವರನ ಬಾಗಿಲ
ಮುಂದೆ ಬಾರಿಸುತಿರ್ದನೈ ಹಲ
ವಂದದಲಿ ಮದ್ದಳೆಯ ಕೇಳುವರೆಲ್ಲ ಬೆಱಗಾಗೆ ||೬೬||

ಕಾರಮುಗಿಲಿನ ಗರ್ಜನೆಯ ಕಿವಿ
ಯಾರೆ ಕೇಳಿದ ಸೋಗೆಯಂತಿರೆ
ಹಾರವಿಸುತಲಿ ಅಲ್ಲಮನ ಮದ್ದಳೆಯ ಧ್ವನಿಗೇಳ್ದು
ನಾರಿ ಮಾಯಾದೇವಿ ನಲಿವುತಿ
ದಾರು ಹೊಱ ಕಡೆಯಲ್ಲಿ ತೂರ್ಯೋ
ದ್ಧಾರವನು ಮಾಡುವರೆನುತ ಕೇಳಿದಳು ಕೆಳದಿಯರ ||೬೭||

ಕೆಳದಿಯರು ತಾವಱಿದು ಬಂದಾ
ಗಳೆ ವಿಚಾರಿಸಿ ಹೇಳಿದಡೆ ಕೋ
ಮಳೆ ಮನೋಮುದದಿಂದ ಕರಸಿಯೆ ಕಂಡಳಲ್ಲಮನ
ಮೊಳೆತವಾಕ್ಷಣ ಕಾಮ  ಬಾಣದ
ಹಿಳುಕುಗಳು ಹಿರಿದಾಗಿ ಚಿತ್ತಜ
ನಳವಿಯಲಿ ಬೆಂಬಿದ್ದು ಮೌನದೊಳಿರ್ದಳಾ ಮಾಯೆ ||೬೮||

ದೇಶವೆಮ್ಮದು ಹೇಳುವಡೆ ಪರ
ದೇಶ ಬಿರುದಿನ ಬಿಂಕಕಾಱರ
ವಾಸಿಗರನಲ್ಲೆನಿಸುವಲ್ಲಮನೆಂಬ ಪೆಸರೆನಗೆ
ಲೇಸು ಮಾಡುವ ಠಾವುಗಳಲಭಿ
ಲಾಷೆಯಿಲ್ಲದೆ ಹೊದ್ದುವೆವು ಸುಖ
ವಾಸಿಗಳು ನಾವೆಂದಲ್ಲಮನೊಲಿದು ಸಖಿಯರಿಗೆ ||೭೦||

ಶರಣೆನುತಲಾ ಮಾಯೆ ಮಧುಕೇ
ಶ್ವರನ ಬೀಳ್ಕೊಂಡಾಗಳಾತನ
ಕರೆದು ಕೊಂಡೆಯ್ತಂದು ತಂದೆಯ ಸಮ್ಮುಖವ ಮಾಡಿ
ಅರಸನಱಿಕೆಯ ಮಾಡಿ ಮಿಗೆ ಬಳಿ
ಕಿರಿಸಿಕೊಂಡಳು ನಾಗ ವಾಸದ
ನೆರವಿಗೊಪ್ಪುವ ಬೋವಗಾಱಿಕೆನುತನದಲಲ್ಲಮನ ||೭೨||

ಸುಧೆಯ ಸೋನೆಯ ಸುರಿವುತಿಹ ಕಾ
ಲದಲಿ ತೃಪ್ತಿಯನೆಯ್ದಲರಿಯದೆ
ಕ್ಷುಧೆಗೆ ಕೃಷಿಗಳಮಾಡಿ ಕೋಟಲೆಗೊಂಬ ಮರುಳಂತೆ
ಮುದದಲಲ್ಲಮ ಕರುಣಿಸುವ ಕಾ
ಲದಲಿ ನಿತ್ಯವನಱಿಯಲಱಿಯದೆ
ಕುದಿದು ಕೋಟಲೆಗೊಳುತಿರ್ದಳು ಮಾಯೆ ಬೇಟದಲಿ ||೭೪||

ನಿನಗೆ ಸಾಕಿನ್ನೇಕೆ ಬೀಡಿನ
ಮನೆ ವೃಥಾ ಬೇರೊಂದು ಸಂಕ
ಲ್ಪನೆಯ ಬಿಡು ನಮ್ಮೊಡತಿಯಾದಡೆ ಮುಟ್ಟಿ ಮೋಹದಲಿ
ನಿನಗೆ ಕೃಪೆಯಾಗಿರ್ದಳೆಮ್ಮರ
ಮನೆಯೊಳಿರು ಸುಖಿಯಾಗಿ ನೀನೆಂ
ದೆನುತ ನಯದಲಿ ನುಡಿದಳಾ ಮದನಮಾನಿಯಲ್ಲಮಗೆ ||೭೯||

ನಾವು ಪರದೇಶಿಗಳು ಬಡವರು
ನೀವು ದೊರೆಗಳು ಮೇಲೆ ನಿಮ್ಮಯ
ದೇವಿ ರಾಜಕುಮಾರಿ ನಾವೇ ಪುರುಷವೇಷಿಗಳು
ನೀವು ಸತಿಯರು ನಿಮ್ಮೊಳಿಹುದೆಮ
ಗಾವ ಮರಿಯಾದೆಗಳು ದೂರದ
ಸೇವೆ ತಾನೆಮಗುಚಿತವೆಂದನು ನಗುತಲಲ್ಲಮನು ||೮೦||

ಸಾಕು ಜಾಣಿನ ಮಾತು ಮಱೆಯಿ
ನ್ನೇಕೆ ನಿನ್ನೊಳು ಮಾಯೆ ಕಾಮೋ
ದ್ರೇಕದಲಿ ನೆಱೆ ನಿನಗೆ ಸೋತಳು ಹಲವು ಮಾತೇನು
ಲೋಕದೊಳು ನರ ದನುಜ ದಿವಿಜರ
ನೇಕರನು ಬಗೆಗೊಂಡು ಲೆಕ್ಕಿಸ
ದಾಕೆ ತಾನೇ ಸೋತಳೈ ನಿನಗೆಂದಳಲ್ಲಮಗೆ ||೮೩||

ಆವ ಶಕುನವ ತಿದ್ದಿಕೊಂಡೆಲೆ
ಭಾವ ಬಂದೆಯೊ ಅಲ್ಲದಿರ್ದಡ
ದಾವ ಮೋಹನ ವಶ್ಯ ವಿದ್ಯವ ಕಲಿತೆಯೋ ದಿಟಕೆ
ದೇವಿಯನು ನೀ ಮರುಳು ಮಾಡಿದೆ
ಜಾವಳಿಗನಲ್ಲೆನುತ ಬಂದಳು
ಭಾವೆ ಬಳಿಕಲ್ಲಮನ ಬಳಿಯಿಂದೊಡತಿಯಿದ್ದೆಡೆಗೆ ||೮೫||

ಮಳೆಗೆ ನೆನೆವುದೆ ಗಾಳಿ ಬೀಸಿದ
ಡೊಲೆವುದೇ ಬಲು ಗಿಚ್ಚಿನುರಿಯಿಂ
ದಳಿವುದೇ ನಭವಾ ಪರಿಯ ಬಯಲಿಗನು ತಾನಾಗಿ
ಕಳವಳದ ವಿಷಯಗಳ ವೆಸನಗ
ಳೊಳಗೆ ಸಿಕ್ಕುವನಲ್ಲವಾತನ
ಹೊಲಬು ತಾ ಬೇರೊಂದು ಪರಿ ಏನೆಂಬೆನಲ್ಲಮನ ||೮೭||

ಮಗಳೆ ನೀ ನಿನಗಲ್ಲದಿರ್ದೋ
ಜೆಗಳ ನೆನೆವರೆ ರಾಜ ಕುಲದಲಿ
ನಗೆಗೆಡೆಯ ಮಾಡುವರೆ ನಿನ್ನಯ ತಂದೆ ಕೇಳುದಡೆ
ಸೊಗಸುವನೆ ಮಿಗೆ ಮುನಿವನಾ ಮಾ
ತುಗಳಿಗಾಸ್ಪದವಹರೆ ಅಕಟಾ
ನೆಗಳಲಹುದೆ ಪುರುಷ ಸಂಗವನೆಂದಳಾ ಜನನಿ ||೮೯||

ಅಣ್ಣ ಕೇಳುದಕದಲಿ ಮುಳುಗಿದ
ಸುಣ್ಣ ಕಲ್ಲಂತಾಗಿ ಕುದಿವುತ
ಬನ್ನ ಬಟ್ಟಳು ಮಾಯೆ ಕಾಣುತ ನಿನ್ನ ಬೇಟದಲಿ
ಕಣ್ಣು ಕಾಣದೆ ಕಾಮನೇಱಿನ
ಹುಣ್ಣಿನಲಿ ಹೊರಳಿದಡೆ ಆ ಸ್ಥಿತಿ
ಹಣ್ಣಿ ಹಬ್ಬಿತು ಪುರದೊಳೆಂದಳು ಸಕಳೆಯಲ್ಲಮಗೆ ||೯೮||

ಎಂದ ಮಾತಿನ ಮಱೆಯ ಬೆಡಗಿನ
ಸಂಧಿಯಲಿ ಶಿವ ಕಾಮ ತತ್ವ
ದ್ವಂದ್ವಮಿಪ್ಪುದನಱಿಯಲಱಿಯದೆ ಈಗಳೇನಾಯ್ತು
ಮುಂದೆ ಮಾಯೆಯ ನಿನ್ನ ರಿಣ ಸಂ
ಬಂಧವುಳ್ಳಣಡೆ ತಾನೆ ಕೂಡಿ
ತ್ತೆಂದು ಮೆಲ್ಲನೆ ಜಾಱಿ ನುಡಿದಳು ಸಕಳೆಯಲ್ಲಮಗೆ ||೧೦೧||

ಗತಿ ೪
ಅಲ್ಲಮನ ವೃತ್ತಾಂತ

ಧರಣಿ ತಳದೊಳು ಶಿಚ್ಚ ಮಧುಕೇ
ಶ್ವರನನಭಿವಂದಿಸುತ ಕಾಮಾ
ತುರದಲಲ್ಲಮಗೋತು ಮಾಯಾದೇವಿಯಿರುತಿರಲು
ಹಿರಿದು ದಿನಗಳು ಹೋದವೆನುತಲಿ
ಗಿರಿಜೆ ಮಾಯೆಯ ಹದನನೀಕ್ಷಿಸಿ
ಕರೆದು ತರಲಿಕೆ ಕಳುಹದಳು ಬೆಸನನಿತ್ತು ವಿಮಳೆಯನು ||೧೦ ೩||

ಹರನ ನಿಷ್ಕಲ ರೂಪನಲ್ಲಮ
ನಿರವಿನಿಂದಲಿ ತಾನು ತಿಳಿವಾ
ತುರಕೆ ತನ್ನ ಗುಣಸ್ವರೂಪದ ಮಾಯೆ ನಿನ್ನುವನು
ಧರೆಗೆ ಕಳುಹಲು ನೀನು ತಡೆದಿರು
ತಿರಲು ನಿನ್ನನು ತಿಳುಹಿ ತರಲಿಕೆ
ಗಿರಿಜೆ ಬಳಿಕಿಂತೆನ್ನ ಕಳುಹಿದಳೆಂದಳಾ ವಿಮಳೆ ||೧೦೬||

ಬಳಿಕ ಮಾಯಾಂಗನೆಯ ಮನಸಿಗೆ
ತಿಳಿವು ತಿಣ್ಣನೆ ತಿಟ್ಟವಿಟ್ಟಿತು
ಹೊಳಹು ಹೊಮ್ಮಿತು ತನ್ನ ಪೂರ್ವದ ಕಥನ ಕಾರಣದ
ಬೆಳವಿಗೆಗೆ ಬೆದೆಯಾಯ್ತು ನೆನಹಿನ
ನೆಳಲು ಮಿಂಚಿದುದೊಳಗೊಳಗೆ ನಿ
ರ್ಮಳರ ಸಂಗವು ಕಳೆಯದಿಹುದೇ ಮನದ ಮೈಲಿಗೆಯ ||೧೦೭||

ಹರಿ  ಹರ ಬ್ರಹ್ಮಾದಿ ದೇವಾ
ಸುರರು ಜನನಕೆ ಬರಲು ಜಾತಿ
ಸ್ಮರಣೆಯಿಲ್ಲೆನಲಾವು ಸತಿಯರು ನಮ್ಮ ಪಾಡೇನು
ಪಿರಿದು ಪೂರ್ವಸ್ಥಿತಿಯ ಭಾವಿಸ
ಲರಿದು ನೀನದಱಿಂದಲಲ್ಲಮ
ನಿರವನೆಲ್ಲವ ವಿವರಿಸೆಂದಳು ವಿಮಳೆಗಾಮಾಯೆ ||೧೦೮||

ದಾನವಿಲ್ಲದ ಧನವು ಈಶ
ಧ್ಯಾನವಿಲ್ಲದ ತಪವು ಜೀವ
ಸ್ಥಾನದನುಸಂಧಾನವಿಲ್ಲದ ಯೋಗದಭ್ಯಾಸ
ಜ್ಞಾನವಿಲ್ಲದ ಸಿದ್ಧಿ ವರ ಸಂ
ತಾನವಿಲ್ಲದ ಬಾಳ್ಕೆಯಲಿ ಫಲ
ವೇನು ದೊರಕುವುದೆನುತ ನಿರಹಂಕಾರ ಚಿಂತಿಸಿದ ||೧೧೧||

ಸತಿ ಸಹಿತ ಸಂಕಲ್ಪ ಸಾಧನ
ಗತಿಯ ಮೇಳಾಪದಲಿ ನೆಱೆ ನಿ
ಶ್ಚಿತವ ಮಾಡಿ ಮನಸ್ಸನೇಕೋಭಾವ ನಿಷ್ಠೆಯಲಿ  
ಪ್ರತಿಯಿಡುವ  ಪಂಚೇಂದ್ರಿಯಂಗಳ
ನತಿಗಳೆವ ಸುಜ್ಞಾನಿ ನಿರಹಂಕಾರರೊಪ್ಪದರು ||೧೧೨||

ಕಂಡರೇಕೋಭಾವದಲಿ ನಿ
ಷ್ಖಂಡ ಮಹಿಮನನಖಿಳ ಭವ ಭಯ
ಖಂಡನನನಾದ್ಯಂತ ರಹಿತನಪ್ರಮೇಯನನು
ಚಂಡ ಕರ ಕೋಟಿ ಪ್ರಕಾಶೋ
ದ್ದಂಡ ಮಯನ ಸುಹೃನ್ಮನೋಂಬುಜ
ಮಂಡಿತನನಾ ದಂಪತಿಗಳೊಲಿದಂತರಂಗದಲಿ||೧೧ ೪||

ಕರಣಗಳು ಕಾ ಲಿಡಲು ನೇತ್ರದ
ಬಿರಿಮುಗುಳು ಬಿಚ್ಚಿದವು ನಾಡಿಯ
ಹೊರಳಿ ಹುರಿಗೊಳಿಸಿದವು ಚೇಷ್ಟಿಸಿ ಬಾಹಿರಂಗದಲಿ
ಅಲಳಿದುದು ಮನದಱಿಕೆ ಭೋಂಕನೆ
ಹೊರೆಯಲಿಹ ಬಾಲಕನ ಕಂಡರು
ಪರಮ ನಿರಹಂಕಾರ ಸುಜ್ಞಾನಿಗಳು ಹರುಷದಲಿ ||೧೧೫||

ಹೊಗಳಿ ಹೋರುವ ವೇದ ಶಾಸ್ತದ
ಬಗೆಗೆ ಬಾರದ ಹರಿ ವಿರಿಂಚ್ಯಾ
ದಿಗಳು ಸಾಧಿಸಿ ಕಾಣಲಱಿಯದ ಪರಮ ಮುನಿನಿಕರ
ಮೊಗಸಿ ಮಾಡುವ ತಪಕೆ ನಿಲುಕದ
ಸಗುಣ ನಿರ್ಗುಣ ಮೂರ್ತಿಯಲ್ಲದ
ವಿಗಡ ಶಿಶುವನು ಕಂಡರಾ ದಂಪತಿಗಳರ್ತಿಯಲಿ  ||೧೧೭||

ಹಾರವಿಸಿ ನಲಿದೆತ್ತಿ ಕಿಂಚಿತು
ಭಾರವಿಲ್ಲದೆ ಕೈಗೆ ಸೋಂಕದೆ
ಸಾರ ತೇಜಂಪುಂಜ ತನು ಶಿಶು ತನ್ನ ಕೈಯೊಳಗೆ
ಪೂರವಿಸಿಕೊಂಡಿರಲು ಬಳಿಕಾ
ನಾರಿ ವಸ್ಮಯವಾಗಿ ನಿರಹಂ
ಕಾರನನು ಕೇಳಿದಳಿದೇನೆನುತಾತ್ಮಜನ ಪರಿಯ ||೧೧೮||

ಬಲ್ಲಡೀ ಶಿಶುವೇತಱೊಳಗಿಹ
ನಲ್ಲ ಹೊಱಗಿಹನಲ್ಲ ಭಾವಿಸ
ಲಿಲ್ಲದಿರುತಿಹನಲ್ಲವೆನುತಾ ತಂದೆತಾಯಿಗಳು
ಎಲ್ಲ ಜಾಡ್ಯದ ಜಂಜಡಂಗಳ
ನಲ್ಲವೆನಿಸುವ ಬಾಲಕಗೆ ಬಳಿ
ಕಲ್ಲಮ ಪ್ರಭುವೆಂದು ಹೆಸರನು ಕೊಟ್ಟರರ್ತಿಯಲಿ ||೧ ೨೦||

ಗಳಿಗೆ ಸಂಖ್ಯೆಗೆ ನುಡಿಯ ಕಲಿತನು
ಗಳಿಗೆ ಸಂಖ್ಯೆಗೆ ನಡೆಯ ಕಲಿತನು
ಗಳಿಗೆ ಸಂಖ್ಯೆಗೆ ಬೆಳೆದನವರ ಮನೋರಥದ ಕೂಡೆ
ಗಳಿಗೆ ಸಂಖ್ಯೆಗೆ ಬಾಲ ಲೀಲೆಯ
ನಳವಡಿಸಿ ಕೊಂಡಾಡುತಿಹ ಮ
ಕ್ಕಳಲಿ ಮೆಱೆವುತಲಿರ್ದನಲ್ಲಮ ತನ್ನ ಲೀಲೆಯಲಿ ||೧೨೧||

ಹರುಷದಿಂದಲಿ ಜನನಿ ಜನಕರು
ಕರೆವುತಿರಲಾ ಬಾಲ ಭಾವದ
ಪರಿಯನಾಗಳೆ ಬಿಸುಟು ಸಾಕಿನ್ನೆನುತ ನಡೆತಂದು
ವರ ಗುರು ಶ್ರೀಮೂರ್ತಿಯಾಗಿಯೆ
ಪರಮ ತತ್ವ ನಿರೂಪಣೆಯ ವಿ
ಸ್ತರಿಸಲುದ್ಯೋಗಿಸಿದನಲ್ಲಮ ತನ್ನ ಲೀಲೆಯಲಿ||೧೨೫||

ಹರನ ಭಕ್ತಿಯ ಮಾಡಿದಡೆ ಗೋ
ಚರಿಸಿ ತೋಱುವನಲ್ಲಮ ಪ್ರಭು
ಕರುಣದಿಂದಲಿ ನೀನು ಬಳಿಕಾತನಲಿ ಬಗೆ ಬಂದ
ವರ ಮನೋರಥ ಸಿದ್ಧಿಯನು ಪತಿ
ಕರಿಸಿ ಪಡೆವುದು ಕೇಳೆನುತಲಾ
ದರಿಸಿ ಮಾಯೆಗೆ ಹೇಳುತಿರ್ದಳು ವಿಮಳೆ ವಿನಯದಲಿ ||೧೩೧||

ತರುಣಿ ನಿನಗುಪದೇಶವಿಲ್ಲವೊ
ನಿರುತ ಮಂತ್ರ ವಿಹೀನವೋ ಮೇಣ್
ಪರಮ ತಂತ್ರ ಕ್ರೀ ಕಳಾಪಗಳೂನವೋ ಬಱಿದೆ
ಹರನ ಭಕ್ತಿ ನಿರರ್ಥವೆಂದು
ಚ್ಚರಿಸಬಹುದೇ ಮಾಯೆ ನಿನ್ನಯ
ಮರುಳುತನಗಳ ಮಱೆದು ಕಳೆ ಸಾಕೆಂದಳಾ ವಿಮಳೆ ||೧೩೩||

ಎಂದಡಾನೇನಱಿಯೆನಕಟಾ
ಮಂದ ಮತಿಯೇ ಅಲ್ಲಮ ಪ್ರಭು
ವೆಂದೆನಿಸಿಕೊಂಬವಪನು ತಾ ಪ್ರತ್ಯಕ್ಷ ಪರ ಬೊಮ್ಮ
ಎಂದು ಹೇಳುವರೆಲ್ಲರಿವನೇ
ಸಂದ ಮದ್ದಳೆಯಲ್ಲಮನು ಬಿಡು
ಹೊಂದದೌ ನೀ ಹೇಳುವುದು ಹುಸಿಯೆಂದಳಾ ಮಾಯೆ ||೧೩೬||

ಅಕಟ ಮರುಳೇ ಅಲ್ಲಮ ಪ್ರಭು
ಸಕಲರಿಗೆ ಸಾಕಾರವಹ ಸಾ
ಧಕರ ನಿರ್ಮಳಮತಿಗೆ ನಿರ್ಗುಣ ರೂಪನಾಗಿಹನು
ಪ್ರಕಟಿಸುವೆ ನೀ ನಿನ್ನ ವಿಷಯದ
ವಿಕಟತನವನು ಬಿಟ್ಟು ಸಲೆ ಸಾ
ತ್ವಿಕದ ಬುದ್ಧಿಯಲೀಕ್ಷಿಸೆಂದಳು ಮಾಯೆಗಾ ವಿಮಳೆ ||೧೩೭||

ಎನುತ ವಿಮಳೆಯ ಕೂಡಿಕೊಳುತಾ
ವನಿತೆ ನಿತ್ಯಸ್ಥಿತಿಯ ದೇವಾ
ರ್ಚನೆಗೆ ದೇವಾಲಯಕೆ ಬಂದಳು ಸಕಲ ವಿಭವದಲಿ
ಮನವೊಲಿದು ಮಧುಕೇಶ್ವರನ ವಂ
ದನೆಯನೆಲ್ಲವ ಮಾಡಿ ಮಾಯಾಂ
ಗನೆ ವಿರಾಜಿಸಿ ಬಂದು ನಿಂದಳು ನೃತ್ಯ ರಂಗದಲಿ ||೧೩೯

ಗತಿ  ೫

ಮಾಯೆಯ ತಿರಸ್ಕಾರ

ಹೂಡಿ ಹಣ್ಣಿದ ಜಗದ ಜಂತ್ರವ
ನಾಡಿಸುವ ಮಾಯಾಂಗನೆಯ ತಾ
ನಾಡಿಸುವೆನೆಂಬುದನು ಪ್ ರತ್ಯಕ್ಷದಲಿ ತೋರ್ಪಂತೆ
ಆಡಿಸುವ ಮದ್ದಳೆಯ ಜೋಕೆಯ
ಜೋಡಿಸುತಲಲ್ಲಮನು ಪಾತ್ರವ
ನಾಡುವವಳಾ ಮಾಯೆ ಲೋಕವ ಮರುಳು ಮಾಡುತಲಿ ||೧೪೦||

ಲಲಿತ ನಿರ್ಮಳ ಚಂದ್ರ ಕಾಂತದ
ಶಿಲೆಯ ಹತ್ತಿರೆ ಲತೆಯ ದಾವಾ
ನಳನು ಕೊಳಲಾ ಜ್ವಾಲೆಯಾ ಶಿಲೆಯೊಳಗೆ ತೋರ್ಪಂತೆ
ತಿಳಿಯದಱಿಯದ ಜನಕೆ ಮಾಯೆಯ
ತಳಿತ ಕಾಮ ಜ್ವಾಲೆಯಲ್ಲಮ  
ನೊಳಗೆ ಪ್ರತಿಬಿಂಬಿಸಿದುದಾತನೆ ಕಾಮಿಯೆಂಬಂತೆ ||೧೪೧||

ಈತನೇ ದಿಟದಲ್ಲಮನೊ ಮೇ
ಣೀತ ಮದ್ದಳೆಯಲ್ಲಮನೊ ನಾ
ನೀ ತರುಣಿಗೀತನನು ತೋಱಿಸಿ ತಿಳಿಯ ಬೇಕೆನುತ
ಪ್ರೀತಿಯಿಂದಲಿ ತನ್ ನ ಮನದೊಂ
ದಾತುರತೆಯನು ಸೈರಿಸುತ ಬಳಿ
ಕೋತು ಮಿಗೆ ತನ್ನೊಳಗೆ ತಾನಿಂತೆಂದಳಾ ಮಾಯೆ ||೧೪೨||

ಬಳಿಕಲೊಯ್ಯನೆ ಬಱಿಯ ಬೇಟದ
ಬಳಕೆ ಬಳಲಿತು ತನ್ನ ಪೈಜೆಯ
ನೆಳಲು ನೆಲಸಿತು ಹೇವ ಹೆಚ್ಚಿತು ಕಾಂಕ್ಷೆ ಕವಲಾಯ್ತು
ತಿಳಿವು ತೀವಿತು ಲಾಸ್ಯ ಲೀಲೆಯ
ಚಳತೆ ಖಂಡಿಸಿ ಹಿಂಗಿ ಹೋಯಿತು
ಹೊಳೆದುದಲ್ಲಮನಳಬಳವನಱಿವಾಸೆ ಮಾಯೆಯಲಿ ||೧೪೬||

ನೋಟವೆಸೆದುದು ಮುನ್ನ ಮುಟ್ಟಿದ
ಬೇಟವಲ್ಲದೆ ಬೇಱೆ ಬುದ್ಧಿಯ
ಕೂಟದಿಂದ ಲತಾಂಗ ಲಂಬಿಸಿತಾತನ ಸ್ತಿತಿಯ
ನಾಟಿ ನಲಿದುದು ಚಿತ್ತವೀ ನಟ
ನಾಟಕನ ಸಿಕ್ಕಿಸುವ ಬಗೆಯಲಿ
ಮಾಟ ಮಕರಿಸಿ ಕಾಣಲಾಯಿತು ಮತ್ತೆ ಮಾಯೆಯಲಿ ||೧೪೮||

ಈಕೆಯಂದವನಱಿದು ನಾವಿ
ನ್ನೇಕೆ ಸದಮಲ ಸ್ವಸ್ವರೂಪವ
ಕಾಕರಿಗೆ ಕಾಣಿಸುವುದನುಚಿತವೆನುತ ತನ್ನೊಳಗೆ
ಸಾಕೆನುತ ನಟ್ಟುವಿಗತನವನು
ನೂಕುತಲಿ ಮದ್ದಳೆಯ ತಾನೊಡೆ
ಹಾಯ್ಕಿ ನಗುತಲಿ ಹೋದನಲ್ಲಮನಖಿಳ ಜಗವಱಿಯೆ.||೧೪೯||

ಸೂಡುತಲಿ ಬಿಡು ಜಡೆಗಳನು ಕೈ
ಗೂಡುತಲಿ ಕಡವಸವ ಭೂತಿಯ
ಗೂಡ ಸಂವರಿಸುತ್ತ ಲಾಕುಳ ಯೋಗವಟ್ಟಿಗೆಯ
ಜೋಡಿಸುತ ಜಪ ತಪ ಸಮಾಧಿಯ
ಮಾಡುವವರಾ ಮಾಯೆ ಬರಲೆ
ದ್ದೋಡಿ ದರು ಹುಲಿ ಗಂಡ ಹುಲ್ಲೆಗಳಂತೆ ದೆಸೆದೆಸೆಗೆ || ೧೫೪||

ನಿಲಿಸಿ ಭಯ ಬೇಡೆಂದು ತಾಪಸ
ಕುಳವನನಭಯವ ಕೊಟ್ಟು ಕರುಣದ
ಬಳಕೆಲಿ ತಾನವರಿಗೊಬ್ಬ ತಪಸ್ವಿಯಂದದಲಿ
ನಲಿದು ಹರಿತಹ ಮಾಯೆಯನು ಮೂ
ದಲಿಸಿ ಮುಱಿದೋಡಿಸುವೆನೆನುತಲಿ
ಸುಳುಹುದೋಱಿದನಾಕೆಗಲ್ಲಮ ಮುನ್ನಿನಂದದಲಿ ||೧೫೬||

ಲೇಸು ಮಾಡಿದೆಯಯ್ಯ ಮಾಯೆಯ
ನೀಸು ದಿನ ಮನವೊಲಿಸಿ ಕಡೆಯಲಿ
ಘಾಸಿಮಾಡುವುದುಚಿತವೇ ನಿನಗೆನುತ ಕೆಳದಿಯರು
ಆ ಸದಾನಂದೈಕ್ಯಮೂರ್ತಿ ವಿ
ಳಾಸಿಯಲ್ಲಮ ಲಿಂಗನಿದಿರಲಿ
ಸೂಸಿದರು ತಮ್ಮೊಡತಿಯಾಸಱು ಬೇಸಱೆಲ್ಲವನು ||೧೫೮ ||

ಆರು ಮೊದಲಲಿ ಬಯಸ ಹೇಳಿದ
ರಾರು ಕಾಣುತ ಕರೆಸ ಹೇಳಿದ
ರಾರು ತನ್ನನು ಬಳಿಕುದಾಸಿನ ಮಾಡ ಹೇಳಿದರು
ನಾರಿಯರಿಗಿದು ಸಹಜ ಸಂಚಲ
ಕಾರಣಿಕತನ ತನ್ನ ತಾನೇ
ದೂರಿಸಿದಡಾನೇನ ಮಾಡುವೆನೆಂದನಲ್ಲಮನು ||೧೫೯||

ಎಂದ ಮಾತನು ಕೇಳಿ ಕಡು ಖತಿ
ಯಿಂದಲಹುದೈ ಧೂರ್ತ ನೀ ಗತಿ
ಯೆಂದು ನಂಬಿದಡೊಳ್ಳಿತಾಯಿತು  ಬಳಿಕ ಮಾತೇನು  
ಸಂದ ಸಟೆ ಕುತ್ಸಿತ ಕುಮಂತ್ರದ
ಬಂದಿಕಾರನು ಚಾಟು ಚಪಳಿಗ
ನೆಂದು ನಾ  ಮುನ್ನಱಿಯೆನೆಂದಳು ಮಾಯೆಯಲ್ಲಮನ ||೧೬೦||

ಹರಿಯನೆದೆನು ಮೆಟ್ಟಿದೆನು ಶಂ
ಕರನನರ್ಧಾಂಗದೊಳು ನೆಟ್ಟನೆ
ಹರಿಸುಟಿಗೆಯನಾಡಿದೆನು ಬ್ರಹ್ಮನ ಬಾಯ ಮುದ್ರಿಸಿದೆ
ಸುರ ನರೋರಗರೆಂಬ ಮಱವೆಯ
ಮರುಳು ತಂಡವನೆನ್ನ ತೊತ್ತಿರ
ಶರಣು ವೊಗಿಸಿದೆನೇನ ಕೇಳುವೆ ಎಂದಳಾ ಮಾಯೆ ||೧೬೩||

ಹರಿ ಹರ ಬ್ರಹ್ಮಾದಿಗಳನೆ
ಲ್ಲರನು ನಿನ್ನಾಧೀನ ವೃತ್ತಿಯ
ಲಿರಿಸಿ ಮಿಗೆ ಱೋಡಾಡಿ ಕಾಡಿದೆನೆಂದು ನೀ ನುಡಿದೆ
ಮರುಳೆ ನಿನ್ನನದಾರು ನಾನಾ
ಪರಿಯಲಾಡಿಸುವವರು ನೀನದ
ಪರಿಕಿಸದೆ ಗರ್ವದಲಿ ನುಡಿವರೆ ಮಾಯೆ ಕೇಳೆಂದ||೧೬೫||

ಆರನಾರಾಡಿಸುವರೆಂಬುದ
ನಾರು ಬಲ್ಲರು ಸಾಕು ಬಱಿಯ ವಿ
ಚಾರವಂತಿರಲೆನ್ನನೊಡನೆ ಬಱಿ ಮಾತನಾಡಿದಡೆ
ಸಾರಲಱಿವವೆ  ನಮಗೆ ನಮ್ಮ ಮ
ನೋರಥಂಗಳು ನಿನ್ನ ಧೂರ್ತ ವಿ
ಕಾರವೆಲ್ಲವ ಬಿಟ್ಟು ಕೃಪೆ ಮಾಡೆಂದಳಾ ಮಾಯೆ ||೧೬೬||

ಭಾಷೆ ಸಲ್ಲದೆ ಹೋಯಿತೆನ್ನಯ
ವಾಸಿ ವರ್ಧಿಸಿ ಬತ್ತುತಿದೆ ಕೈ
ಲಾಸದವರಿದ ಕೇಳಿ ನಗುವಂತಾಯಿತೇ ನನಗೆ
ಈಸು ಧಾವತಿಯಿಂದ ನಾ ಕಡು
ಘಾಸಿಯಾದೆನು ಬೆಂದ ಹುಣ್ಣನು
ಕೀಸುವರೆ ಕಂಬಿಯಲಿ ಕೇಳಕಟೆಂದಳಾ ಮಾಯೆ ||೧೬೭||

ತರಳೆ ತನ್ನಯ  ಹೊನ್ನು ಸಲ್ಲದೆ
ತಿರುಗಿ ಬಂದಡೆ ಅಕ್ಕಸಾಲೆಯ
ದುರುಳತನದಲಿ ಬಯ್ಯಲಹುದೇ ನೀನು ಮತಿಗೆಟ್ಟು  
ಹರನನರ್ಚಿಸುವಂಗ ಭೇದಾಂ
ತರವನಱಿಯದೆ ಸಟೆಯ ಭಕ್ತಿಯ
ಭರದಲೇತಕೆ ಫಲವ ಬಯಸುವೆ ಮಾಯೆ ಕೇಳೆಂದ ||೧೬೮||

ಶರಣ ಜನ ರಕ್ಷಾಮಣಿಯೆ ಕಿಂ
ಕರ ಚಕೋರ  ಸುಧಾಕರನೆ ಭಾ
ಸುರ ದಯಾಂಭೋನಿಧಿಯೆ ನೀನೀ ಸ್ತ್ರೀಯ ತನು ಮನವ
ಒರೆದು ನೋಡಿದಡಲ್ಲಿ ಭಾವಿಸೆ
ಹುರುಳು ಬಳಿಕೇನುಂಟು ನಿನ್ನಯ
ಕರುಣವಾಕೆಯ ಹರಣವೆಂದಳು ವಿಮಳೆ ವಿನಯದಲಿ ||೧೭೦||

ಬಾಲೆ ನೀರಿಗೆ ಹೆಪ್ಪನೆಱೆದಡೆ
ಹಾಲಿನಂತಿರೆ ಹೆತ್ತು ಭುಂಜಿಸಿ
ಬಾಳಿದವರಾರುಂಟು ಭಾವಿಸಲಾ ಪ್ರಕಾರದಲಿ
ಕಾಳುಮತಿಗಳಿಗೆನಿತು ಬುದ್ಧಿಯ
ಹೇಳಿದಡೆ ಫಲವೇನು ಸಾಕೀ
ಖೂಳೆಗಾನಿನ್ನೇನ ಮಾಡುವೆ ವಿಮಳೆ ಕೇಳೆಂದ ||೧೭೧||

ಕೀಳು ಕಬ್ಬುನ ವೆಣ್ಣ ಕೋಪಿಸಿ
ಕಾಲಲೊದೆದಡೆ ಮೇಣು ಕರುಣಿಸಿ
ತೋಳಲಪ್ಪಿದಡೇನು ಪರುಷದ ಗಂಡನದರಂತೆ ಈ ಭಾಗದ
ಬಾಲೆಗೆಂತಾದಡೆಯು ನಿನ್ನ ಸ
ಮೇಳ ಘಟಿಸಿದ ಬಳಿಕ ಮಾಯೆಯ
ಪಾಲಿಸಲು ಬೇಕೆನುತ ನುಡಿದಳು ವಿಮಳೆಯಲ್ಲಮಗೆ ||೧೭೨||

ವನಿತೆ ನಿನ್ನಯ ಮಾತಹುದು ಕ
ಬ್ಬುನವದಾದಡೆ ಪರುಷ ಮುಟ್ಟಲು
ಕನಕವಹುದಲ್ಲದೆ ವೃಥಾ ಹಳೆ ಹಂಚು ಹೊನ್ನಹುದೆ
ಮನಸು ಸಂಚಲವಾದ ಮಾಯಾಂ ಇಲ್ಲ ಅಂತ ಖ
ಗನೆಯದೇನನು ಮುಟ್ಟಿ ಮಾಡಿದ
ಡಿನಿತು ನಿಶ್ಚಲವಾಗಲಱಿಯದು ವಿಮಳೆ ಕೇಳೆಂದ ||೧೭೩||

ದೇವ ತಪ್ಪಿದಡೇನು ನೀನು ಕೃ
ಪಾವಲೋಕನದಲಿ ನಿರೀಕ್ಷಿಸಿ
ದೇವಿಯರ ಹೂಣಿಕೆಯ ಸಲಿಸಿದಡೇನು ಕುಂದಹುದೆ
ದೇವತನಕೂಣೆಯವೆ ಬಱಿಯ ವೃ
ಥಾ ವಿಳಾಸದ ಮಾತ ಬೀಱದೆ
ಕಾವುದೈ ಕರುಣದಲಿ ಮಾಯೆಯನೆಂದಳಾ ವಿಮಳೆ ||೧೭೪||

ವಿಮಳೆ ವಿಮಳೆಯೆನಿಪ್ಪ  ಹೆಸರನು
ಕಮಲ  ಸಂಭವ ನಿನಗೆ ಸಲಿಸಿದ
ನಮಲ ಮತಿ ನೀನಹುದು ಚಾಗುರೆ ಎನುತ ಪರಿಣಮಿಸಿ
ಕ್ರಮದಲಿನ್ನಾದಡೆಯು ಮಿಗೆ ವಿ
ಶ್ರಮಿಸಲು ಬೇಕೆನುತ ಬಳಿಕ
ಲ್ಲಮನು ಮಿಗೆ ವಿನಯದಲಿ ಮಾಯಾದೇವಿಗಿಂತೆಂದ ||೧೭೭||

ಕಾಮವೆತ್ತಲು ಪರಮ ತತ್ವದ
ಸೀಮೆಯೆತ್ತಲು ತಿಮಿರವೆತ್ತಲು
ತಾಮರಸ ಸಖನೆತ್ತ ಮೇಣಱಿವೆತ್ತ ಮಱವೆತ್ತ
ಭ್ರಾಮಕದ ನುಡಿ ಸಾಕು ನೀನೆ
ತ್ತಾ ಮಹಾ ಘನತೆವೆತ್ತ ಮರುಳೇ
ಕ್ಷೇಮದಲಿ ನೀ ಬಂದ ಬಟ್ಟೆಯಲಬಳೆ ಹೋಗೆಂದ ||೧೭೮||

ಮಗಳು ಮದ್ದಳೆಯವನ ಬೆನ್ನಲಿ
ಜಗುಳಿ ಹೋದುದ ಕೇಳಿ ಹರಿ ತಂ
ದಗಣಿತ ವ್ಯಾಮೋಹದಲಿ ಮಾಯಾಂಗನೆಯ ಕಂಡು
ನಗೆಗೆಡೆಯ ಮಾಡಿದೆಯಲಾ ದೇ
ಸಿಗನ ಸಂಗವ ಮಾಡಿ ಕೆಡಿಸಿದೆ
ಮಗಳೆ ಎನುತಲಿ ಮಱುಗಿದನು ಮಮಕಾರಭೂಪಾಲ|| ೧೮೧||

ಉಮೆಯ ನೇಮವ ಕೊಂಡು ತಾನ
ಲ್ಲಮನ ಸಾಧಿಸಲೆಂದು ಬಂದಳು
ನಿಮಗೆ ಹೇಳುವೆ ನಾನು ಚಿಂತಿಸಬೇಡಿ ನೀವಿದಕೆ
ದ್ಯುಮಣಿಯಲ್ಲಮ ಸಿಕ್ಕದಾದನು
ತಮದ ಮಾಯೆಗೆ ಅದಱ ಚಿಂತಾ
ಭ್ರಮೆಯಲಡವಿಗೆ ಬಂದಳೆಂದಳು ವಿಮಳೆಯರಸಂಗೆ ||೧೮೩||

ಕಾರಣವ ಕೈಕೊಂಡು ನಿಮ್ಮ ಕು
ಮಾರಿಯಾದೆನು ಬಂದ ನಮ್ಮಯ
ಕಾರಿಯವು ಕೈಗೂಡದಾಯಿತೆನುತ್ತ ಪೆತ್ತರಿಗೆ
ಹಾರಬೇಡಿನ್ನೆಮ್ಮನೆನುತಲಿ
ಭೋರನೆದ್ದಾ ಮಾಯೆ ವಿಮಳಾ
ನಾರಿ ಸಹಿತವೆ ಹೋಗುತಿರ್ದಳು ರಜತಪರ್ವತಕೆ || ೧೮೪||

ಗತಿ  ೧೦
ಸಿದ್ಧರಾಮನಿಗೆ  ಉಪದೇಶ

ಹಲವು ಪರಿಯಲಿ ಚಿತ್ರ ಪತ್ರದ
ಚೆಲುವನಾಗಿರೆ ಪಶುಪತಿಯ ದೇ
ಗುಲವ ಮಾಡಿಸುತಿಪ್ಪ ಗುಡ್ಡಗಳೆಕ್ಕೆವಿಂಡುಗಳು
ನೆಲನೆ ಬೆಸಲಾದಂತೆ ಮಿಗೆ ಮ
ಣ್ಗೆಲಸದೊಳೊಡ್ಡರು ಬಂಡಿಕಾರಱು
ಕಲುಕುಟಿಗರಿರ್ದೆಡೆಯ ಸೊನ್ನಲಪುರಕೆ ಪ್ರಭು ಬಂದ ||೨೭೨||

ನೂಲ ಸಂಕಲೆ ಗಡಿದು ಕನಕದ
ಕೋಳವನು ಕಾಲಿಂಗೆ ಕೀಲಿಪ
ಕಾಳು ಮತಿಯವನಂತೆ ಸತಿ ಸುತ ಕೂಟ ಭಯವೆಂದು
ಬಾಳಿಕೆಯನತಿಗಳೆದು ಮರಳಿಯು
ಬೋಳು ಮಂಡೆಯ ಕೀರ್ತಿಗೋಸುಗ
ಕೋಳು ಹೋದನೆ ರಾಮನೆನುತಲ್ಲಮನು ಬೆಱಗಾದ ||೨೭೩||

ಚಿಕ್ಕ ಸಂಸಾರವನು ಸಡಿಲಿಸಿ
ಹೊಕ್ಕನಲ್ಲಾ ಹಿರಿಯ ಸಂಸಾ
ರಕ್ಕಕಟ ವಿಖ್ಯಾತಿ ಪೂಜಾ ಲಾಭದಿಚ್ಛೆಯಲಿ
ಸಿಕ್ಕಿಬಿದ್ದನು ಸಿದ್ಧರಾಮನು
ಮಿಕ್ಕ ಭವ ಭಾರಿಗಳನಾದಡೆ
ಮುಕ್ಕದೇ ವಿಧಿಯೆನುತಲ್ಲಮನು ನೋಡಿ ಬೆರಗಾದ ||೨೭೪||

ಒಡ್ಡ ರಾಮನಿದೇನು ಗೊಡವೆಯ
ನೊಡ್ಡಿಕೊಂಡು ವೃಥಾ ಮನಸ್ಸನು
ಗೊಡ್ಡುಮಾಡಿಯೆ ಕೆಟ್ಟನೆನುತಲ್ಲಮನು ಕೇಳಿದಡೆ
ಗುಡ್ಡರೆಲ್ಲರು ಗುರುವನಾವನು
ಖಡ್ಡತನದಲಿ ಜಱೆವನೆನುತವ
ರಡ್ಡ ಹಾಯ್ದರು ತೊಡಗಿದರು ತೋಟಿಯನು ತಮತಮಗೆ ||೨೭೫||

ಅಕಟ ನಿಮ್ಮಯ ಗುರುವಿನಾಗಮ
ಯುಕುತಿ ಪಾಷಾಣಕ್ಕೆ ಬಂದುದೆ
ವಿಕಳ ಸಿದ್ಧನ ನಂಬಿ ಪಡೆದಿರಿ ಗುಡ್ಡ ಪದವಿಯನು
ಸಕಲ ಕಲ್ಲನು ಕಡಿದು ಕಲ್ಲಿಗೆ
ಶಿಖರ ದೇಗುಲವೆಂದು ಮಾಡಿಸಿ
ಮಕರಿಸುವರಿವರೊಡ್ಡರಲ್ಲದೆ ಸಿದ್ಧರಲ್ಲೆಂದ ||೨೭೬||

ನೋಡು ನೋಡಾ ಮತ್ತೆ ಮಾಣದೆ
ನಾಡ ಮಾತನು ಕ ಲಿತು ನಮ್ಮೊಡ
ನಾಡುತಿಹನೆ ದೊಠಾರತನದಲಿ ಮರುಳುಗೊಂಡಂತೆ
ಬೇಡ ಬೇಡಿನ್ನೆಮ್ಮ ಗುರುವನು
ಖೋಡಿಗಳೆದಡೆ ಕೆಡುವೆ ನೀನೆನು
ತಾಡುತಿರ್ದರು ಬಱಿಯ ಬಿಂಕದ ಗುಡ್ಡರಲ್ಲಮಗೆ ||೨೭೭||

ಗುಡ್ಡಗಳು ನೀವಕಟ ನಮ್ಮಯ
ಖಡ್ಡತನಕಾನುವಿರೆ ನಿಮ್ಮಯ
ದೊಡ್ಡನನು ಕರೆ ತನ್ನಿ ನೋಡುವಾತನಳಬಳವ
ಒಡ್ಡ ರಾಮನ ರೀತಿಯನುಭವ
ದೊಡ್ಡವಣಣೆಯನು ಕಾಬೆವೆನುತಲಿ ನುಡಿದನಲ್ಲಮನು ||೨೭೮||

ಕೆಡಹಿಕೊಳ್ಳಿನ್ನೀತನಾಳ್ದನ
ಜಡಿದು ನುಡಿದುಕ್ಕಲಿಸಿ ಹೋಹನೆ
ಹಿಡಿದುಕೋ ಕೋಯೆನುತ ಗುಡ್ಡಗಳೆಕ್ಕೆವಿಂಡುಗಳು
ಬಿಡದೆ ತೆಕ್ಕೆಯೊಳಲ್ಲಮನ ಬಯ
ಲೊಡಲ ಬಂಧಿಸಲೆಂದು ಬಿಗಿಯಲು
ಹಿಡಿಹಿಗಿಲ್ಲದೊಡವರು ಬೆಱಗಾಗಿರ್ದರದ ಕಂಡು||೨ ೭೯||

ಆಳು ನೆರೆದುದು ಲಕ್ಕ ಸಂಖ್ಯೆಗೆ
ಮೇಳವಿಸಿ ಕವಿದಿಡುತಲ್ಲಮ
ಹೂಳಿಹೋದನು ಕವಣೆಗಲ್ಲಲಿ ಕೈದುಗಳೆನೆನಲು
ಹೇಳಲೇನದ ಕಲ್ಲ ರಾಸಿಯ
ಮೇಲೆ ನಿಂದನು ಮತ್ತೆ ತನ್ನಯ
ಲೀಲೆಯಲಿ ನಿರ್ಲೇಪನಿರ್ದನು ನಗುತ ಪ್ರಭುರಾಯ ||೨ ೮೦||

ಛಾಯೆಯೊಳು ಕಾಳಗವ ಮಾಡುವ
ಮಾಯೆ ವಶರುಗಳಂತೆ ಕಡೆತನ
ಕಾಯಸವೆ ಕೈತಟ್ಟಿ ಹೋಯಿತು ಕದನ ಮುಖದೊಳಗೆ
ಕಾಯ ವಿರಹಿತನಲ್ಲಮ ಪ್ರಭು
ರಾಯನಾರೆಂದಱಿಯದೆ
ಸಾಯಸವ ಮಾಡಿದರು ಗುಡ್ಡಗಳೆಕ್ಕೆ ವಿಂಡುಗಳು ||೨೮೧||

ಪರಿಕಿಸಲು ಹರಿಯಾದಡಾಗಳೆ
ತಿರುಹಿ ಚಕ್ರದೊಳಿಡುವ ಮೇಣ್ ಪುರ
ಹರನು  ಮುಳಿದಡೆ ಭಾಳ ನೇತ್ರದ ಕಿಡಿಯ ಕೆದಱುವನು  
ಅರಿಗಳನು ನೋಯಿಸನು ತಾನೂ
ಕೆರಳನೆನುತಲ್ಲಮನ ಮಹಿಮೆಗೆ
ಶರಣು ಶರಣೆನುತಿರ್ದರೆಲ್ಲರು ಕೂಡೆ ನೋಟಕರು ||೨೮೨||

ನಮ್ಮ ಸಿದ್ದನನೇಳಿಸಿದವಂ
ಗೊಮ್ಮೆ ಶಿಕ್ಷೆಯ ಮಾಡದನ್ನಕ
ನಮ್ಮ ಕೋಪಾಟೋಪ ನಿಲ್ಲದೆನುತ್ತ ಹರಿ ತಂದು
ಸುಮ್ಮನೆಯ್ತಂದೊಬ್ಬ ಜಂಗಮ
ಹೆಮ್ಮೆಗೆಡಿಸಿಯೆ ಹಳಿದು ನುಡಿದನು
ನಿಮ್ಮನೆಂದಱುಹಿದರು ಹದನನು ಸಿದ್ದರಾಮಂಗೆ ||೨೮೩||

ಆರು ನಮ್ಮನು ಜಱೆದವನು ಜಂ
ಭಾರಿಯೋ ದನುಜಾರಿಯೋ ಕಾ
ಮಾರಿಯೋ ತೋಱವನ ಹೆಡ ತಲೆಗುಗಿವೆ ನಾಲಗೆಯ
ಬೇರು ಸಹಿತವೆ ಕೀಳುವೆನು ಕೈ
ವಾರವೇಕೆನುತೆದ್ದು ಬಂದನು
ಧೀರತನದಲಿ ಸಿದ್ದರಾಮನು ಗಜಱಿ ಗರ್ಜಿಸುತ ||೨೮೪||

ಲೇಸು ಲೇಸೈ ಸಿದ್ದರಾಮನ
ವಾಸಿ ಸಂಸಾರಿಗಳಿಗಿಂದಲಿ
ಸಾಸಿರಕೆ ವೆಗ್ಗಳಿಸಿತಲ ಸುಡು ಸುಡು ಯತಿತ್ವವನು
ಈಸು ಕೋಪಾಟೋಪ ರೋಷಾ
ವೇಶವೇತಕೆ ಯೋಗಿಯಾದ ನಿ
ರಾಸವಂತಂಗೆನುತಲಿರ್ದನು ನಗುತ ಪ್ರಭು ರಾಯ ||೨೮೫||

ಸಾಕು ಸಾಕು ಮಹೇಂದ್ರ ಜಾಲವ
ನೀ ಕಲಿತು ಬಂದೆಮ್ಮ ಮಂದಿಯ
ಕಾಕುತನದಲಿ ಕಾಡಿದಾ ಮೊಗ್ಗಿನ್ನು  ನಮ್ಮೊಡನೆ
ನೂಕಲಱಿಯದು ನಿನಗೆನುತಲು
ದ್ರೇಕದಿಂದಲಿ ಸಿದ್ದರಾಮನ
ನೇಕ ವಹಣಿಯಲಣಕವಾಡುತಲಿರ್ದನಲ್ಲಮನ ||೨೮೬||

ಭಾಪುರೇ ಮಝ ಪೂತು ನೀನಹು
ದೀ ಪರಿಯಲಿರಬೇಕು ಮನದಾ
ಳಾಪದಂಗವಣೆಗಳು ಮಿಗೆ ಮಾಯಾ ಪ್ರಪಂಚಿನಲಿ
ಕೋಪ ನಿಮ್ಮಯ ಸಂಪ್ರದಾಯ ಕ
ಳಾಪದಲಿ ಶಾಶ್ವತವಲಾ ನಿ
ರ್ಲೇಪಗೀ ಪರಿಯುಚಿತವೇ ರಾಮಯ್ಯ ಕೇಳೆಂದ ||೨೮೭||

ಕೆಣಕದಿರು ನೀ ಸಂಪ್ರದಾಯಗ
ಳೆಣಿಕೆ ನಿನಗೇಕಕಟ ಲೋಕವ
ನಣಕವಾಡಿಯೆ ಹೋಹೆಯಲ್ಲದೆ ಯೋಗಮಾರ್ಗದಲಿ
ಸೆಣಸದಿರು ನೀನಾಚೆಯೀಚೆಯ
ಬಣಗರಂದದಲೆನ್ನ ಜಱೆದಡೆ
ಹಣೆಯ ಕಣ್ಣಿನ ಕಿಡಿಯ ಕೆದರುವೆನೆಂದ ರಾಮಯ್ಯ ||೨೮೮||

ಚಾಗು ಚಾಗುರೆ ನೊಸಲ ಕಣ್ಣಿನ
ಬೇಗೆಯಲಿ ಮುನ್ನೆನಿತ ಕೊಂದೆಯೊ
ಯೋಗಿಯಹುದೈ ನೀನು ಹಿಂಸಾ ಧರ್ಮ ಕರ್ಮದಲಿ
ರಾಗದಿಂದುರಿದೇಳುತಿಹ ಭವ
ರೋಗಿ ನಿನ್ನೊಳು ಮಾತನಾಡಲಿ
ಕಾಗದೆಮಗೆನುತಿರ್ದನಲ್ಲಮ ಸಿದ್ದರಾಮಂಗೆ ||೨೮೯||

ಜಡಿದು ನುಡಿವುದನೀತನಾದಡೆ
ಬಿಡನೆನುತ್ತಲಿ ಸಿದ್ಧರಾಮನು
ಘುಡ ಘುಡಿಸಿ ಘೂರ್ಮಿಸುತ ಕೋಪಿಸಿ ನೊಸಲ ಕಣ್ದೆಱೆಯೆ
ಸಿಡಿಲುಗಿಡಿಗಳು ಸೂಸುತಲ್ಲಮ
ನಡಿಗಳೆಡೆಯನು ಹೊದ್ದಲಮ್ಮದೆ
ಸಿಡಿದು ಸೀಕರಿಗೊಳಿಸುತಿರ್ದವು ಸಕಲ ಜೀವರನು ||೨೯೦||

ಮಾಡಿಕೊಂಡನು ಪರಮ ಪುರುಷನ
ಕೂಡೆ ತೋಟಿಯ ಸಿದ್ಧರಾಮನು
ಮೂಢತನದಲಿ ಹವಣನಱಿಯದೆ ಶಿವ ಮಹಾದೇವ
ನೋಡೆ ಬಡವನ ಕೋಪ ದವಡೆಗೆ
ಕೇಡ ತಹವೊಲು ತನ್ನ ಪುರವನೆ
ಕೂಡೆ ಸುಡುತಿದೆ ಕಿಚ್ಚುಗಣ್ಣೆಂದೊದಱಿತಖಿಳ ಜನ ||೨೯೧||

ಕಡಲನತಿ ಮಥನವನು ಮಾಡಲು
ಸುಡುತ ಬಹ ಹಾಳಾಹಳಾಗ್ನಿಯ
ಕಡುಹ ನಿಲಿಸಿ ಜಗಂಗಳನು ರಕ್ಷಸಿದ ಶಿವನಂತೆ
ತೊಡೆದನಾಗಳೆ ನೊಸಲ ಕಣ್ಣಿನ
ಕಿಡಿಯನೆಲ್ಲರನುಳುಹಿದನು ತ
ನ್ನಡಿಯ ಕೃಪೆಯಿಂದಲ್ಲಮ ಪ್ರಭು ರಾಯ ನಿಮಿಷದಲಿ ||೨೯೨||

ತ್ರಿಪುರ ಸಂಹರನೀತನೆಂಬಡೆ
ಕುಪಿತನಾತನು ಶಾಂತನೀತನು
ಚಪಳ ಕಾಮ ವಿರೋಧಿಯಾದಡೆ ಅರ್ಧನಾರೀಶ
ಉಪಮಿಸುವಡೀ ಮಹಿಮನಾದಡೆ
ವಿಪುಳ ತರ ನಿರ್ಲೇಪನೀತನೆ
ಕಪಿಲ ಸಿದ್ಧ ಮಲೇಶನಹನೆನುತಿರ್ದ ರಾಮಯ್ಯ ||೨೯೩||

ಕುರಿಗಳಾದಡೆ ಸಲಹಿದೊಡೆಯನ
ನಱಿದು ಬೆಂಬಿಡವರರೆ ಶಿವ ಶಿವ
ಕುಱಿಗಳಿಂದಾ  ಕಷ್ಟನಲ್ಲಾ ಎನ್ನ ರಕ್ಷಿಸುವ
ಎಱೆಯನೆಯ್ತರಲೆನ್ನ ಮದದಲಿ
ಮಱೆದೆ ಎನುತೊಳಗೊಳಗೆ ಮನದಲಿ
ಮಱುಗುತಲ್ಲಮನೆಡೆಗೆ ಬಂದನು ಸಿದ್ಧರಾಮಯ್ಯ||೨೯೪||

ತ್ರಾಹಿ ಕರುಣಾಕರನೆ ಸರ್ವ
ದ್ರೋಹವೆನ್ನದು ನಿಮ್ಮನಱಿಯದೆ
ಮೋಹ ಮಾಯಾಡಂಬರಕೆ ಮರುಳಾದೆನಿನ್ನೆಬರ
ಊಹೆ ಗೇಡಿಗನವಗುಣದ ಸಂ
ದೋಹವನು ನೀ ಮಱೆದು ಕರುಣಿಸ
ಬೇಹುದೆನುತ ರಾಮನಲ್ಲಮನಂಘ್ರಿಗೆಱಗಿದನು ||೨೯೫||

ಮನದೊಳಗೆ ನಸು ನಗುತಲೀ ಮೂ
ರ್ಖನ ಗುಣಂಗಳನೇನ ಮಾಡುವೆ
ನೆನುತಲ್ಲಮ ಸರ್ವಜೀವ ದಯಾ ಪ್ರದಾಯಕನು
ತನುಜ ಸಾಕೇಳೇಳು ಖಾತಿಯ
ನೆನಹು ನಮ್ಮೊಳಗಿಲ್ಲವೆನುತಲಿ
ವಿನಯದಿಂದೆತ್ತಿದನು ರಾಮನ ವಿಮಲ ಮಸ್ತಕವ ||೨೯೬||

ದೇವ ನೀನೀ ಪರಿಯ ಜಂಗಮ
ಭಾವ ಭಣಿತೆಯ ಧರಿಸಿ ಬಂದಡೆ
ಗಾವಿಲರು ನಾವೆತ್ತ ಬಲ್ಲೆವು ನಿನ್ನ ಮಹಿಮೆಯನು
ಜಾವಳಿಗ ನೀನೆಂದು ಬಗೆದಕ
ಟಾವು ಬಳಲಿದೆವಿನ್ನು ಕರುಣಿಸಿ
ಕಾವುದೆನುತಲಿ  ಸಿದ್ಧರಾಮನು ನುಡಿದನಲ್ಲಮಗೆ ||೨೯೭||

ಹರಸಿ ಕೊಳ್ಳದೆ ಕೆಲರು ಸಚರಾ
ಚರರಿಗೊಳ್ಳಿತ ಪಕ್ಷಪಾತದಿ
ಹರಸಿ ಗೋ ಬ್ರಾಹ್ಮರಿಗೆ ಶಾಂತಿಗಳಾಗಲೆಂಬಂತೆ
ಹಿರಿಯರನು ಸತ್ಕರಿಸಿ ಮಿಕ್ಕಾ
ದರನು ಧಿಕ್ಕರಿಸುವುದು ಯೋಗೀ
ಶ್ವರರಿಗನುಚಿತವೆಂಬರೈ ರಾಮಯ್ಯ ಕೇಳೆಂದ ||೨೯೮||

ಚಿತ್ತವಿಸು ಗುರುರಾಯ ನಮ್ಮಯ
ಚಿತ್ತದೊಳಗಿನ್ನೂ ವಿಚಾರಿಸ
ಲುತ್ತಮಾಧಮ ಪಕ್ಷಪಾತ ಭ್ರಮೆಗಳಿಡಿದಿಹವು
ಎತ್ತ ಬಲ್ಲೆವು ಸರ್ವರನು ಸಮ
ಚಿತ್ತದಲಿ ಕಾಬಱಿವ  ನೀನೊಲಿ
ದಿತ್ತಡೆಮಗಿನ್ನಾದಡಾಗಲಿ ದೇವ ಕೇಳೆಂದ ||೨೯೯||

ಆಗಲದಕೇನೊಂದು ಬಾರಿಯ
ಲಾಗುವುದೆ  ಸಮಬುದ್ಧಿ ಮೆಲ್ಲನೆ
ಲಾಗಿಸುವುದಿರುತಿರುತಲೀ ಪರಿ ಚಿತ್ತ ಶುದ್ಧಿಯಲಿ
ಯೋಗ ಮಾರ್ಗವನಱಿವಡಖಿಳ ವಿ
ಯೋಗಿಯಾದಡೆ ಬಳಿಕಲಾತಗೆ
ಬೇಗ ಸಮತೆ ಸಮಾಧಿಯಹುದೈ ರಾಮ ಕೇಳೆಂದ ||೩೦೦||

ಎನಗೆ ನಿಮ್ಮಯ ದರ್ಶನ ಸ್ಪ
ರ್ಶನವೆ ಸರ್ವ ಸಮಾಧಿಯೆನಗಾ
ಮನು ಮುನಿ ತ್ರಿದಶರುಗಳಿದಿರೇ ದೇವ ಕೇಳಿನ್ನು
ಮನವೊಲಿದು ನೀನಿನ್ನು ಮಲಿಕಾ
ರ್ಜುನನ ನೋಡಲು ಬಿಜಯ ಮಾಡುವು
ದೆನುತ ತನ್ನಯ ಮಠಕೆ ಕರೆದನು ರಾಮನಲ್ಲಮನ ||೩೦೧||

ಬಿಡು ಮರುಳೆ ಮನೆಯೇನು ಮಠವೇ
ನಡವಿಯೇನೂರೇನು ಬೇಱೊಂ
ದೆಡೆಗಳುಂಟೇ ಸರ್ವಗತನಾದಾ ಮಹಾತ್ಮಂಗೆ
ನುಡಿದುದೇ ಶಿವ ತತ್ವದಾಗಮ
ನಡೆದುದೇ ಶಿವಮಾರ್ಗ ಶರಣರ
ತೊಡಕು ತಾನೀ ಪರಿ ಕಣಾ ರಾಮಯ್ಯ ಕೇಳೆಂದ ||೩೦೨ ||

ಹಲವು ಬಿನ್ನಹಕಂಜುವೆನು ಕೋ
ಟಲೆಗೆ ನಾನಿನ್ನಾಱೆ ಕರ್ಮದ
ಕಳವಳಕೆ ಬೇಸತ್ತೆ ಖಂಡ ಜ್ಞಾನ ಮಾರ್ಗದಲಿ
ಹೊಲಬುಗೆಟ್ಟೆನು ನಿನ್ನ ಪಾದದ
ನೆಲೆಯ ಕಾಣದೆ ದೇವ ನೀನೆ
ಸಲಹೆನುತಲಲ್ಲಮಗೆ ಮೈಯಿಕ್ಕಿದನು ರಾಮಯ್ಯ||೩೦೩||

ಮತ್ತೆ ಕರುಣಿಸಿ ಹೆಱೆ ನೊಸಲ ಹಿಡಿ
ದೆತ್ತಿ ಬಾರೆಂದೆನುತ ತನ್ನಯ
ಹತ್ತಿರಕೆ ಕರೆದಾತನನು ಕೈವಿಡಿದು ಕುಳ್ಳಿರಿಸಿ
ಹೆತ್ತ ತಂದೆಯದಾವ ಪರಿಯಲಿ
ಪುತ್ರನನು ಬೋಳೈಸುವಂತಿರೆ
ನಿತ್ಯನಲ್ಲಮ ಸಿದ್ಧರಾಮನನೊಲಿದು ಮನ್ನಿಸಿದ ||೩೦೪||

ಹಸನ ಮಾಡಿಯೆ ಹರಗಿ ಹೊಲನಲಿ
ಕಸವ ಬಿತ್ತುವ ಮರುಳನಂತಿರೆ
ಮಿಸುಗುವಂತರ್ಮಾರ್ಗದೋಜೆಗೆ ಬಂದ ತನು ಮನವ
ಕಿಸುಕುಳದ ಬಹಿರಂಗದಿಚ್ಚೆಯ
ಬೆಸನದಲಿ ಬೇಯಿಸದೆ ನಿನ್ನಯ
ವಸವ ಮಾಡಲು ನೀನೆ ನಿತ್ಯನು ರಾಮ ಕೇಳೆಂದ ||೩೦೯||

ಕರಣಗಳು ಕೈಗೂ ಡಿದಾಗಳೆ
ಮರಣವನು ಗೆಲ ಕಲಿತು ಸಂತತ
ಶರಣ ಪದದಲಿ ನಿಂದು ಪರಮಾನಂದ ಸುಖದಿಂದ
ಪರಿಣಮಿಸಿ ನಿರ್ಲೇಪನಾಗಿರು
ತಿರಲು ಬಲ್ಲಡೆ ಬಳಿಕ ನೀನೇ
ಪರಮನಪ್ಪುದು ತಪ್ಪದೈ ರಾಮಯ್ಯ ಕೇಳೆಂದ ||೩೧೦||

ಕಾ ಗುದುರೆಗತ್ಯಂತ ಶಿಕ್ಷೆಗ
ಳಾಗಬೇಕಲ್ಲದೆ ವಿಚಾರಿಸ
ಲಾ ಗರು ವ ಜಾತ್ಯಶ್ವಕೊಂದೇ ರಾಯ ರಾಹುತನ
ರಾಘೆ ವಾಘೆಯೆ ಸಾಲದೇ ಶಬು  
ದಾಗಮಂಗಳ ಶಿಕ್ಷೆ ನಿನಗಿ
ನ್ನೇಗುವುವು ಸಂಸ್ಕಾರಿ ನೀನೈ ರಾಮ ಕೇಳೆಂದ||೩೧೧||

ಎಂದು ಬಳಿಕೇಕಾಂತದಲಿ ಮುದ
ದಿಂದಲೊಪ್ಪುವ ಕಾಯ ಕರಣದ
ಸಂದು ಸಂಬಂಧವನು ಸೂಚಿಸಿ ಜೀವ ಪರಮರನು
ಒಂದು ಮಾಡುವ ಶಕ್ತಿ ಭಕ್ತಿಯ
ಹೊಂದಿಕೆಯನುಪದೇಶ ಮಾಡಿದ
ನಂದು ಕರುಣದಲಲ್ಲಮ ಪ್ರಭು ಸಿದ್ ಧರಾಮಂಗೆ ||೩೧೨||

ಸಂಪಾದಕರು
ಎಂ. ಎಸ್. ಬಸವಲಿಂಗಯ್ಯ, ಎಂ.ಎ, ಬಿ. ಎಲ್

ಎಂ. ಆರ್.  ಶ್ರೀನಿವಾಸಮೂರ್ತಿ.ಬಿ.ಎ.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ