ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಜುಲೈ 16, 2017

ಷಡಕ್ಷರಿದೇವವಿರಚಿತಂ ರಾಜಶಂಖರವಿಳಾಸಂ

ಷಡಕ್ಷರಿದೇವವಿರಚಿತಂ
ರಾಜಶಂಖರವಿಳಾಸಂ
ಪ್ರಥಮಾಶ್ವಾಸಂ

ಶ್ರೀಶೈಲಾದಿಪ್ರಸಿದ್ಧಂ ಸುರುಚಿರವಿಜಯಸ್ತುತ್ಯನುದ್ರಿಕ್ತಸತ್ವಾ
ವಂಶಂ ಕಲ್ಯಾಣಭುಭೃತ್ಸದನಧನದಮಿತ್ರಂ ಧರಾಧಾರಧರ್ಮಂ
ವೈಶದ್ಯದ್ಯೋತಿ ಚಂದ್ರೋಪಲಸಿತಭಸಿತಾನಂತಕಾಂತೋತ್ತಮಾಂಗಂ
ಶ್ರೇಶೈವಶ್ರೇಯಮಂ ಮಾಳ್ಕೆಮಗನವರತಂ ನಂದಿಕೇಶಂ ಮಹೇಶಂ ||೧||

ನಿಜನೇತ್ರಂ ಲೋಕನೇತ್ರಂ ನಿಜಭರಣಮಿಳಾಚಕ್ರಭಾರಾವಹಂ
ನಿಜವಾಹಂ ಧರ್ಮಗೇಹಂ ನಿಜಧನು ದನುಜಾರಾತಿಜಾತಾಧಿವಾಸಂ
ನಿಜರೂಪಂ ವಿಶ್ವರೂಪಂ ನಿಜರಮಣಿ ಜಗನ್ಮಂಡಳೀಮಾತೆ ನಿಚ್ಚಂ
ನಿಜಮಾದ ಸುಪ್ರಮೋದಂ ಕುಡುಗೆಮಗತುಳಶ್ರೇಯಮಂ ಶೈಲಜೇಶಂ ||೨||

ಕ್ಷಿತಿಯಂ ಪಾಲಿಪಗಣ್ಯಪುಣ್ಯಮತಿಯಂ ಪ್ರಖ್ಯಾತಸೌಂದರ್ಯಸಂ
ಗತೆಯಂ  ಶೈವಮತೈಕಕಲ್ಪಲತೆಯಂ ಶ್ರೀವಾಗ್ವಧೂಸಂತತ
ಸ್ತುತೆಯಂ ಚಂದ್ರಧರಾರ್ಧದೇಹಯುತೆಯಂ ಬಾಲಾಬ್ಜಿನೀಕಾಂತಸ
ದ್ಯುತಿಯಂ ಪಾರ್ವತಿಯಂ ಕೃಪಾವತಿಯನಾಗಳ್ ಬಣ್ಣಿಪೆಂ ಭಕ್ತಿಯಿಂ ||೪||

ಮುರಹರಪದ್ಮಸದ್ಮಮುಖನಿರ್ಜರಕೋಟಿಯನೊಕ್ಕಲಿಕ್ಕಿ ಸ
ಚ್ಚರಿತ ಜಿತಾಕ್ಷಸಂಚಯಮನಂಜಿಸಿ ಭಂಜಿಸಿ ಮೂಜಗಂಗಳೊಳ್
ಸರಿದೊರೆಯಿಲ್ಲಿವಂಗೆನಿಪ ಶೌರ್ಯಮನಾಂತ ಮನೋಜನಂ ಕನ
ಲ್ದುರುಪಿದ ಶಂಭುವರ್ಧತನುವಂ ಸೆಳೆದಂಬಿಕೆಗೆಯ್ದೆ ವಂದಿಪೆಂ ||೫||
ರದಪನದ ಕಾಂತಿ ನಿರ್ಜರಮುದಗ್ರ ಕಿರೀಟ ಮಣಿಪ್ರಕಾಶಮೊಂ
ದಿದ ನವಧಾತು ಬದ್ಧಫಣಿಯಂದಮರರ್ಕಡೆಯಲ್ಕೆ ಕಟ್ಟಿದ
ಗ್ಗದ ಫಣಿ ಗಂಡಮಂಡಳಮದಾಂಬುಗೆ ಪಾರ್ದೆಱಪುನ್ಮದಾಳಿ ನೀ
ರದಮೆನೆ ಮಂದರಂಬೊಲೆಸೆವಾನೆಮೊಗಂ ಮಿಗೆ ಮಾಳ್ಕವಿಘ್ನಮಂ ||

ಧರೆಯೊಳ್ಮೇಣ್ಪುಟ್ಟುತ್ತುರುಳ್ವ ನರನ ಮೇಲುರ್ಬಿ ಕಬ್ಬಂಗಳಂ ಬಿ
ತ್ತರಿಸುತ್ತಂ ಸಪ್ರಯಾಸಂ ಕೆಲಕೆಲರಕಟಾ ಕಬ್ಬಿಗರ್ ಕೆಟ್ಟುಪೋದರ್
ಹರಿದೇವಂ ದೇವದೇವೋತ್ತಮನ ಶರಣರಂ ಪಾಡಿ ಕೈವಲ್ಯಲಕ್ಷ್ಮೀ
ವರನಾದಂ ಮತ್ತಂವಂಗತ್ಯಧಿಕ ಶಿವಕವೀಂದ್ರಗದಾರ್ ಸಾಟಿಯಪ್ಪರ್ ||೧೯||

ರಸೆಯೊಳ್ ರಸವತ್ಕವಿತೆಯ
ನುಸಿರಲ್ಪಡೆ ದಸಮನಯನನಂ ಪೊಗಳದೆ ಮಾ
ನಿಸರಂ ಸುರರಂ ಪೊಗಳ್ವುದು
ಕಸವರಮಂ ಕಳೆದು ಕಸವನಾಂತವೊಲಕ್ಕು ||೨೧||

ಅದರಿಂದೆ ಮಹಿತಮಹಿಮಾ
ಸ್ಪದನಂ ಶಿವನಂ ತದೀಯ ಶರಣವ್ರಜಮಂ
ಪದೆದು ಮುದಮೊದವೆ ಬಲ್ಲಂ
ದದೆ ನುತಿಪೆಂ ನುತಿಸೆನುಳಿದ ಸುರರಂ ನರರಂ ||೨೨||

ಬರೆಬರೆದಂತದಂ ತೊಡೆದು ತೊಟ್ಟನೆ ನಿಟ್ಟಿಸಿ ಮೆಲ್ಲನೊಂದುಮಂ
ಸರಸಪದಾರ್ಥಮಂ ತಡಕಿ ಕಾಣದೆ ಕಳ್ದು ಪರೋಕ್ತಿಯುಕ್ತಿಯಂ
ವಿರಚಿಸುತಂತುಮಿಂತುಮಳಿಗಬ್ಬಮನಾಗಿಸಿ ಕೇಳಿಸುತ್ತೆ ಕಾ
ಲುರುಚಿರ ತೋರ್ಪ ದುಷ್ಕವಿ ಮಹಾಕವಿಮಧ್ಯದೊಳೊಪ್ಪಲಾರ್ಪನೆ ||೨೩||

ಆರಾರೇಱರ್ಶಾಸ್ತ್ರ
ಶ್ರೀರೋಹಣಗಿರಿಯನಲ್ಲಿ ನವಕವಿತಾಚಿಂ
ತಾರತ್ನಂ ದೊರೆಗುಮೆ ಮಾ
ರಾರಿಯ ಕೃಪೆಯಿಲ್ಲದಂಗೆ ಧರಣೀತಳದೊಳ್ ||೨೯||

ನಿಂದಿಸುವರ್ದುರ್ಜನರೆಂ
ಬೊಂದು ಭಯಂಬೆತ್ತು ಸುಕವಿ ರಚಿಸನೆ ಕೃತಿಯಂ
ಮಂದೇಹರಭಯದಿಂದರ
ವಿಂದಸಖಂ ನಿಜಮಯೂಕಮಂ ಪಸರಿಸನೇ ||೩೧||

ಮೊದಲ ಕವೀಂದ್ರರೊಲ್ದೊರೆದ ಸತ್ಕೃತಿಸಂಚಯಮೀ ಧರಿತ್ರಿಯೊಳ್
ಪುದಿದಿರೆ ನೋಡಿ ತುಷ್ಟಿವಡೆಲೊಲ್ಲದೆ ಕಬ್ಬಿಗರೇಕೆ ಕಬ್ಬಮಂ
ಗದಿಪರೊ ಬೇಱೆನುತ್ತೆ ನುಡಿವಳ್ಕಜಕಾಱಂಗ ಪುತ್ರಸಂ
ಪದಮೆ ದಲೇಕೆ ಬೇಱೆ ಪರಪುತ್ರರನೀಕ್ಷಿಪ ತುಷ್ಟಿ ಸಾಲದೇ ||೩೫||

ಪಳಿಯಲ್ ಬಲ್ಲಂ ನೆಗಳಲ್
ಖಳನೇಂ ಬಲ್ಲನೆ ನವೀನಕಾವ್ಯಮನಿಳೆಯೊಳ್
ತೊಳಗುವ ರವಿಯಂ ಮಸುಳಿಪ
ಜಳಧರಮದಱಂತೆ ಜಗಮನೇಂ ಬೆಳಗುಗುಮೇ ||೪೮||

ಎಳವರೆಯದೊಳಖಿಳಕಳಾ
ವಿಳಾಸಮಂ ಕಂಡು ಮಚ್ಚಿ ಬರೆ ಕವಿತಾಕೋ
ಮಳೆಯವಳ್ಗೆರ್ದೆಯಿತ್ತು ಯತಿ
ತಿಳಕಂ ನೀನೆನಿಪುದಿಳೆಗಚ್ಚರಿಯಲ್ತೇ ||೭೦||

ಮೊದಲೊರೆದ ಕೃತಿಗಳಿರೆ ಪೇ
ಳ್ವುದು ಮೆಱೆಯದಿದೆನ್ನದಿರ್ಕೆ ವಿಬುಧರ್ಮೊದಲ
ಗ್ಗದ ಸಕ್ಕದಮಿರೆ ಕನ್ನಡ
ಮುದಯಿಸಿ ರಂಜಿಸದೆ ಕರ್ಣಕಮನೀಯತೆಯಿಂ ||೮೦||

ತೆಂಬೆಲರಂತೆ ತುಂಬುವೆಱೆಯಿಂ ಪೊಱಪೊಣ್ಮುವ ಜೊನ್ನದಂತೆ ಪೆ
ಣ್ದುಂಬಿಯ ಗಾನದಂತೆ ಪೊಸಸುಗ್ಗಿಯ ನಂದನದಂತೆ ನಲ್ಮೆಯಿಂ
ದಂ ಬಿಗಿದಪ್ಪಿದಂಗನೆಯ ಪೆರ್ಮೊಲೆಸೋಂಕಿನ ಸೌಖ್ಯದಂತೆ ಚಿ
ತ್ತಂಬಡಿದಪ್ಪುದೀಕೃತಿ ಷಡಕ್ಷರಿದೇವಕೋತಂ ರಸಜ್ಞರಾ ||೮೪||

ಎನ್ನೊಳ್ಪುಟ್ಟಿದ ಚಂದ್ರನಿಂದೆ ಪಡೆಗುಂ ಸಸ್ಯಾಳಿ ಸಂಪತ್ತನಂ
ತೆನ್ನೊಳ್ಪುಟ್ಟಿದ ಲಕ್ಷ್ಮಿಯಿಂದೆ ಪಡೆಗುಂ ಸೌಭಾಗ್ಯಮಂ ಧಾತ್ರಿ ಮೇ
ಣೆನ್ನೊಳ್ಪುಟ್ಟಿದ ವಸ್ತುವಿಂದೆ ಪಡೆದಂ ಸರ್ವಾರ್ಥಮಂ ಜಿಷ್ಣು ತಾ
ನೆನ್ನೊಳ್ಪೇಳ್ಸರಿಯಾವನೆಂದುಲಿವವೋಲುದ್ ಘೋಷಿಕುಂ ಸಾಗರಂ ||೧೦೧||

ಅಳಿಯಂ ಪೂಗಣ್ಣನೆನ್ನೀ ಮಗಳೆ ಚಪಳೆ ಪುತ್ರಂ ಕರಂ ರಾಜಯಕ್ಷ್ಮಾ
ಕುಳನೆನ್ನೈಶ್ವರ್ಯಮಂ ನಿರ್ಜರರೆ ಕವರ್ದರೆನ್ನೊಳ್ಬಿಸಂ ಪುಟ್ಟಿತೆನ್ನಂ
ಕಳಶಪ್ರೋದ್ಭೂತನಂದೀಟಿದನಕಟ ಮಹಾಭಂಗಮಂ ತಾಳ್ದೆನೆಂದೆಂ
ದೊಳಗಂಭೋರಾಶಿ ಚಿಂತಾಗ್ನಿಯನೆ ತಳೆದವೋಲೌರ್ವನಂತಸ್ಥಮಿರ್ಕುಂ ||೧೦೨||

ಘುಳುಘುಳಿಸುತ್ತೆ ಬರ್ಪ ತೆಱೆಯಿಂ ನೊಱೆಯಿಂ ಕಱೆಯಿಂಬಿನೊಳ್ಕರಂ
ಬೆಳೆದ ತಮಾಲನೀಲವನದಿಂ ಘನದಿಂ ಬಿನದಂಬುಗುತ್ತೆ ಸಂ
ಚಳಿಸುವ ಪೀನಮೀನಕುಲದಿಂ ಬಲದಿಂ ಜಲದಿಂ ಸಿಡಿಲ್ದ ನಿ
ರ್ಮಳತರಶುಕ್ತಿಯಿಂದೆ ಹರಿಯಿಂ ಕರಿಯಿಂ ಗಿರಿಯಿಂದದೊಪ್ಪುಗುಂ ||೧೦೪||

ಸುಮಮಕರಂದದಿಂದೆ ಕಪಿ ಕೈದೊಳೆದಾ ದ್ರುಮಪತ್ರಪಾತ್ರೆಯಂ
ಸಮೆದದಱಲ್ಲಿ ತುಂಬಿ ತುಳಿವೊಂದದ ಪೂಗಳನೈದೆ ತುಂಬಿಕೊಂ
ಡಮರ್ದಮರ್ದಂತೆ ತೋರ್ಪ ಗಿಳಿಮುಟ್ಟದ ಪಣ್ಗೊನೆಯಾಂತು ಬಂದು ಸಂ
ಯಮಿಗಳ ಮುಂದೆ ನಿಂದೆಱಗಿ ಕಾಣ್ಕೆಯನಿತ್ತುದತೀವ ಭಕ್ತಿಯಿಂ ||೧೨೭||

ಹೋಮದ ಕುಂಡದಿಂ ಕಡೆಸಿಡಿಲ್ದು ಪೊದಳ್ದಿರೆ ಕಂಡು ಕೆಂಡಮಂ
ಕಾಮಿಸಿ ಗೇರಪಣ್ಣೆನುತೆ ಪಣ್ಣನೆ ಪೊರ್ದಿ ತುಡುಂಕೆ ಕೈಸುಡಲ್
ಭೂಮಿಗೆ ತರ್ಗಿ ಕುರ್ಗಿ ಮಿಗೆ ಪಲ್ದೆಱೆದುಃಪೆನುತೂದಿ ಪುರ್ಬಿಡು
ತ್ತಾ ಮುನಿಪುತ್ರರಂ ನಗಿಸಿ ಹಱ್ರೆನುತೇಡಿಸಿತೊಂದು ಕೋಡಗಂ ||೧೨೮||

ದ್ವಿತೀಯಾಶ್ವಾಸಂ

ಬಳಸಿರೆ ನೀಲನೀರಜವನಂ ಕಱೆಯಂಚಿನವೊಲ್ಪೊಡರ್ಪಿನಿಂ
ಬೆಳೆದೆಳಗೆಂಪನಾಂತ ಕಡೆಗರ್ದೆಗಳಂತರವರ್ಣದಂತೆ ಕಂ
ಗೊಳಿಸೆ ಶುಕಾಳಿ ಚಿತ್ರಮೆನೆ ರಂಜಿಸೆ ಪಚ್ಚೆ ಶಾಲೆಯಂ ಧರಾ
ಲಲನೆ ವಿಳಾಸದಿಂ ತಳೆದಳೆಂದೆನೆ ಶಾಲೆಯ ಗರ್ದೆ ತೋಱುಗುಂ ||೧೦||

ತೂಗುತೆ ತೊನೆಯುತೆ ಬಳ್ಕುತೆ
ಬಾಗುತೆ ಕಂಪಿಡುತೆ ಕನಕರುಚಿದಾಳುತ್ತಂ
ರಾಗಿಸುತೆ ರಂಜಿಸುತೆ ಸೊಂ
ಪಾಗಿರ್ದುವು ಕಣ್ಗೆ ಗಂಧಶಾಲಿ ವನಂಗಳ್ ||೧೧||

ಗಿಳಿಗಳ ಬಳಗಂ ಗಳಗಳ
ನಿಳಿದೊಳಪೊಕ್ಕೆಳಸಿ ಬಳಸಿ ಖರಚಂಚುಪುಟಂ
ಗಳಿನುಡಿವುದೆಂದಗಿದು ನೀ
ರ್ಗಳನೊಳಪೊಕ್ಕಂತೆ ನೆಲ್ಲಗರ್ದೆಗಳೆಸೆಗುಂ ||೧೨||

ಎಳಗಿಳಿಗಳ ಬಳಗಂ ಗಳ
ಗಳನಿಳಿತಂದೆಳಸಿ ಬಳಸಿ ಸುಳಿದೊಳಪುಗುತಂ
ನಳನಳಿಸಿ ಬೆಳೆದು ಕಳಿಯದ
ಕಳಮೆಯ ಕಣಿಶಂಗಳಂ ಕರಂ ಖಂಡಿಸುಗುಂ ||೧೫|

ಬಡನಡು ಬಳ್ಕೆ ಬಟ್ಟಮೊಲೆ ಮೇಲುದನೊತ್ತೆ ನಿತಂಬಮಂಡಳಂ
ಪೊಡರೆ ಕಪೋಲರಂಗದೊಳೆ ನರ್ತಿಸೆ ಕನ್ನವುರಂ ಪರಾಗಮಿ
ರ್ಕಡೆಗೆಡೆಯಾಡೆ ನೋಟಮಳಿವುತ್ತಿರೆ ಸೋರ್ಮುಡಿ ಬಂದುನಿಂದು ಪೆ
ಣ್ಗಡಣಮಲ್ಲಿ ಪಾಱಿಪುದು ಕೈರವದಿಂದಿಡುತಂ ಶುಕಾಳಿಯಂ ||೧೬||

ಅರಲಿಂ ಪಣ್ಣಿಂ ಮರಂ ಪೆಣ್ಗಿಳಿಯಿನುದ್ಯಾನಂಭೋಜದಿಂದೀ
ವರದಿಂ ಕಾಸಾರಮಾಸಾರದೆ ಪೊಸಬೆಳೆಯಿಂ ಭೂಮಿ ಭೂಮೀಜದಿಂ ತ
ಣ್ಣೆಲರಿಂ ಮಾರ್ಗಂ ಮರಾಳೋತ್ಕರದೆ ನೆರೆದ ಚಕ್ರೌಘದಿಂ ಸಿಂಧು ಸಿಂಹೋ
ತ್ಕರದಿಂ ಪೇರಾನೆಯಿಂ ಕನನಮಿಡಿದೆಸೆಗುಂ ದೇಶದೊಳ್ನಿಂದಜಜಸ್ರಂ ||೨೭||

ನದಿಯಿಂ ನಂದನದಿಂ ಲತಾಪ್ರತತಿಯಿಂ ಪುಷ್ಪಾಳಿಯಿಂ ಪಾಳಿಯಂ
ಪುದಿದೆತ್ತಂ ನವಸೌರಭಂಬಡೆದ ಸದ್ಭೃಂಗಾಳಿಯಿಂ ಗಾಳಿಯಿಂ
ಮದವತ್ತಾಮ್ರಮುಖಪ್ರತರ್ಜನಕರಸ್ತ್ರೀಶಾಳಿಯಿಂ ಶಾಳಿಯಿಂ
ತದಿಳಾಮಂಡಳೂವೆಪ್ಪುಗುಂ ಕ್ರಮುಕದೊಳ್ಪೊಂಬಾಳೆಯಿಂ ಬಾಳೆಯಿಂ ||೨೮||

ಎಳನನೆ ತೀವಿತೋರ್ಪ ಮೊನೆಮಲ್ಲಿಗೆ ತಾವರೆತೀವಿ ತೋರ್ಪ ತಂ
ಗೊಳಮಳಿ ತೀವಿತೋರ್ಪ ಮಧುದೂತಿಯಲರ್ತವೆ ತೀವಿತೋರ್ಪ ಪಾ
ಟಳಿ ಗಿಳಿ ತೀವಿತೋರ್ಪ ಪೊಸಮಾವು ತಳಿರ್ಬಿಡೆ ತೀವಿತೋರ್ಪ ಮಂ
ಜುಳತರಮಾದಶೋಕೆ ಮೆಱೆದಿರ್ಪುದು ತದ್ವನಮಧ್ಯದೇಶದೊಳ್ ||೩೭||

ಸ್ಮರನಲ್ಲಿ ನೆಲಸಿ ನೆಲೆಗೊಂ
ಡಿರೆ ಮಾಮರದಲ್ಲಿ ಗಿರಿಶನುರಿಗಣ್ಣುರಿ ಬಂ
ದಿರದಡರ್ದು ಸುತ್ತಿಮುತ್ತಿದ
ಪರಿಯಿಂ ಪಸರಿಪುದು ಚೆಲ್ವ ಚೆಂದಳಿರ್ದುಱುಗಲ್ ||೪೦||

ಜಲದ ಜಲದಕ್ಕೆ ಜಲವ
ತ್ಫಲಮೀವುದು ತೆಂಗಿದರ್ಕೆ ಕುಡುದಾಯ್ತೇನಂ
ಸಲಪಿದಿಳೆಗೆಂದೆಱಗಿ ನವ
ಫಲಂಗಳೀವಂತೆ ಬಾಗಿ ಬಾಳೆಗಳೆಸೆಗುಂ ||೫೦||

ತಳಿರ್ಗಳೆ ದಳ್ಳುರಿ ಮುಸುಕಿ
ರ್ದಳಿಗಳೆ ಪೊಸಮಸಿಗಳಾಗೆ ಮದನ ಬಾಣಾ
ವಳಿಯಂ ಕಾಸಲ್ ಚೈತ್ರೋ
ಜ್ವಳಕಾರುಕನಿಟ್ಟ ಕಮ್ಮಟಂಬೊಲೆಸೆಗುಂ ||೫೬||

ತೃತೀಯಾಶ್ವಾಸಂ

ಎಳವರೆಯದೊಳೆಳೆಯರ್ಕಳ
ನೆಳಸುತೆ ನಳಿದೋಳ್ಗಳಿಂದೆ ಬಿಗಿದಪ್ಪಿ ಮನಂ
ಗೊಳೆ ತಳ್ತುನೋಡಿ ಮುದ್ದಿಪ
ವಿಳಾಸಮೊಂದಕ್ಕೆ ನೋಂತುದಿಲ್ಲಾಂ ಕೆಳದೀ ||೪೬||

ಶಿವಭಕ್ತಿಯಿಲ್ಲದನ ಬಾ
ಳ್ಕವಿತ್ವಮಿಲ್ಲದನ ಜಾಣ್ಮೆ ಕಳೆಯಿಲ್ಲದ ಪೆ
ಣ್ಜವವಿಲ್ಲದಶ್ವಮುಂ ತನು
ಭವನಿಲ್ಲದ ಭಾಗ್ಯಮೆಂತುಮೇಂ ಮೆಱೆದಪುದೇ ||೪೭||

ಮಗನಂ ತಳ್ತಮರ್ದಪ್ಪಿ ನೋಡಿ ಮೊಗಂ ಮುಂಡಾಡಿ ನೇಹಂ ಮನಂ
ಬುಗೆ ಮಾತಾಡಿಸಿ ಲಲ್ಲೆಗೆಯ್ದು ನಗಿಸುತ್ತಿರ್ಕೈಗಳಂ ಸಾರ್ಚಿ ಮಂ
ಡೆಗೆ ಬಟ್ಟಾಡಿ ಕಿಲಕ್ಕೆ ಚಿಮ್ಮಿ ಮೊಲೆವಾಲಂ ಮತ್ತೆ ಬಾಯ್ಗೂಡಿ ಮಿ
ಲ್ಲಗೆ ತೊಟ್ಟಿಲ್ಗಿರದಿಟ್ಟು ತೂಗುವೆಳೆವೆಣ್ಣೇಂ ನೋಂಪಿಯಂ ನೋಂತಳೋ ||೫೧||

ಎಡಗೈಯಿಂದೊತ್ತಿ ಶಯ್ಯಾತಳಮನಿನಿಸು ಜಾಱಿರ್ದುದಂ ಮೇಲುದಂ ಪೊಂ
ಗಡಗಂ ಗಲ್ಕೆಂದು ಶಬ್ದಂಗುಡೆ ಬಲದ ಕರಾಂಭೋಜದಿಂದೇಱನೂಂಕು
ತ್ತೊಡನುತ್ತುಂಗಸ್ತನಾಗ್ರಕ್ಕಿಳಿವ ಮುಡಿಯನಾಂತೌಂಕುತಂ ಕಂಠದಿಂ ಮುಂ
ಗಡೆಯೊಳ್ಕಂಡೇಳ್ವಳಂ ಕೈವಿಡಿದವಳೊಡನರ್ಧಾಸನಂಗೊಂಡನಾಗಳ್ ||೫೪||

ಮೃಗಮದಗಂಧಿ ನಿನ್ನ ಮೊಗಮೆಂಬ ಸುಧಾಕರಬಿಂಬಮಿಂದು ಬೆ
ಳ್ನಗೆತಿಳಿಜೊನ್ನಮಂ ತೊಱೆದುದಿಂದುಟಿಚಂದಳಿರಿರ್ಪುಗುಂದಿದ
ತ್ತಗಲದ ರಾಗಸಾಗರದ ಪೆರ್ಚುಗೆ ತರ್ಗಿದುದಕ್ಷಿಕೈರವಂ
ಮಿಗೆ ಕೊರಗಿತ್ತು ಚಿತ್ತ ಪರಿತಪಮಹಾತಪದಿಂ ಮನೋರಮೆ ||೫೫||

ಗಿಳಿವಱಿ ಮೆಱೆಯದ ನಂದನ
ಮಳಿಶಿಶು ವಿಹರಿಸದ ಪೂಗೊಳಂ ಕಳರವದಿಂ
ದೆಳೆಯಂಚೆಯಡಿಯಿಡದ ತ
ಣ್ಬುಳಿಲರ್ಭಕನಾಡದಂಗಳಂ ಮಂಜುಳಮೇ ||೭೪||

ಎನೆ ಕೇಳ್ದು ಹರ್ಷಮೊಗೆತರೆ
ಮನಕ್ಕೆ ಕರಣಾವಲೋಕನಂಗೈದೆಲೆ ಭೂ
ವನಿತೇಶ ನಿನ್ನ ಮನದಿ
ಷ್ಟನಿಯೋಜನೆಗೆಯ್ವೆವಾವುದದನಱಿಪೆಂದರ್ ||೮೨||

ಚತುರ್ಥಾಶ್ವಾಸಂ

ಹೃದಯದೊಳಳೊದವಿದ ಶಿವಮಂ
ತ್ರದ ಸುಮುಹೂರ್ತದೊಳ್ ಶಿವಪ್ರೇರಣೆಯಿಂ
ಸುದತಿಯ ಪುಣ್ಯೋದರದೊಳ್
ಪದಪಿಂದಿಳಿತಂದು ನೆಲಸೆ ಬಳೆದುದು ಗರ್ಭಂ ||೩೦||

ವಳಿಗಳ್ಪಿಂಗಿದುವವಾಸ್ಯಮಿಂದುರುಚಿಯಂ ಕೈಕೊಂಡುದಾ ನಾಭಿ ಗು
ಣ್ಪಳಿದೊಪ್ಪಿತ್ತು ವಿಲಾಸಯಾನಮದು ಮಾಂದಯಂಬೆತ್ತುದಂಭೋಜಕು
ಟ್ಮಳವಕ್ಷೋರುಹದಗ್ರಮಾಳ್ದುದೆಳೆಗರ್ಪಂ ನುಣ್ಗದಿರ್ದೇಹದೊ
ಳ್ಕಳೆಗೊಂಡತ್ತು ತನೂದರಂ ಬಳೆದುದಾ ತನ್ವಂಗಿಗಾ ಗರ್ಭದೊಳ್ ||೩೧||

ನಳಿನಿ ಮರಾಳಮನೆಸೆವು
ತ್ಪಳಿನಿ ಸುಗಂಧಮನುದಾರಕೃತಿ ಸಿತಯಶಮಂ
ತಿಳಿಜೊನ್ನಮನಿಂದೂಜ್ವಳ
ಕಳೆವಡೆವವೊಲಬಲೆ ಪಡೆದಳರ್ಬಕನ ||೫೧||

ಹರಮಂತ್ರೋದ್ಭವನೀತನಿನ್ನುಮದನೇ ಸಂರಕ್ಷಿಪಂ ತಪ್ಪದೆಂ
ದಿರದಾಳೋಚಿಸಿ ಮಂತ್ರಲಕ್ಷ್ಯವೆಸರಂ ಭೂಕಾಂತಸಂತಾನದೊ
ಳ್ದೊರೆವೆತ್ತಗ್ಗದ ಕೀರ್ತಿವೆತ್ತೆಸೆವನೆಂದನ್ವರ್ಥಮಂ ರಾಜಶೇ
ಖರನೆಂದಿತ್ತಭಿಧಾನಮಂ ತಳರ್ದರಾಚಾರ್ಯರ್ ಮಹೋತ್ಸಾಹದಿಂ ||೫೮||

ಪಂಚಮಾಶ್ವಾಸಂ

ಎಲೆವರಱೆಯಲ್ಲಿ ಪೂದಿರಿಯಲೆಂದಿರೆ ನಿಂದು ಪುಳಿಂದಿ ಕಂಡು ಬ
ಬಲ್ಮೊಲೆಯನದೊರ್ವ ಬಾಲಶಬರಂ ಕರಿಕುಂಭಮಿದೆಂದು ಬಾಣಮಂ
ನಲಿದಿಸೆ ಮಧ್ಯದೊಳ್ಪೊಡೆಯಲಂತದನಾ ಕ್ಷಣಮೆಳ್ದ ಸಿಂಹಮಂ
ತಲೆಗಡಿದಲ್ಲಿ ಬೀಳ್ದುದೆನೆ ಸದ್ವಿಧಿಯುಕ್ತರನಾರೊ ಕೊದಪರ್ ||೧೦೪||

ನಸೆಮಸಪೊಂದೆ ನುಣ್ಬಸಲೆಯೊಳ್ಸುಸಿಲಾಂತೆಸೆವೇಣನಂ ವಿಲಂ
ಬಿಸದಿಲೆಂದು ಬಂದನ ಪುಳಿಂದನ ವಕ್ಷಮನುದ್ಗಮಾಸ್ತ್ರದಿಂ
ದಿಸೆ ಕುಸುಮಾಸ್ತ್ರನಾರ್ಪಳಿದು ಕೂರ್ಪಳ ಕೈವಿಡಿದೆಯ್ದಿ ಪಲ್ಲವ
ಪ್ರಸರಸಮೇತಮಾದ ಮೆಳೆಯೊಳ್ ಪೊಸಪೂವಸೆಯಲ್ಲಿ ಕೂಡಿದಂ ||೧೦೫ ||

ಬಿಂಕದ ಶಂಕದ ಮೇಲಣ
ಪಂಕಜರಿಪುಬಿಂಬದಮೃತಫಳದಿನಿರಸಮಂ
ತಾಂ ಕುಡಿದು ಮಿಕ್ಕ ಮಧುರಸ
ಮಂ ಕನಸಿನೊಳಾದೊಡಂಟಿ ನೋಡಂ ಬೇಡಂ ||೧೦೬||

ಅಷ್ಟಮಾಶ್ವಾಸಂ

ಸಿರಿಯ ಹರಿಯೆಡೆಯೊಳಬ್ಧಿಯೊ
ಳಿರದೇಳ್ವ ಸುವರ್ಣಕಂಜರಜದೊಡವೆರೆದೊ
ಳ್ದೆರೆಗೆ ದೊರೆಯಾದುದು ವಧೂ
ವರರೆಡೆಯೊಳ್ಮಸುಪ ಮಿಸುನಿದೆರೆ ಮಣಿಗೃಹದೊಳ್ ||೬೦||

ಜವನಿಕೆ ನಡುವಿರೆ ನೋಡ
ಲ್ತವಕದಿನೋರೊರ್ವರಂ ಸಮುನ್ನತದೇಶ
ಕ್ಕವತರಿಸಿದರೆನೆ ಮುದದಿಂ
ದವರಾಗಳ್ಮೆಟ್ಟಿನಿಂದು ಮೆಟ್ಟಕ್ಕಿಗಳಂ ||೬೧||

ಕಂದದ ಕುಂದದ ನನೆಯಂ
ಕಂದರ್ಪಂ ರತಿಯ ಮುಡಿಗೆ  ಸೂಸುವವೋಲ್ಭೂ
ಕಂದರ್ಪಂ ಸೂದನೊಲ
ವಿಂದವಳ ಕಚೌಘದಲ್ಲಿ ಧವಳಾಕ್ಷತೆಯಂ ||೬೪||

ಎಲರೆಲೆದೆತ್ತನೂಂಕಿ ತೊಲಗುತ್ತಿರೆ ಪುಷ್ಪಪರಾಗಪೂಗಮಾ
ಮ್ರಲತೆಯ ಪಲ್ವಂ ಮಿಸುಪಶೋಕೆಯನುಣ್ದಳಿರೊಂದುವಂತೆ ಚೆ
ಲ್ವರೆ ಸುವರ್ಣಕಾಂಡಪಟಮೋಸರಿಸುತ್ತಿರೆ ಸನ್ಮುಹೂರ್ತಮು
ಜ್ವಲಿಸೆ ವಧೂವರರ್ಕಳ ಕರಗ್ರಹಣಂ ಬಗೆಗೊಂಡುದಾಕ್ಷಣಂ ||೬೫||

ತೆರೆ ಸರಿಯೆ ಸಂಜೆ ಸರಿವಂ
ತಿರೆ ವರವದನೇಂದುವಂ ನಿರೀಕ್ಷಿಸಿ ತಾರಾ
ತರುಣಿ ಮುದವಾಂಪ ಮಾಳ್ಕೆಯೊ
ಳರಸಿ ಮುದಂಬೆತ್ತು ಬೀಱಿದಳ್ನಿಜರುಚಿಯಂ ||೬೬||

ನನೆಯಂ ಪೇಱಿರ್ದ ಮಲ್ಲೀಲತೆಗಮಮರ್ದು ಸತ್ಕೋರಕಂಬೆತ್ತಚೂತಾ
ವನಿಜನಕ್ಕಂ ಚೈತ್ರನಚ್ಛಾಂಬುವನೆ ಸುರಿವವೋಲ್ ಸ್ವೇದವಾರ್ಬಿಂದು ರೋಮಾಂ
ಚನಮಂ ಕೈಕೊಂಡು ನಿಂದಾತ್ಮಜೆಗಮಡನೆ ಜಾಮಾತೃಗಂ ಸಿಂಹಳೇಂದ್ರಂ
ಮನಮೊಲ್ದೋರಂತೆ ಕೈನೀರೆಱೆದನಭಿನವಸ್ವರಕುಂಭಾಂಬುವಿಂದಂ ||೬೭||

ಪಾಡೆ ಶೋಭನಮನಂಗನೆಯರ್ಕಳ್ಮಂಗಳಪಾಟಕರುರ್ವಿ ಕೊಂ
ಡಾಡೆ ಭೋರ್ಗಱೆದು ವಾದ್ಯನಿನಾದಂ ತೀವಿರೆ ಭೂವರಬಾಂಧವ
ರ್ನೋಡೆ ಸಂತಸದಿನಾಗಮಘೋಷಂ ಪೊಣ್ಮಿರೆ ಜಾಣ್ಮಿಗೆ ಹೋಮಮಂ
ಮಾಡೆ ಭೂಸುರರಿಳಾಪತಪುತ್ರಂ ಕೈವಿಡಿದಂ ಕಮಳಾಕ್ಷಿಯಂ ||೬೮||

ನಡೆಮಡಿಯೊಳೊಯ್ಯನೊಯ್ಯನೆ
ನಡೆವ ವಧೂವರರದೇಂವಿರಾಜಿಸಿದರೊ ಬೆ
ಳ್ಪಡರ್ದ ಪುಳಿನಸ್ಥಳದೊಳಡಿ
ಯಿಡುತೊಡನೆಯ್ದುವ ಮರಾಳದಂಪತಿಗಳವೋಲ್ ||೬೯||

ಘನಕಚಘನಕುಚಭಾರದೆ
ವನಿತೆಯರುಱೆ ಬಾಗುವಂತೆ ಬಾಗುತೆ ಕರದಿಂ
ದನವದ್ಯೆಯರಾಗಳ್ ಮು
ತ್ತಿನ ಸೇಸೆಯನಿಕ್ಕಿ ಪರಸಿದರ್ಮನದೊಲವಿಂ ||೭೬||

ಸರಿಯಿಟ್ಟು ನೋಳ್ಪವೋಲ್ಪಂ
ಕರುಹಮನವಳಡಿಗೆ ತನ್ನ ಕರಮಿಡುತರಸಂ
ಸರಸಂ ಮಿಗೆ ಮೆಟ್ಟಿಸಿದಂ
ದರಹಾಸಂ ಮೊಳೆಯೆ ಸಪ್ತಪದಿಗಳನಾಗಳ್ ||೭೯||

ಹಿಮ ಮೃಗಮದ ಕುಂಕುಮ ಕ
ರ್ದಮ ಸುಮನೋಮಾಲ್ಯವೀಟಿಕಾಭೂಷಣವೃಂ
ದಮನಮಳಾಂಬರಮಂ ನೃಪ
ರಮಣಿಯ ಸಮುದಯಕೆ ಪೊನ್ನ ಪಾತ್ರೆಯೊಳಿತ್ತಳ್ ||೮೧||

ಮೆಲ್ಸರಿ ಸೂಳ್ಸರಿ ಮುಗಿಲೊ
ಳ್ಗಲ್ಸರಿ ತೆಳ್ಸರಿ ಕರಂ ಪೊನಲ್ವರಿಯಿಪ ಬಂ
ಬಲ್ಸರಿ ಬಲ್ಸರಿ ಕಾಲ್ಸರಿ
ಸಾಲ್ಸರಿ ಸಲೆ ಸುರಿದುಕಱೆದುವಿರುಳುಂ ಪಗಲುಂ ||೧೧೨||

ಫಣಿಯಂ ತುಂಡಿಸಿ ವಿಷಮಂ
ನೊಣೆದಾನುಂ ನೀಲಕಂಠನಾದೆನೆನುತ್ತಂ
ಕುಣಿವಂತೆ ವಿಷಧರದ ಮುಂ
ದಣಿಯರದಿಂ ಕೇಗಿ ಕುಣಿವ ನವಿಲೆಸೆದಿರ್ಕುಂ ||೧೨೦||

ಚಾದಗೆಯಂತೆ ಮುಂಬನಿಯನೇಂ ಬರೆಪೀರ್ದುದೆ ವಲ್ಲಿಯಂತಿದೇಂ
ತೋದುದೆ ವಾರಿಯಿಂ ಕಡವಿನಂತೆ ಮುಗುಳ್ತುದೆ ತತ್ಸಹಾಯದಿಂ
ಕೇದಗೆಯಂತೆ ಪೂತುದೆ ಮುಗಿಲ್ಗಳ ಪಂಗಿನಿತುಂಟೆ ಕೇಕಿಯಾ
ಹ್ಲಾದದೆ ಕಂಡು ನರ್ತಿಪುದಿದಲ್ತೆ ಸಮಾನವಯಃಪರ್ವರ್ತನಂ ||೧೨||

ನವಮಾಶ್ವಾಸಂ

ತಳಿರ್ವೆಳೆಮಾವು ಪಲ್ಲವಿಪಶೋಕೆ ಮುಗುಳ್ತದಿರ್ಮುತ್ತೆ ಮೊಗ್ಗೆಯಂ
ತಳೆಯಲೊಡರ್ಚಿ ನಿಂದ ಪೊಸಮಲ್ಲಿಗೆ ಪುಷ್ಪಮನಾಂತ ಚಂಪಕಂ
ಪಳೆಯೆಲೆಯಿಕ್ಕಿ ಸಣ್ಣನನೆಯೇಱಿದ ಪಾಟಳಿ ಪೂವನಾಂತು ಕಂ
ಗೊಳಿಸುವ ಕರ್ಣಿಕಾರಮಲರ್ದೀವಿದ ಮುತ್ತಮದೆತ್ತ ನೋಳ್ಪೊಡಂ ||೪೭||

ಮೊಡವಿಗಳಂತೆ ಮೂಡೆ ಪೊಸಮೊಗ್ಗೆಗಳಾ ಮಧುದೂತಿಯಲ್ಲಿ ಸೊಂ
ಪಿಡಿದಿರೆ ವಲ್ಲರೀತನು ಸಮಸ್ತ ಬಕಸ್ತನಮಲ್ಲಿ ಪೊಣ್ಮೆ ಕ
ರ್ಪಡದ ತಮಾಲದಲ್ಲಿ ಬಡಬಾಸೆಯೊಲೊಪ್ಪಿರೆ ಪದ್ಮಲೋಚನಂ
ಬಿಡದಲರ್ದೊಪ್ಪೆ ಜವ್ವನಮನಾಂತವೊಲಾ ವನಲಕ್ಷ್ಮಿ ತೋಱಿದಳ್ ||೪೮||

ಗಿಳಿಗಳೆಱಂಕೆಯ ಪಚ್ಚೆಯ
ನಳಿಮಾಲೆಯ ನೀಲಮಾಲೆಯಂ ಮಾವಿನ ಚೆಂ
ದಳಿರ್ಗೆಂಪಂ ಬನಸಿರಿ ತಾಂ
ತಳೆದಾ ಮಾಧವಮನೋಜ್ಞೆಯೆನಿಸುತ್ತೆಸೆದಳ್ ||೪೯||

ಜೇವಣಶಾಲೆ ತುಂಬಿಗಳ ಪುಷ್ಪಕಳಂಬನ ಶಸ್ತ್ರಶಾಲೆ ಕೀ
ಕೀರಾವಳಿಕೋಕಿಲಾವಳಿಗಳಗ್ಗದ ಪಾಠದ ಪಟ್ಟಶಾಲೆ ಮ
ಲ್ಲೀವಧು ಲಾಸ್ಯಮಭ್ಯಸಿಪ ನರ್ತನಶಾಲೆ ನವೀನಚೈತ್ರಲ
ಕ್ಷ್ಮೀವರಚಿತ್ರಶಾಲೆ ಮಧುಭೂಭುಜನೋಲಗಶಾಲೆ ಮಾಮರಂ ||೫೩||

ಗಿಳಿ ಗಿಳಿದಾಳಿ ಚೆಂದಳಿರೆ ಚಂದಿರಗಾವಿಯ ನೂತನಾಂಬರಂ
ಸುಳಿಯದೆ ನಿಂದ ತುಂಬಿಗಳ ಸಾಲ್ಪವಿಭೃಹನ್ಮಣಿಮಾಲೆ ಪುಷ್ಪಸಂ
ಕುಳದ ರಜಂ ಸುಗಂಧದ ರಜಂ ತನಗಾಗಿರೆ ತಾಳ್ದು ಮಲ್ಲಿಕಾ
ಲಳಯೊಳೇಂ ಮನಂಬಿಡಿದನೋ ಬನದೊಳ್ಸಹಕಾರಪಲ್ಲವಂ ||೫೪||

ತಳಿರಗಳೆ ದಟ್ಟಿಯಾಗೆ ಕೊನರೆಂಬ ಬೆರಲ್ಗದು  ವಜ್ರಮುಷ್ಟಿಯಂ
ತಳವಡೆ ತೋಱ ಮಾಮಿಡಿ ಶಿಖಂಡಕದಂತಿರೆ ಮಧ್ಯದಲ್ಲಿ ಕಂ
ಗೊಳಿಪಳಿವಿಂಡು ತದ್ರಜಮೆ ಮೃದ್ರಜದಂತಿರೆ ಕೋಕಿಳಸ್ವರಂ
ಕಳಕಳಮಾಗೆ ಮಾಮರರಮದೊಪ್ಪಿತು ಮಾರನ ಮಲ್ಲನಂತೆವೋಲ್ ||೫೬||

ಏಕಾದಶಾಶ್ವಾಸಂ

ಬಿಗಿದ ಬೆಳ್ಳಿಯ ನುಣ್ಮಣಿಯಂತೆವೊ
ಲ್ಭಗಣಮೊಪ್ಪಿರೆ ಕಾಲವನೇಚರಂ
ಜಗದ ಲೋಚನಮೀನಕೆ ಬೀಸಿದ
ನೆಗಳ್ದ ಕರ್ಬಲೆವೋಲ್ತಮಮೊಪ್ಪುಗುಂ ||೨೩||

ವಚನ
ಅಂತಿಟ್ಟಣಿಸಿ ಪರ್ಬಿದಂಧಕಾರದಲ್ಲಿ

ಬಳೆಗಳ್ಗಲ್ಕೆನದಂತೆ ಕಣ್ಬೆಳಗದೆತ್ತಂ ಸೂಸದಂತಿಟ್ಟ ಮಂ
ಜುಳಭೂಷಾಳಿಯ ಸಿಂಜಿತಂ ನೆಗಳದಂತಾಸ್ಯಾಬ್ಜಗಂಧಕ್ಕೆ ಮಂ
ಡಳಿಗೊಂಡಾಱಡಿವಿಂಡು ಗಾವರಿಸದಂತೋರಂತೆ ಜಾಣ್ಮಿಕ್ಕು ಪುಂ
ಶ್ಚಳಿಯರ್ ಬಂದುಪಕಾಂತಸೂಚಿತನಿಶಾಂತಾಂತಂಗಳಂ ಪೊರ್ದಿದರ್ ||೨೪||

ಉಡುಗಣದಂತೆ ಮೈಯೊಳಿಡಿದೊಪ್ಪೆ ಬೆಮರ್ನಿಜನೇತ್ರಕೈರವಂ
ಬಿಡದನುರಾಗಮಂ ತಳೆಯೆ ಪೆರ್ಮೊಲೆಯೆಂಬೆಣೆವಕ್ಕಿ ಗಾಸಿಯಂ
ಪಡೆದಿರೆ ತತ್ಕರಾಹತಿಯಿನಂದಿನನಿಲ್ಲದ ವೇಳೆಯಲ್ಲಿರು
ಳ್ಮಡದಿವೊಲಂಬೆರಸು ಪಾಣ್ಬೆ ಕಳಾನಿಧಿಯೊಂದುಗೂಡಿದಳ್ ||೩೦||

ವಚನ
ಮತ್ತಮೊಂದೆಡೆಯೊಳೊರ್ವಳ್ ಪಾಣ್ಬೆ
ಉಗುರ್ಗೊನೆ ನಾಂಟದಂತೆ ಪಿಡಿ ಬಲ್ಮೊಲೆಯಂ ನಿಱಿಯಂ ಸಡಿಲ್ಚಿ ನೀ
ನುಗಿಯದಿರುಟ್ಟುದಂ ಜಡಿದು ಪೊಯ್ಯದಿರೊಯ್ಯನೆ ಮೈಯ ಬಾಸುಳಂ
ನೆಗಪದಿರೆನ್ನ ಚೆಂದುಟಿಗೆ ಪಲ್ಮೊನೆ ನಾಂಟದ ಮಾಳ್ಕೆಯಿಂದೆ ಮೆ
ಲ್ಲಗೆ ಮಿಗೆ ಚುಂಬಿಸೆಂದು ಸತಿ ಶಿಕ್ಷಿಸಿದಳ್ಪೊಸಪಾಣ್ಬನೊರ್ವನಂ ||೩೧||

ವಚನ
ದಲ್ದೆ ಪೆಱತೊಂದು ತಾಣದೊಳೊರ್ವ ಜಾತಿ ಜಾರೆ ಜವ್ವನದ ಜಾರನಂ ಕಂಡು

ಇನನಿಲ್ಲವಿಂದು ಬಾರಂ
ಘನತಿಮಿರಮಿದಪ್ಪದಕ್ಕಟ ನೇಹಮದಿಲ್ಲಂ
ಮನೆಯೊಳ್ಸೊಡರಿದೆ ಪೋದುದು
ಜನರಹಿತಂ ನೆರೆಯಿದೆಂದು ಪದಿರಿಂ ನುಡಿದಳ್ ||೩೨||

ಆಗಳೆ ಮುಳಿಸಾಗಳೆತಿಳಿ
ವಾಗಳೆ ಪೊಸಬೈಗುಳಾಗಳೇ ಪೊಯ್ಗಳ್ ಮ
ತ್ತಾಗಳೆ ಸವಿಸುಸಿಲೆಸಗುವ
ಳಾಗಳೆ ಪಾಣ್ಬಂಗೆ ಸುರತಸುರಲತೆ ನಿಜದಿಂ ||೩೬||

ಮೆಲ್ಲನೆ ಬರ್ಪ ಮೆಲ್ಲನಮರ್ದಪ್ಪುವ ಮೆಲ್ಲನೆ ಚುಂಬಿಪಳ್ಕಱಿಂ
ಮೆಲ್ಲನೆ ನೋಳ್ಪ ಮೆಲ್ಲನುಸಿರಿಕ್ಕುವ ಮೆಲ್ಲನೆ ಲಲ್ಲೆಗೈವ ಮೇ
ಣ್ಮೆಲ್ಲನೆ ಪಾಯ್ವ ಮೆಲ್ಲನೊಡಗೂಡುವ ಮೆಲ್ಲನೆ ಸೌಖ್ಯವಾಂಪ ತ
ಮ್ಮೆಲ್ಲ ನೆಗಳ್ತೆದೋಱಿ ಪೊಸಜಾಣ್ಮೆಯ ಪಾಣ್ಬೆಯರಿರ್ದರೋಪರೊಳ್ ||೩೭||

ಏನೆಲೆ ಬಾಲೆ ಯೇಕೆಲೆ ಭುಜಂಗಯಿದೆಲ್ಲಿಗೆ ಪೋಪೆ ಪರ್ಬಿದು
ದ್ಯಾನಕದೇಕೆ ನೀರ್ಮುಳುಗಲೀ ಪೊಸಜೊನ್ನದೊಳುಂಟೆ ವುಂಟು ಕಾ
ಮಾನಲದಗ್ಧೆಯೇ ನುಡಿಯಲೇನೊಡವರ್ಪೆನೆ ಬೇಡಮೊರ್ವಳೇ
ನೀನೆಲೆಯಾದೊಡೇನಗಿವೆ ಯಿಲ್ಲೆನೆ ಕೈಪಿಡಿದಪ್ಪಿದಂ ವಿಟಂ ||೧೧೭||

ಕಂಡಿನಿಯನೆಂದು ತಿಳಿದಾ
ಖಂಡಲ ಸಂಪದಮೆ ಸಾರ್ದವೋಲ್ಸಂಭ್ರಮದಿಂ
ಪಿಂಡೇಳ್ವ ಪುಳಕದೊಡನೊಡ
ಗೊಂಡೊಯ್ವುತ್ತಾ ತ್ಮಗೃಹದೊಳವನೊಡವೆರೆದಳ್ ||೧೧೮||

ಎಲೆ ಕಿಱೆಸೂಳೆ ನೀ ನೆರೆದ ಸೇದೆಯನಾಱಿಸದೊತ್ತೆಯಾಂತೆಯೀ
ಕಳೆಗಳೆ ಸೂಚಿಕುಂ ಸುಖಮದೇಂ ದೊರಕೊಳ್ವುದೆ ನಿನ್ನೊಳೀಗಳೆಂ
ದುಲಿವ ವಿಟಂಗೆ ಮಾರ್ನುಡಿದಳೊಂದಳಿ ಪೀರ್ದೊಡೆ ಪೋಪುದೇ ನವಾ
ಬ್ಜಲಲಿತಸೌರಭಂ ಬಳಿಕಮೊಂದಳಿ ಸಾರ್ದೊಡೆ ಸೌಖ್ಯಮೀಯದೇ ||೧೨೨||

ಎಲೆ ಕಾಯ್ಪೇರಿದೆ ಚೈತ್ರವವಲ್ಲರಿಯೆ ಗಂಧಂಗುಂದದಿರದಪ್ಪೆ ಕ
ಮ್ಮಲರೇ ಮೇರೆಯನೊತ್ತಿ ವರ್ತಿಸುವೆ ಸಂವರ್ತಾಬ್ಧಿಯೇ ಬಂದುದೇ
ಕಲಿ ಮತ್ತೇಂ ಕೃತಮೇ ಕೃಪಾನ್ವಿತಮೆ ಚಿತ್ತಂ ಕೌರವಕ್ಷೋಣಿ ಭೃದ್
ಬಲಮೇ ಕರ್ಣಕಠೋರಮೀ ನುಡಿಯಿದೇಂ ಪಾರ್ಥಾಸ್ತ್ರಮೆ ಮಟ್ಟಮಿರ್ ||೧೬೯||

ವಚನ
ಎಂಬ ಮಹಾಪ್ರೌಢೆಯ ಜಾಣ್ಮಾತಂ ಕೇಳ್ದು ಮೆಚ್ಚುತಿರ್ಪನ್ನೆಗಮೊಂದು ಮುತ್ತಿನ ಮೊಗಸಾಲೆಯ
ಮುಂದಣ ಕನಕಮಯ ಕಮನೀಯ ವೇದಿಕಾಗ್ರದ ಕುಸುಮತಳ್ಪದೊಳ್ಕುಳ್ಳಿರದು ವಲ್ಲಭೆ ನಲ್ಲನಂ
ನೆಮ್ಮಿ ಚಲ್ಲದಿಂ ಮೆಲ್ಲನಿಂತೆಂದಳ್

ವಾದಿಸಮನಾಂತ ನಾಮಮ
ನಾದಂ ತಳೆದಾತನಳೆದುದೇಂ ಭೋಗಿಜನಾ
ಹ್ಲಾದಕನಾವಂ ತಾರಕ
ಭೇದಕನಾವಂ ಕುಮಾರನಲ್ತೆ ಮೃಗಾಕ್ಷಿ ||೧೭೦||

ವಚನ
ಎನೆ ಮಗುಳ್ದವಳೊಡನವನಿಂತೆಂದಂ
ವನದ ಸಮಧ್ಯದ ಪರ್ಯಾ
ಯನಾಮದೊಳ್ಗಮಿಪುದೇಂ ತದಾಶ್ರಯಮೇಂ ಜೀ
ವನಕೆ ಮುನಿವವನದಾವಂ
ವನಧಿಯೆಂತಪ್ಪುದೆನಗೆ ಪೇಳ್ ಕಮಳಾಕ್ಷೀ ||೧೭೧||

ವಚನ
ಮತ್ತಮೊಂದು ಸೆಜ್ಜೆವನೆಯೊಳೋರ್ವಕ್ಕಱಿಗಬೊಜಂಗಂ ಸೊರ್ಕುಜವ್ವನೆಗೆ ಸಕ್ಕದದ
ಬಹಿರ್ಲಾಪಿಯಂ ಪೇಳ್ದನದೆಂತೆನೆ

ಬ್ರಹ್ಮಾಣೀ ಕಾ ಜನೇಷ್ಟಂ ದಧತಿ ಜಡತಿ ಕೇ ತಾಪಸಾಂಗಂಚ ಕೀದೃಕ್
ಪ್ರೀತಾ ಕಾ ಕುತ್ರ ವಿಶ್ವಂ ನಿವಸತಿ ವಿಬುಧಾಬೋಧನಂ ಕಿಂ ನೃಪಾಲಃ
ಕಸ್ಮೈ ಸನ್ನದ್ಧ ಈಶಃ ಪತತಿರಿತಿವಿದಿತಃ ಕಸ್ಯ ವಂದ್ಯೌಚ ಕೌ ಕಿಂ
ವಕ್ತೀಶಂ ಕೌ ಜಗತ್ಸಂಹರಣಭರಣ ಕೌ ಮಂಗಳೋಕ್ತಿಃ ಕವೇಃ ಕಾ ||೧೭೨||

ವಚನ
ಎನೆ ಕೇಳ್ದವಳ್ಕಾಳಿದಾಸಕವಿವಿರಚಿತಕಾವ್ಯಾದಿಮಂತರ್ಲಾಪಿಯಿನುತ್ತರಂಬೇಳ್ದವನ
ಚಿತ್ತಂಬಡೆದಿರ್ದಳಿತ್ತಮತ್ತೊಂದೆಡೆಯೊಳೊರ್ವ ಮತ್ತಕಾಶಿನಿ ಕಾಂತನೋಳ್ಪ್ರಹೇಳಿಕೆಯಂ
ಸೊಲ್ಲಿಸಿದಳದೆಂತೆನೆ

ರಣೇನ ಸಾಧ್ಯತೇ ಸರ್ವಂ
ಮಠೇನಧ್ರೀಯತೇ ಮಹೀ
ಆಸಾರೇಕ್ರೀಡತೇ ಹಂಸಃ
ಕವಿಶೇಷ ಕಿಮದ್ಭುತಂ ||೧೭೩ ||

ಮಗಳೆ ಮನೋಜ್ಞಮಾತೆ ಮಿಗಿಲಿತ್ಯೊಡೆ ಮೀಱದಿರಾತನಾಜ್ಞಯಂ
ಮುಗುದೆ ಕಳಲ್ಚು ಮೂಢತೆಯ ಮೇಣದ ಪುತ್ತಳಿಯಂತೆ ಮೈಯನಿ
ತ್ತಗಲದೆ ಕೊಡಿ ಮೋಹಿಸಿ ಧನಂಬಡೆ ಮೌನಮಿದೇಕೆ ಮಂದಿರಂ
ಬುಗು ನಡೆ ಮಸ್ತಕಂದೊನೆಯದಿರ್ ಕಡುಮೂರ್ಖತೆ ಬೇಡ ಕಾಮಿನೀ ||೧೭೪||

ಉದರದ ವಳಿಗಳ್ನಿನ್ನಯ
ವದನಮನೆಯ್ದಿದವು ಕುಚದ ಬಿಣ್ಪುದರಮನೈ
ದಿದುದಳಕಮೈದಿದುದು ಕ
ಣ್ಗದಿರಿದು ಮುದಿಪಾಱಿ ಪೇಳಿದೇನಚ್ಚರಿಯೋ||೧೮೧||

ದ್ವಾದಶಾಶ್ವಾಸಂ

ಜಾಱೆ ನಿಱಿ ಜಾಱೆ ಸೋರ್ಮುಡಿ
ಜಾಱೆ ಬೆಮರಜಾಱೆ ಮೇಲುದಂ ಮುಡಿದಲರ್ಗಳ್
ಜಾಱೆ ಮುದಂ ಜಾಱೆ ಮದಂ
ಜಾಱೆ ಪದಂ ಜಾಱೆ ಜಾಱೆ ಜಾಱಿದಳೋರ್ವಳ್ ||೯||

ಮನೆಯಾಣ್ಮಂಗೂಡಿ ಮಂಚಾಗ್ರದೊಳೊಱಗಿರೆನುತ್ತಾಳಿಯಂ ಸಂತಮಿಟ್ಟಾ
ಮನದಾಣ್ಮಂಗೂಡಿ ರತ್ಯಂತದ ಸೊಕವಡೆದೈತರ್ಪುದುಂ ಪಾಣ್ಬೆ ತತ್ಕಾಂ
ತನೊಳತ್ತಲ್ಕೂಡಿ ಸೌಖ್ಯಂಬಡೆದಿದಿರ್ವರೆ ತದ್ದೂತಿಯೋರೋರೂವರೊಳ್ತ
ಮ್ಮನಿತುಂ ವೃತ್ತಾಂತಮಂ ಕೇಳ್ದಹಹಯೆನುತೆ ಕೈವೊಯ್ದು ನಕ್ಕಾಡುತಿರ್ದರ್ ||೧೦||

ಬಿಡು ಬಿಡು ಕೋಳಿ ಕೂಗಿದಪುದೆಮ್ಮವರೇಳ್ವರೆನುತ್ತೆ ಬಲ್ಪಿನಿಂ
ಬಿಡಿಸಿಕೊಳುತ್ತೆ ಸಂವರಿಸಿ ನೀವಿನುಳ್ಳುಡೆಯುಟ್ಟು ಬೀದಿಯೊಳ್
ನಡೆವೆಳೆಜೋಡೆ ಮೂಡುಗಡೆಗೆಂಪನಭೀಕ್ಷಿಸಿ ಭೀತಿವಟ್ಟು ಕ
ಣ್ಗೆಡುತೆ ದವಾಗ್ನಿಗಂಡರಲೆಯಂತೆರ್ದೆ ಪೌವನೆ ಪಾಱೆ ಪಾಱಿದಳ್ ||೧೧||

ತ್ರಯೋದಶಾಶ್ವಾಸಂ

ಶಿವಶಿವ ಪೇಳ್ವೆನೇನನವನೀಪತಿ ತನ್ನ ತುರಂಗಮಂ ಮಹಾ
ಜವದೊಳೆ ಕಂಡು ದಾಂಟಿಸಿ ಕೆಲಂದೆಗೆಯೆಂಬನಿತಕ್ಕೆ ಮುಂಚಿ ಮು
ನ್ನವೆ ಸಚಿವಾಶ್ವಮೈದೆ ಕೊಳಗಿಂ ತಲೆ ಖಂಡಿಸಿ ಪಾಱೆ ಮೆಟ್ಟಿತಂ
ದವಿರಳರಕ್ತಧಾರೆ ಪೊಱಸೂಸಿರೆ ಬಾಲನ ಕಂಠನಾಳಮಂ ||೯೬||

ವಚನ
ಎಂದು ನಿಶ್ಚೈಸಿ ಮನಸ್ತಾಪಮಂ ಧೃತಿಸಾಂದ್ರಚಂದ್ರಿಕೆಯಿಂ ನಂದೆವೊಯ್ದು
ನಡೆತಂದು ರಾಜಾಲರಯದ್ವಾರೋಪಾಂತದೊಳ್ವಾಜಿಗಳನಿಳಿದು ದಂಡನಾಥ ಮಂಡಳಿಕಾದಿಯಂ
ಯಥಾಕ್ರಮಂ ಬೀಳ್ಕೊಟ್ಟು ನಿಜಗೃಹಂಗಳಂ ಪೊಕ್ಕಿರ್ದರನ್ನೆವರಮಿತ್ತಲ್ನೆರೆದ ಪುರಜನಮಾ
ರುಂಡಮಂ ಮುಂಡಮಂ ಕಂಡು

ಅಕಟಕಟದಾರಣುಗನೀ
ಸುಕುಮಾರಂ ಮಡಿದನಶ್ವಖುರಹತಿಯಿಂ ಬಾ
ಲಕವಧಮಿದನಱಿದೊಡೆ ತಾ
ನಕುಟಿಲಮತಿಚೋಳನೃಪತಿಯೇಂ  ಸೈರಿಪನೇ ||೯೮||

ಶರಣಜನ ನಜವನದಿನ
ಕರನಾ ಸತ್ಯೇಂದ್ರಚೋಳಧರಣೀಶ್ವರನೀ
ಶ್ವರಭಕ್ತವಧವನಿದನಾ
ರ್ದೊಱೆಕೊಳಿಸಿದರೆಂದು ಮುಳಿಯದಿರ್ಪನೆ ಬಳಿಯಿಂ ||೯೯||

ಮನುಚೋಳಂ ಮನ್ನಿಸಿದನೆ
ತನಯನಪರಾಧಯುಕ್ತನಂ ಪಿತನೆಂದೇಂ
ನೆನೆದನೆ ಟಂಡೇಶಂ ತ
ನ್ನನೆ ಬಗೆದನೆ ಬಗೆಯೊಳಾ ಪಗಲ್ಚೋಳನೃಪಂ ||೧೦೦||

ಅದಱಿಂದೇನಪ್ಪುದೊ ಬ
ರ್ಪುದನೀಶಂ ಬಲ್ಲನೆಂದು ಮಱುಗುತ್ತಿರೆ ತ
ಳ್ವದೆ ಘಟಮನಿಳಿಪಿ ಕಾಣದೆ
ಸುದತಿ ನಿಜಾತ್ಮನನಱಸಿ ತೊಳಲುತ್ತಿರ್ದಳ್ ||೧೦೧||

ಕರಿಗಳ ಕಾಲ್ಗೊಳಗಾದನೊ
ವರೂಥಚಕ್ರಕ್ಕೆ ಸಿಲ್ಕಿದನೊ ಹಯಚಂಚ
ತ್ಖುರಹತಿಯಿಂದಳಿದನೊ ಶಂ
ಕರನಕಟಕಟೆಂದು ಬಗೆದು ಬಾಯ್ವಿಡುತಿರ್ದಳ್ ||೧೦೩||

ತನುಭವನೆಲ್ಲಿದನೆಲ್ಲಿದ
ನಿನಿವಾತಿನ ಕೀರನೆಲ್ಲಿದಂ ಮೆಲ್ನಗೆಯಿಂ
ಪಿನ ಸೊಬಗನೆಲ್ಲಿದಂ ಚೆ
ಲ್ವಿನ ಕಣಿಯೆಲ್ಲಿದನೊ ಮನ್ಮನೋಂಬುಜಹಂಸಂ ||೧೦೪||

ಎಳೆಗಿಳಿಯಂ ಕೊಱಲ್ಮುಱಿದು ಮೋದಿದರಾರ್ಮಱಿಯಂಚೆಯಂ ಭಯಂ
ಗೊಳಿಸುತೆಱಂಕೆಯಂ ಪಱಿದು ಪೊಯ್ದವರಾರ್ಮೃಗಶಾಬಮಂ ಕರಂ
ಮುಳಿದು ಶಿರೋಧಿಯಂ ಕೆಡೆಯಲೆಚ್ಚವರಾರ್ಬಿಸನಾಕಾಂಡಕೋ
ಮಳತರಕಂಠಮಂ ಕಡಿದುರುಳ್ಚಿದರಾರ್ಸುಕುಮಾರಶೇಖರಾ ||೧೦೫||

ಹಾ ಮಗನೆ ಹಾ ಮನೋಜ್ಞನೆ
ಹಾಮುದ್ದುಗ ಹಾ ಮದೇಭಗತಿ ಮಂಜುಳ ಹಾ
ಹಾ ಮಧುರವಾಣಿ ಹಾ ಮ
ತ್ಪ್ರೇಮಾಸ್ಪದ ಹಾ ಮದೀಶವಂಶಲಲಾಮ ||೧೦೬||

ಎಲ್ಲಿಯ ಹಯಮೆಲ್ಲಿಯನೃಪ
ನೆಲ್ಲಿಯ ವೈಹಾಳಿಯೆಲ್ಲಿಯತಿಕಳಕಳಮಿಂ
ತೆಲ್ಲಿಯ ಮೃತಿ ನಿನಗೆ ಬಂದುದೆಲೆ ಸುಕುಮಾರ ||೧೦೭||

ಮುನ್ನಱುವರಳಿದಳಲನೆಲೆ
ನಿನ್ನಂ ನೆಱೆನೋಡಿ ಮಗನೆ ಮಱೆದಿರ್ದೆಂ ಪೇಳ್
ಇನ್ನಾರಿಂದಂ ಮಱೆದಪೆ
ನೆನ್ನೊಳುಸುರ್ಸುಮ್ಮನಿರದಿರೆಲೆ ತನುಜಾತಾ ||೧೦೮||

ಗಳಗಳನೆ ಬಳೆದು ಧನಮಂ
ಗಳಿಸಿ ಚರಾರ್ಚನೆಯನೆಸಗಿ ಹರಕೃಪೆವಡೆದು
ಜ್ವಳಸುಖಮನೀವನೆಂದಿರೆ
ತಿಳಿವಿಲ್ಲದ ಮಗನೆ ತುರಗಹತಿಯಿಂ ಮಡಿದೈ ||೧೦೯||

ಕೊರಲಂ ಮೆಟ್ಟುವ ಪದದೊಳ್
ತುರಗಂ ಕಂಗೆಟ್ಟು ಜನನಿಯೆಂದೆನ್ನಂ ನೀ
ಕರೆದೆಯೊ ಮಱೆದೆಯೊ ದೋಷಾ
ಕರೆಯೆಂದೇಂ ತೊಱೆದೆಯೋ ತನೂಜನೆ ಪೇಳೈ ||೧೧೦||

ಇವಳವನಿಪಂಗೆ ಮೊಱೆಯಿ
ಕ್ಕುವಳಾನಿರೆ ಕುವರರೆಸಗಿದಪರಾಧಮನೆಂ
ಶದವಧರಿಸಿ ಪೋದನೆಂದೆನೆ
ರವಿ ಪಶ್ಚಿಮಗಿರಿಯ ಶೃಂಗಮಂ ಮಱೆಗೊಂಡಂ ||೧೧೧||

ಕಡವರಮಡಂಗಿತೇ ಪೊಸ
ಕಡಾರಮಿಂದಕಟ ಮಾಯಮಾದುದೆ ಮೆಱೆವಿಂ
ಗಡಲಿಂಗಿಪೋದುದೇ ಕಡಿ
ವಡಿದುದೆ ಕಲ್ಪಾವನೀಜಮಿದು ವಿಧಿವಶದಿಂ ||೧೦೩||

ಪಸಿದೆಯೆಲೆ ಕಂದ ಬತ್ತಿತು
ಬಸುಱಿದು ಕಳೆಗುಂದಿತಾನನಂ ಕಣ್ಬೊಣರ್ಗಳ್
ಮಸುಳ್ದವುಣಲ್ಬಡೆಯದೆ ಮಿಗೆ
ಬಸವಳಿದಿಂತಿರ್ಪುದುಚಿತವೇ ಸುಕುಮಾರಾ||೧೧೪||

ಸರಿವರೆಯದ ಮಕ್ಕಳ್ ಶಂ
ಕರನೆಲ್ಲಿದನಾಡಲೆಂದು ಬೆಸಗೊಳಲೇನೆಂ
ದಿರದೆ ಮಱುಮಾತುಗೊಟ್ಟಪೆ
ನರಸನ ಹಯದಿಂದೆ ಮಡಿದನೆಂಬೆನೆ ಮಗನೇ ||೧೧೫|

ನೀನಾಡಿದೆಡೆಗಳಂ ಸುತ
ನೀನೊಱಗಿದ ಪಾಸುವಂ ತನೂಭವ ಪದಪಿಂ
ನೀನುಂಡ ತಾಣಮುಮನಿ
ನ್ನಾನೆಂತೀಕ್ಷಿಸುವೆನೆಂತು ಸೈರಿಪೆನಕಟಾ||೧೧೬||

ಗಾಡಿಯೊಳಾಡಿ ಮಕ್ಕಳೊಡನಂಗಳಕೈದಿರೆ ತಳ್ತ ಧೂಳಿಯಂ
ನಾಡೆ ಸೆಱಗಿನಿಂದೊಱಸಿ ಮೈದೊಳೆದೊಳ್ಳುಣಿಕ್ಕಿ ಮುದ್ದುಗೈ
ದೂಡಿ ವಿಳಾಸಮಂ ಮೆಱೆದು ಸಿಂಗರಿಸುತ್ತಮರ್ದಪ್ಪೀ ಬೇಡಿತಂ
ನೀಡಿ ನಿರೀಕ್ಷಿಪೆನ್ನನುಳಿದೊರ್ವನೆ ಪೋಪುದೆ ನೀಂ ತನೂಭವಾ ||೧೧೭||

ಅಳಲದಿರು ತಾಯೆ ದುಃಖಂ
ಗೊಳದಿರ್ ನೀನೇಂದು ನೋಡಿ ಸಂತೈಸದೆ
ಣ್ಗಳ ಜಳಮಂ ತೊಡೆಯದೆ ಕಡು
ಮುಳಿದರವೋಲ್ಸುಮ್ಮನಿರ್ಪುದೇ ಸುಕುಮಾರಾ ||೧೧೮||

ನೋಡುವ ಕಣ್ಣೊಡೆದುದು ಮಾ
ತಾಡಿಪ ನಾಲಗೆ ಮುರುಂಟಿದುದು ನಿನ್ನಂ ಮುಂ
ದಾಡುವ ಕೈಯುಡಿದುದು ಸಲೆ
ಪಾಡುವ ಬಾಯ್ಬೆಂದುದಣುಗ ನೀಂ ಮಡಿಯಲೊಡಂ ||೧೧೯||

ಆರೊಡನುಸಿರ್ವೆಂ ದುಃಖಮ
ನಾರುಂಟೆನಗಕಟ ಮಗನೆ ಮಗನೆ ಮನೋಜಾ
ತಾರಿಯ ಕೃಪೆ ತಪ್ಪಿದ ಬಳಿ
ಕಾರಾದೋಡಮೇನೊ ನಿನ್ನನೇಂ ಕಾಣಪರೇ ||೧೨೦||

ವಚನ
ಎಂದಾಕ್ರಂದನಗೈದಳಲ್ದು ಬಳಲ್ದು ಬಸವಳಿದು ಬಲ್ಪುಗುಂದಿ ಬಿಸುಸುಯ್ದು ಬಸುರಂ ಪೊಸೆದು
ದೈನ್ಯಂಬಟ್ಟು ಬಾಯಂ ಬಿಟ್ಟು ಪೆಸರ್ಗೊಂಡು ಕರೆಕರೆದೊಳರ್ದು

ಪರಮ ಕೃಪಾಕರನೆಂಬೀ
ಬಿರುದಂ ಬಿಸುಟಕಟ ಶಂಕರಾ ಶಂಕರನಂ
ಹರಸಿ ನಡುಗಾಡೊಳಂಧೆಯ
ಕರದಂಡಮನೆಳೆದುಕೊಂಡವೊಲ್ಮಾಡಿದೆಯೈ ||೧೨೯||

ಎಲೆ ಗಿರಿಜಾತೆ ಮಾತೆ ಕರುಣಾಕರೆ ಶಾಂಕರಿ ದಿವ್ಯರೂಪೆ ನಿ
ರ್ಮಲೆ ನಿಗಮಾಗಮಸ್ತುತೆ ಮಹೇಶ್ವರಿ ಮಂಗಳಮೂರ್ತಿ ಭಕ್ತವ
ತ್ಸಲೆ ರತಿಗಂದಳಲ್ಗಳೆದವಳೆ ದೇವಿ ರಮಾನತೆ ನೊಂದೆನಿಂದು ನಿ
ನ್ನಲಘುಕೃಪಾಕಟಾಕ್ಷದಿನಭೀಕ್ಷಸಿ ರಕ್ಷಿಪುದೆನ್ನನಂಬಿಕೆ ||೧೩೦||

ಇಂದೆನ್ನ ವಂಶಭವರೊಲ
ವಿಂದಂ ಪನ್ನತಿಕೆದೋಱಿ ಬರಿಪರ್ಗಡ ಬಾ
ಲೇಂದುಶಿರೋಮಣಿಯಂ ನೋ
ಳ್ಪೆಂ ದಿಟಮೆಂದೆಯ್ದಿದಂತೆ ಮೂಡಿದರ್ಕನಂ ||೧೩೧||

ಮೂಡಣದಿಕ್ಕು ಕೆಂಪಡರೆ ಮೂಡಿದ ದಿವ್ಯದಿನೇಶಬಿಂಬಮಂ
ನೋಡಿ ಶಶಾಂಕಶಂಕೆದಳದಂತೆವೊಲುತ್ಪಳಮುಂ ಸರೋಜಮುಂ
ಕೂಡಿರೆ ಸಂಜೆ ನೀಳ್ದೆಸಳನೊಂದನಮರ್ಚುವ ಬಿರ್ಚುವಾಟಮಂ
ಮಾಡಿದುವಂತೆ ಸಂದೆಗಮೆ ಸತ್ವರಕಾರ್ಯಕೆ ವಿಘ್ನಮಲ್ಲವೆ ||೧೩೨||

ನೊಂದು ಪಲುಂಬಿ ಪಂಬಲಿಸಿ ಮೇಣ್ಪಲವಾಡಿ ಬಳಲ್ದುಬಾಡಿ ಕ
ಣ್ಣಿಂದಿಳಿವಶ್ರು ಕಾಳ್ಪುರಮದಾಗಿರೆ ಬಾಯ್ದೆಱೆ ಬತ್ತೆ ಮತ್ತೆ ಶೋ
ಕಂ ದಳವೇಱೆ ಪೌರರಳಲುತ್ತಿರೆ ತಾನಳುತಲ್ಲಿ ತಾಳ್ದು ತ
ನ್ನಂದನನಂಗಮಂ ಮೊಱೆಯಿಡಲ್ನಡೆಗೊಂಡಳಿಳಾಧಿನಾಥನೊಳ್ ||೧೩೪||

ದೆಸೆಗಳ್ಮಾರ್ದನಿಗುಡೆ ಬಿಡ
ದಸವಸದಿಂದೊಳರ್ವ ನಿನದದಿಂ ಕಣ್ಬನಿಯಿಂ
ರಸೆ ಕೆಸಱೇಳ್ದಿರೇ ಬಂದ
ಳ್ಬಸವಳಿಯುತ್ತಳಲುತರಸನರಮನೆಯತ್ತಲ್ ||೧೩೫||

ಕಂದನ ಪಂದಲೆಯಂ ಪಿಡಿ
ದಿಂದೀವರನಯನೆಯೊರ್ವಳುಱೆಮೊಱೆ ಯಿಡುತುಂ
ಕಂದರ್ಪರಿಪುಗೆ ಬಾಗಿಲೊ
ಳಂದಂಗೆಟ್ಟಳುತಮಿರ್ಪಳವನಿತಿಲಕಾ ||೧೩೭||

ವಚನ
ಎನಲಾನೆ ವಿಚಾರಿಪೆಂ ತಳ್ವದೊಳಪುಗಿಸೆಂಬುದುಮವಂ ಮಹಾಪ್ರಸಾದ
ಮೆಂದವಳನೊಳಪುಗಿಸಿ ಕರೆದುತರ್ಪಾಗಳ್

ಕರತಳದಲ್ಲಿ ತಾಳ್ದ ತಲೆ ಸೋಗಿಲೊಳಿಟ್ಟ ಕಬಂದಮೆತ್ತಲುಂ
ಪರೆದಳಕಾಳಿ ಧೂಳಿ ಪುದಿದಂಗಮಡಂಗಿದ ಬಲ್ಪು ನೆತ್ತರೊಳ್
ಪೊರೆದ ಸೆಱಂಗು ಪಾಯ್ದುಗುವ ಕಣ್ಬನಿ ಬತ್ತುವ ಬಾಯ್ಪೊದಳ್ದಸು
ಯ್ಕೊರಗಿದ ವಕ್ತ್ರಮುಚ್ಚಳಿತಹಾರವಮೊಪ್ಪಿರೆ ಬಂದಳಾರ್ತದಿಂ ||೧೩೮||

ಅಳಲದಿರೆಲೆ ತಾಯೆ ನೀನಾ
ರಳಿದಣುಗನಿದಾರವಂ ಕೊರಲ್ಗೊರೆದ ಮಹಾ
ಖಳನಾವನಾತನಂ ಪೇ
ಳ್ಬಳಿಯೊಳ್ನೆಱೆ ಕಾಣ್ಬೆನಿದಕೆ ತಕ್ಕುಜ್ಜುಗಮಂ ||೧೩೯||

ವಚನ ಎನಲೆಂತಾನುಮಳಲಂ ಸಂತೈಸಿಕೊಂಡು ಕೈಮುಗಿದು ನಿಂದು ಕರುಣಾಂತರಂಗಂಗೆ
ಸತ್ಯೇಂದ್ರಂಗೆ ಗದ್ಗದಾಂಕುರಿತಶಿಥಿಲಾಕ್ಷರಂಗಳ್ಪೊಱಮಡೆ ಪೇಳಲ್ಮಗುಳ್ದಿಂತೆಂದಳ್

ತನಗುಳ್ಳರ್ಥಮನೆಲ್ಲಮಂ ಬಿಡದೆ ಕೊಂಡುತ್ಸಾ,ದಿಂದಂ ವಣಿ
ಗ್ಜನಯುಕ್ತಂ ಕಡಲೊಳ್ಪಡಂಗನೇರ್ದು ಪೋಗುತ್ತಿರ್ದೊಡಾ ನಾವೆ ತ
ದ್ಘನವಾರಾಶಿಯೊಳಾಗಳೆ ಮಗುಳ್ದೆನ್ನಾಳ್ದಂ ಸಮಂತಾಳ್ದು ಜೀ
ವನದೊಳ್ಜೀವನಮಂ ವಿಸರ್ಜಿಹಸಿದನೇನೆಂಬೆಂ ಮಹೀಪಾಲಕಾ ||೧೪೨||

ಕಯ್ದಳಿರಿಂದೆ ಮೈದಡವಿ ವಾಮಲೋಚನದಿಂದೆ ನೋಡಿ ಸೈ
ಪೆಯ್ದೆ ಪದಾಬ್ಜಮಂ ಪಣೆಯೊಳಿಟ್ಟಳದಿರ್ನಿನಗೊರ್ವ ಸೂನು ತಾ
ನೆಯ್ದೆ ಗುಣಾಂಕನುದ್ಭವಿಪನೀಯಳಲಂ ಪಱಿದಿಕ್ಕಿ ತರುಣೇಂದುಧರಂ ಧರಾಧಿಪಾ ||೧೫೦||

ಹರೆಯಂ ಕಿಱಿದಾದೊಡಮೇಂ
ಪಿರಿದೊ ವಿವೇಕಂ ಶಿವಾಂಕಮಾಲೆಯನತ್ಯಾ
ದರದಿಂ ಪಾಡುವನಭವನ
ಶರಣರ್ಗೆಱಗುವನವಂದಿಱೊಳ್ಪಿನದಿಸುವಂ ||೧೫೫||

ಶಿವಕೀರ್ತನಮಂ ಕೇಳ್ವಂ
ಶಿವಾಂಘ್ರಿಪೂಜೆಯನೊಱಲ್ದು ನೋಳ್ಪಂ ಮುದದಿಂ
ಶಿವನಾಮಮನುಚ್ಚರಿಪಂ
ಶಿವಂಗೆ ಕೊಟ್ಟಲ್ಲದೇನುಮಂ ಕೊಳಲೊಲ್ಲಂ ||೧೫೬||

ವಚನ
ಇಂತಭಿನವಾಶ್ಚರ್ಯಕರಪವಿತ್ರಚರಿತ್ರನೆನಿಸಿ ಪುತ್ರಂ ಪಂಚವರ್ಷಂಬರಂ ನೆರೆದೆಸೆದಿರ್ದನಿರ್ಪನ್ನೆಗಂ

ನಿನ್ನಿನ ಮುಂಬಗಲ್ಪದೆದು ನಿನ್ನ ಕುಮಾರನಮಾತ್ಯಪುತ್ರನುಂ
ಚೆನ್ನೆಸೆದಿರ್ಪಿನಂ ವಿಹರಿಪಲ್ಲಿ ಪುರಾಂತದೊಳೈದಿಬರ್ಪ ಸೇ
ನೋನ್ನತಿಯಂ ನಿರೀಕ್ಷಿಸಲಿವಂ ಪೊಱವಟ್ಟಿರೆ ತತ್ತುರಂಗಮೇ
ತನ್ನಿಜಮಸ್ತಕಂ ಪಱಿಯೆ ಮೆಟ್ಟಿದುದುತ್ಖುರದಿಂ ಧರಾಧಿಪಾ ||೧೫೭||

ಇವನಿಂದೆ ಮುಂದೆ ಪಡೆದಪೆ
ನವಿರಳತರಸುಖಮನೆಂದು ನಂಬಿರ್ದೆಂ ಕೇ
ಳ್ಯುವರಾಜನಶ್ವಖುರಕೀ
ಕುವರಂ ಬಲಿಯಪ್ಪನೆಂದು ಬಲ್ಲೆನೆ ನೃಪತಿ ||೧೫೮||

ಎಂದಿಂತೆಲ್ಲಮನವಳಳ
ಲಿಂದುಸುರೆ ನರೇಂದ್ರವರ್ಯನಾಲಿಸಿ ಮನದೊಳ್
ನೊಂದು ಶಿವಶಿವ ಶಿವಂ ಬ
ಲ್ಲಂ ದಿಟಮಿದನೆಂದು ಮಗುಳ್ದು ತಲೆದೂಗುತ್ತುಂ ||೧೫೯||

ಬಡಬಾನಳಮಂ ಜಲಮಂ
ಕಡಲೊಡನಾಂತಂತೆ ಕಾಯ್ಪುಮಂ ಕರುಣಮನಾಂ
ತೊಡನೊಪ್ಪಿದನಾತ್ಮಜನೊ
ಳ್ಕಡುಶೋಕಂಗೈವ ಸುದತಿಯೊಳ್ಸತ್ಯೇಂದ್ರಂ ||೧೬೦||

ವಚನ
ಅಂತೊಪ್ಪುತ್ತಮಿರ್ದು ಪತಿಮೋಹಿಮಂತ್ರಿಪನಂ ಬರಿಸೇಂದು ವೃದ್ಧಕಂಚುಕಿಗೆ ಬೆಸಸುತ್ತುಮಿರೆಯಿರೆ

ಚತುರ್ದಶಾಶ್ವಾಸಂ

ಕರೆಕರೆ ಕೃತಾಪರಾಧಕ
ಧರಾತಿಭಾರಕಕುಮಾರಕರನೀಗಳೆನು
ತ್ತರಸನುಸಿರ್ವನಿತಱೊಳ್ಬಂ
ದರಿಳಾಪತಿಸೂನುಸಚಿವಸೂನುಗಳಿರ್ವರ್ ||೫||

ವಚನ
ಅಂತೈತಂದು ಮಣಿಮುಕುಟಕಿರಣಮರುಣಕುಸುಮಮಂ ಪದಪೀಠದೊಳ್ಬಲಿಗೆದರ್ದಂತಾಗೆ ಬಾಗಿ
ಪೊಡಮಟ್ಟು ನಿಜಾಪರರಾಧಮನರಸನಱಿದಪನೆಂದು ಶಂಕಿಸುತ್ತಂತಂತೆ ಕಂಪಿಸುತ್ತಂ ಕೆಲಸಾರ್ದು
ನಿಂದಿರ್ದ ನಿಜಕುಮಾರನುಮಂ ಸಚಿವಸುತನುಮಂ ಕೆಂಪಡರ್ದ ಕಡೆಗಣ್ಗಳಿಂದಡಸಿ ನೋಡಿ

ಕುಡಿಮೀಸೆ ಕುಣಿಯೆ ಪಣೆಯೊ
ಳ್ಬಿಡದೊಗೆತರೆ ಘರ್ಮಜಳಕಣಂ ಭ್ರುಕುಟಿ ಪೊದ
ಳ್ದೆಡೆಗೊಂಡಿರೆ ಕೋಪಾಗ್ನಿಯ
ಪೊಡರ್ಪು ರೂಪಾಂತ ತೆಱದೆ ಘುಡುಘುಡಿಸುತ್ತುಂ ||೬||

ಇನಿತೊಂದೌತ್ಯಮೇಂ ಸಲ್ವುದೆ ತನುಮದದಿಂ ಯೌವನೋದ್ರೇಕಲಕ್ಷ್ಮೀ
ಜನಿತೋದ್ಯದ್ದರ್ಪದಿಂ ಮುಂದಱಿಯದಪಯಶಕ್ಕಳ್ಕದತ್ಯಂತದೋಷ
ಕ್ಕೆ ನಿತಾಂತಂ ಬಳ್ಕದೆನ್ನತ್ತಣಿನಿನಿತು ಭಯಂದೋರದೀ ಧಾತ್ರಿಯೊಳ್ಸ
ಜ್ಜನರಲ್ತಲ್ತೆಂಬರೆಂದೆಂಬುದೆನೆ ಬಗೆಯದೀ ಬಾಲನಂ ಕೊಂದಿರಲ್ತೇ ||೭||

ಶರಣಪದಂಗಳಂ ಪದೆದು ಪೂಜಿಸಿ ಶಂಕರಪೂಜೆಗೆಯ್ದು ಸ
ಚ್ಚರಿತಮನಾಂತು ಶೈವಮತವರ್ತನೆಯಂ ಬಗೆಗೊಂಡು ತಾಳ್ದು ಭಾ
ಸುರಗುಣವೃಂದಮಂ ವಿಮಳಕೀರ್ತಿಯನಾರ್ಜಿಸಿ ಬಾಳ್ದುಮೆಮ್ಮನು
ದ್ಧರಿಸುವೆನೆಂದು ನಚ್ಚಿರೆ ಕುಮಾರಕ ಲೇಸನಿದಂ ನೆಗಳ್ಚಿದೈ ||೮||

ದೇವ ಮದೀಶ ಬಿನ್ನಪಮನೂನಹಯಂಗಳನೇಱಿ ಮೀಱಿ ಸೇ
ನಾವಳಿಗೂಡಿ ಗಾಡಿಮಿಗೆ ಬರ್ಪಿನಮೀ ಶಿಶು ನೋಳ್ಪೊಡೈದೆ ಕಂ
ಡೀ ವಿಭು ತನ್ನ ವಾಜಿಯನೆ ದಾಂಟಿಸಿದಂ ತಲೆ ಪಾಱೆ ರಕ್ತಧಾ
ರಾವಿಳಮಿಕ್ಕಿ ಮೆಟ್ಟಿದುದು ಮತ್ತುರಗಂ ಖುರದಿಂ ಶಿರೋಧಿಯಂ ||೧೩||

ಅದಱಿಂದೆ ದೇವ ತಪ್ಪೆ
ನ್ನದು ಬಳಿಕೀ ಶಿರಕೆ ಪಳಿಯನೆನ್ನಯ ಶಿರಮಂ
ಪದೆದೀವುದುಚಿತಮೆಂದಾ
ಡಿದನಾ ಮಿತವಚನನಚಳಸೂನೃತವಚನಂ ||೧೪||

ಅದಱಿಂದಪರಾಧಮಿದೆ
ನ್ನದು ಗಡ ನೀಮಱಿಯದುದೆ ಮಹೀಶ್ವರ ಸರ್ವ
ಜ್ಞ ದಯಾನಿಧಿ ಪಳಿಗೀವುದು
ಮದುತ್ತಮಾಂಗಮನುಮಾಧವ ಮಚ್ಚುವಿನಂ ||೧೯||

ಅನಿಮೀಶಭಕ್ತೆಯ
ತನುಭವನಿಂತಳಿದನೆಂದು ಮಱುಗಿದಪುದು ಮ
ನ್ಮನಮಿನಿತಲ್ಲದೆ ಮಜ್ಜೀ
ವನಮಂ ತೊಱೆವಲ್ಲಿ ಮಱುಕಮೇಂ ತೋಱುಗುಮೇ ||೨೦||

ಸಂದೆಗಮೇನಿನ್ನಿದಕೆಲೆ
ಕೊಂದವನಿವನಾದಮಾದನೀತನ ಶಿರಮಂ
ತಂದೀವುದು ಪಳಿಗುಚಿತಮಿ
ದೆಂದಂ ಶಿವಶಿವ ಸಭಾಸದರ್ಮಱುಗುವಿನಂ ||೨೨||

ಎನೆ ಕಳೆಯೇಱಿದನುರ್ವಿದ
ನನುರಾಗಂದಾಳ್ದನಭವನಡಿದಾವರೆಯಂ
ನೆನೆದನಮರ್ಚಿದನಾ ನಿಜ
ಜನಕನ ಕನದಂಘ್ರಿಕಂಜದೊಳ್ಪೆಱೆನೊಸಲಂ ||೨೩||

ಕಡುಗಲಿ ಚಂಡಿಕೆಯಂ ತ
ನ್ನೆಡಗೈಯಿಂದಡಸಿಪಿಡಿದು ಸಾರ್ಚಿ ಕೊರಲ್ಗಾ
ಕಡುಗಮನೆ ಘರಿಘರಿಲೆನೆಡೆ
ಯುಡುಗದೆ ಕೊರೆದರರೆ ಮಡಗಿದಂ ನಿಜಶಿರಮಂ ||೨೯||

ಪತಿಯಾಣತಿಯಂ ಮೀಱದೆ
ಪತಿಯಣುಗನನೆಯ್ದೆ ಮಡಿಪಲಾಱದೆ ಮಡಿದಂ
ಪತಿಮೋಹಿ ಸಚಿವಸಂಕುಳ
ಪತಿ ಪರಿಕಿಪೊಡೀತನೊರೆಗೆ ಬರ್ಪವರೊಳರೇ ||೩೦||

ಎನ್ನಾಳ್ದನ ಸತ್ಯಂ ಗೆಲೆ
ನಿನ್ನಸುವಂ ಭಕ್ತಶಿಶುಗೆ ಕುಡು ಚಿಂತೆಯದೇ
ಕೆನ್ನಸುವೆ ಪಾರ್ವತೀಪತಿ
ಪನ್ನಳಿನಭ್ರಮರಲೀಲೆದಳೆ ತಳರೆಂದಳ್ ||೪೦||

ಈ ಸತ್ಯವಚನವೀ ನಯ
ಮೀ ಸದ್ಗುಣಮೀ ವಿವೇಕಮೀ ಸಕಳಕಳೋ
ದ್ಭಾಸತೆಯೀ ಘನಧೃತಿ ವಿ
ನ್ಯಾಸಂ ಮತ್ಸೂನುಗಲ್ಲದನ್ಯರೊಳೊಳವೇ ||೪೧||

ಪ್ರಮಥಗಣಾನ್ವಿತಂ ವಿಧಿವಿಧುಪ್ರಮುಖಾಮರಸಂಕುಳಾವೃತಂ
ಹಿಮಗಿರಿಕನ್ಯಕಾ ಸಹಿತನಂಗಜಮರ್ದನನಂಬರಪ್ರದೇ
ಶಮನಡರ್ದಲ್ಲಿ ನೋಡುತಿರೆ ರಾಜಕುಮಾರಕನೋಜೆಯಿಂದೆ ಖ
ಡ್ಗಮನಿರದೆತ್ತಿ ಮೇಣ್ಜಡಿದು ಕಂಠಕಮರ್ಚಲೊಡರ್ಚುತಿರ್ಪಿನಂ ||೪೮||

ಕರ ಪೊಸತು ಜೀಯ ಪಂಚಾ
ಕ್ಷರಮಂನೀಂಮಱೆದು ಮಡಿಯಲುಜ್ಜುಗಿಪುದಿದೆಂ
ದಿರದನುಚರನೆನೆ ಮೊಗದೊ
ಳ್ದರಹಸನಂ ಮೊಳೆಯೆ ಮಂತ್ರಲಕ್ಷಂ ನುಡಿದಂ ||೪೯||

ನಡೆನೋಡುತ್ತಿರೆ ಕಿಂಕರಂ ಮುಗಿದ ಕಯ್ಯಂ ಪೊತ್ತು ಚಿತ್ತಾಂತದೊ
ಳ್ಮೃಡನಂ ಜಾನಿಸಿ ಖಡ್ಗಮಂ ಜಡಿದು ಸಾರ್ಚುತ್ತಾತ್ಮಕಂಠಕ್ಕೆ ಕೈ
ಗುಡೆ ಸಾಸಂ ಘರಿಲೆಂಬಿನಂ ಕೊಱೆದಿಳಾಧೀಶಂ ಮಹಾಮಂತ್ರಮಂ
ಬಿಡದೋರಂತೊದಱುತ್ತುಮಿರ್ಪಶಿರಮಂ ತಾಳ್ದಂ ಕರಾಂಭೋಜದಿಂ ||೫೭||

ಪೊಸತೊಂದು ತೇಜಮದು ರಂ
ಜಿಸೆ ಥಳಥಳಿಸುತ್ತೆ ನೋಡಲಣ್ಮದೆ ಭೃತ್ಯಂ
ಕುಸಿದೆಱಗಿ ನಿಂದು ಮಿಗೆ ಕೀ
ರ್ತಿಸುತ್ತಿರೆ ತತ್ಕರಕೆ ನೀಡಿದಂ ನಿಜಶಿರಮಂ ||೫೮||

ಅಮರ್ದಿನೊಳಳ್ದಿದ ಕಮಳಮೊ
ವಿಮಳ ಸುಧಾಬ್ಧಿಯೊಳೆ ಪುಟ್ಟಿದಮೃತದ್ಯುತಿಬಿಂ
ಬಮೊ ಪೇಳೆನೆ ಮೆಱೆದುದು ಹಸ
ನಮಯೂಖಾವೃತಮುಖಂ ನರೇಂದ್ರಾತ್ಮಜನಾ ||೬೨||

ಪುರನಾರೀಜನಮೀಕ್ಷಿಸುತ್ತೆ ಮಱುಗುತ್ತಿರ್ಪನ್ನೆಗಂ ಕುತ
ಚ್ಚರಿಯೆಂದಲ್ಲಿ ಬುಧರ್ಕಳೊಲ್ದು ಪೊಗಳುತ್ತಿರ್ಪನ್ನೆಗಂ ಶೈವಭ
ಕ್ತರದೆತ್ತಂ ನೆರೆದಾರ್ದುಘೇಜಯಯೆನುತ್ತಿರ್ಪನ್ನೆಗಂ ತಂದು ಕಿಂ
ಕರನಾ ಮಸ್ತಕಮಂ ಕರಾಂಬುಜದೊಳಿತ್ತಂ ಚೋಳಭೂಪಾಲನಾ ||೬೩||

ಕಮಳದಳಾಯತೇಕ್ಷಣರುಚಿಪ್ರಸರಂ ಭಸಿತತ್ರಿಪುಂಡ್ರಮಂ
ಜಿಮಯುತಪಾಲಮಾ ಲಲಿತ ಕುಂಡಳ ಮಂಡಿತ ಗಂಡಮಂಡಳಂ
ವಿಮಳರದದ್ಯುತಿಸ್ಫುಟರದಚ್ಛದಮುದ್ಗತ ಮಂದಹಾಸವಿ
ಭ್ರಮಮುರುಮಂತ್ರನಾದಮಹಿತಂ ಶಿರಮೊಪ್ಪಿದುದಾ ಕುಮಾರನಾ ||೬೪||

ಅದನೇವೇಳ್ವುದೊ ಭೃತ್ಯಮುಖ್ಯನಳವಂ ತನ್ಮೂರ್ತಿಯಂ ಜಾನಿಸು
ತ್ತದಱಿಂ ಯೋಗಿಮಹೇಶನಂ ನೆನೆದು ತಾನಾದಂತಿರಾವೇಶಮಂ
ಗದೊಳೆತ್ತಂ ಬಿಡೆ ತೀವೆ ನಿಷ್ಠೆ ಮಿಗೆ ನೋಡಿಂತೆಂದು ಖಡ್ಗಾಗ್ರದಿಂ
ದದಟಿಂ ಮೇಣ್ಕೊಱೆದಿತ್ತನಾತ್ಮಶಿರಮಂ ಸನ್ಮಂತ್ರಸಂಯುಕ್ತಮಂ ||೬೮||

ಸುಲಿಪಲ್ನೆಱೆ ಮಿಱುಗುತ್ತಿರೆ
ವಿಲಸನ್ಮಂತ್ರಮನೆ ಜಪಿಪ ತನ್ಮಸ್ತಕಮಂ
ನಲಿನಲಿದು ನೋಡಿ ನರಪತಿ
ತಿಲಕಂ ನಿಜಭೃತ್ಯಕೃತ್ಯಮಿದು ಪೊಸತೆಂದಂ ||೬೯||

ತಳಿವ ಸುಧೆ ಪೊಳೆವ ಸುಳಿಪ
ಲ್ವೆಳಗದು ಸಂಜೀವನಾಖ್ಯಮಂತ್ರಮಂ ಜಪಿಪ
ಗ್ಗಳಮಂತ್ರಮಾಗೆ ಶಿಶುಶಿರ
ದೊಳೆ ಝೀವಂಬಡೆದುದಾ ಶಿರೋದ್ವಯಮಾಗಳ್ ||೭೩||

ಎರಡುಂ ಕಿವಿಗಳೊಳಿರದು
ಚ್ಚರಿಪ ಮಹಾಮಂತ್ರಮಾಸ್ಯವಿವರದೆ ಪೊರಪಾ
ಯ್ವಿರವನನುಕರಿಸಿ ತನ್ಮಂ
ತ್ರರವಂಬಡೆದಿರ್ದುದಾ ಶಿರಂ ಶಂಕರನಾ ||೭೪||

ಕೇಳೆಲೆ  ಚೋಳಭೂಪತಿ ಮದೀಯತನೂಜನ ಮಸ್ತಕಕ್ಕೆ ಲೋ
ಕಾಳಿಯನೊಲ್ದು ಪಾಲಿಪ ಕುಮಾರನ ಮಸ್ತಕಮಿತ್ತೆಯಲ್ತೆ ನಿ
ನ್ನಾಳೆನಿಸಿರ್ದನೀ ಶಿರಕೆ ಮಚ್ಚಿರಮೇ ಪಳಿ ನೋಳ್ಪುದೆಂದವ
ಳ್ಬಾಳನಮರ್ಚಿ ಗೋಣ್ಗೊಱೆದು ಸಾರ್ಚಿದಳಾತ್ಮಸಮಂತ್ರಶೀರ್ಷಮಂ ||೭೫||

ತಿರುಕೊಳವಿನಾಚಿಯೆಸಗಿದ
ಪರಿಗಚ್ಚರಿವಟ್ಟು ನೃಪತಿ ಸಚಿವನ ಶಿರಮಂ
ತರಿಸಿ ಬಳಿಯಿರಿಸಿ ನೋಳ್ಪಿನ
ಮಿರದದುಮಭವಾಂಕಮಂತ್ರಮಾಂತುದು ಪದಪಿಂ ||೭೬||

ನರನಾಥಂ ಮಸ್ತಕಮಂ
ಶಿರೋಧಿಯಿಂದಿಳಿಪಿ ವಾಮಕರದೊಳ್ಯಮಸಂ
ಹರನ ಪೆಸರೆನಿಪ ಪಂಚಾ
ಕ್ಷರಮಂ ಜಪಿಪಂತೆ ಮಾಡಿ ಮಡಗಿದನಾಗಳ್||೭೮||

ಶಂಕರನಂ ಕರಂ ತಳಿದುದೆನ್ನ ತುರಂಗಮಿಅಳೇಶಪುತ್ರನಂ
ಸೋಂಕಿದುದಲ್ತೆ ನೆರ್ನೆರನೆ ಮಾತಿನಮಾಲೆಯ ದೂಱಿದಕ್ಕಟಾ
ಶಂಕಿಸದೆಲ್ಲರಿಂತಳಿದರಾನಿವರಿಂ ಮೊದಲೈದದಾದೆನೆ
ನ್ನಿಂ ಕಡುಗಾಂಪನಾವನೊ ಧರಿತ್ರಿಯೊಳೆಂದು ಕರಾಳಖಡ್ಗಮಂ ||೮೦||

ಸೆಳೆದಭವನಂಘ್ರಿಗೆಱಗು
ತ್ತೊಳಗೆ ಕೊರಲ್ಗೈದೆ ಸಾರ್ಚಿ ಘರಿಲನೆ ಕೊಱೆದು
ಜ್ವಳಪಂಚಾಕ್ಷರಜಪಮಂ
ತಳೆವಂತಿರೆ ಮಾಡಿಮಡಗಿದಂ ನಿಜಶಿರಮಂ ||೮೧||

ಹರಹರ ಬಣ್ಣಿಪಂಗರಿದು ತತ್ಸತಿಯರ್ಕಳವೇರವೃತ್ತಿಯಂ
ಕರತಳಖಡ್ಗಮಂ ಜಡಿದು ಜಾನಿಸಿ ಶೈಲಜೆಯಾಣ್ಮನಂ ನಿಜೇ
ಶ್ವರಶಿರಮೆಂಬ ಲಿಂಗಕೆ ಮುಖಾಂಬುಜದರ್ಚನೆಗೆಯ್ಯಲೆಂದು ಬಿ
ತ್ತರಿಪವೊಲಾತ್ಮಕಂಧರಕಮರ್ಚುತೆ ಖಂಡಿಪ ತತ್ಕ್ಷಣಾರ್ಧದೊಳ್ ||೮೫||

ಇಂದುಖಂಡಮಹಿಕುಂಡಳಮುದ್ಯತ್ಸ್ವರ್ಣದಿ ಭಾಳವಿಲೋಚನಂ
ದಂದಶೂಕ ಪತಿಹಾರಮುದಾರಸ್ಮೇರಮುಖಂ ದ್ವಿರದಾಜಿನಂ
ಸುಂದರಾಂಗಮಸಿತದ್ಯುತಿಕಂಠಂ ಕಣ್ಗಿರದೀಯೆ ಬೆಡಂಗನಾ
ನಂದಿವಾಹನನಘಂ ನಿಜರೂಪಂ ತೋಱಿದನದ್ರಿಸುತಾಧವಂ ||೮೬||

ಮೊಳಗುವ ದೇವದುಂದುಭಿರವಂ ಮೊಳಗಲ್ಲಿಳಿತರ್ಪ ದೇವಸಂ
ಕುಳದ ಕಿರೀಟರತ್ನರುಚಿ ಶಕರಶರಾಸನಮಪ್ಸರೋವಧೂ
ವಿಳಸಿತ ಲೋಚನಾಂಶು ಸೆಳೆಮಿಂಚು ನಭಃಸ್ಥಳಮಭ್ರಮಾಗೆ ಕಾ
ರ್ಮಳೆ ಸುರಿವಂತೆ ಸೂಸಿದುದು ಪೆರ್ಮಳೆ ದಿವ್ಯತರುಪ್ರಸೂನದಾ ||೮೭||

ಮಾರಜನಕಂ ವಿಪುಳಸಾರಸಭವಂ ದಿವಿಜವಾರವರನುಂ ದಹನನಾರವಿತನೂಜಂ
ಧೀರದಿತಿಜಂ ವಿನುತನೀರನಿಲಯಂ ಪೃಥುಸಮೀರನನಘಂ ಘನಕುಬೇರನನಲಾಕ್ಷಂ
ವೀರಗಣಮುಂ ಪ್ರಮಥಸಾರನಿವಹಂ ಸಮದವಾರಣಮುಖಂ ನವಮಯೂರಪತಿವಾಹಂ
ಸೇರಿ ನೆರೆದೊಪ್ಪಿರೆ ಕೃಪಾರಸಸಮುದ್ರನಗಜಾರಮಣನುಜ್ವಳಪುರಾರಿಮೆಱೆದಿರ್ದಂ ||೮೮||

ದರಹಾಸಪ್ರಭೆ ಸೂಸು
ತ್ತಿರೆ ಕರುಣಾಮೃತತೆರೆಯಿದೆನೆ ಮೊಗದೊಳ್ಶಂ
ಕರನೆಱಗಿ ನಿಂದ ತನ್ನೋಪ
ನರಸಿಗೆ ನಿನ್ನಿಷ್ಟಮಾವುದದನೆಱೆಯೆಂದಂ ||೮೯||

ಎನಲೊಡನೆ ದೇವ ಪಂಚಾ
ನನ ಮುನ್ನಳಿದಂಗೆ ಹರಣಮಂ ಕರುಣಿಪುದೆಂ
ದೆನೆ ಮಗುಳ್ದು ಮಚ್ಚಿದೆಂ ಬೇ
ಡೆನುತಿರ್ದಂ ಭಕ್ತವತ್ಸಲಂ ಕೃಪೆಯಿಂದಂ ||೯೦||

ತಿರುಕೊಳವಿನಾಚಿಗಂ ಶಂ
ಕರ ಕರುಣಿಪುದಸುವನಾದೊಡನೆ ಮಚ್ಚಿ ಮಹೇ
ಶ್ವರನಬಳೆ ನೀಗೆಣಿಪುದೀ
ಶಿರಂಗಳಂ ಕ್ರಮದಿನೆಂದು ಬೆಸಸಿದನಾಗಳ್ ||೯೧||

ಅರಸಿ ನಿಜಾಂಗುಲಿಯಿಂದೊಂ
ದೆರಡುಂ ಮೂಱೈದೆನಾಲ್ಕುಮೈದಾಱೇಳೆಂ
ದಿರದೆಣಿಪುದುಮಾಗಳೆ ನಿಜ
ಶಿರಂಗಳೇಳ್ದಂಗದೊಂದಗಗೂಡಿದುವಾಗಳ್ ||೯೨ ||

ಬಲವರಲಾಟಿಸುತ್ತಿರೆ ಪದಂ ಪದಪಿಂ ನಡೆ ನೋಡಲೆಂದು ಕ
ಣ್ಮಲರೆಳಸುತ್ತೆ ಬಿರ್ಚಿರೆ ಕರಂ ಕರಮರ್ಚಿಸಲೆಂದು ನಾಟಕಂ
ನಲಿಯೆ ರಸಜ್ಞೆ ಕೀರ್ತಿಸಲೊಡರ್ಚಿರೆ ಚಚ್ಚರಮಚ್ಚಿಗಂ ಪೊದ
ಳ್ದಲರೆ ಸಮಾನಮಾನಸರದೇನೆಸೆದಿರ್ದರೊ ಭೂಭುಜಾದಿಗಳ್ ||೯೪||

ಜಡೆಮುಡಿ ತಾಳ್ದ ಗಂಗೆ ಪಣೆಗಳ್ಫಣಿಕುಂಡಳಮಿಂದುಲೇಖೆ ಚೆ
ಲ್ವಿಡಿದೆಸೆವೈಮೊಗಂ ಕಱೆಗೊರಲ್ಕರಿಕೃತ್ತಿಮೃಘಾರಿಚರ್ಮದೊ
ಳ್ಳುಡೆ ತಿಸುಳಂ ಕರೋಟಿ ದಶಬಾಹು ಮುರಾಂತಕನಕ್ಷಿ ತಳ್ತ ಮೆ
ಲ್ಲಡಿಯೊಡಲರ್ಧದದ್ರಿಜೆ ವಿರಾಜಿಸೆ ರಂಜಿಸಿದಂ ಮಹೇಶ್ವರಂ ||೯೫||

ಇವನೇ ಸತ್ಯೇಂದ್ರನಪ್ಪಂ ಬಗೆವೊಡಮದು ಸತ್ಯೇಂದ್ರಚೋಳೋರ್ವಿಪಂ ಮ
ತ್ತಿವನೇ ಸನ್ಮಂತ್ರಲಕ್ಷಂ ನಿಜದಿನರರೆಸನ್ಮಂತ್ರಲಕ್ಷಂ ಬಳಿಕ್ಕಿಂ
ತಿವನೇ ನೋಳ್ಪಾಗಳಾಹಾ ಮಿತವಚನನಿವಂ ತಪ್ಪದೆಂತಪ್ಪೊಡಂ ಕೇ
ಳಿವನೇ ಸನ್ಮಂತ್ರಿ ನಾಥಂಗತಿಹಿತನೆನುತಂ ಶಂಕರಂ ನಂದಿಗೆಂದಂ ||೧೦೩||

ಅಂಬಿಕೆ ಸಂಭ್ರಮಂಮಿಗೆ ಪದಕ್ಕೆಱಗಿರ್ದ ನರೇಂದ್ರ ಕಾಂತೆಯಂ
ತಾಂ ಬಿಗಿದಪ್ಪಿ ತತ್ಸುತಸತೀಮುಖರಂ ಕೋಪೆಯಿಂದೆ ನೋಡಿ ಹ
ಸ್ತಾಂಬುಜದಿಂದೆ ಮೆಯ್ದಡವಿ ಮೇಣ್ಪರಸುತ್ತಿವರಂತೆ ಶಂಭುವಂ
ನಂಬಿದರಾರೆನುತ್ತೆ ಪೊಗಳ್ದಳ್ಕಮಳಾಮುಖಿಶಕ್ತಿಬೃಂದದೊಳ್ ||೧೦೪||

ಕಱೆಮಱೆಯಿಲ್ಲದ ಬಲ್ಲವ
ರಱಿತಕ್ಕೊಳಗಾಗದಾಗಮದ ಬಗೆ ಪುಗದೆ
ಳ್ವಱ ಜತಿಗಳ ಜಾನಕ್ಕೆಡೆ
ದೆಱಪಾಗದ ಚಿನ್ಮಯಪ್ರಭಂ ಮೆಱೆದಿರ್ದಂ||೧೧೦||

ಎಲ್ಲಂ ತಾನಲ್ಲದ ಬಳಿ
ಕೆಲ್ಲಂ ತಾನಾದ ಶೂನ್ಯನಲ್ಲದ ರೂಪೊಂ
ದಿಲ್ಲದೊಳಗಲ್ಲದುಱೆ ಪೊಱ
ಘಲ್ಲದ ಪವಣಕ್ಕೆ ನಿಲ್ಲದನುಪಮ ನೆಸೆದಂ ||೧೧೨||

ಕೃಪೆ
ಡಾ. ಆರ್. ಸಿ. ಹಿರೇಮಠ
ಡಾ. ಎಂ. ಎಸ್. ಸುಂಕಾಪುರ




ನಮಸ್ಕಾರ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ