ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಜುಲೈ 8, 2017

ಕಿರಾತರುದ್ರಲೀಲೆ ಅಥವಾ ಶಬರ ಶಂಕರ ವಿಳಾಸಂ

ಮಹಾಕವಿ ಶ್ರೀ ಷಡಕ್ಷರದೇವ
ವಿರಚಿತ
ಕಿರಾತರುದ್ರಲೀಲೆ
ಅಥವಾ
ಶಬರಶಂಕರವಿಳಾಸಂ

ಸ್ರಗ್ಧರೆ

ಶ್ರೀಮತ್ಕಲ್ಯಾಣರೂಪಂ ಶರಭವನಗಜೋತ್ಸಂಗನಭ್ರಾಂತಯೋಗಾ
ರಾಮಾಂಚತ್ಪಾದಪದ್ಮಂ ಸುರುಚಿರಗಣಪವಿಭ್ರಾಜಿತಂ ಸಾರಸತ್ವ
ವ್ಯಾಮಿಶ್ರಾಹೀನಚಂಚತ್ಕಟಕನಧಿಕದಿವ್ಯಾಗಮಂ ಸ್ವಸ್ತಿಲೋಕ
ಸ್ತೋಮ ಭ್ರಾಜಿಷ್ಣುವೆಮ್ಮಂ ಪೊರೆಗೆ ವಿತತಭಾಸ್ವತ್ಪ್ರಕಾಶಂ ಗಿರೀಶಂ ||೧||

ಚಂಪಕ

ಸುರರಮಣೀಕದಂಬಕಬರೀಭರಕಾಂತಿಕಳಿಂದಜಾಂಬುವಿ
ಸ್ಫುರಿತಪದಾಂಬುಜಾತೆ ಕರಿರ್ಮುಖಷಣ್ಮುಖಮಾತೆ ಸದ್ಗುಣಾ
ಭರಣೆ ಕೃಪಾಸುಧಾರಸತರಂಗಿಣಿ ಸಾರಕಳಾಧುರೀಣೆ ಶಾಂ
ಕರಿ ಪೊರೆಯೆನ್ನನನ್ವಿತಶುಭೋದಯೆ ಶೈಲಜೆ ಸರ್ವಮಂಗಳೇ ||೨||

ಮತ್ತೇಭ.
ಹರಭಕ್ತಿಪ್ರಮದಾಮುಖೈಕಮುಕುರಂ ಶೈವಾಗಮಾಂಭೋಜಭಾ
ಸ್ಕರಬಿಂಬಂ ಗುಣರತ್ನಭೂಷಣನುಮೇಶಧ್ಯಾನಸಂಪನ್ನನ
ಕ್ಷರಸದ್ಧರ್ಮಕಳೇವರಂ ಮೃಡಮತಾಂಭೋರಾಶಿರಾಕಾಸುಧಾ
ಕರನಾದ್ಯಂ ವೃಷಭೇಶ್ವರಂ ಸಲಹುಗೆಮ್ಮಂ ಭಕ್ತಕಲ್ಪದ್ರುಮಂ ||೪||

ಮತ್ತೇಭ.
ಕನಕಕ್ಷ್ಮಾಧರವಪ್ರದೊಳ್ ನೆಗಳ್ದುವಪ್ರಕ್ರೀಡೆಯಂ ನೀಳ್ಕಿ ನಾ
ಕನದೀವಾರಿಯನೀಂಟಿ ಫೂತ್ಕರಿಸಿ ತತ್ಪಂಕೇಜ.ಮಂ ಕೊಂಡು ಭೋಂ
ಕನೆ ನೀರಾಟಮನಾಡಿ ಪಾಲ್ಗಡಲೊಳುದ್ಯದ್ಬಾಲಲೀಲಾಪ್ವವ
ರ್ತನಮಂ ತಾಳ್ದಿಭವಕ್ತ್ರನೀ ಖೃತಿಗಜಸ್ರಂ ಮಾಳ್ಕೆ ನಿರ್ವಿಘ್ನಮಂ ||೭||

ಕಿವಿಗಮರ್ದಾಗೆ ನಲ್ನುಡಿಯೊಡಂಬಡೆ ಬಂಧದಳುರ್ಕೆದೇಸಿಯು
ತ್ಸವಮನೊಡರ್ಚೆ ಸೊಂಪು ಸುಳಿದಾಡೆ ರಸಂ ಪೊಸತಾಗಿ ಕಾಳ್ಪುರಂ
ಕವಿಯೆ ಪೊದಳ್ದು ಭಾವಮದು ನಾಂಟೆ ರಸಜ್ಞರ ಚಿತ್ತಮಂ ಮನೋ
ಭವನಲರಂಬಿನಂತೆ ಕೃತಿವೇಳ್ದುದು ಕಬ್ಬಿಗನುರ್ಬಿ ಧಾತ್ರಿಯೊಳ್ ||೧೦||

ಜ್ವರತಪ್ತಂ ಸುಧೆಯಂ ಸುಧಾಂಬುನಿಧಿಯಂ ಭೇಕಂ ಸುಧಾರೋಚಿಯಂ
ವಿರಹಾವಿಷ್ಟನನಂತರತ್ನರುಚಿಯಂ ಘೂಕಂ ರಣದ್ವೀಣೆಯಿಂ
ಚರದೊಳ್ಪಂ ಬಧಿರಂ ಲಸನ್ಮುಕುರಮಂ ಜಾತ್ಯಂಧನುದ್ಯದ್ಗುಣಾ
ಕರಸತ್ಕಾವ್ಯಮನಜ್ಞನೇಂ ಪಳಿಯೆ ಕುಂದಾದಪ್ಪುದೇ ಧಾತ್ರಿಯೊಳ್ ||೧೩||

ತೆಗಳಲ್ ಬಲ್ಲಂ ಖಳನೇಂ
ನೆಗಳಲ್ ಬಲ್ಲನೆ ನವೀನಕೃತಿಯಂ ಶಾಖಾ
ಮೃಗಮಲರ ಮಾಲೆಗೀಳಲ್
ಮಿಗೆ ಬಲ್ಲುದದಲ್ಲದಂತಿರೇಂ ರಚಿಯಿಕುಮೇ ||೧೫||

ಅಜನಜಡನೆಂದು ನುಡಿವುದು
ಕುಜನತೆ ಜಡಜಾತಜಾತನೆಂತಜಡನವಂ
ಸುಜನವಿರೋಧಿಯನಜಡಂ
ಸೃಜಯಿಪನೆ ಪರೋಪತಾಪಫಲನಂ ಖಲನಂ ||೧೭||

ಪಳಿಕೆಯ್ವಂ ಖಲನೆಂದಾಂ
ಮುಳಿಯೆಂ ಗಗಣಮನಮಳಮಣಿದರ್ಪಣಮೇಂ
ತೊಳಗದೆ ಬೆಳಗೆ ತದೀಯೋ
ಜ್ವಳತೆಗೆ ಕಾರಣಮಿದೆಂದು ತಿಳಿದುದಱಿಂದಂ ||೧೯||

ಚಂಪಕ
ಇದು ಪೊಸರೀತಿ ನೋಡಿದು ನವೀನಮಲಂಕೃತಿ ನವ್ಯಭಾವಮಿಂ
ತಿದು ನವವೃತ್ತಿ ಲೇಸಿದು ರಸಸ್ಥಿತಿ ನೂತ್ನಮಿದಲ್ತೆ ನೂತನಂ
ಪದರಚನಾವಿಲಾಸಮಿದು ಕಬ್ಬಮಪೂರ್ವಮಿದೆಂದು ಕಬ್ಬಿಗರ್
ಪದೆದೊಲವಿಂದೆ ಕೀರ್ತಿಸೆ ನಿಮಿರ್ಚುವೆನೀ ಸುಭಗಪ್ರಬಂಧಮಂ ||೨೬||

ಉತ್ಪಲ
ಜೇಂಗೊಡದಂತೆ ಝೇಂಕರಿಪ ತುಂಬಿಗಳಿಂಚರದಂತೆ ಪೆಂಪನಾ
ಳ್ದಿಂಗಡಲಂತೆ ಪಣ್ತೆಸೆವ ಮಾಮರದಂತೆ ಪಯೋಜದಂತೆ ಬೆ
ಳ್ದಿಂಗಳ ಸೊಂಪಿನಂತೆ ಸುಸಿಲಾಸೆಯ ನಲ್ಲಳ ನೋಟದಂತೆ ಚಿ
ತ್ತಂಗೊಳಲಾರ್ಪುದೀ ಕೃತಿ ಷಡಕ್ಷರಿದೇವಕೃತಂ ರಸಜ್ಞರಾ ||೨೭||

ಮತ್ತೇಭ
ಕುಡಿದಂ ಕುಂಭಜನೆನ್ನನಾತ್ಮವಧುವೊಳ್ ಕೂಡಿರ್ದನೆಂದಿಂದರಂ
ಕಡೆದಂ ತನ್ನ ಹಿತಾದ್ರಿಗಾಂ ಶರಣಮೆಂದಾ ರಾಘವಂ ಕಟ್ಟಿ ಮೇಣ್
ತಡೆದಂ ಕಾದೊಳಕೆಯ್ದನೆಂದು ಪಗೆಯಂ ಹಾಲಾಹಲಂಗೊಟ್ಟೊಡಂ
ಮೃಡನೊರ್ವಂ ಮುಳಿಯಂ ಗಡೆಂದುಲಿವವೋಲುದ್ಘೋಷಿಕುಂ ಸಾಗರಂ ||೩೧||

ಮಹಾಸ್ರಗ್ಧರೆ
ಮಗನೊರ್ವಂ ಪುಟ್ಟಿ ದೋಷಾಕರನೆನಿಸಿದನೆನ್ನೊಳ್ಮಗಳ್ ಪಾಱುಗೆಯ್ತಂ
ಮಿಗೆ ನಿಚ್ಚ ಪಂಕಜಾಶ್ರಿತೆಯೆನಿಸಿ ಕುಭೃದ್ವರ್ಗದೊಳ್ ಕ್ರೀಢಿಪಳ್ ನಾ
ಕಿಗಣಂ  ಸರ್ವಸ್ವಮಂ ಮೇಣ್ ಕವರ್ದುದಕಕಟ ಭಂಗಕ್ಕೆ ಪಕ್ಕಾದೆನೆಂದಾ
ತ್ಮಗತೌರ್ವಾಗ್ನಿಚ್ಛಲಂಬೆತ್ತಳಲುರಿಯೊಳಕೊಂಡಂತೆ ತೋರ್ಕುಂ ಸಮುದ್ರಂ ||೩೨||

ಚಂಪಕ
ಪ್ರತಿಗಜಮೆಂದು ಕಾರ್ಮುಗಿಲನೀಡಿಱಿವಾನೆಗಳಿಂ ಪಯೋದಗ
ರ್ಜಿತಕಗಿದೋಡುವಂಚೆಗಳ ಬಾಯ್ಗಳಿನೊಕ್ಕಮೃತಂಗಳಂ ತುಡುಂ
ಕುತೆ ಮಿಗೆ ನುಂಗುವಂಬುಚರದಿಂ ಬಡಬಾಲನೆಂದು ವಿದ್ರುಮ
ಪ್ರತತಿಯನಿರ್ಕೆಲಕ್ಕೊಲೆವ ನಕ್ರದಿನದ್ಭುತಮಾಯ್ತು ಸಾಗರಂ ||೩೩||

ಚಂಪಕ
ಪರಿವ ಪಡಂಗು ಬಲ್ದೆರೆಯ ಸಾಲ ಬೆಡಂಗು ನವೀನವಿದ್ರುಮೋ
ತ್ಕರದ ಪೊದಳ್ಕೆ ಶುಕ್ತಿಜಳದಳುರ್ಕೆ ಸರೋಜದ ಗುಣ್ಪುತೀರಭಾ
ಸುರತರತಾಳನಂದನದಲಂಪು ಪುಳಿಲ್ಗಳಡರ್ಪು ಚೆಲ್ವ ಬಿ
ತ್ತರಿಸೆ ಪೊಡರ್ಪುವೆತ್ತ ಬಗೆಗೊಂಡುದು ಪೂರ್ಣಗುಣಂ ಮಹಾರ್ಣವಂ ||೩೪||

ಮತ್ತೇಭ
ಚಿದಚಿತ್ಪ್ರೇರಕನದ್ವಿತೀಯನನಘಂ ವೇದಾಂತವೇದ್ಯಂ ಕಲಾ
ಸ್ಪದನಾದ್ಯಂತವಿದೂರನಾರ್ಯನಜಡಂ ವಿಶ್ವಾಧಿಕಂ ವಿಶ್ಶಮೂ
ರ್ತಿ ದಯಾವಾರ್ಧಿ ಜಗಜ್ಜನಿಸ್ಥಿತಿಲಯಾಧಾರಂ ಮಹಾಭೋಗಮೋ
ಕ್ಷದನಬ್ಜಾಕ್ಷಮುಖಾಮರಾರ್ಜಿತಪದಂ ಕಣ್ಗೊಪ್ಪಿದಂ ಶಂಕರಂ ||೫೩||

ಉತ್ಪಲ
ಬಾಂಬೊಳೆ ತಳ್ತ ಕೆಂಜೆಡೆಯ ಬಲ್ಮುಡಿ ತಾಳ್ದ ಶಶಾಂಕಲೇಖೆ ಭಾ
ಳಾಂಬಕಮುಲ್ಲಸತ್ಫಣಿಪಕುಂಡಲಮಾಯತಬಾಹುಕೃತ್ತಿ ವ
ಸ್ತ್ರಂ ಬಗೆಗೊಳ್ವ ನುಣ್ಗರೆ ವರಾಭಯಶೂಲಮೃಗಾಂಕಪಾಣಿಯಂ
ಕಂಬಿಡದೊಪ್ಪುವದ್ರಿಜೆ ವಿರಾಜಿಸೆ ರಂಜಿಸಿದಂ ಮಹೇಶ್ವರಂ ||೭೪||

ಚಂಪಕ
ಮಿಸುಪಲರ್ಗಣ್ಣ ಕಾಂತಿ ತಿಳಿಜೊನ್ನಮಿದೆಂಬಿನಮಾಳ್ದ  ಭೂ
ಪ್ರಸರದೆ ರನ್ನದೊಳ್ವೆಳಗು ಚೆಂಬಿಸಿಲಂತಿರೆ ತಾಳ್ದಲಂಪನೆ
ಣ್ದೆಸೆಯೊಳಲರ್ದು ಪರ್ಬಿ ವಿಸಟಂಬರಿಯುತ್ತಿರೆ ಮಂತ್ರದೇವತಾ
ವಿಸರಮೊಱಲ್ದು ಸೇವಿಸೆ ಪದಾಬ್ಝಮನದ್ರಿಜೆ ಕಣ್ಗೆ ತೋರಿದಳ್ ||೭೭||

ದ್ವಿತೀಯಾಶ್ವಾಸಂ

ಕರೆಗಣ್ಮುವ ಸುಖಜಲಮು
ಬ್ಬರಿಸುವ ರೋಮಾಂಚವೆಸೆಯೆ ಗದ್ಗದಗಳಿತಾ
ಕ್ಷರಮಂ ಸಂತವಿಡುತ್ತುಂ
ಗಿರಿಶನನೊಲವಿಂದೆ ಪೊಗಳ್ದರಾ ಮುನಿವರ್ಯರ್ ||೨೪||

ವಚನ
ಇಂತೆಂದು ಪೊಗಳ್ದು ಮಗುಳ್ದುಂ ಮಣಿದ ಮುನಿವರರ ಸಂಸ್ತವಕ್ಕೆ ಸಂತಸಂಬಟ್ಟು
ಕಂತುಹರಂ ಕಾರುಣ್ಯರಸಂ ತೆರೆಮಸಗುವ ನಿಜಕಟಾಕ್ಷದಿಂ ನಿರೀಕ್ಷಿಸಿ,

ಆವ ಗಿರಿಯಲ್ಲಿ ನಿಮ್ಮ ತ
ಪೋವನಮಾಯೆಡೆಯನುಳಿದಿದೇಂ ಕಾರಣಮೀ
ಠಾವಿಂಗೆ ಬಂದಿರಾವುದು
ಬೇವಸಮದನೊರೆವುದೆಮ್ಮೊಳೆಂದನುಮೇಶಂ ||೨೫||

ಮಹಾಸ್ರಗ್ಧರೆ
ಮಣಿಕೂಟಂ ಮಂಜುಳಪ್ರಸ್ಫುಟಮಣಿಮಕುಟಂ ನಿರ್ಝರಂ ತಾರಾಹಾರಂ
ಕ್ಷಣರೋಚಿಃಸ್ವರ್ಣಯುಕ್ತಂ ಸುರಪಮಣಿಮಹಾಕುಂಡಲಂ ಪಾರ್ಶ್ವಮೇಘಂ
ಪ್ರಣುತೋದ್ಯತ್ಕಾನನಂ ಪ್ರಸ್ಫುರಿತಹರಿತವಸ್ತ್ರಂ ಸಮಂತಾಗೆ ಭೂಭೃದ್  
ಗುಣರುದ್ರಂ ಕಾಂತಿಸಾಂದ್ರಂ ಕರಮೆಸೆದುದು ತಳ್ತಿಂದ್ರಕೀಲಾಚಲೇಂದ್ರಂ ||೨೭||

ಚಂಪಕ
ಮುನಿಗಳ ಬೀಡು ಮುಕ್ತಿಯ ತವರ್ಮನೆ ಪೆರ್ಮೆಯ ಗೊತ್ತು ಘೋರಕಾ
ನನದೆಡೆ ಸಿಂಹಮುಖ್ಯಮೃಗದಿಕ್ಕೆ ಮಣಿವ್ರಜದಾಗರಂ ಮಹಾ
ಘನಸುರಸಿದ್ಧಚಾರಣರ ಚಾವಡಿ ಸಯ್ಪಿನ ಸೀಮೆ ದಿವ್ಯನಂ
ದನದ ನಿವಾಸಮಾ ನಗಮದಂ ಮಿಗೆ ಬಣ್ಣಿಸಲಾರ್ಗೆ ಗೋಚರಂ ||೨೮||

ಸುರಮಣಿಯಿಂದೆ ತಳ್ತು ಘನಭೋಗಸಮಾಶ್ರಿತನಾಗಿ ವಂಶಭಾ
ಸುರತೆಯನಾಳ್ದು ಚಂದನಲಸತ್ತಿಳಕಂದಳೆದಾತ್ತನಿರ್ಜರ
ತ್ವರುಚಿರನಾಗಿ ಸಾನುಗತಸತ್ತ್ವನುಪಾಶ್ರಿತದಿವ್ಯನಂದನಂ
ಸರಸನನಂತಭೂಷಿತನಿಳಾಧರರಾಜನೇಂ ಮನೋಜ್ಞನೋ ||೨೯||

ಚಂಪಕ
ತೊಳಪ ಕಿರೀಟಮುಜ್ವಳಮೃದುಸ್ಮಿತವಕ್ತ್ರಮನೂನಕಾಂತಿ ಸಂ
ಗಳಿಸಿದ ಕಾಯಮಾಂತ ಶರಚಾಪಮಡಾಯುಧಮಾಳ್ದ ಬೇನ್ ನ ಬ
ತ್ತಳಿಕೆ ನವೀನಭೂಷಣಚಯಂ ಮೆಱೆಯುತ್ತಿರೆ ಬಂದನಲ್ಲಿಗೆ
ಚ್ಚಳಿಯದ ಜವ್ವನಂ ಮಿಸುಪ ಸೌಂದರನೊರ್ವನಪೂರ್ವವಿಭ್ರಮಂ ||೭೭||

ಮಹಾಸ್ರಗ್ಧರೆ
ತತವಿಧ್ಯಕ್ತಪ್ರಕಾರಂ ಮಿಗೆ ಸದಮಳತೀರ್ಥಾಂಬುವಿಂ ಮಿಂದು ಶೈವ
ವ್ರತಮಂ ಕೈಕೊಂಡು ತಾಳ್ದುಂ ಸುಸಿತಭಸಿತರುದ್ರಾಕ್ಷಾಮಾಲಾಳಿಯಂ ವಿ
ಶ್ರುತತತ್ತನ್ಮಂತ್ಲದಿಂ ಮಂಗಳಮಯತನು ತಾನಾದನತ್ಯಂತಶಾಂತಿ
ಸ್ಥಿತಿಗಿತ್ತಂ ಚಿತ್ತಮಂ ತನ್ಮುನಿ ಶಿವಪದಸದ್ಭಕ್ತಿಸಂಪತ್ಪ್ರಯುಕ್ತಂ ||೭೮||

ಚಂಪಕ
ಅರೆಮುಗುಳ್ದಕ್ಷಿಗಳ್ ಮಿಡುಕುಗುಂದದ ಚೆಂದುಟಿ ನಿಶ್ಚಳಾಂಗಮು
ರ್ವರೆಯೊಳೆ ತಳ್ತ ಕಾಲ್ದುದಿ ಸಮುದ್ಧೃತಬಾಹುಗೆ ಬದ್ಧ ಚಾಪಭಾ
ಸುರತರಖಡ್ಗಮಗ್ಗದ ಕಠಾರಿಯಡಾಯುಧಮಾಳ್ದ ಬೆನ್ನ ವಿ
ಸ್ಫುರಿತನಿಷಂಗಮೊಪ್ಪೆ ಪೊಸವೇಶದ ತಾಪಸನೊಪ್ಪಿ ತೋಱಿದಂ ||೭೯||

ತುದಿಗೊಳಿಸಿದಂಘ್ರಿಯಿಂದೆ
ತ್ತಿದ ಭುಜದಿಂ ನಿಮಿರ್ದ ದೇಹದಿಂ ನಿಳ್ಕದ ಚಿತ್
ಪದಮಂ ಮುಟ್ಟುವೆನೆಂದೋ
ವದೆ ನಿಮಿರ್ದೋರಂತೆ ನಿಂತ ಮಾಳ್ಕೆಯೊಳೆಸೆದಂ ||೮೦||

ವಚನ
ಆಗಳಾ ಪೊಸತಪಸ್ವಿ ತಪಮಿರ್ದೆಡೆಯರಿದು ಪುರಂದರಂ ಧರಾಮರಾಕಾರಮಂ
ತಾಳ್ದೆಳ್ತಂದು ಕಟ್ಟಿದಿರೊಳ್ ನಿಂದು ನಿರೀಕ್ಷಿಸಿ ಘನಗಂಭೀರಧ್ವನಿಯಿಂದಿಂತೆಂದಂ,

ಮೃಗಮದಕೆ ಕರ್ದಮಕೆ ಸಂ
ಪಗೆಯಲರ್ಗಳ ಸರಕೆ ಸರವಿಗೊಳ್ಮುತ್ತಿನ ಮಾ
ಲೆಗೆ ಗಾಜುದೊಡಿಗೆಗಾವುದು
ಬಗೆವೊಡೆ ಸಂಪರ್ಕಮಾಂಪ ಭೂಷಣವಿಧಿಯೊಳ್ ||೮೧||

ಚಂಪಕ
ಕರಜಪಮಾಲೆಯೆತ್ತ ಪೊಸಕೂರಸಿಯೆತ್ತ ವಿಭೂತಿಲಿಪ್ತವಿ
ಸ್ಫುರಿತಶಿವಾಕ್ಷಮಾಲ್ಯವಪುವೆತ್ತ ನಿಬದ್ಧನಿಷಂಗಚಾಪವ
ಲ್ಲರಿ ಮಿಸುಪಂಗಮೆತ್ತ ಘನಶಾಂತಿ ಸಮುನ್ನತಿಯೆತ್ತ ನಿನ್ನ ಭೀ
ಭೀಕರತರವೇಷಮೆತ್ತ  ಪಿರಿದದ್ಭುತಮದ್ಭುತಮೇನನೆಂದಪೆಂ ||೮೨||

ತಪಮಿರ್ಪ ತಾಪಸರನಾ
ನಪರಿಮಿತರನಱಿವೆನಭವವೇಷಾಂಕಿತರಂ
ವಿಪರೀತವೇಷಧರ  
ನಿನ್ನುಪಮೆಯ ಕಿತ್ತಡಿಯನೆಲ್ಲಿಯುಂ ಕಂಡಱಿಯೆಂ||೮೩||

ವಚನ
ಎಂದು ನುಡಿದಾಖಂಡಲನ ತಪೋವಿಡಂಬನೋಕ್ತಿಯನವನಾಕರ್ಣಿಸಿ,ಕಣ್ದೆಱೆದಭೀಕ್ಷಿಸಿ

ಪೊಱಮೆಯ್ಯ ವೇಷದಿರವೇ
ತೆಱನಾದೊಡಮೇನೊ ಮಾನಸಾಬ್ಜಾಂತರದೊಳ್
ಕಱೆಗೊರಲನಂಘ್ರಿದಳೆದ
ಳ್ಕಱೊಳಾಂ ಜಾನಿಸಿ ಮಹೇಶನಂ ಮೆಚ್ಚಿಸುವೆಂ ||೮೪||

ವಚನ
ಎನೆ ಮತ್ತಮಿಂತೆಂದಂ,

ಮತ್ತೇಭ
ಬಿಡದತ್ಯುಗ್ರತಪಂಗಳಂ ತಳೆದುಮತ್ಯಾಯಾಸದಿಂ ಯೋಗಿಗಳ್
ಮೃಡಸಂದರ್ಶನಮಂ ವಲಂ ಪಡೆಯರೆಂದು ಕಾಣವಾಮ್ನಾಯವಾ
ವೆಡೆಯೊಳ್ ದುರ್ಲಭನೀಶನಂತವನನೆಂತು ಕಾಣ್ಬೆನೆಂದಿರ್ಪೆ ನೀಂ
ಗಡ ನಿನ್ನೀ ಪೃಥುಸಾಹಸಂಬಡೆದುದೆನ್ನೊಳ್ ಪೆರ್ಚಿದಾಶ್ಚರ್ಯಮಂ ||೮೫||

ಅತಿಸುಖಿ ನೀಂ ಸುಕುಮಾರಂ
ಪ್ರತಿದಿನಮಾಭೀಳತಪಮನೆಂತೆಸಗುವೆ ಪೇಳ್
ಸಿತಗ ಶಿತೀಕಂಠನಲ್ಪ
ವ್ರತಕ್ಕೆ ತನುತರತಪಕ್ಕಮೇನೊಲ್ದಪನೇ ||೮೬||

ಪೆಳವಂ ಮರದುದಿಯ ಮಹಾ
ಫಳಮಂ ಮಿಗೆ ಭಯಸುವಂತೆ ತನಗಸದಳವಂ
ತಿಳೀಯದೆ ಕಜ್ಜವನೆಸಗುವ
ಬಳರಹಿತಂ ಜಗದ ನಗೆಗೆ ಪಕ್ಕಾಗಿರನೇ ||೮೭||

ಮುನ್ನೆಂದುಂ ತಪವಱಿಯದ
ನಿನ್ನಿರವೆತ್ತಭವನೊಲ್ಮೆತಾನೆತ್ತ ಪೊದ
ಳ್ದುನ್ನತಿಕೆಗೆಡೆದೆ ತಳರನೆ
ತನ್ನಗರಿಪು ನಗುತೆ ಮತ್ತಮವನಿಂತೆಂದಂ ||೮೮||

ಶಾರ್ದೂಲ
ನೀನೆಂದುಕ್ತಿಯೆ ಸತ್ಯಮಾಗಮಚಯಕ್ಕಂ ತಾಪಸರ್ಗಂ ಭವಾ
ನೀನಾಥಂ ಸಲೆ ದುರ್ಲಭಂ ಪರಿಕಿಪಂದಂತಾದೊಡಂ ಭಕ್ತಿಸಂ
ಧಾನಕ್ಕಾತನಸಾಧ್ಯನಲ್ತು ದಿಟಮುದ್ಯದ್ಭಕ್ತಿಯಿಂ ತತ್ಪದ
ಧ್ಯಾನಂಬೆತ್ತು ದಯಾಬ್ಧಿಯಂ ಘನತಪಂಗೆಯ್ದಚ್ಚತಂ ಮಚ್ಚಿಪೆಂ ||೮೯||

ಚಂಪಕ
ಬೆಸನಮನೇಳತೊತ್ತರಿಸಿ ಷಡ್ರಿಪುವರ್ಗಮನೊತ್ತಿ ಮೆಟ್ಟಿ ಬಾ
ಧಿಸುವ ಹೃಷೀಕಸಂಚಯಮನಳ್ಕಿಸಿ ದುರ್ಮದಮೆಂಟನಿಕ್ಕಿ ಬಂ
ಧಿಸಿ ಪೊಱಸೂಸದಂತುಸಿರನರ್ದಿಸಿ ಕಾಯಗುಣಂಗಳಂ ಮನಂ
ಮಿಸುಕದ ಮಾಳ್ಕೆಯಿಂ ತಡೆದು ಭಕ್ತಿಯೊಳಾಂ ಪಿಡಿವೆ ಮೃಡಾಂಘ್ರಿಯಂ ||೯೦||

ಸ್ಥಿರಭಕ್ತಿಭಾವದಿಂ ಶಂ
ಕರನಂ ಮಚ್ಚಿಸುವೆನೊಚ್ಚತಂ ಮಚ್ಚದೊಡೀ
ಹರಣಮನೀವೆಂ ತತ್ಪದ
ಸರಸಿರುಹಕ್ಕೆಂತುಮೆಡೆಯೊಳಾಂ ಬಿಟ್ಟಪೆನೇ ||೯೧||

ವಚನ
ಎಂದು ಪೂಣ್ದವಂ ನುಡಿಯಲೊಡನೆ,

ಬೆರಲೆತ್ತಿ ಪೊಗಳ್ದು ಮಗುಳ್ದ
ಚ್ಚರವಟ್ಟತಿನಿಷ್ಠೆಗವನ ಸದ್ಭಕ್ತಿಗೆ ಜಂ
ಭರಿಪು ನಿಜರೂಪುದೋಱುತೆ
ಪರಸಿ ಮುದಂಬೆತ್ತು ಸಗ್ಗಕೆಯ್ದಿದನಿತ್ತಲ್ ||೯೨||

ವರಷಟ್ ತ್ರಿಂಶತ್ ತತ್ತ್ವೋ
ಪರಿಗತನನವಿದ್ಯೆ ಪುಗದ ಶುದ್ಧಾತ್ಮನನ
ಕ್ಷರರನನನುಪಮನನಭವನ
ನುರುತರಚಿದಖಂಡರೂಪನಂ ಜಾನಿಸಿದಂ ||೯೩||

ನೆಗೆದ ಪುಳಕಾಂಕುರದ ನೆಱೆ
ಮುಗುಳ್ದಕ್ಷಿಯ ಮಿಡುಕದಂಗದಿಳಿದೇಱದೆ ನೆ
ಟ್ಟಗೆ ನಿಂದ ಸುಯ್ಯ ಸುಳಿಯದ
ಬಗೆಯ ಪೊಡರ್ಪೆಸೆಯೆ ತಾಪಸಂ ತಪಮಿರ್ದಂ ||೯೪||

ಪೊಱಗಣ ಮಾಯಾಭ್ರಮೆಯಂ
ಪಱಿದಿಕ್ಕಿ ಮನೋಬ್ಜಮಂಡಲತ್ರಯದೆಡೆಯೊಳ್
ಮಿಱುಗುವ ಕರೆಮರೆಯಿಲ್ಲದ
ಕುಱುಪೊಂದದ ಸೂಕ್ಷ್ಮರೂಪನಂ ಜಾನಿಸಿದಂ ||೯೫||

ಚಂಪಕ
ದಶವಿಧನಾದಮಂ ಪದೆದು ಕೇಳ್ವ ಸಮುಜ್ವ್ವಳ ಬಿಂದುತೇಜಮಂ
ಸ್ವಶುಭಚಿದಕ್ಷಿಯಿಂ ಬಿಡದೆ ನೋಳ್ಪ ವಿಕಾಶಿಮನೋಬ್ಜಗಂಧಮಂ
ಕುಶಲದೆ ಕೂರ್ತು ವಾಸಿಪ ಮಹಾಸುಖಸಂಶ್ರಯಮಧ್ಯನಾಡಿಕಾ
ವಿಶದಮೃತಪ್ರವಾಹಮನೆ ಪೀರ್ವ ವಿಳಾಸಮಳುಂಬಮಾತನೊಳ್ ||೯೬||

ಜ್ಞಾತೃಜ್ಞಾನಜ್ಞಯಕ
ತೀತನನಾದ್ಯಂತಶೂನ್ಯನಂ ನಿರಘಪರಂ
ಜ್ಯೋತಿಃಸ್ವರೂಪನಂ ಪ್ರ
ಖ್ಯಾತಚಿದಾನಂದರೂಪನಂ ಚಿಂತಿಸಿದಂ ||೯೭||

ಚಂಪಕ
ನೆನೆದನನಂತತತ್ವಮಯನಂ ಪರಮಾತ್ಮನನಪ್ರಮೇಯನಂ
ಮುನಿಜನಮಾನಸಾಮಳಸರೋವರಹಂಸನನದ್ವಿತೀಯನಂ
ಘನನಿಗಮಾಂತಮೃಗ್ಯನನನಾಮಯನಂ ಚಿದಚಿತ್ಪ್ರಪಂಚರಂ
ಜನನನವಂ ತುರೀಯನನಖಂಡನಿಜೋನ್ನತಚಿತ್ಪ್ರಕಾಶನಂ ||೯೮||

ಮತ್ತೇಭ
ತ್ರಿದಿನಕ್ಕೊರ್ಮೆ ಫಲಾದನಂ ನೆಗಳ್ದುದಾತಂಗೊಂದು ತಿಂಗಳ್ ದ್ವಿಮಾ
ಸದೊಳಾಱುಂ ದಿನಕ್ಕೊರ್ಮೆ ತತ್ಫಳಚಯಾಹಾರಂ ತ್ರಿಮಾಸಂ ಬಳಿ
ಕ್ಕೊದವಿರ್ದತ್ತುರುಕಂದಮೂಲಸುರಸಂ ನಾಲ್ದಿಂಗಳೊಳ್ ಜೀರ್ಣಪ
ರ್ಣದ ಸಂಸೇವನೆ ಮಾಸಪಂಚಕದೊಳಾಯ್ತಾತಂಗೆ ವಾತಾಶನಂ ||೯೯||

ಸ್ಥಿರತರಭಕ್ತಿಯೆಂಬ ಸುಧೆಯಂ ಸವಿದುರ್ಬುತೆ ಕಂದುಕುಂದನಾ
ಳ್ದಿರದೆಸೆವಂಗಮುರ್ವಿದ ಲಸತ್ಪುಳಕಾಂಕುರಮುಜ್ವ್ವಲನ್ಮುಖಾಂ
ಬುರುಹಮರಲ್ದು ಸತ್ವಮಯ ಮಾನಸಮೊಪ್ಪಿರೆ ಚಿತ್ಸುಖಾಬ್ಧಿಯೊಳ್
ಕರಮವಗಾಹಮಿರ್ದನವನೀಶ್ವರಪಾದಸರೋಜಷಟ್ಪದಂ ||೧೦೦||

ಮಹಾಸ್ರಗ್ಧರೆ
ತನುವೃತ್ತಂ ನೇತ್ರದೊಳ್ ನೇತ್ರದ ಬಗೆ ಮನದೊಳ್ ತನ್ಮನಂ ಬುದ್ಧಿಯೊಳ್ ಬು
ದ್ಧಿ ನಿತಾಂತ ಚಿತ್ತದೊಳ್ ಚಿತ್ತದ ನಿಲವದಹಂಕಾರದೊಳ್ ಸಂದಹಂಕಾ
ರನಿಯೋಗಂ ಜೀವನೊಳ್ ಜೀವನೆ ಪರಮನೊಳಾಳ್ದೈಕಯಮಂ ನಿಲ್ವಿನಂ ಬೇ
ಱೆನಿಪಂದಂಬೊಂದಾನಂದದ ನಿಧಿಯೆನಿಸಲ್ ಸಾಲ್ವನಿರ್ದಂ ಮುನೀಂದ್ರಂ ||೧೦೧||

ಪಳಿಕುಗೊಡದೊಳಹೊಱಗೆ ಪ
ಜ್ಜಳಿಪಂತರ್ಜ್ಯೋತಿಯಂತಿರೊಳಹೊಱಗೆ ಸಮು
ಜ್ಜ್ವಳಿಪಂತಶ್ಚಿಜ್ಜ್ಯೋತಿಯ
ಬೆಳಗಿನೊಳೆಡೆವೆರೆದು ಬೆರಸಿ ಬೆಚ್ಚವೊಲಿರ್ದಂ ||೧೦೨ ||

ಸ್ವಸ್ಥತುರೀಯಾತೀತಾ
ವಸ್ಥೆಯನೊಳಕೊಂಡು ತೊಳಪ ಶೃಂಗಟಕಪ
ದ್ಮಸ್ಥಿತನೊಳನಘನೊಳ್ ನಿರ
ವಸ್ಥನೊಳೊಡವೆರೆದು ಬಾಹ್ಯಮತಿಯಱೆತಿರ್ದಂ ||೧೦೩||

ಮಱೆಪೊಂದದೆಳ್ಚಱದ ಕಣ್
ದೆಱೆಯದ ನಿದ್ರಿಸದ ಬೆರೆಯದಗಲದ ಕಣ್ಣಂ
ಪೊಱಸೂಸದೊಳಗಿರದ ಸಯ್
ವೆರಗಿನ ಸಮರಸದ ಭಾವಮೇಂ ರಂಜಿಸಿತೋ ||೧೦೪||

ನೀನಾನೆಂಬೆರಡಱಿದುದು
ಮಾನಸಂಭೋಧಿಯಾಲಿಕಲ್ಲಾಯ್ತು  ಶಿವಂ
ತಾನಾದನೊ ತಾನೇ ಶಿವ
ನೇನಾದನೊ ಎಂಬ ತೆಱದಿನವನೊಪ್ಪಿರ್ದಂ||೧೦೫||

ವಚನ
ಇಂತೆಸೆವ ಸದೃಶಶಿವಧ್ಯಾನಾನುಸಂಧಾನದಿನುತ್ತರೋತ್ತರತಪಃಪ್ರಭಾವದಿನಾ ತಪಸ್ವಿ
ನಿಷ್ಕಂಪನಿರ್ವಿಕಾರತೆಯಿಂ ರಂಜಿಸಿರ್ಪನ್ನೆಗಂ,

ಮಹಾಸ್ರಗ್ಧರೆ
ಕ್ಷಿತಿಯೆಲ್ಲಂ ಕಾಯ್ದುದಶಾಧಿಪರಗಿದರಮರ್ತ್ಯರ್ಕಳಲ್ಲಾಡಿದರ್  ಪ
ರ್ವತವೃಂದಂ ಕಾಯ್ಪುಗೊಂಡತ್ತತುಳಜಳಧಿ ಮೆಯ್ಗುಂದಿದತ್ತರ್ಕಚಂದ್ರೋ
ನ್ನತತೇಜಃಸ್ಫುರ್ತಿಯೆತ್ತಂ ಮಸುಳ್ದುದಮಮ ತತ್ತಾಪಸಾತ್ತಪ್ರವೃದ್ಧೋ
ಗ್ರತಪೋಗ್ನಿಜ್ವಾಲೆಯಿಂದಂ ನೆಗೆದುದೊಗೆದ ತದ್ಧೂಮದಿಮೇಘವೃಂದಂ||೧೦೬||

ವಚನ
ಆಗಳಾ ತಪೋವನದ ತಪೋಧನರ್ಗೆ,

ಮತ್ತೇಭ
ಧೃತಿಯಳ್ಳಾಡಿದುದೇಳ್ಗೆಗುಂದಿದುದಧೀಶಧ್ಯಾನಮುದ್ಯುತ್ತಪಃ
ಸ್ತಿತಿ ಗೆಂಟಾದುದು ಶಾಂತಿ ಸೋರ್ದುದು ಜಪಾನುಷ್ಠಾನಮಿಲ್ಲಾಯ್ತು ಸದ್
ವ್ರತಮುಂ ಸೀಕರಿಪೋದುದಳ್ಗಿದುದು ವೇದಾಂತೋದಿತಜ್ಞಾನಮು
ನ್ನತಿಗೆಟ್ಟಿರ್ದುದು ಸದ್ವಿವೇಕಮಳಿದತ್ತಾನಂದದೊಂದೆಳ್ತರಂ ||೧೦೭||

ಚಂಪಕ
ಅವನವನೀಶನೋ ಸುಭಟನೋ ಮುನಿಯಲ್ತು ಮುನೀಂದ್ರನಾದೊಡೇ
ಕವನುಡಿಯಲ್ಲಿ ಕಟ್ಟಿದ ಕಠಾರಿಯಡಾಯುಧಮಾಂತ ಸೀಸಕಂ
ಸವಗಮಡರ್ಪುವೆತ್ತ ಧನು ಬೆನ್ನ ನಿಷಂಗಮುಮಂತೆ ತಾಳ್ದ ಭೂ
ತಿ ವಿಲಸದಕ್ಷಮಾಲೆ ಕುಶೆಯುಂ ಮಗುಳ್ದೇನಿದು ಯೋಗಿಧರ್ಮಮೇ ||೧೦೮||

ವಿಪರೀತಮವನ ಚರಿತಂ
ತಪಮಧಿಕಂ ತದ್ವಿಚಾರದಿಂದೆಮಗೇಂ ವಂ
ದಪುದವನತ್ತಣಿನೊದವಿ
ರ್ದುಪಟಳಮಂ ಕಳೆದು ಕಾಯ್ವದೆಮ್ಮನುಮೇಶಾ ||೧೦೯||

ಚಂಪಕ
ಮನದೊಳೆ ನಿನ್ನ ಚಿಂತನೆಯನಲ್ಲದೆ ಮಾತಿನೊಳೆಯ್ದೆ ದೇವ ನಿ
ಮ್ಮನುಪಮಪಂಚವರ್ಣಮಯಮಂತ್ರಮನಲ್ಲದೆ ಕಾಯದಲ್ಲಿ ನಿ
ನ್ನನಘಪದಾಬ್ಜಸೇವನೆಯನಲ್ಲದೆ ನಚ್ಚಿರೆವಾಗಳುಂ ಕೃಪಾ
ವನನಿಧಿ ಮಿಕ್ಕ ದುರ್ವಿಷಯಮಂ ತಿಳಿದಿರ್ದಪೆ ನೀನಿದೆಲ್ಲಮಂ ||೧೧೦||

ಪತಿಯುಂ ಗತಿಯುಂ ಹಿತನುಂ
ಪಿತನುಂ ದೇವೇಶ ನೀನೆ ಪೆಱತೆಮಗಿಲ್ಲಿ
ಲ್ಲತಿಶಯಕಿತವತಪಸ್ವಿಯ
ಕತದಿಂದಾದಳಲನೊರಸಿ ಪೊರೆ ಕರುಣಾಬ್ಧೀ ||೧೧೧||

ಆ ಗಿರಿತಟದಿಂದವನಂ
ಪೋಗಿಸಿ ತದ್ವನನಿವಾಸಮಂ ಕರುಣಿಪುದಂ
ತಾಗದೊಡೆಮಗೀವುದು ನೀ
ಡಾಗದೆ ಪೆಱತೊಂದನುಚಿತನಗನಂದನಮಂ ||೧೧೨||

ಪ್ರಣಯಮಣಮಿಲ್ಲದೊಢಮಾ
ಗುಣಿಯ ಗುಣಂಗಳನೆ ಮಱೆಸದುಸಿರ್ದಂ ಮುನಿಪಾ
ಗ್ರಣಿ ಪಗೆಯೊಳಾದೊಡಂ ಗುಣ
ಗಣಮಿರೆ ತಾಂ ಗ್ರಹಿಸಿ ಪೊಗಳದಿರ್ಪನೆ ಸುಜನಂ ||೧೧೩||

ವಚನ
ಎಂದಿಂತು ಬಿನ್ನಪಂಗೆಯ್ದ ಮುನಿವರನುಕ್ತಿಯಂ ಕೇಳ್ದು ಪನ್ನಗಧರಂ
ಮುಗುಳ್ನಗೆನಕ್ಕು,

ತಳತಳನೆ ತೊಳಪ ರದನದ
ಬೆಳಗಂತಃಸ್ಥಿತಕೃಪಾಸುಧಾಂಭೋನಿಧಿಯ
ಗ್ಗಳಿಸಿ ತೆರೆಮಸಗಿದಂತಿರೆ
ಜಳರುಹರಿಪುಮೌಳಿ ತಾಪಸಂಗಿಂತೆಂದಂ ||೧೧೪||

ಮಲ್ಲಿಕಾಮಾಲೆ
ಆ ತಪೋಧನನಾವನೆಂಬಭಿಶಂಕೆಯೇಕೆ ಜಗತ್ರಯ
ಖ್ಯಾತನರ್ಜುನನಿಂದ್ರಸೂನು ಮುಕುಂದದೇವರನುಗರಶೌ
ರ್ಯಾತುಳಂ ಭವದೀಯಭಾಗ್ಯಮನೇನುಮಂ ವಲಮರ್ಥಿಸಂ
ಭೀತಿ ಬೇಡವನತ್ತಣಿಂ ನಿಮಗಂತವಂ ತಪಮಿರ್ದೊಡಂ ||೧೧೫ ||

ಮತ್ತೇಭ
ಪಡೆ  ನೀಂ ಪಾಶುಪತಾಸ್ತ್ರಮಂ ಗಿರಿಶನಿಂ ಪೋಗಿಂದ್ರಕೀಲಕ್ಕೆ ಪೆಂ
ಪಡರ್ದುದ್ಯತ್ತಪಮಾಂಪುದೆಂದು ಬೆಸನಿತ್ತಂ ವ್ಯಾಸನೆಯ್ತಂದನೀ
ಯೇಡೆಗಾತಂ ಪಡೆದಿತ್ತ ಮಂತ್ರಮನದಂ ಕೆಯ್ಕೊಂಡು ಮದ್ಭಕ್ತಿ ಸಂ
ಗಡಮಾಗುತ್ತಿರೆ ವೈರಿವರ್ಗವಿಜಯೋಪಾಯಾನ್ವಿತಂ ಫಲ್ಗುನಂ ||೧೧೬||

ರಿಪುಜಯಕಾರಣಶರಮಂ
ಪ್ರಪತ್ತಿಯಿಂ ಪಡೆವೆನೆಂದು ಬಯಸುತ್ತೆಮ್ಮಿಂ
ತಪಮಿರ್ದಪನಾ ಮುನಿಯಿ
ತ್ತುಪದೇಶಂಬಿಡಿದು ನಿಶ್ಚಿತಾರ್ಥಂ ಪಾರ್ಥಂ ||೧೧೭||

ಉತ್ಪಲ
ಆತನಭೀಷ್ಟಮಂ ಸಲಿಸಿ ಪಾಶುಪತಾಸ್ತ್ರಮನಿತ್ತು ತತ್ತಪೋ
ಜಾತಮಹೋಷ್ಣಮಂ ತವಿಸಿ ನಿಮ್ಮ ಮನೋರಥಮಿತ್ತು  ರಕ್ಷಿಪೆಂ
ಮಾತಿದು ನನ್ನಿಯೆಂದಭಯಮಿತ್ತವರಂ ಕಳಿಪುತ್ತೆ ಭಕ್ತಸಂ
ಪ್ರೀತಿಯಿನೆಯ್ದಲುಜ್ಜುಗಿಸಿದಂ ಮೃಗಯಾರತನಿಂದುಶೇಖರಂ ೧೧೮||

ತೃತೀಯಾಶ್ವಾಸಂ

ಉತ್ಪಲ
ದೇವನ ಬೇಂಟೆಯುಜ್ಜುಗದ ಸಬ್ಬವಕಾಱರ ಡಿಂಡಿಮಾರವಂ
ತೀವಿದುದಾ ಮಹಾಕಟಕದೊಳ್ ಸುರದುಂದುಭಿನಿಕ್ವಣಾನ್ವಿತಂ
ಭಾವದೊಳುತ್ಸವಂ ನೆಗಳ್ದುದಲ್ಲಿ ಗಣಾಳಿಗೆ ಸಂಭ್ರಮಂ ಪೊದ
ಳ್ದಾವರಿಸಿರ್ದುದಗ್ಗದಮರರ್ಘದನೂಹಿಸಲಾರ್ಗೆ ಗೋಚರಂ ||೨||

ಚಂಪಕ
ಜಡೆಗಳ ಬಂಬಲೇ ತಲೆದಳಿರ್ ಫಣಿ ಸುತ್ತಿದ ಬಳ್ಳಿ ತಾಳ್ದ ಬಾನ್
ಗಡಲದು ಪುಷ್ಪಮಾಲೆ ಗಱಿವೂಗಱಿ ತೆಳ್ವೆಱೆ ಬಗ್ಗ ಸಮ್ಮದದೊ
ಳ್ಳುಡೆ ಪೊಸಚಲ್ಲಣಂ ಕರಿಯ ಕುಪ್ಪಸಮಾನೆಯ ಕೃತಿಯಂಗದೊಳ್
ತೊಡೆದ ವಿಭೂತಿಯುದ್ಗಮಪರಾಗವಿಲೇಪನಮಗ್ನಿ ಲೋಚನಂ||೩||

ಅರೆಯೊಡಲಾದ ಕಾಳಿಯುಳಿದಂಗಮನಾವರಿಸಿರ್ದಮಾಳ್ಕೆಯಿಂ
ಕರಮೆಸೆದಿಂದ್ರನೀಲರುಚಿಕಾಂತಕಳೇವರಮೊಪ್ಪೆ ತಾಳ್ದನಾ
ದರದೆ ಕಿರಾತರೂಪಮನುಮಾಧಿಪನಲ್ಲಿ ಘನಸ್ವತಂತ್ರನ
ಚ್ಚರಿವಡೆದಾಗಮಪ್ರತತಿ ಕೀರ್ತಿಸೆ ಬಣ್ಣಿಸೆ ಸರ್ವನಿರ್ಜರರ್ ||೫||

ತಳಿರುಡೆ ಸಂಜೆಗೆಂಪು ಪೊಸಮುತ್ತಿನ ಹಾರಮೆ ತಾರಕಾಳಿ ತ
ಳ್ತಳಿರುಚಿ ಕಾಯಕಾಂತಿ ಕಡುಗಳ್ತಲೆ ಮೂಕುತಿ ಮುತ್ತು ಶುಕರಮಂ
ಡಳಮಮರ್ದೊಪ್ಪೆ ಭಿಲ್ಲಿಯ ವಿಳಾಸಮನಾಳ್ದೆಸೆದಂದು ಸರ್ವಮಂ
ಗಳೆ ನಿಜಕಾಳರಾತ್ರಿವೆಸರಂ ಮಿಗೆ ಸಾರ್ಥಕಮಂ ನೆಗಳ್ಚಿದಳ್ ||೬||

ಮಹಾಸ್ರಗ್ಧರೆ
ಅಱನೇರಿಲ್ವಣ್ಣ ಬಣ್ಣಂಬಡೆದ ತನು ಪೃಥುಶ್ರೋಣಿ ನೀಲಾಳಕಂ ಪಂ
ಕರುಹಾಸ್ಯಂ ಬಿಣ್ಪನಾಳ್ದೊಪ್ಪುವ ನೆಲೆಮೊಲೆ ಬಿಂಬಾಧರಂ ದೀರ್ಘನೇತ್ರಂ
ತರಳಾಪಾಂಗಂ ಬಳಲ್ಬಲ್ಮುಡಿ ಬಡನಡು ರಂಭೋರು ಕೊಂಕಾಂತ ಪುರ್ಬೊಂ
ದಿರ ನಾನಾಶಕ್ತಿಯರ್ ಬೇಡಿತಿಯರೆಸಕಮಂ ತಾಳ್ದು ಕಣ್ಗೆಡ್ಡಮಾದರ್ ||೭||

ಮತ್ತೇಭ
ಹರಿಮಧ್ಯಂ ಮೃಗಶಾಬನೇತ್ರಮಳಿಮಾಲಾವೇಣಿ ಚಂಚದ್ರಥಾಂ
ಗರುಚಿಸ್ಫಾರಪಯೋಧರಂ ದ್ವಿರದಯಾನಂ ಕೋಕಿಲಾಲಾಪಮೊ
ಮೊಪ್ಪಿರೆ ಭಿಲ್ಲಾಂಗನೆಯರ್ಕಳಾದಮರಿಯರ್ ನೈಜಾಂಗಮಂ ನೋಡಿ ಭೀ
ತಿರಸಂ ತನ್ಮೃಗವೃಂದಕಾಗದಿರವಂ ತಾಳ್ದಂತೆ ಕಣ್ಗೊಪ್ಪಿದರ್ ||೮||

ಚಂಪಕ
ತೊಳಗುವ ದಂತದೋಲೆ ಗುರುಗಂಜಿಯ ಬಣ್ಣಸರಂ ತಮಾಲದೊ
ಳ್ದಳಿರುಡೆ ತಳ್ತ ಪೀಲಿಯ ತರಂಗದ ಬಲ್ನಿಱಿಗಟ್ಟು ಸೂಡಿದು
ತ್ಪಳದಮಾಲೆ ತಾಳ್ದ ಪುಱುವಚ್ಚೆಯ ಬೊಟ್ಟು ಪಸಿರ್ಪುವೆತ್ತ ಪ
ಟ್ಟಳಿಯ ನಿಚೋಳಮೊಪ್ಪಿರೆ ಪುಳಿಂದಿಯರಾದರಮರ್ತ್ಯಕಾಂತೆಯರ್ ||೯||

ಮೃಗಮದದಂಗರಾಗಮಸಿತೋತ್ಪಲಮಾಲೆಯ ಚೊಲ್ಲೆಯಂ ಮನಂ
ಬುಗುವ ತಮಾಲಪಲ್ಲವದ ಮೆಲ್ಲುಡೆ ಕಟ್ಟಿದ ಪೀಲಿದಂಡೆ ಚೆ
ಲ್ವಗಲದ ಸಾಂದ್ರಕಜ್ಜಲಲಲಾಮಮಗಾಹಿತರತ್ನಭೂಷಣಂ
ಸೊಗಯಿಸೆ ದೇವಿಯರ್ ಬಳಸಿ ನಿಂದೆಸೆದಿರ್ದರಗೇಂದ್ರಪುತ್ರಿಯಾ  ||೧೧||

ಬಡನಡು ಬಳ್ಕೆ ಬಟ್ಟಮೊಲೆ ಮೇಲುದನೊತ್ತೆ ನಿತಂಬಮಂಡಲಂ
ಪೊಡರೆ ಕಟಾಕ್ಷಕಾಂತಿ ಮಿಱುಗುತ್ತಿರೆ ಸೋರ್ಮುಡಿ ಜಾಱೆ ಮೀಱಿ ದಿಂ
ಕಿಡೆ ರದನಾಟಂಶು ಬಿಲ್ಸರಲನಾಂತು ಕರಾಗ್ರದೊಳಾರಾಪನಿಂದೇಂ
ನಡೆದುದೋ ಕಾರ ಕಾರ್ಮುಗಿಲ ಬಣ್ಣದ ತಿಣ್ಣದ ನಿರ್ಜರೀಜನಂ ||೧೪||

ತಳಿರ್ಗಳಮರ್ಕೆವೆತ್ತ ತಲೆಕಟ್ಟು ಲತಾಂತದ ಮಾಲೆ ಬೆನ್ನ ಬ
ತ್ತಳಿಕೆ ಮರಂದದಣ್ಪು ಪಸುರಂಗಿಗೆ ಪೀಲಿಯ ಪಕ್ಕಜಲ್ಲಿ ಗೇ
ಣಳವಡೆ ತೊಟ್ಟ ಪೊಂಬುಲಿಯ ಸಮ್ಮದ ಚಲ್ಲಣಮೊಪ್ಪೆ ಬಲ್ಸರಲ್
ದಳೆದು ಗಣಾಳಿ ರುದ್ರತತಿ ತಾಳ್ದುದನೂನಪುಳಿಂದವೇಶಮಂ ||೧೬||

ಮೊಳಗಿದುದಭ್ರದೊಳ್ ದಿವಿಜಭೇರಿಯ ಭೂರಿಗಭೀರರಾವಮು
ಜ್ವಳಸಿತಶಂಖನಾದದೊಡನಾನಕಘೋಷಣಮುಣ್ಮಿದತ್ತು ಮಂ
ಗಳರವದಿಂದೆ ಪೊಂಬರಿಯಣಂಗಳೊಳಾರತಿಯೆತ್ತಿ ಪಾಡಿದರ್
ವಿಳಸಿತಭಾರ್ಗವೀ ವಿಧಿವಧೂರತಿಮುಖ್ಯನಿಳಿಂಪಕಾಂತೆಯರ್||೨೨||

ಮತ್ತೇಭ
ಮಿಡಿವಿಲ್ ಮಿಂಟೆ ತುಪಾಕಮಿಟ್ಟಿ ಪದವಿಲ್ ಕೂರಂಬು ಬೆನ್ಗಲ್ಲಿ ಕೆಯ್
ಪೊಡೆ ಗಾಳಂ ಕಿಱುಗೂಳಿ ಬೀಸುವಲೆ ಬೆಳ್ಳಾರಂ ಸೊಡರ್ಮಡ್ಡಿ ಕ
ರ್ಪಡಮಂಟಡ್ಡಣಮುಲ್ಬಣಂ ಕವಣೆ ನಾರಾಚಂ ಕವಲ್ಕಣ್ಣಿ ಪೇ
ರಡಿ ಖಡ್ಗಂ ಬಡಿಕೋಲ್ಗಳೊಪ್ಪೆ ಜವದಿಂದೆಳ್ತಂದರಾ ಧೀವರರ್ ||೨೩||

ಇಡೆವಲೆ ಸಿಡಿವಲೆ ಕಿಱುವಲೆ
ನಡೆವಲೆ ಪೆರ್ವಲೆ ತೊಡಂಕುವಲೆ ಕೊಲ್ವಲೆ ಕ
ಕ್ಕಡವಲೆ ನಿಡುವಲೆ ಸಾಲ್ವಲೆ
ಬಿಡುವಲೆಗಳೆನಿಪ್ಪುವೆಸೆದುವಾ ಬೇಂಟಿಗರೊಳ್ ||೨೪||

ಒರಸೆ ಕರಿ ಕಟದ ಮದದಿಂ
ಪೊರೆದುರುಚಂದನದೊಳೆಱಗಿ ನಂದಳಿಕುಳಮಂ
ಹರಿನೀಲಮೆಂದು ತಿಱಿಯಲ್
ಸುರತರುಣಿ ತುಡುಂಕಿ ಸಖಿಯನೇಂ ನಗಿಸಿದಳೋ ||೩೮||

ಚಂಪಕ
ಪದಗೊಳಿಸುತ್ತೆ ದಾನರಸದಿಂ ರಸೆಯಂ ಮದಭೃಂಗಮಾಲೆಯಂ
ಕೆದಱುತೆ ಕರ್ಣವಾಳದೆಲರಿಂ ಬಿಸಕಾಂಡಮಿದೆಂದು ಚಂದ್ರಕಾಂ
ತದೊಳಿದಿರಲ್ಲಿ ಮಾರ್ಪೊಳೆವ ತನ್ನಯ ಕೊಂಬನೊಱಲ್ದು ನೋಡುತುಂ
ಮೃದುಗತಿಯೊಪ್ಪೆ ತೂಗಿ ತೊನೆದಾಡುತ್ತೆ ಬಂದುದದೊಂದು ಸಿಂಧುರಂ ||೪೧||

ಕೊಳದೊಳೆ ಕಿಳ್ತು ಪಂಕರುಹಮಂ ಪ್ರತಿಮಾನದೊಳೊಟ್ಟಿಕೊಂಡು ಪಾ
ಯ್ವಳಿಗಳನಗ್ರಪಲ್ಲವದೆ ಸೋವತೆ ಪಂಕಜರೇಣು ತಳ್ತ ಮಂ
ಜುಳರದನಂ ತೆಱಂಭೊಳೆಯೆ ಶೈವಲವಲ್ಲರಿ ಪತ್ತಿ ವೃಕ್ಷದೊಳ್
ಮಿಳಿರೆ ಕರೇಣುವಿರ್ದೆಡೆಗದೇಂ ತಳರ್ದತ್ತೊ ಮದಾಂಧಸಿಂಧುರಂ ||೪೨||

ಮದರಸಮೊಕ್ಕುದಿಲ್ಲಿ ಕರಿ ಪೋದುದು ಸಿಂಗದ ಬಟ್ಟೆ ನೋಳ್ಪೊಡಿಂ
ತಿದು ಗಜಮೌಕ್ತಿಕಂ ಸಿಡಿದುದಿಲ್ಲಿ ಲುಲಾಯದ ಮಾರ್ಗಮಪ್ಪುದಾ
ಸ್ಯದ ನೊರೆ ಬಿಳ್ದುದಿಲ್ಲಿ ಕೆಸಱಿರ್ದರ್ಪುದಿಲ್ಲಿ ವರಾಹಮೆಯ್ದಿದ
ತ್ತಿದಿರೊಳೆ ಪುಲ್ಲೆ ಪಾಯ್ದಡೆಯಿದಪ್ಪದು ಸೂಸಿದುವಾಸ್ಯದೂರ್ವೆಗಳ್ ||೪೬||

ಬಡಿಯುಡುವಂ ತೊಡಂಕದಿಡು ಪೆರ್ಮೊಲನಂ ಬಲೆವೀಸಿ ಪುಲ್ಲೆಯಂ
ಕೆಡೆಪು ಲುಲಾಯಮಂ ತಱಿ ಪೊದಳ್ದಿಸು ದಂತಿಯನಾರ್ದು ಖಡ್ಗದಿಂ
ಕಡಿ ಪುಲಿಯಂ ಕರುತ್ತಿಱಿ ವರಾಹನನಿಟ್ಟೆಯೊಳುಗ್ರಸಿಂಹಮಂ
ಪೊಡೆ ಬಿಡದಣ್ಮಿ ಕೂರಸಿಯಿನೆಂಬ ರವಂ ಪಿರಿದಾಯ್ತರಣ್ಯದೊಳ್ ||೫೦||

ಉತ್ಪಲ
ನೀಡಡಿಗೊಂಡು ನಿಂದು ಡೊಣೆಯಿಂ ಕಣೆಯಂ ತೆಗೆದಾರ್ದುಂ ಬಿಲ್ಗದಂ
ಪೂಡಿ ಪೊಡರ್ಪುವೆತ್ತು ಕಟಕಾಮುಖದಿಂ ಸೆಳೆದುರ್ವಿ ಲಕ್ಷ್ಯಮಂ
ನೋಡಿ ಕಟಾಕ್ಷಮಂಬುದುದಿಯೊಂದಿರೆ ತೆಳ್ನಡು ಬಳ್ಕೆ ಗಾಡಿ ಕೆಯ್
ಗೂಡಿರೆ ತೊಟ್ಟನೆಚ್ಚು ಮೃಗವೃಂದಮನಿಕ್ಕಿದರಲ್ಲಿ ಭಿಲ್ಲಿಯರ್ ||೫೨||

ಚತುರ್ಥಾಶ್ವಾಸಂ

ಶ್ರೀಕಾತ್ಯಾಯನಿಯರಸಂ
ಗೋಕರ್ಣಾಧೀಶಕಟಕನನುಪಮನಭವಂ
ಲೋಕೈಕಪ್ರಭು ಪರಮಕೃ
ಪಾಕರನೆಮಗೀಗೆ ಸೌಖ್ಯಮಂ ಶಿವಲಿಂಗಂ ||೧||

ಚಂಪಕ
ಅತಿಬಳಮೂಕದಾನವನೆನಿಪ್ಪವನೊರ್ವನಖರ್ವಗರ್ವಸಂ
ಯುತನವನೀಧರೇಂದ್ರದ ನಿತಂಬದಿಳುಂಬಿನೊಳಿರ್ದು ನಿರ್ಜರ
ಪ್ರತತಿಯ ಪರ್ಬಿದಬ್ಬರಮನಾಲಿಸಿ ತಿಂದಪೆನೀ ಸುಪರ್ವಸಂ
ತತಿಯನೆನುತ್ತೆ ತಾಳ್ದು ಪೊಱಮಟ್ಟನುದಗ್ರವರಾಹರೂಮಂ ||೨||

ಇದು ಸಿರದಲ್ಲಿ ಕೋಡೊಗೆಯದಂತಕಸೈರಿಭಮೋ ಬಳಿಕ್ಕಮಿಂ
ತಿದು ಭರಿಕೆಯ್ಯನಾನದ ಮಹಾಗಜದಾನವನೋ ವಿಚಾರಿಪಂ
ತಿದು ನಡೆಗಲ್ತು ಸಂಚರಿಪ ಮೇಚಕಶೈಲಮೊ ಸಾರ್ದು ನೋಳ್ಪೊಡಿಂ
ತಿದು ಪೃಥುಕಾಯಸೂಕರನೊ ಪೇಳೆನೆ ತೋರಿದುದಾ ವರಾಹಕಂ ||೩||

ಮತ್ತೇಭ
ಬಡಬಜ್ವಾಲೆಯ ವಿಸ್ಫುಲಿಂಗತತಿಯೆಂಬಂತಿರ್ಪ ಕಣ್ ಚಕ್ರದಿ
ರ್ಕಡೆಯಂ ಬಾಯೊಳಿರುಂಕಿದಂತೆ ಪೊಳೆಪಿಂ ಕೊಂಕಿರ್ದ ಕೂರ್ದಾಡೆ ಬಲ್
ಸಿಡಿಲುದ್ಯದ್ದ್ರವಮಾಳ್ದ ಭೀಕರಮುಖಂ ಕಲ್ಪಾಬ್ದಮಂ ಪೋಲ್ವ ಕಾ
ರೊಡಲತ್ಯದ್ಬುತಮಾಗೆ ಬಂದುದು ಮಹಾರೋಷಾಕರಂ ಸೂಕರಂ ||೪||

ಚಂಪಕ
ಖರಖುರಘಾತದಿಂದೆ ಪುಡಿಯೇಳೆ ಶಿಲಾತಳಮೊತ್ತಿ ಮೆಟ್ಟಿ ಮೆ
ಯ್ಯೊರಸೆ ಬೃಹತ್ಕುಜಪ್ರತತಿ ನುರ್ಗೆ ವಿಜೃಂಭಣಮಾಳ್ಪು ಗರ್ಜಿಸು
ತ್ತುರುತರಪರ್ವತಂ ಪ್ರತಿರವಂಗುಡೆ ಬೆರ್ಚಿಸಿ ತನ್ನಗೇಂದ್ರಕಂ
ದರಮೃಗರಾಜಿಯಂ ಜವದಿನೇಳ್ತತರುತಿರ್ದುದು ಸೊರ್ಕಿದೆಕ್ಕಲಂ ||೫||

ವಚನ
ಆ ಕಟಕದೊಳಿಂತು ಬರ್ಪ ಕಿಟಿಯಂ ಕಳ್ಕನೆ ಕಂಡು

ಚಂಪಕ
ಎಲೆ ಎಲೆ ಪಂದಿ ಪಂದಿ ಮಿಗೆ ಬಂದುದು ಬಂದುದು ಭಿಲ್ಲರೆಲ್ಲರಂ
ಬಲಿಗೊಳಲೆಂದು ಮೃತ್ಯು ಕಿಟಿರೂಪಮನಾಳ್ದವೊಲೊತ್ತು ಪತ್ತು ನಿಲ್
ತೊಲಗದಿರಟ್ಟು ಕುಟ್ಟು ತಿವಿ ಕೊಲ್ ತಱಿ ಗೋಣ್ಮುಱಿ ತುತ್ತು ಸೀಳ್ ಪಳಂ
ಚಲಸದೆ ಪೊಯ್ ಕರುತ್ತಿಱಿಯೆನಿಪ್ಪ ರವಂ ಪಿರಿದಾಯ್ತು ಬೇಡರೊಳ್ ||೬||

ವಚನ
ಎಂದು ಸೌರಂಭದಿಂ ಮುಟ್ಟಿ ಮೂದಲಿಸುತ್ತೊಟ್ಟಜೆಯಿಂ ತೊಟ್ಟನೆಟ್ಟಿಗಳಂ
ತಾಳ್ದು ಕಟ್ಟುಬ್ಬಟೆಯಿಂ ಕವಿದ ದಿಟ್ಟಬಿಯದರ ಪರ್ಬಿದಬ್ಬರಮನಾಲಿಸಿ ಕನಲೆ
ಮಿಗೆ ದಾಡೆಯಂ ಮಸೆದಂಡುಗೊಂಡು ತೃಣಮಂ ತುಂಡಿಸಿ ಬಾಲಂ ನಿಮಿರೆ ಕಾಲಂ
ತೂಗಿ ಪಟುತರಶೌರ್ಯದಿಂ ಪುಳಿಂದನಿಳಿಂಪರ್ಗಭಿಮುಖಮಾಗಿ ನಿಂದು


ಚಂಪಕ
ನಡುಗೆ ಧರಿತ್ರಿ ದಿಕ್ಕರಿಗಳಳ್ಕೆ ಭಯಂಗೊಳೆ ಸತ್ತ್ವಸಂಕುಳಂ
ಪಡಲಿಡೆ ಶೈಲಶೃಂಗತತಿ ತುಳ್ಕೆ ಮಹಾಬ್ಧಿ ಕರಾಳಘೋಷದಿಂ
ಘುಡುಘುಡುಸುತ್ತೆ ದಾಡೆಗಡಿದುರ್ಬಿ ಕಡಂಗುತೆ ಕಾಯ್ಪುವೆತ್ತು ಕಣ್
ಗಡೆ ಕಿಡಿಸೂಸೆ ನೋಡಿದುದು ನಿಂದು ಪುಳಿಂದರನುಗ್ರಸೂಕರಂ ||೭||

ಪೊಗೆ ಪೊಱಸೂಸೆ ಘೂರ್ಮಿಸುವ ಮೂಗಿನೊಳೀಕ್ಷಿಪ ಲೋಹಿತಾಕ್ಷಿಯಿಂ
ಭುಗಿಲೆನೆ ಪೊಣ್ಮೆ ದಳ್ಳುರಿ ಕರಂ ಮಸೆದಗ್ಗದ ದಾಡೆಯಗ್ರದಿಂ
ದುಗುತಿರೆ ತೋರಕೆಂಗಿಡಿಗಳುಗ್ರತೆಯಂ ತಳೆದುರ್ಕಿ ಸೊರ್ಕಿನಿಂ
ದಗಲದೆ ನುಂಗಲವ್ವಳಿಸಿದತ್ತು ವರಾಹಕನಾ ಕಿರಾತರಂ ||೮||

ಕುಸಿದ ಸಿರಂ ಕೆಲಕ್ಕೊಲೆದ ಬಲ್ಮುಸುಡುರ್ಬಿದ ಮೆಯ್ಯ ರೋಮಮಾ
ರ್ಪೆಸೆವ ಮನಂ ಕಿವಿ ಮಿಳ್ಳಿಱಿದಾಡುವ ಬಾಲಮುರ್ವಿ ಪಾ
ಯ್ವುಸಿರೊಡನೆಳ್ದ ಬೆನ್ ಬಲಿದ ಗೋಣ್ ಕಿಡಿಪಾಱುವ ದಾಡೆತಳ್ತಗು
ರ್ಮಿಸೆ ಮಲೆದುರ್ಕಿ ಗರ್ಜಿಸಿ ಕರಂ ಪರಿತಂದುದುಪಂದಿ ಕಾಯ್ಪಿನಿಂ ||೯||

ಟೊಣೆದವರೆಚ್ಚ ಕೂರ್ಗಣೆಗಳಂ ಮಿಗೆ ಮುತ್ತಿದ ಜಾಯಿಲಂಗಳಂ
ಕ್ಷಣದೊಳಿದಿರ್ಚಿ ತುಂಡಿಸಿ ಕುರುತ್ತಿಱಿವಿಟ್ಟಿಯನಂಡುಗೊಂಡು ಬಿ
ನ್ನಣದೆ ಬಿದಿರ್ಚಿ ನಿರ್ಭರದೆ ಪೆರ್ಬಲೆಯಂ ಪಱಿದಿಕ್ಕಿ ಕೇಣದಿಂ
ಕೆಣಕಿದ ಧೀವರಾಮರರನೆಕ್ಕಲನುರ್ಬುತೆ ಸೀಳ್ದುದಾರ್ಪಿನಿಂ ||೧೦||

ಚಂಪಕ
ನೆರೆದಿದಿರಾದೊಟ್ಟುವ ಪೊದಳ್ದರೆಯಟ್ಟಿದೊಡಂಡುಗೊಳ್ವ ಪಾ
ಯ್ತರೆ ಮುಸುಡೆತ್ತಿ ಗರ್ಜಿಪ ಕೆಲಂದೊಲಗುತ್ತಿರೆ ದಾಡೆಗುಟ್ಟಿ ನಿ
ರ್ಭರದೆ ಪಳಂಚಲವ್ವಳಿಪ ಬೊಬ್ಬಿಱಿಯುತ್ತಿರೆ ಮೆಯ್ಯ ರೋಮಮು
ಬ್ಬರಿಸೆ ಕಡಂಗಿ ನಿಲ್ವ ಬಗೆ ಮೊಕ್ಕಳಮಾದುದು ಸೂಕರೇಂದ್ರನಾ ||೧೧||

ಮಲೆವ ಮರಲ್ವಱೊಪ್ಪುವ ಮಲಂಗುವ ಪೊಂಗುವ ತಳ್ತು ಪಾಯ್ವ ಕೆಂ
ಗಲಿಪ ಕಟಾಕ್ಷದಿಂದಡರೆ ನೋಡವ ಕಾಡುವ ದಾಡೆಗುಟ್ಟುವ
ಗ್ಗಲಿಸಿ ತೊಡಂಕುವಬ್ಬರಿಸಿ ಪತ್ತುವ ಸುತ್ತುವ ಘೂರ್ಮಿಸುತ್ತೆ ಸಂ
ಚಲಿಪ ಧರಿತ್ರಿಯಂ ಟೊಣೆವ ಸೂಕರನಾಟಮದೇನಳುಂಬಮೋ ||೧೨||

ತಿರುಗುತ್ತೊಂದೆರಡಡಿಯಂ
ಭರದಿಂ ನೋಡುತ್ತೆ ನಿಲುತೆ ಘೂರ್ಮಿಸುತಂ ಕೊ
ಕ್ಕರಿಸುತಿದಿರಾಂತು ವಿಸಟಂ
ಬರಿದುದು ಸುರರಿದಿರೊಳರರೆ ಘೋರವರಾಹಂ ||೧೩||

ಚಂಪಕ
ಒದೆದು ಧರಿತ್ರಿಯಂ ನೆಱೆ ಪುಟಂ ನೆಗೆದವ್ವಳಿಸುತ್ತೆ ತುಂಡಮಂ
ಬಿದಿರ್ದು ಕಡಂಗಿ ಗರ್ಜಿಸಿ ಘನಾಘನನಿಸ್ವನದಿಂ ತುಡುಂಕಿ ಪೊ
ಯ್ದುದು ಕುಡುದಾಡೆಯಿಂದಿಱಿದುದೆತ್ತಿದುದಿರ್ಬಗಿಯಾಗಿ ಕಾಯಮೊ
ಟ್ಟಿದುದುವರಟ್ಟೆಯಂ ಕೊಱೆದು ತಿಂದುದು ತೇಗಿದುದುಗ್ರಸೂಕರಂ ||೧೬||

ನಡುಗಿದುದಿಳೆ ಗಿರಿಶಿಖರಂ
ಕೆಡೆದುದು ಕದಡೆಳ್ದು ಜಡಧಿ ತುಳ್ಕಿದುದುಡುಗಳ್
ಬಿಡದುಳ್ಕಿದುವಹಿಪತಿ ಪೆಡೆ
ಯುಡುಗಿದನಿನಬಿಂಬಮದಿರ್ದುದಳ್ಕಿದರಹಿತರ್ ||೧೮||
ವಚನ
ಎಂದು ಬಗೆದಂತಕಾಂತಕಂ ಪ್ರತಿಜ್ಞಾರೂಢನಾಗಿ

ಪ್ರಕಟಪಟುರೋಷಬದ್ಧ
ಭ್ರುಕುಟಿ ಕರಾಳಾಸ್ತ್ರದಿಂದೆ ತೆಗೆನೆಱೆದೆಚ್ಚಂ
ಪ್ರಕುಟಿಲದಂಷ್ಟ್ರಾಭೀಷಣ
ವಿಕಟಾಂಗನನಾ ವರಾಹನಂ ಪುರಮಥನಂ ||೨೧||

ಎಚ್ಚೊಡಿಳೆಯದಿರೆ ಶರಮಿರ
ದುಚ್ಚಳಿಸಿದುದೊಡಲದಱ  ಕೆನ್ನೀರ್ ಭರದಿಂ
ಬೆಚ್ಚನೆ ಪಾಯ್ತರೆ ಕಣ್ಣರೆ
ಮುಚ್ಚುತ್ತುಂ ಮೂರ್ಛೆವೋದುದಲ್ಲಿ ವರಾಹಂ ||೨೨||

ಮಡು ಗಿಡು ಸರು ದರಿ ಪಳ್ಳಂ
ಸಿಡುಂಬು ಮೆಳೆ ಬಳ್ಳಿ ಪುಲ್ ಪೊದಱ್ ಬೆಟ್ಟುಗಳಿ
ಟ್ಟೆಡೆ ಕುತ್ತುಱು ನಾನಲ್ಗಳೊ
ಳೆಡೆವೆಡದೋಡಿತ್ತು ಪಂದಿ ಜವೆದಿಂದಾಗಳ್ ||೨೩||

ಬೆಂಬಳಿವಿಡಿದಟ್ಟುತ್ತುಂ
ತಾಂ ಬರೆವರೆ ಬಿಡದಧಿಜ್ಯಧನು ಶಬರೇಶಂ
ಮುಂಬರಿದರ್ಜುನನಿರ್ದ ಬ
ನಂಬೊಕ್ಕುದು ಪಂದಿ ಸುಳಿದುದಾತನ ಬಬಳಿಯೊಳ್ ||೨೪||

ವಚನ
ಆಗಳ್ ಬಳಿವಿಡಿದು ಬಳಸಿ ಕವಿದು ಕುಬುಬೆಂದು ಬೊಬ್ಬಿಱಿವ ಸುರಕಿರಾತ
ರಬ್ಬರಮಂ ಕೇಳ್ದಿದೆತ್ತಣದೆಂದು ಯೋಗಿ ಯೋಗಮನುಪಶಮಿಸಿ, ಕಣ್ದೆಱೆದು
ಮುಂದಿರ್ದ ಭೀಕರಾಕೃತಿವೆತ್ತ ಮಹಾವರಾನಂ ನೋಡಿ ಬನದ ತಪಸ್ವಿಗಳ್ಗು
ಪಹತಿಗೆಯ್ವುದಿದಂ ತವಿಪುದೆನಗೆ ಕರ್ತವ್ಯಮಕ್ಕುಮೆಂದು ನಿಜಕ್ಷ್ತ್ರಾತ್ರಧರ್ಮಮಂ
ಬಗೆದು, ಮೂಡಿಗೆಯಿಂ ತೋಡಿಲ್ಲದ ಚಂಡಕಾಂಡಮನುಗಿದು, ಗಾಂಡೀವಿ
ಗಾಂಡೀವದಿರ್ದೆಸೆಯ ಕೊಪ್ಪನಾರಯ್ದು ಪೆದೆಯಂ ತೊಡರ್ಚಿ ಜೇವೊಡೆದು ಪೂಢಿ
ನೀಡಡಿಗೊಂಡು ತೆಗೆನೆಱೆನಿಂದು,

ಕೆಡೆ ಕೆಡೆಯೆಂದಾರ್ದೆಚ್ಚಂ
ಘುಡುಘುಡಿಪ ಮಹಾವರಾಹನಂ ಕೂರ್ಗಣೆಯಿಂ
ಕಡುಗಲಿ ಪಾರ್ಥಂ ನೆಱನಂ
ನಡೆಗೋಣಡಿಗೊಂಡು ಪಂದಿ ಕೆಡೆದತ್ತಾಗಳ್ ||೨೫||

ತರಳ
ಜವದಿನಲ್ಲಿಗೆ ಬಂದು ಶಂಕರನೆಂದನೀ ಕಿಟಿಯೆಮ್ಮನದಾಂ
ತವಿಸಿದೆಂ ತೆಗೆಯೆಂದು ಭೂತಗಣಕ್ಕೆ ಪೆಳ್ದುದುಮಾಲಿಸು
ತ್ತವಿಕಲಂ ಕೆಡೆದತ್ತಿದೆನ್ನಯ ಬಾಣದಿಂ ಕಡಡೆಸಾರ್ ಬಿಡೆಂ
ದವನನೀಶ್ವರನೆಂದು ಬಲ್ಲನೆ ಪಾರ್ಥನೊತ್ತಿ ಕೆರಳ್ಚಿದಂ ||೨೬||

ಎಲೆ ಶಬರ ಕಾಡ ಬಡನರಿ
ಮೊಲ ಪುಲ್ಲೆಗಳಲ್ಲಿ ನಿನ್ನ ಸಾಹಸಮುಂ ದೋ
ರ್ಬಲಮುಂ ಮೆಱೆಗುಮಲ್ಲದೆ
ಚಲದಂಕನೊಳೆನ್ನೊಳೆಂತುಮೇಂ ಮೆಱೆದಪುದೇ ||೨೭||

ಬೇಡ ನಿನಗೇಕೆ ಸಾಹಸ
ದಾಡಂಬರಮೆನ್ನೊಳಾಹವಕ್ಕನುಗುಣನಂ
ಜೋಡಿಸು ನಿನಗುಳ್ಳೊಡೆಯನ
ನಾಡಲದೇಂ ತೋರ್ಪೆನೆನ್ನಸಾಹಸದಿರವಂ ||೨೮||

ಕರಿ ಕೇಸರಿಯಂ ಕೆಣಕಿದ
ಪರಿಯಂ ಪರುಟವಿಸದಿರ್ ಮದಾಂಧತೆಯಿಂದಾಂ
ತರಿಬಲಬಲಾಹಕಪ್ರ
ಸ್ಫುರಿತಮಹಾನಿಲನೊಳತುಳಬಳಗಾಂಡೀವಿಯೊಳ್ ||೨೯||

ಚಂಪಕ
ಎನೆ ನಸುನಕ್ಕು ಮಾರರಿಪುವಾತನ ಧೈರ್ಯಮನಾತನೆಳ್ಗೆವೆ
ತ್ತನುಗತಶೌರ್ಯಮಂ ಬಳಿಯೊಳಿರಪಗಜಾತೆಗೆ ಸೂಚಿಸುತ್ತೆ ಪು
ರ್ಬಿನ ಕೊನೆಸನ್ನೆಯಿಂ ಗೊರವ ನಿನ್ನಯೆ ಶೌರ್ಯಪುದಿರ್ಕೆ ಖಡ್ಗಮೀ
ಧನುಶರಮೆತ್ತ ನಿನ್ನ ತಪಮೆತ್ತ  ವಿಚಿತ್ರಮಿದಲ್ತೆ ಧಾತ್ರಿಯೊಳ್ ||೩೦||

ವಚನ
ಎಂದೇಳಿಗೆಯ್ದು ನುಡಿದ ಕಪರ್ದಿಯ ಕಟೂಕ್ತಿಯಂ ಕೇಳ್ದು

ವಿಪಿನಚರ ನಿನಗೆ ತಕ್ಕುದು
ಚಪಲಮೃಗವ್ರಜದ ಬೇಂಟೆಯುಜ್ಜುಗಮೆಮ್ಮೀ
ತಪದ ವಿಚಾರಂ ತಕ್ಕುದೆ
ವಿಪರೀತಂ ನಿನ್ನನುಡಿಯನೊಲ್ವರೆ ಬಲ್ಲರ್ ||೩೧||

ಉತ್ಪಲ
ಎಂದವನುಕ್ತಿಯಂ ಗಿರಿಶನಾಲಿಸಿ ತಾಪಸ ಲೇಸನಾಡಿದಯ್
ಕುಂದದೆ ಬೇಂಟೆಯುಜ್ಜುಗಮಿದೆಮ್ಮಯೆ ಕಜ್ಜಮಿದಪ್ಪದಪ್ಪುದಾ
ವಂದದಿನಿಂತು ನಿನ್ನವೊಲದಾವನೊ ಶಾಂತಿಸಮಗ್ರನುಗ್ರಶೌ  
ರ್ಯಂ ದಿಟಮಸ್ತ್ರಶಸ್ತ್ರಧರನಾದ ತಪಸ್ವಿ ಧರಾತಳಾಗ್ರದೊಳ್ ||೩೨||

ಚಂಪಕ
ಕಟಕಿಯಿದೇಂ ಪುಳಿಂದ ಬಿಡು ನಿನ್ನ ದುರುಕ್ತಿಯನೆಮ್ಮವೃತ್ತಿಯಂ
ಪಟುತಪಮಾಂತ ತಾಪಸರೆ ಬಲ್ಲರುದಾರಜಟಾಮೃಗಾಜಿನ
ಸ್ಫುಟಭಸಿತಂಗಳಂ ಶರಶರಾಸನಖಡ್ಗಮನಾಂತು ತಾಪಸೋ
ತ್ಕಟಮೃಡನಿರ್ಪನಾ ಮೃಡನ ಶಿಷ್ಯತೆಯಾಂತೆನಗೇನಿದೊಪ್ಪದೆ ||೩೩||

ನೀನೆನ್ನೊಳಾಹವಕ್ಕೆ ಸ
ಮಾನನೆ ತೊಲಗಾಂಪ ಧೀರನಂ ಬರಿಸೀಗಳ್
ಕಾನನಚರ ಸಮರದೊಳಭಿ
ಮಾನಮನುಳಿಯೆನೆ ಮಹೇಶ್ವರಂ ಮಗುಳ್ದೆಂದಂ ||೩೪||

ಏನಾದೊಡೇನೊ ನಿನ್ನ ತ
ಪೋನೀತಿಯದಂತದಿರ್ಕೆ ನಿನ್ನ ಧನುರ್ವಿ
ದ್ಯಾನಿಪುಣತೆಯೆಂತೆಂತನು
ಮಾನಮದೇಂ ತೋರ್ಪುದೆನ್ನೊಳಡಗಿನಿಸರಿವೆಂ ||೩೫||

ಬಱಿದೇಕೆ ಗಳಪಿದಪ ನೀಂ
ಪೊಱಮಡು ಸಮರಕ್ಕೆ ನಿನ್ನ ಭುಜಬಲದಿರವಂ
ನೆಱೆ ಕಾಣ್ಬೆನೆನ್ನ ವಾಸಿಯ
ತೆಱನಂ ಕಡೆಗಣ್ಚಿ ಪಿಂಗಿ ಪೆಱಸಾರ್ದಪೆನೇ ||೩೬||

ಒಳಸೇರ್ದುದು ಶಾಂತಿರಸಂ
ಮೊಳೆತುದು ಕೋಪಾಗ್ನಿ ಪೊಗೆದುದದುಸಿರೊಳ್ ನಿಡುಗ
ಣ್ಗಳ ಕಡೆಯೊಳ್ ಕಿಡಿಗೆದರ್ದುದು
ಬಳಿಕಲರ್ದುದು ಮೊಗದೊಳಚಲರಿಪುನಂದನನಾ ||೩೭||

ಬಡಬಾಗ್ನಿಯಳುರ್ಕೆಯೊ ಬಱ
ಸಿಡಿಲೇಳ್ಗೆಯೊ ಮುಳಿದ ಸಿಂಹದುಗ್ರತೆಯೊ ಪೊಡ
ರ್ಪಿಡಿದ ಲಯಕಾಲಮೃತ್ಯುವಿ
ನಡರ್ಪೊ ಎನೆ ಮಿಸುಪ ಮಸಕಮಂ ತಳೆದನವಂ ||೩೮||

ಮಹಾಸ್ರಗ್ಧರೆ
ಪಟುಕೋಪಾಟೋಪಬದ್ಧಭ್ರುಕುಟಿ ವಿಚಳಿತಶ್ಮಶ್ರು ಘರ್ಮಾಂಬುಭಾಹಸ್ವ
ನ್ನಿಟಿಲಂ ಶೋಣಾಕ್ಷಕೋಣಂ ಪೆದೆಯನೆಳೆದು ಗಾಂಡೀವದೊಳ್ ತೊಟ್ಟುರೌದ್ರೋ
ತ್ಕಟವೃತ್ತಂ ಜ್ಯಾರವಂಗೆಯ್ದಡಸಿ ಪಿಡಿದು ನಿಂದಾರ್ದು ಶಾತಾಸ್ತ್ರಮಂ ಸಂ
ಘಟಿಸುತ್ತುಂ ಮಾಣದೆಚ್ಚಂ ಕಪಟಶಬರನಂ ಕೊಳ್ಳೆನುತ್ತಣ್ಮಿ ಪಾರ್ಥಂ ||೩೯||

ಮತ್ತೇಭ
ಅದು ಪಿಂತಾಗಿರೆ ಮತ್ತಮೊಂದು ಶರಮೆಯ್ದಿತ್ತಂತದಂ ಪಿಂದುಗೆ
ಯ್ದೊದಱುತ್ತುಂ ಪೆರತೊಂದು ಮಾರ್ಗಣಮಳುಂಬಂ ಪಾಯ್ದುದಂಬೋದು ಮೇ
ಣದರಿಂ ಮುಂಚೆ ಪಳಂಚಿ ಪಾಱಿದುದು ತಿಬ್ಬಂ ಬಾಣಮನ್ಯಂ ಬಳಿ
ಕ್ಕದುಮಂ ದಾಂಟಿ ಕಡಂಗಿ ಸೈವರಿದುದದೇನೆಂಬೆಂ ತದಾಟೋಪಮಂ ||೪೦||

ಗಿರಿಯಗ್ರದೊಳುಱೆ ಕಱೆವಂ
ಶರವೃಷ್ಟಿಯನಾತ್ಮಜನಕನಿಂದ್ರನೆನುತ್ತುಂ
ಪುರುಡಿಸಿ ಶರವೃಷ್ಟಿಯನಾ
ಗಿರಿಶಾಗ್ರದೊಳೆಯ್ದೆ ಕಱೆದನರ್ಜುನನದಟಿಂ ||೪೧||

ಚಂಪಕ
ಒದೆದೆಡೆಗೊಂಡ ಬಿಲ್ಲ ತಿರುವಂ ಮೊರೆದಳ್ತರದಿಂ ಪಳಂಚಿ ವೇ
ಗದೊಳಿದಿರಾಂತು ಬಲ್ಗರಿಯ ಗಾಢಮೊಡಂಬಡೆ ಮೀಱಿ ಷಾಱಿ ಪುಂ
ಖದ ಪೊಳೆರ್ಪುವೆ ಮುಮ್ಮೊನೆಯ ಕೆಂಗಿಡಿಸಾಲಿಡೆ ರೂಢಿಸುತ್ತೆ ಪಿಂ
ಗದೆ ಪೊಗರಾಂತ ಕೂರ್ಗಣೆಗಳೇಂ ಪರಿತಂದುವೊ ಪಾಂಡುಪುತ್ರನಾ ||೪೨||

ಮತ್ತೇಭ
ಧರೆಯೆತ್ತಾಗಸಮೆತ್ತ ತಳ್ತ ದೆಸೆಯೆತ್ತೆಂಬಂತೆ ಮತ್ತಂ ಧನು
ರ್ಧರಪಾರ್ಥಂ ಬಿಡದೆಚ್ಚ ಮಾರ್ಗಣಕದಂಬಂ ಧಾರೆಯಿಂ ಪೊಣ್ಮಿದ
ಳ್ಳುರಿ ವಿದ್ಯುದ್ದ್ಯುತಿವಸ್ಫುಲಿಂಗತತಿ ಸುತ್ತಂ ಸೂಸೆ ಪಾಯ್ತಂದು ನಿ
ರ್ಭರದಿಂ ತೀವಿದುದಂಬಿನಂಬುಧಿಯಳುಂಬಂ ಮುತ್ತಿದತ್ತೆಂಬಿನಂ ||೪೩||

ಉತ್ಪಲ
ಮಂಜಿನ ಪುಂಜಮೊತ್ತರಿಸಿ ಮುತ್ತಿ ಮುಸುಂಕೆ ಭಯಾರ್ತಿಗೊಳ್ವನೇ
ಕಂಜಸಖಂ ಪತಂಗತತಿ ಪಾಯ್ದೊಡೆ ಬೆರ್ಚುಗುಮೇ ದವಾಗ್ನಿ ವಾ
ತಂ ಜವದಿಂ ಪಳಂಚೆ ಗಿರಿ ಕಂಪನವಾಂಪುದೆ ಪಾಂಡುಪುತ್ರನಾ
ತಂ ಜಡಿದೊತ್ತೆ ಜಾಱಿ ಪೆಱಸಾರ್ವನೆ ಧೀರಧನಂಜಯಾಂಬಕಂ ||೪೪||

ಮೊರೆದು ಪರಿತಂದು ಮಶಕೋ
ತ್ಕರಮೆತ್ತಂ ಕವಿಯೆ ಸೆಡೆವುದೇಂ ಮದಗಜಮಾ
ನರನೆಚ್ಚ ಗಱಿಗಣೆಗಳಾ
ವರಿಸಿ ಕರಂ ಮುತ್ತೆ ಮೃತ್ಯುಹರನಂಜುವನೆ ||೪೫||

ಚಂಪಕ
ಮುಳಿದು ಗಜಾಸ್ಯನಬ್ಬರಿಸಿದಂ ಕೆರಳ್ದ ಗುಹನಲ್ಲಿ ರೋಷಮು
ಜ್ಜ್ವಳಿಸಿ ಗಣಾಳಿ ಗರ್ಜಿಸಿದುದಾ ನರನೇಳ್ಗೆಗೆ ಚಿತ್ರಮಿಂತಿದೇಂ
ಕಳಕಳಮೆನ್ನ ಭಕ್ತನಿವನೀತನೊಳಾಂಪ ವಿನೋದಮುಂಟು ನಿ
ಶ್ಚಳತೆಯೊಳಿರ್ಪುದೆಂದವರ್ಗೆ ನೇಮಿಸಿದಂ ಕರುಣಾಬ್ಧಿ ಶಂಕರಂ ||೪೬||

ವಚನ
ಅನಂತರಮಾ ಶಬರಶಂಕರಂ ಪ್ರಚಂಡಧನುರ್ದಂಡಮಂ ಕೆಯ್ಕೊಂಡು ತಿರುವೊಯ್ದು
ಜೇವಡೆದು ಬಾಣಮಂ ಪೂಡಿ ತೆಗೆನೆಱೆದೆಚ್ಚಾಗಳ್

ನರನೆಚ್ಚ ಕಣೆಗಳಂ ಕ
ತ್ತರಿಸಿದುವವನೊಡಲನಂಟದಿಳೆಗೆಱಗಿದುವೀ
ಶ್ವರನಾಣತಿಯಿಂದಾತನ
ಪೊರೆಯೊಳ್ ಪುರಮಮಥನನೆಚ್ಚ ಪೊಸಕೂರ್ಗಣೆಗಳ್ ||೪೭||

ಮಹಾಸ್ರಗ್ಧರೆ
ಶರವೃಂದಂ ಮಾಣದೆಲ್ಲಂ ಕಡಿವಡೆದಿಳೆಯೊಳ್ ಬೀಳೆ ಕರ್ಣಾರಿ ಕೋಪಾ
ತುರಚಿತ್ತಂ ಮತ್ತಮೆಚ್ಚಂ ಕಿವಿವರೆಗುಗಿದ್ದುದ್ದಂಡಕಾಂಡಗಳಂ ಶಂ
ಕರನಾ ಬಾಣಂಗಳಂ ಖಂಡಿಸಿ ಮಗುಳ್ದು ನಿಜಾಸ್ತ್ರಂಗಳಿಂದೆಚ್ಚನಾಗಳ್
ಬೆರಲೆತ್ತುತ್ತೆಯ್ದೆ ಕೊಂಡಾಡಿದನವನ ಮಹಾಶೌರ್ಯಮಂ ಪಾಂಡುಪುತ್ರಂ ||೪೮||

ಎಲೆ ಶಬರ ನಿನ್ನ ಪೃಥುಭುಜ
ಬಲಮೊಳ್ಳಿತ್ತೆಸುಗೆ ಪೊಸತು ಬಿಲ್ಲಾಳ್ತನದೊಳ್
ಕಲಿ ನೀನಲ್ಲದೆ ಪೆಱರಾರ್
ಚಲದಿಂ ಸಮನೆನಿಸಿ ಕಾದಿದಯ್ ಬಿಡದೆನ್ನೊಳ್ ||೪೯||

ಅರರೆ ಭವದೀಯಸಾಹಸ
ದಿರವತಿಶಯಮೆಂದು ಪೊಗಳ್ದು ತೊಟ್ಟೆಚ್ಚಂ ದ
ಳ್ಳುರಿ ಸೂಸುವ ಧಾರೆಯ ಕಿಡಿ
ಸುರಿವ ನಿಶಾತಾಸ್ತ್ರಬೃಂದಮಂ ಕಲಿಪಾರ್ಥಂ ||೫೦||

ಶರವರ್ಷಮನೇ ಕಱೆವುದು
ಪಿರಿದೆ ಮಹಾಕಾಲಮೇಘಮರ್ಜನಜಲದಂ
ಭರದಿಂದಿದಿರಾಂತನವಧಿ
ಶರವರ್ಷಮನಲ್ಲಿ ಕಱೆದುದಿದು ಚಿತ್ರತರಂ ||೫೧||

ಮತ್ತೇಭ
ಶಿವನಿಂ ದಿವ್ಯತರಾಸ್ತ್ರಮಂ ಪಡೆಯಲೇಳ್ತಂದಂದು ಪಾರ್ಥಂ ಮಹೋ
ತ್ಸವದಿಂದಂ ತನಗುಳ್ಳ ಸರ್ವಶರಮಂ ದೇವೇಶ ನೋಡೆಂದು ತೋ
ರ್ಪವೊಲೆಚ್ಚಂ ಕಡಿದಾ ಕಳಂಬಮನಿತಂ ನಿನ್ನಿಷ್ಟಮಾದಸ್ತ್ರಮಂ
ತವೆ ನೋಡೆಂದವನಲ್ಲಿ ತೋಱುವವೊಲಾತಂಗೆಚಾಚನುಗ್ರಾಂಬಕಂ ||೫೨||

ಚಂಪಕ
ನರಸುರದಾನವಾದಿಗಳೊಳೆನ್ನ ಶರಾಹತಿಗೊಡ್ಡಿ ನಿಲ್ವರಿ
ಲ್ಲರಿದರಿದಾರ್ಪುಗುಂದದಿರೊಳ್ ನೆಱೆ ನಿಂದೆ ಕಿರಾತರಲ್ಲಿ ನೀ
ನುರುತರಸಾಹಸಾಂಕನೆನಿಪಯ್ ನಿನಗಾರ್ ಸರಿವರ್ಪರಳ್ಕದೋ
ಸರಿಸದೆ ನಿಲ್ವುದಿನ್ನುಮೆನುತುಂ ಪೊಗಳ್ದಾತನನೋಲ್ದು ಫಲ್ಗುನಂ ||೫೩||

ಜಗಜಗಿಸುವ ಮೂಡಿಗೆಯಿಂ
ತೆಗೆದುಂ ದಿವ್ಯಾಸ್ತ್ರವೃಂದಮಂ ಮಂತ್ರಿಸುತುಂ
ಮಗುಳ್ದೆಚ್ಚನಾರ್ಪು ಮಿಗೆ ಪ
ನ್ನಗಧರನಂ ಪಟುಪರಾಕ್ರಮಂ ಪಾಂಡುಸುತಂ ||೫೪||

ಮಹಾಸ್ರಗ್ಧರೆ
ಎನಿತಂ ತಾನೆಚ್ಚನಸ್ತ್ರಪ್ರಕರಮನಭಿಮಂತ್ರಾನ್ವಿತಂಗೆಯ್ದು ಕೂರ್ಪಿಂ
ದನಿತಂ ಕಾಲಾಂತಕಂ ನುಂಗಿದನಸವಸದಿಂದಂತದಂ ಕಂಡುಮೀಶ
ಕ್ತಿನಿಯುಕ್ತಂ ವ್ಯಾಧನಲ್ಲಾವನೊ ತಿಳಿದಪೆನೆಂಬೀ ವಿಚಾರಕ್ಕೆ ಪಕ್ಕಾ
ದನೆ ಪಾರ್ಥಂ ಕ್ಷಾತ್ರದುಸ್ತಾಮಸಮಡಸಿದವಂಗಕ್ಕುಮೇ ಸದ್ವಿವೇಕಂ ||೫೫||

ಉತ್ಪಲ
ಶಂಕರನಂಘ್ರಿಪಂಕಜದ ಸೇವೆಗೆ ಕಂಟಕನಾದನೇ ಪುಳಿಂ
ದಂ ಕರಮೀತನುರ್ಕನುಗಿವೆಂ ಬಿಡೆನೆಂದು ಜಯೋದ್ಯಮಕ್ಕೆ ನಿಃ
ಶಂಕತೆವೆತ್ತು ನಿರ್ಭರದೆ ಗರ್ಜಿಸಿ ಮುಂಬರಿದೆತ್ತಿ ಚಾಪದಿಂ
ದಂ ಕಲಿಪಾರ್ಥನಪ್ಪಳಿಸಿದಂ ಪಳಿ ಪೊರ್ದದ ಚಂದ್ರಮೌಳಿಯಂ ||೫೮||

ದಂಡೆಗೊಳುತ್ತದಂ ಪೊಳೆದು ಚಿಮ್ಮಿದನೀಶ್ವರನಲ್ಲಿ ಮೇಣದಂ
ಕಂಡು ಕನಲ್ಕೆಯಿಂ ಮಗುಳ್ದು ಬಳ್ಕಿದನೀ ಹತಿಗೆಂದು ಚಂಡಕೋ
ದಂಡಮನೆತ್ತಿ ಪೊಯ್ದನವನೀಶನ ಪೇರುರಮಂ ಕಪರ್ದಿ ಮುಂ
ಕೊಂಡು ಮೃದುಸ್ಮಿತಂ ಮಿಸುಗೆ ತದ್ಧನುವಂ ಸೆಳೆದ ಕರಾಗ್ರದಿಂ ||೫೯||

ವಚನ
ಅಂತುಮಾ ಗಾಂಡೀವಕೋದಂಡಮನುದ್ದಂಡಚಂಡಿಕಾರಮಣಂ ಸೆಳೆದುಕೊಳ್ವು
ದುಮತಿರೋಷಕಷಾಯಿತಕಟಾಕ್ಷನಾಗಿ,

ಚಂಪಕ
ತಿಳಿವಣಮಿಲ್ಲದೆಳ್ತರದ ತಾಮಸಂಪಕದೊಳಾಳ್ದಡಾಯುಧಂ
ದಳೆದೊಱೆಯಿಂದ ಕೀಳ್ತು ಜಡಿದಾರ್ದು ಪಳಂಚಿ ಕಿರಾತ ಬೀಳೆನು
ತ್ತೊಳಱಿ ಕಡಂಗಿ ಪೊಯ್ದನಭವಾಂಗಮನರ್ಜುನನಾ ಪುರ್ರಿ ಕೆಯ್
ಚಳಕದಿನೀಳ್ದುಕೊಂಡನದನಾಗಳೆ ಕೆಯ್ ಬಱಿದಾಯ್ತು ಪಾರ್ಥನಾ ||೬೦||

ಶರತತಿಯೆಲ್ಲಂ ಬಯಲಾ
ಯ್ತುರುಧನುವುಂ ಪೋಯ್ತಡಾಯುಧಂ ಜಗುಳ್ದುದು ಕೋ
ಡಿರದುದಿರ್ದಿಭದವೊಲಿರ್ದಂ
ನರನೀಶ್ವರನೊಡನೆ ಸದರಮಪ್ಪುದೆ ಸಮರಂ ||೬೧||

ಮತ್ತೇಭ
ಶರಚಾಪಾಯುಧಮೆಲ್ಲಮುಂ ಜಗುಳ್ದೊಡೇಂ ಬೆನ್ನಿತ್ತನೇ ಸಾಧ್ವಸಾಂ
ಕುರಂ ತಾಳ್ದನೆ ಪಾರ್ಥನಂದಮಮ ಶೌರ್ಯೋದ್ರೇಕದಿಂದುರ್ಬಿ ಪೆರ್
ಮರಗೊಂಬಂ ಮುಱಿದಿಟ್ಟನಾತ್ಮಕರದಿಂ ಕಿಳ್ತೆತ್ತಿ ಕಲ್ಗುಂಡ ಬಲ್
ಸರಿಯಂ ಸೂಡಿದನಂತದಂ ಕಡಿದನೊಂದಂಬಿಂದೆ ಮೃತ್ಯುಂಜಯಂ ||೬೨||

ಎಲೆ ಗೊರವ ಚಾಪಬಾಣಾ
ವಲಿಯಂ ಖಡ್ಗಮುಮನಕಟ ನೀಗಿದೆ ನಿನ್ನೀ
ಚಲಮಂ ಬಲಮುಮನಿನ್ನೊಂ
ದಲಗುಳ್ಳೊಡೆ ತಂದು ತಾಳ್ದು ಮೆಱೆ ಬಳಿಕೆಮ್ಮೊಳ್ ||೬೩||

ಚಂಪಕ
ಎಲೆ ಗಿರಿಜಾತೆ ನೋಡಿವನ ಸಾಹಸಮಂ ಸಲೆ ನಾಲ್ಕು ತಿಂಗಳುಂ
ವಿಲಸಿತಜೀರ್ಣಪರ್ಣಮನೆ ಮೆಲ್ದುಳಿದೊಪ್ಪುವ ನಾಲ್ಕು ತಿಂಗಳ
ಗ್ಗಲಿಸಿದ ವಾಯುವಂ ಸವಿದು ನಿಗ್ರಹಿಸಿರ್ದ ಶರೀರದಿಂದೇಂ
ಕಲಿಯೊ ಕಡಂಗಿ ಕಾದಿದನಿವಂ ಸಮದಂಡಿಯೊಳೆನ್ನೊಳರ್ಜುನ ||೬೬||

ಉತ್ಪಲ
ಕಾದುವ ಕೆಯ್ದು ಪೋದುದೆನುತಳ್ಕಿದನೇ ಭುಜಶೌರ್ಯಶಕ್ತಿ ಗೆಂ
ಟಾದುದೆ ಸಾರವೀರರಸಮೇಂ ಬಿಸಿಗುಂದಿದುದೇ ಸಹಾಯಮಂ
ಸಾದರಮೊಚ್ಚತಂ ಪಡೆವೆನೆಂಬಭಿಲಾಸೆಯನಾಳ್ದುದೇ ಮನಂ
ಕಾದಲೆ ನೋಳ್ಪುದೀತನ ಸಮಗ್ರಪರಾಕ್ರಮಮುರ್ವಿ ಪೆರ್ಚುಗುಂ ||೬೭||

ಕುಲಗಿರಿ ಸಂಚಲಿಸಿದೊಡಂ
ಜ್ವಲದೌರ್ವ ತಂಪನಾಳ್ದೊಡಂ ರವಿಬಿಂಬಂ
ಸಲೆ ಕರ್ಗಿದೊಡಂ ರಣದೊಳ್
ಕಲಿ ಪಾರ್ಥಂ ಭೀತಿವಟ್ಟು ಬೆನ್ಗೊಟ್ಟಪನೇ ||೬೮||

ಚಂಪಕ
ಕುಲಗಿರಿಯುಗ್ಮಮಾಳ್ದ ಪುರುಷಾಕೃತಿಯಿಂದೆ ಪಳಂಚುವಂತಿರು
ಜ್ಜ್ವಲಬಡಬಾಗ್ನಿವಹ್ನಿಯುಗಮಾಂತು ನರಾಂಗಮನಣ್ಮಿ ಕಾದುವಂ
ತಲಘುಮೃಗಾಧಿಪದ್ವಯಮೊಡಂಬಡೆ ಮಾನವವೇಶಮುರ್ಕು ಸಂ
ಚಲಿಸದೆ ಪೋರ್ವವೊಲ್ ಪೊಣರ್ದರುರ್ಬಿ ವೃಷಧ್ವಜಮರ್ಕಟಧ್ವಜರ್ ||೭೨||

ಪಿಡಿಯೆ ಕರಾಗರಮಂ ಬಿಡಿಸುತೌಂಕೆ ಬಿದಿರ್ಚುವ ತಳ್ಕೆಗೆಯ್ಯೆ ಮೆಯ್
ಗೊಡಪಿ ತೆರಳ್ಚುವವ್ವಳಿಸೆ ಸಿಲ್ಕದೆ ಲಂಘಿಪ ಸಂಚಿನಿಂದೆ ಪೊ
ಯ್ದೊಡೆ ಪೊಳೆವಾರ್ಪಿನಿಂದೆಱಗೆ ಚಿಮ್ಮುವ ಬಾಹುಗಳಿಂದೆ ಕಂಠಮಂ
ತೊಡರೆ ಕುನುಂಗಿ ಪಯ್ಸರಿಪ ಬಿನ್ನಣಮೊಪ್ಪೆ ಕಡಂಗಿ ಕಾದಿದರ್ ||೭೩||

ಮತ್ತೇಭ
ಪದಘಾತಕ್ಕೆ ಧರಾತಳಂ ಕುಸಿಯೆ ಕೂರ್ಮ ಕುರ್ಗೆ ಭೋಗೀಂದ್ರನ
ಗ್ಗದ ದೀರ್ಘಸ್ಫಟೆ ಕಂಠದೊಳ್ ನೆಲಸೆ ಬಾಹುಭ್ರಾಂತಿಸಂಜಾತವಾ
ತದ ಘಾತಕ್ಕೆ ಪಯೋಧರಂ ಕೆದಱೆ ಬಾನೊಳ್ ಜೀರ್ಣಪರ್ಣಂದಲೊ
ಡ್ಡಿದ ವಿದ್ಯಾಧರಪುಷ್ಪಕಂ ಜಗುಳೆಯುದ್ಧಂಗೆಯ್ದರೀಶಾರ್ಜುನರ್ ||೭೮||

ತೊಡೆಯಂ ಪೊಡೆಯಂ ಭುಜಮಂ
ಮುಡುಪಂ ಪೇರುರಮನಳಿಕಮಂ ನೆತ್ತಿಯುಮಂ
ಪೆಡತಲೆಯಂ ಬರಿಯಂ ಕಾ
ಯ್ಪಿಡಿದೊರ್ವರನೊರ್ವರಣ್ಮಿ ಪೊಡೆದರ್ ಕಲಿಗಳ್ ||೭೯||

ಆ ಕೆಯ್ ಮುಂಚದ ಮುನ್ನಂ
ಲೋಕೈಕಕಾಧೀಶನೆತ್ತಿ ದೃಢಮುಷ್ಟಿಯನಾ
ಪಾಕರಿಪುತನಯನಂಗಮ
ನಾ ಕಪಟಕಿರಾತನೋವಿ ಮೆಲ್ಲನೆ ತಿವಿದಂ ||೮೨|

ಚಂಪಕ
ತರಹರಿಸುತ್ತ ಮತ್ತೆ ಪೊಡೆದಂ ನರನೀಶನ ವಕ್ಷಮಂಸುಧಾ
ಕರಧರನಾರ್ದು ಮೇಣೆಱಗಿದಂ ಕಲಿಪಾರ್ಥನನಾ ಧನಂಜಯನಂ
ಮರಳ್ದು ಮಹೇಶನಂ ತಿವಿದನಂತಕಮರ್ದನನಾ ಖ್ಷಣಂ ಪುರಂ
ದರಸುತನುತ್ತಮಾಂಗದೆಡೆಯಂ ಪೊಡೆದಂ ಸುರರಲ್ಲಿ ನೋಳ್ಪಿನಂ ||೮೩||

ಶಿವಶಿವ ಸತ್ವಮೆಂತುಟೊ ತಪಸ್ವಗಿವಂಗೆ ಮರುನ್ನಿಷೇವಣಂ
ಸವನಿಸೆ ದಂಡಿಸಿರ್ದಡಲೊಳದ್ಭುತಮೆನ್ನೊಡನೀತನಂತೆ ಕಾ
ದುವ ಕಲಿಯಾವನೀ ಭುವನದೊಳ್ ಸಮದಂಡಿಯೊಳುದ್ಘಸಾಹಸಾ
ರ್ಣವನಿವನಲ್ತೆ ಸದ್ಗುಣಕಸೂಯೆಯೆಕಾಣೆನಿವಂಗೆ ಸಾಟಿಯಂ ||೮೫||

ಉತ್ಪಲ
ಎನ್ನ ಭುಜಾಗ್ರವಿಕ್ರಮಕೆ ಮಚ್ಚಿದೆ ನೀಂ ಭವದೀಯಸಾಹಸ
ಕ್ಕಾನ್ನೆಱೆ ವಿಸ್ಮಯಂಬಿಡದೆನೆನ್ನ ಪೊಣರ್ಕೆಗಿದಿರ್ಚಿ ನಿಲ್ವ ಧೀ
ರೋನ್ನತರಿಲ್ಲ ದೇವದನುಜರ್ಕಳೊಳೊರ್ವನೆ ನಿಂದು ಕಾದಿದಯ್
ಬಿನ್ನಣದಿಂದೆ ಭಾಪು ಶಪರೇಂದ್ರ ಎನುತ್ತುರೆಮಚ್ಚಿ ಫಲ್ಗುಣಂ ||೮೬||

ಮಾಣದೆ ಮತ್ತೆಱಗಿದನಾ
ಸ್ಥಾನುವನಬ್ಬರಿಸಿ ಸಿಡಿಲ ಮಾಱ್ಕೆಯೊಳಭವಂ
ಕಾಣುತದಂ ಸೈರಿಸುತುಂ
ಕೇಣಂಬಡೆದೊತ್ತಿ ಮೆಟ್ಟಿದಂ ಗಾಂಡಿವಿಯಂ ||೮೭||

ಒಕ್ಕುದು ನೆತ್ತರ್ ಬಾಯಿಂ
ಮಿಕ್ಕಲರ್ದುಸಿರಿಡುವ ಮೂಗಿನೆರಡುಂ ಕಡೆಯಿಂ
ದಕ್ಕಟ ತಪ್ಪಾಯ್ತೆನುತುಂ
ಮುಕ್ಕಣ್ಣಂ ಮರುಗಿ ಮನದೆ ಸಿಡಿಮಿಡಿಗೊಂಡಂ ||೮೮||

ವಚನ
ಅಂತು ಮರುಗಿ ಕರುಣಾಕರಂ ಕಪರ್ದಿ ಕೆಯ್ದೆಗೆದು ನಿಂದಾಗಳ್ ,

ಚಂಪಕ
ಬಱೆತುದು ಧೈರ್ಯವಾರ್ಧಿ ಬಱನಾದುದು ಪೆರ್ಚಿದ ಶಕ್ತಿ ಬಿಂಕಮಂ
ತೊಱೆದುದು ಚಿತ್ತವೃತ್ತಿ ನೆಱೆ ನೆರ್ಗಿದುದಿಂದ್ರಿಯರಾಜಿ ಬೀತುದೆ
ಳ್ಚಱುಮೊಳಸೋರ್ದುದುತ್ಸವಮಡಂಗಿದುದುನ್ನತಿ ಕುಂದನಾಳ್ದೆನೆಂ
ಬೆಱಕದ ಹೇವಮಾವರಿಸೆ ನೊಂದು ಪಲುಂಬಿದನಾ ಧನಂಜಯಂ ||೮೯||

ಅಳ್ಳಿಱಿದುದು ಮಾನಸಮಂ
ತಳ್ಳಂಕಂ ತನು ಬೆಮರ್ತು ದಾಹವದೆಸಕಂ
ಪೊಳ್ಳಾದುದು ಚಂತೋದ್ಗಮ
ಮುಳ್ಳಲಲರ್ದುದವಂಗೆ ಸೋಲದಿಂ ಸುಖಮೊಳವೇ ||೯೦||

ಒಳಗೊಳಗಳಲ್ದು ಚಿಂತಾ
ಕುಳತೆಯನೊಳಕೊಂಡು ಬೇಡನಿವನೆನ್ನಿಂದ
ಗ್ಗಳಿಸಿದನೆ ಮತ್ಪರಾಕ್ರಮ
ಮೊಳಸೋರ್ದುದೆ ಚಿತ್ರಮೆಂದವಂ ಖತಿಗೊಂಡಂ ||೯೨||

ಚಂಪಕ
ಶಿವಪದಭಕ್ತಿಯಂ ತೊಱೆದೆನೋ ಶಿವನಿಂದೆಯನೆಯ್ದೆ ಕೇಳ್ದೆನೋ
ಶಿವನಿಜಭಕ್ತರಂ ಪಳಿದೆನೋ ಪೂಜೆಯಗೆಯ್ಯದನ್ನಮಂ
ಸವಿದೆನೊ ಶೈವಸುವ್ರತಮನಾಳ್ದೆಡೆವಿಟ್ಟೆನೊ ಪೂರ್ವಜನ್ಮದೊಳ್
ಶಿವ ಶಿವ ತಾನದಲ್ಲದೊಡೆ ಸಾರ್ಗುಮೆ ಸಂದೆನಗೀ ಪರಾಭವಂ ||೯೩||

ಎಲ್ಲಂದದಿನಾಹವದೊಳ್
ಗೆಲ್ಲಂ ಶಬರಂಗೆ ಸೋಲಮೆನಗಾಯ್ತಕಟಿ
ನ್ನೆಲ್ಲಿಯದು ವಿಜಯನಾಮಸ
ಮುಲ್ಲಸಿತಖ್ಯಾತಿಯೆಂದು ಬಿಸುಸುಯ್ವುತ್ತಂ ||೯೪||

ಜಗದೇಕವೀರಶಬ್ಧಂ
ನಗೆಗೆಡೆಯಾಯ್ತೆನಗೆ ಪರ್ಬಿದತ್ತೆಣ್ದೆಸೆಯೊಳ್
ನೆಗಳ್ದಪಯಶಮೀ ಶಬರನಿ
ನೊಗೆದ ಪರಾಭೂತಿವೆತ್ತ ಕಾರಣದಿಂದಂ ||೯೫||

ಎತ್ತಣ ಬನಮೆತ್ತಣ ಕಿಟಿ
ಯೆತ್ತಣ ಕಾಳ್ಬಿಯದನಾಗಮಂ ಶಿವ ಶಿವಮೇ
ಣೆತ್ತಣ ಕಾಳೆಗದುಜ್ಜುಗ
ಮೆತ್ತಣಪರಿಭವಮಿದೆನಗೆ ಸಾರ್ದುದು ಚಿತ್ರಂ ||೯೬||

ಈತಂ ನರನಕ್ಕುಮೊ ಪಡಿ
ಮಾತೇಂ ಮುಗುಳ್ದಾನೆ ಶಬರನಪ್ಪೆನೊ ರಣಸಂ
ಜಾತಜಯಲಕ್ಷ್ಮಿಯಗ್ಗದ
ಬೂತಾಟಮೊ ತಿಳಿಯನೆಂದವಂ ಚಿಂತಿಸಿದಂ ||೯೭||

ಚಂಪಕ
ತಿಳಿದೆನೆ ಶಂಭುವೆಂದು ತಱಿಸಂದು ಮಹೋಜ್ಜ್ವಳಶೈವಶಕ್ತಿಯ
ಗ್ಗಳಿಕೆಯ ಕಂಡು ಕಂಡುಮವನಾಹವದೊಳ್ ತಿಳಿಯಲ್ಕೆ ಸಾಧ್ಯಮೇ
ವಿಳಸಿತವೇದರಾಶಿ ಸಲೆ ಕಾಣದ ದೇವನನದ್ವತೀಯನಂ
ತೊಳಗುವಖಂಡಚಿನ್ಮಯನನಾತ್ಮವಿಗುಪ್ತನಪ್ರಮೇಯನಂ ||೯೮||

ತಪಮೊಳಸಾರ್ದುದು ಮಂತ್ರದ
ಜಪಮಳಿದುದು ತೊಲಗಿದುದು ಮಹೇಶಧ್ಯಾನಂ
ಕುಪಿತಂಗೆನಗಂತದಱಿಂ
ದಪಜಯಮಿದು ನೆಗಳ್ದುದಲ್ಲದೊಡೆ ಸಮನಿಪುದೇ ||೯೯||

ವಚನ
ಎಂದು ಪಲವಂದದಿಂ ಪಲುಂಬಿ ವೆರೂಪಾಕ್ಷನುಪೇಕ್ಷೆಯಿಂದೀ ಪರಾಜಯಂ
ತಗುಳ್ದುದೆಂದು ನಿಜಾಂತರಂಗದೊಳ್ ಬಗೆದು,ಕರುಣಾಬ್ಧಿಯಪ್ಪ ಶಂಕರನಂ
ಕಿಂಕರತೆಯಿಂ ಸರಣ್ಬೊಕ್ಕು, ತತ್ಕಾರುಣ್ಯಂಬಣೆದು ಪಗೆಯಂ ಪರಾಭವಿಪೆನೆಂದು
ಕೌಂತೇಯಂ ಚಿಂತಾಪಂಕಮಂ ವಿವೇಕಜಳದಿಂ ತೊಳೆದು ವಿಮಳಮನಸ್ಕನಾಗಿ ;

ಚಂಪಕ
ಪರಮಶಿವಾಗಮೋಕ್ತವಿಧಿಯಿಂ ಮಳಲಿಂ ನೆಗಳ್ದೊಂದು ಲಿಂಗಮಂ
ನೆರುಪಮಭಕ್ತಿಯಿಂ ತಿಳಿದು ಪಡ್ಡಳಿ ಬಂದುಗೆ ಕಕ್ಕೆ ಮುತ್ತ ಪಾ
ದರಿಗಳ ಪೂಗಳಂ ಮೃದುಳಬಿಲ್ವದಳಂಗಳನಲ್ಲಿ ತಂದು ಶಂ
ಕರನನೊಱಲ್ದು ಪೂಜಿಸಿದನರ್ಥಿತವೈರಿಜಯಮಂ ಧನಂಜಯಂ ||೧೦೦||

ಬಲವಂದು ರುದ್ರಸೂಕ್ತಮ
ನೊಲವಿಂದೋದುತ್ತೆ ಮಣಿದು ಮಗುಳ್ದೆಱಗಿ ವಿನಿ
ರ್ಮಲಭಕ್ತಿಭಾವದಿಂ ಸಾಂ
ಜಲಿನಿಟಿಲಂ ನಿಗಮವಂದ್ಯನಂ ಕೀರ್ತಿಸಿದಂ ||೧೦೧||

ವಚನ
ಎಂದು ಪಲವಂದದಿಂ ನುತಿಸಿ ದೈನ್ಯಂದೋಱಿ ಪಾರ್ಥಂ ಪ್ರಾರ್ಥಿಸಿ ಶಬರಂಗಭಿ
ಮುಖನಾಗಿ ನಿಂದು ನಿರೀಕ್ಷಿಸಿ ನಿಜಭುಜಾಸ್ಫಾಲನಂಗೆಯ್ದು

ಉತ್ಪಲ
ಇನ್ನಱಿಯಲ್ಕೆ ಬರ್ಪುದೆಲೆ ಧೂರ್ತಕಿರಾತ ಭವತ್ಪರಾಕ್ರಮ
ಪ್ರೋನ್ನತಿಯೆಳ್ತರಂ ಪೊಱಮಡೆನ್ನಧಿನಾಥಮಹೇಶನೊಲ್ಮೆ ದಲ್
ಸನ್ನಿದಮಾದುದಿಂದೆನಗೆ ನಿನ್ನಸುವಂ ನೆಱೆ ಪೀರ್ವೆನಾವದೇ
ವನ್ನಿನಗೋತು ಬರ್ಪನವನಂ ಸದೆದಿಕ್ಕುವೆನೀಕ್ಷಣಾರ್ಧದೊಳ್ ||೧೦೬||

ಚಂಪಕ
ಸಲೆ ನೆಲಸಿರ್ದ ನುಣ್ಮಳಲ ಲಿಂಗದೊಳಂ ಶಬರಾಂಗದೊಳ್ ಸಮು
ಜ್ವಲನರವಕ್ತ್ರಸಂಭವಮನಾ ಸ್ತವಮಂ ಪಳಿಯಂ ಕಪರ್ದಿ ಮಂ
ಜುಳಗುಣವಾರ್ಧಿ ಕೇಳ್ದುಮೆರಡಂ ಸರಿಗಂಡು ಮನೋನುರಾಗಸಂ
ಕುಲತೆಯನಾಳ್ದನಂತೆ ನುತಿಯುಂ ಪಳಿಯುಂ ಸಮನಲ್ತೆ ಭವ್ಯರೊಳ್ ||೧೦೭||

ತರಳ
ಮಣಲ ಲಿಂಗದ ಮಸ್ತಕಾಗ್ರದ ಪುಷ್ಪಮಂಜರಿ ಮಾಣದಾ
ಕ್ಷಣಮೆ ತಳ್ತಡರ್ದಾ ಕಿರಾತನ ಮಂಡೆಯಲ್ಲಿರೆ ಕಂಡು ಕಾ
ರಣಮಿದೇಂ ಪೊಸತೆಂದು ಸಾದ್ಭುತಮಾನಸಂ ಮಗುಳ್ದೀಕ್ಷಿಸು
ತ್ತಣಿಯರಂ ಬಿಡದಿತ್ತ ಲಿಂಗದ ಶೂನ್ಯಶೀರ್ಷಮನರ್ಜುನಂ ||೧೦೮||

ಮತ್ತೇಭ
ಇದನಿನ್ನುಂ ಮಗುಳ್ದೊರ್ಮೆ ನೋಳ್ಪೆನೆನುತುಂ ಪೂಗೊಂಚಲಂ ತಂದು ಸೂ
ಡಿದನಾ ಲಿಂಗದ ಮಸ್ತಕಾಗ್ರದೊಳೆ ಸಮ್ಯಗ್ಭಕ್ತಿಯಿಂದಾಗಮೋ
ಕ್ತದ ಮಾರ್ಗಂಬಿಡದೊಲ್ದು ಪೂಜಿಸಿ ಕರಂ ಕೊಂಡಾಡಿ ಮೆಯ್ಯಿಕ್ಕಿ ನೋ
ಡಿದನಿತ್ತಲ್ ಶಬರೋತ್ತಮಾಂಗದೆಡೆಯಂ ಪ್ರಾಂಚದ್ಗುಣಂ ಫಲ್ಗುಣಂ ||೧೦೯||

ಉತ್ಪಲ
ಕಂಡನಖಂಡಪುಷ್ಪಭರಮಂಜರಿಯಂ ಶಬರೋತ್ತಮಾಂಗದೊಳ್
ಮಂಡಿತಲಿಂಗಮಸ್ತಕದೊಳಂತದನೀಕ್ಷಿಸಿ ಕಾಣದಾದನಾ
ಖಂಡಲಸೂನುವದ್ಭುತರಸಂಬಡೆದಾಳ್ದು ಭಯಾಬ್ಧಿಯಲ್ಲಿ ಮುಂ
ಕೊಂಡು ಮುಳುಂಗಿ ತೇಲ್ದುವವನೀಕ್ಷಣಯುಗ್ಮಪಯಶ್ಚರದ್ವಯಮಂ ||೧೧೦||

ಚಂಪಕ
ಹರ ಹರ ದೇವದೇವನಿವನಲ್ತೆ ಶಿವಂ ಭುವನೈಕವಲ್ಲಭಂ
ಗುರು ಸಕಲಾಮರರ್ಗೆ ಶಬರಾಕೃತಿಯಿಂ ಮದನುಗ್ರಹಾರ್ಥಮೀ
ಪರಿ ನಡೆತಂದನಲ್ತೆ ತಪದುಬ್ಬೆಗದುದ್ ಭ್ರಮೆ ನೆತ್ತಿವತ್ತೆ ಸೈ
ತಿರದೆ ಮರುಳ್ತನಂದಳೆದಿದಿರ್ಚಿದೆನೆನ್ನವೊಲಜ್ಞನಾವನೋ ||೧೧೧||

ಪಡಿದೆಱೆದಂತೆ ಪಾಱಿತೆರ್ದೆ ಪವ್ವನೆ ಜುಮ್ಮೆನೆ ಮೆಯ್ನವಿರ್ ಪೊದ  
ಳ್ದಿಡಿಕಿಱಿದತ್ತು ಘರ್ಮಜಲಮುಣ್ಮಿದುದಂಗದೊಳಾಗ್ರಹಗ್ರಹಂ
ಕಡೆದೊಲಗಿತ್ತು ಕೌತುಕರಸಂ ಬಗೆಗುರ್ವಿದುದುತ್ಸವಂ ಮಡ
ಲ್ತಡರ್ದುದು ಭೀತಿ ಬೇರ್ವಱಿದುದೇಳ್ಗೆಯನಾಳ್ದುದುರಾಗಸಂಪದದಂ ||೧೧೨||

ಉತ್ಪಲ
ಬೀತುದು ಬಿಂಕಮೋಡಿದುದು ಮೂಢತೆ ಮೂಡಿದುದಶ್ರು ಕಣ್ಗಳೊಳ್
ಕಾತುದು ಭೀತಿವಲ್ಲರಿ ಮನೋಗದಮುಂ ತಱಿಸಂದು ನಿಂದುದು
ದ್ಭೂತಮಹಾದಭುತಂ ಮನದೊಳಂಗದೊಳಾಯ್ತು ವಿವರ್ಣವೃತ್ತಿ ಚಿಂ
ತಾತುರನಾಗಿ ಬೆಳ್ಪಳಿಸಿ ಬೇವಸಮಂ ತಳೆದಂ ಧನಂಜಯಂ ||೧೧೩||


ಉಳಿವೆಳಗು ಸಂಜೆ ನಸುಮ
ರ್ಬಳುರ್ದಂಬರದಂತೆ ತಿಳಿವು ರಾಗಂ ನೆಗಳ್ದು
ಮ್ಮಳಮನೊಳಕೊಂಡ ಬಗೆಯಿಂ
ತಳವೆಳಗಾಗುತ್ತೆ ಪಾರ್ಥನಂದಿಂತೆಂದಂ ||೧೧೪||

ಚಂಪಕ
ತಿಳಿದೆನೆ ಶಂಭುಮೆಂದು ಬಹುಬಾಣದಿನೆಚ್ಚೊಡೆ ತಾಗದಂದದೇಂ
ತಿಳಿದೆನೆ ದಿವ್ಯಮಾರ್ಗಣದಿನಾನಿಸೆ ತಳ್ವದೆ ನುಂಗಿದಂದದೇಂ
ತಿಳಿದೆನೆ ಕೆಯ್ಯ ಚಾಪಮನಡಾಯುಧಮಂ ಸೆಳೆದೀಳ್ದುಕೊಂಡೊಡಂ
ತಿಳಿವೊಳಸಾರ್ದುದಕ್ಕಟ ಪುರಾಕೃತಕರ್ಮದ ಪೆರ್ಮೆಯೆಂತುಟೋ ||೧೧೫||

ಶೆವ ಶಿವ ಸಲ್ವುದೇ ಸಮರಮಿಂತೆನಗದ್ವಯನೊಳ್ ಮಹೇಶನೊಳ್
ಭವಹರನೊಳ್ ಮಹಾಮಹಿಮನೊಳ್ ಜ್ವಲನಾಕ್ಷನೊಳಕ್ಷಯಾಂಗನೊಳ್
ಪ್ರವಿದಿತನಾದಬಿಂದುಕಳೆಯಂ ಮಿಗೆ ಮೀಱಿದನೊಳ್ ಶ್ರುತಿಸ್ಮೃತಿ
ಸ್ತವನಕತೀತನೊಳ್ ಜಗದ ಜೀವರನಾಡಿಪ ಸೂತ್ರಧಾರನೊಳ್ ||೧೨೩||

ಮತ್ತೇಭ
ಕಲಹಂ ತಕ್ಕುದೆ ನೋಳ್ಪೊಡಿಂತೆನಗೆ ಸಚ್ಚದ್ರೂಪನೊಳ್ ನಿತ್ತನಿ
ರ್ಮಳನೊಳ್ ಪ್ರಾಕೃತನಾಮರೂಪ ಗುಣಚೇಷ್ಟಾಲಂಬಶನಂದೋಱದು
ಜ್ಜ್ವಳನೊಳ್ ಸಂದಣುವಿಂಗಣುಸ್ಥಿತಿ ಮಹತ್ತಿಂಗಂ ಮಹತ್ತಾದ ನಿ
ಶ್ಚಲನೊಳ್ ನಿರ್ಭಯನೊಳ್ ನಿರಸ್ತಜಡತಾಸಂಸರ್ಗನೊಳ್ ಭರ್ಗನೊಳ್ ||೧೨೪||

ಚಂಪಕ
ಹರ ಹರ ತಾರ್ಕ್ಷ್ಯನೆತ್ತ ಫಣಿಯೆತ್ತ ಮಹಾವನವಹ್ನಿಯೆತ್ತ ಕಾಳ್
ಮರಮುಮದೆತ್ತ ವಜ್ರಧರನೆತ್ತ ಧರಾಧರಮೆತ್ತ ಮತ್ತ ಕೇ
ಸರಿಪತಿಯೆತ್ತ ವನ್ಯಗಜಮೆತ್ತ ಪೊಣರ್ಕೆಗಿವೆಂತು ನಿಲ್ವುವಾ
ಪರಿ ಜಗದೇಕದೇವ ಶಿವನೆತ್ತ ಧನಪಂಜಯನೆತ್ತ ಧಾತ್ರಿಯೊಳ್ ||೧೩೨||

ಪಂಚಮಾಶ್ವಾಸಂ

ಚಂಪಕ
ಬೆಮರ್ವ ಕಳೇವರಂ ಸುರಿವ ಸಂತಸಕಣ್ಬನಿ ತಳ್ತ ಕಂಪನಂ
ನಿಮಿರ್ದೆಸೆವಂಗರೋಮತತಿ ಕಣ್ಗೊಳಿಸುತ್ತಿರೆ ತಳ್ವದೆಳ್ದು ಸಂ
ಭ್ರಮದ ಪೊದಳ್ಕೆಯಿಂ ಮುದದ ಪೆರ್ಚುಗೆ ಸಂದಣಿಗೊಳ್ವಿನಂ ಪದಾ
ಬ್ಜಮನಮರ್ದೊಪ್ಪೆ ಮೌಳಿ ಮಣಿದಂ ಮಹಿಯಂ ತನು ಸೊಂಕೆ ಪಾಂಡವಂ ||೧೪||

ವಚನ
ಅಂತೆಱಗಿ ಸರುಜಂ ಸಂಜೀವನಮಂ ಸವಿದಂತೆ, ಬಡವಂ ಕಡವರಂಗಂಡವನಂತೆ,
ಕಡಲೊಳಾಳ್ವಂ ತೆಪ್ಪಮನಪ್ಪಿದಂತೆ, ಜಾತ್ಯಂಧಂ ಕಣ್ಬಡೆದಂತೆ ನಿರತಿಶಯಸಂ
ಮದಮನೊಳಕೊಂಡು ಕರಾರವಿಂದಂಗಳಂ ಪಣೆಯೊಳಮರ್ಚಿ ನಿಂದು ;

ಚಂಪಕ
ಪದತಳದೊಳ್ ತೊಡಂಕಿ ಪರಿದಾಡಿ ಪೊದಳ್ದೆಸೆವಂಗದೇಶದೊಳ್
ಪದೆದುರದಲ್ಲಿ ಸಯ್ವರಿದು ಮಂಜುಳಕಂಠಮನಪ್ಪಿ ವಕ್ತ್ರ ಪ
ದ್ಮದೊಳೆಡೆಗೊಂಡು ಸುತ್ತಿ ಸುಳಿದಾಡಿ ಬಳಲ್ದು ಸರಿತ್ಸುಧಾಂಶುಗಳ್
ಪುದಿದ ತದೀಯಮೌಳಿಯೊಳೆ ವಿಶ್ರಮಿಸಿರ್ದುದುದೃಷ್ಟಿ ಪಾರ್ಥನಾ ||೧೫||

ಹರಿವಿಧಿಮನುಮುನಿನಿಗಮೋ
ತ್ಕರಂ ಕರಂ ಕಾಣದರಸುವೀ ನಿನ್ನ ಪದಾಂ
ಬುರುಹದ್ವಯಮಂ ಕಂಡೆಂ
ಹರ ಹರ ನೆಱೆ ಧನ್ಯನಾವನೆನ್ನಿದನ್ಯಂ ||೩೮||

ಪುಟ್ಟಿಂದು ಸಫಲಮಾದುದು
ನೆಟ್ಟನೆ ಮದ್ವಂಶಕುಸುಮಮಲರ್ದುದು ಪೆಱತೇಂ
ಮುಟ್ಟಿದೆನತಿಶಯಪದವಿಯ
ಬಟ್ಟೆಯನೆಲೆ ದೇವದೇವನೀನೊಲ್ದುದಱಿಂ ||೩೯||

ಇಂದು ನಿನ್ನ ವರಶರಾಸನ
ಮಿದು ಶರಮಿದು ಖಡ್ಗಮಿಂತಿವಂ ಪಿಡಿಯೆಂದಾ
ಮದನರಿಪುವಿತ್ತು ಮುಂಕೊಂ
ಡುದನಾವುದು ನಿನ್ನಭೀಷ್ಟಮದನೊರೆಯೆಂದಂ ||೪೨||

ವಚನ
ಎನೆ ಮಹೋತ್ಸವಂದಳೆದು ಕೆಯ್ದಾವರೆಗಳಂ ಮುಗಿದು,

ಕರುಣಿಪುದೆನಗೆಲೆ ಕರುಣಾ
ಕರ ಪಾಶುಪತಾಸ್ತ್ರಮಂ ಮಹಾಬ್ರಹ್ಮಶಿರಃ
ಶರಮಂ ಸಮಸ್ತರಿಪುಸಂ
ಹರಮಂ ದಯೆಯಿಂದೆನುತ್ತೆ ಬೇಡುತ್ತಾಗಳ್ ||೪೪||

ಮತ್ತೇಭ
ಸರದೊಳ್ ಮಿಂದೆಸಗುತ್ತುಮಾಚಮನಮಂ ಸದ್ಭಕ್ತಿಯಿಂ ಪಾದಪಂ
ಕರುಹಕ್ಕೊಲ್ದೆಱಗಿರ್ದ ಗಾಂಡಿವಿಗೆ ತತ್ತನ್ಮಂತ್ರಪೂರ್ವಂ ಕೃಪಾ
ಭರಿತಂ ಬ್ರಹ್ಮಶಿರೋಸ್ತ್ರಮಂಕರುಣಿಸುತ್ತುಂ ಮತ್ತಮಿತ್ತಂ ಗುಣಾ
ಭರಣಂ ಪಾಶುಪತಾಸ್ತ್ರಮಂ ಪದೆಪಿನಿಂ ಕೊಂಡಾಡೆ ದೇವವ್ರಜಂ||೪೫||

ಒರೆದೇಕಾಂತದೊಳೊಳ್ಪಿನಿಂದೆ ನಿಜಭಾಸ್ವತ್ತತ್ತ್ವಮಂ ಮೋಕ್ಷದೊಂ
ದಿರವಂ ನಿನ್ನ ಸಮಸ್ತಕಾರ್ಯಕೆ ಸಹಾಯಂ ಮಾಣದೆನ್ನಂಶಮಾ
ದರವಿಂದಾಂಬಕನಂತಱಂ ನಿನಗೆ ಕುಂದೆಂದುಂ ವಲಂ ತೋಱಿದಾಂ
ತರಿಯಂ ಗೆಲ್ದಪೆ ಸೌಖ್ಯಮಕ್ಕುಮೆಂತುಂ ಪೇಳ್ದಂ ಭವನೀಧವಂ ||೪೬||
ಉತ್ಪಲ
ಬಾರೆಲೆ ಪದ್ಮಲೋಚನನಮಯ್ದುನ ಪಾಂಡವ ನಿನ್ನ ಭಕ್ತಿ ವಿ
ಸ್ತಾರಮಿದಿತ್ತುದೆನ್ನ ಬಗೆಗುತ್ಸವಮಂ ಪಿಡಿ ಕೊಟ್ಟಪೆಂ ಭವದ್
ವೈರಿನಿಕಾಯಮಂ ಕ್ಷಣದೊಳರ್ದಿಪ ಬಾಣಮನೆಂದು ಸದ್ಗುಣಾ
ಧಾರೆ ಧರಾಧರೇಂದ್ರಸುತೆಯಿತ್ತಳುದರತರಾಂಜನಾಸ್ತ್ರಮಂ ||೫೦||

ಚಂಪಕ
ಮೊದಲೊಳಿದೊಂದು ಪತ್ತು ತುಡುವಲ್ಲಿ ಶತಂ ಬಿಡುವಲ್ಲಿ ಸಾಸಿರಂ
ಪದಮಿಡುವಲ್ಲಿ ವೈರಿಶರಸಂಹತಿಯಂ ತಱಿವಲ್ಲಿ ಲಕ್ಷಮ
ಗ್ಗದ ಗತಿಯಲ್ಲಿ ಕೋಟಿ ಸಮರಾಂಕಣದೊಳ್ ಗಣನಾವಿಹೀನಮ
ಪ್ಪುದು ರಿಪುವೃಂದಮಂ ತವಿಸಿ ನಿನ್ನೆಡೆಗೆಯ್ದುಗುಮೀ ಮಹಾಶರಂ ||೫೧||

ಎಂದೊರೆದು ಕರುಣಿಸುತೆ ಗಿರಿ
ನಂದನೆ ಭುವನೈಕಮಾತೆ ಜಯಮಂ ಪಡೆ ನೀಂ
ಕಂದ ಸಮರಾಂಗಣದೊಳೆನು
ತಂದಮರರ್ ಪೊಗಳೆ ಪರಸಿದಳ್ ಗಾಂಡಿವಿಯಂ ||೫೨||

ಕೃಪೆ
ಶಿ. ಶಿ. ಬಸವನಾಳ, ಎಮ್.ಎ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ