ತೊರವೆ ರಾಮಾಯಣ
ಕುಮಾರ ವಾಲ್ಮೀಕಿ
ಕಾಲ: ಸುಮಾರು ೧೫೦೦
ಬಾಲಕಾಂಡ
ಮೊದಲನೆಯ ಸಂಧಿ
ಶ್ರೀಜನಕಜಾರಮಣ ವಿಮಲಸ
ರೋಜಸಂಭವಜನಕನನುಪಮ
ರಾಜಶೇಖರವಿನುತ ನಿಖಿಳಾಮರಕಿರೀಟಚಯ
ರಾಜಿತಾಮಲ ಲಲಿತಪದಪಂ
ಕೇಜನಾನತಜನದಯಾಸುರ
ಭೂಜ ತೊರವೆಯರಾಯ ನರಹರಿ ಪಾಲಿಸುಗೆ ಜಗವ ||೧||
ಪರಮಮಂಗಳಮೂರ್ತಿ ಪಾವನ
ಚರಿತ ಪರಮಾನಂದಮಯ ಪುರ
ಹರ ಪುರಂದರ ಪೂಜಿತಾಂಘ್ರಿಸರೋಜ ಶಶಿಮೌಳಿ
ಶರಣಜನಸುರಧೇನು ಗಂಗಾ
ಧರ ಗಜಾಸುರಮಥನ ಗೌರೀ
ವರ ತ್ರಿಯಂಬಕನೊಲಿದು ಸಲಹುಗೆ ಸಕಲ ಸಜ್ಜನರ ||೨||
ಸರಸಿಜಾಂಘ್ರಿದ್ವಯದ ಕೋಮಲ
ಚರಣಕಾಂಡದ ಘನನಿತಂಬದ
ನಿರುಪಮಾಂಗದ ನಿಮ್ನ ನಾಭಿಯ ನಿಬಿಡಕುಚಭರದ
ವರತರಾಭಯಕರದ ಶೋಭಾ
ಕರದ ನಗೆಮೊಗದನುಪಮದ ಬಂ
ಧುರದ ಭಾರತಿ ನಿಲುಗೆ ಮನ್ಮುಖಪದ್ಮಸದ್ಮದಲಿ ||೫||
ಕರಚತುಷ್ಟಯದುದಿತಮದ ಸಿಂ
ಧುರದನಿಭಾನನದಮಲಲಂಬೋ
ದರದ ವರಸಿಂಧೂರಚಂದನಗಂಧಬಂಧುರದ
ಉರುಲಲಾಟದಿ ನರ್ತಿಸುವ ಕಚ
ಭರದ ಕಮನೀಯಪ್ರಭಾವಿ
ಸ್ತರವಿನಾಯಕ ಮಾಡೆಮಗೆ ನಿರ್ವಿಘ್ನದಾಯಕವ||೬||
ಚಾರುತರ ಕರಣಾಟಕದ ವಿ
ಸ್ತಾರರಾಮಾಯಣಕೆ ಕರ್ತೃ ಕು
ಮಾರವಾಲ್ಮೀಕಿಯೆ ಕಥಾಪತಿ ತೊರವೆಯಧಿನಾಥ
ವೀರನರಹರಿಯೆನಲು ಮೆಚ್ಚದ
ರಾರು ಸತ್ಕವಿತಾವಿಲಾಸದ
ಸೂರಿಗಳ ಹೃದಯಾಕರುಷಣ ಕಥಾಕುತೂಹಲವ ||೯||
ಧರೆಯೊಳಗ್ಗದ ರಾಘವೇಂದ್ರನ
ಚರಿತಶತಕೋಟಿಪ್ರವಿಸ್ತರ
ವರಮಹಾಚಾರಿತ್ರರಚನಾಸುಪ್ರಬಂಧದಲಿ
ಪರಮಭಕ್ತಿಯೊಳಾವನೊಂದ
ಕ್ಷರವ ಕೇಳ್ದ ನರಂಗೆ ಪಾತಕ
ಹರೆವುದೆಂದು ಕುಮಾರರಿಗೆ ವಾಲ್ಮೀಕಿಮುನಿ ನುಡಿದ ||೧೩||
ಕುಮಾರರಿಗೆ= ಲವಕುಶರಿಗೆ
ಸುಂದರಕಾಂಡ
ಮೂರನೆಯ ಸಂಧಿ
ಸೂಚನೆ: ಕ್ಷೋಣಿಪತಿ ಸಿರಿರಾಘವೇಂದ್ರನ
ರಾಣಿಯನು ಬನದೊಳಗೆ ಭುವನ
ಪ್ರಾಣಸುತ ಕಂಡಿತ್ತನನುಪಮರಾಜಮುದ್ರಿಕೆಯ
ಕಂದ ಕೇಳೈ ಕುಶನೆ ಚಿಂತೆಯ
ಸಂದಣಿಯ ಸುಯ್ಲುಗಳ ಸೊಂಪುಱೆ
ಕಂದಿದಾನನದಿಳಿವ ಜಲಬಿಂದುಗಳ ಲೋಚನದ
ನಿಂದಿರುತ ಬೆಱಗಾಗುತವನೀ
ನಂದನೆಯದೇನಾದಳೋ ಹಾ
ಯೆಂದೆನುತ ಹಂಬಲಿಸಿ ಹಲುಬುತ ಹನುಮನೈತಂದ ||೧||
ರಣಲಾಘವದಿಂದ ಮೆಲ್ಲನೆ
ತಿರುತಿರುಗಿ ನೋಡಿದನು ತತ್ಪುರ
ವರವನಾ ಚಂದ್ರಮನ ಸಾಂದ್ರಪ್ರಭೆಯ ಬೆಳಗಿನಲಿ
ಮೆಱೆದುದಿಲ್ಲನಿತಱ ದೇವಿಯ
ರಿರವು ತನ್ನಯ ಕಂಗಳಿಗೆ ಗೋ
ಚರಿಸುವುದು ದುರ್ಲಭವೆನುತ ದುಮ್ಮಾನಮನನಾದ ||೫||
ಮಱುಗಿ ಮಾಡುವುದೇನು ಸಾಕಿ
ನ್ನಱಿಕೆಯೊಂದಿದೆ ತನಗೆ ರಘುವರ
ನಱಸಿಕೊಳಲೀ ಗಿರಿಯ ಕಿತ್ತೊಯ್ದಿಳುಹುವೆನು ಮುಂದೆ
ತೆಱನನಾತನೆ ನೋಡಿಕೊಳಲೆ
ಚ್ಚಱಿಕೆಗಿದು ತಾ ಸಮಯವಿನಿತಕೆ
ಕೊಱತೆ ಬಾರದೆನುತ್ತ ನಿಶ್ಚಯಿಸಿದನು ನಿಜಮತವ||೬||
ವನವಿದೊಂದಿದೆ ಗಗನದಗ್ರದ
ಧ್ವನಿಯಿದೊಂದಿದೆ ನೋಳ್ಪೆನುಪವ
ರ್ತನೆಯನಿಂದಿನಲೀ ಮಹಾವನದೊಳಗೆ ಬಳಿಕಲ್ಲಿ
ವನಜವದನೆಯ ಪಾದದರುಶನ
ವಿನಿತರಲಿ ಸಂಘಟಿಸದಿರೆ ಕಂ
ಡನುವ ಕಾಬೆನೆನುತ್ತಶೋಕಾವನಕೆ ಪುಟನೆಗೆದ ||೧೬||
ಪುಟನೆಗೆದ ಭಾರದಲಿ ಕಪಿಪದ
ಚಟುಳಹತಿಗುಪ್ಪರಿಗೆ ಸಿಡಿಲಾ
ರ್ಭಟಿಸಿ ಹೊಡೆದದ್ರಿಯವೊಲಿಳೆಗೊಱಗಿತು ನಿಹಾರದಲಿ
ಕಟಕ ಬೆದಱಿತು ರಕ್ಕಸರ ಸಂ
ಘಟದ ಸೌರಂಭದಲಿ ಬಳಿಕೀ
ಪಟುಪರಾಕ್ರಮಿ ಹನುಮ ಹೊಕ್ಕನು ಲಲಿತನಂದನವ ||೧೭||
ಆ ಮಹಾದ್ರುಮದಡಿಯ ಕದಳಿ
ಸ್ತೋಮ ಮಧ್ಯದ ದಳನಿಳಯದಲಿ
ರಾಮನಾಮಾಮೃತಸಜೀವತ್ರಾಣಧಾರಣದ
ತಾಮರಸದಳನಯನೆಯನು ನಿ
ಸ್ಸೀಮಸುವ್ರತಚರಿತೆಯನು ಸೀ
ತಾಮಹಾಲಕ್ಷ್ಮಿಯನು ಕಂಡನು ವೀರಹನುಮಂತ ||೧೯||
ಶರಭ ಸಿಂಹ ಚಮೂರ ವದನದ
ಕರಿಲುಲಾಯ ವೃಕಾನನದ ಪರಿ
ಪರಿಯ ಖಗಮೃಗಸರ್ಪವಕ್ತ್ರದ ವಿಕೃತದೃಷ್ಟಿಗಳ
ಎರಡುನಾಲ್ಕೈದಾಱುತಲೆಗಳ
ಕರದ ಕತ್ತಿಯ ಕಾಳರಕ್ಕಸ
ತರುಣಿಯರ ಕಾವಲಿನ ಸೀತೆಯ ಕಂಡನಾ ಹನುಮ ||೨೦||
ಮಂದಗಮನೆಯನಮಲತರಪೂ
ರ್ಣೇಂದುವದನೆಯ ಪೂರ್ವಹರಿಯರ
ವಿಂದಸದನೆಯ ಸಕಲಸುರಕುಲಶಕ್ತಿದೇವತೆಯ
ಇಂದು ಭಾಸ್ಕರ ಕಮಲಭವ ಸಂ
ಕ್ರಂದನಾದಿ ಸಮಸ್ತ ಸುರಮುನಿ
ವಂದಿತೆಯ ವರವಿಶ್ವಮಾತೆಯ ಕಂಡನಾ ಹನುಮ ||೨೧||
ಏಕವೇಣೀಧರೆಯನಶ್ರುಜ
ಲಾಕುಳಾಯತಲೋಚನೆಯನು
ದ್ರೇಕಶೋಕಾನ್ವಿತೆಯನಂತಸ್ತಾಪವಿಹ್ವಲೆಯ
ಶೋಕನಿನದೆಯನಧಿಕಪುಣ್ಯ
ಶ್ಲೋಕಚರಿತೆಯ ಮಲಿನಪಟಪರಿ
ಧೀಕೃತೆಯನವಿರಳಕೃಶಾಂಗಿಯ ಕಂಡನಾ ಹನುಮ ||೨೨||
ಆಗಬೇಕೀ ಜನನಿ ಜಾನಕಿ
ಮೈಗುಱುಹು ತಪ್ಪದು ಮಹಾದೇ
ವೀಗ ಪಾತಿವ್ರತ್ಯಗುಣಗಣನಿಧಿಯ ಕಂಡೆನಲ
ಭಾಗಧೇಯರುನಾವಲಾ ನಮ
ಗಾಗು ಮುಂದಕೆ ಸುಲಭವೆಂದು ಸ
ರಾಗದಲಿ ಕೈಮುಗಿದು ಜಯಜಯ ಎಂದನಾ ಹನುಮ ||೨೬||
ಅರಸುಗಳೊಳಧಿರಾಜ ಚಕ್ರೇ
ಶ್ವರನ ಬಸುಱಲಿ ಬಂದು ಲಕ್ಷ್ಮೀ
ವರನ ತೂಕದ ಸಾರ್ವಭೌಮನ ಕೈವಿಡಿದು ಕಡೆಗೆ
ನಿರಯನಿಳಯನ ನಿಳಯದಲಿ ಕೈ
ಸೆರೆಗೆ ಸಂದೌ ತಾಯೆಯೆಂದಿಳೆ
ಗುರುಳಿಸಿದನಶ್ರುಗಳನಾ ಕೈಯೊಡನೆ ಕಲಿಹನುಮ ||೨೮||
ಇರಲು ಮಾರುತಿ ಶಿಂಶುಪಾವರ
ತರುವಿನಗ್ರದಲವನಿಜೆಯ ಸಂ
ದರುಶನದ ಸಮಯಕ್ಕೆ ಸುಳಿದುದು ಮೂಡಲಿನಬಿಂಬ
ಮುಱಿದು ನಿದ್ರೆಯ ಕಾಪಿನಸುರರ
ತರುಣಿಯರು ಬಳಸಿದರು ಬಿದ್ದುದು
ತರಣಿಬಿಂಬ ಮಹಾಂಬುನಿಧಿಯಲಿ ನಡೆದು ಪಶ್ಚಿಮದ ||೨೯||
ಆಡಲೇನದ ಜೀಯ ಲೋಕದ
ಜೋಡೆಯೆ ಜಾನಕಿ ಜಗತ್ರಯ
ಗಾಢಪತಿಭಕ್ತಿಯರಿಗೀ ಸತಿಮಾತೃಭವನವಲ
ಆಡಿದಡೆ ಜನವೇನನೆಂಬುದೊ
ಖೋಡಿಗಳು ಕಿಱಿದುಂಟು ಮಿಕ್ಕಿನ
ಹಾಡಿಹೊಗಳಿಸಿಕೊಂಬ ಜಗದ ಪತಿವ್ರತಾಜನಕೆ ||೪೨||
ಕಂಡು ಬಲ್ಲೆನು ಹಲಬರನು ಭೂ
ಮಂಡಲದೊಳೀ ಸತಿಯ ಹೋಲುವ
ಹೆಂಡಿರಿಲ್ಲಾ ಧ್ರು ವಸಿಷ್ಠ ಮಹಾತ್ರಿಮುನಿವರರ
ಹೆಂಡಿರುಗಳೊಂದೋಜೆ ಜಗದಗಲ
ಖಂಡಸುವ್ರತೆ ಸೀತೆ ಹುಸಿದಡೆ
ಖಂಡಪರಶುವಿನಾಣೆ ಸತ್ಯವಿದೆಂದಳಾ ಸರಮೆ ||೪೩||
ಕಣುಗಳಲಿ ಕಿಡಿಸೂಸೆ ಕೈಯಲಿ
ತೃಣವನುಱೆ ಮುಱಿದಿಕ್ಕಿ ನುಡಿದಳು
ಬಣಗುರಕ್ಕಸ ಕೇಳೆಲವೊ ನಿನಗಿನಿತುಗುಣವಿರಲು
ತ್ರಿಣಯನನಧನುವಂದದೇತಕೆ
ಮಣಿಯದಾದುದು ಸುಡುಸುಡೆಲವೋ
ಹೆಣದಿನಿಹಿಗಳಿಗುಚಿತವೀ ಮಾತೆಂದಳಾ ಸೀತೆ ||೫೨||
ತಂದಡತಿಬಲನಹುದಲೇ ರಘು
ನಂದನನ ಸಮ್ಮುಖದೊಳೆನ್ನನು
ಹಂದೆ ಹೋಗೆಲೆ ನಾಯೆ ನಿನಗೇಕಮರಮಾನವರ
ದಂದಶೂಕರ ಭುವನದೊಡೆತನ
ಬೆಂದ ಮೋಱೆಗೆ ಬಹುವಿಕಾರದ
ಮಂದೆವಾಳದ ಮಾತದೇಕೆಂದುಱುಬಿದಳು ಖಳನ ||೫೩||
ವಾಸುಗಿಯ ನೀರೊಳ್ಳೆ ತನ್ನ ನಿ
ವಾಸದಲಿ ಜಱೆವುದು ಗಡೆಲವೋ
ದಾಶರಥಿಯನುಚರರ ಲೆಂಕರ ಲೆಂಕರನುಚರರ
ದಾಸಿಯರ ಲೆಂಕರಿಗೆ ಸರಿಬರ
ಲೇಸಱವನೀ ನಾಯ ಕಳುಹೆಂ
ದಾ ಸರಮೆಗಾ ಸೀತೆ ಕೋಪಿಸಿ ನುಡಿದಳಿಂತೆಂದು ||೫೬||
ಲಲನೆ ಕೇಳೀ ರಕ್ಕಸನ ಕಡಿ
ದಲೆಯ ಮೆಟ್ಟಿದು ಮಿಂದ ಬಳಿಕೀ
ಖಳನ ಸತಿಯರು ಸಿದ್ಧವಿದನೀ
ಹೊಲೆಯಗುತ್ತರಕೊಟ್ಟು ಕಳುಹೀ
ಗಳಹರಕ್ಕಸನಾಯನೆಂದಳು ಸರಮೆಗಾ ಸೀತೆ ||೫೭||
ಅಕಟ ಪೂರ್ವದಲಾವ ಹಿರಿಯರ
ಟಕರಿಗಳೆದನದಾವ ದೈವದ
ಭಕುತಿಯನು ಕುಂದಿದೆನೊ ನಿಂದಿಸಿದೆನೊ ಗುರುದ್ವಿಜರ
ವಿಕಳತೆಯಲಿ ವಿವೇಕಿಸದೆ ಪಾ
ತಕವ ನೆನೆದೆನೊ ಪತಿಯಳಕಟಾ
ಪ್ರಕಟಿಸಿತೆ ದುಷ್ಕರ್ಮಫಲವೆನಗೆಂದಳಾ ಸೀತೆ ||೬೪||
ಸುಳಿಯಲೇಕೆ ಕುರಂಗ ರಾಮನ
ಕಳುಹಲೇಕೆ ದುರುಕ್ತಿಯಲಿ ನುಡಿ
ದಲಘುಬಲ ಲಕ್ಷ್ಮಣನನುಱುಬಲದೇಕೆ ಬೆಂಬಳಿಯ
ಲಲನೆಯಿವಳಲ್ಲೆಂದು ಚಿತ್ತದೊ
ಳಲಸಿದರೊ ಮೇಣ್ ಖಳರ ಮಾಯೆಗೆ
ಸಿಲುಕಿದರೊ ಸಾವ್ ಬಾರದೆನಗಕಟೆಂದಳಾ ಸೀತೆ ||೬೫||
ಇನ್ನ ಬರ ಸೈರಿಸಿದ ಸೈರಣೆ
ಯುನ್ನತಿಕೆಗಿದು ಮಾರ್ಗವೇ ದಿನ
ವಿನ್ನು ಸಾರೆ ದಶಾನನಂಗೆಲೆ ತಾಯೆ ಚಿತ್ತೈಸು
ಮನ್ನಿಸದಿರವಿವೇಕವನು ವಿ
ತ್ಪನ್ನತೆಗೆ ಕುಂದಹುದು ಹಬ್ಬುವು
ದಿನ್ನು ನಿಮ್ಮಭ್ಯುದಯಲತೆ ಕೇಳೆಂದಳಾ ತ್ರಿಜಟೆ ||೬೯||
ಧವಳದಂತಿಯ ಹೆಗಲಿನಲಿ ರಾ
ಘವನ ಕಂಡೆನು ಪೃಥುಳಸಿತಪುಂ
ಗವವನೇಱಿರ್ದುದನು ಕಂಡೆನು ರಾಘವಾನುಜನ
ವಿವಿಧಮುಕ್ತಾಭರಣ ಮಂಗಳ
ನಿವಸನಾಲಂಕಾರದಲಿ ನಿ
ಮ್ಮುವನು ಕಂಡೆನು ತೊಡೆಯಮೇಲಿನವಂಶವಲ್ಲಭನ ||೭೧||
ದೇವಿಯರೆ ನಿಡಪತಿಯ ಪದರಾ
ಜೀವವತಿಸುಕ್ಷೇಮ ಲಕ್ಷ್ಮಣ
ದೇವ ಬಲ್ಲಿದನಧಿಕಬಲ ಬಲಿಮುಖಕುಲಾಧಿಪನ
ಭಾವ ಕರಲೇಸೆನ್ನ ನಿಲ್ಲಿಗೆ
ಮೂವರವರಟ್ಟಿದರು ಸೀತಾ
ದೇವಿಯರ ನೀ ನೋಡಿಬಾ ಹೋಗೆಂದು ಗುಪ್ತದಲಿ ||೭೪||
ಬಂದೆನಬಬುಧಿಯ ದಾಂಟಿ ಕಂಡೆನು
ಸಂದ ಸುವ್ರತೆಯಂಘ್ರಿಕಮಲವ
ನೆಂದೆನಲು ಮೊಗನೆಗಹಿ ನೋಡಿದಳಾ ಮಹೀರುಹವ
ಹೊಂದಿಕೆಯ ಹೊಲಬಲ್ಲವೀನುಡಿ
ಯೆಂದು ಸತಿ ಮೊಗದಿರುಹಲೊಡನಿಂ
ತೆಂದನಾ ಹನುಮಂತ ಹವಣಿಸಿದುಚಿತವಚನದಲಿ ||೭೫||
ಜನನಿ ಕೇಳ್ ನಿಮ್ಮರಸನನುಪಮ
ವನರುಹಾಂಘ್ರಿಯ ಸೇವಕರಿಗೀ
ನೆನಹು ದೊಡ್ಡಿತೆ ನೀರಧಿಯನುತ್ತರಿಸಿದಂಗವನು
ಜನನಿ ಚಿತ್ತೈಸೆನುತ ವರವಾ
ಮನ ತ್ರಿವಿಕ್ರಮನಾದವೊಲು ಬೆಳೆ
ದನು ಮಹೀತಳವದುರದವೊಲಂಬರದ ತುದಿಗಾಗಿ ||೮೦||
ಶಿವನ ಕಾಯದ ಕಾಂತಿ ಮೈಯಲಿ
ಖವಖವಿಸಿದುದು ವದನವುದಯದ
ರವಿಯವೊಲು ರಂಜಿಸಿತು ತಾರಾಗಣದ ಹುರಿಯಂತೆ
ದಿವವನಣೆದುದು ಬಾಲ ಬಳಿಕಾ
ಹವಣ ಕಾಣುತ ಕಾಂತೆ ಕಂಗಳ
ನೆವೆಗಳಲಿ ಮುಚ್ಚಿದಳು ರಘುಪತಿ ರಾಮರಾಮೆನುತ ||೮೧||
ಮೂರುಭಾಗದ ಸಂಶಯವು ಕೆಲ
ಸಾಱಿತವನೀಸುತೆಗೆ ನಂಬುಗೆ
ದೋಱದಿರೆ ತುದಿಯಂಶದಲಿ ಹನುಮಂತನಾ ಹದನ
ಮಾಱುನುಡಿಯಿರದರಲಱಿದು ಮನ
ಮೀಱುವುದಲಾಯೆಂದು ಮಣಿಗಣ
ದೋಱಿಕೆಯ ಮುದ್ರಿಕೆಯನಿತ್ತನು ರಮೆಗೆ ರಾಘವನ ||೯೧||
ಕಮಲಮುಖಿ ಸುಮುಖತೆಯ ಘನಸಂ
ಭ್ರಮದ ಪರಮಾನಂದದಲಿ ನಿಜ
ರಮಣನೆಂದೇ ವಂದಿಸಿದಳಾ ರಾಮಮುದ್ರಿಕೆಗೆ
ತಮವನುಱೆ ಜಱೆದುಗುಳ್ವ ಕಿರಣದ
ವಿಮಲರತ್ನದ ನಡುವೆ ಹೊಳೆದುದು
ಕಮಲನಯನನ ಮೂರ್ತಿ ಕಂಗಳಿಗಾ ಪತಿವ್ರತೆಯ ||೯೨||
ತರಣಿಬಿಂಬದ ತೋಱಿಕೆಯ ತಾ
ವರೆಯವೊಲು ಹೆಱೆಗಂಡು ಹಿಗ್ಗುವ
ಶರನಿಧಿಯವೊಲು ಸಾರ್ದ ಸಿರಿಯ ದರಿದ್ರನಂದದಲಿ
ಪರಮತತ್ವದ ನಿಲುಕಡೆಯ ಸಂ
ದರುಶನದ ಸುಜ್ಞಾನಿಯವೊಲು
ಬ್ಬರದ ಹರುಷದಲಬಲೆ ಹೊಂಪುಳಿಯೋದಳಡಿಗಡಿಗೆ ||೯೩||
ಮನದ ಪರಿಯೇನೆನ್ನ ಮೇಲಣ
ನೆನಹಿನಂತರವೇನು ಹೇಳೈ
ಹನುಮ ಕಠಿಣವೊ ಕೋಮಲವೊ ಕಾಕುತ್ಸ್ಥನಂತಸ್ಥ
ಕನಲಿಕೆಯ ಮಾತುಗಳೊ ಮಮತೆಯ
ವಿನಯವಚನವೊ ನಿನ್ನ ಕಳುಹುವ
ದಿನದಲಿದ್ದಸ್ಥಿತಿಯನೇ ಹೇಳೆಂದಳಾ ಸೀತೆ ||೯೬||
ಅರಸಿ ಕೇಳಾಧ್ಯಾತವಿದ್ಯಾ
ಚರಿತರಿನಕುಲದವರು ರಾಮನ
ಪರಿಯವರ ಪರಿಯಲ್ಲ ಚಿಂತನೆ ದೇವಿಯರ ಮೇಲೆ
ವರಜಪಾನುಷ್ಠಾನವಿಹಿತೋ
ತ್ಕರಸಮಾಧಿಧ್ಯಾನದಲಿ ಸಂ
ಚರಣ ಜಾಗ್ರತ್ಸ್ವಪ್ನದಲಿ ಬೇಱಿಲ್ಲ ನೆನಹೆಂದ ||೯೭||
ಅಳಲದಿರಿ ನೀವಿನ್ನು ತಪ್ಪಿದ
ಕೆಲಸಕೇನಂತಿರಲಿ ಸತಿ ಕೇ
ಳೊಲುವ ನಿಮ್ಮಡಿಯರಸನನು ತಿಂಗಳಿಗೆ ತಾರದಿರೆ
ಬಳಿಕ ತಾ ಡಿಂಗರಿಗನೇ ಜಂ
ಗಳದ ಜಾಡ್ಯವ ಜಾರಬಿಡಿ ಮಂ
ಗಳೆಯರಾಗಿ ಮನೋರಥಕೆ ನೀವೆಂದನಾ ಹನುಮ ||೧೦೧||
ನಂಬನೀ ನುಡಿಗೆನ್ನನೆನ್ನನು
ನಂಬುವಂತಿರೆ ಕಿಱಿದು ಕುಱುಹುಗ
ಳೆಂಬವುಳ್ಳಡೆ ಕೊಡಿ ನಿರೂಪವನನಿತಱಿಂ ಮೇಲೆ
ನಂಬದಿರನಿದು ತಥ್ಯವೆನೆ ಬಳಿ
ಕಂಬುಜಾನನೆ ತೆಗೆದಳಾ ಮಲಿ
ನಾಂಬರದ ನಿಱಿಮಱೆಯ ನಿರುಪಮವರಶಿಖಾಮಣಿಯ ||೧೦೩||
ಗುಣನಿಧಿಯೆ ಬಾ ಕಂದ ಕಪಿದಿನ
ಮಣಿಯೆ ಬಾಯೆಂದಮಲಚೂಡಾ
ಮಣಿಯನಿತ್ತಳು ತುಂಬುವಂಬಕಜಲದ ಝಾಡಿಯಲಿ
ರಣಭಯಂಕರ ರಾಘವಂಗೀ
ಮಣಿಯ ಕೊಡು ನೀನೆಂದ ದಿನಕರಿ
ಗಣದಿಶಾಪಟಮಲ್ಲನನು ತಹುದೆಂದಳಿಂದುಮುಖಿ ||೧೦೪||
ಮಗನೆ ಕೇಳ್ ರಾಕ್ಷಸರು ಮಾಯಾ
ವಿಗಳು ಮಾಂಸಾಹಾರಿಗಳು ಮೈ
ದೆಗೆದು ನಡೆ ಮತಿವಂತನಾಗಿಯೆಕಂದ ಹೋಗೆಂದು
ಅಗಲಲಾರದೆ ಪಾವಮಾನಿಯ
ಮಗುಳೆ ಮಗುಳುಪಚರಿಸಿ ತೊರವೆಯ
ನಗರದೊಡೆಯನ ಚರನ ಕಳುಹಿದಳಶ್ರುಜಲ ಝಡಿಯೆ ||೧೦೫||
ಒಂಬತ್ತನೆಯ ಸಂಧಿ
ಸೂಚನೆ :ರಣಭಯಂಕರ ಹನುಮನಾ ದಿನ
ಮಣಿಕುಲೇಂದ್ರಂಗಮಲ ಚೂಡಾ
ಮಣಿಯ ತಂದಿತ್ತನು ಸುರೇಂದ್ರಾದಿಗಳು ನಲಿದಾಡೆ
ಅಱಸದಿರಿ ಬೇಱತ್ತಲಿತ್ತಲು
ತೆಱಪುದೋಱುವೆ ನೋಡಿ ಸಮರವ
ಮೆಱೆವುದುಳ್ಳಡೆ ಮೈಗೂಡುವುದಗ್ಗಳಿಕೆ ನಿಮಗೆನುತ
ಅಱಿಚಲಳಿದುಳಿದಸುರಪಡೆ ಮು
ಕ್ಕುಱಿಕೊಂಡುದು ಬೆಟ್ಟವನು ಕ
ಟ್ಟಿಱುಹೆ ಕವಿವಂದದಲಿ ಕವಿದುದು ಕೂಡೆ ಖಳನಿಖರ||೨||
ಕುಶನೆ ಕೇಳೈ ಕುಲಿಶಹತಿ ನೋ
ಯಿಸಲು ನೆರೆಯದ ಹನುಮನುಱೆ ಕಂ
ಪಿಸುವನೇ ಖಳರಿಱಿತದಲಿ ಲವ ಕೇಳುಕೌತುಕವ
ಮುಸುಕುವತಿಬಲರಕ್ಕಸರ ಕ
ರ್ಕಶರಾಗ್ರನಿಘಾತದಿಂದೆ
ಬ್ಬಿಸಿದನಂತಕಪುರಿಗೆ ನಿಮಿಷದಲಾ ಸಮೀರಸುತ||೩||
ಅದೆ ಬರವು ಪವಮಾನಜನ ಜಯ
ವದನವಿಕಸಿತ ವಿಸ್ತರಣದ
ಭ್ಯುದಯ ಮುಖವೆಮಗಱುಹುತದೆಯೆಂದಖಿಳಕಪಿಸೇನೆ
ತುದಿವೆರಳ ಬೊಬ್ಬೆಗಳತಿಗಗಳ
ತದಹದಬ್ಬರವಱೆಯಲೀತನ
ನಿದಿರುಗೊಂಡಪ್ಪಿದರು ನಮಿಸಿದ ಜಾಂಬವಂತಂಗೆ ||೭||
ವೀರ ಬಂದೈ ಸ್ವಾಮಿಕಾರ್ಯೋ
ದ್ಧಾರ ಬಂದೈ ಕೀಶಕುಲವನ
ವಾರಿರುಹದಿನನಾಥ ಬಂದೈ ತಂದೆಯೆಂದೆನುತ
ಸೋರುವಾನಂದಾಶ್ರುಪುಳಕದ
ಪೂರಣದಲೆತ್ತಿದನು ಪವನಕು
ಮಾರಕನ ಮಸ್ತಕವ ನಲಿದೊಲಿದಬುಜಭವಸೂನು ||೮||
ಏನ ಮಾಡಿದೆಯೆಂದು ಕಲಿಪವ
ಮಾನಜನನಾ ಕಮಲಗರ್ಭನ
ಸೂನು ಬೆಸಗೊಂಡನು ಮುಗುಳ್ನಗೆ ಮುಖದೊಳವತರಿಸೆ
ಏನನೆನಗೆ ನಿರೂಪಿಸಿದಿರದ
ರಾನಿಕೆಯಲೇ ಹೋಗಿ ಕಂಡೆನು
ಜಾನಕಿಯ ಬಳಿಕಿತ್ತೆನವರಿಗೆ ರಾಮಮುದ್ರಿಕೆಯ ||೧೦||
ತನು ಬಡವು ದೇವಿಯರ ದೇವರ
ನೆನಹದಲ್ಲದೆಕಾಣೆನನ್ಯವ
ಮನವಚನಕಾಯದಲಿ ಶಿವ ಶಿವ ಶಿವಮಹಾದೇವ
ಎನಿತು ಪಾತಿವ್ರತೆಯೊ ಜಗದಲಿ
ತನಗೆ ಬಳಿಕೀ ರತ್ನವನು ಕೊ
ಟ್ಟಿನಿಯನಲ್ಲಿಗೆ ಹೋಗೆನುತ ಬೀಳ್ಕೊಟ್ಟರವರೆಂದ ||೧೧||
ಬವರಕೈತಂದಸುರರಾಯನ
ಕುವರರೇಳ್ನೂರ್ವರನು ಕಾಲನ
ಭವನವನು ಕಾಣಿಸಿದನಕ್ಷಾದ್ಯಖಿಳರಾಕ್ಷಸರ
ಕವಿಸಿ ಸಭೆಯಲಿ ರಾವಣನ ಪರಿ
ಭವಿಸಿ ಪುಚ್ಛಾಗ್ರದಲಿ ಸುತ್ತಿದ
ನಿವಸನದ ಶಿಖಿಯಿಂದ ಸೀಕರಿಮಾಡಿದನು ಪುರವ ||೧೩||
ಮುರಿದು ಚರಣಕೆ ನಮಿಸಿ ವಿಶ್ವಂ
ಭರಸುತೆಯ ಶಿರೋಮಣಿಯ ಬಳಿ
ಕೆರಡು ಕೈಗುಡಿತೆಯಲಿ ಧರಿಸಿ ಮನೋನುರಾಗದಲಿ
ಅರಸರಾಮಂಗೀಯೆ ನಗುತಾ
ದರದಿನಾ ಹನುಮಂತದೇವನ
ಪರಮಕರುಣಕಟಾಕ್ಷರುಚಿಯಲಿ ಹೊದೆಸಿದನು ರಾಮ ||೨೮||
ಉದಧಿಮಥನದೊಳಮಳಕೌಸ್ತುಭ
ದುದಯದಂತರದಲ್ಲಿ ಜನಿಸಿ
ತ್ತಿದು ಸುರೇಂದ್ರಂಗಾಯ್ತು ಹಸುಗೆಯಲೀ ಮಹಾಮಣಿಯ
ತ್ರಿದಶಪತಿ ಜನಕಂಗೆ ನೃಪಯ
ಜ್ಞದಲಿ ಕೊಟ್ಟನು ಜನಕ ಸೀತೆಯ
ಮದುವೆಯಲಿ ತನಗಿತ್ತನಿತ್ತೆನು ಸೀತೆಗಾನೆಂದ ||೨೯||
ಕಱುಹಿದಹುದೆಂದರಸನೆಳೆನೇ
ಸಱಿನವೊಲು ರಂಜಿಸುವ ರತ್ನವ
ತುಱುಗಿ ತೂಳುವ ಹರುಷಪುಳಕದಿನಿತ್ತನನುಜಂಗೆ
ನೆಱೆಯದೀತಂಗೀವ ವಸ್ತೂ
ತ್ಕರವದಂತಿರಲೆಂದು ಬೊಮ್ಮನ
ಪರಮಪದವಿಯನಿತ್ತು ನೃಪ ಮನದಣಿಯೆ ಮನ್ನಿಸಿದ ೩೦||
ಕೇಳಿದನು ಬಳಿಕಮರವೈರಿ ವಿ
ಶಾಲನಗರದ ಪಥವನಾ ದಶ
ಮೌಳಿಯನುಪಮದುರ್ಗದುಗ್ರಾಟೋಪವನು ರಾಮ
ಆಳು ಕುದುರೆ ರಥಾಶ್ವದುಬ್ಬರ
ದೇಳಿಗೆಯನವನೈಶ್ವರಿಯದು
ಬ್ಬಾಳಿಸುವ ಢಾಳಿಸುವ ನಗೆಮೊಗದಲಿ ಸಮೀರಜನ ||೩೨||
ನೂರುಯೋಜನ ಜಲಧಿಮೇಲಿ
ನ್ನೂಱುಯೋಜನದುನ್ನತದ ಗಿರಿ ಮೂಱರಗ್ರದಲಿ
ತೋಱುತಿಹುದಿನಬಿಂಬದವೊಲದ
ನೇಱಲಮರರಿಗಸದಳವು ಹದಿ
ನಾಱುಯೋಜನದುದಿತಕೋಟಾವಳಯವದಕೆಂದ ||೩೩||
ಅಗಳು ತಾನೈವತ್ತು ಯೋಜನ
ದಗಲ ಕೆಳಗಣ ಕೋಟೆಯೊತ್ತಿನ
ಲಗಡುರಕ್ಕಸನೈಶ್ವರಿಯವನು ಹೊಗಳುವಡೆ ತನಗೆ
ಮಿಗದು ಮತಿ ಸೈನಿಕದ ಸಂಖ್ಯೆಯ
ಪೊಗಳಲಸದಳವಮರರಾಯನ
ಬಿಗುಹು ದೇವರು ಮುನಿದು ನೋಡಿದಡೇನಹುದೊಯೆಂದ ||೩೪||
ಹರೆದುದೋಲಗವನಿತಱಿಂ ಮೇ
ಲರಸ ಸುಗ್ರೀವಾದಿ ಸುಭಟರ
ಕರಸರೋಜದಿ ಬೀಳುಕೊಟ್ಟನು ಬಳಿಕ ಬೀಡಿಕೆಗೆ
ತೊರವೆಯಧಿಪತಿರಾಯ ನರಕೇ
ಸರಿ ನಿಜಾನುಜಗೂಡಿ ನೂಕಿದ
ನಿರುಳನಹಿತವಧಾವಿರೋಧದ ಬಹಳಚಿಂತೆಯಲಿ|| ೩೫||
ಯುದ್ಧಕಾಂಡ
ಐವತ್ತೊಂದನೆಯ ಸಂಧಿ
ಸೂಚನೆ : ರಾಯ ರಾಯರರಾಯ ರಾಘವ
ರಾಯ ರಣರಂಗದಲಿ ರಕ್ಕಸ
ರಾಯನನು ಗೆಲಿದೊಲಿಸಿ ಸಲಹಿದನಖಿಳ ಭುವನಗಳ
ಕೇಳಿದೈ ಕುಶನೆ ನಿಮ್ಮ ರಘುಭೂ
ಪಾಲಕನ ಸಡಗರದ ಸಮರ ಸ
ಲೀಲೆಯನು ರಣಕೇಳಿಯನು ಲಂಕಾಪುರಾಧಿಪನ
ಮೇಳವಿಸಿದುವು ರಥವೆರಡು ನಿ
ಸ್ಸಾಳದಬ್ಬರವಮರರಸುರರ
ಪಾಳಯದಲೊದಱಿದುವು ಪರುಟವವಾಯ್ತು ಕಾಳಗದ ||೧||
ರಥಿಕರಿಬ್ಬರ ಬೊಬ್ಬೆ ಬಲು ಸಾ
ರಥಿಗಳಿಬ್ಬರ ಚಪ್ಪರಣೆ ಸು
ಪ್ರಥಿತ ಬಲರುದ್ದಂಡ ಕಾರ್ಮುಖದಂಡದಬ್ಬರಣೆ
ರಥವೆರಡಱುತ್ತಾಳ ಗಮನದ
ಪೃಥುಳ ಚೀತ್ಕೃತಿ ರಭಸ ತುಂಬಿತು
ಮಥನದಬುದಿಯ ಸಬುದಕಿಮ್ಮಿಗಿಲೆನೆ ಜಗತ್ರಯವ ||೨||
ರಾಮ ಕೇಳಿನ್ನೇಕೆ ಸೀತೆಯ
ಕಾಮಿತವು ಕಡುಮರುಳಲಾ ಸು
ತ್ರಾಮ ಕಳುಹಿದ ತೇರ ಬಲುಹುಂಟೆಂದು ಬೆಱತೆಯಲ
ವ್ಯೋಮಕೇಶ ವಿರಿಂಚಿ ಮುಖ್ಯಮ
ಹಾಮಹಿಮ ಸುರಕೋಟಿಗಳು ಸಂ
ಗ್ರಾಮಕಭಿಮುಖರಾದರಣುವಿಗೆ ಬಗೆವನಲ್ಲೆಂದ ||೪||
ಎಲವೊ ರಾವಣ ಕೇಳು ಶಂಕರ
ಸಲಿಲಜೋದ್ಭವ ಮುಖ್ಯದಿವಿಜರ
ಬಲದ ಭಟನೇ ತಾನದಾರೆಂದಱಿದುದಿಲ್ಲವಲ
ಹಲವು ತಲಿಗಳ ಹೊತ್ತ ಕೊರಳಿನ
ಲಲಗ ಚಾಚಿದು ನಾಸಿಕಂಗಳ
ನಿಳುಹಿ ಸೀತೆಯ ತೆಗೆವ ಪರಿಯ ನೋಡು ನೀನೆಂದ ||೫||
ಅದಱಿನೀನೆಮಗುರುವರೋಧಾ
ಸ್ಪದನು ನಾವಾ ಬಳಿಯ ಬವರದ
ಲೊದಗಿದೆವು ನಿನ್ನೊಡನೆ ಸಮರೋದ್ಯೋಗ ಕೇಳಿಯಲಿ
ಇದನು ನೀ ಕೈಕೊಂಬುದೆನುತ
ಗ್ಗದ ಮಹಾಮೋಘಾಸ್ತ್ರದಲಿ ತಲೆ
ಯುದರಲೆಚ್ಚನು ಬೊಬ್ಬಿರಿದು ರಘುಪತಿ ದಶಾನನ೧೨||
ದಿವಿಜರಾಯೆಂದುಬ್ಬಿದರು ರಾ
ಘವನ ಮಹಿಮೆಗೆ ಕಮಲಭವ ಭವ
ರವಿರಳಾನಂದೈಕಸುಖಮಯರಾದರಭ್ರದಲಿ
ಅವತರಿಸಿದವು ಮತ್ತೆ ತಲೆಗಳು
ಖವಖವಿಸುತಟ್ಟೆಯಲಿ ಕಲಿ ರಾ
ಘವ ಮಹೀಪತಿ ಕಂಡು ಕೈಗಲ್ಲದಲಿ ಬೆಱಗಾದ ||೧೩||
ತುಂಬಿದುವು ಕಡಿದಲೆಗಳಲಿ ಕಕು
ಭಾಂಬರಾವನಿ ಚಿಗಿದು ಸಿಡಿದರು
ಣಾಂಬುವಿನಲುಱೆ ನನೆದು ಕೆಂಪಾಯ್ತಬುಜಜಾಂಡಘಟ
ಎಂಬೆನೇನನು ಬೇಸಱಿಕೆ ಬಳಿ
ಕಂಬುಗಳಿಗಂಬೋಜನೇತ್ರಂ
ಗಿಂಬುಗೊಂಡದು ಕಾಣೆನುದಿಸುವ ತಲೆಗಳಿಗೆ ಕಡೆಯ ||೨೨||
ಮುರಿದು ನೋಡಿದನಿಂದ್ರಸಾರಥಿ
ಸರಳಗಮನವ ಕಾಣದೆಲೆ ರಘು
ವರನೆ ಚಿತ್ತೈಸಹಿತವಧೆಗೇಕಕಟ ಕೃಪೆ ನಿನಗೆ
ಉರವಣಿಸುತಿವೆ ತೇಜಿಗಳು ಮುಂ
ಬರಿದು ಬರುತಿದೆ ಬಾಣತತಿ ಕೊ
ಕ್ಕರಿಸುವವನಲ್ಲಿವನು ಕೊಲೆಗೆಲೆದೇವ ಕೇಳೆಂದ ||೨೬||
ಸಾಕು ಮಾತಳಿ ಮಾತು ನಾವು ಸ
ಮೀಕಬಾಹಿರರಿಶಿರಂಗಳ
ನೂಕಿ ಬೇಸತ್ತವು ಶರಂಗಳು ಸೋಲವೆಮಗಾಯ್ತು
ಓಕರಿಸಿದಳು ಮೃತ್ತುವೀ ಲೋ
ಕೈಕವೀರನ ನಮಗೆ ತಾನಿ
ನ್ನೇಕೆ ಜಯದಭಿಲಾಷೆ ತಿರುಗಿಸು ತೇರ ಕೆಲಕೆಂದ ||೨೭||
ತೆರಳು ನೀನಿನ್ನೇನ ಮಾಡುವೆ
ಹಿರಿದು ಬಳಲಿದೆ ಸಾರಥಿತ್ವದ
ಹರಹಿನಲಿ ರಿಪುವಿಜಯ ನಿಷ್ಕೃತಿಗಾವಭಾಗ್ಯರಲೆ
ವರ ವಿಭೀಷಣದೇವ ಬಾ ನಮ
ಗೆರಡು ನಾಲಗೆಯಾದುದೆಮ್ಮನು
ಶರಣುವೊಕ್ಕರಿಗಾದುದಪಶಯವೆಂದನಾ ರಾಮ ||೨೮||
ಶರಣುವೊಗು ನಿಮ್ಮಣ್ಣದೇವನ
ಮರಳಿ ನಮ್ಮೊಡನಾಡಿ ಕೆಡಬೇ
ಡೆರಡು ಕಡೆಯಲಿ ಕಷ್ಟತರವೆಮಗಾಯ್ತು ಲೋಕದಲಿ
ಹಿರಿದು ಬಳಲಿದೆ ಹೋಗೆನುತ ನಾಜ
ಕರವ ಮುಗಿದು ದಿನೇಂದ್ರತನುಜನ
ಕರೆದು ನುಡಿದನು ಮನದ ದುಗುಡವ ಮಧುರ ವಚನದಲಿ ||೨೯||
ದೇವ ನೀನೀತಗಳೊಡನೆ ಮಾ
ಯಾ ವಿಲಾಸೋಕ್ತಿಗಳ ನುಡಿವೀ
ಭಾವುಕವು ತನ್ನೊಡನೆ ಕೊಳ್ಳದು ಕಪಟವೇಕಿನ್ನು
ಆ ವಿರಿಂಚಿಪ್ರಮುಖ ಸಕಲ ಸು
ರಾವಳಿಗಳೊಡಗೂಡಿ ಪೌಲೋ
ಮೀವರನು ಬಿನ್ನೈಸಿದುದನಾನಱಿಯೆನೇಯೆಂದ ||೩೪||
ಹೊಸಬ ನೀನಿವರ್ಗಳಿಗೆ ದಿಟ ನೀ
ಹೊಸಬನೇ ತನಗಿನಿತು ಮಿಗೆ ಮಾ
ನುಷಚರಿತ್ರವಿಧಿತೃಪಿತನೆಂದಱಿಯೆನೇ ತಾನು
ಬಿಸುಟ ಚಾಪವನು ತಳೆದುಕೋ ಸಂ
ಧಿಸು ಶರಾಳಿಯನಿನಿತಱೊಳಗೀ
ಯಸುರನುಳಿದರೆ ಹೊಗುವಿನಗ್ನಿಯನೆಂದು ಗರ್ಜಿಸಿದ ||೩೫||
ಮರುಳಲಾ ಸುರಸೂತ ವಾಣೀ
ಶ್ವರನ ಪಿತ ತಾನಾದಡಿವನೀ
ಪರಿಯ ಜೀವಿಸುವನೆ ವಿವೇಕವಿಚಾರವಿನಿತಿಲ್ಲ
ನರರು ನಾವ್ ಸಾಕಿನ್ನು ನಮ್ಮನು
ಹಿರಿದು ಹೊಗಳಲು ಬೇಡವೆನುತೂ
ರ್ವರೆಗೆ ದುಮ್ಮಿಕ್ಕಿದನು ದುಗುಡವ ಹಿಡಿಯಲಖಿಳಜನ ||೩೬||
ಮನದೊಳಂಜದಿರೆಲೆ ರಘುಕ್ಷಿತಿ
ಜನಪ ತೊಡೆನಸ್ತ್ರವನು ಬಾಣಾ
ಸನ ಮಹಾಸ್ತ್ರ ವಿಮುಕ್ತಹಸ್ತರ ಕೂಡೆ ನಿನ್ನವರ
ಅನುವರವನನುಸರಿಸು ಬಳಿಕೆ
ಮ್ಮನುವರಕೆ ಕಲಿಯಾಗಿ ನಿಲು ನಿಲು
ವೆನು ಸುರಾವಳಿ ಮೆಚ್ಚೆ ನಿನ್ನೊಡನೆಂದನಸುರೇಂದ್ರ ||೩೭||
ಇಳೆಗೆ ರಥದಿಂದಿಳಿದ ರಘುಕುಲ
ತಿಲಕನನು ಕಾಣುತ್ತ ದಿವದಿಂ
ದಿಳಿದನಾ ಸಮಯದಲಿ ಸರಸಿಜಭವನನುಜ್ಞೆಯಲಿ
ಕಳಶಭವನಾ ಮನುಕುಲೇಂದ್ರನ
ಬಳಿಗೆ ನರನಾಟಕದ ನಟಣೆಯ
ಕೆಲಸ ಕರ ಲೇಸಾಯಿತೆಂದನು ಮಂದಹಾಸದಲಿ ||೩೮||
ಬಲ್ಲೆವಾವ್ ನಿನ್ನುವನು ಸಾಕಿ
ನ್ನೆಲ್ಲಿಪರಿಯಂತರ ಸುರಾಳಿಯ
ನಳ್ಳೆಬಾಱಿಸಬೇಡ ಬಿಡು ನರನಾಟಕಸ್ಥಿತಿಯ
ಸಲ್ಲಲಿತ ಸಲಿಲದಲಿ ಕೋಪದ
ಪಲ್ಲವವ ತೊಳೆಯಾಗಮೋಕ್ತದ
ಬಲ್ಲವಿಕೆಯಿಂದಾಚಮನ ವಿಧಿವಿಹಿತನಾಗೆಂದ ||೩೯||
ನೆನೆ ಹರಿಬ್ರಹ್ಮಾಮಹೇಶ್ವರ
ರನು ಸದಾನಂದಾತ್ಮಕನನೆನೆ
ನೆನೆದನಾ ತ್ರಿಗುಣಾತ್ಮಕನ ನಿಜಭಾವಶುದ್ಧಿಯಲಿ
ತನುಜ ಕೇಳಿಳಿತಂದನಾ ರವಿ
ಮನುಕುಲೇಂದ್ರನ ಬಳಿಗೆ ಕೊಟ್ಟನು
ವನಜಭವ ಭವ ವಿಷ್ಣುಮಂತ್ರಿತ ದಿವ್ಯಮಾರ್ಗಣವ ||೪೦||
ಸರಿದನಿನನಂಬರಕೆ ಮುನಿಪತಿ
ತಿರುಗಿದನು ದಿವದತ್ತ ದಿವಿಜೇ
ಶ್ವರನ ಸಾರಥಿ ಶಾರ್ಙ್ಗವನು ಬಳಿಕಿತ್ತನರಸಂಗೆ
ಸುರರುಘೇಯೆನೆ ದಿವ್ಯರಥಕು
ಪ್ಪರಿಸಿದನು ಚಪ್ಪರಿಸಿ ಭುಜವನು
ಹರಿಕಟ ಕಹನುಮಂತದೇವನ ಬೆರಳ ಬೊಬ್ಬೆಯಲಿ ||೪೧||
ಲವನೆ ಕೇಳೈ ಬಲದ ಭುಜದಲಿ
ಭವನು ವಾಮದಭುಜದಲಂಬುಜ
ಭವನು ಮುಖದಲಿ ಶಿಖಿ ಕೃತಾಂತನು ಕೋಪದುರುಬೆಯಲಿ
ಪವನುಚ್ಛ್ವಾಸದಲಿ ಶೌರ್ಯೋ
ತ್ಸವದಲಾದ್ಯಾಶಕ್ತಿ ಮಿಕ್ಕಿನ
ದಿವಿಜರಂಗೋಪಾಂಗದಲಿ ನೆಲಸಿದರು ರಾಘವನ ||೪೨||
ಬಳಿಕ ಶಾರ್ಙ್ಗ ಮಹಾಧನುವನು
ಜ್ವಲಿತ ಮೌರ್ವಿಯ ನೀವಿ ಬೆರಳಲಿ
ಲುಳಿವಡೆದು ಬರಸೆಳೆದು ಹೂಡಿದನಾ ಮಹಾಶರವ
ಅಲಗಿನಲಿ ಲಯರುದ್ರನಂಬಿನ
ವಳಯದಲಿ ಪರಮೇಷ್ಠಿ ಬಾಣದ
ಹಿಳುಕಿನಲಿ ಹರಿಗಱಿಯಲೆಸೆದರು ಯಮಸಮೀರಣರು ||೪೩||
ವಿಶ್ವತೋಮುಖನಾದನಮಲ ಸು
ವಿಶ್ವಲೋಚನನಾದನಗ್ಗದ
ವಿಶ್ವತೋಭುಜನಾದನೀಕ್ಷಿಸಿ ನೋಡಲಿದಿರಿನಲಿ ||೪೪||
ಕಮಲಭವಕೋಟಿಗಳು ಗಿರಿಜಾ
ರಮಣ ಕೋಟಿಗಳಿನ ಸುರೇಶ್ವರ
ಯಮ ಹುತಾಶನ ವರುಣ ವಾಯು ಕುಬೇರಕೋಟಿಗಳು
ಹಿಮಕಿರಣ ಕೋಟಿಗಳು ನಿಗಮಾ
ಗಮನಿಕರ ಕೋಟಿಗಳು ದೇವೋ
ತ್ತಮನ ಸಿರಿಯಂಗದಲಿ ನೆಲಸಿರೆ ಕಂಡನಸುರೇಂದ್ರ ||೪೫||
ಸುಖಮಯ ಚಿನ್ಮಯ ಬರ್ಹಿ
ರ್ಮುಖ ಕಿರೀಟಮಣಿಪ್ರಭಾಂಚಿತ
ನಖನ ಪರಮೇಶನ ಪರಾಪರಪರಪರಾತ್ಪರನ
ಶಿಖಿ ಸುಧಾಕರ ಸಲಿಲಸಂಭವ
ಸಖಮಯೂಖ ಸಹಸ್ರತೇಜೋ
ಮುಖನ ರಘುರಾಜೇಂದ್ರಚಂದ್ರನ ಕಂಡನಸುರೇಂದ್ರ ||೪೮||
ಈತನೀಗಲೀ ಜನನಮರಣಾ
ತೀತ ಮಾಯಾಮಹಿಮ ಸಗುಣ ಸ
ನಾತನನು ಸಂದೇಹ ತಾನಿನ್ನೇಕೆ ಪೂರ್ವದಲಿ
ಈತನೊಡನೆ ವಿರೋಧವೆಮಗಭಿ
ಜಾತವಾದುದು ಜನ್ಮಪೂಱಱೊ
ಳೇತಕಂಜಿ ಮುಂದೆ ಮುಕ್ತಿಯ ಸೂಱೆತನಗೆಂದ ||೫೦||
ತಾನದೆತ್ತಲು ಜನಕತನುಜಾ
ಮಾನಿನಿಯದೆತ್ತಲು ಚತುರ್ಮುಖ
ಸೂನು ಸನಕಾದಿಗಳನುಜ್ಞೆಯ ಫಲವಿದೀಗವಲ
ಶ್ರೀನೃಸಿಂಹ ನೃಸಿಂಹಮಾಯಾ
ಮಾನುಷವ್ಯಾಪಾರಸಾರ ಕೃ
ಪಾನಿಧಿಯೆ ಶರಣೆನುತ ಬಿಲುದನಿದೋರಿ ಬೊಬ್ಬಿಱಿದ ||೫೨||
ಎಲೆ ವಿಭೀಷಣದೇವ ಮೂರ್ಖರ
ತಿಲಕನಿವನು ನಿನ್ನಂತರಂಗದ
ನೆಲೆಯ ಹೇಳೈ ಕೊಲಲೊ ಕೊಲಬೇಡವೊ ತವಾಗ್ರಜನ
ತಿಳಿಯಲಿಬ್ಬರಿಗೊಬ್ಬಳೇ ತಾಯ್
ಸಲೆ ಕರುಳ್ಗಳು ಮಱುಗದಿರದಳ
ಬಳವ ಹೇಳೆನ್ನಾಣೆ ಬಿಡೆಯ ನುಡಿಯಬೇಡೆಂದ ||೫೭||
ಮರಳಿ ಮರಳಿನ್ನೆಲ್ಲಿ ಪರಿಯಂ
ತರ ವಿಚಾರವು ಜೀಯ ಛಲದು
ಬ್ಬರದ ಪೌರುಷವಣ್ಣನದು ನಮ್ಮಣ್ಣನೆಂದೆಂಬ
ಕರುಣಬೇಡಗ್ರಜರು ಪಿತೃಗಳು
ಗುರುಗಳಾಗಿಯೆ ದೇವರಾರ್ ಡಿಂ
ಗರಿಗರನುಸರಣೆಯನು ಹಿಡಿಯದೆ ಬೇಗ ಮಾಡೆಂದ ||೫೮||
ಆವ ಭಟನೆಂದಱಿಯಲಾ ಮೂ
ದೇವರೊಳಗಾದಖಿಳ ಲಯದಧಿ
ದೇವರುಗಳೊತ್ತಾಗಿ ಬರಲಿರಲಖಿಳ ಮಂತ್ರಾಸ್ತ್ರ
ತೀವಿ ತೊಟ್ಟೆಸೆ ಕಲ್ಪಪರಿಯಂ
ತಾವ ಭಯಬೇಡೆಂಬ ವಚನವ
ನಾ ವಿಭೀಶಣದೇವನಱಿದಿಂತೆಂದನರಸಂಗೆ ||೬೦||
ಅರಸ ಚಿತ್ತೈಸಂಬಿಕಾಪತಿ
ಯರಸನೋಲಗದೊಳಗೆ ನಂದೀ
ಶ್ವರನನಣಕಿಸುತಿಟ್ಟನಿವ ಜಂಬೀರಫಲದಿಂದ
ಉರವ ತಾಗಲು ಶಾಪವಿತ್ತನು
ಮರಣ ವಕ್ಷಸ್ಥಳದಲುರೆ ಗೋ
ಚರಿಸಲೆಂದದಱಿಂದ ಬಾಣವನುರಕೆ ಬೆಸಸೆಂದ||೬೧||
ಹಳುವರದ ಮಂಡಿಯಲಿ ವಾಸುಗಿ
ಯಳುಕದವೊಲಾಶಾಗಜಂಗಳು
ಬಳುಕದವೊಲಿಳೆ ನೋಯದವೊಲಂಬುಧಿಯ ತಳಮಳಲು
ತುಳುಕದವೊಲಸ್ತ್ರವನು ಕೆನ್ನೆಗೆ
ಸೆಳೆದು ಮತ್ತೀ ಮಾತನೆಂದನು
ಕೊಲೆಗೊಡಂಬಟ್ಟೈ ವಿಚಾರಿಸು ಮನವ ನೀನೆಂದ ||೬೪||
ಮನವ ನೆಱೆ ನಿರ್ಧರಿಸಿದೆನು ನೀ
ಮನುಜನಲ್ಲೆಂಬುದ ವಿವೇಕದ
ನೆನಹಿನಿಂದಾನಱಿದೆನಂಜೆನು ತನುಪರಿಚ್ಯುತಿಗೆ
ನಿನಗೆ ದಯೆಬೇಡಿನ್ನು ದಿಟ ರಂ
ಜನೆಯ ನುಡಿ ಸಾಕೆನಲು ತಪ್ಪದೆ
ಜನವಱಿಯೆ ಹೊಱಗಾವು ಪಾಪಕೆ ತಪ್ಪದೇಯೆಂದ ||೬೫||
ತಪ್ಪದೆಸು ಮಾತೇಕೆ ನಿನಗಿ
ನ್ನೊಪ್ಪಿಸಿದೆ ಛಲಪದವ ನೀ ದಿಟ
ತಪ್ಪುವಾತನೆ ಕಳುಹು ನಮ್ಮೆಡೆಗಮ್ಮುವರೆ ಶರವ
ಒಪ್ಪವನು ಬಳಿಕಿಟ್ಟುಕೋಯೆನೆ
ನಿಪ್ಪಸರದಲಿ ಬೊಬ್ಬಿಱಿದು ಬಿಡೆ
ಚಪ್ಪರಿಸಿದುದು ದೇವಗಣತತಿ ಹರುಷದುಬ್ಬಿನಲಿ ||೬೬||
ಉರವಣಿಸುವ ಮಹಾಸ್ತ್ರಕಂಬಿನ
ಸರಿಯಸುರಿದನು ಮುಟ್ಟವಿಸಿ ಬರೆ
ಬೆರಸಿ ಹೊಯ್ದನು ಖಡ್ಗ ಖರ್ಪರ ಪರಶು ಪರಿಘದಲಿ
ಉರಕೆ ಮೋಹಲು ಮುಷ್ಟಿಯಿಂದ
ಬ್ಬರಿಸಿ ತಿವಿದನು ನರೋರಗ
ಧರಣಿಯಲಿ ದಶಶಿರನವೊಲು ಧುರಧೀರರಾರೆಂದ||೬೮||
ತಡೆವವೇ ತಾರೆಗಳು ತರಣಿಯ
ನಡಸಿ ನುಂಗುವ ರಾಹುವನು ಕಡಿ
ದುಡಿದು ಹಾಯಾಕಿತು ಸರಳುರಸ್ಥಳವನು ದಶಾನನ
ಹೊಡೆದವಮರರ ಭೇರಿ ರಾಮನ
ಮುಡಿಯಲೊಕ್ಕವು ಕುಸುಮವಮರರ
ಮಡದಿಯರು ಸುಳಿದೆತ್ತಿದರು ಜಯಮಂಗಳಾರತಿಯ||೬೯||
ಅಣ್ಣ ನುಡಿಯೈ ಸಮರಜಯ ಮು
ಕ್ಕಣ್ಣ ನುಡಿಯೈ ಸಕಲ ಸುರರೆಳೆ
ವೆಣ್ಣುಗಳ ಕೇಕರ ವಿಲಾಸಪ್ರಥಿತ ಮಾತಾಡೈ
ಹಣ್ಣಿ ಕೆಟ್ಟೈ ಹಗೆತನವ ಪರ
ವೆಣ್ಣಿಗೋಸುಗ ಭಗಿನಿ ಬಿತ್ತಿದ
ಬಣ್ಣಿಗೆಯ ಬೇಳಂಬದಲಿ ಹಾಯೆಂದನಸುರೇಂದ್ರ ||೮೦||
ಕುಲಕೆ ಕಂಟಕನಾದೆನವನೀ
ತಳಕೆ ಭಾರಕನಾದೆ ನರಕದ
ಕುಳಿಗೆ ನಾಯಕನಾದೆ ಜಗದ ಜನಾಪವಾದಕದ
ಜ್ವಲನಕಧಿಕೃತನಾದೆಹೊತ್ತೆನು
ಜಲಜಸಂಭವ ಕಲ್ಪಪರಿಯಂ
ತಲಸದಪಕೀರ್ತಿಯನು ಗತಿಯೆನಗೇನು ಹೇಳೆಂದ ||೮೧||
ಮರುಳುತನ ನಿನಗುಂಟೆ ಕೇಳೈ
ವರವಿಭೀಷಣದೇವ ಜನನಕೆ
ಮರಣ ನಿಜ ಸೌಖ್ಯಕ್ಕೆ ದುಃಖವಿದೀಗಲನುಸಾರಿ
ತರುಣತನ ವಾರ್ಧಿಕಕೆ ಮಹದೈ
ಶ್ವರಿಯ ವಿಪದಾಶ್ರಯಕೆ ನೀನಿದ
ಕರುಹನಾಗಱಿವಿಂಗೆನುತ ಸಂತೈಸಿದನು ರಾಮ ||೮೩||
ಬಿಡು ವೃಥಾ ಶೋಕಾಗ್ನಿದಾಹದೊ
ಳೊಡಲ ಬೀಳಿಸಬೇಡ ನಮ್ಮೀ
ನುಡಿಯನನುವರ್ತಿಸು ಚಿದಾತ್ಮವಿವೇಕಬುದ್ಧಿಯಲಿ
ನಡಸು ಸಾಕಿನ್ನುತ್ತರಕ್ರಿಯೆ
ವಿಡಿ ಕೃತ್ಯವನೆಂದು ಕಂಬನಿ
ದೊಡೆದು ಸಂತೈಸಿದನು ಶರಣಾಗತನನಾ ರಾಮ ||೮೫||
ಅಱುಹಿದರು ದೂತರು ದಶಾಸ್ಯನ
ಮರಣವನು ಮಂಡೋದರಿಗೆ ಕಾ
ಹುರತೆ ಕೋಳಾಹಳಿಸಿತಂತಃಪುರದೊಳಗಲದಲಿ
ಸುರ ನರೋರಗ ದನುಜ ರಜನೀ
ಚರ ಯುವತಿಯರು ಲಕ್ಕಸಂಖ್ಯೆಯ
ನೆರವಿಯಲಿ ರಣಮಂಡಲಕೆ ನಡೆತಂದಳಾ ಕಾಂತೆ ||೮೭||
ಬಿಡುಮುಡಿಯ ಹಾಹಾರವದ ಬೆಳ
ಗಿಡುವ ಕಂಗಳಲುಗುವ ವಾರಿಯ
ನಿಡುಸರದ ರೋದನದ ಮಿಡುಕುವ ಪಲ್ಲವಾಧರದ
ಎಡಬಲಕೆ ಬಳುಕುವ ಕೊರಳ್ಗಳ
ಪೊಡರ್ವ ಪೀನಪಯೋಧರದ ಕೆಲ
ಸಿಡಿದ ಮೇಲುದಿನಖಿಳಯುವತಿಯರೈದಿದರು ರಣವ||೮೯||
ಹಱಿದು ಹಾರವ ಕರ್ಣಪೂರವ
ನುಱುಬಿ ಕಂಕಣ ಮುದ್ರಿಕೆಯ ಮುಡಿ
ವೆಱೆಯ ಮುತ್ತಿನ ಬೈತಲೆಯ ಮೂಗುತಿಯನೀಡಾಡಿ
ಅಱಸಿದರು ಹರಿಹರಿದು ತಮ್ತ
ಮ್ಮೆಱೆಯರನು ನಡೆತಂದು ತನುವಿನ
ಹಱುಕ ಸಂಧಿಸಿ ಮಯತನುಜೆ ತೆಗೆದಪ್ಪಿದಳು ಪತಿಯ ||೯೩||
ಸಿಯ ನೆವದಲಿ ದೇವ ನೀ ವಸು
ಮತಿಯ ಭಾರವ ಕಳೆದು ಶರಣಾ
ಗತನ ಸಲಹಿದೆ ಸಂದುದದು ಸುಲಭದಲಿ ನಿನಗೆನಗೆ
ಗತಿಯದಾವುದು ದೇವ ಹೇಳೆಂ
ದತಿಶಯದ ಶೋಕದಲಿ ಸೀತಾ
ಪತಿಯ ಸಿರಿಚರಣಾರವಿಂದಕೆ ಚಾಚಿದಳು ಹಣೆಯ ||೧೦೨||
ಎತ್ತಿ ಮಂಡೋದರಿಯ ಹಣೆಯನು
ದಾತ್ತ ಕರುಣಾಸಿಂಧು ನುಡಿದನು
ಹೊತ್ತುಕೊಂಡನು ಭಾರವನು ನಿನ್ನಾತನಪಶಯದ
ಸತ್ತನನ್ಯಾಯದಲಿ ನೀನದ
ಕತ್ತು ಮಾಡುವುದೇನು ಬಿಡು ನೆಲ
ಕೊತ್ತಿ ಕಳೆ ಚಿಂತೆಯನು ಚಿತ್ತದೊಳೆಂದನಾ ರಾಮ ||೧೦೩||
ನಿನಗೆ ಹೇಳುವುದೇನು ನಿನ್ನಯ
ನೆನಹು ತಾನಜ್ಞಾನಮೋಹಕ
ದನುಭವಕೆ ಬಲ್ಲಬಲೆಯೆಂಬುದು ತೋಱುತಿದೆ ಮನಕೆ
ತನುಪರಿಚ್ಯುತಿತನಕಲೀ ಮೈ
ದುನನ ಮುಂದಿಟ್ಟುಕೊಂಡುರು
ಮನದ ಮಱುಕವ ಬಿಟ್ಟುಕಳೆ ನೀನೆಂದನಾ ರಾಮ ||೧೦೪||
ಸಂತವಿಟ್ಟನು ಬಳಿಕ ಸೀತಾ
ಕಾಂತನಧಿಕ ವಿಲಾಪಶೋಕದ
ಕಾಂತೆಯನು ಕರುಣೋದಯದ ಮಾಧುರ್ಯವಚನದಲಿ
ಭ್ರಾಂತಿ ಬೇಡಿನ್ನೆಂದು ಶರಣನ
ಸಂತವಿಸಿ ಸೌರಂಭ ಮಿಗೆ ಭೂ
ಕಾಂತ ತೊರವೆಯ ರಾಯ ಹೊಕ್ಕನು ತನ್ನ ಪಾಳೆಯವ ||೧೦೫||
ಐವತ್ತೆರಡನೆಯ ಸಂಧಿ
ಸೂಚನೆ : ಪುರಕೆ ಹನುಮನ ಕಳುಹಿ ಬೆದಱಿದ
ಪುರಜನವ ಸಂತೈಸಿ ಶರಣನ
ಸುರವಿರೋಧಿಯ ಸಂಸ್ಕೃತಿಗೆ ನೇಮಿಸಿದನಾ ರಾಮ
ಪುರಜನವ ಸಂತೈಸಿ ಲಂಕಾ
ಪುರದರಸು ಸಿಂಹಾಸನಕೆ ಭೂ
ವರ ವಿಭೀಷಣ ದೇವನೆಂದೇ ಹೊಯ್ಸಿ ಡಂಗುರವ
ಇರಿಸಿ ಕಾವಲ ಕೇರಿಕೇರಿಗೆ
ಹರಿಚಮೂಪರೈದಿದನು ಬಂ
ಧುರದಶೋಕಾವನದ ದೇವಿಯ ಕಂಡನಾ ಹನುಮ ||೨||
ಸಾಯಕದ ಮುಖದಲ್ಲಿ ಬಳಿಕತಿ
ಕಾಯನನು ಮಾಯಾಪ್ರಬಲ ವ
ಜ್ರಾಯುಧಾಂತಕ ಮುಖ್ಯವೀರರನಸಮ ಸಮರದಲಿ
ವಾಯುಪಥಕೇಱಿಸಿದನಾ ರಘು
ರಾಯನನುಜನು ಮಿಕ್ಕ ಕಪಿಭಟ
ನಾಯಕರು ಕೊಂದರು ಸಮಸ್ತನಿಶಾಟನಾಯಕರ ||೫||
ಎನೆ ಮನೋದ್ಗಮವಾದಹರುಷಾ
ನನದ ಹೊಂಪುಳಿಯೋದ ಹೆಂಪಿನ
ತನುನಳಿದುಮ್ಮಳದಲಾನಂದಾಶ್ರುಪೂರದಲಿ
ಇನಿಯನಧಿಕ ಪರಾಕ್ರಮದ ಭಾ
ವನೆಯನಂಗೀಕರಿಸಿ ಹನುಮನ
ಮನಕೆ ಬಹ ಮಾತುಗಳ ನುಡಿದಳು ಮಧುರವಚನದಲಿ ||೬||
ಶ್ರೀಕರಿಸಿದುದು ಕೀರ್ತಿ ಸತ್ಕುಲ
ಶಾಖೆ ತಳಿತುದು ಸುಪ್ರತಾಪ ಮ
ಯೂಖಮಾಲೆಯ ಮೆಱೆಸಿದುದು ಕೇಳ್ ಹನುಮ ನಿನ್ನಿಂದ
ಆ ಖರಾರಿಗೆ ವಿಜಯ ವಿಭವವು
ಲೇಖವಾದುದುಯೆಂದು ಸಿಂಧುಸ
ಮೇಖಲಾಲಂಕೃತೆಯ ಸುತೆ ಕೊಂಡಾಡಿದಳು ಕಪಿಯ ||೭||
ಮಾತನಾಡಿಸಿ ಕೇದಡೆ ನಾ
ನೇತಱದಿನುತ್ತರವ ಕೊಡುವೆನು
ಮಾತನಾಡದದಡವನಿಪನನೇನೆಂದು ನುಡಿಸುವೆನು
ಓತಡೆನ್ನಯ ಭಾಗ್ಯವೊಲಿಯದ
ಡೇತಱವು ಬಳಿಕುಳಿವು ಹೊಗುವೆನು
ವೀತಿಹೋತ್ರನನೆಂದು ಕಂಬನಿದುಂಬಿದಳು ಸೀತೆ ||೧೧||
ವಿಹಿತವಲ್ಲೀ ನುಡಿ ನಿಮಗೆ ನಿ
ಸ್ಪೃಹತೆಯುಳ್ಳಡೆ ಹಗೆಯ ಕೊಲಲೈ
ತಹನೆ ನಿಮ್ಮಯ ಜೀವಿತೇಶನು ನಿಮ್ಮ ನೆನಹಿನಲಿ
ಇಹ ಮನವ ನಾ ಬಲ್ಲೆ ನೀವು
ಮ್ಮಹದ ಚಿಂತೆಯ ಬಿಸುಡಿ ನೇಮವೆ
ಮಹಿಷನೆಡೆಗೆನೆ ಬೀಳುಕೊಟ್ಟಳು ಪವನನಂದನನ||೧೨||
ಸಾಕು ಬಳಲಿದೆ ಕುಳ್ಳಿರೆಮಗಿ
ನ್ನೇಕೆ ಗತಕಾರ್ಯಪ್ರಸಂಗ
ವ್ಯಾಕುಲತೆಯೆಂದೀಕ್ಷಿಸಿದನಾಶರಣನಾನನವ
ಸಾಕದಿರು ಚಿಂತೆಯನು ನಡೆನೀ
ಕೈಕಸೆಯ ನಂದನಗೆ ಮಾಡು ನಿ
ರಾಕುಲತೆಯಿಂದೂರ್ಧ್ವದೇಹಿಕ ವಿಹಿತ ಸಂಸ್ಕೃತಿಯ ||೧೭||
ಬೀಳುಕೊಂಡಸುರೇಂದ್ರ ಬಂದು ವಿ
ಶಾಲ ವೈದಿಕ ವಿಹಿತದಿಂ ದಶ
ಮೌಳಿಯನು ಸಂಸ್ಕರಿಸಿದನು ಬಳಿಕಾಹಿತಾಗ್ನಿಯಲಿ
ಬಾಲಕಿಯರೊಱಗಿದರು ವಹ್ನಿ
ಜ್ವಾಲೆಯಲಿ ಮಿಕ್ಕಸುರರಗ್ಗದ
ಬಾಲೆಯರು ಸಹಗಮನದಲಿ ನೀಗಿದರು ನಿಜತನುವ ||೧೮||
ಹೊತ್ತಿಸಿದರಗ್ನಿಯನು ಬಳಿಕೆಂ
ಬತ್ತು ಯೋಜನದಗಲದಿಳೆಯಲಿ
ಸತ್ತ ಸುಭಟರ ಮೇಲೆ ತಳಿಗಳನೊಟ್ಟಿ ನೀರಸದ
ಇತ್ತರುದಕಾಂಜಲಿಯನನಿಬರ
ಪುತ್ರಮಿತ್ರಜ್ಞಾತಿಗಳು ಸ
ದ್ವೃತ್ತ ವೀರ ವಿಭೀಷಣಾಸುರನೊಡನೆ ಬಳಿಕೆಂದ ||೧೯||
ಐವತ್ತಮೂರನೆಯ ಸಂಧಿ
ಸೂಚನೆ : ಶರಣನನು ಪತಿಕರಿಸಿ ಲಂಕಾ
ಪುರದ ಪಟ್ಟವ ಕಟ್ಟಿ ಸೀತೆಯ
ವರಿಸಿದನು ರಘುನಾಥನಭವಾದಿಗಳುನಲಿದಾಡೆ
ಪರಿಪರಿಯ ರತ್ನಂಗಳನು ಪರಿ
ಪರಿಯ ದಿವ್ಯ ವಿಭೂಷಣಂಗಳ
ಪರಿಪರಿಯ ದಿವ್ಯಾಂಬರಾದಿ ಸಮಸ್ತವಸ್ತುಗಳ
ಕರಿ ವರೂಥ ಸುವಾಹನಂಗಳ
ತರುಣಿಯರ ಕಾಣಿಕೆಯನಿತ್ತನು
ಚರಣಕಾನತನಾಗಿ ರಘುಕುಲಸಾರ್ವಭೌಮಂಗೆ ||೧೦||
ಶಿರವ ಸಿರಿಹಸ್ತದಲಿ ಮೆಲ್ಲನೆ
ಬರಸೆಳೆದು ಬಿಗಿಯಪ್ಪಿ ನುಡಿದನು
ದರಹಸಿತ ಮುಖದಿಂದ ನಿಜಶರಣಂಗೆ ವಿನಯದಲಿ
ಧರೆಯ ವೈಭವ ಸಹಿತ ಲಂಕಾ
ಪುರವನಿತ್ತೆನು ನಿನಗೆ ನಿನ್ನುಪ
ಚರಣೆ ಬಂದುದು ಪುರಕೆ ಕಳುಹೀ ಕಾಣಿಕೆಯನೆಂದ ||೧೧||
ಅಱಿದೆವಾವ್ ನಿನ್ನಂತರಂಗದ
ಮಱೆಯ ಬಿನ್ನಹವೇಕೆ ಲೋಗರು
ಮುಱಿದ ಮಾನಸ್ಥಿತಿಗೆ ಜಾಂಬವ ರವಿಸುತಾದಿಗಳು
ಉಱುವುದೇ ನಿನಗೆನುತ ಮಾನಸ
ದೆಱಕವಾದರೆ ಕೊಂಡುಬಾ ನಾ
ವಱಿವೆವಂಗೀಕರಣದಿಂಗಿತವನು ಮಹೀಸುತೆಯ ||೧೪||
ಇಳಿದು ದಂಡಿಗೆಯನು ಸುಲಲನ
ವಳಿ ಸಹಿತ ಮೈಯಿಕ್ಕುತೈತಂ
ದಿಳೆಯ ತನುಜೆಯ ಲಲಿತ ಪಾದಪಯೋಜ ಯುಗಳದಲಿ
ಇಳುಹಿದನು ಮಸ್ತಕವ ಮಾಯಾ
ವಿಲಸದನುಪಮ ಲಕ್ಷ್ಮಿ ಭುವನಾ
ವಳಿಯ ಜನನಿ ಜನಾರ್ದನನವಲ್ಲಭೆ ನಮೋಯೆನುತ ||೧೮||
ಡಿಂಗರಿಗ ನಾ ನಿಮಗೆ ನಿಮುಮರ
ಸಂಗೆ ಕಿಂಕರನಾಗಿ ಕೃಪೆ ತ
ನ್ನಂಗದಲಿ ನೆಲೆಗೊಳಲಿ ಬಳಲದಿರೆಮ್ಮ ದೆಸೆಯಿಂದ
ಕಂಗಳಲಿ ಮುಂಗಾಣದಗ್ರಜ
ಹಿಂಗಿದನು ನಾವ್ ನಿಮ್ಮ ಪದಪ
ದ್ಮಂಗಳನು ಸಾಱಿದೆವು ಸಲಹುವುದಿನ್ನು ನೀವೆಂದ ||೧೯||
ಕರಸರೋಜದಿನಾ ನಿಜೇಶನ
ಚರಣ ಶರಣನ ಮಣಿಖಚಿತ ಬಂ
ಧುರ ಕಿರೀಟವನೆತ್ತಿ ಕೇಳೈ ಕಲಿವಿಭೀಷಣನೆ
ನರಪತಿಗೆ ನಿನ್ನಿಂದ ಜಯ ವಿ
ಸ್ತರಣವಾದುದು ನಿನ್ನವೊಲು ಭೃ
ತ್ಯರುಗಳಿನ್ನಾರುಂಟು ಜಗದೊಳಗೆಂದಳಿಂದುಮುಖಿ ||೨೧||
ದೇವಿ ನಿಮ್ಮನು ತರಲು ನಿಮ್ಮಯ
ಜೀವಿತೇಶನು ಕರೆದು ಬೆಸಸಿದ
ನಾವ ಸಂಶಯ ಬೇಡ ತಾ ಹೋಗೆಂದು ಕರುಣದಲಿ
ನೀವು ಬಿಜಯಂಗೈಯಬೇಕೆಂ
ದಾ ವಿಭೀಷಣ ಕೈಮುಗಿಯೆ ರಾ
ಜೀವಮುಖಿ ನೆನೆದೆದ್ದಳಾ ರಘುರಾಮಚಂದ್ರಮನ ||೨೩||
ಚಿತ್ತವಿಸಿದಿರೆ ದೇವಿಯರೆ ದೇ
ವೋತ್ತಮನಲಾ ದೇವರಲಿ ರಾ
ಜೋತ್ತಮನಲಾ ರಾಯರಲಿ ಪುರುಷರಲಿ ಜಗವಱಿಯೆ
ಉತ್ತಮನಲಾ ನಿಮ್ಮರಸ ನೀವ್
ಹೊತ್ತ ಭಾರವಮಂಗಲವು ನೃಪ
ಮತ್ತಕಾಶಿನಿ ನೀವ್ ಶುಭಕರವಾಗಬೇಕೆಂದ||೨೫||
ತರಿಸಿ ಮಣಿಮಡಿವರ್ಗದಲಿ ಕು
ಳ್ಳಿರಿಸಿ ಪರಿಮಳತೈಲದಲಿ ನೇ
ವರಿಸಿದರು ಸಿರಿಮುಡಿಯ ಮಜ್ಜನವಾಯ್ತು ಮಂಗಲದ
ಸುರುಚಿರಾಂಬರ ಗಂಧಮಾಲ್ಯಾ
ಭರಣದಿಂದೊಪ್ಪಿದಳು ಪೂರ್ವದ
ಸಿರಿಯ ಸಡಗರದಲಿ ಸರಾಗದೊಳಾ ಸರೋಜಮುಖಿ ||೨೯||
ಸಾರು ಸಾರ್ನಡೆಯೆಂಬ ಕಂಬಿಯ
ಭಾರಣೆಯಲಿ ವಿಭೀಷಣನು ಕೈ
ವಾರಿಗಳ ಗಡಣದಲಿ ಬಂದನು ಮುಂದೆ ದಂಡಿಗೆಯ
ಚಾರುಚಾಮರದಾತಪತ್ರದ
ಲೋರಣೆವ ಸೀಗುರಿಯ ಹೊದಱಿನ
ಲೂರ ಹೊಱವಂಟಳು ಮಹೀಸುತೆ ಗುಜ್ಜುಗುಱುಕಿನಲಿ ||೩೭||
ದೇವ ತಾನಪರಾಧಿ ಭೃತ್ಯನ
ಸೇವೆಯೈಸಿದು ಹಲವು ಪರಿಯಲಿ
ದೇವಿಯರು ತಾವೊಲ್ಲೆವೆಂದರು ವೈಭವೋಚಿತವ
ದೇವರಲಿ ಮುಳಿಸಾದರೊಮ್ಮಿಗೆ
ಸಾವೆನೆಂದೊಡಬಡಿಸಿ ತಂದೆನು
ಕಾವುದೆನ್ನಪರಾಧಕೃತ್ಯವ ಮಱೆದು ನೀವೆಂದ ||೫೭||
ಎಲೆ ವಿಭೀಷಣದೇವ ಲೋಕಾ
ವಳಿಯ ಮೆಚ್ಚಿಸಿ ನಡೆವುದೇ ಹೆಂ
ಗಳಿಗೆ ಲಕ್ಷಣ ಭುವನದಲಿ ಸುವ್ರತೆಯರವರೀಗ
ಹಳುವದಲಿ ಸೆಱೆವಿಡಿದು ರಕ್ಕಸ
ನೆಳೆದುತಂದಂದಿನಿತು ಶೋಭಾ
ಕಲಿತ ವೈಭವವಿದ್ದುದೇ ನೀ ಹೇಳು ತನಗೆಂದ ||೫೮||
ತಾಯೆ ನಿಮ್ಮರಸನು ನಿರೂಪಕ
ವಾಯಿತಿಳೆಗವತರಿಸಿ ರಾಯರ
ರಾಯನಲ್ಲಾ ಮೇಲೆ ನಿಮ್ಮಯ ಜೀವಿತೇಶನಲ
ಆ ಯಶಃಕರನಾಜ್ಞೆ ನಿಮಗೆಮ
ಗಾಯತದ ಫಲಸಿದ್ಧಿಯೆನೆ ಜಲ
ಜಾಯತೇಕ್ಷಣೆ ಧರೆಗೆ ಧುಮ್ಮಿಕ್ಕಿದಳು ದುಗುಡದಲಿ ||೬೨||
ಹೆಂಪಳಿದ ತನುಲತೆಯ ಹರುಷದ
ಸೊಂಪು ಸಡಿಲಿದ ಮುಖದ ನೋಟದ
ಗುಂಪುದೆಗೆದಕ್ಷಿಗಳ ಕೋಡಿಯಲೊಗುವ ಕಿಱುವನಿಯ
ಕಂಪಿಸುವ ಕರಣಂಗಳಂಜಿಕೆ
ಜೊಂಪಿಸುವ ಮಾನಸದ ಲಜ್ಜೆಯ
ಲಂಪಿನಂಬುಜವದನೆ ಮೈಯಿಕ್ಕಿದಳು ನಿಜಪತಿಗೆ ||೬೭||
ದೇವ ನೀನಲ್ಲದೆಯತಃಪರ
ವಾವುದನು ತಾ ಬಲ್ಲೆನಾದಡೆ
ದೇವತತಿಯಿದೆ ದಿವ್ಯ ಮುನಿಜನವಿದೆ ಸಮೀಪದಲಿ
ತಾವರೆಯ ನೈದಿಲಿನ ಸಖವಂ
ಶಾವಳಿಯ ನೋಪರಿದೆ ಪರೀಕ್ಷಿಸಿ
ಕಾವುದಲ್ಲಿಂ ಮೇಲೆನುತ ಬಿನ್ನೈಸಿದಳು ಸೀತೆ ||೭೯||
ಅರಸ ಚಿತ್ತೈಸೊಟ್ಟಿಸಗ್ನಿಯ
ನರಸಿಗೋಸುಗ ಹೊಗುವೆನುರಿಯನು
ಬೆರಸಿದರೆ ಬಿಡಿ ದೇವಿಯರನುರಿಯೊಳಗೆ ಬೆರಸದಿರೆ
ವರಿಸಿ ನಿಮ್ಮ ಪತಿವ್ರತೆಯನಿದು
ನಿರುತ ಸತಿಗನ್ಯಾಯವುಳ್ಳಡೆ
ಯಱಿವರಿನ ಮೊದಲಾದ ಹದಿನಾಲ್ವರುಗಳಿವರೆಂದ||೮೧||
ಅಂಜುವೆವು ನಾವ್ ನಿಮಗೆ ನಿಮ್ಮಭಿ
ರಂಜಕವ ನಾ ಬಲ್ಲೆನೀ ಸತಿ
ಯಂಜುವಡೆ ಬಿಡಲಂಜದಿರ್ದಡೆ ಹೊಗಲಿ ಹುತವಹನ
ಕಂಜಭವ ಭವ ಮುಖ್ಯ ಸಕಲ ಸ
ಮಂಜಸರು ಕೂಗಿದರೆ ಸರಿ ಮರ
ಳೆಂಜಲಿನ ಮಾತಿಲ್ಲ ನಮಗೆಂದರಸ ನೇಮಿಸಿದ ||೮೪||
ಕೇಳಿದೈ ಸೌಮಿತ್ರಿ ಮಿತ್ರಕು
ಲಾಳಿಗುಪಹತಿ ಬಾರದಂತಿರೆ
ಬೀಳುವೆನು ಶುಚಿಯಾದರೇಳುವೆನಗ್ನಿ ಕುಂಡದಲಿ
ಮೇಲೆ ಮಾತಿನ್ನೇಕೆ ವಂಶವಿ
ಶಾಲ ವೈಭವವೆನ್ನದೈಸಲೆ
ತೂಳಿಸಗ್ನಿಯನೊಟ್ಟಲಿಂಧನವೆಂದಳಿಂದುಮುಖಿ ||೮೫||
ಅಲ್ಲದಿರ್ದಡೆ ನಿಮ್ಮ ಸಿರಿಪದ
ಪಲ್ಲವವ ಕಾಣಿಸಲಿ ಮುಡಿದೀ
ಮಲ್ಲಿಗೆಯ ಹೂ ಕಂದಿದರೆ ಕುಂದಿದರೆ ಮೂಗುತಿಯ
ಸಲ್ಲಲಿತ ಬೆಳಗುಟ್ಟ ಸೀರೆಯ
ಕೆಲ್ಲೆ ಶಿಖಿ ಸೋಂಕಿದರೆ ನಿನ್ನವ
ಳಲ್ಲ ಜನಕಂಗಿಳೆಯಮಗಳಲ್ಲೆಂದಳಿಂದುಮುಖಿ ||೯೧||
ಅವಧರಿಸು ರಾಜೇಂದ್ರ ಕೇಳಿ
ನ್ನಿವಳ ನಿರ್ಮಳ ಶುಚಿತನವನೆಂ
ದವನಿಸುತೆ ಬಲಬಂದಳಭ್ರವ ಚುಂಬಿಸುವ ಶಿಖಿಯ
ಎವೆಯಲೀಶಂಗಜ ಸುರೇಶ್ವರ
ರವಿಗಳಿಗೆ ವಂದಿಸಿ ಧರಿತ್ರೀ
ಧವಗೆ ಕೈಮುಗಿದುರಿಯೊಳಗೆ ಧುಮ್ಮಿಕ್ಕಿದಳು ಸೀತೆ ||೯೨||
ತೆರೆಗಳಬ್ಬರವಳಿದ ಘನಸಾ
ಗರದವೊಲು ಲವ ಕೇಳು ಸುರ ವಾ
ನರ ಕದಂಬಕವಿರ್ದ್ದುದೈ ಚಿತ್ರಿಸಿದ ಪುತ್ಥಳಿಯ
ಇರವಿನಂತಿರೆ ಬಳಿಕ ಮೆಲ್ಲನೆ
ಹರನ ತೊಡೆಯಿಂದಿಳಿದು ನೇಮವ
ಧರಿಸಿ ರಾಮನ ಬಳಿಗೆ ಬಂದಳು ಗೌರಿ ಹರುಷದಲಿ ||೯೬||
ನರಚರಿತ್ರದ ನಾಟಕದ ವಿ
ಸ್ತರಣವತಿಲೇಸಾಯ್ತು ಸಾಕ್ಷಾ
ತ್ಪರಮಪುರುಷನು ನೀನು ಜಾನಕಿ ಜಗದ ಜನನಿಯಲ
ಕರೆದುಕೋ ಸಾಕೆಲ್ಲಿಯಪರಿಯಂ
ತರ ಪರೀಕ್ಷಿಪೆ ಪುಣ್ಯಚರಿತೆಯ
ಪರಮಪಾತಿವ್ರತೆಯನೆಂದರು ಗೌರಿದೇವಿಯರು ೯೭||
ಬೇಡಿಕೊಳಲೇಕಿನಿತು ನಿಮಗೆ ನಿ
ರೂಢಿ ಸತಿ ಶುಚಿಯಾದಡನಲನ
ಬೇಡಿಕೊಂಬುದು ಕಾಣಬಹುದಂತ್ಯದಲಿ ನೀವೆಮಗೆ
ಆಡಿದುದುಚಿತ ಸುಭಾಷಿತವು ನೆರೆ
ಕಾಡದಿರಿ ನೀವೆಮ್ಮನೆನೆ ಕೈ
ನೀಡಿ ಬಾರೌ ತಂಗಿ ಬಾಯೆಂದಳು ವಿದೇಹಜೆಯ||೯೮||
ತಾಯೆ ಬಂದೌ ಬಳಲಿದೌ ಹಿರಿ
ದಾಯಸವನನುಭವಿಸಿದೌಯೆಂ
ದಾಯತಾಕ್ಷಿಯನಪ್ಪಿಕೊಂಡರು ಗೌರಿದೇವಿಯರು
ತಾಯೆ ನೀ ನರಸತಿಯೆ ಲೋಕದ
ತಾಯಲಾಯೆನುತಕ್ಷಿಗಳ ಸಾ
ನೀಯವನು ಪಾಣಿಯಲಿ ನೇವರಿಸಿದಳು ನೇಹದಲಿ ||೧೦೧||
ಬಳಿಕಲಾನಂದೃಶ್ರುಜಲ ಹೆ
ಕ್ಕಳಿಸಿ ಮೈಯಿಕ್ಕಿದನು ಜನಕಂ
ಗಿಳಿದು ದಿವ್ಯವಿಮಾನವನು ದಶರಥಮಹೀಪಾಲ
ಜಲಜಬಾಂಧವವಂಶದವನಿಪ
ತಿಲಕ ಬಾ ರಘುರಾಜವಂಶಾ
ವಳಿಸರಿತ್ಪತಿ ಸೋಮ ಬಾಯೆಂದಪ್ಪಿದನು ಮಗನ ||೧೧೮||
ತಾಯೆ ಬಾರೌ ತಂಗಿ ನೀ ಹಿರಿ
ದಾಯಸವನನುಭವಿಸಿ ನಲುಗಿದೆ
ರಾಯರಂಗನೆಯರಲಿ ನೀನುತ್ತಮೆಯಲಾ ಜಗಕೆ
ವಾಯುಸಖನುದರದಲಿ ಹೊಕ್ಕಬು
ಜಾಯತಾಕ್ಷಿಯರುಂಟೆ ನಿನ್ನವೊ
ಲಾಯಿತೀಸಱ ಮೇಲೆ ಜಗದಲಿ ಕೀರ್ತಿ ನಮಗೆಂದ ||೧೨೨||
ಬಿಕ್ಕಿ ಬಿರಿಬಿರಿದಳುತ ಸತಿ ಮೈ
ಯಿಕ್ಕಲವನೀನಾಥ ಸೆಱಗಿನ
ಲುಕ್ಕುವಂಬಕಜಲವ ತೊಡೆದಪಸವ್ಯದಂಗದಲಿ
ಅಕ್ಕರಿನ ಮೋಹದಲಿ ಕಂಬನಿ
ಯಿಕ್ಕುತಿಬ್ಬರಕುಳ್ಳಿರಿಸಿ ಚರ
ಣಕ್ಕೆ ನಮಿಸಿದ ಲಕ್ಷ್ಮಣನ ತೆಗೆದಪ್ಪಿದನು ಭೂಪ ||೧೨೩||
ಎಡದ ತೊಡೆಯಲಿ ಕುಳ್ಳಿರಿಸಿ ಮೈ
ದಡವಿದನು ಲಕ್ಷ್ಮಣನ ಸೀತೆಯ
ಮುಡಿಯ ನೇವರಿಸಿದನು ಮುಂಡಾಡಿದನು ರಘುಪತಿಯ
ಬಿಡು ಮಗನೆ ಚಿತ್ತದ ಕಳಂಕನು
ಹಿಡಿಯದಿರು ಸಂಶಯವ ಸೀತೆಯ
ನಡವಳಿಗೆ ಸಂತುಷ್ಟಮಾನಸನಾದೆ ನಾನೆಂದ ||೧೨೪||
ಬಳಿಕುಮಾದೇವಿಯರು ಸೀತೆಯ
ಲಲಿತ ಹಸ್ತಾಂಬುಜವನಾ ರಘು
ಕುಲಶಿರೋಮಣಿಯಮಲಕರಕಮಲದೊಳು ಸಂಘಟಿಸಿ
ನಳಿನಭವಸತಿ ಸಹಿತ ಮುಕ್ತಾ
ಫಲದ ಸೇಸೆಯ ತಳಿದು ದೀಪಾ
ವಳಿಯ ಸುಳಿಸಿದರೊಲಿದು ಹೊಂದಳಿಗೆಗಳ ಹಂತಿಯಲಿ ||೧೨೫||
ದೇವ ನೀನೆಮಗಿತ್ತ ವರವದು
ದೇವತಾ ವರವಾಯ್ತು ನೀ ಮನು
ಜಾವತಾರದ ಸೊಗಸನಂಗೀಕರಿಸಿ ನಡೆದುದಕೆ
ನಾವು ಕೊಡುವೆವು ವರವ ಬೇಡೆಂ
ದಾ ವಿರಂಚಿ ಪುರಾರಿ ಪೌಲೋ
ಮೀವರರು ನುಡಿಯಲ್ಕೆ ಬಳಿಕಿಂತೆಂದನಾ ರಾಮ ||೧೨೭||
ಕೊಡುವ ವರವುಂಟಾದರೇಳಲಿ
ಮಡಿದ ವಾನರರೆಲ್ಲರವರಿ
ದ್ದೆಡೆಯಲಿರಲಕ್ಷಯ ಫಲಾಳಿ ಸುಧೋಪಮಾನ್ವಿತದ
ಮಡುಗಳಿರಲಿ ನಿಜಾಂಗನಾಜನ
ದೊಡನೆ ಸುಖದಿಂದಿಪ್ಪ ವರವನು
ಕೊಡುವುದೆನೆ ಕೊಟ್ಟರು ಹರಬ್ರಹ್ಮಾಮರೇಶ್ವರರು ||೧೨೮||
ಪರಮಪುಣ್ಯ ಪತಿವ್ರತೆಯ ಸತಿ
ಯರ ಶಿರೋಮಂಡನೆಯ ತೊರವೆಯ
ಪುರವರಾಧೀಶ್ವರ ನೃಕಂಠೀರವನು ಹರುಷದಲಿ
ವರಿಸಿದನು ಸುಗ್ರೀವ ಜಾಂಬವ
ಹರಿತನುಜ ನಳ ನೀಲ ಮೊದಲಾ
ದರಿಗೆ ನಲವಾಯ್ತಮಲ ದಂಪತಿಗಳ ನಿರೀಕ್ಷೆಯಲಿ ||೧೩೧||
ಕೃತಜ್ಞತೆ
ಎಚ್. ದೇವೀರಪ್ಪ, ಎಂ. ಎ. ,
ಪ್ರಧಾನ ಸಂಪಾದಕ ಹಾಗೂ ಡೈರೆಕ್ಟರ್
ಪ್ರಾಚ್ಯವಿದ್ಯಾ ಸಂಶೋಧನಾಲಯ
ಮೈಸೂರು ವಿಶ್ವವಿದ್ಯಾನಿಲಯ
ಸಂಪಾದಕ:
ಬಿ. ಎಸ್. ಸಣ್ಣಯ್ಯ, ಎಂ. ಎ.,
ಆಕ್ಟಿಂಗ್ ಅಸಿಸ್ಟೆಂಟ್ ಡೈರೆಕ್ಟರ್
ಪ್ರಾಚ್ಯವಿದ್ಯಾ ಸಂಶೋಧನಾಲಯ
ಮೈಸೂರು ವಿಶ್ವವಿದ್ಯಾನಿಲಯ
೧೯೫೯
ತೊರವೆ ರಾಮಾಯಣ ಗ್ರಂಥ ಎಲ್ಲಿ ಲಭ್ಯವಿದೆ
ಪ್ರತ್ಯುತ್ತರಅಳಿಸಿಪ್ರತಿಗಾಗಿ : ಪ್ರಾಚ್ಯವಿದ್ಯಾ ಸಂಶೋಧನಾಲಯ,
ಪ್ರತ್ಯುತ್ತರಅಳಿಸಿಮೈಸೂರು ವಿಶ್ವವಿದ್ಯಾಲಯ,
ಮೈಸೂರು :ಇಲ್ಲಿ ವಿಚಾರಿಸಿ
ನನಗೊಂದು ತೊಱವೆರಾಮಾಯಣದ ಪ್ರತಿ ಬೇಕು.
ಪ್ರತ್ಯುತ್ತರಅಳಿಸಿ