ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಸೆಪ್ಟೆಂಬರ್ 23, 2018

ಶಿವಕೋಟ್ಯಾಚಾರ್ಯರ ವಡ್ಡಾರಾಧನೆ

ಶಿವಕೋಟ್ಯಾಚಾರ್ಯರ ವಡ್ಡಾರಾಧನೆ

ಕರ್ತೃ  - ಕೃತಿ ವಿಚಾರ

ಕನ್ನಡ ಸಾಹಿತ್ಯದಲ್ಲಿ ವಡ್ಡಾರಾಧನೆ ಒಂದು ಅಪೂರ್ವ ಗದ್ಯಕೃತಿ. ಇದು ಹತ್ತೊಂಬತ್ತು ಕಥೆಗಳ ಗುಚ್ಛ. ಪ್ರತಿಯೊಂದು ಕಥೆಯ ಪ್ರಾರಂಭದಲ್ಲಿ ಪ್ರಾಕೃತನಿಬದ್ಧವಾದ ಒಂದು ಗಾಹೆ ( ಗಾಥೆ )ಯಿರುತ್ತದೆ. ಅದು ಕಥೆಯ ಸಾರಸೂಚಿಯಾಗಿರುತ್ತದೆ.ಕಥೆಯ ನಡುವೆಯೂ ಪ್ರಾಕೃತ - ಸಂಸ್ಕೃತ  - ಕನ್ನಡ ಭಾಷೆಯ ಪದ್ಯಗಳು ಬರುವುದೂ ಉಂಟು. ಒಟ್ಟಿನಲ್ಲಿ ಪದ್ಯ ಸಂಖ್ಯೆ ಕಡಮೆ. ಗದ್ಯವೇ ಉದ್ದಕ್ಕೂ ಹಾಸುಹೊಕ್ಕಾಗಿದೆ.ಗದ್ಯದ ಭಾಷೆ ಪೂರ್ವದ ಹಳಗನ್ನಡ ಮತ್ತು ಹಳಗನ್ನಡ ಮಿಶ್ರವಾಗಿ ಸಂಸ್ಕೃತವನ್ನೂ ಸಾಕಷ್ಟು ಬಳಸಿಕೊಂಡು ಕನ್ನಡದ ದೇಶೀಶಬ್ದಗಳ ಸೊಗಸಾದ ಬೆರಕೆಯಿಂದ ಚೆಲುವಾಗಿದೆ. ನಿರೂಪಣೆ ಮನಮುಟ್ಟುವಂತಿದೆ. ಅಡಕವಾದ ನೀತಿ - ತತ್ವ ವಿಚಾರವಂತೂ ಬಹಳ ಹಿರಿದು.

ಇದು ಪಂಪಭಾರತಕ್ಕಿಂತ (೯೪೧)ಹಿಂದಿನ ರಚನೆಯೆಂದೂ ಇದರ ರಚನಾಕಾಲಾವಧಿ ೮೯೮- ೯೪೧ ಎಂದೂ ಆದುದರಿಂದ ಈ ಗ್ರಂಥಕ್ಕೆ ೯೨೦ ಎಂಬ ಕಾಲವನ್ನು ಕೊಡಬಹುದೆಂದು ಶ್ರೀ ಡಿ. ಎಲ್. ಎನ್. ಹೇಳಿದ್ದಾರೆ.

“ವಡ್ಡಾರಾಧನೆ “ ಶಬ್ದದ ಮೂಲ “ವೃದ್ಧಾರಾಧನೆ” ಅಥವಾ ಬೃಹದಾರಾಧನೆ ಎಂದು ಅದರ ನಿಷ್ಪತ್ತಿಯಿಂದ ತಿಳಿಯಬಹುದು. ಶ್ರೀ ಗೋವಿಂದ ಪೈ ಯವರು “ ಬೃಹದಾರಾಧನ” ಎಂಬುದರ ಪ್ರಾಕೃತ ರೂಪ “ವೊಡ್ಡಾರಾಧಣ” ಎಂಬ ಶಬ್ದರೂಪವನ್ನು ಮಾನ್ಯಮಾಡಿಕೊಂಡಿದ್ದಾರೆ. ವೃದೂಧ+ಆರಾಧನೆ ಎನ್ನುವಾಗ ಅದರ ಶಬ್ದಾರ್ಥವನ್ನು ಲಕ್ಷಿಸಬೇಕು, “ವೃದ್ಧ” ಎಂಬುದಕ್ಕೆ ವಯಸ್ಸಾದವನು,ಪೂರ್ಣವಾಗಿ ಬೆಳೆದವನು, ಪೂರ್ವಕಾಲದವನು, ಗೌರವಾರ್ಹ, ಶ್ರೇಷ್ಠ, ಜ್ಞಾನಿ, ಯತಿ, ಮಹಾಪುರುಷ ಎಂಬ ಅರ್ಥಗಳಿವೆ. ಹಾಗೆಯೇ ಆರಾಧನೆ ಎಂಬುದಕ್ಕೆ ಸೇವೆ, ಪೂಜೆ, ಆದರಣೆ ಎಂಬಿವು ಸಾಮಾನ್ಯಾರ್ಥಗಳು. ಜೈನ ಸಿದ್ಧಾಂತದ ದೃಷ್ಟಿಯಿಂದ ಸಮ್ಯಗ್ದರ್ಶನ, ಸಮ್ಯಗ್ ಜ್ಞಾನ, ಸಮ್ಯಕ್ ಚಾರಿತ್ರ, ಸಮ್ಯಕ್ ತಪಸ್ಸು - ಈ ನಾಲ್ಕನ್ನು ಸಾಧಿಸುವುದೇ “ಆರಾಧನೆ” ವೃದ್ಧರು ( ಜೈನಯತಿಗಳು, ಜ್ಞಾನಿಗಳು, ಅಥವಾ ಮಹಾಪುರುಷರು) ಮಾಡಿದ ಸಫಲವಾದ ಆರಾಧನೆಗಳೇ ಈ ಗ್ರಂಥದ ಎಲ್ಲ ಕಥೆಗಳ ಸಾರವಾದುದರಿಂದ “ ವಡ್ಡಾರಾಧನೆ “ ಈ ಗ್ರಂಥಕ್ಕೆ ಒಪ್ಪುವ ಹೆಸರಾಗಿದೆ. ಇದನ್ನು ಕೃತಿಕರ್ತನೇ ಗ್ರಂಥ ಪೀಠಿಕೆಯಲ್ಲಿ ಸ್ಪಷ್ಟಪಡಿಸಿದ್ದಾನೆ.

“ ಶ್ರೀ ವೀರವರ್ಧಮಾನ ಭಟ್ಟಾರಕರ್ಗೆ ನಮಸ್ಕಾರಂಗೆಯ್ದು ದೇವೋಪಸರ್ಗ, ಮನುಷ್ಯೋಪಸರ್ಗ, ತಿರಿಕೋಪಸರ್ಗಮ-
ಚೇತನೋಪಸರ್ಗಮೆಂದಿಂತು ಚತುರ್ವಿಧಮಪ್ಪುಪಸರ್ಗಮುಮಂ ಪಸಿವುಂ, ನೀರೞ್ಕೆ ಮೊದಲಾಗೊಡೆಯ ಇಪ್ಪತ್ತೆರಡು ಪರೀಷಹಂಗಳುಮಂ ಸೈರಿಸಿ, ಅಯ್ದುಮಿಂದ್ರಿಯಂಗಳಂ ಗೆಲ್ದು ಬಾಹ್ಯಾಭ್ಯಂತರ ಪರಿಗ್ರಹಂಗಳಂ ತೊಱೆದು ದ್ವಾದಶವಿಧಮಪ್ಪ ತಪದೊಳ್ ನೆಗೞ್ದು ಪ್ರಾಯೋಪಗಮನದಿಂ ಸಂನ್ಯಸನಂಗೆಯ್ದು ಕರ್ಮಕ್ಷಯಮಂ ಗೆಯ್ದು ಮೋಕ್ಷಕ್ಕೆವೋದ ಮತ್ತಂ ಸರ್ವಾರ್ಥಸಿದ್ಧಿಯೊಳ್ ಪುಟ್ಟಿದ “ಮಹಾಪುರುಷರ್ಕಳ” ಕಥೆಗಳಂ ಪೇೞ್ವಲ್ಲಿ …., “

ಈ ಕಥಾನಾಯಕರು ಮಹಾಪುರುಷರು. ನಾಲ್ಕು ಬಗೆಯ ಉಪಸರ್ಗ(ತಪೋವಿಘ್ನ) ಗಳನ್ನು ಸಹಿಸಿದವರು. ಹಸಿವು, ಬಾಯಾರಿಕೆ ಮೊದಲಾದ ಇಪ್ಪತ್ತೆರಡು ಬಗೆಯಾಗಿರುವ ಪರೀಷಹ(ತೊಂದರೆ)ಗಳನ್ನು ಸೈರಿಸಿ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ಬಾಹ್ಯ ಮತ್ತು ಆಂತರಿಕ ಪರಿಗ್ರಹಗಳನ್ನು ತ್ಯಜಿಸಿದವರು. ಆರು ವಿಧದ ಬಾಹ್ಯತಪಸ್ಸನ್ನೂ ಆರು ಬಗೆಯ ಅಭ್ಯಂತರತಪಸ್ಸನ್ನೂ ಆಚರಿಸಿದವರು. ಇಂತಹ ತಪಸ್ಸಾಧನೆಯೇ ತಪಸ್ಸಿನ ಆರಾಧನೆ. ಜೈನ ಸಿದ್ಧಾಂತಗಳಲ್ಲಿ ದೃಢವಾದ ವಿಶ್ವಾಸ-ಅಭಿರುಚಿಗಳನ್ನಿಡುವುದು ದರ್ಶನಾರಾಧನೆ. ಸಮ್ಯಗ್ ಜ್ಞಾನವನ್ನುಪಡೆಯಲು ಮಾಡುವ ಸಾಧನೆ ಜ್ಞಾನಾರಾಧನೆ. ಪಂಚಮಹಾವ್ರತ, ಪಂಚಸಮಿತಿ, ತ್ರಿಗುಪ್ತಿಗಳನ್ನು ಭಾವಶುದ್ಧಿಯಿಂದ ನಡೆಸುವುದು ಚಾರಿತ್ರಾರಾಧನೆ.
ಈ ನಾಲ್ಕು ಬಗೆಯ ಆರಾಧನೆಗಳನ್ನೆಸಗಿದ ಮಹಾಪುರುಷರ ಕಥೆಗಳು ಇರುವುದರಿಂದ “ವಡ್ಡಾರಾಧನೆ “ ಎಂಬುದು ಸಾರ್ಥಕವಾದ ಹೆಸರಾಗಿದೆ.

ಈ ಕನ್ನಡ ವಡ್ಡಾರಾಧನೆಯ ಪ್ರತಿಯೊಂದು ಕಥೆಯ ಪ್ರಾರಂಭದಲ್ಲಿ ಬರುವ ಕಥಾಸಾರಸೂಚಿಯಾಗಿರುವ ಗಾಹೆಗಳು ಪ್ರಾಕೃತದಲ್ಲಿ “ಭಗವತೀ ಆರಾಧನಾ” ಅಥವಾ “ಮೂಲಾರಾಧನಾ” ಎಂಬ ಗ್ರಂಥದಲ್ಲಿ ಬರುವ “ಕವಚ” ಎಂಬ ಭಾಗದ
೧೫೩೯ರಿಂದ ೧೫೫೭ ರ ವರೆಗಿನ ಹತ್ತೊಂಬತ್ತು ಗಾಹೆಗಳೇ ಆಗಿವೆಯೆಂದು ತಿಳಿದುಬಂದಿದೆ.

ವಡ್ಡಾರಾಧನೆಯಲ್ಲಿ ಕವಿಯ ಕಥನಕೌಶಲ ಚೆನ್ನಾಗಿ ವ್ಯಕ್ತವಾಗಿದೆ.  ಸಹಜತೆ ಸರಳತೆಗಳೆರಡೂ ಎದ್ದುಕಾಣುವ ಇದರ ರಚನೆಯಲ್ಲಿ ವರ್ಣನೆಗಳು ಹೆಚ್ಚಾಗಿಲ್ಲ. ನೀತಿ- ತತ್ವ - ತಪಸ್ಸಾಧನೆ - ಸಮ್ಯಕ್ತ್ವಗಳನ್ನು ಪ್ರತಿಪಾದಿಸುವುದೇ ಕವಿಯ ಉದ್ದೇಶ. ಈ ಕಥೆಯ ಒಂದೆರಡು ವಾಕ್ಯಗಳನ್ನು ದಾಟುವಾಗಲೇ ನಾವು ಹಲವು ವ್ಯಕ್ತಿಗಳ ಪರಿಚಯಮಾಡಿಕೊಂಡು ಬೇಗಬೇಗನೆ ಮುಂದೆ ಸಾಗುತ್ತೇವೆ. ಅಲ್ಲಲ್ಲಿ ಬರುವ ಪಾತ್ರ ಸಂವಾದಗಳನ್ನು ನೋಡಿದಾಗ ಅವರು ನಮ್ಮ ಮುಂದೆಯೇ ಮಾತಾಡುತ್ತಿರುವರೋ ಎಂಬಂತೆ ನಾವು ಆ ಮಾತುಗಳಿಗೆ ಹತ್ತಿರದವರಾಗುತ್ತೇವೆ. ಕಥೆ ದೊಡ್ಡದಿರಲಿ ಚಿಕ್ಕದಿರಲಿ, ಅದರ ತಳಪಾಯ ಒಂದೇ ವಿಧ. ಕಥಾನಾಯಕನು ತಪೋಮಗ್ನನಾಗಿ ಪೂರ್ವ ವೈರಿಯೊಡ್ಡಿದ ಅಸಹ್ಯ ವೇದನೆಗಳನ್ನು ಶಾಂತ-
ಚಿತ್ತತೆಯಿಂದಲೇ ಅನುಭವಿಸಿ, ಸದೂಗತಿ ಪಡೆಯುವುದು. ದೊಡ್ಡಕಥೆಯಲ್ಲಿ ಹಲವು ಪೂರ್ವಜನ್ಮಗಳ ಸ್ವಾರಸ್ಯಪೂರ್ಣ ಕಥೆಗಳೂ ಹೇಣೆದುಕೊಂಡಿರುತ್ತವೆ.

ಪೀಠಿಕೆ

ನಮಃ  ಶ್ರೀ ವರ್ಧಮಾನಾಯ ನಿರ್ಧೂತ ಕಲಿಲಾತ್ಮನೇ
ಸಾಲೋಕಾನಾಂ ತ್ರಿಲೋಕಾನಾಂ ಯದ್ವಿದ್ಯಾ ದರಪಣಾಯತೇ ||

ಶ್ರೀ ವರ್ಧಮಾನ ಭಟ್ಟಾರಕರ್ಗೆ ನಮಸ್ಕಾರಂಗೆಯ್ದು ದೇವೋಪಸರ್ಗ ಮನುಷ್ಯೋಪಸರ್ಗ ತಿರಿಕೋಪಸರ್ಗಮಚೇತನೋಪಸರ್ಗಮೆಂದಿಂತು ಚತುರ್ವಿಧಮಪ್ಪುಪಸರ್ಗಮುಮಂ ಪಸಿವು ನೀರೞ್ಕೆ ಮೊದಲಾಗೊಡೆಯ ಇಪ್ಪತ್ತೆರಡು ಪರೀಷಹಂಗಳುಮಂ ಸೈರಿಸಿ ಅಯ್ದುಮಿಂದ್ರಿಯಂಗಳಂ ಗೆಲ್ದು ಬಾಹ್ಯಾಭ್ಯಂತರ ಪರಿಗ್ರಹಂಗಳಂ ತೊಱೆದು ದ್ವಾದಶವಿಧಮಪ್ಪ ತಪದೊಳ್ ನೆಗೞ್ದು ಪ್ರಾಯೋಪಗಮನದಿಂ ಸಂನ್ಯಸನಂಗೆಯ್ದು ಕರ್ಮಕ್ಷಯಂಗೆಯ್ದು ಮೋಕ್ಷಕ್ಕೆವೋದ ಮತ್ತಂ ಸರ್ವಾರ್ಥಸಿದ್ಧಿಯೊಳ್ ಪುಟ್ಟಿದ ಮಹಾಪುರ್ಕಳ ಕಥೆಗಳಂ ಪೇೞ್ವಲ್ಲಿ ಮುನ್ನಂ ಸುಕುಮಾರಸ್ವಾಮಿಯ ಕಥೆಯಂ ಪೇೞ್ವೆಂ.

೩  ಗಜಕುಮಾರನ ಕಥೆ.

ಗಾಹೆ :- ಭೂಮೀಎ ಸಮಂ ಖೀಲಾಬಾ ಇದ ದೇಹೋವಿ ಅಲ್ಲಚಮ್ಮಂ ವ
           ಭಗವಂ ಪಿ ಗಜಕುಮಾರೋ ಪಡಿವಣ್ಣೋ ಉತ್ತಮಂ ಅಟ್ಠಂ ||

[ಭೂಮೀ ಎ ಸಮಂ= ನೆಲದೊಳೋರಂತಾಗೆ ಮಲರ್ಚಿಕ್ಕಿಯುರದಿಂ ತಗುಳ್ದು ನಾಭಿವರೆಗಂ ಬಸಿಱಂ ಪೋೞ್ದು, ಅಲ್ಲಚಮ್ಮಂ =ಪಂದೊವಲಂ ತೆಗೆದು, ಖೀಲಾಭಾಇದದೇಹೋವಿ=ಕಾಯ್ದ ಕರ್ಬೊನ್ನ ನಿಡಿಯುವುಂ ತೋರಮುಮಪ್ಪ ಕೀಲ್ಗಳಿಂದಂ ಮೆಯ್ಯೆಲ್ಲಮುಂ ನಿರಂತರಮುರ್ಚಿ ಪೋಗಿ ನೆಲನಂ ತಾಪಿನಂ ಕೀಲಿಱಿಯೆ ಪಟ್ಟ ಮೆಯ್ಯನೊಡೆಯನಾಗಿಯುಂ, ಭಗವಂ=ಪಿರಿದಪ್ಪ ಪೆರ್ಮೆಯನೊಡೆಯಂ, ಗಜಕುಮಾರೋಪಿ= ಗಜಕುಮಾರನುಂ, ಪಡಿವಣ್ಣೋ =ಪೊರ್ದಿದೊಂ, ಉತ್ತಮ ಅಟ್ಠಂ= ಮಿಕ್ಕ ದರ್ಶನ ಜ್ಞಾನ ಚಾರಿತ್ರಂಗಳಾರಾಧನೆಯಂ, ]

ಅದೆಂತೆಂದೊಡೆ : ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಸುರಟಮೆಂಬುದು ನಾಡಲ್ಲಿ ದ್ವಾರಾವತಿಯೆಂಬುದು ಪೊೞಲನದನಾಳ್ವೊಂ ವಿಷ್ಣು ಅರ್ಧಚಕ್ರಿಯಾತನ ತಂದೆ ವಸುದೇವಸ್ವಾಮಿಯೆಂಬೊನಾ ವಸುದೇವಸ್ವಾಮಿಯರಸಿ ಗಾಂಧರ್ವದತ್ತೆಯೆಂಬೊಳಾಯಿರ್ವಗ್ಗಂ ಗಜಕುಮಾರನೆಂಬೊಂ ಮಗನಪ್ಪೊನಂತವರ್ಗಳಿಷ್ಟವಿಷಯ ಕಾಮಭೋಗಂ-
ಗಳನನುಭವಿಸುತ್ತಂ ಕಾಲಂ ಸಲೆ ಮತ್ತಿತ್ತ ಸೂರದತ್ತಮೆಂಬುದು ನಾಡಲ್ಲಿ ಪೌದನಪುರಮೆಂಬುದು ಪೊೞಲದನಾಳ್ವೊನಪ-
ರಾಜಿತನೆಂಬೊನರಸನಾದಮಾನುಂ ಪ್ರಚಂಡ ಬಳಗರ್ವಿತನಾರುಮನುಱದೊಂ ವಿಷ್ಣುಗಂ ಬೆಸಕಯ್ಯನೊಂದು ದಿವಸಂ ವಿಷ್ಣು ಪೊೞಲೊಳ್ ಗೋಸಣೆಯಂ ತೊೞಲ್ಚಿದನಾವನೊರ್ವಂ ಪೌದನಪುರಾಧಿಪತಿಯಪ್ಪಪರಾಜಿತನಂ ಸಂಗ್ರಾಮದೊಳ್ ಕಾದಿ ಗೆಲ್ದು ಪಿಡಿಕೊಂಡು ಬರ್ಕುಮಾತಂಗೆಯಾತನ ಬೇಡುವುದೆಲ್ಲಮಂ ಕುಡುವೆನೆಂದು ತೊೞಲ್ವ ಗೋಸಣೆಯಂ ಗಜಕುಮಾರಂ ಪಿಡಿದೊಡಾ ಮಾತನರಸಂ ಕೇಳ್ದು ಗಜಕುಮಾರನಂ ಕರೆಯಿಸಿಯಾತನೊಡನೆ ಚಾತುರ್ದಂತಬಳಮಂ ಕೂಡಿಯಟ್ಟಿದೊಡಾತನುಂ ಪೋಗಿಯಪರಾಜಿತನೊಡನೆ ಮಹಾಯುದ್ಧಂಗೆಯ್ದು ಗೆಲ್ದು ಪೆಡಂಗಯ್ಯುಡಿಯೆ ಕಟ್ಟಿ ಗಜತುರಗ ವಸ್ತುವಾಹನ ಸಹಿತಂ ತಂದು ವಿಷ್ಣಗೊಪ್ಪಿಸಿದೊಡಾತನುಮೊಸೆದು ನೀಂ ಮೆಚ್ಚಿದುದಂ ಬೇಡಿಕೊಳ್ಳೆನೆ ಪೆಱತೇನುಮನೊಲ್ಲೆನ್ ನಿಮ್ಮ ಪ್ರಸಾದದಿಂದೆನಗೆಲ್ಲಮುಂಟು ಒಂದಂ ಬೇೞ್ಪೆಂ ನಿಮ್ಮಂ-
ಪುರಮುೞಿಯೆ ಪೊೞಲೊಳಗೆನ್ನ ಮೆಚ್ಚಿದ ಪೆಂಡಿರನೆ ಕೊಂಡೆನ್ನಿಚ್ಚೆಯೊಳ್ ಮೆಚ್ಚಿದಂತೆ ಬಾೞ್ವೆನೀ ದಾಯಮಂ ಬೇಡಿರ್ದನಿದನೆನಗೆ ದಯೆಗೆಯ್ದು ಸಲಿಸುವುದೆಂದೊಡರ ಸನುಮಂತೆಗೆಯ್ಯೆಂದು ಗಜಕುಮಾರಂಗೆ ಬೇಡಿದುದಂ ಕೊಟ್ಟಂ ಗಜಕುಮಾರನುಂ ತನ್ನ ಬೇಡಿದ ವರಮಂ ಪೆತ್ತು ಪರದರ ಪಾರ್ವರೊಕ್ಕಲಿಗರ ಸಾಮಂತರ ಪೊೞಲೊಳಗುಳ್ಳ ಒಳ್ವೆಂಡಿರೆಲ್ಲರಂ ಕಣ್ಗಂ ಮನಕ್ಕಂ ಮೆಚ್ಚಿದವರೊಳ್ ತನ್ನಿಚ್ಛೆಯಿಂದಂ ಮೊಱೆದು ಮೊಟ್ಟಯಿಸಿಯುಯ್ದು ಬಾೞುತ್ತಿರೆ ಮತ್ತಮಾ ಪೊೞಲೊಳ್ ಪಂಗುಳನೆಂಬ ಸುವರ್ಣಕಾಱನ ಹೆಂಡತಿ ವಸುಂದರಿಯೆಂಬೊಳತ್ಯಂತ ರೂಪ ಲಾವಣ್ಯಾ ಸೌಭಾಗ್ಯ ಕಾಂತಿ ಹಾವ ಭಾವ ವಿಲಾಸ ವಿಭ್ರಮಂಗಳನೊಡೆಯಳಂ ಕಂಡು ಗಜಕುಮಾರನಾಕೆಗಾಟಿಸಿ ತನ್ನ ಮನೆಯೊಳಿಟ್ಟಾಕೆಗಾಸಕ್ತನಾಗಿ ಬಾೞುತ್ತಿರ್ಕುಮಾ ಏರಣಿಗನುಂ ಪೆಂಡತಿಯ ವಿಯೋಗದೊಳ್ ಸಂತಾಪದಿಂದಮಿರುಳುಂ
ಪಗಲುಮನವರತಂ ಬೇಯುತ್ತಮಸಮರ್ಥನಪ್ಪುದಱಿಂದಂ ಮನದೊಳ್ ಗಜಕುಮಾರಂಗೆ ಮುಳಿಯುತ್ತಿರ್ಕುಂ ಇಂತು ಪಲಕಾಲಂ ಸಲೆ ಮತ್ತೊಂದು ದಿವಸಮರಿನೃಪನೇಮಿ ಭಟ್ಟಾರರ ಸಮವಸರಣಂ ವಿಹಾರಿಸುತ್ತಂ ದ್ವಾರಾವತಿಗೆ ವಂದೊಡೆವಿಷ್ಣುವಿನೊಡನೆ ಗಜಕುಮಾರಂ ತ್ರಿಭುವನಪರಮೇಶ್ವರನಲ್ಲಿಗೆ ವೋಗಿ ವಂದಿಸಿ ಪೂಜಿಸಿರ್ದು ಭಟಾರರ್ ಧರ್ಮಮಂ ಪೇೞ್ವಲ್ಲಿಯಗಮ್ಯಾಗಮನಂಗೆಯ್ವೊಡಂ ಪೆಱರ ಸಜ್ಜನಂಗಳೊಳ್ ಬರ್ದೊಡಮೆಯ್ದುವ ದುರ್ಗತಿಗಳೊಳಪ್ಪ ದುಃಖಗಳಂ ಪೇೞೆ ಕೇಳ್ದು ನಾನ್ಯಥಾ ಜನಭಾಷಿತಮೆಂದು ನಂಬಿ ಭೋಗಂಗಳ್ಗೆ ಪೇಸಿ ವೈರಾಗ್ಯಮಾಗಿ ಎಲ್ಲಮಂ ತೊಱೆದರಿಷ್ಟನೇಮಿಭಟ್ಟಾರರ ಪಕ್ಕದೆ ತಪಂಬಟ್ಟುಗ್ರೋಗ್ರತಪಶ್ಚರಣಂಗೆಯ್ದು ಪನ್ನೆರಡು ವರ್ಷಂ ಪೋದೊಡೆ ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹರಿಸುತ್ತಂ ಮತ್ತಮಾ ದ್ವಾರಾವತಿಗೆ ವಂದು ರೇವತೋದ್ಯಾನವನದೊಳ್ ರಾತ್ತಿ ಪ್ರತಿಮೆನಿಂದೊನಂ ಸ್ವಜನ ಪರಿಜನ ಬಂಧುವರ್ಗಮುಂ ಶ್ರಾವಕರ್ಕ್ಕಳುಂ ಬಂದರ್ಚಿಸಿ ಪೊಡೆವಂಟು ಪೋಪರಂ ಪಂಗುಳನೆಂಬ ಸುವರ್ಣಕಾರಕಂ ಕಂಡು ಬೆಸಗೊಂಡು ಭಟಾರರ ಬರವಂ ಕೇಳ್ದಱಿದು ಪಗೆವನನಿಱಿಯಲ್ಪತ್ತೆನೆಂದು ರಾಗಿಸಿ ಪಲವು ನಿಡಿಯವುಂ ತೋರಮುಮಪ್ಪ ಕರ್ಬೊನ್ನ ಕೀಲ್ಗಳಂ ಕೊಂಡು ಬಂದು ಕ್ಷಮಾಂಗನಾಲಿಂಗಿತನಪ್ಪ ಮಹಾಮುನಿಯಂ ಮಲರ್ಚಿ ಪಟ್ಟಿರಿಸಿಯುರಃಸ್ಥಲಮಂ ನಾಭಿವರೆಗಂ ವಿದಾರಿಸಿ ಪಂದೊವಲ್ ಪೊರತಾಪಿನೆಗಂ ಸಮಂತವಯವ ಪ್ರದೇಶಂಗಳೊಳ್ ಕಾಯ್ದ ಕರ್ಬೊನ್ನ ಕೀಲ್ಗಳಂ ನೆಲನಂ ತಾಪಿನಮುರ್ಚಿ ಪೋಗಿಱಿದೊಡೆ ಕ್ಷಮೆಯಂ ಭಾವಿಸಿ ಧರ್ಮಧ್ಯಾನ ಶುಕ್ಲಧ್ಯಾನಂಗಳಂ ಜಾನಿಸಿ ರತ್ನತ್ರಯಮಂ ಸಾಧಿಸಿ ಸಮಾಧಿಮರಣದಿಂ ಮುಡಿಪಿ ದೇವಲೋಕಮೆಂಬ ಪ್ರಾಸಾದಕ್ಕೆ ಕಳಸಮಾಗುತ್ತಿರ್ದ ಸರ್ವಾರ್ಥಸಿದ್ಧಿಯೆಂಬ ಸ್ವರ್ಗದೊಳ್ ಮೂವತ್ತುಮೂಱು ಸಾಗರೋಪಮಾಯುಷ್ಯಸ್ಥಿತಿಯನೊಡೆಯನೇಕಹಸ್ತಪ್ರಮಾಣನುಂ ಪುಂಡರೀಕವರ್ಣಂಗಳನೊಡೆ-
ಯೊನಹಮಿಂದ್ರದೇವನಾಗಿ ಪುಟ್ಟಿದೊಂ ಮತ್ತಂ ಪೆಱರುಮಾರಾಧಕರಪ್ಪವರ್ಗಳ್ ಗಜಕುಮಾರನ ಮನುಷ್ಯೋಪಸರ್ಗದೊಳಾದ ವೇದನೆಯಂ ಮನದೊಳ್ ಭಾವಿಸುತ್ತಂ ಪಸಿವು ನೀರೞ್ಕೆ ದಾಹ ವಾತಂ ಸೂಲೆ ಮೊದಲಾಗೊಡೆಯ ವೇದನೆಗಳಂ ಸೈರಿಸಿ ದರ್ಶನ ಜ್ಞಾನ ಚಾರಿತ್ರಂಗಳಂ ಸಾಧಿಸಿ ಸಮಾಧಿಮರಣದಿಂದಂ ಮುಡಿಪಿ ಸ್ವರ್ಗಾಪವರ್ಗಸುಖಂಗಳನೆಯ್ದುಗೆ.

೫.  ಅಣ್ಣಿಕಾಪುತ್ರನ ಕಥೆ

ಗಾಹೆ || ಣಾವಾ ಎ ಣಿಬ್ಬುಡಾಏ ಗಂಗಾಮಚ್ಝೇ ಅಮೂಢಮಾಣಮದೀ
          ಆರಾಧಣಂ ಪವಣ್ಣೋ ಕಾಲಗದೋ ಏಣಿಯಾ ಪುತ್ರೋ ||

[ ಣಾವಾ ಎ= ನೃವೆ, ಣಿಬ್ಬುಡಾ ಏ= ಮುೞುಗಿದುದಾದೊಡೆ, ಗಂಗಾಮಜ್ಝೇ =ಗಂಗಾಮಹಾನದಿಯ ನಡುವೆ, ಅಮೂಢಮಾಣಮದೀ =ಮೋಹಿಸದ ಬುದ್ಧಿಯನೊಡೆಯನಾಗಿ,  ಆರಾಧಣಂ= ನಿಜಾತ್ಮೃರಾಧನೆಯಂ, ಪವಣ್ಣೋ= ಲೇಸಾಗಿ ಪೊರ್ದಿದೊಂ, ಕಾಲಗದೊ= ಕಾಲಂಗೆಯ್ದೊನಾಗಿ, ಏಣಿಯಾಪುತ್ತೋ= ಅಣ್ಣಿಕೆಯ ಮಗಂ]

ಅದೆಂತೆಂದೊಡೆ  : ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಮಗಧೆಯೆಂಬುದು ನಾಡಲ್ಲಿ ಉತ್ತರಮಧುರೆಯೆಂಬುದು ಪೊೞಲದನಾಳ್ವೊಂ ಪ್ರಜಾಪಾಳನೆಂಬೊನರಸನಾತನ ಮಹಾದೇವಿ ಸುಪ್ರಭೆಯೆಂಬೊಳಂತವರ್ಗ್ಗಳಿಷ್ಟವಿಷಯ ಕಾಮಭೋಗಂಗಳನನುಭವಿಸುತ್ತಿರೆ ಮತ್ತಾ ಪೊೞಲೊಳ್ ಸಾರ್ಥಾಧಿಪತಿ ಧನದತ್ತನೆಂಬೊಂ ಪರದಂ ಧನಕನಕಸಮೃದ್ಧನಾತನ ಭಾರ್ಯೆ ಧನಶ್ರೀಯೆಂಬೊಳಾಯಿರ್ವರ್ಗಂ ಮಗಂ ಧನದೇವನೆಂಬೊನಂತವರ್ಗಳ್ಗೆ ಸುಖದಿಂ ಕಾಲಂ ಸಲೆ ಮತ್ತೊಂದು ದಿವಸಂ ಧನದೇವಂ ಪರದಿಂಗೆಂದು ಪಿರಿದುಂ ಸಾರಮಪ್ಪ ಭಂಡಮಂ ತೀವಿಕೊಂಡು ಪಿರಿದುಂ ಸಾರ್ಥಂ ಬೆರಸು ದಕ್ಷಿಣಮಧುರೆಗೆವೋದೊಡಾ ಪೊೞಲ ರಾಜಶ್ರೇಷ್ಠಿ ತಿಳಕಶ್ರೇಷ್ಠಿಯೆಂಬೊನಾತನ  ಭಾರ್ಯೆ ನಂದೆಯೆಂ-
ಬೊಳಾಯಿರ್ವರ್ಗಂ ಮಕ್ಕಳ್ ಪದ್ಮಾವತಿ ಸುಮತಿ ಗುಣಮತಿಯೆಂದಿವರ್ ಮೊದಲಾಗೊಡೆಯ ಎಣ್ಬರ್ ಪೆಣ್ಗೂಸುಗಳಾದೊಡವರೊಳಗೆಲ್ಲರಿಂ ಕಿಱಿಯಳಣ್ಣಿಕೆಯೆಂಬೊಳಾಕೆಯಂ ಧನದತ್ತ ಮಗನಪ್ಪ ಧನದೇವನಂ ರೂಪಲಾವಣ್ಯ ಸೌಭಾಗ್ಯ ಕಾಂತಿಗುಣಗಳಿಂ ಕೂಡಿದೊನಂ ತಿಳಕಶ್ರೇಷ್ಠಿಯುಂ ನಂದೆಯುಂ ಕಂಡಾತಂಗೆ ಬಯಸಿ ಅಣ್ಣಿಕೆಯೆಂಬ ಕೂಸಂ ಕೊಟ್ಟೊಡೆ ಕೆಲವು ದಿವಸಮಾ ಪೊೞಲೊಳಿರ್ದು ತಮ್ಮ ಕೊಂಡು ಪೋದ ಭಂಡಮಂ ಮಾಱೆ ಪೆಱದಂ ತಮ್ಮ ನಾೞ್ಕಪೂರ್ವಮಪ್ಪ ಭಂಡಮಂ ತೀವಿಕೊಂಡು ತಮ್ಮ ಪೊೞಲ್ಗುತ್ತರ ಮಧುರೆಗೆ ಬಂದಿರ್ದ್ದರನ್ನೆಗಮಣ್ಣಿಕೆಗೆ ಗರ್ಭಮಾಗಿ ಮಗಂ ಪುಟ್ಟಿದೊಡೆ ಧನದೇವನ ತಾಯುಂ ತಂದೆಯುಂ ನೆಂಟರುಮೆಲ್ಲಂ ನೆರೆದಣ್ಣಿಕೆಯ ಮಗನೆಂದಾತಂಗಣ್ಣಿಕಾಪುತ್ರನೆಂದು ಪೆಸರನಿಟ್ಟೊಡಾತಂ ಕ್ರಮಕ್ರಮದಿಂ ಸುಖದಿಂ ಬಳೆದು ನವಯೌವನನಾಗಿರ್ಪನ್ನೆಗಂ ಇತ್ತ ದಮಸೂರಿಗಳೆಂಬವರಧಿಜ್ಞಾನಿಗಳಪ್ಪ ಆಚಾರ್ಯರ್ ಪಿರಿದುಂ ರಿಸಿಸಮುದಾಯಂ ಬೆರಸು ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಾ ಬರ್ಪೊರುತ್ತರ ಮಧುರೆಗೆ ಬಂದು ಬಹಿರುದ್ಯಾನವನದೊರ್ದ್ದರನಣ್ಣಿಕಾಪುತ್ರಂ ಪೋಗಿ ವಂದಿಸಿ ಧರ್ಮಮಂ ಕೇಳ್ದು ಸಮ್ಯಕ್ತ್ವಪೂರ್ವಕಂ ಶ್ರಾವಕವ್ರತಂಗಳೆಲ್ಲಮಂ ಕೈಕೊಂಡು ತದನಂತರಮೆ ಭಟರಾ ಎನಗಾಯುಷ್ಯವೆನಿತೆಂದು ತನ್ನಾಯುಷ್ಯ ಪ್ರಮಾಣಮಂ ಬೆಸಗೊಂಡೊಡೆ ಭಟಾರರುಂ ಕಿಱಿದೆ ನಿನಗಾಯುಷ್ಯಮೆಂದು ಪೇೞ್ದೊಡೆ ವೈರಾಗ್ಯಪರಾಯಣನಾಗಿ ತಾಯುಂ ತಂದೆಯುಮಂ ನಂಟರುಮಂ ಬಿಡಿಸಿ ನಿಶ್ಶಲ್ಯಂಗೆಯ್ದು ದಮಸೂರಿಗಳೆಂಬಾಚಾರ್ಯರ ಪಕ್ಕದೆ ತಪಂಬಟ್ಟು ದ್ವಾದಶಾಂಗ ಚತುರೂದಶಪೂರ್ವಮಪ್ಪಾಗಮಮೆಲ್ಲಮಂ ಕಲ್ತು ಗುರುಗಳನೊಡಂಬಡಿಸಿ ಏಕವಿಹಾರಿಯಾಗಿ ಗ್ರಾಮೇಕರಾತ್ರಂ ನಗರೇ ಪಂಚರಾತ್ರಂ ಅಟವ್ಯಾಂ ದಶರಾತ್ರಮೆಂಬೀನ್ಯಾಯದಿಂ ಗ್ರಾಮನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ತೀರ್ಥಂಗಳೆಲ್ಲಮಂ ವಂದಿಸಲ್ಕೆಂದು ಗಂಗಾಮಹಾನದಿಯಂ ಪಾಯ್ದು ಪೋಪ ಬಗೆಯಿಂದಂ ನಾವೆಯನೇಱಿದೊಡದೊಂದುತ್ಪಾತವಾತದಿಂದಂ ಗಂಗಾಮಹಾನದಿಯ ನಡುವೆ ಮಡುವಿನೊಳ್ ಭಯಂಕರಮಾಗುತ್ತಿರ್ದ್ದ ತೆರೆಯನೊಡನೆಯದಱೊಳ್ ಮುೞುಗಿದೊಡಾ ಅಣ್ಣಿಕಾಪುತ್ರನೆಂಬ ರಿಸಿ  ಪಿರಿದಪ್ಪ ಮಹಾತ್ಮ್ಯಮಂ ಮೋಹಿಸದ ಬುದ್ಧಿಯನೊಡೆಯೊಂ ಚತುರ್ವಿಧಮಪ್ಪಾಹಾರಕ್ಕಂ ಶರೀರಕ್ಕಂ ಯಾವಜ್ಜೀವ ನಿವೃತ್ತಿಗೆಯ್ದು ಕಾರ್ಯೋತ್ಸರ್ಗಂ ನಿಂದು ಧರ್ಮಧ್ಯಾನ ಶುಕ್ಲಧ್ಯಾನಂಗಳಂ ಜಾನಿಸಿ ಸಕಳಕರ್ಮಂಗಳಂ ಕಿಡಿಸಿ ಅಂತರ್ಗತ ಕೇವಲಿಯಾಗಿ ಮೋಕ್ಷಕ್ಕೆವೋದರ್ ಮತ್ತಂ ಪೆಱರಾರಾಧಕರಪ್ಪವರ್ಗಳೆಲ್ಲಮಣ್ಣಿಕಾಪುತ್ರನೆಂಬ ರಿಸಿಯಂ ಮನದೊಳಿಟ್ಟು ಅಚೇತನೋಪಸರ್ಗಂ ಮೊದಲಾಗೊಡೆಯ ಉಪಸರ್ಗಂಗಳುಮಂ ನೀರೞ್ಕೆ ಮೊದಲಾಗೊಡೆಯ ಪರೀಷಹಂಗಳುಮಂ ಸೈರಿಸಿ ದರ್ಶನ ಜ್ಞಾನ ಚಾರಿತ್ರಂಗಳಂ ಸಾಧಿಸಿ ಸ್ವರ್ಗಾಪವರ್ಗದಸುಖಂಗಳಂ ಭವ್ಯರಕಳೆಯ್ದುಗೆ.

೯.  ಸಿರಿದಿಣ್ಣನೆಂಬ ಭಟಾರರ ಕಥೆ

ಗಾಹೆ|| ಸೀದೇಣ ಪುವ್ವವೇರಿಯ ದೇವೇಣ ವಿಗುವ್ವಿದೇಣ ಘೋರೇಣ
          ಸಂಸಿತ್ತೋ ಸಿರಿದಿಣ್ಣೋ ಪಡಿವಣ್ಣೋ ಉತ್ತಮಂ ಅಟ್ಠಂ ||

[ಸೀದೇಣ=ಅಯ್ಕಿಲಿಂದಂ, ಪುವ್ವವೇರಿಯ ದೇವೇಣ= ಮುನ್ನಿನ ಭವದ ಪಗೆವನಪ್ಪ ದೇವನಿಂದಂ, ವಿಗುವ್ವಿದೇಣ= ವಿಗುರ್ವಿಸೆಪಟ್ಟುದಱಿಂದಂ, ಘೋರೇಣ=ಆದಮಾನುಂಕಡಿದಪ್ಪುದಱಿಂದಂ, ಸಂಸಿತ್ತೋ= ತಿಳಿಯಪಟ್ಟೊನಾಗಿ, ಸಿರಿದಿಣ್ಣೋ=ಸಿರಿದಿಣ್ಣನೆಂಬ ಭಟಾರಕಂ, ಪಡಿವಣ್ಣೋ =ಪೊರ್ದಿದೊಂ, ಉತ್ತಮ ಅಟ್ಠಂ = ಮಿಕ್ಕ ದರ್ಶನ
ಜ್ಞಾನಚಾರಿತ್ರಾರಾಧನೆಯಂ ]

ಅದೆಂತೆಂದೊಡೆ: ಈ ಜಂಬೂದ್ವೀಪದ ಭರತಕ್ಷೇತ್ರದೊಳಂಗಮೆಂಬುದು ನಾಡಲ್ಲಿ ಚಂಪಾನಗರಮೆಂಬುದು ಪೊೞಲದನಾಳ್ವೊನಧಿಗಮ ಸಮ್ಯಗ್ ದೃಷ್ಟಿಶ್ರಾವಕಂ ಸಿಂಹರಥನೆಂಬೊನರಸಂ ಮತ್ತಿತ್ತ ಮಗಧೆಯೆಂಬುದು ನಾಡಲ್ಲಿ ಸಾಕೇತವೆಂಬುದದನಾಳ್ವೊಂ ಶ್ರಾವಕಂ ಸುಮಂತನೆಂಬೊನರಸಂ ಮತ್ತಿತ್ತ ಮಂಗಳಾವತಿಯೆಂಬುದು ನಾಡಲ್ಲಿ  ಇಳಾಪಟ್ಟಣಮೆಂಬುದು ಪೊೞಲದನಾಳ್ವೊನಧಿಗಮ ಸಮ್ಯಗ್ ದೃಷ್ಟಿ ಶ್ರಾವಕ ಜಿತಶತ್ರುವೆಂಬೊನರಸನಾತನರಸಿ ಳಾ ಮಹಾದೇವಿಯೆಂಬೊಳಾ ಅರಸನ ದಾದಿ ವಿನಯಮತಿಯೆಂಬೊಳಂತವರ್ಗಳಿಷ್ಟವಿಷಯ ಕಾಮ ಭೋಗಂಗಳನನುಭವಿಸುತ್ತಂ ಕಾಲಂ ಸಲೆ ಫಾಲ್ಗುನ ನಂದೀಶ್ವರಂ ಬಂದೊಡೆ ಮೂವರುಂ ಮಂಡಲಿಕರುಂ ತಂತಮ್ಮ ಪೊೞಲ್ಗಳೊಳೆಂಟು ದಿವಸಮರ್ಹದ್ಭಟ್ಟಾರಕರ್ಗೆ ಮಹಾಮಹಿಮೆಗಳಂ ಮಾಡಲ್ ತೊಡಗಿದರಿತ್ತ ಜಿತಶತ್ರುವುಂ ತನ್ನ ಪೊೞಲೊಳೆಂಟು ದಿವಸಂ ಜಿನಮಹಾಮಹಿಮೆಯಂ ಮಾಡಲ್ ತೊಡಗಿದನಾತನ ದಾದಿ ವಿನಯಮತಿಯೆಂಬೊಳ್ ಗುಜ್ಜಿ ವಿರಳದಂತೆ ಆದಮಾನುಂ ವಿರೂಪೆ ಪೇಸೆಪಡುವಳ್ ನೋಡಿದ ಜನಕ್ಕೆ ಭಯಮಂ ಪಡೆವಳ್ ನಾಣಿಸೆಪಡುವೊಳಂತಪ್ಪಾಕೆ ಅರಸನೊಡನೆ ಜಿನಮಹಾಮಹಿಮೆಯಂ ನೋಡಲ್ ಪೋಪಾಗಳರಸನೆಂದೊನಬ್ಬಾ ನೀಮುಂ ಮಹಿಮೆಗೆ ಬರಲ್ವೇಡ ನಿಮ್ಮಂ ಕಂಡು ಮಹಿಮೆಗೆ ವಂದ ನೆರವಿಯಂಜುಗುಂ ಪೇಸುಗುಮಮಂಗಳಮೆಂಗುಮದಱಿಂ ನೀಮುಂ ಮನೆಯೊಳಿರಿಮೆಂದಿರಿಸಿ ತಾನುಂ ಸಹಸ್ರಕೂಟಮೆಂಬ ಚೈತ್ಯಾಲಯಕ್ಕೆ ಮಹಾಮಹಿಮೆಯಂ ಮಾಡಲ್ ಪೋದನ್ ಇತ್ತ ದಾದಿಯುಂ ಮಗನ ಮಾಡುವ ಮಹಾಮಹಿಮೆಯಂ ನೋಡಲ್ ಪೆತ್ತೆನಿಲ್ಲೆಂದುಬ್ಬೆಗಂ ಬಟ್ಟು ತನ್ನಂ ತಾಂ ಪೞಿದು ನಂದೀಶ್ವರದೆಂಟು ದಿವಸಮಭಿಷೇಕಮುಮರ್ಚನೆಯುಮಷ್ಟೋಪ ವಾಸಮುಮಂ ಮಾಡಿ ದೇವರಂ ಬಂದಿಸುತ್ತಂ ಪೂಜಿಸುತ್ತಿರ್ದಳಿತ್ತರಸನುಮೆಂಟು ದಿವಸಂ ಮಹಾಮಹಿಮೆಯಭಿಷೇಕಮುಮಂ ಮಾಡಿ ಸಮೆಯಿಸಿದ ಬೞಿಕ್ಕೆ ದಾದಿಗೆ ಬೞಿಯಟ್ಟಿವರಿಸಿ ಇಂತೆಂದನಬ್ಬಾ ನೀಮಿಂತೇಕೆ ಕರಂ ಬಡಪಟ್ಟಿರ್ದ್ದಿರೆಂದೊಡೆ ದಾದಿಯಿಂತೆಂದಲಳ್ ಮಗನೆ ಎಂಟು ದಿವಸಸಮುಪವಾಸಂ ಗೆಯ್ದು ಮನೆಯೊಳ್ ದೇವರ್ಗಭಿಷೇಕಮುಂ ಪೂಜೆಯುಮಂ ಮಾಡಿಸುತ್ತಿರ್ದೆನೆಂದೊಡೆ ಅದಂ ಕೇಳ್ದಾದಮಾನುಮರಸನೊಸೆದು ಬಡವಾದುದುಮಂ ಕಂಡು ಕರುಣಿಸಿ ಅಬ್ಬಾ ನಿಮಗೊಸೆದೆಂ ವರಮಂ ಬೇಡಿಕೊಳ್ಳಮೆಂದೊಡಾಕೆಯಿಂತೆಂದಳ್ ಮಗನೆ ನೀನೆನಗೊಸೆದೆಯಪ್ಪೊಡೆನಗೆಂದು ಮತ್ತಮೆಂಟುದಿವಸಂ ದೇವರ್ಗೆ ಮಹಾಮಹಿಮೆಯಂ ಮಾಡೆಂದು ಪೇೞ್ದೊಡಂತೆಗೆಯ್ವೆನೆಂದರಸಂ ದಾದಿಕಾರಣಮಾಗಿ ಮತ್ತಮೆಂಟು ದಿವಸಂ ಮಹಾಮಹಿಮೆಯಂ ಮಾಡಲ್ ತೊಡಂಗಿದೊಡೆನ್ನ ಮಹಾಮಹಿಮೆಯೊಳೆಂತುಣ್ಬೆನೆಂದು ಪಾರಿಸದೆ ಮತ್ತಮಷ್ಟೋಪ ವಾಸಂಗೆಯ್ದು ಪಾರಣೆಯ ದಿವಸದಿಂದಾಕೆಯ ಶ್ರಮಮುಂ ಸೇದೆಯಮುಂ ಹಿಮವಂತ ಪರ್ವತದ ಪದ್ಮೆಯೆಂಬ ಕೊಳದೊಳ್ ವಸಿಯಿಸಿರ್ಪ ಶ್ರೀಯಾದೇವತೆ ಕಂಡಱಿದು ತನ್ನ ಪರಿವಾರ ಸಹಿತಂ ವಿಮಾನಂಗಳನೇಱಿ ಮಹಾವಿಭೂತಿಯಿಂ ಬಂದು ಸ್ವರ್ಣಪೀಠದೊಳ್ ದಾದಿಯನಿರಿಸಿ ಸುಗಂಧೋದಕಗಳಿಂ ತೀವಿದ ಸುವರ್ಣಕಲಶಗಳಿಂದಮಭಿಷೇಕಂಗೆಯ್ದು ನಮೇರು ಮಂದಾರ ಸಂತಾನಕ ಪಾರಿಯಾತ್ತಕಮೆಂಬ ಪೂಗಳಂ ಸುರಿದು ಕಮ್ಮಿತಪ್ಪ ತಂಬೆಲರ್ ವೀಸಿ ದೇವದುಂದುಭಿಗಳಂ ಬಾಜಿಸಿ ಶ್ರೀಯಾದೇವತೆ ತನ್ನಾವೃಸಕ್ಕೆ ವೋದಳ್ ಇತ್ತ ದಾದಿಯುಂ ಶ್ರೀಯಾದೇವತೆಯ ವಿಭೂತಿಯಂ ಕಂಡು ನಿದಾನಂಗೆಯ್ದು ಕೆಲವು ದಿವಸದಿಂ ಕಾಲಂಗೆಯ್ದೀ ಜಂಬೂದ್ವೀಪದ ಹಿಮವಂತ ಪರ್ವತದ ಪದ್ಮೆಯೆಂಬ ಕೊಳದೊಳ್ ಶ್ರೀಯಾದೇವತೆಯಾಗಿ ಪುಟ್ಟಿ ಇಳಾಪಟ್ಟಣಕ್ಕೆ ಬಂದಾ ಪೊೞಲ ಜನಂಗಳ್ಗೆಲ್ಲಮಿರುಳ್ ಕನಸಿನೊಳಂ ಶ್ರೀಯಾದೇವತೆಯೆಂ ನಿಮ್ಮ ಪೊೞಲ್ಗೆವಂದೆನೆನಗೆ ಶ್ರೀ ವಿಹಾರಮಂ ಮಾಡಿ ಎನ್ನ ಪ್ರತಿಯೆಯನಿಟ್ಟು ಪೂಜಿಸುತ್ತುಮೋಲಗಿಸುತ್ತುಮಿರಿಮಾನುಂ ನಿಮಗೆ ಬೇಡಿದ ವರವನೀವೆನೆಂದು ಕನಸಿನೊಳ್ ತೋಱಿದೊಡೆ ಪೊೞಲ ಜನಮೆಲ್ಲಂ ನೆರೆದು ಶ್ರೀವಿಹಾರಮಂ ಮಾಡಿ ಶ್ರೀಯಾದೇವತೆಯ ಪ್ರತಿಮೆಯಂ ಸ್ಥಾಪಿಸಿ ಮಹಿಮೆಯಂ ಮಾಡುತ್ತಂ ಪೂಜಿಸುತ್ತಮೋಲಗಿಸುತ್ತ ಮಿರ್ಪುದುಂ ಕಂಡಿಳಾಮಹಾದೇವಿ ಅಪುತ್ರಿಕೆ ಬೇಡಿ ಪನ್ನೆರಡು ವರುಷಂ ಬರೆಗಂ ನಿಚ್ಚಲುಂ ಶ್ರೀವಿಹಾರಕ್ಕೆ ವೋಗಿ ಶ್ರೀಯಾದೇವತೆಯನರ್ಚಿಸುತ್ತಂ ಪೂಜಿಸುತ್ತಂ ಮಹಾಮಹಿಮೆಯಂ ಮಾಡುತ್ತಂ ಆಡುತ್ತಂ ಪಾಡುತ್ತಮೋಲಗಿಸುತ್ತಮಿರೆ-
ಯದಂ ಕಂಡಱಿದು ಶ್ರೀಯಾದೇವತೆ ಪೂರ್ವವಿದೇಹಕ್ಕೆ ಪೋಗಿ ಸ್ವಯಂಪ್ಭರೆಂಬ ತೀರ್ಥಕರ ಪರಮದೇವರಂ ಕಂಡೆಱಗಿ ಪೊಡೆಮಟ್ಟಿಂತೆಂದು ಬೆಸಗೊಂಡಳ್ ಭಟರಾ ಎನ್ನ ಪೊೞಲೊಳಿರ್ಪ ಇಳಾಮಹಾದೇವಿಗೆ ಮಕ್ಕಳೇನಕ್ಕುಮೊ ಎಂದು ಬೆಸಗೊಂಡೊಡೆ ಭಟಾರರಿಂತೆಂದರ್ ಸ್ವರ್ಗದಿಂದೆ ಬೞ್ಚಿಬಂದಿಲ್ಲಿ ಓರ್ವ ದೇವಂ ಇಳಾಮಹಾದೇವಿಗೆ ಮಗನಾಗಿ ಪುಟ್ಟುಗು-
ಮೆಂದೊಡದಂ ಕೇಳ್ದು ಭಟ್ಟಾರರ್ಗ್ಗೆರಗಿ ಪೊಡೆವಟ್ಟು ಇಳಾಪಟ್ಟಣಕ್ಕೆ ಪೋಗಿ ಇಳಾಮಹಾದೇವಿಗೆ ಕನಸಿನೊಳಿಂತೆಂದು ಪೇೞ್ದಳಿಳಾಮಹಾದೇವಿ ನಿನಗೆನ್ನ ಪ್ರಸಾದದೆವಸೌಧರ್ಮಕಲ್ಪದೊಳ್ ಮೇಘಮಾಲಮೆಂಬ ವಿಮಾನದಿಂ ಬೞ್ಚಿ ವರ್ಧಮಾನನೆಂಬ ದೇವಂ ಬಂದು ನಿನಗೆ ಮಗನಾಗಿ ಪುಟ್ಟುಗುಮೆಂದು ಶ್ರೀಯಾದೇವತೆ ಪೇೞ್ದೊಡಿಳಾ ಮಹಾದೇವಿ -
ಯಾದಮಾನುಂ ಸಂತಸಂಬಟ್ಟಿರ್ದು ಕೆಲವು ದಿವಸದಿಂ ಗರ್ಭಮಾಗಿ ನವಮಾಸಂ ನೆಱೆದು ಮಗನಂ ಪೆತ್ತೊಡೆ ಶ್ರೀಯಾದೇವತೆ ಮಗನಂ ಕೊಟ್ಟಳೆಂದು ಕೂಸಿಂಗೆ ತಾಯುಂ ತಂದೆಯುಂ ನಂಟರುಮೆಲ್ಲಂ ನೆರೆದು ಸಿರಿದಿಣ್ಣನೆಂದು ಪೆಸರನಿಟ್ಟರ್ ಆತನುಂ ಶುಕ್ಲಪಕ್ಷದ ಚಂದ್ರನಂತೆ ಕ್ರಮಕ್ರಮದಿಂ ಬಳೆದು ನವಯೌವನನುಂ ಸರ್ವಕಳಾ ಕುಶಳನುಮಾಗಿರ್ಪನ್ನೆಗಮಿತ್ತ ಸಾಕೇತ ಪುರಾಧಿಪತಿಯಪ್ಪ ಸುಮಂತನೆಂಬೊನರಸನ ಮಗಳ್ ಸುಮತಿಯೆಂಬೊಳಾಕೆಯ ಸ್ವಯಂವರಕ್ಕರಸುಮಕ್ಕಳೆಲ್ಲಂ ನೆರೆದಿರ್ದಲ್ಲಿಗೆ ಸಿರಿದಿಣ್ಣಂಗಂ ಬೞಿಯಟ್ಟಿ ಬರಿಸಿದೊಡೆ ಸ್ವಯಂಭರದೊಳ್ ಸುಮತಿಯೆಲ್ಲರಂ ನೋಡಿಯಾರುಮಂ ಮೆಚ್ಚದೆ ಸಿರಿದಿಣ್ಣಂಗೆ ಮೃಲೆಸೂಡಿದೊಡೆ ಮದುವೆಯಾಗಿ ಕೆಲವು ದಿವಸಮಲ್ಲಿರ್ದು ಮಾವನವರಂ ಬೆಸಗೊಂಡಿಳಾಪಟ್ಟಣಕ್ಕೆ ವೋಪೆಮೆಂದೊಡಾತಂ ತನ್ನ ಮಗಳಪ್ಪ ಸುಮತಿಗೆ ಬೞಿವೞಿಗೊಟ್ಟು ಮಗಳೊಡನೆ ವಾಚಾಳನಪ್ಪ ಗಿಳಿಯುಮನಟ್ಟಿದೊಡವರ್ಗಳುಂ ಕತೀಪಯ ದಿವಸಂಗಳಿಂದಿಳಾ-
ಪಟ್ಟಣಕ್ಕೆ ಪೋಗಿ ಸುಖದಿಂದಿರೆ ಮತ್ತೊಂದು ದಿವಸಂ ಗಿಳಿಯಂ ಸಾಕ್ಷಿಮಾಡಿ ಇರ್ವರುಂ ಚದುರಂಗರಮಾಡುತ್ತಿರೆ ಅರಸಿಯರಸನಂ ಗೆಲ್ದೊಡೆ ಗಿಳಿ ನೆಲದೊಳೆರಡು ಬರೆಯಂ ಬರೆಗುಮರಸನರಸಿಯ ಗೆಲ್ದೊಡೆ ಒಂದೆ ಬರೆಯಂ ಬರೆಗುಮಿಂತು ಪಿರಿದುಂ ಬೇಗಮಾಡಿ ಅರಸನರಸಿಯಂ ಗೆಲ್ದೊಡೆರಡು ಬರೆಯಂ ತೆಗೆದುದನರಸಂ ಕಂಡು ಕಡುಮುಳಿದದಱ ಗೋಣಂ ಮುಱಿದೊಡಾ ಗಿಳಿಯುಂ ಸತ್ತಾ ಪೊೞಲ ಬಹಿರುದ್ಯಾನವನದೊಳ್ ವ್ಯಂತರದೇವನಾಗಿ ಪುಟ್ಟುತಿಂತಿರ್ವರುಂ ಪಲಕಾಲಮಿಷ್ಟವಿಷಯ ಕಾಮಭೋಗಂಗಳನನುಭವಿಸುತ್ತಿರ್ಪನ್ನೆಗಂ ಮತ್ತೊಂದು ದಿವಸಂ ಸಪ್ತತಳಪಾರಾಸಾದದಮೇಗಿರ್ವರುಂ ದಿಶಾವಳೋಕನಂ ಗೆಯ್ಯೈತ್ತಿರ್ಪನ್ನೆಗಂ ಸಹಸ್ರಕೂಟಾಕಾರಮಪ್ಪುದೊಂದು ಮುಗಿಲಂ ಕಂಡಿಂತುಟೊಂದು ಚೈತ್ಯಾಲಯಮಂ ಮಾಡಿಸುವೆನೆಂದು ಪಲಗೆಯೊಳ್ ರೇಖೆಗೊಂಡು ಮತ್ತೆ ನೋೞ್ಪನ್ನೆಗಂ ಕರಗಿದುದಂ ಕಂಡದುವೆ ನಿರ್ವೇಗಕ್ಕೆ ಕಾರಣಮಾಗಿ ತಾಯುಂ ತಂದೆಯುಂ ನಂಟರುಮಂ ಬಿಡಿಸಿ ನಿಶ್ಯಲ್ಯಂಗೆಯ್ದು ಬಾಹ್ಯಾಭ್ಯಂತರ ಪರಿಗ್ರಹಂಗಳಂ ತೊಱೆದು ವರಧರ್ಮ ಭಟ್ಟಾರರ ಪಕ್ಕದೆ ತಪಂಬಟ್ಟು ಪನ್ನೆರಡು ವರೈಷಂಬರೆಗಂ ಗುರುಗಳನಗಲದಿರ್ದು ದ್ವಾದಶಾಂಗ ಚತುರ್ದಶ ಪೂರ್ವಮಪ್ಪಾಗಮಮೆಲ್ಲಮಂ ಲ್ತು ಬೞಿಕ್ಕೆ ಗುರುಗಳಂ ಬೆಸಗೊಂಡವರನುಮತದಿಂದೇಕವಿಹಾರಿಯಾಗಿ ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ಮಾಘಮಾಸದಂದಿಳಾಪಟ್ಟಣಕ್ಕೆ ವಂದಾ ಪೊೞಲ ಬಹಿರುದ್ಯಾನವನದೊಳಿರ್ದು ರಾತ್ರಿ ಪ್ರತಿಮಾಯೋಗದೊಳ್ ನಿಂದರ್ ಅನ್ನೆಗಂ ಮುನ್ನವರ ಕೈಯೊಳ್ ಸತ್ತ ಗಿಳಿ ವ್ಯಂತರದೇವನಾಗಿ ಅಲ್ಲಿ ಪುಟ್ಟಿರ್ದುದು ಕಂಡೇನುಂ ಕಾರಣಮಿಲ್ಲೆನ್ನಂ ಕೊಂದನೆಂದು ಮುಳಿದಾದಮಾನುಂ ಘೋರಮಪ್ಪ ವಾತಮುಂ ಶೀತಮುಮಂ ವಿಗುರ್ವಿಸಿ ನೀರ್ಗಳಂ ಮೇಗೆ ಸುರಿದು ಬೀಸುತ್ತಮಿಂತು ನಾಲ್ಕು ಜಾವಮುಂ ಘೋರಾಕಾರಮಾಗಿಯುಪಸರ್ಗಮಂ ಮಾಡೆ ಭಟಾರರುಂ ದೇವೋಪಸರ್ಗಮೆಂಬುದನಱಿದು

ಗಾಹೆ || ಖಮ್ಮಾಮಿ ಸವ್ವಜೀವಾಣಂ ಸವ್ವೇಜೀವಾ ಖಮಂತು ಮೇ
          ಮೆತ್ತೀ ಮೇ ಸವ್ವಭೂದೇಸು ವೇರಂ ಮಜ್ಝಣ ಕೇಣ ಚ

ಶ್ಲೋಕ || ಅಚ್ಛೇದ್ಯೋऽನಂತ ಸೌಖ್ಯೋऽಹಂ ವೇತ್ತಾऽಪೂವೋ ನಿರಂಜನಃ
           ಸರ್ವದುಃಖಾಕರಂ ದೇಹಂ ತ್ಯಜಾಮೇತತ್ ಪರೆಸ್ಫುಟಂ ||

ಎಂದಿಂತು ಸಮತ್ವೀಭಾವನೆಯಂ ಭಾವಿಸಿ ಶುಕ್ಲಧ್ಯಾನಮಂ ಜಾನಿಸಿ ಎಂಟು ಕರ್ಮಂಗಳಂ ಕಿಡಿಸಿ ಮೋಕ್ಷಕ್ಕೆವೋದರ್ ಮತ್ತಂ ಪೆಱರುಂ ರತ್ನತ್ರಯಂಗಳನಾರಾಧಿಸುವ ಭವ್ಯರ್ಕಳ್ ಸಿರಿದಿಣ್ಣ ಭಟ್ಟಾರರಂ ಮನದೊಳ್ ಬಗೆದು ದೇವೋಪಸರ್ಗ ಮನುಷ್ಯೋಪಸರ್ಗ ತಿರಿಕೋಪಸರ್ಗಮಚೇತನೋಪಸರ್ಗಮೆಂದಿಂತು ಚತುರ್ವಿಧಮಪ್ಪುಪಸರ್ಗಮುಮಂ ಪಸಿವು ನೀರೞ್ಕೆ ಮೊದಲಾಗೊಡೆಯಮಿರ್ಪ್ಪತ್ತೆರಡು ಪರೀಷಹಂಗಳುಮಂ ಸೈರಿಸಿ ವ್ಯಾಧಿಗಳಿಂದಪ್ಪ ವೇದನೆಯಂ ಸೈರಿಸಿ ಸ್ವರ್ಗಾಪವರ್ಗ ಸುಖಂಗಳನೆಯ್ದುಗೆ.

೧೨. ಅಭಯಘೋಷರೆಂಬ ಮುನಿಯ ಕಥೆ.

ಗಾಹೆ|| ಕಾಕಂದಿ ಅಭಯಘೋಷೋ ವಿ ಚಂಡವೇಗೇಣ ಛಿಣ್ಣ ಸವ್ವಂಗೋ
         ತವ್ವೇದಣ ಮಧಿಯಾಸಿಯ ಪಡಿವಣ್ಣೋ ಉತ್ತಮಂ ಅಟ್ಠಂ ||

[ ಕಾಕಂದಿ =ಕಾಕಂದಿಯೆಂಬ ಪೊೞಲೊಳ್,  ಅಭಯಘೋಷೋ ವ = ಅಭಯಘೋಷರೆಂಬ ರಿಸಿಯುಂ, ಚಂಡವೇಗೇಣ= ಚಂಡವೇಗನೆಂಬೊನರಸನಿಂದಂ, ಛಿಣ್ಣಸವ್ವಂಗೋ= ಕೊಱೆಯೆ ಪಟ್ಟೆಲ್ಲಾ ಮೆಯ್ಯನೊಡೆಯನಾಗಿ, ತವ್ವೇದಣಂ= ಆ ವೇದನೆಯಂ, ಅಧಿಯಾಸಿಯ=ಲೇಸಾಗಿ ಸೈರಿಸಿ, ಪಡಡಿವಣ್ಣೋ= ಪೊರ್ದಿದೊಂ,  ಉತ್ತಮಂ ಅಟ್ಠಂ= ಮಿಕ್ಕ ದರ್ಶನ ಜ್ಞಾನ ಚಾರಿತ್ರಂಗಳಾರಾಧನೆಯಂ ]

ಅದೆಂತೆಂದೊಡೆ : ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ಮಗಧೆಯೆಂಬುದು ನಾಡಲ್ಲಿ ಕಾಕಂದಿಯೆಂಬುದು ಪೊೞಲದ-
ನಾಳ್ಪೊನಭಯಘೋಷನೆಂಬೊನರಸನಾತನ ಮಹಾದೇವಿ ಅಭಯಮತಿಯೆಂಬೊಳಂತವರ್ಗ್ಗಳಿಷ್ಟವಿಷಯ  ಕಾಮಭೋ-
ಗಂಗಳನನುಭವಿಸುತ್ತಂ ಕಾಲಂ ಸಲೆ ಮತ್ತೊಂದು ದಿವಸಮರಸಂ ಪೊಱಮಟ್ಟು ಪೊಱವೊೞಲ ಶೋಭೆಯಂ ತೊೞಲ್ದು ನೋಡುತ್ತಿರ್ಪನ್ನೆಗಮೊರ್ವ ಮೀಂಗುಲಿಗನೊಂದಾಮೆಯಂಬಾೞೆವಾೞೆ ನಾಲ್ಕು ಕಾಲಂ ಕಟ್ಟಿ ಬಳ್ಳಿಯಂ ಕೊರಲೊಳ್ ತಗುೞ್ಚಿಯೆೞಲೆ ಪಿಡಿದುಕೊಂಡು ಪೊೞಲ್ಗಿದಿರಂ ಬರ್ಪೊನರಸನಂ ಕಂಡು ತನ್ನ ಬಿನ್ನಣಮಂ ನೆರೆದ ನೆರವಿಗೆ ಮೆಱೆಯಲ್ವೇಡಿ ಗೆಂಟರಿಂ ಚಕ್ರದಿಂ ನಾಲ್ಕು ಕಾಲೈಮನೊರೂಮೊದಲೆ ಪಱಿಯಿಟ್ಟೊಡೆ ಮೀಂಗುಲಿಗಂ ಪ್ರಾಣಮುಳ್ಳಂತಿ-
ರಾಮೆಯಂ ತನ್ನ ಮನೆಗೆ ಕೊಂಡು ಪೋದೊಡಾ ಇರುಳೊಳಾಮೆ ಪಿರಿದು ವೇದನೆಯಿಂದಂ ನಮದು ಸತ್ತಾ ಪೊೞಲೊಳಭಯಘೋಷ ನೃಪತಿಗಭಯಮತಿ ಮಹಾದೇವಿಗಂ ಚಂಡವೇಗನೆಂಬ ಮಗನಾಗಿ ಪುಟ್ಟಿದನಂತವರ್ಗಳಿಷ್ಟವಿಷಯ ಕಾಮಭೋಗಂಗಳನನುಭವಿಸುತ್ತಿರ್ಪನ್ನೆಗಂ ಮತ್ತೊಂದು ದಿವಸಮರಸನುಮರಸಿಯುಂ ಕರುಮಾಡದ ಮೇಗಣ ನೆಲೆಯೊಳ್ ಭೋಗೋಪಭೋಗಸುಖಂಗಳನನುಭವಿಸುತ್ತಂ ವಿನೋದದಿಂದಿರ್ಪನ್ನೆಗಂ ಚಂದ್ರ-
ಗ್ರಹಣಮಾದುದನರಸಂ ಕಂಡನಿತ್ಯಮಂ ಭಾವಿಸಿಯದುವೆ ವೈರಾಗ್ಯಕ್ಕೆ ಕಾರಣಮಾಗಿ ಚಂಡವೇಗನೆಂಬ ಮಗಂಗೆ ರಾಜ್ಯಪಟ್ಟಂಗಟ್ಟಿ ಬಾಹ್ಯಾಭ್ಯಂತರ ಪರಿಗ್ರಹಪರಿತ್ಯಾಗಂಗೆಯ್ದು ನಂದನರೆಂಬಾಚಾರ್ಯರ ಪಕ್ಕದೆ ತಪಂಬಟ್ಟು ಪನ್ನೆರಡು ವರುಷಮವರೊಡನಿರ್ದೆಲ್ಲಾ ವೋದುಗಳುಮಂ ಕಲ್ತು ಗುರುಗಳಂ ಬೆಸಗೊಂಡವರನುಮತದಿಂದೇಕವಿಹಾರಿಯಾಗಿ ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ಬರ್ಪೊರ್ ತಮ್ಮ ಮುನ್ನಿನ ಕಾಕಂದಿಯೆಂಬ ಪೊೞಲ್ಗೆವಂದುದ್ಯಾನವನದೊಳ್ ವೀರಾಸನಮಿರ್ದೊರನ್ನೆಗಂ ಮುನ್ನಾಮೆಯಪ್ಪ ಜೀವನವರ ಮಗನಪ್ಪ ಚಂಡವೇಗಂ ಕರುಮಾಡದ ಮೇಗಣ ನೆಲೆಯೊಳಿರ್ದು ನೋಂಟಕ್ಕೆ ಗೆಂಟು ಪೋಗೆ ಚಕ್ರಮನಿಟ್ಟೊಡಾ ಚಕ್ರಂ ವಂದು ಋಷಿಯರೆರಡು ಕೆಯ್ಯುಂ ಕಾಲ್ಗಳುಮಂ ಮೊಕ್ಕನೆ ಪೋಗೆ ಕೊಂಡೊಡೆ ಚತುರ್ವಿಧಮಪ್ಪಾಹಾರಕ್ಕಂ ಶರೀರಕ್ಕಂ ಜಾವಜ್ಜೀವಂ ನಿವೃತ್ತಿಗೆಯ್ದು ವೇದನೆಯಂ ಸೈರಿಸಿ ಶುಭಪರಿಣಾಮದಿಂ ರತ್ನತ್ರಯಮಂ ಸಾಧಿಸಿ ಪದಿನಾಲ್ಕನೆಯ ಪ್ರಾಣತಮೆಂಬ ಕಲ್ಪದೊಳಿರ್ಪತ್ತು ಸಾಗರೋಪಮಾಯುಷ್ಯಮನೊಡೆಯೊನಿಂದ್ರನಾಗಿ ಪುಟ್ಟಿದೊಂ ಮತ್ತೆ ಪೆಱರುಮಾ-
ರಾಧಕರುಂ ರತ್ನತ್ರಯಮನಾರಾಧಿಸುತ್ತಿರ್ದ್ದ ಭವ್ಯರ್ಕಳಭಯಘೋಷ ಭಟಾರರಂ ಮನದೆ ಬಗೆದು ಪಸಿವುಂ ತೃಷೆಯುಮೇಱುಂ ವ್ಯಾಧಿಯುಂ ಶೀತವಾತೋಷ್ಣಂಗಳುಮೆಂದಿವು ಮೊದಲಾಗೊಡೆಯ ದುಃಖಗಳಂ ಸೈರಿಸಿ ಪರಮ ಶುದ್ಧ ಸಹಜ ದರ್ಶನ ಜ್ಞಾನ ಚಾರಿತ್ರಂಗಳಂ ಸಾಧಿಸಿ ಸ್ರ್ಗಾಪವರ್ಗಸುಖಂಗಳನೆಯ್ದುಗೆ.

ಕೃತಜ್ಞತೆಗಳು.

ಟಿ. ಕೇಶವ ಭಟ್ಟ

ಪ್ರಕಟಣೆ : ಕನ್ನಡ ಸಾಹಿತ್ಯ ಪರಿಷತ್ತು ,
ಪಂಪಮಹಾಕವಿ ರಸ್ತೆ,
ಚಾಮರಾಜಪೇಟೆ,
ಬೆಂಗಳೂರು- ೫೬೦೦೧೮.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ