ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಜನವರಿ 13, 2019

ಪರಮದೇವ ಕವಿ ವಿರಚಿತ ಶ್ರೀ ತುರಂಗ ಭಾರತ

ಪರಮದೇವ ಕವಿ ವಿರಚಿತ ಶ್ರೀ ತುರಂಗ ಭಾರತ
ಕವಿಯ ಕಾಲ ಕಾವ್ಯ

ಕವಿಯ ಜನನ ಕ್ರಿ,  ಶ, ೧೭೨೦. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸುಳಿಗೋಡು ಕವಿಯ ಜನ್ಮ ಸ್ಥಳ. ಇವನು ಹವ್ಯಕ ಬ್ರಾಹ್ಮಣ. ತಂದೆಯ ಹೆಸರು ಶಂಕರನಾರಾಯಣಯ್ಯ, ತಾಯಿಯ ಹೆಸರು ಮಹಾಲಕ್ಷ್ಮಮ್ಮನವರು. ತಂದೆ ವಿದ್ವಾಂಸರು, ಜೋತಿಷಿಗಳು, ಸೂರ್ಯನ ಔಪಾಸಕರು, ಪರಮೇಶ್ವರನ ಭಕ್ತರು. ತಾಳಮದ್ದಳೆಯ ಶ್ರೇಷ್ಠ ಅರ್ಥಧಾರಿಗಳು. ಇವರು ವಂಶಪಾರಂಪರ್ಯವಾಗಿ ಬಂದಿದ್ದ ಗದ್ದೆ, ತೋಟ, ಮನೆ ಹೊಂದಿದ್ದರು. ಇವರ ವಂಶಸ್ಥರು ಸಳಿಗೋಡಿನಲ್ಲಿ ಒಂದು ದೇವಸ್ಥಾನವನ್ನು ಕಟ್ಟಿಸಿ ಅಲ್ಲಿ ಲಕ್ಷ್ಮೀನಾರಾಯಣ ಹಾಗೂ ಒಂದು ಶಿವಲಿಂಗವನ್ನೂ ಸ್ಥಾಪಿಸಿ, ಪೂಜಿಸಿಕೊಂಡು ಬಂದಿದ್ದರು. ಶಂಕರನಾರಾಯಣಯ್ಯನೂ ಈ ಪೂಜೆಯನ್ನು ಮುಂದುವರಿಸಿಕೊಂಡು ಬಂದಿದ್ದನು. ಕವಿಗೆ ತಂದೆಯಿಂದಲೇ ಪ್ರಾರಂಭಿಕ ವಿದ್ಯಾಭ್ಯಾಸವಾಯಿತು. ಶಂಕರನಾರಾಯಣಯ್ಯ ಯಕ್ಷಗಾನ ಬಯಲಾಟಗಳಲ್ಲಿ,  ತಾಳಮದ್ದಳೆಯಲ್ಲಿ ಪಾತ್ರಧಾರಿಯಾಗಿ ಭಾಗವಹಿಸಿ ಖ್ಯಾತರಾಗಿದ್ದರು. ಕವಿಗೆ ತಂದೆಯ ಗುಣಗಳೆಲ್ಲ ಮೈಗೂಡಿದುವು. ಯಕ್ಷಗಾನ ಬಯಲಾಟಗಳಲ್ಲಿ ಪಾತ್ರವಹಿಸಿ ತಂದೆಯಿಂದ ಸೈ ಎನಿಸಿಕೊಂಡಿದ್ದರು.

ಕವಿಗೆ ಇಪ್ಪತ್ತನಾಲ್ಕನೆಯ ವಯಸ್ಸಿಗೆ ಮದುವೆಯಾಯಿತು. ಹೆಂಡತಿಯ ಹೆಸರೈ ಭಾಗೀರಥಮ್ಮ. ಇವರು ಪರಮೇಶ್ವರಯ್ಯ
ಅವರ ತಾಯಿಯ ಅಣ್ಣನ ಮಗಳು, ಪರಮೇಶ್ವರಯ್ಯ ಮೊದಲಿನಿಂದಲೂ ಕೃಷಿ ಬಗ್ಗೆ ನಿರಾಸಕ್ತಿ ಹೊಂದಿದ್ದರು. ಭಾಗೀರಥಿಯೇ ಕಷ್ಟಪಟ್ಟು ಕೃಷಿಯನ್ನು ಮುಂದುವರಿಸುತ್ತಾ ಸಂಸಾರ ಸಾಗಿಸತೊಡಗಿದಳು. ಒಂದೆರಡು ವರ್ಷ ಮಳೆಬಾರದೆ ಬೆಳೆ ಕೈಸೇರಲಿಲ್ಲ. ಸಾಲವೂ ಬೆಳೆಯಿತು. ಸಾಲಗಾರರಿಗೆ ಗದ್ದೆ, ತೋಟ, ಮನೆಯನ್ನು ವಹಿಸಿ, ಸುಳಿಗೋಡನ್ನು ಬಿಟ್ಟು ಇಕಕೇರಿಗೆ ಬರುತ್ತಾರೆ. ಇಲ್ಲಿ ಅಘೋರೇಶ್ವರ ಹಾಗೂ ಗಣಪತಿ ದೇವಾಲಯಗಳ ಪರಿಚಾರಕನಾಗಿ ಕೆಲಸಕ್ಕೆ ಸೇರುತ್ತಾನೆ. ಬಿಡುವಿನ ವೇಳೆಯಲ್ಲಿ ಪ್ರಾಚೀನ ಕಾವ್ಯಗಳ, ಪುರಾಣಗಳ ಅಭ್ಯಾಸದಲ್ಲಿ ನಿರತನಾಗಿರುತ್ತಿದ್ದನು.
ಕಾರಣಾಂತರದಿಂದ ಚಿಪ್ಪಳಿಗೆ ಬಂದು ಗೋಪಾಲಕೃಷ್ಣ ದೇವಸ್ಥನದಲ್ಲಿ ಅರ್ಚಕರಾಗಿ ಸೇವೆಸಲ್ಲಿಸುತ್ತಾರೆ, ಅಲ್ಲಿ ಉತ್ತಮ
ಗಮಕಿ ಹಾಗೂ ಶ್ರೇಷ್ಠ ವ್ಯಾಖ್ಯಾನಕಾರರಾಗಿ ಆ ಸುತ್ತಲಲ್ಲಿ ಪರಿಚಿತನಾದ. ಅಲ್ಲಿಂದ ಕೇದಿಗೆಸರಹು ಎಂಬ ಹಳ್ಳಿಗೆ ಬರುತ್ತಾರೆ. ಇಲ್ಲಿ ಅರ್ಚಕವೃತ್ತಿ ಜೊತೆಗೆ ಐಯ್ಯಗಳ ಕೆಲಸವನ್ನೂ ನಿರ್ವಹಿಸುತ್ತಾರೆ.

ಶಾ. ಶ. ೧೭೦೦ ರಲ್ಲಿ ಕೇದಿಗೆಸರುಹಿನಲ್ಲಿ ಶ್ರೀ ವ್ಯಾಸ ಪೌರ್ಣಮಿಯನ್ನು ಆಚರಿಸುತ್ತಾರೆ. ಅಲ್ಲಿ ಗೋಕರ್ಣದ ವಿದ್ವಾಂಸರಿಂದ ವ್ಯಾಸಭಾರತದ ಪ್ರವಚನ ಏರ್ಪಾಡಾಗಿರುತ್ತದೆ. ವ್ಯಾಸಭಾರತದ ಹದಿನೆಂಟು ಪರ್ವಗಳ ಕಥೆಯನ್ನು ಕೇಳಿದ ಮೇಲೆ, ಕನ್ನಡದಲ್ಲಿ ಸಮಗ್ರವಾದ ಭಾರತದ ಕೃತಿ ಇಲ್ಲವೆನಿಸಿತು. ಅದೇ ವರ್ಷ ಸಂಕ್ಷಿಪ್ತ ಭಾರತವನ್ನು ತುರಂಗಲಯದಲ್ಲಿ ರಚಿಸಿದರು.

ತುರಂಗ ಭಾರತದಲ್ಲಿ ಕಥಾವಸ್ತುವಿನ ದೃಷ್ಟಿಯಿಂದ ನೋಡಿದರೆ ಹದಿನೇಳು ಪರ್ವಗಳು. ನಾಂದ ಪದ್ಯಗಳ ಸಂಧಿಯನ್ನು ಣಒಂದು ಸಂಧಿ ಎಂದು ಪರಿಗಣಿಸಿದರೆ ಹದಿನೆಂಟು ಪರ್ವಗಳಾಗುತ್ತವೆ. ಕವಿ ವ್ಯಾಸಭಾರತದ ಎಲ್ಲ ಘಟನೆಗಳನ್ನೂ ಹೇಳುತ್ತಾನೆ.

ಆಸ್ತಿಕ ಪರ್ವ
ಪ್ರಥಮ ಖಂಡ
ಪೀಠಿಕೆ-ನಾಂದಿ

ಶ್ರೀ ಮಹಾಗಣಪ ನಿರ್ವಿಘ್ನತೆಯ ಮಾಡಿಸು |
ಕ್ಷೇಮದಿಂದೆನಗೆ ಕಾಮಿತ ಫಲವನಿತ್ತು ನಿ |
ಸ್ಸೀಮ ಸುಜನಸ್ತೋಮ ನಮಿತ ಇಕ್ಷುಪ್ರೇಮ ನಾಮಭಕ್ತಾರಾಮನೇ ॥
ಸೋಮಭೂಷಣ ಸಾಮಗಾನ ಭಕ್ತಪ್ರೇಮ |
ಹೇಮರತ್ನ ಕಿರೀಟದಾಮ ಶೃಂಗಾರ ಗುಣ |
ಕಾಮ ಹೋಮನ ಪುತ್ರ ಗಣಪ ಮಾಡೀ ಕೃತಿಗೆ ಸ್ವಾಮಿ ನಿರ್ವಿಘ್ನತೆಯನು॥೧॥

ರೂಢಿಸಿದ ಶಾರದಾಂಬಿಕೆ ಎನ್ನ ಜಿಹ್ವೆಯೊಳ|
ಗಾಡೆ ನಲಿನಲಿದು ಕುಣಿದಾಡೆ ಭಕ್ತನಿಗಭಯ |
ನೀಡೆ ನಿನಗಿನ್ನಾರು ಜೋಡೆ ಕಮಲಜನರಸಿ ನೋಡೆ ಕೃಪೆಯೂಡೆಕೂಡೆ॥
ಬೇಡುವೆನು ನಿನ್ನ ಸಿರಿಚರಣ ಪ್ರಸಾದದೊಳ |
ಗೀಡಿರಿದ ದವನ ಸಂಪಿಗೆ ಜಾಜಿಗಳನು ಕೈ |
ನೀಡಿ ಕೊಡೆ ಶಾರದಾಂಬಿಕೆ ತಾಯೆ ನೀ ಯೆನ್ನ ಗೂಡಿನೊಳು ನೆಲಸಿ ನುಡಿಸೆ॥೨॥

ಸಂಧಿ. ೫,

ಭವನ ಭಿಕ್ಷಾಟನೆ

ಹಸ್ತಿ ಚರ್ಮಾಂಬರಧರಂ ಕರದಿ ಕಮಲಜನ|
ಮಸ್ತಕವ ತರಿಯೆ ಪಿಡಿಯಲ್ಕದನು ಧರೆಸಿ ಪುರು|
ಷೋತ್ತಮನ ಮುಖದಲಿದ ನಿರ್ವಹಿಸಿ ಕೈಲಾಸಮಂ ಪೊಕ್ಕನುತ್ಸವದೊಳು॥

ಶ್ರೀಮದಮೃತಮಯೂಖ ಲೇಖಾವತಂಸನಭಿ|
ರಾಮಸುರಗಂಗೋತ್ತರಂಗೋತ್ತುಮಾಂಗ ನಗ|
ಜಾಮನೋಹರ ನಿರತಕರ್ಮಾಂಧಕಾರ ನಿರಹರಣ ಪ್ರಚಂಡಸೂರ್ಯ ॥
ಸಾಮಗಾನ ಪ್ರೇಮನಗಣಿತ ಸುರಾಸುರ |
ಸ್ತೋಮವಂದಿತ ಭಕ್ತರಂ ಸಲಹುಗನುದಿನಂ|
ಶ್ರೀಮಹೇಶಂ ಸದಾ ಕೈಲಾಸವಾಸಂ ಕೃಪಾಳು ರಕ್ಷಿಸು ಧೂರ್ಜಟೀ॥೧॥

ಮಾರಹರನಾಜ್ಞೆಯಿಂ ಸೃಜಿಸಲ್ಕೆ ಶಾರದೆಯೆ|
ವಾರಿಜೋದ್ಭವ ಸೃಜಿಸಿ ತೋರೆನಲ್ ಸುರಗುರುವ|
ವಾರಿಜಾಕ್ಷನ ಸೂನು ಕರೆಸಿದಂ ಬರಿಸಿದಂ ಮುನಿಗಳಂ ಸಂತಸದೊಳು॥
ಚಾರುತರ ಯಜ್ಞವಂ ಮಾಡಿಸಿದ ಬಹಳ ವಿ|
ಸ್ತಾರದಿಂ ಸಕಲ ಸಂಭಾರದಿಂ ನಾನಾಪ್ರ|
ಕಾರದಿಂ ವೇದೋಕ್ತ ಮಾರ್ಗದಿಂ ಪಾವಕನ ಪುಟಗೊಳಿಸಿ ಘೃತಗಳಿಂದ॥೫॥

ಮಾಡಿದರುಯಜ್ಞಮಂ ಕುಂಡದೊಳಗನಲನೋ|
ಳ್ಮೂಡಿದಳು ಸುರರು ಭಾಪೆಂದೆನಲು ವಿಧಿಯು ಕೈ |
ವಾಡದೋಳ್ ನಿರ್ಮಿಸಿದಮೂರು ಲೋಕದ ಮಾತೆಯೆನಿಸುವಳ ಶಾರದೆಯನು॥
ನಾಡೆ ಪಿಡಿದಿಹಳೊಂದು ಕರದಿ ಪುಸ್ತಕಗಳಂ|
ಕೂಡೆ ಮತ್ತೊಂದು ಹಸ್ತದಿ ಕಂಠಮಂ ಪಿಡಿದು|
ರೂಢಿಸಿದ ರೂಪು ಲಾವಣ್ಯದಿಂ ಕಂಗೊಳಿಸಿ ಬಂದಳಿಳೆ ಕಂಪಿಸೆ॥೬॥

ಕಂಡಜನು ಹಿಂದೆ ಸೃಜಿಸಿದ ನಾರಿಯೊಳೀಕೆ |
ಚಂಡೆ ಇವಳಂ ಪೋಲ್ವ ಮಾನಿನಿಯರನ್ನು ಬ್ರ|
ಹ್ಮಾಂಡದೋಳ್ ನಾ ಕಾಣೆನೀಕೆಗಂ ಮಿಗಿಲಾದ ಸ್ತ್ರೀಯರಂ ಜಗದೀಶನು॥
ಕಂಡನಾದರೆ ತನಗೆ ಬೇಕೆನುವನೆಂದು ಭಯ|
ಗೊಂಡಜಂ ಬಚ್ಚಿಟ್ಟ ಕಾಣ್ದಂತೆ ತಾನೆ ಮನ |
ಗೊಂಡು ಭೋಗಿಪೆನೆಂದಿರುತಿರಲ್ಕಿಂದುವಿನ ಕಳೆಯಂತೆ ಪೆರ್ಚ್ಚಿರ್ದಳು॥೭॥

ಕಂಗಳೋ ಕಾಮನ ಶರಂಗಳೋ ನೀಲಾಳ|
ಕಂಗಳೋ ರಕ್ತಾಧರಂಗಳೋ ಅಳಿಯ ಬಳ|
ಗಂಗಳೋ ಪವಳದ ಲತಂಗಳೋ ತೊಳಪ ವದನಂಗಳೋ ಪೂರ್ಣ ಕಳೆಯೋ|
ತಿಂಗಳೋ ನಗೆಯ ಬೆಳ್ದಿಗಳೋ ತುಂಗಸ್ತ|
ನಂಗಳೋ ಚಕ್ರವಾಕಂಗಳೋ ಮೆದುಪದತ |
ಳಂಗಳೋ ತಳಿರಕೆಂಪಂಗಳೋ ಎಂದೆನಲ್ ರಂಜಿಸಿದಳಾ ಶಾರದೆ॥೮॥

ಕುಂಭಕುಚವೆಂಬ ಕಲಶಂಗಳಲಿ ಪೊಳೆವಧರ |
ವೆಂಬ ಪಲ್ಲವಗಳಿಂ ತೊಳತೊಳಪ ನುಣಗಲ್ಲ |
ವೆಂಬ ದರ್ಪಣಂಗಳಿಂ ಪುಳಕಾಂಕುರಗಳೆಂಬ ಹರುಷಾಶ್ರು ವಕ್ಷತೆಗಳಿಂ ॥
ಬೆಂಬಳಿಯ ನೂಪುರಧ್ವನಿಯೆಂಬ ವಾದ್ಯಂಗ|
ಳಿಂ ಭಕ್ತಿಯೆಂಬ ಸುಮನೋರಾಗದಿಂ ನಯನ|
ವೆಂಬ ದೀಪಂಗಳಿಂ ಮದನನಂ ಇದಿರ್ಗೊಂಬಳೆಂಬಂತೆ ರಂಜಿಸಿದಳು॥೯|

ಸಿಕ್ಕಿದನು ಮನ್ಮಥನ ಬಲೆಯೊಳಗೆ ಬಿದ್ದು ಮನ|
ವಿಕ್ಕಿದನು ತನಗೆ ಪುಟ್ಟಿದ ಮಗಳ ತಾನೆ ವಿಧಿ|
ಕೊಕ್ಕರಿಸಿದಾಳ್ದು ಮರೆದನು ಲೋಕದೊಳಗಣ ಪ್ರಪಂಚವಡಗಳ್ ಮುನಿಗಳು॥
ದಿಕ್ಕಿಲ್ಲದಾಯ್ತೆನುತ ಪೋಗಿ ಪರಶಿವನ ಮರೆ |
ಹೊಕ್ಕು ಬಿನ್ನೈಸಿದರು ಕಮಲಜನು ಮಗಳ ಕೂ |
ಟಕ್ಕೆಳಸಿದಾ ಕಾರಣಂಗಳಲಿ ಮೌನ ಮಂತ್ರಾದಿಗಳ್ ಮಸಳಿಸಿದವು॥೧೦॥

ಎಂದೆನಲ್ ಪರಶಿವನು ಕೇಳ್ದು ಕೋಪಾಟೋಪ|
ದಿಂದ ದುಷ್ಕರ್ಮವಂ ಮಾಡಿದನೆ ಬ್ರಹ್ಮನಿದ |
ರಿಂದಲುಳಿವನೆ ನೀತಿ ತಪ್ಪಿದರೆ ತರಿದು ಬಿಸುಟುವೆನವನ ಮಸ್ತಕಗಳ॥
ಇಂದು ನಿಮ್ಮಾಶ್ರಮಕೆ ಪೋಗಿರೆಂದೆನುತ ಮುನಿ|
ವೃಂದವಂ ಬೀಳ್ಕೊಟ್ಟು ಶಬರರೂಪಿಂದ ಬಾ|
ಲೇಂದೈಧರ ಪಾಶುಪತ ಬಾಣವಂ ಧರಿಸುತಜನಿದ್ದೆಡೆಗೆ ನಡೆತಂದನು॥೧೧॥

ತನ್ನ ಮನಗೊಬ್ಬಿನಿಂದಿರುತಿರಲ್ಕಜನು ಶಿವ |
ನನ್ನು ಮಾತಾಡಿಸದಿರಲ್ಕೆಲವೊ ಕಮಲಭವ|
ನೆನ್ನೊಡನೆ ಮೌನವೇಕೆಂದೆನಲ್ ಗಿರಿಜೇಶನೊಡನೆಂದ ಹಮ್ಮಿನಿಂದ॥
ಇನ್ನೀ ಜಗತ್ತುಗಳ್ ನನ್ನ ದೆಸೆಯಿಂದಲು|
ತ್ಪನ್ನವಾಗಿಹವು ಕೇಳೆಲವೊ ನಾನಾರೂಪ |
ವರ್ಣದಿಂ ಸೃಜಿಸೈವೆನು ಜೀವರಂ ನಿಜವಿದು ಜಗವರಿಯಲು॥೧೨॥

ಇಲ್ಲ ನನ್ನಂ ಪೊರತು ದೈವಗಳು ಬೇರೆ ನಾ|
ನಲ್ಲದಾರಿನ್ನು ಮುಖವೈದಿಹುದು ನಿನಗೆ ನಮ|
ಗಿಲ್ಲವೇ ನೋಡೈದು ಮುಖವೆನುತ ಗರ್ವದಿಂದಾಡಿದನು ಪರಶಿವನೊಳು॥
ಕಲ್ಲೆದೆಯೊಳಿರ್ದು ನುಡಿಯಲ್ಕಿವನ ಚಪಲತೆಯ|
ಸೊಲ್ಲುಗಳ ಕೇಳ್ದು ಕಾಮಾರಿ ರೋಷಾವೇಶ |
ದಲ್ಲಿ ಕಡುಮುಳಿದಜನ ಶಿರವೈದರೊಳಗೊಂದು ತಲೆ ನಟ್ಟನಡು ತಲೆಯನು॥೧೩॥

ಮುಳಿದೆಡದ ಕೈಯುಗುರಿನಿಂ ಚಿವುಟಿದಂ ಉಳಿದ|
ತಲೆ ನಾಲ್ಕರಿಂದಜಂ ಇರುತಿರಲ್ ತರಿದತಲೆ|
ಹೊಳಹೆ ಪರಶಿವನ ಕರಕಮಲ ಪಿಡಿದದ್ಭುತವ ಬೀರಿದುದನೇವೇಳ್ವೆನು॥
ಎಲೆಲೆ ಕಡುಪಾಪಿ ಬಿಡು ಹಸ್ತಮಂ ಎಂದೆನಲ್|
ತಲೆ ಬಿಡೆನು ನಿನ್ನ ಕರವಂ ಪಿಡಿದು ಸದ್ಗತಿಯ|
ಗೆಲುವೆ ನಿನ್ನಂ ಬಿಟ್ಟರೆನ್ನ ದುಷ್ಕರ್ಮವಂ ಕಳೆವರಾರಿಲ್ಲೆಂದುದು॥೧೪॥

ಕಮಲಜನ ಮಸ್ತಕವ ಪಿಡಿದು ತೊಳಲಿದ ಶಿವಂ|
ಕಮಲಜನ ಪಂಚಾಸ್ಯತನ ಪೋಗಿ ಚತುರಾಸ್ಯ|
ಸಮನೆನಿಸಿ ಸುಜ್ಞಾನವಂ ಪಡೆದುಮಾಡಿದ ಪ್ರಪಂಚಮಂ ತಿಳಿವಿನಿಂದ॥
ಉಮೆಯರಸ ಭಿಕ್ಷಾಟನಂ ಗೈಯಲನುವಾದ|
ಸುಮನಸರುಘೇಯೆನಲ್ಕಭ್ರದೊಳು ಶಂಕರಂ |
ಕುಮತಿಗಳ ಸಂಸರ್ಗದಿಂ ದಿಗಂಬರನಾಗಿ ಹೊಸ ವೇಷಮಂ ತಾಳ್ದನು. ॥೧೫॥

ವರಕಾಂಚನಾದ್ರಿಯಿಂದಿಳಿದು ಪುಲಿ ಚರ್ಮವಂ |
ನಿರಿವಿಡಿದು ನಡುವಿಗಂ ಧರಿಸಿ ವಾಸುಕಿಯ ಸಿಂ|
ಗರದಿ ಯಜ್ಞೋಪವೀತವನಿಟ್ಟಲಂಕರಿಸಿ ಕರದೊಳ್ ಕಪಾಲವೆಡಿದು ॥
ಮರಿ ಪಾವುಗಳ ತೊಡವ ತೊಟ್ಟು ಕಿವಿಗಿಟ್ಟದನೆ |
ಮಿರುಪ ಜಡೆಯಲ್ಲಾಡೆ ನಡೆತರಲ್ಕಾಂತಿಯಿಂ|
ಧರಿಸಿದ ವಿಭೂತಿ ಭೂಷಣನು ಭಿಕ್ಷೆಯೆಂದೆನುತ ಸುರನಗರಿಗೈತಂದನು॥೧೮॥

ದುರುಳವಿಟರೆಂಬ ತಸ್ಕರರು ನೆರೆದಿರ್ದೆಮ್ಮ |
ಹರೆಯಮಂ ಕಳ ಬಂದರೆಂದು ಚೆಳ್ದುಗುರೆಂಬ |
ಸುರಗಿಯಲ್ಲಿರಿದು ನಳಿದೋಳೆಂಬ ಪಾಶದಿಂ ಕಟ್ಟಿ ಪೂಸರದಿ ಪೊಯ್ದು॥
ಸಿರಿ ಪಚ್ಚಕರ್ಪೂರಪುಡಿಯ ಮೈಯೋಳ್ ಪೊಯ್ದು |
ಸ್ಮರರಾಜನಾಜ್ಞೆಯಿಂ ಪಿಡಿತಂದು ತಮ್ಮ ಕುಚ|
ಗಿರಿಯೆಂಬ ಝರಿಗೊಯ್ದು ನೂಂಕಿಯಸುಗೊಂಬ ವೇಶ್ಯೆಯರಲ್ಲಿ ಕಣ್ಗೆಸೆದರು॥೨೦॥

ಎಂದು ನಮ್ಮೀಪುರಕೆ ಬಾರದಭವಂ ಬಂದ |
ನೆಂದು ಭಿಕ್ಷೆಯ ನೀಡಲೆಂದು ವಂದನೆ ಮಾಡ |
ಲೆಂದು ರೂಪವ ನೋಡಲೆಂದು ವರವಂ ಬೇಡಲೆಂದು ಮಾತಾಡಲೆಂದು॥
ಪೊಂದುಡುಗೆಯಂ ತೋರಲೆಂದು ಸೊಬಗಂ ಬೀರ|
ಲೆಂದು ಬರವಂ ಸಾರಲೆಂದು ಕಾಮಗೆ ದೂರ |
ಲೆಂದು ಕಾಮುಕಿಯರೈತಂದು ಬೀದಿಯ ನಡುವೆ ನಿಂದು ಬೆರಗಾಗಿರ್ದರು॥೨೩॥

ಎಲ್ಲಿಂದ ಬಂದನೊ ಈ ಮೋಹನದ ಸಿದ್ಧ|
ನೆಲ್ಲಿಂದ ಬಂದನೋ ರೂಪುಳ್ಳ ರುದ್ರ ತಾ |
ನೆಲ್ಲಿಂದ ಬಂದನೋ ಬಹು ಶೋಭೆಗಾಸ್ಪದಂ ಅರರೆ ಭಿಕ್ಷಾಪಾತ್ರನು॥
ಎಲ್ಲಿಂದ ಬಂದನೋ ಜಾಣ ಜಂಗಮರಾಯ |
ನೆಲ್ಲಿಂದ ಬಂದನೆಂದಾ ವಾರಾಂಗನೆಯ |
ವೃಂದವುಂ ತಮತಮಗೆ ಬೆರಗಾಗಿ ಮನಸೋತು ಮರುಳಾಗಿ ನಿಂದಿರ್ದುದು॥೨೪॥

ಸ್ಮರಣೆಯಿಂ ಪುಟ್ಟುವುದು ಮೋಹ ಸತಿ ತಾನೆ ಹ|
ತ್ತಿರಕೆ ಬರೆ ಪುಟ್ಟುವುದು ಮಾತು ಅಲ್ಲಿಂದಲಾ|
ತರುಣಿ ಸೋಂಕಿದೊಡೆ ಪುಟ್ಟುವೈದು ತವಕ ನೋಟದಿಂ ಪುಟ್ಟುವುದು ಬೇಟ॥
ಸುರತದಿಂ ಪುಟ್ಟುವುದು ಮೂರ್ಛೆ ಸುರತಾಂತ್ಯದಿಂ |
ದಿರದೆ ಪುಟ್ಟುವುದು ಲಜ್ಜಾಭಾವವೆಂದದರ ॥
ಪರಿಯ ಬೆಸಗೊಂಡ ಮಿತ್ರಂಗೆ ಪ್ರೌಢ ಪ್ರತ್ಯುತ್ತರಂಗಳಂ ಪೇಳ್ದನು॥೨೬॥

ಮತ್ತಲ್ಲಿಯೊರ್ವಳು ಭವಂಗೆ ಭಿಕ್ಷಾಶನವ|
ನರ್ಥಿಯಿಂ ತಂದು ನೀಡಲೈ ಪಾತ್ರೆಯಂ ಮೇಲ|
ಕ್ಕೆತ್ತೆ ಮೇಲುದು ಜಾರೆ ನಾಚಿ ನಸುನಗುತ ಪೆರ್ಮೊಲೆಗಂಬರಾಂಚಲವನು॥
ಹತ್ತಿಸುತ ಹರನ ಜಾಣ್ಮೆಗೆ ಮೆಚ್ಚಿ ತಲೆದೂಗೆ |
ಚಿತ್ತಜಾಂತಕನವಳ ಭಾವಮಂ ಮರಳಿ ನೋ |
ಡುತ್ತ ವರಹಸಿತ ಮುಖಿಯಾಗಿ ಭಿಕ್ಷೆಯೆಂದೆನುತ ಮುಂದಕಂ ನಡೆತಂದನು॥೨೭॥

ಅತ್ತತ್ತು ಬೇಸರುತಿದೆ ಮೊಗವು ಕೋಣೆಯೊಳ|
ಗತ್ತೆ ಮಾವದಿರು ಮಲಗುವುದು ಕೆಟ್ಟಪುದಿಂದು ॥
ಪತ್ತಿರಿದ್ದೆನ್ನ ಪತಿಯೂರ್ಗೆ ಪೋದನು ಬಾರದತ್ತಲಿನ್ನೇನಾದನೋ॥
ಪೊತ್ತು ಪೋಗದಲೆ ನಡುಮನೆಯ ಪರಳುನೆಲ ಮೈಯೊ|
ಳೊತ್ತುತ್ತಿದೆ ನಿದ್ರೆಯ ಕೆಡಿಸಿತೇಗುವೆನು ವಿಧಿಯಿಂದೆ |
ನುತ್ತಲೋರ್ವಳು ಜಾರಗಂ ಸನ್ನೆ ನುಡಿದಳು ಭಯಾರ್ಥವಾಗೊಂದೆಡೆಯೊಳು॥೨೮॥

ಸುರನಗರಿಯೊಳಗೆ ಭಿಕ್ಷಂಗಳಂ ಸಂಚರಿಸಿ|
ತರುಣಿಯರನೆಲ್ಲರಂ ಭ್ರಮೆಗೊಳಿಸಿ ಬಹ ಗೊರವ |
ತಿರುಗಿದನು ಯಕ್ಷಪುರಿಗೆ ತಂದು ಗೋಪುರಂಗಳ ಕಳೆದು ಕೇರಿಯೊಳಗೆ ॥
ಬರುತ ಮನೆಮನೆಗಳಂ ಪೊಕ್ಕು ಭಿಕ್ಷಾಯೆನಲ್|
ತರುಣಿಯರು ಭಿಕ್ಷೆಯಿಕ್ಕಲ್ ಬರುತ ಮರುಳಾಗಿ|
ನೆರೆದು ಸತಿಯರು ಗೊರವನಂ ಕಂಡು ಕೂಟಕಂ ಮನತಂದರೇನೆಂಬೆನು॥೨೯॥

ನೊಂದರಂಗಜ ಬಾಣದೆಸುಗೆಗಂ ನಾರಿಯರ|
ವೃಂದ ಬೆರಗಾಗಿ ಕಣ್ಸನ್ನೆಯಿಂ ತಿರುಕ ಬಾ |
ರೆಂದು ಕರೆದು ಮರೆಗೆ ಕೈವೀಸಿ ಕುಚಗಳಂ ತೋರಿಸುತ ಕೂಟಕೆಂದು ॥
ಇಂದುಮುಖಿಯರ ನೋಡಿ ಬರೆ ಯಕ್ಷರುಗಳ ಸತಿ |
ಬಂದು ಭಿಕ್ಷಾಧಾರಿಯಂ ಕಂಡು ಮದಗೊಬ್ಬಿ|
ನಿಂದಲಣಗಿಸಿ ಭಿಕ್ಷುಕಗೆ ಕಲ್ಲನಿಕ್ಕಿದಳು ಸರಸದಿಂ ಜಗದೀಶನಂ॥೩೦॥

ಪರಶಿವನು ಭಿಕ್ಷಾಟನಂಗೈದು ಯಕ್ಷಪುರ |
ವರದಿಂದ ಮರಳಿದಂ ಗೊರವಿಕೆಯನಳವಡಿಸಿ|
ತಿರುಗಿದಂ ಕಿನ್ನರರ ಕಿಂಪುರುಷ ಸತಿಯರಂ ಭ್ರಮೆಗೊಳಿಸಿಯುರ್ವೀತಳಕೆ॥
ಪರಿತಂದು ಋಷಿಗಳಾಶ್ರಮಗಳಂ ಪೊಕ್ಕು ಮುನಿ|
ವರರ ಮನೆ ಬಾಗಿಲೊಳ್ ನಿಂದು ಭಿಕ್ಷಾಯೆನಲ್ |
ತರುಣಿಯರು ಪರಿತಂದು ಭಿಕ್ಷೆಯಂ ಪಿಡಿದು ಕಂಡರು ಮಾರಹರನಂಗವ॥೩೨॥

ಮೂಡಿದುದು ಮದನಶರ ಋಷಿಪತ್ನಿಯರಿಗೆ ತನು|
ಬಾಡಿದುದು ಮನಸೋತು ಮುಗುಳು ನಗೆಯಲಿ ತಮ್ಮ |
ಗೂಡಮರೆದಿರಲುಡುಗೆ ಸಡಿಲಿದುದು ಮೊಗದಿ ಬೆವರೆದ್ದುದು ವಿಕಾರದಿಂದ॥
ಕಾಡಿದರು ಮೃಡನ ಬಿಗಿದಪ್ಪಿಕೊಳಲು ಮನವ|
ಮಾಡಿದರು ಲಲನೆಯರು ಮತಿಗೆಟ್ಟು ಕಾಮಶರ|
ಗೂಡಿನೋಳ್ ಧಟ್ಟುಚ್ಚಿ ಭ್ರಮೆಗೊಂಡರೇನದಂ ಬಣ್ಣಿಸುವೆನಚ್ಚಿರಿಯ॥೩೩॥

ಶಶಿರೇಖೆ ಕಾಳಾಹಿವೇಣಿ ಕರ್ಪುರಗಂಧಿ |
ಕುಸುಮಾಹಿ ಕುಶಲೆ ಕೋಮಲೆ ಸುವಿದ್ಯಾರತ್ನೆ|
ರಸಭರಿತೆ ರಾಗಕೋಕಿಲೆ ರಾಗಲಕ್ಷ್ಮಿ ರತಿರೂಪೆ ಶೃಂಗಾರಹಾರೇ॥
ಅಸಮೆಯಭಿನವಭೋಗಿ ರಾಗಿ ಸರಸ ತ್ಯಾಗಿ |
ರಸಿಕಾವತಂಸೆಯೆಂದೆನಿಸಿ ಪುಣ್ಯಾಂಗನೆಯ |
ರೆಸೆದಿರ್ದರೀಶ್ವರನ ಮುಂದೆ ಭಿತ್ತಿಯಲಿ ಚಿತ್ರಿಸಿದ ಪುತ್ಥಳಿಗಳಂತೆ॥೩೫॥

ಮುನಿ ಕಶ್ಯಪಾತ್ರಿ ವಿಶ್ವಾಮಿತ್ರ ಜಮದಗ್ನಿ |
ವಿನುತ ವಾಸಿಷ್ಠ ಗೌತಮ ಭರದ್ವಾಜ ಜೈ |
ಮಿನಿ ಜಹ್ನು ಮಾಂಡವ್ವನುಪಮನ್ಯುವಾಂಗಿರಸ ದೂರ್ವಾಸ ಪಾರಾಶರಾ ॥
ತನುಜ ವೇದವ್ಯಾಸ ಗಾರ್ಗ್ಯ ಭೃಗು ಪೌಲಸ್ತ್ಯ |
ನನುಪಮ ದಧೀಚಿ ಮಾರ್ಕಂಡೇಯ ವಾಲ್ಮೀಕಿ|
ಯೆನಿಪ ತಪಸಿಗಳಾಶ್ರಮಂಗಳೋಳ್ ಭಿಕ್ಷಾಟನಂಗೈದು ನಡೆತಂದನು॥೪೧॥

ಕಣ್ಗೆ ಮಂಗಳವೆನಿಸಿ ಮೆರೆಯುತಿಹ ಪಾತಾಳ|
ಗಂಗೆ ಗಯೆ ಯಮುನೆ ಗೋದಾವರಿ ಮಲಪ್ರಹರಿ|
ತುಂಗೆ ಗೌತಮಿ ಭದ್ರೆ ಕಾವೇರಿ ಕಪಿಲೆ ಸರಯೂ ನದಿಯ ಭೀಮರಥಿಯ ॥
ಗಂಗ ಸಾಗರ ಸಕಲ ತೀರ್ಥಂಗಳಂ ಸುಪಾ |
ದಂಗಳಿಂ ಪಾವನವ ಗೈಯ್ಯುತ್ತ ಮಹಾಪ್ರಯಾ |
ಸಂಗಳಲಿತ್ರೈಲೋಕ್ಯಮಂ ಚರಿಸಿ ಜಗದೀಶಂ ಭಿಕ್ಷಾಟನಂಗೈದನು॥ ೪೨॥

ಶ್ರೀಶೈಲ ಹಿಮದ ಕೇದಾರಮೊಪ್ಪುವ ವಾರ|
ಣಾಸಿ ಪಂಪಾಕ್ಷೇತ್ತ ಬದರಿಕಾಶ್ರಮ ಸೇತು|
ಶೇಷಗಿರಿ ಶಿವಗಂಗೆ ಕುಂಭಕೋಣಂ ಕಂಚಿ ಮೊದಲಾದ ದೇಶಂಗಳ॥
ಈಶ ಜಗದೀಶ ವರದಾತೀರ ಮೊದಲಾದ|
ದೇಶ ದೇಶದ ಮಹಾಸ್ಥಾನಂಗಳಂ ನೋಡು|
ತಾ ಶಿವಂ ಲಕ್ಷ್ಮೀಶನಂ ಕಾಂಬ ತವಕದಿಂ ವೈಕುಂಠಕೈತಂದಂ॥೪೩ ॥

ಮನೆ ಮನೆಯ ಮುಂದೆ ಭಿಕ್ಷಾಯೆಂಬ ಸಂ|
ಜನಿಸೆಯದ ಕೇಳ್ದು ತಪಸಿಗಳು ಬಿಜಯಂಗೈದ |
ರೆನುತ ಭಕ್ತಿಯಲಿ ಭಿಕ್ಷೆಯ ನೀಡಲೆಂದು ತಮತಮಗೆಲ್ಲ ಸಂಭ್ರಮಿಸುತ
ವನಜವಕ್ತ್ರೆಯರು ಕೈರವ ನೇತ್ರೆಯರು ಕಾಂ|
ಚನ ಕರ್ಣಪಾತ್ರೆಯರು ಮಾಂಗಲ್ಯ ಸೂತ್ರೆಯರು |
ವಿನುತ ಸದ್ಗಾತ್ರೆಯರು ಪಾವನ ಚರಿತ್ರೆಯರು ಗೃಹಗಳಿಂ ಪೊರಮಟ್ಟರು॥೪೪॥

ನಾರಾಯಣಂಗೆ ಮರವೆಯ ಬೀರಿ ವೈಕುಂಠ |
ದೂರ ನಾರಿಯರ ಮನೆಮನೆಗಳಂ ಪೊಕ್ಕು ತಾ|
ಮಾರಹರ ವಿವಿಧ ರೂಪಂ ಧರಿಸಿ ಭಿಕ್ಷೆಯಂ ಬೇಡಿದನು ಸಂತಸದೊಳು॥
ಕಾರಣವ ವಷ್ಣುವಿಂಗರುಪಬೇಕೆಂದು ತ|
ದ್ಭೂರಿ ತಾಪಸ ರೂಪನುಳಿದೇಕ ರೂಪಾಗಿ|
ಮಾರಾರಿ ಗಗನ ಗಂಗಾಧಾರಿ ಭಕ್ತಸಂಚಾರಿ ನಡೆತರುತಿರ್ದನು॥೪೬॥

ಅರಮನೆಯ ಬಾಗಿಲೊಳ್ತಡೆವ ವಿಷ್ವಕ್ಸೇನ |
ಸರಸದಿಂ ಪೋಗಬೇಡೆಂದೆನಲ್ ಶೂಲದಿಂ|
ದಿರಿದು ನೆಗಪಿಯೆ ಬಂದನೊಳಪೊಕ್ಕು ಭೀಕರಾಕೃತಿಯಿಂದ ಭಿಕ್ಷವೆನುತಾ॥
ಹರಿಯರಸಿ ಮಂಚದಿಂದಿಳಿದು ಪೊಂಬಟ್ಟಲೋಳ್ |
ಕರವಿಡಿದು ಭಿಕ್ಷೆಯಂ ತರುತಿರಲ್ ಸಂಭ್ರಮದಿ॥
ಹರನ ಹಸ್ತದ ಶೂಲದಗ್ರದೊಳ್ ಪೆಣನಂ ಕಂಡು ಬೆದರಿ ಹಾಯೆಂದಳು॥೪೭॥

ನಗಧರನಿದೇನೆಂದು ಬಂದು ಸಿರಿಯಿದ್ದೆಡೆಗೆ |
ನೆಗಪಿದಂ ಬೋಳೈಸಿ ತರುಣಿ ಮೂರ್ಛಿತೆಯಾದ |
ಬಗೆಗಳಂ ನೋಡಿ ಮಂತ್ರಿಸಿ ನೊಸಲಿನೋಳ್ ವಿಭೂತಿಯ ಧರಿಸಿ ಬೆಸಗೊಂಡನು॥
ತೊಗಲುಡುಗೆ ಪೆಗಲ ಮೇಲಣ ತಿಸುಳದಪೆಣದಿಂ |
ದೊಗುವ ರಕ್ತದ ಪಾವುದೊಡವುಗಳ ರುಂಡಮಾ|
ಲೆಗಳ ಕಾಪಾಲಿಯಿರ್ದಪನು ಭಿಕ್ಷೆಯ ನೀಡಲಂಜಿ ತಿರುಗಿದೆನೆಂದಳು॥೪೮॥

ಬಂದನೇ ಎನ್ನ ಸಾಕ್ಷತ ಗುರುರಾಯ ತಾ |
ಬಂದನೇ ಎನ್ನಿಷ್ಟವೆನಿಪ ದೇವರ ದೇವ |
ಬಂದನೇ ಎನ್ನ ದಾತಾರ ದುರ್ಗುಣ ತಿಮಿರ ನಿರಹರಣ ಚಂಡ ಸೂರ್ಯ॥
ಬಂದನೇ ಎನ್ನನನವರತ ಪಾಲಿಸುವಾತ |
ಬಂದನೇ ಎನ್ನ ಭಾಗ್ಯದ ಸದಾಶಿವನೊಲಿದು |
ಬಂದನೇ ಎನಿತೊಲಿದು ಬಂದು ಶ್ರೀಹರನ ಮೂರ್ತಿಯ ಕಂಡನಹಿಶಯನನು॥೪೯॥

ಮುರಹರನೆ ಸಾಕು ನಾಚಿಸದಿರೆನುತಲಾ |
ಪರಶಿವನು ನುಡಿದನೆಲೆ ವಿಷ್ಣು ವಿಧಿಕಪಾಲ|
ಕರದೊಳಿರ್ದೆನ್ನ ಬಾಧಿಸುತಿಹುದು ಗ್ರಾಸವಿಕ್ಕುವ ಪರಿಯ ನೋಡೆಂದನು॥
ಹರಿತಂದು ಹರಿಸಕಲ ವಸ್ತುವನ್ನಡರಿಸಲ್ |
ವರ ಕಪಾಲಂ ಸುರಿದ ವಸ್ತುಗಳನಿತುವಂ |
ನೆರೆ ನುಂಗುತಿರಲಂದು ಶೇಖರಂ ಕಂಡು ನಾರಾಯಣಗಿಂತೆಂದನು ॥೫೧॥

ಇಕ್ಕುತಿಹ ಗ್ರಾಸದೆಡೆಯೊಳು ಮುಂದೆ ಕಾಸೆಯ|
ನಿಕ್ಕಿ ಬಿಡಿಸೆಂದೆನಲ್ ಮುರಹರನು ವಜ್ರ ಕಂ |
ಭಕ್ಕೆ ತಲೆಯಂ ಪೊಡೆದು ಅರುಣಜಲಮಂ ಸುರಿಸುತಿರ್ದನಜ ಪಾತ್ರೆಯೊಳಗೆ॥
ಇಕ್ಕಿದನು ಬ್ರಹ್ಮನ ಕಪಾಲಕಂ ಸುರಿಸುರಿಸಿ |
ರಕ್ತಮಂ ಕರಿಯ ಬರಿ ಕೈಯ್ಯ ತೋರಲದರುಣ |
ಪೊಕ್ಕು ತುಂಬುತ್ತಿರಲದಂ ಕಂಡು ಬ್ರಹ್ಮನ ಕಪಾಲ ಬೆಳೆಯುತ್ತಿರ್ದುದು॥೫೨॥

ಸುರಿಯುತಿರ್ದುವು ರಕುತ ಧಾರೆಗಳ್ ಮಳೆಗಾಲ|
ದೊರತೆಯೋಪಾದಿಯೊಳ್ ಬೀಳುತಿರೆ ಮುರಹರಂ |
ಕರಗಿದನು ಜರುಗಿದಂ ಸುರಿಸುರಿದು ಸಾರವೆಲ್ಲಾ ಪೋಗಿ ದೇಹವರತು ॥
ಇರದೆ ತರತರಿಸುತಂ ಬೀಳೆ ಕೈವಿಡಿದೆತ್ತಿ |
ಪುರಮಥನ ಮುರಹರನ ಸಂತೈಸಿ ಬೀಳ್ಕೊಂಡು|
ತೆರಳಿದನು ದೈತ್ಯರಂ ಮಡಹಿ ರಕ್ತಂಗಳನ್ನೆರೆದನಂದಜ ಪಾತ್ರೆಗೆ,॥೫೩॥

ಇನ್ನು ಬಿಡು ಮುಂದೆ ಕಲಹವಿಕ್ಕಿ ನಿನ್ನುದರ |
ವನ್ನು ತುಂಬಿಸುವೆ ಬಿಡು ಬಿಡು ಕರವನೆನುತ ಶಿವ |
ತನ್ನೆಡದ ಕೈಯ್ಯ ಪಿಡಿದಿರ್ದ ಬ್ರಹ್ಮನ ಶಿರ ಕಪಾಲಮನಲ್ಲಿ ಜರಿದು॥
ತನ್ನ ರಜತಾಚಲಕೆ ಬರಲು ಕಾಮಾರಿ ಬಳಿ|
ಕಿನ್ನು ಹರನೋಲಗಕ್ಕೈತರಲು ಬ್ರಹ್ಮ ವಿಷ್ಣು
ವನ್ನು ಕಂಡೊದರಿದುದು ಮೂಜಗಂ ತಲ್ಲಣಿಸೆ ಹರಿಕೇಳ್ದು ಬೆಸಗೊಂಡನು॥೫೬॥

ನುಡಿ ಎಲವೋ ನೀನಾರು ಮೊರೆಯಿಡುವುದೇಕೆನಲ್ |
ನುಡಿದುದಾ ಕಮಲಜನ ಮಸ್ತಕವು ಗ್ರಾಸಮಂ|
ಮೃಡನೆನಗೆ ಕೊಡದೆ ಮೋಸದಿ ಬಿಸುಟುಪೋದನೆಂದೊದರಿದುದ ಜನಶಿರವು॥
ಕಡಲ ಶಯನಂ ಕೇಳ್ದು ಕರುಣದಿ ಕಪಾಲಕಂ |
ನುಡಿದ ಪರಮೇಶ್ವರನ ಕರುಣದಿಂದಲಿ ನಿನ್ನ |
ಒಡಲ ಪೊರೆವೆನೆನುತ್ತ ಸಂತೈಸಿ ಹರನೆಡೆಗೆ ಮುರವೈರಿ ನಡೆತಂದನು॥೫೭॥

ಕೃತ್ತಿವಾಸನ ದಾನವಧ್ವಂಸಿ ಕಂಡು ಸಿರಿ|
ಹಸ್ತದಿಂ ಶರಣೆಂದು ಸ್ತುತಿಗೈವುತಿರೆ ಶಿವಂ|
ಸತ್ಕರಿಸಿ ಪ್ರೀತಿಯಿಂದವಿರಳಾಸನದಲ್ಲಿ ಕುಳ್ಳಿರಿಸಿ ಬೆಸಗೊಳ್ಳಲು॥
ಚಿತ್ತವಿಸು ದೇವನಿಮ್ಮೋಲಗಕೆ ಬರುತ ನಾ |
ನತ್ತ ಕೇಳ್ದೆನು ವಿಧಿಯ ಮಸ್ತಕದ ದುಃಖಮಂ|
ವಿಸ್ತರಿಸಲಳವಲ್ಲ ಕೃಪೆಯಿಂದ ಗ್ರಾಸವಂ ಈಯಬೇಕೆಂದೆನ್ನಲು॥೫೮॥

ಸಿರಿಯಲಸ ಕೇಳ್ ವಿಧಿಯ ಮಸ್ತಕದ ದೆಸೆಯಿಂದ |
ಪಿರಿದಾಗಿ ಯುಗವೆರಡು ತೊಳಲಿದೆನು ಅಪಕೀರ್ತಿ|
ಧರೆಯೊಳಗೆ ಬಂತು ಭಿಕ್ಷುಕನೆಂದು ನಿಂದೆಗಂ ಗುರಿಯಾದೆ ಮೂಜಗದೊಳು॥
ಕರುಣಿಸುವ ನಾನಲ್ಲ ಮುಂದಿನ್ನು ಮತ್ತೆ ನಿ |
ನ್ನರಿ ನೀನೆಯೆಂದೆನಲ್ ಮುರವೈರಿ ನಿಮ್ಮ ದಯೆ |
ಕರುಣದಿಂದಾಗ ಬೇಕಲ್ಲದೆನ್ನೊಳ ಸಾಗದೆಂದೆನಲು ಶಿವ ನುಡಿದನು॥೫೯॥

ಇನ್ನೊಂದು ಕೆಲಸವನ್ನರುಪುವೆನು ನಿನಗೆ ಕೇ|
ಳಿನ್ನು ಮಾಯಾಜನಕತಂತ್ರದಿಂ ಭಾರತವ |
ಚೆನ್ನಾಗಿ ರಚಿಸು ಸದ್ಯೋಜಾತ ಮೊದಲಾದ ಪಂಚಕದ ಶಿರವೈದನು ॥
ಭಿನ್ನವಿಲ್ಲದೆ ಸುರಕುಲಾನ್ವಯದಿ ಪಾಂಡುವಿನೊ|
ಳಿನ್ನು ಸುತರೈವರು ದೂರ್ವಾಸಮುನಿ ಮುಖದೋಳ್ |
ಚೆನ್ನಾಗಿ ಪುಟ್ಟುವೆನು ದೈತ್ಯರನು ರಚಿಸು ಕುರುಕುಲದೊಳಗೆ ನೀನೆಂದನು॥೬೦॥

ದುರುಳ ದುರ್ಯೋಧನರ ನೂರ್ವರಂ ಪರುಠವಿಸಿ |
ಧರೆಯೊಳಗೆ ಏಳು ಹನ್ನೊಂದು ಅಕ್ಷೋಹಿಣಿಯ |
ನೆರಹಿ ದಳಗಳನು ಪದಿನೆಂಟು ದಿನದೊಳಗೆಲ್ಲ ಸಂಹರಿಸಿ ಗದೆಯಿಂದಲೇ ॥
ಸರಸಿಜೋದ್ಭವನ ಶಿರಕೆ ಮೋಕ್ಷಂ ಗೈವುದೆನೆ |
ಹರಿ ಬೀಳ್ಕೊಂಡು ಹರನಿರೂಪದಲಿತ್ತ ನಡೆದು |
ಮುರವೈರಿ ಭೂಭಾರರಂ ಸೃಜಿಸಿ ಪಾಂಡವರ ಪತಿಕರಿಸಿ ಧಾರೈಣಿಯೊಳು॥೬೧॥

ಕುರುಭೂಮಿಯೊಳಗೇಳು ತಾಳೆಮರದುದ್ದ ನೆ|
ತ್ತರು ಪರಿದು ಪಾತ್ರೆಗಂ ತುಂಬಿದುದು ಈಶ್ವರಂ|
ಪರಿತಂದು ವಿಧಿಕಪಾಲದ ಹದನಮಂ ಅರಿದು ಗಯದಿ ಮೋಕ್ಷಂಗೈಸಿದಂ॥
ವರ ಕಪಾಲಿಯೆನುತ್ತ ಪೆಸರಾಯ್ತು ಲೋಕದೊಳ್|
ನರರು ತತ್ ಕ್ಷೇತ್ರದಲಿ ತಮ್ಮ ಪಿತೃಗಳಿಗೆಲ್ಲ |
ಪರಿತಂದು ಪಿಂಡ ಪ್ರದಾನಮಂ ರುದ್ರಪಾದದಿ ಮಾಡಿಯುದ್ಧರಿಪರು॥೬೩॥

ಪುರಹರಂ ಕೈಲಾಸಮಂ ಪೊಕ್ಕಮೇಲ್ಬಳಿಕ |
ಮುರಮಥನ ಭೂಭಾರವನ್ನಿಪಳುಹಿ ಧರಣಿಯಂ |
ವರ ಯುಧಿಷ್ಠಿರಗೆ ಪಟ್ಟಾಭಿಷೇಕಂಗೈದು ಹಸ್ತಿನಾಪುರದೊಳಿರಿಸಿ॥
ಕೌರವರಿಗೀಶನನುವಿಡಿದಿನ್ನು ಪದವಿಯಂ |
ಸೇರಿಸುವೆನೆಂದು ಮನತಂದು ನಡೆತಂದು ತಾ|
ದ್ವಾರಾವತಿಗೆ ಬಂದು ಸುಖದಿಂದಿರ್ದ ಬಕವೈರಿಕೋಣೆ ಲಕ್ಷ್ಮೀರಮಣನು॥೬೪॥

ಕ್ಷಿತಿಯೊಳೀ ಭಿಕ್ಷಾಟನದ ಚರಿತೆಯೆಂಬ ಸತ್|
ಕೃತಿಯ ಮುದದಿಂದೋದಿದರ್ಗಿದಂ ಕೇಳ್ದರಿಗೆ |
ಪ್ರತಿಯ ಬರೆವರಿಗೆ ಆಯುರಾರೋಗ್ಯಮೈಶ್ವರ್ಯಮಂ ಕೊಡುವ ಜಗದೀಶನು॥
ಶ್ರುತಿಮತವಿಡಿದು ಪುರಾತನ ವಚನ ಋಷ್ಯೋಕ್ತ |
ಕಥನವಿದ ಜನಮೇಜಯಂಗೆ ವೈಶಂಪಾಯ|
ಚತುರತೆಯೊಳೆಂದುದಂ ಸೂತರೆಂದರು ನೈಮಿಷಾರಣ್ಯ ಮುನಿವೃಂದಕೆ॥೬೫॥

ಆದಿ ಪರ್ವ
ಸಂಧಿ: ೪
ಕೌರವನು ಮಾವಂದಿರನ್ನು ಸೆರೆಹಿಡಿದದ್ದು

ಮೋಸದಿಂ ಮಾತುಳರ ಕುರುನೃಪತಿ ಸೆರೆಮನೆಯೊ|
ಳೈಸರಂ ಕೊಲಬಗೆಯೆ ಗಾಂಧಾರಿ ಮೊರೆಯಿಡಲ್|
ಸಾಸಿಗನು ಕಲಿ ಭೀಷ್ಮ ನೃಪತಿಗಂ ಪೇಳ್ದು ಬಿಡಿಸಿದ ಶಕುನಿಯೋರ್ವನಿರಲು॥ ಪದ॥

ಚಿತ್ತವಿಸು ಜನಮೇಜಯಕ್ಷಿತಿಪ ಕೌರವರ |
ಚಿತ್ತ ಪಲ್ಲಟವಾಯ್ತು ಹೃದಯದೊಳು ವೈರವಂ|
ಬಿತ್ತಿ ಬೆಳೆಯುತ್ತಿರಲ್ ಪಾಂಡವರ ಮೇಲೆ ಕಲಹಮನೆಸಗಿ ತೊಳಸಾಟಮಂ॥
ಹೊತ್ತು ಹೊತ್ತಿಗೆ ಬೀದಿಗಲಹ ಕೈದೊಳಸುಗಳ್ |
ಪತ್ತಿದವು ಶಕುನಿ ಬೋಧೆಗಳಿಂದೆನಲು ಮುನಿ|
ಪೋತ್ತಮನೆ ಕರುಣಿಸೆಲೆ ಶಕುನಿ ಕಥೆಗಳನೆನಲ್ಕೆಂದನಾ ಭೂರಮಣಗೆ॥೧॥

ಧರಣಿಪತಿ ಕೇಳು ನೀನಿದರ ವೃತ್ತಾಂತಮಂ |
ವಿರಚಿಸುವೆನಳಿಯ ಮಾವಂದಿರಿಗೆ ವೈರ ಬಂ|
ದಿರುವ ಪರಿಯಂ ಮಂದರಾದ್ರಿಯೊತ್ತಿನಲಿ ನೆರೆ ಸಿಂಧುವಿಗೆ ಸರಿಯೆನಿಸುವ॥
ವರ ಮಹಾ ಕಾಳಿಂದಿ ನದಿಯ ವೊತ್ತಿನೊಳು ಪುರ |
ವಿರುತಿಹುದು ಗಾಂಧಾರ ದೇಶವದು ಮತ್ತದನೆ
ವರ ಕಳಿಂಗಾ ದೇಶವೆಂಬರದು ಸುರಪುರಿಗ ಮಿಗಿಲೆನಿಸಿ ರಂಜಿಪುದು॥೨॥

ಒಕ್ಕಣಿಸಲದುವೆ ಸೌಧಾಪುರಂ ಎಂದದಕೆ |
ತಕ್ಕದೊರೆ ಸುಬಲನೆಂಬುವನಾಳ್ವನಾತ ದಶ|
ದಿಕ್ಕುಗಳ ಜಯಿಸಿದ ಪರಾಕ್ರಮವನು ಸತ್ಯದಿಂದಾಳುತಿಹನಾ ರಾಜ್ಯವ ॥
ಒಕ್ಕಲನು ಪೊರೆವ ಪ್ರಜೆ ಪರಿವಾರಗಳಲಿ ದಯ|
ಮಿಕ್ಕೆನಿಸಿ ನೀತಿ ತಪ್ಪದೆ ಧರಣಿಪಾಲನಿರು|
ತಿಕ್ಕು ಸುಬಲನು ಲೋಕಹಿತನೆನಿಸಿಯಿರುತಿರಲ್ಕೊಂದು ದಿನ ಭೂಪ ಕೇಳು॥೩॥

ಬರಲು ಸೂರ್ಯಗ್ರಹಣ ಪುಣ್ಯಕಾಲಮದೆಂದು |
ಸುರನದೀಸುತ ಗುಡಿಯನೆತ್ತಿಸಿದ ಬಿಡಿಸಿದನು|
ಹೊರಬೀಡ ಕರಿ ಘಟೆ ತುರಂಗಮಂ ದಳ ಸಹಿತ ವಿದುರನಂ ಕೂಡಿಕೊಂಡು॥
ತೆರಳಿದನು ಕಲಿ ಭೀಷ್ಮ ಸುರನದಿಯ ತೀರಕಂ |
ಬರಲು ದೊರೆತನವು ತನಗಿಲ್ಲದಿರೆ ಧೃತರಾಷ್ಟ್ರ |
ನಿರಲು ಪಾಂಡು ಮಹೀಶ ಬಾಲಕರುಯಿರುತಿರಲ್ಕಲ್ಲಿ ನಾನಾದೇಶದ॥೪॥

ಧರಣಿಪರು ನಾನಾ ಸಮಸ್ತಜನ ಸ್ನಾನಕಂ |
ನೆರೆದು ಬರೆ ವರ ಭಗೀರಥ ತಂದ ಸುರನದಿಗೆ|
ಹರಿತರಲ್ಕಲ್ಲಿಗಂ ಸುಬಲನೈತಂದ ಸತಿಸುತರನಂ ಕೂಡಿಕೊಂಡು ॥
ಬರುತಿರಲ್ಕಂಡು ಭೀಷ್ಮನು ತನ್ನ ಚಿತ್ತದೊಳ್ |
ಬೆರಗಾಗಿ ಹರಿಯರಸಿಗಂ ಮಿಗಿಲು ನೂರುಮಡಿ|
ಪರಿಕಿಸಲು ರೂಪಲಾವಣ್ಯದಲಿ ಸುಬಲಸುತೆಗಿದಿರಾರೆನುತಿರ್ದನು॥೫॥

ಅಲ್ಲಿ ಕೆಲಬಲದೊಪಳಿರ್ದವರಿಗಂ ಭೀಷ್ಮ ತಾ|
ನುಲ್ಲಸದಿ ತಿಳಿಸಿದಂ ಅಂಧಕಗೆ ವತ್ತಾಯ |
ದಲ್ಲಿ ಈ ಬಾಲಕಿಯ ಸಾಮದಿಂದಾದರುಂ ಮಾಡಿಸುವೆ ಕಲ್ಯಾಣವಂ॥
ಅಲ್ಲದಿರೆ ದಂಡದಿಂದೊಯ್ದು ಕಡು ಚೆಲುವಕ|
ಣ್ಣಿಲ್ಲದವನೊಡನೆ ವರಿ,ಸುವೆನೆನುತ್ತಲಾ ರಣ |
ಮಲ್ಲ ಕೇಳಿಸಿದನಾ ಬಾಲಕಿಯನಂಧಕಗೆ ಸುಬಲಪತಿ ವಡಬಡದಿರೆ॥೬॥

ಮುತ್ತಿದರು ಚತುರಂಗಬಲದಿ ಕದನಕೆ ಬಳಿಕ|
ನಿತ್ತು ಕಾದಿದರು ಧೂಳಿ ಮುಸುಗಲ್ಕೆ ಮಾರ್ಬಲಂ|
ಸುತ್ತು ಮುತ್ತಿಗೆಯಿಂದ ಹಿಡಿದರಾ ಸುಬಲನನು ಸುತೆಸಹಿತ ಕೈಸೆರೆಯನು॥
ವೃತ್ತಕುಚೆ ಗಾಂಧಾರಿಯಂ ತಂದೆ ಸಹಿತಲಾ |
ಒತ್ತಾಯದಿಂದಲೊಡಬಡಿಸಿ ಗಂಗಾಸೂನು|
ಹಸ್ತಿನಾಪುರಿಗೆ ನಡೆತಂದು ವಿಪ್ರೋತ್ತಮರ ಕರೆಸಿದಂ ಕೋವಿದರನು॥೭॥

ಜಾತಕದಿ ನೋಡಿಸಲ್ ಗಾಂಧಾರಿಗಂ ವಿಪ್ರ|
ಜಾತಿ ನುಡಿದುದು ವೈದಿಕೋಕ್ತಿ ವಿಧಾನದಿಂ|
ಜಾತಕದಿ ವೈಧವ್ಯವಿರುತಿಹುದು ಈಕೆಗೆಂದೆನಲಾಗ ಧರಣಿಸುರರ ॥
ಮಾತುಗಳು ಪುಸಿಯಹುದೆ ಹಿಂದೆ ಸುಬಲನು ಕುರಿಯ |
ಹೋತನಂ ತರಿಸಿ ಈಕೆಗೆ ಮದುವೆಯಂ ಮಾಡಿ |
ಭೂತಳದಿ ಕೊರಳ ಕೊಯ್ದರೆ ಕಡೆಗೆ ಈಕೆಯನ್ನಂಧಕಗೆ ಪರಿಣಯವನು॥೮॥

ಮಾಡಿಸಿದ ಕಲಿ ಭೀಷ್ಮನುತ್ಸವದಿ ಧೃತರಾಷ್ಟ್ರ |
ಕ್ರೀಡೆಯಿಂದಿರಲಾಕೆಗುದಿಸಿದರು ಶತಪುತ್ರ|
ರಾಡಲಿಕೆ ಬಳಿಕಿತ್ತ ಸುಬಲಗಂ ನೂರ್ವರು ಕುಮಾರಕರು ಜನಿಸಿರ್ದರು॥
ರೂಢಿಪತಿ ಸರಿದ ಸುರನಗರಿಗಂ ಬಾಲಕರು |
ಹೇಡರಾದರು ರಾಜ್ಯಮಂ ಆಳಲಾರದೆ ನಿ|
ವಾಡವಿಲ್ಲದೆ .ಕ್ಷಾತ್ರಧರ್ಮವು ಕಿರಿದಾಗಿ ಬೆಳೆ ಬಿತ್ತುವಕಿರಿದಾದುದು॥೯॥

ಬಡತನವು ಕಷ್ಟ ಲೋಕದಿ ಕಳಿಂಗನ ಮಡದಿ |
ಕಡು ಮಮತೆಯಿಂದ ನೂರ್ವರ ಸಾಕುತಿರಲಿತ್ತ|
ಪೊಡವಿಪತಿ ಕೇಳು ಗಜಪುರದಿ ಗಾಂಧಾರಿಗಂ ಸುತರುದಿಸೆ ನೂರ್ವರೊಳಗೆ॥
ಪಡೆದಳೊಬ್ಬಳನು ದುಶ್ಯಳೆಯೆಂದು ಸೈಂಧವಗೆ|
ಮಡದಿಯಾದಳು ಸಿಂಧು ದೇಶಕಂ ಮಹಾಬಲ |
ದೊಡೆಯನಾಗಿರುತಿಹ ಜಯದ್ರಥನು ಸೈಂಧವನು ತಾನೆಂದು ಪೇಳುತಿಹರು॥ ॥೧೦॥

ತಂದೆ ವಿಪ್ರೋತ್ತಮರ ಕರೆಸಿ ತನ್ನಯ ಜನನ |
ದಂದವನು ನೋಡಿಸಲ್ ವೈಧವ್ಯವೆನಗೆಯಿಹು|
ದೆಂದೆನುತ ಧರಣಿಸುರರುಸುರಿದರು ಜಾತಕದ ಲಕ್ಷಣವ ನೆರೆ ನೋಡುತ॥
ಅಂಧಕನ ಮದುವೆಯಾಗದ ಮುನ್ನ ಹೋತನಂ|
ತಂದು ವೈವಾಹಿಕವ ಮಾಡುತ ಕಡೆಯೊಳದನು|
ಕೊಂದು ನಿಮ್ಮಯಂಗೆ ಮದುವೆಯಂ ಮಾಡಿದರು ತನ್ನನೆಂದಳು ಮಗನಿಗೆ॥೧೯॥

ಚಿಂತೆಯ ತಾಳ್ದು ಕುರುನೃಪತಿ ತನ್ನಯ ಕುಲಕೆ |
ಬಂತೆ ಹಳಿವುಗಳೆಂದು ಬಿಸುಸುಯ್ದು ಮೌನದಿಂ|
ನಿಂತಲ್ಲಿ ನಿಲ್ಲದೆ ನಡೆತಂದು ಸಿರಿಮಂಚದೊಳ್ ಪವಡಿಸಿದ ಮುಸುಕಿನಿಂದ॥
ಅಂತರಂಗದಿ ಕುದಿಯುತ್ತಿರಲಿತ್ತ ಕರ್ಣ ನೃಪ |
ನಂತಿಕಕೆ ನಡೆತಂದು ನುಡಿಸಿದಡೆ ನುಡಿಯದಿರೆ |
ಸಂತಾಪವೇನು ತನುವಿನಲಿ ಜೀಯ ಪೇಳೆಂದು ಸಾರಿದನು ಸಿರಿಮಂಚವ॥ ೨೦॥

ಸಲುಗೆಯಿಂ ನಾನಾ ಪ್ರಕಾರದಿಂ ಬೆಸಗೊಳಲ್ |
ತಿಳುಪಿದಂ ಕರ್ಣ ಕೇಳೆಂದು ಪೂರ್ವಾಪರವ|
ನಳಿನಮುಖಿ ಗಾಂಧಾರಿ ನುಡಿದುದಂ ವಿಸ್ತರಿಸಿದಂದವನು ಭಾನುಸುತಗೆ॥
ಕುಳಿತು ನುಡಿದನು ಭೀಮ ಹಳಿದುದಂ ತಮ್ಮ ಕುಲ|
ಬಲಗಳಿಗೆ ಹೇಳಲೆಳತಾದುದಂ ಕಕೇಳ್ದು ಮನ|
ತುಳುಕುತಿದೆ ಬೇರೆ ಮತ್ತೊಂದಿಲ್ಲ ತನುವಿನೊಳ್ ತಾಪಗಳು ತನಗೆಂದ॥೨೧॥

ಚಿತ್ತವಿಸು ಜೀಯ ಸೌಧಾಪುರದ ನೃಪನರಸಿ |
ಹೆತ್ತಳು ಕುಮಾರರು ನೂರ್ವರನು ಸುಬಲ ವಿ|
ಪ್ರೋತ್ತಮರ ಕರೆಸಿ ಬೆಸಗೊಂಡನಾ ಜಾತಕದ ಫಲಗಳಂ ಪೇಳಿರೆನಲು ॥
ಉತ್ತಮರು ತಾವಾದ ಜೋಯಿಸರು ನೃಪತಿಗಂ |
ವಿಸ್ತರಿಸಿ ಪೇಳ್ದರಾ ಗ್ರಹಬಲಗಳಂ ನೋಡಿ|
ಪೃಥ್ವಿಯಂ ಜಯಿಸಿ ಏಕಚ್ಛತ್ರಪತಿಯಾಗಿ ರಾಜ್ಯಮಂ ಪಾಲಿಸುವರು॥೨೩॥

ಎಂದ ನುಡಿಯಂ ಕೇಳ್ದು ಕುರುನೃಪತಿಗಂ ಸೂರ್ಯ|
ನಂದನನು ನುಡಿದನೆಲೆ ಜೀಯ ಎನ್ನ ಮನಸಿನ |
ಲೊಂದು ತೋರುತ್ತಿಹುದು ಸಾಮದಾನದಿಂದವರನೌತಣಕೆಂದು ಕರೆಸಿಕೊಂಡು॥
ಮಂದಿ ಮಾರ್ಬಲಗಳಂ ಪೊರಗಿಟ್ಟು ಒಳಪುಗಿಸಿ |
ತಂದವರ ಸೆರೆಗಳಲ್ಲಿಕ್ಕುವುದೆ ಸುಲಭತರ |
ವೆಂದೆನಲ್ ಕರ್ಣನಂ ಕೈ ಹೊಯ್ದು ಗಹಗಹಿಸಿ ಬರೆಸಿದಂ ಪತ್ರಿಕೆಯನು॥೨೭॥

ಕಟ್ಟಿಸಿದನುಡುಗೊರೆಗಳಂ ಕಳಿಂಗಾ ದೇಶ|
ಕಟ್ಟಿದನು ಚಾರಕರು ನಡೆತಂದು ರಾಯರಿಗೆ |
ಕೊಟ್ಟು ಪತ್ರಿಕೆಗಳಂ ಪಾಗುಡವನೊಪ್ಪಿಸಲ್ ಕೈಕೊಂಡು ಸಂತಸದೊಳು॥
ದೃಷ್ಟಿಯಿಂ ಪತ್ರಿಕೆಯ ನೋಡುತೌತಣಕೆ ಬರೆ|
ದಟ್ಟಿದರು ಅಳಿಯರೆಂದೆನುತ ನೂರ್ವರು ಹರುಷ|
ಬಟ್ಟು ಕೆಲಬರು ಪುರದೊಳಿರ್ದು ಹೊರಟರು ಕೆಲರು ಚತುರಂಗಬಲ ಸಹಿತಲೆ॥೨೮॥

ಉಂಡು ದಣಿದುದು ಷಡುರಸಾಯನಂಗಳ ಧರಣಿ|
ಮಂಡಲದ ಜನರುಗಳ್ ಕೈತೊಳೆದು ವಿಸ್ತರದಿ|
ಮಂಡಿಸಿದರೈ ಸುಬಲ ನಂದನರು ದಿವ್ಯತರದಾಸನದಿ ವೀಳ್ಯಗೊಂಡು॥
ತಂಡ ತಂಡದಿ ಕುಳಿತಿರಲ್ಕೆ ಕುರುನೃಪ ತಪ್ಪ|
ಕಂಡಲ್ಲದಿವರ ಶಿಕ್ಷಿಸಬಾರದೆಂದು ಭೂ|
ಮಂಡಲದ ಸರ್ವಾಧಿಕಾರಂಗಳಂ ಮಾವನಿಂಗಿತ್ತು ಮನ್ನಿಸಿದನು॥೩೪॥

ಮೊರೆಯಿಡುತಲಿದೆ ನಗರಿಯೆಂದೆನಲ್ ಕೇಳ್ದರಸ|
ತರಣಿಜನ ಮಾತು ಪುಸಿಯಲ್ಲೆಂದು ಮನಸಿನೊಳ|
ಗರಿದು ನೃಪನೋಲಗದಿ ತಲೆದೂಗಿ ನಾಳೆಗಂ ನಾನೊಂದ ಮಾಡಿದರೆಯು॥
ಕುರುಕುಲವನೆಲ್ಲವಂ ಮುರಿದಪರು ಕಲ್ಲೆಡಹಿ|
ದರೆ ಕೀಳಲೋಸ್ಕರ ಬಂದವರು ಇದಿರಾದ |
ವರ ಮುರಿಯದಿಹರೆ ಎನುತಿರಲಿತ್ತ ಕೋಡ್ಗಲ್ಲ ತೆಗೆದಿಡುಕಿಸಭೆಗೆ ಬರಲು॥೩೮॥

ಸಿಟ್ಟಾಗಿ ಕುರು ನೃಪತಿ ದಣಿಸಿ ನೆಲಮಾಳಿಗೆಯೊ|
ಳಿಟ್ಟನು ಕಳಿಂಗರಂ ಸೆರೆಯ ಮೋಸದಿ ಭೂಪ|
ದೃಷ್ಟಿಹೀನನುಮಾತೆಯರೂ ಬೇಡವೆಂದೆನಲ್ ಕೇಳದಿರೆ ಕುರುನೃಪತಿಯು॥
ಕಟ್ಟಿಸಿದನೆಲ್ಲರಂ ತರುಣಿಜನ ಮತವೆ ಪುಟ|
ವಿಟ್ಟುದಕೆ ಖತಿವಿಡಿದು ಕರ್ಣನಂ ಕರೆಸಿ ದಳ|
ವಿಟ್ಟಣಿಸಿ ನಡೆಯಲಿ ಕಳಿಂಗ ದೇಶಕ್ಕೆಂದು ನೇಮಿಸಿದನಾಕ್ಷಣದೊ॥೩೯॥  

ಹಲವು ಮಾತಿನ್ನೇನು ಸುಬಲಸುತರಂ ತಂದು |
ನೆಲಮಾಳಿಗೆಯೊಳೆಲ್ಲರನಿಕ್ಕಿ ನೂರ್ವರಿಗು|
ಬಳಿಕ ದಿನಕೊಂದೊಂದು ತುತ್ತುಗಳ ನಡಸಿ ಕೊಡುತಿರ್ದ ಸೆರೆಮನೆಯೊಳು॥
ಬಳಲಿದರು ಹಸಿವು ತೃಷೆಯಿಂದ ನೂರ್ವರು ನಮ್ಮ|
ಕೊಲ ಬಂದ ಸೆರೆಮನೆಯೊಳಿಟ್ಟುನಮ್ಮೆಲ್ಲರಂ|
ತಲೆಗಾಯ್ವರಿಲ್ಲ ಹೊಟ್ಟೆಯ ಹೊರೆದುಜೀವಿಸುವ ಪರಿಗಾಣೆವೆನುತಿರ್ದರು॥೪೪॥

ಕರಗಲೇತಕೆ ನಾವು ಬರಿದೆ ಸುಮ್ಮನೆ ವೃಥಾ |
ಕುರುಕುಲವ ಸಂಹರಿಸಬೇಕೆಂದು ಯೋಚನೆಯ|
ನರಿತು ತಮ್ಮೊಳಗೆ ತಾವೇ ನುಡಿದರ್ ದಿನದಿನಕೆ ಜನಕೊಂದು ತುತ್ತುಗಳನು ॥
ಕುರುನೃಪಂ ಕೊಡಿಸುವುದ ತಿಂದು ನಮ್ಮಯ ತನುವ |
ಪೊರೆದು ಬದುಕಲ್ಕಿಲ್ಲವೆಂದರಿದುಪಾಯವ |
ನ್ನರಸುತಿರ್ದರು ನೂರ್ವರೊಂದಾಗಿ ಕೌರವನ ಕುಲಹತಿಗೆ ನಿಶ್ಚಯವನು॥೪೫॥

ಮಾಡಿದರು ತಮ್ಮೊಳಗೆ ಕುರುಕುಲವ ನಾಶನವ|
ಮಾಡಲಿಕುಪಾಯವಂ ನೆನೆನೆನೆದು ನಾ ಮುನ್ನ |
ಮಾಡುವೆನು ತಾ ಮುನ್ನವೆಂದು ವಾದಗೈದುಪಾಯಮಂ ತೆಗೆದರೊಂದಂ॥
ಮಾಡಿದರು ನಿಶ್ಚಯವ ನೂರ್ವರೊಪ್ಪಿಗೆಯ ಮಾ|
ತಾಡಿದರು ಏಳು ಡೊಂಕಾಗಿರ್ದ ಪವಳಕಂ|
ರೂಢಿಸಲು ನಾಳವಂದದಕೆ ಧಾರಂಗಳಂ ಪವಣಿಸಲು ಕುರುಕುಲವನು॥೪೬॥

ಮೂಲವಂ ನಾಶನವಮಾಳ್ಪವರು ಶಪಥಮಂ |
ಕೇಳಿ ನೂರ್ವರ ತುತ್ತನುಣ್ಣಲೊಬ್ಬನೆನುತಲಿ |
ಕೂಳ ತುತ್ತುಗಳನೊಬ್ಬನಿಗೆ ನೀಡಿ ಹೆಣಗಿದರು ಒಬ್ಬೊಬ್ಬರೊಂದು ದಿವಸಂ॥
ನಾಳ ಡೊಂಕಿನ ಪವಳಕುಣಿಯೊಳಗೆ ದಾರಮಂ |
ಕೇಳದಕೆ ಪವಣಿಸಲ್ ಸಾಗದಿರೆ ಕರಗಿದರ್ |
ಬಾಳದಲಿ ಬರೆದಿರ್ದ ವಿಧಿಲಿಖಿತವಂ ಮೀರಲಾರ್ಗಳವು ತಮಗೆಂದರು॥೪೭॥

ಸಾಗದಾದುದು ಶಪಥವೊಬ್ಬರಿಗು ಕಿರಿಯನಿಂ |
ಗಾಗ ಶಕುನಿಗೆ ಕೊಡಲ್ ಪವಳಮಂ ಕೊಂಡು ಕಡು|
ವೇಗದಿಂ ಸಕ್ಕರೆಯ ದಾರಕಂ ಹೂಡಿಯಿರಿಸಲ್ಕದನು ಎಜ್ಜದೊಳಗೆ ॥
ಆಗಳೈತಂದಿರುವೆ ಮುತ್ತಿ ದಾರದ ಮಧುರ |
ಕಾಗಿ ಕಚ್ಚಿತುದಾರದಾಂಟೆ ಪವಳಮಂ ಬೆಳ|
ಗಾಗಿ ಪೋಣಿಸಿದಂತೆ ಇರುತಿರಲ್ ತೋರಿದನು ಶಕುನಿ ಜಾಣಂ॥೪೮॥

ದಾರಮಂ ಜೋಡಿಸಿದ ಪವಳಮಂ ನೋಡಿದರು|
ಹೋರಲೇಕಿನ್ನೆನುತ ಜೀವದಾಸೆಯನು ಕಲಿ|
ಯೇರಿ ಬಿಟ್ಟರು ಸುಬಲ ಬಾಲಕರು ನಿಶ್ಚಯಿಸಿ ಕುರುಕುಲದ ಸಂಹಾಸರಕೆ॥
ಧೀರ ಶಕುನಿಯೊಬ್ಬನಂ ಬಿಟ್ಟು ಹರಣವಂ |
ನೂರುವರು ಬಿಡುತಲಿರೆ ಬೇಡಿದನು ವರಗಳನಂ|
ಧಾರುಣೀಪತಿ ಕೇಳಿದರಸ್ತಿಯಲತ್ತೆ ಪಗಡೆಯ ಚರ್ಮ ಹಾಸಂಗಿಯ॥ ೪೯॥

ಮಾಡಿ ನೆನೆದುದೆ ಲತ್ತೆ ಬೀಳಬೇಕೆಂದಿವರ |
ಬೇಡಿದನು ವರಗಳಂ ಹಾಗಾಗಲೆಂದು ಕೃಪೆ|
ಮಾಡಿದರು ಸಾಗಿದರು ಸೂರಿಯನ ಸುತನೂರಿಗಂ ನೂರ್ವರೊಂದಾಗಿಯೆ॥
ಮಾಡಿದಂ ದುಃಖವಂ ಶಕುನಿ ಸತ್ತವರುಗಳ್ |
ಮಾಡಿರ್ದ ಕೂಳ ತುತ್ತನೊಬ್ಬನೆ ತಿಂದು ಕಡು |
ಕೇಡಿಗುಳಿದನು ಕೌರವಾದಿಗಳ ಸಂಹಾರಕಂ ಬೆಳೆದನಾ ಶಕುನಿಯು॥೫೦॥

ನೀತಿಯಂ ಪೇಳ್ದು ಗಂಗಾಸೂನು ಸುಬಲಸುತ|
ರಾ ತತುಕ್ಷಣ ಬಾಗಿಲಂ ತೆಗೆಸಿ ನೋಡೆ ಬಳಿ|
ಕಾತರುಗಳೆಲ್ಲ ಮಡಿದುಳಿದಿರ್ದನಾ ಶಕುನಿಯೋರ್ವನಿರಲಿವನಾದರು॥
ಭೂತಳದಿ ಬದುಕಿರಲಿ ಕಂಡು ಮರೆವೆನು ದುಃಖ|
ಜಾತವನ್ನೆಂದೆನಲ್ ಬಿಡಿಸಿದರು ಶಕುನಿಯಂ |
ಪ್ರೀತಿಯಿಂದಿಟ್ಟುಕೊಂಡಿರ್ದಳಾ ಗಾಂಧಾರಿ ತಮ್ಮನಂ ಗಜಪುರದೊಳು॥೫೩॥

ಇರುತಿರಲ್ ದಿನದಿನಕೆ ಶಕುನಿ ದುರ್ಯೋಧನಗೆ |
ಪರಮ ಸ್ನೇಹವದಾಯ್ತು ಕುರುಕುಲದ ಮೂಲವ|
ನ್ನೊರೆಸಲಿಕೆ ತಿಮಿರಮಂ ಮುಸುಕಿದನು ಹಿತದೊಳಗೆ ವೈರವನಿಟ್ಟುಕೊಂಡು॥
ಹರುಷ ಹೆಚ್ಚಿತು ಶಕುನಿ ಮನದೊಳಗೆ ಕೌರವಂ |
ಗೆರಡಿಲ್ಲ ಮನವೊಂದ ಪಗಲಿರುಳು ಮಮತೆಯಿಂ |
ದಿರುತಿಹರು ಜನಪ ಕೇಳೀರ್ವರಿಗೆ ಶಯನಗೃಹವೊಂದೆಯೊಂದೆ ಭೋಜನವು॥೫೪॥

ಕೃತಜ್ಞತೆಗಳು.
ಸಂಪಾದಕರು: ಕೆ. ಜಗನ್ನಾಥಶಾಸ್ತ್ರಿ
ಪ್ರಕಟಣೆ : ಕನ್ನಡ ಸಾಹಿತ್ಯ ಪರಿಷತ್ತು
ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ,  
ಬೆಂಗಳೂರು- ೫೬೦೦೧೮,

2 ಕಾಮೆಂಟ್‌ಗಳು: