ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಫೆಬ್ರವರಿ 10, 2019

ಚಂದ್ರರಾಜ ಕವಿಯ ಮದನ ತಿಲಕಂ

ಚಂದ್ರರಾಜ ಕವಿಯ ಮದನ ತಿಲಕಂ

ಈ ಕೃತಿಯ ಕರ್ತೃ ಚಂದ್ರರಾಜ ಕವಿ. ಇವನು ಹನ್ನೊಂದನೆಯ ಶತಮಾನದ ಆದಿಭಾಗದಲ್ಲಿದ್ದವನು. ಉಪೋದ್ಘಾತ ಪದ್ಯಗಳಿಂದ ಈ ವಿಷಯ ತಿಳಿದು ಬರುತ್ತದೆ. ಈ ಗ್ರಂಥ ಹಳಗನ್ನಡ ಗ್ರಂಥಗಳಲ್ಲಿ ಪ್ರಾಚೀನತಮವಾದುದು. ವಾತ್ಸ್ಯಾಯನನು ತನ್ನ ಕಾಮಶಾಸ್ತ್ರದಲ್ಲಿ ಹಿಂದಿನ ಗ್ರಂಥಕರ್ತರನ್ನು ಹೀಗೆ ವಿವರೆಸಿದ್ದಾನೆ. ಚತುರ್ಮುಖ ಬ್ರಹ್ಮನು ಧರ್ಮ, ಅರ್ಥ, ಕಾಮಶಾಸ್ತ್ರ ಗ್ರಂಥಗಳನ್ನು ಒಂದು ಲಕ್ಷ ಅಧ್ಯಾಯಗಳಲ್ಲಿ ರಚಿಸಿದನು. ಅನವ ಮಗ ಸ್ವಾಯಂಭುಮನು ಆ ಗ್ರಂಥದಿಂದಲೇ ಮಾನವ ಧರ್ಮ ಶಾಸ್ತ್ರವನ್ನು ರಚಿಸಿದನು. ಬೃಹಸ್ಪತಿಯು ಅರ್ಥಶಾಸ್ತ್ರವನ್ನು ಬರೆದನು. ಮಹಾದೇವರ ಗಣ ನಂದಿಕೇಶ್ವರನು ೧೦೦೦ ಅಧ್ಯಾಯಗಳಿಂದ ಕಾಮಶಾಸ್ತ್ರವನ್ನು ಬರೆದನು. ಉದ್ದಾಲಕ ಮುನಿಯ ಮಗ ೫೦೦ ಅಧ್ಯಾಯಗಳಲ್ಲಿ ಅದನ್ನೇ ಸಂಗ್ರಹಿಸಿದನು. ಅದನ್ನು ಬಬ್ರುವಿನ ಮಗ ಪಾಂಚಾಳನು ೧೫೦ ಅಧ್ಯಾಯಗಳಿಂದ ಹೇಳಿದನು.  

ಅನೇಕ ಆಚಾರ್ಯರು ಕಾಮಶಾಸ್ತ್ರದ ವಿವಿಧ ವಿಷಯಗಳನ್ನು ಪ್ರತ್ಯೇಕವಾಗಿ ವಿವರೆಸಿದರು. (೧) ಪಾಟಳಿಪುತ್ರ ದತ್ತಕನು ವೈಶಿಕವನ್ನು (೨) ಚಾರಾಯಣನು ಸಾಧಾರಣವನ್ನು (೩) ಸ್ವರ್ಣನಾಭನುಸಾಂಪ್ರಯೋಗಿಕವನ್ನು ( ೪) ಘೋಟಮುಖನು ಕನ್ಯಾಸಂಪ್ರಯುಕ್ತ ವನ್ನು, ( ೫) ಗೋನರ್ದೀಯನು ಭಾರ್ಯಾಧಿಕರಣವನ್ನು (೬) ಪತಂಜಳಿಯು ಪಾರದಾರಿಕವನ್ನು (೭) ಗೋಣಿಕಾಪುತ್ರ ಕೂಚಿಮಾರನು ಔಪನಿಷದಕವನ್ನು ಕುರಿತು ಬರೆದರು. ಕಡೆಗೆ ವಾತ್ಸ್ಯಾಯನನು ೩೬ ಅಧ್ಯಾಯಗಳಲ್ಲಿ ಈ ಏಳು ಅಧಿಕರಣಗಳ ವಿಷಯಗಳನ್ನು ಸಂಗ್ರಹವಾಗಿ ವಿವರಿಸಿದನು. ಆಮೇಲೆ ಚಂದ್ರರಾಜನು “ ಆಗಮ ಲೌಕಿಕ ವಿರೋಧಮಂ ಕಳೆದು ಸಾರಾಂಶಮಂ ಕೊಂಡು ಪಲವು ಮತಂಗಳನೊಂದುಮಾಡಿ, ಪದಿನೆಂಟಧಿಕರಣಂಗಳಿಂದಲಂ-
ಕರಣಗಳಿಂದಲಂಕಾರಲಂಕೃತಮಾಗೆ” ನಾನಾ ಛಂದದಿನೈನೂರು ಗದ್ಯ ಪದ್ಯಂಗಳಿಂ ವಿಶ್ರುತಂ ಮಾಡಿ ಪೇಳ್ದಂ. ಇದರಿಂದ ಚಂದ್ರರಾಜನ ಮದನತಿಲಕದ ಮೂಲ ಪ್ರತಿಯಲ್ಲಿ ೧೮ ಅಧಿಕರಣಗಳೂ ಇರಬೇಕೆಂದು ಗೊತ್ತಾಗುವುದು. ಆ ಗದ್ಯ ಪದ್ಯಗಳು ನಾನಾ ಛಂದಸ್ಸಿನಲ್ಲಿ ಇರುವವೆಂದೂ ತಿಳಿದುಬರುತ್ತದೆ. ಪ್ರಕೃತ ಮದನತಿಲಕದಲ್ಲಿ ೧೧ ಅಧಿಕರಣಗಳೂ ಒಟ್ಟು ೩೯೭ ಗದ್ಯ ಪದ್ಯಗಳೂ ಇರುವುವು. ಪದ್ಯಗಳು ನಾನಾ ಛಂದಸ್ಸಿನಲ್ಲಿಯೂ ಬಂಧದಲ್ಲಿಯೂ ಇವೆ.

ಶ್ರೀವಧುವಿಂಗಗಜೆಗೆ ವಾಕ್
ಶ್ರೀವಧುವಿಂಗಜನನಜನನಜನಂ ಕುಸುಮಾ
ಸ್ತ್ರಾವಳಿಯಿಂದೋಲೈಸಿದ
ಭಾವೋದ್ಭವನೀಗೆ ನಮಗೆ ಸುಖಸಂಪದಮಂ॥೧॥

ಶ್ರೀಯನುರಃಸ್ಥಲದೊಳ್ವಾ
ಕ್ಛ್ರೀಯಂ ನಿಜವದನಕಮಲದೊಳ್ ಕೂರ್ತ ಜಯ
ಶ್ರೀಯಂ ಭುಜದೊಳ್ ಕೀರ್ತಿ
ಶ್ರೀಯಂ ದಿಕ್ತಟದೊಳ್ನಿಳಿಸಿದಂ ರೇಚನೃಪಂ॥೨॥

ಎನಿಪ ಜಯಸಿಂಹ ದೇವನ
ಮನುಚರಿತನ ತೊಡೆಯೆ ತೊಟ್ಟಿಲಾಗಿರೆ ಬಳೆದಂ ॥
ವಿನಯಾಂಬುರಾಶಿ ವರಬುಧ
ನನತಾಂಘ್ರಿತಾರಿ ಕಿರೀಟಕೋಟಿ ಘಟ್ಟಿತ ಚರಣಂ॥೬॥

ಪಿರಿಯಕ್ಕರ
ಅತನುವಲ್ಲದ ಪರಿಭವಂ ಬಡೆಯದ ಪೆಸರ ಸೌಭಾಗ್ಯಕ್ಕೆ ಕೆಳೆಗೊಳ್ಳದ
ರತಿಗೆ ಸೋಲದ ಬೈಗುಳಿಂಗೆ ಪಕ್ಕಾಗದೋಪರಂ ಮರುಗಿಸಿ ಬಿಸುಸುಯಿಸದ॥
ಸತತಮತಿ ಕೃಷ್ಣನಲ್ಲದ ಕೂರದರ ದಂಡಿಸಲು ನೆರೆವ
ವ್ರತಕೆ ತಪ್ಪದ ಕಾಮನಪ್ಪುದರಿಂದಭಿನವ ಕಾಮಂ ರೇಚನೃಪಂ॥೧೭॥

ಎನೆ ನೆಗಳ್ದ ರೇಚಭೂಪನ
ಮನೋಜ್ಞೆ ಲಾವಣ್ಯ ರೂಪು ಲಕ್ಷಣಯುತೆ ಮಾ॥
ನಿನಿ ನುಡಿಗುಂ ನೃಪನೊಳ್ ಮಿಂ
ಚಿನ ಗೊಂಚಲಿವೆನಿಸಿ ಪೊಳೆಯೆ ದಶನದ್ಯುತಿಗಳ್॥ ೩೦॥

ಮೃದುಮಧುರ ಗಂಭೀರತರಂ
ವಿದಿತಂ ಲಲಿತಂ ವಿಮುಗ್ದಮತಿ ಚಾತುರ್ಯ್ಯಂ ॥
ಸದಯಂ ಧರ್ಮ್ಯಂ ವಿನಯಾ
ಸ್ಪದಮಿಂತಿದೆ ನೀತಿಯೆಂಬಿನಂ ಸತಿ ನುಡಿದಳ್॥೩೧॥

ಮೃಗಮದಕರ್ಪೂರಯುತಂ
ಮಘಮಘಿಪ ಕದಂಬ ದಂಬುಲಂ ಕಂಪಂ ನೆ॥
ಟ್ಟಗೆ ಮುಖ ಪದ್ಮದ ಗಂಧಂ
ಮಿಗೆ ಪಂಕಜವಕ್ತ್ರೆ ನಯದೌ ನುಡಿಗುಂ ಪ್ರಿಯನೊಳ್॥೩೨॥

ಕುಂತಳೆ
ಕೇಳ್ದು ಸೋಲದರೊಳರೆ ।
ಕಾದಿ ಸೋಲದರೊಳರೆ ।
ಬಾದು ಗೈಯದರೊಳರೆ
ಮೇದಿನೀಪತಿ ನಿಮಗೆ ।।೩೩॥

ಪಿರಿಯಕ್ಕರ
ರೂಪು ಸೌಭಾಗ್ಯಂ ಕುಲಭಿಮಾನ ಮಣ್ಮಾಳುಗುದಿಶಮಾಭರಣಂ ದಾನಂ।
ಕ್ಷ್ಮಾಪಗುಣಮಿಂತಿನಿತು ರೇಚಿಗ ಮಹೀಶ ನಿನಗೆಂದುಂ ಸಹಜಂಗಳಪ್ಪುದರಿಂ ॥
ಭೂಪ ನಿನಗುಳ್ಳ ಗುಣಮಿವೆಲ್ಲವರ್ಗ್ಗಿಲ್ಲಂ ಸ್ತ್ರೀಯರನೊಲಿಸುವ ಭೇದಂಗಳಂ।
ಸೋಪದೇಶಮೆಂಬಂತಿರೆ ಬೆಸಸಿಮೆಂದು ಸತಿಯೆನೆ ಪೇಳಲುದ್ಯುಕ್ತನಾದಂ ॥೩೪॥

ಜಗದ ಕಂಟಕರೆಲ್ಲರುಮಂ ಕೊಂದಿಕ್ಕಿ ನಿಷ್ಕಂಟಕಂ ಮಾಡಿ ಮತ್ತಮೀಗಳು।
ಜಗದೊಳೆಲ್ಲಂ ಗೈವಂತಾಶ್ರಮಂ ಪೂಜ್ಯಮದು ಕೂರ್ಮ್ಮೆಯಿಲ್ಲದ ಪೆಂಡಿರಿಂ ॥
ಜಗದ ಕರ್ಮಂಗಳಂ ಕೆಟ್ಟಪ್ಪವು ಧರ್ಮ ಕರ್ಮಂಗಳು ಸತಿಯರಿಂದಂ ।
ಜಗಕ್ಕೆ ನೆಗಳ್ಗುಂ ನೀನದರಿಂದಂ ರೇಚಮಹೀಶ ನೀ ಜಗಕೆಲ್ಲಂ ಸ್ಮರತತ್ವಮಂ ಬೆಸಸ॥೩೫॥

ಎಂದು ಸತಿ ನುಡಿಯೆ ಪರಮಾ
ನಂದದಿ ರೇಚಿಗ ಮಹೀಶನಾಗಳು ಸಂಪೂ ॥
ರ್ಣೇಂದುಮುಖಿಗರುಪಿದಂ ನಯ
ದಿಂದ ಮುನಿಮತಮನವನಿಗೆಲ್ಲಂ ಹಿತಮಂ॥೩೬॥

ಉಜ್ವಳ
ಮದನ ದರ್ಪಹರಂ ವರ ಕೈಲಾಸಾದ್ರಿಯೊಳದ್ರಿತನೂಜೆಗಾ ।
ಮದನತತ್ವಮಿಂತಿರೆ ಪೇಳ್ದಂ ರೇಚಮಹೀಶನುಮಂತೆ ನಿರ್ಮ॥
ಲದಸಮಯಗುಣಂ ನಯದಿಂದಂ ಸ್ವಾಮಿಯ ಛಂದಮೆ ಛಂದಮೆಂ।
ಬುದನೆ ಭಾವಿಸಿ ಕಾಂತೆಗೆ ಪೇಳ್ದಂ ಮಚ್ಚಿ ಮನೋಭವ ತತ್ವಮಂ॥೩೭॥

ಸಕಳ ಕಳಾಗಮ ಕೋವಿದ ।
ನಕಳಂಕಚರಿತ್ರನುದ್ಘಗುಣಗಣ ಮಣಿ ವಿ॥
ಪ್ರಕುಲಲಲಾಮಂ ಲೋಕ ।
ಪ್ರಕಟಿತ ಶ್ರುತಕೀರ್ತಿ ನೆಗಳ್ದ ಚಂದ್ರಕವೀಂದ್ರ ॥೪೦॥

ಇದು ಪಣವ ಬಂಧಮುಂ ಗೋಮೂತ್ರಿಕೆಯುಮಕ್ಕುಂ

ಚಂಪಕ
ಪರಹಿತನೆಂಬ ಸತ್ಯ ನಿಧಿಯೆಂಬ ಮಹಾಕವಿಯೆಂಬ ದೀನ ಭಾ ।
ಸುರ ಸುರ ಭೂಜನೆಂಬ ಗುಣಿಯೆಂಬ ಗುಣಾನ್ವಿತನೆಂಬ ಲೋಕದೊಳ್ ॥
ಪರಹಿತನೆಂಬ ಸತ್ಯನಿಧಿಯೆಂಬ ಮಹಾಕವಿಯೆಂಬ ದೀನ ಭಾ।
ಸುರಸುರ ಭೂಜನೆಂಬ ಗುಣಿಯೆಂಬ ಪೆಱರ್ನರರಾರ್ ಧರಿತ್ರಿಯೊಳ್॥೪೭॥

ಮಹಾಸ್ರಗ್ಧರೆ
ಶಿವ ಶೀಲಂ ಪುಣ್ಯ ಶೀಲಂ ವಿಬುಧ ವಿಬುಧ ಶಾಲಂ ಗುಣಾನೀಕ ಶಾಳಂ ।
ಸುವಿನೀತಂ ಬಂಧು ನೀತಂ ನಿಕೃತ ಸುಕೃತ ಜಾತಂ ಸುವಿಸ್ತಾರಿ ಜಾತಂ॥
ಕವಿಭಾವಂ ಸುಪ್ರಭಾವಂ ವಿಶದ ವಿಶದ ಭಾವಂ ಮಹಾಭಾವ ಭಾವಂ ।
ಭವ ತೇಜಂ ಚಂದ್ರರಾಜಂ ಕರಣಕರಣ ರಾಜಂ ದ್ವಿಜಾಂಬೋಧಿ ರಾಜಂ॥೫೦॥

ಸಕಲ ವ್ಯಾಕರಣಾರ್ಥ ಶಾಸ್ತ್ರ ಗಣಿತಾಲಂಕಾರ ಸತ್ಕಾವ್ಯ ನಾ ।
ಟಕ ವಾತ್ಸ್ಯಾಯನ ನೃತ್ತ ಗೀತ ಹಯ ಶಾಸ್ತ್ರಾದ್ವ್ಯೆತ ಗಾಂಧರ್ವ ತಾ॥
ರ್ಕಿಕವಿಂದ್ರಾಗಮ ವೈದ್ಯ ವಾದ್ಯ ಶಕುನೋದ್ಯದ್ ಹೃದ್ಯ ವಿದ್ಯಾಕದಂ ।
ಬಕನುಂ ಚಂದ್ರ ಕವೀಂದ್ರನೋರ್ವನೆ ವಲಂ ಬಲ್ಲಂ ಪೆಱರ್ಬಲ್ಲರೇ ॥೫೧॥

ಅನುಭವಿಸಿದಂಗಜಾಗಮ
ಮನೆ ಮಾಡಿ ಪಲರ್ಗೆ ತಾನು ಗತಿಕಾಲೋಕ॥
ಯೆನಿಪಂತೆ ಮುನ್ನ ಪೇಳ್ದುದ ।
ನನುಭವಣೆಗಮಾಗಮಕ್ಕಮಳವಡೆ ಪೇಳ್ವೆಂ॥೫೫॥

ಛಂದದಳಂಕಾರಂ ಕರ ।
ಮೊಂದಿ ಮನೋಜಾಗಮೋಕ್ತಮಂ ಲೌಕಿಕಮಂ॥
ಸಂಧಿಸಿ ನೀತಿಗೊಡಂಬಡು ।
ವಂದದಿನಾರ್ಪೇಳ್ವರಿಂತು ಚಂದ್ರನ ತೆರದಿಂ॥೫೬॥

ಆದರೀಕೃತಿ ವಾತ್ಸ್ಯಾಯನ।
ನಧಿಗತ ಕವಿಮಾರ್ಗನಖಿಳ ನಾನಾಛಂದ॥
ಕ್ಕಧಿಕೃತಮಿದೆಂದು ಪೇಳವುದು ।
ಬುಧ ಮಂಡಳಿ ನಚ್ಚಿ ಮೆಚ್ಚಿ ಚಂದ್ರನ ಕೃತಿಯಂ॥೫೭॥

ಕೃತಿಪತಿ ರೇಚನೃಪಂ ಕವಿ
ಪತಿ ಚಂದ್ರಂ ತಿರ್ವಿಂತಿರೆ ದಂದಂ ಬ್ರಹ್ಮಂ ಸ ॥
ತ್ಕೃತಿ ಮದನತಿಲಕಮಿದು ಕಾ ।
ಮತತ್ವಮೆನೆ ನಚ್ಚಿ ಮೆಚ್ಚಿ ಪೊಗಳದರೊಳರೆ॥೫೮॥

ದ್ವಿತೀಯಾಧಿಕಾರಂ

ಮತ್ತೇಭ
ತನು ಮಧ್ಯಂ ಭ್ರಮರಾಳಕಂ ಘಟಕುಚಂ ಬಿಂಬಾಧರಂ ಮೀನಲೋ ।
ಚನವಬ್ಜಾನನವಬ್ಜಗಂಧಮಿಭಕುಂಭ ಶ್ರೋಣಿ ರಂಭೋರು ಕಂ॥
ತುನಿಷಂಗೋಪಮಜಂಘೆ ಪಿಪ್ಪಲದಳಾ ಸಾಭಾಸ ಗುಹ್ಯಂ ಪಿಕ।
ಧ್ವನಿ ವಜ್ರ ದ್ವಿಜಮಾಗೆ ಪದ್ಮಿನಿಯವಳ್ಶುಂಭಪ್ರವಾಳಾಧರೇ॥೧॥

ನಳಿನತೋಳ್ಮೇಗೊಗೆದೊಪ್ಪಿ ತೋರ್ಪ ಜಘನಂ ಬಿಂಬಾಧರಂ ವಕ್ರಕುಂ ।
ತಳಮೊಂದಾಗಿರೆ ತಳ್ತ ಪುರ್ವು ರತಿ ರಾಗಂ ಗೌರವರ್ಣಂ ಸಪಿಂ ॥
ಗಳ ನೇತ್ರಂ ಗುರು ಮಧ್ಯವಲ್ಪ ನಿಟಿಲಂ ರೋಮಾನ್ವಿತಂ ಜಂಘೆಗ ।
ಳ್ತಿಳಜಾಮೋದಮಿದಾಗೆ ಶಂಕಿನಿಯವಳ್ಪಂಕೇಜ ಪತ್ರೇಕ್ಷಣೇ॥೨॥

ತೊಡೆ ತೋಳಂಗುಲಿ ಕಂಧರಂ ದ್ವಿಜಮಿವೆತ್ತ ಕೋಮಲಂ ಭ್ರೂ ಕುಚಂ ।
ಮಡಕಾಲ್ಕಣ್ಕಪಿಯೆಂಬವಲ್ಪವಧರಂ ಭಾಳಂ ಕಪೋಲಂ ಕಚಂ ॥
ಕಡುಮೆಂದಿಂತಿವು ತೋರವರ್ಧತಿ ತಾಣ್ಯಂ ಬುದ್ಧಿ ಪದ್ಮಾಸ್ಯಮೊ।
ಳ್ನುಡಿಗಳ್ಬೆಟ್ಟಿತುವಾಗೆ ಹಸ್ತಿನಿಗೆ ದಾನಾಮೋದಮಕ್ಕುಂ ಸತಿ॥೩॥

ಅಳಕಂಗಳ್ನಯನಂಗಳಂಗುಲಿಚಯಂಗಳ್ಜಂಘೆಗಳ್ನಾಡೆ ಕೋ ।
ಮಳಮಕ್ಕುಂ ಮೊಲೆ ಬತ್ತು ಕಂಗಳೆನಿತುಂ ತೆಳ್ಪಿಂದ ಕೌಂಕುಳ್ಕರಂ ॥
ಕುಳಿದಿರ್ಕುಂ ಪೆರತಂಕ ವಂದಿ ವಸುರಾಗಿರ್ಕುಂ ನಿತಂಬಂ ಮನಂ।
ಗೊಳಿಕುಂ ಬೆಟ್ಟಿತುವಾಗೆ ಚಿತ್ತಿನಿಗೆ ನಿಂಬಾಮೋದಮಕ್ಕುಂ ಪ್ರಿಯೇ॥೪॥

ತ್ರೋಟಕ

ಮಾನೋನ್ನತಮೊಲ್ಪೆನೆ ಪದ್ಮಿನಿಯೋಳ್ ।
ಮೀನಧ್ವಜರಾಗದೆ ಶಂಕಿನಿಯೊಳ್ ॥
ಪೀನಂ ಕಠಿನತ್ವದೆ ಹಸ್ತಿನಿಯೋಳ್ ॥
ನಾನಾರತವೆಂದರಿ ಚಿತ್ತಿನಿಯೊಳ್॥೫॥

ಇಂತೀ ನಾಲ್ಕುಂ ಜಾತಿಯ ।
ಕಾಂತೆಯರವಯವ ಗುಣಂಗಳೊಂದೊಂದರೊಳ॥
ತ್ಯಂತಂ ಕೂಡಿದೊಡರಿನೀಂ ।
ಭ್ರಾಂತೇಂ ಸಂಕೀರ್ಣ ಜಾತಿಯೆಂದಾ ವಧುವಂ॥೬॥

ಗದ್ಯ : ಇದು ಚಂದ್ರರಾಜವಿರಚಿತಮಪ್ಪ ಮದನತಿಲಕದೊಳು ಜಾತಿ ವಿವರಣಂ ದ್ವಿತೀಯಾಧಿಕಾರಂ ಸಮಾಪ್ತಂ.

ಷಷ್ಠಾಧಿಕಾರಂ

ವನಿತೆಯರುತ್ತಮ ಮಧ್ಯಮ।
ಕನಿಷ್ಠ ನಾಯಕಿಯರೆಂದು ಮೂರುಂ ತೆರದಿಂ ॥
ವನಿತೆಯರಪ್ಪರ್ ಜಗದೊಳು।
ವಿನುತೆ ನೀನವರ ಭೇದಮಂ ಕೇಳ್ಪೇಳ್ವೆಂ ॥೧॥

ವಿದ್ಯುನ್ಮಾಲೆ
ಅಂಬೂದ್ಭೂತಾಸ್ಯಂ ಸನ್ಮಧ್ಯಂ ।
ಕಂಬುಗ್ರೀವಂ ಪ್ರಾಕುಶ್ರೋ॥
ಬಿಂಬಂ ಭೃಂಗಾಳೀವತ್ಕೇಶಂ।
ಬಿಂಬೋಷ್ಠಂ ಶ್ರೇಷ್ಠ ಸ್ತ್ರೀಗಕ್ಕುಂ॥೨॥

ಕಳಕಂಠ
ನೆಗಳ್ದ ಚತುಃಷ ।
ಷ್ಟಿಗಳೆರಡುಂ ನೆ॥
ಟ್ಟಗೆ ವಿದಿತಂ ಕೂ।
ರ್ಮೆಗೆ ಮಿಗೆ ಕೂರ್ಪರ್॥೩॥

ಮಲ್ಲಿಕಾಮಾಲೆ
ಹಾವಭಾವ ವಿಲಾಸ ವಿಭ್ರಮ ಯುಕ್ತೆ ಚೆಲ್ವೆ ಮನೋಜ್ಞೆ ನಾ।
ನಾ ವಿಧೋದ್ಘರತಿ ಪ್ರವೀಣೆ ಕಳಾಗಮಜ್ಞೆ ವಿದಗ್ಧೆ ನಿಃ ॥
ಕೇವಲಂ ಶುಚಿಯಕ್ಕುಮುತ್ತಮಮಪ್ಪ ಗಾಯಕಿಯೆಂದು ಸ ।
ದ್ಭಾವದಿಂದರಿವಂ ಮನೋಭವನೆಂಗುಮಿಂದುನಿಭಾನನೇ॥೪॥

ಉತ್ಪಳ
ಎಲ್ಲಿದನೊಳ್ಳಿದಂ ಗುಣಿ ಸುರೂಪಿ ಕುರೂಪಿ ನಿಸಾರಿನುದಾರಿ ಚಿತ್ತಮುಂ ।
ಬಲ್ಲನೊರಂಟನಲ್ಲನನೃತಂ ನುಡಿಯಂ ಪ್ರಭು ಶೌಚಿ ಪಾಸಮಂ॥
ಕಲ್ಲನಮಾನ ಭೋಗಿ ಚದುರಂ ಸುಲಲಿತಕಾರನಪ್ಪವಂ ।
ಗಲ್ಲದೆ ಸೊಲ್ಗುಮೇ ಮನದೊಳುತ್ತಮನಾಯಕಿ ನೀಲಕುಂತಳೇ॥೭॥

ಏಕಾಕ್ಷರಿ ಕಂದ ॥
ನಿನ್ನನ್ನಂ ನಿನ್ನನ್ನೆಂ ।
ನಿನ್ನಾಂನುನನನ್ನ ನಿನ್ನನನ್ನೆಂ ನಿನ್ನಂ ॥
ನಿನ್ನನ್ನಾಂ ನಾಂ ನೀನೆನೆ ।
ನಿನ್ನೆನ್ನಂ ನನ್ನಿಂ ನಿನ್ನನಾ ನಿನನೇನೇಂ॥೯॥

ದ್ವ್ಯಕ್ಷರಿ ॥
ದನುನಂದನ ನಿನನಂದನ।
ನಿನನಂದನ ನಿನನ ನಂದನನ ನಂದನನಂ॥
ದಿನನಂದನ ನೆಂದನುದಿನ ।
ದನನಿನನಾನನ್ನನಾದೆನಾಂದಂ ನಿನ್ನಂ॥೧೦॥

ತ್ರ್ಯಕ್ಷರಿ ॥

ದಾನನಂದನಂ ಮಾನಾ ।
ಮಾನಂ ಮಾನಿನೀಮದನೋಮದನಂ॥
ಮಾನಿನಂ ನಾನಾ ನಾಮದಿ ನಂ।
ದನನೈದ್ದಾಮ ದಿನದಿಂ ದಾಮಂ॥೧೧॥

ಅಕಾರಾಂತ ಕಂದ ॥
ಹರ ಹಾಸ ಧವಳ ಕಮಳಾ ।
ಕರಶರಧವಳಾಭ್ರಹಾರತಾರಾಚಳ ಪಾಂ ॥
ಡುರ ಪತ್ರ ಖಂಡ ತಾರಾಂ ।
ಬರರಂಗಾಜಳ ಶಶಾಂಕ ಶಂಕರವಲಯಂ ॥೧೨॥

ಓ ಕಾರಾಂತ ಕಂದ॥
ಓವೋವೋವ್ವೊ ಕೋವೊ।
ವೋಪೋ ಪೋತೋನೋ ಪೋಪೊಯ್ವೊಳ್ಗೊಲೋ ॥
ಕೋವೋ ಲ್ವೋಯ್ವೋ ಯೋಸೋ ।
ವೋಂಕೋಳೊಂದೋ ನೋರ್ಪೋ ಪೋರ್ಪೋ॥೧೫॥

ಓಕಾರಾಂತಮುಮೇಕಾರಾಂತಮುಮೊಡಗೂಡಿದ ಕಂದ॥
ಓಲೆದೋರೆ ಪೊಳೆವೋ ।
ರೆಲೆತೋತೋ ಪೋಗೆಂಬೊಡೆ ವೋಡೆಂದೊಡೆವೋ॥
ಬೆಳ್ವೆಲೆಗೊಲೆವೋ ಪೊಣ್ವಡೆ ।
ಪೊರೆವೊರೆವೊ ಕೆಂದೋಳ್ಗೆ ಕೊಳ್ಳೆನೊಡವೋಂಬೆಳ್ಪೊ॥೧೬॥

ಸಪ್ತಮಾಧಿಕಾರಂ

ವಯಸವಿಭೇದದಿಂ ಬಾ ।
ಲೆ ಯೌವನೆ ಪ್ರೌಢೆ ಲೌಲ್ಯೆಯೆಂದಿಂತು ಧರಿ ॥
ತ್ರಿಯೊಳಪ್ಪರ್ನಾಲ್ವರ್ಕಾಂ।
ತೆಯರಂದಮನಿಂತೆಂದು ನೀಂ ಕೇಳ್ಪೇಳ್ವೆಂ॥೧॥

ಪದಿನಾಲ್ಕು ಬಾಲೆಗೆ ಮೂವ।
ತ್ತದಟಿನ ಯೌವನೆಗೆ ನಾಲ್ವತ್ತೆರಡಾಪ್ರೌಢಾ ॥
ಸ್ಪದಮಾಕೆಗೆ ಮೀಹಂದ ।
ಪ್ಪದಂಗನೆಗಂ ಮೇಲೆ ಲೌಲ್ಯೆಗಬ್ದಂ ವನಿತೆ॥೨॥

ರಥೋದ್ದತ
ತಂಬುಲಂ ಕುಸುಮಮಿಂಬು ಪಣ್ಫಲಂ ।
ಡಂಬದಾಟಮಿನಿಯೂಟಮೞ್ಕಱಿಂ ॥
ದೆಂಬ ಮಾತು ಮೃದು ಸಂಪ್ರಯೋಗಮೊ।
ಳ್ಪೆಂಬವಂ ನೆರೆದು ಗೆಲ್ಗೆ ಬಾಲೆಯಂ॥೩॥

ಕಂದ
ತುಡುಗೆಗಳಿಂ ವಸ್ತ್ರಗಳಿ ।
ನೆಡಂಬಡಣಮಿಲ್ಲದಿರ್ಪ ಭೋಗದಿನಿಂಪಿಂ॥
ಗೆಡೆಗೊಂಡು ಸುರತ ಸುಖಮಂ ।
ಪಡೆಗಾ ಯೌವನೆಗೆ ಕೂರ್ಮೆಯಂ ಚದುರ ವಿಟಂ॥೪॥

ಎಡೆಯಕ್ಕರ
ಕರಜಮೆರಡರಿಂ ಬೆಕ್ಕು ಪಾಯ್ವಪಾಂಗಿನಿಂ ।
ತ್ವರಿತದಿಂ ಪೆಗಲನೊತ್ತು ಗುಹ್ಯಾಸನದಿಂ ॥
ತಿರುತೆ ಕರ್ಣಮೂಲಮಂ ಚುಂಬಿಸೆ ಬಾಲೆಗೆ।
ಸುರಿಗುಂ ಕಾಮಾಂಬು ನಿಶ್ಚಯಮಿದನಱಿಗೆ॥೫॥

ಅತಿ ಚದುರತೆಯಿಂ ಸೌಖ್ಯದಿ ।
ನತಿಶಯ ರತಿಯಿಂ ಸಚುಂಬನಾಲಿಂಗನ ಪೀ॥
ಡಿತದಿಂ ಪ್ರೌಢೆಯನಾಗಳೆ ।
ಮತಿಗಿಡೆ ಗೆಲ್ಗುಂ ವಿಟಂ ದಿಟಂ ಚಂದ್ರಮುಖಿ॥೬॥

ಮನವಾರ್ತೆ ನಂಟರ ಮಾ ।
ತಿನ ಕೂರ್ಮೆಯನುಂಟು ಮಾಡಿ ಗೌರವದಿಂ ಮೆ॥
ಲ್ಪನೆ ತೋರಿ ರತಿಯೊಳೆಂದುಂ।
ಮನಮಱಿದೊಡಗೂಡೆ ಲೌಲ್ಯೆಯಂ ಗೆಲ್ಗರಿವಂ॥೭॥

ಇದು ಸಕಲ ಬುಧಜನವಿನುತ ಕಾವ್ಯಾಲಂಕಾರ, ನೀತಿ ಬಂಧನಮುಂ ಛಂದೋಮಹಾರ್ಣವಮುಂ ಕವಿತಾಮಹಾರ್ಣವಂ ಶ್ರೀ ಚಂದ್ರರಾಜ ವಿರಚಿತಮಪ್ಪ ಮದನತಿಲಕದೊಳು, ಬಾಲೆ, ಯೌವನೆ, ಪ್ರೌಢೆ , ಲೌಲ್ಯೆಯೆಂಬಿವರನುಭವವರ್ಣನಂ ಸಪ್ತ
ಮಾಧಿಕಾರಂ ಸಂಪೂರ್ಣಮಂ ಮಂಗಳಮಹಾ ಶ್ರೀ ಶ್ರೀ ಶ್ರೀ.

ಅಷ್ಟಮಾಧಿಕಾರಂ

ಲಲನಾ ಜನದೊಳು ಕುಲವಧು ।
ಕುಲಟಾಂಗನೆ ವೇಶ್ಯೆಯೆಂದು ಮೂರುಂ ತೆರದಿಂ ॥
ಲಲಿಹತಾಂಗಿಯರಪ್ಪರ್ಕೋ ।
ಮಳೆ ನೀನಿನ್ನಿವರ ಭೇದಮಂ ಕೇಳ್ಪೇಳ್ವೆಂ ॥೧॥

ರತಿಗೆಣೆಯೆನೆಸಿದ ಗುಣ ಸಂ ।
ತತಿಯುಳ್ಳಾಕೆ ದೇವತಾಂಶಕೆಯಂ ತಾ॥
ಸತಿಯಂ ಕೊಂಡಾಡುಗೆ ತ ।
ತ್ಪತಿಗಂ ಧರೂಮಾರ್ಥಕಾಮ ಭೋಗಂ ನೆಗಳ್ಗುಂ॥೨॥

ಸತಿ ಗುಣವತಿ ದೊರೆಕೊಂಡಡೆ ।
ಪತಿಗಾ ಸ್ತ್ರೀ ರತ್ನಮೆಂಬ ಪೆಸರಂ ಪಡೆಗುಂ ॥
ಸತಿ ದುರ್ಗುಣೆ ದೊರೆಕೊಂಡಡೆ ।
ಪತಿಗಾ ಸ್ತ್ರೀ ವ್ಯಾಧಿಯೆಂಬ ಪೆಸರುಂ ಪಡೆಗುಂ ॥ ೩॥

ಧರ್ಮಕ್ಕರ್ಥಕ್ಕತಿಥಿಗೆ ।
ಪೆರ್ಮೆಯ ಪಿತೃಗಳ್ಗೆ ದೇವಕಾರ್ಯಕ್ಕೆಂದುಂ ॥
ನಿರ್ಮ್ಮಳ ಸಂತತಿಗಳ್ಗ।
ಕ್ಕೂರ್ಮೆಯ ಕುಲವನಿತೆ ಮುಖ್ಯವಾಕೆಯೆ ಪೂಜ್ಯಂ॥೫॥

ನಯವಿದೆ ಶೌಚೆಯಲ್ಪವಚೆ ಸಾಧು ಸುಠಾಳಿ ಸುಪೂಜ್ಯೆ ಸಂತತಂ ।
ಭಯಯುತೆ ಪುರುಷಭಕ್ತೆಯನುಕೂಲೆ ವಿದಗ್ಧೆ ಮನೋಭವೋತ್ಸವ॥
ಪ್ರಿಯೆ ಮನದನ್ನಳುಂ ಮನವನಿರ್ಕುಳಿಗೊಳ್ವಳು ನಿಃಪ್ರಪಂಚೆ ನಿರ್ಮ ।
ಳಯುತೆ ದೇವ ಬಂಧುಜನ ವತ್ಸಲೆ ಸಜ್ಜನನಾರಿ ಮತ್ಪ್ರಿಯೆ ॥೮॥

ವಂಚಿಸದೆ ಪುಸಿಯದಳುಪದೆ ।
ಸಂಚಳಿಸದೆ ಪುರುಡುಗೆಯ್ಯದುರದಿಂದೆ  ಕರಂ॥
ಬಂಚಿಸದಳಲಿಸದುಳುಗಿಸು।
ವಂ ಚದುರಂ ಸಜ್ಜನಂಗಳಂ ಮೃಗನಯನೆ॥೧೨॥

ಮತಿವಂತೆಯ ಧರೂಮಜ್ಞೆಯ ।
ಪತಿಭಕ್ತೆಯ ಸಂದ ಶೌಚವಂತೆಯ ಸತ್ಯಾ ॥
ನ್ವಿತ ವಚನೆಯ ಕಥೆಯನೆ ಪೇ।
ಳ್ಗತಿಶಯದಿಂ ತನ್ನ ವಧುಗೆ ಘಟಕುಚಯುಗಳೆ॥೧೮॥

ಗೊರತಿಯ ಕಂತಿಯ ಕುಂಟಿಣಿ।
ಯರ ಮುಂಡೆಯ ಮಾಲೆಗಾರ್ತಿಯಸಗಿತಿ ಯೋಗೀ ॥
ಶ್ವರಿಯರ ಕಿಡಿಕಿಯ ನಾದಿತಿ
ಯರ ಮುಂದಂ ನುಡಿಯಲೀಯಲಾಗದು ವಧುವಂ॥೨೬॥

ಗೊರವರ ಸವಣರ ದೊಂಬರ ।
ತಿರಿವರ ತೆಲ್ಲಿಗರವಾದದವರ್ಗಳ ದೈವ ॥
ಜ್ಞರ ಖಳರ ಜೋದುಗಾರರ ।
ನೆರವಿಗಳಂ ಪೋಗಲೀಯಲಾಗದು ವಧುವಂ ॥೨೭॥

ಬಳರಿಯ ನೋಂಪಿಗೆ ಬೀದಿಗೆ ।
ಮುಳಿವರ ಮನೆಗಳ್ಗೆ ಮಧ್ಯಪಿಗಳಲ್ಲಿಗೆ ಕೋ ॥
ಮಳೆಯಂ ಪೋಗಲ್ಕಿತ್ತಡೆ ।
ಬಳರಿಗೆ ಪೂಯಲಿಡಹೋದ ಕುರಿಯಂತಕ್ಕು ॥೨೮॥

ಕೊಳಲ ಬೆಡಂಬೆಯ ಪಗರಣ ।
ದಳಿಗಳ ಪರದೈವ ಮಾಡುವವರ್ಗಳ ಮಾತಿಂ ॥
ಗುಳಿಪರ ಪರಜಾತೆಯವ ।
ರ್ಗಳ ತುಳಿಗಳ ದೆಸೆ ಬೋಗಲೀಯಲಿಗದು ವಧುವಂ॥೨೯॥

ದಶಮಾಧಿಕಾರಂ

ಎನಿಪನಾಗರಿಕಂ ಮು।
ನ್ನಿನ ವೆಭವಂ ಕೆಟ್ಟೊಡಂ ಪೆಸರ್ಕೆಡದುದ್ದದಂ ॥
ತೆನೆ ಪುಣ್ಕೆಟ್ಟಡೆ ಕಲೆ ಕೆಡ।
ದೆನಿಪಂತದರಿನರಿದು ಯೋಚಿಪುದವರಂ॥೩೭॥

ಕೂಡಿದ ನಾಲ್ವರ್ಗಾವಿಲ ।
ರಾಡಂ ನಾಯ್ಮಾಡಿ ತಿಂದರೆಂದಡೆ ಚದುರರ್ ॥
ಕೊಡಿದಡೆ ಸತಿಯರಂ ಕೊಂ ।
ಡಾಡದೆ ಗೆಲ್ದಂದಮರಿದೆ ಮದನಲತಾಂಗಿ ॥೪೨॥

ಕೃತಜ್ಞತೆಗಳು
ಸಂಪಾದಕರು: ವಿದ್ಯಾರತ್ನ ಆರ್. ಎಸ್. ಪಂಚಮೈಖಿ, ಎಂ. ಎ.
ಡಾಯರೆಕ್ಟರ, ಕನ್ನಡ ಸಂಶೋಧನ ಸಂಸ್ಥೆ,
ಧಾರವಾಡ.




1 ಕಾಮೆಂಟ್‌: