ಸತ್ತ್ವಾಲೋಕನಂ ( ಚಂಪು ಕಾವ್ಯ)
ಪ್ರೊ. ಟಿ. ಕೇಶವ ಭಟ್ಟ
ಈ ಕಾವ್ಯದ ಕರ್ತೃ ಶ್ರೀ ಪ್ರೊ. ಟಿ. ಕೇಶವ ಭಟ್ಟರು. ಇವರು ಮದ್ರಾಸು ವಿಶ್ವವಿದ್ಯಾಲಯದಲ್ಲಿ " ಬಿ " ವಿದ್ವಾನ್ ( ಕನ್ನಡ ಮತ್ತು ಸಂಸ್ಕೃತ) ಪೂರೈಸಿದವರು. ಇವರು ಚಂಪೂಕಾವ್ಯಗಳನ್ನು ಹೆಚ್ಚಿನ ಶ್ರದ್ಧೆಯಿಂದ ಅಧ್ಯಯನು ಮಾಡಿದರು. ಅಂತಹದೇ ಕಾವ್ಯರಚನೆಗೆ ಅಂತಃಪ್ರೇರಣೆ ದೊರಕಿದ್ದಿತು. ಕೃಷ್ಣಾರ್ಜುನರ ಕಾಳಗವನ್ನು ಕಥಾವಸ್ತುವಾಗಿಟ್ಟುಕೊಂಡು
ಕಾವ್ಯ ರಚಿಸಿದ್ದಾರೆ. ೧೯೫೯ ರಲ್ಲಿ ಪ್ರಥಮ ಆವೃತ್ತಿಯು ಪ್ರಕಟವಾಯಿತು.
ಇದನ್ನು ರಚಿಸಿದವನು ಸಜ್ಜನ-ಪದ-ಮಸ್ತಕನೂ ಉಪಾಧ್ಯಾಯನೂ ಕನೀಯನೂ ಆದ ಕೇಶವನೆಂದು ಕಾವ್ಯದಲ್ಲಿ ಉಕ್ತವಾಗಿದೆ. ಸತ್- ಜನ - ಪದ - ಮಸ್ತಕಂ ಕನೀಯಂ ಎಂದಾಗ, ಸತ್ಪುರುಷರ ಪಾದಕ್ಕೆ ತಲೆಯನಿಟ್ಟು ( ವಿನಮ್ರನಾದ ) ಕನೀಯನಾದ ( ಕಿರಿಯನಾದ ), ಅಲ್ಪನಾದ ತಾನು ಎಂದಂತಾಗುವುದು. ಕವಿಯ ಭಾವನೆ ಇದೇ. ಇದು ಎಂಟು ಆಶ್ವಾಸಗಳಿಂದ ಕೂಡಿದ ಚಿಕ್ಕ ಚಂಪೂಕಾವ್ಯ. ಇದಕ್ಕೆ "ಸತ್ತ್ವಾಲೋಕನ ಕಾವ್ಯ "ಎಂಬ ಹೆಸರಿಟ್ಟಿದ್ದಾರೆ. "ಸತ್ತ್ವ " ಎಂದರೆ ಇಲ್ಲಿ ಬಲ ಅಥವಾ ಸಾಮರ್ಥ್ಯ. ಆಲೋಕ ಅಥವಾ ಆಲೋಕನ ಎಂದರೆ ನೋಡುವಿಕೆ, ಪ್ರಕಾಶಪಡಿಸುವಿಕೆ. ಈ ಕಾವ್ಯದಲ್ಲಿ ಶ್ರೀಕೃಷ್ಣನು ಅರ್ಜುನನ ಸತ್ತ್ವವನ್ನು ಪರೀಕ್ಷಿಸಿ ನೋಡಲು ಹವಣಿಸಿದ್ದನೆಂದು ಒಂದೆಡೆ ಶಿವನ ಮಾತಿನಲ್ಲಿ ಬಂದಿದೆ.
ಸತ್ತ್ವಾಲೋಕನಂ ಎಂಬ ವಸ್ತುಕ ಕಾವ್ಯಂ
ಪ್ರಥಮಾಶ್ವಾಸಂ
( ನಾಂದಿ - ಕಥಾಪೀಠಿಕೆ - ದ್ವಾರಕಾವರ್ಣನಂ )
ಶಾ. ವಿ. ಶ್ರೀದೇವೀರಮಣಂ ವಿನೋದಕರಣಂ ಧರ್ಮಾನುಕೂಲಾತ್ಮ ಸ
ದ್ಬೋಧಪ್ರಾಯಗುಣಂ ಮನೋಜ್ಞಸುಮುಖಂ ಚಾತುರ್ಮುಖೋದ್ಗೀತದಿ
ವ್ಯೋದಂತಂ ರಣರಂಗಪಂಚವದನಂ ದೋಷಪ್ರಣಾಶಂ ಸದಾ
ಹ್ಲಾದಂ ರಕ್ಷಿಸುಗೊಳ್ಪನಿತ್ತು ತಿರೆಯೊಳ್ ಶ್ರೀಶಂಕರಂ ಲೆಂಕರಂ ॥೧॥
( ಆಶೀರೂಪದ ಈ ಪ್ರಥಮ ಮಂಗಳ ಪದ್ಯವು ವಿಷ್ಣು-ಶಿವ ಉಭಯಪರವಾಗಿದೆ; ಎಂಟು ಆಶ್ವಾಸಗಳ ಕಥಾಗರ್ಭಸೂಚಕ ಆಗಿದೆ ) ಶ್ರೀ ದೇವಿಯ (ಲಕ್ಷ್ಮೀದೆವಿಯ, ಕಾಂತಿಯುಕ್ತಳಾದ ದೇವಿಯ ) ವಲ್ಲಭನು, ವಿನೋದದ ಮನೋಭಾವವುಳ್ಳವನ, ಧರ್ಮಕ್ಕೆ ಅನುಕೂಲವಾಗುಳ್ಳ ಆತ್ಮಜ್ಞಾನ ಸಮೃದ್ಧ ಗುಣವುಳ್ಳವನು, ಮನೋಹರವಾಗಿ ಕಾಣಿಸುವ ಒಳ್ಳೆಯ ಮುಖವಳ್ವವನು (ಗರುಡನುಳ್ಳವನು, ಗಣೇಶನನುಳ್ಳವನು), ನಾರದಾದಿ ಕೀರ್ತನಶೀಲ ಭಕ್ತರಿಂದ ಹಾಡಲಾದ ದಿವ್ಯ ಚರೆತ್ರೆಯುಳ್ಳವನು, ಯುದ್ಧರಂಗದಲ್ಲಿ ಪಂಚಾಸ್ಯನು ( ಸಿಂಹನು, ನರಸಿಂಹ ರೂಪನು, ಐಮೊಗನು ) ದೋಷನಾಶಮಾಡುವವನು, ಯಾವಾಗಲೂ ಸಂತೋಷವುಳ್ಳವನು, ( ಸತ್ಪುರುಷರಿಗೆ ಸಂತೋಷ ಸ್ವರೂಪನು ) ಆದ ಶ್ರೀಶನು (ಶ್ರೀಯರಸನು ) -ಶ್ರೀಶಂಕರನು ಈ ಭೂಮಿಯಲ್ಲಿ ಒಳ್ಳೆಯದನಿತ್ತು ಭಕ್ತರನ್ನು ಕಾಪಾಡಲಿ.
ಶಾ. ವಿ : ಈಶಂ ಮೃತ್ಯುಹರಂ ಸ್ವಕಾಶನಿರೆಯುಂ ಪೂರ್ವಸ್ತುತಂ ಸರ್ವವಿ
ಘ್ನೇಶಂ ರಾಜಿಪ ವಾರಣೇಂದ್ರಮುಖನಾಗಿರ್ದುಂ ವಿವೇಕಾತಿಸಂ
ಕಾಶಂ ಮೂಷಕವಾಹನಂ ಫಣಿಧರಂ ಲಂಬೋದರಂದಾಳ್ದುಂ ಸ
ರ್ವಾಶಾವ್ಯಾಪಿ ಗಣೇಶನಾದನೊಸೆದಾದಂ ಮಾೞ್ಕೆರ್ವಿಘ್ನಮಂ ॥೨॥
ಈಶ್ವರನೂ ಮರಣದೇವತೆಯ ಸಂಹಾರಕನೂ ಆಗಿ, ತನ್ನ ತಂದೆಯಿದ್ದರೂ ಅವನಿಂದ ಮೊದಲೇ ಸ್ತುತಿಗೆ ಪಾತ್ರನಾದ, ಎಲ್ಲ ವಿಘ್ನಗಳಿಗೂ ಒಡೆಯನಾದ, ಶೋಭಿಸುವ ಗಜರಾಜನ ಮುಖವುಳ್ಳವನಾಗಿದ್ದೂ ಜ್ಞಾನದ ಅತಿಶಯ ಕಾಂತಿಯುಳ್ಳವನಾದ, ಇಲಿಯ ವಾಹನವುಳ್ಳವನಾಗಿ ಸರ್ಪಧರನೂ ಆದ, ಜೋತಾಡುವ ಹೊಟ್ಟೆಯಿದ್ದೂ ಎಲ್ಲ ದಿಕ್ಕುಗಳಲ್ಲಿ ವ್ಯಾಪಿಸಿ ಕೊಂಡಿರುವ ಹೀಗೆ ವಿರುದ್ಧಗುಣ ವಿಶೇಷವುಳ್ಳ ಗಣೇಶನೆನಿಸಿದವನು ಭಕ್ತರನ್ನು ಪ್ರೀತಿಸಿ ನಿರ್ವಘ್ನವನ್ನು ವಿಶೇಷವಾಗಿ ಉಂಟುಮಾಡಲಿ.
ಮ. ವಿ: ಕತೆ ಗೆಲ್ ಭಾವಮಲರ್ ಸದರ್ಥಮೆ ಫಲಂ ಶಬ್ಧಂ ಕುಕಿಲ್ ಛಂದಮ
ನ್ವಿತರ್ಪಣಂ ರಸಜೀವಮಾಗೆ ಪುರುಡೆಂಬಾ ಮಾರುತಾಘಾತದಿಂ
ಕೃತಿಭೂಜಂ ಕೆಡೆಬೀಳದಂತೆ ತಳೆವಾ ತಾಯ್ವೇರವೋಲ್ ದೇವಿವಾ
ಕ್ಸತಿ ಮತ್ಕಾವ್ಯವನಾಂತು ರಂಜಿಸುಗೆ ವಿದ್ಯಾಲೋಕಮಂ ಲೋಕಮಂ॥೬॥
ಕಾವ್ಯವೆಂಬುದೊಂದು ಮರ. ಕತೆಗಳೇ ಅದರ ಕೊಂಬೆಗಳು. ಭಾವವೇ ಹೂಗಳು. ಒಳ್ಳಿತಾದ ಅರ್ಥವೆಂಬುದು ಹಣ್ಣುಗಳು. ಶಬ್ಧವೇ ಕೋಗಿಲೆಯ ಕೂಗು, ಛಂದಸ್ಸು ಮರದೆಲೆಗಳು. ರಸವೇ ಜೀವ. ಹೀಗಿರುವ ಕಾವ್ಯವೃಕ್ಷವು ಕೆಟ್ಟ ಜನರ ಹೊಟ್ಟೆಕಿಚ್ಚೆಂಬ ಗಾಳಿಹೊಡೆತಕ್ಕೆ ಗುರಿಯಾಗಿ ಮುರೆದು ಬೀಳದಂತೆ ಧರಿಸತಕ್ಕ ತಾಯಿ ಬೇರಿನಂತೆ ಇರತಕ್ಕವಾಗ್ದೇವಿಯು ನನ್ನ ಕಾವ್ಯವನ್ನು ಆಧರಿಸಿಕೊಂಡು ಇದು ವಿದ್ಯಾವಂತರಾದ ಜನರನ್ನೂ ಇತರ ಜನರನ್ನೂ ರಂಜಿಸುವಂತೆ ಮಾಡಲಿ.
ಕಂದ: ಲಕ್ಕಣಮಂ ಕಿಡಿಸದೆ ಪಿಂ
ತಿಕ್ಕದೆ ಸನ್ಮಾರ್ಗಗತಿಯನೀಗಳ್ ಪುರುಳಂ
ಲಕ್ಕಿಸಿ ಕಬ್ಬಂಬೇೞ್ದರ್
ತಕ್ಕಿನ ಕವಿರಾಜರೆನ್ನ ಸನ್ನುತಿಭಾಜರ್ ॥೭॥
ಕಾವ್ಯಕ್ಕೆ ಇರಬೇಕಾದ ಲಕ್ಷಣವನ್ನು ಕೆಡಿಸದೆ, ಸನ್ಮಾರ್ಗದಲ್ಲಿ ಮುಂದುವರಿಯಬೇಕಾದುದನ್ನು ಹಿಂದಕ್ಕೆ ತಳ್ಳದೆ, ಯಾವಾಗಲೂ ಹುರುಳನ್ನು ವಿಶೇಷವಾಗಿ ಲಕ್ಷ್ಯವಿಟ್ಟುಕೊಂಡು ಕಾವ್ಯರಚನೆ ಮಾಡಿದ ಯೋಗ್ಯ ಕವಿರಾಜರು ನನ್ನ ಸಂಸ್ತುತಿಗೆ ಪಾತ್ರರಾಗಿರುವರು.
ಕಂದ: ಸನ್ನುತರೆನಗಂ ಪೂರ್ವಜ
ರೆನ್ನೋದಿಕೆಗಿಂತು ನೆಗಳ್ದ ಮತಿಗಂ ಕೃತಿಗಂ
ರನ್ನದ ಕೈದೀವಿಗೆಯಾ
ದನ್ನರ್ ಸದ್ಭಕ್ತಿಯಿಂದವಱಂ ನೆನೆವೆಂ॥೮॥
ನನಗೂ ಸನ್ನುತರಾಗಿದ್ದು ನನ್ನ ಓದಿಕೆಗೂ ( ವಿದ್ಯಾಭ್ಯಾಸಕ್ಕೂ ) ಹೀಗೆ ಪ್ರಖ್ಯಾತವಾದ ಬುದ್ಧಿಗೂ ಕೃತಿರಚನೆಗೂ ರತ್ನದ ಕೈದೀವಿಗೆಯಾದಂತಹರು ನನ್ನ ಪೂರ್ವಜರು ( ನನ್ನಣ್ಣನವರು ) ಅವರನ್ನು ನಾನು ಭಕ್ತಿಯಿಂದ ಸ್ಮರಿಸುತ್ತೇನೆ.
ಕಂದ : ಧೀರರುದಾರರ್ ವಾಗ್ಗಂ
ಭೀರರ್ ನಾನಾ ಕಳಾಪ್ರಸಾರವಿಹಾರರ್
ಚಾರುಗುಣಧಾರರೀರ್ಷ್ಯಾ
ದೂರರ್ ಸತತಂ ಬುಧರ್ಕಳೆಂದಱಿದಿರ್ಪೆಂ॥೯॥
ವಿದ್ರಾಂಸರೆಂದರೆ- ಯಾವಾಗಲೂ ಬುದ್ಧಿವಂತರು, ಉದಾರ ಗುಣವುಳ್ಳವರು, ಮಾತಿನಲ್ಲಿ ಗಂಭೀರತೆಯುಳ್ಳವರು, ಹಲವು ಬಗೆಯ ಕಲೆಗಳನ್ನು ಪ್ರಸಾರ ಮಾಡುವುದೇ ತಮ್ಮ ಲೀಲೆಯಾಗಿರೈವವರು, ಮನೋಹರ ಗುಣಗಳನ್ನು ಧರಿಸಿರುವವರು, ಮತ್ಸರದಿಂದ ದೂರವಾದವರು ( ನಿರ್ಮತ್ಸರರು ) ಎಂದು ನಾನು ತಿಳಿದಿರುತ್ತೇನೆ. ( ಪರಿಕರಾಲಂಕಾರ )
ಪೞಗನ್ನಡಮನೆ ಕಬ್ಬದೆ
ಬಳಸುವರೀ ಚಂಪು ತೆರಳ್ವ ಕಾಲರಥಾಂಗ
ಕ್ಕೊಳಗಾಗಿ ಮುಂದೆ ಬಂದುದು
ಪೞತಲ್ತದರಲ್ಲಿ ಪೊಸತನಱಿವವರಱಿವರ್॥೧೦॥
ಹೊಸದಾದ ಕಾವ್ಯವೆಂದಾಗ ಅದರಲ್ಲಿ ಹಳಗನ್ನಡವನ್ನು ಪ್ರಯೋಗಿಸದೆ ಯಾರೂ ಇರುವುದಿಲ್ಲ. ಇದೀಗ ಈ ಚಂಪೂಕಾವ್ಯವು ಕಾಲ ಚಕ್ರ ಪರೆವರ್ತನೆಗೊಳಗಾಗಿ ಮುಂದೆ ಬಂದಿರುತ್ತದೆ. ಇದು ಹಳೆಯದೇನೂ ಅಲ್ಲ. ತಿಳಿದವರು ಇದರಲ್ಲಿರತಕ್ಕ ಹೊಸತನವನ್ನು ತಿಳಿದುಕೊಳ್ಳುವರು.
ಎಲ್ಲುಂ ನಿಱುಗೆಯೊಳಿದಱೊಳ್
ಸಲ್ಲದ ಕುಂದಿರ್ದೊಡಂ ಪ್ರಸನ್ನತೆಯಿಂದಂ
ಬಲ್ಲವರಂದದೆ ತಿರ್ದುಗೆ
ಸಲ್ಲಲಿತಗುಣಾಂತರಂಗ ಶರನಿಧಿ ಸೋಮರ್॥೧೧॥
ಈ ಕಾವ್ಯದ ಪದವಿನ್ಯಾಸದಲ್ಲಿ ಎಲ್ಲಿಯೇ ಆಗಲಿ, ಸಲ್ಲದಂತಹ ಕುಂದು ಏನಾದರು ಇದ್ದರೆ, ಒಳ್ಳೆಯ ಸುಮಧುರವಾದ ಗುಣಗಳುಳ್ಳ ಅಂತರಂಗವೆಂಬ ಸಮುದ್ರಕ್ಕೆ ಚಂದ್ರನಂತಿರತಕ್ಕ ಕೋವಿದರು ಅಂದವಾಗಿ ತಿದ್ದಲಿ.
ಪ್ರಸ್ತುತ ಸತ್ವಾಲೋಕನ
ವಸ್ತುಕಮೀ ಕಾವ್ಯಮಿದಕೆ ಹರಿನರಸಮರಂ
ವಸ್ತುವಿದಂ ಸಜ್ಜನಪದ
ಮಸ್ತಕನೊವಜಂ ಕನೀಯ ಕೇಶವನೊರೆದಂ॥೧೨॥
ಒಳ್ಳೆಯ ಸ್ತುತಿಗೆ ಒಳಗಾದಂತಹ " ಸತ್ತ್ವಾಲೋಕನಂ " ಎಂಬ ವಸ್ತುಕ ( ಚಂಪೂ ) ಕಾವ್ಯವಿದು. ಇದಕ್ಕೆ ಕಥಾವಸ್ತು ಕೃಷ್ಣಾರ್ಜುನರ ಕಾಳಗ. ಇದನ್ನು ಸಜ್ಡನರ ಪೃದಕ್ಕಿಟ್ಟು ಕಲೆಯವನಾದ ಓಜನಾದ "ಕನೀಯ ಕವಿ" ಎಂಬ ಬಿರುದಿನ ಕೇಶವನು ರಚಿಸಿರುವನು.
ತೃತೀಯಾಶ್ವಾಸಂ.
( ಗಯಪರಿಭ್ರಮಣಂ - ಶಿವಾನುಗ್ರಹಂ )
ಕಂ: ಶ್ರೀರಮಣನೇೞಿ ಪೋಗುವ
ಗಾರುಡವೇಗಂ ಸ್ವವಾಜಿವೇಗಕೆ ವೇಗ
ಪ್ರಾರಂಭದೊಳೇ ಕೀಳೆಂ
ದೋರಂತಿರೆ ಗರ್ವಿಯಾದನಾಗಲ್ ಬಹುದೇ? ॥೧॥
ಶ್ರೇಯರಸನು ಹತ್ತಿ ಕುಳಿತು ಪಯಣಿಸತಕ್ಕ ಗರುಡನ ವೇಗವು ತನ್ನ ಕುದುರೆಯ ವೇಗಕ್ಕೆ ಅದರ ವೇಗದ ಪ್ರಾರಂಭದಲ್ಲೆಯೇ, ಕೆಳಗಿನ ಮಟ್ಟದ್ದೆಂದು ಗಯನು ಒಂದಂ ಸಮನೆ ಗರ್ವಗೊಂಡನು. ಹಾಗೆ ಗರ್ವ ತಾಳುವುದು ಸರಿಯೇ?
ಮ. ವಿ : ನಡೇಬೇಗಂ ನಡೆಯಿಂದೆ ಗಾಡಿ ನಡೆಯಿಂದಂ ಗಾಡಿಯಿಂದೆಣ್ಣೆದೇರ್
ನಡೆಯಿಂ ಗಾಡಿಯಿನೆಣ್ಣೆದೇರ ಗತಿಮೀರ್ಗುಂ ದೂವೆದೇರೆತ್ತಲುಂ
ನಡೆಯಿಂ ಗಾಡಿಯಿನೆಣ್ಣೆದೇರ್ಪೋಗೆಯ ತೇರಿಂ ವ್ಯೋಮಯಾನಂ ದಲಂ
ದಡರಲ್ಕಾ ಹರಿ ವೇಗದಿಂದಿವುಗಳಂ ಮೀರ್ವಂತದೇನೋಡಿತೋ॥೨॥
ವೇಗದ ಪರಿಗಣನೆಯಲ್ಲಿ ನಮ್ಮ ನಡಿಗೆಯೇ ವೇಗವಾದುದೆಂದು ಇಟ್ಟುಕೊಂಡರೆ, ಆ ನಡಿಗೆಯಿಂದ ಹೆಚ್ಚಿನ ವೇಗವುಳ್ಳದು ಗಾಡಿ. ( ಕುದುರೆಗಾಡಿ ) ಗಾಡಿಯಿಂದ ಹೆಚ್ಚಿನ ವೇಗವುಳ್ಳುದು ಎಣ್ಣೆದೇರು. ( ಅಂದರೆ ಬಸ್ಸು, ಕಾರು, ಮುಂತಾದವು) ನಡೆ, ಗಾಡಿ, ಎಣ್ಣೆದೇರುಗಳ ವೇಗವನ್ನು ಮೀರುವಂತಹದು ಧೂಮಶಕಟ, ( ಹೊಗೆ ಬಂಡಿ, ರೈಲು ) ಎವೆಲ್ಲವನ್ನೂ ಮೀರುವಂತಹದು ವಿಮಾನ, ಇದು ನಿಶ್ಚಯ. ಅಂದು ಗಯನು ಕುದುರೆಯನ್ನೇರಿದಾಗ ವೇಗದಲ್ಲಿ ಇವೆಲ್ಲವನ್ನೂ ಮೀರುವ ಹಾಗೆ ಅದೇನು ಓಡಿತೋ !
ಮ. ಸ್ರ : ಖುರಘೂತೋದ್ಧೂತ ಪಾಂಸುವ್ರಜಮೊಗೆವ ಮೊದಲ್ ಗಾವುದಂ ದಾಂಟಿತೆಂಬೋಲ್
ಧರೆಯಂ ಘೋಟಾಖುರಂ ಸ್ಪರ್ಶಿಪುದತಿಭರದಿಂ ಸಂದೆಯಂ ಮಾಡೆಯುಂ ವಿ
ಸ್ತರ ಮಾರ್ಗೋಪಾಂತಭೂಜಾವಳಿಯೆ ರಭಸಮಂ ತಾಳ್ದು ಪಾರ್ವಂತೆ ಕಾಣು
ತ್ತಿರೆ ವೇಗಕ್ಕುತ್ತರಾಶಾಧಿಪಸುತ ತುರಗಂ ವೇಗದಿಂ ಪಾಯ್ದುದಾಗಳ ॥೩॥
ಆ ಕುದುರೆಯ ವೇಗ ಅಸಾಮಾನ್ಯ. ಅದರ ಗೊರಸಿನ ಪೆಟ್ಟಿನಿಂದ ಮೇಲೇಳುವ ಧೂಳು ಉಂಟಾಗುವುದರೊಳಗೆ ಒಂದು ಗಾವುದವನ್ನೇ ದಾಟಿತೆಂಬಂತೆಯೂ ಕುದುರೆಯ ಗೊರಸು ನೆಲವನ್ನು ಸ್ಪರ್ಶಿಸುವುದೇ ಸಂದೇಹವನ್ನುಂಟು ಮಾಡತಕ್ಕ ತ್ವರೆಯಿಂದಲೂ ಕುದುರೆ ಓಡುವ ಮಾರ್ಗದ ಸಮೀಪದ ಮರಗಳ ಸಮೂಹವು ಅತ್ಯಂತ ರಭಸದಿಂದ ಓಡುತ್ತಿರುವಂತೆ ಕಾಣುತ್ತಿರಲು ಅಷ್ಟೊಂದು ವೇಗದಿಂದ ಆ ಕುಬೇರನ ಮಗನ ಕುದುರೆಯು ಓಡಿತು.
ಚ. ಮಾ : ತೆಗೞ್ವರ ಮಾತುಮಂ ಕಿವಿಗೆ ಕೊಳ್ಳದೆ ಬೀೞುತೆ ಸಾವರಂ ಮನ
ಕ್ಕೊಗೆದಳಲಿಂದೆ ನೋಡದೆ ಕೃಪಾಕ್ಷಿಯೊಳೀಕ್ಷಿಸಿ ಕಾಯೊ ತಕ್ಕುದಂ
ನೆಗೞದೆ ನಿಲ್ವೊಡಕ್ಕುಮೆ ಜನೇಶ ಎನುತ್ತಮೆ ಕೃಷ್ಣನಂ ಶರಣ್
ಬುಗುವರಲಕ್ಷ್ಯಮಾಗಿರೆ ಬರುತ್ತಿರೆ ಮಾರ್ಗದೆ ನಿರ್ಭಯಂ ಗಯಂ ॥೮॥
ತನ್ನನ್ನು ಬಯ್ಯುವವರ ಮಾತನ್ನು ಕಿವಿಗೆ ಹಾಕಿಕೊಳ್ಳದೆ, ಗೊರಸಿನ ತುಳಿತಕ್ಕೆ ಬಿದ್ದು ಸಾಯುವವರನ್ನು ಮನೋವ್ಯಥೆಪಟ್ಟು ನೋಡದೆ, " ಎಲೈ ಜನರ ಒಡೆಯನಾದ ಕೃಷ್ಣನೇ, ಕರುಣೆಯ ಕಣ್ಣಿನಿಂದ ನೋಡಿ ನಮ್ಮನ್ನು ಕಾಪಾಡೋ, ಈ ದುರುಳನಿಗೆ ತಕ್ಕ ಶಾಸ್ತಿಯನ್ನು ಮಾಡದೆ ನೀನು ಸುಮ್ಮನಿರಬಹುದೆ ?" ಎನ್ನುತ್ತ ಶ್ರೀಕೃಷ್ಣನಿಗೆ ಶರಣಾಗುವವರು ತನಗೆ ಅಲಕ್ಷ್ಯವಾಗಿರಲು ಗಯನು ತನ್ನ ಕುದುರೆ ಸವಾರಿಯ ಮಾರ್ಗದುದ್ದಕ್ಕೂ ಹೆದರದೆಯೇ ಇದ್ದನು.
ಗದ್ಯ : ಅಂತಾ ದೋರಗೆಯಂ ಗೋಳ್ಗುಡಿಸುತ್ತೆ ಚಣದೊಳೆ ಸುತ್ತುತ್ತೆ ಪಿಂದೆರಳುತ್ತಿರಲಲ್ಲಿ ವಲ್ಲೀಗೃಹದಲ್ಲಿರ್ದ ಜನಕಾಂತನಪ್ಪ ಶ್ರೀಕಾಂತಂ ತಿಳಿದು -
ಅಂತು ಆ ಗಯನು ದ್ವಾರಕೆಯ ಜನರಂ ಗೋಳುಗುಡಿಸುತ್ತ ಬಲುಬೇಗನೆ ಪುರವನ್ನು ಸುತ್ತುತ್ತ ಹಿಂದೆರಳುತ್ತಿರಲು, ಆ ಉದ್ಯಾನದಲ್ಲಿ ಬಳ್ಳಿಮನೆಯಲ್ಲಿದ್ದ ಜನರೊಡೆಯನಾದ ಶ್ರೀಯರಸನು ಇದನ್ನು ತಾನಾಗಿಯೇ ತಿಳಿದು-
ಚಂ. ಮಾ: ಇದು ಪಿರಿದಪ್ಪ ಗರ್ವಮಿದು ಲೋಕಕಶಾಂತಿಯನುಂಟು ಮಾೞ್ಕುಮಿಂ
ತಿದು ನಿಜ ಭೂಪ್ರಜಾಜನಕೆ ಕಷ್ಟವನೀವುದು ಮತ್ಪರಾಭವಾ
ಸ್ಪದಮಿದು ವಿಕ್ರಮಕ್ಕೆಡರಹಸ್ಯಮಿದಿಂದು ಮನಕ್ಕೆ ಮೆಚ್ಚನಾ
ಸುದತಿಯರ್ಗಂ ವಿರಾಗಕರಮೆಂದೆನುತಾಂತನುದಗ್ರ ರೌದ್ರಮಂ॥೯॥
ಇದು ಹಿರಿದಾದ ಗರ್ವವೇ ಸರಿ. ಇದು ಲೋಕಕ್ಕೆ ಅಶಾಂತಿಯನುಂಟುಮಾಡುವುದು. ಹೀಗೆ ಇದು ನನ್ನ ಭೂಮಿಯ ಪ್ರಜೆಗಳಿಗೆ ಕಷ್ಟವನ್ನುಂಟುಮಾಡುವುದು. ನನ್ನ ಅಪಜಯಕ್ಕೆ ಆಸ್ಪದ. ಇದು ನನ್ನ ಪರಾಕ್ರಮಕ್ಕೆ ವಿಘ್ನ. ಇದು ಈ ದಿನ ನನ್ನ ಮನಮೆಚ್ಚಿನ ಸ್ರ್ತೀಯರಿಗೆ ಪ್ರೀತಿ ಭಂಗಮಾಡುವುದು. ಎಂದುಕೊಂಡು ಶ್ರೀಕೃಷ್ಣನು ಅತಿಶಯ ಕೋಪವನ್ನು ತಾಳಿದನು.
ಉ. ಮಾ: ಮತ್ತಚಕೋರನೇತ್ರನುದಿತಾಯಸಗಾಢವಿಮುಷ್ಠಿ ಭಂಗಿತೋ
ದ್ವೃತ್ತಲಲಾಟನುದ್ಧರ ಸಮುಚ್ಛಸ್ವಿತಂ ಪರಿಜಾಲ ದೇಹನಾ
ಯತ್ತ ಶರೀರ ಕೋಪಪುಳಕಂ ರದನ ಸ್ಫುಟಿತಾಧರಂ ದ್ವಿಷದ್
ವೃತ್ತಹರಂ ಮುರಾಸುರಹರಂ ಹರನಂತಿರೆ ಬಲ್ಲೇ ಗಯಂ ॥೧೦॥
ಮದಗೊಂಡ ಚಕೋರಪಕ್ಷಿಯಂತೆ ಕೆಂಪಾದ ಕಣ್ಣುಗಳುಳ್ಳವನೂ, ಕಬ್ಬಿಣದಂತೆ ಗಟ್ಟಿಯಾದ ಮುಷ್ಟಿಯುಳ್ಳವನೂ, ಭಂಗಗೊಂಡು ಉದ್ರಿಕ್ತವಾದ ಹಣೆಯುಳ್ಳವನೂ, ಹೆಚ್ಚಾದ ನಿಟ್ಟುಸಿರುಳ್ಳವನೂ, ಅತ್ತಿತ್ತ ಅಲುಗುವ ದೇಹವುಳ್ಳವನೂ,ದೇಹದಲ್ಲಿ ಕೋಪದ ರೋಮಾಂಚನವುಳ್ಳವನೂ, ತುಟಿಗಚ್ಚಿದವನೂ ಆಗಿ, ಶತ್ರುಗಳ ವರ್ತನೆಯನ್ನು ನಾಶಗೊಳಿಸುವವನಾದ ಮುರಾಸುರನನ್ನು ಕೊಂದವನಾದ ಕೃಷ್ಣನು ವಿಲಯಕಾರಿ ಪರಮೇಶ್ವರನಂತಿರಲು, ಗಯನು ಈ ಸಂಗತಿಯನ್ನು ಬಲ್ಲನೇ?
ಉ. ಮಾ: ಕೋಪವನಾಂತನೋ ಬೆದರ್ದನೋ ಪಗೆಗೊಂಡನೊ ಮೆಚ್ಚುಗೊಂಡನೋ
ಚಾಪವನೆತ್ತಿಕೊಂಡನೊ ಸುದರ್ಶನಮಂ ಪಿಡಿದಟ್ಟಿ ಬಂದನೋ
ರೂಪದೆ ಕೆಟ್ಟು ಕೂೞ್ಗುದಿದನೋ ಕೊಲಟ್ಟನೊಸಲಿಸೂರುಳೊಂದನೆಂ
ದೀ ಪರಿಯೊಂದುಮಂ ಮನದೆ ಭಾವಿಸನಾ ಗಯನಂದು ಗರ್ವದಿ॥೧೧॥
ಕೃಷ್ಣನು ತನ್ನ ಮೇಲೆ ಸಿಟ್ಟಾದನೋ ಹೆದರಿದನೋ, ಹಗೆತನವನ್ನು ತಾಳಿದನೋ,ಮೆಚ್ಚಿದನೋ, ಬಿಲ್ಲನ್ನು ಹಿಡಿದನೋ, ಶ್ರೇಷ್ಠವಾದ ಸುದರ್ಶನ ಚಕ್ರವನ್ನು ಹಿಡಿದು ಬೆನ್ನಟ್ಟಿಕೊಂಡು ಬಂದನೋ, ಕೋಪದಿಂದ ವಿರೂಪನಾಗಿ ಮನಸ್ಸಿನಲ್ಲೆ ಕೂಳಿನಂತೆ ಕುದಿದನೋ, ನನ್ನನ್ನು ಕೊಲ್ಲಲು ಪ್ರತಿಜ್ಞೆ ಮಾಡಿದನೋ- ಎಂದು ಇದೊಂದನ್ನೂ ಆ ಗಯನು ತನ್ನ ಗರ್ವದಿಂದ ಭಾವಿಸದೆ ಇದ್ದನು.
ಉ. ಮಾ: ಸಂಪದಮುಂಟು ತನ್ನ ಬಗೆಗೊಪ್ಪುವ ಪೆಂಡಿರ ಮೇಳವುಂಟು ತಾ
ತಂ ಪರಮೇಶಮಿತ್ರನೆನಿಪೊಪ್ಪುವ ಪೆರ್ಮೆಯುಮುಂಟು ಸರ್ವರಿಂ
ದಂ ಪದಪೊಂದಿದೊಂದು ಕುಲಮುಂ ಚಲಮುಂ ಬಲಮುಂ ನೆಗೞ್ತೆಯುಂ
ಟಿಂ ಪೆಱತೇಕೆ ಜವ್ವನಮೆರಲ್ ಮದಮಿಲ್ಲದ ಬಾೞ್ಕೆಯಿರ್ಪುದೇ?॥೧೨॥
ಇದಕ್ಕೇ ಕಾರಣವೇನು? ತನ್ನಲ್ಲಿ ಸಂಪತ್ತಿದೆ, ತನ್ನ ಮನಕ್ಕೆ ಒಪ್ಪುವ ಹೆಂಡಿರ ಮೇಳವಿದೆ, ತನ್ನ ತಂದೆಯಾದ ಕುಬೇರನು ಪರಮೇಶ್ವರನ ಗೆಳೆಯನೆಂಬ ಹಿರಿಮೆಯಿದೆ, ಎಲ್ಲರಿಂದಲೂ ಒಲವಿಗೆ ಕಾರಣವಾದ ಕುಲ, ಚಲ, ಬಲ, ಕೀರ್ತಿಗಳಿವೆ, ಇನ್ನು ಬೇರೆ ಏಕೆ? ಯೌವನವೂ ಇರುವಾಗ ಮದವಿಲ್ಲದ ಬದುಕು ಇರುವುದೇ?
ಕಂದ: ವೇಗಸ್ತಂಭನ ಶಕ್ತಿಯಿ
ನಾ ಗುಣಿಮುನಿ ನಾರದಂ ಹಯಂದಡೆದೆಂದಂ
ವೇಗದೆ ಬರೆ ನೀಂ ಕೇಡೊಗೆ
ದಾಗಳೆ ಕೇಳ್ ನಿನ್ನೊಳಿಂದು ಕೃಷ್ಣಂ ಮುಳಿದಂ ॥೧೭॥
ಗುಣವಂತನಾದ ಆ ನಾರದಮುನಿಯು ತನ್ನಲ್ಲಿರುವ ವೇಗಸ್ತಂಭನ ವಿದ್ಯೆಯ ಶಕ್ತಿಯಿಂದ ಕುದುರೆಯನ್ನು ಅಲ್ಲೇ ನಿಲ್ಲವಂತೆ ಮಾಡಿ ಹೀಗೆಂದನು " ನೀನು ವೇಗದಿಂದ ಬಂದಾಗ ಕೆಡುಕು ಉಂಟಾಯಿತು. ಎಲವೋ ಕೇಳು. ಕೃಷ್ಣನು ಆಗಲೆ ಈ ದಿನ ನಿನ್ನ ಮೇಲೆ ಕೋಪಗೊಂಡನು. ಮತ್ತು ಹೀಗೆಂದನು -
ಕಂದ : ನಿನ್ನೈಸಿರಿಯೊಟ್ಟಜೆ ದ
ರ್ಪೋನ್ನತಿ ದುರ್ನೀತಿಯದಟನೆನ್ನೊಳ್ ತೋರ್ದೈ
ಎನ್ನವರಂ ಪೀಡಿಸಿದೈ
ನಿನ್ನನ್ನೆಂಟನೆಯ ದೆವಸಮಳಿಸದೆ ಮಾಣೆಂ॥೧೮॥
ನಿನ್ನ ಐಶ್ವರ್ಯವನ್ನೂ ,ಮೇಲ್ಮೆಯನ್ನೂ , ದರ್ಪದ ಹೆಚ್ಚಳವನ್ನೂ, ಕೆಟ್ಟ ನೀತಿಯನ್ನೂ, ಪರಾಕ್ರಮವನ್ನೂ, ನನ್ನಲ್ಲಿ ತೋರಿಸಿದೆಯಾ ? ಇಂದಿಗೆ ಎಂಟನೆಯ ದಿನದಂದು ಕೊಲ್ಲದಿರೆನು.
ಗದ್ಯ: ಎಂದು ಸೂರುಳಿಟ್ಟನದಲ್ಲದೆ ನಿನತವಿಚಾರಮಂ ಪಿರಿದುಂ ಪೊಲ್ಲದಾಯ್ತಾತನ ಪತ್ತನದ ನೇಮವನಱಿವೊಡೆ-
ಎಂದು ಕೃಷ್ಣನು ಪ್ರತಿಜ್ಞೆಮಾಡಿದ್ದಾನೆ. ಅದಲ್ಲದೆ ನಿನ್ನ ವಿಚಾರಹೀನವಾದ ವರ್ತನೆ ಕೆಟ್ಟದಾಯಿತು. ಅವನ ಪಟ್ಟಣದ ನಿಯಮವನ್ನು ತಿಳಿಯುವುದಾದರೆ-
ಕಂದ: ಅಱಿತುಂ ಪೇೞದ ತಪ್ಪಿಂ
ಗೆಱೆವಟ್ಟಾದಪೆನದಲ್ಲದೆನುತುಂ ನಿನಗಾ
ನಱಿಪಿದ ತಪ್ಪಂ ಮನ್ನಿಪು
ದಱಿದೇಕೆಯೊ ನಿಲ್ವೆಮುಂದೆ ಧಾವಿಸಿ ಜವದಿಂ॥೨೧॥
ಈ ಸಂಗತಿಯನ್ನು ನಿನಗೆ ನಾನು ಹೇಳದಿದ್ದರೆ - ತಿಳಿದೂ ಹೇಳದೆ ಇದ್ದ ತಪ್ಪಿಗೆ ಆಶ್ರಯನಾಗುವೆನು ಎಂಬುದರಿಂದಾಗಿ, ನಿನಗೀಗ ನಾನು ಹೇಳಿದೆನು. ಎದು ನನ್ನ ತಪ್ಪು; ಇದನ್ನು ನೀನು ಕ್ಷಮಿಸು. ಈ ಸಂಗತಿ ಗೊತ್ತೃದ ಮೇಲೆ, ಇನ್ನೇಕೆ ನಿಂತಿರುವೆ? ವೇಗದಿಂದ ಮುಂದೆ ತೆರಳು!
ಗದ್ಯ: ಎಂಬುದುಮಾ ನಾರದೇರಿತಂ ಮರ್ದುಗುತ್ತಿನಂತೆಯುಂ, ಕೂರ್ಪುಣುಂಬುವೆಟ್ಟಿದಂತೆಯುಂ, ಕೂರ್ವಾಳ ಕಡಿತದಂತೆಯುಂ, ಕಿರ್ಚಿನ ಚುರ್ಚುಂ ಬೇನೆಯಂತೆಯುಂ, ಭೋಂಕನೆ ಗಯನ ಮನಕ್ಕೆ ಪುಗುತೆವಡೆವುದುಂ, ಭೋರನೆ ಮುನಿಚರಣಕ್ಕೆರಗಿ ಪೋಗದಂತೆ ಗಟ್ಟಿವಿಡಿದು, ಗುಂಡಿಗೆ ಕೆಡೆದ ಸೊಂಡಿಲನಂತೆಯುಂ, ಬಲೆಗೆ ಸಿಲ್ಕಿದೆರಲೆಯಂತೆಯುಂ, ಬಾವಿಗೆ ಬಿೞ್ದ ಮಂಕಡನಂತೆಯುಂ, ಸಂಪಗೆಗೆಱಗಿದಳಿಯಂತೆಯುಂ, ಸೊರ್ಕನುಳಿದು,ಗರಂಬೊಯ್ದನಂತೆಯುಂ, ಬೂತಂಬಿಡಿದನಂತೆಯುಂ, ಮುಚ್ಚೆವೋದನಂತೆಯುಂ, ಮಿಡುಕಲಱಿಯದೆ ಕುಳಿರ್ಕೊಂಡಿದನಂತೆಯುಂ, ಪಗೆಗೆ ಸಿಲ್ಕಿದ ಪೆಂಬೇಡಿಯಂತೆಯುಂ, ಪಾವಿನ ನಂಜುವಲ್ ಕೊಂಡನಂತೆಯುಂ, ಬೂತಮಂ ಕಣ್ಕಂಡನಂತೆಯುಂ, ಭಯಂಜ್ವರಂಗೊಂಡು ನಡುನಡುಗಿ ಕಣ್ಗೆ ಚಂಡಾಂಶು ರಶ್ಮಿವೊಕ್ಕಂತೆಯುಂ, ಪೊಗೆ ಕವಿದಂತೆಯುಂ, ಕುತ್ತಂ ಬಿಗಡಿಸಿದಂತೆಯುಂ, ಕಂಬನಿವೊನಲಂ ಕಱೆದು, ಬಸಂಗೆಟ್ಟು, ಮೆಯ್ಯಱೆದು, ಚೇತರಿಸಿ, ನಿಟ್ಟುಸಿರಿಟ್ಟು, ತನ್ನಯೆ ಕೀಳ್ಗೆಯ್ಮೆಗೆ ತಾನೆ ಮಱುಕಂದಾಳ್ದು, ಬೞಿಕ್ಕಂ ನೆಗೞ್ತೆಯಱಿವುಂದೊರೆಕೊಳೆ, ಮುನಿಗಿಂತೆಂದಂ-
ಹೀಗೆನ್ನಲು, ನೃರದನೆಂದ ಮಾತು ಚುಚ್ಚುಮದ್ದಿನಂತೆಯೂ, ಚೂಪಾದ ಬಾಣ ಹೊಡೆದಂತೆಯೂ, ಹರಿತವಾದ ಕತ್ತಿಯ ಕಡಿತದಂತೆಯೂ, ಬೆಂಕಿ ಉರಿದ ನೋವಿನಂತೆಯೂ, ಬೇಗನೆ ಗಯನ ಮನಸ್ಸಿನೊಳಗೆ ಪ್ರವೇಶಿಸಲು, ಊವನು ತಡಮಾಡದೆ ನಾರದನ ಪಾದಕ್ಕೆ ಎರಗಿ, ಅವನು ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡನು. ಆಳವಾದ ಕಂದಕಕ್ಕೆ ಬಿದ್ದ ಆನೆಯಂತೆಯೂ, ಬೀಸುಬಲೆಗೆ ಸಿಕ್ಕಿದ ಜಿಂಕೆಯಂತೆಯೂ, ಬಾವಿಗೆ ಬಿದ್ದ ಮಂಗನಂತೆಯೂ,ಸಂಪಗೆ ಹೂವಿಗೆ ಎರಗಿದ ತುಂಬಿಯಂತೆಯೂ, ಗರ್ವಭಂಗವಾಗಿ ಕೆಟ್ಟಗ್ರಹ ಹೊಡೆದಂತೆಯೂ, ಭೂತ ಹಿಡಿದಂತೆಯೂ, ಪ್ರಜ್ಞೆತಪ್ಪಿದವನಂತೆಯೂ, ಅತ್ತಿತ್ತ ಅಲ್ಲಾಡಲು ತಿಳಿಯದೆ ಶೀತವೇರಿದವನಂತೆಯೂ, ಶತ್ರುವಿಗೆ ಸಿಕ್ಕಿದ ಹೇಡಿಯಂತೆಯೂ, ಹಾವಿನ ವಿಷದ ಹಲ್ಲು ತಗುಲಿದವನಂತೆಯೂ, ಭೂತದ ಸ್ವರೂಪವನ್ನು ಕಣ್ಣಲ್ಲಿ ಕಂಡವನಂತೆಯೂ, ಭಯದ ಜ್ವರವನ್ನು ತಾಳಿ ನಡುಗಿ ಕಣ್ಣಿಗೆ ಸೂರ್ಯನ ರಶ್ಮಿ ಹೊಕ್ಕಂತೆಯೂ, ಕಣ್ಣಿಗೆ ಹೊಗೆ ಕವಿದಂತೆಯೂ, ಕಣ್ಣಿಗೆ ಕಸ ಹೊಕ್ಕಂತೆಯೂ, ಮುಳ್ಳು ಚುಚ್ಚಿದಂತೆಯೂ, ಕಣ್ಣಿಗೆ ಕಲ್ಲು ಬಿದ್ದು ಹೊರಳಿಸಿದಂತೆಯೂ, ರೋಗವು ಬಿಗಡಾಯಿಸಿದಂತೆಯೂ, ಕಣ್ಣೀರಿನ ಹೊನಲನ್ನು ಸುರಿಸಿ, ವಶತಪ್ಪಿ, ಮೈಮರೆತು, ಆ ಮೇಲೆ ಚೇತರಿಸಿ, ನಿಟ್ಟುಸಿರುಬಿಟ್ಟು ತನ್ನದೇ ಆದ ಕೀಳುಗೆಲಸಕ್ಕೆ ತಾನೇ ಮರುಗುತ್ತ, ಆ ಮೇಲೆ ಕಾರ್ಯಮಗ್ನತೆಯ ಅರಿವು ಉಂಟಾಗಲು ಗಯನು ನಾರದ ಮಹರ್ಷಿಗೆ ಹೀಗೆಂದನು.
ಕಂದ: ಉೞಿಸುವೊಡಮೞಿಸುವೊಡಮಾ
ನಳಿನಾಂಬಕ ಶೂಲಿ ಭಕ್ತ ನಿನಗಾಯತ್ತಂ
ಬಳವತ್ ಪಾವನ ನಯನಂ
ಗಳೋಳೀಕ್ಷಿಸಲಾಯ್ತು ಪೂರ್ವಫಲದಿಂ ನಿನ್ನಂ॥೨೨॥
ನನ್ನನ್ನು ಉಳಿಸುವುದಾದರೂ ಅಳಿಸುವುದಾದರೂ ಆ ಶ್ರೀಕೃಷನ ಮತ್ತು ಶಿವನ ಭಕ್ತನಾದ ನಿನಗೇ ಸೇರಿದುದಾಗಿದೆ. ನನ್ನ ಪೂರ್ವಪುಣ್ಯ ಫಲದಿಂದ ಈಗ ಬಲಿಷ್ಠವಾದ ಪಾಪ ಮಾಡಿದ ಕಣ್ಣುಗಳಿಂದ ನಿನ್ನನು ನೋಡುವಂತಾಯಿತು.
ಕಂದ: ಅೞಿವಪ್ಪೊಡೆ ಸುರಮುನಿಪಂ
ಬೞಿಗೇಕೆಯೊ ಬರ್ಕುಮಿವನ ದರೂಶನದಿಂದಂ
ಅೞಿವೞಿಗುಮೆನಗದೇಂ ಪು
ಚ್ಚೞಿಯಪ್ಪುದೆ ಬೆಳೆವ ಬೆಳೆ ಸಕಾಲದ ಮೞೆಯಿಂ ?॥೨೩॥
ಹೀಗೆಂದ ನಂತರ ಗಯನು ತನ್ನ ಮನಸ್ಸಿನಲ್ಲೇ ಹೀಗೆಂದನು. ನನಗೆ ಮರಣವುಂಟಾಗುವುದಾದರೆ, ಈ ನಾರದನು ನನ್ನ ಬಳಿಗೇಕೆ ಬರುತ್ತಾನೆ? ಇವನನ್ನು ಕಂಡುದರಿಂದ ನನಗೆ ಬರಬಹುದಾದ ಸಾವು ಅಳಿಯುವುದು. ಬೆಳೆವ ಬೆಳೆಗೆ ಸಕಾಲದ ಮಳೆಯಿಂದ ಕೇಡಾಗುವುದೆ?
ಗದ್ಯ: ಎಂದಾತಂ ಮನದೊಳ್ ಪರಿಭಾವಿಸಿ-
ಹೀಗೆಂದು ಅವನು ಮನಸ್ಸಿನಲ್ಲಿ ಯೋಚಿಸಿ ನಾರದನೊಡನೆ ಹೀಗೆಂದನು.
ಕಂದ: ಎನ್ನರುಮಂ ಮಱೆವೊಕ್ಕರ
ಮನ್ನಣೆಯಿಂ ಕಾವ ಬಿರುದರೆಱೆಯನೆ ದಯೆಯಿಂ
ದೆನ್ನಂ ಕಾಯನುಪಮಗುಣ
ಎನ್ನಂ ಪೊರೆ ಸಲಪು ದೇವದೇವೆಂಬಿನೆಗಂ॥೨೭॥
ಎಂತಹ ತಪ್ಪು ಮಾಡಿದವರಾಗಿದ್ದರೂ ಅವರು ಮರೆಹೊಕ್ಕರೆ, ಅವರನ್ನು ಮರ್ಯಾದೆಯಿಂದ ಕಾಪಾಡತಕ್ಕ ಬಿರುದಿನ ಒಡೆಯನೆ, ದಯೆಯಿಂದ ನನ್ನನ್ನು ಕಾಪಾಡು. ಹೋಲಿಕೆಯಿಲ್ಲದ ಗುಣಸಂಪನ್ನನೆ, ನನ್ನನ್ನು ಕಾಪಾಡು ದೇವಾ, ದೇವಾ, ನನ್ನನ್ನು ಕಾಪಾಡು- ಎಂದು ಹೇಳುತ್ತಿರಲು-
ಕಂದ: ಉಱದೆಯೆ ಕಾಕಂ ಕೋೞಿಯ
ಮಱಿಯೊಂದಂ ಕೊಳ್ಳೆಗೆಯ್ಯಲೆನುತುಂ ಭರದಿಂ
ದೆಱಗುವುದುಂ ಕಂಡೊಡನಾ
ಮಱಿ ತಾಯ್ಗಱೆವೊಕ್ಕು ತಾಂ ಬರ್ದುಂಕಿದುದಾಗಳ್॥೩೦॥
ಒಂದು ಕಾಗೆ ವೇಗವಾಗಿ ಬಂದು ಒಂದು ಕೋಳಿಮರಿಯನ್ನು ತನ್ನ ಕೊಳ್ಳೆಯನ್ನಾಗಿ ಮಾಡಲು ಹಾರಿಬಂದು ಎರಗಿತು. ಅದನ್ನು ಕಾಣುತ್ತಲೇ ಆ ಮರಿ, ತನ್ನ ತಾಯಿಯ ರೆಕ್ಕೆಯ ಒಳಹೊಕ್ಕು ಬದುಕಿಕೊಂಡಿತು.
ಗದ್ಯ: ಅದಂ ಗಯನೀಕ್ಷಿಸಿ, ದುರ್ಬಳಮಪ್ಪ ಮಱಿ ಸ್ವಬುದ್ಧಿ ಪ್ರಯತ್ನೋಪಾಯದಿಂ ಬರ್ದುಂಕಿತೆಂದು ಮುಂಬೋಪುದುಮತ್ತಲೊಂದು ನೀರ್ದಾಣದ ಬೞಿಯೊಳ್-
ಅದನ್ನು ಗಯನು ನೋಡಿ, ಹೀಗೆಂದುಕೊಂಡನು. " ಬಲಹೀನವಾದ ಕೋಳಿಮರಿ ತನ್ನ ಪ್ರಯತ್ನದಿಂದಲೇ ತಕ್ಕುದಾದ ಉಪಾಯದಿಂದ ಬದುಕಿ ಕೊಂಡಿತು." ಹೀಗೆನ್ನುತ್ತ ಮುಂದೆ ಸಾಗಿದನು. ಅತ್ತಲಾಗಿ ಒಂದೆಡೆ ಒಂದು ಕೆರೆಯ ಬಳಿ ಇನ್ನೊಂದು ಘಟನೆಯನ್ನು ಕಂಡನು.
ಕಂದ: ಹೋರೆತ್ತು ಹಾಯೆ ಭರದಿಂ
ಭೋರನೆ ಬೆರ್ಚುತ್ತೆ ಬಚ್ಚನೋಡಿ ಕೆಳೆಯ ಬ
ಲ್ಪೋರಿಯ ಮಱೆಯಂ ಸಾರ್ದೊಡೆ
ಹೋರಿದುವೆರಡಲ್ಲಿ ನೋಯದುೞಿದುದು ಬಚ್ಚಂ॥೩೧॥
ಒಂದು ಎಳೆಗರು ಒಂದು ಎತ್ತಿನ ಬಳಿಗೆ ಬಂದಾಗ ಹೋರಾಡುವ ಸ್ವಭಾವದ ಆ ಎತ್ತು ಭರದಿಂದ ಕರುವಿಗೆ ಹಾಯಲು ಬಂದಿತು. ಕರು ಹೆದರಿ ಓಡುತ್ತ ಇನ್ನೊಂದು ಬಲಿಷ್ಠ ಎತ್ತನ್ನು ಆಶ್ರಯಿಸಿತು. ಆಗ ಆ ಎರಡು ಎತ್ತುಗಳೂ ಹೋರಾಡತೊಡಗಿದುವು. ಈ ಕರು ಮಾತ್ರ ನೋಯದೆ ಉಳಿದು ಕೊಂಡಿತು.
ಸೂರಗ್ಧರಾ: ಏವಂ ಮಾಣ್ ದ್ವೈತಮೆಂಬಾಟವಿಯೊಳೆಸೆದಪಂ ಸೋದರೋಪೇತ ಪಾರ್ಥಂ
ಕಾವಂ ಮದ್ಭಕ್ತನುಂ ಶಾಪಿತಸುಜನಶರಣ್ಯಂ ಮಹಾಸತ್ವಯುಕ್ತಂ
ಭೂವಿಸ್ತಾರಪ್ರಕೀರ್ತ್ಯನ್ವಿತನಭಯತೆಯಿನ್ನಾತನಿಂದಕ್ಕೆ ಗರ್ವೋ
ದ್ಭಾವಂ ತ್ವತ್ಪಾಪಮಿಂದೆನ್ನಯೆ ಬಕುತಿಯೊಳೇ ಪೋ ಪಡಲ್ವಟ್ಟುದೀಗಳ್ ॥೬೫॥
ನಿನ್ನ ದುಃಖವನ್ನು ಬಿಡು. ದ್ವೈತಾರಣ್ಯದಲ್ಲಿ ತನ್ನ ಸಹೋದರರೊಂದಿಗೆ ಅರ್ಜುನನಿದ್ದಾನೆ. ಅವನು ನಿನ್ನನು ಕಾಪಾಡುವನು. ಅವನು ನನ್ನ ಭಕ್ತನು. ಶಾಪಕ್ಕೆ ಒಳಗಾದ ಒಳ್ಳೆಯ ಜನರಿಗೆ ಆಶ್ರಯದಾತನು. ಮಹಾಸತ್ವಶಾಲಿ, ಭೂಮಿಯಲ್ಲಿ ಅಧಿಕ ಕೀರ್ತಿಯುಳ್ಳವನು. ನಿನಗೆ ಅವನಿಂದ ಅಭಯವುಂಟಾಗಲಿ. ಗರ್ವದಿಂದ ಉಂಟಾದ ನಿನ್ನ ಪಾಪವು ಈ ದಿನ ನನ್ನ ಮೇಲಣ ಭಕ್ತಿಯಿಂದಾಗಿ ಚೆದುರಿಹೋಯಿತು.
ಕಂದ: ಎಡರೆಡೆಯೊಳಡಸದಿರ್ಕೆಮ
ನಡೆ ನೀನಾ ಪಾರ್ಥನೆಡೆಗೆ ತಡೆಯದೇಕೆಂದಂ
ಎಡರ್ಗೇಡಿ ತಂದೆ ಶಾವನೋ
ಲ್ವೆಡೆಯೊಳ್ ಮಗನಪ್ಪ ಬೆನಕನೊಲವೇನಿರದೇ? ॥೬೬॥
ಆಗ ವಿಘ್ನವಿನಾಶಕನಾದ ಗಣೇಶನು " ನಿನಗೆ ನಿನ್ನ ಪ್ರಯತ್ನಗಳ ನಡುವೆ ಏನೊಂದು ವಿಘ್ನವುಂಟಾಗದಿರಲಿ ! ನೀನು ಅರ್ಜುನನ ಬಳಿಗೆ ತೆರಳು. ತಡಮಾಡದಿರು " ಎಂದನು. ತಂದೆಯಾದ ಶಿವನು ಒಲಿಯುವ ಸಂದರ್ಭದಲ್ಲಿ ಅವನ ಮಗನಾದ ವಿನಾಯಕನು ಒಲಿಯದಿರುವನೇ?
ಎಂಬಲ್ಲಿಗೆ ಸತ್ತ್ವಾಲೋಕನ ಕಾವ್ಯದೊಳ್
ಗಯಪರಿಭ್ರಮಣಂ ಶೈವಾನುಗ್ರಹಂ
ತೃತೀಯಾಶ್ವಾಸಂ.
ಉಪಕಾರ ಸ್ಮರಣೆಯೊಂದಿಗೆ.
ಕರ್ತೃ: ಪ್ರೊ. ಟಿ. ಕೇಶವ ಭಟ್ಟ,
ಪ್ರಕಾಶಕರು: ಕನ್ನಡ ಸಾಹಿತ್ಯ ಪರಿಷತ್ತು,
ಪಂಪಮಹಾಕವಿ ರಸ್ತೆ,
ಚಾಮರಾಜಪೇಟೆ, ಬೆಂಗಳೂರು-೫೬೦೦೧೮ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ