ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಬುಧವಾರ, ಮೇ 28, 2025

ಜೈಮಿನಿ ಭಾರತ 3 - ದೊಡ್ಡಬೆಲೆ ನಾರಾಯಣಶಾಸ್ತ್ರಿ

ಜೈಮಿನಿ ಭಾರತ 3 - ದೊಡ್ಡಬೆಲೆ ನಾರಾಯಣಶಾಸ್ತ್ರಿ


ಮೂರನೆಯ ಸಂಧಿ.


ಸೂಚನೆ:- ಹಸ್ತಿನಾವತಿಯಿಂ ತಳರ್ದು ಭದ್ರಾವತಿಯ। 

ವಿಸ್ತಾರಮಂ ತೋರಿದಂ ಸಮೀಪದ ಗಿರಿಯ। 

ಮಸ್ತಕದೊಳಿರ್ದನಿಲಸಂಭವಂ ಕರ್ಣ ತನಯಂಗೆ ಸಂಪ್ರೀತಿಯಿಂದೆ॥ 


ಪ್ರತಿಪದಾರ್ಥ:- 

ಹಸ್ತಿನಾವತಿಯಂ= ಹಸ್ತಿನಾಪುರಿಯನ್ನು, ತಳರ್ದು= ಬಿಟ್ಟು, ಕರ್ಣತನಯಂಗೆ= ಕರ್ಣನಸೂನುವಾದ ವೃಷಧ್ವಜನಿಗೆ, ಸಂಪ್ರೀತಿಯಿಂದ= ಅಧಿಕವಾದ ವಿಶ್ವಾಸದಿಂದ, ಸಮೀಪದ= ಭದ್ರಾವತಿನಗರದ ಪಕ್ಕದಲ್ಲಿರುವ, ಗಿರಿಯ= ಪರ್ವತದ, ಮಸ್ತಕದೊಳು= ತುದಿಯಲ್ಲಿ, ಇರ್ದ=ಇದ್ದಂಥ, ಅನಿಲಸಂಭವಂ= ವಾಯುಸುತನು, ಭದ್ರಾವತಿಯ=ಭದ್ರಾವತಿಯೆಂಬ ಪಟ್ಟಣದ, ವಿಸ್ತಾರಮಂ= ವೈಶಾಲ್ಯವನ್ನು, ತೋರಿದಂ= ಅರುಹಿದನು. 


ಹಸ್ತಿನಾಪುರಿಯನ್ನು ಬಿಟ್ಟು, ಭದ್ರಾವತಿ ನಗರದ ಪಕ್ಕದ ಗಿರಿಯ ತುದಿಯಲ್ಲಿ ಇದ್ದ ನಗರವನ್ನು ವೃಷಧ್ವಜನಿಗೆ ಅಧಿಕವಿಶ್ವಾಸದಿಂದ ತೋರಿಸಿದನು.


ಭೂವಧೂರಮಣ ಕೇಳೈಮುಂದೆ ನಡೆವ ಸುಕ। 

ಥಾವಿಸ್ತಾರವನಿನ್ನು ಪಯಣಗತಿಯಿಂದೆ ಭ। 

ದ್ರಾವತೀದೇಶಮಂ ಪೊಕ್ಕರನಿಲಜ ವೃಷಧ್ವಜ ಘಟೋತ್ಕಚತನುಜರು। 

ಆವಗಂ ನಿರ್ಮಲಶ್ರೀಕರಗ್ರಾಹಿ ಮ। 

ತ್ತಾವಗಂ ಪ್ರಣುತವನಮಾಲಾ ಸುಶೋಭಿ ತಾ। 

ನಾವಗಂ ಮನ್ಮಥೋದ್ಭವಕಾರಿ ಹರಿವೊಲಾನೆಂಬ ಪೆಂಪಿಂದೆಸೆದುದು॥೧॥ 


ಪ್ರತಿಪದಾರ್ಥ:- ಭೂವಧೂರಮಣ= ಜನಮೇಜಯನೇ, ಮುಂದೆ= ಆನಂತರದಲ್ಲಿ, ನಡೆಸುವ= ನಡೆಯುವಂಥ, ಕಥಾವಿಸ್ತರಮಂ= ಕಥೆಯ ವೈಶಾಲ್ಯವನ್ನು, ಕೇಳೈ= ಲಾಲಿಸು, ಪಯಣ= ಪ್ರಯಾಣದ, ಗತಿಯಿಂದ= ಗಮನದಿಂದ, ಅನಿಲಜ= ವಾಯುಸುತನಾದ ವೃಕೋದರನು, ವೃಷಧ್ವಜ= ಕರ್ಣನಂದನನು, ಘಟೋತ್ಚತನುಜರು= ಘಟೋತ್ಚನ ಪುತ್ರನಾದ ಮೇಘನಾದನೇ ಮೊದಲಾದ ಮೂರುಮಂದಿಯೂ, ಭದ್ರಾವತೀದೇಶಮಂ= ಭದ್ರಾವತೀ ನಗರವನ್ನು, ಪೊಕ್ಕರು= ಸೇರಿದರು. ಆ ಪಟ್ಟಣವು, ಹರಿಯೊಲು= ಪದ್ಮನಾಭನಂತೆ,ಆವಗಂ=ಅನವರತವೂ, ಶ್ರೀ= ಐಶ್ವರ್ಯದ ಮತ್ತು ಲಕ್ಷ್ಮಿಯ, ಕರ= ಉಂಟಾಗುವಿಕೆ ಮತ್ತು ಕೈಯನ್ನು, ಗ್ರಾಹಿ= ಧರಿಸಿರುವುದು ಮತ್ತು ಹಿಡಿದಿರುವುದು, (ಭದ್ರಾವತಿ ನಗರ ಮತ್ತು ವಿಷ್ಣು) ಪ್ರಣುತ= ಸ್ತೋತ್ರಾರ್ಹವಾದ, ವನಮಾಲಾ= ಉದ್ರಾನಗಳ ಸಾಲು ಮತ್ತು ತುಳಸೀಹಾರ ಇವುಗಳಿಂದ, ಸುಶೋಭಿ= ಹೆಚ್ಚಾಗಿ ಹೊಳೆಯುತ್ತಿರುವುದು,ತಾನು= ಅದು, ಆವಗಂ= ಯಾವಾಗಲೂ, ಮನ್ಮಥ= ಕಾಮವನ್ನು ಮತ್ತು ಮದನನನ್ನು, ಉದ್ಭವ= ಆಧಿಕ್ಯ ಮತ್ತು ಸೃಷ್ಟಿಯನ್ನು, ಕಾರಿ=ಎಸಗಿದವನು ಮತ್ತು ಎಸಗಿದ್ದು ಆಗಿರುವ ಕಾರಣದಿಂದ, ಆಂ= ನಾನು, ( ಭದ್ರಾವತಿ ನಗರಿಯು ) ಹರಿಯವೋಲ್= ಮಹಾ ವಿಷ್ಣುವಿನಂತೆಯೆ ಇರುವೆನೆನ್ನುವ, ಪೆಂಪಿಂದ= ಹೆಮ್ಮೆಯಿಂದ. ಎಸೆದುದು= ಹೊಳೆಯಿತು.


ಅ. ವಿ :- ಭೂವಧು (ಸಂ. ಪೂ) ಭೂವಧೂರಮಣ( ಷ.ತ) ನಿರ್ಮಲಶ್ರೀ( ವಿ. ಪೂ) ನಿರಮಲಶ್ರೀಯಕರ(ಷ. ತ) 

ನಿರ್ಮಲಶ್ರೀಕರವನ್ನು ಗ್ರಾಹಿ(ಕೃ. ವೃ) ಪ್ರಣುತಮಾದವನಮಾಲಾ(ವಿ. ಪೂ) ಪ್ರಣುತವನಮಾಲೆಯಿಂದಸುಶೋಭಿ(ತೃ. ತ) 

ಪಯಣ=ತ್ಬ, ಪ್ರಯಾಣ= ತ್ಸ) ಹರಿ=ವಿಷ್ಣು, ಕೋತಿ, ಕಪ್ಪೆ, ಸಿಂಹ, ಮೊದಲಾದ ನಾನಾರ್ಥಗಳನ್ನೀಯುವುದು. 

ತಾತ್ಪರ್ಯ:- ಅನಂತರದಲ್ಲಿ ಜೈಮಿನಿಯು ಧರಾವಲ್ಲಭನಾದ ಜನಮೇಜಯನನ್ನು ಕುರಿತು, ಕೇಳೈ ಜನಮೇಜಯನೆ ಮುಂದೆ ನಡೆದ ಕಥಾವೃತ್ತಾಂತವನ್ನು ಪೇಳುವೆನು, ಬಳಿಕ ವಾಯುಸೂನುವಾದ ವೃಕೋದರನೂ, ಕರ್ಣತನುಜನಾದ ವೃಷಧ್ವಜನೂ, ಹಿಡಿಂಬಿಯ ಮೊಮ್ಮಗನಾದ ಮೇಘವರ್ಣನೂ ಸಹ ಧರ್ಮಪುತ್ರನಾದ ಯುಧಿಷ್ಠಿರನು ಕೊಟ್ಟ ಅಪ್ಪಣೆಯನ್ನು ತಮ್ಮ ತಮ್ಮ ತಲೆಗಳಲ್ಲಿ ಧರಿಸಿದವರಾಗಿ ಹಸ್ತಿನಾವತಿಯಿಂದ ಪ್ರಯಾಣಬೆಳಸಿ ಮುಂದೆ ಬರುತ್ತಿರುವಾಗ ಆ ಯೌವನಾಶ್ವನಾಶ್ವನೆಂಬ ಮಹಾರಾಯನ ದೇಶದ ಎಲ್ಲೆಯು ಅಧಿಕವಾದ ಐಶ್ವರ್ಯವನ್ನು ಧರಿಸಿ,  ಮನೋಹರಗಳಾದ ಉದ್ಯಾನಗಳನ್ನೊಳಗೊಂಡು, ಮಹಾತಿಶಯವುಳ್ಳದ್ದಾಗಿ ಲಕ್ಷ್ಮೀರಮಣನಾಗಿಯೂ,ತುಲಸೀಮಾಲಾಂಕೃತನಾಗಿಯೂ, ಮನ್ಮಥನ ಉತ್ಪತ್ತಿಗೆ ಕಾರಣಭೂತನಾಗಿಯೂ ಇರುವ ಮಹಾವಿಷ್ಣುವಿಗೆ ನಾನೂ ಸಮಾನವಾಗಿದ್ದೇನೆಂಬ ಹೆಮ್ಮೆಯಿಂದ ಹೊಳೆಯುತ್ತಲಿರುವುದನ್ನು. 


ಎಲ್ಲಿಯುಂ ಪರಿವ ಪೆರ್ದೊರೆಯಿಂದೆ ಕೆರೆಯಿಂದೆ । 

ಯೆಲ್ಲಿಯುಂ ಕುಸುಮದಾಗರದಿಂದೆ ಸರದಿಂದೆ। 

ಯೆಲ್ಲಿಯುಂ ರತ್ನಮಯದಿಳೆಯಿಂದೆ ಬೆಳೆಯಿಂದೆ ಮಣಿಕೃತಕ ಶೈಲದಿಂದೆ॥ 

ಯೆಲ್ಲಿಯುಂ ಸುಳಿವ ಗೋವ್ರಜದಿಂದೆ ಗಜದಿಂದೆ। 

ಯೆಲ್ಲಿಯುಂ ಕತ್ತುರಿಯ ಮೃಗದಿಂದೆ ಖಗದಿಂದೆ । 

ಯೆಲ್ಲಿಯುಂ ವಿರಚಿತ ಭವನದಿಂದೆ ಜನದಿಂದೆಯಾನಾಡ ಸಿರಿ ಮೆರೆದುದು॥೨॥


ಪ್ರತಿಪದಾರ್ಥ:- ಎಲ್ಲಿಯುಂ=ಎಲ್ಲಾ ಕಡೆಯಲ್ಲಿಯೂ, ಪರಿವ=ಪ್ರವಹಿಸುತ್ತಿರುವ, ಪೆರ್ದೊರೆಯಿಂದ=ಹೆಚ್ಚಿಗೆಯ ಹೊಳೆಗಳಿಂದಲೂ, ಕೆರೆಯಿಂದ= ಕೆರೆಗಳಿಂದಲೂ, ಎಲ್ಲಿಯುಂ= ಸಮಸ್ತವಾದ ಪ್ರದೇಶಗಳಲ್ಲಿಯೂ, ಕುಸುಮದ= ಪ್ಷ್ಪಗಳ,ಆಗರದಿಂದ= ಗೃಹಗಳಿಂದಲೂ, ಸರದಿಂದ= ಸರೋವರಗಳಿಂದಲೂ, ಎಲ್ಲಿಯುಂ= ಎಲ್ಲೆಡೆಗಳಲ್ಲಿಯೂ, ರತ್ನಮಯದ= ರತ್ನಖಚಿತವಾದ, ಇಳೆಯಿಂದ=ಧರಾಮಂಡಲದಿಂದಲೂ, ಬೆಳೆಯಿಂದ= ಪೈರುಗಳ ಭೂಮಿಯಿಂದಲೂ, ಮಣಿ= ರತ್ನಗಳಿಂದ, ಕೃತಕ=ರಚಿಸಲ್ಪಟ್ಟ, ಶೈಲದಿಂದ= ಬೆಟ್ಟದಿಂದಲೂ, ಎಲ್ಲಿಯುಂ= ಸರ್ವಪ್ರದೇಶದಲ್ಲೂ, ಸುಳಿವ= ತಿರುಗಾಡುತ್ತಿರುವ, ಗೋವ್ರಜದಿಂದ= ಧೇನುಸಮೂಹದಿಂದಲೂ,ಗಜದಿಂದಲೂ= ಹಸ್ತಿಸಮೂಹದಿಂದಲೂ, ಎಲ್ಲಿಯೂ= ಅಶೇಷಸ್ಥಳಗಳಲ್ಲಿಯೂ,ಕತುತುರಿಯ= ಕಸ್ತೂರಿಮೃಗಗಳಿಂದಲೂ, ಖಗದಿಂದಂ= ಹಕ್ಕಿಗಳಿಂದಲೂ, ಎಲ್ಲಿಯ= ಎಲ್ಲಾ ಕಡೆಗಳಲ್ಲಿಯೂ, ವಿರಚಿತ= ಮಾಡಲ್ಪಟ್ಟ, ಭವನದಿಂದ= ಗೃಹಗಳಿಂದಲೂ, ಜನದಿಂದ= ಮನುಷ್ಯರಿಂದಲೂ, ಆ ನಾಡ= ಆ ಜನಪದದ, ಸಿರಿ=ಐಶ್ವರ್ಯವು ,ಮೆರೆದುದು=ಕಾಂತಿಯನ್ನೈದಿತು. 


ತಾತ್ಪರ್ಯ = ಮತ್ತು ಯಾವಯಾವಕಡೆ ತಿರುತಿರುಗಿನೋಡಿದರೂ ಕೂಡ ಭೋರೆಂದು ಹರಿಯುತ್ತಿರುವನದಿಗಳು, ದೊಡ್ಡ ದೊಡ್ಡ ಕೆರೆಗಳು, ಮನೋಹರವಾದ ಆರಾಮಂಗಳು, ಸರೋವರಗಳು,ರತ್ನಗರ್ಭಿತವಾದ ಭೂಪ್ರದೇಶಗಳು, ಎತ್ತರಮಾದ ಮೈದಾನಂಗಳು,ಮಾಡುವೆಟ್ಟಗಳು,ದನದ ಮಂದೆಗಳು, ಆನೆಯ ಹಿಂಡುಗಳು,ಕಸ್ತೂರಿಮೃಗಗಳು, ಪಕ್ಷಿಗಳುಗುಂಪುಗಳು, ದೊಡ್ಡ ದೊಡ್ಡ ಮನೆಗಳು ಇವುಗಳಿಂದ ಅತಿ ಮನೋಹರವಾಗಿರುವುದನ್ನೂ ಕಂಡರು. 


ಅಂಚೆವಿಂಡಾಡದಕೊಳಂ ಕೊಳಗಳೊಳು ಸಲೆ ಪ। 

ಳಂಚಿ ಸುಳಿಯದ ಗಾಳಿ ಗಾಳಿಗಳ ಬಳಿವಿಡಿದು। 

ಸಂಚರಿಸದೆಳದುಂಬಿ ತುಂಬಿಗಳ ಬಿಡಯಕಿಂಪೆನಿಸದಚ್ಚಲರಲರ್ಗಳ॥ 

ಗೊಂಚಲೆರಗಿಸದ ಲತೆ ಲತೆಗಳಡರದತಳ್ಕಿ। 

ನಿಂ ಚಿಗುರದಿಮ್ಮಾವು ಮಾವುಗಳ ಚೆಂದಳಿರ್। 

ಮಿಂಚದ ಬನಂ ಬನಗಳಿಂ ಬಳಸದೂರೂರ್ಗಳಿಲ್ಲದೆಡೆಯಿಲ್ಲಿಳೆಯೊಳು॥೩॥ 


ಪ್ರತಿಪದಾರ್ಥ:- ಇಳೆಯೊಳು = ಭದ್ರಾವತೀ ದೇಶಕ್ಕೆ ಸಂಬಂಧಪಟ್ಟ ಭೂಪ್ರದೇಶದಲ್ಲಿ, ಅಂಚೆ= ಹಂಸಪಕ್ಕಿಗಳ, ವಿಂಡು= ಗುಂಪು, ಆಡದ= ತಿರುಗಾಡದಿರುವ, ಕೊಳಂ=ಬಾವಿಗಳು, ಕೊಳಗಳೊಳು= ಆ ಪ್ರಕಾರವಾದ ಕೊಳಗಳಲ್ಲಿ, ಸಲೆ=ಚನ್ನಾಗಿ, ಪಳಂಚಿ= ಆವರಿಸಿಕೊಂಡು, ಸುಳಿಯದ= ಚಲಿಸದಿರುವ, ಗಾಳಿ=ವಾಯುವು, ಗಾಳಿಗಳ= ಆ ಪವನಗಳ, ಬಳಿವಿಡಿದು= ದಾರಿಯನ್ನೈದಿ, ಸಂಚರಿಸದ= ಸಂಚಾರಮಾಡದೆ ಇರುವ, ಎಳದುಂಬಿ= ಮರಿದುಂಬಿಗಳು, ದುಂಬಿಗಳಬಿಡಯಕೆ= ಆ ಅಳಿಗಳ ಗುಂಪಿಗೆ, ಇಂಪೆನಿಸದ= ಸುಖದೋರದ, ಅಚ್ಚಲರು= ಕಲ್ಮಸರಹಿತವಾದ ಪುಷ್ಪಗಳು, ಅಲರ್ಗಳ= ಆ ಹೂಗಳ, ಗೊಂಚಲ= ಗುಡ್ಫಂಗಳನ್ನು, ಎರಗಿಸದ=ಬಿಡದಿರುವ, ಲತೆ= ಎಳಬಳ್ಳಿಗಳು, ಲತೆಗಳು= ಆ ಬಳ್ಳಿಗಳ ರಾಶಿಗಳು, ಅಡರದ= ಆಕ್ರಮಿಸದಿರುವ, ತಳ್ಕಿನಿಂ= ಪ್ರಕಾಶದಿಂದ, ಚಿಗುರಿಸದ= ಚಿಗುರನ್ನು ಹೊಂದದಿರುವ, ಮಾವು= ಚೂತವೃಕ್ಷಗಳು, ಮಾವುಗಳ= ಆ ಚೂತವೃಕ್ಷಂಗಳ, ಚಂದಳಿರ್= ಕೆಂಪು ಚಿಗುರುಗಳಿಂದ,ಮಿಂಚದ= ಹೊಳೆಯದಿರುವ, ಬನಂ=ತೋಟಗ-

ಳು, ಬನಂಗಳಿಂ= ಆ ರೀತಿಯಾದ ಉದ್ಯಾನಗಳಿಂದ, ಬಳಸದ= ಆವರಿಸದ, ಊರು= ಹಳ್ಳಿಗಳು, ಊರ್ಗಳಿಲ್ಲದ= ಆ ತೆರನಾದ ಹಳ್ಳಿಗಳಿಂದ ಕೂಡದ, ಎಡೆ= ಸ್ಥಳಗಳು, ಇಲ್ಲ=ಇರಲಿಲ್ಲ. 


ತಾತ್ಪರ್ಯ:- ತರುವಾಯ ಮತ್ತೆ ಸ್ವಲ್ಪ ಮುಂದೆ ನಡೆಯಲುಮನೋಹರವಾದ ಕೊಳಗಳು ಕಾಣಬಂದವು. ಅವುಗಳಲ್ಲಿ ಹಂಸಪಕ್ಷಿಗಳು ಆಟವನ್ನಾಡುತ್ತಿದ್ದವು, ಅಲ್ಲಿ ಮಂದಮಾರುತವು ಬೀಸುತ್ತಿದ್ದದ್ದರಿಂದ ಎಲ್ಲೆಲ್ಲಿಯೂ ಭೃಂಗಗಳು ಹಾರಾಡುತ್ತಿದ್ದವು. ಎಲ್ಲೆಲ್ಲಿಯೂ ಸುವಾಸನೆಯುಳ್ಳ ಪುಷ್ಪಗಳೂ, ಎಳೆಬಳ್ಳಿಗಳೂ ತುಂಬಿ ನೋಟಕ್ಕೆ ಅತ್ಯಂತ ರಮಣೀಯ-

ವಾಗಿತ್ತು. ಮಾವಿನ ಮರಗಳ ಚಿಗರಿನಿಂದ ಎಲ್ಲಾ ಊರುಗಳೂ ಕಾಂತಿಯುಕ್ತವಾಗಿದ್ದವು. ಇವುಗಳಿಂದ ರಹಿತವಾದ ಊರೇ ಈ ಭದ್ರಾವತಿ ನಗರಕ್ಕೆ ಸೇರಿಲ್ಲವೆಂಬಂತೆ ಹೊಳೆಯುತ್ತಿತ್ತು. 


ಬೆಳೆಯದ ಪೊಲಂಗಳಂ ಬೆಳ್ದಾವರೆಗಳಲ। 

ರ್ದಳೆಯದಕೊಳಂಗಳಂ ಮಣಿಶಿಲಾ ರೋಚಿಯಿಂ। 

ಪೊಳೆಯದಚಲಂಗಳಂ ತರುಣಾರುಣ ಪ್ರಭಾಲಕ್ಷ್ಮಿಯಂ ನಗುವಂತಿರೆ॥ 

ತಳೆಯದ ಬನಂಗಳಂ ಕಿವಿಯೊಳಿಡಿದಾಸರಂ । 

ಕಳೆಯದ ಸೊನಂಗಳಂ ಮನಕನವರತಸುಖಂ। 

ಮೊಳೆಯದ ಜನಂಗಳಂ ಮುಳಿದರಸಲಾಂ ಕಾಣೆನಾಮಹೀಮಂಡಲದೊಳು॥೪॥ 


ಪ್ರತಿಪದಾರ್ಥ:- ಆ ಮಹೀಮಂಡಲದೊಳು= ಆ ಭದ್ರಾವತೀನಗರಕ್ಕೆ ಸೇರಿದ ಸ್ಥಳಂಗಳಲ್ಲಿ, ಬೆಳೆಯದ= ಫಲಿಸದಿರುವ, ಪೊಲಂ= ಕೊಳಗಳನ್ನು, ವಣಿಶಾಲಾ= ರನ್ನ ಮನೆಗಳ, ರೋಚಿಯಿಂ= ಪ್ರಕಾಶದಿಂದ, ಪೊಳೆಯದ= ಕಾಂತಿಯನ್ನೀಯದಿ-

ರುವ, ಅಚಲಂಗಳಂ= ಗಿರಿಗಳನ್ನು, ತರುಣ= ಹೊಸದಾದ, ಅರುಣ= ಸೂರ್ಯನ ಸಾರಥಿಯ, ಪ್ರಭಾ= ಹೊಳಪೆಂಬ, ಲಕ್ಷ್ಮಿಯಂ= ಸಂಪತ್ತನ್ನು, ನಗುವಂತೆ= ಹಾಸ್ಯಮಾಡುವಹಾಗೆ, ಇದೆ=ಇರಲು, ತಳೆಯದ= ಚಿಗುರುಗಳಿಂದ ರಹಿತವಾದ,  ಬನಂಗಳಂ= ತೋಟಗಳನ್ನು, ಕಿವಿಯೊಳು= ಕಿವಿಯಲ್ಲಿ , ಇಡಿದು= ಸೇರಿ, ಆಸರಂ= ಶ್ರಮವನ್ನು, ಕಳೆಯದ= ನೀಗದಿರುವ, ಸ್ವನಂಗಳಂ= ಸಂಗೇತಾಲಾಪಂಗಳನ್ನು, ಮನಕೆ= ಹೃದಯಕ್ಕೆ, ಅನವರತ= ಸರ್ವದಾ, ಸುಖಂ= ಸೌಖ್ಯವು, ಮೊಳೆಯದ= ಅಂಕುರಿಸದಿರುವ,ಜನಂಗಳಂ= ಪ್ರಜೆಗಳನ್ನು, ಮುಳಿದು= ಬೇಸರಗೊಂಡು,ಅರಸಲು= ಹುಡುಕಲಾಗಿ, ಕಾಣೆನು= ನೋಡಲೇ ಇಲ್ಲವು. 


ಅಧಿಕ. ವಿಶೇಷ:- "ಬೆಳೆ" ಎಂಬುದು ಸಸ್ಯವೃದ್ಧಿಯಲ್ಲಿಯೂ, " ಬಳೆ" ಇತರ ವಸ್ತುಗಳ ಅಭಿವೃದ್ಧಿಯಲ್ಲಿಯೂ ಪ್ರಯೋಗಿಸಲ್ಪಡುವುದು. 


ತಾತ್ಪರ್ಯ = ಆ ನಾಡಿನಲ್ಲಿ ಎಲ್ಲೆ ನೋಡಿದರೂ ಫಲಭರಿತವಾದ ಹೊಲಗಳು ಕಾಣುತ್ತಲಿದ್ದುವಲ್ಲದೆ ಬೀಡು ಭೂಮಿಯನ್ನು ನೋಡುವುದು ಬಹು ಅಪೂರ್ವವಾಗಿತ್ತು, ಸರೋವರಗಳಲ್ಲಿ ಕಮಲ ಪುಷ್ಪಂಗಳು ತುಂಬಿ ರಮಣೀಯವಾಗಿತ್ತಲ್ಲದೆ ಇವುಗಳಿಂದ ರಹಿತವಾದ ಕಾಸಾರವೊಂದೂ ಕಾಣದು. ಪರ್ವತಗಳೆಲ್ಲಾ ರತ್ನಖಚಿತವಾಗಿದ್ದವು. ಉದ್ಯಾನವನ ಲಕ್ಷ್ಮಿಯಂ=

ಶ್ರೀ ಮಹಾಲಕ್ಷ್ಮಿಯನ್ನು ಕೂಡ ಹಾಸ್ಯಮಾಡುವಂತೆ ಇತ್ತು. ಎಲ್ಲಿ ನೋಡಿದರೂ ಸಂಗೀತರವವೂ ಸಜ್ಜನಾಲಾಪವೂ ಕೇಳಿ ಬರುತ್ತಲಿದ್ದುವೇ ಹೊರತು ಇವುಗಳು ಇಲ್ಲದೆಡೆಗಳನ್ನು ಕಾಣುವುದೇ ದುರ್ಲಭವಾಗಿತ್ತು. 


ಉರ್ವರೆಯ ಶಾಲಿಗಳ ಪಾಲ್ದೆನೆಗೆ ನಭದಿಂ ಮು। 

ಸುರ್ವ ಗಿಳಿವಿಂಡುಗಳನುಲಿಯಿಂದೆಪಾಮರಿಯ। 

ರೆರ್ವಿಸಿದೊಡಿರದೆ ಬಾಂದಳಕೆ ಮುಗುಳೇಳ್ವವೊಲ್ ಕಲಮಂಗಳಿಕ್ಕೆಲದೊಳು॥ 

ಕೊರ್ವಿ ನಳನಳಿಸಿ ನೀಳ್ದುರೆ ಬೆಳೆದ ರಸದಾಳಿ । 

ಗರ್ವುಗಳ ಸೋಗೆಗಳ ಪಸುರುವೊಗರಾಗಸಕೆ। 

ಪರ್ವುತಿಹುದಾನಾಡೊಳೆಲ್ಲಿಯುಂ ದಾರಿಗರ ಕಣ್ಗೆ ಕೌತುಕಮಾಗಲು॥೫॥ 


ಪ್ರತಿಪದಾರ್ಥ:- ಆ ನಾಡೊಳು= ಆ ಭದ್ರಾವತೀ ದೇಶದಲ್ಲಿ, ಉರ್ವರೆಯ= ಪೈರುಗಳು ಬೆಳೆಯಲು ಅರ್ಹತೆಯನೈದಿದ ಭೂಪ್ರದೇಶದ, ಶಾಲಿಗಳ= ನೆಲ್ಲಿನ ಪೈರುಗಳ, ಪಾಲ್ದೆನೆಗೆ= ಹಾಲು ಹಿಡಿದಿರುವ ತೆನೆಗಳಿಗೆ, ನಭದಿಂ = ಅಂತರಿಕ್ಷದಿಂದ, ಮುಗುರ್ವ= ಮುಂದರಿದು ಹಾರಿಬರುವ, ಗಿಳಿವಿಂಡುಗಳ= ಶುಕಸಮೂಹಗಳನ್ನು, ಪಾಮರಿಯರು= ರೈತರ ಹೆಂಗಸರು, 

(ಒಕ್ಕಲಗಿತ್ತಿಯರು), ಉಲಿಯಿಂದ= ಕೂಗುವಿಕೆಯಿಂದ, ಎರ್ವಿಸಿದೊಡೆ= ಚದರಿಸಲಾಗಿ, ಇರದೆ= ಅದೇಸ್ಥಳವನ್ನಾಶ್ರಯಿ-

ಸದೆ, ಬಾಂದಳಕೆ= ಅಂತರಿಕ್ಷಮಾರ್ಗಕ್ಕೆ, ಮಗುಳೆ=ಪುನಃ, ಏಳ್ವವೊಲ್= ಹಾರಿಹೋಗುವಂತೆ, ಕಲಮಂಗಳ= ನೆಲ್ಲಿನ ಗದ್ದೆಗಳ, ಇಕ್ಕೆಲದೊಳು= ಉಭಯಪಾರ್ಶ್ವಗಳಲ್ಲಿಯೂ, ಕೊರ್ವಿ= ಮದಿಸಿ,(ಪಕ್ವವಾಗಿ) ನಳನಳಿಸಿ= ಹೊಳೆಹೊಳೆಯುತ್ತ,

ನೀಳ್ದು= ನಿಂತುಕೊಂಡು,ಉರೆ= ಅಧಿಕವಾಗಿ, ಬೆಳೆದ= ಬೆಳೆದಿರುವ,ರಸದಾಳಿ= ರಸತಾಳೆ ಎಂಬ ಭೇದವುಳ್ಳ, ಕರ್ವುಗಳ= ಕಬ್ಬುಗಳ ಅಥವಾ ಇಕ್ಷುದಂಡಗಳ, ಸೋಗೆಗಳ= ಗರಿಗಳ, ಪಸರುವಗರು= ಹಸರು ಬಣ್ಣವು,ಆಗಸಕೆ=ಅಂತರಿಕ್ಷಕ್ಕೆ, ಪರ್ವುತ= ಹಬ್ಬುತ್ತ, ದಾರಿಗರು= ಪ್ರಯಾಣಿಕರ, ಕಣ್ಣಿಗೆ =ನಯನಂಗಳಿಗೆ, ಕೌತುಕಂ=ಅಚ್ಚರಿಯು, ಆಗಲು= ಆಗಲಾಗಿ, ಎಲ್ಲಿಯುಂ= ಎಲ್ಲಾ ಸ್ಥಳಗಳಲ್ಲಿಯೂ, ಇತ್ತು= ಆಗಿತ್ತು. 


ತಾತ್ಪರ್ಯ:- ಮತ್ತು, ಆ ದೇಶದ ಎಲ್ಲಾ ಗದ್ದೆಗಳಲ್ಲಿಯೂ ಭತ್ತದ ಪೈರು ಚೆನ್ನಾಗಿ ಬಲಿತಿರುವ ತೆನೆಗಳನ್ನು ತಿನ್ನಲು ಬಯಸಿ ಬರುವ ಗಿಳಿವಿಂಡನ್ನು ಕಾವಲಗಾರ್ತಿಯರು ಚದರಿಸಿ ಬಿಡಲಾಗಿ ಅವುಗಳೆಲ್ಲಾ ಗದ್ದೆಗಳ ಆಕಾಶಕ್ಕೆ ಹಾರಿದಂತೆ ಮಾಡಿ ಗದ್ದೆಗಳ ಎರಡೂ ಕಡೆ ಬೆಳೆದಿರುವ ರಸದಾಳೆ ಕಬ್ಬುಗಳ ಮೇಲೆ ಕುಳಿತು ನಭೋಮಂಡಲದವರೆಗೂ ವ್ಯಾಪಿಸಿವೆಯೊ ಎಂಬಂತೆ ಕಬ್ಬಿನ ಪೈರುಗಳು ಬೆಳೆದಿರುವುದನ್ನು ದಾರಿಗರು ನೋಡಿ ಆಶ್ಚರ್ಯ ಪಡುತ್ತಿದ್ದರು. 


ತಂಬೆಲರ ಸೊಗಸಿಂಗೆ ತಲೆದೂಗುವಂತೆ ತಳೆ। 

ದಂಬುಜದ ಪರಿಮಳಕೆ ಶಿರವನೊವೆವಂತೆ ಮರಿ। 

ದುಂಬಿಗಳ ಗಾನಕ್ಕೆ ಕೊರಲನೊಲೆದಾಡುವಂತೊಯ್ಯೊಯ್ಯನೊಲೆದಾಡುವ॥ 

ಪೊಂಬಣ್ಣಮೆಸೆವ ಕಳಮಶ್ರೀಯ ಪರಿಚರ್ಯೆ। 

ಯಂ ಬಿಡದೆ ಮಾಳ್ಪ ಕೆಳದಿಯರೆನಲ್ ಕೀರ ನಿಕು। 

ರುಂಬಮಂ ಸೋವಲೆಂದಲ್ಲಿರ್ದ ಪಾಮರಿಯರಧ್ವಗರ ನಡೆಗೆಡಿಸಿದರು॥೬॥ 


ಪ್ರತಿಪದಾರ್ಥ:- ತಂಬೆಲರ= ತಂಗಾಳಿಯ, ಸೊಗಸಿಂಗೆ= ಚೆಲ್ವಿಗೆ,( ಮನೋಹರತ್ವಕ್ಕೆ), ತಲೆದೂಗುವಂತೆ= ತಲೆಯನ್ನು ಅಲ್ಲಾಡಿಸುವ ಹಾಗೆ, ತಳೆದ= ಪೂರ್ಣವಾಗಿರುವ, ಅಂಬುಜದ= ತಾವರೆಯ, ಪರಿಮಳಕೆ= ಸುರಭಿಗೆ, ಶಿರವನು= ಶಿರಸ್ಸನ್ನು, ಒಲವಂತೆ= ತೂಗುವಂತೆ, ಮರಿದುಂಬಿಗಳ=ಸಣ್ ಸಣ್ಣ ಭೃಂಗಂಗಳ, ಗಾನಕ್ಕೆ= ಹಾಡುವಿಕೆಗೆ, ಕೂರಳನು= ಕಂಠವನ್ನು, ಒಲದಾಡುವಂತೆ= ಚಲಿಸುತ್ತಿರುವಂತೆ, ಒಯ್ಯೊಯ್ಯನೆ= ಮೆತ್ತಮೆತ್ತಗೆ, ಒಲದಾಡುವ= ಅಲ್ಲಾಡುವ, ಪೊಂಬಣ್ಣಂ= ಚಿನ್ನದ ವರ್ಣದಿಂದ,  ಎಸೆವ= ಹೊಳೆಯುತ್ತಿರುವ, ಕಳಮಶ್ರೀಯ= ಭತ್ತದ ಪೈರೆಂಬ ಲೋಕಮಾತೆಯ, 

ಪರಿಚರ್ಯೆಯಂ= ಚಾಕರಿಯನ್ನು(ಉಪಚಾರವನ್ನು) ಬಿಡದೆ=ತಪ್ಪದೆ, ಮಾಳ್ಪ= ಎಸಗುವ, ಕೆಳದಿಯರು= ಸಂಗಾತಿಯರು, 

ಎನಲು= ಎಂಬಂತೆ, ಕೀರನಿಕುರಂಬಮಂ= ಗಿಳಿವಿಂಡನ್ನು,  ಸೋವಲು= ಅಟ್ಟಲು, ಎಂದು= ಎಂಬತೆರನಾಗಿ, ಅಲ್ಲಿ= ಆ ನೆಲ್ಲಿನ ಗದ್ದೆಯಲ್ಲಿ, ಇದ್ದ=ಇದ್ದಂಥ, ಪಾಮರಿಯರು= ಒಕ್ಕಲಗಿತ್ತಿಯರು, ಅಧ್ವಗರ= ಮಾರ್ಗಸ್ಥರ, ನಡೆ= ಗಮನವನ್ನು, ಕೆಡಿಪರು= ಭಂಗಪಡಿಸುತ್ತಿರುವರು. 


ತಾತ್ಪರ್ಯ:-ಅಲ್ಲದೆ ಮಂದಮಾರುತವೂ, ಕಮಲ ಪುಷ್ಪಗಳ ಸುರಭಿಯೂ, ಸಂಗೀತರವವೂ ಜನರ ಮನಸ್ಸನ್ನು ಎಂತು ಆನಂದಗೊಳಿಸುವುದೋ ಅದೇತೆರನಾಗಿ ಎಲ್ಲೆಡೆಗಳಲ್ಲಿ ಬೆಳದಿರುವ ಹಳದಿ ಬಣ್ಣದ ಬತ್ತದ ತೆನೆಗಳ ಸಮೂಹವೂ. ಜಿಳಿವಿಂಡುಗಳ ಕಂಠಧ್ವನಿಯೂ, ರೈತರ ಹೆಂಗಸರ ಶಬ್ಧ ಪರಂಪರೆಯೂ ಮಾರ್ಗಸ್ಥರ ಮನಸ್ಸನ್ನು ಆನಂದಗೊಳಿಸುತ್ತಿತ್ತು.


ಪಾಲ್ದೆನೆಯೊಳಂಡಿಸಿದ ಗಿಳಿವಿಂಡನಬಲೆಯರ್। 

ಕಾಲ್ದೆಗೆಯಲಾರ್ದುಕೈಪರೆಗುಟ್ಟುವಂಡಲೆಗೆ। 

ತೇಲ್ದು ಮೇಲುದು ಜಾರೆ ತೋರ್ಪ ಪೊಂಗೊಡಮೊಲೆಯನಂಬುಜದಮುಕುಳಮೆಂದು॥ 

ಸೋಲ್ದೆರಗಿ ತಿರುತಿರುಗಿ ಬರುತಿರ್ಪ ತುಂಬಿಗಳ। 

ಸಾಲ್ದಿವಿಜಗಿರಿಯ ಬಳಸುವ ತಮೋರಾಜಿಯಂ। 

ಪೋಲ್ದು ಸಲೆ ಕಂಗೊಳಿಸುತಿರ್ಪುದಾ ಭೂತಲದೊಳೇನಚ್ಚರಿಯನು॥೭॥ 


ಪ್ರತಿಪದಾರ್ಥ:-ಪಾಲ್ದೆನೆಯೊಳು= ಹಾಲು ಹಿಡಿದ ನೆಲ್ಲಿನತೆನೆಗಳಲ್ಲಿ, ಅಂಡಿಸಿದ= ಕುಳಿತಿರುವ, ಗಿಳಿವಿಂಡನು= ಶುಕಸ-

ಹವನ್ನು, ಅಬಲೆಯರು= ಬೆಳೆಗೆ ಕಾವಲಿರುವ ಹೆಂಗಸರು, ಕಾಲೂದೆಗೆಯಲು= ನಡೆಯಲು, ಆರ್ದು= ಧ್ವನಿಗೈಯುತ್ತ, ಕೈಪರೆಗುಟ್ಟುವ= ಕರಗಳನ್ನು ಪರಸ್ಪರ ತಟ್ಟುವುದರ, ಅಡಲೆಗೆ= ಬಾಧೆಗೆ, ತೇಲ್ದು= ಜಾರಿಹೋಗಿ, ಮೇಲುದ= ಮೇಲ್ಸೆರಗು, ಜಾರೆ= ಜಾರಲು, ತೋರ್ಪ=ಕಂಡುಬರುವ, ಪೊಂಗೊಡ= ಚಿನ್ನದ ಬಿಂದಿಗೆಯ ಹಾಗಿರುವ, ಮೊಲೆಯನು=ಕುಚವನ್ನು, ಅಂಬುಜದ ಮುಕುಳಮೆಂದು= ತಾವರೆಯ ಮೊಗ್ಗೆಂದು, ಸೋಲ್ದು= ಭ್ರಾಂತಿಪಟ್ಟು, ಎರಗಿ= ಕುಚಗಳ ಸಮೀಪಕ್ಕೆ ಬಂದು, ತಿರುತಿರುಗಿ=ಸುತ್ತಿ ಸುತ್ತಿ, ಬರುತಿರ್ಪ= ಹತ್ತಿರಕ್ಕೆ ಬರುವಂಥ, ತುಂಬಿಗಳ= ಭೃಂಗಗಳ, ಸಾಲು=ಹಂತಿಯು, ದಿವಿಜಗಿರಿಯಂ

= ಸುವರ್ಣ ಪರ್ವತವನ್ನು, ಬಳಸಿದ= ಆವರಿಸಿಕೊಂಡಿರುವ, ತಮೋರಾಜಿಯಂ = ಅಂಧಕಾರದ ಸಮೂಹವನ್ನು,  ಪೋಲ್ದು= ಹೋಲಿಕೆಯಾಗಿ, ಸಲೆ=ಚಚೆನ್ನಾಗಿ, ಆ ಭೂತಲದೊಳು= ಆ ಭದ್ರಾವತೀ ಪ್ರದೇಶದಲ್ಲಿ,  ಕಂಗೊಳಿಸುತ= ಕಾಣುತ, ಇರ್ಪುದು=ಇದೆ, ಅಚ್ಚರಿಯನು= ಈ ಆಶ್ಚರ್ಯವನ್ನು,  ಏನೆಂಬೆನು= ಎಂತು ವರ್ಣಿಸಲಿ. 


ತಾತ್ಪರ್ಯ:- ಅಲ್ಲದೆ ಹಾಲು ಹಿಡಿದಿರತಕ್ಕ ಭತ್ತದ ತೆನೆಗಳ ಮೇಲೆ ಕುಳಿತಿರುವ ಭೃಂಗಾಳಿಯನ್ನು ಕೈಚಪ್ಪಾಳೆ ತಟ್ಟುತ್ತಾ ಓಡಿಸಲುದ್ಯುಕ್ತರಾದ ಒಕ್ಕಲಗಿತ್ತಿಯರ ಸೀರೆಯ ಸೆರಗು ಜಾರಿಹೋಗಲು ಅಲ್ಲಿ ಪೀತವರ್ಣವಾಗಿ ಹೊಳೆಯುವ ಕುಚಮಂಡಲವನ್ನು, ಅರಸಿನ ಬಣ್ಣವುಳ್ಳ ಕಮಲದ ಮೊಗ್ಗೆಂದು ಭಾವಿಸಿ ಭತ್ತದ ತೆನೆಗಳಿಂದ ಚದರಿಸಲ್ಪಟ್ಟ ಅಳಿವಿಂಡು ಬಂದು ಮುತ್ತಿಕೊಂಡು ಕೈಲಾಸಗಿರಿಯನ್ನು ಆವರಿಸಿರತಕ್ಕ ಅಂಧಕಾರವೋ ಎಂಬಂತೆ ಆಶ್ಚರ್ಯವನ್ನುಂಟುಮಾಡುವ ತೆರದಿಂದ ನೋಟಕರಿಗೆ ಅತಿ ಮನೋಹರವಾಗಿತ್ತು. 


ಶಾಲಿಗಳ ಕೈಗಂಪ ಪೊಲಗಾವ ಪಾಮರಿಯ। 

ರೋಳಿಗಳ ಮೈಗಂಪ ಸತತ ಕುಸುಮಿತ ತರು ಲ। 

ತಾಳಿಗಳ ಪೂಗಂಪ ತಿಳಿಗೊಳಂಗಳೊಳಲರ್ದ ಪೊಚ್ಪೊಪೊಂದಾವರೆಗಳ॥ 

ಧೂಳಿಗಳ ತನಿಗಂಟನುಂಡು ಮಿಂಡೆದ್ದ ಭೃಂ। 

ಗಾಳಿಗಳ ಬಳಗಂ ಪರಿಯಲೊಡನೆ ಸುಳಿವ ತಂ। 

ಗಾಳಿಗಳ ಕಡುಗಂಪ ಸೇವಿಸುತೆ ಪಥಿಕರಾಸರ್ಗಳೆವರಾನಾಡೊಳು॥೮॥ 


ಪ್ರತಿಪದಾರ್ಥ:- ಆ ನಾಡೊಳು= ಆ ಜನತೆಯಲ್ಲಿ, ಶಾಲಿಗಳ= ನೆಲ್ಲುಪೈರುಗಳ, ಕೈಗಂಪ= ತೆನೆಗಳ ಸುವಾಸನೆಯನ್ನು, ಪೊಲಗಾವ= ಗದ್ದೆಗೆ ಕಾವಲಿರುವ, ಪಾಮರಿಯರ= ಒಕ್ಕಲಗಿತ್ತೆಯರ, ಓಳಿಗಳ= ಗುಂಪಿನ, ಮೈಗಂಪ= ಶರೀರದವಾಸ-

ನೆಯನ್ನು, ಸತತ=ಅನವರತವೂ, ಕುಸುಮಿತ= ಹೂಬಿಟ್ಟ, ತರು= ವೃಕ್ಷಗಳ, ಲತಾ= ಎಳೆಬಳ್ಳಿಗಳ, ಅಳಿಗಳ= ಸಾಲುಗಳ, ಪೂಗಂಪ= ಅಲರ್ಗಂಪನ್ನು, ತಿಳಿಗೊಳದೊಳು= ಸ್ವಚ್ಛವಾದ ಉದಕವುಳ್ಳ ಕೂಪದಲ್ಲಿ, ಅಲರಿರ್ದ= ವಿಕಸಿತವಾದ, ಪೊಚ್ಚ= ನೂತನವಾದ,  ಪೊಂದಾವರೆಗಳ= ಹರಿದ್ವರ್ಣಮಾದ ಕಮಲಪುಷ್ಪಂಗಳ, ಧೂಳಿಗಳ= ಧೂಳಿನ, ತನಿಗಂಪನು= ಇಂಪಾದವಾಸನೆಯನ್ನು, ಉಂಡು= ಮೆದ್ದು, ಎದ್ದು= ನಡೆದು, ಭೃಂಗಾಳಿಗಳ= ಅಳಿವಿಂಡುಗಳ, ಬಳಗಂ= ಕುಲದವು, ಪರಿಯಲು= ತಿರುಗಾಡುತ್ತಿರಲು, ಒಡನೆ= ಕೂಡಲೆ, ಸುಳಿವ= ಚಲಿಸುವ, ತಂಗಾಳಿಗಳ= ಮಂದಮಾರುತಂಗಳ, ಕಡುಗಂಪ= ಹೆಚ್ಚಾದ ಸುವಾಸನೆಯನ್ನು,  ಸೇವಿಸುತ= ಆಘ್ರಾಣಿಸುತ್ತ, ಪಥಿಕರು= ದಾರಿಗರು, ಆಸರಗಳೆವರು= ದಾರಿನಡೆದ ಬಳಲಿಕೆಯನ್ನು ನೀಗಿಕೊಳ್ಳುತ್ತಾರೆ, 


ತಾತ್ಪರ್ಯ:- ಅದೂ ಅಲ್ಲದೆ ಆ ದೇಶದ ಎಲ್ಲಾ ಭಾಗದಲ್ಲಿಯೂ ವ್ಯಾಪ್ತವಾಗಿರುವ ಭತ್ತದ ತೆನೆಗಳ ಸುವಾಸನೆಯನ್ನೂ, ಹೊಲದ ಕಾವಲ್ಗಾತಿಯರ ದೇಹದ ಸುವಾಸನೆಯನ್ನೂ, ಎಳೆ ಬಳ್ಳಿಗಳಲ್ಲಿ ಬಿಟ್ಟಿರುವ ಪುಷ್ಪಂಗಳ ಸುಗಂಧವನ್ನೂ,ತಾವರೆ ಹೂಗಳ ಸುರಭಿಯನ್ನೂ,ಆಘ್ರಾಣಿಸಿ ಆನಂದವನ್ನು ಅನುಭವಿಸುತ್ತಿದ್ದ ಭೃಂಗಾಳಿಯೇ ತುಂಬಿರುವುದನ್ನು ನೋಡಲು ಪರಮ ಸಂತೋಷವೂ, ಮಂದಮಾರುತವು ಬೀಸುತ್ತಿದ್ದದ್ದರಿಂದ ಆನಂದಾತಿಶಯವೂ ಉಂಟಾಗಿ ಮಾರ್ಗಸ್ಥರಿಗೆ ಲೇಶವೂ ಆಯಾಸವೆಂಬುದೇ ತೋರುತ್ತಿರಲಿಲ್ಲ.


ಬಟ್ಟೆ ಬಟ್ಟೆಯೊಳೆಲ್ಲಿಯುಂ ಕುಳಿರ್ವೆಸಿದರ। 

ವಟ್ಟಿಗೆಯ ಸದನಂಗಳಿಂದೆ ಬಾಗಿಲ್ಗೆ ಪೊರ। 

ಮಟ್ಟು ಕಲಶಮನೆತ್ತಿ ನೀರೆರೆವ ಕಾಮಿನಿಯರುರುಬಾಹುಮೂಲದೆಡೆಗೆ॥ 

ದಿಟ್ಟಿ ಪರಿಸರಿದು ಮೊಗಮೊರ್ಗುಡಿಸೆ ಸರಿಸಕಳ । 

ವಟ್ಟಜಲಧಾರೆ ಪೊರಸೂಸೆ ಬಯಲಿಗೆ ಬಾಯ। 

ಬಿಟ್ಟು ನಗಿಸುವರಲ್ಲಿ ತೃಷೆಯಿಂದೆ ಬಂದ ಪಥಿಕರ್ಕಳಾ ಬಾಲೆಯರನು॥೯॥ 


ಪ್ರತಿಪದಾರ್ಥ :-ಬಟ್ಟೆ ಬಟ್ಟೆಯೊಳು= ದಾರಿ ದಾರಿಯಲ್ಲಿ,  ಎಲ್ಲಿಯುಂ= ಎಲ್ಲೆಡೆಗಳಲ್ಲಿಯೂ,ಕುಳಿರ್ವೆರಸಿದ= ತಂಪಾಗಿರುವ, ಅರವಟ್ಟಿಗೆಯ= ದಮ್ಮಣಿಯ(ಅರವಂಟಿಗೆ) ಸದನಂಗಳಿಂದ=ಗೃಹಗಳಿಂದ, ಬಾಗಿಲ್ಗೆ= ಬಾಗಿಲ ಬಳಿಗೆ,ಪೊರಮಟ್ಟು= ನಡೆದು, ಕಲಶಮನು= ಕಲಶಗಳನ್ನು,ಎತ್ತಿ= ಎತ್ತಿ ಹಿಡಿದುಕೊಂಡು,ನೀರ=ಉದಕವನ್ನು, ಎರೆವ=ಸುರಿಯುವ, ಕಾಮಿನಿಯರ= ಸ್ತ್ರೀಯರ, ಉರು= ಅಧಿಕಮಾದ, ಬಾಹುಮೂಲದ= ಭುಜದ ಸಂದುಗಳ ಅಂದರೆ ಕಂಕಳಿನ, ಎಡೆಗೆ= ಸ್ಥಾನಕ್ಕೆ, ದಿಟ್ಟಿ=ನೋಟವನ್ನು,  ವರಿವರಿದು= ಬಿಟ್ಟು ಬಿಟ್ಟು,  ಮೊಗಂ= ಮೋರೆಯು, ಓರ್ಗುಡಿಸಿ= ಅರ್ಧ ಹಿಂದುಮಾಡಿಕೊಂಡು, ಸರಿಸಕೆ= ಸಮೀಪಕ್ಕೆ, ಬಳಿವಟ್ಟ= ಬರುವ, ಜಲಧಾರೆ= ನೀರಿನ ಧಾರೆಯು, ಪೊರಸೂಸಿ= ಹೊರಗೆಬಂದು,ಬಯಲಿಗೆ= ಬರಿದಾದ ಸ್ಥಳಕ್ಕೆ,  ಬಾಯ= ಬಾಯನ್ನು, ಬಿಟ್ಟು= ತೆರೆದು, ಅಲ್ಲಿ= ಭದ್ರಾವತಿ ಪಟ್ಟಣದ ಪ್ರದೇಶದಲ್ಲಿ, ತೃಷೆಯಿಂದ= ನೀರಡಿಕೆಯಿಂದ,ಬಂದ=ಸಮೀಪಸ್ಥರಾದ, ಪಥಿಕರ್ಕಳು= ದಾರಿಗರು, ಆ ಬಾಲೆಯರನು= ಆ ಬಾಲಕಿಯರನ್ನು, ನಗಿಸುವರು= ಹಸನ್ಮುಖರಾಗಿ ಮಾಡುವರು. 


ತಾತ್ಪರ್ಯ:- ಆ ದೇಶದಲ್ಲಿ ಎಲ್ಲೆಲ್ಲಿ ನೋಡಿದರೂ ತಣ್ಣಗಿರುವ ಉದಕದಿಂದ ಕೂಡಿದ ಅರವಟ್ಟಿಗೆಗಳು ಕಾಣಬರುತ್ತಿದ್ದವು.

ನವಯೌವನವನ್ನು ತಾಳಿರುವ ಬಾಲಕಿಯರು ಕೈಗಳಲ್ಲಿ ತಂಬಿಗೆಗಳನ್ನು ಹಿಡಿದುಕೊಂಡು ಅರವಟ್ಟಿಗೆಗಳ ಬಾಗಿಲ್ಗಳಲ್ಲಿ ನಿಂತು ನೀರಡಿಕೆಯಿಂದ ಬರುವ ಮಾರ್ಗಸ್ಥರ ಮನದಣಿವಂತೆ ನೀರನ್ನು ಹುಯ್ಯುವದಕ್ಕುದ್ಯುಕ್ತರಾಗಿ ಅವರ ಚಲ್ವಿಗೆ ಮೆಚ್ಚಿ 

ಅವರಲ್ಲಿ ರತಿಕ್ರೀಡೆಯನ್ನನುಭವಿಸಬೇಕೆಂಬ ಕುತೂಹಲವುಳ್ಳವರಾದರೂ ಲಜ್ಜಾಪರವಶರಾಗಿ ಮುಖವನ್ನು ಓರೆಮಾಡಿ-

ಕೊಂಡು ನೀರೆರೆಯುತ್ತಿರಲು ಆ ಉದಕಧಾರೆಯು ಕೆಳಗೇ ಬಿದ್ದು ಹೋಗುತ್ತಲಿತ್ತು. ಇದನ್ನು ನೋಡಿದ ಪಥಿಕರ ಮನಸ್ಸನ್ನೂ ಶಾತಕುಂಭಂಗಳಿಂದಲಂಕೃತರಾಗಿರುವ ನಾರೀಮಣಿಗಳ ಮನೋಭಿಲಾಶೆಯನ್ನೂ ಬಂಣಿಸಲು ಅಸದಳವಾಗಿತ್ತು


ಸ್ವಾದು ಸ್ವಚ್ಛತೆ ಶೈತ್ಯಮಾಮೋದಮೊಂದಿ ಸೊಗ। 

ಸಾದ ಲಲಿತಾಂಗಿಯರ ಕರತಳದ ವಿಮಲ ಕಲ। 

ಶೋದಕವನೊಲಿದೀಂಟುತಿರ್ದೊಡಂ ಮನದಣಿಯದಧ್ವಗರ್ಗಾ ಹೆಂಗಳ॥ 

ಮಾದಳಿರ ಪಳಿವ ಚೆಂದುಟಿಯ ಸವಿಗೆಳನಗೆಯೊ। 

ಳಾದರಿಪ ಕಡೆಗಣ್ಣ ನಿಚ್ಚಳಕೆ ಪೀವರಪ। 

ಯೋಧರದ್ವಯವನಪ್ಪುವ ತಂಪಿಗೆಸೆವ ಮೈಗಂಪಿಂಗೆ ಬಯಸಿ ಬಯಸಿ ॥೧೦॥ 


ಪ್ರತಿಪದಾರ್ಥ:- ಸ್ವಾದ= ಮಾಧುರ್ಯವು, ಸ್ವಚ್ಛತೆ= ಪಾರಿಶುಧ್ಯವು, ಶೈತ್ಯ=ತಂಪಾಗಿರುವ, ಆಮೋದಂ= ಒಳ್ಳೆವಾಸನೆಯು, ಇವುಗಳನ್ನು, ಒಂದಿ= ತಾಳಿ, ಸೊಗಸಾದ= ಇನಿದಾಗಿರುವ, ಲಲಿತಾಂಗಿಯರ= ಸುಂದರಾಂಗಿಯರ, ಕರತಲದ= ಕೈಯಲ್ಲಿರುವ, ಅಮಲ=ಸ್ವಚ್ಛವಾದ, ಕಲಶೋದಕವನು= ಕಲಶದಲ್ಲಿನ ಜಲವನ್ನು, ಒಲಿದು=ಆಶಿಸಿ, ಈಂಟುತ= ಪಾನಮಾಡುತ್ತ, ಇರ್ದೊಡಂ= ಇದ್ದರೂ, ಅಧ್ವಗರ್ಗೆ= ದಾರಿಗರಿಗೆ, ಮನವು= ಮನಸ್ಸು, ಮಾದಳಿರ= ಚೂತವೃಕ್ಷದ ಕೆಂದಳಿರನ್ನು, ಪರಿವ= ಅಲೆಗಳೆಯುವ, ಚೆಂದುಟಿಯ= ರಕ್ತವರ್ಣದ ಅಧರದ, ಸವಿಗೆ= ಸ್ವಾರಸ್ಯಕ್ಕೆ, ಎಳೆನಗೆಯೊಳು= ಹುಸಿನಗೆಯಲ್ಲಿ,ಆದರಿಪ= ಉಪಚರಿಸುವ, ಕಂಗಡೆಯ= ಕಡೆಗಣ್ಣಿನ, ನಿಚ್ಚಳಕೆ= ಪರಿಶುದ್ಧತೆಗೆ, ಪೀವರ= ಗಾತ್ರವಾದ (ಬಲಿತ) ಪಯೋಧರದ್ವಯವನು=ಕುಚಯುಗ್ಮವನ್ನು, ಅಪ್ಪುವ= ತಬ್ಬಿಕೊಳ್ಳುವ,ತಂಪಿಗೆ= ಶೈತ್ಯಕ್ಕೆ, ಎಸೆವ= ಹೊಳೆಯುವ, ಮೈಗಂಪಿಗೆ= ದೇಹ ಸುವಾಸನೆಗೆ, ಬಯಸಿ ಬಯಸಿ = ಆಶಿಸಿ ಆಶಿಸಿ, ದಣಿಯದು= ಸಂತುಷ್ಟಿಯನ್ನೈದದು,


ತಾತ್ಪರ್ಯ  ಮಾರ್ಗಸ್ಥರು ಅರವಟ್ಟಿಗೆಗಳ ಬಳಿಗೆ ಬಂದು ಆ ಕೋಮಲಾಂಗಿಯರು ತಮ್ಮ ಕೈಗಳಲ್ಲಿರುವ ರುಚಿಯಾಗಿಯೂ ನಿರ್ಮಲವಾಗಿಯೂ ತಣ್ಣಗೂ ಸುವಾಸನೆಯುಳ್ಳದ್ದಾಗಿಯೂ ಇರುವ ನೀರನ್ನೊಳಕೊಂಡಿರುವ ಕಲಶಂಗಳಿಂದೆರೆದ ಉದಕ ಮಾತ್ರದಿಂದಲೇ ತೃಪ್ತಿಪಡದೆ ಆ ನಾರೀಮಣಿಗಳ ರಕ್ತ ವರ್ಣದ ಅಧರಾಮೃತದ ರುಚಿಯನ್ನೂ, ಮುಗುಳ್ನಗೆಯಿಂದ ಕೂಡಿದ ಅವರ ನೋಟವನ್ನೂ, ಅವರ ಕುಚಾಲಿಂಗನದಿಂದೊಗೆವ ತಂಪನ್ನೂ, ಅವರ ಮೈಗಂಪನ್ನೂ ಅನುಭವಿಸಿ ತೃಪ್ತಿಪಡಬೇ-

ಕೆಂದು ಹಾರೈಸುತ್ತಿದ್ದರು. 


ತಳಿರೆಡೆಯೊಳಿರ್ದ ಮಾವಿನ ತೋರ ತನಿವಣ್ಣ । 

ಗಿಳಿ ಕರ್ದುಂಕಿದೊಡೆ ರಸಮೊಸರಿ ಸೋರ್ವಂತೆ ಹೆಂ। 

ಗಳ ಕರತಳದ ಪೊಂಗಳಸದ ಜುಳಿಗೆಯೊಳಿಟ್ಟ ಬೆರಲಂ ತೆಗೆದು ಬಿಡಲ್ಕೆ॥ 

ಲಲಿತ ಚಂಪಕ ತನುಚ್ಛಾಯೆಯಿಂ ಕೆಂಪಿಡಿದ। 

ಜಳಧಾರೆ ಕಂಗೊಳಿಸುತಿರ್ಪುದಧ್ವಶ್ರಮಂ। 

ಗಳನಾಂತು ಬಂದ ಪಥಿಕರ್ಕಳೀಂಟುವ ಸಮಯದೊಳ್ ಪ್ರಪಾಶಾಲೆಗಳೊಳು॥೧೧॥ 


ತಳಿರ= ಪಲ್ಲವಂಗಳ, ಎಡೆಯೊಳು= ಹತ್ತಿರದಲ್ಲಿ, ಇರ್ವ=ಇರತಕ್ಕ, ಮಾವಿನ= ಚೂತವೃಕ್ಷದ, ತೋರ=ಗಾತ್ರಮಾದ, ತನಿವಣ್ಣ = ಮಾಗಿದ ಹಣ್ಣನ್ನು, ಗಿಳಿ=ಗಿಳಿಯು, ಕರ್ದುಂಕಿದೊಡೆ= ಕಡಿಯಲಾಗಿ, ರಸಂ= ಸಾರವು, ಒಸರಿ=ಜಿನುಗಿ, ಸೋರ್ವಂತೆ= ದ್ರವಿಸುವಹಾಗೆ, ಹೆಂಗಳ= ಸ್ತ್ರೀಯರ, ಕರತಳದ= ಕೈಯಲ್ಲಿರುವ, ಪೊಂಗಳಸದ= ಚಿನ್ನದ ಕಲಶಂಗಳುಳ್ಳ, ಅಂಜಳಿಯೊಳು= ಬೊಗಸೆಗಳಲ್ಲಿ, ಇಟ್ಟು=ಇಟ್ಟಂಥ, ಬೆರಳಂ= ಅಂಗುಳಿಯನ್ನು,ತೆಗೆದು= ಈಚೆಗೆ ತೆಗೆದುಬಿಟ್ಟು, ಬಿಡಲ್ಕೆ= ಜಲವನ್ನೆರೆಯುತ್ತಿರಲಾಗಿ,ಲಲಿತ= ಅತಿ ಮೃದುವಾದ, ತನು=ದೇಹದ, ಛಾಯೆಯಂ= ನೆಳಲಿನಿಂದ, ಕೆಂಪಿಡಿದ= ರಕ್ತವರ್ಣವಂತಾಳ್ದ, ಜಲಧಾರೆ= ನೀರಿನ ಧಾರೆಯು, ಅಧ್ವಶ್ರಮಂಗಳನು= ದಾರಿಯ ಬಳಲಿಕೆಯನ್ನು, ಆಂತು=ತಾಳಿ, ಬಂದ= ಐತಂದ, ಪಥಿಕರ್ಕಳು= ದಾರಿಗರು, ಈಂಟುವ= ಪಾನಮಾಡುವ, ಸಮಯದೊಳು= ಕಾಲದಲ್ಲಿ, ಪ್ರಪಾಶಾಲೆಗಳೊಳು= ಧರ್ಮ ಪಾನೀಯಶಾಲೆಗಳಲ್ಲಿ, ಕಂಗೊಳಿಸುತಿರ್ಪುದು= ಥಳಥಳಿಸುತ್ತಿಲಿರುವುದು. 


ತಾತ್ಪರ್ಯ :- ಆ ಧರ್ಮಪಾನೀಯಶಾಲೆಗಳಲ್ಲಿ ನೀರನ್ನು ಕೊಟ್ಟು ಬಾಯಾರಿಕೆಯನ್ನು ನೀಗಿಸುವ ಕೋಮಲಾಂಗಿಯರ

ಕೈಯುಮಾವಿನ ಎಳೆಚಿಗುರನ್ನು ಅಲ್ಲಗಳೆಯುವಂತೆ ಕೆಂಪಾಗಿದ್ದವು. ರಕ್ತವರ್ಣದ ಚಿಗುರುಗಳ ಮಧ್ಯದಲ್ಲಿರುವ ಮಾವಿನ ಹಣ್ಣನ್ನು ಗಿಳಿಗಳು ಬಂದು ಕಡಿಯಲು ಅದರ ರಸವು ಒಸರುತ್ತ ಕೆಂಪಗೆ ಕಾಣುತ್ತಿರುವುದೊ ಎಂಬಂತೆ ಆ ನಾರಿಯರು ತಮ್ಮ ಕೈಬೆರಳುಗಳಿಂದ ಸುರಿಸುತ್ತಿರುವ ಉದಕ ಧಾರೆಯು ಭ್ರಾಂತಿಯನ್ನುಂಟುಮಾಡುತ್ತಲೂ,


ಲಲಿತ ಕರತಳದೊಳ್ ಪಿಡಿದ ಚಂದ್ರಕಾಂತಕೃತ। 

ಕಲಸಮಾಸ್ಯೇಂದುಮಂಡಲರುಚಿಗೊಹರ್ವ ನಿ। 

ರ್ಮಲ ಜಲಮಿದೆಂಬಂದದಿಂದೆ ಸೊಗಯಿಪ ಶೀತಾಂಬುಧಾರೆಯನೀಂಟುತೆ॥ 

ಲಲನೆಯರ ಕೋಮಲಾವಯವ ಲಾವಣ್ಯಮಂ। 

ಸಲೆಕಂಡು ಮೆಚ್ಚಿ ಮನಮುಳುಗಿದಾನಂದದಿಂ। 

ತಲೆದೂಗುವರ್ ಪಥಿಕರಾನೀರ್ಗೆ ತಣಿವ ನೆವದಿಂದಮಾ ಜನಪದದೊಳು॥೧೨॥ 


ಪ್ರತಿಪದಾರ್ಥ:-ಲಲಿತ= ಮೃದುವಾದ, ಕರತಳದೊಳ್= ಅಂಗೈಯಲ್ಲಿ, ಪಿಡಿದ= ಹಿಡಿದುಕೊಂಡಿರುವ, ಚಂದ್ರಕಾಂತ = ಇಂದು ಕಾಂತವೆಂಬ ಕಲ್ಲಿನಿಂದ, ಕೃತ=ರಚಿಸಿರುವ, ಕಲಶಂ=ಕಲಶವು, ಆಸ್ಯ= ವದನವೆಂಬ, ಇಂದುಮಂಡಲ= ಚಂದ್ರಬಿಂಬದ,ರುಚಿಗೆ= ಪ್ರಕಾಶಕ್ಕೆ,ಒಸರ್ವ= ಸ್ರವಿಸುವ, ನಿರ್ಮಲ= ಪರಿಶುದ್ಧವಾದ, ಜಲಂ=ನೀರು, ಇದು ಎಂಬಂದದಿಂ = ಇದು ಎಂಬತೆರನಾಗಿ, ಸೊಗಯಿಸುವ= ಇನಿದಾಗಿರುವ, ಶೀತಾಂಬುಧಾರೆಯನು= ತಂಣೀರಿನಧಾರೆಯನ್ನು, ಈಂಟುತ= ಪಾನಮಾಡುತ್ತ, ಲಲನೆಯರ= ಸ್ತ್ರೀಯರ, ಕೋಮಲ= ಮೆತ್ತನಾದ,ಅವಯವ=ಶರೀರದ, ಲಾವಣ್ಯವಂ= ಸೊಗಸನ್ನು ಸಲೆ= ಚೆನ್ನಾಗಿ,  ಕಂಡು= ದೃಷ್ಟಿಸಿ, ಮೆಚ್ಚಿ =ಒಪ್ಪಿಕೊಂಡು, ಮನ=ಮನಸ್ಸು, ಮುಳುಗಿದ= ಮಗ್ನವಾಗಿರುವ, ಆನಂದದಿಂ= ಆಹ್ಲಾದದಿಂದ, ಆ ನೀರ್ಗೆ= ಆ ಉದಕಕ್ಕೆ, ದಣಿವ= ಸಂತುಷ್ಟಿಯಾಯಿತೆಂಬ, ನೆಲದಿಂದ= ಕಾರಣದಿಂದ, ಪಥಿಕರು= ಮಾರ್ಗಸ್ಥರು, ಆ ಜನಪದದೊಳು= ಆ ನಾಡಿನಲ್ಲಿ,  ತಲೆದೂಗುವರ್= ಸಂತೋಷಪಡುವರು. 


ತಾತ್ಪರ್ಯ :- ಅವರ ಕೈಗಳಲ್ಲಿರುವ ಕಲಶಂಗಳು ಚಂದ್ರಕಾಂತ ಶಿಲೆಯಿಂದ ಮಾಡಲ್ಪಟ್ಟವಾದ್ದರಿಂದಲೇ ಆ ನಾರೀಮಣಿಗಳ ಮುಖವೆಂಬ ಚಂದ್ರನ ಮರೀಚಿಕೆಯು ಕರಗಿ ತಂಪಾದ ನೀರಾಗಿ ಹೋಗಿರುವಂತೆಯೂ ತೋರುತ್ತಿತ್ತು. ಇಂತಹ ಅತಿ ಸ್ವಚ್ಛವಾಗಿಯೂ ಪರಿಶುದ್ಧವಾಗಿಯೂ ಇರೈವ ನೀರನ್ನು ಮಾರ್ಗಸ್ಥರು ಪಾನಮಾಡಿ ಸಂತೋಷಪಡುತ್ತಲೂ ಆ ಸ್ತ್ರೀಯರ ಸೌಂದರ್ಯಾತಿಶಯವಂ ಕಂಡು ಹಿಗ್ಗುತ್ತಲೂಇದ್ದರು. 


ಏಂ ತಾಳ್ದುದೋ ಚೆಲ್ವನೀದೇಶಮೆಂದು ನಲ। 

ವಾಂತು ಮುಂದಳೆಯುತಿರೆ ಕಂಡರವರಾ ಪುರ। 

ಪ್ರಾಂತದೊಳ್ ಸನ್ನೆಗೈದಿನಿಯರಂ ಬರಿಸಿ ನವರತಿಕಲಾಪ್ರೌಢಿಯಿಂದೆ॥ 

ಸ್ವಾಂತಸುಖಮಂ ಪಡೆವ ಪೌರನಾರಿಯರ ವಿ। 

ಶ್ರಾಂತಿಗಮರಿದ ರನ್ನವಾಸರೆಗಳಿಂದೆ ಶಶಿ। 

ಕಾಂತಶಿಲೆಗಳ ಕಂದರಂಗಳಿಂದತಿಮನೋಹರಮಾದ ಗಿರಿಯೊಂದನು॥೧೩॥ 


ಈ ದೇಶಂ= ಈ ನಾಡು, ಚೆಲ್ವಂ= ಸೌಂದರ್ಯವನ್ನು, ಏಂ ತಾಳ್ದುದೋ= ಹೇಗೆ ತಾಳಿತೋ,ಎಂದು=ಎಂಬುದಾಗಿ, ನಲವಾಂತು= ಆನಂದವನ್ನು ತಾಳಿ, ಮುಂತೆ=ಮುಂಭಾಗದಲ್ಲಿ, ಅಳೆವುತಿರೆ= ಹೊರಡುತ್ತಿರಲು, ಅವರು=ಆ ವೃಕೋದರ, ವೃಷಧ್ವಜ,ಮೇಘನಾದರು, ಆ ಪುರಪ್ರಾಂತದೊಳು= ಆ ಭದ್ರಾವತೀಯೆಡೆಯಲ್ಲಿ, ಸನ್ನೆಗೈದು= ಸೈಗೆಯನ್ನು ಮಾಡಿ, ಇನಿಯರಂ= ವಿಟಪುರುಷರನ್ನು, ಬರಿಸಿ= ಸಮೀಪಸ್ಥರನ್ನಾಗಿ ಮಾಡಿಕೊಂಡು, ನವ= ಹೊಸದಾದ, ರತಿಕಲಾ= ಮದನಕಲೆಯ, ಪ್ರೌಢಿಯಿಂದ= ಚಾತುರ್ಯದಿಂದ, ಸ್ವಾಂತಸುಖಮಂ= ಹೃದಯಾಹ್ಲಾದವನ್ನು, ಪಡೆವ= ತಾಳುವ, ಪೌರ= ನಗರದ, ನಾರಿಯರ= ಸ್ತ್ರೀಯರ, ವಿಶ್ರಾಂತಿಗೆ= ಆಯಾಸವನ್ನು ನೀಗುವುದಕ್ಕೆ, ಅಮರಿದ= ಅನುಕೂಲ್ಯಮಂ ಪಡೆದ, ರನ್ನ=ಮಣಿಖಚಿತಮಾದ, ವಾಸರಂಗಳಿಂದ= ಶಿಲಾಪರ್ಯಂಕಗಳಿಂದ, ಶಶಿಕಾಂತ= ಇಂದುಕಾಂತದ, ಶಿಲೆಗಳ=ಕಲ್ಲುಗಳ, ಕಂದರಂಗಳಿಂದ= ಗವಿಗಳಿಂದಲೂ, ಅತಿಮನೋಹರಮಾದ= ಬಹುವಾಗಿ ಮನವನ್ನು ರಂಜಿಸುವಂತಹ, ಗಿರಿಯೊಂದನು= ಒಂದಾನೊಂದು ಬೆಟ್ಟವನ್ನು, ಕಂಡರು= ಮುಂಗಡೆಯಲ್ಲಿ ನೋಡಿದರು.



ತಾತ್ಪರ್ಯ = ಇವುಗಳನ್ನೆಲ್ಲಾ ನೋಡಿ ನೋಡಿ ಆಹಾ! ಈ ದೇಶವು ಎಷ್ಟು ಚನ್ನಾಗಿದೆ ಎಂಬುದಾಗಿ ಅತ್ಯಾಶ್ಟರ್ಯ ಪಡುತ್ತಾ ಭೀಮ, ವೃಷಕೇತು, ಮೇಘನಾದರು ಮತ್ತೆ ಸ್ವಲ್ಪ ದೂರ ಮುಂದೆ ನಡೆಯಲು, ಆ ಭದ್ರಾವತೀನಗರ ಪ್ರಾಂತದಲ್ಲಿ ಒಂದಾನೊಂದು ಪರ್ವತವು ಕಾಣಬಂದಿತು. ಆ ಗಿರಿಯು ಆ ನಾಡಿನ ಪೌರನಾರಿಯರು ವಿಟರನ್ನು ಬರಮಾಡಿಕೊಂಡು ರತಿಕ್ರೀಡಾ ಸರಸಸಲ್ಲಾಪಗಳ ಸುಖಗಳನ್ನನುಭವಿಸಲು ಯೋಗ್ಯಮಾದ ಮಣಿಖಚಿತವಾಗಿರುವ ಪರ್ಯಂಕಗಳಿಂದಲೂ, ಚಂದ್ರಕಾಂತಶಿಲೆಗಳ ಗುಹೆಗಳಿಂದಲೂ ತುಂಬಿ ನೋಟಕರಿಗೆ ಬಹು ರಮಣೀಯವಾಗಿ ಕಾಣುತ್ತಿತ್ತು.


ಆ ಗಿರೆಯ ಮಸ್ತಕವನಡರಲ್ಕದರ ಪೂರ್ವ। 

ಭಾಗದೊಳ್ ಮೆರೆವ ಭದ್ರಾವತಿಯ ಸಿರಿಗೆ ತಲೆ। 

ದೂಗುತೆ ವೃಕೋದರಂ ನುಡಿದನೆಲೆ ವೃಷಕೇತು ನೋಡಿದೈ ಕೌತುಕವನು॥ 

ಈಗಳೀ ನಗರಂ ಮಹೀಲಲನೆಗಾಸ್ಯಾಬ್ಜ। 

ಮಾಗಿರ್ಪುದೆತ್ತಲುಂ ಗಗನದೆಡೆಗೇಳ್ವ ಬಹು। 

ಯಾಗಧೂಮಂಗಳೆಂಬಾಲೋಲನೀಲಾಳಕಾವಳಿಯ ಚೆಲ್ವಿನಿಂದೆ॥೧೪॥ 


ಪ್ರತಿಪದಾರ್ಥ:- ಆ ಗಿರಿಯ= ಆ ಪರ್ವತದ, ಮಸ್ತಕವನು= ತುದಿಯನ್ನು, ಅಡರಲ್ಕೆ= ಏರಲು, ಅದರ= ಆ ಪರ್ವತದ, ಪೂರ್ವಭಾಗದೊಳು= ಪೂರ್ವದಿಕ್ಕಿನಲ್ಲಿ, ಮೆರೆವ= ಹೊಳೆಯುತ್ತಿರುವ, ಭದ್ರಾವತಿಯು=ಭದ್ರಾವತೀನಗರದ,ಸಿರಿಗೆ= ಐಶ್ವರ್ಯಕ್ಕೆ,ತಲೆದೂಗುತ್ತ= ಮೆಚ್ಚಿಕೊಳ್ಳುತ್ತ, ವೃಕೋದರನು= ವಾಯುಸುತನಾದ ಭೀಮಸೇನನು, ಎಲೆ ವೃಷಕೇತು= ಅಯ್ಯಾ ವೃಷಧ್ವಜನೇ ! ಈ ಕೌತುಕವನು=ಈ ಅಚ್ಚರಿಯನ್ನು, ನೋಡಿದೈ= ಈಕ್ಷಿಸಿದೆಯಾ,ಈಗಳು= ಈಗ, ನಗರಂ= ಭದ್ರಾವತೀನಗರವು,ಎತ್ತಲುಂ= ಎಲ್ಲೆಡೆಗಳಲ್ಲಿಯೂ, ಗಗನದ= ಅಂತರಿಕ್ಷದ, ಎಡೆಗೆ= ಸಮೀಪಕ್ಕೆ, ಏಳ್ವ= ಎದ್ದು ಬರುವ, ಬಹು=ಅನೇಕವಾದ, ಯಾಗಧೂಮಂಗಳು= ಯಜ್ಞ ನಿಮಿತ್ತವಾದ ಧೂಮ್ರವು, ಎಂಬುವ=ಎಂದು ಹೇಳುವ, ಆಲೋಲ= ಸುಳಿದಾಡುತ್ತಿರುವ, ನೀಲ=ಕರ್ರಗಿರುವ,ಅಲಕಾವಳಿಯ= ಮುಂಗುರುಳಿನ ಸಾಲಿನ,ಚೆಲ್ವಿನಿಂದ=ಸೊಗಸಿನಿಂದ, ಮಹೀಲಲನೆಗೆ= ಧರೆ ಎಂಬ ನಾರೀಮಣಿಗೆ, ಆಸ್ಯಾಬ್ಜಂ= ವದನಾರವಿಂದವು, ಆಗಿರ್ಪುದು= ಆಗಿರುತ್ತದೆ. 


ತಾತ್ಪರ್ಯ :- ಈ ಪರ್ವತದ ಸೌಂದರ್ಯಾತಿಶಯವನ್ನು ನೋಡಿ ಸಂತಸಂತಾಳ್ದು ಅನಂತರದಲ್ಲಿ ಆ ಭೀಮ, ವೃಷಧ್ವಜ, ಮೇಘನಾದರು ಮೂವರೂ ಅದರ ಶಿಖರವನ್ನೇರಿದರು. ತರುವಾಯ ಆ ಪರ್ವತದ ಪೂರ್ವ ದಿಗ್ಭಾಗದಲ್ಲಿ ನೋಡಲಾಗಿ ಅಲ್ಲಿ ಯೌವನಾಶ್ವನಿಂದಾಳಲ್ಪಡುತ್ತಿರುವ ಭದ್ರಾವತೀನಗರಿಯು ಕಂಡಿತು. ಆಗ ಭೀಮಸೇನನು ಈ ಪುರದ ಸೌಂದರ್ಯವನ್ನು ನೋಡಿ ಆಶ್ಚರ್ಯಪಡುತ್ತ ಕರ್ಣಸುತನಾದ ವೃಷಧ್ವಜನನ್ನು ಕುರಿತು, ಎಲೈ ವೃಷಕೇತುವೇ ? ಈ ಪಟ್ಟಣದ ಸೌಂದರ್ಯವನ್ನು ನೋಡಿದೆಯಾ ! ಈ ಪುರಿಯು ಭೂಮಿಯೆಂಬ ಹೆಂಗಸಿನ ಮುಖಕಮಲವಾಗಿ ಮೇಲಕ್ಕೇಳುವ ಯಜ್ಞ ಸಂಬಂಧವಾದ ಧೂಮ್ರವೆಂಬ ಮುಂಗುರುಳಿನಿಂದ ಕೂಡಿ ಎಷ್ಟು ಸುಂದರವಾಗಿದೆ ನೋಡು. 


ಎನಿಸು ಜನಮಿರೂದೊಡಂ ತ್ರಿದಶಜನಕಾವಾಸ। 

ಮೆನಿಪುದಮರಾವತೀಪತ್ತನಂ ಮೂಜಗದೊ। 

ಳೆನಿಸು ಜಸವಡೆದೊಡಂ ಗುಹ್ಯಕಾಸ್ಪದಮೆನಿಪುದಳಕಾಪುರಂ ತಿಳಿವೊಡೆ॥ 

ಎನಿಸುಜನಮಿರಲೆನಿಸುಜಸವಡೆಯಲದರಿಂದೆ । 

ತನಗಿನಿಸು ಕುಂದಿಲ್ಲಮೆಂಬ ಪೆಂಪಿಂದೆ ಪುರ। 

 ವನಿತೆ ಗಹಗಹಿಸಿ ನಗುವಂತೆಸೆವ ಸೌಧಂಗಳ ಮೌರೀಚಿ ನೋಡೆಂದನು॥೧೫॥


ಪ್ರತಿಪದಾರ್ಥ:- ಅಮರಾವತೀಪಟ್ಟಣಂ= ಅಮರಾವತಿಯೆಂಬ ದೇವೇಂದ್ರನ ರಾಜಧಾನಿಯು, ಔನಿಸುಜನಂ= ಎಷ್ಟುಮಂದಿಯು, ಇರ್ದೊಡಂ= ಇದ್ದಾಗ್ಯೂಕೂಡ, ತ್ರಿದಶಜನಕೆ= ದೇವತೆಗಳಿಗೆ(ಹದಿಮೂರು) ಜನರಿಗೆ, ಆವಾಸ= ನೆಲೆಯಾದ, ಮೂಜಗದೊಳು= ತ್ರಿಲೋಕಂಗಳಲ್ಲಿಯೂ, ಅಳಕಾಪುರಂ= ಧನಪತಿಯಾದ ಕುಬೇರನಗರವೂ, ಎನಿಸು= ಎಷ್ಟು. ಜಸವಡೆದೊಡಂ= ಯಶ್ಸ್ಸನ್ನೊಂದಿದರೂ,ಗುಹ್ಯಕೆ= ಹೆಸರುವಾಸಿಗ( ಯಕ್ಷರೆಂಬವರಿಗೆ) ಆಸ್ಪದಂ=ಇಲ್ಲದ್ದಾಗಿದೆ, ಮತ್ತು ಆಸರೆಯಾಗಿದೆ, ತಿಳಿವೊಡೆ= ಯೋಚಿಸಿದರೆ, ಎನಿಸುಜನಂ= ಎಷ್ಟುಮಂದಿಯು, ಇರಲು=ಇದ್ದರೂ, ಎನಿಸು= ಎಷ್ಟು ಮಾತ್ರದ, ಜಸವೊಡೆಯಲು=ಯಶಸ್ಸನ್ನೈದಿದರೂ, ಗುಹ್ಯಕಾಸ್ಪದವೆಂಬ ನಾಮಧೇಯವು ಹೋಗಲಿಲ್ಲ. ಅದರಿಂದ= ಆದ ಕಾರಣ, ತನಿಗೆ= ನನಿಗೆ, ಇನಿಸು= ಸ್ವಲ್ಪವಾದರೂ, ಕುಂದು= ಭಾದಕವು, ಇಲ್ಲಂ=ಇರುವುದಿಲ್ಲ, ಎಂಬ = ಎನ್ನತಕ್ಕ, ಪೆಂಪಿಂದಂ= ಅಭಿವೃದ್ಧಿಯಿಂದ,ಪುರವನಿತೆ= ಭದ್ರಾವತಿಯೆಂಬ ನಗರಿಯು, ಗಹಗಹಿಸಿ ನಗುವಂತೆ= ಗೇಲಿಗೆಬ್ಬಿಸಿ ನಗುವಹಾಗೆ, ಎಸೆವ= ಹೊಳೆಯುವ, ಸೌಧಂಗಳ= ಮಹಡಿಗಳ, ಮರೀಚಿ= ಹೊಳಪನ್ನು, ನೋಡು= ಈಕ್ಷಿಸು, ಎಂದನು=

ಎಂಬುದಾಗಿ ಹೇಳಿದನು. 


ತಾತ್ಪರ್ಯ = ದೇವೇಂದ್ರನ ರಾಜಧಾನಿಯಾದ ಅಮರಾವತೀ ಪಟ್ಟಣದಲ್ಲಿ ಎಷ್ಟು ಜನವಿದ್ದರೂ ಕೂಡ, ಅದು ಸುರರಿಗೆ ಆಸರೆಯಾದ್ದೆಂದೂ, ಕುಬೇರನ ಅಳಕಾಪಟ್ಟಣವು ಎಷ್ಟು ಧನವಿದ್ದು ಪ್ರಸಿದ್ಧವಾಗಿದ್ದರೂ ಯಕ್ಷರಿಗೆ ಆಶ್ರಯವಾಗಿದೆ ಎಂದೂ ಈ ನಮ್ಮ ಪಟ್ಟಣದಲ್ಲಿ ಎಷ್ಟು ಪ್ರಜೆಗಳಿದ್ದರೂ ಎಷ್ಟು ಐಶ್ವರೂಯವಿದ್ದರೂಕೂಡಮತ್ಯಾರಿಗೂ ಆಶ್ರಯವಾದದ್ದು ಎಂದೆಂದಿಗೂ ಆಗುವುದಿಲ್ಲವೆಂಬ ಹೆಮ್ಮೆಯಿಂದ ಈ ಪುರವೆಂಬ ಸ್ತ್ರೀಯು ಅಮರಾವತೀ ಮತ್ತು ಅಳಕಾಪಟ್ಟಣಗಳನ್ನು ನೋಡಿ ಕೇಕೆ ಹಾಕಿಕೊಂಡು ಹಾಸ್ಯಮಾಡಿ ನಗುವಂತಿರ್ಪ ಎತ್ತರವಾದ ಉಪ್ಪರಿಗಿಗಳಿಂದ ಮೆರೆಯುವುದನ್ನು ನೋಡಿದೆಯಾ ? 


ಶ್ವೇತಾದ್ರಿಯಶಿಖರದೊಳ್ ಕಂಗೊಳಿಸುವುಜ್ಜ್ವಲ। 

ಜ್ಯೋತಿರ್ಲತೆಯೊ ಮೇಣು ಸಲ್ಲಲಿತ ಶುಭ್ರ ಜೀ। 

ಮೂತದೊಡ್ಡಿನ ಮೇಲೆ ಪೊಳೆವ ಸೌದಾಮಿನಿಯೊ ಶಿವನ ಮಸ್ತಕದೊಳೆಸೆವ॥ 

ಶೀತಾಂಶುರೇಖೆಯೋ ಬಗೆವೊಡೀನಗರದ ವಿ। 

ನೂತನ ಪ್ರಾಸಾದದಗ್ರದೊಳ್ ಸುಳಿವಂಬು। 

ಜಾತನಯನೆಯರ ತನುವಲ್ಲರಿಯ ಕಾಂತಿಯೋ ಕರ್ಣಸುತ ನೋಡೆಂದನು॥೧೬॥ 


ಪ್ರತಿಪದಾರ್ಥ:- ಶ್ವೇತಾದ್ರಿ= ಈಶ್ವರನಿಗೆ ನೆಲೆಯಾದ ಕೈಲಾಸಗಿರಿಯ, ಶಿಖರೊಳ್= ತುದಿಯಲ್ಲಿ,  ಕಂಗೊಳಿಸುವ=ಥಳಥಳಿ-

ಸುತ್ತಿರುವ, ಉಜ್ವಲ = ಬೆಳಗುತ್ತಿರುವ, ಜ್ಯೊತಿರ್ಲತೆಯೊ= ಕಾಂತಿವಿಶಿಷ್ಟವಾದ ಬಳ್ಳಿಯೊ, ಮೇಣ್= ಅದೂ ಅಲ್ಲದೆ, ಸಲ್ಲಲಿತ= ಅತಿಮನೋಹರವಾದ, ಜೀಮೂತದ= ಮೋಡಗಳ, ಒಡ್ಡಿನ= ಗುಂಪಿನ. ಮೇಲೆ= ಮೇಲ್ಗಡೆಯಲ್ಲಿ, ಪೊಳೆವ= ಥಳಥಳಿಸುವ, ಸೌದಾಮಿನಿಯೊ= ವಿದ್ಯುತ್ತೊ, ಶಿವನ= ಹರನ, ಮಸ್ತಕದೊಳ್=ಶೀರ್ಷದಲ್ಲಿ, ಎಸೆವ= ಹೊಳೆಯುತ್ತಿರುವ, ಶೀತಾಂಶುರೇಖೆಯೊ= ಇಂದುಲೇಖೆಯೊ, ಬಗೆವೊಡೆ= ಆಲೋಚಿಸಿದರೆ, ಈ ನಗರದ= ಈ ಪುರದ, ವಿನೂತನ= ನವೀನವಾದ, ಪ್ರಾಸಾದದ= ಮಹಡಿಗಳ, ಅಗ್ರದೊಳ್= ತುದಿಯಲ್ಲಿ, ಸುಳಿವ=ತಿರುಗಾಡುವ,ಅಂಬುಜಾತನಯನೆಯರ= 

ಪದ್ಮಪತ್ರಾಕ್ಷಿಯರ, ತನು=ಶರೀರವೆಂಬ, ವಲ್ಲರಿಯ= ಲತೆಯ, ಕಾಂತಿಯೊ= ಹೊಳಪೊ, ಕರ್ಣಸುತ= ಎಲೈ ಕರ್ಣತನುಜನಾದ ವೃಷಧ್ವಜನೆ, ನೋಡು=ಈಕ್ಷಿಸು. 


ತಾತ್ಪರ್ಯ:- ಈ ಪಟ್ಟಣವು ಕೈಲಾಸಪರ್ವತದಲ್ಲಿ ಥಳಥಳನೆ ಹೊಳೆಯುತ್ತಿರುವ ತೇಜಸ್ಸೆಂಬ ಬಳ್ಳಿಯೋ ಎಂಬಂತೆಯೂ, ಮೇಘಮಂಡಲದಲ್ಲಿ ಹೊಳೆಯುತ್ತಿರುವ ಮಿಂಚೆಂಬಂತೆಯೂ, ಈಶ್ವರನ ತಲೆಗೆ ಭೂಷಣವಾದ ಚಂದ್ರರೇಖೆಯೆಂಬಹಾ- 

ಗೂ, ಮತ್ತು ಈ ಪುರದ ಉಪ್ಪರಿಗೆಗಳ ಮೇಲ್ಗಡೆಯಲ್ಲಿ ಸಂಚರಿಸತಕ್ಕ ಕಮಲಮುಖಿಯರ ದೇಹಕಾಂತಿಯೋ ಎಂಬಂತೆಯೂ, ಎಂಥಾ ತೇಜೋವಿಶಿಷ್ಟಮಾಗಿದೆ.


ನಳನಳಿಪ ತರುಣತೆಯ ಸೊಂಪುವೆತ್ತರುಣತೆಯ । 

ತಳಿರಿಡಿದ ತೋರಣದ ಚೆಲ್ವನಾಂತೋರಣದ । 

ತೊಳಪ ಕಳಸದ ಗುಡಿಯ ಸಾಲ್ದಳೆದ ಕನ್ನಡಿಯ ಸೆಳೆಯ ಸೀಗುರಿ ಚಮರಿಯ॥ 

ಚಲಿತ ಲೀಲಾಸ್ಯದ ಪತಾಕೆಗಳ ಲಾಸ್ಯದ ಪ। 

ವಳದ ಮುತ್ತುಗಳ ಗೊಂಚಲ್ಗಳೊತ್ತುಗಳ ಗೊಂ। 

ದಳದ ಬಗೆ ಕಂಗಳಿಂಬಿಗೆ ಕೌತುಕಂಗಳಿಂ ಬೀದಿಗಳೊಳೆಸೆದಿರ್ಪುವು॥೧೭॥ 


ಪ್ರತಿಪದಾರ್ಥ :- ನಳನಳಿಪ= ಹೊಳೆಯುವ,  ತರುಣತೆಯ=ಯೌವನದ, ಸೊಂಪುವೆತ್ತ= ಮನೋಹರವಾಗಿರುವ, ಅರುಣತೆಯ= ರಕ್ತವರ್ಣವುಳ್ಳ,ತಳಿರು=ಪಲ್ಲವಗಳಿಂದ, ಇಡಿದ=ತುಂಬಿದ, ತೋರಣದ= ಬೀದಿಬಾಗಿಲಲ್ಲಿ ಕಟ್ಟಿರುವ ತೋರಣದ, ತೊಳಪ= ಹೊಳೆಯುತ್ತಿರುವ, ಕಲಶದ= ಕಲಶವುಳ್ಳ, ಗುಡಿಯ= ಮಂಟಪಗಳ ಎಂದರೆ ಸಣ್ಣ ಮನೆಗಳ, ಸಾಲ್ದಳೆದ= ಹಂತಿಯಾಗಿರುವ, ಕನ್ನಡಿಯ=ದರ್ಪಣದ, ಸಾಲ=ಸಾಲಿನ, ಸೀಗುರಿ= ರವಿಯ ಮತ್ತು ಇಂದುವಿನ ಪಾನಸಂಬಂಧವನ್ನೈದಿದ( ಸೂರೆಪಾನ) ಚಮರಿಯ=ಚಮರಿಯ, ಚಲಿತ=ಅಲ್ಲಾಡುತ್ತಿರುವ, ಲೀಲಾ= ಮನೋಹರವಾದ,  ಆಸ್ಯದ= ಮೋರೆಯುಳ್ಳ, ಪತಾಕೆಗಳ= ಬಾವಟಗಳ, ಲಾಸ್ಯದ= ನರ್ತನೆಯ, ಪವಳ= ಪ್ರವಾಳಂಗಳ, ಮುತ್ತುಗಳ= ಮುತ್ತಿನ ಮಣಿಗಳ, ಗೊಂಚಲುಗಳು= ಗುಚ್ಛಗಳು, ಒತ್ತುಗಳಲಿ= ದಟ್ಟವಾಗಿ ವ್ಯಾಪಿಸಿ, ಗೊಂದಳದ= ಜನಗಳ ಗುಂಪಿನ, ಬಗೆ=ತೆರನಾಗಿ, ಕಂಗಳ=ನಯನಂಗಳ, ಇಂಬಿಗೆ= ಮನೋಹರತ್ವಕ್ಕೆ, ಕೌತುಕಂಗಳಿಂ= ಅಚ್ಚರಿಗಳಿಂದ, ಬೀದಿಗಳೊಳು= ರಾಜಬೀದಿಗಳಲ್ಲಿ, ಎಸೆದಿರ್ಪವು= ಥಳಥಳಿಸುತ್ತಲಿರ್ಪವು. 


ಅಧಿಕ. ವಿಷಯ:- ಈ ಪಟ್ಟಣವು ಬಹು ಭಾಗ್ಯವುಳ್ಳದ್ದೆಂದು ತೋರ್ಪಡಿಸಲು ಈ ರೀತಿ ಹೇಳಿದೆಯಾದ್ದರಿಂದ ಇದನ್ನು ಅತಿಶಯೋಕ್ತ್ಯಲಂಕಾರವೆಂಬುದಾಗಿ ತಿಳಿಯಬೇಕು.


ತಾತ್ಪರ್ಯ:- ಆಗತಾನೆ ಚಿಗುರಿರುವುದರಿಂದ ಅತಿ ಕೆಂಪಾಗಿಯೂ ಮೃದುವಾಗಿಯೂ ಇರುವ ಚಂದಳಿರ್ಗಳ ತೋರಣಂಗಳೂ,ಥಳಥಳನೆ ಹೊಳೆಯುತ್ತಿರುವ ಕಲಶಂಗಳುಳ್ಳ ಮಂಟಪಗಳೂ, ಸಾಲಾಗಿಯೂ, ನೋಟಕರಿಗೆ ಪರಮಾನಂದವುಂಟಾಗುವಂತೆಯೂ ಕಟ್ಟಿರುವಕನ್ನಡಿಗಳೂ, ಸಣ್ಣ ಚಾಮರಂಗಳ ಚಲನೆಯೂ, ಬೃವಟಗಳ ಕುಣಿತವೂ, ಪ್ರವಾಳ ಮತ್ತು ಮುತ್ತುಗಳ ಗೊಂಚಲುಗಳೂ,ಬೀದಿಬೀದಿಗಳಲ್ಲೂ ಗುಂಪಗುಂಪಾಗಿ ನೆರೆದಿರುವ ಜನಸಮುದಾಯವೂ, 

ಹರ್ಷಾತಿಶಯವನ್ನುಂಟುಮಾಡುತ್ತಲೂ, ಮಹದೈಶ್ವರ್ಯವನ್ನು ಸೂಚಿಸುತ್ತಲೂ, ಇರುವುದು.


ಒತ್ತರಿಸಿದುನ್ನತ ಪ್ರಾಸಾದದಬಲೆಯರ। 

ವೃತ್ತವದನೇಂದು ಮಂದಸ್ಮೇರಚಂದ್ರಿಕೆಯೊ। 

ಳುತ್ತುಂಗ ದೇವಾಲಯದ ಗೋಪುರದ ಮಾಣಿಕದ ಕಲಶದೆಳವಿಸಿಲೊಳು॥ 

ಕತ್ತಲೆ ಪರಿವುದಲ್ಲದೀ ನಗರದೊಳ್ ಬೇರೆ।

 ಮತ್ತೆ ಸೋಮಾದಿತ್ಯ ಕಿರಣಂಗಳೈದುವೊಡೆ।

ಸುತ್ತಲುಂ ಮುಗಿಲ ಮುಟ್ಟಿದ ಕೋಟೆಗಳ ವಳಯವಣುಗ ನೋಡಚ್ಚರಿಯನು॥೧೮॥ 


ಒತ್ತರಿಸಿದ= ಸೇರಿರುವ, ಉನ್ನತ= ಎತ್ತರವಾದ, ಪ್ರಾಸಾದದ= ಉಪ್ಪರಿಗೆಗಳಲ್ಲಿರುವ, ಅಬಲೆಯರ= ನಾರಿಯರ, ವೃತ್ತ= ವರ್ತುಲಾಕಾರವಾದ, ವದನದ= ಆನನದ, ಸುಮಂದಸ್ಮೇರ= ಅರೆನಗೆಯೆಂಬ, ಚಂದ್ರಿಕೆಯೊಳು= ಇಂದುಕಿರಣಂಗಳಲ್ಲಿ, ಉತ್ತುಂಗ=ಎತ್ತರವಾದ, ದೇವಾಲಯ= ದೇವರ ಗುಡಿಗಳ, ಗೋಪುರದ= ಕಟ್ಟಕಡೆಯಲ್ಲಿರುವುದಾದ, ಮಾಣಿಕದ= ರತ್ನದ, ಕಲಶದ= ಸುವರ್ಣಕುಂಭಗಳ, ಎಳವಿಸಿಲೊಳು= ಬಾಲಸೂರ್ಯನ ಕಿರಣಗಳಿಂದ, ಈ ನಗರದೊಳು= ಈ ಪುರದಲ್ಲಿ, ಕತ್ತಲೆ= ತಮೋರಾಶಿಯು, ಪರ್ವುತಿದೆ= ಹೊರಟುಹೋಗುತ್ತಲಿದೆ, ಬೇರೆ= ಇದನ್ನು ಬಿಟ್ಟು, ಸೋಮ=ಇಂದುವಿನ, ಆದಿತ್ಯ= ರವಿಯ, ಕಿರಣಂಗಳು= ಕಿರಣಗಳು, ಐದುವಡೆ= ಸಮೀಪಕ್ಕೆ ಬರಲು, ಸುತ್ತಲುಂ= ಎಲ್ಲಾ ಕಡೆಯು, ಮುಗಿಲ= ಅಂತರಿಕ್ಷಮಾರ್ಗವನ್ನು, ಮುಟ್ಟಿದ= ಸೋಂಕುತ್ತಲಿರುವ, ಕೋಟೆಗಳ ವಲಯವು=ಕೋಟೆಗಳ ಆವರಣವು,(ಇರುವುದು) ಅಚ್ಚರಿಯನು= ಈ ಆಶ್ಚರ್ಯವನ್ನು, ನೋಡು= ಈಕ್ಷಿಸು, ಇದು ಉತ್ಪ್ರೇಕ್ಷೆಯು. 


ತಾತ್ಪರ್ಯ:- ಎಲೈ ಕರ್ಣನಂದನಾ! ಇನ್ನೂ ಈ ಪಟ್ಟಣದ ಭಾಗ್ಯವನ್ನು ತಿಳಿಸತ್ತೇನೆಕೇಳು, ಈ ನಗರದ ಸುತ್ತಲೂ ಬಲವಾಗಿಯೂ ಆಕಾಶವನ್ನು ಎಟುಕಿಸುವುದಾಗಿಯೂ ಇರುವ ಕೋಟೆಯು ಆವರಿಸಿಕೊಂಡು ಸೂರ್ಯ ಚಂದ್ರರ ಪ್ರವೇಶಕ್ಕೆ ತಡೆಯನ್ನುಂಟುಮಾಡಿದಾಗ್ಯೂ ಕೂಡಾ ಆ ಪುರದ ಉಪ್ಪರಿಗೆಗಳಲ್ಲಿರುವ ಪದ್ಮಮುಖಿಯರ ಮುಖವೆಂಬ ಚಂದ್ರನ ಮುಗುಳ್ನಗೆಯೆಂಬ ಬೆಳುದಿಂಗಳೂ, ಗೋಪುರಾಗ್ರಂಗಳಲ್ಲಿ ಮಿರುಮಿರುಗುತ್ತಿರ್ಪ ಕಲಶಂಗಳ ಪ್ರಭೆಯೆಂಬೆ- 

ಳೆವಿಸಿಲೂ ದಿವಾರಾತ್ರಿಗಳಲ್ಲಿಯೂ ಬೆಳಕನ್ನೀಯುತ್ತ ಅತ್ಯಾನಂದಕರವಾಗಿದೆ.


ಕುಸಿದು ಪಾತಾಳದೊಳಗಿರ್ದ ಪಲಕಾಲಮಂ। 

ದ್ವಿಸಹಸ್ರ ನಯನಂಗಳಿಂದೆ ನೋಡಿದೊಡೆ ಕಾ। 

ಣಿಸಿ ಕೊಳ್ಳದೀ ಪುರದಗಳ ಘಾತಮಿದನಜಂ ಬಲ್ಲನೋ ಕೇಳ್ವೆನೆಂದು॥ 

ಬಿಸಜಸಂಭವನ ಪೊರೆಗೆಂದಿಳೆಯನುಗಿದುಚ್ಚ। 

ಳಿಸಿ ಬಳೆದ ಫಣಿಪತಿಯ ಮಣಿವೆಡೆಯ ಸಾಲಿವೆನ। 

ಲೆಸೆವುವಾಗಸದೊಳೀ ಪೊಳಲ ಕೋಟೆಯ ರನ್ನದೆನೆಗಳೆಲ್ಲಾ ದೆಸೆಯೊಳು॥೧೯॥ 


ಪ್ರತಿಪದಾರ್ಥಂ:-ಪಲಕಾಲಮಂ= ಬಹುಕಾಲ, ಪಾತಾಳದೊಳಗೆ=ಅಧೋಲೋಕದಲ್ಲಿ, ಇರ್ದು= ಇರುವುದಾಗಿ, ಕುಸಿದು= ಬಾಗಿಹೋಗಿ, ದ್ವಿಸಹಸ್ರನಯನಂಗಳಿಂದ= ಎರಡು ಸಾವಿರ ನೇತ್ರಗಳಿಂದ, ನೋಡಿದೊಡೆ= ಈಕ್ಷಿಸಿದರೂ, ಈ ಪುರದ= ಈ ನಗರದ, ಅಗಳ= ಕಂದಕದ, ಘಾತಂ= ಆಳವು, ಕಾಣಿಸಿಕೊಳ್ಳದು= ಗೋಚರಿಸುವುದಿಲ್ಲ, ಇದನು= ಈ ಕಂದಕದ ಆಳವನ್ನು

ಅಜಂ= ವಿರಂಚಿಯು, ಬಲ್ಲನೋ=ಅರಿತಿರುವನೊ, ಕೇಳ್ವೆನು= ಕೇಳುತ್ತೇನೆ, ಎಂದು=ಎಂಬುದಾಗಿ, ಬಿಸಜಸಂಭವನ= ಕಮಲದಲ್ಲಿ ಹುಟ್ಟಿದ ಬ್ರಹ್ಮನ, ಪುರಿಗೆ= ನಗರಕ್ಕೆ, ಎಂದು ಎಂಬುದಾಗಿ, ಇಳೆಯನು=ಧರಾಮಂಡಲವನ್ನು, ಉಗಿದು= ಭೇದಿಸಿಕೊಂಡು, ಉಚ್ಚಳಿಸಿ= ಮೇಲ್ಗಡೆಗೆ ಬಂದು, ಬೆಳೆದ= ಬೆಳೆದಿರುವಂಥ, ಫಣಿಪತಿಯ = ಸರ್ಪರಾಜನ, ಮಣಿವೆಡೆಯ= ರತ್ನಗರ್ಭಿತವಾದ ಹೆಡೆಗಳ, ಸಾಲು= ಹಂತಿಯು, ಇವು=ಇವುಗಳು, ಎನಲು= ಎಂಬಂತೆ, ಆಗಸದೊಳು= ಅಂತರಿಕ್ಷದಲ್ಲಿ, ಈ ಪೊಳಲ= ಈ ಪಟ್ಟಣದ, ಕೋಟೆಯ= ಆವರಣದ, ರನ್ನದೆನೆಗಳು=ರನ್ನಮಯವಾದ ತೆನೆಗಳು, ಎಲ್ಲಾ ದೆಸೆಯೊಳು= ಸಮಸ್ತ ದಿಗ್ಭಾಗಗಳಲ್ಲಿಯೂ, ಎಸೆವುದು= ಥಳಥಳಿಸುತ್ತಿದೆ.


ತಾತ್ಪರ್ಯ:- ಮತ್ತು ಪಾತಾಳಲೋಕದವರೆಗೂ ಬಗ್ಗಿ ಎರಡು ಸಹಸ್ರ ಕಣ್ಣುಗಳನ್ನಿಟ್ಟುಕೊಂಡು ಪರೀಕ್ಷಿಸಿ ನೋಡಿದರೂ ಕೂಡ ಈ ಕೋಟೆಯ ಆಳವನ್ನು ತಿಳಿಯಲಾರದೆ ಮತ್ತೆ ಭೂಮಿಯನ್ನು ಭೇದಿಸಿಕೊಂಡು ಮೇಲಕ್ಕೆದ್ದು ಬಂದು ಸೃಷ್ಟಿಕರ್ತನಾದ ಕಮಲಸಂಭವನೆಡೆಗೆ ಹೋಗಿ ಈ ಕೋಟೆಯ ಆಳವೆಷ್ಟಿದೆಯೋ ಕೇಳಿ ಬರುವೆನೆಂದು ಹೋಗುತ್ತೆರುವಂತೆ- 

ಯೂ, ಆದಿಶೇಷನ ರತ್ನ ಸಹಿತವಾದ ಹೆಡೆಗಳೆಂಬಂತೆಯೂ ಇರೈವ ರತ್ನಖಚಿತವಾದ ಕೋಟೆಯ ಪ್ರಾಕಾರದ ತೆನೆಗಳು ಕಾಣಬರುತ್ತ ಜನರಿಗೆ ಎಷ್ಟು ಆನಂದದಾಯಕಂಗಳಾಗಿ ಭಾಗ್ಯಾತಿಶಯಸೂಚಕಂಗಳಾಗಿವೆ.


ವಾಯುಪಾಶಂ ಪರಿಯೆ ಧರೆಗುರುಳ್ದಪೆವಿದಕು। 

ಪಾಯಮಿನ್ನೇನೆಂದು ನವರತ್ನ ಖಚಿತ ಕಮ। 

ನೀಯ ಕಾಂಚನಮಯೋತ್ಪನ್ನ ದೃಢಪ್ರಾಕಾರದೊತ್ತುಗೊಂಡಲ್ಲಲ್ಲಿಗೆ ।

ದಾಯ ಮಿಗೆ ನಿಲಿಸಿದರೊ ಖೇಚರರ್ ತಮ್ಮಶೋ।

ಭಾಯಮಾನಾಲಯಂಗಳನೆನಲ್ ಕಣ್ಗೆ ರಮ। 

ಣೀಯವಾಗಿವೆ ಕರ್ಣತನಯ ನೋಡೀಪುರದ ಮುಗಿಲಟ್ಟಳೆಯ ಸಾಲ್ಗಳು॥೨೦॥


ಪ್ರತಿಪದಾರ್ಥ:- ಕರ್ಣತನಯ= ಎಲೈ ವೃಷಧ್ವಜನೇ? ವಾಯು = ಗಾಳಿಯೆಂಬ, ವಾಶಂ=ಹುರಿಯು, ಪರಿಯೆ= ಕಡಿದುಹೋಗಲು, ಧರೆಗೆ= ಇಳೆಗೆ, ಉರುಳ್ದಪೆವು= ಹೊರಳುವೆವು, ಇದಕೆ= ಈ ಕಾರ್ಯಕ್ಕೆ, ಉಪಾಯಂ=ಚಮತ್ಕಾರವು,

(ಚಾತುರ್ಯವು), ಇನ್ನು, ಏನೆಂದು= ಏನಿರುವುದೆಂಬುದಾಗಿ,ನವರತ್ನಖಚಿತ= ವಜ್ರ, ವೈಡೂರ್ಯ, ಗೋಮೇಧಿಕ, ಪುಷ್ಯರಾಗ, ಮರಕತ, ಮಾಣಿಕ್ಯ, ಮುತ್ತು, ಹವಳ, ನೀಲಗಳೆಂಬ ಒಂಬತ್ತು ರತ್ನ ವಿಶೇಷಗಳಿಂದ ಕೆತ್ತಿದ, ಕಮನೀಯ= ಮನೋರಂಜಕವಾದ,  ಕಾಂಚನಮಯ= ಸುವರ್ಣಮಯವಾದ, ಉನ್ನತ= ಎತ್ತರವಾದ, ದೃಢ=ಬಲವಾದ, ಪ್ರಾಕಾರ= ಆವರಣದಿಂದ, ಒತ್ತುಗೊಂಡ= ದಟ್ಟವಾಗಿಸೇರಿ, ಅಲ್ಲಿಗಲ್ಲಿಗೆ= ಅಷ್ಟಷ್ಟು ಸ್ಥಳಕ್ಕೆ, ಖೇಚರರು= ಸುರರು, ತಮ್ಮ=ತಮ್ಮಗಳ,

ಶೋಭಾನಮಾಯ= ಹೊಳೆಯುತ್ತಿರುವ,ಆಲಯಂಗಳನು= ಸ್ಥಾನಂಗಳನ್ನು, ದಾಯಮಿಗೆ= ಹೋಲಿಕೆಗೆ ಸರಿಯಾಗಿ, ನಿಲಿಸಿದರೊ= ನಿಲ್ಲುವಂತೆ ಎಸಗಿದರೊ, ಎನಲು= ಎಂಬಂತೆ, ಕರ್ಣತನಯ= ಕರ್ಣತನಯನಾದ ವೃಷಧ್ವಜನೇ ? ರಮಣೀಯಮಾಗಿ= ಬಹುಚೆಲ್ವಾಗಿ,ಇದೆ=ಇರುವುದು, ಈ ಪುರದ= ಈ ನಗರದ, ಮುಗಿಲ= ಅಂತರಿಕ್ಷವನ್ನೈದುತ್ತಿರು, ಅಟ್ಟಲೆಯ= ಬುರುಜುಗಳ,ಸಾಲ್ಗಳ= ಶ್ರೇಣಿಗಳನ್ನು, ನೋಡು=ಈಕ್ಷಿಸು. 


ತಾತ್ಪರ್ಯ :- ಎಂಬುದಾಗಿ ಹೇಳುತ್ತ ಮತ್ತೆ ವೃಷಕೇತುವನ್ನು ಕುರಿತು, ಅಯ್ಯಾ ಕರ್ಣತನುಜನೇ ಕೇಳು, ಗಾಳಿ ಎಂಬ ಹಗ್ಗವು ಕಡಿದುಶಬಿದ್ದರೆ ಕೆಳಗೆ ಉರುಳದಿರಬೇಕೆಂದು ನವರತ್ನ ಖಚಿತವಾಗಿಯೂ, ಹೃದಯಾಹ್ಲಾದಕರವಾಗಿಯೂ,ಸ್ವರ್ಣಮಯ-

ವಾಗಿಯೂ, ಬಲವಾಗಿಯೂ ಇರುವ ಸುತ್ತುಗಟ್ಟುಗಳಿಂದ ಕೂಡಿ, ಸುರರೆಲ್ಲರೂ ತಮ್ಮತಮ್ಮ ಕೋರಿಕೆಗೆ ಸರಿಯಾಗಿ ಅಲ್ಲಲ್ಲಿ ನಿವಾಸಸ್ಥಾನಗಳನ್ನು ಮಾಡಿಕೊಂಡಿರುವರೋ ಎಂಬಂತೆಯೂ ಎಟಕಿಸಿಕೊಳ್ಳುವಹಾಗೆ ಇದೆಯೋ ಎಂಬಂತೆಯೂ ಅತ್ಯುನ್ನತಗಳಾಗಿರುವ ಈಶನಗರದ ಕೋಟೆಯ ಬುರುಜುಗಳ ಸೌಂದರ್ಯವು ವರ್ಣಿಸಲಸದಳಮಾಗಿರ್ಪುದು. 


 

ಬುಧವಾರ, ಮೇ 21, 2025

ಜೈಮಿನಿ ಭಾರತ 2 - ದೊಡ್ಡಬೆಲೆ ನಾರಾಯಣಶಾಸ್ತ್ರಿ

ಜೈಮಿನಿ ಭಾರತ, ಭಾಗ೨, 


ಎರಡನೆಯ ಸಂಧಿ.


ಸೂಚನೆ ॥ ರಾಜೇಂದ್ರ ಧರ್ಮತನಯಂ ಬಾದರಾಯಣನ। 

ವಾಜಿಮೇಧಾಧ್ವರದ ವಿಧಾನಮಂ ಕೇಳ್ದು ಪಂ। 

ಕೇಜಪತ್ರೇಕ್ಷಣನ ಮತವಿಡಿದು ಕಳುಹಿದಂ ಕುದುರೆಗೆ ವೃಕೋದರನನು॥ 


ರಾಜೇಂದ್ರ= ರಾಜಾಧಾರಾಜನಾದ, ಧರ್ಮತನಯಂ=ಯುಧಿಷ್ಠಿರನು, ಬಾದರಾಯಣನ= ವ್ಯಾಸಮುನೀಶ್ವರನನ್ನು, ವೃಜಿಮೇಧ= ಅಶ್ವಮೇಧವೆಂಬ ಹೆಸರುಳ್ಳ, ಅಧ್ವರ=ಯಾಗದ, ವಿಧಾನಮಂ= ರೀತಿಯನ್ನು, ಕೇಳ್ದು=ಕೇಳಿ, ಪಂಕೇಜ=ತಾವರೆ ಹೂವಿನ, ಪತ್ರ= ದಳಗಳಂತಿರುವ, ಈಕ್ಷಣನ= ನೇತ್ರಗಳುಳ್ಳ, ಕೃಷ್ಣಸ್ವಾಮಿಯ, ಮತವ= ಅಭಿಪ್ರಾಯವನ್ನು ,ಇಡಿದು=ತಾಳಿ, ಕುದುರೆಗೆ= ಅಶ್ವಮೇಧಯಾಗಕ್ಕೆ ಅವಶ್ಯಕವಾದ ಕುದುರೆಗೋಸ್ಕರ, ವೃಕೋದರನನು= 

ಭೀಮಸೇನನನ್ನು, ಕಳುಹಿದಂ= ಕಳುಹಿಸಿದನು.


ವೃಕೋದರ, ರಾಜೇಂದ್ರ, ಪತ್ರೇಕ್ಷಣ, ( ಗುಣಸಂಧಿ) 

ಧರ್ಮ= ಯಮನ, ತನಯಂ=ಪುತ್ರನು (ಯುಧಿಷ್ಠಿರನು )ವೃಕ= ತೋಳದ ಹೊಟ್ಟೆಯಂತೆ, ಉದರಂ= ಹೊಟ್ಟೆಯುಳ್ಳವನು, 

(ಭೀಮನ ಹೊಟ್ಟೆಯಲ್ಲಿರುವ ಅಗ್ನಿಗೆ ವೃಕವೆಂದು ಹೆಸರು) 

ಬದರ= ಎಲಚೀ ಹಣ್ಣುಳ್ಳ ಕಾಡೇ, ಅಯನಂ= ವಾಸಸ್ಥಾನವಾಗಿ ಉಳ್ಳವನು. 

"ಧರ್ಮತನಯಂ ವೃಕೋದರನನ್ನುಕಳುಹಿದಂ" ಎಂಬುದು ಸಕರ್ಮಕ ಕರ್ತರೀವಾಕ್ಯವು. 


ವನರುಹ ಭವಾಂಡದೊಳಗೈವತ್ತು ಕೋಟಿ ಯೋ 

ಜನದ ವಿಸ್ತೀರ್ಣದಿಳೆಯಂ ಸಪ್ತಶರನಿಧಿಗ। 

ಳನುವೇಷ್ಟಿಸಿರಲದರ ಮಧ್ಯದೊಳಗಿಹುದು ಜಂಬೂದ್ವೀಪಮದರ ನಡುವೆ॥ 

ಅನವರತ ಸರಸ ಗೋಷ್ಠಿಗೆ ನೆರೆದ ನಿರ್ಜರಾಂ। 

ಗನೆಯರಂಗಚ್ಛವಿಯ ಹಬ್ಬುಗೆಯೊ ಕಾರಮಿಂ। 

ಚಿನ ಮಹಾರಾಶಿಯೋ ಪೇಳೆನಲ್ ಮೆರೆವ ಕನಕಾಚಲಂ ಕಣ್ಗೆಸೆದುದು॥೧॥ 


ಪ್ರತಿಪದಾರ್ಥ:- ವನರುಹಭವಾಂಡದೊಳಗು= ವನ=ನೀರಿನಲ್ಲಿ, ರುಹ=ಹುಟ್ಟಿದ್ದು, (ಕಮಲ) ವನರುಹ=ಕಮಲದಹಾಗೆ ಇರುವ ವಿಷ್ಣುವಿನ ನಾಭಿಯಲ್ಲಿ, ಭವ=ಹುಟ್ಟಿದವನು,( ಬ್ರಹ್ಮ) ವನರುಹಭವ=ಅಂಥ ಪರಮಾತ್ಮನ ಪುತ್ರನಾದ ಬ್ರಹ್ಮದೇವರ,ಅಂಡದೊಳಗೆ= ಹೊಟ್ಟೆಯಲ್ಲಿ  ಅಂದರೆಬ್ರಹ್ಮಾಂಡದಲ್ಲಿ, ಐವತ್ತು ಕೋಟಿ=ಪಂಚಾಶತ್ಕೋಟಿಯಷ್ಟು     , ವೀಸ್ತೀರ್ಣವಾದ,( ಅಗಲವಾದ ) ಇಳೆಯಂ= ಧರಾಮಂಡಲವನ್ನು, ಸಪ್ತಶರನಿಧಿಗಳು= ಲವಣ, ಇಕ್ಷು, ಸುರಾ, ಸರ್ಪಿ, ದಧಿ, ಕ್ಷೀರ, ಜಲಗಳಿಂದ ಕೂಡಿದ ಏಳು ಸಮುದ್ರಗಳಿಂದ ಕೂಡಿದ, ಅನುವೇಷ್ಟಿಸಿ= ಋವೃತಮಾಗಿ, ( ಸುತ್ತಿಕೊಂಡು ) ಇರಲು=ಎರಲಾಗಿ, ಅದರ= ಆ ಜಂಬೂದ್ವೀಪದ, (ಆ ಸಮುದ್ರಗಳ ) ನಡುವೆ= ಮಧ್ಯಪ್ರದೇಶದಲ್ಲಿ, ಅನವರತ= ಸರ್ವದಾ

ಸುರತಗೋಷ್ಠಿಗೆ= ಕೇಳೀವಿಳಾಸಕ್ಕೆ, ನೆರೆದ= ಸೇರಿಕೊಂಡಿರುವ, ನಿರ್ಜರಾಂಗನೆಯರ= ದೇವಾಂಗನೆಯರ,ಅಂಗ=ಶರೀರದ

ಛವೆ= ಹೊಳಪಿನ, ಹಬ್ಬುಗೆಯೊ= ಗುಂಪೊ, ಕಾರ್ಮಿಂಚಿನ= ವರ್ಷಾಕಾಲದ ಮಿಂಚಿನ, ಮಹಾರಾಶಿಯೊ= ಅಗಾಧವೃದ ಗುಂಪೊ, ಪೇಳ್=ಹೇಳೆಂಬುದಾಗಿ, ಮೆರೆವ= ಹೊಳೆಯುತ್ತಿರುವ, ಕನಕಾಚಲಂ= ಸುವರ್ಣಗಿರೆಯು, ಕಣ್ಗೆ= ಕಣ್ಣುಗಳಿಗೆ, ಎಸೆದುದು= ಪ್ರಕಾಶಮಾನವಾಗಿ ತೋರುತ್ತಿತ್ತು. 


" ಕನಕಾಚಲಂ ಎಸೆದುದು= ಇದು ಅಕರ್ಮಕ ಕರ್ತರಿ ವಾಕ್ಯ. 


ಶ್ರೀಮನ್ನಾರಾಯಣಮೂರ್ತಿಯ ವಕ್ಷಸ್ಥಳದಡಿಯೊಳಿರುವ ನಾಭಿಕಮಲದಲ್ಲಿ ಜನಿಸಿ ಬ್ರಹ್ಮಾಂಡನಾಯಕನಾಗಿರುವ ಕಮಲಾಸನನಿಗೆಸೇರಿದ ಧರ್ಮಂಡಲದಲ್ಲಿ ಏಳು ಸಮುದ್ರಗಳನ್ನೂ ಆವರಣವಾಗಿ ಮಾಡಿಕೊಂಡಿರುವ, ಪಂಚಾಶತ್ಕೋಟಿ

ವಿಸ್ತೇರ್ಣವನ್ನೊಳಕೊಂಡಿರತಕ್ಕ, ಜಂಬೂದ್ವೀಪವೆಂಬ ನಾಮಧೇಯವುಳ್ಳ ಒಂದು ದ್ವೀಪವುಂಟು. ಆ ದ್ವೀಪದ ಮಧ್ಯಭಾಗದಲ್ಲಿ ಸುರಾಂಗನೆಯರ ದೇಹದ ಹೊಳಪೆಂಬಂತೆಯೂ, ವರ್ಷಋತುವಿನಲ್ಲಿ ಉಂಟಾಗುವ ನೇಲಮೇಘವೆಂ-

ಬಂತೆಯೂ, ಭ್ರಾಂತಿಗೆಯ್ಯುತ್ತೆರುವ ಸುವರ್ಣಗಿರೆಯೆಂಬ ಒಂದಾನೊಂದು ಪರ್ವತವುಂಟು,


ಆ ಕನಕ ಗಿರಿಯ ತೆಂಕಣ ದಿಸೆಯೊಳಿರ್ಪುದು ಸು। 

ಧಾಕರಕುಲದ ನೃಪರ ಸಾಮ್ರಾಜ್ಯ ಪಟ್ಟಾಭಿ।

ಷೇಕ ವಿಸ್ತರದಿಂ ಜಸಂಬಡೆದ ಹಸ್ತಿನಾಪುರಮಲ್ಲಿಗರಸೆನಿಸೆನಿಸೈವ॥ 

ಭೂಕಾಂತ ಜನಮೇಜಯ ಮಹಾಭಾರತ ಕ। 

ಥಾ ಕೌತುಕದೊಳಾಶ್ವಮೇಧಿಕವನೊಲವಿನಿಂ। 

ದೇಕಮಾನಸನಾಗಿ ಜೈಮಿನಿ ಮುಶೀಂದ್ರನಂ ಬೆಸಗೊಂಡನೀ ತೆರದೊಳು॥೨॥


ಪ್ರತಿಪದಾರ್ಥ:- ಆ ಕನಕಗಿರಿಯ= ಭಂಗಾರದ ರೂಪವಾಗಿರುವ ಆ ಮೇರುಪರ್ವತದ, ತೆಂಕಣದೆಸೆಯೊಳು= ದಕ್ಷಿಣದಿಕ್ಕಿನಲ್ಲಿ, ಸುಧಾಕರನ= ಹಿಮಕರನ. ಕುಲದ= ಸಂತತಿಯಲ್ಲಿ ಹುಟ್ಟಿದ, ನೃಪರ= ರಾಜರ, ಸಾಮ್ರಾಜ್ಯ = ದೊರೆತನದ

ಪಟ್ಟಾಭಿಷೇಕ = ಪಟ್ಟವನ್ನು ಕಟ್ಟತಕ್ಕ, ವಿಸ್ತರದಿಂ = ವಿಶಾಲತೆಯಿಂದ, ಜಸಂಬಡೆದ= ಕೀರ್ತಿಯನ್ನು ತಾಳಿದ, ಹಸ್ತಿನಾಪುರಂ= ಹಸ್ತಿ ನಾಮಕವಾದ ಪುರವು, ಇರ್ಪುದು= ಇದೆ, ಅಲ್ಲಿಗೆ= ಆ ಪಟ್ಟಣಕ್ಕೆ, ಅರಸು= ರಾಜನು, ಎನಿಸುವ= ಎನ್ನಿಸಿಕೊಳ್ಳುವ, ಭೂಕಾಂತ= ಪೃಥ್ವೀಶ್ವರನಾದ, ಜನಮೇಜಯಂ= ಜನಮೇಯನೆಂಬ ಅರಸು, ಮಹಾಭಾರತ= ಭಾರತದ, ಕಥಾ= ಕತೆಯನ್ನು ಕೇಳಬೇಕೆಂಬ, ಕೌತುಕದೊಳು= ಕುತೂಹಲದಿಂದ,  ಅಶ್ವಮೇಧಿಕವನು= ಅಶ್ವಮೇಧಪರ್ವದ ಕಥೆಯನ್ನು,  ಏಕಮಾನಸನಾಗಿ= ಒಂದೇಮನಸ್ಸಿನಿಂದ, ಜೈಮಿನಿಮುನೀಂದ್ರನಂ= ಋಷಿವರ್ಯನಾದ ಜೈಮಿನಿಋಷಿಯ- 

ನ್ನು, ಈ ತೆರದೊಳು= ಮುಂದೆ ಹೇಳುವ ಪ್ರಕಾರವಾಗಿ, ಒಲವಿನಿ= ಪ್ರೀತಿಯಿಂದ, ಬೆಸಗೊಂಡನು= ಕೇಳಿದನು, 


ತಾತ್ಪರ್ಯ:- ಆ ಪರ್ವತದ ದಕ್ಷಿಣದಿಗ್ಭಾಗದಲ್ಲಿರುವ, ಹಸ್ತಿನಾವತಿಯೆಂಬ ಪಟ್ಟಣವನ್ನು ಚಂದ್ರವಂಶೀಯ ಸಾರ್ವಭೌಮರು ಅನೂಚಾನವಾಗಿ ರಾಜಧಾನಿಯನ್ನಾಗಿ ಮಾಡಿಕೊಂಡು, ಸುಖವಾಗಿ ರಾಜ್ಯಪರಿಪಾಲನೆಯನ್ನು ಮಾಡುತ್ತಿದ್ದರು. ಈ ಪಟ್ಟಣದಲ್ಲಿ ಜನಮೇಜಯನೆಂಬೊರ್ವರಾಯನು ಆಳುತ್ತಿರವಾಗ ಅಲೂಲಿಗೆ ಒಂದಾನೊಂದು ಕಾಲದಲ್ಲಿ ವ್ಯಾಸರುಷಿಗಳ ಶಿಷ್ಯನಾದ ಜೈಮಿನಿ ಎಂಬ ರುಷೀಶ್ವರನು ಬಂದನು. ಜನಮೇಜಯನು ಆತನನ್ನು ಕುರಿತು- 


ಪಿಂತೆ ಕೌರವಜಯಂ ತಮಗೆ ಕೈಸಾರ್ದ ಸಮ। 

ನಂತರದೊಳಾದ ಸಾಮ್ರಾಜ್ಯದೊಳ್ ಪಾಂಡವರ। 

ದೆಂತಿಳೆಯನೋವಿದರದೇಗೆಯ್ದರೆಂದು ಜನಮೇಜಯ ಮಹೀಪಾಲನು॥ 

ಸಂತಸಂದಳೆದು ಜೈಮಿನಿ ಮುನಿಪನಂ ಕೇಳ್ದೊ। 

ಡಿಂತವಂ ಪೇಳ್ದನಾ ಭೂಪಂಗೆ ಸಕಲ ಜನ। 

ಸಂತತಿಗೆ ಕರ್ಣಾವತಂಸಮೆನೆ ರಂಜಿಸುವ ಮಧುರತರ ಸತ್ಕಥೆಯನು॥೩॥ 


ಪ್ರತಿಪದಾರ್ಥ:- ಪಿಂತೆ= ಪೂರ್ವಕಾಲದಲ್ಲಿ, ತಮಗೆ= ತಮಗೆ (ಪಾಂಡವರಿಗೆ), ಕೌರವಜಯಂ= ಕುರುವಂಶೋತ್ಪನ್ನರಾದ ದುರ್ಯೋಧನನೇ ಮೊದಲಾದವರನ್ನುಗೆಲ್ಲುವಿಕೆಯು, ಕೈಸಾರ್ದ= ನೆರವೇರಿದ, ಸಮನಂತರದೊಳ್= ತರುವಾಯ, ಆದ= ಲಭಿಸಿದ, ಸಾಮ್ರಾಜ್ಯದೊಳ್= ರಾಜ್ಯವೈಭವದಲ್ಲಿ, ಪಾಂಡವರು = ಯುಧಿಷ್ಠಿರಾದಿಗಳು, ಅದೆಂತು= ಅದುಹೇಗೆ, ಇಳೆಯನು = ರಾಜ್ಯವನ್ನು, ಓವಿದರು= ಆಳಿದರು, ಅದೇಗೈದರು= ಏನಮಾಡಿದರು, ಎಂದು= ಎಂಬತೆರನಾಗಿ, ಜನಮೇಜಯಮಹೀಪಾಲಂ= ಜನಮೇಜಯನೆಂಬರಾಯನು, ಸಂತಸಂದಳೆದು= ಋನಂದದಿಂದ ಕೂಡಿ, ಜೈಮಿನಿ= ಜೈಮಿನಿಯೆಂಬ, ಮುನಿಪನಂ= ಋಷಿವರ್ಯನನ್ನು, ಕೇಳ್ದೊಡೆ= ಪ್ರಶ್ನೆಮಾಡಲಾಗಿ, ಅವಂ= ಆ ರುಷೀಶ್ವರನು, ಇಂತು= ಮುಂದೆ ಹೇಳುವ ರೀತಿಯಾಗಿ, ಆ ಭೂಪಂಗೆ= ದೊರೆಯಾದ ಜನಮೇಜಯನಿಗೆ, ಕರ್ಣಾವತಂಸಂ= ಕಿವಿಗಿಂಪಾಗಿದೆ, ಎನೆ= ಎಂಬಂತೆ, ಮಧುರತರ= ಅತಿ ಮಧುರ ರಸಭರಿತವಾದ,  ಭಾರತದ= ಭರತಕುಲದಲ್ಲಿ ಜನಿಸಿದ ಅರಸುಗಳ, ಸತ್ಕಥೆಯನು= ಸಚ್ಚರಿತ್ರೆಯನ್ನು, ಪೇಳ್ದನು=ಬೋಧಿಸಿದನು. 


ತಾತ್ಪರ್ಯ:- ಎಲೈ ಋಷಿಗಳೆ ! ಪೂರ್ವದಲ್ಲಿ ಪಾಂಡುಪುತ್ರರಾದ ಧರ್ಮಾದಿಗಳು ಧಾರ್ತರಾಷ್ಪ್ರರನ್ನು ಗೆದ್ದು ರಾಜ್ಯಮಂ ಪಾಲಿಸುತ್ತಿರುವಾಗ ಅವರು ಯಾವ ಯಾವ ಕೃರ್ಯಗಳನ್ನು ಮಾಡಿದರು ? ಇದನ್ನೆಲ್ಲಾ ಹೇಳಬೇಕೆಂದು ಪ್ರಾರ್ಥಿಸಲಾಗಿ ಜೈಮಿನಿ ರುಷಿಗಳು ಜನಮೇಜಯರಾಜನಿಗೆ ಮಹಾಭಾರತದ ಕಥೆಯನ್ನು ಮುಂದೆ ಹೇಳುವ ರೀತಿಯಾಗಿ ಕಿವಿಗಿಂಪಾಗಿರುವಂತೆ ಹೇಳುತ್ತಾರೆ. 


ಕೇಳೆಲೆ ನೃಪಾಲ ಪಾಂಡವರ ಕಥೆಯಿದು ಪುಣ್ಯ।

ದೇಳಿಗೆಯಲಾ ಸುಯೋಧನ ಮೇದಿನೀಶನಂ। 

ಕಾಳಗದೊಳುರೆ ಗೆಲ್ದಬಳಿಕ ವರ ಹಸ್ತಿನಾಪುರದ ನಿಜ ಸಾಮ್ರಾಜ್ಯದ ॥ 

ಬಾಳಿಕೆಯನನುಜರಿಂದೊಡಗೂಡಿ ಧರ್ಮಜಂ। 

ತಾಳಿದಂ ಭರತ ನಳ ನಹುಷಾದಿ ರಾಯರನ। 

ಪೇಳುವೊಡವರ್ಗಿನಿತು ಗುಣಮಿಲ್ಲಮೆಂದು ಭೂಮಂಡಲಂ ಕೊಂಡಾಡಲು॥೪॥ 


ಪ್ರತಿಪದಾರ್ಥ:- ಎಲೆನೃಪಾಲ= ಅಯ್ಯಾ ಜನಮೇಜಯನೆ, ಕೇಳು= ಲಾಲಿಸು, ಇದು= ಈಗ ಹೇಳಲ್ಪಡುವುದು, ಪಾಂಡವರ ಕಥೆ= ಯುಧಿಷ್ಠಿರಾದಿಗಳ ಚರಿತ್ರೆಯು, ಪುಣ್ಯದ= ಪುಣ್ಯಾತಿಶಯದಿಂದ ಲಭಿಸಿದ, ಏಳಿಗೆಯಲಾ= ಮೇಲ್ಮೆಯಲ್ಲವೆ, ಆ ಸುಯೋಧನ= ಕುರುವಂಶಜನಾದ ದುರ್ಯೋಧನನೆಂಬ ಅರಸನನ್ನು, ಕಾಳಗದೊಳು= ರಣರಂಗದಲ್ಲಿ,  ಉರೆ= ಹೆಚ್ಚಾಗಿ, ಗೆಲೂದಬಳಿಕ= ಜಯಿಸಿದ ಮೇಲೆ, ವರ= ಉತ್ತಮವಾದ,  ಹಸ್ತಿನಾಪುರದ = ಹಸ್ತಿನಾವತಿ ನಗರಿಯ, ನಿಜ=ಸ್ವಕೀಯವಾದ

ಸಾಮ್ರಾಜ್ಯದ = ಒಡೆತನದ, ಬಾಳಿಕೆಯನು= ಇರುವಿಕೆಯನ್ನು (ಸಂಪತ್ತನ್ನು) ಅನುಜರಿಂದ= ಭೀಮಾರ್ಜುನಾದಿಗಳಾದ ಸಹೋದರರಿಂದ, ಒಡಗೂಡಿ= ಜತೆಯಲ್ಲಿದ್ದುಕೊಂಡು, ಧರ್ಮಜಂ= ಧರ್ಮಸ್ವರೂಪನಾದ ಯೈಧಿಷ್ಠಿರನು, ಭರತ ನಳ ನಹುಷಾದಿ= ರಾಜಾಧಿರಾಜರಾದ ಭರತ, ನಳ, ನಹುಷರೆಂಬುವರೇ ಮೊದಲಾದವರನ್ನು, ಪೇಳುವೊಡೆ= ಎಣೆಯೆಂದು ಹೇಳಲು, ಅವರ್ಗೆ= ಅವರಿಗೆ( ನಹುಷಾದಿರಾಯರಿಗೆ) ಇನಿತು= ಈ ಧರ್ಮಜನಲ್ಲಿರುವಷ್ಟು, ಗುಣಂ= ಉತ್ತಮವಾದ ಗುಣಗಳು,  ಇಲ್ಲವೆಂದು= ಇರಲಿಲ್ಲವೆಂಬುದಾಗಿ, ಭೂಮಂಡಲಂ= ಲೋಕದ ಜನರು, ಕೊಂಡಾಡಲು= ಹೊಗಳುವಂತೆ, 

ತಾಳಿದ= ರಾಜ್ಯೃಭಿಷಿಕ್ತನಾದನು. 


ಆ. ವಿ॥ ಭರತ= ಶಕುಂತಳಾ ದುಷ್ಯಂತರಿಂದ ಜನಿಸಿದವನು, ನಹುಷ= ಪೂರ್ವಕಾಲದಲ್ಲಿ ಇವನು ಇಂದ್ರಪಟ್ಟಕ್ಕಾಗಿ ಒನದುನೂರು ಅಶ್ವಮೇಧಯಾಗವನ್ನು ಮಾಡಿದನು. ಅನಂತರ ಇಂದ್ರಪಟ್ಟವನ್ನೂ ಪಡೆದು, ಇಂದ್ರಪತ್ನಿಯಾದ ಶಚೀದೇವಿಯಲ್ಲಿ ಆಸಕ್ತನಾಗಿದ್ದು ಬಹಳ ಹೆಮ್ಮೆಯಿಂದ ತಾನು ಪಲ್ಲಕ್ಕಿಯಲ್ಲಿ ಕುಳಿತು ತನ್ನನ್ನು ಸಪ್ತ ಋಷಿಗಳು ಹೊತ್ತುಕೊಂಡು ಹೋಗುವಂತೆ ಮಾಡಿದನು. ಋಷಿಗಳು ಪಲ್ಲಕ್ಕಿಯನ್ನು ಹೊತ್ತುಕೊಂಡು ಹೋಗುತ್ತಿರುವಾಗ ಇವನು "ಸರ್ಪ"  "ಸರ್ಪ" ಎಂಬುದಾಗಿ ಹೇಳುತ್ತ ಅಗಸ್ತ್ಯಮಹರ್ಷಿಗಳನ್ನು ಕಾಲಿನಿಂದೊದ್ದು ಅವರ ಕೋಪಾಗ್ನಿಯಿಂದ 

" ಸರ್ಪೋಭವ" ಎಂಬ ಶಾಪವನ್ನು ಹೊಂದಿದನು. ಆಗ ಅವನಿಗೆ ಅಜಗರನೆಂಬ ನಾಮಧೇಯವಾಯೆತು. ಈ ಶಾಪವು ಧರ್ಮರಾಯನೊಡನೆ ಸಂಭಾಷಿಸಿದ್ದರಿಂದ ವಿಮೋಚನೆಯಾಯಿತು. 


ನಳ: ಇವನು ನಿಷಧಾಧಿಪತಿಯು, ವಿದರ್ಭರಾಜನಾದ ಭೀಮಭೂಪಾಲನ ಅಳಿಯನು. ದಾಯಾದಿಯಾದ ಪುಷ್ಕರನಿಗೆ ಪಗಡೆಯಾಟದಲ್ಲಿ ರಾಜ್ಯವನ್ನು ಸೋತು ಪತ್ನಿಯಾದ ದಮಯಂತಿಯನ್ನು ಕಾಡಿನಲ್ಲಿ ಬಿಟ್ಟು ತಾನು ಅನೇಕಪ್ರಕಾರವಾದ

ಶನಿಕಾಟಗಳನ್ನು ಅನುಭವಿಸಿ ಪುನಃ ದಮಯಂತಿಯನ್ನೂ ರಾಜ್ಯವನ್ನೂಹೊಂದಿ ಹೆಸರುವಾಸಿಯನ್ನು ಪಡೆದು ಸುಖವಾಗಿದ್ದ ಚಕ್ರವರ್ತಿಯು. 


ತಾತ್ಪರ್ಯ:- ಕೇಳು ಜನಮೇಜಯನೆ ! ಯುಧಿಷ್ಠಿರನು ಕುರುವಂಶಜರಾದ ಸುಯೋಧನಾದಿಗಳನ್ನೆಲ್ಲಾ ರಣದಲ್ಲಿ ಗೆದ್ದು ಅವರನ್ನು ಸಂಹರಿಸಿದ ಬಳಿಕ ಖ್ಯಾತಿಯಲ್ಲಿಯೂ, ಸದ್ಗುಣದಲ್ಲಿಯೂ,ಪ್ರಸಿದ್ಧರಾದ ನಳ, ನಹುಷ, ಭರತಾದಿರಾಯರಿಗೆಲ್ಲಾ ಅಗ್ರಗಣ್ಯನಾಗಿಹಸ್ತಿನಾವತಿಯಲ್ಲಿ ಭೀಮಾರ್ಜುನಾದಿಗಳಾದ ತಮ್ಮಂದಿರೊಡಗೂಡಿ ಸಾಮ್ರಾಜ್ಯಲಕ್ಷ್ಮಿಯನ್ನು ಕೈಯಲ್ಲಿರಿಸಿಕೊಂಡು ಅಪರಿಮಿತ ಸುಖದಿಂದ ಇದ್ದನು. ಆದರೆ ತಮ್ಮ ವಂಶದಲ್ಲಿ ಉತ್ಪನ್ನರಾಗಿದ್ದ ದಾಯಾದಿಗಳಾದ ದೈರೂಯೋಧನಾದ್ಯರನ್ನು ಯುದ್ಧದಲ್ಲಿ ಸಂಹರಿಸಿದ್ದರಿಂದ ಗೋತ್ರಹತ್ಯಾದೋಷ ಉಂಟಾಯಿತೆಂಬ ಸಂತಾಪಾಗ್ನಿಯು ಮಾತ್ರ ಯಾವಾಗಲೂ ಅವನ ಸುಖವನ್ನು ಭಸ್ಮೀಭೂತವಾಗಿ ಮಾಡುತ್ತಿತ್ತು. 


ಬಳಿಕ ನೃಪವರ ಯುಧಿಷ್ಠಿರನಾಳ್ವ ದೇಶದೊಳ್ । 

ಕಳವು ಕೊಲೆ ಪಾದರಂ ಪುಸಿ ನುಸುಳು ವೈರವ। 

ಟ್ಟುಳಿ ತೋಹು ಬೆದರು ಬೆಜ್ಜರ ಕಷ್ಟನಿಷ್ಟುರಂ ಗಜರು ಗಾವಳಿ ವಿವಾದ॥ 

ಮುಳಿಸು ಪೊಲೆಗಲಸು ಮೊರೆ ಸೆರೆ ಕೃತಕ ಕಾರ್ಪಣ್ಯ। 

ಮಳಿವು ಪಳಿವನ್ಯಾಯ ಮರೆ ಮೋಸವಾಸಿ ತ। 

ಲ್ಲಳ ತಳೆ ವಿಯೋಗಮಲಸಿಕೆ ಕರ್ಕಶಂಗಳಿವು ಮೊಳೆದೋರವೇವೇಳ್ವೆನು॥೫॥ 


ಪ್ರತಿಪದಾರ್ಥ:- ಬಳಿಕ= ಆ ಮೇಲೆ, ನೃಪವರ= ರಾಜೋತ್ತಮನಾದ, ಯುಧಿಷ್ಠಿರ= ಧರ್ಮಭೂಪಾಲ, ಆಳ್ವ= ರಾಜ್ಯಭಾರಮಾಡುತ್ತಿರುವ, ದೇಶದೊಳು= ರಾಜ್ಯದಲ್ಲಿ,  ಕಳವು= ಚೌರ್ಯವು, ಕೊಲೆ=ಕೊಂದುಹಾಕುವುದು, ಪಾದರ= ಹಾದರವು, ಪುಸಿ=ಸಟೆ, ನುಸುಳು= ತಪ್ಪಿಸಿಕೊಳ್ಳುವುದು, ವೈರಂ= ಶತ್ರುಭಾವವು, ಅಟ್ಟುಳಿ= ಗರ್ಜನೆಯು, ತೋಹು= ಎಡರುಗಳು, ಬೆದರು= ಗಾಬರಿ, ಬೆಜ್ಜರ=ದಿಗಿಲು, ಕಷ್ಟ=ಕಷ್ಟವು, ನಿಷ್ಠುರಂ= ಕ್ರೂರವಚನಗಳು, ಗಜರು=ಗದ್ದಲವು, ಗಾವಳಿ= ರೊಂಪು(ಹಾವಳಿ) ವಿವಾದ=ವ್ಯಾಜ್ಯಗಳು, ಮುಳಿಸು=ಸಿಟ್ಟು, ಹೊಲೆಗೆಲಸು= ನೀಚಕೆಲಸಮಾಡುವುದು, ಮೊರೆ=ದೈನ್ಯವು, ಸೆರೆ= ಬಂಧನವು, ಕೃತಕ=ಮೋಸ, ಕಾರ್ಪಣ್ಯ= ಲುಬ್ಧತೆ,ಅಳಿವು= ನಾಶನವು, ಪಳಿವು= ದುರ್ಜನವು, ಅನ್ಯಾಯ= ನ್ಯಾಯರಾಹಿತ್ಯವು, ಮರೆಮೋಸವಾಸಿ= ನಂಬಿಕೆಗೆ ದ್ರೋಹವು, ತಲ್ಲಣ=ಕೊರಗು, ತಳೆ= ಪ್ರಜ್ಞೆ ತಪ್ಪುವುದು, ವಿಯೋಗಂ= ಅಗಲುವಿಕೆಯು, ಅಲಸಿಕೆ= ಸೋಮಾರಿತನವು, ಕರ್ಕಶಂಗಳು= ಕ್ರೂರಕರ್ಮವು, ಇವು=ಇವೆಲೂಲ, ಮೊಳೆದೋರವು= ಉಂಟಾಗುತ್ತಿರಲಿಲ್ಲ, ಏವೇಳ್ವೆನು= ಏನೆಂದು ಹೇಳಲಿ. 


ತಾತ್ಪರ್ಯ:- ಈತನು ಆಳುವ ಹಸ್ತಿನಾಪುರಿಯಲ್ಲಿಚೋರಭಯ, ಹಾದರ, ಅನೃತ, ಶತೃತ್ವ, ಬೆದರಿಕೆ, ಕಾಠಿಣ್ಯ, ಕೋಪ, ದೂಷಣೆ, ಅಪನಿಂದೆ, ಕಾಪಟ್ಯ, ಆಲಸ್ಯ, ಮೊದಲಾದವು ತಲೆದೋರಲು ಹೆದರುತ್ತಲಿದ್ದವು. 


ನೀತಿ ಚತುರತೆ ಕೀರ್ತಿ ಕಲ್ಯಾಣ ಭೋಗ ಸಂ ।

ಪ್ರೀತಿ ಪರಹಿತ ವಿನಯ ಶುಭ ವಿಭವ ವಿಜಯ ವಿ। 

ಖ್ಯಾತಿ ಧರ್ಮಾಚಾರ ನಿಷ್ಟೆ ದೈವಜ್ಞತೆ ವಿ। 

ಭೂತಿ ಶಮೆ ದಮೆ ದಾನ ದಾಕ್ಷಿಣ್ಯಮೆಂಬಿವು ಮ। 

ಮಹಾತಿಶಯಮೆನೆ ಪೆರ್ಚಿದುವು ಯುಧಿಷ್ಠಿರನರೇಶ್ವರನಾಳ್ವ ಭೂತಳದೊಳು॥೬॥ 


ಪ್ರತಿಪದಾರ್ಥ:- ನೀತಿ= ಸನ್ಮಾರ್ಗವು, ಚತುರತೆ= ಚಮತ್ಕಾರವು, ಕೀರ್ತಿ= ಒಳ್ಳೆಯ ಹೆಸರುವಾಸಿಯು, ಕಲ್ಯಾಣ =ಮಂಗಳವು, ಭೋಗ=ಸೌಖ್ಯವು, ಸಂಪ್ರೀತಿ= ಪ್ರೇಮಾತಿಶಯವು, ಪರಹಿತ= ಪರೋಪಕಾರ ಬೈದ್ಧಿಯು, ವಿನಯ= ನಮ್ರತೆಯು, ಶುಭ= ಕಲ್ಯಾಣವನ್ನು ಕೊಡುವ, ವಿಭವ= ವೈಭವವು, ವಿಜಯ= ಗೆಲುವು, ವಿಖ್ಯಾತಿ= ಹೆಸರುವಾಸಿಯು, ಕಳೆ=ಪ್ರಕಾಶವು, ಸೌಭಾಗ್ಯ = ಮಹಿಮೆಯು, ಆರೋಗ್ಯ = ಕಾಯಿಲೆಯಿಲ್ಲದಿರುವಿಕೆ, ಸೌಖ್ಯ= ಸುಖವು, ಉನ್ನತ= ಅಧಿಕವಾದ,  ಸತ್ಯ= ನಿಶ್ಚಯವು, ನಿತ್ಯಶಕ್ತಿ= ಶಾಶ್ವತವಾದ ಸಾಮರ್ಥ್ಯವು, ಜಾತಿ= ಚಾತುರ್ವಣ್ಯವು, ಧರ್ಮಾಚಾರ= ಧರ್ಮದ ನಡವಳಿಕೆಗಳಲ್ಲಿ, ನಿಷ್ಠೆ= ಅಭಿಲಾಷೆಯು, ಧರೂಮಜ್ಞತೆ= ಧರ್ಮದ ಅರಿವು, ವಿಭೂತಿ= ಸಂಪತ್ತು, ಶಮ=ಒಳಭಾಗದ ಇಂದ್ರಿಯಗಳ ಸ್ವಾಧೀನತೆ, ದಮ= ಹೊರಭಾಗದ ಇಂದ್ರೆಯಗಳ ಸ್ವಾಧೀನತೆ, ದಾನ= ಕೊಡುವುದು, 

( ಮಂತ್ರೋಕ್ತದಿಂದ) ದಾಕ್ಷಿಣ್ಯ= ಅಭಿಲಾಷೆ, ( ಎರಡನೆಯವರ ಇಷ್ಟದಂತೆ ನಡೆಯುವುದು) ಎಂಬಿವು= ಇವುಗಳೆಲ್ಲವೂ, ಯುಧಾಷ್ಠಿರನರೇಶ್ವರನ= ಧರ್ಮರೃಯನೆಂಬ ಪೃಥ್ವೀಶನು, ಆಳ್ವ= ಪಾಲಿಸುತ್ತಿರುವ, ಭೂತಳದೊಳು= ಭೂಮಂಡಲದಲ್ಲಿ, ಮಹಾತಿಶಯವು= ಬಹಳ ಹೆಚ್ಚು,  ಎನೆ= ಎಂಬಂತೆ, ಪೆರ್ಚಿತು= ಅತ್ಯಧಿಕವಾಯಿತು. 


ತಾತ್ಪರ್ಯ:- ಆದರೆ ಈತನ ರಾಜ್ಯಭಾರದಲ್ಲಿ ನ್ಯಾಯ, ಚಮತ್ಕಾರ, ಸತ್ಕೀರ್ತಿ, ಸುಖ, ಭೋಗ, ಪ್ರೇಮ, ಪರೋಪಕಾರ, ವಿಧೇಯತೆ, ಸತ್ಯ, ಸಾಮರ್ಥ್ಯ, ಚತುರ್ವರ್ಣಾಶ್ರಮಧರ್ಮವು, ಆಚಾರ, ಐಶ್ವರ್ಯ,  ದಾನ, ಧರ್ಮ, ದಯೆ, ದಾಕ್ಷಿಣ್ಯ 

ಅಂತರ್ಬಹೀಂದ್ರಿಯನಿಗ್ರಹಗಳು ಮೊದಲಾದುವೇ ತುಂಬಿ ತುಳುಕಾಡುತ್ತಿದ್ದವು. 


ಕುಟಿಲ ಚಂಚಲ ಕಠಿನ ಕೃಶ ಮಾಂದ್ಯಮೆಂಬಿವು। 

ತ್ಕಟ ಯೌವನಶ್ರೀವಿಲಾಸಿನಿಯರಳಕಾಳಿ। 

ಚಟುಲ ಸುಕಟಾಕ್ಷ ವಕ್ಷೋಜಾತ ಮಧ್ಯ ಗತಿಗಳ ವಿಸ್ತರದೊಳಲ್ಲದೆ॥ 

ಘಟಿಸದು ಮದಾವಸ್ಥೆ ನಿಗಳಬಂಧನದ ಸಂ। 

ಕಟ ಹರಿದ್ವೇಷ ಮತಿಹೀನತೆಗಳೆಂಬಿವಿಭ। 

ಘಟೆಯೊಳಲ್ಲದೆ ಸಲ್ಲದೆಲ್ಲಿಯುಂ ಧರ್ಮತನಯಂ ಪಾಲಿಸುವ ನೆಲದೊಳು॥೭॥ 


ಪ್ರತಿಪದಾರ್ಥ:- ಕುಟಿಲ= ಕೌಟಿಲ್ಯವು, (ವಕ್ರಮಾರ್ಗವು) ಉತ್ಕಟ= ಹೆಚ್ಚಾದ, ಯೌವನಶ್ರೀ= ಹರವೆಯ ಭಾಗ್ಯವಾಗಿರುವ, ವಿಲಾಸಿನಿಯರ= ನಾರೀಮಣಿಗಳ, ಅಳಕಾಳಿ= ಮುಂಗುರುಳಿನ ಪಙ್ತಿಯಲ್ಲಿಯೂ, ಚಂಚಲ= ಚಾಪಲ್ಯವೆಂಬುದು, ಚಟುಲ= ಅಲ್ಲಾಡುತ್ತಿರುವ, (ಚಂಚಲಮಾದ) ಸುಕಟಾಕ್ಷ = ನೇತ್ರಗಳಲ್ಲಿಯೂ, ಕಠಿನ= ಘಟ್ಟಿಯಾಗಿರುವುದು( ಕಾಠಿಣ್ಯವು) ವಕ್ಷೋಜಾತ = ಎದೆಗಂಟುಗಳಲ್ಲಿಯೂ( ಮೂಲೆಗಳಲ್ಲಿ) ಕೃಶ=ಕುಂದಿರುವುದು, (ಬಡವಾಗಿರುವುದು) ಮಧ್ಯ= ಮಧ್ಯದೇಶದಲ್ಲಿ(ಸೊಂಟದಲ್ಲಿ)ಯೂ, ಮಾಂದ್ಯ= ಮಂದತೆ( ಚಟುವಟಿಕೆಯಿಲ್ಲದಿರುವಿಕೆಯು) ಗತಿವಿಲಾಸದೊಳು= ನಡಿಗೆಯ ಠೀವಿಯಲ್ಲಿಯೂ, ಎಂಬ ಇವು= ಇವೆಲ್ಲಾ, ಅಲ್ಲದೆ= ಇದ್ದವೇ ವಿನಹ, ಘಟಿಸದು= ಇನ್ನೆಲ್ಲಿಯೂ ಇರಲಿಲ್ಲ. ಮದಾವಸ್ಥೆ = ಕಾಮೋದ್ರೇಕದ ಬಾಧೆಯು, ನಿಗಳಬಂಧನದಸಂಕಟ= ಸರಪಣಿಯನ್ನು ಹಾಕಿ ಕಟ್ಟಿರುವುದರಿಂದುಂಟಾಗುವ ದುಃಖ, ಹರಿದ್ವೇಷ= ವೈಷ್ಣವದ್ವೇಷ(ಸಿಂಹದಲ್ಲಿರುವದ್ವೇಷ) ಮತಿಹೀನತೆಗಳು=ಮಂಕುತನವು, ಎಂಬವು= ಇವುಗಳೆಲ್ಲಾ, ಇಭಘಟೆಯೊಳಗಲ್ಲದೆ= ಗಜಸಂಕುಲದಲ್ಲಿದೂದವೇ ಹೊರ್ತು, ಧರ್ಮತನಯಂ= ಯುಧಿಷ್ಠಿರನು, ಪಾಲಿಸುವ =ಆಳತಕ್ಕ

ನೆಲದೊಳು=ರಾಜ್ಯದಲ್ಲಿ, ಎಲ್ಲಿಯುಂ= ಯೃವಭಾಗದಲ್ಲಿಯೂ, ಸಲೂಲದು= ಒದಗುತ್ತಿರಲಿಲ್ಲ. 


ಹರಿ ಎಂಬ ಪದಕ್ಕೆ ಸೂರ್ಯ, ಗಿಣಿ, ಕೋತಿ, ಕಪ್ಪೆ, ಗಾಳಿ, ಸಿಂಹ, ಕುದುರೆ, ವಿಷ್ಣು, ಮೊದಲಾದ ಅನೇಕಾರ್ಥಗಳುಂಟು. 

ಉತ್ಪಲ= ಕಪ್ಪು ಕಮಲದಹಾಗೆ, ಅಕ್ಷಿ= ನೇತ್ರವುಳ್ಳವಳು (ಸವರ್ಣದೀರ್ಘಸಂಧಿ) ವಕ್ಷ= ಎದೆಯಭಾಗದಲ್ಲಿ, ಜ= ಉತ್ಪನ್ನವಾದ್ದು(ಸ್ತನ) 


ಗಾರುಡದೊಳಹಿತತ್ವಮಾರಣ್ಯದೊಳ್ ದಾನ। 

ವಾರಣಂ ಚಾರುಪ್ರವಾಳಮಣಿ ರೈಚಿಯೊಳ್ ಸ। 

ದಾರುಣಂ ಸರಸಿಯೊಳ್ ಕಲಹಂಸಮಯಮುತ್ಪಲಾಕ್ಷಿಯರ ಕಂಧರದೊಳು॥ 

ಹಾರವಲಯಂ ಭೂರುಹದೊಳನೇಕಾಗ್ರತೆ ನ। 

ವಾರಾಮದೊಳ್ ಮಹಾಶೋಕಂ ವಸಂತದೊಳ್ । 

ಮಾರಹಿತಮುಂಟಲ್ಲದಿಲ್ಲಮಿವು ಮತ್ತೆಲ್ಲಿಯುಂ ಧರ್ಮಜನ ನೆಲದೊಳು॥೮॥ 


ಪ್ರತಿಪದಾರ್ಥ:- ಗಾರುಡದೊಳು= ಪಕ್ಷಿರಾಜನಲ್ಲಿ ಮತ್ತು ಗಾರುಡವಿದ್ಯೆಯಲ್ಲಿಯೂ, ಅಹಿತತ್ವಂ= ವೈರವು, ಮತ್ತು ಹಾವುಗಳ ಸಂಬಂಧವಾದ ತತ್ವವು, ಅರಣ್ಯದೊಳ್= ವನದಲ್ಲಿ,ದಾನವಾರಣಂ= ದಾನಮಾಡುವುದಕ್ಕವಕಾಶವಿಲ್ಲದಿರುವಿಕೆ ಮತ್ತು ಮದಜಲದಿಂದಪೂರ್ಣವಾದ ಗಜವು, ಚಾರು= ಹೃದಯಾಹ್ಲಾದವನ್ನೀಯುವ,ಪ್ರವಾಳಮಣಿರುಚಿಯೋಳ್= ಹವಳಗಳಲ್ಲಿ, ಸದಾ= ಅನವರತವೂ,  ಆರುಣಂ= ರಕ್ತವರ್ಣವು, ಸರಸಿಯೋಳ್= ಸರೋವರದಲ್ಲಿ, ಕಲಹಂಸಮಯಂ= ಜಗಳದ ಕಾಲವು, ಇನಿದಾದ ಸ್ವರದಿಂದ ಕೂಡಿದ ಹಂಸಗಳ ಸೇರುವಿಕೆಯು, ಉತ್ಪಲಾಕ್ಷಿಯರ= ನಾರೀಮಣಿಗಳ,  ಕಂಧರದೊಳು= ಕಂಠದಲ್ಲಿ, ಹಾರವಲಯಂ= ಗುಂಡಾದ ಮಾಲೆಯು, ಮತ್ತು ಹಾ ಎಂಬ ವ್ಯಸನಸೂಚಕವಾದ ಶಬ್ಧವು, ಭೂರುಹದೊಳು= ವೃಕ್ಷದಲ್ಲಿ, ಅನೇಕಾಗ್ರತೆ= ಚಿತ್ತಚಾಂಚಲ್ಯ ಮತ್ತು ಶಾಖಾಬಾಹುಳ್ಯವು, ನವ=ಹೊಸದಾದ, ಆರಾಮದೊಳ್= ತೋಟದಲ್ಲಿ, ಮಹಾಶೋಕಂ= ಸಾಮತಿಯಿಲ್ಲದ ವ್ಯಸನವು ಮತ್ತು ಅಗಾಧವಾದ ಅಶೋಕವೃಕ್ಷವು,

ವಸಂತದೊಳ್= ಮಧುಮಾಸದಲ್ಲಿ, ಮಾರಹಿತಂ= ಐಶ್ವರ್ಯ ರಾಹಿತ್ಯವು, ಮತ್ತು ಮದನನಿಗೆ ಇಷ್ಟವಾಗಿರುವುದು, ಉಂಟಲ್ಲದೆ= ಉಂಟಾಗಿರುವೈದಲ್ಲದೆ,ಧರ್ಮಜನ= ಯುಧಿಷ್ಠಿರನ, ನೆಲದೊಳು= ರಾಜ್ಯದಲ್ಲಿ, ಮತ್ತೆಲ್ಲಿಯೂ= ಇನ್ನೆಲ್ಲಿಯೂ

ಇವು=ಇವುಗಳು, ಇಲ್ಲ=ಇರಲಿಲ್ಲ. 


ತಾತ್ಪರ್ಯ:- ಮತ್ತು ಆ ರಾಜ್ಯದಲ್ಲಿ ಅಹಿತತ್ವವೆಂಬುದುಗರುಡನಲ್ಲಿಯೂ, ಸದಾರುಣವೆಂಬುದು ಪ್ರವಾಳಂಗಳಲ್ಲಿಯೂ ಕಲಹಂಸವೆಂಬುದು ಕಾಸಾರಗಳಲ್ಲಿಯೂ, ಹಾರವಲಯವೆಂಬುದು ನಾರೀಮಣಿಗಳ ಕಂಠಗಳಲ್ಲೂ, ಅನೇಕಾಗ್ರತೆ ಎಂಬುದು ತರುಸಮೂಹದಲ್ಲೂ, ಮಹಾಶೋಕವೆಂಬುದು ಉದ್ಯಾನದಲ್ಲೂ, ಮಾರಹಿತವೆಂಬುದು ವಸಂತಸಮಯ-

ದಲ್ಲೂ, ಅನ್ವರ್ಥಕಂಗಳಾಗಿ ಮೇಲೆ ವಿವರಿಸಿರುವ ಅಹಿತತ್ವ(ವೈರ) ಸದಾರುಣ(ಸಾಲ) ಕಲಹಂ(ಜಗಳ)ಹಾರವಲಯ 

( ಹಾ ಎಂಬ ರೋದನಧೂವನಿ) ಅನೇಕಾಗ್ರತೆ( ಚಾಂಚಲ್ಯ) ಮಹಾಶೋಕ (ವ್ಯಸನ) ಮಾರಹಿತ(ಬಡತನ) ಮೊದಲಾದವೆಲ್ಲಾ ಅಲ್ಲಿನ ಪ್ರಜೆಗಳ ವಿಷಯದಲ್ಲಿ ನಿರರ್ಥಕತೆಯನ್ನೈದಿದವು. 


ಕೊಡೆಯೆಂಬರಾತಪತ್ರವನುದರದೇಶಮಂ। 

ಪೊಡೆಯೆಂಬರೊಲಿದು ಮಂಥನವನೆಸಗೆಂಬುದಂ । 

ಕಡೆಯೆಂಬರಾರಡಿಯನಳಿಯೆಂಬರುದಕಪ್ರವಾಹಮಂ ತೊರೆಯೆಂಬರು॥ 

ಮಡಿಯೆಂಬರಂಬರದ ಧೌತಮಂ ಕಬರಿಯಂ । 

ಮುಡಿಯೆಂಬರೆಡೆವಿಡದೆಮುಸುಕಿರ್ದ ಮೇಘಮಂ। 

ಜಡಿಯೆಂಬರೈರೈಶಿಲೆಯನರೆಯೆಂಬರಲೂಲದಿವ ನುಡಿಯರವನಾಳ್ವಿಳೆಯೊಳು॥೯॥ 


ಪ್ರತಿಪದಾರ್ಥ:- ಅವನು= ಆ ಪಾಂಡುಪುತ್ರನಾದ ಯುಧಿಷ್ಠಿರನು, ಆಳ್ವ= ರಾಜ್ಯವಾಳುತ್ತಿರುವ, ಇಳೆಯೊಳು= ಧರಾಮಂಡ-

ಲದಲ್ಲಿ ಆಯಪತ್ರವನು= ಬಿಸಿಲಿನ ಝಳವನ್ನು ನಿವಾರಣೆ ಮಾಡುವ ವಸ್ತುವನ್ನು ಮಾತ್ರ, ಕೊಡೆಯೆಂಬರು= ಕೊಡೆ ಎಂಬುದಾಗಿ ಹೇಳುವರು, ಉದರದೇಶಮಂ = ಜಠರಭಾಗವನ್ನು,(ಹೊಡೆ) ಪೊಡೆ ಎಂಬರು= ಪೊಡೆಎಂಬುದಾಗಿ ಅನ್ನುವರು. ಒಲಿದು= ಮೆಚ್ಚಿ,  ಮಂಥನವನು= ಕಲಕುವಿಕೆಯನ್ನು, ಎಸಗು= ಮಾಡು(ಕಡೆ) ಎಂಬುದಂ=ಎನ್ನುವುದನ್ನು ಮಾತ್ರ ಕಡೆಎಂಬರು= ಕಡೆ ಎಂಬುದಾಗಿ ಕರೆಯುತ್ತಾರೆ,  ಆರಡಿಯನು= ಭ್ರಮರವನ್ನು, ಅಳಿಎಂಬರು=ಅಳಿ ಅನ್ನುವರು,

ಉದಕಪ್ರವೃಹಮಂ= ನೀರು ಹರಿಯುತ್ತಿರುವುದನ್ನು ಮಾತ್ರ ತೊರೆಎಂಬರು= ತೊರೆಎಂದು ಹೇಳುವರು, ಅಂಬರದದೌತಮಂ= ಒಗೆದ ವಸ್ತ್ರಗಳನ್ನುಮಾತ್ರವೇ ಮಡಿಎಂಬರು= ಮಡಿ ಎನ್ನುತ್ತಿದ್ದರು, ಕಬರಿಯ= ಹೆರಳನ್ನು,

ಮುಡಿಎಂಬರು= ಮುಡಿ ಅನ್ನುವರು, ಎಡವಿಡದೆ= ಅವಕಾಶವಿಲ್ಲದೆ ಆವರಿಸಿದ ಮುಗಿಲನ್ನು ಮಾತ್ರವೇ ಜಡಿಎನ್ನುವರು, ಉರುಶಿಲೆಯನ್ನು= ದಪ್ಪವಾದ ಬಂಡೆಯನ್ನು, ಅರೆಎಂಬರು=ಅರೆಎನ್ನುವರು, ಅಲ್ಲದೆ= ಈ ಪ್ರಕಾರವಾಗಿತ್ತೇ ಹೊರ್ತು, ಮೇಲ್ಕಂಡ ಕೊಡೆ, ವೊಡೆ, ಕಡೆ, ಅಳಿ, ತೊರೆ, ಮಡಿ, ಮುಡಿ, ಜಡಿ, ಅರೆ ಮೊದಲಾದವುಗಳ ನಿಜಾರ್ಥವಾದ ಕೊಡದಿರುವಿಕೆ, ದಂಡನೆ, ಕತ್ತರಿಸುವಿಕೆ, ಹಾಳಾಗುವುದು, ತ್ಯಜಿಸುವುದು, ಮರಣವು, ನಷ್ಟವಾಗುವುದು, ಒಡೆಯುವುದು,

ಕಲ್ಲಿನಿಂದ ಅರೆಯುವುದು, ಎಂಬ ಮಾತುಗಳನ್ನು, ನುಡಿಯರು= ಆಡುತ್ತಲೇ ಇರಲಿಲ್ಲ. 


ಎಲ್ಲರುಂ ಭೋಗಿಗಳ್ ಪಾತಾಳಗತರೆನಿಸ। 

ರೆಲ್ಲರುಂ ವಿದ್ಯಾಧರರ್ ನಭೋಜನರೆನಿಸ। 

ರೆಲ್ಲರುಂ ದಾಕ್ಷಿಣ್ಯವರ್ತಿಗಳ್ ತಿಳಿಯೆ ಲಂಕಾನಿವಾಸಿಗಳೆನಿಸರು॥ 

ಎಲ್ಲರುಂ ಸುಮನೋರತರ್ ಮಧುವ್ರತರೆನಿಸ।

ರೆಲ್ಲರುಂ ಗುಣಯುತರ್ ಕಠಿನರೆನಿಸರ್ ಮನುಜ। 

ರೆಲ್ಲರುಂ ಕಾಂತಾರಮಿತಭಾಗ್ಯಸಂಪದರ್ ಕುಜರೆನಿಸರವನಿಯೊಳು॥೧೦॥ 


ಪ್ರತಿಪದಾರ್ಥ:- ಅವನ= ಆ ಧರ್ಮಭೂಪಾಲನ, ಇಳೆಯೊಳು= ರಾಜ್ಯದಲ್ಲಿರುವ, ಎಲ್ಲರುಂ= ನಿವಾಸಿಗಳೆಲ್ಲಾ, ಭೋಗಿಗಳ್= ಹಾವುಗಳೇ ಆದರೂ, ಪಾತಾಳಗತರು= ಪಾತಾಳಲೋಕದಲ್ಲಿರುವರೆಂಬುದಾಗಿ, ಎನಿಸರು= ಎನಿಸಿಕೊಳ್ಳರು,

(ಸರೂವರೂ ಸುಖಾನುಭವಿಗಳು), ಎಲ್ಲರೂ = ಸಕಲರೂ, ವಿದ್ಯಾಧರರು= ದೇವತೆಗಳಿಂದ ಹುಟ್ಟಿದವರು ಆದಾಗ್ಗೂ, ನಭೋಗತರು=ಗಗನ ನಿವಾಸಿಗಳು, ಎನಿಸರು= ಅನ್ನಿಸಿಕೊಳ್ಳರು,(ಸಕಲಕಲಾಪ್ರೌಢರು), ಎಲ್ಲರುಂ= ಸರ್ವರೂ, ದಾಕ್ಷಿಣ್ಯ = ತೆಂಕಣದೆಸೆಯಲ್ಲಿ, ವರ್ತಿಗಳ್= ಇರತಕ್ಕವರು ಆದರೂ, ತಿಳಿಯೆ= ಆಲೋಚನೆ ಮಾಡಿದರೆ, ಲಂಕಾನಿವಾಸಿಗಳ್= ಲಂಕಾಪಟ್ಟಣದಲ್ಲಿರತಕ್ಕವರು,(ಅಸುರರು) ಎನಿಸರು= ಅನ್ನಿಸಿಕೊಳ್ಳರು,(ಪರದಾಕ್ಷಿಣ್ಯಾಭಿಲಾಷಿಗಳು), ಎಲ್ಲರೂ= ಅಶೇಷರೂ,ಸುಮನೋರತರು= ಹೂಗಳಲ್ಲಿ ಹಿತವುಳ್ಳವರು ಆಗಿದ್ದರೂ, ಮಧುವ್ರತರು= ಬಂಡನುಂಡು ಬದುಕುವವರು,(ದುಂಬಿಗಳು) ಎನಿಸರು= ಅನ್ನಿಸಿಕೊಳ್ಳರು,(ಪಂಡಿತರು, ಪ್ರೇಮವುಳ್ಳವರು ಮತ್ತು ಸಾರಾಯಿ ಕುಡಿಯುತ್ತಿರಲಿಲ್ಲ) ಎಲ್ಲರೂ= ಎಲ್ಲಾ ಜನರೂ, ಗುಣಯುತರ್= ಸದ್ಗುಣಸಂಪನ್ನರು, ಆದರೂ, ಕಠಿಣರು= ಕಾಠಿಣ್ಯಚಿತ್ತರು, ಎನಿಸರು= ಎಂಬುದಾಗಿ ಹೇಳಿಸಿಕೊಳ್ಳುತ್ತಿರಲಿಲ್ಲ, (ದಯಾಳುಗಳು ಮತ್ತು ಸನ್ಮಾರ್ಗಪ್ರವರ್ತಕರು), ಎಲ್ಲರೂ= ಎಲ್ಲಾ ಮನುಷ್ಯರೂ, ಕಾಂತಾರ= ಅರಣ್ಯಗಳಲ್ಲಿ, ಮಿತ=ಕ್ಲುಪ್ತವಾದ, ಭೋಗ= ಸುಖದ, ಸಂಪದರು= ನಿಧಿಯುಳ್ಳವರೂ, ಆಗಿದ್ದರು, ಕುಜನರು= ನೀಚರು, ಇಲ್ಲ= ಇರಲಿಲ್ಲ,.


ತಾತ್ಪರ್ಯ:- (ಅಲ್ಲದೆ) ಆ ಪುರವಾಸಿಗಳೆಲ್ಲಾ ಸುಖಾನುಭವಿಗಳೂ, ವಿದ್ಯಾವಿಶಾರದರೂ, ದಾಕ್ಷಿಣ್ಯಶೀಲರೂ, ವಿದ್ಯಾಪಕ್ಷಪಾತಿಗಳೂ, ಗುಣಾಢ್ಯರೂ, ಏಕಪತ್ನೀವ್ರತವುಳ್ಳವರೂ ಆಗಿ ಕಾಠಿಣ್ಯ ಕ್ರೌರ್ಯಾದಿ ದುರ್ಗುಣಗಳನ್ನು ದೂರಮಾಡಿದ್ದರು. 


ವಸುಗಳಿಂದುಪಭೋಗ್ಯಮಾಗದೊಡೆ ಸೌರಭ್ಯ। 

ರಸದಿಂದಮಾರೋಗ್ಯಮೆನಿಸದೊಡೆ ಸಂತತಂ। 

ವಿಶದ ಸುಮನೋಯೋಗ್ಯಮಲ್ಲದೊಡೆ ಹರಿವಿಭವ ಸುಶ್ಲಾಘ್ಯಮಲ್ಲದಿರಲು॥ 

ಲಸದಪ್ಸರೋದ್ಯಾನ ಸೌಭಾಗ್ಯಮೊಂದಿರದೊ। 

ಡೆಸೆವರಾಜೇಂದ್ರಂಗೆ ಸೊಗಸುವೀಡಾಗಿ ರಂ। 

ಜಿಸದೊಡೆ ಹಸ್ತಿನಾವತಿಯನಮರಾವತಿಗೆ ಸರಿಯೆಂಬರೇ ಪ್ರೌಢರು॥೧೧॥ 


ಪ್ರತಿಪದಾರ್ಥ:- ವಸುಗಳಿಂದ= ಜಯ,ವಿಷ್ಣು, ಅನಿಲ, ಪ್ರಭಾಸೆ, ವರುಣ, ನಹುಷ, ಪ್ರತ್ಯೂಷ,ವೃಷಭರೆಂಬ ಎಂಟು ಜನ ವಸುವೆಂಬ ದೇವತೆಗಳ ಭೇದದವರಿಂದ, (ಹಣದಿಂದ), ಉಪಭೋಗಂ= ಸುಖಾರ್ಹವಾದದ್ದು, ಆಗದೊಡೆ= ಆಗದೆಹೋ-

ದರೆ, ಸೌರಭ್ಯರಸದಿಂದ= ಕಾಮಧೇನುವಿನ ಹಾಲಿನಿಂದ ಮತ್ತು ಮನೋಲ್ಲಸಕರಮಾದ ಶೃಂಗಾರಾದಿರಸಗಳಿಂದ, ಆರೋಗ್ಯಂ =ನಿರುಪಾಧಿಕವಾಗಿ, ಇರುವುದೆಂದು, ಎಣಿಸದೆ= ಹೇಳಿಸಿಕೊಳ್ಳದಿದ್ದರೆ, ಸಂತತಂ= ಅನವರತವೂ, ಸುಮನೋಯೋಗ್ಯಂ= ಸುರರಿಗೆ ಅರ್ಹವಾದ್ದು( ವಿದ್ವಾಂಸರಿಗೆ ಅರ್ಹವಾದ್ದು) ಅಲ್ಲದೊಡೆ= ಆಗದಿದ್ದರೆ, ಹರಿ= ನಾರಾಯಣನ, ವೈಭವ=ಸಂಪತ್ತಿನಿಂದ, ಶ್ಲಾಘ್ಯಂ= ಸ್ತುತ್ಯರ್ಹವು, ಅಲ್ಲದೊಡೆ= ಅಲ್ಲದೆಯಿದ್ದರೆ, ಲಸತ್= ಹೊಳೆಯುತ್ತಿ-

ರುವ, ಅಪ್ಸರ= ದೇವತೆಗಳ ವೇಶ್ಯಾಂಗನೆಯರಿಂದ ಕೂಡಿದ, ಉದ್ಯಾನ= ದೇವೇಂದ್ರನ ನಂದನವನದ, ಸೌಭಾಗ್ಯಂ= ಸೊಬಗನ್ನು, ಒಂದಿರದೊಡೆ= ಹೊಂದಿಲ್ಲವಾದರೆ, ಮತ್ತು ಲಸತ್= ಕಾಂತಿ ವಿಶಿಷ್ಟವಾದ, ಅಪ್ಸರ= ಕಾಸಾರಗಳಿಂದಲು, ಉದ್ಯಾನ= ತೋಟಗಳಿಂದಲೂ, ಸೌಭಾಗ್ಯಂ= ಸಂಪತ್ಸಮೃದ್ಧಿಯನ್ನು, ಒಂದಿರದೊಡೆ= ಉಂಟಾಗಿಲ್ಲವಾದರೆ, ಎಸೆವ= ರಾರಾಜಿಸುತ್ತಲಿರುವ, ರಾಜೇಂದ್ರಂಗೆ= ಧರ್ಮನಂದನನಿಗೆ, ಸೊಗಸು= ಅಲಂಕಾರವಾಗಿ ಕಾಣುವುದಕ್ಕೆ, ಈಡಾಗಿ= ಸ್ಥಾನಭೂತವಾಗಿದ್ದು, ರಂಜಿಸದೊಡೆ= ಕಾಂತಿಯನ್ನೀಯದೆ ಹೋದರೆ, ಪ್ರೌಢರು = ಪ್ರೃಜ್ಞರು, ಹಸ್ತಿನಾವತಿಯನು= ಹಸ್ತಿನಾವತೀಪುರಿಯನ್ನು, ಅಮರಾವತಿಗೆ= ದೇವೇಂದ್ರನ ನಗರಕ್ಕೆ, ಸರಿಯೆಂಬರೆ=ಹೋಲಿಸಿ ಹೇಳುತ್ತಾರೆಯೆ? 


ತಾತ್ಪರ್ಯ:- ಆ ಧರ್ಮಾತ್ಮನಾದ ಧರ್ಮನಂದನನ ರಾಜಧಾನಿಯಾದ ಹಸ್ತಿನಾವತಿಯು ಐಶ್ವರ್ಯಸಮೃದ್ಧಿಯಿಂದಲೂ, ಶೃಂಗಾರಾದಿ ನವರಸಗಳಿಂದಲೂ, ಪಂಡಿತನಿಕಾಯದಿಂದಲೂ, ಸದಾ ವಿಷ್ಣುಭಕ್ತರಾದವರಿಂದಲೂ, ಪ್ರಕಾಶವನ್ನೈದುತ್ತಿ-

ರುವ ಆರಾಮಗಳಿಂದಲೂ ಮೆರೆಯುತ್ತ ದೇವತಾವಾಸಮಾಗಿಯೂ, ಇಷ್ಟಾರ್ಥಗಳನ್ನೀಯುವ ಕಾಮಧೇನುವಿನಿಂದ ಕೂಡಿಯೂ, ರಂಭಾದ್ಯಪ್ಸರ ಸ್ತ್ರೀಯರಿಂದ ಅಲಂಕೃತಮಾಗಿಯೂ, ಮನೋಹರವಾದ ನಂದನವನವೆಂಬ ಉದ್ಯಾನವುಳ್ಳ-

ದ್ದಾಗಿಯೂ, ದೇವತೆಗಳಿಗೆ ಒಡೆಯನಾದ ದೇವೇಂದ್ರನಿಗೆ ರಾಜಧಾನಿಯಾಗಿಯೂ ಇರೈವ ಅಮರಾವತೀ ಪಟ್ಟಣವನ್ನೂ ಕೂಡ ಅಲ್ಲಗಳೆಯುತ್ತಿತ್ತು. 


ನಾಗೇಂದ್ರನಂ ಬಿಡದೆ ತಲೆವಾಗಿಸಿತ್ತಮರ । 

ನಾಗೇಂದ್ರನಂ ಬುದ್ಧಿ ದೊರೆಸಿತ್ತು ಪುರಮರ್ದ। 

ನಾಗೇಂದ್ರನಂ ನಿಂದು ಬೆರಗಾಗಿಸಿತ್ತಮಲ ಧರ್ಮಜನ ಕೀರ್ತಿ ಬಳಿಕ॥

ನಾಗೇಂದ್ರಶಯನಾಲಯವ ಜಡಧಿಯೆನಿಸಿ ನುತ।

ನಾಗೇಂದ್ರವರದಾಯುಧವ ಪೊಳ್ಳುಗಳೆದು ಮಥ। 

ನಾಗೇಂದ್ರಧರನ ಜಾತೆಯನಿಲುವುಗೆಡಿಸಿ ನೆರೆ ರಾಜಿಸಿತು ಮೂಜಗದೊಳು॥೧೨॥ 


ಪ್ರತಿಪದಾರ್ಥ:- ಅಮಲ= ಪರಿಶುದ್ಧವಾದ, ಧರ್ಮಜನ = ಧರ್ಮನಂದನನ, ಕೀರ್ತಿ= ಒಳ್ಳೆಯ ಹೆಸರು,ಬಳಿಕ= ಆಮೇಲೆ, ನಾಗೇಂದ್ರನಂ= ಸರ್ಪರಾಜನನ್ನು, (ಆದಿಶೇಷನನ್ನು) ತಲೆವಾಗಿಸೆತು= ನಾಚಿಕೆಯನ್ನುಂಟುಮಾಡಿತು, ಅಮರನಾಗೇಂದ್ರ-

ನಂ= ಸುರರ ಐರಾವತವೆಂಬ ಗಜವನ್ನು, ಬುದ್ಧಿದೊರಸಿತ್ತು= ಮಂಕಾಗಿ ಮಾಡಿತು, ಮತ್ತು ಪುರ= ತ್ರಿಪುರಾಸುರರನ್ನು, ಮರ್ದನ= ಸಂಹರಿಸಿದ ಪರಮೇಶ್ವರನ, ಅಗೇಂದ್ರನಂ= ಕೈಲಾಸ ಶಿಖರವನ್ನು, ನಿಂದು=ಎದುರಾಗಿ ನಿಂತು, ಬೆರಗಾಗಿಸಿತ್ತು= ಸ್ತಂಭೀ ಭೂತಮಾಡಿತ್ತು, ನಾಗೇಂದ್ರಶಯನ= ಸರ್ಪರಾಜನನ್ನೇ ಹಾಸಿಗೆಯಾಗಿವುಳ್ಳ ನಾರಾಯಣನ, ಆಲಯವ= ನಿವಾಸ

ಸ್ಥಾನಮಾದ ಪಾಲ್ಗಡಲನ್ನು, ಜಡಧಿ= ಮಂಕಾಗಿ ಮತ್ತು ನೀರುಳ್ಳದ್ದಾಗಿ, ಎನಿಸಿ= ಎನ್ನಿಸಿ, ನುತನಾಗೇಂದ್ರ= ಸ್ತೋತ್ರಾರ್ಹನಾ

-ದ ಗಜೇಂದ್ರನಿಗೆ, ವರದ= ಇಷ್ಟಾರ್ಥಗಳನ್ನು ಕೊಟ್ಟ ನಾರಾಯಣನ, ಆಯುಧವ= ಶಂಖವೆಂಬ ಆಯುಧವನ್ನು, ಪೊಳ್ಳು-

ಗಳೆದು= ಟೊಳ್ಳುಮಾಡಿಬಿಟ್ಟು, ಮಥನ= ಸಮುದ್ರವನ್ನು ಕಡೆಯಲುಉಪಯೋಗಿಸಿಕೊಂಡಿದ್ದ, ಅಗೇಂದ್ರ= ಮಂದರಗಿ-

ರಿಯನ್ನು, ಧರನ= ಧರಿಸಿದಂಥಾ ಹರಿಯಿಂದ, ಜಾತೆಯ= ಉತ್ಪನ್ನಳಾದ ಜಾಹ್ನವಿಯ, ನಿಲುವುಗೆಡಿಸಿ= ಸ್ಥಿತಿಯನ್ನು ಭಂಗಪಡಿಸಿ, ಮೂಜಗದೊಳು= ಮೂರುಲೋಕಗಳಲ್ಲೂ, ನೆರೆ= ಅಸದೋಶವಾಗಿ, ರಾಜಿಸಿತು= ಪ್ರಕಾಶವನ್ನೈದಿತು. 


ಅಧಿಕ ವಿಷಯ:- ನಾಗ=ಸರ್ಪ, ಮತ್ತು ಆನೆ, ಪುರಮರ್ದನ= ಈಶ್ವರ, ( ಪೂರ್ವದಲ್ಲಿ ತ್ರಿಪುರರೆಂಬ ರಕ್ಕಸರು ಅಂತರಿಕ್ಷದಲ್ಲಿ ಮೂರು ಪಟ್ಟಣಗಳನ್ನು ನಿರ್ಮಿಸಿಕೊಂಡು ತ್ರಿಲೋಕ ಕಂಟಕರಾಗಿದ್ದರಾದ್ದರಿಂದ ಪರಮೇಶ್ವರನು ಲೋಕಕ್ಷೇಮಕ್ಕಾಗಿ ವಿಷ್ಣವನ್ನು ಬಾಣವಾಗಿ ಮಾಡಿಕೊಂಡು ಇವರನ್ನು ಸಂಹಾರಮಾಡಿ ಖ್ಯಾತನಾದನು.) 


ಗಜೇಂದ್ರ:- ಇವನು ಪೂರ್ವಕಾಲದಲ್ಲಿ ಶಾಪಕ್ಕೊಳಗಾಗಿ ಈ ಜನ್ಮವೆತ್ತಿದ ರಾಜನು. ಒಂದು ದಿನ ನೀರನ್ನು ಕುಡಿಯಲು ಸರಸ್ಸಿಗೆ ಹೋದಾಗ ಅದರಲ್ಲಿದ್ದ ಮೊಸಳೆಯೊಂದು ಇದನ್ನು ಹಿಡಿದುಕೊಂಡಿತು, ಅದರಿಂದ ತಪ್ಪಿಸಿಕೊಳ್ಳಲು ಮಾಡಿದ ಪ್ರಯತ್ನಗಳೆಲ್ಲಾ ವ್ಯರ್ಥವಾಗಿ ನಾನಾ ಪ್ರಕಾರವಾಗಿ ಭಗವಂತನನ್ನು ಸ್ತುತಿಸಲು ವಿಷ್ಣುವು ಬಂದು ಆ ಮೊಸಳೆಯನ್ನು ಸಂಹರಿಸಿದನು. ಇದರಿಂದ ಪಾಪಪರಿಹಾರವಾಯಿತಲ್ಲದೆ ಶಾಶ್ವತವಾದ ಮೋಕ್ಷವನ್ನೂ ಹೊಂದಿ ಹೆಸರುವಾಸಿಗೆ ಬಂದನು

( ಇದೇ ಗಜೇಂದ್ರಮೋಕ್ಷ ಕಥೆಯು), 


ಮಂದರಪರ್ವತ:- ಪೂರ್ವದಲ್ಲಿ ಸುರಾಸುರರು ಸಮುದ್ರದಲ್ಲಿರುವ ಅಮೃತವನ್ನು ಪಡೆಯಲು ಇದನ್ನು ಕಡಗೋಲಾಗಿ ಮಾಡಿಕೊಂಡಿದ್ದರು. 


ತಾತ್ಪರ್ಯ:- ಆತನ ಸತ್ಕೀರ್ತಿಯಾದರೋ ಸರ್ಪರಾಜನಾದ ಆದಿಶೇಷನು ನಾಚಿಕೆಯಿಂದ ತಲೆತಗ್ಗಿಸಿಕೊಳ್ಳುವಂತೆಯೂ, ಐರಾವತದ ಬುದ್ಧಿಯು ಮಂಕಾಗುವ ತೆರನಾಗಿಯೂ,ಕೈಲಾಸಗಿರಿಯು ಭ್ರಾಂತಿಯನ್ನೈದುವರೀತಿಯಾಗಿಯೂ, ಕ್ರೀರ-

ಸಮುದ್ರವನ್ನು ಜಡಬುದ್ಧಿಯಿಂದಿರೂಪಂತೆಯೂ, ಶ್ರೀ ಮಹಾವಿಷ್ಣುವಿನ ಶಂಖವನ್ನು ಅನಾಮಧೇಯವಾಗಿರುವಹಾಗೂ  ಲೋಕಪ್ರಸಿದ್ಧವಾದ ಗಂಗಾನದಿಯ ಕೀರ್ತಿಯು ಕಡಿಮೆಯಾಗುವಂತೆಯೂ ಮಾಡಿಬಿಟ್ಟಿತು. 


ಹರಿಯಂತೆ ಬಲಯುತಂ ಶಿವನಂತೆ ರಾಜಶೇ। 

ಖರನಬ್ಜಭವನಂತೆ ಚತುರಾನನಂ ಸರಿ। 

ದ್ವರನಂತೆ ರತ್ನಾಕರಂ ದಿವಾಕರನಂತೆ ನಿರ್ದೋಷನಿಂದ್ರನಂತೆ॥ 

ಪರಿಚಿತಸುರಭಿರಮ್ಯನಮೃತಾರ್ಚಿಯಂತೆ ವಿ। 

ಸ್ತರಿತಕುವಲಯನೆಂದು ಧರ್ಮಜನ ಧರೆ ಪೊಗಳು।

 ತಿರೆ ಬಳಿಕ ಹಸ್ತಿನಾವತಿಗೆ ವೇದವ್ಯಾಸನೊಂದುದಿವಸಂ ಬಂದನು॥೧೩॥ 


ಪ್ರತಿಪದಾರ್ಥ:- ಧರೆ=ಲೋಕದ ಜನರು, ಧರ್ಮಜನ= ಯುಧಿಷ್ಠಿರನನ್ನು, ಹರಿಯಂತೆ= ನಾರಾಯಣನಂತೆ, ಬಲಯುತಂ= ಬಲದೇವನು ಮತ್ತುಪರಾಕ್ರಮ ಇವುಗಳಿಂದ ಕೂಡಿ, ಶಿವನಂತೆ= ಪರಮೇಶ್ವರನಂತೆ, ರಾಜಶೇಖರಂ= ಚಂದ್ರಚೂಡನು ಮತ್ತು ಉತ್ತಮವಾದ ದೊರೆಯು, ಅಬ್ಜಭವನಂತೆ= ವಿರಿಂಚಿಯಹಾಗೆ, ಚತುರಾನನಂ=ಚತುರ್ಮುಖವುಳ್ಳವನು ಮತ್ತು ಚಾತುರ್ಯವಾದ ವದನವುಳ್ಳವನು, ಸರಿದ್ವರನಂತೆ= ಕಡಲಿನಹಾಗೆ, ರತ್ನಾಕರಂ = ರತ್ನಗಳಿಗೆ ನೆಲೆಯಾದವನು, ಮತ್ತು ರತ್ನಗರ್ಭನು, ದಿವಾಕರನಂತೆ= ರವಿಯೋಪಾದಿಯಲ್ಲಿ, ನಿರ್ದೋಷನು= ಅನಿಶನು, (ಜ್ಞಾನಿಯು)ಮತ್ತು ಅನಿಂದ್ಯನು, 

(ಪಾಪವಿಲ್ಲದವನು) ಇಂದ್ರನಂತೆ= ಶಚೀಪತಿಯಹಾಗೆ, ಪರಿಚಿತ= ಪಡೆದಿರುವ ಮತ್ತು ಸಹಿತವಾದ, ಸುರಭಿ=ಕಾಮಧೇನು,  ಮತ್ತು ಸುವಾಸನೆ ಇವುಗಳಿಂದ ರಮ್ಯನು=ಮನೋಲ್ಲೃಸಕರನು, ಅಮೃತಾರ್ಚಿಯಂತೆ= ಹಿಮಕರನಹಾಗೆ, ವೆಸ್ತರಿತ=ವಿಶಾಲವಾದ,  ಕುವಲಯ= ಕಪ್ಪುಕಮಲವುಳ್ಳವನು, ಮತ್ತು ಧರಾಮಂಡಲವುಳ್ಳವನು, ಹೀಗೆಂಬುದಾಗಿ ಪೊಗಳುತಿರೆ=ಸ್ತುತಿಸುತ್ತಿರಲು, ಬಳಿಕ=ಅನಂತರ, ಒಂದು ದಿನಂ= ಒಂದಾನೊಂದು ದಿನ, ವೇದವ್ಯಾಸಮುನಿ= ವ್ಯಾಸಮಹಾಮುನಿಯು, ಹಸ್ತಿನಾವತಿಗೆ= ಹಸ್ತಿನಾಪುರಿಗೆ, ಬಂದನು= ಬಿಜಯಮಾಡಿದನು.


ಅಧಿಕ ವಿಷಯ:- ಅಮೃತ =ಸುಧಾಪೂರಿತವಾದ, ಅರ್ಚಿ=ಕಿರಣವನ್ನುಳ್ಳವನು(ಚಂದ್ರ) ದಿವಾಕರ= ಹಗಲನ್ನು ಮಾಡುವವನು, ಸರಿದ್ವರ= ನದಿಗಳಲ್ಲಿಉತ್ತಮವಾದದ್ದು.


ತಾತ್ಪರ್ಯ:- ಇಂಥಾ ಕೀರ್ತಿವಂತನಾದ ಧರ್ಮರಾಯನು ಬಲದಲ್ಲಿ ವಿಷ್ಣುವನ್ನೂ, ಶ್ರೇಷ್ಠತೆಯಲ್ಲಿ ಹರನನ್ನೂ, ಚಾತುರ್ಯದಲ್ಲಿ ಬ್ರಹ್ಮನನ್ನೂ, ಐಶ್ವರ್ಯದಲ್ಲಿ ಸಮುದ್ರವನ್ನೂ, ಪರಿಶುದ್ಧತೆಯಲ್ಲಿ ರವಿಯನ್ನೂ, ಕಾಮಿತಂಗಳನ್ನೀಯು-

ವುದರಲ್ಲಿ ಕಾಮಧೇನುವನ್ನೂ, ವೈಶಾಲ್ಯದಲ್ಲಿ ಚಂದ್ರನನ್ನೂ, ಹೋಲುತ್ತ ಅಪರಿಮಿತ ಸುಖಸಾಮ್ರಾಜ್ಯ ವೈಭವಗಳಿಂದೊಡ

-ಗೂಡಿ ಸಕಲ ಜನರಿಂದಲೂ ಹೊಗಳಿಸಿಕೊಳ್ಳುತ್ತ ಅರಸುತನ ಗೆಯ್ಯುತ್ತಿರುವ ಕಾಲದಲ್ಲಿ ಒಂದಾನೊಂದುದಿನ ಆ ಪ್ರಸಿದ್ಧವಾದ ಹಸ್ತಿನಾವತಿಗೆ ಋಷೀಶ್ವರರಾಗಿ ಪ್ರಸಿದ್ಧಿಯನ್ನು ಪಡೆದಿರುವ ವ್ಯಾಸಮಹಾಮುನಿಗಳು ಬಿಜಯಂಗೈದರು. 


ಬರಲಾ ನೃಪಾಲಕಂ ಸೋದರರ್ವೆರಸಿ ಮುನಿ। 

ವರನ ಪದಕೆರಗಿದೊಡೆ ಮಣಿದೆತ್ತಿ ಬೋಳೈಸಿ। 

ಪರಸಿ ಮಂತ್ರಾಕ್ಷತೆಯನಿತ್ತು ಸತ್ಕಾರಮಂ ಕೊಂಡು ಕುಳ್ಳಿರ್ದ ಬಳಿಕ॥

ಅರಸನನುತಾಪದಿಂ ತಲೆವಾಗಿ ಮಾತಾಡ। 

ದಿರುತಿರ್ದನನಿಲ ಸಂಚಾರಮೊಂದಿನಿತಿಲ್ಲ। 

ದುರಿವ ಕಡುವೇಸಗೆಯ ಬಿಸಿಲಿಂದ ಬಸವಳಿದ ಕೋಮಲರಸಾಲದಂತೆ॥೧೪॥ 


ಪ್ರತಿಪದಾರ್ಥ:- ಬರಲು= ವ್ಯಾಸರುಷಿಗಳು ಬಿಜಯಮೃಡಲಾಗಿ, ಆ ನೃಪಾಲಕಂ= ಆ ರಾಜೇಂದ್ರನು, ಸೋದರರ್ವೆರಸಿ= ಸಹೋದರರಿಂದ ಕೂಡಿ, ಮುನಿವರನ= ಋಷಿವರ್ಯನಾದ ಬಾದರಾಯಣನ, ಪದಕೆ=ಕಾಲುಗಳಿಗೆ, ಎರಗಿದೊಡೆ= ನಮಸ್ಕಾರಮಾಡಲಾಗಿ, ಮಣಿದು= ಕೆಳಕ್ಕೆ ಬಗ್ಗಿ, ಎತ್ತಿ= ಮೇಲಕ್ಕೆತ್ತಿ, ಬೋಳೈಸಿ= ತಲೆಯಂಸವರಿ,ಪರಸಿ= ಆಶೀರ್ವಾ- 

ದವಂಗೈದು, ಮಂತ್ರಾಕ್ಷತೆಯನು= ಸೇಸೆಯನ್ನು, ಇತ್ತು= ಕೊಟ್ಟಂಥವನಾಗಿ, ಸತ್ಕಾರಮಂ=ಸಪರ್ಯೆಯನ್ನು,ಕೊಂಡು= ಸ್ವೀಕರಿಸಿ, ಕುಳ್ಳಿರ್ದಬಳಿಕ= ಪೀಠವನ್ನು ಅಲಂಕರಿಸಿದನಂತರ, ಅರಸನು= ರಾಜನು, ಅನುತಾಪದಿಂ= ದುಃಖಾತಿಶಯ- 

ದಿಂದ, ತಲೆವಾಗಿ= ತಲೆತಗ್ಗಿಸಿದವನಾಗಿ, ಮಾತಾಡದೆ= ಯಾವಮಾತನ್ನೂ ಆಡದೆ, ಅನಿಲ= ವಾಯುವಿನ, ಸಂಚಾರಮಂ= ತಿರುಗುವಿಕೆಯು, ಒಂದಿನಿತು= ಸ್ವಲ್ಪವೂ, ಇಲ್ಲದೆ= ಉಸಿರಾಡಿಸದೆ, ಉರಿವ= ದಹಿಸುವ, ಕಡುವೇಸಗೆಯ= ಅಸದಳವಾದ ವೈಶಾಖಮಾಸದ ಬಿಸಿಲಿನಿಂದ, ಬಸವಳಿದ=ಕಂದಿದ, ರಸಾಲದಂತೆ= ಚೂತವೃಕ್ಷದೋಪಾದಿಯಲ್ಲಿ, ಇರುತಿರ್ದನು= ಇದ್ದನು. 


ತಾತ್ಪರ್ಯ:- ಆಗ ಧರ್ಮರಾಯನು ತನ್ನ ಅನುಜರಾದ ಭೀಮಾರ್ಜುನ ನಕುಲ ಸಹದೇವರಿಂದೊಡಗೂಡಿ ತಾಪಸೋತ್ತಮ-

ರಾದ ವ್ಯಾಸಮುನಿಗಳಿಗೆ ಸಾಷ್ಟಾಂಗ ಪ್ರಣಾಮವಂ ಮಾಡಿದನು. ವ್ಯಾಸಮುನೀಶ್ವರನು ಅವರಿಗೆಲ್ಲಾ ಆಶೀರ್ವಾದವನ್ನು ಮಾಡಿ ಮಂತ್ರಾಕ್ಷತೆಗಳನ್ನು ದಯಪಾಲಿಸಿದನು.  ಯುಧಿಷ್ಠಿರಾದಿಗಳೆಲ್ಲ ವ್ಯಾಸಮಹಾಮುನಿಗಳಿಂ ದೊರೆತ ಆಶೀರ್ವಚನ ಸೇಸೆಗಳಂ ತಮ್ಮತಮ್ಮ ಶಿರದೊಳ್ಧರಿಸಿ, ಆ ಮಹಾಮುನಿಗಳಿಗೆ ಅರ್ಘ್ಯಪಾದ್ಯಾದ್ಯುಪಚಾರಂಗಳನ್ನು ಮಾಡಿ ಉಚಿತಾಸನದಲ್ಲಿ ಕುಳ್ಳಿರಿಸಿದರು. ಅನಂತರ ಯುಧಿಷ್ಠಿರಾದಿಗಳೂ ತಮ್ಮತಮ್ಮ ಆಸನಂಗಳನ್ನಲಂಕರಿಸಿದರು ಯುಧಿಷ್ಠಿರನು ಎಷ್ಟುಹೊತ್ತಾದರೂ ಒಂದು ಮಾತನ್ನಾದರೂ ಆಡದೆ ಮೂಕಭಾವವನ್ನವಲಂಬಿಸಿ ತಲೆಯನ್ನು ತಗ್ಗಿಸಿ ನೆಲವನ್ನು ನೋಡುತ್ತ ಸುಮ್ಮನೆ ಕುಳಿತಿದ್ದನು. ಈ ರೀತಿಯಲ್ಲಿರುವ ರಾಯನ ಕಡೆಗೆ ವ್ಯಾಸಮಹಾಮುನಿಗಳು ತಿರುಗೆನೋಡಿ,ಗ್ರೀಷ್ಮರುತುವಿನಲ್ಲಿ-

ರುವ ಪ್ರಚಂಡವಾದ ಬಿಸಿಲಿನಲ್ಲಿ ಸಿಕ್ಕಿದ ಕೋಮಲವಾದ ಎಳೆಚಿಗುರುಗಳಿಂದ ಕೂಡಿದ ಚೂತವೃಕ್ಷದಂತೆ ಕಂದಿ ಕುಂದಿ ಕಾಂತಿಹೀನವಾಗಿ ಚಿಂತಾಸಮುದ್ರದಲ್ಲಿ ಮಗ್ನನಾಗಿರುವ ಯುಧಿಷ್ಠಿರನ ಮುಖ ಕಮಲವನ್ನು ನೋಡಿ, 


ಕಂಡನರಸನ ಭಾವಮಂ ಬಳಿಕ ನಗುತೆ ಬೆಸ। 

ಗೊಂಡನಿಂತೆಂದಾ ಮುನೀಂದ್ರನೆಲೆ ನೃಪತಿ ಭೂ। 

ಮಂಡಲದ ಸಕಲ ಸಾಮ್ರಾಜ್ಯಮಂ ಪಾಲಿಸುವ ನಿನ್ನ ಸಂತಸದೇಳ್ಗೆಗೆ॥ 

ಖಂಡನವ ಮಾಳ್ಪುದಾನನದಿರವು ಸಾಕು ಮನ। 

ದಂಡಲೆಯ ತೊರೌಯೆನಲ್ ಜೀಯ ಸಂತಾಪದಿಂ। 

ಬೆಂಡಾದುದೆನ್ನೊಡಲ್ ಸೈರಿಸಲರಿಯೆನೆಂದೊಡಾ ತಪೋನಿಧಿ ನುಡಿದನು॥೧೫॥ 


ಪ್ರತಿಪದಾರ್ಥ:-ಆ ಮನೀಂದ್ರನು= ಆ ಬಾದರಾಯಣನು, ಅರಸನ= ಯುಧಿಷ್ಠಿರನ,  ಭಾವಮಂ= ರೀತಿಯನ್ನು,  ಕಂಡನು= ತಿಳಿದುಕೊಂಡನು, ಬಳಿಕ= ಅನಂತರ, ನಗುತ=ನಗುತ್ತ, ಇಂತೆಂದನು= ಈ ರೀತಿಯಾಗಿ, ಬೆಸಗೊಂಡನು= ಕೇಳಿದನು, ಎಲೆನೃಪತಿ= ಎಲೈ ರಾಜನೆ, ಭೂಮಂಡಲದ= ಪ್ರಪಂಚದ, ಸಕಲ=ಎಲ್ಲಾ, ಸಾಮ್ರಾಜ್ಯಮಂ= ಸಂಪತ್ತನ್ನೂ, ಪಾಲೆಸು=ರಕ್ಷಿಸುವ, ನಿನ್ನ =ನಿನ್ನಯ, ಸಂತಸದ= ಹರ್ಷಾತಿಶಯದ, ಏಳ್ಗೆಗೆ= ಅಭಿವೃದ್ಧಿಗೆ, ಆನನದ= ಮೋರೆಯ, ಇರವು= ಇರುವಿಕೆಯು, ಖಂಡನಂಮಾಳ್ಪುದು= ಭಗ್ನಪಡಿಸುವುದು, ಸಾಕು= ಇನ್ನು ಚಿಂತಿಸಬೇಡ, ಅಂಡಲೆಯನು = ದುಃಖದ ಬಗೆಯನ್ನು,  ಒರೆ=ತಿಳಿಸು, ಎನಲ್= ಎಂಬುದಾಗಿ ಹೇಳಲು, ಜೀಯ= ಸ್ವಾಮಿಯೆ, ಎನ್ನ=ನನ್ನ, ಒಡಲ್= ದೇಹವು, ಸಂತಾಪದಿಂ= ವ್ಯಸನದಿಂದ, ಬೆಂಡಾದುದು= ನಿಸ್ಸಾರವಾಯಿತು, ಸೈರಿಸಲು= ತಡೆಯಲು ಅರಿಯೆ= ಆಗದು, ಎಂದೊಡೆ= ಎನ್ನಲು, ಆ ತಪೋನಿಧಿ= ಆ ಬಾದರಾಯಣನು ಮುನೀಂದ್ರನು, ನುಡಿದನು=ಮುಂದೆ ವಿವರಿಸುವಹಾಗೆ ಹೇಳುವನು. 


ಅಧಿಕ ವಿಷಯ:- ತಪಃ= ತಪಸ್ಸೆ, ನಿಧಿ= ನಿಕ್ಷೇಪವಾಗಿ ಉಳ್ಳವನು (ಬ. ಸ.) 


ತಾತ್ಪರ್ಯ:-ತನ್ನಲ್ಲಿ ಮುಸುಗುನಗೆಯನ್ನೈದಿ, ಎಲೈ ರಾಜನೆ ! ನೀನು ಸಕಲ ಸಾಮ್ರಾಜ್ಯವನ್ನನುಭವಿಸುತ್ತಿರುವವನಾಗಿ ಚಕ್ರವರ್ತಿ ಎಂಬ ಹೆಸರುಳ್ಳವನಾಗಿದ್ದಿ. ಇಂಥ ನಿನ್ನ ಮುಖವೆಂಬ ಚಂದ್ರನು ರಾಹುವಿನ ಬಾಯಿಗೆ ತುತ್ತಾಗಲು ಕಾರಣವೇನು ನಿನ್ನ ದುಃಖವನ್ನೆಲ್ಲಾ ಎನ್ನು ಬಿಟ್ಟು ನಿನಗೆ ಈ ದುಃಖಕಾರಣವನ್ನು ಹೇಳೆಂದರು. ಇದನ್ನು ಕೇಳಿ ಧರ್ಮಜನು ವ್ಯಾಸಮಹಾ-

ಮುನಿಗಳನ್ನು ಕುರಿತು ಎಲೈ ಮಹಾನುಭಾವರೇ ! ಗೋತ್ರಹತ್ಯಮಾಡಿದ ದುಃಖಾತಿಶಯದಿಂದ ನನ್ನ ಶರೀರವೆಲ್ಲಾ ಬೆಂದು ಬೂದಿಯಾಗಿದೆ. ಈ ದುಃಖವನ್ನು ಸಹಿಸಲು ಅಸಾಧ್ಯವೆಂಬುದಾಗಿ ಹೇಳಿದ ರಾಯನನ್ನು ನೋಡಿ. 


ಕೆತ್ತ ಬಲ್ಗತ್ತಲೆಗೆ ತರಣಿ ಮುಂಗಾಣದಿರೆ। 

ಪೊತ್ತುವೆಳಗಂ ಬೇರೆ ತೋರ್ಪರಾರ್ ಬಿಡದೆ ಘ। 

ರ್ಮೋತ್ತರಕೆ ಮಾರುತಂ ಬೆಮರ್ದೊಡಾರ್ ಬೀಸುವರ್ ಬಳಿಕಾಲವಟ್ಟದಿಂದೆ॥ 

ಕೃತ್ರಿಮದ ವಿಷದ ಸೋಂಕಿಗೆ ಗರುಡನಳವಳಿಯೆ। 

ಮತ್ತೆ ರಕ್ಷೆಗೆ ಮಂತ್ರಿಸುವರಾರು ಭೂಪ ನೀ। 

ನೊತ್ತುವನುತಾಪಕೆಡೆಗೊಟ್ಟೊಡಾರ್ ಬಿಡಿಸುವರ್ ಪೇಳೆಂದನಾ ಮುನಿಪನು॥೧೬॥ 


ಪ್ರತಿಪದಾರ್ಥ:- ಕೆತ್ತ=ಕವಿದಿರುವ, ಬಲ್ಗತ್ತಲೆಗೆ= ಗಾಢಾಂಧಕಾರಕ್ಕೆ, ತರಣಿ= ರವಿಯು, ಮುಂಗಾಣದಿರೆ= ಏನೂ ತೋರದವನಾದರೆ, ಬೆಳಕಂ=ಕಾಂತಿಯನ್ನು,(ಬೆಳಕನ್ನು) ಪೊತ್ತು= ಹೊಂದಿ, ಬೇರೆಆರು= ಮತ್ತೆ ಯಾರು, ತೋರೂಪರು= ಪ್ರಕಾಶವನ್ನೀಯುವರು, ಮಾರುತಂ= ವಾಯುದೇವರೇ, ಬಿಡದೆ= ತಪ್ಪದೆ, ಘರ್ಮೋತ್ತರಕೆ= ಬಹಳ ಸೆಕೆಗೆ, ಬೆಮರ್ದೊಡೆ=

ಬೆವರನ್ನುಹೊಂದಿಬಿಟ್ಟರೆ,ಆರು=ಮತ್ತೆ ಯಾರು,ತಂಪನ್ನು ಉಂಟುಮಾಡತಕ್ಕವರು, ಬಳಿಕ=ಆ ಮೇಲೆ, ಆಲವಟ್ಟದಿಂ= ಬೀಸಣಿಗೆಯಿಂದ, ಬೀಸುವರು= ಬೀಸುವವರು, ಕೋತ್ರಿಮದ= ಮೋಸದ, ವಿಷದ= ನಂಜಿನ, ಸೋಂಕಿಗೆ= ಸ್ಪರ್ಶಕ್ಕೆ,  ಗರುಡನೆ=ಪಕ್ಷಿರಾಜನೆ, ಅಳವಳಿಯೆ= ಸ್ಮರಣತಪ್ಪಲು, ಮತ್ತೆ=ತಿರುಗಿ, ರಕ್ಷೆಗೆ= ವಿಷದ ಕಾಟವನ್ನು ತಪ್ಪಿಸಲು, ಆರು=ಇನ್ನು ಯಾರು, ಮಂತ್ರಿಸುವರು= ವಾಸಿಮ್ಡುವರು, ಭೂಪ=ರಾಜೇಂದ್ರನೆ, ನೀನು=ನೀನು, ಒತ್ತುವ= ಅನುಭವಿಸುತ್ತಲಿರುವ, 

( ಆವರಿಸಲ್ಪಟ್ಟಿರುವ) ಅನುತಾಪಕೆ= ಸಂಕಟಕ್ಕೆ, ಎಡೆಗೊಟ್ಟರೆ= ಅವಕಾಶಕೊಟ್ಟದ್ದೇ ಆದರೆ, ಬಿಡಿಸುವರು= ನಿನ್ನ ವ್ಯಸನವನ್ನು ನೀಗಿ ಸಂತೋಷವನ್ನುಂಟುಮಾಡುವವರು, ಆರು= ಮತ್ತೆ ಯಾರಾದರೂ ಎದಾರೆಯೆ? ಪೇಳು=ಹೇಳು

( ಯಾರೂಇಲ್ಲ)


ತಾತ್ಪರ್ಯ:- ವ್ಯಾಸಮುನಿಗಳು ಕೇಳೈ ಧರ್ಮರಾಯನೇ, ಅಂಧಕಾರವನ್ನು ನೋಡಿ ಸೂರ್ಯನೂ, ಉಷ್ಣಾತಿಶಯವನ್ನು ಕಂಡು ಮಾರುತನೂ, ವಿಷಕ್ಕೆ ಬೆದರಿ ಗರುಡನೂ ಹೆದರಿಕೊಂಡರೆ ಅವರಿಗೆ ಸಹಾಯಮಾಡತಕ್ಕವರು ಮತ್ತೆ ಯಾರಿರುವರು

ಎಂಬುದಾಗಿ ಹೇಳಿದ ಮಾತನ್ನು ಧರ್ಮರಾಯನು ಕೇಳಿ,


ಎನಲಾ ಮುನೀಂದ್ರನಂ ನೋಡಿ ಬಿಸುಸುಯ್ಯುತೊ। 

ಯ್ಯನೆ ಮಹೀಪಾಲನಿಂತೆಂದನೆಂತೆನ್ನ ಮನ। 

ದನುತಾಪಮಂ ಬಿಡುವೆನಕಟ ಶಿಶುತನದಿಂದೆ ಸಲಹಿದ ಪಿತಾಮಹಂಗೆ॥ 

ನೆನೆದವನುಚಿತವನಗ್ರಜನೆಂದರಿಯದೆ ಕ। 

ರ್ಣನನಿರಿದೆವಾಚಾರ್ಯವಧೆಗೆಳಸಿದೆವು ಸುಯೋ। 

ಧನ ಶಲ್ಯ ಮುಖ್ಯ ಬಾಂಧವರನೀಡಾಡಿದೆವು ಬದುಚಲೇಕಿನ್ನಿಳೆಯೊಳು॥೧೭॥ 


ಪ್ರತಿಪದಾರ್ಥ:-ಎನಲು= ಹೀಗೆ ಬಾದರಾಯಣ ಮುನಿಯು ಪೇಳಲಾಗಿ, ಆ ಮುನಿವರ್ಯನಂ= ಆ ರುಷಿಶ್ರೇಷ್ಠನನ್ನು, ನೋಡಿ=ಈಕ್ಷಿಸಿ, ಬಿಸುಸುಯ್ಯುತ್ತ= ದುಃಖದ ಗಾಳಿಯನ್ನು ಹೊರಕ್ಕೆ ಉಗುಳುತ್ತ, ಒಯ್ಯನೆ= ಮೆಲ್ಲಗೆ,ಮಹೀಪಾಲ=ದೊರೆ

-ಯು, ಇಂತು= ಈ ಪ್ರಕಾರವಾಗಿ, ಎಂದನು= ಹೇಳಿದನು, ಎನ್ನ=ನನ್ನ, ಮನದ= ಹೃದಯದ, ಅನುತಾಪಮಂ= ವ್ಯಸನಪರಂಪರೆಯನ್ನು, ಎಂತು= ಯಾವರೀತಿಯಲ್ಲಿ, ಬಿಡುವೆಂ=ಬಿಡಲಿ, ಅಕಟ=ಆಹಾ, ಶಿಶುತನದಿಂದ= ಹುಡುಗರಾ-

ದಾರಾಭ್ಯದಿಂದಲೂ( ಬಾಲಬಾವದಿಂದ) ಸಲಹಿದ= ಪಾಲಿಸಿದ, ಪಿತಾಮಹಂಗೆ= ಮುತ್ತ ತಂದೆಯಾದ ಭೀಷ್ಮನಿಗೆ, ಅನುಚಿತವನು= ಅವನನ್ನು ಸಂಹರಿಸುವಂಥ ನೀಚಕಾರ್ಯವನ್ನು, ನೆನೆದೆವು= ಆಲೋಚನೆ ಮಾಡಿಬಿಟ್ಟೆವು, ಅಗ್ರಜನು= ಹಿರಿಯಣ್ಣನು, ಎಂಬುದು= ಎಂಬುದಾಗಿ, ಅರಿಯದೆ= ತಿಳಿದುಕೊಳ್ಳಲಾರದೆ, ಕರ್ಣನನು= ಕರ್ಣನನ್ನು, ಇರಿದೆವು= ತಿವಿದೆವು, (ಕೊಂದೆವು) ಆಚಾರ್ಯ = ವಿದ್ಯೃಬುದ್ಧಿಗಳನ್ನು ಕಲಿಸಿದ ದ್ರೋಣಾಚಾರ್ಯರನ್ನು, ವಧೆಗೆ= ಕೊಲಲು, ಎಳಸಿದೆವು= ಬಯಸಿದೆವು, ಸುಯೋಧನ=ಕುರುನಂದನರಾದ ದುರ್ಯೋಧನಾದ್ಯರನ್ನು ,ಶಲ್ಯ=ಸೋದರಮಾವನಾದ ಶಲ್ಯನೇ, ಮುಖ್ಯ= ಮೊದಲಾದ, ಬಾಂಧವರನು= ಎಲ್ಲಾ ಬಂಧುವರ್ಗದವರನ್ನೂ, ಈಡಾಡಿದೆವು= ಸಂಹರಿಸಿಬಿಟ್ಟೆವು, ಇನ್ನು=ಇಷ್ಟಾದಮೇಲೆ, ಇಳೆಯೊಳು=ಈ ಧರ್ಮಂಡಲದಲ್ಲಿ, ಬದುಕಲು ಯಾಕೆ= ಜೀವಿಸಿ ಫಲವೇನಿದೆ, (ಏನೂ ಇಲ್ಲ) 

ಪಿತಾಮಹ= ಬ್ರಹ್ಮ, ತಾತ ಎಂಬ ಅರ್ಥಗಳಿವೆ. 


ತಾತ್ಪರ್ಯ:- ಎಲೈ ತಾಪಸೋತ್ತಮರೇ, ಹೇಗೆ ಮನೋವ್ಯಥೆಯನ್ನು ಬಿಡಲಿ, ಆದರೆ ಅಯ್ಯೋ ಬಾಲ್ಯದಿಂದಲೂ ಸಾಕಿ ಸಲಹಿದ ತಾತನಾದ ಭೀಷ್ಮಾಚಾರ್ಯನಿಗೆ ಎರಡು ಬಗೆದೆವು. ಅಣ್ಣನೆಂದು ತಿಳಿಯದೆ ಕರ್ಣನನ್ನು ಕೊಂದೆವು, ವಿದ್ಯಾ ಬುದ್ಧಿಗಳಲ್ಲಿ ನಮ್ಮನ್ನೆಲ್ಲಾ ನಿಸ್ಸೀಮರನ್ನಾಗಿ ಮಾಡಿದ ಗುರುಗಳಾದ ದ್ರೋಣಾಚಾರ್ಯರನ್ನು ಮರಣಕ್ಕೆ ಗುರಿ ಮಾಡಿದೆವು,

ಆತ್ಮ ಬಂಧುಗಳಾದ ಶಲ್ಯ, ದುರ್ಯೋಧನಾದ್ಯರನ್ನೆಲ್ಲಾನೆಲಖ್ಖೆ ಅದುಮಿದೆವು. ಗೋತ್ರಹತ್ಯ, ಗೈರುಹತ್ಯೆ,ಮೊದಲಾದ ಮಹಾ ಪಾತಕವಾದ ವಿಷವೃಕ್ಷವು ಚೆನ್ನಾಗಿ ಬೇರೂರಿ ನಿಂತುಬಿಟ್ಟಿದೆ.ಇದನ್ನು ಬುಡಸಹಿತ ಕೀಳದೆ ಇಷ್ಟು ಪಾಪ ಕರ್ಮಗಳನ್ನು ಮಾಡಿ ಇನ್ನೂ ಈ ಭೂಮಿಯಲ್ಲಿ ಬದುಕಿ ಪ್ರಯೋಜನವೇನು ? ಅಯ್ಯೋ ಎಂದು ದುಃಖಿತನಾಗಿ,


ಶಿಷ್ಯರಿಂದಭಿವರ್ಧಿಸದ ಗುರುವಿನಂತೆ ವೈ। 

ದುಷ್ಯದಿಂ ಪೂಜ್ಯನಾಗದ ವಹ್ನಿಯಂತೆ ಸಲಿಲಾಶಯವನಾಶ್ರೈಸದ॥ 

ಕೃಷ್ಯದಂತಖಿಳ ಬಾಂಧವರೊಡನೆ ಬದುಕದ ಮ। 

ನುಷ್ಯ ಸಂಸಾರದಿಂದೇನದರಿನೀ ನಿಜಾ । 

ಯುಷ್ಯಮುಳ್ಳನ್ನ ಪರಿಯಂತ ವನವಾಸಮಂ ಮಾಡುವುದೇ ಲೇಸೆಂದನು॥೧೮॥


ಪ್ರತಿಪದಾರ್ಥ:- ಶಿಷ್ಯರಿಂದ= ವಿದ್ಯಾರ್ಥಿಗಳಿಂದ,ಅಭಿವರ್ಧಿಸದ= ಏಳಿಗೆಯಾಗದ, ಗುರುವಿನಂತೆ= ಬೋಧಕನ,ಹಾಗೂ ವೈದುಷ್ಯದಿಂ= ವಿದ್ಯಾಸಂಪತ್ತಿನಿಂದ,ಪೂಜ್ಯನಾಗದ = ಬಹುಮತಿಯನ್ನು ಹೊಂದದ, ವಿಪ್ರನಂತೆ= ಭೂಸುರನ ಹಾಗೂ,ಸು= ಉತ್ತಮವಾದ, ಹವಿಷ್ಯದಿಂ= ಹವಿಸ್ಸಿನಿಂದ,ಸೇವ್ಯಮಾಗದ= ಪೂಜಿಸಲ್ಪಡದಿರುವ, ವಹ್ನಿಯಂತೆ= ಬೆಂಕಿಯ ಹಾಗೂ,ಸಲಿಲ= ಉದಕದ, ಆಶ್ರಯವನು= ಸಹಾಯವನ್ನು, ಆಶ್ರಯಿಸದ= ಹೊಂದದ, ಕೃಷ್ಯದಂತೆ= ಬೇಸಾಯದ ಹಾಗೂ, ಅಖಿಲ= ಅಶೇಷರಾದ, ಬಾಂಧವ= ಬಂಧುವರ್ಗದ,ಒಡನೆ=ಸಂಗಡ, ಬದುಕದ= ಬಾಳದಿರುವ, ಮನುಷ್ಯ= ಮಾನವನ, ಸಂಸಾರದಿಂದ, ಏನು= ಪ್ರಯೋಜನವೇನು ? ಅದರಿನಿಂ= ಆದಕಾರಣದಿಂದ, ನಿಜಾಯುಷ್ಯಂ= ನನ್ನ ಜೀವಮಾನವು, ಉಳ್ಳನ್ನಪರಿಯಂತಂ= ಇರುವತನಕ, ವನವಾಸಮಂ= ಅರಣ್ಯವಾಸವನ್ನೇ,ಮಾಡುವುದೆ=ಮಾಡತಕ್ಕದ್ದೇ,

ಲೇಸು= ಉತ್ತಮ, ಎಂದನು= ಹೀಗೆಂದನು.


ತಾತ್ಪರ್ಯ:-ಆ ಮುನಿವರ್ಯರನ್ನು ಕುರಿತು, ಎಲೈ ಮಹಾನುಭಾವರೇ, ಇಂಥ ದುಃಖವನ್ನು ಲಕ್ಷ್ಯಮಾಡದೆ ಮೂಢನಾಗಿ ರಾಜ್ಯಸುಖದಲ್ಲಿದ್ದಮಾತ್ರದಲ್ಲಿ ನನಗೆ ತತ್ಸಂಬಂಧವಾದ ದೋಷಪರಿಹಾರವಾಗುವುದು ಹೇಗೆ? ಪರಲೋಕದಲ್ಲಿ ನನಗೆ ಮೋಕ್ಷತಾನೆ ಹೇಗೆ ಲಭಿಸೀತು? ಈ ರಾಜ್ಯಸಂಬಂಧವೇ ನನಗೆ ಬೇಡ. ಇದನ್ನೆಲ್ಲಾ ನನ್ನ ಅನುಜನಾದ ಭೀಮಸೇನನಿಗೆ ಕೊಟ್ಟು ಯಾವಜ್ಜೀವವೂ ನಾನು ವನವಾಸಮಾಡುತ್ತ ಏಕಚಿತ್ತಮನೋಭಾವದಿಂದ ಮಹಾನುಭಾವನಾದ ಜಗತ್ಪತಿಯನ್ನು ನೆನೆಯುತ್ತ ಧನ್ಯನಾಗುತ್ತೇನೆ.


ಕಾಯದುಪಭೋಗ ಸಿರಿಯಂಬಯಸಿ ಸುಗತಿಯಂ। 

ಕಾಯದುರುತರ ವೈರದಿಂದಖಿಳಬಾಂಧವ ನಿ। 

ಕಾಯದುಪಹತಿಯನೆಸಗಿದ ಪಾತಕದ್ರುಮಂ ತನಗೆ ವಿಷಮಾಗಿ ಮುಂದೆ॥ 

ಕಾಯದುಳಿಯದು ಮಹಿಯನಿನ್ನಾಳ್ದೊಡಂ ಜಸಂ। 

ಕಾಯದುರೆ ಮಾಣದದರಿಂದರಸುತನವೆ ಸಾ।

ಕಾ ಯದುಕುಲೇಂದರ್ನಂ ಭಜಿಸುವೆಂ ಚಿತ್ತಶುದ್ಧಿಯೊಳರಣ್ಯದೊಳೆಂದನು॥೧೯॥


ಪ್ರತಿಪದಾರ್ಥ:- ಕಾಯದ=ಶರೀರದ, ಉಪಭೋಗ= ಸುಖಾನುಭವಗಳ, ಸಿರಿಯಂ= ಸಂಪದವನ್ನು, ಬಯಸಿ=ಕೋರಿ, ಸುಗತಿಯಂ= ಮುಂದೆ ಪಡೆಯಬೇಕಾದ ಸದ್ಗತಿಯನ್ನು, ಕಾಯದೆ= ಕಾಪಾಡಿಕೊಳ್ಳದೆ,ಉರುತರದ= ಬಹು ಕಠಿನವಾದ, ವೈರದಿಂದ= ದ್ವೇಷದಿಂದ, ಅಖಿಲ= ಸಕಲರಾದ, ಬಾಂಧವ= ಬಂಧುಗಳ, ನಿಕಾಯದ= ಸಮೂಹದ,ಉಪಹತಿಯನು= ತೊಡಕನ್ನು, ಎಸಗಿದ= ಮಾಡಿದ, ಪಾತಕ=ದುರಿತವೆಂಬ, ದ್ರುಮಂ= ವೃಕ್ಷವು, ವಿಷಮಾಗಿ=ನಂಜಾಗಿ, ಮುಂದೆ= ಇನ್ನು ಮೇಲೆ, ತನಗೆ=ನನಗೆ, ಕಾಯದೆ= ಫಲಗಳನ್ನು ಕೊಡದೆ, ಉಳಿಯದು= ಬಿಡುವುದಿಲ್ಲ, ಮಹಿಯನು= ಈ ಪ್ರಪಂಚವನ್ನು, ಇನ್ನು= ಮುಂದೆ, ಆಳ್ದೊಡಂ= ರಕ್ಷಿಸಿದರೂ, ಜಸಂ= ಯಶಸ್ಸು, ಕಾಯದು= ಸ್ಥಿರಪಡುವುದಿಲ್ಲ, (ರಕ್ಷಿಸದು) ಉರೆ= ಹೆಚ್ಚಾಗಿ,

(ಪೂರ್ತಿಯಾಗಿ) ಮಾಣದು= ಆಗುವುದಿಲ್ಲ, ಅದರಿಂದ = ಆ ಕಾರಣದಿಂದ,  ಅರಸುತನವನೆ=ರಾಜ್ಯಪದವಿಯೇ, ಸಾಕು= ಇನ್ನುಬೇಡ, ಅರಣ್ಯದೊಳು= ಕಾಡಿನಲ್ಲಿ,  ಚಿತ್ತಶುದ್ಧಿಯೊಳು= ನಿಷ್ಕಲ್ಮಸವಾದ ಹೃದಯದಿಂದ, ಯದುಕುಲ= ಯದುವಂಶಕ್ಕೆ, ಇಂದ್ರನಂ= ರಾಜನಾದ ಕೃಷ್ಣಸ್ವಾಮಿಯನ್ನು, ಭಜಿಸುವೆಂ= ಧ್ಯಾನಮಾಡುತ್ತಾ ಕಾಲಕಳೆಯುತ್ತೇನೆ, 

( ರಾಜ್ಯಭಾರ ಬೇಡವೆಂದು ಭಾವ)


ತಾತ್ಪರ್ಯ:- ಶಾರೀರಸುಖವನ್ನು ಬಯಸಿ ಮೋಕ್ಷಮಾರ್ಗವನ್ನು ಮರೆತುಬಂಧುಮಿತ್ರ ಗುರುಗಳನ್ನೆಲ್ಲಾ ನಾಶಪಡಿಸಿಪಡೆ- 

ದಿರುವ ಪಾಪವೂ ಅಪಕೀರ್ತಿಯೂ ಅತಿಶಯವಾಗಿದೆಯಾದ್ದರಿಂದ ಇನ್ನು ಅರಸುತನಕ್ಕಿಂತಲೂ ವನವಾಸವೇ ಅತ್ಯುತ್ತಮವಾಗಿದೆ ಎಂಬುದಾಗಿ ಹೇಳಿದನು.


ಆಗಳರಸನ ಮಾತಿನಾಸರಂ ಕೇಳ್ದು ತಲೆ। 

ದೂಗಿ ಮುನಿಪುಂಗವಂ ನುಡಿದನೆಲೆ ಭೂಪ ನಿಗ। 

ಮಾಗಮ ಪುರಾಣ ಶಾಸ್ತ್ರಂಗಳ ವಿಚಾರಮಂ ನೀನರಿಯದಪ್ರೌಢನೆ॥ 

ಈಗಳನುತಾಪಮೇತಕೆ ನಿಖಿಳ ಸಾಮ್ರಾಜ್ಯ । 

ಮಾಗಲಿಳೆಯಂ ಧರ್ಮದಿಂ ಪಾಲಿಸದೆ ಬನಕೆ। 

ಪೋಗಲಾವುದು ಸಿದ್ಧಿನಿನಗಪ್ಪುದುಸಿರೆನೆ ಧರಾನಾಥನಿಂತೆಂದನು॥೨೦॥ 


ಪ್ರತಿಪದಾರ್ಥ:- ಆಗಲ್= ಆ ಕಾಲದಲ್ಲಿ,  ಅರಸಿನ= ರಾಜನಾದ ಯುಧಿಷ್ಠಿರನ, ಮಾತಿನ=ವಚನದ, ಆಸರಂ= ಅಭಿಪ್ರಾಯವನ್ನು, ಕೇಳ್ದು= ಚೆನ್ನಾಗಿ ತಿಳಿದವನಾಗಿ,ತಲೆದೂಗಿ=ತಲೆಯನ್ನು ಅಲ್ಲಾಡಿಸುತ್ತ, ಮುನಿಪುಂಗವಂ= ಮುನೀಂದ್ರನಾದ ವ್ಯಾಸರುಷಿಯು, ನುಡಿದನು= ಮುಂದೆ ಹೇಳುವಂತೆ ಹೇಳಿದನು,ಎಲೆ ಭೂಪ= ಎಲೈ ರಾಜನೇ, ನೀನು= ನೀನಾದರೋ, ನಿಗಮ= ಬ್ರಹ್ಮನ ಮುಖದಿಂದ ಪ್ರಕಟಿಸಲ್ಪಟ್ಟ ಚತುರ್ವೇದಗಳಲ್ಲಿಯೂ, ಶಾಸ್ತ್ರಂಗಳ = ಮೀಮಾಂಸವೇ ಮೊದಲಾದ ಶಾಸ್ತ್ರಗಳಲ್ಲೂ, ವಿಚಾರಮಂ= ಉಕ್ತವಾದದ್ದನ್ನೆಲ್ಲಾ ( ಸಂಗತಿಯನ್ನೆಲ್ಲ) ಅರಿಯದ= ತಿಳಿಯದೆ ಇರುವ, ಅಪ್ರೌಢನೆ= ಬುದ್ಧಿಹೀನನೆ, (ಅಂದರೆ ಸಕಲ ನಿಗಮಾಗಮ ಶಾಸ್ತ್ರ ಪಾರಂಗತನೆಂದು ಅಭಿಪ್ರಾಯವು), ಈಗಲ್= ಈಗ, ಅನುತಾಪಂ= ಕೊರತೆಯು, ಏತಕೆ= ಏಕೆ, ನಿಖಿಲ= ಅಶೇಷವಾದ, ಸಾಮ್ರಾಜ್ಯಂ= ಒಡೆತನ, ಆಗಲು= ದೈವಾಯತ್ತವಾಗಿ ಒದಗಿದ್ದರೂ,ಇಳೆಯಂ = ಧರ್ಮಂಡಲವನ್ನು, ಧರ್ಮದಿಂ= ಧರ್ಮಮಾರ್ಗದಿಂದ, ಪಾಲಿಸದೆ=ಸಲಹದೆ, ವನಕೆ= ಕಾಡಿಗೆ, ಪೋಗಲು= ಹೋಗುವುದಕ್ಕೆ, ನಿನಗೆ= ನಿನಗಾದರೋ, ಆವುದು ಸಿದ್ಧಿಯು= ಬೇರೆ ಯಾವ ಇಷ್ಟಾರ್ಥತಾನೆ,ಅಪ್ಪುದು= ಆಗುತ್ತದೆ ? ಉಸಿರು=ಹೇಳು, ಎನಲು= ಹೀಗೆಂದು ವ್ಯಾಸರು ಹೇಳಲಾಗಿ, ಧರಾನಾಥನು= ಈ ಮಾತುಗಳನ್ನು ಕೇಳಿದ ರಾಜೇಂದ್ರನಾದ ಯುಧಿಷ್ಠಿರನು,  ಇಂತು= ಮುಂದೆ ಹೇಳುವ ತೆರನಾಗಿ, ಎಂದನು= ವ್ಯಾಸಮುನಿಗಳಿಗೆ ಉತ್ತರವನ್ನಿತ್ತನು.


ತಲೆಯನ್ನು ತೂಗಿ=ತಲೆದೂಗಿ ( ಕ್ರಿ. ಸ.) ಮುನಿಗಳಲ್ಲಿ ಪುಂಗವಂ= ಮುನಿಪುಂಗವಂ ( ಸ. ತ. ) ಸಿಂಹ= ಪ್ರಕಾಂಡ ಪುಂಗವ, ಮಣಿ, ವರ ಈ ಮೊದಲಾದ ಶಬ್ಧಗಳನ್ನು ಶ್ರೇಷ್ಠವಾಚಕದಲ್ಲಿ ಕವಿಗಳು ಪ್ರಯೋಗಿಸುತ್ತೃರೆ.


ತಾತ್ಪರ್ಯ:- ಧರ್ಮರಾಜನ ಈ ಅಭಿಪ್ರಾಯವನ್ನೆಲ್ಲಾ ಕೇಳಿ ವ್ಯಾಸಮುನಿಪುಂಗವನು ಎಲೈಧರ್ಮಜ, ನೀನು ವೇದವೇದಾಂಗಗಳಲ್ಲಿಯೂ ಸಕಲವಾದ ಶಾಸ್ತ್ರ ಪೈರಾಣಗಳಲ್ಲೂ ಉತ್ತಮೋತ್ತಮನೆನಿಸಿಕೊಂಡು ಪ್ರಜ್ಞಾಶಾಲಿಯಾಗಿದ್ದೂ

ಇಂಥ ಅವಿವೇಕತೆಯನ್ನು ಹೊಂದಬಹುದೆ ? ನೀನು ಅನ್ಯಾಯವಾಗಿ ಹೀಗೆ ದುಃಖ ಸಮುದ್ರದಲ್ಲಿ ಮಗ್ನನಾಗಿ ಏಕಿರುವೆ ? ಇನ್ನು ಸಾಕು ! ವ್ಯಥೆಯನ್ನು ಬಿಟ್ಟು ಸಂತೋಷಚಿತ್ತವನ್ನು ಪಡೆ. ಸಕಲ ಸುಖ ವೈಭವಗಳಿಗೆ ಕಾರಣವಾಗಿರುವ ರಾಜ್ಯವನ್ನು ಪಾಲಿಸು, ರಾಜ್ಯವನ್ನು ಬಿಟ್ಟು ಕಾಡಿನಲ್ಲಿ ವಾಸಮಾಡಿದ ಮಾತ್ರಕ್ಕೆ ಗೋತ್ರಹತ್ಯಾದಿ ದೋಷಗಳು ಹೇಗೆ ತಾನೆ ಹೋಗುತ್ತವೆ 

ಈ ಮೌಢ್ಯವನ್ನು ಸುಖವಾಗಿ ರಾಜ್ಯವನ್ನು ಪಾಲಿಸು ಎಂದು ಹೇಳಿದನು.