ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ನವೆಂಬರ್ 1, 2025

ಜೈಮಿನಿ ಭಾರತ 20 - ದೊಡ್ಡಬೆಲೆ ನಾರಾಯಣಶಾಸ್ತ್ರೀ

ಜೈಮಿನಿ ಭಾರತ 20 - ದೊಡ್ಡಬೆಲೆ ನಾರಾಯಣಶಾಸ್ತ್ರೀ


ಸೂಚನೆ :- ರಘುವರನ ತುರಗಮೇಧಾಧ್ವರದ ಕುದುರೆಯನ। 

ಲಘು ಪರಾಕಾಕ್ರಮಿ ಲವಂ ತರಳತನದಿಂ ಕಟ್ಟಿ । 

ಲಘಟಿತಮೆನಿಸಿತು ಶತ್ರುಘ್ನ ಲಕ್ಷ್ಮಣರ ತಳತಂತ್ರಕ್ಕೆ ಬಿಡಿಸಿಕೊಳಲು॥ 


ಪ್ರತಿಪದಾರ್ಥ :- ಅಲಘು= ಅತಿಶಯದಿಂದ, ಪರಾಕ್ರಮಿ= ಶೌರ್ಯವುಳ್ಳ, ಲವಂ= ಲವನೆಂಬ ಹೆಸರುಳ್ಳ ಸೀತೆಯ ಕಿರಿಯ ಮಗನು,ರಘುವರನ= ರಾಮನ, ತುರಗಮೇಧ= ಅಶ್ವಮೇಧವೆಂಬ, ಅಧ್ವರದ= ಯಾಗದ, ಕುದುರೆಯನು=ಅಶ್ವವನ್ನು,  ತರಳತನದಿಂದ= ಬಾಲಭಾವದಿಂದ, ಕಟ್ಟಲು= ಕಟ್ಟಿಹಾಕಲಾಗಿ,ಶತ್ರುಘ್ನ ಲಕ್ಷ್ಮಣರ= ಶತ್ರುಘ್ನ ಲಕ್ಷ್ಮಣರೆಂಬ ಶ್ರೀರಾಮನ ಅನುಜರ, ತಳತಂತ್ರಕ್ಕೆ= ಪರಾಕ್ರಮಕ್ಕೆ, ಅಘಟಿತ= ವಶವಾಗದಿರುವುದು, ಎನಿಸಿತು= ಎಂದು ಹೇಳಿಸಿಕೊಂಡಿತು. 


ಅ॥ವಿ॥ ಅಲಘು= ಸ್ವಲ್ಪವಲ್ಲದ್ದು ಎಂದರೆ ಹೆಚ್ಚಾದದ್ದು, ರಘು+ವರ= ರಘುವರ ( ಷ. ತ. ) ತರಳತನ=ತರಳನ ಭಾವ 

( ಭಾವನಾಮದಲ್ಲಿ" ತನ" ಎಂಬ ಪ್ರತ್ಯಯವು ಸೇರಿದೆ) 


ತಾತ್ಪರ್ಯ:-ಶ್ರೀರಾಮನ ಅಶ್ವಮೇಧದ ಕುದುರೆಯನ್ನು ಮಹಾಪರಾಕ್ರಮಿಯಾದ ಲವನು ಕಟ್ಟಲು ಶತ್ರುಘ್ನ ಲಕ್ಷ್ಮಣರ ಸೈನ್ಯಕ್ಕೆ ಅದನ್ನು ಬಿಡಿಸಿಕೊಳ್ಳಲಾಗಲಿಲ್ಲ. 


ಹಿಮಕರಕುಲೇಂದ್ರ ಕೇಳ್ ವಾಲ್ಮೀಕಿ ಮುನಿಪನಾ। 

ಶ್ರಮದೊಳ್ ಸಮಸ್ತ ಕಲೆಗಳನರಿದು ಕಾಕ ಪ। 

ಕ್ಷಮನಾಂತು ಜಾನಕಿಯ ಶುಶ್ರೂಷೆಯೊಳ್ ಸಂದು ಋಷಿಯ ಚಿತ್ತಕ್ಕೆ ಬಂದು॥ 

ಯಮಳರಿರೆ ಕಂಡು ಸಂಪ್ರೀತಿಯಂ ತಾಪಸೋ। 

ತ್ತಮನಿತ್ತನಿಷು ಚಾಪ ಚರ್ಮ ಖಡ್ಗಂಗಳಂ।

 ರಮಣೀಯ ಕವಚ ಕುಂಡಲ ಕಿರೀಟಂಗಳಂ ತನ್ನಯ ತಪೋಬಲದೊಳು॥೧॥


ಪ್ರತಿಪದಾರ್ಥ :- ಹಿಮಕರಕುಲೇಂದ್ರ = ಜನಮೇಜಯ ಪ್ರಭುವೆ! ಕೇಳು=ಲಾಲಿಸು, ವಾಲ್ಮೀಕಿ=ವಾಲ್ಮೀಕಿ ಋಷಿಯೆಂಬ, ಮುನಿಪನ= ತಾಪಸೋತ್ತಮನ, ಆಶ್ರಮದೊಳ್= ತಪೋವನದಲ್ಲಿ, ಸಮಸ್ತ = ಎಲ್ಲ, ಕಲೆಗಳನು= ವಿದ್ಯೆಗಳನ್ನು, ಅರಿದು= ಕಲಿತು, ಕಾಕಪಕ್ಷಮನು= ಜುಂಪರು ಕೂದಲನ್ನು, ಆಂತು=ಹೊಂದಿ, ಜಾನಕಿಯ= ವೈದೇಹಿಯ, ಶುಶ್ರೂಷೆಯೊಳ್= ಚಾಕರಿಯಲ್ಲಿ, ಸಂದು=ಇದ್ದವನಾಗಿ, ಋಷಿಯ= ವಾಲ್ಮೀಕಿ ಮುನಿಯ, ಚಿತ್ತಕ್ಕೆ= ಮನಸ್ಸಿಗೆ, ಬಂದು= ಗುಣಶಾಲಿಗಳು ಎಂಬ ಪ್ರೇಮಒದಗಿ, ಯಮಳರು= ಅಣ್ಣತಮ್ಮಂದಿರಾದ ಕುಶಲವರು, ಇರೆ=ಇರಲಾಗಿ, ಕಂಡು= ಈಕ್ಷಿಸಿ, ಸಂಪ್ರೀತಿಯಿಂ= ಪ್ರೇಮಾತಿಶಯದಿಂದ, ತಾಪಸೋತ್ತಮನು= ಋಷಿವರ್ಯನಾದ ವಾಲ್ಮೀಕಿಯು, ತನ್ನಯ=ತನ್ನ ಸಂಬಂಧವಾದ, ತಪೋಬಲದೊಳು= ತಪಸ್ಸಿನ ಮಹಿಮೆಯಿಂದ, ಇಷು= ಬಾಣಗಳು, ಚಾಪ=ಧನುಸ್ಸು,ಚರ್ಮ=ಚರ್ಮವು, ಖಡ್ಗಂಗಳಂ= ಕತ್ತಿಯೇ ಮೊದಲಾದವನ್ನು, ರಮಣೀಯ= ಕಾಂತಿಯುಕ್ತಂಗಳಾದ, ಕವಚ= ಅಂಗಿಗಳು, ಕುಂಡಲ= ಕಿವಿಯನ್ನು ಅಲಂಕರಿಸುವ ಕಡಕುಗಳು, ಕಿರೀಟಂಗಳಂ= ಕಿರೀಟಗಳನ್ನು, ಇತ್ತನು= ಕೊಟ್ಟನು, 


ಅ॥ವಿ॥ ಹಿಮಕರಕುಲ=ಹಿಮ-ತಣ್ಣಗಿರುವ,ಕರ-ಕಿರಣಗಳುಳ್ಳವನು, ಚಂದ್ರನು, (ಬ. ಸ.) ಹಿಮಕರಕುಲದ ಇಂದ್ರ= ಜನಮೇಜಯ ( ಷ. ತ.) ವಾಲ್ಮೀಕಿ ಮುನಿಪ= ಮುನಿ-ಋಷಿಗಳನ್ನು, ಪ- ಪಾಲಿಸುವವನು ಎಂದರೆ ಮುನಿಶ್ರೇಷ್ಠನು

( ಕೃ. ವೃ.) ವಾಲ್ಮೀಕಿ ಎಂಬ ಮುನಿಪ (ಸೌ. ಪೂ.) ವಲ್ಮೀಕ= ಹುತ್ತ, ವಲ್ಮೀಕದಲ್ಲಿ = ಹುತ್ತದಲ್ಲಿ, ಉತ್ಪನ್ನನಾದವನಾದುದ- 

ರಿಂದ, ವಾಲ್ಮೀಕಿ ಎಂಬ ಹೆಸರು ಬಂದಿರುವುದು. ಜಾನಕಿ= ಜನಕರಾಯನ ಕುವರಿಯೈ. ತಾಪಸ+ಉತ್ತಮ= ತಾಪಸೋತ್ತಮ ( ಗು. ಸಂ)


ಇನಕುಲಲಲಾಮನಾದ ಜನಮೇಜಯನೆ ಕೇಳು, ವಾಲ್ಮೀಕಿ ಮುನಿಪನ ಆಶ್ರಮದಲ್ಲಿ ಲವಕುಶರು ಅಭಿವೃದ್ಧಯಾಗುತ್ತ ತನ್ನ ತಾಯಿಯಾದ ಸೀತೆಯನ್ನೂ ಗುರುವಾದ ವಾಲ್ಮೀಕಿಯನ್ನೂ ಅಲ್ಲಿರುವ ಋಷಿಮಂಡಲಿಯನ್ನೂ ಮೆಚ್ಚುವಂತೆ ಮಾಡುತ್ತ, ಆ ಮಹರ್ಷಿಯ ಅನುಗ್ರಹಕ್ಕೆ ಪಾತ್ರರಾಗಿ, ಆತನಿಂದ ಸಕಲ ಶಾಸ್ತ್ರಗಳನ್ನೂ ಅಭ್ಯಾಸ ಮಾಡಿ, ಸಕಲ ಕಲಾಕೋವಿದರೆನ್ನಿಸಿಕೊ-

ಕೊಂಡರು, ಬಾಣವೆದ್ಯೆಯಲ್ಲಿಯೂ, ಧನುಸ್ಸು, ಚರ್ಮ, ಕತ್ತಿ ಮೊದಲಾದ ವೀರ ವಿದ್ಯೆಗಳಲ್ಲಿಯೂ,ಪಂಡಿತರಾದ ಈ ಇಬ್ಬರು ಅವಳಿ ಮಕ್ಕಳನ್ನು ನೋಡಿ ಪರಮಸಂತೋಷ ಪಟ್ಟು ತನ್ನ ತಪಃ ಪ್ರಭಾವದಿಂದ ಉತ್ತಮವಾದ ಕಿರೀಟ, ಅಂಗಿ, ಕುಂಡಲಗಳು, ಮೊದಲಾದುವನ್ನೆಲ್ಲಾ ಇತ್ತು ರಣ ಪಂಡಿತರನ್ನಾಗಿ ಮಾಡಿದರು. ಈ ರೀತಿಯಲ್ಲಿ ವಾಲ್ಮೀಕಿ ಮುನಿಪುಂಗವ- 

ರಿಂದ ಎಲ್ಲಾ ವಿದ್ಯೆಗಳಲ್ಲಿಯೂ ನಿಪುಣರೆನ್ನಿಸಿಕೊಂಡು ತಾಯಿಯಾದ ಸೀತಾದೇವಿಯ ಸೇವೆಮಾಡುತ್ತ, ಕಾಲ ಕಳೆಯುತ್ತಿ-

ದ್ದರಲ್ಲದೆ  ವಾಲ್ಮೀಕಿಯಿಂದ ಭೋದಿಸಲೂಪಟ್ಟ ರಾಮಚಂದ್ರನ ಕಥೆಯ ಸಂಕೀರ್ತನೆಯನ್ನು ತಾಳ, ಲಯಗಳಿಗನುಗುಣ- 

ವಾಗಿ ಸದಾ ಭಜನೆಮಾಡುತ್ತಲಿದ್ದರು. ಈ ಮಕ್ಕಳನ್ನು ಕಂಡು ಅಲ್ಲಿದ್ದ ಇತರ ಮುನಿಗಳೆಲ್ಲರೂ ತಮತಮಗೆ ತಿಳಿದ ವೀರ ವಿದ್ಯೆಗಳನ್ನೂ ಶಾಸ್ತ್ರವಿದ್ಯೆಗಳನ್ನೂ, ಹೇಳಿಕೊಟ್ಟವರಾಗಿ ಅನೇಕ ಮಂತ್ರಾಸ್ತ್ರಗಳನ್ನೆಲ್ಲಾಅನುಗ್ರಹಿಸಿದರೈ. ಋಷಿವರ್ಯರ ಆಶೀರ್ವಾದ ಬಲದಿಂದ ಲವಕುಶರು ಹುಣ್ಣಿಮೆಯ ಚಂದ್ರನಂತೆ ದಿನೇದಿನೇ ಅಭಿವೃದ್ಧಿಯಾಗುತ್ತಲಿದ್ದರು.


ಅವರ್ಗಳಂತಿರಲಯೋಧ್ಯಾಪುರದೊಳಿತ್ತ ರಾ। 

ಘವನಖಿಳ ಧರಣಿಯಂ ಪಾಲಿಸುತೆ ಸೌಖ್ಯಾನು। 

ಭವದೊಳೊಂದಿಸದೆ ರಾವಣನವಧೆಯೊಳಂದು ಬಂದಾ ಬ್ರಹ್ಮಹತಿ ತನ್ನನು॥ 

ಅವಗಡಿಸಲದಕೆ ನಾಷ್ಕೃತಿ ಯಾವುದೆಂದು ಸಾ। 

ರುವ ನಿಗಮದರ್ಥಮಂ ತಿಳಿದು ಹಯಮೇಧಮಂ। 

ತವೆ ನೆಗಳ್ಚುವನಾಗಿ ನಿಶ್ಚೈಸಿ ಕರೆಸಿದಂ ವರವಸಿಷ್ಟಾದಿಗಳನು॥೨॥ 


ಪ್ರತಿಪದಾರ್ಥ :- ಅವರ್ಗಳು=ಕುಶಲವರು, ಅಂತು= ಆ ತೆರದಿ, ಇರಲು= ಅಭಿವೃದ್ಧಿ ಹೊಂದುತ್ತಿರಲು,ಅಯೋಧ್ಯಾಪುರ- ದೊಳು = ಅಯೋಧ್ಯಾ ನಗರದಲ್ಲಿ, ಇತ್ತ= ಈ ಕಡೆ, ರಾಘವನು= ಶ್ರೀರಾಮಮೂರ್ಯಿಯು, ಅಖಿಳ= ಸಮಸ್ತ, ಧರಣಿಯಂ= ಭೂಮಂಡಲವನ್ನು, ಸೌಖ್ಯಾನುಭವದೊಳು= ಸುಖ ಸಮೃದ್ಧಿಯಿಂದ, ಪಾಲಿಸುತ= ಕಾಪಾಡುತ್ತ, ಅಂದು= ರಾವಣನೊಡನೆ ಯುದ್ಧಮಾಡಿದ ಸಂದರ್ಭದಲ್ಲಿ,ರಾವಣ= ರಾವಣಾಸೈರನ, ವಧೆಯೊಳು= ಕೊಂದುಹಾಕುವಿಕೆಯಿಂದ, ಒಂದಿದ= ಉಂಟಾದ, ಅಬ್ರಹ್ಮಹತಿ= ಆ ಬ್ರಹ್ಮಹತ್ಯಾದೋಷವು, ತನ್ನನು= ತನ್ನನ್ನು, ಅವಗಡಿಸಲು= ಹಿಂಸೆಪಡಿಸಲು, ಅದಕೆ= ಅದರ ನಿವಾರಣೆಗೆ, ನಿಷ್ಕೃತಿಯು= ಪರಿಹಾರಕೃತ್ಯವು, ಆವುದು= ಯಾವುದು, ಎಂದು=ಎಂಬುದಾಗಿ, ಸಾರುವ= ಹೇಳತಕ್ಕ, ನಿಗಮದ= ವೇದವಚನದ, ಅರ್ಥಮಂ= ಆಶಯವನ್ನು, ತಿಳಿದು= ತಿಳಿದುಕೊಂಡವನಾಗಿ,ಹಯಮೇಧಮಂ= ಅಶ್ವಮೇಧಯಾಗವನ್ನು, ತವೆ= ಚೆನ್ನಾಗಿ, ನೆಗಳ್ಚುವನಾಗಿ= ಮಾಡತಕ್ಕವನಾಗಿ,ನಿಶ್ಚೈಸಿ= ನಿಷ್ಕರ್ಷೆಮಾಡಿ, ವರ= ಉತ್ತಮರಾದ,ವಸಿಷ್ಠಾದಿಗಳ= ವಸಿಷ್ಠರೇ ಮೊದಲಾದವರನ್ನು, ಕರೆಸಿದಂ= ಬರಮಾಡಿಕೊಂಡನು. 


ಅ॥ವಿ॥ಸೌಖ್ಯ+ಊನುಭವ= ಸೌಖ್ಯಾನುಭವ ( ಷ. ತ. ) ಬ್ರಹ್ಮ +ಹತಿ= ಬ್ರಹ್ಮಹತಿ( ಷ. ತ. ) 


ತಾತ್ಪರ್ಯ:- ಇತ್ತ ಅಯೋಧ್ಯಾಪಟ್ಟಣದಲ್ಲಿ ಶ್ರೀರಾಮಚಂದ್ರನು ಸಕಲ ಭೂಮಂಡಲವನ್ನು ಸುಖದಿಂದ ಪಾಲಿಸುತ್ತ ಸೌಖ್ಯದಲ್ಲಿದ್ದರೂ ಕೂಡ ರಾವಣನನ್ನು ಕೊಂದ್ದರಿಂದ ಬ್ರಹ್ಮಹತ್ಯಾದೋಷವು ಬಂದೊದಗಿರುವುದೆಂಬ ವ್ಯಾಕುಲವು ಇವನ ಸುಖವನ್ನೆಲ್ಲಾ ಭಸ್ಮವಾಗುವಂತೆ ಮಾಡಿಬಿಡುತ್ತಿತ್ತು, ಹೀಗಿರುವಲ್ಲಿ ಒಂದಾನೊಂದು ದಿನ ತನ್ನಷ್ಟಕ್ಕೆ ತಾನೇ ಆಲೋಚಿಸಿ, 

ಬ್ರಹ್ಮಹತ್ಯಾದೋಷವು ಹೋಗಬೇಕಾದರೆ ಅಶ್ವಮೇಧಯಾಗಕ್ಕಿಂತಲೂ ಮೇಲಾದದ್ದು ಯಾವುದೂ ಇಲ್ಲವೆಂದು ಬಗೆದು ಆ ಮಹಾ ಯಾಗವನ್ನು ಮಾಡಬೇಕೆಂದು ಯೋಚಿಸಿ ವಸಿಷ್ಠರೆ ಮೊದಲಾದವರನ್ನು ಕರೆಸಿದನು. 


ವಾಮದೇವಾತ್ರಿ ಗಾಲವ ಗುರು ವಸಿಷ್ಠ ವಿ।

ಶ್ವಾಮಿತ್ರರಂ ಕರೆಸಿ ಹಯಮೇಧಲಕ್ಷಣವ। 

ನಾ ಮುನಿಗಳಿಂ ಕೇಳ್ದನುಜ್ಞೆಗೊಳಲವರಿದಕೆ ನಿಜಪತ್ನಿವೇಳ್ವುದೇನಲು॥ 

ಹೇಮನಿರ್ಮಿತವಾದ ಜಾನಕಿಯನಿರಿಸಿಕೊಂ। 

ಡೀ ಮಹಾಯಜ್ಞಮಂ ನಡೆಸುವೆಂ ತಾನೆಂದು। 

ರಾಮಚಂದ್ರಂ ನಿಖಿಳಋಷಿಗಳನೊಡಂಬಡಿಸಿ ಶಾಲೆಯಂ ಮಾಡಿಸಿದನು॥೩॥ 


ಪ್ರತಿಪದಾರ್ಥ :- ವಾಮದೇವ= ವಾಮದೇವನೆನ್ನುವ, ಅತ್ರಿ= ಅತ್ರಿಯೆಂಬ ಹೆಸರುಳ್ಳ, ಗಾಲವ= ಗಾಲವನೆಂಬ ಹೆಸರುಳ್ಳ,ಗುರು=ಪುರೋಹಿತನಾದ, ವಸಿಷ್ಠ = ವಸಿಷ್ಠರೆಂದು ಪ್ರಸಿದ್ಧರಾದ,ವಿಶ್ವಾಮಿತ್ರ= ವಿಶ್ವಾಮಿತ್ರನೆಂಬ ಹೆಸರುಳ್ಳ, ಋಷಿಗಳನ್ನೆಲ್ಲಾ, ಕರೆಸಿ= ಬರಮಾಡಿಕೊಂಡು,  ಹಯಮೇಧ= ಅಶ್ವಮೇಧವೆಂಬ ಯಾಗದ, ಲಕ್ಷಣವನು= ವಿಧಾನವನ್ನು, 

ಆ ಮುನಿಗಳಂ= ಆ ತಾಪಸರನ್ನು, ಕೇಳ್ದು= ಕೇಳಿ, ಅನುಜ್ಞೆಗೊಳ್ಳಲು= ಅಪ್ಪಣೆಪಡೆದು, ಅವರು= ಆ ಮುನಿಗಳು, ಇದಕ್ಕೆ = ಈ ಯಾಗಕ್ಕೆ, ನಿಜಪತ್ನಿ= ಧರ್ಮಪತ್ನಿಯು, ವೇಳ್ಪುದಂ= ಸಮೀಪವರ್ತಿಯಾಗಿರಬೇಕೆಂದು, ಎನಲು=ನುಡಿಯಲು, ಹೇಮ= ಚಿನ್ನದಿಂದ, ನಿರ್ಮಿತಮಾದ= ಮಾಡಲ್ಪಟ್ಟ, ಜಾನಕಿಯನು= ಸೀತಾದೇವಿಯನ್ನು, ಇರಿಸಿಕೊಂಡು= ಹತ್ತಿರದಲ್ಲಿ-

ರುವಂತೆ ಮಾಡಿಕೊಂಡು,ಈ ಮಹಾಯಜ್ಞಮಂ= ಈ ದೊಡ್ಡಯಾಗವನ್ನು, ತಾನು=ನಾನಾದರೋ, ನಡೆಸುವೆನು= ನೆರವೇ-

ರಿಸುತ್ತೇನೆ, ಎಂದು= ಎಂಬುದಾಗಿ, ರಾಮಚಂದ್ರಂ= ಶ್ರೀರಾಮನು, ನಿಖಿಳ = ಸಮಸ್ತ, ಋಷಿಗಳನು= ಮುನಿವರ್ಯರನ್ನು, ಒಡಂಬಡಿಸಿ=ಒಪ್ಪಿಸಿ, ಶಾಲೆಯಂ= ಯಾಗಮಂಟಪವನ್ನು, ಮಾಡಿಸಿದನು= ಸಿದ್ಧಪಡಿಸಿದನು.  


ತಾತ್ಪರ್ಯ:- ಮುನಿವರ್ಯರಾದ ವಾಮದೇವ, ಅತ್ರಿ, ಗಾಲವರನ್ನೂ ತನ್ನ ಮುಖ್ಯ ಗುರುವೂ ಪುರೋಹಿತನೂ ಆದ ವಸಿಷ್ಠ ಮಹರ್ಷಿಯನ್ನೂ, ವಿಶ್ವಾಮಿತ್ರರನ್ನೂ ಕರೆಸಿದವನಾಗಿ ತನ್ನಾಶಯವನ್ನು ಆ ಮುನಿಪತಿಗಳೊಂದಿಗೆ ಹೇಳಿ ಈ ಯಾಗವನ್ನು ಮಾಡಬಹುದೆಂದು ಅವರಿಂದ ಅಪ್ಪಣೆ ಪಡೆದನು. ಆಗ ಅಲ್ಲಿ ನೆರೆದಿದ್ದ ಮುನಿಗಳೆಲ್ಲರೂ ಶ್ರೀರಾಮನನ್ನು ಕುರಿತು, ಎಲೈ ರಾಮನೆ,ಈ ಮಹಾಯಾಗದಿಂದ ಬ್ರಹ್ಮಹತ್ಯಾದೋಷವು ಪರಿಹಾರವಾಗುವುದರಲ್ಲಿಲೇಶವೂ ಅನುಮಾನವಿಲ್ಲ. ಆದರೆ ಈ ಯಾಗಕ್ಕೆ ಪಟ್ಟಮಹಿಷಿ ಇರಬೇಕಾದ್ದು ಅವಶ್ಯಕವೆಂದು ತಿಳಿಸಿದ ಮುನಿಗಳ ನುಡಿಯನ್ನು ಕೇಳಿ, ಬಂಗಾರದಿಂದ ಸೀತಾವಿಗ್ರಹವನ್ನು ಮಾಡಿಸಿ ಈ ಮಹಾಯಾಗವನ್ನು ಮಾಡುವೆನೆಂದು ಅವರಿಂದ ಅಪ್ಪಣೆ ಪಡೆದು, ಬಳಿಕ ಅಶ್ವಮೇಧಾ-

ರ್ಹವಾದ ಒಂದು ದೊಡ್ಡ ಯಾಗಶಾಲೆಯನ್ನು ಮಾಡಿಸಿದನು. 


ಬಳಿಕ ವೇದೋಕ್ತ ಪ್ರಕಾರದಿಂ ದೀಕ್ಷೆಯಂ। 

ತಳೆದು ರಘುನಾಥಂ ತುರಂಗಮಂ ಪೂಜೆಗೈ। 

ದಿಳೆಯೊಳ್ ಚರಿಸಲದರ ಪಣೆಗೆ ತನ್ನಗ್ಗಳಿಕೆಯಂ ಬರೆದ ಪತ್ರಿಕೆಯನು॥ 

ಅಳವಡಿಸಿ ಕೂಡೆ ಮೂರಕ್ಷೋಹಿಣೀಮೂಲ। 

ಬಲಸಹಿತ ವೀರಶತ್ರುಘ್ನನಂ ಕಾವಲ್ಗೆ। 

ಕಳುಹಿಬಿಡಲಾ ಹಯಂ ತಿರುಗುತಿರ್ದುದು ಧರೆಯಮೇಲಖಿಳ ದೆಸೆದೆಸೆಯೊಳು॥೪॥ 


ಪ್ರತಿಪದಾರ್ಥ :- ಬಳಿಕ =ತರುವಾಯ, ವೇದ=ವೇದವಚನಗಳಲ್ಲಿ, ಉಕ್ತ= ಹೇಳಿರುವ, ಪ್ರಕಾರದಿಂ= ತೆರದಿಂದ, ದೀಕ್ಷೆ- ಯಂತಳೆದು= ದೀಕ್ಷಾಬದ್ಧನಾಗಿ, ರಘುನಾಥಂ= ಶ್ರೀರಾಮನು, ತುರಗಮಂ= ಯಜ್ಞಾಶ್ವವನ್ನು, ಪೂಜೆಗೈದು= ಪೂಜೆಮಾಡಿ, ಇಳೆಯೊಳ್= ಭೂಮಂಡಲದಲ್ಲಿ, ಸಂಚರಿಸಲು=ತಿರುಗಲು, ಅದರ=ಆ ಕುದುರೆಯ, ಪಣೆಗೆ= ಹಣೆಗೆ, ತನ್ನ= ಸ್ವಕೀಯ-

ವೃದ, ಅಗ್ಗಳಿಕೆಯ= ಬಿರುದಾವಳಿಯನ್ನು, ಬರೆದು= ಬರೆದಿರುವಂತ, ಪತ್ರಿಕೆಯನೈ= ಚಿನ್ನದ ತಗಡನ್ನು, ಅಳವಡಿಸಿ= ಬಿಗಿದು, ಕೂಡೆ= ಒಡನೆಯೇ, ಮೂರು ಅಕ್ಷೋಹಿಣಿಯ= ಆರೈಲಕ್ಷ ಐವತ್ತು ಸಾವಿರದ ನೂರು ಸೇನೆಯನ್ನೊಳಗೊಂಡಿ-

ರುವ,  ಮೂಲಬಲಸಹಿತ=ಮುಖ್ಯಸೈನ್ಯದೊಂದಿಗೆ, ವೀರ= ಪರಾಕ್ರಮಿಯಾದ, ಶತ್ರುಘ್ನನಂ= ಶತ್ರುಘ್ನನೆಂಬ ಸಹೋದರ-

ನನ್ನು, ಕಾವಲ್ಗೆ= ರಕ್ಷಣೆಗೆ, ಕಳುಹಿ= ಕಳುಹಿಸಿ, ಬಿಡಲು= ಯಜ್ಞಾಶ್ವವನ್ನು ಬಿಡಲಾಗಿ, ಆ ಹಯಂ= ಆ ತುರಗವು, ಧರೆಯ-

ಮೇಲೆ= ಭೂವಲಯದಲ್ಲಿ,ಅಖಿಳ=ಸಮಸ್ತ, ದೆಸೆದೆಸೆಯೊಳು=ದಿಕ್ಕುಗಳಲ್ಲೆಲ್ಲಾ, ತಿರುಗುತ= ಸಂಚಾರಮಾಡುತ್ತ, ಇರ್ದುದು= ಇತ್ತು. 


ಅ॥ವಿ॥ ರಘು+ನಾಥ= ರಘುನೃಥ (ಷ. ತ. ) ಶತ್ರು+ವೈರಿಗಳನ್ನು, ಘ್ನ= ಸಂಹರಿಸತಕ್ಕವನು (ಕೃ. ವೃ.) 


ತಾತ್ಪರ್ಯ:- ಅನಂತರ ವೇದೋಕ್ತವಿಧಾನದಿಂದ ಅಶ್ವಮೇಧಯಾಗವನ್ನು ಮಾಡಲು ದೀಕ್ಷಾಬದ್ಧನಾಗಿ, ಯಜ್ಞಾಶ್ವವನ್ನು ಗಂಧಪುಷ್ಪಾಕ್ಷತೆಗಳಿಂದಲಂಕರಿಸಿ, ಭಂಗಾರದ ಒಂದು ತಗಡಿನಲ್ಲಿ ತನ್ನ ಬಿರುದಾವಳಿಯನ್ನೆಲ್ಲಾ ಬರೆದು, ಪೂಜೆಮಾಡಿದ ಕುದುರೆಯ ಹಣೆಯಲ್ಲಿ ಬಿಗಿದು, ಆ ಉತ್ತಮಾಶ್ವದ ಬೆಂಗಾವಲಿಗಾಗಿ ಮೂರು ಅಕ್ಷೋಹಿಣಿದಳವನ್ನೂ,ವೈರಿ ಹೃದಯ- 

ಭೇದಕನೂ ತನ್ನ ತಮ್ಮನೂ ಆದ ಶತ್ರುಘ್ನನನ್ನು ಕಳುಹಿಸಿದನು. ಕಾವಲ್ಗಾರರಿಂದೊಡಗೂಡಿದ ಆ ಅಶ್ವವುದಿಕ್ಕುದಿಕ್ಕಿನ-

ಲ್ಲಿಯೂ, ತಿರುಗತೊಡಗಿತು. 


ಬಲ್ಗಯ್ಯ ನೃಪರಂಜಿ ತಡೆಯದೆ ರಘೂಧ್ವಹನ। 

ಸೊಲ್ಗೇಳಿ ನಮಿಸಲಿಳೆಯೊಳ್ ಚರಿಸುತಧ್ವರದ । 

ನಲ್ಗುದುರೆ ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು॥ 

ಪುಲ್ಗಳ ಪಸುರ್ಗೆಳಸಿ ಪೊಕ್ಕೊಡಾ ತೋಟಗಾ। 

ವಲ್ಗೆ ತನ್ನೊಡನಾಡಿಗಳ ಕೂಡಿ ಲೇಲೆ ಮಿಗೆ। 

ಬಿಲ್ಗೊಂಡು ನಡೆತಂದವಂ ಕಂಡನರ್ಚಿತ ಸುವಾಜಿಯಂ ವೀರ ಲವನು॥೫॥ 


ಪ್ರತಿಪದಾರ್ಥ :- ಬಲ್ಗಯ್ಯನೃಪರು= ಹೆಚ್ಚು ಬಲಿಷ್ಟರಾದ ರಾಜಾಧಿರಾಜರು, ಅಂಜಿ= ಹೆದರಿ, ತಡೆಯದೆ= ಅಶ್ವವನ್ನು ಕಟ್ಟದೆ, ರಘೂದ್ವಹನ= ದಾಶರಥಿಯ, ಸೊಲ್=ವೀರನುಡಿಗಳನ್ನು, ಕೇಳಿ=ಆಲಿಸಿ, ನಮಿಸಲು= ವಂದನೆಯನ್ನು ಮಾಡು-

ತ್ತಿರಲು, ಇಳೆಯೊಳು= ಧರಾಮಂಡಲದಲ್ಲಿ,ಚರಿಸುತ= ತಿರುಗುತ್ತ, ಅಧ್ವರದ= ಯಾಗದ, ನಲ್ಗುದುರೆ= ಶ್ರೇಷ್ಠ ಹಯವು, ಬಂದು= ಐತನದು, ವಾಲ್ಮೀಕಿಯ= ವಾಲ್ಮೀಕಿ ತಾಪಸವರ್ಯನ, ನಿಜ= ಸ್ವಂತ, ಆಶ್ರಮದ= ಪರ್ಣಶಾಲೆಯ ಸನಿಹದ, ವಿನಿಯೋಗದ= ರಚಿಸಲ್ಪಟ್ಟಿರುವ, ಉಪವನದೊಳು= ಉದ್ಯಾನದಲ್ಲಿ, ಪುಲ್ಗಳ= ಹುಲ್ಲುಗಳ, ಪಸುರ್ಗೆ= ಹಸುರುವರ್ಣಕ್ಕೆ, ಎಳಸಿ= ಆಶಿಸಿ, ಪೊಕ್ಕೊಡೆ= ಪ್ರವೇಶಮಾಡಲಾಗಿ, ಆ ತೋಟದ= ಆ ಉದ್ಯಾನದ, ಕಾವಲ್ಗೆ= ಪಾಲನೆಗೆ, ತನ್ನೊಡನೆ= ತನ್ನೊಂದಿಗೆ, ಆಡಿಗಳ= ಆಡತಕ್ಕವರ, ಕೂಡೆ= ಒಡನೆ, ಲೀಲೆ= ಸಂತಸವು, ಮಿಗೆ= ಅಧಿಕವಾಗುತ್ತಿರಲು ,ವೀರ= ಪರಾಕ್ರ-

ಮಿಯಾದ, ಲವಂ= ಲವನು, ಬಿಲ್ಗೊಂಡು= ಧನುರ್ಧಾರಿಯಾಗಿನಡೆತಂದು= ಬಂದವನಾಗಿ, ತಾನು= ಸ್ವಂತವಾಗಿ, ಅರ್ಚಿಸಿದ= ಪೂಜಿಸಲ್ಪಟ್ಟ, ವಾಜಿಯಂ= ಹಯವನ್ನು, ಕಂಡನು= ಈಕ್ಷಿಸಿದನು. 


ಅ॥ವಿ॥ ಬಲ್ಗಯ್ಯ=ಬಲ್ಲಿತ್ತಾದ ಕೈ ಯಾರಿಗೊ ಅವರು= ಬಲ್ಗಯ್ಯರು (ಬ. ಸ.) ನಲ್=ಐತ್ತಮವಾದ+ಕುದುರೆ=ನಲ್ಗುದುರೆ

(ವಿ. ಪೂ. ಕ) ಬಿಲ್+ಕೊಂಡೈ= ಬಿಲ್ಗೊಂಡು( ಕ್ರಿ. ಸ.)


ತಾತ್ಪರ್ಯ:-ಆ ಯಜ್ಞಾಶ್ವವನ್ನು ಕಂಡ ರಾಜಾಧಿರಾಜರೆಲ್ಲರೂ ಕುದುರೆಯ ಹಣೆಯಲ್ಲಿ ಚಿನ್ನದ ರೇಖಿನಲ್ಲಿ ಬರೆದಿರುವ ಲಿಖಿತವನ್ನು ಓದಿ ಕೂಡಲೇ ಅದಕ್ಕೆ ನಮಸ್ಕರಿಸಿ ಹೊರಟುಹೋಗಿ, ಬಹು ಪ್ರಕಾರವಾದ ಕಪ್ಪ ಕಾಣಿಕೆಗಳೊಂದಿಗೆ ಶತ್ರುಘ್ನ-

ನನ್ನು ಇದಿರ್ಗೊಂಡು, ಆತನ ಪಾದಗಳಿಗೆ ನಮಸ್ಕರಿಸಿ, ತಮ್ಮ ಸಕಲ ಪರಿವಾರದೊಂದಿಗೆ ಅವನನ್ನು ಹಿಂಬಾಲಿಸುತ್ತಿದ್ದರೇ ಹೊರತು ಎದುರಾಳಿಗಳಾಗಿ ಯಾರೂ ನಿಲ್ಲಲಿಲ್ಲ. ಈ ರೀತಿಯಲ್ಲಿ ನಿರುಪಾಧಿಕವಾಗಿ ದೇಶವನ್ನೆಲ್ಲಾ ಸುತ್ತಿ ದಾರಿಯಲ್ಲಿ ವಾಲ್ಮೀಕಿಯ ಆಶ್ರಮವು ಸಿಕ್ಕಲಾಗಿ, ಕುದುರೆಯು ಆಶ್ರಮದಲ್ಲಿರುವ ಚಿಗುರು ಹುಲ್ಲನ್ನು ತಿನ್ನಲೆಳಸಿ ಒಳಗೆ ನುಗ್ಗಿ ಹುಲ್ಲನ್ನು ಯಥೇಷ್ಟವಾಗಿ ತಿನ್ನಲಾರಂಭಿಸಿತು. ಆ ತೋಟದ ಕಾವಲಿಗಾಗಿ ವಾಲ್ಮೀಕಿಯಿಂದ ನೇಮಿಸಲ್ಪಟ್ಟ ಲವನು ಧನುರ್ಧಾರಿ-

ಯಾಗಿ ತನ್ನೊಡನಾಡಿಗಳೊಂದಿಗೆ ಆಡುತ್ತಲಿರುವಾಗ ಯಜ್ಞಾಶ್ವವು ತಮ್ಮ ತೋಟದಲ್ಲಿ ಮೇಯುತ್ತಿರುವುದನ್ನು ನೋಡಿ 

ಜಾಗ್ರತೆಯಾಗಿ ಅಲ್ಲಿಗೆ ಬಂದನು. 


ಎತ್ತಣ ತುರಂಗಮಿದು ಪೊಕ್ಕು ಪೂದೋಟಮಂ। 

ತೊತ್ತಳದುಳಿದುದು ವಾಲ್ಮೀಕಿಮುನಿನಾಥ ನೇ। 

ಪೊತ್ತುಮಾರೈವುದೆಂದೆನಗೆ ನೇಮಿಸಿ ಪೋದನಬ್ಧಿಪಂ ಕರೆಸಲಾಗಿ॥ 

ಮತ್ತೆ ವರುಣನ ಲೋಕದಿಂ ಬಂದು ಮುಳಿದಪನೆ। 

ನುತ್ತ ಹಯದೆಡೆಗೆ ನಡೆತಂದು ನೋಡಲ್ಕದರ। 

ನೆತ್ತಿಯೊಳ್ ಮೆರೆವ ಪಟ್ಟದ ಲಿಖಿತಮಂ ಕಂಡು ಲವನೋದಿಕೊಳುತಿರ್ದನು॥೬॥ 


ಪ್ರತಿಪದಾರ್ಥ :- ಇದು= ಈ ಹಯವು, ಎತ್ತಣ= ಎಲ್ಲಿಂದ ಬಂದ, ತುರಂಗಂ= ಅಶ್ವವು, ಪೂದೋಟಮಂ= ಹೂಬನವನ್ನು,

ಪೊಕ್ಕು = ಸೇರಿ, ತೊತ್ತಳದು= ತುಳಿದು ತುಳಿದು, ಉಳಿವುದು= ಬಿಟ್ಟುಬಿಟ್ಟಿದೆ, ವಾಲ್ಮೀಕಿಮುನಿನಾಥಂ= ವಾಲ್ಮೀಕಿ ಮಹಾ

ಮುನಿಯು, ಏಪೊತ್ತುಂ= ಯಾವಾಗಲೂ, ಆರೈವುದು= ಸಲಹುತ್ತಿರಬೇಕು,ಎಂದು=ಎಂಬುದಾಗಿ, ಎನಗೆ= ನನಗೆ, ನೇಮಿಸಿ= ಅನುಜ್ಞೆಯನ್ನಿತ್ತು, ಅಬ್ಧಿಪಂ= ಜಲದೇವತೆಯಾದ ವರುಣನು, ಕರೆಸಲಾಗಿ= ಬರಬೇಕೆಂದು ಕೇಳಲಾಗಿ, ಪೋದನು= ಹೋದನು, ಮತ್ತೆ= ಪುನಃ, ವರುಣಲೋಕದಿಂದ= ವರುಣನ ರಾಜ್ಯದಿಂದ, ಬಂದು=ಐತಂದು,ಮುಳಿದಪನು=

ಸಿಟ್ಟುಮಾಡಿಕೊಳ್ಳುತ್ತಾನೆ, ಎನುತ= ಎಂದುಕೊಳ್ಳುತ್ತ,ಹಯದ= ಕುದುರೆಯ, ಎಡೆಗೆ= ಸಮೀಪಕ್ಕೆ, ನಡೆತಂದು=ಬಂದು, ನೋಡಲ್ಕೆ= ನೋಡಲಾಗಿ, ಅದರ= ಆ ಕುದುರೆಯ, ನೆತ್ತಿಯೊಳ್=ಹಣೆಯಲ್ಲಿ, ಮೆರೆವ= ಹೊಳೆವ, ಪಟ್ಟದ=ಚಿನ್ನದ ಪಟ್ಟಿಯಲೂಲಿರತಕ್ಕ, ಲಿಖಿತಮಂ= ಲೆಪಿಯನ್ನು, ಕಂಡು=ನೋಡಿ, ಲವನು= ಲವನಾದರೊ, ಓದಿಕೊಳುತಿರ್ದನು= ಓದಿ ಕೊಳ್ಳುತ್ತಿದ್ದನು. 


ಅ॥ವಿ॥ ಹೂವಿನ+ತೋಟ= ಹೂದೋಟ (ಷ. ತ. )


ತಾತ್ಪರ್ಯ:- ಈ ಕುದುರೆ ಯಾವುದು? ಇಲ್ಲಿಗೆ ಬರಲು ಕಾರಣವೇನು? ನಮ್ಮ ಗುರುವಾದ ವಾಲ್ಮೀಕಿ ಮುನಿಯನ್ನು ವರುಣನು ತನ್ನ ಲೋಕಕ್ಕೆ ಬರಬೇಕೆಂದು ಹೇಳಿ ಕಳುಹಿಸಿದ್ದರಿಂದ ಅವರು ಅಲ್ಲಿಗೆ ಹೋಗುವಾಗ ಈ ಉದ್ಯಾನವನ್ನು ಕಾದಿರಬೇಕೆಂದು ನನಗೆ ಹೇಳಿ ಹೋದರು. ನಾನು ಎಡೆಬಿಡದೆ ಕಾದಿದ್ದರೂ ಕೂಡ ನನ್ನ ಕಣ್ಣು ತಪ್ಪಿಸಿ ಈ ಕುದುರೆಯು ಬಂದು ಈ ಉದ್ಯಾನದಲ್ಲಿ ಮೇಯುತ್ತಾ ಎಲ್ಲೆಲ್ಲಿಯೂ ತುಳಿದು ಹಾಳುಮಾಡುತ್ತಿದೆಯಲ್ಲಾ! ಇದನ್ನು ನಮ್ಮ ಗುರುಗಳು 

ಬಂದು ನೋಡಿದರೆ ನನ್ನ ಮೇಲೆ ಕೋಪಿಸಿಕೊಳ್ಳದಿರುವರೆ? ಆದ್ದರಿಂದ ಜಾಗ್ರತೆಯಾಗಿ ಇದನ್ನು ಆಚೆಗೆ ಓಡಿಸಬೇಕೆಂದು 

ಬಳಿಗೆ ಬರಲಾಗಿ ಅದರ ಹಣೆಯಲ್ಲಿ ಒಂದು ಬಂಗಾರದ ತಗಡು ಕಾಣಿಸಿತು.ಅದನ್ನು ಓದತೊಡಗಿದನು. 


ಉರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮ। 

ನೊರ್ವನೇ ವೀರನಾತನ ಯಜ್ಞತುರಗಮಿದು। 

ನಿರ್ವಹಿಸಲಾರ್ಪರಾರಾದೊಡಂ ತಡೆಯಲೆಂದೀ ಲೇಖನವನೋದಿ॥ 

ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ। 

ಸರ್ವಜನಮುಂ ಬಂಜೆಯೆನ್ನದಿರ್ದಪುದೆ ತನ। 

ಗುರ್ವತೋಳ್ಗಳಿವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದೆದ್ದನು॥೭॥ 


ಪ್ರತಿಪದಾರ್ಥ :- ಉರ್ವಿಯೊಳ್ = ಪ್ರಪಂಚದಲ್ಲಿ, ಕೌಸಲೆ= ದಶರಥನ ಪತ್ನಿಯು,ಪಡೆದ= ಹೊಂದಿದ, ಕುಮಾರಂ=ಪುತ್ರನಾದ, ರಾಮನು= ಶ್ರೀರಾಮಚಂದ್ರನು, ತಾಂ= ತಾನು, ಓರ್ವನೆ= ಒಬ್ಬನು ಮಾತ್ರವೇ, ವೀರನು= ಪರಾಕ್ರಮಿಯು, ಆತನ= ಆ ಮಹಾರಾಜನ, ಇದು= ಈ ಅಶ್ವವು, ಯಜ್ಞ ತುರಗಂ= ಯಾಗದ ಕುದುರೆಯು, ನಿರ್ವಹಿಸಲಾಪರು= ಇದನ್ನು ಕಟ್ಟಿ ಗೆಲ್ಲತಕ್ಕವರು, ಆರಾದೊಡಂ= ಯಾರೇ ಆದರೂ, ತಡೆಯಲಿ= ಕಟ್ಟಿಹಾಕಲಿ,ಎಂದು= ಎಂಬಂತೆರನಾಗಿ, ಇರ್ದ=ಇದ್ದಂಥ, ಲೇಖನವನು= ಬರಹವನ್ನು, ನೋಡಿ=ಈಕ್ಷಿಸಿ, ಗರ್ವಮಂ= ಹೆಚ್ಚುಗಾರಿಕೆಯನ್ನು , ಬಿಡಿಸದಿರ್ದೊಡೆ= ತಗ್ಗಿಸದೆ ಬಿಟ್ಟರೆ, ತನ್ನ= ನನ್ನ, ಮಾತೆಯಂ= ತಾಯಿಯಾದ ಸೀತೆಯನ್ನು, ಸರ್ವಜನಂ= ಎಲ್ಲರೂ, ಬಂಜೆ= ಹೆಸರುವಾಸಿಯಾದ ಮಕ್ಕಳನ್ನು ಹೊಂದಿಲ್ಲವಾಗಿ, ಎನ್ನದಿರ್ದಪರೆ= ಹೇಳದಿರುವರೆ, ತನಗೆ= ನನಗೆ, ಉರ್ವ= ಭೂಭಾರವನ್ನು ಹೊರತಕ್ಕ, ಇವುತೋಳ್ಗಳು= ಈ ಬಾಹುಗಳು, ಏತಕೆ= ಇದ್ದೂ ಪ್ರಯೋಜನವೇನು? ಎಂದು=ಎಂಬುದಾಗಿ, ಸಲೆವಾಸಿಯಂ= ಅಂಗಿಯನ್ನು,  ತೊಟ್ಟು= ತೊಟ್ಟುಕೊಂಡವನಾಗಿ,ಲವನು= ಲವನಾದರೊ,ಉರಿದು= ಕಿಡಿಕಿಡಿಯಾಗಿ.ಎದ್ದನು= ಮೇಲಕ್ಕೆದ್ದವನಾದನು.


ಅ॥ವಿ॥ ಬಂಜೆ (ತ್ಭ) ವಂಧ್ಯಾ (ತ್ಸ) ಕುಮಾರಂ (ತ್ಸ) ಕುವರಂ (ತ್ಭ)


ತಾತ್ಪರ್ಯ:- ಲವನು ಸ್ವಲ್ಪ ನಿಧಾನಿಸಿ ನೋಡಿ ಆ ತಗಡಿನಲ್ಲಿ ಬರೆದಿರುವುದನ್ನೆಲ್ಲಾ ಆದ್ಯಂತವಾಗಿ ಓದಿಕೊಂಡನು. ಸುವರ್ಣದ ರೇಖಿನಲ್ಲಿ - ಭೂಲೋಕದೊಳಗೆ ಯಾರಾದರೂ ವೀರರಿದ್ದರೆ ಈ ಕುದುರೆಯನ್ನು ಕಟ್ಟಿ ಉಳಿಸಿಕೊಳ್ಳಲೆಂದೂ, ಪ್ರಪಂಚದಲ್ಲೆಲ್ಲಾ ದಶರಥಮಹಾರಾಜನಿಂದ ಕೌಸಲ್ಯಾದೇವಿಯ ಗರ್ಭಾಂಬುಧಿಯಲ್ಲಿ ಜನಿಸಿದ ಶ್ರೀರಾಮನೊಬ್ಬನೇ 

ವೀರಾಗ್ರಣಿಯೆಂದೂ ಬರೆದಿದ್ದುದನ್ನು ಕಂಡು, ಅತಿಯಾದ ರೊಷದಿಂದ ಕಿಡಿಕಿಡಿಯಾಗಿ ತನ್ನಲ್ಲಿ ತಾನೆ, ಆಹಾ! ರಾಮನ ಅಹಂಕಾರವು ಇನ್ನೆಂಥಾದ್ದೊ? ಇವನ ಗರ್ವಭಂಗವನ್ನು ಮಾಡಿ ಖ್ಯಾತಿಯಂ ಪಡೆಯದಿದ್ದರೆ, ನಾನು ನಮ್ಮ ತಾಯಿಯ ಹೊಟ್ಟೆಯಲ್ಲಿ ಹುಟ್ಟಿ ಫಲವೇನು,ಪ್ರಪಂಚದ ಜನರೆಲ್ಲರೂ ನನ್ನ ತಾಯಿಯಾದ ಸೀತೆಯನ್ನು ಹೆಸರುವಾಸಿಯಾದ ಮಕ್ಕಳನ್ನು ಹೆರಲಿಲ್ಲವೆಂದು ಅಲ್ಲಗಳೆಯದೆ ಬಿಡುತ್ತಾರೆಯೇ? ಆದ್ದರಿಂದ ಸರ್ವಪ್ರಕಾರದಿಂದಲೂ ಈ ರಾಮನ ಗರ್ವಕ್ಕೆ ತಕ್ಕದ್ದನ್ನೇ ಮಾಡುವುದೇ ಸಿದ್ಧವೆಂದು ಬಗೆದು, ವಾಲ್ಮೀಕಿ ಮುನಿಪತಿಯಿಂದ ಅನುಗ್ರಹಿಸಲ್ಪಟ್ಟಿದ್ದ ಅಂಗಿಯನ್ನು ತೊಟ್ಟು ಧನುರ್ಧಾರಿಯಾಗಿ ನಿಂತನು. 


ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ। 

ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ ಮುನಿಸುತರ್। 

ಮಿಗೆ ನಡುಗಿ ಬೇಡಬೇಡರಸುಗಳ ವಾಜಿಯಂ ಬಿಡು ಬಡಿವರೆಮ್ಮನೆನಲು॥ 

ನಗುತೆ ಪಾರ್ವರ ಮಕ್ಕಳಂಜಿದೊಡೆ ಜಾನಕಿಯ। 

ಮಗನಿದಕೆ ಬೆದರುವನೆ ಪೋಗಿ ನೀವೆಂದು ಲವ। 

ನಗಡುತನದಿಂದೆ ಬಿಲ್ದಿರುವನೇರಿಸಿ ತೀಡಿ ಜೇಗೈದು ನಿಂತಿರ್ದನು॥೮॥ 


ಪ್ರತಿಪದಾರ್ಥ :- ಉತ್ತರೀಯಮಂ = ಮೈಮೇಲಿದ್ದ ವಸ್ತ್ರವನ್ನು, ತೆಗೆದು= ತೆಗೆದುಕೊಂಡು, ಮುರಿದು= ತಿರುಗಿಸಿಕೊಂಡು, 

(ತಿರಿಮುರಿಮಾಡಿಕೊಂಡು), ಗಳಕೆ=ಕುದುರೆಯ ಕಂಠಕ್ಕೆ,ಬಿಗಿದು=ಬಂಧಿಸಿ,ಕದಳೀದ್ರುಮಕೆ=ಬಾಳೆಯ ಗಿಡಕ್ಕೆ, ಕಟ್ಟಲ್ಕೆ= ಕಟ್ಟಿಬಿಡಲು,ಮುನಿಸುತರು= ಮುನಿ ಕುಮಾರರು, ಮಿಗೆ= ಹೆಚ್ಚಾಗಿ, ನಡುಗಿ= ಹೆದರಿ, ಬೇಡಬೇಡ= ಕುದುರೆಯನ್ನು ಕಟ್ಟಿ ಹಾಕುವ ಕೆಲಸವು ಬೇಡ, ಅರಸುಗಳ= ರಾಜರುಗಳ, ವಾಜಿಯಂ= ಹಯವನ್ನು, ಬಿಡು= ಬಂದಿಸದಿರು, ಎಮ್ಮನು= ನಮ್ಮನ್ನು,ಬಡಿವರು= ಹೊಡೆಯುತ್ತಾರೆ, ಎನಲು= ಹೀಗೆಂದು ಹೇಳಲು, ನಗುತ= ಮುಗುಳ್ನಗುತ, ಪಾರ್ವರ= ವಿಪ್ರರ, ಮಕ್ಕಳು = ಸುತರು, ಅಂಜಿದರೆ= ಹೆದರಿದರೆ, ಇದಕ್ಕೆ = ಇದಕ್ಕೋಸ್ಕರ, ಜಾನಕಿಯ = ಜನಕನ ಕುವರಿಯ, ಮಗನು= ಪುತ್ರನು, ಬೆದರುವನೆ= ಹೆದರಿಕೊಂಡಾನೆ, ನೀವು= ನೀವಾದರೊ, ಪೋಗಿ= ನಡೆಯಿರಿ, ಎಂದು= ಎಂಬತೆರನಾಗಿ, ಆ ಮುನಿಕುವರರಿಗೆ ತಿಳಿಸಿ, ಅಗಡುತನದಿಂದ= ಕಠಿಣ್ಯತನದಿಂದ, ಬಿಲ್ದಿರುವನು= ಧನುಸ್ಸಿನ ಹೆದೆಯನ್ನು, ಏರಿಸಿ= ಕಟ್ಟಿ, ತೀಡಿ=ಎಳೆದು, ಜೇಗೈದು= ಠಂಕಾರಮಾಡಿ, ನಿಂತು= ನಿಂತುಕೊಂಡು, ಇರ್ದನು= ಇದ್ದನು. 


ತಾತ್ಪರ್ಯ:- ತಾನು ಹೊದ್ದುಕೊಂಡಿದ್ದ ಪಂಚೆಯನ್ನು ಹುರಿಮಾಡಿ ಕುದುರೆಯ ಕತ್ತಿಗೆ ಬಿಗಿದು ಹತ್ತಿರದಲ್ಲಿದ್ದ ಬಾಳೆಯ ಗಿಡಕ್ಕೆ ಕಟ್ಟಿದನು. ಇದನ್ನು ನೋಡಿದ ಲವನೊಂದಿಗೆ ಆಡುತ್ತಿದ್ದ ಮುನಿವಟುಗಳು ಒಡನಾಡಿಯಾದ ಲವನನ್ನು ನೋಡಿ, 

ಎಲೈ ಲವನೆ! ರಾಜರ ಕುದುರೆಯನ್ನು ಕಟ್ಟುವ ದುರ್ಯೋಚನೆ ನಿನಗೆ ಬೇಡ, ಅರಸರಿಗೆ ಇದು ತಿಳಿದರೆ ನಿನ್ನನ್ನು ಸುಮ್ಮನೆ ಬಿಟ್ಟಾರೆ, ಎಂದು ಗಡಗಡನೆ ನಡುಗಿ ಹೇಳುತ್ತಿರುವ ಮುನಿಕುವರರನ್ನು ಕುರಿತು ಲವನುಬ್ರಾಹ್ಮಣರ ಮಕ್ಕಳಾದ ನೀವುಹೆದರಿದರೆ ಸೀತೆಯ ಮಕ್ಕಳೂ ಬೆದರತಕ್ಕವರೆಂದು ಬಗೆವಿರಾ! ನಿಮಗೆ ದಿಗಿಲಾದರೆನೀವು ಹೊರಡಿ, ಎಂದು ನುಡಿದು ಶೌರ್ಯದಿಂದ ಧನುಸ್ಸಿಗೆ ಕಟ್ಟಿದ್ದ ದಾರವನ್ನು ಎಳೆದು ನಿಂತುಕೊಂಡನು. 


ಕುದುರೆಗಾವಲ ಸುಭಟರನಿತರೊಳೊದಗಿ ಬಂದು। 

ಕದಳೀದ್ರುಮಕೆ ಕಟ್ಟಿದ ತುರಂಗಮಂ ಕಂಡು। 

ಸದಮಲ ಬ್ರಹ್ಮಚಾರಿಗಳನಾರ್ಭಟಿಸಿ ವಾಜಿಯನೇಕೆ ಬಿಗಿದಿರೆನಲು॥ 

ಬೆದರಿ ನಾವಲ್ಲಿವಂ ಬೇಡಬೇಡೆನೆ ಬಂಧಿ। 

ಸಿದನೆಂದು ಲವನಂ ಕರಾಗ್ರದಿಂ ತೋರಿಸಿದ। 

ರದಟರೀತಂ ತರಳನರಿಯದೆಸಗಿದನೆಂದು ಬಿಡಹೇಳಿ ಗರ್ಜಿಸಿದರು॥೯॥


ಪ್ರತಿಪದಾರ್ಥ 

ಕುದುರೆಗಾವಲ= ಕುದುರೆಯನ್ನು ರಕ್ಷಿಸುವ, ಸುಭಟರು= ವೀರರು, ಒದಗಿಬಂದು= ನೆರೆದು, ಕದಳೀದ್ರುಮಕ್ಕೆ= ಬಾಳೆಯ ಗಿಡಕ್ಕೆ, ಕಟ್ಟಿದ = ಕಟ್ಟಿಹಾಕಿರುವ, ತುರಂಗಮಂ= ಅಶ್ವವನ್ನು, ಕಂಡು=ನೋಡಿ, ಸತ್=ಉತ್ತಮವಾದ, ಅಮಲ= ನಿರ್ಮಲವಾದ, ಬ್ರಹ್ಮಚಾರಿಗಳ= ಮುನಿವಟುಗಳನ್ನು, ಆರ್ಭಟಿಸಿ=ಗಟ್ಟಿಯಾಗಿ ಕೂಗಿ, ವಾಜಿಯನು= ಕುದುರೆಯನ್ನು, ಏಕೆಬಿಗಿದಿರಿ=ಏತಕ್ಕೆ ಬಂಧಿಸಿದಿರಿ, ಎನಲು= ಎಂದು ಕೇಳಲು, ಬೆದರಿ= ಹೆದರಿಕೊಂಡು, ನಾವು= ನಾವುಗಳು, ಅಲ್ಲ=ಕುದು-

ರೆಯನ್ನು ಕಟ್ಟಲಿಲ್ಲ, ಇವಂ= ಈ ಲವನು, ಬೇಡಬೇಡ ಎನೆ= ಬೇಡವೆಂದು ಹೇಳಿದರೂ ಕೂಡ,ಬಂಧಿಸಿದನು= ಕಟ್ಟಿ ಹಾಕಿರುವನು, ಎಂದು=ಎಂಬುದಾಗಿ, ಲವನಂ= ಲವನನ್ನು, ಕರಾಗ್ರದಿಂ = ಬೆಟ್ಟಿನ ತುದಿಯಿಂದ, ತೋರಿಸಿದರು= ನೋಡಿಸಿದರು. ಆಶಭಟರು= ಆ ವೀರರು, ಈತಂ= ಇವನು, ತರಳನು= ಹುಡುಗನು, ಅರಿಯದೆ= ತಿಳಿವಳಿಕೆ ಸಾಲದೆ, ಎಸಗಿದನು= ಕುದುರೆಯನ್ನು ಕಟ್ಟಿದ್ದಾನೆ, ಎಂದು=ಹೀಗೆಂದು ತಿಳಿದುಕೊಂಡು, ಬಿಡಹೇಳಿ= ಬಿಟ್ಟುಬಿಡು ಎಂದು ನುಡಿದು, ಗರ್ಜಿಸಿದರು= ಆರ್ಭಟಿಸಿದರು. 


ತಾತ್ಪರ್ಯ:- ಆ ಕಾಲಕ್ಕೆ ಸರಿಯಾಗಿ ಅಲ್ಲಿಗೆ ಕುದುರೆ ಕಾವಲ್ಗಾರರು ಬಂದು, ಕದಳೀದ್ರುಮಕೆ ಕುದುರೆಯನ್ನು ಬಿಗಿದಿರುವುದನ್ನು ನೋಡಿ ಕೋಪಗೊಂಡು ಪಕ್ಕದಲ್ಲಿದ್ದ ವಟುಗಳನ್ನು ಕುರಿತು, ಈ ಕುದುರೆಯನ್ನು ನೀವು ಏತಕ್ಕೆ ಕಟ್ಟಿದಿರೆಂದು ಗದರಿಸಿ ಕೇಳಿದರು. ಆಗ ಆ ವಟುಗಳು ಈ ಕುದುರೆಯನ್ನು ನಾವುಶಕಟ್ಟಲಿಲ್ಲ,ಬೇಡಬೇಡವೆಂದರೂ ಈ ಹುಡುಗನೇ ಕಟ್ಟಿರುವನೆಂದು ಲವನನ್ನು ತೋರಿಸಿದರು. ಆಗ ಆ ಯೋಧರು ಲವನನ್ನು ಕಂಡು ಈ ಹುಡುಗನು ತಿಳಿವಳಿ-

ಕೆಯಿಲ್ಲದೆ ಇದನ್ನು ಕಟ್ಟಿರುವನೆಂದರಿತು, ಕುದುರೆಯನ್ನು ಬಿಟ್ಟುಬಿಡೆಂದು ಗರ್ಜಿಸಿ ನುಡಿದರು. 


ವಿಕ್ರಮವಿದೇಕೆ ಬಿಡೆನಶ್ವಮಂ ಮೇಣ್ಬಿಡಲು। 

ಲುಪಕ್ರಮಿಸಿದವರ್ಗಳ ಕರವನರಿವೆನಲವರ। 

ತಿಕ್ರಮಿಸಿ ವಾಜಿಯಂ ಬಿಡುವೊಡೈತರಲವರ ಕೈಗಳಂ ಕೋಪದಿಂ॥ 

ವಕ್ರಮಿಲ್ಲದೆ ಕೋಲ್ಗಳಿಂದೆಚ್ಚು ಕಡಿದೊಡನೆ । 

ಶಕ್ರನದ್ರಿಯ ಮೇಲೆ ಮಳೆಗರೆವೊಲಾ ಸೈನ್ಯ। 

ಚಕ್ರಮಂ ಮುಸುಕಿದಂ ವೀರ ಲವನಾಕ್ಷಣದೊಳೇನೆಂಬೆನದ್ಭುತವನು॥೧೦॥ 


ಪ್ರತಿಪದಾರ್ಥ :- ಅಶ್ವಮಂ= ಹಯವನ್ನು, ಬಿಡೆನು= ಬಿಡತಕ್ಕವನಲ್ಲ, ಇದು ವಿಕ್ರಮಂ=ಈ ಶೌರ್ಯವು, ಏಕೆ= ಏನು ಸಾರ್ಥಕವು, ಮೇಣ್=ಅಲ್ಲದೆ, ಬಿಡಲು= ಕುದುರೆಯನ್ನು ಬಿಡಿಸಲು, ಉಪಕ್ರಮಿಸಿದವರ್ಗಳ= ಉದ್ಯುಕ್ತರಾದವರ, ಕರವನು= ಹಸ್ತವನ್ನು, ಅರಿವೆನು= ಛೇದಿಸುವೆನು, ಎನಲು= ಎಂದು ನುಡಿಯಲು, ಅವರು= ಆ ದೂತರು, ಅತಿಕ್ರಮಿಸಿ= 

ಅವನ ನುಡಿಗಳನ್ನು ಮೀರಿ, ವಾಜಿಯಂ = ಅಶ್ವವನ್ನು, ಬಿಡಿಸಲು=ಬಿಡಿಸುವುದಕ್ಕೋಸ್ಕರ, ಐತರಲು= ಹತ್ತಿರಕ್ಕೆ ಬರಲು,  ಅವರ= ಕುದುರೆಯನ್ನು ಬಿಡಿಸಲು ಬಂದವರ, ಕೈಗಳಂ= ಕರಗಳನ್ನು,ಕೋಪದಿಂದ = ರೋಷದಿಂದ,ವಕ್ರಂ= ವ್ಯತ್ಯಸ್ತವು, ಅಲ್ಲದೆ= ಆಗದೆ, ಕೋಲ್ಗಳಿಂದ= ಬಾಣಗಳಿಂದ, ಎಚ್ಚು= ಹೊಡೆದು, ಕಡಿದು= ಛೇದಿಸಿ, ಒಡನೆ= ಕೂಡಲೆ, ಶಕ್ರನು= ದೇವೇಂದ್ರನು, ಅದ್ರಿಯಮೇಲೆ= ಪರ್ವತಗಳ ಮೇಲೆ, ಮಳೆಗರೆವೊಲು= ಮಳೆಯನ್ನು ಸುರಿಸುವಂತೆ, ಆ ಸೈನ್ಯಚಕ್ರಮಂ= ಆ ಸೇನಾಸಮುದಾಯವನ್ನು ವೀರಲವನು= ಶೂರನಾದ ಲವನು, ಆಕ್ಷಣದೊಳು= ಆ ಕಾಲದಲ್ಲಿ, ಮುಸುಕಿದಂ= ಕವಿದುಕೊಂಡನು, ಅದ್ಭುತವನು= ಅಚ್ಚರಿಯನ್ನು, ಏನೆಂಬೆನು= ಏನೆಂದು ಹೇಳಲಿ.  


ತಾತ್ಪರ್ಯ:- ಲವನಾದರೊ ಈ ವೀರರ ನುಡಿಗಳನ್ನು ಕೇಳಿ, ಅವರನ್ನು ಕುರಿತು, ಕುದುರೆಯ ಆಸೆ ನಿಮಗೇತಕ್ಕೆ? ನಿಮ್ಮ ಸಾಹಸವು ಇಲ್ಲಿ ನಡೆಯುವುದಿಲ್ಲ. ಸುಮ್ಮನೆ ಹೊರಟುಹೋಗಿರಿ,ಬಲವಂತದಿಂದ ಕುದುರೆಯನ್ನು ಯಾರಾದರೂ ಬಿಡಿಸ-

ಲುಜ್ಜುಗಿಸಿದರೆ ಊವರ ಕೈಗಳನ್ನೇ ಕತ್ತರಿಸಿ ಹಾಕಿಬಿಡುತ್ತೇನೆಂದು ಹೇಳಿದನು. ಕುದುರೆ ಕಾವಲ್ಗಾರರಾದರೋ ಅತಿಕ್ರಮಿಸಿ ಅದನ್ನು ಬಿಡಿಸಲುಪಕ್ರಮಿಸಲಾಗಿ, ಲವನು ಅವರ ಕೈಗಳನ್ನು ಕತ್ತರಿಸಿ, ಪೂರ್ವದಲ್ಲಿ ದೇವೇಂದ್ರನು ಪರ್ವತಗಳ ರೆಕ್ಕೆಗಳನ್ನು ಲಕ್ಷ್ಯವಿಲ್ಲದೆ ವಜ್ರಾಯುಧದಿಂದ ಕತ್ತರಿಸಿದಂತೆ, ನೋಡುವವರಿಗೆ ಆಶ್ಚರ್ಯವನ್ನುಂಟು ಮಾಡುವಂತೆ ಹಗೆಗಳ ಪಡೆಯನ್ನೆಲ್ಲಾ ಶರವರ್ಷಗಳಿಂದ ತುಂಬಿಸಿದನು, 


ಬಾಲಕನ ಮೇಲೆ ಕವಿದುದು ಬಳಿಕ ಮುಳಿದು ಹಯ। 

ಪಾಲಕಬಲಂ ಕರಿ ತುರಗ ರಥ ಪದಾತಿಗಳ। 

ಜಾಲಕವನೊರ್ವನೆನ್ನದೆ ಬಾಣ ಪರಶು ತೋಮರ ಶಕ್ತಿ ಸುರಗಿಗಳೊಳು॥ 

ಕಾಲಕಖಿ ಪ್ರಾಣಿಗಳನೈದೆಸಂಹರಿಪ। 

ಶೂಲಕರನೆನೆಲವಂ ಕೊಲುತಿರ್ದನನಿಬರಂ। 

ಕೋಲ ಕಡುವಳೆಗರೆದು ಮುನಿಪನಿತ್ತಕ್ಷಯ ನಿಷಂಗಮೆಸೆದಿರೆ ಬೆನ್ನೊಳು॥೧೧॥


ಪ್ರತಿಪದಾರ್ಥ :- ಬಳಿಕ = ಕುದುರೆಯ ಕಟ್ಟನ್ನು ಬಿಚ್ಚಲು ಬಂದ ಶೂರರ ಕೈಗಳನ್ನು ಕತ್ತರಿಸಿದ ನಂತರ, ಹಯಪಾಲಕಬಲಂ= ಕುದುರೆಯ ಕಾವಲಿನ ದಂಡು, ಮುಳಿದು= ಕೋಪಗೊಂಡು, ಬಾಲಕನಮೇಲೆ= ಹುಡುಗನಾದ ಲವನ ಮೇಲೆ, ಕರಿ=ಆನೆ, ತುರಗ=ಕುದುರೆ, ರಥ= ರಥಗಳು, ಪದಾತಿ= ಕಾಲಾಳುಗಳು, ಜಾಲಕಂ= ಸಮೂಹ, ಅವನೊರ್ವನೆನ್ನದೆ= ಅವನು ಒಬ್ಬನೇ ಎಂದು ಹೆದರದೆ, ಬಾಣ= ಕಣೆಗಳಿಂದಲೂ, ಪರಶು=ಕೊಡಲಿಗಳಿಂದಲೂ, ತೋಮರ= ತೋಮರವೆಂಬ ಆಯುಧದಿಂದಲೂ, ಸುರಗಿಗಳೊಳು= ಸುರಗ ಎಂಬ ಆಯುಧಗಳಿಂದಲೂ, ಕವಿದುದು= ಸುತ್ತಿಕೊಂಡಿತು, ಕಾಲಕೆ= ಪ್ರಳಯಸಮಯಕ್ಕೆ,ಅಖಿಲ= ಸಮಸ್ತ, ಪ್ರಾಣಿಗಳನು= ಜೀವರಾಶಿಗಳನ್ನು, ಐದೆ= ಹತ್ತಿರ ಬಂದರೆ,ಸಂಹರಿಪ =ಕೊಂದುಹಾಕುವ, ಶೂಲಧರನು=ಈಶ್ರನು, ಎನೆ= ಎಂಬಂತೆ, ಲವಂ= ಲವನು, ಮುನಿಪನು= ವಾಲ್ಮೀಕಿಯು, ಇತ್ತ=ದಯಪಾಲಿಸಿದ್ದ, ಅಕ್ಷಯ= ಕಡಿಮೆಯಾಗದಿರತಕ್ಕ, ನಿಷಂಗ=ಬತ್ತಳಿಕೆಯು, ಬೆನ್ನೊಳು=ತನ್ನ ಬೆನ್ನಿನಲ್ಲಿ, ಮೆರೆದಿರೆ= ಶೋಭಿಸುತ್ತಿರಲು, ಕೋಲ=ಬಾಣಗಳನ್ನು,ಕಡು= ತೀಕ್ಷ್ಣವಾದ, ಮಳೆಗರೆದು= ಮಳೆಯನ್ನು ಸುರಿಸಿ, ಅನಿಬರಂ= ಸೇನೆಯೆಲ್ಲವನ್ನೂ, ಕೊಲುತಿರ್ದನು= ಕೊಲ್ಲುತ್ತಿದ್ದನು.


ತಾತ್ಪರ್ಯ :-ಆಗ ಶತ್ರುಸೈನ್ಯದವರು,ಈ ಹುಡುಗನು ಸಾಧಾರಣನಂತೆ ಕಾಣುವುದಿಲ್ಲ ಎಂದು ಚತುರಂಗ ಬಲದೊಡನೆ ಲವನನ್ನು ಸುತ್ತವರೆದರು. ಲವನು ಸ್ವಲ್ಪವೂ ಹೆದರದೆ ವಾಲ್ಮೀಕಿಮುನಿಯಿತ್ತ ಅಕ್ಷಯ ಬಾಣಗಳಿಂದ ತುಂಬಿದ ಬತ್ತಳಿಕೆಯಿಂದ ಬಾಣಗಳ ಸುರಿಮಳೆಗರೆದನು, ಪ್ರಳಯಕಾಲದ ರುದ್ರನಂತೆ ಶತ್ರುಬಲವನ್ನು ಸಂಹರಿಸಿದನು. 


ಸಂಖ್ಯೆಯಿಲ್ಲದೆ ಮೇಲೆ ಬೀಳ್ವಕೈದುಗಳೆಲ್ಲ। 

ಮಂ ಖಂಡಿಸುತ್ತೊಡನೆ ಮುತ್ತಿದರಿ ಚತುರಂಗ। 

ಮಂ ಖಾತಿಯಿಂದೆ ಸಂಹರಿಸುತೊಂದೊಂದು ರಿಪುಬಾಣಕೈದೈದಂಬುಗಳನು॥

ಪುಂಖಾನುಪುಂಖದಿಂದಿಸುವ ಬಾಲಕನಿಸುಗೆ। 

ಯಿಂ ಖಿಲಪ್ರಾಯಮಾಗಿರ್ದ ನಿಜಬಲಜಾಲ। 

ಮಂ ಖರಾಂತಕನನುಜನೀಕ್ಷಿಸಿ ಕನಲ್ದೇರಿದಂ ಮಹಾಮಣಿರಥವನು॥೧೨॥ 


ಸಂಖ್ಯೆಯಿಲ್ಲದೆ= ಅಸಂಖ್ಯಾತವಾಗಿ, ಮೇಲೆ=ತನ್ನ ಮೇಲೆ, ಬೀಳ್ವ= ಬೀಳುತ್ತಿರುವ,ಕೈದುಗಳೆಲ್ಲಮಂ= ಆಯುಧಗಳೆಲ್ಲವ- 

ನ್ನೂ, ಖಂಡಿಸುತ= ಛೇದಿಸುತ್ತ,ಒಡನೆ=ಕೂಡಲೆ, ಮುತ್ತಿದ= ಸುತ್ತಿಕೊಂಡ, ಅರಿ=ಹಗೆಗಳ, ಚತುರ್ಬಲಮಂ= ಚತುರಂಗ ಸೈನ್ಯವನ್ನು, ಖತಿಯಿಂದ=ಸಿಟ್ಟಿನಿಂದ, ಸಂಹರಿಸುತ= ಕೊಂದುಹಾಕುತ್ತ, ಒಂದೊಂದು= ಒಂದೊಂದಾಗಿ,ಬಿಡುವ ರಿಪು ಬಾಣಕೆ= ಬಿಡುತ್ತಿರುವ ವೈರಿಗಳ ಬಾಣಗಳಿಗೆ, ಐದಂಬುಗಳನು= ಒಂದು ಬಾಣಕ್ಕೆ ಐದು ಬಾಣಗಳಂತೆ, ಪುಂಖಾನುಪುಂ-

ಖದಿಂದ= ಕ್ರಮಕ್ರಮವಾಗಿ, ಎಸೆವ=ಪ್ರಯೋಗ ಮಾಡುವ, ಬಾಲಕನ= ಹುಡುಗನ, ಎಸುಗೆಯಿಂ= ಏಟುಗಳಿಂದ, ಖಿಲ-

ಪ್ರಾಯಮಾಗಿ= ಹಾಳಾಗಿ ಹೋದಂತೆ,ಇರ್ದ= ಇದ್ದ, ನಿಜ=ತನ್ನ, ಬಲ= ಸೈನ್ಯದ, ಜಾಲಮಂ= ಸಮುದಾಯವನ್ನು, ಖರಾಂತಕನ= ಶ್ರೀರಾಮನ, ಅನುಜನು= ಸಹೋದರನಾದ ಶತ್ರುಘ್ನನು, ಈಕ್ಷಿಸಿ= ಅವಲೋಕಿಸಿ, ಕನಲ್ದು= ಸಿಟ್ಟಾಗಿ, ಮಣಿರಥವನು= ರತ್ನಖಚಿತವಾದ ತೇರನ್ನು, ಏರಿದಂ= ಹತ್ತಿದವನಾದನು. 


ಅ॥ವಿ॥ಖರ= ಖರನೆಂಬ ರಕ್ಕಸನಿಗೆ,ಅಂತಕನು=ಯಮನು, ಶ್ರೀರಾಮನು, ಏರಿದಂ= ಏರು ಎಂಬುದರ ಭೂತಕಾಲ.


ತಾತ್ಪರ್ಯ:-ತನ್ನ ಮೇಲೆ ಬರತಕ್ಕ ಬಾಣಗಳನ್ನು ದಾರಿಯಲ್ಲಿಯೇ ಖಂಡಿಸಿ, ಹಗೆಗಳ ಒಂದು ಬಾಣಕ್ಕೆ ಐದುಬಾಣಗಳಿಂದ ಅದರ ವೇಗವನ್ನು ಅಡಗಿಸುತ್ತ,ವೈರಿಗಳ ಪಡೆಗಳನ್ನೆಲ್ಲ ನಿರ್ಮೂಲಮಾಡುತ್ತಿರುವುದನ್ನು ಶತ್ರುಘ್ನನು ನೋಡಿ  ಕೋಪಾವಿ-

ಷ್ಟನಾಗಿ, ನವರತ್ನ ಖಚಿತವಾದ ರಥವನ್ನು ಏರಿ ಲವನಿಗೆ ಅಭಿಮುಖನಾದನು. 


ದುರಿತ ಗಣಮಿರ್ದಪುದೆ ಗೌತಮಿಯೊಳಾಳ್ದಂಗೆ।

ಪರಮಯೋಗಿಗೆ ಭವದ ಬಂಧನಂ ಬಂದಪುದೆ ।

ಪರಸೈನ್ಯದುರುಬೆ ರಘುಕುಲಜರ್ಗೆ ತೋರುವುದೆ ಪೇಳವನಿಪಾಲತಿಲಕ॥

ತರಳನಾದೊಡೆ ಲವಂ ಬೆದರುವನೆ ನಿಮಿಷದೊಳ್। 

ಪರಿಗಡಿದನನಿತು ಚತುರಂಗಮಂ ಶತ್ರುಘ್ನ । 

ನುರವಣಿಸೆ ತಡೆದನೆರಗುವ ಸಿಡಿಲಗರ್ಜನೆಗೆ ಮಲೆವ ಮರಿಸಿಂಗದಂತೆ॥೧೩॥


ಪ್ರತಿಪದಾರ್ಥ :- ಗೌತಮಿಯೊಳು= ಗೌತಮೀನದಿಯ ತೀರ್ಥದಲ್ಲಿ ,ಅಳ್ದಂಗೆ=ಸ್ನಾನಮಾಡಿದವನಿಗೆ, ದುರಿತಗಣ= ಪಾಪಸಮುದಾಯವು, ಇರ್ದಪುದೆ= ಇರುತ್ತದೆಯೇ, ಪರಮ=ಶ್ರೇಷ್ಠನಾದ, ಯೋಗಿಗೆ= ತಾಪಸೋತ್ತಮನಿಗೆ, ಭವದಬಂಧನಂ= ಹುಟ್ಟು ಸಾವು,ಕಷ್ಟ, ಸುಖ ಮೊದಲಾದವುಗಳಿಂದ ಕೂಡಿದ ಸಂಸಾರದ ಕಟ್ಟು, ಬಂದಪುದೆ= ಒದಗುತ್ತದೆಯೇ, ಪರಸತನ್ಯದ= ಹಗೆಗಳ ದಳದ, ಉರುಬೆ= ಆಟೋಪವು, ರಘುಕುಲಜರ್ಗೆ= ರಘುಕುಲದಲ್ಲಿ ಹುಟ್ಟಿದ-

ವರಿಗೆ, ತೋರುವುದೆ= ಕಂಡೀತೆ, ಅವನಿಪಾಲಕ= ಭೂಕಾಂತನಾದ ಜನಮೇಜಯನೆ, ಕೇಳು=ಲಾಲಿಸು, ಲವಂ=ಲವನಾದರೊ, ತರಳನಾದೊಡೆ= ಬಾಲನಾದಮಾತ್ರಕ್ಕೆ,ಬೆದರುವನೆ= ಹೆದರಿಕೊಂಡಾನೆ, ನಿಮಿಷದೊಳ್= ಕ್ಷಣಮಾತ್ರದಲ್ಲಿ, ಅನಿತು=ಅಷ್ಟು, ಚತುರಂಗಮಂ= ಸೈನ್ಯವನ್ನೆಲ್ಲಾ, ಪರೆಗೆಡಸಿದನು= ಸೀಳಿಕೆಡವಿದನು,ಶತ್ರುಘ್ನನು= 

ಶತ್ರುಘ್ನನೆಂಬುವನು, ಉರವಣಿಸಿ= ಮೇಲ್ವಾಯಲು, ಎರಗುವ= ಬರತಕ್ಕ, ಸಿಡಿಲಗರ್ಜನೆಗೆ = ಸಿಡಿಲಧ್ವನಿಗೆ, ಮಲೆವ=ಉಬ್ಬಿ ಬರುವ, ಮರಿಸಿಂಗದಂತೆ= ಸಿಂಹದ ಮರಿಯಹಾಗೆ,ತಡೆದನು= ಅಡ್ಡಗಟ್ಟಿದನು, 


ತಾತ್ಪರ್ಯ:- ಕೇಳೈ ಜನಮೇಜಯನೆ, ಗೋದಾವರಿ ನದಿಯಲ್ಲಿ ಮಿಂದವನಿಗೆ ಪಾಪಶೇಷವಿರುವುದು ಅಸಂಭವವಾಗಿರು-

ವಂತೆಯೂ ಮಹಾಯೋಗಿಗೆ ಸಂಸಾರ ಕಷ್ಟಗಳು ಬಂದೊದಗುವುದು ಅಸದಳವಲ್ಲವೆ? ರಘುಕುಲದಲ್ಲಿ ಹುಟ್ಟಿದವರಿಗೆ ಶತ್ರುಬಾಧೆಯು ಹೇಗೆ ಸಂಬಂಧಿಸೀತು? ಲವನು ಹುಡುಗನೃದ ಮಾತ್ರಕ್ಕೆ ವಂಶವು ಸಾಧಾರಣವಾದದ್ದೇ, ಕ್ಷಣಮಾತ್ರದಲ್ಲಿ ಶತ್ರುಸೈನ್ಯದ ಹೆಸರನ್ನು ಕೆಡಿಸಿ, ತನ್ನೆದುರಿಗೆ ಕೋಪಾಟೋಪದಿಂದ ಬರುತ್ತಿರುವ ಅಸಹಾಯಶೂರನಾದ ಶತ್ರುಘ್ನನನ್ನು, ಮೇಘಗರೂಜನೆಗೆ ಕಿವಿಗೊಟ್ಟು ತನ್ನಾರ್ಭಟವನ್ನು ಹೆಚ್ಚಿಸುವ ಸಿಂಹದ ಮರಿಯಂತೆ, ಸಿಂಹನಾದವನ್ನು ಮಾಡಿಕೊಂಡು ಹೋಗಿ ತಡೆದನು. 


ಒತ್ತಿಬಹ ಶತ್ರುಘ್ನನುರುಬೆಗೆ ಲವಂ ತನ್ನ। 

ತತ್ತದೊಳ್ ಮಹೇಶಮಂತ್ರಮಂ ಸ್ಮರಿಸುತ್ತೆ। 

ಮತ್ತೆ ನಿರ್ಭಯನಾಗಿ ಮಾರಾಂತನಾತನೆಲನೆಲವೊ ನೀಂ ಪಸುಳೆ ನಿನಗೆ॥ 

ತೆತ್ತಿಗರದಾರಕಟ ಸಾಯದಿರ್ ಪೋಗೆನುತೆ। 

ಹತ್ತು ಶರದಿಂದೆಚ್ಚೊಡವನಬಾಣಂಗಳಂ। 

ಕತ್ತರಿಸಿ ಕೂಡೆ ಭರತಾನುಜನ ಕಾರ್ಮುಕದ ಹೆದೆಯನಿಕ್ಕಡಿಗೆಯ್ದನು॥೧೪॥ 


ಪ್ರತಿಪದಾರ್ಥ :- ಒತ್ತಿಬಹ= ಮೇಲೆ ನುಗ್ಗಿ ಬರತಕ್ಕ, ಶತ್ರುಘ್ನನ=ಶತ್ರುಘ್ನನೆಂಬುವನ, ಉರುಬೆಗೆ= ಹೊಯಿಲಿಗೆ, ಲವಂ= ಲವನು, ಚಿತ್ತದೊಳ್= ಮನಸ್ಸಿನಲ್ಲಿ, ಮಾಹೇಶಮಂತ್ರಮಂ= ಈಶ್ವರಸಂಬಂಧವಾದ ಬಾಣವನ್ನು, (ಪಾಶುಪತಾಸ್ತ್ರವನ್ನು) ಸ್ಮರಿಸುತ್ತ= ಧ್ಯಾನಮಾಡುತ್ತ, ಮತ್ತೆ=ಪುನಃ, ನಿರ್ಭಯನು= ಭಯರಹಿತನು, ಆಗಿ= ಆಗಿಬಿಟ್ಟು, ಮಾರಾಂತಡೆ= ಎದುರಾ- 

ಗಲು, ಆತನು= ಆ ಶತ್ರುಘ್ನನು, ಎಲವೊ=ಎಲಾ, ನೀಂ=ನೀನು, ಪಸುಳೆ= ಬಾಲಕನು, ನಿನಗೆ= ನಿನಗಾದರೊ, ತೆತ್ತಿಗರು= 

ತಂದೆ ತಾಯಿಗಳು, ಅದಾರು= ಯಾರಾಗಿರುವರು? ಅಕಟ=ಆಹಾ, ಸಾಯದಿರ್= ಮರಣವನ್ನು ಹೊಂದಬೇಡ, ಪೋಗು= ಹೊರಡು, ಎನುತ= ಎಂದು ನುಡಿಯುತ್ತ, ಹತ್ತುಶರದಿಂದ= ಹತ್ತು ಬಾಣಗಳಿಂದ, ಎಚ್ಚಡೆ= ಪ್ರಯೋಗಮಾಡಲು, ಅವನ= ಆ ಶತ್ರುಘ್ನನ, ಬಾಣಂಗಳಂ= ಬಾಣಗಳನ್ನು,  ಕತ್ತರಿಸಿ= ಕಡಿದು ಹಾಕಿ, ಕೂಡೆ= ಒಡನೆಯೇ, ಭರತಾನುಜನ= ಭರತನಿಗೆ 

ಸಹೋದರನಾದ ಶತ್ರುಘ್ನನ, ಕಾರ್ಮುಕದ= ಬಿಲ್ಲಿನ, ಹೆದೆಯನು= ಹುರಿಯನ್ನು, ಇಕ್ಕಡಿಗೈದನು= ಎರಡುಭಾಗವಾಗಿ ಕತ್ತರಿಸಿಬಿಟ್ಟನು. 


ತಾತ್ಪರ್ಯ:-ತನ್ನ ಮನದಲ್ಲಿ ಪಾಶುತಾಸ್ತ್ರಕ್ಕಾಗಿ ಶಿವನನ್ನು ಸ್ತುತಿಸಿಹೆದರದೆ ನಿಂತಿರುವುದನ್ನು ಶತ್ರುಘ್ನನು ಕಂಡು, ನೀನು ಹುಡುಗನು, ನಿನ್ನನ್ನು ಪಡೆದವರು ಯಾರು? ಅನ್ಯಾಯವಾಗಿ ಸಾವಿಗೆ ಗುರಿಯಾಗಬೇಡ, ತಡಮಾಡದೆ ಹೊರಟುಹೋಗು, 

ಎಂದು ನುಡಿಯುತ್ತ, ಹತ್ತು ಬಾಣಗಳನ್ನು ಲವನ ಮೇಲೆ ಬಿಡಲು, ಲವನು ಆ ಬಾಣಗಳನ್ನೆಲ್ಲಾ ದಾರಿಯಲ್ಲಿಯೇ ಕಡಿದು, ಶತ್ರುಘ್ನನ ಬಿಲ್ಲನ್ನು ಎರಡುಭಾಗವಾಗಿ ಕತ್ತರಿಸಿದನು.


ತರಳನ ಪರಾಕ್ರಮಕೆ ಮೆಚ್ಚಿದಂ ಮತ್ತೊಂದು। 

ತಿರುವನಳವಡಿಸಿದಂ ಕಾರ್ಮುಕಕೆ ಶತ್ರುಘ್ನ । 

ನಿರದೆ ಕಣೆಮೂರರಿಂ ಬಾಲಕನ ಪಣೆಯನೆಚ್ಚೊಡೆ ನಗುತೆ ಪರಿಮಳಿಸುತೆ॥ 

ವಿರಹಿಗಳನಂಜಿಸುವ ಪೂಗೋಲ್ಗಳ್ ವೊಲಾಯ್ತು ನಿ। 

ನ್ನುರವಣೆಯ ಬಾಣಂಗಳೆನುತ ಭರತಾನುಜನ। 

ತುರಗ ಸಾರಥಿ ವರೂಥ ಧ್ವಜ ಶರಾಸನಂಗಳವಂತಡೆಗಡಿದನು॥೧೫॥ 


ಪ್ರತಿಪದಾರ್ಥ :- ಶತ್ರುಘ್ನನು = ರಾಮಾನುಜ ಶತ್ರುಘ್ನನು, ತರಳನ= ಹುಡುಗನ, ಪರಾಕ್ರಮಕೆ= ಶೌರ್ಯಕ್ಕೆ,ಮೆಚ್ಚಿದಂ=

ಸಮ್ಮತಿಸಿದನು, ಮತ್ತೊಂದು ತಿರುವನು= ಬೇರೊಂದು ದಾರವನ್ನು, ಕಾರ್ಮುಕಕೆ= ಧನುಸ್ಸಿಗೆ, ಅಳವಡಿಸಿದಂ= ಸೇರಿಸಿದ-

ನು, ಇರದೆ= ಸುಮ್ಮನಿರದೆ, ಕಣೆಮೂರರಿಂ = ಮೂರು ಬಾಣಗಳಿಂದ, ಬಾಲಕನ= ಹಸುಳೆಯಾದ ಲವನ, ಫಣೆಯನು= ಹಣೆಯಮೇಲೆ, ಎಚ್ಚಡೆ= ಹೊಡೆಯಲು, ನಗುತ= ಮುಗುಳ್ನಗುತ್ತ,ನಿನ್ನ = ನಿನ್ನಸಂಬಂಧವಾದ, ಉರವಣೆಯ= ಅತಿ ಕಠಿಣವಾದ, ಬಾಣಂಗಳು= ಕಣೆಗಳು, ಪರಿಮಳಿಸಿದ= ಸುವಾಸನೆಯಿಂದ ಕೂಡಿದ, ವಿರಹಿಗಳನು= ಕಾಮಾತುರನ್ನು, ಅಂಜಿಸುವ= ಹೆದರಿಸುವ, ಪೂಗೋಲ್ಗಳು= ಹೂವಿನ ಬಾಣಗಳು, ಆಯ್ತು= ಆಗಿಹೋಯಿತು, ಎನುತ= ಎಂದು ಹೇಳುತ್ತ, ಭರತಾನುಜನ = ಭರತನ ತಮ್ಮನಾದ ಶತ್ರುಘ್ನನ, ತುರಗ= ಕುದುರೆಗಳು, ಸಾರಥಿ= ರಥವನ್ನು ನಡೆಯಿಸತಕ್ಕವನು, ವರೂಥ=ರಥ,ಧ್ವಜ= ಧ್ವಜ ಪಠ, ಶರಾಸನಂಗಳನು= ಧನುಸ್ಸು ಮೊದಲಾದುವನ್ನು, ಅವಂ=ಲವನು, ತಡೆಗಡಿದನು= ಛಿದ್ರಛಿದ್ರವಾಗಿ ಕತ್ತರಿಸಿದನು. 


ಅ॥ವಿ॥ ಪೂ+ಕೋಲ್ಗಳ್=ಪೂಗೋಲ್ಗಳ್ ( ಷ.ತ.ಸ. ಮತ್ತು ಕನ್ನಡ ಆ.ಸಂ ) ಶರ= ಬಾಣಗಳಿಗೆ, ಆಸನ= ನೆಲೆಯಾದದ್ದು.

( ಬ. ಸ. )


ತಾತ್ಪರ್ಯ:-ಈ ರೇತಿಯಲ್ಲಿ ಶೌರೂಯವನ್ನು ತೋರಿಸುತ್ತೆರುವ ಈ ಬಾಲಕನ ಸಾಹಸಕ್ಕೆ ಶತ್ರುಘ್ನನು ಮೆಚ್ಚಿ ಮೂರು ಬಾಣಗಳನ್ನು ಬಾಲಕನ ಮೇಲೆ ಬಿಡಲು, ಲವನು ಅವನ್ನೈ ಖಂಡಿಸಿ,  ವೈರಿಯನ್ನು ಕುರಿತು, ವಿರಹವೇದನೆಯನ್ನು ಹೊಂದಿರುವವರಿಗೆ ತಗಲೈವ ನಿನ್ನಂಬುಗಳು ನನ್ನನ್ನು ಏನು ಮಾಡಬಲ್ಲವು? ಎಂದು ಹಾಸ್ಯಮಾಡುತ್ತ, ಅವನ ಕುದುರೆ, ಸಾರಥಿ,ರಥ, ಧ್ವಜ ಧನುಸ್ಸುಗಳನ್ನು ಕತ್ತರಿಸುತ್ತಿರುವುದನ್ನು ಶತ್ರುಘ್ನನು ನೋಡಿ. 


ಕೋಪದಿಂ ಪೊಸರಥಕಡರ್ದು ಶತ್ರುಘ್ನನುರು। 

ಚಾಪಮಂ ಕೊಂಡು ದಿವ್ಯಾಸ್ತ್ರದಿಂದೆಸುತ ಬರ। 

ಲಾಪಥದೊಳೆಣಿಕೆಗೆಯ್ದಣ್ಣನಂ ಮಾತೆಯಂ ನೆನೆದು ಮನದೊಳು ಮರುಗುತೆ॥ 

ಆ ಪಸುಳೆ ಮತ್ತೆ ಕಡುಧೈರ್ಯಮಂ ತವೆ ತಾಳ್ದಿ। 

ನೋಪಮದೊಳೆಯ್ದುವ ಪಗೆಯ ಶರವನೆಡೆಯೊಳ್ ಪ್ರ। 

ತಾಪದಿಂ ಕತ್ತರಿಸಿ ಕೆಡಹಲ್ಕೆಬಯಲಾಯ್ತು ಕೂಟಸಾಕ್ಷಿಯ ಸಿರಿಯೊಲು॥೧೬॥


ಪ್ರತಿಪದಾರ್ಥ :- ಶತ್ರುಘ್ನಂ == ಭರತಾನುಜನು, ಕೋಪದಿಂ= ರೋಷದಿಂದ, ಪೊಸರಥಕೆ= ಹೊಸದಾಗಿರುವ ಮತ್ತೊಂದು ರಥಕ್ಕೆ, ಅಡರ್ದು= ಹತ್ತಿ, ಉರುಚಾಪಮಂ= ದೊಡ್ಡದಾಗಿರುವ ಧನುಸ್ಸನ್ನು, ಕೊಂಡು= ತೆಗೆದುಕೊಂಡು, ದಾವ್ಯಾಸ್ತ್ರದಿಂದ= ಉತ್ತಮವಾದ ದೇವತಾಸ್ತ್ರದಿಂದ,ಎಸುತ= ಬಾಣಗಳನ್ನು ಬಿಡುತ್ತ, ಬರಲು=ಬರಲಾಗಿ, ಆ ಪಥದೊಳು= ಆ ಹಾದಿಯಲ್ಲಿ, ಎಣಿಕೆಗೈದು= ಆಲೋಚಿಸಿ, ಅಣ್ಣನಂ= ತನ್ನ ಅಗ್ರಜನಾದಕುಶನನ್ನೂ, ಮಾತೆಯಂ= ತಾಯಿಯಾದ ಸೀತಾದೇವಿಯನ್ನೂ, ನೆನೆದು= ಸ್ಮರಿಸಿಕೊಂಡು, ಮನದೊಳ್= ಹೃದಯದಲ್ಲಿ, ಮರುಗುತ= ದುಃಖಪಡುತ್ತ,ಮತ್ತೆ=ಪುನಃ, ಆ ಪಸುಳ= ಆ 

ಹುಡುಗನು, ತವೆ=ಹೆಚ್ಚಾಗಿ, ಧೈರ್ಯಮಂ ತಾಳ್ದು= ಧೈರ್ಯವನ್ನವಲಂಬಿಸಿ, ಇನೋಪಮದೊಳು= ರವಿಯ ಹಾಗೆ, ಐದುವ= ಸಮೀಪಸ್ತವಾಗುವ, ಪಗೆಯ= ಶತ್ರುವಾದ ಶತ್ರುಘ್ನನ, ಶರವನು= ಬಾಣವನ್ನು, ಎಡೆಯೊಳ್= ಮಧ್ಯದಲ್ಲಿಯೇ, ಪ್ರತಾಪದಿಂ= ಶೌರ್ಯದಿಂದ,ಕತ್ತರಿಸಿ=ಕಡಿದು ಹಾಕಿ, ಕೆಡಲ್ಕೆ= ನೆಲಕ್ಕೆ ಬೀಳಿಸಲು, ಕೂಟಸಾಕ್ಷಿಯ = ಸುಳ್ಳುಸಾಕ್ಷಿಯನ್ನಾ-

ಡತಕ್ಕವನ,ಸಿರಿಯೊಲು= ಐಶ್ವರ್ಯದ ಹಾಗೆ, ಬಯಲಾಯ್ತು= ಭಂಗವನ್ನೈದಿತು. 


ಅ॥ವಿ॥ ದಿವ್ಯ+ಅಸ್ತ್ರ=ದಿವ್ಯಾಸ್ತ್ರ ( ಸ.ದೀ. ಸಂ.) ಇನ+ಉಪಮ=ಇನೋಪಮ ( ಗು. ಸಂ. )


ತಾತ್ಪರ್ಯ:- ಹೊಸದಾದ ಬೇರೊಂದು ರಥವನ್ನು ಏರಿ, ದೊಡ್ಡದಾದ ಧನುಸ್ಸಿಗೆ ಉತ್ತಮಾಸ್ತ್ರವೊಂದನ್ನು ಸೇರಿಸಿಕೊಂಡು ಬರುತ್ತಿರುವುದನ್ನು ಕಂಡು ಸ್ವಲೂಪಹೊತ್ತು ತನ್ನ ತಾಯಿಯನ್ನು, ಅಣ್ಣನಾದ ಕುಶನನ್ನು ಸ್ಮರಿಸಿಕೊಂಡು, ಅನಂತರ ಮನಸ್ಸಿನಲ್ಲಿ ಕಡು ಧೈರ್ಯ ತಂದುಕೊಂಡು, ಸೂರ್ಯತೇಜಸ್ಸನ್ನು ತಿರಸ್ಕರಿಸುತ್ತಲಿರುವ, ಶತ್ರುವಿ ಬಾಣವನ್ನು ಅರ್ಧದಲ್ಲಿಯೇ ತುಂಡರಿಸಿದನು. 


ವಿಸ್ಮಯಾನ್ವಿತನಾದನಂದು ಶತ್ರುಘ್ನ ನಾ। 

ಕಸ್ಮಿಕದ ಪಸುಳೆಯ ಪರಾಕ್ರಮಕೆ ಬಳಿಕ ವಿಲ। 

ಯಸ್ಮರಾಂತಕನ ಪಣೆಗಣ್ಣಿಂದ ಪೊರಮಡುವ ದಳ್ಳುರಿಯತೆರದೊಳೆಸೆವ॥ 

ರಶ್ಮಿಗಳನುಗುಳ್ವಮೋಘದ ಬಾಣಮಂ ಪೂಡು। 

ತಸ್ಮದಿಷುಘಾತಮಂ ನೋಡೆನುತಿರಲ್ಕೆ ಮಂ। 

ದಸ್ಮಿತದೊಳಾಸರಳನೆಚ್ಚು ಲವನೆಡೆಯೊಳಿಕ್ಕಡಿಗೆಯ್ದನೇವೇಳ್ವೆನು॥೧೭॥ 


ಪ್ರತಿಪದಾರ್ಥ:- ಅಂದು=ಆ ಸಮಯದಲ್ಲಿ, ಶತ್ರುಘ್ನನು =ಶತ್ರುಘ್ನನಾದರೊ, ಆಕಸ್ಮಿಕದ= ಹಠಾತ್ತಾಗಿ ಒದಗಿದ, ಶಿಶುವಿನ= ಹುಡುಗನಾದ ಲವನ, ಪರಾಕ್ರಮಕ್ಕೆ=ಸಾಹಸಕ್ಕೆ,  ವಿಸ್ಮಯಾನ್ವಿತನು= ಅಚ್ಚರಿಯಿಂದ ಕೂಡಿದವನು, ಆದನು= ಆಗಿಹೋ-

ದನು, ಬಳಿಕ =ಆ ಮೇಲೆ, ವಿಲಯ= ನಾಶವಾಗತಕ್ಕ ಕಾಲದ, ಸ್ಮರಾಂತಕನ= ಪರಮೇಶ್ವರನ, ಪಣೆಗಣ್ಣಿಂದ =ಫಾಲನೇತ್ರ-

ದಿಂದ,ಪೊರಮಡುವ= ಹೊರಡತಕ್ಕ, ದಳ್ಳುರಿಯ= ದೊಡ್ಡ ಉರಿಯ, ತೆರದೊಳು= ಬಗೆಯಿಂದ,ಎಸೆವ=ಪ್ರಜ್ವಲಿಸುವ, ರಶ್ಮಿಗಳನು= ಕಿರಣಗಳನ್ನು, ಉಗುಳ್ವ= ಹೊರಸೂಸುತ್ತಿರುವ, ಅಮೋಘ=ಅತಿಶಯವಾದ, ಬಾಣಮಂ= ಅಸ್ತ್ರವನ್ನು, ಪೂಡುತ= ಹೂಡುತ್ತ, ಅಸ್ಮತ್= ನಮ್ಮ ಸಂಬಂಧವಾದ, ಇಷುಘಾತಮಂ= ಬಾಣದ ಏಟನ್ನು, ನೋಡು=ಈಕ್ಷಿಸು, ಎನುತ= ಎಂದು ನುಡಿಯುತ್ತ, ಎಸಲ್ಕೆ= ಪ್ರಯೋಗಮಾಡಲು, ಲವನು=ಲವನಾದರೊ, ಮಂದಸ್ಮಿತದೊಳು= ಮುಗುಳ್ನಗೆಯಿಂದ,ಆ ಸರಳನು= ಆ ಬಾಣವನ್ನು, ಎಚ್ಚು= ತನ್ನ ಬಾಣದಿಂದ ಹೊಡೆದು, ಎಡೆಯೊಳ್= ಮಧ್ಯಮಾರ್ಗದಲ್ಲಿಯೆ, ಇಕ್ಕಡಿಗೈದನು= ಎರಡು ತುಂಡಾಗಿ ಕತ್ತರಿಸಿದನು. ಏವೇಳ್ವೆನು= ಏನೆಂದು ನುಡಿಯಲಿ. 


ಅ॥ವಿ॥ ಸ್ಮರ+ಅಂತ= ಸ್ಮರಾಂತ (ಸ. ದೀ. ಸಂ.) ಸ್ಮರ-ಮನ್ಮಥನಿಗೆ, ಅಂತ- ಯಮನಾದವನು ಶಿವ( ಷ. ತ. )


ತಾತ್ಪರ್ಯ:- ಇದನ್ನು ಶತ್ರುಘ್ನನು ನೋಡಿ ಪರಮಾಶ್ಚರ್ಯವನೈದಿ, ಆಹಾ! ಈ ಹುಡುಗನ ಸಾಹಸವು ಬಹು ಅಸೃಧ್ಯವಾದದ್ದು, ಇವನು ಯಾರೋ ಕಾಣೆನು.  ಒಳ್ಳೇದು ಎರಲಿ ಎಂದು ತನ್ನ ಮನದಲ್ಲಿ ಅಂದುಕೊಳ್ಳುತ್ತ, ಪ್ರಳಯಕಾಲದ ರುದ್ರನ ಹಣೆಗಣ್ಣಿನ ಪ್ರಕಾಶದಂಥ ಒಂದು ಬಾಣವನ್ನು ಬಿಲ್ಲಿನಲ್ಲಿ ಹೂಡಿ ಲವನ ಮೇಲೆ ಬಿಟ್ಟನು, ಆ ಕೂರಂಬನು ಲವನು ಮಧ್ಯದಲ್ಲಿಯೇ ಖಂಡಿಸಿ ಮುಗುಳ್ನಗುತ್ತಿದ್ದನು. 


ಅರಸ ಕೇಳಾಶರದೊಳರ್ಧಮವನಿಗೆ ಕೆಡೆದು। 

ದಿರದೆ ಮೇಲ್ವಾಯ್ದರ್ಧಮೀ ಲವನ ಕಾರ್ಮುಕವ। 

ನರಿದುಕೊಂಡೆರ್ದೆಯನುಚ್ಚಳಿಸೆ ಮೈಮರೆದೊರಗಿದಂ ಪಸುಳೆ ಮೂರ್ಛೆಯಿಂದೆ॥ 

ಹರುಷದಿಂದೃರ್ದುದುಳಿದರಿಬಲಂ ನಡೆತಂದು। 

ಕರುಣದಿಂ ತರಳನಂ ನೋಡಿ ರಾಮಾಕೃತಿವೊ। 

ಲಿರೆ ಮೋಹದಿಂ ತನ್ನ ರಥದ ಮೇಲಿರಿಸಿಕೊಂಡೈದಿದಂ ಶತ್ರುಘ್ನನು॥೧೮॥ 


ಪ್ರತಿಪದಾರ್ಥ :- ಅರಸ= ಎಲೈ ಜನಮೇಜಯನೆ,  ಕೇಳು=ಲಾಲಿಸು, ಆ ಶರದೊಳು= ಶತ್ರುಘ್ನನು ಬಿಟ್ಟ ಬಾಣದಲ್ಲಿ, ಅರ್ಧಂ= ಹಿಂದಗಡೆಯ ಅರ್ಧವು, ಅವನಿಗೆ= ಭೂಮಿಯಮೇಲೆ, ಕೆಡೆದುದು= ಬಿದ್ದುಹೋಯಿತು, ಇರದೆ=ಸುಮ್ಮನಿರದೆ, ಮೇಲ್ವಾಯ್ದು= ಮೇಲೆಮೇಲೆ ಬರುವ, ಅರ್ಧಂ= ಮುಂದುಗಡೆಯ ಮತ್ತರ್ಧವು, ಲವನ= ಲವನೆಂಬ ಹಸುಳೆಯ, ಕಾರ್ಮುಕವನು= ಧನುಸ್ಸನ್ನು, ಅರಿದುಕೊಂಡು=ಕತ್ತರಿಸಿಕೊಂಡು,ಎದೆಯನು= ಹೃದಯವನ್ನು, ಉಚ್ಚಳಿಸೆ= ಕತ್ತರಿಸಲು, ಪಸುಳೆ= ಲವನೆಂಬ ಹುಡುಗನು, ಮೂರ್ಛೆಯಿಂ= ಸ್ಮೃತಿತಪ್ಪಿದ್ದರಿಂದ, ಮೈಮರೆತು= ತನ್ನ ದೇಹವನ್ನೆ ಮರೆತು, ಒರಗಿದಂ= ಭೂಮಿಯ ಮೇಲೆ ಬಿದ್ದನು. ಅರಿಬಲಂ= ವೈರಿಗಳ ಪಡೆಯು, ಹರ್ಷದಿಂದ= ಆನಂದದಿಂದ, ಆರ್ದು=ಹರ್ಷೋದ್ಗಾರ ಮಾಡಿ, ಉಳಿದುದು= ನಿಂತುಬಿಟ್ಟಿತು, ಶತ್ರುಘ್ನನು = ಶತ್ರುಘ್ನನಾದರೊ,  ನಡೆತಂದು = ಲವನ- 

ಬಳಿಗೆ ಬಂದು, ಕರುಣದಿಂ = ವಿಶ್ವಾಸದಿಂದ, ತರಳನಂ= ಮಗುವಾದ ಲವನನ್ನು ಕಂಡು, ರಾಮಾಕೃತಿಯವೊಲ್= ರಾಮನ ಆಕಾರದಂತೆಯೇ, ಇರೆ=ಇರಲಾಗಿ, ಮೋಹದಿಂ= ಪ್ರೀತಿಯಿಂದ,  ತನ್ನ= ಸ್ವಕೀಯವಾದ, ರಥದಮೇಲೆ= ತೇರಿನ ಮೇಲೆ, 

ಇರಿಸಿಕೊಂಡು= ಇಟ್ಟುಕೊಂಡು, ಐದಿದಂ= ಮುಂದೆ ನಡೆದನು. 


ತಾತ್ಪರ್ಯ:-ಎಲೈ ಜನಮೇಜಯನೆ ಕೇಳು, ಶತ್ರುಘ್ನನ ಕ್ರೂರ ಬಾಣವನ್ನು ದಾರಿಯಲ್ಲಿಯೇ ಲವನು ಖಂಡಿಸಲು, ಅದರ ಅರ್ಧಭಾಗವು ನೆಲದಲ್ಲಿ ಬಿದ್ದುಹೋಯಿತು, ಮತ್ತರ್ಧ ಭಾಗ ಗಗನಮಾರ್ಗವನ್ನೈದಿಲವನ ಮೇಲೆ ನುಗ್ಗಿ, ಅವನ ಎದೆಯನ್ನು ಚುಚ್ಚಲಾಗಿ, ಆ ಬಾಲಕನು ಮೂರ್ಛೆಹೋಗಿ ನೆಲದಮೇಲೆ ಬಿದ್ದನು. ಶತ್ರುಗಳು ಇದನ್ನು ನೋಡಿ ಕೋಲಾಹಲ ಧ್ವನಿಯನ್ನು ಮಾಡುತ್ತಲಿದ್ದರು. ಆಗ ಶತ್ರುಘ್ನನು ಈ ಬಾಲಕನ ಬಳಿಗೆ ಬಂದು ನೋಡಿ ರಾಮಚಂದ್ರನಂತೆಯೇ ಇರುವ ಮುಖವುಳ್ಳ ಲವನನ್ನು ಪ್ರೀತಿಯಿಂದೆತ್ತಿ, ತನ್ನ ರಥದಮೇಲಿಟ್ಟುಕೊಂಡು ಮುಂದೆ ಹೊರಟನು. 


ಕದಳಿಯೊಳ್ ಕಟ್ಟಿರ್ದ ಕುದುರೆಯಂ ಬಿಡಿಸಿ ನಗ। 

ರದ ಕಡೆಗೆ ಪಡೆವೆರಸಿ ತೆರುಗಿದಂ ಶತ್ರುಘ್ನ । 

ನುದಧಿಘೋಷದೊಳಿತ್ತಲೋಡಿದರ್ ತಾಪಸವಟುಗಳವನಿಸುತೆಯ ಪೊರೆಗೆ॥ 

ಕದನದೊಳ್ ನಡೆದ ವೃತ್ತಾಂತಮಂ ಪೇಳಲ್ಕೆ। 

ರೈದಿತದಿಂ ಕೈವೆರಳ್ಗಳನೊತ್ತಿಕೊಳುತ ನಿಜ। 

ಸದನಮಂ ಪೊರಮಟ್ಟು ಹಲುಬಿದಳ್ ಸುತನ ಗುಣಶೀಲರೂಪಗಳನೆಣಸಿ॥೧೯॥ 


ಪ್ರತಿಪದಾರ್ಥ :- ಶತ್ರುಘ್ನನು =ಶತ್ರುಘ್ನನಾದರೋ, ಕದಳಿಯೊಳು= ಬಾಳೆಯಮರದ ಬುಡಕ್ಕೆ, ಕಟ್ಟಿರ್ದ= ಕಟ್ಟಿಹಾಕಿದಂಥ, ಕುದುರೆಯಂ= ತುರಗವನ್ನು, ಬಿಡಿಸಿ= ಬಿಚ್ಚಿಸಿಬಿಟ್ಟು, ಪಡೆವೆರಸಿ= ಸೈನ್ಯದೊಡನೆ, ನಗರದಕಡೆಗೆ= ಪಟ್ಟಣದ ಕಡೆಗೆ, ತಿರುಗಿದಂ= ಹೊರಟನು, ಇತ್ತ= ಈ ಕಡೆ, ಉದಧಿಘೋಷದೊಳು= ಕಡಲರಭಸದಿಂದ,ತಾಪಸವಟುಗಳು= ಋಷಿಕುವ-

ರರು, ಅವನಿಸುತೆಪೊರಗೆ= ಸೀತೆಯಿದ್ದೆಡೆಗೆ, ಓಡಿದರು=ಓಡೆಹೋದರು, ಕದನದೊಳ್= ಕಾಳಗದಲ್ಲಿ, ನಡೆದ= ನಡೆದಂಥ, ವೃತ್ತಾಂತಮಂ = ವರ್ತಮಾನವನ್ನೆಲ್ಲಾ, ಪೇಳಲ್ಕೆ= ಹೇಳಲು, ರುದಿತದಂ= ರೋದನೆಯಿಂದ, ಕೈವೆರಳ್ಗಳನು= ಕೈಬೆಟ್ಟುಗಳ-

ನ್ನು, ಒತ್ತಿಕೊಂಡು= ಹಿಸುಕಿಕೊಳ್ಳುತ್ತ, ನಿಜಸದನದಿಂ= ತನ್ನೆಲೆವನೆಯಿಂದ,ಪೊರಮಟ್ಟು = ಹೊರಬಂದು,ಸುತನ= ಪುತ್ರನ, ಗುಣ=ಸದ್ಗುಣ, ಶೌರ್ಯಾದಿಗಳನ್ನು, ಶೀಲ= ಒಳ್ಳೆಯ ನಡತೆಯನ್ನು, ರೂಪಗಳನು= ಆಕಾರವನ್ನು,  ಎಣಿಸಿ= ಸ್ಮರಣೆಮಾಡಿಕೊಂಡು, ಹಲುಬಿದಳು= ದುಃಖಪಟ್ಟಳು. 


ತಾತ್ಪರ್ಯ:- ಬಾಳೆಯ ಮರಕ್ಕೆ ಬಿಗಿದಿದ್ದ, ಯಜ್ಞಾಶ್ವವನ್ನು ಬಿಡಿಸಿಕೊಂಡು ಸೇನಾಸಮೇತನಾಗಿ ಪಟ್ಟಣದ ಕಡೆಗೆ ಹೊರಟುಹೋಗುತ್ತಲಿದ್ದನು, ಇದನ್ನೆಲ್ಲಾ ನೋಡುತ್ತಿದ್ದ ಮುನಿವಟುಗಳು ಸಮೈದ್ರದ ಅಲೆಗಳಂತೆ ಕೂಗಿಕೊಳ್ಳುತ್ತ 

ಜಾಗ್ರತೆಯಾಗಿ ಸೀತೆಯಿದ್ದೆಡೆಗೆ ಬಂದು ನಡೆದ ವರ್ತಮಾನವನ್ನೆಲ್ಲಾ ವಿವರಿಸಲು,ಜಾನಕಿಯು ಮನಸ್ಸಿನಲ್ಲಿ ಅತಿಯಾಗಿ ನೊಂದುಕೊಂಡು ತನ್ನ ಮಗನಾದ ಲವನ ಗುಣಶೀಲಾದಿಗಳನ್ನೆಲ್ಲಾ ಜ್ಞಾಪಿಸಿಕೊಳ್ಳುತ್ತ, ಅಳುತ್ತಿದ್ದಳು. 


ಒದರಿದವು ಕಂಬನಿಗಳಂಗಲತೆ ಕಂಪಿಸಿತು। 

ಪೊಸೆದಳೊಡಲಂ ಕೂಡೆ ಕೂಡೆ ಸುತಮೋಹದಿಂ। 

ದಸವಳಿದು ಕಂದನೆಲ್ಲಿರ್ದಪಂ ಕಾದಿದನೆ ಪಗೆಯ ಕೈಗೊಳಗಾದನೇ॥ 

ಪಸುಳೆಗೇನಾಯ್ತೊ ಮಗನೆಂತು ನೊಂದನೊ ತರಳ। 

ನಸುವಿಡಿದಿಹನೊ ಬಾಲಕನ ಮುದ್ದುಮೊಗಮೆನ್ನ। 

ದೆಸೆಗೆ ಸೈರಿಸದೊ ಜೇವಿಸಿ ಕೆಟ್ಟೆನೆಂದು ಹಲುಬಿದಳಂಬುಜಾಕ್ಷಿ ಮರುಗಿ॥೨೦॥ 


ಪ್ರತಿಪದಾರ್ಥ :- ಕಂಬನಿಗಳು= ಕಣ್ಣಿನಲ್ಲಿ ನೀರು, ಒಸರಿದವು= ಸುರಿದವು, ಅಂಗಲತೆ= ಬಳ್ಳಿಯಂತೆ ಕೋಮಲವಾದ ದೇಹವು, ಕಂಪಿಸಿತು= ನಡುಗಲೃರಂಭಿಸಿತು, ಕೂಡೆಕೂಡೆ= ಆಗಾಗ್ಗೆ, ಒಡಲಂ= ಹೊಟ್ಟೆಯನ್ನು, ಪೊಸೆದಳು= ಬಡಿದು- 

ಕೊಂಡಳು, ಸುತಮೋಹದಿಂದ = ಪುತ್ರವಾತ್ಸಲ್ಯದಿಂದ, ಬಸವಳಿದು= ಸ್ಮೃತಿತಪ್ಪಿದವಳಾಗಿ,ಕಂದನು= ಮಗುವು, ಎಲ್ಲಿದ್ದಪಂ= ಎಲ್ಲಿರುವನೋ, ಕಾದಿದನೆ= ಯುದ್ಧಮಾಡಿದನೆ, ಪಗೆಯಕೈಗೆ= ಶತ್ರುವಶಕ್ಕೆ, ಒಳಗಾದನೆ= ಸಿಕ್ಕಿಬಿದ್ದನೆ, 

ಪಸುಳೆಗೆ= ಬಾಲಕನಿಗೆ, ಏನಾಯ್ತೊ= ಯಾವ ಕಷ್ಟ ಒದಗಿತೊ, ಮಗನು=ಕುವರನು,  ಎಂತು=ಹೇಗೆ, ನೊಂದನೋ= ತೊಂದರೆಯನ್ನನುಭವಿಸಿದನೋ, ತರಳನು= ಬಾಲನು, ಅಸುವ= ಪ್ರಾಣವನ್ನು,ಇಡಿದು= ಧರಿಸಿ, ಇಹನೊ= ಇದ್ದಾನೆಯೋ, ಬಾಲಕನ= ಹಸುಳೆಯ, ಮುದ್ದುಮೊಗಂ= ಚೆಲುವಾದ ಮುಖವು, ಎನ್ನ= ನನ್ನ,ದೆಸೆಗೆ= ನಿರ್ಭಾಗ್ಯಕ್ಕೆ 

ಸೈರಿಸದೊ= ತಡೆಯದೆ ಹೋಯಿತೋ, ಜೀವಿಸಿ= ಪ್ರಾಣವನ್ನಿಟ್ಟುಕೊಂಡು, ಕೆಟ್ಟೆನು= ಕೆಟ್ಟುಹೋದೆನು, ಎಂದು= ಎಂಬ ತೆರನಾಗಿ, ಅಂಬುಜಾಕ್ಷಿ = ಪದ್ಮಪತ್ರದಂತೆ ನಯನಗಳುಳ್ಳ ಜಾನಕಿಯು, ಮರುಗಿ=ಸಂಕಟಪಟ್ಟು,ಹಲುಬಿದಳು= ಕಳವಳಪಟ್ಟಳು. 


ಅ॥ವಿ॥ ಕಣ್+ಪನಿ=ಕಂಬನಿ (ಷ. ತ. ) ಅಸವು+ಅಳಿದು=ಅಸವಳಿದು (ಕ್ರಿ. ಸ. ) ಅಂಬು+ನೀರಿನಲ್ಲಿ, ಜ=ಹುಟ್ಟಿದ್ದು ಕಮಲ( ಷ. ತ. ) 


ತಾತ್ಪರ್ಯ:- ಲವನನ್ನು ಶತ್ರುಗಳು ಹಿಡಿದುಕೊಂಡು ಹೋದರೆಂಬ ಸುದ್ಧಿಯನ್ನು ಕೇಳಿದಾಗಿನಿಂದಲೂ ಲೋಕಮಾತೆಯಾದ ಸೀತಾದೇವಿಯ ಕಣ್ಣುಗಳಿಂದ ನೀರು ಸುರಿದು ಸುರಿದು ದೊಡ್ಡದಾದ ಪ್ರವಾಹವು ಹರಿದು ಹೋಯಿತು.ಮೈನಡುಕವು ಹೆಚ್ಚಿತು. ಮಾತನೃಡಲು ಬಾಯಿಯೂ ನೃಲಗೆಯೂ ಸ್ವಾಧೀನ ತಪ್ಪಿಹೋದವು. ಪುತ್ರವಾತ್ಸಲ್ಯದಿಂದ ಆಗಾಗ್ಗೆ ಅಯ್ಯೋ, ವಿಧಿಯಂ, ನನ್ನ ಮಗನಿಗೆ ಇಂಥಾ ಗತಿ ಬಂದಿತಲ್ಲಾ! ಶತ್ರುಗಳೊಂದಿಗೆ ಹೋರಾಡಿ ಸೋತುಹೋದನೆ, ಮಗುವಿನ ಪಾಡೇನಾಗಿ ಹೋಯೆತೋ ಕಾಣೆನಲ್ಲಾ! ಯುದ್ಧದಲ್ಲಿ ಎಷ್ಟು ನೋವನುಭವೆಸಿದನೊ ತಿಳಿಯದು. ಈಗ ಬದುಕಿದಾನೆಯೋ ಇಲ್ಲವೋ ಗೊತ್ತಾಗಲಿಲ್ಲವಲ್ಲ! ನನ್ನ ಕಂದನ ಮೈದ್ದು ಮೊಗವನ್ನು ನೋಡಿಕೊಂಡು ಕಾಲಹರಣಮಾಡುತ್ತಲಿದ್ದದ್ದು ಪಾಪಿ ದೈವಕ್ಕೆ ಒಪ್ಪಿತಯಿಲ್ಲವಾಯಿತೆ! ಹಾ ನನ್ನ  ಕಂದ, ಇನ್ನೇನುಶಗತಿಯೆಂದು ನಾನಾ ಪ್ರಕಾರವಾಗಿ ದುಃಖಿಸುತ್ತಿರುವ ಕಾಲಕ್ಕೆ.