ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ನವೆಂಬರ್ 22, 2025

ಜೈಮಿನಿ ಭಾರತ 22 - ದೊಡ್ಡಬೆಲೆ ನಾರಾಯಣಶಾಸ್ತ್ರೀ

ಜೈಮಿನಿ ಭಾರತ 22 - ದೊಡ್ಡಬೆಲೆ ನಾರಾಯಣಶಾಸ್ತ್ರೀ


ಸೂಚನೆ:- ಸತ್ವದಿಂದೊದಗಿದರ್ ತಮತಮಗೆ ಭುಜ ಸಾಹ। 

ಸತ್ವದಿಂ ಪ್ರದ್ಯುಮ್ನ ಮೊದಲಾದ ಪಟುಭಟರ್। 

ಸತ್ವರದೊಳೆಚ್ಚಾಡಿದರ್ ಬಭ್ರುವಾಹನ ಧನಂಜಯರ್ ಸಂಗರದೊಳು॥ 


ಪ್ರತಿಪದಾರ್ಥ :- ಪ್ರದ್ಯುಮ್ನ ಮೊದಲಾದ = ಪ್ರದ್ಯುಮ್ನನೆ ಆದಿಯಾದ, ಪಟು= ಶೂರರಾದ,ಭಟರು=ಯೋಧರು, ರಣ= ಕಾಳಗದ, ಸಾಹಸತ್ವದಿಂ= ಸಾಮರ್ಥ್ಯದಿಂದ,ತಮತಮಗೆ= ತಮ್ಮತಮ್ಮೊಳಗೆ, ಸಂಗರದೊಳು= ಕಾಳಗದಲ್ಲಿ, ಒದಗಿದರು= ನೆರೆದರು, ಸತ್ವರದೊಳು= ಬೇಗನೆ, ಬಭ್ರುವಾಹನ ಧನಂಜಯನರು= ಬಭ್ರುವಾಹನ ಮತ್ತು ಪಾರ್ಥರೂ ಸಹ, ಎಚ್ಚಾಡಿದರು= ಕಾಳಗಮಾಡಿದರು. 


ತಾತ್ಪರ್ಯ:-ಪ್ರದ್ಯುಮ್ನನೇ ಮೊದಲಾದ ವೀರರು ತಮ್ಮ ಸತ್ವಕ್ಕನುಗುಣವಾಗಿ ಬಭ್ರುವಾಹನನೊಡನೆ ಹೋರಾಡಿದರು. ಬಳಿಕ ಅರ್ಜುನ, ಬಭ್ರುವಾಹನರು ಪರಾಕ್ರಮಾತಿಶಯದಿಂದ ಕಾದಿದರು. 


ಅರಸ ಕೇಳರ್ಜುನಂ ಬೈದು ನೂಕಿದ ಬಳಿಕ। 

ತರಿಸಿದ ಸುವಸ್ತುಗಳನಧ್ವರದ ತುರಗಮಂ। 

ತಿರುಗಿ ನಿಜನಗರಿಗೆ ಕಳುಹಿ ಬಭ್ರುವಾಹನಂ ಸಮರಕನುವಾಗಿ ನಿಲಲು॥ 

ಧರಣಿಮಂಡಲಮಂ ಚತುರ್ಬಲಂ ಗೀರ್ವಾಣ। 

ಸರಣಿ ಮಂಡಲಮಂ ಧ್ವಜ ಛತ್ರ ಚಾಮರಂ। 

ತರಣಿಮಂಡಲಮಂ ಚಮೂ ಪದ ಹತೋದೂಧೂತ ರೇಣುವ್ರಜಂ ಮುಸುಕಿತು॥೧॥ 


ಪ್ರತಿಪದಾರ್ಥ :- ಅರಸ= ಎಲೈ ಜನಮೇಜಯ ಮಹೀಪಾಲನೆ, ಕೇಳು=ಲಾಲಿಸು, ಅರ್ಜುನಂ= ಪಾರ್ಥನು, ಬೈದು= ಕ್ರೂರವಾದ ನುಡಿಗಳನ್ನಾಡಿ, ನೂಕಿದ ಬಳಿಕ = ತಳ್ಳಿದ ಮೇಲೆ, ತರಿಸಿದ= ತರಿಸಿಕೊಂಡಿದ್ದ, ಸುವಸ್ತುಗಳನು= ಶ್ರೇಷ್ಠತಮ- ವಾದ ಪದಾರ್ಥಗಳನ್ನೂ,(ರತ್ನಾಭರಣಾದಿಗಳನ್ನೂ) ಊಧ್ವರದ= ಯಾಗದ, ತುರಗಮಂ= ಹಯವನ್ನೂ, ಬಭ್ರುವಾಹನನು = ಬಭ್ರುವಾಹನನಾದರೊ, ನಿಜ=ತನ್ನ, ನಗರಿಗೆ= ಪಟ್ಟಣಕ್ಕೆ, ತಿರುಗಿ= ಪುನಃ, ಕಳುಹಿ= ಕಳುಹಿಸಿ ಬಿಟ್ಟು, ಸಮರಕೆ= ಕಾಳಗಕ್ಕೆ, ಅನುವಾಗಿ= ನೇರ್ಪಟ್ಟು, ನಿಲಲು= ನಿಂತುಕೊಳ್ಳಲು, ಚತುರ್ಬಲಂ= ಚತುರಂಗ ಸೇನೆಯು,ಧರಣಿಮಂಡಲಂ= ಇಳಾಮಂಡಲವನ್ನು, ಧ್ವಜ= ಬಾವುಟಗಳು,ಛತ್ರ= ಸತ್ತಿಗೆಯು,ಚಾಮರ= ಚೌರಿಯು, ಗೀರ್ವಾಣ= ಸುರರ, ಸರಣಿ= ಸರಣಿ= ದಾರಿಯ, ಮಂಡಲಮಂ= ಸ್ಥಾನವನ್ನು, ಚಮೂ= ದಳದ, ಪದ= ಪಾದಗಳ, ಹತ=ತುಳಿಯುವಿಕೆಯಿಂದ,ಉದ್ಧೂ-

ತ= ಮೇಲಕ್ಕೇಳುವ, ರೇಣುರಜಂ= ಧೂಳಿನ ಸಮೂಹವು, ಮುಸುಕಲು= ಕವೆದುಕೊಳ್ಳಲಾಗಿ. 


ತಾತ್ಪರ್ಯ:- ಕೇಳೈ ಜನಮೇಜಯ ಧರೃವಲ್ಲಭನೆ, ತನ್ನು ಮಾತೆಯಾದ ಚಿತ್ರಾಂಗದೆಯ ನೀತಿ ವಾಕ್ಯಗಳನ್ನು ಶಿರಸಾವಹಿಸಿ ತಾನು ಕಟ್ಟಿದ್ದ ಕುದುರೆಯನ್ನು ಅರ್ಜುನನಿಗೆ ಒಪ್ಪಿಸಿ ಬಿಡಲು ನಿಶ್ಚ್ಯೆಸಿದವನಾಗಿ, ಅನೇಕವಾದ ದಿವ್ಯಾಭರಣಗಳಿಂದಲೂ,

ಗಂಧ, ಪುಷ್ಪ, ತಾಂಬೂಲಗಳಿಂದಲೂ, ನಾರೀಮಣಿಗಳಿಂದಲೂ ಕೂಡಿದವನಾಗಿ ಅರ್ಜುನನೆಡೆಗೆ ಬಂದು ತಿಳಿಯದೆ ಕುದುರೆಯನ್ನು ಕಟ್ಟಿದ ನನ್ನ ತಪ್ಪನ್ನು ಕ್ಷಮಿಸಿ ಈ ಅಶ್ವವನ್ನು, ಮತ್ತು ನಾನು ತಂದಿರುವ ಸಕಲ ಸಾಮಗ್ರಿಗಳನ್ನು ಕೈಕೊಂಡು ಮನ್ನಿಸೆಂದು ಎಷ್ಟು ಕೇಳಿಕೊಂಡರೂ ಅರ್ಜುನನು ಒಡಂಬಡದೆ ರೋಷೋನ್ಮತ್ತನಾಗಿದ್ದನು. ಸಮೀಪದಲ್ಲಿದ್ದ ಹಂಸಧ್ವಜಾ-

ದಿಗಳೆಲ್ಲರೂ ಹೇಳಿದರೂ ಕೇಳದೆ ಬಭ್ರುವಾಹನನನ್ನು ಕುರಿತು,  ಎಲೈ ಹೇಡಿಯೆ, ನೀನು ನನ್ನ ಮಗನೆಂದಿಗೂ ಅಲ್ಲವು, ಸುಭದ್ರೆಯ ಗರ್ಭದಲ್ಲಿ ನನ್ನಿಂದ ಜನಿಸಿದ ಅಭಿಮನ್ಯೈವೊಬ್ಬನೇ ನನ್ನ ಮಗನು. ಪರಾಕ್ರಮಿಯಾದ ನನ್ನ ಹೊಟ್ಟೆಯಲ್ಲಿ  ಹೇಡಿಯಾದ ನಿನ್ನಂಥವನು ಎಂದೆಂದಿಗೂ ಹುಟ್ಟುವುದೇಯಿಲ್ಲವು. ಛಿ, ನಡೆ, ಎಂದು ಗದರಿಸಲು ಬಭ್ರುವಾಹನನು ರೋಷೋನ್ಮತ್ತನಾಗಿ, ಕುದುರೆಯನ್ನೂ ತಾನು ತಂದಿದ್ದ ಉತ್ತಮವಾದ ಸಾಮಗ್ರಳನ್ನೂ ಪಟ್ಟಣಕ್ಕೆ ಕಳುಹಿಸಿ, ತಾನು 

ಅರ್ಜುನನ ಮೇಲೆ ಯುದ್ಧಕ್ಕೆ ನಿಂತವನಾದನು. ಅವನ ಸೈನ್ಯವಾದರೊ ಭೂಮಂಡಲವನ್ನು ಛತ್ರ, ಚಾಮರ, ಧ್ವಜಪತಾಕೆಗಳು ನಭೋಮಂಡಲವನ್ನೂ ಆವರಿಸೆದವು, ಸೇನಾರಭಸದಿಂದ ಎದ್ದ ಧೂಳು ಭೂಮ್ಯಾಕಾಶಗಳ ಮಧ್ಯೆ ವ್ಯಾಪಿಸಿ ಬಿಟ್ಟಿತು. 


ಅರ್ಬುದಗಜಂ ಪತ್ತುಕೋಟಿ ಸುವರೂಥಮೆರೆ। 

ದರ್ಬುದ ತುರಂಗಮಂ ಕೂಡಿತು ಪದಾತಿ ಮೂ। 

ರರ್ಬುದಂ ಜೋಡಿಸಿದ ರಾಹವಪ್ರೌಢರ್ ಸುಬುದ್ಧಿ ಮೊದಲಾದ ಭಟರು॥ 

ಸರ್ಬಸನ್ನಾಹದಿಂದೊತ್ತರಿಸಿದೆತ್ತಣ ಚ। 

ತುರ್ಬಲಮೊ ಕಮಲಜನ ಸೃಷ್ಟಿಯೊಳದೃಷ್ಟಮೆನೆ। 

ಪರ್ಬಿದುದು ನೆಲದಗಲಕಾ ಬಭ್ರುವಾಹನಂ ತರಿಸಿದಂ ಮಣಿತಥವನು॥೨॥ 


ಪ್ರತಿಪದಾರ್ಥ :- ಗಜಂ= ಹಸ್ತಿಗಳಾದರೊ, ಅರ್ಬುದ= ಅರ್ಬುದ ಸಂಖ್ಯೆಯುಳ್ಳದ್ದು, ಸು= ಶ್ರೇಷ್ಠವಾದ, ವರೂಥಂ= ರಥಗಳಾದರೊ,ಪತ್ತುಕೋಟಿ= ಹತ್ತು ನೂರು ಲಕ್ಷವುಳ್ಳದ್ದು ,ತುರಂಗಮಂ= ಹಯಗಳು, ಎರಡು ಅರ್ಬುದಂ= ಎರಡು ಅರ್ಬುದವುಳ್ಳದ್ದು, ಕೂಡಿದ= ನೆರೆದ, ಪದಾತಿ= ಕಾಲ್ಬಲವು, ಮೂರರ್ಬುದಂ= ಮೂರುನೂರು ಕೋಟಿ ಸಂಖ್ಯೆಯಿಂದ,

ಜೋಡಿಸಿದುದು= ಒಂದುಗೂಡಿತೈ, ಆಹವಪ್ರೌಢರು=ರಣಪಂಡಿತರು, ಸುಬುದ್ಧಿ= ಸುಬುದ್ಧಿಯೆಂಬುವನೇ, ಮೊದಲಾದ =ಆದಿಯಾಗಿರತಕ್ಕ, ಭಟರ= ವೀರರ, ಸರ್ವ=ಸಕಲ, ಸನ್ನಾಹದಿಂದ= ಕಾರ್ಯಗಳಿಂದ,ಒತ್ತರಿಸಿ= ಒಟ್ಟು ಸೇರಿಸಿ,ದೆತ್ತಣ= ಅಲ್ಲಿಯ ಸಂಬಂಧವಾದ, ಚತುರ್ಬಲಂ= ಚತುರಂಗ ಸೇನೆ, ಕಮಲಜನ= ಚತುರ್ಮುಖನ, ಸೃಷ್ಟಿಯೊಳು= ಸೃಷ್ಟಿವರ್ಗದಲ್ಲಿ

ಅದೃಷ್ಟಂ=ಎಲ್ಲಿಯೂ ಕಾಣಲೇ ಇಲ್ಲವು, ಎನೆ= ಎಂಬತೆರನಾಗಿ, ನೆಲದ=ಭೂಮಂಡಲದ, ಅಗಲ್ಕೆ= ವಿಶಾಲಕ್ಕೂ ,ಪರ್ಬಿ- 

ದುದು= ಆವರಿಸಿಕೊಂಡಿತು, ಆ ಬಭ್ರುವಾಹನನು= ಆ ಅರ್ಜುನಿಯು,ಮಣಿರಥವನು= ರತ್ನಖಚಿತವಾದ ತೇರನ್ನು, ತರಿಸಿದಂ= ತರಿಸಿಕೊಂಡನು. 


ತಾತ್ಪರ್ಯ:- ಆಗ ಒಂದರ್ಬುದ ಆನೆಗಳೂ, ಹತ್ತು ಕೋಟಿ ತೇರುಗಳೂ,ಎರಡರ್ಬುದ ಕುದುರೆಗಳೂ, ಸುಬುದ್ಧಿಯೇ ಮೊದಲಾದವರಿಂದ ಕೂಡಿದ ಮೂರರ್ಬುದ ಕಾಲಾಳುಗಳೂ, ಬ್ರಹ್ಮಸೃಷ್ಟಿಯಲ್ಲೆಲ್ಲಾ ಅತ್ಯಾಶ್ಚರ್ಯಕರವಾಗಿದೆಯೊ 

ಎಂಬಂತೆ ಭೂಮಂಡಲವನ್ನೆಲ್ಲ ಆವರಿಸಿಕೊಂಡಿತು.  


ಚಿತ್ರಶೋಭಿತಮಾದ ಮಣಿಮಯ ವರೂಥಮಂ। 

ಚಿತ್ರಾಂಗದೆಯ ತನೂಭವ ನಡರ್ದಂ ಕೂಡೆ। 

ಚಿತ್ರಮಾದುದು ಸಮರಮೆರಡುಥಟ್ಟಿನ ಚೂಣಿ ಸಂದಣಿಸಿತುರವಣೆಯೊಳು॥ 

ಮಿತ್ರಮಂಡಲವನೊಡೆದೈದುವತಿಭರದಿಂದೆ। 

ಮಿತ್ರಭಟರಂ ತಾಗಿದರ್ ಕಡುಗಲಿಗಳಾಗ। 

ಮಿತ್ರಭಾವದ ನೇಹದಿಂದೆ ಮರುಗದೆ ಮಾಣವಂಭೋರುಹಂಗಳೆನಲು॥೩॥


ಪ್ರತಿಪದಾರ್ಥ :- ಚಿತ್ರ=ಅಲಂಕಾರಗಳಿಂದ, ಶೋಭಿತಮಾದ= ಪ್ರಕಾಶಿಸಲ್ಪಟ್ಟ, ಮಣಿಮಯ= ರತ್ನಮಯವಾದ, ವರೂಥಮಂ= ರಥವನ್ನು, ಚಿತ್ರಾಂಗದೆಯ= ಚಿತ್ರಾಂಗದೆಯೆಂಬ ಸ್ತ್ರೀಯ,ತನೂಭವಂ= ಮಗನಾದ ಬಭ್ರುವಾಹನನು, ಅಡರ್ದಂ= ಹತ್ತಿದನು,ಸಮರಂ= ಕಾಳಗವು, ಕೂಡೆ=ಒಡನೆಯೇ, ಚಿತ್ರಂ= ಆಶ್ಚರ್ಯವುಂಟಾಗುವಂತೆ, ಆದುದು=ಆಯಿತು

ಉರವಣೆಯೊಳು= ಮೇಲ್ವಾಯ್ದರೊ ಎಂಬಂತೆ, ಎರಡು ಥಟ್ಟಿನ ಚೂಣಿ= ಉಭಯ ಪಾರ್ಶ್ವದ ವೀರರಗುಂಪೂ, ಸಂದ- 

ಣಿಸಿತು= ಒಟ್ಟುಗೂಡಿತು, ಆಗ= ಎರಡೂ ಕಡೆಯವರು ಒಟ್ಟಾದಾಗ, ಕಡುಗಲಿಗಳು= ವೀರಾಗ್ರಣಿಗಳು,ಮಿತ್ರಭಾವವ= 

ಸ್ನೇಹಸಂಬಂಧದ (ರವಿಯೆಂಬ ಆಶಯದ) ನೇಹದಿಂ= ಅಕ್ಕರೆಯಿಂದ, ಮರುಗದೆ= ವ್ಯಥೆಪಡದೆ,ಮಾಣದ= ಬಾಡದೆ ಇರತಕ್ಕ, ಅಂಬೋರುಹಂಗಳು= ತಾವರೆ ಹೂಗಳು, ಎನಲು= ಎನ್ನುವಂತೆ, ಮಿತ್ರಮಂಡಲವನು= ರವಿಮಂಡಲವನ್ನೂ, 

(ಮತ್ತು ಸ್ನೇಹಿತರ ಗುಂಪನ್ನೂ) ಒಡೆದು= ಬೇರ್ಪಡಿಸಿಕೊಂಡು, ಐದುವ= ಹೊರಹೊರಡತಕ್ಕ, ಅತಿಭರದಿಂ= ಬಹಳ ಸಂ- ಭ್ರಮದಿಂದ,ಮಿತ್ರರಂ= ಸ್ನೇಹಿತರನ್ನು, ತಾಗಿದರು= ಎದುರಿಸಿದರು.


ಅ॥ ವಿ॥ ತನು= ಶರೀರದಲ್ಲಿ, ಭವಂ= ಹುಟ್ಟಿದವನು( ಷ.ತ.) 


ತಾತ್ಪರ್ಯ:- ಬಭ್ರುವಾಹನನು ರತ್ನಖಚಿತವಾಗಿಯೂ, ಚಿತ್ರವಿಚಿತ್ರವಾಗಿಯೂ ಇರುವ ದಿವ್ಯ ರಥವನ್ನೇರಿಹೊರಟನು. ಎರಡು ಕಡೆಯ ವೀರರೂ ಮಹಾರೋಷದಿಂದ ಕಾದಾಡಲಾರಂಭಿಸಿದರು. ಸೂರ್ಯನೆಂಬ ಅಭಿಪ್ರಾಯದಿಂದ ವ್ಯಸನ-

ವನ್ನು ತಾಳದಿರುವ ಪದ್ಮಾಕರಂಗಳಂತೆ ಮಿತ್ರರಂತಿರುವ ವೀರಾಗ್ರಣಿಗಳು ಹೊಡೆದೋಡಿಸಬೇಕೆಂದು ಎಲ್ಲೆಲ್ಲಿಯೂ ನೆರೆದರು. 


ತೇರವಂಗಡದ ಜರ್ಜಾರವಂ ಗಜದ ಘಂ। 

ಟಾರವಂ ಹಯದ ಹೇಷಾರವನ ನಡೆವ ಸೇ। 

ನಾರವಂ ಭೇರಿಯ ಮಹಾರವಂ ಬಹಳ ಕಹಳಾರವಂ ಸಂಗಡಿಸಿದ॥ 

ಜ್ಯಾರವಂ ಭಟರ ಬಾಹಾರವಂ ದಳದ ಬಂ। 

ಭಾರವಂ ರಣ ಕಿಲಕಿಲಾ ರವಂ ಪಟಹ ಢ। 

ಕ್ಕಾರವಂ ಪುದಿದ ನಾನಾ ರವಂ ಕಿವಿಗತಿ ಕಠೋರವಂ ತೀವಿತಂದು॥೪॥


ಪ್ರತಿಪದಾರ್ಥ :- ಪಂಗಡದ= ಎರಡೂ ಕಡೆಯ, ತೇರ= ರಥಗಳ, ಜರ್ಝಾರವಂ= ಜರಜರಧ್ವನಿಯು, ಗಜದ= ಹಸ್ತಿಗಳ

ಕೊರಳ, ಘಂಟಾರವಂ= ಘಂಟೆಗಳ ಶಬ್ಧವು, ಹಯದ= ಕುದುರೆಗಳ, ಹೇಷಾರವಂ= ಕೆನೆಯುವಿಕೆಯು,ನಡೆವ= ಕಾಳಗಕ್ಕೆ ಬರುವ, ಸೇನಾ= ಪದಾತಿಯ, ರವಂ=ಗದ್ದಲವು,ವಾದ್ಯದ= ಭೇರಿ ಮೃದಂಗಾದಿಗಳ,ಮಹಾರವಂ= ದೊಡ್ಡ ಶಬ್ಧವು,ಬಹಳ= 

ತಂಡತಂಡವಾದ,ಕಹಳ=ತುತ್ತುರಿಮೊದಲಾದ್ದರ,ರವಂ= ನಿನಾದವೂ, ಸಂಗಡಿಸಿದ= ಒಟ್ಟುಗೂಡಿದ,ಜ್ಯಾರವಂ= ಬಿಲ್ಲಿನ 

ನಿನದವು, ಭಟರ=ಯೋಧರ, ಬಾಹಾರವಂ= ಭುಜಮೂಲಗಳನ್ನು ಅಪ್ಪಳಿಸುವ ಧ್ವನಿಯು, ದಳದ= ಪಡೆಯ, ಬಂಭಾರ- ವಂ= ಶಂಖಧ್ವನಿಯು, ಪಟಹ= ಧ್ವಜಗಳ, ಢಕ್ಕೆ=ಮದ್ದಳೆಯ ವಾದ್ಯಗಳ, ರವಂ=ಶಬ್ಧವು, ಪುದಿದ= ವ್ಯಾಪಿಸಿಕೊಂಡ, ನಾನಾರವಂ= ತೆರತೆರನಾದ ಶಬ್ಧ ಭೇದಗಳು,ಅಂದು= ಆ ಕಾಲದಲ್ಲಿ, ಕಠೋರಮಂ= ಕ್ರೌರ್ಯವನ್ನು,  ತೀವಿತು= ತುಬಿತು. 


ತಾತ್ಪರ್ಯ:-ಈ ರೀತಿಯಲ್ಲಿ ಬಭ್ರುವಾಹನನ ಸೈನ್ಯವು ಬರುವಾಗ ಉಭಯ ಪಾರ್ಶ್ವದ ರಥಗಳಿಂದೊಗೆದ ಝಲ್ ಝಲ್ ಎಂಬ ಶಬ್ಧವೂ, ಆನೆಗಳ ಕೊರಳ ಘಂಟೆಗಳ ಧೂವನಿಯೂ, ಕುದುರೆಗಳ ಹೇಷಾರವವೂ, ಪದಾತಿಗಳ ಕಾಲುಗಳಿಂದೊ-

ಗೆದ ಸಪ್ಪಳವೂ, ವಾದ್ಯಗಳ ದೊಡ್ಡ ಸ್ವನಂಗಳು, ತುತ್ತುರಿ ಮೊದಲಾದವುಗಳ ಶಬ್ಧವೂ, ಮದ್ದಳೆ ಮೊದಲಾದವುಗಳ ಧ್ವನಿಯೂ ಏಕಕಾಲದಲ್ಲಿ ನೆರೆದು ಕಿವಿಗೆ ಕಠೋರವಾಯಿತು.


ಸಿಂಧ ಸೀಗುರಿ ಛತ್ರ ಚಾಮರ ಪತಾಕೆಗಳ್। 

ಸಂದಣಿಸಿ ಗಗನಮಂ ಮುಸುಗಲ್ಕೆ ತವೆ ಮೂಡಿ। 

ದಂಧಕಾರಂಗಳಂ ಕಿಡಿಸಿದುವು ರತ್ನಾಭರಣಕಾಂತಿಗಳ್ ಭೂಪರ॥ 

ಕೆಂದೂಳಡರ್ದು ನಭಮಂ ಮುಸುಕಿತಾಗ ಸುರ। 

ಸಿಂಧುಪ್ರವಾಹಮುತ್ತುಂಗ ಶೋಣಾಚಲದ। 

ಬಂಧುರ ತಟಪ್ರದೇಶದೊಳೊಪ್ಪುವೊಜ್ಜರದ ನದಿಯೆಂಬ ತೆರನಾಗಲು॥೫॥ 


ಪ್ರತಿಪದಾರ್ಥ :- ಸಿಂಧ= ಗುರ್ತಿಗಾಗಿ ಇರತಕ್ಕ ಬಾವುಟಗಳು, ಸೀಗುರಿ= ಸಣ್ಣ ಚಾಮರ, ಛತ್ರ=ಕೊಡೆಯು, ಚಾಮರ= ಚಾಮರವು, ಪತಾಕೆಗಳ್= ಬಾವುಟಗಳು, ಸಂದಣಿಸಿ = ಒಟ್ಟುಗೂಡಿ,  ಗಗನಮಂ= ಅಂತರಿಕ್ಷವನ್ನು, ಮುಸುಕಲ್ಕೆ= ಕವಿ- 

ಕೊಳ್ಳಲು, ತವೆ=ಚೆನ್ನಾಗಿ,ಮೂಡಿದ= ಉದ್ಭವಿಸಿದ, ಅಂಧಕಾರಂಗಳಂ= ಕತ್ತಲೆಯನ್ನು,ಭೂಪರ= ರಾಜರ, ರತ್ನಾಭರಣ= 

ರತ್ನಖಚಿತವಾದ ಆಭರಣಗಳ, ಕಾಂತಿಗಳು=ಪ್ರಕಾಶಗಳು, ಕಿಡಿಸಿದುವು= ಕಳೆದುಬಿಟ್ಟವು, ಆಗ= ಆ ಕಾಲದಲ್ಲಿ, ಸುರಸಿಂ-

ಧು= ದೇವಗಂಗೆಯ, ಪ್ರವಾಹಂ= ಹರಿಯುವಿಕೆಯು, ಉತ್ತುಂಗ= ಬಹಳ ಎತ್ತರವಾದ, ಶೋಣಾಚಲದ= ಕೆಂಗಲ್ಗಳಿಂದ ಕೂಡಿದ ಬೆಟ್ಟದಲ್ಲಿ, ಬಂಧುರ= ಸೇರಿರುವ, ತಟಪ್ರದೇಶದೊಳ್= ದಡದಲ್ಲಿ, ಒಪ್ಪುವ= ಪ್ರಕಾಶಿಸುವ, ವಜ್ಜರದ= ವಜ್ರಮಯವಾದ,ನಿಧಿ= ನಿಕ್ಷೇಪವು, ಎಂಬ = ಎನ್ನತಕ್ಕ, ತೆರನಾಗಲು= ಬಗೆಯಾಗುವಂತೆ, ಕೆಂಧೂಳು= ಕೆಂಪಾದ ಧೂಳು,ಅಡರ್ದು= ವ್ಯಾಪಿಸಿಕೊಂಡು, ನಭಮಂ= ಅಂತರಿಕ್ಷವನ್ನು, ಮುಸುಕಿತು= ಕವಿದುಕೊಂಡಿತು. 


ತಾತ್ಪರ್ಯ:- ಅನೇಕ ನಿಶಾನಿಗಳು, ಛತ್ರ, ಚಾಮರ, ಪತಾಕೆಗಳು ಮೊದಲಾದವೆಲ್ಲ ಒಟ್ಟಾಗಿ ಸೇರಿ ಅಂತರಿಕ್ಷ ಮಾರ್ಗವನ್ನು ಕವಿದುಕೊಂಡದ್ದರಿಂದ ಹುಟ್ಟುವ ಕತ್ತಲೆಯ ರಾಶಿಯನ್ನು ರಾಜರ ರತ್ನಾಭರಣ ಪ್ರಭೆಗಳು ಹೋಗಲಾಡಿಸುತ್ತಿರುವಂತೆಯೂ

ದೇವಗಂಗಾನದಿಯ ಪ್ರವಾಹವು ಅತ್ಯುನ್ನತವಾದ ಕೆಂಪುಕಲ್ಲುಗಳಿಂದ ಕೂಡಿದ ಬೆಟ್ಟದ ತೀರದಲ್ಲಿರುವ ವಜ್ರದ ನಿಧಿಯೋ 

ಎಂಬಂತೆಯೂ ಎಲ್ಲೆಲ್ಲಿಯೂ ಕೆಂಧೂಳು ತುಂಬಿಕೊಂಡಿತು.


ಚೂಣಿಯೊಳ್ ಬೆರಸಿ ಪೊಯ್ದಾಡಿದರ್ ತಮತಮಗೆ। 

ಬಾಣ ತೋಮರ ಪರಶು ಚಕ್ರವಸಿ ಮುದ್ಗರ ಕೃ। 

ಪಾಣ ಡೊಂಕಣಿ ಕುಂತ ಸುರಗಿ ಸೆಲ್ಲೆಹ ಶಕ್ತಿ ಮೊದಲಾದ  ಕೈದುಗಳೊಳು॥ 

ಕೇಣಮಿಲ್ಲದೆ ಚಾರಿ ಚಳಕ ಚಾಳೆಯ ಚದುರ್। 

ಪಾಣಿಲಾಘವ ಪಂಥ ಪಾಡುಗಳನರಿದು ಬಿ। 

ನ್ನಾಣದಿಂ ಗಾಯಗಾಣಿಸಿದರತಿಬಲರಲ್ಲಿ ನಾನಾ ಪ್ರಹಾರದಿಂದ॥೬॥ 


ಪ್ರತಿಪದಾರ್ಥ :- ತಮತಮಗೆ = ಒಬ್ಬರಕೂಡ ಒಬ್ಬರು, ಬೆರಸಿ= ಸೇರಿಕೊಂಡು, ಬಾಣ=ಕಣೆಗಳಿಂದಲೂ, ತೋಮರ= ತೋಮರವೆಂಬ ಆಯುಧದಿಂದಲೂ, ಪರಶು= ಕೊಡಲಿಯಿಂದಲೂ, ಚಕ್ರ= ಚಕ್ರಾಯುಧದಿಂದಲೂ,ಅಸಿ=ಕತ್ತಿಯಿಂದಲೂ

ಮುದ್ಗರ= ಮುದ್ಗರವೆಂಬ ಆಯುಧದಿಂದಲೂ, ಕೃಪಾಣ= ಖಡ್ಗವು, ಡೊಂಕಣಿ= ಡೊಂಕಣಿಯೆಂಬ ಆಯುಧವೂ, ಕುಂತ= ಕುಂತವೂ, ಸುರಗಿ= ಸುರಗಿಯೂ,ಶಲ್ಯಹ= ಶಲ್ಯವೆನ್ನುವ ಆಯುಧವೂ, ಶಕ್ತಿ= ಶಕ್ತಿ ಎನ್ನತಕ್ಕದ್ದೂ, ಮೊದಲಾದ, ಕೈದುಗಳೊಳು= ಶಸ್ತ್ರಗಳಿಂದ,ಚೂಣಿಯೊಳು=ರಣರಂಗದಲ್ಲಿ, ಪೊಯ್ದಾಡಿದರು= ಹೊಡೆದಾಡಿದರು, ಕೇಣಂ= ಕೆಟ್ಟದ್ದು, ಇಲ್ಲದೆ= ಆಗದೆ, (ಕೃತ್ರಿಮವಿಲ್ಲದೆ) ಚಾರಿ= ಕಷ್ಟವಿಲ್ಲದೆಯೂ, ಚಳಕ= ವೇಗವಾಗಿಯೂ, ಚಾಳೆಯ= ಸತ್ಸ್ವಭಾವದಿಂದ

ಕೂಡಿಯೂ, ಚತೈಷ್ಪಾಣಿ= ಚಾತುರ್ಯದಿಂದ ಕೂಡಿದ ಕೈಯ್ಗಳ, ಲಾಘವಂ= ಲಘುವಾಗಿರುವುದು, ಪಂಥಪಾಡುಗಳನು= ಪಟ್ಟು ಮೊದಲಾದವನ್ನು, ಅರಿದು= ತಿಳಿದು, ಬಿನ್ನಾಣದಿಂದ= ಚಮತ್ಕಾರದಿಂದ,ಘಾಯ= ಹುಣ್ಣನ್ನು, ಅತಿಬಲರು= ಬಹು 

ಪರಾಕ್ರಮಿಗಳಾದವರು,ನಾನಾ= ವಿಧವಿಧವಾದ, ಪ್ರಹಾರದಿಂದ= ಏಟುಗಳಿಂದ, ಕಾಣಿಸಿದರು= ಗೋಚರಿಸಿದರು. 


ತಾತ್ಪರ್ಯ:- ಎರಡು ಕಡೆಯ ವೀರರೂ ಬಾಣಗಳು, ತೋಮರಗಳು, ಪರಶು, ಚಕ್ರ, ಖಡ್ಗ, ಕುಂತ, ಸುರಗಿ, ಶಕ್ತಿ, ಮೊದಲಾದ ವಿವಿಧಾಯುಧಗಳನ್ನು ಕೈಕೊಂಡು ಚಮತ್ಕಾರದಿಂದಲೂ, ವೇಗದಿಂದಲೂ,ಶಪಥಗೈದು, ನಾನಾಪ್ರಕಾರವಾಗಿ ಯುದ್ಧಮಾಡುತ್ತಿದ್ದರು. 


ತೂಳಿಸಿದರಾನೆಯಂ ಜೋದರುರವಣಿಸಿ ದೂ। 

ವಾಳಿಸಿದರುಬ್ಬೆದ್ದು ರಾವುತರ್ ತೇಜಿಯಂ। 

ಕೇಳಿಸಿದರಾಹವದ ನಾಟ್ಯಮಂ ರಣರಂಗದೊಳ್ ಚಟುಲ ಪಟುರಥಿಕರು॥ 

ಏಳಿಸಿದರಾಳ್ತನದ ಪಂತಮಂ ಕಾಲವರ್। 

ಬೀಳಿಸಿದಹಿತರಂ ಪೊಯ್ದಾಡಿ ತಲೆಯಂ ನಿ। 

ವಾಳಿಸಿದರಾಳ್ದಂಗೆ ಕೈದುಗಳ ಹೋರಟೆಯ ಖಣಿಖಟಿಲ ರಭಸದಿಂದೆ॥೭॥ 


ಪ್ರತಿಪದಾರ್ಥ :- ಆನೆಯಂ = ಹಸ್ತಿ ಸಮೂಹವನ್ನು, ಜೋಧರು= ಮಾವಟಿಗರು, ತೂಳಿಸಿದರು=ನುಗ್ಗಿಸಿಬಿಟ್ಟರು, ತೇಜಿಗಳಂ= ಕುದುರೆಗಳನ್ನು, ರಾವುತರು= ಸವಾರರು, ಉಬ್ಬೆದ್ದು= ಬೆನ್ನಮೇಲೆ ಪೆಟ್ಟುಹಾಕಿ, ಉರವಣಿಸಿ= ರೋಷವುಂ-

ಟಾಗುವಂತೆ ಮಾಡಿ, ದುವ್ವಾಳಿಸಿದರು= ಓಡಿಸಿದರು, ರಂಗದೋಳ್= ರಣಭೂಮಿಯಲ್ಲಿ, ಚಟುಲ= ಚಪಲಚಿತ್ತರಾದ, ಪಟು= ವೀರರಾದ, ಭಟರು= ಯೋಧರು, ರಥಿಕರು= ರಥಗಳಿಂದ ಹೋರಾಡುವವರು, ಆಹವದ= ಯುದ್ಧದ, ನಾಟ್ಯವಂ= ಕುಣಿಯುವ ಧ್ವನಿಯನ್ನು, ಕೇಳಿಸಿದರು= ಕೇಳುವಹಾಗೆ ಮಾಡಿದರು, ಕಾಲವರು= ಪದಾತಿದಳ,ಆಳ್ತನದ= ಶೌರ್ಯದ, ಪಂಥಮಂ= ಜೂಜನ್ನು, ಏಳಿಸಿದರು= ಭಗ್ನವಾಗುವಂತೆ ಮಾಡಿದರು, ಪೊಯ್ದಾಡಿ = ಹೋರಾಡಿ, ಅಹಿತರಂ=ವೈರಿಗಳನ್ನು, ಬೀಳಿಸಿದರು= ನೆಲಕಚ್ಚುವಂತೆ ಮಾಡಿದರು,ಕೈದುಗಳ= ಶಸ್ತ್ರಗಳ,  ಹೋರಟೆಯ= ಹೊಡೆಯುವುದರ, ಖಣಿ= ಖಣಿಎನ್ನುವ, ಕಟಿಲ=ಕಟಕಟ ಎನ್ನತಕ್ಕ,ರಭಸದಿಂದ = ಶಬ್ಧದಿಂದ, ಆಳ್ದಂಗೆ= ಒಡೆಯನಿಗೆ, ತಲೆಯಂ= ಶಿರಸ್ಸನ್ನು, ನಿವಾಳಿಸಿದರು= ಅರ್ಪಿಸಿದರು. 


ತಾತ್ಪರ್ಯ:- ಮಾವಟಿಗರು ಆನೆಗಳನ್ನು ಶತ್ರುಸೈನ್ಯದ ಮೇಲೆ ನುಗ್ಗಿಸಿದರು. ರಾವುತರು ಕುದುರೆಗಳನ್ನು ದೌಡಾಯಿಸಿದರು. ವೀರಭಟರು ವೀರಾವೇಶದಿಂದ ಕುಣಿಯಲಾರಂಭಿಸಿದರು. ಪರಾಕ್ರಮದ ಪಂಥಪಾಡುಗಳನ್ನು ನುಡಿಯುತ್ತಲೂ ಶತ್ರುಗಳತಲೆಯನ್ನು ಕಡಿದು ತಮ್ಮ ಒಡೆಯನಿಗೆ ಅರ್ಪಿಸಿದರು. 


ಕಾರ್ಮುಗಿಲ ಸಿಡಿಲ ರವದಂದಮಾಗಿರೆ ಕರೆದ। 

ಕಾರ್ಮುಕಧ್ವನಿ ಮಿಂಚಿನಂತೆ ಪೊಳೆಪೊಳೆವ ಪೊಂ। 

ದೇರ್ಮೆರೆಯೆ ಶರವರ್ಷಮಂ ಕರೆಯುತರ್ಜುನನ ಸಮ್ಮುಖಕೆ ಬಂದು ನಿಂದ॥ 

ಮಾರ್ಮಲೆಯಬಾರದಯ್ಯನೊಳೆಂದು ಕಂಡು ನಾಂ। 

ಕೂರ್ಮೆಯಿಂದೆರಗಿದೊಡೆ ಜರೆದಲಾ ರಣದೊಳಿ। 

ನ್ನಾರ್ಮೊಗೆದೊಡಂ ಜೈಸದೊಡೆ ನಿನ್ನ ಸುತನಲ್ಲೆನುತ ಪಾರ್ಥಿ ತೆಗೆದೆಚ್ಚನು॥೮॥ 


ಪ್ರತಿಪದಾರ್ಥ :- ಕಾರ್ಮುಗಿಲ= ಮಳೆಗಾಲದಲ್ಲಿ ಮೇಘದಿಂದೊಗೆವ, ಸಿಡಿಲ= ಸಿಡಿಲಿನ, ರವದ= ಗರ್ಜನೆಯ, ಅಂದಮಾಗಿ= ಬಗೆಯಾಗಿ, ಕರದ= ಕೈಯ, ಕಾರ್ಮುಕ= ಧನುಸ್ಸಿನ, ಧ್ವನಿ= ಶಬ್ಧವು, ಇರೆ=ಇರಲಾಗಿ,ಮಿಂಚಿನಂತೆ= ವಿದ್ಯುತ್ತಿನ ತೆರನಾಗಿ, ಪೊಳೆವ= ಪ್ರಕಾಶಿಸುವ, ಪೊಂದೇರ್= ಚಿನ್ನದ ರಥವು,ಮೆರೆಯೆ= ಕಾಂತಿಯುಕ್ತವಾಗಿರಲು, ಶರವರ್ಷಮಂ= ಬಾಣಗಳ ಮಳೆಯನ್ನು, ಕರೆವುತ= ಸುರಿಸುತ್ತ, ಅರ್ಜುನನ= ಪಾರ್ಥನ, ಸಮ್ಮುಖಕೆ= ಎದುರಾಗಿ, ಬಂದು=ನೆರೆದು, ನಿಂದು=ನಿಂತು,ಅಯ್ಯನೊಳು= ಜನಕನೊಂದಿಗೆ,ಮಾರ್ಮಲೆಯಬಾರದು= = ಗರ್ವದಿಂದ ಎದುರಾಗ- 

ಬಾರದು, ಎಂದು= ಎಂಬಂತೆ, ಕಂಡು=ನೋಡಿ, ಕೂರ್ಮೆಯಿಂದ= ಅಕ್ಕರೆಯಿಂದ, ನಾಂ=ನಾನು, ಎರಗಿದೊಡೆ= ವಂದಿಸಲು, ಜರೆದಲಾ= ದೂಷಿಸಿಬಿಟ್ಟೆಯಲ್ಲವೇ, ಇನ್ನು= ಇನ್ನುಮೇಲೆ, ಆರು= ಯಾರು,ಮೊಗೆದೊಡಂ= ಕಾಳಗಮಾಡಲು ಬಂದರೂ, (ಆರ್ಮೊಗದೊಡಂ= ಷಣ್ಮುಖನಾದರೂ) ಕೂಡ, ಜೈಸದೊಡೆ= ಅವರನ್ನು ಸೋಲಿಸದಿದ್ದರೆ,ನಿನ್ನಮಗನು= ನಿನಗೆ ಜನಿಸಿದವನು, ಅಲ್ಲ= ಅಲ್ಲವು,ಎನುತ= ಎಂದು ನುಡಿಯುತ್ತ, ಪಾರ್ಥಿ= ಅರ್ಜುನನ ಮಗನು, ತೆಗೆದು= ಧನುಸ್ಸನ್ನು ಸರಿಪಡಿಸಿಕೊಂಡು,ಎಚ್ಚನು= ಬಿಟ್ಟನು. 


ತಾತ್ಪರ್ಯ:- ಆಗ ಬಭ್ರುವಾಹನನು ಸಿಡಿಲ ಘರ್ಜನೆಯಂತೆ ಶಬ್ಧವನ್ನು ಮಾಡುವ ಧನುಸ್ಸನ್ನು ಕೈಯಲ್ಲಿಡಿದು ಮಿಂಚಿನಂತೆ 

ಹೊಳೆಹೊಳೆವ ಚಿನ್ನದ ತೇರಿನೊಳಗೆ ಕುಳಿತುಕೊಂಡು, ಅರ್ಜುನನ ಬಳಿಗೆ ಬಂದು ಆತನಿಗೆದುರಾಗಿ ಬಂದು ನಿಂತು ಎಲೈ ಅರ್ಜುನನೆ, ನಿನ್ನೊಂದಿಗೆ ಅಹಂಕಾರದಿಂದ ಕಾದುವದು ಧರ್ಮವಲ್ಲವೆಂದು ಬಗೆದು ಕಟ್ಟಿದ್ದ ಕುದುರೆಯನ್ನು ಮರ್ಯಾದೆ- ಯಿಂದ ನಿನಗೆ ತಂದೊಪ್ಪಿಸಿದರೆ ನನ್ನನ್ನು  ತಿರ್ಸ್ಕರಿಸಿದೆಯಾದ ಕಾರಣ ಇನ್ನು ನಿನ್ನೊಡನೆ ಯುದ್ಧಮಾಡಿ ನಿನ್ನ ತಲೆಯನ್ನು ಚೆಂಡಾಡದೆ ಬಿಡುವುದಿಲ್ಲ.  ಈ ನನ್ನ ಶಪಥವನ್ನು ಷಣ್ಮುಖನೂ ಕೂಡ ಹಿಂತೆರುಗಿಸಲಾರನು. ನನ್ನ ಸಾಹಸವನ್ನು ನೋಡು, ಇದಕ್ಕೆ ತಪ್ಪಿದರೆ ನಿನ್ನ ಮಗನೇ ಅಲ್ಲವೆಂದು ಕ್ರೂರಶಪಥವನ್ನು ಮಾಡಿ ಬಾಣಗಳನ್ನು ಬಿಡಲು ಪ್ರಾರಂಭಿಸಿದನು. 


ಪಾರ್ಥಿವರ ಪಂಥಮಲ್ಲೆಂದು ಪೇಳಲ್ಕೆ ಪುರು। 

ಷಾರ್ಥಮಂ ಮಾಳ್ಪೆಲಾ ನಿನ್ನ ಪೌರುಷವ ನಪ। 

ಕೀರ್ತಿಗಂಜುವನಲ್ಲ ಪಿತನಂ ಪಚಾರಿಸುವೆ ಮತ್ತೆ ಕಾಳಗಕೆ ಬಂದು॥ 

ಧೂರ್ತನಹೆ ನೀನೆನುತೆ ನಸುನಗೆಯೊಳಿದಾರಾಗಿ। 

ಸುಕುಮಾರನಂ ಘಾತಿಸಿದನೊಂಬತ್ತು। 

ಕಾರ್ತಸ್ವರಾಂಕಿತ ಸುಪುಂಖದಿಂದೆಸೆವ ಬಾಣಗಳಿಂದನುಸಾಲ್ವನು॥೯॥


ಪ್ರತಿಪದಾರ್ಥ :- ಅನುಸಾಲ್ವನು= ಅನುಸಾಲ್ವನೆಂಬ ರಾಜನು, ಪಾರ್ಥಿವರ= ಅರಸುಗಳ, ಪಂಥಂ=ಪ್ರಮಾಣವು, ಅಲ್ಲ= ಹಯವನ್ನು ಬಂಧಿಸಿ ಕಾಳಗ ಮಾಡದೆ ಹೋದರೆ ಆಗಲಾರದೆಂದು, ಪೇಳಲ್ಕೆ = ಹೇಳಲು, ನಿನ್ನ= ನಿನ್ನ, ಪೌರುಷವನು= ಸಾಮರ್ಥ್ಯವನ್ನು, ಪುರುಷಾರ್ಥಮಂ= ಬೇಕಾದದ್ದಾಗಿ, ಮಾಳ್ಪೆಲಾ= ಎಸಗುವಿಯಲೂಲವೇ, (ಸ್ವೇಚ್ಛೆಯಾಗಿ ಹರಟುವಿ- 

ಯಲ್ಲವೇ)ಅಪಕೀರ್ತಿಗೆ= ದುಷ್ಕೀರ್ತಿಗೆ, ಅಂಜುವನು= ಹೆದರತಕ್ಕವನು,ಅಲ್ಲ=ಅಲ್ಲವು, ಮತ್ತೆ=ಪುನಃ, ಕಾಳಗಕೆ= ಯುದ್ಧಕ್ಕೆ, ಬಂದು= ನೆರೆದು, ಪಿತನಂ= ತಂದೆಯಾದ ಅರ್ಜುನನನ್ನು, ಪಚಾರಿಸುವೆ = ಎದುರಾಳಾಗುತ್ತಿ, ನೀನು= ನೀನಾದರೊ, ಧೂರ್ತನು= ನೀಚನು, ಆಹೆ= ಆಗಿದ್ದೀಯೆ, ಎನುತ= ಎಂದು ಹೇಳುತ್ತ, ನಸುನಗೆಯೊಳು=ಹುಸಿನಗುವಿ- 

ನಿಂದ, ಪಾರ್ಥಕುಮಾರನಂ= ಅರ್ಜುನಿಯನ್ನು,ಇದಿರಾಗಿ= ಎದುರುಗೊಂಡು, ಒಂಭತ್ತು= ಒಂಭತ್ತಾದ, ಕಾರ್ತಸ್ವರ= ಸುವರ್ಣದ, ಅಂಕಿತ= ಗುರುತಿನಿಂದ ಕೂಡಿದ, ಸುಪುಂಖದಿಂದ= ಮೇಲಲಿಗಿನ ಪ್ರದೇಶದಿಂದ, ಎಸೆವ= ಹೊಳೆಯುವ, ಬಾಣಗಳಿಂದ= ಕಣೆಗಳಿಂದ, ಘಾತಿಸಿದನು= ಹೊಡೆದನು. 


ಅ॥ವಿ॥ ಪುರುಷಾರ್ಥ= ಪೌರುಷ ಮತ್ತು ಧರ್ಮ, ಅರ್ಥ, ಕಾಮ, ಮೋಕ್ಷ


ತಾತ್ಪರ್ಯ:- ಈ ರೀತಿಯಲ್ಲಿ ಕ್ರೂರ ಪ್ರತಿಜ್ಞೆಯನ್ನು ಮಾಡಿಯುದ್ಧಕ್ಕೆ ನಿಂತ ಬಭ್ರುವಾಹನನನ್ನು ಕುರಿತು, ಅನುಸಾಲ್ವನುಎಲೈ ಪಾರ್ಥಿಯೆ,ಕಟ್ಟಿದ ಕುದುರೆಯನ್ನು ಪುನಃ ಬಿಡುವುದು ವೀರ ಕ್ಷತ್ರಿಯನ ಧರ್ಮವಲ್ಲವೆಂದು ಹೇಳಿದರೆ ತಂದೆಗೆದುರಾಗಿ ಯುದ್ಧಕ್ಕೆ ನಿಂತೆಯಾ? ನೀನು ಅಪಕೀರ್ತಿಗೂ ಕೂಡ ಅಂಜುವನಂತೆ ಕಾಣುವುದಿಲ್ಲ. ಒಳ್ಳೇದು ಇರಲಿ, ಎಂದು ಮಂದಹಾ- 

ಸದಿಂದ ಕೂಡಿದವನಾಗಿ ಸುವರ್ಣ ಖಚಿತವಾದ ಒಂಬತ್ತು ಬಾಣಗಳನ್ನು ಬಿಲ್ಲಿಗೆ ಜೋಡಿಸಿ ಬಭ್ರುವಾಹನನ ಮೇಲೆ ಬಿಟ್ಟನು. 


ಕೈತವದಿಸುಗೆಯೊ ನಿಜ ಸಾಹಸಮಿನಿತು ನಿನ್ನ । 

ಮೈತಲೆಗಲಸಿ ಬಂದುದಾಹವಕೆ ಪೊಸತೆನುತ। 

ಕೈತವಕದಿಂದೆಚ್ಚನನುಸಾಲ್ವನಂ ನೂರುಬಾಣದಿಂ ಪಾರ್ಥಸೂನು॥ 

ಐತರಲವಂ ಮಧ್ಯಮಾರ್ಗದೊಳ್ ತಡೆಗಡಿದು। 

ದೈತೇಯರಾಜಂ ಕನಲ್ದಾಗ ಬರಸಿಡಿಲ। 

ಹೊಯ್ತೆಗಿಮ್ಮಡಿಯಾಗಿ ಕಣೆಗಳಂ ಕವಿಸಿದಂ ಬಭ್ರುವಾಹನನ ಮೇಲೆ॥೧೦॥ 


ಪ್ರತಿಪದಾರ್ಥ :- ಪಾರ್ಥಸೂನು= ಅರ್ಜುನನ ಮಗನಾದ ಬಭ್ರುವಾಹನನು, ಕೈತವಕದ= ಕೈಕರಣದ, ಎಸುಗೆಯೊ= ಶರಸಂಧಾನವೊ, ನಿನ್ನ =ನಿನ್ನ, ಸಾಹಸಂ= ಶೌರ್ಯವು, ಇನಿತೊ= ಇಷ್ಟುಮಾತ್ರವೊ, ಮೈ= ದೇಹದ ಭಾಗವು, ತಲೆ= ಶೀರ್ಷವು,ಕಲಸಿ= ಬೆರತು,ಆಹವಕೆ= ರಣಕ್ಕೆ, ಬಂದುದು= ಬಂದಂಥಾದ್ದು, ಪೊಸದು= ನವೀನವಾದದ್ದು, ಎನುತ= ಎಂದು ನುಡಿಯುತ್ತ, ಕೈತವಕದಿಂ= ಕೈಬಲದಿಂದ, ಅನುಸಾಲ್ವನಂ= ಸಾಲ್ವಾನುಜನನ್ನು,ನೂರುಬಾಣದಿಂ= ನೂರು ಕಣೆಗಳಿಂದ,

ಎಚ್ಚನು= ಹೊಡೆದನು, ಮಧ್ಯಮಾರ್ಗದೊಳ್ = ಮಧ್ಯದಾರಿಯಲ್ಲಿ,ಐತರಲು= ಬರಲಾಗಿ, ದೈತೇಯರಾಜಂ= ಸಾಲ್ವಾನು-

ಜನು, ಕನಲ್ದು= ಸಿಟ್ಟುಮಾಡಿಕೊಂಡು, ಅವಂ= ಆ ಕಣೆಗಳನ್ನು, ತಡೆಗಡಿದು= ಛೇದಿಸಿ,ಆಗ= ಆ ಕಾಲದಲ್ಲಿ, ಬರಸಿಡಿಲ= ಪ್ರಳಯಕಾಲದ ಸಿಡಿಲಿನ, ಹೊಯ್ತೆಗೆ= ಪೆಟ್ಟಿಗೆ,ಇಮ್ಮಡಿಯಾದ= ಎರಡುಪಾಲು ಹೆಚ್ಚಾದ, ಕಣೆಗಳಂ= ಬಾಣಗಳನ್ನು, ಬಭ್ರುವಾಹನನ ಮೇಲೆ= ಬಭ್ರುವಾಹನನಿಗೆದುರಾಗಿ,ಕವಿಸಿದಂ= ಮುಸುಕುವಂತೆ ಮಾಡಿದನು. 


ಅ॥ವಿ॥ದೈತೇಯ= ರಕ್ಕಸರ, ರಾಜಂ= ದೊರೆಯು (ಅನುಸಾಲ್ವನು)


ತಾತ್ಪರ್ಯ:-ಪಾರ್ಥಜನು ಎಲೈ ಅನುಸಾಲ್ವನೆ, ನಿನ್ನ ಸಾಹಸವೂ, ಕೈಚಮತ್ಕಾರವೂ ಇಷ್ಟೇನೇ, ಒಳ್ಳೇದು ಎಂದು ನುಡಿಯುತ್ತಾ ನೂರುಬಾಣಗಳಿಂದ ಅನುಸಾಲ್ವನನ್ನುಮುಸುಕಿದನು. ಸಾಲ್ವಾನುಜನಾದರೊ ತನ್ನ ಮೇಲೆ ಬರುತ್ತಲಿರುವ ಕೂರ್ಗಣೆಗಳನ್ನು ಮಧ್ಯಮಾರ್ಗದಲ್ಲಿಯೇ ಕತ್ತರಿಸಿ ವರ್ಷಾಕಾಲದ ಮೇಘಗರ್ಜನೆಯಂತೆ ಕ್ರೂರವಾದ ಬಾಣಗಳ ಮಳೆಯಿಂದ ಬಭ್ರುವಾಹನನನ್ನು ನೆನೆಯಿಸಿದನು.


ಉಬ್ಬಿದುದು ಮೈರೋಷದಿಂದೆ ಗಂಟಿಕ್ಕಿದುವು। 

ಹುಬ್ಬುಗಳ್ ಬಭ್ರುವಾಹಂಗೆ ತೆಗೆತೆಗೆದಿಸುತೆ।

ಬೊಬ್ಬಿರಿದನನುಸಾಲ್ವನಂ ಮುಸುಕಿದುವು ಕೋಟಿಸಂಖ್ಯೆಯ ಪೊಗರ್ಗಣೆಗಳು॥ 

ಅಬ್ಬರಿಸಿ ದೈತ್ಯನದಕಿಮ್ಮಡಿಸಿ ಕೋಲ್ಗರೆದ। 

ನೊಬ್ಬೊಬ್ಬರಂ ಜಯಿಸುವಾತರದೊಳೆಚ್ಚಾಡ।

 ಲಿಬ್ಬರಂಗದೊಳಿಡಿದುವಂಬುಗಳ್ ಬಂದುವರುಣಾಂಬುಗಳ್ ಸಂಗರದೊಳು॥೧೧॥ 


ಪ್ರತಿಪದಾರ್ಥ :- ಬಭ್ರುವಾಹಂಗೆ= ಪಾರ್ಥಿಗೆ, ಮೈ=ಅವನ ದೇಹವು, ರೋಷದಿಂದ = ಆಗ್ರಹದಿಂದ, ಉಬ್ಬಿದುದು= ಅಧಿಕವಾಯಿತು, ಪುರ್ಬುಗಳ್= ಕಣ್ಣು ಹುಬ್ಬುಗಳು,ಗಂಟಿಕ್ಕಿದವು= ವಕ್ರವಾದವು, ತೆಗೆತೆಗೆದು= ಸೆಳೆಸೆಳೆದು, ಎಸುತ= ಬಾಣಗಳನ್ನು ಬಿಡುತ್ತ, ಬೊಬ್ಬಿರಿದನು= ಸಿಂಹನಾದವನ್ನು ಮಾಡಿದನು, ಕೋಟಿಸಂಖ್ಯೆಯ= ಕೋಟಿ ಸಂಖ್ಯಾಕವಾದ, 

ಪೊಗರ್ಗಣೆಗಳು= ಪ್ರಕಾಶಮಾನವಾದ ಅಲಗುಗಳು, ಅನುಸಾಲ್ವನಂ= ಸಾಲ್ವಾನುಜನನ್ನು, ಮುಸುಕಿದವು= ಕವಿದುಕೊಂ-

ಡವು, ದೈತ್ಯನು= ಅನುಸಾಲ್ವನು, ಅಬ್ಬರಿಸಿ=ಗರ್ಜಿಸಿ,ಅದಕೆ= ಆ ಕಣೆಗಳಿಗೆ, ಇಮ್ಮಡಿಯಾಗಿ= ಎರಡರಷ್ಟು ಹೆಚ್ಚಾಗಿ, ಕೋಲ್= ಬಾಣಗಳನ್ನು, ಕರೆದನು= ಸುರಿಯುವಂತೆ ಮಾಡಿದನು, ಒಬ್ಬೊಬ್ಬರಂ= ಒಬ್ಬರು ಮತ್ತೊಬ್ಬರನ್ನು, ಜೈಸುವ= ಗೆಲ್ಲತಕ್ಕ, ಆತುರದೊಳು= ವೇಗದಿಂದ, ಎಚ್ಚಾಡಲು= ಕಾದಾಡಲಾಗಿ,ಇಬ್ಬರ= ಬಭ್ರುವಾಹನ ಸಾಲ್ವಾನುಜರಿಗೊದಗಿದ ಕಾಳಗದಲ್ಲಿ, ಅರುಣಾಂಬುಗಳು= ರಕ್ತಧಾರೆಗಳು,ಪರಿದುವು= ಪ್ರವಾಹರೂಪವಾಗಿ ಹರಿಯಲಾರಂಭಿಸಿದವು. 


ಅ॥ವಿ॥ ಅರುಣ=ಕೆಂಪಾದ,ಅಂಬು=ನೀರು, ಅರುಣಾಂಬು(ರಕ್ತ) (ಸ. ದೀ. ಸಂ.) ಮತ್ತು (ವಿ. ಪೂ. ಕ. ಸ.)


ತಾತ್ಪರ್ಯ:- ಇದರಿಂದ ಪಾರ್ಥಜನ ಮೈಯೊಳಗೆ ರೋಷದ ಸೂಚನೆಗಳು ತೋರಿಬಂದವು. ಕಣ್ಣುಬ್ಬುಗಳು ವಕ್ರಗತಿಯನ್ನು ಹೊಂದಿದವು. ಸಿಂಹಗರ್ಜನೆಯನ್ನು ಮಾಡುತ್ತಾ ಕೋಟಿ ಪ್ರಕಾರವಾದ ದಿವ್ಯ ಬಾಣಗಳನ್ನು ಅನುಸಾಲ್ವನ ಮೇಲೆಸೆಯಲು ಸಾಲ್ವಾನುಜನೂ ಕೂಡ ಅದಕ್ಕಿಂತಲೂ ಎರಡರಷ್ಟು ಬಾಣಗಳಿಂದ ಅವನನ್ನು ಮುಸುಕಲು, ಇಬ್ಬರ ದೇಹದಲ್ಲಿಯೂ ಬಾಣಗಳು ನಾಟಿಕೊಂಡು ರಕ್ತವು ಪ್ರವಾಹಾಕಾರವಾಗಿ ಹರಿಯಲಾರಂಭಿಸಿತು.


ಬಾಣದೊಳ್ ಬಣಿತೆಯೊಳ್ ಬಿಲ್ಗಾರತನದ ಬಿ। 

ನ್ನಾಣದೊಳ್ ಬಿಂಕದೊಳ್ ತಾಳಿಕೆಯೊಳುರುತರ। 

ತ್ರಾಣದೊಳ್ಜಯದೊಳ್ ಚಮತ್ಕೃತಿಯೊಳದಟಿನೊಳ್ ವೀರದೊಳ್ ಭಾರಣೆಯೊಳು॥ 

ಪಾಣಿಲಾಘವದೊಳ್ ಪರಾಕ್ರಮದ ಪಂತದೊಳ್। 

ಕಾಣೆನವರಿರ್ವಗೆ ಸುಮರಾದ ಕಲಿಗಳಂ। 

ಕ್ಷೋಣಿಯೊಳೆನಲ್ ಬಭ್ರುವಾಹಾನುಸಾಲ್ವರೆಚ್ಚಾಡಿದರ್ ಕೊಳುಗುಳದೊಳು॥೧೨॥ 


ಪ್ರತಿಪದಾರ್ಥ :- ಬಭ್ರುವಾಹಾನುಸಾಲ್ವರು= ಬಭ್ರುವಾಹನ ಅನುಸಾಲ್ವರು,ಬಾಣದೊಳ್= ಶರಸಂಧಾನದಲ್ಲಿಯೂ, ಬಣಿತೆಯೊಳ್= ಗೌರವದಲ್ಲಿಯೂ,ಬಿಲ್ಗಾರತನದ= ಧನುರ್ಬಾಣಗಳ ವಿದ್ಯದಲ್ಲಿ ಶೌರ್ಯವುಳ್ಳ, ಬಿನ್ನಾಣದೊಳ್= ಠೀವಿ-

ಯಲ್ಲಿಯೂ,ಬಿಂಕದೊಳ್= ಗರ್ವದಲ್ಲಿಯೂ,ತಾಳಿಕೆಯೊಳು= ಅರ್ಹತೆಯಲ್ಲಿಯೂ,ಉರುತರ= ಬಹು ಹೆಚ್ಚಾದ, ತ್ರಾಣದೊಳ್= ಶಕ್ತಿಯಲ್ಲಿಯೂ,ಜಯದೋಳ್= ಜಯಗಳಿಸುವುದರಲ್ಲಿಯೂ,ಚಮತ್ಕೃತಿಯೊಳ್= ಚಾತುರ್ಯದಲ್ಲಿಯೂ, ಅಧಟಿನೊಳ= ಪರಾಕ್ರಮದಲ್ಲಿಯೂ, ವೀರದೊಳ್= ಧೀರತನದಲ್ಲಿಯೂ, ಭಾರಣೆಯೊಳು= ಪರಾಕ್ರಮದಲ್ಲಿಯೂ ,ಪಾಣಿ=ಕರಗಳ, ಲಾಘವದೊಳು= ವೇಗದಲ್ಲಿಯೂ,ಪರಾಕ್ರಮದ= ಧೀರತೆಯ, ಪಂಥದೊಳ್= ಶಪಥದಲ್ಲಿಯೂ, ಅವರ= ಆ, ಈರೂವರ್ಗೆ= ಇಬ್ಬರಿಗೆ, ಸಮವಾದ= ಹೋಲಿಕೆಯಾಗತಕ್ಕ, ಕಲಿಗಳಂ= ಶೂರರನ್ನು, ಕ್ಷೋಣಿಯೊಳ್= ಧರಾವಲಯದಲ್ಲಿ, ಕಾಣೆನು= ನೋಡಲೇ ಇಲ್ಲವು,ಎನಲ್= ಎಂಬತೆರನಾಗಿ, ಸಂಗರದೊಳು= ರಣದಲ್ಲಿ, ಎಚ್ಚಾಡಿದರ್= ಹೋರಾಡುತಲಿದ್ದರು.


ಅ॥ವಿ॥ ಪಾಣಿ+ಲಾಘವ= ಪಾಣಿಯಲಾಘವ ( ಷ. ತ. )


ತಾತ್ಪರ್ಯ:- ಬಾಣಪ್ರಯೋಗದಲ್ಲಿಯೂ ಧನುರ್ವಿದ್ಯೆಯಲ್ಲಿಯೂ ,ಬೆಡಗಿನಲ್ಲಿಯೂ, ವಿದ್ಯಾಚಾತುರ್ಯದೊಳಗೂ ,ಸಾಹಸದಲ್ಲಿಯೂ, ಜಯದಲ್ಲಿಯೂ, ಕೈಜಾಗ್ರತೆಯಲ್ಲಿಯೂ, ಶಪಥಮಾಡುವುದರಲ್ಲಿಯೂ ಇವರಿಬ್ಬರಿಗೆಸರಿಯಾದವರು ಈ ಭೂಮಂಡಲದಲ್ಲಿ ಇಲ್ಲವೋ ಎಂಬಂತೆ ಎಂಬಂತೆ ಹೊಡೆದೃಡುತ್ತಲಿದ್ದರು. 


ಕಾಳಗಂ ಸಮಮಾಗಿ ಬರೆ ಕೆರಳ್ದನುಸಾಲ್ವ। 

ನೇಳಂಬಿನಿಂ ಪಾರ್ಥಸುತನ ಬತ್ತಳಿಕೆಯಂ। 

ಕೋಲೆಂಟರಿಂದೆ ಟೆಕ್ಕೆಯವ ನೀರೇಳು ಮಾರ್ಗಣದಿಂದ ಕಾರ್ಮುಕವನು॥ 

ಬೀಳಲಿಕ್ಕಡಿಯಾಗಿ ಕತ್ತರಿಸಿ ಕವಚಮಂ। 

ಸೀಳಿದಂ ಕೈಯೊಡನೆ ಸಾಸಿರ ಸರಲ್ಗಳಿಂ। 

ಪೂಳಿದಂ ಸಾರಥಿ ವರೂಥ ವಾಜಿಗಳಂ ಶಿಲೀಮುಖ ವ್ರಾತದಿಂದೆ॥೧೩॥ 


ಪ್ರತಿಪದಾರ್ಥ :- ಕಾಳಗಂ= ಸಮರವು, ಸಮವಾಗಿ= ಒಂದೇ ತೆರನಾಗಿ,ಬರೆ=ಬರಲಾಗಿ, ಅನುಸಾಲ್ವನು= ಸಾಲ್ವನ ತಮ್ಮನು

ಕೆರಳ್ದು= ಕೋಪಿಸಿಕೊಂಡು, ಪಾರ್ಥಸುತನ= ಅರ್ಜುನಿಯ, ಬತ್ತಳಿಕೆಯಂ= ಬಾಣಗಳನ್ನಿಡುವ ಕೋಶವನ್ನು, ಏಳಂಬಿನಿಂ= ಏಳು ಬಾಣಗಳಿಂದಲೂ, ಟೆಕ್ಕೆಯನು= ಅವನ ಧ್ವಜವನ್ನು, ಕೋಲೆಂಟರಿಂದ= ಎಂಟು ಬಾಣಗಳಿಂದಲೂ, ಕಾರ್ಮುಕವನು

= ಧನುಸ್ಸನ್ನು, ಈರೇಳುಮಾರ್ಗಣದಿಂದ= ಹದಿನಾಲ್ಕು ಬಾಣಗಳಿಂದಲೂ, ಬೀಳಲು= ನೆಲದಲ್ಲಿ ಬೀಳುವಂತೆ, ಇಕ್ಕಡಿಯಾ-

ಗಿ= ಎರಡುಭಾಗವಾಗಿ, ಕತ್ತರಿಸಿ = ಕಡಿದುಹಾಕಿ, ಕೈಯೊಡನೆ= ಕೈಸಮೇತವಾದ, ಕವಚಮಂ= ಅಂಗಿಯನ್ನು, ಸಾವಿರಸರ-

ಲ್ಗಳಿಂ= ಸಾವಿರ ಬಾಣಗಳಿಂದಲೂ, ಸೀಳಿದಂ= ಛೇದಿಸಿಬಿಟ್ಟನು, ತುರಗ= ಹಯಗಳನ್ನೂ, ಸಾರಥಿ= ತೇರನ್ನು ನಡೆಯಿಸು-

ವವನ್ನೂ, ವರೂಥಂಗಳ= ತೇರುಗಳನ್ನೂ ,ಶಿಲೀಮುಖವ್ರಾತದಿಂ= ಬಾಣಗಳ ರಾಶಿಯಿಂದ, ಪೂಡಿದಂ= ತುಂಬಿದನು. 


ತಾತ್ಪರ್ಯ:- ಏಳು ಬಾಣಗಳಿಂದ ಪಾರ್ಥಸುತನ ಬತ್ತಳಿಕೆಯನ್ನೂ, ಎಂಟು ಬಾಣಗಳಿಂದ ಅವನ ಧ್ವಜಕಂಬವನ್ನೂ ಹದಿನಾಲ್ಕು ಬಾಣಗಳಿಂದ ಆತನ ಧನುಸ್ಸನ್ನೂ, ಎರಡುಭಾಗವಾಗಿ ಕತ್ತರಿಸಿಬಿಟ್ಟನು. ಕೈ ಸಹಿತವಾದ ಕವಚವನ್ನು ಒಂದು ಸಾವಿರ ಬಾಣಗಳಿಂದಲೂ ಸೀಳಿಹಾಕಿದ್ದೂ ಅಲ್ಲದೆ ಅನೇಕ ದಿವ್ಯಾಸ್ತ್ರಗಳಿಂದ ಅರ್ಜುನಿಯ ಚತುರಂಗಬಲವನ್ನೂ, ಹೊಡೆದನು.  


ಕ್ಷಣದೊಳಾಗಲೆ ಬಭ್ರುವಾಹನಂ ಮತ್ತೊಂದು। 

ಮಣಿವರೂಥವನಡರ್ದಿಸುತಿರ್ದನಿತ್ತಲುರ। 

ವಣಿಸುವನುಸಾಲ್ವಂ ವಿರಥನಾಗಿ ಕೊಂಡನುರುಗದೆಯ ನೀ ಪಾರ್ಥಸುತನ॥ 

ರಣ ಚಮತ್ಕಾರಮೆಂತುಟೊ ತನ್ನ ಮೇಲಕಿ। 

ಟ್ಟಣಿಸಿ ಬಹ ದಾನವನನೆಚ್ಚೊಡುಚ್ಚಳಿಸಿ ಕೂ । 

ರ್ಗಣೆಗಳಡಗಿದುವಿಯೊಳಸುರೇಂದ್ರನಸದಳಿದು ವಸುಧೆಯಂ ಪಸೆಗೆಯ್ದನು॥೧೪॥ 


ಪ್ರತಿಪದಾರ್ಥ :- ಆಗಲೆ= ಕೂಡಲೆ, ಕ್ಷಣದೊಳು= ಒಂದು ಕ್ಷಣಮಾತ್ರದಲ್ಲಿ, ಬಭ್ರುವಾಹನನು = ಪಾರ್ಥಿಯು, ಮತ್ತೊಂದು= ಬೇರೊಂದು, ಮಣಿರಥವನು= ರತ್ನಖಚಿತವಾದ ತೇರನ್ನು, ಅಡರ್ದು= ಹತ್ತಿ, ಎಸುತ= ಬಾಣಪ್ರಯೋಗವನ್ನು ಮಾಡುತ್ತ, ಇರ್ದನು= ಇದ್ದನು, ಇತ್ತಲು= ಈ ಭಾಗದಲ್ಲಿ, ಉರವಣಿಸುವ= ಮೇಲ್ವಾಯ್ದು ಬರತಕ್ಕ, ಅನುಸಾಲ್ವನು= ಸಾಲ್ವನ ಸಹೋದರನು, ವಿರಥನಾಗಿ= ರಥವಿಲ್ಲದವನಾಗಿ, ಉರು= ಬಹುದೊಡ್ಡ, ಗಧೆಯನು= ಗದಾದಂಡವನ್ನು, ಕೊಂಡನು= ತೆಗೆದುಕೊಂಡನು, ಆಗ= ಆ ಕಾಲದಲ್ಲಿ, ಈ ಪಾರ್ಥಸುತನ= ಈ ಅರ್ಜುನಿಯ, ರಣಚಮತ್ಕಾರಂ= ಯುದ್ಧ ಚಾತುರ್ಯವು,ಎಂತುಟೊ=ಇನ್ನೆಷ್ಟು ಮಾತ್ರದ್ದೊ, ತನ್ನ ಮೇಲಕೆ= ತನಗೆ ಪ್ರತಿಭಟಿಸಿ, ಇಟ್ಟಣಿಸಿಬಹ= ಸಾಂದ್ರವಾಗಿ ಬರತಕ್ಕ, ದಾನವನನು= ಅನುಸಾಲ್ವನನ್ನು,ಎಚ್ಚಡೆ= ಬಾಣದಿಂದ ಹೊಡೆಯಲು,ಉಚ್ಚಳಿಸಿ=

ಸೀಳಿಕೊಂಡು,  ಕೂರ್ಗಣೆಗಳು=ಮೊನೆಯಾದ ಬಾಣಗಳು,ಅಡಗಿದವು= ಶರೀರದೊಳಗೆ ಚುಚ್ಚಿಕೊಂಡವು, ಅಸುರೇಂದ್ರನು= ಅನುಸಾಲ್ವನು, ಅಸವಳಿದು = ಮೈಮರೆತು, ಇಳೆಯೊಳು= ಭೂಮಿಯಮೇಲೆ, ಬಿದ್ದು=ಬಿದ್ದವನಾಗಿ, ವಸುಧೆಯಂ= ನೆಲವನ್ನು, ಪಸೆಗೈದನು= ಹೊಕ್ಕವನಾದನು. ( ಮಲಗುವ ಜಗಲಿಯನ್ನಾಗಿ ಮಾಡಿಕೊಂಡನು,)


ತಾತ್ಪರ್ಯ:-ಬಭ್ರುವಾಹನನು ಒಂದು ಕ್ಷಣಮಾತ್ತದೊಳಗಾಗಿ ಬೇರೊಂದು ದಿವ್ಯರಥವನ್ನೇರಿ ಬಾಣಪ್ರಯೋಗ ಮಾಡುತ್ತಲಿದ್ದನು, ಈ ಕಡೆಯಲ್ಲಿ ಅನುಸಾಲ್ವನು ರಥದಿಂದ ಜಿಗಿದು ತೋರಗದೆಯನ್ನು ಕೈಕೊಂಡು ಈ ಬಭ್ರುವಾಹನನ ಯುದ್ಧ ಚಾತುರ್ಯವು ಇನ್ನೆಂಥಾದ್ದೊ ನೋಡಬೇಕೆಂದು ಬರಲಾಗಿ,  ಪಾರ್ಥಸುತನು ಕೂರ್ಗಣೆಗಳಿಂದವನನ್ನು ಹೊಡೆಯಲು ಅನುಸಾಲ್ವನು ಮೂರ್ಛಾಕ್ರಾಂತನಾಗಿ ನೆಲಕ್ಕೆ ಉರುಳಿದನು. 


ಅನುಸಾಲ್ವನಳವಳಿಯೆ ಚಾಪಮಂ ಜೇಗೈದು। 

ದನುಜಾರಿತನಯನಿದಿರಾಗಿ ನಿಲ್ಲೆಲವೊ ತ। 

ನ್ನನೆ ಮೊದಲೆ ವಂದಿಸದೆ ಪಾರ್ಥನಂ ಕಂಡು ಕೆಡಿಸಿದೆ ರಾಜಕಾರಿಯವನು॥ 

ತನುವನುರೆ ನೋಯಿಸೆಂ ಮೈದುನನಲಾ ಸರಸ। 

ಕನುವರದೊಳೆಚ್ಚಾಡಿ ನೋಡುವೆಂ ಕಂಗೆಡದಿ। 

ರೆನುತೆ ನಾಲ್ಕೈದು ಬಾಣಂಗಳಂ ಬೀರಿದಂ ಬಭ್ರುವಾಹನನ ಮೇಲೆ ॥೧೫॥


ಪ್ರತಿಪದಾರ್ಥ :- ಅನುಸಾಲ್ವನು = ಸಾಲ್ವನ ತಮ್ಮನು,  ಅಳವಳಿಯೆ= ಪ್ರಜ್ಞೆ ತಪ್ಪಿ ಕೆಳಗೆ ಬೀಳಲು,ದನುಜಾರಿತನಯನು=

ಮದನನು, ಚಾಪಮಂ = ಧನುಸ್ಸನ್ನು, ಜೇಗೈದು=ಟಂಕಾರ ಮಾಡಿ, ಎಲವೊ= ಎಲೈ, ಇದಿರಾಗಿ = ನನಗೆ ಪ್ರತಿಭಟಿಸಿದವ-

ನಾಗಿ, ನಿಲ್ಲು= ನಿಲ್ಲತಕ್ಕವನಾಗು, ಮೊದಲು= ಆದಿಯಲ್ಲಿ, ತನ್ನನೇ= ನನ್ನನೇ,ವಂದಿಸದೆ= ಮರೆಹೋಗದೆ, ಪಾರ್ಥನಂ= ಫಲ್ಗುಣನನ್ನು, ಕಂಡು=ನೋಡಿ, ರಾಜಕಾರಿಯವನು= ಅರಸುಗಳ ಮನ್ನಣೆಯನ್ನು,ಕೆಡಿಸಿದೆ= ನಾಶಮಾಡಿಬಿಟ್ಟೆ, ಉರೆ=

ಅಧಿಕವಾಗಿ, ತನುವನು= ದೇಹವನ್ನು, ನೋಯಿಸದೆ= ಬಾಧೆಗಳಿಸದೆ,ಅನುವರದೊಳು=ಕಾಳಗದಲ್ಲಿ, ಮೈದುನನೊಳು= ಭಾವಮೈದುನನಾದ ನಿನ್ನ ಕೂಡೆ, ಸರಸಕೆ= ಪ್ರೀತಿಗೋಸ್ಕರ, ಎಚ್ಚಾಡಿ= ಬಾಣಗಳನ್ನು ಪ್ರಯೋಗಿಸಿ, ನೋಡುವೆವು= ನೋಡುತ್ತೇವೆ, ಕಂಗೆಡದೆ= ಎದೆಗುಂದದೆ, ಇರು= ಇರತಕ್ಕವನಾಗು, ಎನುತಲೆ= ಎಂದು ನುಡಿಯುತ್ತ,  ಬಭ್ರುವಾಹನನ ಮೇಲೆ, ನಾಲ್ಕೈದು ಬಾಣಂಗಳಂ= ನಾಲ್ಕೈದು ಕಣೆಗಳನ್ನು,  ಬೀರಿದನು= ಎಸೆದನು.


ಅ॥ವಿ॥ಜೇಗೈದು (ಕ್ರಿ. ಸ. ) ದನುಜ+ ರಾಕ್ಷಸರ, ,ತನಯ=ಮಗ (ಕೃ. ವೃ ) ದನುಜ-ರಾಕ್ಷಸರ, ಅರಿ-ಶತ್ರು (ಷ. ತ.)ದನುಜಾರಿ=ಶ್ರೀಕೃಷ್ಣನ, ತನಯ=ಮಗನು -ಮನ್ಮಥನು(ಷ. ತ. )


ತಾತ್ಪರ್ಯ:-ಅನುಸಾಲ್ವನು ಮೂರ್ಛಿತನಾಗಿ ಬಿದ್ದುಹೋದದ್ದನ್ನು ಪ್ರದ್ಯುಮ್ನನು ಕಂಡು ಧನುಷ್ಟಂಕಾರವಂ ಮಾಡುತ್ತ, ಎಲಾ ಅರ್ಜುನೀ, ಮೊದಲೇ ನೀನು ನನಗೆ ಶರಣಾಗತನಾಗದೆ ಅರ್ಜುನನಿಗೆ ಮರೆಹೊಕ್ಕು ರಾಜಕಾರ್ಯವನ್ನು ಕೆಡಿಸಿಬಿಟ್ಟೆ,

ನೀನು ಭಾವಮೈದುನನಾದ ಕಾರಣ ನಾನು ಹೆಚ್ಚಾಗಿ ನೋಯಿಸುವುದಿಲ್ಲ. ಸರಸವಾದ ಕಾಳಗವನ್ನು ಮಾಡುವೆನೆಂದು ನಾಲ್ಕೈದು ಬಾಣಗಳಿಂದ ಬಭ್ರುವಾಹನನನ್ನು ಹೊಡೆದನು. 


ಸರಸ ಭಾವದೊಳೆ ಭಾವಿಸೆ ಭಾವನವರಿಗಿದು। 

ವಿರಸವಾಗದೆ ಮಾಣದೀಗ ಸಂಗ್ರಾಮದೊಳ್। 

ಸರಸ ಕಾರ್ಮುಕಮಿಲ್ಲ ಸರಸ ಶಿಂಜನಿಯಿಲ್ಲ ಸರಸ ಬಾಣಂಗಳಿಲ್ಲ॥ 

ಸರಸ ಯುವತಿಯ ಕಟಾಕ್ಷದ ನೆಮ್ಮುಗೆಗಳಿಲ್ಲ। 

ಪರುಷಮಾಗದೆ ನೋಡು ರಣವೆನುತ ಪತ್ತು ಸಾ। 

ಸಿರ ಕೋಲ್ಗಳಂ ಮುಸುಕಿ ಹರಿ ತನಯನಂ ದಿಟದನಂಗನೆನಿಸಿದನಾರ್ಜುನಿ॥೧೬॥ 


ಪ್ರತಿಪದಾರ್ಥ :- ಅರ್ಜುನಿ= ಪಾರ್ಥನ ಕುವರನಾದ ಬಭ್ರುವಾಹನನು,  ಸರಸಭಾವದೊಳೆ= ಪ್ರೀತಿಪುರಸ್ಸರವಾಗಿಯೆ,

ಭಾವಿಸೆ= ಆಲೋಚನೆಮಾಡಿ ನೋಡಿದರೆ, ಭಾವನವರಿಗೆ= ಭಾವನಾದ ನಿನಗೆ, ವಿರಸವು= ಪ್ರೀತಿಯಿಲ್ಲದಿರತಕ್ಕದ್ದು, ಆಗದೆ=ಆಗಿಬಿಡದೆ, ಮಾಣದು= ಇರತಕ್ಕದ್ದೇ ಇಲ್ಲವು, ಈಗ= ಈಗಲಾದರೂ, ಸಂಗ್ರಾಮದೊಳ್= ಕಾಳಗದಲ್ಲಿ, ಸರಸ= ಸರಳಮಾದ, ಕಾರ್ಮುಕಂ= ಧನುಸ್ಸು, ಇಲ್ಲ=ಇಲ್ಲವು, ಸರಸ=ಸರಸಭರಿತವಾದ, ಸಿಂಜಿನಿ= ಬಿಲ್ಲಿನ ಹಗ್ಗವು,ಇಲ್ಲ=ಇಲ್ಲವು, 

ಸರಸ= ಸಾನುರಾಗಮಾದ, ಬಾಣಂಗಳು= ಕೋಲ್ಗಳು,ಇಲ್ಲ=ಇಲ್ಲವು, ಸರಸ= ಅಲಂಕಾರಮಾಡಿಕೊಂಡಿರುವ, ಯುವತಿ-

ಯ= ಪ್ರಾಯದ ಹುಡುಗಿಯ, ಕಟಾಕ್ಷದ= ಕಡೆಗಣ್ಣಿನ, ನೆಮ್ಮುಗೆಗಳು= ದೃಷ್ಟಿಗಳು, ಇಲ್ಲ= ಇಲ್ಲವು,ರಣವು= ಕಾಳಗವಾದ-

ರೊ, ಪರುಷಂ=ಬಹಳ ಕಠಿನವಾದುದು, ಆಗದೆ= ಆಗುವುದಿಲ್ಲವೆ, ನೋಡು= ಈಕ್ಷಿಸು, ಎನುತ= ಎಂದು ನುಡಿಯುತ್ತ, ಪತ್ತು ಸಾವಿರಕೋಲ್ಗಳಂ= ಹತ್ತು ಸಹಸ್ರ ಬಾಣಗಳನ್ನು, ಮುಸುಗಿ= ಕವಿದು, ದಿಟಕೆ= ನಿಶ್ಚಯವಾಗಿಯೂ,ಹರಿತನಯನಂ= ಮನ್ಮಥನನ್ನು, ಅನಂಗನು= ದೇಹಶೂನ್ಯನು, ಎನಿಸಿದನು= ಎನ್ನುವುದಕ್ಕೆ ಸರಿಯಾಗಿ ಮಾಡಿದನು.  


ಅ॥ವಿ॥ " ರಸ" ಎಂಬುದಕ್ಕೆ ಹಿಂದುಗಡೆಯಲ್ಲಿ ಸ, ವಿ ಎಂಬ ಉಪಸರ್ಗಗಳು ಸೇರಿ ಪದದ ಅರ್ಥವನ್ನು ಬೇರೆಯಾಗಿ ಮಾಡಿರುವುದು. 


ತಾತ್ಪರ್ಯ:- ಆಗ ಬಭ್ರುವಾಹನನು ಪ್ರದ್ಯುಮ್ನನನ್ನು ಕುರಿತು,  ಸಾನುರಾಗದಿಂದ ಯೋಚಿಸಿ ನೋಡಿದರೆ ಭಾವಂದಿರಾದ ನಿಮಗೆ ತಕ್ಕ ಸರಸ ಬಾಣಗಳು, ಸರಸವಾದ ಬಿಲೂಲೂ, ಸರಸವಾದ ಬಿಲ್ಲಿನ ದಾರವೂ, ಕಾಂತಾ ಕಟಾಕ್ಷದ ಕುಡಿನೋಟಗಳೂ ನನ್ನಲ್ಲಿಲ್ಲದಿರುವುದರಿಂದ ಈ ಯುದ್ಧವು ಕಠಿಣವೇ ಆಗುತ್ತದೆ ಎಂದು ನುಡಿಯುತ್ತ ಅಸಂಖ್ಯಾತವಾದ ಬಾಣಗಳಿಂದ ಮುಚ್ಚಿ ಮನ್ಮಥನನ್ನು ಅನಂಗನೆಂಬ ನಾಮಧೇಯವನ್ನುಸಾರ್ಥಕವಾಗುವಂತೆ ಮಾಡಿಬಿಟ್ಟನು. 


ಮುಸುಕಿದ ಸರಳ್ಗಳಂ ಕುಸುರಿದರಿದಂ ಕೂಡೆ। 

ದೆಸೆಗಳೇನಾದುವಾಗಸಮೆತ್ತಲಡಗಿದುದು। 

ವಸುಮತಿಯದೆಲ್ಲಿಹುದು ಶಶಿರವಿಗಳೆಡೆಯಾಟದೆಸಕಂಗಳಾವೆಡೆಯೊಳು॥ 

ಅಸುರರೊಳ್ ನಿರ್ಜರ ಪ್ರಸರದೊಳ್ ಮನುಜರೊಳ್ । 

ಪೆಸರುಳ್ಳವರ ಸಮರದಿಸುಗೆಯೊಳ್ ಕಾಣೆನಿದು। 

ಪೊಸತೆಂಬ ತೆರನಾಗೆ ವಿಶಿಖಮಂ ಕೆದರಿದಂ ಬಿಸುರುಹಾಕ್ಷನ ತನಯನು॥೧೭॥ 


ಪ್ರತಿಪದಾರ್ಥ :-  ಬಿಸುರುಹಾಕ್ಷನ= ಕೃಷ್ಣನ, ತನಯನು= ಕುಮಾರನಾದ ಮನ್ಮಥನು,ಮುಸುಕಿದ= ಬಭ್ರುವಾಹನನನ್ನು ತುಂಬಿರತಕ್ಕ, ಸರಲ್ಗಳಂ= ಕಣೆಗಳನ್ನು, ಕೂಡೆ= ತಕ್ಷಣವೇ, ಕುಸುರಿ= ಚದರಿಸಿ, ತರಿದಂ= ಸೀಳಿಹಾಕಿದನು, ದೆಸೆಗಳು= ದಿಕ್ಕುಗಳು, ಏನಾದವು= ಯಾವಗತಿಯನ್ನೈದಿದವು, ಎತ್ತಲುಂ= ಎಲ್ಲಾ ಕಡೆಯಲ್ಲಿಯೂ, ಆಗಸಂ= ಅಂತರಿಕ್ಷವು,ಅಡಗಿದುದು= ಔತುಕೊಂಡಿತು,ವಸುಮತಿಯು= ಇಳೆಯು, ಅದೆಲ್ಲಿ= ಅದಾವೆಡೆಯಲ್ಲಿ,ಇಹುದು= ಇದೆ, ಶಶಿರವಿಗಳ= ಚಂದ್ರ ಸೂರ್ಯರ,ಎಡೆಯಾಟದ= ತಿರುಗಾಟದ,ಎಸಕಂಗಳು= ಕಾಂತಿಗಳು, ಆವೆಡೆಯೊಳು= ಯಾವಪ್ರ- ದೇಶದಲ್ಲಿ,ಇಹುದು=ಇರುವುದು, ಅಸುರರೊಳ್= ರಕ್ಕಸರಲ್ಲಿಯೂ, ನಿರ್ಜರಪ್ರಸರದೊಳ್= ದೇವತೆಗಳ ಸಮೂಹದಲ್ಲೂ, ಮನುಜರೊಳ್= ಮಾನವರಲ್ಲಿಯೂ,ಪೆಸರುಳ್ಳವರ= ಪ್ರಸಿದ್ಧರಾಗಿರತಕ್ಕವರ, ಎಸುಗೆಯೊಳ್= ಬಾಣಗಳನ್ನು ಬಿಡುವಿಕೆಯಲ್ಲಿ, ಕಾಣೆನು= ನೋಡಲೇಇಲ್ಲವು, ಇದು= ಈಗಿನ ಶರಸಂಧಾನವು, ಪೊಸತು= ನವೀನವಾದದ್ದು, ಎಂಬ= ಎನ್ನತಕ್ಕ, ತೆರನು= ಬಗೆಯು, ಆಗೆ=ಆಗುವಂತೆ, ವೆಶಿಖಮಂ= ಬಾಣವನ್ನು,  ಕೆದರಿದಂ= ತುಂಬಿಸಿದನು. 


ಅ॥ವಿ॥ ಬಿಸುರುಹ=ತಾವರೆಯಂತೆ, ಅಕ್ಷ= ಕಣ್ಣುಗಳುಳ್ಳವನು, ಕೃಷ್ಣ, ( ಸ. ದೀ. ಸಂ. ಮತ್ತು ಬ.ಸ.)


ತಾತ್ಪರ್ಯ:- ಆಗ ಮನ್ಮಥನು ತನ್ನನ್ನು ಆವರಿಸಿಕೊಂಡು ಬರುವ ಬಾಣಗಳನ್ನೆಲ್ಲಾ ದಿಕ್ಕಾಪಾಲಾಗಿ ಚದರಿಸಿ, ಭೂಮ್ಯಾಕಾಶಗಳೇ ಕಾಣದಂತೆಯೂ, ಸೂರ್ಯಚಂದ್ರರು ದೃಷ್ಟಿಪಥಕ್ಕೆ ತೋರದ ಹಾಗೂ,ಸ್ವರ್ಗ ಮರ್ತ್ಯ ಪಾತಾಳಂಗಳಲ್ಲಿಯೂ, ದೈತ್ಯ ದಾನವ ಮಾನವರೊಳಗೂ ಮತ್ತೆ ಯಾರೂ ಇವರಿಗೆ ಸರಿಯೇ ಅಲ್ಲವೆಂಬಂತೆಯೂ, ಇದು ಎಂದೂ ಕಾಣದ ವಿಚಿತ್ರವಾದ ಕಾಳಗವೆಂಬ ಪರಿಯಿಂದಲೂ ತೋರಿಬರುವಂತೆ ಕೃಷ್ಣಸುತನಾದ ಮದನನು ಕೂರ್ಗಣಣೆ-

ಗಳನ್ನು ಅರ್ಜುನಿಯ ಮೇಲೆ ಚೆಲ್ಲಾಡುತ್ತಲಿದ್ದನು. 


ಕರ್ಕಶದೊಳೆಸೆವ ಕೃಷ್ಣಾತ್ಮಜನ ಬಾಣಸಂ। 

ಪರ್ಕದಿಂದಾದ ಕತ್ತಲೆಯಂ ಕೆಡಿಸಿದುವಮ। 

ರರ್ಕಳಹುದೆನೆ ಸವ್ಯಸಾಚಿಯ ತನುಜನ ಪೊಸಮಸೆಯ ವೆಶಿಖಪ್ರಭೆಗಳು॥ 

ಅರ್ಕರಶ್ಮಿಗಳಂಧಕಾರಂಗಳಡಿಗಡಿಗೆ। 

ತರ್ಕಮಂ ಮಾಳ್ಪಂತೆ ಕಂಗೊಳಿಸಲಾಗ ವೀ। 

ರರ್ಕಳೆಚ್ಚಾಡಿದರ್ ಬಭ್ರುವಾಹನ ರುಕ್ಮಿಣೀಸುತರ್ ಸಂಗರದೊಳು॥೧೮॥ 


ಪ್ರತಿಪದಾರ್ಥ :- ಕರ್ಕಶದೊಳು= ಬಹಳ ಕ್ರೂರವಾಗಿ ಎಸೆವ= ಶರಪ್ರಯೋಗ ಮಾಡುವ, ಕೃಷ್ಣಾತ್ಮಜನ = ಕೃಷ್ಣನ ಮಗನಾದ ಮನ್ಮಥನ, ಬಾಣ=ಸರಲ್ಗಳ, ಸಂಪರ್ಕದಿಂದ = ಸೋಂಕುವ ದೆಸೆಯಿಂದ, ಆದ= ಒಗೆದ, ಕತ್ತಲೆಯಂ= ಕತ್ತಲೆಯನ್ನು, ಸವ್ಯಸಾಚಿಯ= ಪಾರ್ಥನ, ತನುಜನ= ಕುವರನಾದ ಬಭ್ರುವಾಹನನ, ಪೊಸಮಸೆಯ= ಹೊಸದಾಗಿ ಸಾಣೆಯಿಟ್ಟ, ವಿಶಿಖ= ಬಾಣಗಳ,ಪ್ರಭೆಗಳು= ಪ್ರಕಾಶಗಳು,ಅಮರರ್ಕಳು= ದೇವತಾಸಮುದಾಯವೆಲ್ಲಾ,ಅಹುದೆನೆ= 

ಮೆಚ್ಚುವ ತೆರನಾಗಿ, ಕೆಡಸಿದವು= ನಾಶಮಾಡಿದವು, ಅರ್ಕರಶ್ಮಿಗಳು= ಸೂರ್ಯಕಿರಣಗಳು, ಅಂಧಕಾರಂಗಳಂ= ಕತ್ತಲೆಯ ಸಮುದಾಯವನ್ನು, ಅಡಿಗಡಿಗೆ= ಆಗಾಗ್ಗೆ, ಅಥವಾ ಬಾರಿಬಾರಿಗೂ, ತರ್ಕಮಂ= ಹೆಚ್ಚಾಗಿ ವ್ಯಾಖ್ಯಾನಿಸುವುದು ತಗ್ಗಿಸುವುದು ಇವನ್ನು, ಮಾಳ್ಪಂತೆ= ಮಾಡುವಂತೆ, ಕಂಗೊಳಿಸಲು= ಹೊಳೆಯಲಾಗಿ,ಆಗ= ಆ ಕಾಲದಲ್ಲಿ, ವೀರರ್ಕಳು= ಪರಾಕ್ರಮಿಗಳಾದ,ಬಭ್ರುವಾಹನ ರುಕ್ಮಿಣೀಸುತರು= ರ್ಜುನಿ ಮತ್ತು ಮದನರು,ಸಂಗರದೊಳು= ರಣಾಂಗಣದಲ್ಲಿ, ಎಚ್ಚಾಡಿದರು= ಬಾಣಗಳಿಂದ ಕಾದಾಡಿದರು. 


ಅ॥ವಿ॥ ಕೃಷ್ಣ= ಕೃಷ್ಣನ, ಆತ್ಮ=ಹೊಟ್ಟೆಯಲ್ಲಿ,ಜ= ಹುಟ್ಟಿದವನು(ಮನ್ಮಥನು) ಅರ್ಕ=ಸೂರ್ಯ, ಎಕ್ಕದಗಿಡ. 


ತಾತ್ಪರ್ಯ:- ಸೂರ್ಯರಶ್ಮಿಗಳು ಅಂಧಕಾರವನ್ನು ನೀಗುವಂತೆ ನೀಗುವಂತೆ, ಮನ್ಮಥನು ಬಿಟ್ಟ ಕ್ರೂರವಾದ  ಬಾಣಗಳಿಂ- 

ದುಂಟಾದ ಕತ್ತಲೆಯನ್ನು ಕೋಟಿ ಸೂರ್ಯ ತೇಜೋವಿರಾಜಮಾನವಾದ ಬಭ್ರುವಾಹನನ ಕೂರ್ಗಣೆಗಳಿಂದೊಗೆವ ಕಾಂತಿಯು ಹೋಗಲಾಡಿಸುತ್ತಿರುವಂತೆ ಬಭ್ರುವಾಹನ ಕೃಷ್ಣತನುಜರು ಕಾಳಗವನ್ನು ಮಾಡುತ್ತಿದ್ದರು. 


ಅಚ್ಚರಿಯನಿನ್ನು ಜನಮೇಜಯ ನರೇಂದ್ರ ಕೇ। 

ಳಚ್ಯುತನ ಸುತನ ಬಾಣಂಗಳಂ ನಡುವೆ ಮುರಿ। 

ಯೆಚ್ಚನಾತನ ಮಣಿವರೂಥ ಭೈತ್ರವನಂಬಿನಂಬುಧಿಯ ವೀಚಿಯಿಂದೆ॥ 

ಮುಚ್ಚಿದನೊಡನೆ ಮದನನಂಗದೊಳ್ ಕಣೆಗಳಂ। 

ಪೊಚ್ಚಿದಂ ಕೆಲಬಲದೊಳಿಡಿದ ರೆಪುಸೇನೆಯಂ। 

ಕೊಚ್ಚಿದಂ ಕೊಂದನಗಣಿತಬಲವನಾ ಬಭ್ರುವಾಹನಂ ಕೊಳುಗುಳದೊಳು॥೧೯॥


ಪ್ರತಿಪದಾರ್ಥ :- ಜನಮೇಜಯನರೇಂದ್ರ= ಜನಮೇಜಯ ಭೂನಾಥನೆ, ಇನ್ನು= ಮುಂದೆ ಆದ, ಅಚ್ಚರಿಯನು= ಆಶ್ಚರ್ಯವನ್ನು, ಕೇಳು=ಕೇಳತಕ್ಕವನಾಗು,ಬಭ್ರುವಾಹನನು, ಅಚ್ಯುತಸುತನ= ಮನ್ಮಥನ, ಬಾಣಂಗಳಂ = ಕಣೆಗಳನ್ನು, ನಡುವೆ= ಮಧ್ಯಮಾರ್ಗದಲ್ಲಿಯೇ,ಮುರಿಯೆ= ಛೇದಿಸಲು, ಆತನ= ಆ ಮದನನ, ಮಣಿವರೂಥ= ರತ್ನಖಚಿತವಾದ ತೇರಿನ,ಛತ್ರವನು= ಕೊಡೆಯನ್ನು, ಅಂಬಿನ= ಕಣೆಗಳೆಂಬ, ಅಂಬುಧಿಯ= ಕಡಲಿನ, ವೀಚಿಯಿಂದ= ಅಲೆಗಳಿಂದ, ಎಚ್ಚನು= ಹೊಡೆದವನಾದನು,ಮುಚ್ಚಿದಂ= ಎಲ್ಲೆಲ್ಲಿಯೂ ಕವಿದುಕೊಂಡನು, ಸ್ಮರನ= ಮನ್ಮಥನ, ಅಂಗದೊಳ್=ಅವಯವದಲ್ಲಿ,ಕೂಡೆ=ಒಡನೆಯೇ, ಕಣೆಗಳಂ= ಬಾಣಗಳನ್ನು, ಮುಚ್ಚಿದನು= ವ್ಯಾಪಿಸುವಂತೆ ಮಾಡಿದನು, ಕೆಲಬಲದೊಳು= ಉಭಯಪಾರ್ಶ್ವದಲ್ಲಿಯೂ, ಇಡಿದ= ತುಂಬಿಕೊಂಡಿದ್ದ, ಸೇನೆಯಂ= ದಳವನ್ನೆಲ್ಲಾ, ಕೊಚ್ಚಿದಂ= ಕತ್ತರಿಸಿಹಾಕಿದನು, ಪಚ್ಚಿದಂ= ತುಂಡುತುಂಡು ಮಾಡಿದನು, ಅಗಣಿತ = ಅಸಂಖ್ಯಾತ, ಬಲವನು = ಪಡೆಯನ್ನೆಲ್ಲಾ, ಕೊಳುಗುಳದೊಳು= ರಣರಂಗದಲ್ಲಿ, ಕೊಂದನು= ಕೊಂದುಹಾಕಿದನು.


ಅ॥ವಿ॥ ಅಚ್ಚರಿ( ತ್ಭ) ಆಶ್ಚರ್ಯ( ತ್ಸ) ಮಣಿವರೂಥ+ಛತ್ರ = ಮಣಿವರೂಥ (ವಿ.ಪೂ.ಕ.) ಮಣಿವರೂಥ ಛತ್ರ (ಷ.ತ.)


ತಾತ್ಪರ್ಯ:-ಎಲೈ ಜನಮೇಜಯರಾಯನೆ, ಮುಂದೆ ನಡೆದ ಆಶ್ಚರ್ಯವನ್ನು ಕೇಳು, ಬಭ್ರುವಾಹನನು ಈ ತೆರನಾದ ಕ್ರೂರವಾದ ಬಾಣಗಳು ಮನ್ಮಥನ ಕಡೆಯಿಂದ ಬರತಕ್ಕ ನಿಶಿತಾಸ್ತ್ರಗಳನೆಲ್ಲಾ ನಡುದಾರಿಯಲ್ಲಿಯೇ ಖಂಡಿಸುತ್ತ, ರತ್ನ-

ಖಚಿತವಾದ ಅವನ ತೇರನ್ನೂ,ಛತ್ರಚಾಮರಾದಿಗಳನ್ನೂ ಬಾಣಗಳ ಕಡಲಿನ ಅಲೆಗಳಿಂದ ಮುಚ್ಚಿಸಿ ಮದನನ ಮೈಯಲ್ಲೆಲ್ಲಾ ಬಾಣಗಳು ಚುಚ್ಚಿಕೊಳ್ಳುವಂತೆ ಮಾಡಿದ್ದಲ್ಲದೆ, ಎಡಬಲದಲ್ಲಿದ್ದ ಸೈನ್ಯವನ್ನೆಲ್ಲಾ ಕೆಡಹುತ್ತಲೂ, ಅಸಂಖ್ಯಾತ- 

ವಾದ, ಪರಬಲವನ್ನೆಲ್ಲಾ ಪುಡಿಪುಡಿಯಾಗುವಂತೆ ಮಾಡಿದನು. 


ಕಂಡುರೆ ಕನಲ್ದಾತನಿಸುವಿಸುವ  ಕೋಲ್ಗಳಂ। 

ಖಂಡಿಸುತೆ ಮಿಡುಕದಂತವನ ತೇರನೊಡನೊಡನೆ । 

ಚಂಡ ಶರಜಾಲಮಂ ಸೈಗರೆಯುತುಚ್ಛಳಿಸಿ ಮತ್ತೆ ರಿಪುಬಲದ ಮೇಲೆ॥ 

ಹಿಂಡುಗಣೆಯಂ ಕವಿಸಿ ಮಂದಿಯಂ ಕೊಲುತಿರ್ದ। 

ನಂಡಲೆದು ಮೂಜಗವನೈದೆ ಕುಸುಮಾಸ್ತ್ರದಿಂ। 

ದಿಂಡುರುಳ್ಚುವ ಶಂಬರಾರಿಗಿದಿರಾರೆನಲ್ ಪುಂಡರೀಕಾಕ್ಷಸೂನು॥೨೦॥


ತಾತ್ಪರ್ಯ:- ಪುಂಡರೀಕಾಕ್ಷಸೂನು=ಮನ್ಮಥನು,ಕಂಡು= ಬಭ್ರುವಾಹನನ ಬಾಣಪ್ರಯೋಗದ ತೆರನನ್ನು ನೋಡಿ, ಉರೆ= ಹೆಚ್ಚಾಗಿ, ಕನಲ್ದು= ಕೋಪಗೊಂಡು, ಆತನು=ಅರ್ಜುನಿಯು,ಎಸುವೆಸುವ= ಎಡೆಬಿಡದೆ ಬಿಡತಕ್ಕ, ಕೋಲ್ಗಳಂ=ಬಾಣಗ- 

ಗಳನ್ನು, ಖಂಡಿಸುತ= ತುಂಡು ತುಂಡು ಮಾಡುತ್ತ, ಮಿಡುಕದಂತೆ= ನಿಶ್ಚಲನಾಗುವಂತೆ ಮಾಡಿ, ಅವನ=ಪಾರ್ಥಿಯ, ತೇರ= ರಥವನ್ನು, ಒಡನೊಡನೆ= ಸಂಗಡ ಸಂಗಡಲೆ,ಚಂಡ=ಉಗ್ರವಾದ,ಶರ= ಬಾಣಗಳ, ಜಾಲಮಂ= ಸಮುದಾಯವನ್ನು, ಸೈಗರೆವುತ= ಚಲ್ಲುತ್ತ. ಉಚ್ಛಳಿಸಿ= ಎದುರಾಗಿ,ರಿಪು= ಹಗೆಗಳ, ಬಲದಮೇಲೆ= ಪಡೆಯಮೇಲೆ,ಹಿಂಡುಗಣೆಯಂ= ಬಾಣ

ಪರಂಪರೆಯನ್ನು, ಕವಿಸಿ= ಮುಸುಕಿಸಿ,ಮೂಜಗವನು= ಸ್ವರ್ಗ ಮರ್ತ್ಯ ಪಾತಾಳಗಳನ್ನು, ಅಂಡಲೆದು= ಹಿಂಸೆಪಡಿಸಿ, ಐದು= ಐದಾದ, ಕುಸುಮಾಸ್ತ್ರದಿಂದ= ಪುಷ್ಪಬಾಣಗಳಿಂದ,ದಿಂಡುರುಳ್ವ= ದಿಂಡು ಕೆಡಸತಕ್ಕ, ಶಂಬರಾರಿಗೆ= ಶಂಬರಾಸು-

ರನ ಹಗೆಯಾದ ಮದನನಿಗೆ,ಇದಿರು= ಪ್ರತಿಯಾಗಿ ಎದುರು ನಿಲ್ಲತಕ್ಕವರು,ಆರು= ಯಾರಿರುವರು, ಎನಲ್= ಎಂಬತೆರ-

ನಾಗಿ, ಮಂದಿಯಂ= ದಳವನ್ನೆಲ್ಲಾ, ಕೊಲುತಿರ್ದನು= ಸಂಹಾರಮಾಡುತ್ತಲಿದ್ದನು. 


ಅ॥ವಿ॥ ಪುಂಡರೀಕ=ತಾವರೆಯಂತೆ, ಅಕ್ಷ= ನೇತ್ರಗಳುಳ್ಳವನು( ಕೃಷ್ಣ) ಸೂನು=ಮಗ,( ಮಾರನು) ಪುಂಡರೀಕ+ಅಕ್ಷ= ಪುಂಡರೀಕಾಕ್ಷ (ಸ. ದೀ. ಸಂ.) ಪುಂಡರೀಕ= ಕಮಲ, ಮತ್ತು ಹುಲಿ, ಬಲ= ಸೈನ್ಯ, ಮತ್ತು ಶಕ್ತಿ ,ಚಂಡಕರ+ ಜಾಲ= ಚಂಡಕರವಾದ ಶರ,(ವಿ. ಪೂ ಕ. ) ಚಂಡಕರಗಳಜಾಲ( ಷ. ತ. ಸ.) ಕುಸುಮ+ ಅಸ್ತ್ರ=ಕುಸುಮಾಸ್ತ್ರ(ಸ. ದೀ. ಸಂ.) 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ