ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಮಾರ್ಚ್ 17, 2019

ಬಾಹುಬಲಿಪಂಡಿತ ಕವಿಯ ಧರ್ಮನಾಥ ಪುರಾಣಂ

ಧರ್ಮನಾಥ ಪುರಾಣಂ

ಹದಿನಾಲ್ಕನೆಯ ಶತಮಾನದ ಮಧ್ಯಭಾಗದಲ್ಲಿ ತಲೆದೋರಿದ ಚಂಪೂಕವಿಗಳಲ್ಲಿ ಬಾಹುಬಲಿಪಂಡಿತ ಮುಖ್ಯನಷ್ಟೇ ಅಲ್ಲ, ಕೇಂದ್ರಬಿಂದುವೂ ಹೌದು. ಈ ಶತಮಾನದಲ್ಲಿ ಬಂದ ಮಧುರ ಕವಿ ಇದೇ ವಿಷಯವನ್ನು ಕುರಿತು ಒಂದು ಚಂಪೂಕಾವ್ಯ  ವನ್ನು ಬರೆದಿದ್ದಾನೆ. ಈತನ ಕಾಲ ಸುಮಾರು ೧೨೦೦.
ಬಾಹುಬಲಿಪಂಡಿತ ಧರ್ಮನಾಥಪುರಾಣವನ್ನು ಕನ್ನಡದಲ್ಲಿಯೂ ಗುಮ್ಮಟನಾಥ ಚರಿತೆಯನ್ನು ಸಂಸ್ಕೃತದಲ್ಲಿಯೂ ಬರೆದಿದ್ದಾನೆ.  “ ಈತನಿಗೆ ಉಭಯಭಾಷಾ ಕವಿಚಕ್ರವರ್ತಿ” ಎಂಬ ಬಿರುದಿದ್ದಂತೆ ತಿಳಿದುಬರುತ್ತದೆ. ಇದರಲ್ಲಿ ಹದಿನೈದನೆಯ ತೀರ್ಥಂಕರನಾದ ಧರ್ಮನಾಥನ ಚರಿತ್ರೆಯನ್ನು ಹೇಳಿದೆ.

ಸ್ರಗ್ಧರೆ
ಶ್ರೀಮದ್ದೇವೇಂದ್ರವೃಂದಸ್ಫುರದುರುಮಕುಟಶ್ರೇಣಿಮಾಣಿಕ್ಯರೋಚಿ
ಸ್ತೋಮಾಂಭೋಧೌತಪಾದಂ ನಿರವಧಿಸುಖದೃಗ್ಭಬೋಧವೀರ್ಯಸ್ವರೂಪಂ
ವಾಮಾಷ್ಟಪ್ರಾತಿಹಾರ್ಯಪ್ರಕಟಿತಪರಮಾರ್ಹಂತ್ಯಲಕ್ಷ್ಮೀಪ್ರಭಾವೋ
ದ್ದಾಮಂ ಮಾಳ್ಕಿಷ್ಟಸಂಸಿದ್ಧಿಯನೆಮಗನೆಶಂ ಧರ್ಮನಾಥ ಜಿನೇಂದ್ರಂ॥೧॥

ಚಂಪಕಮಾಲೆ
ವಿಮಳತರೋದ್ಘಬೋಧಬಿಸಶಾಲಿನಿ ಪನ್ನೆರಡಂಗಮೆಂಬನು
ತ್ತಮದಳರಾಜಿರಾಜಿನಿ ಲಸದ್ಗುಣಭಾಗ್ಭುವನ ಪ್ರವೃದ್ಧಿಸಂ
ಭ್ರಮಪರಿಶೋಭಿನಿರ್ವೃತಿ ಮಧುವ್ರತಮೋದಿನಿ ತತ್ಸರಸ್ವತೀ
ಕಮಳಿನಿ ತೋರ್ಕೆ ಮುಕ್ತಿಕಮಳಾಮುಖಮಂ ನಮಗೊಲ್ದು ಲೀಲೆಯಿಂ॥೧೦॥

ಮತ್ತೇಭವಿಕ್ರೀಡಿತ
ಭಣಿತಾನೇಕನಯನಂ ಗಜಾಂಕುಷನುದಾತ್ತಂ ನಾಗವರೂಮಂ ರಸಾ
ಗ್ರಣಿ ಹಂಪಂ ಕವಿರಾಜ ನೇಮಿಕವಿ ಭಾಳಾಕ್ಷಾಖ್ಯಂ ಜನ್ನಿಗಂ
ಗೈಣಿರನ್ನಂ ಕವೆಚಕ್ರಿಯಗ್ಗಳನುಮೆಂಬೀ ಸರ್ವವಿದ್ವಚ್ಛಿರೋ
ಮಣಿ ರಾಜತ್ಕವಿವೃಂದದಿಂದೆಸೆದುದೀ ಭೂಮಂಡಳಂ ಸಂತತಂ॥೩೦॥

ಮತ್ತೇಭವಿಕ್ರೀಡಿತ
ಕವಿ ತಾಂ ಶ್ರವ್ಯಮೆನಿಪ್ಪ ಕಾವ್ಯಮಿದಂ ಚಾತುರ್ಯದಿಂ ಪೇಳ್ದೊಡಂ
ಸುವಿವೇಕರ್ ಪರಿತೋಷಮಂ ತಳೆವರೆಂದುಂ ತಾಳರತ್ಯುದ್ಧತರ್
ನವಮಾಧುರ್ಯದ ಸೀಮೆಯಾದ ವಿಲಸತ್ಪೀಯೂಷದ ಸ್ವಾದಮಂ
ದಿವಿಜವ್ರಾತಮೆ ಬಲ್ಲುದಲ್ಲದೆ ಪಿಶಾಚಾನೀಕಮೇಂ ಬಲ್ಲುದೇ॥೩೬॥

ಉತ್ಪಲಮಾಲೆ
ದುರ್ಜನರೆಯ್ದೆ ದೂಱಿದಪರೆಂದು ಮಹಾಕವಿ ಮಾಳ್ಪ ಕಾವ್ಯಮಂ
ಸಜ್ಜನವಂದ್ಯಮಂ ಬಿಡುವನಲ್ಲದೆಂತೆನೆ ಹೇನಿಗಂಜಿ ಸಂ
ವರ್ಜಿಪರುಂಟೆ ಕುಂತಳಮನೊಲ್ಲರೆ ಕಂಟಕಕಂಜಿ ಯಾನಮಂ
ಸಜ್ಜೆ ನಿವಾಸಮಂ ಬಿಡುವರುಂಟೆ ಕುಮತ್ಕುಣದಂಶಭೀತಿಯಿಂ॥೩೭॥

ಉತ್ಪಲಮಾಲೆ
ಪುಣ್ಯದಿನುದ್ಘಮಪ್ಪ ಮತಿಯಾದೊಡೆ ಶಾಸ್ತ್ರಮನೋದಿ ಸದ್ಗುಣಾ
ಗಣ್ಯಜಿನೇಶ ಚಾರುಚರಿತಾಂಕಿತಕಕಾವ್ಯಮನೆಯ್ದೆ ಮಾಡಿ ನೈ
ಪುಣ್ಯವನಾಂತವಂ ಕವಿ ಕೃತಾರ್ಥನಲ್ಲದೆ ಪಾಪಹೇತುವಂ
ಬಣ್ಣಿಸಿ ದುಃಖಮಂ ಪಡೆವನುಂ ಕವಿಯೇ ಕೃತಿಯುಂ ಕೃತಾರ್ಥಮೇ॥೩೯॥

ಮತ್ತೇಭವಿಕ್ರೀಡಿತ
ರಮಣೀಯಂ ಕೃತಭೂಪರಾಗಮಸಮಂ ಚಿತ್ರಾನುಬದ್ಧಂ ಸ್ಮರಾ
ಶ್ರಮಮಾಮೋದ ನಿವಾಸಮಪ್ಪ ವಿಲಸತ್ಕಾವ್ಯಂ ಮಹೀಚಕ್ರದೊಳ್
ಸುಮನೋಮಾಲ್ಯದವೋಲ್ ಸುನಾಯಕ ಗುಣಪ್ರೋದ್ದಾಮಮಾಗಿರ್ದೊಡು
ತ್ತಮಪುಣ್ಯಾಧಿಕಕಂಠಭೂಷಣಮದಕ್ಕಂತಲ್ಲದಂದಕ್ಕುಮೇ ॥೪೧॥

ಮತ್ತೇಭವಿಕ್ರೀಡಿತ
ಕೃತಿ ಲೇಸಲ್ಲದಥಡಂ ಜಿನೇಶ್ವರ ಕಥಾಸಂದರೂಭಸಂಬಂಧಸಂ
ಗತಮಾಗಿರ್ದನಿಮಿತ್ತಮಾದರಿಸುವರ್ ವಿದ್ವಾಂಸರೀ ಕಾವ್ಯಂ
ಕ್ಷಿತಿಯೊಳ್ ಮೃಣ್ಮಯಪಿಂಡಮಂ ಧರಣಿಪಾಲಾಜ್ಞಾಧಿಮುದ್ರಾಸಮಂ
ಕಿತಮಾಗಿರ್ದುದುಕಾರಣಂ ತಲೆಯಮೇಲಿಟ್ಟಾದರಂ ಮಾಡರೇ॥೪೨॥

ಮಹಾಸ್ರಗ್ಧರೆ
ನಿಪುಣಂ ಷಟ್ತರ್ಕದೊಳ್ ವ್ಯಾಕರಣದೊಳಧಿಕಂ ಛಂದದೊಳ್ ತಾನಭಿಜ್ಞಂ
ವಿಪುಳಾಳಂಕಾರಭೇದಂಗಳೊಳತಿಚತುರಂ ಕಾವ್ಯದೊಳ್ ತಾನೆ ಬಲ್ಲಂ
ಸ್ವಪರೋದಾರಾಗಮವ್ಯಕ್ತಿಯೊಳತಿಕುಶಲಂ ನಾಟಕಾಖ್ಯಾನದೊಳ್ ತಾ
ನೆ ಪುರೈಪ್ರಜೂಞಾವೆಶೇಷಂ ಭುಜಬಳಿಯತಿಪಂ ಮತ್ತೆ ಬೊಟ್ಟೆತ್ತಲುಂಟೇ॥೪೬॥

ಇಂತಪ್ಪಧಿಕ ಸುಸಾಮ
ರ್ಥ್ಯಂ ತನಗಳವಟ್ಟು ತೋಱೆ ತಪಮಂ ಬಾಲ್ಯದೊ
ಳಾಂತ ನಿಜಕೀರ್ತ ಸಕಳದಿ
ಗಂತದೊಳೆಸೆವಂದು ಬಾಹುಬಲಿಮುನಿ ನೆಗಳ್ದಂ॥೪೭॥

ಮತ್ತೇಭವಿಕ್ರೀಡಿತ
ಮೊದಲೊಳ್ ಸಂಸ್ಕೃತಭಾಷೆಯಿಂ ಬುಧಜನಂ ಕೊಂಡಾಡುತಿರ್ಪಂತೆ ಸಂ
ಮದದಿಂ ಗುಮ್ಮಟನಾಥ ಸಚ್ಚರಿತವೆಂಬೀ ಕಾವ್ಯಮಂ ಪೇಳ್ದು  ಮಾ
ಣದೆ ಕರ್ನಾಟಕದಿಂದೆ ಮತ್ತೆ ರಚಿಸಿ ಶ್ರೀಧರ್ಮನಾಥಪ್ರಬಂ
ಧದ ಪೆರ್ಚಂ ತಳೆದಂ ಸಮಂತುಭಯಭಾಷಾಕಾವ್ಯಕರ್ತೃತ್ವಮಂ॥೪೮॥

ಚಂಪಕಮಾಲೆ
ನಯವಿದರೆಲ್ಲರುಂ ಪೊಗಳೆ ಜಾಣ್ಣುಡಿ ಮಿಕ್ಕಿರೆ ಕಾವ್ಯಮಂ ಗುಣೋ
ದಯವರಮಾಗೆ ಮಾಡಿ ನಯಕೀರ್ತಿಯತೀಶ್ವರರಗ್ರಶಿಷ್ಯನಿಂ
ತಯಯುತನಪ್ಪ ಬಾಹುಬಲಿಪಂಡಿತದೇವನಭಿಷ್ಟುತಂ ಮಹೋ
ಭಯಕವಿಚಕ್ರವರ್ತಿ ಪೆಸರಿಂದೆಸೆದಂ ಜಗದೊಳ್ ನಿರಂತರಂ ॥೪೯॥

ಮಹಾಸ್ರಗ್ಧರೆ
ಪುರುಚಂಚತ್ಫೇನಮುದ್ರಂ ನಿರವಧಿಮಣಿಭದ್ರಂ ನಿಮಗ್ನೀಕೃತಾರ್ಧಂ
ದರಕೃನ್ನಕ್ರಾದಿಭದ್ರಂ ಕೃತಕುಹರತಳಾರ್ದ್ರಂ ಮಹತ್ವಾದರಿದ್ರಂ
ವರಗಂಗಾಯೋಗರುದ್ರಂ ಘುಳುಘುಳುರವರೌದ್ರಂ ಮಹಾಭೀಷಣಾರ್ದ್ರಂ
ಗರಿಮಾರ್ದ್ರಂ ರಾಜಕುಂಭೀಕರಲವಣಸಮುದ್ರಂ ತರಂಗೋದ್ವಿನಿದ್ರಂ ॥೬೨॥

ಉತ್ಪಲಮಾಲೆ
ಪನ್ನಗಲೋಕಮಂ ಬಿಡದೆ ಮೆಟ್ಟಿ ಮನುಷ್ಯರ ಲೋಕಮೆಲ್ಲಮಂ
ತನ್ನಯ ಪಾದಸೇವನೆಯೊಳೊಂದಿಸಿ ಚೂಳಿಕೆಯಗ್ರಭಾಗದಿಂ
ಸ್ವರ್ನಿಳಯಂಬರಂ ನಿಮಿರ್ದು ಮೂಜಗದೊಳ್ ಮಹಿಮಾಪ್ರಭಾವದಿಂ
ದುನ್ನತಮಾದ ಮೇರೈಗಿರಿ ಪುಟ್ಟಿಸುತಿರ್ದುದಗುರ್ವನಾವಗಂ॥೬೬॥

ನಿರವಧಿಸುಖಕ್ಕೆ ಪಾತ್ರಂ
ಪರಮಜಿನಾಗಮಜಲಪ್ರವಾಹಪವಿತ್ರಂ
ಉರುತರಶೋಭಾಚಿತ್ರಂ
ಕರಮೆಸಗುಂ ರಯ್ಯಮಪ್ಪ ಭರತಕ್ಷೇತ್ರಂ ॥೬೯॥

ಮಹಾಸ್ರಗ್ಧರೆ
ಅದನಾನೇನೆಂದು ಕೊಂಡಾಡುವೆನಧಿಕತಟಾಂಕಂಗಳಿಂ ಸುತ್ತಲುಂ ಪ
ರ್ವಿದ ಕುಲ್ಯೌಘಂಗಳಿಂ ಕುಕ್ಕುಟಸಮುದಯಸಂಪಾತ್ಯಮಪ್ಪೂರ್ಗಳಿಂ ಪೆ
ರ್ಚಿದ ಸತ್ಪುಂಡ್ರೇಕ್ಷುವಾಟಂಗಳಿನೆಡೆದೆಱಹಿಲ್ಲಾಗಿ ತುಂಬಿರ್ದುದೆತ್ತಂ
ಮುದದಿಂ ನೋಳ್ಪಡಂ ಕೌತುಕಮನೊದವಿಸುತ್ತಿರ್ಪುದಾ ದೇಶಮೆಂದುಂ ॥೭೨॥

ಉದಯಾಸ್ತಗಿರಿಗಳೆಡೆಯೊಳ್
ಪದಪಿಂದೆಡೆಯಾಡುತಿರ್ಪ ರವಿಬಿಂಬಕ್ಕಾ
ಸ್ಪದಶೈಲಂಗಳಿವೆಂಬಂ
ದದಿನೊಪ್ಪುವುವಲ್ಲಿ ಧಾನ್ಯರಾಶಿಗಳೆಂದುಂ ॥೭೪॥

ಬಡವನಿವನೆಂದು ಮೃಡನಂ
ಜಡೆಯಲ್ಲಿಯಗಂಗೆ ಬಿಟ್ಟು ಬಹುಮುಖದಿಂ ಸಿರಿ
ಯೊಡಗೂಡಿದ ಜನಪದದೊಳ್
ತೊಡದಿರ್ದವೊಲೆಯ್ದೆ ಪರಿಯುತಿರ್ಪುವು ತೊಱೆಗಳ್ ॥೭೫॥

ಧರಯೆಂಬ ಜನನಿ ಪದ್ಮಾ
ಕರಮೆಂಬ ಕುಚಾಗ್ರದಲ್ಲಿ ತೀವಿರ್ದ ಮಹಾ
ಪರಮಕ್ಷೀರಮನಿತ್ತು
ದ್ಧರೆಪಳ್ ಸಸ್ಯಂಗಳೆಂಬ ಶಿಶುಗಳನೊಲವಿಂ॥೮೦॥

ಲಲಿತೆನಿಪ್ಪೀ ನೀರಿಂ
ಬೆಳೆದು ಸಮೃದ್ಧಂಗಳಾದೆವೆಂದು ಸಸ್ಯಾ
ವಳಿಗಳ್ ಮಾರ್ಪೊಳೆಪಿಂ ತ
ಜ್ಜಳದೇವತೆಯರ್ಗೆ ಫಳಮನೀವವೊಲೆಸೆಗುಂ॥೮೪॥

ಅಲರ್ದ ಬಯಲ್ದಾವರೆಗಳ್
ಸುಲಲಿತ ತದ್ದೇಶನೃಪತಿಗೆತ್ತಿದ ಶೋಭಾ
ಕಳಿತಂಗಳಪ್ಪ ಸತ್ತಿಗೆ
ಗಳ ತೆಱದಿಂ ಸೊಗಸನೀಯುವವೆಂದುಂ ॥೮೯॥

ವಚನ: ಮತ್ತಮತ್ಯಂತ ಪೇಶಲಮಾದ ತದ್ದೇಶದೊಳ್ ನೀಳ್ದು ಪರ್ವಿದ ರಾಜಮಾರ್ಗಂಗಳೆಂಬ ಲತಾವಿತಾನಂಗಳೊಳ್ ಪುಟ್ಟಿರ್ದಸ್ತೋಕಪರೆಪಕ್ವಫಲಸ್ತಬಕಂಗಳೆಂಬಂತೆ ಸುರಭಿಪರಿಮಳಮಿಳಿತ ಪರಮಾಮೃತಾಯಮಾನ ರಸಪ್ರಪೂರ್ಣತ-
ದುಚಿತ ನವ್ಯದ್ರವ್ಯಸಂಬಂಧುರಂಗಳಪ್ಪ ಚಂಚತ್ಕಾಂಚನ ಪ್ರಪಂಚಿತ ನಿರುಪಮ  ಪ್ಪಾಕಳಾಪ ಪ್ರಕಾಂಡ ಮಂಡಪಂಗಳಲ್ಲಿ

ಚಂಪಕಮಾಲೆ
ಸರಸಿಜನೇತ್ರೆ ಸತ್ಕಳಶಂ ಪಿಡಿದೆತ್ತಿ ಮನೋಹರಾಂಬುವಂ
ವರಪರಿತೋಷದಿಂದೆಱೆವ ಪೊತ್ತಿನೊಳುದ್ಘಕುಚಂಗಳಕ್ಷಿಗೋ
ಚರಮುಮನೆಯ್ದೆ ಕಾಮಪರಿತಾಪದ ಪೆರ್ಚುಗೆಯಿಂದೆ ಶೋಷಿಸು
ತ್ತಿರೆ ಬಿಡದಾಗಳುಂ ಜಲಮನೀಂಟುವರಧ್ವಗರಾತುರತ್ವದಿಂ ॥೯೦॥

ಪೊಡೆಯೆಂಬಿದು ಬೆಳೆಗೆಯ್ಯೊಳ್
ಪಿಡಿಯೆಂಬಿದು ಕರಿಣಿಯೊಳ್ ವಿಚಾರಿಪೊಡೆಂದುಂ
ಬಡತನಮೆಂಬಿದು ಪೆಂಡಿರ
ಗಡಣದ ನಡುವಿನೊಳಮಲ್ಲದಿಲ್ಲಾ ನಾಡೊಳ್॥೯೫॥

ಹರಿಕಾಂತಾಸಮುಪಚಿತಂ
ಪರಿವಿಲಸಿತ ಭೋಗಭೂಮಿ ಮಣಿಕೂಟಯುತಂ
ಪುರುರತ್ನಾಕರಮಾದಂ
ಪುರಮೆಸೆಗುಂ ಜಂಬೂದ್ವೀಪದಂತನವರತಂ ॥೯೮॥

ಮಹಾಸ್ರಗ್ಧರೆ
ಕವಿಸೇವ್ಯಂ ಕಾವ್ಯಪೀಡಂ ನಿರುಪಮಬಹುಧಾಮಾತಿರಮ್ಯಂ ಬುಧಶ್ರೀ
ಪ್ರವರಂ ಜ್ಯೇಷ್ಠಾಭಿಯೋಗಂ ಸಮುಪಗತಲಸನ್ಮಂಗಳಂ ಸದ್ಗುರೂಚ್ಚಂ
ನವಗಂಧರ್ವಾಭಿರಾಮಂ ಬಗೆವೊಡೆ ಪರರಿಂ ದುರ್ನಿರೀಕ್ಷ್ಯಂ ಪುರಂ ಭಾ
ನುವ ರಾಜದ್ಬಿಂಬಮಮೆಂಬಂದದೆ ವರಕಮಳಾನಂದನಮಂ ಮಾಳ್ಕುಮೆಂದುಂ॥೧೦೦॥

ಶಾರ್ದೂಲವಿಕ್ರೀಡಿತ
ಅತ್ಯುತ್ಚೈಸ್ತನಕೂಟರಮ್ಯಮತುಳಂ ಪ್ರಾಕಾರಸಂಶೋಭಿತಂ
ಪ್ರತ್ಯಗ್ರಪ್ರಮದಾಧಿರೂಢಮಸಕೃತ್ಸಂತೋಷ ಸಂಪಾದಕಂ
ಸ್ತುತ್ಯಂ ಭೂಷಿತರತ್ನಕಾಂತಿಚಯದಿಂ ಚಿತ್ರೀಯಮಾಣಾಂಬರಂ
ನಿತ್ಯಂ ಸ್ತ್ರೀಜನದಂತೆ ಕಣ್ಗೆ ಸೊಗಸಂ ಮಾಡುತ್ತುಮಿರ್ಕುಂ ಪುರಂ॥೧೦೧॥

ಮತ್ತೇಭವಿಕ್ರೀಡಿತ
ಕಳಹಂಸಾವಳಿ ಪುಷ್ಪಜಾತಿ ಸುಕನತ್ಪತ್ರಾಳಿ ರಾಜತ್ಫಳಾ
ಕಳಿತಾನೋಕಹಪಂಕ್ತಿ ಕೀರ ಪಿಕ ಪಕ್ಷಿಶ್ರೇಣಿ ಭಾಸ್ವಲ್ಲತಾ
ವಳಿಯಿಂ ಚಿತ್ರಿತಮಾದ ಪಚ್ಚೆಯ ಮನೋಹೃದ್ವಸ್ತ್ರಮಂ ತತ್ಪರೀ
ವಿಳಸತ್ಕಾಮಿನಿಯುಟ್ಟಳೆಂಬ ತೆಱದಿಂ ತನ್ನಂದಮಂ ರಾಜಿಕುಂ॥೧೦೨॥

ವಚನ ॥ ಮತ್ತಮಲ್ಲಿಂದೊಳಗೆ

ಸ್ರಗ್ಧರೆ
ಆನುದ್ಧಂಡತ್ವದಿಂದಾಕ್ರಮಿಸಿದೊಡಮದಂ ಸೈರಿಸಿರ್ದುಂ ನಭಶ್ರೀ
ತಾನೀಗಳ್ ಕೊಟ್ಟಳಾದಂ ತೆಱಪುಮನೆವಗಿಂತೆಂದು ಮತ್ತೀ ವನಶ್ರೀ
ನಾನಾಜಾತೀಯಮಪ್ಪೀ ಸುಫಲತತಿಯನೀಯಲ್ಕೆ ಹಸ್ತಂಗಳಂ ತ
ನ್ನಾನಂದೋದ್ರೇಕದಿಂದೆತ್ತಿದವೊಲೆಸೆವುವಾ ನಾಳಿಕೇರಂಗಳೆಂದುಂ॥೧೦೪॥

ಮಹಾಸ್ರಗ್ಧರೆ
ಪರಿಗಾಯದ್ಭೃಂಗಮಾಲಂ ಹೃದಯಭವವಿಕಾರಾನುಕೂಲಂ ವಿಯೋಗಾ
ತುರಚೇತೋವೃತ್ತಿಶೂಲಂ ಕವಿಕೃತನುತಿಲೋಲಂ ಪಿಕವ್ರಾತಲೀಲಂ
ವರಶಾಖಾಲೀವಿಶಾಲಂ ಕವಿಕೃತನುತಿಲೋಲಂ ಪ್ರಿಯಗ್ರೀಷ್ಮಕಾಲಂ
ಧರಣೀವಿಕ್ಷಿಪ್ತಮೂಲಂ ಪಡೆದುದು ಸೊಗಸಂ ಮಾರಸಾಲಂ ರಸಾಲಂ॥೧೦೫॥

ಚೆನ್ನ ಪಣ್ಗೊನೆಯ ಭರದಿಂ
ಸನ್ನತಮಾಗಿರ್ದು ಬಾಳೆಸಸಿಯೊಳ್ ಮಿಳಿರ್ಗುಂ
ತನ್ನ ಶಿಶುವಿಂಗೆ ಮೊಲೆಯಂ
ಮನ್ನಿಸಿ ಬಾಗಿರ್ದು ಕೊಡುವ ಬಾಲೆಯ ತೆಱದಿಂ॥೧೦೬॥

ತುಱುಗಿದ ಕಾಯ್ಗಳ ಭರದಿಂ
ನೆಱೆತಗ್ಗಿ ವಿಲಂಬಿಸಿರ್ದ ಮಾದಲಮೊಪ್ಪಿ
ತ್ತುಱುವ ನೆಲನೆಂಬ ತಾಯೊಳ್
ತಱಿಸಂದು ವಿಮೋಹದಿಂದೆ ಮುಂಡಾಡುವವೊಲ್॥೧೦೮॥

ಒಳಗೆ ಕತ್ತಲೆಯ ಮೊತ್ತಮ
ನೊಳಕೊಂಡೆಲೆವಳ್ಳಿಗಳ್ ದಿವಾಕರಕರಸಂ
ಕುಳಮಂ ನೂಂಕಲ್ ನಿಜಕರ
ತಳಮಂ ಬಿಡದೆತ್ತಿದಂತೆ ತಳೆದವು ಚೆಲ್ವಂ ॥೧೦೯॥

ಶಾರ್ದೂಲವಿಕ್ರೀಡಿತ
ಮುನ್ನೆಂದುಂ ಬಲಯುಕ್ತರಪ್ಪ ಪಗೆಗಳ್ ದುರ್ಗರ್ವದಿಂದೆತ್ತಿಬಂ
ದೆನ್ನಂ ಮುತ್ತಿದರಾರುಮಿಲ್ಲ ದಿಟಮೆಂಬೀ ಖ್ಯಾತಿಯಂ ಸೂಱುಳಿಂ
ದಿನ್ನುಂ ಲೋಕಜನಕ್ಕೆ ಸೂಚಿಸುವವೊಲ್ ಪ್ರಾಕಾರಹಸ್ತದಿಂ
ದೌನ್ನತ್ಯಾಧಿಕಮಾದ ವಿಷ್ಣುಪದಮಂ ಮುಟ್ಟುತ್ತುಮಿರ್ಕುಂ ಪುರಂ॥೧೨೨॥

ಉತ್ಪಲಮಾಲೆ
ಮುತ್ತಿನಹಾರಮುದ್ಘಕುಚಮಂಡಳದೊಳ್ ಕುಣಿದಾಡೆ ಕರ್ಣದೊಳ್
ಬಿತ್ತರಿಸಿರ್ದ ರತ್ನಮಯಭೂಷಣಕಾಂತಿ ಕಪೋಳದೊಳ್ ಕರಂ
ನರ್ತಿಸೆ ಕೈಯ ಕಂಕಣ ಝಣತ್ಕೃತಿಯೊಪ್ಪಿರೆ ಚಿತ್ತದೊಳ್ ಮುದಂ
ಬೆತ್ತರೆಯುತ್ತಮಿರ್ಪುದು ವಿಳಾಸವತೀಜನಮೆಯ್ದೆ ಘಟ್ಟಿಯಂ॥೧೩೧॥

ಶಾರ್ದೂಲವಿಕ್ರೀಡಿತ
ಎನ್ನಿಂದಿಮ್ಮಡಿಗಾಡಿಯಂ ಪಡೆದು ತೋರ್ಪೀ ಸ್ತ್ರೀಯರೊಳ್ ಕೂಡಿದಂ
ದೆನ್ನಂ ಬಿಟ್ಟಪನೆಂದು ಪಾರ್ವತಿ ಮಹಾಭೂತೇಶನರ್ಧಾಂಗದೊಳ್
ಕೆನ್ನ ಪೊಕ್ಕೊಡನಿರ್ಪಳಂತೆ ವಿಳಸಲ್ಲಕ್ಷ್ಮೀಮಹಾದೇವಿಯುಂ
ತನ್ನಾ ಕೃಷ್ಣನ ವಕ್ಷದೊಳ್ ನೆಲಸಿರ್ದಳ್ ತರ್ಕೈಸುವ ವ್ಯಾಜದಿಂ॥೧೩೬॥

ಪಳಿಕಿನ ಭಿತ್ತಿಯನೊಲವಿಂ
ನಳಿನಾಕ್ಷಿಯರೆಯ್ದೆ ನೋಡಿ ಪಲ್ಸುಲಿಯಲ್ ನಿ
ರ್ಮಳಮಾದೊಡಮಧರಚ್ಛವಿ
ಗಳ ಪೊಳಪಿಂದರುಣಮಾಗೆ ಸುಲಿಯುತ್ತಿರ್ಪಳ್॥೧೪೨॥

ವಚನ॥ ಮತ್ತಮಾಪುರಂ ಕಳಾಧರವಿರಾಜಿತಮಾಗಿಯುಂ ದೋಷೋಚ್ಚಯಮಲ್ತು ವಿಶಿಷ್ಟಲಕ್ಷ್ಮೀಸಮಾಲಕ್ಷಿತಮಾಗಿಯುಂ ಖರದಂಡಮಲ್ತು ವಿಸ್ತೃತಸೂತ್ರವಿಧಿಸನಾಥಮಾಗಿಯುಂ ಮಹಾಭಾಷ್ಯಮಲ್ತು ಉಪಮಾಸಮುಪಗತಮಾಗಿಯುಮರ್ಧ-
ನಾರಿಯಲ್ತು ಪೀತಾಂಬರಧಾಮರಮಣೀಯಮಾಗಿಯುಂ ಗದಾಭಿಯುಕ್ತ ಮಲ್ತುಮಂತುಮಲ್ಲದೆಯುಂ

ಚಂಪಕಮಾಲೆ
ಅಗಣಿತವಜ್ರಮುದ್ರರಿನನೇಕಸಪುಣ್ಯ ಜನಂಗಳಿಂ ಪ್ರಸಿ
ದ್ಧಿಗೆ ನೆಲೆಯಾಗಿ ತೋರ್ಪೆನಗೆ ತಾಂ ಗಡ ಪಾಸಟಿಯೊರ್ವನೊರ್ವನಿಂ
ಸೊಗಯಿಪ ಶಕ್ರಪತ್ತನಕಮೆಂದದುವಂ ನಗುವಂತಿರೊಪ್ಪುಗುಂ
ಮಿಗೆ ನಿಜಚಂದ್ರಕಾಂತಗೃಹಸಂತತಿ ಕಾಂತಿಗಳಿಂದೆ ತತ್ಪುರಂ॥೧೪೬॥

ಸುರತತಿ ಸಂತತಂ ಬಿಡದೆ ಕಣ್ಣೆವೆಯಿಕ್ಕದೆ ನೋಡುತ್ತಿರ್ದದು
ರ್ಧರತರದೃಷ್ಟಿದೋಷಪರಿಹಾರನಿಮಿತ್ತಕಮಾಗಿ ರಾತ್ರಿಸೌಂ
ದರಿ ಪಿಡಿದೆತ್ತುವಾರತಿಯ ಬೆಳ್ಳಿಯ ಭಾಜನಮೆಂಬವೊಲ್ ಮಹಾ
ಪುರಮನನೂನಮಂ ಬಳಸುತಿರ್ಪುದು ಪೂರ್ಣಸುಧಾಂಶುಮಂಡಲಂ ॥೧೪೭॥

ವಚನ॥ ಅದಱ ನಾನಾಪ್ರಕಾರನೂತ್ನರತ್ನಖಚಿತಂಗಳಪ್ಪ ತೋರಣಂಗಳಿಂ ಪೇಶಲಮಾದ ಪ್ರಥಮದ್ವಾರಪ್ರದೇಶದೊಳ್

ಉತ್ಪಲಮಾಲೆ
ಪಾಗುಡಮಾಗಿ ಬಂದು ಸಮಯೋಚಿತಮಂ ಸಲೆಸಾರ್ದು ಪಾರ್ದು ಮುಂ
ಬಾಗಿಲೊಳಿರ್ದ ಗಂಧಗಜದಾನಜಲಂಗಳಿನಾದ ಪಂಕದೊಳ್
ವೇಗಿಗಳಪ್ಪ ವಾಜಿಗಳ ಫೇನಲವಂಗಳವಲ್ಲಿಗಿಲ್ಲಿಗಿಂ
ಬಾಗಿಯೆ ಬೀಳೆ ಪೋಲ್ತುದದು ಪಂಕದೊಳಿಕ್ಕಿದ ರಂಗವಾಲಿಯಂ॥೧೪೯॥

ಚಂಪಕಮಾಲೆ
ಮಣಿಶಿಖರಂಗಳಿಂ ಬಗೆವೊಡೆನ್ನವೊಲೊಪ್ಪಮನಾಂತುದೆಂಬ ತ
ತ್ಪ್ರಣಯದಿನಾ ನೃಪಾಲಯಮನೀಕ್ಷಿಸಲೆಂದು ಸುರಾದ್ರಿ ಬಂದು ತಾ
ನೆಣಿಕಿಗತೀತಮಾದ ವರರೂಪಮುಮಂ ಧರಿಸಿರ್ದುದೆಂಬಿನಂ
ಪ್ರಣುತೆಯರಪ್ಪ ರಾಣಿಯರ ಗೇಹಚಯಂ ಬಳಸಿರ್ದುದಂತದಂ॥೧೫೮॥

ಮತ್ತೇಭವಿಕ್ರೀಡಿತ
ಪಿರಿದುಂ ಪುಣ್ಯಸಮೃದ್ಧಿಭಾಜನಮಿದೆಂದೆನ್ನಲ್ಲಿಗೆಳ್ತಂದಪಂ
ಸುರರಾಜಾರ್ಚಿತನಪ್ಪ ಪಂಚದಶತೀರ್ಥಾಧೀಶ್ವರಂ ನಿನ್ನೊಳಾ
ದರಮಂ ಮಾಡದೆ ಪೋಪುದೆಂಬ ಮದದಿಂ ಸರ್ವಾರ್ಥಸಿದ್ಧಾಖ್ಯಮಂ
ದಿರಮಂ ಮೂದಲಿಪಂತೆ ಗೀತರವದಿಂದೊಪ್ಪಿತ್ತು ರಾಜಾಲಯಂ ॥೧೬೫॥

ಭೂರಿತರ ರತ್ನಕುಟ್ಟಿಮ
ಧಾರಿಣಿಯೊಳ್ ತಾರಕಾಳಿ ಬಿಂಬಿಸೆ ನಿಶೆಯೊಳ್
ಭೂರಮಣಿ ತನ್ನೃಪಾಲಯ
ಚಾರುತೆಯಂ ನೋಡಲೆಂದು ಕಣ್ದೋಱಿದ ವೊಲ್ ॥೧೬೬॥

ಚಂಪಕಮಾಲೆ
ಧ್ವಜಪಟವೃಂದ ಪಲ್ಲವಿತಮೆಲ್ಲೆಡೆಯೊಳ್ ನೆಱೆಕೀಲಿಸಿರ್ದ ಪೀ
ನಜನಮನಃಪ್ರಮೋದಕರ ಮೌಕ್ತಿಕಪುಷ್ಪಿತಮುದ್ಘಚೋದ್ಯಭಾ
ವಜನನದಕ್ಷರತ್ನಕಳಶಾವಳಿ ಸತ್ಫಳಿತಂ ದಲಾಗಿ ಭೂ
ಮಿಜನೆನೆ ರಾಜಗೇಹಮದು ಶೋಭೆಯನಾಂತೆಸೇಗುಂ ನಿರಂತರಂ॥೧೬೭॥

ಷಷ್ಟಾಶ್ವಾಸಂ

ವಸುಮತಿಗವತರಿಸಿದಪಂ
ದಶರಥಚರನಪ್ಪ ತದಹಮಿಂದ್ರಂ ದಿವದಿಂ
ಮಿಸುಪ ಚರಮಾಂಗಮಂ ಕೊಳ
ಲೆಸಪಂದೆಂದಱಿದನಂದು ಸೌಧರ್ಮೇಂದ್ರಂ॥೧೬॥

ವಚನ: ಇಂತು ನಿಜಪರಮಾವಧಿಬೋಧಪ್ರಯೋಗವಿಧಾನದಿಂ ಧರ್ಮನಾಥನಾಗವತರಿಸಿದಪನೆಂದಱಿದು ರಾಗಿಸಿ ಬಳಿಯಂ ತನ್ನರ ಭಾಂಡಾಗಾರಾಧಿಕಾರನಿಯುಕ್ತನಪ್ಪ ಕುಬೇಯನಂ ಕರಸಿ ನೀಂ ಪೋಗಿಯುತ್ತರಕೌಶಲದೇಶಾಧೀಶ್ವರನುಂ ರತ್ನಪುರಲಕ್ಷ್ಮೀಮಣಿಮಯಮುಕುರನುಮಿಕ್ಷ್ವಾಕುವಂಶವನಜವನದಿವಾಕರನುಮೆನಿಪ ಮಹಾಸೇನ ಮಹಾರಾಜನ ವಿರಾಜಮಾನ ರಾಜಧಾನಿಯೊಳ್ ಧರ್ಮತೀರ್ಥಕರನ ಗರ್ಭಾವತರಣ ಕಲ್ಯಾಣನಿಮಿತ್ತ ರತೂನವೃಷ್ಟಿಯಂ ಕಱೆಯೆಂದು ಬೆಸಸಲದಂ ಶಿರದೊಳಾಂತು ಮಹಾಪ್ರಸಾದಮೆಂದು ಕೈಕೊಂಡಂ ಮತ್ತಂ ನಿಜಪುರಪ್ರಧಾನೆಯರಪ್ಪ ಸುರಪುರಂದ್ರಿಯರುಮಂ ಬರಿಸಿ ಪೋಗಿ ನೀವಾ ಜಿನನ ಜನನಿಗೆ ಪರಿಚರ್ಯಪರಿಕರಮನೊಡರ್ಚುತ್ತುಮಿರಿ ಯೆಂದು ನಿಯಾಮಿಸಿ ಬೇಱೆವೇಱೆಯವರವರ್ಗೆ ತಕ್ಕಂತಪ್ಪ ಪರಿವಾರದೇವಿಯವರುಮನಪ್ಪಯಿಸಿ ಬೀಳ್ಕೊಟ್ಟು ಕಳಿಪಲೊಡಮವರು ಬರುತ್ತುಮಾಕಾಶತಳಪ್ರದೇಶಮನೆಯ್ದಿದಾ ಪೊತ್ತಿನೊಳ್

ಆಗಸದೊಳೊಗೆದುದುಱಿ ಮಿಗಿ
ಲಾಗಿರೆ ಬೆಳಗುಗಳ ಬಳಗಮೆಲ್ಲಾತಾಣದೊ
ಳಾಗಳ್ ಸಭೆಯೆಲ್ಲಂ ಬೆಱ
ಗಾಗಿದೇನೆಂದು ನೋಡಿದುದು ವಿಸ್ಮಯದಿಂದಂ ॥೧೭॥

ಮಹಾಸ್ರಗ್ಧರೆ
ಮುಗಿಲೇನುಂ ಪೊರ್ದದಿರ್ಪ್ಪಾಗಸದೊಳಿರದು ವಿದ್ಯುಲ್ಲತಾಮಾಲೆ ಮತ್ತಂ
ಪಗಲುಂ ನಕ್ಷತ್ರಕಾಂತಿಪ್ರಸರಮದಿರದಿಂತೆಲ್ಲಿಯುಂ ಕೋಷ್ಠಾಚಾರಾ
ಳಿಗಳಿನ್ನುಂ ಸಾರದಿರ್ಪಾ ನೆಲೆಯೊಳುರಿಗಳುಂ ನೋಳ್ಪಡಿಲ್ಲಿಂತಿದೇನೊ
ಯ್ದೊಗೆದಿರ್ದೀ ದೀಪ್ತಿಯೆಂಬೀ ಬಹುವಿಧದ ವಿಕಲ್ಪಂಗಳಂ ಕಲ್ಪಿಸುತ್ತುಂ॥೧೮॥

ವಚನ: ಕಡುಚೋಜಿಗಮಿದೇನೆಂದು ಸಭೆಯುಂ ಸಭಾಪತಿಯುಂ ಕೊರಲ್ಗಳಂ ನೆಗಪಿ ನೋಡುತ್ತಮಿರಲ್ ಮತ್ತಂ

ಚಂಪಕಮಾಲೆ
ಪೊಳೆವ ಕೊರಲ್ಗಳಂದವಧಿಯಾಗಿ ಮುಗಿಲ್ಗಳ ಮೊತ್ತಮಾ ಸಮು
ಜ್ವಳತರ ದೇಹಯಷ್ಟಿಗಳನಾವರಿಸಲ್ ಮಿಗೆ ಸೂರ್ಯಬಿಂಬಮಂ
ಘಳಿಲನೆ ಗೆಲ್ವುದೊಂದು ಬಗೆಯಿಂದೆ ಸಮುದ್ಯತಪೂರ್ಚಂದ್ರಮಂ
ಡಳ ಘನಸೈನ್ಯದಂತೆಸೆದುದಿಂದುಮುಖೀಜನವಕ್ತ್ರಮಂಡಳಂ॥೧೯॥

ವಚನ: ಅದಱಿಂ ಬಳಿಯಂ

ಉತ್ಪಲಮಾಲೆ
ಕೋಮಳಪಂಚರತ್ನಮಯಭೂಷಣಕಾಂತಿಗಳಿಂದೆ ಸುತ್ತಲುಂ
ವ್ಯೋಮದೊಳಾ ಸುರಾಧಿಪವಿಳಾಸವತೀನಿವಹಂಗಳಾಕ್ಷಣಂ
ಕಾಮನ ಬಿಲ್ಗಳಂ ಬಿಡದೆ ನಿರ್ಮಿಸಿ ತಾವವಱಲ್ಲಿ ಮತ್ತಮು
ದ್ದಾಮ ಸುವರ್ಣಬಾಣನಿಚಯಗಳಿವೆಂಬವೊಲೊಪ್ಪಿದರ ಕರಂ ॥೨೦॥

ವಚನ: ಮತ್ತಮಾಕಾಶಮೆಂಬ ಭಿತ್ತಿಯೊಳ್ ಬರೆದ ನವೀನಚಿತ್ರಂಗಳೆಂಬಂತೆ ಭಾವಿತಾಕಾರೆಯರಾಗಿ ತೋಱುತ್ತುಂ ವಿಯತ್ತಳದಿಂದಿಳಿದು ಮೆಲ್ಲಮೆಲ್ಲನೆ ಬರುತ್ತುಮಿರಲ್ ಮತ್ತಂ

ವರಪದ್ಮರಾಗಮಣಿನೂ
ಪುರರೂಪಂ ಕೊಂಡು ಸೂರ್ಯನವರಂಘ್ರಿಗಳಂ
ಸ್ಮರಪೀಡಿತನಾಗಿ ಮಹಾ
ದರದಿಂದಂ ಪಿಡಿದನೆಂಬ ತೆಱದಿಂ ಮೆಱೆದಂ॥೨೧॥

ವಚನ: ಅಲ್ಲಿಂ ಬಳಿಯಂ
ಮತ್ತೇಭವಿಕ್ರೀಡಿತ
ವರವೃಂದಾರಕಸೌಂದರೀಸಮುದಯಂ ತೀರಾಗ್ರದೊಳ್ ಬಂದು ನಿಂ
ದಿರೆ ಮಂದಾಕಿನಿವಾರಿಬಿಂದುಮಯಶೃಂಗಾರಂಗಳಂ ಶ್ರೇಣಿಯಂ
ತಿರೆಗಳ್ ಕೈಗಳನ್ನಿತ್ತು ತಾಂ ನುಡಿಸುವಂತಿರ್ದತ್ತು ಘೋಷಂಗಳಿಂ
ಧರೆಯೊಳ್ ನಿರ್ಮಳರಿಂಗೆ ನಿರ್ಮಳರದೇಂ ಸಂಪ್ರೀತಿಯಂ ಮಾಡರೇ॥೨೨॥

ವಚನ:
ಆ ಸ್ವರ್ಣದಿಯಂ ಪರಿತೂರ್ಣದಿಂ ತರ್ಕ್ಕೈಸಿಕೊಳುತ್ತುಮಿರ್ದಪರೆಂಬಂತಿರೀಸಾಡುತ್ತುಂ ದಾಂಟಿಬರುತ್ತಿರ್ಪಾಗಳ್

ಚಂಪಕಮಾಲೆ
ಸುರುಚಿರಪಾರಿಜಾತಕುಸುಮಸ್ತಬಕಂಗಳ ಕರ್ಣಪೂರಸ
ತ್ಪರಿಮಳಲೋಭದಿಂತೊಡನೆ ತುಂಬಿಗಳುಂ ನಭದಲ್ಲಿ ಮಂಡಳೀ
ಕರಿಸಿ ನಿಳಿಂಪಕಾಂತೆಯರಿಗೆತ್ತಿದ ಹೀಲಿಯ ಚೆಲ್ವುವೆತ್ತ ಝ
ಲ್ಲರಿಗಳಿವೆಂಬಿನಂ ಬಿಡದೆ ಬಂದುವು ಲೀಲೆಯನಂದು ಮಾಡುತುಂ॥೨೩॥

ಗುರುಕುಚಮಂಡಳಸ್ಥತಿಯನೀಕ್ಷಿಸಿ ಮಧ್ಯಮಭಾಗದೊಂದುಸಂ
ಸ್ಥಿರತೆಯ ಬೋಧಮಂ ಸಭೆಗೆ ಪುಟ್ಟಿಸುತಿರ್ದ ವಿಶಿಷ್ಟರೂಪಮಂ
ಧರಿಸಿ ಸಮಸ್ತಲೋಕವನಿತಾನಿಕರಂಗಳನಾವಗಂ ಲಘೂ
ಕರಿಸುವ ದೇವಕಾಮಿನಿಯರೆಯ್ದಿದರಂದು ಸಭಾಸಮೀಪಮಂ॥೨೪॥

ವಚನ: ಅಂತಾ ದೇವಕಾಂತೆಯರ್ ನಭೋಮಾರ್ಗದಿಂದಿಳಿದು ಬಂದು ತಮ್ಮಯ ಶರೀರಸಂಜಾತಸೌಗಂಧ್ಯಸಂಸ್ಪರ್ಶಸಂ-
ಬಂಧದಿಂದಾದ ಸಂಮದ ಮದಭರ ಮಂದರಪ್ರಯಾತನಪ್ಪ ಬಂಧುರಗಂಧವಹನಂ ಮುಂದಿಟ್ಟುಕೊಂಡು ವಿಚಿತ್ರರತ್ನಪರಿ-
ಮಂಡಿತಮಪ್ಪ ಸಭಾಮಂಡಪದೊಳಗಂಪೊಕ್ಕು ನೋಳ್ಪಾಗಳ್

ಹರಿವೆಷ್ಟರದೊಳ್ ಕುಳ್ಳಿ
ರ್ದರಸನನಾ ದಿವಿಜಕಾಂತೆಯರ್ ಕಂಡು ಮಹಾ
ದರದಿಂ ಚಿಂತಿಸಿದರ್ ತ
ಮ್ಮುರುಚಿತ್ತದೊಳೆಯ್ದೆ ಮಾಡುತುಂ ಸಂದೆಗಮಂ ॥೨೫॥

ವಚನ:ಅದೆಂತೆನೆ

ಚಂಪಕಮಾಲೆ
ಉದಯಗಿರೀಂದ್ರದೊಳ್ ನೆಲಸಿದುದ್ಘಕಳಾಪರಿಪೂರ್ಣಚಂದ್ರನೋ
ಮದಭರಮತ್ತಮಾನಸೆಯರಪ್ಪ ದಲೆಮ್ಮುಮನೆಯ್ದೆ ಸೋಲಿಸಲ್
ಮದನನೆ ಬಂದು ಕುಳ್ಳಿದನೊ ಮಾನವಲೋಕದರಿದ್ರಮಂ ಸಮಂ
ತೊದೆದುಱೆ ನೂಂಕಲೆಂದಿರದೆ ಬಂದ ಕುಬೇರನೊ ಭಾವಿಸಲ್॥೨೬॥

ಎಮ್ಮಂ ಬಂದರೊ ಬಾರರೊ
ಸಮ್ಮುದದಿಂ ನೋಳ್ಪೆನೆಂದು ಸೌಧರ್ಮೇಂದ್ರಂ
ಪೆರ್ಮೆಯೊಳೆ ಮುಂದೆ ಬಂದಂ
ತಿಮ್ಮಡಿಸಿರಿಯಲ್ಲಿ ಕೂಡಿ ಕುಳ್ಳಿರ್ದನೊ ಪೇಳ್॥೨೭॥

ವಚನ: ಎಂದಿಂತು ನಾನಾವಿಕಲ್ಪಂಗಳಂ ಕಲ್ಪಿಸುತ್ತುಮರಸನ ಸಮೀಪಕ್ಕೆವರೆ

ಶಾರ್ದೂಲವಿಕ್ರೀಡಿತ
ಆಗಳ್ ಭೂಪನ ತತ್ಸಭಾಜನದ ಚೇತೋವೃತ್ತಿಯುಂ ಕಣ್ಗಳುಂ
ಬೇಗಂ ಪೋಗಿ ಸುರೇಂದ್ರಕಾಮಿನಿಯರಂ ಮುಮ್ಮಟ್ಟೆ ಕೌತೂಹಳಂ
ತಾಗಲ್ಕಾಕ್ಷಣಮೆಲ್ಲರುಂ ಮೆಱೆದರನ್ಯವ್ಯಾಪ್ತಿಯಂ ಸಂಭ್ರಮಾ
ಭೋಗಂ ಕೈಮಿಗೆ ನೋಡುತ್ತಿರ್ದರವರೊಂದಾಶ್ಚರ್ಯಸೌಂದರ್ಯಮಂ॥೨೮॥

ವಚನ: ತದನಂತರಂ

ಉತ್ಪಲಮಾಲೆ
ನ್ಯಾಯದಿನೆಯ್ದೆರಕ್ಷಿಸು ಸಮಸ್ತಧರಾತಳಮಂ ಲಸತ್ಸುಖೋ
ಪಾಯ ಜಿನೇಶಧರ್ಮಮುಮನುದ್ಧರಿಸೆಂದು ಮಹೀತಳಾಧಿಪ
ಜ್ಯಾಯನನಂದು ತಾಂ ಪರಸಿದರ್ ನಲವಿಂದುಱೆ ದೇವಕಾಂತೆಯರ್
ಕಾಯವಿಭೂಷಣಪ್ರಭೆಗಳಾವರಿಸಲ್ ಸಭೆಯಂ ವಿಶೇಷದಿಂ ॥೨೯॥

ವಚನ: ಅನಂತರಮಾ ದೇವಕಾಂತೆಯರ್ಗೆ ಭೂಕಾಂತಂ ಸ್ವಕೀಯಸೇವಾಪರರಪ್ಪ ಕಿಂಕರರ ಕೈಗಳಿಂದಂ ಯಥೋಚಿತಂಗಳಪ್ಪಾಸನಂಗಳಂ ಕೊಡಿಸಿ ಕುಳ್ಳಿರಲೊಡಂ

ದ್ಯುಮಣಿಮಯೂಖಾವಳಿಗಳ್
ಕಮಳಂಗಳ ನಡುವೆ ಪೊಳೆವುತಿರ್ದಪುವೆಂಬಂ
ತಮರಕುಮಾರಿಯರತ್ಯು
ತ್ತಮಪೀಠಂಗಳೊಳಮಂದು ಪೊಳೆಯುತ್ತಿರ್ದರ್॥೩೦॥

ನೀವಾರ್ ನಿಮ್ಮಯ ಪೆಸರೇಂ
ನೀವೆಲ್ಲಿಂ ಬಂದಿರಿಲ್ಲಿಗೆಮ್ಮಿಂದಂ ಸಂ
ಭಾವಿಸುವ ಕಾರ್ಯಮೇನೆಂ
ದಾ ವೀಭು ಬೆಸಗೊಂಡನವರನತಿಮುದದಿಂದಂ॥೩೬॥

ಆಗಳ್ ದೇವಿಯರೆಲ್ಲಂ
ವಾಗತಿ ಚತುರತ್ವದೊದವನಾಂತೆಸೆದಿರ್ಪಾ
ಶ್ರೀಗೆ ನುಡಿಯೆಂದು ಪೇಳಲ್
ಭೂಗಧಿಪಂಗುಸುರ್ದಳಾಕೆ ವಿಸ್ತರದಿದಂ॥೩೭॥

ವಚನ: ಅದೆಂತೆಂದೊಡನಂತತೀರ್ಥಂಕರಂ ಕೈವಲ್ಯಕಲ್ಯಾಣಪ್ರಾಪ್ತನಾದಿಂಬಳಿಯಮರ್ಧಪಲ್ಯಮುಳಿಯಲ್ ನಾಲ್ಕುಸಾಗ-
ರೋಪಮಕಾಲಪರ್ಯಂತಂ ಧರ್ಮಂ ಪೆರ್ಚಿ ಪರಿವರ್ತಿಸುತ್ತುಮಿರ್ದತ್ತು ಕಡೆಯಲುಳಿದಿರ್ದ ಪಲ್ಯಪ್ರಮಿತಕಾಲದೊಳ್ ಧರ್ಮಪ್ರಭಾವನಾಪ್ರಕಾಶಮೆಲ್ಲಂ ವಿಚ್ಛಿತ್ತಿಯನೆಯ್ದಿ ಮಿಥ್ಯಾತ್ವಮೆಂಬ ಕತ್ತಲೆಯ ಮೊತ್ತಮೆತ್ತಲುಂ ಪ್ರಬಲಮಾಗೆ

ರಮ್ಯಮೆನಿಸಿರ್ದು ತೋಱುವ
ಸಮ್ಯಗ್ದರ್ಶನ ಸುರತ್ನಮಂ ತನ್ನದುವಂ
ಪೆರ್ಮೆಯೊಳೊಂದಿದ ಜಿನಪತಿ
ಧರ್ಮಂ ತನ್ನೊಡನೆ ಕೊಂಡುಪೋದತ್ತಾಗಳ್ ॥೩೮॥

ವಚನ: ಅಂತಱುದಿಂಗಳುಳಿಯೆ ಮಿಕ್ಕಿರ್ದ ಪಲ್ಯಪ್ರಮಾಣಕಾಲಮೆಲ್ಲಂ ಭರತಕ್ಷೇತ್ರದೊಳಧರ್ಮದೋಷದೂಷಿತಮಾಗ-
ಲೊಡಮೊರ್ಮೆ ಸೌಧರ್ಮೇಂದ್ರಂ ಜಿನಧರ್ಮ ಮಾರ್ಗಪ್ರಭಾವನಾ ನಾಯಕನಪ್ಪ ಜಿನನಾಯಕನುದಯಮಂ ನೋಡು-
ವಂತವಧಿಜ್ಞಾನಮೆಂಬ ವಿಲೋಚನ ವಿಕಾಶಮನೊಡರ್ಚಿಯಱುದಿಂಗಳಿಂ ಮೇಲೆ ಪದಿನಯ್ದನೆಯ ತೀರ್ಥಕರನಪ್ಪ
ಧರ್ಮಜಿನನಾಥಂ ನಿನ್ನಯ ಪಟ್ಟದರಸಿಯಪ್ಪ ಸುವ್ರತಾಮಹಾದೇವಿಯ ಗರ್ಭದೊಳುದ್ಭವಿಸಿದಪನೆಂದಱಿದು ಕಡುನಲಿದು ಬಳಿಯಮೆಮ್ಮಂ ಕರೆದು

ಭಾವಿಜಿನಜನನಿಯಪ್ಪಾ
ದೇವಿಗೆ ಶುಶ್ರೂಷೆಯಂ ಮಹಾದರದಿಂದಂ
ನೀವೆಯ್ದೆಮಾಡಿಯೆಂದಾ
ದೇವೇಂದ್ರಂ ಬೆಸಸೆ ಬಂದೆವಿಲ್ಲಿಗೆ ನೃಪತೀ॥೩೯॥

ಮತ್ತೊಂದುಕಾರ್ಯಮೇನುಂ
ಬಿತ್ತರಿಪೊಡಮಿಲ್ಲ ನಿನ್ನ ವಲ್ಲಭೆಗೆ ಕರಂ
ತೊತ್ತಿಯರಾಗಿಯೆ ಬೆಸನಂ
ನೆತ್ತಿಯೊಳಾಂತೆಯ್ದೆ ಮಾಳ್ಪುದಲ್ಲದೆ ನಮಗಂ॥೪೦॥

ದಾಸೀಪುತ್ರನ ತೆಱದಿಂ
ವಾಸವನುಂ ಬಂದು ಸೇವೆಯಂ ಮಾಡಿದಪಂ
ಲೇಸಾಗಿ ಮತ್ತೆ ಕತಿಪಯ
ವೃಸರದಿಂ ಮೇಲೆ ಸಕಳ ಭೂಪತಿತಿಳಕಾ॥೪೧॥

ಇನ್ನು ಜಗತ್ರಯಗುರುವಿಂ
ಗುನ್ನತ ನೀಂ ತಂದೆಯಪ್ಪ ಕಾರಣದಿಂದಂಶ
ಪನ್ನಗಸುರನರರೊಳ್ ಮಿಗೆ
ನಿನ್ನವೊಲೈತ್ಕೃಷ್ಟಪುಣ್ಯಭಾಜನನಾವಂ॥೪೨॥

ವಚನ : ಮತ್ತಂ ನಾಕಲೋಕದೊಳಗ್ಗಳಮಪ್ಪ ದೇವಸ್ತ್ರೀಯರುಂ ಕುಳಕುಧರ ನಿವಾಸಿಗಳಾದ ಶ್ರೀ ಹ್ರೀ ಧೃತಿಕೀರ್ತಿ ಬುದ್ಧಿ ಲಕ್ಷ್ಮಿ ಜಯೆ ವಿಜಯೆ ಅಜಿತೆ ಅಪರಾಜಿತೆಯರೆಂಬ ಮುಖ್ಯರಪ್ಪ ದೇವಿಯರುಂ ಬಂದು ನಿಮ್ಮಯ ಸೇವೆಯಂ ಮಾಳ್ಪನಿತು ಪುಣ್ಯದೊದವು ನಿನಗಲ್ಲದೆ ಮತ್ತಾರ್ಗಂ ಕೈಸಾರಿತ್ತಿಲ್ಲಮಂತುಮಲ್ಲದೆಯುಂ

ಸುರನಾಥನಾಜ್ಞೆಯಿಂದೀ
ಪುರದೊಳಗೆ ಸುವರೂಣವೃಷ್ಟಿಯಂ ಕಱೆಯಲ್ಕೆಂ
ದಿರದೌ ಬಂದಿರ್ದನೀತಂ
ನಿರೈಪಮಮಹಿಮಂ ಕುಬೇರನೆಂಬಂ ಪೆಸರಿಂ॥೪೩

ವಚನ: ಎಂದು ಸುಟ್ಟುಂಬೆಯಂ ತೋಱಿ ನುಡಿಯುತ್ತಮಿರ್ದ ಶ್ರೀದೇವಿಯ ಮಾತಂ ಕೇಳ್ದು

ಚಂಪಕಮಾಲೆ
ಯತಿಪತಿ ಪೇಳ್ದುದಂ ಮುಕುಳಿತಾರ್ಧವಿಲೋಚನನಾಗಿ ತನ್ಮಹೀ
ಪತಿ ಮನದಲ್ಲಿ ಭಾವಿಸಿ ಕರಂಗಳನಂದು ನೊಸಲ್ಗೆತಂದು ಮ
ತ್ತತಿಶಯದಿಂದೆ ಮೆಚ್ಚಿ ತಲೆಯಂ ನೆಱೆತೂಗಿದನುದ್ಘಮೌಲಿಕೀ
ಲಿತಮಣಿಗಳ್ ಕರಂ ಕೆದಱೆ ಕಾಮನ ಬಿಲ್ಗಳ ಭೂರಿಶೋಭೆಯಂ॥೪೪॥

ವಚನ: ಬಳಿಯಂ ಮಹೀಪಾಳಂ ವೃದ್ಧಕಂಚುಕಿಯಂ ಕರಸಿ ನೀನೊಡಗೊಂಡು ಪೋಗಿ ಸುವ್ರತಾಮಹಾದೇವಿಯನಿವರ್ಗೆ ತೋಱೆಂದಪ್ಪೈಸಲೊಡಂ

ಚಂಪಕಮಾಲೆ
ಮಣಿಮಯಮೇಖಳಾಕಳಿತ ಕಿಂಕಿಣಿಝಣತ್ಕೃತಿಯುಂ ವಿಶೆಷ್ಟ ಕಂ
ಕಣಘನನಾದಂಮುಂ ಬಿಡದೆ ತಮ್ಮೊಳಮೆಯ್ದೆ ವಿವಾದಿಸುತ್ತಿರಲ್
ಪ್ರಣುತಕಪೋಳದೊಂದು ಪೊಳೆಪುಂ ನಯನಾಂಚಳಕಾಂತಿಯೊಳ್ ಕರಂ
ಕುಣಿಯೆ ನೃಪಾಂಗನಾಲಯಕೆ ಬಂದುದು ದೇವವಿಳಾಸಿನೀಜನಂ॥೫೦॥

ವಚನ: ಅಂತು ಬಂದು

ಚಂದ್ರನ ಕಳೆಗಳ್ ಕೈರವ
ವೃಂದದೊಳಂ ಪೊಳೆವ ಮಾಳ್ಕೆಯಿಂದಂ ಪೊಕ್ಕರ್
ಕುಂದದ ಸಿರಿಯೊಳ್ ಕೂಡಿದ
ಸೌಂದರಿಯ ನಿವಾಸದಲ್ಲಿ ಸುರನಾರಿಯರುಂ॥೫೧॥

ವಚನ: ಅಂತು ಪೊಕ್ಕನಂತರಂ ಮುಂದೊಂದು ರತ್ನಕುಟ್ಟಿಮಭೂಮಿಕೆಯೊಳನೇಕ ಭೂಪಾಳಕರರಸಿಯರ ನಿಕರಂ ಕ್ಷತ್ರಿ-
ಯಕುಮಾರಿಯರ ಮೊತ್ತಮುಂ ಸೇವಾವಿನೋದನಿಮಿತ್ತಂ ಬಂದು ಸುತ್ತಲುಂ ಕಿಕ್ಕಿಱಿಗಿಱಿದು ಕುಳ್ಳಿರಲಾ ಸ್ತ್ರೀಯರ ಒಡ್ಡೋಲಗದ ನಟ್ಟನಡುವೆ

ಹರಿವಿಷ್ಟರದೊಳ್ ಕುಳ್ಳಿ
ರ್ದರಸಿ ಮಹಾಲಕ್ಷ್ಮಿಯಂತಿರೊಪ್ಪಮನಾಳ್ದಳ್
ನರರೆಲ್ಲರ ಬಡತನಮಂ
ಪರಿಹರಿಸಿ ಸಮರ್ಥರಾಗಿ ಮಾಳ್ಪುದಱಿಂದಂ ॥೫೨॥

ಗುಣದ ಕಣಿ ದಾನಚಿಂತಾ
ಮಣಿ ಜಿನಮತಗಗನತಳವಿಭಾಸಿ ವಿಹಾಯೋ
ಮಣಿಯೆನಿಪ ದೇವಿ ಲಲನಾ
ಗ್ರಣಿಗಳ ಸಭೆಯಲ್ಲಿ ರತ್ನಮಿರ್ಪಂತಿರ್ದಳ್ ॥೫೩॥

ವಚನ: ಅಂತು ಶೋಭಿಸುತ್ತುಮಿರ್ಪ ಭಾಮಾಸಭಾಮಧ್ಯದಲ್ಲಿ ಮಂಗಳಮಣಿದರ್ಪಣದಂತಿರೊಪ್ಪಮನಾಂತು ತೋರ್ಪ ತತ್ಸುವ್ರತಾಮಹಾದೇವಿಯಂ ದೇವಕಾಂತೆಯರ್ ಕಂಡು ನಾಡೆಯುಂ ಮನದೆಗೊಂಡು

ಪಲಕಾಲದಿಂದೆ ಸಂಚಿಸಿ
ದಲಘುವೆನಿಪ್ಪೊಂದು ತಮ್ಮ ರೂಪಿನ ಮದಮಂ
ಸಲೆಬಿಟ್ಟರ್ ದೇವಿಯರಾ
ಲಲನೆಯ ರೂಪಂ ನಿರೀಕ್ಷಣಂಗೆಯ್ವಾಗಳ್ ೫೬॥

ವಚನ: ಅಂತಾಕೆಯ ಗಾಡಿಯಂ ನೀಡುಂನೋಡುತ್ತುಂ ಸಮೀಪಕ್ಕೆ ನಡೆದು ಬಂದು ಕಡುನಲವಿಂ ತಮ್ಮಯ ಸಮುಲ್ಲಸದಳಕವಲ್ಲಿಗೆ ಮಣಿಕುಟ್ಟಿಮಧಾರಿಣಿಯನಾಧಾರಮಾಗಿಮಾಡಲೊಡಂ

ಆಕೆಯ ಚರಣಂಗಳನಾ
ನಾಕಸ್ತ್ರೀಕುಂತಳಂಗಳಂದಾವರಿಸಲ್
ಕೋಕನದೊಳ್ ಮುಸುಱಿದ ಭೃಂ
ಗೀಕುಳಮಂ ಪೋಲ್ತು ಸೊಗಯಿಸಿತ್ತಾಕ್ಷಣದೊಳ್॥೫೭॥

ವಚನ: ಅನಂತರಮಾ ದೇವಕಾಂತೆಯರೆಲ್ಲಂ ನಿಂದು ಕೈಗಳಂ ಮುಗಿದುಕೊಂಡಿರ್ಪುದುಮಾ ಭೂಕಾಂತಕಾಮಿನಿ-
ಯರವರ್ಗೆ ತಕ್ಕಂತಪ್ಪ ಸುವರ್ಣಮಯಂಗಳಾದಾಸನಂಗಳಂ ಕೊಡಿಸಿ ಕುಳ್ಳಿರಿಸಿ ಬಳಿಯಂ ಯಥಾಯೋಗ್ಯಸನ್ಮಾನಪ್ರತಿ-
ಪತ್ತಿಪೂರ್ವಕಂ ಮನ್ನಿಸಿ ಪರಮಸ್ನೇಹದಿಂದಾ ದೇವಿಯರ ಮೊಗಂಗಳಂ ನೋಳ್ಪಾಗಳ್

ಬಳಿಯಂ ಪ್ರಿಯಸಂಭಾಷಣಕ್ಕೆ ನೆವನಪ್ಪ ಕಾರಣಮಾಗೌ ನೀವಿಲ್ಲಿಗಾವ ಪ್ರಯೋಜನನಿಮಿತ್ತ ಬಂದಿರೆಂದು ಕೇಳ್ವುದುಂ

ಚಂಪಕಮಾಲೆ
ಜಿನಪತಿ ಪುಟ್ಟುವನ್ನೆವರಮಾತನ ತಾಯ್ಗೆ ಸಮಸ್ತಸೇವೆಯಂ
ಘನಮೆನೆ ಮಾಡಿಯೆಂದು ಸುಮನಃಪತಿ ಪೇಳ್ದೊಡೆ ಬಂದೆವಿಲ್ಲಿಗಂ
ಮನದೊಲವಿಂದೆ ನಿಮ್ಮನುಱೆ ಸೇವಿಪುದಲ್ಲದೆ ಬೇಱೆ ಸತ್ಪ್ರಯೋ
ಜನಮೆಮಗಿಲ್ಲಮೆಂದು ನುಡಿದರ್ ಕಡುನೀಱೆಯ ಮುಂದೆ ದೇವಿಯರ್॥೫೯॥

ಉತ್ಪಲಮಾಲೆ
ಎಂತು ನೃಪಂಗೆ ಮುನ್ನಮತಿವಿಸ್ತರದಿಂದಮೆ ಪೇಳ್ದರಂತೆ ತ
ತ್ಕಾಂತೆಗಮಾ ಸುರಾಧಿಪ ವಿಳಾಸಿನಿಯರ್ ಸಲೆ ತಮ್ಮ ಬಂದ ವೃ
ತ್ತಾಂತಮನೆಯ್ದೆ ಪೇಳ್ದೊಡದನಾಲಿಸಿ ಮತ್ತೆ ನಿಜಾಂತರಂಗದೊಳ್
ಸಂತಸಮಂ ಕರಂ ತಳೆದಳಾಕ್ಷಣದೊಳ್ ಮಗನಾದನೆಂಬಿದಂ॥೬೦॥

ವಚನ: ಅಂತು ಪದೆನೈದನೆಯ ತೀರ್ಥಂಕರನಪ್ಪ ಧರ್ಮಜಿನನಾಥನಿನ್ನಱುದಿಂಗಳಿಂ ಮೇಲೆ ಸರ್ವಾರ್ಥಸಿದ್ಧಿಯಿಂದಂ ಬಂದು ನಿಮ್ಮಯ ಗರ್ಭದೊಳುದ್ಭವಿಸಿದಪನೆಂದು ದೇವೇಂದ್ರನಱಿದೆಮ್ಮಂ ಕರೆದು ಧರ್ಮತೀರ್ಥಂಕರ ಗರ್ಭಾವತರಣಕಲ್ಯಾಣನಿಮಿತ್ತಂ ಪೋಗಿ ನೀವಾ ಜಿನಜನನಿಯ ಗರೂಭಶೋಧನೆಯಂ ಮಾಡಿಯಾಕೆಗಿಷ್ಟಮಾದ ಪರಿಯಷ್ಟಿಯಂ ಮಾಡುತ್ತುಮಿರಿಯೆಂದು ಬೆಸಸಿ ಕಳಿಪಿದೊಡೆ ಬಂದೆವೆಂಬುದುಮಾ ಸುವ್ರತಾಮಹಾದೇವಿ ತತ್ಪ್ರಚೇತಾಚಾರ್ಯರ್ ಮುಂಪೇಳ್ದ ವಚನಾವಿಸಂವಾದಮಂ ನೆನೆನೆನೆದು ಪರಮಾನಂದದಿಂ ಬಹಳ ಪುಳಕಾಂಕುರೆಯಾಗಿ
ತದೀಯಚರಣಾರವಿಂದದ್ವಂದ್ವಮಂ ಮನದೊಳಭಿವಂದಿಸಿ ತನ್ಮುನೀಂದ್ರರ ಮಹಾತ್ಮ್ಯಮನಾ ದೇವಸ್ರ್ರೀಯರೊಡನೆ ನುಡಿಯುತ್ತುಮಿರಲ್ ಮತ್ತಮವರಿಂತೆಂದರ್

ನರಯುವತಿಯಾಗಿಯುಂ ನಿ
ರ್ಜರಯುವತಿಯರೊಲ್ದು ಸೇವಿಸುವ ಪುಣ್ಯಂ ಮ
ತ್ತರಸಿ ನಿನಗಾದುದಲ್ಲದೆ
ಧರಣಿಯೊಳುಳಿದನ್ಯಮನುಜಸತಿಯರ್ಗುಂಟೇ॥೬೧॥

ಮೂಜಗದೊಡೆಯಂಗಂ ಗುಣ
ಭಾಜನೆ ನೀಂ ಜನನಿಯಪ್ಪ ಕಾರಣದಿಂ ಸಂ
ಯೋಜಿಸಿದುದಲ್ಲದಿರ್ದೊಡೆ
ರಾಜಿತ ಸುರರ್ಗಂ ನರರ್ಗಮಂತರಮೇಂ ಪೇಳ್॥೬೨॥

ವಚನ:ಅಂತುಮಲ್ಲದೆಯುಂ
ಓಲಯಿಸಿಕೊಂಬುದೆಮ್ಮಂ
ಪಾಲಿಪುದುಱೆ ಮಾಳ್ಪ ಕಾರ್ಯಮೇನುಳ್ಳೊಡದಂ
ಬಾಲಕಿ ಮಾಡಿಸಿಕೊಂಬುದು
ಲೀಲೆಯಿನೆಂದಮರಕಾಂತೆಯರ್ ಪೇಳಲೊಡಂ ॥೬೩॥

ವಚನ : ಅನಂತರಂ
ಚಂಪಕಮಾಲೆ
ಸೊಗಸುವ ಬೋನಮಂ ಸಮೆವ ಕಾರ್ಯದೊಳಂ ಕೆಲರಂ ಸುಮಜ್ಜನಂ
ಬೊಗಿಸುವ ಕಜ್ಜದಲ್ಲಿ ಕೆಲರಂ ಹರಿಚಂದನಮಂ ಸಮಂತು ಸ
ಣ್ಣಿಗೆಯೊಳೆ ಸಣ್ಣಿಪುಜ್ಜುಗದೊಳಂ ಕೆಲರಂ ಜಿನದೇವಕಾರ್ಯಪೂ
ಜೆಗಳನೆ ಮಾಳ್ಪುದೊಂದುರು ನಿಯೋಗದೊಳಂ ಕೆಲರಂ ಪ್ರಮೋದದಿಂ॥೬೪॥

ಮತ್ತೇಭವಿಕ್ರೀಡಿತ
ಕೆಲರಂ ಕಂಪಿನ ಪೂಗಳಂ ಕೆದಱಿ ಹಾಸಂ ಹಾಸುವುದ್ಯೋಗದೊಳ್
ಕೆಲರಂ ಪಾವುಗೆ ನೀಡುವಲ್ಲಿ ಕೆಲರಂ ಬಾಣಡ್ಡಣಂಗೊಂಡು ಸು
ತ್ತಲುಮೋಲೈಸುವ ಪೆರ್ಮೆಯಲ್ಲಿ ಕೆಲರಂ ದೌವಾರಿಕಸ್ಥಾನದೊಳ್
ಕೆಲರಂ ಜಾಣ್ನುಡಿಯೊಳ್ ಮಹತ್ತರಿಯರಂ ಮಾದೇವಿಯಪ್ಪೈಸಿದಳ್॥೬೫॥

ಅಮರಕುಮಾರಿಯರಾ ಭೂ
ರಮಣನ ವಲ್ಲಭೆಗೆ ಚಾಮರಂಗಳನತಿಸಂ
ಭ್ರಮದಿಂದಿಕ್ಕಿದರತ್ಯು
ತ್ತಮಕಾಂಚನದಂಡಮಂಡಿತಂಗಳನಾಗಳ್ ॥೮೨॥

ಲಾಲಿಪ ಪೇರಣೆಯೊಳ್ ಮಿಗೆ
ಮೇಲೆನಿಸುವ ಕುಶಲೆ ದಿವಿಜಸತಿ ಮತ್ತೊರ್ವಳ್
ಕಾಲೇ ನಾಲಗೆಯೆಂಬಂ
ತೋಲಗದೊಳ್ ಕುಣಿದು ದೇವಿಯಂ ಮೆಚ್ಚಿಸಿದಳ್ ॥೮೫॥

ಧಿಂ ಧಿಂ ಧಿಮಿಕ್ಕು ಧಿಮಿಕೆಂ
ದಿಂದೀವರಲೋಲಲೋಚನೆಯ ಮುಂದೊಲವಿಂ
ವೃಂದಾರಕ ವಧುವೊರ್ವಳ್
ಕುಂದದ ಜಾಣಿಂದ ಮುರಜಮಂ ಬಾಜಿಸಿದಳ್ ॥೮೮॥

ರಂಭೆಯದೊರ್ವಳ್ ನಯದಿಂ
ದಂ ಭಾಮೆಯ ಮುಂದೆ ಚಂದ್ರಕಾಂತದ ಕಡುಪಿಂ
ಭೊಂ ಭೊಂ ಭೊಂ ಭೊಂಭೆಂಬೀ
ಶುಂಭಧ್ವನಿ ಪೊಣ್ಮೆ ಢಕ್ಕೆಯಂ ಬಾಜಿಸಿದಳ್॥೮೯॥

ಹೊನ್ನಿನ ಕಹಳೆಗಳಂ ಪೊಸ
ರನ್ನದ ವಾಸಂಗಳಂ ಸುಶಂಖಂಗಳುಮಂ
ಚೆನ್ನಿನ ಮೌರಿಗಳಂ ಸುರ
ಕನ್ನೆಯರೊರ್ವೊರ್ವರೂದಿದರ್ ಕಡುನಲವಿಂ॥೯೦॥

ಚಂಪಕಮಾಲೆ
ಸರಸಿಜವಕ್ತ್ರೆಗುತ್ಪಳದಳಾಯತನೇತ್ರೆಗೆ ಕುಂದಕುಟ್ಮಳೋ
ದ್ಧುರತರದಂತಪಂಕ್ತಿಗೆ ಚಂಪಕನಾಸಿಕೆಗುದ್ಘಪಾಟಳಾ
ಧರೆಗೆ ಸುಕೇತಕೀನಖಿಗೆ ಚಾರುವಿಕಾಸಿ ಶಿರೀಷದಾಮ ಸೌಂ
ದರತನುಗಿಂತು ಪುಷ್ಪವತಿಯೆಂಬಿದು ಸಾರ್ಥಕಮಾಗದಿರ್ಪುದೇ॥೯೫॥

ವಚನ: ಮತ್ತಂ ಕಡೆಯಾಣಿಯ ಮಿಱುಗುವ ಮಿಸುನಿಯಂ ಸಮೆದ ಚೆಲುವ ಜಗಲಿಯ ಮೇಲೆ ಕುಳ್ಳಿರ್ದು ಬಾಲಕರ್ ಮೊದಲಾದಱಿಯದನ್ಯಜನಸಂಸ್ಪರ್ಶಪರಿಹರಣಾರ್ಥಂ ವಜ್ರಂಗಳಿಂ ಕೇವಣಿಸಿದ ಹೊನ್ನ ಸೆಳೆಯಂ ಪಿಡಿದು ಚಾಳನಂಗೆಯ್ವುತ್ತುಂ ಸುರಕುಮಾರಿಯರೊಡನೆ ಪ್ರಹೇಳಿಕಾವಿನೋದದಿಂ ಪೊತ್ತಂ ಕಳೆಯುತ್ತುಮಿರ್ದುಮೂಱುದಿನಂಗಳ್ ಪೋಗಲೊಡಂ

ಋತುಸಮಯದೊಳೊಪ್ಪಿದಳಾ
ಸತಿ ಭರದಿಂದಂ ವಸಂತಋತುಸಮಯದೊಳಗೆ
ದತಿಕೋಮಳಲತೆಯಂತುಪ
ಗತವಿಭ್ರಮಿಕೆ ಪ್ರವಾಳವಿಳಸಿತೆ ಪಿರಿದುಂ॥೯೭॥

ಕಮ್ಮೆಣ್ಣೆಯಿಂದೆ ಮಜ್ಜನ
ಮಂ ಮಾಡಿಸಿದರ್ ನಿಳಿಂಪಕಾಂತೆಯರೊಲವಿಂ
ದಂ ಮಿಗೆನೀರ್ದಳಿವಂತಿರೆ
ರಮ್ಯಾಳಕವಲ್ಲಿಗಮಿತನಖಕಾಂತಿಗಳಿಂ॥೯೯॥

ವಚನ: ಬಳಿಯಂ ಜಾಂಬೂನದಮಯಮಾದ ಸ್ನಾನಸ್ಥಾನದ ನಟ್ಟನಡುವೆ ಪೊಳೆಯುತ್ತುಮಿರ್ದ ಚಂದ್ರಕಾಂತ ಚತುರಾಘಾಟಪಟ್ಟಕದ ಮಧ್ಯದಲ್ಲಿ ಕುಳ್ಳಿರಿಸಿ  

ಮತ್ತೇಭವಿಕ್ರೀಡಿತ
ಸ್ತನಕುಂಭಸ್ಥಳೆಯರ್ ಮದಾನ್ವಿತೆಯರತ್ಯಂತಾಲಸಾಯಾನೆಯರ್
ವಿನುತಾನಂಗಮಹೀಪದಂತಿನಿಗಳೆಂಬಂತಿರ್ದ ದೇವೇಂದ್ರನಂ
ಗನೆಯರ್ ಕೈಗಳನೆತ್ತಿಕೊಂಡು ಬಿಸಿನೀರಿಂ ತುಂಬಿರ್ದ ಸ್ವರ್ಣಪಾ
ವನಕುಂಭಂಗಳನಂತು ನೀರೆಱೆದರೆಂತು ಶ್ರೀಗಿಭಂಗಳ್ ಕರಂ ॥೧೦೧॥

ಕಮಳಿನಿಯ ಮೇಲೆ ಪಿರಿದುಂ
ದ್ಯುಮಣಿಯಕಿರಣಂಗಳೆಱಗಿ ಸುರಿವಂತಿರೆ ಸ
ತ್ಕಮಳಾಕ್ಷಿಯ ಮೇಲೆಱಗಿದು
ದಮಳಿನ ಕಮಳಪ್ರವಾಹಮತಿಸಂಭ್ರಮದಿಂ॥೧೦೨॥

ಸಾರತೆ ಜಳದೊಳಮೊಪ್ಪುವ
ಧಾರೆಗಳೊಡಗೂಡಿ ಭುವನದೊಳ್ ಪೊಳೆವುದಱಿಂ
ದಾ ರಮಣಿ ಕಾಮದೇವನ
ಕೂರಸಿಯೆಂಬಿದನೆ ನಿಶ್ಚಯಂಗೆಯ್ದಳ್ ತಾಂ ॥೧೦೩॥

ಬೆಳುದಿಂಗಳ ಧಾವಲ್ಯಮ
ನಿಳಿಕೆಯ್ವುತ್ತಿರ್ದ ಬಿಳಿಯ ಪಟ್ಟಾವಳಿಯಂ
ನಳಿನಾಕ್ಷಿಗೆ ತಂದುಡಿಸಿದ
ಳೊಲಿದೊರ್ವಳ್ ದಿವಿಜಕಾಂತೆ ಕಡುಜಾಣಿಂದಂ ॥೧೦೫॥

ಹರಿಚಂದನಕಲ್ಕಮನೊ
ಲ್ದರಸಿಯ ಮೆಯ್ಯಲ್ಲಿ ಪೂಸಲಂತಾಕ್ಷಣದೊಳ್
ಶರದದ ಮುಗಿಲಾವರಿಸಿದ
ಸುರಗಿರಿಶಿಖರಂ ದಲೆಂಬಿನಂ ಕಣ್ಗೆಸೆದಳ್॥೧೦೬॥

ಉತ್ಪಲಮಾಲೆ
ಮುತ್ತಿನ ತೋಳಬಂದಿ ಪೊಸಮುತ್ತಿನ ಚೂಳಿಕೆ ಮುತ್ತಿನೈಸರಂ
ಮುತ್ತಿನ ಸೂಡಗಂ ಪೊಳೆವ ಮುತ್ತಿನ ಕಂಕಣಮೆಯ್ದೆ ಮುತ್ತಿನಿಂ
ಬಿತ್ತರಿಸಿರ್ದ ನೂಪುರಮದೊಪ್ಪುವ ಮುತ್ತಿನ ನೇವುರಂ ದಲೆಂ
ದುತ್ತಮವಾದ ಭೂಷಣದಿ ಭೂಷಿಸಿದರ್ ಸುರಕಾಂತೆಯರ್ ಕರಂ ॥೧೦೭॥

ಉತ್ಪಲಮಾಲೆ
ಕಾಲ ಪಳಂಚಿನುಂಗುರದ ಮೆಲ್ಲುಲಿಯಿಂದಮೆ ಪೇಳ್ದು ತಮ್ಮ ಲೀ
ಲಾಲಸಯಾನಮಂ ಕಳಮರಾಳಯುಗಂಗಳಿಗೆಯ್ದೆ ಶಿಕ್ಷಿಪಂ
ತಾ ಲಲಿತಾಂಗಿ ಪಾವುಗೆಗಳಂ ನಿಜಪಾದತಳಂಗಳಿಂದೆ ಸಂ
ಲಾಲಿತಮಾಗಿ ಮೆಟ್ಟಿ ನಡೆತಂದಳನೂನಮನೋನುರಾಗದಿಂ॥೧೧೫॥

ರತಿಸಾಗರದೊಳಗೋಲಾ
ಡುತುಮಿರ್ದಾ ನೃಪತಿಯುಂ ಮಹಾದೇವಿಯುಮೆ
ಯ್ದತನುಬಿಡದಾಡಿಸುತ್ತಿ
ರ್ದತಿಶಯಪುತ್ರಿಕೆಗಳೆಂಬ ತೆಱದಿಂದಾಗಳ್ ॥೧೨೪॥

ವಚನ: ಅಂತು ವಿಶ್ರಾಂತಸಂಭೋಗಸುಖದಿಂದೊಗೆದ ಬೆಮರ ಬಿಂದುಗಳಿಂದಾ ದಂಪತಿಗಳ ನಿಕಾಮಕೋಮಳತನುಲತೆ-
ಗಳಾರ್ದಂಗಳಾಗಿಯುಂ ಮೆಯ್ಸೋಂಕಿನೊಳುಬ್ಬರಿಸುವವಿಪುಳಪುಳಕಾಂಕುರಂಗಳಿಂ ಕಠಿನತ್ವಮಂ ತಾಳ್ದಿರ್ದವು ಮತ್ತಂ ನಿಬಿಡಮಾದ ಗಾಢಾಲಿಂಗನದಿಂದಿರ್ವರ ಶರೀರಂಗಳನೊಂದಾಗಿ ಪಚ್ಚಿಸಿದರೆಂಬಂತೈಕ್ಯಮನಾಂತು ಕ್ಷೀರನೀರಾಕಾರದೊ-
ಳೊಂದಿದ ರತ್ನವೇಳೆಯಂತಿರಾ ಮಹಾಸೇನಮಹಾರಾಜನೊಡನೆ ಪವಡಿಸುತ್ತುಮಿರ್ದ ಸುವ್ರತಾಮಹಾದೇವಿ ಪರಿಶ್ರಮ-
ನಿಮೀಲಿತನಯನೆಯಾಗಿ ಬೆಳಗಪ್ಪ ಜಾವದೊಳ್

ಚಂಪಕಮಾಲೆ
ಅನುಪಮತೀರ್ಥನಾಥಜನನೋತ್ಸವಮಂಗಳಕಾರಣಂಗಳಂ
ಕನಸುಗಳಂ ಯಥಾಕ್ರಮದೊಳಂ ಪದಿನಾಱುಮನೆಯ್ದೆ ಕಂಡಳಾ
ಜಿನಜನನಿ ಪ್ರಮೋದಭರದಿಂದುರುಷೋಡಶಭಾವನಾದಿ ಭಾ
ಜನನೆನಿಸಿರ್ದ ಪುಣ್ಯತನಯೋದಯಮಂ ನೆಱೆಸೂಚಿಪಂದದಿಂ॥೧೨೫

ವಚನ: ಅದೆಂತೆನೆ
ಉತ್ಪಲಮಾಲೆ
ಮಿಳ್ಳಿಸಿ ತುಂಬಿಗಳ್ ಮೊರೆದುಬಂದು ಮದಾಂಬುವ ಗಂಧಶಾಲೆಯಿಂ
ಕುಳ್ಳಿರೆ ಗಂಧದೊಳ್ ಮೆಱೆವ ವಾಸವಭದ್ರಗಜಾಧಿರಾಜನಂ
ಬೆಳ್ಳಿಯ ಬೆಟ್ಟಮೆಂಬ ಬಗೆಯಂ ಸಲೆಪುಟ್ಟಿಸುತಿರ್ದುದಂ ಭಯಂ
ಗೊಳ್ಳದೆ ನೋಡಿದಳ್ ಕನಸಿನೊಳ್ ಮದಕುಂಜರಯಾನೆ ಲೀಲೆಯಿಂ॥೧೨೬॥

ದೇವಿ ಕನಸಿನೊಳ್ ಕಂಡಳ್
ತಾವರೆಗೊಳನಂ ಮರಾಳಿಕಾಪಕ್ಷಸುಲೀ
ಲಾವಿಕ್ಷಿಪ್ತ ಸರೋರುಹ
ಪಾವನಕಿಂಜಲ್ಕಪುಂಜಪಿಂಜರಿತಮುಮಂ॥೧೩೫॥

ಪಿರಿದುಂ ಗಂಭೀರತೆಯಂ
ಧರಿಸಿದ ಬಹುರತ್ನರಾಶಿಪರಿರಂಜಿತಮಂ
ಪರಮಕ್ಷೀರಸಮುದ್ರಮ
ನರಸಿ ಸ್ವಪ್ನದೊಳೆ ನೋಡುತಿರ್ದಳ್ ನಲವಿಂ॥೧೩೬॥

ಕನಕಮಯಚಾರುಸಿಂಹಾ
ಸನಮಂ ನವರತ್ನರಾಜಿಪರಿಕೀಲಿತಮಂ
ಘನಕೌಶರನಿರ್ಮಿತಮಂ
ವನಿತೋತ್ತಮೆ ಕನಸಿನಲ್ಲಿ ಕಂಡಳ್ ಮುದದಿಂ॥೧೩೭॥

ಮಂಜೀರಧ್ವನಿಯುಂ ಸುಕಂಕಣಝಣತ್ಕಾರಂಗಳಂ ಮೇಖಳಾ
ಮಂಜುಧ್ವಾನಮುಮುಣ್ಮಿ ಪೊಣ್ಮೆ ನಯನಂ ಕೆಂಪಾಗೆ ಧಮ್ಮಿಲ್ಲಭಾ
ರಂ ಜೋಲ್ದೊಪ್ಪೆ ಶರೀರಯಷ್ಟಿ ತಳೆಯಲ್ ಬೇಱೊಂದು ಸೌರಭ್ಯಮಂ
ರಂಜಂ ನೀವಿ ಸಡಿಲ್ದು ತೋಱೆ ಸತಿ ಪಾಸಿಂದೆರ್ದಳಾನಂದದಿಂ॥೧೪೩॥

ವಚನ: ಅಂತುಪ್ಪವಡಿಸಿ ಪ್ರಭಾತಕಾಲಕರಣೀಯನಿತ್ಯನಿಯಮಂಗಳಂ ನಿರ್ವರ್ತಿಸಿದನಂತರಂ

ಪತಿಯ ಸಮೀಪಕ್ಕೆ ಮಹಾ
ಸತಿ ಬಂದುಱೆತನ್ನ ಕಂಡ ಕನಸುಗಳಂ ಸಂ
ಗತಿಯಿಂ ಪೇಳ್ದಳ್ ದಂತ
ದ್ಯುತಿಯಿಂದಂ ದ್ವಿಗುಣಿಸುತ್ತುಮೆಕ್ಕಾವಳಿಯಂ॥೧೪೪॥

ಸ್ರಗ್ಧರೆ
ಭೂಪಂ ಸ್ವಪ್ನಂಗಳಂ ಕೇಳ್ದಪರಿಮಿತ ವಿವೇಕಪ್ರಭಾವಾತ್ತಚಿತ್ತ
ವ್ಯಾಪಾರಂ ಮತ್ತಮಿಂತೆಂದುಸಿರ್ದನವಱ ಭೂಯಃಫಲಪ್ರಾಪ್ತಿಯಂ ತ
ನ್ನ ಪ್ರಾಣಪ್ರೀತೆಗಾಗಳ್ ನಗೆಯೆ ದಶನಭಾಭಾರಮುಂ ವಕ್ತ್ರದಿಂದಂ
ಪೆಂಪಿಂ ಬೇಱೊಬ್ಬ ಚಂದ್ರಂ ಪಗಲೊಳಮೆಳೆವೆಳ್ದಿಂಗಳಂ ಬೀಱುವನ್ನಂ॥೧೪೫॥

ಚಂಪಕಮಾಲೆ
ಜಲನಿಧಿಯಂತಪಾರಮಹಿಮಾಸ್ಪದನಂ ಹರಿಪೀಠದಂತೆ ಮಂ
ಜುಳತರದರ್ಶನೋನ್ನತನುಮಂ ಸುರಲೋಕವಿಮಾನದಂತಿರು
ಜ್ವಳಿತ ಸುರೇಂದ್ರಯಾತ್ರಕನುಮಂ ಫಣಿರಾಜನಿವಾಸದಂತೆ ನಿ
ರ್ಮಳತರತೀರ್ಥಘೋಷಣವಿಶೇಷಿತಚಾರುಮಹಾನುಭಾವನಂ॥೧೪೮॥

ಚಂಪಕಮಾಲೆ
ತನುಭವಲಾಭವಾರ್ತೆಯನಿದಂ ನಿಜಹೃತ್ಪತಿ ಪೇಳೆ ಕೇಳ್ದು ಮ
ತ್ತನುಪಮಭೂರಿಹರ್ಷಭರದಿಂ ಪುಳಕೋದ್ಗಮಭಾರಮಂ ನೃಪಾಂ
ಗನೆ ತಳೆದಿರ್ದಂದು ವನಲಕ್ಷ್ಮಿ ವಿಶೇಷವಸಂತಕಾಲದೊಳ್
ಘನಕಳಷಿಕಾಕಳಾಪಮನದೆಂತುಱೆ ತಾಳ್ದುವಳಂತಿರೊಪ್ಪರೊಪ್ಪದಿಂ ॥೧೫೩॥

ಪುಟ್ಟದ ಮುನ್ನಂ ದಿವಿಜರ್
ನೆಟ್ಟನೆ ಗರ್ಭಾವತರಣದುತ್ಸವಮಂ ಮುಂ
ದಿಟ್ಟು ಸೇವಿಸಿದರೆಂದೊಡೆ
ಪುಟ್ಟಿದ ಪೊತ್ತಿನೊಳೆ ಮಾಳ್ಪುದಂ ಬಣ್ಣಿಪರಾರ್॥೧೫೬॥

ವಚನ: ಅನಂತರಂ
ಒಡೆಯನ ಗರೂಭಾದಾನದ
ಸಡಗರಮಂ ಪಿರಿದುಮಳ್ತಿಯಿಂ ಭೂತಳದೊಳ್
ಕಡುಚೋಜಿಗಮಪ್ಪಂತಿರ
ಲೊಡರಿಸಿದಂ ಮತ್ತಮಾ ನೃಪಾಳಕತಿಳಕಂ ॥೧೫೭॥

ಮಹಾಸ್ರಗ್ಧರೆ
ಕ್ಷಿತಿನಾಥಂ ತನ್ನ ಪುಣ್ಯೋದಯದ ಮಹಿಮೆಯಂ ಕೂಡೆಕೊಂಡಾಡುತಿರ್ದಂ
ವ್ರತಶೀಲಾಧಾರನುದ್ಯದ್ವಿಮಳತರಗುಣಂ ಭಾರತೀಕರ್ಣಪೂರಂ
ನುತವದ್ದಾನಪ್ರಿಯಂ ಬಾಹುಬಲಿಸುಕವಿರಾಜಂ ಮಹಾರಾಜಪೂಜ್ಯಂ
ಜಿತಮಿಥ್ಯಾವಾದಿ ಸಾರ್ಥಪ್ರವಚನರಚನಂ ಚಾತುರೀಜನೂಮಗೇಹಂ॥೧೫೮॥

ಗದ್ಯ: ಇದು ಸಕಳಭುವನಜನವಿನೂಯಮಾನಾನೂನ ಮಹಿಮಾಮಾನನೀಯ
ಪರಮಜಿನಸಮಯಕಮಳಿನೀಕಳಹಂಸಾಯಮಾನ ಶ್ರೀಮನ್ನಯಕೀರ್ತಿದೇವ
ಪ್ರಸಾದಸಂಪದಪಾದನಿಧಾನನದೀಪವರ್ತಿಯುಭಯಭಾಷಾಕವಿ
ಚಕ್ರವರ್ತಿ ಬಾಹುಬಲೆಪಂಡಿತದೇವ ಪರಿನಿರ್ಮಿತಮಪ್ಪ
ಧರ್ಮನಾಥಪುರಾಣದೊಳ್ ಧರ್ಮತೀರ್ಥಕರ
ಗರ್ಭಾವತರಣಕಲ್ಯಾಣಪರಿವ್ಯಾವರ್ಣನಂ
ಷಷ್ಠಾಶ್ವಾಸಂ.

ಅನಂತ ವಂದನೆಗಳು
ಸಂಪಾದಕರು: ಎನ್ ಬಸವಾರಾಧ್ಯ.
ಪ್ರಕಾಶನ: ಕನ್ನಡ ಅಧ್ಯಯನ ಸಂಸ್ಥೆ
ಮೈಸೂರು ವಿಶ್ವವಿದ್ಯಾನಿಲಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ