ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಬುಧವಾರ, ಏಪ್ರಿಲ್ 30, 2025

ನೇಮಿಚಂದ್ರನ ಅರ್ಧನೇಮಿಪುರಾಣ

ನೇಮಿಚಂದ್ರನ ಅರ್ಧನೇಮಿಪುರಾಣ

ಈ ಗ್ರಂಥಕರ್ತನು ನೇಮಿಚಂದ್ರನು. ಈತ ಲೀಲಾವತೀ ಮತ್ತು ನೇಮಿನಾಥಪುರಾಣಂ ಎಂಬೆರಡು ಕೃತಿಗಳನ್ನು ರಚಿಸಿದ್ದಾನೆ. ಕವಿಯ ಕಾಲ ೧೨ ನೆಯ ಅಂತ್ಯಭಾಗ. ಈತನು ತಾನು ಚತುರ್ಭಾಷಾಚಕ್ರವರ್ತಿ ಎಂದು ಹೇಳಿಕೊಂಡಿದ್ದಾನೆ. 


ಶ್ರೀ ರಸ್ತು.

 ನೇಮಿಚಂದ್ರನ ನೇಮಿನಾಥಪುರಾಣಂ (ಅರ್ಧನೇಮಿಪುರಾಣಂ)


ಶ್ರೀವೀತರಾಗಾಯ ನಮಃ, - ಶ್ರೀ ಮತ್ಪಂಚಗುರುಭ್ಯೋ ನಮಃ.


ಶ್ಲೋ ॥ ಶ್ರೀಮತೇ ನೇಮಿನಾಥಾಯ ನಮಸ್ಸ್ಯಾದ್ವಾದಸಿಂಧವೇ । 

ಯಸ್ಮಿನ್ನುದಿತಬೋಧೇಂದೌ ತ್ರೈಲೋಕ್ಯಂ ಲಕ್ಷಣಾಯತೇ॥ 


ಶ್ರೀಯಂ ಶ್ವೇತಾತಪತ್ರಂ ಪ್ರಥಿತವಿಭವಮಂ ಚಾಮರಂ ಬೋಧಮಂ ವಾ  । 

ಕ್ಪೀಯೂಷಂ ಪೆರ್ಮೆಯಂ ಭಾಸುರತರಪಟಹಂ ಶಕ್ತಿಯಂ ಸಿಂಹಪೀಠಂ ॥ 

ಸ್ವಾಯತ್ತಂಮಾೞ್ಪೆನಂ ಭಾವಳಯವಿಳಸಿತಾಶೋಕಮಂದಾರವರ್ಷ। 

ಚ್ಛಾಚ್ಛನ್ನಾಂಗನಾದಂ ತ್ರಿಭುವನವಿನುತಂ ನೇಮಿ ರಕ್ಷಿಕ್ಕೆ ನಮ್ಮಂ ॥೧॥ 


ಲೀಳಾಗಾತ್ರೈಕಮಲ್ಲೀಮುಕುಳಮೆನಿಸೆ ನಾಸಾಗ್ರದೊಳ್ ಪಾಂಚಜನ್ಯಂ। 

ವ್ಯಾಳಂ ಶಯ್ಯಾತಳಂ ಪೂಗಣೆಯನೊಣೆಧೃತಂ ಪೈರ್ವುವಿಲ್ಲಾ ಗೆ ಶಾರ್ಙಂ॥ 

ಹೇಳಾಕೃಷ್ಟಂ ಸುಪುಷ್ಟಂ ಹರಿಮದಹರನಪ್ಪಂತೆ ಕಂದರ್ಪದರ್ಪ। 

ವ್ಯಾಳೋಳಕ್ರೀಡೆಗಾದಂ ಕುಡುಗೆಮಗೆ ಮಹೋತ್ಸಾಹಮಂ ನೇಮಿನಾಥಂ॥೨॥ 


ವಿಮಳಜ್ಞಾನಾಳಿನಾಳಂ ಸುಖಮಯಮಕರಂದಾಕರಂ ಮುಕ್ತಪಾಪ । 

ಭ್ರಮರಂಸಂಸಕ್ತಸೂಕ್ಷ್ಮೋಜ್ಜ್ವಲಗುಣಮವಗಾಹಾವಹಂಭದ್ರಮುನ್ನಿ॥ 

ದ್ರಮಪಾರಂ ಪಾವನಪ್ರಸ್ತುತಗತಿ ಭುವನಾಗ್ರಸ್ಥಿತಂ ತೋರ್ಕೆ ನಿಚ್ಚಂ । 

ನಮಗಿಂತತ್ಯಂತಲಕ್ಷ್ಮೀಲಲಿತಲಪನಮಂ ಸಿದ್ಧನೀರೇಜಷಂಡಂ ॥೩॥ 


ಆಚಾರಂ ನಿಸದಾಗಿ ಸದ್ಗುಣಗಣಂ ಮುಂತಾಗಿ ಮಂತ್ರಕ್ರಿಯಾ। 

ಳೋಚನಂ ನಿರ್ವ್ಯಭಿಚಾರಮಾಗೆ ಜಿನರಾಜಪ್ರಾಜ್ಯಸಾಮ್ರಾಜ್ಯದೊಳ್ ॥ 

ಶೌಚವ್ಯೋಚಿತಭಾಗ್ಯಲಕ್ಷ್ಮಿ ತಮಗೇಕಚ್ಛತ್ರಮಾಯ್ತೆಂದುಮೆಂ। 

ಬಾಚಾರ್ಯರ್ ನಮಗೀವರಕ್ಕೆ ನಯನಿಕ್ಷೇಪಪ್ರಮಾಣಂಗಳಂ॥೪॥ 


ರಸಮೊ ರಸಾಯನಮೋ ಶ್ರುತಿ ।

ವಸಂತಮೋ ಕಿವಿಗಳಮೃತಮೋ ನೇಮಿಯವಾಕ್॥ 

ಪ್ರಸರಮದದೆಸಕದಿಂ ನಿ। 

ಪ್ಪೊಸತಾದುದು ಜಗಕ್ಕೆ ನೇಮಿನಾಥಪುರಾಣಂ॥೩೮॥


ಕುವಳಯದಲರಂ ಕೌಮುದಿ । 

ಯ ವಿಭವಮಂ ಕಂಡು ಕೊಂಡು ಕೊನೆವಂ ಕವಿಯೋ॥ 

ರವಿಯೋ ರವಿ ಕಾಣದುದಂ । 

ಕವಿ ಕಾಣ್ಬನೆನಿಪ್ಪ ವಚನಮೇಂ ತಪ್ಪುಗುಮೇ॥೩೩॥


ಬೆಲೆಯಿಂದಕ್ಕುಮೆ ಕೃತಿ ಗಾ । 

ವಿಲ ಭುವನದ ಭಾಗ್ಯದಿಂದಮಕ್ಕುಂ ನೋೞ್ಪಂ ॥ 

ಬೆಲೆಗೊಟ್ಟು ತಾರ ಮಧುವಂ । 

ಮಲಯಾನಿಲನಂ ಮನೋಜನಂ ಕೌಮುದಿಯಂ॥೪೫॥



 ಆಶ್ವಾಸ ಎಂಟು


ಮಳೆಗಾಲದ ವರ್ಣನೆ.


ನೀರಂ ನೀರಂಧ್ರಮೇಘಂ ಸುರಿಯೆ ಮೊರೆಯೆ ಭೀಮಾರುತಂ ಕೊ ।

ಳ್ಗಾರಂ ಗಾರಂಬೊಲಾಯ್ತೆಂದಗಿಯೆ ಪಥಿಕರುಚ್ಚಾತಕಂ ಚಾತಕಂ ಕಾ ॥

ಸಾರಾಸಾರಾರ್ಥಿ ಗೋಲಂಗುಡಿಯೆ ನಲಿವನೋಜಂಬುವಂ ಜಂಬುವಂ ಸೋ ।

ತ್ಕೀರಂ ಕೀರಂ ಕರ್ದುಂಕುತ್ತಿರೆ ಕೆರಳಿಸಿದತ್ತೋವಿಕಾರಂ ವಿಕಾರಂ॥ ೨॥


ಎಳಮಿಂಚಂ ತಳೆಯಿಕ್ಕಿ ಚಾದಗೆಗಳಂ ಬಿಟ್ಟೋಡಿ ಬಲ್ಗೆಚ್ಚಲಿ ।

ಟ್ಟಳಿನೀಳಾಂಬುದದಿಂ ಬೞಲ್ದ ಗಗನಶ್ರೀ ಧೇನುವಂ ಕೋಮಳಾ ॥

ಮಳದೀರ್ಘಾಮೃತಧಾರೆಗಳ್ಸುರಿಯೆ ಭೋರ್ಭೋರೆಂಬಿನಂ ಶಕ್ರಚಾ ।

ಪಳತಾದಾಮಕದಿಂದೆ ಕಟ್ಟಿ ಕಱೆದಂ ಕಾರೆಂಬ ಗೋಪಾಳಕಂ॥೩॥


ಕಳಕೇಕಾರುತಿ ಪೋಲೆ ವೀಣುರುತಿಯಂ ಬೀಸುತೆ ಮಿಂಚೆಂಬ ಗೋ ।

ವಳಗೋಲಂ ಪೊಡೆಸೆಂಡುವೊಯ್ದು ಸಿಡಿಲಂ ಗೀರ್ವಾಣಬಾಣಸನ॥

ಚ್ಛಳದಿಂ ಕತ್ತರಿವೀಲಿಯೊಂದು ಪಣೆಕಟ್ಟಂ ಕಟ್ಟಿಕೊಂಡಭ್ರಕಂ। 

ಬಳಮಂ ಗೋವನವುಂಕಿಬಂದೊದಱಿದಂ ಕಾರೆಂಬ ಗೋಪಾಳಕಂ॥ ೪॥


ಕಡಲೊಳ್ ಪಟ್ಟಿರ್ದವಂ ಪುಟ್ಟಿರದಿರ ಬನದೊಳ್ ಬಂದು ಸಪ್ತಾರ್ಣವಂ ಮೇ 

ಗೊಡಿವಿರ್ದಂತಾಗೆ ಮಿಂಚೆಂಬುರಿ ಮಿಗೆ ನಭಮಾಶಾಮುಖಶ್ರೇಣಿಯಂ ಗೋ॥

ೞಿಡುವಂತೋರಂದದಿಂದಂ ಮೊೞಗೆ ಮುಸುಱೆ ಮೇಘೌಘಮಬ್ಜಾಕ್ಷನಂ ಬ । 

ಲ್ಸಿಡಿಲಿಂದಿಟ್ಟಾಲಿಕಲ್ಲಿಂದೆಱಗಿ ಕಱೆದುದಾಗೋಕುಲಂ ತೇಂಕುವನ್ನಂ॥ ೭॥


ಪೊಡೆವ ಸಿಡಿಲ್ಗಳನೆಳೆಯೊಳ್ । 

ಕೆಡೆದೇೞೆಂಟಣಕು ನೆಗೆದು ನುರ್ಗಪ್ಪಿನೆಗಂ ॥ 

ಪೊಡೆದಂ ಗೋವಳಿಗೋಲಿಂ । 

ಪೊಡೆಸೆಂಡಾಡುವವೊಲೇಂ ಬಲಸ್ಥನೊ ಕೃಷ್ಣಂ॥ ೯॥


ಕರಗದ ಮುಗಿಲಂ ಪರೆಯದ ।

ಸುರಧನುವಂ ಮಿಂಚಿ ಕಿಡದ ಮಿಂಚಂ ಪೊಡೆದೋ ॥

ಸರಿಸದ ಸಿಡಿಲಂ ಸಮೆಯದ । 

ಸರಿವೞೆಯಂ ಕಂಡು ಬೆಗಡುಗೊಂಡರ್ ಗೋವರ್॥೧೦॥


ಕಂಸವಧೆ


ವಚನ॥ ಅಂತು ಕಂಸಂ ಕೃಷ್ಣಂಗೆ ಕಡಿವಂದುದಂ ಕಂಡು ವಸುದೇವಂ ಬಲದೇವಂ ಬೆರಸು ಚಾತುರ್ದಂತಬಲಮಂ ಕೂಡಿಕೊಂಡು ನಿಯುದ್ಧರಂಗದ ಕೆಲದೊಳ್ ಯುದ್ಧಸನ್ನದ್ಧರಾಗಿರ್ದಾಗಳುದ್ಧತನಾಗಿರ್ದ ಕಂಸಂ ಪಡಿಯಱನಂ ಕರೆದು ಕಿವಿಯೊಳ್ ಪರ್ಚುವುದುಮಾತನಂತೆಗೆಯ್ವೆನೆಂದು ಪೋಗಿ ಯಶೋದೆಗೆಂದಂ- ನಿನ್ನ ಮಗನೆಲ್ಲಿಗಾದೊಡಂ ಕಾಳೆಗವೆಂ-

ದೊಡೆ ಪೂಣಿಗನಾಗಿ ಪರಿವರಿಯಪ್ಪನ ವ್ಯಸನಮುಂ ವ್ಯಸನಮುಳ್ಳೊಡೆ ಬಂದು ಚಾಣೂರಮಲ್ಲನೊಳ್ ಮಲ್ಲವೋರ್ದು ಪರ್ವಕ್ಕೆ ನೆರೆದರಸುಮಕ್ಕಳ ಕಣ್ಗೆ ಪರ್ವಮಂ ಮಾೞ್ಕೆಂದು ಕಂಸಮಹಾರಾಜಂ ಬೆಸಸಿಯಟ್ಟಿದಂ ; ನೀವೆ ತಿವುರುಂ ತಿಳಕಮುಂ ಬೆರಸುತ್ಪೂರಿಸಿಕೊಂಡುಬರ್ಕೆ ಕೊಳ್ಳಿಮಾತನೆಲ್ಲಿದನೆಂಬುದುಂ ಯಶೋದೆ ಮುಗುಳ್ನಗೆ ನಗುತಿಂತೆಂದಳ್-


ಎನ್ನ ಮಗನಾವ ತಿವುರಿಂ । 

ಮುನ್ನಿಕ್ಕಿದನಣ್ಣ ಶಕಟನಂ ಪೂತನಿಯಂ ॥ 

ಪನ್ನಗನಂ ಯಮಳಾರ್ಜುನ । 

ರನ್ನರಕನನವನಿನಧಿಕನೇ ಚಾಣೂರಂ॥ ೭೩॥


ವಚನ॥ ನಿಜದಿಂ ಕೂರ್ಪುಳ್ಳನುಮಂ ಕತ್ತರಿವಾಣಿಯುಮಂ ಮಸೆಯಲೇಕೆಸಿಂಗಮಾನೆಯಂ ಮುಱಿವಲ್ಲಿಗಾವಭ್ಯಾಸಮಂ ಮಾಡಿದುದು; ಮುರಾಂತಕನುಂ ಅಂತಕನುಂ ಕೊಲ್ವುದನಿನ್ನು ಕಲ್ತಪರೆ ಕೇಳಿಮೆನ್ನ ಮಗಂ ನೀರೊಳ್ನಾನಂ ಬಿಸಿಲೊಳ್ಬಾಡಂ ಬೆಂಕಿಯೊಳ್ಬಾಡಂ ಬೆಂಕಿಯೊಳ್ಬೇಯಂ ಜವನ ಕೆಯ್ಯೊಳ್ಸಾಯಂ ಏನುಂ ಬೇಡೊಡಗೊಂಡು ಪೋಗಿಮೆಂಬಿನಿತರ್ಕೆಯಂಬು-

ಜೋದರಂ ಬಂದಬ್ಬಾಪಸಿದೆನೆಂಬುದುಂ ಯಶೋದೆಯಿಂತೆಂದಳ್- 


ಸಮೆದೆಂ ಮೊಸಱಂ ಬಾಳ್ಮೊಸ। 

ಱುಮನಾಂ ಘನವಾಗಿ ತಂದೆನಿಕ್ಕಿದಪೆಂ ಲಂ ॥ 

ಚಮನೆನ್ನ ಮಲ್ಲ ಚಾಣೂ। 

ರಮಲ್ಲನಂ ಮುಱಿದು ಬಂದು ಹಸಿವಂ ಮುಱಿಯಾ॥ ೭೪॥


ಉತ್ತಮಸತ್ವದಿಂ ಪಿಡಿದು ಚಾಣೂರನಂ ನೆಲಕಿಕ್ಕಿ ಕೃಷ್ಣನಾ ।

ಳ್ದೊತ್ತಿದೊಡೊತ್ತಿ ಧಾತ್ರಿ ರಸೆಗರ್ದುದು ರಕ್ಕಸನೊಯ್ದ ಧಾತ್ರಿಯಂ ॥

ಕೆತ್ತಿದನಾತನುಂ ಹರಿಯ ಗೋವನಿಱುಂಕಿ ತದಂಘ್ರಿಘಾತದಿಂ । 

ದತ್ತ ಪತಂಗವೊಂದು ಶಕಟಂ ಮುಱಿದಾಶಕಟಂಬೊಲಿರ್ಪಿನಂ॥ ೯೩॥


ಓರೊರ್ವರನಕ್ಖಡದಿಂ।

ದೂರಂ ಪೊಱಗಿಕ್ಕಿ ಪೋರ್ದು ಪಾದಾಹತಿಯಿಂ ॥

ಭೂರೇಣುವಾಗೆ ಹರಿಚಾ ।

ಣೂರರ್ಮತ್ತೊಂದುಮಲ್ಲಗಳನಂ ಸಮೆದರ್॥೯೪॥


ಬೆದಱಿದ ಬೆಱಗಿಂ ಬೆನ್ನಿ । 

ಕ್ಕಿದ ಕೃಷ್ಣಂ ಮೊಗದೆಗೊಂಡು ಮೊಗದೊಳ್ಮೆಯ್ಸಿ॥ 

ಕ್ಕಿದ ಚಾಣೂರನನಾರ್ದೆ। 

ತ್ತಿದನವನಿಯನೆತ್ತುವಂತಿರಾದಿವರಾಹಂ॥ ೯೫॥


ಕೆಡೆದರ್ಪೋರ್ದರ್ ಪೊರಳ್ದರ್ಮಿಗೆ ಪಿಡಿದರಾರ್ದೊತ್ತಿದರ್ಮತ್ತಮೆರ್ದರ್ । 

ನಿಡುಕೆಯ್ಯಂ ಬೇಡಿದರ್ನೀಡಿದರೆೞೆದು ನೆಲಕಿಕ್ಕಿದರ್ಕೂಂಕಿದರ್ಮೇ ॥ 

ಗಡೆಯಾದರ್ಪತ್ತಿ ಗಾಯಂಗೊಳಲೆ ಮಿಡುಕದಾರಯ್ದರಾರಯ್ದ ಗಾಯ । 

ಕ್ಕೆಡೆಗೊಟ್ಟುರ್ಕಿಟ್ಟುಕೊಂಡರ್ಪೊಳೆದು ಬಿಡಿಸಿದರ್ ಕೃಷ್ಷಚಾಣೂರಮಲ್ಲರ॥ ೯೬॥


ಪಿಡಿವಡೆ ಕೃಷ್ಣನ ತೋಳುಂ । 

ತೊಡೆಯುಂ ದೊಡ್ಡಿದುವಿದೆನ್ನ ಮುಷ್ಟಿಗೆ ಪವಣಿಂ॥ 

ದಡಹಡಿಸಿ ನಳಿನನಾಭನ । 

ನಡುವಂ ಮುಱಿಯಲ್ಕೆ ನೋಡಿದಂ ಚಾಣೂರಂ॥ ೯೭॥


ಮರನಂ ಕಿೞ್ತ ಮುರಾರಿಯಾಱನೆ ಕಿೞಲ್ಮುಂಗೆಯ್ಯ ರೋಮಂಗಳಂ।

ಕರಮಂ ಕೊಟ್ಟೊಡಮಾರ್ತನಿಲ್ಲ ಪಿಡಿಯಲ್ತತ್ಞಕಾಳಿಯಗ್ರಾಹಕಂ॥

ಧರೆಯಂ ಬೆಂಬಲದೊತ್ತಿ ಪತ್ತೆಗಿರಿಯಂ ಮುನ್ನೆತ್ತಿ ಪೊತ್ತಾಮಹೀ।

ಧರನಂತಿಂತು ತಳರ್ಚಲಾಱನೆ ಕರಂ ಚಾಣೂರನೇಂ ಶಕ್ತನೋ॥ ೯೮॥


ನೆಲನುಂ ಜಲನಿಧಿಯುಂ ಸಲೆ । 

ತಲೆವತ್ತುವ ತೆಱದಿನಿರ್ದು ಕಡೆಯೊಳ್ ನೆಲನಂ ॥ 

ಜಲಧಿ ಕಿಡಿಪಂತೆ ಕಿಡಿಸಿದ। 

ನಲಸದೆ ಚಾಣೂರಮಲ್ಲನಂ ಮುರಮಥನಂ॥ ೧೧೦॥


ವಚನ॥ ಮತ್ತೆ ಬಿಡದ ಮಲ್ಲರನೃನೆ ಮೆಟ್ಟಿದುದೆ ಸಂಡೆಂಬಂದಾವೆಡೆಯಂ ಪಿಡಿದೊಡಂ ಪಿಡಿದೆಡೆಯೆ ಗಾಯಮಾಗೆ ಬಳೆಯ ಪೇಱನಾನೆ ಮೆಟ್ಟಿದಂತೆಲುವೆಲ್ಲನುರ್ಗುನುರ್ಗಾಗೆ ಮೆಯ್ಯ ತೊವಲಾಗೆ ಸಡಿಯಾಡುಗಳಂತಿವದವಲ ಬೇರಂಗಳನೀಡಾತೀ- 

ಡಾಡಿದ ಚಾಣೂರಮಥನನ ಮೇಲೆ ಯಗಸ್ತ್ಯನ ಮೇಲೆ ಕವಿದ ಕಡಲಂತೆ ಕವಿವ ಕಂಸನ ಚಾತುರ್ವಲಮಂ ಬಲದೇವನುಂ ವಸುದೇವನುಂ ಕಂಡು ತಮ್ಮ ಬಲಮಂ ಕೈವೀಸೆ ಪೆಣಮಯಂ ಮಾಡೆ ನೆತ್ತರೈಗಡಲಂ ಪರಿಯಿಸಿ ಕಟ್ಟೇವಮುಂ ಕಡುಮುಳಿಸು ಅಳವಿಗೞಿಯೆ ಸಿಗ್ಗಾಗಿ ಸೈರಿಸಲಾಱದೆ ಅಭಿನವನಾರಸಿಂಹಾಡಂಬರಮಗುರ್ವುಮದ್ಭುತಮುಮಾಗಿ- 


ಮಾಡದ ಕಂಭಮಂ ಮಲಗಿನೊಳ್ಪರಿಪಾಯ್ದು ನೆಲಕ್ಕೆ ಬಾಳನ ।

ಲ್ಲಾಡೆ ನೆಗಪ್ಪಿಕೊಂಡು ತೊಡೆಗಾನರಸಿಂಹನವುಂಕಿ ಕಂಭದಿಂ ॥ 

ಮಾಡಿದ ಕಾಳರಕ್ಕಸನನಿಕ್ಕುವವೋಲ್ ನಖದಿಂ ಕರುಳ್ಗಳಂ । 

ತೋಡಿ ಪಿಸುಳ್ದು ನೀೞ್ದು ಬಿಸುಟಂ ಕಲಿಕಂಸನನಬ್ಜಲೋಚನಂ ॥ ೧೧೭॥


ಕೆಡೆಕೆಡೆಯೆಂದರಮಗನೊದೆ। 

ದೆಡಗಾಲೊಳ್ ತೊಡರ್ದು ಕರುಳೋಳೇನಿರ್ದಂ ಕ ॥ 

ರ್ದಡಿಗಂ ಗೋವಳನಿಕ್ಕಿದ। 

ತೊಡರೊಳ್ ಮಿಗೆ ಕೋದೆೞಲ್ವ ಪಾಪೆಯ ತೆಱದಿಂ॥ ೧೧೮॥


ಕ್ಷಿತಿಗೊರ್ವನೆ ದುರ್ಜನನೊಂ । 

ದತಿವೇಗದೆ ಮಾಡುವುಪಕಾರಮನ ॥ 

ಪ್ರತಿಮರ್ ಸಜ್ಜನರಾಚಂ। 

ದ್ರತಾರಕಂ ಬರ್ದು ಮಾಡಲೇನಾರ್ತಪರೇ ॥೧೧೯॥


ಕೃತಜ್ಞತೆಗಳು, 

ಸಂಪಾದಕರು,  

ರಂ. ಶ್ರೀ. ಮುಗಳಿ. 

ಪ್ರಕಾಶಕರು: ಸಾಹಿತ್ಯ ಅಕಾಡಮಿ,  

೧೦೯,  ಎ ಡಿ ಎ ರಂಗಮಂದಿರ, 

ಜೆ. ಸಿ. ರಸ್ತೆ, ಬೆಂಗಳೂರು- ೫೬೦೦೦೨.


 

ನೇಮಿಚಂದ್ರನ ಲೀಲಾವತಿ ಪ್ರಬಂಧ

ನೇಮಿಚಂದ್ರ


ಇವನು ಹನ್ನೆರಡನೆಯ ಶತಮಾನದ ಕೊನೆಯ ಭಾಗದಲ್ಲಿಯೂ ಹದಿಮೂರನೆ ಶತಮಾನದ ಮೊದಲಲ್ಲಿಯೂ ಜೀವಿಸಿದ್ದ ದೊಡ್ಡ ಪಂಡಿತ ಕವಿ. ಪಂಪ ಮತ್ತು ರನ್ನರಂತೆಯೇ ಒಂದು ಲೌಕಿಕ ಕಾವ್ಯವನ್ನೂ ಒಂದು ಧಾರ್ಮಿಕ ಕಾವ್ಯವನ್ನೂ ಬರೆದಿದ್ದಾನೆ. ರಟ್ಟರಾಜನಾದ ಲಕ್ಷ್ಮಣರಾಜನ ಆಶ್ರಯದಲ್ಲಿದ್ದುಕೊಂಡು ಸು. ಕ್ರಿ. ಶ. ೧೧೯೦ ರ ಹೊತ್ತಿಗೆ ತನ್ನ ಮೊದಲ ಕಾವ್ಯವಾದ “ ಲೀಲಾವತಿ “ ಯನ್ನು ಬರೆದನು . ಇವನಿಗೆ ಮಹಾಕವಿ, ಕವಿರಾಜಕುಂಜರ ಎಂಬ ಬಿರುದುಗಕ್ಷಿದ್ದುವು. ಹೊಯ್ಸಳ ವೀರಬಲ್ಲಾಳನ ಮಹಾಪ್ರಧಾನನಾದ ಪದ್ಮನಾಭನ ಪ್ರೇರಣೆಯ ಮೇರೆ “ ನೇಮಿನಾಥ ಪುರಾಣ “ ವನ್ನು ಬರೆದನು. ಕವಿಯಾದವನು ಎಷ್ಟು ಮಹಿಮಾವಂತನೆಂಬುದನ್ನು ಅವನು ವರ್ಣಿಸಿರುವುದು : 


ಪ್ರಥಮಾಶ್ವಾಸಂ.  


ಶ್ರೀಪಾದಾಕ್ರಾಂಲೋಕಂ ಪರಮಹಿಮಕರಂ ನೂತನಕ್ಷತ್ರಕಾಂತಂ। 

ತಾಪಧ್ವಾಂತಾಪನೋದಕ್ಷಮನಮೃತಕಲಾವಲ್ಲಭಂ ವಿಶ್ ವಿದ್ಯೃ। 

ಕೂಪಾರೋಜ್ಜೀವಜೈವಾತೃಕನತನುಕೃತಸ್ವಾಂತಸೌಖ್ಯಂ ತ್ರಿಲೋಕೀ।

ದೀಪಂ ತಳ್ಕೈಸುಗಸ್ಮನ್ಮತಿಕುಮುದಿನಿಯಂ ನೇಮಿಚಂದ್ರಂ ಜಿನೇಂದ್ರಂ॥೧॥


ವಿಧುಕಾಂತಂ ಕಾಮದಂ ಪ್ರೋದ್ಧತಮಕರಪತಾಕಂ ನತಭ್ರೂಲತಾಪು । 

 ಷ್ಪಧನುರ್ಲೇಖಂ ಮನೋಲಕ್ಷ್ಯಕಮಸೃಣಧರಸ್ಮೇರನೇತ್ರ ಪ್ರಸೂನಾ।

ಯುಧನುದ್ಯದ್ಭಾರತೀಶಂ ಕುಡುಗೆಮಗಮೃತಶ್ರೀಸಮುತ್ಕಂಠೆಯಂ ಸ।

ನ್ಮಧುರಾಜಶ್ರೀಮನೋಜ್ಞಂ ಜಿನವದನಮಯಂ ಮಾನ್ಮಥಂ ದಿವ್ಯರೂಪಂ॥೨॥ 


ಆಯತದಿವ್ಯಮೂರ್ತಿ ಶಿವಸಾಖ್ಯಕರಂ ಹರಿಪೂಜ್ಯನೂರ್ಜಿತಂ। 

ಶ್ರೀಯುವತೀಶ್ವರಂ ಮಧುವಿರುದ್ಧ ವಿಭೂತಿ ವಿಯೋಗಿ ಚಿತ್ತ ಮಂ । 

ನೋಯಿಸದೊಂದಿ ನಿಂದ ರತಿರಾಗಮನಾಗಿಸದತ್ಯಪೂರ್ವಪು। 

ಷ್ಪಾಯುಧನೀವನಕ್ಕೆಮಗೆ ಶಾಂತಿಜಿನಂ ವೃಜಿನೈಕಶಾಂತಿಯಂ॥೩॥ 


ಬೞಲದೆ ಪುಷ್ಪಬಾಣಹತಿಯಿಂ ಪುಳಕಂಗಳನಾನದುಣ್ಮಿನಾ । 

ಣಱಿಯದೆ ಜಾಣನಿಕ್ಕದೆ ಬೆಮರ್ತಱುತಾಱದೆ ತೀರ್ದು ತಾನೆ ಮೆ।

ಯ್ಕೞಲದೆ ಡಂಗಿ ಮುಕ್ತಿಯೊಡಗೂಡಿದ ಪೆಂಪಿನ ಸೌಖ್ಯದಿಂಪು ಪೊಂ। 

ಪುೞಿಯೆನಿಸಿರ್ದ ಸಿದ್ಧರೆಮಗೀಗೆವಿಶುದ್ಧರಭೀಷ್ಟಸಿದ್ಧಿಯಂ॥೪॥ 


ಜಿನಪದಬೋಧವಾರ್ಧಿಭವೆ ಭವ್ಯಮನೋಹರಕಾಂತೆ ಕಾಮಸಂ । 

ಜನನಿ ಯಶೋವಿಕಾಸಿನಿ ಗುಣೀಕೃತಸಂಸೃತಿದೋಷೆ ಪುಣ್ಯಭಾ। 

ಗಿನಿ ಭುವನಪ್ರಬೋಧಿನಿಸುಖಾಮೃತದಾಯಿನಿ ಬಂದು ನೇಮಿಚಂ। 

ದ್ರನ ಮುಖಪದ್ಮದೊಳ್ ಸಿರಿವೊಲಿರ್ಪ ಸರಸ್ವತಿ ನಿಲ್ಕೆ ನಲ್ಮೆಯಿಂ॥೫॥ 


ಬಱಿದೆ ಮರಲ್ದರಲ್ದಕುಕವಿವ್ರಜಶಾಲಾಮಲಿಯಂ ಮಲಂಗದೆ। 

ೞ್ಚಱಿಸದೆದುರ್ವಿವೇಕಮುಖಕುಟ್ಮಲದಿಂದವಗಂಧಮಂ ಮರು । 

ಳ್ದೆಱಗದೆ ಮುಗ್ಧಚಂಪಕದೊಳೊಲ್ದು ಸರಸ್ವತಿಯೆಂಬ ತುಂಬಿ ಬಂ। 

ದೆಱಗುಗೆ ನೇಮಿಚಂದ್ರನ ನವಸ್ಮಿತಜಾತಮುಖಾಂಬುಜಾತದೊಳ್ ॥೬॥


ಕಡುಗಱಿಯದಯಶಂ ಪೆಸರಿಡೆ । 

ಕಡುವಿಳಿದಾಯಿತ್ತು ಕೀರ್ತಿ ಕವಿಗಳ್ ಕಱಿದೆಂ। 

ದೊಡೆ ಕಱಿದವರ್ಗಳ್ ಬಿಳಿದೆಂ

ದೊಡೆ ಬಿಳಿದೇಕವರನುೞಿದುಕಿಡುವರ್ ಕೆಲಬರ್॥೯॥ 



ಸುಭಗಕವಿವೃಷಭಶುಭದ। 

ಸ್ವಭಾವಸರಸಪ್ರಬಂಧಬಂಧುರಗುಣಸಾ।

ರಭಮಂ ಪೊತ್ತೆಸಗುವ ವಾ

ಗ್ವಿಭವಮುಮುಂಟಾದೊಡವನೆ ಸೇವ್ಯಂಜಗದೊಳ್॥೧೦॥


ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ, ವಾಮನಕ್ರಮಂ ।

ಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ, ಹರನಂ ನರನೊತ್ತಿ ಗಂಟಲಂ ॥

ಮೆಟ್ಟುಗೆ ಮೆಟ್ಟದಿರ್ಕೆ, ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್ ।

ಮುಟ್ಟಿದರ್ ಒತ್ತಿ ಮೆಟ್ಟಿದರ್, ಅದೇನಳವಗ್ಗಳಮೋ ಕವೀಂದ್ರರಾ॥( ೧೧॥


{ ಕಪಿ ಸಮೂಹವು ಸಮುದ್ರಕ್ಕೆ ಸೇತುವೆಯನ್ನು ಕಟ್ಟಿದರೋ ಬಿಟ್ಟರೋ ಕಾವ್ಯದಲ್ಲಂತೂ ಹಾಗೆ ಮಾಡಿದರು. ವಾಮನನು ಆಕಾಶದಲ್ಲಿ ತನ್ನ ಮೂರನೆಯ ಪಾದವನ್ನುಇಟ್ಟನೋ ಇಲ್ಲವೋ ಕವಿಯು ಹಾಗೆ ಮಾಡಿಸಿದ. ಅರ್ಜುನನು ಶಿವನ ಗಂಟಲನ್ನು ಒತ್ತಿ ಮೆಟ್ಟಿದನೋ ಇಲ್ಲವೋ ಆದರೆ ಭಾರತದಲ್ಲಿ ಹಾಗೆ ಒತ್ತಿದ. ಹೀಗೆಲ್ಲ ಅದ್ಭುತಕಾರ್ಯಗಳನ್ನುಮಾಡಿಸುವ ಕವಿಗಳ ಮಹತ್ವವು ಅದೆಷ್ಟು ಅದ್ಭುತ} ಹಾಗೆಯೇ ಶ್ರೇಷ್ಠವಾದ ಕಾವ್ಯವು ಆ ದೇಶದ ಜನರ ಪುಣ್ಯಬಲದಿಂದ ರಚಿತವಾಗುತ್ತದೆ,ಎಂದು ಹೇಳುವ ಅವನ ಪದ್ಯವು ತುಂಬ ಪ್ರಸಿದ್ಧವಾದುದು. } 


ಬೆಲೆಯಿಂದಕ್ಕುಮೆ ಕೃತಿ, ಗಾ 

ವಿಲ, ಭುವನದ ಭಾಗ್ಯದಿಂದಮಕ್ಕುಂ ; ನೋೞ್ಪಂ ॥

ಬೆಲೆಗೊಟ್ಟು ತಾರ ಮಧುವಂ ।

ಮಲಯಾನಿಲನಂ ಮನೋಜನಂ ಕೌಮುದಿಯಂ॥ ( ನೇಮಿ. ಪು. ೧-೪೫)ಅಳಿಸಿ


{ ಶ್ರೇಷ್ಠ ಕಾವ್ಯವು ದುಡ್ಡು ಕೊಟ್ಟರೆ ಬರುತ್ತದೆಯೆಂದು ಭಾವಿಸಬೇಡವೊ ಮೂರ್ಖ. ಅದು ಜಗತ್ತಿನಪುಣ್ಯದಿಂದ ಉಂಟಾಗುವಂಥದು. ವಸಂತನನ್ನು, ಮಲಯಪರೂವತದ ತಂಗಾಳಿಯನ್ನು, ಕಾಮನನ್ನು, ಬೆಳುದಿಂಗಳನ್ನು ದುಡ್ಡು ಕೊಟ್ಟು ಕೊಂಡುಕೊಂಡು ಬಾ ನೋಡೋಣ} ಅಳಿಸಿ


ಲೀಲಾವತಿ

ಇದೊಂದು ಚಂಪೂ ಕೃತಿ. ಇದು ದೀರ್ಘವಾದ ಪ್ರಣಯಕತೆಯೊಂದನ್ನು ಚಿತ್ರಿಸುತ್ತದೆ. ಇದಕ್ಕೆ ಸುಬಂಧುವೆಂಬ ಸಂಸ್ಕೃತ ಕವಿಯ “ ವಾಸವದತ್ತಾ “ ಎಂಬ ಗದ್ಯಕಾವ್ಯವು ಪ್ರೇರಣೆಯನ್ನೊದಗಿಸಿದಂತೆ ಕಾಣುತ್ತದೆ. “ ಸ್ತ್ರೀ ರೂಪಮೆ ರೂಪಂ, ಶೃಂಗಾರ ರಸಮೆರಸಂ “ ಎಂಬ ಕವಿಯ ಆದರ್ಶವು ಪ್ರಣಯ ಕತೆಯಾಗಿ ಮೂಡಿ ಬಂದಿದೆ. ಅಳಿಸಿ


ಹೇಮಂತ ವರ್ಣನೆ.

ಒಂಬತ್ತನೆಯ ಆಶ್ವಾಸಂ.


ನೀಳಲ ಕಂಪನೊಟ್ಟಿ ನಳಿನಂಗಳನಳ್ಕಿಸಿ ಬೆಳ್ಮುಗಿಲ್ಗಳಂ ।

ತೂಳಮನೆತ್ತುವಂತೆೞೆದು ಸೋಗೆಯ ಪೀಲಿಯ ಬೇಱನೆತ್ತಿ ಹಂ ॥

ಸಾಳಿಯ ತುಪ್ಪುೞಂ ತುೞಿದ ಪಶ್ಚಿಮದಿಂ ಬಡವಾಗಿ ಬರ್ಪ ಮೆ ।

ಲ್ಗಾಳಿಯನೊತ್ತಿ ತೀಡಿದುದು ಮೂಡಣ ಗಾಳಿ ಹಿಮಪ್ರವೇಶದೊಳ್॥೨॥


ಇಂದಾರಂ ಕುಳಿರ್ದಪ್ಪುದಿಂದು ಪಗಲುಂ ಮೆಯ್ಕೋಡಿತಿಂದೊಳ್ವಿಸಿಲ್ ।

ನಾಂದಂತಿರ್ದಪುದಿಂದು ಪಾಲ ಬಸಿಱಿಂ ಬಂದಂತಿರಿಂದಿಂತು ನೀರ್ ॥

ಪೊಂದಿತ್ತಿಂದಱೆಜಾವಮಾಯ್ತು ಮುಗಿದಲ್ತಿಲ್ಲುತ್ಪಳಂ ಪಂಕಜಂ ।

ಕುಂದಿತ್ತಿಂದೆಲೆ ಪೊಕ್ಕುದಕ್ಕುಮಿಳೆಯೊಳ್ ಹೇಮಂತಮೇಮಂತಣಂ॥ ೩॥


ಒಂದೆ ಕುಂದಮಲರ್ದತ್ತು ಗಾಳಿಗೊ । 

ಲ್ದೊಂದಿತೊಂದೆ ಗುಣಮಧ್ವಗ ವ್ರಜ ॥

ಕ್ಕೊಂದೆ ಮಗ್ಗುಲಮರ್ದತ್ತು ಪೊತ್ತಡ ।

ರ್ದೊಂದೆ ಬೆಳ್ಳಿ ಬೆಳಗಿತ್ತು ಮಾಗಿಯೊಳ್॥೫॥


ಮುಗಿಯೆ ಕರದ ಕಂಜಂ ವಾಜಿಗಳ್ ಸುರ್ಕೆ ಸೂತಂ ।

ಸುಗಿದು ಪೆೞವನಾದಂತೈಕಿಲಿಂ ಪೆರ್ನರಂಗಳ್ ॥ 

ತೆಗೆಯೆ ರಥದ ಕೀಲಂ ಕಿತ್ತು ಪೊತ್ತಿಕ್ಕೆ ಕಣ್ಣೊಳ್ । 

ಪುಗೆ ಪೊಗೆ ರವಿ ಸಾರ್ತಂದೂದುವಂ ಪೋಪ ಕಿಚ್ಚಂ॥ ೬॥


ಮಾಸಱಮೆನೆ ಪಾರದದಿಂ ।

ಪೂಸಿದವೋಲ್ ಪೊನ್ನವಮುಕುರಮಂ ಹಿಮಲಿಪ್ತಂ ॥

ನೇಸಱ ಬಿಂಬಂ ತಿಂಗಳ ।

ಕೂಸಿನವೊಲ್ ಕೋಡುತಿರ್ದುದಂದಿನ ದಿನದೊಳ್॥೮॥


ಚಳಿಗಳ್ಕಿ ಕಱಿಯ ಪೊಸಕಂ ।

ಬಳಿಯಂ ಮುಸುಕಿದವೊಲಗ್ನಿಯುಪಗತತಾರ್ಣಾ॥

ನಳರಾಶಿಯೆಸೆದುವಂತ । 

ರ್ಜ್ವಳದುಲ್ಮುಕಮೊಟ್ಟೆ ಪೋಗೆ ಪಥಿಕರ್ ಪಥದೊಳ್॥ ೯॥


ತಡಿವಿಡಿದು ನಡೆದು ಮೆಲ್ಲಗೆ । 

ತಡಾಗಜಳದೊಳಗೆ ಪೊಳೆವ ನಿಜಚಂಚುಗಳಂ ॥ 

ಮಿಡುಕುವ ಮೀನ್ಗೆತ್ಗೊಡರಿಸಿ । 

ತುಡುಕಿದುವಡಿಗಡಿಗೆ ಬಾಳಖಗಸಂತತಿಗಳ್॥೧೩॥


ನಂದುವ ಪುಲ್ಲ ಕಿಚ್ಚಿನೊಳೆ ಕಪ್ಪಡಮಂ ಪರಿದಿಕ್ಕಿ ಪಾಂಥನುಃ ।

ಪೆಂದಿರದೂದೆ ಪೊಣ್ಮಿ ಪೊಗೆ ಕಣ್ಗೊಳಗಂ ಪುಗೆ ಬಾಷ್ಪ ಬಿಂದು ಬೀ॥

ೞ್ತಂದು ತದಗ್ನಿಯಂ ನದಿಪಿದತ್ತಕಟಾತನ ಬೆನ್ನ ಕಪ್ಪಡಂ । 

ಬೆಂದುದು ಬಂದುದಾಗಳೆ ಹಿಮಾನಿಳನಿಂತುಟು ಪಾಂಥರುಬ್ಬಸಂ ॥ ೧೯॥


ಪೊಸಪುಲ್ಲೊಳ್ ಕಿಚ್ಚನಿಟ್ಟೂದಿದೊಡುರಿದುರಿ ಕೂರ್ಚಾಗ್ರಮಂ ಪತ್ತೆಕೆಯ್ಯಂ।

ಪೊಸೆದು ವಸ್ತ್ರಾಗ್ರದಿಂ ಮೋದಿಯುಮುಗುಳ್ವೞೆಯಿಂ ನಾಂದಿಯುಂ ಮೊಕ್ಕಳಂ ನಂ ॥

ದಿಸಲೆಂತುಂ ಪಾಂಥನಂದಾಱದೆ ನಡುಮಡುವಂ ಪೋಗಿ ಬಿರ್ದೈಕಿಲಿಂ ಕಂ । 

ಪಿಸುತಿರ್ದಂ ಪುಲ್ಲಕಿರ್ಚುಂ ಪೊಲೆಯನ ಕೆಳೆಯುಂ ಮಾಡದಾವಂಗೆ ಕೇಡಂ॥೨೦॥


ತಳಿರೊಳ್ ಮುಚ್ಚಿಟ್ಟು ಕೂಸಂ ಶಬರಿ ತೆಗೆದು ನಿಶ್ಚೇಷ್ಟಮಾಗಿರ್ದೊಡಂ ಕ । 

ಣ್ಗಳ ನೀರಂ ತೀವಿಬೇಗಂ ತೊಡೆದು ಹಿಮಕಣಾನೀಕಮಂ ತೇಂಕುದಾಣಂ ॥

ಗಳನಂಟಂಟೆಲ್ಲಿಯುಂ ಕಾಣದೆ ಹರಣಮನತ್ಯುಷ್ಣದಿಂ ಸುಯ್ಯೆ ಸುಯ್ಯಿಂ ।

ದೆಳಗೂಸೆೞ್ಚತ್ತು ಕಾವ್ಕಾವೆನೆ ತೊಱೆದ ಕುಚಾಗ್ರಗಳಂ ನೀಡುತಿರ್ದಳ್॥೨೧॥


ವಸಂತವರ್ಣನೆ 


ಉಗುೞೆ ಮದಾಳಿ ನೆಯ್ದಿಲ ಮಧುದ್ರವಮಂ ವನದೊಳ್ ಪಿಕಂ ಸರಂ । 

ದೆಗೆಯೆ ಸರಂಗಳಂ ಶಿಶಿರಮಂ ಬಿಸಿಲಾಯ್ದು ಕುಱುಂಕೆ ಮೆಲ್ಲನ ॥ 

ಲ್ಲುಗೆ ಕೞಿವಂದ ಕುಂದದಲರ್ಗಳ್ ಗಿಳಿ ತತ್ತಿಯನಿಕ್ಕಿ ಪಕ್ಕಮಂ । 

ನೆಗೆದೆಲೆದೊಂಗಲೊಳ್ ತೊಡೆಯೆ ತೀಡಿದುದೊಯ್ಯನೆ ದಕ್ಷಿಣಾನಿಳಂ॥ ೬೧॥


ಕೊನರನೆ ಸಾರ್ದ ಕೋಗಿಲೆಯೆ ಸತ್ತಸರಂ ಪೊಸತಾಗಿ ಪುಟ್ಟಿತೆಂ ।

ಬಿನಿತೆ ಬನಂಗಳೊಳ್ ಕೊನರ್ವ ಕನ್ನಡವಕ್ಕಿಯನಾದ ಮೆತ್ತರು ॥

ದ್ರನ ಮುನಿಸಿಂದೆ ಬೆಂದತನುವುಂ ಮಱುವುಟ್ಟಿಗನಾದನಂದು ಮಾ । 

ವಿನ ಕಳಿಕಾರಸಂ ನವಸುಧಾರಸಮಲ್ಲವೆ ಚೈತ್ರಮಾಸದೊಳ್॥ ೬೬॥


ಕಲಿಕೆ ಕವಲ್ತು ಮೂಡಿದುದು ಮಾಮರದೊಳ್ ಬನದೊಳ್ ಪೊರಳ್ದು ಸಾ । 

ಯಲೆ  ಪೊಲಗೆಟ್ಟು ಪೊಕ್ಕುದು ವಿಯೋಗಿಮೋಗಾವಳಿ ಕೊಲ್ವುದೆಂದು ಮು ॥ 

ನ್ನುಲಿಯದೆ ಕೊಂಬುಗೊಂಡುೞಿದ ಕೋಗಿಲೆ ಕರ್ಬಿನ ಬಿಲ್ಗೆ ಕೂರ್ತು ಕ । 

ರ್ಬೆಳನನೆಗೊಬ್ಬಿನಿಂ ಕರೆವವೊಲ್ ಕರೆದತ್ತು ವಸಂತಮಾಸದೊಳ್॥ ೬೭॥


ಚಂಚು ವಿಘಾತಜಾತ ವಿಳಸದ್ವಿವರಂ ಸಹಕಾರಕೋರಕಂ । 

ಬಂಚದ ಭಂಗಿಯೊಳ್ ಬೆರಸೆ ಸೂಸೆ ರಸಂ ಮೊಗಮಿಟ್ಟು ರಾಗದಿಂ॥ 

ಪಂಚಮದಿಂಚರಂ ನಿಮಿರೆ ಪಂಚಸರಂ ಭಯದಿಂದೆ ಕೇಳ್ದು ರೋ ।

ಮಾಂಚನಮನಾಂತು ಮೆಚ್ಚುತಿರೆ ಕೇಳಿಸಿದಂ ಕಳಕಂಠವಾಂಶಿಕ॥೬೮॥


ತಳಿರಂ ತಾಳ್ದಿ ಬೞಲ್ದು ಪೊತ್ತು ನನೆಯಂ ಪೂಗೊಂಚಲಂ ಪೇಱು ಬ ।

ಳ್ವಳನಲ್ಲಾಡುವ ಭೃಂಗಕೋಕಿಳಶುಕವ್ರಾತಂಗಳಿಂ ಬೞ್ಕುವೀ ॥

ಸೆಳೆಗೊಂಬುಂ ಕೊನೆಗೊಂಬುಮೆಂತುಂ ಫಳಭಾರಕ್ಕಾರ್ಪುವೆಂದಾಂತವೋ। 

ಲೆಳಮಾವಂ ಮಳಯಾನಿಳಂ ಬಳಸಿಕೊಂಡಿರ್ದತ್ತು ಚೈತ್ರಾದ್ರಿಯೊಳ್॥ ೬೯॥


ಗಿಳಿ ತಳಿರಂ ಮುದಂ ಮಗುೞ್ದ ಕೋಗಿಲೆ ಕೋರಕಮಂ ಮದಾಳಿ ಪೂ । 

ಗಳನರೆಗರ್ಚಿ ಪಾಱಿದುವು ನೂತನಮಂ ನವವಸ್ತು ಜಾತಮಂ ॥ 

ಬಳೆದೊಲವಿಂದಮೋಲಗಿಸಿ ಬಂದ ಬಸಂತದ ಸೊಂಪನೞ್ತಿಯಿಂ । 

ತಳೆದಱಿಪಲ್ಕೆ ಪೋಪ ವನಪಾಲಕರಂತೆ ಮನೋಜ ರಾಜನಾ॥ ೭೦॥


ಮೀಂಗಳ್ ಮಿಗೆ ಮೋಕ್ಷ ಸ್ನಾ। 

ನಂಗುಡುವವೊಲೊಡನೆ ಮುೞಿಗೆ ತಾನುಗುೞ್ದಂದು ಮುಂ ॥

ನುಂಗಿದ ದಿನಕರನಂ ಮಿಗೆ । 

ಪಿಂಗುತ್ತುಂ ರಾತ್ರಿ ರಾಹು ಶಿಶಿರಾತ್ಯಯದೊಳ್ ॥ ೮೪॥


ಭರವಸದೆ ಕವಿವ ಖರಕರ । 

ಕಿರಣಂಗಳ್ಗಳ್ಕಿ ಪುಲ್ಗಳಂ ಕರ್ಚಿದವೋ॥ 

ಲರುಣಿತತುಷಾರಜಳ ಶೀ। 

ಕರಮೆನೆ ಪನಿಪುಲ್ಲ ಪನಿಗಳಲುಗಿದುವೆಲರಿಂ॥ ೮೫॥


ಪಿರಿದುಮನಂಗನಾವ ಸಿರಿ ಕಮ್ಮನೆ ಕೂರ್ಗಣೆ ಮಾಡೆ ನಲ್ಲರಂ । 

ಬಿರಯಿಗಳಂ ಮನಂ ಬಿರಿಯೆ ತಾಗಿ ಕರಂಬಿಗಿವಂತೆಶಬೇಗದಿಂ ॥ 

ಬಿರಿಯಿಯ ಚಿತ್ತಮಂ ಪಿರಿದು ನುಂಗಲೆ ಬಾಯ್ದೆಱೆವಂದದಿನೇಂ। 

ಬಿರಿದುವೊ ತೋರಮಲ್ಲಿಗೆಗಳಬ್ಬರಮಾಗಿ ಬಸಂತಮಾಸದೊಳ್॥೧೦೪॥


ಕೃತಜ್ಞತೆಗಳು: 


ಸಂಪಾದಕರು- ರಂ. ಶ್ರೀ. ಮುಗಳಿ 

ಪ್ರಕಾಶಕರು: ಸಾಹಿತ್ಯ ಅಕಾಡಮಿ,

ರವೀಂದ್ರ ಭವನ, ೩೫, ಫಿರೋಜಶಾಹ ರಸ್ತೆ 

ನವದೆಹಲಿ - ೧೧೦೦೦೧.


 

ಬುಧವಾರ, ಏಪ್ರಿಲ್ 23, 2025

ಶ್ರೀ ವಾಣಿವಿಲಾಸ ಮಹಾಸನ್ನಿದಾನಂಚರಿತಂ - ಬಸವಲಿಂಗಯ್ಯ

ಶ್ರೀ ವಾಣಿವಿಲಾಸ ಮಹಾಸನ್ನಿದಾನಂಚರಿತಂ

ಬಸವಲಿಂಗಯ್ಯ


ಕಾವ್ಯದ ಕರ್ತೃ ಎಂ. ಎಸ್. ಬಸವಲಿಂಗಯ್ಯ, ಎಂ. ಎ, ಬಿ, ಎಲ್,


ಅಸಿಸ್ಟೆಂಟ್ ಕ್ಯೂರೇಟರ್, 

ಗವರ್ನಮೆಂಟ್ ಓರಿಯಂಟಲ್ ಲೈಬ್ರರಿ, ಮೈಸೂರು. 


ಭರತಖಂಡದಲ್ಲಿ ರಾಜ್ಯವಾಳುವ 

ರಾಜರ ನೆರವಿಯಲ್ಲಿ ಆದರೂಶರಾಜರೆಂದೂ, 

ಮಾನವಕುಲಕ್ಕೇ ಮಾನನೀಯ ಚರಿತರೆಂದೂ ಖ್ಯಾತಿವಡೆದು, 

ನಿಖಿಲಕಲಾಪೋಷಕರೆನಿಸಿ, 

ಪ್ರಜಾಹಿತೈಕದೃಷ್ಠಿಯಿಂದ, ನಿರಭಿಮಾನದಿಂದ, 

ಈ ನಮ್ಮ ಹಿರಿಯಕನ್ನಡನಾಡಾದ ಮೈಸೂರುಸಂಸ್ಥಾನವನ್ನು 

ಪರಿಪಾಲಿಸುತ್ತ, 

ಪವಿತ್ರಕರ್ನಾಟಕರತ್ನ ಸಿಂಹಾಸೀನರಾಗಿ ರಾರಾಜಿಸುತ್ತಿರುವ.

 ಶ್ರೀಮನ್ನಾಲ್ವಡಿ ಶ್ರೀ ಕೃಷ್ಣರಾಜೇಂದ್ರ ಒಡೆಯರ್ ಬಹದೂರ್, ಜಿ,ಸಿ,ಎಸ್, ಐ, ಜಿ, ಬಿ, ಇ., 

ಮಹಾಪ್ರಭುವರ್ಯರ ದಿವ್ಯಚರಣಾರವಿಂದಗಳಲ್ಲಿ

ಅನುಜ್ಞೆಯಾಂತು, 

ಶ್ರಿ ಚರಣಸೇವಕನಾದ ಈ ಗ್ರಂಥಕರ್ತನು 

ಭಯಭಕ್ತಿ ಕೃತಜ್ಞತಾಪೂರಿತನಾಗಿ

ಗ್ರಂಥವಿದನ್ನು 

ಸಮರ್ಪಿಸಿರುತ್ತಾನೆ. 


" ಗುಣಾಃ ಪೂಜಾಸ್ಥಾನಂ ಗುಣಿಸು ನ ಚ ಲಿಂಗಂ ನ ಚ ವಯಃ " ಎಂದು ಭವಭೂತಿಯು ಹೇಳಿರುವಂತೆ, ಸೌಶೀಲ್ಯಾದಿಗುಣಗಳೇ ಪೂಜಾರ್ಹವಾದುವುಗಳು. ಸುಗುಣಿಗಳ ವಿಷಯದಲ್ಲಿ ಪುರುಷರು, ಸ್ರೀಯರು, ಅಲ್ಪವಯಸ್ಸಿನವರು,ವಯೋಧಿಕರು ಎಂದು ಮುಂತಾದ ಭಿನ್ನ ಭಾವಗಳ ಕಲ್ಪನೆಗೆ ಅವಕಾಶವೇ ಇಲ್ಲ. ಊವಕಾಶವು ಎರಲೂ ಬಾರದು. ಏಕೆಂದರೆ ಸುಗುಣವೆಂಬುದು ಕಾಲ, ದೇಶ, ಜಾತಿ ಮೊದಲಾದುವುಗಳ ವ್ಯತ್ಯಾಸದಿಂದ ಬಣ್ಣಗೆಡದೆ ಸರ್ವದಾ ಸರ್ವರಿಗೂ ಪುರಸ್ಕರಣೀಯವಾದ ವಸ್ತುವಾಗಿದೆ. ಪ್ರಕೃತದಲ್ಲಿ ಈ ಕೃತಿಯ ಕಥಾನಾಯಿಕೆಯರಾದ ಶ್ರೀ ಮನ್ ಮಹಾಮಾತೃಶ್ರೀಯವರಾದರೋ ಗುರು ದೈವತಾಭಕ್ತಿ, ಭೂತದಯಾಪಶ್ಚಾತ್ತಾಪ, ಪ್ರಜಾವಾತ್ಸಲ್ಯ ಮುಂತಾದ ಗುಣಗಳಿಗೆ ಗಣಿಯಾದವರು ಮತ್ತು ನಮ್ಮನ್ನಾಳಿದವರು.ಸಾಮಾನ್ಯವಾಗಿ ಅರಮನೆಗೆ ಸಂಬಂಧಪಟ್ಟ ಗೃಹಕೃತ್ಯಗಳ ನಿರ್ವಹಣ ಮತ್ತು ಮೇಲ್ವಿಚಾರಣೆಗಳಿಗೇನೇ ಪ್ರತಿದಿನವೂ ಮೇಧಾವಿಯಾದವನೊಬ್ಬ ಮನುಷ್ಯನು ಹಗಲಿರುಳೆನ್ನದೆ ಕೆಲಸಮಾಡಿದರೂ ಎಷ್ಟೋ ಕಾರ್ಯಗಳು ಮುಗಿಯದೆ ಉಳಿಮೆಯಾಗಿ ನಿಲ್ಲುತ್ತವೆ. ಇಂತಹ ಕಾರ್ಯಗಳನ್ನೆಲ್ಲ ಲೋಪವೊದಗದಂತೆ ನೋಡಿಕೊಂಡು, ಇದರ ಜತೆಗೆ ನಮ್ಮ ಶ್ರೀಮನ್ ಮಹಾಮಾತೃಶ್ರೀಯವರು ತಮ್ಮ ಪತಿವರ್ಯರು ಅಕಾಲದಲ್ಲಿ ದೈವಾಧೀನರಾದಾಗ ಯುವರಾಜರಾಗಿದ್ದ ನಮ್ಮ ಶ್ರೀಕೃಷ್ಣರಾಜ ಒಡೆಯರವರು ಸ್ವತಃ ರಾಜ್ಯವಾಳುವ ಶಕ್ತಿಯನ್ನು ಪಡೆಯುವವರೆಗೂ ಸುಮಾರು ಎಂಟು ವರ್ಷಗಳ ಕಾಲ ತಾವೇ ಈ ಸಂಸ್ಥಾನದ ರಾಜ್ಯಭಾರವನ್ನು ವಹಿಸಿ, ಬಹಳ ದಕ್ಷತೆಯಿಂದ ಯಶಸ್ವಿಯಾದ ಮಾರ್ಗದಲ್ಲಿ ಈ ದೇಶವನ್ನು ಆಳಿದರು. ಪ್ರಜೆಗಳ ನೈತಿಕ, ಧಾರ್ಮಿಕ, ಆರ್ಥಿಕಸಮೃದ್ಧಿಗಾಗಿಯೂ ಅನೇಕ ನೂತನಕಾರ್ಯಗಳನ್ನು ಋರಂಭಿಸಿ ಅವುಗಳಲ್ಲಿ ಕೆಲವನ್ನು ತಮ್ಮ ಅಧಿಕಾರದ ಅವಧಿಯಲ್ಲಿಯೇ ಮುಗಿಯಿಸಿ, ಈ ರಾಜ್ಯವನ್ನು ಸರ್ವತೋಮುಖವಾದ ಅಭಿವೃದ್ಧಿಗೆ ತಂದರು. ಈ ವಿಷಯಗಳನ್ನೆಲ್ಲ ಈ ಗ್ರಂಥಕರ್ತರು ಸರಳ ಮೃದು ಮಧುರವೂ ರಸಭಾವಾಲಂಕಾರಾದಿಗುಣಪರಿಪುಷ್ಟವೂ, ಹೃದಯಂಗಮವೂ ಆದ ಶೈಲಿಯಲ್ಲಿ ರಸಿಕಜನಾಹ್ಲಾದಕರವಾದ ಭಾಮಿನೀಷಟ್ಪದಿಯಲ್ಲಿ ಬರೆದಿದ್ದಾರೆ. ಶ್ರೀಮನ್ ಮಹಾರಾಜ್ಞಿಯವರು ತಮ್ಮ ರಾಜ್ಯಭಾರಕಾಲದಲ್ಲಿ ಕೀರೂತಿಕಾಯರೃದ ತಮ್ಮ ಪತಿವರ್ಯರ ಸೇವೆ, ದೇಶಸೇವೆ, ಪ್ರಜಾಸೇವೆಗಳನ್ನು ಲೋಕೋತ್ತರವಾಗಿಯೂ, ಮನಸ್ಸಾಕ್ಷಿಯಾಗಿಯೂ ನೆರವೇರಿಸಿದ ರೀತಿನೀತಿ,ಪ್ರದರ್ಶಿಸಿದ, ಸೌಶೀಲ್ಯ, ಔದಾರ್ಯ,  ರಾಜನೀತಿ ನೈಪುಣ್ಯ ಮುಅಂತಾದುವುಗಳು, ಎಲ್ಲಕ್ಕಿಂತ ಮಿಗಿಲಾಗಿ, ಭಾವಿರಾಜರಾದ ತಮ್ಮ ಪುತ್ರವರ್ಯರಿಗೆ ರಾಜ್ಯವಾಳಲು ತಕ್ಕ ಅರ್ಹತೆಯನ್ನು  ಸಂಪಾದಿಸಲು ಆವಶ್ಯಕವಾದ ನಿಖಿಲವಿದ್ಯೆಗಳನ್ನೂ ಶಕ್ತರಾದ ವಿದ್ಯಾಗುರುಗಳಿಂದ ಬೋಧಿಸಲು ಮಾಡಿದ ಏರ್ಪಾಡುಗಳು - ಇವುಗಳೆಲ್ಲವೂ ವಸ್ತುಸ್ಥಿತಿಯನ್ನು ಬಿಡದೆ, ಅತಿಶಯೋಕ್ತಿಗೆ ಎಡೆಗುಡದೆ, ಸ್ವಭಾವವಾಗಿ, ಸರಳವಾಗಿ, ಹೃದ್ಯವಾಗಿ ವರ್ಣಿಸಲ್ಪಟ್ಟಿವೆ. ಈಗ ನಮ್ಮನ್ನಾಳುತ್ತಿರುವ ಮಹಾಸ್ವಾಮಿಯವರಲ್ಲಿ ನೆಲೆಸಿರುವ ದೂರದರ್ಶಿತ್ವ, ದೈವಭಕ್ತಿ, ಪೂರಜಾನುರಾಗ, ಮುಂತಾದ ಗುಣಗಳಿಗೆ ಶ್ರೀಮನ್ ಮಹಾಮಾತೃಶ್ರೀಯವರ ನೇತೃತ್ವದಲ್ಲಿ ಇವರು ಗಳಿಸಿದ ವಿದ್ಯಾಮಹತ್ವವೇ ಕಾರಣವೆಂದು ಧಾರಾಳವಾಗಿ ಹೇಳಬಹುದಾಗಿದೆ.ಈ ವಿದ್ಯಾಭ್ಯಾಸದ ಫಲವೆನಿಸಿದ ಮಹಾಸ್ವಾಮಿಯವರ ಮನಃಪರಿಪಾಕವು ಈ ಕೃತಿಯಲ್ಲಿ ಮನೋಹರವಾಗಿ ವರ್ಣಿಸಲ್ಪಟ್ಟಿದೆ.


ಶ್ರೀವಾಣಿವಿಲಾಸ ಮಹಾಸನ್ನಿಧಾನಚರಿತಂ.


ಮಂಗಳಪೂರ್ವಕ ಗ್ರಂಥಸಮರ್ಪಣಂ. 


ವಿರಚಿಸಲು ಜಗವೆಲ್ಲವನು ನೆರೆ 

ಪೊರೆಯಲದನಾದರದೆ ಮೇಣ್ ಸಂ 

ಹರಿಸಲದ ತಾಂ ತ್ರಿವಿಧಲೀಲಾಕಾರಧರನಾಗಿ ॥ 

ಕರವ ತನ್ನೊಳೆ ರವಿಯು ಸೆಳೆಯುವ 

ತೆರದೆ ಲೋಕವನುಗಿಸಿ ತನ್ನೊಳು 

ಮೆರೆವ ಸಚ್ಚಿತ್ಸುಖದ ಮೂರುತಿಯೀಗೆ ಮಂಗಳವ॥೧॥ 


ಶ್ರೀಕರಂ ತಾನಾದನಾವಳಿ 

ನಾ ಕಪಾಲದೆ ತಿರಿವ ಗಿರಿಶನು 

ಲೋಕಭರಿತವನು ಶಿವನುಮಾವಳಿನಾಂತನರೆಮೆಯ್ಯ॥

ಆಕೆ ಪಾಲಿತಲೋಕೆ ಹೃತನತ 

ಶೋಕೆ ಕರುಣಾಲೋಕೆ ಪುಣ್ಯ 

ಶ್ಲೋಕೆಯಂಬಿಕೆ ಕುಡುಗೆ ಯದುನೃಪತತಿಗೆ ಮಂಗಳವ॥೨॥ 


ಭರತವರ್ಷದೊಳಾಳ್ವ ರಾಜರ 

ನೆರವೆಯೊಳು ಸಚ್ಛೀಲಧರ್ಮಾ 

ಕರನು ತಾನೆಂದೆನಿಸಿ ಶಾಶ್ವತಕೀರ್ತಿದೀಪ್ತಿಯಲಿ॥ 

ಮೆರೆವ ನಾಲ್ವಡಿ ಕೃಷ್ಣರಾಜನು 

ಚಿರಮೆನಲ್ಕಿಳೆಯನು ವಿಭವದೆ 

ಕರುಣಿಸಲಿ ನಿರ್ವಿಘ್ನತೆಯನಾವಿಘ್ನನಾಯಕನು॥೩॥ 


ಭೂಮಮಹಿಮಾಗಾರನೆನಿಪಾ

ರಾಮನಾಗುಣಗಣದೆ ಸಲೆಯಭಿ 

ರಾಮನೆನಿಸುತೆ ಜನರ ಪ್ರೇಮಾರ್ಚನೆಯ ತಾನಾಂತು॥

ರಾಮರಾಜ್ಯವಿದೆಂದು ಸುಜನ 

ಸ್ತೋಮವುಲಿಯಲು ಕೃಷ್ಣನೃಪನು 

ದ್ಧಾಮವಿಭವದಿನಾಳುತಿರ್ದಪನಲ್ತೆ ನಾಡಿದನು॥೪॥ 


ಪ್ರಣುತನಾದೀನೃಪನ ಬಾಲ್ಯದೊ 

ಳನುವಿನಿಂ ಧರೆಯಾಳ್ದ ಮಾತೆಯ 

ವಿನುತಜೀವನಚರಿತೆಯೊರೆವೀಕೃತಿಯ ಕಾಣಿಕೆಯ॥ 

ಅನುಮತಿಯನಾಂತರ್ಪಿಸಿರ್ಪನು

ವಿನಯದಿಂ ಕೃಷ್ಣೇಂದ್ರಪದಯುಗ

ವನರುಹಕೆ ಕವಿ ಬಸವಲಿಂಗಾರ್ಯನು ನೃಪಾಶ್ರಿತನು॥೫॥ 


ಮೊದಲನೆಯ ಸಂಧಿ. 


ಸೂ॥ ಅಖಿಲಸದ್ಗುಣಗಣದೆ ವನಿತಾ 

ನಿಕರಮಣಿಯೆನೆ ಕೆಂಪನಂಜಾಂ

ಬಿಕೆಯು ತಾನವತರಿಸಿದಳು ವರಕಳಲೆಯನ್ವಯದೆ॥ 


ಶ್ರೀ ಮಹಾಬಲಶೈಲವಾಸಿನಿ 

ಸೋಮಧರವಾಮಾಂಗಭಾಸಿನಿ 

ಕಾಮದೂರಯಮೀಂದ್ರ ಚಿತ್ತವಿಲಾಸಿನೀ ಜನನೀ॥ 

ಭೂಮಹಿತೆ ಚಾಮುಂಡಾಂಬಿಕೆ 

ಕಾಮಿತಾರ್ಥವನಿತ್ತು ಸಲಹೌ 

ಪ್ರೇಮದಿಂ ವಾಣೀವಿಲಾಸಾಂಬೆಯನು ವಿಮಲೆಯನು॥೧॥


ವಾಣಿ ಬೊಮ್ಮನ ರಾಣಿ ನತಕ 

ಲ್ಯಾಣಿ ಶ್ರೀವಾಣೀವಿಲಾಸಾಂಬಿಕೆಯ ಚರೆತೆಯನು॥ 

ಕ್ಷೋಣಿ ಮೆಚ್ಚುವೊಲೊರೆಯಿಸಲು ನೀಂ 

ಮಾಣದೆನ್ನೀರಸನೆಯಗ್ರದ

ತಾಣದೊಳು ನೆಲಸುತ್ತೆ ಚಾಪಿಡು ಸನ್ಮತಿಯ ನೀಡು॥೨॥ 


ಪೂತವಹ ಕನ್ನಡದ ಸಿರಿ ತಾ 

ನೋತು ಕನ್ನಡನಾಡ ಸಲಹ 

ಲ್ಕಾತು ಶ್ರೀವಾಣೀವಿಲಾಸದ ರಾಣಿಯಾಕೃತಿಯ॥ 

ಭೂತಳದೆ ಧರೆಯನಾಳ್ದಳೆನ್ನುವ 

ರೀತಿಯಿಂದಿದನೊರೆವೆನಾಂ ವಿ

ಖ್ಯಾತೆ ಶ್ರೀವಾಣೀವಿಲಾಸಾಂಬಿಕೆಯ ಚರಿತೆಯನು॥೩॥ 


ಭರತವರ್ಷದ ದಕ್ಷಿಣದೆ ಸುರ 

ಪುರಿಯವೊಲು ರಾಜಿಸುತೆ ಮಹಿಮಾ 

ಕರವೆನಿಪ ಕಾವೇರಿಮೊದಲಹ ಪುಣ್ಯತೀರ್ಥಗಳು॥ 

ಪರಿಯೆ ಪಾವನವೆನಿಸಿ ಸಂತರ 

ಪೊರೆವುತಮರರ ಧೇನುವೋಲ್ ತಾಂ 

ಮೆರೆಯುತಿರ್ದಪುದಲ್ತೆ ಮೈಸೂರಾಖ್ಯ ಜನಪದವು॥೪॥ 


ಘನತರದ ರತ್ನದ ಸುವರ್ಣದ 

ಖನಿಗಳಿಂ ಗಿರಿತರುಗಳಿಡಿದಾ 

ವನಗಳಿಂ ಪಶುಸಸ್ಯಸಂಪತ್ಸತ್ಪ್ರಜೋತ್ಕರದ॥ 

ಅನುವಿನಿಂ ಪ್ರೇಕ್ಷಕರ ಕಣ್ಮನ 

ವನಿತುಮಂ ಸೆರೆಗೊಂಡು ಭರತಾ 

ವನಿಯೊಳೆಲ್ಲರ ಮೆಚ್ಚಿಸಿರ್ದಪುದಲ್ತೆ ಈ ನಾಡು॥೫॥ 


ಶೀರ್ಷವಿಳೆಗೆನಲೆಸೆವ ಭಾರತ 

ವರ್ಷದೊಳ್ ಪುರುಷಾರ್ಥವೆಲ್ಲವ 

ವರ್ಷಿಸುತ್ತಾಶ್ರಿತದ ಸಂಸ್ಥಾನಂಗಳೊಳಗಿದುವೆ॥ 

ಘರೂಷಣೆಗೆ ತಾನೆಡೆಯನೀಯದೆ

ಹರ್ಷದಿಂ ಧರೆಯಾಳ್ವ ಪರಿಗಾ 

ದರ್ಶದೇಶವಿದೆಂದು ಘೋಷಿಪರಾಂಗ್ಲರನವರತ॥೬॥ 


ವಸುಧೆಯೊಳು ಸುಕ್ಷತ್ರತೇಜದೊ

ಳೆಸೆವ ಯದುಕುಲದರಸರಾಳ್ದಪ 

ರೊಸಗೆಯಿಂ ಕಳೆದೈದುವರೆಶತಮಾನದಿಂದಿದನು॥ 

ರಸೆಯೊಳಿಂತುರೆ ದೀರ್ಘಕಾಲದಿ

ನೆಸೆಯುತೊಂದೇ ಕುಲದ ರಾಜರು 

ಗಸಣಕೆಡೆಗುಡದಾಳ್ವುದಚ್ಚರಿಯಲ್ತೆ ಜಗದೊಳಗೆ॥೭॥


ಓಜೆಯಿಂದಲ್ಲಲ್ಲಿಗೆಸೆಯುವ

ರಾಜಪಥಸೌಧಂಗಳಿಂದುರೆ 

ರಾಜಿಸುವ ಪರಿಪರಿಯ ವೈದ್ಯುತದೀಪತತಿಯಿಂದೆ॥ 

ಸೋಜಿಗವ ನೋಳ್ಪರ್ಗೆ ಬೀರುತೆ 

ರಾಜಸೀಮೈಸೂರುನಗರವು 

ರಾಜಧಾನಿಯೆನಿಪ್ಪುದಾಮೈಸೂರು ಜನಪದಕೆ॥೮॥


ಓಡುವಮರರ ಭಯವನಳಿಸಲು 

ನಾಡೆ ನಂಜಂ ಪೀರ್ದುಮೇಶಗೆ 

ಬೀಡು ತಾನಾಗಿರ್ದು ನಂಜನಗೂಡುನಾಮದಲಿ॥ 

ಬೇಡಿರ್ಗಿಷ್ಟಾರ್ಥವೀಯುತೆ 

ನೋಡೆ ದಕ್ಷಿಣಕಾಶಿಯೆನಿಪಾ 

ರೂಢಿಯಾಂತಿಹ ಪುರವೆಹುದು ಮೈಸೂರ ದಕ್ಷಿಣದೆ॥೯॥ 


ಕೆಲದೊಳಿದಕಿರುತಿಹುದು ಕಳಲೆಯ 

ಪೊಳಲು ಭಾರದ್ವಾಜಗೋತ್ರದ 

ಪೊಳೆವ ಕಾಥಿಯವಾಡಿ ಪಾರ್ಥಿವಕುಲಜರೈತಂದು॥ 

ನೆಲೆಸುತದರೊಳು ವಿಜಯನಗರದ 

ಬಲಯುತಾಶ್ರಿತರಾಜರೊಳಗತಿ 

ಬಲರು ತಾವೆನಿಸುತ್ತೆ ಧರಣಿಯನಾಳೆದರು ಪಿಂತೆ॥೧೦॥ 


ಜನಿಸಿತೀಕುಲದೊಳಗೆ ಮೈಸೂರ್ 

ಜನಪರಗ್ರಣಿ ರಾಜಭೂಪಗೆ

ವಿನುತಸೋದರಳಿಯನೆನಿಸುತ್ತತುಲ ಭುಜಬಲದೆ॥ 

ಘನವೆತ್ತೀಪುರದೆ ದಳವಾ

ಯ್ತನವ ಪಡೆಯುತೆ ಜಸವ ಗಳಿಸಿದ 

ನನಘಕರಿಕಾಲ್ ಮಲ್ಲರಾಜೊಡೆಯಾಹ್ವಯದ ನೃಪನು॥೧೧॥ 


ಆತನುದರದೆ ತಿಮ್ಮರಾಜನು 

ಮಾತನಿಂ ನರಸರಸನವನಿಂ 

ಖ್ಯಾತ ಚಿಕಕಾಂತರಸನವನಿಂ ಕೃಷ್ಣಪಾರ್ಥಿವನು॥ 

ಆತನಿಂ ಕಾಂತರಸನವನಿಂ 

ದೋತು ಜನಿಸುತೆ ನರಸೆಯರಸಂ 

ಖ್ಯಾತ ಮುಮ್ಮಡಿ ಕೃಷ್ಣನೃಪಸತಿಯನುಜೆಯನು ವರಿಸಿ॥೧೨॥ 


ಆಂತನವನಾಕಾಂತೆಯುದರದೆ 

ಕಾಂತೆಯರಸನನಾತನುದ್ವಹ 

ವಾಂತು ಪುಟ್ಟಯ್ಯಾಜಿಯರಸನ ಕುವರಿಯನು ಬಳಿಕ॥ 

ಕಾಂತೆಯಾಕೆಯ ಪುಣ್ಯಗರ್ಭದೆ 

ಕಾಂತರೂಪನು ಗುಣಗಣಾಢ್ಯನ 

ನೋಂತು ಪಡೆದನು ನರಸರಾಜಾಭಿಧ ಕುಮಾರಕನ॥೧೩॥ 


ಮೀರಿ ಬಾಲ್ಯವು ಜವ್ವನವು ನೆರೆ 

ಯೇರಲೀತನು ಕಪ್ಪಡಿಯ ಗುರು 

ವೀರರಾಜೇಯರಸ ಕುವರಿಯ ಪಾಣಿಯನು ಪಿಡಿದು॥ 

ಧೀರ ಮುಮ್ಮಡಿ ಕೃಷ್ಣನೃಪತಿಯ 

ಪಾರಕರುಣಾಲೋಕದಿಂ ಮೈ 

ಸೂರು ನಗರದೆ ರಾಜಿಸುತ್ತಿರೆ ಭಾರ್ಯೆಯೊಡವೆರಸಿ॥೧೪॥ 


ಪರಮಗುಣಗಣರತ್ನಹಾರನ 

ಸರಸನಾದೀನರಸರಾಜನಿ 

ಗರಸಿಯಾದಾವರಗುಣಾಂಬೆಯ ಪುಣ್ಯಗರ್ಭದೊಳು॥ 

ವರಮಹಾಲಕ್ಷ್ಮಿಯು ಸುಧಾಸಾ 

ಗರದೊಳೊಗೆದಂತೊಗೆದಳೊರ್ವಳ್ 

ವರಕುವರಿ ತಾಂ ರಾಜಯೋಗದಿನೆಸೆವ ಲಗ್ನದೊಳು॥೧೫॥ 


ಶಾಲೆವಾಹನಶಕೆಯ ನಿಧಿದಿ 

ಕ್ಪಾಲಸಪ್ತಶಶಾಂಕಸಂಖ್ಯೆಯ 

ಸಾಲಿನಕ್ಷಯವತ್ಸರದ ಸುಜೇಷ್ಠಮಾಸದೊಳು॥ 

ಕಾಲಪಕ್ಷದೆ ಷಷ್ಠಿಯೊಳು ಬುಧ 

ನೋಲಯಿಪ ವಾಸರದೆ ಕ್ರಮದಿಂ 

ಮೇಳವಿಸಿದುತ್ತರೆಯ ಭಾದ್ರದ ತಾರೆಯೊಪ್ಪುತಿರೆ॥೧೬॥ 


ನಿಂದಿರಲು ಗುರು ಮಕರಲಗ್ನದೊ 

ಳಿಂದುಕೇತುಗಳಂದು ಮೂರರೊ 

ಳೊಂದಿರಲು ನಾಲ್ಕರೊಳು ಕುಜನಾರೊಳಗೆ ಭಾಸ್ಚರನು॥ 

ಇಂದುಸುತಸಿತರಸ್ತದೊಳು ಮೇ 

ಣಂದು ರಾಹುವು ನವಮದೊಳು ತಾಂ 

ಮಂದನೊಂದಿರೆ ದಶಮಕೇಂದ್ರವನೊಗೆದಳಾಕುವರಿ॥೧೭॥ 


ಹೋರೆಯಧಿಪತಿ ನಭದೊಳುಚ್ಚತೆ 

ಯೇರಿ ಸುಖವನಂ ಮೇಣ್ ತದಧೆಪನ 

ಕಾರ್ಯದೊಡೆಯನ ನೋಳ್ಪ ಯೋಗವು ಧರ್ಮಕರ್ಮಪರು॥

ಕಾರ್ಯಕಾರ್ಯದೊಳಿರ್ಪ ಯೋಗವು 

ಧೂಮ್ರ ಮೂರೊಳು ಸೇರ್ದು ಯೋಗವು 

ಮಾರುತಾಶನನಂತೆ ನವಮದೊಳಿರ್ಪ ಯೋಗವದು॥೧೮॥ 


ಅಷ್ಟಮಾಧಿಪನಂತು ಪರಿಕಿಸೆ 

ಷಷ್ಠಗತನಾಗಿರ್ಪ ಯೋಜವು 

ದಿಷ್ಟದಿಂದೊಡಗೂಡಿ ಸಹಜಾಂತ್ಯೇಶನಾಗಿರ್ದು॥ 

ಪುಷ್ಟ ಯೋಗವನೀವ ಜೀವಗೆ 

ಸೃಷ್ಟಿಯೊಳಗೊದವಿರ್ದನೈಚ್ಯವ 

ತುಷ್ಟಿಯಿಂ ಪರಿಹಿಸಲೆಸಗಿದನಾರ್ಯ ಯೋಜವನೆ॥೧೯॥ 


ಕೆಂಪುವರ್ಣದಿನಂತೆ ರೂಪದ 

ಸೊಂಪಿನಿಂ ನೋಳ್ಪರ್ಗೆ ಸಂತಸ 

ದಿಂಪನೀವುತೆ ಮೇಣು ನಂಜುಂಡೇಶ್ವರಾಂಬೆಯರ॥ 

ಪೆಂಪುವೆತ್ತಾವರದೆ ಜನಿಸುತ 

ಲಂಪಿನಿಂ ಭಾಸಿಸುವ ಕುವರಿಗೆ 

ಕೆಂಪನಂಜಾಂಬಿಕೆಯ ಪೆಸರನಿಟ್ಟನಾಜನಕ॥೨೦॥


ವರದೆ ಚಾಮುಂಡಾಂಬಿಕೆಯ ಘನ 

ಚರಮವಂ ನೆರೆ ಪಿಡಿವವೊಲು ತಾಂ 

ಕರಯುಗಳದಿಂ ಮುಷ್ಟಿವಿಡಿವಳು ಶೈಶವದೊಳಾಕೆ॥ 

ಧರೆಯ ಸಿರಿಯಸ್ಥಿರಮದೆಂಬುದ 

ನರಿತೊಡಂ ವ್ಯರ್ಥಾಭಿಮಾನದೆ 

ಬೆರೆದು ಬಾಳುವೆಬೀಳುಗೆಯ್ವರ ನೋಡಿ ನಗುತಿಹಳು॥೨೧॥ 


ಪರರ ಕೈಯೊಳಗಿರ್ದ ಮೈಸೂರ್ 

ಸಿರಿಯು ಪರರನೆ ಮುಂದಕೆಂದುಂ 

ವರೆಸಿದಪಳೋ ಎನ್ನುತತ್ತಪಳಾಕೆ ತಾನೊಮ್ಮೆ॥ 

ಮರಳಿ ಚಾಮುಂಡಾಂಬೆಯೊಲವಿಂ 

ಪೊರೆವೆ ನಾನೇ ದೇಶವಿದನೆಂ 

ದೊರೆವವೊಲು ತಾಂ ನಲೆಯುತಿರ್ದಳು ಬಾಲೆ ಮತ್ತೊಮ್ಮೆ ॥೨೨॥ 


ಈ ತೆರದೊಳಾಕ್ಷತ್ರ ಬಾಲಿಕೆ 

ಕೌತುಕವ ನೋಳ್ಪರ್ಗೆ ಬೀರುತೆ 

ಪೂತಯಾದವವಂಶಭೂಪರ ಸಿರೆಯು ಬಳೆವಂತೆ॥ 

ಜಾತಿರತ್ನದ ತೆರದೆ ಸುಗುಣೋ 

ಪೇತೆ ಕಲುಷವಿಧೂತೆ ಪಾಪವಿ 

ಭೀತೆ ಭುವನಪುನೀತೆ ಬಳೆದಳು ನೂಂಕಿ ಬಾಲ್ಯವನು॥೨೩॥ 


ತಂದೆ ತನ್ನೀ ಕುವರಿಜಾತಕ 

ದಂದವನು ತಿಳಿಯುತ್ತೆ ಪರಮಾ 

ನಂದದಿಂದೆಳೆವರೆಯದೊಳೆ ತಾನೋದುಬರಹಗಳ॥ 

ಚಂದದಿಂ ಕಲೆಸಲ್ಕೆ ಬೋಧಕ 

ವೃಂದದಿಂದಾಕುಶಲಮತಿ ತಾ 

ನಂದು ಗಳಿಸಿದಖಿಲವಿದ್ಯೆಯನಲ್ಪಕಾಲದೊಳು॥೨೪॥ 


ಪ್ರೇತಿಯಿಂದೋದುತ್ತೆ ಕೇಳು 

ತ್ತಾ ತಳೋದರಿ ಸುಗುಣಮಂಜರಿ 

ಪೂತಭಾರತಭಾಗವತರಾಮಾಯಣಾದಿಗಳ॥ 

ನೀತಿಸಾರವ ಪೀರಿ ದ್ರೌಪದಿ 

ಸೀತೆಯರವೊಲು ಶೇಲಚರಿತ 

ಖ್ಯಾತೆ ತಾನೆಂದೆನೆಸಿ ಬಾಲ್ಯದೆ ಜಸವ ಗಳಿಸಿದಳು॥೨೫॥ 


ಬಾಲತನದೊಳೆ ದೀನಲೋಕವ 

ಪಾಲಿಸುತೆ ಸದ್ದೈವಭಕ್ತಿಯ 

ತಾಳಿ ಸತತಂ ಸತ್ಯಧರ್ಮಶ್ರದ್ಧೆಗಳ ಪಥದೆ॥ 

ಲೇಲೆಯಿಂ ನಡೆಯುತ್ತೆ ಲಲನಾ 

ಜಾಲಕಿರದಾದರ್ಶಳೆನ್ನುತೆ 

ಪೇಳೆ ಬಳೆದಳು ಬಾಲೆಯೆಂಬಾಲೋಲೆ ಶ್ರಿತಪಾಲೆ॥೨೬॥ 


ಅಂತು ಮೇಣಾನರಸಭೂಪನ 

ಕಾಂತೆ ಗರ್ಭವನೆರಡನೆಯಳೆನೆ

ಕಾಂತಸುತೌಯಂ ಪಡೆದು ಕಾಂತಮ್ಮಣ್ಣಿ ನಾಮಕಳ॥

ಕಾಂತಿಯುತಮೈಸೂರು ರಾಜಯದೊ 

ಳಾಂತು  ಚಿವನ ಪದವ ಮೆರೆದಾ 

ಕಾಂತರಾಜೇಯರಸನಂ ತಾಂ ಪೆತ್ತಳಾ ಬಳಿಕ॥೨೭॥ 


ಪಡೆದ ಸತ್ಸಂತಾನಸಂತತಿ 

ಯೊಡನೆ ಬಾಳ್ವ ನರಸರಾಜನು 

ನಡೆಸುತವರ್ಗಾ ನಾಮಕರಣಪ್ರಮುಖಸಂಸ್ಕೃತಿಯ॥ 

ನಡೆಯೆ ತಾಂ ನಿರ್ಜರರ ಲೋಕ 

ಕ್ಕೊಡನೆ ಸುತಸತಿಯರ್ಕಳಾಗ

ಳ್ಕೆಡೆದರಾದುರ್ದೈವ ವಶದಿಂದಿಂ ಶೋಕಸಾಗರದೆ॥೨೮॥ 


ಅಂದು ದಾರುಣದೈವಬಲದಿಂ 

ಬಂದ ದಂದುಗದಿಂದೆ ನೊಂದರು 

ಮೊಂದಿ ಧೃತಿಯನು ಮನದೆ ಕಂದರ ಪೊರೆವ ಭಾರವನು ॥

ಹೊಂದಿ ತನ್ನಯ ನಡೆನುಡಿಗಳಿಂ 

ದೊಂದಿಸುತೆ ಸತ್ಪಥದೊಳವರಂ 

ಮುಂದಕೊಯ್ಯುತೆ ವೀರಜನನಿಯು ಪಡೆದಳ್ಜಸವ॥೨೯॥ 


ಅಂದು ಪನ್ನೆರಡನೆಯ ವಯವದು 

ಬಂದುದನು ನೆರೆ ನೋಡಿ ತನ್ನಯ 

ನಂದಿನಿಗೆ ಶ್ರೀಕೆಂಪನಂಜಾಂಬಿಕೆಗೆ ತಜ್ಜನನಿ ॥

ಚಂದಗುವರಿಗೆ ಮದುವೆಮಾಳ್ದಪೆ 

ನೆಂದು ಮುದದಿಂ ಕ್ಷತ್ರಿಯೋತ್ತಮ 

ಬಂಧುವರ್ಗದೊಳರಸುತಿರ್ದಳು ವರನ ಗುಣವರನ॥೩೦॥ 


ಮೊದಲನೆಯ ಸಂಧಿ ಮುಗಿದುದು. 


ಎರಡನೆಯ ಸಂಧಿ. 


ಆಳೆ ರಾಜ್ಯವ ಕೃಷ್ಣವರಭೂ 

ಪಾಲ ಬೆಟ್ಟದಕೋಟೆಯರಸರ 

ಪೀಳಿಗೆಯ ಶಿಶುವೊಂದನಾಂತನು ದತ್ತ ರೂಪದಲಿ॥ 


ಇತ್ತ ಇಮ್ಮಡಿ ಕೃಷ್ಣನೃಪ ತ 

ಮ್ಮತ್ತಣಿಂ ಜಾರಿರ್ದ ರಾಜ್ಯವ 

ಮತ್ತೆ ಪಡೆಯುತೆ ಧರ್ಮನಿರತಾಂಗ್ಲೇಯಬಲದಿಂದೆ॥

 ಪತ್ತೆರಡು ವತ್ಸರದ ವರೆಗಂ

ಪೊತ್ತು ಮೈಸೂರ್ ರಾಜ್ಯಭಾರವ 

ನುತ್ತಮಾಂಗ್ಲರ ರಕ್ಷಣೆಯೊಳಾಳುತ್ತೆ ತಾನಿರಲು॥೧॥ 


ರಾಜನೀತಂ ಶ್ರಿತಜನಕೆ ಸುರ 

ಭೂಜನೀತಂ ಬುಧಸಮಾಜಕೆ 

ಭೋಜನೀತಂ ಸತ್ಯಚರಿತನು ಸದ್ಗುಣಾಕಾರನು॥ 

ಈ ಜಗದೆ ಸದ್ಧರ್ಮವೇ ಸ 

ದ್ರಾಜನೀತನ ರೂಪದಿ ಸಲೆ 

ರಾಜಿಪುದು ತಾನೆನ್ನುತಾತನ ಜನವು ಪೊಗಳುತಿರೆ॥೨॥ 


ದುಷ್ಟರಧಿಕಾರಿಗಳು ಕೆಲಬರ್ 

ಶೆಷ್ಟರೆಂದುರೆ ನಟಿಸುತರಸಂ 

ಗಿಷ್ಟಶತ್ರುಗಳಂತೆ ಕಾಲಕ್ರಮದೆ ಪರಿಣಮಿಸಿ॥ 

ಸೃಷ್ಟಿಸುತೆ ಮಿಥ್ಯಾಪವಾದವ 

ಶಿಷ್ಟರಾಗಿರ್ದಾಂಗ್ಲ ಭೂಪರ 

ದೃಷ್ಟಿಯಂ ಹದಗೆಡಿಸಿದರು ಖಳರಾತ್ಮಘಾತುಕರು॥೩॥


ಕಂಗಳಿಂ ನಿಜದಿರವ ನೋಡದೆ 

ಮಂಗಳದ ಮೈಸೂರಿಗಿದು ಬಹು 

ಭಂಗದಾಯಕವೆಂದು ಲಾರ್ಡ ಬೆಂಟಿಂಗು ತಾಂ ಭ್ರಮಿಸಿ॥ 

ಪಿಂಗಿಸುವೆನೀಸ್ಥಿತಿಯನೆನ್ನು

ತ್ತಂಗವಣೆಯಿಂ ರಾಜ್ಯಭಾರವ 

ನಂಗವಿಸಿ ತಾಂ ಕಮಿಷನರ್ಗಳ ಕೈಯೊಳಿರಿಸಿದನು॥೪॥


ಕಾಲವಶದಿಂ ಪರ್ಬುತಿಹ ತ 

ಮ್ಮಾಳಿಕೆಯ ಪ್ರತಿಭಟಿಸುತೆಲ್ಲಿಯು 

ಮೇಳುತಿಹ ದಂಗೆಯನೀಕ್ಷಿಸಿ ಭರತಖಂಡದೊಳು॥ 

ದಾಳಿಯಿಂದ ಸದೆದು ತಮ್ಮಯ

ಜೋಳಿಗೆಗೆ ಭಾರತವನೆಲ್ಲವ 

ಮೇಳವಿಸಬೇಕೆನ್ನತಾಂಗ್ಲರು ಬಯಸುತಿರಲಂದು॥೫॥ 


ಬೇಗ ಶಾಂತಿಯ ತರ್ಪೆವೆಂಬಾ 

ಸೋಗಿನಿಂ ಬೀಗುತ್ತೆ ಭರದಿಂ 

ನಾಗಪುರ ವರರ್ಜಾಸಿತಂಜಾವೂರು ಮೊದಲಾದ ॥ 

ಭೋಗಭೂಮಿಯ ರಾಷ್ಟ್ರಗಳ ತಾಂ 

ಸಾಗಿಸಿದನಾಂಗ್ಲಾಧಿಪತ್ಯ 

ಕ್ಕಾಗ ಲಾರ್ಡ ಡಾಲ್ಹೌಸಿ ಚಕ್ರೇಶ್ವರನ ಪ್ರತಿನಿಧಿಯು॥೬॥ 


ಒಮ್ಮೆ ವಂಶವು ನಿಲ್ಲೆ ರಾಜರ 

ಸೊಮ್ಮದೆಲ್ಲವು ನಮ್ಮದೆನ್ನುತೆ 

ಹೆಮ್ಮೆಯಿಂ ರಾಜ್ಯವನು ವಿಸ್ತರಿಪಾಂಗ್ಲ ನೀತಿಯನು॥ 

ಮುಮ್ಮಡಿಯ ಕೃಷ್ಣೇಂದ್ರನರಿಯು

ತ್ತೆಮ್ಮ ನಾಡಿಗಮಿಂತಹುದೊ ಎಂ 

ಬಿಮ್ಮನದೆ ತಾಂ ಕೊರಗುತಿರ್ದನು ತನುಜರಿಲ್ಲದಿರೆ॥೭॥ 


ತನ್ನ ಪೀಳಿಗೆಯಾದಿಭೂಪರು 

ಪನ್ನತಿಕೆಯಿಂ ಪಡೆದ ರಾಜ್ಯವ 

ನಿನ್ನು ತನಗೀವುದುಮದಲ್ಲದೆ ತನ್ನ ನಂತರದೆ ॥ 

ಚೆನ್ನನಾಡಿದನಾಳ್ವುದಕೆ ಸಂ 

ಪನ್ನ ವಂಶದೊಳೊರ್ವ ದತ್ತಕ 

ನನ್ನು ಪಡೆಯಲುಮಾಂಗ್ಲರಾಜ್ಞೆಯ ಬೇಳ್ದನಾ ನೃಪತಿ॥೮॥


ಅಂದು ಯದುಭೂವರನ ತೇಜದಿ 

ನಿಂದುವರೆಗಂ ಜ್ವಲಿಸುತಿಳೆಗಾ

ನಂದವೀವೀನಾಡದೀಪವದೆಲ್ಲಿ ನಂದುವುದೊ॥ 

ಎಂದು ನಿರುಕಿಸಿದಾಂಗ್ಲರುತ್ತರ 

ದಂದವೇನೆಂಬುದ ನು ನೃಪತಿಯು 

ಚಂದಗುವರನನರಸುತಿರ್ದನು ಬಂಧುವರ್ಗದೊಳು॥೯॥ 


ಒಂದು ದಿನ ನಿಜಸೋದರಳಿಯನ 

ಚಂದಚಿಕಕೃಷ್ಣರಸನರಸಿಯ 

ಳೊಂದಿ ಗರ್ಭವ ರಾಜಿಸುವಳೆಂಬುದನು ನೃಪನರಿತು॥ 

ಅಂದೆ ದಂಪತಿಯರ್ಕಳಂ ನಲ 

ವಿಂದೆ ಕರೆಸುತೆ ಜೋತಿಷದ ಬಲ 

ದಿಂದೆ ಕುವರನೆ ಜನಿಪನೆಂಬುದನವರ್ಗೆ ತಿಳಿಪಿದನು॥೧೦॥ 


ಪೇಳಿ ಮುಂದಣ ಭವ್ಯಫಲವನು 

ತಾಳಿ ಹರ್ಷೋತ್ಕರ್ಷವನು ನೃಪ 

ನೇಳಿಗೆಗೆ ಯದುವಂಶಸಂಭವಭೂಪಸಂತತಿಯ1 

ಕೇಳಿದನು ತಾನಂದು ಸದ್ಗುಣ 

ಶೀಲನೆನಿಸುತೆ ಮುಂದೆ ಪುಟ್ಟುವ

ಬಾಲನಂ ದತ್ತಕನ ರೊಪದೆ ಕುಡಲುಬೇಕೆನುತೆ॥೧೧॥ 


ಚಿತ್ತಕೊಪ್ಪುವ ತೆರದೆ ಮಾಳ್ಪುದೆ 

ನುತ್ತೆ ಭಕ್ತಿಯಿನವರು ನೃಪನಂ 

ತೃಪ್ತಿಗೊಳಿಸಲ್ ಕ್ರಿಸ್ತಶಕದಾ ತ್ರಿರಸಗಜಶಶಿಯ ॥ 

ಶಸ್ತ ದುಂದುಭಿಫಾಲ್ಗುನದ ಸಿತ 

ದಸ್ತ್ರರವಿದಿನದಶ್ವಿನಿಯ ನ 

ಕ್ಷತ್ರದಾ ಮೂರನೆಯ ಟರಣದೆ ತೌಳಿಲಗ್ನದೊಳು॥೧೨॥ 


ಆ ಮಹಿತಚಿಕಕೃಷ್ಣರಾಜನ 

ಭಾಮೆ ದೇವಾಜಾಂಬೆವೆಸರಿನ 

ಧೀಮತಿಯ ಗರ್ಭದೊಳು ಮೂರನೆಯಣುಗನೆನಿಸುತ್ತೆ॥ 

ನೇಮದಿಂ ಕರ್ಣಾಟರಾಷ್ಟ್ರ

ಸ್ವಾಮಿಯಾಗಲು ಜನಿಸಿದನು ತಾಂ 

ಚಾಮಭೂಪನು ಕಾಮರೂಪನು ಸುಗುಣಲೋಲುಪನು॥೧೩॥ 


ತನ್ನಣುಗನೀತೆರದೆ ಪುಟ್ಟುವ 

ನೆನ್ನುವುದರೊಳ್ ಪತ್ತು ದಿನಗಳ 

ಮುನ್ನ ರಮಣಂ ದೇವಲೋಕವನಡರೆ ದೇವಾಂಬೆ॥ 

ಬನ್ನದಿಂ ಬಹುದುಃಖವಾಂತಿರ

ಲನ್ನೆಗಂ ಬಾಲಾರ್ಕವಿಧು ಧರೆ 

ಯನ್ನು ಬೆಳಗುತೆ ಕವಿದ ದುಃಖದ ಹಿಮವನೋಡಿಸಿತು॥೧೪॥ 


ಇಷ್ಟ ವಾರ್ತೆಯನಿದನು ಕೇಳು 

ತ್ತಿಷ್ಟು ದಿವಸಕೆ ಯದುನೃಪಾಲರ 

ಕಷ್ಟವೆಲ್ಲವೂ ತೊಲಗಿತೆನ್ನುತ್ತಂಬಿಕೆಯ ನಮಿಸಿ॥ 

ತುಷ್ಟಿಯಾಂತನು ಕೃಷ್ಣನೃಪವರ 

ನಿಷ್ಟರೊಂದಿಗೆ ಪೋಗಿ ನೋಡುತೆ 

ಶಿಷ್ಟಗುಣದಿಂ ರಾಜಯೋಗದೆ ಪುಟ್ಟಿದಾಶಿಶುವ॥೧೫॥ 


ಬಾಲತನದೊಳೆ ಮುಂದೆ ತಾಂ ಭೂ 

ಪಾಲನಾಗುವೆನೆಂದು ಸೂಚಿಪ 

ಶೀಲಲಕ್ಷಣದಿಂದೆ ಮೆರೆವಾಶಿಶುವು ಕ್ರಮದಿಂದೆ॥ 

ಪಾಲಿಪಂಬೆಗಮಂತೆ ಸಹಜ 

ರ್ಗೋಲಯಿಪ ಜನಕೆಲ್ಲ ತನ್ನಯ 

ಲೀಲೆಯಿಂ ಮುದವಿತ್ತು ಬಳೆದನು ಬಳೆವ ಚಂದ್ರನೊಲು॥೧೬॥ 


ಕರೆಸುತಾಪ್ತರ ಕೃಷ್ಣಭೂಮಿಪ 

ನೊರೆದನವರ್ಗಂ ನೇವೆ ಬಲ್ಲಿರಿ 

ಬರಿಸವೆಪ್ಪತ್ತೆರಡುಮಾದುದು ಪುತ್ರರಿಲ್ಲೆನಗೆ ॥ 

ಅರಿಯೆ ಲೃರ್ಡ್ ಡಾಲ್ ಹೌಸಿತಂತ್ರವು 

ಭರತರಾಜರ ಕುಲವ ಕೊಯ್ಯುವ 

ಗರಗಸಂಬೊಲು ತಲ್ಲಣಂಗೊಳಿಸಿರ್ಪುದೆಲ್ಲರನು॥೧೭॥ 


ಒಡನೌ ದತ್ತನ ಪಡೆಯದಿರೆ ಪರ 

ರೆಡೆಗೆ ಪೋಪುದು ರಾಜ್ಯದೊಡೆತನ 

ತಡವ ಮಾಡದೆ ಪೇಳಿ ನೀವೆನಗುಚಿತಮಂತ್ರವನು॥ 

ಒಡೆಯನೀಪರಿ ನುಡಿಯಲಾಪ್ತರು 

ಪೊಡವೆಪನೆ ದತ್ತಕನೊರ್ವನ

ಬಿಡದೆ ಪಡೆವುದಗತ್ಯವೆನ್ನುತೆ ನೃಪಗೆ ಬಿನ್ನವಿಸೆ॥೧೮॥


ಸಾದರದೆ ಪುರಮುಖ್ಯರನು ಮ 

ರ್ಯಾದೆಯಿಂ ಕರೆತರಿಸಿ ಸಭೆಯೊಳ್ 

ಕ್ರೋಧನದ ಸುಜ್ಯೇಷ್ಠ ಬಹುಳದ ದಶಮಿರವಿದಿನದೆ॥

ಯಾದವಾನ್ವಯದೇಳ್ಗೆಯನು ಸಲೆ 

ಸಾಧಿಸಲು ತಾಂ ಬಾಹುಯುಗಳದೆ 

ಮೋದದಿಂದೆತ್ತಿರ್ದ ಶಿಶುವನು ನೃಪನು ತೋರಿಸುತೆ॥೧೯॥ 


ಉತ್ತಮರೆ ನಾನಿಂದು ಹಸ್ತದೊ 

ಳೆತ್ತಿರುವ ಶಿಶುವೆಮಗೆ ತಾಂ ನೆರೆ

ಹತ್ತಿರದ ಸಂಬಂಧವಹ ಹದಿಮೂರು ಮನೆತನದ ॥ 

ಕತ್ತಿ ಗೋಪಾಲರಸವಂಶದೊ

ಳೆತ್ತಿಹುದು ಜನ್ಮವನು ನಾನಿದ 

ದತ್ತರೂಪದೆ ನಿಮ್ಮನುಜ್ಞೆಯಬಲದಿನಾಂತಿಹೆನು॥೨೦॥


ಪ್ರೇಮದಿಂದೀಶಿಶುವಿಗೆನ್ನಯ 

ಭೂಮಹಿತಗುಣಜನಕಗಿರ್ದಾ 

ಚಾಮರಾಜೇಂದ್ರಾಖ್ಯೆಯನ್ನಿತ್ತಿಹೆನು ಮೇಣಿನ್ನು ॥ 

ಈ ಮನೋಹರಸುತನಯೋಗ

ಕ್ಷೇಮವೆಲ್ಲವು ನಿಮ್ಮ ಸೇರ್ದುದು

ಸೋಮಕುಲಬಾಲೇಂದು ನಿಮ್ಮವನೆಂದನಾ ನೃಪತಿ॥೨೧॥ 


ಎಂದು ನೃಪನೆತ್ತಿರ್ದ ಮುದ್ದಿನ 

ಕಂದನನು ಪ್ರತಿಯೊರೂವರೆಡೆಗೈ

ತಂದು ತೋರುತ್ತಾಶಿಷಂಗಳ ಯಾಚಿಸಲ್ಕವರು ॥ 

ಬಂಧು ದೀನರ್ಗೆನಿಪ ವರಮುಚು 

ಕುಂದವರದನೆ ಕಂದರೂವಿಂ 

ದಿಂದು ಬಂದಿಹನೆಂದು ಪೊಗಳಿದರಂತೆ ಪರಸಿದರು॥೨೨॥ 


ತಿಳಿಪುದಿದನಾಂಗ್ಲೇಯರಿಗೆ ತನ 

ಗೆಳೆವರೆಯದೊಳಗಾರ್ಷ ರಾಜ್ಯವ 

ನುಳಿಸಿಕೊಟ್ಟುಪಕಾರಗೆಯ್ದೊಲು ತನ್ನ ಬಾಲಕನ॥ 

ಇಳೆಗಧೀಶನ ಮಾಡಿ ತನ್ನೀ 

ಕುಲವನಂತೆ ನೃಪಾಲಬಾಲನ 

ನೊಲವಿಂ ರಕ್ಷಿಸುವೊಲವರನು ಬೇಳ್ದನಾ ನೃಪತಿ॥೨೩॥ 


ನಲವಿನಿಂದಾಂಗ್ಲೇಯರಾನೃಪ 

ತಿಲಕಗಾಸ್ವೀಕೃತಕುಮಾರನ 

ನಿಳೆಗೆ ರಾಜನ ಮಾಳ್ಪೆವೆನ್ನುತೆ ಕುಡೆ ಖರೀತವನು॥ 

ನಲಿದನಾನೃಪನಾತ್ಮ ಸಂತತಿ 

ಬಳೆಯಿತಾಂಕೃತಕೃತ್ಯನೆನ್ನು 

ತ್ತೊಲವಿನಿಂ ಸಂರಾಜ್ಞಿಗರ್ಪಿಸಿದನು ಕೃತಜ್ಞತೆಯ॥೨೪॥ 


ಬಳಾಕಮಾನೃಪನಾತ್ಮಸುತನೀ 

ಇಳೆಯನಾಳಲ್ಕರ್ಹತೆಯ ನೆರೆ 

ಗಳಿಸುವಂತೆಸಗಲ್ಕೆ ಬಿಜ್ಜೆಗರಿಂದೆ ವಿದ್ಯೆಯನು ॥ 

ಕಲಿಸೆ ತವಕಿಸುತಿರಲು ತನ್ನನು 

ಬಳಸಿ ಬಳೆದಾಮುಪ್ಪು ಬಾಳ್ದುದಿ 

ಗೆಳೆವುದರಿಯುತೆ ಬರಿಸಿ ಮಗನಂ ತೊಡೆಯ ಮೇಲಿರಿಸಿ॥೨೫॥ 


ಪಟ್ಟದಸಿಯೊಡನಾಶಿಖಾಸರ

ವಿಟ್ಟು ಪುತ್ರನ ಪುಟ್ಟಕೈಯೊಳು 

ಪಟ್ಟದರಸಾಗುತ್ತೆ ನೀಂ ಕರ್ಣಾಟರಾಷ್ಟ್ರವನು॥ 

ಶಿಷ್ಟರಾಂಗ್ಲರ್ಗಿಷ್ಟನಾಗುರೆ

ತುಷ್ಟಿಯಿಂಬಾಳೆಂದು ಪರಸುತೆ 

ದಿಷ್ಟವಶನಾಕೃಷ್ಣರಾಜನು ಸಗ್ಗವಡರಿದನು॥೨೬॥ 


ಎರಡನೆಯ ಸಂಧಿ ಮುಗಿದುದು. 



ಆರನೆಯ ಸಂಧಿ. 


ಬಾಲತನದಿಂದಖಿಲವಿದ್ಯಾ 

ಜಾಲದೊಳು ಪರಿಣತನ ಮಾಡುತೆ 

ಪಾಲಿಸಿದ ತನ್ನಯ ಸುಪುತ್ರನು ನಿಖಿಲವೈಭವದೆ॥ 

ಬಾಲನೃಪನೊಡವೆರಸಿ ಧರೆಯನು 

ಪಾಲಿಪುದನೀಕ್ಷಿಸುತೆಹರ್ಷವ

ತಾಳುತೆಸೆವಾಮಾತೆ ತಾನೇಂ ಧನ್ಯಳೋ ಜಗದೆ॥೪೧॥ 


ಸುಜನನುತನರಸಿಂಹರಾಜಾ

ತ್ಮಜನು ಶ್ರೀಜಯಚಾಮರಾಜನು 

ವಿಜಯಸುಜಯಾಂಬೆಯರು ಚಾಮುಂಡಾಂಬೆಯೆದೆನಿಪ॥ 

ನಿಜಸಹೋದರಿಯರ್ಕಳೊಡನಾ 

ತ್ರಿಜಗದಂಬೆಯ ಕರುಣದಿಂ ತಾಂ 

ವಿಜಯಿಸುಗೆ ದೀರ್ಘಾಯುರಾರೋಗ್ಯಂಗಳಂ ಪಡೆದು॥೪೨॥ 


ಜಯಿಕೆ ಚಾಮನೃಪೇಂದ್ರನರಸಿಯು 

ಜಯಿಕೆ ಶ್ರೀಕೃಷ್ಣರಾಜೇನದ್ರಜನನಿಯು 

ಜಯಿಕೆ ಕನ್ನಡನಾಡಲಕುಮಿಯು 

ಜಯಿಕೆ ಜನದಾಪುಣ್ಯಮೂರ್ತಿಯು

ಜಯಿಕೆ ಶ್ರೀವಾಣೀವಿಲಾಸದ ಮಾತೆ ಸುಪುನೀತೆ॥೪೩॥ 


ಕವಿ ನೆವೇದನಂ.


ಎಳೆಯ ಬಾಲರುಮರಿವವೊಲು ಸಲೆ 

ಲಲಿತವಹ ಕನ್ನಡದ ನುಡಿಯೊಳು

ಕಲುಷನಾಶಕರಾಮಕಥೆಯನ್ನೊರೆದು ನೃಪತಿಯನು ॥ 

ಒಲಿಸಿ ತಾಂ ರಾಜಕವಿಭೂಷಣ

ನಿಳೆಯೊಳಿವನೆಂದೆಂಬ ಪದವಿಯ 

ಗಳಿಸಿದಾ ಚಿಕಲಿಂಗರಾಜನು ಬುಧಜನಪ್ರಿಯನು॥೪೪॥ 


ಖ್ಯಾತಿವೆತ್ತಾ ಕೃಷ್ಣರಾಜನ 

ಮಾತೃವಿನ ಸಚ್ಚರಿತವಿದ ಸಂ 

ಪ್ರೀತಿಯಿಂದೊರೆಯೆನ್ನುತುತ್ತೇಜನವ ತನಗೀಯೆ॥ 

ಭೂತಳದೊಳಾವೀರಗೋತ್ರೋ

ದ್ಭೂತನಾಗುತೆ ತಾಪಹರವೇ

ದಾಂತವಿದ್ಯೆಯ ಗಳಿಸಿ ಮೈಸೂರ್ಪುರದೆ ವಾಸಿಸುತೆ॥೪೫॥ 


ಪರಮಶಿವಸಿದ್ಧಾಂತಬದೂಧಾ 

ದರನು ತಾನೆಂದೆನಿಸಿ ನಿಜಗುಣ 

ವರಯಮೀಂದ್ರನ ಕೃತಿಗಳುರುತರಸಾರವಂ ಗ್ರಹಿಸಿ॥ 

ಅರಿವಿನಿಂ ಸಂಸೃತಿಯ ಬೀಜವ 

ನುರುಹಿ ಶಿವಜೀವೈಕ್ಯದಿರವಿನೊ 

ಳಿರುವ ಜೀವನ್ಮುಕ್ತನೆವನೆಂದೊರೆಯೆ ಬುಧಜನವು॥೪೬॥ 


ಉರುತರದ ವೇದಾಂತಕೃತಿಗಳ 

ನಿರದೆ ಭಕ್ತರ ವರ್ಗಕಾವಗ

ಮೊರೆವುತರಿಪುದೆ ತನಗೆ ದೈನಂದಿನದ ಕ್ರಿಯೆಯೆನಿಸೆ॥ 

ಮೆರೆವ ಸಿದ್ಧಾರ್ಯನ ಕುಮಾರನು 

ವಿರಚಿಸಿದನೀ ಕೃತಿಯ ಸದ್ಗುರು 

ಕರುಣದಿಂ ಕವಿ ಬಸವಲಿಂಗಾರ್ಯನು ನೃಪಾಶ್ರಿತನು॥೪೭॥ 


ಶ್ರೀ ಮುಖಾಬ್ದದೊಳೂರ್ಜಮಾಸ 

ಶ್ಯಾಮಲೇತರಪಕ್ಷ ಪಂಚಮಿ 

ಸೋಮದಿನ ಮಾಜ್ಯೇಷ್ಠ ತಾರೆಯು ಶೋಭನಂ ಬರಲು॥ 

ಭೂಮಿಯನ್ನಿದನಾಳ್ದು ಪೊರೆದು 

ದ್ದಾಮಗುಣವಾಣೀವಿಲಾಸದ 

ಭೂಮಸನ್ನಿಧಿಚರಿತರಚನೆಯು ಪೂರ್ಣಮೆನಿಸಿದುದು॥೪೮॥ 


ಮಂಗಳಂ. 


ಪ್ರಜೆಗಳಂ ನೆರೆ ಸೌಖ್ಯಸಂಪ 

ದ್ವಜ್ರದೆ ಪೋಷಿಪ ಕೃಷ್ಣವಸುಧಾ 

ಭುಜನು ರಜತೋತ್ಸವದ ವೈಭವತತಿಯಿನೆಸೆದಂತೆ॥ 

ತ್ರಿಜಗದೀಶ್ವರಿಯೊಲವ ಬಲದಿಂ 

ನಿಜಕುಟುಂಬಂಬೆರಸು ಚಿರಮೆನೆ 

ವಿಜಯಿಸುಗೆ ತಾಂ ಸ್ವರ್ಣವಜ್ರೋತ್ಸವವನನುಭವಿಸೆ॥೪೯॥ 


ಮಂಗಳಂ ಶ್ರೀವಾಣಿಯಂಬೆಗೆ 

ಮಂಗಳಂ ಶ್ರೀ ಕೃಷ್ಣರಾಜಗೆ 

ಮಂಗಳಂ ಯುವರಾಜಗಾ ಜಯಚಾಮರಾಜಂಗೆ॥ 

ಮಂಗಳಂ ನೃಪಬಂಧುವರ್ಗಕೆ 

ಮಂಗಳಂ ಮೈಸೂರುದೇಶಕೆ 

ಮಂಗಳಂ ಜಗಕಕ್ಕೆ ಚಾಮುಂಡಾಂಬೆಯೊಲವಿಂದೆ॥೫೦॥ 


ಸಂಪೂರ್ಣಂ. 


ನೆನಕೆಗಳು. 

ಗ್ರಂಥಕರ್ತರು: 

ಎಂ. ಎಸ್. ಬಸವಲಿಂಗಯ್ಯ, ಎಂ. ಎ. ಬಿ. ಎಲ್, 

ಅಸಿಸ್ಟೆಂಟ್ ಕ್ಯೂರೇಟರ್, 

ಗವರ್ನಮೆಂಟ್ ಓರಿಯಂಟಲ್ ಲೈಬ್ರರಿ, ಮೈಸೂರು,