ಜೈಮಿನಿ ಭಾರತ 10 - ದೊಡ್ಡಬೆಲೆ ನಾರಾಯಣಶಾಸ್ತ್ರಿ
ಸೂಚನೆ:- ಹರಿ ಶಿಲೆಯಮೇಲೆ ನಡೆಗೆಡೆ ಸವ್ಯಸಾಚಿ ಸೌ।
ಭರಿಯ ದೆಸೆಯಿಂದಲುದ್ದಾಲಕನ ಕಥೆಗೇಳು।
ತಿರದೆ ಹಂಸಧ್ವಜನ ಪಟ್ಟಣಕೆ ಬರಲವಂ ಕಾದಲ್ಕೆ ಪೊರಮಟ್ಟನು ॥
ಹರಿ= ಯಾಗದ ಕುದುರೆಯು, ಶಿಲೆಯಮೇಲೆ = ವಿಂಧ್ಯಪರ್ವತದಲ್ಲಿ ಶಾಪಗ್ರಸ್ತಳಾದ ಚಂಡಿಯು ಬಂಡೆಯರೂಪವಾಗಿ ಬಿದ್ದಿದ್ದಳಾದ್ದರಿಂದ ಅದೇ ಬಂಡೆಯ ಮೇಲೆಯೇ, ನಡೆಗೆಡೆ= ಹೆಜ್ಜೆಯೂರಿ ಮುಂದುವರಿಯಲು ಆಗದೆ, ಸವ್ಯಸಾಚಿ = ಪಾರ್ಥನು, ಸೌಭರಿಯ ದೆಸೆಯಿಂದ= ಸೌಭರಿ ಎಂಬ ಮುನಿಯ ಮೂಲಕವಾಗಿ, ಉದ್ದಾಲಕನ= ಉದ್ದಾಲಕನೆಂಬ ತಪಸ್ವಿಯ, ಕಥೆ= ವೃತ್ತಾಂತವನ್ನು, ಕೇಳುತ= ಕೇಳುತ್ತಾ,ಇರದೆ= ಅಲ್ಲಿನಿಲ್ಲದೆ, ಹಂಸಧ್ವಜನ= ಹಂಸಧ್ವಜನೆಂಬ ರಾಜನ, ಪಟ್ಟಣಕೆ= ನಗರಕ್ಕೆ, ಬರಲು =ಐತರಲು, ಅವಂ= ಆ ಹಂಸಧ್ವಜನು, ಕಂಡು=ನೋಡಿ, ಕಾದಲ್ಕೆ= ಜಗಳವಾಡಲು, ಪೊರ-
ಮಟ್ಟನು= ಹೊರಟವನಾದನು.
ಅ॥ವಿ॥ ಹಂಸಧ್ವಜ= ಹಂಸ- ಹಂಸಪಕ್ಷಿಯನ್ನು, ಧ್ವಜ- ಧ್ವಜಪಟದಲ್ಲುಳ್ಳವನು(ಬ.ಸ.)
ಆಲಿಸೆಲೆ ಜನಮೇಜಯಕ್ಷಿತಿಪ ಮುಂದಣ ಕ।
ಥಾಲಾಪ ಕೌತುಕವನುಚಿತದಿ ಫಲುಗುಣಂ।
ನೀಲಧ್ವಜನ ಕಂಡ ಬಳಿಕಾತನಂ ಕೂಡಿಕೊಂಡಖಿಳ ಸೇನೆಸಹಿತ॥
ಮೇಲೆ ನಡೆದಂ ತೆಂಕಮೊಗನಾಗಿ ಹಯದೊಡನೆ।
ಕಾಲಿಡುವ ಮಂದಿಗಿಂಬಿಲ್ಲ ನೆಲನಾಗಸಂ।
ಸಾಲದೇಳುವ ಧೂಳಿಗೆಣ್ದೆಸೆ ಕಠೋರ ವಾದ್ಯಧ್ವನಿಗೆ ನೆರೆಯದೆನಲು॥೧॥
ಪ್ರತಿಪದಾರ್ಥ:- ಎಲೆ ಜನಮೇಜಯ ಕ್ಷಿತಿಪ = ಎಲೈ ಜನಮೇಜಯ ಭೂಕಾಂತನೆ! ಮುಂದಣ= ಮುಂದೆ ನಡೆಯತಕ್ಕ, ಕಥಾ= ಚರಿತ್ರೆಯ, ಆಲಾಪ= ತೆರದ, ಕೌತುಕವನು= ಅಚ್ಚರಿಯನ್ನು, ಆಲಿಸು= ಗಮನಿಸುವವನಾಗು, ಫಲುಗುಣಂ= ಪಾರ್ಥನು, ನೀಲಧ್ವಜನ = ಮಾಹಿಷ್ಮತೀ ರಾಜನನ್ನು, ಉಚಿತದಿಂ= ಮರ್ಯಾದೆಯಿಂದ,ಕಂಡಬಳಿಕ= ನೋಡಿದ ತರುವಾಯ, ಆತನಂಕೂಡಿಕೊಂಡು= ಅವನೊಂದಿಗೆ, ಅಖಿಳ= ಸಮಸ್ತವಾದ, ಸೇನೆಸಹಿತ= ಸೇನೆಯಿಂದೊಡಗೂಡಿ, ಹಯದೊಡನೆ= ಯಜ್ಞಾಶ್ವ ಸಮೇತನಾಗಿ, ತೆಂಕಮುಖಮಾಗಿ= ದಕ್ಷಿಣದಿಕ್ಕಿನ ಕಡೆಗೆ, ಕಾಲಿಡುವ, ಮಂದಿಗೆ= ಲೋಗರಿಗೆ, ಇಂಬಿಲ್ಲದ= ಆಸ್ಪದವಿಲ್ಲದ, ನೆಲನು= ಇಳೆಯುಳ್ಳದ್ದಾಗಿ, ಆಗಸಂ= ಅಂತರಿಕ್ಷವು, ಸಾಲದೆ= ಕಡಮೆಎಂದು, ಏಳುವ= ಮೇಲಕ್ಕೆದ್ದು ಬರುವ, ಧೂಳಿಂಗೆ = ಧೂಳಿನ ರಾಶಿಗೆ, ಎಣ್ದೆಸೆ= ಅಷ್ಟ ದಿಕ್ಕುಗಳೂ, ಕಠೋರ= ಅತಿ ಕಠಿಣವಾದ, ವಾದ್ಯಧ್ವನಿಗೆ= ಭೇರಿ ಮೊದಲಾದವುಗಳ ಸ್ವನಂಗಳಿಗೆ,ನೆರೆಯದು= ಸಾಲುವುದಿಲ್ಲ, ಎನಲು= ಎಂಬಂತೆ, ಮೇಲೆನಡೆದಂ= ಮುಂದಕ್ಕೆ ಪ್ರಯಾಣವಂ ಬೆಳೆಸಿದನು.
ತಾತ್ಪರ್ಯ:- ಅನಂತರದಲ್ಲಿ ಜೈಮಿನಿ ರುಷಿಯು ಜನಮೇಜಯರಾಯನಂ ಕುರಿತು, ಕೇಳೈ ಜನಮೇಜಯನೆ! ಮುಂದಿನ
ಕಥಾ ವೃತ್ತಾಂತವನ್ನು ಚನ್ನಾಗಿ ಆಲಿಸು. ಧನಕನಕ ರಾಶಿಗಳಿಂದಲೂ, ವಸ್ತು ವಾಹನಾದಿಗಳಿಂದಲೂ, ದಿವ್ಯಾಶ್ವದಿಂದಲೂ ಕೂಡಿ ಕೊಂಡು ತನ್ನನ್ನು ನೋಡಲು ಬಂದ ನೀಲಧ್ವಜನೆಂಬ ಮಾಹಿಷ್ಮತೀ ರಾಜನನ್ನು ಅರ್ಜನನು ನೋಡಿ ಹೆಚ್ಚಾದ ಸಂತೋಷದಿಂದ ಆತನ ಮರ್ಯಾದೆಯನ್ನೆಲ್ಲಾ ಕೈಕೊಂಡು ನೀಲಧ್ವಜನನ್ನು ಬಹುವಾಗಿ ಸತ್ಕರಿಸಿ ಬಳಿಕ ಯಜ್ಞಾಶ್ವಮಂ ಮುಂದುಮಾಡಿಕೊಂಡು, ನೀಲಧ್ವಜನೊಂದಿಗೆ ತನ್ನ ಸಕಲ ಸೇನೆಯಿಂದೊಡಗೂಡಿ, ದಕ್ಷಿಣ ದಿಕ್ಕಿಗೆ ಹೊರಟನು. ಆಗ ಸೈನ್ಯದ ರಭಸದಿಂದ ಜನರು ನೆಲದಮೇಲೆ ಅಡಿಯಿಡಲಾಗದೆಯೂ, ಆ ಸೇನಾಕಡಲಿನಿಂದೊಗೆವ ಧೂಳನ್ನು ತುಂಬಿಕೊಳ್ಳಲು ಆಕಾಶವೂ ಸಾಲದೆಂಬ ಹಾಗೂ, ಅಲ್ಲಿ ಹುಟ್ಟಿದ ವಾದ್ಯಧ್ವನಿಗಳನ್ನು ಕೇಳಲು ಇಂದ್ರಾದಿ ಅಷ್ಟ ದಿಕ್ಕುಗಳಿಗೂ ಬಹು ಕಷ್ಟವಾಗಿತ್ತೆಂಬಂತೆಯೂ ತೋರುತ್ತಲಿತ್ತು.
ಸಹದೇವನಾಗಿ ಸಮುದಿತ ನಕುಲನಾಗಿ ಸ।
ನ್ನಿಹಿತಾರ್ಜುನನುಮಾಗಿ ವರ ವೃಕೋದರನಾಗಿ।
ಮಹದಿಳಾ ಭೃದ್ರಾಜನಾಗಿ ಶಶಿಕಾಂತ ಕುಲದಿಂದೆ ಪಾಂಡವನುಮಾಗಿ॥
ಅಹಿತರುಗಳಂ ಧಾರ್ತರಾಷ್ಟ್ರರಂ ಕೂಡಿಕೊಂ।
ಡಿಹುದರಿಂದಚಲನಾಗಿಹೆನೆಂದು ಹರಿಯೊಡನೆ।
ಬಹ ಪಾರ್ಥನಂ ಕರೆದು ಮೂದಲಿಪ ತೆರದಿಂದೆ ವಿಂಧ್ಯಾದ್ರಿ ಮುಂದೆಸೆದುದು॥೨॥
ಪ್ರತಿಪದಾರ್ಥ:- (ಅರ್ಜುನನ ಪರವಾಗಿ) ಸಹದೇವನಾಗಿ = ಸಹದೇವನೆಂಬ ತಮ್ಮನಿಂದ ಕೂಡಿದ, ಸಮುದಿತಕುಲನಾಗಿ= ನಕುಲನೆಂಬ ಅನುಜನಿಂದ ಕೂಡಿ, ಸನ್ನಿಹಿತ= ಹತ್ತಿರದಲ್ಲಿರುವ, ಅರ್ಜುನನುಆಗಿ= ಅರ್ಜುನನೇ ತಾನಾಗಿ, ವರ= ಶ್ರೇಷ್ಠನಾದ, ವೃಕೋದರನುಂ ಆಗಿ= ವಾಯುನಂದನನೆಂಬ ಅಗ್ರಡನಿಂದ ಸೇರಿ, ಮಹತ್= ಅತ್ಯಧಿಕವಾದ, ಇಳಾಭೃತ್= ಮಹೀಪಾಲರಿಗೆಲ್ಲಾ, ರಾಜನಾಗಿ= ಅರಸನಾಗಿ ಚಕ್ರವರ್ತಿಯೆಂಬ ಬಿರುದಿನಿಂ ಕೂಡಿದ ದೊಡ್ಡ ಅಣ್ಣನಿಂದ ನೆರೆದು, ಶಶಿಕಾಂತಕುಲದಿಂದ= ಚಂದ್ರವಂಶದಿಂದ, ಪಾಂಡವರುಮಾಗಿ= ಪಾಂಡುರಾಯನ ಕುವರನಾಗಿ, ಅಹಿತರುಗಳಿಂ= ವೈರಿಗಳಾದ,ಧಾರ್ತರಾಷ್ಟ್ರರಿಂ= ಧೃತರಾಷ್ಟ್ರನ ಕುವರರಾದ ದುರ್ಯೋಧನಾದಿಗಳಿಂದ, ಕೂಡಿಕೊಂಡು=ಸಂರಿದವನಾಗಿ, ಇಹುದರಿಂದ=ಇರೋಣದರಿಂದ, ಅಚಲನಾಗಿ= ಧೈರ್ಯದಿಂದ ನಿಲ್ಲತಕ್ಕವನಾಗಿ, ಹರಿಯೊಡನೆ= ಯಾಗದ ಅಶ್ವದೊಂದಿಗೆ, ಬಹ=ಬರುತ್ತಲಿರುವ, ಪಾರ್ಥನಂ= ಫಲ್ಗುಣನನ್ನು,
(ವಿಂಧ್ಯಪರ್ವತದ ಪರವಾಗಿ), ಸಹದೇವನಾಗಿ = ಈಶ್ವರ, ಪಾರ್ವತಿ, ಲಿಂಗಗಳು ಮೊದಲಾದವುಗಳಿಂದಲೂ, ಸಮುದಿತ= ಕಾಡಿನಲ್ಲಿ ಹುಟ್ಟಿದ, ನಕುಲನಾಗಿ= ಮುಂಗಸಿಗಳಿಂದ ಕೂಡಿಯೂ, ಸನ್ನಿಹಿತ=ಹತ್ತಿರದಲ್ಲಿಯೇ ಇಟ್ಟುಕೊಂಡಿರತಕ್ಕ ಅಂದರೆ ಬೆಟ್ಟದ ಬಳಿಯಿರುವ ಅರ್ಜುನನೆಂಬ ಮರದಿಂದ ಸಹಿತವಾಗಿಯೂ, ವರ= ಮೇಲಾದ, ವೃಕ=ತೋಳಗಳನ್ನೆ, ಉದರನಾಗಿ= ತನ್ನಲ್ಲಿ ಧರಿಸಿರತಕ್ಕವನಾಗಿ, ಮಹತ್= ದೊಡ್ದೊಡ್ಡ , ಇಳಾಭೃತ್= ಪರ್ವತಗಳ, ರಾಜನಾಗಿ=ಅರಸನಾಗಿ-
ಯೂ, ಶಶಿಕಾಂತಕುಲದಿಂದ= ಚಂದ್ರಕಾಂತಂಗಳ ತಂಡತಂಡಗಳಿಂದ, ಪಾಂಡವರುಮಾಗಿ= ಬಿಳಿಯಬಣ್ಣದಿಂದ ಕೂಡಿಯೂ, ಅಹಿ= ಹಾವುಗಳಿಂದಲೂ, ತರುಗಳಿಂ= ವೃಕ್ಷಗಳಿಂದಲೂ, ಧಾರ್ತರಾಷ್ಟ್ರರಿಂ= ಶರೀರವೆಲ್ಲಾ ಬೆಳ್ಳಗಿರತಕ್ಕ ಹಂಸಪಕ್ಷಿಗಳಿಂದ ಕೂಡಿಯೂ, ಅಚಲನಾಗಿ= ಕದಲದೆ ಇದ್ದ ಕಡೆಯೇ ಇರುವುದೂ ಆಗಿ, ಮೂದಲಿಪ= ಅರ್ಜುನನನ್ನು ನಾನೂ ನಿನ್ನಂತೆಯೇ ಇರುವೆನೆಂದು ತೋರ್ಪಡಿಸುವ, ತೆರದಿಂದ = ಬಗೆಯಿಂದ, ಎದುರಿನಲ್ಲಿ, ವಿಂಧ್ಯಾದ್ರಿ = ವಿಂಧ್ಯ ಪರ್ವತವು, ಎಸೆದುದು= ಕಾಂತಿಯುಕ್ತವಾಯಿತು.
ಅ॥ವಿ॥ ಈ ಪದ್ಯದಲ್ಲಿ ಕವಿಯು ತನ್ನೆದುರಿಗೆ ಬರುತ್ತಲಿರುವ ಅರ್ಜುನನನ್ನು ನಾನೂ ನಿನ್ನಂತೆಯೇ ಇರುವೆನೆಂದು ತೋರುತ್ತಲಿರುವಂತೆ ವಿಂಧ್ಯಪರ್ವತವನ್ನು ವರ್ಣಿಸಿರುವನು.
ತಾತ್ಪರ್ಯ:- ಅರ್ಜುನನು ಯೃಗದ ಕುದುರೆಯನ್ನು ಮುಂದುಮಾಡಿಕೊಂಡು ಅಪರಿಮಿತ ಸೇನಾಪರಿವೃತನಾಗಿ ದಕ್ಷಿಣದಿಕ್ಕಿಗೆ ಕುದುರೆಯ ಮೈಗಾವಲಾಗಿ ಹೋಗುತ್ತಲಿರುವಾಗ ಮುಂದುಗಡೆಯಲ್ಲಿ ವಿಂಧ್ಯಪರ್ವತವುಕಾಣಿಸಿತು. ಈಶ್ವರ ದೇವಸ್ಥಾನಗಳು, ಶಿವಲಿಂಗಗಳು ಮೊದಲಾದವುಗಳಿಗೆ ಸ್ಥಾನಭೂತವಾಗಿಯೂ, ಮುಂಗಸಿಗಳು, ಅರ್ಜುನವೃಕ್ಷವು, ತೋಳಗಳ ಹಿಂಡು ಇವುಗಳಿಂದ ಕೂಡಿಯೂ, ಪರ್ವತಗಳಿಗೆಲ್ಲಾ ರಾಜನಾಗೆಯೂ, ಚಂದ್ರಕಾಂತಶಿಲೆಗಳಿಂದನ್ವಿತಮಾ-
ಮಾಗಿಯೂ, ಬಿಳಿದಾದ ಹಂಸಪಕ್ಷಿಗಳಿಂದ ಕೂಡಿಯೂ ಇರುವ ಆ ವಿಧ್ಯಾದ್ರಿಯಾದರೊ, ತನ್ನೆದುರಿಗೆ ಬರುತ್ತಲಿರುವ, ನಕುಲ ಸಹದೇವರೆಂಬ ತಮ್ಮಂದಿರಿಂದಲೂ, ಧರ್ಮಜ ವೃಕೋದರರೆಂಬ ಅಣ್ಣಂದಿರಿಂದಲೂ ಕೂಡಿದ, ಚಂದ್ರವಂಶಕ್ಕೆ ದೀಪಪ್ರಾಯನೂ, ಕೌರವಾಂತಕನು,ರಾಜಾಧಿರಾಜನು, ಪಾಂಡುನಂದನನೂ ಆದ ಅರ್ಜುನನನ್ನು ನೋಡಿ, ನಾನೂ ನಿನ್ನಂತೆಯೇ ಇರುವೆನೆಂದು ಅವನನ್ನು ಅಣಕಿಸುತ್ತಲಿತ್ತು.
ಎಸೆದುದಾ ಗಿರಿ ಗಗನ ಮಂಡಲವನಂಡಲೆವ।
ಲಸದುನ್ನತದ ಶೃಂಗದುತ್ಕರದ ಸತ್ಕರದ।
ಶಶಿಕಾಂತಮಯವಾದ ರಮಣೀಯ ಕಮನೀಯ ಕಂದರದ ಸೌಂದರದೊಳು॥
ಮುಸುಕಿ ತಪ್ಪಲ ಮೇವ ಮಂಜುಗಳ ನಂಜುಗಳ।
ದಶನದುಗ್ರಾಹಿಗಳ ಪುತ್ತುಗಳ ಮುತ್ತುಗಳ।
ಬೆಸಲಾದ ಪೆರ್ಬಿದಿರ ಕಾಡುಗಳ ಬೀಡುಗಳ ಶಬರಿಯರ ಸಂಕುಲದೊಳು॥ ॥೩॥
ಪ್ರತಿಪದಾರ್ಥ:- ಆಗಿರಿ= ಆ ವಿದ್ಯಾದ್ರಿಯಾದರೊ, ಗಗನಮಂಡಲವನು=ಅಂತರಿಕ್ಷ ಪ್ರದೇಶವನ್ನು, ಅಂಡಲೆವ= ಸೋಕತಕ್ಕ, ಲಸತ್= ಕಾಂತಿಯುಕ್ತವಾದ, ಉನ್ನತ= ಎತ್ತರವಾದ, ಶೃಂಗದ=ತುದಿಯುಳ್ಳ, ಉತ್ಕರದ= ಹೆಚ್ಚಾದ, ಸತ್ಕರದ = ಒಳ್ಳೆಯ ಕಿರಣಗಳಿಂದ ಕೂಡಿದ, ಶಶಿಕಾಂತಮಯ= ಚಂದ್ರಕಾಂತಶಿಲೆಯಿಂದ ಕೂಡಿದ, ರಮಣೀಯ= ಸುಂದರವಾದ, ಕಮನೀಯ= ಕೋರಲ್ಪಡುವ, ಕಂದರದ= ಗುಹೆಗಳಿಂದ ಕೂಡಿದ, ಸೌಂದರ್ಯದೊಳು=ಅಲಂಕಾರತಿಶಯದಲ್ಲಿ, ಮುಸುಕಿ= ಮುತ್ತಿಕೊಂಡು, ತಪ್ಪಲ=ಸಾನುಪ್ರದೇಶವನ್ನು( ಜರಿಗಳನ್ನು) ಮೇವ=ಮೇಯುತ್ತಲಿರತಕ್ಕ,ಮಂಜುಗಳ= ಹಿಮದ ಗಡ್ಡೆಗಳ, ನಂಜುಗಳ= ವಿಷದಿಂದ ಕೂಡಿದ, ದಶನದ= ದಂತಗಳನ್ನು ಪಡೆದ, ಉಗ್ರ= ಕ್ರೂರವಾದ, ಅಹಿ= ಸರ್ಪಗಳ, ಪುತ್ತುಗಳ= ಹುತ್ತದ ಸಾಲ್ಗಳ, ಮುತ್ತುಗಳ= ರತ್ನಗಳಿಂದ ಕೂಡಿದ, ಬೆಸಲಾದ= ಅಲ್ಲಲ್ಲಿ ಅಭಿವೃದ್ಧಿಯಾಗಿರತಕ್ಕ, ಪೆರ್ಬಿದಿರ= ಹೆಬ್ಬಿದಿರಿನ, ಕಾಡುಗಳ= ಕಾಂತಾರಂಗಳಲ್ಲಿ, ಬೀಡುಗಳ= ಬೈಲಿನ ಪ್ರದೇಶಗಳ, ಶಬರಿಯರ= ಕಿರಾತ ಸ್ತ್ರೀಯರ
ಸಂಕುಲದೊಳು= ಗುಂಪಿನಿಂದ, ಎಸೆದುದು= ಹೊಳೆಯುತ್ತಲಿತ್ತು.
ತಾತ್ಪರ್ಯ:- ಅದರ ಶಿಖರವು ನಭೋಮಂಡಲದ ತುದಿಯನ್ನು ಎಟಕಿಸಿಕೊಳ್ಳುತ್ತಲಿದೆಯೋ ಎಂಬಂತೆ ಕಾಣುತ್ತಲಿತ್ತು. ಮತ್ತು ಕ್ರೀಡಾಯೋಗ್ಯವಾಗಿರುವ ಚಂದ್ರಕಾಂತಶಿಲೆಗಳಿಂದಲೂ, ರಮಣೀಯವಾದ ಗುಹೆಗಳಿಂದಲೂ, ಸಾನುಪ್ರದೇಶವನ್ನು ಆವರಿಸಿಕೊಂಡಿರುವಮಂಜಿನ ರಾಶಿಗಳಿಂದಲೂ ಕ್ರೂರವಾದ ಹಾವುಗಳ ಹುತ್ತಗಳಿದಲೂ ಕೂಡಿರುವ ಆ ವಿಂಧ್ಯಾದ್ರಿಯು ಹೊಳೆಯುತ್ತಲಿತ್ತು.
ಪಕಷಿ ಮೃಗಜಾತಿಗಳು ಲೀಲೆ ಮಿಗೆ ರಮಿಸುತಿಹ।
ಯಕ್ಷ ಕಿನ್ನರ ಕಿಂಪುರುಷ ಗಂಧರ್ವ ।
ರಕ್ಷೋಗಣಂಗಳಿಂದಲ್ಲಲ್ಲಿಗೆಸೆವ ಪುಣ್ಯಾಶ್ರಮದ ಮುನಿಗಳಿಂದೆ॥
ಋಕ್ಷ ವಾನರ ಕುಲದ ವಿವಿಧ ಚೇಷ್ಟೆಗಳಿಂದೆ।
ವೃಕ್ಷ ಲತೆಗಳ ಕುಸುಮ ಫಲ ಸಮೃದ್ಧಿಗಳಿಂದ।
ಮಕ್ಷಿಗಚಲೇಂದ್ರಮೆಸೆದಿರ್ದುದು ಪುಳಿಂದಿಯರ ತನುಗಂಧ ಬಂಧುರದೊಳು॥೪॥
ಪ್ರತಿಪದಾರ್ಥ :- ಪಕ್ಷಿ= ವಿಹಗಂಗಳು, ಮೃಗಜಾತಿಗಳು = ಸಿಂಹವೇ ಮೊದಲಾದವುಗಳು, ಲೀಲೆಮಿಗೆ= ಸಂತಸವು ಹೆಚ್ಚುವಂತೆ, ರಮಿಸುತ= ಕ್ರೀಡಿಸುತ್ತಾ, ಎಹ=ಇರತಕ್ಕ, ಯಕ್ಷ= ಯಕ್ಷರೆಂಬುವ, ಕಿನ್ನರ= ಕಿನ್ನರರೆಂಬ ಹೆಸರುಳ,ಕಿಂಪುರುಷ= ಕಿಂಪುರುಷರೆಂಬ ನಾಮಧೇಯದಿಂದ ಕೂಡಿದ, ಗರುಡ= ಗರುಡನು, ಗಂಧರ್ವ= ಗಂಧರ್ವರು, ರಕ್ಷೋಗಣಂಗಳು= ರಾಕ್ಷಸಸಮೂಹವೇ ಮೊದಲಾದ ದೇವತಾ ಭೇದದವರು, ಊಲ್ಲಲ್ಲಿಗೆ= ಅಷ್ಟಷ್ಟಕ್ಕೆ, ಎಸೆವ= ಹೊಳೆಯುವ, ಪುಣ್ಯ= ಸುಕೃತದಿಂದ ಕೂಡಿದ, ಆಶ್ರಮದ= ಪರ್ಣಶಾಲೆಗಳುಳ್ಳ, ಮುನಿಗಳಿಂದ= ತಾಪಸೋತ್ತಮರಿಂದ, ಋಕ್ಷ= ಭಲ್ಲೂಕಂಗಳು( ಕರಡಿಗಳು) ವಾನರ= ಕಪಿಗಳು, ಇವುಗಳ, ಕುಲದ= ಸಮೂಹದ,ವಿವಿಧ =ತಂಡತಂಡವಾದ, ಚೇಷ್ಟೆಗಳಿಂದ= ಆಡಳಿತಗಳಿಂದ, ವೃಕ್ಷ= ತರುಗಳ, ಲತೆ= ಎಳೆವಳ್ಳಿಗಳ, ಕುಸುಮ= ಹೂಗಳ, ಫಲ= ಹಣ್ಣುಗಳ, ಸಮೃದ್ಧಿಗಳಿಂದ= ಅತಿಶಯಗಳಿಂದ, ಪುಳಿಂದಿನೀ= ಬೇಡತಿಯರ, ತನುಗಂಧ= ಶರೀರವಾಸನೆಯ, ಬಂಧುರದೊಳು= ಆವರಿಸುವಿಕೆಯಿಂದ,
ಅಚಲೇಂದ್ರಂ= ವಿಂಧ್ಯವೆಂಬ ಗಿರಿಯು, ಅಕ್ಷಿಗೆ= ನಯನಂಗಳಿಗೆ, ಎಸೆದಿರ್ದುದು= ಥಳಥಳಿಸುತ್ತಲಿತ್ತು.
ಅ॥ ವಿ॥ ಋಕ್ಷ=ಕರಡಿ, ಮತ್ತು ನಕ್ಷತ್ರ.
ತಾತ್ಪರ್ಯ = ಅನೇಕವಾದ ಹಕ್ಕಿಗಳ, ಸಿಂಹ ಹುಲಿ ಮೊದಲಾದ ದುಷ್ಟಮೃಗಗಳ ಆವಾಸಕ್ಕೆ ಸಹಾಯವಾಗಿ, ಯಕ್ಷ, ಗರುಡ, ಗಂಧರ್ವರೇ ಮೊದಲಾದ ದೇವಯೋನಿಯಲ್ಲಿ ಜನಿಸಿದವರ ಸಂಚಾರಕ್ಕೆ ಸಿಕ್ಕಿ ಪುಣ್ಯಾಶ್ರಮಗಳಿಂದಲೂ, ಪವಿತ್ರರಾದ ತಾಪಸೋತ್ತಮರಿಂದಲೂ ಕೂಡಿ, ಕಪಿಗಳು, ಕರಡಿಗಳು ಮೊದಲಾದವುಗಳ ಚೇಷ್ಟೆಗೆ ಆಕರವಾಗಿ ಎಲ್ಲೆಲ್ಲಿಯೂ ದೊಡ್ಡ ದೊಡ್ಡ ಮರಗಳು, ಒಳ್ಳೆ ಹಣ್ಣು ಕಾಯಿಗಳು, ಸುವಾಸನೆಯನ್ನುಂಟುಮಾಡುವ ಪುಷ್ಪಜಾತಿಗಳು, ಇವುಗಳಿಂದ ತುಂಬಿಕೊಂಡು ಕಿರಾತಾಂಗನೆಯರ ಶರೀರಗಂಧದಿಂದ ಕೂಡಿ, ನೋಟಕರಿಗೆ ಬಹು ಮನೋಹರವಾಗಿತ್ತು.
ಅಭಿಲಾಷೆಯಂತಿರೆ ಸದಾನವಂ ಸಿರಿಯಂತೆ।
ವಿಧವಾಸ್ಪದಂ ಕಲಾನಿಧಿಯಂತೆ ಮೃಗಧರಂ।
ನಭದಂತೆ ಕುಜಯುತಂ ದ್ವಿಜನಂತೆ ವಂಶ ಪರಿಶೋಭಿತಂ ಸ್ವರ್ಗದಂತೆ॥
ಶುಭ ಸುರಭಿ ಸಂಭೃತಂ ರಣದಂತೆ ಶರವೃತಂ।
ಸಭೆಯಂತೆ ಚಿತ್ರ ಪತ್ರಾನ್ವಿತಂದಿನಕರ।
ಪ್ರಭೆಯಂತೆ ಪುಂಡರೀಕೋಲ್ಲಾಸಕರಮಾಗಿ ತಚ್ಛೈಲಮೆಸೆದಿರ್ದುದು॥೫॥
ಪ್ರತಿಪದಾರ್ಥ:- ತಚ್ಛೈಲಂ = ಆ ವಿಂಧ್ಯಪರ್ವತವು, ಅಭಿಲಾಷೆಯಂತೆ= ಇಷ್ಟಾರ್ಥ ಸಿದ್ಧಿಯಂತೆ, ಇರೆ= ಇರಲು, ಸದಾ= ಅನವರತವೂ, ನವಂ= ನೂತನವಾದದ್ದು, ಸದಾನವಂ= ನಿಶಿಚರರಿಂದ ಕೂಡಿದ್ದು, ಸಿರಿಯಂತೆ= ಸಂಪತ್ತಿನ ಹಾಗೆ, ವಿಭವ= ಸಾಮ್ರಾಜ್ಯಕ್ಕೆ, ಆಸ್ಪದಂ= ಆಧಾರವಾದದ್ದು, ವಿಭವ= ವೈರಾಗಯವುಳ್ಳ ಯೋಗಿಗಳಿಗೆ, ಆಸ್ಪದಂ= ಆಶ್ರಯವಾಗಿರುವ, ಕಲಾನಿಧಿಯಂತೆ= ಕಲಾಪೂರ್ಣನಂತೆ, ಮೃಗಧರಂ= ಮೃಗ- ಜಿಂಕೆಯನ್ನು, ಧರಂ= ಗುರ್ತಾಗಿ ಧರಿಸಿರುವವನು, ಮೃಗಧರಂ- ಸಿಂಹಮೊದಲಾದ ದುಷ್ಟ ಮೃಗಗಳಿಂದ ಕೂಡಿರುವುದು, ನಭದಂತೆ= ಅಂತರಿಕ್ಷದೋಪಾದಿಯಲ್ಲಿ, ಕುಜಯುತಂ= ಕುಜ-ಅಂಗಾರಕ ಗ್ರಹದಿಂದ, ಯುತಂ- ಯುಕ್ತವಾಗಿರುವುದು, (ಆಕಾಶ) ಕೈಜ= ವೃಕ್ಷಭೇದಗಳಿಂದ, ಯುತಂ= ಸಹಿತಮಾದದ್ದು, (ಪರ್ವತ) ದೂವಿಜನಂತೌ= ಬ್ರಾಹ್ಮಣನ ತೆರದಿಂದ, ವಂಶಪರಿಶೋಭಿತಂ= ವಂಶ- ಸದ್ವಂಶದಿಂದ, ಪರಿಶೋಭಿತಂ= ಅಲಂಕಾರಯುಕ್ತವಾದದ್ದು,( ಬ್ರಾಹ್ಮಣ ವಂಶ), ವಂಶ= ಬಿದೆರುಮೆಳೆಗಳು ಅಲ್ಲಲ್ಲಿರೋ-
ಣದರಿಂದ, ಪರಿಶೋಭಿತಂ= ಅಂದವಾಗಿ ಕಾಣುವುದು (ಪರ್ವತ) ಸ್ವರ್ಗದಂತೆ= ಇಂದ್ರಲೋಕದಂತೆ, ಶುಭ= ಶುಭಕರವಾದ
ಸುರಭಿ= ಪುಣ್ಯದಾಯಕವಾದ ಕಾಮಧೇನುವಿನಿಂದ, ಸಂಭೃತಂ= ಸಹಿತವಾದದ್ದು, (ಸ್ವರ್ಗ) ಶುಭ= ಕಲ್ಯಾಣಯೋಗ್ಯವಾದ
ಸುರಭಿ= ಶ್ರೀಗಂಧಾದಿಗಳ ಸುವಾಸನೆಯಿಂದ, ಸಧೃತಂ= ಸಹಿತವಾದದ್ದು, ರಣದಂತೆ= ಕಾಳಗದಂತೆ, ಶರಧೃತಂ= ಸರಳ್ಗಳಿಂದ ಕೂಡಿರುವುದು(ರಣರಂಗವು) ಶರ= ನೀರಿನಲ್ಲಿ ಬೆಳೆಯುವ ಜೊಂಡುಗಳನ್ನು, ಧೃತಂ= ಧರಿಸಿರುವುದು, ಸಭೆಯಂತೆ= ಒಡ್ಡೋಲಗದ ರೀತೆಯಾಗಿ, ಚಿತ್ರ=ವಿಧವಿಧವಾದ, ಪತ್ರ= ಲೇಖನಾದಿಗಳಿಂದ, ಅನ್ವಿತಂ= ಕೂಡಿರುವುದು,
(ಓಲಗವು), ಚಿತ್ರ= ನಾನಾಪ್ರಕಾರವಾದ, ಪತ್ರ= ಎಲೆಗಳಿಂದ, ಅನ್ವಿತಂ= ಸೇರಿರುವುದು,( ವಿಂಧ್ಯಾದ್ರಿಯು) ದಿನಕರ= ರವಿಯ, ಪ್ರಭೆಯಂತೆ = ಪ್ರಕಾಶದಹಾಗೆ, ಪುಂಡರೀಕ= ತಾವರೆ ಹೂಗಳಿಗೆ, ಉಲ್ಲೃಸಕರಂ= ಅರಳಲು ಅನುಕೂಲವಾಗಿ ಸಂತೋಷವನ್ನುಂಟುಮಾಡುವುದು, (ಸೂರ್ಯನು), ಪುಂಡರೀಕ= ವ್ಯಾಘ್ರಸಮೂಹಗಳಿಗೆ, ಉಲ್ಲಾಸಕರಂ= ಆನಂದವನ್ನುಂಟುಮಾಡುವುದು,( ಪರ್ವತವು), ಆಗಿ= ಈ ಬಗೆಯಾಗಿ ತೋರುತ್ತ, ಇರ್ದುದು= ಇತ್ತು.
ಅ॥ ವಿ॥ ಸಿರಿ (ತ್ಭ) ಶ್ರೀ( ತ್ಸ) ದ್ವಿಜ= ಎರಡು, ಜ=ಜನ್ಮವುಳ್ಳವನು, ಅಂದರೆ ಹುಟ್ಟಿನಿಂದಲೂ ಉಪನಯನಸಂಸ್ಕಾರದ-
ವರೆಗೂ ಒಂದು ಜನ್ಮವೆಂದೂ(ಶೂದ್ರಜನ್ಮ) ತದನಂತರ ಬ್ರಾಹ್ಮಣ ಜನ್ಮವೆಂದೂ ಭಾವಿಸಬೇಕು( ದ್ವಿಜ-ಬ್ರಹ್ಮ, ಕ್ಷತ್ರಿಯ,ವೈಶ್ಯರು) ಮತ್ತು ಹಲೂಲುಗಳು. ಪಕ್ಷಿಗಳು. ಇದರಲ್ಲಿ ವಿರೋಧಾಭಾಸವು ತೋರುವುದು.
ತಾತ್ಪರ್ಯ:- ಅದೂ ಅಲ್ಲದೆ ಆ ಪರ್ವತದಲ್ಲಿ ಎಲ್ಲೆಲ್ಲಿಯೂ ರಾಕ್ಷಸರೂ ವಿರಕ್ತರಾದ ಯೋಗಿಗಳೂ, ಸಿಂಹಾದಿಮೃಗಗಳೂ, ದೊಡ್ಡ ದೊಡ್ಡ ಮರಗಳೂ, ಬಿದಿರು ಮೆಳೆಗಳೂ ಶ್ರೀಗಂಧ, ಜಂಬು ಮೊದಲಾದವೂ, ವಿಧವಿಧವಾದ ಎಲೆಗಳೂ, ಹೈಲಿಗಳೂ, ತುಂಬಿಕೊಂಡು ಇಷ್ಟಾರ್ಥ, ಐಶ್ವರ್ಯಲಕ್ಶ್ಮಿ, ಚಂದ್ರ, ಆಕಾಶ, ಬ್ರಾಹ್ಮಣ, ಸ್ವರ್ಗಲೋಕ, ಯುದ್ಧಭೂಮಿ, ಸಭಾಭವನ, ಸೂರ್ಯಮಂಡಲ ಇವುಗಳನ್ನು ಜ್ಞಾಪಿಸುತ್ತಲಿತ್ತು.
ನಾಗಭೂಷಣನಾಗಿ ಶಿವನಲ್ಲಹರಿಗಿರ್ಕೆ।
ಯಾಗಿ ಪಾಲ್ಗಡಲಲ್ಲ ಶಿಖಿ ನಿವಾಸಸ್ಥಾನ।
ಮಾಗಿ ದಿಗ್ಭಾಗಮಲ್ಲಷ್ಟಾಪದೋದ್ಭಾಸಮಾಗಿ ನೈಪಥ್ಯಮಲ್ಲ॥
ಗೋ ಗಣಾನ್ವಿತಮಾಗಿವ್ರಜಮಲ್ಲ ಖಡ್ಗಧರ।
ನಾಗಿ ಪಟುಭಟನಲ್ಲ ಮಹಿಷೀ ವಿಲಾಸಕರ।
ಮಾಗಿ ನೃಪಗೇಹಮಲ್ಲೆನಿಸಿರ್ದುದಾಶ್ಚರ್ಯ ಸಾಂದ್ರಮಚಲೇಂದ್ರಮೆಸೆದುದು॥೬॥
ಪ್ರತಿಪದಾರ್ಥ:- ಕವಿಯು ಮುಂದಿನ ಪದ್ಯದಲ್ಲಿ ಮೊದಲು ವಿರೋಧಾಭಾಸವನ್ನು ತೋರಿಸಿ ಅನಂತರ ಅದರ ಪರಿಹಾರ ವನ್ನೂ ಹೇಳುತ್ತಾ ವಿಂಧ್ಯಾದ್ರಿಯನ್ನು ವರ್ಣಿಸುತ್ತಲಿದ್ದಾನೆ. ವಿಂಧ್ಯಪರವತವಾದರೊ, ನಾಗಭೂಷಣನಾಗಿ = ದೊಡ್ಡದೊಡ್ಡ ಹಾವುಗಳನ್ನು ಒಡವೆಗಳಂತೆ ಮೈಯಲ್ಲೆಲ್ಲಾ ಹಾಕಿಕೊಂಡಿದ್ದರೂ, ಶಿವನಲ್ಲ= ಪರಮೇಶ್ವರನು ಎಂದು ಹೇಳಲಾಗುವುದಿಲ್ಲ, ಇದು ವಿರೋಧವು, ವಿಧ್ಯಪರ್ವತದಲ್ಲಿ ಅನೇಕವಾದ ಹಾವುಗಳು ತುಂಬಿದ್ದವೆಂಬುದು ಇದಕ್ಕೆ ಪರಿಹಾರವು, ಹರಿಗೆ= ನಾರಾಯಣಮೂರ್ಯಿಗೆ, ಇರ್ಕೆಯಾಗಿ= ನೆಲೆಯಾಗಿದ್ದರೂ, ಪಾಲ್ಗಡಲಲ್ಲ= ಹಾಲಿನ ಸಮುದ್ರವಲ್ಲವೆಂಬ ವಿರೋಧವನ್ನು,
ಹರಿಗೆ=ಸಿಂಹ, ಕೋತಿ, ಕಪ್ಪೆ, ನದಿ, ಅಶ್ವತ್ಥವೃಕ್ಷ, ಗಿಳಿಗಳೇ ಮೊದಲಾದವುಗಳಿಗೆ ವಿಂಧ್ಯಪರ್ವತವು ಆಸರೆಯಾಗಿತ್ತೆಂದು ಪರಿಹಾರವಾಗಿ ಊಹಿಸಬೇಕು, ಶಿಖಿ= ಬೆಂಕಿಗೆ, ನಿವಾಸಸ್ಥಾನಂ=ನೆಲೆಯು, ಆಗಿ=ಆದರೂ, ದಿಗ್ಭಾಗಂ= ಆಗ್ನೇಯ ಮೂಲೆಯು, ಅಲ್ಲ= ಆಗಿರಲಿಲ್ಲ, ಎಂದರೆ ನವಿಲುಗಳಿಂದ ತುಂಬಿತ್ತೆಂದು ಆಶಯವು, ಅಷ್ಟಾಪದ= ಸುವರ್ಣದಿಂದ, ಉದ್ಭಾಸಮಾಗಿ= ಹೊಳೆಯುತ್ತಲಿದ್ದರೂ, ನೈಪಥ್ಯಂ= ರಾಣಿವಾಸವು(ಅಲಂಕಾರವು) ಅಲ್ಲ= ಆಗಿರಲಿಲ್ಲ, ಎಂದರೆ ಅಷ್ಟಾಪದ= ಶರಭವೆಂಬ ಮೃಗಬೇಧದಿಂದ ತುಂಬಿತ್ತೆಂದು ಊಹೆಯು, ಗೋಗಣಾನ್ವಿತಮಾಗಿ= ಹಸುಗಳ ಗುಂಪಿನಿಂದ ಸೇರಿದ್ದರೂ, ವಜ್ರಮಲ್ಲ=ದನದ ಕೊಟ್ಟಿಗೆಯಲ್ಲ, ಎಂದರೆ ಗೋ= ಜಲರಾಶಿಗಳು, ಸರೋವರ ಮೊದಲಾದವುಗಳ, ವ್ರಜ= ಸಮುದಾಯದಿಂದ, ಅನ್ವಿತಂ= ಕೂಡಿತ್ತೆಂದು ಅರಿಯಬೇಕು, ಖಡ್ಗಧರನಾಗಿ= ಕತ್ತಿಯನ್ನು ಹಿಡಿದಿರತಕ್ಕವನಾಗಿ, ಪಟುಭಟನಲ್ಲ= ಶೂರಾಗ್ರೇಸರನಲ್ಲ, ಅಂದರೆ ಅನೇಕಶಖಡ್ಗಮೃಗಗಳುಇದ್ದವೆಂದು ಭಾವವು,ಮಹಿಷೀ= ಪಟ್ಟದರಸಿ-
ಯಿಂದ, ವಿಲಾಸಕರಮಾಗಿ= ಆನಂದಪಡಲು ಯೋಗ್ಯವಾಗಿದ್ದರೂ, ನೃಪಗೇಹವು= ರಾಜಭವನವು,ಅಲ್ಲ= ಅಲ್ಲವು, ಎಂದರೆ, ಮಹಿಷೀ= ಎಮ್ಮೆಗಳಿಂದ, ವಿಲಾಸಕರಮಾಗಿ= ಸಂತೋಷವನ್ನುಂಟುಮಾಡುವುದಾಗಿತ್ತೆಂದು ಆಶಯವು, ಈ ರೀತಿಯಲ್ಲಿ, ಅಚಲೇಂದ್ರಂ= ವಿಂಧ್ಯವೆಂಬ ಪರ್ವತರಾಜನು, ಆಶ್ಚರ್ಯಸಾಂದ್ರಂ=ಅಚ್ಚರಿಯನ್ನುಂಟುಮಾಡುವ ಪದಾರ್ಥಗಳಿಂದ ಕೂಡಿದಂಥಾದ್ದಾಗಿ ಕಾಣಿಸುತ್ತಲಿತ್ತು.
ತಾತ್ಪರ್ಯ:- ಅನೇಕವಾದ ಹಾವುಗಳಿಂದಲೂ ಸಿಂಹಾದಿಗಳಿಂದಲೂಕೂಡ, ನವಿಲುಗಳಿಗೆ ವಾಸಸ್ಥಳವಾಗಿಯೂ, ಸುವ-
ರ್ಣರಾಶಿಗಳಿಂದ ಸಹಿತವಾಗಿಯೂ, ಅನೇಕವಾದ ಖಡ್ಗಮೃಗಗಳು, ಹಸುಗಳು, ಎಮ್ಮೆಗಳು ಇವುಗಳಿಗೆಲ್ಲಾ ಆಕರವಾಗಿ ನೋಡುವವರಿಗೆಲ್ಲಾ ಪರಮಾಶ್ಚರ್ಯವನ್ನುಂಟುಮಾಡುತ್ತ. ಈಶ್ವರ, ಕ್ಷೀರಸಮುದ್ರ, ಅಗ್ನಿದಿಕ್ಕು, ದನಗಳದೊಡ್ಡಿ, ಅಂತಃಪುರ ಇವುಗಳಲ್ಲಿ ಯಾವುದಿರಬಹುದೆಂಬ ಅನುಮಾನವನ್ನುಂಟುಮಾಡುತ್ತಲಿತ್ತು.
ಶೃಂಗಮಯಮುರುಶಿಲಾ ಸಂಗಮಯಮಧಿಕ ಮಾ।
ತಂಗಮಯಮನುಪಮ ಭುಜಂಗಮಯಮುನ್ನತ ಲ।
ವಂಗಮಯಮಮಿತ ಸಾರಂಗಮಯಮದ್ಭುತದ ಸಿಂಗಮಯ ಶರಭಮಯವು॥
ಭೃಂಗಮಯಮವಿರಳ ವಿಹಂಗಮಯಮೊಪ್ಪುವ ಕು।
ರಂಗಮಯಮಮರಿಯರನಂಗಮಯ ಕೇಳಿಗಳ।
ಸಂಗಮಯಮೆನಿಪ ಗಿರಿ ಭಂಗಮಯಮಲ್ಲದುತ್ತುಂಗಮಯ ಮಾಗಿರ್ದುದು॥೭॥
ಪ್ರತಿಪದಾರ್ಥ:- ಶೃಂಗ= ಶಿಖರಗಳ, ಮಯವು= ಆಧಿಕ್ಯದಿಂದ ಕೂಡಿದ್ದು, ಉರು= ವಿಸ್ತಾರವಾದ, ಶಿಲಾ=ಅರೆಯ, ಅಪಾಂಗ= ಹತ್ತಿರವಿರುವ ದೊಡ್ಡ ದೊಡ್ಡ ಗುಂಡುಗಳ, ಮಯವು=ಅತಿಶಯದಿಂದ ತುಂಬಿರುವುದು, ಮದಿತ= ಮದವೇರಿದ, ಮಾತಂಗ=ಹಸ್ತಿಗಳಿಂದ, ಮಯವು= ಸಾಂದ್ರವಾಗಿರುವುದು, ಅನುಪಮ= ಅಸದೃಶವಾದ, ಭುಜಂಗಮಯಂ= ಹಾವುಗಳಿಂದ ಕೂಡಿರುವುದು, ಉನ್ನತ= ಬಹು ಎತ್ತರವಾದ, ಪ್ಲವಂಗಮಯಂ= ಕೋತಿಗಳಿಂದ ತುಂಬಿರುವುದು, ವಿತತ= ಹೆಚ್ಚಾದ, ಸಾರಂಗಮಯಂ= ದುಪ್ಪಿಮೃಗಗಳಿಗೆ ಆಕರವಾಗಿರುವುದು, ಅದ್ಭುತ= ಅಚ್ಚರಿಯನ್ನುಂಟುಮಾಡತಕ್ಕ, ಸಿಂಗಮಯಂ= ಸಿಂಹಗಳಿಂದ ಕೂಡಿರುವುದು, ಶರಭಮಯವು= ಶರಭ ಮೃಗಗಳಿಂದ ತುಂಬಿರುವುದು, ಭೃಂಗಮಯಂ=ಅಳಿವಿಂಡಿನಿಂ ಸಹಿತಮಾಗಿರುವುದು, ಅವಿರಳ= ಸಾಂದ್ರವಾದ, ವಿಹಂಗಮಯಂ= ಹಕ್ಕಿಗಳಿಂದೊಡಗೂಡಿರುವುದು, ಒಪ್ಪುವ= ಮೆರೆಯತಕ್ಕ, ಕುರಂಗಮಯಂ=ಜಿಂಕೆಗಳಿಂದ ಕೂಡಿರುವುದು, ಅಮರಿಯರ= ಸುರಾಂಗನೆಯರ, ಅನಂಗಮಯಂ= ಮದನ ಕೇಳಿಗಳಿಂದ ವ್ಯಾಪಿಸುರುವುದು. ಕೇಳಿಗಳ= ಸುರತಸುಖದ, ಸಂಗ= ಸಹಾಯದಿಂದ, ಮಯಂ= ಒಪ್ಪತಕ್ಕದ್ದು, ಎನಿಪ= ಎಂದು ಹೊಗಳಿಸಿಕೊಳ್ಳುವ, ಗಿರಿ= ವಿಂಧ್ಯಾದ್ರಿಯು, ಭಂಗಂ= ಕೃಶವಾದ, ಅಯಂ= ಗಮನವು, ಇಲ್ಲದ= ಇಲ್ಲದೆ ಇರತಕ್ಕ, ಉತ್ತುಂಗಮಯಮಾಗಿ= ಅತ್ಯುನ್ನತವಾದದ್ದಾಗಿ, ಇರ್ದುದು= ಇತ್ತು.
ಅ॥ವಿ॥ ಸಿಂಗ( ತ್ಸ) ಸಿಂಹ (ತ್ಭ) ವಿಹಂಗ= ವಿಹ-ಅಂತರಿಕ್ಷದಲ್ಲಿ, ಗಮ-ಸಂಚರಿಸುವುದು ( ಹಕ್ಕಿ, ಕೃ. ವೃ.)
ತಾತ್ಪರ್ಯ:- ಆ ಪರ್ವತದಲ್ಲಿ ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಕಲ್ಲುಗಳು, ಬಂಡೆಗಳು, ಗೂಡುಗಳು, ಮತ್ತಗಜಗಳು ,ಹಾವುಗಳು, ಕೋತಿಗಳು, ಸಿಂಹ, ಸಾರಂಗಗಳು, ಭೃಂಗಗಳು, ಪಕ್ಷಿರಾಶಿಗಳು, ಜಿಂಕವಿಂಡುಗಳು, ದೇವಕನ್ನಿಕೆಯರ ವಿಹಾರ ಸ್ಥಳಗಳು, ಇವುಗಳಿಂದ ತುಂಬಿ ಅಲ್ಲಲ್ಲಿ ಕದಲದೆ ಸ್ಥಿರವಾಗಿಯೂ ಅತ್ಯುತನ್ನತವಾಗಿಯೂ ಇತ್ತು.
ಬಹು ಕಾಲಮೆನಗೆ ನೀರ್ಮಳೆಗರೆದ ಪುರುಷಾರ್ಥ।
ಕಹಹ ಮೋದ್ಬಿಂದುಗಳನೀಗ ಸುರಿದಪೆನೆಂದು।
ಮಹಿ ನಭಸ್ಥಳಕೂರ್ಧ್ವಮುಖಮಾಗಿಸೂಸುವ ರಜದ ಸೋನೆಯೆನೆ ಧೂಳಿಡೆ॥
ಬಹುಳ ತರು ಗುಲ್ಮಲತೆ ಮೃಗ ಪಕ್ಷಿ ಕ್ರಿಮಿ ಕೀಟ।
ಗುಹೆ ದೊಣೆ ಮೊರಡಿ ಪಳ್ಳ ಕೊಳ್ಳ ಜರಿ ಸರಿ ಜಲುಗು।
ಗಹನ ಗಹ್ವರದ ವಿಂಧ್ಯಾದ್ರಿಯಂ ಫಲುಗುಣನ ಸೇನೆ ತುಳಿದಸಿಯರೆದುದು॥೮॥
ಪ್ರತಿಪದಾರ್ಥ:- ಬಹುಕಾಲ = ಅನೇಕ ದಿನಗಳವರೆಗೂ, ಮೃದ್ಬಿಂದುಗಳನು= ಧೂಳಿನಿಂದ ತುಂಬಿದ ಮಣ್ಣಿನ ಕಣಗಳನ್ನು, ಈಗ= ಈ ಕಾಲದಲ್ಲಿ, ಸುರಿದಪೆನು= ಕರೆಯುತ್ತೇನೆ, ಎಂದು = ಎಂಬುದಾಗಿ, ಮಹಿ=ಇಳೆಯು, ನಭಸ್ಥಳಕೆ= ಆಕಾಶಮಾ-
ರ್ಗಕ್ಕೆ, ಉದಙ್ಮುಖಮಾಗಿ= ಮೇಲ್ಮುಖವಾಗಿ, ಸೂಸುವ= ಬೀರುತ್ತಲಿರುವ,ರಜದ= ಧೂಳಿನ ಸಂಬಂಧವಾದ,ಸೋನೆಯಂ
= ಸಣ್ಣ ಸಣ್ಣ ಕಣಗಳೊ ಎಂಬಂತೆ, ಧೂಳಿಡೆ= ಧೂಳು ತುಂಬಿಕೊಳ್ಳಲಾಗಿ, ಬಹಳ= ನಾನಾಪ್ರಕಾರವಾದ, ತರು=ವೃಕ್ಷಗಳು, ಗುಲ್ಮ= ಪೊದರುಗಳು, ಲತೆ= ಎಳೆವಳ್ಳಿಗಳು, ಮೃಗ= ಸಿಂಹಗಳು, ಪಕ್ಷಿ= ಹಕ್ಕಿಗಳು, ಕ್ರಿಮಿ= ಸಣ್ಣ ಸಣ್ಣ ಹುಳುಗಳು, ಕೀಟ= ಬಹುದೊಡ್ಡ ಹುಳುಗಳು, ಗುಹೆ= ಗವಿಗಳು, ದೋಣಿ= ನೀರಿನ ಹೊಂಡಗಳು, ಮೊರಡಿ= ಗುಡ್ಡಗಳು, ಪಳ್ಳ= ಹಳ್ಳಗಳು, ಕೊಳ್ಳ= ದಿಣ್ಣೆಗಳು, ಜರಿ= ಕಿಬ್ಬರಿಗಳು, ಸರಿ= ನೀರಿಳಿಯತಕ್ಕ ಸ್ಥಳಗಳು, ಜಲಗು= ನುಣುಪಾದ ಬಂಡೆಗಳು, ಗಹನ= ದುರ್ಗಮವಾದ ಅರಣ್ಯ ಮಾರ್ಗವು, ಗಂಹರದ= ಮೇಲಿನಿಂದ ಕೆಳಗೆ ಹೊರಳಲು ಸಿದ್ಧವಾದ ಗುಂಡುಗಳು ಇವೇ ಮೊದಲಾದವುಗಳಿಂದ ಕೂಡಿದ, ವಿಂಧ್ಯಾದ್ರಿಯಂ= ವಿಂಧ್ಯ ಪರ್ವತದ ದಾರಿಯನ್ನು, ಫಲುಗುಣನ= ಪಾರ್ಥನ, ಸೇನೆ= ದಂಡು, ತುಳಿದು= ಮೆಟ್ಟಿ, ಅಸಿಯರದುದು= ಆಯಾಸದಿಂದ ಕೂಡಿತು.
ತಾತ್ಪರ್ಯ = ಈ ಪರ್ವತಾಗ್ರದಿಂದ ಕೆಳಗೆಬಿದ್ದ ಮಂಜಿನಿಂದ ಭೂಮಂಡಲಕ್ಕೆಲ್ಲಾ ನೀರುಂಟಾದ ಪ್ರತ್ಯುಪಕಾರಕ್ಕಾಗಿ ಈ ಭೂಮಂಡಲದಿಂದ ಆಕಾಶಪ್ರಾಂತಕ್ಕೆ ಧೂಳಿನ ಮಳೆಯು ಎದ್ದಿದೆಯೋ ಎಂಬಂತೆ ಎಲ್ಲೆಲ್ಲಿಯೂ ಧೂಳನ್ನು ಎಬ್ಬಿಸುತ್ತ, ದುಷ್ಟ ಮೃಗಗಳಿಂದಲೂ, ಕ್ರಿಮಿಕೀಟಾದಿಗಳಿಂದಲೂ, ಗಿಡಮರಗಳಿಂದಲೂ, ಹಳ್ಳತಿಟ್ಟುಗಳಿಂದಲೂ, ಕಲ್ಲು, ಗುಂಡು, ದುರ್ಗಮವಾದ ಗುಹೆಗಳು ಇವುಗಳಿಂದಲೂ ಕೂಡಿರುವ ಅತಿ ದುಸ್ತರವಾದ ದಾರಿಯಲ್ಲಿ ಅರ್ಜುನನ ಉತ್ತಮಾಶ್ವವೂ, ಅಪರಿಮಿತವಾದ ಸೇನೆಯೂ ಹೊರಟು ನಡೆಯಲಾರದೆ ಹೆಚ್ಚಾದ ಬಳಲಿಕೆಯಂ ತಾಳಿರುವುದನ್ನು ನೋಡಿ.
ಹರಿಯ ಸೇವಕರ ಬರವಂ ಕಾಣುತಾ ವಿಧ್ಯ।
ಗಿರಿಯ ದುರ್ಮಾರ್ಗಮುಂ ಸನ್ಮಾರ್ಗಮಾಯ್ತು ದು।
ರ್ಧರ ಹೃದಯ ವನಜಾಂಧಕಾರಮುಂ ಸುಪ್ರಕಾಶಿತಮಾಯ್ತು ವಿಕೃತಿಯಡಗಿ॥
ಉರುತರ ಪ್ರಭಾವದಿ ವಿಮುಕ್ತ ಭಾವಿತಮಾಯ್ತು।
ನಿರುಪಮಾಶಾ ಪರಿಜ್ಞಾನಮಾಯ್ತಿರದೆ ಗೋ।
ಚರಮೃಯ್ತು ವೆಷ್ಣುಪದಮೆನೆ ನಡೆದುದಾ ಹಯಂ ಬೆಂಬಿಡದೆ ಸೇನೆಸಹಿತ॥೯॥
ಪ್ರತಿಪದಾರ್ಥ:- ಹರಿಯ= ನಾರಾಯಣನ, ಮತ್ತು ಕುದುರೆಯ, ಸೇವಕರ= ಭಕ್ತರಾದವರ, ಕಾವಲ್ಗಾರರ,ಬರವಂ= ಆಗಮನವನ್ನು, ಕಾಣುತ= ಈಕ್ಷಿಸುತ್ತಲೆ, ಆ ವಿಂಧ್ಯಗಿರಿಯ= ಆ ವಿಂಧ್ಯ ಪರ್ವತದ, ದುರ್ಮಾರ್ಗಮುಂ = ದೈರಾಚಾರವು, ಮತ್ತು ಕಠಿಣವಾದ ದಾರಿಯು, ಸನ್ಮಾರ್ಗಮಾಯ್ತು = ನ್ಯಾಯಮಾರ್ಗದಿಂದ ಕೂಡಿದ್ದಾಯಿತು, ಅತ್ಯುತ್ತಮವಾದ ದಾರಿಯಾಯಿತು, ದುರೂಧರ= ಹೊಂದಿರಲಸದಳಮಾದ, ವನ= ಕಾಡಿನಲ್ಲಿ, ಜ= ಉತ್ಪನ್ನವಾದ ತರುಗಳ, ಅಂಧಕಾರಂ= ಕತ್ತಲೆಯು, ಮತ್ತು ದುರೂಧರ= ಪಡೆಯಲಶಕ್ಯಮಾದ, ಹೃದ್ವನಜ= ಹೃದಯವೆಂಬ ತಾವರೆಯ, ಅಂಧಕಾರಂ= ಕತ್ತಲೆಯನ್ನು ಹೋಲುವ ಅವಿವೇಕವು, ಸುಪ್ರಕಾಶಿತಂ= ತಡೆಯಿಲ್ಲದಿರುವುದು, ಮತ್ತು ಬೆಳಕನ್ನೈದಿದಂಥಾದ್ದು, ಆಯ್ತು= ಆಗಿಬಿಟ್ಟಿತು, ವಿಕೃತಿಯು= ದುಸ್ಸಹವಾದ ಕಾಡುದಾರಿಯ ವಿಕಾರವು, ಮತ್ತು ನೈಜವಾದ ವಿಕಾರವು, ಅಡಗಿ= ಒಳ್ಳೆದಾರಿಯಾಗಿ, ತಗ್ಗಿಹೋಗಿ, ಉರುತರಂ= ಬಹು ಹೆಚ್ಚಾದ, ಪ್ರಭಾವದಿ= ಮಹಾತ್ಮೆಯಿಂದ, ಶಕ್ತಿಯಿಂದ, ವಿಮುಕ್ತ= ಸರರಿಂದಲೂ, ಕುದುರೆಯ ಕಾವಲಿಗಾಗಿ ಬಂದಿದ್ದ ಸೇನಾಜನರಿಂದಲೂ, ಭಾವಿತಂ= ಸಮೀಪಸ್ತವಾದದ್ದು, ಯೋಚಿಸಲ್ಪಟ್ಟದ್ದು, ಆಯ್ತು=ಆಗಿಬಿಟ್ಟೆತು, ನಿರುಪಮ= ಅಸದೃಶಮಾದ, ಆಶಾ= ದಿಗ್ಭಾಗದ, ಮತ್ತು ವಿಂಧ್ಯಾಟವಿಯನ್ನು ನೋಡಬೇಕೆಂಬ ಕುತೂಹಲದಿಂದ, ಪರಿಜ್ಞಾನವು= ತಿಳಿವಳಿಕೆಯು, ಆಯ್ತು= ಉಂಟಾಯಿತು, ಇರದೆ= ಸುಮ್ಮನಿರದೆ, ವಿಷ್ಣುಪದಂ= ವೈಕುಂಠಪದವಿಯು, ಮತ್ತು ಅಂತರಿಕ್ಷವು, ಗೋಚರವಾಯಿತು=ಕಣ್ಗಳಿಗೆ ಕಂಡುಬಂದಿತು, ಎನೆ=ಎಂಬಂತಾಗಿ, ಆ ಹಯಂ= ಆ ಅಶ್ವವು, ಬೆಂಬಿಡದೆ= ಅನುಸರಿಸದಿರದೆ, ಸೇನೆಸಹಿತ= ದಳದೊಂದಿಗೆ, ನಡೆದುದು= ವಿಂಧ್ಯಪರ್ವತದ ಮಾರ್ಗದಲ್ಲಿ ನಡೆಯಲಾರಂಭಿಸಿತು.
ಅ॥ ವಿ॥ ವನ= ನೀರಿನಲ್ಲಿ, ಜ= ಹುಟ್ಟಿದ್ದು, (ಕಮಲ- ಕೃ. ವೃ.) ಬೆನ್ನನ್ನು ಬಿಡದೆ ( ಕ್ರಿ. ಸ. )
ತಾತ್ಪರ್ಯ:- ವಿಂಧ್ಯ ಪರ್ವತದ ದುರ್ಗಮವಾದ ದಾರಿಯು ವಿಷ್ಣುಭಕ್ತರಾದ ಅರ್ಜುನಾದಿಗಳಿಗೆ ತೊಂದರೆಯಾಗಕೂಡದೆಂ-
ದುಬಹು ಸುಖವಾದ ಮಾರ್ಗವಾಯಿತು. ಅರಣ್ಯದಲ್ಲಿ ಮರಗಳು ಸಾಂದ್ರವಾಗಿ ಬೆಳೆದು ಬಹು ಕತ್ತಲಾಗಿದ್ದದ್ದು ಎವರಿಗೆ ತೊಂದರೆಯಾಗಬಾರದೆಂದು ಅಂಧಕಾರವೆಲ್ಲ ಹೋಗಿ ಹೆಚ್ಚಾಗಿ ಪ್ರಕಾಶಿಸುತ್ತಲಿತ್ತು. ಎಲ್ಲೆಲ್ಲಿಯೂ ಕಲ್ಲುಗುಂಡುಗಳು, ಮುಳ್ಳುಗಳು, ಹಳ್ಳದಿಣ್ಣೆಗಳೂ ಆಗಿದ್ದ ನೆಲವೆಲ್ಲವೂ ಯಜ್ಞಾಶ್ವಕ್ಕೆ ಬಾಧೆಯಾಗಬಾರದೆಂದು ಅತಿ ಮನೋಹರವಾದ ದಾರಿಯಾಯಿತು. ಇಷ್ಟು ಅನುಕೂಲತೆಗಳು ಉಂಟಾದ್ದರಿಂದ ಎರಡನೆಯ ಸ್ವರ್ಗಲೋಕವೋ ಎಂಬಂತಿರುವ ವಿಂಧ್ಯಾದ್ರಿಯ ದಾರಿಯಲ್ಲಿ ಕುದುರೆಯು ಮುಂದೆ ನಡೆಯುತ್ತಾ ಅದರ ಹಿಂದುಗಡೆಯಲ್ಲಿ ಸೇನಾಸಮೇತರಾದ ಅರ್ಜುನಾದಿಗಳು ಬರುತ್ತಿರುವಾಗ,
ಮಂದೆ ಸಂದಣಿಸಿ ಬೆಂಕೊಂಡು ನಡೆತರೆ ಕುದುರೆ।
ಮುಂದೆ ಬರೆವರೆ ಕಂಡುದೊಂದು ಯೋಜನದಗಲ।
ದಿಂದೆಸೆವ ಶಿಲೆಯನದರೊಳ್ ಪೊರಳ್ದಪೆನೆಂಬ ತವಕದಿಂದತಿಭರದೊಳು॥
ಬಂದಡರ್ದಾ ಕಲ್ಲ ಮೇಲೆ ಹರಿ ಕಾಲಿಟ್ಟು।
ದಂದು ಹರಿ ಮೆಟ್ಟಿದೊಡೆ ಪೆಣ್ಣಾದುದಂತೆ ಮೇ।
ಣಿಂದಾಗದಿರ್ದಪುದೆ ಪೇಳೆಂಬಿನಂ ಮಹೀಪಾಲ ಕೇಳದ್ಭುತವನು॥೧೦॥
ಪ್ರತಿಪದಾರ್ಥ:- ಮಂದಿ= ಸೇನಾಜನವು, ಸಂದಣಿಸಿ= ಸಾಂದ್ರವಾಗಿ, ಬೆಂಗೊಂಡು=ಕುದುರೆಯನ್ನು ಹಿಂಬಾಲಿಸಿ, ನಡೆತರೆ= ಐತರಲು, ಕುದುರೆ= ಹಯವು, ಮುಂದೆ= ಎದುರಿನಲ್ಲಿ, ಬರೆಬರೆ= ಬರುತ್ತಿರಲಾಗಿ, ಒಂದುಯೋಜನದ ಅಗಲದಿಂದ = ಒಂದು ಗಾವುದದಷ್ಟು ವೈಶಾಲ್ಯದಿಂದ ಕೂಡಿದ, ಶಿಲೆಯನು=ಬಂಡೆಯನ್ನು, ಕಂಡುದು=ಈಕ್ಷಿಸಿತು, ಅದರೋಳ್= ಆ ಬಂಡೆಯ ಮೇಲೆ, ಪೊರಳ್ದಪೆನು= ಹೊರಳಾಡುವೆನು, ಎಂಬ= ಎನ್ನತಕ್ಕ, ತವಕದಿಂದ= ಆಶೆಯಿಂದ, ಅತಿಭರದೊಳು= ಬಹುಬೇಗನೆ, ಅಡರ್ದು=ಏರಿ, ಆ ಕಲ್ಲಮೇಲೆ= ಆ ಶಿಲೆಯಮೇಲೆ, ಹರಿ= ಕುದುರೆಯು,ಕಾಲಿಟ್ಟುದು=ಕಾಲೂರೆತು, ಅಂದು=ಆಗ, ಹರಿ=ಅಶ್ವವು, ಮೆಟ್ಟಿದ=ತುಳಿದಂಥ, ಅರೆ= ಶಿಲೆಯು, ಹರಿ= ಶ್ರೀರಾಮನು, ಮೆಟ್ಟಿದ=ತುಳಿದ, ಅರೆ=ಕಲ್ಲು, ಪೆಣ್ಣಾದುದಂತೆ= ಸ್ತ್ರೇರೂಪವಾಗಿ ಹೋದ ತೆರದಿಂದ, ಮೇಣ್= ಪುನಃ, ಇಂದು=ಈಗ, ಆಗದಿರ್ದಪುದೆ= ಆಗದೆ ಹೋಗುತ್ತದೆಯೇ? ಪೇಳು=ಅರುಹು, ಎಂಬಿನಂ= ಎನ್ನುವ ಬಗೆಯಿಂದ, ಮಹೀಪಾಲ=ಭೂರಮಣನಾದ ಜನಮೇಜಯನೆ
ಅದ್ಭುತವನು= ಅಚ್ಚರಿಯನ್ನು, ಕೇಳು= ಆಲಿಸು.
ತಾತ್ಪರ್ಯ :- ಒಂದು ಗಾವುದ ಅಗಲವಾಗಿರತಕ್ಕ ದೊಡ್ಡ ಬಂಡೆಯೊಂದು ಕಾಣಬಂದಿತು. ಆಗ ಯಜ್ಞಾಶ್ವವು ಇದನ್ನು ನೋಡಿ ಈ ಬಂಡೆಯ ಮೇಲೆ ಸ್ವೇಚ್ಛೆಯಾಗಿ ಹೊರಳಾಡುತ್ತಾ ಸಂತೋಷದಿಂದ ಕಾಲಸರಣವಂ ಮಾಡಬೇಕೆಂದು, ಬಗೆದು ಆ ಕಲ್ಲಿನ ಮೇಲೆ ತನ್ನ ಕಾಲ್ಗಳನ್ನು ಊರಲು, ಪೂರ್ವದಲ್ಲಿ ಶ್ರೀರಾಮಚಂದ್ರನು ಬಂಡೆಯ ಮೇಲೆ ಕಾಲಿಡಲು ಆ ಶಿಲೆಯು ಹೆಂಗಸಾಗಿ ಹೋದುದನ್ನು ಜ್ಞಾಪಿಸುವಂತೆ ಈಗ ಯಾಗದ ಕುದುರೆಯ ಕಾಲುಗಳು ಸಿಕ್ಕಿಕೊಂಡು ಆಚೆ ಈಚೆಗೆ ಕದಲದೆ ಹೋಗಿ ಸ್ತಬ್ಧವಾಗಿ ನಿಂತುಬಿಟ್ಟಿತು.
ಕಾಲಿಡಲ್ಕಾ ಶಿಲೆಯೊಳಾ ತುರಂಗದ ಖುರಂ।
ಕೀಲಿಸಿತು ಭಿನ್ನಿಸದೆ ಕೂಡೆ ಬೆಚ್ಚಂದದಿಂ।
ಮೇಲೆ ನಡೆಗೆಟ್ಟು ನಿಂದುದು ದರಿದ್ರನ ಮನೋರಥದಂತೆ ನಿಜ ತನುವಿನ॥
ಲೀಲೆಯಡಗಿರ್ದುದಾಕೃತಿಯ ಭಂಜಿಕೆಯೆನಲ್।
ಭೂಲೋಲ ಕೇಳೈಕ್ಯಮಾಗಿರ್ದುದಾ ಕಲ್ಲೊ।
ಳಾ ಲಲಿತ ವಾಜಿ ಪೂರ್ಣೇಂದು ಮಂಡಲದೊಳೊಪ್ಪುವ ಮೃಗಾಂಕದ ತೆರದೊಳು॥೧೧॥
ಪ್ರತಿಪದಾರ್ಥ:- ಆ ಶಿಲೆಯೊಳು = ಒಂದುಯೋಜನ ವಿಸ್ತಾರವಾದ ಆ ಬಂಡೆಯಲ್ಲಿ, ಕಾಲಿಡಲ್ಕೆ= ಕುದುರೆಯು ಹೆಜ್ಜೆಯನ್ನೂರಿದ ತಕ್ಷಣವೇ, ಆ ತುರಂಗದ ಖುರಂ= ಹಯದ ಗೊರಸು, ಕೀಲಿಸಿತು= ಅಲ್ಲಿಯೇ ಸಿಕ್ಕಿಕೊಂಡು ಬಿಟ್ಟಿತು, ಭಂಗಿಸದೆ= ಬಲವಂತದಿಂದ ಕಾಲ್ಗಳನ್ನು ಮೇಲಕ್ಕೆ ತೆಗೆಯಲು ಯತ್ನೆಸಿದಾಗ್ಯೂ ಆಗದೆ, ಕೂಡೆ= ಒಡನೆಯೇ, ಬೆಚ್ಚಂದದಿಂ= ಬೆಸಿಗೆ ಹಾಕಿದ ಬಗೆಯಿಂದ, ಮೇಲೆ= ಮುಂದಕ್ಕೆ, ನಡೆಗೆಟ್ಟೈ= ನಡೆಯಲಾರದೆ ಹೋಗಿ, ದರಿದ್ರನ= ಭಾಗ್ಯಹೀನನ, ಮನೋರಥದಂತೆ= ಇಷ್ಟಸಿದ್ಧಿಯ ಹಾಗೆ, ನಿಂದುದು= ಸ್ತಬ್ಧವಾಯಿತು,ನಿಜ=ಸ್ವಕೀಯವಾದ, ತನುವಿನ= ದೇಹದ, ಲೀಲೆ=ಕ್ರೀಡಾದಿಗಳು, ಆಕೃತಿಯ= ಕೈಯಲ್ಲಿ ಬರೆದ, ಗೊಂಬೆವೊಲ್= ಬೊಂಬೆಯ ಹಾಗೆ, ಅಡಗಿ= ಕುಂದೆಹೋಗಿ, ಇರೂದುದು= ಇತ್ತು, ಭೊಲೋಲ= ಭೂರಮಣನಾದ ಜನಮೇಜಯನೆ! ಕೇಳು= ಲಾಲಿಸು, ಲಲಿತವಾಜಿ= ಕೋಮಲಗಾತ್ರದಿಂದೊಪ್ಪುವ ಆ ಕುದುರೆಯು, ಆ ಕಲ್ಲೊಳು= ಆ ದೊಡ್ಡ ಬಂಡೆಯಲ್ಲಿ,ಪೂರ್ಣೇಂದು ಮಂಡಲದೊಳು= ಪೂರ್ಣಚಂದ್ರನ ಬಿಂಬದಲ್ಲಿ, ಒಪ್ಪುವ=ಕಾಣುತ್ತಲಿರತಕ್ಕ,ಮೃಗಾಂಕದ = ಮೃಗದ ಗುರುತಿನ, ತೆರದೊಳು= ಬಗೆಯಿಂದ, ಐಕ್ಯವಾಗಿ= ಒಂದುಗೂಡಿ, ಇರ್ದುದು= ಇದ್ದಂಥಾದ್ದಾಯಿತು.
ಅ॥ ವಿ॥ ತುರಂಗ= ತುರ-ಜಾಗ್ರತೆಯಿಂದ, ಗ-ಗಮಿಸುವುದು,( ಕೃ. ವೃ. ) ಮೃಗಾಂಕ= ಮೃಗದ ಅಂಕ( ಷ. ತ. )
ತಾತ್ಪರ್ಯ:- ವಜ್ರವನ್ನು ಮರಕ್ಕೆ ಹಾಕಿದರೆ ಭದ್ರವಾಗಿ ನಿಲ್ಲುವಂತೆ ಬಂಡೆಯಲ್ಲಿ ಸಿಕ್ಕಿಕೊಂಡು ಬಡವನ ಮನೋರಥದಂತೆ-
ಯೂ, ಪೂರ್ಣಚಂದ್ರನಲ್ಲಿ ಸೇರಿರುವ ಮೃಗದ ಚಿಹ್ನೆಯ ಹಾಗೂ ವಾಯೈವೇಗವನ್ನು ಮೀರಿಸುವಂತೆಯೂಇದ್ದ ಹಯವು ಈಗ ಸ್ತಂಭೀಭೂತವಾಗೆರುವುದನ್ನು ಚಾರರು ನೋಡಿ.
ಗಾಳಿಯಂ ಮಿಕ್ಕು ನಡೆವಾ ಹಯಂ ಕಾಲ್ಗಳಂ।
ಕೀಳಲಾರದೆ ನಿಂದುದರೆಯೊಳೇನಚ್ಚರಿಯೊ।
ಪೇಳಬೇಕೆಂದು ಚರರೈತಂದು ಪಾರ್ಥಂಗೆ ಕೈಮುಗಿದು ಬಿನ್ನೈಸಲು॥
ಕೇಳಿ ವಿಸ್ಮಿತನಾಗಿ ಬಂದು ನೋಡಿದನಲ್ಲಿ।
ಗಾಳನಟ್ಟಿದನಬ್ಬರಿಸಿಸೆಳೆಗಳಿಂದ ಪೊ।
ಯ್ದೇಳಿಸಿದೊಡದು ವಜ್ರ ಲೇಪವಾದುದು ಸಿಕ್ಕಿತಾ ಕುದುರೆ ಕಲ್ಲೆಡೆಯೊಳು॥೧೨॥
ಪ್ರತಿಪದಾರ್ಥ:- ಗಾಳಿಯಂ ಮಿಕ್ಕು= ವಾಯುವೇಗವನ್ನು ಮೀರಿಸಿ, ನಡೆವ= ಹೊರಡತಕ್ಕ, ಆ ಹಯಂ= ಆ ತುರಗವು, ಕಾಲ್ಗಳಂ= ಅಡಿಗಳನ್ನು, ಕೀಳಲಾರದೆ= ಮೇಲಕ್ಕೆತ್ತಲಾರದೆ, ನಿಂದುದು= ನಿಂತುಬಿಟ್ಟು ಇರತಕ್ಕದ್ದಾಯಿತು,ಧರೆಯೊಳು= ಇಳೆಯಲ್ಲಿ, ಏನಚ್ಚರಿಯೊ= ಎಂಥಾ ಆಶ್ಚರ್ಯವೊ, ಪೇಳಬೇಕು= ಉಸಿರುವುದು, ಎಂದು= ಎಂಬುದಾಗಿ, ಚರರು= ಸೇವಕರು, ಐತಂದು= ಸಮೀಪವನ್ನು ಸೇರಿ, ಪಾರ್ಥಂಗೆ= ಕಿರೀಟಿಗೆ, ಬಿನ್ನೈಸಿ= ವಿಜ್ಞಾಪನೆಯಂ ಮಾಡಿಕೊಂಡು, ಕೈಮುಗಿಯಲು= ನಮಸ್ಕಾರವಂ ಮಾಡಲು, ಕೇಳಿ= ಅವರ ನುಡಿಗಳನ್ನಾಲಿಸಿ,ವಿಸ್ಮಿತನಾಗಿ= ಆಶ್ಚರ್ಯದಿಂದ ಕೂಡಿ, ಬಂದು= ಕುದುರೆಯಿದ್ದೆಡೆಯನ್ನು ಸೇರಿ, ನೋಡಿದನು= ಅದರ ತೆರನೆಲ್ಲವನ್ನು ಈಕ್ಷಿಸಿದನು. ಅಲ್ಲಿನ= ಅಲ್ಲಿ ನೆರೆದಿದ್ದ, ಆಳ= ಸೇವಕರನ್ನೆಲ್ಲಾ, ಅಟ್ಟಿದನು= ಕುದುರೆಯು ಏಳುವ ಹಾಗೆ ಮಾಡಿರೆಂದು ಕಳುಹಿದನು, ಆ ದೂತರು ಅಬ್ಬರಿಸಿ= ಹೆದರಿಕೊಳ್ಳುವಂತೆ ಕೂಗಿ, ಸೆಳೆಗಳಿಂದ= ಎಳೆಯುವಿಕೆಯಿಂದ, ( ಉಳಿಗಳಿಂದ) ಪೊಯಿದು= ಹೊಡೆದೂ ಕೂಡ, ಏಳಿಸಿದೊಡೆ= ಎಬ್ಬಿಸಿದರೆ, ಅದು= ಆ ಅಶ್ವವು, ವಜ್ರಲೇಪವಾದುದು= ಮರಕ್ಕೆ ವಜ್ರವನ್ನು ಹಾಕಿ ಬಿಗಿಸಿದಂತೆ ಆಯಿತು, ಆ ತುರಗವು, ಕಲ್ಲೆಡೆಯೊಳು= ಬಂಡೆಯಲ್ಲಿ, ಸಿಲುಕಿತು= ಸಿಕ್ಕಿ ಹೋಯಿತು.
ಅ॥ ವಿ॥ ಅಚ್ಚರಿ( ತ್ಭ)-ಆಶ್ಚರ್ಯ ( ತ್ಸ.)
ತಾತ್ಪರ್ಯ :- = ಈ ಸುದ್ದಿಯನ್ನು ಸ್ವಾಮಿಯಾದ ಅರ್ಜುನನಿಗೆ ತಿಳಿಸಬೇಕೆಂದು ಬಂದು, ಕೈಗಳಂ ಜೋಡಿಸಿದವರಾಗಿ ಕುದುರೆಯು ಬಂಡೆಯಲ್ಲಿ ಸಿಕ್ಕಿ ಹೋಗಿರುವ ವಾರ್ತೆಯನ್ನು ಸವಿಸ್ತಾರವಾಗಿ ತಿಳಿಸಿದರು. ಚರರಿಂದ ತಿಳಿದು ಬಂದ ಕುದುರೆಯ ವಾರ್ತೆಯನ್ನು ಕೇಳಿ ಪರಮಾಶ್ಚರ್ಯದಿಂದ ಜಾಗ್ರತೆಯಾಗಿ ಬಂಡೆಯ ಬಳಿಗೆ ಬಂದು ನೋಡಿ, ಜನರಿಂದ ಅದನ್ನು ಎಳಸಿ, ಹೊಡೆದು ನೂಕಿ ಏನೇನು ಮಾಡಿದರೂ ವಜ್ರವನ್ನು ಹಾಕಿದಂತೆ ಅದರ ಕಾಲ್ಗಳುಬಂಡೆಯಲ್ಲಿ ಸಿಕ್ಕಿಕೊಂಡಿದ್ದವೇ ಹೊರತು ಹೊರಕ್ಕೆ ಬರಲೇ ಇಲ್ಲವು
ಬಳಿಕ ಚಿಂತಿಸಿದನರ್ಜುನನಿದೇನಾದೊಡಂ।
ಮುಳಿದ ಮುನಿಪನ ಶಾಪಮಾಗಬೇಕೀ ವನ।
ಸ್ಥಳದೊಳಾಶ್ರಮಮುಂಟೆ ನೋಳ್ಪುದಗಲದೊಳೆಂದು ಚಾರನಂ ಕಳುಹಲವರು॥
ತೊಳಲಿ ನಿಮಿಷದೊಳರಸಿ ಬಂದು ಬಿನ್ನೈಸಲ್ಕೆ।
ಫಲುಗುಣಂ ಪ್ರದ್ಯುಮ್ನ ವೃಷಕೇತು ಸಾಲ್ವಪತಿ।
ಕಲಿ ಯೌವನಾಶ್ವ ನೀಲಧ್ವಜರನೈವರಂ ಕೂಡಿಕೊಂಡೈತಂದನು॥೧೩॥
ಪ್ರತಿಪದಾರ್ಥ :- ಬಳಿಕ = ಅನಂತರದಲ್ಲಿ, ಅರ್ಜುನನು = ಪಾರ್ಥನು, ಚಿಂತಿಸಿದನು= ಮುಂದೆ ಹೇಳುವಂತೆ ಆಲೋಚನೆಯಂ ಮಾಡಿದನು, ಇದು= ಈ ಕುದುರೆಯು, ಹೀಗೆ ಬಂಡೆಯಲ್ಲಿ ಸಿಕ್ಕಿಬಿದ್ದಿರುವುದು, ಏನಾದೊಡಂ= ಪ್ರಾಯಶಃ, ಮುಳಿದ= ಕೋಪದಿಂದ ಕೂಡಿದ, ಮುನಿಶಾಪಂ= ಋಷಿಯ ಶಾಪವು, ಆಗಬೇಕು= ಆಗಿದ್ದೀತು, ಈ ವನಸ್ಥಳದೊಳು= ಈ ಕಾಡಿನನಡುವೆ, ಆಶ್ರಮಂ= ಮುನಿಗಳ ಪರ್ಣಶಾಲೆಯು, ಉಂಟೆ= ಇದೆಯೇ ? ಅಗಲದೊಳು= ಎಲ್ಲಾಕಡೆಯೂ, ನೋಳ್ಪುದು= ನೋಡಿಕೊಂಡು ಬನ್ನಿರಿ,ಎಂದು= ಎಂದು=ಎಂಬುದಾಗಿ, ಚಾರರಂ= ದೂತರನ್ನು, ಕಳುಪಲು=ಅಟ್ಟಲಾಗಿ, ಅವರು= ಆ ದೂತರಾದರೊ, ತೊಳಲಿ= ಎಲ್ಲೆಲ್ಲಿಯೂ ತಿರುಗಿ, ನಿಮಿಷದೊಳು= ಸ್ವಲ್ಪ ಹೊತ್ತಿನಲ್ಲಿ, ಅರಸಿಬಂದು= ಆಶ್ರಮವಿರುವ ಸ್ಥಳವನ್ನು ಗೊತ್ತುಮಾಡಿಕೊಂಡು ಬಂದು, ಬಿನ್ನೈಸಲ್ಕೆ= ತಿಳಿಸಲಾಗಿ, ಫಲುಗುಣ= ಪಾರ್ಥನು, ಪ್ರದ್ಯುಮ್ನ, ವೃಷಕೇತು, ಅನುಸಾಲ್ವ, ಕಲಿ= ಶೂರನಾದ, ಯೌವನಾಶ್ವ = ಯೌವನಾಶ್ವನೆಂಬರಸು
ನೀಲಧ್ವಜರನು= ನೀಲಧ್ವಜನೇ ಮೊದಲಾದ ಐದುಮಂದಿಯನ್ನು, ಕೂಡಿಕೊಂಡು= ಜೊತೆಮಾಡಿಕೊಂಡು, ಐತಂದನು= ಬಂದವನಾದನು.
ತಾತ್ಪರ್ಯ:- ಅನಂತರ ಅರ್ಜುನನು ಯಜ್ಞಾಶ್ವದ ಈ ದುರವಸ್ಥೆಯನ್ನು ನೋಡಿ, ಮನಸ್ಸಿನಲ್ಲಿಯೇ ಬಹುವಾಗಿ ಚಿಂತಿಸಿ ಈ ರೀತಿಯಲ್ಲಿ ಆಗಲು ಪ್ರಾಯಶಃ ಯಾರೋ ಒಬ್ಬ ಮಹನೀಯನಾದ ಪರಮರ್ಷಿಯ ಶಾಪವೇ ಕಾರಣವಾಗಿರಬಹುದು. ಇಲ್ಲವಾದರೆ ನಾವು ಇಷ್ಟು ಸಾಹಸಮಾಡಿದರೂ ಕೈದುರೆಯು ಮುಂದೆ ಹೊರಡದಿರುವುದೇ ಎಂದು ಯೋಚಿಸಿ, ತನ್ನ ದೂತರನ್ನು ಕುರಿತು, ಇಲ್ಲಿ ಎಲ್ಲಿಯಾದರೂ ಋಷ್ಯಾಶ್ರಮವುಂಟೋ ಇಲ್ಲವೋ ಜಾಗ್ರತೆಯಲ್ಲಿ ನೋಡಿಕೊಂಡು ಬನ್ನಿರೆಂದು ಹೇಳಿಕಳುಹಿಸಿದನು. ಆ ಚರರಾದರೊ ಕ್ಷಣಮಾತ್ರದಲ್ಲಿ ವಿಂಧ್ಯಾಟವಿಯನ್ನೆಲ್ಲಾ ಸುತ್ತಿ ಸುತ್ತಿ ಆಶ್ರಮವಿರುವುದನ್ನು ನೋಡಿ ಜಾಗ್ರತೆಯಾಗಿ ಪಾರ್ಥನಿದ್ದೆಡೆಗೆ ಬಂದು ಒಂದಾನೊಂದು ಪುಣ್ಯಾಶ್ರಮವುಂಟೆಂದು ವಿಜ್ಞಾಪಿಸಿಕೊಂಡರು, ಅರ್ಜುನನು ಪ್ರದ್ಯುಮ್ನ, ವೃಷಕೇತು, ಅನುಸಾಲ್ವ, ಯೌವನಾಶ್ವ, ನೀಲಧ್ವಜರಿಂದೊಡಗೂಡಿ ಜಾಗ್ರತೆಯಾಗಿ ಹೊರಟು ಬರಲಾಗಿ.
ವೆಗ್ಗಳಿಸಲಿನ ಚಂದ್ರ ಪವನ ಶಿಖಿ ಪರ್ಜನ್ಯ ।
ರೊಗ್ಗಿಹವು ವೈರಮಿಲ್ಲದೆ ನಿಖಿಳ ಮೃಗಪಕ್ಷಿ।
ಮೊಗ್ಗಲರ್ ಕಾಯ್ಪಣ್ತಳಿರ್ಗಳಿಂ ಬೀಯವೆಂದೆಂದುಮೆಲ್ಲಾ ತರುಗಳು॥
ಸಗ್ಗದವರಂತೆ ಬೇಡಿದುದನೀವುವಾವಗಂ।
ಸುಗ್ಗಿಯಾಗಿಹುವಾರು ಋತುಗಳುಂ ಸಲೆ ಪೆಚ್ಚು।
ತಗ್ಗು ಶೀತೋಷ್ಣ ಸುಖದುಃಖಂಗಳೊಳಗೆ ಯದಾಶ್ರಮಮೊಂದು ಮುಂದೆಸೆದುದು॥೧೪॥
ಪ್ರತಿಪದಾರ್ಥ :- ಇನ=ರವಿ, ಚಂದ್ರ= ಇಂದುವು, ಪವನ=ಗಾಳಿಯು, ಶಿಖಿ= ಅಗ್ನಿ, ಪರ್ಜನ್ಯ= ಮಳೆಯು, ಮತ್ತು ಋತುಭೇದಗಳೂ, ವೆಗ್ಗಳಿಸಲು= ಮೀರಿ ನಡೆಯಲು, ವೈರಮಿಲ್ಲದೆ = ದ್ವೇಷವನ್ನು ಬಿಟ್ಟು, ನಿಖಿಳ= ಸಕಲವಾದ, ಮೃಗ= ಸಿಂಹಾದಿಗಳೂ,ಪಕ್ಷಿ= ಪಕ್ಷಿಗಳ ಸಮೂಹವೂ, ಮೊಗ್ಗು= ಮೊಗ್ಗುಗಳು, ಅಲರ್= ಕುಸುಮಂಗಳು, ಕಾಯಿ= ಪಕ್ವವಾಗದವು, ಪಣ್ಣು= ಹಣ್ಣುಗಳು, ತಳಿರ್ಗಳಂ= ಪಲ್ಲವಂಗಳನ್ನು, ಎಂದೆಂದೂ= ಅನವರತವೂ, ಎಲ್ಲಾ ತರುಗಳು= ಮರಗಳೆಲ್ಲವೂ, ಬೀಯವು=ಬಿಡದೆ ಇರುವುದಿಲ್ಲ, ಸಗ್ಗದವರಂತೆ= ಸ್ವರ್ಗಲೋಕದಲ್ಲಿರುವವರ ಹಾಗೆ, ಬೇಡಿದನು= ಯಾಚಿಸಿದ್ದನ್ನು, ಆವಗಂ= ಯಾವಾಗಲೂ, ಈವುದು=ಕೊಡತಕ್ಕದ್ದು, ಸುಗ್ಗಿಯಾಗಿಹವು= ಹಣ್ಣುಗಳಿಂದ ಕೂಡಿರುವುದು, ಆರು ಋತುಗಳಂ= ಷಡೋತುಗಳನ್ನು, ಸಲೆ= ಚನ್ನಾಗಿ, ಪೆಚ್ಚುತ= ಹೆಚ್ಚುತ್ತ, ತಗ್ಗು= ಕಡಮೆಯಾಗುವುದು, ಶೀತೋಷ್ಣ ಸುಖ ದುಃಖಗಳು=ತಂಪು, ಶಕೆ, ಸೌಖ್ಯ, ವ್ಯಸನ ಮೊದಲಾದವುಗಳು, ಬಗೆಯದ= ಸೇರದಿರುವ, ಒಂದು=ಒಂದಾನೊಂದು, ಆಶ್ರಮ= ತಪೋವನವು, ಮುಂದೆ= ಎದುರಿನಲ್ಲಿ, ಕಾಣಿಸಿತು= ಗೋಚರವಾಯಿತು.
ಅ॥ವಿ॥ ಸಗ್ಗ (ತ್ಭ ) ಸ್ವರ್ಗ (ತ್ಸ ) ಆರು ಋತುಗಳು ವಸಂತ, ಗ್ರೀಷ್ಮ, ವರ್ಷಋತು, ಶರದೃತು, ಹೇಮಂತ ಋತು, ಶೆಶಿರ ಋತುಗಳೆಂಬವು.
ತಾತ್ಪರ್ಯ:- ಆ ಪುಣ್ಯೃಶ್ರಮದ ಬಳಿಗೆ ಬರಲಾಗಿಅಲ್ಲಿ ಚತುರ್ವೇದಗಳನ್ನೂ, ಮೀಮಾಂಸಾದಿ ಶಾಸ್ತ್ರಂಗಳನ್ನೂ, ಪರಾಶರ ಮೊದಲಾದ ಮಹನೀಯರ ಸ್ಮೃತಿಗಳನ್ನೂ, ಅಷ್ಟಾದಶ ಪುರಾಣಗಳನ್ನೂಹೇಳಿಕೊಡುತ್ತ ಸಮಿತ್ತು, ಹೂ, ಹಣ್ಣು, ಕಂದಮೂಲಾದಿಗಳುಇವನ್ನೆಲ್ಲಾ ಸಿದೂಧಮಾಡಿ, ಜಪಮಾಡುವುದು, ತಪಸ್ಸು, ಸ್ನಾನ, ಸಂಧ್ಯಾವಂದನ, ಅಗ್ನಿಹೋತ್ರಾದಿ ನಿತ್ಯಕರ್ಮಗಳಂ ಕಾಲಕಾಲಕ್ಕೆ ಮಾಡುವುದರಲ್ಲಿ ನಿರತರಾಗಿ, ಸೂರ್ಯನಮಸ್ಕಾರ, ಈಶ್ವರ, ವಿಷ್ಣು ಪೂಜೆಗಳು ಮೊದಲಾದುವನ್ನು ಭಕ್ತಿಪುರಸ್ಸರವಾಗಿ ಮಾಡುತ್ತ, ಅನ್ನೋದಕಗಳಿಗೆ ಬಂದವರನ್ನು ಪರಮ ವಿಶ್ವಾಸದಿಂದ, ಆದರಿಸುತ್ತ ಯೋಗನಿಷ್ಠರಾಗೆರುವ ಮಹನೇಯರಾದ ಋಷಿಗಳು ಆಶ್ರಮದೆಡೆಯಲ್ಲಿ ತಿರುಗಾಡುತಲಿರುವುದನ್ನು,
ವೇದಶಾಸ್ತ್ರಾಗಮಸ್ಮೃತಿ ಪುರಾಣಾವಳಿಯ ।
ನೋದಿಸುವ ಕೈಶ ಸಮಿತ್ಪುಷ್ಪ ಫಲಮೂಲ ಪ।
ರ್ಣಾದಿಗಳನೊದವಿಸುವ ಜಪ ತಪಸ್ಸ್ನಾನಾಗ್ನಿಹೋತ್ರ ವಿಧಿ ವೇಳೆಗಳನು॥
ಸಾಧಿಸುವ ರವಿ ನಮಸ್ಕಾರ ಹರಿ ಹರ ಸಮಾ ।
ರಾಧನೆಗಳಂ ಮಾಡುವತಿಥಿಗಳನಳ್ತಿಯಿಂ।
ದಾದರಿಪ ಯೋಗಮಾರ್ಗದೊಳೆಸೆವ ಮುನಿಗಳಾಶ್ರಮದೆಡೆಯೊಳಿರುತಿರ್ದರು॥೧೫॥
ಪ್ರತಿಪದಾರ್ಥ :- ವೇದ= ಋಗ್ವೇದವೇ ಮೊದಲಾದ ನಾಲ್ಕು ವೇದಗಳು, ಶಾಸ್ತ್ರ= ಮೀಮಾಂಸವೇ ಆದಿಯಾದ ಶಾಸ್ತ್ರಗಳು
ಆಗಮ=ಶೈವ ವೈಷ್ಣವ ಮೊದಲಾದ ಆಗಮಗಳು, ಪುರಾಣ= ಸ್ಕಾಂದವೇ ಮೊದಲಾದ ಹದಿನೆಂಟು ಪುರಾಣಗಳು, ಇವುಗಳ ಆವಳಿಯನು= ಸಮುದಾಯವನ್ನು, ಓದಿಸುವ= ಅಭ್ಯಾಸ ಮಾಡಿಸತಕ್ಕ,ಕುಶ= ದರ್ಭೆಯು, ಸಮಿತ್=ಮುತ್ತುಗ ಮತ್ತು ಅರಳಿಯಮರಗಳ ಸಣ್ಣ ಸಣ್ಣ ಕಡ್ಡಿಗಳ, ಪುಷ್ಪ= ಹೂ, ಫಲ= ಹಣ್ಣು, ಮೂಲ= ಬೇರುಗಳು, ಎಂದರೆ ಗೆಡ್ಡೆ ಗೆಣಸುಗಳು, ಪರ್ಣ= ಎಲೆಗಳು, ಆದಿಗಳನು=ಇವೇ ಮೊದಲಾದವನ್ನು, ಒದವಿಸುವ= ಒದಗಿಸಿಕೊಡತಕ್ಕ, ಜಪ= ಹೇಳಿದ ಮಂತ್ರವನ್ನೇ ಅನೇಕಬಾರಿ ಹೇಳುವುದು, ತಪ= ಅನೇಕ ಮಂತ್ರಗಳಿಂದ ದೇವರನ್ನರ್ಚಿಸುವುದು, ಸ್ನಾನ = ಅನೇಕ ತೀರ್ಥಗಳಲ್ಲಿ ಸ್ನಾನಮಾಡುವುದು, ಅಗ್ನಿಹೋತ್ರ= ಅಗ್ನಿಯಲ್ಲಿ ಹೋಮಮಾಡುವುದು, ವಿಧಿ= ಸಂಧ್ಯಾವಂದನೆ, ಮಾಧ್ಯಾಹ್ನಿಕ ಮೊದಲಾದ ನಿತ್ಯಕರ್ಮಗಳ, ವೇಳೆಗಳನು= ಸಮಯಗಳನ್ನು, ಸೃಧಿಸುವ= ಸಾಧನೆಯಂ ಮಾಡತಕ್ಕ, ರವಿನಮಸ್ಕಾರ= ಸೂರ್ಯೋಪಾಸನೆ, ಹರಿ= ವೆಷ್ಣುವಿನ ಸಂಬಂಧವಾದ ಮತ್ತು ಹರ= ಈಶ್ವರನಿಗೆ ಪ್ರೀತಿಯಾಗಬೇಕಾದ, ಸಮಾರಾಧನೆಗಳನು= ಪೂಜೆ ಮೊದಲಾದವನ್ನು, ಮಾಡುವ= ಎಸಗುವ, ಅತಿಥಿಗಳನು= ಭೋಜನಕ್ಕಾಗಿ ಬಂದವರನ್ನು, ಅರ್ಥಿಯಿಂದ= ಬಹು ಪ್ರೀತಿಯಿಂದ, ಆದರಿಪ= ಉಪಚಾರಮಾಡುವ, ಯೋಗಮಾರ್ಗದೊಳು= ಭಕ್ತಿ ಪುರಸ್ಸರವಾದ ಜ್ಞಾನಮಾರ್ಗದಿಂದ , ಎಸೆವ= ಕಾಂತಿಯುಕ್ತರಾಗಿರತಕ್ಕ, ಮುನಿಗಳು= ತಾಪಸೋತ್ತಮರು, ಆಶ್ರಮದ= ತಪೋವನದ, ಎಡೆಯೊಳು=ವಹತ್ತಿರದಲ್ಲಿ, ಇರುತಿರ್ದರು= ಇರುತ್ತಾ ಇದ್ದರು.
ತಾತ್ಪರ್ಯ:- ಆ ಪುಣ್ಯಾಶ್ರಮದ ಬಳಿಗೆ ಬರಲಾಗಿ ಅಲ್ಲಿ ಚತುರ್ವೇದಗಳನ್ನೂ, ಮೀಮಾಂಸಾದಿ ಶಾಸ್ತ್ರಂಗಳನ್ನೂ, ಪರಾಶರ ಮೊದಲಾದ ಮಹನೀಯರ ಸ್ಮೃತಿಗಳನ್ನೂ, ಅಷ್ಟಾದಶ ಪುರಾಣಗಳನ್ನೂ, ಹೇಳಿಕೊಡುತ್ತ ಸಮಿತ್ತು, ಹೂ, ಹಣ್ಣು, ಕಂದಮೂಲಾದಿಗಳು ಇವನ್ನೆಲ್ಲಾ ಸಿದ್ಧಮಾಡಿ, ಜಪಮಾಡುವುದು,ತಪಸ್ಸು, ಸ್ನಾನ, ಸಂಧ್ಯಾವಂದನ , ಅಗ್ನಿ ಹೋತ್ರಾದಿ ನಿತ್ಯಕರ್ಮಗಳಂ ಕಾಲಕಾಲಕ್ಕೆ ಮಾಡುವುದರಲ್ಲಿ ನಿರತರಾಗಿ, ಸೂರ್ಯನಮಸ್ಕಾರ, ಈಶ್ವರ, ವಿಷ್ಣು, ಪೂಜೆಗಳು ಮೊದಲಾದುವನ್ನು ಭಕ್ತಿಪುರಸ್ಸರವಾಗಿ ಮಾಡುತ್ತ, ಅನ್ನೋದಕಗಳಿಗೆ ಬಂದವರನ್ನು ಪರಮವಿಶ್ವಾಸದಿಂದ, ಆದರಿಸುತ್ತ ಯೋಗನಿಷ್ಠರಾಗಿರುವ ಮಹನೀಯರಾದ ಋಷಿಗಳು ಆಶ್ರಮದೆಡೆಯಲ್ಲಿ ತಿರುಗಾಡುತಲಿರೈವುದನ್ನೂ,
ಸುಡದಿರ್ದ ಪಾವಕನೊ ಬಿಸಿ ಮಾಣ್ದ ರವಿಯೊ ತಂ।
ಪಿಡಿದಿರದ ಚಂದ್ರಮನೊ ವಿಷಕಂಠನಾಗದಿಹ ।
ಮೃಡನೊ ರಜಮಂ ಪೊರ್ದದಂಬುಜಾಸನನೊ ಫಣಿತಲ್ಪನಲ್ಲದ ವಿಷ್ಣುವೊ।
ಕಡುತೇಜದೊಬ್ಬುಳಿಯೊ ಶಾಂತಿಯ ನಿಜಾಕಾರ।
ದೊಡಲೊ ಪೇಳೆಂಬ ಸೌಭರಿ ಮುನಿಪನಾಶ್ರಮದ।
ನಡುವೆ ಕುಳ್ಳಿರ್ದು ಸುಖಯೋಗದೊಳಿರಲ್ಕೆ ನಡೆತಂದರ್ಜುನಂ ಕಂಡನು॥೧೬॥
ಪ್ರತಿಪದಾರ್ಥ :- ಸುಡದೆ= ದಹಿಸಿಬಿಡದೆ, ಇರ್ದ=ಇರತಕ್ಕ, ಪಾವಕನೊ= ಯಜ್ಞೇಶ್ವರನೊ, ಬಿಸಿಲು= ಸೂರ್ಯಕಿರಣವು, ಮಾಣ್ದ= ಕಾಯದ, ರವಿಯೊ= ಸೂರ್ಯನೊ, ತಂಪು= ಶೈತ್ಯವನ್ನು, ಇಡಿದಿರದ=ಹೊಂದದೆ ಇರುವ, ಚಂದ್ರಮನೊ= ಇಂದುವೊ, ವಿಷ= ನಂಜನ್ನು, ಕಂಠನು=ಕತ್ತಿನಲ್ಲಿ ಉಳ್ಳ ಈಶ್ವರನು, ಆಗದಿಹ= ಆಗದೆ ಇರತಕ್ಕ, ಮೃಡನೊ= ಹರನೊ, ರಜಮಂ= ತ್ರಿಗುಣಗಳಲ್ಲಿ ಎರಡನೆಯದಾಗಿರುವ ರಜೋಗುಣವನ್ನು, ಪೊದ್ದದ=ಹೊಂದದೆ ಇರುವ, ಅಂಬುಜಾಸನೊ= ಕಮಲೋದ್ಭವನಾದ ಬ್ರಹ್ಮದೇವರೊ, ಫಣಿ= ಆದಿಶೇಷನನ್ನು, ತಲ್ಪನು= ಹಾಸಿಗೆಯಾಗಿವುಳ್ಳ ವಿಷ್ಣುವು, ಅಲ್ಲದ= ಅಲ್ಲದೆ ಇರುವ, ವಿಷ್ಣುವೊ= ನಾರಾಯಣಮೂರ್ತಿಯೊ, ಕಡು= ಹೆಚ್ಚಾದ, ತೇಜದ= ಪ್ರಕಾಶದ, ಬಬ್ಬುಳಿಯೊ= ಸಮುದಾಯವೊ, ಕಾಂತಿಯ= ಕಾಂತಿಗುಣದ, ನಿಜ= ಸ್ವಭಾವಸಿದ್ಧವಾದ, ಆಕಾರದ= ಸ್ವರೂಪದ, ಒಡಲೊ= ದೇಹವೊ, ಪೇಳು= ಹೇಳು, ಎಂಬ= ಎನ್ನತಕ್ಕ, ಸೌಭರಿಮುನಿಪನ= ಸೌಭರಿ ಎಂಬ ಋಷೀಶ್ವರನ, ಆಶ್ರಮದ= ತಪೋವನದ, ನಡುವೆ= ಮಧ್ಯಭಾಗ-
ದಲ್ಲಿ, ಕುಳ್ಳಿರ್ದು= ಕುಳಿತುಕೊಂಡವನಾಗಿ, ಸುಖಯೋಗದೊಳು= ದುಃಖರಹಿತವಾದ ಯೋಗಪೀಠದಲ್ಲಿ, ಇರಲ್ಕೆ= ಇರಲಾಗಿ, ಅರ್ಜುನಂ= ಪಾರ್ಥನು, ನಡೆತಂದು= ಅಲ್ಲಿಗೆ ಬಂದು, ಕಂಡನು= ಯೋಗನಿಷ್ಠನಾಗಿ ಕುಳಿತಿರುವ ಸೌಭರಿ ಮುನಿಯನ್ನು ನೋಡಿದನು.
ಅ॥ವಿ॥ ವಿಷಕಂಠ= ವಿಷವು ಕಂಠದಲ್ಲಿ ಯಾರಿಗೊ ಊವನು( ಬ. ಸ. ) ಅಂಬುಜಾಸನ= ಅಂಬು- ನೀರಿನಲ್ಲಿ, ಜ- ಹುಟ್ಟಿದ್ದು ( ಕಮಲ ಕೃ. ವೃ. ) ಅಂಬುಜವು= ಆಸನವಾಗುಳ್ಳವನು ಯಾರೊ ಅವನು ( ಬ್ರಹ್ಮನು ಬ.ಸ. )
ತಾತ್ಪರ್ಯ = ಆ ಪುಣ್ಯಾಶ್ರಮದ ನಡುವೆ ಸುಡದೆ ಇರುವ ಯಜ್ಞೇಶ್ವರನಂತೆಯೂ, ಬಿಸಿಲಿನ ತಾಪವನ್ನು ಬಿಟ್ಟ ಸೂರ್ಯನ ಹಾಗೂ, ತಣ್ಣಗಿಲ್ಲದ ಚಂದ್ರನ ತೆರನೃಗಿಯೂ, ವಿಷವನ್ನು ಕತ್ತಿನಲ್ಲಿ ಧರಿಸದ ಪರಮೇಶ್ವರನ ಹೋಲಿಕೆಯಿಂದಲೂ, ರಜೋಗುಣವಿಶಿಷ್ಟನಲ್ಲದ ಕಮಲೃಸನನನ್ನು ಹೋಲುತ್ತಲೂ, ಶೇಷಶಾಯಿಯಲ್ಲದ ನಾರಾಯಣಮೂರ್ತಿಯ ಅಂದದಿಂದಲೂ, ತೇಜಃಪುಂಜವೋ ಎಂಬ ಭ್ರಾಂತಿಗೆ ಆಕರನಾಗಿಯೂ, ಕಾಂತಮೂರ್ತಿಯೊ ಎನ್ನುವ ವಿಧದಿಂದಲೂ ಮೆರೆವ ಸೌಭರಿಮುನಿಯು, ಸುಖಾಸೀನನಾಗಿ ಯೋಗನಿಷ್ಠನಾಗಿರುವುದನ್ನು ನೋಡಿ, ಆ ಮುನೀಶ್ವರನ ಬಳಿಗೆ ಬಂದು,
ಬಂದು ಸಾಷ್ಟಾಂಗದಿಂದೆರಗಿ ಸೌಭರಿಮುನಿಯ।
ಮುಂದೆ ಕೈಮುಗಿದು ನಿಲಲಾ ಪಾರ್ಥನಂ ಪ್ರೀತಿ।
ಯಿಂದೆ ಸತ್ಕರಿಸಿ ಕುಶಲಂಗಳಂ ಕೇಳ್ದಿಲ್ಲಿಗೇಕೆ ಬರವಾಯಿತೆನಲು॥
ಅಂದು ಕುಲಗೋತ್ರಮಂ ಕೊಂದ ಪಾಪಂ ಪೋಗ।
ಲೆಂದಶ್ವಮೇಧಮಂ ತೊಡಗಿ ಯೆನ್ನಂ ಧರ್ಮ।
ನಂದನಂ ಕಳುಹಿದಂ ಹಯ ರಕ್ಷೆಗದರೊಡನೆ ಬರೆ ಸಿಲ್ಕಿತದು ಶಿಲೆಯೊಳು॥೧೭॥
ಪ್ರತಿಪದಾರ್ಥ :- ಅರ್ಜುನನು, ಬಂದು= ಸೌಭರಿಮುನಿಯ ಬಳಿಗೆ ಸೇರಿ, ಸಾಷ್ಟಾಂಜದಿಂದ = ಎದೆ, ತಲೆ, ಕಣ್ಣು, ಕೈ, ಕಾಲು ಮೊದಲಾದ ಎಂಟು ಬಗೆಯಾದ ಅವಯವಗಳಿಂದ, ಎರಗಿ= ನಮಸ್ಕಾರ ಮಾಡಿ, ಸೌಭರಿಮುನಿಯ ಮುಂದೆ= ಸೌಭರಿ-
ಮುನಿಯ ಎದುರಿಗೆ, ಕೈಮುಗಿದು= ಕರಗಳಂ ಒಟ್ಟುಗೂಡಿಸಿಕೊಂಡು, ನಿಲ್ಲಲು= ನಿಂತುಕೊಳ್ಳಲಾಗಿ, ಆಗ ಸೌಭರಿಯು, ಆ ಪಾರ್ಥನಂ= ಆ ಕಿರೀಟಿಯನ್ನು, ಪ್ರೀತಿಯಿಂದ= ಪ್ರೇಮಾತಿಶಯದಿಂದ, ಸತ್ಕರಿಸಿ= ಮರ್ಯಾದೆ ಮಾಡಿ, ಕುಶಲಂಗಳಂ =
ಕ್ಷೇಮಸಮಾಚಾರಗಳನ್ನೆಲ್ಲಾ, ಕೇಳ್ದು= ಕೇಳಿ, ಇಲ್ಲಿಗೆ= ಈ ಸ್ಥಾನಕ್ಕೆ, ಏಕೆ= ಯಾವ ಉದ್ದೇಶವಾಗಿ, ಬರವು= ಬಂದದ್ದು, ಆಯಿತು= ಆಗಿದೆ ?ಎನಲ್= ಹೀಗೆಂದು ಕೇಳಲಾಗಿ, ಅರ್ಜುನನು, ಅಂದು= ಆ ಕಾಲದಲ್ಲಿ, ಕುಲಗೋತ್ರಮಂ = ನಮ್ಮ ವಂಶೀಯರಾಗಿಯೂ ದಾಯಾದರಾಗಿಯೂ ಇದ್ದ ದುರ್ಯೋಧನಾದಿಗಳನ್ನು, ಕೊಂದ = ಸಂಹಾರಮಾಡಿದ, ಪಾಪವು= ದುರಿತವು, ಪೋಗಲಿ=ಕಳೆಯಲಿ, ಎಂದು= ಎಂಬುದಾಗಿ, ಅಶ್ವಮೇಧವಂ= ಅಶ್ವಮೇಧವೆಂಬ ಹೆಸರಿನ ಯಾಗವನ್ನು, ತೊಡಗಿ= ಪ್ರಾರಂಭಮಾಡಿ, ಧರ್ಮನಂದನನು= ಯುಧಿಷ್ಠಿರನು, ಎನ್ನಂ= ನನ್ನನ್ನು, ಹಯರಕ್ಷೆಗೆ= ಕುದುರೆಯ ಕಾವಲಿಗೆ ಕಳುಪಿದಂ= ಕಳುಹಿಸಿಕೊಟ್ಟನು, ಅದರೊಡನೆ= ಆ ಯಜ್ಞಾಶ್ವದೊಂದಿಗೆ,ಬರೆ=ಐತರಲು, ಅದು= ಆ ಹಯವು, ಉರುಶಿಲೆಯೊಳು= ದೊಡ್ಡ ಬಂಡೆಯಲ್ಲಿ, ಸಿಲುಕಿತು= ಸಿಕ್ಕಿಕೊಂಡುಬಿಟ್ಟಿತು.
ತಾತ್ಪರ್ಯ = ಸಾಷ್ಟಾಂಗದಂಡಪ್ರಣಾಮಮಂ ಮಾಡಿ, ಕರಗಳಂ ಜೋಡಿಸಿಕೊಂಡು, ಸೌಭರಿಮುನೀಂದ್ರನೆದುರಿಗೆ ಸವಿನಯದಿಂದ ನಿಂತುಕೊಂಡನು. ಆಗ ಸೌಭರಿ ಎಂಬ ತಾಪಸೋತ್ತಮನು ತನ್ನೆದುರಿಗೆ ನಿಂತಿರುವ ಅರ್ಜುನನನ್ನು ನೋಡಿ ಅವನನ್ನು ಉಪಚರಿಸಿ ಅರ್ಘ್ಯಪಾದ್ಯಾದಿಗಳಿಂದ ಮನ್ನಿಸಿ ಕ್ಷೇಮಸಮಾಚಾರಗಳನ್ನೆಲ್ಲಾ ಕೇಳಿದ ಬಳಿಕ ನೀವು ಇಲ್ಲಿಗೆ ಬಂದ ಕಾರಣವೇನೆಂದು ಪ್ರಶ್ನೆ ಮಾಡಿದನು. ಈ ರೀತಿಯಲ್ಲಿ ಕೇಳಿದ ಸೌಭರಿಮುನಿಪುಂಗವನಂ ನೋಡಿ, ಪಾರ್ಥನು, ಎಲೈ ತಪೋನಿಧಿಯೆ ! ನಮ್ಮ ದಾಯಾದರಾದ ದುರ್ಯೋಧನಾದಿಗಳನ್ನು ಕೊಂದ ದೋಷಪರಿಹಾರಕ್ಕಾಗಿ ಅಶ್ವಮೇಧಯಾಗ-
ವೆಂಬ ಮಹಾ ಕ್ರತುವನ್ನೆಸಗಲುದ್ಯುಕ್ತನಾಗಿ ಯುಧಿಷ್ಠಿರನು ಕುದುರೆಯ ಬೆಂಗಾವಲ್ಗಾಗಿ ನನ್ನನ್ನು ಕಳುಹಿಸಿದನು. ನಾನು ಅದರ ಹಿಂದೆಯೇ ಬರುತ್ತಿರುವಾಗ ಈ ವಿಂಧ್ಯಾದ್ರಿಯಲ್ಲಿರುವ ದೊಡ್ಡ ಬಂಡೆಯೊಂದರಲ್ಲಿ ಆ ಉತ್ತಮಾಶ್ವದ ಕಾಲ್ಗಳು ಸಿಕ್ಕಿಕೊಂಡವು. ಏನು ಮಾಡಿದರೂ ಈಚೆಗೆ ಬಾರದು.
ಎಲೆ ಮುನೀಶ್ವರ ತವಾನುಗ್ರಹದೊಳಲ್ಲದೀ।
ಶಿಲೆಯೊಳೊಂದಿದ ಹಯಂ ಬಿಡುವಂದಮಂ ಕಾಣೆ।
ನುಳುಹಬೇಕೆಂದೆರಗಲರ್ಜುನನ ಮೊಗ ನೋಡಿ ನಗುತೆ ಸೌಭರಿ ನುಡಿದನು॥
ತಿಳುಹಿದಂ ಪಿಂತೆ ಭಾರತ ಯುದ್ಧ ಮಧ್ಯದೊಳ್ ।
ನಳಿನನಾಭಂ ನಿನಗೆ ಮತ್ತಿಯುಮಹಂಕಾರ।
ಮಳಿದುದಿಲ್ಲಕಟ ಜಗದೊಳ್ ಕೊಲ್ವರಾರ್ ಕಾವರಾರ್ ಬಲ್ಲೊಡುಸಿರೆಂದನು॥೧೮॥
ಎಲೆ ಮುನೀಶ್ವರ = ಎಲೈ ತಾಪಸವರ್ಯನಾದ ಸೌಭರಿಯೆ! ಈ ಶಿಲೆಯೊಳು= ಈ ದೊಡ್ಡ ಬಂಡೆಯಲ್ಲಿ, ಒಂದಿದ= ಸಿಕ್ಕಿ ಬಿದ್ದ, ಹಯಂ= ಅಶ್ವವು, ತವ= ನಿಮ್ಮ, ಅನುಗ್ರಹದೊಳು=ಕರುಣೆಯಿಂದ, ಅಲ್ಲದೆ= ಹೊರತು, ಬಿಡುವುದಂ= ಬಿಡು-
ಗಡೆಯನ್ನು ಪಡೆಯುವುದನ್ನು, ಕಾಣೆನು= ನೋಡಲಾರೆ, ಉಳುಹಬೇಕು= ನನ್ನನ್ನು ಕಾಪಾಡಬೇಕು, ಎಂದು= ಎಂಬುದಾಗಿ,
ಎರಗಲು= ನಮಸ್ಕಾರ ಮಾಡಲು, ಸೌಭರಿ= ಸೌಭರಿಮುನಿಯು, ಅರ್ಜುನನ=ಪಾರ್ಥನ, ಮೊಗ= ಮುಖವನ್ನು, ನೋಡಿ=
ಈಕ್ಷಿಸಿ, ನಗುತ= ಮುಗುಳ್ನಗೆಯನ್ನೈದುತ್ತ, ನುಡಿದನು=ಮುಂದೆ ಹೇಳುವಂತೆ ಹೇಳಿದನು, ಪಿಂತೆ= ಪೂರ್ವದಲ್ಲಿ, ನಳಿನನಾಭಂ = ಪದ್ಮನಾಭನಾದ ಕೃಷ್ಣಸ್ವಾಮಿಯು, ಭಾರತಯುದ್ಧ=ಭರತವಂಶದವರಲ್ಲಿ ಪರಸ್ಪರ ನಡೆದ ಕದನದ, ಮಧ್ಯದೊಳ್= ಮಧ್ಯಭಾಗದಲ್ಲಿ, ನಿನಗೆ= ನಿನಗಾದರೊ, ಅರುಪಿದನು= ಅರುಹಿದನು, ಮತ್ತೆಯುಂ= ತಿರುಗಿ, ಅಹಂಕಾರ = ಗರ್ವವು, ಅಳಿದುದಿಲ್ಲ= ಹೋಗಲಿಲ್ಲ, ಅಕಟ=ಅಚ್ಚರಿಯು, ಜಗದೊಳ್= ಲೋಕದಲ್ಲಿ, ಕೊಲ್ವರು= ಪ್ರಾಣಗಳನ್ನು ಕಳೆಯುವವರು, ಕಾಯ್ವರು= ಕಾಪಾಡತಕ್ಕವರು, ಆರು=ಯಾರಿರಬಹುದು, ಬಲ್ಲಡೆ=ತಿಳಿದಿದ್ದರೆ, ಉಸಿರು= ಹೇಳು, ಎಂದನು= ಹೀಗೆಂದು ನುಡಿದನು.
ಅ॥ವಿ॥ ಮೊಗ( ತ್ಭ ) ಮುಖ (ತ್ಸ) ನಳಿನನಾಭಂ= ನಳಿನವು ನಾಭಿಯಲ್ಲಿ ಯಾರಿಗೊ ಅವನು( ಬ.ಸ.)
ತಾತ್ಪರ್ಯ:- ಮಹಾತ್ಮನಾದ ನಿನ್ನ ಅನುಗ್ರಹದಿಂದ ಈ ನಮ್ಮ ಯಜ್ಞಾಶ್ವವು ಬಿಡುಗಡೆಯನ್ನೈದಬೇಕೇ ವಿನಾ ಮತ್ತೆ ಯಾವ ಉಪಾಯವನ್ನೂ ಕಾಣೆನು. ನಿಮ್ಮಿಂದಲೇ ನಾನು ಕೃತಾರ್ಥನಾಗಬೇಕೆಂದು ಸಾಷ್ಟಾಂಗಪ್ರಣಾಮವನ್ನರ್ಪಿಸುತ್ತಲಿರುವ, ಅರ್ಜುನನನ್ನು ಸೌಭರಿ ಮುನಿಯು ನೋಡಿ ಮುಗುಳ್ನಗೆಯಂ ತಾಳಿ, ಎಲೈ ಪಾರ್ಥನೆ ! ಪೂರ್ವದಲ್ಲಿ ಭಾರತಯುದ್ಧವು ನಡೆಯುತ್ತಿದ್ದ ವೇಳೆಯಲ್ಲಿ ನಿನಗೆ ಬುದ್ಧಿವಾದವನ್ನು ಉಪದೇಶಮಾಡಿದರೂ ನಿನ್ನ ಅಹಂಕರವು ಇನ್ನೂ ತಗ್ಗಲಿಲ್ಲವೆಂಬುದ-
ನ್ನು, ಪುನಃ ಎಚ್ಚರಿಸಿ ಜ್ಞಾನೋದಯವನ್ನುಂಟುಮಾಡಬೇಕೆಂತಲೂ, ಪ್ರಪಂಚದಲ್ಲಿ ಕೊಲ್ಲುವವನೂ, ಕಾಪಾಡತಕ್ಕವನೂ ಪಾವನಮೂರ್ತಿಯಾದ ನಾರಾಯಣನೆ ಎಂತಲೂ ತಿಳಿಸುವುದಕ್ಕಾಗಿ ಕೃಷ್ಣನು ಈ ಯುಕ್ತಿಯನ್ನು ಹುಡುಕಿದನು.
ಶ್ರೀ ಕೃಷ್ಣನಿರೆ ಮುಂದೆ ವಂಶಮಂ ಕೊಂದೆನೆಂ।
ಬೀ ಕೃತ್ಯದಿಂ ಪಾತಕಂ ಬಹುದೆ ನಿಮ್ಮೊಳ್ ಸ।
ದಾ ಕೃಪಾನಿಧಿಯ ಸಾನಿಧ್ಯಮಿರುತಿರಲಾಗಿ ವಾಜಿಮೇಧಂ ಬೇಹುದೆ॥
ಆ ಕೃತಾಂತಕನರಿದುದಿಲ್ಲಲಾ ಲೋಕದೊಳ್ ।
ಪ್ರಾಕೃತರ ತೆರದಿಂದೆ ಹರಿ ಮನೆಯೊಳಿರೆ ಗರ್ದ।
ಭಾಕೃತಿಯ ಹರಿಯೊಡನೆ ಬಂದೆ ಸುರಭೂಜಮಿರೆ ಶಾಲ್ಮಲಿಯನರಸುವಂತೆ॥೧೯॥
ಪ್ರತಿಪದಾರ್ಥ :- ಮುಂದೆ= ಎದುರಿನಲ್ಲಿ, ಶ್ರೀಕೃಷ್ಣನು= ಕೃಷ್ಣಮೂರ್ತಿಯು, ಇರೆ= ಇರುತ್ತಿರಲಾಗಿ, ವಂಶವಂ= ಗೋತ್ರದವರನ್ನು, ಕೊಂದೆನೆಂಬ= ಹತಮಾಡಿದೆನೆಂಬ, ಈ ಕೃತ್ಯದಿಂ= ಈ ಕೆಲಸದಿಂದ, ಪಾತಕಂ= ದುರಿತವು, ಬಹುದೆ= ಬರುತ್ತದೆಯೇ? ನಿನ್ನೋಳ್= ನಿನ್ನಲ್ಲಿ, ಸದಾ= ಅನವರತವೂ, ಕೃಪಾನಿಧಿಯ= ದಯೆಯಿಂದ ತುಂಬಿದ ಕೃಷ್ಣಸ್ವಾಮಿಯ, ಸಾನಿಧ್ಯಂ= ಜೊತೆಯು, ಇರುತಿರಲಾಗಿ=ಇರುವುದರ ಸಲುವಾಗಿ, ವಾಜಿಮೇಧಂ= ಅಶ್ವಮೇಧವು, ಬೇಹುದೆ= ಬೇಕೆ ? ಆ ಕೃತಾಂತಕನ= ಧರ್ಮತನಯನೂ, ಅರಿದುದಿಲ್ಲಲಾ= ಇದನ್ನು ಯೋಚಿಸದೆ ಹೋದನಲ್ಲ, ಲೋಕದಲ್ಲಿ = ಭೂಮಂಡ-
ಲದಲ್ಲಿ, ಪ್ರಾಕೃತರತೆರದಿಂದ= ಬುದ್ಧಿಶೂನ್ಯರ ಬಗೆಯಿಂದ, ಸುರಭುಜಂ= ಕಾಮಿತ ಫಲಗಳನ್ನೀಯುವ ಕಲ್ಪತರೈವು, ಇರೆ= ಇದ್ದರೂ,ಶಾಲ್ಮಲಿಯನು= ನಿಷ್ಪ್ರಯೋಜನವಾದ ಬೂರುಗದ ಮರವನ್ನು, ಅರಸುವಂತೆ= ಹುಡುಕುವ ತೆರನಾಗಿ, ಹರಿ= ಕೃಷ್ಣಸ್ವಾಮಿಯು, ಮನೆಯೊಳ್= ಮಂದಿರದಲ್ಲಿ, ಇರೆ=ಇರಲು, ಗರ್ದಭಾಕೃತಿಯ= ಕತ್ತೆಯನ್ನು ಹೋಲುವ ಆಕಾರವುಳ್ಳ, ಹರಿಯೊಡನೆ = ಹಯದೊಂದಿಗೆ, ಬಂದೆ= ಐತಂದೆ.
ಅ॥ವಿ॥ ಕೃಪಾ= ಕರುಣೆಯನ್ನು, ನಿಧಿ= ನಿಕ್ಷೇಪವಾಗಿ ಉಳ್ಳವನುಯಾರೊ ಅವನು(ಜ. ಸ.) ಸುರಭೂ=ಭೂಮಿಯಲ್ಲಿ, ಜ- ಹುಟ್ಟಿದ್ದು (ಮರವು ಕೃ. ವೃ) ಸುರರ ಭೂಜವು(ಷ. ತ.)
ತಾತ್ಪರ್ಯ:- ಶ್ರೀ ಕೃಷ್ಣಮೂರ್ತಿಯೇ ನಿಮ್ಮ ಬಳಿಯಲ್ಲಿ ನೆಲಸಿರುವಾಗ ಗೋತ್ರ ಹತ್ಯಾದೋಷವು ಹೇಗೆ ಬರುವುದು ? ಕೃಷ್ಣಮೂರ್ತಿಯು ನಿಮ್ಮ ಪ್ರೀತಿಗೆ ಪಾತ್ರನಾಗಿರುವಾಗ ಅಶ್ವಮೇಧಯಾಗದಿಂದ ನಿಮಗೆ ಆಗತಕ್ಕದ್ದೇನಿರುವುದು? ಇದನ್ನೆಲ್ಲಾ ಪರಮಮೂರ್ತಿಯಾದ ಕೃಷ್ಣನು ತಿಳಿಯದಿರುವನೆ? ಈಗ ನೀನು ಕೃಷ್ಣನನ್ನು ಬಿಟ್ಟು ಈ ಕುದುರೆಯೊಂದಿಗೆ ಬಂದಿರುವುದು ಕತ್ತೆಯ ಹಿಂದೆ ಬಂದಹಾಗೂ, ಕಲ್ಪವೃಕ್ಷವನ್ನು ಬಿಟ್ಟು ನಿಸ್ಸಾರವಾದ ಬೂರುಗದ ಮರವನ್ನು ನಂಬಿದಂತೆಯೂ ಆಗಿರುವುದು.
ಕೊಟ್ಟಿಗೆಯ ಕಾಮಧೇನುವನೊಲ್ಲದಳ್ತೆಯಿಂ।
ಕಟ್ಟರಣ್ಯದ ಪುಲಿಯನರಸಿ ಕರೆಯಲ್ಕೊದಯ।
ಕಟ್ಟುವೆಯಲಾ ತುರಗಮೇಮೇಧಗೈವುದಾ ಹರಿಯ ಸಾನಿಧ್ಯಮಿರಲು॥
ಹುಟ್ಟಿತಿಲ್ಲವೆ ನಿನಗರಿವು ಧರ್ಮಸೂನು ಮತಿ।
ಗೆಟ್ಟಿಹನೆ ಶಿವಶಿವ ವೃಥಾ ಪರಿಭ್ರಮವೆ ನಿಮ।
ಗಟ್ಟಿತೆಂದಮರೇಂದ್ರ ತನಯನಂ ಜರೆದು ಸೌಭರಿ ನುಡಿಯುತಿಂತೆಂದನು॥೨೦॥
ಪ್ರತಿಪದಾರ್ಥ:- ಕೊಟ್ಟಿಗೆಯ = ದನಗಳ ದೊಡ್ಡಿಯಲ್ಲಿರತಕ್ಕ, ಕಾಮಧೇನುವನು= ದೇವಲೋಕದ ಆಕಳನ್ನು, ಒಲ್ಲದೆ= ಇಚ್ಛೆ ಪಡದೆ, ಕಟ್ಟರಣ್ಯದ = ಬಹು ಕ್ರೂರವಾದ ಕಾಡಿನ, ಪುಲಿಯನು= ಹುಲಿರಾಯನನ್ನು, ಅರಸಿಕರೆಯಲ್ಕೆ= ಹುಡುಕಿಕೊಂಡು ಬರುವುದಕ್ಕೆ, ಅರ್ಥಿಯಿಂ= ಪ್ರೀತಿಯಿಂದ, ಒಡೆಯನ= ಸ್ವಾಮಿಯ, ಕಟ್ಟಲೆಯಲಾ= ಕಟ್ಟಳೆಯಲ್ಲವೆ? ಹರಿಯ= ಕೃಷ್ಣ ಪರಮಾತ್ಮನ, ಸಾನಿಧ್ಯಂ= ಸಮೀಪವು, ಇರಲ್= ಸಿಕ್ಕಿದಮೇಲೆ, ತುರಗಮೇಧಂ= ಅಶ್ವಮೇಧವು, ಏಗೈವುದು= ಏನು ತಾನೆ ಮಾಡಲಾದೀತು? ನಿನಗೆ= ನಿನಗಾದರೋ, ಅರೆವು= ತಿಳಿವಳಿಕೆಯು, ಹುಟ್ಟುತಿಲ್ಲವೆ= ಉಂಟಾಗದೆ ಹೋಯಿತೆ? ಧರ್ಮಸೂನು= ಧರ್ಮಪುತ್ರನು, ಮತಿಗೆಟ್ಟು= ಬುದ್ಧಿ ಶೂನ್ಯನಾಗಿ, ಇಹನೆ= ಇದ್ದಾನೆಯೆ? ಶಿವಶಿವ= ಹರಹರಾ, ನಿಮಗೆ= ನಿಮಗಾದರೋ, ಪರಿಭ್ರಮಣ= ತಿರುಗಾಡುವುದು, ವೃಥಾ= ನಿರರ್ಥಕವಾಗಿ, ಅಟ್ಟಿತು= ಆಯಿತು, ಎಂದು= ಎಂಬುದಾಗಿ, ಅಮರೇಂದ್ರಸೂನುವಂ= ಪಾರ್ಥನನ್ನು, ಜರಿದು= ತಿರಸ್ಕಾರಮಾಡಿ, ಸೌಭರಿ= ಸೌಭರಿ ಎಂಬ ಋಷಿಯು, ನುಡಿದೊಡೆ= ಹೇಳಲಾಗಿ, ಅರ್ಜುನಂ= ಪಾರ್ಥನು, ಇಂತು= ಮುಂದೆ ಹೇಳುವಂತೆ. ಎಂದನು= ನುಡಿದನು.
ತಾತ್ಪರ್ಯ:- ನೀವು ಯೋಚಿಸಿರುವ ಕಾರ್ಯವಾದರೋ, ದನಗಳ ದೊಡ್ಡಿಯಲ್ಲಿರುವ ಕಾಮಧೇನುವನ್ನು ಬಿಟ್ಟು ಕಾಡು ಹುಲಿಯನ್ನು ಕರತಂದು ಹಾಲು ಕರೆಯಲೆಳಸಿದಂತಾದುದಲ್ಲಾ ಕೃಷ್ಣನ ಸಾನಿಧ್ಯವೇ ನಿಮಗೆ ಲಭಿಸುವಾಗ ಅಶ್ವಮೇಧ ಯಾಗದಿಂದ ನಿಮಗೆ ಆಗತಕ್ಕದ್ದೇನು? ನಿನಗೆ ಇದು ಗೊತ್ತೇ ಆಗದೆ ಹೋತಿತೆ? ಧರ್ಮನಂದನನೂ ಕೂಡ ಈ ವಿಷಯದಲ್ಲಿ ಬುದ್ಧಿಯಿಲ್ಲದವನಾದನೆ? ಅಯ್ಯೊ ಈಶ್ವರಾ! ಅನ್ಯಾಯವಾಗಿ ನಿಮಗೆ ಈ ಅಲೆದಾಟವುಂಟಾಯಿತಲ್ಲ! ಎಂದು ಸೌಭರಿಯು ಅರ್ಜುನನನ್ನು ಅಲ್ಲಗಳೆಯಲಾಗಿ, ಪಾರ್ಥನು ತಪೋನಿಧಿಯಾದ ಸೌಭರಿಯಂ ನೋಡಿ.