ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಬುಧವಾರ, ಸೆಪ್ಟೆಂಬರ್ 3, 2025

ಜೈಮಿನಿ ಭಾರತ 13 - ದೊಡ್ಡಬೆಲೆ ನಾರಾಯಣಶಾಸ್ತ್ರಿ

ಜೈಮಿನಿ ಭಾರತ 13 - ದೊಡ್ಡಬೆಲೆ ನಾರಾಯಣಶಾಸ್ತ್ರಿ


ಸೂಚನೆ:- ಹಂಸಧ್ವಜನ ಸುತನ ಸಮರಮರಿದಾಗಿ ಬರೆ। 

ಕಂಸಾರಿಬಂದು ಸಾರಥಿಯಾಗಿ ನರನ ಶರ। 

ದಿಂ ಸುಧನ್ವನ ಶಿರವನರಿಸಿದಂ ಮೇಲೆ ಸುರಗಣಮೈದೆ ಕೊಂಡಾಡಲು॥ 


ಪ್ರತಿಪದಾರ್ಥ :- ಹಂಸಧ್ವಜನ ಸುತನ = ಹಂಸಧ್ವಜನ ಮಗನಾದ ಸುಧನ್ವನ, ಸಮರಂ= ಕಾಳಗವು, ಅರಿದಾಗಿ ಬರೆ= ಅಸಾಧ್ಯವಾಗಿ ಬರಲು, ಕಂಸಾರಿ= ಕಂಸಾಸುರನಿಗೆ ಶತ್ರುವಾದ ಕೃಷ್ಣನು,  ಬಂದು=ಬಂದವನಾಗಿ,ಸಾರಥಿಯಾಗಿ = ಅರ್ಜುನನ ತೇರನ್ನು ನಡೆಸುವವನಾಗಿ, ಮೇಲೆ= ಅಂತರಿಕ್ಷದಲ್ಲಿ, ಸುರಗಣಂ= ದೇವತೆಗಳ ಸಮೂಹವು,ಐದಿ= ಬಂದವ-

ರಾಗಿ, ಕೊಂಡಾಡಲು= ಸ್ತುತಿಸುತ್ತಿರಲು, ನರನ=ಪಾರ್ಥನ, ಶರದಿಂ= ಬಾಣದಿಂದ, ಸುಧನ್ವನ,  ಶಿರವನು=ಶಿರಸ್ಸನ್ನು, ಆರಿಸಿದಂ= ಕತ್ತರಿಸಿದನು. 


ಅ॥ವಿ॥ ಕಂಸ+ಅರಿ=ಕಂಸಾರಿ ( ಷ.ತ.) ಸುರರ+ಗಣ=ಸುರಗಣ ( ಷ.ತ. ) ಕೊಂಡು+ಆಡು =ಕೊಂಡಾಡು,( ಹೊಗಳು,)


ಕೇಳೆಲೆ ನೃಪಾಲಕುಲಮೌಳಿ ಬಳಿಕರ್ಜುನಂ।

ಕಾಳಗಕೆ ನಡೆವ ಭಟರಂ ನಿಲಿಸಿ ಮುಂದುವರಿ। 

ವಾಳಪಡೆಯಂ ತೆಗೆಸಿ ಭರದಿಂದೆ ನೂಕಿದಂ ಕಲಿಸುಧನ್ವನ ಸರಿಸಕೆ। 

ಗಾಳಿಯ ಜವಂ ಸಿಡಿಲ ಗರ್ಜನೆ ರವಿಯ। 

ಮೇಳಮುಂ ದಾವಾಗ್ನಿಯಾಟೋಪಮಂತಕನ। 

ಕೋಳಾಹಳಂ ಕೂಡಿಕೊಂಡೊಂದು ರೂಪಾದವೋಲ್ ಕಾಣಿಸುವ ರಥವನು॥೧॥


ಪ್ರತಿಪದಾರ್ಥ:-ಎಲೆ= ಎಲಯ್ಯ, ನೃಪಾಲ=ರಾಜರ, ಕುಲ=ವಂಶಕ್ಕೆ, ಸಮೂಹಕ್ಕೆ, ಮೌಳಿ=ಕಿರೀಟಪ್ರಾಯನಾದವನೆ! ಕೇಳು= ಆಲಿಸು, ಬಳಿಕ = ಅನಂತರ, ಅರ್ಜುನಂ= ಪಾರ್ಥನು, ಕಾಳಗಕೆ = ಜಗಳಕ್ಕೆ, ನಡೆವ= ಹೋಗುತ್ತಿರುವ, ಭಟರಂ= ವೀರರನ್ನು, ನಿಲಿಸಿ= ತಡೆದು, ಮುಂದುವರಿವ=ಮುಂದುಗಡೆ ಒತ್ತಿ ಬರುತ್ತಿರುವ ,ಆಳ= ಕಾಲ್ಬಲದ, ಪಡೆಯಂ= ಬಲವನ್ನು, ತೆಗಿಸಿ= ಪ್ರವೇಶಿಸದಂತೆ ಅಡ್ಡಿಪಡಿಸಿ, ಭರದಿಂ= ಶೀಘ್ರವಾಗಿ, ಸುಧನ್ವನ ಸರಿಸಕೆ= ಸುಧನ್ವನ ಹತ್ತಿರಕ್ಕೆ, ಗಾಳಿಯ=ವಾಯುವಿನ, ಜವಂ= ಜಾಗ್ರತೆಯಾಗಿ ಬೀಸೋಣವು(ವೇಗವು) ಪೊಡೆವ= ಬಡಿವ, ಸಿಡಿಲಘರ್ಜನೆ= ಅಶನಿಯ ಆರ್ಭಟವು, ರವಿಯ= ಭಾಸ್ಕರನ, ಮೇಳಮಂ= ಮಧ್ಯಕಾಲದ ಬಿಸಿಲು, ದವಾಗ್ನಿಯ= ಕಾಡ್ಕಿಚ್ಚಿನ, ಆಟೋಪಂ= ಆಧಿಕ್ಯವು, ಅತಕನ= ಕಾಲನ, ಕೋಳಾಹಳಂ= ಕಲಕಲಧ್ವನಿಯು, ಕೂಡಿಕೊಂಡು= ಬೆರೆದುಕೊಂಡು, ಒಂದುರೂಪಾದವೋಲ್= ಒಂದು ಆಕೃತಿಯಾದ ರೀತಿಯಿಂದ, ಕಾಣಿಸುವ= ಕಂಡುಬರುವ, ರಥವನು= ವರೂಥವನ್ನು, ನೂಕಿದಂ= ಹೊಡೆದನು( ತಳ್ಳಿದನು). 


ಅ॥ವಿ॥ ಮೌಳಿ=ತಲೆ, ಕಿರೀಟ. (ಕಲಿಯಾದ +ಸುಧನ್ವ =ಕಲಿಸುಧನ್ವ, (ವಿ. ಪೂ. ಕ.) ಶರ=ನೀರು, ಬಾಣ, ದರ್ಭೆ.


ತಾತ್ಪರ್ಯ:- ಎಲೈ ರಾಜಕುಲಕ್ಕೆ ಕಿರೀಟಪ್ರಾಯನಾದ ಜನಮೇಜಯನೆ! ಕೇಳು, ಪೃಥೆಯಮಗನಾದ ಪಾರ್ಥನು, ಸಾತ್ಯಕಿ, ವೃಷಕೇತು, ಪ್ರದ್ಯುಮ್ನ, ಯೌವನಾಶ್ವ, ಸಾಲ್ವಾನುಜ, ಅಸಿತಧ್ವಜನೇ ಆದಿಯಾದ ಮಹಾವೀರರು, ಹಂಸಧ್ವಜನ ಪುತ್ರನಾದ ಸುಧನ್ವನಂ, ರಣದೊಳ್ ಸೋಲಿಸಿದ್ದನ್ನೂ, ಉಳಿದ ವೀರಾಧಿಗಳು ಯುದ್ಧಕ್ಕೆ ಹೊರಟಿರುವುದನ್ನೂ ಕಂಡು, ಆ ಸೇನಾ ಜನರನ್ನು, ಹಿಂದಕ್ಕೆ ನಿಲ್ಲಿಸಿ ಸುಧನ್ವನ ಹತ್ತಿರಕ್ಕೆ ಗಾಳಿಯ ವೇಗವೂ, ಹೊಡೆವ ಸಿಡಿಲಧ್ವನಿಯೂ,ಸೂರ್ಯನ ತಾಪವೂ ದವಾಗ್ನಿಯಾಧಿಕ್ಯವೂ, ಅಂತಕನ ಕೋಲಾಹಲವೂ ಇವೆಲ್ಲವೂ ಏಕೀಭವಿಸಿ ಒಂದಾದ ರೀತಿಯಿಂದ ಕಾಣಬರುವ ರಥವನ್ನು ನಡೆಯಿಸಿದನು. 


ಕುದುರೆಗಳ ಖುರಪುಟಧ್ವನಿ ನಿಜವರೂಥ ಚ। 

ಕ್ರದ ರವಂ ದೇವದತ್ತ ಘೋಷಮೆಸೆವ ಸಿಂ।

ಧದ ತುದಿಯ ಕಪಿಯಬ್ಬರಣೆ ಧನುರ್ಜ್ಯಾನಾದಮೊಂದಾಗಿ ಭೀಕರದೊಳು॥ 

ಪದಿನಾಲ್ಕು ಲೋಕಮಂ ಬೆದರಿಸಲ್ಕಿದು ನರನ। 

ಕದನದಾರವವೆಂದು ತಿಳಿದಂಬುಜಾಸನಂ। 

ಮೊದಲಾದ ನಿರ್ಜರರ್ ತಂತಮ್ಮ ವಾಹನವಿಮಾನದಿಂದೈತಂದರು॥೨॥


ಪ್ರತಿಪದಾರ್ಥ :- ಕುದುರೆಗಳ= ಅಶ್ವಗಳ, ಖುರಪುಟಧ್ವನಿ = ಪಾದ(ಗೊರಸು) ಗಳಿಂದಾಗುವ ಶಬ್ಧವು, ನಿಜ=ತನ್ನ, ವರೂಥದ= ತೇರಿನ, ಚಕ್ರದ= ಗಾಲಿಗಳ, ರವಂ= ಧ್ವನಿಯು, ದೇವದತ್ತ= ದೇವದತ್ತವೆಂಬ ಶಂಖದ, ಘೋಷಂ= ಸದ್ದು, ಎಸೆವ= ಪ್ರಕಾಶಿಸುವ, ತುದಿಯ= ಕೊನೆಯಲ್ಲಿರುವ, ಕಪಿಯ= ಕಪಿಯಾದ ಆಂಜನೇಯನ, ಅಬ್ಬರಣೆ= ಆರ್ಭಟವು, ಧನು= ಬಿಲ್ಲಿನ, ಝೇಂಕಾರಂ= ಟಂಕೃತಿಯು, ಒಂದಾಗಿ= ಒಟ್ಟುಗೂಡಿ, ಭೀಕರದೊಳು= ಭಯವನ್ನುಂಟುಮಾಡುವ ರೀತಿ-

ಯಿಂದ, ಪದಿನಾಲ್ಕು ಲೋಕಮಂ= ಹದಿನಾಲ್ಕು ಲೋಕಗಳನ್ನು, ಬೆದರಿಸಲ್ಕೆ= ಹೆದರಿಸಲು, ಇದು=ಈ ಶಬ್ಧವು, ನರನ= ಪಾರ್ಥನ, ಕದನದ= ಯುದ್ಧದ, ಆಟೋಪಮಂ= ವೈಖರಿಯು, ಎಂದು= ಎಂಬುದಾಗಿ, ಅರಿದು=ತಿಳಿದು, (ಗ್ರಹಿಸಿ) ಅಂಬುಜಾಸನಂ= ಕಮಲಾಸನನಾದ ಬೊಮ್ಮನು, ಮೊದಲಾದ =ಆದಿಯಾದ,  ನಿರ್ಜರರ್= ದೇವತೆಗಳು( ಅನಿಮಿಷರು) ತಂತಮ್ಮ = ತಮ್ಮಗಳ, ವಾಹನ= ಹೊರುವುದಕ್ಕೆ ಯೋಗ್ಯವಾದವುಗಳಿಂದಲೂ, ವಿಮಾನದಿಂ= ವಿಮಾನಗಳಿಂದಲೂ, ಐತಂದರೈ= ಬಂದರೈ. 


ಅ॥ವಿ॥ ಐತರ್=ಧಾತು, ಪದಿನಾಲ್ಕು ಲೋಕಗಳ ಸಮಾಹಾರ= ಪದಿನಾಲ್ಕು ಲೋಕ (ಸ.ದೀ. ಸ. ದ್ವಿಗು) ಕದನದ+ ಆಟೋಪ=ಕದನದಾಟೋಪ (ಲೋ.ಸ.) ಜರ=ಮುಪ್ಪು ಅದಿಲ್ಲದವರು ನಿರ್ಜರರು (ಆ.ಸಂ ) ಖುರದ + ಪುಟ=ಖುರಪುಟ

(ಷ. ತ.) 


ತಾತ್ಪರ್ಯ:- ಆ ಸಮಯದಲ್ಲಿ ಅರ್ಜುನನ ಚತುರಂಗಬಲದ ನಿನದವೂ, ದೇವದತ್ತದ ಘೋಷವೂ, ಧನುಸ್ಸಿನ ಝೇಂಕಾರವೂ, ಎವೆಲ್ಲ ಏಕೀಭವಿಸಿ ಪದಿನಾಲ್ಕು ಲೋಕಗಳನ್ನು ಬೆದರಿಪ ನಿನದಂ ಕೇಳ್ದು, ಬ್ರಹ್ಮಾದಿ ದೇವತೆಗಳು ಅರ್ಜುನನ ಕದನದಾಟೋಪವಂ ನೋಡಲ್ಕೆ ತಮ್ಮ ವಾಹನಾದಿಗಳಂ ಹತ್ತಿ ಐತಂದು ನೋಡುತ್ತಿರಲು. 


ವಾನರಸಮುನ್ನತ ಧ್ವಜವರೂಥದೊಳೈದು। 

ವಾನರ ಸಮರ ಭರವನರಿದು ಕಾಳಗಕೆ ತಾ। 

ವಾನರಸಮರ್ಥರೆಂದರ್ಜುನಂ ಬಹನೆಂದು ನಿಜಸಾರಥಿಗೆ ಸೂಚಿಸಿ॥ 

ದಾನವರನಾನಿಮಿಷರೊಳ್ ನೀನೆ ಭಟನಹ ನಿ। 

ದಾನವನೇಕಮುಖದಿಂ ಕೇಳ್ದು ಸಂಗ್ರಾಮ। 

ದಾನವನರಸಿ ಬಂದೆನೆಂದೆಚ್ಚನಾ ಸುಧನ್ವಂ ಪಾರ್ಥನಂ ಧುರದೊಳು ॥೩॥


ಪ್ರತಿಪದಾರ್ಥ :- ವಾನರ= ಆಂಜನೇಯನಿಂದ ಯುಕ್ತಮಾದ, ಸಮುನ್ನತ = ಮೇಲಕ್ಕೆ ಎತ್ತಲ್ಪಟ್ಟಿರುವ, ಧ್ವಜ= ಕೇತನವುಳ್ಳ, ವರೂಥದೊಳು= ತೇರಿನಲ್ಲಿ, ಐದುವ= ಪ್ರಯಾಣಮಾಡುತ್ತಿರುವ, ಆ ನರನ= ಆ ಪಾರ್ಥನ, ಸಮರ=ಕಾಳಗದ, ಭರವಂ=

ಜಾಗ್ರತೆಯನ್ನು, ಅರಿದು= ಗ್ರಹಿಸಿ,  ನಾವು= ನಾವುಗಳು, ಆ ನರ= ಆ ಫಲ್ಗುಣನಿಗಿಂತಲೂ, ಸಮರ್ಥಂ ಎಂದು= ಶೂರನು ಎಂಬುದಾಗಿ, ಅರ್ಜುನಂ= ಪಾರ್ಥನು, ಬಹನು ಎಂದು= ಬರುತ್ತಿರುವನು ಎಂಬುದಾಗಿ, ನಿಜ= ತನ್ನ, ಸಾರಥಿಗೆ= ಸೂತನಿಗೆ, ಸೂಚಿಸಿ=ತಿಳಿಯಪಡಿಸಿ( ಎಚ್ಚರಿಸಿ) ದಾನವ= ದೈತ್ಯರಲ್ಲಿ, ನರ= ಮನುಜರಲ್ಲಿ, ಅನಿಮಿಷರೊಳು= ದೇವತೆಗಳಲ್ಲಿಯೂ ಕೂಡ, ನೀನೇ= ನೀನೊಬ್ಬನು ಮಾತ್ರವೇ, ಭಟಂ= ವೀರನು, ಅಹೆ= ಆಗಿರುತ್ತಿ,ನಿದಾನವಂ= ಈ ಮೂಲತತ್ವವನ್ನು, ಅನೇಕಮುಖದಿಂ= ಬಹು ಜನರಮುಖೇನ, ಕೇಳ್ದು= ತಿಳಿದು, ಸಂಗ್ರಾಮ= ಯುದ್ಧದ, ದಾನವಂ= ಯುದ್ಧಾಡಂಬರವನ್ನು, ಅರಸಿ= ಹುಡುಕಿ, (ಅಪೇಕ್ಷಿಸಿ,) ಬಂದೆನು= ಬಂದಿರುವೆನು, ಎಂದು= ಎಂಬುದಾಗಿ, ಆ ಸುಧನ್ವಂ= ಆ ಸುಧನ್ವನು, ಪಾರ್ಥನಂ= ಫಲ್ಗುಣನನ್ನು, ಧುರದೊಳು= ಯುದ್ಧದಲ್ಲಿ, ಎಚ್ಚಂ= ಬಾಣ ಪ್ರಯೋಗ ಮಾಡಿದನು.


ಅ॥ವಿ॥ ವಾನರರಲ್ಲಿ+ಸಮರ್ಥಂ= ವಾನರಸಮರ್ಥಂ (ಷ. ತ.), ನಿಮಿಷ= ಕಣ್ಣಿನ ರೆಪ್ಪೆಯ ಕೂದಲು, ಅ=ಇಲ್ಲದವರು= ಅನಿಮಿಷರು, ಅನಿಮಿಷ=ದೇವತೆಗಳು, ಮೀನು, ರೆಪ್ಪೆ ಕೂದಲು ಇಲ್ಲದವರು, ಅರಸಿ= ಹುಡುಕಿ,  ರಾಣಿ.


ತಾತ್ಪರ್ಯ:- ಅತ್ತಲಾ ಸುಧನ್ವನು ಕಪಿಧ್ವಜನಾದ ಅರ್ಜುನನನ್ನು ನೋಡಿ, ತನ್ನ ಸಾರಥಿಯನ್ನು ಎಚ್ಚರಿಸಿ, ತನ್ನ ಇತರ ಸೇನಾಧಿಕಾರಿಗಳಿಂದ ಜಯಿಸಲಾಗದೆಂದು ತಿಳಿದು, ಪಾರ್ಥನೇ ಯುದ್ಧಕ್ಕೆ ಬರುತ್ತಲಿರುವನು, ಈ ಮಹನೀಯನ ಪರಾಕ್ರಮಾತಿಶಯವನ್ನು ಅನೇಕರಿಂದ ತಿಳಿದಿರೋಣವಾಗಿದೆ, ನರರಲ್ಲಿಯೂ, ದೇವಾದಿದೇವತೆಗಳಲ್ಲಿಯೂ ನೀನೇ ಸಮರ್ಥನು, ಆದರೂ ನಾನು ನಿನ್ನೊಡನೆ ಕದನಮನೆಸಗಲ್ಕೆ ಬಂದಿರ್ಪೆನೆಂದು ಅರ್ಜುನನ ಮೇಲೆ ಬಾಣಪ್ರಯೋಗಮಾಡಲಾಗಿ.


ಕ್ರೈದ್ಧನಾದಂ ಧನಂಜಯನಿದೇಕೆಮ್ಮೊಡನೆ। 

ಯುದ್ಧವನಪೇಕ್ಷಿಸುವೆ ಶಿವಶಿವಾ ನೀನಪ್ರ। 

ಬುದ್ಧನಲ್ಲವೆ ದೇವದೈತ್ತಮಾನವರೊಳ್ ಮದೀಯವೈರದೊಳೆ ಬಾಳ್ದ॥ 

ಉದ್ಧತಪರಾಕ್ರಮಿಗಳುಂಟೆ ಸಂಗರಕೆ ಸ। 

ನ್ನದ್ಧರಾದಿನಸುತ ದ್ರೋಣ ಭೀಷ್ಮಾದಿ ಪ್ರ। 

ಸಿದ್ಧಭಟರೇನಾದರರಿಯಲಾ ಮರುಳೆ ಹೋಗೆನುತೆಚ್ಚನಾ ಪಾರ್ಥನು॥೪॥ 


ಪ್ರತಿಪದಾರ್ಥ :- = ಧನಂಜಯಂ= ಪಾರ್ಥನು, ಕ್ರುದ್ಧನಾದಂ= ಕುಪಿತನಾದನು, ಇದೇಕೆ= ಏತಕ್ಕಾಗಿ, ನಮ್ಮೊಡನೆ= ನಮ್ಮಲ್ಲಿ, ಯುದ್ಧವಂ= ಕಾಳಗವನ್ನು, ಅಪೇಕ್ಷಿಸುವೆ= ಅಪೇಕ್ಷಿಸುತ್ತಿ, ಶೆವಶಿವ= ಪರಮೇಶ್ವರನೇ, ನೀಂ=ನೇನು, ಅಪ್ರಬುದ್ಧನು= ತಿಳುವಳಿಕೆಯಿಲ್ಲದವನು, ಅಲ್ಲವೆ= ಆಗಿರುತ್ತಿ(ಆಗಿಲ್ಲವೆ) ದೇವ=ದೇವತೆಗಳಲ್ಲಿಯೂ, ದೈತ್ಯ= ರಕ್ಕಸರಲ್ಲಿಯೂ, ಮಾನವರೊಳು= ಮನುಷ್ಯರಲ್ಲಿಯೂ,ಮದೀಯ= ನನ್ನ, ವೈರದೊಳು= ಶತ್ರುತ್ವದಿಂದ,ಬಾಳ್ದ= ಜೀವಿಸಿರುವ, ಉದ್ಧತ= ಅಧಿಕರಾದ, ಪರಾಕ್ರಮಿಗಳು= ಯುದ್ಧದಲ್ಲಿ ಆಟೋಪವುಳ್ಳವರು,ಉಂಟೆ= ಇರುವರೇ, ಸಂಗರಕೆ= ಕಾಳಗಕ್ಕೆ, ಸನ್ನದ್ಧರಾದ= ಅನುವಾದ, ಇನಸುತ=ಇನಸುತನಾದ ಕರ್ಣನು, ದ್ರೋಣ= ದ್ರೋಣಾಚಾರೂಯನು, ಭೀಷ್ಮ= ಭೀಷ್ಮನು, ಇವರೆ, ಆದಿ=ಮೊದಲಾದ, ಪ್ರಸಿದ್ಧ= ಲೋಕವಿಖ್ಯೃತರಾದ, ಭಟರು= ಶೂರರು,  ಅಂನಾದರು= ಯಾವ ಫಲವನ್ನು ಹೊಂದಿದರು, ಅರಿ=ತಿಳಿ, ಎಲಾ ಮರುಳೆ= ಎಲೆ ಮೂಢನೆ, ಹೋಗೆನುತ= ಕಾಳಗವನ್ನು ಬಿಟ್ಟು ನಡೆ ಎಂದು, ಆ ಪಾರ್ಥನು= ಆ ಫಲ್ಗುಣನು, ಎಚ್ಚನು= ಬಾಣ ಪ್ರಯೋಗ ಮಾಡಿದನು.  


ಅ॥ವಿ॥ ಅದಿತಿಯ ಮಕ್ಕಳು =ದೇವತೆಗಳು,  ದಿತಿಯ ಮಕ್ಕಳು = ರಕ್ಕಸರು, ಅವನೈ+ಪಾರ್ಥ= ಆ ಪಾರ್ಥ(ಗ.ಸ.) ಇನನ+ಸುತ= ಇನಸುತ (ಷ.ತ.) ದ್ರೋಣನುಂ+ಭೀಷ್ಮನೂ= ದ್ರೋಣ ಭೀಷ್ಮರು(ದ್ವಿ. ದ್ವಂ.)


ತಾತ್ಪರ್ಯ:- ಅರ್ಜುನನು ಕೋಪೋದ್ರೇಕವುಳ್ಳವನಾಗಿ, ಎಲೈ ಸುಧನ್ವನೇ! ನೀನು ನನ್ನೊಡನೆ ಯುದ್ಧಕ್ಕಾಗಿ ಬಂದಿರ್ಪೆಯಾ! ಅಗತ್ಯವಾಗಿ ಯುದ್ಧಮಾಡಬಹುದು, ಆದರೆ ನೀನೇನೋ ವಿವೇಕಿಯೆಂದು ಭಾವಿಸಿದ್ದೆನು, ದೇವಾದಿ-

ದೇವತೆಗಳಲ್ಲಿಯೂ,  ನರಮನುಷ್ಯರಲ್ಲಿಯೂ, ರಾಕ್ಷಸರಲ್ಲಿಯೂ,ಯುದ್ಧಮಾಡಿ ಬದೈಕಿದವರಿಲ್ಲ, ಮತ್ತು ಅತ್ಯಂತ ಪರಾಕ್ರಮಿಗಳಾದ ಭೀಷ್ಮ, ದ್ರೋಣಾದಿಗಳುನನ್ನೊಡನೆ ಕಾದಿ ಯಾವ ಗತಿಯಂ ಪೊಂದಿದರು. ಮರುಳೆ ನನ್ನನ್ನು ನೀನು  ಜಯಿಸುವುದೆಂದರೇನು, ಸುಮ್ಮನೆ ಹೊರಟು ಹೋಗು ಎನುತ ಅರ್ಜೈನನುಬಾಣ ಪ್ರಯೋಗ ಮಾಡಿದನು.  


ಸಾರಥಿಯ ಬಲ್ಪಿಂದೆ ಕೌರವ ಬಲದ ನಿಖಿಳ। 

ವೀರರಂ ಗೆಲ್ದೆಯಲ್ಲದೆ ನಿನ್ನನೀ ಧರೆಯೊ। 

ಳಾರರಿವರಕಟ ನೀಂ ಕೃಷ್ಣನಂ ಕರೆಸಿಕೊಂಡಳವಿಗುಡು ಬಳಿಕೆನ್ನೊಳು॥ 

ಸಾರನ್ನೆಗಂ ಬರಿದೆ ಬಳಲಬೇಡೆಮ್ಮಲ್ಲಿ। 

ಹಾರೈಸದಿರ್ ಜಯವನೆನುತೆಚ್ಚೊಡರ್ಜುನನ। 

ತೇರಿರದೆ ತಿರ್ರನೆ ತಿಗುರಿಯಂತೆ ತಿರುಗಿತದನೇನೆಂಬೆನದ್ಭುತವನು॥೫॥ 


ಪ್ರತಿಪದಾರ್ಥ :- ಸಾರಥಿಯ= ರಥವನ್ನು ನಡೆಯಿಸುವ ಕೃಷ್ಣನ, ಬಲ್ಪಿಂದೆ= ಸಾಮರ್ಥ್ಯದಿಂದ, ಕೌರವನ= ದುರ್ಯೋಧ- 

ನನ, ಬಲದ=ಸೈನ್ಯದ, ಅಖಿಳ= ಸಮಸ್ತರಾದ, ವೀರರಂ=ಶೂರರನ್ನು,  ಗೆಲ್ದೆ=ಜಯಿಸಿದೆ,ಅಲ್ಲದೆ= ಹಾಗಿಲ್ಲದಿದ್ದರೆ ನಿನ್ನಂ= ನಿನ್ನನ್ನು, ಈ ಧರೆಯೊಳು= ಈ ಪೃಥ್ವಿಯಲ್ಲಿ, ಆರರಿವರ್= ಯಾರು ತಾನೆ ತಿಳಿದಿರ್ಪರು, ಅಕಟ=ಅಯ್ಯೋ, ನೀಂ=ನೀನು,

ಕೃಷ್ಣನಂ ಕರೆಸಿಕೊಂಡು= ಕೃಷ್ಣನನ್ನು ಬರಮಾಡಿಕೊಂಡು,  ಎನ್ನೊಳು= ನನ್ನೊಡನೆ, ಅಳವಿಗೊಡು= ಕಾಳಗವನ್ನು ಮಾಡು,ಅನ್ನೆಗಂ= ಅದುವರೆಗೂ, ಸಾರು= ಹೋಗು,(ಬೇರೆಯಿರು) ಬರಿದೆ=ವ್ಯರ್ಥವಾಗಿ,  ಎಮ್ಮಲ್ಲಿ=ನಮ್ಮೊಡನೆ ಯುದ್ಧಮಾಡಿ, ಬಳಲಬೇಡ= ಆಯಾಸಪಡಬೇಡ,ಜಯವಂ= ಗೆಲ್ಲುವಿಕೆಯನ್ನು, ನಮ್ಮಲ್ಲಿ,  ಹಾರೈಸದಿರ್= ಅಪೇಕ್ಷಿಸ-

ಬೇಡ, ಎನುತ= ಎಂದು ಹೇಳುತ್ತ, ಎಚ್ಚಡೆ= ಶರಪ್ರಯೋಗಮಾಡಲು, ತೇರು= ( ಅರ್ಜುನನ) ರಥವು, ಇರದೆ= ನಿಂತಿರದೆ, ತಿರ್ರನೆ= ತಿರ್ರೆಂಬ ಧ್ವನಿಯಿಂದ,ಬುಗುರಿಯಂತೆ=ಬುಗುರಿಯ ಹಾಗೆ, ತಿರುಗಿತು= ಸುತ್ತಿತು, ಅದ್ಭುತವನು= ಈ ಅತಿಶಯವನ್ನು, ಏನೆಂಬೆನು= ಏನೆಂದು ವರ್ಣಿಸಲಿ. 


ಅ॥ವಿ॥ ತಿರ್ರನೆ= ಅನುಕರಣ ಶಬ್ಧ, ಕೌರವನ+ಬಲ= ಕೌರವ ಬಲ (ಅಲುಕ್ ಷಷ್ಠಿ)


ತಾತ್ಪರ್ಯ:-ಆ ಮಾತನ್ನು ಕೇಳಿ, ಸುಧನ್ವನು ಸಾರಥಿಯಾದ ಶ್ರೀಕೃಷ್ಣನ ಸಹಾಯದಿಂದ,  ಬಲಶಾಲಿಗಳಾದ ಕೌರವಾದಿಗಳ ಜಯಿಸಿದೆಯೇ ಹೊರ್ತು, ನಿನ್ನ ಸಾಮರ್ತ್ಯದಿಂದೇನಾದರೂ ಜಯಿಸಿದೆಯಾ! ಲೋಕದಲ್ಲಿ ನಿನ್ನನ್ನು ಯಾರು ತಾನೆಶೂರನೆಂದರಿವರು, ಆದ್ದರಿಂದ ನೀನು ಕೃಷ್ಣನನ್ನು ಬರಮಾಡಿಕೊಂಡು ನನ್ನೊಡನೆ ಯುದ್ಧಮಾಡು, ಹಾಗೆಮಾಡದೆ ವೃಥಾ ನನ್ನೊಡನೆ ಕಾದಿ ಆಯಾಸಪಡಬೇಡ, ಕೃಷ್ಣನಿಲ್ಲದೆ ನನ್ನಲ್ಲಿ ನೆನಗೆ ಜಯವೃದೀತೇ? ಎಂದಿಗೂ ಜಯವನ್ನು ಅಪೇಕ್ಷಿಸಬೇಡವೆಂದು ಬಾಣಪ್ರಯೋಗವಂ ಮಾಡಲು, ಅರ್ಜುನನ ರಥವು ಗರ್ರನೆ ಬುಗುರಿಯಂತೆ ತಿರುಗಿ ಸಮಸ್ತರಿಗೂ 

ಆಶ್ಚರ್ಯವನ್ನುಂಟುಮಾಡಿತು. 


ಪೂತುರೆ ಸುಧನ್ವ ಸತ್ವಾತಿಶಯದಿಂದೆ ವಿ। 

ಖ್ಯಾತನಹೆ ಮದ್ರಥವನೀ ತೆರದೊಳಿಸುವರಂ। 

ಪಾತಾಳ ಸುರನಿಲಯಭೂತಳದ ಪಟುಭಟವ್ರಾತದೊಳ್ ಕಾಣೆನಿನ್ನು॥ 

ನೀ ತರಳನಕಟ ಬರಿದೇತಕಳಿದಪೆ ನಿನ್ನ । 

ತಾತನಂ ಬರಹೇಳು ಘಾತಿಸುವವರಲ್ಲ ನಾ। 

ವಾ ತುರಂಗಮವ ಬಿಡು ಧಾತುಗೆಡಬೇಡೆನುತ್ತಾತನಂ ನರನೆಚ್ಚನು॥ ೬॥ 


ಪ್ರತಿಪದಾರ್ಥ :- ಸುಧನ್ವ = ಎಲೈ ಸುಧನ್ವನೆ, ಪೂತುರೆ= ಶಹಬಾಸು, ಸತ್ವ=ಪರಾಕ್ರಮದ, ಅತಿಶಯದಿಂದ= ಆಟೋಪದಿಂದ, ವಿಖ್ಯಾತನು= ಲೋಕಪ್ರಸಿದ್ಧನು, ಅಹೆ= ಆಗಿರುತ್ತಿ,ಮದ್ರಥವ= ನನ್ನ ರಥವನ್ನು, ಈ ತೆರದೊಳು= ಈ ರೀತಿಯಿಂದ,ಎಸೆವರಂ= ಬಾಣಪ್ರಯೋಗಮಾಡಿ ಹಿಂದಟ್ಟಿದವರನ್ನು,ಪಾತಾಳ= ಕೆಳಲೋಕದಲ್ಲಿಯೂ, ಸುರ= ದೇವತೆಗ-

ಳಿಗೆ, ನಿಲಯ= ಆವಾಸವಾದ ಸ್ವರ್ಗಲೋಕದಲ್ಲಿಯೂ, ಭೂತಳ= ಮರ್ತ್ಯಲೋಕದಲ್ಲಿಯೂ ಇರುವ, ಪಟು=ಸಮರ್ಥ-

ರಾದ, ಭಟ= ವೀರರ, ವ್ರಾತದೊಳ್= ಗುಂಪಿನಲ್ಲಿ, ಕಾಣೆನು= ನೋಡಿರುವುದಿಲ್ಲ, ಇನ್ನು= ಈಗಲೂ, ನೀ=ನೀನು, ತರಳಂ= ಹುಡುಗನು,(ಆಗಿರುತ್ತಿ) ಅಕಟ= ಅಯ್ಯೊ, ಬರಿದೆ= ವ್ಯರ್ಥವಾಗಿ, ಏಕೆ= ಏತಕ್ಕಾಗಿ, ಅಳಿದಪೆ= ಪ್ರಾಣಬಿಡುತ್ತಿ, ನಿನ್ನ =ನಿನ್ನಯ, ತಾತನಂ= ತಂದೆಯಾದ ಹಂಸಧ್ವಜನನ್ನು, ಬರಹೇಳು= ಬರುವಂತೆ ಹೇಳು, ನಾವು=ನಾವುಗಳು, ಘಾತಿಸುವ-

ವರು= ಸಂಹರಿಸತಕ್ಕವರು, ಅಲ್ಲ=ಆಗಿರುವುದಿಲ್ಲ, ಆ ತುರಂಗಮಂ=ಆ ಯಜ್ಞಾಶ್ವವನ್ನು,  ಬಿಡದೆ= ಬಿಟ್ಟುಕೊಡದೆ, ಧಾತುಗೆಡಬೇಡ= ಅಧೈರ್ಯಪಡಬೇಡ,ಎನುತಲಿ= ಎಂದು ಹೇಳುತ್ತಾ,  ಆತನಂ= ಆ ಸುಧನ್ವನನ್ನು, ನರಂ=ಅರ್ಜುನನು, ಎಚ್ಚನು=ಬಾಣದಿಂದ ಹೊಡೆದನು. 


ಅ॥ವಿ॥ ಪೂತುರೆ=ಮಹಾರಾಷ್ಟ್ರ ಪದ, (ಸ್ವರ್ಗ, ಮರ್ತ್ಯ, ಪಾತಾಳ  ಇವು ತ್ರಿಲೋಕಗಳು,) ಮತ್+ರಥ=ಮದ್ರಥ (ಜ.ಸಂ.)

(ತುರಂಗ= ಕುದುರೆ, ಕುರಂಗ= ಜಿಂಕೆ )


ತಾತ್ಪರ್ಯ:- ಆಗ ಅರ್ಜುನನು ಸುಧನ್ವನನ್ನು ನೋಡಿ ಎಲೈ ಸುಧನ್ವನೇ ಶಹಬಾಸು, ಪರಾಕ್ರಮಾತಿಶಯದಿಂದ ವಿಖ್ಯಾತನಾ-

ಗಿರುತ್ತಿ ,ಈ ರೀತಿಯಾಗಿ ಬಾಣಪ್ರಯೋಗಮಾಡಿ, ನನ್ನ ರಥವನ್ನು ಹಿಂದಕ್ಕೆ ನೂಕಿದ ವೀರರು ತ್ರಿಲೋಕಗಳಲ್ಲಿ ಯಾರನ್ನೂ ಕಾಣೆ, ನೀನು ಇನ್ನೂ ಬಾಲಕ,ನಿಮ್ಮ ತಂದೆಯನ್ನಾದರೂ ಯುದ್ಧಕ್ಕೆ ಬರಹೇಳು, ಅನ್ಯಾಯವಾಗಿ ಅಲ್ಪಾಯುಸ್ಸಿನಲ್ಲಿ ಪ್ರಾಣ- 

ಬಿಡಬೇಡ, ಯಜ್ಞಾಶ್ವವನ್ನು ಬಿಡದೆ ಆಯಾಸಪಡಬೇಡವೆಂದು ಬಾಣವಂ ಪ್ರಯೋಗಿಸಲಾಗಿ. 


ಇನ್ನು ಹಯಮಂ ಬಿಡುವನಲ್ಲ ನಿನಗೆಮ್ಮ ತಾ। 

ತಂ ನಳಿನನಾಭನ ಸಹಾಯಮಿಲ್ಲದೆ ಬರಿದೆ। 

ತನ್ನನಳುಕಿಸಲಹೆ ಕಕ್ಕುಲಿತೆ ಬೇಡ ನಡೆ ಹಸ್ತಿನಾಪುರಕೆ ಮರಳಿ॥ 

ಸನ್ನುತತುರಂಗಮೇಧಾದ್ವರಕೆ ದೀಕ್ಷೆಗೊಂ। 

ಬಂ ನರೇಂದ್ರಾಗ್ರಣಿ ಮರಾಳಧ್ವಜಂ ಬಳಿಕ । 

ನಿನ್ನ ವಿಕ್ರಮದಿಂದೆ ಜಯಿಸು ಭೂಮಂಡಲವನೆನುತವಂ ತೆಗೆದೆಚ್ಚನು॥೭॥ 


ಪ್ರತಿಪದಾರ್ಥ :- ಇನ್ನು= ಇನ್ನುಮೇಲೆ, ( ಅಶ್ವಮಂ ಹಿಡಿದು ಕಟ್ಟಿದನಂತರ ) ಎಮ್= ನಮ್ಮ,  ತಾತಂ= ಜನಕನು, ನಿನಗೆ= ನಿನಗೋಸ್ಕರ, ಹಯಮಂ= ತುರಗವನ್ನು, ಬಿಡುವಂ ಅಲ್ಲ= ಬಿಡತಕ್ಕವನಾಗಿಲ್ಲ, ನಳಿನ=ಪದ್ಮವೇ, ನಾಭನ= ನಾಭಿಯಾ-

ಗುಳ್ಳ ಶ್ರೀಕೃಷ್ಣನ,  ಸಹಾಯಂ= ಉಪಕಾರವು, ಇಲ್ಲದೆ= ಹೊರ್ತಾಗಿ, ಬರಿದೆ= ಸುಮ್ಮನೆ, ತನ್ನಂ=ನನ್ನನ್ನು,  ಅಳುಕಿಸಲ್= ಹೆದರಿಸಲು, ಅರಿಯೆ= ತಿಳಿಯಲಾರೆ( ಸಾಧ್ಯವಲ್ಲ) ಕಕ್ಕೈಲಿತೆಬೇಡ= ಕುದುರೆಯ ಮೇಲಿನ ಅಪೇಕ್ಷೆಯನ್ನು ಬಿಡು, (ಕುದುರೆಯು ಪುನಹ ನಿನಗೆ ದೊರೆಯಲಾರದು) ಮರಳಿ= ಹಿಂದಿರುಗಿ, ಹಸ್ತಿನಾಪುರಕೆ=ಗಜನಗರಿಗೆ, ನಡೆ= ಹೊರಡು, ನರೇಂದ್ರ= ಭೂಪಾಲರಲ್ಲಿ, ಅಗ್ರಣಿ= ಯೋಗ್ಯನಾದ, ಮರಾಳಧ್ವಜಂ= ಹಂಸಪಕ್ಷಿಯೆ ಧ್ವಜವಾಗುಳ್ಳ ಹಂಸಕೇತುವು, ಸನ್ನುತ= ಸ್ತುತಿಸಲ್ಪಟ್ಟ ,ತುರಂಗಮೇಧಾಧ್ವರಕೆ = ಅಶ್ವಮೇಧಯಜ್ಞಕ್ಕೆ, ದೀಕ್ಷೆಗೊಂಡು= ಕಂಕಣಬದ್ಧನಾಗುವನು, ಬಳಿಕ= ಅನಂತರದಲ್ಲಿ ( ನಾವು ಯಜ್ಞಮಾಡಿದನಂತರ) ನಿನ್ನವಿಕ್ರಮದಿಂದ= ನಿನ್ನ ಪರಾಕ್ರಮಾತಿಶಯದಿಂದ,  ಭೂಮಂಡಲವಂ= ಈ ಪ್ರಪಂಚವನ್ನೆಲ್ಲಾ, ಜಯಿಸು= ಗೆಲ್ಲುವನಾಗು, ಎನುತ= ಎಂದು ಹೇಳುತ್ತ, ಅವಂ=ಆ ಸುಧನ್ವನು,  ತೆಗೆದೆಚ್ಚನು= ಬಾಣಪ್ರಯೋಗ ಮಾಡಿದನು. 


ಅ॥ವಿ॥ ನಳಿನವೆ ನಾಭಿಯಾಗುಳ್ಳವನು=ನಳಿನನಾಭ ( ಬ.ಸ.) ನರ+ಇಂದ್ರ=ನರೇಂದ್ರ(ಗು. ಸಂ) ಸತ್+ನುತ=ಸನ್ನುತ

(ಅನು. ಸಂ)ಹಸ್ತಿ ಎಂಬ ಪುರಂ (ಸಂ. ಪೂ. ಕ.)ಹಸ್ತಿ=ಆನೆಯ,ಪುರ=ಪಟ್ಟಣ-ಗಜಪುರಿ


ತಾತ್ಪರ್ಯ:- ಪುನಹ ಸುಧನ್ವನು, ಕಟ್ಟಿದ ಕುದುರೆಯನ್ನು ನಮ್ಮ ತಂದೆ ತಾನೆ ಹೇಗೆ ಕೊಟ್ಟಾನು (ಕೊಡತಕ್ಕವನಲ್ಲ) ಶ್ರೀಕೃಷ್ಣನ ಸಹಾಯವಿಲ್ಲದೆ ನಿನ್ನಿಂದಾಗಲಾರದು,ನನ್ನನ್ನು ಹೆದರಿಸುವುದರಿಂದ ಫಲವಿಲ್ಲ. ಆಯಾಸಪಡದೆ ಹಸ್ತಿನಾವತಿಗೆ ಹೋಗಿ ಸೇರಿಕೊ. ನಮ್ಮ ತಂದೆಯೇ ಯಜ್ಞವನ್ನು ಮಾಡಲುಪಕ್ರಮಿಸುವನು.ನಾವು ಯಜ್ಞವನ್ನು ಪೂರೈಸಿದನಂತರ, ನೀನು ಭೂಮಂಡಲವನ್ನೆಲ್ಲಾ ಜಯಿಸೈವನಾಗೆಂದು ಬಾಣಪ್ರಯೋಗವಂ ಗೈದನು.


ಈ ಚಾಪಮೀ ಬಾಣಮೀ ದಿವ್ಯರಥಮೀ ವ। 

ನೇಚರಧ್ವಜಮೀ ಮಹಾಶ್ವಂಗಳೀ ಸವ್ಯ। 

ಸಾಚಿತ್ವಮೀ ದೇವದತ್ತಶಂಖಮಂ ತನಗಿದೇಕೆ ನಿನ್ನಂ ಜಯಿಸದೆ॥ 

ಈ ಚತುರ್ದಶಜಗವನಣುವೆಂದರಿವೆನಕಟ। 

ಗೋಚರವೆ ನೀನೆನಗೆ ಫಡಯೆನುತ ತೆಗಿದು ನಾ।

ರಾಚವೇಳ್ನೂರನೆಚ್ಚಂ ಸೈಧನ್ವನ ಮೇಲೆ ಪಾರ್ಥನೆಣ್ದೆಸೆ ಕಂಪಿಸೆ॥೮॥ 


ಈ ಚಾಪಂ= ಈ ಧನುಸ್ಸು, ಈ ಬಾಣಂ=ಈ ಶರವು, ಈ ದಿವ್ಯ= ಈ ದೇವತಾಯೋಗ್ಯವಾದ, ರಥಂ= ವರೂಥವೂ, ಈ 

ವನೇಚರ= ಕೋಡಗನಿಂದ ಯುಕ್ತಮಾದ, ಧ್ವಜಂ= ಕೇತನವು, ಈ ಮಹಾಶ್ವಂಗಳು= ಈ ಶ್ರೇಷ್ಠವಾದ ಕುದುರೆಗಳು, ಈಸವ್ಯಸಾಚಿತ್ವಂ= ಎರಡು ಕೈಗಳಿಂದಲೂ ಬಾಣಪ್ರಯೋಗಮಾಡುವುದು,ಈ ದೇವದತ್ತ ಶಂಖಂ= ದೇವರಿಂದ ಕೊಡಲ್ಪಟ್ಟ ಶಂಖವೂ, ನಿನ್ನ ಜಯಿಸದೆ= ನಿನ್ನನ್ನು ಗೆಲ್ಲದೆ, ತನಗೆ=ನನಗೆ, ಇದೇತಕೆ= ಇದು ಏತಕ್ಕಾಗಿ ಪ್ರಯೋಜನಕ್ಕೆ ಬಂದೀತು, ಈ ಚತುರ್ದಶ ಜಗವಂ= ಈ ಹದಿನಾಲ್ಕು ಲೋಕಗಳುಳ್ಳ ಪ್ರಪಂಚವನ್ನು, ಅಣುವೆಂದು = ಒಂದು ತೃಣಕ್ಕೆ ಸಮಾನವಾದುದು ಎಂಬುದಾಗಿ,  ಅರಿಯೆ= ಯೋಚಿಸಿದವನಾಗಲಿಲ್ಲವೆ,ಅಕಟ=ಅಯ್ಯೋ, ನೀಂ=ನೀನು, ಎನಗೆ= ನನಗೆ, ಗೋಚರವೆ= ಗಣ್ಯವೆ, ಫಡ=ಛೆ, (ಇರು) ಎನುತ= ಎಂದು ಹೇಳುತ್ತ, ಪಾರ್ಥಂ= ಫಲ್ಗುಣನು, ಎಣ್ದೆಸೆ= ಎಂಟು ದಿಕ್ಕುಗಳೂ, ಕಂಪಿಸೆ= ಅಲ್ಲಾಡುವಂತೆ, ಸುಧನ್ವನ ಮೇಲೆ= ಸುಧನ್ವನಿಗೋಸ್ಕರವಾಗಿ,ನಾರಾಚವೇಳ್ನೂರಂ= ಏಳುನೂರು ಶರಗಳನ್ನು, ಎಚ್ಚಂ= ಹೊಡೆದನು.


ಅ॥ವಿ॥ ಎಂಟು ದಿಕ್ಕುಗಳು = ಇಂದ್ರ, ಅಗ್ನಿ, ಯಮ, ವರುಣ, ನಿರುತಿ, ವಾಯು, ಕುಬೇರ, ಈಶಾನ, ಇದು+ ಚಾಪಂ= ಈ ಚಾಪಂ( ಗ. ಸ. ) ಫಡ=ಅವ್ಯಯ, ಎಂಟುದೆಸೆಗಳ ಸಮಾಹಾರಂ= ಎಣ್ದೆಸೆ, ಸಮಾ, ದ್ವಿಗು,


ತಾತ್ಪರ್ಯ:- ಎಲೈ ಸುಧನ್ವನೇ ನನ್ನ ಈ ಗಾಂಡೀವವೆಂಬ ಧನುಸ್ಸು ದೇವತಾಯೋಗ್ಯವಾದ ರಥ, ಈ ಕಪಿಧ್ವಜ, ಶ್ರೇಷ್ಠವಾದ ಅಶ್ವಗಳು,ಎರಡುಕೈಗಳಲ್ಲಿಯೂ ಬಾಣಪ್ರಯೋಗಮಾಡುವ ಚಾತುರ್ಯ, ದೇವದತ್ತವಾದ ಈ ಶಂಖ ಇವೆಲ್ಲಾ ಇರಲಾಗಿ, ತೃಣಪ್ರಾಯನಾದ ನಿನ್ನನು ನಾನು ಜಯಿಸುವುದಸಾಧ್ಯವೇ! ಎಂದು ಹೇಳಿ ಅರ್ಜುನನು ಎಂಟು ದಿಕ್ಕುಗಳಿಗೂ ಕದಲುವಂತೆ

ಏಳ್ನೂರು ಬಾಣಗಳಿಂದ ಪ್ರಯೋಗಿಸಿದನು. 


ದಿವ್ಯಹಯ ರಥ ಚಾಪ ಶರ ಕೇತು ಕಂಬುಗಳ್। 

ಸವ್ಯಸಾಚಿತ್ವಮಿವು ನಿನಗೊದಗಿದವು ರಣದೊ। 

ಳವ್ಯಯಂ ಸಾರಥ್ಯಮಂ ಮಾಡಲಿನ್ನು ಜಯವಹುದೆ ಹುಲುಸೂತನಿಂದೆ॥ 

ಹವ್ಯವಾಹನಸಖಂ ತೊಲಗಿಸುವ ಬಹಳಮೇ। 

ಘವ್ಯೂಹಸಂಘಾತದೊಡ್ಡವಣೆ ಮುರಿವುದೆ ಕೃ। 

ತವ್ಯಜನವಾತದಿಂದಲೆ ಮರುಳೆ ಹೋಗೆನುತವಂ ಕಿರೀಟಿಯನೆಚ್ಚನು॥೯॥ 


ಪ್ರತಿಪದಾರ್ಥ :- ದಿವ್ಯ= ದೇವತಾಯೋಗ್ಯವಾದ,  ರಥ= ವರೂಥವೂ, ಹಯ=ಅಶ್ವವೂ, ಚಾಪ= ಧನುಸ್ಸು, ಶರ= ಬಾಣಗಳು, ಕೇತು=ಟೆಕ್ಕೆಯು, ಕಂಬುಗಳ್= ಶಂಖವೇ ಮೊದಲೃದವುಗಳು, ಸವ್ಯಸಾಚಿತ್ವಂ= ಎರಡು ಕೈಗಳಿಂದಲೂ ಬಾಣಪ್ರಯೋಗ ಮಾಡುವಿಕೆಯೂ,ಇವು= ಇವುಗಳು, ನಿನಗೆ ಅವ್ಯಯಂ= ಪಾಪರಹಿತ(ನಾಶರಹಿತನಾದ) ಕೃಷ್ಣನು, ರಣದೊಳು=ಯುದ್ಧದಲ್ಲಿ, ಸಾರಥ್ಯಂ= ರಥ ನಡೆಸತಕ್ಕ ಕಾರ್ಯವನ್ನು ,ಮಾಡಲ್ = ಮಾಡಲಾಗಿ, ಒದಗಿತು = ಉಂಟಾ-

ಯಿತು, ಇನ್ನು= ಹಾಗಲ್ಲದೆ, ಹುಲುಸೂತನಿಂದ= ಒಂದು ಹುಲ್ಲುಕಡ್ಡಿಗೆ ಸಮಾನ ಮನುಷ್ಯನಾದ ಸೂತನಿಂದ, ಜಯ= ಗೆಲುವು, ಅಹುದೆ=ಆದೀತೆ, ಹವ್ಯವಾಹನ= ಬೆಂಕಿಗೆ,ಸಖ= ಸ್ನೇಹಿತನಾದ ವಾಯುದೇವನು, ತೊಲಗಿಸುವ= ಹೋಗಲಾ-

ಸುವ, ಬಹಳ=ಹೆಚ್ಚಾದ, ಮೇಘ=ಜಲಧರಗಳ, ವ್ಯೂಹ= ಸಮೂಹದ, ಸಂಘಾತದ= ಗುಂಪಿನಿಂದ, ಒಡ್ಡವಣೆ= ತೊಲಗಿಸುವ ಕೆಲಸವು, ಕೃತ= ಮನುಷ್ಯರಿಂದ ಮಾಡಲೂಪಟ್ಟ, ವ್ಯಜನ= ಬೀಸಣಿಗೆಯಿಂದ ಹುಟ್ಟುವ, ವಾತದಿಂದ= ವಾಯುವಿನಿಂದ, ಮುರಿವುದೆ=ಬೇರೆಯಾದೀತೆ, ಎಲೆ ಮರುಳೆ= ಎಲಾ ಮೂಢನೆ, ಹೋಗು ಎನುತ= ಹೋಗೆಂದು ಹೇಳುತ್ತ, ಅವಂ= ಆ ಸುಧನ್ವನು, ಕಿರೀಟಿಯಂ=ಪಾರ್ಥನನ್ನು, ಎಚ್ಚನು= ಬಾಣದಿಂದ ಹೊಡೆದನು.  


ಅ॥ವಿ॥ ದಿವ್ಯವಾದ+ರಥ= ದಿವ್ಯರಥ( ವಿ. ಪೂ. ಕ) ವ್ಯಯವಿಲ್ಲದ್ದು - ಅವ್ಯಯ, ವ್ಯಜನ= ಬೀಸಣಿಗೆ, ವಾತ=ಗಾಳಿ, ಪಾತ= ಬೀಳುವಿಕೆ, ಸವ್ಯ= ಎಡಗೈಯಿಂದಲೂ ಸಾಚಿತ್ವ, ಬಾಣಪ್ರಯೋಗ ಮಾಡುವಿಕೆ. 


ತಾತ್ಪರ್ಯ:- ಆಗ ಸುಧನ್ವನು ಸಾರಥಿಯ ಬಲದಿಂದ, ಈ ಸವ್ಯಸಾಚಿತ್ವವು ಗಾಂಡೀವಾದಿ ಯುದ್ಧ ಸಾಮಗ್ರಿಗಳು ಇವೇ ಮೊದಲಾದುವೆಲ್ಲಾ, ನೀನಗೆ ಸಹಾಯಕಗಳಾಗಿದ್ದವು, ಈಗ ಈ ಕೆಲಸಕ್ಕೆ ಬಾರದ ಸಾರಥಿಯಿಂದ ನನ್ನನ್ನು ಜಯಿಸಬಲ್ಲೆಯ? 

ಹವ್ಯವಾಹನ ಸಖನಾದ ವಾಯುದೇವನಿಂದ ತೊಲಗಿಸಲು ಸಾಧ್ಯವಾದ ಮೇಘಗಳ ಸಮೂಹವನ್ನು ಕೈಯಿಂದ ಮಾಡಿದ ಬೀಸಣಿಗೆಯಿಂದುತ್ಪನ್ನವಾದ ಗಾಳಿಯಿಂದ ಚೆದರಿ ಹೋಗುವಂತೆ ಮಾಡಲು ಸಾಧ್ಯವೆ! ಎಲೈ ಹುಚ್ಚನೆ, ಏಕೆ ವೃಥಾ ಆಯಾಸ ಪಡುತ್ತಿ, ಸುಮ್ಮನೆ ಹೋಗೆಂದು ಅರ್ಜುನನಿಗೆ ಬಾಣಪ್ರಯೋಗವನ್ನು ಮಾಡುತ್ತಿದ್ದನು.


ಪಾಂಡವಂ ಬಳಿಕ ಬೇಸಗೆಯ ನಡುವಗಲ ಮಾ। 

ರ್ತಾಂಡನಂತಿಹ ಕಲಿಸುಧನ್ವನಂ ಕಂಡು ಮಿಗೆ। 

ಖಾಂಡವದಹನಲಬ್ಧವಾಗಿ ಮೂಡಿಗೆಯೊಳಿರ್ದಾಗ್ನೇಯಮಾರ್ಗಣವನು॥ 

ಗಾಂಡೀವಕಳವಡಿಸಿ ತೆಗೆವಿನಂ ಕರ್ಬೊಗೆಯ। 

ಜಾಂಡಮಂ ತೀವಿದುದು ಕಾದುವು ಕುಲಾದ್ರಿಗಳ್। 

ಭಾಂಡಜಲದಂದದಿಂ ಕುದಿದುಕ್ಕಿದುದು ಕಡಲ್ ಪೇಳಲೇನುದ್ಭುತವನು॥೧೦॥ 

 

ಪ್ರತಿಪದಾರ್ಥ :- ಪಾಂಡವಂ= ಪಾರ್ಥನು, ಬಳಿಕ = ಅನಂತರ, ಬೇಸಗೆಯ=ವೈಶಾಖಮಾಸದ, ನಡುವಗಲ= ಮಧ್ಯ ಹಗಲಿನಲ್ಲಿರುವ ( ಮಧ್ಯಾಹ್ನ ಕಾಲ) ಮಾರ್ತಾಂಡನಂತೆ= ಭಾಸ್ಕರನಹಾಗೆ, ಇಹ=ಇರುತ್ತಲಿರುವ, ಕಲಿ=ಶೂರನಾದ, ಸುಧನ್ವನಂ= ಸುಧನ್ವನನ್ನು, ಕಂಡು=ನೋಡಿ, ಮಿಗೆ= ಹೆಚ್ಚಾಗಿ, ಕಾಂಡವ=ಇಂದ್ರನ ಕಾಂಡವ ವನವನ್ನು, ದಹನ= ದಹಿಸುವ ಅಗ್ನಿಯಿಂದ,ಆಗಿ=ಉಂಟಾಗಿ, ಮೂಡಿಗೆಯೊಳು= ಬಾಣದ ಚೀಲದಲ್ಲಿ, ಇದ್ದ=ಇದ್ದಂಥ, ಆಗ್ನೇಯಮಾರ್ಗಣ-

ವನು=ಯಜ್ಞೇಶ್ವರ ದೇವತಾಕವಾದ ಶರವನ್ನು, ಗಾಂಡೀವಕೆ=ಗಾಂಡೀವ ಧನುಸ್ಸಿಗೆ, ಅಳವಡಿಸಿ = ಸೇರಿಸಿ, ತೆಗೆವಿನಂ= ಪ್ರಯೋಗಮಾಡುವುದರಿಂದ, ಕಾರ್ಬೊಗೆ=ಕಪ್ಪಾದ ಹೊಗೆಯು, ಅಜಾಂಡಂ= ಭೂಮಂಡಲವನ್ನು ( ಬ್ರಹ್ಮಾಂಡವು) ತೀವಿದುದು= ವ್ಯಾಪಿಸಿಕೊಂಡಿತು, ಕುಲಾದ್ರಿಗಳ್= ಕುಲಾಚಲಗಳು, ಕಾದವು= ಬೆಚ್ಚಗಾದವು, ಕಡಲು= ಸಮುದ್ರವು, 

ಭಾಂಡಜಲದಂದದಿ= ಗಡಿಗೆಯಲ್ಲಿರುವ ಉದಕದಂತೆ, ಕುದಿದು= ಕೊತಕೊತನೆ ಕಾದು, ಉಕ್ಕಿದುದು= ಮೇಲಕ್ಕೆ ಬಂದಿತು, ಅದ್ಭುತವನು= ವೈಖರಿಯನ್ನು, ಪೇಳಲ್ ಏಂ= ಏನೆಂದು ಹೇಳಲಿ.


ಅ॥ವಿ॥ ಅರ್ಜುನನ ಧನುಸ್ಸಿಗೆ ಗಾಂಡೀವವೆಂದು ಹೆಸರು, ಮಹೇಂದ್ರ, ಮಲಯ, ಸಹ್ಯ, ಸಾನುಮಂತ, ಋಕ್ಷ, ವಿಂಧ್ಯ, ಪಾರಿಯಾತ್ರ ಇವು ಕುಲಪರ್ವತಗಳು, ಅಗ್ನಿ ದೇವತಾಕವಾದುದು, ಭಾಂಡದಜಲ=ಭಾಂಡಜಲ( ಷ. ತ. ) 


ತಾತ್ಪರ್ಯ:- ತರುವಾಯ ಅರ್ಜುನನು ಬಿಸಿಲುಕಾಲದ ನಡುವಗಲಿನಂತಿರುವ, ಸೂರ್ಯನಂತೆ ಹೊಳೆಯುತ್ತಿರುವ ಸುಧನ್ವನನ್ನು ನೋಡಿ ಅಗ್ನಿ ದೇವತಾಕಮಾದ ಬಾಣಮಂ ಪ್ರಯೋಗಿಸಲು, ಆ ಬಾಣದ ಹೊಗೆಯು ಬ್ರಹ್ಮಾಂಡವನ್ನು ಆವರಿಸಿಕೊಂಡಿತು,  ಕುಲಾದ್ರಿಗಳುಕಾದುಹೋದವು. ಸಮುದ್ರವು ಗುಡಾಣದ ನೀರಿನಂತೆ ಕಾದು ಮೇಲಕ್ಕೆ ಉಕ್ಕಿ ಬಂತು,  ಈ ಅದ್ಭುತವನ್ನು ಏನೆಂದು ಹೇಳಲಿ. 


ಆವಗಂ ಪೀರ್ವೊಡಾಸರ್ಗೊಂಡು ತೀರದ ಮ। 

ಹಾವಾರ್ಧಿಜಲವನೋಂದೇಸಾರಿ ಸುರಿಗೊಂಬ। 

ಡಾವರದೊಳೆದ್ದ ವಡಬಾಗ್ನಿಯೋ ವಿಲಯರುದ್ರನ ಫಣೆಯ ಕಣ್ಗಿಚ್ಚಿದೋ॥ 

ಭಾವಿಸುವೊಡರಿದೆಂಬೊಲಾದುದು ಧನಂಜಯನ। 

ಪಾವಕಾಸ್ತ್ರಂ ಬಳಿಕ ತೆಗೆದು ಬೊಬ್ಬಿರಿದು ಗಾಂ। 

ಡೀವದಿ ಪಾರಿಸಿದೊಡಾ ಸುಧನ್ವನ ಸರಿಸಕಡರಿತುರಿ ಕಡುಭರದೊಳು॥೧೧॥ 


ಪ್ರತಿಪದಾರ್ಥ :- ಆವಗಂ= ಸರ್ವದಾ, ಪೀರ್ವೊಡೆ= ನೀರನ್ನು ಕುಡಿಯುತ್ತ ಬಂದರೆ,ಆಸರ್ಗೊಂಡು=ಬಳಲಿಕೆಯನ್ನು ಹೊಂದಿ, ತೀರದ= ಆ ದಡದ, ಮಹಾವಾರ್ಧಿ= ಅಧಿಕವಾದ ಅಬ್ಧಿಯು, ಜಲವಂ= ಉದಕವನ್ನು, ಒಂದೇಸಾರಿ= ಒಟ್ಟಿಗೆ,

ಸುರಿಗೊಂಬ= ಬಗ್ಗಿಸಿಕೊಳ್ಳುವ, ದಾವರದೊಳು= ದಾಹದಿಂದ, ಎದ್ದ= ಮೇಲ್ಗಡೆಗೆ ಬಂದ, ಬಡವಾಗ್ನಿಯೊ= ಸಮುದ್ರದಲ್ಲಿರುವ ಬೆಂಕಿಯೊ, ವಿಲಯರುದ್ರ= ಪ್ರಳಯದ, ರುದ್ರನ= ಭಯಂಕರಾಕಾರದ ಈಶ್ವರನ,ಕಣ್ಗಿಚ್ಚು= ಫಾಲನೇತ್ರದಲ್ಲಿರುವ ಅಗ್ನಿಯು, ಇದೊ= ಇದಾಗಿರುವುದೊ? ಭಾವಿಸುವೊಡೆ= ಊಹಿಸಲು, ಅರಿದು= ಅಸಾಧ್ಯವು ಎಂಬವೋಲ್= ಎನ್ನುವಂತೆ, ತೆಗೆದು= ತೆಗೆದುಕೊಂಡು, ಬೊಬ್ಬಿರಿದು= ಗರ್ಜಿಸಿ, ಗಾಂಡೀವದಿಂ= ಧನುಸ್ಸಿನಿಂದ, ಪಾರಿಸಿದೊಡೆ= ಹಾರಿಸಲಾಗಿ, ಆ ಸುಧನ್ವನ ಸರಿಸಕೆ= ಆ ಸುಧನ್ವನ ಹತ್ತಿರಕ್ಕೆ, ಉರಿ= ಜ್ವಾಲೆಯು,ಕಡು ಭರದೊಳು= ಅತಿ ಜಾಗ್ರತೆಯಿಂದ,ಅಡರಿತು=ಹತ್ತಿತು.


ಅ॥ವಿ॥ ತೀರ=ದಡ, ಪೂರ್ತಿ, ಸಮುದ್ರದಲ್ಲಿರುವ ಬಡಬವೆಂಬ ಹೆಣ್ಣು ಕುದುರೆ ಮುಖದಲ್ಲಿರುವ ಅಗ್ನಿಗೆ ಬಡಬಾಗ್ನಿ, ಫಣ(ತ್ಸ) ಹಣೆ(ತ್ಭ) ಈಶ್ವರನ=ಒಂದು ಕಣ್ಣಿನಲ್ಲಿ ಸೂರ್ಯನು, ಇನ್ನೊಂದರಲ್ಲಿ =ಚಂದ್ರನು, ಹಣೆಗಣ್ಣಿನಲ್ಲಿ=ಅಗ್ನಿಯು ಇರುವರು. 


ತಾತ್ಪರ್ಯ:- ಮಹಾ ಸಮುದ್ರದ ಉದಕವನ್ನು, ಒಂದೇ ಸಾರಿ ಸುರಿಕೊಂಬುವ ನೀರಡಿಕೆಯಿಂದ ಮೇಲಕ್ಕೆ ಎದ್ದು ಬಂದ ಬಡಬಾಗ್ನಿಯೋ? ಪ್ರಳಯ ಕಾಲದ ಭೈರವ ಮೂರ್ತಿಯ ಫಣೆಯಲ್ಲಿರುವ ನೇತ್ರಜ್ವಾಲೆಯೋ? ಎನ್ನುವಂತೆ ಭಾವಿಸಲು ಅಸಾಧ್ಯವಾದದ್ದಾಗಿ, ಅರ್ಜುನನ ಆಗ್ನೇಯಾಸ್ತ್ರವು ಈ ರೀತಿಯಾಗಿ ದಹಿಸುವಂತೆ ಗಾಂಡೀವದಿಂದ ಹೊರಟು, ಅತ್ಯಧಿಕವಾದ ವೇಗದಿಂದ ಆ ಬಾಣವು ಸಧನ್ವನಸಾಮೀಪ್ಯವಂ ಕುರಿತು ದಹಿಸುತ್ತ ಅಡರಿತು. 


ತೆಕ್ಕೆವರೆದೇಳ್ವ ಕರ್ಬೊಗೆಯ ಹೊರಳಿಗಳ ದಶ। 

ದಿಕ್ಕುಗಳನವ್ವಳಿಪ ಕೇಸುರಿಯ ಚೂಣಿಗಳ। 

ಮಿಕ್ಕು ಸೂಸುವ ತೂರುಗಿಡಿಗಳಾ ಕೌರಿಡುವ ಪೊತ್ತುಗೆಗಳ॥ 

ಕೊಕ್ಕರಿಸುತುಗುವ ತನಿಗೆಂಡದಿಂಡೆಗಳ ಸಲೆ। 

ಮುಕ್ಕುಳಿಸಿ ಮೊಗೆವ ಪೆರ್ಗಿಚ್ಚುಗಳ ವೆಂಕೆ ಮೇ। 

ಲಿಕ್ಕಿದುದು ಹಂಸಧ್ವಜನ ಸೇನೆ ಬೆಂದು ಬೇಗುದಿಗೊಂಡುದಾ ಕ್ಷಣದೊಳು॥೧೨॥ 


ಪ್ರತಿಪದಾರ್ಥ :- ಧನಂಜಯನಿಂದ ಬಿಡಲ್ಪಟ್ಟ ಆಗ್ನೇಯಾಸ್ತ್ರವು,  ತೆಕ್ಕೆ= ಕೇತವನ್ನು, ಪರಿದು= ಅತಿಕ್ರಮಿಸಿ, ಏಳ್ವ= ಮೇಲ್ಮುಖಮಾಗಿ ಹೊರಡುತ್ತಿರುವ,ಕಾರ್ಬೊಗೆಯ= ಕಪ್ಪಾದ ಹೊಗೆಯ, ಹೊರಳಿಗಳ= ಹೊರಳುವಿಕೆಗಳುಳ್ಳ, ದಶದಿಕ್ಕುಗಳನು= ಹತ್ತು ದಿಕ್ಕುಗಳನ್ನು, ಅಪ್ಪಳಿಪ= ತಟ್ಟುತ್ತಿರುವ, ಕೇಸುರಿಯ= ಜಡೆಗಳಂತಿರುವ ಬೆಂಕಿಯ ಉರಿಯು, ಚೂಣಿಗಳ= ಕೊನೆಭಾಗಗಳುಳ್ಳ, ಮಿಕ್ಕ= ಉಳಿಯಲಾಗಿ, ಸೂಸುವ= ಸುರಿಸುತ್ತಿರುವ, ತೂರು= ವಾಯುವಿನಿಂದ ಊದುತ್ತಿರುವ, ಕಿಡಿಗಳ= ಅಗ್ನಿ ಕಣಗಳ, ಕಣ= ಸಣ್ಣ ಕಿರಣಗಳ, ಆಳಿಗಳ= ಸಂಘಗಳ, ಕಾರಿಡುವ= ಕತ್ತಲೆಯನ್ನುಂಟು ಮಾಡುತ್ತಿರುವ, ಪೊತ್ತಿಗಳ= ಉರಿವ ಕೊಳ್ಳಿಗಳ, ಕೊಕ್ಕರಿಸುತ= ಎಗರುತ್ತ, ಉಗುವ= ಸುರಿಸುತ್ತಿರುವ, ತನಿಗೆಂಡದ= ಹೊಸಕಣಗಳ, ದಿಂಡೆಗಳ= ಭಾಗಗಳುಳ್ಳ, ಸಲೆ= ತುಂಬಾಗಿ, ಮುಕ್ಕುಳಿಸಿ = ಉಗುಳುತ್ತ (ದಹಿಸುತ್ತ) ಸುತ್ತಿಕೊಂಡು, ಮೊಗೆವ= ಪೂರ್ತಿ ಮಾಡುವ, ಪೆರ್ಗಿಚ್ಚುಗಳ= ಅಧಿಕಾಗ್ನಿಯ, ಬೆಂಕಿಯ= ಅಗ್ನಿಯ, ಮೇಲಿಕ್ಕಿದುದು= ಮೇಲೆ ಬಿದ್ದಿತು, ಆ ಕ್ಷಣದೊಳು= ಆ ತಕ್ಷಣವೇ, ಹಂಸಧ್ವಜನ ಸೇನೆ =ಹಂಸಧ್ವಜನ ಸೈನ್ಯವು,  ಬೆಂದು= ಸುಡಲ್ಪಟ್ಟು,ಬೇಗುದಿಗೊಂಡುದು= ಪಚನವಾಗುತ್ತಿತ್ತು. 


ಅ॥ವಿ॥ ಕರಿದು+ಪೊಗೆ= ಕರ್ಬೊಗೆ ( ವಿ. ಪೂ. ಕ. ), ಇಂದ್ರ, ಅಗ್ನಿ, ಯಮ, ನಿರುತಿ, ವರುಣ, ವಾಯು, ಕುಬೇರ.  ಈಶಾನ, ಊರ್ಧ್ವ, ಅಧೋದಿಕ್ಕು ಇವು ದಶ ದಿಕ್ಕುಗಳು. 


ತಾತ್ಪರ್ಯ:- ಆಗ ಧನಂಜಯನಿಂದ ಬಿಡಲ್ಪಟ್ಟ ಆಗ್ನೇಯಾಸ್ತ್ರವು, ಸುಧನ್ವನ ಸಾಮೀಪ್ಯ ಬರುತ್ತಿರಲು, ಆ ಬಾಣದ ಜ್ವಾಲೆಯಿಂದ ಸುಧನ್ವನ ಸೈನಿಕರು ಹಿಡಿದಿದ್ದ ಆಯುಧಗಳೆಲ್ಲವೂ ಕಾದು ಬಿಸಿಯಾದವು, ದಶದಿಕ್ಕುಗಳೂ ಕಾರ್ಬೊಗೆಯಿಂದ ತುಂಬಲ್ಪಟ್ಟು, ಅಂಧಕಾರದಿಂದ ಕೂಡಿರಲು, ಬಾಣದಿಂದ ಹೊರಡುತ್ತಿರುವ ಬೆಂಕಿ ಕಿಡಿಗಳ ಕಾಂತಿಯು ಆ ತಿಮಿರವನ್ನೆಲ್ಲಾ ಹೋಗಲಾಡಿಸಿ ಸುಧನ್ವನ ಸೈನ್ಯವೆಲ್ಲಾ ಸುಡುತ್ತಿತ್ತು.


ಕಾದವು ಭಟರ ಕೈದುಗಳ್ ಪಿಡಿಯಲರಿದೆನ। 

ಲ್ಕಾದವು ಶರಾಗ್ನಿಗಾಹುತಿ ಗಜಹಯಾದಿಗಳ್। 

ಕಾದವು ಧನಂಜಯನ ಮುಂದೆಮ್ಮ ಬಲಗಳೆಂದಾ ಸುಧನ್ವಂ ಕೆರಳ್ದು॥ 

ಕೋದಂಡಕತಿವೇಗದೊಳ್ ವಾರುಣಾಸ್ತ್ರಮಂ। 

ಕೋದಂಡಲೆವ ಶಿಖಿಜ್ವಾಲೆಯಂ ನೆಲಿಸಲಿದ। 

ಕೋದಂಡಮೆನ್ನೊಳೆನುತಾರ್ದು ತೆಗೆದೆಚ್ಚನುರಿನಂದಿಜಲಮಯವಾಗಲು॥೧೩॥ 


ಪ್ರತಿಪದಾರ್ಥ :- ಭಟರ= ಸೈನಿಕರ, ಕೈದುಗಳ್= ಕೈಯಲ್ಲಿ ಹಿಡಿದಿದ್ದ ಆಯುಧಗಳು, ಪಿಡಿಯಲು= ಹಿಡಿಯಲು, ಅರಿದು ಎನಲ್ಕೆ= ಅಸಾಧ್ಯವು ಎನ್ನೈವಂತೆ, ಕಾದವು= ಬೆಚ್ಚಗಾದವು, ಗಜಹಯಾದಿಗಳ್= ಆನೆ ಕುದುರೆ ಮೊದಲಾದ ಬಲಗಳು, ಶರಾಗ್ನಿಗೆ= ಬಾಣದ ಬೆಂಕಿಗೆ, (ಆಗ್ನೇಯಾಸ್ತ್ರದ ಬೆಂಕಿಗೆ) ಆಹುತಿ ಆದವು= ಆಹಾರವಾದವು, ಧನಂಜಯನ ಮುಂದೆ= ಪಾರ್ಥನ ಎದುರಾಗಿ, ಎಮ್ಮ ಬಲವು= ನಮ್ಮ ಸೈನ್ಯವು, ಕಾದುವು=ಸುಟ್ಟು ಹೋದವು,(ಬಿಸಿಯಾದವು) ಎಂದು= ಎಂಬುದಾಗಿ ಹೇಳುತ್ತ, ಕಲಿಸುಧನ್ವಂ= ವೀರನಾದ ಸುಧನ್ವನು, ಕೆರಳ್ದು= ಕೋಪಾವಿಷ್ಟನಾಗಿ, ಅತಿವೇಗದೊಳ್= ಅತಿ ತ್ವರೆಯಿಂದ, ಕೋದಂಡಕೆ= ತನ್ನ ಚಾಪಕ್ಕೆ, ವಾರುಣಾಸ್ತ್ರಮಂ= ವರುಣದೇವತಾಕವಾದ ಬಾಣವನ್ನು, ಕೋದು= ಕೊಬ್ಬಿ, ಅಂಡಲೆವ= ಬಾಧೆಪಡುತ್ತಿರುವ, ಶಿಖಿಜ್ವಾಲೆಯಂ = ಬೆಂಕಿಯ ಉರಿಯನ್ನು, ನಿಲಿಸಲು= ಅಡ್ಡಿಪಡಿಸಲು, ಎನ್ನೊಳ್=

ನನ್ನಲ್ಲಿ, ದಂಡಂ= ಪ್ರತಿಯಾದುದು( ಆಗ್ನೇಯಾಸ್ತ್ರವನ್ನು ಶಮನ ಮಾಡುವ ವಾರುಣಾಸ್ತ್ರವು) ಇದಕೋ= ಇಗೋ, ಈಕ್ಷಿಸುವನಾಗು, ಎನುತ= ಎಂದು ಹೇಳುತ್ತ, ಆರ್ದು= ಗರ್ಜಿಸಿ, ತೆಗೆದೆಚ್ಚನು= ಕಿವಿ ಪರಿಯಂತವೂ ಎಳೆದು ಪ್ರಯೋಗಿಸಲು,ಉರಿ= ಸುಡಿತವು,ನಂದಿ= ಶಮನವಾಗಿ,ಜಲಮಯಂ=ನೀರಿನಿಂದ ತುಂಬಲ್ಪಟ್ಟದ್ದು, ಆಗಲು= ಉಂಟಾಗಲು. 


ಅ॥ವಿ॥ ವರುಣನ ಸಂಬಂಧವಾದದ್ದು= ವಾರುಣ, ಶಿಖ ಉಳ್ಳದ್ದು= ಶಿಖಿ, ಶಿಖಿ= ನವಿಲು, ಬ್ರಾಹ್ಮಣ,  ಬೆಂಕಿ.


ತಾತ್ಪರ್ಯ:- ಈ ರೀತಿಯಾಗಿ ತನ್ನ ಸೇನಾಜನವು ಹಸ್ತ್ಯಶ್ವರಥಪದಾತಿಗಳು, ಆಗ್ನೇಯಾಸ್ತ್ರದಿಂದ ಸುಟ್ಟು ನಾಶವಾಗುತ್ತಿರುವುದನ್ನು ಮರಾಳಧ್ವಜನ ಮಗನಾದ, ಅಸಹಾಯಶೂರನಾದ ಕಲಿ ಸುಧನ್ವನು ಕಂಡು ಕೋಪಾವಿಷ್ಟನಾಗಿ, ಅತಿ ತ್ವರಿತದಿಂದ ತನ್ನ ಧನುಸ್ಸಿನಲ್ಲಿ ಆಗ್ನೇಯಾಸ್ತ್ರಕ್ಕೆ ಪ್ರತೀಕಾರವಾಗಿ ವಾರುಣಾಸ್ತ್ರವನ್ನು ಅನುಸಂಧಾನಮಾಡಿ ಕಿವಿಯ-

ಪರಿಯಂತವೂ ಸೆಳೆದು ಬಿಟ್ಟು ಆರ್ಭಟಿಸಲಾಗಿ ಆ ವಾರುಣಾಸ್ತ್ರವು ಆಗ್ನೇಯಾಸ್ತ್ರವನ್ನುತನ್ನ ಬಲದಿಂದ ಶಮನಮಾಡಿ-

ದುದಲ್ಲದೆ ಎಲ್ಲಾ ಕಡೆಯೂ ಜಲಮಯವಾಯಿತು.


ನಾದವು ಸಮಸ್ತಬಲಮಖಿಳವಾದ್ಯಗಳ ನಿ। 

ನಾದವುಡುಗಿತು ನೆನೆದುಗಜವಾಜಿನಿಕರಮೇ। 

ನಾದವುದಕದೊಳೆಂಬುದಂ ಕಾಣೆನಾ ಸುಧನ್ವನ ವಾರುಣಾಸ್ತ್ರದಿಂದೆ॥ 

ತೋದಳವಳಿದರೆಲ್ಲರಂಬುಧಾರೆಗಳದೆಂ। 

ತೋದಳವನೊರಸಿದವರ್ಜುನಂ ಬೆರಗುವೆ। 

ತ್ತೋದಲಳವಡದ ವಟುವಂತಿರ್ದನಾಹವದೊಳರಸ ಕೇಳ್ ಕೌತುಕವನು॥೧೪॥


ಪ್ರತಿಪದಾರ್ಥ :- ಸಮಸ್ತ ಬಲಂ=ಸಕಲ ಸೇನೆಯೂ, ಅಖಿಳ= ಸಮಸ್ತವಾದ, ವಾದ್ಯಂಗಳು= ಭೇರಿ ಮುಂತಾದ ವಾದ್ಯ ವಿಶೇಷಗಳು, ನಾದವು= ಉದಕದಿಂದ ನೆನೆದು ಹೋದವು, ನಿನಾದ= ಧ್ವನಿಯು, ಉಡುಗಿತು= ನಿಶ್ಯಬ್ಧವಾಯಿತು, 

ಗಜವಾಜಿನಿಕರಂ= ಹಸ್ತ್ಯಶ್ವಗಳ ಸಮೂಹವು, ನನದ= ನೆಂದ, ಉದಕದೊಳು= ಜಲದಲ್ಲಿ, ಏನಾದವು= ಯಾವ ಗತಿಯನ್ನು ಹೊಂದಿದವು, ಎಂಬುದಂ= ಎಂಬ ಸಂಗತಿಯನ್ನು, ಕಾಣೆನು= ನೋಡಿಬರಲಿಲ್ಲ, ಆ ಸುಧನ್ವನ ವಾರುಣಾಸ್ತ್ರ-

ದಿಂದ= ಆ ಸುಧನ್ವನ ವರುಣದೇವತಾಕವಾದಂಬಿನಿಂದ, ಎಲ್ಲರೂ= ಸಮಸ್ತರೂ, ತೋದು=ನೆನೆದು, ಅಳವಳಿದರು= ಶಕ್ತಿಗುಂದಿದರು, ಅಂಬುಧಾರೆಗಳು=ಉದಕ ಬಿಂದುಗಳು, ದಳವನು= ಸೈನ್ಯವನ್ನು, ಅದೆಂತು=ಅದು ಹೇಗೋ,ಓರಗಿಸಿತು= ಬೀಳುಗೆಡವಿತು,ಫಲುಗುಣಂ = ಪಾರ್ಥನು, ಬೆರಗುವೆತ್ತು= ಆಶ್ಚರ್ಯಮಂ ಹೊಂದಿ, ಓದು= ವಿದ್ಯಾಭ್ಯಾಸವು, ಅಳವಡದ= ಇಲ್ಲದ, ವಟುವಿನಂತೆ= ಬ್ರಹ್ಮಚಾರಿಯಂತೆ, ಇರ್ದಂ=ಇರುತ್ತಿದ್ದನೆಬಂಶವನ್ನು, ಅರಸ= ಎಲೈ ಜನಮೇಜಯ ರಾಯನೆ! ಆಹವದೊಳು= ಕಾಳಗದಲ್ಲಿ ನಡೆದ,ಕೌತುಕವನು = ಆಶ್ಚರ್ಯವನ್ನು,ಕೇಳು=ಆಲಿಸು. 


ಅ॥ವಿ॥ ಗಜವೂ -ವಾಜಿಯೂ = ಗಜವಾಜಿಗಳು,( ದ್ವಿ. ದ್ವಂ. ) ಆಜಿ=ಯುದ್ಧ, ವಾಜಿ=ಕುದುರೆ, ಅಂತು, ಇಂತು, ಎಂತು ಇವು ಅವ್ಯಯಗಳು, ಅಂಬು=ಬಾಣ, ನೀರು. 


ತಾತ್ಪರ್ಯ:-ಇದರಿಂದ ಅರ್ಜುನನ ಸೇನೆಯೂ ನೆನೆದು ಹೋಯಿತು. ಭೇರಿ ಮೊದಲಾದ ವಾದ್ಯಧ್ವನಿಗಳೂ ಉದಕದ ದೆಸೆಯಿಂದ ನಿಶ್ಯಬಧವೃದುವು. ಚತುರಂಗ ಬಲವೆಲ್ಲವೂ ಈ ಜಲಪ್ರಳಯದಂತಿರುವ ಉದಕದಲ್ಲಿ ಏನು ಗತಿಯನ್ನು ಹೊಂದಿದುವೊ ಎಂಬ ಸಂಗತಿಯುಬಣ್ಣಿಸಲರಿದು, ಆ ಸುಧನ್ವನ ವಾರುಣಾಸ್ತ್ರದ ಪೆರ್ಮೆಯನ್ನು ಪಾರ್ಥನು ಪರಾಮರ್ಶಿಸಿ ವಿದ್ಯಾಭ್ಯಾಸ ಮಾಡದ ವಟುವಿನಂತೆ ಏನೂ ತೋರದೆ ಆಶ್ಚರ್ಯಪಡುತ್ತಿದ್ದನೆಂಬಂಶವನ್ನು ಎಲೈ ಜನಮೇಜಯನೆ 

ಕೇಳುವನಾಗು. 


ಬಳಿಕ ವಾಯವ್ಯಾಸ್ತ್ರದಿಂದೆ ಶೋಷಿಸಿದನಾ। 

ಜಲವನರ್ಜುನನದ್ರಿಬಾಣಮಂ ಪೂಡಿದಂ। 

ಕಲಿ ಸುಧನ್ವಂ ತೊಟ್ಟನೈಂದ್ರಶರಮಂ ಫಲುಗುಣಂ ತಿಮಿರಸಾಯಕವನು॥ 

ಸೆಳೆದಂ ಮರಾಳಧ್ವಜನ ಸುತಂ ತೆಗೆದನು। 

ಜ್ಜ್ವಲರವಿಕಳಂಬಕಮಂ ಭೀಭತ್ಸು ತುಡುಕಿದಂ। 

ಮುಳಿದವಂ ಗರಳವಿಶಿಖವನುಗಿದನಾನರಂ ಗಾರುಡಶಿಲೀಮುಖವನು॥೧೫॥ 


ಪ್ರತಿಪದಾರ್ಥ :- ಬಳಿಕ =ಅನಂತರದಲ್ಲಿ, ಅರ್ಜುನಂ= ಫಲುಗುಣನು, ವಾಯವ್ಯಾಸ್ತ್ರದಿಂದ= ವಾಯುದೇವನಿಂದ ಅಭಿಮಂತ್ರಿತವಾದ ಬಾಣದಿಂದ, ಆ ಜಲವನು=ಆ ಉದಕವನ್ನು, ಶೋಷಿಸಿದಂ= ಒಣಗಿಸಿದನು,(ಆರಿಸಿದನು) ಬಳಿಕ =ತರುವಾಯ, ಕಲಿ=ಶೂರನಾದ, ಸುಧನ್ವಂ= ಸುಧನ್ವನು, ಅದ್ರಿಬಾಣಮಂ= ಪರ್ವತಗಳ ಸಂಬಂಧವಾದ ಅಂಬನ್ನು, ಪೂಡಿದಂ= ಅನುಸಂಧಾನ ಮಾಡಿದನು, ಫಲುಗುಣಂ= ಪಾರ್ಥನು, ಐಂದ್ರಶರಮಂ= ಇಂದ್ರ ದೇವತಾಕಮಾದ ಶರವನ್ನು, (ವಜ್ರಾಯುಧವನ್ನು) ತೊಟ್ಟನು= ಹೂಡಿದನು, ಮರಾಳಧ್ವಜನ ಸುತಂ= ಸುಧನ್ವನು, ತಿಮಿರಸಾಯಕವನು= ಅಂಧಕಾರವನ್ನುಂಟುಮಾಡುವ ಬಾಣವನ್ನು,ಸೆಳೆದಂ= ಎಳೆದು ಪ್ರಯೋಗಿಸಿದನು,ಭೀಭತ್ಸು= ಪಾರ್ಥನು, ಉಜ್ವಲ = ಉರಿಯುತ್ತಿರುವ, ರವಿಕಳಂಬಮಂ= ಸೂರ್ಯದೇವತಾಕಮಾದ ಅಸ್ತ್ರವನ್ನು,(ಸೂರ್ಯ ಬಾಣವನ್ನು) ತುಡುಕಿದಂ= ಪ್ರಯೋಗಿಸಿದನು,ಅವಂ= ಆ ಸುಧನ್ವನು, ಮುಳಿದು= ಕೋಪಗೊಂಡು, ಗರಳವಿಶಿಖಮಂ= ಸರ್ಪಾಸ್ತ್ರವನ್ನು,ತುಡುಕಿದಂ= ಪ್ರಯೋಗಿಸಿದನು, ಆ ನರಂ= ಫಲುಗುಣನು,ಗಾರುಡ= ಗರುಡದೇವತಾಕಮಾದ, ಶಿಲೀಮುಖವನು= ಅಂಬನ್ನು,  ಉಗಿದಂ= ಪ್ರಯೋಗಿಸಿದನು.  


ಅ॥ವಿ॥ ಇಂದ್ರ ಸಂಬಂಧವಾದದ್ದು =ಐಂದ್ರ, ಇದರಂತೆಯೇ ವಾರಣ, ಗಾರುಡ, ಆಗ್ನೇಯ, ತಾಮಸ ಇತ್ತಾದಿ ( ಮರಾಳವೇ ಧ್ವಜವಾಗುಳ್ಳವನು= ಮರಾಳಧ್ವಜ (ಬ. ಸ.) 


ತಾತ್ಪರ್ಯ:- ಆ ಬಳಿಕ ಪಾರ್ಥನು ವಾಯುದೇವನಿಂದ ಉಪದೇಶಿಸಲ್ಪಟ್ಟ ವಾಯವ್ಯಾಸ್ತ್ರವನ್ನು ಪ್ರಯೋಗಿಸಿ, ಜಲವನ್ನೆಲ್ಲಾ ನಿಮಿಷಾರ್ಧದೊಳಗೆ ಹೀರುವಂತೆ ಮಾಡಿದನು. ತರುವಾಯ ಶೂರನಾದ ಸುಧನ್ವನು, ಅದ್ರಿ ಬಾಣಮಂ ಪ್ರಯೋಗಿಸಲು ಅರ್ಜುನನು ಅದನ್ನು ಪರಿಹರಿಸಲಿಕ್ಕಾಗಿ, ಐಂದ್ರ ಶರವನ್ನು ಪ್ರಯೋಗಿಸಿದನು, ಮತ್ತೆ ಸುಧನ್ವನು ತಿಮಿರಸಾಯಕವನ್ನು ಪ್ರಯೋಗಿಸಲು ಅದಕ್ಕೆ ಪ್ರತಿಯಾಗಿ ಪಾರ್ಥನು ಸೂರ್ಯದೇವತಾಕಮಾದ ಬಾಣಮಂ ಹೂಡಲು, ಮರಾಳಧ್ವಜನ ಸುತನು ರೇಗಿ ಸರ್ಪಾಸ್ತ್ರವನ್ನು ತೊಡಲು, ಫಲುಗುಣನು ಗಾರುಡಾಸ್ತ್ರವನ್ನು ಪ್ರಯೋಗಿಸಿದನು.


ಈ ತೆರದೊಳಖಿಳ ದಿವ್ಯಾಸ್ತ್ರಂಗಳಿಸುಗೆಗಳ। 

ಚಾತುರ್ಯದಿಂದೊರ್ವರೊರ್ವರಂ ಗೆಲ್ವ ಸ। 

ತ್ವಾತಿಶಯದಿಂದೆ ಕಾದಿದರಾ ಸುಧನ್ವಾರ್ಜುನರ್ ಬಳಿಕ ರೋಷದಿಂದೆ॥

ಭೀತಿಗೊಳೆ ಮೂಜಗಂ ತೆಗೆದು ಬ್ರಹ್ಮಾಸ್ತ್ರಮಂ। 

ಶ್ವೇತವಾಹನನಾರ್ದಿಸಲ್ಕೆ ಹಂಸಧ್ವಜನ । 

ಜಾತಂ ಪ್ರತೀಕಾರಕಾ ಪಿತಾಮಹಶರವನೆಚ್ಚೊಡನೆ ಬೊಬ್ಬಿರಿದನು॥೧೬॥ 


ಪ್ರತಿಪದಾರ್ಥ :- ಅವರೀರ್ವರ್= ಆ ಸುಧನ್ವಾರ್ಜುನರ್, ಈ ತೆರದೊಳು= ಈ ರೀತಿಯಾಗಿ,ಅಖಿಳ= ಸಮಸ್ತವಾದ, ಮಂತ್ರಾಸ್ತ್ರಂಗಳ= ಮಂತ್ರಿತಮಾದ ಶರಗಳ, ಎಸುಗೆಗಳ= ಪ್ರಯೋಗಿಸುವುದರ( ಹೊಡಿಯೋಣದರ), ಚಾತುರ್ಯದಿಂದ = ಚತುರತೆಯಿಂದ( ಕೈಚಳಕದಿಂದ) ಓರ್ವರ್= ಒಬ್ಬರು, ಓರ್ವರಂ= ಇನ್ನೊಬ್ಬರನ್ನು, ಗೆಲ್ವ= ಗೆಲ್ಲತಕ್ಕ, ಸತ್ವಾತಿಶಯದಿಂದ= ಬಲಾಧಿಕ್ಯದಿಂದ, ಆ ಸುಧನ್ವಾರ್ಜುನರ್ = ಆ ಸುಧನ್ವನು ಮತ್ತು ಅರ್ಜುನ ಇವರಿಬ್ಬರು,ಕಾದಿದರ್= ಜಗಳವಾಡಿದರು, ಬಳಿಕ = ತರುವಾಯ, ರೋಷದಿಂದ = ಕೋಪದಿಂದ, ಮೂಜಗಂ= ಮೂರು ಲೋಕಗಳೂ, ಭೀತಿಗೊಳೆ = ಹೆದರುವಂತೆ, ಶ್ವೇತವಾಹನನು= ಪಾರ್ಥನು, ಬ್ರಹ್ಮಾಸ್ತ್ರಮಂ= ಪಿತಾಮಹ ಸಂಬಂಧವಾದ ಬಾಣವನ್ನು, ಆರ್ದು= ಆರ್ಭಟಿಸಿ, ಎಸಲ್ಕೆ= ಪ್ರಯೋಗಿಸಲಾಗಿ, ಹಂಸಧ್ವಜನಜಾತಂ= ಹಂಸಧ್ವಜನ ಮಗನಾದ ಸುಧನ್ವನು, ಪ್ರತೀಕಾರಕೆ=ಪ್ರತಿಯಾಗಿ ಪ್ರಯೋಗಿಸಲಿಕ್ಕೆ,ಆ ಪಿತಾಮಹಶರವನೆ= ಆ ಬ್ರಹ್ಮಸಂಬಂಧವಾದ ಬಾಣವನ್ನೆ= (ಬ್ರಹ್ಮಾಸ್ತ್ರವನ್ನೆ), ಎಚ್ಚು= ಹೊಡೆದು, ಒಡನೆ= ತಕ್ಷಣವೆ, ಬೊಬ್ಬಿರಿದನು= ಘರ್ಜಿಸಿದನು. 


ಅ॥ವಿ॥ ಶ್ವೇತವಾದ ವಾಹನವುಳ್ಳವನು, ಶ್ವೇತವಾಹನ,(ಬ. ಸ.) ಮೂರು ಜಗಗಳ ಸಮಾಹಾರ, ಮೂಜಗ.(ಸ. ದ್ವಿಗು. ಸ) 


ತಾತ್ಪರ್ಯ:- ಈ ರೀತಿಯಾಗಿ ಪಾರ್ಥಸುಧನ್ವರೀರ್ವರೂ ಮಹಾ ಪರಾಕ್ರಮಾತಿಶಯದಿಂದ ಒಬ್ಬರನೊಬ್ಬರು ಜಯಿಸುವ ತಾತ್ಪರ್ಯದಿಂದ ಹೋರಾಡುತ್ತ ಅರ್ಜುನನು ಕೋಪಾವಿಷ್ಟನಾಗಿ ಮೂಜಗಂಗಳು ತಲ್ಲಣಿಸುವಂತೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲಾಗಿ, ಆ ಸುಧನ್ವನು ಅದನ್ನು ಪರಿಹರಿಸಲಿಕ್ಕೆ ಪಿತಾಮಹಾಸ್ತ್ರಮಂ ತೊಡಲು ಆ ಬಾಣಗಳೆರಡೂ ಹೋರಾಡಿ ಸುಮ್ಮನಾದವು. 


ಅವರ ಬ್ರಹ್ಮಾಸ್ತ್ರಂಗಳೆರಡುಂ ಪೊಣರ್ದಡಂಗ। 

ಲಾ ವಿಜಯನೆಣಿಕೆಗೊಂಡೀತನಂ ಗೆಲ್ವ ಬಗೆ। 

ಯಾವುದೆಂದುಗಿದು ಹೂಡಿದನಕ್ಷಯಾಸ್ತ್ರಮಂ ತನ್ ರಥಕವನ ತೇರ್ಗೆ॥ 

ತೀವಿದುವು ಬಾಣಂಗಳಾಕಾಶಮಂ ಕಾಣೆ। 

ನೀವಸೈಧೆಯೆತ್ತಣದು ಶಶಿರವಿ ಕುಲಾದ್ರಿ ತಾ। 

ರಾವಳಿಗಳೇನಾದುವೆಣ್ದೆಸೆಯನರಿವರಾರೆಂಬಿನಂ ಕೈಗೈದನು॥೧೭॥ 


ಪ್ರತಿಪದಾರ್ಥ :- ಅವರ= ಆ ಪಾರ್ಥ ಸುಧನ್ವರ, ಬ್ರಹ್ಮಾಸ್ತ್ರಂ ಎರಡುಂ= ಎರಡು ಬ್ರಹ್ಮ ದೇವತಾಕಮಾದ ಬಾಣಗಳೂ, ಪೊಣರ್ದು= ಹೋರಾಡಿ, ಅಣಗಲ್= ಸುಮ್ಮನಾಗಲು, ಆ ವಿಜಯನು= ಆ ಫಲ್ಗುಣನು,  ಎಣಿಕೆಗೊಂಡು= ವ್ಯಥೆಪಟ್ಟು, 

(ಚಿಂತಿಸಿ) ಈತನಂ= ಈ ಸುಧನ್ವನನ್ನು, ಗೆಲ್ವ = ಗೆಲ್ಲುವ, ಬಗೆ=ಕ್ರಮವು, ಆವುದು ಎಂದು= ಯಾವುದೆಂಬುದಾಗಿ, ತನ್=ತನ್ನಯ, ರಥಕೆ= ವರೂಥಕ್ಕೆ, ಅಕ್ಷಯಾಸ್ತ್ರಮಂ= ನಾಶವಿಲ್ಲದೆ ಹುಟ್ಟುತ್ತಲೇ ಇರುವ ಶರಂಗಳ ಸಮುದಾಯದಿಂದ ಕೂಡಿದ ಬಾಣ ವಿಶೇಷವನ್ನು, ಉಗಿದು= ಪ್ರಯೋಗಿಸಿ, ಮಾಡಿದನು= ಬೆರಗಾಗುವಂತೆ ಕಾಳಗ ಮಾಡಿದನು, ಬಾಣಂಗಳು= ಅಂಬುಗಳು, ಅವನತೇರ್ಗೆ= ಆ ಸುಧನ್ವನ ರಥಕ್ಕೆ ,ತೀವಿದುವು=ತುಂಬಿದವು, ಆಕಾಶಮಂ= ಆಗಸವನ್ನು, ಕಾಣೆಂ= ನೋಡಲಿಲ್ಲವು,ಈ ವಸುಧೆ= ಈ ಪೃಥ್ವಿಯು,ಎತ್ತಣದು=ಎಷ್ಟುಮಾತ್ರದ್ದು,(ಎಲ್ಲಿಯೊ) ಶಶಿರವಿ= ಇಂದು ಭಾಸ್ಕರರು, ಕುಲಾದ್ರಿ=ಸಪ್ತ ಕುಲಾಚಲಗಳು, ತಾರಾವಳಿಗಳು= ನಕ್ಷತ್ರ ವ್ಯೂಹಂಗಳು,ಏನಾದವೊ=ಏನಾಗಿ ಹೋದವೊ,ಎಣ್ದೆಸೆಯನು= ಅಷ್ಟದಿಕ್ಕುಗಳನ್ನು, ಅರಿವರು ಯಾರು= ತಿಳಿದುಕೊಳ್ಳತಕ್ಕವರು ಯಾರಿರುವರು, (ಸಾಧ್ಯವಲ್ಲ)

ಎಂಬಿನಂ= ಎನ್ನುವಂತೆ,ಅಂಬುಗಳು= ಶರಗಳು, ತುಂಬುವಂತೆ= ವ್ಯಾಪಿಸುವಂತೆ,ಕೈಗೈದನು= ಕೈ ಚಳಕವನ್ನು ತೋರ್ಪಡಿಸಿದನು.


ಅ॥ವಿ॥ ಇವನು ಎಂಬುವದಕ್ಕೆ ಗೌರವಾರ್ಥದಲ್ಲಿ ಈತನು, ಅವನು, ಆತನು, ಎಂದು ವರ್ತಿಸುವದು. ವರ= ಶ್ರೇಷ್ಠ, ಅಳಿಯ, ಪ್ರಸಾದ, ಅಕ್ಷಯ, ಕ್ಷಯ=ನಾಶವು, ಅ=ಅಲ್ಲದ್ದು, (ಕ್ಷಿ=ಕ್ಷಯ್-ನಾಶ) 


ತಾತ್ಪರ್ಯ:-ಹೀಗೆ ಪಾರ್ಥ ಸುಧನ್ವರು ಜಯಾಪಜಯಗಳು ಗೊತ್ತಾಗದೆ ಅರ್ಜುನನು ಈ ಸುಧನ್ವನಂ ಗೆಲ್ಲುವ ಬಗೆ ಹೇಗೆಂದು ಚಿಂತಸುತ್ತಾ ಕಡೆಗೆ ದಶದಿಕ್ಕುಗಳು, ಕುಲಾದ್ರಿಗಳು,ಏನಾದುವೊ? ತಾರಕಾಳಿಗಳೆಲ್ಲಿರ್ಪವೋ? ಸೂರ್ಯಚಂದ್ರ-

ರೆಂತಿರೂಪರೋ? ಎಂದೂಹಿಸುವಂತೆ ಬಾಣವೃಷ್ಟಿಯಂ ಸುರಿಸುತ್ತ ಕೈ ಚಳಕವಂ ತೋರ್ಪಡಿಸಲು,


ಇಚ್ಚಾರಿಗೊಂಡು ನರನೆಚ್ಚ ಕೆಂಗರಿಗೋಲ। 

ಬಚ್ಚಳೆಯ ಪೊಸಮಸೆಯ ನಿಚ್ಚಳದ ನಿಡುಸರಳ್। 

ಪೆಚ್ಚಿದವು ನಿಮಿಷದೊಳ್ ಮುಚ್ಚಿದವು ಗಗನಮಂ ಕೊಚ್ಚಿದವು ಪರಬಲವನು॥ 

ಬಿಚ್ಚಿದವು ಕವಚಮಂ ಕಚ್ಚಿದವು ಖಂಡಮಂ। 

ಚುಚ್ಚಿದವು ಕೂಡೆ ಥಟ್ಟುಚ್ಚಿದವುಸೀಳಾಗಿ। 

ಪಚ್ಚಿದವು ಮೈಯೊಳಗೆ ಹೆಚ್ಚಿದವು ಹೊಗರಗಲು ಮುಚ್ಚಿದವು ನೆಣವಸೆಯನು॥೧೮॥


ಪ್ರತಿಪದಾರ್ಥ :- ನರನು= ಪಾರ್ಥನು, ಇಚ್ಚಾರಿಗೊಂಡು = ಎಡಬಲ ಕೈಗಳ ಕ್ರಮದಿಂದ, ಔಚ್ಚ= ಬಾಣವನ್ನು ಹೊಡೆಯುವ, ಕೆಂಗರಿಗೋಲ = ಕೆಂಪಾದ ರೆಕ್ಕೆಗಳುಳ್ಳ ಬಾಣಗಳ, ಬಿಚ್ಚಳೆಯ= ಬಿಚ್ಚಿಕೊಂಡು ಬರುವ ದಾರದಂತೆ ಬರುತಿರ್ಪ, ಪೊಸಮಸೆಯ= ಹೊಸದಾಗಿ ಹದಮಾಡಿರುವ, ನಿಚ್ಚಳದ= ಶಾಶ್ವತವಾದ, ನಿಡುಸರಳ್= ದೀರ್ಘವಾದ ಶರವು

ಪೆಚ್ಚಿದವು= ವೃದ್ಧಿಯಾದವು, ನಿಮಿಷದೊಳ್= ಕಣ್ಣರೆಪ್ಪೆ ಬಡಿಯುವಷ್ಟು ಕಾಲದಲ್ಲಿ, ಗಗನಮಂ= ಆಕಾಶವನ್ನು, ಮುಚ್ಚಿದವು = ಮರೆಯಾಗಿ ಮಾಡಿದವು, ಪರಬಲವನು= ಅರಿಸೇನೆಯನ್ನು, ಕೊಚ್ಚಿದವು= ಕತ್ತರಿಸಿದವು,ಕವಚಮಂ= ತೊಟ್ಟಿದ್ದ ಅಂಗಿಯನ್ನು, ಬಿಚ್ಚಿದವು= ಬೇರೆಮಾಡಿದವು, ಖಂಡಮಂ= ಶರೀರದ ಮಾಂಸ ಖಂಡವನ್ನು,ಕಚ್ಚಿಕೊಂಡವು= ಹಿಡಿದುಕೊಂಡವು,ಕೂಡೆ=ತಕ್ಷಣವೇ, ಚುಚ್ಚಿದವು= ನಾಟಲ್ಪಟ್ಟವು ,ಥಟ್ಟು=ಹೊಂದಿ,ಉಚ್ಚಿದವು= ಸುರಿಸಿದವು, ಸೀಳಾಗಿ= ಭಾಗವಾಗಿ, ಹೆಚ್ಚಿದವು= ಚೂರುಚೂರಾದವು, ಮೈಯೊಳಗೆ=ಶರೀರದಲ್ಲಿ,ಹೊಚ್ಚಿದವು= ಆಚ್ಆಚ್ಛಾದಿಸಿದವು, ಹೊಗಲರಗು= ಕಾಂತಿಯುಕ್ತವಾದ ಅಂಬು, ನೆಣವಸೆಯನು= ಮೂಳೆಯಲ್ಲಿ ಅಂಟಿರುವ ಕೊಬ್ಬನ್ನು, ಮುಚ್ಚಿದವು = ಮರೆಮಾಚಿದವು, ಎಂದರೆ ಅರ್ಜುನನು ಪ್ರಯೋಗಿಸಿದ ಅಂಬುಗಳು ಅನೇಕ ಪ್ರಕಾರವಾಗಿ ಶತ್ತು ಸೈನ್ಯದಲ್ಲಿ ವ್ಯಾಪಿಸುತ್ತಿತ್ತು.


ಅ॥ವಿ ॥ಪೆಚ್ಚು, ಬಿಚ್ಚು, ಮುಚ್ಚು, ಚುಚ್ಚು, ಧಾತುಗಳು. ಹೊಗರಾದ+ಅಲಗು= ಹೊಗರಲಗು(ವಿ. ಪೂ. ಕ.) ನಿಮಿಷ= ರೆಪ್ಪೆಯ ಕೂದಲು, ನಿಮಿ= ನಿಮಿ ಚಕ್ರವರ್ತಿ. 


ತಾತ್ಪರ್ಯ:- ಪಾರ್ಥನು ಎಡಬಲ ಕೈಗಳಿಂದ ಪ್ರಯೋಗಿಸಿದ ಕೆಂಪಾದ ರೆಕ್ಕೆಗಳಿಂದ ಕೂಡಿದ, ಬಿಚ್ಚಿಕೊಂಡು ನೂಲಿನಂತೆ ಬರುತ್ತಿರುವ ನೂತನವಾಗಿಸಾಣೆಗಿಟ್ಟು ಉದ್ದವಾದ ಬಾಣಗಳು ಅಭಿವೃದ್ಧಿಯಾಗಿ, ಒಂದು ಕ್ಷಣ ಮಾತ್ರದೋಳ್ಆಕಾಶವನ್ನು ಮರೆಯಾಗುವಂತೆ ಆಚ್ಛಾದಿಸಿ, ಶತ್ರುಗಳ ಶರೀರದ ಮಾಂಸ ಖಂಡಗಳನ್ನು ಗಟ್ಟಿಯಾಗಿ ಹಿಡಿದು ತೊಟ್ಟಿದ್ದ ಅಂಗಿಯನ್ನು ಬೇರ್ಪಡಿಸಿ, ಶರೀರದಲ್ಲಿರುವ ಮೂಳೆಗಳಿಗೆ ಆವೃತಮಾದ ಮೇದಸ್ಸನ್ನು ಆವರಿಸಿಕೊಂಡು ನಾನಾವಿಧವಾಗಿ ತುಂಬುತ್ತಿದ್ದವು.