ಜೈಮಿನಿ ಭಾರತ 16 - ದೊಡ್ಡಬೆಲೆ ನಾರಾಯಣಶಾಸ್ತ್ರಿ
ಸೂಚನೆ:- ಸ್ತ್ರೀರಾಜ್ಯದೊಳ್ ಪ್ರಮೀಳೆಯನೊಡಂಬಡಿಸಿ ವಿ।
ಸ್ತಾರಮಾಗಿರ್ದ ಬಹುದೇಶಂಗಳಂ ತೊಳಲಿ।
ಘೋರಭೀಷಣದೈತ್ಯನಂ ಮುರಿದು ಫಲುಗುಣಂ ಮಣಿಪುರಕೆ ನಡೆತಂದನು॥
ಫಲುಗುಣಂ= ಪಾರ್ಥನು, ಸ್ತ್ರೀರಾಜ್ಯದೊಳ್= ಹೆಂಗಸರ ರಾಜ್ಯದಲ್ಲಿ, ಪ್ರಮೀಳೆಯಂ= ಪ್ರಮೀಳೆಯೆಂಬ ರಾಜ್ಞಿಯನ್ನು, ಒಡಂಬಡಿಸಿ= ಸಮಾಧಾನಪಡಿಸಿ, ವಿಸ್ತಾರ= ವಿಸ್ತೀರ್ಣವು, ಆಗಿರ್ದ= ಆಗಿರುವುದಾಗಿದ್ದ, ಬಹುದೇಶೇಗಳಂ= ಅನೇಕ ರಾಜ್ಯಗಳನ್ನು, ತೊಳಲಿ= ಬಹು ಶ್ರಮಪಟ್ಟು, ಸಂಚಾರಮಾಡಿಕೊಂಡು, ಘೋರ=ಭಯಂಕರನಾದ, ಭೀಷಣನ= ಭೀಷಣನೆಂಬುವ, ದೈತ್ಯನಂ= ರಾಕ್ಷಸನನ್ನು, ಮುರಿದು=ಸಂಹರಿಸಿ, ಮಣಿಪುರಕೆ= ರತ್ನಪುರವೆಂಬ ಪಟ್ಟಣಕ್ಕೆ, ನಡೆತಂದನು= ಬಂದನು.
ಅ॥ವಿ॥ ಸ್ತ್ರೀಯರ+ರಾಜ್ಯ= ಸ್ತ್ರೀರಾಜ್ಯ ( ಷ. ತ.) ಘೋರನಾದ+ ಭೀಷಣ=ಘೋರಭೀಷಣ( ವಿ. ಪೂ. ಕ. ) ಮಣಿಯ+ ಪುರ=ಮಣಿಪುರ( ಷ. ತ. ) ದೈತ್ಯ=ಕ್ರೂರ, ರಾಕ್ಷಸ (ತ್ಸ) ರಕ್ಕಸ(ತ್ಭ)
ಕೇಳವನಿಪಾಲಕುಲತಿಲಕ ತುರಗದ ಕೂಡೆ।
ಪಾಳಯಂ ತೆರಳಿ ಬಂದಲ್ಲಿ ಬಿಟ್ಟರ್ಜುನಂ।
ಪೇಳಿದಂತಿರುತಿರ್ದುದನ್ನೆಗಂ ಕುದುರೆ ತನ್ನಿಚ್ಛೆಯಿಂದೈದೆ ಕಂಡು॥
ಭಾಳಪಟ್ಟದ ಲೇಖನವನೋದಿಕೊಂಡು ನೀ।
ಲಾಳಕೆಯರಾಗ ನಡೆತಂದು ಕೈಮುಗಿದು ಪ್ರ।
ಮೀಳೆಯೆಂಬರಸಾಗಿಹ ಸ್ತ್ರೀಶಿರೋಮಣಿಗೆಸಂಭ್ರಮದೊಳಿಂತೆಂದರು॥೧॥
ಪ್ರತಿಪದಾರ್ಥ :- ಅವನಿ= ಪೃಥ್ವಿಯನ್ನು, ಪಾಲ= ಕಾಪಾಡುವವರಾದ ರಾಜರ, ಕುಲ=ಸಮೂಹಕ್ಕೆ, ತಿಲಕ= ಲಲಾಮನಾದ ಜನಮೇಜಯರಾಯನೆ! ಕೇಳು= ಲಾಲಿಸು, ತುರಗದ=ಕುದುರೆಯ, ಕೂಡೆ= ಒಡನೆ, ಪಾಳೆಯಂ= ಸೈನ್ಯವು, ತೆರಳಿ= ಪ್ರಯಾಣಮಾಡಿ, ಬಂದು= ಬಂದವನಾಗಿ, ಅಲ್ಲಿ=ಆ ಸ್ಥಳದಲ್ಲಿ, ಬಿಟ್ಟು= ಆ ಸೈನ್ಯವನ್ನು ನಿಲುವಂತೆ ಮಾಡಿ, ಅರ್ಜುನಂ= ಪಾರ್ಥನು, ಪೇಳಿದಂತೆ= ಹೇಳಿದ ಪ್ರಕಾರವಾಗಿ, ಇರುತಿರ್ದುದು= ಇದ್ದಿತು, ಅನ್ನೆಗಂ= ಅಷ್ಟುಹೊತ್ತಿಗೆ, ಕುದುರೆ=ತುರಗವು, ತನ್ನ=ತನ್ನಯ, ಇಚ್ಛೆಯಿಂದ= ಮನಸ್ಸು ಬಂದ ಬಗೆಯಿಂದ, ಐದು= ನಡೆದು ಬರುತ್ತಿರಲು, ಕಂಡು= ಆ ಕುದುರೆಯನ್ನು ನೋಡಿ, ನೀಲ=ಕಪ್ಪಾಗಿರುವ, ಆಳಕಿಯರು= ಮುಂಗುರುಳುಗಳುಳ್ಳ ಸ್ತ್ರೀಯರು, ಭಾಳ= ಕುದುರೆಯ ಹಣೆಯಲ್ಲಿರುವ, ಪಟ್ಟದ= ಚಿನ್ನದ ಪಟ್ಟಿಯಲ್ಲಿ ಬರೆದಿರುವ,ಲೇಖನವನು= ಬರಹವನ್ನು, ಓದಿಕೊಂಡು= ಓದಿ ನೋಡಿಕೊಂಡು, ಆಗ= ಆ ವೇಳೆಯಲ್ಲಿ, ನಡೆತಂದು= ಬಂದವರಾಗಿ, ಕೈಮುಗಿದು = ಕರಜೋಡಿಸಿಕೊಂಡು, (ನಮಸ್ಕಾರ ಮಾಡಿ) ಪ್ರಮೀಳೆಯೆಂಬ = ಪ್ರಮೀಳೆಯೆಂಬ ನಾಮಧೇಯದ, ಅರಸಾಗಿಹ= ಅರಸಿಯಾಗಿರುತ್ತಿರುವ, ಸ್ತ್ರೀಶಿರೋಮಣಿಗೆ= ವನಿತೆಯರಲ್ಲಿ ಶೀರೋರತ್ನಪ್ರಾಯಳಾದವಳಿಗೆ,ಸಂಭ್ರಮದೊಳು= ಅತಿ ವೈಭವದಿಂದ, ಇಂತೆಂದರು= ಮುಂದಿನ ರೀತಿಯಿಂದ ಹೇಳಿದರು.
ಅ॥ ವಿ॥ ಅವನಿಯನ್ನು+ ಪಾಲನೆ ಮಾಡುವವ = ಅವನಿಪಾಲ( ಕೃ. ವೃ.) ತಿಲಕ= ಊರ್ಧ್ವಪುಂಡ್ರ, ತಿಲಕವೃಕ್ಷ, ಶ್ರೇಷ್ಠ, ನೀಲವಾದ+ ಅಳಕ= ನೀಲಾಳಕ (ವಿ. ಪೂ. ಕ ) ನೀಲವಾದ+ ಅಳಕವುಳ್ಳವಳು= ನೀಲಾಳಕಿಯರು( ಬ. ಸ. ) ಕೈಯಂ+ ಮುಗಿದು= (ಕ್ರಿ. ಸ. ) ಇಂತು+ಎಂದು=ಇಂತೆಂದು.
ತಾತ್ಪರ್ಯ:-ಭೂಮಿಪಾಲರ ಕುಲಕ್ಕೆ ಶಿರೋರತ್ನಪ್ರಾಯನಾದ ಜನಮೇಜಯರಾಯನೆ! ಆಲಿಸು, ಮುಂದಿನ ಕಥಾಸಂದರ್ಭವನ್ನು ವಿಸ್ತಾರವಾಗಿ ವಿವರಿಸುತ್ತೇನೆ. ಆಗ ಅರ್ಜುನನು ಯಜ್ಞಾಶ್ವದ ಸಂಗಡ ಹೊರಟು ತನ್ನ ಸೇವೆಯನ್ನು ಒಂದು ಕಡೆಯಲ್ಲಿ ನಿಲ್ಲುವಂತೆ ಮಾಡಲು, ಆ ಸೇನೆಯು ಒಡೆಯನ ಮಾತಿನ ಪ್ರಕಾರವಾಗಿಯೆ ನಡೆದುಕೊಂಡಿರಲು, ಆ ಹೊತ್ತಿಗೆ ಆ ಕುದುರೆಯು ತನ್ನ ಮನಸ್ಸು ಬಂದ ರೀತಿಯಿಂದ ಸ್ತ್ರೀರಾಜ್ಯದಲ್ಲಿ ಬರುತ್ತಿರಲು, ದುಂಬಿಯ ಮೈ ಬಣ್ಣದಂತೆ ಕಪ್ಪಾದ ಮುಂಗುರುಳುಗಳುಳ್ಳ ಕಾಂತೆಯರು ಆ ಯಜ್ಞಾಶ್ವದ ಹಣೆಯಲ್ಲಿರುವ ಚಿನ್ನದ ಪಟ್ಟಿಯಲ್ಲಿ ಬರೆದಿದ್ದ ಬರವಣಿಗೆಯನ್ನು ಮನನ ಮಾಡಿಕೊಂಡು ಬಂದು ತಮ್ಮ ರಾಜ್ಯಕ್ಕೆ ರಾಣಿಯಾಗಿದ್ದ, ಪ್ರಮೀಳೆಯೆಂಬ ನಾಮದಿಂದ ಧೊರೆಯಾದ ಸ್ತ್ರೀಯರಿಗೆಲ್ಲಾ ಸೀಮಂತರತ್ನ ಪ್ರಾಯಳಾದ ನಾರೀ ಶಿರೋಮಣಿಗೆ ಕೈಮುಗಿದುಕೊಂಡು ಅತ್ಯಂತ ವೈಭವದೊಡನೆ ಈ ರೀತಿಯಾಗಿ ಪೇಳಿದರು.
ಶಶಿಕುಲೋದ್ಭವ ಯುಧಿಷ್ಠಿರನ ಪನ ಕುದುರೆ ಗಡ।
ವಸುಧೆಯೊಳಿದಂ ಬಲ್ಲಿದರ್ ಕಟ್ಟಬೇಕು ಗಡ।
ದೆಸೆಯೊಳಿದಕರ್ಜುನನ ಕಾಪಿನಾರೈಕೆ ಗಡ ಪಿಡಿದೊಡೆ ಬಿಡಿಸುವರ್ಗಡ॥
ಪೊಸತಲಾ ನಮಗೆಂದು ನಾರಿಯರ್ ಬಿನ್ನೈಸೆ।
ನಸುನಗುತೆ ಲಾಯದೊಳ್ ಕಟ್ಟಿಸಿದಳಾ ಹಯವ।
ನೆಸೆವ ಭದ್ರಾಸನವನಿಳಿದು ಸಂಗ್ರಾಮಕ್ಕೆ ಪೊರಮಟ್ಟಳಾ ಪ್ರಮೀಳೆ॥೨॥
ಪ್ರತಿಪದಾರ್ಥ :- ಶಶಿಕುಲ= ಇಂದುವಿನ ಕುಲದಲ್ಲಿ ಜನಿಸಿದವನಾದ, ಯುಧಿಷ್ಠಿರ =ಧರ್ಮಪುತ್ರನೆಂಬ, ನೃಪನ=ರಾಜನ, ಕುದುರೆಶಗಡ= ತುರಗವಂತೆ, ವಸುಧೆಯೊಳು= ಪೃಥ್ವಿಯಲ್ಲಿ, ಇದಂ= ಈ ಅಶ್ವವನ್ನು, ಬಲ್ಲಿದರ್= ಬಲಾಢ್ಯರು, ಕಟ್ಟಬೇಕು ಗಡ= ಬಂಧಿಸಬೇಕಂತೆ, ದೆಸೆಯೊಳು= ನಾನಾ ದಿಕ್ಕಗಳಲ್ಲಿ ಇದಕೆ= ಈ ತುರಗಕ್ಕಿ,ಅರ್ಜುನನ= ಪಾರ್ಥನ, ಕಾವಿನ =ರಕ್ಷಿಸುವಿಕೆಯ, ಆರೈಕೆಗಡ= ಪೋಷಣೆಯಂತೆ, ಪಿಡಿದರೆ= ಆ ಅಶ್ವವನ್ನು ಯಾರಾದರೂ, ಹಿಡಿದರೆ = ಹಿಡಿದುಕೊಂಡರೆ, ಬಿಡಿಸಿಕೊಂಬರು= ಸ್ವಾಧೀನಪಡಿಸಿಕೊಳ್ಳುತ್ತಾರೆ,ನಮಗ= ನಮ್ಮಗಳಿಗೆ, ಪೊಸತಲಾ= ಹೊಸದಾದ ಸಂಗತಿಯಲ್ಲವೆ! ಎಂದು= ಎಂದು ಹೇಳುತ್ತ, ನಾರಿಯರ್= ಸ್ತ್ರೀಯರು, ಬಿನ್ನೈಸೆ= ಅರಿಕೆಮಾಡಿಕೊಳ್ಳಲು, ಆ ಪ್ರಮೀಳೆಯು= ಆ ಪ್ರಮೀಳೆಯೆಂಬ ರಾಣಿಯು, ನಸುನಗುತ= ಮುಗುಳು ನಗೆನಗುತ್ತ, ಲಾಯದೊಳ್= ಕುದುರೆಗಳನ್ನು ಕಟ್ಟುವ ಸ್ಥಳದಲ್ಲಿ(ತುರಗ ಶಾಲೆಯಲ್ಲಿ) ಆ ಹಯಮಂ= ಆ ತುರಗವನ್ನು,ಕಟ್ಟಿಸಿದಳು=ಸೇವಕರಿಂದ ಬಂಧಿಸಿದಳು, ಎಸೆವ= ಪ್ರಜ್ವಲಿಸುವ,ಭದ್ರಾಸನವನು= ಮಂಗಳ ಪೀಠವನ್ನು, (ದರಬಾರ್ ಮಾಡುವ ಪೀಠವನ್ನು)ಇಳಿದು= ಕೆಳಗೆ ಇಳಿದವಳಾಗಿ, ಸಂಗ್ರಾಮಕ್ಕೆ = ಕಾಳಗಕ್ಕೆ, ಪೊರಮಟ್ಟಳು= ಹೊರಟಳು.
ಅ॥ವಿ॥ ಶಶ= ಮೊಲ, ಅದನ್ನುಳ್ಳದ್ದು=ಶಶಿ, ಶಶಿಯ+ಕುಲ= ಶಶಿಕುಲ, ( ಷ. ತ. ) ಕುಲ+ಉದ್ಭವ= ಕುಲೋದ್ಭವ( ಗು. ಸಂ)
ಯುಧಿಷ್ಠಿರ=ಯುದ್ಧದಲ್ಲಿ ಸ್ಥಿರವಾಗಿ ನಿಲ್ಲತಕ್ಕವನು, ಗಡ=ಅವ್ಯಯ ರೂಪ, ಭದ್ರವಾದ+ಆಸನ= ಭದ್ರಾಸನ(ವಿ. ಪೂ. ಕ) ಭದ್ರ= ಮಂಗಳ, ಜೋಪಾನ.
ತಾತ್ಪರ್ಯ:- ಎಲೌ ಮಹಾರಾಜ್ಞಿಯೇ ಆಲಿಸು, ಚಂದ್ರವಂಶೋತ್ಪನ್ನನಾದ ಧರ್ಮರಾಯನೆಂಬ ರಾಜನ ತುರಗವಂತೆ, ಭೂಮಿಯಲ್ಲಿ ಬಲಾಢ್ಯರಾದವರು ಇದನ್ನು ಹಿಡಿದು ಕಟ್ಟಿಹಾಕಬೇಕಂತೆ, ನಾನಾ ದೇಶಗಳಲ್ಲಿಯೂ, ಈ ಅಶ್ವವು ಸಂಚರಿಸುತ್ತಿರುವಾಗ್ಗೆ, ಅದರ ಮೈಗಾವಲಿಗೆ ಅರ್ಜುನನನ್ನು ನೇಮಿಸಿರುತ್ತಾರಂತೆ, ಬಲಶಾಲಿಗಳಾದವರುಈ ಯಜ್ಞಾಶ್ವವನ್ನು ಪಿಡಿದರೆ ಅದನ್ನು ಬಿಡಿಸಿಕೊಳ್ಳುತ್ತಾರಂತೆ,ಇದು ನಮ್ಮಗಳಿಗೆ ಹೊಸ ಸಂಗತಿಯಲ್ಲವೆ! ಎಂಬುದಾಗಿ ವಿಜ್ಞಾಪನೆಯನ್ನು ಮಾಡಿಕೊಳ್ಳಲಾಗಿ, ರಾಜ್ಞಿಯಾಗಿ ಪ್ರಮೀಳೆಯು ಆ ತುರಗವನ್ನು ತನ್ನ ಅಶ್ವಶಾಲೆಯಲ್ಲಿ ಕಟ್ಟಿಸಿ, ಭದ್ರಾಸನದಿಂದ ಕೆಳಕ್ಕೆ ಇಳಿದು ಯುದ್ಧಕ್ಕೆ ಹೊರಟಳು,
ಕಣ್ಣ ಹೊಳಪಿನ ಚಪಲೆಯರ ಕುದುರೆ ಲಕ್ಷದಿಂ।
ತಿಣ್ಣ ಮೊಲೆಯಲಸಗಮನೆಯರಾನೆ ಲಕ್ಷದಿಂ।
ಹುಣ್ಣಿಮೆಯ ಶಶಿಯಂತೆಸೆವ ಬಟ್ಟಮೊಗದ ನೀರೆಯರ ರಥ ಲಕ್ಷದಿಂದೆ॥
ಸಣ್ಣನಡುವಿನ ಸೊಕ್ಕು ಜವ್ವನದ ಪೊಸಮಿಸುನಿ।
ವಣ್ಣದಂಗದ ಬಾಲೆಯರ ಮೂರುಲಕ್ಷದಿಂ।
ಪೆಣ್ಣದಳಮೈದೆ ಜೋಡಿಸಿತು ಪಾರ್ಥನ ಸಮರಕಾ ಪ್ರಮೀಳೆಯ ಸುತ್ತಲು॥೩॥
ಪ್ರತಿಪದಾರ್ಥ :- ಕಣ್ಣ= ಕಣ್ಣುಗಳ, ಹೊಳಹಿನ= ಪ್ರಕಾಶಿಸುವಿಕೆಯುಳ್ಳವರು,ಚಪಲೆಯರು= ಮಿಂಚಿನಂತೆ ಚಂಚಲವಾದ ಸ್ತ್ರೀಯರ, ಕುದುರೆ= ತುರಗಗಳ, ಲಕ್ಷದಿಂ= ಒಂದು ಲಕ್ಷ ಸಂಖ್ಯೆಯಿಂದ, ತಿಣ್ಣ= ಕರ್ಕಶವಾದ,(ಗಟ್ಟಿಯಾದ) ಮೊಲೆಯ= ಕುಚಗಳುಳ್ಳವರಾದ, ಅಲಸದ= ನಿಧಾನವಾದ, ಗಮನೆಯರ= ಗಮನವುಳ್ಳವರಾದ,(ನಡಿಗೆಯುಳ್ಳವರಾದ) ಹೆಂಗಳ= ಹೆಂಗಸರ, ಆನೆ=ಇಭಗಳ, ಲಕ್ಷದಿಂ= ಒಂದು ಲಕ್ಷ ಸಂಖ್ಯೆಯಿಂದಲೂ, ಹುಣ್ಣಿಮೆಯ = ಹುಣ್ಣಿಮೆಯ ದಿನದಲ್ಲಿರುವ, ಶಶಿಯಂತೆ= ಚಂದ್ರನ ಹಾಗೆ, ಎಸೆವ= ಹೊಳೆಯುವ, ಬಟ್ಟ= ಮಂಡಲಾಕಾರವಾದ,( ಗುಂಡಗಿರುವ) ಮೊಗದ= ಆಸ್ಯವುಳ್ಳವರಾದ, ನೀರೆಯರ= ಕಾಂತೆಯರ, ರಥ= ವರೂಥಗಳ, ಲಕ್ಷದಿಂ= ಒಂದು ಲಕ್ಷ ಸಂಖ್ಯೆಯಿಂದಲೂ, ಸಣ್ಣ=
ಸಣ್ಣಗಿರುವ,( ಕೃಶವಾಗಿರುವ) ನಡುವಿನ= ಮಧ್ಯಗಳುಳ್ಳ, ಸೊಕ್ಕು= ಕೊಬ್ಬಿದ, ಜವ್ವನದ= ಪ್ರಾಯವುಳ್ಳವರಾದ, ಪೊಸ= ನೂತನವಾದ, ಮಿಸುನಿ= ಚಿನ್ನದ, ವಣ್ಣದ= ವರ್ಣವುಳ್ಳ, ಅಂಗದ= ದೇಹವುಳ್ಳವರಾದ, ಬಾಲೆಯರ= ಸ್ತ್ರೀಯರ, ಮೂರುಲಕ್ಷದಿಂದ= ಮೂರುಲಕ್ಷ ಸಂಖ್ಯೆಗಳಿಂದಲೂ, ಪೆಣ್ಣ= ಹೆಂಗಸರ, ದಳಂ= ಸೈನ್ಯವು, ಬಂದು= ಬಂದದ್ದಾಗಿ, ಪಾರ್ಥನ =ಫಲುಗುಣನ, ಸಮರಕೆ= ಕಾಳಗಕ್ಕೆ, ಆ ಪ್ರಮೀಳೆಯ = ಆ ಪ್ರಮೀಳೆಯೆಂಬ ರಾಣಿಯ, ಸುತ್ತಲೂ= ಎಲ್ಲಾ ಭಾಗದಲ್ಲಿಯೂ, ಜೋಡಿಸಿತು= ಯುದ್ಧಕ್ಕೆ ಸನ್ನದ್ಧವಾಯಿತು.
ಅ॥ವಿ॥ ಚಪಲ= ಮಿಂಚು, ಚಂಚಲ, ಶಶಿ(ತ್ಸ)ಸಸಿ(ತ್ಭ) ಹುಣ್ಣಿಮೆ( ತ್ಭ) ಪೂರ್ಣಿಮಾ(ತ್ಸ) ಲಕ್ಷ(ತೂಸ)ಲಕ್ಕ(ತ್ಭ)
ತಾತ್ಪರ್ಯ:- ನೇತ್ರಗಳ ಹೊಳೆಯುವಿಕೆಯುಳ್ಳ ಮಿಂಚಿನಂತೆ ಚಂಚಲ ಮನಸ್ಕರಾದ, ಸ್ತ್ರೀಯರ ಒಂದು ಲಕ್ಷ ಸಂಖ್ಯೆಯ ಕುದುರೆಗಳು ಸೈನ್ಯವನ್ನು ಅತಿ ಕಠಿನ ಸ್ತನವುಳ್ಳವರು, ಮಂದಗಮನೆಯರೂ ಆದ ಹೆಂಗಸರುಳ್ಳ ಆನೆಗಳೂ, ರಾಕಾಚಂದ್ರ ಬಿಂಬಕ್ಕೆ ಸಮಾನ ಮುಖಿಯರಾದ, ರಥದಿಂದ ಸೇರಿದ ಹೆಂಗಸರ ಒಂದು ಲಕ್ಷದಿಂದಲೂ, ಕೃಶವಾದ ನಡುವು ಮದ ಇವುಗಳಿಂದ ಕೂಡಿದ ಪ್ರಾಯಸಮರ್ಥರಾದ ಸ್ತ್ರೀಯರ ಒಂದು ಲಕ್ಷ ಸಂಖ್ಯೆಯೂ, ಚಿನ್ನದಂತೆ ಅತಿ ತೇಜಸ್ಕರಾದ ಅಂಗಕಾಂತಿಯುತರಾದ ಹೆಂಗಳ ಮೂರುಲಕ್ಷ ಸಂಖ್ಯೆಯ ಕಲ್ಬಲವೂ( ಈ ನಾಲ್ಕೂ ಬಗೆಯಾದ ಚತುರಂಗಬಲವು) ತಮ್ಮ ರಾಜ್ಞಿಗಾಗಿ, ಅರ್ಜುನನೊಂದಿಗೆ ಕಾಳಗಕ್ಕೆ ನಿಂತಿರುವ ಅರಸಿಯ ಎಲ್ಲಾ ಕಡೆಯಲ್ಲಿಯೂ ವ್ಯಾಪ್ತವಾಯಿತು.
ತೆಗೆದುಟ್ಟ ಚಲ್ಲಣದ ಬಿಗಿದ ಮೊಲೆಗಟ್ಟುಗಳ।
ಪೊಗರುಗುವ ವೇಣಿಗಳ ಮೃಗಮದದ ಬೊಟ್ಟುಗಳ।
ತಿಗುರಿದನುಲೇಪನದ ಮಗಮಗಿಪ ಕಂಪುಗಳ ಝಗಝಗಿಸುವಾಭರಣದ॥
ನಗೆಮೊಗದ ಮಿಂಚುಗಳ ದೃಗುಯುಗದ ಕಾಂತಿಗಳ।
ಮಿಗೆತೊಳಗುವಂಘ್ರಿಗಳ ಸೊಗಯಿಸುವ ಬಾಹುಗಳ।
ಬಗೆಬಗೆಯ ಕೈದುಗಳ ವಿಗಡೆಯರ್ ನೆರೆದು ಕಾಳಗಕೆ ಮುಂಕೊಳುತಿರ್ದರು॥೪॥
ಪ್ರತಿಪದಾರ್ಥ :- ತೆಗೆದು=ತೆಗೆದುಕೊಂಡು, ಉಟ್ಟ=ಧರಿಸಿದ, ಚಲ್ಲಣದ= ಚಲ್ಲಣವುಳ್ಳವರು( ಚಡ್ಡಿಯನ್ನು ಧರಿಸಿದ್ದವರು) ಬಿಗಿದ= ಬಿಗಿಯಾಗಿ ಕಟ್ಟಿದ,ಮೊಲೆಕಟ್ಟುಗಳ= ಸ್ತನಗಳಿಗೆ ಕಟ್ಟಿಕೊಂಡಿರುವ ಕುಪ್ಪಸದ ಗಂಟುಳ್ಳವರು, ಪೊಗರ್= ಪ್ರಕಾಶ- ವು, ಒಗುವ= ದ್ರವಿಸುವ, ( ಹೊರಡುತ್ತಿರುವ) ವೇಣಿಗಳ= ಜಡೆಗಳುಳ್ಳವರು, ಮೃಗಮದದ= ಕತ್ತುರಿಯಿಂದ ರಚಿಸಿದ, ಬೊಟ್ಟುಗಳ= ಚುಕ್ಕೆಗಳುಳ್ಳವರು,ತಿಗುರಿದ= ಲೇಪಿಸಿಕೊಂಡ, ಅನುಲೇಪದ= ಸುವಾಸನೆಯ ವಸ್ತುವುಳ್ಳ, ಮಘಮಘಿಪ= ಸುವಾಸನೆಯುತಮಾದವರು, ಕಂಪುಗಳ=ಒಳ್ಳೇವಾಸನೆಗಳುಳ್ಳವರು, ಝಗಝಗಿಪ= ಹೊಳೆಹೊಳೆಯುವ, ಆಭರಣದ= ತೊಡಿಗೆಗಳುಳ್ಳವರು, ನಗೆಮೊಗದ=ಮಂದಹಾಸದಿಂದ ಕೂಡಿದ ( ಮುಗುಳುನಗೆಯಿಂದ ಕೂಡಿದ ಮುಖವುಳ್ಳ) ದೃಗುಯುಗಳ= ಎರಡು ನೇತ್ರಗಳ, ಕಾಂತಿಗಳ= ಕಾಂತಿಯುತರಾದವರು, ಮಿಗೆ=ಅತ್ಯಧಿಕವಾಗಿ, ತೊಳಗುವ= ಪ್ರಕಾಶಿಸುತ್ತಿರುವ, ಅಂಘ್ರಿಗಳ= ಅಡಿಗಳುಳ್ಳವರು, ಸೊಗಯಿಸುವ = ಮನೋಹರವಾದ, ಬಾಹುಗಳ= ಭುಜಗಳುಳ್ಳವ-
ರಾದರು, ಬಗೆಬಗೆಯ =ಹಲವು ರೀತಿಗಳಾದ, ಕೈದುಗಳ=ಆಯುಧಗಳ, ವಿಗಡೆಯರು= ವಿಕಟರಾದ ಸ್ತ್ರೀಯರು, (ಶತ್ರುಗಳಾದ ಸ್ತ್ರೀಯರು) ಕಾಳಗಕೆ= ಜಗಳಮಾಡಲಿಕ್ಕೆ, ಮುಂಕೊಳುತಿರ್ದರು=ಮುಂದುಮುಂದಾಗಿ ಆಗಮಿಸುತ್ತಿದ್ದರು.
ಅ॥ವಿ॥ ವಿಗಡ (ತ್ಭ) ವಿಕಟ (ತ್ಸ) (ಕಂಪು=ವಾಸನೆ, ಕೆಂಪು= ಕೆಂಪು ಬಣ್ಣ), ಅಂಘ್ರಿ=ಪಾದ, ಕಿರಣ=ದುರದ ಬೇರು, ನಗೆಯ+ ಮೊಗ= ನಗೆಮೊಗ( ವಿ. ಪೂ. ಕ. ) ಮೊಗ(ತ್ಭ) ಮುಖ(ತ್ಸ) ಮುಖ=ಮೋರೆ, ಮಖ=ಯಜ್ಞ) ವೇಣಿ=ಸರ್ಪಾಕಾರದ ಹೆರಳು,ಒಂದು ನದಿ.
ತಾತ್ಪರ್ಯ:- ಆಗ ಆ ಪ್ರಮೀಳೆಯ ಹತ್ತಿರದಲ್ಲಿ ಪ್ರಮೀಳೆಯ ಕಡೆಯವರು ಚಡ್ಡಿಗಳನ್ನು ಧರಿಸಿದ,ಸ್ತನಗಳನ್ನು ಬಿಗಿಯಾಗಿ ಕಟ್ಟಿಕೊಂಡ ಕುಪ್ಪುಸದ ಗಂಟುಗಳುಳ್ಳ, ಕಾಂತಿಯುತಮಾಗಿ ಸರ್ಪಾಕಾರದ ಹೆರಳುಗಳುಳ್ಳ, ಕಸ್ತೂರಿ ಬೊಟ್ಟಿನಿಂದ ಕೂಡಿದ ಮುಖಗಳುಳ್ಳ, ಸುವಾಸನೆಯಿಂದೊಡಗೂಡಿದ,ಗಂಧವನ್ನು ಲೇಪನಮಾಡಿಕೊಂಡಿರುವ,ಕಾಂತಿಯತಿಶಯಮಾಗಿ,ಪ್ರಕಾಶಿ-
ಸುತ್ತಿರುವ ಪಾದಗಳುಳ್ವರಾದ, ಸುಂದರಮಾದ ಭುಜಗಳುಳ್ಳವರಾದ, ಬಗೆಬಗೆಯ ಕೈದುಗಳುಳ್ಳವರಾಗಿ ಅರ್ಜುನನಲ್ಲಿ ದ್ವೇಷಿಗಳಾದ ಸ್ತ್ರೀಯರು ಕಾಳಗಕ್ಕೆ ಹೊರಡುತ್ತಿದ್ದರು.
ಮಂದಗತಿಯಿಂದೆ ನಳಿತೋಳಿಂದೆ ಕುಂಭಕುಚ।
ದಿಂದೆ ಜೌವನದ ಮದದಿಂದೆ ಭದ್ರಾಕಾರ।
ದಿಂದೆಸೆವ ಕನಕಮಣಿಬಂಧನಿಗಳಂಗಳಿಂ ಭೃಂಗಾಳಕಂಗಳಿಂದೆ॥
ಸಿಂಧೂರದಿಂದಮಾರಾಜಿಸುವ ಸೀಮಂತ।
ದಿಂದೆ ಮಂಜುಳಕಿಂಕಿಣಿಗಳ ಕಾಂಚೀದಾಮ।
ದಿಂದೆಸೆವ ಪೆಣ್ಗಳಾನೆಗಳ ಮೇಲೈತಂದರವರಾಯತಂಗಳಿಂದೆ॥ ೫॥
ಪ್ರತಿಪದಾರ್ಥ :- ಮಂದಗತಿ= ನಿಧಾನವಾಗಿ ನಡೆಯುವಿಕೆಯಿಂದಲೂ, ನಳಿತೋಳಿಂದ= ತಾವರೆಯ ನಾಳದಂತಿರುವ ಭುಜಗಳಿಂದಲೂ, ಕುಂಭ= ಗಜದ ಕುಂಭಸ್ಥಳದ ಹಾಗೆ ದೊಡ್ಡದಾಗಿರುವ,ಕುಚಗಳಿಂದ= ಮೊಲೆಗಳಿಂದಲೂ, ಜವ್ವನದ= ಪ್ರಾಯದ ಮದದಿಂದ, (ಕೊಬ್ಬಿನಿಂದಲೂ) ಭದ್ರಾಕಾರದಿಂದ) = ಶುಭಕರವಾದ ಆಕೃತಿಯಿಂದಲೂ,ನವ=ನೂತನವಾದ, ಕನಕ= ಚಿನ್ನದಿಂದಲೂ, ಮಾಣಿಕ= ಮಾಣಿಕ್ಯದಿಂದಲೂ, (ರತ್ನದಿಂದಲೂ ನಿರ್ಮಿತವಾದ) ಬಂಧಗಳಿಂದ=ಕೈಮುರಿಗೆ ಬಾಹುಮುರಿಗೆ,ಸೊಂಟದ ನಡುಕಟ್ಟು ಮೊದಲಾದವುಗಳಿಂದಲೂ, ಭೃಂಗ= ಭ್ರಮರಕ್ಕೆ ಸಮಾನ ಕಾಂತಿಯುಳ್ಳ, ಅಲಕಂಗಳಿಂ= ಮುಂಗೂದಲುಗಳಿಂದಲೂ, ಸಿಂಧೂರದಿಂದ= ಕುಂಕುಮ ಧೂಳಿಯಿಂದ, ಆರಾಜಿಸುವ= ಹೊಳೆಯುವ, ಸೀಮಂತದಿಂದ= ಬೈತಲೆ ಬೊಟ್ಟಿನಿಂದಲೂ, ಮಂಜುಳ= ಪ್ರಕಾಶಮಾನವಾದ, ಕಿಂಕಿಣಿಗಳ= ಕಿರಿಗೆಜ್ಜೆಗಳಿಂದ ಕೂಡಿದ, ಕಾಂಚೀದಾಮದಿಂದ= ನಡುವಿಗೆ ಬಿಗಿಯುವ ಪಟ್ಟಿಯಿಂದಲೂ, ಎಸೆವ=ಹೊಳೆಯುವ, ಪೆಣ್ಣಾನೆಗಳ= ಹೆಣ್ಣುಗಜಗಳ, ಮೇಲೆ= ಮೇಲುಭಾಗದಲ್ಲಿ, ಆಯತಂಗಳಿಂದ= ವಿಶಾಲದಿಂದ, ಅವರು= ಆ ಸ್ತ್ರೀಯರು, ಬರುತಿರ್ದರು.
ಅ॥ವಿ॥ ಗತಿ= ಮಾರ್ಗ, ದಿಕ್ಕು, ಮಂದವಾದಗತಿ=ಮಂದಗತಿ( ವಿ. ಪೂ. ಕ.) ಕುಂಭ= ಆನೆಯ ತಲೆಯಮೇಲಿರುವ ಗುಪ್ಪು, ಮಡಿಕೆ, ಗುಗ್ಗುಳದ ಗಿಡ, ಜವ್ವನ(ತ್ಭ)ಯವ್ವನ(ತ್ಸ)ಸಿಂಧೂರ= ಆನೆ, ಚಂದ್ರ.
ತಾತ್ಪರ್ಯ:- ನಿಧಾನವಾದ ನಡಿಗೆಯಿಂದಲೂ,ತಾವರೆ ಎಸಳಿನಂತೆ ನೀಳವಾದ ತೋಳಿನಿಂದಲೂ, ಆನೆಯ ಕುಭಸ್ಥಳದಂತೆ ದಪ್ಪವಾಗಿರುವ ಕುಚಗಳಿಂದಲೂ, ಚಿನ್ನದಿಂದಲೂ ಮತ್ತು ರತ್ನದಿಂದಲೂ ಕೆತ್ತಲ್ಪಟ್ಟ ಆಭರಣಗಳಿಂದಲೂ, ಬಾಹು ಮುರಿಗೆ, ಮೊದಲಹ ತೊಡವುಗಳಿಂದಲೂ, ಭ್ರಮರಗಳ ಮೈಬಣ್ಣದಂತೆ ಹೊಳೆವ ಮುಂಗುರುಳಿನಿಂದಲೂ, ಪ್ರಾಶಿಸುತ್ತಿರ್ಪ ರತ್ನಖ-
ಚಿತವಾದ ಬೈತಲೆ ಬೊಟ್ಟಿನಿಂದಲೂ, ಮಂಜುಳ ರವಗೈವ ಕಿರುಗೆಜ್ಜೆಗಳಿಂದಲೂ, ಹೊಳೆಹೊಳೆಯುತ್ತಿರುವ ಒಡ್ಯಾಣಗಳಿಂದಲೂ, ಪ್ರಕಾಶಿಸುವಸ್ತ್ರೀ ಸಮೂಹವು ಹೆಣ್ಣಾನೆಗಳ ಮೇಲೆ ಕುಳಿತು ವಿಸ್ತಾರವಾಗಿ ಬರುತ್ತಿದ್ದರು.
ಸ್ಫುರದುತ್ಕಟಾಕ್ಷದಿಂ ಲಲಿತೋರುಯುಗದಿಂದೆ।
ಗುರುಪಯೋಧರವಿಜಿತ ಚಕ್ರಶೋಭಿತದಿಂದೆ।
ಪರಿಲುಳಿತ ಚಾಪಲತೆಯಿಂ ಪ್ರಣಯ ಕಲಹದೊಳಗಲ್ದಿನಿಯರಂ ಜಯಿಸುವ॥
ವರಮನೋರಥದೊಳೈದುವಕಾಮಿನಿಯರೀಗ।
ನರನ ಸಂಗರಕೆ ಪೊಂದೇರ್ಗಳನಡರ್ದು ಬರು।
ತಿರೆ ಚಿತ್ರಮೆಂದು ಸಲೆ ನೋಡುತಿರ್ದರು ಸಕಲಪರಿವಾರದೊಳ್ ವೀರರು॥೬॥
ಪ್ರತಿಪದಾರ್ಥ :- ಸ್ಫುರತ್= ಪ್ರಕಾಶಿಸುವ, ಉತ್= ಯೋಗ್ಯಮಾದ, ಕಟಾಕ್ಷದಿಂ= ಕೊನೆಗಣ್ಣಿನ ವೀಕ್ಷಣೆಯಿಂದಲೂ,ಲಲಿತ= ಮೃದುವಾದ, ಊರು=ತೊಡೆಗಳ, ಯುಗ್ಮದಿಂ= ಜೊತೆಯಿಂದಲೂ, ಗುರು= ದಪ್ಪವಾದ, ಪಯೋಧರ= ಕುಚಗಳಿಂದ, ವಿಜಿತ= ಗೆಲ್ಲಲ್ಪಟ್ಟ, ಚಕ್ರ= ದಂಪತಿಪಕ್ಷಿಗಳ, ಶೋಭಿತದಿಂದ= ಕಾಂತಿಯಿಂದಲೂ, ಪರಿಲುಳಿತ= ಸುತ್ತಲೂ ಓಡಿಯಾಡುವ, ಚಾಪಲತೆಯಿಂ = ಚಂಚಲತ್ವದಿಂದಲೂ, ಪ್ರಣಯ= ಪ್ರೀತಿಯಿಂದುಂಟಾದ,ಕಲಹದೊಳ್= ವ್ಯಾಜ್ಯದಲ್ಲಿ,ಅಗಲ್ದು= ಬೇರೆ- ಯಾದ, ಇನಿಯರಂ= ವಲ್ಲಭರನ್ನು, ಜಯಿಸಿ= ಗೆದ್ದು, ವರ=ಯೋಗ್ಯವಾದ, ಮನೋರಥದೊಳು= ಮನಸ್ಸಿನ ಅಭಿಪ್ರಾ-
ಯದಿಂದ, ಐದುವ= ಬರುತ್ತಲಿರುವ, ಕಾಮಿನಿಯರು= ಸ್ತ್ರೀಯರು, ಈ ನರನ= ಈ ಪಾರ್ಥನ, ಸಂಗರಕೆ= ಕಾಳಗಕ್ಕಾಗಿ, ಪೊಂದೇರ್ಗಳನು= ಚಿನ್ನದಿಂದ ನಿರ್ಮಿತವಾದ ವರೂಥಗಳನ್ನು, ಅಡರ್ದು=ಹತ್ತಿಕೊಂಡು, ಬರುತಿರೆ= ಬರುತ್ತಿರಲಾಗಿ, ಸಕಲ= ಎಲ್ಲಾ, ಪರಿವಾರದೊಳ್= ಸಮೂಹದವರಲ್ಲಿ, ವೀರರು= ಕಲಿಗಳು, ಚಿತ್ರಂ ಎಂದು= ಸೋಜಿಗ ಎಂಬುದಾಗಿ, ಸಲೆ= ಬಹಳವಾಗಿ, ನೋಡುತ್ತಿರ್ದರ್= ನಿರೀಕ್ಷಿಸುತ್ತಿದ್ದರು.
ಅ॥ವಿ॥ ಲಲಿತವಾದ+ ಊರು= ಲಲಿತೋರು( ವಿ. ಪೂ. ಕ. ), ಲಲಿತ+ಊರು= ಲಲಿತೋರು( ಗು. ಸಂ ), ಗುರು= ದೊಡ್ಡದು, ಬೃಹಸ್ಪತಿ, ಗುರುವರ್ಣ= ವಿದ್ಯಾಬೋಧಕ, ಪಯೋಧರ= ಸ್ತನ, ಮೇಘ, ಪಯ-ಹಾಲನ್ನು, ಧರ= ಧರಿಸಿರು- ವುದು( ಸ್ತನ) ಪಯ-ನೀರನ್ನು, ಧರ=ಹೊತ್ತಿರುವುದು(ಮೇಘ)
ತಾತ್ಪರ್ಯ:- ಮತ್ತು ಹೊಳೆಯುತ್ತಿರುವ ಯೋಗ್ಯಮಾದ, ಕಡೆಗಣ್ಣಿನ ವೀಕ್ಷಣೆಯಿಂದಲೂ, ಕದಳೀಸ್ತಂಭಗಳಿಗೆ ಸದೃಶಮಾದ ತೊಡೆಗಳ ಯುಗ್ಮದಿಂದಲೂ, ಗಾತ್ರವಾದ ಪಯೋಧರಗಳಿಂದ ಜಯಿಸಿದ ಚಕ್ರವಾಕಪಕ್ಷಿಗಳ ಪ್ರಕಾಶದಿಂದಲೂ, ಉಲಿದಾ-
ದಾಡುವ ಚಂಚಲತ್ವದಿಂದಲೂ, ಪ್ರೀತಿಯಿಂದುಂಟಾದ ಕಲಹದಲ್ಲಿ ಅಗಲಿದ ವಲ್ಲಭನನ್ನು ಜಯಿಸಿದ ಶ್ರೇಷ್ಠವಾದ ಮನೋಭಿಪ್ರಾಯಗಳಿಂದ ಬರುವ ಸ್ತ್ರೀಯರು, ಅರ್ಜುನನಲ್ಲಿ ಯುದ್ಧಕ್ಕೆ ಸ್ವರ್ಣವಿಕಾರವಾದ ವರೂಥವನ್ನು ಹತ್ತಿಕೊಂಡು ಬರುತ್ತಿರಲು, ಸಮಸ್ತ ಪರಿವಾರದ ವೀರರು ಶಹಬಾಸ್, ಆಶ್ಚರ್ಯವೆಂದು ಚನ್ನಾಗಿ ನೋಡುತ್ತಿದ್ದರು.
ಚಂಚಲಾಕ್ಷಿಯರ ತಳತಳಿಪ ಕಡೆಗಣ್ಣ ಕುಡಿ।
ಮಿಂಚವರಡರ್ದ ತೇಜಿಗಳ ದೂವಾಳಿಯಂ।
ಮುಂಚಿದುವುನಳಿತೋಳ್ಗಳಿಂ ಜಡಿದು ಝಳಪಿಸುವ ಕೈದುಗಳ ದೀಧಿತಿಗಳು॥
ಹೊಂಚಿದುವು ವಜ್ರಮಣಿಭೂಷಣದ ಕಾಂತಿಯಂ।
ಪಂಚಬಾಣ ಪ್ರಯೋಗದೊಳನೇಕಾಸ್ತ್ರ ಪ್ರ।
ಪಂಚವಡಗಿತ್ತೆಸೆವ ಸಿಂಗಾಡಿಗಳನವರ ಪುರ್ಬಿನ ಗಾಡಿಗಳ್ ಮಿಕ್ಕುವು॥೭॥
ಪ್ರತಿಪದಾರ್ಥ :- ಚಂಚಲ= ಚಪಲವಾದ, ಅಕ್ಷಿಯರ= ನೇತ್ರಗಳುಳ್ಳ ಸ್ತ್ರೀಯರ, ಥಳಥಳಿಪ= ಹೊಳಹೊಳೆವ, ಕಡೆಗಣ್ಣ= ನೇತ್ರದ ಕೊನೆಯ, ಕುಡಿಮಿಂಚುಗಳು= ಹೊಳಪಿಗೆ ಸಮಾನವಾದ ಕಾಂತಿಯ ಕೊನೆಗಳು, ಅಡರ್ದು= ಏರಿ, ತೇಜಿಗಳ= ತುರಗಗಳ, ದುವ್ವಾಳಿಯಂ= ಮೇಲಕ್ಕೆ ಎಗರಿಸೋಣವನ್ನು, ಮಿಂಚಿದುವು= ಅತಿಕ್ರಮಿಸಿದುವು(ಎಂದರೆ ಆ ಸ್ತ್ರೀಯರ ಕಡೆ =ಗಣ್ಣಿನ ನೋಟವು ತುರಗದ ವೇಗಕ್ಕಿಂತಲೂ ಹೆಚ್ಚಾಗಿತ್ತೆಂಬ ಅಭಿಪ್ರಾಯ)ನಳಿ= ತಾವರೆಯ ಬಳ್ಳಿಯ ಹಾಗೆ ಕೋಮಲ-
ವಾದ, ತೋಳ್ಗಳಿಂ= ಬಾಹುಯುಗ್ಮಗಳಿಂದ, ಜಡಿದು= ಶಕ್ತಿಯಿಂದ ಗ್ರಹಿಸಿ, ಝಳಪಿಸುವ = ಅಲ್ಲಾಡಿಸುವ, ಕೈದುಗಳ = ಕತ್ತಿ ಮೊದಲಾದ ಆಯುಧಗಳ, ದೀಧಿತಿಗಳು= ಪ್ರಕಾಶಗಳು, ವಜ್ರಮಣಿ= ರತ್ನಮಣಿಗಳಿಂದವ್ಯಾಪ್ತವಾದ, ಭೂಷಣದ= ಆಭರಣಗಳು, ಕಾಂತಿಯಂ= ಪ್ರಕಾಶವನ್ನು, ಹೊಂಚಿದುವು= ಜಯಿಸಲು ಮರೆಮಾಡಿಕೊಂಡಿದ್ದವು, ನೈಕ=ನಾನಾಬಗೆ-
ಗಳಾದ,(ಅಧಿಕಗಳಾದ) ಅಸ್ತ್ರಪ್ರಪಂಚ= ಅಸ್ತ್ರ(ಬಾಣಗಳ)ಸಮೂಹದಮಯವು, ಪಂಚಬಾಣನ= ಮದನನ, ಪ್ರಯೋಗದೊಳು= ಉಪಯೋಗಿಸೋಣದರಲ್ಲಿಯೇ ( ಪಂಚಬಾಣ= ಐದು ಬಾಣಗಳು) ಅಡಗಿತು= ಮಗ್ನವಾಯಿತು, ಎಸೆವ= ಹೊಳೆಯುವ, ಸಿಂಗಾಡಿಗಳು= ಚಾಪಗಳನ್ನು, ಅವರ= ಆ ಸ್ತ್ರೀಯರ, ಪುರ್ಬ್ಬಿನ= ಹುಬ್ಬುಗಳ, ಗಾಡಿಗಳ್= ಕಾಂತ್ಯತಿಶಯಾದಿಗಳು, ಮಿಕ್ಕುವು= ಹೆಚ್ಚಾದ್ದೆಂಬುದಾಗಿ,ಉಳಿದವು.
ಅ॥ವಿ॥ ಚಂಚಲವಾದ+ ಅಕ್ಷಿಯುಳ್ಳವರು= ಚಂಚಲಾಕ್ಷಿಯರ್( ಬ. ಸ)ಕಡೆ+ಕಣ್= ಕಡೆಗಣ್( ಗ ಕಾರಾದೇಶ ಸಂಧಿ) (ಪಂಚಬಾಣಗಳು= ಅವರಿಂದ, ಅಶೋಕ, ಚೂತ, ನೀಲೋತ್ಪಲ, ನವಮಲ್ಲಿಕ), ಅರವಿಂದದಂತೆ+ ವದನ ಉಳ್ಳವರು= ಅರವಿಂದ ವದನೆಯರು( ಉ. ಪೂ. ಬ. ಸ.)
ತಾತ್ಪರ್ಯ:- ಆಗ ಚಂಚಲವಾದ ನೇತ್ರಗಳುಳ್ಳ, ಸ್ತ್ರೀಯರ, ಅತ್ಯಂತವಾಗಿ ಪ್ರಕಾಶಿಸುವ, ನೇತ್ರಾಗ್ರದ,ಮಿಂಚಿಗೆ ಸಮಾನವಾದ ಕಾಂತಿಯಶಕುಡಿಗಳು, ಕುದುರೆಯ ವೇಗಕ್ಕಿಂತಲೂ ಹೆಚ್ಚಾಗಿ ವಿಸ್ತರಿಸುತ್ತಿತ್ತು. ಕಮಲದ ನಾಳದಂತೆ ಕೋಮಲವಾದ ಬಾಹುಗಳಿಂದ ಅಲೂಲಾಡಿಸುವ, ಕತ್ತಿ ಮೊದಲಾದ ಆಯುಧಗಳ ಕಾಂತಿಗಳು ವಜ್ರಖಚಿತವಾದ ಆಭರಣಗಳ ಕಾಂತಿಯನ್ನು ತಿರಸ್ಕರುಸುವಂತೆ ಪ್ರಜ್ವಲಿಸುತ್ತಿದ್ದವು, ಅನೇಕ ವಿಧವಾದ ಅಸ್ತ್ರ ಸಮೂಹದ, ಪೆರ್ಮೆಯು ಮನ್ಮಥನ ಪ್ರಯೋಗದಲ್ಲಿಯೇ ಆ ದೃಶ್ಯವಾಯಿತು. (ಐದು ಬಾಣಗಳ ಪ್ರಯೋಗದಲ್ಲಿಯೇ) ಪ್ರಕಾಶಿಸುವ ಬಿಲ್ಲುಗಳನ್ನು ಆ ಅಂಗನೆಯರ ಪುರ್ಬುಗಳ ಸೌಂದರ್ಯವನ್ನು ಮೀರಿಸಿದವು( ಎಂದರೆ ಆ ಸ್ತ್ರೀಯರು ಅಷ್ಟು ಸೌಂದರ್ಯವತಿಯರಾಗಿದ್ದರು
ಲೀಲೆ ಮಿಗೆ ಪೆಣ್ದಳಂ ಬಂದು ವಿಜಯನ ಪಡೆಯ।
ಮೇಲೆ ಬಿದ್ದುದು ಕರಿ ತುರಗ ರಥ ಪದಾತಿಗಳ।
ಸಾಲೆಸೆಯೆ ಸಂದಣಿಸಿ ನಾನಾಪ್ರಕಾರದಿಂ ಕೈದುಗಳ ಮಳೆಗರೆಯುತೆ॥
ಬಾಲಾರ್ಕಬಿಂಬಮಂ ಶಶಿಮಂಡಲಮುಮೇಕ।
ಕಾಲದೊಳ್ ಮೂಡಿ ಬರ್ಪಂತೆ ಪೊಂದೇರೊಳ್ ಪ್ರ।
ಮೀಳೆ ಮುಖಕಾಂತಿ ಕಳಕಳಿಸೆನಡೆತರುತಿರ್ದಳರಸುಮೋಹರದ ನಡುವೆ॥೮॥
ಪ್ರತಿಪದಾರ್ಥ:- ಲೀಲೆ= ವೈಭವವು, ಮಿಗೆ= ಹೆಚ್ಚಾಗುವಂತೆ, ಪೆಣ್ದಳಂ= ಸ್ತ್ರೀಸೇನೆಯು, ಬಂದು= ಬಂದುದಾಗಿ, ವಿಜಯನ= ಪಾರ್ಥನ, ಪಡೆಯಮೇಲೆ= ಸೇನೆಯಮೇಲೆ, ಬಿದ್ದುದು= ನುಗ್ಗಿತು, (ಬಿತ್ತು) ಕರಿ=ಆನೆ, ತುರಗ=ಅಶ್ವ, ರಥ=ವರೂಥ, ಪದಾತಿಗಳ= ಕಾಲ್ಬಲಗಳ, ಸಾಲು= ಕ್ರಮವು(ಪಙ್ತಿಯು) ಎಸೆಯೆ= ಹೊಳೆಯಲು, ಸಂದಣಿಸಿ = ಗುಂಪಾಗಿ ಸೇರಿ, ನಾನಾಪ್ರಕಾರದಿಂ = ಅನೇಕವಿಧಗಳಿಂದ, ಕೈದುಗಳ= ಆಯುಧಗಳ, ಮಳೆ= ವೃಷ್ಟಿಯನ್ನು, ಗರೆವುತ= ಸುರಿಸುತ್ತ, ಬಾಲ= ಎಳೆಯದಾದ, ಅರ್ಕ= ಸೂರ್ಯನ, ಬಿಂಬಮಂ= ಬಿಂಬವು( ಎಳೇ ಸೂರ್ಯಬಿಂಬವು) ಶಶಿಮಂಡಲಮುಂ= ಚಂದ್ರಬಿಂಬವೂ, ಏಕಕಾಲದೊಳ್= ಒಂದೇ ಕಾಲದಲ್ಲಿಯೇ, ಮೂಡಿ= ಉತ್ಪತ್ತಿಯಾಗಿ,ಬರ್ಪಂತೆ= ಬರುವ ರೀತಿಯಿಂದ,ಪೊಂದೇರೊಳ್= ಚಿನ್ನದಿಂದ ನಿರ್ಮಿತವಾದ ವರೂಥದಲ್ಲಿ, ಪ್ರಮೀಳೆಯ= ಪ್ರಮೀಳೆಯೆಂಬ ಅರಸಿಯ, ಮುಖಕಾಂತಿ = ಮುಖದ ಹೊಳಪು, ಕಳಕಳಿಸೆ= ಅತ್ಯಂತವಾಗಿ ಶೋಭಿಸುತ್ತಿರಲು,ಮೋಹರದ= ಸೇನೆಯ, ನಡುವೆ= ಮಧ್ಯಭಾಗದಲ್ಲಿ, ಅರಸು=ಪ್ರಭು(ದೊರೆ)ವಾದ ಪ್ರಮೀಳೆಯು, ನಡೆತರುತ= ಆಗಮಿಸುತ್ತ, ಇರ್ದಳು=ಇರುತ್ತಿರ್ದಳು.
ಅ॥ ವಿ॥ ಪೆಣ್ಣಿನ+ದಳ= ಪೆಣ್ದಳ(ಷ. ತ.) ವಿಜಯ=ಅರ್ಜುನ,ಜಯಶಾಲಿ, ವಿಜಯಸಂವತ್ಸರ, ಕರ=ಸೊಂಡಿಲು,ಅ ಅದುಳ್ಳದ್ದು ಕರಿ,(ಕರಿ=ಆನೆ, ಕಪ್ಪು), ಪೊನ್ನಿನ+ತೇರ್= ಪೊಂದೇರ್( ಷ. ತ.) ಬಾಲನಾದ +ಅರ್ಕ= ಬಾಲಾರ್ಕ (ವಿ. ಪೂ. ಕ.) ಅರ್ಕ=ಸೂರ್ಯ, ಎಕ್ಕದ ಗಿಡ.
ತಾತ್ಪರ್ಯ:- ಆ ಬಳಿಕ ವೈಭವವು ಅಧಿಕವಾಗುವಂತೆ ಸ್ತ್ರೀ ಬಲವು ಬಂದು ಅರ್ಜುನನ ಸೇನೆಯ ಮೇಲೆ ಬಿತ್ತು,ಮತ್ತು ಹಸ್ತ್ಯಶ್ವರಥಪದಾತಿಗಳಿಂದಲೂ ಅನೇಕ ಬಗೆಗಳಾದ ಆಯುಧವಿಶೇಷಗಳಿಂದಲೂ, ಸಂದಣಿಸಿ ಬಾಣವೃಷ್ಟಿಯನ್ನು ಕರೆಯುತ್ತಬಾಲಾರ್ಕ ಬಿಂಬವೂ, ಇಂದು ಬಿಂಬವೂ ಏಕಕಾಲದಲ್ಲಿ ಉದಯಿಸುವಂತೆ(ಹುಟ್ಟಿಬರುವಂತೆ) ಸ್ವರ್ಣ ರಥದಲ್ಲಿ
ಪ್ರಮೀಳೆ ಎಂಬರಸಿಯ ವದನಕಾಂತಿಯು ಪ್ರಕಾಶಿಸುತ್ತಿರಲು, ಸೈನ್ಯದ ಮಧ್ಯಪ್ರದೇಶದಲ್ಲಿ ಆ ರಾಜ್ಞಿಯಾದ ಪ್ರಮೀಳೆಯು ಬರುತ್ತಿದ್ದಳು.
ಬಳಿಕಾ ಪ್ರಮೀಳೆ ಪಾರ್ಥನ ಮೋಹರಕೆ ತನ್ನ।
ದಳಸಹಿತ ನಡೆತಂದು ಕಂಡಳುನ್ನತ ಕಪಿಯ।
ಪಳವಿಗೆಯ ಮಣಿರಥದೊಳೊಪ್ಪುವ ಕಿರೀಟಿಯಂ ನಗುತೆ ಮಾತಾಡಿಸಿದಳು॥
ಫಲುಗುಣಂ ನೀನೆ ನಿನ್ನಶ್ವಮಂ ತಡೆದೆನಾಂ।
ಚಲವೊ ವಿನಯವೊ ಬಿಡಿಸಿಕೊಳ್ವ ಬಗೆಯಾವುದಿ।
ನನ್ನಳವಿಯೊಳ್ ಕಾಣಬಹುದೆನುತೆಬಿಲ್ತೆಗೆದು ಜೇಗೈಯ್ಯೆ ನರನಿಂತೆಂದನು॥೯॥
ಪ್ರತಿಪದಾರ್ಥ :- ಆ ಬಳಿಕ = ಅನಂತರದಲ್ಲಿ, ಆ ಪ್ರಮೀಳೆಯೆಂಬ ಅರಸಿಯು, ಪಾರ್ಥನ= ಫಲುಗುಣನ, ಮೋಹರಕ್ಕೆ= ಸೇನೆಗೆ, ತನ್ನ=ತನ್ನಯ, ದಳಸಹಿತ= ಸೇನೆಸಹಿತ, ನಡೆತಂದು= ಬಂದವಳಾಗಿ, ಉನ್ನತ=ಎತ್ತರವಾದ, ಕಪಿ= ಆಂಜನೇಯ-
ನೇಯನೇ, ಪಳವಿಗೆಯ = ಧ್ವಜದಲ್ಲಿರುವ,ಮಣಿವರೂಥದೊಳು= ರತ್ನದಿಂದ ನಿರ್ಮಿತವಾದ ರಥದಲ್ಲಿ, ಒಪ್ಪುವ=ಹೊಂದಿ
-ಕೆಯಾಗಿರುವ,ಕಿರೀಟಿಯಂ= ಪಾರ್ಥನನ್ನು, ಕಂಡಳು= ಈಕ್ಷಿಸಿದಳು, ನಗುತ= ನಗುತ್ತ, ಮಾತಾಡಿಸಿದಳು, ಫಲುಗುಣಂ= ಧನಂಜಯನು, ನೀನೆ= ನೀನೆಯಷ್ಟೆ, ಆಂ=ನಾನು, ನಿನ್ನ=ನಿನ್ನಯ, ಅಶ್ವಮಂ= ತುರಗವನ್ನು, ತಡೆದೆನು= ಬಂಧಿಸಿದೆನು, ಛಲವೊ ನನ್ನಲ್ಲಿ ಕಾಳಗವಾಡಬೇಕೆಂಬಶಪಥವೇನಾದರೂ ಇದೆಯೇ? ವೆನಯವೋ= ನನ್ನ ಮಾತಿಗೆ ಒಪ್ಪಿಕೊಂಡು ವಿಧೇಯತೆಯಿಂದ ಇರೋಣವೋ, ಬಿಡಿಸಿಕೊಂಬ= ಕುದುರೆಯನ್ನು ಬಿಡಿಸಿಕೊಂಡು ಹೋಗುವಂತಹ, ಬಗೆ= ಅಭಿಪ್ರಾಯವೊ? ಯಾವೈದು= ಆವ ಬಗೆಯಾದುದು, ಇನ್ನು= ಇನ್ನು ಮುಂದೆ, ಅಳವಿಯೊಳ್= ಯುದ್ಧದಲ್ಲಿ (ಪರಾಕ್ರಮದಲ್ಲಿ) ಕಾಣಬಹುದು= ಈಕ್ಷಿಸಬಹುದು, ಎನುತ= ಎಂಬುದಾಗಿ ಹೇಳುತ್ತ, ಬಿಲ್ದೆಗೆದು = ಚಾಪವನ್ನು ಈಚೆಗೆ ತೆಗೆದು, ಜೇಗೈಯೆ= ಟಂಕಾರವನ್ನು ಮಾಡಲು, ನರನು= ಪಾರ್ಥನು, ಇಂತೆಂದನು= ಈ ರೀತಿಯಾಗಿ ಹೇಳಿದನು.
ಅ॥ವಿ॥ ಫಲುಗುನೀ ನಕ್ಷತ್ರದಲ್ಲಿ ಹುಟ್ಟಿದವನು =ಫಲ್ಗುಣ, ತುರ=ಶೀಘ್ರವಾಗಿ, ಗ= ಗಮಿಸುವುದು, ಇಂತು+ ಎಂದು= ಇಂತೆಂದು(ಉ ಕಾರ ಲೋಪ ಸಂಧಿ) ಬಳಿಕ=ಕಾಲವಾಚಕಾವ್ಯಯ, ದಳ=ಸೈನ್ಯ, ಬೇಳೆ, ಶಶಿಯ+ ಮಂಡಲ= ಶಶಿಮಂಡಲ
(ಷ. ತ. ) ಪಂಚ= ಐದಾದ, ಬಾಣ=ಬಾಣಗಳುಳ್ಳವನು(ಮನ್ಮಥ) ಪಂಚಬಾಣಂಗಳ ಸಮಾಹಾರ,ಪಂಚಬಾಣ ( ದ್ವಿ.ಸಮಾ.
ತಾತ್ಪರ್ಯ:-ಬಳಿಕ ಪ್ರಮೀಳೆಯು ಪಾರ್ಥನ ಸೇನೆಗೆ(ಸೈನ್ಯಕ್ಕೆ ಸರಿಯಾಗಿ),ತನ್ನ ಸೇನೆಯನ್ನು ತಂದು, ಉದ್ದವಾದ ಹನುಮಧ್ವಜಾನ್ವಿತವಾದ ಮಣಿರಥದಲ್ಲಿ ಒಪ್ಪವಾಗಿ ಕುಳಿತಿರುವ ಕಿರೀಟಿಯನ್ನು ಕಂಡು ಹರ್ಷಿಸುತ್ತ ಅರ್ಜುನನೆಂಬಾತನು
ನೀನೇನೊ, ನಾನಾದರೊ ನಿನ್ನ ಯಜ್ಞಾಶ್ವವನ್ನು ಹಿಡಿದು ಕಟ್ಟಿಬಿಟ್ಟೆನು. ಆದರೆ ನಿನಗೆ ನನ್ನಲ್ಲಿ ಯೈದ್ಧಮಾಡಬೇಕೆಂಬ ಹಟವೇನಾದರೂ ಇದೆಯೋ? ಇಲ್ಲವೆಸಮಾಧಾನವಾಗಿ ನನ್ನ ಅಭಿಪ್ರಾಯಾನುಸಾರವಾಗಿಬರುತ್ತೀಯೋ? ತುರಗವನ್ನು ಬಿಡಿಸಿಕೊಂಡು ಹೋಗುವ ಯಾವ ಮಾರ್ಗವನ್ನು ಯೋಚಿಸಿರುತ್ತಿ? ನನ್ನ ಪರಾಕ್ರಮವನ್ನಾದರೂ ಪರೀಕ್ಷಿಸೆಂದು ಧನುಷ್ಟಂ-
ಕಾರಮಾಡಲು.
ನಾರಿಯೊಳ್ ಕಾಳಗವೆ ತನಗಕಟ ಕಡುಗಿ ಮದ।
ನಾರಿಯೊಳ್ ಕಾದಿದುಗ್ಗಡದ ನಿಜಕಾರ್ಮುಖದ।
ನಾರಿಯೊಳ್ ಕಣೆಯಂ ತುಡುವೆನೆಂತೊ ಶಿವಶಿವಾಪರ್ಯಂಕಮಂ ಸಾರ್ದೊಡೆ॥
ನೀರಜಶರೃಹವದೊಳೊದಗುವೊಡೆ ಕಡುಚದುರೆ।
ನೀ ರಣದೊಳಾಳ್ತನವನೆನ್ನೊಡನೆ ತೋರಿದೊಡೆ।
ನೀರಸವೆನಿಸದೆ ಪೇಳೆಂದು ಕುಂತೀಸುತಂ ನುಡಿದೊಡವಳಿಂತೆಂದಳು॥೧೦॥
ಪ್ರತಿಪದಾರ್ಥ :- ತನಗೆ= ಅರ್ಜುನನಾದ ನನಗೆ, (ಗಂಡಸಾದ ನನಗೆ) ನಾರಿಯೋಳ್= ಅಂಗನೆಯೊಂದಿಗೆ, ಕಾಳಗವೇ= ಜಗಳವೆ? ( ಹೆಂಗಸಿನ ಸಂಗಡ ಯುದ್ಧವು ಯೋಗ್ಯವೇ) ಅಕಟಕಟ= ಅಯ್ಯೋ, ಕಡು=ಅಧಿಕವಾಗಿ ಬಿಗಿದಿರುವ (ಕೊಬ್ಬಿರುವ), ಮದನಾರಿಯೋಳ್= ಮನಸಿಜನನ್ನು ಉರಿಹಿ ಬೂದಿಮಾಡಿದವನಲ್ಲಿ, (ಹಗೆಯೆಂದು ಹೆಸರುಳ್ಳವನ ಸಂಗಡ),ಕಾದಿ= ಜಗಳವಾಡಿ, ಉಗ್ಗಡದ= ಹೆಚ್ಚಾದ, ನಿಜ=ತನ್ನಯ, ಕಾರ್ಮುಖದನಾರಿಯೊಳ್= ಬಿಲ್ಲಿನ ಸಿಂಜನಿಯಲ್ಲಿ, ಕಣೆಯಂ= ಶರವನ್ನು, ಎಂತು= ಯಾವರೀತಿಯಾಗಿ, ತುಡುವೆನು=ಬಿಲ್ಲಿನಲ್ಲಿ ಸೇರಿಸುವೆನು, ಶಿಶಿವ= ಈಶ್ವರ, ಈಶ್ವರ, ಪರ್ಯಂಕಮಂ= ಮಂಚವನ್ನು ಎಂದರೆ ಹಾಸಿಗೆಯನ್ನು,ಸಾರ್ದೊಡೆ= ಹೊಂದಿದರೆ, ನೀರಜ= ತಾವರೆಯೇ, ಶರ= ಬಾಣಗಳುಳ್ಳ ಮನ್ಮಥನ, ಆಹವದೊಳು= ಸಂಭೋಗಮೆಂಬ ಕಾಳಗದಲ್ಲಿ, ಒದಗುವಡೆ= ಸಂಧಿಸಬೇಕಾಗಿದ್ದ ಪಕ್ಷದಲ್ಲಿ, ಕಡು=ಹೆಚ್ಚಾಗಿ, ಚದುರೆ= ಪ್ರೌಢಿಮೆಯುಳ್ಳವಳು, ನೀನು=ಈ ರೀತಿ ಅಬಲೆಯಾದ ನೀನು, ರಣದೋಳ್= ಆಹವದಲ್ಲಿ, ಆಳ್ತನವಂ= ಪರಾಕ್ರಮವನ್ನು, ಎನ್ನೊಡನೆ= ನನ್ನ ಎದುರಿನಲ್ಲಿ,ತೋರಿದೊಡೆ= ಕಾಣಿಸುವವಳಾದರೆ, (ತೋರ್ಪಡಿಸುವವ-
ಳಾದರೆ) ನೀರಸವು= ಸಾರವಿಲ್ಲದ್ದು, (ಎಂದು) ಎನಿಸದೆ= ಎನ್ನಿಸಿಕೊಳ್ಳುವುದಿಲ್ಲವೆ? ಪೇಳೆಂದು= ಹೇಳು ಎಂಬುದಾಗಿ,
ಕುಂತೀಸುತಂ= ಪಾರ್ಥನು, ನುಡಿದೊಡೆ= ಹೇಳಲಾಗಿ, ಅವಳು= ಆಕೆಯು(ಆ ಪ್ರಮೀಳೆಯು), ಇಂತೆಂದಳು= ಈ ರೀತಿಯಾಗಿ ಪೇಳಿದಳು.
ಅ॥ವಿ॥ ನಾರಿ= ಹೆಂಗಸು, ಹೆದೆ,. ಮದನಾರಿ= ಮನ್ಮಥ, ಮದವುಳ್ಳ ಸ್ತ್ರೀಯು, ನೀರ=ಉದಕದಲ್ಲಿ, ಜ= ಹುಟ್ಟಿದ್ದು ಕಮಲ
(ಕಾಮನ ಬಾಣ),ಕುಂತಿಯ+ಸುತ= ಕುಂತೀಸುತ( ಷ. ತ. )
ತಾತ್ಪರ್ಯ:- ಆ ಪ್ರಮೀಳೆಯ ಮಾತನ್ನಾಲಿಸಿದ ಪಾರ್ಥನು ತನಗೆ ಹೆಂಗಸಿನ ಸಂಗಡ ಯುದ್ಧವೆ? ಆಕಟಕಟ,ಅತಿಯಾಗಿ ಕಾದಿ ಮದನನನ್ನ ಭಸ್ಮಮಾಡಿದವನಿಗೆ ಶತ್ರುವೆಂದು ಹೆಸರಾದ ಈಶ್ವರನ ಸಂಗಡ ಯುದ್ಧ ಮಾಡಿದ ನಾನು ಈ ನಾರಿಯ ಎದುರಾಗಿ ನಿಂತು ಬಿಲ್ಲಿನಲ್ಲಿ ಶರಸಂಧಾನವನ್ನು ಮಾಡುವಂತಾಯಿತೆ? ಹರಹರ! ಮಂಚವನ್ನು ಸೇರಿದರೆ, ಕಮಲ ಬಾಣನ ಕೇಳಿಯಲ್ಲಿ ಯುದ್ಧ ಕೊಡುವುದಕ್ಕೆ ಅತ್ಯಂತವಾದ ಚಮತ್ಕಾರ ಚಿಂತಾಮಣಿಯಾಗಿರುತ್ತಿ
ಪರಿಯಂಕಮಂ ಸಾರ್ದೊಡಂಗಜಾಹವದೊಳಗ।
ಪರಿಮಿತಸುಖಾವಹದ ಸುರತ ತಂತ್ರದ ಕಲೆಯ।
ಪರಿವಿಡಿಗಳಂ ತೋರಿಸುವೆನೀಗಳೆನ್ನಂ ವರಿಸುವುದಲ್ಲದೊಡೆ ನಿನ್ನ॥
ತುರಗಮಂ ಬಿಡುವುದಿಲ್ಲದಟಿಂದೆ ಕಾದುವಾ।
ತುರಮುಳ್ಳೊಡಿದಿರಾಗಿ ನೋಡು ಸಾಕೆನ್ನೊಳೆನು।
ತುರವಣಿಸುತವಳೆಚ್ಚೊಡರ್ಜುನಂ ಸೈರಿಸುತ್ತೆಳನಗೆಯೊಳಿಂತೆಂದನು॥೧೧॥
ಪ್ರತಿಪದಾರ್ಥ :- ಎಲಾ= ಎಲೈ ಅರ್ಜುನ, ಈಗಳೇ= ಕೂಡಲೆ,ಎನ್ನಂ= ನನ್ನನ್ನು, (ಅರಸಿಯಾದ ನನ್ನನ್ನು) ವರಿಸಿದೊಡೆ= ಮದುವೆಯನ್ನು ಮಾಡಿಕೊಂಡರೆ, (ಸ್ವಯಂವರಮಾಡಿಕೊಂಡರೆ) ಪರ್ಯಂಕಮಂ = ಮಂಚವನ್ನು,(ಹಾಸಿಗೆಯನ್ನು) ಸಾರ್ದೊಡೆ= ಸೇರಲು, ಅಂಗಜಾಹವದೊಳಗೆ= ಮದನವಿಜಯದಲ್ಲಿ, ಅಪರಿಮಿತ= ಬಹಳ, ಸುಖಾವಹದ= ಸೌಖ್ಯವ-
ನ್ನುಂಟುಮಾಡುವ, ಸುರತ= ಸಂಭೋಗಸುಖದ, ತಂತ್ರದ= ಯುಕ್ತಿಯ, ಕಲೆಯ=ವಿದ್ಯದ, ಪರಿವಿಡಿಗಳಂ= ಪ್ರತಿಕ್ರಮವ-
ನ್ನೂ, ತೋರಿಸುವೆನು= ತೋರಿಸುತ್ತೇನೆ, ಅಲ್ಲದೊಡೆ= ನೀನು ನನ್ನನ್ನು ವರಿಸದಿದ್ದರೆ,ನಿನ್ನ= ನಿನ್ನಯ, ತುರಗಮಂ= ಅಶ್ವವನ್ನು, ಬಿಡುವುದಿಲ್ಲ= ಬಿಟ್ಟುಕೊಡುವುದಿಲ್ಲ, ಅಧಟಿಂದ= ಪರಾಕ್ರಮಾತಿಶಯದಿಂದ, ಕಾದುವ= ನನ್ನಲ್ಲಿ ಜಗಳವಾ-
ಡುವ, ಆತುರಂ= ಅಭಿಲಾಷೆಯು, ಉಳ್ಳೊಡೆ= ಹೊಂದಿದ್ದ ಪಕ್ಷದಲ್ಲಿ, ಇದಿರಾಗು= ಪ್ರತಿಭಟಿಸಿ ನಿಲ್ಲು, (ನನ್ನ ಸಂಗಡ ಕಾಳಗಕ್ಕೆ ಎದುರು ನಿಂತು ನೋಡು), ಇನ್ನು= ಇಲ್ಲಿಂದ ಮುಂದಕ್ಕೆ,ಎನ್ನೊಳು= ನನ್ನೊಂದಿಗೆ, ಸಾಕು= ಮಾತಾಡುವುದು
ಸಾಕು, ಎನುತ= ಎಂದು ಹೇಳುತ್ತ, ಉರವಣಿಸುತ= ಮೇಲೆ ನುಗ್ಗಿ ಬರುತ್ತ, ಅವಳು=ಆಕೆಯು, ಎಚ್ಚಡೆ= ಬಾಣಪ್ರಯೋಗ ಮಾಡಲು, ಅರ್ಜುನಂ= ಪಾರ್ಥನು, ಸೈರಿಸುತ್ತ= ಸಹಿಸಿಕೊಳ್ಳುತ್ತ, ಎಳೆನಗೆಯೊಳು= ಮಂದಹಾಸದಿಂದ, ಇಂತೆಂದನು= ಹೀಗೆಂದು ಹೇಳಿದನು.
ಅ॥ವಿ॥ ಅಂಗಜಾಹವ= ಮದನವಿಜಯ, ಅಂಗಜನ+ಆಹವ= ಅಂಗಜಾಹವ( ಷ. ತ. ), ಕಲೆ=ಕಾಂತಿ, ವಿದ್ಯ,ಪರ್ಯಂಕ= ಮಂಚ, ಹಾಸಿಗೆ,ಎಳದು+ನಗೆ= ಎಳನಗೆ(ವಿ. ಪೂ. ಕ. )
ತಾತ್ಪರ್ಯ:- ಎಲೈ ಪಾರ್ಥ ! ನೀನು ಈಗಲೇ ನನ್ನನ್ನು ವರಿಸಿದರೆ, ಮದನನ ಕೇಳಿಯಲ್ಲಿ ಅಪರಿಮಿತವಾದರತಿ ಕ್ರೀಡೆಯ ತಂತ್ರದ ವಿದ್ಯೆಯ ನಾನಾ ರೀತಿಗಳನ್ನೂ ತೋರೂಪಡಿಸುತ್ತೇನೆ, ಹಾಗೆ ನನ್ನನ್ನು ಸ್ವಯಂವರ ಮಾಡಿಕೊಳ್ಳದೆ ಹೋದರೆ ನಿನ್ನ ಅಶ್ವವನ್ನು ಎಂದಿಗೂ ಬಿಡುವವಳಲ್ಲ. ಸಾಮರ್ತ್ಯದಿಂದ ಕಾಳಗ ಮಾಡುವ ಯೋಚನೆಯು ಇದ್ದರೆ ಪ್ರತಿಭಟಿಸಿ ನಿಂತು ಪರೀ
-ರೀಕ್ಷಿಸು, ಇನ್ನು ನನ್ನ ಸಂಗಡ ಮಾತಾಡುವುದನ್ನು ಸಾಕು ಮಾಡು ಎಂದು ರೇಗಿ ಮೇಲೆಬಿದ್ದು ಬರುತ್ತಾ,ಬಾಣಪ್ರಯೋಗ ಮಾಡಲು ಅರ್ಜುನನು ಅದನ್ನು ಸಹಿಸಿಕೊಂಡು ಮುಗುಳುನಗೆಯಿಂದ ಹೀಗೆಂದನು.
ವಿಷಯೋಪಭೋಗಮಂ ಬಯಸಿ ನಿನಗಾನೊಲಿಯೆ।
ವಿಷಯೋಗಮಾಗದಿರೂದಪುದೆ ಪೇಳ್ ಪುರುಷರೀ।
ವಿಷಯೋದ್ಭವ ಸ್ತ್ರೀಯರಂ ಬೆರಸಿ ಬಾಳ್ದಪರೆ ಸಾಕದಂತಿರಲಿ ನಿನಗೆ॥
ರುಷಭಾಯಿತದೊಳಾಂತ ಭಟರೊಳ್ ಪಳಂಚುವ ಪ।
ಪರುಷಭಾಷಿತವನಬಲೆ ನಿನ್ನೊಳಾಡುವುದು ಪೌ।
ರೈಷಭಾವಮಲ್ಲ ಬಿಡು ವಾಜಿಯಂ ಪೆಣ್ಗೊಲೆಗಳುಕುವೆನೆಂದಂ ಪಾರ್ಥನು೧೨॥
ಪ್ರತಿಪದಾರ್ಥ :- ವಿಷಯ= ವನಿತಾ ಸಂಬಂಧವಾದ, ಉಪಭೋಗಮಂ= ಸ್ರಕ್ಚಂದನಾದಿ ಸೌಖ್ಯವನ್ನು, ಬಯಸಿ= ಆಶಿಸಿ
( ದಾಹಗೊಂಡು) ಆಂ=ನಾನು, ನಿನಗೆ= ಅರಸಿಯಾದ ನಿನಗೆ, ಒಲಿಯೆ= ವಶನಾಗತಕ್ಕವನಲ್ಲ, ಹಾಗಾದರೆ ವಿಷಯೋಗಂ=
ನಂಜಿನ ಪ್ರಯೋಗವು, ಆಗದಿರ್ದಪುದೆ= ಆಗದೇ ಹೋದೀತೆ,(ಆಗೇ ಆಗುತ್ತೆ) ಪೇಳ್= ಹೇಳುವಳಾಗು, ಪುರುಷರು= ಗಂಡಸರು, ಈ ವಿಷಯ= ಈ ಹೆಣ್ಣು ರಾಜ್ಯದಲ್ಲಿ, ಉದ್ಭವ=ಜನಿಸಿರುವ,ಸ್ತ್ರೀಯರಂ= ವಿಷಧಾರಿಗಳಾದ ಹೆಂಗಸರನ್ನು, ಬೆರಸಿ=ಕಲೆತು,(ಸೇರಿ) ಬಾಳ್ದಪರೆ= ಬದುಕಲಾಪರೆ, (ಎಂದಿಗೂ ಇಲ್ಲ) ಸಾಕು=ಆ ಮಾತು ಬಿಡು, ಅದು=ಆ ವಿಷಯವು,
ಅಂತು= ಹಾಗೆ, ಇರಲಿ= ಇರುತ್ತಿರಲಿ, ನಿನಗೆ= ಪ್ರಮೀಳೆಯಾದ ನಿನಗೆ, ವೃಷಭಾಯತದೊಳು= ಹೋರಿಗಳು ಜಗಳವಾ-
ಡುವ ಕ್ರಮದಿಂದ, ಆಂತ= ಹೊಂದಿದ, ಭಟರೊಳ್=ವೀರರ ಸಂಗಡ, ಪಳಂಚುವ= ಹೆಸರುವಾಸಿಯಾಗಿರುವ, ಪುರುಷ-
ಭಾಷಿತವನು= ಗಂಡಸರು ಆಡುವ ಮಾತನ್ನು, ಅಬಲೆ=ಬಲರಹಿತಳಾದ(ಹೆಂಗಸಾದ) ನಿನ್ನೊಳು= ನಿನ್ನೊಡನೆ, ಆಡುವುದು
= ಯುದ್ಧಮಾಡತಕ್ಕದ್ದು, ಉತ್ಕರ್ಷಭಾವಂ=ಹಿರಿತನವು(ದೊಡ್ಡಸ್ಥಿಕೆಯು, ಅಲ್ಲ=ಆಗಿರುವುದಿಲ್ಲ, ವಾಜಿಯಂ= ಯಜ್ಞಾಶ್ವವನ್ನು, ಬಿಡು= ಬಿಟ್ಟು ಕಳುಹು, ಪೆಣ್ಗೊಲೆಗೆ= ಸ್ತ್ರೀಹತ್ಯೆಗೆ, ಅಳುಕುವೆನು= ಹೆದರುತ್ತೇನೆ,ಎಂದು=ಎಂಬುದಾಗಿ, ಪಾರ್ಥ= ಫಲುಗುಣನು, ಎಂದಂ= ಆಡಿದನು.
ಅ॥ವಿ॥ ವಿಷಯ+ಉಪಭೋಗ= ವಿಷಯೋಪಭೋಗ (ಗುಣ. ಸಂ. ) ವಿಷ=ನಂಜು, ನೀರು, ಭೋಗ=ಸುಖ, ಸರ್ಪದ ಹೆಡೆ, ವೃಷಭದ+ಆಯತ=ವೃಷಭಾಯತ( ಷ. ತ. ) ವಿಷಧರ=ಈಶ್ವರ, ಮೇಘ, ತರಣಿ=ಸೂರ್ಯ,ತರುಣಿ=ಸ್ತ್ರೀ,
ತಾತ್ಪರ್ಯ:- ಆಗ ಅರ್ಜುನನು ಪ್ರಮೀಳೆಯನ್ನು ಕುರಿತು ಸ್ತ್ರೀ ಸಂಬಂಧಮಾದ ಸುಖವನ್ನೇ ಅಪೇಕ್ಷಿಸಿ ನಾನು ನಿನಗೆ ಒಲಿದು ಎಂದಿಗೂ ಸ್ವಾಧೀನವಾಗತಕ್ಕವನಲ್ಲ ಹಾಗಾದರೆ (ಆ ರೀತಿಯಾಗಿನಾನು ನಿನ್ನಲ್ಲಿಒಲಿದರೆ ವಿಷಪ್ರಯೋಗವೇ ಆಗುತ್ತದೆ),ತಪ್ಪುವುದಿಲ್ಲ. ಗಂಡಸರು ಈ ಸ್ತ್ರೀರಾಜ್ಯದಲ್ಲುದ್ಭವಿಸಿರುವ ವಿಷಾಂಗನೆಯರನ್ನು ಬೆರತು ಬದುಕಲಾಪರೆ? ಎಂದಿಗೂ ಬದುಕುವುದಿಲ್ಲ. ಆ ಮಾತು ಹಾಗಿರಲಿ, ನಿನಗೆ ಹೋರಿಗಳಂತೆ ಜಗಳವಾಡುವರೀತಿಯಿಂದ ಕಾದಲು ಸಿದ್ಧ-
ವಾಗಿರುವ ವೀರರಲ್ಲಿ ಪ್ರಸಿದ್ಧಿಯಾಗಿರುವ,ಪುರುಷ ಭಾಷಿತವನ್ನು ಅಬಲೆಯಾದ ನಿನ್ನಲ್ಲಿ ನಾನು ಆಡುವುದು ದೊಡ್ಡಸ್ಥಿ-
ಕೆಯಾದ್ದಲ್ಲ. ತುರಗವನ್ನು ಬಿಟ್ಟು ಕಳುಹು, ನಾನು ಸ್ತ್ರೀಹತ್ಯಾಮಾಡಲಿಕ್ಕಾಗಿ ಬಹುವಾಗಿ ಹೆದರುತ್ತೇನೆ ಎಂದು ಅರ್ಜುನನು
ಹೇಳಿದನು.
ಕಾದಲಂಬಿಂದೆ ಕೊಂದಪೆನೀಗಳಲ್ಲದೊಡೆ।
ಕಾದಲಂ ನೀನಾಗೆ ಸುರತಮೋಹಕೆ ಪ।
ಕ್ಕಾದಲಂಪಿನ ಸೌಖ್ಯಮಂ ತಳೆದ ಬಳಿಕಹುದು ಮೃತಿ ತಪ್ಪದೆಂತುಮಳಿವು॥
ಸಾದರದೊಳೆನ್ನೊಡನೆ ರಮಿಸುವುದು ನಿನಗೆ ಸೊಗ।
ಸಾದರದನನುಕರಿಸು ಮೇಣ್ ಕಲಹಕೃತವೆ ಲೇ।
ಸಾದರದಟಂ ತೋರಿಸೆಂದಾ ಪ್ರಮೀಳೆ ಪಾರ್ಥನ ಮೇಲೆ ಕಣೆಗರೆದಳು॥೧೩॥
ಪ್ರತಿಪದಾರ್ಥ :- ಕಾದಲು=ಎನ್ನೊಡನೆ ಯುದ್ಧಮಾಡಲು, ಅಂಬಿಂದ=ಶರದಿಂದ, ಈಗಳೆ= ಈ ಕ್ಷಣವೇ, ನಿನ್ನಂ= ಪಾರ್ಥನಾದ ನಿನ್ನನು, ಕೊಂದಪೆಂ= ಸಂಹರಿಸುತ್ತೇನೆ, ಅಲ್ಲದೊಡೆ= ಜಗಳವಾಡದಿದ್ದರೆ, ಆಂ=ನಾನು, ನಿನಗಾಗಿ= ನಿನ್ನ ಸಲುವಾಗಿ, ಕಾದಲು= ಮದನಕೇಳಿಯನ್ನೆಸಗಲು, ಪಕ್ಕಾದಳ= ಸಾಮರ್ಥ್ಯವುಳ್ಳವಳು, ಆಂಪಿನ= ಆಲಿಂಗನೆ ಮಾಡಿಕೊ-
ಳ್ಳುವುದರ, ಸೌಖ್ಯಂ= ಭೋಗವನ್ನು ತಳೆದ= ಹೊಂದಿದ, ಬಳಿಕ= ಅನಂತರದಲ್ಲಿ, ಮೃತಿ=ಸಾವು, ಅಹುದು=ಸಂಭವಿಸು-
ತ್ತದೆ, ಎಂತು=ಯಾವರೀತಿಯಾದಾಗ್ಯೂ, ಅಳಿವು= ಮರಣವು, ತಪ್ಪದು= ತಪ್ಪುವುದಿಲ್ಲ, ಸಾದರದೊಳು= ಅಕ್ಕರೆಯಿಂದ,
ಎನ್ನೊಳು= ನನ್ನೊಡನೆ, ರಮಿಸುವುದು= ಕ್ರೀಡೆಯನ್ನೆಸಗುವುದು, ನಿನಗೆ= ಪಾರ್ಥನಾದ ನಿನಗೆ,ಸೊಗಸಾದರೆ= ಸರಿಯಾದ್ದಾಗಿ ತೋರಿಬಂದರೆ, ಅನುಕರಿಸು= ನನ್ನ ಮಾತನ್ನು ಒಪ್ಪುವನಾಗು, ಮೇಣ್= ಮತ್ತೆ, ಕಲಹವೇ= ಕಾಳಗವೇ , ಬೇಕಾದರೆ= ಬೇಕಾಗಿದ್ದ ಪಕ್ಷದಲ್ಲಿ,ಇಲ್ಲವೆ ಕಲಹವೇ = ಜಗಳವೆ, ಬೇಕೇ= ಬೇಕಾಗಿದೆಯೋ? ಲೇಸು= ಒಳ್ಳೇದು, ಋದರೆ ಹಾಗೆ ಯೈದ್ಧಮಾಡುವುದೇ ಗೊತ್ತಾಗಿದ್ದರೆ, ಅಧಟಂ= ಪರಾಕ್ರಮವನ್ನು, ತೋರಿಸು= ಪ್ರತ್ಯಕ್ಷಮಾಡಿಸುವನಾಗು,ಎಂದು=
ಎಂಬುದಾಗಿ ಹೇಳುತ್ತ, ಅವಳು= ಆ ಪ್ರಮೀಳೆಯು, ಪಾರ್ಥನ ಮೇಲೆ= ಫಲುಗುಣನ ಮೇಲೆ, ಕಣೆಗರೆದಳು= ಶರಪ್ರಯೋಗ ಮಾಡಿದಳು.
ಅ॥ವಿ॥ ಅಂಬು=ನೀರು, ಬಾಣ, ಸುರತ= ಮೈಥುನ, ದಯಾಳು, ಆದರದೊಡನೆ+ ಸಹಿತವಾದದ್ದು = ಸಾದರ, (ಬ. ಸ. )
ತಾತ್ಪರ್ಯ:-ಆ ಅರ್ಜುನನ ಮಾತನ್ನು ಕೇಳಿದ ಪ್ರಮೀಳೆಯು, ಅರ್ಜುನನನ್ನು ಕುರಿತು ನೀನು ನನ್ನೊಡನೆ ಯುದ್ಧಮಾಡುತ್ತಲೇ ಬಂದರೆ ಅಂಬಿನಿಂದ ನಿನ್ನನ್ನು ಸಂಹರೆಸುತ್ತೇನೆ. ಯೈದ್ಧಮಾಡದೆ ಹೋದರೆ ನೃನು ನಿನ್ನ ಸಲುವಾಗಿ ಮದನಕೇಳಿಯನ್ನೆಸಗಲು ಸಮರ್ಥಳಾಗಿ ಕಾದಿರುವೆನು. ನಿನ್ನನ್ನು ನಾನು ಆಲಿಂಗನಮಾಡಿಕೊಂಡು ಸುಖವನ್ನು ಹೊಂದಿದ ತರುವಾಯ ಮರಣವನ್ನು ಹೊಂದುವೆನು, ಹೇಗಾದಾಗ್ಯೂ ಸಾವು ತಪ್ಪುವುದಿಲ್ಲ( ಬಂದೇ ಬರುತ್ತದೆ) ಆದರ ಪೂರ್ವಕವಾಗಿ
ನೀನು ಎನ್ನೊಳುರಮಿಸುವುದು ಯುಕ್ತವಾಗಿ ತೋರಿಬಂದರೆ ಅಗತ್ಯವಾಗಿ ನನ್ನ ಮಾತನ್ನು ಅನುಮೋದಿಸುವನಾಗು, ಹಾಗಿಲ್ಲದಿದ್ದರೆ ನನ್ನೊಡನೆ ನಿನಗೆ ಕಲಹವೇ ಬೇಕೆ? ಅದೂ ಆಗಬಹುದು. ಹಾಗೆ ನೀನು ಯುದ್ಧವಂ ಮಾಡಬೇಕೆಂಬ ಕುತೂಹಲವಿದ್ದರೆ ನಿನ್ನ ಪರಾಕ್ರಮಾತಿಶಯವನ್ನು ತೋರಿಸುವನಾಗೆಂದು ಆ ಪ್ರಮೀಳೆಯು ಹೇಳಿ ಪಾರ್ಥನ ಮೇಲೆ ಶರವೃಷ್ಟಿಯನ್ನು ಕರೆದಳು.
ಹಿಂದೆ ಶೂರ್ಪಣಕೆ ಲಕ್ಷ್ಮಣನನಂಡಲೆದು ಪಡೆ।
ದಂದಮಂ ನೆನೆದೀಕ್ಷಣವೆ ಭಂಗಿಸುವೆ।
ನೆಂದು ಸಮ್ಮೋಹನಾಸ್ತ್ರವನುಗಿದು ಗಾಂಡೀವದೊಳ್ ಪೂಡಿ ಪಾರ್ಥನಿಸಲು॥
ಮಂದಸ್ಮಿತದೊಳದಂ ಕಡಿದು ಬಿಲ್ದಿರುವನೆ।
ಚ್ಚಿಂದುಮುಖಿಶಕ್ರಸುತನಂ ನೋಯಿಸಲ್ಕೆ ಮ।
ಮತ್ತೊಂದುಹೆದೆಯಂ ಚಾಪಕೇರಿಸಿ ನರಂ ಪೂಡಿದಂ ದಿವ್ಯಮಾರ್ಗಣವನು॥೧೪॥
ಪ್ರತಿಪದಾರ್ಥ :- ಪಿಂತೆ= ಹಿಂದಕ್ಕೆ, (ತ್ರೇತಾಯುಗದಲ್ಲಿ),ಶೂರ್ಪಣಕೆ= ಮೊರದಂತೆ ಅಗಲವಾದ ಉಗುರುಳ್ಳ ಒಬ್ಬ ದೈತ್ಯ ಸ್ತ್ರೀಯು, ಲಕ್ಷ್ಮಣನನ್ನು= ರಾಮನ ತಮ್ಮನಾದ ಲಕ್ಷ್ಮಣನನ್ನುಅಂಡಲೆದು= ತನಗೆ ವಲ್ಲಭನಾಗುವಂತೆ ಹಿಂಸೆಪಡಿಸಿ, ಪಡೆದ= ಹೊಂದಿದ, (ಕರ್ಣ ನಾಸಿಕಗಳನ್ನು ಕಳೆದುಕೊಂಡು) ಅಂದಮಂ= ಚಂದವನ್ನು,ನೆನೆದು=ಭಾವಿಸಿಕೊಂಡು,(ಮನಸ್ಸಿನಲ್ಲಿ ಜ್ಞಾಪಿಸಿಕೊಂಡು), ಇವಳನು= ಈ ಪ್ರಮೀಳೆಯನ್ನು, ಈಕ್ಷಣವೆ= ಈಗಲೇ, ಭಂಗಿಸುವೆನು= ಶೂರ್ಪನಖಿಯಂತೆ ಅವ-ಮಾನಪಡಿಸುವೆನು, ಎಂದು=ಎಂಬುದಾಗಿ ಯೋಚನೆಮಾಡಿ, ಸಮ್ಮೋಹನಾಸ್ತ್ರವನು= ಜ್ಞಾನವನ್ನು ಹೋಗಲಾಡಿ-
ಸುವ ಮಂತ್ರದಿಂದ ಮಂತ್ರಿತಮಾದಶರವನ್ನು, ಉಗಿದು= ಬತ್ತಳಿಕೆಯಿಂದ ತೆಗೆದು, ಗಾಂಡೀವದೊಳ್= ತನ್ನ ಧನುಸ್ಸಾದ ಗಾಂಡೀವವೆಂಬ ಚಾಪದಲ್ಲಿ,ಪೂಡಿ= ಸಂಧಾನಮಾಡಿ(ಸೇರಿಸಿ) ಪಾರ್ಥನು= ಫಲುಗುಣನು, ಎಸಲು= ಬಾಣವನ್ನು ಪ್ರಯೋಗಿಸಲು, ಇಂದುಮುಖಿ= ಚಂದ್ರನೋಪಾದಿಯಲ್ಲಿ ಮುಖವುಳ್ಳವಳಾದ ಪ್ರಮೀಳೆಯು, ಮಂದಸ್ಮಿತದೊಳು= ಕಿರುನಗೆಯಿಂದ, ಅದಂ= ಅರ್ಜುನನು ಪ್ರಯೋಗಿಸಿದ ಸಮ್ಮಮೋಹನಾಸ್ತ್ರವನ್ನು, ಕಡಿದು=ತುಂಡುಮಾಡಿ, ಬಿಲ್ದಿರುವನು= ಧನುಸ್ಸಿನ ಹಗ್ಗವನ್ನು, (ಸಿಂಜನಿಯನ್ನು) ಎಚ್ಚು= ಕತ್ತರಿಸಿ, ಶಕ್ರಸುತನಂ= ಪಾರ್ಥನನ್ನು, ನೋಯಿಸಲ್ಕೆ,= ಬೇನೆಯುಂಟಾ-
ಗುವಂತೆ ಪ್ರಯೋಗಿಸಲು, ನರಂ= ಆ ಪಾರ್ಥನು, ಮತ್ತೊಂದು= ಬೇರೊಂದು, ಹೆದೆಯಂ= ಬಿಲ್ದಿರುವನ್ನು, ಚಾಪಕ್ಕೆ= ಬಿಲ್ಲಿಗೆ( ಗಾಂಡೀವಕ್ಕೆ) ಏರಿಸಿ= ಕೂಡಿಸಿ,(ಸೇರಿಸಿ) ದಿವ್ಯಮಾರ್ಗಣವನು= ಅತ್ಯುತ್ತಮ ಬಾಣವನ್ನು, ಪೂಡಿದಂ= ಅನುಸಂಧಾನ ಮಾಡಿದನು, ( ಬಿಲ್ಲಿನಲ್ಲಿ ಸೇರಿಸಿದನು).
ಅ॥ವಿ॥(ಕೃತ, ತ್ರೇತ,ದ್ವಾಪರ, ಕಲಿ ಇವು ಚತುರ್ಯುಗಗಳು) ಶೂರ್ಪ=ಮೊರ, ಶೂರ್ಪ=ಮೊರದ ಹಾಗೆ, ನಖ= ಉಗುರುಳ್ಳವಳು,ಸತ್+ಮೋಹನ= ಸಮ್ಮೋಹನ, (ಅನುನಿಸಿಕ ಸಂಧಿ) ಕೃತ=ಮಾಡಿದ ಉಪಕಾರವನ್ನು, ಜ್ಞಾ= ತಿಳಿಯತಕ್ಕವನು,(ರಾಮ-ಎಲ್ಲರ ಮನಸ್ಸಿನಲ್ಲಿಯೂ ರಮಿಸತಕ್ಕವನು) ಲಕ್ಷ್ಮಣ= ಸರ್ವ ಲಕ್ಷಣಗಳಿಂದ ಕೂಡಿದವನು,
ತಾತ್ಪರ್ಯ:-ಆಗ ಪಾರ್ಥನು ಪ್ರಮೀಳೆಯನ್ನು ಕುರಿತು ತ್ರೇತಾಯುಗದಲ್ಲಿ ಶೂರ್ಪಣಕಿ ಎಂಬೊಬ್ಬ ರಾಕ್ಷಸಸ್ತ್ರೀಯು ಶ್ರೀರಾಮನ ತಮ್ಮ ಲಕ್ಷ್ಮಣನನ್ನು ನೋಡಿ ನನಗೆ ನೀನು ವಲ್ಲಭನಾಗೆಂದು ಪೀಡಿಸಿ, ಕಿವಿ, ಮೂಗನ್ನು ಕಳೆದುಕೊಂಡ ಸಂಗತಿಯನ್ನು ಜ್ಞಾಪಕಮಾಡಿಕೊಂಡು ಈಗಲೆ ಜಯಿಸುವೆನು ಮತ್ತು ಶೂರ್ಪಣಕಿಯಂತೆ ಭಂಗಪಡಿಸುತ್ತೇನೆಂದು ಅಂದುಕೊಂಡು ಸಮ್ಮೋಹನಾಸ್ತ್ರವನ್ನು ಬತ್ತಳಿಕೆಯಿಂದ ತೆಗೆದು ಧನುವಿನಲ್ಲಿ ಹೂಡಿ, ಪಾರ್ಥನು ಪ್ರಯೋಗಿಸಲು,
ಚಂದ್ರವದನೆಯಾದ ಪ್ರಮೀಳೆಯು, ಮಂದಹಾಸದಿಂದ ಆ ಸಮ್ಮೋಹನಾಸ್ತ್ರವನ್ನು ಕತ್ತರಿಸಿ ಶಕ್ರಸುತನ ಬಿಲ್ದಿರುವನ್ನು (ಬಿಲ್ಲಿನ ಹಗ್ಗವನ್ನು) ಕತ್ತರಿಸಿ, ನೋವುಂಟಾಗುವಂತೆ ಪಾರ್ಥನನ್ನು ಹೊಡೆಯಲು ಆಗ ಪಾರ್ಥನು ಬಿಲ್ಲಿಗೆ ಮತ್ತೊಂದು ಹುರಿಯನ್ನು ಕಟ್ಟಿ ಮತ್ತೊಂದು ಯೋಗ್ಯವಾದ ಶರವನ್ನು ಸಂಧಾನಮಾಡಿದನು.
ಆ ಸಮಯದೊಳ್ನುಡಿದುದಶರೀರವಾಕ್ಯಮಾ।
ಕಾಶದೊಳ್ಬೇಡಬೇಡೆಲೆಪಾರ್ಥ ಹೆಂಗೊಲೆಗೆ।
ಹೇಸದೆ ಮಹಾಸ್ತ್ರಮಂ ತುಡುವೆ ನೀಂ ಮುಳಿದಯುತವರ್ಷಮಿನ್ನವಳ ಕೂಡೆ॥
ಬೇಸರದೆ ಕಾದಿದರುತೀರಲರಿಯದುಮನದ।
ವಾಸಿಯಂ ಬಿಟ್ಟು ವರಿಸೀಕೆಯಂ ಸತಿಯಾಗೆ।
ಲೇಸಹುದು ಮುಂದೆ ನಿನಗೆಂದು ನಿಡುಸರದಿಂದೆ ಸಕಲಜನಮುಂ ಕೇಳ್ವೊಲು॥೧೫॥
ಆ ಸಮಯದೊಳ್= ಅರ್ಜುನನು ಪ್ರಮೀಳೆಯ ಮೇಲೆ ತಾನು ಸಂಧಾನಮಾಡಿದ ನಂತರದಲ್ಲಿ, ಆಕಾಶದೊಳ್= ಆಗಸದಲ್ಲಿ, ಅಶರೀರವಾಕ್ಯಂ= ಆಕಾರವಿಲ್ಲದ ಎಂದರೆ ಶರೀರವಿಲ್ಲದವರಿಂದಾದವಾಕ್ಯವು, (ಭಗವಂತನು ತನ್ನ ಭಕ್ತರಿಗೆ ಆವ ವಿಪತ್ತೂ ಬಾರದಂತೆ ಸಲಹುವುದು ಸಹಜವಾಗಿದೆಯಾದ್ದರಿಂದ ಸರ್ವಂತರ್ಯಾಮಿಯೂ, ಸಕಲರೂಪಚೈತನ್ತನೂ, ಪಂಚಭೂತ ಸ್ವರೂಪನೂ,ಜಗದೀಶನೂ ಆದ ಶ್ರೀ ಪರಮೇಶ್ವರನು, ಅಂತರಿಕ್ಷಾಭಿಮಾನಿಯಾದ ಅಧಿದೇವತೆಯಲ್ಲ್ಲಿ ಗುಪ್ತನಾಗಿ ಧ್ವನಿಯ ಆಕಾರದಿಂದ ಎಚ್ಚರಿಸಿದನು) ಅರ್ಜುನನನಂ ಕುರಿತು, ಎಲೆ ಪಾರ್ಥ= ಎಲೆ ಧನಂಜಯನೆ! ಹೆಂಗೊಲೆಗೆ= ಅಬಲೆಯನ್ನು ಸಂಹಾರಮಾಡಲಿಕ್ಕೆ(ಸ್ತ್ರೀಹತ್ಯೆಗೆ) ಹೇಸದೆ= ಹಿಂದೆಗೆಯದೆ(ಭಯಪಡದೆ) ಮಹಾಸ್ತ್ರಮಂ= ಮಹಾದೇವತಾಕಮಾದ ಶರವನ್ನು, ತೊಡುವೆ= ಬಿಲ್ಲಿಗೆ ಹೂಡುತ್ತಿರುವ,ನೀಂ=ನೀನು, ಮುಳಿದು= ಕೋಪಾವಿಷ್ಟನಾಗಿ, ಇನ್ನು=ಇನ್ನು ಮುಂದೆ, ಆಯುತವರ್ಷಂ= ಹತ್ತುಸಾಸಿರ ವರ್ಷಗಳು, ಬೇಸರದ= ಜಿಗುಪ್ಸೆಪಡದೆ, ಅವಳ= ಅರಸಿಯಾದ ಪ್ರಮೀಳೆಯ, ಕೂಡೆ= ಒಡನೆ, ಕಾದಿದರೆ= ಹೋರಾಡಿದರೆ, ತೀರಲರಿಯದು= ಪೂರೈಸುವಂತೆ ಕಾಣುವುದಿಲ್ಲ, ಮನದ= ನಿನ್ನ ಹೃದಯದಲ್ಲಿರುವ, ವಾಸಿಯಂ= ದುರಹಂಕಾರವನ್ನು, ಬಿಟ್ಟು =ವಿಸರ್ಜಿಸಿ, ಈಕೆಯಂ= ಈ ಪ್ರಮೀಳೆಯನ್ನು, ವರಿಸು= ಸ್ವಯಂವರಮಾಡಿಕೊ, ಸತಿಯಾಗೆ= ಪತ್ನಿಯಾಗಿ ಮಾಡಿಕೊಂಡರೆ, ನಿನಗೆ= ನಿನಗಾದರೊ, ಮುಂದೆ=ಇನ್ನು ಮುಂದಕ್ಕೆ, ಲೇಸು= ಒಳ್ಳೇದು, ಅಹುದು= ಆಗುವುದು, ಎಂದು=ಎಂಬುದಾಗಿ, ನಿಡುಸರದಿಂದ= ಉದ್ದವಾದ ಸ್ವರದಿಂದ
(ಗಟ್ಟಿ ಧ್ವನಿಯಿಂದ) ಸಕಲ= ಸಮಸ್ತ, ಜನಮುಂ= ಜನರೂ, ಕೇಳ್ವೊಲು= ಆಲಿಸುವಂತೆ, ನುಡಿದುದು= ಆಡಿತು.
ಅ॥ವಿ॥ ಶರೀರವಿಲ್ಲದ್ದು =ಅಶರೀರ (ನ.ತ.) ಆಕಾಶ(ತ್ಸ.) ಆಗಸ(ತ್ಭ) ಹೆಣ್+ ಕೊಲೌ= ಹೆಂಗೊಲೆ (ಗಕಾರ ಆದೇಶ.ಸಂ)
(ವಾಕ್ಯ=ಸಂಪೂರ್ಣ ಅರ್ಥವನ್ನು ಕೊಡುವ ಪದಗಳ ಗುಂಪಿಗೆ ವಾಕ್ಯವೆಂದು ಹೆಸರು),ವಾಣಿ= ಸರಸ್ವತಿ, ಮಾತು.
ತಾತ್ಪರ್ಯ:-ಆ ವೇಳೆಗೆ ಸರಿಯಾಗಿ ಅಂತರಿಕ್ಷದಲ್ಲಿ ಅಶರೀರವಾಕ್ಯರೂಪವಾಗಿ ಭಗವಂತನು ಭಕ್ತರಿಗಧೀನನೆಂಬಂತೆ
ಸರ್ವಂತರ್ಯಾಮಿಯಾಗಿಯೂ ಸಕಲ ಗುಣಾನ್ವಿತನಾಗಿಯೂ, ಅಷ್ಟವಿಧವಾದ ರೂಪವುಳ್ಳವನಾಗಿಯೂ,ಇರುವ ಲೋಕೇಶನಾದ ಭಗವಂತನು ಅಂತರಿಕ್ಷಮೂರ್ತಿ ಸ್ವರೂಪದಲ್ಲಿ ಅಡಗಿ ತನ್ನ ಭಜಕರಿಗೆತೊಂದರೆ ಬಾರದಂತೆ, ಎಲಾ ಅರಜುನ ಹೆಂಗೊಲೆಗೆ ಹಿಮ್ಮೆಟ್ಟದೆ ಮಹಾಸ್ತ್ರವನ್ನು ಸಂಧಾನ ಮಾಡುವೆಯಾ? ನೀನು ರೋಷಗೊಂಡು ಇನ್ನು ಹತ್ತು ಸಾವಿರ ವರ್ಷಗಳು ಬೇಜಾರು ಪಡದೆ ಆ ಪ್ರಮೀಳೆಯ ಸಂಗಡ ಯುದ್ಧ ಮಾಡಿದರೂ ಮುಗಿಯುವುದಿಲ್ಲ. ನಿನ್ನ ಅಹಂಭಾವವನ್ನು ಬಿಟ್ಟು ಈ ಪ್ರಮೀಳೆಯನ್ನು ಸ್ವಯಂವರ ಮಾಡಿಕೊ, ಈಕೆಯನ್ನು ವರಿಸಿದ್ದೇಆದರೆ ಇದರಿಂದ ನಿನಗೆ ಮುಂದೆ ಒಳ್ಳೇದಾಗುವುದೆಂದು ದೇರ್ಘವಾದ ಧ್ವನಿಯಿಂದ ಸರ್ವರೂ ಆಲಿಸುವಂತೆ ನುಡಿದುದು.
ಆಲಿಸಿದನಶರೀರವಾಣಿಯಂ ಪೂಡಿರ್ದ।
ಕೋಲನೊಯ್ಯನೆ ಶರಾಸನದಿಂದಮಿಳಿಪಿದಂ।
ಮೇಲಣ ವಿಚಾರಮಂ ಚಿತ್ತದೊಳ್ ತಿಳಿದನಾಳೋಚಿಸಿದನಾಪ್ತರೊಡನೆ॥
ಆ ಲಲನೆಯಂ ತನ್ನೆಡೆಗೆ ಬರಿಸಿಕೊಂಡು ತ।
ತ್ಕಾಲೋಚಿತದೊಳೊಡಂಬಡಿಸಿ ಕೈವಿಡಿದನನು।
ಕೂಲೆಯಾಗಿರೆ ಬಳಿಕ ನಸುನಗುತೆ ವಿನಯದಿಂ ಕಲಿಪಾರ್ಥನಿಂತೆಂದನು॥೧೬॥
ಪ್ರತಿಪದಾರ್ಥ :- ಪಾರ್ಥಂ=ಫಲುಗುಣನು, ಅಶರೀರವಾಣಿಯಂ= ಶರೀರವಿಲ್ಲದೆ ನುಡಿದ ವಾಕ್ಯವನ್ನು, ಆಲಿಸಿದನು= ಕೇಳಿದನು, ಪೂಡಿರ್ದ= ಚಾಪಕ್ಕೆ ಸಂಧಾನಮಾಡಿದ್ದ, ಕೋಲನು= ಅಂಬನ್ನು, ಒಯ್ಯನೆ= ನಿಧಾನವಾಗಿ, ಶರಾಸನದಿಂದ= ತನ್ನ ಬಿಲ್ಲಾದ ಗಾಂಡೀವದಿಂದ, ಇಳಿಪಿದಂ= ಇಳುಹಿದನು, ಮೇಲಣ= (ಮೇಲೆ ನಡೆದ ಕಥಾಸಂದರ್ಭದ) ಮುಂದೆ ನಡೆಯಿಸತಕ್ಕ ಕಾರ್ಯಕ್ಕೆ, ವಿಚಾರಮಂ= ಸಮಾಚಾರವನ್ನು,ಚಿತ್ತದೊಳ್= ಮನಸ್ಸಿನಲ್ಲಿ, ತಿಳಿದನು= ಗ್ರಹಿಸಿಕೊಂಡನು, ಆಪ್ತರೊಡನೆ= ಹಿತಚಿಂತಕರಾದ ಅಮಾತ್ಯರೊಂದಿಗೆ, ಆಲೋಚಿಸಿದನು= ಆಲೋಚನೆಯನ್ನು ಮಾಡಿದನು, ಆ ಲಲನೆಯಂ= ಆ ಪ್ರಮೀಳೆಯನ್ನು, ತನ್ನ ಎಡೆಗೆ= ತನ್ನ ಸಮೀಪಕ್ಕೆ, ಬರಸಿಕೊಂಡು= ಬರಮಾಡಿಕೊಂಡು, ತತ್ಕಾಲೋಚಿತ-
ದೊಳು= ಕಾಲಕ್ಕೆ ಅನುಕೂಲಿಸುವಂತೆ,ಒಡಂಬಡಿಸಿ= ಒಪ್ಪುವಂತೆಮಾಡಿ, ಕೈವಿಡಿದನು= ಪಾಣಿಗ್ರಹಣಮಾಡಿಕೊಂಡನು,
( ಪ್ರಮಾಣಪೂರ್ವಕವಾಗಿ ನಿನ್ನನು ವರಿಸುವೆನೆಂದು ಭಾಷೆಮಾಡಿಕೊಟ್ಟನು) ಅನುಕೂಲೆಯಾಗಿರೆ= ತನ್ನ ಮನೋಭಿಪ್ರಾ-
ಯಾನುಸಾರಿಯಾಗಿ ನಡೆದುಕೊಳ್ಳುವಳಾದ್ದರಿಂದ, ಬಳಿಕ= ಅನಂತರದಲ್ಲಿ, ನಸುನಗುತ= ಮುಗುಳುನಗೆಯನ್ನು ನಗುತ್ತ, ವಿನಯದಿಂ= ನಮ್ರಭಾವದೊಡನೆ, ಕಲಿ= ಅಸಹಾಯಶೂರನಾದ, ಪಾರ್ಥಂ= ಫಲುಗುಣನು, ಇಂತೆಂದನು = ಈ ಪ್ರಕಾರವಾಗಿ ಹೇಳಿದನು.
ಅ॥ವಿ॥ ಪೃಥೆಯ+ಮಗ=ಪಾರ್ಥ, ಅಶರೀರವಾಣಿ=ಶರೀರವಿಲ್ಲದ ಮಾತು, ಶರೀರವಿಲ್ಲದ್ದು=ಅಶರೀರ,(ನ. ತ.),ಕೋಲು= ಬಾಣ,ಕಟ್ಟಿಗೆ, ಮಂತ್ರ= ರಾಜಕಾರ್ಯಾಲೋಚನೆ, ಅದುಳ್ಳವನು ಮಂತ್ರಿ, ಶರ+ಆಸನ=ಶರಾಸನ(ಸ. ಸಂ.) ಪಾಣಿ=ಹಸ್ತವನ್ನು, ಗ್ರಹಣ= ಹಿಡಿಯುವುದು.( ಮದುವೆಮಾಡಿಕೊಳ್ಳುವುದು) ವಿನಾಯಕ (ತ್ಸ) ಬೆನಕ(ತ್ಭ) ಹಗ್ಗ (ತ್ಭ) ಪ್ರಗ್ರಹ(ತ್ಸ) ಕಾಲ=ಯಮ. ವೇಳೆ.
ತಾತ್ಪರ್ಯ:- ಆ ಬಳಿಕ ಅರ್ಜುನನು ಆ ಅಶರೀರವಾಕ್ಯಮನಾಕರ್ಣಿಸಿ, ಧನುಸ್ಸಿಗೆ ಏರಿಸಿದ್ದ ಮಹಾಶರವನ್ನು ನಿಧಾನವಾಗಿ, ಇಳಿಸಿಕೊಂಡು, ತನ್ನ ಮನಸ್ಸಿನಲ್ಲಿ ಯೋಚಿಸಿ ತಿಳಿದವನಾಗಿ,ಆಗಸವಾಣಿಯಂತೆ, ಕಾರ್ಯವನ್ನು ನೆರವೇರಿಸಲು,ತನ್ನ ಹಿತ-
ಮಂತ್ರಿಗಳಾದವರ ಸಂಗಡ ಆಲೋಚಿಸಿ ಆ ಪ್ರಮೀಳೆಯನ್ನು ತನ್ನ ಸಮೀಪಕ್ಕೆ ಬರಮಾಡಿಸಿಕೊಂಡು ತತ್ಕಾಲೋಚಿತಮಾ-
ದ ಮಾತುಗಳಿಂದ ಆ ಪ್ರಮೀಳೆಯನ್ನು ಸಮಾಧಾನಪಡಿಸಿ, ಪಾಣಿಗ್ರಹಣಮಾಡಿಕೊಂಡನು, (ವಿವಾಹ ಮಾಡಿಕೊಂಡನು, ತದನಂತರದಲ್ಲಿ ಸಹಚರಿಯಾಗಿ ಬಂದುದರಿಂದ,ನಸುನಗುತ ಅತ್ಯಂತ ವಿಧೇಯತೆಯೊಡನೆ ಅಸಹಾಯಶೂರನಾದ ಅರ್ಜುನನು ಈ ಪ್ರಕಾರವಾಗಿ ಹೇಳಿದನು.
ಕಣ್ಣಳವಿದಲ್ಲಬಲೆ ಕೇಳ್ ದೀಕ್ಷೆಗೊಂಡಿರ್ಪ।
ನಣ್ಣದೇವಂ ತಾನುಮನ್ನೆಗಂ ವ್ರತಿಯಾಗಿ।
ಪೆಣ್ಣೊಳ್ ಬೆರೆಯೆನೆಂದು ಪೊರಮಟ್ಟೆನಶ್ವರಕ್ಷೆಗೆಮುಂದೆ ಗಜಪುರದೊಳು॥
ಪಣ್ಣುವಧ್ವರಕೆ ನೀಂ ಬಂದು ಕನ್ನೈದಿಲೆಯ।
ಬಣ್ಣದ ಮುರಾರಿಯಂ ಕಂಡು ವಿಷವಧುತನದ।
ತಿಣ್ಣಮಂ ಕಳೆದೆನ್ನೊಡಗೂಡು ಸೌಖ್ಯಮಹುದಲ್ಲಿಗೈತಹುದೆಂದನು॥೧೭॥
ಪ್ರತಿಪದಾರ್ಥ:- ಅಬಲೆ= ಸ್ತ್ರೀಯಾದ ಪ್ರಮೀಳೆಯೇ, ಕಣ್ಣ= ಕಂಗಳ, ಅಳವಿ= ಸಂತುಷ್ಟಿಯು, (ಸಮಾಧಾನವು, ಇದು= ಈ ಕೈಹಿಡಿಯೋಣವು, ಅಲ್ಲ= ವಿಷಾಂಗನೆಯಾಗಿರುವುದರಿಂದಲೂ, ನಮ್ಮ ಅಗ್ರಜನಾದ ಧರ್ಮರಾಯನು ದೀಕ್ಷೆಗೊಂಡಿರುವುದರಿಂದಲು, ತುರಗದ ಪೋಷಕನಾದ ನಾನು ಸ್ತ್ರೀಸಂಭೋಗಮಾಡುವುದಿಲ್ಲವೆಂದು ಆಣೆಮಾಡಿ- ಕೊಂಡಿರುವುದರಿಂದಲು,ನಾನು ನಿನ್ನಲ್ಲಿ ಕ್ರೀಡಿಸುವ ಸಮಯವಲ್ಲ, ಕೇಳು =ಆಲಿಸು, (ಆ ವಿಷಯವನ್ನು ವಿಸ್ತರಿಪೆನು) ಅಣ್ಣದೇವಂ= ನಮ್ಮ ಸ್ವಾಮಿಯಾದ, ಮತ್ತು ಅಗ್ರಜನಾದ ಧರ್ಮಪುತ್ರನು,ದೀಕ್ಷೆ= ಕಂಕಣವನ್ನು,( ಅಸಿತಪತ್ರವೆಂಬ ಪ್ರತಿ-
ಜ್ಞೆಯನ್ನು),ಕೈಗೊಂಡು=ಅನುಸರಿಸಿ, ಇರ್ಪನು= ಇದ್ದಾನೆ, ಅನ್ನೆಗಂ= ಆ ದೀಕ್ಷಾವ್ರತವು ನೆರವೇರುವ ಪರಿಯಂತವೂ, ತಾಂ= ನಾನು, ಪ್ರತಿಯಾಗಿ= ಬದಲಾಗಿ, ( ಆ ಅಸಿಪತ್ರವ್ರತಕ್ಕೆ ಬದಲಾಗಿ) ಪೆಣ್ಣೊಳ್ = ಸ್ತ್ರೀಯರಲ್ಲಿ, ಬೆರೆಯೆನು= ಕೂಡಲೊಲ್ಲೆನು, (ಸ್ತ್ರೀಸಂಭೋಗವಿಲ್ಲ,), ಎಂದು= ಎಂತ, ಅಶ್ವರಕ್ಷೆಗೆ= ಕುದುರೆಯ ಕಾವಲಿಗೆ, ಪೊರಮಟ್ಟೆನು= ಹೊರಟಿ-
ರುತ್ತೇನೆ, ಮುಂದೆ= ಇನ್ನು ಮುಂದೆ, ಗಜಪುರದೊಳು= ಹಸ್ತಿನಾವತಿಯಲ್ಲಿ, ಪಣ್ಣುವ= ಗೈಯುವ, ಅಧ್ವರಕೆ= ಯಾಗಕ್ಕೆ, ನೀಂ= ನೀನೂ ಸಹ, ಬಂದು= ಬಂದವಳಾಗಿ,ಕನ್ನೈದಿಲೆಯ= ಕನ್ನೈದಿಲೆಯಂತೆ ನೀಲವರ್ಣವಾದ, ಬಣ್ಣದ = ವರ್ಣವುಳ್ಳ-
ವನಾದ, ಮುರಾರಿಯಂ= ಮುರಹರನಾದ ಶ್ರೀಕೃಷ್ಣನನ್ನು, ಕಂಡು=ನೋಡಿದವಳಾಗಿ, ವಿಷ=ನಂಜಿನ ಸಂಬಂಧವಾದ, ವಧುತನದ= ವಧೂತ್ವದ, ತಿಣ್ಣಮಂ= ತೀಕ್ಷ್ಣತೆಯನ್ನ್ನು, ಕಳೆದು= ಹೋಗಲಾಡಿಸಿಕೊಂಡು, ಎನ್ನೊಳು= ನನ್ನೊಡನೆ, ಒಡಗೂಡು= ಸೇರುವವಳಾಗು, ಸೌಖ್ಯಂ= ಸ್ರಕ್ಚಂದನಾದಿ ಭೋಗವು, ಅಹುದು= ಉಂಟಾಗುತ್ತದೆ, ಅಲ್ಲಿಗೆ= ಆ ಗಜಪುರಿಗೆ, ಐತಹುದು= ಬರಬೇಕು, ಎಂದನು= ಎಂಬುದಾಗಿ ಹೇಳಿದನು.
ಅ॥ವಿ॥ ಅಶ್ವದ+ರಕ್ಷೆ=ಅಶ್ವರಕ್ಷೆ(ಷ. ತ. )ಮುರ= ಮುರಾಸುರನಿಗೆ, ಅರಿ=ಶತ್ರುವಾದವನು= ಕೃಷ್ಣನು, ತಿಣ್ಣ (ತ್ಭ) ತೀಕ್ಷ್ಣ(ತ್ಸ)
ತಾತ್ಪರ್ಯ:- ಎಲೆ ಪ್ರಮೀಳೆಯೇ ನಮ್ಮ ಅಣ್ಣನಾದ ಧರ್ಮನಂದನನು, ಯಜ್ಞದೀಕ್ಷೆಯನ್ನು ಕೈಗೊಂಡಿರುವನು, ನಾನಾದರೊ, ಆ ಯಜ್ಞವು ಪೂರೈಸುವ ತನಕ, ಸ್ತ್ರೀನಿಯಮವುಳ್ಳವನಾಗಿರುತ್ತೇನೆ, ಆ ನಮ್ಮ ಸ್ವಾಮಿಯಾದ ಧರ್ಮಪುತ್ರನ
ಯಜ್ಞಕಾರ್ಯ ಕೈಗೂಡುವ ತನಕ ನಾನು ಸ್ತ್ರೀ ಸಂಭೋಗಮಾಡುವುದಿಲ್ಲವೆಂದು ದೀಕ್ಷೆಗೊಂಡಿರುವೆನು. ಆದ್ದರಿಂದ ನೀನೂ ಸಹ ನಮ್ಮ ಅಗ್ರಜನು ಎಸಗುವ ಯಜ್ಞ ಕಾರ್ಯಕ್ಕೆ ಬಂದು, ಅಧ್ವರವನ್ನು ನೋಡಿ, ಮುರಹರನಾದ, ನೀಲಮೇಘಶ್ಯಾಮ-
ನಾದ, ಶ್ರೀಕೃಷ್ಣನ ಸಂದರ್ಶನವನ್ನು ಮಾಡಿಕೊಂಡು, ನಿನ್ನಲ್ಲಿರುವ ವಿಷವನ್ನು ಹೋಗಲಾಡಿಸಿಕೊಳ್ಳುವಳಾಗು, ಅನಂತರದಲ್ಲಿ ನೀನು ನನ್ನೊಡನೆ ಸುಖಿಸಲು ಅರ್ಹಳಾಗುತ್ತಿ ,ಆದ್ದರಿಂದ ಗಜಪುರಿಗೆ ಹೊರಡುವಳಾಗು ಎಂಬುದಾಗಿ ಹೇಳಿದನು.
ಎನಲಾ ಪ್ರಮೀಳೆ ಪಾರ್ಥನ ಮಾತಿಗೊಪ್ಪಿ ಕರ।
ವನಜಮಂ ನೀಡಿ ನಂಬುಗೆಗೊಂಡು ಕುದುರೆಯಂ।
ಮನೆಯಿಂ ತರಿಸಿಕೊಟ್ಟು ತನ್ನಾಲಯದೊಳಿರ್ದ ವಿವಿಧರತ್ನಾವಳಿಗಳನು॥
ಜನಪದದೊಳಿರ್ದ ವಸ್ತುಗಳೆಲ್ಲಮಂ ಕೊಂಡು।
ವನಿತೆಯರ ಮೋಹರಂಬೆರಸಿ ಪೊರಮಟ್ಟು ಯಮ।
ತನಯನಂಕಾಣ್ಬ ಕಡುತವಕದಿಂ ಬಂದಳಿಭನಗರಿಗತಿಸಂಭ್ರಮದೊಳು॥೧೮॥
ಪ್ರತಿಪದಾರ್ಥ :- ಎನಲು= ಪಾರ್ಥನು ಈ ಪ್ರಕಾರವಾಗಿ ಹೇಳಲಾಗಿ, ಆ ಪ್ರಮೀಳೆ= ಆ ಅರಸಿಯಾದ ಪ್ರಮೀಳೆ ಎಂಬುವಳು, ಪಾರ್ಥನ= ಧನಂಜಯನ, ಮಾತಿಗೆ= ವಚನಕ್ಕೆ, ಒಪ್ಪಿ= ಅನುಮೋದಿಸಿ, ಕರವನಜಮಂ= ಪಾಣಿಪದ್ಮವನ್ನು, ನೀಡಿ= ಮುಂದಕ್ಕೆ ಚಾಚಿ, ನಂಬಿಗ= ಪ್ರಮಾಣವನ್ನು, ಗೊಂಡು=ತೆಗೆದುಕೊಂಡು, ಕುದುರೆಯಂ= ಕುದುರೆಯನ್ನು, ಮನೆಯಿಂ= ತನ್ನ ಅರಮನೆಯಿಂದ,ತರಿಸಿಕೊಟ್ಟು= ಬರಮಾಡಿಕೊಟ್ಟವಳಾಗಿ, ತನ್ನ=ತನ್ನಯ, ಆಲಯದೊಳು= ಮಂದಿರದಲ್ಲಿ, ಇರ್ದ= ಇರತಕ್ಕ, ವಿವಿಧ= ಬಗೆಬಗೆಯಾದ, ರತ್ನಾಳಿಗಳನು= ರತ್ನವೆ ಮೊದಲಾದ ವಸ್ತುಗಳನ್ನು, ಜನಪದದೊಳು= ತನ್ನ ರಾಜ್ಯದಲ್ಲಿ, ಇರ್ದ=ಇರುವ, ವಸ್ತುಗಳೆಲ್ಲಮಂ= ಸಮಸ್ತ ಪದಾರ್ಥಗಳನ್ನು, ಕೊಂಡು= ವಹಿಸಿ, ವನಿತೆಯರ= ಸ್ತ್ರೀಯರ, ಮೋಹರಂ= ಸೇನೆಯು, ವೆರೆಸಿ= ಸೇರಿಸಿಕೊಂಡು, ಯಮತನಯನಂ= ಧರ್ಮರಾಯನನ್ನು, ಕಾಣ್ಬ= ನೋಡಬೇಕೆಂಬ, ಕಡು= ಹೆಚ್ಚಾದ, ತವಕದಿಂದ= ಅಪೇಕ್ಷೆಯಿಂದ,ಪೊರಮಟ್ಟು = ತನ್ನ ರಾಜ್ಯವನ್ನು ಬಿಟ್ಟು ಹೊರಟು, ಅತಿ ಸಂಭ್ರಮದೊಳು= ಹೆಚ್ಚಾದ ವೈಭವದಿಂದ, ಇಭನಗರಿಗೆ= ಹಸ್ತಿನಾವತಿ ಪಟ್ಟಣಕ್ಕೆ, ಬಂದಳು= ಬಂದು ತಲಪಿದಳು.
ಅ॥ವೆ॥ ಅವಳು+ಪ್ರಮೀಳೆ= ಆ ಪ್ರಮೀಳೆ( ಗಮಕ. ಸ. ) ಕರವು+ವನಜದಂತೆ= ಕರವನಜ( ಉ.ಉ.ಕ) ವನ= ನೀರು, ಕಾಡು, ಯಮನ+ ತನಯ= ಯಮತನಯ ( ಷ. ತ.)
ತಾತ್ಪರ್ಯ:- ಪಾರ್ಥನು ಈ ಪ್ರಕಾರವಾಗಿ ಹೇಳಲಾಗಿ, ಆ ಪ್ರಮೀಳೆಯು ಅರ್ಜುನನ ಮಾತಿಗೆ ಒಪ್ಪಿಕೊಂಡು ಕರಕಮಲವನ್ನು ನೀಡಿ ನಂಬಿಕೆಯನ್ನು ಪಡೆದುಕೊಂಡು ಯಜ್ಞಾಶ್ವವನ್ನು ಅಶ್ವಶಾಲೆಯಿಂದ ತರಿಸಿಕೊಟ್ಟು ತನ್ನ ಅರಮನೆಯಲ್ಲಿದ್ದ ನಾನಾ ವಿಧವಾದ ರತ್ನಾದಿಗಳನ್ನು, ತನ್ನ ದೇಶದಲ್ಲಿದ್ದ ಪಶು ಮೊದಲಾದ ಪ್ರಾಣಿಗಳನ್ನು ಸೇರಿಸಿಕೊಂಡು ವನಿತೆಯರ ಸೇನೆಯಿಂದ ಕೂಡಿದವಳಾಗಿ ಧರ್ಮನಂದನನನ್ನು ಕಾಣುವ ಉದ್ದೇಶದಿಂದ ಹೊರಟು ಅತಿ ವೈಭವದಿಂದ ಹಸ್ತಿನಾವತಿಗೆಬಂದು ಸೇರಿದಳು.
ಗಜನಗರಿಗಾಕೆಯಂ ಕಳುಹಿ ಕುದುರೆಯ ಕೂಡೆ।
ವಿಜಯನೈತರೆ ಮುಂದೆ ದೇಶಂಗಳಜಮನುಜ।
ಗಜ ಗೋಶ್ವ ಮಹಿಷಾದಿ ನಿಕರಂಗಳಿಂದೆ ಪೂರಿತಮಾಗಿ ಕಂಗೊಳಿಸಲು॥
ಕುಜಕುಜಂಗಳ ಪೊದರೊಳತಿ ಸೂಕ್ಷ್ಮಜೀವರಂ।
ಬುಜಮಿತ್ರನುದಯಕುದ್ಭವಿಸಿ ಮಧ್ಯಾಹ್ನದೊಳ್।
ನಿಜದ ಜೌವನದಿಂದೆ ಬಾಳ್ದಸ್ತಮಯಕಳಿಯುತಿರೆ ಕಂಡು ಬೆರಗಾದನು॥೧೯॥
ಪ್ರತಿಪದಾರ್ಥ :- ಗಜನಗರಿಗೆ= ಹಸ್ತಿನಾವತಿಗೆ,ಆಕೆಯಂ= ಆ ಪ್ರಮೀಳೆಯನ್ನು, ಕಳುಹಿ=ಕಳುಹಿಸಿಕೊಟ್ಟು, ಕುದುರೆಯ= ಆ ಯಜ್ಞ ಕುದುರೆಯ, ಕೂಡೆ=ಒಡನೆ, ವಿಜಯನು= ಪಾರ್ಥನು, ಐತರೆ= ಬರುತ್ತಿರಲು, ಮುಂದೆ=ಮುಂಭಾಗದಲ್ಲಿ ,ದೇಶಂಗ-
ಳು= ರಾಜ್ಯಗಳು,ಅಜ=ಮೆಕೆ, ಗಜ=ಕರಿ, ಗೊ=ಹಸುವು, ಊಶ್ವ=ಕುದುರೆ, ಮಹಿಷ= ಎಮ್ಮೆ, ಆದಿ= ಮೊದಲಾದ ಪ್ರಾಣಿಗಳ, ನಿಕರಂಗಳಿಂ= ಗುಂಪುಗಳಿಂದ,ಪೂರಿತಮಾಗಿ=ತುಂಬಲ್ಪಟ್ಟದ್ದಾಗಿ,ಕಂಗೊಳಿಸಲು= ಹೊಳೆಯುತ್ತಿರಲು, ಇರ್ದವು= ಇರುತ್ತಿರ್ದವು,ಕುಜಕುಜಗಳ= ವೃಕ್ಷವೃಕ್ಷಗಳ, ಪೊದರೊಳು= ಹೊದರಿನಲ್ಲಿ, ಅತಿಸೂಕ್ಷ್ಮ= ಅತ್ಯಂತ ಅಣು ಪ್ರಮಾಣವುಳ್ಳ, ಜೀವರಂ= ಜೀವರಾಶಿಗಳನ್ನು,ಅಂಬುಜ=ತಾವರೆಗೆ, ಮಿತ್ರ=ಹಿತನಾದ ಭಾಸ್ಕರನ, ಉದಯಕೆ= ಉದಯವಾಗುವ ಸಮಯಕ್ಕೆ,ಉದ್ಭವಿಸಿ=ಜನಿಸಿ, ಮಧ್ಯಾಹ್ನದೊಳ್= ನಡು ಹಗಲಿನಲ್ಲಿ, ನಿಜದ ಜವ್ವನದಿಂದ= ಯವ್ವನದ ದೆಸೆಯಿಂದ, ಬಾಳ್ದು=ಜೀವಿಸಿ, ಅಸ್ತಮಯಕೆ= ಸಂಧ್ಯಾಕಾಲಕ್ಕೆ,ಅಳಿವುತಿರೆ= ಮೃತಿಹೊಂದುತ್ತಿರಲು, ಕಂಡು=ನೋಡಿ, ಬೆರಗಾದನು= ಆಶ್ಚರ್ಯ ಹೊಂದೆದನು.
ಅ॥ವಿ॥ ಗಜದ ನಗರಿ= ಗಜನಗರಿ( ಷ. ತ.) ಅವಳು ಎಂಬುದಕ್ಕೆ ಆಕೆ ಎಂಬುದು ಗೌರವಾರ್ಥದಲ್ಲಿ ಬಂದಿದೆ, ಉ ಇವನು- ಈತನು, ಅವನು=ಆತನು, ಅವಳು=ಆಕೆ, ಇವಳು=ಈಕೆ, ಗಜವು-ಅಶ್ವವು-ಮಹಿಷವು=ಗಜೋಶ್ವಮಹಿಷಾದಿಗಳು,
(ಬಹುವಚನ, ದ್ವಂ ಸ.),ಮಿತ್ರ= ಸೂರ್ಯ, ಸ್ನೇಹಿತ.
ತಾತ್ಪರ್ಯ:- ಆಗ ಪಾರ್ಥನು ಆ ಪ್ರಮೀಳೆಯನ್ನು ಹಸ್ತಿನಾವತಿಗೆ ಕಳುಹಿಸಿಕುದುರೆಯ ಮೈಗಾವಲಿಗೆ ಹೊರಟು ಮುಂದೆ ಕಂಡಬರುವ ದೇಶಂಗಳು ಗಜ, ಗೋ, ಅಶ್ವ, ಮಹಿಷ, ಆದಿಯಾದ ಪ್ರಾಣಿಗಳ ಸಮುದಾಯಗಳಿಂದ ಪೂರಿತವಾಗಿ ಶೋಭಿಸಲು ಅರೂಹವಾಗಿದ್ದವು. ತರುತರುಗಳ ಪೊದೆಗಳಲ್ಲಿಅತಿಸಣ್ಣ ತರದ ಜೀವರಾಶಿಗಳು, ಸೂರ್ಯನ ಐದಯಕ್ಕೆ ಹುಟ್ಟಿ ಮಧ್ಯೃಹ್ನಕಾಲದಲ್ಲಿ ಪ್ರಾಯಕ್ಕೆ ಬಂದು,ಅಸ್ತಮಸಮಯಕ್ಕೆ ಮರಣಹೊಂದುತ್ತಿರಲು,ಅದನ್ನು ಕಂಡು ಆಶ್ಚರ್ಯಪಟ್ಟನು.
ಮತ್ತೆ ಮುಂದೈದುವ ತುರಂಗಮದ ಕೂಡೆ ನಡೆ।
ಯುತೆ ಬರಿದೊಗಲುಡಿಗೆಯವರ ವಕ್ರಾಂಗಿಗಳ।
ನೊತ್ತೋಳವರನೊಂದು ಕಾಲವರನೊಂದು ಕಣ್ಣವರ ಮೂರಡಿಗಳವರ॥
ಉತ್ತುಂಗ ನಾಸಿಕದವರ ಮೂರು ಈಣ್ಣವರ।
ನೆತ್ತಿಗೋಡೆರಡುಳ್ಳವರನೊಂದು ಕೋಡುವರ।
ಕತ್ತೆ ಮೊಗದವರ ಕುದುರೆಮೊಗದವರ ದೇಶಂಗಳಂ ಕಂಡನಾ ಕಲಿಪಾರ್ಥನು॥೨೦॥
ಪ್ರತಿಪದಾರ್ಥ :- ಮತ್ತೆ= ಇನ್ನು, ಮುಂದೆ= ಮುಂದಿನ ರಾಜ್ಯಕ್ಕೆ, ಐದುವ= ಪ್ರಯಾಣಮಾಡುತ್ತಿರುವ,ತುರಂಗಮದ= ಅಶ್ವದ, ಕೂಡೆ= ಒಂದಿಗೆ, ನಡೆವುತ್ತ= ಪ್ರಯಾಣಮಾಡುತ್ತ, ಬರಿದೊಗಲು= ಬರಿ ತೊಗಲಿನಿಂದ ಮಾಡಿರುವ, ಉಡಿಗೆಯ= ಉಡುಪುಳ್ಳವರನ್ನು, ವಕ್ರಾಂಗಿಗಳು= ವಿಕಾರವಾದ ಶರೀರವುಳ್ಳವರನ್ನು,ಒತ್ತೋಳವರನು= ಒಂದೇತೋಳುಳ್ಳವರನ್ನು, ಒಂದುಕಾಲವರನ್ನು= ಒಂದೇ ಕಾಲುಳ್ಳವರನ್ನು, ಒಂದು ಕಣ್ಣವರನ್ನು= ಒಂದೇ ಕಣ್ಣುಳ್ಳವರನ್ನು, ಮೂರಡಿಗಳವರ= ಮೂರು ಕಾಲುಳ್ಳವರನ್ನು, ಉತ್ತುಂಗದ= ಎತ್ತರವಾದ, ನಾಸಿಕದವರ= ಮೂಗುಳ್ಳ ಜನರನ್ನು, ಮೂರು ಕಣ್ಣವರ= ಮೂರು ಕಣ್ಣುಗಳುಳ್ಳವರನ್ನು, ನೆತ್ತಿ= ತಲೆಯಮೇಲೆ, ಕೋಡೆರಡುಳ್ಳವರನು= ಎರಡು ಶೃಂಗಗಳುಳ್ಳವರನ್ನು,ಒಂದು ಕೋಡವರ= ಏಕ ಶೃಂಗವುಳ್ಳವರನ್ನು,ಕತ್ತೆಮೊಗದ= ಖರಮುಖವುಳ್ಳವರನ್ನು, ಕುದುರೆಮೊಗದವರ= ಅಶ್ವಮುಖವುಳ್ಳವರ, ದೇಶಂಗಳಂ= ಮೇಲೆ ಹೇಳಿದ ಜನರಿರುವ ರಾಜ್ಯಗಳನ್ನು, ಆ ಕಲಿಪಾರ್ಥನು= ಅಸಹಾಯಶೂರನಾದ ಧನಂಜಯನು, ಕಂಡನು= ಈಕ್ಷಿಸಿದನು.
ಅ॥ವಿ॥ ವಕ್ರವಾದ+ ಅಂಗವುಳ್ಳವರು= ವಕ್ರಾಂಗಿಗಳು (ಬ. ಸ.) ಮೂರಾದ ಕಣ್ಣುಗಳ ಸಮಾಹಾರವು= ಮೂಗಣ್ಣು,
(ದ್ವಿ. ಸ.) ಕೋಡುತ್ಭ) ಕೂಟ(ತ್ಸ) ಮೊಗ(ತ್ಭ) ಮುಖ(ತ್ಸ) ಕಲಿ=ಶೂರ, ಕಲಿಯುಗ, ಕಲಿಯಾದ + ಪೃರ್ಥ= ಕಲಿಪಾರ್ಥ( ವಿ.
ಪೂ. ಕ)
ತಾತ್ಪರ್ಯ:-ಮತ್ತೆ ಮುಂದಿನ ರಾಜ್ಯಕ್ಕೆ ಪ್ರಯಾಣಮಾಡುತ್ತಿರುವಯಜ್ಞಾಶ್ವದ ಕೂಡೆ ನಡೆಯುತ್ತಾಬರೀ ತೊಗಲಿನಿಂದ ಮಾಡಿರುವ ವಸ್ತ್ರವುಳ್ಳವರನ್ನೂ, ವಕ್ರಾಂಗಿಗಳನ್ನೂ,ಒಂದು ತೋಳುಳ್ಳವರನ್ನೂ, ಒಂದೆಕಾಲುಳ್ಳವರನ್ನೂ, ಒಂದೇ ಕಣ್ಣುಳ್ಳವರನ್ನೂ ,ಮೂರುಅಡಿಗಳು ಅಡಿಗಳು ಉದ್ದದವರನ್ನೂ, ಉದ್ದವಾದ ಮೂಗುಳ್ಳವರನ್ನೂ, ಮುಕ್ಕಣ್ಣರನ್ನೂ, ತಲೆಯ ಮೇಲೆ ಎರಡು ಕೊಂಬುಗಳುಳ್ಳವರನ್ನೂ,ಒಂದೇ ಕೊಂಬುಳ್ಳವರನ್ನೂ,ಕತ್ತೆ ಮೊಗದವರನ್ನೂ, ಕುದುರೆ ಮೊಗದವರನ್ನೂ ಈ ಜನರು ವಾಸಮಾಡುವ ಸ್ಥಳಾದಿಗಳನ್ನೂ, ಅಸಹಾಯಶೂರನಾದ ಧನಂಜಯನು ನೋಡಿ ಮನಸ್ಸಿನಲ್ಲಿ ಆಶ್ಚರ್ಯ ಹೊಂದಿದನು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ