ಜೈಮಿನಿ ಭಾರತ 15 - ದೊಡ್ಡಬೆಲೆ ನಾರಾಯಣಶಾಸ್ತ್ರಿ
ಸೂಚನೆ:- ತಣ್ಗದಿರನನ್ವಯದ ಪಾರ್ಥನ ತುರಂಗಮದು।
ಪೆಣ್ಗುದುರೆಯಾಗಿಪೆರ್ಬುಲಿಯಾಗಾ ಪಳಿಯಂತೆ।
ಕಣ್ಗೊಳಿಸುವಮಲಾಶ್ವಮಾಗಿ ಯಾಶ್ಚರ್ಯದಿಂ ಸ್ರೀರ್ಜ್ಯಮಂ ಪೊಕ್ಕುದು॥
ಪ್ರತಿಪದಾರ್ಥ :- ತಣ್ಗದಿರನ= ತಂಪಾದ ಕಿರಣವುಳ್ಳ ಇಂದುವಿನ(ಚಂದ್ರನ) ಅನ್ವಯದ= ವಂಶೋದ್ಭವನಾದ, ಪಾರ್ಥನ= ಫಲುಗುಣನ, ತುರಂಗಂ=ಯಜ್ಞದ ಕುದುರೆಯು, ಅದು= ಅದೇ ಕುದುರೆಯೇ, ಪೆಣ್ಗುದುರೆಯಾಗಿ= ಹೆಂಗುದುರೆಯಾಗಿ, ಪೆರ್ಬುಲಿ ಆಗಿ= ದೊಡ್ಡ ವ್ಯಾಘ್ರವಾಗಿ, ಮೇಣ್=ಮತ್ತು, ಪಳೆಯಂತೆ= ಹಿಂದಿನ ರೂಪದಂತೆ, ಕಂಗೊಳಿಸುತ= ಹೊಳೆಯು-
ತ್ತ, ಅಮಲ= ಕೊಳೆಯಿಲ್ಲದ, (ನಿರ್ಮಲವಾದ,) ಅಶ್ವಂ= ತುರುಗವು, ಆಗುತ್ತಾ=ರೂಪವನ್ನು ಧರಿಸುತ್ತ, ಆಶ್ಚರ್ಯದಿಂ= ಸೋಜಿಗವನ್ನುಂಟುಮಾಡುವ ರೀತಿಯಿಂದ, ಸ್ತ್ರೀರಾಜ್ಯಮಂ= ಸ್ತ್ರೀಯರ ದೇಶವನ್ನು ಎಂದರೆ (ಮಲಯಾಳ ದೇಶವನ್ನು)
ಪೊಕ್ಕುದು= ಪ್ರವೇಶಿಸಿತು.
ಅ॥ವಿ॥ ತಣ್ಣಿತ್ತು+ ಕದಿರ್= ತಣ್ಗದಿರ್ ( ವಿ. ಪೂ. ಕ. ) ತಣ್ಗದಿರುಳ್ಳವನು ಯಾರೋ ಅವನು ತಣ್ಗದಿರ( ಬಹು. ಸ. ) ಅನ್ವಯ= ಕೈಲ, ವಂಶ. ಪೃಥೆಯ ಮಗ ಪಾರ್ಥ, ಪೆಣ್+ಕುದುರೆ=ಪೆಣ್ಗುದುರೆ ( ಗಕಾರ ಆದೇಶ ಸಂ.) ಪಿರಿದು + ಪುಲಿ=ಪೆರ್ಬುಲಿ ( ವಿ.ಪೂ. ಕ. ) ಸ್ತ್ರೀಯರ +ರಾಜ್ಯ= ಸ್ತ್ರೀರಾಜ್ಯ (ಷ. ತ. ) ಪೊಕ್ಕುದು, ಪೋಗು ಧಾತು, ಪೊಕ್ಕುದು ಕ್ರಿಯಾ ಪದ, ಭೂತರೂಪ, ಏಕವಚನ, ಪ್ರಥಮಪುರುಷ. ( ಕುದುರೆಯು ಸ್ತ್ರೀರಾಜ್ಯಮಂ ಪೊಕ್ಕುದು ಎಂಬೀ ವಾಕ್ಯವು ಸಾಮಾನ್ಯ ವಾಕ್ಯವಾಗಿದೆ, ಪ್ರಥಮಾಂತ ಕರ್ತೃ, ದ್ವಿತೀಯಾಂತ ಕರ್ಮ, ಕ್ರಿಯಾ ಪದವೂ ಇದೇ ಆದ್ದರಿಂದ ಸಕರ್ಮಕ ಕರ್ತರೀ ಪ್ರಯೋಗವು.
ವಿಸ್ತರಿಪೆನಿನ್ನು ಮೇಲ್ಗತೆಯನಾಲಿಸು ನೃಪರ।
ಮಸ್ತಕದ ಮೌಳಿ ಜನಮೇಜಯ ಧರಾನಾಥ।
ಹಸ್ತಿನಾಪುರಕೆ ಬಂದಸುರಾರಿ ಹಂಸಧ್ವಜನ ದೇಶದಿಂದೆ ತಂದ॥
ವಸುತ್ಗಳನವನಿಪತಿಗೊಪ್ಪಿಸಿದನಲ್ಲಿಯ ಸ।
ಮಸ್ತ ವೃತ್ತಾಂತಮಂ ವಿವರಿಸಿದನಿತ್ತ ಸುಭ।
ಟಸ್ತೋಮಸಹಿತರ್ಜುನಂ ಬಡಗಮುಂತಾಗಿ ತಿರುಗಿದಂ ತುರಗದೊಡನೆ॥೧॥
ಪ್ರತಿಪದಾರ್ಥ :- ನೃಪರ= ರಾಜರ, ಮಸ್ತಕದ=ಶಿರದ ಮೇಲಿನ, ಮೌಳಿ= ಕಿರೀಟದ ಹಾಗೆ ಉತ್ತಮನಾದ, ಜನಮೇಜಯ = ಜನಮೇಜಯನೆಂಬ ಹೆಸರುಳ್ಳ, ಧರಾನಾಥ= ಪೃಥವೀಪತಿಯೆ! ಇನ್ನು=ಇನ್ನು ಮುಂದೆ, ಮೇಲ್ಕಥೆಯನು= ಮೇಲೆ ಸೂಚನೆಯ ರೂಪವಾಗಿ ಹೇಳಿದ ಕಥಾಂಶವನ್ನು, ವಿಸ್ತರಿಪೆಂ= ವಿವರಿಸುತ್ತೇನೆ, ಆಲಿಸು = ಕೇಳುವವನಾಗು, ಅಸುರಾರಿ= ಶ್ರೀಕೃಷ್ಣನು, ಹಸ್ತಿನಾಪುರಕೆ ಬಂದು= ಇಭ ನಗರಕ್ಕೆ ಬಂದು, ಹಂಸಧ್ವಜನ = ಮರಾಳಧ್ವಜನ, ದೇಶದಿಂದ= ರಾಜ್ಯದಿಂದ, ತಂದ= ತೆಗೆಸಿಕೊಂಡು ಬಂದಿರುವ, ವಸ್ತುಗಳಂ= ಸಮಸ್ತ ವಸ್ತ್ರಾಭರಣಗಳನ್ನು, ಅವನಿಪತಿಗೆ= ಭೂಮಿಪತಿಯಾದ ಧರ್ಮಜನಿಗೆ, ಒಪ್ಪಿಸಿದಂ= ಒಪ್ಪಿಸಿದನು, ಅಲ್ಲಿಯ= ಆ ಹಂಸಧ್ವಜನ ರಾಜ್ಯದಲ್ಲಿ ನಡೆದ, ಸಮಸ್ತ = ಸಕಲವಾದ, ವೃತ್ತಾಂತಮಂ= ವರ್ತಮಾನವನ್ನು, ವಿವರಿಸಿದಂ=ಬಿತ್ತರಿಸಿದನು, ಇತ್ತ= ಈ ಸ್ಥಳದಲ್ಲಿ, ಸುಭಟ= ಯೋಗ್ಯರಾದ ವೀರರ, ಸ್ತೋಮ=ಗುಂಪಿನ, ಸಹಿತ= ಕೂಡ, ಅರ್ಜುನಂ= ಪಾರ್ಥನು, ತುರಗದ= ಯಜ್ಞಾಶ್ವದ, ಒಡನೆ= ಸಂಗಡಲೆ,ಬಡಗ= ಉತ್ತರ ಭಾಗದಲ್ಲಿರುವ ರಾಜ್ಯವೇ, ಮುಂತಾಗಿ= ಆದಿಯಾಗಿ, ತಿರುಗಿದಂ= ಸಂಚಾರ ಮಾಡಿದನು.
ಅ॥ವಿ॥ ಬಿತ್ತರ (ತ್ಭ) ವಿಸ್ತಾರ (ತ್ಸ) ಮೇಲಿನ+ ಕಥೆ= ಮೇಲ್ಕತೆ ( ವಿ. ಪೂ. ಕ. ) ಮೌಳ= ಕಿರೀಟ, ಶ್ರೇಷ್ಠ, ಧರೆಯ+ ನೃಥ = ಧರಾನಾಥ ( ಷ. ತ. ) ಹಸ್ತೆನವೆಂಬ+ಪುರ= ಹಸ್ತಿನಾಪುರ (ಸಂ. ಪೂ. ಕ. ) ಅಥವಾ ರೂಪಕ ಸಮಾಸ.
ತಾತ್ಪರ್ಯ:- ರಾಜ ಕುಲಕ್ಕೆ ಕಿರೀಟಪ್ರಾಯನಾದ ಎಲೈ ಜನಮೇಜಯರಾಯನೆ! ಇನ್ನು ಮುಂದೆ ನಡೆದ ಕಥಾಸಂದರ್ಭವನ್ನು ವಿವರಿಸುತ್ತೇನೆ ಆಲಿಸು, ಶ್ರೀಕೃಷ್ಣನು ಹಂಸಧ್ವಜನ ನಗರವಾದ ಚಂಪಕಾವತಿ ನಗರದಿಂದ ತಂದ ರತ್ನಾಭರಣಾದಿ ಸಕಲೈಶ್ವರ್ಯವನ್ನೂ, ವಸ್ತು ವಾಹನಾದಿಗಳನ್ನೂ ಗಜಪುರಿಯಲ್ಲಿದ್ದ ಧರ್ಮರಾಯನಿಗೆ ಒಪ್ಪಿಸಿ, ಊಲ್ಲಿ ನಡೆದ ಸಂಗತಿಗಳನೆಲ್ಲಾ- ವಿಸ್ತಾರವಾಗಿ ವಿವರಿಸಿ ಸರ್ವರೂ ಸುಖದಿಂದಿರುತ್ತಿರಲು, ಇತ್ತಲೃ ಅರ್ಜುನನು ತುರಗದ ಸಂಗಡ ಉತ್ತರ ದಿಕ್ಕಿನಲ್ಲಿರುವ ದೇಶಾದಿಗಳನ್ನು, ಸಂಚರಿಸುತ್ತಿದ್ದನು.
ಅಲ್ಲಿಂದ ಮುಂದೆ ನಡೆದುದು ಗ್ರೀಷ್ಮ ಕಾಲದೊಳ್।
ಸಲ್ಲಲಿತವಾಜಿ ಪಾರಿಪ್ಲವಕೆ ಭೂತಲದೊ।
ಳೆಲ್ಲಿಯುಂ ಕೆರೆತೊರೆಗಳೊರತೆ ಬರೆತವು ನೀರ್ನೆಳಲ್ಗಳನರಸಿ ಪಾಂಥರು॥
ಘಲ್ಲಿಸುವ ಬೇಸಗೆಯ ಬಿಸಿಲಿಂದೆ ಮೂಜಗಂ।
ತಲ್ಲಣಿಸಿತಿಳೆಯ ಕಾಹಿಳಿದು ಪಾತಾಳದಹಿ।
ವಲ್ಲಭನ ಪಡೆವಣಿಯ ರುಚಿಗಳಾತಪದಂತೆ ಕಾಣಿಸದೆ ಮಾಣೆವೆನಲು॥೨॥
ಪ್ರತಿಪದಾರ್ಥ :- ಸಲ್ಲಲಿತ = ಮನೋಹರವಾದ, ವಾಜಿ= ಆ ಯಜ್ಞಾಶ್ವವು, ಅಲ್ಲಿಂದ=ಆ ಮರಾಳಧ್ವಜನ ರಾಷ್ಟ್ರದಿಂದ, ಗ್ರೀಷ್ಮ ಕಾಲದೊಳ್= ಗ್ರೀಷ್ಮ ಋತುವಿನಲ್ಲಿ,(ಜ್ಯೇಷ್ಠಾಷಾಢ ಮಾಸಗಳಲ್ಲಿ) ಪಾರಿಪ್ಲವಕ್ಕೆ = ಪಾರಿಪ್ಲವವೆಂಬ ರಾಜ್ಯಕ್ಕೆ, ಮುಂದೆ= ಮೊದಲೆ, ನಡೆದುದು= ಹೋಯಿತು, ಭೂತಳದೊಳು= ಪೃಥ್ವಿಯಲ್ಲಿ, ಕೆರೆ=ಕೆರೆಯು, ತೊರೆ=ಸಣ್ಣ ಹೊಳೆಯು, ಒರತೆ= ಜೌಗು ನೀರಿರುವ ಸ್ಥಳವು, ಒರತುದು= ಬತ್ತುತ್ತ ಬಂತು, ಪಾಂಥರು= ಪ್ರಯಾಣಿಕರು, ನೀರ್ನೆಳಲ್ಗಳಂ= ನೀರು ಮತ್ತು ಛಾಯೆಯನ್ನು, ಅರಸೆ= ಹುಡುಕಲು, ಇಳೆಯ= ಪೃಥ್ವಿಯ, ಕಾಹು= ಶಾಖವು, ಇಳಿದು= ಕೆಳಭಾಗಕ್ಕೆ ಹೋಗಿ, ಪಾತಾಳದ= ಪಾತಾಳಲೋಕದ, ಅಹಿವಲ್ಲಭನ= ಸಾಸಿರ ಹೆಡೆಯುಳ್ಳ ಆದಿಶೇಷನ, ಪೆಡೆ= ಹೆಡೆಯ ಪ್ರದೇಶದಲ್ಲಿರುವ, ಮಣಿ= ಜೀವ ರತ್ನಾದಿಗಳ, ರುಚಿಗಳು= ತೇಜಸ್ಸುಗಳು, ಆತಪದಂತೆ= ಬಿಸಿಲಿನ ಹಾಗೆ, ಕಾಣಿಸದೆ=ತೋರ್ಪಡಿಸದೆ, ಮಾಣವೆನಲು= ಬಿಡಲಾರೆವು ಎಂಬಂತೆ, ಘಲ್ಲಿಸುವ= ಬೇಗೆಯನ್ನುಂಟುಮಾಡುವ, ಬೇಸಗೆಯ= ಚೈತ್ರ ವೈಶಾಖ ಮಾಸದ ಬಿಸಿಲಿನಿಂದ, ಮೂಜಗಂ= ಮೂರು ಲೋಕಗಳೂ, ತಲ್ಲಣಿಸಿತು= ತಾಪಗೊಂಡಿತು.
ಅ॥ವಿ॥ ಲಲಿತವಾದ +ವಾಜಿ= ಲಲಿತವಾಜಿ ( ವಿ, ಪೂ. ಕ.) ತುರ=ವೇಗವಾಗಿ, ಗ= ಗಮಿಸುವುದು - ಕುದುರೆ, ಪಾರಿಪ್ಲವ= ಚಂಚಲ, ಪಾರಿಪ್ಲವ ದೇಶ, ಭೂಮಿಯ+ತಳ= ಭೂತಳ(ಷ. ತ. ) ಕೆರೆಯೂ, ತೊರೆಯೂ ಇವು ಕೆರೆತೊರೆಗಳು( ದ್ವಂ. ಸ. ) ಬೇಸಗೆ (ತ್ಭ) ವೈಶಾಖ (ತ್ಸ.)
ತಾತ್ಪರ್ಯ:- ಅನಂತರದಲ್ಲಿ ಅತಿ ಮನೋಹರವಾಗಿ ರಾಜಿಸುವ ಯಜ್ಞಾಶ್ವವು ಗ್ರೀಷ್ಮರುತುವಿನಲ್ಲಿ ಪಾರಿಪ್ಲವವೆಂಬ ರಾಜ್ಯಕ್ಕೆ ಮೊದಲೇ ಪ್ರವೇಶಿಸಿತು, ಭೂತಳದಲ್ಲಿ ಕೆರೆ ತೊರೆಗಳು, ಕೂಪ ತಟಾಕಾದಿಗಳು, ಒರತೆ ಮೊದಲಾದ ಜೌಗುಪ್ರದೇಶಗಳು, ಬತ್ತಿಹೋಗಲುಪಕ್ರಮಿಸಿದವು, ಪ್ರಯಾಣಿಕರು ದಾಹಗೊಂಡು ನೀರು ಮತ್ತು ನೆಳಲುಗಳನ್ನು ಹುಡುಕಲು ಪ್ರಾರಂಭಿಸಿದರು, ಭೂಮಿಯ ಶಾಖವು ಪಾತಾಳಲೋಕದವರೆಗೂ ಇಳಿಯುತು, ಅಲ್ಲಿರುವ ಸಾಸಿರಫಣಾಧರನಾದ ಆದಿಶೇಷನ ಹೆಡೆಗಳಲ್ಲಿನ ಜೀವರತ್ನಾದಿಗಳ ತೇಜಸ್ಸುಗಳು, ಆತಪದಂತೆ ತೋರದೆ ಇರಲಾರವೋ ಎಂಬಂತೆ, ತಾಪವನ್ನುಂಟುಮಾಡುವ ಬಿಸಿಲಿನ ತಾಪದಿಂದ ಮೂಲೋಕಗಳೂ ತಾಪಗೊಂಡವು.
ಒಂದುಕಡೆಯೊಳ್ ಸೋವಲೊಂದುಕಡೆಯೊಳ್ ತಮಕೆ।
ನಿಂದು ಮರೆಯಾಗಿರ್ಪ್ಪುದಿನ್ನಿದಂ ಕರಗಿಸುವೆ।
ನೆಂದು ಕನಕಾಚಲವನುರಿಪುವನೊ ತರಣಿ ಕಿರಣದೊಳೆನೆ ಬಿಸಿಲ್ಗರೆಯಲು॥
ಬೆಂದು ಬೆಂಡಾಗಿ ಕುಲಶೈಲಂಗಳಾಸರಿಂ।
ಕಂದರದ ಮೊಗದಿಂದೆ ಬಿಡುವ ಬಿಸುಸಯ್ಯೆಲರ್।
ಬಂದಪುದೆನಲ್ಕೆ ಝಳದಿಂ ಬಿಡದೆ ಬೀಸುತಿರ್ದುದು ಗಾಳಿ ಬೇಸಗೆಯೊಳಗೆ॥೩॥
ಪ್ರತಿಪದಾರ್ಥ :- ಒಂದುಕಡೆಯೊಳ್ = ಒಂದೆಡೆಯಲ್ಲಿ, ಸೋವಲ್= ಅಂಧಕಾರವನ್ನು ಹೋಗಲಾಡಿಸಲು, ತಮಕೆ= ಆ ಅಂಧಕಾರಕ್ಕೆ, ಒಂದುಕಡೆಯೊಳ್ = ಇನೊಂದು ಕಡೆಯಲ್ಲಿ, ನಿಂದು=ನಿಂತುಕೊಂಡುದಾಗಿ, ಮರೆಯಾಗಿ= ಯಾರಿಗೂ ಕಾಣಿಸದಂತೆ, ಇರ್ಪುದು=ಇರುತ್ತದೆ, ಇನ್ನು= ಇನ್ನು ಮುಂದೆ, ಇದಂ= ಈ ಅಂಧಕಾರವನ್ನು, ಕರಗಿಸುವೆಂ= ಹೋಗಲಾಡಿ-
ಸುವೆನು, ಎಂದು= ಎಂಬುದಾಗಿ ಹೇಳಿ, ಕನಕಾಚಲವನು= ಸುವರ್ಣಾದ್ರಿಯನ್ನು,ಎಂದರೆ ( ಮೇರು ಪರ್ವತವನ್ನೆಲ್ಲಾ ) ತರಣಿ= ಭಾಸ್ಕರನು, ಕಿರಣದೊಳು= ಕದಿರ್ಗಳಿಂದ( ಕಾಂತಿಯಿಂದ, ಉರುಪುವನೋ= ಉರಿಸುತ್ತಾನೆಯೋ ಎಂದರೆ ( ಕರಗಿಸುವನೊ) ಎನೆ= ಎನ್ನುವಂತೆ, ಬಿಸಿಲ್ಗರೆಯಲು= ಬಿಸಿಲನ್ನುಟುಮಾಡಲಾಗಿ, ಬೆಂದು= ದಹಿಸಿ, ಬೆಂಡಾಗಿ = ಹಗುರವಾಗಿ, ಕುಲಶೈಲಂಗಳು= ಸಪ್ತ ಕುಲಾಚಲಗಳು, ಆಸರಿಂ= ದಣಿವಿನಿಂದ, ಕಂದರದ= ಕಣಿವೆಯ, ಮೊಗದಿಂ= ಮುಖದಿಂದ, ಎಂದರೆ ( ಗರಿಗಳೆಂಬ ಮುಖದಿಂದ) ಬಿಡುವ= ವಿಸರ್ಜಿಸುವ, ಸುಯ್ಯೆಲರ್= ದೀರ್ಘನಿಶ್ವಾಸದ ಗಾಳಿಯು, ಬಂದಪುದು= ಬರುವುದು, ಎನಲ್ಕೆ= ಎಂಬುವ ಹಾಗೆ, ಜಳದಿಂದ= ಬಿಸಿಲ ದಾಹದಿಂದ, ಬಿಡದೆ= ಅವಕಾಶವಿಲ್ಲದೆ, ಗಾಳಿ= ಗಾಳಿಯು,( ಮಾರುತವು) ಬೇಸಿಗೆಯೊಳು= ಬೇಸಿಗೆಯ ಕಾಲದಲ್ಲಿ, ಬೀಸುತ್ತಿರೆ= ಚಲಿಸುತ್ತಿರಲು ( ಬೇಸಿಗೆಯುಂಟಾಯ್ತು)
ಅ॥ವಿ॥ ಬಿಸಿಲ್+ ಕರೆ= ಬಿಸಿಲ್ಗರೆ (ಗಕಾರ, ಆದೇಶ, ಸಂ.) ಬೆಚ್ಚನೆಯಸುಯ್=ಬಿಸುಸುಯ್ ( ವಿ. ಪೂ. ಕ. ) ಎಲರ್ = ಗಾಳಿ, ಅಲರ್=ಹೂ, ಕನಕದ+ಅಚಲ=ಕನಕಾಚಲ ( ಷ. ತ. ) ಸಪ್ತಕುಲಪರ್ವತಗಳು= ಹಿಮವಂತ, ನಿಷದ, ವಿಂಧ್ಯ, ಮಾಲ್ಯವಂತ, ಪಾರಿಯಾತ್ರಕ, ಗಂಧಮಾದನ,ಹೇಮಕೂಟ.
ತಾತ್ಪರ್ಯ:- ಆಗ ಒಂದು ಕಡೆಯಲ್ಲಿ ತಮವನ್ನು ಹೋಗಲಾಡಿಸಲು, ಆ ತಮಕ್ಕೆ ಮತ್ತೊಂದೆಡೆಯಲ್ಲಿನೆಲೆಯನೀವುದು, ಇದನ್ನು ಕರಗಿಸುತ್ತೇನೆ(ಇಲ್ಲದ ಹಾಗೆ ಮಾಡುತ್ತೇನೆ) ಎಂಬುದಾಗಿ ಕನಕಾಚಲವನ್ನೆಲ್ಲಾ ಸೂರ್ಯನು ತನ್ನ ಕಿರಣಗಳಿಂದ ಉರಿಸುವನೋ ಎಂಬಂತೆ ತೀಕ್ಷ್ಣವಾಗಿ ಬಿಸಿಲ್ಗರೆಯಲು ಸುಟ್ಟು ನಿಶ್ಶಕ್ತಿಯಾಗಿ, ಸಪ್ತಕುಲಪರೂವತಗಳು, ದಣಿವಿನಿಂದ ಗುಹೆಗಳೆಂಬ ಮುಖದಿಂದ ಹೊರಹಾಕುವ ನಿಡಿದುಸುರ್ಗಾಳಿಯು ಬರುತಿರ್ಪುದೊ ಎನ್ನುವಂತೆ ಬಿಸಿಲಿನ ತಾಪದಿಂದ ವಿರಾಮವಿಲ್ಲ, ಭೂಮಿಯ ಸಮಸ್ತವಾದ ಪರ್ವತಪ್ರಾಂತವನ್ನಾವರಿಸಿ, ಸಕಲ ಪ್ರಾಣಿಗಳೂ ಪರಿತಾಪಪಡುತ್ತಿರುವ,
ಸಹಿಸಲಸಾಧ್ಯವಾದ, ಗ್ರೀಷ್ಮ ಋತುವೆಂಬ ರಾಜನು, ಸೂರ್ಯನ ತಾಪದಿಂದುಂಟಾಗುವ ಬಿಸಿಲ್ದೊರೆಗಳೆಂಬ ಕುದುರೆಗಳಿಂದಲೂ, ಸೂರ್ಯನ ಕಾವೆಂಬ ರಥದಿಂದಲೂ, ಬಿಸಿಲಿನ ಆತಪದಿಂದುಂಟಾದ ಜ್ವಾಲೆಯೆಂಬ ಆನೆಗಳಿಂದಲೂ
ಅಧಿಕವಾಗಿ ಆವರಿಸಿಕೊಂಡಿರುವವೃಕ್ಷಗಳಿಂದ ಐದುರಿದ್ದ ಎಲೆಗಳೆಂಬ ಸೈನ್ಯದಿಂದಲೂ, ಯುದ್ಧಕ್ಕೆ ಸನ್ನಧ್ಧನಾಗಿ ಬರುವಂತೆ ತೋರಿಬರುತ್ತಿದ್ದನು, ಎಂದರೆ ವಿಶೇಷವಾಗಿ ಬಿಸಿಲು ತಾಪವನ್ನುಂಟುಮಾಡುತ್ತಿತ್ತು. (ಉತ್ಪ್ರೇಕ್ಷಾಲಂಕಾರ)
ಅವನಿಯೊಳ್ ಸಕಲ ಭೂಭೃತ್ಕುಲದ ಸೀಮೆಗಳ।
ನವಗಡಿಸಿ ಪೊಕ್ಕು ನಿಖಿಳಪ್ರಾಣಿಗಳ್ಗೆ ತಾ।
ಪವನೊದವಿಸುವ ದುರ್ಧರ ಗ್ರೀಷ್ಮರಾಜನ ನೆಗಳ್ದ ಚತುರಂಗಮೆನಲು॥
ರವಿಯ ಕಡುಗಾಯ್ಪುಗಳ್ ತೇರೈಸಲೊತ್ತರಿಸಿ।
ಕವಿದುವ ಬಿಸಿಲ್ಗುದುರೆಗಳ್ ಕಾಯ್ದರಿಯ ಕರಿಗ।
ಳವಧಿಯಿಲ್ಲದೆ ಮುಸುಕಿದುವು ಬಹಳ ತರುಗಳಿತ ದಳದಳಾಳಿಗಳಿಡಿದುವು॥೪॥
ತಾತ್ಪರ್ಯ:- ಭೂಮಿಯ ಮೇಲಿನ ಸಮಸ್ತ ಪರ್ವತ, ಬೆಟ್ಟ ಗುಡ್ಡಗಳನ್ನು ನಿರ್ಭಯವಾಗಿ (ಅತಿಕ್ರಮಿಸಿ) ಹೊಕ್ಕು ಸಮಸ್ತ ಪ್ರಾಣಿಗಳಿಗೂ ತಾಪವನ್ನುಂಟುಡುವ ಸೂರ್ಯನ ಚತುರಂಗವೋ ಎಂಬಂತೆ ಬಿಸಿಲುಗುದುರೆ, ಹೆಚ್ಚಿನಕಾವೆಂಬ ತೇರು, ಉರಿಯೆಂಬ ಆನೆ, ಉದುರಿದ ಎಲೆಗಳೆಂಬ ಕಾಲಾಳುಗಳು ಕಂಡರು.
ಅರವಟ್ಟಿಗೆಯೊಳಿರ್ದು ನೀರೆರೆವ ತರಳೆಯರ।
ಬರಿವೇಟಕೆಳಸಿ ತಪಿಸುವ ಪಥಿಕರಂ ಬಯ।
ಲ್ದೊರೆಗಾಸೆಯಿಂ ಪರಿದು ಬಳಲುವ ಮೃಗಗಳಂ ಕರುವಾಡದೊಳ್ ದಳದೊಳು॥
ಉರುವ ಕಾಂತೆಯರ ಕೂಟದ ಸೊಕ್ಕುದಕ್ಕೆಯೊಳ್।
ಮಿರುಗುವಧರಾಮೃತವನೀಂಟಿ ಸೊಗಸುವ ಸುಖಿಗ।
ಳುರೆ ಜರೆವ ತನಿವೇಸಗೆಯ ದಿನದೊಳಧ್ವರಾಶ್ವದ ಕೂಡೆ ಪಡೆ ನಡೆದುದು॥೫॥
ಪ್ರತಿಪದಾರ್ಥ :- ಅರವಟ್ಟಿಗೆಯೊಳ್= ನೀರನ್ನು ಕುಡಿಯಲು ಯೋಗ್ಯವಾದ ಮನೆಯಲ್ಲಿ, ಇರ್ದು= ಇದ್ದುಕೊಂಡು, ನೀರ=ಉದಕವನ್ನು, ಎರೆವ= ಜನರಿಗೆ ಹಾಕುವ( ನೀರನ್ನು ಕೊಡುವ) ತರಳೆಯರ= ಸ್ತ್ರೀಯರ, ಬರಿ= ನಿಷ್ಪ್ರಯೋಜಕವಾದ
ಬೇಟಕೆ=ಠೀವಿಗೆ, ಅಂದರೆ(ಸ್ರಕ್ಚಂದನಾದಿ ವಿಷಯಗಳಿಗೆ) ಎಳಸಿ= ಆಸೆಪಟ್ಟು, ತಪಿಸುವ= ಕಾಮಾತಿಶಯದಿಂದ ತಾಪಪ-
ಡುತ್ತಿರುವ, ಪಥಿಕರಂ= ದಾರಿಗರನ್ನು, ಬಯಲ್ದೊರೆಯ= ಮರೀಚಿಕೆಯ, ಗಾಸಿಯಂ= ನೀರಿನ ಭ್ರಾಂತಿಯಿಂದ, ಪರಿದು= ಹರಿದಾಡಿ,( ಓಡಾಡಿ,) ಬಳಲುವ= ಆಯಾಸಪಡುವ, ಮೃಗಂಗಳಂ= ಜಿಂಕೆಗಳನ್ನು, ಕರುವಾಡದ= ಮಹಡಿಯ,ಒಳ್ದಳದೊ-
ಳು= ಒಳಗಿನ ಭಾಗದಲ್ಲಿ, ಉರುವ=ಪ್ರಕಾಶಿಸುತ್ತಿರುವ, ಕಾಂತೆಯರ=ಸ್ತ್ರೀಯರ, ಕೂಟದ=ಗುಂಪಿನ, ಸೊಕ್ಕು= ಕಾಮಾತಿ-
ಶಯದಿಂದುಂಟಾದ ಅಹಂಕಾರವು, ದಕ್ಕೆಯೋಳ್= ಬಾಯಾತಿಕೆಯಲ್ಲಿ, (ದಾಹ) ಮಿರುಗುವ= ಪ್ರಜ್ವಲಿಸುವ, ಅಧರ= ತುಟಿಯಲ್ಲಿರುವ, ಅಮೃತವನು= ಸೊದೆಯನ್ನು, ಈಂಟಿ= ಪಾನಮಾಡಿ, ಸೊಗಸುವ= ಅಲಂಕಾರಾದಿಗಳಿಂದ ಪ್ರಕಾಶಿಸುವ
ಸುಖಿಗಳು=ವಿಷಯಿಗಳು, (ಭೋಗ ಭೋಕ್ತೃಗಳು) ಉರೆ= ಬಹುವಾಗಿ, ಜರಿವ= ತಿರಸ್ಕರಿಸುವ, ತನಿ= ಹೊಸದಾಗಿ ಬಂದಿರುವ, ಬೇಸಿಗೆಯ= ಬಿಸಿಲು ಕಾಲದ, ದಿನದೊಳು= ದಿನದಲ್ಲಿ, ಪಡೆ= ಪಾರ್ಥನ ಸೇನೆಯು, ಅಧ್ವರ= ಯಜ್ಞದ, ಅಶ್ವದ=ತುರಗದ, ಕೂಡೆ= ಸಂಗಡ, ನಡೆದುದು= ಹೊರಟಿತು.
ತಾತ್ಪರ್ಯ:- ಆಗ ಅರವಟ್ಟಿಗೆಯಲ್ಲಿದ್ದುಕೊಂಡು ಪಾಂಥರಿಗೆ ನೀರನ್ನು ಎರೆಯುತ್ತಿರುವ ಸ್ತ್ರೀಯರ ನಿಷ್ಪ್ರಯೋಜನವಾದ ಲಾವಣ್ಯಕ್ಕೆ ಆಶೆಪಟ್ಟು ಕಾಮಾತಿಶಯದಿಂದ, ದಹಿಸುತ್ತಲಿರುವ ದಾರಿಗರನ್ನು ಬಿಸಿಲ್ದೊರೆಯಲ್ಲಿ ನೀರಿನ ಭ್ರಾಂತಿಯಿಂದ ಸುಳಿದಾಡುತ್ತ ಬಳಲುವ ಜಿಂಕೆಗಳನ್ನು, ಮಹಡಿಯ ಒಳಗಿನ ಭಾಗದಲ್ಲಿ ಪ್ರಕಾಶಿಸುತ್ತಿರುವ ಸ್ತ್ರೀಯರ ಸಂಗಡ ಕಾಮಾತಿಶಯದಿಂದ ಅಧರಾಮೃತವನ್ನು ಪಾನಮಾಡಿ, ಸೊಕ್ಕಿರುವ ರಸಿಕರನ್ನು ಅಲಂಕಾರಾದಿಗಳಿಂದ ಪ್ರಕಾಶಿಸುವ ವಿಷಯಗಳನ್ನೂ, ಅಧಿಕವಾಗಿ ತಿರಸ್ಕರಿಸುವ,ಬೇಸಿಗೆಯ ದಿನದಲ್ಲಿ ಪಾರ್ಥನ ಸೇನೆಯು ಯಜ್ಞಾಶ್ವದ ಸಂಗಡ ಹೊರಟಿತು.
ಅನುಸಾಲ್ವ ಪ್ರದ್ಯುಮ್ನ ವೃಷಕೇತು ಯೌವನಾ।
ಶ್ವನ ತನಯ ನೀಲಧ್ವಜರ್ ನರಂಗಿವರೈವ।
ರನುವರ್ತಿಗಳ್ ಬಳಿಕ ಹಂಸಧ್ವಜನ ಸಖ್ಯಮಾದುದದಕಿಮ್ಮಡಿಯೆನೆ॥
ತನತನಗೆ ಮುಂಕೊಂಡು ನಡೆದುದಾ ತುರಗದೊಡ।
ನನಿಬರ ಚತುರ್ಬಲಂ ಬಹಳ ಗಿರಿ ಪುರ ದೇಶ।
ವನ ಪಳ್ಳ ಕೊಳ್ಳಂಗಳಂ ತುಳಿದು ಕಣದ ಘಟ್ಟಣೆಯಂತೆಸಮಮಾಗಲು॥೬॥
ಪ್ರತಿಪದಾರ್ಥ :- ಅನುಸಾಲ್ವ=ಅನುಸಾಲ್ವನೆಂಬುವನು, ಪ್ರದ್ಯುಮ್ನ = ಕೃಷ್ಣನ ಮಗನಾದ ಪ್ರದ್ಯುಮ್ನನೆಂಬುವನು, ವೃಷಕೇತು=ಕರ್ಣನ ಮಗನು, ಯೌವನಾಶ್ವನ = ಯವನನ ಮಗನಾದ ಯೌವನಾಶ್ವನೆಂಬುವನ, ತನಯ= ಪುತ್ರನಾದ, ಸುವೇದನೆಂಬುವನು, ನೀಲಧ್ವಜರು= ನೇಲಧ್ವಜನೇ ಮೊದಲಾದವರುಗಳು, ಇವರ್= ಈ ಐದು ಮಂದಿಗಳು, ನರಂಗೆ= ಪಾರ್ಥನಿಗೆ, ಅನುವರ್ತಿಗಳ್= ಹಿಂಬಾಲಕರು, ಬಳಿಕ =ಅನಂತರದಲ್ಲಿ, ಹಂಸಧ್ವಜನ = ಮರಾಳಧ್ವಜನ, ಸಖ್ಯಂ= ಸ್ನೇಹಭಾವವು, ಆದುದಕೆ= ಆದ ತರುವಾಯ, ಇಮ್ಮಡಿ= ಎರಡರಷ್ಟು ಸೇನೆಯು, ಎನೆ= ಎಂಬುವಂತೌ, ತನತನಗೆ= ತಮ್ಮತಮ್ಮಷ್ಟಕ್ಕೆ, ಮುಂಕೊಂಡು= ಮುಂದಾಗಿ ನುಗ್ಗಿ, ಅನಿಬರ= ಆ ಸಕಲ ರಾಜರ, ಚತುರ್ಬಲಂ = ನಾಲ್ಕು ಬಗೆಯಾದ ಸೇನೆಯು, ಆ ತುರಗದ= ಆ ಕುದುರೆಯ, ಒಡನೆ=ಸಂಗಡ, ಬಹಳ= ಹೆಚ್ಚಾದ, ಗಿರಿ=ಪರ್ವತಗಳು, ಪುರ= ಪಟ್ಟಣಗಳು, ದೇಶ= ನಾಡುಗಳು, ಕಾಡು= ಅರಣ್ಯ ಪ್ರದೇಶಗಳು, ಬೀಡುಗಳು= ಹಾಳು ಪ್ರದೇಶಗಳು, ವನ=ಉದ್ಯಾನ ವನಗಳು, ಪಳ್ಳ= ಹಳ್ಳಗಳು, ಕೊಳ್ಳಂಗಳ= ದಿಣ್ಣೆ ಮೊದಲಾದವುಗಳನ್ನು, ತುಳಿದು= ಮೆಟ್ಟಿ, ಕಣದ= ಧಾನ್ಯವನ್ನು ಬಡಿಯುವುದಕ್ಕಾಗಿ ಮಾಡಿದ ಸ್ಥಳದ, ಘಟ್ಟಣೆಯಂತೆ= ದೊಣ್ಣೆಯಿಂದಶಬಡಿದು ಸಮಮಾಡಿದಂತೆ, ಸಮಂ= ಹಳ್ಳ, ತಿಟ್ಟಿಲ್ಲದಂತೆ ಸಮಮಾಗಲು= ಸರಿಯಾದದ್ದು ಆಗಲಾಗಿ.
ಅ॥ ವಿ॥ ಅದು+ತುರಗ=ಆ ತುರಗ( ಗಮಕ. ಸ. ) ವೃಷಭವೇ +ಧ್ವಜದಲ್ಲಿ ಉಳ್ಳವನು= ವೃಷಭಧ್ವಜ ( ಬ. ಸ. ) ಎರಡು ಪದ್ಯಗಳಿಗೆ ಒಂದೇ ಕ್ರಿಯಾಪದವಿದ್ದರೆ (ಯುಗ್ಮವೆಂದು ), ಮೂರುಪದ್ಯಗಳಿಗೆ ಒಂದೇ ಕ್ರಿಯಾಪದವಿದ್ದರೆ (ವಿಶೇಷಕವೆಂದೂ) ನಾಲ್ಕು ಪದ್ಯಗಳಿಗೆ ಒಂದೇ ಕ್ರಿಯಾಪದವಿದ್ದರೆ (ಕಲಾಪಕವೆಂದೂ), ನಾಲ್ಕರಮೇಲೆ ಅನೇಕ ಪದ್ಯಗಳಿಗೆ ಒಂದೇ ಕ್ರಿಯಾಪದವಿದ್ದರೆ ( ಕುಳಕವೆಂದೂ ಸಂಜ್ಞೆಯುಂಟು)
ತಾತ್ಪರ್ಯ:- ಆ ಬಳಿಕ ಅನುಸಾಲ್ವ, ಪ್ರದ್ಯುಮ್ನ, ವೃಷಕೇತು, ಯೌವನಾಶ್ವನ ಸುತನಾದ ಸುವೇಗ, ನೀಲಧ್ವಜ ಇವರೇ ಮೊದಲಾಗಿರುವ ಈ ಐದು ಮಂದಿಗಳು ಯಾವಾಗಲೂ ಪಾರ್ಥನನ್ನು ಅನುಸರಿಸಿ ನಡೆಯತಕ್ಕವರಾಗಿದ್ದರು, ತರುವಾಯ ಹಂಸಧ್ವಜನ ಮೈತ್ರಿಯುಂಟಾದ ಅನಂತರದಲ್ಲಿ ಎರಡರಷ್ಟು ಸೇನೆಯಾಗುವಂತೆ ತಾವು ತೃವೆ, ಮುಂದಾಗಿನುಗ್ಗಿ ಸಕಲ ರಾಜರ ಚತುರ್ಬಲವೂ ಆ ಯಜ್ಞಾಶ್ವದ ಸಂಗಡಲೇ ಅನೇಕವಾದ ಪರ್ವತಗಳು, ನಗರಗಳು, ಪಟ್ಟಣಗಳು, ಕಾಡುಗಳು, ಗಟ್ಟಪ್ರದೇಶಗಳು,ಹಳ್ಳಗಳು, ಉದ್ಯಾನವನಗಳು, ದೇಶಗಳು, ಹಾಳುನೆಲಗಳು, ಇವೇ ಮೊದಲಾದುವನ್ನು ತುಳಿದು ತುಳಿದು ಧಾನ್ಯವನ್ನು ಬಡಿಯಲೋಸುಗವಾಗಿ ಮಾಡಿರುವ ಕಣಗಳ ಪ್ರದೇಶದಂತೆ ಗಟ್ಟಣಿಯಾಗಿ ಸಮಮಾಗಿಸಿತು.
ಹಯಮುತ್ತರಾಭಿಮುಖಮಾಗಿ ಪಾರಿಪ್ಲವದ ಧ।
ರೆಯೊಳೈದಿ ಪೆಣ್ಗುದುರೆಯಾಗಿ ಪುಲಿಯಾಗಿ ವಿ।
ಸ್ಮಯದಿಂದೆ ಪಾರ್ಥನಂ ಬೆದರಿಸಿ ಮುರಾರಿಯ ಮಹಿಮೆಯಿಂದ ಮುನ್ನೆನಂತೆ॥
ನಿಯಮಿತಮಖಾಶ್ವಮಾದತ್ತೆನಲ್ಕಾಗ ಸಂ।
ಶಯದಿಂದೆ ಜನಮೇಜಯಂ ಮುನಿಪ ತಿಳಿಪು ನಿ।
ಶ್ಚಯವನೀ ತುರಗಮಿಂತಾದ ಕಥನವನಿಂದು ಬೆಸಗೊಂಡೊಡಿಂತೆಂದನು॥೭॥
ಪ್ರತಿಪದಾರ್ಥ :- ಹಯಂ= ಆ ಯಜ್ಞಾಶ್ವವು, ಉತ್ತರಾಭಿಮುಖಮಾಗಿ= ಉತ್ತರ ದೇಶಕ್ಕೆ ಎದುರಾಗಿ, ಪಾರಿಪ್ಲವ= ಪಾರಿಪ್ಲವವೆಂಬ, ಧರೆಯೊಳು= ಭೂಮಿಯಲ್ಲಿ, ಐದಿ= ಪ್ರವೇಶಮಾಡಿ, ಪೆಣ್ಗುದುರೆಯಾಗಿ = ಹೆಣ್ಣು ಕುದುರೆಯಾಗಿ, ಪುಲಿಯಾಗಿ= ಹುಲಿಯ ರೂಪವನ್ನು ಹೊಂದಿ, ವಿಸ್ಮಯದಿಂದ= ಆಶ್ಚರ್ಯದಿಂದ, ಪಾರ್ಥನಂ= ಫಲ್ಗುಣನನ್ನು, ಬೆದರಿಸಿ= ಅಂಜಿಕೊಳ್ಳುವಂತೆ ಮಾಡಿ, ಮುರಾರಿಯ= ಶ್ರೀಕೃಷ್ಣನ, ಮಹಿಮೆಯಿಂದ =ಮಹಾತ್ಮೆಯಿಂದ, ಮುನ್ನಿನಂತೆ= ಮೊದಲಿನಹಾಗೆ, ನಿಯಮಿತ=ಸರಿಯಾದ, ಮಖಾಶ್ವಂ= ಯಜ್ಞದ ಕುದುರೆಯು, ಆದಂತೆ= ಆದಹಾಗೆ, ಎನಲ್ಕೆ= ಎಂಬುದಾಗಿ ಹೇಳಲು, ಆಗ= ಆ ವೇಳೆಯಲ್ಲಿ, ಸಂಶಯದಿಂದ= ಅನುಮಾನದಿಂದ (ಸಂದೇಹದಿಂದ ) ಜನಮೇಜಯಂ= ಜನಮೇಜಯರಾಯನು, ಮುನಿಪ= ಎಲೈ ಮುನಿ ಶ್ರೇಷ್ಠನಾದಜೈಮಿನೀಂದ್ರನೆ! ತುರಗಂ= ಆ ಕುದುರೆಯು, ಇಂತಾದ= ಈ ರೀತಿಯಾದ, ಕಥನವ= ಕಥಾ ಸಂದರ್ಭದ, ನಿಶ್ಚಯಂ= ನಿಜವನ್ನು, ತಿಳಿಪು= ತಿಳಿಸುವನಾಗು, ಎಂದು=ಎಂತ, ಬೆಸಗೊಂಡೊಡೆ = ಕೇಳಿಕೊಳ್ಳಲಾಗಿ, ಅವಂ= ಆ ಜೈಮಿನಿ ಋಷಿಯು, ಇಂತು ಎಂದನು= ಈ ಪ್ರಕಾರವಾಗಿ,ಹೇಳಲುಪಕ್ರ-
ಮಿಸಿದನು.
ಅ॥ವಿ॥ ಪೆಣ್+ಕುದುರೆ= ಪೆಣ್ಗುದುರೆ ( ಆದೇಶ. ಸಂ. ) ಮುರ= ಮುರನೆಂಬ, ರಕ್ಕಸನಿಗೆ, ಅರಿ=ಶತ್ರು-ಕೃಷ್ಣನು, ಮಖ=ಯಜ್ಞ, ಮುಖ= ಮೋರೆ.
ತಾತ್ಪರ್ಯ:-ಆಗ ಕುದುರೆಯು ಉತ್ತರಕ್ಕೆ ಅಭಿಮುಖವಾಗಿ,ಪಾರಿಪ್ಲವವೆಂಬ ಭೂಪ್ರದೇಶದಲ್ಲಿ ಹೋಗಿ, ಮೊದಲು ಹೆಣ್ಣು ಕುದುರೆಯಾಗಿ, ಅನಂತರ ಪೆರ್ಬುಲಿಯಾಗಿ,ಆಶ್ಚರ್ಯದಿಂದ ಪಾರ್ಥನನ್ನು ಹೆದರಿಸಿ, ಮುರಾರಿಯಾದ ಶ್ರೀಕೃಷ್ಣನ ಸಹಾಯದಿಂದ ಮೊದಲಿನಂತೆ ಸರಿಯಾದ ಯಜ್ಞಾಶ್ವವು ಆದಂತೆ ಎಂದು ಹೇಳಲು, ಆ ಸಮಯದಲ್ಲಿ ಅನುಮಾನದಿಂದ ಭೂಪಾಲನಾದ ಜನಮೇಜಯರಾಯನು ಮುನಿಗಳಲ್ಲಿ, ಎಲೈ ಋಷಿವರ್ಯನೆ! ಆ ಕುದುರೆಯು ನಾನಾ ರೀತಿಯಾದ ಬದಲಾವಣೆಗಳನ್ನು ಹೊಂದಲು ಕಾರಣವೇನು? ಇದರ ನಿಜಾಂಶವನ್ನು ತಿಳಿಸುವನಾಗೆಂದು ಕೇಳಿಕೊಳ್ಳಲಾಗಿ ಜೈಮಿನಿ
ಮುಂದಿನ ರೀತಿಯಲ್ಲಿ ಹೇಳಲುಪಕ್ರಮಿಸಿದನು.
ಧರಣಿಪತಿ ಕೇಳಾದೊಡಿನ್ನು ಪೂರ್ವದೊಳಿಂದು।
ಧರನಂ ಮನೋಭಾವದಿಂದರ್ಚಿಸುವೆನೆಂದು।
ಗಿರಿತನುಜೆ ತಪಕೆ ಪುಣ್ಯಾರಣ್ಯಮಾವುದೆಂದರಸಿಕೊಂಡೈತರಲ್ಕೆ॥
ಪರಿಶೋಭಿಸಿತು ಮುಂದೆ ಹಂಸ ಕಾರಂಡ ಮಧು।
ಕರ ಕೋಕ ಮಧುರ ಮೃದುತರ ಕಲಮದೋತ್ಕರ।
ಸ್ವರ ಕಮಲ ಕುವಲಯ ವಿರಾಜಿತ ಶ್ರೀಕರಂ ಪದ್ಮಾಕರಂ ಚೆಲ್ವೆನೆ॥೮॥
ಪ್ರತಿಪದಾರ್ಥ :- ಧರಣಿಪತಿ= ಪೃಥ್ವೀಪತಿಯಾದ ಜನಮೇಜಯರಾಯನೆ, ಆದೊಡೆ= ಆ ಕಥಾಸಂದರ್ಭವನ್ನು ತಿಳಿಯಬೇಕಾಗಿದ್ದರೆ, ಇನ್ನು ಕೇಳ್= ಇನ್ನು ಮುಂದೆ ವಿವರಿಸುವೆನು ಕೇಳು, ಪೂರ್ವದೋಳ್= ಕೆಲವು ಕಾಲದ ಹಿಂದೆ, ಗಿರಿತನುಜೆ= ಪರೂವತರಾಜನಾದ ಹಿಮವಂತನ ಪುತ್ರಿಯಾದ ಹೈಮವತಿಯು, ಇಂದುಧರನಂ= ಚಂದ್ರಶೇಖರನಾದ
ಪರಮೇಶ್ವರನನ್ನು, ಮನೋಭಾವದಿಂ= ಮನೋವ್ಯಾಪಾರದಿಂದ, ಅರ್ಚಿಸುವೆನು= ಸೇವಿಸುವೆನು(ಪೂಜಿಸುತ್ತೇನೆ) ಎಂದು= ಎಂಬುದಾಗಿ, ತಪಕೆ= ತಪಸ್ಸನ್ನು ಮಾಡಲಿಕ್ಕೆ, ಪುಣ್ಯ=ಪವಿತ್ರವಾದ, ಅರಣ್ಯಂ= ವನಪ್ರದೇಶವು, ಆವುದು= ಯಾವುದಿರುತ್ತದೆ, ಎಂದು=ಅಂದುಕೊಂಡು, ಅರಸಿಕೊಂಡು = ಅನ್ವೇಶಣೆ ಮಾಡುತ್ತಾ( ಹುಡುಕುತ್ತಾ) ಐತರಲ್ಕೆ= ಬರಲಾಗಿ, ಮುಂದೆ= ಮುಂದುಗಡೆಯಲ್ಲಿ, ಹಂಸ=ಮರಾಳವು, ಕಾರಂಡ= ಬಾತುಕೋಳಿಯು, ಮಧುಕರ=ದುಂಬಿಯು, ಕೋಕ= ರಥಾಂಗವು( ಚಕ್ರವಾಕ ಪಕ್ಷಿಯು) ಇವೇ ಆದಿಯಾದ ಪಕ್ಷಿಗಳ, ಮಧುರ= ಸವಿಯಾದ, ಮೃದುತರ= ಅತಿ ಮೆತ್ತಗಿರುವ, ಕಲ=ಮಧುರವಾದ ಕಲಕಲದ, ಸ್ವನ= ಶಬ್ಧದ, ಮದೋತ್ಕರ= ಮದಾಧಿಕ್ಯದಿಂದ ಕೂಡಿದ,ಕಮಲ= ಅರವಿಂದಗಳಿಂದಲೂ, ಕೈವಲಯ= ಕನ್ನೈದಿಲೆಗಳಿಂದಲೂ, ವಿರಾಜಿಪ= ಕಾಂತಿಯನ್ನು ಬೀರುತ್ತಿರುವ,ಪದ್ಮಾಕರಂ=ಪುಷ್ಕ-
ರಿಣಿಯು, ಚೆಲ್ವೆನೆ= ಸುಂದರವಾಗಿರುವಂತೆ, ಕಾಣಿಸಿತು= ತೋರಿಬಂತು.
ಅ॥ವಿ॥ ಇಂದುವನ್ನು+ಧರಿಸಿರುವವನು=ಇಂದುಧರ(ಕೃ. ವೃ. ) ಗಿರಿಯ +ತನುಜೆ= ಗಿರೆತನುಜೆ ( ಷ. ತ. )ಪುಣ್ಯ=ಸುಕೃತ, ಸುಖವನ್ನು ಕೊಡುವ ಧರ್ಮ, ಪವಿತ್ರ, ಸುಂದರ, ಹಂಸ(ತ್ಸ) ಅಂಚೆ(ತೂಭ) ಮೃದುತರ=ಗುಣವಾಚಕ, ಕುವಲಯ=ಕನ್ನೈ-
ದಿಲೆ, ಆಕರ(ತ್ಸ)ಆಗರ( ತ್ಭ) ಪದ್ಮ=ಕಮಲಗಳಿಗೆ, ಆಕರ=ಸರಸ್ಸು(ಆಶ್ರಯವಾದದ್ದು)
ತಾತ್ಪರ್ಯ:- ಎಲೈ ಪೃಥ್ವೀಪತಿಯಾದ ಜನಮೇಜಯರಾಯನೆ! ಆ ಕುದುರೆಯು ನಾನಾ ವಿಕಾರವನ್ನು ಹೊಂದಲುಂಟಾದ ಕಥಾಸಂದರ್ಭವನ್ನು ತಿಳಿಯಬೇಕಾಗಿದ್ದರೆ ಅದನ್ನು ವಿವರಿಸುತ್ತೇನೆ ಕೇಳುವವನಾಗು, ಪೂರ್ವದಲ್ಲಿ ಪರ್ವತರಾಯನ ಪುತ್ರಿಯಾದ ಪಾರ್ವತಿಯು, ಚಂದ್ರಧರನಾದ ಈಶ್ವರನನ್ನು ಮನೋವ್ಯಾಪಾರದಿಂದ ಸೇವಿಸುತ್ತೇನೆಂದು ಪುಣ್ಯಪ್ರದಮಾದ ಸ್ಥಳವನ್ನು ಹುಡುಕುತ್ತಾ ಬರಲಾಗಿ ಆ ಪಾರ್ವತಿಯ ಮುಂಭಾಗದಲ್ಲಿ ಮರಾಳವು, ನೀರು ಹಕ್ಕಿಯು, ಭ್ರಮರವು, ಚಕ್ರವಾಕ,
ಅತಿಮೃದುವಾದ ಅವ್ಯಕ್ತ ಮಧುರ ಸ್ವನಂಗಳಿಂದ,ಕೂಡಿ ಕಮಲ, ಕನ್ನೈದಿಲೆ, ಮೊದಲಾದ ಪುಷ್ಪಗಳಿಂದ ವಿರಾಜಿಸುತ್ತಿರುವ ಪುಷ್ಕರಣಿಯು ಪಾರ್ವತೀದೇವಿಯ ಕಂಗಳಿಗೆ ಕಂಡುಬಂತು.
ಲಸದಮಲರತ್ನಸೋಪಾನದಿಂ ಮೀನದಿಂ।
ಬಿಸವನಾಸ್ವಾದಿಸುವ ಚಕ್ರದಿಂ ನಕ್ರದಿಂ।
ದೆಸೆದೆಸೆಗೆ ಬೀರ್ವ ತನಿಗಂಪಿನಿಂ ತಂಪಿನಿಂ ತೊಳಪ ಹಿಮಕರಕಾಂತದ॥
ಪೊಸಸಣ್ಣಿಗೆವೊಲಿಡಿದ ಪುಳಿನದಿಂ ನಳಿನದಿಂ।
ದೊಸೆದು ಬಿನದಿಪ ಹಂಸಕೇಳಿಯಿಂದೋಳಿಯಿಂ।
ದೆಸೆವ ನೀರ್ವಕ್ಕಿಗಳ ಸಂಗದಿಂ ಭೃಂಗದಿಂದಾಕೊಳಂ ಕಣ್ಗೆಸೆದುದು॥೯॥
ಪ್ರತಿಪದಾರ್ಥ :- ಅದು=ಆ ಪದ್ಮಾಕರವು,ಲಸತ್= ಪ್ರಕಾಶಮಾನವಾದ, ಅಮಲ= ನಿರ್ಮಲವಾದ, ರತ್ನ= ರತ್ನಮಣಿಗ-
ಳಿಂದ ಯುತಮಾದ, ಸೋಪಾನದಿ= ಪಾವಟಿಗೆಗಳಿಂದಲೂ, ಮೀನದಿಂ= ಮೀನುಗಳಿಂದಲೂ, ಬಿಸವನು=ತಾವರೆಯ
ನಾಳವನ್ನು, ಆಸ್ವಾದಿಸುವ= ರುಚಿನೋಡುವ, ಚಕ್ರದಿಂ= ರಥಾಂಗಳಿಂದಲೂ, ನಕ್ರ= ದೊಡ್ಡ ಮೀನುಗಳಿಂದಲೂ,ದೆಸೆದೆ-
ಸೆಗೆ= ಪ್ರತಿ ದಿಕ್ಕಿಗೂ, ಬೀರ್ವ= ಎರಚುತ್ತಿರುವ, ತನಿ=ನೂತನವಾದ, ಗಂಪಿನಿಂ= ಸುವಾಸನೆಯಿಂದಲೂ, ತಂಪಿನಿಂ= ಶೈತ್ಯದಿಂದಲೂ, ತೊಳಪ= ಪ್ರಕಾಶಿಸುವ, ಹಿಮಕಾಂತದ = ಹಿಮವನ್ನುಂಟುಮಾಡುವ ಶಿಲೆಯ ಅಂದರೆ (ಚಂದ್ರಕಾಂತ
-ಶಿಲೆಯ) ಪೊಸ= ಹೊಸದಾದ, ಸಣ್ಣಿಗೆಯೊಳು= ಅಣುರೂಪದಿಂದ, ಇಡಿದ= ವ್ಯಾಪ್ತವಾದ, ಪುಳಿನದಿಂ = ಮಳಲು ದಿಣ್ಣೆಗಳಿಂದಲು, ನಳಿನದಿಂ= ಪದ್ಮಗಳಿಂದಲೂ, ಒಸೆದು= ಸುಂದರವಾಗಿ,(ಪ್ರೀತಿಸಿ) ಬಿನದಿಪ= ಮಧುರ ಧ್ವನಿಮಾಡುತ್ತಿ-
ರುವ, ಹಂಸ= ಅಂಚೆಗಳ, ಕೇಳಿಯಿಂದ= ಕ್ರೀಡೆಯಿಂದ, ಓಳಿಯಿಂದ= ಸಮೂಹದಿಂದ, ಎಸೆವ= ಹೊಳೆಯುವ, ನೀರ್ವಕ್ಕಿಗಳು= ಸಾರಸ ಪಕ್ಷಿಗಳ,ಸಂಘದಿಂ= ಸಮೂಹದಿಂದ, ಭೃಂಗದಿಂ= ದುಂಬಿಗಳಿಂದಲೂ,(ಷಟ್ಪದಗಳಿಂದಲೂ) ಆ ಕೊಳಂ= ಆ ಪದ್ಮಾಕರವು, ಕಣ್ಗೆ= ಕಣ್ಣುಗಳಿಗೆ, ಎಸೆದುದು= ಹೊಳೆಯಿತು.
ಅ॥ವಿ॥ ಲಸತ್+ಅಮಲ= ಲಸದಮಲ( ಜ. ಸಂ. ) ರತ್ನ(ತ್ಸ) ರನ್ನ (ತ್ಭ) ಹಿಮ=ಹಿಮವನ್ನು, ಕರ= ಉಂಟುಮಾಡತಕ್ಕವನು
= ಹಿಮಕರ( ಕೃ. ವೃ.)
ತಾತ್ಪರ್ಯ:- ಆ ಪದ್ಮಾಕರವು ಪ್ರಕಾಶಮಾನವಾದ ಮತ್ತು ನಿರ್ಮಲವಾದ, ರತ್ನಖಚಿತಮಾದ ಸೋಪಾನಗಳಿಂದಲೂ ಮೀನುಗಳಿಂದಲೂ, ತಾವರೆಯ ನಾಳವನ್ನು ಸವಿನೋಡುವ ಚಕ್ರವಾಕದಂಪತಿಗಳಿಂದಲೂ, ದೊಡ್ಡ ದೊಡ್ಡ ಮೊಸಳೆಗಳಿಂದಲೂ, ನಾಲ್ಕು ದಿಕ್ಕುಗಳಿಗೂ ಬಡಿಯುತ್ತೆರುವ,ನೂತನವಾದ ಸುವಾಸನೆಗಳಿಂದಲೂ, ಶೈತ್ಯದಿಂದಲೂ, ಪ್ರಕಾಶಿಸುವ ಚಂದ್ರಕಾಂತ ಶಿಲೆಗಳಿಂದಲೂ, ನೂತನವಾದ ಮತ್ತು ಸಣ್ಣಗಿರುವ ಮಳಲು ದಿಣ್ಣೆಗಳಿಂದಲೂ, ಪದ್ಮಗಳಿಂದಲೂ, ಸುಂದರವಾದ ಮಧುರಧ್ವನಿಗೈವ ರಾಜಹಂಸಪಕ್ಷಿಗಳಿಂದಲೂ, ಸಾರಸಗಳ ಜಲಕ್ರೀಡೆಗಳಿಂದಲೂ, ನಾನಾ ಬಗೆಗಳಾದ ಜಲಚರಗಳಿಂದಲೂ, ಭ್ರಮರಗಳಿಂದಲೂ, ನೋಟಕರ ಕಣ್ಗೆ ಪ್ರಕಾಶಿಸುತ್ತಿತ್ತು.
ತಳದೊಳೊಪ್ಪುವ ಪಸುರೆಸಳ ರೋಚಿಯಿಂ ನಡುವೆ।
ತೊಳಪ ಕೆಂದಳದ ದೀಧಿತಿಯಿಂದೆ ಮೇಲೆ ಕಂ।
ಗೊಳಿಪ ಹೊಂಗೇಸರದ ಕಾಂತಿಯಿಂದೆರಗುವ ಸಿತಾಳಿಯ ಮರೀಚಿಯಿಂದೆ॥
ಹೊಳೆಹೊಳೆವ ಕೋಕನದ ಪಂಙ್ತಿಗಳ ಬಣ್ಣಮು।
ಜ್ವಲದಿಂದ್ರಚಾಪದಾಕಾರಮಂ ಸಂತತಂ।
ಪಳಿವಂತೆ ಕೊಳದೊಳಾರಾಜಿಸಿತು ತುಹಿನ ಗಿರಿರಾಜನಂದನೆಯ ಕಣ್ಗೆ॥೧೦॥
ಪ್ರತಿಪದಾರ್ಥ :- ಮೇಣ್=ಮತ್ತು,ಆ ಕೊಳಂ=ಆ ಸರಸ್ಸು,ತಳದೊಳು= ತಳಭಾಗದಲ್ಲಿ, ಒಪ್ಪುವ=ಹೊಂದಿರುವ, ಪಸರು=
ಹಸುರು ಬಣ್ಣವಾಗಿರುವ,ಎಸಳ=ಪತ್ರಗಳ, ರೋಚಿಯಿಂ = ಪ್ರಕಾಶದಿಂದ, ನಡುವೆ= ಮಧ್ಯಭಾಗದಲ್ಲಿ, ತೊಳಪ= ಪ್ರಕಾಶಿ-
ಸುವ, ಕೆಂದಳದ= ಕೆಂಪಾದ ಪದ್ಮದ ಎಸಳಿನಿಂದ ಕೂಡಿದ, ದೀಧಿತಿಯಿಂದ= ಕಾಂತಿಯಿಂದ, ಮಂಲೆ= ಮೇಲಿನ ಪ್ರದೇಶದಲ್ಲಿ, ಕಂಗೊಳಿಪ=ಹೊಳೆಯುತ್ತಿರುವ,( ಕಂಗಳಿಗೆ ಪ್ರಕಾಶಿಸುತ್ತಿರುವ, ಹೊಂಗೇಸರದ= ಹೊನ್ನಿನ ಬಣ್ಣದ ಹೂವಿನ, ಕಾಂತಿಯಿಂದ= ಪ್ರಭೆಯಿಂದ, ಎರಗುವ= ಬಂದು ಬೀಳುತ್ತಿರುವ,ಅಸಿತ=ಕಪ್ಪಾದ, ಅಳಿಯ=ದುಂಬಿಯ, ಮರೀಚಿಯಿಂದ= ಕಾಂತಿಯಿಂದಲು, ಹೊಳಹೊಳೆವ= ಅತ್ಯಂತವಾಗಿ ಪ್ರಕಾಶಿಸುವ, ಕೋಕನದ= ಕೆಂದಾವರೆಯ, ಪಪಂಙ್ತಿಗಳ=ಹಂತಿಗಳ, ಬಣ್ಣಂ= ಬಣ್ಣವು, ಉಜ್ವಲದ= ಹೊಳೆಯುತ್ತಿರುವುದಾದ, ಇಂದ್ರಚಾಪದ= ಇಂದ್ರನ ಬಿಲ್ಲಿನ, ಆಕಾರಮಂ= ರೀತಿಯನ್ನು, ಸಂತತಂ= ಸರ್ವದಾ, ಪಳಿವಂತೆ= ತಿರಸ್ಕರಿಸುವ ಹಾಗೆ, ಕೊಳದೊಳು= ಸರೋವರದಲ್ಲಿ, ತುಹಿನ= ಮಂಜಿನ, ಗಿರಿ= ಪರ್ವತದ, ರಾಜ= ದೊರೆಯ, ನಂದನೆಯ= ಮಗಳಾದ ಪಾರ್ವತಿಯ, ( ಹಿಮವಂತನ ಮಗಳಾದ ಪಾರ್ವತಿಯ) ಕಣ್ಗೆ= ಕಣ್ಣುಗಳಿಗೆ, ಆರಾಜಿಸಿತು= ಕಾಂತ್ಯತಿಶಯದಿಂದಿತ್ತು.
ಅ॥ವಿ॥ ಹೊನ್ನಿನಂತಿರುವ+ಕೇಸರ= ಹೊಂಗೇಸರ( ಉ. ಪೂ. ಕ. ) ಇಂದ್ರನ+ಚಾಪ= ಇಂದ್ರ ಚಾಪ= (ಷ. ತ. ) ಕೇಸರ= ಸಿಂಹದ ಕತ್ತಿನ ಸುತ್ತಲಿರುವ ಕೂದಲು, ಪುವ್ವಿನ ಕುಸುಮ, ಬಕುಳ ವೃಕ್ಷ, ನಾರು, ಗಡ್ಡೆ, ಸುರಗೀಮರ.
ತಾತ್ಪರ್ಯ:- ಮತ್ತು ಆ ಸರಸ್ಸು, ತನ್ನ ಒಳಭಾಗದಲ್ಲಿ ಕಾಂತ್ಯತಿಶಯಮಾದ ಚಿಗುರಿನಿಂದ ಹಸುರಾದ ಎಲೆಗಳ ಪ್ರಕಾಶದಿಂ-
ದಲು, ಮಧ್ಯಭಾಗದಲ್ಲಿ ಥಳಥಳಿಸುವ ಕೆಂಪು ಕಮಲಗಳಿಂದಾವೃತಮಾದ ಕಾಂತಿಯಿಂದಲೂ, ಆ ಕಮಲಗಳ ಮೇಲುಗಡೆ ಮಕರಂದಕ್ಕಾಗಿ ಕೂತಿದ್ದ ಕಪ್ಪಾದ ಬಣ್ಣದಿಂದ ಪ್ರಕಾಶಿಸುವ ಭ್ರಮರ ಪಙ್ತಿಗಳ ಕಾಂತಿಯಿಂದಲೂ, ಅತ್ಯಂತವಾಗಿ ಪ್ರಕಾಶಿಸುವ ಕನ್ನೈದಿಲೆಯ ರಾಜಿಗಳಿಂದಲೂ, ಸರ್ವ ಕಲದಲ್ಲಿಯೂ, ಪಂಚ ವರ್ಣಗಳಿಂದ ಶೋಭಿಸುತ್ತಿರುವ ಇಂದ್ರಚಾಪವನ್ನು ತಿರಸ್ಕರಿಸುತ್ತ ಪ್ರಕಾಶಿಸುತ್ತಿತ್ತು.
ನಿರುತಂ ಕುಮುದಶೋಬಿ ನೈರುತ್ಯದಂತೆ ವಾ।
ನರಸೈನ್ಯದಂತೆ ಕಮಲೋದರೋದ್ಭಾಸಿ ಭಾ।
ಸುರ ಶುಕ್ಲಪಕ್ಷದಂತಹಿತಲ್ಪದಂತೆ ಕವಿಸೇವಿತಂ ಗಗನದಂತೆ॥
ಧರಣಿಪಾಲಯದಂತೆ ಸುಮನೋಹರಂ ನಿಶಾ।
ಚರವಂಶದಂತೆ ಮಾಲಾಕಾರಜನದಂತೆ।
ಹರಿಜನ್ಮಭೂಮಿ ಗೋಕುಲದಂತೆ ವನದಂತೆ ತತ್ಸರಂ ಕಂಗೊಳಿಸಿತು॥೧೧॥
ಪ್ರತಿಪದಾರ್ಥ :- ತತ್ಸರಂ= ಆ ಪದ್ಮಾಕರವು, ನಿರುತಂ=ಯಾವಾಗಲೂ, ನೈಋತ್ಯದಂತೆ= ನೈರುತ್ಯನೆಂಬ ರಾಕ್ಷಸನ ದೆಸೆಯ
ಹಾಗೂ ವಾನರ=ಕಪಿಯ,ಸೈನ್ಯದಂತೆ= ಸೇನೆಯ ಹಾಗೆಯೂ, ಶೋಭಿ=ಪ್ರಕಾಶಿಸುವುದು, ಹೇಗೆಂದರೆ ರಾಕ್ಷಸದಿಕ್ಕಿನ ಪರವಾಗಿನಿರುತಂ=ಸರ್ವದಾಕುಮುದ=ಕುಮುದವೆಂಬ ದಿಗ್ಗಜದಿಂದ,ಶೋಭಿ=ಪ್ರಕಾಶಿಸುತ್ತಿರುವುದು, ನೈರುತ್ಯದಿಕ್ಕು, ವಾನರ ಸೈನ್ಯದ ಪರವಾಗಿ, ನಿರುತಂ=ಯಾವಾಗಲೂ, ಕುಮುದ=ಕುಮುದನೆಂಬ ಕಪಿಶ್ರೇಷ್ಠನಿಂದ, ಶೋಭಿ= ಪ್ರಕಾಶಿಸು-
ವುದು, ವಾನರ ಸೈನ್ಯವು, ಸರಸ್ಸಿನ ಪರವಾಗಿ, ನಿರಂತರ= ಸರ್ವದಾ, ಕುಮುದ=ನೈದಿಲೆಗಳಿಂದ, ಶೋಭಿ= ಪ್ರಕಾಶಿಸುವುದು ಸರಸ್ಸು, ಕಮಲೋದರ= ವಿಷ್ಣುವಿನಂತೆ,ಉದ್ಭಾಸಿ= ಪ್ರಕಾಶಿಸುವುದು, ಹೇಗೆಂದರೆ- ವಿಷ್ಣುವಿನ ಪರವಾಗಿ, ಕಮಲ= ಕಮಲಪುಷ್ಪವೇ , ಉದರ= ನಾಭಿಯಾಗುಳ್ಳವನು ವೆಷ್ಣುವು ,ಕಮಲಪುಷ್ಪಗಳೇ, ಉದರ= ಒಳಗಡೆಯಲ್ಲಿ ಉಳ್ಳದ್ದು ಸರೋವರವು, ಭಾಸುರ= ಮನೋಹರವಾದ, ಶುಕ್ಲಪಕ್ಷದಂತೆ= ಚಂದ್ರನ ಕಳೆಯು ಪೆರ್ಚುವ ಕಾಲದಂತೆ, ಉದ್ಭಾಸಿ= ಪ್ರಕಾಶಿಸುವುದು, ಹೇಗೆಂದರೆ- ಶುಕ್ಲಪಕ್ಷದಿಂದ, ಉದ್ಭಾಸಿ= ಪ್ರಕಾಶಿಸುವವನು ಚಂದ್ರನು, ಭಾಸುರ= ಪ್ರಕಾಶಮಾನವಾದ, ಶುಕ್ಲ= ಬಿಳುಪಾದ, ಪಕ್ಷ= ಪಕ್ಷಿಗಳ ಗರಿಗಳಿಂದ, ಉದ್ಭಾಸಿ= ಪ್ರಕಾಶಿಸುವುದು ಸರಸ್ಸು, ಅಹಿತಲ್ಪದಂತೆ = ಆದಿಶೇಷನೆಂಬ ಹಾಸಿಗೆಯಂತೆ, ಉದ್ಭಾಸಿ=ಪ್ರಕಾಶಿಸುವುದು, ಹೇಗೆಂದರೆ- ಕಮಲ= ಇಂದುವು, ಲಕ್ಷ್ಮೀ-
ಲಕ್ಷ್ಮೀದೇವಿಯ, ಕಮಲೋದರನು, ಉದರ= ಮಧ್ಯದಲ್ಲಿರುವುದರಿಂದ, ಉದ್ಭಾಸಿ= ಪ್ರಕಾಶಿಸಿರುವುದು ಆದಿಶೇಷನೆಂಬ ತಲ್ಪವು, ಅಹಿ= ಹಾವುಗಳ, ತಲ್ಪ= ಸಮೂಹದಿಂದ, ಉದ್ಭಾಸಿ= ಪ್ರಕಾಶಿಸುವುದು ಸರಸ್ಸು, ಗಗನದಂತೆ= ಅಂತರಿಕ್ಷದಂತೆಯೂ, ಧರಣಿಪ= ರಾಜನ, ಆಲಯದಂತೆ= ಗೃಹದೋಪಾದಿಯಲ್ಲಿಯೂ, ಶೋಭಿ=ಶೋಭಿಸುತ್ತಿರುವುದು, ಹೇಗೆಂದರೆ- ಕವಿ=ಶುಕ್ರಾಚಾರ್ಯನಿಂದ, ಸೇವಿತಂ= ಹೊಂದಿರುವುದು, ಗಗನ= ಅಂತರಿಕ್ವು, ವಿ=ಕವಿಗಳಿಂದ, ಸೇವಿತಂ= ಹೊಂದಿರುವುದು, ಧರಣಿಪಾಲಯಂ= ರಾಜನ ಅರಮನೆಯು, ಕವಿ= ನೀರು ಹಕ್ಕಿಗಳಿಂದ, ಸೇವಿತಂ= ಆಶ್ರಯಿಸಲ್ಪಟ್ಟಿ-
ರುವುದು, ಸರಸ್ಸು= ಸರೋವರವು, ನಿಶಾಚರ= ರಾಕ್ಷಸರ, ವಂಶದಂತೆ= ಕುಲದ ಹಾಗೆಯೂ, ಮಾಲಾಕಾರ= ಮಾಲೆಯನ್ನು ಮಾಡುವವರ(ಹೂವಾಡಿಗರ) ಜನದಂತೆ= ಜನಗಳ ಹಾಗೆಯೂ, ಎಸೆಗುಂ= ಪ್ರಕಾಶಿಸುವುದು, ಹೇಗೆಂದರೆ- ಸುಮನ= ಸುರರನ್ನು ,ಹರಂ= ಸಂಹರಿಸುವವರು ರಾಕ್ಷಸರು, ಸುಮನ= ಪುಷ್ಪಗಳನ್ನು, ಹರಂ= ಅಪಹರಿಸುವವರು, ಹೂವಾಡಿಗರು,
ಸುಮನ= ಚೆನ್ನಾಗಿ ಜನರ ಮನಸ್ಸನ್ನು, ಹರಂ= ತನ್ನ ಕಡೆಗೆ ಅಪಹರಿಸುವುದು ಸರಸ್ಸು, ಗೋಕುಲದಂತೆ= ಗೋಕುಲದ ಹಾಗೆಯೂ, ವನದಂತೆ= ಅರಣ್ಯ ಮತ್ತು ನೀರಿನ ಹಾಗೆಯೂ, ಶೋಭಿಕುಂ= ಪ್ರಕಾಶಿಸುವುದು, ಹೇಗೆಂದರೆ- ಹರಿ= ಶ್ರೀ ಕೃಷ್ಣಸ್ವಾಮಿಗೆ, ಜನ್ಮಭೂಮಿ= ಉತ್ಪತ್ತಿಯಾದ ಸ್ಥಳವು, ಗೋಕುಲವು, ಹರಿ= ಸಿಂಹ, ಹುಲಿ, ಕರಡಿ,ನರಿ, ಗಿಳಿ ಮೊದಲಾದ ಪ್ರಾಣಿಗಳಿಗೆ, ಜನ್ಮಭೂಮಿ= ಹುಟ್ಟಿದ ಸ್ಥಳವು ಅರಣ್ಯವು,ಹರಿ=ಕಪ್ಪೆ, ಹಾವು ಮೊದಲಾದವುಗಳಿಗೆಜನ್ಮಭೂಮಿ= ಜನಿಸಿದ ಸ್ಥಳವಾಗಿರುವುದು, ಸರೋವರವು ಇಂತು=ಈ ಪ್ರಕಾರವಾಗಿ, ಕಂಗೊಳಿಸಿತು= ಕಣ್ಣುಗಳಿಗೆ ಸಂತೋಷವನ್ನುಂಟುಮಾಡಿತು
ಅ॥ವಿ॥ ಧರಣಿಪನ+ಆಲಯ= ಧರಣಿಪಾಲಯ (ಷ. ತ. ) ಕುಮುದ= ನೈದಿಲೆ, ಕುಮುದವೆಂಬ ಆನೆ, ಕುಮುದನೆಂಬ ಕಪಿ,ಕಮಲ= ಲಕ್ಷ್ಮಿ, ತಾವರೆ,ಪಕ್ಷ=ಹದಿನೈದು ದಿನಗಳು, ರೆಕ್ಕೆ, ಕಡೆ.
ತಾತ್ಪರ್ಯ:- ಆ ವನಪ್ರದೇಶದಲ್ಲಿದ್ದ ಕಾಸಾರವುಕನ್ನೈದಿಲೆ ಆವೃತವಾಗಿದ್ದುದರಿಂದರಾಕ್ಷಸದಿಕ್ಕಿನಂತೆಯೂ, ವಾನರ ಸೈನ್ಯದಂತೆಯೂ(ಕುಮುದವೆಂಬ ದಿಗ್ಗಜದಿಂದ ಕೂಡಿದ್ದು ನೈರುತ್ಯದಿಕ್ಕು, ಕುಮುದನೆಂಬ ಕಪಿಯಿಂದ ಸೇರಿದ್ದು ವಾನರಸೈನ್ಯವು) ಲಕ್ಷ್ಮೀಪತಿಯಾದ ವಿಷ್ಣವಿನಂತೆಯೂ(ಪದ್ಮವೇ ನಾಭಿಯುಳ್ಳವನು ವಿಷ್ಣುವು, ಕಮಲವೇ ಒಳಗಡೆಯಲ್ಲಿರುವುದೇ ಸರಸ್ಸು) ಶುಕ್ಲಪಕ್ಷದ ಚಂದ್ರನಂತೆಯೂ (ಶುಕ್ಲ ಪಕ್ಷದಿಂದ ಯುತವಾದವನು ಚಂದ್ರನು ಬಿಳಿಯಪಕ್ಷಿಗಳಿಂದ ಕೂಡಿದ್ದು ಸರಸ್ಸು)ಅಂತರಿಕ್ಷದಂತೆಯೂ, ರಾಜನ ಅರಮನೆಯಂತೆಯೂ,ಶುಕ್ರಾಚಾರ್ಯನಿಂದ ಕೂಡಿರುವುದುಅಂತರಿಕ್ಷವು,( ಕವಿಗಳಿಂದ ಕೂಡಿರುವುದು ರಾಜಗೃಹವು ನೀರ ಹಕ್ಕಿಗಳಿಂದಾವೃತವಾದುದುಹ
ಸರಸ್ಸು) ರಾಕ್ಷಸರ ವಂಶದಂತೆಯು, ಹೂವಾಡಿಗಶಜನರಂತೆಯೂ,( ದೇವತೆಗಳನ್ನು ಕೊಲ್ಲುವವರು ರಾಕ್ಷಸರು, ಸುಮನ ಪುಷ್ಪಗಳನ್ನು ಬಿಡಿಸಿಕೊಳ್ಳುವವರು ಹೂವಾಡಿಗರು( ಚೆನ್ನಾಗಿ ಮನುಷ್ಯರ ಮನಸ್ಸನ್ನು ತನ್ನ ಕಡೆಗೆ ಎಳೆಯುವುದು ಸರಸ್ಸು) ಗೋಕುಲದಂತೆಯೂ, ಅರಣ್ಯದಂತೆಯೂ ( ಹರಿ=ಕೃಷ್ಣನಿಗೆ ಜನ್ಮಭೂಮಿಯಾದದ್ದು ಗೋಕುಲವು, ಹರಿ=ಸಿಂಹ, ಹುಲಿ, ಕರಡಿಗಳಿಂದ ವ್ಯಾಪ್ತವಾದುದು ಅರಣ್ಯವು,( ಹರಿ=ಕಪ್ಪೆ, ಹಾವುಗಳಿಂದ ವ್ಯಾಪ್ತವಾದದ್ದು ಸರಸ್ಸು) ಕಂಗೊಳಿಸುತ್ತಿತ್ತು.
ವನಮಾಲಿಯಂದದಿಂ ಪದ್ಮಿ ಪದ್ಮಿಯವೋಲ್ ಭು।
ವನಕುಕ್ಷಿ ಭುವನಕುಕ್ಷಿಯ ತೆರದೆ ಹಂಸಲೋ।
ಚನಶೋಭಿ ಹಂಸಲೋಚನಶೋಭಿಯಂತೆ ವರಚಕ್ರಿ ವರಚಕ್ರಿಯವೊಲು॥
ಅನಿಮಿಷಾಶ್ರಯಮೂರ್ತಿಯನಿಮಿಷಾಶ್ರಯಮೂರ್ತಿ।
ಯೆನೆ ಕುವಲಯಾಧಾರಿಕುವಲಯಾಧಾರಿಯವೋಲ್।
ವನಮಾಲಿಯೆನಿಸಿ ರಂಜಿಸುವ ಕಾಸಾರಮಂ ಸರ್ವಮಂಗಳೆ ಕಂಡಳು॥೧೨॥
ಪ್ರತಿಪದಾರ್ಥ :- ಆ ಸರಸ್ಸು ವಿಷ್ಣುವಿನಂತೆ ರಂಜಿಸುವುದು. ನೀತಿ ಮಾಲೆಯಾಗಿರುವದ್ದರಿಂದಲೂ, ( ವನ=ತುಲಸೆಯ ಹಾರವೇ ಮಾಲೆಯಾಗುಳ್ಳವನು ವಿಷ್ಣುವು) ಪದ್ಮದಿಂದ ಕೂಡೆದ್ದುದರಿಂದಲೂ( ಪದ್ಮ-ಲಕ್ಷ್ಮೀಯುತನಾದ ವೆಷ್ಣುವು) ನೀರೇ ಉದರದಲ್ಲಿರುವೈದರಿಂದಲೂ( ಭೈವನ= ಪ್ರಪಂಚವೇ ಉದರದಲ್ಲುಳ್ಳವನು ವಿಷ್ಣುವು) ಹಂಸೆಗಳ ನೋಟವುಳ್ಳದ್ದರಿಂದ-
ಲೂ( ಹಂಸಲೋಚನ- ಸೂರ್ಯನೆಂಬ ನೇತ್ರವುಳ್ಳವನು ವಿಷ್ಣುವು) ಮತ್ಸ್ಯಗಳಿಗೆ ಆಶ್ರಯವಾಗಿರುವುದರಿಂದಲೂ( ಅನಿಮಿಷ= ದೇವತೆಗಳಿಗೆ ಆಶ್ರಯನಾದವನು ವಿಷ್ಣುವು) ಕನ್ನೈದಿಲೆಗಳಿಂದ ವ್ಯಾಪ್ತವಾದದ್ದರಿಂದಲೂ( ಕುವಲಯ= ಭೂಮಿಗೆ ಆಧಾರಭೂತನಾದವನು ವಿಷ್ಣುವು) ವಿಷ್ಣುವಿನ ರೀತಿಯಿಂದ ಪ್ರಕಾಶಿಸುತ್ತಿದ್ದ ಪದ್ಮಾಕರವನ್ನು ಸಕಲಜನರಿಗೂ ಮಂಗಳ ಸ್ವರೂಪಳಾದ ಪಾರ್ವತಿಯು ಕಂಡಳು.
ಅಳಿಯ ವರ್ಗವನಾದರಿಸುತೆ ಮಿತ್ರಸ್ನೇಹ।
ದೊಳೆ ಸಂದು ಸುತರಂಗಲೀಲೆಯಂ ಲಾಲೆಸುತೆ।
ಕುಲಸದಭ್ಯುದಯಮಂ ನೆಲೆಗೆಯ್ದು ಕಾಂತನುಕೂಲರಮಣೀಯಮಾಗಿ॥
ಲಲಿತ ಲಕ್ಷ್ಮೀನಿವಾಸ ಸ್ಥಾನಮೆನಿಸಿ ಮಂ।
ಗಳವಿಭವಕ್ಕೆಡೆಗೊಟ್ಟು ಸಕಲಸೌಭಾಗ್ಯಮಂ।
ತಳೆದ ಸಾಂಸಾರಿಕನ ತೆರದಿಂದೆ ವಿಮಲ ಪದ್ಮಾಕರಂ ಕಣ್ಗೆಸೆದುದು॥೧೩॥
ಪ್ರತಿಪದಾರ್ಥ :- ಕಾಸಾರವನ್ನು ಕವಿಯು ಒಬ್ಬ ಗೃಹಸ್ಥನಿಗೆ ಹೋಲಿಸಿರುವನು:- ಹೇಗೆಂದರೆ, ಗೃಹಸ್ತನ ಪರವಾಗಿ, ಅಳಿಯ = ಮಗಳನ್ನು ಕೊಟ್ಟಿರುವ ಅಳಿಯನ, ವರ್ಗವನು= ಸಮೂಹವನ್ನು, ಆದರಿಸುತ=ಆದರಣೆ ಮಾಡುತ್ತ, ಮಿತ್ರ= ಹಿತರ, ಸ್ನೇಹದೊಳೆ= ಅಕ್ಕರೆಯಿಂದಲೆ, ಸಂದು= ಅನುಕೂಲವಾಗಿದ್ದುಕೊಂಡು, ಸುತನ= ಪುತ್ರರ, ಅಂಗಲೀಲೆಯಂ= ಕೈಕಾಲಾಡಿ-
ಸಿಕೊಂಡು ಆಡುವ ವಿನೋದವನ್ನು, ಲಾಲಿಸುತ= ಹರೂಷದಿಂದ ನೋಡುತ್ತ, ಕುಲ= ಗೋತ್ರದಲ್ಲಿ, ಸತ್= ಉತ್ತಮವಾದ, ಅಭ್ಯುದಯಮಂ= ಏಳಿಗೆಯನ್ನು, ನೆಲೆಗೈದು= ಗೊತ್ತುಮಾಡಿ, (ಶಾಶ್ವತಗೊಳಿಸಿ)ಕಾಂತಾ=ಪತ್ನಿಯ, ಅನುಕೂಲ= ಅನು-
ಕೂಲತೆಯಿಂದ, ರಮಣೀಯಮಾಗಿ= = ಮನೋಹಾರಿಮಾಗಿ, ಲಲಿತ= ಮನೋಹರವಾದ, ಲಕ್ಷ್ಮೀನಿವಾಸ ಸ್ಥಾನಮಂ=
ಲಕ್ಷ್ಮೀದೇವಿಗೆ ವಾಸ ಮಾಡಲು ಯೋಗ್ಯವಾದ ಸ್ಥಳವು, ಎನಿಸಿ= ಎನ್ನಿಸಿಕೊಂಡು, ಮಂಗಳ= ಶುಭಕರಗಳಾದ, ವಿಭವಕ್ಕೆ= ವೈಭವಾದಿಗಳಿಗೆ, ಎಡೆಗೊಟ್ಟು= ಸ್ಥಳವನ್ನು ಕೊಟ್ಟು, ಸಕಲಸೌಭಾಗ್ಯಮಂ = ಸಮಸ್ತ ವಿಧವಾದ ಐಶ್ವರ್ಯಗಳನ್ನುಹೊಂದಿ
-ರುವವನಾದ, ಸಂಸಾರಿಕನು= ಸಂಸಾರಿಯು(ಗೃಹಸ್ಥನು)
ತಾತ್ಪರ್ಯ:- ಆ ಪದ್ಮಾಕರವು ಭ್ರಮರಂಗಳ ವರ್ಗಕ್ಕೆ ಆಹಾರಾದಿಗಳನ್ನು ಕೊಟ್ಟು ಕಾಪಾಡುತ್ತಲೂ,( ಅಳಿಯ=ಮಗಳ ಗಂಡನ ವರ್ಗವನ್ನು ಉಪಚಾರಮಾಡುತ್ತಲೂ) ಸೂರ್ಯನ ವಿಶ್ವಾಸವನ್ನು ಹೊಂದಿಯೂ (ಮಿತ್ರ= ಸ್ನೇಹದಿಂದಲೆ ಅನು- ಕೂಲವಾಗಿದ್ದುಕೊಂಡು) ಒಳ್ಳೆಯದಾದ ಅಲೆಗಳ ಸಮೂಹವನ್ನು ಮಮತೆಯಿಂದ ಕೇಳುತ್ತಲೂ ( ಸುತ= ಮಕ್ಕಳ, ರಂಗ= ಆಟಪಾಟಂಗಳನ್ನು ಹರ್ಷದಿಂದ ನೋಡುತ್ತಲೂ) ಕಾಂತಿಯಿಂದ ಒಪ್ಪುತ್ತಿರುವನೈದಿಲೆಗಳಿಗೆ ಶಾಶ್ವತಗೊಳಿಸುವುದರಿಂದ-
ಲೂ, (ಕುಲ= ಸತ್, ವಂಶದಲ್ಲಿ ಉತ್ತಮವಾದ ಏಳಿಗೆಯನ್ನು ಸ್ಥಿರಪಡಿಸುತ್ತಲು) ನೀರಿನ ಕೊನೆಯ ಭಾಗದಲ್ಲಿ ಮನೋಹರವಾಗಿಯೂ( ಕಾಂತಾ= ಪತ್ನಿಯಿಂದೊಡಗೂಡಿಯೂ, ) ಲಕ್ಷ್ಮೀದೇವಿಗೆ ಆವಾಸವಾದ ಸ್ಥಳವಾದ್ದರಿಂದಲೂ (ಲಕ್ಷ್ಮಿಗೆ= ಐಶ್ವರ್ಯಕ್ಕೆ ಆಶ್ರಯವಾದ್ದರಿಂದ)ಈ ರೀತಿಯಾಗಿ ಸಕಲವಿಧವಾದ ಸೌಭಾಗ್ಯವನ್ನು ಗೃಹಸ್ಥನಂತೆ ಹೊಂದಿ ನೋಟಕರ ಕಣ್ಣುಗಳಿಗೆ ಶೋಭಿಸುತ್ತಿತ್ತು.
ಕಳಹಂಸಮಾಕೀರೂಣಮಾಗಿರ್ದು ಕಾಳೆಗದ।
ಕಳನಲ್ಲ ವಿಷಭರಿತಮಾಗಿರ್ದು ಸರ್ಪಸಂ।
ಕುಳಮಲ್ಲ ಕುಮುದಯುತೆಮಾಗಿರ್ದು ಖಳರಂತರಂಗದಾಳಾಪಮಲ್ಲ॥
ಅಳಿದುಳಿದು ಭಂಗಮಯಮಾಗಿರ್ದು ಮುರಿದ ನೃಪ।
ದಳಮಲ್ಲ ಬಹುವಿಚಾರಸ್ಥಾನಮಾಗಿರ್ದು।
ತಿಳಿಯಲ್ಕುಪದ್ರವಸ್ಥಳಮಲ್ಲಮೆನಿಸಿರ್ದುದಾ ವಿಮಲಸರಸಿ ಕಣ್ಗೆ॥೧೪॥
ಪ್ರತಿಪದಾರ್ಥ :- ವಿಮಲ= ನಿರ್ಮಲವಾದ, ಸರಸಿ=ಆ ಸರೋವರವು, ಕಣ್ಗೆ= ಕಣ್ಣುಗಳಿಗೆ, ಕಲಹ= ಹೊಡೆದಾಟವು, ಸಮಾಕೀರ್ಣಂ= ಉಂಟಾಗಿರುವಂಥಾದ್ದು, (ವ್ಯಾಪ್ತವಾದದ್ದು) ಆಗಿರ್ದು= ಆಗಿದ್ದರೂ, ಕಾಳಗದ= ಜಗಳದ, ಕಳನು= ಸ್ಥಾನವು, ಅಲ್ಲ= ಆಗಿರುವದಿಲ್ಲ, ಹೇಗೆಂದರೆ:- ಚಲಹಂಸಂ= ಅರಸಂಚೆಗಳಿಂದ, ಆಕೀರ್ಣಂ= ವ್ಯಾಪ್ತವಾಗಿರುತ್ತೆಂಬ ಅಭಿಪ್ರಾಯವು, ವಿಷ= ನಂಜಿನಿಂದ, ಭರಿತಂ= ತುಂಬಿದ್ದು, ಆಗಿದ್ದರೂ, ಸರ್ಪ= ಅಹಿಗಳಿಂದ, ಸಂಕುಲಂ=ತುಂಬಿರುವಂ-
ಥಾದ್ದು, ಅಲ್ಲ= ಆಗಿರುವುದಿಲ್ಲ, ಹೇಗೆಂದರೆ :- ವಿಷ=ನೀರಿನಿಂದ, ಭರಿತಂ= ತುಂಬಿರುತ್ತೆಂಬಭಿಪ್ರಾಯವು, ಕುಮುದ=ಕೆಟ್ಟ ಜನಗಳಿಂದ, ಯುತಂ= ಹೊಂದಿರುವಂಥಾದ್ದು, ಆಗಿರ್ದು= ಆಗಿದ್ದರೂ, ಖಳ= ನೀಚರ, ಅಂತರಂಗದ= ಗುಟ್ಟಾದ, ಆಲಾಪಂ= ಸಲ್ಲಾಪವು, ಅಲ್ಲ= ಆಗಿರುವುದಿಲ್ಲ, ಎಂದರೆ ಕುಮುದ= ನೈದಿಲೆ ಪುಷ್ಪಗಳಿಂದ, ಯುತಂ= ಯುಕ್ತವಾಗಿತ್ತೆಂಬ ಅಭಿಪ್ರಾಯವು, ಅಳಿದು= ಹತವಾಗಿ, ಉಳಿದ= ಮಿಕ್ಕ, ಭಂಗಮಯವೃಗಿ= ಸೋಲುವಿಕೆಯ ವಿಕಾರ ಉಳ್ಳದ್ದಾಗಿ, ಇರ್ದ=ಇದ್ದರೂ, ಮುರಿದ=ಓಡಿಹೋದ, ನೃಪ= ರಾಜನ, ದಳಂ= ಸೇನೆಯು, ಅಲ್ಲ= ಆಗಿರುವುದಿಲ್ಲ, ಹೇಗೆಂದರೆ:- ಅಳಿದು= ಬಿಸಿಲು ಮತ್ತುವಾಯು ಇವುಗಳಿಂದ ಇಂಗಿ ಹೋಗಿ, ಉಳಿದು= ಒಣಗುತ್ತಿದ್ದರೂ, ಧ್ರುವಜಲದಿಂದಕೂಡಿ ಭಂಗಮಯಮಾಗಿ= ಅಲೆಗಳ ಸಮೂಹದಿಂದ ಕೂಡಿದ್ದಾಗಿ, ಇತ್ತೆಂಬ ಅಭಿಪ್ರಾಯವು, ಬಹು= ಅಧಿಕವಾಗಿ, ವಿಚಾರ-
ಸ್ಥಾನಂ= ವಿಷಯಗಳನ್ನು ತಿಳಿಯತಕ್ಕತಾವು, ಆಗಿ= ಆಗಿದ್ದರೂ, ತಿಳಿಯಲ್ಕೆ= ಗ್ರಹಿಸುವುದಕ್ಕೆ, ಉಪದ್ರವ= ತೊಂದರೆ-
ಯುಂಟಾಗುವ, ಸ್ಥಳಂ= ಪ್ರದೇಶವು, ಅಲ್ಲ= ಆಗಿರುವುದಿಲ್ಲ, ಏಕೆಂದರೆ- ವಿ=ಹಕ್ಕಿಗಳ, ಚಾರ= ಸಂಚರಿಸುವುದಕ್ಕೆ, ಸ್ಥಾನಮಾಗಿ=ಸ್ಥಳವಾಗಿರುತ್ತದೆಂಬ ಅಭಿಪ್ರಾಯವು, ಎನಿಸಿರ್ದುದು=ಎನ್ನಿಸಿಕೊಂಡಿತ್ತು. ಶಬ್ಧದಲ್ಲೂ ಶ್ಲೇಷವು, ಅರ್ಥದಲ್ಲೂ ಶ್ಲೇಷಾರ್ಥವು ಉಳ್ಳ ವಿರೋಧಾಭಾಸಾಲಂಕಾರವು.
ಅ॥ವಿ॥ ಅಳಿದು+ಉಳಿದು= ಅಳಿದುಳಿದು(ಉ. ಲೋಪ. ಸಂ) ನೃಪನ+ದಳ=ನೃಪದಳ ( ಷ.ತ.) ವಿಮಲವಾದ+ ಸರಸಿ= ವಿಮಲ ಸರಸಿ(ವಿ. ಪೂ. ಕ.) ವಿ=ಪಕ್ಷಿ, ವಿಂಗಡ, ಕುದುರೆ, ಸೋಮ, ಯಾಜ್ಞಿಕ.
ತಾತ್ಪರ್ಯ:- ಆ ನಿರ್ಮಲೋದಕದಿಂದ ಕಂಗೊಳಿಸುತ್ತಿದ್ದ ಸರಸ್ಸು, ರಾಜಹಂಸಗಳಿಂದ ಯುತಮಾಗಿಯೂ, ಅಧಿಕಮಾದ ಉದಕದಿಂದಕೂಡಿದ್ದಾಗಿಯೂ, ಕನ್ನೈದಿಲೆ ಪುಷ್ಪಗಳಿಂದ ಕೂಡಿದ್ದಾಗಿಯೂ, ಬಿಸಿಲು ಗಾಳಿ ಇವುಗಳಿಂದ ನೀರು ತಗ್ಗುತ್ತಿದ್ದರೂ, ಧ್ರುವ ಜಲದಿಂದ ಪ್ರಕಾಶಿಸುತ್ತಲೂ, ಪಕ್ಷಿಗಳಿಗೆ ಸಂಚಾರಮಾಡುವುದಕ್ಕೆ ಅನುಕೂಲವಾದ ಸ್ಥಳವಾಗಿತ್ತು.
ಆ ಸರಸ್ತಟದಲ್ಲಿ ಕಲ್ಪಿಸಿದಳಾಶ್ರಮ ನಿ।
ವಾಸಮಂ ಭಕ್ತಿಯಿಂ ಭಜಿಸಿದಳಗೇಂದ್ರಜೆ ಸು।
ಧಾಸೂತಿಮೌಳಿಯಂ ಮೆಚ್ಚಿದಂ ಶಂಭು ವರಮಂ ಕೊಟ್ಟನಿಲ್ಲಿ ನಿನ್ನ ॥
ಮೀಸಲ ತಪಕ್ಕೆಡರ್ ಬಾರದಿರಲೆಂದು ಬಳಿ।
ಕೋಸರಿಸದಲ್ಲಿ ಚಿರಕಾಲಮಿರುತಿರ್ದಳು।
ಲ್ಲಾಸದಿಂ ಧೂರ್ಜಟಿಯ ರಾಣಿ ಯೋಗಿನಿಯೊ ತಾನೆಂಬ ತೆರದಿಂ ಬನದೊಳು॥೧೫॥
ಪ್ರತಿಪದಾರ್ಥ :- ಅಗೇಂದ್ರ= ಪರ್ವತಗಳಿಗೆ ದೊರೆಯಾದ ಹಿಮವಂತಂಗೆ, ಜೆ= ಜನಿಸಿದವಳು ಹೈಮವತಿಯು, ಆಸರ= ಆಸರೋವರದ, ತಟದಲ್ಲಿ = ದಡದಲ್ಲಿ, ಆಶ್ರಮ= ತಪೋಯೋಗ್ಯವಾದ, ನಿವಾಸವಂ= ಎಲೆಮನೆಯನ್ನು, ಕಲ್ಪಿಸಿದಳ್=
ಉಂಟುಮಾಡಿಕೊಂಡಳು, ಸುಧಾಸೂತಿ= ಅಮೃತಯುತನಾದ ಇಂದುವೆ, ಮೌಳಿಯಂ= ತಲೆಯಲ್ಲಿ ಧರಿಸಿರುವನಾದ ಚಂದ್ರಶೇಖರಸ್ವಾಮಿಯನ್ನು, (ಪರಮೇಶ್ವರನನ್ನು) ಭಕ್ತಿಯಿಂ= ಭಕ್ತಿಯಿಂದ, ಭಜಿಸಿದಳ್= ಆರಾಧಿಸಿದಳು, ಶಂಭು= ಈಶ್ವರನು, ಮೆಚ್ಚಿದಂ= ಪಾರ್ವತಿಯ ಭಕ್ತಿಪುರಸ್ಸರವಾದ ಪ್ರೀತಿಗೆ ಪ್ರತ್ಯಕ್ಷನಾದನು, ವರಮಂ= ಪ್ರಸಾದವನ್ನು (ಇಷ್ಟಾರ್ಥವನ್ನು) ಕೊಟ್ಟನು=ದಯಪಾಲಿಸಿದನು, ಇಲ್ಲಿಂದ= ಮುಂದೆ, ಮೀಸಲು= ಶಾಸ್ತ್ರಾನುಸಾರವಾಗಿ ನೆರವೇರಿಸುವ,ತಪಕೆ= ತಪಸ್ಸು ಮಾಡುವುದಕ್ಕೆ, ಎಡರು= ಬಾಧಕವು( ವಿಘ್ನವು) ಬಾರದಿರಲಿ= ಉಂಟಾಗದಿರಬೇಕು, ಎಂದು= ಎಂಬುದಾಗಿ, ಬಳಿಕ = ತರುವಾಯ, ಓಸರಿಸದೆ= ಜಿಗುಪ್ಸೆಯನ್ನು ಹೊಂದದೆ, ಅಲ್ಲಿ= ಆ ಅರಣ್ಯಪ್ರದೇಶದಲ್ಲಿ,
ಧೂರ್ಜಟಿಯ = ಪರಮೇಶ್ವರನ, ರಾಣಿ= ರಾಜ್ಞಿಯಾದ ಪಾರ್ವತೀದೇವಿಯು, ಬನದೊಳು= ಆ ಕಾಡಿನಲ್ಲಿ, ತಾಂ=ತಾನು, ಯೋಗಿನಿಯೊಯೋಗಿನಿಯೊ= ಯೋಗಸಿದ್ಧಿಯುಳ್ಳ ಸ್ತ್ರೀಯೋ( ದುರ್ಗಾದೇವಿಯಿಂದ ಹುಟ್ಟಿ ಆಕೆಯ ಸೇವೆಯನ್ನು ಮಾಡುವ ಎಂಟುಮಂದಿ ಸ್ತ್ರೀಯರಲ್ಲಿಒಬ್ಬಳೊ) ಎಂಬ= ಎಂಬುದಾಗಿ ಹೇಳುವ, ತೆರದಿಂದ = ಕ್ರಮದಿಂದ, ಚಿರಕಾಲಂ= ದೀರ್ಘಕಾಲದವರೆಗೂ, ಉಲ್ಲಾಸದಿಂದ= ಸಂತಸದಿಂದ, ಇರುತಿರ್ದಳ್= ವಾಸಿಸುತ್ತಿದ್ದಳು.
ಅ॥ವಿ॥ ಅದು+ಸರಸ್ಸು= ಆ ಸರಸ್ಸು( ಗ. ಸ. ) ಅಗ+ಇಂದ್ರ= ಅಗೇಂದ್ರ( ಗುಣ. ಸಂ. ) ಅಗಗಳ+ಇಂದ್ರ= ಅಗೇಂದ್ರ( ಷ. ತ. )
ತಾತ್ಪರ್ಯ:- ಆಗ ಪರ್ವತರಾಜನ ಕುವರಿಯಾದ ಪಾರ್ವತೀದೇವಿಯು ಆ ಸರೋವರದ ತೀರದಲ್ಲಿ ತಪಸ್ಸಿಗೆ ಯೋಗ್ಯವಾದ ಸ್ಥಳವನ್ನು ಮಾಡಿಕೊಂಡು ಅಮೃತ ಕಲೆಗಳಿಂದ ಕೂಡಿದ ಚಂದ್ರನನ್ನು ಧರಿಸಿದ ಚಂದ್ರಶೇಖರನನ್ನು ಹೆಚ್ಚಾದ ಭಕ್ತಿಪುರಸ್ಸ-
ರವಾಗಿ ಸೇವಿಸಿದಳು. ಈಶ್ವರನು ಪಾರ್ವತಿಯ ಭಕ್ತಿಯತಿಶಯವಾದ ಪ್ರೀತಿಗೆ ಮೆಚ್ಚಿ ಪ್ರತ್ಯಕ್ಷನಾಗಿ, ಆಕೆಯ ಇಷ್ಟಾರ್ಥವನ್ನು ನೆರವೇರಿಸಿದವನಾಗಲು ಪಾರ್ವತೀದೇವಿಯು ತನ್ನ ತಪಸ್ಸಿಗೆ ಯಾವ ವಿಘ್ನವೂ ಬಾರದಂತೆ ಬೇಜಾರುಪಡದಂತೆ ಆ ಅರಣ್ಯದಲ್ಲಿ ಯೋಗಿನಿಯಂತೆ ಕ್ರಮವಾಗಿ ಚಿರಕಾಲ ಉಲ್ಲಾಸದಿಂದ ಇರುತ್ತಿದ್ದಳು.
ಇಂದುಮೌಳಿಯ ಪದಧ್ಯಾನಮಂ ಮಾಡುವಾ।
ನಂದಮಿನ್ನೇತಿರತಶಯಮೋ ಶಿವನರೆಮೈಯೊ।
ಳೊಂದಿರ್ದಸೌಖ್ಯಮಂ ಮರೆದು ಪಾರ್ವತಿ ತಪಸ್ವಿನಿಯಾಗಿ ತಿಳಿಗೊಳದೊಳು॥
ಮಿಂದನುದಿನಂ ಜಪ ತಪೋನಿಯಮ ಯೋಗಂಗ।
ಳಿಂದೆ ಭಜಿಸಿದಳಂತರಾತ್ಮನಂ ಸಕಲಸುರ।
ವೃಂದವಂದಿತ ಪಾದಪದ್ಮನಂ ಸುಜ್ಞಾನ ಸದ್ಮನಂ ಕಾನನದೊಳು॥೧೬॥
ಪ್ರತಿಪದಾರ್ಥ :- ಇಂದು= ಹಿಮಕರನೆ, ಮೌಳಿಯ= ಶಿರಸ್ಸಿನಲ್ಲುಳ್ಳ ಚಂದ್ರಮೌಳೀಶ್ವರನ,ಪದ=ಅಡಿಗಳ, ಧ್ಯಾನಮಂ= ಚಿಂತನೆಯನ್ನು, ಮಾಡುವ= ನೆರವೇರಿಸುವ, ಆನಂದಂ= ಸಂತೋಷವು, ಇನ್ನೇತರ= ಇನ್ನು ಯಾವ ಬಗೆಯಾದ, ಅತಿಶಯಮೊ= ಶ್ರೇಷ್ಠವಾದುದೊ,ಶಿವನ=ಈಶ್ವರನ, ಅರೆಮೈಯೊಳು= ಅರ್ಧಾಂಗದಲ್ಲಿ, ಒಂದಿರ್ದ= ಒಟ್ಟುಗೂಡಿದ್ದ, ಸೌಖ್ಯಮಂ= ಆನಂದವನ್ನು, ಮರದು= ಮರೆತುಹೋಗಿ, ಪಾರ್ವತಿ=ಹೈಮವತಿಯು, ತಪಸ್ವಿನಿಯಾಗಿ= ತಪಸ್ಸನ್ನೆಸಗುವ-
ವಳಾಗಿ, ಅನುದಿನದೊಳು= ಪ್ರತಿದಿನವೂ, ತಿಳಿಗೊಳದೊಳು= ನಿರ್ಮಲವಾದ ನೀರ್ಗೊಳದಲ್ಲಿ, ಮಿಂದು=ಸ್ನಾನಮಾಡಿ,
ಜಪ= ಮಂತ್ರಾನುಷ್ಠಾನವನ್ನು, ತಪ= ತಪಸ್ಸನ್ನು, ಸಮಾಧಿ= ಅಂಗೀಕರೆಸುವಿಕೆಯಿಂದ, ನಿಯಮಂಗಳಿಂದ= ವಿಧ್ಯುಕ್ತವಾಗಿ
(ಕಾಲಕಾಲಕ್ಕೆ ನೆರವೇರಿಸತಕ್ಕ ಕರ್ಮಗಳಿಂದ) ಅಂತರಾತ್ಮನಂ= ಸಕಲಪ್ರಾಣಿಗಳಲ್ಲಿಯೂ ಅಂತರ್ಮಯನಾದ, ಸಕಲ= ಎಲ್ಲಾ, ಸುರ= ದೇವತೆಗಳ, ವೃಂದ= ಗುಂಪಿನಿಂದ, ವಂದಿತ= ಎರಗಲ್ಪಟ್ಟ, ಪಾದಪದ್ಮನಂ= ಕಮಲದಂತೆ ಪಾದಪದ್ಮವು-
ಳ್ಳವನಾದ, ಸು= ಒಳ್ಳೆಯದಾದ, ಜ್ಞಾನ = ತಿಳಿವಳಿಕೆಗೆ, ಸದ್ಮನಂ= ಗೃಹದಂತೆ ಇರುವವನಾದ ಈಶ್ವರನನ್ನು, ಕಾನನದೊಳು
= ವನದಲ್ಲಿ, ಭಜಿಸಿದಳು= ಆರಾಧಿಸಿದಳು.
ಅ॥ವಿ॥ ಸುಗುಣಾರಾಧನೆ, ನಿರ್ಗುಣಾರಾಧನೆ ಎಂಬೆರಡರಲ್ಲಿ ,ಸುಗುಣಾರಾಧನೆಯಲ್ಲಿ ಧ್ಯಾನಿಸಿದಳು, ತಪಸ್ಸನ್ನು ಆಚರಿಸುವವಳು=ತಪಸ್ವಿನಿ, ಏಕಮಾತ್ರೋಭವೇತ್ ಹ್ರಸ್ವಃ ದ್ವಿಮಾತ್ರಂ ದೀರ್ಘ ಉಚ್ಯತೇ। ತ್ರಿಮಾತ್ರಾ ಸ್ತುಪ್ಲುತಂ-
ಜ್ಞೇಯಂ ವ್ಯಂಜನಂತ್ವರ್ಧ ಮಾತ್ರಕಂ॥ ಇಂದು=ಚಂದ್ರ, ಈಗ. ಇಂದುವೇ+ ಮೌಳಿಯಲ್ಲಿ ಉಳ್ಳವನು= ಇಂದುಮೌಳಿ
(ಬ. ಸ. ) ಸುರರ+ವೃಂದ= ಸುರವೃಂದ (ಷ. ತ.) ವೃಂದದಿದ+ ವಂದಿತ= ವೃಂದವಂದಿತ ( ತೃ. ತ. )
ಬೀಸದು ಬಿರುಸುಗಾಳಿ ಬಿಸಿಯ ಬಿಸಿಲವನಿಯಂ।
ಕಾಸದು ದವಾಗ್ನಿ ಪುಲ್ಗಳೊಳೊಂದನಾದೊಡಂ।
ಬೇಸದು ಮುಗಿಲ್ಗಳತಿಭರದಿಂ ಸಿಡಿಲ್ಮಿಂಚುಗಳ ಕೂಡೆ ಪೆರಮಳೆಯನು॥
ಸೂಸದು ತಳೆದ ಪೂತಳಿರ್ಗಳಿಂಪಿನ ಸೊಂಪು।
ಮಾಸದು ತರುಗಳಲ್ಲಿ ಪಣ್ಗಾಯ್ಗಳಂ ಬೀಯ।
ಲೀಸದು ಸಮಸ್ತಋತುಮಾನಮಯಂಗಳಚಲೇಂದ್ರ ತನುಜೆ ತಪಮಿರೆ ಬನದೊಳು॥೧೭॥
ಪ್ರತಿಪದಾರ್ಥ :- ಅಚಲೇಂದರ್ನ= ಹಿಮವಂತನ, ತನುಜೆ= ಪುತ್ತಿಯಾದ ಪಾರ್ವತಿಯು, ಬನದೊಳು= ಕಾನನದಲ್ಲಿ, ತಪಂ= ತಪಸ್ಸನ್ನು, ಇರೆ=ಗೈಯ್ಯುತಿರಲು ಆ ಕಾನನದೊಳು= ಆ ತಪಸ್ಸು ಮಾಡುವ ಅರಣ್ಯದಲ್ಲಿ, ಬಿರುಸುಗಾಳಿ = ಸೂರ್ಯನ ಬಿಸಿಲು, ಅವನಿಯಂ= ಭೂಮಿಯನ್ನು, ಕಾಸದು= ಸುಡುವುದಿಲ್ಲ, ದವಾಗ್ನಿ= ಕಾಳ್ಗಿಚ್ಚು, ಪುಲ್ಗಳೊಳು= ತೃಣಪ್ರದೇಶದಲ್ಲಿ, ಒಂದಂ ಆದೊಡಂ= ಒಂದು ವಸ್ತುವನ್ನಾದರೂ, ಬೇಸದು= ಬೇಯಿಸದು(ಸುಡಲಾರದು) ಮುಗಿಲ್ಗಳು
= ಮೋಡಗಳು, ಅತಿ= ಹೆಚ್ಚಾದ, ಭರದಿ= ರಭಸದಿಂದ, ಸಿಡಿಲು= ಅಶನಿ ಪಾತವು, ಮಿಂಚುಗಳ= ವಿದ್ಯುತ್ತುಗಳ, (ಹೊಳಪುಗಳ) ಕೂಡೆ=ಸಂಗಡ, ಪೆರ್ಮಳೆಯನು= ದೊಡ್ಡ ವೃಷ್ಟಿಯನ್ನು, ಸೂಸದು= ಕರೆಯುವುದಿಲ್ಲ, (ಸುರೆಸುವುದಿಲ್ಲ) ದಳದ= ಒಟ್ಟಿಗೆ ಕೂಡಿರುವ ರೇಖಿನ, ಪೂದಳಿರ್ಗಳ= ಹೂ ಮತ್ತು ಚಿಗುರು ಮೊದಲಾದವುಗಳ, ಇಂಪಿನ=ಚಂದದ, ಸೊಂಪು= ಅಲಂಕಾರವು, ಮಾಸದು= ಕಳೆಗುಂದುವುದಿಲ್ಲ, ಅಲ್ಲಿ= ಆ ತಪೋವನದಲ್ಲಿ, ತರುಗಳು= ವೃಕ್ಷಗಳು, ಪಣ್ಗಾಯ್ಗ
-ಗಳಂ= ಹಣ್ಣು ಮತ್ತು ಕಾಯಿ ಇವುಗಳನ್ನು, ಬೀಯಲೀಸದು= ಬಂಜೆಗಿಡಗಳಾಗಿ ಮಾಡವು( ಫಲವಿಲ್ಲದವುಗಳಾಗಿಮಾ-
ಡವುದಿಲ್ಲ) , ಸಮಸ್ತ = ಸಕಲ ವಿಧವಾದ, ಋತುಸಮಯಂ= ಋತುಗಳ ಧರ್ಮವು ಹೊಂದಿದ್ದವು.
ಅ॥ವಿ॥ ಚೈತ್ರ-ವೈಶಾಖ= ವಸಂತ ಋತು, ಜ್ಯೇಷ್ಠ- ಆಷಾಢ= ಗ್ರೀಷ್ಮ ಋತು, ಶ್ರಾವಣ- ಭಾದ್ರಪದ= ವರ್ಷ ಋತು, ಆಶ್ವಯುಜ- ಕಾರ್ತಿಕ= ಶರದೃತು, ಮಾರ್ಗಶಿರ-ಪುಷ್ಯ= ಹಿಮಂತ ಋತು, ಮಾಘ-ಫಾಲ್ಗುಣ= ಶಿಶಿರ ಋತು,ಪೂಗಳ್+ ತಳಿರ್ಗಳ್= ಪೂತಳಿರ್ಗಳ್ (ದ್ವಂ. ಸ. ) ಇಂದ್ರ= ದೊರೆ, ದೇವೇಂದ್ರ, ಬೆಟ್ಟಿತ್ತು+ಗಾಳಿ= ಬಿರುಗಾಳಿ ( ವಿ. ಪೂ. ಕ. ) ಸಿಡಿಲೂ+ಮಿಂಚೂ= ಸಿಡಿಲ್ಮಿಂಚುಗಳು ( ದ್ವಂ. ಸ. )
ತಾತ್ಪರ್ಯ:-ಹಿಮವಂತನ ಪುತ್ರಿಯಾದ ಪಾರ್ವತಿಯು ಆ ಅರಣ್ಯದಲ್ಲಿ ತಪಸ್ಸು ಮಾಡುತ್ತಿರುವ ಕಾಲದಲ್ಲಿ ಆ ಕಾನನದಲ್ಲಿ ಚಂಡಮಾರುತವು ಬೀಸದೆ ನಿಧಾನವಾಗಿ ಬೀಸುತ್ತಿತ್ತು, ಸೂರ್ಯನ ತಾಪವು ತೀಕ್ಷ್ಣವಾಗಿರದೆ ಶಾಂತವಾಗಿದ್ದಿತು. ಭೂಮಿ
-ಯನ್ನು ವಿಶೇಷವಾಗಿ ಕಾವುಮಾಡುತ್ತಿರಲಿಲ್ಲ,. ಮುಗಿಲ್ಗಳು ಕಠಿಣವಾದ ಗುಡುಗು, ಸಿಡಿಲ,ಮಿಂಚಿನಿಂದಾವೃತವಾದ ಬಿರು
ಮಳೆಯನ್ನು ಸುರಿಸುತ್ತಿರಲಿಲ್ಲ.ದವಾಗ್ನಿಯು ಸವಿಧ ಸ್ಥಳಗಳಲ್ಲಿ ತನ್ನ ಶಕ್ತಿಯನ್ನು ತೋರಿಸುತ್ತಿರಲಿಲ್ಲ. ಯೃವಾಗ್ಯೂ ಭ್ರಮರ-
ಗಳು ಮಕರಂದಕ್ಕಾಗಿ ಪದ್ಮಗಳಲ್ಲಿ ಸೇರುತ್ತಿದ್ದವು .ವೃಕ್ಷಾದಿಗಳು ಬಂಜೆಯಾಗಿರದೆ ಸರ್ವಕಾಲದಲ್ಲೂ ಫಲ, ಪುಷ್ಪ, ಚಿಗುರು
-ಗಳಿಂದ ಶೋಭಿಸುತ್ತಿರುವುವು. ಆಯಾ ಋತುಗಳು ಋತುಧರ್ಮಕ್ಕೆ ಅನುಸಾರವಾಗಿ ನಡಿಸುತ್ತಿದ್ದವು.
ಅಂಚೆಗಳುಡುಗವು ಮಳೆಗಾಲದೊಳ್ ಕೋಗಿಲೆಗ।
ಳಿಚರವನುಳಿದಿರವು ಮಾಗಿಯೊಳ್ ಬೇಸಗೆಯೊ।
ಳುಂ ಚಿಗುರಿದೆಳವುಲ್ ಮೃಗಂಗಳ್ಗೆ ಬೀಯದಗಲದು ಚಕ್ರಮಿಥುನಮಿರುಳು॥
ಹೊಂಚದು ಪಗಲ್ ಗೂಗೆ ಸಂಪಗೆಯಲರ್ಗಳಂ।
ಚಂಚರೀಕಂಗಳಡರದೆ ಮಾಣವೆಸೆವಕಮ।
ಲಂ ಚಂದ್ರನುದಯಕುತ್ಪಲಮಿನಕಿರಣಕೆ ಬಾಡದು ಬನದೊಳುಮೆಯಿರಲ್ಕೆ॥೧೮॥
ಪ್ರತಿಪದಾರ್ಥ :- ಉಮೆ= ಕಾತ್ಯಾಯನಿಯು, ಬನದೊಳು= ಅರಣ್ಯದಲ್ಲಿ, ಇರಲ್ಕೆ= ಚಂದ್ರಮೌಳಿಯನ್ನು ಕುರಿತು ಧ್ಯಾನಿಸುತ್ತಿರಲು, ಆ ಮಳೆಗಾಲದೊಳ್= ಆ ವರ್ಷರ್ತುವಿನಲ್ಲಿ(ವರ್ಷಾ ಕಾಲದಲ್ಲಿ) ಅಂಚೆಗಳ್= ಮರಾಳಗಳು, ತೊಲಗವು= ಮಳೆಗಾಲವು ತಮಗೆ ಅನಾರೋಗ್ಯವಾಗಿದ್ದರೂ, ಆ ಸ್ಥಳವನ್ನು ಬಿಟ್ಟು ಹೋಗಲಾರವು, ಮಾಗಿಯೊಳ್= ಮಾಗಿಯಕಾಲದಲ್ಲಿ( ಹಿಮಂತ ಋತುವಿನಲ್ಲಿ) ಕೋಗಿಲು= ಪರಪುಟ್ಟವು, ಇಂಚರಮಂ= ತನ್ನ ಮಧುರಧ್ವನಿಯನ್ನು, ಉಳಿದು= ತ್ಯಜಿಸಿ, ಇರವು=ಇರುತ್ತಿರಲಿಲ್ಲ, (ಕೋಗಿಲೆಗಳಿಗೆ ಹಿಮಂತ ಋತುವು ಅಸೌಖ್ಯವಾದದ್ದು ಆಗಿದ್ದರೂ, ಪಾರ್ವತಿಯ ತಪಶ್ಶಕ್ತಿಯಿಂದ ಆ ಅಕಾಲದಲ್ಲೂ ಕೂಗುತ್ತಿದ್ದವು) ಬೇಸಿಗೆಯೊಳು= ಚೈತ್ರ-ವೈಶಾಖ ಮಾಸಗಳಲ್ಲಿಯೂ,
ಚಿಗುರಿದ= ಅಂಕುರದಿಂದ ಕೂಡಿ ಬೆಳೆದಿರುವ, ಎಳೆ= ಎಳೆಯದಾದ. ಪುಲ್= ತೃಣವು, ಮೃಗಂಗಳಿಗೆ= ಪಶ್ವಾದಿಶಪ್ರಾಣಿಗ-
ಳಿಗೆ, ಬೀಯದು=ಇಲೂಲದೆ ಇರುತ್ತಿರಲಿಲ್ಲ ( ಬಹಳವಾಗಿತ್ತೆಂಬ ಭಾವ) ಇರುಳು= ರಾತ್ರಿ ಕಾಲದಲ್ಲಿ, ಚಕ್ರವಾಕ =ರಥಾಂಗ-
ಗಳು, ಅಗಲದು= ಗಂಡು ಹೆಣ್ಣು ಬೇರೆಯಾಗವು, (ರಾತ್ರಿಯಾದ ಕೂಡಲೆ ದಂಪತಿ ಪಕ್ಷಿಗಳು ಒಂದನ್ನೊಂದು ಅಗಲುವವು, ಇಲ್ಲಿ ಹಾಗಿರಲಿಲ್ಲ) ಪಗಲು= ಹಗಲುಕಾಲದಲ್ಲಿ, ಗೂಗೆ=ಕೌಶಿಕ ಪಕ್ಷಿಯು (ಗೂಬೆಯು )ಹೊಂಚದು= ಹೊಂಚುಕಾಯುತ್ತಿ-
ರದು, ತನ್ನ ಆಹಾರವನ್ನು ಹುಡುಕುತ್ತಿರುವುದು, ಚಂಚರೀಕಂಗಳು= ಅಳಿಗಳು, ಸಂಪಗೆಯಲರ್ಗಳಂ= ಚಂಪಕಾ ಪುಷ್ಪಗ-
ಳನ್ನು, ಅಡರದೆ= ಅದರಲ್ಲಿ ಹೋಗದೆ, ಎರದು= ಇರುತ್ತಿರಲಿಲ್ಲ, ಎಸೆವ= ಶೋಭಿಸುವ, ಕಮಲಂ= ತಾವರೆಯು, ಚಂದ್ರನ= ಶೀತರೋಚಿಯ, ಉದಯಕ್ಕೆ=ಆವಿರ್ಭವಿಸಿದುದಕ್ಕೆ, ಉತ್ಪಲಂ=ನೈದಿಲೆ ಪುಷ್ಪವು, ಇನ= ಭಾಸ್ಕರನ, ಕಿರಣಕೆ= ಪ್ರಕಾಶಕ್ಕೆ, ಬಾಡದು= ಒಣಗಿ ಹೋಗದು, (ಮುಚ್ಚಿಕೊಳ್ಳುವುದು)
ಅ॥ವಿ॥ಷಟ್+ಋತು= ಷಡ್ರುತು( ಜ. ಸಂ.)ಮೃಗ=ಜಿಂಕೆ, ಕಾಡುಮೃಗ, ಗೂಗೆ( ತ್ಭ.) ಘೂಕ(ತ್ಸ)ರಾತ್ರಿಯಲ್ಲಿ ಕಮಲಗಳು ಮುಕುಳಿತವಾಗದಿರುವುದು, ಹಗಲಿನಲ್ಲಿ ಉತ್ಫಲಗಳು ವಿಕಶಿಸುವುದು, ಗೂಬೆಗಳು ಹಗಲಲ್ಲಿ ಆಹಾರವನ್ನು ಹುಡುಕುವುದು, ಅಂಚೆಗಳು ಮಳೆಗಾಲದಲ್ಲಿ ಮಾನಸ ಸರಸ್ಸಿಗೆ ಹೊರಡದೆ ಇರುವುದು ಈ ವಿರೋಧಾತಿಶಯಗಳೆಲ್ಲವೂ ಪಾರ್ವತೀ ದೇವಿಯ ತಪಶ್ಶಕ್ತಿಯ ಅತಿಶಯದಿಂದ ನಡೆಯುತ್ತಿದ್ದವು.
ತಾತ್ಪರ್ಯ:-ಈರೀತಿಯಾಗಿ ಕಾತ್ಯಾಯಿನಿಯು ತಪೋವನದಲ್ಲಿ ಚಂದ್ರಶೇಖರನನ್ನು ಕುರಿತು ತಪಸ್ಸು ಮಾಡುತ್ತಿರಲು, ವರ್ಷ -ಋತುವು ಅಂಚೆಗಳಿಗೆ ಅನಾರೋಗ್ಯವಿದ್ದರೂ ಮಾನಸ ಸರಸ್ಸಿಗೆ ಹೋಗದೆ ಅಲ್ಲಿಯೇ ಇರುತ್ತಿದ್ದವು.ಮಾಗಿಯ ಕಾಲದಲ್ಲಿ ಕೋಕಿಲ ಪಕ್ಷಿಗಳ ಕಂಠವು ಹುಣ್ಣಾಗಿರುತ್ತದೆ. ಹಾಗಿದ್ದರೂ ಮಾಗಿಯ ಕಾಲದಲ್ಲೂ ಮಧುರಧ್ವನಿ ಮಾಡುತ್ತಿದ್ದವು. ಚೈತ್ರ ವೈಶಾಖ ಮಾಸಗಳಲ್ಲಿ ಬಿಸಿಲಿನ ತಾಪದಿಂದ ತೃಣಾದಿಯಾಗಿ ಸಕಲವೂ ಒಣಗಿಹೋಗುವುದಾಗಿದ್ದರೂ, ಮೃಗಪಶ್ವಾದಿಗಳಿಗೆ ಚಿಗುರಿನಿಂದ ಕೂಡಿದ ಹುಲ್ಲು ಮೊದಲಾದವು ಸಮೃದ್ಧಿಯಾಗಿರುತ್ತಿತ್ತು. ರಾತ್ರಿಯ ಕಾಲದಲ್ಲಿ ಚಕ್ರವಾಕಗಳು ಗಂಡು ಹೆಣ್ಣು ಬೇರೆಯಾಗುವುದು ಸ್ವಾಭಾವಿಕವಾಗಿದ್ದರೂ ಹಗಲಿನಂತೆಯೇ ಒಟ್ಟುಗೂಡಿದ್ದವು. ಹಗಲಲ್ಲಿ ಗೂಗೆಗಳು ಆಹಾರಕ್ಕಾಗಿಸಂಚ
-ಸದಾದರೂ ಸಂಚರಿಸುತ್ತಿದ್ದವು. ಭ್ರಮರಗಳು ಚಂಪಕಾ ಪುಷ್ಪಗಳಿಗೆ ಅಡರುತ್ತಿದ್ದವು. ರಾತ್ರಿ ಕಾಲದಲ್ಲಿ ಕಮಲವೂ, ಹಗಲಿನಲ್ಲಿ ನೈದಿಲೆಯೂ ಮುಕುಳಿತವಾಗುವವಾದರೂ ಸರ್ವಕಾಲದಲ್ಲಿಯೂ ವಿಕಸಿತವಾಗಿಯೇ ಇರುವುವು.
ಕಾಡಾನೆಗಳ್ ಕೇಸರಿಗಳ ಮರಿಗಳ್ಗೆ ಮೊಲೆ।
ಯೂಡುವುವು ಪುಲ್ಲೆಗಳ್ ಪೆರ್ಬುಲಿಗಳೊಳ್ ಸರಸ।
ವಾಡುವುವು ಪಾವು ಮುಂಗುಲಿಗಳೊಡಗೂಡುವುವು ಮೂಷಕಂ ಮೇಲೆ ಬಿದ್ದು॥
ಕಾಡುವುವು ಮಾರ್ಜಾಲಮಂ ಮೊಲಂ ತೋಳನಂ।
ಬೇಡುವುವು ಮೇವುಗಳನೊಂದು ಬಳಿಯೊಳ್ ಗೂಡು।
ಮಾಡುವುವು ಪದ್ದು ಕಾಗೆಗಳೆಂತೊ ಸಾತ್ವಿಕಮರ್ಪಣೆಯ ತಪೋವನದೊಳು॥೧೯॥
ಪ್ರತಿಪದಾರ್ಥ :- ಕಾಡಾನೆಗಳ್ = ವನಗಜಗಳು, ಕೇಸರಿಗಳ= ಮೃಗೇಂದ್ರಗಳ, ಮರಿಗಳ್ಗೆ= ಮರಿಗಳಿಗೆ, ಮೊಲೆಯ= ಸ್ತನ್ಯಕ್ಕಾಗಿ ಮೊಲೆಯನ್ನು,ಊಡುವುವು= ನೀಡುವುವು, ಪುಲಿಗಳೋಳ್= ಶಾರ್ದೂಲಗಳೊಂದಿಗೆ, ಪುಲ್ಲೆಗಳ್ = ಎರಳೆಗಳು, (ಜಿಂಕೆಗಳು) ಐದೆ= ಬಹುವಾಗಿ, ಸರಸವ= ವಿನೋದಗಳನ್ನು, ಆಡುವುವು= ಆಡುತ್ತಲಿರುವುವು, ಪಾವು= ಹಾವುಗಳು, ಮುಂಗಿಲಿಗಳ=ನಕುಲಗಳ, ಒಡಗೂಡುವುವು= ಸಂಗಡ ಸೇರಿಕೊಳ್ಳುವುವು,ಮೂಷಕಂ=ಅಖುವು(ಇಲಿಯು)
ಮಾರ್ಜಾಲಮಂ= ಬಿಡಾಲವನ್ನು( ಓತುವನ್ನು-ಓತಿಕ್ಯಾತ)ಮೇಲೆ ಬಿದ್ದು= ಅದರ ಮೇಲ್ಗಡೆ ಬಿದ್ದುಕೊಂಡು, ಕಾಡುವುದು= ಬಾಧೆಪಡಿಸುವುದು, ಮೊಲಂ= ಶಶವು, ತೋಳನಂ= ತೋಳವನ್ನು ನೋಡಿ, ಮೇವುಗಳನು= ಆಹಾರಾದಿಗಳನ್ನು, ಬೇಡುವುವು=ಯಾಚಿಸುವುವು, ಪದ್ದು=ರಣಹದ್ದು ಮೊದಲಾದವಗಳು, ಕಾಗೆಗಳ= ಚಿರಜೀವಿಗಳು(ವಾಯಸವೇ ಮೊದಲಾದವುಗಳು)ಒಂದು ಬಳಿಯೋಳ್= ಒಕ್ಕಡೆಯಲ್ಲಿ, ಗೂಡುಮಾಡುವುವು= ವಾಸಿಸಲು ಗೂಡನ್ನು ಮಾಡುವುವು, ಇಕ್ಕೆ= ಸ್ಥಳವನ್ನು ಮಾಡುವುವು, ಊಪರ್ಣೆಯ= ಅಂಬಿಕೆಯ, ತಪೋಬನದೊಳು= ತಪಸ್ಸನ್ನು ಮಾಡುತ್ತಿರುವ ಬನದಲ್ಲಿ,ಸಾತ್ವಿಕಂ= ನಿರ್ದುಷ್ಟವಾದ ಗುಣವು, ಎಂತೊ= ಅದು ಎಷ್ಟು ಆಶ್ಚರ್ಯಕರವಾದುದೊ.
ಅ॥ವಿ॥ ಕೇಸರ= ಸಿಂಹದ ಕತ್ತಿನ ಸುತ್ತಲಿರುವ ಕೂದಲಿಗೆ ಕೇಸರವೆಂಬ ಹೆಸರು, ಕೇಸರುಳ್ಳದ್ದು ಕೇಸರಿ, ಕಾಕ(ತ್ಸ) ಕಾಗೆ(ತ್ಭ) ಕೋಕಿಲ(ತ್ಸ) ಕೋಗಿಲೆ(ತ್ಭ) ಗೃಧ್ರ(ತ್ಸ) ಹದ್ದು( ತ್ಭ)
ಪರಿಚರ್ಯೆಯಂ ಮಾಡುವುವು ಕೋಡಗಂಗಳಿ।
ರ್ದರಗಿಳಿಗಳಾಡುವುವು ಕೂಡೆ ಸರಸೋಕ್ತಿಯಂ।
ಬರಿಕೈಗಳಂ ನೀಡಿ ಪಣ್ಗಾಯಲರ್ಗಳಂ ದಂತಿಗಳ್ ಕುಡುತಿರ್ಪವು॥
ಪಿರಿದು ಬಯಸಿದ ವಸ್ತುಗಳನಿತ್ತಪವು ಕಲ್ಪ।
ತರುಗಳೆಡೆಯಾಟದಾಸರ್ಗಳಂ ಕಳೆದಪುವು।
ಪರಿಮಳದಲರ್ಗಳಗಜೆಯ ತಪೋವನದೊಳಾವಾಸಮಾಗಿರ್ಪವರ್ಗೆ॥೨೦॥
ಪ್ರತಿಪದಾರ್ಥ :- ಆಗಜೆಯ= ದಾಕ್ಷಾಯಿಣಿಯ, ತಪೋವನದೊಳು= ತಪಸ್ಸು ಮಾಡುವ ಅರಣ್ಯದಲ್ಲಿ, ಆವಾಸಂ= ವಾಸಮಾಡಿಕೊಂಡು, ಇರ್ಪ=ಇರುತ್ತಿರುವ, ಅವರ್ಗೆ= ಅಂಥವರಿಗೆ, ಕೋಡಗಗಳ್= ಮರ್ಕಟಗಳು, ಇರ್ದರೆ= ಇರುತ್ತಿದ್ದರೆ,
ಪರಿಚರ್ಯೆಯಂ= ಸೇವೆಯನ್ನು, ಮಾಡುವವು= ಗೈಯುವವು, ಗಿಳಿಗಳು= ಕೀರಗಳು, ಕೂಡೆ= ಒಡನೆಯೇ, ಸರಸ= ರಸಯುಕ್ತವಾದ, ಉಕ್ತಿಯಿಂ= ಹೇಳುವಿಕೆಯಿಂದ, ಮಾತನ್ನು ಆಡುವುವು= ಆಡುತ್ತಿರುವುವು, ದಂತಿಗಳ್= ಇಭಗಳು
(ಆನೆಗಳು) ಬರಿಕೈಗಳಂ= ಬರಿದಾದ ಸೊಂಡಿಲನ್ನು, ನೀಡೆ= ಮುಂದಕ್ಕೆ ಚಾಚಿಕೊಂಡರೆ, ಪಣ್ಗಾಯಿ ಪೂಗಳಂ= ಫಲಪುಷ್ಪಾ
-ದಿಗಳನ್ನು, ಕೊಡುತ=ಕೊಡುತ್ತ, ಇರ್ಪವು= ಇರುತ್ತಿದ್ದವು, ಕಲ್ಪತರುಗಳ್= ಕಲೂಪವೃಕ್ಷಗಳು( ಅಲ್ಲಿದ್ದುಕೊಂಡು) ಪಿರಿದು= ಅಧಿಕವಾಗಿ, ಬಯಸಿದ= ಅಪೇಕ್ಷಿಸಿದ, ವಸ್ತುಗಳನು= ವಸ್ತುಗಳನ್ನು, ಇತ್ತಪವು= ಕೊಡುವುವು, ಅಗಜೆಯ= ಕಾತ್ಯಾಯಿ-
ನಿಯ, ತಪೋವನದೊಳು= ತಪಸ್ಸುಮಾಡುವ ಕಾಡಿನಲ್ಲಿ, ಆವಾಸ= ವಾಸಮಾಡಿಕೊಂಡು, ಇರ್ಪ=ಇರುತ್ತಿರುವ, ಅವರ್ಗೆ=ಅಂಥವರಿಗೆ, ಪರಿಮಳದ= ಒಳ್ಳೆಯ ವಾಸನೆಯಿಂದ ಕೂಡಿದ, ಎಲರ್ಗಳ್= ಗಾಳಿಗಳು, ಎಡೆಯಾಡದ= ಸಂಚರಿಸದ, ಆಸರ್ಗಳಂ= ಬೇಜಾರನ್ನು, ಕಳೆದಪವು= ಪರಿಹಾರಮಾಡುವವು,
ಅ॥ವಿ॥ ಕಲ್ಪವೃಕ್ಷ= ಕೇಳಿದ ವಸ್ತುಗಳನ್ನು ನೀಡುವ ಮರ, ದಂತವುಳ್ಳದ್ದು-ದಂತಿ, (ಆನೆ) ತರು=ವೃಕ್ಷ, ತುರು= ಆಕಳು, ಕರ=ಕೈ, ಕಪ್ಪ, ಕಿರಣ, ಆನೆಯ ಸೊಂಡಿಲು.
ತಾತ್ಪರ್ಯ:- ಆಗ ಗಿರಿಜೆಯು ತಪಸ್ಸು ಮಾಡುತ್ತಿದ್ದ ತಪೋವನದಲ್ಲಿ ಯಾರಾದರೂ ಇದ್ದರೆ, ಕೋಡಗಗಳು ಉಪಚಾರಾ-
ದಿಗಳನ್ನೂ, ಶುಕಾದಿಗಳು ಮೃದು ಮಧುರ ಸರಸ ಸಲ್ಲಾಪಗಳನ್ನು ಮಾಡುತ್ತಿದ್ದವು. ಆನೆಗಳು ಬೆರಳುಗಳಿಲ್ಲದ ತಮ್ಮ ಸೊಂಡಿಲನ್ನು ನೀಡಿದರೆ ಹಣ್ಣು ಕಾಯಿ ಮೊದಲಾದವುಗಳನ್ನು, ಗಿಣಿ ಮೊದಲಾದ ಪಕ್ಷಿಗಳು ಸರಸೋಕ್ತಿಗಳನ್ನಾಡುತಿರ್ದ-
ವು. ಯಾರ್ದರೂ ತಮಗೆ ಬೇಕಾದ ವಸ್ತುಗಳನ್ನು ಅಪೇಕ್ಷಿಸಿದರೆ ಕಲ್ಪವೃಕ್ಷಗಳು ಅಲ್ಲಿದ್ದುಕೊಂಡು ಕೊಡುವುವು. ಆ ಅರಣ್ಯದಲ್ಲಿ ವಾಸಮಾಡುತ್ತಿದ್ದವರಿಗ ಸುವಾಸನೆಯಿಂದೊಡಗೂಡಿದ ವಾಯುವು ಸೋಕೋಣದರಿಂದ ಆನಂದವನ್ನುಂಟು
-ಮಾಡುತ್ತಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ