ಜೈಮಿನಿ ಭಾರತ 14 - ದೊಡ್ಡಬೆಲೆ ನಾರಾಯಣಶಾಸ್ತ್ರಿ
ಸೂಚನೆ:- ಚಂಡಸುರಥನ ಶಿರವನಸುರಹರನಾಜ್ಞೆಯಿಂ।
ಕೊಂಡು ಗರುಡಂ ಪ್ರಯಾಗವನೈದಲೀಶ್ವರಂ।
ಕಂಡು ವೃಷರಾಜನಂ ಕಳುಹಿತರಿಸಿದನದಂ ರುಂಡಮಾಲೆಯ ತೊಡವಿಗೆ॥
ಪ್ರತಿಪದಾರ್ಥ :- ಅಸುರಹರನ= ರಾಕ್ಷಸಾಂತಕನಾದ ಶ್ರೀಕೃಷ್ಣನ, ಆಜ್ಞೆಯಿಂ = ಅನುಜ್ಞೆಯ ಮೇರೆಗೆ, ಗರುಡಂ= ವಿನತೆಯ ಮಗನಾದ ಗರುಡನು, ಚಂಡ= ಭಯಂಕರನಾದ ಸುರಥನ, ಅರ್ಜುನನೊಂದಿಗೆ ಕಾದಿ ಮಡಿದ ಸುರಥನ, ಶಿರವಂ= ಶಿರಸ್ಸನ್ನು, (ತಲೆಯನ್ನು) ಕೊಂಡು=ಹೊಂದಿ,(ಪಡೆದು ಬಂದು) ಪ್ರಯಾಗವಂ= ಪ್ರಯಾಗವೆಂಬ ಪುಣ್ಯಸ್ಥಳವನ್ನು(ಗಂಗಾ-
ಯಮುನಾ ಸಂಗಮ ಕ್ಷೇತ್ರವಾದ ವಾರಣಾವತವನ್ನು) ಐದಲು= ಆ ಕ್ಷೇತ್ರದಲ್ಲಿ ಹಾಕಲಿಕ್ಕಾಗಿ ಬರಲು, ಈಶ್ವರಂ = ಜಗಧೀಶನಾದ ಪರಮೇಶ್ವರನು,ಕಂಡು=ವೈನತೇಯನು ಸುರಥನ ಶಿರವಂ ತಂದುದನ್ನು ನೋಡಿ, ವೃಷರಾಜನನ್ನು= ತನ್ನ ವಾಹನವಾದ ವೃಷಭೇಶನಂ , ಕಳುಹಿ=ಕಳುಹಿಸಿಕೊಟ್ಟು, ಅದಂ=ಆ ಶಿರವನ್ನು,ಶಿವಂ=ಈಶ್ವರನು, ರುಂಡಮಾಲೆಯ = ತಲೆಯ ಬುರುಡೆಗಳಿಂದೆಸಗಿದ ಹಾರದ, ತೊಡವಿಗೆ= ಆಭರಣಕ್ಕಾಗಿ,ತರಿಸಿದಂ= ವೃಷಭೇಶ್ವರನಿಂದ ತರಿಸಿದನು.
ಕೇಳ್ದೈ ನೃಪಾಲಕ ಸಧನ್ವನಗ್ಗಳಾಕೆಯಂ।
ಪೇಳ್ದಪೆಂ ನಿನಗಾಲಿಪುದು ಸುರಥನಂಕಮಂ।
ತಾಳ್ದನತಿರೋಷಮಂ ರಥವೇರಿ ವಿನುತಕೋದಂಡಮಂ ಜೇಗೈಯ್ಯುತೆ॥
ಬಾಳ್ದಪನೆ ಫಲುಗುಣಂ ಮೇಣಿಳಾಮಂಡಲವ।
ನಾಳ್ದಪನೆ ಧರ್ಮಜಂ ಕಾಣಬಹುದಿಂದೆನ್ನ।
ತೋಳ್ದೀಂಟೆಯಂ ಕಳೆವೆನೆನುತೆ ಕೃಷ್ಣಾರ್ಜುನರ ಸರಿಸಕೈತರುತಿರ್ದನು॥೧॥
ಪ್ರತಿಪದಾರ್ಥ :- ನೃಪಾಲ= ರಾಜನಾದ ಜನಮೇಜಯನೆ, ಸುಧನ್ವನ ಅಗ್ಗಳಿಕೆಯಂ= ಸುಧನ್ವನ ಪರಾಕ್ರಮಾತಿಶಯವನ್ನು, ಕೇಳ್ದೈ= ಆಲಿಸಿದೆಯಷ್ಟೆ, ಪೇಳ್ದಪೆಂ= ಸುಧನ್ವನ ತಮ್ಮನಾದ ಸುರಥನ ಶೌರ್ಯಾದಿಗಳನ್ನು ಪೇಳುವೆನು, ಆಲಿಪುದು= ಆಕರ್ಣಿಸುವುದು, ಸುರಥಂ= ಸುರಥನೂ ಕೂಡ, ಅಂಕಮಂ= ಪರಾಕ್ರಮಯುತವಾದ ಕಾಳಗೋದ್ಯೋಗವನ್ನು, ತಾಳ್ದಂ= ಹೊಂದಿದನು, (ಕೈಗೊಂಡನು) ಅತಿ ರೋಷದಿಂದ =ಅಧಿಕವಾದ ಕೋಪದಿಂದ, ರಥವ= ವರೂಥವನ್ನು, ಏರಿ=ಹತ್ತಿ ವಿನುತ= ಸ್ತೋತ್ರಾರ್ಹಮಾದ,ಕೋದಂಡಮಂ= ಧನುಸ್ಸನ್ನು, ಜೇಗೈವುತ= ಝೇಂಕಾರಮಾಡುತ್ತ, ಫಲುಗುಣಂ= ಪಾರ್ಥನು, ಬಾಳ್ದಪನೆ= ಭೂಮಿಯಮೇಲೆ ಜೀವಿಸಲಾಪನೆ, ಮೇಣ್= ಮತ್ತು, ಧರ್ಮಜಂ = ಧರ್ಮರಾಯನು, ಇಳಾ-
ಮಂಡಲವಂ= ಈ ಪೃಥ್ವೀಮಂಡಲವನ್ನು, ಆಳ್ದಪನೆ= ಪಾಲೆಸುತ್ತಾನೆಯೆ, ಇಂದು= ಈಗ, (ಈ ದಿವಸ) ಕಾಣಬಹುದು= ನೋಡಬಹುದು, ಎನ್ನ=ನನ್ನಯ,ತೋಳ್ದೀಟೆಯಂ= ತೋಳಿನ ನವೆಯನ್ನು, (ಜೋವನ್ನು) ಕಳೆವೆಂ= ಹೋಗಲಾಡಿಸುವೆನು, ಎನುತ= ಎಂಬುದಾಗಿ ಹೇಳಿಕೊಳ್ಳುತ್ತಾ, ಕೃಷ್ಣಾರ್ಜುನರ= ಕೃಷ್ಣ ಪಾರ್ಥರ, ಸರಿಸಕೆ= ಸಾಮೀಪ್ಯವನ್ನು ಕುರಿತು, ಐತರು-
ತ್ತಿದ್ದನು= ಬರುತ್ತಿದ್ದನು.
ಅ॥ವಿ॥ಅಂಕ= ಪರಾಕ್ರಮ, ತೊಡೆ, ಗುರುತು, ನಾಟಕದ ವಿಭಾಗ, ಧರ್ಮ= ಯಮಧರ್ಮನ ಉಪದೇಶಮಂತ್ತದಿಂದ, ಜ= ಹುಟ್ಟಿದವನು, ನೃ= ಮನುಷರನ್ನು, ಪಾಲಕ= ಕಾಪಾಡತಕ್ಕವನು) ಧರ್ಮನಿಂದ+ಜ=ಧರ್ಮಜ,(ತೃ, ತ.) ತೋಳ್+ ತೀಟೆ= ತೋಳ್ದೀಟೆ, (ತಕಾರಕ್ಕೆ ದಕಾರ ಆದೇಶ ಸಂಧಿ) ತೋಳಿನ+ತೀಟೆ ( ಷ. ತ. )
ಸುರಥನೈತಹ ರಣೋತ್ಸಾಹಮಂ ಕಂಡು ಹರಿ।
ನರನೊಳಾಲೋಚಿಸಿ ನುಡಿದನಿವಂ ಧರೆಯೊಳಾ।
ಚರಿಸದಿಹ ಪುಣ್ಯಕರ್ಮಂಗಳೊಂದಿಲ್ಲಿವಂ ಮರೆದಾದೊಡಂ ಮಾಡಿದ॥
ದುರಿತಲವಮಂ ಕಾಣೆನಾರ್ ಜಯಿಪರೀತನಂ।
ಸರಿಸದೊಳ್ ನಿಂದೆಡೆ ಬಹುದು ನಮಗೀಗ।
ಪರಿಭವಂ ಪ್ರದ್ಯುಮ್ನ ಮೊದಲಾದ ಪಟುಭಟರ್ ಕಾದಲಿವನೊಡನೆಂದನು॥೨॥
ಪ್ರತಿಪದಾರ್ಥ :- ಸುರಥಂ= ಸುರಥನು, ಐತಹ= ತಮ್ಮ ಸಮೀಪಕ್ಕೆ ಬರುತ್ತಿರುವ, ರಣೋತ್ಸಾಹಮಂ = ಯುದ್ಧ ಉತ್ಸುಕತೆಯನ್ನು, ಕಂಡು=ನೋಡಿ, ಹರಿ= ಶ್ರೀಕೃಷ್ಣನು, ನರನೊಳು= ಪಾರ್ಥನಲ್ಲಿ,(ಅರ್ಜುನನ ಕೂಡ, ) ಆಲೋಚಿಸಿ ಯೋಚನೆಮಾಡಿ, ನುಡಿದಂ= ಹೇಳಿದನು, ಇವಂ=ಈ ಸುರಥನು, ಧರೆಯೋಳ್= ಪೃಥ್ವಿಯಲ್ಲಿ, ಆಚರಿಸದೆ= ನೆರವೇರಿಸದೆ, ಇಹ= ಇರುವಂಥ, ಪುಣ್ಯಕರ್ಮಂಗಳು= ಪುಣ್ಯ(ಒಳ್ಳೆ)ಕಜ್ಜಂ =ಸತ್ಕಾರ್ಯಗಳು, ಒಂದಿಲ್ಲ= ಉಳಿದಿರುವದಾವುದೂ ಇಲ್ಲ,
( ಸಕಲ ಪುಣ್ಯಪ್ರದಮಾದ ಕೆಲಸಗಳನ್ನೆಲ್ಲಾ ಮಾಡಿರುವನು) ಇವಂ= ಈ ಸುರಥನು, ಮರದಾದೊಡಂ= ಅಜ್ಞಾನದಿಂದಾ-
ದರೂ, ಮಾಡಿದ= ಆಚರಿಸಿದ, ದುರಿತಂ= ಪಾಪವು,ಲವಂ= ಕೊಂಚವಾದರೂ,ಕಾಣೆನು= ನೋಡಿದವನಲ್ಲ ಆರು=
ಯಾರುತಾನೆ, ಈತನಂ= ಈ ಸುರಥನನ್ನು, ಜಯಿಪರು= ಗೆಲ್ಲುವರು, ಸರಿಸದೊಳ್= ಎದುರಾಗಿ, ನಿಂದೆವಾದೊಡೆ= ನಿಂತು
-ಕೊಂಡವರಾದದ್ದೇಯಾದರೆ, ನಮಗೆ= ನಮ್ಮಗಳಿಗೆ, ಈಗ= ಈ ಸಮಯದಲ್ಲಿ, ಪರಿಭವಂ= ಸೋಲುವಿಕೆಯು, ಬಹದು= ಉಂಟಾಗುವುದು, ಪ್ರದ್ಯುಮ್ನನೇ ಮೊದಲಾದ = ಪ್ರದ್ಯುಮ್ನನೇ ಆದಿಯಾಗುಳ್ಳ, ಪಟುಭಟರ್= ಸಮರ್ಥರಾದ ವೀರರು, ಇವನೊಡನೆ= ಈ ಸುರಥನೊಂದಿಗೆ,ಕಾದಲಿ= ಕಾಳಗಮಾಡಲಿ, ಎಂದನು= ಎಂದು ಹೇಳಿದನು.
ಅ॥ವಿ॥ ರಣ+ ಉತ್ಸಾಹ= ರಣೋತ್ಸಾಹ(ಗು. ಸಂ. )ಪುಣ್ಯದ+ಕರ್ಮ= ಪುಣ್ಯ ಕರ್ಮ(ಷ.ತ. )
ತಾತ್ಪರ್ಯ:-ಆ ಬಳಿಕ ಶ್ರೀಕೃಷ್ಣನು ಸುರಥನ ಯುದ್ಧಾಟೋಪವನ್ನು ಕಂಡು, ಅರ್ಜುನನೊಂದಿಗೆ ಮಾತಾಡುತ್ತಲಿದ್ದನು,ಎಲೈ ಪಾರ್ಥ, ಈಗ ಯುದ್ಧಕ್ಕೆ ಬರುತ್ತಿರುವ ಹಂಸಧ್ವಜನ ಎರಡನೆಯ ಮಗನಾದ ಸುರಥನು ಈ ಭೂಲೋಕದಲ್ಲಿ ನರಮನು-
ಷ್ಯರು ಮಾಡಬೇಕಾದ ಪುಣ್ಯಕಾರ್ಯಗಳನ್ನೆಲ್ಲಾ ಮಾಡಿದ್ದಾನೆ. ಇನ್ನು ಉಳಿದಿಹ ಕಾರ್ಯ ಒಂದೂ ಇಲ್ಲ. ಮರೆತಾದರೂ ಒಂದು ಅಕೃತ್ಯ ಸಹ ಮಾಡಿದವನಲ್ಲ, ನಾವು ಈತನ ಸಂಗಡ ಯುದ್ಧಕ್ಕೆ ನಿಂತೆವಾದರೆ, ನಮಗೆ ಎಂದಿಗೂ ಜಯವಾಗಲಾ-
ರದು, ಆದ್ದರಿಂದ ಪ್ರದ್ಯುಮ್ನನೇ ಆದಿಯಾದ ವೀರರೆಲ್ಲರೂ ಈ ಸುರಥನೊಡನೆ ಯುದ್ಧಮಾಡುವರಾಗಲಿ ಎಂದು ಹೇಳಿದನು.
ರಾಜೀವನೇತ್ರನಿಂತೆನಿತುಮಂಧಕವೃಷ್ಣಿ।
ಭೋಜರೆನಿಪಖಿಳ ಯಾದವಕುಲದ ಪಟುಭಟ ಸ।
ಮಾಜಮಂ ಪ್ರದ್ಯುಮ್ನನೊಡನೆ ಸುರಥನ ರಥಕ್ಕೆಣೆಯೊಡ್ಡಿ ನರನ ರಥದ॥
ವಾಜಿಗಳ ವಾಘೆಯಂ ತಿರುಹಿ ಹಿಂದಕೆ ಮೂರು।
ಯೋಜನದೊಳಿಟ್ಟಣಿಸಿ ನಿಂದು ಗರ್ಜಿಸುವ ಸೇ।
ನಾಜಲಧಿಮಧ್ಯದೊಳ್ ಬಂದು ನಿಂದರನೆಲೆಯ ಸುಯಿದಾನಮಂ॥೩॥
ಪ್ರತಿಪದಾರ್ಥ :- ರಾಜೀವನೇತ್ರನು= ಅರವಿಂದಾಕ್ಷನಾದ ಶ್ರೀಕೃಷ್ಣನು, ಇಂತು= ಈ ರೀತಿಯಾಗಿ, ಎನುತಲೆ= ಹೇಳಿದ ಕೂಡಲೆ, ಅಂಧಕವೃಷ್ಣಿ= ಅಂಧಕ, ವೃಷ್ಣಿಯು, ಭೋಜರು, ಎನಿಪ= ಎನ್ನುವ ಅಖಿಳ= ಸಮಸ್ತಮಾದ, ಯಾದವಕುಲದ = ಯದುವಂಶದವರ ಗುಂಪಿನ, ಪಟುಭಟ= ಸಮರ್ಥರಾದ ಶೂರರ, ಸಮಾಜ=ಗುಂಪು, ಪ್ರದ್ಯುಮ್ನನೊಡನೆ= ಪ್ರದ್ಯುಮ್ನನ ಸಂಗಡ, ಸುರಥನ ರಥಕೆ= ಸುರಥನವರೂಥಕ್ಕೆ, ಎಣೆ= ಬದಲಾಗಿ, ಒಡ್ಡಿ= ನಿಲ್ಲಿಸಿ, (ಚಾಚಿಕೊಂಡು) ನರನ= ಅರ್ಜುನನ, ರಥದ= ವರೂಥದ, ವಾಜಿಗಳ= ಕುದುರೆಗಳ, ವಾಘೆಯಂ= ಲಗಾಮನ್ನು, ಹಿಂದಕೆ= ಹಿಂಭಾಗಕ್ಕೆ, ತಿರುಹಿ= ತಿರುಗುವಂತೆ ಮಾಡಿ, ಮೂರುಯೋಜನದೋಳ್= ಮೂಗಾವುದ ಮಾರ್ಗದಲ್ಲಿ,ಇಟ್ಟಣಿಸಿ= ಗುಂಪುಕೂಡಿ, ನಿಂತು=ನಿಂತುಕೊಂಡು, ಗರ್ಜಿಸುವ= ಆರ್ಭಟಿಸುವ, ಸೇನಾಜಲಧಿ= ಸೈನ್ಯವೆಂಬ ಸಮುದ್ರದ, ಮಧ್ಯದೊಳ್= ನಡುಭಾಗದಲ್ಲಿ,ಬಂದು ನಿಂದಿರೆ= ಬಂದು ನಿಂತಿರಲು, ನೆಲೆಯ= ಸೈನ್ಯ ನಿಂತಿರುವ ಸ್ಥಳದ, ಸುಯಿಧಾನದಿಂ= ಎಚ್ಚರಿಕೆಯಾಗಿರುವ ವ್ಯೂಹ ನಿರ್ಮಾಣದಿಂದ, ಬಲೆದನು= ಬಲಪಡಿಸಿದನು.
ಅ॥ವಿ॥ ರಾಜೀವದಂತೆ +ನೇತ್ರಗಳುಳ್ಳವನು=ರಾಜೀವನೇತ್ರ ( ಉ.ಪೂ. ಬಹು. ) ವೃಷ್ಣಿ= ಟಗರು, ಕಿರಣ, ಯದುವಂಶದ ವೇರ. ಜಲ= ನೀರಿಗೆ, ಧಿ= ನಿಕ್ಷೇಪಸ್ಥಾನ(ನಿಲ್ಲುವ ಸ್ಥಳ)
ತಾತ್ಪರ್ಯ:- ಅರವಿಂದಾಕ್ಷನಾದ ಶ್ರೀಕೃಷ್ಣನು ಈ ಪ್ರಕಾರವಾಗಿ, ನುಡಿದ ಕೂಡಲೆ, ಯದುವಂಶದ ಮಹಾ ಶೂರರ ಸಮೂಹದಿಂದೊಡಗೂಡಿದ ಪ್ರದ್ಯುಮ್ನನೊಡನೆ, ಅಂಧಕ, ವೃಷ್ಣಿ, ಭೋಜರೇ ಮೊದಲಾದವರನ್ನು,ಸುರಥನ ರಥಕ್ಕೆ ಎದುರಾಗಿ ನಿಲ್ಲಿಸಿ, ಅರ್ಜುನನ ರಥದ ಅಶ್ವಗಳ ಕಡಿವಾಣವನ್ನುಪಿಡಿದು ರಥವನ್ನು ಹಿಂದಕ್ಕೆ ತಿರುಗಿಸಿ, ಮೂರು ಗಾವುದಗಳ ಮಾರ್ಗದಲ್ಲಿ ಗುಂಪುಗೂಡಿ ಆರ್ಭಟಿಸುವ ಸೇನಾಜಲಧಿಯ ಮಧ್ಯದಲ್ಲಿ, ನಿಂತೆರಲು, ಎಚ್ಚರಿಕೆಯಿಂದಿರುವ,
ವ್ಯೂಹನಿರ್ಮಾಣದಿಂದ ಬಲಪಡಿಸಿದನು.
ಇತ್ತಲಾಹವಕೆ ಮುಂಕೊಂಡು ಬಹ ಸುರಥನಂ।
ತೆತ್ತಿಸಿದನಂಬಿನಿಂ ಪ್ರದ್ಯುಮ್ನನಾತನಂ।
ಮೆತ್ತಿಸಿದನವಂ ಬಾಣದಿಂ ಪಾರ್ಥನೆತ್ತ ಜಾರಿದನೀಗಶೌರಿಸಹಿತ॥
ಮತ್ತಗಜದಗ್ಗಳಿಕೆ ಮಕ್ಷಿಕದೊಳಹುದು ಗಡ।
ಮುತ್ತದುವು ಕರಿ ತುರಗ ರಥ ಪದಾತಿಗಳಿಲ್ಲಿ।
ಹೊತ್ತುಗಳೆವಡೆ ಸುಧನ್ವನ ಹರೆಬವಲೂಲೆನುತ ತೆಗೆದೆಚ್ಚನಾ ಭಟರನು॥೪॥
ಪ್ರತಿಪದಾರ್ಥ :- ಇತ್ತಲ್= ಈ ಕಡೆ, ಆಹವಕ್ಕೆ= ಯುದ್ಧಕ್ಕೆ, ಮುಂಕೊಂಡು= ಮೇಲೆನುಗ್ಗಿ, ಬಹ= ಬರುವ, ಸುರಥನಂ= ಸುರಥನನ್ನು, ಪ್ರದ್ಯುಮ್ನಂ= ಪ್ರದ್ಯುಮ್ನನು, ಅಂಬಿನಿ= ಶರದಿಂದ,ತೆತ್ತಿಸಿದಂ= ಆವರಿಸಿಕೊಳ್ಳುವಂತೆ ಮಾಡಿದನು, ಅವಂ= ಆ ಸುರಥನು, ಆತನಂ= ಪ್ರದ್ಯುಮ್ನನನ್ನು,ಅಂಬಿನಿಂ= ಬಾಣಗಳಿಂದ, ಮುತ್ತಿದಂ= ಕವಿಯುವಂತೆ ಮಾಡಿದನು, ಈಗ= ಈ ಸಮಯದಲ್ಲಿ, ಶೌರಿಸಹಿತ= ಕೃಷ್ಣನ ಸಂಗಡ, ಪಾರ್ಥಂ= ಕಿರೀಟಿಯು,ಎತ್ತ=ಯಾವಕಡೆ, ಜಾರಿದನು= ಓಡೆಹೋದನು! ಮತ್ತೆ=ಇನ್ನು, ಗಜದಗ್ಗಳಿಕ= ಹಸ್ತಿಗಳ ಆಧಿಕ್ಯವು( ಆನೆಗಳ ಶಕ್ತಿಯು), ಮಕ್ಷಿಕದೊಳು= ನೊಣದ ಸಂಗಡ, ಅಹುದು=ಉಂಟಾಗುವುದು, ಗಡ= ಅಲ್ಲವೆ? ಕರಿ=ಆನೆಯೂ, ತುರಗ=ಅಶ್ವವೂ, ರಥ= ವರೂಥವೂ, ಪದಾತಿಗಳ್= ಕಾಲ್ಬಲವೇ ಮೊದಲಾದ ಚತುರಂಗಬಲವೂ, ಮುತ್ತಿದವು= ಆವರಿಸಿಕೊಂಡವು, ಇಲ್ಲಿ= ಈ ಕಾಳಗದಲ್ಲಿ, ಹೊತ್ತುಗಳೆವರೆ= ಕಾಲವನ್ನು ಕಳೆಯುತ್ತಾರೆಯೆ? ಸುಧನ್ವನ = ಹಂಸಧ್ವಜನ ಸುತನಾದ ಸುಧನ್ವನ, ಹರಿಬವು= ಕೆಲಸವು, ಅಲ್ಲೆನುತ= ಅಲ್ಲವೆಂದು, ಆ ಭಟರನು= ಆ ಯೋಧರನ್ನು,ತೆಗೆದೆಚ್ಚನು= ಶರದಿಂದ ಪ್ರಹಾರಮಾಡಿದನು.
ಅ॥ವಿ॥ಅತ್ತಲ್, ಇತ್ತಲ್, ಎತ್ತಲ್ ಇವು ಅವ್ಯಯಗಳು, ಪೃಥೆಯಮಗ=ಪಾರೂಥ, ಶೂರನಕುಲದವನು=ಶೌರಿ, ಚತುರಂಗಬಲ= ಹಸ್ತಿ, ಅಶ್ವ, ರಥ, ಪದಾತಿ.
ತಾತ್ಪರ್ಯ:- ಈ ಕಡೆಯಲ್ಲಿ ಯುದ್ಧಕ್ಕೆ ಮುಂದಾಗಿಮೇಲೆಬಿದ್ದು ಬರುವ ಸುರಥನನ್ನು ಪ್ರದ್ಯುಮ್ನನು ಬಾಣಗಳಿಂದ ಮುತ್ತಿದನು. ಅದಕ್ಕೆಪ್ರತಿಯಾಗಿ ಸುರಥನು ಪ್ರದ್ಯುಮ್ನನನ್ನು ಶರಗಳಿಂದ ಮುತ್ತಿದನು. ಈ ಕಡೆ ಕೃಷ್ಣಸಹಿತನಾಗಿ ಪಾರ್ಥನು ಎಲ್ಲಿ ಓಡಿಹೋದನೋ ತಿಳಿಯದು. ಇನ್ನು ಮದಿಸಿದ ಆನೆಗಳ ಹೆಚ್ಚಿಗೆಯು ನೊಣಕ್ಕೆ ಸಮವಾಯಿತು,ಚತುರಂಗಬಲವನ್ನು ಮುತ್ತಲು ಸುಧನ್ವನಂತೆ ಕಾಲಕಳೆವರೆ ಎಂದು, ಸುರಥನು ಆ ಶೂರರಾದ ಭಟರನ್ನು ಹೊಡೆದನು.
ತವಕದಿಂ ಪ್ರದ್ಯುಮ್ನನಂ ಗೆಲ್ದು ಸಾತ್ಯಕಿಯ।
ನವಗಡಿಸಿ ಕೃತವರ್ಮ ಸಾಂಬಾನುಸಾಲ್ವರಂ।
ಜವಗೆಡಿಸಿ ಕಲಿಯೌವನಾಶ್ವನಂ ಸದೆದು ನೇಲಧ್ವಜನನುರೆಘಾತಿಸಿ॥
ರವಿಸುತನ ಸೂನುವಂ ಪರಿಭವಿಸಿ ನಿಖಿಳ ಯಾ।
ದವ ಸುಭಟರಂ ಜಯಿಸಿ ಚತುರಂಗಸೈನ್ಯಮಂ।
ಸವರಿ ಸಮರಥ ಮಹಾರಥರನೊಂದೇ ರಥದೊಳಾ ಸುರಥನೊಡೆದುಳಿದನು॥೫॥
ಪ್ರತಿಪದಾರ್ಥ :- ಆಗ=ಆ ಪ್ರದ್ಯುಮ್ನನಾದಿಗಳು ಸುರಥನನ್ನು ಮುತ್ತಿದಾಗ, ಆ ಸುರಥಂ= ಆ ಸುರಥನಾದರೊ, ತವಕದಿಂ =ಅವಸರದಿಂದ, ಪ್ರದ್ಯುಮ್ನನಂ= ಪ್ರದ್ಯುಮ್ನನನ್ನು, ಗೆಲ್ದು=ಗೆದ್ದು, ಸಾತ್ಯಕಿಯಂ= ಸಾತ್ಯಕಿಯನ್ನು, ಅವಘಡಿಸಿ= ಮುತ್ತಿಕೊಂಡು, ಕೃತವರ್ಮ =ಕೃತವರ್ಮನು, ಸಾಂಬ= ಸಾಂಬನು, ಅನುಸಾಲ್ವಂ= ಅನುಸಾಲ್ವನೇ ಮೊದಲಾದ ವೀರರನ್ನು, ಜವಗೆಡಿಸಿ = ಶಕ್ತಿಗುಂದಿಸಿ, ಕಲಿ= ಶೂರನಾದ, ಯೌವನಾಶ್ವನಂ= ಯೌವನಾಶ್ವನನ್ನು, ಸದೆದು= ಶರಪ್ರಹಾರಮಾಡಿ, ನೀಲಧ್ವಜನಂ= ಜ್ವಾಲೆಯ ಗಂಡನಾದ ನೀಲಧ್ವಜನನ್ನು, ಉರೆ= ಬಹುವಾಗಿ, ಘಾತಿಸಿ= ಆಯಾಸಪಡಿಸಿ( ಹಿಂಸೆಪಡಿಸಿ) ರವಿಸುತನ= ಸೂರ್ಯಪುತ್ರನಾದ ಕರ್ಣನ,ಸೂನುವಂ= ಮಗನಾದ ವೃಷಧ್ವಜನನ್ನು, ಪರಿಭವಿಸಿ= ಅಪಜಯಪಡಿಸಿ ಎಂದೆ ಗೆದ್ದು, ಅಖಿಳ = ಸಮಸ್ತವಾದ, ಯಾದವ=ಯದುವಂಶದ, ಪಟುಭಟರಂ= ಬಲಾಢ್ಯರಾದ ವೀರರನ್ನು,ಜಯಿಸಿ= ಗೆದ್ದು, ಚತುರಂಗಸೈನ್ಯಮಂ= ಹಸ್ತ್ಯಶ್ವರಥಪದಾತಿ ಇವೇ ಮೊದಲಾದುವನ್ನು, ಸವರಿ= ಕತ್ತರಿಸಿ,ಸಮರಥಮಹಾರಥರಂ = ಸಮರಥ, ಮಹಾರಥರನ್ನು ಒಂದೇರಥದೊಳ್=ತನ್ನ ರಥವೊಂದರಿಂದಲೇ, ಒಡೆದು= ಬಾಣಪ್ರಯೋಗಮಾಡಿ ಚದುರಿಸಿ, ಉಳಿದನು = ನಿಂತನು.
ಅ॥ವಿ॥ ಕೃತವರ್ಮನೂ, ಸಾಂಬನೂ, ಅನುಸಾಲ್ವನೂ, ಇವರು= ಕೃತವರ್ಮಸಾಂಬಾನುಸಾಲ್ವರು, ಬಹು. (ದ್ವಂ.) ಸತಿ=ಹೆಂಡತಿ, ಸುತ=ಮಗ.
ತಾತ್ಪರ್ಯ:- ಪ್ರದ್ಯುಮ್ನಾದಿಗಳು ಸುರಥನನ್ನು ಮುತ್ತಿದಾಗ ಸುರಥನುಪ್ರದ್ಯುಮ್ನನನ್ನು ಜಯಿಸಿ, ಸಾತ್ಯಕಿಯನ್ನು ಮುತ್ತಿ ಕೃತವರ್ಮ ಸಾಂಬಾನುಸಾಲ್ವರನ್ನು ಶಕ್ತಿಗುಂದಿಸಿ, ಶೂರನಾದ ಯೌವನಾಶ್ವನನ್ನು ಗಾಯಪಡಿಸಿ, ನೀಲಧ್ವಜನನ್ನು ಹಿಂಸಿಸಿ, ಸೂರ್ಯನ ಮೊಮ್ಮಗನಾದ ವೋಷಧ್ವಜನನ್ನು ಅಪಜಯಗೊಳಿಸಿ, ಸಮಸ್ತ ಯದುಸೈನ್ಯವನ್ನೆಲ್ಲಾ ಕತ್ತರಿಸಿ, ಅವರಲ್ಲಿ ಮಹಾಮಹಾ ಪರಾಕ್ರಮಿಗಳನ್ನೆಲ್ಲಾ ಗೆದ್ದು, ಚತುರಂಗಬಲವನ್ನೆಲ್ಲಾ ನಾಶಮಾಡಿ, ಅತಿರಥ ಮಹಾರಥರನ್ನು ತನ್ನೊಂದು ರಥದಿಂದಲೇ ಹೊಡೆದು ತಾನು ಮಾತ್ರ ಯುದ್ಧಕ್ಕೆ ಅನುವಾಗಿ ನಿಂತನು
ಸೊಕ್ಕಾನೆ ಪೊಕ್ಕು ಕಾಸಾರಮಂ ಕಲಕುವಂ।
ತಕ್ಕಜದೊಳೊಕ್ಕಲಿಕ್ಕಿದನಖಿಳಸೈನ್ಯಮಂ।
ಮಿಕ್ಕು ನೊಂದೆಕ್ಕಲಂ ಬೀದಿವರಿದಟ್ಟುವಂತೋಡಿಸಿದನತಿಬಲರನು॥
ಕಕಸದೊಳೆಕ್ಕತುಳಕೈತಂದ ವೀರರಂ।
ಮುಕ್ಕುರುಕಿ ತೆಕ್ಕೆಗೆಡಿಸಿದನಾ ರಣಾಗ್ರದೊಳ್।
ಪೆಕ್ಕಳಿಸಿದುಕ್ಕಂದದದಟಿಂದೆ ಸುರಥನರಸಿದನಚ್ಯುತಾರ್ಜುನರನು॥೬॥
ಪ್ರತಿಪದಾರ್ಥ :- ಸೊಕ್ಕಾನೆ = ಮದಿಸಿದಾನೆಯು, ಕಾಸಾರವಂ= ಸರೋವರವನ್ನು, ಪೊಕ್ಕು=ಪ್ರವೇಶಿಸಿ, ಕಲಕುವಂತೆ= ಕದಡುವಹಾಗೆ, ಅಕ್ಕಜದೊಳು= ಪ್ರೀತಿಯಿಂದ, ಒಕ್ಕಲಿಕ್ಕಿದ= ಒಂದಾಗಿ ಸೇರಿದ್ದ, ನಿಖಿಳ = ಸಮಸ್ತವಾದ, ಸೈನ್ಯಮಂ= ವಾಹಿನಿಯನ್ನು, ಅದು=ಆ ಹಸ್ತಿಯು, ಮಿಕ್ಕು=ಅತಿಕ್ರಮಿಸಿ, ಒಂದೆಕ್ಕಲಂ= ಒಂದು ಕಾಡುಹಂದಿಯು, ಬೀದಿವರಿದು=
ಬೀದಿಯಲ್ಲಿ ಹರಿದಾಡಿ, ಅಟ್ಟುವಂತೆ= ಹಿಮ್ಮೆಟ್ಟಿಸುವ ಹಾಗೆ, ಅತಿಬಲರನು= ಅತಿಶೂರರನ್ನು, ಓಡಿಸಿದಂ= ಅಟ್ಟಿದನು, ಕಕ್ಕಸದೊಳು= ಕರ್ಕಶವಾಗಿ, ಎಕ್ಕಳಿಸುತ= ರೋಷಗೊಳ್ಳುತ್ತ, ಐತಂದು= ಬಂದಿರುವ, ವೀರರಂ=ಪರಾಕ್ರಮಿಗಳನ್ನು, ಮುಕ್ಕುರಿಸಿ= ಅವಮಾನಪಡಿಸಿ, ತೆಕ್ಕೆಗೆಡಿಸಿದಂ= ನಿಲ್ಲದಂತೆ ಓಡಿಸಿದನು, ಆ ರಣಾಗಾರದೊಳ್= ಆ ಯುದ್ಧರಂಗದಲ್ಲಿ, ಸುರಥಂ= ಸುರಥನು, ಅಚ್ಯುತಾರ್ಜುನರನ್ನು= ಕೃಷ್ಣ ಫಲುಗುಣರನ್ನು, ಅರಸಿದಂ= ಹುಡುಕಿದವನಾದನು.
ಅ॥ವಿ॥ ಕಾಸಾರ (ತ್ಸ) ಕಾಸರ (ತ್ಭ) ಕಕ್ಕಸ(ತ್ಭ) ಕರ್ಕಶ(ತ್ಸ) ಸೊಕ್ಕಿದ+ಆನೆ=ಸೊಕ್ಕಿದಾನೆ( ವಿ. ಪೂ. ಕ. ) ಅಚ್ಯುತನೂ ಅರ್ಜುನನೂ ಇವರು ಅಚ್ಯುತಾರ್ಜುನರು (ದ್ವಂ. ಗ)
ತಾತ್ಪರ್ಯ:- ಮದೋದಕದಿಂದ ಕೂಡಿದ ಆನೆಯು ಸರೋವರವನ್ನು ಪ್ರವೇಶಿಸಿ ಸರಸಿಯ ಉದಕವನ್ನು ಕದಡುವ ರೀತಿಯಿಂದ, ಅಕ್ಕರೆಯಿಂದ ಕೂಡಿ ಬರುವ ಸಕಲ ಸೇನೆಯನ್ನೂ ಆ ಸಲಗನು ( ಹಂದಿ) ಬೀದಿಯಲ್ಲಿ ಹರಿದಾಡಿ ಓಡಿಸುವ ರೀತಿಯಿಂದ ಅತಿಬಲನು ಓಡಿಸಿ ಅಧಿಕವಾಗಿರೋಷಗೊಳ್ಳುತ ಬರುವ ವೀರರನ್ನು ಅಪಮಾನಪಡಿಸಿ ಆ ರಣರಂಗದಲ್ಲಿ ನಿಲ್ಲಗೊಡದೆ ಓಡಿಸಿದನು. ಅನಂತರ ಬಲಾನ್ವಿತನಾದ ಸುರಥನು ಕೃಷ್ಣ ಫಲುಗುಣರನ್ನು ಹುಡುಕಿದನು.
ಘೋರಸಂಸಾರದೊಳ್ ಮುಸುಕುವ ಮರವೆಯಂ ನಿ।
ವಾರಿಸಿ ಮಹಾಯೋಗಿ ಜೀವಪರಮಾತ್ಮರ ವಿ।
ಚಾರಿಸುವ ತೆರದಿಂದೆ ರಿಪುಮೋಹರದೊಳೆತ್ತಿ ಕವಿವ ಭಟರಂ ಗಣಿಸದೆ॥
ವೀರಸುರಥಂ ಕೃಷ್ಣಫಲ್ಗುಣರನರಸಿದನು।
ದಾರ ವಿಕ್ರಮ ಪರಿಜ್ಞಾನದಿಂದೆಡಬಲನ।
ನಾರಯ್ಯದೇಕಾಗ್ರಚಿತ್ತದಿಂ ವಸುಮತೀಕಾಂತ ಕೇಳದ್ಭುತವನು॥೭॥
ಪ್ರತಿಪದಾರ್ಥ :- ಘೋರ= ಭಯವನ್ನುಂಟುಮಾಡುವ, ಸಂಸಾರದೊಳ್= ಸಂಸಾರದಲ್ಲಿ,ಮುಸುಕಿರ್ದ= ಮುತ್ತಿಕೊಂಡಿದ್ದ,
ಮರವೆಯ= ಮರವೆಯನ್ನು( ಅಜ್ಞಾನವನ್ನು) ನಿವೃರಿಸಿ= ಹೋಗಲಾಡಿಸಿ, ಮಹಾಯೋಗಿ= ಯೋಗಾಭ್ಯಾಸವುಳ್ಳವನು, ಎಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಈ ಎಂಟು ಯೋಗಗಳು-
ಳ್ಳವನಿಗೆ ಯೋಗಿ ಎಂದು ಹೆಸರು, (ಯತಿಯು) ಜೀವಪರಮಾತ್ಮರ = ಜೀವ ಮತ್ತು ಪರಮಾತ್ಮ ಇವರನ್ನು ( ಜೀವ ಬ್ರಹ್ಮ ಇವರನ್ನು) ವಿಚಾರಿಸುವ= ಕೇಳಿ ತಿಳಿಯುವ, ತೆರದಿಂದೆ= ಕ್ರಮದಿಂದ, ರಿಪುಮೋಹರದೊಳು= ಅರಿಬಲದಲ್ಲಿ,ಒತ್ತಿ= ನುಗ್ಗಿ, ಕವಿವ= ಆವರಿಸುವ, ಭಟರಂ= ಯೋಧರನ್ನು, ಗಣಿಸದೆ= ಲಕ್ಷ್ಯಮಾಡದೆ,ವೀರ=ಅಸಹಾಯಶೂರನಾದ, ಸುರಥಂ= ಸುರಥನು,ಉದಾರ= ಹೆಚ್ಚಾದ, ವಿಕ್ರಮ= ಆಟಾಟೋಪದಿಂದೊಡಗೂಡಿದ, ಪರಿಜ್ಞಾನದಿಂ= ತಿಳುವಳಿಕೆಯೆಂಬ ಯೋಗ-
ದಿಂದ, ಎಂದರೆ ಪಾರ್ಥನೆ ಜೀವಾತ್ಮನು,ಕೃಷ್ಣನೆ ಪರಮಾತ್ಮನೆಂಬ ತಿಳುವಳಿಕೆಯಿಂದ, ಎಡಬಲವಂ= ಎಡಭಾಗ ಮತ್ತು ಬಲಭಾಗಗಳನ್ನು, ಆರೈಯದೆ= ಈಕ್ಷಿಸದೆ, ಏಕಾಗ್ರಚಿತ್ತದಿಂದ= ಒಂದೇ ಮನೋನಿಶ್ಚಯದಿಂದ, ಅರಸಿದಂ= ಕಾಣಲು ಹೊರಟನು, ವಸುಮತೀಕಾಂತ = ಭೂಮಿಪತಿಯಾದ ಜನಮೇಜಯನೆ! ಅದ್ಭುತವನು=ಆಶ್ಚರ್ಯವನ್ನು, ಕೇಳು=ಆಲಿಸು,
ಜೀವನೆ ಬೇರೆ, ಪರಮಾತ್ಮನೆ ಬೇರೆ ಎಂದು ದ್ವೈತಿಗಳೂ, ಜೀವಾತ್ಮನಿಗೂ ಪರಮಾತ್ಮನಿಗೂ ಭೇದವೇ ಇಲ್ಲವೆಂದುಅದ್ವೈತಿಗಳು ವಾದಿಸುವರು.
ಅ॥ ವಿ॥ ಘೋರವಾದ ಸಂಸಾರ= ಘೋರಸಂಸಾರ ( ವಿ. ಪೂ. ಕ. ) ಜೀವ= ಜೀವಾತ್ಮ.ಬೃಹಸ್ಪತಿ.
ತಾತ್ಪರ್ಯ:- ಆಗ ಸುರಥನು ಘೋರವಾದ ಮಹಾ ಸಂಸಾರಪಾಶವನ್ನು ತಿರಸ್ಕರಿಸಿ, ಅಷ್ಟವಿಧವಾದ ಯೋಗಾಭ್ಯಾಸಗಳ- ನ್ನು, ನಿಯಮದಿಂದ ನೆರವೇರಿಸುವ, ಯೋಗೀಶ್ವರನಹಾಗೆ,ಎಡಬಲಭಾಗಗಳನ್ನು ಈಕ್ಷಿಸದೆ ಜಿತೇಂದ್ರಿಯನಾಗಿ, ಏಕಾಗ್ರಚಿತ್ತದಿಂದ ಅರ್ಜುನನೆ ಜೀವನೆಂತಲೂ, ಕೃಷ್ಣನೇ ಪರಮಾತ್ಮನೆಂತಲೂ, ಯೋಚಿಸುತ್ತಿರುವನಂತೆ, ಕೃಷ್ಣಾರ್ಜುನರನ್ನು
ಹುಡುಕುತ್ತ ಅಧಿಕವಾದ ಪರಾಕ್ರಮಾತಿಶಯದಿಂದ ಕೂಡಿದವನಾಗಿ, ಹೋಗುತ್ತಿದ್ದನು. ಎಲೈ ಭೂಪಾಲಕನಾದ ಜನಮೇಜ-
ರಾಯನೆ ಈ ಅದ್ಭುತವನ್ನು ಕೇಳುವವನಾಗೆಂದನು.
ಅದ್ಭುತ ಪರಾಕ್ರಮದೊಳಾ ನಿಖಿಳಸೇನೆಗೆ ಮ।
ಹದ್ಭಯವ ಬೀರುತೈತಹ ಸುರಥನಂ ಕಾಣು।
ತುದ್ಭವಿಸಿತರ್ಜುನಂಗತಿರೋಷಮೆಂದನಸುರಾಂತಕನೊಳಿವನ ಜಯಕೆ॥
ತ್ವದ್ಭಾವದೊಳ್ ತೋರಿದೆಣಿಕೆಯೇನೆಲೆ ದೇವ।
ಮದ್ಭುಜದೊಳೀ ಚಾಪಮಿರ್ದುಪಾವಕನಸ್ತ್ರ।
ವಿದ್ಭುವನಕಮಮ ನೋಡುವೆನುತೆ ಬಿಲ್ದಿರುವನೊದರಿ ನರನಿದಿರಾದನು॥೮॥
ಪ್ರತಿಪದಾರ್ಥ :- ಅದ್ಭುತ= ಆಶ್ಚರ್ಯವಾದ, ಪರಾಕ್ರಮದೊಳು॥ ವಿಕ್ರಮದಿಂದ(ಶೌರ್ಯದಿಂದ,) ನಿಖಿಳಸೇನೆಗೆ= ಸಮಸ್ತವಾದ ಸೈನ್ಯಕ್ಕೂ,ಮಹದ್ಭಯಂ= ಹೆಚ್ಚಾದ ಅಂಜಿಕೆಯನ್ನು,ಬೀರುತ= ಪಡಿಸುತ್ತ( ಚೆಲ್ಲುತ್ತ) ಐತಿಹ= ಬರುತ್ತಲಿರುವ, ಸುರಥನಂ= ಸುರಥನನ್ನು,ಕಾಣುತ=ನೋಡುತ್ತಲೇ, ಅರ್ಜುನಂಗೆ= ಅರ್ಜುನನಿಗೆ, ಅತಿರೋಷ= ಅಧಿಕವಾದ ಕೋಪವು, ಉದ್ಭವಿಸಿತು= ಹುಟ್ಟಿತು, ಎಲೆ ದೇವ= ಎಲೈ ಸ್ವಾಮಿಯಾದ ಕೃಷ್ಣನೆ, ಮತ್=ನನ್ನ, ಭುಜದೊಳು= ಭುಜದಲ್ಲಿ,ಈ ಚಾಪಂ= ಈ ಧನುಸ್ಸು, ಇರ್ದು= ಇದ್ದರೂ,ಪಾವಕನಸ್ತ್ರದ = ಅಗ್ನ್ಯಸ್ತ್ರದ, ಅಭ್ಯುದಯಕಂ= ಏಳಿಗೆಯನ್ನು ಕುರಿತು( ಜಯವನ್ನು ಕುರಿತು) ಅಮಮ= ಆಶ್ಚರ್ಯವು, ನೋಡುವೆಂ= ಪರೀಕ್ಷಿಸುತ್ತೇನೆ, ಇವನ=ಈ ಸುರಥನ, ಜಯಕೆ= ಗೆಲ್ಲುವ ವಿಷಯಕ್ಕೆ,ತ್ವತ್= ನಿನ್ನಯ, ಭಾವದೋಳ್= ಯೋಚನೆಯಲ್ಲಿ, ತೋರಿದ= ಕಾಣಬಂದವಿಷಯವು, ಏನು= ಯಾವವಿಧವಾಗಿರುತ್ತೆ?ಎಂದು= ಎಂಬುದಾಗಿ, ಅಸುರಾಂತಕನೊಳು= ದೈತ್ಯಾರಿಯಾದ ಕೃಷ್ಣನಲ್ಲಿ,ಎಂದನು= ಮೇಲೆ ಹೇಳಿದಂತೆ ಹೇಳಿದನು,ಎನುತ= ಈ ರೀತಿಯಾಗಿ ಹೇಳುತ್ತ,ಬಿಲ್ದಿರುವನು= ಚಾಪದ ಹುರಿಯನ್ನು, ಒದರಿ= ಟಂಕಾರ ಶಬ್ಧಗೊಳಿಸಿ,ನರನ=ಅರ್ಜುನನು, ಎದಿರಾದನು= ಸುರಥನಿಗೆ ಪ್ರತಿಭಟಿಸಿ ನಿಂತನು.
ಅ॥ವಿ॥ ತ್ವತ್+ ಭಾವ=ತದ್ಭಾವ (ಜ. ಸಂ. ), ದೇವ=ಸ್ವಾಮಿ, ದೇವತೆ, ಇದು+ಚಾಪ= ಈ ಚಾಪ, (ಗ. ಸ. ) ರೋಷ(ತ್ಸ) ರೋಸ(ತ್ಭ)
ತಾತ್ಪರ್ಯ:- ಆಗ ಅತ್ಯಧಿಕವಾದ ಪರಾಕ್ರಮದಿಂದಸಮಸ್ತ ಸೈನ್ಯವನ್ನು ಓಡಿಸಿ, ಅರಿಬಲಕೆ ಭಯವನ್ನುಂಟುಮಾಡುತ್ತ ಬರುತ್ತಲಿರುವ ಸುರಥನಂ ಅರ್ಜುನನು ನೋಡಿ ಬಹುವಾಗಿ ಕೋಪಿಸಿಕೊಂಡು ದೈತ್ಯಾರಿಯಾದ ಶ್ರೀಕೃಷ್ಣನೊಡನೆ ಹೇಳಿದನು,ಎಲೈ ಸ್ವಾಮಿಯೇ, ಈ ಸುರಥನನ್ನು ಕಾಳಗದಲ್ಲಿ ಗೆಲ್ಲುವ ವಿಷಯಕ್ಕೆತಮ್ಮ ಅಭಿಮತವೇನಿರುತ್ತೆ? ನನ್ನ ಬಾಹುನಲ್ಲಿರುವ ಈ ಚಾಪವೂ, ಯಜ್ಞೇಶ್ವರನ ಅನುಗ್ರಹದಿಂದ ಪ್ರಾಪ್ತವಾದ ಅಗ್ನ್ಯಸ್ತ್ರವೂ, ಇವಕ್ಕೆ ಈ ಪ್ರಯೋಜನವನ್ನು
ನೋಡುತ್ತೇನೆ.( ಇದನ್ನು ಉಪಯೋಗಿಸುತ್ತೇನೆ) ಎಂದು ಗರ್ಜಿಸುತ್ತ, ಬಿಲ್ಲಿನ ಹುರಿಯನ್ನುಸರಿಪಡಿಸಿ ಧ್ವನಿಮಾಡುತ್ತ, ಸುರಥನಿಗೆ ಎದುರಾಗಿ ನಿಂತನು.
ಎಲವೊ ಸೋದರನಳಿದಳಲ್ಗಾಗಿ ನಮ್ಮೊಡನೆ।
ಕಲಹಕೈದುವ ನಿನ್ನನಿಸುವದನುಚಿತಮೆಂದು।
ತೊಲಗಿದೊಡೆ ನೀನರಿದುದಿಲ್ಲಲಾ ತಲೆ ಬಲ್ಲಿತೆಂದು ಕಲ್ಲಂ ಪಾಯ್ವೆಲಾ॥
ಕಲಿಯಾಗಿ ಸಮರದೊಳ್ ಕಾದಿದೊಡೆ ನಿನಗಿಲ್ಲಿ।
ಗೆಲವಹುದೆ ಮರುಳಾಗಬೇಡ ಹಯಮಂ ಬಿಟ್ಟು।
ನೆಲದೆರೆಯ ಧರ್ಮಸುತನಂ ಕಂಡು ಬದುಕುವುದು ಲೇಸೆಂದು ನರನೆಚ್ಚನು॥೯॥
ಪ್ರತಿಪದಾರ್ಥ :- ಎಲವೊ= ಎಲೋ! ಸುರಥ, ಸೋದರನ= ಅಗ್ರಜನಾದ ಸುಧನ್ವನು, ಅಳಿದ= ಮೃತಪಟ್ಟ, ಅಳಲ್ಗಾಗಿ= ವ್ಯಥೆಗೋಸ್ಕರವಾಗಿ,ನಮ್ಮೊಡನೆ= ನಮ್ಮ ಸಂಗಡ, ಕಲಹಕೆ= ವ್ಯಾಜ್ಯಕ್ಕೆ,ಐದುವ= ಬರುತ್ತಲಿರುವ, ನಿನ್ನ= ನಿನ್ನನು, ಕೊಲುವುದು=ಸಂಹರಿಸತಕ್ಕದ್ದು,ಅನುಚಿತಂ= ಯೋಗ್ಯವಲ್ಲವು, ಎಂದು=ಎಂಬುದಾಗಿ, ತೊಲಗಿದೊಡೆ= ಬೇರೆ ಹೋಗಿದ್ದರೆ,ನೀಂ= ನೀನು, ಅರಿದುದಿಲ್ಲಲಾ= ಜ್ಞಾಪಕಮಾಡಿಕೊಂಡವನಾಗಲಿಲ್ಲವೆ! ತಲೆ=ಶಿರವು, ಬಲ್ಲಿತೆಂದು= ಬಲವಾ-
ದುದೆಂಬುದಾಗಿ, ಕಲ್ಲಂ= ಶಿಲೆಯನ್ನು, ಪಾಯ್ವೆಲಾ= ಹಾಯತಕ್ಕವನಾಗಿರುತ್ತಿ ಅಲ್ಲವೇ? ನೀಂ=ನೀನು,ಸಮರದೋಳ್= ಕಾಳಗದಲ್ಲಿ, ಕಲಿಯಾಗಿ= ಸಮರ್ಥನಾಗಿ,(ಶೂರನಾಗಿ) ನಿಂದು=ಪ್ರತಿಭಟಿಸಿ ನಿಂತು,ಕಾದಿದೊಡೆ= ಜಗಳವಾಡಿದುದೇ ಆದರೆ, ಗೆಲವು= ಜಯವು, ಊಹುದೇ= ಆದೀತೇ? ಮರುಳಾಗಬೇಡ= ಅಜ್ಞಾನಿಯಾಗಬೇಡ,ಹಯಮಂ= ಅಶ್ವವನ್ನು
ಬಿಟ್ಟು=ತ್ಯಜಿಸಿ,ನೆಲದೆರೆಯ= ಭೂಪತಿಯಾದ, ಧರ್ಮಸುತನಂ= ಯಮಧರ್ಮನ ಮಗನನ್ನು, ಕಂಡು=ನೋಡಿ, ಬದುಕುವುದು= ಜೀವಿಸುವುದುಲೇಸೆಂದು= ಯೋಗ್ಯವಾದದ್ದೆಂದು,ನರಂ=ಅರ್ಜುನನು, ಎಚ್ಚಂ=ಬಾಣಪ್ರಯೋಗ ಮಾಡಿದನು.
ಅ॥ವಿ॥ ಸಹ=ಸಮಾನವಾದ, ಉದರ= ಹೊಟ್ಟೆಯುಳ್ಳವನುಒಬ್ಬ ತಾಯಿ ಗರ್ಭದಲ್ಲಿ ಹುಟ್ಟಿದವನು ,ಕೊಲುವುದು+ ಅನುಚಿತ= ಕೊಲುವುದನುಚಿತ ( ಉ. ಲೋ. ಸಂ.)
ತಾತ್ಪರ್ಯ:- ಪೇಳಲುಪಕ್ರಮಿಸಿದನು-ಎಲಾ ಸುರಥನೌ! ನಿನ್ನ ಸಹೋದರನಾದ ಸುಧನ್ವನು ನನ್ನೊಡನೆ ಕಾದಿ ಏನಾದನು! ನಿಮ್ಮ ಅಣ್ಣ ಸುಧನ್ವನು ಮಡಿದ ದುಃಖಕ್ಕಾಗಿ ನಮ್ಮ ಸಂಗಡ ಯುದ್ಧಕ್ಕೆ ಬರುವ ನಿನ್ನನ್ನು ಸಂಹರಿಸುವುದು ಸರಿಯಾದುದಲ್ಲವೆಂತ ಬಾವಿಸಿ ಮರೆಯಾದಾಗ್ಯೂ ಅದನ್ನು ತಿಳಿಯದೇ ಹೋದೆಯಲ್ಲವೆ? ತಲೆಬುರುಡೆಯು ಗಟ್ಟಿಯಾಗಿ-
ದೆಯೆಂದು ಕಲ್ಲನ್ನು ಹೃಯಬಹುದೆ? (ಕೊಡದೈ) ವೃಥಾ ಯೈದ್ಧ ಮಾಡಿ ನಾಶವಾಗಬೇಡ, ಕುದುರೆಯನ್ನು ಬಿಟ್ಟು ಭೂಪತಿಯಾದ ಧರ್ಮರಾಜನಂ ಕಂಡು ಸೈಖಿಯಾಗಿ ಜೀವಿಸೆನುತ ಪಾರ್ಥನು ಬಾಣ ಪ್ರಹಾರವಂ ಮಾಡಲು.
ಗಣ್ಯವೇಮತ್ಸಹಭವಂಗೆ ನೀಂ ಹರಿಹರ ಹಿ।
ರಣ್ಯಗರ್ಭಾದಿಗಳ್ ಮುಳಿದೊಡಳಿದಪನೆ ಕಾ।
ರುಣ್ಯದಿಂ ನಿನ್ನನುದ್ಧರಿಸಲೆಂದಚ್ಯುತಂ ಕೊಟ್ಟ ತನ್ನವತಾರದ॥
ಪುಣ್ಯದಿಂ ಮಡಿದು ಮುಕ್ತಿಗೆ ಸಂದನಿದಕೆ ನೈ।ರ್
ವಿಣ್ಣ್ಯಮೆಮಗಿಲ್ಲ ನಾವಿನ್ನು ಹಯಮಂ ಬಿಡಲ।
ರಣ್ಯವಾಸಿಗಳಲ್ಲ ನೋಡೆಮ್ಮ ಸಾಹಸವನೆನುತೆಚ್ಚನಾ ಸುರಥನು॥೧೦॥
ಪ್ರತಿಪದಾರ್ಥ :- ಮತ್ಸಹಭವಂಗೆ= ನನ್ನ ಸಹೋದರನಾದ ಸುಧನ್ವನಿಗೆ, ನೀಂ ಗಣ್ಯವೆ= ನೀನು ತಾಳಿಕೆಯಾಗುತ್ತೀಯ?
(ಇಲ್ಲವೆಂಬ ಭಾವವು) ಹರಿ=ವಿಷ್ಣುವು, ಹರ=ಪರಮೇಶ್ವರನು, ಹಿರಣ್ಯಗರ್ಭ= ಬ್ರಹ್ಮನು ಇವರೇ, ಆದಿ= ಮೊದಲಾದ ದೇವಯೋನಿಗಳು, ಮುಳಿದೊಡೆ= ಕೋಪಮಾಡಿದರೆ ತಾನೆ, ಅಳಿದಪನೆ= ನಾಶವಾಗತಕ್ಕವನೆ? ಕಾರುಣ್ಯದಿಂ= ಕೃಪೆಯಿಂದ, ಅಚ್ಯುತಂ= ನಾಶರಹಿತನಾದ ಕೃಷ್ಣನು, ನಿನ್ನಂ=ನಿನ್ನನ್ನು, ಉದ್ಧರಿಸಲೆಂದು= ರಕ್ಷಿಸಬೇಕೆಂಬುದಾಗಿ, ತನ್ನ ಅವತಾರದ= ತನ್ನಯ ರಾಮಾದಿ ದಶಾವತಾರಗಳ,ಪುಣ್ಯದಿಂ= ಸುಕೃತದಿಂದ, ಮಡಿದು= ಮೃತಪಟ್ಟು,ಮುಕ್ತಿಗೆ= ವೀರಸ್ವರ್ಗಕ್ಕೆ, ಸಂದನು= ನಡದನು, (ಪ್ರಯಾಣಮಾಡಿದನು) ನಾವ್=ನಾವುಗಳು, ಇದಕೆ= ಈ ಕೆಲಸಕ್ಕಾಗಿ, ನಿರ್ವಿಣ್ಣರು=
ಆಶ್ಚರ್ಯಪಡತಕ್ಕವರು, (ಖಿನ್ನ) ಅಹುದಿಲ್ಲ= ಆಗತಕ್ಕವರಲ್ಲ, ಇನ್ನು ಮುಂದೆ= ಇನ್ನು ಮೇಲೆ, ಹಯವಂ ಬಿಡಲು= ಅಶ್ವವನ್ನು ಬಿಡಲು, ಅರಣ್ಯವಾಸಿಗಳ್= ಮುನಿಗಳು, ಊಲ್ಲ= ಆಗಿರುವುದಿಲ್ಲ,ಎಮ್ಮ=ನಮ್ಮಯ, ಸಾಹಸಂ=ಸಾಮರ್ಥ್ಯ-
ವನ್ನು, ನೋಡು= ಪರೀಕ್ಷಿಸು, ಎನುತ=ಎಂದು ಹೇಳುತ್ತ, ಆ ಸುರಥಂ= ಆ ಸುರಥನು, ಎಚ್ಚಂ= ಬಾಣ ಪ್ರಯೋಗಮಾಡಿ-
ದನು.
ಅ॥ವಿ॥ ತ್ರಿಮೂರ್ತಿಗಳು= ಬ್ರಹ್ಮ, ವಿಷ್ಣು, ಶಿವ ಇವರು, ಹಿರಣ್ಯ= ಬಂಗಾರವೆ, ಗರ್ಭಂ= ಹೊಟ್ಟೆಯಲ್ಲಿ ಉಳ್ಳವನು=
ಹಿರಣ್ಯಗರ್ಭ, (ಬ್ರಹ್ಮ) ಹಿರಣ್ಯ= ಬಂಗಾರ,ಗರ್ಭ=ಬಸಿರು,ಹೊಟ್ಟೆ, ಚ್ಯುತಿ= ನಾಶ, ಅ=ಅಲ್ಲದವನು =ಅಚ್ಯುತ, ಊವನು+ ಸುರಥ=ಆ ಸುರಥ (ಗ. ಸ. )ಸಾಹಸ= ಸಾಸ, ಮಹಿಮೆ=ಮೈಮೆ, ಮಾಲಕುಮಿ= ಮಹಾಲಕ್ಷ್ಮಿ.
ತಾತ್ಪರ್ಯ:- ಆ ಸುರಥನು ಎಲೈ ಪಾರ್ಥ! ನನ್ನ ಒಡಹುಟ್ಟಿದವನಾದ ಸುಧನ್ವನಿಗೆನೀನುಗಣ್ಯನಾಗುವೆಯಾ? ಬ್ರಹ್ಮ, ವಿಷ್ಣು, ಮಹೇಶ್ವರಾದಿಗಳಲ್ಲಿ ಯಾರು ಕುಪಿತರಾದರೂ ನನ್ನ ಸಹೋದರನು ಸಾಯತಕ್ಕವನೆ! ಕೃಪೆಯಿಂದ ಶ್ರೀಕೃಷ್ಣನು ನಿನ್ನನ್ನು ರಕ್ಷಿಸಬೇಕೆಂಬ ಯೋಚನೆಯಿಂದ ತಾನು ಮಾಡಿದ ಅವತಾರಗಳಲ್ಲಿ ಸಂಪಾದಿಸಿದ ಪುಣ್ಯವನ್ನೆಲ್ಲಾ ಧಾರೆಯೆರೆದುಕೊಟ್ಟು-
ದರಿಂದ, ಸಾಲೋಕ್ಯಪದವಿಯನ್ನು ಹೊಂದಿದನೇ ಹೊರತಾಗಿ, ನಿನ್ನಿಂದ ಎಂದಿಗೂ ಸೋಲತಕ್ಕವನಲ್ಲ. ಯಾಗದ ಅಶ್ವವನ್ನು ಬಿಡಲು ನಾವು ಅರಣ್ಯದಲ್ಲಿ ಕಂದಮೂಲಾದಿಗಳನ್ನು ತಿಂದು ಜೀವಿಸುವ ಋಷಿಗಳಲ್ಲ, ನನ್ನ ಸಾಹಸವನ್ನಾದರೂ ನೋಡೆಂದು ಸುರಥನು ಬಾಣಪ್ರಯೋಗ ಮಾಡಿದನು.
ಇಸಲುಚ್ಚಳಿಸಿ ಪಾಯ್ವ ಸುರಥನಂಬಿನ ಗರಿಯ।
ಬಿಸಿಯ ಗಾಳಿಯ ಬಾಧೆಯಿಂದುರಿದು ಭುಗಿಲೆಂದು।
ಮಸಗಿದತಿಶಯದ ರೋಷಜ್ವಾಲೆಯಿಂ ಧನಂಜಯನಾದನೀ ನರನೆನೆ॥
ದೆಸೆಯಾವುದಿಳೆಯಾದಿನಬಿಂಬಮಾವುದಾ।
ಗಸಮಾವುದೆಂಬಿನಂ ಪೊಸಮಸೆಯ ವಿಶಿಖಮಂ।
ಮುಸುಕಿದಂ ಸಾರಥಿ ಧ್ವಜ ಹಯಗಳಡಗೆಡೆದು ಸುರಥಂ ವಿರಥನಾಗಲು॥೧೧॥
ಪ್ರತಿಪದಾರ್ಥ :- ಸುರಥಂ= ಸುರಥನು, ಎಸಲು= ಬಾಣವನ್ನು ಹೊಡೆದದ್ದರಿಂದ, ಉಚ್ಛಳಿಸಿ= ಅತರಿಕ್ಷದಲ್ಲಿ ಎಗರಿ, ಪಾಯ್ವ= ಹಾದು ಬರುತ್ತಲಿರುವ, ಸುರಥನ ಅಂಬಿನ= ಸುರಥನ ಬಾಣದ, ಗರಿಯ= ರೆಕ್ಕೆಗಳ, ಬಿಸಿಯ= ಬೆಚ್ಚನೆಯ, ಗಾಳಿಯ= ವಾಯುವಿನ, ಬಾಧೆಯಿಂದ= ತೊಂದರೆಯಿಂದ,ಉರಿದು= ಪ್ರಜ್ವಲಿಸಿ, ಭುಗಿಲ್ ಎಂದು= ಭುಗ್ ಎಂಬ ಧ್ವನಿಯಿಂದ, ಮಸಗಿದ=ಉರಿದ, ಅತಿಶಯದ= ಹೆಚ್ಚಾದ, ರೋಷ=ಸಿಟ್ಟೆಂಬ,ಜ್ವಾಲೆಯಿಂ= ಉರಿಯ ದೆಸೆಯಿಂದ, ಧನಂಜಯಂ= ಅಗ್ನಿಯೇ, (ಧನಂಜಯನೆಂಬ ನಾಮವುಳ್ಳ)ನರಂ= ಪಾರ್ಥನು, ಎನೆ= ಇರುವನೋ ಎನ್ನುವಂತೆ, ದೆಸೆ= ದಿಕ್ಕು, ಆವುದು= ಯಾವುದೊ, ಇಳೆ= ಪೃಥ್ವಿಯು, ಆವುದು= ಯಾವುದೊ, ಇನಬಿಂಬಂ= ರವಿ ಮಂಡಲವು, ಆವುದು= ಯಾವುದೋ,ಆಗಸಂ=ಆಕಾಶವು, ಆವೈದು= ಯಾವುದೋ, ಎಂಬಿನಂ= ಎನ್ನುವ ತೆರದಿಂದ, ಪೊಸ= ನೂತನವಾಗಿ, ಮೊಸೆಯ=ಹದಗೊಳಿಸಿದ, ವಿಶಿಖಮಂ= ಅಂಬನ್ನು, ಸುರಥಂ= ಸುರಥನು, ವಿರಥನು= ತೇರಿಲ್ಲದವನು, ಆಗಲು= ಉಂಟಾಗುವಂತೆ, ಸಾರಥಿ= ರಥ ನಡೆಸತಕ್ಕವನು, ಧ್ವಜ= ಟೆಕ್ಕೆ, ಹಯಗಳ= ಕುದುರೆ ಇವೇ ಮೊದಲಾದವುಗಳ, ಎಡೆಗೆಡೆಗೆ= ಹತ್ತಿರಕ್ಕೆ, ಮುಸುಕಿದಂ= ಕವಿಯುವಂತೆ ಮಾಡಿದನು.
ಅ॥ವಿ॥ ಸು=ಒಳ್ಳೆಯದಾದ,ರಥಂ= ತೇರುಳ್ಳವನು= ಸುರಥ, ಧನಂಜಯ= ಅರ್ಜುನ, ಅಗ್ನಿ, ಬಿಂಬ=ಮಂಡಲ, ಗುಂಡು, ಇನ= ಸೂರ್ಯ, ಗಂಡ, ರೋಷವೆಂಬ+ ಜ್ವಾಲೆ= ರೋಷಜ್ವಾಲೆ, ( ಸಂ. ಪೂ. ಕ. ) ಆಗಸ (ತ್ಭ) ಆಕಾಶ(ತ್ಸ.)
ತಾತ್ಪರ್ಯ:- ಆಗ ಅರ್ಜುನನು ಸುರಥನು ಪ್ರಯೋಗಿಸಿದ್ದರಿಂದ ಅದು ಅಂತರಿಕ್ಷದಲ್ಲಿ ಹಾರಿ ಬರುತ್ತಿರುವ ಬಾಣದ ರೆಕ್ಕೆಗಳ ಬಿಸಿಯಾದ ಗಾಳಿಯ ತೊಂದರೆಯಿಂದ ಬಹುವಾಗಿ ಕೋಪಾವಿಷ್ಟನಾಗಿ, ಅಗ್ನಿಯೇ ಪಾರ್ಥನ ಆಕಾರವಾಗಿದೆಯೋ ಎನ್ನುವಂತೆ, ಭೂಮಿ,ಆಕಾಶ, ಸೂರ್ಯ, ಅಷ್ಟದಿಕ್ಕುಗಳು, ಇವು ಯಾವುವೂ ಕಂಡು ಬರದ ಹಾಗೆ, ಹೊಸದಾಗಿ ಸಾಣೆಯಿಟ್ಟ ಬಾಣವನ್ನು, ಸುರಥನು ವಿರಥನಾಗುವ ರೀತಿಯಿಂದ ಸಾರಥಿ, ಧ್ವಜ, ಕುದುರೆ, ಇವುಗಳ ಸಮೀಪಕ್ಕೆ ಕವಿಯುವಂತೆ ಮಾಡಿದನು.
ಕೂಡೆ ಮತ್ತೊಂದು ಪೊಸರಥವನಳವಡಿಸಿಕೊಂ।
ಡೀಡಿರಿದನಂಬಿನಿಂ ಪಾರ್ಥನ ವರೂಥಮಂ।
ಕೂಡೆ ಹಿಂಭಾಗಕ್ಕೈನೂರ ಬಿಲ್ಲಂತರಕೆ ಪೋದುದದು ಸಂಗರದೊಳು॥
ಮಾಡಿದಂ ಕೃಷ್ಣನ ಶರೀರದೊಳ್ ಗಾಯಮಂ।
ತೋಡಿದಂ ಕುದುರೆಗಳೊಡಲ್ಗಳಂ ನರನನ ವಿ।
ಭಾಡಿಸಿದನಾ ಸೈರಥನೊಂದು ಶಪಥದೊಳಿಸುವುದಿದರೊಳೇನಹುದೆಂದನು॥೧೨॥
ಪ್ರತಿಪದಾರ್ಥ :- ಸುರಥಂ= ಸುರಥನು, ಕೂಡೆ=ತಕ್ಷಣವೆ, ಮತ್ತೊಂದು= ಬೇರೆಯಾದ ಒಂದು, ಪೊಸರಥವಂ= ನವ ವರೂಥವನ್ನು, ಅಳವಡಿಸಿಕೊಂಡು= ಒದಗಿಸಿಕೊಂಡವನಾಗಿ, ಪಾರ್ಥನ= ಫಲುಗುಣನ, ವರೂಥಂ= ರಥವನ್ನು, ಅಂಬಿನಿಂ= ಶರದಿಂದ, ಈಡಿರಿದಂ= ಬದಲಾಗಿ ಬಾಣಪ್ರಯೋಗ ಮಾಡಿದನು(ಎಚ್ಚನು)ಕೂಡೆ= ಸಂಗಡಲೆ, ಆ ರಥಂ= ಆ ಪಾರ್ಥನ ರಥವು, ಐನೂರು ಬಿಲ್ಲಂತರಕೆ= ಐನೂರುಬಾರು( ಬಿಲ್ಲಿನಳತೆ) ದೂರಪ್ರದೇಶದ, ಹಿಂಭಾಗಕೆ= ಹಿಂಗಡೆಗೆ, ಪೋದುದು= ಹೋದುದು, ಆ ಸಂಗರದೊಳು= ಆ ಯುದ್ಧದಲ್ಲಿ, ಕೋಷ್ಣನ ಶರೀರದೊಳ್= ಕೃಷ್ಣನ ದೇಹದಲ್ಲಿ, ಗಾಯಮಂ= ವ್ರಣವನ್ನು,ಮಾಡಿದಂ=ಉಂಟುಮಾಡಿದನು, ಕುದುರೆಗಳ= ಅಶ್ವಗಳ, ಒಡಲ್ಗಳಂ= ಶರೀರಗಳನ್ನು, ತೋಡಿದಂ= ಹಳ್ಳಬೀಳುವಂತೆ ಮಾಡಿದನು, ನರನಂ= ಪಾರ್ಥನನ್ನು, ವಿಭಾಡಿಸಿದಂ= ಛೇದಿಸಿಹೋಗುವಂತೆ ಪ್ರಯೋಗಿಸಿದನು, ಆ ಸುರಥನ= ಆ ಸೈರಥನು, ಒಂದುಶಪಥದೊಳು= ಒಂದು ಆಣೆಯಿಂದ,ಎಸೆವುತ= ಬಾಣಪ್ರಯೋ-
ಗಮಾಡುತ್ತ, ಇದರೊಳು=ಈ ಪ್ರಕಾರವಾಗಿ ಪ್ರಯೋಗಿಸಿದ್ದರಿಂದ, ಏಂ= ಏನುತಾನೆ, ಆಹುದು= ಆದೀತು, ಎಂದನು= ಎಂಬುದಾಗಿ ಹೇಳಿದನು.
ಅ॥ವಿ॥ ಪೊಸತು+ರಥ= ಪೊಸರಥ (ವಿ. ಪೂ. ಕ. ) ಅವನು+ಪಾರ್ಥಂ= ಆ ಪಾರ್ಥಂ (ಗ. ಸ. )
ತಾತ್ಪರ್ಯ:- ಮತ್ತೆ ಸುರಥನು ಕೂಡಲೆ ಬೇರೊಂದು ರಥವನ್ನು ಸಿದ್ಧಪಡಿಸಿಕೊಂಡು, ಅರ್ಜುನನ ರಥವನ್ನು ಪ್ರತಿಯಾಗಿ ಬಾಣಗಳಿಂದ ಹೊಡೆದನು, ಕೂಡಲೆ ಆ ಅರ್ಜುನನ ರಥವು ಐನೂರು ಮಾರು ದೂರ ಹಿಂಗಡೆಗೆ ಸರಿಯಲು, ಆ ಕಾಳಗದಲ್ಲಿ ಸುರಥನು ಕೃಷ್ಣನ ಶರೀರದಲ್ಲಿ ಗಾಯಪಡಿಸಿ, ಅಶ್ವಗಳ ಶರೀರದಲ್ಲಿ ಹಳ್ಳ ಬೀಳುವಂತೆ ಮಾಡಿ, ಅರ್ಜುನನನ್ನು ಬಹುವಾಗಿ ಹೊಡೆದನು. ಈ ರೀತಿಯಾಗಿ ಯುದ್ಧಮಾಡಿಕೊಂಡು ಬರುವುದಕ್ಕಿಂತಲೂ, ಯಾವುದಾದರೊಂದು ಶಪಥವನ್ನು
ಮಾಡಿಕೊಂಡು ಯುದ್ಧಮಾಡುವುದು ಉತ್ತಮವಾದುದೆಂದು ಹೇಳುತ್ತಾ, ಅತ್ಯಧಿಕವಾಗಿ ಬಾಣಗಳನ್ನುಪ್ರಯೋಗಿಸಿದನು.
ಶಪಥಮೇನಿದಕಿನ್ನು ನಿನ್ನನಾಂ ಕೊಲ್ಲದೊಡೆ।
ವಿಪುಲಪಾತಕರಾಶಿ ತನಗೆ ಸಂಘಟಿಸದಿ।
ರ್ದಪುದೆ ಪೇಳೆನುತ ತೆಗೆದೆಚ್ಚೊಡಾ ಬಾಣಮಂ ಸುರಥಂ ನಡುವೆ ಖಂಡಿಸಿ॥
ಅಪಹಾಸದಿಂದಿಳೆಗೆ ನಿನ್ನನೀ ರಥದಿಂದೆ।
ನಿಪತನಂಗೆಯ್ಸದೊಡೆ ತನಗೆ ಪರಲೋಕದೊಳ್।
ವಿಪರೀತಗತಿಯಾಗದಿರ್ದಪುದೆ ಪೇಳೆಂದು ತೆಗೆದೆಚ್ಚು ಬೊಬ್ಬಿರಿದನು॥೧೩॥
ಪ್ರತಿಪದಾರ್ಥ :- ಆಗ= ಆ ಸಮಯದಲ್ಲಿ, ಪಾರ್ಥಂ= ಅರ್ಜುನನು, ಸುರಥನಂ ನೋಡಿ= ಇದಕ್ಕೆ= ಈ ವಿಷಯಕ್ಕೆ, ಶಪಥಂ= ಆಣೆಯು, (ಪ್ರತಿಜ್ಞೆಯು) ಏಂ ಉಂಟು= ಏನುತಾನೆ ಇರುವುದು? ನಿನ್ನಂ= ನಿನ್ನನ್ನು, ನಾಂ=ನಾನು, ಕೊಲ್ಲದೊಡೆ= ಪ್ರಾಣವನ್ನು ತೆಗೆಯದಿದ್ದರೆ, ವಿಪುಲ=ಅಧಿಕವಾದ, ಪಾತಕರಾಶಿ= ದೋಷದ ಸಮೂಹವು(ಪಾಪದ ಸಮೂಹವು) ತನಗೆ ಸಂಘಟಿಸದಿರ್ದಪುದೆ= ನನಗೆ ಹೊಂದದೆ ಇದ್ದೀತೆ, (ಹೊಂದುವುದು) ಪೇಳ್= ಹೇಳುವನಾಗು, ಎನ್ನುತ= ಎನ್ನುತ್ತ, ಪಾರ್ಥಂ=ಅರ್ಜುನನು, ತೆಗದೆಚ್ಚಡೆ= ಬಾಣಪ್ರಯೋಗಮಾಡಲು, ಸುರಥಂ= ಸುರಥನು, ಆ ಬಾಣಮಂ= ಆ ಶರವನ್ನು, ನಡುವೆ=ಮಧ್ಯದಲ್ಲಿಯೇ, ಖಂಡಾಸಿ= ತುಂಡುಮಾಡಿ, ಅಪಹಾಸದಿಂದ= ಹಾಸ್ಯಮಾಡುವಿ-
ಯಿಂದ,ಆಂ=ನಾನು ನಿನ್ನಂ=ನಿನ್ನನ್ನು, ಈ ರಥದಿಂದ= ಈ ವರೂಥದಿಂದ, ಇಳೆಗೆ= ಪೃಥ್ವಿಗೆ, ನಿಪತನಂ= ಬೀಳಿಸುವಿಕೆಯ-
ನ್ನು, ಗೈಯದೊಡೆ=ಎಸಗದಿದ್ದರೆ, ತನಗೆ=ನನಗೆ, ಪರಲೋಕದೊಳ್= ಬೇರೆ ಲೋಕದಲ್ಲಿ, ವಿಪರೀತಗತಿಯು= ನರಕಪ್ರಾ-
ಪ್ತಿಯು, ಆಗದೆ=ಲಭಿಸದೇ, ಇರ್ದಪುದೆ= ಇದ್ದೀತೆ? ಪೇಳೆಂದು= ಹೇಳು ಎಂಬದಾಗಿ, ತೆಗೆದು= ಬಾಣವನ್ನು ತೆಗೆದುಕೊಂ-
ಡು, ಎಚ್ಚನು= ಹೊಡೆದನು, ಬೊಬ್ಬಿರಿದನು= ಗರ್ಜಿಸಿದನು.
ಅ॥ವಿ॥ ವಿಪುಲವಾದ+ಸಾಯಕ= ವಿಪುಲ ಸಾಯಕ (ವಿ. ಪೂ. ಕ. ) ಉಂಟು+ಇದಕೆ=ಉಂಟಿದಕೆ (ಉ. ಲೋ. ಸಂ.)
ತಾತ್ಪರ್ಯ:-ಆಗ ಅರ್ಜುನನು ಸುರಥನಂ ನೋಡಿ ಈ ವಿಷಯಕ್ಕೆ ಪ್ರತಿಜ್ಞೆ ಮಾಡತಕ್ಕದ್ದೇನಿರುತ್ತೆ? ನಿನ್ನನ್ನು ನಾನು ಸಂಹರಿಸದೇ ಹೋದ ಪಕ್ಷದಲ್ಲಿ, ಹೆಚ್ಚಾದ ಪಾಪವು ಸಂಘಟನೆಯಾಗಲೆಂದು ಹೇಳುತ್ತ ಅರ್ಜುನನು ಬಾಣಪ್ರಯೋಗ ಮಾಡಲು, ಸುರಥನು ಆ ಬಾಣವನ್ನು ಮಧ್ಯಮಾರ್ಗದಲ್ಲಿಯೇ ಕತ್ತರಿಸಿ, ಹಾಸ್ಯಮಾಡುವಿಕೆಯಿಂದ ಎಲೋ! ಅರ್ಜುನ! ನಿನ್ನನ್ನು ನಾನು ನಿನ್ನ ರಥದಿಂದ ಕೆಳಕ್ಕೆ ಕೆಡವಿ ಅವಮಾನ ಪಡಿಸದಿದ್ದರೆ, ಪರಲೋಕದಲ್ಲಿ ನರಕಭಾಗಿಯಾಗುವೆನೆನಂದು ಬಾಣಪ್ರಯೋಗವನ್ನು ಮಾಡಿ ಗರ್ಜಿಸಿದನು.
ಸುರಥನಿಸುಗೆಯೊಳರ್ಜುನಂ ನೊಂದು ಮುಂಗಾಣ।
ದಿರೆ ಮುರಾಂತನಿವನ ತೋಳ್ಗಳಂ ಬೇಗ ಕ।
ತ್ತರಿಸು ದಿವ್ಯಾಸ್ತ್ರಮಂ ಪೂಡೆಂದು ತಾಂ ಪಾಂಚಜನ್ಯಮಂ ಪೂರೈಸಲು॥
ನರನಾ ನುಡಿಗೆ ಮುನ್ನಮೆಚ್ಚು ಕೆಡಪಿದನಾತ।
ನುರುಭುಜವನೈವೆಡೆಯ ಭುಜಗೇಂದ್ರನಂದದಿಂ।
ಧರೆಯೊಳ್ ಪೊರಳ್ದುಪರುಳ್ದುದು ಪೊಯ್ದುರೆ ಕೊಂದುದಾಕ್ಷಣಂ ಪರಬಲವನು॥೧೪॥
ಪ್ರತಿಪದಾರ್ಥ :- ಸುರಥನ ಎಸುಗೆಯೊಳು= ಸುರಥನ ಶರ ಪ್ರಹಾರದಿಂದ, ಅರ್ಜುನಂ= ಪಾರ್ಥನು, ನೊಂದು= ಬೇನೆ-
ಯುಂಟಾದವನಾಗಿ,ಮುಂಗಾಣದೆ=ಮುಂದೇನು ಮಾಡಬೇಕೆಂದು ತೋಚದೆ, ಇರೆ=ಇರಲಾಗಿ, ಮುರಾಂತಕಂ= ಮುರವೈರಿ-
ಯಾದ ಶ್ರೀಕೃಷ್ಣನು, ಅವನ= ಆ ಸುರಥನ, ತೋಳ್ಗಳಂ = ಬಾಹುಗಳನ್ನು, ಬೇಗ= ಶೀಘ್ರವಾಗಿ, ಕತ್ತರಿಸು= ಛೇದಿಸು, ದಿವ್ಯಾಸ್ತ್ರಮಂ= ದೇವತಾಯೋಗ್ಯವಾದ ಬಾಣವನ್ನು, ಪೂಡೆಂದು= ಅಂಬಿನಲ್ಲಿ ಸೇರಿಸೆಂಬುದಾಗಿ ಹೇಳಿ, ತಾಂ=ತಾನು, ಪಾಂಚಜನ್ಯಮಂ=ಪಾಂಚಜನ್ಯವೆಂಬ ಶಂಖವನ್ನು, ಪೂರೈಸಲು= ಊದಲಾಗಿ, ನರಂ=ಅರ್ಜುನನು, ಆ ನುಡಿಗೆ= ಆ ಮುರಾರಿಯ ವಚನಕ್ಕೆ, ಮುನ್ನಲೆ= ಮುಂದಾಗಿಯೇ, ಎಚ್ಚು= ಬಾಣವನ್ನು ಹೊಡೆದು, ಆತನ= ಆ ಸುರಥನ, ಉರು= ದೊಡ್ಡದಾದ, (ಉದ್ದವಾದ) ಭುಜವನು=ಬಾಹುವನ್ನು ಕೆಡಪಿದಂ= ಬೀಳಿಸಿದನು, ಆಗಳ್= ಆಗ, ಆ ಸುರಥನ ಬಾಹುವು, ಐವೆಡೆಯ= ಐದು ಹೆಡೆಗಳುಳ್ಳ, ಭುಜಗೇಂದ್ರನ= ಸರ್ಪರಾಜನ, ಅಂದದಿಂ= ಚಂದದಿಂದ, ಧರೆಯೊಳ್= ಪೃಥ್ವಿಯಲ್ಲಿ, ಪೊರಳ್ದು=ಹೊರಳಾಡಿ, ಉರುಳ್ದುದು= ಉರುಳಿ, ಉರೆ= ಹೆಚ್ಚಾಗಿ, ಪೊಯ್ದು=ಹೊಡದು, ಅರೆದು=ತಿಕ್ಕಿ, ಆ ಕ್ಷಣಂ= ಕೂಡಲೆ, ಪರಬಲವನು= ರಿಪುಸೇನೆಯನ್ನು, ಕೊಂದುದು=ನಾಶಮಾಡಿತು.
ಅ॥ವಿ॥ ಅಸ್ತ್ರ= ಮಂತ್ರಿಸಿ ಬಿಡುವ ಬಾಣ, ಶಸ್ತ್ರ= ಆಯೈಧರೊಪವಾದ ಬಾಣ, ಉರಗ+ಇಂದ್ರ= ಉರಗೇಂದ್ರ(ಗು. ಸ.)
ಉರು= ಹೆಚ್ಚು, ಉರ=ಎದೆ, ಪರ=ಶತ್ರು, ಅನ್ಯ= ಶ್ರೇಷ್ಠ, ಕೀಳ.
ಒತ್ತೋಳನುತ್ತರಿಸಲೊತತೋಳ ಸತ್ವದಿಂ।
ಮತ್ತಾತನುರವಣಿಸಿ ಮತ್ತದಂತಿಯ ತೆರದಿ।
ನೊತ್ತಿ ಭರದಿಂ ಪಾರ್ಥನೊತ್ತಿಗೈತರೆ ಕಂಡು ಹರಿ ವಿಜಯನಂ ಜರೆಯಲು॥
ತತ್ತಳಂಗೊಳದೆಚ್ಚು ತತ್ತಳವಿಗೆಯ್ದು ನವ।
ನತ್ತಲ್ ಭುಜವನರಿಯೆ ನೆತ್ತರಾಗಸಕೆ ಚಿ।
ಮ್ಮಿತ್ತು ರಣದೋಕುಳಿಯ ಮಿತ್ತುವಿನ ಜೀರ್ಕೊಳವಿಯುಗಳ್ವ ಕೆನ್ನೀರೆಂಬೊಲು॥೧೫॥
ಪ್ರತಿಪದಾರ್ಥ :- ಪಾರ್ಥ= ಅರ್ಜುನನು, ಒತ್ತೋಳು = ಒಂದು ಭುಜವನ್ನು, ಉತ್ತರಿಸಲ್= ಕತ್ತರಿಸಲಾಗಿ, ಒತ್ತೋಳ= ಒಂದು ಭುಜದ, ಸತ್ವದಿಂ= ಶಕ್ತಿಯಿಂದ, ಮತ್ತೆ=ಪುನಃ, ಆತನು= ಆ ಸುರಥನು, ಉರವಣಿಸಿ= ಕೋಪಗೊಂಡು ಮತ್ತ ಮದದಿಂದ ಕೂಡಿದ, ದಂತಿಯ= ಗಜದ, ತೆರದಿ= ಕ್ರಮದಿಂದ, ಒತ್ತಿ=ನುಗ್ಗಿ, ಪಾರ್ಥನ= ಫಲುಗುಣನ, ಒತ್ತಿಗೆ= ಹತ್ತಿರಕ್ಕೆ, ಭರದಿಂ=ಶೀಘ್ರದಿಂದ, ಐತರೆ= ಬರುತ್ತಿರಲು, ಹರಿ= ಶ್ರೀಕೃಷ್ಣನು,ಕಂಡು= ಸುರಥನನ್ನು ಈಕ್ಷಿಸಿ,ವಿಜಯನಂ= ಪಾರ್ಥನನ್ನು, ಜರಿಯಲು= ತಿರಸ್ಕಾರಮಾಡಲು, ಆಗ=ಆ ಕಾಲದಲ್ಲಿ, ಪಾರ್ಥಂ= ಅರ್ಜುನನು, ತತ್ತಳಂಗೊಳದೆ= ಭ್ರಾಂತಿಯನ್ನು ಹೊಂ-
ದದೆ, ಎಚ್ಚು= ಬಾಣಪ್ರಯೋಗ ಮಾಡಿ, ತತ್ತಳವಿಗೆ= ಫಲುಗುಣನ ಸಮೀಪಕ್ಕೆ, ಐದುವ= ಬರುತ್ತಿರುವ, ಅವನ= ಆ ಸುರಥನ, ಭುಜವನು= ಬಾಹುವನ್ನು, ಅರಿಯ=ಛೇದಿಸಲು, ಎತ್ತಲ್= ಸುತ್ತಲೂ, ನೆತ್ತರ್= ನೆತ್ರರು, (ರಕ್ತವು) ಆಗಸಕೆ= ಅಂತರಿಕ್ಷಕೆ, ರಣದ= ಯುದ್ಧರಂಗ ಸ್ಥಳದಲ್ಲಿ ನಡೆಯುತ್ತಿರುವ,ಓಕುಳಿಯ=ವಸಂತೋದಕದ, (ಕೆಂಪಾದ ನೀರಿನ) ವಿಹಾರ ಸ್ಥಾನವುಳ್ಳ, ಮಿತ್ತುವಿನ= ಮೃತ್ಯುದೇವತೆಯೆಂಬ ಸ್ತ್ರೀಯ, ಜೀರ್ಕೊಳವಿಯು = ನೀರನ್ನು ಮುಂದಕ್ಕೆ ಸಾಗಿಸುವ ಯಂತ್ರವು
(ಪಿಚಕಾರಿಯು) ಉಗುಳ್ವ= ಹೊರಗೆ ಚಿಮ್ಮುತಿರ್ಪ, ಕೆನ್ನೀರ್ಗಳಂತೆ= ಕೆಂಪಿನ ನೀರಿನ ಹಾಗೆ, ಚಿಮ್ಮಿತ್ತು= ಮೇಲಕ್ಕೆ ಎಗರಿಸುತ್ತಿತ್ತು.
ಅ॥ವಿ॥ ಒರ್+ತೋಳ್= ಒತ್ತೋಳ್ ( ಒಂದಕ್ಕೆ ಎಂದೂ ಎರಡಕ್ಕೆ ಇರ್ ಎಂಬಾದೇಶವೂ ಬರ್ಪುದು) ಆಗಸ(ತ್ಭ) ಆಕಾಶ(ತ್ಸ) ಮಿತ್ತು(ತ್ಭ) ಮೃತ್ಯು ( ತ್ಸ) ಕೆಚ್ಚನೆಯ +ನೀರ್= ಕೆನ್ನೀರ್ ( ವಿ. ಪೂ. ಕ. )
ತಾತ್ಪರ್ಯ:- ಆಗ ಅರ್ಜುನನು ಸುರಥನ ಒಂದು ತೋಳನ್ನು ಮಾತ್ರ ಕತ್ತರಿಸಲು, ಆ ಬಳಿಕ ಸುರಥನು ಒಂದು ತೋಳಿನ ಶಕ್ತಿಯಿಂದಲೆ ಮದಿಸಿದ ಆನೆಯೋಪಾದಿಯಲ್ಲಿ, ಪಾರ್ಥನ ಸಮೀಪಕ್ಕೆ ಬರುತ್ತಿರಲು, ಶ್ರೀಕೃಷ್ಣನು ಆ ಸುರಥನನ್ನು ಕಂಡು ಅರ್ಜುನನನ್ನು ತಿರಸ್ಕಾರಮಾಡಲು, ಮತ್ತೆ ಅರ್ಜುನನು ತನ್ನ ಬಳಿಗೆ ಅತಿ ತ್ವರೆಯಾಗಿ ಬರುತ್ತಲಿರುವ ಸುರಥನ ಮತ್ತೊಂದು ಬಾಹುವನ್ನೂ, ಕತ್ತರಿಸಲು, ಸುತ್ತಲೂ ರಕ್ತವು ಆಕಾಶದವರೆಗೂ ಎಗರಿತು, ಅದು ಹೇಗೆಂದರೆ ಯುದ್ಧರಂಗವೆಂಬ ಪ್ರದೇಶದಲ್ಲಿ ಮೃತ್ಯುದೇವತೆಯೆಂಬ ಸ್ತ್ರೀಯು ಜೀರ್ಕೊಳವಿಯಿಂದ ಮೇಲಕ್ಕೆ ಹಾರುತ್ತಿರುವ ವಸಂತೋದಕವೋ ಎಂಬಂತೆ ಪ್ರಕಾಶಿಸುತ್ತಿತ್ತು.
ತೋಳ್ಗಳೆರಡುಂ ಕತ್ತರಿಸಿ ಬೀಳೆ ಮತ್ತೆ ಕ।
ಟ್ಟಾಳ್ಗಳ ಶಿರೋಮಣಿ ಸುರಥನಾ ಕಿರೀಟಿಯಂ।
ಕಾಲ್ಗಳಿಂದೊದೆದು ಕೆಡಹುವೆನೆಂದು ಭರದಿಂದೆ ಬೊಬ್ಬಿರೆಯುತೈತರಲ್ಕೆ॥
ಕೋಲ್ಗಳಿಂ ತೊಡೆಗಳಂ ಕತ್ತರಿಸೆ ನಾದಿದುವು।
ಧೂಳ್ಗಳರುಣಾಂಬುವಿಂದೆದೆಯೊಳ್ ತೆವಳ್ದಹಿಯ।
ವೊಲ್ಗಂಡುಗಲಿ ಧನಂಜಯನ ಸಮ್ಮುಖಕೆ ಮೇಲ್ವಾಯ್ದನವನೇವೇಳ್ವೆನು॥೧೬॥
ಪ್ರತಿಪದಾರ್ಥ :- ಆಗ= ಆ ಸುರಥನು ಎದೆಯಲ್ಲಿ ದೇಕಿಕೊಂಡು ಬರುತ್ತಿರುವಾಗ,ಫಲುಗುಣಂ= ಪಾರ್ಥನು, ಮುರಹರನ= ಮುರಾಸುರನನ್ನು ಸಂಹರಿಸಿದ ಕೃಷ್ಣನ, ಆಜ್ಞೆಯಿಂದೆ= ಅನುಜ್ಞೆಯಂತೆ, ಎಚ್ಚು= ಬಾಣ ಪ್ರಯೋಗಮಾಡಿ, ಬೇಗ =ಶೀಘ್ರವಾಗಿ, ಸುರಥನ ಶಿರವಂ= ಸುರಥನ ಶಿರಸ್ಸನ್ನು, ಅರಿಯಲ್= ಕತ್ತರಿಸಲಾಗಿ, ಆ ತಲೆ ಬಂದು=ಆ ಸುರಥನ ತಲೆಯು ಬಂದು, ಅತಿರಭಸದಿಂದ= ಅತ್ಯಧಿಕವಾದ ರಭಸದಿಂದ, ನರನ= ಪಾರ್ಥನ, ವಕ್ಷವ= ವಕ್ಷಸ್ಥಳವನ್ನು, (ಎದೆಯ ಪ್ರದೇಶವನ್ನು) ತಾಗಿತು= ಸೋಕಿತು, ಆ ವರೂಥಾಗ್ರದಿಂದ= ಆ ತೇರಿನ ಮುಂಭಾಗದಿಂದ, ಕೆಡಹಿತು= ಅರ್ಜುನನನ್ನು ಬೀಳಿಸಿತು, ಧನಂಜಯಂ= ಫಲುಗುಣನು, ಮರವೆಯಿಂ= ಅಜ್ಞಾನದಿಂದ, ಅರಿವ=ತಿಳುವಳಿಕೆಯನ್ನು, ನೀಗಿದಂ= ತೀರಿಸಿಕೊಂಡನು, ಮೇಗೆ=ತರುವಾಯ, ಆ ಶಿರಂ= ಆ ತಲೆಬುರುಡೆಯು, ಹರೆ= ಹರಿಯೇ ! ರಾಘವ =ರಘುವಂಶೋತ್ಪ-
ನ್ನನೆ,!ಜನಾರ್ಧನ = ಜನಾರ್ಧನನೆ! ಮುಕುಂದ= ಮುಕ್ತಿದಾಯಕನೆ, ಎನುತ= ಎಂಬುದಾಗಿ ಹೇಳುತ್ತ, ಐತಂದು= ಬಂದು, ಕೃಷ್ಣನ ಚರಣಕೆ= ಕೃಷ್ಣನ ಪಾದಕ್ಕೆ, ಬಿರ್ದ್ದುದು= ಬಿತ್ತು. ಅತಿ=ಹೆಚ್ಚಾದ, ಸಾಸದಿಂದ=ಪರಾಕ್ರಮದಿಂದ, ಇಲ್ಲವೆ, ಹರ್ಷಾತಿಶಯದಿಂದ, ಇರ್ದುದು= ಇದ್ದಂಥಾದ್ದಾಯಿತು,
ಅ॥ವಿ॥ ಕಡು+ಕಲಿ=ಕಡುಗಲಿ( ಗ ಕಾರಾದೇಶ ಸಂಧಿ ) ಜನ+ ಜನರನ್ನು, ಅರ್ದನ=ಲಯಪಡಿಸತಕ್ಕವನು, ಮುಕುಂದ= ಮುಕ್ತಿದಾಯಕ, ಕೃಷ್ಣ= ತನ್ನ ಭಕ್ತರನ್ನು ಸಂಸಾರಬಂಧನದಿಂದ ತನ್ನ ಕಡೆಗೆ ಸೆಳೆಯತಕ್ಕವನು.
ತಾತ್ಪರ್ಯ:- ಆಗ ಸುರಥನು ಕೈಗಳನ್ನೂ, ಕಾಲುಗಳನ್ನೂ, ಕಳೆದುಕೊಂಡು ಎದೆಯಲ್ಲಿಯೇ ದೇಕಿಕೊಂಡು ಅರ್ಜುನನ ಸಮೀಪಕ್ಕೆ ಬರುತ್ತಲಿರುವದನ್ನು ಶ್ರೀಕೃಷ್ಣನು ನೋಡಿ, ಆ ಸುರಥನ ಶಿರವನ್ನು ಶೀಘ್ರವಾಗಿ ಕತ್ತರಿಸೆಂದು ಹೇಳಿದ ತರುವಾಯ ಅದೇ ಪ್ರಕಾರ ಅವನ ತಲೆಯನ್ನು ಕತ್ತರಿಸಿದ ಕೂಡಲೆ ಆ ತಲೆಯು ಹಾರಿಬಂದು ಅರ್ಜುನನ ವಕ್ಷಸ್ಥಳಕ್ಕೆ ಬಡಿದು, ಅರ್ಜುನನನ್ನು ರಥದಿಂದ ಕೆಳಕ್ಕೆ ಕೆಡವಿತು, ಅರ್ಜುನನು ಅಜ್ಞಾನವನ್ನು ಹೊಂದಿ ಪುನಃ ಚೇತರಿಸಿಕೊಂಡನು. ಆ ಬಳಿಕ ಆ ಸುರಥನ ಶೆರವು ಹರಿ, ರಾಘವ, ಜನಾರ್ದನ, ಮುಕುಂದ ಎಂಬುದಾಗಿ ಸ್ಮರಣೆ ಮಾಡುತ್ತ ಬಂದು ಶ್ರೀಕೃಷ್ಣನ ಪಾದದಲ್ಲಿ ಬಿದ್ದಿತು.
ಆಗ ಮುರಹರನಾಜ್ಞೆಯಿಂದೆಚ್ಚು ಫಲುಗುಣಂ।
ಬೇಗ ಸುರಥನ ಶಿರವನರಿಯಲಾ ತಲೆ ಬಂದು ।
ತಾಗಿತತಿಭರದೊಳ್ ನರನ ವಕ್ಷಮಂ ಕೆಡಹಿತಾ ವರೂಥಾಗ್ರದಿಂದೆ॥
ನೀಗಿದಂ ಮರವೆಯಿಂದರಿವಂ ಧನಂಜಯಂ।
ಮೇಗೆ ಕೃಷ್ಣನ ಚರಣಕೈತಂದು ಬಿದ್ದು ಹರಿ।
ರಾಘವ ಜನಾರ್ಧನ ಮುಕುಂದ ಯೆನುತಿರ್ದುದಾ ಶಿರಮತಿವಿಕಾಸದಿಂದೆ॥೧೭॥
ಪ್ರತಿಪದಾರ್ಥ :- ಕಮಲಾಕಾಂತಂ= ಲಕ್ಷ್ಮೀಪತಿಯಾದ ಶ್ರೀಕೃಷ್ಣನು, ಆ ಶಿರವಂ= ಆ ಸುರಥನ ಶಿರಸ್ಸನ್ನು, ಶ್ರೀ= ಸಂಪದ್ಯುಕ್ತಮಾದ, ಕರ= ಹಸ್ತವೆಂಬುವ, ಅಂಬುಜ= ಕಮಲಪುಷ್ಪದ, ಯುಗ್ಮದಿಂದ= ಜೊತೆಯಿಂದ, ಎತ್ತಿಕೊಂಡು= ತೆಗೆದುಕೊಂಡು, ಕರುಣದಿಂದಲಿ= ದಯೆಯಿಂದ, ಈಕ್ಷಿಸಿ = ನೋಡಿದವನಾಗಿ, ಆಕಾಶದೆಡೆಯೊಳಿಹ= ಅಂತರಿಕ್ಷ ಪ್ರದೇಶದಲ್ಲಿರುವ,ಗರುಡನಂ= ವೈನತೇಯನನ್ನು,ಕರೆದಿತ್ತು= ಬರಮಾಡಿ ಕೊಟ್ಟು, ಜವದಿಂ=ಬೇಗನೆ( ಶೀಘ್ರವಾಗಿ) ಪ್ರಯಾಗಕೆ= ವಾರಣಾವತ ಕ್ಷೇತ್ರಕ್ಕೆ, ಐದಿ=ಹೋಗಿ, (ಹೊಂದಿ) ಈ ಕಪಾಲವಂ= ಈ ತಲೆಯನ್ನು, ಅಲ್ಲಿ= ಆ ಪ್ರಯಾಗ ಕ್ಷೇತ್ರದಲ್ಲಿ, ಹಾಯ್ಕು= ಹಾಕುವುದು, ಎಂದು= ಎಂಬುದಾಗಿ, ಬೆಸಸಲ್= ಅಪ್ಪಣೆ ಮಾಡಲಾಗಿ, ಆ ಖಗೇಶ್ವರಂ= ವಿಹಂಗಾ-
ಧಿಪನಾದ ಗರುತ್ಮಂತನು(ಗರುಡನು) ಅದನು= ಆ ತಲೆಯನ್ನು, ಗಗನಪಥದೊಳ್=ಅಂತರಿಕ್ಷ ಮಾರ್ಗದಲ್ಲಿ, ಒಯ್ಯುತಿರೆ
=ತೆಗೆದುಕೊಂಡು ಹೋಗುತ್ತಾ ಇರುವಾಗ್ಯೆ,ಪಿನಾಕಿ= ಈಶ್ವರನು, ಆ ತಲೆಯಂ= ಆ ಶಿರವನ್ನು, ಕಂಡು= ಈಕ್ಷಿಸಿ, ಅರ್ಥಿಯಿಂ= ಕಾಂಕ್ಷೆಯಿಂದ, ಮುದದೊಳು=ಪ್ರೀತಿಯಿಂದ, ಭೃಂಗೀಶನಂ= ಭೃಂಗೀಶ್ವರನನ್ನು(ಶಿವನ ಸಭೆಯಲ್ಲಿ ನೃತ್ಯಮಾಡುವ ಪ್ರಮಥನು), ಕಳುಹಿದಂ= ಆ ತಲೆಯನ್ನು ತರುವಂತೆ ಕಳುಹಿದನು.
ಅ॥ವಿ॥ ಭೃಂಗಿ (ತ್ಸ) ಬಿಂಗಿ(ತ್ಭ) ಖರ+ಈಶ= ಖರೇಶ (ಗು. ಸಂ. ) ಭೃಂಗಿ+ಈಶ= ಭೃಂಗೀಶ ( ಸವರ್ಣ. ದೀರ್ಘ ಸಂಧಿ) ಗಗನದ+ಪಥ= ಗಗನಪಥ ( ಷ. ತ. ) ಪಿನಾಕವನ್ನುಳ್ಳವನು= ಪಿನಾಕಿ, (ಈಶ್ವರ) ಕಪಾಲ= ತಲೆಬುರುಡೆ, ರಾಶಿ,ಭಿಕ್ಷುಕನ ಬಟ್ಟಲು.
ತಾತ್ಪರ್ಯ:- ಆಗ ಲಕ್ಷ್ಮೀಪತಿಯಾದ ಶ್ರೀಕೃಷ್ಣನು ತನ್ನ ಪಾದದಮೇಲೆ ಬಿದ್ದ ಶಿರಸ್ಸನ್ನು ಅತ್ಯಂತ ಪ್ರೀತಿಪುರಸ್ಸರವಾಗಿ ತನ್ನ ಕೈಗೆ ತೆಗೆದುಕೊಂಡು ನೋಡಿ, ಅಂತರಿಕ್ಷದಲ್ಲಿ ಸಂಚರಿಸುತ್ತಿದ್ದ ತನ್ನ ವಾಹನನಾದ ಗರುಡನನ್ನು ಕರೆದು ಈ ರುಂಡವನ್ನು ಪ್ರಯಾಗ ಕ್ಷೇತ್ರದಲ್ಲಿ ಹಾಕಿ ಬಾರೆಂದು ಅಪ್ಪಣೆಮಾಡಲು, ಅದರಂತೆಯೆ ವೈನತೇಯನು ಆ ಶಿರದೊಡನೆ ಗಗನಪಥದಲ್ಲಿ ಹೋಗುತ್ತಿರಲು,ಪಿನಾಕಿಯು ಅದನ್ನು ಕಂಡು ಆ ಕಪಾಲವನ್ನು ತನಗೆ ತಂದು ಕೊಡುವಂತೆ ಭೃಂಗೀಶ್ವರನನ್ನು ಪ್ರೀತಿಯಿಂದ ಕಳುಹಿಸಿದನು.
ಶ್ರೀಕರಾಂಭುಜಯುಗ್ಮದಿಂದೆತ್ತಿಕೊಂಡು ಕಮ।
ಲಾಕಾಂತನಾ ಶಿರವನೀಕ್ಷಿಸಿ ಕರುಣದಿಂದೆ।
ಮಾಕಾಶದೆಡೆಯೊಳಿಹ ಗರುಡನಂ ಕರೆದಿತ್ತು ಜವದಿಂ ಪ್ರಯಾಗಕೈದಿ॥
ಈ ಕಪಾಲವನಲ್ಲಿ ಹಾಯ್ಕೆಂದು ಬೆಸಸಲದ ।
ನಾ ಖಗೇಶ್ವರನೊಯ್ಯುತಿರೆ ಗಗನಪಥದೊಳ್ ಪಿ।
ನಾಕಿ ಕಂಡಳತಿಯಿಂದಾ ತಲೆಗೆ ಕಳುಹಿದಂ ಭೃಂಗೀಶನಂ ಮುದದೊಳು॥೧೮॥
ಪ್ರತಿಪದಾರ್ಥ :- ಗರುಡ= ನಾಗಾಂತಕನು, ಸುರಥನ ತಲೆಯಂ= ಸುರಥನ ಶಿರವನ್ನು, ಎಲ್ಲಿಗೆ ಒಯ್ದಪಂ= ಯಾವ ಕಡೆ(ಸ್ಥಳ) ಗೆ ತೆಗೆದುಕೊಂಡು ಹೋಗುವನು, ಇಲ್ಲಿ, ರುಂಡಮಾಲೆಯೊಳು= ಈ ಪರಮೇಶ್ವರನಲ್ಲಿರುವ ಕಪಾಲಗಳ ಹಾರದಲ್ಲಿ, ಅವನ= ಆ ಸುಧನ್ವನ, ಸೋದರನ= ಅಗ್ರಜನಾದ ಸುಧನ್ವನ, ಸಲ್ಲಲಿತ = ಮನೋಹರವಾದ, ಶಿರಂ= ಕಪಾಲವು, ಇಹುದು= ಇದೆ, ಅದರ= ಆ ಸುಧನ್ವನ ಶಿರಸ್ಸಿನ, ಸಂಗಡಕೆ= ಹತ್ತಿರದಲ್ಲಿ ಸೇರಿಸುವುದಕ್ಕೋಸ್ಕರವಾಗಿ, ಕೊಂಡು ಬಾ ಎಂದು= ತೆಗೆದುಕೊಂಡು ಬರುವನಾಗೆಂದು, ಮದನಾರಿ= ಸ್ಮರಹರನಾದ ರುದ್ರನು, ಬೆಸಸೆ= ಅಪ್ಪಣೆ ಮಾಡಲು, ಭೃಂಗೀಶ್ವರಂ= ಭೃಂಗಿಗಳೊಡೆಯನಾದ ಪ್ರಮಥನು, ನಿಲ್ಲದೆ= ನಿಂತಕೊಳ್ಳದೆ( ಸಾವಕಾಶ ಮಾಡದೆ) ಐತಂದು= ಬಂದವನಾಗಿ, ಬೇಡೆ= ಆ ಶಿರಸ್ಸನ್ನು ಕೊಡುವಂತೆ ಕೇಳಲಾಗಿ, ಖಗವಲ್ಲಭನು= ವಿಹಂಗೇಶನಾದ ವೈನತೇಯನು, ಪತಿ= ಒಡೆಯನಾದ ಕೃಷ್ಣನ, ನಿರೂಪವನು= ಆಜ್ಞೆಯನ್ನು, ಒಮ್ಮೆಯುಂ= ಒಂದು ಸಲವೂ , ಮೀರ್ವಂ= ಅತಿಕ್ರಮಿಸುವವನು, ಅಲ್ಲೆಂದು=ಅಲ್ಲವೆಂಬುದಾಗಿ ಹೇಳಿ, ಅತಿಕ್ರಮಿಸಿ = ಭೃಂಗೀಶನ ಮಾತನ್ನು, ಲಕ್ಷ್ಯಮಾಡದೆ, ನಡಿಯಲು= ಹೋಗಲಾಗಿ, ಆ ಪಕ್ಷಘಾತದೊಳ್= ಆ ಗರುಡನ ಗರಿಗಳ ಹೊಡೆತದಿಂದ, ಆತನು= ಆ ಭೃಂಗಿಗಳೊಡೆಯನು, ಅಳವಳಿದನು= ಶಕ್ತಿಗುಂದಿ-
ದನು, (ಆಯಾಸಪಟ್ಟನು)
ಅ॥ವಿ॥ ಇದು+ಶಿರ=ಈ ಶಿರ ( ಗ. ಸ. ) ಮದನನ+ ಅರಿ= ಮದನಾರಿ ( ಷ. ತ. ) ಪಕ್ಷ=ರೆಕ್ಕೆ, ಭುಜ, ಪಕ್ಕ, ಅರೆದಿಂಗಳು. ಅಲ್ಲಿ, ಎಲ್ಲಿ, ಇಲ್ಲಿ, ಸ್ಥಾನ ವಾಚಕಾವ್ಯಯಗಳು.
ತಾತ್ಪರ್ಯ:- ಆಗ ಖಗೇಶ್ವರನು ಆ ಶಿರವನ್ನು ತೆಗೆದುಕೊಂಡು ಅಂತರಿಕ್ಷಮಾರ್ಗದಲ್ಲಿ ಹೋಗುತ್ತಿರುವುದನ್ನು ಕಂಡು, ಈ ವೈನತೇಯನು ಆ ಸುರಥನ ಶಿರಸ್ಸನ್ನು ತೆಗೆದುಕೊಂಡು ಎಲ್ಲಿಗೋ ಹೋಗುತ್ತಿರುವನು,ಈಗಲಾದರೋ ಈ ಸುರಥನ ಅಗ್ರಜನಾದ ಸುಧನ್ವನ ಅತಿ ಮನೋಹರವಾದ ಶಿರಸ್ಸು ತನ್ನ ರುಂಡಮಾಲೆಯಲ್ಲಿರುವುದು, ಅದರ ಸಂಗಡ ಇರುವುದಕ್ಕೋಸ್ಕರವಾಗಿ ಈ ತಲೆಬುರುಡೆಯನ್ನು ತೆಗೆದುಕೊಂಡು ಬರುವಂತೆ ಮನಸಿಜವೈರಿಯಾದ ಪರಮೇಶ್ವರನು ಅಪ್ಪಣೆ ಮಾಡಲು, ಅತಿ ತ್ವರೆಯಾಗಿ ಬಂದು ಆ ವೈನತೇಯನನ್ನು ಆ ಸುರಥನ ರುಂಡವನ್ನು ಕೊಡುವಂತೆ ಕೇಳಲಾಗಿ, ಆ ಮಾತನ್ನು ಕೇಳಿ ಖಗೇಶ್ವರನು, ನಮ್ಮ ಒಡೆಯನ ಮಾತನ್ನು ಲೇಶಮಾತ್ರವೂ ಮೀರತಕ್ಕವನಲ್ಲವೆಂದು, ಭೃಂಗೀಶ್ವರನನ್ನು ಲಕ್ಷ್ಯಮಾಡದೆ ಮುಂದಕ್ಕೆ ಹೊರಡಲು ಆಗ ಭೃಂಗೀಶ್ವರನು ಗರುಡನ ಗರಿಯ ಘಾಳಿಯ ಹೊಡೆತಕ್ಕೆ ಸಿಕ್ಕಿ ಬಹುವಾಗಿ ಆಯಾಸವನ್ನು ಹೊಂದಿದನು.
ಎಲ್ಲಿಗೊಯ್ದಪನೀ ಸುರಥನತಲೆಯಂ ಗರುಡ।
ನಿಲ್ಲಿಹುದು ರುಂಡಮಾಲೆಯೊಳಿವನ ಸೋದರನ।
ಸಲ್ಲಲಿತ ಶಿರಮಿದರ ಸಂಗಡಕೆ ಕೊಂಡು ಬಾರೆಂದು ಮದನಾರಿ ಬೆಸಸೆ॥
ನಿಲ್ಲದೈತಂದು ಭೃಂಗೀಶ್ವರಂ ಬೇಡೆ ಖಗ।
ವಲ್ಲಭಂ ಪತಿನಿರೂಪವನೊಮ್ಮೆಯುಂ ಮೀರ್ವ।
ನಲ್ಲೆಂದತಿಕ್ರಮಿಸಿ ನಡೆಯಲಾ ಪಕ್ಷಘಾತದೊಳಾತನಳವಳಿದನು॥೧೯॥
ಪ್ರತಿಪದಾರ್ಥ :- ಗರುಡ = ನಾಗಾಂತಕನು, ಸುರಥನ ತಲೆಯಂ= ಸುರಥನ ಶಿರಸ್ಸನ್ನು, ಎಲ್ಲಿಗೆ ಒಯ್ದಪಂ= ಯಾವ ಕಡೆ(ಸ್ಥಳ) ಗೆ ತೆಗೆದುಕೊಂಡು ಹೋಗುವನು, ಇಲ್ಲಿ, ರುಂಡಮಾಲೆಯೊಳು= ಈ ಪರಮೇಶ್ವರನಲ್ಲಿರುವ ಕಪಾಲಗಳ ಹಾರದಲ್ಲಿ, ಅವನ= ಆ ಸುಧನ್ವನ, ಸೋದರನ= ಅಗ್ರಜನಾದ ಸುಧನ್ವನ, ಸಲ್ಲಲಿತ= ಮನೋಹರವಾದ, ಶಿರಂ= ಕಪಾಲವು, ಇಹುದು= ಇದೆ, ಅದರ= ಆ ಸುಧನ್ವನ ಶಿರಸ್ಸಿನ,ಸಂಗಡಕೆ= ಹತ್ತಿರದಲ್ಲಿ ಸೇರಿಸುವುದಕ್ಕೋಸ್ಕರವಾಗಿ, ಕೊಂಡು ಬಾ ಎಂದು= ತೆಗೆದುಕೊಂಡು ಬರುವನಾಗೆಂದು, ಮದನಾರಿ= ಸ್ಮರಹರನಾದ ರುದ್ರನು, ಬೆಸಸೆ= ಅಪ್ಪಣೆ ಮಾಡಲು, ಭೃಂಗೀಶ್ವರಂ= ಭೃಂಗಿಗಳೊಡೆಯನಾದ ಪ್ರಮಥನು, ನಿಲ್ಲದೆ= ನಿಂತಕೊಳ್ಳದೆ(ಸಾವಕಾಶ ಮಾಡದೆ) ಐತಂದು=ಬಂದು, ಬೇಡೆ= ಆ ಶಿರಸ್ಸನ್ನು ಕೊಡುವಂತೆ ಕೇಳಲಾಗಿ, ಖಗವಲ್ಲಭಂ= ವಿಹಂಗೇಶನಾದ ವೈನತೇಯನು, ಪತಿ= ಒಡೆಯನಾದ ಕೃಷ್ಣನ, ನಿರೂಪವನು= ಆಜ್ಞೆಯನ್ನು, ಒಮ್ಮೆಯುಂ= ಒಂದು ಸಲವೂ, ಮೀರ್ವಂ= ಅತಿಕ್ರಮಿಸುವವನು, ಅಲ್ಲೆಂದು= ಅಲ್ಲವೆಂಬುದಾಗಿ ಹೇಳಿ, ಅತಿಕ್ರಮಿಸಿ = ಭೃಂಗೀಶನ ಮಾತನ್ನು ಲಕ್ಷ್ಯಮಾಡದೆ, ನಡಿಯಲು= ಹೋಗಲಾಗಿ, ಆ ಪಕ್ಷಾಘಾತದೊಳು= ಆ ಗರುಡನ ಗರಿಗಳ ಹೊಡೆತದಿಂದ, ಆತನು= ಭೃಂಗೀಶನು, ಅಳವಳಿದನು=ಶಕ್ತಿಗುಂದಿದನು
(ಆಯಾಸ ಪಟ್ಟನು)
ತಾತ್ಪರ್ಯ:- ಆಗ ಖಗೇಶ್ವರನು ಆ ಶಿರವನ್ನು ತೆಗೆದುಕೊಂಡು ಅಂತರಿಕ್ಷಮಾರ್ಗದಲ್ಲಿ ಹೋಗುತ್ತಿರುವುದನ್ನು ಕಂಡು, ಈ ವೈನತೇಯನು ಆ ಸುರಥನ ಶಿರಸ್ಸನ್ನು ತೆಗೆದುಕೊಂಡು ಎಲ್ಲಿಗೋ ಹೋಗುತ್ತಿರುವನು, ಈಗಲಾದರೋ ಈ ಸುರಥನ ಅಗ್ರಜನಾದ ಸುಧನ್ವನ ಅತಿ ಮನೋಹರವಾದ ಶಿರಸ್ಸು ತನ್ನ ರುಂಡಮಾಲೆಯಲ್ಲಿರುವುದು, ಅದರ ಸಂಗಡ ಇರುವುದ-
ಕ್ಕೋಸ್ಕರವಾಗಿ ಈ ತಲೆಯ ಬುರುಡೆಯನ್ನು ತೆಗೆದುಕೊಂಡು ಬರುವಂತೆ ಮನಸಿಜವೈರಿಯಾದ ಪರಮೇಶ್ವರನು ಅಪ್ಪಣೆ ಮಾಡಲು, ಅತಿ ತ್ವರೆಯಾಗಿ ಬಂದು ಆ ವೈನತೇಯನನ್ನು ಆ ಸುರಥನ ರುಂಡವನ್ನು ಕೊಡುವಂತೆ ಕೇಳಲಾಗಿ, ಆ ಮಾತನ್ನು ಕೇಳಿ ಖಗೇಶ್ವರನು, ನಮ್ಮ ಒಡೆಯನ ಮಾತನ್ನು ಲೇಶಮಾತ್ರವೂ ಮೀರತಕ್ಕವನಲ್ಲವೆಂದು, ಭೃಂಗೀಶ್ವರನನ್ನು ಲಕ್ಷ್ಯಮಾಡದೆ ಮುಂದಕ್ಕೆ ಹೊರಡಲು ಆಗ ಭೃಂಗೀಶ್ವರನು ಗರುಡನ ಗರಿಯ ಘಾಳಿಯ ಹೊಡೆತಕ್ಕೆ ಸಿಕ್ಕಿ ಬಹುವಾಗಿ ಆಯಾಸ ಹೊಂದಿದನು.
ತಾತ್ಪರ್ಯ:- ಈ ರೀತಿಯಾಗಿ ಆಯಾಸಪಟ್ಟು ಪುನಃ ಈಶ್ವರನ ಸಭೆಗೆ ಬಂದು ಅಲ್ಲಿ ನಡೆದ ಸಂಗತಿಗಳನ್ನೆಲ್ಲಾ ವಿಜ್ಞಾಪನೆ ಮಾಡಿಕೊಳ್ಳುತ್ತಿರಲಾಗಿ, ಪಾರ್ವತಿಯು ಈ ಭೃಂಗೀಶನ ಮಾತನ್ನು ಕೇಳಿ ಮಂದಹಾಸಯುತಳಾಗಿ ಆ ವೈನತೇಯನ ಪರಾ- ಕ್ರಮಾತಿಶಯಕ್ಕೆಅವನನ್ನು ಹೊಗಳಿ ಭೃಂಗೀಶನನ್ನು ಹಿಯ್ಯಾಳಿಸಲು,ಲಜ್ಜೆಯಿಂದ ತಲೆ ತಗ್ಗಿಸಿ ನಿಂತಿರುವ ಭೃಂಗೀಶ್ವರನನ್ನು, ಉಮಾಪತಿಯಾದ ಈಶ್ವರನು ಪ್ರೀತಿಯಿಂದ ಸಮಾಧಾನಮಾಡಿ, ತನ್ನ ಬಳಿಯೊಳಿದ್ದ ನಂದೀಶ್ವರನನ್ನು ಆ ಸುರಥನ ಶಿರಸ್ಸನ್ನು ತರುವಂತೆ ಕಳುಹಿಸಲಾಗಿ, ನಂದೀಶ್ವರನು ಆ ವೈನತೇಯನ ಬೆನ್ನು ಹತ್ತಿ ಹೋದನು.
ಗರುಡನ ಗರಿಯ ಗಾಳಿಯೋಳ್ ಸಿಕ್ಕಿ ಬೆಂಡಾಗಿ।
ತಿರುಗಿ ಬಂದಭವಂಗೆ ಭೃಂಗಿಪಂ ಬಿನ್ನೈಸು।
ತಿರೆ ಕೇಳ್ದು ಗಿರಿಜೆ ನಸುನಗುತೆ ಹರಿವಾಹನನ ಬಲ್ಮೆಯಂ ನೆರೆ ಪೊಗಳ್ದು॥
ಪಿರಿದಾತನಂ ಜರೆಯೆ ತಲೆವಾಗಿ ಲಜ್ಜಿಸಲ್।
ಪುರಹರಂ ಕೃಪೆಯೊಳವನಂ ಮತ್ತೆ ಸಂತೈಸಿ।
ಕರೆದು ವೃಷರಾಜಂಗೆ ಬೆಸಸೆ ಬೆಂಬತ್ತಿದಂ ಪಕ್ಷೀಂದ್ರನಂ ನಭದೊಳು॥೨೦॥
ಪ್ರತಿಪದಾರ್ಥ :- ಗರುನ= ಪಕ್ಷಿರಾಜನ, ಗರಿಯ= ಎರಕೆಯ, ಗಾಳಿಯೋಳ್= ಗಾಳಿಯಲ್ಲಿ, ಸಿಕ್ಕಿ = ವಶವಾಗಿ, ಬೆಂಡಾಗಿ= ಆಯಾಸಪಟ್ಟು, ತಿರುಗಿ ಬಂದು= ಹಿಂದಕ್ಕೆ ಬಂದು, ಭೃಂಗಿಪಂ= ಭೃಂಗೀಶನು, ಅಭವಂಗೆ= ಈಶ್ವರನಿಗೆ, ( ಹುಟ್ಟು ಸಾವುಗಳ ಕೊರತೆಗಳಾವುವೂ ಇಲ್ಲದವನು) ಬಿನ್ನೈಸುತ್ತಿರೆ= ಬಿನ್ನವಿಸುತ್ತಿರಲು, (ಎಂದರೆ ಅರಿಕೆ ಮಾಡುಕೊಳ್ಳುತ್ತಿರಲು) ಗಿರಿಜೆ= ಹೈಮವತಿಯು, ಕೇಳ್ದು= ಭೃಂಗೀಶ್ವರನ ಮಾತುಗಳನ್ನು ಆಲಿಸಿ, ನಸುನಗುತೆ= ಕಿರುನಗೆ ನಗುತ್ತ, ಹರಿವಾಹನನ= ಕೃಷ್ಣನ ವಾಹನವಾದ ವೈನತೇಯನ, ಬಲ್ಮೆಯಂ= ಸಾಮರ್ಥ್ಯವನ್ನು, ನೆರೆ=ಬಹಳವಾಗಿ, ಪೊಗಳ್ದು= ಸ್ತುತಿಸಿ, ಪಿರಿದು= ಬಹಳವಾಗಿ, ಆತನಂ= ಭೃಂಗಿಯನ್ನು, ಜರಿಯೆ= ಹೀಯಾಳಿಸಲಾಗಿ, ತಲೆವಾಗಿ= ಶಿರವನ್ನು ಬಗ್ಗಿಸಿಕೊಂಡು,ಲಜ್ಜಿಸಲು= ನಾಚಿಕೆ ಪಡುತ್ತಿರಲು, ಪುರಹರಂ= ಈಶ್ವರನು, ಕೃಪೆಯೊಳು= ಪ್ರೀತಿಯಿಂದ, ಅವನಂ= ಆ ಭೃಂಗೀಶನನ್ನು, ಮತ್ತೆ=ಪುನಹ, ಸಂತೈಸಿ= ಮನಶ್ಯಾಂತಿ ಪಡಿಸಿ, ಕರೆದು= ಹತ್ತಿರಕ್ಕೆ ಬರಮಾಡಿ, ವೃಷರಾಜಂಗೆ= ವೃಷಭೇಶನಾದ ನಂದಿಗೆ, ಬೆಸಸೆ= ಅನುಜ್ಞೆಮಾಡಲು, ನಭದೊಳು= ಗಗನದಲ್ಲಿ, ಪಕ್ಷೀಂದ್ರನಂ= ಪಕ್ಷಿರಾಜನಾದ ವೈನತೇಯನನ್ನು, ಬೆಂಬತ್ತಿದಂ= ಹಿಂಬಾಲಿ-
ಸಿಕೊಂಡು ಹೋದನು.
ಅ॥ವಿ॥ ಪತ್ರ=ಗರಿ, ಪತ್ರವುಳ್ಳದ್ದು ಪತ್ರಿ=ಪಕ್ಷಿ, ಪತ್ರಿ+ ಇಂದ್ರ= ಪತ್ರೀಂದ್ರ ( ಸ. ದೀ. ) ಗಿರಿ=ಪರ್ವತದಲ್ಲಿ, ಜೆ= ಹುಟ್ಟಿದವಳು ಗೌರಿ, ಪತ್ರಿ= ಪಕ್ಷಿ, ಬಾಣ, ರಥ, ತ್ರಿಪುರಗಳ ಸಮಾಹಾರ = ತ್ರಿಪುರ ಸಮಾಹಾರ ( ದ್ವಿಗು. ಸ.) ತ್ರಿಪುರ ಹರ= ತಾರಕ, ತಾರಕಾಕ್ಷ, ವಿದ್ಯುನ್ಮಾಲಿ ಎಂಬ ಅಣ್ಣ ತಮ್ಮಂದಿರಾದ ರಕ್ಕಸರು ಕಂಚು, ಬೆಳ್ಳಿ, ತಾಮ್ರದ ರೂಪನಾದ ಮೂರು ಪಟ್ಟಣಗಳಿಗೆ ಅರಸರಾಗಿ ಅಂತರಿಕ್ಷದಲ್ಲಿ ಸಂಚರಿಸುತ್ತ ದೇವಾದಿದೇವತೆಗಳನ್ನು ಹಿಂಸೆ ಪಡಿಸುತ್ತಿದ್ದು, ದೇವತೆಗಳ ಪ್ರಾರ್ಥನೆಯಂತೆ ಈಶ್ರನು ಆಲೀಢಪದದಿಂದ ಆ ಮೂರು ಪುರಗಳೂ ಒಟ್ಟುಗೂಡುವುದನ್ನು ನೀರೀಕ್ಷಿಸುತ್ತಿದ್ದು ಸರಿಯಾದ ಕಾಲದಲ್ಲಿ ಆಶಮೂವರನ್ನು ಒಂದೆ ಬಾಣದಿಂದ ಸಂಹರಿಸಿದನು.
ತಾತ್ಪರ್ಯ:- ಈ ರೀತಿಯಾಗಿ ಆಯಾಸಪಟ್ಟು ಪುನಹ ಈಶ್ರ ಸಭೆಗೆ ಬಂದು, ಅಲ್ಲಿ ನಡೆದ ಸಂಗತಿಗಳನೆಲ್ಲಾ ವಿಜ್ಞಾಪನೆ ಮಾಡಿಕೊಳ್ಳುತ್ತಿರಲಾಗಿ, ಪಾರ್ವತಿಯು ಈ ಭೃಂಗೀಶನ ಮಾತನ್ನು ಕೇಳಿ ಮಂದಹಾಸಯುತಳಾಗಿ ಆ ವೈನತೇಯನ ಪರಾ-
ಕ್ರಮಾತಿಶಯಕ್ಕೆ ಅವನನ್ನು ಹೊಗಳಿ ಭೃಂಗೀಶನನ್ನು ಹಿಯ್ಯಾಳಿಸಲು, ಲಜ್ಜೆಯಿಂದ ತಲೆಬಾಗಿ ನಿಂತಿರುವ ಭೃಂಗೀಶ್ವರನನ್ನು, ಈಶ್ವರನು ಪ್ರೀತಿಯಿಂದ ಸಮಾಧಾನಮಾಡಿ, ತನ್ನ ಬಳಿಯೊಳಿದ್ದ ವೃಷಭೇಶ್ವರನಾದ ನಂದೀಶ್ವರನನ್ನು ಆ ಸುರಥನ ಶಿರಸ್ಸನ್ನು ತರುವಂತೆ ಕಳುಹಿಸಲಾಗಿ, ನಂದೀಶ್ವರನು ಆ ವೈನತೇಯನ ಬೆನ್ನು ಹತ್ತಿ ಹೋದನು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ