ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ನವೆಂಬರ್ 4, 2018

ನಯಸೇನ ವಿರಚಿತ ಧರ್ಮಾಮೃತಂ

ನಯಸೇನ ವಿರಚಿತ ಧರ್ಮಾಮೃತಂ

ಧರ್ಮಾಮೃತಕಾರನಾದ ನಯಸೇನ ಕವಿಯ ಕಾಲಕ್ರಿ. ಶ. ೧೧೧೨. ಮುಳುಗುಂದದಲ್ಲಿ ಇದ್ದುಕೊಂಡು ಕೃತಿ ರಚನೆ  ಮಾಡಿದೆನೆಂದು ಹೇಳಿರುವುದರಿಂದ, ಕವಿಯು ಈಗಿನ ಧಾರವಾಡ ಜಿಲ್ಲೆಗೆ ಸೇರಿದ ಮುಳುಗುಂದದ ನಿವಾಸಿಯೆಂಬುದು ಖಚಿತ. ತಂದೆ ತಾಯಿ ಹೆಸರೈಗಳನ್ನು ಹೇಳಿಲ್ಲ. ಆಶ್ರಯದಾತರ ಹೆಸರನ್ನೂ ಹೇಳಿಲ್ಲ. ಬಹುಶಃ ಈತನು ರಾಜಾಶ್ರಯವನ್ನು ಬಯಸಿರಲಾರ. ಈ ಕೃತಿಯನ್ನು ಬರೆಯುವ ಹೊತ್ತಿಗೆ ನಯಸೇನನು ಜೈನಯತಿಯಾಗಿದ್ದನೆಂದು ಧರ್ಮಾಮೃತದಲ್ಲಿ ಕಂಡುಬಂದಿದೆ.

ನಯಸೇನ ನೂತ್ನಕವಿತಾವಿಳಾಸ, ದಿಗಂಬರದಾಸ, ಸುಕವಿನಿಕರಪಿಕಮಾಕಂದಂ, ಸಹಜಕವಿ ಜನಪಯಃಪಯೋಧಿ ಹಿಮಕರ,ಸುಕವಿಜನಮನಃಪದ್ಮಿವೀರಾಜಹಂಸ, ಎಂಬ ಬಿರುದುಗಳನ್ನು ಬಳಸಿಕೊಂಡಿದ್ದಾನೆ.ಹಿಂದಿನ ಕವಿಗಳ ಪದ್ದತಿಯಂತೆ “ಸುಕವಿನಿಕರಪಿಕಮಾಕಂದ” ಎಂಬ ತನ್ನ ಪ್ರೀತಿಯ ಬಿರುದನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಕಥಾನಾಯಕನಿಗೂ ಹೇರುತ್ತಾನೆ.

ನಯಸೇನನು ತನ್ನ ಕಾವ್ಯದಲ್ಲಿ ಇಷ್ಟದೇವತಾಸ್ತೋತ್ರವಾದಮೇಲೆ ಪೂರ್ವಕವಿ ಸ್ಮರಣೆಮಾಡುತ್ತ ಅಸಗ, ಪೊನ್ನ, ಪಂಪ, ಗಜಾಂಕುಶ, ಗುಣವರ್ಮ ಮತ್ತು ರನ್ನ ಎಂಬ ಆರು ಕನ್ನಡ ಕವಿಗಳನ್ನು ಮಾತ್ರ ಹೊಗಳಿ ಅವರ ಕಾವ್ಯಗುಣಗಳು ತನ್ನ ಕೃತಿಗೂ ಒದಗಿಬರಲೆಂದು ಪ್ರಾರ್ಥಿಸಿಕೊಂಡಿದ್ದಾನೆ. ಪೂರ್ವಕವಿಸ್ಮರಣೆಯಾದಮೇಲೆ ಕನ್ನಡ ಸಂಸ್ಕೃತಗಳ ಸಂಬಂಧ ಹೇಗಿರಬೇಕೆಂದು ಚರ್ಚಿಸಿದ್ದಾನೆ. ಕನ್ನಡ ಕಾವ್ಯಗಳಲ್ಲಿ ಸಂಸ್ಕೃತದ ಬಳಕೆ ಅತಿಯಾಯಿತೆಂದೂ, ಔಚಿತ್ಯವಿಲ್ಲದ, ಅನಗತ್ಯವಾದ, ಅಪ್ರಸಿದ್ಧವಾದ ಸಂಸ್ಕೃತಪದಗಳನ್ನು ಉಪಯೋಗಿಸಿ ಓದುಗರ ಕ್ಲೇಶವನ್ನು ಹೆಚ್ಚಿಸುವುದು ವಿವೇಕವಲ್ಲವೆಂದು ನಯಸೇನನ ಮತ. ಕವಿ ತನ್ನ ಅಭಿಪ್ರಾಯವನ್ನು ಕನ್ನಡ ಮಾತುಗಳಲ್ಲಿ ತಿಳಿಯ ಹೇಳಲು ಸಾಧ್ಯವಾಗದೆ “ ಮಿಸುಕದ ಸಕ್ಕದಮನಿಕ್ಕುವವನುಂ ಕವಿಯೇ” ಎಂದು ಗಟ್ಟಿಸಿ ಕೇಳಿದ್ದಾನೆ. ಸಂಸ್ಕೃತವನ್ನು ಬಳಸುವ ಅಪೇಕ್ಷೆಯಿದ್ದರೆ ಸಂಪೂರ್ಣವಾಗಿ ಆ ಭಾಷೆಯಲ್ಲಿಯೇ ಕೃತಿರಚನೆ ಮಾಡಬಹುದಲ್ಲಾ! ಅದಕ್ಕೆ ಯಾರ ಅಡ್ಡಿ ಇದೆ. ಶುದ್ಧ ಕನ್ನಡದಲ್ಲಿ ಮಧ್ಯೆ ಅರ್ಥವಾಗದ ಸಂಸ್ಕೃತವನ್ನು ತಂದಿಕ್ಕುವುದು ಸರಿಯಲ್ಲ. ಅದು ತುಪ್ಪ ಮತ್ತು ಎಣ್ಣೆಗಳನ್ನು ಬೆರಸುವಂಥ ಕೆಟ್ಟ ಕೆಲಸ. ಅದು ದುರ್ಮಿಶ್ರಣ. ಎಣ್ಣೆಯೂ ಅಲ್ಲ ತುಪ್ಪವೂ ಅಲ್ಲ.

ಕಾವ್ಯ ರಸವತ್ತಾಗಿರಬೇಕೆಂಬುದಷ್ಟೇ ನಯಸೇನನ ಅಭಿಪ್ರಾಯ. ಅದರಲ್ಲಿ ನಾಣ್ನುಡಿಗಳಿರಬೇಕು. ದೇಸಿ ಪದ್ಧತಿಯ ರಚನೆಯಿರಬೇಕು. ಮಾರ್ಗಶೈಲಿಯೂ ಇರಬೇಕು. ನಯಸೇನನಿಗೆ ದೇಸಿಯ ಮೇಲೆ ಆದರ.

ಧರ್ಮಾಮೃತ ಹದಿನಾಲ್ಕು ಆಶ್ವಾಸಗಳನ್ನೊಳಗೊಂಡ ದೀರ್ಘ ಚಂಪೂ ಕಾವ್ಯ. ಒಂದೊಂದು ಆಶ್ವಾಸವೂ ಚಿತ್ತಾಹ್ಲಾದಕರವಾದ ಒಂದು ಕಥೆಯಿಂದ ಕೂಡಿದೆ. ತತ್ವಪ್ರಚಾರಕ್ಕಾಗಿ ಬರೆದ ಕಥೆಗಳಾದರೂ ಓದುಗರ ಕುತೂಹಲವನ್ನು ಕೆರಳಿಸುತ್ತವೆ.

ಪ್ರಥಮಾಶ್ವಾಸಂ.

ದಯಾಮಿತ್ರಸೆಟ್ಟಿ- ವಸುಭೂತಿ ಕಥೆ.

ಶ್ರೀರಾಮಾ ರಮಣೀಯ ಪಾದಸರಸೀಜಾತಂ ನಿಲಿಂಪೇಂದ್ರ ವೃಂ
ದಾರಾಧ್ಯಂ ಭುವನತ್ರಯ ಪ್ರಭು ವಿನೇಯಾನೀಕಕಲ್ಪದ್ರುಮಂ
ಧೀರಂ ನಿತ್ಯನನಂತನಕ್ಷಯಸುಖಂ ಮುಕ್ತ್ಯಂಗನೇಕಂ ಜಗ
ತ್ಸಾರಂ ವೀರಜಿನೇಂದ್ರನೀಗೆಮಗೆ ಮುಕ್ತಿಶ್ರೀ ಸುಖಾವಾಪ್ತಿಯಂ॥॥೧॥॥

ಅಸಗನ ದೇಸಿ ಪೊನ್ನನ ಮಹೋನ್ನತಿವೆತ್ತ ಬೆಡಂಗು ಪಂಪನೊಂ
ದಸದೃಸಮಪ್ಪಪೂರ್ವರಸಮೆಯ್ದೆ ಗಜಾಂಕುಶನೊಳ್ಪುವೆತ್ತುರಂ
ಜಿಸುವ ಸದರ್ಥ ದೃಷ್ಟಿ ಗುಣವರ್ಮನ ಜಾಣ್ಕವಿರತ್ನನೋಜೆ ಶೋ
ಭಿಸೆ ನೆಲಸಿರ್ಕೆ ಧಾರಿಣಿ ಮನಂಗೊಳೆ ಮತ್ಕೃತಿಯೊಳ್ನಿರಂತರಂ ॥೩೯॥

ರಸ ಭಾವಂ ಗಮಕಂ ಕಾ
ಣಿಸೆ ನಾಣ್ಣುಡಿ ದೇಸಿವೆತ್ತ ಪೊಸನುಡಿ ಮಾರ್ಗಂ
ಕುಸುಱಿಯ ಬಗೆಯಿಂದಿನತಱೊ
ಳೆಸೆಯದ ಕೃತಿ ಕೃತಿಯೆ ಬಗೆದು ನೋೞ್ಪೊಡೆ ಜಗದೊಳ್॥೪೦॥

ಪೊಸಗನ್ನಡದಿಂ ವ್ಯಾವ
ರ್ಣಿಸುವೆಂ ಸತ್ಕೃತಿಯನೆಂದು ಕನ್ನಡಮಂ ಚಿಂ
ತಿಸಿ ಕೂಡಲಾಱದಕ್ಕಟ
ಮಿಸುಕದ ಸಕ್ಕದಮನಿಕ್ಕುವವನುಂ ಕವಿಯೇ॥೪೯॥

ಸಕ್ಕದಮಂ ಪೇೞ್ವೊಡೆ ನೆಱೆ
ಸಕ್ಕದಮಂ ಪೇೞ್ಗೆ ಸುದ್ದಗನ್ನಡದೊಳ್ತಂ
ದಿಕ್ಕುವುದೇ ಸಕ್ಕದಮಂ
ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮುಮಂ॥೪೨॥

ಪರಿಣತರೆನಿಸುವ ನಿರ್ಮ
ತ್ಸರರಂ ಮೆಚ್ಚಿಪುದು ಗಹನಮಲ್ಲದು ಜಡರಂ
ಕರಮಱಿದು ತಿಳಿಪಲೆಂತೆನೆ
ಖರಕರನಂ ಗೂಗೆಗೆಯ್ದೆ ತೋರ್ಪಂತಕ್ಕು॥೪೩॥

ಮಂಡೂಕಂ ಶರನಿಧಿಯಂ
ಕಂಡಱಿಯದೆ ಪಳಿಗುಮಬ್ಧಿಗದು ಭಂಗಮೆ ಪೇೞ್
ಖಂಡಿಸೆ ಕುಕವಿ ಸಮೂಹಂ
ಪಂಡಿತರಪ್ಪವರ್ಗೆ ಭಂಗಮಕ್ಕುಮೆ ಜಗದೊಳ್॥೪೪॥

ಪೊಲ್ಲಮೆಗಂಡದನಱಿದುಂ
ಮೆಲ್ಲನೆ ಸಯ್ತಾಗೆ ತಿರ್ದುವರೂಸುಕವೀಶರ್
ಪೊಲ್ಲಮೆಯಿಲ್ಲದೊಡಂ ಲೇ
ಸಲ್ಲದು ಕೃತಿಯೆಂದು ಕುಕವಿನಿಕರಂ ಪಳಿಗುಂ॥೪೫॥

ಇಲಿಗಂ ಮರಕುಟವಕ್ಕಿಗ
ಮಲಸದೆ ಕರೂದುಕುತ್ತೆ ಕಡಿಯುತಿರ್ಪುದೆ ಸಹಜಂ
ಸಲೆ ಚಪಲಂಗಂ ಕುಕವಿಗ
ಮಲಸದೆ ತೆಗಳ್ವಿದುವೆ ಸಹಜಮದಱಂತೆ ಕರಂ॥೪೬॥

ಮೞೆಯಿಲ್ಲದೆ ಪೊಯ್ನೀರಿಂ
ಬೆಳಗುಮೆ ಧರೆ ಮಱುಗಿ ಕುದಿದು ಶಾಸ್ತ್ರದ ಬಲದಿಂ
ದೞಿಪಿಂ ಪೇೞ್ವೊಡಮದುಕೋ
ಮಳಮಕ್ಕುಮೆ ಸಹಜಮಿಲ್ಲದಾತನ ಕಬ್ಬಂ॥೪೯॥

ಉಪ್ಪಿಲ್ಲದೆ ಕೇಳೊಕ್ಕಳ
ತುಪ್ಪವನೆಱೆದುಣ್ಬೆನೆಂಬೊಡುಣಿಸೇಂ ಸ್ವಾ
ದಪ್ಪುದೆ ಸಹಜಂ ತನಗಿನಿ
ಸಪ್ಪೊಡಮಿಲ್ಲದನ ಕವಿತೆ ರುಚಿವಡೆವುದೇ॥೫೦॥

ತರಣಿ ಬೆಳಗಲ್ಪೆಂಪೇಕೆಂದಿರ್ದುವೇ ಭಗಣಂ ಸುರ
ದ್ವಿರದಮಿರಲಿಂ ಸೊರ್ಕೇಕೆಂದಿರ್ದುವೇ ಪೆಱವಾನೆಗಳ್
ಪರಮಕವಿಗಳ್ ಸಾಲ್ವರ್ತಾಮೆಂದು ಮಾಣದೆ ಪೇೞ್ವೆ ನಾ
ದರದಿನೊಲವಿಂದರ್ಥೀ ದೋಷಂ ನಪಶ್ಯತಿಯೆಂಬಿನಂ॥೫೩॥

ಜಿನಮತದೊಳೆನಿತುಸಾರಮ
ದನಿತುಂ ಲೇಸಾಗಿ ತೋರ್ಪುದೀ ಕೃತಿಯೊಳದೆಂ
ತೆನೆ ಕನ್ನಡಿಯೊಳಗೆ ಜಲ
ಕ್ಕನೆ ತೋರೂಪವೊಲಿಭದರೂಪವು ವಿಸ್ತರದಿಂದಂ॥೫೫॥  

ದುರಿತತಿಮಿರಪ್ರಭಾವಂ
ಪರಿಹರಿಪುದು ದೇವ ನಿನ್ನ ಮುಖಚಂದ್ರಮನಿಂ
ತ್ವರಿತಂ ನೋಡಲದೆಂತುಂ
ದೊರೆಕೊಳ್ವುದು ವೀರಜಿನಪ ನಿರ್ವೃತಿ ಸೌಖ್ಯಂ॥೬೩॥

ತಿರಿಕನಾರಕಮಾನವಾಮರಲೋಕದೊಳ್ ನೆಲೆಗೊಂಡು ನಿ
ತ್ತರಿಸದೆಲ್ಲಿಯುಮಲ್ಲಿಗಲ್ಲಿಗೆ ಪುಟ್ಟಿ ರಾಟಳದಂದದಿಂ
ತಿರಿವ ಸಂಸ್ಕೃತಿ ದುಃಖದಿಂ ಪೊಱಮಟ್ಟು ಶಾಶ್ವತ ಸೌಖ್ಯದೊಳ್
ನೆರೆವುಪಾಯಮನೞ್ತಿಯಿಂ ಬೆಸೆಸಲ್ಕೆವೇೞ್ಕು ಮುನೀಶ್ವರಾ॥೬೫॥

ಗದ್ಯ॥ ನೀಂ ಬೆಸಗೊಂಡ ಚತುರೂಗತಿಚ್ಛೇದಮುಂ ಜಾತಿಜರ್ಮರಣದೂರಮುಂ ಸಾರಮುಮಪ್ಪ ನಿರಂತರ ಸುಖಂ ಮುಕ್ತಿಯೊಳಲ್ಲದೆ ದೊರೆಕೊಳ್ಳದಾಮುಕ್ತಿಯುಂ ತ್ರಿಜಗನ್ಮಾಂಗಲ್ಯಮಪ್ಪ ಸಮ್ಯಗ್ದರ್ಶನದಿಂದಲ್ಲದೆ ಸಮನಿಸದಾ ಸಮ್ಯಗ್ದರ್ಶನಮುಂ ಕರಣಲಬ್ಧಿಯಿಲ್ಲದೆ ಕೂಡದಾ ಸಮ್ಯಗ್ದರ್ಶನ ಮಿಲ್ಲದೆ ನಿರಂತರಸ್ಥಾಯಿಯಪ್ಪ ಮುಕ್ತಿಶ್ರೀಯಂ ಪಡೆವೆನೆಂಬಾತಂ ಕಣ್ಣಿಲ್ಲದೆ ಕಾಣ್ಬೆನೆಂಬ ಮಣ್ಣಿಲ್ಲದೆ ಬಳೆವೆನೆಂಬ ಸತಿಯಿಲ್ಲದೆ ಸುತರಂ ಪಡೆವೆನೆಂಬ, ಮತಿಯಿಲ್ಲದೆ ಪರದುಗೆಯ್ಬೆನೆಂಬ, ಕೇರಿಲ್ಲದೆ ಚಿತ್ರಮಂ ಬರೆವೆನೆಂಬ, ನೀರಿಲ್ಲದೆ ಕೂಳನಡುವೆನೆಂಬ, ಅಂಬಿಲ್ಲದೆ ಬಿಲ್ವಿಡಿವೆನೆಂಬ, ತೂಬಿಲ್ಲದೆ ಕೆಱೆಯಂ ಕಟ್ಟುವೆನೆಂಬ, ಕಾಲಿಲ್ಲದೆ ಪರಿವೆನೆಂಬ, ಕೀಲಿಲ್ಲದೆ ಪಡಿದೆಱೆ ವೆನೆಂಬ, ಭೈತ್ರಮಿಲ್ಲದೆ
ಸಮುದ್ರದೊಳ್ಪೋಪೆನೆಂಬ, ಗೋತ್ರಮಱಿಯದೆ ಕೂಸುಗುಡುವೆನೆಂಬ, ಕಿವಿಯಿಲ್ಲದೆ ಕೇಳ್ವೆನೆಂಬ, ಸವಿಯಿಲ್ಲದುಣ್ಬೆವೆಂಬ,
ಕೆಯ್ಯಿಲ್ಲದೆ ಬೇಲಿಯಿಕ್ಕುವೆನೆಂಬ, ಬಾಗಿಲಿಲ್ಲದೆ ಪೊಗುವೆನೆಂಬ, ಧನಮಿಲ್ಲದಧಿಕನೆಂಬ, ವಾಹನಮಿಲ್ಲದೇರುವೆನೆಂಬ, ನಾಲಗೆಯಿಲ್ಲದೆ ನುಡಿವೆನೆಂಬ, ಪಱುಗೋಲಿಲ್ಲದೆತೊಱೆಯಂ ಪಾಯ್ವೆನೆಂಬ ಪಚ್ಚಪಸಿಯೆಗ್ಗನಂ ಪೋಲ್ಗುಂ ಇಂತು.

ವರಚಕ್ರವರ್ತಿ ಪದವಿಗ
ಮುರುಗೀರ್ವಾಣಾಧಿಪತಿಯಸದ್ವಿಭವಕ್ಕಂ
ಪರಮಾರ್ಹಂತ್ಯ ಪದಕ್ಕಂ
ಪರಮಾರ್ಥಂ ಶುದ್ಧದರ್ಶನಂ ಮೊತ್ತಮೊದಲ್॥೬೮॥

ಭಟಸಂಘಕ್ಕದಟೆಂತುಟಂತುಟೆ ಮುಖಾಂಭೋಜಕ್ಕೆ ಮೂಗೆಂತುಟಂ
ತುಟೆ ಬಿತ್ತಿಂಗೆಲೆಯೆಂತುಟಂತುಟೆ ಮಹಾಭೈತ್ರಕ್ಕೆ ಕೀಲೆಂತುಟಂ
ತುಟೆ ಕೈಗಂಗುಲಿಯೆಂತುಟಂತುಟೆ  ಲಸದ್ವೀಪಕ್ಕೆ ಸಂದೆಣ್ಣೆಯೆಂ
ತುಟು ತಾನಂತುಟೆ ದರ್ಶನಂ  ಸಕಲಧರೂಮಕ್ಕಂ ಧರಾಚಕ್ರದೊಳ್॥೭೨॥

ಪಟುದೇಹಕ್ಕಸುವೆಂತುಟಂತುಟೆಕುಜಾನೀಕಕ್ಕೆ ಬೇರೆಂತುಟಂ
ತುಟೆ ಕಣ್ಣಾಲಿಯದೆಂತುಟಂತುಟೆ ತಟಾಕಕ್ಕೇರಿತಾನೆಂತೈಟಂ
ತುಟೆ ಕಾಲಿಂಗಡಿಯೆಂತುಟಂತುಟೆಚಿರಾವಾಸಕ್ಕಧಿಷ್ಠಾನಮೆಂ
ತುಟು ತಾನಂತುಟೆ ದರೂಶನಂ ಸಕಲಧರ್ಮಕ್ಕಂ ಮಹೀಚಕ್ರದೊಳ್॥೭೩॥

ಸುದತಿಯರಿಲ್ಲದೋಲಗದ ಲೀಲೆ ಮನೋಹರಮಪ್ಪ ಪುತ್ರರಿ
ಲ್ಲದ ಮನೆವಾೞ್ತೆ ಸಾರಜಲಮಿಲ್ಲದ ಬಾವಿ ವಿಶೇಷದುರ್ಗಮಿ
ಲ್ಲದಮಹಿಪಾಲನುಗ್ರತೆ ಜನೋನ್ನತಿಯಿಲ್ಲದನಾಡು ಕೂರ್ಮೆಯಿ
ಲ್ಲದ ನಿಜಕಾಂತೆ ಸತ್ವದಯೆಯಿಲ್ಲದಧರ್ಮಮದೊಪ್ಪಲಾರ್ಕುಮೇ॥೭೪॥

ಗದ್ಯ॥ ಕಂಪಿಲ್ಲದ ತುಪ್ಪಮುಂ, ಪೆಂಪಿಲ್ಲದ ಪ್ರಭುತ್ವಮುಂ, ಸ್ನೇಹಮಿಲ್ಲದ ಕೋಡುಂ, ಮೋಹಮಿಲ್ಲದ ಬಾೞುಂ, ಭಕ್ತಿಯಿಲ್ಲದ ಕೊಂಡಾಟಮುಂ, ಶಕ್ತಿಯಿಲ್ಲದ ಸೆಣಸುಂ, ಕೋಡಿಲ್ಲದ ಸಿರಿಯುಂ, ನಾಡಿಲ್ಲದರಸುಂ, ಫಲಮಿಲ್ಲದ ತೋಟಮುಂ, ಕುಲಮಿಲ್ಲದ ಮಹಿಮೆಯುಂ, ಬಟ್ಟೆಯಲ್ಲದ ಪಯಣಮುಂ, ಪಟ್ಟಣಮಿಲ್ಲದರಾಜ್ಯಮುಂ, ಕಿಚ್ಚಿಲ್ಲದ-
ಡುಗೆಯುಂ, ನಚ್ಚಿಲ್ಲದ ಪೆಂಡತಿಯುಂ, ದಯೆಯಿಲ್ಲದನೆಗೞ್ತೆಯುಂ, ನಯಮಿಲ್ಲದ ಸೇವೆಯುಂ, ಭಂಡಮಿಲ್ಲದಂಗಡಿಯುಂ, ಗಂಡನಿಲ್ಲದ ಸತಿಯುಂ, ಮೊದಲಿಲ್ಲದ ಪರದುಂ, ಮದಮಿಲ್ಲದಾನೆಯುಂ, ನೀರಿಲ್ಲದೂರುಂ, ಕೇರಿಲ್ಲದ ಮನೆಯುಂ, ಶ್ರುತಮಿಲ್ಲದ ತಪಮುಂ, ಘೃತಮಿಲ್ಲದೂಟಮುಂ, ಸಮ್ಯಗ್ದರ್ಶನಮಿಲ್ಲದ ದಾನಮುಂ, ತಪಮುಂ, ಜಪಮುಂ, ಧರ್ಮಮುಮೊಪ್ಪಲಾರ್ಕುಮೆ?

ಒದವಿದ ಭೂಪರಿಲ್ಲದಿಳೆ ಭೋಜನವಿಲ್ಲದಬಾಡು ವಸ್ತ್ರಮಿ ••••••••••••• (ಬಾಡು= ಮಾಂಸ)
ಲ್ಲದಬಹುಭೂಷಣಂ ನಯನಮಿಲ್ಲದ ಸೂಳೆ ವಿಶೇಷಲಾಭಮಿ
ಲ್ಲದಷರದಬ್ಜಮಿಲ್ಲದಕೊಳಂ ಬೆಳಸಿಲ್ಲದ ಧಾತ್ರಿ ರಕ್ಷೆಯಿ
ಲ್ಲದನೃಪನಾಳ್ಕೆ ದರ್ಶನದೊಳೊಂದದ ಧರ್ಮಮುಮೊಪ್ಪಲಾರ್ಕುಮೇ॥೭೬॥

ಕೊಲ್ಲದ ಪಸಿಯದ ಕಳವಿನಿ
ಸಿಲ್ಲದ ಪರವನಿತೆಯರ್ಗೆಪದಪಿಂಚಿತ್ತಂ
ಸಲ್ಲದ ಪರಿಗ್ರಹಕ್ಕಳಿ
ಪಿಲ್ಲದ ಸುವ್ರತಮಿವೈದುಮಲ್ಲವೆ ರತ್ನಂ॥೮೧॥

ಜಿನಭವನಾವಳಿಯಿಂದುಪ
ವನದಿಂ ಪೆರ್ಗೆಱೆಗಳಿಂ ಸರೋಜಾಕರದಿಂ
ಧನದನಪುರದಂತೊಪ್ಪುವು
ದನವರತಂ ಶೋಭೆಯಿಂ ಕರಂ ಗಿರಿ ನಗರಂ॥೮೯॥

ಗದ್ಯ ॥ ಆ ಪುರಮನಾಳ್ವ ವಿಶ್ವಸೇನನೆಂಬ ಮಹಾಮಂಡಳಿಕನಾತನ ರಾಜಶ್ರೇಷ್ಠಿಯನ್ವಯ ಶುದ್ಧನುಂ ಪ್ರಸಿದ್ಧನುಮಪ್ಪ ದಯಾಮಿತ್ರಶೆಟ್ಟಿಯೆಂಬ ಪರದನಿರ್ಪನಾತಂ

ಸಿರಿಯೊಳ್ ಕುಬೇರನಂ ತ್ರ
ಸ್ತರಿಯಾಡುವನಹಿಷನೊಡನೆ ಭೋಗಕ್ಕಂ ಮ
ಚ್ಚರಿಸುವನುದಾರಗುಣದೊಳ್
ಪುರೈಡಿಸುವಂ ಕಲ್ಪವೃಕ್ಷದೊಳ್ತದ್ವಣಿಜಂ॥೯೧॥

ಗದ್ಯ॥ ಎಂದು ಪರದುವೋಪೆನೆಂಬ ಬಗೆಯಂತಂದು ಯಥೋಚಿತಮಪ್ಪ ಭಂಡಮಂ ಕೊಂಡು ಶುಭದಿನದೊಳ್ ಪೊಱವೀಡಂಬಿಟ್ಟು ತನ್ನನಾಶ್ರಯಿಸಿ ಬರೂಪವರ್ ಬರ್ಪನ್ನೆವರಮಿರ್ಪನ್ನೆಗಂ

ಕೊರಲ ಪೊಸಜನ್ನಿವರಮೊ
ಪ್ಪಿರೆ ನಿಡುಬೊಟ್ಟೆಸೆಯೆ ದರ್ಭೆಕರಮತಿಶಯದಿಂ
ಬೆರಳೊಳ್ ರಂಜಿಸೆ ಕಾಶಾಂ
ಬರಮೆಸೆದಿರೆ ಬಂದು ನಿಂದುಭೂಸುರನೊರ್ವಂ॥೯೫॥

ಗದ್ಯ : ವೇದರುಕ್ಕಂ ಪೇಳ್ದಕ್ಷತೆಯನೀವುದುಂ ದಯಾಮಿತ್ರಶೆಟ್ಟಿ ನೋಡಿ ನಿಮ್ಮ ಪೆಸರೇನೆಂದೆತ್ತಣಿಂಬಂದಪ್ಪರಿಲ್ಲಿಗೆ ಪೋದಪ್ಪಿರಿಲ್ಲಿಗೇಂ ಕಾರಣಂ ಬಂದಿರೆಂದು  ಬೆಸಗೊಳ್ವುದುಂ ಪಾರ್ವನಿಂತೆಂದಂ.

ವಸುಭೂತಿಯೆಂಬುದೆನ್ನಯ
ಪೆಸರುನ್ನತಿವೆತ್ತತೆಂಕನಾಡಿಂ ಬಂದೆಂ
ವಸುಧೆಗೆಸೆದಿರ್ದ ಗಂಗೆಯ
ನಸಹಾಯನೆಯರ್ತಿವೆರಸುಮೀಯಲ್ಕೆಂದಾಂ॥೯೭॥

ಗದ್ಯ॥ ಎಂದು ಮುಂದಡವಿಯಪ್ಪುದಱಿಂ ಕ್ರೂರಮೃಗಂಗಳಿಂದಾನುಂ ವನಚರರಿಂದಾನುಂ ಪ್ರಾಣಭಯಮಕ್ಕುಮೆಂದಂಜಿ
ನೆರವಂ ಪೊೞಲಿನೊಳಱಸುತ್ತುಮಿರ್ದು ನಿಮ್ಮ ಪೋಗಂ ಪುರಜನಂ ಪೇೞೆ ಕೇಳ್ದು ನಿಮ್ಮನೆರವನಾಶ್ರಯಿಸಿ ಬಂದೆನೆಂಬು-
ದುಂ ಸೆಟ್ಟಿ ಕರಮೊಳ್ಳಿತ್ತು ಬನ್ನಿಮೆನೆ,

ಕರಮೊಸೆದು ರಾಗದಿಂ ಪೆ
ರ್ಚಿರೆ ಸೆಟ್ಟಿ ಮನೋನುರಾಗದಿಂದೊಡನೆಯವರ್
ಬರೆ ನಯದಿಂ ಪಿರಿದುಬಲಂ
ಬೆರಸು ಮಹೋತ್ಸಾಹ ಚಿತ್ತಂ ಮಱುದಿವಸಂ ॥೯೯॥

ಗದ್ಯ॥ ಮುವ್ವತ್ತಿರ್ವರ್ಪೆಂಡಿರುಮಂ ಬಂಧುಜನಮುಮಂ ಜ್ಯೇಷ್ಠಪುತ್ರನುಮಂ ಕರೆದು

ಅಕಟಕಟ ವೈಶ್ಯಜಂ ಭಾ
ವಕನಲ್ಲಂ ಲಜ್ಜೆಗೆಟ್ಟ ಸವಣರ ಮಾತಂ
ನಿಕರಕ್ಕೆ ನಂಬಿ ಠಕ್ಕಿಂ
ಗೆ ಕರಂ ಮತಿಗೆಟ್ಟು ಗತಿಯನಱಿಯದೆ ಕೆಟ್ಟಂ ॥೧೦೩॥

ವಸುಮತಿಯೊಳ್ ಪಲರುಂ ಪೂ
ಜಿಸುವೆಸಗುವ ದೈವಮಂ ಮಹಾಧರ್ಮಮುಮಂ
ಬಿಸುಟಹಹ ಮೋಡಕೋಣೆಯ
ಕುಸುಕುಱುಧರ್ಮಮನದೆಂತು ನಂಬಿದನೀತಂ॥೧೦೪॥

ಕುಲಮಂ ಮಾಸಿಸಿ ಮೀಹಮಂ ತೊಱೆದು ಕಂಡಪೇಸೆ ಮೆಯ್ಯೊಳ್ ಮಹಾ
ಮಲಮಂ ತಾಳ್ದಿದ ಕಷ್ಟರಂ ಸವಣರಂ ಕಂಗೆಟ್ಟರಂ ಕಂಡು ಸಂ
ಚಲಚಿತ್ತಂ ಕುಲದೈವಮೆಂದು ಪದಪಿಂ ಕೊಂಡಾಡುವಿಂತಪ್ಪ ಗಾ
ವಿಲನಂ ಗಾಂಪನನೆಗ್ಗನಂ ಜಡನನಾಂ ಕಾಣೆಂ ಮಹೀಚಕ್ರದೊಳ್॥೧೦೮॥

ಎಲ್ಲೆಲ್ಲ ವಸ್ತುಗಳುಮಂ
ಬಲ್ಲರ್ನಿಮ್ಮನ್ನರಿಲ್ಲ ಬುದ್ಧಿಗೆ ನೀವುಂ
ನಿರ್ಲಜ್ಜರಪ್ಪ ಸವಣರ
ಸೊಲ್ಲಿಂಗೊಳಗಾದುದಕ್ಕೆ ನಾಂ ಬೆಱಗಾದೆಂ॥೧೧೧॥

ಮಾಯಮನೆ ಬೀಸಿ ಪೆಱರನು
ಪಾಯದೆ ಠಕ್ಕಿಕ್ಕಿ ದೇವಕಾರ್ಯದೊಳಿನಿಸುಂ
ನೋಯದೆ ಸುಖಿಯಿಪ ಸವಣರು
ಪಾಯಮನಿಂ ನಿನ್ನೊಳಣ್ಣ ಭಾವಿಸಿ ನೋಡಾ॥೧೧೨॥

ಮಲಮಂ ಧರಿಯಿಸಿ ನಾಣಂ
ತೊಲಗಿಸಿ ನಿರ್ಗ್ರಂಥಮಿರ್ದುಸೊಂಬಿಂ ಪಲ್ಲಂ
ಸುಲಿಯದೆ ಮೀಯದೆ ಮಿಳ್ಕದೆ
ಕುಲದಿಂ ಕೆಟ್ಟವರವರಣ್ಣ ನೀಂ ಮನ್ನೆಪುದೇ॥೧೧೩॥

ಗದ್ಯ॥ ಮತ್ತಂ ಭಾವಿಸುವೊಡವರ ಮಾಟಮೆಲ್ಲಂ ಕೂೞ್ ಕಾರಣಮಲ್ಲದೆ ಗತಿ ಕಾರಣಮಲ್ಲದು; ಗತಿವಡೆವೆನೆಂಬುದು ಕಾಯಕ್ಲೇಶಂ ಬೇೞ್ಪುದು; ಆ ಕಾಯಕ್ಲೇಶಂ ನಿಮ್ಮ ನಚ್ಚಿನ ಸವಣರ ಮೆಯ್ಯೊಳೆಳ್ಳನಿತುಮಿಲ್ಲ; ನೀನವರುಮನವರ ದೈವಮುಮಂ ಕೊಂಡಾಡುವ ಮರುಳಾಟಕ್ಕೆನಗೆ ಪಿರಿದುಂ ವಿಸ್ಮಯಮಾದಪುದೆಂಬುದುಂ ದಯಾಮಿತ್ರಸೆಟ್ಟಿ ಮುಗುಳ್ನಗೆ ನಕ್ಕು ತನ್ನೊಳಿಂತೆಂದಂ

ಬೇಡಂ ಮಾಣಿಕಮೊಂದಂ
ಕಾಡೊಳ್ ಕಂಡೊರ್ಮೆ ಮೆಲ್ದುಪಗಿನಲ್ಲೆಂದೀ
ಡಾಡಿದನೆಂಬೀನಾಣ್ಣುಡಿ
ನಾಡೆಯುಮೆಸೆದಪುದು ದುರಿತವಶದಿಂದಿವನೊಳ್॥೧೧೫॥

ಬೆಳಗಿನೊಳಂ ಕಾಣದು ನಿಶಿ
ಯೊಳ್ ಕಾಣ್ಬುದು ಪೆಗ್ಗಣಕ್ಕೆ ನಿರ್ಗುಣರ್ಗಂತು
ಜ್ವಳ ಧರ್ಮಮನಱಿಯದೆಯು
ಮ್ಮಳಮಂ ಪೊರ್ದುವುದು ಜಡರ್ಗೆ ಸಹಜಮೆನಿಕ್ಕುಂ॥೧೧೬॥॥

ಅಱಿಯದು ಕಪ್ಪೆ ಸಾಗರಮನಂಬುಧಿಗಂತದು ಕುಂದೆ ಗೂಗೆ ಕಂ
ಡಱಿಯದು ಚಂಡರೋಚಿಯನಿನಂಗದು ಭಂಗಮೆ ನೋಡೆ ಕಾಗೆ ಕಂ
ಡಱಿಯದು ಚಂದ್ರನಂ ಸಸಿಗೆ ಹೀನಮೆ ಸಜ್ಜನರೊಳ್ಪನಿಂ
ತಱಿಯದೆ ದೂರ್ತಿನಿಂ ಪೞಿಯೆ ಕಷ್ಟತೆ ಸಾರ್ಗುಮೆ ದಿವ್ಯರಪ್ಪರಂ॥೧೧೭॥

ಗದ್ಯ॥ ಮದ್ದು ಕುಣಿಕೆಯಂ ತಿಂದಂಗೆ ಕಲ್ಲುಂ ಮಣ್ಣುಂ ಮರನುಂ ಪೊಂಬಣ್ಣಮಾಗಿ ತೋರ್ಪಂತೆ ಕರ್ಮದ ತೀವ್ರತೆಯಿಂದೀ
ಪಾರ್ವಂಗೆ ಲೌಕಿಕ ಧರ್ಮಮೆ ಧರ್ಮಮಾಗಿ ತೋರ್ಪುದದು ಕಾರಣದಿಂ ಸದ್ಧರ್ಮಮನೊರ್ಮೆಯೆ ಪೇೞ್ದೆನಪ್ಪೊಡೆ ಪಿತ್ತಜ್ವರಮುಳ್ಳವಂಗೆ ಕುದಿವ ಪಾಲನೆಱೆವಂತಾನುಂ ಶಿಶುವಿನ ಕೈಯೊಳ್ ಮಸೆದ ಬಾಳಂ ಕೊಟ್ಟಂತಾನು ಕಪಿಯ ಕೊರಲೊಳ್ ಪೂಮಾಲೆಯಿಕ್ಕಿದಂತಾನುಮಕ್ಕುಮದಱಿಂದುಪಾಯದೊಳೆ ತಿಳಿಪಲ್ವೇೞ್ಕುಮೆಂದು ದಯಾಮಿತ್ರಸೆಟ್ಟಿ  ಪತ್ತೆಂಟು ದಿವಸಂ ಪೋಗಲ್ ಮತ್ತೊಂದು ದಿವಸಂ.

ಭಟ್ಟರೆ ಕೇಳಿಂ ನಿಮ್ಮಂ
ಬಿಟ್ಟು ಕೆಲರ್ಕುಲಜರೊಳರೆ ನಂಬಿದೆನೀಗಳ್
ನೆಟ್ಟನೆ ನಿಮ್ಮಿಂ ಸುಗತಿಯ
ಬಟ್ಟೆಯ ತೆಱನಱಿಯಲಾಯ್ತು ಪುಣ್ಯೋದಯದಿಂ॥೧೨೦॥

ನೆರಪಲ್ಬಾರದ ವಿತ್ತಂ
ದೊರೆಕೊಂಡುದು ನೆಲೆಗೆ ಪೋಗಿ ಮಕ್ಕಳೊಳಂ ಪೆಂ
ಡಿರೊಳಮೊಡಗೂಡಿ ಸುಖದಿಂ
ಚರಿಯಿಸುವೆಂ ಮೆಚ್ಚಿದಂದದಿಂ ಭೋಗಿಸುವೆಂ ॥॥೧೩೧॥

ಗದ್ಯ॥ ಎಂದು ಮನದೊಳ್ ಪಾಲ್ಗುಡಿದು ನೋಂಪಿಯಂ ನೋಂಪ ಕ್ರಮಮಂ ಪೇೞಿಮೆನೆ ವೈಶ್ಯವಂಶಲಲಾಮನಿಂತೆಂ-
ದನಾ ನೋಂಪಿ ತೀರ್ವನ್ನಂ ಗ್ರಾಸದೊಳ್ ಕಳಪೆಯ ಕೂೞಂ ತಿಳಿದುಪ್ಪಮಂ ಪೆಱರೊರ್ವರ್ಬಡಿಸೆ ಕೈಯೊಳ್ ಮೋನದಿಂದುಂಡು

ಮತ್ತಂ ನೋಂಪಿಯ ಪ್ರಾರಂಭದೊಳಂ ನೆಱವಿಯೊಳಂ ಮಂದಲದಂತೆ ಧೈರ್ಯಂಬೆರಸು ಲಾಭಂಬೆತ್ತ ಪರದನಂತುತ್ಸಾಹಂ
-ಬೆರಸು ಪಂದೆಯಂತು ನೋವಿಂಗಳ್ಕದೆ ತಣಿಯುಂಡನಂತೆ ಸಾಲ್ಗುಮೆನ್ನದೆ ದೃಢಚಿತ್ತದಿಂದಿರ್ದು ತಲೆಯ ರೋಮಗಳೆ-
ಲ್ಲಮಂ ಪಱಿಯಿಸಿ ರಾಗದಿನೆಮಗೀವುದಿತ್ತು ಮನದೊಳುಮ್ಮಳಿಸದೊಂದೆಡೆಯೊಳ್ ಮುನ್ನಿನ ವಿನೋದಂಗಳಂ ಮಱೆದ -ಪ್ಪೊಡಂ ನೆನೆಯದೆ ಸ್ವಾಧ್ಯಾಯ ಪರನಾಗಿ ಬೀಡಿನೊಳಾದಿನಿತಕ್ಕಂ ವಿಸ್ಮಯಕ್ಕಂ ವಸ್ತ್ರಕ್ಕಮಪೇಕ್ಷೆಯಿಂದೆಳಸದಿಂತೆರಡು ತಿಂಗಳ್ವರಂ ಎಮ್ಮ ಪೇೞ್ದೋಜೆಯಿಂ ಕ್ರಮಂದಪ್ಪದೆ ನೋಂಪುದೆಂದು ಪೇೞ್ವುದುಂ

ಸಲೆ ಮಱೆಯೊಳ್ಪಡುವುದು ಮೈ
ಮಲವೇಱಿತ್ತೆಂದು ಮೀಯಲಾಗದು ಪಲ್ಲಂ
ಸುಲಿಯದೆ ವನಿತೆಯರಂ ಪಂ
ಬಲಿಸದೆ ತಲ್ಲಣಿಸದಿರ್ಪುದತ್ಯುತ್ಸವದಿಂ॥೧೩೫॥

ತಲೆಯಂ ಬಲುದಡಿಗರ್ಕಿಳೆ
ನಿಲಲಾಱದೆ ಸಂಕಟದಿಂದ ಕೋಡಗದಂತು
ಮ್ಮಳಿಸಿ ಕಳವಳಿಸಿ ನೋವಿಂ
ತಲೆಯಂ ತಿರಿಪುತ್ತುಮಂಜಿ ಕೆಟ್ಟೆನೆನುತ್ತುಂ ॥೧೪೧॥

ಬಿಡದೌಡುಗರ್ಚಿನೋವಿಂ
ದಡಿಗಡಿಗಹಹಾಯೆನುತ್ತುಮೆಡಗಯ್ಯಿಂದಂ
ತಡವರಿಸುತ್ತುಂ ಸಾಸವೆ
ಗುಡಿದಂತಿರೆ ಕರಮೆ ಮಱುಗಿ ತಳವೆಳಗಾದಂ॥೧೪೭॥

ಇವು ಲೇಸವು ಲೇಸೆಂಬೀ
ವಿವರದೊಳೇಂ ಸಕಲ ಭಕ್ಷ್ಯಮುಂ ಬಾಡುಗಳುಂ
ಸವಿಯೊಳ್ ಸಾಸಿರಮಡಿ ಮಿ
ಕ್ಕುವು ಭಾವಿಸಿ ನೋೞ್ಪೊಡಿಂದ್ರನುಣ್ಬಮೃತಮುಮಂ ॥೧೫೩॥

ಗದ್ಯ॥ ಎಂದು ತನ್ನೂಟಂ ತನಗೆ ಜನ್ಮಾಪೂರ್ವಮಪ್ಪುದಱಿಂ ಮಹಾವಿಸ್ಮಯಂಬಟ್ಟು ಇರುಳ್ಕಂಡ ಕನಸುಗಳಂ ಪಗಲ್ನೆನೆವಂತೆ ನೆನೆಯುತ್ತುಂ ಪಗಲೆಲ್ಲಂ ಸಂತಸದಿಂದಿರ್ದು ನೇಸರ್ಪಟ್ಟೊಂದು ಜಾವಕ್ಕೆ ತೊಟ್ಟನೆ

ಅಸದಳಮೆನಿಸುವ ತೀವ್ರದ
ತೃಷೆ ಮೊಕ್ಕಳಮಾಗೆ ನಾಡೆಯುಂ ಮನದೊಳ್ಸೈ
ರಿಸಲಾರದೆ ತಲ್ಲಣದಿಂ
ಬಿಸುಸುಯ್ದುಮ್ಮಳಿಸಿ ಬಾೞಲರಿದಾಯ್ತೆನುತುಂ॥೧೫೫॥

ಅಂತಿಂತೆನ್ನದೆ ಮುಂ ಪೇ
ೞ್ದಂತುಸಿರದೆ ಮೋನದಿಂದಮುಣ್ಬುದು ನಾನೇ
ನಂ ತಂದಿಕ್ಕಿದೊಡಂ ಗುಣ
ವಂತರ್ಕುಲದೊಡೆಯರೆನಿಪ ನಿಮಗಿದು ಪಿರಿದೇ॥೧೬೩॥

ಪುಲಿಯಮೀಸೆಯನಂಜದುಯ್ಯಲನಾಡಲಪ್ಪುದು ನಂಜನೆಂ
ಜಲಿಸಲಪ್ಪುದು ಸಿಂಹಮಂಪಿಡಿದೇಱಲಪ್ಪುದು ಕಿಚ್ಚಿನೊ
ಳ್ತೊಲಗದೊರ್ಮೆಯೆಪಾಯಲಪ್ಪುದು ಸೊಕ್ಕಿದಾನೆಗೆಸಂದುಮಾ
ರ್ಮಲೆಯಲಪ್ಪುದು ನಿನ್ನ ನೋಂಪಿಗೆ ಗಂಡನಾವನೊ ಸೈರಿಪಂ॥೧೬೯॥

ಕಲಿತನದಿಂದಂ ಲೋಗರ್
ಪುಲಿಯಂ ಪಿಡಿದೊಡಮದೇಂಬಿಡೆಂಬರ್ತಾಮೊಂ
ದಿಲಿಯಂಪಿಡಿದೊಡಮದು ಪೆ
ರ್ಬುಲಿಯೆಂಬರ್ದುಜನರ್ಗೆ ತಾನಿದು ಸಹಜಂ॥೧೭೩॥

ಗದ್ಯ॥ ಪಾವಿಲ್ಲದೆಡೆಯೊಳ್ ಕಪ್ಪೆಗಳ್ ತಮ್ಮಗಱೆಗಜಱಾಗಿರ್ಪುವು, ಪಾವು ಬರೆಗಜಱುಗೆಟ್ಟುಸತ್ತಂತಿರ್ಪುವು. ಅಂತೆ ಮಹಪರಿಷಹಂಗಳ್ ತಮ್ಮ ಮನಮಂ ಕದಡದನ್ನಂ ಕುತ್ಸಿತರ್ ತಮ್ಮ ನೆಗೞ್ತೆಯೆ ಪಿರಿದೆಂದು ಪೊಂಗುತ್ತಿರ್ಪರ್
ಪರೀಷಹಂಗಳಡಸಿದಂದು ದೆಸೆಗೆಟ್ಟು ಮಱುಗುತ್ತಿರ್ಪರ್

ಕಡುಮೂರ್ಠಖರ್ತಮ್ಮಿಚ್ಛೆಗೆ
ಪಿಡಿದುದೆ ಪಿರಿದೆಂಬರಣ್ಣಜಿನಮಾರ್ಗದೊಳೇಂ
ನಡೆಯಲ್ಬರ್ಕುಮೆ ಬಾರದು
ಕಡಲೆಗಳಂ ತಿಂಬ ಮೊಗ್ಗು ಕಲ್ಗಳೊಳುಂಟೇ॥೧೭೫॥

ಗದ್ಯ॥ ಕಟಕಮಂ ಕಂಡಱಿಯದವಂಗೆ ಪಳ್ಳಿಪಿರಿಯೂರಾಗಿ ತೋರ್ಪಂತೆ ಧೈರ್ಯಾನ್ವಿತರಪ್ಪ ಮಹರೂಷಿಯರ ತಪೋಮಾರ್ಗಮನಱಿಯದೆನಗೆಮ್ಮ ಚಾರಿತ್ರಮೆ ಪಿರಿದಾಗಿರ್ದುದು ಸಹಜಮಾದೊಡಂ “ ಪರದರೊಳ್ಮರುಳಿಲ್ಲಸೂಳೆ
ಸಾಧುವಲ್ಲ” ಎಂಬ ನಾಣ್ಣುಡಿಯುಂಟಪ್ಪುದಱಿಂದೀತಂ ಮರುಳಲ್ಮೀತನ ಪಿಡಿದ ಧರ್ಮಮೆ ಧರ್ಮಮೆಂದು

ಎಂದು ತನ್ನೊಳೆ ವಿಚಾರಿಸಿ ವಾತ್ಸಲ್ಯರತ್ನಾಕರಂಗೆ ಕೈಗಳಂ ಮುಗಿದು ನಿಮ್ಮ ಪಿಡಿದ ಧರ್ಮಮೆ ಲೇಸೆಂಬುದನೀಗಳಱಿದೆಂ ನೀವೆನಗೆ ಧರ್ಮದೊಳಾದಭಿಪ್ರಾಯಮನಱಿಯೆ ಪೇೞಲ್ವೇೞ್ಕೆಂಬುದುಂ ಸೆಟ್ಟಿಯಿಂತೆಂದಂ

ಪರಮಾರ್ಥಮಪ್ಪುದಂ ಮ
ಚ್ಚರಿಸದೆ ಕೋಪಿಸದೆ ಡಂಗೆಗೊಳ್ಳದೆ ಪಕ್ಷ
ಕ್ಕುರಿದೇಳದೊಂದೆಮನದಿಂ
ನಿರುತಂ ಕೇಳ್ವವನೆ ಧರ್ಮದೊಳಗಂ ತಿಳಿಗುಂ॥೧೮೧॥

ಕನ್ನಡಿಯಂ ನೋಡುವವಂ
ತನ್ನಯ ಪೆಱಗಣ್ಗೆ ಕಾಣಲಾರ್ಪನೆ ರೂಪಂ
ಮುನ್ನಮೆ ಬಱಿದೊಳಱುವವಂ
ಸನ್ನುತಸದ್ಧರ್ಮಮಪ್ಪುದಂ ತಾನಱಿಯಂ॥೧೮೨॥

ಮರಣಂ ಚಿಂತೆ ಭಯಂ ಮದಂ ಮುಳಿಸು ಮೋಹಂ ಖೇದ ರೋಗಂ ಬೆಮ
ರ್ಜರೆ ನೀರೞ್ಕೆ ವಿಷಾದಮೂಟ ಜನನಂ ಲೋಭಂ ಮಹಾವಿಸ್ಮಯಂ
ಸ್ಮರಬಾಣಾಹತಿ ನಿದ್ರೆಯೆಂಬಿನಿತಂ ಗೆಲ್ದಾತನೇ ತಾಂ ಜಿನೇ
ಶ್ವರನಿಂದ್ರಾರ್ಚಿತಪಾದನಾತನೆ ವಲಂ ಸೌಖ್ಯಕ್ಕೆ ತಾಂ ಕಾರಣಂ ॥೧೯೮॥

ಗದ್ಯ॥ ಸಮ್ಯಕ್ತ್ವಂ ಆ ಸಮ್ಯಕ್ತ್ವಮೇಗೆಯ್ದುಂ ದೊರೆಕೊಳ್ಳದದು ಪುಣ್ಯದಿಂ ದೊರೆಕೊಂಡುದಪ್ಪೊಡನಂತಸುಖದೊಳ್ಕೂಡುಗುಮೆಂದು ವಣಿಗ್ವಂಶಲಲಾಮಂ ಪೇೞೆ, ವಸುಭೂತಿ ಕೇಳ್ದು ತಾಗಿ ಬಾಗಿದನಂತೆ ಮುನ್ನಿನ ದರ್ಪಂಗೆಟ್ಟು ಕದಡಿ ತಿಳಿದ ನೀರಂತೆ ಮನದೊಳ್ ನಿರ್ಮಳನಾಗಿ ಸಮ್ಯಗ್ದರ್ಶನಮಂ ದೊರೆಕೊಂಡುದಕ್ಕೆ ಮನದೊಳಾನಂದಂಬೆತ್ತು ಸಮ್ಯಕ್ತ್ವಚೂಡಾಮಣಿಯಂ ನಾನಾವಿಧದಿಂ ಪೊಗೞ್ದು ದರೂಶನದೊಳ್ ದೃಢನಾಗಿರ್ದನನ್ನೆಗಮಿಭಾನ್ವಯ ಪವಿತ್ರಂ ಮಱುದಿವಸಂ ಬೀಡನೆತ್ತಿ ಕತಿಪಯ ಪಯಣಂ ಬೋಗಿ ನಂದ್ಯಾವಲಿಯೆಂಬ ಪೇರಡವಿಯೊಳ್ ಬೀಡಂ ಬಿಡುವುದುಂ

ನೆರೆದು ವನಚರರುಮೊರ್ಮೆಯೆ
ಭರವಶದಿಂ ತಾಗೆ ಸೆಟ್ಟಿ ಪಿರಿದಪ್ಪ ಬಲಂ
ಬೆರಸಿದಿರನದಿರದಣ್ಮಿಂ
ಕರಿಯೊಡ್ಡಂ ಸಿಂಹದೊಡ್ಡು ತಾಗುವತೆರದಿಂ॥೨೦೭॥

ಗದ್ಯ॥ ತಾಗಿ ಕಿಚ್ಚುಂ ಕಿಡಿಯುಮಾಗಿ ಕಾದುತ್ತಮಿರೆ ದೂರದೊಳಿರ್ದ ವಸುಭೂತಿಯಂ

ಅಂಬಱಿಗುಮಾಯುತಪ್ಪಿದೊ
ಡೆಂಬೀ ನಾಣ್ಣುಡಿಯಲ್ಲಿ ಪುಸಿಮಾಡದೆ ಕೂ
ರಂಬೊಂದು ಬಂದು ನಡೆ ನೋ
ವಿಂ ಬಿದ್ದಂ ಸಾವಪೊತ್ತನಾವಂ ಬಲ್ಲಂ॥೨೦೯॥

ಗದ್ಯ॥ ಅಂತು ಬೀೞ್ವುದುಮತ್ತಮುಬ್ಬಿರ್ದ ಬೇಡರ ಗರ್ವದಗುರ್ವಂ ಕೆಡಿಸಿ ಕಾಳಗಮಂ ಗೆಲ್ದು ಬೀಡಂ ಪೊಕ್ಕು ನೊಂದಿರ್ದ ವಸುಭೂತಿಯಂ ಕಂಡು ಧರ್ಮಪಕ್ಷಪಾತದೆಂದೇಱುಪಿಱಿದಪ್ಪುದಱಿಂ ಸನ್ಯಸನಮಂ ಕೊಟ್ಟು ಪಂಚನಮಸ್ಕಾರಮಂ
ಪೇಳುತ್ತಿರ್ಪುದುಂ ಮತ್ತೆನಿಸದೆ ತನಗೆ ಜಿನನೆ ದೈವಮೆಂಬ ಭಾವನೆಯಿಂದ ವಸುಭೂತಿ ದಯಾಮೂಲಮಪ್ಪ ಧರ್ಮಮಂ ನೆನೆಯುತ್ತೆ ಮುಡಿಪಿ ದರ್ಶನ ಫಲದಿಂ ಸೌಧರ್ಮಕಲ್ಪದೊಳ್ ಮಣಿಪ್ರಭಾವಿಮಾನದೊಳ್ ಮಣಿಕುಂಡಲನೆಂಬ ದೇವನಾಗಿ
ಪುಟ್ಟುವುದುಂ.

ಸಪ್ತಮಾಶ್ವಾಸಂ.

ವಾರಿಷೇಣ - ಪುಷ್ಪದಾಡ ಕಥೆ.

ಶ್ರೀನಿರ್ವೃತಿ ವನಿತೆಗೆ ಪೆಱ
ತೇನುಪಗೂಹನ ಗುಣಂ ಲಸನ್ಮಣಿಹಾರಂ
ತಾನೆಂದು ನಂಬಿದಂ ವಿಬು
ಧಾನಂದಂ ಸುಕವಿನಿಕರಪಿಕಮಾಕಂದ॥೧॥

ಉದಯಗಿರಿಯೊಳ್ ದಿವಾಕರ
ನುದಯಂಗೆಯ್ವಂತೆ ಸಕಲ ಗುಣಗಣ ನಿಳಯಂ
ವಿದಿತ ಯಶಃಪುಂಜಂ ಪು
ಟ್ಟಿದನೊಪ್ಪಿರೆ ವಾರಿಷೇಣನೆಂಬ ಕುಮಾರಂ॥೧೧॥

ಅಂತಾ ಸದ್ಗೈಣನೆಧಿ ವಿ
ಖ್ಯಾತಂ ಭೂಭುವನವಂದಿತಕ್ರಮಯುಗ್ಮಂ
ನೀತಿವಿದಂ ಭವ್ಯಜನ
ಪ್ರೀತಂ ಜಿನಸಮಯವಾರ್ಧಿವರ್ಧನ ಚಂದ್ರಂ॥೧೨॥

ದೃಢಚಿತ್ತಂ ಗುಣನಿಳಯಂ
ಕಡುಗಲಿ ಕಿಱಿಯಂದು ದಿವ್ಯಜಿನಮುನಿಗಳ ಮೆ
ಲ್ಲಡಿಯಂ ಪಿಡಿದು ತಳರ್ನಡೆ
ನಡೆಗಲ್ತಂ ಭವ್ಯವನಜವನಕಳಹಂಸಂ॥೧೩॥

ವನತೆಯರಂ ವನಿತೆಯರೊಳ್
ಕನಕಮನೋರಂತೆ ಕನಕದೊಳ್ ರತ್ನಮನಿಂ
ಬೆನೆರತನದೊಳ್ ವಿಚಾರಿಸಿ
ಮನದೊಳ್ ಕೀೞ್ಮೀಲಿದೆಂದು ನಂಬುವ ತೆಱದಿಂ॥೩೨॥

ಗ್ಯ॥ ಆಪ್ತನನಾಪ್ತನೊಳ್ ತಪಮಂ ತಪದೊಳ್ ಧರ್ಮಮಂ ಧರ್ಮದೊಳ್ ಆಗಮಮನಿಗಮದೊಳ್ ದಾನಮಂ ದಾನದೊಳ್ ಪೂಜೆಯಂ ಪೂಜೆಯೊಳ್  ಪರೀಕ್ಷೀಸಿ ಬೇಗಮಿವನಾಪ್ತನಿವನನಾಪ್ತ ನಿದು ಸತ್ತಪಮಿದು ದುಸ್ತಪಮಿದು ಸದ್ಧರ್ಮಮಿದು ಕುಧರೂಮಮಿದಾಗಮಮಿದನಾಗಮಮಿದು ಸದ್ಧೃನಮಿದು ಕುದಾನಮಿದು ಪೊಜೆಯಿದು ಕುಪೂಜೆಯಿದು ಸುಖಕೆ ಕಾರಣಮಿದು ದುಃಖಕಾರಣಮಿದು ಮುನ್ನಮಿದು ಬೞಿಕಮೆಂಬುದಂ ಬುದ್ಧಿಯಿಂ ಸಂಚಲಚಿತ್ತನಾಗದೆ ತನ್ನೊಳಾರೈದು ನೋಡಿ ಜಲಮಿಶ್ರೆತಮಪ್ಪ ಪಾಲಂ ಮುಂದಿಡಲ್ ಹಂಸೆಯೆಂತು ನೀರಂ ಬಿಟ್ಟು ಪಾಲಂ ಕುಡಿವುದಂತೆ ಕುಧರ್ಮಮಂ ಬಿಟ್ಟು ಸದ್ಧರ್ಮಮಂ ಕೈಕೊಳ್ವುದು

ಕುರುಡನಪ್ಪ ಪೊಲಂಬಿಗನಂ ನಂಬಿ ಗಟ್ಟದಿಟ್ಟೆಡೆಯೊಳಿರುಳ್ ದೂರದೇಶಕ್ಕೆ ಪಯಣಂ ಬೋಪೆನೆಂಬಾತನುಂ ದೋಷಿಯಪ್ಪಾಪ್ತವಂ ನಂಬಿ ತಪಂಗೆಯ್ದು ಮುಕ್ತಿವಡೆವೆನೆಂಬಾತನುಂ ನಿರ್ಬುದ್ಧಿಗಳಲ್ಲದೆ ಬುದ್ಧಿವಂತರಲ್ಲರ್

ಪೆಣ್ಣಿಂಗಂ ಪೊನ್ನಿಂಗಂ
ಮಣ್ಣಿಂಗಂ ಕಾಂಕ್ಷೆಯಿಂದಮೆಱಗದೆ ಲೋಕಂ
ಬಣ್ಣಿಸೆ ಚಂಚಲನಾಗದೆ
ತಿಣ್ಣಂ ನಡೆವವನೆ ತಾಂ ತಪೋಧನನಕ್ಕುಂ ॥೪೪॥

ನಾಯಕನಿಲ್ಲದ ರಣಮುಂ
ಮಾಯಾವಿಯ ಪರದುಮಳಿಪನಪ್ಪನ ಧನಮಂ
ನ್ಯಾಯಮಣಮಿಲ್ಲದವನ
ಶ್ರೀಯುಂ ನಿರ್ದಯನ ತಪಮುಮೇನೆಸೆದಪುದೇ॥೫೩॥

ಕೊಲೆಯೆಂಬೀ ನುಡಿಗೆ ಮಹಾ
ಕಲಿಯುಂ ಮೊದಲಾಗೆ ನಾಡೆ ಬೆರ್ಚುವನೆಂದಂ
ದೆಲೆಗಳ ಬಗೆವೊಡೆ ಜಗದೊಳ್
ಕೊಲೆಯಿಂದಂ ಬಿಟ್ಟು ಪಾತಕಂ ಪೆಱತುಂಟೇ॥೫೭॥

ಕುರುಡರ್ನೂರ್ವರ್ನೆರೆದುಂ
ಸುರಗಿರಿ ಮುಂದಿರ್ದುದಾದೊಡಂ ಕಾಣ್ಬರೆ ಕಾ
ಪುರುಷರ್ಮಿಥ್ಯಾ ಜ್ಞಾನಿಗ
ಳುರು ನಿರ್ವೃತಿಗುಯ್ವ ಧರ್ಮಮಂ ಕಂಡಪರೇ॥೬೬॥

ಪೇಲಿಂಗೆ ನೊಣಂಗಳ್ ಕಡು
ಸೋಲದಿನೆಱಗುವುವು ಕಪ್ಪುರಕ್ಕೇಗೆಯ್ದುಂ
ಸೋಲದಿನೆಱಗವು ಜಗದೊಳ್
ಪೇಲೇಂ ಮೇಲಾಯ್ತೆ ಕಪ್ಪುರಂ ಕೀೞಾಯ್ತೇ॥೬೮॥

ಎಲವದ ಪುಷ್ಪದೊಂದು ಕಮನೀಯತೆಯಂ ಗಿಳಿ ಕಂಡು ಸೋಲ್ತು ಕೋ
ಮಲಮಿದಱಂದಮಿಂತುಟು ಫಲಂ ಪಿರಿದಾಗದೆ ಮಾಣದೆಂದು ಸಂ
ಚಲಮತಿ ಕಾದುಕೊಂಡು ನೆಲಸಿರ್ದು ಬೞಿಕ್ಕದು ದೂರವಾಗೆ ಪೋ
ಯ್ತಲಸಿ ಪೊಡರೂಪುಗೆಟ್ಟೆನಿಪವೊಲ್ ಫಲಮಾಗದು ಕೇಳ್ಕುಪೂಜೆಯೊಳ್॥೭೬॥

ಈ ವರಧರ್ಮದಿಂದಘಕುಲಂ ಕಿಡುಗುಂ ಸುಖಮಕ್ಕುಮಕ್ಷಯ
ಶ್ರೀವಧು ಸಾರ್ಗುಮುನ್ನತಿಯಕ್ಕು ಮಳಂ ಕಿಡುಗುಂ ಕುಧರೂಮದಿಂ
ಬೇವಸಮಕ್ಕುಮುಗ್ರ ನರಕಾರ್ಣವದೊಳ್ಗಡ ಬೀೞ್ವೆನೆಂಬುದಂ
ಭಾವಿಸಿ ನೋಡಿ ತನ್ನೊಳೆ ಪರೀಕ್ಷಿಸಿ ಮಾೞ್ಪುದು ಧರ್ಮಮೆಂಬುದಂ ॥೮೦॥

ಗದ್ಯ॥ ಭೋಂಕನೆ ಕಂಡು ಬೆರ್ಚಿ ಕಳ್ಳಂ ಸತ್ತೊಡಮಕ್ಕುಂ ಪುಲಿ ಸತ್ತೊಡಮಕ್ಕುಮೆಂಬ ನಾಣ್ಣುಡಿಯಂತೆ ತಳಾಱನ ಕೈಯೊಳೀತಂ ಸತ್ತೊಡಮಕ್ಕುಮೀತನ ಕೈಯೊಳ್ತಳಾಱಂ ಸತ್ತೊಡಮಕ್ಕು ನಗೆಗೆಟ್ಟುದಾನೊರ್ಮೆಗೆನ್ನ ಪುಣ್ಯದಿಂ ಪುಲಿನಕ್ಕಿ ಬರ್ದುಂಕಿದೆನೆಂದು ಹಾರಮಂ ವಾರಿಷೇಣ ಕುಮಾರನ ಮುಂದೀಡಾಡಿ ಪೋಪುದುಂ ತಳಾಱರೆಯ್ದೆವಂದು

ನಿಂದಿರ್ದ ವಾರಿಷೇಣನ
ನಂದವರಡಹಡೆಸಿನೋಡಿ ಕಳ್ಳನಿವಂ ಪೋ
ಸಂದೆಯಮಿಲ್ಲೆರಡಿಲ್ಲದೆ
ಕೊಂದಪರೆಂದಂಜಿ ಸೆಡೆದು ಪೋಗದೆ ನಿಂದಂ॥೮೬॥

ಗದ್ಯ॥ ಎಂದು ಕೞ್ತಲೆಯೊಳವರಿವರೆಂದಱಿಯದೆ ತಡವರಿಸಿನೋಡಿ ಮುಂದಿರ್ದಹಾರಮಂ ಕಂಡು ಕಳ್ಳನೆಂದು ನಿಶ್ಚಯಿಸಿ ದೀವಿಗೆಯ ಬೆಳಗಿಂ ನೋಡಿ ವಾರಿಷೇಣನಪ್ಪುದನಱಿದು ಬೆಱಗಾಗಿ

ತುರಗಕ್ಕಂ ಕರಿಗಂ ರಥಪ್ರತತಿಗಂ ದ್ರವ್ಯಕ್ಕಂ ಮೇರೆಯಿ
ಲ್ಲರಸಂಗಪ್ಪೊಡೆ ತಾನೆ ಮುಖ್ಯನವನೀನಾಥರ್ಪಲರ್ತನ್ನರಿ
ರ್ಪರಮೋಘಂನೃಪನೇಕೆ ಕಳ್ವಬಗೆಯಂ ತಾಂ ತಂದನೋ ನೋೞ್ಪೊಡ
ಚ್ಚರಿಯೆಂದು ತಳಾಱರಂಜಿ ಧರಣೇಶಾರಾಧ್ಯನಂ ನೋಡಿದರ್॥೮೮॥

ತುಡಲಿಲ್ಲದೆ ಕಳ್ದನೋ ಮೇ
ಣುಡಲಿಲ್ಲದೆ ಪೋಗಿ ಕಳ್ದನೋ ತನಗರಸಂ
ಕುಡದೊಡೆ ಕಳ್ದನೊ ಕೆಮ್ಮನೆ
ದೃಢಚಿತ್ತಂ ಕಳ್ವಬಗೆಯನೇಕೆಯೊ ತಂದಂ ॥೮೯॥

ಗದ್ಯ॥ ಎಂದು ತಮ್ಮೊಳಾಶ್ಚರ್ಯಂ ಬಟ್ಟು ನಿನ್ನಲಿಗೆವಂದು ಹಾರಮಂ ತೋಱಿ ಜಿನಸಮಯವಾರ್ಧಿವರ್ಧನ ಸುಧಾರಕರನಂ ನೆಷ್ಕಾರಣಂ ಕಳ್ಳನೆಂದು ಬಿನ್ನಪಂಗೆಯ್ವುದುಂ ಜಾತಿ ಕ್ಷತ್ರಿಯಂಗೆ ದುಷ್ಟನಿಗ್ರಹ ಶಿಷ್ಟಪರಿಪಾಲನಂ ಧರ್ಮಮಪ್ಪುದಱಿಂ ಮಗನೆಂದು ಕಾರುಣ್ಯಂಗೆಯ್ಯದೆ ಕೊಲ್ಲಿಮೆಂದು ತಳಾಱರ್ಗೆ ನೀಂ ಬೆಸಸುವುದುಂ ತಳಾಱಂ ಕುಮಾರನಲ್ಲಿಗೆವಂದು

ಪಿಸುಣರ ಕಳ್ಳರ ಮಿಂಡರ
ಪೆಸರಂ ಮೊದಲಾಗೆ ನುಡಿದೊಡುರ್ವೀಶಂ ಸೈ
ರಿಸನೆಂಬುದನಱಿದಿರ್ದುಂ
ಕಸವರಕ್ಕೇಕೆ ದೇವ ನೀಂ ಬಗೆದಂದೈ॥೯೧॥

ನಿನ್ನಯ್ಯನ ಭಂಡಾರದ
ಪೊನ್ನೆಲ್ಲಮನಕ್ಕೆ ಪಿರಿದು ತದ್ಧನಮಿರ್ದುಂ
ತನ್ನ ದರಿದ್ರನ ತೆಱದಿಂ ಕೆ
ಮ್ಮನೆ ಕಳವಿಂಗೆ ಬಗೆಯನೇಕೆಯೊ ತಂದೈ॥೯೨॥

ಗದ್ಯ॥ ಅಂತೊಡೆದ ಕಲ್ಲ ಕೆಱಯಿಲ್ಲೆಂಬ ನಾಣ್ಣುಡಿಯಂತೆ ನಾನರಸನ ಮಗನೆಂ ಬಲ್ಲಿದನೆನ್ನರಸಂ ಕಳ್ದೊಡಂ ಕೊಲ್ವನಲ್ಲೆಂದು ಸೊಕ್ಕಿಯಕ್ಕುಂದಲೆವಾಯ್ದು ಕೀರ್ತಿಮತಿಯ ಹಾರಮಂ ಕಳ್ದುಮೆಮ್ಮನೌ ಪೆಱರೇಡಿಸಲೆಂದು ಪೋಗಿ ದಸಿಯ ಮೇಲೆ ಬಿದ್ದು ಸತ್ತ ಕೋಡಗದಂತೆ ನಿನಗೆ ಕಷ್ಟಮಪ್ಪ ಸಾವಂ ಮಾಡಿಕೊಂಡೈ ಎಂದು ತಳಾಱರ್ಮೂದಲಿಸಿ ನುಡಿಯುತ್ತಿರೆ ಸಮ್ಯಕ್ತ್ವಚೂಡಾಮಣಿ ತನ್ನೊಳಿಂತೆಂದಂ

ಧರೆಯಂ ಪೊಕ್ಕೊಡಗಿರ್ದೊಡಂ ಜಲಧಿಯಂ ಪೊಕ್ಕಿರ್ದೊಡಂ ಪೋಗಿ ಮಂ
ದರಶೈಲಾಗ್ರದೊಳಿರ್ದೊಡಂ ಖಚರರಂ ಬೇಗಂ ಶರಣ್ಬೊಕ್ಕೊಡಂ
ಪಿರಿದುಂ ದ್ರವ್ಯಮನಿತ್ತೊಡಂ ನಡುಕದಿಂ ಚಕ್ರೇಶನಂ ಪಾರ್ದೊಡಂ
ಮರುಳೇ ಮಾಣ್ಬನೆ ಕಾಲಮೆಯ್ದಿದವನಂ ಕ್ರೂರಾಂತಕಂ ಕೊಲ್ವುದಂ॥೯೪॥

ದುರಿತಂ ಕಿಡದನ್ನೆವರಂ
ಪರಮ ಜಿನಾಗಮಮನಱಿಯದನ್ನೆವರಂ ನಿ
ಷ್ಠುರಮಪ್ಪದುಃಖಚಯಮುಂ
ಮರಣಮುಮಾವಾವ ಭವದೊಳೇಂ ಪಿಂಗುಗುಮೇ॥೯೬॥

ಛಲದಿಂ ಪೂಣಿಸಿ ತಲೆಯಂ
ಸೆರಗಿಲ್ಲದೆ ಪೊಯ್ಯೆ ನಗರ ದೇವತೆಗಳ್ನಿ
ಷ್ಠುರಮಪ್ಪೇಱಂ ಮುದದಿಂ
ಸ್ಫುರಿಯಿಪ ಸದ್ರತ್ನಹಾರಮಂ ಮಾಡುವುದುಂ॥೧೦೬॥

ರಡುಂ ಕೈಗಳುಮಂ ನಿ
ಷ್ಕರುಣಿಗಳಡೆಯಿಟ್ಟು ಕಡಿಯೆ ದೇವತೆಗಳಮಾ
ಣ್ದಿರದಾಗಳೆ ಕಂಕಣಮಾ
ಗಿರೆ ಮಾಡಿದ ತೆಱನದವನಿಗಚ್ಚರಿಯಾಗಳ್॥೧೦೭॥

ಬೇಗಂ ಮಂಡೆಯನಿರ್ಪೋ
ೞಾಗಿರೆ ಕರ್ಬುನದ ಡಂಕೆಯಿಂ ಪೊಯ್ವುದುಮಂ
ತಾಗಳ್ಮುನಿಸೇಱಂ ಸ
ದ್ರಾಗದಿನೊಡನೊಡನೆ ಮಕುಟಮಂ ಮಾಡುವುದಂ॥೧೦೮॥

ಪರಸಿದಂ ನಡುವಂ ನಿ
ಷ್ಠುರ ಕೋಪರ್ಪೊಯ್ಯೆ ನಗರದೇವತೆಗಳ್ವಿ
ಸ್ತರದಿದೇಱಂ ದಿವ್ಯಾಂ
ಬರಮಾಗೆ ಮಹಾನುರಾಗದಿಂ ಮಾಡುವುದುಂ ॥೧೦೯॥

ಎರಡುಂ ಕಿವಿಯುಮನೊಡನೊಡ
ನರಿಯೆ ಕೆಲರ್ಸೊಕ್ಕಿ ನಗರದೇವತೆಗಳ್ ಭಾ
ಸುರ ಕುಂಡಳಂಗಳಾಗಿರೆ
ವಿರಚಿಸಿದರ್ನೋವು ಪೊರ್ದದಂತಾಗೇಱಂ॥೧೧೦॥

ಗದ್ಯ॥ ಅಂತಿಱಿದೇಱುಗಳೆಲ್ಲಮಂ ಹಾರಾದ್ಯಾಭರಣಂಗಳಾಗಿ ವಿರಚಿಸಿ ಸುಕವೆನಿಕರಪಿಕಮಾಕಂದಂಗೆ ವೇದನೆಯನೆಂತುಂ
ಪೊರ್ದದಂತಾಗೆ ಮಾಡುವುದುಂ ದಂಡಧರರ್ತಮ್ಮಿಱಿದೇಱುಗಳೆಲ್ಲಂ ವಾರಿಷೇಣಕುಮಾರಂಗಾಭರಣಂಗಳಾಗೆ ಕಂಡು ನಿಲಲಣ್ಮದೆ ನಿನ್ನಲ್ಲಿಗೆ ಪರಿತಂದು ಮಹಾವಿಸ್ಮಯಂ ಪೇೞುತ್ತುಮಿರ್ದರನ್ನೆಗಂ ದೇವತೆಗಳುಂ ಪುರದೇವತೆಗಳುಂ ನೆರೆದು

ರುಂದ್ರ ಜಿನ ಸಮಯ ವಾರಿಧಿ
ಚಂದ್ರನನಭಿಮಾನಧವಳನಂ ಧೈರ್ಯಸುರಾ
ದ್ರೀಂದ್ರೋಪಮನಂ ವಿಭವ ಸು
ರೇಂದ್ರನನಘತಿಮಿರವನಜಸಖಸನ್ನಿಭಂ॥೧೧೨॥

ಗದ್ಯ॥ ತಮ್ಮ ವಿಗುರ್ವಿಸಿದ ನಾನಾ ರತ್ನಖಚಿತಮಪ್ಪ ಸಿಂಹಾಸನದ ಮೇಲಿರಿಸಿ ಕಲ್ಪವೃಕ್ಷದ ಪುಷ್ಪಂಗಳಿಂ ಮನಮಾರೆ ಪೂಜಿಸಿ ಪೊಗೞುತ್ತುಮಿರ್ದರನ್ನೆಗಂ

ಸುರದುಂದುಭಿ ಪಲವುಂ ಭೋ
ರ್ಗರೆಯೆ ವಿಯತ್ತಳದೊಳಿರ್ದು ಮೈಯೞಿಯದೆ ದೇ
ವರ ತಂಡಂ ಪೂವಿನ ಬ
ಲ್ಸರಿಯಂ ನೃಪಸುತನ ಮೇಲೆ ಕರೆದುಮಾಗಳ್॥೧೧೪॥

ಮಂದರಾದ್ರಿನಿಭಕ್ಷಮಾನ್ವಿತನಂ ದೃಢವ್ರತನಂ ಮಹಾ
ನಂದದಿಂ ಸುರಕೋಟಿ ಬಣ್ಣಿಸಿದಪ್ಪುದೀಗಳೆ ಪೋಗಿ ನಾ
ಮುಂ ದಯಾಂಬುಧಿ ವಾರಿಷೇಣ ಕುಮಾರನಂ ನೆಱೆ ನೋೞ್ಪೆನೆಂ
ಬಂದದಿಂದುದಯಾಚಲಾದ್ರಿಯನೇಱಿದಂ ದಿನವಲ್ಲಭಂ॥೧೧೬॥

ಆ ವಾರಿಷೇಣಮುನಿಗೆ ಮ
ಹಾವಿಭವದ ಜಂಘಚಾರಣತ್ವಂ ಪುಟ್ಟಿ
ತ್ತೇವೇೞ್ವುದೋ ಜಗದೊಳ್  ಜಿನ
ಸೇವನೆಯಿಂದಿರ್ಪವಂಗಿದಾವುದು ಗಹನಂ॥೧೨೩॥

ಕುರುಡರ್ಕುಳಿಯೊಳ್ ಕೆಡೆದೊಡೆ
ಕರುಣಿಸಿ ತೆಗೆವವನೆ ನಂಟನಘವಶದಿಂದಂ
ನರಕಗತಿಗಿೞಿದ ಜೀವೋ
ತ್ಕರಮುಮನೊಳ್ಗತಿಗೆ ತರ್ಪೊಡಾತನೆ ಕೆಳೆಯಂ॥೧೨೫॥

ಭರತಂ ಷಟ್ಕಂಡವಸುಂ
ಧರೆಯುಮನೊರ್ಮೊದಲೆ ಬಿಟ್ಟು ಜಿನಸದ್ರೂಪಂ
ಧರಿಯಿಸಿದನೆಂದೊಡುೞಿದರ
ಸಿರಿಯಂ ಸಂಪತ್ತುಮಳವುಂ ಬಳವುಂ ಪಿರಿದೇ॥೧೩೩॥

ಗದ್ಯ॥ ಮಡಕೆಯೊಳಿನಿಸು ಬೇಗಮಿರ್ದೊಡಂ ಕೂೞನೆಂಜಲೆನ್ನರ್ ಪೇಸದುಂಬರಂಜದೆ ಮುಟ್ಟುವರಾ ಕೂೞಂ ಮಾನಿಸರ್ಮುಟ್ಟಿದನಿತಱೊಳೆ ಗುಣಂಗೆಟ್ಟೆಂಜಲಪ್ಪುದು ಪೆಱರ್ಮುಟ್ಟದೋಸರಿಪುದಱಿಂ ಶರೀರಂ ಪೊಲ್ಲದೆಂಬುದಲ್ಲದೆ ಶುಚಿಯೆನಲಾಗದು

ವನಿತೆಯರುಂ ತಾಯುಂ ಬಂ
ಧುನಿಕಾಯಮುಮಾತ್ಮಜಾತರುಂ ತಂತಮ್ಮಿಂ
ಬನೆ ಬಗೆವರಲೂಲದೆಂತುಂ
ತನಗಪ್ಪರೆ ನರಕಗತಿಗೆ ಪೋಪವಸರದೊಳ್॥೧೪೬॥

ಕಳವೆಯಕೂೞುಮಂ ತೊವೆಯುಮಂ ತಿಳಿದುಪ್ಪಮುಮಂ ವಿನೋದದಿಂ
ಗಳಿಲನೆ ನಾಯ್ಗೆಬೇಗಮೊಸೆದಿಕ್ಕಿದೊಡಂ ಕಡುಗೆಯ್ದು ಮತ್ತಮ
ವ್ವಳಿಸಿ ಕನಲ್ದೊನಲ್ದು ಸಲೆ ಪೇಲನೆ ಚಿಂತಿಸುತಿರ್ಪುವಂತೆ ಸಂ
ಚಳಮನರುಂ ಸದುಕ್ತಿಗಳನೊಲ್ಲದೆ ಚಿಂತಿಸುವರ್ಕುಮಾರ್ಗಮಂ॥೧೬೭॥

ನೆಟ್ಟನೆ ಕಾಱಿದ ಕೂೞಂ
ಮುಟ್ಟದು ನಾಯುಂ ಧರಾತಳಾಗ್ರದೊಳೆನೆ ಮುಂ
ಬಿಟ್ಟು ಬೞಿಕ್ಕೞಿಪವನುಂ
ನಿಟ್ಟಿಸುವೊಡೆ ಪಂದೆ ಕಷ್ಟನಾ ನಾಯಿಂದಂ॥೨೩೨॥

ಗದ್ಯ॥ ಎಂದು ಮನದೊಳೆ ವಾರಿಷೇಣ ಮುನಿಕುಂಜರನ ಮುಂ ಪೇಳ್ದ ಧರ್ಮಶ್ರವಣಮನನಿತುಮಂ ನಂಬಿ ಸಂಸೃತಿಲತಾಂಕುರಮಂ ಕೀೞ್ತೀಡಾಡಲುಂ ಮೋಹಮಹೀರುಹಮಂ ಕಡಿಯಲುಂ ಕರ್ಮೇಂಧನಂಗಳಂ ಸುಡಲುಂ ಜಿನಚರಣಮಂ ಬಲ್ವಿಡಿಯಲು ಸನ್ಮಾರ್ಗಮಂ ಪೊರ್ದಲುಂ ಮನಂದಂದು ಜಿನಸಮಯ ವಾರ್ಧಿವರ್ಧನ ಸುಧಾಕರನ ಪಾದಕ್ಕೆರಗಿ ಪೊಡೆಮಟ್ಟು ಪುನರ್ದೀಕ್ಷೆಯಂ ಪ್ರಸಾದಂಗಯ್ವುದೆಂಬುದುಮಾತನುಂ ಗುರುಗಳಲ್ಲಿಗೊಡಗೊಂಡು ಬಂದು
ದೀಕ್ಷೆಯಂ ಕೂಡೆಸುವುದುಂಶಭಾವತಪಸ್ವಿಯಾಗಿ ತನ್ನೊಳಿಂತೆಂದಂ

ಕೃತಜ್ಞತೆಗಳು
ಕೆ. ವೆಂಕಟರಾಮಪ್ಪ.

ಪ್ರಕಟಣೆ:
ಕನ್ನಡ ಸಾಹಿತ್ಯ ಪರಿಷತ್ತು.
ಚಾಮರಾಜಪೇಟೆ,
ಬೆಂಗಳೂರು- ೫೬೦೦೧೮.

1 ಕಾಮೆಂಟ್‌: