ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಬುಧವಾರ, ಜುಲೈ 19, 2023

ಗೋವಿಂದಕವಿ ವಿರಚಿತ ನಂದಿಮಾಹಾತ್ಮ್ಯಂ

ಗೋವಿಂದಕವಿ ವಿರಚಿತ ನಂದಿಮಾಹಾತ್ಮ್ಯಂ

ವಾರ್ಧಕ ಷಟ್ಪದಿ, 

ಇದರ ಕರ್ತೃ ಗೋವಿಂದ ಕವಿ, ಈತನಿಗೆ ಗೋಪಕವಿ, ಗೋಪಾಲ ಎನ್ನುವ ಹೆಸರೂ ಉಂಟು. ಈತ ಚಿತ್ರಭಾರತವನ್ನು ವಾರ್ಧಕ ಷಟ್ಪದಿಯಲ್ಲಿ ರಚಿಸಿದ್ದಾನೆ. ನಂದಿಮಾಹಾತ್ಮ್ಯದ ಗ್ರಂಥ ಪ್ರಮಾಣ ೨೫ ಸಂಧಿ, ೧೨೨೫ ಪದ್ಯಗಳು.ಈತ ವಿಶ್ವಾಮಿತ್ರ ಗೋತ್ರದವನು. ಭೀಮರಥೀತೀರದಲ್ಲಿರುವ ಖೇಡಬುಯ್ಯರದವನು. ಅಲ್ಲಿನ ಕರಣಿಕರ ಜ್ಯೋತಿಯು ಈತನ ತಂದೆ. ಮದನಗೋಪಾಲನ ಕರುಣದಿಂದ ಕಾವ್ಯವನ್ನು ರಚಿಸಿದನು ಎಂದು ತಿಳಿದು ಬರುತ್ತದೆ. ಚಿತ್ರಭಾರತದ ಪದ್ಯದಿಂದ ಗೋಪಕವಿಗೆ ಮುದ್ಗಲಾರ್ಯ ಎನ್ನುವ ಮುತ್ತಾತ,ಮಲ್ಲಾಜಿ ಎನ್ನುವ ತಾತ, ಮಾಯಾಂಬಿಕೆ ಎನ್ನುವ ತಾಯಿ ಇದ್ದಂತೆ ತಿಳಿದು ಬರುತ್ತದೆ.ಈತನ ಕೃಲ ಸು. ೧೬೦೦ ಎಂದು ಹೇಳಬಹುದು.


ಒಂದನೆಯ ಸಂಧಿ:

ವಾರ್ಧಕ ಷಟ್ಪದಿ: 


ಶ್ರೀ ನಗಸುತಾವಾಕ್ಷಿ ಕಾಲಾಪದಿಂ ಶಿವಾ 

ಕಾನಕಲತಾಂಗ ಪರಿಜನಿತ ಕುಚಕುಟ್ಮಲ ವಿ 

ತಾನದಿಂ ಪಾರ್ವತೀಲಲಿತ ಮೃದುಯಾನ ವರಹಂಸಗಮನೋತ್ಸಾಹದಿಂ॥ 

ಮೇನಾತ್ಮಜಾತಾಂಬಕಭ್ರಮರದಿಂದಂ ಭ 

ವಾನಿಯ ನವೀನತರಮಾದ ವರಯೌವನೋ 

ದ್ಯಾನದೊಳ್ ಕ್ರೀಡಿಸುವ ನಂದೀಶಚೈತ್ರನೊಲ್ದೀಗೆ ನಮಗಿಷ್ಟಾರ್ಥಮಂ॥೧॥ 


ಕ್ಷೀರಾಬ್ಧಿಕನ್ಯಾ ಮುಖಾರಾಜಿತಾಂಬುರುಹ 

ಸೂರಲಕ್ಷ್ಮೀನಯನ ಚಾರುಕೈರವಶಾರ್ವ 

ರೀರಮಣ ಮಾರಮಾತಾರುಚಿರ ಕಬರೀಮಯೂರಮೇಘಶ್ಯಾಮಲ ॥ 

ಭೂರಿಸುರವೈರಿಪೃತನಾರಾಮ ಕೃಂತನ ಕು 

ಠಾರಭವದೂರ ಗುಣಸಾರ ಪ್ರಪೂರಾದಿ 

ನಾರಾಯಣನೆ ಕುಡು ಸುಮತಿಯ ಸಜ್ಜನರ ಸನ್ಮತಿಗೆ ಕೃತಿಸಲ್ವಂದದಿ॥೪॥ 


ಹುತಭುಗ್ಲಸನ್ನೇತ್ರ ಸೂತ್ರಾಮಲಾಮ ರ 

ಕ್ಷಿತಿರುಹಾವೃತ ಕಲ್ಪಲತೆಯ ಹಿಮವದ್ದ್ರಾಜ 

ಸುತೆಯ ಸಂತತದಯಾನ್ವಿತೆಯ ಭಕ್ತಾಶ್ರಿತೆಯನತಿಪವಿತ್ರತೆಯ ಋತೆಯ॥ 

ಶ್ರುತಿಕೋಟಿಸನ್ನುತೆಯ ಸತ್ಪವಿತ್ರತೆಯ ಶಾ 

ಶೂವತೆಯ ಭವಹಿತೆಯ ಶಿವಕೃತೆಯ ಶೋಭಿತೆಯ ಪಾ 

ರ್ವತಿಯ ಮತ್ಕೃತಿಯ ಪದ್ಧತಿಯೊಳಾಂ ತುತಿಸುವೆಂ ಮತಿಯನೊಲಿದೀವಳಾಗಿ॥೬॥ 


ಕಣ್ಗದಂದೆಗೆಯೆ ಛಳಿಛಳಿಛಿಟಿಲ್ ಛಟಿಲೆಂಬ 

ಪಣ್ಗೆಂಡದಿಂಡೆಯೊಳ್ ನಿಲಸಾಲದಿಳೆಯ ಮೇ 

ಗಣ್ಗೆ ದುಮ್ಮಿಕ್ಕಿದಚ್ಚಿಯ ಬೊಂಬೆಯೆನೆ ಪಲಗೆ ಕಡುಗದಿಂ ಕುಬಿಬಿಱುವುತ ॥ 

ತಣ್ಗಮ್ಮನಂದಳೆದನಿಳಿಸಿ ಜನ್ನಂಗೈವ 

ಜಾಣ್ಗೆಡಲ್ ದಕ್ಷನಂ ತುಡುಕಿ ಕಡುಪಿಂ ಕೆಡಪಿ 

ಗೋಣ್ಗೊರೆದ ವೀರಭದ್ರಂ ಮದ್ರಚಿತಕೃತಿಗೆ ಮಾಳ್ಕೆ ಸನ್ಮಂಗಳವನು॥೮॥ 


ಮಾತೃಪಿತೃಗಳ ವದನದೇಳ್ಗೆವೆತ್ತುದಿಸಿದಾ 

ಪುತ್ರಂ ಭವಸುವಿಕ್ರಮಂದಳೆವನೆನಿಪುದು ಧ 

ರಿತ್ರಿಯೊಳ್ ನಿಜಮಾದುದೆಂಬಿನ ಶಿವಾಭವನ ಪುಣ್ಯಗರ್ಭದೊಳುದಯಿಸಿ॥ 

ಚಿತ್ರಮೆನಲೇಳನೆಯ ದಿನದೊಳ್ ಕಡಗಿ ನಡೆದು 

ಶತ್ರು ತಾರಕನ ಸೀಳ್ದಿಕ್ಕಿದಱುಮೊಗ ಕೃಪಾ 

ನೇತ್ರದಿಂ ಮತ್ಕೃತಿಚಮತ್ಕೃತಿಯ ತಪ್ಪಿದರೆ ಈಕ್ಷಿಸಾಪೇಕ್ಷೆಯಿಂದ॥೯॥ 


ದುಗ್ಧಪಾರಾವಾರಹೀರ ಮುಕ್ತಾಫಲ 

ಸ್ನಿಗ್ಧತಾರಾವಾರ ಪಾರದಪಟೀರ ಶರ 

ವಾಗ್ಧನದಕುಕ್ಷಿಶಾರದನೀರದಪ್ರಭಾಸಾರದಿಂ ಸೃಜಿಸಿದಂತೆ॥ 

ದಿಗ್ಧವಳಮಾಗಲೆಸವಂಗದೊಳನಂಗಾಂಗ

ದಗ್ಧನಂ ಪೊತ್ತು ಚರಿಸುವ ನಂದಿ ಕೃಪೆಯಿಂದ 

ಮುಗ್ಧನಾದೆನ್ನ ನೋಡಿ ನವ್ಯಕಾವ್ಯಂ ಜಗತ್ಸೇವ್ಯಮಾಗುವಂತೆ॥೧೦॥ 


ಅಂಗಜನ ಜಯಿಸಿರೂದಭಂಗನಂ ಭವಭಕ್ತ 

ಸಂಗನಂ ಮಹಿಮಾಂತರಂಗನಂ ಸದ್ಗುಣೋ 

ತ್ತುಂಗನಂ ವಿಮಲಾಂತರಂಗನಂ ಸತ್ಕೃಪಾಪಾಂಗನಂ ದುರಿತಜಗಕೆ॥ 

ಸಿಂಗನಂ ಸನ್ನುತ ಪತಂಗನಂ ಲೀಲಾಮ

ಯಾಂಗನಂ ವಿನಯದಿ ಮನಂಗೊಂಡು ಕೃತಿಮುಖದೊ 

ಳಂ ಗಾಡಿಯಿಂ ನುತಿಪೆ ನಾನೊಲ್ದು ಸುಕೃತಪ್ರಸಂಗಿಯಂ ಭೃಂಗೀಶನಂ ॥೧೧॥


ಚಾರುಮಾಣಿಕ್ಯಮೌಳಿಪ್ರಭೂಷಣದಿ ಶೃಂ

ಗಾರಂ ತ್ರಿಯಕ್ಷದಿಂ ರೌದ್ರಂ ದ್ವಿಪವದನಾ 

ಕಾರದಿಂದದ್ಭುತಂ ಫಣಿಬಂಧದಿಂ ಭಯಂ ವಿಘ್ನವಿದ್ವಂಸನದೊಳು॥ 

ವೀರಂ ನಿಜಾಶ್ರಿತರೊಳು ಶಾಂತಿಯಭಯದೊಳ್ 

ಕಾರುಣ್ಯವಾಖುವಾಹನದಿ ಹಾಸ್ಯಂ ಮುಱಿದ 

ಕೋರೆಯಿಂ ಭೀಭತ್ಸರಸಮೆಸೆವ ಗಣಪ ಮಾಡೀ ಕೃತಿಗವಿಘ್ನತೆಯನು ॥೧೨॥ 


ಮಿಱುಪ ಮತ್ಸ್ಯಾಕ್ಷಿಯಿಂ ಕೂರ್ಮಪದದಿಂ ಸಮು 

ದ್ಧುರ ವರಹಚಕ್ರದಿಂ ಮಿಥುನಕುಚದಿಂ ಸಿಂಹ 

ವರಮಧ್ಯದಿಂ ವಾಮನಾಭಿಯಿಂ ರಾಜವಿಜಿತಾಸ್ಯಾಭಿರಾಮತೆಯೊಳು॥ 

ಉರುಕೃಷ್ಣ ಕಚದಿಂ ಪ್ರಬುದ್ಧೋರುಹಂಸ ಭಾ 

ಸುರಕಲಿತಯಾನದಿಂ ಚಕ್ರಿಯವತಾರಾಖ್ಯ

ದಿರವಾಂತು ಮೆಱೆವ ಶಾರದೆಯೆನ್ನ ಕೃತಿಗೆ ಕೃಪೆಯಿಂ ಮಾಳ್ಕೆ ಮಂಗಳವನು॥೧೩॥ 


ಜನಮಿತ್ರ ಕಾಳಿದಾಸನ ಕಲಾನಿಧಿ ಮಯೂ 

ರನ ಮಂಗಳಚರಿತ್ರ ಮಲುಹಣನ ಸೌಮ್ಯ ಬಾ 

ಣನ ಚತುರಸಂಜೀವರತ್ನ ಭೋಜನ ಕವೀಶ್ವರಕೇಶಿರಾಜನೊಲ್ದು॥ 

ಘನಶಬ್ಧ ಶೌರಿಪಂಪನ ಭೋಗಿ ಭಲ್ಲಟನ 

ವಿನುತ ಚಿತ್ಕೇತು ಶುಕರೂಪನಡಿದಾವರೆಯ 

ನೆನೆದುಪಕ್ರಮಿಸೆಕೃತಿಗವರೊಳ್ ನವಗ್ರಹಂ ಬಲವಂದು ಪೆಂಪೀಯವೆ॥೧೪॥ 


ತನುವಿಲ್ಲದಲ್ಲಿ ಪ್ರಾಣಪ್ರತಿಷ್ಠೆಯ ಕಟ್ಟೆ 

ಯನುಗೊಳಿಸದಾಱುಸರ ಸ್ಥಾಪನೆಯ ಭಿತ್ತಿಯೊಂ

ದಿನಿಸಿಲ್ಲದತಿ ಚಿತ್ರಮಂ ರೂಪುದೋಱದೆಡೆಯೊಳ್ ಪಲವಲಂಕಾರಮಂ 

ಮನೆಯಿಲ್ಲದರ್ಥಸಂಚಿತವನು ಮೇರೆಯಿರ 

ದನುಪಮಕ್ರಿಯೆಗಳಂ ನಡೆಯಿಪ ಕವೀಶ್ವರರ 

ಘನತೆಯಂ ಬಣ್ಣಿಸುವರಾರಾನೆಹೋದುದೇ ಬೀದಿಯಲ್ಲವೇ ಜಗದೊಳು॥೧೬॥ 


ಚಿತ್ರಚಾತುರ್ಯ ಛಂದೋಬಂಧ ಸಂಧಿವರ 

ಮಿತ್ರತ್ವ ರಸ ರೀತಿ ಭಾವ ಗುಣಗಣಕಥಾ 

ಸೂತ್ರ ಸುಕಲಾಕ್ರಿಯಾಲಂಕಾರ ದೇಶೀಯ ದುಷ್ಕರ ಪ್ರಾಸನೇಮಂ॥ 

ಸತ್ರಾಣ ಯತಿ ಗತಿ ನಯಂ ಸುಲಕ್ಷಣದಿ ಲೋ 

ಕೋತ್ರಮೆನೆ ಪದವನಿಡಲಱಿಯದಾಂ ಪಾಣಿಶತ 

ಪತ್ರಮಂ ಮುಗಿದು ಬಿನ್ನೈಸುವೆಂ ಸುಕವಿಜನರೊಲಿದೊಪ್ಪುಗೊಂಬುದೆಂದು॥೧೭॥ 


ಚಾತುರತರಮಲ್ಲಿಕಾಮಾಲಿಕೆಯ ನಱುಗಂಪ 

ನಾಱಡಿಯಕುಲ ಬಲ್ಲವೊಲ್ ಮಲಯಚಂದನದ 

ಸಾರವ ಭುಜಂಗಕುಲ ಬಲ್ಲವೊಲ್ ಸುಧೆಯರಸದಿಂಪನಾ ದೇವತೆಗಳ॥ 

ವಾರಬಲ್ಲಂತೆ ಕಾಂತೆಯ ಕಲಾಪ್ರೌಢಿಯಂ 

ನೀಱಬಲ್ಲಂತೆ ಈ ಸುಪ್ರಬಂಧದ ಸವಿಯ 

ಸಾರಜ್ಞ ಬಲ್ಲಂತೆ ದುರ್ಜೀವಿಗಳ್ ತಿಳಿಯಬಲ್ಲರೆ ಮಹೀತಳದೊಳು॥೨೧॥ 


ಪರಿಪಕ್ವಫಲದಿಂಪ ಗಿಣಿಯಂತೆ ಗೀಜುಗನ 

ಮಱಿಬಲ್ಲುದೇ ಕಲಾಕಾಂತೋದಯದ ಸೊಗಸ 

ಶರಧಿಯಂ ತುಳಿದ ಬೆಂಚೆಗಳು ಬಲ್ಲವೆ ಷಡ್ರಸಾಸ್ವಾದಮೈದೆ ಜಿಹ್ವೆ॥ 

ಅಱಿವಂತೆ ಕಿಱುನಾಲಗೆಯು ಬಲ್ಲುದೇ ದಿವಾ 

ಕರನ ಸಖ್ಯವ ಕಮಲಮಱಿವಂತೆ ಗೂಗೆಗಳ್ 

ನೆಱೆ ಬಲ್ಲವೇ ರಸಿಕ ಕೃತಿರಸ ಬಲ್ಲಂತೆ ಕುಜನ ರಱಿವರೆ ಧರೆಯೊಳು॥೨೨॥ 


ವರಹಂಸೆಯಂತೆ ಮೃದುಪದಗತಿಗಳಿಂದ ಭಾ 

ಸುರರಾಜಶುಕನಂತೆ ಮಧುರೋಕ್ತಿಯಿಂದ ಭೂ 

ವರಗೇಹದಂತೆ ಬಹುಭಾವನಾಚಿತ್ರಬಂಧಗಳಿಂದ ಮಧುವಿನಂತೆ॥ 

ನಿರುತಸುಮನೋಲ್ಲಾಸದಿಂದ ಸತ್ಫಲದಂತೆ 

ಪರಮನವರಸದಿಂದ ಪ್ರಭುವಿನಂತಧಿಕಾರ್ಥ

ಭರಿತದಿಂದೆನ್ನ ಕೃತಿ ಕ್ಷಿತಿಗಲಂಕೃತಿಯಾಗಿ ರಾಜಿಪುದು ಸೋಜಿಗಮೆನೆ॥೨೩॥ 


ವರಲಕ್ಷಣದಿ ಕಲಾಪೂರ್ಣದಿಂ ಚಂದ್ರಮನ 

ಸಿರಿಯಂತನಂತಪರಿಶೋಭಿತಾಲಂಕಾರ 

ವರಗಣಪ್ರಚಯದಿಂ ಶಿವನಂತೆ ಘನರಸ ಸಮೇತದಿಂ ಚಿತ್ರಪದದಿಂ ॥ 

ಮಿಱುಪಜಲಧರಪಟಲದಂತೆ ನಿರೂದೋಷಭಾ 

ಸುರತೆಯಿಂ ದಿನರಾಜನಂತೆ ಮತ್ಕೃತಿ ಬುಧ 

ರ್ಗುರುತರಾನಂದಮಂ ಸಾರ್ಚುತಿರ್ಕುಳಿಗೊಳದೆ ಮನಮಂ ಮಹೀತಳದೊಳು॥೨೫॥ 


ಸತಿಯ ಮೃದುಪದಸೋಂಕಿನಿಂದಸುಗೆ ತಾಂ ತಳ್ತು 

ಕ್ಷಿತಿಗಲಂಕೃತಿಯಾಗಿ ತೋರ್ಪಂತೆ ಎನ್ನ ಸ 

ತ್ಕೃತಿಕಲಾವತಿಯ ಸಲ್ಲಕ್ಷಣಾನ್ವಿತಮಾದ ಪದಪಲ್ಲವದ ಸೋಂಕಿನಿಂ॥ 

ಅತಿಜಡಾತ್ಮಕಪಾಮರರ ಮನಂ ನಲಿದು ವಿಕ 

ಸಿತಮಾಗಿ ಪಲ್ಲವೆಸದೇ ಎನ್ನ ಬಾಲಭಾ 

ಷಿತಮಾರ್ದವಂ ಸಕಲಜನವನಾಶಾಚರ್ಯಭಾಜನವನಾಗಿಸದಿರ್ಪುದೆ॥೨೮॥


ಹರುಷಮಂ ತಾಳ್ದೀ ಮಹಾತ್ಮೆಯಂ ಪೇಳ್ದನಾ 

ದರದಿ ವಿಶ್ವಾಮಿತ್ರ ಗೋತ್ರಜಂ ಭೀಮರಥಿ 

ವರತೀರದೊಳ್ ತೊಳಪ ಖೇಡಬುಯ್ಯರದ ಕರಣಿಕಜೋತಿಯಾತ್ಮಭವನು॥ 

ಸರಸಿರುಹನೇತ್ರ ಶ್ರೀ ಮದನಗೋಪಾಲಕನ 

ಕರುಣದಿಂ ಗೋವಿಂದನೆಂಬೊರ್ವಂ ಪ್ರಿಯದಿ 

ಪರಮಸತ್ಪುರುಷರಾಲಿಸಿ ಲಾಲಿಸುವುದೆನ್ನ ಮೇಲುಳ್ಳ ಮೋಹದಿಂ॥೨೯॥ 


ಎಳನೀರೊಳೈದೆ ತವರಾಜವೆರೆದಂದದಿಂ 

ಸುಲೆದರಸಗಂಧಿವಾಳೆಯೊಳು ಜೇನ್ದಳಿದಂತೆ 

ಲಲಿತಮಾಧುರ್ಯದ್ರಾಕ್ಷಾಫಲಪ್ರಚಯಮಂ ರಸದಾಳೆರಸದೊಳೊಸೆದು॥ 

ಇಳುಹಿದಂತೊಲ್ದು ಚಿನಿವಾಲ್ಗೆನೆಗೆ ಸದ್ಘೃತಂ 

ಗಲಸಿದಂದದೊಳೆನ್ನ ಕೃತಿರಸಂ ನಾಡೆ ಸವಿ 

ಗೊಳಿಸುವುದು ನಿರ್ಮತ್ಸರದೊಳಾಲಿಸುವ ರಸಿಕವೃಂದಕಾನಂದಮಾಗೆ॥೩೧॥


ಹದಿನಾರನೆಯ ಸಂಧಿ: 


ನಂದಿಯಾನಂದದಿಂ ನಗನಿತಂಬದ ನಿಗಮ 

ವೃಂದದಂದಕೆ ನಲಿವುತೈದೆ ಕೂಷ್ಮಾಂಡಾಖ್ಯ 

ಮಂದಳೆದು ಕಂದಳಿಸಿ ತೋರ್ವ ತತ್ಪರ್ವತವ ಕಂಡು ಪುಳಕಿತನಾದನು॥ 


ಪರಪರಂಜ್ಯೋತಿಸ್ವರೂಪ ರೂಪಾಭಿಧಾ 

ನರಹಿತಾಹಿತ ದರ್ಪಶಮನ ಶಮನೋಗ್ರ ಬಲ 

ಹರಣೋಜ್ವಲ ಜ್ವಲನ ವಿಧೃತ ಕರ ಕರಟಿಭಂಜನ ಜನಾರ್ದನ ಸನ್ನುತ॥ 

ಗಿರಿಜಾಮುಖಾಂಬುಜಾಂಬುಜಮಿತ್ರ ಮಿತ್ರಾಗ್ನಿ

ಪುರುಷೇಂದು ನೇತ್ರಶ್ರವಾ ಕಲ್ಪ ಕಲ್ಪ ಭಾ 

ಸುರ ಸುರ ಸುಗೇಹ ಕೃತಧರ್ಮ ಕೃತಧರ್ಮಗಮ ನಂದೀಶ ಪಾಹಿ ಸತತಂ॥೧॥ 


ಸಾರ ಶಿವಸತ್ಕಕಥಾಮೃತವ ಕರ್ಣಾಂಜುಳಿಯ 

ಲೋರಂತೆ ಹೃತ್ಪಿಪಾಶೋಪಶಮಮಾಗೆ ರುಷಿ 

ವಾರಮೊಲಿದೀಂಟಿವದೆನುತ್ತ ಮುಂಗಥೆಯ ಸಂಗತಿಯ ಸಂಪ್ರೀತಿಯಿಂದ॥ 

ಭೂರಿ ವಿಸ್ತಾರದಿಂ ಪೇಳ್ದ ಕೇಳ್ದರ ಮಹಾ 

ಘೋರಸಂಸಾರ ಪಾರಾವಾರ ಪಾರಮಂ 

ಸೇರಿಸುವ ನವ್ಯ ನವ್ಯೋಪಮ ಪವಿತ್ರ ಚಾರಿತ್ರಮಂ ಸೂತನಾಗ ॥೨॥ 


ಈ ತೆಱದಿನೊಪ್ಪುವ ಪ್ರಪಾಶಾಲೆಗಳ್ವಿನೋ 

ದಾತಿಶಯಮಂ ನೋಡುತಂ ನಂದಿಯೊಲ್ದು ಗಮ 

ನಾತುರದಿ ಕೂಷ್ಮಾಂಡಪರ್ವತ ನಿರೀಕ್ಷಣಾಪೇಕ್ಷೆಯಿಂ ಮುಂತಳರ್ದು॥ 

ವಾತಪಥದೊಳ್ ಬರುತಿರಲ್ ಸುಳಿವ ಸಜ್ಜನ 

ವ್ರಾತದಡಿಸೋಂಕಿಯವನೀಸತಿಯ ತನುವಿನೊಳ್ 

ತಾ ತಳ್ತ ರೋಮಹರುಷಾಂಕುರಗಳೆನಲೆಳೆಯ ಮೊಳೆಗದ್ದೆ ಕಣ್ಗೆಸೆದವು॥॥೩॥


ಗತಿ ಮಂದಮಾಯ್ತು ನುಡಿಮೆಲ್ಲಿತಾದುದು ಮಧ್ಯ 

ಕತಿ ಬಡತನಂಬೊಂದಿತಿದು ಸಮಯಮೆಂದು ಉ 

ನ್ನತ ಮುಡಿಯನಡರ್ದವಾ ಸೋಗೆಯೆದೆಯಂತುಳಿದವೆಣೆವಕ್ಕಿ ಪಂಸೆ ನಡೆಯ॥ 

ಚತುರತೆಗೆ ತೊಡಕಾದ ಪಾಮರಿಯ ಕಂಡು ಶುಕ 

ತತಿ ಗಂಧಶಾಲೀವನವ ಸೂರೆಗೊಳಲು ಮು 

ತ್ತಿತೊಯೆನಲ್ ತೆನೆಯೊಳಂಡಿಸಿ ಪಾಲ್ಗುಡಿತಿರ್ದವಾ ನೆಲ್ಲಮಡಿಯೆಡೆಯೊಳು॥೪॥ 


ಪೊಸವಾಲ್ದೆನೆಯೊಳೆಱಗಿಯೆಳೆಗೊಂಬ ಕಳಕೀರ 

ವಿಸರಮಱೆಯಟ್ಟಿಯೆಬ್ಬಿಸಲು ಬಿಸಜಾಕ್ಷಿಯರ್ 

ಮಸಗಿ ದನಿಗೈಯೆ ಕಳಕೋಕಿಲನಿನಾದಮೆಂದಾ ರಾಜಶುಕನಿಕಾಯಂ॥ 

ಘಸಣಿಗೊಳ್ಳದೆ ಮನದೊಳಳ್ಕದಕ್ಕಱೊಳು ಸ್ವಾ 

ದಿಸುತಿರ್ದವಾ ನೆಲ್ಲಮಡಿ ಮಡಿಗಳಲ್ಲಿ ಕಂ 

ಗೆಸವಸಮವಿಷಯಾಂತರಾಳದೊಳ್ ಮೇಳದಿಂ ನೋಡುವರ್ ನಾಡೆ ನಲಿಯೆ॥೫॥ 


ಮಿಱುಪ ಮೃದುಪದರಾಗಪಲ್ಲವ ಲಸತ್ಕುಚ 

ಸ್ಫುರಿತೋದ್ಗಮ ಸ್ತಬಕ ಕುಂತಳ ತಮಾಲವ 

ಲ್ಲರಿ ಸುಭಗಕಾಯ ನಳಿತೋಳ್ಗೊಂಬ ನುಣ್ದೊಡೆ ನವೀನ ರಂಭಾಸ್ತಂಭವು॥ 

ವರ ವದನ ಪದ್ಮಸದ್ಮಂ ವಿರಾಜಿಸಲು ಪಾ 

ಮರಿ ಫಲಿತ ಶಾಲೀವನಂಗಾಯ್ವಳಲ್ಲಿ ವನ 

ಸಿರಿಯ ಸಾಕಾರಮಂ ಮೀಱುವತಿ ಚೆಲ್ವಿನಿಂ ನಲ್ವಿನಿಂದಾಯೆಡೆಯೊಳು॥೬॥ 


ವರಗಂಧಶಾಲೀ ವನಂಗಾಯ್ವತರಳೆಯರ್ 

ಮಿಱುಪ ಚಪಲಾಂಗ ದಶನ ಮುಖವಿಶದಾಂಶು ಮೃದು

ಕರತಳಾಧರದರುಣಕಾಂತಿ ಕೊಲ್ಲಣಿಸಿ ಕವಿದಾ ಪ್ರದೇಶವಾ ತೀವಲು॥ 

ಪರಿಮಳಿಪ ಚಾರುಕಾಶ್ಮೀರಬನದಂತಲ 

ರ್ದುಱುಗಿ ರಾಜಿಪ ಮಲ್ಲಿಕಾ ವಾಟಿಯಂತೆ ಭಾ 

ಸುರಮಾಗೆ ದಾರಿಗರ್ ವಿಸ್ಮಿತದರಸ್ಮಿತಾನನದಲೀಕ್ಷಿಸಲೆಸೆದವು॥೭॥ಮೊಗಗೊಡದೆ ಮಾಣ್ಮಾಣೆನಲ್ಕೆ ಸಂಪ್ರೀತಿ ಕೈ 

ಮಿಗಿಲೆಳೆಯಳಧರಾಮೃತವನೀಂಟುವಂತೆ ಮೆ 

ಲ್ಲಗೆ ಸುಳಿವ ತೆಳುಗಾಳಿಗೊಯ್ಯೊಯ್ಯನೊಲೆದಾಡುತಿರ್ದ ನೆಲ್ವಾಲ್ದೆನೆಗಳ॥ 

ಉಗುರಿಂದಲೌಂಕಿ ಪಿಡಿದೊಡನೆಯಿನಿಸಿನಿಸಾಗ 

ಲೊಗುಮಿಗೆಯ ಹರುಷದಿಂ ಪಾಲ್ಪೀರ್ವವೈದೆ ಗ 

ದ್ದೆಗಳೊಳೆಳೆಗಿಳಿವಿಂಡುಗಳ್ ಪಾಮರಿಯರೊಲ್ದು ಸೋವಲ್ಕದೆ ಸೊಗಸುತ॥೮॥ 


ತುಱುಗಲಿಡಲೊಂದೊಂದನೊತ್ತಿದೆಳೆ ನೀರ್ಗಳೊಡ 

ದುಱೆ ಪರಿವ ಕಾಲ್ಗಳಿಂ ಕರ್ವುಸಲೆ ಕೊರ್ವಿ ಬೆಳೆ 

ದಱೆವಿರಿದು ಸೋರ್ವರಸವೊನಲ್ದಂಪಿನಿಂದಾದ ಸುಮನಫಲಪಣ್ಗೊನೆಗಳ॥ 

ಧರಿಸಿರ್ದ ಸಹಕಾರ ಬೋರೆ ನೇಱಿಲು ಪಲಸು 

ಕರಕವಾಮಲಕ ಹೇರಿಳೆ ಕರ್ಪುರದವಾಳೆ 

ವೆರಸಿದಾರಾಮದಿಂದೊಪ್ಪುವಾ ತಪೋವನಂ ಗಿರಿನಿತಂಬದೊಳೆಸೆದವು॥೯॥ ( ನಿತಂಬ= ಕಣಿವೆ ಪ್ರದೇಶ) 


ಪಸಿದು ಮೇಪಿಗೆ ಪೋದ ಪೆಣ್ಬುಲಿಯ ಮಱಿಗೆ ಹರಿ 

ಣಿ ಸಮಂತು ಮೊಲೆಗೊಡುವವೆಳೆವಾವು ಕ್ಷುಧೆಗೊಂಡು 

ಬಸವಳಿಯೆ ಕಂಡು ಗರುಡಂಗರಿಯಗಾಳಿಗೂಳುಣಿಪವು ನವೆಲ್ಮರಿಗಳು॥ 

ಒಸೆದು ಕತ್ತಲ್ಗವಿದ ಗವಿಯೊಕ್ಕು ಪೊಱಮಡಲ್ 

ದೆಸೆಗಾಣದಿರಲುರಗ ಪೆಡೆವಣಿಯ ಕಾಂತಿದೋ 

ಱಿಸಿದಪೊಱಗಣ್ಗೆ ಕರೆತಪ್ಪುವು ತಪೋವನದೊಳೇವೇಳೆನೃಶ್ಚರ್ಯವ॥೧೦॥


ಘನ ಕುಟಿಲ ಚೂರ್ಣಕುಂತಳ ನಿಬಿಡ ಕರ್ಕಶ 

ಸ್ತನಯುಗ್ಮಕೃಶಮಧ್ಯ ಕ್ಷಾಮೋದರಂ ನಿತ್ಯ 

ಕನಕಾಭರಣಕುಮುದನೇತ್ರದೋಷಾಕರಾನನ ಸರೂಪವೇಣಿವೆತ್ತ॥ 

ವನಿತೆಯರ ಕೂಡೆ ಸಂಸಾರಮಂ ಮಾಡಿರ್ಪು 

ದನುಚಿತಮಿದೆಂದುಳಿದರೆನೆ ಸಂಗಸುಖ 

ವನು ಮಾಣ್ದ ಮುನಿಕುಲಂ ನಿಚ್ಚಟ ತಪಂಗೈವರೆನೆ ವನದೊಳೊಪ್ಪಿರ್ದರು॥೧೧॥


ಎಸೆವ ಕೆಂಜೆಡೆಮುಡಿಯ ಮಸ್ತಕದ ಮಾಣಿಕಂ 

ಭಸಿತ ಲೇಪಂ ಶುಭ್ರಕಾಯಂ ಗುಹಾವಾಸ

ಮಿಸುಪ ವಲ್ಮೀಕಪ್ರಭಂಜನಾಹಾರಾತಿಶಾಪೋರು ವಿಷ್ಣುಮುಖದೊಳು॥ 

ಅಸಮ ಶೇಷಾವತಾರದೊಲಿರ್ದ ಸನ್ಮುನಿ 

ಪ್ರಸರಂ ತಪೋವನದೊಳಾವಗಂ ಬಲ್ತಪವ 

ನೆಸಗುತಿರ್ದ ಬ್ರಹ್ಮ ವಿಷ್ಣು ರುದ್ರಾದಿಗಳ ಸಿರಿಯ ಪುಲ್ಸರಿಗೊಳ್ಳದೆ ॥೧೨॥ 


ತುಱುಗಿ ಮುಗಿಲ್ ಮಱೆಯ ಬಾಲರವಿಯಂತೆ ಮ

ಮಣ್ಮಱೆಯ ನಿಧಿಯಂತೆ ತುಕ್ಕಿನಮಱೆಯ ಮುಕುರದಂ 

ತುರು ಕುಟ್ಮಲದಮಱೆಯಸೌರುಭ್ಯದಂತೆ ಭಸ್ಮದ ಮಱೆಯ ವಹ್ನಿಯಂತೆ॥ 

ಅಱಿಯೆ ಶುಕ್ತಿಯ ಮಱೆಯ ಮಣಿಯಂತೆವೊಲ್ನಿರಂ 

ತರ ಶಿವಪದಾಬ್ಜ ನಖರೋಚಿ ದೀಪಪ್ರಭಾ 

ಸ್ಫುರಿತ ಹೃದ್ವಿಮಲಮಂದಿರ ಮುನಿವ್ರಾತಮಿರ್ದುದು ತತ್ಪ್ರದೇಶದಲ್ಲಿ॥೧೩॥ 


ನಿರುತ ವಾಗ್ಲೀಲಾವಿಲಾಸದಿಂದಜನಂತೆ 

ಮಿಱುಪ ಸಾರಂಗಾಜಿನಾವೃತದಿಪಾರ್ವತೀ 

ಶ್ವರನಂತೆ ಕ್ಷಾರಪ್ರಶೋಭೆಯಿಂ ಕಡಲಂತೆ ಸಂತತ ವನಕ್ರೀಡೆಯಿಂ ॥ 

ವರ ಹಂಸಿಯಂತೆ ಮುಕ್ತಾಹಾರದಿಂ ಮಹೇ 

ಶ್ವರನಂತೆ ಸುಸ್ಥಿರಾಸನದಿಂದ ಶೇಷನಂ 

ತುಱೆ ಮೆಱೆದುದಾ ಗಿರಿಯ ಬರಿಯ ಬಲ್ತ ಪವನೆಸಗುತ್ತೆತಿಗಳೆಸೆದಿರ್ದರು॥೧೪॥ 


ಸೂರಪ್ರಭಾಬ್ಜಾರ್ಧಮೌಳಿ ಮಂಗಳಮಯ ಶ 

ರೀರ ಸೌಮ್ಯಸ್ವರೂಪಾನ್ವಿತ ಜಗದ್ಗುರು ಪು 

ರಾರಿಯಂ ಹೃತ್ಕಮಲಕರ್ಣಿಕೆಯೊಳತ್ಯತಿಷ್ಠದ್ಧಶಾಂಗುಲಮಿತಿಯೊಳು॥ 

ತೋಱುವಂತಿರಿಸಿ ಭೃಗುಮುಖ್ಯರಾರಾಧಿಸಿ 

ರೂದೋರು ಪಥದಿಂದಮಂದಮನೀಘದಿಂ ಬಿಡದೆ 

ಸಾರ ಸದ್ಭಕ್ತಿಯಿಂ ಪ್ರತಿದಿನಂ ತತ್ಪದರ್ಚಿಪ ಮುನಿಗಳಂ ಕಂಡನು॥೧೫॥ 


ಸಿತಭಸ್ಮಭೂಷಿತಾಂಗ ದ್ಯುತಿ ಕ್ಷೀರದಿಂ 

ವಿತತ ಘರ್ಮ ಕಣಾಳಿಸೀಕರಗಳಿಂ ರದ 

ಪ್ರತತಿ ಮೌಕ್ತಿಕ ನಿಕರದಿಂ ಜಟಾಪಟಲ ಪ್ರವಾಳಲತಿಕಾಳಿಯಿಂದ॥ 

ಶ್ರುತಿಘೋಷದಿಂ ದಯಾಮೃತದಿ ಮನೀಶ ರಾ 

ಜಿತ ಹಂಸದಿಂ ಮುನಿವ್ರಾತ ಕಲಶಾಂಬುಧಿ 

ಪ್ರತಿಮಾನದಿಂದಿರ್ದರಾ ಶಿಲೋಚ್ಛಯ ಕಟಕವಲಯದೊಳ್ ವಹಿಲದಿಂ॥೧೬॥ 


ಸ್ಫುರಿಪುಪಾಧಿಯನುಳಿದು ನಟಿಸಿ ತೋಱುವ ದೀಪ 

ಕರನ ಬಲ್ಬಿಸಿಲ ಬೇಱಿರಿಸಿ ಬೆಳಗುವ ಚಂಡ 

ಕರನ ಹೊದ್ದಿದ ಹಿಮದಿ ಹಿಂಗಿ ಕಂಗೊಳಿಪ ತಂಗದಿರಾಶ್ರಯಾಶಗುಣವ ॥ 

ಜಱೆದುಜಾಜ್ವಲಿಸುತಿರ್ಪಾ ಜಾತವೇದನಂ 

ತುಱೆಮೆಱೆವ ಮುನವಟುಗಳಟಣಿಸುವರಾಗಿರಿಯ 

ಬರಿಯ ಪುಣ್ಯಾಶ್ರಮಂಗಳೊಳನಂತಧ್ವಾಂತದೊಳ್ ನಂದಿ ಬರೆ ಕಂಡನು॥೧೭॥ 


ಹರಿಪದವ ರವಿಗೆಯೂ ರವಿಪದವ ಧ್ರುವಗೆಯೂ 

ಧ್ರುವಪದವ ಕವಿಗೆಯೂ ಕವಿಪದವ ಜವಗೆಯೂ 

ಜವಪದವ ಪವನಗಂ ಮುಳಿದರೊಲಿದೀವ ಪ್ರಭಾವರ್ ದಯಂ ಪೊಣ್ಮಲು॥ 

ಆವರಿಸುವರವರ್ಗೆ ವೈಶ್ರವಣನ ನಿಧಾನ ವಾ 

ಸವನ ಸದ್ಭೋಗವಾಗ್ಧವನ ಮಹದಾಯುವಂ 

ಯವೆಹಳಚುವನೆತಱೊಳಗೆಂಬುರು ತಪೋಬಲವ್ರತಿಗಳಿರುತಿರೆ ಕಂಡನು॥೧೮॥ 


ನೇರೆಱೆಯದಿದ್ದ ಕಾಸಾರ ಫಲವೇಯದೆಹ 

ಭೂರುಹಪ್ರಚಯ ಲೀಲಾಲಾಸ್ಯಮಿಲ್ಲದ ಮ 

ಯೂರ ಮಧುರ ಪ್ರಾಂಜುಳ ನಿನಾದಮಂ ಮಾಣ್ದ ಕೋಕಿಲಾಂಬುದಕೆ ಸೆಡೆದು॥ 

ಪಾರದ ಮರಾಳ ಸಸಿಗಳ್ಕದೆಣೆವಕ್ಕಿ ನೀ 

ಹಾರದಿಂ ನಸಿಯದ ಸರೋಜಸಂತತಿಯಿರ್ದ 

ವಾ ರುಷಿಗಳಾಗಿಸುವ ಸುತಪಪ್ರಭಾವದಿಂದಾ ತಪೋವನದೆಡೆಯೊಳು॥೧೯॥ 


ಬೇಡಲ್ ಮರಂ ಮಣಿದು ತನಿವಣ್ಗಳಂ ಕೈಗೆ 

ನೀಡುವವು ಕುಳ್ಳಿತಱೆಯೊಳ್ ಬಯಸಿದಡೆ ಜಲಂ 

ಮೂಡುವುದಕಾಲದೊಳ್ ನೆನೆದ ಪುಷ್ಪಪ್ರತತಿಯಲತಾಗುಲ್ಮಂಗಳು॥ 

ಕೂಡೆ ಪಡೆದವು ಬಿತ್ತದೇ ಸಕಲಧಾನ್ಯಂಗಳ್ 

ನಾಡೆ ಬೆಳೆದಪವಾ ಮುನೀಂದ್ರರೊಡರಿಪ ತಪದ 

ಗಾಡಿಯಂ ಬಣ್ಣಿಸುವರಚ್ಚರಿಯೆನುತ್ತಲಾ ನಂದಿ ನೋಡುತ ಬಂದನು॥೨೦॥ 


ವ್ಯಗ್ರನಾಗದೆ ನಂದಿ ನಿಟ್ಟಿಸಿದ ಮೂಡುವ ಸ 

ಮಗ್ರ ಸಂತೋಷದಿಂ ಮುನಿಗಳನವರತಲ 

ವ್ಯಗ್ರದಿಂದಾಗಿಪ ತಪೋನಿಷ್ಠೆಯಂ ತನ್ನ ಚಿತ್ತವಿಭ್ರಮತೆಗೊಳದೆ॥ 

ಉಗ್ರ ಪೂಜಾತಪದೊಳವರಂದದಿಂದಲೇ 

ಕಾಗ್ರದಿಂ ನೆಲೆಗೊಂಡತಿ ತ್ವರಿತದಿಂದಲಾ 

ಉಗ್ರನಭಿಮುಖವನಾಗಿಸಲೆಂದು ಬರುತಿರ್ದ ನಿರ್ಜರಪಥಾಂತರದೊಳು॥೨೧॥ 


ಚರಣಾಂಬುರುಹದೊಳಂ ನಯನ ವಿಲಸನ್ಮೃದುಲ 

ಕರಪಲ್ಲವದೊಳು ತಲೆಕಂಧರದೊಳಂದದಿಂ 

ಮಿಱುಪಸ್ಥಿನಿಚಯೋತ್ತುಮಾಂಗದೊಳ್ ಜೀವನಂ ಪರಿವೃತ ಸುಚರ್ಮದಿಂದ॥ 

ಅರೆವೆಣ್ಣದಾಗಿ ಲೋಕದೊಳದ್ಭುತಚರಿತ್ರ 

ವೆರಸಿ ವೈಚಿತ್ರಮಂ ತೋರ್ವ ಶಿವನಂ ಭಜಿಸಿ 

ಕರಣೇಪ್ಸಿತಂ ಬಡೆವೆನೆಂದು ಲವಲವಿಕೆಯಿಂದಾ ನಂದಿ ಬರುತಿರ್ದನು॥೨೨॥ 


ಮಸೆದಶೂಲಾಗ್ರದೊಳ್ ನಿಂದು ಶೂಲಿಯಂ ಬಿಸಿಲೊ 

ಳೆಸೆದು ಕುಳ್ಳಿರ್ದು ಬಿಸಕಂಠನಂ ಪಂಚಾಗ್ನಿ 

ಮಸಕಮಧ್ಯದಿಪಂಚಮುಖನನಿರ್ಗಮಿತ ಗುಹೆಯಂ ಪೊಕ್ಕು ಗುಹತಾತನ॥ 

ನಿಸದ ಗಂಗಾಜಲದೊಳಿರ್ದು ಗಂಗಾಧರನ 

ರಸರಹಿತ ಪರ್ಣಗಳ್ ಸವಿದಪರ್ಣಾಧವನ 

ಮುಸುಡನೂರ್ಧ್ವಕೆ ನೆಗಹಿ ಊರ್ಧ್ವಕೇಶನ ಭಜಿಸುವರ ನೋಡುತೈತಂದನು॥ ೨೩॥


ಬರಬರಲು ಮುಂದೆ ಪೆರ್ದೊಱೆಗಳಂ ಕೆಱೆಗಳಂ 

ಪರೆದಿಹ ಪರಳ್ ಪಾಸಿದಱೆಗಳಂ ತೊಱೆಗಳಂ 

ಮುರಿಮುರಿಗಳಂದಿಳಿದ ಸರಿಗಳಂ ದರಿಗಳಂ ಸರಿವುತಿಹ ಪಂಜರಗಳ॥ 

ನೆಱೆದು ವಿಹರಿಸುತಿರ್ಪ ಕರಿಗಳಂಶಹರಿಗಳಂ 

ಹರಿಣ ಶಾರ್ದೂಲ ಸೂಕರಗಳಂ ಮರಗಳಂ 

ಬರಿಯೊಳೊಪ್ಪುವ ಪಾದಗಿರಿಗಳಂ ಪುರಿಗಳಂ ನೋಡುತ್ತ ನಡೆತಂದನು॥೨೪॥ 


ನಿರುತ ಸತ್ಪ್ರಾಜ್ಞ ಪ್ರದೀಪ ವಿದಳಿತ ಚಿತ್ತ 

ಕುರು ಸುಪ್ರಕಾಶ ಚಿಂತಾತಮಸ್ತೋಮ ನಿರು 

ಹರಣೇಂದು ವ್ಯಾಕುಲಾಗ್ನಿ ವಿದಗ್ಧ ಹೃನ್ಮಹೀತಳವಲಯ ಜಲದಾಗಮ॥ 

ಉರುತರ ಕ್ಲೇಶತಪನೋತ್ತಾಪ ಸಂತಪ್ತ 

ತರುಣ ತನುಲತಿಕಾಮಲಯ ಮಂದಮರುತನಂ 

ತಿರೆ ಪೂರ್ಣಪುಣ್ಯಪುಂಜದೊಲು ರಂಜಿಸುವ ಕೂಷ್ಮಾಂಡಗಿರಿಯನು ಕಂಡನು॥೨೫॥ 


ಶರದವಿದ್ಯುನ್ಮಾಲೆಯೊಬ್ಬುಳಿಯೊ ಪಾಲ್ಗಡಲ್ 

ಉರಿವ ವಡಬಾಗ್ನಿಯಿಂ ಬೆಂದು ಬೆಟ್ಟಿತು ಬೆಟ್ಟ 

ದಿರವಾಯ್ತೊ ಪುದಿದಚಂದ್ರಿಕೆ ಹೆತ್ತು ಕರಣೆಗೊಂಡುದೊ ತುಹಿನಕರ್ದಮದೊಳು॥ 

ಬೆರಸಿ ಕಪ್ಪುರ ಮಲಯಜದ ರೇಣುಗಳ್ ಮಿದ್ದು 

ಪರಮೇಷ್ಠಿ ಮಾಡಿದುರುಳಿಯೊ ರಜತಪರ್ವತದ 

ಮಱಿಯೊಯೆನೆ ಕೂಷ್ಮಾಂಡಗೋತ್ರ ಚಿತ್ರಂದೋರ್ದುದಾ ನಂದಿಗಣನ ಕಣ್ಗೆ॥೨೬॥ 


ಪ್ರೇಮದಿಂ ಬರೆ ದೂರದೊಳ್ಕಂಡ ಕೂಷ್ಮಾಂಡ 

ನಾಮಾವನೀಧರವ ಕಣ್ಣ ಪುಣ್ಯವ ಹೃದಯ 

ತಾಮರಸ ದಿನಮಣಿಯ ವರಚಿತ್ತ ರಾಜಶುಕಸೇವ್ಯ ಪರಿಪಕ್ವ ಫಲವ॥ 

ತಾ ಮಹಾದೈನ್ಯನೀ ಪರ್ವತಾಗ್ರದೊಳು ನಿ 

ಸ್ಸೀಮ ಸೋಮಾವತಂಸನ ಭಜಿಸಿದಪೆನೆನ್ನ 

ನೇಮ ಕೈಗೂಡಿತೆಂದಾ ನಂದಿ ಬಂದನಾನಂದಸಂದೋಹದಿಂದ॥೨೭॥ 


ಬನವ ಕೋಗಿಲೆ ಜಕ್ಕವಕ್ಕಿ ಪಗಲಂ ಪುಷ್ಪ 

ವನು ತುಂಬಿ ಕಾರ್ಗಾಲಮಂ ಕೂರ್ತು ಸೋಗೆ ಮುಂ 

ಬನಿಯ ಚಾತಕ ಸರೋವರವನರಸಂಚೆ ರಾಕಾಶಶಾಂಕನ ಚಕೋರ॥ 

ವನಿತೆ ವಲ್ಲಭನ ಶಿಶು ತಾಯ ಕಂಡಂತೆ ಒ 

ಯ್ಯನೆ ಧರಾಧರ ಮಣಿಯದಾನ ಕೂಷ್ಮಾಂಡಾದ್ರಿ 

ಯನು ಕಂಡು ನಂದಿ ನಂದಿಯುಲ್ಲಸದಲಾಗಸದಿಂದಲೊಸೆದಿಳಿದನಾ ಗಿರಿಯೊಳು॥ ೨೮॥ 


ದವದಹನಕಾಲದಲಕಾಲ ವರುಷಂ ಸೂಸಿ 

ದವೊಲೊದಗಿದಧಿಕತರ ಜಾಣ್ಮೆದೊರೆಕೊಂಡಮಾ

ಳ್ಕೆ ವಿಶೇಷ ವಿಷವಿಷಾದಾನ್ವಿತಗಸ್ಮಿಕ ಸುಧಾರಸಂ ಮೈದೋರ್ದವೊಲು॥ 

ಅವನೀಧರಾರ್ಯ ಕೂಷ್ಮಾಂಡಾದ್ರಿಯಂ ಕಾಣು 

ತವೆ ನಂದಿಯಾನಂದಕಂದಳಿತ ಹೃದಯಾಂಬು 

ಜ ವಿಶಾಲ ವಿಸ್ಮಯಾವಿರ್ಭವಶರೀರ ಹರುಷಾಂಬು ಲುಳಿತಾಕ್ಷನಾದ॥ ೨೯॥


ಹರಗೆ ಹರ್ಮ್ಯಮದಾಗಿ ನಿಷ್ಕಲಂಕಾಕೃತಿಯ 

ಧರಿಸಿ ಪುಣ್ಯದಪುಂಜದಂತೆ ರಂಜಿಸುತೆ ಭೂ 

ಧರಗಳೊಳ್ವಿಶ್ರುತಮದಾದೆನ್ನ ಮಹಿಮೆಯಂ ಮಿಕ್ಕು ಕೂಷ್ಮಾಂಡವೆಂಬ ॥ 

ಗಿರಿ ಮೆಱೆವುತಿರ್ಕು ಗಡ ನೀಂ ತಿಳಿದು ಬಹುದೆಂದು 

ತುರಿತ ತನ್ನಭಿಮಾನದೇವತೆಯ ರಜತಾಗ 

ವರ ಕಳುಹಿತೆಂಬಿನಂ ನಂದಿ ಸಾರ್ದನಮರ್ದ ಹರುಷದುತ್ಕರುಷದಿಂದ॥೩೧॥ 


ಕಡಲ ಕಡೆವೆಡೆಯೊಳುದಿಸಿದ ಸುಧೆಯ ಕಂಡು ಮುದ 

ವಡೆಸಿದ ಸುನಾಸೀರನಂತೆ ಭೂತಳದೊಳಂ 

ಮಡಗಿದ ನಿಧಾನಮಂ ಕಂಡಂಜನೀಕನಂತೆಸೆವ ಕುಸುಮಾಯುಧನನು॥ 

ಪಡೆದ ಪಂಕರುಹಾಕ್ಷನಂತೆ ಕೂಷ್ಮಾಂಡಗಿರಿ 

ಎಡೆಯೊಳವತರಿಸಿದನಾ ನಂದಿ ಮನ್ಮನದಿಷ್ಟ 

ಮೊಡಗೂಡಿತೆಂದು ಹೇರಳದ ಪರಿತೋಷದಿಂದುರ್ವಿ ಕೊರ್ವಿದ ಮನದೊಳು॥೩೨॥ 


ಬಾಳು ಕೂಷ್ಮಾಂಡಗಣನಾಥ ನನ್ನೆಡೆಗತಿ ದ 

ಯಾಳುವದಱಿಂದೀ ಮಹಾಪುಣ್ಯಪರ್ವತವ 

ಹೇಳಿದನೆನುತ್ತ ಪೊರೆಪೆಚ್ಚುತಲ್ಲಿರ್ದ ವನ ನದಿ ದಿವ್ಯತೀರ್ಥಂಗಳ 

ಏಳಿಗೆಯ ಸುಳಿವ ಸತ್ಪುರುಷರು ಫಲದ್ರುಮ ಮೃ 

ಗಾಳಿಯಂ ನೋಡಿ ವಿಗತಶ್ರಾಂತನಾಗಿ ಮಿಗೆ 

ಭಾಳಭೂಷಿಯನೇತ್ರನಂ ಭಜಿಸಲೆಂದು ಉದ್ಯುಕ್ತನಾದಂ ಮನದೊಳು॥೩೩॥ 


ಗಂಗೆಯೊಳ್ ಮಿಂದವನ ಪಾಪ ತಳ್ತೆಸೆವ ಬೆ 

ಳ್ದಿಂಗಳಂ ಸಾರ್ದವನ ತಾಪ ಕಡವರವ ಕಂ 

ಡಂಗತಿಕ್ಲೇಶ ಸದ್ಗುರುವಿನುಪದೇಶಮಾದಾತಜ್ಞಾನದೋಷ॥ 

ಹಿಂಗುವಂತೆ ಸಾರೂಪ್ಯಮೀ ಕೂಷ್ಮಾಂಡ 

ತುಂಗಪರ್ವತವ ಸಾರ್ದೀಗ ಪೋಗುವರೆಂದು 

ಪೊಂಗಿ ಹರುಷಿತನಾದನಾ ನಂದಿಯಾಗ ವರ್ಷಾಗಮಂ ಪ್ರಾಪ್ತಮಾಯ್ತು॥೩೪॥ 


ಬಿಸಿಲುಮಿಗೆ ಬಿಸಿಯಾಱೆ ಗಾಳಿ ತಣ್ಪೇಱೆ ಮುಗಿ

ಲೊಸರ್ದು ಮಳೆಗಱೆಯೆ ಹಂಸೆಗಳಿರದೆ ಸರಿಯೆ ಕೇ 

ಕಿಸಮೂಹ ಕುಣಿದಾಡೆ ಪುಲ್ಗಳಂಕುರಮೂಡೆ ಕೇತಕೀಪ್ರಚಯ ನಾಡೆ॥ 

ಪೊಸಪರಿಮಳಂದಳೆಯೆ ತರು ಗುಲ್ಮ ಲತೆ ಬೆಳೆಯೆ 

ಕೆಸರಾರದಿರ್ದುದಿಳೆ ತುಂಬಿ ತುಳುಕಿದವು ಪೊಳೆ 

ಎಸಕದಿಂ ಮಳೆಗಾಲ ಬಂದುದು ಪಥಿಕಜಾಲ ಬೇಸಱಲು ಸರುವಿನಿಂದು॥೩೫॥ 


ಸೂರನತಿಕ್ರೂರತರಮಾದ ನಿಜಕರಂಗಳಿಂ 

ದೋರಂತೆ ಜಲವನೆಲ್ಲಂ ಮೊಗೆದನಾ ಗ್ರೀಷ್ಮ 

ದಾರಂಭದೊಳ್ ತನಗೆ ಜಲಪತಿಯೆನಿಪ್ಪ ಗಂಭೀರ ಪೆಸರಿರ್ದು ಬಳಿಕ ॥ 

ನೀರನೆಲ್ಲೆಡೆಯೊಳಂ ತುಂಬದೊಡೆ ಭಂಗ ಮೈ 

ದೋಱುವುದೆನುತ್ತ ವರುಣಂ ಸುಯ್ದ ಸುಯ್ಯನೆ ಸ 

ಮೀರಣಂ ಪಶ್ಚಿಮಾಶಾಭಾಗದಿಂದಾಗ ಸೂಸಿತು ಘನಾಗಮದೊಳು॥೩೬॥ 


ಕಡುಗೆ ಪಲಕಾಲ ತಮ್ಮಧಿಪನಾಗಿಹ ಮೇಘ 

ಗಡಣಮಂ ಸುರಪ ಸೆಱೆಗೂಡಿಕೊಂಡಿರ್ಪನಿ 

ರ್ದೆಡೆಯೊಕ್ಕು ಬಿಡಿಸಿ ತರಲೆಂದು ದಂಡೆತ್ತಿ ಮುಗಿಲೊಡ್ಡು ಗಗನಾಂತರದೊಳು॥ 

ಒಡನಡಿಸಿ ತುಱುಗಿ ತಳ್ತಿಡಿದು ಕಳ್ತಳಿಸಿವೊ 

ಗ್ಗೊಡೆಯದಗ್ಗಳಿಸಿ ಮೊಗ್ಗರಿಸಿ ಲಗ್ಗೆಯನೇರ್ವ 

ಸಡಗರದ ಪಾಂಗಿನಿಂ ಪೊಂಗಿ ಕಂಗೆಸೆದಿರ್ದವಾ ಮುದಿರಕಾಲದಲ್ಲಿ॥೩೭॥ 


ಗರಶರಧಿಮಂಥನದೊಳೊಗೆದವನಿಯಂ ತುಂಬೆ 

ಸುರಸರಣಿಯೊಳ್ ಪುದಿದ ತತ್ಸವಿಯೊ ನಂದನದೊ 

ಳುಱೆ ತುಱುಗಿತೋರ್ಪಾ ತಮಾಲಲತಿಕಾಂಶು ಕಡುದರ್ಪದಿಂ ನಭವಿಡಿದುದೊ॥ 

ನರನುರುಹೆ ಖಾಂಡವವನದೊಳಿರ್ದತುಂಬಿವಿಂ 

ಡುಱೆ ಮೆಱೆವುತಾಗಸವ ಸಾರ್ದವೊಲ್ ಕಾರ್ಮುಗಿಲ್ 

ಥರಥರದೊಳೊತ್ತರಿಸಿ ಕತ್ತಲಿಸಿತೇವೇಳ್ವೆ ದೀಪಲೋಪಾಲಯದೊಳು॥ ೩೮॥


ವರ ಪೆಕ್ಕಣಂಗಳಂ ಬಿಟ್ಟು ಬೆಟ್ಟದ ಗವಿಯ 

ನೆರೆ ಸಾರಿದರ್ ಶಬರರಾಗ ಕಾಗೆಗಳ ಗೂ 

ಡಿಱಿದಿಕ್ಕಿದವು ಬಿರಿದಕೇತಕಿಯ ಧೂಳ್ಮೊಗೆಯೆ ಗಾಳಿ ಮಾಗಾಯಿ ನೆಲಕೆ॥ 

ಸುರಿಯೆ ಧರೆ ಪಸುರಾಗೆ ಪಾಲ್ಗಱೆಯೆ ತುರುವಿಂಡು 

ಮೊರೆಯೆ ದರ್ದುರ ಕೇಕಿಗಳ್ ಕೇಗೆ ನಡೆಗೊಡದೆ 

ಪರಿಯೆ ನೀರ್ ಪಥಿಕರುಂ ತೋಯೆ ತೋಯಾಗಮಂ ರಂಜಿಸಿತು ರಚನೆಯಿಂದ॥೩೯॥ 


ವರುಷಾಗಮ ಪ್ರೌಢವಿಟನಂಬರಾಂಗನೆಯ 

ಬೆರಸಲುಣ್ಮುವ ಗಳರವಂ ತಾನೆನಲ್ 

ಮೊಳಗು ನೆಱೆಮೊಳಗಲಾಗಲತಿಬಳಲ್ಕೆಯೊಳು ಬೆಮರ್ದೊಸರುವಂತೆ ಮಿಗೆಪನಿಪನಿಯಲು॥ 

ಮಿಱುಪ ಚೆಂಬೊಗರಾಂತ ಕಣ್ಪೊಳಪಿನಂತೆ ಮಿಂ

ಚಿರದೆ ಮಿಂಚಿದವು ಮಾಣ್ಮಾಣೆಂದು ಗಜಱಿ ನಿ 

ಷ್ಠುರದಿ ಗರ್ಜಿಸುವಂತೆ ಸಿಡಿಲಬ್ಬರದೋರೆ ನೀರದಾಗಮಮೆಸೆದುದು॥೪೦॥ 


ಸುರಚಾಪ ನವರತ್ನ ಮಂಟಪದೊಳಂ ಮುದಿರ 

ತರುಣಿಯಿರೆ ಕಂಡು ಕಾತರಿಸಿ ಕವಿದಾ ಕಾಲ 

ಪುರುಷ ಸುರತಂಗೈಯೆ ಮುಡಿ ಸಡಿಲ್ದಿಟ್ಟ ಕೊರಲೆಕ್ಕಸರಕಡಿಕಿರಿಯಲು॥ 

ಸುರಿದವೊಸಮಲ್ಲಿಗೆಯಲರ್ ಪದ್ಮರಾಗಗಳ್ 

ಪರೆದವವನಿಯೊಳೆಂಬೊಲಾಲಿಗಳ್ ಸುರಗೋಪ 

ನೆರವಿ ರಾಜಿಸುತಿರ್ದನೇವೇಳ್ವೆನಮಮ ವರ್ಷಾಗಮದ ಪೆಂಪಿನಿಂಪ॥೪೧॥ 


ವರ ಗ್ರೀಷ್ಮ ಋತು ಮದೋತ್ಕರಿಯ ಕುಂಭಸ್ಥಳವ 

ವರ್ಷಾಗಮ ಪ್ರಬಲಪಂಚಮುಖ ದಶನಖದಿ ಕು 

ಕ್ಕಿರಿಯೆ ಬಿರಿದಿಡಿದಿರ್ದ ಮುಕ್ತಾಫಲಂ ನೆಲಕುದುರ್ದ ಪಾಂಗೆನೆ ಪಸರಿಸಿ ॥ 

ಸೈರಿಯೆ ವರ್ಷೋಪಲಂ ತದ್ರಕ್ತಬಿಂದು ನೆಲ 

ಕುರುಳೆ ಸಂಜೀವನದ ಮೂಲಿಕೆಯ ಸೋಂಕಿನಿಂ 

ಪರಿದಾಡುವಂತಿರೊಪ್ಪಿದವಿಂದ್ರಗೋಪಂ ಸುಕಲಾಪಮಾ ಸಮಯದಲ್ಲಿ ॥೪೨॥ 


ಸ್ಫುರಿಪ ಘನಕೋಪಭೀಷಣ ಮುಖದೊಳಾಗ ಸಿಡಿ 

ಲುಱುಬೆಗಣ್ಣಿಂದ್ರಗೋಪದೊಲು ಕಿಡೆಯುದರಲಾ 

ಸುರಚಾಪಚಾಪಕುಱೆ ಮಿಂಚೆಂಬ ಪೆದೆದುಡಿಸಿ ವರ್ಷಶರಮಂ ಕರೆವುತ॥ 

ಮೊಱೆವಮೊಳಗೆಂಬ ಪ್ರೋಧ್ವನದಿಂದಾರ್ದು ನಿ 

ಷ್ಠುರ ನಿದಾಘನನೈದೆ ಬೆನ್ನಟ್ಟಿ ಲೋಕಮಂ 

ಪೊಱಮಡಿಸಿ ವರವೀರವಾರಿದನೃಪಂ ಸಕಲರಾಷ್ಟ್ರಮಂ ಕೈಕೊಂಡನು॥೪೩॥ 


ಬಗೆಯಲುತ್ತಮಜಾತಿ ತನ್ನೊಡನೆ ಸೌಖ್ಯಮಂ 

ನೆಗಳಲಾಮೋದಮಂ ಪೆರ್ಚಿಸದೆ ಬಱಿದೆ ಕೇ 

ದಗೆಗತಿಶಯೋತ್ಸವವನಾಗಿಸುವ ಘನಕಾಲಗತಿಯೊಳ್ ವಿಚಾರಮುಂಟೆ॥ 

ಜಗದೊಳಿದು ಚೋದ್ಯಮೆಂದೆನಲಾಗಳಿಚ್ಛೆ ಕೈ 

ಮಿಗುವ ಮುಕ್ತಿಯ ನೆಲೆಯ ಪುಗುವರೀ ಕೂಷ್ಮಾಂಡ 

ನಗಮಾಗಿಸಿದನಜನೆನುತ ನಂದಿ ನಂದೀಶನಂ ಭಜಿಸಲನುಗೈದನು॥೪೪॥ 


ನೆನೆಕೆ: 

ಕರ್ತೃ : ಗೋವಿಂದ ಕವಿ,

ಸಂಪಾದಕ: ಜಿ. ಜಿ. ಮಂಜುನಾಥನ್.

ಪ್ರಕಾಶನ: 

ಕನ್ನಡ ಅಧ್ಯಯನ ಸಂಸ್ಥೆ,  

ಮೈಸೂರು ವಿಶ್ವವಿದ್ಯಾನಿಲಯ,  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ