ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಬುಧವಾರ, ಜುಲೈ 19, 2023

ಸಾಳ್ವ ಭಾರತ

ಸಾಳ್ವ ಭಾರತ


ಸಾಳ್ವಭಾರತವೆಂದು ಚಿರಪರಿಚಿತವಾಗಿರುವ ಈ ಕಾವ್ಯದ ನಿಜವಾದ ಹೆಸರು ನೇಮಿನಾಥ ಚರಿತೆ. ವಿಕ್ರಮಾರ್ಜುನ ವಿಜಯಕ್ಕೆ, ಪಂಪ ಬರೆದ ಭಾರತವಾದುದರಿಂದ ಪಂಪ ಭಾರತವೆಂದು ಹೆಸರಾಯಿತು.ರಾಮಚಂದ್ರಚರಿತಪುರಾಣಕ್ಕೆ ಅಭಿನವ ಪಂಪ ಬರೆದ ರಾಮಾಯಣವಾದುದರಿಂದ ಪಂಪ ರಾಮಾಯಣವೆಂದು ಹೆಸರಾಯಿತು.ಅದರಂತೆ ನೇಮಿನಾಥ ಚರಿತೆಗೆ ಸಾಳ್ವ ಕವಿ ಬರೆದ ಭಾರತವಾದುದರಿಂದ ಸಾಳ್ವಭಾರತವೆಂದು ಹೆಸರು ಪಡೆಯಿತು. 


ಈತ ನಗಿರೆ ರಾಜ್ಯದ ರಾಜಕವಿ. ನಗಿರ ರಾಜ್ಯದ ರಾಜಧಾನಿ ನಗಿರೆ ನಗರ.ಅಂದರೆ ಗೇರುಸೊಪ್ಪೆ.ಇದಕ್ಕೆ ಕ್ಷೇಮಪುರವೆಂದೂ ಹೆಸರುಂಟು. ಈತನ ಕಾಲ ಕ್ರಿ. ಶ. ೧೪೮೫ . ಈತನ ಕೃತಿಗಳು,ರಸರತ್ನಾಕರ,ಶಾರದಾವಿಲಾಸ, ವೈದ್ಯಸಾಂಗತ್ಯ, ಮತ್ತು ಸಾಳ್ವ ಭಾರತ( ನೇಮಿನಾಥ ಪುರಾಣ) ಸಾಳ್ವ ಭಾರತವನ್ನು ನಡುಗನ್ನಡದಲ್ಲಿಬರೆದ ಕವಿ  ರಸರತ್ನಾಕರವನ್ನು ಹಳಗನ್ನಡದಲ್ಲಿ ಬರೆದಿದ್ದಾನೆ. ಈ ಕವಿಯ ಶ್ರೇಷ್ಠ ಕೃತಿ ಹಾಗೂ ಸ್ವತಂತ್ರ ಕೃತಿ ಸಾಳ್ವ ಭಾರತ.ಇದು ೧೬ ಪರ್ವಗಳ ಹಾಗೂ೬೪ಸಂಧಿಗಳ ಉದ್ಘಕೃತಿ. ಈ ಕಾವ್ಯದಲ್ಲಿ ಶೇಕಡಾ ೯೨ ರಷ್ಟು ಭಾಮಿನೀ ಷಟ್ಪದಿ, ಜತೆಗೆ ವಾರ್ಧಕ ಷಟ್ಪದಿ, ಪರಿವರ್ಧಿನಿಯನ್ನೂ ಬಳಸಿದ್ದಾನೆ. ಜೊತೆಗೆ ಕಂದ ಮತ್ತು ಸ್ವಲ್ಪ ಭಾಗ ಗದ್ಯವನ್ನೂ ಸೇರಿಸಿದ್ದಾನೆ. 


ಸಾಳ್ವ ಭಾರತಕ್ಕೆ ನೇಮಿನಾಥ ನಾಯಕನಾದರೂ ಅವನ ಕಥೆ ಬರುವುದು ಬಹಳ ಕಡಿಮೆ. ಸುಮಾರು ಹತ್ತು ಸಂಧಿಗಳಲ್ಲಿ ಅವನ ಕಥೆಯಿದ್ದರೆ ಉಳಿದ ೫೪ ಸಂಧಿಗಳಲ್ಲಿ ನೇಮಿನಾಥನ ಬಂಧುಗಳ ಕಥೆಬಂದಿದೆ.ಇದರಲ್ಲಿನ ಒಟ್ಟು ಪದ್ಯಗಳ ಸಂಖ್ಯೆ

೩೪೩೭ .ಇವುಗಳಲ್ಲಿ ೩೨೧೩  ಭಾಮಿನೀ ಷಟ್ಪದಿ. ಪರಿವರ್ಧಿನಿ ಷಟ್ಪದಿ೫೦,( ಸಂಧಿ ೬೩) ವಾರ್ಧಕ ಷಟ್ಪದಿ ೧೭೪ (ಸಂಧಿಗಳು ೨೪, ೨೫, ೨೭, ಮತ್ತು ೬೨ ) 


ಸಂಧಿ ೧, ಭಾಮಿನೀ ಷಟ್ಪದಿ, 


ಶ್ರೀಮದಮರಾದೀಶ ವಂದಿತ 

ನೇಮಿನಾಥ ಚರಿತ್ರವನು ಪು 

ಣ್ಯಾಮೃತವನಾಲಿಪರ ಕರ್ಣರಸಾಯನವನುಸುರುವೆನು॥ಪ॥ 


ಅಷ್ಟ ಕರ್ಮವನುಱೆ ಕೆಡಿಸಿ ಸುಗು 

ಣಾಷ್ಟಕಮನಾಂತೇಕ ಸಮಯದೊ 

ಳಷ್ಟಮಾವನಿಯಗ್ರ ತನುವಾಯದೊಳೆ ಸಲೆ ನೆಲಸಿ॥ 

ತುಷ್ಟರಾ ಛಾಯಾಪ್ರತುಮೆವೊಲು

ಶಿಷ್ಟ ರೂಪಾರೂಪರೀಗೆಮ

ಗಿಷ್ಟ ಸಿದ್ಧ ಗುಣಾಷ್ಟಕಮನಾ ಸಿದ್ಧರನುಪಮರು॥೨॥ 


ತರದಿನೆಂಟೆಂಟಾವ ಬೋಧ ಸು 

ದರುಷನಂ ಪನ್ನೆರಡು ಪದಿಮೂ 

ರುರು ತಪಂ ಚಾರಿತ್ರಮೈದುಂ ಸತ್ವವೆಂದೆಂಬಾ॥ 

ಪರಮ ಪಂಚಾಚಾರದೊಳೆ ಭ 

ವ್ಯರನುಮೊಡನೆಯಿದಿಪ ಸದಾಚಾ 

ರ್ಯರೆವಲಂ ಶಿಕ್ಷಿಸುಗೆ ದಯೆಯಿಂದೆಮ್ಮನಾತೆಱದೀ॥೩॥


ನಿನಗೆ ಕೇಳ್ನಿರ್ದೋಷಿ ಸಕಲ 

ಜ್ಞನೆ ಸದಾಪ್ತನುಭಯಪರಿಗ್ರಹ 

ವನೆ ತೊಱೆದು ರತ್ನತ್ರಯೋತ್ತಮ ವೃತ್ತನೆಸಗುರು॥ 

ಸುನಯಯುತಮಪಹಿಂಸಮವಿರು

ದ್ಧನುತ ಶಾಸ್ತ್ರಮೆ ಶಾಸ್ತ್ರಮೆಂದಱಿ

ವಿನೆಗಮೋದಿಸಿದಮಳದೇಶಕಮೋದಿಸುಗೆ ನಮ್ಮಾ॥೪॥ 


ಸರ್ವ ಜೀವ ದಯಾಂಬುಧಿಗಳ

ಸರ್ವ ಸಂಗರು ಮೌನ ನಿರತರು 

ಸರ್ವಸುವ್ರತಶೀಲ ಗುಣಮಣಿಹಾರ ಭೂಷಣರು॥ 

ಸರ್ವಸಂಧ್ಯಾಕಾಲಯೋಗರು

ಸರ್ವ ಚಾರಿತ್ರಮನೆ ಸಾಧಿಪ 

ಸರ್ವ ಸಾಧುಗಳೀಗೆಮಗೆನಿಮ್ಮಲ ಚರಿತ್ರವನೂ॥೫॥ 


ಸಕಲತತ್ವ ಸುವಸ್ತು ಭಾಷಾ 

ತ್ಮಕ ವಿವೃತ ಕಾಲತ್ರಯಮಹಿಂ 

ಸಕ ಮತಾಲೋಷ್ಠಪುಟಕರ್ಮಸುಸಪ್ತ ಭಂಗಿಯುತ॥ 

ಸಕಲ ಬೋಧನ ದಿವ್ಯವಾಗ್ವಧಿ 

ನಿಕರ ಶರನಿಧಿ ಚರಮತನು ಬೋ 

ಧಕರನಿಪ ವರದತ್ತ ಗಣಧರರೀಗೆಮಗೆ ಮತಿಯಾ॥೬॥ 


ಕರ್ಮ ವೆಪಿನ ದವಾಗ್ನಿ ಸಜ್ಜನ 

ಕರ್ಮಮಪಹಿಂಸಂ ಸಮಸ್ತ ಬು 

ಧರ್ಮುದದಿ ಧರಿಯಿಸುವ ರತ್ನತ್ರಯ ಸುರತ್ನ ಗಿರೀ॥ 

ಪೆರ್ಮೆವಡೆದುದನಾದ್ಯನಂತಮ

ದೊರ್ಮೆಯಿಂ ಧಾರ್ಮಿಕರನಾ ಜಿನ 

ಧರ್ಮಮದೆ ತಾಂ ದಾಟಿಸುಗೆ ಕುಂದದೆ ಭವಸಮುದ್ರವನೂ॥೭॥ 


ಮರಕತಚ್ಛವಿ ದೇಹರುಚಿಸ 

ತ್ಕರವಿಧೃತ ಚೂತ ಸ್ತಬತೆಱೆ 

ಕರಣದಿಂ ತನುಜಾತಮಸ್ತಕ ನಿಹಿತವಾಮಕರೇ॥ 

ಪರಮಜಿನಪದ ಭಕ್ತೆ ವರಕೇ 

ಸರಿಸುವಾಹಿನಿ ಮಾಡುಗೀ ಬಂ 

ಧುರಕೃತಿಗೆ ಕೂಷ್ಮಾಂಡಿಯಕ್ಷಿ ನಿರಂತರಾಯವನೂ॥೮॥ 


ತನುರುಚಿಯೆ ವೈಢೂರಕಾಂತಿಯ 

ನನುಕರಿಸಿ ಬಲಗೈಯೊಳೊಪ್ಪಿರೆ 

ವನಜವೇಡಯ ಮೆಱದಿರೆ ಮಾತುಳುಂಗ ಫಲ॥ 

ಜಿನರಥಮನಿರೆನೆಡಿಯಿಪೊಡೆ 

ಮುಖ್ಯವೆಗಡೆನ್ನ ಮನೋರಥ 

ಮನೋಳ್ಪೆಮಂ ಸರ್ವಾಣ್ಣ ಯಕ್ಷನೆ ನಡೆಯಿಸುಗು ಮುದದಿ॥೯॥ 


ವಿತತ ಗುಣಗಣನಿಳಯ ವರಜಿನ 

ಪತಿ ಮುಖಾಂಬುಜಜನ್ಮೆ ಚಿನ್ಮಯೆ 

ಸತತ ಸಕಲಕಲಾ ಪ್ರವೀಣೆ ಜಗತ್ರಿತಯ ವಂದ್ಯೇ॥ 

ಗತದುರಿತೆ ಸುಗತಪ್ರದಾಯಿನಿ 

ನುತ ಧವಲತರವರ್ಣೆ ವರ ಭಾ 

ರತಿ ಮದೀಯಾನನುಸುರಂಗದೊಳೊಲಿದು ನರ್ತಿಸುಗೆ॥೧೦॥ 


ಇಳೆ ಪೊಗಳ್ವ ಗುಣದತಿಶಯದ ಕೇ 

ಕೇವಳಿಗಳೆಸೆವನುಬದ್ಧ ಕೇ 

ವಳಿಗಳ ವಿಮಲಶೃತಕೇವಳಿಗಳೀರೈದು ಪೂರ್ವರನು॥ 

ತಳೆದು ಪನ್ನೊಂದಂಗವಾಂತು 

ಜ್ಜಳಿಪ ಪ್ರಥಮಾಂಗಮನೆ ಧರಿಯಿಸಿದ 

ಮಳರಹಿತರಡಿದಾವರೆಗಳನು ವಂದಿಸುವೆನೊಲಿದು॥೧೨॥ 


ಕ್ಷಮೆಗೆ ನಾಲ್ವೆರಲಧಿಕ ತಮ್ಮಾ 

ಕ್ಷಮೆಯೆನಿಪವೊಲಿಳೆಯನಂಘ್ರಿಗ 

ಳಮರ ದಿಸೆಪಾ ಕುಂಡಕುಂದಾಚಾರ್ಯರಂಘ್ರಿಗಳಾ॥ 

ಕ್ರಮದುಮಾಸ್ವಾತಿ ತ್ರಿವಿದ್ಯಾ 

ರಮಣರಾ ತತ್ವಾರ್ಥಸೂತ್ರವ 

ಸಮೆದರಾ ಪಜ್ಜಳಿಸುವಡಿಗಡಿಗಡಿಗೆ ವಂದಿಸುವೆ॥೧೫॥ 


ಶ್ರೀಮದಮಳ ಸಮಂತ ಭದ್ರ 

ಸ್ವೃಮಿ ಕವೆಪರಮೇಷ್ಠಿ ವಿದ್ಯಾ 

ಸ್ವಾಮಿ ಪಂಚತ್ಪೂಜ್ಯಪಾದಸ್ವಾಮಿಚರಣಗಳಾ॥ 

ಆ ಮಹಾಪತ್ತಡರೆ ಭವ್ಯ 

ಸ್ತೋಮಮುವನುದ್ಧರಿಸಿದುರುಗುಣ

ಧಾಮರೆಲ್ಲಚಾರ್ಯರಡಿಗಳನೊಲಿದು ವಂದಿಸುವೆ॥೧೬॥ 


ವೀರಸೇನಾಚಾರ್ಯರೊಪ್ಪುವ

ಸೂರಿ ಜಿನಸೇನರ ಜಿನಾಗಮ 

ಸಾರ ಸಿದ್ಧಾಂತಿಗಳೆನಿಪ ವರನೇಮಿಚಂದ್ರಮರಾ॥ 

ಮಾರಮದಹರ ರಾಮಸೇನರು 

ದಾರಗಣದಕಳಂಕ ದೇವರ 

ಚಾರುಸುಗುಣಾನಂತವೀರ್ಯರ ಪದಕೆ ನಮೋಯೆಂಬೇ॥೧೭॥ 


ಸಂದ ವಿದ್ಯಾನಂದ ಮಾಣಿಕ 

ನಂದಿಶಭಟ್ಟಾರಕರ ಮೆಱೆವ ಪ್ರ 

ಭೇಂದುಗಳ ವರರಾಮಚಂದ್ರರ ವಾಸವೇಂದುಗಳ॥ 

ಕುಂದದಾ ಗುಣಭದ್ರದೇವರ 

ವಂದಿಸುರತರು ಮಾಘನಂದಿಗ 

ಳಂದದಡಿಯುಗ ವೆಳಗುಗೆ ತೊಳಗಿ ಮನ್ಮನವಾ॥೧೮॥ 


ಮಂಡಲದ ವರರಾಜಗುರುಗಣ

ಸೌಂದರೆನಿಸುವ ಚಾರುಕೀರುತಿ 

ಪಂಡಿತಾಚಾರ್ಯರ ಪದಂಗಳನಳ್ತಿಯಿಂ ನಮಿಸಿ॥ 

ಮಂಡಲೇಶ್ವರ ವಂದಿತರ ನೆಱೆ 

ಹಿಂಡುವಾದಿ ಪ್ರಥಮ ವಚನವ 

ಖಂಡ ಪರಶು ವಿಶಾಲ ಕೀರ್ತಿಗಳಂಘ್ರಿಗೆಱಗುವೆನೂ॥೧೯॥ 


ನೆಗಳ್ದದೇಶೀಗಣ ವಿಜಯಕೀ 

ರ್ತಿಗಳ ತನುಜರಜಾತರೂಪರ 

ವಿಗತ ಬಾಹ್ಯಾಭ್ಯಂತರ ಗ್ರಂಥರ ದಯಾಪರರ॥ 

ಮಿಗೆ ಮೆಱೆವ ಕಲಿಕಾಲ ಜಿನರೆನೆ 

ಸೊಗಯಿಪೆನ್ನಯ ಗುರುಗಳಾ ಪದ 

ಯುಗಕೆ ಭಕ್ತಿಯೊಳೆಱಪೆನಾಶ್ರುತಕೀರ್ತಿ ದೇವರನೂ॥೨೦॥


ಪ್ರಣುತಗುಣಿಗಳ ಜಾತರೂಪಾ 

ಗ್ರಣಿಗಳತ್ಯುತ್ತಮರ ಮಹಿಭೂ 

ಷಣಮುನಿಯ ಪಾಲಾದಿದೇವರ ಮೇರುನಂದಿಗಳಾ॥ 

ಪಣೆದಣುವ್ರತರಾಗಿಯುಂ ವರ 

ಗುಣಧರಪ್ರಾಯರೆ ದಲೆನಿಸುವ 

ಗುಣಸಮುದ್ರ ಸಮಂತಭದ್ರರ ಚರಣಕೆರಗುವೆನೂ॥೨೧॥ 


ನಟ್ಟನಡವಿಯೊಳು ಹಾವುಹುಲಿಕಲಿ 

ಜೆಟ್ಟಿ ಗಂಗಳ ನೆರವಿಯೊಳು ಕಡು 

ಬೆಟ್ಟ ಬೇಸಗೆ ಮಾಗಿ ಮಳೆಗಾಲದೊಳುಪರ್ವದಲಿ॥ 

ನೆಟ್ಟನೋರ್ವನೆ ಬೈಗಿನಿಂ ರವಿ 

ಪುಟ್ಟುವಂನಿಗ ಜಾನ ಜಪವಳ 

ವಟ್ಟು ನಿಲುವಾ ಪಾಲಕೀರ್ತಿ ನಮೋಸ್ತುಗೆಱಗುವೆನು॥೨೨॥ 


ವರ್ತಮಾನ ಸಮಸ್ತ ಜಿನಮುನಿ 

ಪೋತ್ತಮರ್ಗೆನಮೋಸ್ತು ಜಿನಮತ 

ವರ್ತಿಗಳ ನೂತನ ಪುರಾತನ ಕವಿತತಿಗೆ ನಮಿಪೆ॥ 

ಪೆತ್ತ ಮದ್ಗುರು ಧರ್ಮಚಂದ್ರ ಬು 

ಧೋತ್ತಮರ ಪದಕೆಱಗಿ ಸೂರಿಸು 

ವೃತ್ತರೆಲ್ಲರನಳ್ತಿಯಿಂ ಬಲಬಂದು ವಂದಿಸುವೆ॥೨೩॥ 


ಮಿಸುಪ ಜಂಬೂದ್ವೀಪಮೇರುವಿ 

ನೆಸೆವ ತೆಂಕಣ ಭರತದಾರ್ಯೆಯೊ

ಳೆಸೆವ ತೌಳವ ಹೈವ ಕೊಂಕಣ ದೇಶದಧಿನಾಥಾ॥ 

ವಸುಧೆ ಕೀರ್ತಿಪ ನಗಿರ ನಗರವ 

ನೊಸೆದು ರಾಜ್ಯಂ ಗೆಯ್ದರೆಲ್ಲರೊ

ಳಸದೃಶಂ ಸಮ್ಯಕ್ತ್ವ ಚೂಡಾಮಣಿಯಾದರೆನಲೂ॥೨೪॥  


ವನಜಮುಖಿಯಾ ಲಕ್ಷ್ಮಿಯುದರದಿ

ಜನಿಸಿದುನ್ನತನಮಲ ಜಿನಮತ 

ವನಧಿವರ್ಧನಚಂದ್ರನಭಿನವನಿಂಬನಿನತೇಜಾ॥ 

ಜನನುತ ಮಹಾಮಂಲೇಶ್ವರ 

ನನುಪಮಿತ ಗುಣಧಾಮನೀಭೂ

ವನಿತೆಯನು ಪಡೆದಾಳು ಭೈರವರಾಯನಂದೆಸದಾ॥೨೫॥


ಖ್ಯಾತೆ ಪಟ್ಟದರಾಣಿಯಭಿನವ 

ಸೀತೆಯೆನಿಸಿದ ನಾಗಲಾಂಬಿಕೆ 

ಯಾತನೂಭವ ನವಮನೋಭವ ಸಂಗನೃಪವೆರಸಿ॥ 

ಪ್ರೀತಿಯಿಂ ಪಲಕಾಲವಾ ರಘು 

ಜಾತನೆನೆ ಧರ್ಮಾರ್ಥಕಾಮವ 

ನೋತು ಸಾಧಿಸಿ ಭೈರವೇಶ್ವರನರಸುಗೆಯಿದನದಾ॥೨೬॥ 


ಆ ನರಾಧಿಪನನುಜನಿಳೆ ಪೊಗ 

ಳ್ವಾ ನಗಿರನಗರವನು ಕೂರ್ತುಮ

ನೋನುರಾಗದಿ ಚಿಕ್ಕಭೈರವನೃಪತಿ ಪಾಲಿಸಿದಾ॥ 

ಆ ನೃಪನ ಚಿಕ್ಕಂಮ ಪಡೆದಳು

ಮಾನನಿಧಿ ಮಲಿದೇವಿಯನು ವಸು 

ದಾನಮೇರುವೆನಿಪ್ಪ ಪುತ್ರನನಾತನಾರೆನಲೂ॥೨೭॥ 


ಕುವಲಯಪ್ರಿಯ ವಂಶಬಯ್ಯ ನೃ 

ಪವರನಂಗನೆ ಶಂಕರಾಂಬಿಕೆ 

ಅವರಗರ್ಭಸುಧಾಂಬುನಿಧಿ ಸಂಭವಸುಧಾಕಿರಣ॥ 

ಕವಿಸರೋವರ ರಾಜಹಂಸ 

ಪ್ರವರ ಜಿನಧರ್ಮಧ್ವಜಂ ಪ್ರಾ 

ಭವದ ದಕ್ಷಿಣ ಸಿದ್ಧ ಸಿಂಹಾಸನ ನರಾಧೀಶ॥೨೮॥ 


ಪ್ರಣುತನಾ ತ್ರಿಭುವನ ಕಠಾರಿ 

ತ್ತ್ರಿಣಯನಂ ಸಮ್ಯಕ್ತ್ವ ಚೂಡಾ 

ಮಣಿ ವಿಮಲ ಜಿನದೇವರಥಯಾತ್ರಾ ಪ್ರಭಾವಕನು॥ 

ಗುಣವಿಧಾನಂ ತ್ಯಾಗವಿದ್ಯೆಯೊ 

ಳೆಣೆಯದಾರೈ ಜಗದ ಗುರುವೆನೆ 

ಫಣಿಪಭೋಗದ ಸಾಳವ ಮಲ್ಲ ನರೇಂದ್ರನದನಾಳ್ವಾ॥೨೯॥ 


ಪ್ರಕಟಹರಧರಣಿ ಪ್ರಸೂತಾ 

ಧಿಕಬಿರುದ ಮುಕ್ಕಣ್ಣ ಕಾದಂ 

ಬಕನೆನಿಸುವಾ ಶಾಂತದಂಡಾಧೀಶನರ್ಧಾಂಗಿ॥ 

ವಿಕಚ ಸರಸಿಜವದನೆ ಲೋಲಾಂ 

ಬಿಕೆಯೆನಿಪ ಮಲಿದೇವಿಯಾತ್ಮಜ 

ನಕೃತಕಶ್ರೀ ಸಾಳ್ವ ದೇವ ನೃಪಾಲನೊಪ್ಪಿದನು॥೩೦॥ 


ಅಳಿಯನೆಂದೊಡೆ ಅಳಿಯನೇ ಚಲ 

ವಳಿಯ ಚಾಗವನಳಿಯ ಪಾಳಿಯ 

ನಳಿಯ ಪಂಥವನಳಿಯ ಪೆರ್ಮೆಯನಳಿಯ ಧರ್ಮವನೂ ॥ 

ಅಳಿಯ ಮಾನ್ಯರನಳಿಯನೆನೆಸುವ

ಸುಲಭ ಸಾಳುವ ಮಲ್ಲಭೂವರ

ನಳಿಯ ದೇವೇಂದ್ರನೆ ಸಂರಾಜ್ಯವನಾಳ್ವ ಕಾಲದಲಿ॥೩೧॥ 


ಜಿನಸಮಯವಾರಾಶಿಚಂದ್ರರು 

ಜಿನರ ಪೂಜೆಗೆ ಶಕ್ರರೆಲ್ಲರು 

ವಿನುತ ದಾನಕ್ಕೆಲ್ಲರುಂ ಶ್ರೇಯಾಂಸರೆನಿಸುವರು॥ 

ಅನಘವೃತ್ತರು ಸಾಳ್ವರಾಜೇಂ

ದ್ರನ ನಗಿರ ನಗರದೊಳಗಾ ಧನ 

ದನನಿಳಿಪ ಧನಪಾಲರಗಣಿತ ಭವ್ಯರೊಪ್ಪಿದರೂ॥೩೨॥ 


ಸೃಷ್ಟಿಗಾತನೆ ವಿವಿಧ ವಿದ್ಯೆಗೆ 

ನೆಟ್ಟನೋರ್ವನೆ ಸಾರ್ವಭೌಮನು 

ದಿಟ್ಟನೆನಿಸಿದ ಸಾಳ್ವಮಲ್ಲ ನರೇಂದ್ರ ನಾನವನಾ॥ 

ಪಟ್ಟದಾ ಕವಿಯೆಂದೊಡೆಣ್ದೆಸೆ 

ಮುಟ್ಟೆ ಪಸರಿಪುದರಿದೆ ಗುಣವಳ 

ವಟ್ಟ ನಿರ್ಮಲ ಕೀರ್ತಿಯಾತನ ಸುಕವಿಸಾಳುವನ॥೩೩॥


ರಾಜಸಭೆಯೊಳು ಮಾನ್ಯ ಸತ್ಕವಿ 

ರಾಜಿಯೊಳು ಮಿಗೆ ಪೂಜ್ಯನುರುಜಿನ 

ರಾಜ ಪದನಿಧಿ ದೀಪವರ್ತಿ ವಿನೇಯ ವಾತ್ಸಲ್ಯಾ॥ 

ಸಾಜ ಕವಿ ಕರ್ಣಾಟ ಲಕ್ಷಣ 

ದೋಜೆಗನುಕವಿ ಸಾಳ್ವನಿಂ ಜಿನ 

ರಾಜ ಚರಿತೆಯ ಭಾಮಿನೀ ಷಟ್ಪದಿಯಲುಸುರುವೆನು॥೩೪॥ 


ಸುರಸ ಸಾಳುವ ದೇವಭೂಪತಿ 

ನಿರವಿಸಿದನೇಕೆನಲು ಮುನ್ನವೆ 

ವಿರಚಿಸಲು ಬೆಸಸಿದನು ಸಾಳುವ ಮಲ್ಲನದಱಿಂದ॥ 

ಹರುಷದಿಂ ಜೀವವೆಂದು ವಿದ್ವಾಂ 

ಸರುಗಳನುಮತದಿಂದ ಪೇಳ್ವೆನು 

ಪರಮ ನೇಮೀಶ್ವರ ಚರಿತ್ರವನಿಂತು ಭಕುತಿಯಲೀ॥೩೫॥ 


ಶರಧಿಯನು ತೋಳ್ವಲದೋಳಿಸುವೊ 

ಡುರವಣಿಪ ಮರುಳಂತೆ ದುರ್ಬಲ 

ನಿರದೆ ನಾಂ ಹರಿವಂಶ ಕುರುವಂಶಾರ್ಣವವನೆನ್ನಾ

ದುರುಳಮತಿಯ ಸಹಾಯದಿಂದು 

ತ್ತರಿಸ ಬಗೆದನು ಸಂಸರಣ ಸಂ 

ಹರಣ ಕಾರಣವಿದೆ ದಲೆಂದಱಿದೆಸಗದವನಾರೋ ॥೩೬॥ 


ಒಂದು ವೇಳೆಯೊಳೊಮ್ಮೆ ಜಿನಜಿನ 

ಎಂದವನೆ ಕೃತಪುಣ್ಯನೆಂದೊಡೆ 

ಕುಂದದಾವಗಮಾ ಜಿನೇಂದ್ರಕಥಾ ಪ್ರಸಂಗವನೇ ॥ 

ಚಂದದಿಂ ಭಾವಿಸುವ ಚಂದದೊ 

ಳೊಂದಿಸುವ ಬಾಜಿಸುವ ಪರಮಾ 

ನಂದವೆಯಿದುವೆ ಕಬ್ಬಿಗನವೊಲು ಧನ್ಯನವನಾರೋ॥೩೮॥ 


ಪಡೆದು ಸಮ್ಯಗ್ದೃಷ್ಟಿಯೊಳು ಪು 

ಟ್ಟಿದಕವಿತ್ವವು ಚಂದ್ರನೊಳು ಪು 

ಟ್ಟಿದ ಸುಧಾ ಕಿರಣಂಗಳಂತತಿ ಸೇವ್ಯ ಸುಖದಮಡೂ॥

ಪುದಿದ ಮಿಥ್ಯಾ ವೃಷ್ಟಿಯೊಳು ಪು 

ಟ್ಟಿದ ಕವಿತೆ ಕಿಂಪಾಕದೊಳು ಪು 

ಟ್ಟಿದ ಫಲದವೊಲು ಸೇವಿಪರ್ಗೆ ಪಾಕದೊಳು ಹಿತಕರವೇ॥೩೯॥


ಪಣದ ಲಾಭದಿ ಕೀರ್ತಿ ಪೂಜಾ 

ಪ್ರಣಯದಿಂ ಹಿತವಱಿಯದೊಪ್ಪುವ 

ಗುಣವನೊಕ್ಕರೆ ಕಾಸುವೀಸವನೀವ ಮಾನವನಾ ॥ 

ಗುಣದ ಕಣಿ ದೇವೇಂದ್ರ ಚಿಂತಾ 

ಮಣಿಯೆನುತ ಕಾಲ್ಗೆಡದು ಬೇಳಾ 

ದೆಣಿಕೆ ಸಾಕೆಂದನಘ ಚರಿತೆಯನುಸುರಲೊಡರಿಸಿದೇ॥೪೦॥ 


ನೇಮಿನಾಥನ ಚರಿತವೀ ಕೃತಿ 

ನಾಮಮದಱಧಿನಾಥನೊಪ್ಪುವ

ನೇಮಿಜಿನನೀ ಪುಣ್ಯಕತೆಯ ಸುಧಾರಸವನೀಂಟೀ॥ 

ಪ್ರೇಮವಾದರಿಸುವರೆ ಭವ್ಯ 

ಸ್ತೋಮವಿದು ಜಿನಭಕ್ತ ಸುಕವಿ 

ಪ್ರೇಮ ಶತವೀ ಸಾಳ್ವಕೃತವೆನೆ ಮೆಚ್ಚದವರಾರೋ॥೪೧॥ 


ಪಳಿವನಲ್ಲದೆ ಮೆಚ್ಚನೆಂದುಂ 

ಮಳಿನ ದುರ್ಜನನಾ ಮಹಾಕವಿ 

ಗಳ ಕವಿತ್ವಮನೊಳ್ಳಿದರೆ ಕೇಳಾಯೆನಿಪ್ಪುದನೂ॥ 

ಇಳೆಯೊಳವಗದು ಸಹಜವೆಂತೆನೆ

ತಿಳಿದ ಜೊನ್ನಕೆ ಜೊನ್ನವಕ್ಕಿಗ 

ಳೆಳಸುವಂತೆಳಸುವುದೆ ಕರಳದೆ ರಾತ್ರಿಜಾಗರನೂ॥೪೨॥ 


ಧಾರಣೀ ಸುತರಭಯಸೂರಿಕು 

ಮಾರರುತ್ತಮರಾಗಮತ್ರಯ 

ಸಾರ ಸರ್ವಜ್ಞರು ವಿನೇಯ ನೃಪಾಲವಂದಿತರೂ॥ 

ಆರಯಲ್ ಪ್ರತಿವಾದಿಗಜಕಂ 

ಠೀರವರು ವರಗುಮ್ಮಟಾರ್ಯರು 

ದಾರರವಧಾರಿಸಿದರೆನಲೀ ಕೃತಿಯೆ ಸುಕೃತಿಯಲೇ॥೪೩॥ 


ನವರಸದ ನೆಲೆಮಧುರಭಾವದ 

ತವದಲಂಕಾರಂಗಳಿಂದೊ 

ಪ್ಪುವ ವಿಮಲಲಲಿತಾಂಗ ಮೃದುಪದರಚನೆ ನೆಱೆಮೆಱೆವಾ॥ 

ವಿವಿಧ ಗುಣಗಣನಿಳಯೆ ಸೊಬಗಿನ 

ಸವಿಯ ಸೈವೆಳಗಱೆವ ಮತ್ಕೃತಿ 

ಚದುರರ ಮನವನಿರ್ಕುಳಿ ಗೊಳುವುದಚ್ಚರಿಯೇ॥೪೪॥ 


ಱೞಕುೞಕ್ಷಳಲತ್ವರೇಪೋ 

ಜ್ವಳರಕಾಱ ಪ್ರಾಸ ಭೇದಂ 

ಗಳ ಸ್ವರವ್ಯಂಜನ ವಿಭಕ್ಕಿ ಸಮಾಸ ಶಿಥಿಲಗಳಾ ॥ 

ಪೞಿಯನೇನುಂ ಪಾಡುಗವಿತೆಗ 

ಳೊಳು ವಿಚಾರೆಸ ಸಲ್ಲವೆಂಬ 

ಗ್ಗಳದ ಪೞಗಬ್ಬಿಗರಪೇೞ್ಕೆಯ ತೆಱದಿ ವಿರಚಿಸದೇ॥೪೫॥ 


ಕೊಲಿಸಿದಾತನೆ ದೇವ ಕೊಂದ 

ಗ್ಗಳಿಕೆಯಿಂದವೆ ಪುಣ್ಯಪುರುಷರು 

ಪಲವು ಮಾತೇನೈವರೊಡವುಟ್ಟಿದರು ಸನ್ನತರೂ॥ 

ಲಲನೆಯೋರ್ವಳನಾಳ್ದರೆಂಬೀ 

ಪೊಲೆನುಡಿಗೆ ಕಿವಿಗುಡದೆ ಸಜ್ಜನ 

ರೊಲಿದು ಚಿತ್ತೈಸೂದು ಜಿನಪಾವನ ಚರಿತ್ರವನೂ೪೬॥ 


ಆದಿಪರ್ವಸದನ್ವಯವುಪೆಂ 

ಪಾದ ವಸುದೇವಪ್ರಯುತ ಕೃ 

ಷ್ಣೋದಯಾಖ್ಯೆಯು ಕಂಸಮರ್ದನವಭ್ಯುದಯ ಪರ್ವಾ॥ 

ಓದುವಾ ಪ್ರದ್ಯುಮ್ನ ವೀಂದ್ರಕೃ 

ತಾದರದ ಕಲ್ಯಾಣ ಪಾಂಡವ 

ಜೂದಿನಾರಣ್ಯವು ಜಗದೊಳುದ್ಯೋಗ ಪರ್ವವಿದೂ॥೪೭॥ 


ನೆರೆದಯುಧವು ಚಕ್ರಪರ್ವವು

ವರಸುದೀಕ್ಷಾ ಪರ್ವ ಭಾಭಾ 

ಸುರತ್ರಿಲೋಕ ಸಭಾಹ್ವಯವು ನಿರ್ವಾಣ ಪರ್ವವಿವೂ॥ 

ಪರಮ ನೇಮಿ ಸುಧಾರಕನ ವಿ 

ಸ್ಫುರಿತ ಷೋಡಷ ಕಳೆಗಳೆನೆ ತ 

ಚ್ಚರಿತೆಯಲಿ ತತ್ಕ್ರಮದಿ ಷೋಡಷ ಪರ್ವವೊಪ್ಪುವವೂ॥೪೮॥ 


ಎಲೆ ಮಗಧನೃಪ ಕೇಳು ಕಡೆಮೊದ 

ಲಳಿದ ಗಗನದ ನಡುವೆ ಪಿರಿದುಂ 

ಬಳಸಿದಾ ವಾಯುತ್ರಿತಯದೊಳರ್ದ್ಧಮದ್ದಳೆಯಾ॥ 

ತಲೆಯ ಮೇಗಡೆ ನಿಲಿಸಿದಿಡಿಮ 

ದ್ದಳೆಯೆನಲದಸ್ತಿರ್ಯಗೂರ್ಧೋ

ಜ್ವಳ ವಿಭೇದದಿ ಮೂಜಗಂ ಷಡ್ದ್ರವ್ಯಭರಿತವದೂ॥೫೦॥


ಬಗೆದಱಿವೊಡೀರೇಳು ರಜ್ಜುವ 

ನೊಗೆದ ಮೂರುಂ ಲೋಕದೊಳು ಪೆ 

ರ್ಮೆಗೆ ತವರ್ಮನೆಯಾದ ಮಧ್ಯಮಲೋಕಮಧ್ಯದಲೀ॥ 

ಸೊಗಯಿಪುದು ತಾಂ ಲಕ್ಷ ಯೋಜನ 

ದಗಲವದು ಲವಣಾಬ್ಧಿ ಚಕ್ರದೊ 

ಳಗೆ ಮೆರೆವುದಾ ಜಂಬೂದ್ವೀಪವಿಳೇಶ ಕೇಳೆಂದಾ॥೫೧॥ 


ಬಳಸಿ ತದ್ವಿಗುಣ ದ್ವಿಗುಣದು 

ಜ್ಜಳಿಸಿ ಶರನಿಧಿ ದ್ವೀಪವವು ಕೈ 

ಗಳಿಯಸಂಖ್ಯಾತಂ ಸ್ವಯಂಭೂರಮಣ ಪರ್ಯಂತಾ॥ 

ಚಳಿಸದಿಪ್ಪವು ನಾಡು ನಗರದಿ 

ಕುಳದಿ ಮೆಱೆದಾ ಜಂಬುದ್ವೀಪಕ

ಮಳದ ಕರ್ಣಿಕೆಯಂತೆ ಮೇರುಮಹೀಂದ್ರವೊಪ್ಪುವುವೂ॥೫೨॥ 


ಜನಪ ಕೇಳಲೆಸಾಸಿರದ ಯೋ 

ಜನವನಿಳೆಯೊಳನಟ್ಟು ವೃತ್ತದಿ 

ಕನಕಗಿರಿಯಾ ತೊಂಬತೊಂಬತು ಸಾವಿರವನೇಳೂ॥ 

ವನಚತುಷ್ಕ ಚತುಷ್ಕ ಮೇಖಲೆ 

ಜಿನಭವನ ಪದಿನಾರು ಸುರತರು 

ವನಿಮಿಷರ ತಿಂತಿಣಿ ನಿರಂತರದಲ್ಲಿ ಶೋಭಿಸುವುದೂ॥೫೩॥ 


ಜಿನರ ಜನ್ಮಸ್ಥಾನ ಭವ ಪಾ 

ವನ ಜಲವೆ ನಿರ್ಜರಜಲಂ ಶಿಲೆ 

ಕನಕಮಣಿ ಪಕ್ಕಾಡುವವರಿಂದ್ರಾದಿ ಸುರನಿಕರಾ॥ 

ವನದ ತರು ಸುರತರು ರವಿಂದುಗ 

ಳನುದಿನಂ ಬಲಬಪ್ಪರೆನೆ ತಳೆ 

ದನುಪಮಾದ್ರಿಯನುಪಮಿಸುವಕವೀಂದ್ರನವನಾರೋ॥೫೪॥ 


ಅದರ ಪೂರ್ವಾಪರದೊಳೆಸೆದಿ

ಪ್ಪುದು ವಿದೇಹಮಿದೆರಡುಮವಱೊಳ 

ಗುದಯಿಸಿರ್ಪುದು ನೋಡೆ ಮೂವತ್ತೆರಡು ನಾಡುಗಳೂ॥ 

ಪಡೆದಿಹುದು ಜಿನಸಮದ ಶ್ರುತಿತಾ 

ನೊದವಿಹುದುಜಿನ ಧರ್ಮಮೊಂದ 

ಲ್ಲದೆ ಕುಧರ್ಮದ ವಾರ್ತೆಯಲ್ಲಿಲ್ಲೆಂದನಾ ಮುನಿಪಾ॥೫೫॥ 


ಅದರೊಳಪರ ವಿದೇಹದೊಳು ಪೆಂ 

ಪೊದವಿಹುದುಶೀತೋದೆಯೆಂಬಾ 

ನದಿಯದಱ ಬಡಗಣತಡಿಯ ನಾಡೆಂಟಱೊಳು ಮೆಱೆವಾ॥ 

ನದಿ ಸರೋಜ ಸುಗಂಧಿಬನ ಮೃಗ 

ಮದ ಸುಗಂಧಿ ಮಹಾವೆಪಿನ ಗಜ 

ಮದ ಸುಗಂಧಿಯೆನಿಪ್ಪ ಗಂಧಿಳ ವಿಷಯವೆಸೆದಿಹುದೂ॥೫೬॥ 


ಅಲರ್ದ ತಾವರೆಗೆರೆಗಳಿಂ ಕಂ 

ಮಲರ್ದವೂದೋಂಟಂಗಳಿಂ ಕ 

ತ್ತಲಿಸಿ ಬೆಳದೆಳೆ ನಂದನಂಗಳಿನೂರು ಕೇರಿಗಳಿಂ॥ 

ಬೆಳೆದ ಕಮ್ಮಂಗಳವೆಪೊಲದಿಂ 

ಪಿಳಿದರೊಮ್ಮನೆ ರಸವೊಗುವಕಡು 

ಬೆಳೆದಕಬ್ಬಿನ ಕೆಯಿಗಳಿಂ ಸೊಗಯಿಸುವುದಾ ವಿಷಯಾ॥೫೭॥ 


ಕರಿಗಳಿಲೂಲದ ಕಾಡು ಮಾಣಿಕ 

ದುರುಳಿಯಿಲ್ಲದ ಬೆಟ್ಟ ಚಂದನ

ತರುಗಳಿಲ್ಲದರಣ್ಯವಂಚೆಗಳಿಲ್ಲದ ಬೆಂಚೆ ॥ 

ರುಷವಿಲ್ಲದ ಭೂಮಿ ಮುತ್ತಿನ 

ನೆರವಿಯಿಲ್ಲದ ಮಣಲು ಹೊಂದಾ 

ವರೆಗಳಿಲ್ಲದ ತಿಳಿಗೊಳಂಗಳವಿಲ್ಲ ಮತ್ತಲ್ಲೀ॥೫೮॥ 


ಬಡತನವು ಕರ್ಕಶತೆಯಲ್ಲಿಯ 

ಮಡದಿಯರ ನಡುವಿನೊಳು ಮೊಲೆಯೊಳು

ಮಡಿವೆಸರು ಮರುಗದೊಳು ಪಳಿವೆಸರೊಂದು ವಸನದೊಳು॥ 

ಪಿಡಿಯೆನಿಪ್ಪುದು ಕರಿಣಿಯೊಳು ಮು

ಕ್ಕೊಡೆಯೆನಿಪ್ಪುದು ಜಿನಪತಿಯ ಮು 

ಕ್ಕೊಡೆಯೊಳಲ್ಲದೆ ನೋಳ್ಪೊಡಿಲ್ಲಾ ಮೆಱೆವನಾಡೊಳಗೆ॥೬೦॥ 


ದೇವಪಶುವಾ ವಿಷಯದೊಳಗೊಂ 

ಡಾವಿನೊಂದೇ ಮೊಲೆಯ ತಿಕ್ಕನೆ 

ತೀವಿ ಕುಡಿದಾ ಕಾಮಧೇನುವದೆನಿಸಿಕೊಂಡುದೆನೆ ॥ 

ಗಾವರಿಸಿ ಪಾಮರಿಯರರಗಿಳಿ 

ಸೋವುತಿರೆ ಚೆಲ್ವಿಕೆಯನೀಕ್ಷಿಸಿ 

ದೇವಕಾಂತೆಯರೆವೆ ಮಿಸುಕರೆನೆ ಪೊಗಳ್ವರಾರದನೂ॥೬೧॥ 


ತುಂಬುದಿಂಗಳು ಮೊಗದ ನಸುನಗೆ

ಯೆಂಬ ಬಾಂದೊಱೆದೆರೆವೊಯಿದು ನಿಡು 

ಗಂ ಬೆಳಗು ಜೊನ್ನದೊಳು ಮುಳುಗಿಸಿ ತಮ್ಮ ಲಾವಣ್ಣಾ ॥ 

ಯೆಂಬ ಪನಿನೀರೆರೆದು ಚಿನ್ನದ 

ಕುಂಭದಲಿ ಕಂಪಿಂಪು ತಂಪೆಸೆ 

ವಂಬುವೆಱೆವರು ಪಥಿಕರಿಗೆ ಅಱವಟಿಗೆ ರತಿಯಾರು॥೬೨॥ 


ಅಂತು ಸಂಧಿ ೧ ಕ್ಕಂ ಮಂಗಳಮಹಾ ॥


ಸಂಧಿ ೨೪: ವಾರ್ಧಕ ಷಟ್ಪದಿ, 


ದೇವಕೀ ನಂದನನು ಬ್ರಹ್ಮಪುತ್ರನನುದಿಗೆ 

ಕಾವನೈದಂಬಲೆಯೆ ದಂಡೆತ್ತಿ ನಡೆದುತಾ 

ನಾವನಿತೆರುಗುಮಿಣಿಯನುರ್ಕಿನಿಂ ತಳೆದು ತತ್ಪುರದನದೊಳಂದಿರ್ದನೈಯ್ಯಾ॥ ಪ॥ 


ಶ್ರೀ ರಮಣನಿಂತು ಸುಖದಿಂದೆ ವಿದ್ಯಾಧರಕು 

ಮಾರಿಯಂ ಸತ್ಯಭಾಮೆಯನೊಲಿದುಮದುವೆನಿಂ 

ದೋರಂತೆ ಸುಖದಿರ್ಪೆನೆಂದರಿದು ಪರಸಿ ಪೋಪುಜ್ಜುಗದಿನೊಂದು ದಿವಸಾ॥ 

ನಾರದಂ ನಭದಿನಿಳಿತಂದು ಹರಿಯಂ ಪರಸಿ 

ವಾರಿಜಾನನೆ ಸತ್ಯಭಾವೆಗಾಶೀರ್ವಚನ 

ಸಾರಮಂ ಕಂಡ ಪೋದನಾ ಸತಿಯಸದನಕ್ಕೆ ನಾಡೆ ಕಲಹಪ್ರಿಯನೂ॥೧॥ 


ಆ ವನಿತೆಯಾಗಳಾ ಶೃಂಗಾರ ಸಾಲೆಯೊಳು 

ತೀವಿರ್ದ ಮೇಳದೆಳೆವೆಣ್ಬಳಗದೊಡನೆ ನಾ 

ನಾವಿಧದ ಮಣಿಭೂಷಣಾವಳಿಗಳಿಂ ಪರಿಮಳಾನು ಲೇಪನವಸನದಿಂ 

ಭಾವೆ  ನೆರೆಸಿಂಗರಿಸಿಕೊಳ್ವಳಾ ಕನ್ನಡಿಗಾಣ್ಬ 

ನೀವಿಯಂತದರಿಂ ಕಬರಿ ಬಂಧಮಂ ಕರೆದ 

ನೀವುವುಜ್ಜುಗದೆ ಯೌವನರೂಪ ಮದಗರ್ವದಿಂ ಮುನಿಯ ಮರದಿರ್ದಳೈ॥೨॥ 


ಇದಿರೆದ್ದು ಬಂದರ್ಘ್ಯಪಾದ್ಯಮಂಕುಡದೆ ಸ 

ನ್ಮದದಿನಭಿವಂದಿಸದೆಶತಕ್ಕಾಸನವನಿಡದೆ 

ಮದವತ್ಸುರೂಪ ಯೌವನ ವಿಭ್ರಮೋದಯದಿನುರದಿರ್ದಳೆಂದು ಮುನಿಪಾ॥ 

ಪದುಳದಿಂ ಕ್ಷಮಿಸಲರಿಯದೆ ತನ್ನ ಚಿತ್ತದೊಳು 

ಮದಗಜಕೆ ದಂತ ಭಂಗಂ ರಾಜಪುತ್ರರ್ಗೆ 

ಕದನ ಭಂಗಂ ಮುನಿಗವಜ್ಞೆ ಯಾದುದೆ ಭಂಗವೆಂದು ಮುನಿದೆದ್ದನಿರದೇ॥೩॥ 


ಮುನಿಮುನಿದುಪೋಗುವದೊಂದುಪಾಯಮಂ 

ನೆನೆದನಾಕೆಯಗರ್ವಮಂ ನುರ್ಗಿಯಾಳ್ವ ಚೆಲು 

ವಿನಸವತಿಯೋರ್ವಳಂ ತರಿಪೆನೆಂದಲ್ಲದೆ ದೇಶದೊಳುರುವಪೆಣ್ಣರಸುತಾ॥ 

ವಿನುತ ಕೊಂಡಿಮಪುರವನೈದರಾಯಾಲಯಮ 

ನನುನಯದಿ ಪೊಕ್ಕನಾಸಮಯದೊಳು ಮುನಿಗೆ ಭೋ 

ರನೌ ಭೀಷ್ಮರೆದ್ದೆರಗಿ ತಕ್ಕಾಸನದೊಳಿರಿಸಿ ಕೈಮುಗಿದು ಕುಳ್ಳಿರ್ದನೂ॥೪॥ 


ಆ ನಾರದಂಗೆ ಭೂಪನ ರಾಣಿ ಸಿರಿದೇವಿ 

ತಾನೆರಗಿ ಪರಕೆಗೊಂಡಂತರಂ ತತ್ಪುತ್ರಿ 

ಮೀನಾಕ್ಷಿ ರುಗುಮಿಣೀದೇವಿ ವಿನಯದಿ ಪೊಡವಡಲ್ಕೆನೋಡುತ ಮುನಿಪತೀ॥ 

ದಾನವಾರಿಯ ಪಟ್ಟದರಸಿಯಾಗೆಂದು ಸ 

ಮ್ಮಾನದಿಂ ಪರಸೆ ಕೇಳ್ದತಿ ಬೆಕ್ಕಸಂಬಟ್ಟಿ

ದೇನೆಂದಿರಾ ದಾನವಾರಿಯೆಂದಾರೆಂದವರ್ಕೇಳೆ ಮುನಿ ಪೇಳ್ದನೈ॥೫॥ 


ಸುರಪ ವಿರಚಿತ ಮದುಂದ್ವಾರಾವತಿಯೆನಿಪ್ಪ 

ಪುರವರನು ವಸುದೇವನಾತ್ಮಜನು ಸಿರಧರ 

ವರನನುಜನೆನಿಪ ನಾರಾಯಣನು ನೋಡೆ ಕಾರಣ ಪುರುಷನಸುರಾಂತಕಂ॥ 

ಭರದಿ ಕಾಳಿಂಗ ನಾಗನ ಮಡುಗಲಂಕಿದವ 

ನುರುಕಂಸನುಂ ಕಂಸ ಚಾಣೂರಮಲ್ಲ ಸಂ 

ಹರಣ ನೇಳ್ಪಗಲಿಳಾಧರವನೊಂದೆ ಬೆರಳ್ಗೊಳಾಂತ ವಿಖ್ಯಾತ ನವನೈ॥೬॥ 


ವಸುಮತಿಯೊಳಾಂತ ತ್ರಿಖಂಡ ಚಕ್ರೇಶ್ವರನು 

ಶಿಶು ತನದೊಳಖಿಳ ದೈತ್ಯರ ನೊಕ್ಕಲಿಕ್ಕಿದವ 

ನುಸುರಲೇನಾತನಾಗ್ನೆಯೆನಿಸಿತು ಮೀರಿ ಬಾಳ್ವರ ಕಾಣೆನೀ ಮಹಿಯೊಳೂ॥ 

ಜಸವೆತ್ತು ಮೆರೆವಾ ಸಮುದ್ರವಿಜಯಕ್ಸ್ಮಾಪ

ನೆಸೆವ ತೀರ್ಥಂಕರರ ಜನಕನಾಹರಿಗೆರಾ 

ಜಿಸುವ ಹಿರಿಯಯ್ಯನೆಂದೊಡೆ ಮತ್ತಮವನಸಿರಿಯೇಂಪಿಡಿದು ನೋಡೆಂದನೈ॥೭॥ 


ಆತನೈಶ್ವರ್ಯಮಂ ಶೌರ್ಯಧೈರ್ಯಂಗಳಂ 

ಚಾತುರ್ಯಮಂ ಪೊಗಳಲೆನ್ನಳವೆ ನೀವೀರ್ವ

ರೋತು ನಿಮ್ಮ ಕುಮಾರಿ ರುಕುಮಿಣಿಯನಾತಂಗೇಕುಡುವುದೆಂದಾ ನಾರದಂ॥ 

ಭೂತಳೇಶಂಗೆ ತತ್ಸತಿಗೆ ನಣ್ಪಿಂ ಪೇಳೆ 

ಮಾತೇನೋ ಶಿಶುಪಾಲಕಂಗಿತ್ತೆವೀಮಗಳ 

ನಾತನುಂ ನಿರ್ಬಣಂ ಬಂದಪನಿವಳಾಮದುವೆ ನಾಡದಿನೊಳೆಂದರವರೈ॥೮॥ 


ಬೇಡಗಡ ಮರುಳಾಟಮೀಮಗಳ ಮದುವೆಯನು 

ಮಾಡುವುದೆ ಪುಸಿ ನಿಮ್ಮ ಶಿಶುಪಾಲಕಂಗೆ ಕೇ

ಳಾಡಿದಂ ಮುನಿಪನಿಂತೆಂದು ನೋಯಲು ಬೇಡ ಮಾದವಂಗೀಕೆಯಾ॥

ನಾಡೆ ಕೊಡಿಮೆಂದಾಡೆ ಕೊಡುವುದನುಚಿತಮೆಂತು 

ಬೇಡುವುದೆ ಪೆರರ್ಗಿತ್ತ ಪೆಣ್ಣನೆಂದವರುಸುರೆ 

ಕೂಡೆ ಮುನಿದೆದ್ದನತ್ತಲಾ ಪೆಣ್ಣರೂಪಂ ಪಟದೊಳಾಂತು ಕೊಂಡೈದೀ॥೯॥ 


ಅಸುಮಗನೈದಿ ಬಾಂಬಟ್ಟೆಯಿಂ ಶಿಖಿಮುಂಜಿ 

ಭಾಸುರ ಕಮಂಡಲಂ ಯಜ್ಞೋಪವೀತವೆಸೆ 

ವಾ ಸೊಬಗಿನಲಿ ತಂದನಾ ನಾರದಂ ಕೃಷ್ಣನ ಸಭೆಗೆ ಬರೆಬೋರನೆ॥ 

ಆ ಸಭೆಯನೇಳ್ದಿದಿರುಗೊಂಡೆರಗಿ ವಿಷ್ಣುತ 

ಕ್ಕಾಸನದೊಳಿರಿಸಿ ಬಿಜಯಂಗೈದರೇಂ ಮುನಿಪ

ರೀಸು ಬರದೆನೆ ದೇವಋಷಿ ತೋರಿದಂ ಚಿತ್ರಪಟವನತಿ ಚತುರನಿಂದೈ॥೧೦॥


ಮಂಡನಂಬಡದೆಸೆವ ಪಟದರಸ ಚಿತ್ರವನು 

ತಂಡದೆಳೆ ತಿಂಗಳುಱುವರಸಿಯೆನಿಸುವ ಚೆಲ್ವು 

ಗೊಂಡು ಮೋಹನವಾಂತು ಲಕ್ಷಣಂಬೆತ್ತು ಪಸದನಗೈದು ಕಡುಸೊಬಗಿನಿಂ॥ 

ಮಂಡಿಸುವ ಲಲಿತಾಂಗ ಮನಗಂತೆ ನುಡಿಯ ಬಗೆ 

ಗೊಂಡುನುಡಿಯದೆನಾಣ್ಪಿನಿಂದವೊಲ್ ತೋರ್ಪುದಂ 

ಕಂಡುಕಂಡೈದೆ ಮನದಣಿಯದದರಂತೆ ತಾನುಂ ಚಿತ್ರವಾಗಿರ್ದನೈ॥೧೧॥ 


ಇರೆನೋಳ್ಪನೆಂಬವನ ಬಗೆನೆಱೆಯದದರ ಸಿರಿ 

ಪಿರಿದೆಂದು ಚಿತ್ತದಲಿ ಬೆರಗಾಗಿರೆ ವಾಮ್ಮನು 

ಬ್ಬರಿಪ ಪುಳಕವನಾಂತು ನಿಜ ಶಿರಸ್ಕಂಪನ ನೆರೆನೋಡಿ ನಳಿನನಯನಾ॥ 

ಸ್ಮರಸತಿಯೊ ಸರಸತಿಯೊ ಗಿರಿಸುತೆಯೊ ರಂಬೆಯೋ 

ದೊರೆವಡೆದನಾಗವನಿತೆಯೊ ವನಶ್ರೀಯೊ  ಪೇ 

ಳಿರದಿದಾವಳ ರೂಪಿದೆಂದು ಬೆಸಗೊಂಡನಾ ತಾವರೆಯ ಮೊಮ್ಮಗನ ನೈ॥೧೨॥ 


ಅರಸನಿಂ ಕುಂದನಾಡಲು ಬಹುದೆ ಮೈಗೆಟ್ಟ 

ನರಸಿಯಂ ಮೊರೆಗೊಟ್ಟ ಹೆಣ್ಣನಾವಗ ಮಿರದೆ

ತಿರಿತಿಂಬ ವನಮಡದಿಯಂ ಪಲರಸೂಗೆಯನು ಕಿವಿಲ್ಲದಂಗನೆಯನೂ॥ 

ಮರಗಿಡುಗಲೆಡೆಯೊಳುದಯಿಸಿದವರನೇಂ ಪೋಲಿ 

ಪರೆನೋಡಲಿನಿತೂಣಯಂದಳೆಯದಿರ್ದ ಸೌಂ 

ದರಿಗೆ ಸರಿಯಾರೊ ದೊರೆಯಾರೊ ಎನೆ ಮತ್ತಮವಳಾರೊ ಮುನಿ ಪೇಳೆಂದನೈ॥೧೩॥ 


ಕೇಳಂಬುಜಾಂಬಕವಿದರ್ಭ ದೇಶದೊಳೆ ಪೆಂ 

ಪಾಲನೊಪ್ಪುವುದು ಕೊಂಡಿಮಪುರವದಂ ಸೌಖ್ಯ 

ಜಾಳನತುಳಂ ಭೀಷ್ಮ ಭೂಪಾಲನಾಳ್ವನಾತನ ಪಟ್ಟದರಸಿಸುರಸೇ॥ 

ಬಾಲೆಮೀಂಗಣ್ಣವಳು ಶ್ರೀದೇವಿ ತತ್ಪುತ್ರ 

ನಾಲೋಕಿಪರ್ಗೆಮನಸಿಜನೆನಿಪ ರುಗ್ಮಣಂ 

ಬಾಲೆ ರುಗುಮಿಣಿಯವಂಗನುಜೆಯಾಗಿರುತಿರ್ಪಳವಳನಂವಣ್ಣಿಸುವೆನೈ॥೧೪॥ 


ಏನೆಂಬೆ ನೀಕ್ಷಿಪರ ಕಣ್ಣಪುಣ್ಯದ ಸಿರಿಯ 

ನೇನೆಂಬೆನಲರಂಬನಧಿದೇವತೆಯ ಸೊಬಗ 

ನೇನೆಂಬೆನಂಗಜನ ಪಂಚಬಾಣಂಗಳೊಂದೊಡಲಿಟ್ಟು ನಿಂದುದೆನಿಪಾ॥ 

ಮಾನಿನಿನಿಧಾನವನು ಭಾವಜನ ಮಚ್ಚುಮ

ದ್ದೇನಂಗವಾಂತುದೆನಿಸುವ ಹೆಂಗಳರಸಿಯನ 

ದೇನೆಂಬೆನೇನೆಂಬೆನಮಮ ಮದನನ ಮಂತ್ರದೆಯಂ ರುಗುಮಿಣಿಯಾ ನೈ॥೧೫॥ 


ಅವಳ ಮೊಗದೊಳು ಸಸಿಯ ಕಡೆಗಂಗಳೊಳುನವಕು 

ಸುಮ ಶರತತಿಯನವಳ ಪುರುವಿನೊಳೆ ಸಬ್ಬವಡಿ 

ಕ್ಷವನುವನವಳಳಕದೊಳು ಭ್ರಮರಸಂಕುಳವನವಳೊಳ್ನುಡಿಯೊಳೂ॥ 

ಸವಿವೀರಿ ಗಳಪುವರಗಿಳಿಯನಾ ಚದುರಿನಿಂ 

ದವಳಿಂಚರದೊಳುಲಿವ ಕೋಗಿಲೆಯ ನಿರಿಸಿತಾ 

ನವಳಂಗದಲ್ಲಿ ನೆಲೆಮನೆಗಟ್ಟಿ ಬಾಳುತಿಹನನುದಿನಂ ಕಂದರ್ಪನೈ॥೧೬॥


ಮುಗಿದ ಭುಜಮಂ ಪಲಂಬಿಡೆದಳಿವ ಕದಳಿಯಂ 

ಮೃಗಪತಿಯ ಮಧ್ಯಮಂಗಿನಿಸಗಲ್ವಾ ಚಕ್ರ 

ಯುಗಲಮಂ ಮಾತಂಗಹಸ್ತಮಂ ಪಗಲಿನೊಳು ಕಂದುವಿಂದುವನಾಗಳೇ॥ 

ವಿಗೆ ಕೊರಗುವಳರ್ಗಣೆಯ ನಾರಡಿಯನಾ ಪೆಣ್ಣ 

ಸೊಗಸುವಡಿ ತೊಡೆನಡುಪೊದಳ್ವ ಮೊಲೆ ತೋಳ್ಗಳೆ

ನಗೆ ಮೊಗಕೆ ನೋಟಕಳಕಕ್ಕೆ ಸರಿಯೆಂದೊಡಪ ಮಾಹೀನವಾಗದಿರದೈ॥೧೭॥ 


ಅಡಿಯೊದೆಳೆದಳಿರೂರೊಳೆಸೆ ರಭಾಸ್ತಂಭ

ದೊಡನೆನಡುವಿನೊಳುಹರಿ ಮಧ್ಯಮೆದೆವದಕೆಯೊಳು 

ಬಿಡದಪೊಣವಕ್ಕಿನಲಿ ತೋಳೊಳಾ ಪಲ್ಲಮರಿವಲೆವ ಬರಿಕೈಮೊಗದೊಳೂ॥ 

ಪೊಡರ್ವಪುಣ್ಣಮೆಯ ಬಿಡುವೀಕ್ಷಣದೊಳಲರಂಬು

ಮಡದಿಯಿಂದುಟಿಯೊಳೆಲ ಪವಳಲತೆ ಕುರುಳೊಲಾ 

ರಡಿ ಕಬರಿಯೊಳು ಸೋಗೆ ತಾವುಪಮೆವೆತ್ತು ತೋರುತ್ತಿಪ್ಪುದೇವೇಳ್ವೆನೈ॥೧೮॥ 


ಅಳಿತುಳಿಯದಂಬೋಜವೆಲರಲೆಯದೆಳೆವಳ್ಳಿ

ಕಳೆ ನೆರೆವ ಸಸಿಲೇಖೆಗಳಿಯದಿನಿವಂಣಿನಿಸು 

ಬಳಸೆಕೈಗುತ್ತದಿನಿದಾನವಾಸ್ವಾದಿಸುವ ಸೊದೆಯ ತೀವಿದ ಪೊಂಗೊಡಾ॥ 

ಪೊಳೆವ ಕೀಳಣೆಗೊಳಿಸದುರುಮಾಣಿಕಂ ವಿಂದ

ಗಳೆಯದೊಳು ಮುತ್ತುಮದನನಮೀಸಲಳಿಯದಾ 

ಬೆಸಸೆನಿಸಿ ಸೊಗಯಿಪಳು ನವಯೌವನದಸೊಂಪು ಪೆಂಪಿನಿಂದಾಸುದತಿಯೈ॥೧೯॥ 


ಸರಿಗಾಣೆನೊರೆಗಾಣೆನವಳ ಚೆಲುವಿಕೆಗೆ ಭೂ

ಚರ ಖೇಚರಾಮರೋರಗವನಿತೆಯರೊಳರರೆ

ಸಿರಿಸೊಬಗು ಚೆಲುವು ಜಿನಭಕ್ತಿಯೊಳು ಸೀತೆಯಂ ಪೊಗಳರಂದಿನಕಾಲಕೇ॥ 

ಧರೆಯೊಳಿವಳಾಕೆಗೈವಡಿ ಪೆಂಪನಾಂತಿಪ್ಪ 

ಳೊರೆವಡೆಲನಾಕೆಗಾಕೆಯೆ ಸಾಟಿಯಾಸತಿಗೆ 

ವರನಪ್ಪುದಕ್ಕೆ ನೀನೇ ಪಾಟಿಯಿಂತಲೂಲದಿಲ್ಲ ಪೆರತೇನೆಂದನೈ॥೨೦॥ 


ಇರುಳೆರೆಯನಂ ಪಾಲ್ಗಡಲು ಪಗಲೆಣೆವಕ್ಕಿ 

ತರುಣಿಯನು ಸರಸಿರುಹ ನೆನೆವಂತೆ ನೆನೆವಳಾ 

ತರಳೆ ನಿನ್ನನೆ ನಮ್ಮನುಡಿಗೇಳಿದಂದದಿ ನಿಂದಾದೂಸರಿಂ ಬಂದೆವೂ॥ 

ಮುರವೈರಿ ತಳುವದೀಗಳೆ ಪೋಪುದತ್ತಲಾ 

ತರುಣಿಯನು ಯಮನಸುತ ಶಿಶುಪಾಲನೆಂಬ ಭೂ 

ವರನೊಳಿತ್ತರು ನಿಬ್ಬಣಂ ಬಂದುದಾ ಮದುವೆನಾಡದಿನೊಳೆಂದರವರೈ॥೨೧॥ 


ಹರಿಯೆಂದು ಬೆದರುವನೊ ಹರನೆಂದು ಬೆಚ್ಚಿಪನೊ 

ಸರಸತಿಯ ಪತಿಯೆಂದು ಸೈರಿಪನೊ ಬಗೆಗೊಟ್ಟು 

ತರುಣಿಯರ ವಾರ್ತೆಯಲಿ ಕೇಳ್ಪರೆಲ್ಲರಮರ್ಮಮಂ ಮದನನಿರಿಯದಿಹನೇ ॥ 

ಹರಿಯೆದೆಯೊಳಾಮುನಿಯ ನುಡಿಯುಮಂಗಜನಪೊಳ 

ಪಲರ ಹೊಸಮಸೆಯ ಪೊಗರಂಬುಗಳು ಮೊಡಮೊಡನೆ 

ಭರದಿ ನೆಲೆಗೊಂಡುವಲ್ಲಿಂಬಳಿಕೆ ಮುನಿ ಪರಸಿ ಗಗನಕವತರಿಸಿದಪನೈ॥೨೨॥ 


ಯುವತಿಯರ ದೆಸೆಯಿಂದ ಬಂದಸವಿನುಡಿಗಳಂ 

ಕಿವಿಗೊಟ್ಟು ಕೇಳದವನಾರೊ ನಾರದನೆ ಬಂ

ದವಳಂಕಮಾಲೆಗಳನೊಲಿದು ಬಣ್ಣಿಸೆ ಮನಂಗೊಟ್ಟು ಪಂಬಲಿಪುದರಿದೇ॥ 

ತವಕಿಸುವಬಿತ್ತು ಮುರ್ಬುವ ಪುಳಕವಾಹರಿಗೆ 

ಕಿವಿವೇಟದಿಂದಾಯ್ತು ಕಂಬೇಟದಿನ್ನೆಂತೋ

ಪವಣಿಸುವನಾರೊರಗುಮಿಣಿಯ ಸೋಂಕಿಂದಾದ ಸುಖದಸುಗ್ಗಿಯ ಬೆಳಸನೈ॥೨೩॥ 


ಪರೆಯಿಸದವನೋಲಗವ ಬಲನಮಂತ್ರಿಯಮತದೊ 

ಳೊರೆದ ಕಾರ್ಯಾಂತರವನರ್ಜುನನನೊಡಗೊಂಡು 

ನಿರದೆ ದಂಡೆತ್ತಿ ಬರವೇಳೆಂದು ದಂಡನಾಥನೊಳರುಪಿ ಮಧುಸೂಧನಾ॥ 

ತುರಿತದಿಂ ಬಲಭದ್ರ ಪಾರ್ಥಸಾತ್ವಕಿಗಳಂ 

ಬೆರಸಿ ಪರಿದಾದೇಶಮಂ ಪೊಕ್ಕುಗೊಂಡಿಮಾ 

ಪರಭಾಗ ಶುಷ್ಕನದಿಯಡೆಯನಂದನದಲ್ಲಿ ನಿಲಿಸಿದಂ ಮಣಿರಥವನೂ॥೨೪॥ 


ಅಲ್ಲಿ ನರನುಂ ಸಾತ್ವಕಿಯುಮೆಂದರಾ ಹರಿಗೆ 

ನಿಲ್ಲದಾ ಪಟ್ಟಣಮನೊರ್ಮೆನೋಡಿಯು ಬರ್ಪೆ 

ನಿಲ್ಲಿರೆಂದಿಳಿದು ರಥದಿಂ ಮುಂದೆ ನಡೆಗೊಂಡು ಕಂಡರಾ ಬಿಟ್ಟಬೀಡಾ॥ 

ಎಲ್ಲಿ ನೋಡಿದೊಡಿಳೆಯೆ ಬೆಸಲೇಯೆಂಬವೋ 

ಲೆಲ್ಲಿಯುಂ ಪಸರಿಸಿದ ಸೈನ್ಯಮಂ ನೋಡುತ್ತೆ 

ಬಲ್ಲಿದರು ಪೋಗುತೆಡೆಯೊಳದೋರ್ವನಂ ಕಂಡಿರದಾದೈಪಡೆಯೆಂದರೈ॥೨೫॥


ಎಂದೊಡೆಂದಮ್ಮಂಡಲಾಧಿಪತಿ ಯಮರಾಜ 

ನೆಂದೇಳ್ಗೆವೆತ್ತವನ ಬೀಡು ಮತ್ತಾ ನೃಪನ 

ನಂದನನು ಶಿಶುಪಾಲನವನ ಭುಜವಿಕ್ರಮವನಾರುಬಣ್ಣಿಪರಾಂತೊಡೇ ॥ 

ಒಂದು ನಿಮಿಷದೊಳೆ ತಿಸುಳಿಯನಾದೊಡಂತಿರವ 

ನಿಂದಲ್ಲದೆರಡು ದಿನವಾತನ ವಿವಾಹವೆಸೆ 

ವಿಂದುಮುಖಿ ರುಗುಮಿಣಿಯನಿತ್ತನಾಕೆಯ ತಂದೆ ಭೀಷ್ಮರದರಿಂ ಬಂದರೈ॥೨೬॥ 


ಅವನ ನುಡಿಗೇಳ್ದು ನಸುನಗುತ ಪಟ್ಟಣವಪೊ 

ಕ್ಕವನಿಪರು ಜಿನಗೇಹದೊಳೀಗಳುಂ ಮಂದೂರ 

ದವಳೋಕಿಸುತ್ತೆ ಪೊರಮಡುತೆ ಸಾರ್ದಾಜಿನರ್ಗೆರಗೆ ಪೋಪವಸರದೊಳೂ॥ 

ತವಕದಿಂದರಸುವ ನಿಧಾನವಿಧಿರೇಳ್ದು ಬ 

ಬಪ್ಪವೊಲಿದಿರ ಬರುತಿರ್ದಳಾ ಜಿನಾರ್ಚನೆಗದಾ 

ಯುವತಿಯರ ಸೀಮಂತ ಮಣಿಯಿನಿಪ ರುಗುಮಿಣೀ ಮಹಾದೇವಿ ವೈಭವದೊಳೈ॥೨೭॥ 


ತೊಲಗೆಲವೊ ಮನಸಿಜನಮದದಾನೆ ಬರುತಲದೆ 

ತೊಲಗಿರೆ ಮನ್ಮಥನ ಮಸದಲಗು ಬರುತಲದೆ 

ತೊಲಗಿರೆಲೆ ಮಕರಕೇಥನ ಜಯಶ್ರೀ ಬರುತಲದೆ ವಿದರ್ಭಾಪತಿಯ॥ 

ಕುಲತಿಲಕ ಬರುತಲದೆ ತೊಲತೊಲಗಿಮೆಂಬ ಬ 

ಲ್ಲುಲಿಪೊಣ್ಮೆ ಪಡಿಯರತಿಯರೆ ಜಡಿವ ಕಳಕಳದಿ 

ಲಲನೆಯರ ಕಲಕಾಂಚಿಯಿಂಚರದಿನೇವುರದ ಝಣತ್ಕೃತದಿವೆಸೆಯೆ ಬಂದಳೈ॥೨೮॥ 


ತುಂಬಿರ್ದ ತಾರಕಾ ಮಧ್ಯದೊಳು ಚಂದ್ರ ಕಲೆ 

ತಾಂಬಾನೊಳೈದುವವೊಳೆಲೆವರೆಯದಾಳಿ ಕ 

ದಂಬಕದ ನಡುವೆ ಪೊಸಮುತ್ತಡಸಿ ಮೆರೆವ ಪಲ್ಲಕ್ಕಿಯಲಿ ಮಂಡಿಸಿರ್ದೂ॥ 

ಬೆಂಬಿಡದೆ ಛತ್ರ ಚಾಮರನಿಚಯವೊಪ್ಪುತಿರೆ

ತಂಬಿಸಿಲನುಗುಳ್ವನಗೆ ಮೊದಲಲಿತಾಂಗಿ ಚೆ 

ಲ್ವಿಂಬಂದು ಪೊರಗಿಳಿದು ಕಾಲ್ದೊಳೆದು ಜಿನಗೇಹಮಂ ಪೊಕ್ಕಳುತ್ಸವದೊಳೂ॥೨೯॥ 


ತನುಮನೋವಚನ ಶುದ್ಧಿಯೊಳಿಂತು ಪೊಕ್ಕು ತ 

ಜ್ಜಿನಪತಿಗೆ ನುತಿಸಿ ಪೂಜಿಸಿ ಭಕ್ತಿಯಿಂ ಮಣಿದು 

ಮುನಿಗಳಿಗೆರಗಿ ನಿತ್ಯಂ ವೃತಂಗೊಡೆಂದಿನಂತೆ ಮತ್ತಾ ರುಗುಮಿಣೀ ॥ 

ಜಿನ ಭವನದಿಂ ಮನೆಗೆ ಪೋಪ ಸಮಯದಲಿ ದೊ 

ಕ್ಕನೆ ನೋಡುತಿರ್ದ ಮಧ್ಯಮ ಪಾಂಡವಂ ಧೈರ್ಯ 

ಮನನೆತ್ತಿ ಪೆಗಲನೇರಿಸಿಯೆ ಕೊಂಡನೆಲ್ಲರುಂ ಕಂಗೆಡಲು ರುಗುಮಿಣಿಯನೂ॥೩೦॥ 


ಘೋಳೆಂದುದಾಸತಿಯ ಮೇಳದಬಲೆಯರುಕೆಲ 

ದಾಳುಗಳು ಕೇಳಿದರೆ ಪತ್ತಿ ಮುತ್ತಿದೊಡಿವರು 

ಬಾಳಲಿವರೇ ಪಾರ್ಥ ಸಾತ್ವಕಿಗಳವರ ನಿತ್ತೈತರುತೆ ಸತಿ ಬೆದರದೇ॥ 

ಬಾಳಮ್ಮ ಕೃಷ್ಣನೆಡೆಗೈವೆ ವೆಂದೊಯ್ಯುತಿರೆ 

ಕೋಳಾಹಳಂ ಮಸಗಿ ನಮ್ಮ ಭೂ

ಪಾಲನಂದನೆಯ ನೀರ್ವೊರೆಯಮಾನಸರು ಬಂದು ಕೊಂಡೊಯ್ದರೆಂದವರೂ॥೩೧॥


ವನಜನೃಭಂಗೆ ರೈಗುಮಿಣಿಯೊಯ್ಯೆವಾನರೂಜು

ನನುಕದ್ದುಕೊಂಡೊಯ್ದರೆನ ಬೇಡ ನಿಮ್ಮೊಳಾಂ 

ತನುವರಂಗೈದಲ್ಲದೇಂ ಪೋಗೆವೆಂದು ಸಿಂಹಾರವದಿ ಗರ್ಜಿಸುತ್ತಾ॥ 

ವನಿತೆಯಂ ತೋರಿಮತ್ತತ್ತ ಶಿಶುಪಾಲ ಭೂ 

ಪನ ಪಡೆಗೆ ಬಂದಂತೆ ಪೇಳ್ದರಿದಿರಾಂತರಂ

ಮುನಿದಿಕ್ಕಿ ವನಜಾಕ್ಷನಿರ್ದಬನಮಂ ಪೊಕ್ಕರೇಂ ಸಾಹಸಿಗರೋ ಧರೆಯೊಳು॥೩೨॥ 


ಅಂತುರುಗಮಿಣಿಯನುರ್ಕಿ ತಂದುಮಾಸಿರಿಯ 

ಕಾಂತನ ರವಕ್ಕಿಳುಪಿದಂ ನಾಡೆ ಶಿಶುಪಾಲಾ 

ನಾಂತಿರ್ದಗೆಲವೆಣ್ಣು ಮಂವಿದರ್ಭೇಶ್ವರನೊಳಿರ್ದ ವಿಜಯಾಂಗನೆಯನೂ॥

ಸಂತಸದಿನರ್ಜುನನ ಸೆಳೆತಂದಿರಿಸುವಂತೆ 

ಕಾಂತೆಯಂ ನೋಡಿ ಪೂಗೋಲ ಬತ್ತಳಿಕೆಯಂ 

ಬಂತೆ ಸೊಗಯಿಪ ಚಿತ್ತವಾಂತು ಪುಳಕಿತಗಾತ್ರನಾದನಾ ಕಂಸಾರಿಯೈ॥೩೩॥ 


ಅವಳ ರೂಪೆಂದು ಪಟದಲಿ ಭರ್ಚಿಸಿರ್ದ ಚಿ 

ತ್ರವನಂದು ನೋಡಿ ಮುನಿ ಪೇಳ್ದ ಮಾತಂಕೇಳಿ 

ಲವಲವಿಕೆವೆತ್ತಂಗಜಾಸ್ತ್ರಗೆಡೆಗೊಟ್ಟವನೆ ದಿಟದಿಂದಲಾ ಪೆಣ್ಣನೇ॥ 

ಅವಲೋಕಿಸುತ್ತೆ ಸಾರಿರ್ಪಾಗಳಾತನಿಂ 

ನವಪು ಮೈಸರಕೆಗುರಿಯಪ್ಪುದರಿದೇಬಗೆವೊ 

ಡೆವನೇಧರಧರನ ಕಣ್ಮೀಂಗಳವಳಂಗ ಲಾವಣ್ಯ ನದಿಯೊಳೆ ನಲಿದನೈ॥೩೪॥ 


ಎಳೆಯಳಂಗಜ ಪಿತನ ನೀಳಚ್ಛವಿಯ ತನುವ 

ನೆಳಸಿನನೆಗಣೆಗರೆವದಿಟ್ಟಿಗುಡಿಯಿಂ ನೋಡು 

ವಳದೊರ್ಮೆ ನಾಣ್ಚಿತಲೆ ವಾಗುವಳದೊರ್ಮೆತನಿಮೋಹರಸದಿ ಪುಳಕವಾ॥ 

ತಳೆದ ತನ್ನಂಗವನು ನೋಡುವಳದೊರ್ಮೆಸುಖ 

ದೊಳ ಭಾಗದೇಯರಿರುತಿರಲತ್ತ ಭೀಷ್ಮರಾ 

ಗಳಿದೆಲ್ಲಮಂ ಕೇಳಿ ನಾಡೆ ಕೋಪಾಟೋಪದಿಂದೆ ಕಿಡಿಕಿಡಿವೋದನೈ॥೩೫॥ 


ಕೂಡಿದಂ ತನ್ನ ಪೆಂಪಿನ ತುರಂಗವನು ಮಿಗೆ 

ನೋಡಿದಂ ರುಗುಮಿಣಿಯ ತಂದೆನೆಸಿತಾಸಿಯುಮ 

ನಾಡಿದಂ ನಡೆಯ ಹೇಳೆನೆ ಮಂತ್ರಿ ಸೈರಿಸಿಂದಿನದಿನ ಮನೆಂದು ನೃಪನಾ॥ 

ಬೇಡಿದಂ ತದ್ವಾರ್ತೆಯನು ಕೇಳಿ ರೌದ್ರದೊಳು 

ಮೂಡಿದಂ ಶಿಶುಪಾಲನತ್ತಲಿಂತೆಲ್ಲಮಂ 

ಮಾಡಿದಂ ಮಾಧವನು ನಾರದನಗೊಡ್ಡಾಟವೆಂದೆಂದು ಕೆಲರೆಂದರೈ॥೩೬॥ 


ದೇವದಾನವರೆನ್ನೊಳಾಂತು ಬದುಕುವರಿಲ್ಲ 

ದಾವನೋತನಗಿತ್ತ ಕನ್ನಿಕೆಯನೆಳೆದೊಯ್ದು 

ಜೀವಿಸುವೆನೆಂದೊಡೆನ್ನಂಬುಳಿಯಗೊಡುವುದೆಯೆಂದು ಶಿಶುಪಾಲಭೂಪಾ॥ 

ಆ ವೇಳೆಯೊಳೆದಂಡ ನಡೆಯೆನಲು ಮಂತ್ರಿಗಳ 

ದೇವನೀಗಳುಪೊತ್ತುವೋಯ್ತು ನಾಳಿನ ದಿನವೆ 

ಗೋವಳಗೆ ಬದುಕುಂಟೆ ಸೈರಿಸೆಂದಂದು ನಿಲಿಸಿದನು ಪಯಣದ ಭರವನೈ॥೩೭॥ 


ಶಿಶುಪಾಲಕನ ಬೀಡಿನೊಳು ಭೀಷ್ಮಪುರದೊಳ 

ರ್ವಿಸುವ ಪಡೆಯೊಳಗಲಭೆ ಪೆರ್ಚಿಕಡಲೆರಡುಘೂ 

ರ್ನಿಸಿದಂತಿರಾಗದಲಿ ನಾಲ್ವರಿದನೆಂತು ಗೆಲಿದೆನ್ನನೆಂತೊಯ್ವರೆಂದೂ॥ 

ಹಸುಳೆ ನೆರೆ ಬೆದರಿ ಕಣ್ಬನಿಗರೆಯೆ ಕಂಡರಿದು 

ನಸುನಗುತಲಿತ್ತ ನೋಡೆಂದೊಂದು ವಜ್ರಮಂ 

ಪೊಸೆದು ತುದೆಬೆರಳಿಂದ ಪುಡಿಮಾಡಿ ತೋರಲಾಕಾಂತೆ ಮತ್ತಿತೆಂದಳೂ॥೩೮॥ 


ಫಲುಗುಣನ ಮೊಗನೋಡುತೆಮ್ಮಣ್ಣರುಗುಮಣ 

ಕಲಹದಲಿ ಚೂಣಗೈದದೆ ಮಾಣನಾತನಂ 

ಕೊಲಲೆ ಬೇಡೆನೆ ಕೊಲ್ಲೆವಂಜಬೇಡೆಂದು ಮಾಧವನಭಯಮಂ ಮಾಡಲೂ॥ 

ಲಲನೆ ಸಂತಸದಿನಿರೆ ಬಂದುದಾ ಯಾದವರ 

ಬಲವಿಳೆಯೆ ಬೆಸಲೆಯಾದಂತೆ ವಾದ್ಯಧ್ವನಿಗೆ 

ನೆಲನದಿರೆ ವಸುದೇವ ನೃಪಸಹಿತ ಕೃಷ್ಣನಂ ಬಳಸಿ ಬೀಡಂ ಬಿಟ್ಟುದೈ॥೩೯॥ 


ಹರಿಯಮನದನುರಾಗಮಂ ರುಗುಮಿಣಿಯ ಮನದ 

ಹರುಷಮಂ ಶಿಶುಪಾಲನ ಚಿತ್ತದಳಲುಮಂ 

ಪರಿವರ್ಣಿಸುವೆನೆಂದೊಡೆನ್ನಳವೆಯಾಗಳೋ ತಾವರೆಯನಂಟನಿರದೇ॥ 

ವರುಣದ್ವಿಗುವಾರ್ಧಿಯೊಳು ನೆರೆದನಾ ಶಿಶುಪಾಲ 

ನುರು ತೇಜವೈದೆ ನೀರೊಳು ನೆರೆವೊಲು ನಾಳೆ 

ಹರಿಯರಿಯರಶುತದಿಂತಹುದು ನೆಲನೆಂಬಂತೆ ಪಡುಗೆಂಪು ಪಸರಿಸಿದುದೈ॥೪೦॥ 


ಅಂದಿನಿರುಳಿನಗುರ್ವ ನೇನೆಂಬೆನತ್ತ ಯಮ 

ನಂದನನ ಬೀಡಿನೊಳು ಭೀಷ್ಮರಾ ಪುರದೊಳರ 

ವಿಂದ ನಾಭನ ಪಾಳೆಯದೊಳೀಕ್ಷಿಸುವ ಕಂಗಳ ಹಬ್ಬವೆಂದದೀ॥ 

ಸಂದಣಿಸಿ ಮನ್ನಣೆಯ ವಾವಂತರಾನೆಗಳ 

ನೊಂದಾಗಿ ಘೋಳಾಯಿತರವಾಜೀಗಳನೇಳೆ

ಯಿಂದೆ ಪಲತೆರನಾದ ಕೈದುಕಾರರು ಕೈದುಗಳನೈದೆ ಪೂಜಿಸಿದರೈ॥೪೧॥ 


(ಸಂಧಿ ೨೪ ಕ್ಕಂ ಮಂಗಳ ಮಹಾ) 


ನೆನಕೆ: ಕರ್ತೃ- ಸಾಳ್ವ

ಸಂಪಾದಕ: ಹಂ. ಪ. ನಾಗರಾಜಯ್ಯ,

ಪ್ರಕಾಶನ: ಪ್ರಕಟಣ ಮತ್ತು ಪ್ರಚಾರೋಪನ್ಯಾಸ ವಿಭಾಗ, 

ಬೆಂಗಳೂರು ವಿಶ್ವವಿದ್ಯಾಲಯ,  ಬೆಂಗಳೂರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ