ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಬುಧವಾರ, ಜುಲೈ 19, 2023

ಗುರುಲಿಂಗದೇಶಿಕ ವಿರಚಿತ ಲಿಂಗಪುರಾಣಂ

ಗುರುಲಿಂಗದೇಶಿಕ ವಿರಚಿತ ಲಿಂಗಪುರಾಣಂ


ಈ ಕಾವ್ಯದ ಕರ್ತೃ ಲಿಂಗಣಾರ್ಯ.ಈ ಕಾವ್ಯದಲ್ಲಿ ತನ್ನ ಗುರು ಬೆಂಡೆಯ ಕೆರೆಯ ಲಿಂಗಣಾರ್ನನ್ನು ಶಿವನೊಡನೆ ಅವಿನಾಭಾವವೆನ್ನುವಂತೆ ವರ್ಣಿಸೆದ್ದಾನೆ. " ಲಿಂಗಪುರಾಣಂ " ಬೆಂಡೆಯಕೆರೆಯ ಲಿಂಗಣಾರ್ಯನ ಪರಂಪರೆಯನ್ನು ಕವಿ ವಿಸ್ತಾರವಾಗಿ ತಿಳಿಸೆದ್ದಾನೆ. ಈ ಕೃತಿ ವೀರಶೈವಪುರಾಣಲಕ್ಷಣಕ್ಕೆ ಒಂದು ಉತ್ತಮ ಮಾದರಿಯಾಗಿದೆ.ವೀರಶೈವಧರ್ಮದ ಕೈಪಿಡಿಯಾಗಿ ಈ ಗ್ರಂಥ ಮೂಡಿಬಂದಿದೆ. ಅಷ್ಟಾವರಣ,ಷಟ್ಸ್ಥಲಗಳ ನಿರೂಪಣೆಸ್ಫುಟವಾಗಿ ಒಡಮೂಡಿದೆ. ಗುರು ಲಿಂಗ ಜಂಗಮದ ಮಹತ್ವವನ್ನು ಹೇಳುವಂತೆಯೇ ಜಪದಲಕ್ಷಣ, ಭಸ್ಮೋದ್ಧರಣ,ರುದ್ರಾಕ್ಷ ಧಾರಣ, ಮುಂತಾದವುಗಳು ವೀರಶೈವರ ದಿನಚರಿಯಲ್ಲಿ ಹೇಗೆ ಪ್ರಮುಖವಾದುವು ಎನ್ನುವುದನ್ನು ವಿವರಿಸುತ್ತದೆ. ಈಕೃತಿಯ ಕಾಲ ೫-೭-೧೫೬೩. ಕೃತಿಯ ಪ್ರಮಾಣ ೩೯ ಸಂಧಿ ೧೮೨೦ ವಾರ್ಧಕ ಷಟ್ಪದಿಗಳು. 


ಒಂದನೆಯ ಸಂಧಿ: 


ಮಂಗಲಚರಸ್ವರೂಪದಿನೊಗೆದುಮಾವಗಂ 

ಮಂಗಲದಿನಿಳೆಯಜನರಂ ಪೊರೆದು ಮೆಱೆದ ಗುರು 

ಲಿಂಗಣಾರ್ಯನ ಬಣ್ಣಿಸುವೆನೆನ್ನ ಕರುಣದಿಂ ಹಿಂಗದೆ ವಿಲಾಸವೆರಸಿ॥ಪ॥ 


ಶ್ರೀಮತ್ಸುಧಾಕರ ಕಪರ್ದ ಶರ್ವಂ ಶಿವಂ 

ತಾಮರಸನೇತ್ರಪ್ರಿಯಂ ಪಾವನಾತ್ಮಕಂ 

ಸೋಮಸಖವೈಮಲ್ಯನಿರುಪಮಂ ಪರಶಿವಂ ವಾಮದೇವಂ ಶಾಶ್ವತಂ॥ 

ಧಾಮರೂಪಂ ದಯಾಲೋಕನಂ ಚಿತ್ಸುಖಂ 

ರಾಮಣೀಯಕಪೂರಿತಂ ಪ್ರಚುರಸದ್ಗುಣಂ 

ಕೋಮಲ ಸುಪಾಂಡುವರ್ಣಂ ಭಕ್ತವತ್ಸಲಂ ತಾ ಮಾಳ್ಪನೆಮಗಿಷ್ಟವ॥೧॥ 


ಗಿರಿಕುವರಿಯಂಬಕ ಚಕೋರಯುಗಳಂ ಪೊರೆಯೆ 

ಕರೆವದನ ಹೃತ್ಕುಮುದಕುಟ್ಮಲಂ ಮಿಗೆ ಬಿರಿಯೆ 

ವರಶೈವದುಗ್ಧಾಕರಂ ಪೆರ್ಚಿ ಮೇಲ್ವರಿಯೆ ನಿರತಿಶಯ ಶರಣಜನದ ॥ 

ಪರಿಮಿತಕರಣಚಂದ್ರಕಾಂತಸಮುದಯ ತೊಱೆಯೆ 

ದೊರೆವಡೆದ ಸುಕೃತಶಾರ್ವರಿ ಮಹಾಬೆಳ್ಗಱೆಯೆ 

ನಿರುಪಮ ಶಿವಾಸ್ಯ ಪೂರ್ಣೇಂದು ಪ್ರಸನ್ನಮಾಗೊರೆವುದೆನಗಿಷ್ಟಫಲವ॥೨॥ 


ತುಱುಗಿರ್ದ ಬಾಂಬೊಳೆಯ ಮಂಡೆಯಂ ಮಣಿದಡೇ 

ತೊಱೆವೆಣ್ಗೆ ಸಂದೇಹಮೆಂದು ಕಾಲ್ವಿಡಿವುತಂ 

ಕಱೆಗೊರಲ ತನ್ನೆಳೆಯಳಂ ತಿಳಿಪುವಲ್ಲಿ ಕೈದೆಱಪಿನೊಳು ನಖದಶಪೊಳೆಪು॥ 

ನೆಱೆದಿಂಗಳಂತಿರಲ್ಕವು ಕದಹಿ ಪರಿಯಲು 

ದೆಱಗಿದ ಶಿವೆಯ ತೋರದುಱುಬು ನವಿಲೆಂದಂಜು 

ತುಱೆ ಕರವನಡರೆ ನಗೆಯೊಱವ ಶಿವ ರಕ್ಷಿಪಂ ಕರಿಗೊಂಡ ಸಿರಿಯೊಳೆಮ್ಮು॥೩॥


ಕಂಗಳಿಂ ದಿಟ್ಟಿಸುತ ಕರಗಳಿಂದರ್ಚಿಸುತ 

ಜಾಣ್ಗುಳಿಂ ಬಲವಂದು ನುತಿಗೆಯ್ದು ಕುಂಬಿಡುತ 

ನುಣ್ಗೊರಲವನ  ಗಾನದಿಂ ಪಾಡಿ ಪುಳಕಿಸುತ ತಣ್ಗದಿಱಕೋಟಿವೆಳಗ॥ 

ಅಂಗದ ನವಿರೊಳೊಂದಱಿಂ ತೋರ್ಪ ನಿರೈಪಮನ 

ಮುಂಗೆಲದ ಶಿವಮಂತ್ರ ಕುಳಗಳಿಂ ಜೃಂಭಿಸುತ 

ಮಂಗಲಪರಬ್ರಹ್ಮರೂಪನೆನ್ನಯ ಗುರುವನಂಘ್ರಿಗಳನೋಲೈಸುವೆ॥೪॥


ತುಱುಗಿರ್ದ ಕೆಂಜೆಡೆಯ ಕೆಂಪಿನಿಂ ಸೊಂಪಿನಿಂ 

ಮಿಱುಪ ಸುಲಿಪಲ್ಲ ಬೆಳ್ವೆಳಗಿನಿಂ ಪೊಳಪಿನಿಂ 

ನೆಱೆದಿಂಗಳನ್ನ ಮೈಗಾಂತಿಯಿಂ ಶಾಂತಿಯಿಂದುಱೆ ಸಕಲ ಶೋಭೆವಡೆದ ॥ 

ಹೆಱೆನೊಸಲ ಚೆಲ್ವಿನಿಂ ನಗೆಮೊಗದಳ್ಪಿನಿಂ

ದಱುಹಿಡಿದ ಜಾನದಿಂ ಮಾಳ್ಪ ಸಂಧಾನದಿಂ 

ಮೆಱೆದ ಪರಶಿವಯೋಗಿ ಲಿಂಗಣಾರ್ಯಂ ದೇಶಿಕೇಂದ್ರನನುಪಮಚಂದ್ರನು॥೫॥


ತಂಗದಿರನಂ ಮುಡಿದು ನಾಗಮೋಹದೊಳೆಸೆವ 

ಕಂಗಿವಿಗರಂ ಧರಿಸಿ ಕರುಣಪೂರದಿ ಸರ್ವ 

ಮಂಗಲೆಗೆ ತೊಡೆದೆಱಪನಿತ್ತು ಕುಸುಮಾಯುಧನನಂಗತ್ವಮಂ ಕರುಣಿಸಿ॥ 

ರಂಗನಕ್ಷಿಯ ಸಮರ್ಪಿಸಿಕೊಂಡು ತಾಪಸ ಜ 

ನಂಗಳಿಗೆ ದಯೆಗೆಯ್ದು ಭಿಕ್ಷಾಟನಂ ಮಾಳ್ದ 

ಜಂಗಮಾಕೃತಿಯ ವಿಮಲಾಂಗ ಬೆಂಡೆಯಕೆಱೆಯ ಲಿಂಗಣಾರ್ಯಂಗೆಱಗುವೆ॥೬॥ 


ಆ ಗುರುವಿನತುಳ ಕರಕಂಜದಿಂ ಜನಿಸುತಂ 

ರಾಗ ವೀತ ಕ್ಲೇಶಪಂಚಕವನಳಿವುತಂ 

ಸಾಗಿಸುತ ನಿಖಿಲ ಕರಣೇಂದ್ರಿಯಪ್ರಚರಮನೂನಾಗೆಸುತ ಶಿವತತ್ವವ॥ 

ಯೋಗಾಂಗಲಕ್ಷಣದ ಸಂಪದವನಡರುತಂ 

ಭೋಗಮೋಕ್ಷದ್ವಯವ ಲಿಂಗದಿಂದಱಿವುತಂ 

ಬಾಗಿಸುತ ಮಹದೊಳೆಸೆದಿಹ ಬಸವಲಿಂಗಾರ್ಯಗೇಗಳುಂ ಪೊಡಮಡುವೆಂ॥೭॥ 


ಮೀಱದೆ ಶಿವಾಜ್ಞೆಯಂ ಪಾರದೆ ಪದಾರ್ಥಮಂ 

ಜಾರದೆ ಯತಿತ್ವಮಂ ಸಾರದೆ ಕುಮಾರ್ಗಮಂ 

ಹೇಱದೆ ಭೀಭತ್ಸಮಂ ತಾರದಪಕೃತ್ಯಮಂ ದೂರದೆ ಮಹಾಜ್ಞಾನವ ॥ 

ಬೀಱುತೆ ಸುಘೋಸನೆಯೊಳೇಱುತೆ ಗಭೀರತೆಯೊ 

ಳೂಱುತೆ ಮಹತೂವಮಂ ತೋಱುತಿಳೆಯೊಳ್ಮೆಱೆದ

ನೂಱೆಂಟುಮಡಿ ಗುರುತ್ವದಿ ಗೌರವತ್ವದಿಂ ಬಸವಲಿಂಗಾರ್ಯ ಜಗದಿ॥೮॥ 


ಆ ನಿರ್ಮಲ ಗುರುಕರಾಬ್ಜದಿಂದೊಗೆವುತಂ 

ಮಾನಿತ ವಿವೇಕಲಕ್ಷಣಪಾರಮಾರ್ಥದಿಂ 

ತಾ ನಿಜಬ್ರಹ್ಮ ಬೋಧಾವಿಚಕ್ಷಣವಡೆದು ಜಾನಿಸಿ ಪರಾತ್ಪರದೊಳು॥ 

ಆನಂದಿಸುತ ಗುರುಪದದ್ವಯ ಸ್ಮರಣೆಯಿಂ 

ಏನತತ್ವಮಸೀತಿವಾಕ್ಯಪ್ರಮಾಣ ಸಂ

ಧಾನ ಶಿವಯೋಗಿನುತ ಶಾಂತವೀರೇಶ್ವರ ಸ್ವಾನುಭವನಡಿಗೆಱಗುವೆ॥೯॥ 


ಖಂಡಿತವ್ರಿಜಿನಗುಣ ಮಂಡನಮಹಾತರ್ಕ

ತಂಡ ತಮಹರಣ ಮಾರ್ತಂಡ ಮಾಯಾಪ್ರಕೃತಿ 

ಪುಂಡರೀಕಪ್ರಕರ ಪಂಚಾಸ್ಯಪಾನಮಂಡಲಮಹೀಪಾಲಕ ॥ 

ಖಂಡೇಂದುಧರಸಮಯಮಣಿಗಣಗಂಡನುರು

 ಬೆಂಡೆಯಕೆಱೆಯ ಬಸವಲಿಂಗಣಾರ್ಯಾಬ್ಧಿ ಹಿಮ 

ಚಂಡಕರ ಶಾಂತವೀರೇಶ ಮದ್ಗುರುನಾಥ ಮಂಡಿತಮಹಾಪ್ರಕಾಶ॥೧೦॥ 


ಮಾಟದಸಹಸ್ರದಳದಿಂ ಘನವನಿರಿಸುತಂ

 ನೋಟದ್ವಯವನಲ್ಲಿ ತೆಗೆದು ಸಂಭ್ರಮಿಸುತಂ 

ನೃಟಿಸುತ ನಿಖಿಲ ಭುವನದ ಜಠರಕೊಂದಿಸುತ ಮೀಟೆನಿಪ ಚಿದ್ಘನದೊಳು॥ 

ಕೂಟಮಂ ಬಲಿದು ತನ್ನಂ ಕಂಡು ಪರಿಣಮಿಸಿ

ದಾಟಿ ನಿಃಕಲಸಕಲದಿಂದತ್ತಲೆಸೆದಿರ್ಪ 

ತೋಟದ ವಿಮಲ ಸಿದ್ಧಲಿಂಗಣಾರ್ಯನ ಪಾದಪೀಠಕವನತನಪ್ಪೆನು॥೧೨॥


ವರವೀರಶೈವಚಾರಿತ್ರ ವಿಭ್ರಾಜಿತಂ 

ಪರಸಮಯದೂಷಕಧ್ವಾಂತ ಘನಭಾಸ್ಕರಂ

ಚರಲಿಂಗಭಕ್ತ್ಯಾವಿಶೇಷಪರಿತೋಷಣಂ ಪರಿಮಿತಶಿವಾದ್ವೈತನಂ ॥ 

ಅರಿವಿಜಯಕೀರ್ತಿಖಡ್ಗಪ್ರತಾಪಪ್ರಚುರ 

ನರಲೋಕಪಾಲನ ಮಹಾರುದ್ರ ಸುಕುಮಾರ 

ವರ ಚನ್ನಬಸವೇಶನಂಘ್ರಿದ್ವಯಾಬ್ಜದೆಡೆಗಿರದೆಶಷಟ್ಪದನಪ್ಪೆನು॥೧೩॥ 


ಮಾತೆ ಮೂಲೋಕವಿಖ್ಯಾತೆ ಭವದುಃಖ ನಿ 

ರ್ಭೀತೆ ನಿರೈಪಮ ಸುಖವ್ರಾತೆ ಬಹುಶಕ್ತಿಕುಲ 

ತಾತೆ ಶರಣಪ್ರಕರದಾತೆ ನವಯಜ್ಞೋಪವೀತೆ ಪುನರಪಿಶರ್ವನ ॥ 

ಪ್ರೀತೆಪಂಚಾಕ್ಷರಸಮೇತೆ ಸುಕೃತವ್ರಜ ಪು 

ನೀತೆ ಶಿವತತ್ವಸಂಘಾತೆ ಪರಿಮಿತಗುಣ ವಿ 

ಭಾತೆಯಷ್ಟಾತ್ಮ ಸಂಭೂತೆ ಹಿಮಕುಧರಸಂಜಾತೆ ರಕ್ಷಿಪುದೆಮ್ಮುವ॥೧೪॥


ಇಟ್ಟಿ ಸೆಲ್ಲೆಯ ಸುರಗಿ ಸಬಳ ಕಾರ್ಮೊಗಸರಂ 

ಪಟ್ಟೆಯ ಫಲಕ ಶೂಲಮುಂ ಕರಾಗ್ರದಿನೊಪ್ಪ 

ಲುಟ್ಟ ಕಾಸೆಯ ಕನಕದೊಡಗಳ ಶರೀರಕಿಂಪಿಟ್ಟ ಮೃಗಮದಗಂಧದ॥ 

ಬಟ್ಟಿತಿನ ಕಣ್ಮಕುಟದಿಂ ಜುಂಜಿನಿಂ ಜಲ್ಲಿ 

ವಟ್ಟೆಯಿಂದರುಣತರ ಕಿಂಜಲ್ಕಮಾಲೆಯಿಂ 

ಕಟ್ಟೆಸಕಮಾದ ರಣಗಲಿ ವೀರಭದ್ರೇಶನೊಟ್ಟಜೆಗೆ ಶರಣೆಂಬೆನು॥॥೧೫॥ 


ಮೋಹರಿಸಿ ಬಹ ತಾರಕನ ಭುಜಾಟೋಪಮ

ನ್ನಾಹವದಿ ಗೆಲ್ದು ಬಲಶೃಂಗಮಂ ಕಿತ್ತು ಮಿಗೆ 

ಸಾಹಸದಿ ವೀರಸಿರಿಯಂ ಪಡೆದ ಸರ್ಗದಿಂ ಬೇಹನಿತು ಜಸದಿ ಮೆಱೆದಂ॥ 

ಡಾಹರದೊಳೆಱಗಿದೆಕ್ಕಲನದಟುಮಂ ಮುಱಿಯೆ 

ನೇಹದಿಂ ಹರಿ ತನ್ನ ಕುವರಿಯಂ ಕೊಡಲ್ಕೆ ವಿ 

ವಾಹವಾಗೆಸೆವ ಷಣ್ಮುಖನೆಮ್ಮ ಕೃತಿಗೀವನೂಹಿಸದ ಮುನ್ನ ಮತಿಯ॥೧೬॥ 


ಶುಂಡಾಲವದ ಚೆಲ್ವಲಪನದಿಂ ಮಣಿಖಚಿತ 

ಮಂಡನಮಹಾನರ್ಘ್ಯಮಕುಟದಿಂದಮಲತರ 

ಗಂಡಸ್ಥಲದಿ ಸೊರ್ವಮೃಗನಾಭಿಯಿಂ ಪ್ರಚುರ ಗಂಧಮಾಲ್ಯಾಂಬರಗಳಿಂ॥ 

ಮಂಡಲಿಸುತೊದರ್ವ ಬಹುಳಾಮ್ನಾಯಪಂಕ್ತಿಯಿಂ 

ದಿಂಡೆಗಳ ಪಾರ್ದಿಹ ಸುಪರ್ವಾಣರಿಂದೆಸೆವ 

ಚಂಡಕರಕೋಟಿಪ್ರಕಾಶವಿಘ್ನನೇಶ್ವರಂ ಮತಿಮಾಳ್ಪುದೆನಗಾವಗಂ ॥೧೭॥ 


ನವ್ಯತರಮಾದ ಸುರಶಬ್ಧರಸರಾಜಿಯಿಂ 

ದಿವ್ಯಾಗಮಪ್ರವರ ಪೌರಾಣದರ್ಥದಿಂ 

ಸುವ್ಯಾಕರಣ ತರ್ಕ ಸಾರಸ್ವತಂಗಳಿಂ ಕಾವ್ಯಾರ್ಥ ಸರಣಿಯಿಂದ ॥ 

ಸೇವ್ಯಮಾಗತುಳ ವಿದ್ವಜ್ಜನಾವಳೀ ಶ್ರುತ 

ಶ್ರಾವ್ಯಮೆಂದಾಲಿಸುವ ತೆಱದಿ ನೀ ಮನ್ಮನದೊ 

ಳು ವ್ಯಾಪಿಸಿರ್ಪುದುಱೆ ವಾಣಿ ನಿಗಮಾಗಮಶ್ರೇಣಿ ಧವಲೃಬ್ಜಪಾಣಿ॥೧೮॥ 


ಮಲ್ಹಣ ಮಹಿಮ್ನ ಸೋಮಾಂಕ ವಾಣೀಸಿರಿಯ 

ಗೆಲ್ವ ಹರಿಹರದೇವಕೇಶಿರಾಜಂ ಬಗೆಮಿ 

ಗಲೂವರಂಬಡೆದ ಕವಿ ಕಾಳಿದಾಸ ಕೃತಿಗರಲ್ವ ಸಕ್ಕಜ ಬಾಣನ ॥ 

ತೂಳ್ದ ಸುರಶಬ್ಧ ಪರಿಣತ ಹಲಾಯುಧನ ಬಗೆ 

ಯೊಳ್ವಿರಾಜಿಪ ನೀಲಕಂಠಪಾಣಾದಿ ಶೈ 

ವಾಳ್ವಾರುಗಳ ನೆನೆದುಸುರ್ವೆನೀ ಕಬ್ಬಮಂ ಕೇಳ್ವ ರಸಿಕರ್ಮೆಚ್ಚಲು॥೧೯॥ 


ಕಂಪಿಡಿದೆಲರಿನಂತೆ ರಸಗಾನದಂತೆ ಬಾ 

ಯ್ಗಿಂಪಾದ ಬಟ್ಟವಾಲ್ಗೆನೆಯಂತೆ ಜವ್ವನದಿ 

ಸೊಂಪಾದ ಕಾದಲಪ್ಪುಗೆಯಂತೆ ಚೆಲ್ವಿಡಿದಲಂಪಿನಂತೆ ಸೊಬಗಸುರಿವ॥ 

ಕಂಪನೊಳಕೊಂಡ ಕತ್ತುರಿವೆರೆದ ಬಾವನ್ನ 

ದಿಂ ಪೆರ್ಚಿತೀ ಕಾವ್ಯಮೆಂದು ಕಬ್ಬಿಗಸಮುದ 

ಯಂ ಪೊಗಳಲುಸಿರಿದಂ ಗುರುಲಿಂಗದೇಶಿಕಂ ಪೆಂಪಿನಿಂ ಪರಕಲೆಸುತ॥೨೦॥ 


ಎಡ್ಡಮಾಗಿರ್ಪಜತ್ತಣಮನೇಳಿಸಿ ಬಯಲಿ 

ಗಡ್ಡ ನೀಳಂದೆಗೆದು ಮತ್ಸರಿಪ ಗಾಂಪಕುಲ 

ದೊಡ್ಡ ಸವರುವ ನವ್ಯಚಂದ್ರಾಸವೆನಿಸುತಂ ಸಡ್ಡೆಗೊಳ್ಳದೆ ಬೆದರದೆ॥ 

ಪ್ರೋಡ್ಡತಮ ನಿರುಹರಣಮಾರ್ತಂಡನೆನಿಸುತಂ

ಜಡ್ಡುಮತಿ ನಿಮಗೀಶಗುರುವಾದನುಸುರಿದಂ 

ಪಡ್ಡಳೀ ಕಿಂಜಲ್ಕಸಂಭವನ ಕಬ್ಬಮಂ ದಡ್ಡಕ್ಕರದ ಪ್ರಸರದಿ॥೨೧॥ 


ಖುಲ್ಲರೆಡೆಯಲ್ಲೋದಿ ಕೊಂಕುತಿರ್ದೆವೆನೆಂದು 

ಕೊಲ್ಲಟಿಗತನದಿಂದಲಪಶಬ್ಧಮಂ ಕೂಡಿ 

ಬಲ್ಲವರ ಬಳಿಗೊಯ್ದು ಬಿನ್ನಹಂ ಮಾಡಿ ಸಲ್ಲದ ತ್ರಾಸಪಲ್ಲಟಿಸುವ॥ 

ತಲ್ಲಣಿಗ ಪೇಳ್ದ ಕಬ್ಬದ ಪಾಂಗನಂತಲ್ಲ 

ವೆಲ್ಲಿಯುಂ ವಿದ್ವತ್ಸಭಾವಲಯಮೆಚ್ಚಕೈ 

ಯಲ್ಲಿರಿಸಿದಾಮಳಕದಂತೊರವೆನೀ ಕಾವ್ಯದಲ್ಲಿ ಸಂಕ್ರಮಿಸಿದರ್ಗೆ॥೨೨॥ 


ಕೃತಿಗೆ ನಾಮಂ ಲಿಂಗಪೌರಾಣಮೀ ದಿವ್ಯ 

ಕೃತಿಗೆ ಪತಿ ಗುರುಲಿಂಗಣಾರ್ಯಚರರೂಪನೀ 

ಕೃತಿಗೆ ಪಾಲಕರು ಶಿವಭಕ್ತಸಂಕುಳಮಿದಂ ಪೇಳ್ವ ಕವೆಯಾರೆಂದೊಡೆ ॥ 

ಪ್ರತಿರಹಿತ ಕರ್ಣಾಟಕಾಚಾರ್ಯನಾವಗಂ 

ಚತುರಕವಿಲಪನಸರಸಿರುಹಭಾಸ್ಕರನಿಳೆಗೆ 

ನುತ ಕಲಾಪ್ರೌಢಗುರುಲಿಂಗದೇಶಿಕನೆನಲ್ ಕೃತಿಜಸಂ ಬೆತ್ತುದಿಳೆಗೆ॥೨೩॥ 


ಕರ್ಣಾಕದಿನೆಸೆವ ದೇಶಿಯಿಂ ಪ್ರಚುರತರ 

ವರ್ಣಕದೆನೊಪ್ಪಿದಷ್ಟಾದಶ ಸ್ಥಓ೦ಳಗಳಿಂ 

ನಿರ್ಣಯಂಬಡೆದ ಸವಿನುಡಿಗಳಿಂದಡಿಗಳಿಂ ಪೂರ್ಣಪದಪದ್ಧತಿಗಳಿಂ॥ 

ಚೂರ್ಕದಿನೊಗೆದ ಛಂದಸ್ಸಲಂಕಾರದಿ ಮ 

ಹರ್ಣವಮಾಗೆಸೆವ ರಸಭಾವಚಿತ್ರಂದಳೆದ 

ಪರ್ಣವಲ್ಲಭನ ಕೃಪೆಯಿಂದೊರೆವೆನಮಳಿನ ಸ್ವರ್ನದಿಯ ತೇಜವೆನಲು॥೨೪॥ 


ತನಿವಾಲ ಕಱೆದು ಬಾಯ್ಗಿನಿದಾಗಿ ಪಚನಿಸುತ

ಲನುವೆಱೆದ ಶರ್ಕರೆಯ ನೀಡಿ ಚಿಲಿಪಾಲ್ಗೆಯ್ದು

ಮನಕೆ ಸೊಗಸಾದಮರ್ದನುಣ್ಣಲಱಿಯದಪಯದಿ ಸೊನೆವೆರೆದ ಹುಳಿಯಹಿಂಡಿ॥ 

ಎನಸಿನಾಮ್ರವ ಕೆಡಿಸೆ ಕುಂದಾರಿಗಪ್ಪುದೀ 

ಮನುಜಗೋ ಸುರಭಿಗೋ ಸತ್ಕಾವ್ಯದೊಳ್ಸಟೆಯಂ 

ಕನಲಿಕೆಯನೊಂದಿಸಿದ ಕಿಱಬಗಲ್ಲದೆ ಹೀನ ಜನಿತ ಸತ್ಕವಿಗಪ್ಪುದೆ॥೨೫॥ 


ವಕ್ತ್ರಮಂಡಲವಿರ್ದ ಭಾವ ಕೈಪಿಡಿಯೊಳಗೆ 

ಮುಕ್ತವಲ್ಲದೆ ಬೇಱೆ ಬಗೆವೆರಸಿ ತೋರ್ಪುದೇ 

ಯುಕ್ತಿಲಯಮಾದ ಖೂಳರು ಕಾವ್ಯಲಕ್ಷಣವ್ಯಕ್ತವಱಿಯದೆ ಕೊಂಕಿಸಿ॥ 

ನಕ್ತಸಮಯದಿ ನೋಡಿ ಮುಕ್ತಾಫಳವ ಹಳಿವ 

ಭುಕ್ತಗೆಯ್ಯದೆ ದೂರದಿಂ ರಸಾನ್ನವ ಹಳಿವ 

ತಿಕ್ತಮುಮನುಂಬ ಗಾಂಪರು ಬಲ್ಲರೇ ಕಾವ್ಯಸೂಕ್ತಿಯೊಳಗೊಗೆದ ಸುಖವ॥೨೬॥ 


ಮುನ್ನಾದ ಕವಿತೆ ಲಕ್ಷಣ ರಸಂ ಜಸವಡೆಯ

ಲಿನ್ನಾದ ಕವಿತೆ ಸಾಮಾನ್ಯವೆನಬೇಡ ಬಾ 

ಲ್ಯಂ ನಿಮಿರ್ದ ಕುವರಿಗೊಗೆದೌ ಪೂರ್ವದಿಂ ಕಣ್ಗಳುನ್ನತಸ್ತನವಧರದಿ॥ 

ಪೊಣ್ಮಿದೌ ದಿಟ್ಟಿಕೋವಿದರನೊಲೆಸಿದವೆನಲ್ 

ಜಾಣ್ಮೆಯಿಲ್ಲದೆ ಕುಚಂ ಜಾವದೊಳೆಸೆದವೇ 

ಕಣ್ಮನಕೆ ಸೊಗಸನೀವುದಂ ಮದ್ವಚೋವೃತ್ತಿ ಸಮ್ಮೋಹನಪ್ರಕರದಿ॥೨೭॥ 


ಜಾಣರಂ ತಲೆದೂಗಿಸದೆ ರಸಿಕಜನಗಳೆದೆ 

ದಾಣಸೊಗಸಾಗದೆ ಕವಿವ್ರಜಕೆ ಸಂತತಂ 

ಕೇಣವೆಲ್ಲದೆ ಸೊಗಸನೀಯದಿರ್ಪಡೆ ವಿಷ್ಣು ಬಾಣನ ಕಳೇವರಕ್ಕೆ ॥ 

ಆಣತಿಯೊಳೆಸೆದ ಸೌರಾಷ್ಟ್ರದೊಡಮಾಗದೊಡೆ

ನಾಣಳಿದು ಸರ್ವಪ್ರಪಂಚುಡುಗದೊಡೆ ಭವ 

ಕ್ಷೀಣ ಹಿಂಗದೆ ಜತ್ತಣವನೊರವನೆಗ್ಗನೆಸಗೇಣಧರಗಪ್ರಣಯವು॥೨೮॥ 


ಲಿಂಗಪೌರಾಣದೊಳಗುಸುರ್ದ ನವಶಾಂತಿ ಮಹ 

ಲಿಂಗಾಭಿಷೇಕವೆರಚಿತ ಗಂಧವಾ ದಿವ್ಯ 

ಲಿಂಗಾನುಭವಲೇಪಧವಳಿಮದೆಸಕವಾ ನವ್ಯನಿಟಿಲಾಕ್ಷತೆ ಮಿಗೆ॥ 

ಲಿಂಗಾನುಭವನುತಿಯ ವಾಕ್ಪುಷ್ಟಚಿತ್ಸುಖದ 

ಲಿಂಗಸಂಧಾನವಾರತಿ ಸುವಾಸನೆ ಧೂಪ 

ಲಿಂಗತದ್ಧ್ಯಾನ ಪರಮಾನ್ನರತಿ ತಾಂಬೂಲವಂಗವಾಯ್ತಷ್ಟವಿಧದಿ॥೨೯॥ 


ನಾಕಾಣ್ಮನಂತೆ ಮೈಗಣ್ಣನಿಸು ತೊರೆವುತಂ 

ವಾಕಾವತೀಶನೆನಲೆಸೆವ ವಿವರಣಗಳಿಂ 

ಶಾಖಾಚತುಷ್ಕರೆನಲಂತಸ್ಸಮಾಸದಿಂದಾ ಕ್ರತುಭುಜರ ಪಾಂಗಿನಿಂ॥ 

ವ್ಯಾಕರಣ ಪದ ಪದಚ್ಛೇದ ಲಿಂಗತ್ರಯಂ 

ಸ್ವೀಕರಿಸುವನ್ಯಸಮಯದ ಸೂರಿಗಳ ಗೆಲ್ದು 

ಲೋಕವ್ರಜದೊಳಾ ವಿಶೇಷಣವೆನಲ್ಮಾಡು ರಾಕೇಂದುಮೌಲ ಪರವಂ॥೩೦॥


ಶಿವಗಣಂಗಳ ಶಿವಾದ್ವಯಿತರಂ ಶಿವಭಕ್ತ 

ನಿವಹಮಂ ಶಿವಪುರಾಣಜ್ಞರಂ ಶಿವಕಾವ್ಯ 

ಶಿವಕುಶಲ ಶಿವತತ್ವರಂ ಶಿವಾರ್ಚಕರುಮಂ ಶಿವಸೌಖ್ಯರಂ ನೆನೆವುತ॥ 

ಜವಹದಿಂ ಬಲವಂದು ಪೊಡಮಡುತ ಪೊಗಳುತಂ 

ತವೆ ಱಿಂಗಣಂಗುಣಿವುತಂ ಪೇಳ್ದೆನೀಕೃತಿಯ 

ನವಧರಿಸಿ ಪಾಲಿಪುದು ಭವಹರಪ್ರೇಮರಿದಂ ನವಸೌಖ್ಯವಪ್ಪಂದದಿ॥೩೧॥ 


ಪುಣ್ಯಾಭಿದಾನ ಪುನರಪಿ ನೆನೆವ ಸಜ್ಜನವ 

ರಣ್ಯಾವಧಾನ ಗೌರವ ಋಷಿಸಮಾಜಜದಿನ 

ಗಣ್ಯಾಭಿಧಾನ ಸುರುಚಿರಭಕ್ತಿರತಿಗೆ ಲಾವಣ್ಯಾಭಿಧಾನ ಮಹದೀ॥ 

ವಾಣ್ಯಾವರಾದಿ ಸಂಕಲ್ಪಾಭಿಧಾನಬಹು 

ಗುಣ್ಯೃಭಿಧಾನ ಗುರುಲಿಂಗಣಾರ್ಯ ಪ್ರಚುರ 

ಮಾನ್ಯಾಭಿಧಾನ ಮಂಗಲ ಶಿವಾದ್ವೈತಕುಲದನ್ಯಾಭಿಧಾನವಿಳೆಗೆ॥೩೨॥ 


ಇದು ಪರಶಿವಾಕೃತಿಯ ಗುರುಲಿಂಗಣಾರ್ಯನು 

ಪದುಳದಿಂ ನುತಿಗೆಯ್ದ ಲಿಂಗಪೌರಾಣದಿಂ 

ಮುದವಡೆದ ಶಿವಗಿರಿಜೆತತ್ಕುಮಾರಸ್ತುತಂ ಬುಧಜನಕೆ ಪ್ರತ್ಯುತ್ತರ॥ 

ವಿದಿತಕಾವ್ಯದೊಳಷ್ಟದಶಕೆಕವಿತಾಶಕ್ತಿ 

ಚದುರತೆಯ ಕಂಡನದ ಬಗೆ ಸಮಾಸಕ್ರಮವ 

ನಧಿಕಮಾಗೊರೆದ ಪೀಠಿಕೆಯ ಸಂಧಿಯ ಕ್ರಮಂ ಸದಮಲಾತ್ಮಕರಾಲಿಸಿ॥೩೩॥ 


ಹತ್ತೊಂಬತ್ತನೆಯ ಸಂಧಿ: 


ಗಿರಿಕುವರಿಗುಸುರಿದಂ ವರಸೌಂದರನ ಕಥೆಯ 

ಪರಮಸುಜ್ಞಾನದಿಂ ಶರಣಜನವತ್ಸಲಂ 

ಗುರುಕೃಪಾರಸವಡೆದು ವಿರಚಿಸಿದ ಬೋಧೆಯಂ ಪರಿಮಿತದೊಳಾಲಿಸುವುದು॥ ಪ॥ 


ಚಿದ್ರೂಪ ಚಿನ್ಮಯ ಚಿದಾನಂದ ಭವಗುಣೋ 

ಪದೂರನೃಶನ ಪರಮಪಾವನ ಗಿರೀಶ ಬಹು 

ಕ್ಷುದ್ರಮಾಯಾಹತವಿಲಾಸ ಕಾಂಚನರಂಜಿತದ್ರಿಕೋದಂಡ ಶರಣ॥ 

ಭದ್ರಪ್ರಸನ್ನಮುಖ ಕಾಮಮೋಹಾಮಯಸ

ಮುದ್ರ ವಡಬಾನಳ ಮದೀಯ ಜನ್ಮಾಂತರ ದ 

ರಿದ್ರನಾಶನ ರಕ್ಷಿಸೆಮ್ಮನೊಲಿದಾವಗಂ ರುದ್ರಶತಮಷ್ಟರೂಪ॥೧॥ 


ಈ ಪರಿಯೊಳೆಸೆವ ರಾಷ್ಟ್ರದ ನಡುವೆ ರಂಜಿಪುದು 

ಭೂಪರಂತೊಡನೆ ದಶದಿಶಿಗಳಿಂ ಜಸವಡೆದ 

ಕೂಪಾರದಂತೆ ರಂಜಿಪ ದೀರ್ಘದಗಳಿನಿಂದಾ ಪೊಳೆವ ಕೋಂಟೆಯಿಂದ ॥ 

ಆ ಪಟೀರವದ ಬೆಳಗಿಂದೆಸೆವ ಕೊತ್ತಳದಿ 

ರೂಪಿಸುವ ಪೂರ್ವನಗವೆನಲೊಪ್ಪುವಟ್ಟಳೆಯ 

ಗೋಪುರಾಕೃತಿಯ ಹೆಬ್ಬಾಗಿಲಿಂ ರಂಜಿಪುದುಮಾಪತಿಸುಖನಗರವು॥೨॥


ಕರಮೆಸೆವ ದೀರ್ಘಪ್ರಸಾದಗಳ ಸಾಲಿನಿಂ 

ವರಕನಕಮಣಿ ಕೇವಣಗೃಹದ ಚೆಲಿನಿಂ 

ಪರಮಸೌಭಾಗ್ಯವಡೆದೆಸೆವ ವಾಣಿಜ್ಯರಿಂ ವಿರಚಿಪಡಗಣ್ಯ ಮಾದ॥ 

ಅರಮನೆಗಳಿಂ ರಾಜಪುತ್ರರಿಂ ಮದವೆತ್ತ 

ಕರಿಗಳಿಂ ಕುಣಿವಶ್ವದಿಂ ಭಟಾನೀಕದಿಂ 

ದೊರೆವರಸದಳ ಸಂಭ್ರಮಂಬೆತ್ತು ವಾಲ್ಮೀಕಪುರಮೆಸೆದುವತಿಚಿತ್ರದಿ॥೩॥ 


ಆ ಪತ್ತನಮನಾಳ್ವ ನರಸಿಂಗಮೊನೆಯನೃಪ

ಚಾಪಸಾಯಕಶೂರ ಗೀರ್ವಾಣಚಾರಿತ್ರ 

ಭೂಪಕುಲ ಚಕ್ರೇಶ ಭೂತೇಶ್ವರನಭಕ್ತ ಕೂಪನಕಳಂಕಚರಿತ ॥ 

ಏಪೊಗಳ್ದಪೆನವನ ಕೀರ್ತಿಪ್ರಕಾಶಮಂ 

ರೂಪಿಸುವೊಡರಿದು ಭೂತಳಚೂಡನಾದೊಡಂ 

ತಾ ಪರಿಣತಂ ನಿಖಿಲಶಾಸ್ತ್ರವಿಸ್ತರಂ ಕಾಪಾಲಧರಭಜಕನು॥೪॥ 


ಕಾಮಕಾಮಂ ಕುಂದನಳಿದ ನವ ಚೆಲ್ವಿನಿಂ

ಸೋಮಸೋಮಂ ಕಳಂಕಿತನಲ್ಲದಾವಗಂ 

ಭೀಮಭೀಮಂ ಧುರಪ್ರಕರದೆಡೆಗಂ ಪುಣ್ಯನಾಮನಾಮ ಪ್ರಚುರನು॥ 

ರಾಮರೃಮಂ ದೇಹಪರಿಶುದ್ಧ ಶೌಚದಿಂ 

ನೇಮನೇಮಂ ತನಗೆ ಪರವಧು ಪರಾರ್ಥದಿಂ 

ಧಾಮಧಾಮಂ ಸಕಲಧರ್ಮಚಿಂತನೆಗಳಿಂ ಭೂಮಿಪಂ ಉತ್ತುಂಗನು॥೫॥ 


ಇದಿರಿಲ್ಲವದಱಿನಾ ಕದನಮುನ್ಷನಿಲ್ಲವಂ 

ತಿದಿರಾದ ಬಳಿಕ ಸಂಗರವಲ್ಲದುಳಿವಿಲ್ಲ 

ವಿದಿರಾಗಲಮ್ಮವಿಳೆಯರಸುಗಳದಂ ಕಂಡು ಕದನಂದೆಗೆಯಲಮ್ಮರು॥ 

ಹದುಗುತೋಲಯಿಸುತಂಜುತ ನಡುಗುತಿರೂದಪುದುಂ 

ಕದುಬಿ ಕಳವಳಿಸಿ ಕಾಲ್ಗೆಱಗಿ ಭಯಗೊಂಬುದುಂ 

ಪದುಳದಿಂ ನಾಮಕರಣಂಗೈವುತಿರ್ಪರಂದಿದನಱಿದು ಚೋಳನೃಪಗೆ ॥೬॥


ಆತನಿಹ ನವ್ಯ ತಿರುವಾರೂರ ನಗರಿಯಿಂ 

ಭೂತೇಶನಿತ್ತ ನೇಮದಿ ದಿವ್ಯಭೂಸುರ 

ವ್ರಾತಮಣಿ ಜಡೆಯನೈನಾರಸತಿಯುದರದಿಂ ಜಾಯವಡೆದಿಹ ನಂಬಿಗೆ॥ 

ಪ್ರೀತಿಯ ಪಿತನಾಗಿ ರಾಷ್ಟ್ರಪಟ್ಟಂಗಟ್ಟಿ 

ಭಾತಿಮಿಗೆ ನರಸಿಂಗಮೊನೆಯರುಚ್ಛವಗೈದು 

ನೂತನವಿಲಾಸಿಯ ಪರಿಣಯಂಗೈವುತಿರೆ ಕಾತರಿಸಿ ಬಂದು ಪರಮ॥೭॥ 


ಮದುವೆಯಂ ಕೆಡಿಸಿ ಬಗೆವಟ್ಟು ಶಿವದಿಟ್ಟು ಮಿಗೆ 

ವಿದಿತ ವೃದ್ಧಬ್ರಾಹ್ಮಣಾಕೃತಿಯೊಳೆಸೆವುತಂ 

ಪದುಳಮಂ ಕೆಡಿಸಿ ಪ್ರಮಾಣಪತ್ರವ ತೋಱೆ ಕದುಬಿಪ್ರಸನ್ನಮಾಗಿ ॥ 

ಚದುರನಂಬಿಗೆ ನಿಚ್ಚ ಪಡಿಹೊನ್ನನೀವುತಂ 

ಮದನಹರ ವಾಲ್ಮೀಕಿನಾಥನಿಹ ನಿರ್ಮಲದ 

ಸದನದಿಂ ಸೌಂದರೇಶ್ವರನಿರಲ್ಕಾ ಪುರದಿನುದಿಸೆ ಕಾಂಚ್ಯದವಲ್ಲಿ॥೮॥ 


ನೃತ್ಯಕುಲಮಣಿಯೆನಿಪ ವಿಮಲಮಂಗಲೆ ನಾಚಿ 

ಗತ್ಯನುಪಮದ ಕುವರಿಯಾಗಿ ಬಾಲ್ಯವ ಕಳಿದು 

ನಿತ್ಯಸೌಂದರ್ಯವುನ್ನತವಾಗುತಿರ್ಪುದಂ ಕೃತ್ಯಮಾಗುಸುರಲರಿದು॥ 

ಒತ್ತರಿಪ ಯೌವನಂ ನಗೆಮೊಗದ ಲಾವಣ್ಯ 

ವೃತ್ತ ಕುಚ ಕನಕಾಬ್ಜ ಕೋರಕಮನೇಳಿಸುತ 

ಲಿತ್ತೆರದ ಕದಪುಕೊನೆ ಕಣ್ಕಾಂತಿ ಶೋಭಿಸಲ್ಕುತ್ತರವಿಲಾಸವೆಸೆಯೆ॥ ೯॥ 


ಅಳಿಪಲ್ಲವಗಳಂತೆ ಪದತಳಂ ಕುಂತಳಂ 

ಗಿಳಿಪರಭೃತಸ್ವರಂ ಸವಿನುಡಿಯ ವಿಸ್ತರಂ 

ಕಳಹಂಸಮಾನದಿಂ ರಂಜಿಸುವ ಯಾನದಿಂ ಕಳೆವೆತ್ತ ನೈತಂಬದ ॥ 

ನಳಿತೋಳ ಚೆಲ್ವಿನಿಂ ನಗೆಮೊಗದಮಳ್ವೆನಿಂ 

ಜಳಜದಾಮೋದದಿಂ ಬೆಳೆವ ಮೈಗಂಪಿನಿಂ 

ಬಳವಡೆದು ಸಿಂಗರದೊಳೆಸದಳ್ವಿಲಾಸದಿಂ ಪುಳಕಿಸುತ ಪರಮನಾಚಿ॥೧೦॥ 


ರೋಹಣಾದ್ರಿಯನಮಲ ಪಯದೊಟ್ಟಿಲಂ ಚಂದ್ರ 

ವಾಹನನಭಾಕರಮುಮನ್ನಿಂದ್ರಚಾಪಮಂ 

ದೇಹವಿಲ್ಲದನೆ ಕೈಬಡಿಕೋಲ ಷಟ್ಪದನಗಾಹಿಪರಿಫುಲ್ಲವಗಳ ॥ 

ಗೂಹಲಶ್ರೀಕರಮನತನುನೃಪ ಕೈಪಿಡಿಯ 

ಗೇಹಿಯಾ ತಿಲಕಮಂ ಗೆಲ್ದು ಪರಮೆಯಮೊಗಂ 

ಮೋಹನದೊಳೆಸೆದುದು ವಿಚಿತ್ರಮೆನೆ ಸಂತತಂ ತಾಹೌವಣಿಗತುಳಮಾಗಿ॥ ೧೧॥


 ಇವಳ ಚರಣದ್ವಯಂ ಮನ್ಮಥನ ಭಟಕುಲಂ 

ಇವಳ ನೈತಂಬವಂಗಜನ ಗಿರಿದುರ್ಗಮಿಂ 

ತಿವಳ ಕುಚವತನುಚಕ್ರೇಶ್ವರಗಜಂ ನೋಡಲಿವಳಕ್ಷಿ ಕಾಮವಾಜಿ ॥ 

ಎವಳ ಚೂಡಿಪಾಶ ಪ್ರದ್ಯುಮ್ನ ಖೇಟಕಂ 

ಇವಳನಖ ಮೀನಕೇತನಖಡ್ಗಮಾಗಲೊಡ 

ನಿವಳಲಾವಣ್ಯಚಾತುರ್ಬಲಂ ರತಿವರಗೆ ತವೆ ಸೊಗಸುಗಱೆವುತಿರಲು॥೧೨॥ 


ಸೋರ್ಮುಡಿಯೊಳಿಟ್ಟ ಮಾಲತಿಯರಳು ತಾರೆಗಳ 

ನೂರ್ಮಡಿಸಿ ಮಿನ್ನೆಸೆಯೆ ಮೊಗವಱೆ ಕಳಂಕಳಿದ 

ನಿರ್ಮಲೀಕೃತಚಂದ್ರನಂತೊಪ್ಪೆ ದಿಟ್ಟಿಗಳಲರ್ಮಿಗೆ ಚಕೋರಮಾಗೆ ॥ 

ಭರ್ಮಕಮಳಂ ಕುಮುದವೈರದಿಂ ಯಾಮಿನಿಯೊ 

ಳಮರ್ದೆ ಮುಗಿದ ಪಾಂಗಿನಿಂ ಮೊಗ್ಗೆಮೊಳೆಗಳಿರ 

ಲೂರ್ಮಿದುರುಳಂತೆ ಮಿಗೆ ಪರವೆಯೆಸೆದಳು ನೋಡಲಿರ್ಮೆಯ್ಯೊಳೆಸೆಯೆ ಕಾಂತಿ॥೧೩॥ 


ಇಂತಿರ್ದ ಪರವೆ ತನ್ನಯ ಲಾಸ್ಯವಿದ್ಯಮಂ 

ಕಂತುಹರ ವಾಲ್ಮೀಕನಾಥಗೊಪ್ಪೆಸುವೆನೆಂ 

ದಂತರಿಸದಲ್ಲಿ ಬಹುವಿನಿಯೋಗವೆರಸುತಂ ತಾಂ ತಳರಿ ಬಂದು ಜವದಿ॥ 

ಅಂತಕಾಹಿತನಾಲಯಂಬೊಕ್ಕು ಶಿವಗೆಱಗಿ 

ಮುಂತೆ ರಂಗಸ್ಥಲದಿ ನಿಂದು ನರ್ತಿಸುವಲ್ಲಿ 

ಪಂತಿಗಳಧರ ಶರಣ ನಂಬಿಯಂ ಕಂಡಳು ಮನಂ ತೀವಿ ನೋಳ್ದಳಂದು॥೧೪॥ 


ಅಂದು ವಿರಹಾವಸ್ಥೆ ಪೆರ್ಚಿ ಬಿದ್ದಳ ತೆಗೆವು 

ತಂದಣದ ಮೇಲೊಯ್ದರಿತ್ತ ವಿರಹಂ ಬಲಿದು 

ಸೌಂದರಂ ಶಿವಗೆ ಬಿನ್ನೈಸುತಿರ್ದಂ ಪರಮನೊಂದುವಂ ನುಡಿಯದಿರಲು॥ 

ಮುಂದೆ ಪ್ರಮಾಣಪತ್ರವ ಬೇಡಿ ಮುನಿವುತಿರ 

ಲಿಂದುಶೇಖರ ಮಂಗಲೆಯರನೊಡಂಬಡಿಸಿ ಭರ 

ದಿಂದಲೊಡಗೂಡಿದಂ ಪರವೆನಾಚಿಯ ಬೇಗ ತಂದು ನಂಬಿಯೊಳಮರ್ಚಿ॥೧೫॥ 


ಹಡಪಮಂ ಹೊಱುವ ಕುಂಟಣಿಯಪ್ಪ ವಿತ್ತಮಂ 

ಕೊಡುವ ಕರೆದೊಯ್ವನಲ್ಲಲ್ಲಿ ಲಿಂಗದ ಕೈಯ 

ಪಡಿಹೊನ್ನ ವರ್ತನಂಗೈವ ಪರಿಮಳವೀವ ಕೊಡೆ ಚಮರವೆಜನವಿತ್ತು॥ 

ಸಡಗರಿಸಿ ಪಲ್ಲಕ್ಕಿಯಂದಣಂ ಚೌದಳದ 

ನಡುವೆ ಸುಖಮನ್ನೀವ ಕಂಡಡುತ್ಸವಗೈವ 

ಗುಡಿತೋರಣಂಗಟ್ಟಿಸುವ ಶಿವಪುರಂಗಳಿಂ ಮಡಲಿಱಿದು ಜಸವಡಸುವ॥೧೬॥ 


ಸಂಕಿಲೆಯ ತಂದು ಪರಿಣಯಂಗೈದು ಕಣ್ದೆಗೆದು 

ಭೋಂಕನೀವುತ ಪಾಡಿಸುತ ಪಿಚ್ಚನೆನಿಸಿಕೊಂ 

ಡುಂ ಕೊಡುವ ತಿರುಣಾವಲೂರಿಂಗೆ ಪೊಱಿಸುವಂ 

ಶಂಕರಾರ್ಚನೆಗೈಸುವಂ ಪರಮನೃಚಿಯಿಂ 

ದಂ ಕೊನರಿಸುವ ನಂಬಿಯೊಳ್ಪ್ರಣಯಕಲಹಮುಮನುಂ ಕಂತೂಹಲಿಪ ನಗಿಪ॥೧೭॥ 


ಇಂತಿರಲು ಮೆಱೆಮಿಂಡ ಶಿವರಾತ್ರಿಗೈವಲ್ಲಿ 

ಕಂತುಹಯ ನಂಬಿ ಹಯವೃಹನದಿ ನಡೆತರುತ 

ನಂತ ಸಂಭ್ರಮದಿ ಶರಣರ್ಗೆ ಪೊಡಮಡದೆ ಶಿವನಂತರಂಗದ ದೇಹದ॥ 

ಮುಂತೆ ನಿಲೆ ಮೆಱೆಮಿಂಡನವಗಡಿಸಿ ಪೂಜಿಸುತ 

ಲಂತಕಾಹಿತ ಭಕ್ಯರಡಿಗೆಱಗಿದಿವನಾವ 

ನಿಂತಲ್ಲಿ ಶಿವನಿಳಯಮಂ ಪೊಕ್ಕನೆನಲು ದೂವಿಜರಂ ತವೆ ನಡುಗುತಿರ್ದರು॥೧೮॥


ದೇವ ಈತಂ ನಂಬಿ ದೇವರಣುಗಂ ಮಹಾ 

ದೇವನಿವಗೊಲಿದಿರ್ಪ ದೇವನಿವನೊಡನಿರ್ಪ 

ದೇವ ಕುಂಟಣಿಯಪ್ಪ ದೇವ ಪಡಿಹೊನ್ನೀವ ದೇವ ಚಿತ್ತಯಿಪುದೆನಲು॥ 

ದೇವ ಪತಿಭಕ್ತ ಮೆಱೆಮಿಂಡನಾಟೋಪಿಸುತ

ದೇವ ನಿಮಗೊಲಿದರೊಳ್ಳಿತು ಪರಮಭಕ್ತರಂ 

ದೇವ ತಾನೊಲ್ಲನೇ ಹೊಯ್ ಡಂಗುರವನೆಂದು ದೇವಮೆಱೆಮಿಂಡ ಹೊಯಿದ॥೧೯॥ 


ಎನುತಲ್ಲಿ ನಂಬಿಯುಂ ಶಿವನುಂ ಪ್ರಳಾಪಿಸುತ 

ವನದೆಡೆಯೊಳಿರೆ ಪುರದಿ ಶಿವನ ಕದ ಕೆತ್ತಿರಲು 

ಜನಸುಯ್ವುತಿರೆ ಪಶುಗಳುಂ ತೃಣಮನೊಲ್ಲದಿರೆ ಕನಲಿ ಶಿಶುಪಾಲ್ಗೊಳ್ಳದೆ॥ 

ಇನಿತಾಗೆ ಹೊಂದಾಳವಂ ನಂಬಿಗೀವುತಂ 

ಘನಮಯಂಶರಣಗಂ ಪಾಡುತಂ ನಲವಿಂದ 

ಪುನರಪಿ ಸ್ಮರಿಸುತಂ ಪುರಕೆ ನಡೆತರುತಿರ್ದ ಮನದೊಳುತ್ಸವಗೈವುತ॥೨೪॥ 


ಇನಕೋಟಿತೇಜನಱುವತ್ತುಮೂವರ ನುತಿಸು 

ತೆನಸಿನಿಂ ಪಿತಸುತರ ಬಣ್ಣಿಸುವ ಪಾಂಗಿನಿಂ 

ತನುಪುಳಕವಡೆದು ಬರೆ ಮೆಱೆಮಿಂಡ ನಿಟ್ಟಿಸಿದನಿನಮಸ್ತಕನ ಮೊಗವನು॥ 

ತನಗೆ ರೋಮಾಂಚನಂ ಕೊನರಿ ಜುಮ್ಮೆನುತಾಗ 

ವನಮಾಲಿ ವಂದ್ಯ ಪದನಂ ನಂಬಿಯಂ ಕಂಡು 

ಮನದೊಳುದ್ಯೋಗಿಸುತ ನುಡಿದ ಶರಣರ ಮುಂದೆ ಘನಮಯಂ ಮೆಱೆಮಿಂಡನು॥೨೫॥ 


ಶಿವಗಿನಿತು ಹಿತವನೇ ನಂಬಿ ನಾನಱಿಯೆನೈ 

ಶಿವನ ಬಳಲಿಸೆದೆನೆಂದೆನುತ ಖಡ್ಗವಪಿಡಿದು 

ಶಿವನಿದಿರಿನಿಂ ತಲೆಯನರಿದುಕೊಳುತಿರ್ಪಲ್ಲಿ ಶಿವ ಬಂದು ಕರವಪಿಡಿದಂ॥ 

ತವೆ ಖಡ್ಗಮಂ ಬಿಸುಟು ತನ್ನ ಸ್ವಭಾವದಿಂ 

ಭವಹರಣ ತೋಱಿದಂ ಶಿಖಿನಯನ ದಶ ಭುಜದಿ 

ಭುವನಧರಕಟಕದಿಂದೆಸೆಯೆ ಮೆಱೆಮಿಂಡನಾಗವಧಿಯಿಂ ಪೊಡಮಟ್ಟನು॥೨೬॥ 


ಮೆಱೆಮಿಂಡನಂ ಪಿಡಿದು ತಕ್ಕೈಸುತಂ ಶಂಭು 

ಕೊಱಚಾಡುವಘಮನೊತ್ತರಿಸಿ ಕರೈಣಮನಿತ್ತು 

ಕಱೆಗೊರಲ ಶರಣರಿಗೆ ನಂಬಿಯಂ ಪೊಡಮಡಿಸಿ ಪೊಱಗೊಳಗ ತನ್ನೊಳಿಟ್ಟು॥ 

ತಱಿಸಂದು ಸಕಲ ನಿಷ್ಕಲ ಸಾಕ್ಷಿತ್ವದಿಂ 

ಕಱಿಗೊಂಡು ಪರಮಶಿವಶರಣರಿಂ ಪೆಚ್ಚಿರ್ದ 

ನೆಱೆದಿಂಗಳಪ್ರಭೆಯನೇಳಿಸುವ ಕಾಂತಿಯಿಂ ತೆಱಪಿಡಿದು ಶೋಭಿಸುತ್ತ॥೨೭॥ 


ಆಗ ಪುಷ್ಪಕದಿ ಮೆಱೆಮಿಂಡನಂ ಕುಳ್ಳಿರಿಸಿ 

ನಾಗಭೂಷಣನೊಯ್ದ ರಜತಾಚಲಕ್ಕಂದು 

ರಾಗಿಸುತ ಗಣಪದವನಿತ್ತ ನಂಬಿಯ ಕೂಡೆ ಸಾಗದೀಶಂ ರಸೆಯೊಳು॥ 

ಏಗಳುಂ ಬೆನದಿಸುತ ಬಹಳವಂ ಕ್ರೀಡೆಯಿಂ 

ಭೋಗಿಸುತ ಚೇರಮನ ಕಂಡು ಸೌಂದರಗೆ ಮೈ 

ಲೃಗಿನಿಂ ಬೆಸಸುತಿರ್ದಂ ಜಗತ್ರಯಬಂಧು ಮೇಘನದಿಮೌಲನಂದು॥೨೮॥ 


ಬಂದನೆದೆ ಚಾರಮಂ ನಿನ್ನ ಕಾಣ್ಬ ಪ್ರಣಯ 

ದಿಂದಲೆಮ್ಮ ಯಮಪುರಿಗೆ ಮತ್ಸುತನ ಬೇಗದಿಂ

ಸಂಧಿಸಿಕೊಳಲ್ಬೇಕು ನಡೆಯೆನುತ ನಂಬಿಯನು ಮುಂದೆ ನಿಲಿಸಲೂಚೇರಮ॥ 

ಮಂದಹಾಸದಿ ಸೌಂದರನ ನುತಿಸಿ ಪೊಡಮಟ್ಟು 

ಕಂದುಗಳ ನಿನಗೊಲಿದ ಶಿವನಕೃಪೆಯಿಂದಿಳೆಗೆ 

ಬಂದೆಯಲ್ಲದೆ ಜಗತ್ಕಾರಣ ಮಹಾಪುರುಷನೆಂದು ನಿಗಮಂ ನುತಿಸಲು॥೨೯॥ 


ನಿನ್ನ ಕಂಡಾ ಪುಣ್ಯರೂಪನಾದೆಂ ನಂಬಿ 

ನಿನ್ನ ಕಂಡಾ ಪವಿತ್ರವನೆಯಿದಿದೆಂ ನಂಬಿ 

ನಿನ್ನ ಕಂಡಾ ಶಿವಾದ್ವೈತನಾದೆಂ ನಂಬಿ ನಿನ್ನ ಕೂಡೇಕಮಾಗಿ ॥ 

ನಿನ್ನ ಪದವಿಡಿದು ಕೈಲಾಸಮಂ ಸೇರುವೆಂ 

ನಿನ್ನ ಮಧ್ಬಾವನೆಯೊಳೊಡಗೂಡಿಸೈ ನಂಬಿ 

ನಿನ್ನವಂ ನಾನೆಂಬ ಚೇರಮನ ಕೈವೆಡಿದು ತನ್ನರಮನೆಗೆ ಬಂದನು॥೩೦॥ 


ಏಕಾಸನದೆ ಕುಳಿತು ಲಿಂಗಾರ್ಚನಂ ಗೈದು 

ರಾಕೇಂದುಮೌಲನಂ ನುತಿಸಿ ಭಕ್ತ್ಯಾತುರದಿ 

ಶಾಖಭಕ್ಷಾದಿ ಪರಮಾನ್ನಮಂ ಶಾವಗಿತ್ತು ನಾಕಾಣ್ಮ ನತ ಚರಣನ॥ 

ಸ್ವೀಕರದ ಶೇಷಮಂ ಭೋಗಿಸಿ ವೆಶೇಷಣದ 

ಜೋಕೆಯಿಂ ತಾಂಬೂಲ ಕೈಘಟ್ಟೆಯಂ ಕೊಂಡು 

ಶಾಖಾಚತುಷ್ಕ ನುತನಂ ನೆನೆದು ಕುಳ್ಳಿರ್ದರಾಖವಿತ ಸಂಭ್ರಮದೊಳು॥೩೧॥ 


ಚೆನ್ನಾಯ್ತು ಕಾವ್ಯಲಕ್ಷಣ ನಂಬೆಯೊಡವೆಚ್ಚು 

ಭಿನ್ನವಿಲ್ಲದೆ ನಮ್ಮ ಕೈವಲ್ಯಕೆಯ್ದಿ ಬಾ 

ನಿನ್ನ ಚತುರಂಗಬಲ ಸಹವಾಗಿ ಜವಹದಿಂದಿನ್ನುಳಿಯಬೇಡವೆಂದು॥ 

ಪನ್ನಗಾಧರನುಸುರಿ ನಿಷ್ಕಲಮನೈದಿದಂ 

ನನ್ನಿಯಿಂ ನಂಬಿಯಂ ಬೀಳ್ಕೊಂಡು ಚೇರಮಂ 

ತನ್ನ ಪುರಿಗೆಯ್ದಿದಂ ಸೌಂದರಂ ಸುಖಮಿರ್ದಡನ್ನೆಗಂ ಪರವೌ ಮುನಿಯೆ॥೩೪॥ 


ರಮಣಿಯನೊಡಂಬಡಿಸಿ ಸಾಲೂವಿಡಿದಂ ಸಂತೈಸು 

ತಮನಾಶಿಗೈದಿ ಲಿಂಗದಿ ಹೊಂಗಳಂ ಪಡೆದು 

ನಮಿಸಿ ಮುಂದಣ ನದಿಗೆ ಬರ್ಪಲ್ಲಿ ಮೊಸಳೆಪಿಡಿದಮಲ ನಂಬಿಯ ಹೆಸರಿನ॥ 

ಅಮಿತ ಗುಣಶರ್ಮನಾತ್ಮಜನಂ ಕಬಳಿಸಲ್ಕೆ 

ಕಮಲಮುಖಿ ನಂಬಿ ನಂಬೀ ನಿನ್ನ ಪೆಸರಿಟ್ಟು 

ಕುಮತಿಯಾದೆಂ ನಕ್ರ ನುಂಗಿತೆನ್ನಯಸುತನ ಸುಮನಸಗುಣೋಲ್ಲಾಸನ॥೩೫॥ 


ಎಂಬ ನುಡಿಗೇಳಿ ಹೊಂದಾಳವಂ ಪಿಡೆವುತಂ 

ಶಂಭು ಸರ್ವೇಶ ಭವ ಭರ್ಗ ಶರಣಾಗೆನುತ 

ಲಂಬಿಕಾಧವನ ಪಾಡಲ್ಮೆಚ್ಚಿಯಮನೃಶಿಯಿಂ ಬಂದು ಸತ್ಕೃಪೆಯೊಳು॥ 

ಕಂಬಲಾಶ್ವತ ಕರ್ಣ ಸುಪ್ರಸನ್ನದಿ ಕೇಳ್ದ 

ನೀಂ ಬಂದು ನಮ್ಮ ನುತಿಗೆಯಿವುದೇನೈ ಮಗನೆ 

ಎಂಬ ಶೆವನೊಡನೆ ಬಿನ್ನೈಸುತಿರ್ದಂ ಜವದಿ ನಂಬಿ ಶೆವಸೌಖ್ಯ ತಂಬಿ॥೩೬॥ 


ದೇವ ನಿಮ್ಮಯ ದಾಸಿಯಣುಗನ ಪೆಸರವಂಗಂ 

ದೇವ ನಿಮ್ಮಯ ನದಿಯ ನಕ್ರದಿಂ ಮೃತವಡೆದ 

ದಂವ ಕರುಣಿಪುದೆನಲ್ ಮೊಸಳೆ ಭರದಿಂ ಬಂದು ದೇವರಣುಗನ ಪೆಸರಿನ ॥ 

ಋ ವಿಮಲ ಕುವರನಂ ಜಠರದಿಂ ತೆಗೆವುತಂ 

ತೀವಿರ್ದ ಬಾಯಿಂದ ಪೊಱಮಡಿಸೆ ತೀವ್ರದಿಂ 

ಕೇವಲ ವೆಲೃಸದಿಂ ಸಿಂಗರದೊಳೊಪ್ಪರ್ದ ಭಾವಜನ ಗೆಲ್ದ ರೂಪಿಂ॥೩೭॥ 


ಅಮನಾಶಿಯೊಡೆಯನಂ ಬೀಳ್ಕೊಂಡು ಜವಹದಿಂ 

ವಿಮಲ ತನ್ನಯ ಪೆಸರ ನಂಬಿಯಂ ಕಳುಪುತಂ 

ಕಮಲಾಲಯಕೆ ಸೌಂದರೇಶ ಬರುತಿರೆ ಪಥದಿ ಕಮಲಸಖಧರ ನೇಮದಿ ॥ 

ಪ್ರಮುದದಿಂ ನಂದೀಶ ನಂಬಿಯಂ ಸಂಧಿಸುತ 

ಸುಮನಶರವೈರಿ ಕಳುಹಿದ ರಾಯಸವನಿತ್ತು 

ಸಮನಿಪಡೆ ಬೆಳ್ಗಜವ ಕೊಟ್ಟು ಕರೆಯಲ್ ನಂಬಿ ನಮಿಸಿದಂ ನಂದೀಶಗೆ॥೩೮॥ 


ಅಂತಾಗಲೆಂದು ತುಂಬುರನ ಕಳುಹಿದ ಚೇರ 

ಮಂ ತಳರಿ ಬರಲೆಂದು ಪರವೆ ಸಂಕಿಲೆಯರಂ 

ನಿಂತಲ್ಲಿ ಕರೆಸುತನ್ವಯದ ಮಾತಾಪಿತರ ಸಂತಸದಿ ಗಜವೇಱಿಸಿ ॥ 

ಮುಂತೆ ಪ್ಷ್ಪಕದೆಡೆಯ ರಮಣಿಯರ ಕಳಿಪುತಂ 

ಸಂತಸದಿ ನಂದೀಶನುಂ ತಾನುಮಿರ್ವರುಂ 

ದಂತಾವಳಮನಡರಿ ಜವದೊಳೈದುತ್ತಿರ್ದರಂತರಿಕ್ಷದ ಪಥದೊಳು॥೩೯॥ 


ಅನಿತಱೊಳು ಹಯ ಗಜದ ರಥ ಪ್ರಕರದಿಕ್ಕೆಯಿಂ 

ಮನುಜಸ್ಥಲದಿನೂರ್ಧ್ವಕ್ಕೆದ್ದು ಕೇರಳನೃಪಂ 

ಘನಪಥಕೆ ಬಂದು ನಂಬಿಯ ಕಂಡು ನಮಿಸುತಂ ಜನಪತಿವಿಲಾಸವೆತ್ತು॥ 

ವಿನಯದಿಂ ಕೈವಲ್ಯಕೆಯ್ದುತಿರೆ ಜವಹದಿಂ 

ವನಿತೆ ತಲೆಯಡಿಯಾಗಿ ನಡೆದಿವರ ಹಿಂದುಳಿಸಿ 

ವನಮಾಲ ವಂದ್ಯನ ಪದಾಬ್ಜಮನ್ನೈದಿರ್ದಳೆನಸಂ ಪರಮಾದ್ವೈತವು॥೪೦॥ 


ಚೇರಮನೃಪಂ ಸೌಂದರೇಂದ್ರನಿಂ ಮುಂ ಪೋಗಿ 

ಸೇರಿದಳು ಕೈವಲ್ಯಮಂ ಕ್ಷಿಪ್ರದಿಂದೆಮ್ಮ 

ಕಾರಿಕಾಲಮ್ಮೆ ಬಳಿಕಿವರಂ ನಡೆತರುತಿರ್ದಡಾ ರಜತಗಿರಿಯ ಹೊರಗೆ॥ 

ಓರಣದ ಗಜತುರಗಮನ್ನಿಳಿದು ಕೈವಲ್ಯ 

ಚಾರುಶಿಖರದ್ವಾರದಿಂ ಬಂದು ನಿಲೆ ಪರಮ

ಚೇರನೃಪಾಲನಂ ನಂಬಿಯಂ ಕರೆಸಿದಂ ಹಾರವಿಸಿ ತನ್ನ ಹೊರೆಗೆ॥೪೧॥ 


ಕಂಡರೀಶನ ಪದವ ಕುಂಬಿಡುತ ಪೊಗಳುತಂ 

ತುಂಡಪಂಚಕನ ಕರುಣಂಬಡೆದು ಜವಹದಿಂ 

ಖಂಡಿತರಹಿತ ಶಿವಾದ್ವೈತರಾದರು ಭವದ ಮಂಡೆಯಂ ಕಿತ್ತಿಟ್ಟರು॥ 

ಉಂಡರೀಶನ ಸುಪ್ರಸನ್ನ ಪ್ರಸಾದಮಂ

ಕೊಂಡರತುಳ ಬ್ರಹ್ಮದೊಳಗಿರ್ಪ ಸೌಖ್ಯಮಂ 

ಚಂಡಕರಕೋಟಿ ಪ್ರಕಾಶದಿಂ ಕೈವಲ್ಯಮಂಡಲದೊಳೊಪ್ಪಿದರು॥೪೨॥ 


ಶಿವನೊಡನೆ ಸಂಭಾಷಣಂಗೈವುತಾವಗಂ 

ಶಿವಪುರಾಣವನೋದುತನುಭವಿಸಿ ತೀವ್ರದಿಂ 

ಶಿವಕರ್ತಭಾಷ್ಯಸಂಹಿತೆಗಳಂ ಕೇಳುತಂ ಶಿವಸಂಗವಡೆವುತಿಂತು॥ 

ಶಿವಕಥಾಲಾಪಕಜ್ಜಪ್ರಮುದರಾಗುತಂ 

ಶಿವಕುತೂಹಲಸುಪ್ರಸಾದಮಂ ಪಡೆವುತಂ 

ಶಿವ ನಂಬಿ ಚೇರಮರ್ಸಂತಸದಿನೊಪ್ಪಿರ್ದರವಿರಳದ ಕೈವಲ್ಯದಿ॥೪೩॥ 


ಇಂತು ಗಿರಿಜಾದೇವಿ ನಿನ್ನ ಪತಿ ಬಿನದಿಸುವ 

ನಂತಮಹಿಮಾವಿಸ್ತರಂ ಪೇಳ್ವಡೆನಗರಿದು 

ನೀಂ ತಳರು ಗೇಹಕೆನಲಡಿಗೆಱಗಿ ಶೈಲಗಣನುಂ ತಾನುಮೀರ್ವರೊಡನೆ ॥ 

ಸಂತಸದಿ ಪುನರಪಿ ನಮಸ್ಕರಿಸಿ ಬರುತಿರ್ದ 

ರುಂ ತವೆವಿಲಾಸದಿಂದರಮನೆಯ ಪೊಗುತ ಮಿಗೆ 

ಮಂತಣದಿ ಲಿಂಗಾರ್ಚನಂಗೈವುತಿರ್ದಲೊಲಿದಂತಕಾರಿಯ ನೇಮದಿ ॥೪೪॥ 


ಇದು ಪರಶಿವಾಕೃತಿಯ ಗುರುಲಿಂಗಣಾರ್ಯನಂ 

ಪದುಳದಿಂ ನುತಿಗೆಯಿಂದ ಲಿಂಗಪೌರಾಣದಿಂ 

ಮುದವಡೆದ ನಂಬಿ ಚೇರಮರ ಸತ್ಕಥನಮಂ ವಿದಿತ ಸದ್ಗುರಂಬೋಧಿಸಿ ॥ 

ಸದನಕೆಯ್ದಿಸಿದ ನಗಸುತೆಯ ನಗಮುನಿಪನಂ 

ವದನಪಂಚಕನ ಕೃಪೆಯಿಂ ಗುರೋತ್ತಮನೆಸೆದ 

ನಧಿಕಪ್ರಸಂಗ ನವದಶಕಸಂಧಿಯ ಪದಂ ಸದಮಲಾತ್ಮಕರಾಲಿಸಿ॥೪೫॥


ಮೂವತ್ತೊಂದನೆಯ ಸಂಧಿ: 


ಚೆನ್ನಬಸವೇಶನೊಳು ಸತ್ಯಣ್ಣಗಳ ಕಥೆಯ 

ಚೆನ್ನೆಸೆಯಲುಸುರಿದಂ ಬಸವ ಮಡಿವಳ ಮೆಚ್ಚಿ 

ಮನ್ನಿಸೆ ಪುರಾತನಗಣಂಗಳುತ್ಸವಿಸುತಿರೆ ವರ್ಣಿಸುತ್ತಿರ್ದನಂದು॥ಪ॥ 


ಶ್ವೇತನಿಗೆ ಪದವಿತ್ತು ಪರಮ ಸಂತೋಷದಿಂ 

ಭೂತಗಳ ಕೈವಲ್ಯಕೆಯಿದಿಸಿದಗೊಲಿವುತಂ 

ಮಾತೆಯ ಮೊಲೆಯನುಂಡು ಮಗನಾಗಿ ಸಂತತಂ ಜ್ಯೋತಿಸ್ವರೂಪವೆತ್ತು॥ 

ಜಾತಿ ಜನನಗಳಳಿದು ವೇದಾಗಮಂಗಳಿಗಶ

ತೀತನಾದಮಲ ಸಂಗಮದೇವ ರಕ್ಷಿಪುದಂ 

ಪ್ರೀತಿಯಿಂ ಸರ್ವಶರಣಾವಳಿಯನಕ್ಕಱಿಂ ಭಾತಿಮಿಗಲಿಷ್ಟವಿತ್ತು॥೧॥ 


ಕೇಳು ಸತ್ಯಣ್ಣದೇವನ ಕಥೆಯನಾವಗಂ 

ಭಾಳನಯನನ ಭಕ್ತನೆಸೆದಿರ್ಪ ಸಂತತಂ 

ಚೇಳೂರೆನಿಪ್ಪ ನಗರಿಯೊಳು ತನ್ನಯ ರಮಣಿ ನೇಲಾಕ್ಷಿಯೊಡನೆ ಸುಖದಿ॥ 

ಆಳುತಿರ್ಪಂ ಶಿವಶರಣ ಸುಖಾಲಾಪದಿಂ 

ಪಾಳಿವಿಡಿದಿಂತು ಹಾಗು ನಿತ್ಯವರ್ಜಿಪುದು 

ಶೂಲಧರ ಭಕ್ತರಂ ಭಜಿಸುತಿಹನಳ್ತಿಯಿಂ ಶೀಲವ್ರತ ಕ್ರಮದೊಳು॥೨॥ 


ಶಿವಲಿಂಗ ಸನ್ನಿಹಿತ ಶಿವಪದಾರಾಧಕಂ 

ಶಿವಶರಣ ಸುಪ್ರೇಮಿ ಶಿಶಭಕ್ತ ಶಿವಯುಕ್ತ 

ಶಿವಲೀನ ಶಿವನಿಷ್ಠ ಶಿವಗುಪ್ತ ಶಿವನಾಪ್ತ ಶಿವಯೋಗಿಜನವೇದ್ಯನು॥ 

ಶಿವನಲ್ಲದಾರುಮಂ ಬಗೆಯ ಬಣ್ಣಿಸಿ ನೋಡ

ಶಿವನಲ್ಲದೇನುವಂ ತಿಳಿಯ ಬೇಸರಿಸ ಮಿಗೆ 

ಶಿವನಿಗಮವಲ್ಲದೇನಂ ಕೇಳ ಸರ್ವಥಾ ಶಿವನ ಕಿಂಕರನಪ್ಪನು॥೩॥ 


ಚಿಲುಮೆಯಗ್ಘವಣಿ ಸರ್ವಭಾಸಣೆಯ ವಸ್ತ್ರದಿಂ 

ಜಲಜಪೂಗಳ ನೇಮ ತನ್ನಿಷ್ಟಲಿಂಗಕಂ 

ಫಲ ಪುಷ್ಪ ಗಂಧ ಮಾಲ್ಯಾಂಬರ ಚರಾರ್ಪಣಂ ತಿಲದನಿತು ಕೊಱತೆಯಿಲ್ಲ॥ 

ಬಲವಂತ ಲಿಂಗದಿಂ ಜಂಗಮ ಪ್ರೇಮದಿಂ 

ಛಲವಂತ ಸಜ್ಜನಂ ಸತ್ಯ ಶೌಚಂ ಭಕ್ತ 

ರೊಲವುಳ್ಳ ಸನ್ಮಾರ್ಗಿ ಭೋಗಮಲ್ಲೇಶನಿಂ ಸುಲಭತ್ವ ತನಗೊಂದಲು॥೪॥ 


ಭೋಗಮಲ್ಲೇಶ ಗುರುಭಜನೆಯಿಂದೊಲಿದಿರ್ಪ 

ನಾಗಕಟಕನ ಶಿವಾಚಾರಮುದ್ರೆಯೊಳಿರ್ಪ 

ನಾಗಿಸುವನಖಿಳ ಪರಮಾರ್ಥ ಸುಖಸೌಖ್ಯಮಂ ವಾಗಾದಿಗುಣವನಳಿವ॥ 

ಜಾಗರಂ ಮಾನಕೊಂದೊಂದು ಶಿವರಾತ್ರೆಯಿಂ 

ಬೀಗುವ ಚರಣಂಗಳ ಕಂಡು ಸಂತತಂ 

ತಾಗುವರಿಷಡ್ವರ್ಗ ಸಂಪರ್ಕಸಂಹರಂ ಹೀಗೆ ರಂಜಿಸುತಿರೂಪನು॥೫॥ 


ಪೊಸವಸ್ತ್ರ ಕಬ್ಬು ನೆಲಗಡಲೆ ತಂಬಿಟ್ಟು ಚಿಗಳಿ 

ಕಿಸಲಯದ ಪತ್ರೆ ಪಡ್ಡಳಿಜಾಲವದೃಗಂತಿ 

ಬಿಸಜಕಮಲಂ ಕುಮುದ ಬಕುಳ ಚಂಪಕ ಪುಷ್ಪದೆಸಕಧೂಪಂ ದೀಪದಿ॥ 

ಪೊಸಪುಟಗಳುಪಕರಣ ಸಮ್ಮಾರ್ಜನಂಗಳಂ 

ಕುಶಲತೆಯ ನವರಂಗವಾಲಿ ಗದ್ದುಗೆಗಳಂ 

ರಸೆಯ ಚರಗಣಕೆ ರಚಿಸುತಲಿರ್ಪ ನಿರ್ಮಲಂ ಪಶುಪನವಿಲಾಸಭಕ್ತ॥6॥


ಗಂಧಾಕ್ಷತೆಗಳೆಸಕದಿಂ ಫಲಪ್ರಕರದಿಂ 

ತಂದಿರಿಸಿ ಪರಿಯಾಣಮಂ ವಸ್ತಿನಿವಹಮಂ 

ಬಂಧುರಪ್ರಭೆಗಳಾರತಿಗಳಿಂ ರತಿಗಳಿಂ ಕಂದುಗಳಗಣನಿವಹಕೆ॥ 

ವಂದಿಸುತ ಬಿನ್ನೈಸುವಂ ಜಂಗಮಪ್ರಕರ 

ವಂದು ಶಿವಪೂಜೆಗೈವುತ್ತಿರ್ಪರೇನೆಂಬೆ

ನಿಂದುಧರನೇಶಬಲ್ಲ ವರ್ಣಿಪಡೆ ಬೆಕ್ಕಸಂ ಒಂದುನಾಲಗೆಗೆಯ್ಯದು॥೭॥ 


ಅಲ್ಲಲ್ಲಿ ಭಸ್ಮಾಂಗಮಂ ಮಾಡುತಿರ್ಪರಿಂ 

ದಲ್ಲಲ್ಲಿ ಮಂತ್ರಗಳನುಚ್ಚರಿಸುತಿರ್ಪರಿಂ

ದಲ್ಲಲ್ಲಿ ರುದ್ರಾಕ್ಷೆಗಳ ಧರಿಸುತಿರ್ಪರಿಂದಲ್ಲಲ್ಲಿ ಜಪಿಸುತಿಹರಿಂ॥ 

ಅಲ್ಲಲ್ಲಿ ಬಹಿರಂಗಮಂ ಮಱೆವುತಿರ್ಪರಿಂ 

ದಲ್ಲಲ್ಲಿ ಲಿಗಮಜ್ಜನಗೈವುತಿರ್ಪರಿಂದಲ್ಲಿ ಚರಲಿಂಗವೊಪ್ಪೆ॥೮॥ 


ಗಂಧಗಳನರ್ಪಿಸುತಲಕ್ಷತೆಯನೀವುತಂ 

ಗೊಂದಣದ ಪುಷ್ಪದಿಂ ಪೂಜಿಸುತ ನುತಿಸುತಂ 

ಮಂದಹಾಸಂ ಮೊಳೆತು ಹರುಷಜಲಪೊಣ್ಮುತಂ ತಂದಾರತಿಯನೆತ್ತುತ॥ 

ಬಿಂದುಗಳೆಯದ ಮುತ್ತ ಚೆಂಗಣಿಗಲೊಡಗೂಡಿ 

ಸಿಂಧುಜೂಟನ ಶಿರಸ್ಸಿನೊಳಿಟ್ಟು ಕೊಡೆವಿಡಿದು 

ಮಂದಾನಿಲನ ಬರಿಸುತಾಲವಟ್ಟವನಿಕ್ಕುತಂದು ಚಾಮರವ ಬೀಸಿ॥೯॥ 


ದಿವ್ಯಾನ್ನಮಂ ನಿವೇದಿಸಿ ವೀಳೆಯಮನಿತ್ತು 

ನವ್ಯಜಯಘಂಟೆಯಂ ನುಡಿಸಿ ಮುಕುರವ ತೋಱಿ

ಗವ್ಯಾಘಮಂ ಪೂರ್ವದಿಂ ಸಮುಚಿತಂಗೈದು ನಿರ್ವ್ಯಾಕುಲದಿ ನೂತನ ॥ 

ರಮ್ಯವಸ್ತ್ರವನಿತ್ತು ಗೀತ ನೃತ್ಯಂಗೈದು 

ಕವ್ಯ ಪ್ರಕಾರದಿಂ ಪದಪದ್ಯಗಳನುಸುರು 

ತವ್ಯೋಮಧರನ ಭಜಿಸಿದರು ಚರಸಂಕುಳಂ ಸುವ್ಯಲಾಪಂಗಳಿಂದ॥೧೦॥


ಪೆಚ್ಚುತಂ ಕರಗುತಂ ಕೊರಗುತಂ ಲಿಂಗದಿಂ 

ಮೆಚ್ಚುತಂ ವಿರಹಿಸಲಪ್ಪುತಂ ಕೂಡುತಂ 

ನಚ್ಚುತಂ ನಂಬುತಂ ಸೆಱಗೊಡ್ಡಿ ಬೇಡುತಂ ಬಿಚ್ಚಿ ಬಿಸುಡುತ ಮಾಯೆಯ ॥ 

ಬಿಚ್ಚಿಸುತಲಗೆದು ಹೂಳಿಸಂತಸಂಸಾರಮಂ 

ಕೊಚ್ಚಿಸುತ ಕಂತುಕಾಲಭ್ರಮೆಯ ಱೊಪ್ಪಮಂ 

ಮೆಚ್ಚಿಸುತ ಪರಮನನ್ನರಸುತಂ ರಂಜಿಸಿದರಚ್ಚರಿಯ ಶಿವಗಣಗಳು॥೧೧॥ 


ಆ ಕಾಲದಲ್ಲಿ ಸತ್ಯಣ್ಣದೇವರ ತನ್ವಿ 

ನೂಕಿ ಬೆಳೆದಿಹ ಗರ್ಭದಿಂ ಬೇನೆ ಕೆರಳುತಂ 

ತಾ ಕುತೂಹಲದಿ ಪೆತ್ತಳು ಜವಳಿ ಮಕ್ಕಳಂ ಸ್ವೀಕರಿಸಿ ನೋಡಿ ಶರಣ॥ 

ಜೋಕೆಯಿಂ ಗರ್ಭಲಿಂಗಮದೊಂದು ಪಿಂಡಮಾ 

ಯ್ತೀ ಕರ್ಮ ಶಿಶುವಿಗಿಲ್ಲಂ ಲಿಂಗಮೆಂದೆನುತ 

ಸೂಕರಂ ಚರಿಪ ತಿಪ್ಪೆಗೆ ಬಿಸುಟ ಮಗುವೊಂದನಾ ಖಚರವರ ಭಕ್ತನು॥೧೨ ॥ 


ಪಾಕ ಭಕ್ಷಮನೆಲ್ಲ ಗುಂಡಿಯಿಂ ಹೂಣಿಸುತ 

ಶಾಖ ಫಳ ತಂಡುಲಂಗಳ ಹೊಱಗೆ ತೆಗೆದಿಡುತ 

ತಾ ಕಡೆಗೆ ನಿಂದು ಸುಣ್ಮದ ಸೋಥೆಯಂ ಹೊಯ್ಸಿ ನೂಕಿ ಸಮ್ಮಾರ್ಜಿಸುತ್ತ॥ 

ಆ ಕುತೂಹಲ ಧರಗೆ ಶೌಚದ್ರವ್ಯಮಂ ತರಿಸಿ 

ಲೋಕವಲ್ಲಭನ ಭಕ್ತರಿಗೆ ಪುನರಪಿರಚಿಸಿ ಸಾಕಿದನು ಭಕ್ತನೊಪ್ಪೆ॥೧೩॥ 


ಸರ್ವ ಸನ್ನಾಹದಿಂ ಶಿವಪೂಡೆಗೆಡೆಮಾಡಿ 

ಸರ್ವ ಸಾಧನವಿತ್ತು ಶರಣರನ್ನುಪಚರಿಸಿ 

ಸರ್ವ ಭಕ್ತರ ತಣಿಸಿ ಲಿಂಗಧಾರಣಗೈಸಿ ಸರ್ವ ಸತ್ಕ್ರಿಯೆಯ ರಚಿಸಿ॥ 

ಸರ್ವ ಗಣವುಚ್ಛವಿಸಿ ಹರಪೂಜನಂಗೈದು 

ಸರ್ವ ಚರತೃಪ್ತಿವಟ್ಟತಿ ಸಂತಸಂ ಬಟ್ಟು

ಶರೂವನಂ ಪೂಜಿಸುತ ಸತ್ಯಣ್ಣನೊಪ್ಪಿರ್ದ ಪರ್ವತಪಿನಾಕನಿಂದ॥೧೪॥ 


ತನ್ನರ್ಭಕನ ತತ್ಪುರುಷನೆಂದು ಕರೆವುತಂ

ತನ್ನ ಗುರು ಭೋಗಮಲ್ಲೇಶಂಗೆ ಪೊಡಮಡಿಸಿ

ತನ್ನ ಚರಗಣದೊಳುಚ್ಛವಗೈವುತಾವಗಂ ತನ್ನರಸಿ ನೀಲಾಕ್ಷಿಯ ॥ 

ತನ್ನೊಳಗೆ ಪೊಗಿಸುತಂ ಶಿವಪೂಜೆಗೈವುತಂ 

ತನ್ನ ಧನ ಕನಕಮಂ ಶರಣಜನಕೀವುತಂ 

ತನ್ನ ಗುರುವಿಂಗೆಱಗಿ ಪಾದೋದಕಂಗೊಂಡು ಮುನ್ನಿನಿಂ ಪ್ರಚುರಮಾಗಿ॥೧೫॥ 


ಇರೆ ಶಿವಂ ಜಂಗಮಾಕೃತಿವೆತ್ತು ನಡೆತಂದು 

ಹರನಣುಗ ಸತ್ಯಣ್ಣನಾ ಗೃಹಕೆ ಜವಹದಿಂ 

ಬರೆ ಭಕ್ತನೆಱಗಿ ನುತೆಸುತ ಪುಳಕವೇಳುತಂ ಚರಣಮಂ ತೊಳೆದೀಂಟುತ॥ 

ಉರವಣಿಸಿ ಗದ್ದುಗೆಯೊಳಿಟ್ಟು ಲಿಂಗಾರ್ಚನೆಯ 

ವಿರಚಿಸುವ ಸಮಯಮಂ ಸತ್ಯಣ್ಣ ಕಾಯ್ದಿರ್ದು 

ಪರಮಪ್ರಸಾದಮಂ ಕೈಕೊಂಡು ಭಕ್ತಿಯಿಂ ಕರಮೆಸೆವುತೊಪ್ಪಿರಲ್ಕೆ॥೧೬॥ 


ಚೆನ್ನಾಯ್ತು ಲಿಂಗಾರ್ಚನಂಗೆಯ್ದೆವೆಲೆ ಶರಣ 

ನಿನ್ನರಸಿ ನೀಲಾಕ್ಷಿಯಂ ಕೊಡೈ ನಮಗೆನಲು 

ಮುನ್ನವೇ ನಿಮಗೆ ಮೀಸಲೆದೆ ದೇವ ಚಿತ್ತೈಸಿ ತನ್ನಿಮಿತ್ತದೊಳೆನುತ್ತ॥ 

ಉನ್ನತ ಸ್ತ್ರೀಯ ಜಂಗಮಕಿತ್ತು ತತ್ಪುರುಷ 

ನನ್ನೀವುತಿರೆ ಮೆಚ್ಚಿದಂ ಗಜಾಜಿನವಸನ 

ತನ್ನ ಕೃಪೆ ಮೈಗರೆದು ಸುಖರಸಂ ಬಲೆದು ಪ್ರಸನ್ನವೃದಂ ಶರಣಗೆ॥೧೭॥ 


ಅಸಿತಗಳನಹಿಕರ್ಣನತದುಮೊಗ ಧವಲಮೈ 

ಲಸಿತ ನಿಟಿಲದ ನೇತ್ರ ಮೌಲದ ಜಟಾಪಟಲ 

ಬಿಸಜವಗೆಮೌಲದಿಂ ಬಿನದಿಪ ಕರೋಟಿಯಿಂ ನಸುನಗೆಯ ಚೆಲ್ವಿನಿಂದ॥

ದಶನದ ಪರ್ಭೆಗಳಿಂ ಮೃದುವಚನಶೋಭೆಯಿಂ 

ದಶಭುಜಂ ಮೆಚ್ಚಿ ಪ್ರಸನ್ನವಾದಂ ಶರಣ 

ರಸಗೆ ಸಕ್ಕಜರೂಪಕಂಡೆನೆನುತೆಱಗಿದಂ ವಸುಮತಿಯೊಳೊಂದಿ ಭರದಿ॥೧೮॥ 


ದಂಡಪ್ರಣಮಗೈದು ಪುನರಪಿ ನಮಸ್ಕರಿಸಿ 

ಖಂಡಶಶೆಧರ ಭಾಳನೇತ್ರ ಪಶುಪತಿ ಭರ್ಗ 

ದಂಡಧರವಿದ್ವಂಸ ಧರಣಿಧರಸುತೆಯಾಸ್ಯಪುಂಡರೀಕವಿಕಾಸನ॥ 

ಚಂಡಕರತೇಜ ಷಡ್ವಕ್ತ್ರಪಿತ ಚರಣದೃಗ 

ಮಂಡನವಿಲಾಸ ವಿಧಿನುತ ಮನ್ಮಥಧ್ವಂಸ

ಪಂಡಿತಾಖಿಲವರದ ಪಾವನಚರಿತ್ರ ಜಯ ತುಂಡಪಂಚಕ ಪಾಹಿಮೃ॥೧೯॥ 


ಎಂದು ನುತಿಸುವ ಶರಣನಂ ನೋಡಿ ಭರದೊಳೆಯಿ 

ತಂದಪ್ಪಿ ಕರಣದಿಂ ಪುಳಕಿಸುತ ಪರಮೇಶ 

ನೆಂದನೆಲೆ ಮಗನೆ ನಿನ್ನಯ ವ್ರತಂ ಮಮಸುಖಂ ಮುಂದೆ ನಿರುಪಮವಪ್ಪುದು॥ 

ಕಂದನಂ ತಿಪ್ಪೆಗೆಯ್ದಿಸಿದೆಯೆನೆ ದೇವ ನೀ 

ಬಂದ ಬಟ್ಟೆಯೊಳೆಯ್ದು ನೀನಿದಂ ನುಡಿಯದಿರು 

ಕುಂದಪ್ಪುದೆಮ್ಮಯ ಪುರಾತನಗಣಂಗಳಿಂ ಛಂದವಲ್ಲಂ ಭಾವಿಸೆ॥೨೦॥ 


ಎನೆ ಕೇಳು ಮಗನೆ ಪೂರ್ವದೊಳವಂಗಂ ಧರ್ಮ 

ತನಯನೆಮ್ಮಂ ಭಜಿಸಿ ತಪವಿರ್ದಡಾತಂಗೆ 

ವನಜಗೋಲನ ಧಾಳಿ ಬಂದು ಪರಸತಿಗಳುಪಿ ತನುವಳಿಯಲಾವು ಕಂಡು॥ 

ಎನಸಿನಂ ವ್ರತಿಗಳ ಬಸುಱೊಳೊಪ್ಪೆ ಜವಹದಿಂ 

ಜನಿಸು ಪೋಗೆಂದೊಡುದಿಸಿದ ಪಾರಮಾರ್ಥದಿಂ 

ಕನಲದಿರು ನೀನವನ ಸಲಹೆಂದೊಡಾನೊಲ್ಲೆ ಘನವೆನ್ನ ಕುಳಕೆ ಭಂಗ॥೨೧॥ 

 

ಎಂದು ನುಡಿದರೆ ಶಿವನದೃಶೂಯವೃದಂ ಶರಣ 

ಕಂಧರವನರಿದಿಟ್ಟನಾ ಶಿರಂ ಧೂರ್ಜಟಿಯ 

ಮುಂದೆ ನಿಲುತಂ ಕೂಡೆ ಬರೆ ಶರೂವನಳುಕುತಂ ಬಂದು ಚೇಳೊರ ಪೊಕ್ಕು ॥ 

ಅಂದು ಶರಣನ ಮುಂಡದಿಂ ಶಿರವನಮರಿಚುತ 

ಕಂದುಗಳ ಚೇತನವ ತುಂಬಿದಂ ಶಿವಶರಣ 

ಕಂದೆಱೆದು ಶಿವನಡಿಗೆ ನಮಿಸಿದಂ ಮೈವೆಚ್ಚಿ ಮಂದಹಾಸಂ ಮೊಳೆವುತ॥೨೨॥


ಸಿಕ್ಕಿಲ್ಲ ಜೀವಹಿತವೆಂದು ಗೊಬ್ಬರದೆಡೆಯಂ 

ಹೊಕ್ಕು ಪಿಂಡವ ತೆಗೆದು ಜೀವನವ ತುಂಬುತಂ

ಮಕುಕ್ಕಣ್ಣಗೊಪ್ಪಿಸಿದಡವನ ಕರಿಯಜಿನದಿಂ ಸಿಕ್ಕಿ ಶರಣನನಿರಿಸುತ ॥

ಅಕ್ಕಱಿಂ ಬೀಳ್ಕೊಂಡು ಕೈವಲ್ಯಕೆಯಿದಿ ಶೆವ 

ಚೊಕ್ಕಳದ ಪದವಿತ್ತು ರುದ್ರೇಶವೆಂದು ಹೆಸ 

ರಿಕ್ಕುತಂ ಶಿವನಿರ್ದ ಶರ್ವಾಣಿಯೊಡೆವೆಚ್ಚು ಮಿಕ್ಕ ಸುಖಮಂ ಹಳಿವುತ॥೩೫॥ 

 

ಸತ್ಯಣ್ಣ ಜಂಗಮಾರ್ಚನೆಗೈವುತಿರುತಿರ್ದ 

ನತ್ಯಧಿಕ ಲಿಂಗಸಂಗದಿ ಗುರುಧ್ಯಾನದಿಂ 

ಚಿತ್ತವಲರುತ  ತನ್ನ ತನು ಮನ ಧನಂಗಳಂ ಕರ್ತುವಿನವೆಂದು ತಿಳಿದು॥ 

ಮತ್ತೆ ಗುಡಿ ತೋರಣ ಪತಾಕೆಗಳ ಕಟ್ಟುತಂ 

ಸುತ್ತ ಕೇಳಿಸುತ ನಾನಾವಾದ್ಯರಭಸದಿಂ 

ಚಿತ್ತಜಾರಿಯ ಭಕ್ತರನ್ನಿದಿರ್ಗೊಂಬ ರತಿವೆತ್ತು ಸಂತಸದೊಳಿಂತು॥೩೬॥


ತಂದು ಮನೆಯಲ್ಲಿರಿಸಿ ಚರಣಗಳ ತೊಳೆವುತಂ 

ಕಂದುಗಳ ಭಕ್ತರಿಗೆ ಶಿವಪೂಜೆಗೀವುತಂ 

ಮುಂದೆ ಪರಮಾನ್ನ ಗಳ ಬಡಿಸುತಂ ನುತಿಸುತಂ ನಂದೀಶನೀವಂತಿರೆ॥ 

ಇಂದುವಣ್ಣದೊಳಿರ್ಪ ಬಟ್ಟವಾಲಂ ನೀಡಿ 

ಕಂದಳಿದ ಕಳಮೆಯೋಗರವನಿಕ್ಕುತ ಬೇಗ 

ತಂದು ಶಾಖವ ಬಡಿಸಿ ಸೂಪಗಳನೆಱೆವುತಂ ನಿಂದು ಬಿನ್ನಯಿಸುತಿರ್ದ॥೩೭॥ 


ದೇವ ಚೆನ್ನಯ್ಯನವಸರವೆಂದು ಪರಿಣಮಿಸಿ 

ದೇವ ಚೋಳನಭಕ್ತಿರಸವೆಂದು ಸಡಗರಿಸಿ

ದೇವ ನಿಮ್ಮಮ್ಮೆಯರ ಹಣ್ಣೆಂದು ಸವಿನೋಡಿ ದೇವ ನಿಮ್ಮಯ ಮೆಚ್ಚಿನ ॥ 

ದಂವ ರಮಣಿಯ ನವ್ಯ ಹುಗ್ಗಿಯೆಂದವಧರಿಸಿ 

ದೇವ ನಿಂಬಿಯ ಪಾಕವೆಂದು ಕೈಕೊಂಬುದೆಲೆ 

ದೇವ ಕೊಡಗೂಸಿತ್ತ ಹಾಲೆಂದು ಪುಳಕಿಪುದು ದೇವ ಸುಖಿಪುದು ಸವಿವುದು॥೩೮॥ 


ಗೊಲ್ಲಣನ ಬಂಟನಾ ಗೊಬ್ಬೂರ ವರಸುತಂ 

ಬಲ್ಲಳನ ಬಾಗಿಲವ ಬಾಹೂರವನ ಲೆಂಗಿ 

ಮಲ್ಲಯ್ಯನಣುಗ ಮಾದರನ ಕಂಬಿಯ ಬೋವನಲ್ಲಮನ ಲೆಂಕ ಪುರದ ॥ 

ಭಿಲ್ಲಮನ ಸಾಣಿ ಭೀಮಯ್ಯನ ಕಠಾರವದ 

ಕಲ್ಲಿದೇವನ ಭೃತ್ಯ ಕಣ್ಣಪನ ಪಡೆವಳಂ 

ತಿಲ್ಲವೇಳಾಂಧನಂಕದ ಬಂಟ ನಾನೆನ್ನನಿಲ್ಲಿ ರಕ್ಷಿಸಿ ಸವಿವುದು॥೩೯॥ 


ಬಱಿಮಾತು ಬೇಡ ದೃಷ್ಟವ ಕಾಬೆವೆನೆ ಗಜವ 

ನಿಱಿದವರ ಪಾದೋದಕವನದಱ ಜಿಹ್ವೆಯ 

ಲ್ಲೆಱದೆಚ್ಚಿಸಿದನಾನೆಯಂ ದ್ವಿಜರ್ನಮಿಸುತಂ ಬೆಱಗೊಂದಲರಸ ನುತಿಸಿ॥ 

ಮಿಱುಪ ಮಣಿಕನಕದೊಡವನಿತ್ತು ಕಳುಪಿದಂ 

ಕಱೆಗೊರಲನಣುಗ ಸತ್ಯಣ್ಣ ಜವದಿಂ ಬಂದು 

ಪೆಱೆದಲೆಗಭಕ್ತರಂ ಭಜಿಸುತಿರ್ದಂ ಕೂಡೆ ನೆಱೆ ವೀರಭಕ್ತಿ ಮಿಗಲು॥೪೮॥ 


ಸತ್ತ ಶಿಶುವನೆಬ್ಬಿಸುತ ಜವಹದಿಂ ತಂದು 

ಕೃತ್ತಿವಾಸನ ಗಜಾಜಿನದೆಡೆಯ ಸಿಕ್ಕಿದಂ 

ಮತ್ತಗಜಮನ್ನಿಱಿದು ಚೇಳೂರ ನೃಪನ ಮುಂದೆತ್ತಿದಂ ಪಾದಜಲದಿ॥ 

ಚಿತ್ತಜಹರಂಗೆ ಶಿರವರಿದಿಟ್ಟು ಬರಿಸಿದ 

ನಿತ್ಯನಿಂ ಶಿವತತ್ವಮಂ ಕೇಳಿ ದುರಿತಹರ 

ನಿತ್ತ ಕೈವಲ್ಯಸುಖಮಂ ಹಳಿದ ನೋಡೆಂದು ಸತ್ಯಣ್ಣನಂ ನುತಿಸಿದಂ॥೪೯॥ 


ಇದು ಪರಶಿವಾಕೃತಿಯ ಗುರುಲಿಂಗಣಾರ್ಯನಂ 

ಪದುಳದಿಂ ನುತಿಗೆಯ್ದ ಲಿಂಗಪೌರಾಣದಿಂ 

ಮುದವಡೆದು ಬಸವನಿಂ ಚೆನ್ನಬಸವಂ ಕೇಳ್ದನಧಿಕಶರಣನ ಕಥೆಯನು॥ 

ವಿದಿತ ಸತ್ಯಣ್ಣನಂ ನೆನೆಯೆ ಸದ್ಭಕ್ತಿ ಸುಖ 

ಸಂಧನ ಕಥೆಯಲ್ಲಿ ಮೂವತ್ತೊಂದು ಸಂಧಿಯಿಂ 

ಪದನೆಸದವಮಲ ಭಕ್ತಿ ಜ್ಞಾನ ಬೋಧೆಯಂ ಮದನಹರಸೌಖ್ಯವಡೆದಂ॥೫೦॥ 


ನೆನಕೆ: 

ಕರ್ತೃ:ಗುರುಲಿಂಗದೇಶಿಕ,

ಸಂಪಾದಕ: ಜಿ. ಜಿ. ಮಂಜುನಾಥನ್, 

ಪ್ರಕಾಶಕರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, 

ಮೈಸೂರು ವಿಶ್ವವಿದ್ಯಾನಿಲಯ, 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ