ತಿಲಕಪುರ ಸೋಮ ವಿರಚಿತ ಚತುರಾಚಾರ್ಯ ಪ್ರಬಂಧ
ಚತುರಾಚಾರ್ಯ ಪ್ರಬಂಧದ ಕರ್ತೃ ತಿಲಕಪುರದ ಸೋಮ. ತಿಲಕಪುರ ಎಂಬುದು ಈಗಿನ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿಗೆ ಸೇರಿದ ತಿಲಕೂರು. ಇದಕ್ಕೆ ಲಲಾಮಪುರ ಎನ್ನುವ ರೂಪವೂ ಇದೆ. ಕವಿಯ ಕಾಲ ಕ್ರಿ. ಶ. ೧೮೩೨ .ಈತನ ಗುರು ವೃಷಲಿಂಗ. ಕಾವ್ಯದ ಉದ್ದಕ್ಕೂ ಅನನ್ಯ ಭಕ್ತಿಭಾವದಿಂದ ವೃಷಲಿಂಗನನ್ನು ಸ್ತುತಿಸಿದ್ದಾನೆ. ಚಿತ್ತಾರು ಗಂಗಾಧರಶಾಸ್ತ್ರಿಯವರು ತೆಲುಗಿನಲ್ಲಿ ಬರೆದಿರುವ " ಕೊಲನುಪಾಕ ಮಹತ್ವವನ್ನು" ಹದಿನೆಂಟು ವರ್ಣನೆಗಳಿಂದ ಕೂಡಿದ ಕನ್ನಡ ಕಾವ್ಯವಾಗಿ ರಚಿಸಿದ್ದಾನೆ. ಈ ಕಾವ್ಯ ೫ ಆಶ್ವಾಸ, ೨೯ ಸಂಧಿ, ೧೪೧೩ ಪದ್ಯಗಳಿಂದ ಕೂಡಿದೆ.
ಒಂದನೆಯ ಸಂಧಿ,
ಮಲಹರನು ಚಿತ್ಕಲೆಗಳೇ ಶ್ರೀ
ಕೊಲನುಪಾಕಿಯ ಸೋಮಲಿಂಗದ
ಲಲಿತ ಗರ್ಭದಿ ಜನಿಸಿದರು ಆಚಾರ್ಯರುಗಳಾಗಿ॥
ಶ್ರೀಶ್ವರೇಶ್ವರ ಸೀತಗಜಮುಖ
ಭಾಸ್ವರಾಂಬುಜ ಭಾಸ್ಕರಾ ನಿಗ
ಮಾಶ್ವ ನಿರುಪಮ ಮಾಜ ಮದಸಂಹಾರ ಗಣಸಾರ॥
ಶಾಶ್ವತಾಮಳ ಶರಣಜನ ರ
ಕ್ಷಾ ಸ್ವತಂತ್ರ ಶ್ರೀಪರಮ ಮಾ
ಹೇಶ್ವರನೆ ಪೊರೆ ವಿಶ್ವವನು ಬಿಡದೆಲ್ಲ ಕಾಲದಲಿ॥೧॥
ಕಾಯಕಲೆ ನೆಲೆಗಳನು ತಿಳಿದತಿ
ಮಾಯ ಕಳವಳಕಾಗದಲೆ ಪೂ
ಸಾಯಕನ ಮದ ಜೈಸಿ ಸಕಲಾರಂಭಗಳಿಗೆಲ್ಲ॥
ಆಯತದಿ ಮೊದಲಾಗಿ ವಿದ್ಯಾ
ದಾಯಕನು ಎಂದೆನಿಸಿ ಮೆರೆವ ವಿ
ನಾಯಕನೆ ಒಲಿದೀವುದೆಮಗೆ ಸುಮತಿಯ ಮಂಗಲವ॥೬॥
ಸಾರತರದುಗ್ರಾಕ್ಷದಿಂ ಮಿಗೆ
ಹಾರಿ ಬಂದಾರ್ಭಟಿಸಿಯಾಗಲೆ
ಚೀರಿ ಜನಕನ ಬೆಸನದಿಂದಲಿ ಖೂಳ ದಕ್ಷನನ
ಚಾರು ಮುಖವನು ಕೆಡಿಸಿ ನೆರೆದಿಹ
ಭೂರಿ ದಿವಿಜರ ಭಂಗಿಸಿದ ಶ್ರೀ
ವೀರಭದ್ರನೆ ಸಲಹು ಸಂತತ ಬಿಡದೆ ಭಕ್ತರನು॥೭॥
ಉಣ್ಮಿದೇಳನೆ ವಾಸರದಿ ನೆರೆ
ದಣ್ಮಿ ತಾರಕಸುರನ ಕೋಪದಿ
ಗೋಣ್ಮುರಿದು ದಿವಿಜಾಳಿಗಳ ಸಂರಕ್ಷಿಸಿದ ಬಳಿಕ ॥
ಬಿಣ್ಮಿದಿಂದ್ರನ ಅಳಿಯನೆನಿಸಿದ
ಷಣ್ಮುಗನೆ ಸಲೆ ನಿನ್ನ ಪರತರ
ಜಾಣ್ಮೆಯನು ಒಲಿದಿತ್ತು ಎಮ್ಮನು ಕಾಯ್ವುದನುದಿನವು॥೮॥
ಅಕ್ಷಯ ಸಧರ್ಮಾರ್ಥ ಕಾಮ ವಿ
ಮೋಕ್ಷವೇ ನಾಲ್ಕಡಿಗಳಾಗಿ ಸ
ಲಕ್ಷಣದಿ ಬ್ರಹ್ಮಾಂಡ ಸಚರಾಚರದ ಪ್ರಾಣಿಗಳ॥
ರಕ್ಷಿಸಿದ ತ್ರ್ಯಕ್ಷ ಸ್ವರೂಪ ಮು
ಮುಕ್ಷುದಾಯಕ ನಂದಿಕೇಶ್ವರ
ಪಕ್ಷದಿಂ ಕರುಣೇಕ್ಷಣದಿ ನೀನೀಕ್ಷಿಸನವರತ॥೯॥
ತುಂಗ ಶ್ರೀರುದ್ರಾಭಿಷೇಕದಿ
ಲಿಂಗಪೂಜೆಯ ಮಾಡುವರು ಕೆಲ
ಲಿಂಗಕಾರತಿಯೆತ್ತುವರು ಮುಸುಕಿಟ್ಟು ಜಪಗಳನು॥
ಪೊಂಗಿ ಮಾಳ್ಪರು ಕೆಲರು ವಟಂ ಪಾ
ಠಂಗಳೊಪ್ಪಿಸಿ ಕೊಂಬುವರು ಕೆಲ
ಸಿಂಗರದ ಜಂಗಮ ವಿತತಿ ಕಂಗೊಳಿಸಲಾ ಕಡೆಗೆ॥೨೨॥
ಚಿನ್ನಿಧಿಯೆ ಸದ್ಗುರುವರನೆ ಕೇ
ಳೆನ್ನ ವಾಕ್ಯವನಾದರದಿ ಸಲೆ
ಚನ್ನಮಲ್ಲಪ್ಪನುವದೆಂಬರು ಮತ್ತೆ ಈ ತನಯ
ನನ್ನಿಯಿಂ ತಿಲಕೂರ ಪುರಜನ
ಕುನ್ನತದಿ ಗುರುವಾರದ ಗುಣಸಂ
ಪನ್ನ ಕರಿಬಸವಾಕ್ಯನತುಳಾಚಾರ್ಯನ ಕುಮಾರ॥೩೩॥
ಘನ ಮುಗುದಸಂಗಯ್ಯನಾತನ
ಮನವರಿದುವಾಚರಿಸುತಿರ್ಪಾ
ವನಿತೆ ಸಜ್ಜನವಿನುತೆ ನಾಗಮ್ಮನ ಮನೋತ್ಸಹದ ॥
ತನಯ ಶಿವಮೂರ್ತಯ್ಯನಾಮಳ
ತನುಜನಿವ ಸೋಮಯ್ಯನೆನಲಾ
ಅನಘ ತಲೆಯಲ್ಲಾಡಿಯಹುದಹುದೆನುತಲಿಂತೆಂದ॥೩೪॥
ನಾಡೆ ನಿಮ್ಮಯ ಸುಗುಣತೆಯ ಜನ
ರಾಡುತಿರಲಾ ಕೇಳಿ ಮುದದೊಡ
ಗೂಡಿಯಿರ್ದೆವು ಈ ದಿವಸ ಸುಮುಹೂರ್ತಸಮಯದಲಿ॥
ನೋಡಿದೆವು ಸಂತೋಷವಾಯಿತು
ಗಾಢ ಶಿವಲಿಂಗಾರ್ಚನೆಯ ನೆರೆ
ಮಾಡುವರೆ ಏಳೆಂದು ಎಬ್ಬಿಸಿ ಪ್ರೌಢವಟುಗಳನು॥೩೫॥
ಮಿಗೆ ಮುದಂದಳೆದೆದ್ದು ಕರಗಳ
ಮುಗಿದು ಕಂಗಳೊಳಶ್ರುಜಲಗಳು
ಉಗಿವುತಲಿಯಿಂತೆಂದ ಈ ಮಗನಿಗೆ ಸುವಿದ್ಯವನು॥
ಸೊಗಸಿನಿಂದಲಿ ಪೇಳುವುದುಯೆನೆ
ಅಘಹರಂ ಗುರುವರನು ಕೇಳುತ
ನಗೆಮೊಗದಿ ಕುಳ್ಳಿರುವುದೆಂದಾ ಭಕ್ತಗಿಂತೆಂದ॥೩೭॥
ಏತಕೈ ಇನಿತಿಷ್ಟು ದೈನ್ಯವು
ಸಾತಿಶಯದಿಂದೆಮ್ಮ ತಾಣದಿ
ಈ ತರಳನನುಯಿಟ್ಟು ಪೋಗೈ ತವಕದಿಂದೀಗ॥
ನೀತಿ ಜ್ಞಾನ ವಿರಾಗಶಾಸ್ತ್ರಗ
ಳೋತು ಪೇಳುವೆವೆಂದು ಸದ್ಗುರು
ನಾಥ ಪೇಳಲಿಕಾ ತನಯಗಿಂತೆಂದನಾ ಭಕ್ತ॥೩೮॥
ಮಿಥ್ಯವುಸಿಕನೆ ಹೊತ್ತುಗಳೆಯದೆ
ಸತ್ಯಸಾರ ಗುರೋತ್ತಮನ ಸಲೆ
ಚಿತ್ತವೃತ್ತಿಯವಿಡಿದು ವಟುಗಳೊಳುತ್ತಮನುಯೆನಿಸಿ॥
ಜತ್ತನಾಗಿರುಯೆಂದು ಭಕ್ತನು
ತತ್ತನಯನಿಗೆ ಬುದ್ಧಿಪೇಳುತ
ಮತ್ತೆ ಗುರುವರನಡಿಗೆರಗಿ ತಾನತ್ತ ಗಮನಿಸಲು॥೩೯॥
ಲೇಸಿನಿಂ ಗುರುವಾ ಸುಮೂರ್ತದಿ
ಯಾ ಸುತನ ಕರೆದಾ ಸುಮಂಗಲ
ಭೃಸುರ ವಚನವೋಸರಿಸದಭ್ಯಾಸಿಸುತ ಮುಂದೆ॥
ಕೋಶಮೊದಲಾದೇಸುಶಾಸ್ತ್ರವ
ಬೇಸರಿಸದುಲ್ಲಾಸದಲಿ ಪೇ
ಳ್ದಾ ಸುಸಂವತ್ಸರದಿ ಶ್ರೀ ಪರಮೇಶ್ವರನ ದಯದಿ॥೪೦॥
ಸ್ವಾತಿ ಮೇಘದ ಹನಿಯು ಶುಕ್ತಿಗೆ
ಓತು ಬಿದ್ದಾಕ್ಷಣಕೆ ಬಲಿದು ಸು
ಸಾತಿಶಯ ಮುತ್ತಾದ ತೆರದಿಂ ಗುರುವಚನಸುಧೆಯ ॥
ಪ್ರೀತಿಯಿಂ ಶ್ರೋತ್ರದಲಿ ಬಿದ್ದಮ
ಳಾತುಮದಿ ನೆರೆ ಘಟ್ಟಿಗೊಂಡತಿ
ಜ್ಯೋತಿಯಂದದಿ ಬೆಳಗುತಿರಲಾಚಾರ್ಯ ಕಂಡು॥೪೧॥
ಕುಂದದೋದುವ ಚಪಲತೆಯ ಕಂ
ಡಂದದಿಂದಾತನ ಕರೆದೆಮಗೆ
ತಂದೆ ಕೀರ್ತಿಯೆನುತ್ತ ಕರುಣಾಸಿಂಧು ಶೀಘ್ರದಲಿ॥
ಹೆಂದದಾಶೀರ್ವಾದವಿತ್ತತಿ
ಚಂದದಿಂ ಕರತಂದುಕೊಟ್ಟಾ
ತಂದೆಯಲ್ಲಿಗೆ ಪೋಗು ಮಗನೇಯೆಂದು ಕಳುಹಲಿಕೆ॥೪೨॥
ಇರುತಿರಲು ಏಳೇಳು ಜನ್ಮದ
ಪರಮ ಪುಣ್ಯದ ತೊರೆಯು ತ್ವರಿತದಿ
ಪರಿದು ಬರುವಂದದಿ ಮಹಾ ಸದ್ಗುರುವರನುಯೆಮ್ಮ ॥
ಇರದೆ ನೋಡಲಿಕೆಂದು ಬರುತಿರೆ
ಪಿರಿಯ ಉತ್ಸಹದಿಂದೆ ಭಕ್ತರ
ನೆರವಿಯೊಳು ಮೆರೆಯಿಸುತ ಕರೆತಂದಾಗಳತಿಶಯದಿ॥೪೫॥
ತಾಳ ಜಾಗಟೆ ಭೇರಿ ಕರ್ನೆಯು
ಕಾಳೆ ಬುರುಗನಪೂರಿ ಬಾಜಿಗ
ಳೋಳಿಗಳ ರವದೊಳು ವಿಧದಿ ಲಿಂಗಾರ್ಚನಕ್ರಮವ॥
ಭಾಳ ಸಂಭ್ರಮದಿಂದ ಮಾಡಿಸಿ
ಪೇಳಲೇಂ ಪಾದಾಂಬುಶೇಷವ
ನೀಳ ಭಕ್ತಿಲಿ ಕೊಂಡನಂತರ ವೀಳೆಯವನಿತ್ತು ॥೪೬॥
ಎಲೆ ಮಗನೆ ನೀನಾಲಿಪುದು ಶ್ರೀ
ಕೊಲನುಪಾಕ ಮಹತ್ವ ಮೊದಲಲಿ
ತೆಲುಗಿನಿಂದಿರುತಿಹುದು ನೀ ನವರಸಪ್ರಪೂರಿತದಿ॥
ಸುಲಭ ರಂಭಾಫಲದ ಪರಿ ನೀ
ನೊಲಿದು ಕನ್ನಡದಿಂದ ಪೇಳೆಂ
ದೊಲವೆನಿಂದೆನ್ನಯ ತಲೆಗೆ ಕೈಯಿಟ್ಟು ನೇಮಿಸುತೆ॥೪೯॥
ತಿಳಿಯ ಸೋಸಿದ ಗಂಜಿ ಗಂಟಲೊ
ಳಿಳಿಯದವನಿಗೆ ತೋರ ಕಡುಬನು
ತಳುಹುದೇ ದಂತಕೆ ತಗುಲಿಸದೆ ನುಂಗುಯೆಂದಂತೆ॥
ತಿಳಿಯಲರಿಯದವನಿಗುರುತರೋ
ಜ್ವಳ ಕವಿತೆ ಪೇಳೆನಲು ಪುಣ್ಯದ
ಬಳರಹಿತನೆಂತೊರವೆನೈ ನಿಮಗಾಡಲಂಜುವೆನು॥೫೧॥
ಬಿಡುಬಿಡೆಲೊ ಬಡತನದ ನುಡಿಗಳ
ನುಡಿಯದಿರು ಕಡವರದ ದ್ರವ್ಯವು
ಒಡನಿರಲು ಬಡತನವ ಬಯಸುವರುಂಟೆ ಜಗದೊಳಗೆ॥
ಕಡುಭಯವು ಎಡೆಬಿಡದೆ ನಿನ್ನಯ
ಒಡಲೊಳಿರ್ದು ರಸಿಕರ ಮನ ಸೆರೆ
ವಿಡಿವವೋಲ್ ನುಡಿಸುವೆನು ಕವೆತೆಗೆ ತೊಡಗು ತಡವೇಕೆ॥೫೩॥
ಸತ್ಯ ಸದ್ಗುರು ಬಿತ್ತರಿಸಿದ
ತ್ಯುತ್ತಮಾಲಾಪಕ್ಕೆ ಚಂಚಲ
ಚಿತ್ತನಾಗಿಹುದೇನು ಬಿಡು ಮನಸಿನತಿ ಸಂಶಯವ॥
ಹೊತ್ತಗಳೆವುದದೇತಕೆಲವೋ
ನಿತ್ಯ ಕವಿತಾಂಗನೆಯ ಚುಂಬನ
ಪಥ್ಯವಂ ಮಾಡೆಂದು ನಿರ್ವಯಲಾಗೆಯೆಚ್ಚೆತ್ತು॥೫೬॥
ಶ್ರೀಮಯೂರನು ಬಾಣ ಮಲುಹಣ
ರಾಮ ಪಂಡಿತರಾಘವಾಂಕೋ
ದ್ಧಾಮ ಭೋಜ ಹಲಾಯುಧೋದ್ಭಟ ಭಾರವಿ ವ್ಯಾಸ॥
ಭೀಮ ಹರಿಹರ ಮಲೆಯರಾಜನು
ಭೂಮಿಪತಿ ಕೆರೆಪದ್ಮರಸ ವಿಬು
ಧಾ ಮನೋಹರ ಕಾಳಿದಾಸರ ದಾಸನಾಗುವೆನು॥೫೯॥
ಪರಹಿತಕೆ ಶ್ರೀ ಶಂಭುಲಿಂಗನ
ಕರುಣದಲಿ ವೇದಾಂತನುಸುರಿದ
ವರದಯಾನಿಧಿ ನಿಜಗುಣಾರ್ಯರ ಚರನ ಚರ ಮತ್ತೆ॥
ಪರಮ ಕವಿಗಳ ಪಲ್ಗಳನು ನೆರೆ
ಮುರಿದ ಕರ್ಣಾಟಕದ ಸಲೆ ಕವಿ
ವರ ಯಳಂದೂರಿನಷಡಕ್ಷರ ದೇವಗೊಂದಿಸುವೆ॥೬೧॥
ಅಳಿಯ ಪೂಗಣ್ಣನು ಮಗಳು ಚಂ
ಚಲೆ ಮಗನು ದೋಷಾಕರನು ಕೋ
ಮಲೆ ಕುಮುದಿನೀಯೆಂಬುವಳು ನಾಕಿಗರೊಡನೆ ಸ್ನೇಹ॥
ತಳುಹದೇ ಮಾಡಿದಳದಕೆಯ
ಗ್ಗಳದ ಭಂಗವದಾಯಿತೆಂದೊಳ
ಗೊಳಗೆ ಕುದಿವದೊಯೆನುತಶರಧಿ ಕುದಿವದೊಡಭನಳದಿ॥೭೦॥
ಕೈಡಿ ಕುಂಭಜನುಸಿಕನೆನ್ನನು
ಕಡಿದನಿಂದ್ರನ್ನೇಯದಲಿ ಸಲೆ
ತಡೆದ ರಾಮ ನಿರಾಪರಾಧದಲಿರ್ದವನ ಕಟ್ಟಿ॥
ಪೊಡವಿಯೊಳಗಿನ್ನಾರು ದಿಕ್ಕೆಂ
ದಡರಿದಳಲಲಿ ಮೃಡನಿಗೆಯು ಮೊರೆ
ಇಡುತಿಹುದೊಯೆಂಬಂತೆ ಘುಡುಘುಡು ಕಡಲೊದರುತಿಹುದು॥೭೧॥
ಆದಿಯಲಿ ಯುಗಜುಗೆಯು ಪರಶೆವ
ಮೋದದಿಂದತ್ಯುರುತರ ಯಜು
ರ್ವೇದಸೂಕ್ತಿಯನೆತ್ತಿ ಪೇಳಿದನದನೊರೆವೆನೆಂದು॥
ಸಾದರದಲಾ ನಂದಿ ಪೇಳ್ದದ
ರಾದಿಯಂತ್ಯಗಳನು ಬಿಡದೆ ನಿಮ
ಗೊಂದಿ ಪೇಳ್ದೆವು ಕೇಳಿರೈ ಮುನಿಗಳಿರ ಮುದದಿಂದ॥೮೬॥
ಏಳನೆಯ ಸಂಧಿ:
ಸೂಚನೆ:
ಹರಿಯದಾಸಿಯ ಹರಣ ಬರಿಸುತ
ತ್ವರಿತ ಲಿಂಗವ ಧರಿಸಿ ಶ್ರೀ ಗಿರಿ
ಪುರನಿರೀಕ್ಷಿಸಿ ಬರುತುಭಯ ಗೂಳಿಯ ಕಲಹನಿಲಿಸಿ॥
ಶ್ರೀಮದಗಜ ಮನೋವಿಲಾಸಭಿ
ರಾಮರಾಜಿತ ಕುಧರನಿಲಯ ಸು
ತ್ರಾಮಸುತ ಕಾಮಿತ ಪ್ರದಾಯಕ ಭೀಮ ಜಿತಕಾಮ॥
ನಾಮರಹಿತ ನಗೇಂದ್ರ ಕಾರ್ಮುಕ
ಶ್ರೀ ಮಹಿತ ತಿಲಕೂರಪುರ ಸ
ದ್ಧಾಮ ದಯವಾರಾಶಿ ಗುರುವೃಷಲಿಂಗಯತಿ ತುಂಗ॥೧॥
ಭರದಿ ದೇವರಕೊಂಡೆಯೆಂಬಾ
ಪುರಕೆ ಪೋಗಲ್ಲಿರ್ದ ಜನರನು
ಕರಸಿ ಶುಭ ಮೂರ್ತದಲಿ ಲಿಂಗವ ಧರಿಸಿ ಹರುಷದಲಿ॥
ಧರೆಯ ಸುರರಿಗೆ ಪೊನ್ನವೃಷ್ಟಿಯ
ಕರೆವವೋಲ್ ದಾನಗಳನೀವುತ
ಪರಮ ಪುರುಷನು ಇರುವನಿತರೊಳಗೊರ್ವ ಹರಿದಾಸ॥ ೨॥
ಚಿಂತಿಸುತ ಮನದಲ್ಲಿ ವಸುಧಾ
ಕಾಂತ ನೀಲಗಳೇಂದ್ರ ಭುಜಬಲ
ವಂತ ತಾನಾಳ್ವಷ್ಟದಿಕ್ಕಿಗೆ ಲಿಂಗವನು ಧರಿಸಿ॥
ಅಂತರೆಸದಲೆ ಬಂದನಿಲ್ಲಿಗೆ
ಎಂತು ಮಾಡುವೆನಿದಕೆನುತ ತನ
ಕಾಂತೆಯೊಡನೇಕಾಂತದಲಿ ಆಲೋಚಿಸುತಮಿರ್ದು॥೩॥
ಮಾನಿನಿಯೆ ನಾವಿಡಿದ ನೇಮವು
ಹಾನಿಯಾಗಲಿ ಬಂತು ಇದಕಿ
ನ್ನೇನ ಮಾಡಲಿಯೆಂದು ತೀಕ್ಷಣಮಾದ ದುರ್ವಿಷವ ॥
ಪಾನಮಾಡುತ ಪ್ರಾಣಬಿಡುವೆನು
ನೀನಿದನು ತಿಳಿಯೆಂದೆನುತಲನು
ಮಾನವಿಲ್ಲದೆ ವಿಷವ ಕೊಂಡಳಿದವನ ಪ್ರಾಣವನು॥೪॥
ಭೋಂಕನೆ ಪಿಡಿದೊಯ್ವ ಕಾಲನ
ಕಿಂಕರರ ಗರ್ಜಿಸಿ ವಿಭಾಡಿಸಿ
ಪಂಕಜಾಕ್ಷನ ಭಟರು ಎಮ್ಮವನೆಂದು ನೆರೆ ಬಿಡಿಸಿ॥
ಬಿಂಕದಲಿ ಒಯ್ವರನಾ ಶಿವ
ಲೆಂಕರುಗಳತಿ ಬಿಡಿಸಿ ತಂದಾ
ಶಂಕರನಿಗೊಪ್ಪಿಸಲು ಇವನಾರೆಂದು ಕೇಳಲಿಕೆ॥೫॥
ತುಂಗ ವಿಕ್ರಮ ಭೂಪ ತನ ದೇ
ಶಂಗಳೊಳಗಿಹ ಭವಿಜನಕೆ ಶಿವ
ಲಿಂಗಧಾರಣ ಮಾಡುತೈತರುತಿರಲು ಹರಿದಾಸ ॥
ಪೊಂಗಿ ತಾ ಪಿಡಿದಿರ್ದ ವ್ರತವನು
ಭಂಗವಾಗುವದೆಂದೆನುತ ಘನ
ಲಿಂಗಧಾರಣಕಂಜಿಕೊಂಡಿಹನಲ್ಲದಲೆ ಮತ್ತೆ॥೬॥
ಕುಂದುವಡೆದವನಲ್ಲ ಭಕ್ತರ
ನಿಂದೆಗೆಯ್ದುವನಲ್ಲವೈ ಕೇ
ಳೆಂದೆನುತ ದೂತರು ಶಿವಗೆ ಪೇಳುತಮಿರಲಿಕಿತ್ತ ॥
ಸಂದ ಹರಿದಾಸಿಯ ಸತಿಯು ಬಲು
ನೊಂದು ಶೋಕದಿಯರಸನಲ್ಲಿಗೆ
ಬಂದು ನಮಿಸಲು ಮುತ್ತಯಿದೆಯಾಗೆಂದೆನಲಿಕಾಗ॥೭॥
ಎನಗೆ ಎಲ್ಲಿನ ಮುತ್ತಯಿದೆತನ
ಇನ ಮಡಿದು ಎಮ್ಮೊಡಲೊಳಗೆ ಘನ
ವನಲವಿಟ್ಟನು ಎನಲು ಪುಸಿಯಾಯಿತು ವಚನವಮೆಂದು॥
ಜನಪನಾ ಪರಲೋಕ ಪತಿಯನು
ವಿನುತಿಸುತ ಕರವಾಳ ಝಳ್ಪಿಸಿ
ಅನಘ ನಿಮ್ಮಯ ಒಲುಮೆಯಿಂದಾಡಿದುದ ನಿರ್ವಹಿಸು॥೮॥
ಖಂಡಶಶಿಶೇಖರ ವಿಧಿಶಿರಃ
ಖಂಡ ಕಾನಕನಗನಿಕೇತನ
ಕುಂಡಲೇಶ್ವರ ಕುಂಡಲಾಖಿಳ ಮಂಡಲಾಧೀಶ ॥
ಖಂಡಪರಶುವೆ ಈ ವಧೂಮಣಿ
ಗಂಡನ ಪ್ರಾಣವನು ಪರಮೋ
ದ್ದಂಡತೆಯೊಳಿತ್ತೀಗಳೆಮ್ಮನು ಕಾಯೊ ಕರುಣಾಬ್ಧಿ॥೯॥
ಬಿಡದೆಯವನಿಗೆ ಮರಳಿ ಪ್ರಾಣವ
ತಡೆಯದೇ ಕೊಟ್ಟೆನ್ನ ವ್ರತವನು
ವಿಡಿದು ಮಾಡೆನ್ನೊಡೆಯನೆನುತಲೆ ಖಡುಗವನು ಪಿಡಿದು ॥
ಜಡಿದು ನುಡಿವರಸಿನ ಪರಾಕ್ರಮ
ಕೊಡನೊಡನೆ ಮೆಚ್ಚುತ್ತ ಶಂಕರ
ಕಡುಜವದಿಯಾ ದಾಸನನು ಪೋಗೆಂದು ಕಳುಹಲ್ಕೆ॥೧೦॥
ಆಯತದ ಪ್ರಾಣವದು ಬಂದಾ
ಕಾಯದೊಳು ಪೊಗೆ ನೆದ್ರೆಯವನೋ
ಪಾದಿಯಲಿ ಮೈಮರೆದು ಮೆಲ್ಲನೆಏಳಲಿಕೆಯವನ॥
ಜಾಯ ಸಂಭ್ರಮದಿಂದ ತೀವ್ರದಿ
ರಾಯನ ಮಹತ್ವವನು ತನ್ನಯ
ಬಾಯ ತುಂಬಲು ಹಾಡಿ ಕೊಂಡಾಡಿದನೇನೆಂಬೆ॥೧೧॥
ದಾಸಿ ಪರಮೋಲ್ಲಾಸದಿಂದಲಿ
ಭೂಸತೀಶನ ಕಂಡು ದಯವಾ
ರಾಶಿಯೇ ನಿನ್ನಿಂದ ಪೃವನನಾದೆನೆಂದೆನುತೆ ॥
ಓಸರಿಸದಲೆ ಸೈಗೆಡದು ಎ
ದ್ದಾ ಸ್ವಹಸ್ತವ ಮುಜಿದು ನಿಂದು ಸು
ಭೃಷೆಯಿಂದಲೆ ಪೇಳ್ದನಾ ಕೈಲಾಸ ಸುದ್ಧಿಯನು॥೧೨॥
ಭೂವಿಭುವೆ ಭೂತೇಶ ಭಕ್ತಸು
ಪಾವನಾತ್ಮಕ ನಿನ್ನ ಮತಕಿ
ನ್ನಾವ ಮತ ಸರಿ ಬಪ್ಪುದೈ ನೀನುದ್ಧರಿಸಿ ಎಮ್ಮ॥
ತೀವಿದ ಕೃಪಾಪಾಂಜದೀಕ್ಷಿಸಿ
ಓವಿ ಲಿಂಗವ ಧರಿಸಿ ಭಕ್ತರ
ಸೇವೆಯೊಳಗಿರಿಸೆಂದು ನಿಂದಾ ದಾಸನನು ನೋಡಿ॥೧೬॥
ಲೋಕವೆಲ್ಲವರಿವಂತೆ ಕರುಣಾ
ಲೋಕನದಿ ಸತಿಪತಿಗಳೀರ್ವರ
ನೇಕ ವಿಧದಿಂ ಲಿಂಗವನು ಧರೆಸ್ಯಾಚಕ ಜನರ್ಗೆ॥
ಸಾಕು ಸಾಕೆಂಬಂತೆ ಧನ ಕನ
ಕಾ ಕುಶಲ ದಾನಗಳನಿತ್ತು ಸು
ಶ್ರೀಕರಾಂಚಿತ ನೀಲಗಳ ಚಕ್ರೇಶ್ವರನು ಬೇಗ॥೧೭॥
ನೆನಕೆ:
ಕರ್ತೃ: ತಿಲಕಪುರ ಸೋಮ,
ಸಂಪಾದಕರು:
ನಗುವನಹಳ್ಳಿ ಪಿ. ರತ್ನ,
ಪ್ರಕಾಶಕರು: ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ,
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ