ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಬುಧವಾರ, ಜುಲೈ 19, 2023

ಬಬ್ಬೂರು ರಂಗ ಕವಿಯ ಪರಶುರಾಮ ರಾಮಾಯಣ

 ಬಬ್ಬೂರು ರಂಗ ಕವಿಯ ಪರಶುರಾಮ ರಾಮಾಯಣ 


ಈ ಕಾವ್ಯದ ಕರ್ತೃ ಬಬ್ಬೂರು ರಂಗ.ಈತನ ಕಾಲ ೧೭೫೦ .ಈತ ಸ್ಮಾರ್ತ ಬ್ರಾಹ್ಮಣ. ವೇದಾವತಿ ತೀರದಲ್ಲಿನೆಲೆಸಿರುವ ಹಿರಿಯಪುರ, ಈಗಿನ ಹಿರಿಯೂರು. ಇದಕ್ಕೆ ಘನಪುರಿ ಎಂಬ ಹೆಸರೂ ಇದೆ. ಅಲ್ಲಿಯ ಕರಣಿಕಾಗ್ರಣಿ ರಂಗ ಇವರ ತಂದೆ. ಈತನ ಮತ್ತೊಂದು ಕೃತಿ " ಅಂಬಿಕಾ ವಿಜಯ " ಹಿರಿಯೂರಿನ ಸಮೀಪವಿರುವ ಬೊಬ್ಬೂರಿನ ರಂಗನಾಥನೇ ಈತನ ಆರ್ಧ್ಯ ದೈವ. ಸುಕವಿಗಳ ಕರಮುಕುರ, ಕುಕವಿಗಳೆದೆನಾರ್ಚು, ಸಜ್ಜನನಿಕರ ಮನದಾನಂದನಂದನ ಚೈತ್ರ ಎಂದು ತನ್ನನ್ನು ಹೊಗಳಿಕೊಂಡಿದ್ದಾನೆ. ಇಳೆಯ ಕರ್ನಾಟಕ ಮಹಾಕೃತಿಗಳಿಗೆ ಗುರುವೆಂದೆಂಬ ಬಿರುದನು ತಳೆದು ಭಾರತವನು ವೆವರಿಸಿದ ಕುಮಾರವ್ಯಾಸನನ್ನು ಅವನ ಬಳಿವಿಡಿದು ಶ್ರೀರಾಮಚರಿತವ ಬೆಳಗಿನ ಕುಮಾರ ವಾಲ್ಮೀಕಿಯನ್ನು ಸ್ಮರಿಸಿದ್ದಾನೆ.ಪರಶುರಾಮ ಜನಿಸಿ, ಸ್ವಜನನಿಯ  ಕಂಠಮಂ ತರಿದು, ಮತ್ತಿರದೆ ಪ್ರಾಣಮಂ ಬರಿಸಿ, ಕ್ರತುವೀರ್ಯ ಸಂಭವಂ. ಸುರಪಶುವ ಪುರಕೊಯ್ದು, ಜಮದಗ್ನಿಗಸುಗೊಳಿಸಿ, ವಿಪ್ರರ್ಗೆ ಧರಣಿಯಂ ಕೊಟ್ಟುದಂ,ವಿಸ್ತರಿಪೆನು ಎಂಬುದು ಪರಶುರಾಮ ರಾಮಾಯಣದಲ್ಲಿ ಕವಿ ಹೇಳ ಹೊರಟಿರುವ ಕಾವ್ಯವಸ್ತು. 


ಸಂಧಿ ೧, 


ಶ್ರೀರಮೆಮುಗುಳ್ನಗೆಯ ಮಲ್ಲಿಗೆಯ ಪೊರಸುತಂ 

ಸೂರಿ ಸದ್ರೋಬಲಂಗಳನೈದೆನೇವ ಸುತಂ 

ಚಾರು ಋಷಿ ಹೃದ್ಯಾನಮೆಂಬುದು ರಸಾಲಮಂ ಮೆರೆಸುತಂ ಸೌರಭದೊಳು॥ 

ಸಾರದಿಂ ಭಾಗವತ ಕೋಗಿಲೆಯ ಮೊರೆಸುತಂ 

ತೋರುತಂ ಕುವಲಯಕ್ಕಾಮೋದಮೀವ ಬೊ 

ಬ್ಬೂರವಾಸ ವಸಂತ ಮಾಧವಂ ಎಮಗೀಗೆ ಸನ್ಮತಿಯ ಮಂಗಳವನು॥೧॥ 


ಪೊಕ್ಕುಳಿನ ಪೂವಿನಿಂದುದ್ಭವಿಸಿ ತನ್ಮಹಿಮ

ನಕ್ಕರಿಂ ಕೈಯೊಡನೆ ನಿಖಿಳ ಭಾತಂಗಳಂ 

ಮಕ್ಕಳಾಟಿಕೆಗಳಿಂ ನಿರ್ಮಿಸುತ್ತಾನಂದ  ಖೇಲಿನಿಂ ಕುಣಿಕುಣಿಸಿಯೆ ॥ 

ತಕ್ಕ ತಕ್ಕಸುಭವಂ ಗಂಟಿಕ್ಕುತವರೈದೆ 

ಸಿಕ್ಕದುರೆ ಸದ್ರಜೋ ಗುಣಗಳಿಂ ವಡೆವರೆದು 

ನಕ್ಕು ನಲಿದೀಕ್ಷಿಸುತ್ತಿರುವ ಚತುರಾಸ್ಯನಂ ಬೇಡುವೆಂ ಸನ್ಮತಿಯನು॥೨॥ 


ಮದನೃರಿ ಪುರವೈರಿ ಗಜದೈತ್ಯ ಸಂಹಾರಿ 

ತ್ರಿದಶಗಣ ಸಾಕಾರಿ ದಶದಿಶಾ ಸಂಚಾರಿ 

ವಿಧು ಸರಿದ್ವಯಧಾರಿ ದುರಿತಲಿಟಪಿ ಕುಠಾರಿ ಫಣಾ ತಟಕ ತುಲ್ಯಹಾರಿ॥ 

ವಿಧಿ ವಿತಂಗನುಸಾರಿ ವೃಷಾಕೇತು ವಿಸ್ತಾರಿ 

ವಿಧಿತ ಧವಳ ಶರೀರಿ ರಜತಾದ್ರಿ ತುದಿಯೇರಿ 

ಚದುರಿನಿಂ ನೆಲಸಿರ್ಪ ಸರ್ವಮಂಗಳೆಯರೆಯನೀಂ ಪಾಲಿಸೆನಗಿಷ್ಟವ॥೩॥ 


ಗಿರಿಜಾತೆ ಕಲ್ಯಾಣಿ ಫಣಿವೇಣಿ ಶರ್ವಾಣಿ 

ಸರಸಿಜಾನನ ಮಾಯೆ ಹ್ರೊಂಕಾರಿ ಯೋಂಕಾರಿ 

ಕರುಣಾಬ್ಧಿಯುರು ಪುಣ್ಯ ಚಾರಿತ್ರೆ ಸಾವಿತ್ರೆ ರೆಪುರಕ್ತ ಬೀಜವಿಜಯೆ॥ 

ನೆರೆ ಪರಂಜ್ಯೋತಿ ಸದ್ಭ್ರಮರಾಂಭೆ ಮೂಕಾಂಬೆ 

ಪರಮ ಮಂತ್ರೋದ್ಧಾರೆ ಮೀನಾಕ್ಷಿ ಕಾಮಾಕ್ಷಿ 

ಕರುಣಿಸೆಂದೆನ್ನನುಂ ಮುನ್ನ ರಕ್ಷಿಸು ಕರುಣೆಯನ್ನವಗುಣಂ ನೋಡದೆ॥೪॥


ಶತಕೋಟಿ ಶೃತಿದಿವ್ಯ ಕೋಟೀರ ಮಸ್ತಕದ 

ಶ್ರುತಿಜ್ವಲತ್ಕುಂಡಲ ಸುಗಂಡಯುಗಮದ ಚಕ್ಷು 

ಚತುರ್ಭುಜದ ಪಾಶಾಂಕುಶಂ ಹಸ್ತ ಮೋದಕದ ಸೊಂಡಿಲಿನ ಸಿರಿಡೊಳ್ಳಿನ॥ 

ಅತಿ ಶರಶ್ಚಂದ್ರೋಪಮಾನಧಾನಳ್ಯ ರಾ 

ಜಿತಮಪ್ಪದರ ಏಕದಂತ ಹೇರಂಭ ಪಾ 

ರೂವತಿಗೆ ನಗೆಮುದ್ದೀವ ಸಿದ್ಧಿ ಗಣನಾಯಕನೆ ಬುದ್ಧಿಯತಿ ವರ್ಧಿಸೆನಗೆ॥೫॥ 


ಭಜಕ ಜನದಾಧಾರೆ ಭಾನು ದೀಧಿತಿ ಹಾರೇ 

ತ್ರಿಜಗ ಪೂಜಿತ ಚರಣೆ ತತ್ವ ಮುಕ್ತಾಭರಣೆ 

ನಿಜಮುನಿವ್ರಾತಪಾಲೆ ನಾಕ ಸಂಕುಲ ಲೋಲೆ ನಿಗಮಾರ್ಥಶಬ್ಧಲೀಲೆ॥ 

ಅಜನ ಪಟ್ಟದರಾಣಿ ಯಾಮ್ನಾಯ ಶುಕವಾಣಿ 

ರಜಿತ ಮೇಘ ಸುವರ್ಣೆ ರಕ್ತಕುಂಡಲ ಕರ್ಣೆ 

ವಿಜಯೆ ಜಯೆ ವಾಗ್ದೇವಿ ವಿದ್ಯಾರ್ಥಿಗಳ ಜೀವಿ ಮತಿಯಿತ್ತು ಕಾಯೆ ತಾಯೆ॥೬॥ 


ಮಿತ್ರಬಾಂಧವರಕ್ಷ ಸೋಮಕುಲದಧ್ಯಕ್ಷ 

ಶ್ರುತಕರಿ ಮೃಗರಾಜ ವಿಮಲ ಮಂಗಳತೇಜ 

ಚಿತ್ರಪಟ ಕಟಿಯರುಣ ವೆಬುಧ ವಾಕ್ಪತಿರುಣ ಸತ್ಪಾತ್ರ ಶುಭಚರಿತ್ರ॥ 

ಸ್ತೋತ್ರ ಹೃತ್ಕವಿ ಫಲದ ಮಂದಸ್ಮಿತಾರ್ಯ ತ್ರಿ 

ನೇತ್ರ ಪೂಜಾವಿಧಿತ ಫಣಿ ಕೇತು ಗ್ರಹ ನವ ವಿ 

ಧಾತ್ರ ನಿನ್ನಾಧೀನ ಪಾಲಿಸೆನ್ನಿಷ್ಟಮಂ ನೃಪವರ್ಯ ಕಾರ್ತವೇರ್ಯ॥೭॥ 


ಕಪ್ಪೆಯಂ ಹರಿಯಂದರದು ಮತ್ತೆ ಪರಿಕಿಸಲ್ 

ಸರ್ಪಶಾಯಿಯೆ ಮೇಣರಿಯನುಂ ಶಿವನೆನಲ್ 

ಕಪ್ಪುಗೊರಲನೆ ಜಗಕೆ ಮೆಕೆಯಂ ಜೋಕೆಯಿಂದಜನೆಂದರವನಿಗಜನೆ 

ನೆಪ್ಪಿನಿಂದಾರಡಿಯ ವಜ್ರಿಯನಲ್ವಜ್ರಿಯೇ

 ಒಪ್ಪುವುಪಮೆಗಳಲ್ಲದೊಡಕು ಮಡಿಕೆಯೆನಿಪ್ಪ 

ಸಪ್ಪೆ ಕವಿ ರಸಭರಿತ ಕವೆರಾಜನಕ್ಕುಮೇ ಪಕ್ಕಿಗಿದೆ ಕವಿನಾಮವು॥೧೦॥ 


ಕಚಕುಚಗಳಿಲ್ಲದಿಹ ನಾರಿ ವಿಳಾಸ ಮೃದು 

ವಚನ ಮರ್ಯಾದಿಲ್ಲದಿಹನೆಂಟು ನವರಸ ರುಚಿ 

ರಚನೆ ಬಳಿಕಿಲ್ಲದಿಹ ಕಾವ್ಯ ಘೋರತರ ದುಂಖ ಕಂಠಕ್ಷೋಭವು॥ 

ಸಚರಾಚರಂಗಳೋಳ್ ಪರಿಕಿಸಲ್ ನಿಶ್ಚಯಂ 

ಸುಚರಿತ್ರರೀಕ್ಷಿಪರೆ ಬಯಸುವರೆ ಮೆಚ್ಚುವರೆ 

ವಚಿಸಲೇಂ ಕನ್ನಡಿಗೆ ತಾನೆರಗಲಾಯುಷ್ಯ ವರ್ಧಿಪುದೆ ನಿರ್ಧರದೊಳು॥೧೧॥ 


ಸೊನ್ನಾರಿಗತಿರಮ್ಯ ಕಟ್ಟಾಣಿ ದೊರಕಿದಡೆ 

ಬಿನ್ನಾಣಿ ಚಿತ್ರಿಕಗೆ ಸದ್ಭಾವಮೊದಗಿದಡೆ 

ಚೆನ್ನಾದ ಪರತತ್ವ ಸುಜನಗುಂ ನಿಲುಕಿದಡೆ ಕುಸುಮಂ ಮಾಲೆಗಾರಗೆ॥ 

ಸನ್ನಾಹಮಾಗೈದೆ ಪರಿಮಳಿಸಿ ಕೂಡಿದಡೆ 

ಪುಣ್ಯದ ಚರಿತ್ರಮಂ ಕವಿವರಂ ಕೇಳಿದಡೆ 

ಮಿನ್ನಾದ ನಗಮನಾಕಾರ ನಿಸ್ಸಂಗ ಮಾಲಾಕೃತಿಗಳಂ ಮಾಡರೆ॥೧೨॥ 


ಬಾಲಕಂ ತೊದಲಿಸುತ ನುಡಿದರಾಮೋದಮಂ 

ತಾಳುವರ್ತಮ ತನುಗೆ ತಾತಮಾತೆಯರದಂ 

ಜಾಳಿಸುರೆ ಜರಿದಪರೆ ಹರಿಗೆ ಮೆಚ್ಚಾದುದಂ ಧರೆಯೊಳುಂ ಮಿಕ್ಶಜನರು॥ 

ಏಳಿಲಂ ಗಂಡಪರೆ ಛಂದಸ್ಸು ಲಕ್ಷಣವ 

ಭೂಲೋಕದೊಳಗೋರ್ವ ಮನುಜ ಮೇಣ್ಗುರುವಾಗಿ 

ಪೇಳಲಿಲ್ಲೆನಗೈದೆ ಗುರುವರಂ ಪರಮಾತ್ಮ ಪೇಳಿಸಿದುದಾಂ ಪೇಳ್ವೆನು॥೧೩॥ 


ಪುಟವಿಟ್ಟ ಶಬ್ದದಿಂ ನಿಗುಚುತ್ತೆ ಪ್ರಾಸಿನಿಂ 

ಪಠಿಸುವಷ್ಟಾದಶ ವರ್ಣನೆಗಳಿಂ ಬೆಸೆದು 

ಚಟುಳ ನವರಸ ರಸದಿ ತೊಳತೊಳದು ಮಿಗೆ ಬೆಳಗಿ ನಾನಾರ್ಥರತ್ನಂಗಳಿಂ ॥ 

ಪಟುಗೊಳಿಸಿ ಯುಕ್ತಿಯೋಳ್ತಾಗಿಯೊಪ್ಪವನಿಕ್ಕಿ 

ನಟನೆಯಿಂ ನವ್ಯ ಹೇಮಾಭರಣ ತತಿಗಳಿಂ 

ವಿಟಗಾತಿಯಂತಲಂಕರಿಸಿ ಕನಿಸೂದಕಿಯರ್ ಕಂಡವರ್ ಭ್ರಮಿಸದೆಹರೆ॥ ೧೪॥


ಅಂಬಿಕಾ ವಿಜಯಮಂ ಭಾಮಿನಿಯೊಳರುಪಿದೇಂ 

ಬೆಂಬಿಡದೆ ಮಗುಳಿದಂ ವಾರ್ಧಕದ ಷಟ್ಪದಿಯೊ 

ಳಂಬುಜಾಕ್ಷನ ಕೃಪೆಯೊಳುಸುರುವೆಂ ಕೃತಿ ಕರ್ತೃ ಬಬ್ಬೂರ ಪತಿ ಶಾಶ್ವತಂ॥

ರಂಭಾದಿ ಫಲವಸ್ತು ಭೋಗಿ ಜನಕದು ಪ್ರಿಯಂ 

ರಂಭಾದಿ ಚುಂಬನಂ ಸುರಪಗುಮಸಾಧ್ಯಕ್ಸಾ 

ರಂಭ ಕಾವ್ಯಂ ಬಳಿಕ ರಸಿಕರ್ಗೆ ಹಿತಕರಂ ಕಪಿ ರತ್ನಮಂ ಬಲ್ಲುದೆ॥೧೫॥ 


ರಸಿಕರ್ಗೆ ಸಿಂಗರಂ ದುರ್ಜನರಿಗುರೆಭಯಂ 

ಶಿಶುಗಳ್ಗೆ ಶಾಂತರಸ ತಿಳಿಯದರಿಗದ್ಭುತಂ 

ಪಿಸುಣರ್ಗೆ ಭೀಭತ್ಸು ಖಳರ್ಗೆ ಪರಿಣಾಸಕಂ ಜಡರ್ಗೆ ರೌದ್ರಂ ನೃಪರ್ಗೆ॥ 

ಅಸಮವೀರಂ ವಿಮಲ ಭಜಕರ್ಗೆ ಸುಕರುಣಂ 

ಪಸರಿಪುದು ಪರಶುರಾಮ ರಾಮಾಯಣಂ ನವ 

ರಸಮನೋಸುಧೆಯೋಳ್ ರಾಮನಂ ಧ್ಯಾನಮಂ ಗೈದವಂ ಪರಶಿವಂ ಪರಮಾರ್ಥವು॥೧೬॥


ಪರಶುರಾಮಂ ಜನಿಸಿ ಸಾವಜನನಿಯ ಕಂಠಮಂ 

ತರಿದುದಂ ತವಕದಿಂದ ಮತ್ತಿರದೆ ಪ್ರಾಣಮಂ 

ಬರಿಸಿ ಬಳಿಕೆಬ್ಬಿಸಿದ ಮಹಿಮೆಯಂ ಕ್ರತುವೀರ್ಯ ಸಂಭವಂ ಸುರಪಶುವನು॥ 

ಪುರಕೊಯ್ದರಪ್ಪಳಿಸಲವನ ಸುತರಿಂದಳಿದ 

ವರ ಮಹಾ ಜಮದಗ್ನಿಗಸುಗೊಳಿಸಿ ಪಾರ್ಥಿವರ 

ನೆರೆಯಟ್ಟಿ ಸದೆದುದಂ ವಿಪ್ರರ್ಗೆ ಧರಣಿಯಂ ಕೊಟ್ಟುದಂ ವಿಸ್ತರಿಪೆನು॥೧೭॥


ಸರ್ವ ಕುಸುಮಂಗಳುರು ಸಾರಸೌರಭ್ಯಮಂ 

ನಿರ್ವಾಹಕತ್ವದಿಂ ಜೇನ್ ಪುಳುಗಳುರೆ ಪೀರ್ದು 

ಗರ್ವದಿಂ ಮತ್ತುಗಳ್ದ ಮಧುರಸಮಿದೆಂದು ತೋರ್ಪಂತಲ್ಲದೀ ಕೃತಿ ರುಚಿ॥ 

ಊರ್ವಿಗತಿಶಯ ರಾಮಚರಿತಾಮೃತಂ 

ನಿರ್ವಿಘ್ನ ಕೃತವಸ್ತು ಮೇಣದರ ಪರಿಯಂತೆ 

ನೀರ್ವರಿದು ಪುಳಿಪುಟ್ಟಿ ನಶಿಪುದಲ್ಲರಿದದಂ ಸವಿದದಂ ಸರ್ಮಜ್ಞನು॥೧೮॥ 


ಸಲೆ ಪಂಕದೋಳ್ಪಟ್ಟಿತಬ್ಜಮೆಂದಾ ಹರಿಯು 

ಕಳೆದನೇ ಮೇಣದಂ ನಾಭಿಯಂ ಮಾಡಿಕೊಂ

ದೊಲವಿನಿಂ ತತ್ಪದ್ಮದಿಂದೈದೆ ಬ್ರಹ್ಮನಂ ಪಡೆಯನೇ ಸತ್ಪುರುಷರು॥ 

ಕಲಿಯುಗದ ಬಿಡಬಂ ಪೇಳ್ವೆನೆಂದೀಕೃತಿಯ 

ಕಳೆಯದುರೆ ವರ್ಣಿಪೇಂ ಸವಿನುಡಿಯಲಾಲಿಸುವು 

ದಿಳೆಯೊಳಾನಲ್ಪಜ್ಞನಲ್ಲದುರೆ ಸರ್ವಜ್ಞನಲ್ಲವೆಲೆ ಶಿವನಲ್ಲದೆ॥೧೯॥ 


ನೀರಸ ನಿರ್ಜೀವಿಯಹ ತದ್ವೇಣುಕೃತ ಸುಸಿರ 

ಪರಿಪರಿಯ ಸುಸ್ವರವ ತನ್ನಿಂದ ತಾನದಂ 

ಮೆರೆದಪುದೆ ನುಡಿಸುವಂಬೇರಿಹಂ ರವಿ ಕಾಣದಿರ್ಪುದಂ ಕವಿ ಕಾಣನೆ॥ 

ಪರಶು ರಾಮಾಯಣವ ಪೇಳ್ವರಾರಿಳೆಯೊಳುಂ 

ಪರಮಾತ್ಮನೂಹಿಸಿದ ತೆರದೊಳಾನುಸುರುವೆಂ

ಕೊರತೆ ಕುಂದೆನಗಿಲ್ಲ ಶಿಷ್ಯನವ ಮನ್ನಣೆಯು ಗುರುವಿನಿಂದಲ್ತೆ ಜಗದೊಳ್॥೨೦॥ 


ಮೇರುವಿನ ವಾಚಿ ದಿಗ್ಭಾಗದೊಳ್ ಹರಿವುತಿಹ 

ಚಾರು ವೇದಾವತಿ ತೀರದೊಳ್ನೆಲಸಿರ್ಪ ಘನ 

ತೇರ ಮಲ್ಲೇಶ ದೇವರ ಕಟಾಕ್ಷದಿಂ ಪುರಗಳ್ಗೆ ಹಿರಿಯ ಪುರವು॥ 

ಧಾರುಣಿಯೊಳೆನಿಸಿದಂ ತೋರ್ದಪುದು ಈ 

ಪುರದ ಸೇರುವೆಯ ಕರಣಿಕಂ ವರ ಶೌನಕಾಖ್ಯನಾ 

ದಾ ಋಷಿಯೆ ಗೋತ್ರಜಂ ಬಳಿಕಪ್ಪರಂಗಜಂ ಪೇಳ್ವೆನಾಂ ಬೊಬ್ಬೂರನು॥


ಅಪ್ರೌಢರತಿ ಕಷ್ಟವಾದಿ ಪಾಷಂಡಿಯಾ 

ದಪ್ರಯೋಜಕರಿಗೆ ದುರ್ಬೋಧೆ ದೂಷಕರಿ

ಗಪ್ರಮಾಣೇಕಾತ್ಮನುತಿಯು ಪರದೂಷ ಕರಿಗರುಹ ಬೇಡೀ ಸಾರವ॥ 

ಸುಪ್ರೌಢ ಸರ್ವಜ್ಞ ನೆರೆಸಾರ ಹೃದಯರೋ ಶು 

ಭ ಪ್ರಕೃತಿಯುಳ್ಳಧಿಕ ವಿತರಣ ವಿಚಕ್ಕಣರಿ 

ಗೀ ಪ್ರಬಂಧೋಕ್ತಿ ಸರಸೋಕ್ತಿಗಳ ವಿಸ್ತರಿಸಿ ಸೂಚಿಸುವುದನವರತ॥೨೨॥ 


" ಪೀಠಿಕಾಧ್ಯಾಯ ಸಮಾಪ್ತವು" ಶ್ರೀರಾಮಾಯನಮಃ


ಸಂಧಿ - ೩೪,


ವೃದ್ಧ ಭೂಭುಜನತ್ತ ಯೋಧ್ಯಕೈತರೆ ಕಂಡು 

ಸದ್ದಿಲೀಪಾಖ್ಯನುಂ ನೃಪಗತವ ಕೇಳ್ದಳಲಿ 

ಹೊದ್ದಿ ಮಾಹಿಷ್ಪತಿಯ ನಿಜಸೋದರಳಿಯನಂ ಪಟ್ಟಗಟ್ಟೈತಂದನು॥ 


ನೃಪ ಲಲಾಮನೆ ಕೇಳು ಭಾರ್ಗವಂ ಪುಣ್ಯಮಯ 

ಸುಪವಿತ್ರದ ಏಣಿಯಂ ಮೆಟ್ಟುತೊಡನಾಕಡೆಯ 

ನಿಪುಣತ್ವದಿಂ ಸರಣಿಗೊಂಡೆಸಗಿ ಗಮಿಸಿದಂ ವರವೃದ್ಧ ಭೂಭುಜಾಂಕನ॥ 

ಗುಪಿತದಿಂದೀ ಕಡೆಯ ಮಾಲಾಸುಕೇತು ಸಹ 

ಅಪರಿಮಿತ ಭೀತಿಯಿಂ ಗಿರಿಗಿರಿ ವನಂಗಳಂ 

ಚಾಪಲಮಾನಸನಾಗಿ ದಾಂಟಿಮಿಗೆ ತಲ್ಲಣಿಸುತೀ ಪರಿಯು ಬರುತಿರ್ದನು॥೧॥


ಬೆಳಗಿತೊಡನಾವಾವ ದೇಶದೊಳಗರ್ಜುನಂ 

ಮುಳುಗಿದಂ ಎಂಬಧಿಕ ದುರ್ವಾರ್ತೆ ಪೇರಟವಿ 

ಕಳಕಳದು ಸುತವೃದ್ಧ ಭೂಭುಜಂ ತಮ್ಮ ಸಹ ಹಮ್ಮಳಿದು ಮನದೊಳು॥ 

ತುಳಿದು ಬಹ ವಿಧವಿಧದ ಪಾಷಾಣ 

ನೆಲೆಗಟ್ಟುಗಳ ನೆಮ್ಮುತೈತರಲ್ ಸಾಕೇತಪುರವರಂ 

ಚೆಲುವಿನಿಂ ಕಾಣ್ಪಡಿಸಲಸುಬಂದ ರೀತಿಯೊಳ್ ಸುಕುಮಾರರೀಕ್ಷಿಸಿದರು॥೨॥ 


ಮಣಿಮಕರ ಸದೃಶೋಪಮಾನ ಮುಖಮಂಡಲಂ 

ಘೃಣಿಸತಾಮೃತ ರೋಚಿ ಮಂಡಲಕ್ಕೆಣೆಯಾಗಿ 

ತ್ರಿಣಯವಾಹನದಶನರೂಪಾಗಿ ಮತ್ತೆ ಕುರುಗಾಹಿಗಳಿಗಸಮರಾಗಿ ॥ 

ಫಣಿಪತಾಕನ ಸುತಂ ಹರಿ ಕುಠಾರಾಯುಧದಿ 

ಹರಿತಕ್ಷ ವ್ರಣಕೆ ಝೇಂಕರಿಸುತುರಿಗಿಡುವ 

ನೊಣಗಳು ಝಾಡಿಸುತ್ತಡಿಗಡಿಗೆ ನಡೆತಂದರಾಪುರಜನರ್ಬೆರಗಿಡೆ॥೩॥ 


ನಗರೋಪ ಕಂಠದೊಳ್ನಿಂದು ಸುಕುಮಾರರ್ 

ಸಗರವಂಶಜನೆಡೆಗೆ ಪೇಳಲ್ತಂ ನೃಪಂ 

ಬೆಡಗುಗೊಂಡತಿ ತೀವ್ರಕರಿಸಲ್ಕೆ ಒಳಪೊಕ್ಕು ನೃಪಸೂತರ್ಭೂಪತಿಯ॥ 

ಪೊಗೆನಾಟಿದುದು ಹೇಮ ಪುತ್ಥಳಿಗಳೆನೆ 

ದೂಗಿ ಪೊಗಳಿರಿದು ನಮಿಸಲ್ಕೆ ಕಕ್ಕಸಂ ಬೆರ 

ಗಾಗಿ ಹಗರಮಿದೇನೆಂದು ತತ್ಸಭಾಮಂಟಪದೊಳೆಲ್ಲರುಂ ಬಸವಳಿದರು॥೪॥ 


ಶಿರವಲುಗಿ ಮಿಗೆ ನಾಸಿಕಾಗ್ರಕೆ ಸುಮಂತ್ರನಂ 

ಬೆರಳತಾನೇರಿಸಿಯೆ ಧಿಕ್ಕರಿಸಿ ವಿಧಿಯನುಂ 

ಜರೆದರುಮ್ಮಳಿಸುತೆಲ್ಲರುಂ ಕಳವಳಿಸಿ ಕೂಷ್ಮಾಂಡ ಫಲಕ್ಕೆಣ್ಣೆಯ ॥ 

ಎರದಂತೆ ತನ್ನೊಳಗೆ ತಾಂ ಕುದಿದು ನೃಪವರ್ಯ 

ತರಳರಿರವಂ ನೋಡಿ ಬಾಡುತಂ ಬಸವಳಿದು 

ತರಹರಿಸಿ ಕೊಳುತೊಡನೆ ಕಾರುಣ್ಯ ಕುಡಿವಡೆದು ಮಿಡಿದನೈ ನಯನಾಂಬುವಂ ॥೫॥ 


ಆ ದಿಲೀಪಾಂಕನುಂ ಕರಕರನೆ ಕಂದುತಂ 

ಸೋದರಳಿಯಂದಿರಂ ಮಗುಳೆ ಮಗುಳೀಕ್ಷಿಸಿ 

ವಿಷಾದಗೊಳುತ ತಿಳುಪಿದೇನಾರಿಂದ ಸಮನಿಸಿತು ರೂಪತ್ವವು॥ 

ಆ ದಶಾಶ್ಯನ ದರ್ಪಗಳದವಂ ತ್ವತ್ಪಿತಂ 

ಮೇದಿನಿಯೊಳಾರ್ನಿಮಗೆ ಬಲ್ಲಿದರ್ಬಲ್ಲೆನೆಂ 

ದಾದರಿಸಿ ಬೆಸಗೊಂಡರಾ ವೃದ್ಧ ಭೂಭುಜಂ ವಿಸ್ತರಿಸಲನುಗೈದನು॥೬॥ 


ಮಾವಕೇಳ್ ತಮಗೈದ ತೊಡರಿಂದ ವಿಪತ್ತನುಂ 

ದೇವತೆಯದೆಲ್ಲರುಂ ಕಂಡಿರ್ಪರೇನೆಂಬೆ 

ನೋವಿನಿಂ ಸೂಚಿಸುವೆನೆಂತೆನಲ್ ಮತ್ಪಿತಂ ಮೃಗವ್ಯಾಜದಿಂದೊಂದಿನಂ ॥ 

ರವಿಯಂ ತುರಿಯುತ್ತಲೈದೆ ಮಿಗಗಳಂ ತಾನು 

ಸೋವಿಕೊಂಡೈತರಲಂದು ಪುರುಷಾಮೃಗಂ 

ಸಾವಿಗಳ್ಲದೆ ಬಲೆಯಕೋಳ್ಗೊಂಡು ತಿರುಗಿದ್ದ ಭರದೊಳಂ ಬಲವೆರಸಿಯೆ॥೭॥ 


ಜಮದಗ್ನಿ ಮುನಿಪನುಂ ಕಾಣ್ಪಡಿಸೆ ಮಾರ್ಗದೊಳ್ 

ರಮಣೀಯಮಾಗದಂ ಬೊಪ್ಪನಲ್ಲಿ ಗಡ 

ಕಮಲಾಪ್ತನಸ್ತಮಿಸಲು ಸಪ್ತರಿಸಿಯಾಮಿನಿಯ ಬಳಿಕಂದು ಮರುದಿನದೊಳು॥ 

ಗಮಕದಿಂದೇಳಲ್ಕೆ ತನ್ಮುನಿಯು ಮತ್ಪಿತನ 

ಸಮಯಮರಿದನ್ನೆಗಂ ಭೋಜನಂಗೈದಿಸಿ 

ಮಮತೆಯುಳ್ಳರೆನುತ್ತ ನಿಲ್ದಡದು ಸುರಭಿಯಿಂದಿತ್ತಗಡ ಮೃಷ್ಟಾನ್ನವ॥೮॥ 


ಸುರಭಿನಮಗಿರವೇಳ್ಕು ಬೆಸಸೆಂದು ಭಿಕ್ಷಿಕಂ 

ಗರುಪಿ ಮಿಗೆ ಬಲಗೊಂಡು ಬಾರೆಂದು ಶ್ರುತಗೊಳಿಸಿ 

ವರವರೇಣ್ಯಾಖ್ಯನೆಂಬಾತನಂ ಬರೆಪಿ ತಂದದ್ಧೇನುವಾ॥ 

ತರಲದೇ ರೀತಿಯೊಳ್ ಬೆನ್ನಟ್ಟಿ ತಾಪಸನ 

ತರುಣನಡಗಡತಂದು ನಗರೋಪಕಂಠದೊಳ್ 

ಹರಿಯಂತೆ ಮೊಳಗುತಂ ನಿಲ್ಲಲ್ಕೆ ತಳ್ಳೆಂದು ಸಚಿವನಂ ಬೀಳ್ಕೊಟ್ಟನು॥೯॥ 


ಸ್ಪ್ರದಾನಿಯು ಕೆಣಕಲಾರಾಮನೆಂದೆಂಬ 

ವಿಪ್ರನು ಕಾಳಗಕೆ ಕಾಲ್ಗೆರೆದು ವಾಹಿನಿಯ 

ಕ್ಷಿಪ್ರದಿಂ ಕಡಿದಿಕ್ಕಿ ಕೆಡಹಿದಂ ಮಂತ್ರಿಯಂ ದುರ್ಜಯವ ಕೇಳೆಯ್ಯನು ॥ 

ಅಪ್ರಯೋಜಕ ಬುಧಗೆ ಕರಸಹಸ್ರಂಗಳುಳ್ಳ 

ಅಪ್ರತಿಮ ತಾಂ ಬೇರೆ ಬೆಚ್ಚುವನೆ ಭಳಿರೆನ್ನು 

ತುಪ್ರಗೊಳಿಸಿಕ್ಕೆಲದ ಮೀಸೆಯ ವಾಸಿಯಂ ಒಲವೆರಸಿ ಪೊರಮಟ್ಟನು॥೧೦॥


ಬರಿಕೈದು ವಾಹಿನಿಯ ಒಡಹುಟ್ಟಿದರ್ಗಳಂ 

ಹರಣಗೊಂಡಿರಿಡಿರಿದು ತನ್ನನೀ ಪರಿಸೆದದು 

ಹರಿಸಾಡಿ ಮಾಲಾಸುಕೇತುವಿನ ನಿಡುತೋಳ್ಗಳುತ್ತರಿಸಿ ಮಜ್ಜನಕನ ॥ 

ಕೊರಳ್ಪರಿದು ಕುಂಭೀಣಿಯೊಳೀಡಾಡಿ ಧೇನುವಂ 

ಬರಸೆಳೆದು ಜಮದಗ್ನಿ ತನಯನಂ ಹುಲುರಾಮ 

ಧುರವಿಜಯನೆಂದೆನಿಸಿ ಗಮಿಸಿದಂ ಎನಲೂಣ್ಮಿತರಸಂಗೆ ನೇತ್ರಾಂಬುವು॥೧೧॥ 


ಅಕಟನೃಪ ಶಾರ್ದೂಲನಸ್ತಮಿಸಿ ಪೋದನೆ 

ಸುಕುಮಾರವರ್ಗ ಸಹ ಶಿವ ಶಿವಾ ಎಂದುತಾ 

ವಿಕಳತೆಯು ಗೊಂಡಾ ದಿಲೀಪನುಂ ತಂಬುಲವನುಗುಳಿದಂ ಸಾಂದೀಪಿಯ॥ 

ಮುಖದಸಿರಿ ಪಾವಕಂಗುಣಿಸಾಯ್ತೆ ಪಾಪಿ ಪಶು 

ದೃಕುಳ್ಗೆ ಗೋಚರಿಸಿತದು ಮೃತ್ಯುರೂಪಾಗಿ 

ಸುಕೃತಮೆನಿಸಿರ್ದುದೆಂದಾ ವೃದ್ಧ ಪಾರ್ಥಿವನನವಲೋಕಿಸಿಂತೆಂದನು॥೧೨॥ 


ಆದರೇಂ ಕಣ್ಗೆಡದಿರಾನಿಹೇಂ ಸುಕುಮಾರ 

ನೀದಕ್ಷನಣುಗನಲೆ ಪಿಂತೆಮಗೆ ಕಪಿಲದಿಂ 

ದಾದುದಂ ಕೇಳ್ದರಿಯದೆಂತೆಂದರರುಪುವೆಂ ಪೂರ್ವದೊಳ್ ಸಗರಾಂಕನು॥ 

ಮೋದದಿಂದರವತ್ತು ಸಾವಿರ ಮಕ್ಕಳು 

ಮೇದಿನಿಯೊಳುಂ ಪಡೆದು ಬೆಳೆವುತಾಗವನೈದೆ 

ಸಾಧಿಸಲು ವೇಳ್ಕಿಂದ್ರ ಪದವೆಯಂ ಎನುತವಂ ಯಜ್ಞಮಂ ಕೈಕೊಂಡನು॥೧೩॥ 


ಶತಮುಖಕ್ಕೊಂದುಳಿದರದನು ಪೂರೈಪೆವೆಂ 

ದತುಳದುಶ್ಚಿತ್ತದಿಂದಾ ಸುರಪನುಂ ವರ 

ಕ್ರತುಸೂವಾಜಿಯನಂದು ಕದ್ದೊಯ್ದು ಕಾಶಿಯೊಳ್ ಕಪೆಲನೆಂಬುರುವರ್ಣಿಯು ॥ 

ಶಿತಿಕಂಠನೊಲು ತಪಿಸಲಿರಲೋರ್ವರರಿಯದೊಲು 

ಕೃತಕದಿಂದಾತನಹ ತಾಣದೊಳ್ಕಟ್ಟಿ ಬರೆ 

ಪೃಥುಲ ಬಲರರವತ್ತು ಸಾವಿರ ಬೆದಕುತ್ತ ಹೆಜ್ಜೆವಿಡಿದೈತಂದರು॥೧೪॥ 


ಕಾಣುತೊಡನಶ್ವಮಂ ಖತಿಗೊಂಡು ಸಾಗರರ್ 

ಕೇಣವಿಲ್ಲದೆ ಕವಿದು ಬಂಧಿಸಲ್ ಕಪಿಲನುಂ 

ಸ್ಥಾಣುವೋಲ್ ಕಣ್ದೆರೆಯಲಾತಪೋಜ್ವಾಲೆಯಿಂದೆಲ್ಲರು ಒಮ್ಮುಖದೊಳು॥ 

ಪ್ರಾಣಗಳದರ್ವಹಿಸಿ ಪೇಳ್ದುದೇಂ ವಂಶಕುಂ 

ತ್ರಾಣಿಯುಳಿದಂ ಬಳಿಕೋರ್ವನೆ ಭಗೀರಥಂ 

ಜಾಣತನದಿಂದವಂ ತನ್ಮುನಿಪನೆಡೆಗೈದಿ ಎನಗೇನು ಗತಿಯೆಂದನು॥೧೫॥ 


ಊರ್ಧ್ವದೇಹಿಕ ಮೆಸಗವೇಳ್ವುದದಕೇಕಾಕಿ 

ತೀರ್ದುರುವರರವತ್ತು ಸಾಸಿರಂ ನಿನಗೊಂದು 

ತೋರ್ದಪೆಂ ಲೋಕೋಪಕಾರಕುಂ ಸರಿಮಗನೆ ಬಳಿಕೊಂದು ಧನುವನು॥ 

ಊರ್ಧ್ವದಲ್ಲಿಹ ದುನಿಯನೀಂ ಭಜಿಸಿತಂದರೀ 

ಶ್ರಾದ್ಧಮದು ಸಂಗಮವಹುದಕ್ಷಯದ ಪದವಿಗವ 

ರೇರ್ದುಪರ್ ಸಂದೇಹಮಿಲ್ಲೆನಲ್ ಮುನಿಪನಂ ಬೀಳ್ಕೊಂಡು ತಪದಿರ್ದನು॥೧೬॥ 


ಕೆಲವು ಕಾಲಾಂತರಕ್ಕವನ ತಪವಂ ಮೆಚ್ಚಿ

 ಇಳಿವರಿದು ಮಹಗಂಗೆ ಬರಲಯದೆ ಕಮಲಜಂ 

ಲಲೆತ ಕರ ಕುಂಡಿಕೆಯೊಳಾಂತು ಕೊಂಡಾಕೆಯಂ ಮುಂದಿಟ್ಟು ಬಿಡದಿರಲ್ಕೆ ॥ 

ತಿಳಿದುಕೊಂಡನ್ನೆಗಂ ಬ್ರಹ್ಮನಂ ಭಜಿಸಲ್ಕೆ 

ನಲೆದಜಂ ಕಡೆಗೆ ಕೊಡೆಶಂಕರಂ ತಲೆಯೊಡ್ಡಿ 

ಕಲುಷ ಸಂಹಾರಿಯಂ ಪಿಂಗಳ ಜಟಾಮಕುಟದಲ್ಲಿಟ್ಟು ಭಾಸಿಸಿದನು॥೧೭॥ 


ವರೂಧಿಪ ಶ್ರೇಯಸಕ್ಕೆಡೆ ವಿಘ್ನತೋರ್ದಪುದು 

ನಿರ್ಧರಮದೆಂದಲಿಸಿದುರೆ ಭಗೀರಥ ಮಾರ 

ಮರ್ದನನ ನೆಡವೆಡರೆ ಬಹುಕಾಲ ಪ್ರಾರ್ಥಿಸಿದಭ್ರಹಕ ಭವ ಮೇಣ್ ಗಂಗೆಯ ॥ 

ನೆರ್ಧರದ ಕಾರುಣ್ಯದಿಂ ಬಿಡಲು ದೇವನಕ 

ಪರ್ದದಿಂ ದಿಳಿವರಿದು ಬರಲಾ ಶತಶೃಂಗ 

ಮೂರ್ದ್ನಿಯಂ ಬಳಿಕಿತ್ತು ನುಗಿಕೊಂಡುದು ಕೇಳ್ ವಿಸ್ಮಯವ ಸುಕುಮಾರಕ॥೧೮॥


ಪಾಷಾಣ ಹೃದಯ ನೀ ನಗನೃಪಂ ಬಿಡೆನೆಂದು 

ರೋಷದಿಂ ಕೈಯೊಡನೆ ಕುಳಿತು ನಾಗೇಂದ್ರನಂ 

ಶೇಷನಂತೆಲರುಣುತ ಧ್ಯಾನಿಸಿದರುಭವರದನಾಗೈದೆ ಬೇಡಿಷ್ಟವ ॥ 

ದೋಷರಹಿತಂ ನೀನು ಪಾಲಿಸುವೆನೆಂದೆನಲ್ 

ಪೋಷಿಸುವುದೀ ಗಿರಿಯನೊಡೆ ತಿವಿದು ಗಂಗೆಯಂ 

ವಿಶೇಷದಿಂ ಬಪ್ಪಂತೆ ಮಾಡೆಸಲ್ ಚೌದಂತಗಳೊಳೊಡೆ ತಿವಿದನು॥೧೯॥ 


ಒಕ್ಕೊಂಬು ಸಿಕ್ಕದರೊಳೆಳೆದರುಂ ಬಾರದಿರೆ 

ಕಕ್ಕಸದೊಳಿಕ್ಕಡಿಯು ಗಳದೊಂದುಳಿದಿರೂಪು 

ಮುಕ್ಕೊಂಬಿನುಕ್ಕುಂದ ನಿಬ್ಬಗಿಯು ಗಳೆಯಲ್ಕೆ ದಢದಢಿಸಿ ದೇವದುನಿಯ॥ 

ಶಿಕ್ಕು ವಕ್ತ್ರಗಳಿಲ್ಲದುಬ್ಬಿ ಬರೆಹರುಷಗೊಂ 

ಡಕ್ಕರಿಂ ಸಿತಗಜವ ಮಣಿದು ಮಿಗೆ ಬೀಳ್ಕೊಟ್ಟು 

ಚುಕ್ಕಿಗಳ ಲೆಕ್ಕಪನೆ ಭಾಷೆಂದು ನಡೆಗೊಡಲ್ ಜನ್ಹುಮುನಿಪಂ ಕಂಡನು॥೨೦॥ 


ಯಜ್ಞಮೆಸಗುತಿರ್ಪ ಕದಳಿ ಪೋದಪುದೆಂದು 

ಸುಜ್ಞಾನದಿಂದರಿತು ಜನ್ಹುಮುನಿಪಂ ಬರ್ಪ 

ವಿಘ್ನೇಶನಂಬಿಕೆಯ ಸವತಿಯಂ ಕೈಗೂಡಿ ಕಲಶಜಂ ತಾನಿಕ್ಕಿದ॥ 

ಲಗ್ನ ಸಾಮರ್ತ್ಯದಿಂದಬ್ಧಿಯಂ ಪೀರಿದಂ 

ತಗ್ನಿನೇತ್ರಂ ಬೆರಗುಗೊಂಬಂತೆ ನುಂಗಿದಂ 

ಭಗ್ನಮಾಯ್ತೇಗೈವೆನೆಂದಾ ಭಗೀರಥಂ ಮಂಡಿಸಿದನಾ ಸ್ಥಳದೊಳು॥೨೧॥ 


ಕಲ್ಪ ಪರ್ಯಂತರಂ ಮಗುಳಲ್ಲಿ ದೃಢತರದಿಂ 

ಸ್ವಲ್ಪ ಚಂಚಲಗೊಳ್ಳದುರೆ ತಪಿಸೆನೃಪ 

ಸರ್ಪತಳ್ಪನೊಳ್ ತುಷ್ಟನಾಗಾಮೋಕ್ಷು ಕೇಳೊರೆದನಂತೆನಲ್ ಕೂಡಿಗಂಗೆಯ ॥ 

ನಿಲ್ಪುಮಾಡದೆ ಎಂದರವನಿಪನ ನುಡಿಗೇಳ್ದು 

ಬಲ್ಪಿನಿಂ ದೂರುವಂ ಸಖದೊಳುಂ ಸೀಳಿಬಿಡೆ 

ಓಲ್ಪಿನಿಂ ಜಾನ್ಹವಿಯಳೆಂ ನಿಶಾನಂದ ಕಾನನದಿ ನಡೆಗೊಂಡಳು॥೨೨॥ 


ಮೋಕ್ಷವಾಯ್ತೆಲರ್ಗೆ ಕಡೆಗದನೆ ನೃಪನಾಗಿ 

ಶಿಕ್ಷಿಸುತ್ತರಿಗಳಂ ಸುಜನರ್ಕಳಾ ಮಹಾ 

ಪೇಕ್ಷೆಯಿಂ ಮಿಗೆ ಸಲಿಸಿ ಬೆಳಗಿದಂ ಕೇಳ್ಕಂದ ಕುಡಿವರಿದು ದಿನವಂಶವು ॥ 

ಆ ಕ್ಷಿತಿ ಪಾಲಕಂ ಪರಸಲ್ಲ ಪಿಂತಾಮು 

ಮುಕ್ಷುವಿಂದಿನಿತಾಯ್ತು ನಿಜವೃದ್ಧ ಪಾರ್ಥಿವನೆ 

ದಾಕ್ಷಿಣ್ಯ ಮೇಣ್ಮುನಿಗಳೊಳತೋಟಿ ಕರಕಷ್ಟ ಸಾಕ್ಷಿನಾವ್ ನೋಡೆಂದನು॥೨೩॥ 


ಎನುತಾ ದಿಲೀಪನು ಜಾಮಾತನುಪಚರಿಸಿ 

ವಿನಯದಿಂ ಕಾಶಿಕಾಪುರಕೈದೆ ದೂತರಂ 

ತನಯರೈತಂದಿರ್ಪ ವಾರ್ತೆಯಂಬರದಲ್ಲಿ ಗಟ್ಟಳ್ಕೆಭದ್ರಾಖ್ಯನು ॥ 

ವನಿತೆ ಸಹ ಗೋಳಿಡುತ ನಡೆತಂದು ಮೊಮ್ಮರಂ 

ಮನಕತದೊಳುಂ ಕಂಡು ಕಾರ್ತಿವೀರ್ಯಾರ್ಜುನಂ 

ಜನಿಸಲಲ್ಲೆಂದೆನುತ ಹಂಬಲಿಸಿ ಕಾಶ್ಮೀರೆಗಾಗೈದೆ ಬಾಯಾರ್ದಳು॥೨೪॥ 


ಮುಂದಿವರಿಗಾಯದಿಂದಧಿಕಾರ ಮೆಂದೊಡನೆ 

ನೊಂದು ಕೊಳೆ ಭದ್ರಾಂಕನದ ಕೇಳ್ದು ರಘುಕುಲಂ 

ಬಂಧುಗಳ್ ನಾವಿದ್ದ ಬಳಿಕಿವರಿಗೇನಾಗದಿವರಯ್ಯನಧಿಕಾರಕೆ॥ 

ನಿಂದಿರಿಸಿ ಬಹೆನೇಳಿ ಎನುತಾತನೊಂದಿಗೆಯೊ 

ಳಂದು ಮಿಗೆ ಚತುರಂಗ ಬಲಗೂಡಿ ತನ್ನೃಪಂ 

ದುಂದುಭಿಯಂ ನಾದಿಸಿರೆ ನಡೆಗೊಂಡು ಬರುತಿರ್ದರಾ ನಗರಿಗೊಗ್ಗಿನಿಂ॥೨೫॥ 


ಧರಣಿಪತಿಕೇಳ್ ಸೋದರಳಿಯಂದರೀರ್ವರಂ 

ದೊರೆ ದಿಲೀಪಾಹ್ವಯ ಗಿರಿವನಂ ನೆಗ್ಗುವೊಲು 

ಭರದವೋಲ್ ಭರದಿನಿಂದೊಡಗೊಂಡು ಬರೆನೆಲಂ ಬಳಿಕೈದೆ ಬೆಸಲಾದೊಲು॥ 

ಕರಿತುರಗ ರಥವಾಹಿನಿಯುಕ್ತದಿಂದರಿ 

ಯುರಗಳೊಡೆವಂತೆ ಸಾಗಿಮುಂದೈತಂದು 

ಸರಸರಸಿ ಗೋಮಾಖ್ಯ ನಗರಮಂದೊಳಪೊಕ್ಕು ಠಕ್ಕದಿಂ ಬಿಕ್ಕಳಿಕೆಯ॥೨೬॥


ಜೋತಿಶೂನ್ಯತೆಯಾದ ನಿಳಯದಂತರಗಿಳಿಯ 

ಮಾತುಮತ್ತಿಲ್ಲದಿಹ ವನದಂತೆ ನಾಸಿಕಂ 

ಘಾತಿಯಾದಾಸದೊಳು ಪರಿಮಳಂ ಝಾಡಿಸಿದ ಕುಸುಮದಂತಿರೆ ನಗರವು॥ 

ಶಾತಕುಭಾನ್ವಿತದ ಪ್ರಾಸಾದ ಪಂಕ್ತಿಗಳ್ 

ಧಾತೈಗೆಟ್ಟೆಡಬಲದಿ ಪಾಳಾಗಿ ಕಾಣ್ಪಡಿಸೆ 

ಕೌತುಕಂಗೊಳುತಳಲುತಾ ದಿಲೀಪಾಹ್ವಯಂ ನೃಪಗೇಹಕ್ಕೆ ತಂದನು॥೨೭॥ 


ಕರಿಸಿದಂ ಪುರಜನರದೆಲ್ಲರಂ ಮನ್ನೆಸುರೆ 

ಪರಿವಾರಕಭಯಮಂ ಕೊಟ್ಟ ನೃಪಪಟ್ಟಮಂ 

ಮರೈದಿನಂ ಮಂಗಳೋತ್ಸವಗಳಿಂ ಕಟ್ಟಿಮಿಗೆ ಕಲಿವೃದ್ಧಭೂಭುಜಂಗೆ॥ 

ಅರಸು ವೀರ್ಯಾರ್ಜುನಿಯು ಎಂದಾಗ ಡಂಗುರಂ 

ಮೊರಸಿದಂ ಮಣಿದಖಿಳ ಪುರಜನಂ ಪರಿವಾರ 

ಭರದೊಳೋಲೈಸುತ್ತ ತದ್ವೃದ್ಧ ಪಾರ್ಥಿವನ ಸೈರಚಾಪದೈಸಿರಿಯೊಲು॥೨೮॥ 


ಮಾಲಾಸುಕೇತುವಿಂಗುಭಯ ಬಾಹುಗಳುಡಿದು 

ಕೀಲಾಳಿನಂತಿರ್ಪರಿದಕೇನು ಹದನೆಂದು 

ರೋಲಗದೊಳು ವೃದ್ಧ ಪಾರ್ಥಿವಂ ರವಿವಂಶಗೆಚ್ಚರಿಸಲದ ಕೆಂದನು॥

ಕಾಳಗದೊಳು ಪೋದದಹುದಲ್ತೆ ಸುಭಟರಿಂ 

ಗೇಳಿಗೆಯ ನೈಪತ್ಯಮೆಂದರಸ ಕನಕ ಕೃತ 

ಲೋಲಸದ್ಭಾಹುವಂ ಪತ್ತೆಸೆವಗೊಹಿಸಿತ್ತು ಸೇನಾನಿ ನಿಜಪಟ್ಟವ॥೨೯॥ 


ಮಾಸಾರ್ಧ ಪರ್ಯಂತ ನೆಲಸಿರ್ದು ಚದುರಿರ್ಪ 

ದೇಶರೋಶಾದಿಗಳೆಲ್ಲವಂ ಜಿತಗೊಳಿಸಿ 

ಬೇಸರಂ ಪರಿಹರಿಸಿ ಅಯೋಧ್ಯಾವನೀಶ್ವರಂ ಸ್ಥಾಪನಂಗೊಳಿಸಳಿಯನ॥ 

ಕಾಶಿಕಾನೃಪತಿಯನಂ ಬೀಳ್ಕೊಟ್ಟು ಮೇಣ್ ಮಹ 

ತ್ತೈಸಿರಿ ಯೊಳನುವಾಗಿ ಗಮಿಸಿದನದೇನೆಂಬೆ 

ಭಾಸದಿಂ ಬಲವೆರಸಿ ಜಾಮಾತರುಪಚರಿಸಿ ಚೊಲ್ಲಣಿಗೆ ಕಳಕಳದೊಳು ॥೩೦॥ 


ಕಳುಪಲ್ಕೆ ತನ್ನಖಿಳ ಪರಿವಾರ ಗಣವೆರಸಿ 

ಕಲಿವೃದ್ಧ ಭೂವರಂ ಸೋದರನ ಮೇಳದಿಂ 

ಬಳಿಕ ತೃನರಸನಾದೆನೆಂಬ ಹಮ್ಮಿನಿಂ ಬೀಳ್ಕೊಟ್ಟು ನೃಪವರನ॥ 

ಕಳೆಗುಂದಿ ಕುಳಿಕುಳಿತ ಕಮಲಮಧು ಚಯನೃಪಂ 

ಸುಳಿಯಲ್ಕೆ ನಲಿವಂತೆ ನಗರದುಂ ಭಾಜನಂ 

ಕಳೆದುಳಿದೆವೇ ಭಯವನೆನುತಿರ್ದುದೀಕ್ಷಿಸುತ ಕನಸಿನುತ್ಸಾಹದಂತೆ॥೩೧॥ 


ತಿರುಗಿ ವೀರ್ಯಾರ್ಜುನಿಯು ಮರಳಿದಂ ಪಟ್ಟಣಕೆ 

ನೆರವಿ ಪರಿಜನವೆರಸಿ ತೈಲಮಿಗೆ ಕಡೆಗಂಡ 

ನಿರಸ ದೀಪ್ತಿಯ ತೆರದಿ ಮುಂದಾಗುವನುಭವಂ ಗೋಚರಿಸದುದ ಮದದೊಳು॥ 

ದೊರೆ ದಿಲೀಪಾಂಕನುಂದಾ ಕಡೆಯ ಬೊಭ್ಭೂರ ಕರಿ 

ವರದ ಭಾರ್ಗವನ ಬಲಿಯಕುಂ ಬೆರಗಾಗು 

ತಿರದೆ ತಾನು ಗಮಿಸಿದಂ ಸಾವಂತರೊಗ್ಗಿನಿಂ ನಿಜನಗರಿಗೆ॥೩೨॥ 

॥ ಅಂತು ಸಂಧಿ ೩೪ ಕ್ಕಂ ಪದನು ೧೨೫೨ ಕ್ಕಂ ಮಂಗಳ ಮಹಾ ॥ 


ನೆನಕೆ: 


ಕರ್ತೃ: ಬಬ್ಬೂರು ರಂಗ 

ಪ್ರಧಾನ ಸಂಪಾದಕ: ಪ್ರೊ. ಕೆ.ಎನ್. ಗಂಗಾನಾಯಕ್ 

ಸಂಪಾದಕರು: ಡಾ. ಕೆ. ರವೀಂದ್ರನಾಥ್ 

ಪ್ರಕಾಶಕರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ 

ಮೈಸೂರು ವಿಶ್ವವಿದ್ಯಾನಿಲಯ 

ಮಾನಸಗಂಗೋತ್ರಿ,ಮೈಸೂರು- ೫೭೦ ೦೦೬ ,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ